ಮಂಕಿಗೀತೆ
ಧನಾದಿಗಳ ತೃಷ್ಣೆಯೇ ದುಃಖ ಮತ್ತು ತೃಷ್ಣತ್ಯಾಗವೇ ಸುಖ ಎಂದು ಪ್ರತಿಪಾದಿಸುವ ಈ ಮಂಕಿಗೀತೆಯು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 171ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು.
***
ಯುಧಿಷ್ಠಿರನು ಹೇಳಿದನು:
“ಧನದಾಹಿಯು ವಿವಿಧ ಉದ್ಯೋಗಗಳಿಂದಲೂ ಬಯಸಿದಷ್ಟು ಧನವನ್ನು ಪಡೆಯಲಾಗದಿದ್ದರೆ ಏನು ಮಾಡುವುದರಿಂದ ಅವನಿಗೆ ಸುಖವುಂಟಾಗುತ್ತದೆ?”
ಭೀಷ್ಮನು ಹೇಳಿದನು:
“ಭಾರತ! ಸರ್ವರಲ್ಲಿಯೂ ಸಮಭಾವ, ಅನಾಯಾಸ, ಸತ್ಯವಾಕ್ಯ, ವೈರಾಗ್ಯ ಮತ್ತು ಕಾಮ್ಯಕರ್ಮಗಳಲ್ಲಿ ನಿರಾಸಕ್ತಿ – ಇವುಗಳಿರುವ ನರನೇ ಸುಖಿಯು. ವೃದ್ಧರು ಈ ಐದನ್ನೇ ಶಾಂತಿಸಾಧನಕ್ಕೆ ಹೆಜ್ಜೆಗಳೆಂದು ಹೇಳಿದ್ದಾರೆ. ಇದೇ ಸ್ವರ್ಗ, ಇದೇ ಧರ್ಮ ಮತ್ತು ಇದೇ ಸತ್ಪುರುಷರ ಉತ್ತಮ ಸುಖವೆಂದು ಹೇಳಿದ್ದಾರೆ. ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಭೋಗಮುಕ್ತ ಮುನಿ ಮಂಕಿಯ ಗೀತೆಯನ್ನು ಉದಾಹರಿಸುತ್ತಾರೆ. ಅದನ್ನು ಕೇಳು.
***
ಧನಕ್ಕಾಗಿ ಮಂಕಿಯ ಅನೇಕ ಪ್ರಯತ್ನಗಳು ಪುನಃ ಪುನಃ ವ್ಯರ್ಥವಾಗುತ್ತಿದ್ದವು. ಉಳಿದಿದ್ದ ಸ್ವಲ್ಪವೇ ಧನದಿಂದ ಅವನು ಎರಡು ಹಸುವಿನ ಕರುಗಳನ್ನು ಕೊಂಡುಕೊಂಡನು. ಒಮ್ಮೆ ಅವನು ಆ ಎರಡು ಕರುಗಳನ್ನೂ ಜೋಡಿಯಾಗಿ ಕಟ್ಟಿ ನೇಗಿಲು ನಡೆಸುವುದನ್ನು ಕಲಿಸಲು ಕರೆದುಕೊಂಡು ಹೋದನು. ನಡುದಾರಿಯಲ್ಲಿ ಕುಳಿತಿದ್ದ ಒಂದು ಒಂಟೆಯನ್ನು ಮಧ್ಯದಲ್ಲಿ ಬಿಟ್ಟುಕೊಂಡು ಎರಡು ಹೋರಿಗಳೂ ಬಹಳ ಬೇಗ ಮುಂದೆ ಹೋದವು. ಆ ಎರಡು ಹೋರಿಗಳೂ ಒಂಟೆಯ ಹೆಗಲನ್ನು ಸಮೀಪಿಸುತ್ತಲೇ ಕೋಪದಿಂದ ಒಂಟೆಯು ಮೇಲೆದ್ದಿತು. ತನ್ನ ಕುತ್ತಿಗೆಯ ಮೇಲೆ ಬಂದು ಕುಳಿತಿದ್ದ ಆ ನೊಗವನ್ನು ಹೋರಿಗಳ ಸಹಿತ ಮೇಲಕ್ಕೆತ್ತಿ ಒಂಟೆಯು ವೇಗದಿಂದ ಓಡ ತೊಡಗಿತು. ಬಲಿಷ್ಠ ಒಂಟೆಯು ತನ್ನ ಎರಡೂ ಹೋರಿಗಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಿ ಸ್ವಲ್ಪವೇ ಸಮಯದಲ್ಲಿ ತನ್ನ ಹೋರಿಗಳು ಸಾಯುವವು ಎಂದು ನಿಶ್ಚಯಿಸಿ ಮಂಕಿಯು ಹೇಳಿದನು:
“ಮನುಷ್ಯನು ಎಷ್ಟೇ ದಕ್ಷನಾಗಿದ್ದರೂ ಮತ್ತು ಎಷ್ಟೇ ಶ್ರದ್ಧೆಯಿಂದ ಧನಸಂಪಾದನೆಗೆ ಪ್ರಯತ್ನಿಸಿದರೂ ದೈವವು ನೀಡದ ಧನವನ್ನು ಅವನು ಸಂಪಾದಿಸಲಾರನು. ಹಿಂದೆ ನಾನು ಅರ್ಥಸಂಪಾದನೆಗಾಗಿ ಮಾಡಿದ ಪ್ರಯತ್ನಗಳೆಲ್ಲವೂ ಅನರ್ಥದಲ್ಲಿಯೇ ಕೊನೆಗೊಂಡವು. ಆದರೂ ನಿರಾಶನಾಗದೇ ಪ್ರಯತ್ನವನ್ನು ಮುಂದುವರಿಸಿ ಧನಸಂಪಾದನೆಗೆಂದು ತಂದ ಈ ಹೋರಿಗಳ ಸಹವಾಸದಿಂದ ನನಗಾದ ದೈವದ ಉಪದ್ರವವನ್ನಾದರೂ ನೋಡಿ! ಉದ್ಯಮೆಗೆ ಉಪಯೋಗಿಸಬೇಕಾದ ಹೋರಿಗಳನ್ನು ಒಂಟೆಯು ಮೇಲೆತ್ತಿಕೊಂಡು ಹಳ್ಳ-ತಿಟ್ಟುಗಳಿರುವ ಮಾರ್ಗದಲ್ಲಿ ಹೋಗುತ್ತಿದೆ. ಕಾಕತಾಳೀಯ ನ್ಯಾಯ[1]ದಂತೆ ಹಾದಿಯಲ್ಲಿದ್ದ ಒಂಟೆಯ ಮೇಲೆಯೇ ನನ್ನ ಹೋರಿಗಳು ಹೋದವು ಮತ್ತು ಒಡನೆಯೇ ಒಂಟೆಯು ಮೇಲೆದ್ದು ನೊಗದೊಡನೆ ಎರಡು ಹೋರಿಗಳನ್ನೂ ಎತ್ತಿಕೊಂಡು ಮನಬಂದಂತೆ ಓಡುತ್ತಿದೆ. ನನ್ನ ಪ್ರಿಯ ಹೋರಿಗಳು ಒಂಟೆಯ ಎರಡು ಕಿವಿಗಳಲ್ಲಿರುವ ಮಣಿಗಳಂತೆ ನೇತಾಡುತ್ತಿವೆ. ನಿಶ್ಚಯವಾಗಿಯೂ ಇದು ದೈವಲೀಲೆಯು. ಆದುದರಿಂದ ಹಠದಿಂದ ಮಾಡುವ ಪುರುಷಪ್ರಯತ್ನದಲ್ಲಿ ಯಾವ ಪ್ರಯೋಜನವೂ ಇಲ್ಲ. ಯಾವಾಗಲಾದರೊಮ್ಮೆ ಪುರುಷಪ್ರಯತ್ನವು ಸಫಲವಾಯಿತೆಂದು ಕಂಡುಬಂದರೂ ಫಲಿತಾಂಶದ ಕಾರಣವನ್ನು ಸಂಪೂರ್ಣವಾಗಿ ವಿವೇಚಿದರೆ ಅಲ್ಲಿಯೂ ದೈವದ ಸಹಯೋಗವಿದೆಯೆಂದು ನಮಗೆ ಸ್ಪಷ್ಟವಾಗಿ ಕಾಣುತ್ತದೆ. ಆದುದರಿಂದ ಸುಖವನ್ನು ಬಯಸುವವನು ಧನಾದಿಗಳಿಂದ ವಿರಕ್ತಿಯನ್ನು ಹೊಂದಬೇಕು. ಅರ್ಥಸಾಧನೆಯ ಆಸೆಗಳಿಲ್ಲದೇ ನಿರ್ವಿಣ್ಣನಾದವನು ಸುಖವಾಗಿ ನಿದ್ರಿಸುತ್ತಾನೆ. ಅಹೋ! ಶುಕಮುನಿಯು ಜನಕನ ನಿವೇಶನದಿಂದ ಮಹಾರಣ್ಯಕ್ಕೆ ಹೊರಡುವಾಗ ಸರ್ವಪ್ರಕಾರದಲ್ಲಿಯೂ ಬಂಧನಮುಕ್ತನಾಗಿ ಎಂಥಹ ಉತ್ತಮ ಮಾತನ್ನಾಡಿದ್ದನು!
“ಸರ್ವಕಾಮನೆಗಳನ್ನೂ ಪೂರೈಸಿಕೊಳ್ಳುವುದು ಮತ್ತು ಎಲ್ಲವನ್ನೂ ಕೇವಲ ತ್ಯಾಗಮಾಡುವುದು – ಇವೆರಡರಲ್ಲಿ ಸರ್ವಕಾಮನೆಗಳನ್ನು ಪಡೆದುಕೊಳ್ಳುವುದಕ್ಕಿಂತ ಅವುಗಳನ್ನು ತ್ಯಜಿಸುವುದೇ ಶ್ರೇಷ್ಠವು. ಸಕಲವಿಧದ ಕಾಮನೆಗಳನ್ನೂ ಪೂರೈಸಿಕೊಳ್ಳುವುದರ ಅಂತ್ಯವನ್ನು ತಲುಪಿದವರ್ಯಾರೂ ಇಲ್ಲ. ಶರೀರ ಮತ್ತು ಜೀವನದಲ್ಲಿ ಮೂರ್ಖನ ತೃಷ್ಣೆಯು ಹೆಚ್ಚಾಗುತ್ತಲೇ ಇರುತ್ತದೆ.”
ಮಾಮಕ! ಸಕಲ ಕಾಮನೆಗಳಿಂದಲೂ ವಿಮುಕ್ತನಾಗು. ವೈರಾಗ್ಯದಿಂದ ಶಾಂತಿಯನ್ನು ಪಡೆದುಕೋ. ಧನಸಂಗ್ರಹಕ್ಕೆ ಪ್ರಯತ್ನಪಟ್ಟು ಹಲವು ಬಾರಿ ವಂಚಿತನಾಗಿರುವೆ. ಹೀಗಿದ್ದರೂ ನಿನಗೆ ವೈರಾಗ್ಯವುಂಟಾಗಿಲ್ಲ. ಧನಸಂಗ್ರಹದ ಪ್ರಯತ್ನವನ್ನು ಮುಂದುವರೆಸುತ್ತಲೇ ಇದ್ದೀಯೆ! ವಿತ್ತಕಾಮುಕ ಮನಸ್ಸೇ! ನನ್ನನ್ನು ನಾಶಪಡಿಸುವ ಅಭಿಲಾಷೆಯು ಇಲ್ಲದಿದ್ದರೆ ಮತ್ತು ನನ್ನೊಡನೆ ಆನಂದದಿಂದಿರಲು ಇಚ್ಛಿಸಿದರೆ ನನ್ನನ್ನು ವೃಥಾ ಲೋಭದಲ್ಲಿ ತೊಡಗಿಸಬೇಡ. ಧನಕಾಮುಕನೇ! ಧನವನ್ನು ಸಂಚಯಿಸುತ್ತಲೇ ಇರುವೆ. ಸಂಚಯಿಸಿದಂತೆ ಧನವು ಪುನಃ ಪುನಃ ನಷ್ಟವಾಗುತ್ತಲೇ ಇದೆ. ಓ ಮೂಢ ಮನಸ್ಸೇ! ಯಾವಾಗ ನೀನು ಈ ಧನದ ಆಸೆಯಿಂದ ಮುಕ್ತನಾಗುತ್ತೀಯೆ? ಅಯ್ಯೋ! ನನ್ನದು ಎಂಥಹ ಮೂರ್ಖತನ! ಮನಸ್ಸೇ! ನೀನು ನನ್ನನ್ನು ಆಟದ ಬೊಂಬೆಯನ್ನಾಗಿ ಮಾಡಿಕೊಂಡು ತಕ-ತಕನೆ ಕುಣಿಸುತ್ತಿರುವೆ. ಇಲ್ಲವಾದರೆ ವಿವೇಕಿ ಪುರುಷನು ಯಾವಾಗಲಾದರೂ ಇತರರಿಗೆ ದಾಸನಾಗುತ್ತಾನೆಯೇ?
ಹಿಂದಾಗಲೀ ಈಗಾಗಲೀ ಯಾರೂ ಯಾವಾಗಲೂ ಕಾಮನೆಗಳ ಕೊನೆಯೆಂಬುದನ್ನು ಕಂಡಿದ್ದೇ ಇಲ್ಲ. ಇದೂವರೆಗೂ ಯಾರೂ ಕಾಮನೆಗಳಿಂದ ಸಂಪೂರ್ಣ ತೃಪ್ತಿಯನ್ನು ಹೊಂದಿಲ್ಲ. ಕಾಮನೆಗಳನ್ನು ಉಪಭೋಗಿಸಿದರೆ ಇನ್ನೂ ಉಪಭೋಗಿಸಬೇಕು ಎಂಬ ಆಸೆಯು ಹೆಚ್ಚುತ್ತಲೇ ಇರುತ್ತದೆ. ಆದುದರಿಂದ ನಾನು ಸರ್ವ ವ್ಯವಹಾರಗಳನ್ನೂ ಪರಿತ್ಯಜಿಸಿ ಎಚ್ಚರಗೊಂಡಿದ್ದೇನೆ. ಪುನಃ ಆಸೆಯು ತಲೆದೋರದಂತೆ ಜಾಗರೂಕನಾಗಿದ್ದೇನೆ. ಕಾಮವೇ! ನಿನ್ನ ಹೃದಯವು ವಜ್ರಸಾರಮಯವಾಗಿ ದೃಢವಾಗಿದೆಯಲ್ಲವೇ? ಅದಕ್ಕಾಗಿಯೇ ನೂರಾರು ಅನರ್ಥಗಳನ್ನು ಎದುರಿಸಿಯೂ ಈ ನಿನ್ನ ಹೃದಯವು ಒಡೆದುಹೋಗುತ್ತಿಲ್ಲ. ಕಾಮವೇ! ನಾನು ನಿನ್ನನ್ನು ತ್ಯಜಿಸುತ್ತೇನೆ. ನಿನಗೆ ಪ್ರಿಯವಾದುದನ್ನೂ ತ್ಯಜಿಸುತ್ತೇನೆ. ಯಾವಾಗಲೂ ನಿನಗೆ ಪ್ರಿಯವನ್ನುಂಟುಮಾಡಲು ಪ್ರಯತ್ನಿಸುತ್ತಿದ್ದೆ. ಆದರೆ ನನಗೆ ಮಾತ್ರ ಎಂದೂ ಸುಖಾನುಭವವೇ ಆಗಿಲ್ಲ. ಕಾಮವೇ! ನಾನು ನಿನ್ನನ್ನು ಅರಿತುಕೊಂಡಿದ್ದೇನೆ. ನೀನು ಸಂಕಲ್ಪದಿಂದ ಹುಟ್ಟುತ್ತೀಯಲ್ಲವೇ? ನಾನಿನ್ನು ನಿನ್ನ ವಿಷಯದಲ್ಲಿ ಸಂಕಲ್ಪವನ್ನೇ ಮಾಡುವುದಿಲ್ಲ. ಅದರಿಂದ ನೀನು ಸಮೂಲವಾಗಿ ನಾಶಹೊಂದುತ್ತೀಯೆ.
ಧನವನ್ನು ಬಯಸುವುದು ಅಥವಾ ಸಂಗ್ರಹಿಸುವುದು ಸುಖಕರವಲ್ಲ. ಧನವನ್ನೂ ಪಡೆದರೂ ಮತ್ತೆ ಚಿಂತೆಯಾಗುತ್ತಿರುತ್ತದೆ. ಸಂಗ್ರಹಿಸಿದ ಧನವು ನಾಶವಾದರೆ ಮೃತ್ಯುವನ್ನು ಹೊಂದಿದಷ್ಟೇ ಸಂಕಟವಾಗುತ್ತದೆ. ಪ್ರಯತ್ನಿಸಿದರೂ ಧನವು ದೊರಕಬಹುದು ಅಥವಾ ದೊರಕದೆಯೂ ಇರಬಹುದು. ಶರೀರವನ್ನು ತ್ಯಜಿಸಿದರೂ ಧನವು ಲಭಿಸಲಾರದೆಂದರೆ ಅದಕ್ಕಿಂತಲೂ ದುಃಖತರವಾದುದು ಯಾವುದಿದೆ? ದೊರಕಿದುದಷ್ಟರಲ್ಲೇ ಮನಸ್ಸು ತೃಪ್ತಿಯಾಗುವುದಿಲ್ಲ. ಅದನ್ನು ಇನ್ನೂ ಹೆಚ್ಚಿಸುವ ಮಾರ್ಗವನ್ನು ಹುಡುಕುತ್ತಲೇ ಇರುತ್ತದೆ. ರುಚಿಯಾದ ಗಂಗಾಜಲದಂತೆ ಧನವು ಧನದ ತೃಷ್ಣೆಯನ್ನು ನಿಜವಾಗಿಯೂ ಹೆಚ್ಚಿಸುತ್ತದೆ. ಅದು ನನ್ನ ವಿನಾಶಕ್ಕೇ ಕಾರಣ ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ. ಆದುದರಿಂದ ನನ್ನನ್ನು ತ್ಯಜಿಸಿ ಹೊರಟುಹೋಗು. ನನ್ನ ದೇಹದಲ್ಲಿರುವ ಈ ಭೂತಗ್ರಾಮಗಳು ಬಯಸಿದರೆ ಹೊರಟುಹೋಗಲಿ ಅಥವಾ ಇಲ್ಲಿಯೇ ಇರಲಿ. ನನಗಂತೂ ಅವುಗಳಲ್ಲಿ ಆಸೆ-ಆಸಕ್ತಿಗಳಿಲ್ಲ. ಕಾಮ-ಲೋಭಗಳನ್ನೇ ಅನುಸರಿಸಿ ಹೋಗುವ ನಿಮ್ಮ ಮೇಲೂ ನನಗೆ ಪ್ರೀತಿಯಿಲ್ಲ. ಆದುದರಿಂದ ನಿಮ್ಮೆಲ್ಲರನ್ನೂ ತ್ಯಜಿಸಿ ನಾನು ಸತ್ಯವನ್ನೇ ಆಶ್ರಯಿಸುತ್ತೇನೆ.
ನಾನು ನನ್ನ ದೇಹದಲ್ಲಿ ಮನಸ್ಸಿನೊಳಗೇ ಸಂಪೂರ್ಣ ಭೂತಗಳನ್ನು ಕಾಣುತ್ತಾ ಬುದ್ಧಿಯನ್ನು ಯೋಗದಲ್ಲಿ, ಏಕಾಗ್ರಚಿತ್ತವನ್ನು ಶ್ರವಣ-ಮನನ ಮೊದಲಾದ ಸಾಧನಗಳಲ್ಲಿ ಮತ್ತು ಮನಸ್ಸನ್ನು ಪರಮಾತ್ಮನಲ್ಲಿ ಇರಿಸಿ ರೋಗ-ಶೋಕರಹಿತನಾಗಿ ಸುಖಿಯಾಗಿ ಸಂಪೂರ್ಣ ಲೋಕಗಳಲ್ಲಿ ಅನಾಸಕ್ತ ಭಾವದಿಂದ ಸಂಚರಿಸುತ್ತೇನೆ. ಹೀಗೆ ಮಾಡುವುದರಿಂದ ನೀನು ನನ್ನನ್ನು ಈ ರೀತಿಯಲ್ಲಿ ಪುನಃ ದುಃಖಗಳಲ್ಲಿ ಮುಳುಗಿಸಲಾರೆ. ಕಾಮವೇ! ತೃಷ್ಣೆ, ಶೋಕ ಮತ್ತು ಪರಿಶ್ರಮಗಳಿಗೆ ನೀನು ಉತ್ಪತ್ತಿ ಸ್ಥಾನವಾಗಿರುವೆ. ಎಲ್ಲಿಯವರೆಗೆ ನೀನು ನನ್ನನ್ನು ಪ್ರೇರೇಪಿಸಿ ಅಲ್ಲಲ್ಲಿ ಎಳೆದುಕೊಂಡು ಹೋಗುತ್ತಿರುತ್ತೀಯೋ ಅಲ್ಲಿಯವರೆಗೆ ನನಗೆ ಬೇರೆ ಯಾವ ಗತಿಯೂ ಇಲ್ಲ. ಧನನಾಶದಿಂದಾಗುವ ದುಃಖವು ಎಲ್ಲಕ್ಕಿಂತಲೂ ಹೆಚ್ಚಿನದೆಂದು ನಾನು ತಿಳಿಯುತ್ತೇನೆ. ಏಕೆಂದರೆ ಧನದಿಂದ ಚ್ಯುತನಾದವನನ್ನು ಜ್ಞಾತಿಬಾಂಧವರು ಮತ್ತು ಮಿತ್ರರು ಅಪಮಾನಿಸುತ್ತಾರೆ. ದರಿದ್ರನಿಗೆ ಸಹಸ್ರಾರು ತಿರಸ್ಕಾರಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದುದರಿಂದ ನಿರ್ಧನನಾಗಿರುವುದು ಬಹಳ ಕಷ್ಟಕರ ದೋಷವು. ಧನದಿಂದ ಯಾವ ಸುಖದ ಲೇಶವು ದೊರೆಯುತ್ತದೆಯೋ ಅದೂ ಕೂಡ ದುಃಖದಿಂದಲೇ ದೊರೆಯುತ್ತದೆ. ಧನವಿರುವುದೆಂದು ಮೊದಲೇ ತಿಳಿದುಕೊಂಡು ದಸ್ಯುಗಳು ಪುರುಷನನ್ನು ಕೊಲ್ಲುತ್ತಾರೆ. ವಿವಿಧ ದಂಡಗಳಿಂದ ಪೀಡಿಸಿ ಅವನನ್ನು ನಿತ್ಯವೂ ಉದ್ವೇಗಗೊಳಿಸುತ್ತಿರುತ್ತಾರೆ.
ಮೂರ್ಖ ಧನದಾಸೆಯು ದುಃಖಕ್ಕೆ ಕಾರಣವು ಎಂದು ನನಗೆ ತಡವಾಗಿ ತಿಳಿಯಿತು. ನೀನು ಯಾವುದನ್ನು ಆಶ್ರಯಿಸಿರುವೆಯೋ ಅವುಗಳನ್ನೇ ಅನುಸರಿಸುತ್ತೀಯೆ ಮತ್ತು ಅವುಗಳನ್ನು ಪಡೆದುಕೊಳ್ಳಲು ನನ್ನನ್ನು ಪ್ರೇರೇಪಿಸುತ್ತೀಯೆ. ಕಾಮವೇ! ನೀನು ತತ್ತ್ವಜ್ಞನಲ್ಲ. ಬಾಲಬುದ್ಧಿಯಾಗಿರುವೆ. ನಿನ್ನನ್ನು ತೃಪ್ತಿಗೊಳಿಸುವುದು ದುಷ್ಕರವಾದುದು. ಅಗ್ನಿಯಂತೆ ನಿನ್ನ ಹೊಟ್ಟೆಯನ್ನು ತುಂಬಿಸಲು ಸಾಧ್ಯವಿಲ್ಲ. ಯಾವುದನ್ನು ಪಡೆದುಕೊಳ್ಳುವುದು ಸುಲಭ ಮತ್ತು ಯಾವುದು ಕಷ್ಟ ಎನ್ನುವುದು ನಿನಗೆ ತಿಳಿದಿಲ್ಲ. ಸುಲಭವಾದವುಗಳನ್ನೂ ಬಯಸುತ್ತೀಯೆ ಮತ್ತು ದುರ್ಲಭವಾದುದನ್ನೂ ಬಯಸುತ್ತೀಯೆ. ದೊರೆಯದ ವಸ್ತುವಾದರೂ ಮಹಾಕಷ್ಟವನ್ನು ಪಟ್ಟಾದರೂ ತಂದೊಪ್ಪಿಸುವಂತೆ ಪ್ರೇರೇಪಿಸುತ್ತೀಯೆ. ತುಂಬಲಾರದ ಪಾತಾಳದಂತೆ ನಿನ್ನ ಆಸೆಗಳನ್ನು ಪೂರೈಸುವುದು ದುಸ್ಸಾಧ್ಯವು. ಪುನಃ ಪುನಃ ನನ್ನನ್ನು ದುಃಖಭಾಗಿಯನ್ನಾಗಿ ಮಾಡುತ್ತೀಯೆ. ಕಾಮವೇ! ಇಂದು ನನ್ನನ್ನು ಪುನಃ ಸೇರಿಕೊಳ್ಳಲು ನಿನಗೆ ಸಾಧ್ಯವಾಗುವುದಿಲ್ಲ.
ದೈವೇಚ್ಛೆಯಂತೆ ಅಕಸ್ಮಾತ್ತಾಗಿ ದ್ರವ್ಯರೂಪದ ಹೋರಿಗಳ ನಾಶವಾದುದರಿಂದ ನನಗೆ ವೈರಾಗ್ಯವುಂಟಾಗಿ ಪರಮ ಸುಖವು ಪ್ರಾಪ್ತವಾಗಿದೆ. ಇನ್ನು ನಾನು ಕಾಮಗಳ ಕುರಿತು ಚಿಂತಿಸುವುದಿಲ್ಲ. ಹಿಂದೆ ನಾನು ನಿನಗಾಗಿ ಬಹಳ ಕ್ಲೇಶಗಳನ್ನು ಸಹಿಸಿಕೊಳ್ಳುತ್ತಿದ್ದೆನು. ಮೂರ್ಖನಾದ ನಾನು ಈ ಕಷ್ಟಗಳನ್ನು ನಿನ್ನಿಂದಾಗಿ ಅನುಭವಿಸುತ್ತಿದ್ದೆ ಎನ್ನುವುದನ್ನು ಈ ಮೊದಲು ತಿಳಿದುಕೊಳ್ಳಲೇ ಇಲ್ಲ. ಈ ಧನನಾಶದಿಂದ ವಂಚಿತನಾಗಿ ನಾನು ಸರ್ವಾಂಗಗಳ ತಾಪವನ್ನೂ ಕಳೆದುಕೊಂಡು ಸುಖವಾಗಿ ನಿದ್ರಿಸುತ್ತೇನೆ. ಕಾಮವೇ! ನನ್ನ ಸರ್ವ ಮನೋಗತಿಗಳನ್ನೂ ಬಿಟ್ಟು ನಿನ್ನನ್ನು ಪರಿತ್ಯಜಿಸುತ್ತೇನೆ. ಇನ್ನುಮುಂದೆ ನೀನು ನನ್ನೊಡನಿರಲಾರೆ ಮತ್ತು ನನ್ನೊಡನೆ ರಮಿಸಲಾರೆ. ಕ್ಷಮಿಸದೇ ಇಲ್ಲದವರನ್ನೂ ಕ್ಷಮಿಸುತ್ತೇನೆ. ಹಿಂಸೆಮಾಡುವವರನ್ನೂ ಹಿಂಸಿಸುವುದಿಲ್ಲ. ದ್ವೇಷದಿಂದ ಮಾತನಾಡುವವನೊಂದಿಗೂ ಅವನ ಆ ಮಾತುಗಳನ್ನು ಅಲಕ್ಷಿಸಿ ಪ್ರೀತಿಯಿಂದಲೇ ಮಾತನಾಡುತ್ತೇನೆ. ತೃಪ್ತನಾಗಿ, ಇಂದ್ರಿಯಗಳನ್ನು ಶಾಂತಗೊಳಿಸಿ, ನಿತ್ಯವೂ ಯಾವುದು ದೊರೆಯುತ್ತದೆಯೋ ಅದರಿಂದಲೇ ಜೀವಿಸುತ್ತೇನೆ. ನನ್ನ ಶತ್ರುವಾಗಿರುವ ನಿನ್ನನ್ನು ನಾನು ಸಕಾಮನನ್ನಾಗಿಸುವುದಿಲ್ಲ. ನಾನೀಗ ವೈರಾಗ್ಯ, ಸುಖ, ತೃಪ್ತಿ, ಶಾಂತಿ, ಸತ್ಯ, ದಮ, ಕ್ಷಮೆ, ಸರ್ವಭೂತದಯೆಗಳಿಗೆ ಶರಣಾಗತನಾಗಿದ್ದೇನೆ ಎನ್ನುವುದನ್ನು ತಿಳಿದುಕೋ. ಆದುದರಿಂದ ಕಾಮ, ಲೋಭ, ತೃಷ್ಣೆ ಮತ್ತು ಕಾರ್ಪಣ್ಯಗಳು ಮೋಕ್ಷಮಾರ್ಗವನ್ನು ಹಿಡಿದಿರುವ ನನ್ನನ್ನು ಬಿಟ್ಟು ಹೊರಟು ಹೋಗಲಿ. ನಾನೀಗ ಸತ್ತ್ವದಲ್ಲಿಯೇ ಸ್ಥಿರಚಿತ್ತನಾಗಿದ್ದೇನೆ. ಇಂದು ನಾನು ಕಾಮ, ಲೋಭ, ಕ್ರೋಧ ಮತ್ತು ಪೌರುಷಗಳನ್ನು ಪರಿತ್ಯಜಿಸಿ ಪುನಃ ಲೋಭವಶನಾಗಿ ದುಃಖಕ್ಕೆ ಭಾಗಿಯಾಗುವುದಿಲ್ಲ. ಮನುಷ್ಯನು ಯಾವ ಯಾವ ಕಾಮನೆಗಳನ್ನು ತ್ಯಜಿಸುತ್ತಾನೋ ನಿರಸ್ತವಾದ ಆ ಕಾಮನೆಗಳು ಅವನಿಗೆ ಸುಖವಾಗಿಯೇ ಪರಿಣಮಿಸುತ್ತವೆ. ಕಾಮಕ್ಕೆ ವಶನಾದವನು ಸದಾ ದುಃಖವನ್ನೇ ಅನುಭವಿಸುತ್ತಾನೆ. ಕಾಮಕ್ಕೆ ಬಂಧಿಸುವ ಸ್ವಲ್ಪವಾದರೂ ರಜೋಗುಣವಿದ್ದರೆ ಮನುಷ್ಯನು ಅದನ್ನು ದೂರೀಕರಿಸಬೇಕು. ದುಃಖ, ನಿರ್ಲಜ್ಜೆ ಮತ್ತು ಅಸಂತೋಷ ಇವು ಕಾಮ-ಕ್ರೋಧಗಳಿಂದಲೇ ಹುಟ್ಟಿಕೊಳ್ಳುವವು[2]. ಗ್ರೀಷ್ಮಋತುವಿನ ಉರಿಬಿಸಿಲಿನಲ್ಲಿ ಶೀತಲ ಸರೋವರವನ್ನು ಪ್ರವೇಶಿಸಿ ಆನಂದ ಪಡುವಂತೆ ನಾನು ಸಂಸಾರದ ಬೇಗೆಯಿಂದ ತಪ್ಪಿಸಿಕೊಂಡು ಪರಬ್ರಹ್ಮದಲ್ಲಿ ಪ್ರತಿಷ್ಠಿತನಾಗಿದ್ದೇನೆ. ಕರ್ಮಗಳಲ್ಲಿ ಆಸಕ್ತಿರಹಿತನಾಗಿದ್ದೇನೆ. ಶಾಂತನಾಗಿದ್ದೇನೆ. ದುಃಖರಹಿತನಾಗಿದ್ದೇನೆ. ಈಗ ಕೇವಲ ಸುಖವನ್ನೇ ಪಡೆದಿದ್ದೇನೆ. ಲೋಕದಲ್ಲಿ ಯಾವ ಕಾಮಸುಖ ಮತ್ತು ದಿವ್ಯ ಮಹಾಸುಖಗಳಿಯೋ ಅವುಗಳು ತೃಷ್ಣೆಯನ್ನು ಕ್ಷಯಮಾಡಿಕೊಂಡ ಸುಖದ ಹದಿನಾರನೆಯ ಒಂದು ಅಂಶಕ್ಕೂ ಸಮನಾಗಿರುವುದಿಲ್ಲ. ಆತ್ಮನಿಂದ ಏಳನೆಯವನಾದ[3] ಮತ್ತು ಉತ್ತಮ ಶತ್ರುವಾದ ಕಾಮನನ್ನು ಸಂಹರಿಸಿ ಅವಿನಾಶಿಯಾದ ಬ್ರಹ್ಮಪುರವನ್ನು ಸೇರಿ ರಾಜನಂತೆ ಸುಖಿಯಾಗಿರುತ್ತೇನೆ.”
***
ಈ ಬುದ್ಧಿಯನ್ನೇ ಆಶ್ರಯಿಸಿ ಮಂಕಿಯು ಸರ್ವ ಕಾಮನೆಗಳನ್ನೂ ಪರಿತ್ಯಜಿಸಿ ವೈರಾಗ್ಯವನ್ನು ತಾಳಿ ಬ್ರಹ್ಮಸಾಕ್ಷಾತ್ಕಾರವನ್ನು ಹೊಂದಿ ಪರಮ ಸುಖಿಯಾದನು. ತನ್ನ ಪ್ರೀತಿಯ ಹೋರಿಗಳು ನಾಶವಾದುದರಿಂದ ಮಂಕಿಯು ಅಮೃತತ್ತ್ವವನ್ನೇ ಪಡೆದುಕೊಂಡನು. ಅವನು ಕಾಮದ ಮೂಲವನ್ನೇ ಕತ್ತರಿಸಿ ಹಾಕಿ ಮಹಾಸುಖವನ್ನು ಪಡೆದುಕೊಂಡನು.”
[1] ತಾಳೆಯ ಮರದ ಕೆಳಗೆ ಕುಳಿತಿರುವಾಗ ಎಲ್ಲಿಂದಲೋ ಬಂದ ಕಾಗೆಯೊಂದು ಮರದ ಮೇಲೆ ಕುಳಿತುಕೊಂಡಾಗ, ಮತ್ತು ಆಗಲೇ ಮಾಗಿದ ತಾಳೇಹಣ್ಣು ಕೆಳಕ್ಕೆ ಬಿದ್ದಾಗ ಕೆಳಗೆ ಕುಳಿತಿದ್ದವನು ಕಾಗೆಯು ಬಂದಿರುವುದರಿಂದಲೇ ತಾಳೇ ಹಣ್ಣು ಬಿದ್ದಿತು ಎಂದು ತಿಳಿಯುವುದೇ ಕಾಕತಾಳೀಯ ನ್ಯಾಯ. ಎರಡು ಘಟನೆಗಳಿಗೂ ಸಂಬಂಧವಿಲ್ಲದೇ ಅಕಸ್ಮಾತ್ತಾಗಿ ನಡೆಯುವ ಕಾರ್ಯಫಲ.
[2] ರಜಸ್ಸು ಪ್ರವೃತ್ತಿಗೆ ಕಾರಣವಾದ ಗುಣ. ಇದು ಕಾಮನಾಸಂಬಂಧವನ್ನು ಹೊಂದಿರುತ್ತದೆ. ಕಾಮ-ಕ್ರೋಧಗಳೇ ದುಃಖಕ್ಕೆ ಕಾರಣ. ಆದುದರಿಂದ ಪುರುಷನು ನಾಚಿಕೆಯನ್ನೂ ಸಂಸಾರದಲ್ಲಿ ಆಸಕ್ತಿಯನ್ನೂ ಬಿಟ್ಟು ಸರ್ವಾನರ್ಥಮೂಲವಾದ ರಜೋಗುಣವು ಸ್ವಲ್ಪವೂ ಇಲ್ಲದಂತೆ ಅದನ್ನು ದೂರಮಾಡಬೇಕು. (ಭಾರತ ದರ್ಶನ).
[3] ಆತ್ಮನಾ ಸಪ್ತಮಂ ಎನ್ನುವುದಕ್ಕೆ ವ್ಯಾಖ್ಯಾನಕಾರರು ಹೀಗೆ ಹೇಳಿದ್ದಾರೆ: ಆತ್ಮನಾ – ಸ್ಥೂಲದೇಹೇನ ಸಹ ಗಣನಾಯಾಂ – ಸ್ಥೂಲದೇಹವನ್ನು ಸೇರಿಸಿ ಗಣನೆ ಮಾಡಿದರೆ, ಸಪ್ತಮಃ ಕಾಮಃ – ಏಳನೆಯವನು ಕಾಮನಾಗುತ್ತಾನೆ. ಹೇಗೆಂದರೆ: ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯಾಶ್ಚತ್ವಾರಃ ಕೋಶಾಃ ಪ್ರವೃತ್ತಿಮತ್ತ್ವದ್ರಜಃ ಪ್ರಧಾನಾಃ – ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯಗಳೆಂಬ ನಾಲ್ಕು ಕೋಶಗಳು ಪ್ರವೃತ್ತಿ ಮಾರ್ಗವನ್ನು ಉತ್ತೇಜಿಸುವುದರಿಂದ ರಜೋಗುಣ ಪ್ರಧಾನವಾದವುಗಳು. ಆನಂದಮಯಃ ಆವರಣರೂಪತ್ತ್ವಾತ್ತಮಃ ಪ್ರಧಾನಃ ಪಂಚಮಃ – ಆನಂದಮಯ ಕೋಶವು ಆವರಣರೂಪವಾಗಿರುವುದರಿಂದ ತಪಃ ಪ್ರಧಾನವಾದುದು. ಇದು ಐದನೆಯದು. ತತಃ ಶುದ್ಧ ಸತ್ತ್ವಪ್ರಧಾನ್ಯಾತ್ ಸಜೀವಸಮಧಿಃ ಆನಂದಾಖ್ಯಃ ಷಷ್ಠಃ – ಶುದ್ಧ ಸತ್ತ್ವಪ್ರಧಾನವಾಗಿರುವ ಆನಂದ ಎಂಬ ಹೆಸರಿನ ಸಜೀವ ಸಮಾಧಿಯು ಆರನೆಯದು. ತಸ್ಯಾಪಿ ಮೂಲಮಸ್ಮೀತಿ ಪ್ರತ್ಯಯಮಾತ್ರಶರೀರೋ ಮಹತ್ತತ್ತ್ವಾಖ್ಯಃ ಸರ್ವಾನರ್ಥಬೀಜಭೂತಃ ಚರಮಃ ಕಾಮಃ ಸಪ್ತಮಃ – ಆನಂದಾಖ್ಯವಾದ ಸಜೀವ ಸಮಾಧಿಗೂ ಮೂಲವೆಂದು ಹೇಳಿಕೊಳ್ಳುವ ಅಸ್ಮಿ ಎಂಬ ಪ್ರತ್ಯಯಮಾತ್ರ ಶರೀರವನ್ನು ಹೊಂದಿರುವ, ಮಹತ್ತತ್ತ್ವವೆಂದು ಹೆಸರು ಪಡೆದಿರುವ, ಸಕಲ ವಿಧದ ಅನರ್ಥಗಳಿಗೂ ಬೀಜಭೂತವಾದ ಕಡೆಯದಾದ ಕಾಮವೇ ಏಳನೆಯದು. ಸಾಮಾನ್ಯವಾಗಿ ಹೇಳುವ ಕಾಮ-ಕ್ರೋಧಾದಿ ಅರಿಷಡ್ವರ್ಗಗಳ ಸರಣಿಯಲ್ಲಿ ಕಾಮವೇ ಮೊದಲನೆಯದಾಗುತ್ತದೆ. ಇಲ್ಲಿ ಆತ್ಮನಿಂದ ಅಂದರೆ ದೇಹದಿಂದ ಕಾಮನು ಸಪ್ತಮನು ಎಂದು ವ್ಯಾಖ್ಯಾನಕಾರರು ವಿವರಿಸಿದ್ದಾರೆ.
ಆದರೆ ಇದು ಕ್ಲಿಷ್ಟ ಕಲ್ಪನೆ. ಕಾಮವು ಸಮಾಧಿಯ ಆನಂದಕ್ಕೂ ಮೂಲವಾದುದು ಎಂದು ಹೇಳುವುದು ಸರಿಯಾಗಿ ಕಾಣುವುದಿಲ್ಲ. ಗೀತೆಯ ಈ ಶ್ಲೋಕದಲ್ಲಿ ಇದಕ್ಕೆ ಸರಳವೂ ಸಾಧುವೂ ಆದ ಉತ್ತರವಿದೆ: ವಿಷಯಾ ವಿನಿವರ್ತಂತೇ ನೀರಾಹಾರಸ್ಯ ದೇಹಿನಃ| ರಸವರ್ಜಂ ಸರೋಽಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ|| (ಭೀಷ್ಮಪರ್ವ, ಅಧ್ಯಾಯ ೨೪, ಶ್ಲೋಕ ೫೯). ವಿಷಯಗಳು ಐದು. ಆರನೆಯದು ರಸ ಎಂದು ಕರೆಯಲ್ಪಟ್ಟಿರುವ ರಾಗ. ಆತ್ಮನಾ ಸಪ್ತಮಂ ಕಾಮಂ ಎಂಬಂತೆ ಆತ್ಮವನ್ನೂ ಸೇರಿಸಿಕೊಂಡರೆ ಕಾಮವು ಏಳನೆಯದಾಗುತ್ತದೆ. ಐದು ಇಂದ್ರಿಯಗಳು, ಆರನೆಯ ಮನಸ್ಸು, ಮತ್ತು ಏಳನೆಯದು ಇವಕ್ಕೆ ಮೂಲವಾದ ಕಾಮ ಅಥವಾ ರಸ.
ಆತ್ಮ ಶಬ್ಧವನ್ನು ಅವರೋಹಣ ಕ್ರಮದಿಂದ ವ್ಯಾಖ್ಯಾನಿಸಿ “ಪರಮಾತ್ಮ” ಎಂಬ ಅಭಿಪ್ರಾಯದಿಂದ ಹೇಳಿದರೂ ಕಾಮವು ಏಳನೆಯದಾಗುತ್ತದೆ: ಪರಮಾತ್ಮ, ಜೀವ, ಪ್ರಕೃತಿ, ಮಹತ್ತು, ಅಹಂಕಾರ, ಮನಸ್ಸು ಮತ್ತು ಅದರಲ್ಲಿ ಜನಿಸಿದ ಕಾಮ (ಭಾರತ ದರ್ಶನ).
The other spiritual discourses in Mahabharata (Kannada):
- ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
- ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
- ಯುಧಿಷ್ಠಿರ-ಮಾರ್ಕಂಡೇಯ ಸಂವಾದ
- ಸರಸ್ವತೀಗೀತೆ
- ಕೌಶಿಕ-ಪತಿವ್ರತೆ-ಧರ್ಮವ್ಯಾಧ
- ವಿದುರನೀತಿ
- ಸನತ್ಸುಜಾತಿಯ
- ಭೌಮಗುಣಕಥನ
- ಶ್ರೀಮದ್ಭಗವದ್ಗೀತಾ
- ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
- ಪಿತಾಪುತ್ರ ಸಂವಾದ
- ಶಮ್ಯಾಕಗೀತೆ
- ಮಂಕಿಗೀತೆ
- ಭೃಗು-ಭರದ್ವಾಜ ಸಂವಾದ
- ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ