ಅಶ್ಮ-ಜನಕ ಸಂವಾದ

ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ಋಷಿ ಅಶ್ಮ ಮತ್ತು ಜನಕನ ಸಂವಾದದ ಮೂಲಕ ಪ್ರಾರಬ್ಧದ ಪ್ರಬಲತೆಯನ್ನು ವರ್ಣಿಸುತ್ತಾ ವ್ಯಾಸನು ಯುಧಿಷ್ಠಿರನಿಗೆ ತಿಳಿಯ ಹೇಳಿದ ಈ ವಿಷಯವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 28ರಲ್ಲಿ ಬರುತ್ತದೆ.

***

ದುಃಖ-ಶೋಕಗಳಲ್ಲಿ ಮುಳುಗಿಹೋಗಿದ್ದ ವಿದೇಹ ದೇಶದ ನೃಪ ಜನಕನು ಪ್ರಾಜ್ಞ ಬ್ರಾಹ್ಮಣ ಅಶ್ಮನನ್ನು ಪ್ರಶ್ನಿಸಿದನು:

“ಕುಟುಂಬದ ಮತ್ತು ಸಂಪತ್ತಿನ ವೃದ್ಧಿ-ವಿನಾಶಗಳುಂಟಾದಾಗ ಕಲ್ಯಾಣವುಂಟಾಗಲು ಮನುಷ್ಯನು ಏನು ಮಾಡಬೇಕು?”

ಅಶ್ಮನು ಹೇಳಿದನು:

“ಜನನದ ನಂತರ ಸತತವಾಗಿ ದುಃಖ-ಸುಖಗಳು ಮನುಷ್ಯನನ್ನು ಅನುಸರಿಸಿ ಬರುತ್ತಲೇ ಇರುತ್ತವೆ. ಆ ಸುಖ-ದುಃಖಗಳಲ್ಲಿ ಯಾವುದು ಪ್ರಾಪ್ತವಾಗುವುದೋ ಅದೇ ಮನುಷ್ಯನ ಬುದ್ಧಿಯನ್ನು ಗಾಳಿಯು ಮೋಡವನ್ನು ಹಾರಿಸಿಕೊಂಡು ಹೋಗುವಂತೆ ಹಾರಿಸಿಕೊಂಡು ಹೋಗುತ್ತದೆ. ನಾನು ಒಳ್ಳೆಯಕುಲದಲ್ಲಿ ಹುಟ್ಟಿದ್ದೇನೆ, ನಾನು ಎಲ್ಲವನ್ನೂ ಸಾಧಿಸಿದ್ದೇನೆ ಮತ್ತು ನಾನು ಸಾಧಾರಣ ಮನುಷ್ಯನಲ್ಲ ಎಂಬ ಈ ಮೂರು ಅಹಂಕಾರಗುಣಗಳು ಮನುಷ್ಯನ ಚಿತ್ತವನ್ನು ತೋಯಿಸಿಬಿಡುತ್ತವೆ. ಭೋಗಗಳಲ್ಲಿಯೇ ಮನಸ್ಸನ್ನು ತೊಡಗಿಸಿಕೊಂಡು ಪಿತೃಸಂಚಿತ ಸಂಪತ್ತು ಮುಗಿದುಹೋಗಲು ಪರರ ಸ್ವತ್ತನ್ನು ಕಿತ್ತುಕೊಳ್ಳುವುದೇ ಸರಿಯೆಂದು ಭಾವಿಸುತ್ತಾನೆ. ಮರ್ಯಾದೆಗಳನ್ನು ಮೀರಿ ಇತರರ ಸ್ವತ್ತನ್ನು ಅಪಹರಿಸುವ ಆ ಲುಬ್ಧರನ್ನು ರಾಜನು ಮೃಗಗಳನ್ನು ಬಾಣಗಳಿಂದ ಹೇಗೋ ಹಾಗೆ ಬೇಟೆಯಾಡಿ ವಿರೋಧಿಸುತ್ತಾನೆ. ಇಪ್ಪತ್ತು ಅಥವಾ ಮೂವತ್ತು ವರ್ಷಗಳ ಇಂತಹ ಯುವಕರು ನೂರು ವರ್ಷಗಳ ಪರ್ಯಂತ ಜೀವಿಸುವುದಿಲ್ಲ. ಹೀಗೆ ಎಲ್ಲ ಪ್ರಾಣಿಗಳ ವ್ಯವಹಾರಗಳನ್ನೂ ಅಲ್ಲಲ್ಲಿ ನೋಡುತ್ತಾ ಅವರ ಪರಮದುಃಖಗಳಿಗೆ ಬುದ್ಧಿಯಿಂದ ಯೋಚಿಸಿ ಚಿಕಿತ್ಸೆಗಳನ್ನು ನಡೆಸಬೇಕು. ಮಾನಸಿಕ ದುಃಖಗಳಿಗೆ ಬುದ್ಧಿಭ್ರಮೆ ಮತ್ತು ಅನಿಷ್ಟಗಳೆಂಬ ಎರಡು ಕಾರಣಗಳಿವೆ. ಮೂರನೆಯ ಯಾವುದೇ ಕಾರಣವೂ ಇರುವುದಿಲ್ಲ. ಇವೇ ಮೊದಲಾದ ದುಃಖಗಳು ಮಾನವನನ್ನು ಆವರಿಸುತ್ತಿರುತ್ತವೆ. ಹಾಗೆಯೇ ವಿಷಯಾಸಕ್ತಿಗಳಿಂದಲೂ ದುಃಖಗಳು ಪ್ರಾಪ್ತವಾಗುತ್ತವೆ. ಮುಪ್ಪು ಮತ್ತು ಸಾವು ಎನ್ನುವವು ಪ್ರಾಣಿಗಳನ್ನು ತಿನ್ನುವಂಥಹ ತೋಳಗಳಂತೆ. ಅವು ಬಲಶಾಲಿಗಳನ್ನೂ, ದುರ್ಬಲರನ್ನೂ, ಸಣ್ಣವರನ್ನೂ ಮತ್ತು ದೊಡ್ಡವರನ್ನೂ ತಿನ್ನುತ್ತವೆ. ಸಾಗರ ಪರ್ಯಂತವಾದ ಈ ಭೂಮಿಯನ್ನು ಜಯಿಸಿದರೂ, ಜರಾಮೃತ್ಯುಗಳನ್ನು ಜಯಿಸಲು ಯಾವ ಮನುಷ್ಯನಿಗೂ ಸಾಧ್ಯವಿಲ್ಲ. ಕಾಲ-ಕರ್ಮ ಸಂಯೋಗದಿಂದ ಪ್ರಾಪ್ತವಾಗುವ ಸುಖ-ದುಃಖಗಳೆಲ್ಲವನ್ನೂ ಪ್ರಾಣಿಗಳು ಅವಶ್ಯವಾಗಿ ಅನುಭವಿಸಬೇಕೇ ಹೊರತು ಅವುಗಳಿಗೆ ಯಾವ ಪರಿಹಾರವೂ ಇಲ್ಲ.

ಮನುಷ್ಯನಿಗೆ ಪೂರ್ವ ವಯಸ್ಸಿನಲ್ಲಿ, ಅಥವಾ ಮಧ್ಯ ವಯಸ್ಸಿನಲ್ಲಿ ಅಥವಾ ಮುಪ್ಪಿನಲ್ಲಿಯಾಗಲೀ ಈ ಸುಖ-ದುಃಖಗಳನ್ನು ತ್ಯಜಿಸಲು ಸಾಧ್ಯವಿಲ್ಲ. ಅನುಭವಿಸಬೇಕೇ ಹೊರತು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.  ಅತ್ಯಂತ ಪ್ರಿಯರಾದವರಿಂದ ವಿಯೋಗ, ಅಪ್ರಿಯರೊಡನೆ ಸಹವಾಸ, ಧನಪ್ರಾಪ್ತಿ, ಧನನಷ್ಟ, ಮತ್ತು ಸುಖ-ದುಃಖಗಳು ಅವರವರ ಪ್ರಾರಬ್ಧವನ್ನು ಅನುಸರಿಸಿ ಬರುತ್ತಲೇ ಇರುತ್ತವೆ. ಪ್ರಾಣಿಗಳ ಹುಟ್ಟು-ಸಾವುಗಳೂ ಲಾಭಾಲಾಭಗಳೂ ಎಲ್ಲವೂ ಅವರವರು ಪಡೆದುಕೊಂಡು ಬಂದಿರುವ ಪ್ರಾರಬ್ಧಕರ್ಮಫಲಗಳಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ. ಗಂಧ-ವರ್ಣ-ರಸ-ಸ್ಪರ್ಶಗಳು ಸ್ವಾಭಾವಿಕವಾಗಿ ಬಂದು-ಹೋಗುತ್ತಲೇ ಇರುತ್ತವೆ. ಹಾಗೆಯೇ ಸುಖದುಃಖಗಳು ಕರ್ಮಫಲಾನುಸಾರವಾಗಿ ದೈವ ನಿಯಮವನ್ನನುಸರಿಸಿ ಬಂದು-ಹೋಗುತ್ತಿರುತ್ತವೆ. ಸರ್ವಪ್ರಾಣಿಗಳಿಗೂ ಕುಳಿತುಕೊಳ್ಳುವ, ಮಲಗುವ, ತಿರುಗಾಡುವ, ಏಳುವ, ಮತ್ತು ಪಾನ-ಭೋಜನಗಳ ಕಾಲವು ನಿಯತವಾಗಿರುತ್ತದೆ. ವೈದ್ಯರೂ ರೋಗಿಗಳಾಗುತ್ತಾರೆ. ಬಲಿಷ್ಠರೂ ದುರ್ಬಲರಾಗುತ್ತಾರೆ. ಸ್ತ್ರೀಸಂಗಗಳನ್ನು ಹೊಂದಿದವರೂ ಷಂಢರಾಗುತ್ತಾರೆ. ಕಾಲದ ವೈಪರೀತ್ಯವು ಹೀಗೆ ವಿಚಿತ್ರವಾದುದು. ಉತ್ತಮ ಕುಲದಲ್ಲಿ ಜನ್ಮ, ವೀರ್ಯ, ಆರೋಗ್ಯ, ಧೈರ್ಯ, ಸೌಭಾಗ್ಯ ಮತ್ತು ಉಪಭೋಗಗಳು ಅದೃಷ್ಟದಿಂದಲೇ ಲಭ್ಯವಾಗುತ್ತವೆ. ಮಕ್ಕಳೇ ಬೇಡವೆನ್ನುವ ದರಿದ್ರನಿಗೆ ಅನೇಕ ಮಕ್ಕಳಾಗುತ್ತಾರೆ. ಮಕ್ಕಳಾಗಬೇಕೆಂದು ಹಂಬಲಿಸುವ ಶ್ರೀಮಂತನಿಗೆ ಮಕ್ಕಳೇ ಆಗುವುದಿಲ್ಲ. ವಿಧಿಯು ವಿಚಿತ್ರವಾದುದು.

ವ್ಯಾಧಿ, ಅಗ್ನಿ, ನೀರು, ಶಸ್ತ್ರ, ಹಸಿವು, ಅಪಘಾತ, ವಿಷಜ್ವರ, ಬೀಳುವುದು ಇವೇ ಪ್ರಾಣಿಗಳ ಮರಣಕ್ಕೆ ಮುಖ್ಯ ಕಾರಣಗಳಾಗಿರುತ್ತವೆ. ಯಾರ ಅದೃಷ್ಟದಲ್ಲಿ ಯಾವ ಕಾರಣದಿಂದ ಮರಣಹೊಂದಬೇಕೆಂದಿರುತ್ತದೆಯೋ ಅದೇ ರೀತಿಯಲ್ಲಿ ಮರಣ ಹೊಂದುತ್ತಾರೆ. ಕೆಲವೊಮ್ಮೆ ಧರ್ಮಗಳನ್ನು ಉಲ್ಲಂಘಿಸದೇ ಇರತಕ್ಕವನೂ ಆಪತ್ತಿನಿಂದ ಪಾರಾಗದೇ ಇರುವುದನ್ನು ಕಾಣುತ್ತೇವೆ. ಐಶ್ವರ್ಯವಂತನಾದವನು ಯುವಕನಾಗಿರುವಾಗಲೇ ಸತ್ತುಹೋಗುವುದನ್ನು ಮತ್ತು ದರಿದ್ರನಾಗಿ ಕಷ್ಟದಲ್ಲಿದ್ದವನು ನೂರುವರ್ಷಗಳ ಬದುಕಿರುವುದನ್ನು ನೋಡುತ್ತೇವೆ. ಯಾರಲ್ಲಿ ಏನೂ ಇರುವುದಿಲ್ಲವೂ ಅಂಥಹ ದರಿದ್ರ ಜನರು ಬಹುಕಾಲ ಬಾಳುತ್ತಾರೆ. ಶ್ರೀಮಂತ ಕುಲದಲ್ಲಿ ಹುಟ್ಟಿದವರು ಪತಂಗಗಳಂತೆ ನಾಶಹೊಂದುತ್ತಾರೆ. ಲೋಕದಲ್ಲಿ ಶ್ರೀಮಂತರಿಗೆ ಬಹುಷಃ ಭೋಗಿಸುವ ಶಕ್ತಿಯೇ ಇರುವುದಿಲ್ಲ. ಆದರೆ ದರಿದ್ರನು ಕಟ್ಟಿಗೆಯನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯಿರುತ್ತದೆ. ಕಾಲಚೋದಿತ ಮನುಷ್ಯನು ನಾನೇ ಇದನ್ನು ಮಾಡುತ್ತೇನೆ ಎಂದು ಭಾವಿಸಿಕೊಳ್ಳುತ್ತಾನೆ. ತನಗಿಲ್ಲವೆಂಬ ಅಸಂತೋಷದಿಂದ ದುರಾತ್ಮನು ಪಾಪಕರ್ಮಗಳನ್ನೆಸಗುತ್ತಾನೆ. ಸ್ತ್ರೀಸಂಗ, ದ್ಯೂತ, ಬೇಟೆ, ಸುರಾಪಾನ ಇವುಗಳು ಕೆಟ್ಟ ಹವ್ಯಾಸಗಳೆಂದು ತಿಳಿದವರು ನಿಂದಿಸುತ್ತಾರೆ. ಆದರೆ ತಿಳಿದವರೇ ಹೆಚ್ಚಾಗಿ ಇವುಗಳಲ್ಲಿ ತೊಡಗಿರುವುದನ್ನು ನಾವು ಕಾಣುತ್ತೇವೆ! ಹೀಗೆ ಕಾಲದ ಪ್ರಭಾವದಿಂದಲೇ ಜೀವಿಗಳು – ಇಷ್ಟವಾದವುಗಳು ಮತ್ತು ಇಷ್ಟವಲ್ಲದವುಗಳು – ಎಲ್ಲವನ್ನೂ ಅವರವರ ಅದೃಷ್ಟದ ಪ್ರಕಾರ ಪಡೆಯುತ್ತವೆ. ವಾಯು, ಆಕಾಸ, ಅಗ್ನಿ, ಚಂದ್ರಾದಿತ್ಯರು, ಹಗಲು-ರಾತ್ರಿಗಳು, ನಕ್ಷತ್ರಗಳು ಮತ್ತು ನದೀ-ಪರ್ವತಗಳನ್ನು ಕಾಲವಲ್ಲದೇ ಇನ್ನ್ಯಾರು ಸೃಷ್ಟಿಸುತ್ತಾರೆ? ಬೇರೆ ಯಾರು ಇವುಗಳನ್ನು ಹೊರುತ್ತಾರೆ? ನರರ್ಷಭ! ಛಳಿ-ಬೇಸಗೆ-ಮಳೆಗಾಲಗಳು ಕಾಲದ ಪ್ರಭಾವದಿಂದಲೇ ಬದಲಾಗುತ್ತಿರುತ್ತವೆ. ಹಾಗೆಯೇ ಮನುಷ್ಯರ ಸುಖ-ದುಃಖಗಳೂ ಬದಲಾಗುತ್ತಿರುತ್ತವೆ.

ಔಷಧಗಳಾಗಲೀ, ಶಾಸ್ತ್ರಗಳಾಗಲೀ, ಹೋಮಗಳಾಗಲೀ ಅಥವಾ ಪುನಃ ಜಪಗಳಾಗಲೀ ಮಾನವನನ್ನು ಮೃತ್ಯುವಿನಿಂದಾಗಲೀ ಮುಪ್ಪಿನಿಂದಾಗಲೀ ರಕ್ಷಿಸುವುದಿಲ್ಲ. ಮಹಾಸಾಗರದಲ್ಲಿ ಹೇಗೆ ಒಂದು ಕಟ್ಟಿಗೆಯ ತುಂಡು ತೇಲಿಕೊಂಡು ಬಂದು ಇನ್ನೊಂದು ಕಟ್ಟಿಗೆಯ ತುಂಡನ್ನು ಸೇರಿ ಪುನಃ ದೂರ ತೇಲಿಕೊಂಡು ಹೋಗುವುದೋ ಹಾಗೆಯೇ ಜೀವಿಗಳ ಸಮಾಗಮವೂ ಕೂಡ ಕ್ಷಣಿಕವಾಗಿರುತ್ತದೆ. ಸ್ತ್ರೀಯರೊಡನೆ ಗೀತ-ವಾದ್ಯಗಳಿಂದ ಆನಂದಿತರಾಗಿರುವ ಪುರುಷರು ಮತ್ತು ಅನಾಥರಾಗಿ ಪರಾನ್ನವನ್ನೇ ತಿಂದು ಜೀವಿಸುವ ಪುರುಷರು ಇವರೊಬ್ಬಡನೆಯೂ ಕಾಲವು ಒಂದೇ ಸಮನಾಗಿ ವರ್ತಿಸುತ್ತದೆ[1]. ಈ ಸಂಸಾರದಲ್ಲಿ ನಾವು ಅನೇಕಾನೇಕ ಸಹಸ್ರ ತಾಯಿ-ತಂದೆಯರನ್ನೂ, ಪತ್ನಿ-ಮಕ್ಕಳನ್ನೂ ಪಡೆದಿರುತ್ತೇವೆ. ಆದರೆ ಇಂದು ಅವರು ಯಾರಿಗೆ ಸಂಬಂಧಪಟ್ಟವರು? ಅಥವಾ ನಾವು ಯಾರಿಗೆ ಸಂಬಂಧಿಸಿದವರು? ನಾವು ಯಾರದ್ದೂ ಆಗಿರುವುದಿಲ್ಲ. ಯಾರೂ ನಮ್ಮವರಾಗಿರುವುದಿಲ್ಲ. ಈ ಪತ್ನಿ-ಬಂಧು-ಸ್ನೇಹಿತ ಗಣಗಳು ದಾರಿಯಲ್ಲಿ ಸಿಗುವ ದಾರಿಹೋಕರು ಅಷ್ಟೆ! “ನಾನು ಯಾರು? ಎಲ್ಲಿಗೆ ಹೋಗುತ್ತಿದ್ದೇನೆ? ನಾನು ಯಾರವನು? ಇಲ್ಲಿಗೇಕೆ ಬಂದಿದ್ದೇನೆ? ಯಾರಿಗೋಸ್ಕರ ಚಿಂತಿಸುತ್ತಿದ್ದೇನೆ?” ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಿರಬೇಕು. ಚಕ್ರದಂತೆ ತಿರುಗುತ್ತಿರುವ ಈ ಸಂಸಾರದಲ್ಲಿ ಪ್ರಿಯವಾದುದನ್ನು ಪಡೆಯುವ ಅಥವಾ ಪ್ರಿಯರೊಡನೆ ಸೇರುವ ಕ್ರಿಯೆಗಳು ಅನಿತ್ಯವಾದವು. ಶಾಶ್ವತವಾದವುಗಳಲ್ಲ. ಪರಲೋಕವು ಪ್ರತ್ಯಕ್ಷದಲ್ಲಿಲ್ಲ. ಪರಲೋಕವನ್ನು ನೋಡಿದವರು ಯಾರೂ ಇಲ್ಲ ಎನ್ನುವುದನ್ನು ತಿಳಿದವರು ಹೇಳುತ್ತಾರೆ.

ಆದರೆ ಆಗಮಗಳನ್ನು ಉಲ್ಲಂಘಿಸದೇ ಅವುಗಳಲ್ಲಿ ಶ್ರದ್ಧೆಯನ್ನಿಡಬೇಕು. ವಿದ್ವಾನನು ಪಿತೃ-ದೇವಕಾರ್ಯಗಳನ್ನು ಮತ್ತು ಯಜ್ಞಗಳನ್ನು – ಈ ಮೂರು ವಿಧದ ಕರ್ಮಗಳನ್ನು ವಿಧಿವತ್ತಾಗಿ ನಡೆಸುತ್ತಿರಬೇಕು. ಮುಪ್ಪು-ಮರಣಗಳೆಂಬ ಮೊಸಳೆಗಳಿಂದ ಕೂಡಿರುವ ಗಂಭೀರ ಸಮುದ್ರದಂತಿರುವ ಈ ಕಾಲದಲ್ಲಿ ಜಗತ್ತೆಲ್ಲವೂ ಮುಳುಗಿಹೋಗಿದೆ. ಆದರೆ ಯಾರೂ ಇದನ್ನು ತಿಳಿದುಕೊಳ್ಳುವುದಿಲ್ಲ! ಆಯುರ್ವೇದವನ್ನು ಅಧ್ಯಯನ ಮಾಡಿರುವ ಅನೇಕ ವೈದ್ಯರು ಪರಿವಾರ ಸಮೇತರಾಗಿ ನಾನಾ ವ್ಯಾಧಿಗಳಿಗೆ ತುತ್ತಾಗಿರುವುದನ್ನು ಕಾಣುತ್ತೇವೆ. ಅವರು ವಿವಿಧ ಕಷಾಯಗಳನ್ನೂ ಲೇಹಗಳನ್ನೂ ಸೇವಿಸುತ್ತಲೇ ಇರುತ್ತಾರೆ. ಆದರೂ ಸಮುದ್ರವು ಎಷ್ಟೇ ಪ್ರಯತ್ನಿಸಿದರೂ ತೀರವನ್ನು ಉಲ್ಲಂಘಿಸದಂತೆ ಅವರು ಮೃತ್ಯುವನ್ನು ಮೀರಲಾರರು. ರಸಾಯನ ಶಾಸ್ತ್ರವನ್ನು ತಿಳಿದವರೂ ಕೂಡ ಉಪಯುಕ್ತ ರಸಾಯನಪದಾರ್ಥಗಳನ್ನು ಸೇವಿಸಿದರೂ ಬಲಿಷ್ಠ ಆನೆಯಿಂದ ಮುರಿಯಲ್ಪಟ್ಟ ವೃಕ್ಷದಂತೆ ಮುಪ್ಪಿನಿಂದ ಮುರಿಯಲ್ಪಟ್ಟು ಬೀಳುತ್ತಾರೆ. ಹಾಗೆಯೇ ತಪಸ್ಸಿನಿಂದ ಕೂಡಿ ಸ್ವಾಧ್ಯಾಯ-ಅಭ್ಯಾಸಗಳಲ್ಲಿ ನಿರತರಾದವರೂ, ದಾನಗಳನ್ನಿತ್ತವರೂ ಮತ್ತು ಯಜ್ಞಶೀಲರೂ ಕೂಡ ಮುಪ್ಪು-ಮರಣಗಳನ್ನು ಮೀರುವುದಿಲ್ಲ. ಹುಟ್ಟಿದ ಎಲ್ಲ ಪ್ರಾಣಿಗಳಿಗೂ ಕಳೆದುಹೋದ ದಿನಗಳಾಗಲೀ, ರಾತ್ರಿಗಳಾಗಲೀ, ಮಾಸಗಳಾಗಲೀ, ಪಕ್ಷಗಳಾಗಲೀ, ವರ್ಷಗಳಾಗಲೀ ಪುನಃ ಮರಳಿ ಬರುವುದಿಲ್ಲ. ಅಸ್ಥಿರನಾದ ಅಸ್ವತಂತ್ರನಾದ ಮನುಷ್ಯನು ಕಾಲವು ಸನ್ನಿಹಿತವಾದೊಡನೆಯೇ ಸರ್ವಪ್ರಾಣಿಗಳೂ ಹೋಗುವ ಶಾಶ್ವತವಾದ ವಿಶಾಲ ಮೃತ್ಯುಪಥದಲ್ಲಿ ಹೋಗುತ್ತಾನೆ. ದೇಹವೇ ಜೀವವೆಂದು ತಿಳಿದುಕೊಂಡಿರುವವರು ಅಥವಾ ಜೀವವೇ ದೇಹವೆಂದು ತಿಳಿದುಕೊಂಡಿರುವವರು ಇಬ್ಬರೂ ಕೂಡ ದಾರಿಯಲ್ಲಿ ಪತ್ನಿಯೇ ಮೊದಲಾದ ಬಂಧುಗಳೊಡನೆ ಸೇರಿಕೊಂಡು ಸ್ವಲ್ಪಕಾಲವೇ ಇರುತ್ತಾರೆ. ಯಾರಿಗೂ ಅನಂತವಾದ (ಕೊನೆಯಾಗದ) ಸಂಬಂಧಗಳು ಯಾವಾಗಲೂ ದೊರಕುವುದಿಲ್ಲ. ತನ್ನ ಶರೀರದೊಡನಿರುವ ಸಂಬಂಧವೇ ಅಲ್ಪಕಾಲದ್ದಾಗಿರುವಾಗ ಬೇರೆಯವರೊಡನಿರುವ ಸಂಬಂಧಗಳ ಕುರಿತು ಹೇಳುವುದೇನಿದೆ? ಈಗ ನಿನ್ನ ತಂದೆಯೆಲ್ಲಿದ್ದಾನೆ? ನಿನ್ನ ಪಿತಾಮಹನೆಲ್ಲಿದ್ದಾನೆ? ಅವರನ್ನು ಇಂದು ನೀನೂ ಕಾಣುತ್ತಿಲ್ಲ. ಅವರಿಗೂ ಕೂಡ ನೀನು ಕಾಣುತ್ತಿಲ್ಲ! ಯಾವ ಪುರುಷನೂ ಇಲ್ಲಿಂದ ಸ್ವರ್ಗ ಅಥವಾ ನರಕವನ್ನು ಕಂಡಿಲ್ಲ. ಆದರೆ ಆಗಮಗಳೇ ಸತ್ಪುರುಷರಿಗೆ ಕಣ್ಣುಗಳಾಗಿವೆ. ಆದುದರಂತೆ ಅವುಗಳು ಹೇಳುವಂತೆ ನಡೆದುಕೋ! ಬ್ರಹ್ಮಚರ್ಯವನ್ನು ನಡೆಸಿ, ಮಕ್ಕಳನ್ನು ಪಡೆದು ಯಜ್ಞಗಳನ್ನು ಮಾಡಬೇಕು. ಈ ರೀತಿ ಪಿತೃ-ದೇವ-ಮಹರ್ಷಿಗಳ ಋಣಗಳನ್ನು ದೋಷವೆಣಿಸದೇ ತೀರಿಸಬೇಕು. ಮೊದಲು ಬ್ರಹ್ಮಚಾರಿಯಾಗಿದ್ದುಕೊಂಡು, ನಂತರ ಸಂತಾನಗಳನ್ನು ಪಡೆದು, ದ್ವಂದ್ವಗಳನ್ನು ಮೀರಿ ಅವಿಭಕ್ತನಾಗಿದ್ದುಕೊಂಡು ಈ ಲೋಕವೇ ಸ್ವರ್ಗವೆಂದು ಆರಾಧಿಸಿ ಹೃದಯದಲ್ಲಿರುವ ಮುಳ್ಳನ್ನು ಕಿತ್ತೊಗೆಯಬೇಕು. ಉತ್ತಮ ಧರ್ಮದಲ್ಲಿಯೇ ನಡೆದುಕೊಂಡು, ಯಥಾವತ್ತಾಗಿ ದ್ರವ್ಯಗಳನ್ನು ಸಂಗ್ರಹಿಸುತ್ತಾ ನಡೆದುಕೊಳ್ಳುವ ನೃಪನ ಯಶಸ್ಸು ಎಲ್ಲ ಲೋಕಗಳಲ್ಲಿಯೂ ವಿಸ್ತರಿಸುತ್ತದೆ.”

ಹೀಗೆ ಅಶ್ಮನಿಂದ ಈ ಸಮಗ್ರವಾದ, ಉದಾಹರಣೆಗಳಿಂದ ಪರಿಪೂರ್ಣವಾಗಿದ್ದ ಮಾತುಗಳನ್ನು ಕೇಳಿ ಜನಕನು ವಿಶುದ್ಧ ಮನಸ್ಸುಳ್ಳವನಾಗಿ, ಶೋಕವನ್ನು ತೊರೆದು ಶಾಂತನಾಗಿ ತನ್ನ ಅರಮನೆಗೆ ತೆರಳಿದನು.

***

[1] ಕಾಲದ ಪರಿಣಾಮವು - ಶ್ರೀಮಂತರಿರಲಿ ಅಥವಾ ದರಿದ್ರರಿರಲಿ  ಒಂದೇ ತೆರನಾಗಿರುತ್ತದೆ.

Leave a Reply

Your email address will not be published. Required fields are marked *