ಇಂದ್ರ-ಮಾಂಧಾತ ಸಂವಾದ

ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ರಾಜಧರ್ಮದ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಇಂದ್ರರೂಪೀ ವಿಷ್ಣು ಮತ್ತು ಮಾಂಧಾತರ ಈ ಸಂವಾದವನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳುತ್ತಾನೆ. ಇದು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 64-65ರಲ್ಲಿ ಬರುತ್ತದೆ.

***

ಭೀಷ್ಮನು ಹೇಳಿದನು:

“ಪಾಂಡವ! ನಾಲ್ಕು ಆಶ್ರಮಧರ್ಮಗಳೂ, ಜಾತಿಧರ್ಮಗಳೂ, ಲೋಕಪಾಲಧರ್ಮಗಳೂ ಕ್ಷಾತ್ರಧರ್ಮದಲ್ಲಿಯೇ ಪ್ರತಿಷ್ಠಿತಗೊಂಡಿವೆ. ಭರತಸತ್ತಮ! ಈ ಎಲ್ಲ ಧರ್ಮಗಳೂ ಕ್ಷಾತ್ರಧರ್ಮವನ್ನವಲಂಬಿಸಿವೆ. ಕ್ಷಾತ್ರಧರ್ಮವು ಅವ್ಯವಸ್ಥಿತವಾದರೆ ಜೀವಲೋಕಗಳು ನಿರಾಶೆಗೊಳ್ಳುತ್ತವೆ. ಆಶ್ರಮವಾಸಿಗಳ ಧರ್ಮಗಳು ಅಪ್ರತ್ಯಕ್ಷವಾಗಿವೆ ಮತ್ತು ಅವುಗಳಿಗೆ ಬಹುದ್ವಾರಗಳಿವೆ. ಆಗಮಗಳೇ ಅವುಗಳ ಶಾಶ್ವತ ಭಾವಗಳನ್ನು ರೂಪಿಸುತ್ತವೆ. ಕೆಲವರು ಲೋಕನಿಶ್ಚಯವನ್ನು ಪುಣ್ಯವೇದವಚನಗಳ ಮೂಲಕ ಹೇಳುತ್ತಾರೆ. ಇತರರು ನಿಶ್ಚಯಗಳನ್ನು ತೆಗೆದುಕೊಳ್ಳಲಾರದೇ ಧರ್ಮಗಳನ್ನು ಕಂಡುಕೊಳ್ಳುವುದಿಲ್ಲ. ಪ್ರತ್ಯಕ್ಷವೂ, ಅಧಿಕ ಸುಖಮಯವೂ, ಆತ್ಮಸಾಕ್ಷಿಕವೂ, ಕಪಟರಹಿತವೂ ಮತ್ತು ಸರ್ವಲೋಕಹಿತವೂ ಆಗಿರುವ ಧರ್ಮವು ಕ್ಷತ್ರಿಯರಲ್ಲಿ ಪ್ರತಿಷ್ಠಿತಗೊಂಡಿದೆ. ಯುಧಿಷ್ಠಿರ! ಆಶ್ರಮಧರ್ಮಗಳನ್ನು ಆಚರಿಸುತ್ತಿರುವ ಬ್ರಾಹ್ಮಣರ ಪ್ರಕಾರ, ಹಿಂದೆ ಹೇಳಿದಂತೆ ಮೂರು ವರ್ಣಗಳು ಹೇಗೆ ರಾಜಧರ್ಮದಲ್ಲಿ ಲೀನವಾಗುತ್ತವೆಯೋ ಹಾಗೆ ಲೋಕದಲ್ಲಿರುವ ಸುಚರಿತ್ರಗಳೆಲ್ಲವೂ ರಾಜಧರ್ಮದಲ್ಲಿಯೇ ಇರುತ್ತವೆ. ರಾಜೇಂದ್ರ! ಇದರ ಕುರಿತು ಒಂದು ಉದಾಹರಣೆಯಿದೆ.

ಹಿಂದೆ ದಂಡನೀತಿಗಾಗಿ ಅನೇಕ ಶೂರ ರಾಜರು ಸರ್ವಭೂತೇಶ್ವರ ದೇವ ಪ್ರಭು ನಾರಾಯಣನಲ್ಲಿಗೆ ಹೋದರು. ಅದಕ್ಕೆ ಮೊದಲು ರಾಜರು ವರ್ಣಾಶ್ರಮ ಧರ್ಮಕ್ಕನುಗುಣವಾಗಿ ತಾವು ಮಾಡಿದ ಒಂದೊಂದು ಕರ್ಮವನ್ನೂ ದಂಡನೀತಿಯೊಡನೆ ತುಲನೆ ಮಾಡಿದ್ದರು. ಆದರೆ ಅವರ ಸಂಶಯವು ಪರಿಹಾರವಾಗಿರಲಿಲ್ಲ. ಹಿಂದೆ ಆದಿದೇವ ವಿಷ್ಣುವಿನಿಂದ ಸೃಷ್ಟಿಸಲ್ಪಟ್ಟ ಸಾಧ್ಯರು, ದೇವತೆಗಳು, ವಸುಗಳು, ಅಶ್ವಿನರು, ರುದ್ರರು, ವಿಶ್ವೇದೇವರು, ಸಿದ್ಧರು ಮತ್ತು ಮರುದ್ಗಣಗಳು ಕ್ಷಾತ್ರಧರ್ಮದಂತೆಯೇ ನಡೆದುಕೊಳ್ಳುತ್ತಾರೆ.  ರಾಜೇಂದ್ರ! ಅದರ ಕುರಿತಾದ ಧರ್ಮನಿಶ್ಚಯವನ್ನು ನಿನಗೆ ಹೇಳುತ್ತೇನೆ.

***

ಕೃತಯುಗದಲ್ಲಿ ಈ ಅಖಂಡ ವಿಶ್ವವು ದಾನವರ ವಶವಾಗಿ ಮರ್ಯಾದೆಗಳಿಲ್ಲದೇ ನಡೆಯುತ್ತಿರಲು ಮಾಂಧಾತ ಎಂಬ ವೀರ್ಯವಾನ್ ರಾಜನಾದನು. ಹಿಂದೆ ಆ ವಸುಮತೀಪಾಲಕನು ಅನಾದಿಮಧ್ಯನಿಧನ ದೇವ ನಾರಾಯಣನನ್ನು ಕಾಣಲೋಸುಗ ಒಂದು ಯಜ್ಞವನ್ನು ನಡೆಸಿದನು. ಆ ಯಜ್ಞದಲ್ಲಿ ರಾಜಾ ಮಾಂಧಾತನು ಪರಮೇಷ್ಠಿ ಮಹಾತ್ಮ ವಿಷ್ಣುವಿನ ಪಾದಗಳಲ್ಲಿ ತನ್ನ ಶಿರಸ್ಸನ್ನಿಟ್ಟನು. ಆಗ ವಿಷ್ಣುವು ವಾಸವ ಇಂದ್ರನ ರೂಪವನ್ನು ಧರಿಸಿ ಆ ರಾಜನಿಗೆ ಕಾಣಿಸಿಕೊಂಡನು. ರಾಜನಾದರೋ ಪ್ರಭುವನ್ನು ಉತ್ತಮವಾಗಿ ಅರ್ಚಿಸಿದನು. ಆಗ ಆ ಪಾರ್ಥಿವಶ್ರೇಷ್ಠ ಮಾಂಧಾತನಿಗೂ ಮಹಾತ್ಮ ಇಂದ್ರನಿಗೂ ವಿಷ್ಣುವಿನ ಕುರಿತಾದ ಈ ಸಂವಾದವು ನಡೆಯಿತು.

ಇಂದ್ರನು ಹೇಳಿದನು:

“ಧರ್ಮಭೃತರಲ್ಲಿ ವರಿಷ್ಠ! ಆದಿದೇವನೂ, ಪುರಾಣನೂ, ಅಮಿತ ಸತ್ತ್ವವೀರ್ಯನೂ, ಅನಂತಮಾಯೆಗಳುಳ್ಳವನೂ, ಅಪ್ರಮೇಯನೂ ಆದ ನಾರಾಯಣನನ್ನು ಕಾಣಲು ಏಕೆ ಬಯಸುತ್ತಿರುವೆ? ಆ ದೇವ ವಿಶ್ವರೂಪನನ್ನು ನಾನಾಗಲೀ ಸಾಕ್ಷಾತ್ ಬ್ರಹ್ಮನೇ ಆಗಲಿ ನೋಡಲು ಶಕ್ಯರಿಲ್ಲ. ರಾಜನ್! ಮನುಷ್ಯರಲ್ಲಿ ರಾಜನಾಗಿರುವ ನಿನಗೆ ಅನ್ಯ ಕಾಮನೆಗಳು ಹೃದಯಸ್ಥವಾಗಿದ್ದರೆ ಅವುಗಳನ್ನು ನಾನೇ ದಯಪಾಲಿಸುತ್ತೇನೆ. ಸತ್ಯನಿಷ್ಠನಾಗಿರುವ, ಧರ್ಮಪರನೂ ಜಿತೇಂದ್ರಿಯನೂ ಆಗಿರುವ, ಶೂರನೂ ದೃಢನೂ, ಸುರರ ಪ್ರೀತಿರತನೂ ಆಗಿರುವ, ಉತ್ತಮ ಬುದ್ಧಿ-ಭಕ್ತಿ-ಶ್ರದ್ಧೆಗಳಿರುವ ನಿನಗೆ ಇಷ್ಟವಾದ ವರವನ್ನು ನಾನೇ ನೀಡುತ್ತೇನೆ.”

ಮಾಂಧಾತನು ಹೇಳಿದನು:

“ಭಗವನ್! ನಿನ್ನ ಅಡಿದಾವರೆಗಳಲ್ಲಿಯೇ ಶಿರಸ್ಸನ್ನಿಟ್ಟು ಪ್ರಸನ್ನಗೊಳಿಸಿ ನಾನು ಆದಿದೇವನನ್ನು ಕಾಣುತ್ತೇನೆ. ಇದರಲ್ಲಿ ಸಂದೇಹವಿಲ್ಲ. ಭೋಗಗಳನ್ನು ತ್ಯಜಿಸಿ ಧರ್ಮಕಾಮನಾಗಿ ನಾನು ಲೋಕದ ಸತ್ಪುರುಷರ ಅಂತಿಮ ಮಾರ್ಗವಾದ ಅರಣ್ಯವನ್ನು ಸೇರಲು ಬಯಸುತ್ತೇನೆ. ಕ್ಷಾತ್ರಧರ್ಮದಿಂದ ವಿಪುಲ ಅಪ್ರಮೇಯ ಲೋಕಗಳನ್ನು ಪಡೆದುಕೊಂಡಿದ್ದೇನೆ ಮತ್ತು ನನ್ನ ಯಶಸ್ಸನ್ನೂ ಲೋಕಗಳಲ್ಲಿ ಸ್ಥಾಪಿಸಿದ್ದೇನೆ. ಆದರೆ ಆ ಲೋಕಜ್ಯೇಷ್ಠ ಆದಿದೇವನಿಂದ ಪ್ರವೃತ್ತವಾದ ಮೋಕ್ಷಧರ್ಮವನ್ನು ನಡೆಸಲು ನನಗೆ ತಿಳಿದಿಲ್ಲ.”

ಇಂದ್ರನು ಹೇಳಿದನು:

“ಕ್ಷಾತ್ರಧರ್ಮವು ಆದಿದೇವನಿಂದಲೇ ಪ್ರವೃತ್ತಗೊಂಡಿತು. ಅದರ ನಂತರವೇ ಉಳಿದ ಅನ್ಯ ಧರ್ಮಗಳು ಹುಟ್ಟಿಕೊಂಡವು. ಅನಂತರ ಹುಟ್ಟಿದ ಶೇಷಧರ್ಮಗಳು ಕಾಲಾನುಗುಣವಾಗಿ ಕ್ಷಯಿಸುತ್ತವೆ. ಉತ್ತಮ ಸಂಪ್ರದಾಯಗಳಿರುವ ಕ್ಷತ್ರಧರ್ಮವೇ ವಿಶಿಷ್ಠವಾದುದು. ಈ ಧರ್ಮದಲ್ಲಿ ಸರ್ವಧರ್ಮಗಳೂ ಸೇರಿಕೊಂಡಿವೆ. ಆದುದರಿಂದ ಇದನ್ನು ಶ್ರೇಷ್ಠಧರ್ಮವೆಂದು ಹೇಳುತ್ತಾರೆ. ಹಿಂದೆ ಅಮಿತೌಜಸ ವಿಷ್ಣುವು ಕ್ಷತ್ರಧರ್ಮವನ್ನನುಸರಿಸಿಯೇ ಅರಿಗಳನ್ನು ಸದೆಬಡಿದು ಸರ್ವ ದೇವತೆಗಳನ್ನೂ ಋಷಿಗಳನ್ನೂ ಸಂರಕ್ಷಿಸುವ ಕಾರ್ಯವನ್ನೆಸಗಿದನು. ಒಂದುವೇಳೆ ಆ ವಸುಮಾನ ಅಪ್ರಮೇಯ ಭಗವಂತನು ರಿಪುಗಳೆಲ್ಲರನ್ನೂ ಸಂಹರಿಸದೇ ಇದ್ದಿದ್ದರೆ ಲೋಕದ ಆದಿಕರ್ತ ಬ್ರಹ್ಮನಾಗಲೀ, ಬ್ರಾಹ್ಮಣರಾಗಲೀ, ಸದ್ಧರ್ಮವಾಗಲೀ ಆದಿಧರ್ಮವಾಗಲೀ ಇರುತ್ತಿರಲಿಲ್ಲ. ದೇವಶ್ರೇಷ್ಠನು ಹಿಂದೆ ತನ್ನ ವಿಕ್ರಮದಿಂದ ಈ ಉರ್ವಿಯನ್ನು ಗೆಲ್ಲದೇ ಇದ್ದಿದ್ದರೆ ಬ್ರಾಹ್ಮಣರ ವಿನಾಶದಿಂದಾಗಿ ಚಾತುರ್ವರ್ಣ ಧರ್ಮಗಳಾಗಲೀ ಚತುರಾಶ್ರಮ ಧರ್ಮಗಳಾಗಲೀ ಯಾವುದೂ ಇರುತ್ತಿರಲಿಲ್ಲ. ನೂರಾರು ಚೂರುಗಳಾಗಿ ಹೋಗಿದ್ದ ಧರ್ಮಗಳು ಶಾಶ್ವತ ಕ್ಷಾತ್ರಧರ್ಮದಿಂದ ಪುನಃ ಪ್ರವೃತ್ತಗೊಂಡಿರುವುದನ್ನು ನೋಡಿದ್ದೇವೆ. ಯುಗಯುಗಗಳಲ್ಲಿಯೂ ಈ ಆದಿಧರ್ಮ ಕ್ಷತ್ರಿಯಧರ್ಮವು ಹುಟ್ಟುತ್ತದೆ. ಆದುದರಿಂದ ಲೋಕದಲ್ಲಿ ಕ್ಷತ್ರಧರ್ಮವೇ ಜ್ಯೇಷ್ಠವೆಂದು ಹೇಳುತ್ತಾರೆ. ಆತ್ಮತ್ಯಾಗ, ಸರ್ವಭೂತಗಳ ಮೇಲಿನ ಅನುಕಂಪ, ಲೋಕಜ್ಞಾನ, ಪೀಡಿತರನ್ನು ಪೀಡೆಯಿಂದ ಬಿಡುಗಡೆಗೊಳಿಸುವುದು, ಇವು ಪಾರ್ಥಿವರ ಕ್ಷಾತ್ರಧರ್ಮವೆಂದು ತಿಳಿಯಲ್ಪಟ್ಟಿವೆ. ಮರ್ಯಾದೆಯಿಲ್ಲದಿರುವವರು ಮತ್ತು ಕಾಮ-ಕೋಪ ಪ್ರವೃತ್ತರಾದವರು ರಾಜನ ಭೀತಿಯಿಂದ ಪಾಪವನ್ನೆಸಗುವುದಿಲ್ಲ. ಅನ್ಯ ಶಿಷ್ಟಾಚಾರಿಗಳು ಸರ್ವಧರ್ಮ ಸಂಪನ್ನರಾಗಿ ಉತ್ತಮ ಆಚಾರ, ಸಾಧುಧರ್ಮಗಳನ್ನು ನಡೆಸುತ್ತಾರೆ. ಪಾರ್ಥಿವರು ಅವರ ಲಿಂಗಧರ್ಮದಿಂದ ಪ್ರಜೆಗಳನ್ನು ಪುತ್ರರಂತೆ ಪಾಲಿಸುತ್ತಾರೆ. ಆದುದರಿಂದಲೇ ಲೋಕದಲ್ಲಿ ಪ್ರಾಣಿಗಳೆಲ್ಲವೂ ನಿರ್ಭಯದಿಂದ ಸಂಚರಿಸುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಸರ್ವಧರ್ಮಗಳಿಗೂ ಶ್ರೇಷ್ಠವಾದುದು ಕ್ಷತ್ರಿಯಧರ್ಮ. ಇದು ಲೋಕದಲ್ಲಿಯೇ ಹಿರಿಯದು. ಸನಾತನವು. ಇದು ನಿತ್ಯ, ಅವಿನಾಶಿ, ಮೋಕ್ಷದಾಯಕ ಮತ್ತು ಸರ್ವತೋಮುಖ ಧರ್ಮ.

ಹೀಗೆ ಕ್ಷತ್ರಧರ್ಮವು ವೀರ್ಯಯುಕ್ತವೂ, ಸರ್ವಧರ್ಮಸಂಪನ್ನವೂ, ಶ್ರೇಷ್ಠವೂ ಆಗಿದೆ. ಸರ್ವಧರ್ಮಗಳ ಧರ್ಮವಾಗಿದೆ. ಆ ಧರ್ಮವನ್ನು ನಿನ್ನಂತಹ ಲೋಕಸಿಂಹ ಉದಾರಿಗಳು ಪಾಲಿಸಬೇಕು. ವಿಪರ್ಯಾಸವಾದರೆ ಪ್ರಜೆಗಳ ನಾಶವಾಗುತ್ತದೆ. ಭುವ ಸಂಸ್ಕಾರ, ರಾಜಸಂಸ್ಕಾರಯೋಗ, ಭಿಕ್ಷಾಟನೆ ಮಾಡದಿರುವುದು, ಪ್ರಜೆಗಳ ಪರಿಪಾಲನೆ, ವಿಧ್ಯೆ, ಸರ್ವಭೂತಗಳ ಮೇಲೆ ಅನುಕಂಪ, ದೇಹತ್ಯಾಗ ಇವೇ ರಾಜನ ಮೊದಲ ಧರ್ಮಗಳು. ತ್ಯಾಗವೇ ಶ್ರೇಷ್ಠವೆಂದು ಮುನಿಗಳು ಹೇಳುತ್ತಾರೆ. ಆದರೆ ಶರೀರವನ್ನು ತ್ಯಜಿಸವುದು ಎಲ್ಲಕ್ಕಿಂತಲೂ ಶ್ರೇಷ್ಠವಾದುದು. ರಾಜಧರ್ಮದಲ್ಲಿರುವ ಭೂಮಿಪಾಲರು ನಿತ್ಯವೂ ಸರ್ವವನ್ನೂ ತ್ಯಜಿಸುತ್ತಾರೆ ಎನ್ನುವುದನ್ನು ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ಗುರುಶುಶ್ರೂಷೆ ಅಥವಾ ಅಧಿಕ ಅಧ್ಯಯನದಿಂದ ಅಥವಾ ಶತ್ರುಗಳ ಸಂಹಾರಗಳ ಮೂಲಕ ಕ್ಷತ್ರಿಯನು ಧರ್ಮಕಾಮನಾಗಿ ಬ್ರಹ್ಮಚರ್ಯಾಶ್ರಮವನ್ನು ಒಬ್ಬಂಟಿಗನಾಗಿ ಪಾಲಿಸಬೇಕು. ಜನಸಾಮಾನ್ಯರ ವ್ಯವಹಾರದಲ್ಲಿ ತೊಡಗಿದಾಗ ರಾಜನು ಪ್ರಿಯ-ಅಪ್ರಿಯರು ಎನ್ನುವುದನ್ನು ವರ್ಜಿಸಬೇಕು. ಉತ್ತಮ ನಿಯಮ-ಯೋಗಗಳ ಮೂಲಕ ಚಾತುರ್ವರ್ಣ್ಯದ ಸ್ಥಾಪನೆ-ಪಾಲನೆಗಳನ್ನು ಮಾಡುತ್ತಿರಬೇಕು. ಎಲ್ಲ ಆಶ್ರಮಗಳಿಗಿಂತ ಗೃಹಸ್ಥಾಶ್ರಮ ಧರ್ಮವು ಶ್ರೇಷ್ಟವೆಂದೂ, ಎಲ್ಲ ಧರ್ಮಗಳಿಗಿಂತ ಕ್ಷತ್ರಿಯ ಧರ್ಮವು ಶ್ರೇಷ್ಠವೆಂದೂ ಹೇಳುತ್ತಾರ. ವರ್ಣಗಳು ತಮ್ಮ ತಮ್ಮ ಧರ್ಮವನ್ನನುಸರಿಸಲು ಕ್ಷತ್ರಧರ್ಮವೇ ಪ್ರೇರೇಪಿಸುತ್ತದೆ ಎಂದು ಹೇಳುತ್ತಾರೆ. ಮರ್ಯಾದೆಗಳಿಲ್ಲದೇ ನಿತ್ಯವೂ ಅರ್ಥಸಂಗ್ರಹದಲ್ಲಿಯೇ ತೊಡಗಿರುವ ಮನುಷ್ಯರನ್ನು ಪಶುಸದೃಶರು ಎಂದು ಹೇಳುತ್ತಾರೆ. ಆದರೆ ಲೋಭದಿಂದಲ್ಲದೇ ನೀತಿಯುಕ್ತವಾಗಿ ಸಂಪತ್ತನ್ನು ಪಡೆಯುವ ರೀತಿಯನ್ನು ಕ್ಷತ್ರದರ್ಮವು ಹೇಳಿಕೊಡುತ್ತದೆಯಾದುದರಿಂದ ಕ್ಷತ್ರಧರ್ಮವೇ ಎಲ್ಲ ಆಶ್ರಮಗಳಿಗಿಂತ ಶ್ರೇಷ್ಠವಾದುದು. ಮೂರುವೇದಗಳನ್ನು ಅಧ್ಯಯನ ಮಾಡುವ ಬ್ರಾಹ್ಮಣರಿಗೆ ಹೇಳಿರುವ ಕರ್ಮ ಮತ್ತು ಆಶ್ರಮಗಳು ಬ್ರಾಹ್ಮಣನಾದವನ ಸರ್ವಶ್ರೇಷ್ಠ ಧರ್ಮವೆಂದು ಹೇಳಲ್ಪಟ್ಟಿದೆ. ಅನ್ಯಥಾ ನಡೆದುಕೊಳ್ಳುವ ಬ್ರಾಹ್ಮಣನು ಶೂದ್ರನಂತೆ ಮತ್ತು ವಧಿಸಲು ಯೋಗ್ಯ. ಪಾರ್ಥಿವ! ನಾಲ್ಕು ಆಶ್ರಮಧರ್ಮಗಳೂ ವೇದಧರ್ಮಗಳೂ ಬ್ರಾಹ್ಮಣರಿಗೆ ಮಾತ್ರ ತಿಳಿದವುಗಳು. ಅನ್ಯರಿಗೆ ಇವು ಎಂದೂ ತಿಳಿಯುವುದಿಲ್ಲ. ಅನ್ಯಥಾ ನಡೆದುಕೊಂಡರೆ ಅದು ಬ್ರಾಹ್ಮಣ ವೃತ್ತಿಯೆಂದೆನಿಸಿಕೊಳ್ಳುವುದಿಲ್ಲ. ತನ್ನ ಧರ್ಮದ ವಿರುದ್ಧ ಕರ್ಮಗಳಲ್ಲಿ ನಿರತನಾಗಿರುವ ವಿಪ್ರನು ಸನ್ಮಾನಕ್ಕೆ ಅರ್ಹನಲ್ಲ. ಸ್ವಧರ್ಮ-ಕರ್ಮಗಳನ್ನು ಅನುಸರಿಸದಿರುವವನು ವಿಶ್ವಾಸಾರ್ಹನಲ್ಲವೆಂದು ವಿದ್ವಾಂಸರು ಭಾವಿಸುತ್ತಾರೆ. ಸರ್ವವರ್ಣಗಳ ಧರ್ಮಗಳನ್ನು ವೀರ ಕ್ಷತ್ರಿಯರೇ ಮೇಲೆತ್ತುತ್ತಾರೆ. ಇದೇ ಕ್ಷತ್ರಿಯರ ಧರ್ಮ. ಆದುದರಿಂದ ರಾಜಧರ್ಮವು ಜ್ಯೇಷ್ಠವಾದುದು. ಬೇರೆ ಧರ್ಮಗಳಿಗೆ ಈ ಹಿರಿಮೆಯಿಲ್ಲ. ವೀರ್ಯವೇ ಹಿರಿದಾಗಿರುವ ಈ ಧರ್ಮವು ವೀರಧರ್ಮವೆಂದು ನನ್ನ ಮತ.”

ಮಾಂಧಾತನು ಹೇಳಿದನು:

“ನನ್ನ ರಾಜ್ಯದಲ್ಲಿ ಎಲ್ಲಕಡೆ ಯವನರು, ಕಿರಾತರು, ಗಾಂಧಾರರು, ಚೀನರು, ಶಬರರು, ಬರ್ಬರರು, ಶಕರು, ತುಷಾರರು, ಕಹ್ವರು, ಪಹ್ಲವರು, ಆಂಧ್ರರು, ಮದ್ರಕರು, ಓಡ್ರರು, ಪುಲಿಂದರು, ರಮಠರು, ಕಾಂಬೋಜರು ಮತ್ತು ಮ್ಲೇಚ್ಛರಿದ್ದಾರೆ. ಅವರು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರಲ್ಲಿ ಜನಿಸಿದ ಮಾನವರು. ದಸ್ಸುಗಳ ಜೀವನವನ್ನು ನಡೆಸುತ್ತಿರುವ ಆ ಎಲ್ಲ ರಾಷ್ಟ್ರವಾಸಿಗಳನ್ನು ಹೇಗೆ ಧರ್ಮದಲ್ಲಿ ನಡೆಯುವಂತೆ ಮಾಡಬಹುದು? ನನ್ನಂಥವರು ಅವರೆಲ್ಲರನ್ನು ಹೇಗೆ ಧರ್ಮದಲ್ಲಿ ತೊಡಗಿಸಬಹುದು? ಭಗವನ್! ಸುರೇಶ್ವರ! ಇದನ್ನು ಕೇಳಲು ಬಯಸುತ್ತೇನೆ. ನನಗೆ ಹೇಳು. ನೀನು ಕ್ಷತ್ರಿಯರಾದ ನಮ್ಮ ಬಂಧುವೇ ಆಗಿರುವೆ!”

ಇಂದ್ರನು ಹೇಳಿದನು:

“ಎಲ್ಲ ದಸ್ಯುಗಳಿಗೂ ಮಾತಾ-ಪಿತೃಗಳ ಶುಶ್ರೂಷೆ, ಆಚಾರ್ಯ-ಗುರುಗಳ ಶುಶ್ರೂಷೆ ಮತ್ತು ಆಶ್ರಮವಾಸಿಗಳ ಶುಶ್ರೂಷೆಗಳು ಕರ್ತವ್ಯವಾಗಿರುತ್ತದೆ. ಎಲ್ಲ ದಸ್ಯುಗಳಿಗೆ ಭೂಮಿಪಾಲರ ಶುಶ್ರೂಷೆಯೂ ಒಂದು ಕರ್ತವ್ಯವೇ. ವೇದಧರ್ಮಕ್ರಿಯೆಗಳೂ ಅವರ ಧರ್ಮವೆಂದು ತಿಳಿಸಿದ್ದಾರೆ. ಪಿತೃಯಜ್ಞ, ಬಾವಿ-ಅರವಟ್ಟಿಗೆ-ಧರ್ಮಶಾಲೆಗಳ ನಿರ್ಮಾಣ, ಯಥಾಕಾಲದಲ್ಲಿ ದ್ವಿಜರಿಗೆ ದಾನ ಇವುಗಳೂ ದಸ್ಯುಗಳ ಕರ್ತ್ಯವ್ಯಗಳಾಗಿವೆ. ಅಹಿಂಸೆ, ಸತ್ಯ, ಅಕ್ರೋಧ, ದಾಯಾದ ವೃತ್ತಿಯನ್ನು ಪಾಲಿಸುವುದು, ಪತ್ನಿ-ಮಕ್ಕಳ ಪೋಷಣೆ, ಶೌಚ, ಅದ್ರೋಹ, ಶ್ರೇಯಸ್ಸನ್ನು ಬಯಸುವವನು ಸರ್ವಯಜ್ಞಗಳಲ್ಲಿ ದಕ್ಷಿಣೆಗಳನ್ನು ನೀಡುವುದು, ಭೂರಿದಕ್ಷಿಣಾಯುಕ್ತವಾದ ಪಾಕಯಜ್ಞ ಇವು ಸರ್ವದಸ್ಯುಗಳ ಕರ್ತವ್ಯಗಳಾಗಿವೆ. ಅನಘ! ಪಾರ್ಥಿವ! ಈ ಪ್ರಕಾರವಾಗಿ ಸರ್ವಲೋಕದ ಕರ್ಮ-ಕರ್ತವ್ಯಗಳು ಮೊದಲೇ ವಿಹಿತಗೊಂಡಿವೆ.”

ಮಾಂಧಾತನು ಹೇಳಿದನು:

“ಮಾನವ ಲೋಕದಲ್ಲಿ ಸರ್ವವರ್ಣಗಳಲ್ಲಿಯೂ ದಸ್ಯುಗಳು ಕಂಡುಬರುತ್ತಾರೆ. ನಾಲ್ಕೂ ಆಶ್ರಮಗಳಲ್ಲಿಯೂ ಅವರು ಮರೆಮಾಚಿ ನಡೆದುಕೊಳ್ಳುತ್ತಾರೆ.”

ಇಂದ್ರನು ಹೇಳಿದನು:

“ರಾಜನ ದೌರಾತ್ಮ್ಯದಿಂದ ದಂಡನೀತಿಯು ನಶಿಸುತ್ತದೆ. ರಾಜಧರ್ಮವು ನಡೆಯದೇ ಇದ್ದಾಗ ಜೀವಿಗಳು ಭ್ರಾಂತಿಗೊಳಗಾಗುತ್ತವೆ. ಈ ಕೃತಯುಗವು ಕಳೆದ ನಂತರ ನಾನಾವೇಷ ಧಾರೀ ಅಸಂಖ್ಯಾತ ಸಂನ್ಯಾಸಿಗಳು ಹುಟ್ಟಿಕೊಳ್ಳುತ್ತಾರೆ. ಆಶ್ರಮಗಳೂ ವಿಕಲ್ಪಗೊಳ್ಳುತ್ತವೆ. ಶ್ರೇಯಸ್ಕರ ಮಾರ್ಗವಾದ ಪುರಾಣಧರ್ಮಗಳನ್ನು ಅವರು ಕೇಳದೇ ಕಾಮ-ಕ್ರೋಧಗಳಿಂದ ಪ್ರೇರಿತರಾಗಿ ಬೇರೆಯೇ ದಾರಿಯನ್ನು ಹಿಡಿಯುತ್ತಾರೆ. ಮಹಾತ್ಮರು ದಂಡನೀತಿಯಿಂದ ಪಾಪವನ್ನು ತಡೆಯುವವರೆಗೆ ಶಾಶ್ವತವಾದ ಪರಮ ಧರ್ಮವು ಒಳ್ಳೆಯದಾಗಿ ನಡೆಯುತ್ತಿರುತ್ತಿದೆ. ಪರಲೋಕಗುರುವಾದ ರಾಜನನ್ನು ಅಪಮಾನಿಸುವವನ ದಾನವಾಗಲೀ, ಯಜ್ಞವಾಗಲೀ ಮತ್ತು ಶ್ರಾದ್ಧವಾಗಲೀ ಫಲಗಳನ್ನೀಡುವುದಿಲ್ಲ. ಮನುಷ್ಯರ ಅಧಿಪತಿ ಸನಾತನ ದೇವಸಂಭೂತ ಧರ್ಮಕಾಮ ನರೇಶ್ವರನನ್ನು ದೇವತೆಗಳೂ ಕೂಡ ಬಹಳವಾಗಿ ಮನ್ನಿಸುತ್ತಾರೆ. ಭಗವಾನ್ ಪ್ರಜಾಪತಿಯು ಈ ಸರ್ವ ಜಗತ್ತನ್ನೂ ಸೃಷ್ಟಿಸಿದನು. ಅವನು ಧರ್ಮಗಳ ಪ್ರವೃತ್ತಿ-ನಿವೃತ್ತಿಗಳ ಸಲುವಾಗಿ ಕ್ಷತ್ರಧರ್ಮವನ್ನು ಇಚ್ಛಿಸಿದನು. ಬುದ್ಧಿಪೂರ್ವಕವಾಗಿ ಧರ್ಮದ ಪ್ರವೃತ್ತಿಯನ್ನೇ ಸ್ಮರಿಸಿವವನು ನನಗೆ ಮಾನ್ಯನೂ ಪೂಜ್ಯನೂ ಆಗುತ್ತಾನೆ. ಅದರಲ್ಲಿಯೇ ಕ್ಷತ್ರಧರ್ಮವು ಪ್ರತಿಷ್ಠಿತಗೊಂಡಿದೆ.”

***

ಭೀಷ್ಮನು ಹೇಳಿದನು:

“ಹೀಗೆ ಹೇಳಿ ಆ ಭಗವಾನ್ ಪ್ರಭುವು ಮರುದ್ಗಣಗಳಿಂದ ಸುತ್ತುವರೆಯಲ್ಪಟ್ಟು ಪರಮ ಪದ ಅಕ್ಷರ ವಿಷ್ಣುವಿನ ಭವನಕ್ಕೆ ತೆರಳಿದನು. ಅನಘ! ಹಿಂದೆ ಹೀಗೆ ಸುಚರಿತ ಧರ್ಮವು ನಡೆಯುತ್ತಿರಲು ಬಹುಶ್ರುತ ಚೇತನಾವಂತನಾದ ಯಾರುತಾನೇ ಕ್ಷತ್ರಧರ್ಮವನ್ನು ಅಪಮಾನಿಸುತ್ತಾರೆ? ಧರ್ಮಗಳ ಪ್ರವೃತ್ತಿ-ನಿವೃತ್ತಿಗಳ ಈ ಕ್ಷತ್ರಧರ್ಮವನ್ನು ಅನ್ಯಾಯವಾಗಿ ತೊರೆದವನು ಕುರುಡನಂತೆ ಮಧ್ಯದಲ್ಲಿಯೇ ವಿನಾಶವನ್ನು ಹೊಂದುತ್ತಾನೆ. ಪುರುಷವ್ಯಾಘ್ರ! ಅನಘ! ಹಿಂದೆಯೇ ಪ್ರಾರಂಭಿಸಲ್ಪಟ್ಟ ಮತ್ತು ಮೊದಲಿನಿಂದಲೂ ಆಶ್ರಯಭೂತವಾದ ರಾಜಧರ್ಮದ ಚಕ್ರದಂತೆ ನಡೆದುಕೋ! ನಿನ್ನನ್ನು ನಾನು ಅರಿತುಕೊಂಡಿದ್ದೇನೆ.”

Leave a Reply

Your email address will not be published. Required fields are marked *