ಜನಮೇಜಯನಿಗೆ ಸುರಮೆಯ ಶಾಪ
ಸೂತ ಉಗ್ರಶ್ರವನು ಇದನ್ನು ನೈಮಿಷಾರಣ್ಯವಾಸೀ ಋಷಿಗಳಿಗೆ ಮಹಾಭಾರತದ ಕಥೆಯನ್ನು ಪ್ರಾರಂಭಿಸುವಾಗ ಹೇಳಿದನು [ಆದಿಪರ್ವ, ಪೌಷ್ಯ ಪರ್ವ, ಅಧ್ಯಾಯ ೩, ಶ್ಲೋಕ ೧-೧೮].
01003001 ಸೂತ ಉವಾಚ|
01003001A ಜನಮೇಜಯಃ ಪಾರಿಕ್ಷಿತಃ ಸಹ ಭ್ರಾತೃಭಿಃ ಕುರುಕ್ಷೇತ್ರೇ
ದೀರ್ಘಸತ್ರಮುಪಾಸ್ತೇ|
01003001B ತಸ್ಯ ಭ್ರಾತರಸ್ತ್ರಯಃ ಶ್ರುತಸೇನ ಉಗ್ರಸೇನೋ ಭೀಮಸೇನ
ಇತಿ||
01003002A ತೇಷು ತತ್ಸತ್ರಂ ಉಪಾಸೀನೇಷು ತತ್ರ ಶ್ವಾಭ್ಯಾಗಚ್ಛತ್ಸಾರಮೇಯಃ|
01003002B ಸ ಜನಮೇಜಯಸ್ಯ ಭ್ರಾತೃಭಿರಭಿಹತೋ
ರೋರೂಯಮಾಣೋ ಮಾತುಃ ಸಮೀಪಮುಪಾಗಚ್ಛತ್||
01003003A ತಂ ಮಾತಾ ರೋರೂಯಮಾಣಮುವಾಚ|
01003003B ಕಿಂ ರೋದಿಷಿ|
01003003C ಕೇನಾಸ್ಯಭಿಹತ ಇತಿ||
01003004A ಸ ಏವಮುಕ್ತೋ ಮಾತರಂ ಪ್ರತ್ಯುವಾಚ|
01003004B ಜನಮೇಜಯಸ್ಯ ಭ್ರಾತೃಭಿರಭಿಹತೋಽಸ್ಮೀತಿ||
01003005A ತಂ ಮಾತಾ ಪ್ರತ್ಯುವಾಚ|
01003005B ವ್ಯಕ್ತಂ ತ್ವಯಾ ತತ್ರಾಪರಾದ್ಧಂ ಯೇನಾಸ್ಯಭಿಹತ ಇತಿ||
01003006A ಸ ತಾಂ ಪುನರುವಾಚ|
01003006B ನಾಪರಾಧ್ಯಾಮಿ ಕಿಂಚಿತ್|
01003006C ನಾವೇಕ್ಷೇ ಹವೀಂಷಿ ನಾವಲಿಹ ಇತಿ||
01003007A ತಚ್ಛ್ರುತ್ವಾ ತಸ್ಯ ಮಾತಾ ಸರಮಾ ಪುತ್ರಶೋಕಾರ್ತಾ
ತತ್ಸತ್ರಮುಪಾಗಚ್ಛದ್ಯತ್ರ ಸ ಜನಮೇಜಯಃ ಸಹ
ಭ್ರಾತೃಭಿರ್ದೀರ್ಘಸತ್ರಮುಪಾಸ್ತೇ||
ಸೂತನು ಹೇಳಿದನು: “ಪಾರಿಕ್ಷಿತ ಜನಮೇಜಯನು ಕುರುಕ್ಷೇತ್ರದಲ್ಲಿ ಸಹೋದರರೊಡನೆ ಒಂದು ದೀರ್ಘಯಾಗ[1]ದಲ್ಲಿ ತೊಡಗಿದ್ದನು. ಶೃತಸೇನ, ಉಗ್ರಸೇನ ಮತ್ತು ಭೀಮಸೇನ ಎನ್ನುವವರು ಅವನ ಮೂವರು ಸಹೋದರರು. ಅವರು ಆ ಸತ್ರದಲ್ಲಿ ಉಪಸ್ಥಿತರಿರಲು ಅಲ್ಲಿಗೆ ಶ್ವಾನ[2] ಸಾರಮೇಯ[3]ನು ಆಗಮಿಸಿದನು. ಜನಮೇಜಯನ ತಮ್ಮಂದಿರಿಂದ ಪೆಟ್ಟುತಿಂದ ಅವನು ರೋಧಿಸುತ್ತಾ ತನ್ನ ತಾಯಿಯ ಬಳಿ ಹೋದನು. ರೋಧಿಸುತ್ತಿರುವ ಮಗನನ್ನುದ್ದೇಶಿಸಿ ತಾಯಿಯು ಕೇಳಿದಳು: “ಯಾಕೆ ರೋದಿಸುತ್ತಿರುವೆ? ನಿನಗೆ ಯಾರು ಹೊಡೆದರು?” ತಾಯಿಯಿಂದ ಈ ರೀತಿ ಪ್ರಶ್ನೆಗೊಳಗಾದ ಅವನು ಉತ್ತರಿಸಿದನು: “ಜನಮೇಜಯನ ತಮ್ಮಂದಿರು ನನ್ನನ್ನು ಹೊಡೆದರು.” ತಾಯಿಯು ಅವನಿಗೆ ಪುನಃ ಹೇಳಿದಳು: “ನೀನು ನಿಜವಾಗಿಯೂ ಏನೋ ಅಪರಾಧವನ್ನು ಮಾಡಿರುವುದರಿಂದಲೇ ಅವರು ನಿನಗೆ ಹೊಡೆದಿರಬಹುದು.” ಅವನು ಅವಳಿಗೆ ಪುನಃ ಹೇಳಿದನು: “ನಾನೇನು ಅಪರಾಧವನ್ನೂ ಮಾಡಿಲ್ಲ. ನಾನು ಹವಿಸ್ಸಿನ ಕಡೆ ಕೂಡ ನೋಡಲಿಲ್ಲ; ಅದನ್ನು ನೆಕ್ಕಲೂ ಇಲ್ಲ.” ಅದನ್ನು ಕೇಳಿದ ಅವನ ಮಾತೆ ಸರಮೆಯು ಪುತ್ರಶೋಕಾರ್ತಳಾಗಿ ತಮ್ಮಂದಿರೊಂದಿಗೆ ದೀರ್ಘಸತ್ರದಲ್ಲಿ ಉಪಸ್ಥಿತನಿದ್ದ ಜನಮೇಜಯನಲ್ಲಿಗೆ ಆಗಮಿಸಿದಳು.
01003008A ಸ ತಯಾ ಕ್ರುದ್ಧಯಾ ತತ್ರೋಕ್ತಃ|
01003008B ಅಯಂ ಮೇ ಪುತ್ರೋ ನ ಕಿಂಚಿದಪರಾಧ್ಯತಿ|
01003008C ಕಿಮರ್ಥಮಭಿಹತ ಇತಿ|
01003008D ಯಸ್ಮಾಚ್ಚಾಯಮಭಿಹತೋಽನಪಕಾರೀ ತಸ್ಮಾದದೃಷ್ಠಂ ತ್ವಾಂ
ಭಯಮಾಗಮಿಷ್ಯತೀತಿ||
01003009A ಸ ಜನಮೇಜಯ ಏವಮುಕ್ತೋ ದೇವಶುನ್ಯಾ ಸರಮಯಾ
ದೃಢಂ ಸಂಭ್ರಾಂತೋ ವಿಷಣ್ಣಶ್ಚಾಸೀತ್||
01003010A ಸ ತಸ್ಮಿನ್ಸತ್ರೇ ಸಮಾಪ್ತೇ ಹಾಸ್ತಿನಪುರಂ ಪ್ರತ್ಯೇತ್ಯ
ಪುರೋಹಿತಮನುರೂಪಮನ್ವಿಚ್ಛಮಾನಃ ಪರಂ
ಯತ್ನಮಕರೋದ್ಯೋ ಮೇ ಪಾಪಕೃತ್ಯಾಂ ಶಮಯೇದಿತಿ||
ಕೃದ್ಧಳಾದ ಅವಳು ಅವನಿಗೆ ಹೇಳಿದಳು: “ಈ ನನ್ನ ಪುತ್ರನು ಯಾವ ಅಪರಾಧವನ್ನೂ ಮಾಡಿಲ್ಲ. ಯಾಕೆ ಹೊಡೆದಿರಿ? ಏನೂ ತಪ್ಪು ಮಾಡದ ಇವನನ್ನು ಹೇಗೆ ಹೊಡೆದಿರೋ ಹಾಗೆ ಭವಿಷ್ಯದಲ್ಲಿ ನೀವೂ ಕೂಡ ನಿರೀಕ್ಷೆಪಟ್ಟಿರದ ಭಯ[4]ವನ್ನು ಅನುಭವಿಸುತ್ತೀರಿ!” ದೇವತೆಗಳ ನಾಯಿ ಸರಮೆಯಿಂದ ಈ ರೀತಿ ಹೇಳಿಸಿಕೊಂಡ ಜನಮೇಜಯನು ಅತೀವ ವಿಷಣ್ಣನಾಗಿ ಯೋಚನೆಗೊಳಗಾದನು. ಆ ಸತ್ರವನ್ನು ಸಮಾಪ್ತಿಗೊಳಿಸಿ ಅವನು ಹಸ್ತಿನಾಪುರಕ್ಕೆ ಮರಳಿ, ತನ್ನ ಪಾಪಕೃತ್ಯಗಳನ್ನು ಶಾಂತಗೊಳಿಸಿ ಶಾಪದಿಂದ ಮುಕ್ತಿ ದೊರಕಿಸುವ ಅನುರೂಪ ಪುರೋಹಿತನನ್ನು ಪಡೆಯುವ ಪರಮ ಯತ್ನವನ್ನು ಮಾಡಿದನು.
01003011A ಸ ಕದಾ ಚಿನ್ಮೃಗಯಾಂ ಯಾತಃ ಪಾರಿಕ್ಷಿತೋ
ಜನಮೇಜಯಃ ಕಸ್ಮಿಂಶ್ಚಿತ್ಸ್ವವಿಷಯೋದ್ದೇಶೇ
ಆಶ್ರಮಮಪಶ್ಯತ್||
01003012A ತತ್ರ ಕಶ್ಚಿದೃಷಿರಾಸಾಂ ಚಕ್ರೇ ಶ್ರುತಶ್ರವಾ ನಾಮ|
01003012B ತಸ್ಯಾಭಿಮತಃ ಪುತ್ರ ಆಸ್ತೇ ಸೋಮಶ್ರವಾ ನಾಮ||
01003013A ತಸ್ಯ ತಂ ಪುತ್ರಮಭಿಗಮ್ಯ ಜನಮೇಜಯಃ ಪಾರಿಕ್ಷಿತಃ
ಪೌರೋಹಿತ್ಯಾಯ ವವ್ರೇ||
01003014A ಸ ನಮಸ್ಕೃತ್ಯ ತಂ ಋಷಿಮುವಾಚ|
01003014B ಭಗವನ್ನಯಂ ತವ ಪುತ್ರೋ ಮಮ ಪುರೋಹಿತೋಽಸ್ತ್ವಿತಿ||
ಒಮ್ಮೆ ಬೇಟೆಗೆಂದು ಹೋಗಿದ್ದ ಪಾರಿಕ್ಷಿತ ಜನಮೇಜಯನು ತನ್ನ ರಾಜ್ಯದ ಗಡಿಯ ಒಳಗೇ ಇದ್ದ ಒಂದು ಆಶ್ರಮವನ್ನು ಕಂಡನು. ಅಲ್ಲಿ ಶೃತಶ್ರವ[5] ಎಂಬ ಹೆಸರಿನ ಓರ್ವ ಋಷಿಯೊಬ್ಬನು ಸೋಮಶ್ರವ ಎಂಬ ಹೆಸರಿನ ತನ್ನ ಪುತ್ರನೊಂದಿಗೆ ವಾಸಿಸುತ್ತಿದ್ದನು. ಅವನ ಆ ಮಗನನ್ನು ಪಾರಿಕ್ಷಿತ ಜನಮೇಜಯನು ಪೌರೋಹಿತ್ಯಕ್ಕಾಗಿ ಕೇಳಿದನು. ಆ ಋಷಿಯನ್ನು ನಮಸ್ಕರಿಸಿ ಹೇಳಿದನು: “ಭಗವಾನ್! ನಿನ್ನ ಪುತ್ರನು ನನ್ನ ಪುರೋಹಿತನಾಗಲಿ.”
01003015A ಸ ಏವಮುಕ್ತಃ ಪ್ರತ್ಯುವಾಚ|
01003015B ಭೋ ಜನಮೇಜಯ ಪುತ್ರೋಽಯಂ ಮಮ ಸರ್ಪ್ಯಾಂ ಜಾತಃ|
01003015C ಮಹಾತಪಸ್ವೀ ಸ್ವಾಧ್ಯಾಯಸಂಪನ್ನೋ
ಮತ್ತಪೋವೀರ್ಯಸಂಭೃತೋ ಮಚ್ಛುಕ್ರಂ
ಪೀತವತ್ಯಾಸ್ತಸ್ಯಾಃ ಕುಕ್ಷೌ ಸಂವೃದ್ಧಃ|
01003015D ಸಮರ್ಥೋಽಯಂ ಭವತಃ ಸರ್ವಾಃ ಪಾಪಕೃತ್ಯಾಃ ಶಮಯಿತುಮಂತರೇಣ ಮಹಾದೇವಕೃತ್ಯಾಂ|
01003015E ಅಸ್ಯ ತ್ವೇಕಮುಪಾಂಶುವ್ರತಂ|
01003015F ಯದೇನಂ ಕಶ್ಚಿದ್ಬ್ರಾಹ್ಮಣಃ ಕಂಚಿದರ್ಥಮಭಿಯಾಚೇತ್ತಂ
ತಸ್ಮೈ ದದ್ಯಾದಯಂ|
01003015G ಯದ್ಯೇತದುತ್ಸಹಸೇ ತತೋ ನಯಸ್ವೈನಮಿತಿ||
01003016A ತೇನೈವಮುತ್ಕೋ ಜನಮೇಜಯಸ್ತಂ ಪ್ರತ್ಯುವಾಚ|
01003016B ಭಗವಂಸ್ತಥಾ ಭವಿಷ್ಯತೀತಿ||
01003017A ಸ ತಂ ಪುರೋಹಿತಮುಪಾದಾಯೋಪಾವೃತ್ತೋ
ಭ್ರಾತೄನುವಾಚ|
01003017B ಮಯಾಯಂ ವೃತ ಉಪಾಧ್ಯಾಯಃ|
01003017C ಯದಯಂ ಬ್ರೂಯಾತ್ತತ್ಕಾರ್ಯಮವಿಚಾರಯದ್ಭಿರಿತಿ||
01003018A ತೇನೈವಮುಕ್ತಾ ಭ್ರಾತರಸ್ತಸ್ಯ ತಥಾ ಚಕ್ರುಃ|
01003018B ಸ ತಥಾ ಭ್ರಾತೄನ್ಸಂದಿಶ್ಯ ತಕ್ಷಶಿಲಾಂ ಪ್ರತ್ಯಭಿಪ್ರತಸ್ಥೇ|
01003018C ತಂ ಚ ದೇಶಂ ವಶೇ ಸ್ಥಾಪಯಾಮಾಸ||
ಈ ಕೇಳಿಕೆಗೆ ಅವನು ಉತ್ತರಿಸಿದನು: “ಜನಮೇಜಯ! ನನ್ನ ತಪೋವೀರ್ಯದಿಂದ ಹುಟ್ಟಿದ, ನನ್ನ ವೀರ್ಯವನ್ನು ಕುಡಿದ ಸರ್ಪವೊಂದರ ಗರ್ಭದಲ್ಲಿ ಜನಿಸಿದ ನನ್ನ ಈ ಮಗನು[6] ಮಹಾತಪಸ್ವಿ ಮತ್ತು ಸ್ವಾಧ್ಯಾಯಸಂಪನ್ನನಾಗಿದ್ದಾನೆ. ಮಹಾದೇವನ ವಿರುದ್ಧ ಕರ್ಮಗಳನ್ನು ಬಿಟ್ಟು ನಿನ್ನ ಉಳಿದೆಲ್ಲ ಪಾಪಕೃತ್ಯಗಳನ್ನೂ ಶಾಂತಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆದರೆ ಅವನು ಒಂದೇ ಒಂದು ವ್ರತವನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಾನೆ. ಬ್ರಾಹ್ಮಣ ಯಾರೇ ಆಗಿರಲಿ, ಯಾವಾಗ ಏನು ಕೇಳಿದರೂ ಅದನ್ನು ಕೊಟ್ಟುಬಿಡುತ್ತಾನೆ[7]. ಅವನು ಈ ನಿಯಮವನ್ನು ಪಾಲಿಸಲು ಅಡ್ಡಿಯಿಲ್ಲವಾದರೆ ಅವನನ್ನು ಕರೆದುಕೊಂಡು ಹೋಗು.” ಜನಮೇಜಯನು “ನೀನು ಹೇಳಿದ ಹಾಗೆಯೇ ಆಗಲಿ” ಎಂದು ಉತ್ತರಿಸಿ, ಅವನನ್ನು ತನ್ನ ಪುರೋಹಿತನನ್ನಾಗಿ ಸ್ವೀಕರಿಸಿ ಹಿಂದಿರುಗಿ ಬಂದು “ಇವನನ್ನು ನಮ್ಮ ಉಪಾಧ್ಯಾಯನನ್ನಾಗಿ ಆರಿಸಿದ್ದೇನೆ. ಅವನು ಹೇಳಿದುದನ್ನೆಲ್ಲಾ ವಿಚಾರಮಾಡದೇ ನಡೆಸಿಕೊಡಬೇಕು” ಎಂದು ತನ್ನ ತಮ್ಮಂದಿರಿಗೆ ಆದೇಶವನ್ನಿತ್ತನು. ಅವನ ಸಹೋದರರು ಹೇಳಿದಹಾಗೆಯೇ ನಡೆದುಕೊಂಡರು. ಈ ರೀತಿ ತಮ್ಮಂದಿರಿಗೆ ಆದೇಶವನ್ನು ನೀಡಿ ಅವನು ತಕ್ಷಶಿಲೆಗೆ ಅ ದೇಶದಲ್ಲಿ ತನ್ನ ವಶವನ್ನು ಸ್ಥಾಪಿಸುವುದಕ್ಕಾಗಿ ಹೊರಟುಹೋದನು.
[1] ಇದು ಸರ್ಪಸತ್ರವಲ್ಲ. ಈ ಯಜ್ಞದ ಉಲ್ಲೇಖವು ಶತಪಥ ಬ್ರಾಹ್ಮಣದಲ್ಲಿ ಬರುವ ಜನಮೇಯನನು ಕುರುಕ್ಷೇತ್ರದಲ್ಲಿ ಪೂರೈಸಿದ ಅಶ್ವಮೇಧ ಯಜ್ಞ.
[2] ನಾಯಿ
[3] ಸರಮೆಯ ಮಗ – ಸಾರಮೇಯ. ಸರಮೆಗೆ ದೇವಶುನಿ ಅಂದರೆ ದೇವಲೋಕದ ನಾಯಿ ಎನ್ನುವ ಹೆಸರೂ ಇದೆ. ಋಗ್ವೇದದಲ್ಲಿ ಸರಮೆಯು ಇಂದ್ರನಿಗೆ ಕಳೆದುಹೋಗಿದ್ದ ಆಂಗೀರಸರ ಹಸುಗಳನ್ನು ಹುಡುಕಿಕೊಡುವುದರಲ್ಲಿ ಸಹಾಯಮಾಡಿತೆಂಬ ವಿಷಯವು ಬರುತ್ತದೆ. ಪಾಣೀ ಎಂಬ ರಾಕ್ಷಸರು ಆಂಗೀರಸರ ಹಸುಗಳನ್ನು ಕದ್ದು ಗುಹೆಯೊಂದರಲ್ಲಿ ಅಡಗಿಸಿದ್ದಾಗ, ಸರಮೆಯು ತನ್ನ ಪ್ರಾಕೃತಿಕ ಬುದ್ಧಿಯಿಂದ ಹಸುಗಳನ್ನು ಹುಡುಕಿಕೊಡುವುದರಲ್ಲಿ ಇಂದ್ರನಿಗೆ ಸಹಾಯಮಾಡಿದ್ದಳು. ಲೋಕದ ಎಲ್ಲ ನಾಯಿಗಳೂ ಸರಮೆಯಿಂದ ಬಂದವೆಂದು ಪ್ರತೀತಿಯಿದೆ. ದಕ್ಷನ ಒಬ್ಬ ಮಗಳ ಹೆಸರೂ ಸರಮೆಯೆಂದಿತ್ತು.
[4] ಅನಿರೀಕ್ಷಿತವಾದ ಈ ಭಯವಾದರೂ ಏನು? ಸರ್ಪಸತ್ರವೇ?
[5] ಶೃತಶ್ರವನು ನಾಗ ತಕ್ಷಕನ ತಮ್ಮನೆಂದೂ ಕೆಲವು ಮೂಲಗಳು ತಿಳಿಸುತ್ತವೆ.
[6] ಜನಮೇಜಯನ ಪುರೋಹಿತನಾಗಿ ಮುಂದೆ ಸರ್ಪಸತ್ರವನ್ನು ನಡೆಸಿಕೊಟ್ಟ ಸೋಮಶ್ರವನು ನಾಗಕನ್ಯೆಯಲ್ಲಿ ಹುಟ್ಟಿದವನು ಮತ್ತು ಅವನೇ ಆಸ್ತೀಕನು ಕೇಳಿದುದನ್ನು ನೀಡಿ ತಕ್ಷಕನನ್ನು ಉಳಿಸಿಕೊಟ್ಟನು ಎನ್ನುವುದು ಗಮನಾರ್ಹ. ಆದರೆ ಸರ್ಪಸತ್ರದ ವಿವರಣೆಯಿರುವ ಮುಂದಿನ ಉಪ ಪರ್ವ ಆಸ್ತೀಕ ಪರ್ವದಲ್ಲಿ ಎಲ್ಲಿಯೂ ಸೋಮಶ್ರವನ ಹೆಸರು ಬರುವುದಿಲ್ಲವೆನ್ನುವುದೂ ಗಮನಾರ್ಹ.
[7] ಬಹುಷಃ ಇದೇ ಪುರೋಹಿತನು ಮುಂದೆ ಸರ್ಪಯಾಗದಲ್ಲಿ ಆಸ್ತೀಕನಿಗೆ ಯಾಗವನ್ನು ನಿಲ್ಲಿಸುವ ವಚನವನ್ನು ಕೊಡುತ್ತಾನೆ.