ಸಂಸಾರ ಚಕ್ರ
ನೈಮಿಷಾರಣ್ಯವಾಸೀ ಮುನಿಗಳಿಗೆ ಮಹಾಭಾರತದ ಕಥೆಯನ್ನು ಪ್ರಾರಂಭಿಸುವ ಮೊದಲು ಸೂತ ಪುರಾಣಿಕ ಉಗ್ರಶ್ರವನು ಸಂಸಾರಚಕ್ರವನ್ನು ಈ ರೀತಿ ವರ್ಣಿಸಿದನು [ಆದಿ ಪರ್ವ, ಅನುಕ್ರಮಣಿಕಾ ಪರ್ವ, ಶ್ಲೋಕ ೨೭-೩೮]:
[1]01001027a ನಿಷ್ಪ್ರಭೇಽಸ್ಮಿನ್ನಿರಾಲೋಕೇ ಸರ್ವತಸ್ತಮಸಾವೃತೇ |
01001027c ಬೃಹದಂಡಮಭೂದೇಕಂ ಪ್ರಜಾನಾಂ ಬೀಜಮಕ್ಷಯಂ ||
01001028a ಯುಗಸ್ಯಾದೌ ನಿಮಿತ್ತಂ ತನ್ಮಹದ್ದಿವ್ಯಂ ಪ್ರಚಕ್ಷತೇ |
01001028c ಯಸ್ಮಿಂಸ್ತತ್ ಶ್ರೂಯತೇ ಸತ್ಯಂ ಜ್ಯೋತಿರ್ಬ್ರಹ್ಮ ಸನಾತನಂ||
01001029a ಅದ್ಭುತಂ ಚಾಪ್ಯಚಿಂತ್ಯಂ ಚ ಸರ್ವತ್ರ ಸಮತಾಂ ಗತಂ |
01001029c ಅವ್ಯಕ್ತಂ ಕಾರಣಂ ಸೂಕ್ಷ್ಮಂ ಯತ್ತತ್ಸದಸದಾತ್ಮಕಂ ||
01001030a ಯಸ್ಮಾತ್ಪಿತಾಮಹೋ ಜಜ್ಞೇ ಪ್ರಭುರೇಕಃ ಪ್ರಜಾಪತಿಃ |
01001030c ಬ್ರಹ್ಮಾ ಸುರಗುರುಃ ಸ್ಥಾಣುರ್ಮನುಃ ಕಃ ಪರಮೇಷ್ಟ್ಯಥ ||
01001031a ಪ್ರಾಚೇತಸಸ್ತಥಾ ದಕ್ಷೋ ದಕ್ಷಪುತ್ರಾಶ್ಚ ಸಪ್ತ ಯೇ |
01001031c ತತಃ ಪ್ರಜಾನಾಂ ಪತಯಃ ಪ್ರಾಭವನ್ನೇಕವಿಂಶತಿಃ ||
01001032a ಪುರುಷಶ್ಚಾಪ್ರಮೇಯಾತ್ಮಾ ಯಂ ಸರ್ವಂ ಋಷಯೋ ವಿದುಃ|
01001032c ವಿಶ್ವೇದೇವಾಸ್ತಥಾದಿತ್ಯಾ ವಸವೋಽಥಾಶ್ವಿನಾವಪಿ ||
01001033a ಯಕ್ಷಾಃ ಸಾಧ್ಯಾಃ ಪಿಶಾಚಾಶ್ಚ ಗುಹ್ಯಕಾಃ ಪಿತರಸ್ತಥಾ |
01001033c ತತಃ ಪ್ರಸೂತಾ ವಿದ್ವಾಂಸಃ ಶಿಷ್ಟಾ ಬ್ರಹ್ಮರ್ಷಯೋಽಮಲಾಃ||
01001034a ರಾಜರ್ಷಯಶ್ಚ ಬಹವಃ ಸರ್ವೈಃ ಸಮುದಿತಾ ಗುಣೈಃ |
01001034c ಆಪೋ ದ್ಯೌಃ ಪೃಥಿವೀ ವಾಯುರಂತರಿಕ್ಷಂ ದಿಶಸ್ತಥಾ ||
01001035a ಸಂವತ್ಸರರ್ತವೋ ಮಾಸಾಃ ಪಕ್ಷಾಹೋರಾತ್ರಯಃ ಕ್ರಮಾತ್|
01001035c ಯಚ್ಚಾನ್ಯದಪಿ ತತ್ಸರ್ವಂ ಸಂಭೂತಂ ಲೋಕಸಾಕ್ಷಿಕಂ ||
ನಿಷ್ಪ್ರಭೆಯೂ ನಿರಾಲೋಕವೂ ಆಗಿದ್ದಾಗ ಸರ್ವವೂ ಕತ್ತಲೆಯಿಂದ ಮುಚ್ಚಿಕೊಂಡಿದ್ದ, ಎಲ್ಲವಕ್ಕೂ ಅಕ್ಷಯ ಬೀಜವಾದ ಬೃಹತ್ ಅಂಡವೊಂದಿತ್ತು. ಈ ದಿವ್ಯ ಮಹಾ ಅಂಡವೇ ಯುಗದ ಆದಿ ನಿಮಿತ್ತ ಎಂದು ಪರಿಗಣಿಸಲ್ಪಟ್ಟಿದೆ. ಎಲ್ಲವಕ್ಕೂ ಕಾರಣಹೇತುವಾದ ಇದನ್ನೇ ಸತ್ಯ, ಸನಾತನ ಜ್ಯೋತಿರ್ಬ್ರಹ್ಮ ಎಂದು ಹೇಳುತ್ತಾರೆ[2]. ಅದ್ಭುತ, ಅಚಿಂತ್ಯ, ಮತ್ತು ಸರ್ವತ್ರ ಸಮನಾಗಿರುವ ಇದೇ ಇರುವ ಮತ್ತು ಇಲ್ಲದಿರುವ ಎಲ್ಲವಕ್ಕೂ ಅವ್ಯಕ್ತ ಸೂಕ್ಷ್ಮ ಕಾರಣ. ಇದರಿಂದಲೇ ಏಕೈಕ ಪ್ರಭು ಪ್ರಜಾಪತಿ ಪಿತಾಮಹ ಬ್ರಹ್ಮ, ಸುರಗುರು ಸ್ಥಾಣು, ಮನು, ಪರಮೇಷ್ಠಿ, ಪ್ರಾಚೇತಸ, ದಕ್ಷ, ದಕ್ಷನ ಏಳು ಮಕ್ಕಳು[3] ಮತ್ತು ಇಪ್ಪತ್ತೊಂದು ಪ್ರಜಾಪತಿಗಳು[4] ಹುಟ್ಟಿದರು. ಇದರಿಂದಲೇ ಸರ್ವ ಋಷಿಗಳಿಗೂ ತಿಳಿದಿರುವ ಅಪ್ರಮೇಯಾತ್ಮ ಪುರುಷ, ವಿಶ್ವೇದೇವರು, ಆದಿತ್ಯರು, ವಸುಗಳು ಮತ್ತು ಅಶ್ವಿನಿ ದೇವತೆಗಳು ಕಾಣಿಸಿಕೊಂಡರು. ನಂತರ ಯಕ್ಷ, ಸಾಧ್ಯ, ಪಿಶಾಚ, ಗುಹ್ಯಕ, ಪಿತೃಗಳು ಹಾಗೂ ವಿದ್ವಾಂಸ-ಶಿಷ್ಠ-ಅಮಲ ಬ್ರಹ್ಮರ್ಷಿಗಳು ಹುಟ್ಟಿದರು. ಅದೇರೀತಿ, ಬಹುಸಂಖ್ಯೆಯಲ್ಲಿ ಸರ್ವ ಗುಣ ಸಮುದಿತ ರಾಜರ್ಷಿಗಳೂ, ನಂತರ ನೀರು, ಆಕಾಶ, ಪೃಥ್ವಿ, ವಾಯು, ಅಂತರಿಕ್ಷ ಮತ್ತು ದಿಕ್ಕುಗಳೂ ಹುಟ್ಟಿದವು. ಇದರಿಂದಲೇ ಸಂವತ್ಸರ, ಮಾಸ, ಪಕ್ಷ ಮತ್ತು ಹಗಲು-ರಾತ್ರಿಗಳು ಹಾಗೂ ಈ ಲೋಕದಲ್ಲಿ ಕಂಡುಬರುವ ಸರ್ವವೂ ಕ್ರಮವಾಗಿ ಉದ್ಭವಿಸಿದವು.
01001036a ಯದಿದಂ ದೃಶ್ಯತೇ ಕಿಂಚಿದ್ಭೂತಂ ಸ್ಥಾವರಜಂಗಮಂ |
01001036c ಪುನಃ ಸಂಕ್ಷಿಪ್ಯತೇ ಸರ್ವಂ ಜಗತ್ಪ್ರಾಪ್ತೇ ಯುಗಕ್ಷಯೇ ||
ಈ ಜಗತ್ತಿನಲ್ಲಿ ಇರುವ ಮತ್ತು ಕಾಣುವ ಎಲ್ಲ ಸ್ಥಾವರ ಜಂಗಮಗಳೂ ಯುಗಕ್ಷಯದಲ್ಲಿ ಪುನಃ ಸಂಕ್ಷಿಪ್ತವಾಗುತ್ತವೆ.
01001037a ಯಥರ್ತಾವೃತುಲಿಂಗಾನಿ ನಾನಾರೂಪಾಣಿ ಪರ್ಯಯೇ |
01001037c ದೃಶ್ಯಂತೇ ತಾನಿ ತಾನ್ಯೇವ ತಥಾ ಭಾವಾ ಯುಗಾದಿಷು ||
ಋತುವಿನ ಪ್ರಾರಂಭದಲ್ಲಿ ಹೇಗೆ ನಾನಾ ರೂಪಲಕ್ಷಣಗಳು ಕಂಡು ಬಂದು ಅದರ ಜೊತೆಗೇ ನಾಶವಾಗುವವೋ ಹಾಗೆ ಯುಗದ ಆದಿಯಲ್ಲಿ ಕಂಡುಬರುವವು ಅದರ ಅಂತ್ಯದಲ್ಲಿ ನಾಶವಾಗುತ್ತವೆ.
01001038a ಏವಮೇತದನಾದ್ಯಂತಂ ಭೂತಸಂಹಾರಕಾರಕಂ |
01001038c ಅನಾದಿನಿಧನಂ ಲೋಕೇ ಚಕ್ರಂ ಸಂಪರಿವರ್ತತೇ ||
ಈ ರೀತಿ ಈ ಅನಾದಿನಿಧನ ಲೋಕದಲ್ಲಿ ಹುಟ್ಟು-ಸಂಹಾರದ ಚಕ್ರವು ಆದಿ ಅಂತ್ಯಗಳಿಲ್ಲದೆ ಸದಾ ತಿರುಗುತ್ತಿರುತ್ತದೆ.
01001039a ತ್ರಯಸ್ತ್ರಿಂಶತ್ಸಹಸ್ರಾಣಿ ತ್ರಯಸ್ತ್ರಿಂಶಚ್ಛತಾನಿ ಚ |
01001039c ತ್ರಯಸ್ತ್ರಿಂಶಚ್ಚ ದೇವಾನಾಂ ಸೃಷ್ಟಿಃ ಸಂಕ್ಷೇಪಲಕ್ಷಣಾ ||
01001040a ದಿವಸ್ಪುತ್ರೋ ಬೃಹದ್ಭಾನುಶ್ಚಕ್ಷುರಾತ್ಮಾ ವಿಭಾವಸುಃ |
01001040c ಸವಿತಾ ಚ ಋಚೀಕೋಽರ್ಕೋ ಭಾನುರಾಶಾವಹೋ ರವಿಃ ||
01001041a ಪುತ್ರಾ ವಿವಸ್ವತಃ ಸರ್ವೇ ಮಹ್ಯಸ್ತೇಷಾಂ ತಥಾವರಃ |
01001041c ದೇವಭ್ರಾಟ್ತನಯಸ್ತಸ್ಯ ತಸ್ಮಾತ್ಸುಭ್ರಾಢಿತಿ ಸ್ಮೃತಃ ||
01001042a ಸುಭ್ರಾಜಸ್ತು ತ್ರಯಃ ಪುತ್ರಾಃ ಪ್ರಜಾವಂತೋ ಬಹುಶ್ರುತಾಃ|
01001042c ದಶಜ್ಯೋತಿಃ ಶತಜ್ಯೋತಿಃ ಸಹಸ್ರಜ್ಯೋತಿರಾತ್ಮವಾನ್ ||
01001043a ದಶ ಪುತ್ರಸಹಸ್ರಾಣಿ ದಶಜ್ಯೋತೇರ್ಮಹಾತ್ಮನಃ |
01001043c ತತೋ ದಶಗುಣಾಶ್ಚಾನ್ಯೇ ಶತಜ್ಯೋತೇರಿಹಾತ್ಮಜಾಃ ||
01001044a ಭೂಯಸ್ತತೋ ದಶಗುಣಾಃ ಸಹಸ್ರಜ್ಯೋತಿಷಃ ಸುತಾಃ |
01001044c ತೇಭ್ಯೋಽಯಂ ಕುರುವಂಶಶ್ಚ ಯದೂನಾಂ ಭರತಸ್ಯ ಚ ||
01001045a ಯಯಾತೀಕ್ಷ್ವಾಕುವಂಶಶ್ಚ ರಾಜರ್ಷೀಣಾಂ ಚ ಸರ್ವಶಃ |
01001045c ಸಂಭೂತಾ ಬಹವೋ ವಂಶಾ ಭೂತಸರ್ಗಾಃ ಸವಿಸ್ತರಾಃ ||
ಸಂಕ್ಷಿಪ್ತವಾಗಿ ಹೇಳುವುದಾದರೆ, ಒಟ್ಟು ಮೂವತ್ತುಮೂರು ಲಕ್ಷ ಮೂವತ್ತುಮೂರು ಸಾವಿರ ಮೂವತ್ತುಮೂರು ನೂರು ದೇವತೆಗಳ ಸೃಷ್ಟಿಯಾಗಿದೆ. ದಿವಸ್ಪುತ್ರ, ಬೃಹದ್ಭಾನು, ಚಕ್ಷು, ಆತ್ಮ, ವಿಭಾವಸು, ಸವಿತ, ಋಚಿಕ, ಅರ್ಕ, ಭಾನು, ಅಶಾವಹ, ರವಿ ಮೊದಲಾದ ಸರ್ವ ವಿವಸ್ವತರೂ ಕಾಣಿಸಿಕೊಂಡರು. ಅವರಲ್ಲಿ ಕೊನೆಯ ಮಹಾತ್ಮನು ದೇವತೆಗಳ ಅನುಗ್ರಹದಿಂದ ಲಭಿಸಿದ ದೇವಭ್ರಾತನೆಂಬ ಪುತ್ರನನ್ನೂ ಹಾಗೆಯೇ ದೇವಭ್ರಾತನು ಸುಭ್ರಾತನೆಂಬ ತನಯನನನ್ನೂ ಪಡೆದರು. ಸುಭ್ರಾತನು ದಶಜ್ಯೋತಿ, ಶತಜ್ಯೋತಿ ಮತ್ತು ಸಹಸ್ರಜ್ಯೋತಿ ಎನ್ನುವ ಮೂವರು ಪ್ರಜಾವಂತ, ಬಹುಶೃತ, ಆತ್ಮವಂತ ಪುತ್ರರನ್ನು ಪಡೆದನು. ಮಹಾತ್ಮ ದಶಜ್ಯೋತಿಯು ಹತ್ತುಸಾವಿರ ಪುತ್ರರನ್ನೂ, ಅದಕ್ಕೂ ಹತ್ತುಪಟ್ಟು ಪುತ್ರರನ್ನು ಶತಜ್ಯೋತಿಯೂ ಪಡೆದರು. ಸಹಸ್ರಜ್ಯೋತಿಯು ಅವರಿಗಿಂತಲೂ ಹತ್ತುಪಟ್ಟು ಮಕ್ಕಳನ್ನು ಪಡೆದನು. ಇವರಲ್ಲಿಯೇ ಕುರು, ಯದು, ಭರತ, ಯಯಾತಿ, ಇಕ್ಷ್ವಾಕು ಮೊದಲಾದ ಸರ್ವ ರಾಜರ್ಷಿ ವಂಶಗಳು ಜನಿಸಿದವು ಮತ್ತು ಈ ವಂಶಗಳಿಂದ ಭೂಮಿಯನ್ನಾಳಿದ ಬಹಳಷ್ಟು ಸವಿಸ್ತಾರ ವಂಶಗಳು ಹುಟ್ಟಿದವು.
***
[1] ಕುಂಭಕೋಣ ಪ್ರತಿಯಲ್ಲಿ ಇದಕ್ಕೆ ಮೊದಲು ಮಹಾಭಾರತರಚನೆಯ ಕುರಿತಾಗಿ ಈ ಶ್ಲೋಕಗಳಿವೆ: ಪುಣ್ಯೇ ಹಿಮವತಃ ಪಾದೇ ಮಧ್ಯೇ ಗಿರಿಗುಹಾಲಯೇ| ವಿಶೋಧ್ಯ ದೇಹಂ ಧರ್ಮಾತ್ಮಾ ದರ್ಭಸಂಸ್ಥರಮಾಶ್ರಿತಃ|| ಶುಚಿಃ ಸನಿಯಮೋವ್ಯಾಸಃ ಶಾಂತಾತ್ಮಾ ತಪಸಿಸ್ಥಿತಃ| ಭಾರತಸ್ಯೇತಿಹಾಸಸ್ಯ ಧರ್ಮೇಣನ್ವೀಕ್ಷ್ಯ ತಾಂ ಗತಿಂ| ಪ್ರವಿಶ್ಯ ಯೋಗಂ ಜ್ಞಾನೇನ ಸೋಽಪಶ್ಯತ್ ಸರ್ವಮಂತತಃ|| ಅರ್ಥಾತ್: ಪುಣ್ಯ ಹಿಮವತ್ಪರ್ವತದ ಇಳುವಿನ ಗುಹಾಲಯದಲ್ಲಿ ದೇಹಶುದ್ಧಿ ಮಾಡಿ ಧರ್ಮಾತ್ಮ ವ್ಯಾಸನು ಧರ್ಭಾಸನದ ಮೇಲೆ ಕುಳಿತು ಶುಚಿ ಸಂಯಮ ಮತ್ತು ಶಾಂತಾತ್ಮನಾಗಿ ತಪಸ್ಥಿತನಾಗಿರಲು ಯೋಗ ಜ್ಞಾನದಿಂದ ಧರ್ಮಪೂರ್ವಕ ಭಾರತ ಇತಿಹಾಸವನ್ನು ಆದಿಯಿಂದ ಅಂತ್ಯದ ವರೆಗೆ ಕಂಡನು.
[2] ತತ್ ಸೃಷ್ಠ್ವಾ ತದೇವಾನು ಪ್ರವಿಶತ್ ಅರ್ಥಾತ್ ಬ್ರಹ್ಮನು ಅಂಡವನ್ನು ರಚಿಸಿ ಸ್ವಯಂ ತಾನೇ ಅದರಲ್ಲಿ ಪ್ರವೇಶಿಸಿದನೆಂದು ತೈತ್ತಿರೀಯ ಉಪನಿಷತ್ ನಲ್ಲಿ ಹೇಳಲಾಗಿದೆ.
[3] ಕ್ರೋಧ, ತಮ, ದಮ, ವಿಕೃತ, ಅಂಗೀರ, ಕರ್ದಮ ಮತ್ತು ಅಶ್ವ
[4] ಸಪ್ತ ಋಷಿಗಳು (ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕ್ರತು ಮತ್ತು ಕಶ್ಯಪ) ಮತ್ತು ಹದಿನಾಲ್ಕು ಮನುಗಳು (ವಿಷ್ಣು ಪುರಾಣದ ಪ್ರಕಾರ ಹದಿನಾಲ್ಕು ಮನುಗಳು: ಸ್ವಾಯಂಭುವ ಮನು, ಸ್ವಾರೋಚಿಷ ಮನು, ಉತ್ತಮ ಮನು, ತಾಪಸ ಮನು, ರೈವತ ಮನು, ಚಾಕ್ಷುಷ ಮನು, ವೈವಸ್ವತ ಮನು, ಸಾವರ್ಣಿಕ ಮನು, ದಕ್ಷಸಾವರ್ಣಿಕ ಮನು, ಬ್ರಹ್ಮಸಾವರ್ಣಿಕ ಮನು, ಧರ್ಮ ಸಾವರ್ಣಿಕ ಮನು, ರುದ್ರ ಸಾವರ್ಣಿಕ ಮನು, ರುಚಿರ ಮನು ಮತ್ತು ಭೌಮ ಮನು). ಬ್ರಹ್ಮಾಂಡಪುರಾಣದಲ್ಲಿ ಇದರ ವರ್ಣನೆ ಈ ರೀತಿ ಇದೆ: ಋಷಯಃ ಸಪ್ತ ಪೂರ್ವೇ ಯೇ ಮನವಶ್ಚ ಚತುರ್ದಶಃ| ಏತೇ ಪ್ರಜಾನಾಂ ಪತಯ ಏಭಿಃ ಕಲ್ಪಃ ಸಮಾಪ್ಯತೇ||