ಪಾಂಡವರಿಗೆ ಮರುತ್ತನಿಧಿಲಾಭ ಮತ್ತು ಪರೀಕ್ಷಿತ್ಸಂಜೀವನ
ಹಸ್ತಿನಾಪುರ ನಗರದಲ್ಲಿ ಕೂಡ ವೀರ ಪಾಂಡವರು ಅಭಿಮನ್ಯುವು ಇಲ್ಲದೇ ಶಾಂತಿಯನ್ನು ಪಡೆಯಲಿಲ್ಲ. ಪತಿಶೋಕದಿಂದ ಆರ್ತಳಾಗಿದ್ದ ವಿರಾಟನ ಮಗಳು ಉತ್ತರೆಯು ಅನೇಕ ದಿವಸಗಳು ಊಟವನ್ನೇ ಮಾಡಲಿಲ್ಲ. ಅದೊಂದು ಮಹಾ ಕರುಣಾಜನಕ ವಿಷಯವಾಗಿತ್ತು. ಹಾಗೆಯೇ ಅವಳ ಗರ್ಭದಲ್ಲಿದ್ದ ಭ್ರೂಣವೂ ದಿನ-ದಿನಕ್ಕೆ ಕ್ಷೀಣಿಸತೊಡಗಿತು. ತನ್ನ ದಿವ್ಯದೃಷ್ಟಿಯಿಂದ ಇದನ್ನು ತಿಳಿದ ಧೀಮಂತ ಮಹಾತೇಜಸ್ವೀ ವ್ಯಾಸನು ಆಗಮಿಸಿ ಕುಂತಿ ಮತ್ತು ಪೃಥುಲಲೋಚನೆ ಉತ್ತರೆಗೆ ಶೋಕವನ್ನು ಪರಿತ್ಯಜಿಸುವಂತೆ ಹೇಳಿದನು. “ಯಶಸ್ವಿನೀ! ನಿನ್ನಲ್ಲಿ ಮಹಾತೇಜಸ್ವಿಯಾದ ಮಗನು ಹುಟ್ಟುತ್ತಾನೆ. ವಾಸುದೇವನ ಪ್ರಭಾವದಿಂದ ಮತ್ತು ನನ್ನ ಆಶೀರ್ವಾದದಿಂದ ಇವನು ಪಾಂಡವರ ನಂತರ ಮೇದಿನಿಯನ್ನು ಪಾಲಿಸುತ್ತಾನೆ.”
ವ್ಯಾಸನು ಧರ್ಮರಾಜನ ಸಮಕ್ಷಮದಲ್ಲಿ ಧನಂಜಯನನ್ನು ನೋಡಿ ಅವನಿಗೆ ಸಂತೋಷವನ್ನುಂಟುಮಾಡುವಂಥಹ ಮಾತುಗಳನ್ನಾಡಿದನು: “ಮಹಾಬಾಹೋ! ನಿನಗೆ ಮಹಾಮನಸ್ವಿಯಾದ ಮೊಮ್ಮಗನು ಜನಿಸುತ್ತಾನೆ. ಅವನು ಸಾಗರಪರ್ಯಂತ ಈ ಪೃಥ್ವಿಯನ್ನು ಪಾಲಿಸುತ್ತಾನೆ. ಆದುದರಿಂದ ಶೋಕವನ್ನು ತ್ಯಜಿಸು. ಇದು ಸತ್ಯವಾಗುತ್ತದೆ ಎನ್ನುವುದರ ಕುರಿತು ವಿಚಾರಿಸಬೇಡ. ವೃಷ್ಣಿವೀರ ಕೃಷ್ಣನು ಹಿಂದೆ ಏನೆಲ್ಲ ಹೇಳಿದ್ದನೋ ಅವೆಲ್ಲವೂ ಹಾಗೆಯೇ ಆಗುತ್ತದೆ. ಅದರಲ್ಲಿ ವಿಚಾರಮಾಡುವಂಥದ್ದೇನೂ ಇಲ್ಲ. ತಾವೇ ಗೆದ್ದ ವಿಬುಧರ ಅಕ್ಷಯ ಲೋಕಗಳಿಗೆ ಅಭಿಮನ್ಯು ಮತ್ತು ಅನ್ಯ ಕುರುಗಳು ಹೋಗಿದ್ದಾರೆ. ಆದುದರಿಂದ ನೀನು ಅವರ ಕುರಿತು ಶೋಕಿಸಬಾರದು.”
ಹೀಗೆ ಪಿತಾಮಹನು ಮಾತನಾಡಲು ಧರ್ಮಾತ್ಮ ಧನಂಜಯನು ಶೋಕವನ್ನು ತೊರೆದು ಹೃಷ್ಟರೂಪನಾದನು. ಉತ್ತರೆಯ ಗರ್ಭವೂ ಕೂಡ ಯಥಾಕಾಲದಲ್ಲಿ ಶುಕ್ಲಪಕ್ಷದ ಚಂದ್ರನಂತೆ ಬೆಳೆಯಿತು. ಆಗ ವ್ಯಾಸನು ನೃಪ ಧರ್ಮಾತ್ಮಜನಿಗೆ ಅಶ್ವಮೇಧದ ಕುರಿತು ಪ್ರೋತ್ಸಾಹಿಸಿ ಅಲ್ಲಿಯೇ ಅಂತರ್ಧಾನನಾದನು. ಮೇಧಾವೀ ಧರ್ಮರಾಜನೂ ಕೂಡ ವ್ಯಾಸನ ಆ ಮಾತುಗಳನ್ನು ಕೇಳಿ ಐಶ್ವರ್ಯವನ್ನು ತರಲು ಹಿಮಾಲಯಕ್ಕೆ ಹೋಗುವ ಕುರಿತು ಮನಸ್ಸುಮಾಡಿದನು. ದ್ವೈಪಾಯನನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ತನ್ನ ಸಹೋದರರೆಲ್ಲರನ್ನೂ - ಅರ್ಜುನ, ಭೀಮಸೇನ ಮತ್ತು ಮಾದ್ರೀಪುತ್ರ ಯಮಳರನ್ನು – ಕರೆಯಿಸಿ ಕಾಲೋಚಿತವಾದ ಈ ಮಾತುಗಳನ್ನಾಡಿದನು. “ವೀರರೇ! ಧೀಮಂತ ಮಹಾತ್ಮ ಕೃಷ್ಣನು ಕುರುಗಳ ಹಿತಕಾಮ ಮತ್ತು ಸೌಹಾರ್ದತೆಗಳಿಂದ ಹೇಳಿದ ಈ ಮಾತುಗಳನ್ನು ನಾವು ಕೇಳಿದೆವು. ಸುಹೃದಯರ ಅಭ್ಯುದಯವನ್ನೇ ಬಯಸುವ ಮಹಾ ತಪೋವೃದ್ಧ ಧರ್ಮಶೀಲ ಗುರು ಅದ್ಭುತಕರ್ಮಿ ವ್ಯಾಸ, ಮಹಾಪ್ರಾಜ್ಞ ಬೀಷ್ಮ ಮತ್ತು ಧೀಮಂತ ಗೋವಿಂದ ಇವರು ನೀಡಿರುವ ಸಲಹೆಗಳನ್ನು ಸ್ಮರಿಸಿ, ಅವುಗಳನ್ನು ಕಾರ್ಯರೂಪದಲ್ಲಿ ತರಲು ಇಚ್ಛಿಸಿದ್ದೇನೆ. ಅವರು ನೀಡಿದ ಸಲಹೆಗಳೆಲ್ಲವೂ ನಮಗೆ ಭವಿಷ್ಯ-ವರ್ತಮಾನಗಳೆರಡರಲ್ಲೂ ಹಿತವನ್ನೇ ಉಂಟುಮಾಡುತ್ತವೆ. ಬ್ರಹ್ಮವಾದಿ ವ್ಯಾಸನು ಹೇಳಿದಂತೆ ಮಾಡುವುದರಲ್ಲಿ ನಮ್ಮ ಕಲ್ಯಾಣವಿದೆ. ಈ ಸಮಯದಲ್ಲಿ ಭೂಮಂಡಲದಲ್ಲಿರುವ ಎಲ್ಲ ರಾಜ್ಯಗಳೂ ಐಶ್ವರ್ಯರಹಿತವಾಗಿವೆ. ಆದುದರಿಂದ ವ್ಯಾಸನು ಮರುತ್ತನ ಬಹು ಧನದ ಕುರಿತಾಗಿ ಹೇಳಿದ್ದನು. ನೀವೆಲ್ಲರೂ ಮರುತ್ತನು ಇಟ್ಟಿರುವ ಐಶ್ವರ್ಯವು ಸಾಕೆಂದು ಮತ್ತು ಅದನ್ನು ತರುವ ಸಾಮರ್ಥ್ಯವಿರುವುದೆಂದು ತಿಳಿದರೆ ಅದನ್ನು ನಾವು ತರೋಣ. ಭೀಮ! ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು?”
ನೃಪತಿಯು ಹೀಗೆ ಹೇಳಲು ಭೀಮಸೇನನು ಕೈಮುಗಿದು ನೃಪಶ್ರೇಷ್ಠನಿಗೆ ಇಂತೆಂದನು: “ಮಹಾಬಾಹೋ! ವ್ಯಾಸನು ಹೇಳಿದ ವಿತ್ತವನ್ನು ತರುವುದರ ಕುರಿತಾಗಿ ನೀನು ಹೇಳಿದ ಮಾತುಗಳು ನನಗೆ ರುಚಿಸಿವೆ. ಹುಗಿದಿಟ್ಟಿರುವ ಆ ಧನವನ್ನು ಪಡೆದುಕೊಂಡುದೇ ಆದರೆ ಕಾರ್ಯವು ಆದಂತೆಯೇ ಎಂದು ನನ್ನ ಅಭಿಪ್ರಾಯ. ಮಹಾತ್ಮ ಗಿರೀಶನಿಗೆ ಶಿರಸಾ ನಮಸ್ಕರಿಸಿ ನಾವು ಆ ಧನವನ್ನು ತರೋಣ. ನಿನಗೆ ಮಂಗಳವಾಗಲಿ! ಕಪರ್ದಿನಿಯನ್ನು ಅರ್ಚಿಸು. ಮಾತು-ಮನಸ್ಸು-ಕ್ರಿಯೆಗಳ ಮೂಲಕ ಆ ವಿಭು ದೇವದೇವೇಶನನ್ನೂ ಅವನ ಅನುಚರರನ್ನೂ ಪ್ರಸನ್ನಗೊಳಿಸಿ ನಾವು ಆ ಧನವನ್ನು ನಮ್ಮದಾಗಿಸಿಕೊಳ್ಳೋಣ. ವೃಷಭದ್ವಜನನ್ನು ಪ್ರಸನ್ನಗೊಳಿಸಿದರೆ ಆ ದ್ರವ್ಯವನ್ನು ರಕ್ಷಿಸುತ್ತಿರುವ ಅವನ ರೌದ್ರದರ್ಶನ ಕಿಂಕರರೂ ನಮ್ಮ ವಶರಾಗುತ್ತಾರೆ.”
ಭೀಮನಾಡಿದ ಆ ಮಾತುಗಳನ್ನು ಕೇಳಿ ರಾಜಾ ಧರ್ಮಾತ್ಮಜನು ಅತೀವ ಹರ್ಷಿತನಾದನು. ಅರ್ಜುನ ಪ್ರಮುಖಾದಿಗಳೂ ಕೂಡ ಸಂತೋಷದಿಂದ ಹಾಗೆಯೇ ಆಗಲೆಂದು ಅನುಮೋದಿಸಿದರು. ಪಾಂಡವರೆಲ್ಲರೂ ಆ ರತ್ನಗಳನ್ನು ತರಲು ನಿಶ್ಚಯಿಸಿ ಶುಭನಕ್ಷತ್ರದ ಶುಭದಿನದಲ್ಲಿ ಸೇನೆಗಳಿಗೆ ಸಜ್ಜಾಗುವಂತೆ ಆಜ್ಞಾಪಿಸಿದರು. ಆಗ ಪಾಂಡುಸುತರು ಎಲ್ಲವಕ್ಕೂ ಮೊದಲು ಸುರಶ್ರೇಷ್ಠ ಮಹೇಶ್ವರನನ್ನು ಅರ್ಚಿಸಿ ಬ್ರಾಹ್ಮಣರ ಸ್ವಸ್ತಿವಾಚನಗಳೊಂದಿಗೆ ಹೊರಟರು. ಅವರು ಮಹಾತ್ಮ ಮಹೇಶ್ವರನನ್ನು ಮೋದಕ, ಪಾಯಸ, ಮಾಂಸಪೂಪಗಳಿಂದ ತೃಪ್ತಿಪಡೆಸಿ ಅವನ ಆಶೀರ್ವಾದವನ್ನು ಪಡೆದು ಅತ್ಯಂತ ಸಂತೋಷದಿಂದ ಪ್ರಯಾಣಿಸಿದರು. ಅವರು ಹೊರಟಾಗ ಪ್ರಹೃಷ್ಟಮನಸ್ಕರಾದ ದ್ವಿಜಾಗ್ರರೂ ನಾಗರೀಕರೂ ಅವರಿಗೆ ಶುಭ-ಮಂಗಲಗಳನ್ನು ಕೋರಿದರು. ಅಗ್ನಿಸಹಿತ ಬ್ರಾಹ್ಮಣರನ್ನು ಪ್ರದಕ್ಷಿಣೆಮಾಡಿ ಶಿರಬಾಗಿ ನಮಸ್ಕರಿಸಿ ಆ ಪಾಂಡುನಂದನರು ಹೊರಟರು. ಪುತ್ರಶೋಕದಿಂದ ಬಳಲುತ್ತಿದ್ದ ರಾಜಾ ಧೃತರಾಷ್ಟ್ರ, ಅವನ ಪತ್ನಿ ಮತ್ತು ಪೃಥುಲಲೋಚನೆ ಪೃಥೆಯ ಅನುಜ್ಞೆಯನ್ನು ಅವರು ಪಡೆದಿದ್ದರು. ಧೃತರಾಷ್ಟ್ರನ ಮಗ ಕೌರವ್ಯ ಯುಯುತ್ಸುವನ್ನು ರಾಜ್ಯದಲ್ಲಿರಿಸಿ, ಪೌರರೂ, ಮನೀಷಿಗಳೂ ಮತ್ತು ಬ್ರಾಹ್ಮಣರೂ ಗೌರವಿಸುತ್ತಿರಲು ಅವರು ಪ್ರಯಾಣಮಾಡಿದರು.
ಅನಂತರ ಸಂತೋಷದಿಂದ ಅವರು ಹರ್ಷಿತ ನರ-ವಾಹನಗಳೊಂದಿಗೆ ಮಹಾ ರಥಘೋಷಗಳಿಂದ ಭೂಮಿಯನ್ನು ಮೊಳಗಿಸುತ್ತಾ ಪ್ರಯಾಣಿಸಿದರು. ಸೂತ-ಮಾಗಧ-ಬಂದಿಗಳು ಸ್ತುತಿಗಳಿಂದ ಪ್ರಶಂಸಿಸುತ್ತಿರಲು ಪಾಂಡವರು ಆದಿತ್ಯರು ತಮ್ಮ ಕಿರಣಗಳಿಂದ ಪ್ರಕಾಶಿಸುವಂತೆ ತಮ್ಮ ಸೈನ್ಯಗಳಿಂದ ಆವೃತರಾಗಿ ಪ್ರಕಾಶಿಸುತ್ತಿದ್ದರು. ನೆತ್ತಿಯ ಮೇಲೆ ಬೆಳ್ಗೊಡೆಯನ್ನು ಧರಿಸಿದ್ದ ಯುಧಿಷ್ಠಿರನು ಆಗ ಹುಣ್ಣಿಮೆಯಂದು ಬೆಳದಿಂಗಳಿನಿಂದ ಆವೃತನಾದ ಚಂದ್ರನಂತೆಯೇ ಶೋಭಿಸುತ್ತಿದ್ದನು. ಮಾರ್ಗದಲ್ಲಿ ಆ ಪುರುಷರ್ಷಭ ಪಾಂಡವನು ಪ್ರಹೃಷ್ಟ ಜನರು ನ್ಯಾಯೋಚಿತವಾಗಿ ಮಾಡುತ್ತಿದ್ದ ಜಯಕಾರ-ಆಶೀರ್ವಾದಗಳನ್ನು ಯಥಾವತ್ತಾಗಿ ಸ್ವೀಕರಿಸಿದನು. ರಾಜನನ್ನು ಅನುಸರಿಸಿ ಹೋಗುತ್ತಿದ್ದ ಸೈನಿಕರ ಹಲಾಹಲ ಶಬ್ಧವು ಆಕಾಶವನ್ನು ಸ್ತಬ್ಧಗೊಳಿಸುತ್ತಿತ್ತು. ವನ-ಉಪವನ-ನದಿ-ಸರೋವರಗಳನ್ನು ದಾಟಿ ಮಹಾರಾಜನು ಗಿರಿಯನ್ನು ತಲುಪಿದನು. ಯಾವ ಪ್ರದೇಶದಲ್ಲಿ ಆ ಉತ್ತಮ ದ್ರವ್ಯವಿತ್ತೋ ಅಲ್ಲಿ ಶುಭಕರ ಸಮತಟ್ಟು ಪ್ರದೇಶದಲ್ಲಿ ರಾಜಾ ಪಾಂಡವನು ತಪಸ್ಸು-ವಿದ್ಯೆ-ಇಂದ್ರಿಯನಿಗ್ರಹಗಳಿಂದ ಯುಕ್ತರಾದ ಬ್ರಾಹ್ಮಣರನ್ನೂ ವೇದವೇದಾಂಗಪಾರಗ ಪುರೋಹಿತನನ್ನೂ ಮುಂದೆ ಮಾಡಿಕೊಂಡು ಸೈನಿಕರೊಂದಿಗೆ ಬಿಡಾರಹೂಡಿದನು. ಪುರೋಹಿತ ಸಹಿತ ಬ್ರಾಹ್ಮಣರು ಮೊದಲು ಶಾಂತಿಕರ್ಮಗಳನ್ನು ಮಾಡಿ ಯಥಾನ್ಯಾಯವಾಗಿ ರಾಜಾ ಯುಧಿಷ್ಠಿರನ ಬಿಡಾರವನ್ನು ಸುತ್ತುವರೆದು ಉಳಿದುಕೊಂಡರು. ಯಥಾವಿಧಿಯಾಗಿ ರಾಜನನ್ನೂ ಅಮಾತ್ಯರನ್ನೂ ಮಧ್ಯದಲ್ಲಿರಿಸಿ ದ್ವಿಜರು ಆರು ಮಾರ್ಗಗಳಲ್ಲಿ ಒಂಭತ್ತು ನಿವೇಶನಗಳ ಗುಂಪುಗಳನ್ನು ರಚಿಸಿದರು. ಮದಿಸಿದ ಆನೆಗಳಿಗೂ ಯಥಾವಿಧಿಯಾಗಿ ನಿವೇಶನಗಳನ್ನು ನಿರ್ಮಿಸಿ ರಾಜೇಂದ್ರನು ಬ್ರಾಹ್ಮಣರಿಗೆ ಇಂತೆಂದನು: “ದ್ವಿಜಶ್ರೇಷ್ಠರೇ! ಈ ಕಾರ್ಯವನ್ನು ಯಾವ ಶುಭ ನಕ್ಷತ್ರ-ದಿನದಲ್ಲಿ ಮಾಡಬೇಕೆಂದು ನೀವು ಅಭಿಪ್ರಾಯಪಡುತ್ತೀರೋ ಆಗಲೇ ಮಾಡಬೇಕು. ಇಲ್ಲಿಯೇ ಹೆಚ್ಚು ಸಮಯ ಉಳಿಯುವಂತಾಗಿ ನಮ್ಮ ಕಾಲವು ವ್ಯರ್ಥವಾಗದ ರೀತಿಯಲ್ಲಿ ನಂತರದ ಕರ್ಮಗಳನ್ನು ಮಾಡಬೇಕು.”
ರಾಜನ ಆ ಮಾತನ್ನು ಕೇಳಿದ ಪುರೋಹಿತನೊಡಗೂಡಿದ ಬ್ರಾಹ್ಮಣರು ಹೃಷ್ಟರಾಗಿ ಧರ್ಮರಾಜನ ಪ್ರಿಯವನ್ನೇ ಬಯಸಿ ಈ ಮಾತುಗಳನ್ನಾಡಿದರು: “ರಾಜನ್! ಇಂದೇ ಪವಿತ್ರ ನಕ್ಷತ್ರ ಮತ್ತು ಪುಣ್ಯ ದಿನವಾಗಿದೆ. ಆದುದರಿಂದ ಇಂದಿನಿಂದಲೇ ನಾವು ಶ್ರೇಷ್ಠತಮ ಕ್ರಿಯೆಗಳನ್ನು ಮಾಡಲು ಪ್ರಯತ್ನಿಸುತ್ತೇವೆ. ಇಂದು ನಾವು ಕೇವಲ ನೀರನ್ನು ಕುಡಿಯುತ್ತೇವೆ. ನೀನೂ ಕೂಡ ಇಂದು ಉಪವಾಸದಿಂದಿರಬೇಕು.”
ದ್ವಿಜಸತ್ತಮರ ಆ ಮಾತನ್ನು ಕೇಳಿ ನರೇಂದ್ರರು ಉಪವಾಸದಲ್ಲಿದ್ದುಕೊಂಡು ದರ್ಭೆಯ ಹಾಸಿನ ಮೇಲೆ ಮಲಗಿ ಆ ರಾತ್ರಿಯನ್ನು ಕಳೆದರು. ಆಗ ಅವರು ಯಜ್ಞದಲ್ಲಿ ಪ್ರಜ್ವಲಿಸುವ ಹವ್ಯವಾಹನರಂತೆಯೇ ಕಾಣುತ್ತಿದ್ದರು. ವಿಪ್ರರ ಸುಮಧುರ ಮಾತುಗಳನ್ನು ಕೇಳುತ್ತಲೇ ಮಹಾತ್ಮರಿಗೆ ಆ ರಾತ್ರಿಯು ಕಳೆದು ಹೋಯಿತು. ನಿರ್ಮಲ ಪ್ರಭಾತವಾಗಲು ದ್ವಿಜರ್ಷಭರು ನರಾಧಿಪ ಧರ್ಮಸುತನಿಗೆ ಈ ಮಾತುಗಳನ್ನಾಡಿದರು: “ನೃಪತೇ! ಇಂದು ಮೊದಲು ಮಹಾತ್ಮ ತ್ರ್ಯಂಬಕನಿಗೆ ಬಲಿಯನ್ನು ಸಮರ್ಪಿಸು. ಇದರ ನಂತರ ನಮ್ಮ ಕಾರ್ಯಸಿದ್ಧಿಗಾಗಿ ಪ್ರಯತ್ನಿಸೋಣ.” ಬ್ರಾಹ್ಮಣರ ಆ ಮಾತನ್ನು ಕೇಳಿ ಯುಧಿಷ್ಠಿರನು ಯಥಾನ್ಯಾಯವಾಗಿ ಗಿರೀಶನಿಗೆ ಪೂಜೆ-ಬಲಿಗಳನ್ನು ಅರ್ಪಿಸಿದನು. ಪುರೋಹಿತರು ವಿಧಿಪೂರ್ವಕವಾಗಿ ಸಂಸ್ಕರಿಸಿದ ಅಗ್ನಿಯನ್ನು ತುಪ್ಪದಿಂದ ತೃಪ್ತಿಗೊಳಿಸಿ, ಮಂತ್ರಪೂರ್ವಕವಾಗಿ ಚರುವನ್ನು ಸಿದ್ಧಗೊಳಿಸಿ ತಂದರು. ವೇದಪಾರಂಗತ ದ್ವಿಜರು ಮಂತ್ರಪೂತ ಪುಷ್ಪಗಳನ್ನು ಹಿಡಿದು ಮೋದಕ-ಪಾಯಸ-ಮಾಂಸಗಳಿಂದ, ಉಚ್ಚಧ್ವನಿಯ ಮಂತ್ರಗಳಿಂದ, ಶಿವನಿಗೆ ಪ್ರಿಯವಾದ ಎಲ್ಲ ವಿಚಿತ್ರ ಪುಷ್ಪ-ಅರಳುಗಳಿಂದ ಬಲಿಯನ್ನು ಸಮರ್ಪಿಸಿದರು. ಅನಂತರ ಶಿವನ ಕಿಂಕರರಿಗೆ ಉತ್ತಮ ಬಲಿಯನ್ನಿತ್ತರು. ಯಕ್ಷೇಂದ್ರ ಕುಬೇರನಿಗೆ, ಮಣಿಭದ್ರನಿಗೆ ಮತ್ತು ಹಾಗೆಯೇ ಇತರ ಯಕ್ಷ-ಭೂತಾಧಿಪತಿಗಳಿಗೆ ಎಳ್ಳನ್ನದಿಂದಲೂ, ಮಾಂಸದಿಂದಲೂ, ಎಳ್ಳಿನಿಂದ ಕೂಡಿದ ನೀರಿನಿಂದಲೂ ಬಲಿಯನ್ನು ಅರ್ಪಿಸಿದರು. ದೇವದೇವನ ಆ ಸ್ಥಾನವು ಅತೀವವಾಗಿ ಶೋಭಿಸುತ್ತಿತ್ತು. ರುದ್ರನ ಮತ್ತು ಅವನ ಗಣಗಳೆಲ್ಲರ ಪೂಜೆಯನ್ನು ಮಾಡಿ ನೃಪ ಯುಧಿಷ್ಠಿರನು ವ್ಯಾಸನನ್ನು ಮುಂದಿರಿಸಿಕೊಂಡು ರತ್ನನಿಧಿಯ ಕಡೆ ನಡೆದನು. ವಿಚಿತ್ರ ಪುಷ್ಪಗಳಿಂದ, ಅಪೂಪಗಳಿಂದ ಮತ್ತು ಎಳ್ಳನ್ನದಿಂದ ಧನಾಧ್ಯಕ್ಷನನ್ನೂ, ಶಂಖಗಳೇ ಮೊದಲಾದ ನಿಧಿಗಳನ್ನೂ, ಸರ್ವ ನಿಧಿಪಾಲಕರನ್ನೂ ನಮಸ್ಕರಿಸಿ ಪೂಜಿಸಿ, ದ್ವಿಜಾಗ್ರರನ್ನೂ ಅರ್ಚಿಸಿ, ಅವರ ಸ್ವಸ್ತಿವಾಚನ-ಪುಣ್ಯಾಹಘೋಷಗಳೊಂದಿಗೆ, ತೇಜೋನ್ವಿತನಾಗಿ ವೀರ್ಯವಾನ್ ಕುರುಶ್ರೇಷ್ಠ ಯುಧಿಷ್ಠಿರನು ಪ್ರೀತಮನಸ್ಕನಾಗಿ ಆ ನಿಧಿಯನ್ನು ಅಗೆಯತೊಡಗಿದನು. ಆಗ ಧರ್ಮರಾಜ ಯುಧಿಷ್ಠಿರನು ಸಹಸ್ರಾರು ಬಹು ಆಕಾರಗಳ ಮನೋಹರ ದೊಡ್ಡ ಮತ್ತು ಸಣ್ಣ ಪಾತ್ರೆಗಳನ್ನೂ, ತಂಬಿಗೆಗಳನ್ನೂ, ಸುವರ್ಣಮಯ ಕಡಾಯಿ-ಕಲಶ-ಶರಾವೆಗಳನ್ನೂ ಮೇಲೆತ್ತಿದನು, ರಕ್ಷಣೆಗಾಗಿ ಅವುಗಳನ್ನು ಮಹಾ ಸಂದೂಕಗಳಲ್ಲಿ ಇಟ್ಟರು. ಅಂಥಹ ಕೆಲವು ಸಂದೂಕಗಳನ್ನು ಮರದ ದೊಣ್ಣೆಯ ಎರಡೂ ತುದಿಗಳಿಗೆ ಕಟ್ಟಿ ಎತ್ತಿ ತೆಗೆಯುತ್ತಿದ್ದರು. ಅವುಗಳನ್ನು ಕೊಂಡೊಯ್ಯಲು ಪಾಂಡುಪುತ್ರನ ಅರವತ್ತು ಲಕ್ಷ ಒಂಟೆಗಳೂ, ಒಂದು ಕೋಟಿ ಎಪ್ಪತ್ತು ಲಕ್ಷ ಕುದುರೆಗಳೂ ಅಲ್ಲಿ ಸಿದ್ಧವಾಗಿದ್ದವು. ಒಂದು ಲಕ್ಷ ಆನೆಗಳೂ, ಒಂದು ಲಕ್ಷ ಬಂಡಿಗಳೂ, ಒಂದು ಲಕ್ಷ ರಥಗಳೂ, ಒಂದು ಲಕ್ಷ ಹೆಣ್ಣಾನೆಗಳೂ, ಮತ್ತು ಲೆಕ್ಕವಿಲ್ಲದಷ್ಟು ಕತ್ತೆಗಳೂ, ಮನುಷ್ಯರೂ ಅಲ್ಲಿದ್ದರು[1]. ಆಗ ಯುಧಿಷ್ಠಿರನಿಗೆ ದೊರಕಿದ ಆ ವಿತ್ತದ ಪ್ರಮಾಣವು ೧೬ ಕೋಟಿ ೮ ಲಕ್ಷ ೨೪ ಸಾವಿರ ಭಾರ[2] ಅಳತೆಯಾಗಿತ್ತು. ಈ ದ್ರವ್ಯಗಳನ್ನು ಪಡೆದುಕೊಂಡು ಪಾಂಡವನು ಪುನಃ ಮಹಾದೇವನನ್ನು ಅರ್ಚಿಸಿ, ಮರಳಿ ನಾಗಾಹ್ವಯ ಪುರದ ಕಡೆ ಪ್ರಯಾಣಿಸಿದನು. ದ್ವೈಪಾಯನನ ಅನುಮತಿಯನ್ನು ಪಡೆದು ಪುರೋಹಿತನನ್ನು ಮುಂದಿರಿಸಿಕೊಂಡು ಆ ಪುರುಷರ್ಷಭನು ಪ್ರತಿ ಗಾವುದ[3] ದೂರದಲ್ಲಿಯೂ ವಿಶ್ರಾಂತಿಗಾಗಿ ಬೀಡು ಬಿಡುತ್ತಿದ್ದನು. ದ್ರವ್ಯಧನದ ಭಾರದಿಂದ ಪೀಡಿತರಾಗಿದ್ದರೂ ಆ ಮಹಾ ಸೇನೆಯು ಕುರೂದ್ವಹರನ್ನು ಹರ್ಷಗೊಳಿಸುತ್ತಾ ಪುರಾಭಿಮುಖವಾಗಿ ಪ್ರಯಾಣಬೆಳೆಸಿತು.
ಅದೇ ಸಮಯದಲ್ಲಿ ವೀರ್ಯವಾನ್ ವಾಸುದೇವನೂ ಕೂಡ ವೃಷ್ಣಿಗಳೊಂದಿಗೆ ವಾರಣಸಾಹ್ವಯ ಪುರಿಗೆ ಆಗಮಿಸಿದನು. ಧರ್ಮಪುತ್ರನು ಯಾವ ಸಮಯದಲ್ಲಿ ಅಶ್ವಮೇಧವು ನಡೆಯುತ್ತದೆ ಎಂದು ಹೇಳಿದ್ದನೋ ಅದನ್ನು ತಿಳಿದುಕೊಂಡೇ ಪುರುಷರ್ಷಭ ಕೃಷ್ಣನು ತನ್ನ ಪುರಿ ದ್ವಾರಕೆಗೆ ತೆರಳಿದ್ದನು. ಈಗ ಅವನು ರುಕ್ಮಿಣಿಯ ಮಗ ಪ್ರದ್ಯುಮ್ನ, ಯುಯುಧಾನ ಸಾತ್ಯಕಿ, ಚಾರುದೇಷ್ಣ, ಸಾಂಬ, ಗದ, ಕೃತವರ್ಮ, ಸಾರಣ, ವೀರ ನಿಶಠ ಮತ್ತು ಉಲ್ಮುಕರೊಡನೆ ಬಲದೇವನನ್ನು ಮುಂದೆಮಾಡಿಕೊಂಡು ಸುಭದ್ರೆಯ ಸಹಿತ ಆಗಮಿಸಿದನು. ದ್ರೌಪದೀ, ಉತ್ತರಾ, ಹಾಗೂ ಪೃಥಾ ಕುಂತಿಯನ್ನು ನೋಡಲೋಸುಗ ಮತ್ತು ಪತಿಗಳನ್ನು ಕಳೆದುಕೊಂಡ ಕ್ಷತ್ರಿಯ ಸ್ತ್ರೀಯರನ್ನು ಸಮಾಧಾನಗೊಳಿಸಲು ಅವನು ಆಗಮಿಸಿದನು. ಅವರು ಆಗಮಿಸಿದುದನ್ನು ನೋಡುತ್ತಲೇ ಮಹೀಪತಿ ಧೃತರಾಷ್ಟ್ರ ಮತ್ತು ಮಹಾಮನಸ್ವಿ ವಿದುರರು ಅವರನ್ನು ಯಥಾನ್ಯಾಯವಾಗಿ ಸ್ವಾಗತಿಸಿದರು. ವಿದುರ ಮತ್ತು ಯುಯುತ್ಸುವುನಿಂದ ಸತ್ಕೃತನಾದ ಪುರುಷರ್ಷಭ ಮಹಾತೇಜಸ್ವಿ ಕೃಷ್ಣನು ಅಲ್ಲಿಯೇ ಸ್ವಲ್ಪ ಸಮಯ ಉಳಿದುಕೊಂಡಿದ್ದನು. ಆ ವೃಷ್ಣಿವೀರರು ಅಲ್ಲಿ ಉಳಿದುಕೊಂಡಿರುವಾಗಲೇ ಜನಮೇಜಯನ ತಂದೆ ಪರವೀರಹ ಪರಿಕ್ಷಿತನು ಹುಟ್ಟಿದನು. ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಆ ರಾಜನು ಶವದಂತೆ ನಿಶ್ಚೇಷ್ಟನಾಗಿ ಹುಟ್ಟಿ, ಎಲ್ಲರ ಹರ್ಷ-ಶೋಕಗಳನ್ನು ಹೆಚ್ಚಿಸಿದನು. ಅವನ ಜನನದಿಂದ ಹರ್ಷಗೊಂಡ ಜನರ ಸಿಂಹನಾದವು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತು. ಮರುಕ್ಷಣದಲ್ಲಿಯೇ ಪುನಃ ಅದು ಶಾಂತವಾಗಿಬಿಟ್ಟಿತು. ಆಗ ಅತಿ ಅವಸರದಿಂದ ಇಂದ್ರಿಯ-ಮನಸ್ಸುಗಳಲ್ಲಿ ವ್ಯಥಿತನಾಗಿದ್ದ ಕೃಷ್ಣನು ಸಾತ್ಯಕಿಯೊಡನೆ ಅಂತಃಪುರವನ್ನು ಪ್ರವೇಶಿಸಿದನು. ಅವಸರದಲ್ಲಿ ಬರುತ್ತಿದ್ದ ಕೃಷ್ಣನನ್ನು ನೋಡಿ ಅವನ ಸೋದರತ್ತೆ ಕುಂತಿಯು ವಾಸುದೇವನಿಗೆ “ಓಡಿ ಹೋಗು!” ಎಂದು ಪುನಃ ಪುನಃ ಕೂಗಿಕೊಳ್ಳುತ್ತಿದ್ದಳು. ಅವಳ ಹಿಂದೆ ದ್ರೌಪದಿ, ಯಶಸ್ವಿನೀ ಸುಭದ್ರೆ ಮತ್ತು ಬಾಂಧವ ಸ್ತ್ರೀಯರು ಕರುಣಾಜನಕವಾಗಿ ರೋದಿಸುತ್ತಿದ್ದರು.
ಆಗ ರಾಜಸುತೆ ಕುಂತಿಯು ಕೃಷ್ಣನ ಬಳಿಸಾರಿ ಕಣ್ಣೀರುಸುರಿಸುತ್ತಾ ಗದ್ಗದ ಧ್ವನಿಯಲ್ಲಿ ಹೇಳಿದಳು: “ವಾಸುದೇವ! ನಿನ್ನಿಂದಾಗಿ ದೇವಕಿಯು ಉತ್ತಮ ಪುತ್ರವತಿಯೆನಿಸಿಕೊಂಡಳು! ನೀನೇ ನಮಗೆ ಗತಿ, ಆಧಾರಭೂತ. ಈ ಕುಲದ ರಕ್ಷಣೆಯೂ ನಿನ್ನ ಅಧೀನದಲ್ಲಿದೆ. ನಿನ್ನ ಸೋದರಳಿಯನ ಮಗನಾದ ಇವನು ಅಶ್ವತ್ಥಾಮನಿಂದ ಹತನಾಗಿ ಹುಟ್ಟಿದ್ದಾನೆ. ಇವನನ್ನು ಬದುಕಿಸು! ಅಶ್ವತ್ಥಾಮನು ಐಷೀಕವನ್ನು ಬ್ರಹ್ಮಾಸ್ತ್ರವನ್ನಾಗಿ ಅಭಿಮಂತ್ರಿಸಿ ಪ್ರಯೋಗಿಸಿದಾಗ “ಸತ್ತು ಹುಟ್ಟಿದವನನ್ನು ನಾನು ಬದುಕಿಸುತ್ತೇನೆ” ಎಂದು ನೀನು ಪ್ರತಿಜ್ಞೆಯನ್ನು ಮಾಡಿದ್ದೆ. ಹಾಗೆಯೇ ಇವನು ಮೃತನಾಗಿಯೇ ಹುಟ್ಟಿದ್ದಾನೆ ನೋಡು! ಉತ್ತರೆ, ಸುಭದ್ರೆ, ದ್ರೌಪದೀ, ನಾನು, ಧರ್ಮಪುತ್ರ, ಭೀಮ, ಫಲ್ಗುನ, ನಕುಲ ಮತ್ತು ಸಹದೇವರನ್ನು ನೋಡು! ನಮ್ಮೆಲ್ಲರನ್ನು ನೀನು ಈ ದುಃಖದಿಂದ ಪಾರುಮಾಡಬೇಕು! ಪಾಂಡವರ ಮತ್ತು ನನ್ನ ಪ್ರಾಣಗಳೂ ಹಾಗೆಯೇ ಪಾಂಡು ಮತ್ತು ನನ್ನ ಮಾವನವರ ಪಿಂಡಗಳೂ ಇವನನ್ನೇ ಅವಲಂಬಿಸಿವೆ. ನಿನಗೆ ಮಂಗಳವಾಗಲಿ! ಇಂದು ನಿನ್ನ ಪ್ರಿಯನಾಗಿದ್ದ, ನಿನ್ನಂತೆಯೇ ಇದ್ದ, ಮತ್ತು ಮೃತನಾಗಿರುವ ಅಭಿಮನ್ಯುವಿನ ಸಂತೋಷವನ್ನು ಹೆಚ್ಚಿಸು! ನಿಸ್ಸಂಶಯವಾಗಿಯೂ ನಿನಗೆ ಪ್ರಿಯನಾದ ಅಭಿಮನ್ಯುವು ಪ್ರೀತಿಯಿಂದ ಹೇಳುತ್ತಿದ್ದ ಮಾತುಗಳನ್ನು ಉತ್ತರೆಯು ನನ್ನೊಡನೆ ಹೇಳಿಕೊಳ್ಳುತ್ತಿದ್ದಳು. ಹಿಂದೆ ಅರ್ಜುನನ ಮಗನು ವೈರಾಟೀ ಉತ್ತರೆಯಲ್ಲಿ ಇದನ್ನೇ ಹೇಳುತ್ತಿದ್ದನಲ್ಲವೇ? “ಭದ್ರೇ! ನಿನ್ನ ಮಗನು ನನ್ನ ಸೋದರಮಾವನ ಮನೆಗೆ ಹೋಗುತ್ತಾನೆ. ವೃಷ್ಣಿ-ಅಂಧಕರ ಕುಲಕ್ಕೆ ಹೋಗಿ ಅವನು ಧನುರ್ವೇದ, ವಿಚಿತ್ರ ಅಸ್ತ್ರಗಳು ಮತ್ತು ಸಮಗ್ರ ನೀತಿಶಾಸ್ತ್ರವನ್ನು ಪಡೆದುಕೊಳ್ಳುತ್ತಾನೆ!” ಪರವೀರಹ ದುರ್ಧರ್ಷ ಸೌಭದ್ರನು ಪ್ರಣಯದಿಂದ ಹೀಗೆ ಹೇಳುತ್ತಿದ್ದನು ಎನ್ನುವುದರಲ್ಲಿ ಸಂಶಯವೇ ಇಲ್ಲ. ನಾವೆಲ್ಲರೂ ನಿನ್ನ ಪಾದಗಳಿಗೆ ನಮಿಸಿ ಯಾಚಿಸಿಕೊಳ್ಳುತ್ತೇವೆ. ಈ ಕುಲದ ಹಿತಕ್ಕಾಗಿ ಉತ್ತಮ ಕಲ್ಯಾಣವನ್ನು ಮಾಡು!”
ವಾರ್ಷ್ಣೇಯನಿಗೆ ಹೀಗೆ ಹೇಳಿ ವಿಶಾಲನೇತ್ರೆ ಪೃಥಾಳು ದುಃಖಾರ್ತಳಾಗಿ ತನ್ನ ಬಾಹುಗಳನ್ನು ಮೇಲೆತ್ತಿಕೊಂಡು ದೊಪ್ಪನೆ ನೆಲದ ಮೇಲೆ ಬಿದ್ದುಬಿಟ್ಟಳು. ಆಗ ಅನ್ಯ ಸ್ತ್ರೀಯರೂ ನೆಲದ ಮೇಲೆ ಬಿದ್ದರು. ಕಣ್ಣೀರಿಡುತ್ತಿದ್ದ ಎಲ್ಲರೂ “ಅಯ್ಯೋ! ವಾಸುದೇವನ ಅಳಿಯನ ಮಗನು ಮೃತನಾಗಿ ಹುಟ್ಟಿದನಲ್ಲಾ!” ಎಂದು ಕೂಗಿಕೊಂಡರು. ಅವರೆಲ್ಲರನ್ನೂ ಕೇಳಿದ ಜನಾರ್ದನನು ಆಗ ನೆಲದ ಮೇಲೆ ಬಿದ್ದಿದ್ದ ಕುಂತಿಯನ್ನು ಹಿಡಿದು ಮೇಲೆಬ್ಬಿಸಿ ಸಂತೈಸತೊಡಗಿದನು.
ಪೃಥೆಯನ್ನು ಮೇಲೆಬ್ಬಿಸಿದ ನಂತರ ಸುಭದ್ರೆಯು ತನ್ನ ಅಣ್ಣನನ್ನು ನೋಡಿ ದುಃಖಾರ್ತಳಾಗಿ ಅಳುತ್ತಲೇ ಈ ಮಾತುಗಳನ್ನಾಡಿದಳು: “ಪುಂಡರೀಕಾಕ್ಷ! ಕುರುವಂಶೀಯರೆಲ್ಲರೂ ಸಂತಾನವಿಲ್ಲದೇ ಕ್ಷಯಿಸುತ್ತಿರಲಾಗಿ ಧೀಮಂತ ಪಾರ್ಥನ ಆಯುಸ್ಸನ್ನೇ ಕಳೆದುಕೊಂಡಿರುವ ಈ ಮೊಮ್ಮಗನನ್ನು ನೋಡು! ದ್ರೋಣಪುತ್ರನು ಭೀಮಸೇನನ ಮೇಲೆ ಪ್ರಯೋಗಿಸಿದ ಇಷೀಕವು ಉತ್ತರೆ, ಅರ್ಜುನ ಮತ್ತು ನನ್ನ ಮೇಲೆ ಬಿದ್ದಿತ್ತು. ಅದು ಪ್ರಜ್ವಲಿಸುತ್ತಾ ನನ್ನ ಹೃದಯದಲ್ಲಿಯೇ ನೆಲೆಸಿಕೊಂಡಿರುವುದರಿಂದ ನನ್ನ ಮಗನ ಮಗನನ್ನು ನಾನು ಕಾಣದಾಗಿದ್ದೇನೆ! ಅಭಿಮನ್ಯುವಿನ ಮಗನು ಮೃತನಾಗಿ ಹುಟ್ಟಿದನೆಂದು ಕೇಳಿ ಧರ್ಮಾತ್ಮ ಧರ್ಮರಾಜ ಯುಧಿಷ್ಠಿರನು ಏನು ಹೇಳುವನು? ಭೀಮಸೇನ, ಅರ್ಜುನ, ಮತ್ತು ಮಾದ್ರವತಿಯ ಮಕ್ಕಳೀರ್ವರೂ ಏನು ಹೇಳುವರು? ದ್ರೋಣಪುತ್ರನು ಪಾಂಡವರ ಎಲ್ಲವನ್ನೂ ಕೊಳ್ಳೆಹೊಡೆದುಬಿಟ್ಟನು! ಅಭಿಮನ್ಯುವು ತನ್ನ ತಂದೆಯರಿಗೆ ಪ್ರಿಯನಾಗಿದ್ದನೆನ್ನುವುದರಲ್ಲಿ ಸಂಶಯವೇ ಇಲ್ಲ. ದ್ರೋಣಪುತ್ರನ ಅಸ್ತ್ರದಿಂದ ಸೋಲಿಸಲ್ಪಟ್ಟ ಅವರು ಇದನ್ನು ಕೇಳಿ ಏನು ಹೇಳುವರು? ಅಭಿಮನ್ಯುವಿನ ಮಗನು ಮೃತನಾಗಿ ಹುಟ್ಟಿರುವುದಕ್ಕಿಂತಲೂ ಮಿಗಿಲಾದ ದುಃಖವು ಯಾವುದು ತಾನೇ ಇರುವುದು? ಇಂದು ಶಿರಬಾಗಿ ನಮಸ್ಕರಿಸಿ ನಾನು ನಿನ್ನ ಪ್ರಸಾದವನ್ನು ಬೇಡಿಕೊಳ್ಳುತ್ತಿದ್ದೇನೆ. ಪೃಥೆ-ದ್ರೌಪದಿಯರನ್ನೂ ನೋಡು! ದ್ರೋಣಸುತನು ಪಾಂಡವರ ಗರ್ಭಗಳನ್ನು ನಾಶಗೊಳಿಸಲು ಹೊರಟಾಗ ನೀನು ಕ್ರುದ್ಧನಾಗಿ ದ್ರೌಣಿಗೆ ಹೀಗೆ ಹೇಳಿದ್ದೆಯಲ್ಲವೇ? “ಬ್ರಹ್ಮಬಂಧು ನರಾಧಮನೇ! ನಿನ್ನ ಅಪೇಕ್ಷೆಯು ನೆರವೇರದಂತೆ ಮಾಡುತ್ತೇನೆ. ಕಿರೀಟಿಯ ಮಗನ ಮಗನನ್ನು ನಾನು ಬದುಕಿಸುತ್ತೇನೆ!” ನಿನ್ನ ಆ ವಚನವನ್ನು ಕೇಳಿದಾಗಲೇ ನಿನ್ನ ಬಲವೇನೆನ್ನುವುದನ್ನು ನಾನು ಅರಿತುಕೊಂಡೆ. ಅಭಿಮನ್ಯುವಿನ ಮಗನನ್ನು ಬದುಕಿಸಿ ಕರುಣಿಸು! ಒಂದು ವೇಳೆ ನೀನು ಹೇಳಿದ್ದ ಆ ಶುಭವಚನವನ್ನು ಸಫಲಗೊಳಿಸದೇ ಇದ್ದರೆ ನಾನೂ ಕೂಡ ಮೃತಳಾದೆನೆಂದೇ ಭಾವಿಸು! ಅಭಿಮನ್ಯುವಿನ ಸುತನನ್ನು ನೀನು ಇಂದು ಬದುಕಿಸದೇ ಇದ್ದರೆ ಜೀವಿಸಿರುವ ನಿನ್ನಿಂದ ಇನ್ನು ನನಗೇನಾಗಬೇಕಾಗಿದೆ? ಮೋಡವು ಮಳೆಗರೆದು ಸಸ್ಯವನ್ನು ಪುನರ್ಜೀವನಗೊಳಿಸುವಂತೆ ನಿನ್ನ ಕಣ್ಣುಗಳಂಥಹದೇ ಕಣ್ಣುಗಳಿದ್ದ ಅಭಿಮನ್ಯುವಿನ ಈ ಮಗನನ್ನು ಬದುಕಿಸು! ನೀನು ಧರ್ಮಾತ್ಮ. ಸತ್ಯವಂತ ಮತ್ತು ಸತ್ಯವಿಕ್ರಮ. ನೀನು ನಿನ್ನ ಮಾತನ್ನು ಸತ್ಯವಾಗಿಸಬೇಕು! ನೀನು ಇಚ್ಛಿಸಿದರೆ ಮೃತಗೊಂಡ ಮೂರು ಲೋಕಗಳನ್ನೂ ಬದುಕಿಸಬಲ್ಲೆ! ಹೀಗಿರುವಾಗ ಸತ್ತು ಹುಟ್ಟಿರುವ ನಿನ್ನ ಈ ಅಳಿಯನ ಮಗನನ್ನು ಬದುಕಿಸಲಾರೆಯಾ? ನಿನ್ನ ಪ್ರಭಾವವೇನೆಂದು ತಿಳಿದುಕೊಂಡಿರುವುದರಿಂದಲೇ ನಾನು ನಿನಗೆ ಹೇಳುತ್ತಿದ್ದೇನೆ. ಪಾಂಡುಪುತ್ರರಿಗೆ ಈ ಪರಮ ಅನುಗ್ರಹವನ್ನು ಕರುಣಿಸು! ತಂಗಿಯೆಂದಾದರೂ ಅಥವಾ ಪುತ್ರನನ್ನು ಕಳೆದುಕೊಂಡಿರುವಳೆಂದಾದರೂ ಅಥವಾ ಮರುಕಗೊಂಡು ಬೇಡುತ್ತಿರುವ ನನ್ನ ಮೇಲಿನ ದಯೆಯಿಂದಲಾದರೂ ಇದನ್ನು ನೀನು ಮಾಡಬೇಕು.”
ಇದನ್ನು ಕೇಳಿ ದುಃಖಮೂರ್ಚಿತನಾದ ಕೇಶವನು ಅಲ್ಲಿದ್ದ ಜನರನ್ನು ಹರ್ಷಗೊಳಿಸುವನೋ ಎಂಬಂತೆ ಗಟ್ಟಿಯಾಗಿ “ಹಾಗೆಯೇ ಆಗಲಿ!” ಎಂದು ಹೇಳಿದನು. ಬಿಸಿಲಿನಿಂದ ಬಳಲಿದವನಿಗೆ ನೀರನ್ನು ಕೊಟ್ಟು ಸಂತಸಗೊಳಿಸುವಂತೆ ಆ ವಿಭು ಪುರುಷರ್ಷಭನು ತನ್ನ ಆ ವಾಕ್ಯದಿಂದ ಅಲ್ಲಿದ್ದ ಜನರನ್ನು ಸಂತಸಗೊಳಿಸಿದನು. ತಕ್ಷಣವೇ ಅವನು ಯಥಾವಿಧಿಯಾಗಿ ಬಿಳಿಯ ಹೂಗಳಿಂದ ಪೂಜಿಸಿ ಅಲಂಕರಿಸಿದ್ದ ಪರಿಕ್ಷಿತನ ಜನ್ಮಗೃಹವನ್ನು ಪ್ರವೇಶಿಸಿದನು. ಅಲ್ಲಿ ಎಲ್ಲಕಡೆಗಳಲ್ಲಿ ಜಲಪೂರ್ಣ ಕುಂಭಗಳಿದ್ದವು. ತುಪ್ಪದಲ್ಲಿ ನೆನೆದ ತುಂಬೇಗಿಡದ ಪಂಜುಗಳು ಬೆಳಗುತ್ತಿದ್ದವು. ಸುತ್ತಲೂ ಬಿಳೀಸಾಸಿವೆಯನ್ನು ಚೆಲ್ಲಿದ್ದರು. ಥಳಥಳಿಸುತ್ತಿರುವ ಶುಭ್ರ ಶಸ್ತ್ರಗಳನ್ನು ಇಟ್ಟಿದ್ದರು. ಸುತ್ತಲೂ ಅಗ್ನಿಗಳು ಪ್ರಜ್ವಲಿಸುತ್ತಿದ್ದವು. ಪರಿಚಾರಕ್ಕೆಂದಿದ್ದ ವೃದ್ಧಸ್ತ್ರೀಯರು ಅಲ್ಲಿ ಸೇರಿದ್ದರು. ಅಲ್ಲಿ ದಕ್ಷರೂ ಕುಶಲರೂ ಆಗಿದ್ದ ಚಿಕಿತ್ಸಕರಿದ್ದರು. ಅಲ್ಲಿ ಸುತ್ತಲೂ ರಾಕ್ಷಸರನ್ನು ನಾಶಗೊಳಿಸುವ ವಿಧಿಯನ್ನು ತಿಳಿದಿದ್ದ ಕುಶಲ ಜನರನ್ನೂ, ಇರಿಸಿದ್ದ ದ್ರವ್ಯಗಳನ್ನೂ ಆ ಅಚ್ಯುತ ತೇಜಸ್ವಿಯು ನೋಡಿದನು. ಯಥಾಯುಕ್ತವಾಗಿದ್ದ ನಿನ್ನ ತಂದೆಯ ಜನ್ಮಗೃಹವನ್ನು ನೋಡಿ ಹರ್ಷಗೊಂಡ ಹೃಷೀಕೇಶನು “ಸಾಧು! ಸಾಧು!” ಎಂದನು. ಪ್ರಹೃಷ್ಟವದನನಾಗಿ ವಾರ್ಷ್ಣೇಯನು ಹಾಗೆ ಹೇಳುತ್ತಿರಲು ದ್ರೌಪದಿಯು ಅವಸರದಲ್ಲಿ ವೈರಾಟಿಯಲ್ಲಿಗೆ ಹೋಗಿ ಅವಳಿಗೆ ಈ ಮಾತುಗಳನ್ನಾಡಿದಳು: “ಭದ್ರೇ! ಇದೋ ಇಲ್ಲಿ ನೋಡು! ನಿನ್ನ ಮಾವ ಅಚಿಂತ್ಯಾತ್ಮ ಅಪರಾಜಿತ ಪುರಾಣಋಷಿ ಮಧುಸೂದನನು ಬರುತ್ತಿದ್ದಾನೆ!”
ಅವಳ ಮಾತನ್ನು ಕೇಳಿ ಕೃಷ್ಣನನ್ನು ದೇವನೆಂದೇ ಕಾಣುತ್ತಿದ್ದ ದೇವೀ ಉತ್ತರೆಯಾದರೋ ಅಳುವುದನ್ನು ನಿಲ್ಲಿಸಿ, ಕಣ್ಣೀರನ್ನು ಒರೆಸಿಕೊಳ್ಳುತ್ತಾ ಸೀರೆಯನ್ನು ಸರಿಪಡಿಸಿಕೊಂಡಳು. ಬರುತ್ತಿದ್ದ ಗೋವಿಂದನನ್ನು ನೋಡಿ ಆ ತಪಸ್ವಿನಿಯು ದುಃಖದಿಂದ ಪೀಡಿತವಾಗಿದ್ದ ಹೃದಯದಿಂದ ದೀನಳಾಗಿ ರೋದಿಸಿದಳು: “ಪುಂಡರೀಕಾಕ್ಷ! ಜನಾರ್ದನ! ಅಭಿಮನ್ಯು ಮತ್ತು ನಾವಿಬ್ಬರೂ ಸಂತಾನಹೀನರಾಗಿದ್ದುದನ್ನು ನೋಡು! ನಾವಿಬ್ಬರೂ ಹತರಾದರಂತೆಯೇ! ಶಿರಸಾ ನಿನಗೆ ನಮಸ್ಕರಿಸುತ್ತಿದ್ದೇನೆ. ದ್ರೋಣಪುತ್ರನ ಅಸ್ತ್ರದಿಂದ ಸುಟ್ಟುಹೋಗಿರುವ ನನ್ನ ಈ ಮಗನನ್ನು ಬದುಕಿಸು! ಧರ್ಮರಾಜನಾಗಲೀ, ಭೀಮಸೇನನಾಗಲೀ ಅಥವಾ ನೀನಾಗಲೀ “ಈ ಇಷೀಕವು ಅರಿವಿಲ್ಲದ ತಾಯಿಯನ್ನೇ ಕೊಲ್ಲಲಿ!” ಎಂದು ಹೇಳಿಬಿಟ್ಟಿದ್ದರೆ ನಾನೇ ಮರಣ ಹೊಂದುತ್ತಿದ್ದೆ. ಈ ದುಃಸ್ಥಿತಿಯು ಬರುತ್ತಿರಲಿಲ್ಲ! ಗರ್ಭಸ್ಥನಾಗಿದ್ದ ಈ ಬಾಲಕನನ್ನು ಬ್ರಹ್ಮಾಸ್ತ್ರದಿಂದ ಕೊಂದು ಹಿಂಸೆಯನ್ನೆಸಗಿದ ಆ ದುರ್ಬುದ್ಧಿ ದ್ರೌಣಿಗಾದ ಲಾಭವಾದರೂ ಏನು? ಶತ್ರುನಿಬರ್ಹಣ! ನಿನಗೆ ಶಿರಸಾ ವಂದಿಸಿ ಬೇಡಿಕೊಳ್ಳುತ್ತಿದ್ದೇನೆ. ಕರುಣಿಸು. ಒಂದು ವೇಳೆ ಇವನು ಬದುಕದೇ ಇದ್ದರೆ ನಾನು ಪ್ರಾಣಗಳನ್ನು ತ್ಯಜಿಸುತ್ತೇನೆ! ಇವನಲ್ಲಿಯೇ ನನ್ನ ಅನೇಕ ಉತ್ತಮ ಮನೋರಥಗಳನ್ನು ಇಟ್ಟುಕೊಂಡಿದ್ದೆನು. ದ್ರೋಣಪುತ್ರನಿಂದ ಇವನು ಹತನಾದ ಮೇಲೆ ನಾನೇಕೆ ಜೀವಿಸಿರಲಿ? ಇವನನ್ನು ನನ್ನ ಕಂಕುಳಿನಲ್ಲೆತ್ತಿಕೊಂಡು ಸಂತೋಷದಿಂದ ನಿನಗೆ ನಮಸ್ಕರಿಸಬೇಕೆಂದು ನನ್ನ ಆಸೆಯಾಗಿತ್ತು. ಆದರೆ ಅದು ಈಗ ಮಣ್ಣುಪಾಲಾಯಿತು! ಚಪಲಾಕ್ಷನ ಮಗನು ಮೃತನಾಗಿದ್ದಾನೆ. ಇದರಿಂದಾಗಿ ನನ್ನ ಹೃದಯದಲ್ಲಿದ್ದ ಸರ್ವಮನೋರಥಗಳೂ ವಿಫಲವಾಗಿ ಹೋದವು!! ಆ ಚಪಲಾಕ್ಷನು ನಿನಗೆ ಪ್ರಿಯನಾಗಿದ್ದ ತಾನೇ? ಅವನ ಪುತ್ರನು ಬ್ರಹ್ಮಾಸ್ತ್ರದಿಂದ ಹತನಾಗಿರುವುದನ್ನು ನೋಡು! ಪಾಂಡವರ ಸಂಪತ್ತನ್ನು ತೊರೆದು ಇಂದು ಯಮಸಾದನಕ್ಕೆ ಹೋದ ಇವನೂ ಕೂಡ ಅವನ ತಂದೆಯಂತೆ ಕೃತಘ್ನನೂ ಕ್ರೂರಿಯೂ ಆಗಿದ್ದಾನೆ. “ವೀರ! ಅಭಿಮನ್ಯು! ನೀನೇದರೂ ರಣಾಂಗಣದಲ್ಲಿ ಹತನಾದರೆ ಬೇಗನೆ ನಾನೂ ಕೂಡ ನಿನ್ನನ್ನು ಹಿಂಬಾಲಿಸಿ ಬರುತ್ತೇನೆ!” ಎಂದು ಪ್ರತಿಜ್ಞೆಮಾಡಿದ್ದೆ. ನನ್ನ ಜೀವನದ ಮೇಲಿನ ಆಸೆಯಿಂದ ನಿರ್ದಯಳಾದ ನಾನು ಆ ರೀತಿ ಮಾಡಲಿಲ್ಲ. ಈಗ ನಾನು ಅಲ್ಲಿಗೆ ಹೋದರೆ ಫಾಲ್ಗುನಿ ಅಭಿಮನ್ಯುವು ಏನು ಹೇಳಿಯಾನು?”
ಪುತ್ರಪ್ರಿಯಳೂ ಶೋಚನೀಯಳು ಆಗಿದ್ದ ತಪಸ್ವಿನೀ ಉತ್ತರೆಯು ಈ ರೀತಿ ಕರುಣಾಜನಕವಾಗಿ ವಿಲಪಿಸುತ್ತಾ ಹುಚ್ಚುಹಿಡಿದವಳಂತೆ ಭೂಮಿಯ ಮೇಲೆ ಬಿದ್ದುಬಿಟ್ಟಳು. ಬಂಧುಗಳನ್ನೂ ಪುತ್ರನನ್ನೂ ಕಳೆದುಕೊಂಡ ಅವಳು ಬಿದ್ದುದನ್ನು ನೋಡಿ ದುಃಖಾರ್ತರಾದ ಕುಂತೀ ಮತ್ತು ಭರತಸ್ತ್ರೀಯರೆಲ್ಲರೂ ಗಟ್ಟಿಯಾಗಿ ಗೋಳಿಟ್ಟರು. ಒಂದು ಮುಹೂರ್ತಕಾಲ ಪಾಂಡವರ ಆ ನಿವೇಶನವು ಆರ್ತಸ್ವರ ಗೋಳಾಟದ ಧ್ವನಿಯಿಂದ ಪ್ರತಿಧ್ವನಿಗೊಂಡು ಅಪ್ರೇಕ್ಷಣೀಯವಾಗಿತ್ತು. ಪುತ್ರಶೋಕದಿಂದ ಪೀಡಿತಳಾಗಿದ್ದ ವೈರಾಟಿಯು ಮುಹೂರ್ತಕಾಲ ಮೂರ್ಛಿತಳಾಗಿಯೇ ಬಿದ್ದಿದ್ದಳು. ಅನಂತರ ಉತ್ತರೆಯು ಎಚ್ಚೆತ್ತು ತನ್ನ ಪುತ್ರನನ್ನು ತೊಡೆಯಮೇಲಿರಿಸಿಕೊಂಡು ಈ ಮಾತುಗಳನ್ನಾಡಿದಳು: “ಧರ್ಮಜ್ಞನ ಮಗನಾಗಿರುವ ನೀನು ಈಗ ಅಧರ್ಮವನ್ನು ಮಾಡುತ್ತಿದ್ದೀಯೆ ಎಂದು ತಿಳಿಯದವನಾಗಿರುವೆ! ಆದುದರಿಂದಲೇ ನೀನು ವೃಷ್ಣಿಪ್ರವೀರನಿಗೆ ನಮಸ್ಕರಿಸುತ್ತಿಲ್ಲ! ಪುತ್ರ! ಹೋಗಿ ನಿನ್ನ ತಂದೆಗೆ ನನ್ನ ಈ ಮಾತುಗಳನ್ನು ಹೇಳು: “ವೀರ! ಕಾಲವು ಸನ್ನಿಹಿತವಾಗದೇ ಪ್ರಾಣಿಗಳಿಗೆ ಎಂದೂ ಮರಣವುಂಟಾಗುವುದಿಲ್ಲ! ಪತಿಯಾದ ನಿನ್ನಿಂದ ಮತ್ತು ಈಗ ಈ ಮಗನಿಂದಲೂ ವಿಹೀನಳಾಗಿ ಮೃತಳಾಗಬೇಕಾಗಿದ್ದ ನಾನು ಇನ್ನೂ ಬದುಕಿಯೇ ಇದ್ದೇನಲ್ಲಾ!” ಅಥವಾ ಧರ್ಮರಾಜನ ಅನುಜ್ಞೆಯನ್ನು ಪಡೆದು ತೀಕ್ಷ್ಣ ವಿಷವನ್ನಾದರೂ ಕುಡಿಯುತ್ತೇನೆ ಅಥವಾ ಅಗ್ನಿಯನ್ನಾದರೂ ಪ್ರವೇಶಿಸುತ್ತೇನೆ. ಮಗೂ! ಅಥವಾ ಮರಣವು ಕಷ್ಟಸಾಧ್ಯವೆನಿಸುತ್ತದೆ. ಪತಿ-ಪುತ್ರರನ್ನು ಕಳೆದುಕೊಂಡು ನನ್ನ ಈ ಹೃದಯವು ಸಾವಿರ ಚೂರುಗಳಾಗಿ ಏಕೆ ಒಡೆಯುತ್ತಿಲ್ಲ? ಪುತ್ರ! ಮೇಲೇಳು! ಶೋಕಸಾಗರದಲ್ಲಿ ಮುಳುಗಿ ದುಃಖಿತಳಾಗಿರುವ ಈ ನಿನ್ನ ದೀನ ಆರ್ತ ಮುತ್ತಜ್ಜಿಯನ್ನು ನೋಡು! ವ್ಯಾಧನು ಹೊಡೆದ ಜಿಂಕೆಯಂತೆ ಅತ್ಯಂತ ದುಃಖಾರ್ತರಾಗಿರುವ ಆರ್ಯೆ ಪಾಂಚಾಲೀ, ತಪಸ್ವಿನೀ ಸಾತ್ವತೀ ಮತ್ತು ನನ್ನನ್ನೂ ನೋಡು! ಎದ್ದೇಳು! ಹಿಂದೆ ನಾನು ಚಪಲೇಕ್ಷಣ ಅಭಿಮನ್ಯುವನ್ನು ನೋಡುತ್ತಿದ್ದಂತೆಯೇ ಇರುವ ಧೀಮಂತ ಲೋಕನಾಥ ಪುಂಡರೀಕಪಲಾಕ್ಷನನ್ನು ನೋಡು!”
ಈ ರೀತಿ ರೋದಿಸುತ್ತಾ ಪುನಃ ಬಿದ್ದ ಉತ್ತರೆಯನ್ನು ನೋಡಿ ಆ ಎಲ್ಲ ಸ್ತ್ರೀಯರೂ ಅವಳನ್ನು ಪುನಃ ಎದ್ದು ಕುಳ್ಳಿರಿಸಿದರು. ಮತ್ಸ್ಯಪತಿಯ ಮಗಳು ಮೇಲೆದ್ದು ಧೈರ್ಯತಂದುಕೊಂಡು ಕುಳಿತಲ್ಲಿಂದಲೇ ಪುನಃ ಪುಂಡರೀಕಾಕ್ಷನಿಗೆ ಕೈಮುಗಿದಳು. ಅವಳ ಆ ವಿಪುಲ ವಿಲಾಪವನ್ನು ಕೇಳಿ ಪುರುಷರ್ಷಭ ಕೃಷ್ಣನು ಆಚಮನ ಮಾಡಿ ಬ್ರಹ್ಮಾಸ್ತ್ರವನ್ನು ಉಪಶಮನಗೊಳಿಸಿದನು. ವಿಶುದ್ಧಾತ್ಮಾ ದಾಶಾರ್ಹ ಅಚ್ಯುತನು ಮಗುವನ್ನು ಜೀವಿತಗೊಳಿಸಲೋಸುಗ ಜಗತ್ತೆಲ್ಲವೂ ಕೇಳುವಂತೆ ಪ್ರತಿಜ್ಞೆಮಾಡಿ ಇಂತೆಂದನು: “ಉತ್ತರೇ! ನಾನು ಸುಳ್ಳುಹೇಳುವವನಲ್ಲ. ಇದು ಸತ್ಯವಾಗಿಯೇ ನಡೆಯುತ್ತದೆ. ಸರ್ವದೇಹಿಗಳೂ ನೋಡುತ್ತಿರುವಂತೆಯೇ ನಾನು ಇವನನ್ನು ಬದುಕಿಸುತ್ತೇನೆ! ಈ ಮೊದಲು ನಾನು ಪರಿಹಾಸಕ್ಕಾಗಿಯೂ ಎಂದೂ ಸುಳ್ಳುಹೇಳಿರದೇ ಇದ್ದರೆ ಮತ್ತು ಯುದ್ಧದಿಂದ ಪರಾಙ್ಮುಖನಾಗದೇ ಇದ್ದಿದ್ದರೆ ಇವನು ಬದುಕಲಿ! ನನಗೆ ಧರ್ಮ ಮತ್ತು ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರು ಪ್ರಿಯರಾಗಿದ್ದಾರೆ ಎಂದಾದರೆ ಅಭಿಮನ್ಯುವಿನ ಈ ಸತ್ತುಹುಟ್ಟಿರುವ ಮಗನು ಜೀವಿತನಾಗಲಿ! ವಿಜಯ ಅರ್ಜುನನಿಗೆ ಎಂದೂ ವಿರೋಧವಾಗಿ ನಾನು ನಡೆದುಕೊಂಡಿದುದು ನೆನಪಿಲ್ಲ. ಆ ಸತ್ಯದಿಂದ ಈ ಮೃತ ಶಿಶುವು ಜೀವಿತಗೊಳ್ಳಲಿ! ಸತ್ಯ-ಧರ್ಮಗಳು ನಿತ್ಯವೂ ನನ್ನಲ್ಲಿ ಹೇಗೆ ಪ್ರತಿಷ್ಠಿತಗೊಂಡಿವೆಯೋ ಹಾಗೆ ಅಭಿಮನ್ಯುವಿನ ಈ ಮೃತ ಶಿಶುವು ಜೀವಿತನಾಗಲಿ! ಕಂಸ-ಕೇಶಿಯರು ನನ್ನಿಂದ ಧರ್ಮಪೂರ್ವಕವಾಗಿಯೇ ಹತರಾದರೆನ್ನುವ ಆ ಸತ್ಯದಿಂದ ಈ ಬಾಲಕನು ಪುನಃ ಜೀವಿತನಾಗಲಿ!”
ವಾಸುದೇವನು ಹೀಗೆ ಹೇಳಲು ಆ ಬಾಲಕನು ಮೆಲ್ಲ ಮೆಲ್ಲನೇ ಚೇತನಗೊಂಡು ಅವಯವಗಳನ್ನು ಆಡಿಸತೊಡಗಿದನು. ಕೃಷ್ಣನು ಬ್ರಹ್ಮಾಸ್ತ್ರವನ್ನು ಉಪಶಮನಗೊಳಿಸಿದ ಕೂಡಲೇ ಆ ಪ್ರಸೂತಿಗೃಹವು ನಿನ್ನ ತಂದೆಯ ತೇಜಸ್ಸಿನಿಂದ ಬೆಳಗತೊಡಗಿತು. ಆಗ ರಾಕ್ಷಸರೆಲ್ಲರೂ ಆ ಪ್ರಸೂತಿಗೃಹವನ್ನು ಬಿಟ್ಟು ಹೊರಟುಹೋದರು. ಅಂತರಿಕ್ಷದಲ್ಲಿ ಕೂಡ “ಸಾಧು ಕೇಶವ! ಸಾಧು!” ಎಂಬ ಧ್ವನಿಯಾಯಿತು. ಉರಿಯುತ್ತಿದ್ದ ಆ ಅಸ್ತ್ರವೂ ಕೂಡ ಪಿತಾಮಹ ಬ್ರಹ್ಮನ ಬಳಿ ಹೋಯಿತು. ಆಗ ಪರಿಕ್ಷಿತನು ಪುನಃ ಪ್ರಾಣಗಳನ್ನು ಪಡೆದನು. ಆ ಬಾಲಕನು ಯಥೋತ್ಸಾಹದಲ್ಲಿ ಯಥಾಬಲನಾಗಿ ಕಾಲು-ಕೈಗಳನ್ನು ಅಲ್ಲಾಡಿಸತೊಡಗಿದನು. ಆಗ ಅಲ್ಲಿದ್ದ ಭರತಸ್ತ್ರೀಯರು ಅತ್ಯಂತ ಮುದಿತರಾದರು. ಗೋವಿಂದನ ಆಜ್ಞೆಯಂತೆ ಬ್ರಾಹ್ಮಣರಿಂದ ಸ್ವಸ್ತಿವಾಚನಗಳನ್ನು ಮಾಡಿಸಲಾಯಿತು. ಮುದಿತರಾದ ಎಲ್ಲ ಭರತಸಿಂಹರ ಸ್ತ್ರೀಯರೂ ಪಾರಾಗಲು ದೊರಕಿದ ದೋಣಿಯಂತಿದ್ದ ಜನಾರ್ದನನನ್ನು ಪ್ರಶಂಸಿಸಿದರು. ಕುಂತೀ, ದ್ರುಪದಪುತ್ರೀ, ಸುಭದ್ರಾ ಮತ್ತು ಉತ್ತರೆ ಹಾಗೆಯೇ ಇತರ ನರನಾಯಕರ ಸ್ತ್ರೀಯರು ಹೃಷ್ಟಮಾನಸರಾದರು. ಬಳಿಕ ಅಲ್ಲಿ ಮಲ್ಲರೂ, ನಟರೂ, ಜ್ಯೋತಿಷಿಗಳೂ, ಸುಖಸಮಾಚಾರಗಳನ್ನು ಹೇಳುವ ದೂತರೂ, ಸೂತ-ಮಾಗಧ ಗಣಗಳು ಕುರುವಂಶದ ಸ್ತುತಿ-ಆಶೀರ್ವಾದಗಳೊಂದಿಗೆ ಜನಾರ್ದನನನ್ನು ಸ್ತೋತ್ರಮಾಡಿದರು. ಯಥಾಕಾಲದಲ್ಲಿ ಉತ್ತರೆಯು ಎದ್ದು ಮಗನನ್ನು ಎತ್ತಿಕೊಂಡು ಯದುನಂದನನಿಗೆ ನಮಸ್ಕರಿಸಿದಳು. ಆಗ ಕೃಷ್ಣನು ಪ್ರೀತಿಯಿಂದ ಅವರಿಬ್ಬರಿಗೂ ಅನೇಕ ವಿಶೇಷ ರತ್ನಗಳನ್ನು ಉಡುಗೊರೆಯನ್ನಾಗಿತ್ತನು. ಹಾಗೆಯೇ ಅನ್ಯ ವೃಷ್ಣಿಶಾರ್ದೂಲರೂ ಉಡುಗೊರೆಗಳನ್ನಿತ್ತರು. ಅನಂತರ ಪ್ರಭು ಸತ್ಯಸಂಧ ಜನಾರ್ದನನು ಮಗುವಿಗೆ ನಾಮಕರಣ ಮಾಡಿದನು. ಆಗ ಅವನು “ಪರಿಕ್ಷೀಣಿಸುತ್ತಿರುವ ಕುಲದಲ್ಲಿ ಹುಟ್ಟಿರುವುದರಿಂದ ಈ ಅಭಿಮನ್ಯುವಿನ ಮಗನ ಹೆಸರು ಪರಿಕ್ಷಿತ ಎಂದಾಗುತ್ತದೆ” ಎಂದನು. ಕಾಲಕ್ಕೆ ತಕ್ಕಂತೆ ಪರಿಕ್ಷಿತನು ವರ್ಧಿಸಿದನು ಮತ್ತು ಸರ್ವಜನರ ಮನಗಳಿಗೆ ಆಹ್ಲಾದವನ್ನುಂಟುಮಾಡುತ್ತಿದ್ದನು.
ಅವನು ಹುಟ್ಟಿ ಒಂದು ತಿಂಗಳ ನಂತರ ಪಾಂಡವರು ಬಹುರತ್ನಗಳನ್ನು ತೆಗೆದುಕೊಂಡು ಹಿಂದಿರುಗಿದರು. ಅವರು ನಗರದ ಸಮೀಪದಲ್ಲಿದ್ದಾರೆ ಎಂದು ಕೇಳಿ ವೃಷ್ಣಿಪುಂಗವರು ಅವರನ್ನು ಎದಿರುಗೊಳ್ಳಲು ಹೊರಟರು. ಪುರಜನರು ನಾಗಸಾಹ್ವಯವನ್ನು ಪುಷ್ಪರಾಶಿಗಳಿಂದ ಅಲಂಕರಿಸಿದರು. ವಿಚಿತ್ರ ಪತಾಕೆಗಳಿಂದಲೂ. ವಿವಿಧ ಧ್ವಜಗಳಿಂದಲೂ ಪೌರರು ಅರಮನೆಗಳನ್ನು ಅಲಂಕರಿಸಿದರು. ಪಾಂಡುಪುತ್ರರಿಗೆ ಪ್ರಿಯವಾಗಲೆಂದು ವಿದುರನು ದೇವತಾಲಯಗಳಲ್ಲಿ ಬಹುವಿಧದ ಪೂಜೆಗಳು ನಡೆಯುವಂತೆ ಸಂದೇಶವನ್ನಿತ್ತಿದ್ದನು. ರಾಜಮಾರ್ಗಗಳನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಆ ಪುರವು ಆಗ ಭೋರ್ಗರೆಯುತ್ತಿರುವ ಸಮುದ್ರದಂತೆ ಶೋಭಿಸುತ್ತಿತ್ತು. ನರ್ತಕರ ನೃತ್ಯಗಳಿಂದಲೂ ಮತ್ತು ಗಾಯನಗಳ ಇಂಪಾದ ಸ್ವರಗಳಿಂದಲೂ ಆ ಪುರವು ಕುಬೇರನ ನಗರಿಯಂತೆಯೇ ತೋರುತ್ತಿತ್ತು. ನಗರದ ಅಲ್ಲಲ್ಲಿ ಸಹಸ್ರಾರು ಬಂದಿಗಳು ಅವರ ಪತ್ನಿಯರೊಂದಿಗೆ ನಿಂತು ಶೋಭೆಗೊಳಿಸುತ್ತಿದ್ದರು. ಗಾಳಿಯ ರಭಸದಿಂದ ಎಲ್ಲೆಡೆಯಲ್ಲಿಯೂ ಪತಾಕೆಗಳು ಪಟಪಟನೆ ಹಾರಾಡುತ್ತಿದ್ದವು. ಹಸ್ತಿನಾಪುರವು ಆಗ ದಕ್ಷಿಣ-ಉತ್ತರ ಕುರುದೇಶಗಳಿಗೆ ಆದರ್ಶಪ್ರಾಯವಾಗಿತ್ತು. ರಾಜಪುರುಷರು “ಇಂದಿನ ರಾತ್ರಿ ಸರ್ವರೂ ರತ್ನಾಭರಣಭೂಷಿತರಾಗಿ ವಿಹರಿಸಿ!” ಎಂಬ ಘೋಷಣೆಯನ್ನೂ ಮಾಡಿದರು.
ಪಾಂಡವರು ಸಮೀಪದಲ್ಲಿಯೇ ಬಂದಿದ್ದಾರೆಂದು ಕೇಳಿದ ಶತ್ರುಕರ್ಶನ ವಾಸುದೇವನು ಅಮಾತ್ಯರೊಂದಿಗೆ ಅವರನ್ನು ಕಾಣಲು ಬಂದನು. ಪಾಂಡವರು ವೃಷ್ಣಿಗಳೊಂದಿಗೆ ಯಥಾನ್ಯಾಯವಾಗಿ ಕಲೆತು ಒಟ್ಟಿಗೇ ವಾರಣಸಾಹ್ವಯ ಪುರವನ್ನು ಪ್ರವೇಶಿಸಿದರು. ಆ ಮಹಾ ಸೇನೆಯ ಮತ್ತು ರಥಚಕ್ರಗಳ ಶಬ್ಧಗಳಿಂದ ಭೂಮಿ-ಸ್ವರ್ಗಗಳ ಮಧ್ಯದ ಆಕಾಶವು ತುಂಬಿಹೋಯಿತು. ಆಗ ಪಾಂಡವರು ಪ್ರೀತಮನಸ್ಕರಾಗಿ ಅಮಾತ್ಯರು ಮತ್ತು ಸ್ನೇಹಿತಗಣಗಳೊಂದಿಗೆ ಕೋಶವನ್ನು ಮುಂದೆಮಾಡಿಕೊಂಡು ತಮ್ಮ ಪುರವನ್ನು ಪ್ರವೇಶಿಸಿದರು. ಅವರು ಯಥಾನ್ಯಾಯವಾಗಿ ಜನಾಧಿಪ ಧೃತರಾಷ್ಟ್ರನನ್ನು ಸಂಧಿಸಿ ತಮ್ಮ ತಮ್ಮ ಹೆಸರುಗಳನ್ನು ಹೇಳಿಕೊಳ್ಳುತ್ತಾ ಅವನ ಪಾದಗಳಿಗೆ ವಂದಿಸಿದರು. ಧೃತರಾಷ್ಟ್ರನ ನಂತರ ಆ ಭರತಸತ್ತಮರು ಸುಬಲಾತ್ಮಜೆ ಗಾಂಧಾರೀ, ಕುಂತೀ ಮತ್ತು ವಿದುರರನ್ನು ಪೂಜಿಸಿ ವೈಶ್ಯಾಪುತ್ರ ಯುಯುತ್ಸುವನ್ನು ಸಂಧಿಸಿದರು. ಅವರಿಂತ ಸನ್ಮಾನಿತರಾದ ಆ ವೀರರು ವಿರಾಜಿಸುತ್ತಿದ್ದರು. ಆಗ ಆ ವೀರರು ವಿಚಿತ್ರವೂ ಮಹದದ್ಭುತವೂ ಪರಮಾಶ್ಚರ್ಯವೂ ಆದ ಪರಿಕ್ಷಿತನ ಜನ್ಮದ ಕುರಿತು ಕೇಳಿದರು. ಧೀಮತ ವಾಸುದೇವನ ಆ ಕೃತ್ಯವನ್ನು ಕೇಳಿ ಅವರು ಪೂಜಾರ್ಹನಾದ ದೇವಕಿನಂದನ ಕೃಷ್ಣನನ್ನು ಪೂಜಿಸಿದರು.
[1] ಭಾರ ಲಕ್ಷಣಗಳನ್ನು ತಿಳಿದವರ ಪ್ರಕಾರ ಒಂದು ಒಂಟೆಯು ೧೬೦೦೦ ಸುವರ್ಣವನ್ನು ಹೊರುತ್ತದೆ. ಈ ಪ್ರಮಾಣವು ಕುದುರೆಗೆ ೮೦೦೦, ಆನೆ-ಗಾಡಿಗಳಿಗೆ ೨೪೦೦೦.
[2] ಚಿನ್ನದ ಭಾರದ ಅಳತೆಯು ಈ ಪ್ರಕಾರವಾಗಿದೆ: ೫ ಗುಲಗುಂಜಿಗಳ ತೂಕ=೧ ಆರ್ಯಮಾಪಕ. ೧೬ ಆರ್ಯಮಾಪಕ=೧ ಪಲ. ೧೦೦ ಪಲಗಳು=೧ ತುಲಾ. ೨೦ ತುಲಗಳು=೧ ಭಾರ.
[3] ಒಂದು ಗಾವುದ=೪ ಮೈಲುಗಳು