ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ -1
ಯುಧಿಷ್ಠಿರನು ಕೇಳಲು ಭೀಷ್ಮನು ರಾಜಧರ್ಮವನ್ನು ವರ್ಣಿಸುತ್ತಾ ರಾಜನಿಗೆ ಪುರುಷಾರ್ಥ ಮತ್ತು ಸತ್ಯದ ಅವಶ್ಯಕತೆಗಳನ್ನು ಪ್ರತಿಪಾದಿಸುವ ಹಾಗೂ ರಾಜನ ಧರ್ಮಾನುಕೂಲ ಮತ್ತು ನೀತಿಪೂರ್ಣ ವ್ಯವಹಾರಗಳನ್ನು ವರ್ಣಿಸುವ ಈ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 56-57ರಲ್ಲಿ ಬರುತ್ತದೆ.
***
ಹೃಷೀಕೇಶನಿಗೆ ನಮಸ್ಕರಿಸಿ, ಪಿತಾಮಹನಿಗೂ ಅಭಿವಾದನ ಮಾಡಿ, ಸರ್ವ ಗುರುಗಳ ಅನುಮತಿಯನ್ನೂ ಪಡೆದು ಯುಧಿಷ್ಠಿರನು ಭೀಷ್ಮನನ್ನು ಪ್ರಶ್ನಿಸಿದನು:
“ಪಾರ್ಥಿವ! ರಾಜನಿಗೆ ರಾಜ್ಯವೇ ಪರಮ ಧರ್ಮವೆಂದು ಧರ್ಮವನ್ನು ತಿಳಿದವರು ಹೇಳುತ್ತಾರೆ. ಆದರೆ ಈ ರಾಜಧರ್ಮವು ಅತ್ಯಂತ ದೊಡ್ಡ ಹೊಣೆಯೆಂದು ನನಗನ್ನಿಸುತ್ತದೆ. ಅದರ ಕುರಿತು ಹೇಳು! ಪಿತಾಮಹ! ವಿಶೇಷವಾಗಿ ರಾಜಧರ್ಮಗಳ ಕುರಿತೇ ಹೇಳು! ಲೋಕದ ಸರ್ವ ಜೀವಿಗಳಿಗೆ ರಾಜಧರ್ಮಗಳೇ ಆಶ್ರಯಸ್ಥಾನವಾಗಿವೆ. ಕೌರವ! ರಾಜಧರ್ಮಗಳಲ್ಲಿ ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳೂ ಸೇರಿಕೊಂಡಿವೆ. ಸಕಲ ಮೋಕ್ಷಧರ್ಮವೂ ಇದರಲ್ಲಿಯೇ ಸೇರಿಕೊಂಡಿದೆ. ಕುದುರೆಗಳಿಗೆ ಕಡಿವಾಣಗಳು ಹೇಗೋ ಮತ್ತು ಆನೆಗೆ ಅಂಕುಶವು ಹೇಗೋ ಹಾಗೆ ರಾಜಧರ್ಮವು ಲೋಕವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಅವಶ್ಯಕವೆಂದು ಹೇಳುತ್ತಾರೆ. ರಾಜರ್ಷಿಗಳು ನಡೆದುಕೊಂಡು ಬಂದಿರುವ ಈ ಧರ್ಮದ ವಿಷಯದಲ್ಲಿ ವಿಮೋಹಗೊಂಡರೆ ಲೋಕದ ವ್ಯವಸ್ಥೆಯೇ ಅಸ್ತವ್ಯಸ್ತವಾಗುತ್ತದೆ. ಎಲ್ಲವೂ ವ್ಯಾಕುಲಗೊಳ್ಳುತ್ತವೆ. ಸೂರ್ಯನು ಉದಯಿಸುತ್ತಿದ್ದಂತೆಯೇ ಅಮಂಗಳಕರ ಕತ್ತಲೆಯು ನಾಶವಾಗುವಂತೆ ರಾಜಧರ್ಮದಿಂದ ಲೋಕದ ಅಮಂಗಳಕರ ಅಪ್ರಕಾಶ ಮಾರ್ಗವು ದೂರವಾಗುತ್ತದೆ. ಪಿತಾಮಹ! ಭರತಶ್ರೇಷ್ಠ! ನೀನು ಬುದ್ಧಿವಂತರಲ್ಲಿಯೇ ಶ್ರೇಷ್ಠನಾಗಿರುವೆ! ಆದುದರಿಂದ ಮೊದಲು ನನಗೆ ರಾಜಧರ್ಮಗಳನ್ನು ತತ್ತ್ವಾರ್ಥಗಳೊಂದಿಗೆ ಹೇಳಿ ತಿಳಿಸು! ಪರಂತಪ! ಅನಂತರ ಆಗಮಗಳ ತತ್ತ್ವಗಳೆಲ್ಲವನ್ನೂ ಹೇಳು. ನೀನು ಪರಮ ಬುದ್ಧಿಯುಳ್ಳವನು ಎಂದು ವಾಸುದೇವನ ಅಭಿಪ್ರಾಯವಾಗಿದೆ!”
ಭೀಷ್ಮನು ಹೇಳಿದನು:
“ಮಹತ್ತರ ಧರ್ಮಕ್ಕೆ ನಮಸ್ಕಾರ! ವಿಶ್ವದ ಸೃಷ್ಟಿಗೆ ಕಾರಣನಾದ ಕೃಷ್ಣನಿಗೆ ನಮಸ್ಕಾರ! ಬ್ರಾಹ್ಮಣರಿಗೆ ನಮಸ್ಕರಿಸಿ ಶಾಶ್ವತ ಧರ್ಮಗಳ ಕುರಿತು ಹೇಳುತ್ತೇನೆ. ಯುಧಿಷ್ಠಿರ! ನನ್ನಿಂದ ರಾಜಧರ್ಮಗಳ ಕುರಿತು ಸಂಪೂರ್ಣವಾಗಿ ಕೇಳು. ನಾನು ಹೇಳುವಾಗ ಕೂಡ ಮಧ್ಯದಲ್ಲಿ ನೀನು ಬೇಕಾದ ಪ್ರಶ್ನೆಗಳನ್ನು ಕೇಳಬಹುದು! ಕುರುಶ್ರೇಷ್ಠ! ಮೊಟ್ಟಮೊದಲನೆಯದಾಗಿ ರಾಜನು ಯಥಾವಿಧಿಯಾಗಿ ದೇವತೆಗಳನ್ನು ಮತ್ತು ದ್ವಿಜರನ್ನು ತೃಪ್ತಿಗೊಳಿಸುವಂತೆ ನಡೆದುಕೊಳ್ಳಬೇಕು. ಕುರೂದ್ವಹ! ದೇವತೆಗಳನ್ನು ಮತ್ತು ಬ್ರಾಹ್ಮಣರನ್ನು ಅರ್ಚಿಸಿದ ರಾಜನು ಧರ್ಮದ ಋಣದಿಂದ ಮುಕ್ತನಾಗುತ್ತಾನೆ ಮತ್ತು ಲೋಕದಲ್ಲಿ ಮಾನ್ಯನಾಗುತ್ತಾನೆ. ಮಗೂ ಯುಧಿಷ್ಠಿರ! ಸದಾ ಪುರುಷಾರ್ಥಗಳ ಸಿದ್ಧಿಗಾಗಿ ಪ್ರಯತ್ನಶೀಲನಾಗಿರಬೇಕು! ಪುರುಷಪ್ರಯತ್ನವಿಲ್ಲದೇ ರಾಜರಿಗೆ ಕೇವಲ ದೈವವು ಮಾತ್ರ ಪುರುಷಾರ್ಥಗಳನ್ನು ಅನುಗ್ರಹಿಸುವುದಿಲ್ಲ. ಸಾಧಾರಣವಾಗಿ ಅದೃಷ್ಟ ಮತ್ತು ಪುರುಷಪ್ರಯತ್ನ ಇವೆರಡೂ ಕಾರ್ಯದ ಸಿದ್ಧಿಗೆ ಕಾರಣಗಳೆನಿಸಿಕೊಳ್ಳುತ್ತವೆ. ಆದರೆ ಇವೆರಡರಲ್ಲಿ ಪುರುಷಪ್ರಯತ್ನವೇ ಶ್ರೇಷ್ಠವೆಂದು ನನಗನ್ನಿಸುತ್ತದೆ. ಏಕೆಂದರೆ ಅದೃಷ್ಟವು ಮೊದಲೇ ನಿಶ್ಚಿತವಾಗಿಬಿಟ್ಟಿರುತ್ತದೆ. ಮಗೂ! ಪ್ರಾರಂಭಿಸಿದ ಕಾರ್ಯವು ಸಿದ್ಧಿಯಾಗದಿದ್ದರೂ ಸಂತಾಪಪಡಬಾರದು. ಒಂದು ಉಪಾಯವು ಫಲಿಸದಿದ್ದರೆ ಇನ್ನೊಂದು ಉಪಾಯವನ್ನು ಬಳಸಬೇಕಾಗುತ್ತದೆ. ಸತ್ಯವನ್ನು ಬಿಟ್ಟು ಬೇರೆ ಯಾವುದೂ ರಾಜನ ಸಿದ್ಧಿಗೆ ಕಾರಣವಾಗುವುದಿಲ್ಲ. ಸತ್ಯದಲ್ಲಿಯೇ ನಿರತನಾದ ರಾಜನು ಇಹದಲ್ಲಿಯೂ ಪರದಲ್ಲಿಯೂ ಸುಖವನ್ನು ಅನುಭವಿಸುತ್ತಾನೆ. ರಾಜೇಂದ್ರ! ಋಷಿಗಳಿಗೆ ಕೂಡ ಸತ್ಯವೇ ಪರಮ ಧನವು. ಹಾಗೆಯೇ ರಾಜರಿಗೆ ಸತ್ಯವನ್ನು ಬಿಟ್ಟರೆ ಬೇರೆ ಯಾವುದೂ ಪ್ರಜೆಗಳ ವಿಶ್ವಾಸಕ್ಕೆ ಕಾರಣವಾಗುವುದಿಲ್ಲ. ಗುಣವಂತನೂ, ಶೀಲವಂತನೂ, ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವವನೂ, ವೃದುಸ್ವಭಾವದವನೂ, ದಾನಮಾಡುವ ಉದಾರಬುದ್ಧಿಯುಳ್ಳವನೂ, ಸ್ಥೂಲಲಕ್ಷ್ಯನೂ ಆದ ರಾಜನು ಯಾವಾಗಲೂ ಶ್ರೀಯಿಂದ ಭ್ರಷ್ಟನಾಗುವುದಿಲ್ಲ. ಕುರುನಂದನ! ಸರ್ವಕಾರ್ಯಗಳಲ್ಲಿ ಸರಳತೆಯನ್ನು ಬಳಸಬೇಕು. ಆದರೆ ನೀತಿಶಾಸ್ತ್ರದ ಪರಾಮರ್ಶೆಯಂತೆ ಮೂರನ್ನು[1] ಮಾತ್ರ ಗುಟ್ಟಾಗಿಡಬೇಕು. ರಾಜನು ಮೃದುಸ್ವಭಾವದವನಾಗಿರಬೇಕು. ಆದರೆ ಎಲ್ಲ ಸಂದರ್ಭಗಳಲ್ಲಿಯೂ ಮೃದುವಾಗಿದ್ದರೆ ಎಲ್ಲರೂ ಅವನನ್ನು ಉಲ್ಲಂಘಿಸಬಹುದು. ಹೀಗೆಂದು ರಾಜನು ಸದಾ ಕ್ರೂರಿಯೂ ಆಗಿರಬಾರದು. ಸರ್ವದಾ ಕ್ರೂರಿಯಾಗಿದ್ದರೆ ಜನರು ಉದ್ವಿಗ್ನರಾಗುತ್ತಾರೆ.
ಭಾರತ! ದಾನಿಗಳಲ್ಲಿ ಶ್ರೇಷ್ಠ! ನೀನು ಎಂದೂ ಬ್ರಾಹ್ಮಣರನ್ನು ದಂಡಿಸಬಾರದು. ಏಕೆಂದರೆ ಬ್ರಾಹ್ಮಣನೆಂಬುವನೇ ಲೋಕದ ಜೀವಿಗಳಲ್ಲಿ ಶ್ರೇಷ್ಠನು. ರಾಜೇಂದ್ರ! ಕೌರವ್ಯ! ಈ ಧರ್ಮದ ಕುರಿತು ಮನುವು ಈ ಎರಡು ಶ್ಲೋಕಗಳನ್ನು ಹೇಳಿದ್ದಾನೆ. ಇವೆರಡನ್ನು ನೀನು ಹೃದ್ಗತಮಾಡಿಕೊಳ್ಳಬೇಕು. “ಅಗ್ನಿಯು ನೀರಿನಿಂದ, ಕ್ಷತ್ರಿಯನು ಬ್ರಾಹ್ಮಣನಿಂದ ಮತ್ತು ಲೋಹವು ಕಲ್ಲಿನಿಂದ ಹುಟ್ಟಿವೆ. ಸರ್ವತ್ರವೂ ತಮ್ಮ ತೇಜಸ್ಸನ್ನು ಬೀರುವ ಅಗ್ನಿ, ಕ್ಷತ್ರಿಯ ಮತ್ತು ಲೋಹಗಳು ಅವುಗಳ ಜನ್ಮಸ್ಥಾನಗಳಲ್ಲಿ ಪ್ರಭಾವ ಬೀರುವುದಿಲ್ಲ ಮಾತ್ರವಲ್ಲದೇ ಅವುಗಳಲ್ಲಿ ವಿನಾಶವನ್ನೇ ಹೊಂದುತ್ತವೆ. ಕಲ್ಲನ್ನು ಒಡೆಯಲು ಹೋದ ಲೋಹವು ಮೊಂಡಾಗುತ್ತದೆ. ನೀರನ್ನು ಸುಡಲು ಹೋದರೆ ಅಗ್ನಿಯೇ ಆರಿಹೋಗುತ್ತದೆ. ಕ್ಷತ್ರಿಯನು ಬ್ರಾಹ್ಮಣನನ್ನು ದ್ವೇಷಿಸಿದರೆ ನಾಶವಾಗುತ್ತಾನೆ. ಹೀಗೆ ಈ ಮೂರೂ ನಾಶಹೊಂದುತ್ತವೆ.” ಮಹಾರಾಜ! ಇದನ್ನು ಅರಿತುಕೊಂಡು ನೀನು ದ್ವಿಜರ ಕುರಿತು ಪೂಜ್ಯಭಾವವನ್ನೇ ತಾಳಿಕೊಂಡಿರಬೇಕು. ಶಮಾನ್ವಿತರಾದ ಬ್ರಾಹ್ಮಣರು ಭೂಮಿಯಲ್ಲಿ ಬ್ರಹ್ಮವನ್ನೇ ಧರಿಸಿಕೊಂಡಿರುತ್ತಾರೆ. ನರವ್ಯಾಘ್ರ! ಆದರೆ ಬ್ರಾಹ್ಮಣರು ಲೋಕತಂತ್ರವನ್ನು ನಾಶಗೊಳಿಸುವವರಾಗಿದ್ದರೆ ಅವರನ್ನು ಸತತವಾಗಿ ಬಾಹುಬಲದಿಂದ ನಿಗ್ರಹಿಸಬೇಕು. ಮಗೂ! ನೃಪ! ಮಹಾಪ್ರಾಜ್ಞ! ಇದರ ಕುರಿತಾಗಿ ಹಿಂದೆ ಮಹರ್ಷಿ ಉಶನಸನು ಈ ಎರಡು ಶ್ಲೋಕ ಗೀತೆಗಳನ್ನು ರಚಿಸಿದ್ದಾನೆ. ಅವುಗಳನ್ನು ಏಕಾಗ್ರಚಿತ್ತನಾಗಿ ಕೇಳು! “ಶಸ್ತ್ರಗಳನ್ನೆತ್ತಿ ವೇದಾಂತಗನು ರಣದಲ್ಲಿ ಬಂದರೆ ಧರ್ಮಾಪೇಕ್ಷೀ ನರೇಶ್ವರನು ಸ್ವಧರ್ಮವನ್ನನುಸರಿಸಿ ಅವನನ್ನು ಸಂಹರಿಸಬೇಕು. ವಿನಾಶವಾಗುತ್ತಿರುವ ಧರ್ಮವನ್ನು ರಕ್ಷಿಸುವವನೇ ಧರ್ಮವಿದುವು. ಆಗ ರಾಜನು ಆ ಬ್ರಾಹ್ಮಣನನ್ನು ಕೊಂದಂತಾಗುವುದಿಲ್ಲ. ಕೋಪವೇ ಬ್ರಾಹ್ಮಣನ ನಾಶಕ್ಕೆ ಕಾರಣವೆನಿಸುತ್ತದೆ.”
ನರಶ್ರೇಷ್ಠ! ಹೀಗಿದ್ದರೂ ಬ್ರಾಹ್ಮಣರನ್ನು ರಕ್ಷಿಸಲೇ ಬೇಕು. ಅಪರಾಧವನ್ನೆಸಗಿದ ಬ್ರಾಹ್ಮಣನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ವಿಶಾಂಪತೇ! ಮಹಾಪಾಪಿಗಳಾದ ಬ್ರಾಹ್ಮಣರ ಮೇಲೂ ಕೃಪೆಯನ್ನೇ ತೋರಬೇಕು. ಬ್ರಹ್ಮಹತ್ಯೆ ಮಾಡಿದ, ಗುರುಪತ್ನೀಸಮಾಗಮ ಮಾಡಿದ, ಭ್ರೂಣಹತ್ಯೆ ಮಾಡಿದ ಮತ್ತು ರಾಜದ್ರೋಹವನ್ನೆಸಗಿದ ವಿಪ್ರನನ್ನು ರಾಜ್ಯದ ಹೊರಗೆ ಕಳುಹಿಸಬೇಕು. ಶಾರೀರಕ ಶಿಕ್ಷೆಯ ಭಯವನ್ನು ಮಾತ್ರ ಯಾವಾಗಲೂ ವಿಧಿಸಬಾರದು. ಪುರುಷಸತ್ತಮ! ಅಂಥವನು ನಿತ್ಯವೂ ಜನರ ಪ್ರಿಯನಾಗಿರುತ್ತಾನೆ. ರಾಜನಾದವನಿಗೆ ಪ್ರಜೆಗಳ ಪ್ರೀತಿಸಂಚಯವೇ ಉತ್ತಮ ಧನಸಂಗ್ರಹವೆಂದು ಭಾವಿಸಬೇಕು. ಮಹಾರಾಜ! ಆರು ದುರ್ಗ[2]ಗಳಲ್ಲಿ ಮನುಷ್ಯದುರ್ಗವೇ ಎಲ್ಲ ದುರ್ಗಗಳಿಗಿಂತ ದುಸ್ತರವಾದುದೆಂದು ಶಾಸ್ತ್ರನಿಶ್ಚಿತವಾಗಿದೆ. ಆದುದರಿಂದ ರಾಜನು ನಿತ್ಯವೂ ಚಾತುರ್ವಣ್ಯಗಳ ಮೇಲೆ ದಯಾಪರನಾಗಿರಬೇಕು. ಸತ್ಯವಾಕ್ಯ ಧರ್ಮಾತ್ಮ ರಾಜನು ಪ್ರಜೆಗಳನ್ನು ರಂಜಿಸುತ್ತಾನೆ. ಪುರುಷಸತ್ತಮ! ಆದರೆ ನೀನು ನಿತ್ಯವೂ ಕ್ಷಮಾವಂತನಾಗಿರಕೂಡದು. ಮೃದುವಾಗಿರುವುದು ಆನೆಗೆ ಹೇಗೋ ಹಾಗೆ ಸದಾ ಕ್ಷಮಾವಂತನಾಗಿರುವುದು ರಾಜನಿಗೂ ಅಧರ್ಮ. ಮಹಾರಾಜ! ಇದೇ ಅರ್ಥಕೊಡುವ ಶ್ಲೋಕಗಳನ್ನು ಹಿಂದೆ ಬೃಹಸ್ಪತಿಯು ತನ್ನ ಶಾಸ್ತ್ರದಲ್ಲಿ ಹೇಳಿದ್ದನು. ಅದನ್ನು ಪುನಃ ಕೇಳು. “ಮಾವಟಿಗನು ಆನೆಯ ಶಿರವನ್ನೇ ಏರಿ ಕುಳಿತುಕೊಳ್ಳುವಂತೆ ಕ್ಷಮಾವಂತನಾದ ನೃಪನನ್ನು ನೀಚ ಜನರು ನಿತ್ಯವೂ ತಿರಸ್ಕರಿಸುತ್ತಿರುತ್ತಾರೆ.”
ವಸಂತ ಋತುವಿನಲ್ಲಿ ಶ್ರೀಮಾನ್ ಸೂರ್ಯನು ಅತ್ಯಂತ ಶೀತಲನೂ ಪ್ರಖರನೂ ಆಗಿರುವುದಿಲ್ಲವೋ ಹಾಗೆ ನೃಪನೂ ಕೂಡ ನಿತ್ಯವೂ ಅತ್ಯಂತ ಮೃದುವಾಗಿಯೂ ತೀಕ್ಷ್ಣನಾಗಿಯೂ ಇರಬಾರದು. ಮಹಾರಾಜ! ಪ್ರತ್ಯಕ್ಷ್ಯ[3], ಅನುಮಾನ[4], ಉಪಮಾನ[5] ಮತ್ತು ಉಪದೇಶ[6]ಗಳಿಂದ ಸರ್ವದಾ ತನ್ನವರು ಯಾರು ಮತ್ತು ಶತ್ರುಗಳು ಯಾರು ಎನ್ನುವುದನ್ನು ಪರೀಕ್ಷಿಸುತ್ತಿರಬೇಕು. ಭೂರಿದಕ್ಷಿಣ! ಎಲ್ಲ ವ್ಯಸನಗಳನ್ನೂ[7] ತ್ಯಜಿಸಿಬಿಡಬೇಕು. ಆದರೆ ಇವುಗಳಲ್ಲಿ ಕೆಲವನ್ನು ಕೆಲವು ಸಮಯಗಳಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅವುಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಇಟ್ಟುಕೊಂಡಿರಬಾರದು. ನಿತ್ಯವೂ ವ್ಯಸನಿಯಾಗಿದ್ದುಕೊಂಡು ಬೇರೆಯವರನ್ನು ಸದಾ ದ್ವೇಷಿಸುತ್ತಾ ಲೋಕವನ್ನೇ ಉದ್ವೇಗಗೊಳಿಸುವ ರಾಜನು ಜನರ ತಿರಸ್ಕಾರಕ್ಕೆ ಪಾತ್ರನಾಗುತ್ತಾನೆ. ಮಹಾರಾಜ! ರಾಜನಾದವನು ಸದಾ ಗರ್ಭಿಣೀ ಸ್ತ್ರೀಯಂತೆ ವ್ಯವಹರಿಸಬೇಕು. ಇದಕ್ಕೆ ಕಾರಣವನ್ನು ಹೇಳುತ್ತೇನೆ, ಕೇಳು. ಕುರುಶ್ರೇಷ್ಠ! ಗರ್ಭಿಣೀ ಸ್ತ್ರೀಯು ಹೇಗೆ ತನ್ನ ಮನೋಕಾಮನೆಗಳನ್ನು ದೂರೀಕರಿಸಿ ಗರ್ಭಸ್ಥವಾಗಿರುವ ಶಿಶುವಿನ ಹಿತದಲ್ಲಿಯೇ ಆಸಕ್ತಳಾಗಿರುವಳೋ ಹಾಗೆ ರಾಜನೂ ಕೂಡ ನಿಸ್ಸಂಶಯವಾಗಿ ತನ್ನ ಸಂತೋಷವನ್ನು ದೂರೀಕರಿಸಿ ಲೋಕಹಿತಕ್ಕಾಗಿ ನಿತ್ಯವೂ ಧರ್ಮನಿರತನಾಗಿರಬೇಕು. ಪಾಂಡವ! ರಾಜನು ಎಂದೂ ತನ್ನ ಧೈರ್ಯವನ್ನು ತೊರೆಯಬಾರದು. ಧೀರನಾದ ಮತ್ತು ಸ್ಪಷ್ಟವಾದ ಶಿಕ್ಷೆಯನ್ನು ನೀಡುವವನ ಆಜ್ಞೆಗಳನ್ನು ಯಾರೂ ಉಲ್ಲಂಘಿಸುವುದಿಲ್ಲ. ವಾಗ್ಮಿಗಳಲ್ಲಿ ಶ್ರೇಷ್ಠನೇ! ಸೇವಕರೊಡನೆ ನಿತ್ಯವೂ ಪರಿಹಾಸಗಳಲ್ಲಿ ತೊಡಗಬಾರದು. ಇದು ರಾಜನ ಕರ್ತ್ಯವ್ಯ. ರಾಜಶಾರ್ದೂಲ! ಇದರಲ್ಲಿ ದೋಷವೇನೆನ್ನುವುದನ್ನು ಕೇಳು.
ರಾಜನ ಆಶ್ರಯದಿಂದಲೇ ಜೀವನವನ್ನು ನಡೆಸುವ ಸೇವಕರು ನಿಕಟ ಸಂಪರ್ಕದಿಂದಾಗಿ ತಮ್ಮ ಒಡೆಯನನ್ನೇ ಕೀಳುಭಾವನೆಯಿಂದ ಕಾಣುತ್ತಾರೆ. ಅವನಿಗೆ ಮರ್ಯಾದೆಯನ್ನು ಕೊಡದೇ, ಅವರು ತಮ್ಮ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡುವುದಿಲ್ಲ. ಅವನ ಆಜ್ಞೆಯನ್ನೂ ಉಲ್ಲಂಘಿಸುತ್ತಾರೆ. ಒಂದು ಕೆಲಸಕ್ಕೆ ಕಳುಹಿಸಿದರೆ ಬೇರೆಯದನ್ನೇ ಮಾಡಿಬರುತ್ತಾರೆ. ಗುಟ್ಟುಗಳನ್ನು ಬಯಲುಮಾಡುತ್ತಾರೆ. ಕೇಳಬಾರದವುಗಳನ್ನು ಕೇಳುತ್ತಾರೆ. ರಾಜನ ಭೋಜನವನ್ನೂ ಊಟಮಾಡುತ್ತಾರೆ. ರಾಜನು ಸಲಿಗೆಯಲ್ಲಿರುವ ಸೇವಕರು ಕುಪಿತರಾಗುತ್ತಾರೆ. ರಾಜನ ಆಸನದಲ್ಲಿಯೇ ಕುಳಿತುಕೊಳ್ಳಲು ನೋಡುತ್ತಾರೆ. ರಾಜನಿರುವನೆಂಬ ಪರಿವೆಯೇ ಇಲ್ಲದೇ ಜೋರಾಗಿ ಮಾತನಾಡುತ್ತಾರೆ. ಲಂಚ-ಮೋಸಗಳಿಂದ ರಾಜನ ಕಾರ್ಯಗಳನ್ನು ಹಾಳುಮಾಡುತ್ತಾರೆ. ರಾಜಾಜ್ಞೆಯ ನಕಲುಗಳನ್ನು ತಮಗೆ ಇಚ್ಛೆಬಂದಂತೆ ಹೊರಡಿಸಿ ದೇಶವನ್ನು ಶಿಥಿಲಗೊಳಿಸುತ್ತಾರೆ. ಪಹರೆಯವರ ಸ್ತ್ರೀವೇಷವನ್ನೇ ಧರಿಸಿ ಅಂತಃಪುರದ ಒಳಗೆ ಹೋಗುತ್ತಾರೆ. ನರಶಾರ್ದೂಲ! ರಾಜನು ಸಲಿಗೆಯಿಂದಿದ್ದ ಸೇವಕರು ಅವನ ಸನ್ನಿಧಿಯಲ್ಲಿಯೇ ಆಕಳಿಸುತ್ತಾರೆ ಮತ್ತು ಉಗುಳುತ್ತಾರೆ. ನಾಚಿಕೆಗೆಟ್ಟವರಾಗಿ ರಾಜನ ಮಾತುಗಳನ್ನು ಹೊರಹಾಕುತ್ತಾರೆ. ಹಾಸ್ಯಪ್ರವೃತ್ತಿಯವನೂ ಅತಿಮೃದುಸ್ವಭಾವದವನೂ ಆದ ರಾಜನ ಸೇವಕರು ರಾಜನಿಗೆಂದಿರುವ ಕುದುರೆ, ಆನೆ ಅಥವಾ ರಥವನ್ನು ಅವನನ್ನೇ ಅನಾದರಿಸಿ ತಮಗಾಗಿ ಬಳಸಿಕೊಳ್ಳುತ್ತಾರೆ ಕೂಡ. ಗಣ್ಯರಿರುವ ರಾಜಸಭೆಯಲ್ಲಿಯೂ ಅವರು ಸ್ನೇಹಿತರಂತೆ ಅತಿ ಸಲುಗೆಯಿಂದ “ರಾಜನ್! ಇದು ನಿನಗೆ ಕಷ್ಟವಾದುದು! ನೀನು ಮಾಡಿದ ಇದು ಸರಿಯಲ್ಲ!” ಎಂದು ಹೇಳುತ್ತಿರುತ್ತಾರೆ. ರಾಜನು ಕ್ರುದ್ಧನಾದರೆ ಇವರು ನಗುತ್ತಾರೆ. ರಾಜನು ಗೌರವಿಸಿದರೆ ಸಂತೋಷಪಡುವುದಿಲ್ಲ. ಸ್ವಾರ್ಥಕ್ಕಾಗಿ ಸದಾ ಸಂಘರ್ಷಶೀಲರಾಗಿಯೇ ಇರುತ್ತಾರೆ. ಗುಪ್ತಸಮಾಲೋಚನೆಗಳನ್ನು ಬಹಿರಂಗಗೊಳಿಸುತ್ತಾರೆ. ಮಾಡಿದ ತಪ್ಪುಗಳನ್ನು ಹೊರಹಾಕುತ್ತಾರೆ. ರಾಜಶಾಸನವನ್ನು ಮತ್ತು ಆಜ್ಞೆಯನ್ನು ಕೂಡ ಆಟವೋ ಎನ್ನುವಂತೆ ಅಸಡ್ಡೆಯಿಂದ ಮಾಡುತ್ತಾರೆ. ರಾಜನ ಅಲಂಕಾರ, ಭೋಜನ, ಸ್ನಾನ ಮತ್ತು ಗಂಧಾನುಲೇಪನಗಳ ವಿಷಯಗಳಲ್ಲಿಯೂ ಸೇವಕರು ಅವನಿಗೆ ಕೇಳಿಸುವಂತೆಯೇ ನಿರ್ಭಯರಾಗಿ ಕುತ್ಸಿತ ಮಾತುಗಳನ್ನಾಡುತ್ತಿರುತ್ತಾರೆ. ಭಾರತ! ವಹಿಸಿಕೊಟ್ಟಿರುವ ಕಾರ್ಯಗಳನ್ನು ದೂಷಿಸುತ್ತಾರೆ. ವಹಿಸಿದ ಕಾರ್ಯಗಳನ್ನು ಪೂರೈಸದೇ ಮಧ್ಯದಲ್ಲಿಯೇ ಬಿಟ್ಟುಬಿಡುತ್ತಾರೆ. ವೇತನದಲ್ಲಿ ತೃಪ್ತಿಯಿರುವುದಿಲ್ಲ. ರಾಜನು ಕೊಟ್ಟ ದಾನಗಳನ್ನೂ ಕದಿಯುತ್ತಾರೆ. ದಾರಕ್ಕೆ ಕಟ್ಟಿದ ಪಕ್ಷಿಯಂತೆ ರಾಜನನ್ನು ಆಡಿಸಲು ಬಯಸುತ್ತಾರೆ. ರಾಜನು ನಾನು ಹೇಳಿದಂತೆ ಕೇಳುತ್ತಾನೆ ಎಂದು ಜನರೊಂದಿಗೆ ಆಡಿಕೊಳ್ಳುತ್ತಿರುತ್ತಾರೆ. ಯುಧಿಷ್ಠಿರ! ರಾಜನು ಅತಿಮೃದುವಾಗಿಯೂ ಹಾಸ್ಯಪ್ರವೃತ್ತಿಯುಳ್ಳವನಾಗಿಯೂ ಇದ್ದರೆ ಇದಕ್ಕೂ ಮೀರಿ ಇತರ ದೋಷಗಳೂ ಉಂಟಾಗುತ್ತವೆ.
ಯುಧಿಷ್ಠಿರ! ರಾಜನು ನಿತ್ಯವೂ ಉದ್ಯೋಗಶೀಲನಾಗಿರಬೇಕು. ಗೃಹಕೃತ್ಯಗಳಲ್ಲಿ ಅನಾಸಕ್ತಳಾದ ನಾರಿಯಂತೆ ನಿರುದ್ಯೋಗಿಯಾದ ರಾಜನು ಪ್ರಶಂಸೆಗೆ ಪಾತ್ರನಾಗುವುದಿಲ್ಲ. ವಿಶಾಂಪತೇ! ಇದಕ್ಕೆ ಸಂಬಂಧಿಸಿದಂತೆ ಭಗವಾನ್ ಉಶನನು ಒಂದು ಶ್ಲೋಕವನ್ನು ಹೇಳಿದ್ದಾನೆ. ರಾಜನ್! ನಿನಗೆ ಅದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. “ಬಿಲದಲ್ಲಿರುವ ಇಲಿ-ಕಪ್ಪೆಗಳನ್ನು ಸರ್ಪವು ನುಂಗಿಬಿಡುವಂತೆ ಶತ್ರುಗಳೊಡನೆ ಯುದ್ಧಮಾಡದಿರುವ ರಾಜ ಮತ್ತು ದೇಶಸಂಚಾರ ಮಾಡದಿರುವ ಬ್ರಾಹ್ಮಣ ಇಬ್ಬರನ್ನೂ ಭೂಮಿಯು ನುಂಗಿಹಾಕುತ್ತದೆ.” ನರಶಾರ್ದೂಲ! ಆದುದರಿಂದ ಇದನ್ನು ನೀನು ಹೃದ್ಗತಮಾಡಿಕೊಳ್ಳಬೇಕು. ಸಂಧಿಗೆ ಯೋಗ್ಯರಾದವರೊಡನೆ ಸಂಧಿಮಾಡಿಕೋ ಮತ್ತು ವಿರೋಧಿಸಬೇಕಾದವರನ್ನು ವಿರೋಧಿಸು. ರಾಜ್ಯದ ಸಪ್ತಾಂಗ[8]ಗಳಿಗೆ ವಿರುದ್ಧವಾಗಿ ಯಾರು ನಡೆದುಕೊಳ್ಳುತ್ತಾರೋ ಅವನನ್ನು, ಗುರುವಾಗಿರಲಿ ಅಥವಾ ಮಿತ್ರನಾಗಿರಲಿ, ಸಂಹರಿಸಲೇ ಬೇಕು. ರಾಜೇಂದ್ರ! ಬೃಹಸ್ಪತಿಯ ಅಭಿಪ್ರಾಯದಂತೆ ರಾಜಾಧಿಕಾರದ ವಿಷಯದಲ್ಲಿ ಹಿಂದೆ ಮರುತ್ತನು ಹೇಳಿದ ಈ ಪುರಾತನ ಶ್ಲೋಕವನ್ನು ಉದಾಹರಿಸುತ್ತೇನೆ. “ದುರಹಂಕಾರದಿಂದ ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂದು ತಿಳಿಯದೇ ತಪ್ಪು ಹಾದಿಯನ್ನು ಹಿಡಿದಿರುವವನು ಆಚಾರ್ಯನೇ ಆಗಿದ್ದರೂ ಪರಿತ್ಯಜಿಸಬೇಕೆಂದು ಹೇಳುತ್ತಾರೆ.” ಬಾಹುವಿನ ಮಗ, ಧೀಮಂತ ರಾಜ ಸಗರನು ತನ್ನ ಜ್ಯೇಷ್ಠ ಪುತ್ರ ಅಸಮಂಜಸನನ್ನು ಪೌರರ ಹಿತವನ್ನು ಬಯಸಿ ತ್ಯಜಿಸಿದನು. ನೃಪ! ಅಸಮಂಜಸನು ಪೌರರ ಬಾಲಕರನ್ನು ಸರಯೂ ನದಿಯಲ್ಲಿ ಮುಳುಗಿಸಿಬಿಡುತ್ತಿದ್ದನು. ಆದುದರಿಂದ ಅವನ ತಂದೆಯು ಅವನನ್ನು ರಾಜ್ಯದಿಂದ ಹೊರಗಟ್ಟಿದನು. ಋಷಿ ಉದ್ದಾಲಕನೂ ಕೂಡ ತನ್ನ ಪ್ರಿಯ ಮಗ ಮಹಾತಪಸ್ವಿ ಶ್ವೇತಕೇತುವನ್ನು ವಿಪ್ರರೊಡನೆ ವಂಚನೆಯಿಂದ ವರ್ತಿಸಿದುದರಿಂದ ತ್ಯಜಿಸಿದನು. ಪ್ರಜಾರಂಜನೆ, ಸತ್ಯದ ರಕ್ಷಣೆ ಮತ್ತು ವ್ಯವಹಾರಗಳಲ್ಲಿ ಸರಳತೆ ಇವೇ ರಾಜನ ಸನಾತನ ಧರ್ಮವಾಗಿದೆ. ಪರರ ಸ್ವತ್ತನ್ನು ನಾಶಗೊಳಿಸಬಾರದು. ಕೊಡಬೇಕಾದುದನ್ನು ಕಾಲಕ್ಕೆ ಸರಿಯಾಗಿ ಕೊಟ್ಟುಬಿಡಬೇಕು. ಪರಾಕ್ರಮಿಯಾದ, ಸತ್ಯವಾಗ್ಮಿಯಾದ, ಮತ್ತು ದಯಾಪರನಾದ ರಾಜನು ಧರ್ಮಮಾರ್ಗದಿಂದ ವಿಚಲಿತನಾಗುವುದಿಲ್ಲ. ಗುಪ್ತವಾಗಿ ಮಂತ್ರಾಲೋಚನೆ ಮಾಡುವವನು, ಕ್ರೋಧವನ್ನು ಜಯಿಸಿದವನು, ಶಾಸ್ತ್ರಗಳ ಅರ್ಥ-ನಿಶ್ಚಯಗಳನ್ನು ಅರಿತವನು, ಸತತವೂ ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ನಿರತನಾದವನು, ಮೂರು ವೇದಗಳ ರಹಸ್ಯವನ್ನು ತಿಳಿದಿರುವವನು, ಗುಪ್ತಾಲೋಚನೆಗಳನ್ನು ಗೌಪ್ಯವಾಗಿಯೇ ಇಟ್ಟಿರುವವನು ರಾಜನಾಗಲು ಯೋಗ್ಯನಾಗುತ್ತಾನೆ. ನರೇಂದ್ರರಿಗೆ ಪ್ರಜಾಪಾಲನೆಯ ಹೊರತಾಗಿ ಬೇರೆ ಪರಮ ಧರ್ಮವೇ ಇಲ್ಲ. ಭೂಮಿಯಲ್ಲಿ ಚಾತುರ್ವರ್ಣ್ಯಗಳ ಧರ್ಮಗಳನ್ನು ರಕ್ಷಿಸಬೇಕು. ಧರ್ಮವನ್ನು ಸಂಕರದಿಂದ ರಕ್ಷಿಸುವುದೇ ರಾಜನ ಸನಾತನ ಧರ್ಮವು. ನೃಪತಿಯು ಯಾರಲ್ಲಿಯೂ ವಿಶ್ವಾಸವನ್ನಿಡಬಾರದು. ವಿಶ್ವಾಸಕ್ಕೆ ಪಾತ್ರರಾದವರೊಡನೆಯೂ ಅತಿಯಾದ ವಿಶ್ವಾಸವನ್ನಿಡಬಾರದು.
ಆರು ವಿಷಯಗಳಲ್ಲಿ[9] ಗುಣ-ದೋಷಗಳಿವೆಯೇ ಎನ್ನುವುದದ್ನ್ನು ತನ್ನ ಬುದ್ಧಿಯಿಂದ ನಿತ್ಯವೂ ಪರಿಶೀಲಿಸುತ್ತಿರಬೇಕು. ನಿತ್ಯವೂ ಶತ್ರುಗಳ ನ್ಯೂನತೆಗಳನ್ನು ತಿಳಿದುಕೊಳ್ಳುವ, ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳ ಅರ್ಥವನ್ನು ತಿಳಿದುಕೊಂಡಿರುವ, ಮತ್ತು ಚಾರರನ್ನು ಬಳಸುತ್ತಿರುವ ನೃಪತಿಯು ಪ್ರಶಂಸೆಗೆ ಪಾತ್ರನಾಗುತ್ತಾನೆ. ನ್ಯಾಯದಲ್ಲಿ ಯಮನಂತೆಯೂ ಕೋಶವನ್ನು ತುಂಬುವುದರಲ್ಲಿ ವೈಶ್ರವಣನಂತೆಯೂ ಇರಬೇಕು. ಸ್ಥಾನ, ವೃದ್ಧಿ ಮತ್ತು ಕ್ಷಯಗಳಿಗೆ ಕಾರಣಗಳಾದ ದಶವರ್ಗಗಳನ್ನೂ[10] ತಿಳಿದುಕೊಂಡಿರಬೇಕು. ಭರಣ-ಪೋಷಣೆಗಳಿಲ್ಲದವರಿಗೆ ರಾಜನು ಭರಣ-ಪೋಷಕನಾಗಿರಬೇಕು. ಸೇವಕರ ಮೇಲ್ವಿಚಾರಣೆ ಮಾಡುತ್ತಿರಬೇಕು. ರಾಜನಾದವನು ಪ್ರಸನ್ನಮುಖನಾಗಿರಬೇಕು. ಮಾತನಾಡುವಾಗ ಮಂದಸ್ಮಿತನಾಗಿರಬೇಕು. ವೃದ್ಧರ ಸೇವೆಯನ್ನು ಮಾಡಬೇಕು. ಆಲಸ್ಯವನ್ನು ಜಯಿಸಬೇಕು. ವ್ಯಸನಲೋಲುಪನಾಗಿರಬಾರದು. ಸತ್ಪುರುಷರ ನಡತೆಗಳಲ್ಲಿಯೇ ಸ್ಥಿರವಾಗಿ ಬುದ್ಧಿಯನ್ನಿರಿಸಿರಬೇಕು. ಏಕೆಂದರೆ ಸಂತರೇ ಆಚಾರಗಳನ್ನು ತೋರಿಸಿಕೊಡುವವರು. ಸತ್ಪುರುಷರ ಕೈಯಿಂದ ಎಂದೂ ಧನವನ್ನು ತೆಗೆದುಕೊಳ್ಳಬಾರದು. ಅಸಾಧುಪುರುಷರಿಂದ ಧನವನ್ನು ಸಂಗ್ರಹಿಸಿ, ಸತ್ಪುರುಷರಲ್ಲಿ ದಾನಮಾಡಬೇಕು. ಸ್ವಯಂ ತಾನೇ ದಂಡಿಸಬೇಕು. ದಾನಶೀಲನಾಗಿರಬೇಕು. ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿರಬೇಕು. ಸಾಧನಗಳನ್ನು ಹೊಂದಿರಬೇಕು. ಕಾಲಕಾಲಕ್ಕೆ ದಾನಗಳನ್ನು ನೀಡುತ್ತಿರಬೇಕು. ಶುದ್ಧಾಚಾರಗಳಿಂದ ಭೋಗಿಸಲೂ ಬೇಕು.
ಶೂರರನ್ನೂ, ಭಕ್ತರನ್ನೂ, ಲೋಭಕ್ಕೆ ಒಳಗಾಗದವರನ್ನೂ, ಸತ್ಕುಲದಲ್ಲಿ ಜನಿಸಿದವರನ್ನೂ, ನಿರೋಗಿಗಳನ್ನೂ, ಶಿಷ್ಟರನ್ನೂ, ಶಿಷ್ಟರ ಬಂಧುಗಳನ್ನೂ, ಮಾನನಿಷ್ಟರನ್ನೂ, ಬೇರೆಯವರನ್ನು ಅಪಮಾನಿಸದವರನ್ನೂ, ವಿದ್ಯಾವಂತರನ್ನೂ, ಲೋಕವ್ಯವಹಾರಗಳನ್ನು ತಿಳಿದುಕೊಂಡಿರುವವರನ್ನೂ, ಪುಣ್ಯಲೋಕಾಪೇಕ್ಷಿಗಳನ್ನೂ, ಧರ್ಮದಲ್ಲಿ ನಿರತರಾದವರನ್ನೂ, ಸತ್ಪುರುಷರನ್ನೂ, ಪರ್ವತದಂತೆ ಸ್ಥಿರವಾಗಿರುವವರನ್ನೂ ರಾಜನಾದವನು ತನ್ನ ಸಹಾಯಕರನಾಗಿ ಇಟ್ಟುಕೊಂಡಿರಬೇಕು. ಅವರನ್ನು ಪುರಸ್ಕರಿಸುತ್ತಿರಬೇಕು. ತನ್ನಲ್ಲಿರುವಂತಹ ಸುಖ-ಭೋಗಗಳನ್ನು ಅವರಿಗೂ ಒದಗಿಸಿಕೊಡಬೇಕು. ಶ್ವೇತ ಛತ್ರ ಮತ್ತು ಆಜ್ಞೆ ಈ ಎರಡರಲ್ಲಿ ಮಾತ್ರ ಅವರಿಗಿಂತ ರಾಜನು ಅಧಿಕನಾಗಿರಬೇಕು. ಪ್ರತ್ಯಕ್ಷ್ಯದಲ್ಲಾಗಲೀ ಪರೋಕ್ಷದಲ್ಲಾಗಲೀ ಇವರೊಂದಿಗೆ ರಾಜನ ವರ್ತನೆಯು ಒಂದೇ ಸಮನಾಗಿರಬೇಕು. ಹೀಗೆ ಮಾಡಿದ ನರೇಂದ್ರನು ಇಲ್ಲಿ ಖೇದವನ್ನೇ ಹೊಂದುವುದಿಲ್ಲ. ಎಲ್ಲರನ್ನೂ ಅತಿಯಾಗಿ ಶಂಕಿಸುವ ರಾಜನು ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಕಪಟಿಯೂ ಲುಬ್ಧನೂ ಆದ ರಾಜನು ಬೇಗನೆ ಸ್ವಜನರ ಬಾಧೆಗೊಳಗಾಗುತ್ತಾನೆ. ಶುಚಿಯಾಗಿರುವ ಮತ್ತು ಪ್ರಜೆಗಳ ಚಿತ್ತವನ್ನು ಆಕರ್ಶಿಸುವುದರಲ್ಲಿ ನಿರತನಾಗಿರುವ ಪೃಥ್ವೀಪಾಲನು ಅರಿಗಳಿಂದ ಪತನಹೊಂದುವುದಿಲ್ಲ.
ಒಂದುವೇಳೆ ಶತ್ರುಗಳಿಂದ ಕೆಳಗುರುಳಿಸಲ್ಪಟ್ಟರೂ ಬೇಗನೆ ರಾಜ್ಯವನ್ನು ಪಡೆದುಕೊಳ್ಳುತ್ತಾನೆ. ಕ್ರೋಧವಿಲ್ಲದ, ವ್ಯಸನಗಳಿಲ್ಲದ, ಮೃದುವಾಗಿ ಶಿಕ್ಷಿಸುವ, ಜಿತೇಂದ್ರಿಯನಾದ ರಾಜನು ಹಿಮವತ್ಪರ್ವತದಂತೆ ಪ್ರಜೆಗಳ ವಿಶ್ವಾಸವನ್ನು ಗಳಿಸುತ್ತಾನೆ. ಪ್ರಾಜ್ಞನೂ, ನ್ಯಾಯಗುಣೋಪೇತನೂ, ಶತ್ರುಗಳ ನ್ಯೂನತೆಗಳನ್ನು ತಿಳಿದುಕೊಳ್ಳುವುದರಲ್ಲಿ ತತ್ಪರನಾದವನೂ, ಸರ್ವವರ್ಣದವರನ್ನೂ ಚೆನ್ನಾಗಿ ನೋಡಿಕೊಳ್ಳುವವನೂ, ಸುನೀತಿ-ದುರ್ನೀತಿಗಳನ್ನು ಅರಿತವನೂ, ಕಾರ್ಯಗಳನ್ನು ಕ್ಷಿಪ್ರವಾಗಿ ಪೂರೈಸುವವನೂ, ಕ್ರೋಧವನ್ನು ಗೆದ್ದವನೂ, ಪ್ರಸನ್ನನೂ, ವಿಶಾಲಹೃದಯಿಯೂ, ಅರೋಗಪ್ರಕೃತಿಯುಳ್ಳವನೂ, ಕ್ರಿಯಾಶೀಲನೂ, ಆತ್ಮಪ್ರಶಂಸೆ ಮಾಡಿಕೊಳ್ಳದವನೂ, ಆರಂಭಿಸಿದ ಕಾರ್ಯಗಳನ್ನು ಮುಗಿಸುವ ರಾಜನೆಂದು ತೋರಿಸಿಕೊಡುವವನೂ ಆದ ರಾಜನು ಸರ್ವಶ್ರೇಷ್ಠ ರಾಜನಾಗುತ್ತಾನೆ. ತಂದೆಯ ಮನೆಯಲ್ಲಿ ಮಕ್ಕಳು ಹೇಗೋ ಹಾಗೆ ಯಾರ ರಾಜ್ಯದಲ್ಲಿ ಪ್ರಜೆಗಳು ನಿರ್ಭಯರಾಗಿ ಜೀವನವನ್ನು ನಡೆಸುತ್ತಿರುತ್ತಾರೋ ಆ ರಾಜನು ಸರ್ವಶ್ರೇಷ್ಠ ರಾಜನೆನಿಸಿಕೊಳ್ಳುತ್ತಾನೆ. ಯಾರ ರಾಷ್ಟ್ರದಲ್ಲಿ ವಾಸಿಸಿರುವ ಪ್ರಜೆಗಳು ತಮ್ಮಲ್ಲಿರುವ ವೈಭವವನ್ನು ಬಹಿರಂಗವಾಗಿಯೇ ತೋರಿಸಿಕೊಳ್ಳುತ್ತಾರೆಯೋ ಮತ್ತು ನ್ಯಾಯ-ಅನ್ಯಾಯಗಳನ್ನು ತಿಳಿದಿರುತ್ತಾರೋ ಆ ರಾಜನೇ ರಾಜಸತ್ತಮನು.
ಯಾರ ರಾಜ್ಯದಲ್ಲಿ ವಾಸಿಸಿರುವ ಜನರು ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿ, ಪರಸ್ಪರರನ್ನು ದ್ವೇಷಿಸದೇ, ಜಿತೇಂದ್ರಿಯರಾಗಿ ಯಥಾವಿಧಿಯಾಗಿ ಪರಿಪಾಲಿಸಲ್ಪಟ್ಟಿರುವರೋ, ನ್ಯಾಯದ ವಶದಲ್ಲಿದ್ದುಕೊಂಡು ವಿನೀತರಾಗಿ, ಸಂಘರ್ಷಶೀಲರಾಗಿರದೇ ಇರುತ್ತಾರೋ, ಯಾರ ರಾಜ್ಯದಲ್ಲಿ ಜನರು ದಾನಮಾಡುವುದರಲ್ಲಿ ರುಚಿಯನ್ನಿಟ್ಟುಕೊಂಡಿರುತ್ತಾರೋ ಅವನೇ ಪಾರ್ಥಿವನೆನಿಸಿಕೊಳ್ಳುತ್ತಾನೆ. ಯಾವ ಭೂಮಿಪಾಲನ ರಾಜ್ಯದಲ್ಲಿ ಕೂಟ (ಸುಳ್ಳು), ಕಪಟ, ಮಾಯೆ, ಮತ್ಸರಗಳಿಲ್ಲವೋ ಅವನ ಧರ್ಮವೇ ಸನಾತನ ಧರ್ಮವು. ಯಾವ ರಾಜನು ಜ್ಞಾನ-ಜ್ಞಾನಿಗಳನ್ನು ಸತ್ಕರಿಸುತ್ತಾನೋ, ಪೌರರ ಹಿತದಲ್ಲಿ ನಿರತನಾಗಿರುತ್ತಾನೋ ಆ ರಾಜನು ರಾಜ್ಯಕ್ಕೆ ಅರ್ಹನಾಗುತ್ತಾನೆ. ಯಾವ ರಾಜನು ನಿತ್ಯವೂ ಮಾಡುವ ಗೂಢಾಚರಿ ಮತ್ತು ಗುಪ್ತ ಸಮಾಲೋಚನೆಗಳು ಶತ್ರುಗಳಿಗೆ ತಿಳಿಯುವುದಿಲ್ಲವೋ ಅಂಥಹ ರಾಜನೇ ರಾಜ್ಯಭಾರಮಾಡಲು ಅರ್ಹನೆನಿಸಿಕೊಳ್ಳುತ್ತಾನೆ. ಭಾರತ! ಹಿಂದೆ ಮಹಾತ್ಮ ಭಾರ್ಗವ ರಾಮನು ನೃಪತಿಯ ಕುರಿತಾಗಿ ಹೇಳಿದ ಗೀತೆಯ ಈ ಶ್ಲೋಕವನ್ನು ಕೇಳು. “ಮೊದಲು ರಾಜನನ್ನು ಪಡೆದುಕೊಳ್ಳಬೇಕು. ಅನಂತರ ಪತ್ನಿ ಮತ್ತು ಧನಗಳನ್ನು ಪಡೆದುಕೊಳ್ಳಬೇಕು. ಲೋಕದಲ್ಲಿ ರಾಜನೇ ಇಲ್ಲದಿದ್ದರೆ ಪತ್ನಿಯು ಏಕೆ? ಧನವು ಏಕೆ?” ರಾಜನ್! ಆದುದರಿಂದ ರಾಜಸಿಂಹರಿಗೆ ಸ್ಪಷ್ಟವಾಗಿ ಲೋಕದ ಧಾರಣೆಯನ್ನು ರಕ್ಷಿಸುವುದನ್ನು ಬಿಟ್ಟು ಬೇರೆ ಯಾವ ಸನಾತನ ಧರ್ಮವೂ ಇರುವುದಿಲ್ಲ. ಪ್ರಚೇತಸನ ಮಗ ಮನುವು ರಾಜಧರ್ಮದ ಕುರಿತು ಈ ಎರಡು ಶ್ಲೋಕಗಳನ್ನು ಹೇಳಿದ್ದಾನೆ. ರಾಜೇಂದ್ರ! ಅವೆರಡನ್ನೂ ಏಕಾಗ್ರಮನಸ್ಸಿನಿಂದ ಕೇಳು. “ಸಮುದ್ರದಲ್ಲಿ ಒಡೆದುಹೋದ ನಾವೆಯನ್ನು ತ್ಯಜಿಸುವಂತೆ ಈ ಆರು ಪುರುಷರನ್ನು ತ್ಯಜಿಸಬೇಕು: ಉಪದೇಶಿಸದ ಆಚಾರ್ಯ, ವೇದಾಧ್ಯಯನ ಮಾಡಿರದ ಋತ್ವಿಜ, ರಕ್ಷಿಸದೇ ಇರುವ ರಾಜ, ಅಪ್ರಿಯವಾಗಿ ಮಾತನಾಡುವ ಪತ್ನಿ, ಗ್ರಾಮದಲ್ಲಿಯೇ ಇರುವ ಗೋಪಾಲಕ ಮತ್ತು ಅರಣ್ಯದಲ್ಲಿಯೇ ವಾಸಿಸಲಿಚ್ಛಿಸುವ ನಾಪಿತ ಅಥವಾ ಕ್ಷೌರಕ.””
***
[1] ತನ್ನಲ್ಲಿರುವ ನ್ಯೂನತೆಗಳು, ಸೇನಾಪತಿಗಳೊಡನೆ ಮಾಡುವ ಗುಪ್ತ ಸಮಾಲೋಚನೆಗಳು ಮತ್ತು ಶತ್ರುಪಕ್ಷದಲ್ಲಿರುವ ನ್ಯೂನತೆಗಳನ್ನು ಕಂಡುಹಿಡಿಯುವ ಉಪಾಯಗಳು – ಈ ಮೂರನ್ನು ಗೌಪ್ಯವಾಗಿಡಬೇಕು.
[2] ಮರುಭೂಮಿ, ನೀರು, ಪೃಥ್ವೀ, ಅರಣ್ಯ, ಪರ್ವತ ಮತ್ತು ಮನುಷ್ಯ – ಇವುಗಳೇ ಆರು ದುರ್ಗಗಳು.
[3] ಪ್ರತ್ಯಕ್ಷ ಪ್ರಮಾಣವೆಂದರೆ ಉಪಕಾರ-ಅಪಕಾರಾದಿಗಳು.
[4] ಅನುಮಾನವೆಂದರೆ ನೇತ್ರವಕ್ತ್ರವಿಕಾರೇಣ ಜ್ಞಾಯತೇಽಂತರ್ಗತಂ ಮನಃ – ಕಣ್ಣು, ಮುಖಗಳ ವಿಕಾರದಿಂದಲೇ ಮನಸ್ಸಿನ ಇಂಗಿತವನ್ನು ತಿಳಿಯುವುದು.
[5] ಉಪಮಾನ ಪ್ರಮಾಣವೆಂದರೆ ಹೋಲಿಕೆಯಿಂದ ವಿಷಯಗಳನ್ನು ತಿಳಿಯುವುದು.
[6] ಉಪದೇಶವೆಂದರೆ ಆಪ್ತರು ಹೇಳುವ ಮಾತುಗಳಿಂದ ನಿರ್ಧರಿಸುವುದು.
[7] ವ್ಯಸನಗಳು ಹದಿನೆಂಟು. ಕಾಮಜ ವ್ಯಸನಗಳು ಹತ್ತು ಮತ್ತು ಕ್ರೋಧಜ ವ್ಯಸನಗಳು ಎಂಟು. ಬೇಟೆಯಾಡುವುದು, ಜೂಜಾಡುವುದು, ಹಗಲಿನಲ್ಲಿ ಮಲಗುವುದು, ಇತರರನ್ನು ಯಾವಾಗಲೂ ನಿಂದಿಸುತ್ತಿರುವುದು, ಸರ್ವದ ಸ್ತ್ರೀ-ಸಹವಾಸದಲ್ಲಿಯೇ ಇರುವುದು, ಮದದಿಂದ ಕೊಬ್ಬಿರುವವನಂತೆ ವ್ಯವಹರಿಸುವುದು, ವಾದ್ಯ-ಗೀತ-ನೃತ್ಯಗಳಲ್ಲಿಯೇ ಸರ್ವದಾ ಆಸಕ್ತನಾಗಿರುವುದು, ಮತ್ತು ಸುರಾಪಾನಮಾಡುವುದು – ಇವು ಹತ್ತು ಕಾಮಜ ವ್ಯಸನಗಳು. ಚಾಡಿಕೋರತನ, ಸಾಹಸ, ದ್ರೋಹ, ಈರ್ಷ್ಯೆ, ಇತರರಲ್ಲಿ ದೋಷವನ್ನೆಣಿಸುವುದು, ಪುರುಷಾರ್ಥಗಳನ್ನು ದೂಷಿಸುವುದು, ಕಠಿನವಾದ ಮಾತು, ಉಗ್ರವಾದ ಶಿಕ್ಷೆಯನ್ನು ವಿಧಿಸುವುದ್ – ಇವು ಎಂಟೂ ಕ್ರೋಧಜ ವ್ಯಸನಗಳು. ಮೃಗಯಾಕ್ಷಾ ದಿವಾಸ್ವಾಪಃ ಪರಿವಾರಸ್ತ್ರಿಯೋಮದಃ| ತೌರ್ಯತ್ರಿಕಂ ವೃಥಾ ಪಾನಂ ಕಾಮಜೋ ದಶಮೋ ಗುಣಃ|| ಪೈಶುನ್ಯಂ ಸಾಹಸಂ ಕ್ರೋಧಂ ಈರ್ಷ್ಯಾಸೂಯಾರ್ಥದೂಷಣಮ್| ವಾಗ್ದಂಡಜಂ ಚ ಪಾರುಷ್ಯಂ ಕ್ರೋಧಜೋಽಇ ಗುಣೋಽಷ್ಟಕಃ||
[8] ಸ್ವಾಮಿ, ಅಮಾತ್ಯ, ಸುಹೃತ್, ಕೋಶ, ರಾಷ್ಟ್ರ, ದುರ್ಗ ಮತ್ತು ಬಲಗಳೇ ರಾಜ್ಯದ ಸಪ್ತಾಂಗಗಳು.
[9] ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ, ಮತ್ತು ಸಮಾಶ್ರಯಗಳು – ಇವು ಆರು ವಿಷಯಗಳು.
[10] ಮಂತ್ರಿ, ರಾಷ್ಟ್ರ, ದುರ್ಗ, ಕೋಶ ಮತ್ತು ದಂಡ – ಈ ಐದನ್ನು ಪ್ರಕೃತಿ ಎಂದು ಕರೆಯುತ್ತಾರೆ. ತನ್ನ ಕಡೆಯ ಈ ಐದು ಮತ್ತು ಶತ್ರುಗಳ ಕಡೆಯ ಈ ಐದು ಸೇರಿ ದಶವರ್ಗವಾಗುತ್ತದೆ.
The other spiritual discourses in Mahabharata (Kannada):
- ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
- ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
- ಯುಧಿಷ್ಠಿರ-ಮಾರ್ಕಂಡೇಯ ಸಂವಾದ
- ಸರಸ್ವತೀಗೀತೆ
- ಕೌಶಿಕ-ಪತಿವ್ರತೆ-ಧರ್ಮವ್ಯಾಧ
- ವಿದುರನೀತಿ
- ಸನತ್ಸುಜಾತಿಯ
- ಭೌಮಗುಣಕಥನ
- ಶ್ರೀಮದ್ಭಗವದ್ಗೀತಾ
- ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
- ಪಿತಾಪುತ್ರ ಸಂವಾದ
- ಶಮ್ಯಾಕಗೀತೆ
- ಮಂಕಿಗೀತೆ
- ಭೃಗು-ಭರದ್ವಾಜ ಸಂವಾದ
- ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ