ಅನುಶಾಸನ ಪರ್ವ: ದಾನಧರ್ಮ ಪರ್ವ
೪೯
ವಿವಿಧ ಪ್ರಕಾರದ ಪುತ್ರರ ವರ್ಣನೆ (೧-೨೯).
13049001 ಯುಧಿಷ್ಠಿರ ಉವಾಚ|
13049001a ಬ್ರೂಹಿ ಪುತ್ರಾನ್ಕುರುಶ್ರೇಷ್ಠ ವರ್ಣಾನಾಂ ತ್ವಂ ಪೃಥಕ್ಪೃಥಕ್|
13049001c ಕೀದೃಶ್ಯಾಂ ಕೀದೃಶಾಶ್ಚಾಪಿ ಪುತ್ರಾಃ ಕಸ್ಯ ಚ ಕೇ ಚ ತೇ||
ಯುಧಿಷ್ಠಿರನು ಹೇಳಿದನು: “ಕುರುಶ್ರೇಷ್ಠ! ಪ್ರತ್ಯೇಕ ಪ್ರತ್ಯೇಕ ವರ್ಣಗಳಲ್ಲಿ ಎಂತಹ ಸ್ತ್ರೀಯ ಗರ್ಭದಿಂದ ಎಂತಹ ಪುತ್ರನು ಉತ್ಪನ್ನನಾಗುತ್ತಾನೆ ಮತ್ತು ಯಾವ ಪುತ್ರರು ಯಾರಲ್ಲಿ ಹುಟ್ಟುತ್ತಾರೆ ಎನ್ನುವುದನ್ನು ಹೇಳು.
13049002a ವಿಪ್ರವಾದಾಃ ಸುಬಹುಶಃ ಶ್ರೂಯಂತೇ ಪುತ್ರಕಾರಿತಾಃ|
13049002c ಅತ್ರ ನೋ ಮುಹ್ಯತಾಂ ರಾಜನ್ಸಂಶಯಂ ಚೇತ್ತುಮರ್ಹಸಿ||
ಪುತ್ರರ ವಿಷಯದಲ್ಲಿ ಅನೇಕ ಮಾತುಗಳನ್ನು ಕೇಳುತ್ತೇವೆ. ರಾಜನ್! ಆದರೆ ಮೋಹದ ಕಾರಣದಿಂದ ನಿಶ್ಚಯಮಾಡಲು ಆಗುತ್ತಿಲ್ಲ. ಆದುದರಿಂದ ನೀನು ಆ ಸಂಶಯಗಳನ್ನು ದೂರಮಾಡು.”
13049003 ಭೀಷ್ಮ ಉವಾಚ|
13049003a ಆತ್ಮಾ ಪುತ್ರಸ್ತು ವಿಜ್ಞೇಯಸ್ತಸ್ಯಾನಂತರಜಶ್ಚ ಯಃ|
13049003c ನಿಯುಕ್ತಜಶ್ಚ ವಿಜ್ಞೇಯಃ ಸುತಃ ಪ್ರಸೃತಜಸ್ತಥಾ||
ಭೀಷ್ಮನು ಹೇಳಿದನು: “ಮೊದಲನೆಯ ಪುತ್ರನನ್ನು ಆತ್ಮನೆಂದೇ ತಿಳಿಯಬೇಕು. ಅನಂತರದವನನ್ನು ನಿಯುಕ್ತಜನೆಂದೂ ಮೂರನೆಯವನನ್ನು ಪ್ರಸೃತಜನೆಂದೂ ತಿಳಿಯಬೇಕು.
13049004a ಪತಿತಸ್ಯ ಚ ಭಾರ್ಯಾಯಾಂ ಭರ್ತ್ರಾ ಸುಸಮವೇತಯಾ|
13049004c ತಥಾ ದತ್ತಕೃತೌ ಪುತ್ರಾವಧ್ಯೂಢಶ್ಚ ತಥಾಪರಃ||
ತನ್ನ ಭಾರ್ಯೆಯಲ್ಲಿ ಪತಿತ ಪುರುಷನು ಸ್ವಯಂ ಪುತ್ರನನ್ನು ಹುಟ್ಟಿಸಿದರೆ ಅವನು ನಾಲ್ಕನೇ ಶ್ರೇಣಿಯ ಪುತ್ರನಾಗುತ್ತಾನೆ. ಇದನ್ನು ಬಿಟ್ಟು ದತ್ತಕ ಮತ್ತು ಖರೀದಿಸಿದ ಪುತ್ರರೂ ಇರುತ್ತಾರೆ. ಇವೆಲ್ಲ ಒಟ್ಟಿಗೇ ಆರು ರೀತಿಯ ಪುತ್ರರಾದರು. ಏಳನೆಯವನು ಅಧ್ಯೂಡ[1].
13049005a ಷಡಪಧ್ವಂಸಜಾಶ್ಚಾಪಿ ಕಾನೀನಾಪಸದಾಸ್ತಥಾ|
13049005c ಇತ್ಯೇತೇ ತೇ ಸಮಾಖ್ಯಾತಾಸ್ತಾನ್ವಿಜಾನೀಹಿ ಭಾರತ||
ಎಂಟನೆಯವನು “ಕಾನೀನ” ಪುತ್ರ. ಇವರಲ್ಲದೇ ಆರು “ಅಪಧ್ವಂಸಜ” (ಅನುಲೋಮ) ಪುತ್ರರೂ ಹಾಗೆಯೇ ಆರು “ಅಪಸದ” (ಪ್ರತಿಲೋಮ) ಪುತ್ರರೂ ಆಗುತ್ತಾರೆ. ಭಾರತ! ಈ ಪ್ರಕಾರ ಪುತ್ರರ ಭೇದಗಳನ್ನು ಹೇಳಿದ್ದಾರೆ. ಈ ಎಲ್ಲ ಪುತ್ರರ ಕುರಿತೂ ನಿನಗೆ ತಿಳಿದಿರಬೇಕು.”
13049006 ಯುಧಿಷ್ಠಿರ ಉವಾಚ|
13049006a ಷಡಪಧ್ವಂಸಜಾಃ ಕೇ ಸ್ಯುಃ ಕೇ ವಾಪ್ಯಪಸದಾಸ್ತಥಾ|
13049006c ಏತತ್ಸರ್ವಂ ಯಥಾತತ್ತ್ವಂ ವ್ಯಾಖ್ಯಾತುಂ ಮೇ ತ್ವಮರ್ಹಸಿ||
ಯುಧಿಷ್ಠಿರನು ಹೇಳಿದನು: “”ಆರು ಪ್ರಕಾರದ ಅಪಧ್ವಂಸಜ ಮತ್ತು ಆರು ಪ್ರಕಾರದ ಅಪಸದ ಪುತ್ರರೆಂದು ಯಾರಿಗೆ ಕರೆಯುತ್ತಾರೆ? ಇವೆಲ್ಲವನ್ನೂ ಯಥಾತತ್ತ್ವವಾಗಿ ನನಗೆ ಹೇಳಬೇಕು.”
13049007 ಭೀಷ್ಮ ಉವಾಚ|
13049007a ತ್ರಿಷು ವರ್ಣೇಷು ಯೇ ಪುತ್ರಾ ಬ್ರಾಹ್ಮಣಸ್ಯ ಯುಧಿಷ್ಠಿರ|
13049007c ವರ್ಣಯೋಶ್ಚ ದ್ವಯೋಃ ಸ್ಯಾತಾಂ ಯೌ ರಾಜನ್ಯಸ್ಯ ಭಾರತ||
13049008a ಏಕೋ ದ್ವಿವರ್ಣ ಏವಾಥ ತಥಾತ್ರೈವೋಪಲಕ್ಷಿತಃ|
13049008c ಷಡಪಧ್ವಂಸಜಾಸ್ತೇ ಹಿ ತಥೈವಾಪಸದಾನ್ ಶೃಣು||
ಭೀಷ್ಮನು ಹೇಳಿದನು: “ಯುಧಿಷ್ಠಿರ! ರಾಜನ್! ಭಾರತ! ಬ್ರಾಹ್ಮಣನಿಗೆ ಕ್ಷತ್ರಿಯ, ವೈಶ್ಯ ಮತ್ತು ಶೂದ್ರ – ಈ ಮೂರು ವರ್ಣದ ಸ್ತ್ರೀಯರಲ್ಲಿ ಹುಟ್ಟುವ ಪುತ್ರರನ್ನು ಮೂರು ಪ್ರಕಾರದ ಅಪಧ್ವಂಸಜ ಪುತ್ರರೆಂದು ಕರೆಯುತ್ತಾರೆ. ಕ್ಷತ್ರಿಯನಿಗೆ ವೈಶ್ಯ ಮತ್ತು ಶೂದ್ರ ಜಾತಿಯ ಸ್ತ್ರೀಯರಲ್ಲಿ ಹುಟ್ಟುವ ಪುತ್ರರನ್ನು ಎರಡು ಪ್ರಕಾರದ ಅಪಧ್ವಂಸಜ ಪುತ್ರರೆಂದು ಕರೆಯುತ್ತಾರೆ. ಹಾಗೆಯೇ ವೈಶ್ಯನಿಗೆ ಶೂದ್ರಜಾತಿಯ ಸ್ತ್ರೀಯಲ್ಲಿ ಹುಟ್ಟುವ ಪುತ್ರನೂ ಒಂದು ಪ್ರಕಾರದ ಅಪಧ್ವಂಸಜನೆನಿಸಿಕೊಳ್ಳುತ್ತಾನೆ. ಇದನ್ನು ಈಗಾಗಲೇ ನಾನು ನಿನಗೆ ಹೇಳಿಯಾಗಿದೆ. ಇನ್ನು ಆರು ವಿಧದ ಅಪಸದ ಪುತ್ರರ ಕುರಿತು ಕೇಳು.
13049009a ಚಂಡಾಲೋ ವ್ರಾತ್ಯವೇನೌ ಚ ಬ್ರಾಹ್ಮಣ್ಯಾಂ ಕ್ಷತ್ರಿಯಾಸು ಚ|
13049009c ವೈಶ್ಯಾಯಾಂ ಚೈವ ಶೂದ್ರಸ್ಯ ಲಕ್ಷ್ಯಂತೇಽಪಸದಾಸ್ತ್ರಯಃ||
ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಸ್ತ್ರೀಯಲ್ಲಿ ಶೂದ್ರನಿಗೆ ಹುಟ್ಟುವ ಚಂಡಾಲ, ವ್ರಾತ್ಯ ಮತ್ತು ವೇನ ಇವರು ಮೂರು ಪ್ರಕಾರದ ಅಪಸದರೆಂದು ಹೇಳುತ್ತಾರೆ.
13049010a ಮಾಗಧೋ ವಾಮಕಶ್ಚೈವ ದ್ವೌ ವೈಶ್ಯಸ್ಯೋಪಲಕ್ಷಿತೌ|
13049010c ಬ್ರಾಹ್ಮಣ್ಯಾಂ ಕ್ಷತ್ರಿಯಾಯಾಂ ಚ ಕ್ಷತ್ರಿಯಸ್ಯೈಕ ಏವ ತು||
13049011a ಬ್ರಾಹ್ಮಣ್ಯಾಂ ಲಕ್ಷ್ಯತೇ ಸೂತ ಇತ್ಯೇತೇಽಪಸದಾಃ ಸ್ಮೃತಾಃ|
13049011c ಪುತ್ರರೇತೋ ನ ಶಕ್ಯಂ ಹಿ ಮಿಥ್ಯಾ ಕರ್ತುಂ ನರಾಧಿಪ||
ನರಾಧಿಪ! ಬ್ರಾಹ್ಮಣ ಮತ್ತು ಕ್ಷತ್ರಿಯ ಸ್ತ್ರೀಯಲ್ಲಿ ವೈಶ್ಯನಿಗೆ ಹುಟ್ಟುವ ಪುತ್ರರನ್ನು – ಕ್ರಮಶಃ ಮಾಗಧ ಮತ್ತು ವಾಮಕರನ್ನು – ಎರಡು ಪ್ರಕಾರದ ಅಪಸದ ಪುತ್ರರೆಂದು ಹೇಳುತ್ತಾರೆ. ಬ್ರಾಹ್ಮಣಿಯಲ್ಲಿ ಕ್ಷತ್ರಿಯನು ಪಡೆಯುವ ಸೂತನೆಂದು ಕರೆಯಲ್ಪಡುವ ಪುತ್ರನು ಅಪಸದ ಪುತ್ರನೇ. ಈ ಆರು ಅಪಸದ ಅರ್ಥಾತ್ ಪ್ರತಿಲೋಮ ಪುತ್ರರೆಂದು ತಿಳಿಯಲಾಗುತ್ತದೆ. ಈ ಪುತ್ರರು ಮಿಥ್ಯರೆಂದು ಹೇಳಲಿಕ್ಕಾಗುವುದಿಲ್ಲ.”
13049012 ಯುಧಿಷ್ಠಿರ ಉವಾಚ|
13049012a ಕ್ಷೇತ್ರಜಂ ಕೇ ಚಿದೇವಾಹುಃ ಸುತಂ ಕೇ ಚಿತ್ತು ಶುಕ್ರಜಮ್|
13049012c ತುಲ್ಯಾವೇತೌ ಸುತೌ ಕಸ್ಯ ತನ್ಮೇ ಬ್ರೂಹಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ತನ್ನ ಪತ್ನಿಯ ಗರ್ಭದಲ್ಲಿ ಹುಟ್ಟುವ ಎಲ್ಲರೂ ತನ್ನದೇ ಪುತ್ರರೆಂದು ಕೆಲವರು ಹೇಳಿದರೆ ತನ್ನ ವೀರ್ಯದಿಂದ ಹುಟ್ಟುವವನು ಮಾತ್ರ ತನ್ನ ಪುತ್ರನೆಂದು ತಿಳಿಯುತ್ತಾರೆ. ಈ ಇಬ್ಬರು ಪ್ತ್ರರೂ ಸಮಾನರೇ? ಪಿತಾಮಹ! ಇದರ ಕುರಿತು ನನಗೆ ಹೇಳು.”
13049013 ಭೀಷ್ಮ ಉವಾಚ|
13049013a ರೇತಜೋ ವಾ ಭವೇತ್ಪುತ್ರಸ್ತ್ಯಕ್ತೋ ವಾ ಕ್ಷೇತ್ರಜೋ ಭವೇತ್|
13049013c ಅಧ್ಯೂಢಃ ಸಮಯಂ ಭಿತ್ತ್ವೇತ್ಯೇತದೇವ ನಿಬೋಧ ಮೇ||
ಭೀಷ್ಮನು ಹೇಳಿದನು: “ತನ್ನದೇ ವೀರ್ಯದಿಂದ ಉತ್ಪನ್ನ ಪುತ್ರನು ನಿಜವಾಗಿ ತನ್ನ ಪುತ್ರನೆಂದೇ ಆಗುತ್ತಾನೆ. ಒಂದು ವೇಳೆ ವೀರ್ಯವನ್ನಿತ್ತ ಪುರುಷನು ಸ್ತ್ರೀಯನ್ನು ತ್ಯಜಿಸಿದ್ದರೆ ಅವಳಲ್ಲಿ ಹುಟ್ಟುವ ಪುತ್ರನು ಕ್ಷೇತ್ರಜನೆಂದಾಗುತ್ತಾನೆ. ಈ ರೀತಿ ಸಮಯಭೇದನ ಮಾಡಿಯೇ ಅಧ್ಯೂಢ ಪುತ್ರನ ವಿಷಯದಲ್ಲಿ ತಿಳಿದುಕೊಳ್ಳಬೇಕು.”
13049014 ಯುಧಿಷ್ಠಿರ ಉವಾಚ|
13049014a ರೇತೋಜಂ ವಿದ್ಮ ವೈ ಪುತ್ರಂ ಕ್ಷೇತ್ರಜಸ್ಯಾಗಮಃ ಕಥಮ್|
13049014c ಅಧ್ಯೂಢಂ ವಿದ್ಮ ವೈ ಪುತ್ರಂ ಹಿತ್ವಾ ಚ ಸಮಯಂ ಕಥಮ್||
ಯುಧಿಷ್ಠಿರನು ಹೇಳಿದನು: “ವೀರ್ಯದಿಂದ ಉತ್ಪನ್ನ ಪುತ್ರನನ್ನು ಮಾತ್ರ ಪುತ್ರನೆಂದು ತಿಳಿಯುತ್ತೇವೆ. ತನ್ನ ವೀರ್ಯದಿಂದಲ್ಲದ ಕ್ಷೇತ್ರಜ ಪುತ್ರನು ಹೇಗಾಗಬಲ್ಲನು? ಹಾಗೆಯೇ ಯಾವ ರೀತಿಯಲ್ಲಿ ಸಮಯಭೇದನ ಮಾಡಿ ನಾವು ಅಧ್ಯೂಡ ಪುತ್ರನೆಂದು ತಿಳಿಯಬೇಕು?”
13049015 ಭೀಷ್ಮ ಉವಾಚ|
13049015a ಆತ್ಮಜಂ ಪುತ್ರಮುತ್ಪಾದ್ಯ ಯಸ್ತ್ಯಜೇತ್ಕಾರಣಾಂತರೇ|
13049015c ನ ತತ್ರ ಕಾರಣಂ ರೇತಃ ಸ ಕ್ಷೇತ್ರಸ್ವಾಮಿನೋ ಭವೇತ್||
ಭೀಷ್ಮನು ಹೇಳಿದನು: “ತನ್ನ ವೀರ್ಯದಿಂದ ಪುತ್ರನನ್ನು ಹುಟ್ಟಿಸಿ ಅನ್ಯ ಕಾರಣಗಳಿಂದ ಅವಳನ್ನು ಪರಿತ್ಯಜಿಸಿದರೆ, ಕೇವಲ ವೀರ್ಯಸ್ಥಾಪನೆ ಮಾಡಿದ ಕಾರಣದಿಂದ ಅವನಿಗೆ ಆ ಪುತ್ರನ ಮೇಲೆ ಅಧಿಕಾರವಿರುವುದಿಲ್ಲ. ಆ ಪುತ್ರನು ಆ ಕ್ಷೇತ್ರ ಅಥವಾ ಸ್ತ್ರೀಯ ಸ್ವಾಮಿಯವನದಾಗುತ್ತಾನೆ.
13049016a ಪುತ್ರಕಾಮೋ ಹಿ ಪುತ್ರಾರ್ಥೇ ಯಾಂ ವೃಣೀತೇ ವಿಶಾಂ ಪತೇ|
13049016c ತತ್ರ ಕ್ಷೇತ್ರಂ ಪ್ರಮಾಣಂ ಸ್ಯಾನ್ನ ವೈ ತತ್ರಾತ್ಮಜಃ ಸುತಃ||
ವಿಶಾಂಪತೇ! ಪುತ್ರನನ್ನು ಬಯಸಿದವನು ಪುತ್ರನಿಗಾಗಿ ಯಾರನ್ನು ವಿವಾಹವಾಗುತ್ತಾನೋ ಅವಳ ಕ್ಷೇತ್ರಜ ಪುತ್ರನು ಆ ವಿವಾಹವಾದ ಪತಿಯದ್ದು ಎಂದು ನಿಶ್ಚಯಿಸುತ್ತಾರೆ. ಅಲ್ಲಿ ಗರ್ಭಸ್ಥಾಪನೆ ಮಾಡಿದವನ ಅಧಿಕಾರವಿರುವುದಿಲ್ಲ.
13049017a ಅನ್ಯತ್ರ ಕ್ಷೇತ್ರಜಃ ಪುತ್ರೋ ಲಕ್ಷ್ಯತೇ ಭರತರ್ಷಭ|
13049017c ನ ಹ್ಯಾತ್ಮಾ ಶಕ್ಯತೇ ಹಂತುಂ ದೃಷ್ಟಾಂತೋಪಗತೋ ಹ್ಯಸೌ||
ಭರತರ್ಷಭ! ಬೇರೆ ಕ್ಷೇತ್ರದಲ್ಲಿ ಉತ್ಪನ್ನನಾದ ಪುತ್ರನ ವಿಭಿನ್ನ ಲಕ್ಷಣಗಳಿಂದ ಅವನು ಯಾರ ಪುತ್ರನು ಎಂದು ತಿಳಿದುಹೋಗುತ್ತದೆ. ಯಾರೂ ತನ್ನ ವಾಸ್ತವವನ್ನು ಮುಚ್ಚಿಡಲಾರನು. ಅದು ಸ್ವತಃ ಪ್ರತ್ಯಕ್ಷವಾಗಿಬಿಡುತ್ತದೆ.
13049018a ಕಶ್ಚಿಚ್ಚ ಕೃತಕಃ ಪುತ್ರಃ ಸಂಗ್ರಹಾದೇವ ಲಕ್ಷ್ಯತೇ|
13049018c ನ ತತ್ರ ರೇತಃ ಕ್ಷೇತ್ರಂ ವಾ ಪ್ರಮಾಣಂ ಸ್ಯಾದ್ಯುಧಿಷ್ಠಿರ||
ಯುಧಿಷ್ಠಿರ! ಕೆಲವೊಮ್ಮೆ ಕೃತ್ರಿಮ ಪುತ್ರರೂ ಆಗುತ್ತಾರೆ. ಅವರು ಗ್ರಹಣ ಮಾತ್ರದಿಂದ ಅಥವಾ ತನ್ನವರೆಂದು ಸ್ವೀಕರಿಸುವುದರ ಮಾತ್ರದಿಂದಲೇ ತನ್ನ ಪುತ್ರರಾಗುತ್ತಾರೆ. ಅಲ್ಲಿ ವೀರ್ಯ ಅಥವಾ ಕ್ಷೇತ್ರಗಳ ಕುರಿತು ಯೋಚಿಸಿ ಅವನ ಪುತ್ರತ್ವವನ್ನು ನಿರ್ಧರಿಸಲು ಆಗುವುದಿಲ್ಲ.”
13049019 ಯುಧಿಷ್ಠಿರ ಉವಾಚ|
13049019a ಕೀದೃಶಃ ಕೃತಕಃ ಪುತ್ರಃ ಸಂಗ್ರಹಾದೇವ ಲಕ್ಷ್ಯತೇ|
13049019c ಶುಕ್ರಂ ಕ್ಷೇತ್ರಂ ಪ್ರಮಾಣಂ ವಾ ಯತ್ರ ಲಕ್ಷ್ಯೇತ ಭಾರತ||
ಯುಧಿಷ್ಠಿರನು ಹೇಳಿದನು: “ಭಾರತ! ಪುತ್ರತ್ವದ ನಿಶ್ಚಯದಲ್ಲಿ ವೀರ್ಯ ಮತ್ತು ಕ್ಷೇತ್ರದ ಪ್ರಮಾಣವು ಎಲ್ಲಿ ಇರುವುದಿಲ್ಲವೋ ಮತ್ತು ಕೇವಲ ಸಂಗ್ರಹ ಮಾತ್ರದಿಂದಲೇ ಪುತ್ರನೆಂದೆನಿಸಿಕೊಳ್ಳುತ್ತಾನೋ ಅಂತಹ ಕೃತ್ರಿಮ ಪುತ್ರನು ಹೇಗಿರುತ್ತಾನೆ?”
13049020 ಭೀಷ್ಮ ಉವಾಚ|
13049020a ಮಾತಾಪಿತೃಭ್ಯಾಂ ಸಂತ್ಯಕ್ತಂ ಪಥಿ ಯಂ ತು ಪ್ರಲಕ್ಷಯೇತ್|
13049020c ನ ಚಾಸ್ಯ ಮಾತಾಪಿತರೌ ಜ್ಞಾಯೇತೇ ಸ ಹಿ ಕೃತ್ರಿಮಃ||
ಭೀಷ್ಮನು ಹೇಳಿದರು: “ತಂದೆ-ತಾಯಿಯರು ಮಾರ್ಗದಲ್ಲಿ ತ್ಯಜಿಸಿರುವ ಮತ್ತು ಹುಡುಕಿದರೂ ಯಾರ ತಂದೆ-ತಾಯಿಯರು ಸಿಗಲಿಲ್ಲವೋ, ಆ ಬಾಲಕನನ್ನು ಪಾಲನೆ-ಪೋಷಣೆ ಮಾಡುವವರಿಗೆ ಅವನು ಕೃತ್ರಿಮ ಪುತ್ರನೆನಿಸಿಕೊಳ್ಳುತ್ತಾನೆ.
13049021a ಅಸ್ವಾಮಿಕಸ್ಯ ಸ್ವಾಮಿತ್ವಂ ಯಸ್ಮಿನ್ಸಂಪ್ರತಿಲಕ್ಷಯೇತ್|
13049021c ಸವರ್ಣಸ್ತಂ ಚ ಪೋಷೇತ ಸವರ್ಣಸ್ತಸ್ಯ ಜಾಯತೇ||
ಅನಾಥನಾಗಿರುವ ಅವನನ್ನು ವರ್ತಮಾನದಲ್ಲಿ ಪಾಲನೆ ಪೋಷಣೆ ಮಾಡುವವರ ಜಾತಿಯೇ ಆ ಪುತ್ರನದ್ದೂ ಆಗುತ್ತದೆ.”
13049022 ಯುಧಿಷ್ಠಿರ ಉವಾಚ|
13049022a ಕಥಮಸ್ಯ ಪ್ರಯೋಕ್ತವ್ಯಃ ಸಂಸ್ಕಾರಃ ಕಸ್ಯ ವಾ ಕಥಮ್|
13049022c ದೇಯಾ ಕನ್ಯಾ ಕಥಂ ಚೇತಿ ತನ್ಮೇ ಬ್ರೂಹಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಇಂಥಹ ಬಾಲಕನ ಸಂಸ್ಕಾರಗಳನ್ನು ಯಾವ ಜಾತಿಯ ಅನುಸಾರ ಮಾಡಬೇಕು? ವಾಸ್ತವದಲ್ಲಿ ಅವನು ಯಾವ ವರ್ಣದವನು ಎಂದು ಹೇಗೆ ತಿಳಿಯಬಹುದು? ಹಾಗೆಯೇ ಅವನನ್ನು ಯಾವ ವರ್ಣದ ಕನ್ಯೆಯೊಡನೆ ವಿವಾಹ ಮಾಡಬೇಕು? ಅದನ್ನು ನನಗೆ ಹೇಳು.”
13049023 ಭೀಷ್ಮ ಉವಾಚ|
13049023a ಆತ್ಮವತ್ತಸ್ಯ ಕುರ್ವೀತ ಸಂಸ್ಕಾರಂ ಸ್ವಾಮಿವತ್ತಥಾ|
13049024a ತ್ಯಕ್ತೋ ಮಾತಾಪಿತೃಭ್ಯಾಂ ಯಃ ಸವರ್ಣಂ ಪ್ರತಿಪದ್ಯತೇ|
ಭೀಷ್ಮನು ಹೇಳಿದನು: “ತಂದೆ-ತಾಯಿಯರಿಂದ ತ್ಯಕ್ತನಾದವನು ಪಾಲಕನಿಗೆ ಸವರ್ಣಿಯೇ ಆಗುತ್ತಾನೆ. ಆದುದರಿಂದ ಅವನ ಸಂಸ್ಕಾರಗಳನ್ನು ಪಾಲಕನ ವರ್ಣದ ಪ್ರಕಾರವೇ ಮಾಡಬೇಕು.
13049024c ತದ್ಗೋತ್ರವರ್ಣತಸ್ತಸ್ಯ ಕುರ್ಯಾತ್ಸಂಸ್ಕಾರಮಚ್ಯುತ||
13049025a ಅಥ ದೇಯಾ ತು ಕನ್ಯಾ ಸ್ಯಾತ್ತದ್ವರ್ಣೇನ ಯುಧಿಷ್ಠಿರ|
ಯುಧಿಷ್ಠಿರ! ಅಚ್ಯುತ! ಪಾಲಕ ತಂದೆಯ ಸಗೋತ್ರ ಬಂಧುಗಳಲ್ಲಿ ಯಾವ ಸಂಸ್ಕಾರಗಳಾಗುತ್ತವೆಯೋ ಅವುಗಳನ್ನೇ ಆ ಪುತ್ರನಿಗೂ ಮಾಡಬೇಕು. ಮತ್ತು ಹಾಗೆಯೇ ಅದೇ ವರ್ಣದ ಕನ್ಯೆಯೊಡನೆ ಅವನ ವಿವಾಹವನ್ನೂ ಮಾಡಬೇಕು.
13049025c ಸಂಸ್ಕರ್ತುಂ ಮಾತೃಗೋತ್ರಂ ಚ ಮಾತೃವರ್ಣವಿನಿಶ್ಚಯೇ||
13049026a ಕಾನೀನಾಧ್ಯೂಢಜೌ ಚಾಪಿ ವಿಜ್ಞೇಯೌ ಪುತ್ರಕಿಲ್ಬಿಷೌ|
ಒಂದು ವೇಳೆ ಆ ಪುತ್ರನ ತಾಯಿಯ ವರ್ಣ ಮತ್ತು ಗೋತ್ರಗಳ ಕುರಿತು ತಿಳಿದಿದ್ದರೆ ಆ ಬಾಲಕನ ಸಂಸ್ಕಾರವನ್ನು ಅವನ ತಾಯಿಯ ವರ್ಣ-ಗೋತ್ರಗಳಿಗನುಸಾರವಾಗಿಯೇ ಮಾಡಬೇಕು. ಕಾನೀನ ಮತ್ತು ಅಧ್ಯೂಡಜ ಪುತ್ರರು ಇಬ್ಬರೂ ಕಿಲ್ಬಿಷ ಪುತ್ರರೆಂದೇ ತಿಳಿಯಬೇಕು.
13049026c ತಾವಪಿ ಸ್ವಾವಿವ ಸುತೌ ಸಂಸ್ಕಾರ್ಯಾವಿತಿ ನಿಶ್ಚಯಃ||
13049027a ಕ್ಷೇತ್ರಜೋ ವಾಪ್ಯಪಸದೋ ಯೇಽಧ್ಯೂಢಾಸ್ತೇಷು ಚಾಪ್ಯಥ|
13049027c ಆತ್ಮವದ್ವೈ ಪ್ರಯುಂಜೀರನ್ಸಂಸ್ಕಾರಂ ಬ್ರಾಹ್ಮಣಾದಯಃ||
13049028a ಧರ್ಮಶಾಸ್ತ್ರೇಷು ವರ್ಣಾನಾಂ ನಿಶ್ಚಯೋಽಯಂ ಪ್ರದೃಶ್ಯತೇ|
13049028c ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯಃ ಶ್ರೋತುಮಿಚ್ಚಸಿ||
ಈ ಎರಡು ಪ್ರಕಾರದ ಪುತ್ರರಿಗೂ ಸಮಾನ ಸಂಸ್ಕಾರಗಳನ್ನು ಮಾಡಬೇಕೆಂದು ಶಾಸ್ತ್ರನಿಶ್ಚಯವಿದೆ. ಬ್ರಾಹ್ಮಣಾದಿ ವರ್ಣದವರು ಕ್ಷೇತ್ರಜ, ಅಪಸದ ಮತ್ತು ಅಧ್ಯೂಡ ಈ ಎಲ್ಲ ಪ್ರಕಾರದ ಪುತ್ರರಿಗೂ ತಮ್ಮದೇ ವರ್ಣದ ಸಮಾನ ಸಂಸ್ಕಾರಗಳನ್ನು ನೀಡಬೇಕು. ವರ್ಣಸಂಸ್ಕಾರಗಳ ವಿಷಯದಲ್ಲಿ ಧರ್ಮಶಾಸ್ತ್ರಗಳ ಇದೇ ನಿಶ್ಚಯವಿದೆ. ಈ ಪ್ರಕಾರ ನಾನು ನಿನಗೆ ಎಲ್ಲವನ್ನೂ ಹೇಳಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿವಾಹಧರ್ಮೇ ಪುತ್ರಪ್ರತಿನಿಧಿಕಥನೇ ಏಕೋನಪಂಚಾಶತ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿವಾಹಧರ್ಮೇ ಪುತ್ರಪ್ರತಿನಿಧಿಕಥನ ಎನ್ನುವ ನಲ್ವತ್ತೊಂಭತ್ತನೇ ಅಧ್ಯಾಯವು.
[1] ಕುಮಾರೀ ಅವಸ್ಥೆಯಲ್ಲಿಯೇ ತಾಯಿಯ ಗರ್ಭದಲ್ಲಿದ್ದವನು ವಿವಾಹಿತನಾದವನ ಮನೆಗೆ ಬಂದಮೇಲೆ ಹುಟ್ಟಿದವನು.