ಅಕ್ಷೌಹಿಣಿ

ನೈಮಿಷಾರಣ್ಯವಾಸೀ ಋಷಿಗಳು ಕೇಳಲು ಸೂತ ಉಗ್ರಶ್ರವನು ಅಕ್ಷೌಹಿಣಿಯ ವ್ಯಾಖ್ಯಾನವನ್ನು ಈ ರೀತಿ ಕೊಟ್ಟನು [ಆದಿ ಪರ್ವ, ಪರ್ವಸಂಗ್ರಹ ಪರ್ವ, ಅಧ್ಯಾಯ ೨, ಶ್ಲೋಕ ೧೩-೨೩].

01002013 ಋಷಯ ಊಚುಃ|

01002013a ಅಕ್ಷೌಹಿಣ್ಯ ಇತಿ ಪ್ರೋಕ್ತಂ ಯತ್ತ್ವಯಾ ಸೂತನಂದನ|

01002013c ಏತದಿಚ್ಛಾಮಹೇ ಶ್ರೋತುಂ ಸರ್ವಮೇವ ಯಥಾತಥಂ||

01002014a ಅಕ್ಷೌಹಿಣ್ಯಾಃ ಪರೀಮಾಣಂ ರಥಾಶ್ವನರದಂತಿನಾಂ|

01002014c ಯಥಾವಚ್ಚೈವ ನೋ ಬ್ರೂಹಿ ಸರ್ವಂ ಹಿ ವಿದಿತಂ ತವ||

ಋಷಿಗಳು ಹೇಳಿದರು: “ಸೂತನಂದನ! ನೀನು ಅಕ್ಷೌಹಿಣಿ ಎಂದು ಹೇಳಿದೆಯಲ್ಲ ಅದರ ಕುರಿತು ಸರ್ವವನ್ನೂ ಕೇಳಲು ಇಚ್ಛಿಸುತ್ತೇವೆ. ನಿನಗೆ ಸರ್ವವೂ ತಿಳಿದಿರುವುದರಿಂದ ಒಂದು ಅಕ್ಷೌಹಿಣಿಯಲ್ಲಿ ರಥ, ಅಶ್ವ, ನರ ಮತ್ತು ಆನೆಗಳ ಪರಿಮಾಣ ಎಷ್ಟೆಂದು ಹೇಳು.”

01002015 ಸೂತ ಉವಾಚ|

01002015a ಏಕೋ ರಥೋ ಗಜಶ್ಚೈಕೋ ನರಾಃ ಪಂಚ ಪದಾತಯಃ|

01002015c ತ್ರಯಶ್ಚ ತುರಗಾಸ್ತಜ್ಞೈಃ ಪತ್ತಿರಿತ್ಯಭಿಧೀಯತೇ||

01002016a ಪತ್ತಿಂ ತು ತ್ರಿಗುಣಾಮೇತಾಮಾಹುಃ ಸೇನಾಮುಖಂ ಬುಧಾಃ|

01002016c ತ್ರೀಣಿ ಸೇನಾಮುಖಾನ್ಯೇಕೋ ಗುಲ್ಮ ಇತ್ಯಭಿಧೀಯತೇ||

01002017a ತ್ರಯೋ ಗುಲ್ಮಾ ಗಣೋ ನಾಮ ವಾಹಿನೀ ತು ಗಣಾಸ್ತ್ರಯಃ|

01002017c ಸ್ಮೃತಾಸ್ತಿಸ್ರಸ್ತು ವಾಹಿನ್ಯಃ ಪೃತನೇತಿ ವಿಚಕ್ಷಣೈಃ||

01002018a ಚಮೂಸ್ತು ಪೃತನಾಸ್ತಿಸ್ರಸ್ತಿಸ್ರಶ್ಚಂವಸ್ತ್ವನೀಕಿನೀ|

01002018c ಅನೀಕಿನೀಂ ದಶಗುಣಾಂ ಪ್ರಾಹುರಕ್ಷೌಹಿಣೀಂ ಬುಧಾಃ||

01002019a ಅಕ್ಷೌಹಿಣ್ಯಾಃ ಪ್ರಸಂಖ್ಯಾನಂ ರಥಾನಾಂ ದ್ವಿಜಸತ್ತಮಾಃ|

01002019c ಸಂಖ್ಯಾಗಣಿತತತ್ತ್ವಜ್ಞೈಃ ಸಹಸ್ರಾಣ್ಯೇಕವಿಂಶತಿಃ||

01002020a ಶತಾನ್ಯುಪರಿ ಚೈವಾಷ್ಟೌ ತಥಾ ಭೂಯಶ್ಚ ಸಪ್ತತಿಃ|

01002020c ಗಜಾನಾಂ ತು ಪರೀಮಾಣಮೇತದೇವಾತ್ರ ನಿರ್ದಿಶೇತ್||

01002021a ಜ್ಞೇಯಂ ಶತಸಹಸ್ರಂ ತು ಸಹಸ್ರಾಣಿ ತಥಾ ನವ|

01002021c ನರಾಣಾಮಪಿ ಪಂಚಾಶಚ್ಚತಾನಿ ತ್ರೀಣಿ ಚಾನಘಾಃ||

01002022a ಪಂಚಷಷ್ಠಿಸಹಸ್ರಾಣಿ ತಥಾಶ್ವಾನಾಂ ಶತಾನಿ ಚ|

01002022c ದಶೋತ್ತರಾಣಿ ಷಟ್ ಪ್ರಾಹುರ್ಯಥಾವದಿಹ ಸಂಖ್ಯಯಾ||

01002023a ಏತಾಮಕ್ಷೌಹಿಣೀಂ ಪ್ರಾಹುಃ ಸಂಖ್ಯಾತತ್ತ್ವವಿದೋ ಜನಾಃ|

01002023c ಯಾಂ ವಃ ಕಥಿತವಾನಸ್ಮಿ ವಿಸ್ತರೇಣ ದ್ವಿಜೋತ್ತಮಾಃ||

ಸೂತನು ಹೇಳಿದನು: “ಒಂದು ರಥ, ಒಂದು ಆನೆ, ಐದು ಪಾದಾಳುಗಳು ಮತ್ತು ಮೂರು ಕುದುರೆಗಳನ್ನು ಸೇರಿ ಒಂದು ಪತ್ತಿ ಎಂದು ತಜ್ಞರು ಹೇಳುತ್ತಾರೆ. ತಿಳಿದವರ ಪ್ರಕಾರ ಮೂರು ಪತ್ತಿಗಳು ಸೇರಿ ಒಂದು ಸೇನಾಮುಖ, ಮತ್ತು ಮೂರು ಸೇನಾಮುಖಗಳು ಸೇರಿ ಒಂದು ಗುಲ್ಮ. ಮೂರು ಗುಲ್ಮಗಳು ಒಂದು ಗಣದಲ್ಲಿ, ಮೂರು ಗಣಗಳು ಒಂದು ವಾಹಿನಿಯಲ್ಲಿ ಮತ್ತು ಮೂರು ವಾಹಿನಿಗಳು ಒಂದು ಪೃತದಲ್ಲಿ ಸೇರಿವೆ. ಮೂರು ಪೃತಗಳು ಒಂದು ಚಮುವನ್ನೂ, ಮೂರು ಚಮುಗಳು ಒಂದು ಅನೀಕಿನಿಯನ್ನೂ ಮತ್ತು ಹತ್ತು ಅನೀಕಿನಿಗಳು ಒಂದು ಅಕ್ಷೌಹಿಣಿಯನ್ನು ಮಾಡುತ್ತವೆ ಎಂದು ತಿಳಿದವರು ಹೇಳುತ್ತಾರೆ[1]. ದ್ವಿಜಸತ್ತಮರೇ! ಗಣಿತಜ್ಞರು ಒಂದು ಅಕ್ಷೌಹಿಣಿಯಲ್ಲಿ ಇಪ್ಪತ್ತೊಂದು ಸಾವಿರದ ಎಂಟುನೂರಾ ಎಪ್ಪತ್ತೊಂದು (೨೧,೮೭೧) ರಥಗಳು ಮತ್ತು ಅಷ್ಟೇ ಸಂಖ್ಯೆಯ ಆನೆಗಳು ಇರುತ್ತವೆಯೆಂದು ಲೆಖ್ಕ ಹಾಕಿದ್ದಾರೆ. ಒಂದು ಅಕ್ಷೌಹಿಣಿಯಲ್ಲಿ ಒಂದು ಲಕ್ಷ ಒಂಭತ್ತು ಸಾವಿರದ ಮುನ್ನೂರಾ ಐವತ್ತು (೧೦೯,೩೫೦) ಕಾಲ್ದಾಳುಗಳೂ ಮತ್ತು ಅರವತ್ತೈದು ಸಾವಿರದ ಆರುನೂರಾ ಹತ್ತು (೬೫,೬೧೦) ಕುದುರೆಗಳೂ ಇರುತ್ತವೆ. ದ್ವಿಜೋತ್ತಮರೇ! ಸಂಖ್ಯಾತತ್ವವನ್ನು ತಿಳಿದ ಜನರು ನಾನು ವಿಸ್ತಾರವಾಗಿ ಹೇಳಿದುದನ್ನೇ ಒಂದು ಅಕ್ಷೌಹಿಣೀ ಎಂದು ಪರಿಗಣಿಸುತ್ತಾರೆ.

***

[1] ಅಕ್ಷೌಹಿಣಿಯ ಲೆಖ್ಕಾಚಾರವು ಕಾಲದ ಅಳತೆಯಂತೆ ಅತ್ಯಂತ ಸಣ್ಣ ಘಟಕವನ್ನು ಆಧಾರವನ್ನಾಟ್ಟುಕೊಂಡು ಅತಿ ದೊಡ್ಡ ಪ್ರಮಾಣವನ್ನು ಅಳತೆ ಮಾಡುತ್ತದೆ.

Leave a Reply

Your email address will not be published. Required fields are marked *