ಭೀಷ್ಮಸ್ವರ್ಗಾರೋಹಣ
ಭೀಷ್ಮಸ್ವರ್ಗಾನುಜ್ಞಾ
ಅನಂತರ ರಾಜಾ ಕುಂತೀಸುತನು ಪೌರ-ಜಾನಪದ ಜನರನ್ನು ಯಥಾನ್ಯಾಯವಾಗಿ ಪೂಜಿಸಿ ತಮ್ಮ ತಮ್ಮ ಮನೆಗಳಿಗೆ ಹೋಗಲು ಅನುಮತಿಯನ್ನಿತ್ತನು. ಆಗ ಪಾಂಡುಸುತ ನೃಪನು ವೀರರನ್ನು ಕಳೆದುಕೊಂಡಿದ್ದ ಮತ್ತು ಪತಿಯಂದಿರನ್ನು ಕಳೆದುಕೊಂಡಿದ್ದ ನಾರೀಗಣಗಳಿಗೆ ಅಪಾರ ಐಶ್ವರ್ಯವನ್ನು ದಾನಮಾಡಿ ಸಂತವಿಸಿದನು. ಅಭಿಷಿಕ್ತನಾಗಿ ರಾಜ್ಯವನ್ನು ಪಡೆದ ಮಹಾಪ್ರಾಜ್ಞ ನರಶ್ರೇಷ್ಠ ಧರ್ಮಭೃತರಲ್ಲಿ ಶ್ರೇಷ್ಠ ಯುಧಿಷ್ಠಿರನು ಮಂತ್ರಿಗಳೇ ಮೊದಲಾದ ಸಮಸ್ತ ಪ್ರಕೃತಿಗಣಗಳನ್ನೂ ಅವರವರ ಸ್ಥಾನಗಳಲ್ಲಿ ನಿಯೋಜಿಸಿ ಶಕ್ತಿಯುತ ದ್ವಿಜ ಮುಖ್ಯರಿಂದ ಶ್ರೇಷ್ಠ ಆಶೀರ್ವಾದಗಳನ್ನು ಪಡೆದನು. ಶ್ರೀಮಾನ್ ಪುರುಷರ್ಷಭನು ಆ ಉತ್ತಮ ನಗರದಲ್ಲಿ ಐವತ್ತು ರಾತ್ರಿಗಳನ್ನು ಕಳೆದು ಅನಂತರ ಕೌರವಾಗ್ರ್ಯ ಭೀಷ್ಮನನ್ನು ಸ್ಮರಿಸಿದನು. ಆದಿತ್ಯನು ಹಿಂದಿರುಗಿ ಉತ್ತರಾಯಣದ ಕಡೆ ಹೋಗುತ್ತಿರುವುದನ್ನು ನೋಡಿ ಅವನು ಯಾಜಕರಿಂದ ಪರಿವಾರಿತನಾಗಿ ಗಜಪುರದಿಂದ ಹೊರಟನು. ಇದಕ್ಕೆ ಮೊದಲೇ ಕೌಂತೇಯ ಯುಧಿಷ್ಠಿರನು ಭೀಷ್ಮನ ಸಂಸಾಧನೆಗಾಗಿ ತುಪ್ಪ, ಮಾಲೆ, ಗಂಧ, ಪಟ್ಟವಸ್ತ್ರಗಳು, ಚಂದನ-ಅಗರು -ಕಪ್ಪು ಅಗರು ಮೊದಲಾದವುಗಳು, ಮತ್ತು ಮಹಾಬೆಲೆಬಾಳುವ ವಿವಿದ ರತ್ನಗಳನ್ನೂ ಮಾಲೆಗಳನ್ನೂ ಕಳುಹಿಸಿದ್ದನು. ಮಹಾರಾಜ! ಆ ಧೀಮಾನ್ ಪುರುಷರ್ಷಭನು ಧೃತರಾಷ್ಟ್ರನನ್ನು ಮುಂದಿರಿಸಿಕೊಂಡು ಯಶಸ್ವಿನೀ ಗಾಂಧಾರೀ, ತಾಯಿ ಪೃಥೆ, ಸಹೋದರರು, ಜನಾರ್ದನನನ್ನು ಅನುಸರಿಸಿದ ಧೀಮಂತ ವಿದುರ, ಕೌರವ್ಯ ಯುಯುತ್ಸು, ಯುಯುಧಾನ, ಮತ್ತು ಮಹಾ ರಾಜಭೋಗ್ಯ ವಸ್ತುಗಳಿಂದ ಕೂಡಿಕೊಂಡು ಸ್ತುತಿಸಲ್ಪಡುತ್ತಾ ಭೀಷ್ಮನ ಮೂರು ಅಗ್ನಿಗಳನ್ನೂ ಅನುಸರಿಸುತ್ತಾ ಭೀಷ್ಮನಿದ್ದೆಡೆಗೆ ಹೊರಟನು. ದೇವಪತಿಯಂತೆ ಪುರದಿಂದ ಹೊರಟು ಅವನು ಕುರುಕ್ಷೇತ್ರದಲ್ಲಿದ್ದ ನೃಪ ಶಾಂತನವನನ್ನು ತಲುಪಿದನು. ರಾಜರ್ಷೇ! ಧೀಮಂತ ಪಾರಶರ್ಯ ವ್ಯಾಸ, ನಾರದ ಮತ್ತು ದೇವಲ-ಅಸಿತರು ಹತ್ತಿರದಲ್ಲಿದ್ದ, ನಾನಾ ದೇಶಗಳಿಂದ ಬಂದು ಹತರಾಗದೇ ಉಳಿದಿದ್ದ ನೃಪರಿಂದ ಎಲ್ಲಕಡೆಗಳಿಂದ ರಕ್ಷಣೆಗೊಳಗಾಗಿದ್ದ, ವೀರಶಯನದಲ್ಲಿ ಮಲಗಿದ್ದ ಭೀಷ್ಮನನ್ನು ನೃಪತಿಯು ಕಂಡನು. ಆಗ ಸಹೋದರರೊಡನೆ ಕೌಂತೇಯ ಧರ್ಮರಾಜನು ರಥದಿಂದ ಇಳಿದು ಅರಿಂದಮ ಪಿತಾಮಹನನನ್ನೂ ದ್ವೈಪಾಯನನೇ ಮೊದಲಾದ ವಿಪ್ರರನ್ನೂ ನಮಸ್ಕರಿಸಿದನು. ಅವರೂ ಕೂಡ ಅವನನ್ನು ಪ್ರತಿನಂದಿಸಿದರು. ಬ್ರಹ್ಮಕಲ್ಪ ಋತ್ವಿಜರು ಮತ್ತು ಸಹೋದರರನ್ನೊಡಗೂಡಿ ಆ ಅಚ್ಯುತನು ಋಷಿಗಳಿಂದ ಸುತ್ತುವರೆಯಲ್ಪಟ್ಟು ಶರತಲ್ಪದಮೇಲಿದ್ದ ಭೀಷ್ಮನನ್ನು ಸಮೀಪಿಸಿದನು. ಕೌರವ್ಯ! ಆಗ ಧರ್ಮರಾಜ ಯುಧಿಷ್ಠಿರನು ಸಹೋದರರೊಂದಿಗೆ ಮಲಗಿದ್ದ ನದೀಸುತ ಭರತಶ್ರೇಷ್ಠನಿಗೆ ಹೇಳಿದನು: “ನೃಪತೇ! ಜಾಹ್ನವೀಸುತ! ಮಹಾಬಾಹೋ! ನಾನು ಯುಧಿಷ್ಠಿರ! ನಿನಗೆ ನಮಸ್ಕರಿಸುತ್ತಿದ್ದೇನೆ. ನಿನಗೆ ಕೇಳಿಸುತ್ತಿದೆ ತಾನೇ? ನಾನು ನಿನಗೆ ಏನು ಮಾಡಬಹುದೆನ್ನುವುದನ್ನು ಹೇಳು! ರಾಜನ್! ವಿಭೋ! ನೀನು ಹೇಳಿದ ಸಮಯಕ್ಕೆ ಸರಿಯಾಗಿ ನಿನ್ನ ಅಗ್ನಿಗಳನ್ನೂ, ಆಚಾರ್ಯ-ಬ್ರಾಹ್ಮಣರನ್ನೂ, ಋತ್ವಿಜರನ್ನೂ ಮತ್ತು ನನ್ನ ಸಹೋದರರನ್ನೂ ಕರೆದುಕೊಂಡು ಬಂದಿದ್ದೇನೆ. ಮಹಾತೇಜಸ್ವಿಯೇ! ನಿನ್ನ ಪುತ್ರ ಜನೇಶ್ವರ ಧೃತರಾಷ್ಟ್ರನು ತನ್ನ ಅಮಾತ್ಯರೊಂದಿಗೆ ಮತ್ತು ವೀರ್ಯವಾನ್ ವಾಸುದೇವನೂ ಕೂಡ ಇಲ್ಲಿ ಉಪಸ್ಥಿತರಿದ್ದಾರೆ. ಕುರುಜಾಂಗಲದಲ್ಲಿ ಅಳಿದುಳಿದ ರಾಜರೆಲ್ಲರೂ ಬಂದಿದ್ದಾರೆ. ಕುರುಶಾರ್ದೂಲ! ಕಣ್ಣುಗಳನ್ನು ತೆರೆದು ಇವರನ್ನು ನೋಡು! ಆಗ ನೀನು ಹೇಳಿದುದೆಲ್ಲವನ್ನೂ ಮಾಡಿದ್ದೇನೆ. ಏನು ಮಾಡಬೇಕೆಂದು ನೀನು ಬಯಸಿದ್ದೆಯೋ ಅವೆಲ್ಲವನ್ನೂ ನಾನು ಸಂಗ್ರಹಿಸಿಕೊಂಡು ಬಂದಿದ್ದೇನೆ."
ಧೀಮಂತ ಕುಂತೀಪುತ್ರನು ಹೀಗೆ ಹೇಳಲು ಗಾಂಗೇಯನು ತನ್ನನ್ನು ಸುತ್ತುವರೆದು ನಿಂತಿದ್ದ ಎಲ್ಲ ಭಾರತರನ್ನೂ ನೋಡಿದನು. ಆಗ ವಾಗ್ಮೀ ಭೀಷ್ಮನು ತನ್ನ ವಿಪುಲ ಭುಜವನ್ನು ಮೇಲೆತ್ತಿ ಗಂಭೀರ ಮೇಘಧ್ವನಿಯಲ್ಲಿ ಕಾಲಕ್ಕೆ ತಕ್ಕುದಾದ ಈ ಮಾತನ್ನಾಡಿದನು: “ಕೌಂತೇಯ! ಯುಧಿಷ್ಠಿರ! ಒಳ್ಳೆಯದಾಯಿತು! ಭಗವಾನ್ ಸಹಸ್ರಾಂಶು ದಿವಾಕರನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ತಿರುಗಿರುವಾಗ ಅಮಾತ್ಯರೊಂದಿಗೆ ನೀನು ಇಲ್ಲಿಗೆ ಬಂದಿರುವೆ! ನಾನು ಈ ಶಯನವನ್ನು ಪಡೆದು ಇಂದಿಗೆ ನೂರಾಐವತ್ತೆಂಟು ರಾತ್ರಿಗಳು ಕಳೆದುಹೋದವು. ನಿಶಿತಾಗ್ರ ಈ ಶರಗಳ ಮೇಲೆ ಮಲಗಿರುವುದರಿಂದ ಅದು ನೂರು ವರ್ಷಗಳಂತೆ ತೋರುತ್ತಿವೆ. ಯುಧಿಷ್ಠಿರ! ಪುಣ್ಯ ಮಾಘಮಾಸವು ಪ್ರಾರಂಭವಾಗಿದೆ. ಈ ಮಾಸದಲ್ಲಿ ಮೂರು ಭಾಗಗಳು ಉಳಿದಿವೆಯಾದ್ದರಿಂದ ಇದು ಶುಕ್ಲಪಕ್ಷವೇ ಆಗಿರಬೇಕು.”
ಧರ್ಮಪುತ್ರ ಯುಧಿಷ್ಠಿರನಿಗೆ ಹೀಗೆ ಹೇಳಿ ಗಾಂಗೇಯನು ಧೃತರಾಷ್ಟ್ರನನ್ನು ಕರೆದು ಕಾಲಕ್ಕೆ ತಕ್ಕುದಾದ ಈ ಮಾತನ್ನಾಡಿದನು: “ರಾಜನ್! ಧರ್ಮಗಳನ್ನು ತಿಳಿದುಕೊಂಡಿದ್ದೀಯೆ. ಅರ್ಥಶಾಸ್ತ್ರದ ಸಂಶಯಗಳನ್ನು ಚೆನ್ನಾಗಿ ನಿರ್ಣಯಿಸಿಕೊಂಡಿರುವೆ. ಅನೇಕ ಶಾಸ್ತ್ರಗಳನ್ನು ತಿಳಿದಿರುವ ಅನೇಕ ವಿಪ್ರರನ್ನು ನೀನು ಸೇವೆಗೈದಿರುವೆ. ಮನುಜೇಶ್ವರ! ವೇದಶಾಸ್ತ್ರಗಳೆಲ್ಲವನ್ನೂ, ಧರ್ಮಗಳನ್ನೂ, ನಾಲ್ಕು ವೇದಗಳನ್ನೂ, ಅವುಗಳ ಅಂಗಗಳೆಲ್ಲವನ್ನೂ ನೀನು ಅರ್ಥಮಾಡಿಕೊಂಡಿರುವೆ. ಕೌರವ್ಯ! ಶೋಕಿಸಬಾರದು! ಹೇಗೆ ಆಗಬೇಕಿತ್ತೋ ಅದು ಹಾಗೆಯೇ ಆಗಿಹೋಯಿತು! ಕೃಷ್ಣದ್ವೈಪಾಯನನಿಂದ ನೀನು ದೇವರಹಸ್ಯವನ್ನೂ ಕೇಳಿದ್ದೀಯೆ. ರಾಜನ್! ಇವರು ಹೇಗೆ ಪಾಂಡುವಿನ ಮಕ್ಕಳೋ ಧರ್ಮತಃ ಅವರು ನಿನ್ನ ಮಕ್ಕಳೂ ಕೂಡ. ಗುರುಶುಶ್ರೂಷಣೆಯಲ್ಲಿಯೇ ನಿರತರಾಗಿರುವ ಅವರನ್ನು ಧರ್ಮದಲ್ಲಿದ್ದುಕೊಂಡು ಪಾಲಿಸು! ನಿನ್ನ ನಿರ್ದೇಶನದಲ್ಲಿಯೇ ನಡೆದುಕೊಳ್ಳುವ ಈ ಧರ್ಮರಾಜನು ಶುದ್ಧಾತ್ಮ. ಇವನು ಕ್ರೂರನಲ್ಲ. ಗುರುವತ್ಸಲನು ಎಂದು ನಾನು ತಿಳಿದುಕೊಂಡಿದ್ದೇನೆ. ನಿನ್ನ ಪುತ್ರರು ದುರಾತ್ಮರೂ, ಕ್ರೋಧ-ಲೋಭ ಪರಾಯಣರೂ, ಅಸೂಯಾಪರರೂ ಆಗಿದ್ದರು. ದುರ್ವೃತ್ತರಾದ ಅವರ ಕುರಿತು ಶೋಕಿಸಬಾರದು.”
ಮನೀಷಿಣಿ ಧೃತರಾಷ್ಟ್ರನಿಗೆ ಹೀಗೆ ಹೇಳಿ ಕೌರವ ಭೀಷ್ಮನು ಮಹಾಬಾಹು ವಾಸುದೇವನಿಗೆ ಹೇಳಿದನು: “ಭಗವನ್! ದೇವದೇವೇಶ! ಸುರಾಸುರನಮಸ್ಕೃತ! ತ್ರಿವಿಕ್ರಮ! ಶಂಖಚಕ್ರಗದಾಧರ! ನಿನಗೆ ನಮಸ್ಕಾರ! ವೈಕುಂಠ! ಪುರುಷೋತ್ತಮ! ನನಗೆ ಅನುಜ್ಞೆಯನ್ನು ನೀಡು! ನೀನು ಪಾಂಡವರನ್ನು ರಕ್ಷಿಸಬೇಕು. ನೀನೇ ಇವರ ಪರಾಯಣನು. “ಎಲ್ಲಿ ಕೃಷ್ಣನಿರುವನೋ ಅಲ್ಲಿ ಧರ್ಮ ಮತ್ತು ಎಲ್ಲಿ ಧರ್ಮವಿರುವುದೋ ಅಲ್ಲಿ ಜಯ” ಎಂದು ಹಿಂದೆ ನಾನು ದುರ್ಬುದ್ಧಿ ಮಂದಬುದ್ಧಿ ದುರ್ಯೋಧನನಿಗೆ ಹೇಳಿದ್ದೆ. “ಪುತ್ರ! ವಾಸುದೇವನ ಸಹಾಯದಿಂದ ಪಾಂಡವರೊಡನೆ ಸಂಧಿಮಾಡಿಕೋ. ಇದೇ ಸಂಧಾನಕ್ಕೆ ಪರಮ ಸಮಯ!” ಎಂದು ಪುನಃ ಪುನಃ ಹೇಳಿದ್ದೆ. ಆ ಮೂಢ ಅತಿ ಮಂದಬುದ್ಧಿಯು ನನ್ನ ಮಾತಿನಂತೆ ಮಾಡಲಿಲ್ಲ. ಈಗ ಈ ಪೃಥ್ವಿಯನ್ನು ನಾಶಗೊಳಿಸಿ ತಾನೂ ನಿಧನಹೊಂದಿದನು. ವೀರ! ನೀನು ನರನ ಸಹಿತ ಬದರಿಯಲ್ಲಿ ಬಹುಕಾಲ ವಾಸಿಸುತ್ತಿದ್ದ ಪುರಾಣ ಋಷಿಸತ್ತಮನೆಂದು ತಿಳಿದಿದ್ದೇನೆ. ಆ ಮಹಾತಪಸ್ವಿಗಳಾದ ನರ-ನಾರಾಯಣರು ಮನುಷ್ಯರಾಗಿ ಹುಟ್ಟಿದ್ದಾರೆ ಎಂದು ನನಗೆ ನಾರದ ಮತ್ತು ವ್ಯಾಸರು ಹೇಳಿದ್ದರು.”
ವಾಸುದೇವನು ಹೇಳಿದನು: “ಭೀಷ್ಮ! ನಿನಗೆ ಅನುಮತಿಯನ್ನು ನೀಡುತ್ತಿದ್ದೇನೆ. ಪಾರ್ಥಿವ! ನೀನು ವಸುಗಳನ್ನು ಸೇರುವೆ. ಮಹಾದ್ಯುತೇ! ನಿನಗೆ ಯಾವರೀತಿಯೂ ಪಾಪವೂ ಇಲ್ಲ ಎಂದು ನಾನು ಕಂಡಿದ್ದೇನೆ. ರಾಜರ್ಷೇ! ನೀನು ಮಾರ್ಕಂಡೇಯನಂತೆ ಪಿತೃಭಕ್ತನಾಗಿರುವೆ. ಆದುದರಿಂದಲೇ ಮೃತ್ಯುವು ಸೇವಕನಂತೆ ನಿನ್ನ ವಶದಲ್ಲಿದೆ.”
ಇದನ್ನು ಕೇಳಿದ ಗಾಂಗೇಯನು ಪಾಂಡವರಿಗೆ, ಧೃತರಾಷ್ಟ್ರ ಮುಖ್ಯರಿಗೆ ಮತ್ತು ಅಲ್ಲಿದ್ದ ಎಲ್ಲ ಸುಹೃದಯರಿಗೆ ಹೇಳಿದನು: “ನಾನೀಗ ಪ್ರಾಣಪರಿತ್ಯಾಗಮಾಡಲು ಬಯಸಿದ್ದೇನೆ. ನನಗೆ ಅನುಜ್ಞೆಯನ್ನು ನೀಡಬೇಕು. ನೀವು ಸತ್ಯವಂತರಾಗಿರಲು ಪ್ರಯತ್ನಿಸಬೇಕು. ಏಕೆಂದರೆ ಸತ್ಯವೇ ಪರಮ ಬಲ. ಇತರರ ಕುರಿತು ದಯಾವಂತರಾಗಿರಬೇಕು. ಸದೈವ ನಿಯತೇಂದ್ರಿಯರಾಗಿರಬೇಕು. ಬ್ರಹ್ಮಣ್ಯರೂ, ಧರ್ಮಶೀಲರೂ, ತಪೋನೀತರೂ ಆಗಿರಬೇಕು.”
ಹೀಗೆ ಹೇಳಿ ಎಲ್ಲ ಸುಹೃದಯರನ್ನೂ ಆಲಂಗಿಸಿ ಆ ಧೀಮಂತನು ಪುನಃ ಯುಧಿಷ್ಠಿರನಿಗೆ ಈ ಮಾತನ್ನಾಡಿದನು. “ನರಾಧಿಪ! ಬ್ರಾಹ್ಮಣರನ್ನು ಅದರಲ್ಲೂ ವಿಶೇಷವಾಗಿ ಪ್ರಾಜ್ಞ ಆಚಾರ್ಯರನ್ನು ಮತ್ತು ಋತ್ವಿಜರನ್ನು ನೀನು ನಿತ್ಯವೂ ಪೂಜಿಸಬೇಕು!”
ಭೀಷ್ಮಸ್ವರ್ಗಗಮನ
ಅರಿಂದಮ! ಕುರುಗಳಿಗೆಲ್ಲರಿಗೂ ಹೀಗೆ ಹೇಳಿ ಕೌರವ್ಯ ಭೀಷ್ಮ ಶಾಂತನವನು ಮುಹೂರ್ತಕಾಲ ಸುಮ್ಮನಾದನು. ಆ ಮಹಾತ್ಮನು ಆತ್ಮನನ್ನು ಯಥಾಕ್ರಮವಾಗಿ ಧಾರಣೆ[1]ಗಳಲ್ಲಿ ಸ್ಥಾಪಿಸತೊಡಗಿದನು. ಆಗ ಅವನ ಸಂನಿರುದ್ಧ ಪ್ರಾಣಗಳು ಊರ್ಧ್ವಮುಖವಾಗಿ ಹೋಗತೊಡಗಿದವು. ಆ ಮಹಾತ್ಮರ ಮಧ್ಯೆ ಈ ಆಶ್ಚರ್ಯವು ನಡೆಯಿತು. ಶಂತನು ಸುತನು ಶರೀರದ ಯಾವ ಯಾವ ಅಂಗಾಂಗಗಳಲ್ಲಿ ಯೋಗಯುಕ್ತನಾಗುತ್ತಿದ್ದನೋ ಆ ಅಂಗಾಂಗಗಳಿಂದ ಚುಚ್ಚಿದ್ದ ಶರಗಳು ಕೆಳಗೆ ಬೀಳುತ್ತಿದ್ದವು. ಅವರೆಲ್ಲರೂ ನೋಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಅವನು ವಿಶಲ್ಯ (ಬಾಣಗಳು ಚುಚ್ಚದೇ ಇರುವವನು) ನಾದನು. ನೃಪ! ಅದನ್ನು ನೋಡಿದ, ವಾಸುದೇವನೇ ಮೊದಲಾಗಿ ವ್ಯಾಸಾದಿ ಸರ್ವ ಮುನಿಗಳೂ ಕೂಡಿ ಎಲ್ಲರೂ ವಿಸ್ಮಿತರಾದರು. ಎಲ್ಲ ದ್ವಾರಗಳಲ್ಲಿಯೂ ತಡೆಯಲ್ಪಟ್ಟ ಅವನ ಆತ್ಮವು ನೆತ್ತಿಯ ಬ್ರಹ್ಮರಂಧ್ರವನ್ನು ಭೇದಿಸಿಕೊಂಡು ದಿವಕ್ಕೆ ಹಾರಿಹೋಯಿತು. ಜನಾಧಿಪ! ಪ್ರಾಣವು ಭೀಷ್ಮನ ನೆತ್ತಿಯಿಂದ ಮಹಾಉಲ್ಕೆಯಂತೆ ಹೊರಟು ಆಕಾಶವನ್ನು ಸೇರಿ ಕ್ಷಣಾಂತರದಲ್ಲಿ ಅಂತರ್ಧಾನವಾಯಿತು. ನೃಪಶಾರ್ದೂಲ! ಹೀಗೆ ನೃಪ ಶಾಂತನವ, ಭರತರ ಕುಲೋದ್ವಹನು ತನ್ನದೇ ಲೋಕಗಳಲ್ಲಿ ಸೇರಿಕೊಂಡನು. ಅನಂತರ ಮಹಾತ್ಮ ಪಾಂಡವರು, ವಿದುರ ಮತ್ತು ಕೌರವ್ಯ ಯುಯುತ್ಸುವು ಕಟ್ಟಿಗೆಗಳನ್ನು ಮತ್ತು ಅನೇಕ ವಿಧದ ಗಂಧಗಳನ್ನು ತಂದು ಚಿತೆಯನ್ನು ಸಿದ್ಧಪಡಿಸಿದರು. ಇತರರು ಪ್ರೇಕ್ಷಕರಾಗಿದ್ದರು. ಯುಧಿಷ್ಠಿರ ಮತ್ತು ಮಹಾಮತಿ ವಿದುರರು ರೇಷ್ಮೆಯ ವಸ್ತ್ರಗಳಿಂದಲೂ ಪುಷ್ಪಮಾಲೆಗಳಿಂದಲೂ ಕೌರವ ಗಾಂಗೇಯನನ್ನು ಆಚ್ಚಾದಿಸಿ ಚಿತೆಯ ಮೇಲೇರಿಸಿದರು. ಯುಯುತ್ಸುವು ಅವನ ಮೇಲೆ ಉತ್ತಮ ಚತ್ರವನ್ನು ಹಿಡಿದನು. ಭೀಮಸೇನ-ಅರ್ಜುನರು ಶುಭ್ರ ಚಾಮರಗಳನ್ನು ಬೀಸಿದರು. ಮಾದ್ರೀಪುತ್ರರೀರ್ವರು ಕಿರೀಟವನ್ನು ಅವನ ತಲೆಯ ಕಡೆ ಇಟ್ಟರು. ಸ್ತ್ರೀಯರು ತಾಲಪತ್ರದ ಬೀಸಣಿಗೆಯನ್ನು ಹಿಡಿದು ಕುರುಕುಲೋದ್ಭವ ಕೌರವ ನಾಥ ಭೀಷ್ಮನ ಸುತ್ತಲೂ ಬೀಸತೊಡಗಿದರು. ಅನಂತರ ಆ ಮಹಾತ್ಮನ ಪಿತೃಮೇಧ ಸಂಸ್ಕಾರವು ವಿಧಿವತ್ತಾಗಿ ನಡೆಯಿತು. ಯಾಜಕರು ಅಗ್ನಿಯಲ್ಲಿ ಆಹುತಿಗಳನ್ನಿತ್ತರು. ಸಾಮಗರು ಸಾಮಗಳನ್ನು ಹಾಡಿದರು. ಅನಂತರ ಚಂದನ ಮತ್ತು ಕಪ್ಪುಚಂದನ ಕಾಷ್ಠಗಳು ಹಾಗು ಕಾಲಾಗರುವೇ ಮೊದಲಾದ ಉತ್ತಮ ಸುಗಂಧದ್ರವ್ಯಗಳಿಂದ ಗಾಂಗೇಯನನ್ನು ಮುಚ್ಚಿ ಅಗ್ನಿಯನ್ನು ಪ್ರಜ್ವಲಿಸಿ, ಧೃತರಾಷ್ಟ್ರ ಮುಖ್ಯ ನೃಪರು ಅಪಸವ್ಯವನ್ನು ಮಾಡಿದರು. ಕುರುಶ್ರೇಷ್ಠ ಗಾಂಗೇಯನಿಗೆ ಈ ರೀತಿ ಸಂಸ್ಕಾರವನ್ನೆಸಗಿ ಕುರೂದ್ವಹ ಕುರುಸತ್ತಮರು ಋಷಿಜುಷ್ಟ ಭಾಗೀರಥೀ ತೀರಕ್ಕೆ ಹೋದರು. ಅಲ್ಲಿ ಸೇರಿದ್ದ ವ್ಯಾಸ, ನಾರದ, ಅಸಿತ, ಕೃಷ್ಣ, ಭರತ ಸ್ತ್ರೀಯರು ಮತ್ತು ಪೌರ ಜನರು ಅವರನ್ನು ಅನುಸರಿಸಿ ಹೋದರು. ಆ ಕ್ಷತ್ರಿಯ ಶ್ರೇಷ್ಠರೂ ಎಲ್ಲ ಜನರೂ ವಿಧಿವತ್ತಾಗಿ ಮಹಾತ್ಮ ಗಾಂಗೇಯನ ಉದಕ ಕ್ರಿಯಯನ್ನು ನಡೆಸಿದರು. ತನ್ನ ಮಗನ ಉದಕ ಕ್ರಿಯೆಗಳು ಮುಗಿಯಲು ದೇವೀ ಭಾಗೀರಥಿಯು ಶೋಕಲಾಲಸಳಾಗಿ ರೋದಿಸುತ್ತಾ ನೀರಿನಿಂದ ಮೇಲೆದ್ದಳು. ಪರಿವೇದಿಸುತ್ತಿರುವ ಅವಳು ಕೌರವರಿಗೆ ಹೇಳಿದಳು: “ಅನಘರೇ! ನಾನು ಈಗ ಹೇಳುವುದನ್ನು ಕೇಳಿ! ಇವನು ರಾಜವೃತ್ತಿಯಿಂದ ಸಂಪನ್ನನಾಗಿದ್ದನು. ಪ್ರಜ್ಞಾವಂತನಾಗಿದ್ದನು. ಉತ್ತಮ ಕುಲದಲ್ಲಿ ಜನಿಸಿದ್ದನು. ದೃಢವ್ರತನಾಗಿ ಕುರುವೃದ್ಧರನ್ನು ಸತ್ಕರಿಸಿದನು. ಪಿತೃಭಕ್ತನಾಗಿದ್ದನು. ಹಿಂದೆ ಜಾಮದಗ್ನಿ ರಾಮನ ದಿವ್ಯಾಸ್ತ್ರಗಳಿಂದಲೂ ಪರಾಜಿತನಾಗಿರದಿದ್ದ ಈ ಮಹಾವೀರ್ಯನು ಇಂದು ಶಿಖಂಡಿಯಿಂದ ಹತನಾದನು. ಪಾರ್ಥಿವರೇ! ನಿಶ್ಚಯವಾಗಿಯೂ ನನ್ನ ಹೃದಯವು ಲೋಹದಿಂದ ಮಾಡಲ್ಪಟ್ಟಿದೆ! ನನ್ನ ಪ್ರಿಯಪುತ್ರನನ್ನು ಕಳೆದುಕೊಂಡೂ ನನ್ನ ಹೃದಯವು ಇಂದು ಒಡೆಯದೇ ಹಾಗೆಯೇ ಇದೆ! ಕಾಶೀಪುರಿಯ ಸ್ವಯಂವರದಲ್ಲಿ ಸೇರಿದ್ದ ಕ್ಷತ್ರಿಯ ರಾಜರನ್ನು ಏಕರಥನಾಗಿ ಸೋಲಿಸಿ ಆ ಕನ್ಯೆಯರನ್ನು ಇವನು ಅಪಹರಿಸಿದ್ದನು. ಭೂಮಿಯ ಮೇಲೆ ಇವನ ಸಮನಾದ ಬಲಶಾಲಿಯು ಯಾರೂ ಇಲ್ಲದಿರುವಾಗ ಇವನು ಶಿಖಂಡಿಯಿಂದ ಹತನಾದನೆಂದು ಕೇಳಿ ನನ್ನ ಮನಸ್ಸು ಸೀಳಿಹೋಗುತ್ತಿಲ್ಲವಲ್ಲ! ಕುರುಕ್ಷೇತ್ರದ ಯುದ್ಧದಲ್ಲಿ ಮಹಾತ್ಮ ಜಾಮದಗ್ನಿಯನ್ನು ಅತಿಯತ್ನದಿಂದ ಪೀಡಿಸಿದ ಅವನು ಶಿಖಂಡಿಯಿಂದ ಹತನಾದನು!” ಈ ರೀತಿ ಬಹುವಿಧವಾಗಿ ವಿಲಪಿಸುತ್ತಿದ್ದ ಮಹಾನದಿಯನ್ನು ವಿಭು ದಾಮೋದರನು ಆಶ್ವಾಸನೆಯನ್ನಿತ್ತು ಸಮಾಧಾನಗೊಳಿಸಿದನು. “ಭದ್ರೇ! ಶುಭದರ್ಶನೇ! ಸಮಾಧಾನಗೊಳ್ಳು! ಶೋಕಿಸಬೇಡ! ನಿನ್ನ ಪುತ್ರನು ಪರಮ ಸಿದ್ಧಿಯನ್ನು ಪಡೆದಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಶೋಭನೇ! ಶಾಪದೋಷದಿಂದ ಮನುಷ್ಯತ್ವವನ್ನು ಪಡೆದಿದ್ದ ಇವನು ಮಹಾತೇಜಸ್ವಿ ವಸುವು. ಇವನ ಕುರಿತು ಶೋಕಿಸಬಾರದು! ರಣಾಜಿರದಲ್ಲಿ ಕ್ಷತ್ರಧರ್ಮದಂತೆ ಯುದ್ಧಮಾಡುತ್ತಿರುವಾಗ ಇವನು ಧನಂಜಯನಿಂದ ಹತನಾದನು. ಶಿಖಂಡಿಯಿಂದಲ್ಲ. ಮಹಾರಣದಲ್ಲಿ ಆಯುಧಗಳನ್ನು ಮೇಲೆತ್ತಿದ್ದ ಕುರುಶಾರ್ದೂಲ ಭೀಷ್ಮನನ್ನು ಯುದ್ಧದಲ್ಲಿ ಸಂಹರಿಸಲು ಸಾಕ್ಷಾತ್ ಶತಕ್ರತುವೂ ಶಕ್ಯನಿರಲಿಲ್ಲ. ಶುಭಾನನೇ! ನಿನ್ನ ಮಗನು ಸ್ವಚ್ಚಂದದಿಂದ ಸ್ವರ್ಗಕ್ಕೆ ಹೋಗಿದ್ದಾನೆ. ರಣದಲ್ಲಿ ಅವನನ್ನು ಸಂಹರಿಸಲು ಸರ್ವದೇವತೆಗಳೂ ಶಕ್ಯರಿಲ್ಲ!”
[1] ಅಷ್ಟಾಂಗ ಯೋಗಗಳಲ್ಲಿ ಧಾರಣೆಯು ಒಂದು ಅಂಗ. ಧಾರಣ ಎಂದರೆ ಮನಸ್ಸನ್ನು ಸ್ಥಿರಗೊಳಿಸುವ ಸ್ಥಳಗಳು ಎಂದರ್ಥ. ಯಮಾದಿ ಗುಣಯುಕ್ತಸ್ಯ ಮನಸಃ ಸ್ಥಿತಿರಾತ್ಮನಿ| ಧಾರಣೇತ್ಯುಚತೇ ಸದ್ಧಿಃ ಯೋಗಶಾಸ್ತ್ರ ವಿಶಾರದೈಃ|| ನಾಭಿಚಕ್ರೇ ಹೃದಯಪುಂಡರೀಕೇ ಮೂರ್ಧ್ನಿಜ್ಯೋತಿಷಿ ನಾಸಾಗ್ರೇ ಜಿಹ್ವಾಗ್ರೇ ಇತ್ಯೇವಮಾದಿಷು| ಬಾಹ್ಯೇ ವಾ ವಿಷಯೇ ಚಿತ್ತಸ್ಯ ವೃತ್ತಿಮಾತ್ರೇಣ ಬಂಧಃ|| ಅರ್ಥಾತ್ ನಾಭಿ ಚಕ್ರ, ಹೃದಯ, ನಾಲಿಗೆಯ ತುದಿ, ಶಿರಸ್ಸು ಮೊದಲಾದ ಶರೀರದ ಅವಯವಗಳಲ್ಲಿ ಅಥವಾ ಹೊರಗಿನ ಶುಭ ವಸ್ತುಗಳಲ್ಲಿ ಚಿತ್ತವನ್ನು ಸ್ಥಿರವಾಗಿ ನಿಲ್ಲಿಸುವ ಅಭ್ಯಾಸವೇ ಧಾರಣೆ.