ಪ್ರಾಯಶ್ಚಿತ್ತಗಳು

ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ಯಾವ ಕರ್ಮಗಳನ್ನು ಮಾಡಿದರೆ ಅಥವಾ ಮಾಡದೇ ಇದ್ದರೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು ಎನ್ನುವುದರ ಕುರಿತಾದ ಯುಧಿಷ್ಠಿರನ ಪ್ರಶ್ನೆಗೆ ವ್ಯಾಸನು ನೀಡಿದ ಈ ಪ್ರಾಯಶ್ಚಿತ್ತೋಪಾಖ್ಯಾನವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 35-36ರಲ್ಲಿ ಬರುತ್ತದೆ.

***

ಯುಧಿಷ್ಠಿರನು ಹೇಳಿದನು:

“ಪಿತಾಮಹ! ಯಾವಕರ್ಮಗಳನ್ನು ಮಾಡಿ ಮನುಷ್ಯನು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು. ಯಾವುದನ್ನು ಮಾಡುವುದರಿಂದ ಅವನಿಗೆ ಪಾಪದ ಬಿಡುಗಡೆಯಾಗುತ್ತದೆ? ಅದನ್ನು ನನಗೆ ಹೇಳು!”

ವ್ಯಾಸನು ಹೇಳಿದನು:

“ವಿಹಿತ ಕರ್ಮಗಳನ್ನು ಮಾಡದಿರುವವನೂ, ಪ್ರತಿಷಿದ್ಧ ಕರ್ಮಗಳನ್ನು ಮಾಡುವವನೂ, ಸುಳ್ಳಾಗಿ ನಡೆದುಕೊಳ್ಳುವವನೂ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು. ಸೂರ್ಯೋದಯ-ಸೂರ್ಯಾಸ್ತಮ ಸಮಯಗಳಲ್ಲಿ ನಿದ್ರೆಮಾಡುವ ಬ್ರಹ್ಮಚಾರಿಯೂ ಹಾಗೆಯೇ ಉಗುರುಗಳು ಕಪ್ಪಾಗಿರುವವನೂ, ಹಲ್ಲುಗಳು ಕಪ್ಪಾಗಿರುವವನೂ ಪ್ರಾಯಶ್ಚಿತ್ತಕ್ಕೆ ಭಾಗಿಯಾಗುತ್ತಾನೆ. ತಮ್ಮನಿಗೆ ವಿವಾಹವಾದರೂ ವಿವಾಹಿತನಾದಗೇ ಇರುವ ಅಣ್ಣ, ಅಣ್ಣನಿಗೆ ಮದುವೆಯಾಗುವ ಮೊದಲೇ ವಿವಾಹವಾದ ತಮ್ಮ, ಬ್ರಹ್ಮಹತ್ಯೆ ಮಾಡಿದವನು, ಇತರರನ್ನು ನಿಂದೆಮಾಡಿದವನು, ಎರಡನೆಯ ಮದುವೆ ಮಾಡಿಕೊಂಡಿರುವವಳು, ಉಪಪತಿಯನ್ನಿಟ್ಟುಕೊಂಡವಳು, ಮತ್ತು ಬ್ರಾಹ್ಮಣನನ್ನು ಉಪಪತಿಯನ್ನಾಗಿಟ್ಟುಕೊಂಡಿರುವವಳು, ವ್ರತಭಂಗನಾದ ಬ್ರಹ್ಮಚಾರಿ, ದ್ವಿಜರನ್ನು ಕೊಂದವನು, ಅಪಾತ್ರರಲ್ಲಿ ದಾನಮಾಡಿದವನು, ಸತ್ಪಾತ್ರರಲ್ಲಿ ದಾನಮಾಡದವನು, ಗ್ರಾಮಗಳನ್ನು ನಾಶಗೊಳಿಸಿದವನು, ಮಾಂಸವನ್ನು ಮಾರುವವನು, ಅಗ್ನಿಯನ್ನು ತಿರಸ್ಕರಿಸಿದವನು, ವೇದವನ್ನು ಮಾರುವವನು, ಶೂದ್ರರು ಅಥವಾ ಸ್ತ್ರೀಯರನ್ನು ವಧಿಸಿದವನು, ಇವರಲ್ಲಿ ಮೊದಲಿನವರು ಕಡೆಯವರಿಗಿಂಥ ಹೆಚ್ಚು ಪಾಪಿಷ್ಠರಾಗಿರುತ್ತಾರೆ. ಪಶುಗಳನ್ನು ವಧಿಸುವವನು, ವನಕ್ಕೆ ಬೆಂಕಿಹಚ್ಚಿಸುವವನು, ಸುಳ್ಳು ಹೇಳಿಕೊಂಡು ಜೀವನ ನಡೆಸುವವನು, ಗುರುವನ್ನು ಅಪಮಾನಗೊಳಿಸುವವನು, ಮಾಡಿದ ಪ್ರತಿಜ್ಞೆಯನ್ನು ಉಲ್ಲಂಘಿಸಿದವನು, ಸದಾಚಾರ-ಮರ್ಯಾದೆಗಳನ್ನು ಉಲ್ಲಂಘಿಸಿದವನು – ಇವರೆಲ್ಲರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ. ಲೋಕಕ್ಕೂ ವೇದಕ್ಕೂ ವಿರುದ್ಧವಾಗಿರುವ ಮತ್ತು ಮಾಡಬಾರದಿರುವ ಕಾರ್ಯಗಳ ಕುರಿತು ಹೇಳುತ್ತೇನೆ. ಅವುಗಳನ್ನು ಏಕಾಗ್ರಮನಸ್ಸಿನಿಂದ ಕೇಳು!

ಸ್ವಧರ್ಮವನ್ನು ಬಿಡುವುದು, ಪರಧರ್ಮವನ್ನು ಆಚರಿಸುವುದು, ಯಜ್ಞವನ್ನು ಮಾಡಿಸಬಾರದವನಿಂದ ಯಜ್ಞಮಾಡಿಸುವುದು, ತಿನ್ನ ಬಾರದವುಗಳನ್ನು ತಿನ್ನುವುದು, ಶರಣಾಗತರಾದವನ್ನು ತೊರೆಯುವುದು, ಸೇವಕರ ಭರಣ-ಪೋಷಣೆ ಮಾಡದಿರುವುದು, ಉಪ್ಪು-ಬೆಲ್ಲ ಮುಂತಾದವುಗಳನ್ನು ಮಾರುವುದು, ಪಶು-ಪಕ್ಷಿಗಳನ್ನು ಕೊಲ್ಲುವುದು, ಶಕ್ತಿಯಿದ್ದರೂ ಆಧಾನವೇ ಮೊದಲಾದ ಕರ್ಮಗಳನ್ನು ಮಾಡದೇ ಇರುವುದು, ನಿತ್ಯಕರ್ಮಗಳಾದ ಗೋಗ್ರಾಸ ನೀಡುವುದು ಮುಂತಾದವುಗಳನ್ನು ಮಾಡದೇ ಇರುವುದು, ಬ್ರಾಹ್ಮಣರಿಗೆ ದಕ್ಷಿಣೆಗಳನ್ನು ಕೊಡದೇ ಇರುವುದು, ಬ್ರಾಹ್ಮಣರ ಸ್ವತ್ತನ್ನು ಅಪಹರಿಸುವುದು – ಇವುಗಳು ಮಾಡಬಾರದ ಕರ್ಮಗಳು ಎಂದು ಧರ್ಮವನ್ನು ತಿಳಿದುಕೊಂಡಿರುವವರು ಹೇಳುತ್ತಾರೆ.

ತಂದೆಯಿಂದ ಜಗಳವಾಡಿ ಬೇರೆಯಾಗುವ ಮಗ, ಗುರುಪತ್ನಿಯೊಡನೆ ಮಲಗಿದ ಶಿಷ್ಯ, ಮತ್ತು ಅಧರ್ಮದಿಂದ ಮಕ್ಕಳನ್ನು ಪಡೆಯದೇ ಇರುವವನು ಇವರು ಅಧಾರ್ಮಿಕ ಜನರು. ಯಾವುದನ್ನು ಮಾಡುವುದರಿಂದ ಮತ್ತು ಮಾಡದೇ ಇರುವುದರಿಂದ ಜನರು ಪ್ರಾಯಶ್ಚಿತ್ತಕ್ಕೆ ಭಾಗಿಯಾಗುತ್ತಾರೆ ಎನ್ನುವುದನ್ನು ವಿಸ್ತಾರವಾಗಿ ಹೇಳಿದ್ದಾಯಿತು. ಈಗ ಮಾನವನು ಯಾವುದೇ ಕರ್ಮಗಳನ್ನು ಮಾಡಿದರೂ ಯಾವ ಕಾರಣಗಳಿಂದ ಅವನಿಗೆ ಪಾಪಗಳು ಅಂಟಿಕೊಳ್ಳುವುದಿಲ್ಲ ಎನ್ನುವುದನ್ನು ಕೇಳು.

ವೇದಾಂತಿ ಬ್ರಾಹ್ಮಣನು ರಣದಲ್ಲಿ ಶಸ್ತ್ರವನ್ನು ಹಿಡಿದು ಕೊಲ್ಲಲು ಬಂದಾಗ ಅವನನ್ನು ಸಂಹರಿಸಿದರೆ ಬ್ರಹ್ಮಹತ್ಯಾ ದೋಷವು ತಗಲುವುದಿಲ್ಲ. ಇದರ ಕುರಿತಾಗಿ ವೇದದಲ್ಲಿ ಮಂತ್ರವೊಂದು ಹೇಳಲ್ಪಟ್ಟಿದೆ. ವೇದಪ್ರಮಾಣವಿಹಿತವಾದ ಆ ಧರ್ಮವನ್ನೇ ನಾನು ನಿನಗೆ ಹೇಳುತ್ತಿದ್ದೇನೆ. ಬ್ರಾಹ್ಮಣೋಚಿತ ಕರ್ಮಗಳಿಂದ ಭ್ರಷ್ಟನಾಗಿರುವ ಆತತಾಯಿಯನ್ನು ಕೊಲ್ಲುವುದರಿಂದ ಬ್ರಹ್ಮಹಂತಕನಾಗುವುದಿಲ್ಲ. ಕ್ರೋಧವೇ ಕ್ರೋಧವನ್ನು ಎದುರಿಸುತ್ತದೆ. ಪ್ರಾಣಹೋಗುವ ಸಮಯದಲ್ಲಿ ಮತ್ತು ಹಾಗೆಯೇ ಅಜ್ಞಾನದಿಂದ ಮದ್ಯವನ್ನು ಸೇವಿಸಿದರೂ ಧರ್ಮಪರರ ಪ್ರಕಾರ ಅವರಿಗೆ ಪುನಃ ಸಂಸ್ಕಾರವಾಗಲೇಬೇಕು. ತಿನ್ನಬಹುದಾದುದರ ಮತ್ತು ತಿನ್ನಬಾರದ ವಿಷಯಗಳ ಕುರಿತು ಎಲ್ಲವನ್ನೂ ಹೇಳಿದ್ದಾಯಿತು. ಪ್ರಾಯಶ್ಚಿತ್ತ ವಿಧಾನದಿಂದ ಈ ಎಲ್ಲ ಪಾಪಗಳಿಂದಲೂ ಶುದ್ಧಿಯಾಗುತ್ತದೆ. ಗುರುವಿನ ಕಾರ್ಯಸಿದ್ಧಿಗಾಗಿ ಗುರುಪತ್ನಿಯೊಡನೆ ಸಂಭೋಗಿಸಿದರೆ ಮನುಷ್ಯನು ದೂಷಿತನಾಗುವುದಿಲ್ಲ. ಉದ್ದಾಲಕನು ಶ್ವೇತಕೇತುವನ್ನು ಶಿಷ್ಯನಿಂದಲೇ ಪಡೆದುಕೊಂಡನು. ಗುರುವಿಗಾಗಿ ಮತ್ತು ಆಪತ್ತು ಬಂದಾಗ ಕಳ್ಳತನ ಮಾಡುವುದು ನಿಷೇಧವಲ್ಲ. ಮನಸ್ಸಿನಲ್ಲಿ ಯಾವುದೇ ಕಾಮನೆಗಳನ್ನು ಇಟ್ಟುಕೊಳ್ಳದೇ, ಪುನಃ ಪುನಃ ಕಳ್ಳತನ ಮಾಡದೇ, ಬ್ರಾಹ್ಮಣರದಲ್ಲದವುಗಳನ್ನು ಕಳ್ಳತನ ಮಾಡುವುದರಿಂದ ಮತ್ತು ಕಳ್ಳತನ ಮಾಡಿದುದನ್ನು ಇತರರಿಗೆ ನೀಡುವುದರಿಂದ ದೋಷವೆನಿಸುವುದಿಲ್ಲ. ಕದಿದ ವಸ್ತುವನ್ನು ಸ್ವಂತಕ್ಕೆ ಉಪಯೋಗಿಸಿಕೊಳ್ಲದೇ ಇರುವವನೂ ಪಾಪಲಿಪ್ತನಾಗುವುದಿಲ್ಲ. ತನ್ನ ಅಥವಾ ಇತರರ ಪ್ರಾಣಾಪತ್ತಿನ ಕಾಲದಲ್ಲಿ, ಗುರುವಿಗಾಗಿ, ಸ್ತ್ರೀಯರಲ್ಲಿ ಮತ್ತು ವಿವಾಹಮಾಡಿಸುವಲ್ಲಿ ಸುಳ್ಳುಹೇಳುವವನು ದೋಷಿಯಾಗುವುದಿಲ್ಲ. ಸ್ವಪ್ನದಲ್ಲಿ ವೀರ್ಯಸ್ಖಲನವಾದರೆ ಬ್ರಹ್ಮಚಾರಿಯ ವ್ರತದಲ್ಲಿ ಭಂಗವಾಯಿತೆನಿಸುವುದಿಲ್ಲ. ಅದಕ್ಕೆ ಅಗ್ನಿಯಲ್ಲಿ ಸಮಿತ್ತು ಮತ್ತು ತುಪ್ಪದ ಹೋಮವನ್ನೇ ಪ್ರಾಯಶ್ಚಿತ್ತವೆಂದು ಹೇಳುತ್ತಾರೆ. ಅಣ್ಣನು ಪತಿತನಾಗಿದ್ದರೆ ಅಥವಾ ಪರಿವ್ರಾಜಕನಾಗಿದ್ದರೆ ತಮ್ಮನು ಮೊದಲು ವಿವಾಹಮಾಡಿಕೊಂಡರೂ ದೂಷಿತನಾಗುವುದಿಲ್ಲ. ಹಾಗೆಯೇ ಇನ್ನೊಬ್ಬನ ಸ್ತ್ರೀಯು ಸಂತಾನಕ್ಕಾಗಿ ಭಿಕ್ಷೆ ಬೇಡಿದಾಗ ಅವಳೊಡನೆ ಸಂಗಮಾಡಿದರೆ ಅದು ಧರ್ಮದ ದೂಷಣೆಯೆನಿಸಿಕೊಳ್ಳುವುದಿಲ್ಲ.

ಸುಮ್ಮ ಸುಮ್ಮನೇ ವ್ಯರ್ಥವಾಗಿ ಪಶುವಧೆಯನ್ನು ಮಾಡಬಾರದು. ವಿಧಿವತ್ತಾಗಿ ಸಂಸ್ಕಾರಸಹಿತವಾಗಿ ಪಶುವಧೆಯನ್ನು ಮಾಡಿದರೆ ಅದು ಪಶುಗಳಿಗೆ ಅನುಗ್ರಹವನ್ನು ಮಾಡಿದ ಹಾಗೆಯೇ ಆಗುತ್ತದೆ. ಅಜ್ಞಾನದಿಂದ ಅನರ್ಹ ಬ್ರಾಹ್ಮಣನಿಗೆ ದಾನಮಾದಿದರೆ ಅದರಲ್ಲಿ ದೋಷವಿಲ್ಲ. ಅಪಾತ್ರನೆಂದು ತಿಳಿದೂ ದಾನಮಾಡಬಾರದು. ಅಥವಾ ಸತ್ಪಾತ್ರನೆಂದು ತಿಳಿದೂ ದಾನಕೊಡದೇ ಇರಬಾರದು. ವ್ಯಭಿಚಾರಿಣಿಯಾದ ಪತ್ನಿಯನ್ನು ತಿರಸ್ಕರಿಸುವುದು ಪಾಪವಲ್ಲ. ಅದರಿಂದ ಅವಳೂ ಪವಿತ್ರಳಾಗುವಳು ಮತ್ತು ಪತಿಯೂ ದೋಷವಿಲ್ಲದವನಾಗುವನು. ಸೋಮದ ತತ್ತ್ವವನ್ನು ತಿಳಿದು ಅದನ್ನು ಮಾರಿದರೆ ಅದರಲ್ಲಿ ದೋಷವಿಲ್ಲ. ಅಸಮರ್ಥನಾದ ಸೇವಕನನ್ನು ವಿಸರ್ಜಿಸುವುದರಲ್ಲಿ ದೋಷವಿಲ್ಲ. ಗೋವುಗಳ ಸಲುವಾಗಿ ಹುಲ್ಲು ಬರಲೆಂದು ಕಾಡನ್ನು ಸುಟ್ಟರೂ ಅದು ದೋಷವೆನಿಸುವುದಿಲ್ಲ. ಯಾವ ಕರ್ಮಗಳನ್ನು ಮಾಡಿದರೆ ದೋಷವೆಲ್ಲವೆಂದು ಹೇಳಿದ್ದಾಯಿತು. ಈಗ ಪ್ರಾಯಶ್ಚಿತ್ತಗಳ ಕುರಿತು ವಿಸ್ತಾರವಾಗಿ ಹೇಳುತ್ತೇನೆ.

ಭಾರತ! ತಪಸ್ಸಿನಿಂದ, ಕರ್ಮಗಳಿಂದ ಮತ್ತು ದಾನದಿಂದ ಮತ್ತು ಆ ಪಾಪಗಳನ್ನು ಪುನಃ ಮಾಡದೇ ಇರುವುದರಿಂದ ಪುರುಷನು ಪಾಪಗಳನ್ನು ತೊಳೆದುಕೊಂಡು ಪವಿತ್ರನಾಗುತ್ತಾನೆ. ಬ್ರಹ್ಮಹತ್ಯೆಯನ್ನು ಮಾಡಿದವನು ಭಿಕ್ಷೆಯನ್ನು ಮಾಡಿಕೊಂಡು ಒಂದೇ ಹೊತ್ತು ಊಟಮಾಡಬೇಕು. ತನ್ನ ಎಲ್ಲ ಕೆಲಸಗಳನ್ನೂ ತಾನೇ ಮಾಡಿಕೊಳ್ಳಬೇಕು. ಕಪಾಲವನ್ನೂ ದಂಡವನ್ನೂ ಹಿಡಿದು ಬ್ರಹ್ಮಚಾರಿಯಾಗಿರಬೇಕು. ಸದಾ ಚಟುವಟಿಕೆಯಿಂದಿರಬೇಕು. ಯಾರಲ್ಲಿಯೂ ದೋಷವನ್ನೆಣಿಸಬಾರದು. ನೆಲದ ಮೇಲೆ ಮಲಗಬೇಕು. ತಾನು ಮಾಡಿದ ಪಾಪವನ್ನು ಜನರಲ್ಲಿ ಹೇಳಿಕೊಳ್ಳಬೇಕು. ಈ ನಿಯಮಗಳನ್ನು ಸಂಪೂರ್ಣ ಹನ್ನೆರಡು ವರ್ಷಗಳವರೆಗೆ ಪಾಲಿಸಿದರೆ ಅವನು ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುತ್ತಾನೆ. ಆರು ವರ್ಷಗಳು ಕೃಚ್ಛ್ರವ್ರತಾನುಸಾರವಾಗಿ ಭೋಜನಮಾಡುತ್ತಿದ್ದರೆ  ಅಥವಾ ಮಾಸ-ಮಾಸಗಳಲ್ಲಿಯೂ ಕೃಚ್ಛ್ರವ್ರತಾಚರಣೆ ಮಾಡಿದರೆ ಬ್ರಹ್ಮಹತ್ಯೆಮಾಡಿದ ನರನು ಪವಿತ್ರನಾಗುತ್ತಾನೆ. ತಿಂಗಳಿಗೊಮ್ಮೆ ಮಾತ್ರ ಊಟಮಾಡಿಕೊಂಡಿದ್ದರೆ ಒಂದೇ ವರ್ಷದಲ್ಲಿ ಬ್ರಹ್ಮಹತ್ಯೆಮಾಡಿದವನು ಪವಿತ್ರನಾಗುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೂ ಹೆಚ್ಚು ಕಾಲ ಉಪವಾಸದಿಂದಿದ್ದರೆ ಅತ್ಯಲ್ಪಕಾಲದಲ್ಲಿಯೇ ಬ್ರಹ್ಮಹತ್ಯಾದೋಷದ ನಿವಾರಣೆಯಾಗುತ್ತದೆ. ಅಶ್ವಮೇಧಯಾಗದಿಂದಲೂ ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುವನು ಎನ್ನುವುದರಲ್ಲಿ ಸಂಶಯವಿಲ್ಲ. ಅಶ್ವಮೇಧದ ಅವಭೃಥಸ್ನಾನ ಮಾಡಿದ ನರನು ಈ ವಿಧದ ಎಲ್ಲ ಪಾಪಗಳಿಂದಲೂ ಮುಕ್ತನಾಗುತ್ತಾನೆ ಎಂದು ಶ್ರುತಿಗಳು ಹೇಳುತ್ತವೆ.  ಬ್ರಾಹ್ಮಣರಿಗಾಗಿ ಯುದ್ಧದಲ್ಲಿ ಹತನಾದರೆ ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುತ್ತಾನೆ. ಒಂದು ಲಕ್ಷ ಗೋವುಗಳನ್ನು ಪಾತ್ರನಾದವನಿಗೆ ದಾನಮಾಡಿದರೆ ಬ್ರಹ್ಮಹತ್ಯೆ ಮತ್ತು ಎಲ್ಲ ದೋಷಗಳಿಂದಲೂ ಮುಕ್ತನಾಗುತ್ತಾನೆ. ಹಾಲುಕೊಡುವ ಇಪ್ಪತ್ತೈದು ಸಾವಿರ ಕಪಿಲ ವರ್ಣದ ಗೋವುಗಳನ್ನು ದಾನಮಾಡಿದರೆ ಸರ್ವ ಪಾಪಗಳಿಂದ ಮುಕ್ತಿದೊರೆಯುತ್ತದೆ. ಮರಣಕಾಲದಲ್ಲಿ ಕರುಗಳಿರುವ ಮತ್ತು ಹಾಲುಕರೆಯುವ ಸಹಸ್ರ ಗೋವುಗಳನ್ನು ದರಿದ್ರ ಸತ್ಪುರುಷರಿಗೆ ದಾನಮಾಡಿದರೆ ಎಲ್ಲ ಪಾಪಗಳ ವಿಮೋಚನೆಯಾಗುತ್ತದೆ. ನಿಯಮಾನುಷ್ಠಾನ ಪರರಾದ ಬ್ರಾಹ್ಮಣರಿಗೆ ನೂರು ಕಾಂಬೋಜ ದೇಶದ ಕುದುರೆಗಳನ್ನು ದಾನಮಾಡುವುದರಿಂದಲೂ ಸರ್ವ ಪಾಪಗಳ ವಿಮೋಚನೆಯಾಗುತ್ತದೆ. ಕೇವಲ ಒಬ್ಬನ ಮನೋರಥವನ್ನು ಪೂರೈಸುವ ಹಾಗೆ ದಾನಮಾಡಿ ಆ ದಾನದ ಕುರಿತು ಬೇರೆಯವರಲ್ಲಿ ಹೇಳಿಕೊಳ್ಳದೇ ಇದ್ದವನೂ ಪಾಪದಿಂದ ಮುಕ್ತನಾಗುತ್ತಾನೆ.

ಸುರಾಪಾನವನ್ನು ಮಾಡಿದ ದ್ವಿಜನು ಕೆಂಪಾಗಿ ಕಾಸಿ ಕುದಿಯುತ್ತಿರುವ ಅಗ್ನಿವರ್ಣದ ಸುರೆಯನ್ನು ಕುಡಿದರೆ ಅವನು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಶುದ್ಧನಾಗುತ್ತಾನೆ. ಪರ್ವತದಿಂದ ಹಾರಿ ಕೆಳಗೆ ಬೀಳುವುದರಿಂದಲೂ, ಅಗ್ನಿಯನ್ನು ಪ್ರವೇಶಿಸುವುದರಿಂದಲೂ ಮತ್ತು ಮರಣದೀಕ್ಷೆಯನ್ನು ಕೈಗೊಂಡು ಉತ್ತರಾಭಿಮುಖವಾಗಿ ಪ್ರಯಾಣಿಸುತ್ತಾ ಹಿಮಾಲಯದಲ್ಲಿ ಪ್ರಾಣತ್ಯಾಗಮಾಡುವುದರಿಂದಲೂ ಮನುಷ್ಯನು ಸರ್ವಪಾಪಗಳಿಂದ ವಿಮುಕ್ತನಾಗುತ್ತಾನೆ. ಸುರಾಪಾನ ಮಾಡಿದ ಬ್ರಾಹ್ಮಣನು ಬೃಹಸ್ಪತಿಸವ ಎನ್ನುವ ಯಾಗವನ್ನು ಮಾಡುವುದರಿಂದ ಬ್ರಾಹ್ಮಣರ ಸಭೆಗೆ ಪುನಃ ಹೋಗಲು ಅರ್ಹನಾಗುತ್ತಾನೆ ಎಂದು ಶ್ರುತಿಗಳು ಸಾರುತ್ತವೆ. ಸುರಾಪಾನ ಮಾಡಿದವನು ಮಾತ್ಸರ್ಯರಹಿತನಾಗಿ ಭೂದಾನ ಮಾಡುವುದರಿಂದ ಮತ್ತು ಪುನಃ ಸುರಾಪಾನಮಾಡದೇ ಇರುವುದರಿಂದ ನರನು ಸುಸಂಸ್ಕೃತನೂ ಶುದ್ಧನೂ ಆಗುತ್ತಾನೆ.

ಗುರುಪತ್ನಿಯೊಡನೆ ಸಮಾಗಮ ಮಾಡಿದವನು ಕಾದ ಶಿಲೆಯ ಮೇಲೆ ಮಲಗಬೇಕು ಅಥವಾ ತನ್ನ ಶಿಶ್ನವನ್ನು ಕತ್ತರಿಸಿಕೊಂಡು, ತಲೆಯೆನ್ನೆತ್ತಿ ಆಕಾಶವನ್ನೇ ನೋಡುತ್ತಾ ಪ್ರಯಾಣಿಸಬೇಕು. ಈ ರೀತಿ ಶರೀರವನ್ನು ತೊರೆಯುವುದರಿಂದಲೇ ಆ ಅಶುಭಕರ್ಮದ ಪಾಪದಿಂದ ಮುಕ್ತನಾಗುತ್ತಾನೆ. ಇಂತಹ ಪಾಪಕರ್ಮವನ್ನು ಮಾಡಿದ ಸ್ತ್ರೀಯರು ಒಂದು ವರ್ಷ ಸಂಯಮದಿಂದ ಇದ್ದರೆ ಪಾಪಮುಕ್ತರಾಗುತ್ತಾರೆ. ಮಹಾವ್ರತ[1]ವನ್ನು ಆಚರಿಸಿದವನು, ಸರ್ವವನ್ನೂ ದಾನಮಾಡಿದವನು ಮತ್ತು ಗುರುವಿನ ಪರವಾಗಿ ಯುದ್ಧದಲ್ಲಿ ಮಡಿದವನು ಈ ಅಶುಭ ಕರ್ಮದಿಂದ ಮುಕ್ತನಾಗುತ್ತಾನೆ. ಗುರುವಿಗೆ ಪ್ರಿಯವಾದುದನ್ನು ತಂದು ಕೊಡುವುದರಿಂದ ಗುರುವಿಗೆ ಸುಳ್ಳುಹೇಳಿದುದರ ಮತ್ತು ಗುರುವಿಗೆ ವಿರುದ್ಧವಾಗಿ ನಡೆದುಕೊಂಡಿದುದರ ಪಾಪದಿಂದ ಮುಕ್ತನಾಗುತ್ತಾನೆ.

ಬ್ರಹ್ಮಚರ್ಯವ್ರತದಿಂದ ಭ್ರಷ್ಟನಾದವನು ಗೋಚರ್ಮವನ್ನು ಹೊದೆದುಕೊಂಡು ಆರು ತಿಂಗಳ ಕಾಲ ಬ್ರಹ್ಮಹತ್ಯಾವ್ರತವನ್ನು ಆಚರಿಸಿದರೆ ಆ ಪಾಪದಿಂದ ಮುಕ್ತನಾಗುತ್ತಾನೆ. ಒಂದು ವರ್ಷ ಕಠೋರ ವ್ರತವನ್ನು ಆಚರಿಸಿದರೆ ಪರಸ್ತ್ರೀಯನ್ನು ಮತ್ತು ಪರರ ಸ್ವತ್ತನ್ನು ಅಪಹರಿಸಿದ ಪಾಪದಿಂದ ಮುಕ್ತನಾಗಬಹುದು. ಪರರ ಸ್ವತ್ತನ್ನು ಅಪಹರಿಸಿದವನು, ಅದಕ್ಕೆ ಸಮನಾದಷ್ಟು ಸಂಪತ್ತನ್ನು ವಿವಿಧ ಉಪಾಯಗಳಿಂದ ಹಿಂದಿರುಗಿಸಿದರೆ ಆ ಪಾಪದಿಂದ ಮುಕ್ತನಾಗುತ್ತಾನೆ. ಪರಿವೇತ್ತ[2] ಮತ್ತು ಪರಿವಿತ್ತಿ[3] ಇವರಿಬ್ಬರಿಗೂ ಹನ್ನೆರಡು ರಾತ್ರಿಗಳು ಜಿತೇಂದ್ರಿಯರಾಗಿದ್ದು ಕೃಚ್ಛ್ರವ್ರತವನ್ನಾಚರಿಸುವುದೇ ಪ್ರಾಯಶ್ಚಿತ್ತವಾಗಿದೆ. ಪ್ರಾಯಶ್ಚಿತ್ತವನ್ನು ಮಾಡಿಕೊಂಡ ಪರಿವೇತ್ತಿಯು ವಿವಾಹವಾಗಿ ಪಿತೃಕಾರ್ಯಗಳನ್ನು ಮಾಡುತ್ತಾ ಬಂದರೆ ಅವನ ಪತ್ನಿಗೆ ಯಾವ ದೋಷವೂ ಆಗುವುದಿಲ್ಲ. ಅವಳಿಗೆ ಪಾಪಗಳು ಅಂಟಿಕೊಳ್ಳುವುದಿಲ್ಲ. ಚಾತುರ್ಮಾಸ್ಯವ್ರತ[4]ದ ಮೂಲಕ ಶುದ್ಧಿಮಾಡಿಕೊಳ್ಳುವ ವಿಧಾನವಿದೆ. ಸ್ತ್ರೀಯರು ಈ ವ್ರತದ ಆಚರಣೆಯಿಂದ ಶುದ್ಧರಾಗುತ್ತಾರೆಂದು ಧರ್ಮವಿದರು ಹೇಳುತ್ತಾರೆ. ಪತ್ನಿಯು ಪಾಪಿಯೆಂದು ಶಂಕಿಸಿದರೆ ಅವಳು ಪುನಃ ರಜಸ್ವಲೆಯಾಗುವವರೆಗೆ ಅವಳೊಡನೆ ಕೂಡಬಾರದು. ಭಸ್ಮಲೇಪನದಿಂದ ಪಾತ್ರೆಯು ಶುದ್ಧವಾಗುವಂತೆ ರಜೋದರ್ಶನದಿಂದ ಸ್ತ್ರೀಯರು ಶುದ್ಧರಾಗುತ್ತಾರೆ.

ಧರ್ಮದ ಎಲ್ಲ ನಾಲ್ಕು ಪಾದಗಳೂ ಬ್ರಾಹ್ಮಣರಿಗೆ ವಿಹಿತವಾಗಿವೆ. ರಾಜನಿಗೆ ಧರ್ಮದ ಮೂರು ಪಾದಗಳು ವಿಹಿತವಾಗಿವೆ. ಹಾಗೆಯೇ ವೈಶ್ಯ ಮತ್ತು ಶೂದ್ರರಿಗೆ ಒಂದೊಂದು ಪಾದ ಕಡಿವೆ ಧರ್ಮವು ವಿಹಿತವಾಗಿದೆ. ಇದರ ಪ್ರಕಾರ ಪಾಪಗಳ ಮಹತ್ತ್ವತೆ ಮತ್ತು ಲಘುತ್ವಗಳನ್ನು ಮತ್ತು ಅವುಗಳ ಪ್ರಾಯಶ್ಚಿತ್ತಗಳು ನಿಶ್ಚಯಿಸಲ್ಪಟ್ಟಿವೆ. ಪಶು-ಪಕ್ಷಿಗಳನ್ನು ವಧಿಸುವುದರಿಂದ ಮತ್ತು ಅನೇಕ ವೃಕ್ಷಗಳನ್ನು ಕಡಿಯುವುದರಿಂದ ಆದ ಪಾಪವನ್ನು ಮನುಷ್ಯನು ಮೂರುರಾತ್ರಿ ವಾಯುಭಕ್ಷಕನಾಗಿದ್ದು ಉಪವಾಸದಿಂದಿದ್ದರೆ ತೊರೆದುಕೊಳ್ಳುತ್ತಾನೆ. ಸಂಗಮಾಡಬಾರದೇ ಇದ್ದವರೊಡನೆ ಸಂಗಮಾಡಿದರೆ ಆರು ತಿಂಗಳ ಕಾಲ ಒದ್ದೆ ಬಟ್ಟೆಯನ್ನು ಉಟ್ಟುಕೊಂಡು ಸಂಚರಿಸುತ್ತಿರಬೇಕು ಮತ್ತು ಬೂದಿಯ ಮೇಲೆ ಮಲಗಬೇಕು ಎಂಬ ಪ್ರಾಯಶ್ಚಿತ್ತವಿದೆ. ಮಾಡಬಾರದ ಎಲ್ಲ ಕರ್ಮಗಳಿಗೂ ಇದನ್ನೇ ಪ್ರಾಯಶ್ಚಿತ್ತವಾಗಿ ಬ್ರಾಹ್ಮಣಗಳಲ್ಲಿ ವಿಧಾನ-ದೃಷ್ಟಾಂತಗಳ ಮೂಲಕ ವಿಹಿಸಲಾಗಿದೆ. ಶುಚಪ್ರದೇಶದಲ್ಲಿ, ಅಲ್ಪಾಹಾರಗಳನ್ನು ತಿಂದು, ಅಹಿಂಸಾವ್ರತನಿಷ್ಟನಾಗಿ, ರಾಗ-ದ್ವೇಷ-ಮಾನಾಪಮಾನಶೂನ್ಯನಾಗಿ, ಮೌನಿಯಾಗಿ ಗಾಯತೀ ಮಂತ್ರವನ್ನು ಜಪಿಸುವವನು ಸರ್ವ ಪಾಪಗಳಿಂದಲೂ ವಿಮುಕ್ತನಾಗುತ್ತಾನೆ. ತಿಳಿಯದೇ ಪಾಪಮಾಡಿದ ದ್ವಿಜನು ಪಾಪವಿಮೋಚನೆಗಾಗಿ ಹಗಲಿನಲ್ಲಿ ಯಾವಾಗಲೂ ನಿಂತುಕೊಂಡೇ ಇರಬೇಕು. ರಾತ್ರಿಯಲ್ಲಿ ಆಕಾಶವನ್ನೇ ಹೊದ್ದಿಕೊಂಡು ಬಯಲಿನಲ್ಲಿ ಮಲಗಬೇಕು. ಹಗಲು ಮೂರು ಬಾರಿ ಮತ್ತು ರಾತ್ರಿ ಮೂರು ಬಾರಿ ಉಟ್ಟಬಟ್ಟೆಯಲ್ಲಿಯೇ ನೀರಿನಲ್ಲಿ ಮುಳುಗಿ ಸ್ನಾನಮಾಡಬೇಕು. ಈ ವ್ರತವನ್ನಾಚರಿಸುತ್ತಿರುವಾಗ ಸ್ತ್ರೀ-ಶೂದ್ರ-ಪತಿತರಲ್ಲಿ ಮಾತನಾಡಬಾರದು.

ಪಂಚಭೂತಗಳೇ ಸಾಕ್ಷಿಕವಾಗಿರುವ ಶುಭಾಶುಭಫಲಗಳು ಮರಣದ ನಂತರವೇ ದೊರೆಯುತ್ತವೆ. ಅವುಗಳಲ್ಲಿ ಯಾವ ಕರ್ಮಗಳನ್ನು ಹೆಚ್ಚು ಮಾಡಿರುವನೋ ಅವುಗಳ ಫಲವನ್ನು ಹೆಚ್ಚಾಗಿ ಪಡೆಯುತ್ತಾನೆ. ಆದುದರಿಂದ ದಾನ, ತಪಸ್ಸು ಮುಂತಾದ ಕರ್ಮಗಳಿಂದ ಶುಭಫಲಗಳು ಹೆಚ್ಚುತ್ತವೆ. ಅಶುಭ ಕರ್ಮಗಳಿಗಿಂತಲೂ ಪುಣ್ಯಕರ್ಮಗಳನ್ನು ಹೆಚ್ಚಾಗಿ ಮಾಡಿದರೆ ಪುಣ್ಯಫಲಗಳೇ ಹೆಚ್ಚು ದೊರೆಯುತ್ತವೆ. ಶುಭಕರ್ಮಗಳನ್ನು ಮಾಡುತ್ತಿರಬೇಕು; ಪಾಪಕರ್ಮಗಳನ್ನು ಮಾಡಬಾರದು. ನಿತ್ಯವೂ ಧನವನ್ನು ದಾನಮಾಡುವುದರಿಂದ ಪಾಪವಿಮುಕ್ತನಾಗುತ್ತಾನೆ. ಪಾಪಗಳಿಗೆ ಅನುರೂಪವಾದ ಪ್ರಾಯಶ್ಚಿತ್ತಗಳನ್ನು ಉದಾಹರಿಸಿದ್ದೇನೆ. ಮಹಾಪಾತಕವನ್ನು ಬಿಟ್ಟು ಉಳಿದವುಗಳಿಗೆ ಪ್ರಾಯಶ್ಚಿತ್ತಗಳನ್ನು ಹೇಳಲಾಗಿದೆ.

ತಿಳಿದೋ ಅಥವಾ ತಿಳಿಯದೆಯೋ ಅಭಕ್ಷ್ಯವಾದುದನ್ನು ಭಕ್ಷಿಸಿದರೆ, ಮತ್ತು ಅವಾಚ್ಯವಾದವುಗಳನ್ನು ಮಾತನಾಡಿದರೆ ಅವುಗಳಿಗೂ ಪ್ರಾಯಶ್ಚಿತ್ತಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ತಿಳಿದು ಮಾಡಿದ ಪಾಪಗಳೆಲ್ಲವೂ ಅಧಿಕ ಪಾಪಗಳಾಗುತ್ತವೆ. ಅಜ್ಞಾನದಿಂದ ಮಾಡಿದ ದೋಷಗಳಿಗೆ ಪ್ರಾಯಶ್ಚಿತ್ತಗಳನ್ನು ಹೇಳಿದ್ದಾರೆ. ಈಗ ಹೇಳಿದ ವಿಧಿಗಳಿಂದ ಪಾಪಗಳನ್ನು ಕಳೆದುಕೊಳ್ಳಲು ಶಕ್ಯವಿದೆ. ಆದರೆ ಆಸ್ತಿಕರಿಗೆ ಮತ್ತು ಶ್ರದ್ಧೆಯುಳ್ಳವರಿಗೆ ಮಾತ್ರ ಈ ವಿಧಿಗಳನ್ನು ಹೇಳಲಾಗಿದೆ. ದಂಭದೋಷವೇ ಪ್ರಧಾನವಾಗಿರುವ ನಾಸ್ತಿಕರು ಮತ್ತು ಶ್ರದ್ಧೆಯಿಲ್ಲದ ಪುರುಷರಿಗೆ ಪ್ರಾಯಶ್ಚಿತ್ತವಿಧಿಗಳು ಯಾವುವೂ ಇಲ್ಲ. ಮರಣಾನಂತರದಲ್ಲಿ ಮತ್ತು ಇಹದಲ್ಲಿ ಸುಖವನ್ನು ಬಯಸುವವರು ಶಿಷ್ಟಾಚಾರಿಗಳಾಗಿರಬೇಕು. ಧರ್ಮವನ್ನು ಅನುಸರಿಸಿ ನಡೆದುಕೊಳ್ಳಬೇಕು. ಈ ಮೊದಲು ಹೇಳಿದ ಕಾರಣಗಳಿಂದಾಗಿ ನೀನು ನಿನ್ನ ಪಾಪದಿಂದ ಮುಕ್ತನಾಗುವೆ. ಅಥವಾ ಈ ಕರ್ಮಗಳನ್ನು ಮಾಡಿದೆನೆಲ್ಲಾ ಎಂದು ತಪ್ಪಿತಸ್ಥಭಾವವನ್ನು ಹೊಂದಿದ್ದರೆ ಪ್ರಾಯಶ್ಚಿತ್ತಗಳನ್ನು ಮಾಡಿಕೋ! ಅನಾರ್ಯಜುಷ್ಟವಾದ ಕಾರ್ಯವನ್ನೆಸಗಿ ಆತ್ಮವಿನಾಶವನ್ನು ಮಾಡಿಕೊಳ್ಳಬೇಡ!”

***

[1] ಒಂದು ತಿಂಗಳು ನೀರನ್ನೂ ಕುಡಿಯದೇ ನಿರಾಹಾರಿಯಾಗಿರುವುದಕ್ಕೆ ಮಹಾವ್ರತವೆನ್ನುವರು.

[2] ಅಣ್ಣನಿಗಿಂತ ಮೊದಲು ಮದುವೆಯಾದವನು

[3] ತಮ್ಮನ ಮದುವೆಯಾದರೂ ಮದುವೆಯಾಗದೇ ಇರುವವನು

[4] ಚಾತುರ್ಮಾಸ್ಯದಲ್ಲಿ ದಿನಬಿಟ್ಟು ದಿನ ಊಟಮಾಡುವ ವಿಧಾನವಿದೆ.

Leave a Reply

Your email address will not be published. Required fields are marked *