ಅಶ್ವಮೇಧ ಯಜ್ಞ
ಯುಧಿಷ್ಠಿರನ ಯಜ್ಞದೀಕ್ಷೆ
ಅದಾದ ಕೆಲವು ದಿನಗಳ ನಂತರ ಸತ್ಯವತೀ ಸುತ ಮಹಾತೇಜಸ್ವೀ ವ್ಯಾಸನು ನಾಗಸಾಹ್ವಯ ನಗರಕ್ಕೆ ಆಗಮಿಸಿದನು. ಆಗ ಎಲ್ಲ ಕುರೂದ್ವಹರೂ ವೃಷ್ಣಿ-ಅಂಧಕವ್ಯಾಘ್ರರೊಂದಿಗೆ ಅವನಿಗೆ ಯಥಾನ್ಯಾಯವಾಗಿ ಸೇವೆಸಲ್ಲಿಸಿದರು. ಅಲ್ಲಿ ನಾನಾ ವಿಧದ ಮಾತುಕಥೆಗಳು ನಡೆಯುತ್ತಿರಲು ಧರ್ಮಸುತ ಯುಧಿಷ್ಠಿರನು ವ್ಯಾಸನಿಗೆ ಇಂತೆಂದನು: “ಭಗವನ್! ನಿನ್ನ ಅನುಗ್ರಹದಿಂದ ಈ ರತ್ನವನ್ನು ತಂದಿದ್ದೇವೆ. ಇದನ್ನು ಮಹಾಕ್ರತು ವಾಜಿಮೇಧಕ್ಕೆ ಉಪಯೋಗಿಸಲು ಇಚ್ಛಿಸುತ್ತೇನೆ. ನೀನು ನನಗೆ ಅಪ್ಪಣೆಯನ್ನು ಕೊಡಬೇಕು. ನಾವೆಲ್ಲರೂ ನಿನ್ನ ಮತ್ತು ಮಹಾತ್ಮ ಕೃಷ್ಣನ ಅಧೀನದಲ್ಲಿದ್ದೇವೆ.”
ವ್ಯಾಸನು ಹೇಳಿದನು: “ರಾಜನ್! ನಿನಗೆ ಅನುಮತಿಯನ್ನು ಕೊಡುತ್ತಿದ್ದೇನೆ. ಇದರ ನಂತರದ ಕಾರ್ಯಗಳನ್ನು ನೀನು ಮಾಡಬೇಕು. ವಿಧಿವತ್ತಾಗಿ ದಕ್ಷಿಣಾಯುಕ್ತವಾದ ವಾಜಿಮೇಧವನ್ನು ಯಜಿಸು! ಅಶ್ವಮೇಧವೇ ಸರ್ವಪಾಪಗಳನ್ನು ಪಾವನಗೊಳಿಸುತ್ತದೆ. ಆ ಇಷ್ಟಿಯಿಂದ ನೀನು ಪಾಪರಹಿತನಾಗುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ.”
ಆ ಧರ್ಮಾತ್ಮನು ಹೀಗೆ ಹೇಳಲು ಕುರುರಾಜ ಯುಧಿಷ್ಠಿರನು ಅಶ್ವಮೇಧವನ್ನು ಕೈಗೊಳ್ಳಲು ನಿರ್ಧರಿಸಿದನು. ಕೃಷ್ಣದ್ವೈಪಾಯನನ ಅಪ್ಪಣೆಯನ್ನು ಪಡೆದ ವಾಗ್ಮೀ ನೃಪನು ವಾಸುದೇವನನ್ನು ಆಮಂತ್ರಿಸಿ ಇಂತೆಂದನು: “ಪುರುಷಸತ್ತಮ! ನಿನ್ನಿಂದಾಗಿ ದೇವೀ ದೇವಕಿಯು ಸುಪ್ರಜಾ ಎಂದೆನಿಸಿಕೊಂಡಳು. ಈಗ ನಾನು ಹೇಳುವುದನ್ನು ನೀನು ಮಾಡಿಕೊಡಬೇಕು. ನಿನ್ನ ಪ್ರಭಾವದಿಂದ ಜಯಿಸಿದ ಸಂಪತ್ತನ್ನು ನಾವು ಭೋಗಿಸುತ್ತಿದ್ದೇವೆ. ನಿನ್ನ ಬುದ್ಧಿ-ಪರಾಕ್ರಮಗಳಿಂದ ನೀನೇ ಈ ಮಹಿಯನ್ನು ಜಯಿಸಿದ್ದೀಯೆ. ನಮಗೆ ಪರಮ ಗುರುವಾಗಿರುವ ನೀನೇ ಈ ಯಾಗಕ್ಕೆ ದೀಕ್ಷಿತನಾಗು. ನೀನೇ ಈ ಇಷ್ಟಿಯನ್ನು ನೆರವೇರಿಸಿದರೆ ನಾವು ವಿಪಾಪಿಗಳಾಗುತ್ತೇವೆ. ನೀನೇ ಯಜ್ಞ. ಅಕ್ಷರ. ಎಲ್ಲವೂ ನೀನೇ. ಧರ್ಮ ಮತ್ತು ಪ್ರಜಾಪತಿಯೂ ನೀನೇ.”
ವಾಸುದೇವನು ಹೇಳಿದನು: “ಮಹಾಬಾಹೋ! ನಿನ್ನಂಥವನು ಹೀಗೆ ಹೇಳುವುದು ಯೋಗ್ಯವಾಗಿಯೇ ಇದೆ. ಆದರೆ ನೀನೇ ಸರ್ವಭೂತಗಳಿಗೆ ಗತಿ ಎಂದು ನನ್ನ ಮತಿಯ ನಿಶ್ಚಯ. ಕುರುವೀರರಲ್ಲಿ ನೀನೇ ಇಂದು ಧರ್ಮದಿಂದ ವಿರಾಜಿಸುತ್ತಿರುವೆ. ರಾಜನ್! ನಾವೆಲ್ಲರೂ ನಿನ್ನ ಅನುಯಾಯಿಗಳು. ನಮಗೆ ನೀನು ರಾಜ ಮಾತ್ರನಲ್ಲದೇ ಗುರುವೂ ಆಗಿರುವೆ! ಭಾರತ! ಅನಘ! ನನ್ನ ಅನುಮತಿಯಂತೆ ನೀನೇ ಈ ಯಜ್ಞವನ್ನು ಮಾಡು. ನೀನು ಯಾವ ಕೆಲಸಗಳನ್ನು ಹೇಳುತ್ತೀಯೋ ಅವೆಲ್ಲವನ್ನೂ ನಾನು ಮಾಡುತ್ತೇನೆ. ಎಲ್ಲವನ್ನೂ ಮಾಡುವೆನೆಂದು ಸತ್ಯಪ್ರತಿಜ್ಞೆಯನ್ನು ಮಾಡುತ್ತೇನೆ. ಭಾರತ! ನೀನು ಯಜ್ಞಮಾಡಿದರೆ ಭೀಮಸೇನ-ಅರ್ಜುನರೂ ಹಾಗೆಯೇ ಮಾದ್ರವತೀ ಸುತರೂ ಯಜ್ಞವನ್ನು ಮಾಡಿದಂತಾಗಿ ಅದರ ಫಲವನ್ನು ಪಡೆದುಕೊಳ್ಳುತ್ತಾರೆ.”
ಕೃಷ್ಣನು ಹೀಗೆ ಹೇಳಲು ಧರ್ಮಪುತ್ರ ಯುಧಿಷ್ಠಿರನು ಮೇಧಾವೀ ವ್ಯಾಸನನ್ನು ಕರೆಯಿಸಿ ಈ ಮಾತುಗಳನ್ನಾಡಿದನು: “ಹಯಮೇಧಕ್ಕೆ ತತ್ತ್ವತಃ ಯಾವ ಕಾಲವು ಸರಿಯೆಂದು ನಿಮಗೆ ತಿಳಿದಿದೆಯೋ ಆಗ ನನಗೆ ಯಜ್ಞದೀಕ್ಷೆಯನ್ನು ನೀಡಿರಿ. ಈ ಕ್ರತುವು ನಿಮ್ಮನ್ನೇ ಅವಲಂಬಿಸಿದೆ!”
ವ್ಯಾಸನು ಹೇಳಿದನು: “ಕೌಂತೇಯ! ಕಾಲವು ಸನ್ನಿಹಿತವಾದೊಡನೆಯೇ ನಾನು ಪೈಲ ಮತ್ತು ಯಾಜ್ಞವಲ್ಕ್ಯನೇ ಮೊದಲಾದವರಿಂದ ಯಜ್ಞವಿಧಾನವನ್ನು ನಡೆಸಿಕೊಡುತ್ತೇನೆ. ಅದರಲ್ಲಿ ಸಂಶಯವಿಲ್ಲದಿರಲಿ! ಬರುವ ಚೈತ್ರ ಶುದ್ಧ ಪೂರ್ಣಿಮೆಯಂದು ನಿನ್ನ ದೀಕ್ಷೆಯು ನಡೆಯುತ್ತದೆ. ಯಜ್ಞಾರ್ಥಕ್ಕಾಗಿ ಸಾಮಗ್ರಿಗಳನ್ನು ಸಂಗ್ರಹಿಸು. ನಿನ್ನ ಯಜ್ಞಸಿದ್ಧಿಗಾಗಿ ಅಶ್ವವಿದ್ಯೆಯನ್ನು ತಿಳಿದ ಸೂತರು ಮತ್ತು ವಿಪ್ರರು ಪವಿತ್ರ ಕುದುರೆಯನ್ನು ಗುರುತಿಸಲಿ. ಯಥಾಶಾಸ್ತ್ರವಾಗಿ ಅದನ್ನು ಬಿಟ್ಟ ನಂತರ ಅದು ಸಾಗರವನ್ನೇ ವಸ್ತ್ರವಾಗುಳ್ಳ ಪೃಥ್ವಿಯಲ್ಲಿ ನಿನ್ನ ಯಶಸ್ಸು-ಹೆಸರನ್ನು ವರ್ಧಿಸುತ್ತಾ ಸುತ್ತಾಡಲಿ!”
ಹೀಗೆ ಹೇಳಲು ಪೃಥಿವೀಪತಿ ಪಾಂಡವನು ಬ್ರಹ್ಮವಾದಿಯು ಹೇಳಿದಂತೆ ಎಲ್ಲವನ್ನೂ ಮಾಡಿದನು. ಸಕಲ ಸಾಮಗ್ರಿಗಳನ್ನೂ ಸಂಗ್ರಹಿಸಿದನು. ಸಾಮಗ್ರಿಗಳನ್ನು ಒಟ್ಟುಗೂಡಿಸಿಕೊಂಡು ನೃಪ ಧರ್ಮಾತ್ಮಜನು ಅಮೇಯಾತ್ಮಾ ಕೃಷ್ಣದ್ವೈಪಾಯನನಿಗೆ ನಿವೇದಿಸಿದನು. ಆಗ ಮಹಾತೇಜಸ್ವೀ ವ್ಯಾಸನು ನೃಪ ಧರ್ಮಾತ್ಮಜನಿಗೆ ಹೇಳಿದನು: “ಯಥಾಕಾಲದಲ್ಲಿ ಯಥಾಯೋಗದಲ್ಲಿ ನಿನಗೆ ದೀಕ್ಷೆಯನ್ನು ನೀಡಲು ಸಿದ್ಧರಿದ್ದೇವೆ! ಕೌರವ! ನೀನು ಸುವರ್ಣಮಯ ಸ್ಫ್ಯಶವನ್ನೂ ಕೂರ್ಚವನ್ನೂ ಮಾಡಿಸು. ಬೇರೆ ಯಾವುದರ ಅವಶ್ಯಕತೆಯಿದೆಯೋ ಅವುಗಳೆಲ್ಲವನ್ನು ಸುವರ್ಣದಲ್ಲಿ ಮಾಡಿಸು. ಇಂದು ಯಥಾಕ್ರಮವಾಗಿ ಅಶ್ವವನ್ನು ಭೂಮಿಯ ಮೇಲೆ ಸಂಚರಿಸಲು ಬಿಟ್ಟುಬಿಡು. ಚೆನ್ನಾಗಿ ರಕ್ಷಿಸಲ್ಪಟ್ಟು ಅದು ಯಥಾಶಾಸ್ತ್ರವಾಗಿ ಸಂಚರಿಸಲಿ!”
ಯುಧಿಷ್ಠಿರನು ಹೇಳಿದನು: “ಬ್ರಹ್ಮನ್! ಈ ಅಶ್ವವನ್ನು ನಾನು ಬಿಟ್ಟಿದ್ದೇನೆ. ಇದು ಮನಬಂದಂತೆ ಇಡೀ ಭೂಮಿಯನ್ನು ಸುತ್ತಾಡುತ್ತದೆ. ಇದರ ಕುರಿತು ನೀವು ನನಗೆ ಸಲಹೆಯನ್ನು ನೀಡಬೇಕು. ಭೂಮಿಯನ್ನು ಸುತ್ತಾಡುತ್ತಾ ಬೇಕಾದಲ್ಲಿ ಹೋಗುವ ಈ ತುರಗವನ್ನು ಯಾರು ರಕ್ಷಿಸಬೇಕು ಎನ್ನುವುದನ್ನು ನೀವು ಹೇಳಬೇಕು!”
ಇದಕ್ಕೆ ಕೃಷ್ಣದ್ವೈಪಾಯನನು ಹೇಳಿದನು: “ಭೀಮಸೇನನ ತಮ್ಮ, ಸರ್ವಧನುಷ್ಮತರಲ್ಲಿ ಶ್ರೇಷ್ಠ, ಜಿಷ್ಣು ಸಹನಶೀಲ ಧೈರ್ಯವಂತ ಅರ್ಜುನನು ಇದನ್ನು ರಕ್ಷಿಸುತ್ತಾನೆ. ನಿವಾತಕವಚರನ್ನು ಸಂಹರಿಸಿದ ಇವನು ಭೂಮಿಯನ್ನೇ ಗೆಲ್ಲಲು ಶಕ್ತನಾಗಿದ್ದಾನೆ. ಅವನಲ್ಲಿ ದಿವ್ಯಾಸ್ತ್ರಗಳಿವೆ. ದಿವ್ಯ ಕವಚವಿದೆ. ಮತ್ತು ದಿವ್ಯವಾದ ಧನುಸ್ಸೂ-ಭತ್ತಳಿಕೆಗಳೂ ಇವೆ. ಅವನೇ ಈ ಕುದುರೆಯನ್ನು ಅನುಸರಿಸಿ ಹೋಗುತ್ತಾನೆ. ನೃಪಶ್ರೇಷ್ಠ! ಧರ್ಮಾರ್ಥಕುಶಲನೂ ಸರ್ವವಿದ್ಯಾವಿಶಾರದನೂ ಆದ ಅವನೇ ಯಥಾಶಾಸ್ತ್ರವಾಗಿ ಈ ಕುದುರೆಯನ್ನು ತಿರುಗಾಡಿಸುತ್ತಾನೆ. ರಾಜಪುತ್ರ ಮಹಾಬಾಹು ಶ್ಯಾಮವರ್ಣಿ ರಾಜೀವಲೋಚನ ಅಭಿಮನ್ಯುವಿನ ತಂದೆ ಈ ವೀರನೇ ಇದನ್ನು ಅನುಸರಿಸಿ ಹೋಗುತ್ತಾನೆ. ತೇಜಸ್ವೀ ಕೌಂತೇಯ ಅಮಿತವಿಕ್ರಮಿ ಭೀಮಸೇನ ಮತ್ತು ನಕುಲರು ರಾಷ್ಟ್ರವನ್ನು ರಕ್ಷಿಸಲು ಸಮರ್ಥರಾಗಿದ್ದಾರೆ. ಬುದ್ಧಿಮಾನ್ ಮಹಾಯಶಸ್ವಿ ಸಹದೇವನಾದರೋ ಕುಟುಂಬರಕ್ಷಣೆಯ ಸಲುವಾಗಿ ಸಮಸ್ತ ಕಾರ್ಯಗಳನ್ನೂ ಕೈಗೊಳ್ಳುತ್ತಾನೆ.”
ಅವನು ಹೇಳಿದಂತೆ ಎಲ್ಲವನ್ನೂ ಯಥಾನ್ಯಾಯವಾಗಿ ಕುರುಕುಲೋದ್ವಹ ಯುಧಿಷ್ಠಿರನು ಮಾಡಿ ಕುದುರೆಯ ಕುರಿತಾಗಿ ಫಲ್ಗುನನಿಗೆ ಹೀಗೆ ಹೇಳಿದನು: “ವೀರ ಅರ್ಜುನ! ಇಲ್ಲಿ ಬಾ! ನೀನು ಈ ಕುದುರೆಯನ್ನು ರಕ್ಷಿಸಬೇಕು. ಬೇರೆ ಯಾವ ಮಾನವನೂ ಇದನ್ನು ರಕ್ಷಿಸಲು ಅರ್ಹನಲ್ಲ. ಒಂದು ವೇಳೆ ನರಾಧಿಪರು ನಮ್ಮನ್ನು ವಿರೋಧಿಸಿದರೂ ಅವರೊಡನೆ ಯುದ್ಧವಾಗದ ರೀತಿಯಲ್ಲಿ ನೀನು ಕಾರ್ಯನಿರ್ವಹಿಸಬೇಕು. ಎಲ್ಲರಿಗೂ ನನ್ನ ಈ ಯಜ್ಞದ ಕುರಿತು ತಿಳಿಸಬೇಕು ಮತ್ತು ಯಜ್ಞದ ಸಮಯಕ್ಕೆ ಬರುವಂತೆ ಎಲ್ಲ ಪಾರ್ಥಿವರನ್ನೂ ಆಹ್ವಾನಿಸಬೇಕು.”
ತಮ್ಮ ಸವ್ಯಸಾಚಿಗೆ ಹೀಗೆ ಹೇಳಿ ಧರ್ಮಾತ್ಮ ಯುಧಿಷ್ಠಿರನು ಭೀಮ-ನಕುಲರನ್ನು ಪುರದ ರಕ್ಷಣೆಗೆ ವಿಧಿಸಿದನು. ಯುಧಿಷ್ಠಿರನು ಮಹೀಪಾಲ ಧೃತರಾಷ್ಟ್ರನ ಅನುಮತಿಯನ್ನು ಪಡೆದು ಸೇನಾಪತಿ ಸಹದೇವನನ್ನು ಕುಟುಂಬರಕ್ಷಣೆಗೆ ನೇಮಿಸಿದನು.
ಅರ್ಜುನನ ಅಶ್ವಾನುಸರಣೆ
ದೀಕ್ಷಾಕಾಲವು ಬಂದೊದಗಿದಾಗ ಆ ಮಹಾ ಋತ್ವಿಜರು ಪಾರ್ಥಿವನಿಗೆ ವಿಧಿವತ್ತಾಗಿ ಅಶ್ವಮೇಧದ ದೀಕ್ಷೆಯನ್ನು ನೀಡಿದರು. ಪಶುಬಂಧಗಳನ್ನೂ ಮಾಡಿ ದೀಕ್ಷಿತ ಪಾಂಡುನಂದನ ಮಹಾತೇಜಸ್ವಿ ಧರ್ಮರಾಜನು ಋತ್ವಿಗರೊಂದಿಗೆ ಶೋಭಿಸಿದನು. ಅಶ್ವಮೇಧದ ಕುದುರೆಯನ್ನು ಸ್ವಯಂ ಬ್ರಹ್ಮವಾದೀ ಅಮಿತತೇಜಸ್ವೀ ವ್ಯಾಸನೇ ಶಾಸ್ತ್ರವಿಧಿಗಳಂತೆ ಬಿಟ್ಟನು. ಆಗ ದೀಕ್ಷಿತನಾಗಿದ್ದ ರಾಜಾ ಧರ್ಮರಾಜನು ಚಿನ್ನದ ಹಾರಗಳನ್ನು ಧರಿಸಿ, ಸುವರ್ಣಕಂಠನಾಗಿ ಪ್ರಜ್ವಲಿಸುತ್ತಿರುವ ಅಗ್ನಿಯಂತೆಯೇ ಕಾಣುತ್ತಿದ್ದನು. ರೇಷ್ಮೆಯ ವಸ್ತ್ರವನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ದಂಡಪಾಣಿಯಾಗಿದ್ದ ದ್ಯುತಿಮಾನ್ ಧರ್ಮಜನು ಆಗ ಅಧ್ವರದಲ್ಲಿದ್ದ ಪ್ರಜಾಪತಿಯಂತೆಯೇ ಶೋಭಿಸಿದನು. ಅದೇ ವೇಷಧಾರಣೆ ಮಾಡಿದ್ದ ಋತ್ವಿಜರೆಲ್ಲರೂ ಮತ್ತು ಅರ್ಜುನನೂ ಕೂಡ ಪ್ರಜ್ವಲಿಸುತ್ತಿರುವ ಅಗ್ನಿಯಂತೆ ಶೋಭಿಸುತ್ತಿದ್ದರು. ಧರ್ಮರಾಜನ ಶಾಸನದಂತೆ ಶ್ವೇತಾಶ್ವ ಧನಂಜಯನು ಕೃಷ್ಣವರ್ಣದ ಆ ಯಜ್ಞಾಶ್ವವನ್ನು ವಿಧಿವತ್ತಾಗಿ ಅನುಸರಿಸಿ ಹೋದನು. ಗೋಧಾಂಗುಲಿಗಳನ್ನು ಕಟ್ಟಿಕೊಂಡು ಅವನು ಗಾಂಡೀವವನ್ನು ಟೇಂಕರಿಸುತ್ತಾ ಸಂತೋಷದಿಂದ ಆ ಅಶ್ವವನ್ನು ಹಿಂಬಾಲಿಸಿ ಹೋದನು. ಕುಮಾರರಿಂದ ಹಿಡಿದು ಎಲ್ಲರೂ ಪ್ರಯಾಣಕ್ಕೆ ಹೊರಟಿದ್ದ ಆ ಕುರುಶ್ರೇಷ್ಠ ಧನಂಜಯನನ್ನು ನೋಡಲು ಪುರಕ್ಕೆ ಆಗಮಿಸಿದ್ದರು. ಕುರೆಯನ್ನೂ ಮತ್ತು ಕುದುರೆಯನ್ನು ಅನುಸರಿಸಿಹೋಗುತ್ತಿದ್ದವರನ್ನೂ ನೋಡಲು ಬಂದ ಅವರ ಅನ್ಯೋನ್ಯ ನುಗ್ಗಾಟದಿಂದ ಎಲ್ಲರ ಮುಖಗಳಲ್ಲಿಯೂ ಬೆವರು ಸುರಿದು ಸೆಖೆಯುಂಟಾಯಿತು. ಆಗ ಕುಂತೀಪುತ್ರ ಧನಂಜಯನನ್ನು ನೋಡಲು ಬಂದಿದ್ದ ಜನರ ಕೂಗು ಹತ್ತು ದಿಕ್ಕುಗಳನ್ನೂ ತುಂಬಿತು. “ಇಗೋ! ದೀಪ್ತಿಮಾನ್ ಮಹಾಬಾಹು ಕೌಂತೇಯನು ಉತ್ತಮ ಧನುಸ್ಸನ್ನು ಸೆಳೆಯುತ್ತಾ ತುರಗವನ್ನು ಹಿಂಬಾಲಿಸಿ ಹೋಗುತ್ತಿದ್ದಾನೆ!” ಉದಾರಬುದ್ಧಿ ಜಿಷ್ಣುವಿಗೆ “ಭಾರತ! ನಿನಗೆ ಮಂಗಳವಾಗಲಿ! ನಿನ್ನ ಪ್ರಯಾಣವು ಸುಖಕರವಾಗಲಿ! ಕ್ಷೇಮದಿಂದ ಹಿಂದಿರುಗಿ ಬಾ!” ಎಂದು ಕೂಗಿ ಹೇಳುತ್ತಿದ್ದುದು ಕೇಳಿಬರುತ್ತಿತ್ತು. ಇನ್ನು ಇತರ ಜನರು “ಈ ಜನಜಂಗುಳಿಯಲ್ಲಿ ಅರ್ಜುನನಾಗಲೀ ಅವನ ಧನುಸ್ಸಾಗಲೀ ಕಾಣುತ್ತಿಲ್ಲ! ಭಯಂಕರ ಶಬ್ಧಮಾಡುವ ವಿಶೃತ ಗಾಂಡೀವ ಧನುಸ್ಸೇ ಇದು! ಅವನಿಗೆ ಮಂಗಳವಾಗಲಿ! ಅವನ ಪ್ರಯಾಣವು ನಿರ್ಭಯವಾಗಿರಲಿ! ಕ್ಷೇಮದಿಂದ ಇವನು ಹಿಂದಿರುಗುವುದು ನಿಶ್ಚಯ! ಆಗ ಅವನನ್ನು ಪುನಃ ನೋಡುತ್ತೇವೆ!” ಎಂದು ಅಂದುಕೊಂಡರು. ಈ ರೀತಿಯ ಪುರುಷ-ಸ್ತ್ರೀಯರ ಮಧುರ ಮಾತುಗಳನ್ನು ಪುನಃ ಪುನಃ ಅರ್ಜುನನು ಕೇಳಿಸಿಕೊಂಡನು. ಯಜ್ಞಕರ್ಮಗಳಲ್ಲಿ ಕುಶಲನಾದ ಯಾಜ್ಞವಲ್ಕ್ಯನ ವೇದಪಾರಗ ಶಿಷ್ಯನೋರ್ವನು ಶಾಂತಿಗಾಗಿ ಪಾರ್ಥನ ಜೊತೆ ಹೊರಟನು. ಅನೇಕ ವೇದಪಾರಗ ಬ್ರಾಹ್ಮಣರೂ ಕ್ಷತ್ರಿಯರೂ ಮತ್ತು ವೈಶ್ಯರೂ ಆ ಮಹಾತ್ಮನನ್ನು ಹಿಂಬಾಲಿಸಿ ಹೋದರು. ಅಸ್ತ್ರತೇಜಸ್ವೀ ಪಾಂಡವರು ಜಯಿಸಿದ್ದ ದೇಶಗಳಿಗೆ ಹೋಗುತ್ತಾ ಆ ಕುದುರೆಯು ಪೃಥ್ವಿಯಲ್ಲಿ ಸಂಚರಿಸತೊಡಗಿತು. ಆ ಕುದುರೆಯು ಪ್ರದಕ್ಷಿಣಾಕಾರವಾಗಿ ಭೂಮಿಯನ್ನು ಸಂಚರಿಸಿತು. ಮೊದಲು ಅದು ಉತ್ತರದ ಕಡೆ ಹೋಯಿತು. ಆ ಉತ್ತಮ ಹಯವು ಅನೇಕ ಪಾರ್ಥಿವರ ರಾಷ್ಟ್ರಗಳಲ್ಲಿ ಪದವಿನ್ಯಾಸ ಮಾಡಿ ಮೆಲ್ಲನೆ ಪೂರ್ವಕ್ಕೆ ತಿರುಗಿತು. ಮಹಾರಥ ಶ್ವೇತಾಶ್ವನು ಅದನ್ನು ಹಿಂಬಾಲಿಸಿಯೇ ಹೋಗುತ್ತಿದ್ದನು. ಅಲ್ಲಿ ಬಾಂಧವರನ್ನು ಕಳೆದುಕೊಂಡಿದ್ದ ಸಾವಿರಾರು ಕ್ಷತ್ರಿಯ ರಾಜರು ಯುದ್ಧಮಾಡಿದರು. ಅವರ ಲೆಕ್ಕವೇ ಇಲ್ಲ. ಹಿಂದೆ ಪಾಂಡವರಿಂದ ರಣದಲ್ಲಿ ಪರಾಜಿತಗೊಂಡಿದ್ದ ಖಡ್ಗ-ಧನುರ್ಧರರಾದ ಅನೇಕ ಕಿರಾತರು, ಯವನರು ಮತ್ತು ಬಹುವಿಧದ ಅನ್ಯ ಮ್ಲೇಚ್ಚರು ಯುದ್ಧಮಾಡಿದರು. ಸೈನಿಕ-ವಾಹನಗಳಿಂದ ಹೃಷ್ಟ-ಪುಷ್ಟರಾಗಿದ್ದ ಅನೇಕ ಯುದ್ಧದುರ್ಮದ ಆರ್ಯ ಪೃಥಿವೀಪಾಲರು ಕೂಡ ಪಾಂಡುಪುತ್ರನನ್ನು ಎದುರಿಸಿದರು. ಹೀಗೆ ಅಲ್ಲಲ್ಲಿ ನಾನಾ ದೇಶನಿವಾಸೀ ಮಹೀಪಾಲರು ಮತ್ತು ಅರ್ಜುನರ ನಡುವೆ ಯುದ್ಧಗಳು ನಡೆದವು. ಯಾವ ಯುದ್ಧಗಳು ಎರಡೂ ಪಕ್ಷಗಳಿಗೆ ಕಷ್ಟಕರವಾಗಿದ್ದವೋ ಮತ್ತು ಮಹತ್ವದ್ದಾಗಿದ್ದವೋ ಅವುಗಳ ಕುರಿತಾದ ವರ್ಣನೆಯು ಇಲ್ಲಿದೆ.
ತ್ರೈವರ್ಗವಿಜಯ
ಯುದ್ಧದಲ್ಲಿ ಪುತ್ರರು ಮತ್ತು ಆಪ್ತರನ್ನು ಕಳೆದುಕೊಂಡಿದ್ದ, ಮಹಾರಥರೆಂದು ಖ್ಯಾತರಾಗಿದ್ದ ಮತ್ತು ಕಿರೀಟಿಯ ಬದ್ಧವೈರಿಗಳಾಗಿದ್ದ ತ್ರಿಗರ್ತರೊಡನೆ ಯುದ್ಧವು ನಡೆಯಿತು. ಯಜ್ಞದ ಆ ಉತ್ತಮ ಕುದುರೆಯು ತಮ್ಮ ದೇಶದ ಗಡಿಯನ್ನು ತಲುಪಿದುದನ್ನು ತಿಳಿದುಕೊಂಡ ಆ ವೀರರು ಕವಚಧಾರಿಗಳಾಗಿ ಅದನ್ನು ತಡೆದರು. ಆ ರಥಿಗಳು ತೂಣೀರಗಳನ್ನು ಕಟ್ಟಿಕೊಂಡು ಅಲಂಕೃತ ಕುದುರೆಗಳೊಂದಿಗೆ ಕುದುರೆಯನ್ನು ಸುತ್ತುವರೆದು ಅದನ್ನು ಕಟ್ಟಿಹಾಕಲು ತೊಡಗಿದರು. ಆಗ ಅರಿಂದಮ ಕಿರೀಟಿಯು ರಾಜಾ ಯುಧಿಷ್ಠಿರನು ಬಯಸಿದಂತೆ ಯೋಚಿಸಿ ಸಾಂತ್ವನಪೂರ್ವಕವಾಗಿ ಆ ವೀರರನ್ನು ತಡೆದನು. ಅವನನ್ನು ಅನಾದರಿಸಿ ಅವರೆಲ್ಲರೂ ಶರಗಳಿಂದ ಹೊಡೆಯತೊಡಗಲು, ತಮೋರಜಗುಣಗಳಿಂದ ತುಂಬಿಹೋಗಿದ್ದ ಅವರನ್ನು ಕಿರೀಟಿಯು ತಡೆದನು. ಆಗ ಜಿಷ್ಣುವು ನಸುನಗುತ್ತಾ ಅವರಿಗೆ “ಅಧರ್ಮಜ್ಞರೇ! ಹಿಂದಿರುಗಿರಿ! ಜೀವವನ್ನು ಉಳಿಸಿಕೊಳ್ಳುವುದೇ ನಿಮಗೆ ಶ್ರೇಯಸ್ಕರವು!” ಎಂದನು. “ಪಾರ್ಥ! ಬಾಂಧವರನ್ನು ಕಳೆದುಕೊಂಡ ಪಾರ್ಥಿವರನ್ನು ನೀನು ಕೊಲ್ಲಬಾರದು!” ಎಂದು ಧರ್ಮರಾಜನು ಹೇಳಿ ತಡೆದಿದ್ದುದರಿಂದಲೇ ಆ ವೀರನು ಹೀಗೆ ಹೇಳಿದನು. ಧೀಮತ ಧರ್ಮರಾಜನ ಆ ಮಾತನ್ನು ಕೇಳಿ ಅವನು ಅವರನ್ನು ತಡೆದನು. ಆದರೆ ಅವರು ಹಿಂದಿರುಗಲಿಲ್ಲ. ಆಗ ಧನಂಜಯನು ತಿಗರ್ತ ರಾಜ ಸೂರ್ಯವರ್ಮನನ್ನು ಯುದ್ಧದಲ್ಲಿ ಶರಜಾಲದಿಂದ ಮುಚ್ಚಿ ಜೋರಾಗಿ ನಕ್ಕನು. ಆಗ ಅವರು ರಥಘೋಷ ಮತ್ತು ರಥಚಕ್ರಗಳ ಶಬ್ಧಗಳೊಂದಿಗೆ ಎಲ್ಲ ದಿಕ್ಕುಗಳನ್ನೂ ಮೊಳಗಿಸುತ್ತಾ ಧನಂಜಯನನ್ನು ಆಕ್ರಮಣಿಸಿದರು. ಸೂರ್ಯವರ್ಮನು ಪಾರ್ಥನ ಮೇಲೆ ನೂರಾರು ನತಪರ್ವ ಶರಗಳನ್ನು ಪ್ರಯೋಗಿಸಿ ತನ್ನ ಹಸ್ತಲಾಘವವನ್ನು ಪ್ರದರ್ಶಿಸಿದನು. ಧನಂಜಯನನ್ನು ಕೊಲ್ಲಲು ಬಯಸಿದ ಅವನ ಅನ್ಯ ಮಹೇಷ್ವಾಸ ಅನುಯಾಯಿಗಳೂ ಅವನ ಮೇಲೆ ಶರವರ್ಷಗಳನ್ನೇ ಸುರಿಸಿದರು. ಆಗ ಪಾಂಡವನು ಶಿಂಜಿನಿಯ ಮುಖದಿಂದ ಹೊರಟ ಅನೇಕ ಶರಗಳಿಂದ ಅವುಗಳನ್ನು ತುಂಡರಿಸಲು ಅವು ಭೂಮಿಯ ಮೇಲೆ ಬಿದ್ದವು. ಸೂರ್ಯವರ್ಮನ ತಮ್ಮ ತೇಜಸ್ವೀ ಯುವಕ ಕೇತುವರ್ಮನು ಅಣ್ಣನ ಪರವಾಗಿ ಮಹಾತ್ಮ ಪಾಂಡವನೊಡನೆ ಯುದ್ಧಮಾಡಿದನು. ಯುದ್ಧಕ್ಕೆ ಕೇತುವರ್ಮನು ಇಳಿದುದನ್ನು ನೋಡಿ ಪರವೀರಹ ಬೀಭತ್ಸುವು ನಿಶಿತ ಬಾಣಗಳಿಂದ ಅವನನ್ನು ಸಂಹರಿಸಿದನು. ಕೇತುವರ್ಮನು ಹತನಾಗಲು ಮಹಾರಥ ಧೃತವರ್ಮನು ರಥಗಳಿಂದ ಸುತ್ತುವರೆದು ಶರಗಳಿಂದ ಜಿಷ್ಣುವನ್ನು ಮುಸುಕಿದನು. ಬಾಲಕ ವೀರ್ಯವಾನ್ ಮಹಾತೇಜಸ್ವೀ ಧೃತವರ್ಮನ ಶೀಘ್ರತೆಯನ್ನು ನೋಡಿ ಗುಡಾಕೇಶನು ಸಂತುಷ್ಟನಾದನು. ಅವನು ಶರಗಳ ಸಂಧಾನ ಮಾಡುತ್ತಿರುವುದಾಗಲೀ ಪ್ರಯೋಗಿಸುತ್ತಿರುವುದಾಗಲೀ ಕಾಣುತ್ತಲೇ ಇರಲಿಲ್ಲ. ಶರಗಳನ್ನು ಸುರಿಸುತ್ತಿರುವುದನ್ನು ಮಾತ್ರ ಪಾಕಶಾಸನಿಯು ನೋಡಿದನು. ಯುದ್ಧದಲ್ಲಿ ಧೃತವರ್ಮನ ಉತ್ಸಾಹವನ್ನು ನೋಡಿ ಅರ್ಜುನನು ಒಂದು ಕ್ಷಣ ರಣದಲ್ಲಿಯೇ ಮನಸಾ ಅವನನ್ನು ಶ್ಲಾಘಿಸಿದನು. ಪನ್ನಗದಂತೆ ಕ್ರುದ್ಧನಾದ ಅವನನ್ನು ಕುರುವೀರನು ನಸುನಗುತ್ತಲೇ ಪ್ರೀತಿಪೂರ್ವಕವಾಗಿ ಅವನ ಪ್ರಾಣವನ್ನು ತೆಗೆಯಲಿಲ್ಲ. ಹಾಗೆ ಅಮಿತತೇಜಸ್ವಿ ಪಾರ್ಥನಿಂದ ರಕ್ಷಿಸಲ್ಪಟ್ಟ ಧೃತವರ್ಮನು ವಿಜಯನ ಮೇಲೆ ತೀಕ್ಷ್ಣ ಶರವನ್ನು ಪ್ರಯೋಗಿಸಿದನು. ಕೂಡಲೇ ಅದು ವಿಜಯನ ಕೈಯಲ್ಲಿ ಜೋರಾಗಿ ಬಂದು ನೆಟ್ಟಿಕೊಂಡಿತು. ಅವನು ದುಃಖದಿಂದ ಗಾಂಡೀವವನ್ನು ಬಿಡಲು ಅದು ಭೂತಲದಲ್ಲಿ ಬಿದ್ದಿತು. ಸವ್ಯಸಾಚಿಯ ಕರದಿಂದ ಜಾರಿ ಬಿದ್ದ ಆ ಧನುಸ್ಸು ಇಂದ್ರನ ಆಯುಧದಂತೆಯೇ ಕಾಣುತ್ತಿತ್ತು. ಆ ದಿವ್ಯ ಮಹಾಧನುಸ್ಸು ಕೆಳಗೆ ಬೀಳಲು ಯುದ್ಧದಲ್ಲಿ ಧೃತವರ್ಮನು ಅಟ್ಟಹಾಸದಿಂದ ನಗತೊಡಗಿದನು. ಆಗ ರೋಷಾನ್ವಿತನಾದ ಜಿಷ್ಣುವು ಕೈಗಳಿಂದ ರಕ್ತವನ್ನು ಒರೆಸಿಕೊಂಡು ಆ ದಿವ್ಯ ಧನುಸ್ಸನ್ನು ಎತ್ತಿಕೊಂಡು ಶರವರ್ಷವನ್ನು ಸುರಿಸಿದನು. ಅವನ ಆ ಕರ್ಮವನ್ನು ಪ್ರಶಂಸಿಸುತ್ತಿದ್ದ ನಾನಾವಿಧದ ಭೂತಗಳ ಹಲಹಲಾ ಶಬ್ಧವು ಗಗನವನ್ನು ಮುಟ್ಟಿತು. ಕಾಲಾಂತಕ ಯಮನಂತೆ ಕ್ರುದ್ಧನಾಗಿದ್ದ ಜಿಷ್ಣುವನ್ನು ನೋಡಿ ತೈಗರ್ತಕ ಯೋಧರು ತ್ವರೆಮಾಡಿ ಅವನನ್ನು ಸುತ್ತುವರೆದು ಮುತ್ತಿಗೆ ಹಾಕಿದರು. ಧೃತವರ್ಮನನ್ನು ರಕ್ಷಿಸುವ ಸಲುವಾಗಿ ಅವರು ಗುಡಾಕೇಶನನ್ನು ಸುತ್ತುವರೆದು ಮುತ್ತಿದರು. ಆಗ ಧನಂಜಯನು ಕ್ರೋಧಿತನಾದನು. ಅವನು ಮಹೇಂದ್ರನ ವಜ್ರಗಳಿಗೆ ಸಮಾನ ನಿಶಿತ ಉಕ್ಕಿನ ಶರಗಳಿಂದ ಅವರ ಹದಿನೆಂಟು ಯೋಧರನ್ನು ಸಂಹರಿಸಿದನು. ಅವರ ಸೇನೆಯು ತುಂಡಾಗುತ್ತಿರುವುದನ್ನು ನೋಡಿ ಅದನ್ನು ಧನಂಜಯನು ತ್ವರೆಮಾಡಿ ಸರ್ಪವಿಷದಾಕಾರ ಶರಗಳಿಂದ ಪ್ರಹರಿಸಿದನು. ಆ ತ್ರೈಗರ್ತಕ ಮಹಾರಥರೆಲ್ಲರೂ ಧನಂಜಯನ ಶರಗಳಿಂದ ಪೀಡಿತರಾಗಿ ಭಗ್ನಮನಸ್ಕರಾಗಿ ಎಲ್ಲ ದಿಕ್ಕುಗಳಲ್ಲಿಯೂ ಓಡಿಹೋದರು. ಅವರು ಪುರುಷವ್ಯಾಘ್ರ ಸಂಶಪ್ತಕನಿಷೂದನನಿಗೆ ಹೇಳಿದರು: “ನಾವೆಲ್ಲರೂ ನಿನ್ನ ಕಿಂಕರರು. ಎಲ್ಲರೂ ನಿನ್ನ ವಶದಲ್ಲಿ ಬಂದಿದ್ದೇವೆ. ವಿನೀತರಾಗಿ ಸೇವಕರಂತೆ ನಿಂತಿರುವ ನಮಗೆ ಆಜ್ಞಾಪಿಸು! ನಿನಗೆ ಪ್ರಿಯವಾದುದೆಲ್ಲವನ್ನೂ ನಾವು ಮಾಡುತ್ತೇವೆ!” ಅವರೆಲ್ಲರ ಮಾತುಗಳನ್ನು ಕೇಳಿ ಅರ್ಜುನನು “ನೃಪರೇ! ನಮ್ಮ ಶಾಸನವನ್ನು ಸ್ವೀಕರಿಸಿಕೊಂಡು ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ!” ಎಂದು ಆಜ್ಞಾಪಿಸಿದನು.
ವಜ್ರದತ್ತ ಪರಾಜಯ
ಆ ಉತ್ತಮ ಕುದುರೆಯು ಪ್ರಾಗ್ಜೋತಿಷಪುರವನ್ನು ತಲುಪಿ ಅಲ್ಲಿ ಸಂಚರಿಸತೊಡಗಿತು. ಆಗ ರಣಕರ್ಕಶ ಭಗದತ್ತನ ಮಗನು ಅದನ್ನು ಕಟ್ಟಿಹಾಕಲು ಹೊರಟನು. ಪಾಂಡುಪುತ್ರನ ಆ ಕುದುರೆಯು ತನ್ನ ರಾಜ್ಯದ ಗಡಿಯಲ್ಲಿ ಬರಲು ಮಹೀಪತಿ ವಜ್ರದತ್ತನು ಯುದ್ಧಮಾಡಿದನು. ನೃಪ ಭಗದತ್ತನ ಮಗನು ನಗರದಿಂದ ಹೊರಟು ಬರುತ್ತಿದ್ದ ಕುದುರೆಯನ್ನು ಬಂಧಿಸಿ ಅದರೊಡನೆ ನಗರಾಭಿಮುಖವಾಗಿ ಹೊರಟನು. ಅದನ್ನು ನೋಡಿ ಮಹಾಬಾಹು ಕುರುವೃಷಭ ಅರ್ಜುನನು ಗಾಂಡೀವವನ್ನು ಟೇಂಕರಿಸಿ ಬೇಗನೇ ಅವನನ್ನು ಆಕ್ರಮಣಿಸಿದನು. ಗಾಂಡೀವದಿಂದ ಹೊರಟ ಬಾಣಗಳಿಂದ ಮೋಹಿತನಾದ ಆ ವೀರ ನೃಪನು ಕುದುರೆಯನ್ನು ಬಿಟ್ಟು ಪಾರ್ಥನನ್ನು ಆಕ್ರಮಣಿಸಿದನು. ಕವಚಧಾರಿಯಾಗಿದ್ದ ಆ ನೃಪೋತ್ತಮನು ಪುನಃ ತನ್ನ ನಗರವನ್ನು ಪ್ರವೇಶಿಸಿ, ಪ್ರಮುಖ ಆನೆಯನ್ನು ಏರಿ ಯುದ್ಧಾಕಾಂಕ್ಷೆಯಿಂದ ಹೊರಬಂದನು. ಆ ಮಹಾರಥನ ನೆತ್ತಿಯ ಮೇಲೆ ಶ್ವೇತಚ್ಛತ್ರವು ಬೆಳಗುತ್ತಿತ್ತು. ಬಿಳಿಯ ಚಾಮರಗಳನ್ನು ಬೀಸುತ್ತಿದ್ದರು. ಪಾಂಡವರ ಮಹಾರಥ ಪಾರ್ಥನನ್ನು ಸಮೀಪಿಸಿ ಅವನು ಬಾಲ್ಯತನ- ಮೂರ್ಖತೆಗಳಿಂದ ಕೌರವ್ಯನನ್ನು ಯುದ್ಧಕ್ಕೆ ಆಹ್ವಾನಿಸಿದನು. ಸಂಕ್ರುದ್ಧನಾದ ಅವನು ಮದೋದಕವನ್ನು ಸುರಿಸುತ್ತಿದ್ದ ಪರ್ವತೋಪಮ ಮಹಾಗಜವನ್ನು ಶ್ವೇತಹಯ ಅರ್ಜುನನ ಮೇಲೆ ಎರಗುವಂತೆ ಪ್ರಚೋದಿಸಿದನು. ಮೇಘವು ಮಳೆಯನ್ನು ಸುರಿಸುವಂತೆ ಮದೋದಕವನ್ನು ಸುರಿಸುತ್ತಿದ್ದ ಆ ಯುದ್ಧದುರ್ಮದ ಅನೆಯು ಶಾಸ್ತ್ರವತ್ತಾಗಿ ಯುದ್ಧಕ್ಕಾಗಿಯೇ ಸಜ್ಜುಗೊಳಿಸಲ್ಪಟ್ಟಿತ್ತು. ರಾಜನ ಅಂಕುಶದಿಂದ ತಿವಿಯಲ್ಪಟ್ಟು ಪ್ರಚೋದನೆಗೊಂಡ ಆ ಮಹಾಬಲ ಆನೆಯು ಜಿಗಿದು ಆಕಾಶಕ್ಕೇ ಹಾರುತ್ತಿದೆಯೋ ಎನ್ನುವಂತೆ ತೋರುತ್ತಿತ್ತು. ತನ್ನ ಮೇಲೆ ಬೀಳಲು ಬರುತ್ತಿದ್ದ ಅದನ್ನು ನೋಡಿ ಧನಂಜಯನು ಭೂಮಿಯ ಮೇಲೆ ನಿಂತುಕೊಂಡೇ ಆನೆಯನ್ನೇರಿದ್ದ ವಜ್ರದತ್ತನೊಡನೆ ಯುದ್ಧಮಾಡಿದನು. ಸಂಕ್ರುದ್ಧನಾದ ವಜ್ರದತ್ತನಾದರೋ ಧನಂಜಯನ ಮೇಲೆ ಶಲಭಗಳಂತಿರುವ ಅಗ್ನಿಸಂಕಾಶ ತೋಮರಗಳನ್ನು ವೇಗವಾಗಿ ಪ್ರಯೋಗಿಸಿದನು. ಆಕಾಶದಲ್ಲಿ ಹಾರಿ ಬರುತ್ತಿದ್ದ ಅವುಗಳನ್ನು ಅರ್ಜುನನು ಆಕಾಶಮಾರ್ಗವಾಗಿ ಹಾರುತ್ತಿದ್ದ ಗಾಂಡೀವದಿಂದ ಬಿಟ್ಟ ಶರಗಳಿಂದ ಎರಡು-ಮೂರು ಭಾಗಗಳನ್ನಾಗಿ ತುಂಡರಿಸಿದನು. ತೋಮರಗಳು ತುಂಡಾಗಿದ್ದುದನ್ನು ನೋಡಿ ಭಗದತ್ತನ ಮಗನು ತ್ವರೆಯಿಂದ ಪಾಂಡವನ ಮೇಲೆ ನಿರಂತರವಾಗಿ ಬಾಣಗಳನ್ನು ಸುರಿಸಿದನು. ಆಗ ಸಂಕ್ರುದ್ಧನಾದ ಅರ್ಜುನನು ತ್ವರೆಮಾಡಿ ಚಿನ್ನದ ರೆಕ್ಕೆಗಳುಳ್ಳ ಜಿಹ್ಮಗಗಳನ್ನು ಭಗದತ್ತಾತ್ಮಜನ ಮೇಲೆ ಪ್ರಯೋಗಿಸಿದನು. ಆ ಮಹಾಯುದ್ಧದಲ್ಲಿ ಮಹಾತೇಜಸ್ವೀ ಬಾಣಗಳಿಂದ ಹೊಡೆಯಲ್ಪಟ್ಟ ವಜ್ರದತ್ತನು ಅತ್ಯಂತ ಗಾಯಗೊಂಡು ಭೂಮಿಯ ಮೇಲೆ ಬಿದ್ದನು. ಆದರೆ ಅವನ ಸ್ಮೃತಿಯು ತಪ್ಪಿರಲಿಲ್ಲ. ಪುನಃ ಅವ್ಯಗ್ರನಾದ ಅವನು ರಣದಲ್ಲಿ ಆ ಮಹಾಗಜವನ್ನು ಏರಿ ವಿಜಯ ಅರ್ಜುನನ ಮೇಲೆ ಆ ಆನೆಯು ಆಕ್ರಮಣಿಸುವಂತೆ ಮಾಡಿದನು. ಆಗ ಸಂಕ್ರುದ್ಧ ಜಿಷ್ಣುವು ಪೊರೆಕಳಚಿದ ಸರ್ಪಗಳಂತೆ ಮತ್ತು ಅಗ್ನಿಗಳಂತೆ ಪ್ರಜ್ವಲಿಸುತ್ತಿದ್ದ ಬಾಣಗಳನ್ನು ಆ ಆನೆಯ ಮೇಲೆ ಪ್ರಯೋಗಿಸಿದನು. ಅವುಗಳಿಂದ ಹೊಡೆಯಲ್ಪಟ್ಟ ಆ ಮಹಾಗಜವು ರಕ್ತವನ್ನು ಸುರಿಸತೊಡಗಿ, ಗೈರಿಕಾದಿ ಧಾತುಗಳಿಂದ ಮಿಶ್ರಿತವಾದ ಕೆಂಪು ನೀರನ್ನು ಸುರಿಸುತ್ತಿದ್ದ ಹಿಮಾಲಯ ಪರ್ವತದಂತೆಯೇ ಕಾಣುತ್ತಿತ್ತು.
ಹೀಗೆ ವೃತ್ರನೊಡನೆ ಶತಕ್ರತುವಿನ ಯುದ್ಧದಂತಿದ್ದ ಅರ್ಜುನ ಮತ್ತು ನರೇಂದ್ರ ವಜ್ರದತ್ತನ ನಡುವಿನ ಯುದ್ಧವು ಮೂರುರಾತ್ರಿಗಳು ನಡೆಯಿತು. ನಾಲ್ಕನೆಯ ದಿವಸ ಮಹಾಬಲ ವಜ್ರದತ್ತನು ಗಟ್ಟಿಯಾಗಿ ಅಟ್ಟಹಾಸದಿಂದ ನಗುತ್ತಾ ಈ ಮಾತನ್ನಾಡಿದನು: “ಅರ್ಜುನ! ಅರ್ಜುನ! ನಿಲ್ಲು! ಜೀವಸಹಿತವಾಗಿ ನನ್ನಿಂದ ನೀನು ಬಿಡುಗಡೆ ಹೊಂದುವುದಿಲ್ಲ. ನಿನ್ನನ್ನು ಸಂಹರಿಸಿ ಯಥಾವಿಧಿಯಾಗಿ ನಾನು ನನ್ನ ತಂದೆಗೆ ತರ್ಪಣವನ್ನು ನೀಡುತ್ತೇನೆ! ನಿನ್ನ ವೃದ್ಧ ತಂದೆಯ ಸಖ ನನ್ನ ತಂದೆ ವೃದ್ಧ ಭಗದತ್ತನನ್ನು ನೀನು ಸಂಹರಿಸಿದೆ! ಇಂದು ಇನ್ನೂ ಬಾಲಕನಾಗಿರುವ ನನ್ನೊಡನೆ ಯುದ್ಧಮಾಡು!” ಹೀಗೆ ಹೇಳಿ ಸಂಕ್ರುದ್ಧನಾದ ನರಾಧಿಪ ವಜ್ರದತ್ತನು ಆನೆಯನ್ನು ಪಾಂಡವನ ಮೇಲೆ ಆಕ್ರಮಣಿಸಿದನು. ಧೀಮತ ವಜ್ರದತ್ತನಿಂದ ಕಳುಹಿಸಲ್ಪಟ್ಟ ಆ ಗಜೇಂದ್ರವು ಆಕಾಶಕ್ಕೆ ಜಿಗಿಯುತ್ತಿರುವುದೋ ಎನ್ನುವಂತೆ ಪಾಂಡವನ ಮೇಲೆ ಎರಗಿತು. ಅದು ತನ್ನ ಸೊಂಡಿಲಿನಿಂದ ನೀಲಮೋಡಗಳು ಮಳೆಸುರಿಸುವಂತೆ ನೀರಿನ ತುಂತುರುಗಳನ್ನು ಫಲ್ಗುನನ ಮೇಲೆ ಸುರಿಸಿತು. ರಾಜನಿಂದ ಕಳುಹಿಸಲ್ಪಟ್ಟ ಆ ಅನೆಯು ಪುನಃ ಪುನಃ ಮೇಘದಂತೆ ಗರ್ಜಿಸುತ್ತಾ, ಮುಖಾಡಂಬರ ಘೋಷಗಳೊಂದಿಗೆ ಫಲ್ಗುನನನ್ನು ಆಕ್ರಮಣಿಸಿತು. ವಜ್ರದತ್ತನಿಂದ ಪ್ರಚೋದಿತಗೊಂಡ ಆ ಗಜೇಂದ್ರವು ನರ್ತಿಸುತ್ತಿರುವುದೋ ಎನ್ನುವಂತೆ ಓಡಿ ಬಂದು ಮಹಾರಥ ಕೌರವನ ಮೇಲೆ ಎರಗಿತು. ಹಾಗೆ ಮೇಲೆ ಬೀಳಲು ಬರುತ್ತಿದ್ದ ವಜ್ರದತ್ತನ ಆನೆಯನ್ನು ನೋಡಿ ಬಲಶಾಲೀ ಶತ್ರುಹಂತಕ ಅರ್ಜುನನು ಗಾಂಡೀವನ್ನು ಹಿಡಿದುಕೊಂಡು ಸ್ವಲ್ಪವೂ ವಿಚಲಿತನಾಗಲಿಲ್ಲ. ಹಿಂದಿನ ವೈರದಿಂದ ಭೂಪತಿ ವಜ್ರದತ್ತನು ಬಲವನ್ನುಪಯೋಗಿಸಿ ಯಜ್ಞಕ್ಕೆ ವಿಘ್ನವನ್ನುಂಟುಮಾಡುತ್ತಿರುವನೆಂದು ಸ್ಮರಿಸಿಕೊಂಡು ಅರ್ಜುನನು ಅತ್ಯಂತ ಕ್ರೋಧಿತನಾದನು. ಆಗ ಕ್ರುದ್ಧನಾದ ಪಾಂಡವನು ಶರಜಾಲಗಳಿಂದ ತೀರವು ಸಮುದ್ರವನ್ನು ತಡೆಯುವಂತೆ ಆ ಆನೆಯನ್ನು ತಡೆದನು. ಅರ್ಜುನನಿಂದ ತಡೆಯಲ್ಪಟ್ಟ ಆ ಮಹಾಗಜವು ಅಂಗಾಂಗಗಳಲ್ಲಿ ಶರಗಳು ಚುಚ್ಚಿಕೊಂಡು ಮುಳ್ಳುಗಳು ನಿಮಿರಿನಿಂತಿದ್ದ ಮುಳ್ಳುಹಂದಿಯಂತೆ ಅಲ್ಲಿಯೇ ನಿಂತುಕೊಂಡಿತು. ಆನೆಯನ್ನು ತಡೆದು ನಿಲ್ಲಿಸಿದುದನ್ನು ನೋಡಿ ನೃಪ ಭಗದತ್ತಾತ್ಮಜನು ಕ್ರೋಧಮೂರ್ಚಿತನಾಗಿ ಅರ್ಜುನನ ಮೇಲೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ಅರ್ಜುನನಾದರೋ ಶರಗಳನ್ನು ತುಂಡರಿಸಬಲ್ಲ ಶರಗಳಿಂದ ಅವನ ಬಾಣಗಳನ್ನು ತಡೆದನು. ಅದೊಂದು ಅದ್ಭುತವಾಗಿತ್ತು. ಆಗ ಅತಿಕ್ರುದ್ಧನಾದ ರಾಜಾ ಪ್ರಗ್ಜ್ಯೋತಿಷಾಧಿಪನು ಪರ್ವತೋಪಮವಾಗಿದ್ದ ಆ ಮಹಾಗಜವನ್ನು ಪುನಃ ಅರ್ಜುನನ ಮೇಲೆ ನುಗ್ಗಿಸಿದನು. ಮೇಲೆರಗಿ ಬರುತ್ತಿದ್ದ ಅದನ್ನು ನೋಡಿ ಬಲವಾನ್ ಪಾಕಶಾಸನಿಯು ಆ ಆನೆಯ ಮೇಲೆ ಅಗ್ನಿಸಂಕಾಶ ನಾರಾಚವನ್ನು ಪ್ರಯೋಗಿಸಿದನು. ಮರ್ಮಸ್ಥಾನಕ್ಕೆ ಜೋರಾಗಿ ಹೊಡೆಯಲ್ಪಟ್ಟ ಆ ಆನೆಯು ವಜ್ರದಿಂದ ಹೊಡೆಯಲ್ಪಟ್ಟ ಪರ್ವತದಂತೆ ಒಮ್ಮೆಲೇ ಭೂಮಿಯ ಮೇಲೆ ಬಿದ್ದಿತು. ಧನಂಜಯನ ಶರದಿಂದ ಹತಗೊಂಡು ಬೀಳುತ್ತಿದ್ದ ಆ ಆನೆಯು ವಜ್ರದಿಂದ ಹೊಡೆಯಲ್ಪಟ್ಟ ಮಹಾಶೈಲವು ಭೂಮಿಯ ಮೇಲೆ ಕುಸಿದು ಬೀಳುತ್ತಿದ್ದಂತೆ ಶೋಭಿಸುತ್ತಿತ್ತು. ಆನೆಯೊಂದಿಗೆ ವಜ್ರದತ್ತನೂ ಕೆಳಗೆ ಬೀಳಲು ಪಾಂಡವನು ಭೂಮಿಗತನಾದ ನೃಪನಿಗೆ “ಭಯಪಡಬೇಕಾಗಿಲ್ಲ!” ಎಂದು ಕೂಗಿ ಹೇಳಿದನು. “ನಾನು ಹೊರಡುವಾಗ ಮಹಾತೇಜಸ್ವಿ ಯುಧಿಷ್ಠಿರನು “ಧನಂಜಯ! ಯಾವ ಕಾರಣಕ್ಕೂ ನೀನು ರಾಜರನ್ನು ಕೊಲ್ಲಬಾರದು! ರಣದಲ್ಲಿ ನೀನು ಯೋಧರನ್ನೂ ಕೊಲ್ಲಬಾರದು! ಇಷ್ಟುಮಾಡಿದರೆ ನರವ್ಯಾಘ್ರ! ನೀನು ಎಲ್ಲವನ್ನೂ ಮಾಡಿದಂತೆ!” ಎಂದು ಹೇಳಿದ್ದನು. ಸುಹೃಜ್ಜನರೆಲ್ಲರೊಂದಿಗೆ ಯುಧಿಷ್ಠಿರನ ಅಶ್ವಮೇಧಕ್ಕೆ ನೀವೆಲ್ಲರೂ ಬರಬೇಕೆಂದೂ ಅವನು ಹೇಳಿದ್ದಾನೆ. ಅಣ್ಣನ ಈ ಮಾತನ್ನು ಕೇಳಿದ ನಾನು ನಿನ್ನನ್ನು ಸಂಹರಿಸುವುದಿಲ್ಲ. ಪಾರ್ಥಿವ! ಮೇಲೇಳು! ಭಯಪಡಬೇಡ! ಕ್ಷೇಮವಾಗಿ ಹೋಗು! ಬರುವ ಚೈತ್ರಹುಣ್ಣಿಮೆಯಂದು ಧೀಮತ ಧರ್ಮರಾಜ ಅಶ್ವಮೇಧವು ಆಗಲಿಕ್ಕಿದೆ. ಅದಕ್ಕೆ ಬರಬೇಕು!” ಹೀಗೆ ಹೇಳಲು ಪಾಂಡವನಿಂದ ಪರಾಜಿತನಾದ ರಾಜಾ ಭಗದತ್ತಾತ್ಮಜನು ಹಾಗೆಯೇ ಆಗಲೆಂದು ಹೇಳಿದನು.
ಸೈಂಧವ ಪರಾಜಯ
ಬಳಿಕ ಕಿರೀಟಿ ಮತ್ತು ಯುದ್ಧದಲ್ಲಿ ಹತರಾಗದೇ ಉಳಿದಿದ್ದ ಸೈಂಧವರು ಮತ್ತು ಹತರಾಗಿದ್ದ ಸೈಂಧವರ ಮಕ್ಕಳ ನಡುವೆ ಯುದ್ಧವು ನಡೆಯಿತು. ಅರ್ಜುನನು ತಮ್ಮ ರಾಜ್ಯದ ಗಡಿಯಲ್ಲಿ ಬಂದಿದ್ದಾನೆಂದು ತಿಳಿದ ಆ ರಾಜರು ಅಸಹನೆಯಿಂದ ಪಾಂಡವರ್ಷಭನೊಡನೆ ಯುದ್ಧಮಾಡಿದರು. ರಾಜ್ಯದ ಗಡಿಗೆ ಬಂದಿದ್ದ ಅಶ್ವವನ್ನು ವಿಷೋಪಮರಾದ ಅವರು ಭೀಮನ ತಮ್ಮ ಪಾರ್ಥನಿಗೆ ಹೆದರದೇ ಬಂಧಿಸಿದರು. ಯಜ್ಞಕುದುರೆಯ ಸ್ವಲ್ಪ ದೂರದಲ್ಲಿಯೇ ಪದಾತಿಯಾಗಿ ನಿಂತಿದ್ದ ಧನುಷ್ಪಾಣೀ ಬೀಭತ್ಸುವನ್ನು ಎದುರಿಸಿದರು. ಹಿಂದೆ ಯುದ್ಧದಲ್ಲಿ ಅವನಿಂದ ಸೋತುಹೋಗಿದ್ದ ಆ ಮಹಾವೀರ್ಯ ನರವ್ಯಾಘ್ರ ರಾಜರು ಈಗ ಅವನನ್ನು ಗೆಲ್ಲಲು ಬಯಸಿ ಸುತ್ತುವರೆದರು. ಅವನು ತಮ್ಮ ನಾಮ-ಗೋತ್ರಗಳನ್ನೂ ವಿವಿಧ ಸಾಧನೆಗಳನ್ನೂ ಹೇಳಿಕೊಳ್ಳುತ್ತಾ ಪಾರ್ಥನನ್ನು ಶರವರ್ಷಗಳಿಂದ ಮುಚ್ಚಿದರು. ಆನೆಗಳನ್ನೇ ತಡೆದು ನಿಲ್ಲಿಸಲು ಸಮರ್ಥವಾದ ತೀಕ್ಷ್ಣ ಬಾಣಗಳನ್ನು ಎರಚುತ್ತಾ ರಣದಲ್ಲಿ ಜಯವನ್ನು ಬಯಸಿದ ಅವರು ಕೌಂತೇಯನನ್ನು ಸುತ್ತುವರೆದು ಮುತ್ತಿದರು. ಯುದ್ಧದಲ್ಲಿ ಉಗ್ರಕರ್ಮಗಳನ್ನೆಸಗಿದ್ದ ಆ ವೀರನು ಪದಾತಿಯಾಗಿರುವುದನ್ನು ನೋಡಿ ಆ ಎಲ್ಲ ವೀರರೂ ರಥಸ್ಥರಾಗಿಯೇ ಯುದ್ಧದಲ್ಲಿ ತೊಡಗಿದರು. ನಿವಾತಕವಚರಿಗೆ ಯಮನಾಗಿದ್ದ, ಸಂಶಪ್ತಕರನ್ನು ಸಂಹರಿಸಿದ್ದ, ಸೈಂಧವನನ್ನು ಕೊಂದಿದ್ದ ಆ ವೀರನನ್ನು ಅವರು ಪ್ರಹರಿಸಿದರು. ಆಗ ಅವರು ಸಾವಿರ ರಥಗಳು ಮತ್ತು ಹತ್ತು ಸಾವಿರ ಕುದುರೆಗಳಿಂದ ಗುಂಪಾಗಿ ಸುತ್ತುವರೆದು ಕೌಂತೇಯನೊಡನೆ ಹರ್ಷದಿಂದ ಯುದ್ಧಮಾಡಿದರು. ಸಮರದಲ್ಲಿ ಸವ್ಯಸಾಚಿಯು ಧೀಮತ ಸಿಂಧುರಾಜ ಜಯದ್ರಥನನ್ನು ವಧಿಸಿದುದನ್ನು ನೆನಪಿಸಿಳ್ಳುತ್ತಾ ಆ ವೀರರು ಯುದ್ಧಮಾಡಿದರು. ಆಗ ಅವರೆಲ್ಲರೂ ಮಳೆಯಂತೆ ಶರವೃಷ್ಟಿಯನ್ನು ಅವನ ಮೇಲೆ ಸುರಿಸಿದರು. ಅವುಗಳಿಂದ ಮುಸುಕಲ್ಪಟ್ಟ ಪಾರ್ಥನು ಮೇಘಗಳ ಮಧ್ಯದಲ್ಲಿದ್ದ ರವಿಯಂತೆ ಶೋಭಿಸಿದನು. ಆ ಶರಗಳಿಂದ ಮುಚ್ಚಿಹೋಗಿದ್ದ ಪಾಂಡವರ್ಷಭನು ಪಿಂಜರದಲ್ಲಿ ಅಲೆದಾಡುತ್ತಿದ್ದ ಪಕ್ಷಿಯಂತೆಯೇ ಕಂಡನು. ಕೌಂತೇಯನು ಶರಪೀಡಿತನಾಗಲು ತ್ರೈಲೋಕ್ಯಗಳಲ್ಲಿ ಎಲ್ಲಕಡೆಯೂ ಹಾಹಾಕಾರವುಂಟಾಯಿತು. ರವಿಯು ಧೂಳುಮುಕ್ಕಿ ಕೆಂಪಾದನು. ಆಗ ರೋಮಾಂಚಕಾರೀ ಚಂಡಮಾರುತವು ಬೀಸತೊಡಗಿತು. ರಾಹುವು ಆದಿತ್ಯ-ಚಂದ್ರರಿಬ್ಬರನ್ನೂ ಒಂದೇ ಕಾಲದಲ್ಲಿ ನುಂಗಿದನು. ಎಲ್ಲಕಡೆಗಳಿಂದಲೂ ಬೀಳುತ್ತಿದ್ದ ಉಲ್ಕೆಗಳು ಸೂರ್ಯನ ಮೇಲೂ ಬಿದ್ದವು. ಮಹಾಗಿರಿ ಕೈಲಾಸವೂ ನಡುಗಿತು. ದುಃಖಶೋಕಸಮನ್ವಿತರಾದ ಸಪ್ತರ್ಷಿಗಳು ಬಿಸಿ ನಿಟ್ಟುಸಿರನ್ನು ಬಿಡತೊಡಗಿದರು. ಹಾಗೆಯೇ ದೇವರ್ಷಿಗಳಿಗೂ ಭಯವುಂಟಾಯಿತು. ಚಂದ್ರಮಂಡಲವನ್ನೇ ಭೇದಿಸಿಕೊಂಡು ಮೊಲವು ಕೆಳಗುರುಳಿತು. ಹಾಗೆ ವಿಪರೀತ ಉತ್ಪಾತಗಳು ಕಾಣಿಸಿಕೊಂಡವು. ಕತ್ತೆಯ ಕೆಂಪುಬಣ್ಣಗಳುಳ್ಳ ಮೇಘಗಳು ಕಾಮನಬಿಲ್ಲು ಮತ್ತು ಮಿಂಚುಗಳಿಂದ ಕೂಡಿ ಗಗನವನ್ನು ಆವರಿಸಿ ಮಾಂಸ-ರಕ್ತಗಳ ಮಳೆಯನ್ನೇ ಸುರಿಸಿದವು. ಶರವರ್ಷಗಳಿಂದ ಆ ವೀರ ಅರ್ಜುನನು ಮುಸುಕಿರಲು ಲೋಕದಲ್ಲಿ ಈ ಅದ್ಭುತಗಳು ನಡೆದವು. ಸುತ್ತಲೂ ಶರಜಾಲಗಳಿಂದ ಮುಚ್ಚಲ್ಪಟ್ಟ ಅರ್ಜುನನು ಮೋಹಪರವಶನಾಗಲು ಅವನ ಕೈಯಿಂದ ಗಾಂಡೀವವೂ, ಕೈಚೀಲಗಳೂ ಜಾರಿ ಬಿದ್ದವು. ಹೀಗೆ ಮಹಾರಥ ಅರ್ಜುನನು ಮೂರ್ಛಿತನಾಗಿದ್ದರೂ ಸೈಂಧವರು ಮಹತ್ತರವಾದ ಶರಜಾಲಗಳನ್ನು ಅವನ ಮೇಲೆ ಸುರಿಸುತ್ತಲೇ ಇದ್ದರು. ಪಾರ್ಥನು ಮೂರ್ಛಿತನಾಗಿರುವುದನ್ನು ತಿಳಿದ ದಿವೌಕಸರು ಎಲ್ಲರೂ ಭಯಗೊಂಡು ಅದನ್ನು ನಿವಾರಿಸಲು ಅನುವಾದರು. ಆಗ ದೇವರ್ಷಿಗಳು, ಸಪ್ತರ್ಷಿಗಳು ಮತ್ತು ಬ್ರಹ್ಮರ್ಷಿಗಳು ಎಲ್ಲರೂ ಪಾರ್ಥನಿಗೆ ವಿಜಯವಾಗಲೆಂದು ಜಪಿಸತೊಡಗಿದರು. ದೇವತೆಗಳಿಂದಾಗಿ ಪಾರ್ಥನ ತೇಜಸ್ಸು ಉದ್ದೀಪನಗೊಂಡಿತು. ಪರಮಾಸ್ತ್ರಗಳನ್ನು ತಿಳಿದಿದ್ದ ಆ ಧೀಮಂತನು ಸಂಗ್ರಾಮದಲ್ಲಿ ಪರ್ವತದಂತೆ ಸ್ಥಿರವಾಗಿ ನಿಂತುಕೊಂಡನು. ಆಗ ಕೌರವನಂದನನು ದಿವ್ಯ ಧನುಸ್ಸನ್ನು ಸೆಳೆಯಲು ಅದರಿಂದಾಗಿ ಪುನಃ ಪುನಃ ಯಂತ್ರದ ಶಬ್ಧದಂತೆ ಮಹಾ ಶಬ್ಧವು ಕೇಳಿಬಂದಿತು. ಆಗ ಪ್ರಭು ಪಾರ್ಥನು ಸುರೇಶ್ವರನಂತೆ ತನ್ನ ಧನುಸ್ಸಿನಿಂದ ಶತ್ರುಗಳ ಮೇಲೆ ಶರವರ್ಷಗಳನ್ನು ಸುರಿಸಿದನು. ಪತಂಗಗಳು ಮುತ್ತಿದ ಅಗ್ನಿಗಳಂತೆ ಶರಗಳಿಂದ ಮುಚ್ಚಲ್ಪಟ್ಟ ಆ ಸೈಂಧವ ಯೋಧರು ರಾಜರೊಂದಿಗೆ ಕಾಣಿಸದೇ ಹೋದರು. ಗಾಂಡೀವದ ಶಬ್ಧದಿಂದ ಸೈಂಧವರು ಭಯಾರ್ತರಾಗಿ ನಡುಗಿದರು ಮತ್ತು ಪಲಾಯನಗೈದರು. ಶೋಕಾರ್ತರಾಗಿ ಅತ್ತರು ಮತ್ತು ಮೂರ್ಛಿತರಾದರು ಕೂಡ. ಆ ಬಲಶಾಲೀ ನರಶ್ರೇಷ್ಠನು ಪಂಜಿಯ ಚಕ್ರದಂತೆ ಎಲ್ಲಕಡೆ ತಿರುಗುತ್ತಾ ಅವರೆಲ್ಲರ ಮೇಲೆ ಶರಜಾಲಗಳನ್ನು ಸುರಿಸಿದನು. ವಜ್ರಧಾರಿ ಮಹೇಂದ್ರನಂತೆ ಇಂದ್ರಜಾಲದಂತಿರುವ ಬಾಣಜಾಲವನ್ನು ಅಮಿತ್ರಹ ಅರ್ಜುನನು ಸರ್ವ ದಿಕ್ಕುಗಳಲ್ಲಿಯೂ ಪ್ರಯೋಗಿಸಿದನು. ಮೇಘಜಾಲಗಳಂತಿದ್ದ ಆ ಸೇನೆಯನ್ನು ಸೀಳಿದ ರವಿಪ್ರಭ ಕೌರವಶ್ರೇಷ್ಠನು ಶರದ್ಕಾಲದ ದಿವಾಕರನಂತೆಯೇ ಬೆಳಗಿದನು.
ಯುದ್ಧದಲ್ಲಿ ತೊಡಗಿದ್ದ ಆ ಗಾಂಡೀವಧಾರೀ ಶೂರ ದುರ್ಧರ್ಷ ಅರ್ಜುನನು ಹಿಮವತ್ಪರ್ವತದಂತೆ ಅಚಲನಾಗಿ ಪ್ರಕಾಶಿಸುತ್ತಿದ್ದನು. ಪುನಃ ಸುಸಜ್ಜಿತರಾದ ಸೈಂಧವಯೋಧರು ಕೋಪದಿಂದ ಶರವರ್ಷಗಳನ್ನು ಸುರಿಸತೊಡಗಿದರು. ಪುನಃ ಯುದ್ಧಕ್ಕೆ ಸಿದ್ಧರಾಗಿ ನಿಂತಿರುವ ಅವರನ್ನು ನೋಡಿ ಮಹಾವೀರ್ಯ ಕೌಂತೇಯನು ಗಟ್ಟಿಯಾಗಿ ನಗುತ್ತಾ ಮಧುರ ಧ್ವನಿಯಲ್ಲಿ ಈ ಮಾತುಗಳನ್ನಾಡಿದನು: “ಪರಮ ಶಕ್ತಿಯಿಂದ ಯುದ್ಧಮಾಡಿರಿ. ನನ್ನನ್ನು ವಧಿಸಲು ಪ್ರಯತ್ನಿಸಿ. ಮಹಾಭಯವು ಉಂಟಾಗಿರುವ ನೀವು ಸರ್ವಕಾರ್ಯಗಳನ್ನೂ ಮುಗಿಸಿ ಬನ್ನಿರಿ! ನಿಮ್ಮ ಎಲ್ಲ ಶರಜಾಲಗಳನ್ನೂ ತುಂಡರಿಸಿ ಯುದ್ಧಮಾಡುತ್ತೇನೆ. ಯುದ್ಧದಲ್ಲಿಯೇ ಮನಸ್ಸನ್ನಿಟ್ಟುಕೊಂಡು ನಿಲ್ಲಿರಿ. ನಿಮ್ಮ ದರ್ಪವನ್ನು ನೀಗಿಸುತ್ತೇನೆ!” ರೋಷದಿಂದ ಹೀಗೆ ಹೇಳಿದ ಗಾಂಡೀವಧಾರೀ ಕೌರವ್ಯನಿಗೆ ಆಗ ಹಿರಿಯಣ್ಣನ ಮಾತುಗಳು ಸ್ಮರಣೆಗೆ ಬಂದವು. “ಮಗೂ! ರಣದಲ್ಲಿ ವಿಜಯೇಚ್ಛುಗಳಾದ ಕ್ಷತ್ರಿಯರನ್ನು ಕೊಲ್ಲಬಾರದು. ಅವರನ್ನು ಜಯಿಸಬೇಕು!” ಎಂದು ಮಹಾತ್ಮ ಧರ್ಮರಾಜನು ಹೇಳಿದ್ದನು. “ನೃಪರನ್ನು ಕೊಲ್ಲಬೇಡ! ಎಂದು ರಾಜನು ಹೇಳಿದ್ದನು. ಧರ್ಮರಾಜನ ಆ ಶುಭವಚನವು ಸುಳ್ಳಾಗದಂತೆ ನಾನು ಹೇಗೆ ನಡೆದುಕೊಳ್ಳಲಿ? ರಾಜರನ್ನು ಕೊಲ್ಲಬಾರದೆಂಬ ರಾಜನ ಆಜ್ಞೆಯನ್ನು ಹೇಗೆ ಪೂರೈಸಲಿ?” ಎಂದು ಆಗ ಪುರುಷರ್ಷಭ ಫಲ್ಗುನನು ಚಿಂತಿಸತೊಡಗಿದನು. ಅಣ್ಣನಿಗೆ ಪ್ರಿಯವಾದುದನ್ನು ಮಾಡುವುದರಲ್ಲಿಯೇ ನಿರತನಾಗಿದ್ದ ಧರ್ಮಜ್ಞ ಅರ್ಜುನನು ಹೀಗೆ ಆಲೋಚಿಸಿ ಯುದ್ಧದುರ್ಮದ ಸೈಂಧವರಿಗೆ ಈ ಮಾತನ್ನಾಡಿದನು: “ಸಂಗ್ರಾಮದಲ್ಲಿ ನಿಂತಿರುವ ನಿಮ್ಮಲ್ಲಿ ಬಾಲಕರನ್ನೂ ಅಥವಾ ಸ್ತ್ರೀಯರನ್ನೂ ನಾನು ಸಂಹರಿಸುವುದಿಲ್ಲ. ಹಾಗೆಯೇ ಸೋತು ನಿನ್ನವರಾಗಿದ್ದೇವೆ ಎನ್ನುವವರನ್ನೂ ನಾನು ಕೊಲ್ಲುವುದಿಲ್ಲ! ನನ್ನ ಈ ಮಾತನ್ನು ಕೇಳಿ ನಿಮಗೆ ಹಿತವೆನಿಸಿದಂತೆ ಮಾಡಿ. ಅನ್ಯಥಾ ನನ್ನಿಂದ ಪೆಟ್ಟುತಿಂದು ಕಷ್ಟವನ್ನು ಅನುಭವಿಸಬೇಕಾಗುತ್ತದೆ!”
ಹೀಗೆ ಹೇಳಿ ಅತಿಕ್ರುದ್ಧನಾದ ಕುರುಪುಂಗವನು ಕ್ರುದ್ಧರಾಗಿ ವಿಜಯವನ್ನೇ ಬಯಸಿದ್ದ ಆ ವೀರರೊಂದಿಗೆ ಯುದ್ಧದಲ್ಲಿ ತೊಡಗಿದನು. ಆಗ ಗಂಡೀವಧನ್ವಿಯ ಮೇಲೆ ಸೈಂಧವರು ನೂರುಸಾವಿರ ನತಪರ್ವ ಶರಗಳನ್ನು ಪ್ರಯೋಗಿಸಿದರು. ತನ್ನ ಮೇಲೆ ಬೀಳುತ್ತಿದ್ದ ಆ ಕ್ರೂರ ಸರ್ಪಗಳ ವಿಷಗಳಂತಿದ್ದ ಬಾಣಗಳನ್ನು ಧನಂಜಯನು ಅವುಗಳು ಬೀಳುವುದರೊಳಗೇ ನಿಶಿತ ಬಾಣಗಳಿಂದ ತುಂಡರಿಸಿದನು. ವೇಗದಿಂದ ಬರುತ್ತಿದ್ದ ಆ ಶಿಲಾಶಿತ ಕಂಕಪತ್ರಗಳನ್ನು ಕತ್ತರಿಸಿ ಅವನು ಸಮರದಲ್ಲಿ ಒಬ್ಬೊಬ್ಬರನ್ನೂ ಹತ್ತು-ಹತ್ತು ಶರಗಳಿಂದ ಹೊಡೆದನು. ಆಗ ಜಯದ್ರಥನ ಮರಣವನ್ನು ಸ್ಮರಿಸಿಕೊಳ್ಳುತ್ತಾ ಸೈಂಧವ ನೃಪರು ಧನಂಜಯನ ಮೇಲೆ ಪುನಃ ಪ್ರಾಸಗಳನ್ನೂ ಶಕ್ತಿಗಳನ್ನೂ ಪ್ರಯೋಗಿಸಿದರು. ಅವೆಲ್ಲವನ್ನೂ ಮಧ್ಯದಲ್ಲಿಯೇ ತುಂಡರಿಸಿ ಅವರ ಸಂಕಲ್ಪವನ್ನು ನಿಷ್ಫಲಗೊಳಿಸಿದ ಮಹಾಮನಸ್ವಿ ಕಿರೀಟೀ ಪಾಂಡವನು ಸಂತೋಷದಿಂದ ಗರ್ಜಿಸಿದನು. ಹಾಗೆಯೇ ತನ್ನ ಮೇಲೆ ಆಕ್ರಮಣಿಸುತ್ತಿದ್ದ ಜಯೈಶೀ ಯೋಧರ ಶಿರಗಳನ್ನು ಸನ್ನತಪರ್ವ ಭಲ್ಲಗಳಿಂದ ಕೆಳಗುರುಳಿಸಿದನು. ಅವರು ಪಲಾಯನ ಮಾಡುತ್ತಿರುವ ಮತ್ತು ಪುನಃ ಓಡಿ ಹಿಂದಿರುಗಿ ಬರುವ ಶಬ್ಧವು ಉಕ್ಕಿಬರುವ ಸಮುದ್ರದ ಶಬ್ಧದಂತೆಯೇ ಜೋರಾಗಿತ್ತು. ಅಮಿತತೇಜಸ್ವೀ ಪಾರ್ಥನು ಅವರನ್ನು ಸಂಹರಿಸುತ್ತಿದ್ದರೂ, ಅವರು ಪ್ರಾಣವಿದ್ದಷ್ಟೂ ಉತ್ಸಾಹವಿದ್ದಷ್ಟೂ ಅರ್ಜುನನೊಡನೆ ಯುದ್ಧಮಾಡತೊಡಗಿದರು. ಆಗ ಫಲ್ಗುನನು ಸನ್ನತಪರ್ವ ಶರಗಳಿಂದ ಅವರನ್ನು ಮೂರ್ಛೆಗೊಳಿಸಿದನು. ವಾಹನ-ಸೈನಿಕರೂ ಬಹಳವಾಗಿ ಬಳಲಿದ್ದರು. ಅವರೆಲ್ಲರೂ ದಣಿದಿರುವುದನ್ನು ತಿಳಿದ ಧೃತರಾಷ್ಟ್ರನ ಮಗಳು ದುಃಶಲೆಯು ತನ್ನ ಮೊಮ್ಮಗ - ವೀರ ಸುರಥನ ಮಗ - ಬಾಲಕನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಸರ್ವಯೋಧರ ಶಾಂತಿಗಾಗಿ ಪಾಂಡವನಿದ್ದಲ್ಲಿಗೆ ಆಗಮಿಸಿದಳು. ಧನಂಜಯನ ಬಳಿಸಾರಿ ಅವಳು ಆರ್ತಸ್ವರದಲ್ಲಿ ಅಳತೊಡಗಿದಳು. ಪ್ರಭು ಧನಂಜಯನೂ ಕೂಡ ಅವಳನ್ನು ನೋಡಿ ಧನುಸ್ಸನ್ನು ಬಿಸುಟನು. ಧನುಸ್ಸನ್ನು ಬದಿಗಿಟ್ಟು ಪಾರ್ಥನು ವಿಧಿವತ್ತಾಗಿ ತಂಗಿಗೆ “ಏನು ಮಾಡಬೇಕು?” ಎಂದು ಕೇಳಿದನು. ಅವಳು ಅವನಿಗೆ ಈ ಮಾತನ್ನಾಡಿದಳು: “ಭರತಶ್ರೇಷ್ಠ! ಇವನು ನಿನ್ನ ತಂಗಿಯ ಮಗನ ಮಗನು. ಈ ಶಿಶುವು ನಿನಗೆ ನಮಸ್ಕರಿಸುತ್ತಿದ್ದಾನೆ ನೋಡು!” ಅವಳು ಹೀಗೆ ಹೇಳಲು ಅರ್ಜುನನು “ಇವನ ತಂದೆಯೆಲ್ಲಿರುವನು?” ಎಂದು ಕೇಳಿದನು. ಅದಕ್ಕೆ ದುಃಶಲೆಯು ಹೀಗೆ ಹೇಳಿದಳು: “ವೀರ! ಇವನ ತಂದೆಯು ಪಿತೃಶೋಕದಿಂದ ಸಂತಪ್ತನಾಗಿ ವಿಷಾದದಿಂದ ಆರ್ತನಾಗಿ ಮೃತ್ಯುವಶನಾದನು. ನಾನು ಹೇಳುವುದನ್ನು ಕೇಳು. ಹಿಂದೆ ನಿನ್ನಿಂದ ಯುದ್ಧದಲ್ಲಿ ತಂದೆಯು ಹತನಾದುದನ್ನು ಅವನು ಕೇಳಿದ್ದನು. ಈಗ ನೀನು ಕುದುರೆಯನ್ನು ಹಿಂಬಾಲಿಸಿ ಯುದ್ಧಕ್ಕೆ ಬಂದಿರುವುದನ್ನು ಕೇಳಿ ತಂದೆಯ ಮೃತ್ಯುವಿನ ದುಃಖದಿಂದ ಆರ್ತನಾಗಿ ಪ್ರಾಣವನ್ನೇ ತೊರೆದುಬಿಟ್ಟನು. ಬೀಭತ್ಸುವು ಇಲ್ಲಿಗೆ ಬಂದಿದ್ದಾನೆ ಎಂದು ನಿನ್ನ ಹೆಸರನ್ನು ಕೇಳುತ್ತಲೇ ವಿಶಾದಾರ್ತನಾಗಿ ನನ್ನ ಮಗನು ಭೂಮಿಯ ಮೇಲೆ ಬಿದ್ದು ಮರಣಹೊಂದಿದನು. ಅವನು ಕೆಳಗುರುಳಿದುದನ್ನು ನೋಡಿ ಅವನ ಮಗನನ್ನು ಕರೆದುಕೊಂಡು ಶರಣಾರ್ಥಿಯಾಗಿ ನಿನ್ನ ಬಳಿ ಬಂದಿದ್ದೇನೆ.” ಹೀಗೆ ಹೇಳಿ ಧೃತರಾಷ್ಟ್ರಜೆಯು ಆರ್ತಸ್ವರದಲ್ಲಿ ರೋದಿಸಿದಳು. ಮುಖಕೆಳಗೆ ಮಾಡಿಕೊಂಡು ದೀನನಾಗಿ ನಿಂತಿದ್ದ ಪಾರ್ಥನಿಗೆ ಆ ದೀನಳು ಹೇಳಿದಳು: “ಕುರೂದ್ವಹ! ನಿನ್ನ ತಂಗಿಯನ್ನು ನೋಡು. ಮತ್ತು ನಿನ್ನ ತಂಗಿಯ ಮೊಮ್ಮಗನನ್ನು ನೋಡು. ಕುರುರಾಜ ದುರ್ಯೋಧನ ಮತ್ತು ಮೂಢಮತಿ ಜಯದ್ರಥರನ್ನು ಮರೆತು ನನ್ನ ಮೇಲೆ ದಯೆತೋರಿಸಬೇಕು. ಪರವೀರಹ ಪರಿಕ್ಷಿತನು ಅಭಿಮನ್ಯುವಿಗೆ ಹೇಗೆ ಹುಟ್ಟಿದನೋ ಹಾಗೆಯೇ ಈ ಮಹಾಭುಜನು ನನ್ನ ಮಗ ಸುರಥನಿಗೆ ಹುಟ್ಟಿದ ಮೊಮ್ಮಗನು. ಸರ್ವಯೋಧರ ಶಾಂತಿಗಾಗಿ ಇವನನ್ನು ಕರೆದುಕೊಂಡು ನಿನ್ನ ಬಳಿ ಬಂದಿರುವೆನು. ನನ್ನ ಈ ಮಾತನ್ನು ಕೇಳು. ಆ ಮಂದ ಜಯದ್ರಥನ ಮೊಮ್ಮಗನು ಇಗೋ ಇಲ್ಲಿಗೆ ಬಂದಿದ್ದಾನೆ. ಆದುದರಿಂದ ಈ ಬಾಲಕನ ಮೇಲೆ ನೀನು ಕರುಣೆತೋರಿಸಬೇಕು. ನನ್ನೊಡನೆ ಇವನು ನಿನಗೆ ಶಿರಬಾಗಿ ನಮಸ್ಕರಿಸುತ್ತಿದ್ದಾನೆ. ಕರುಣೆಯನ್ನು ಕೇಳುತ್ತಿದ್ದಾನೆ. ಶಾಂತನಾಗಿ ಹೋಗು! ಬಂಧುಗಳನ್ನು ಕಳೆದುಕೊಂಡಿರುವ ಏನನ್ನೂ ತಿಳಿಯದಿರುವ ಈ ಬಾಲಕನ ಮೇಲೆ ಕರುಣೆತೋರು. ಕೋಪವಶನಾಗಬೇಡ! ಇವನ ಅಜ್ಜನಾದ ಜಯದ್ರಥನ ಅನಾರ್ಯ ಕ್ರೂರತನವನ್ನು ಮತ್ತು ನಿಮಗೆಸಗಿದ ಅಪರಾಧಗಳನ್ನು ಮರೆತು ಇವನ ಮೇಲೆ ಕೃಪೆತೋರಬೇಕು!”
ದುಃಶಲೆಯು ಈ ರೀತಿ ಕರುಣಾಜನಕ ಮಾತುಗಳನ್ನು ಹೇಳುತ್ತಿರಲು ಧನಂಜಯನು ದೇವೀ ಗಾಂಧಾರಿ ಮತ್ತು ಪಾರ್ಥಿವ ಧೃತರಾಷ್ಟ್ರರನ್ನು ಸ್ಮರಿಸಿಕೊಂಡು ದುಃಖಶೋಕಾರ್ತನಾಗಿ ಕ್ಷತ್ರಧರ್ಮವನ್ನೇ ನಿಂದಿಸಿ ಈ ಮಾತನ್ನಾಡಿದನು: “ನಾನು ಸರ್ವ ಬಾಂಧವರನ್ನೂ ಯಮಕ್ಷಯಕ್ಕೆ ಕಳುಹಿಸುವಂತೆ ಮಾಡಿದ ಆ ಮಾನಿನಿ ರಾಜ್ಯಲೋಭೀ ಕ್ಷುದ್ರ ದುರ್ಯೋಧನನಿಗೆ ಧಿಕ್ಕಾರ!” ಹೀಗೆ ಹೇಳಿ ಅನೇಕ ಸಾಂತ್ವನಮಾತುಗಳಿಂದ ಜಯ ಅರ್ಜುನನು ಪ್ರಸಾದಿತನಾದನು. ಪ್ರೀತಿಯಿಂದ ಅವಳನ್ನು ಬಿಗಿದಪ್ಪಿ, ಮನೆಗೆ ಕಳುಹಿಸಿಕೊಟ್ಟನು. ಶುಭಾನನೆ ದುಃಶಲೆಯೂ ಕೂಡ ಮಹಾರಣದಿಂದ ಆ ಯೋಧರನ್ನು ಹಿಂದಿರುಗುವಂತೆ ಮಾಡಿ ಪಾರ್ಥನನ್ನು ಪೂಜಿಸಿ ತನ್ನ ಮನೆಯ ಕಡೆ ನಡೆದಳು. ಅನಂತರ ಸೈಂಧವ ಯೋಧರನ್ನು ಬಿಟ್ಟು ನರರ್ಷಭ ಅರ್ಜುನನು ಕಾಮಚಾರಿಣಿಯಾದ ಆ ಕುದುರೆಯನ್ನು ಪುನಃ ಅನುಸರಿಸುತ್ತಾ ಹೋದನು. ದೇವದೇವ ಪಿನಾಕಧಾರಿಯು ಆಕಾಶದಲ್ಲಿ ತಾರಾಮೃಗವನ್ನು ಹೇಗೆ ಹಿಂಬಾಲಿಸಿ ಹೋಗುತ್ತಿದ್ದನೋ ಹಾಗೆ ವೀರ ಅರ್ಜುನನು ಯಜ್ಞದ ಕುದುರೆಯನ್ನು ವಿಧಿವತ್ತಾಗಿ ಹಿಂಬಾಲಿಸಿ ಹೋಗುತ್ತಿದ್ದನು. ಆ ಕುದುರೆಯು ಪಾರ್ಥನ ಯಶಸ್ಸನ್ನು ವೃದ್ಧಿಸುತ್ತಾ ಯಥೇಷ್ಟವಾಗಿ ಯಥಾಸುಖವಾಗಿ ಮನಸ್ಸು ಬಂದಂತೆ ದೇಶಗಳನ್ನು ಸುತ್ತಾಡಿತು. ಹೀಗೆಯೇ ಸಂಚರಿಸುತ್ತಾ ಕ್ರಮೇಣವಾಗಿ ಆ ಕುದುರೆಯು ಪಾಂಡವನೊಂದಿಗೆ ಮಣಿಪುರದ ಅರಸನ ದೇಶಕ್ಕೆ ಆಗಮಿಸಿತು.
ಬಬ್ರುವಾಹನ ಯುದ್ಧ
ವೀರ ತಂದೆಯು ಬಂದಿದ್ದಾನೆಂದು ಕೇಳಿ ನೃಪತಿ ಬಭ್ರುವಾಹನನು ವಿನಯದಿಂದ ಆರ್ಯಬ್ರಾಹ್ಮಣರನ್ನು ಮುಂದಿಟ್ಟುಕೊಂಡು ಅರ್ಘ್ಯಗಳೊಂದಿಗೆ ಪಟ್ಟಣದಿಂದ ಹೊರಟನು. ಕ್ಷತ್ರಧರ್ಮವನ್ನು ಸ್ಮರಿಸಿಕೊಂಡ ಮೇಧಾವೀ ಧನಂಜಯನು ಹೀಗೆ ಬಂದಿರುವ ಮಣಿಪೂರೇಶ್ವರನನ್ನು ಅಭಿನಂದಿಸಲಿಲ್ಲ. ಆಗ ಧರ್ಮಾತ್ಮಾ ಫಲ್ಗುನನು ಕೋಪದಿಂದಲೇ ಅವನಿಗೆ ಹೇಳಿದನು: “ಕ್ಷತ್ರಧರ್ಮದ ಹೊರಕ್ಕಿರುವ ಈ ಪ್ರಕ್ರಿಯೆಯು ನಿನಗೆ ಯುಕ್ತವಾದುದಲ್ಲ! ಪುತ್ರಕ! ಯುಧಿಷ್ಠಿರನ ಯಜ್ಞ ಕುದುರೆಯನ್ನು ಸಂರಕ್ಷಿಸುತ್ತಾ ನಿನ್ನ ರಾಜ್ಯಕ್ಕೆ ನಾನು ಬಂದಿರುವಾಗ ನನ್ನೊಡನೆ ನೀನು ಏಕೆ ಯುದ್ಧಮಾಡುತ್ತಿಲ್ಲ? ಯುದ್ಧಕ್ಕಾಗಿ ಬಂದಿರುವ ನನ್ನನ್ನು ಸಾಮ್ಯದಿಂದ ಸ್ವಾಗತಿಸುತ್ತಿರುವ, ಕ್ಷತ್ರಧರ್ಮವನ್ನು ತಿಳಿಯದಿರುವ ಅತ್ಯಂತ ದುರ್ಬುದ್ಧಿಯಾದ ನಿನಗೆ ಧಿಕ್ಕಾರವು! ಬದುಕಿರುವಾಗ ನೀನು ಯಾವ ಪುರುಷಾರ್ಥವನ್ನೂ ಸಾಧಿಸಿಲ್ಲ. ಈಗ ಯುದ್ಧಮಾಡಲು ಆಗಮಿಸಿರುವ ನನ್ನನ್ನು ಸ್ತ್ರೀಯಂತೆ ಸಾಮ್ಯದಿಂದ ಸ್ವಾಗತಿಸುತ್ತಿರುವೆ! ದುರ್ಮತೇ! ನರಾಧಮ! ಒಂದುವೇಳೆ ನಾನು ಶಸ್ತ್ರಗಳನ್ನು ಬದಿಗಿಟ್ಟು ಇಲ್ಲಿಗೆ ಬಂದಿದ್ದೆನಾದರೆ ನಿನ್ನ ಈ ಪ್ರಕ್ರಿಯೆಯು ಯುಕ್ತವಾಗುತ್ತಿತ್ತೋ ಏನೋ!”
ತನ್ನ ಪತಿಯು ಹೀಗೆ ಹೇಳುತ್ತಿರುವುದನ್ನು ತಿಳಿದ ಪನ್ನಗಾತ್ಮಜೆ ಉಲೂಪಿಯು ಕೋಪವನ್ನು ಸಹಿಸಿಕೊಳ್ಳಲಾರದೇ ಭೂಮಿಯನ್ನೇ ಭೇದಿಸಿಕೊಂಡು ಪಾತಾಳದಿಂದ ಮೇಲೆ ಬಂದಳು. ಅಲ್ಲಿ ಅವಳು ಮುಖಕೆಳಗೆ ಮಾಡಿಕೊಂಡು ಏನುಮಾಡಬೇಕೆಂದು ವಿಮರ್ಶಿಸುತ್ತಿರುವ ಮಗನನ್ನೂ ಮತ್ತು ಯುದ್ಧಾರ್ಥಿಯಾದ ಪತಿಯು ಅವನನ್ನು ಕಠೋರಮಾತುಗಳಿಂದ ನಿಂದಿಸುತ್ತಿರುವುದನ್ನೂ ನೋಡಿದಳು. ಆಗ ಆ ಕ್ಷತ್ರಧರ್ಮವನ್ನು ತಿಳಿದಿದ್ದ ಸುಂದರಸರ್ವಾಂಗೀ ಉರಗಾತ್ಮಜೆ ಉಲೂಪಿಯು ಬಭ್ರುವಾಹನನಿಗೆ ಇಂತೆಂದಳು: “ನೀನು ನನ್ನನ್ನು ನಿನ್ನ ತಾಯಿ ಪನ್ನಗಾತ್ಮಜೆ ಉಲೂಪಿಯೆಂದು ತಿಳಿ! ಮಗೂ! ನನ್ನ ಈ ಮಾತನ್ನು ಕೇಳು. ಇದರಿಂದ ನೀನು ಮಹಾಧರ್ಮವನ್ನೆಸಗಿದಂತಾಗುತ್ತದೆ! ನೀನು ಈ ಕುರುಶ್ರೇಷ್ಠ ಧನಂಜಯನೊಡನೆ ಯುದ್ಧಮಾಡು! ಇದರಿಂದಲೇ ನಿನಗೆ ಸಂತೋಷವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”
ಹೀಗೆ ತಾಯಿಯಿಂದ ಉತ್ಸಾಹಗೊಳಿಸಲ್ಪಟ್ಟ ಮಹಾತೇಜಸ್ವೀ ರಾಜಾ ಬಭ್ರುವಾಹನನು ಯುದ್ಧಕ್ಕೆ ಮನಸ್ಸು ಮಾಡಿದನು. ಅವನು ಕಾಂಚನ ಕವಚವನ್ನು ಮತ್ತು ಹೊಳೆಯುತ್ತಿರುವ ಶಿರಸ್ತ್ರಾಣವನ್ನೂ ತೊಟ್ಟು, ನೂರಾರು ಭತ್ತಳಿಕೆಗಳನ್ನು ತುಂಬಿಸಿದ್ದ ಮಹಾರಥವನ್ನೇರಿದನು. ಸರ್ವೋಪಕರಣಗಳಿಂದ ಕೂಡಿದ್ದ, ಮನೋವೇಗದಲ್ಲಿ ಹೋಗಬಲ್ಲ ಕುದುರೆಗಳನ್ನು ಕಟ್ಟಿದ್ದ, ಚಕ್ರವೇ ಮೊದಲಾದ ಇತರ ಸಾಮಾಗ್ರಿಗಳಿಂದ ಕೂಡಿದ್ದ, ಹೊಳೆಯುವ ಸುವರ್ಣಮಯ ಆಭರಣಗಳಿಂದ ಅಲಂಕೃತಗೊಂಡಿದ್ದ, ಪರಮಾರ್ಚಿತವಾದ ಹಿರಣ್ಮಯ ಸಿಂಹಧ್ವಜವನ್ನು ಮೇಲೇರಿಸಿಕೊಂಡು ರಾಜಾ ಬಭ್ರುವಾಹನನು ಪಾರ್ಥನನ್ನು ಎದುರಿಸಿ ಹೊರಟನು. ಆಗ ವೀರ ಬಭ್ರುವಾಹನನು ಪಾರ್ಥನ ರಕ್ಷೆಯಲ್ಲಿದ್ದ ಆ ಯಜ್ಞದ ಕುದುರೆಯನ್ನು ಹಯಶಿಕ್ಷಾವಿಶಾರದ ಪುರುಷರಿಂದ ಕಟ್ಟಿಹಾಕಿಸಿದನು. ಅವನು ಕುದುರೆಯನ್ನು ಕಟ್ಟಿಹಾಕಿದುದನ್ನು ನೋಡಿ ಸಂತೋಷಗೊಂಡ ಧನಂಜಯನು ಭೂಮಿಯಮೇಲೆ ನಿಂತುಕೊಂಡೇ ರಥಸ್ಥನಾಗಿರುವ ಮಗನನ್ನು ರಣದಲ್ಲಿ ತಡೆದನು. ಆಗ ರಾಜಾ ಬಭ್ರುವಾಹನನು ವೀರ ಅರ್ಜುನನನ್ನು ಸರ್ಪವಿಷಗಳಿಗೆ ಸಮಾನವಾದ ಸಹಸ್ರಾರು ನಿಶಿತ ಬಾಣಗಳಿಂದ ಪೀಡಿಸಿದನು. ಪರಸ್ಪರರಿಗೆ ಸಂತೋಷವನ್ನು ಕೊಡುತ್ತಿದ್ದ ಆ ತಂದೆ-ಮಗನ ನಡುವೆ ದೇವಾಸುರರ ನಡುವೆ ನಡೆದಂಥಹ ಸರಿಸಾಟಿಯಿಲ್ಲದ ಮಹಾಯುದ್ಧವೇ ನಡೆಯಿತು. ನರವ್ಯಾಘ್ರ ಬಭ್ರುವಾಹನನು ನತಪರ್ವ ಶರದಿಂದ ಕಿರೀಟಿಯ ಜತ್ರುದೇಶಕ್ಕೆ ಹೊಡೆದು ಜೋರಾಗಿ ನಕ್ಕನು. ಸರ್ಪವು ಹುತ್ತವನ್ನು ಹೇಗೋ ಹಾಗೆ ಆ ಬಾಣವು ಪುಂಖದೊಂದಿಗೆ ಕೌಂತೇಯನನ್ನು ಭೇದಿಸಿ ಭೂಮಿಯ ಒಳಹೊಕ್ಕಿತು. ಧೀಮಾನ್ ಅರ್ಜುನನು ಗಾಢವೇದನೆಯಿಂದ ಉತ್ತಮ ಧನುಸ್ಸನ್ನು ಅವಲಂಬಿಸಿ ಹಾಗೆಯೇ ನಿಂತುಕೊಂಡನು. ಆಗ ಅವನು ದಿವ್ಯ ತೇಜಸ್ಸಿನಿಂದ ಕೂಡಿದ್ದ ಯಜ್ಞಪಶುವಿನಂತೆಯೇ ಕಾಣುತ್ತಿದ್ದನು. ಪುನಃ ಸಂಜ್ಞೆಗಳನ್ನು ಪಡೆದುಕೊಂಡ ಪುರುಷರ್ಷಭ ಶಕ್ರಾತ್ಮಜನು ಮಗನನ್ನು ಪ್ರಶಂಸಿಸುತ್ತಾ ಈ ಮಾತುಗಳನ್ನಾಡಿದನು: “ಭಲೇ! ಭಲೇ! ಮಹಾಬಾಹೋ! ಮಗೂ! ಅನುರೂಪವಾದ ನಿನ್ನ ಈ ಕೆಲಸವನ್ನು ನೋಡಿ ನಾನು ಹರ್ಷಿತನಾಗಿದ್ದೇನೆ. ಈ ಬಾಣವನ್ನು ನಿನ್ನ ಮೇಲೆ ಪ್ರಯೋಗಿಸುತ್ತಿದ್ದೇನೆ. ಯುದ್ಧದಲ್ಲಿ ಸ್ಥಿರವಾಗಿರು!” ಹೀಗೆ ಹೇಳಿ ಆ ಅಮಿತ್ರಹ ಅರ್ಜುನನು ನಾರಾಚಗಳನ್ನು ಅವನ ಮೇಲೆ ಸುರಿಸಿದನು. ಗಾಂಡೀವದಿಂದ ಹೊರಟ ವಜ್ರದ ಮಿಂಚುಗಳಿಗೆ ಸಮಾನ ಪ್ರಭೆಯುಳ್ಳ ಆ ನಾರಾಚಗಳೆಲ್ಲವನ್ನೂ ರಾಜಾ ಬಭ್ರುವಾಹನನು ಮೂರು ಮೂರು ಭಾಗಗಳನ್ನಾಗಿ ತುಂಡರಿಸಿದನು. ಪಾರ್ಥನು ದಿವ್ಯ ಕ್ಷುರಪ್ರ ಶರಗಳಿಂದ ಸುವರ್ಣತಾಲವೃಕ್ಷದಂತಿದ್ದ ಬಭ್ರುವಾಹನನ ಕಾಂಚನ ಧ್ವಜವನ್ನು ಅವನ ರಥದಿಂದ ಅಪಹರಿಸಿದನು. ಪಾಂಡವರ್ಷಭನು ನಗುತ್ತಾ ರಾಜ ಬಭ್ರುವಾಹನನ ಮಹಾವೇಗಪರಾಕ್ರಮಗಳಿದ್ದ ಮಹಾಕಾಯದ ಕುದುರೆಗಳನ್ನು ಕೂಡ ನಿರ್ಜೀವಗೊಳಿಸಿದನು. ಪರಮ ಕುಪಿತನಾದ ರಾಜಾ ಬಭ್ರುವಾಹನನು ರಥದಿಂದ ಕೆಳಗಿಳಿದು ಪದಾತಿಯಾಗಿಯೇ ತಂದೆ ಪಾಂಡವ ಅರ್ಜುನನೊಡನೆ ಕೋಪದಿಂದ ಯುದ್ಧಮಾಡಿದನು. ಪಾಂಡುಗಳ ವೃಷಭ ವಜ್ರಧರಾತ್ಮಜನು ಮಗನ ವಿಕ್ರಮದಿಂದ ಸಂತುಷ್ಟನಾಗಿ ಮಗನನ್ನು ಹೆಚ್ಚು ಪೀಡಿಸಲಿಲ್ಲ. ಆಕ್ರಮಣ ಮಾಡದಿರುವುದನ್ನು ನೋಡಿ ತಂದೆಯು ವಿಮುಖನಾದನೆಂದೇ ತಿಳಿದು ಬಲಶಾಲೀ ಬಭ್ರುವಾಹನನು ಸರ್ಪದ ವಿಷದಂತಿದ್ದ ಶರಗಳಿಂದ ಪುನಃ ಅವನನ್ನು ಪ್ರಹರಿಸಿದನು. ಆಗ ಬಾಲ್ಯತನದಿಂದ ಬಲವಂತನಾದ ಬಭ್ರುವಾಹನನು ಪುಂಖಗಳಿದ್ದ ನಿಶಿತ ಪತ್ರಿಯಿಂದ ತಂದೆಯ ಹೃದಯಕ್ಕೆ ಹೊಡೆದನು. ಆ ಬಾಣವು ಉರಿಯುತ್ತಿರುವ ಬೆಂಕಿಯಂತೆ ತೇಜಸ್ಸಿನಿಂದ ಬೆಳಗುತ್ತಾ ಪಾಂಡವನ ಮರ್ಮವನ್ನು ಭೇದಿಸಿ ಒಳಹೊಕ್ಕು ಅತ್ಯಂತ ದುಃಖವನ್ನುಂಟುಮಾಡಿತು. ಹಾಗೆ ಮಗನಿಂತ ಅತಿ ಜೋರಾಗಿ ಹೊಡೆಯಲ್ಪಟ್ಟ ಕುರುನಂದನ ಧನಂಜಯನು ಮೂರ್ಛಿತನಾಗಿ ನೆಲಕ್ಕುರುಳಿದನು. ಕೌರವರ ವೀರ ದುರಂಧರನು ಕೆಳಕ್ಕುರುಳಲು ಚಿತ್ರಾಂಗದನ ಮಗನೂ ಕೂಡ ಮೂರ್ಛಿತನಾದನು. ಮೊದಲೇ ಅರ್ಜುನನ ಬಾಣಸಂಘಗಳಿಂದ ಅತಿಯಾಗಿ ಗಾಯಗೊಂಡು ಬಳಲಿದ್ದ ರಾಜಾ ಬಭ್ರುವಾಹನನು ಯುದ್ಧದಲ್ಲಿ ತಂದೆಯು ಹತನಾದುದನ್ನು ನೋಡಿ ಮೂರ್ಛೆಹೋದನು. ಪತಿಯು ಹತನಾದುದನ್ನು ಮತ್ತು ಮಗನು ಭೂಮಿಯ ಮೇಲೆ ಬಿದ್ದುದನ್ನು ನೋಡಿ ಪರಿತಪಿಸಿದ ಚಿತ್ರಾಂಗದೆಯು ರಣಾಂಗಣವನ್ನು ಪ್ರವೇಶಿಸಿದಳು. ಶೋಕಸಂತಪ್ತಹೃದಯಿಯಾಗಿ ರೋದಿಸುತ್ತಿದ್ದ ಆ ಶುಭೆ ಮಣಿಪೂರಪತಿಯ ಮಾತೆಯು ತನ್ನ ಪತಿಯು ಹತನಾಗಿರುವುದನ್ನು ನೋಡಿದಳು.
ಆಗ ಬಹುವಿಧವಾಗಿ ವಿಲಪಿಸಿ ಆ ಕಮಲೇಕ್ಷಣೆ ಭೀರು ಸಹಿಸಲಸಾಧ್ಯ ದುಃಖದಿಂದ ಮೂರ್ಛಿತಳಾಗಿ ನೆಲದ ಮೇಲೆ ಬಿದ್ದಳು. ಸುಂದರ ರೂಪಿಣೀ ಆ ದೇವಿಯು ಸಂಜ್ಞೆಗಳನ್ನು ಪಡೆದು ಪನ್ನಗಸುತೆ ಉಲೂಪಿಯನ್ನು ನೋಡಿ ಈ ಮಾತುಗಳನ್ನಾಡಿದಳು: “ಉಲೂಪಿ! ನೀನೇ ನಡೆಸಿದಂತೆ ನನ್ನ ಬಾಲಕ ಮಗನಿಂದ ರಣದಲ್ಲಿ ಹತನಾಗಿ ಮಲಗಿರುವ ಸಮಿತಿಂಜಯ ಪತಿಯನ್ನು ನೋಡು! ನೀನು ಧರ್ಮಜ್ಞಳೂ ಪತಿವ್ರತೆಯೂ ಅಲ್ಲವೇ? ಆದರೂ ನಿನ್ನ ಪತಿಯು ರಣದಲ್ಲಿ ಹತನಾಗಿ ಬೀಳುವಹಾಗೆ ಏಕೆ ಮಾಡಿದೆ? ಒಂದು ವೇಳೆ ಧನಂಜಯನದ್ದೇ ಸರ್ವ ಅಪರಾಧಗಳೇ ಆಗಿದ್ದರೂ ಇಂದು ಅವನನ್ನು ಕ್ಷಮಿಸಿಬಿಡು. ಧನಂಜಯನನ್ನು ಬದುಕಿಸು. ಬೇಡುತ್ತಿದ್ದೇನೆ. ನೀನು ಧರ್ಮಜ್ಞೆಯೆಂದು ಮೂರುಲೋಕಗಳಲ್ಲಿಯೂ ಖ್ಯಾತಳಾಗಿಲ್ಲವೇ? ಆದರೂ ಮಗನಿಂದ ಪತಿಯನ್ನು ಕೊಲ್ಲಿಸಿಯೂ ಶೋಕಿಸುತ್ತಿಲ್ಲವಲ್ಲ! ಹತನಾಗಿರುವ ಮಗನಿಗಾಗಿ ನಾನು ಶೋಕಿಸುತ್ತಿಲ್ಲ. ಪತಿಗೆ ಇಂತಹ ಆತಿಥ್ಯವನ್ನು ನೀಡಿದೆನಲ್ಲಾ ಎಂದು ಶೋಕಿಸುತ್ತಿದ್ದೇನೆ!”
ಪನ್ನಗಾತ್ಮಜೆ ದೇವೀ ಉಲೂಪಿಗೆ ಹೀಗೆ ಹೇಳಿ ಆ ಯಶಸ್ವಿನೀ ಚಿತ್ರಾಂಗದೆಯು ಪತಿಯ ಬಳಿಸಾರಿ ಈ ಮಾತುಗಳನ್ನಾಡಿದಳು: “ಕುರುಮುಖ್ಯನಿಗೆ ಪ್ರಿಯವಾದುದನ್ನು ಮಾಡುವವನೇ! ನನ್ನ ಪ್ರಿಯನೇ! ಎದ್ದೇಳು! ಈ ಕುದುರೆಯನ್ನು ನಾನೇ ನಿನಗೆ ಬಿಟ್ಟುಕೊಟ್ಟಿದ್ದೇನೆ! ಧರ್ಮರಾಜನ ಈ ಯಜ್ಞಕುದುರೆಯನ್ನು ನೀನು ಹಿಂಬಾಲಿಸಿ ಹೋಗಬೇಕಲ್ಲವೇ? ಆದರೂ ನೀನು ಮಹೀತಲದಲ್ಲಿ ಏಕೆ ಮಲಗಿರುವೆ? ಕುರುಗಳ ಪ್ರಾಣಗಳು ನಿನ್ನನ್ನೇ ಅವಲಂಬಿಸಿವೆ! ಅನ್ಯರಿಗೆ ಪ್ರಾಣದಾನವನ್ನು ನೀಡುವ ನೀನೇ ಏಕೆ ಹೀಗೆ ಪ್ರಾಣಗಳನ್ನು ತ್ಯಜಿಸಿರುವೆ? ಉಲೂಪಿ! ರಣದಲ್ಲಿ ಹತನಾಗಿರುವ ಪತಿಯನ್ನು ಚೆನ್ನಾಗಿ ನೋಡು! ಮಗನನ್ನು ಪ್ರೋತ್ಸಾಹಿಸಿ ಇವನನ್ನು ಕೊಲ್ಲಿಸಿದ ನೀನು ಶೋಕಿಸುತ್ತಿಲ್ಲವಲ್ಲ! ಪ್ರೇತಗತಿಯನ್ನು ಸೇರಿದ ನನ್ನ ಈ ಬಾಲಕನು ಬೇಕಾದರೆ ಭೂಮಿಯ ಮೇಲೆಯೇ ಮಲಗಿರಲಿ! ಆದರೆ ನಿದ್ರೆಯನ್ನು ಜಯಿಸಿದ ಲೋಹಿತಾಕ್ಷ ವಿಜಯನು ಮಾತ್ರ ಜೀವಿಸಿದರೆ ಚೆನ್ನಾಗಿರುತ್ತಿತ್ತು! ಪುರುಷರಿಗೆ ಅನೇಕ ಭಾರ್ಯೆಯರಿದ್ದರೆ ಅಪರಾಧವೇನೂ ಅಲ್ಲ. ಆದರೆ ನಾರಿಯರಿಗೆ ಇದು ತರವಲ್ಲ. ನಿನಗೆ ಈ ರೀತಿಯ ಬುದ್ಧಿಯುಂಟಾಗಬಾರದಾಗಿತ್ತು! ಪತಿ-ಪತ್ನಿಯರ ನಡುವಿನ ಈ ಶಾಶ್ವತವೂ ಅವ್ಯಯವೂ ಆದ ಸಖ್ಯವನ್ನು ಧಾತನೇ ಮಾಡಿರುವನು. ನಿನಗೂ ಅರ್ಜುನನೊಡನೆ ಇದೇ ರೀತಿಯ ಸಂಬಂಧವಿದೆ ಎನ್ನುವ ಸತ್ಯವು ನಿನಗೆ ಅರಿವಾಗಲಿ! ಪುತ್ರನಿಂದ ಕೊಲ್ಲಿಸಿದ ನನ್ನ ಈ ಪತಿಯನ್ನು ಇಂದು ಜೀವಂತವಾಗಿ ತೋರಿಸದೇ ಇದ್ದರೆ ಇಂದೇ ನಾನು ನನ್ನ ಜೀವವನ್ನು ತ್ಯಜಿಸುತ್ತೇನೆ! ಪತಿ-ಪುತ್ರರಿಂದ ವಿಹೀನಳಾಗಿ ದುಃಖಾನ್ವಿತಳಾದ ನಾನು ಇಲ್ಲಿಯೇ ಪ್ರಾಯೋಪವೇಶ ಮಾಡುವುದನ್ನು ನಿಸ್ಸಂಶಯವಾಗಿ ನೀನು ಕಾಣುವೆ!” ಹೀಗೆ ಸವತಿಯಾದ ಪನ್ನಗಸುತೆಗೆ ಹೇಳಿ ಚಿತ್ರವಾಹನನ ಮಗಳು ಚಿತ್ರಾಂಗದೆಯು ಪ್ರಾಯೋಪವೇಶಮಾಡಿ ಸುಮ್ಮನೇ ಕುಳಿತುಕೊಂಡಳು.
ಹಾಗೆ ಪತಿಯ ಪಾದಗಳೆರಡನ್ನೂ ಹಿಡಿದು ವಿಲಪಿಸುತ್ತ ಕುಳಿತಿದ್ದ ದೇವೀ ಚಿತ್ರಾಂಗದೆಯು ಮಗನು ಉಸಿರಾಡುತ್ತಿರುವುದನ್ನು ಗಮನಿಸಿದಳು. ಅನಂತರ ಸಂಜ್ಞೆಗಳನ್ನು ಪುನಃ ಪಡೆದ ರಾಜಾ ಬಭ್ರುವಾಹನನು ರಣಭೂಮಿಯಲ್ಲಿ ತನ್ನ ತಾಯಿಯನ್ನು ನೋಡಿ ಈ ಮಾತುಗಳನ್ನಾಡಿದನು: “ಅಯ್ಯೋ! ಸುಖವನ್ನೇ ತಿಳಿದಿರುವ ನನ್ನ ಈ ತಾಯಿಯು ಮೃತನಾದ ವೀರ ಪತಿಯೊಡನೆ ಭೂಮಿಯ ಮೇಲೆ ಬಿದ್ದು ಮಲಗಿದ್ದಾಳಲ್ಲಾ! ಇದಕ್ಕಿಂತಲೂ ಹೆಚ್ಚಿನ ದುಃಖವು ಯಾವುದಿದೆ? ರಣದಲ್ಲಿ ಅರಿಗಳನ್ನು ಸಂಹರಿಸುವ, ಸರ್ವಶಸ್ತ್ರಭೃತರಲ್ಲಿಯೂ ಶ್ರೇಷ್ಠನಾಗಿದ್ದವನು ನನ್ನಿಂದ ಯುದ್ಧದಲ್ಲಿ ಹತನಾಗಿ ದುರ್ಮರಣ ಹೊಂದಿರುವುದನ್ನು ಇವಳು ನೋಡುತ್ತಿರುವಳಲ್ಲ! ಈ ವಿಶಾಲವಕ್ಷಸ್ಥಳವಿರುವ ಮಹಾಬಾಹು ಪತಿಯು ಹತನಾಗಿರುವುದನ್ನು ನೋಡಿಯೂ ಈ ದೇವಿಯ ಹೃದಯವು ಒಡೆದುಹೋಗುತ್ತಿಲ್ಲ ಎಂದರೆ ಇವಳ ಹೃದಯವು ದೃಢವಾಗಿಯೇ ಇರಬೇಕು! ದುರ್ಮರಣದಂಥಹ ಈ ಸಂಕಟವು ಸಂಭವಿಸಿದಾಗಲೂ ನನ್ನ ಅಥವಾ ನನ್ನ ತಾಯಿಯ ಪ್ರಾಣವು ಹೊರಟುಹೋಗುತ್ತಿಲ್ಲವಲ್ಲ! ಅಯ್ಯೋ! ನನಗೆ ಧಿಕ್ಕಾರ! ಈ ಕುರುವೀರನ ಕಾಂಚನ ಕವಚವು ಭೂಮಿಯ ಮೇಲೆ ಕೆಡವಲ್ಪಟ್ಟು ಮಗನಾದ ನನ್ನಿಂದ ಹತನಾಗಿರುವ ಇವನನ್ನು ನೋಡಿರಿ! ಭೋ! ಭೋ! ಬ್ರಾಹ್ಮಣರೇ! ನನ್ನ ವೀರ ತಂದೆಯು ಮಗನಾದ ನನ್ನಿಂದ ಕೆಳಗುರುಳಿಸಲ್ಪಟ್ಟು ವೀರಶಯನದಲ್ಲಿ ಮಲಗಿರುವುದನ್ನು ನೋಡಿರಿ! ಕುರುಮುಖ್ಯನ ಕುದುರೆಯನ್ನು ಹಿಂಬಾಲಿಸಿ ಬಂದಿರುವ ಬ್ರಾಹ್ಮಣರು ಇಂದು ನನ್ನಿಂದ ರಣದಲ್ಲಿ ಹತನಾಗಿರುವ ಇವನಿಗೆ ಯಾವ ಶಾಂತಿಕರ್ಮಗಳನ್ನು ಮಾಡುವರು? ವಿಪ್ರರೇ! ರಣರಂಗದಲ್ಲಿ ತಂದೆಯನ್ನು ಕೊಂದ ಈ ಕ್ರೂರಿ ಪಾಪಿಗೆ ಪ್ರಾಯಶ್ಚಿತ್ತವೇನನ್ನಾದರೂ ವಿಧಿಸಿರಿ! ಇಂದು ತಂದೆಯನ್ನು ಕೊಂದ ನಾನು ಹನ್ನೆರಡು ವರ್ಷಗಳು ಕಷ್ಟದಲ್ಲಿ ಇರಬೇಕು. ಕ್ರೂರನಾಗಿರುವ ನಾನು ಇವನದೇ ಚರ್ಮವನ್ನು ಹೊದೆದುಕೊಂಡು ಇವನದೇ ಶಿರವನ್ನು ಕಪಾಲವನ್ನಾಗಿ ಹಿಡಿದು ಸಂಚರಿಸಬೇಕು. ತಂದೆಯನ್ನೇ ಕೊಂದ ನನಗೆ ಇದಕ್ಕಿಂತ ಬೇರೆ ಯಾವ ಪ್ರಾಯಶ್ಚಿತ್ತವೂ ಇಲ್ಲ! ನಾಗೋತ್ತಮನ ಮಗಳೇ! ನೋಡು! ನಿನ್ನ ಪತಿಯನ್ನು ನಾನು ಸಂಹರಿಸಿದ್ದೇನೆ! ಸಮರದಲ್ಲಿ ಅರ್ಜುನನನ್ನು ಸಂಹರಿಸಿ ಇಂದು ನಾನು ನಿನಗೆ ಪ್ರಿಯವಾದುದನ್ನು ಮಾಡಿದ್ದೇನೆ! ಆದರೆ ನಾನು ನನ್ನ ಜೀವವನ್ನೇ ಧರಿಸಿರಲು ಶಕ್ಯನಾಗಿಲ್ಲ! ಇಂದು ನನ್ನ ತಂದೆಯು ಯಾವ ಮಾರ್ಗದಲ್ಲಿ ಹೋಗಿರುವನೋ ಅದೇ ಮಾರ್ಗದಲ್ಲಿ ಹೋಗುತ್ತೇನೆ! ಗಾಂಡೀವಧನ್ವಿಯೊಡನೆ ನಾನೂ ಮೃತನಾದ ನಂತರ ನೀನು ಸಂತೋಷದಿಂದಿರು! ಇವನಿಲ್ಲದೇ ನಾನು ಬದುಕಿರಲಾರೆ ಎನ್ನುವುದು ಸತ್ಯ!”
ಹೀಗೆ ಹೇಳಿ ದುಃಖಶೋಕಸಮಾಹತನಾದ ರಾಜ ಬಭ್ರುವಾಹನನು ಆಚಮನ ಮಾಡಿ ದುಃಖದಿಂದ ಈ ಮಾತನ್ನಾಡಿದನು: “ಸ್ಥಾವರ-ಚರ ಸರ್ವಭೂತಗಳೂ ಕೇಳಿರಿ! ಭುಜಗೋತ್ತಮೇ! ಮಾತಾ! ನೀನೂ ಕೂಡ ನಾನು ಹೇಳಲಿರುವ ಈ ಸತ್ಯವನ್ನು ಕೇಳು! ಒಂದು ವೇಳೆ ನನ್ನ ತಂದೆ ಈ ಭರತರ್ಷಭ ಜಯನು ಮೇಲೇಳದಿದ್ದರೆ ಇದೇ ರಣಪ್ರದೇಶದಲ್ಲಿ ನಾನು ನನ್ನ ಶರೀರವನ್ನು ಶೋಷಿಸಿಬಿಡುತ್ತೇನೆ! ತಂದೆಯನ್ನು ಕೊಂದಿರುವ ನನಗೆ ಯಾವುದೇ ರೀತಿಯ ಪ್ರಾಯಶ್ಚಿತ್ತವೂ ಇಲ್ಲ! ಗುರುವನ್ನು ವಧಿಸಿದ ಪಾಪಮಾಡಿದ ನಾನು ನಿಶ್ಚಯವಾಗಿಯೂ ನರಕವನ್ನೇ ಪಡೆಯುತ್ತೇನೆ! ನೂರು ಗೋವುಗಳನ್ನು ದಾನಮಾಡುವುದರಿಂದ ವೀರ ಕ್ಷತ್ರಿಯನನ್ನು ಕೊಂದ ಪಾಪದಿಂದ ಮುಕ್ತನಾಗಬಹುದು. ಆದರೆ ತಂದೆಯನ್ನೇ ಕೊಂದ ಈ ಪಾಪವನ್ನು ಮಾಡಿರುವ ನನಗೆ ಬಿಡುಗಡೆಯೇ ಇಲ್ಲವಾಗಿದೆ! ಪಾಂಡುವಿನ ಮಗನಾದ ಈ ಧನಂಜಯನು ಅದ್ವಿತೀಯನು. ಮಹಾತೇಜಸ್ವಿಯು. ಧರ್ಮಾತ್ಮನಾದ ಈ ತಂದೆಯನ್ನು ಕೊಂದ ನನಗೆ ಎಲ್ಲಿಯ ಪ್ರಾಯಶ್ಚಿತ್ತವು?”
ಹೀಗೆ ಹೇಳಿ ನೃಪತಿ ಧನಂಜಯನ ಮಗ ನೃಪ ಮಹಾಮತಿ ಬಭ್ರುವಾಹನನು ಆಚಮನ ಮಾಡಿ ಆಮರಣಾಂತ ಉಪವಾಸವ್ರತವನ್ನು ಕೈಗೊಂಡು ಮೌನವಾಗಿ ಕುಳಿತನು. ಪಿತೃಶೋಕದಿಂದ ಮುಳುಗಿಹೋಗಿದ್ದ ಮಣಿಪೂರೇಶ್ವರ ನೃಪತಿಯು ಆಗ ತಾಯಿಯೊಡನೆ ಪ್ರಾಯೋಪವೇಶ ಮಾಡಿದನು. ಆಗ ಉಲೂಪಿಯು ಸಂಜೀವನ ಮಣಿಯನ್ನು ಸ್ಮರಿಸಿಕೊಂಡಳು. ಪನ್ನಗಗಳ ಪರಾಯಣವಾದ ಆ ಮಣಿಯು ಕೂಡಲೇ ಅಲ್ಲಿಗೆ ಬಂದಿತು. ಆ ಮಣಿಯನ್ನು ಹಿಡಿದುಕೊಂಡು ನಾಗರಾಜಪತಿಯ ಆ ಮಗಳು ಸೈನಿಕರ ಮನಸ್ಸಿಗೆ ಆಹ್ಲಾದಕರವಾದ ಈ ಮಾತನ್ನಾಡಿದಳು: “ಮಗೂ! ಎದ್ದೇಳು! ಶೋಕಿಸಬೇಡ! ಜಿಷ್ಣುವು ನಿನ್ನಿಂದ ಹತನಾಗಲಿಲ್ಲ. ಇವನು ಇಂದ್ರಸಹಿತನಾದ ದೇವತೆಗಳಿಗೂ ಮನುಷ್ಯರಿಗೂ ಅಜೇಯನು. ಯಶಸ್ವಿನೀ ನಿನ್ನ ಈ ತಂದೆ ಪುರುಷೇಂದ್ರನಿಗೆ ಪ್ರಿಯವಾದುದನ್ನು ಮಾಡಲೋಸುಗ ನಾನೇ ಈ ಮೋಹಿನೀ ಎಂಬ ಹೆಸರಿನ ಮಾಯೆಯನ್ನು ಪ್ರದರ್ಶಿಸಿದೆನು. ಈ ಪರವೀರಹ ಕೌರವನು ತನ್ನ ಮಗನ ಬಲವೆಷ್ಟಿರಬಹುದೆಂಬ ಜಿಜ್ಞಾಸೆಯಿಂದಲೇ ನಿನ್ನೊಡನೆ ಸಂಗ್ರಾಮದಲ್ಲಿ ಯುದ್ಧಮಾಡಲು ಬಯಸಿದ್ದನು. ಆದುದರಿಂದಲೇ ನಾನು ನಿನ್ನನ್ನು ಯುದ್ಧಕ್ಕಾಗಿ ಪ್ರಚೋದಿಸಿದೆ! ನೀನು ನಿನ್ನನ್ನು ಪಾಪಿಯೆಂದು ಸ್ವಲ್ಪವೂ ಶಂಕಿಸಬೇಕಾಗಿಲ್ಲ! ಈ ಪುರುಷನು ಮಹಾತೇಜಸ್ವೀ ಋಷಿಯು. ಶಾಶ್ವತನು ಮತ್ತು ಅವ್ಯಯನು. ಸಂಗ್ರಾಮದಲ್ಲಿ ಇವನನ್ನು ಶಕ್ರನಿಗೂ ಜಯಿಸಲು ಸಾಧ್ಯವಿಲ್ಲ! ನಿತ್ಯವೂ ಮೃತಗೊಂಡ ಪನ್ನಗೇಂದ್ರರನ್ನು ಬದುಕಿಸುವ ಈ ದಿವ್ಯ ಮಣಿಯನ್ನು ಇಗೋ ತರಿಸಿದ್ದೇನೆ. ಇದನ್ನು ನೀನು ನಿನ್ನ ತಂದೆಯ ಎದೆಯ ಮೇಲೆ ಇಡು. ಆಗ ನೀನು ಪುನಃ ಪಾಂಡವ ಅರ್ಜುನನನ್ನು ಜೀವಂತನಾಗಿ ಕಾಣುವೆ!”
ಹೀಗೆ ಹೇಳಲು ಪಾಪವನ್ನೆಸಗಿದ್ದ ಅಮಿತತೇಜಸ್ವೀ ಬಭ್ರುವಾಹನನು ಸ್ನೇಹಪೂರ್ವಕವಾಗಿ ಆ ಮಣಿಯನ್ನು ತಂದೆ ಪಾರ್ಥನ ಎದೆಯಮೇಲೆ ಇಟ್ಟನು. ಆ ಮಣಿಯನ್ನು ಇಟ್ಟೊಡನೆಯೇ ಪ್ರಭು ಜಿಷ್ಣುವು ಪುನಃ ಜೀವಿತನಾದನು. ಮಲಗಿದ್ದವನು ಎದ್ದೇಳುವಂತೆ ತನ್ನ ಕೆಂಪು ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಅವನು ಎದ್ದು ಕುಳಿತನು. ಸಂಜ್ಞೆಗಳನ್ನು ಪಡೆದು ಸ್ವಸ್ಥನಾಗಿ ಮೇಲೆದ್ದ ಆ ಮಹಾತ್ಮ ಮನಸ್ವೀ ತಂದೆಯನ್ನು ನೋಡಿ ಬಭ್ರುವಾಹನನು ವಂದಿಸಿದನು. ಆ ಪುರುಷವ್ಯಾಘ್ರ ಶ್ರೀಮಂತನು ಪುನಃ ಮೇಲೇಳಲು ಸಂತೋಷಗೊಂಡ ಪಾಕಶಾಸನ ಇಂದ್ರನು ಅವನ ಮೇಲೆ ಪುಣ್ಯ ದಿವ್ಯವೃಷ್ಟಿಯನ್ನು ಸುರಿಸಿದನು. ಯಾರೂ ಬಾರಿಸದೇ ಇದ್ದರೂ ಮೇಘದ ಧ್ವನಿಯಲ್ಲಿ ದುಂದುಭಿಗಳು ಮೊಳಗಿದವು. ಆಕಾಶದಲ್ಲಿ “ಸಾಧು! ಸಾಧು!” ಎಂಬ ಮಹಾ ಧ್ವನಿಯು ಕೇಳಿಬಂದಿತು. ಮಹಾಬಾಹು ಧನಂಜಯನು ಸಮಾಧಾನಹೊಂದಿ ಮೇಲೆದ್ದು ಬಭ್ರುವಾಹನನನ್ನು ಆಲಂಗಿಸಿ ನೆತ್ತಿಯನ್ನು ಆಘ್ರಾಣಿಸಿದನು. ಅನತಿ ದೂರದಲ್ಲಿಯೇ ಉಲೂಪಿಯೊಡನೆ ಶೋಕಕರ್ಶಿತಳಾಗಿ ನಿಂತಿದ್ದ ಅವನ ತಾಯಿ ಚಿತ್ರಾಂಗದೆಯನ್ನೂ ನೋಡಿ, ಧನಂಜಯನು ಬಭ್ರುವಾಹನನಿಗೆ ಕೇಳಿದನು: “ಅಮಿತ್ರಘ್ನ! ಈ ರಣಾಂಗಣವು ಶೋಕ-ವಿಸ್ಮಯ-ಹರ್ಷಗಳಿಂದ ಕೂಡಿದಂತೆ ಕಾಣುತ್ತಿದೆ. ಇದಕ್ಕೆ ಕಾರಣವೇನಾದರೂ ನಿನಗೆ ತಿಳಿದಿದ್ದರೆ ಹೇಳು! ನಿನ್ನ ಜನನಿಯು ಏಕೆ ಈ ರಣಭೂಮಿಗೆ ಬಂದಿದ್ದಾಳೆ? ನಾಗೇಂದ್ರನ ಮಗಳು ಉಲೂಪಿಯೂ ಕೂಡ ಇಲ್ಲಿಗೆ ಏಕೆ ಬಂದಿದ್ದಾಳೆ? ನನ್ನ ಹೇಳಿಕೆಯಂತೆಯೇ ನಮ್ಮಿಬ್ಬರೊಡನೆ ಯುದ್ಧವು ನಡೆಯಿತು ಎನ್ನುವುದು ನನಗೆ ತಿಳಿದಿದೆ. ಆದರೆ ಈ ಸ್ತ್ರೀಯರು ಇಲ್ಲಿಗೆ ಬರಲು ಕಾರಣವೇನೆಂದು ತಿಳಿಯಲು ಬಯಸುತ್ತೇನೆ.”
ಹೀಗೆ ಕೇಳಲು ಮಣಿಪೂರಪತಿಯು ಅರ್ಜುನನಿಗೆ ಶಿರಸಾ ನಮಸ್ಕರಿಸಿ ಪ್ರಸನ್ನಗೊಳಿಸಿ ಇದನ್ನು ಉಲೂಪಿಯಲ್ಲಿ ಕೇಳಿ ತಿಳಿದುಕೊಳ್ಳಬೇಕೆಂದು ಪ್ರಾರ್ಥಿಸಿಕೊಂಡನು. ಅರ್ಜುನನು ಹೇಳಿದನು: “ಕೌರವ್ಯಕುಲನಂದಿನಿ! ನೀನು ಮತ್ತು ಮಣಿಪೂರಪತಿಯ ತಾಯಿ ಚಿತ್ರಾಂಗದೆಯು ರಣಾಂಗಣಕ್ಕೆ ಏಕೆ ಬಂದಿರಿ? ಈ ರಾಜಾ ಬಭ್ರುವಾಹನನಿಗೆ ಕುಶಲವನ್ನೇ ಬಯಸುತ್ತಿರುವೆಯಲ್ಲವೇ? ನನಗೂ ಕೂಡ ಶುಭವನ್ನೇ ಬಯಸುತ್ತೀಯಲ್ಲವೇ? ನಾನಾಗಲೀ ಬಭ್ರುವಾಹನನಾಗಲೀ ಅಜ್ಞಾನದಿಂದ ನಿನಗೆ ಅಪ್ರಿಯವಾದುದನ್ನು ಏನನ್ನೂ ಮಾಡಿಲ್ಲ ತಾನೇ? ನಿನ್ನ ಸವತಿ ಚಿತ್ರವಾಹನನ ಮಗಳು ರಾಜಪುತ್ರೀ ವರಾರೋಹೇ ಚಿತ್ರಾಂಗದೆಯು ನಿನ್ನ ಕುರಿತು ಯಾವುದೇ ರೀತಿಯ ಅಪರಾಧವನ್ನೂ ಎಸಗಿಲ್ಲ ತಾನೇ?”
ಉರಗಪತಿಯ ಮಗಳು ನಗುತ್ತಾ ಅವನಿಗೆ ಉತ್ತರಿಸಿದಳು: “ನೀನಾಗಲೀ, ನೃಪ ಬಭ್ರುವಾಹನನಾಗಲೀ ಮತ್ತು ನನ್ನ ಸೇವಕಿಯಂತೆ ನಿಂತಿರುವ ಅವನ ತಾಯಿ ಚಿತ್ರಾಂಗದೆಯಾಗಲೀ ನನ್ನ ಕುರಿತು ಅಪರಾಧವನ್ನೆಸಗಿಲ್ಲ! ನಾನು ಇಲ್ಲಿಗೆ ಬಂದು ಮಾಡಿದುದೆಲ್ಲವನ್ನೂ ಕೇಳಬೇಕು. ಆದರೆ ನೀನು ಕೋಪಗೊಳ್ಳಬಾರದು. ಶಿರಸಾ ನಮಸ್ಕರಿಸಿ ಬೇಡಿಕೊಳ್ಳುತ್ತೇನೆ. ಕೌರವ್ಯ! ನಿನ್ನ ಪ್ರೀತಿಗೋಸ್ಕರವಾಗಿಯೇ ನಾನು ಇವೆಲ್ಲವನ್ನೂ ಮಾಡಿದೆನು. ಎಲ್ಲವನ್ನೂ ಕೇಳು! ಮಹಾಭಾರತ ಯುದ್ಧದಲ್ಲಿ ನೀನು ನೃಪ ಶಾಂತನವನನ್ನು ಅಧರ್ಮದಿಂದ ಸಂಹರಿಸಿದೆ. ಅದಕ್ಕೆ ಪ್ರಾಯಶ್ಚಿತ್ತವಾಗಿ ನಾನು ಇದನ್ನು ಮಾಡಬೇಕಾಯಿತು. ನಿನ್ನೊಡನೆ ನೇರವಾಗಿ ಯುದ್ಧಮಾಡುತ್ತಿರುವಾಗ ಭೀಷ್ಮನು ಕೆಳಗುರುಳಲಿಲ್ಲ. ಅವನೊಡನೆ ಯುದ್ಧಮಾಡುತ್ತಿದ್ದ ಶಿಖಂಡಿಯನ್ನು ಆಶ್ರಯಿಸಿ ನೀನು ಅವನನ್ನು ಕೆಳಗುರುಳಿಸಿದೆ! ಅದಕ್ಕೆ ಶಾಂತಿಯನ್ನು ಮಾಡಿಕೊಳ್ಳದೇ ನೀನು ಜೀವವನ್ನು ತ್ಯಜಿಸಿದ್ದೇ ಆದರೆ ನಿನ್ನ ಪಾಪಕರ್ಮದಿಂದ ನೀನು ನಿಶ್ಚಯವಾಗಿಯೂ ನರಕದಲ್ಲಿ ಬೀಳುತ್ತಿದ್ದೆ! ವಸುಗಳು ಮತ್ತು ಗಂಗೆಯೂ ಕೂಡ ಪುತ್ರನಿಂದ ಪರಾಜಯ ಹೊಂದುವ ಪ್ರಾಯಶ್ಚಿತ್ತವನ್ನೇ ನಿನಗೆ ವಿಧಿಸಿದ್ದರು. ಹಿಂದೆ ನೃಪ ಶಾಂತನವನು ಹತನಾದ ನಂತರ ಗಂಗಾತೀರಕ್ಕೆ ಬಂದಿದ್ದಾಗ ವಸುಗಳು ಹೇಳುತ್ತಿದ್ದ ಈ ಮಾತನ್ನು ನಾನು ಕೇಳಿಸಿಕೊಂಡಿದ್ದೆನು. ದೇವ ವಸುಗಳು ಮಹಾನದಿಯಲ್ಲಿ ಮಿಂದು ಭಾಗೀರಥಿಯ ಸಮ್ಮತಿಯಂತೆ ಈ ಘೋರ ಮಾತುಗಳನ್ನಾಡಿದ್ದರು: “ಭಾಮಿನಿ! ಸಂಗ್ರಾಮದಲ್ಲಿ ಶಾಂತನವ ಭೀಷ್ಮನು ಅನ್ಯನೊಡನೆ ಯುದ್ಧದಲ್ಲಿ ತೊಡಗಿದ್ದಾಗ ಸವ್ಯಸಾಚಿಯು ಅವನನ್ನು ಹೊಡೆದುರುಳಿಸಿದನು. ಅವನ ಈ ಅಪರಾಧಕ್ಕಾಗಿ ಇಂದು ನಾವು ಅರ್ಜುನನಿಗೆ ಶಾಪವನ್ನು ಕೊಡುತ್ತೇವೆ!” ಅದಕ್ಕೆ ಅವಳು “ಹಾಗೆಯೇ ಆಗಲಿ!” ಎಂದಳು. ಅತ್ಯಂತ ದುಃಖಿತಳಾದ ನಾನು ನಡೆದುದನ್ನು ತಂದೆಗೆ ತಿಳಿಸಿದೆನು. ಅದನ್ನು ಕೇಳಿ ಅವನೂ ಕೂಡ ಅತ್ಯಂತ ದುಃಖಿತನಾದನು. ನನ್ನ ತಂದೆಯು ನಿನಗೋಸ್ಕರವಾಗಿ ವಸುಗಳಲ್ಲಿ ಹೋಗಿ ಬೇಡಿಕೊಂಡನು. ಪುನಃ ಪುನಃ ಬೇಡಿಕೊಂಡನಂತರ ಅವರು ಅವನಿಗೆ ಹೀಗೆ ಹೇಳಿದರು: “ಮಹಾಭಾಗ! ಇವನು ರಣಮಧ್ಯದಲ್ಲಿರುವಾಗ ಯುವಕ ಮಣಿಪೂರೇಶ್ವನು ಇವನನ್ನು ಪುನಃ ಶರಗಳಿಂದ ಹೊಡೆದು ಭೂಮಿಗುರುಳಿಸುತ್ತಾನೆ! ಇದಾದನಂತರ ಅವನು ಶಾಪದಿಂದ ಮುಕ್ತನಾಗುತ್ತಾನೆ. ನೀನು ಈಗ ಹೋಗು!” ಎಂದು ವಸುಗಳು ಅವನಿಗೆ ಹೇಳಿದರು. ಅದನ್ನು ಅವನು ನನಗೆ ಹೇಳಿದನು. ಅದನ್ನು ಕೇಳಿ ನಾನು ನಿನ್ನನ್ನು ಆ ಶಾಪದಿಂದ ವಿಮೋಚನಗೊಳಿಸಿದ್ದೇನೆ. ದೇವರಾಜನೂ ಕೂಡ ನಿನ್ನನ್ನು ಸಮರದಲ್ಲಿ ಪರಾಜಯಗೊಳಿಸಲಾರನು. ಪುತ್ರನು ಆತ್ಮನಿಗೆ ಸಮಾನ ಎಂದು ಸ್ಮೃತಿಗಳು ಹೇಳುತ್ತವೆ. ಆದುದರಿಂದ ಬಭ್ರುವಾಹನನಿಂದ ನೀನು ಪರಾಜಿತನಾಗಿರುವುದರಲ್ಲಿ ನಿನ್ನ ದೋಷವು ಸ್ವಲ್ಪವೂ ಇಲ್ಲವೆಂದು ನನ್ನ ಅಭಿಪ್ರಾಯ. ನೀನು ಹೇಗೆ ಇದನ್ನು ತಿಳಿದುಕೊಳ್ಳುತ್ತೀಯೋ?”
ಇದನ್ನು ಕೇಳಿ ಪ್ರಸನ್ನಾತ್ಮನಾದ ವಿಜಯ ಅರ್ಜುನನು ಹೀಗೆ ಹೇಳಿದನು: “ದೇವಿ! ನೀನು ನಡೆಸಿದುದೆಲ್ಲವೂ ನನಗೆ ಸುಪ್ರಿಯವಾಗಿಯೇ ಇವೆ!” ಹೀಗೆ ಹೇಳಿ ಜಯ ಅರ್ಜುನನು ಕೌರವ್ಯಸೊಸೆ ಚಿತ್ರಾಂಗದೆಗೆ ಕೇಳಿಸುವಂತೆ ಮಗ ಮಣಿಪೂರೇಶ್ವರನಿಗೆ ಇಂತೆಂದನು: “ಬರುವ ಚೈತ್ರದಲ್ಲಿ ಯುಧಿಷ್ಠಿರನ ಅಶ್ವಮೇಧವು ನಡೆಯಲಿದೆ. ನೃಪ! ಅದಕ್ಕೆ ತಾಯಂದಿರಿಬ್ಬರು ಮತ್ತು ಅಮಾತ್ಯರೊಂದಿಗೆ ಬರಬೇಕು.” ಪಾರ್ಥನು ಹೀಗೆ ಹೇಳಲು ಧೀಮಾನ್ ರಾಜಾ ಬಭ್ರುವಾಹನನು ಕಂಬನಿದುಂಬಿದ ಕಣ್ಣುಗಳುಳ್ಳವನಾಗಿ ತಂದೆಗೆ ಹೇಳಿದನು: “ಧರ್ಮಜ್ಞ! ನಿನ್ನ ಶಾಸನದಂತೆ ನಾನು ಬರುತ್ತೇನೆ. ಅಶ್ವಮೇಧ ಮಹಾಯಜ್ಞದಲ್ಲಿ ನಾನು ದ್ವಿಜಾತಿಯವರಿಗೆ ಸೇವಕನಾಗಿರುತ್ತೇನೆ. ನನ್ನ ಮೇಲೆ ಅನುಗ್ರಹ ತೋರಿಸುವ ಸಲುವಾಗಿ ಪತ್ನಿಯರಿಬ್ಬರೊಂದಿಗೆ ನಿನ್ನದೇ ಆದ ಈ ಪುರವನ್ನು ಪ್ರವೇಶಿಸು. ಅದರ ಕುರಿತು ವಿಚಾರಿಸಬೇಡ! ನಿನ್ನದೇ ಮನೆಯಲ್ಲಿ ಒಂದು ರಾತ್ರಿಯನ್ನು ಸುಖವಾಗಿ ಕಳೆದು ನಾಳೆ ಪುನಃ ಅಶ್ವವನ್ನು ಹಿಂಬಾಲಿಸಿ ಹೋಗಬಹುದು.”
ಪುತ್ರನು ಹೀಗೆ ಹೇಳಲು ವಾನರಕೇತನ ಕೌಂತೇಯನು ಮುಗುಳ್ನಗುತ್ತಾ ಚಿತ್ರಾಂಗದ ಸುತ ಮಗನಿಗೆ ಹೇಳಿದನು: “ಮಹಾಬಾಹೋ! ದೀಕ್ಷಾಬದ್ಧನಾಗಿ ನಾನು ತಿರುಗಾಡುತ್ತಿರುವೆನೆನ್ನುವುದು ನಿನಗೆ ತಿಳಿದೇ ಇದೆ. ಆದು ಮುಗಿಯುವವರೆಗೆ ನಾನು ನಿನ್ನ ಪುರವನ್ನು ಪ್ರವೇಶಿಸಲಾರೆ. ಯಜ್ಞದ ಈ ಕುದುರೆಯು ಮನಬಂದಂತೆ ಹೋಗುತ್ತಿರುತ್ತಿದೆ. ಆದುದರಿಂದ ನನಗೆ ನಿರ್ದಿಷ್ಟ ಸ್ಥಾನವೆನ್ನುವುದೂ ಇಲ್ಲ. ಹೊರಡುತ್ತೇನೆ. ನಿನಗೆ ಮಂಗಳವಾಗಲಿ!” ಅಲ್ಲಿಯೇ ವಿಧಿವತ್ತಾಗಿ ಪೂಜಿತನಾದ ಪಾಕಶಾಸನಿ ಭರತಸತ್ತಮನು ಪತ್ನಿಯಿಬ್ಬರಿಂದಲೂ ಬೀಳ್ಕೊಂಡು ಹೊರಟನು.
ಮಾಗಧಪರಾಜಯ
ಆ ಕುದುರೆಯಾದರೋ ಸಮುದ್ರಪರ್ಯಂತವಾಗಿ ಇಡೀ ಭೂಮಿಯನ್ನು ಸಂಚರಿಸಿ, ಹಿಂದಿರುಗಿ ಹಸ್ತಿನಾಪುರಕ್ಕೆ ಅಭಿಮುಖವಾಗಿ ಹೊರಟಿತು. ಕಿರೀಟ ಧಾರೀ ತೇಜಸ್ವೀ ಅರ್ಜುನನೂ ಕೂಡ ಅದನ್ನು ಹಿಂಬಾಲಿಸಿಯೇ ಹೋಗುತ್ತಿದ್ದನು. ಆಗ ಅದು ದೈವೇಚ್ಛೆಯಂತೆ ರಾಜಗೃಹ ಪುರವನ್ನು ತಲುಪಿತು. ಕ್ಷತ್ರಧರ್ಮನಿರತನಾಗಿದ್ದ ವೀರ ಜರಾಸಂಧನ ಮೊಮ್ಮಗನು[1] ಅದನ್ನು ಕಟ್ಟಿ ಯುದ್ಧಕ್ಕೆ ಆಹ್ವಾನಿಸಿದನು. ಅನಂತರ ರಥವನ್ನೇರಿ, ಧನುಸ್ಸು-ಶರಗಳನ್ನೂ ಭತ್ತಳಿಕೆಯನ್ನೂ ಹಿಡಿದು ಮೇಘಸಂಧಿಯು ಪುರದಿಂದ ಹೊರಟು ಪದಾತಿಯಾಗಿದ್ದ ಧನಂಜಯನನ್ನು ಆಕ್ರಮಣಿಸಿದನು. ಮಹಾತೇಜಸ್ವೀ ಮೇಘಸಂಧಿಯು ಧನಂಜಯನ ಬಳಿಸಾರಿ ಕೌಶಲವಿಲ್ಲದ ಬಾಲಭಾವದ ಈ ಮಾತನ್ನಾಡಿದನು: “ಭಾರತ! ಇಲ್ಲಿಯ ವರೆಗೆ ಈ ಕುದುರೆಯನ್ನು ಸ್ತ್ರೀಯರ ಮಧ್ಯದಲ್ಲಿ ನಡೆಸಿಕೊಂಡು ಬಂದಿರುವಂತಿದೆ! ಈ ಕುದುರೆಯನ್ನು ನಾನು ಅಪಹರಿಸುತ್ತೇನೆ. ಪ್ರಯತ್ನಪಟ್ಟು ಅದನ್ನು ಬಿಡಿಸಿಕೋ! ನನ್ನ ಪಿತೃಗಳು ಯುದ್ಧದಲ್ಲಿ ನಿನಗೆ ಅನುನಯವಾಗಿ ನಡೆದುಕೊಂಡಿದ್ದಿರಬಹುದು. ನಿನ್ನ ಆತಿಥ್ಯವನ್ನು ನಾನು ಸರಿಯಾಗಿ ಮಾಡುತ್ತೇನೆ. ನನ್ನ ಮೇಲೆ ಪ್ರಹರಿಸು ಅಥವಾ ನಾನು ನಿನ್ನ ಮೇಲೆ ಪ್ರಹರಿಸುತ್ತೇನೆ.” ಇದಕ್ಕೆ ಪ್ರತಿಯಾಗಿ ಪಾಂಡವ ಅರ್ಜುನನು ನಗುತ್ತಿರುವನೋ ಎನ್ನುವಂತೆ ಇಂತೆಂದನು: “ನನ್ನ ಹಿರಿಯಣ್ಣ ನೃಪತಿಯು ಈ ಕುದುರೆಯ ಸಂಚಾರಕ್ಕೆ ವಿಘ್ನವನ್ನುಂಟುಮಾಡುವವರನ್ನು ತಡೆ ಎಂಬ ವ್ರತವನ್ನು ವಹಿಸಿರುವನು. ಇದು ನಿನಗೆ ನಿಶ್ಚಯವಾಗಿಯೂ ತಿಳಿದೇ ಇದೆ. ಯಥಾಶಕ್ತಿಯಾಗಿ ನೀನು ನನ್ನನ್ನು ಪ್ರಹರಿಸು. ನನಗೆ ಕೋಪವಾಗುವುದಿಲ್ಲ!” ಹೀಗೆ ಹೇಳಲು ಮಗಧೇಶ್ವರನು ಮೊದಲು ಪಾಂಡವನ ಮೇಲೆ ಸಹಸ್ರಾಕ್ಷನು ಮಳೆಗರೆಯುವಂತೆ ಸಹಸ್ರ ಶರಗಳ ಮಳೆಯನ್ನು ಸುರಿಸಿದನು. ಆಗ ಗಾಂಡೀವಧಾರೀ ಶೂರ ಅರ್ಜುನನು ಗಾಂಡೀವದಿಂದ ಬಿಟ್ಟ ಶರಗಳಿಂದ ಸುಲಭವಾಗಿ ಆ ಶರಗಳನ್ನು ನಿರಸನಗೊಳಿಸಿದನು. ಅವನ ಬಾಣಸಂಕೀರ್ಣಗಳನ್ನು ನಿರಸನಗೊಳಿಸಿ ವಾನರಕೇತನನು ಪನ್ನಗಗಳಂತೆ ಪ್ರಜ್ವಲಿಸುವ ಮುಖಗಳುಳ್ಳ ಶರಗಳನ್ನು ಅವನ ಶರೀರ ಮತ್ತು ಸಾರಥಿಗಳನ್ನು ಬಿಟ್ಟು - ಧ್ವಜ, ಪತಾಕದಂಡ, ರಥಯಂತ್ರ, ಅನ್ಯ ರಥಾಂಗಗಳು ಮತ್ತು ಕುದುರೆಗಳ ಮೇಲೆ ಪ್ರಯೋಗಿಸಿದನು. ಪಾರ್ಥ ಫಲ್ಗುನನು ಅವನ ಶರೀರವನ್ನು ಹಾಗೆ ರಕ್ಷಿಸಲು, ತನ್ನ ವೀರ್ಯವೇ ಇದಕ್ಕೆ ಕಾರಣವೆಂದು ತಿಳಿದ ಮಾಗಧನು ಅವನನ್ನು ಶರಗಳಿಂದ ಪ್ರಹರಿಸಿದನು. ಮಾಗಧನಿಂದ ಪ್ರಹರಿಸಲ್ಪಟ್ಟ ಗಾಂಡೀವಧಾರಿ ಶೂರ ಅರ್ಜುನನು ಆಗ ವಸಂತದಲ್ಲಿ ಹೂಬಿಟ್ಟ ದೊಡ್ಡ ಪಲಾಶವೃಕ್ಷದಂತೆ ಶೋಭಿಸಿದನು. ವಧಿಸದೇ ಇದ್ದ ಪಾಂಡವರ್ಷಭನನ್ನು ಮಾಗಧನು ಪ್ರಹರಿಸುತ್ತಿದ್ದುದರಿಂದಲೇ ಅವನು ಲೋಕವೀರ ಕೌರವ್ಯನ ಎದಿರು ಅಷ್ಟು ಹೊತ್ತು ಯುದ್ಧಮಾಡಲು ಸಾಧ್ಯವಾಯಿತು. ಸಂಕ್ರುದ್ಧನಾದ ಸವ್ಯಸಾಚಿಯಾದರೋ ಧನುಸ್ಸನ್ನು ಬಲವಾಗಿ ಸೆಳೆದು ಕುದುರೆಗಳನ್ನು ಸಂಹರಿಸಿದನು ಮತ್ತು ಸಾರಥಿಯ ಶಿರವನ್ನು ಅಪಹರಿಸಿದನು. ಕ್ಷುರದಿಂದ ಅವನ ಚಿತ್ರಿತವಾಗಿದ್ದ ಮಹಾ ಧನುಸ್ಸನ್ನೂ ತುಂಡರಿಸಿದನು. ಅವನ ಹಸ್ತಾವಾಪವನ್ನೂ, ಪತಾಕೆ-ಧ್ವಜಗಳನ್ನೂ ಕೆಳಗುರುಳಿಸಿದನು. ಕುದುರೆಗಳನ್ನು, ಧನುಸ್ಸನ್ನೂ ಮತ್ತು ಸಾರಥಿಯನ್ನೂ ಕಳೆದುಕೊಂಡು ವ್ಯಥಿತನಾದ ರಾಜಾ ಮೇಘಸಂಧಿಯು ಗದೆಯನ್ನು ತೆಗೆದುಕೊಂಡು ಅದನ್ನು ವೇಗವಾಗಿ ಕೌಂತೇಯನ ಮೇಲೆ ಪ್ರಹರಿಸಿದನು. ಬೀಳುವುದರೊಳಗೇ ಆ ಹೇಮಪರಿಷ್ಕೃತ ಗದೆಯನ್ನು ಅರ್ಜುನನು ಗೃಧ್ರರೆಕ್ಕೆಗಳುಳ್ಳ ಅನೇಕ ಶರಗಳಿಂದ ಅನೇಕ ಚೂರುಗಳನ್ನಾಗಿ ತುಂಡರಿಸಿದನು. ಮಣಿಬಂಧನವು ಒಡೆದು ಆ ಗದೆಯು ಸಹಸ್ರ ಚುರುಗಳಾಗಿ ಮುಷ್ಟಿಯಿಂದ ಹೆಣ್ಣುಸರ್ಪವು ನುಸುಳುವಂತೆ ನುಸುಳಿ ಕೆಳಗೆ ಬಿದ್ದಿತು. ವಿರಥನೂ, ಧನುಸ್ಸು-ಗದೆಗಳಿಂದ ವರ್ಜಿತನೂ ಆಗಿದ್ದ ಅವನನ್ನು ಸಮರಾಗ್ರಣಿ ಧೀಮಾನ್ ಅರ್ಜುನನು ಇನ್ನೂ ಪ್ರಹರಿಸಲು ಇಚ್ಛಿಸಲಿಲ್ಲ. ಹೀಗೆ ಕ್ಷತ್ರಧರ್ಮದಲ್ಲಿ ನಿರತನಾಗಿದ್ದ ಮತ್ತು ವಿಮನಸ್ಕನಾಗಿದ್ದ ಅವನಿಗೆ ಕಪಿಕೇತನ ಅರ್ಜುನನು ಸಾಂತ್ವಪೂರ್ವಕ ಈ ಮಾತುಗಳನ್ನಾಡಿದನು: “ಮಗೂ ಪಾರ್ಥಿವ! ನೀನು ಕ್ಷತ್ರಧರ್ಮವನ್ನು ಸಾಕಷ್ಟು ಪ್ರದರ್ಶಿಸಿರುವೆ! ಬಾಲಕನಾದ ನೀನು ಸಮರದಲ್ಲಿ ಅನೇಕ ಕರ್ಮಗಳನ್ನೆಸಗಿರುವೆ! ಹಿಂದಿರುಗು! ನೃಪರನ್ನು ಸಂಹರಿಸಬಾರದೆಂದು ಯುಧಿಷ್ಠಿರನ ಸಂದೇಶವಾಗಿದೆ. ಆದುದರಿಂದ ರಣದಲ್ಲಿ ನೀನು ಅಪರಾಧವನ್ನೆಸಗಿದ್ದರೂ ಜೀವದಿಂದ ಉಳಿದುಕೊಂಡಿರುವೆ!”
ಆಗ ಮಾಗಧನು ತಾನು ಅರ್ಜುನನಿಂದ ನಿರಾಕೃತನಾದನೆಂದು ತಿಳಿದು ಅವನ ಮಾತನ್ನು ಸತ್ಯವೆಂದು ಸ್ವೀಕರಿಸಿ, ಅವನನ್ನು ಅಂಜಲೀಬದ್ಧನಾಗಿ ಪೂಜಿಸಿದನು. ಅರ್ಜುನನು ಅವನನ್ನು ಸಮಾಧಾನಗೊಳಿಸಿ ಪುನಃ ಇದನ್ನು ಹೇಳಿದನು: “ಬರುವ ಚೈತ್ರದಲ್ಲಿ ನೃಪನ ಅಶ್ವಮೇಧಕ್ಕೆ ನೀನು ಬರಬೇಕು!” ಇದಕ್ಕೆ ಹಾಗೆಯೇ ಆಗಲಿ ಎಂದು ಹೇಳಿ ಸಹದೇವನ ಮಗ ಮೇಘಸಂಧಿಯು ಆ ಕುದುರೆಯನ್ನು ಮತ್ತು ಯೋಧಶ್ರೇಷ್ಠ ಫಲ್ಗುನನನ್ನು ವಿಧಿವತ್ತಾಗಿ ಪೂಜಿಸಿದನು. ಅನಂತರ ಆ ಕುದುರೆಯು ಯಥೇಚ್ಛವಾಗಿ ಪುನಃ ಸಂಚರಿಸತೊಡಗಿತು. ಸಮುದ್ರತೀರದಲ್ಲಿಯೇ ಮುಂದೆ ಹೋಗಿ ವಂಗ-ಪುಂಡ್ರ-ಕೇರಳಗಳಿಗೆ ಸಂಚರಿಸಿತು. ಅಲ್ಲಲ್ಲಿ ಅನೇಕ ಮ್ಲೇಚ್ಛ ಸೇನೆಗಳನ್ನು ಧನಂಜಯನು ತನ್ನ ಗಾಂಡೀವ ಧನುಸ್ಸಿನಿಂದ ಗೆದ್ದನು.
ಏಕಲವ್ಯಸುತ ಪರಾಜಯ
ಶ್ವೇತವಾಹನ ಪಾಂಡವನು ಮಾಗಧನಿಂದ ಪೂಜಿಸಲ್ಪಟ್ಟು ದಕ್ಷಿಣದಿಶೆಯನ್ನು ಹಿಡಿದು ಕುದುರೆಯನ್ನು ಹಿಂಬಾಲಿಸಿ ಹೋದನು. ಅನಂತರ ಆ ಬಲಶಾಲೀ ಕಾಮಚರ ಕುದುರೆಯು ಪುನಃ ಹಿಂದಿರುಗಿ ಚೇದಿಯರ ರಮ್ಯ ಪುರಿ ಶುಕ್ತಿಪುರವನ್ನು ತಲುಪಿತು. ಅಲ್ಲಿ ಶಿಶುಪಾಲನ ಮಗ ಮಹಾಬಲ ಶರಭನು ಯುದ್ಧಮಾಡದೇ ಅವನನ್ನು ಗೌರವಿಸಿ ಪೂಜಿಸಿದನು. ಅಲ್ಲಿ ಪೂಜಿಸಲ್ಪಟ್ಟು ಆ ಉತ್ತಮ ಕುದುರೆಯು ಕಾಶೀ, ಆಂಧ್ರ, ಕೋಸಲ, ಕಿರಾತ ಮತ್ತು ತಂಗಣ ರಾಷ್ಟ್ರಗಳಲ್ಲಿ ಸಂಚರಿಸಿತು. ಅಲ್ಲಿ ಯಥಾನ್ಯಾಯವಾಗಿ ಸತ್ಕಾರಗಳನ್ನು ಸ್ವೀಕರಿಸಿ ಪಾಂಡವ ಕೌಂತೇಯನು ಪುನಃ ಹಿಂದಿರುಗಿ ದಶಾರ್ಣದೇಶಕ್ಕೆ ಬಂದನು. ಅಲ್ಲಿ ಚಿತ್ರಾಂಗದ ಎಂಬ ಹೆಸರಿನ ಬಲವಾನ್ ವಸುಧಾಧಿಪನೊಡನೆ ವಿಜಯ ಅರ್ಜುನನ ಅತಿಭೈರವ ಯುದ್ಧವು ನಡೆಯಿತು. ಅವನನ್ನು ಕೂಡ ಪರಾಜಯಗೊಳಿಸಿ ಪುರುಷರ್ಷಭ ಕಿರೀಟಿಯು ನಿಷಾದರಾಜ ಏಕಲವ್ಯನ ರಾಜ್ಯಕ್ಕೆ ಬಂದನು. ಏಕಲವ್ಯನ ಮಗನು ಅವನನ್ನು ಆಗ ಯುದ್ಧದ ಮೂಲಕವೇ ಸ್ವಾಗತಿಸಿದನು. ನಿಷಾದನೊಂದಿಗೆ ಅರ್ಜುನನು ರೋಮಾಂಚಕಾರೀ ಸಂಗ್ರಾಮವನ್ನು ನಡೆಸಿದನು. ಆಗ ಸಮರದಲ್ಲಿ ಸೋಲನ್ನೇ ಹೊಂದದಿದ್ದ ವೀರ ಕೌಂತೇಯನು ಯಜ್ಞಕ್ಕೆ ವಿಘ್ನವನ್ನುಂಟುಮಾಡಲು ತೊಡಗಿದ್ದ ಅವನನ್ನೂ ಕೂಡ ಸಮರದಲ್ಲಿ ಗೆದ್ದನು. ನೈಷಾದಿಯನ್ನು ಗೆದ್ದು ಅವನಿಂದ ಪೂಜಿಸಲ್ಪಟ್ಟು ಪಾಕಶಾಸನಿಯು ಪುನಃ ದಕ್ಷಿಣಸಮುದ್ರದ ತೀರಪ್ರದೇಶಕ್ಕೆ ಹೋದನು. ಅಲ್ಲಿಯೂ ಕೂಡ ದ್ರವಿಡ, ಅಂಧ್ರ, ರೌದ್ರ, ಮಾಹಿಷಕರು ಮತ್ತು ಕೋಲ್ಲಗಿರಿಯವರೊಂದಿಗೆ ಕಿರೀಟಿಯ ಯುದ್ಧವು ನಡೆಯಿತು. ಕುದುರೆಯ ವಶದಲ್ಲಿಯೇ ಇದ್ದ ಅವನು ಸೌರಾಷ್ಟ್ರದೇಶಕ್ಕೆ ಹೋದನು. ಅಲ್ಲಿಂದ ಗೋಕರ್ಣ ಮತ್ತು ಪ್ರಭಾಸ ಕ್ಷೇತ್ರಗಳಿಗೂ ಹೋದನು. ಅನಂತರ ಕುರುರಾಜನ ಯಜ್ಞದ ಆ ಶ್ರೀಮಂತ ಕುದುರೆಯು ವೃಷ್ಣಿವೀರರಿಂದ ರಕ್ಷಿತವಾದ ರಮ್ಯ ದ್ವಾರವತಿಯನ್ನು ತಲುಪಿತು. ಯಾದವ ಕುಮಾರರು ಆ ಶ್ರೇಷ್ಠ ಕುದುರೆಯನ್ನು ಕಟ್ಟಿಹಾಕಲು ಮುಂದೆಬಂದಾಗ ಉಗ್ರಸೇನನು ಅವರನ್ನು ತಡೆದನು. ಆಗ ವೃಷ್ಣಿ-ಅಂಧಕರ ರಾಜನು, ಕಿರೀಟಿಯ ಸೋದರ ಮಾವ ವಸುದೇವನೊಂದಿಗೆ ಪುರದಿಂದ ಹೊರಬಂದನು. ಅವರಿಬ್ಬರೂ ಒಂದಾಗಿ ಕುರುಶ್ರೇಷ್ಠ ಭರತಶ್ರೇಷ್ಠನನ್ನು ವಿಧಿವತ್ತಾಗಿ ಪರಮ ಪ್ರೀತಿಪೂರ್ವಕವಾಗಿ ಸತ್ಕರಿಸಿದರು. ಅನಂತರ ಅವರಿಬ್ಬರಿಂದ ಅನುಮತಿಯನ್ನು ಪಡೆದು ಅರ್ಜುನನು ಕುದುರೆಯು ಎಲ್ಲಿಗೆ ಹೋಗುತ್ತಿತ್ತೋ ಅಲ್ಲಿಗೆ ಹೋದನು. ಬಳಿಕ ಆ ಕುದುರೆಯು ಸಮುದ್ರದ ಪಶ್ಚಿಮ ತೀರದ ದೇಶದಲ್ಲಿ ಸಂಚರಿಸಿ, ಕ್ರಮೇಣವಾಗಿ ಪಂಚನದ ಪ್ರದೇಶಕ್ಕೆ ಬಂದಿತು. ಗಾಂಧಾರದೇಶವನ್ನು ಪ್ರವೇಶಿಸಿ ಅಲ್ಲಿಯೂ ಕೂಡ ಕೌಂತೇಯನಿಂದ ಹಿಂಬಾಲಿಸಲ್ಪಟ್ಟ ಆ ಕುದುರೆಯು ಯಥೇಚ್ಛವಾಗಿ ಸಂಚರಿಸಿತು. ಅಲ್ಲಿ ಹಿಂದಿನ ವೈರವನ್ನೇ ಸಾಧಿಸುತ್ತಿದ್ದ ಶಕುನಿಯ ಮಗ ಗಾಂಧಾರರಾಜನೊಡನೆ ಮಹಾತ್ಮ ಅರ್ಜುನನ ಯುದ್ಧವು ನಡೆಯಿತು.
ಗಾಂಧಾರಪರಾಜಯ
ಶಕುನಿಯ ಮಗ, ಗಾಂಧಾರರ ವೀರ ಮಹಾರಥನು ಪತಾಕ-ಧ್ವಜ-ಮಾಲೆಗಳಿಂದ ಅಲಂಕೃತಗೊಂಡ ಆನೆ-ಕುದುರೆ-ರಥಗಳಿಂದ ಪರಿಪೂರ್ಣವಾದ ಮಹಾ ಸೇನೆಯೊಂದಿಗೆ ಗುಡಾಕೇಶ ಅರ್ಜುನನೊಡನೆ ಯುದ್ಧಕ್ಕೆ ಹೊರಟನು. ನೃಪತಿ ಶಕುನಿಯ ವಧೆಯನ್ನು ಸಹಿಸಿಕೊಳ್ಳಲಾರದೇ ಆ ಯೋಧರು ಧನುಸ್ಸುಗಳನ್ನು ಹಿಡಿದುಕೊಂಡು ಒಂದಾಗಿ ಪಾರ್ಥನನ್ನು ಆಕ್ರಮಣಿಸಿದರು. ಧರ್ಮಾತ್ಮ ಅಪರಾಜಿತ ಬೀಭತ್ಸುವು ಅವರಿಗೆ ಯುಧಿಷ್ಠಿರನ ಸಂದೇಶವನ್ನು ತಿಳಿಸಿದನು. ಆದರೆ ಅದನ್ನು ಅವರು ಸ್ವೀಕರಿಸಲಿಲ್ಲ. ಪಾರ್ಥನು ಸಾಂತ್ವಪೂರ್ವಕವಾಗಿ ಅವರನ್ನು ತಡೆದರೂ ಕುಪಿತರಾದ ಅವರು ಕುದುರೆಯನ್ನು ಸುತ್ತುವರೆದರು. ಆಗ ಪಾಂಡವನು ಅತ್ಯಂತ ಕ್ರೋಧಿತನಾದನು. ಪಾಂಡವ ಅರ್ಜುನನು ಹೆಚ್ಚಿನ ಪ್ರಯತ್ನಪಡದೇ ಗಾಂಡೀವದಿಂದ ಪ್ರಯೋಗಿಸಲ್ಪಟ್ಟ ಉರಿಯುತ್ತಿರುವ ಕ್ಷುರಗಳಿಂದ ಅವರ ಶಿರಗಳನ್ನು ಕತ್ತರಿಸಿದನು. ಪಾರ್ಥನಿಂದ ವಧಿಸಲ್ಪಡುತ್ತಿದ್ದ ಅವರು ಶರಗಳಿಂದ ಅತ್ಯಂತ ಗಾಯಗೊಂಡು ಗಾಬರಿಯಿಂದ ಕುದುರೆಯನ್ನು ಅಲ್ಲಿಯೇ ಬಿಟ್ಟು ಪಲಾಯನಗೈದರು. ಗಾಂಧಾರರು ಪ್ರಹರಿಸುತ್ತಿದ್ದರೂ ಪಾಂಡವರ್ಷಭ ತೇಜಸ್ವೀ ಅರ್ಜುನನು ಅವರನ್ನು ಕರೆ ಕರೆದು ಶಿರಗಳನ್ನು ಕೆರಗುರುಳಿಸಿದನು. ಹೀಗೆ ಎಲ್ಲ ಕಡೆಗಳಲ್ಲಿ ಗಾಂಧಾರರು ವಧಿಸಲ್ಪಡುತ್ತಿರಲು ಶುಕುನಿಯ ಮಗ ರಾಜನು ಪಾಂಡವನನ್ನು ಆಕ್ರಮಣಿಸಿದನು. ಕ್ಷತ್ರಧರ್ಮದಲ್ಲಿ ನಿರತನಾಗಿದ್ದು ಯುದ್ಧಮಾಡುತ್ತಿದ್ದ ರಾಜನಿಗೆ ಪಾರ್ಥನು ಹೇಳಿದನು: “ರಾಜಶಾಸನದಂತೆ ನಾನು ರಾಜರನ್ನು ವಧಿಸುವುದಿಲ್ಲ! ವೀರ! ನಿನ್ನ ಯುದ್ಧವನ್ನು ನಿಲ್ಲಿಸು! ಇಂದು ನೀನು ಪರಾಜಯಗೊಳ್ಳುವೆ!” ಅಜ್ಞಾನದಿಂದ ಮೋಹಿತನಾಗಿದ್ದ ಶಕುನಿಯ ಮಗನು ಈ ಮಾತನ್ನು ಅನಾದರಿಸಿ, ಕರ್ಮಗಳಲ್ಲಿ ಶಕ್ರನ ಸಮನಾದ ಅರ್ಜುನನನ್ನು ಸಾಯಕಗಳಿಂದ ಮುಸುಕಿದನು. ಗಾಭರಿಗೊಳ್ಳದೇ ಪಾರ್ಥನು ಅರ್ಧಚಂದ್ರದ ಪತ್ರಿಯಿಂದ ಜಯದ್ರಥನ ಶಿರವನ್ನು ಹೇಗೋ ಹಾಗೆ ಅವನ ಶಿರಸ್ತ್ರಾಣವನ್ನು ಅಪಹರಿಸಿದನು. ಅದನ್ನು ನೋಡಿ ಗಾಂಧಾರರು ಎಲ್ಲರೂ ವಿಸ್ಮಯಗೊಂಡರು. ಉದ್ದೇಶಪೂರ್ವಕವಾಗಿಯೇ ಅವನು ರಾಜನನ್ನು ಕೊಲ್ಲಲಿಲ್ಲವೆಂದು ಅರ್ಥಮಾಡಿಕೊಂಡರು. ಗಾಂಧಾರರಾಜನ ಪುತ್ರನಾದರೋ ಅವಕಾಶವನ್ನು ಹುಡುಕುತ್ತಿದ್ದನು. ಸಿಂಹವನ್ನು ಕಂಡು ಬೆದರಿದ ಕ್ಷುದ್ರ ಮೃಗಗಳಂತೆ ಅನೇಕರು ಪಲಾಯನಗೈಯುತ್ತಿದ್ದರು. ಕೂಡಲೇ ಪಾರ್ಥನು ಸನ್ನತಪರ್ವ ಭಲ್ಲಗಳಿಂದ ಓಡಿಹೋಗುತ್ತಿದ್ದವರ ಶಿರಸ್ಸುಗಳನ್ನು ಕತ್ತರಿಸತೊಡಗಿದನು. ಪಾರ್ಥನು ಗಾಂಡೀವದಿಂದ ಪ್ರಯೋಗಿಸಿದ ಶರಗಳಿಂದ ಭುಜಗಳು ತುಂಡಾಗಿದ್ದುದೂ ಅವರಿಗೆ ಸ್ವಲ್ಪ ಸಮಯ ತಿಳಿಯುತ್ತಲೇ ಇರಲಿಲ್ಲ. ಭ್ರಾಂತಿಗೊಂಡ ಪದಾತಿಗಳು, ಆನೆಗಳು ಮತ್ತು ಕುದುರೆಗಳ ಆ ಬಲವು ಪಲಾಯನಮಾಡುತ್ತಿತ್ತು ಮತ್ತು ಹತವಾಗದೇ ಉಳಿದವರು ಪುನಃ ಪುನಃ ಸಂಘಟಿತರಾಗಿ ಹಿಂದಿರುಗಿ ಆಕ್ರಮಣಿಸುತ್ತಿದ್ದರು. ಆದರೆ ಮಹಾಶರಗಳಿಂದ ಶತ್ರುಗಳು ಕೆಳಗುರುಳುತ್ತಿದ್ದುದರಿಂದ ಆ ಅಗ್ರ್ಯಕರ್ಮಿ ವೀರ ಅರ್ಜುನನ ಮುಂದೆ ಅವರ್ಯಾರೂ ಹೆಚ್ಚುಹೊತ್ತು ಕಾಣಿಸಿಕೊಳ್ಳಲಿಲ್ಲ. ಆಗ ಗಾಂಧಾರರಾಜನ ಜನನಿಯು ಭೀತಳಾಗಿ ಮಂತ್ರಿಗಳನ್ನೂ ವೃದ್ಧರನ್ನೂ ಮುಂದಿಟ್ಟುಕೊಂಡು, ಉತ್ತಮ ಅರ್ಘ್ಯವನ್ನು ತೆಗೆದುಕೊಂಡು ನಗರಿಂದ ಹೊರಬಂದಳು. ಅವ್ಯಗ್ರಳಾಗಿದ್ದ ಅವಳು ಯುದ್ಧದುರ್ಮದ ಮಗನನ್ನು ತಡೆದಳು ಮತ್ತು ಅಕ್ಲಿಷ್ಟಕಾರಿ ಜಿಷ್ಣುವನ್ನು ಪ್ರಸನ್ನಗೊಳಿಸಿದಳು. ಅವಳನ್ನು ಗೌರವಿಸಿ ಕೌಂತೇಯನು ಪ್ರಸನ್ನನಾದನು ಮತ್ತು ಶಕುನಿಯ ಮಗನನ್ನು ಸಂತೈಸುತ್ತಾ ಈ ಮಾತನ್ನಾಡಿದನು: “ಮಹಾಬಾಹೋ! ನನ್ನೊಡನೆ ಯುದ್ಧಮಾಡಬೇಕೆಂಬ ನಿನ್ನ ಈ ಬುದ್ಧಿಯು ನನಗೆ ಹಿಡಿಸಲಿಲ್ಲ. ಏಕೆಂದರೆ ನೀನು ನನ್ನ ಸೋದರನೇ ಆಗಿರುವೆ! ಮಾತೆ ಗಾಂಧಾರಿಯನ್ನು ಸ್ಮರಿಸಿಕೊಂಡು ಮತ್ತು ಧೃತರಾಷ್ಟ್ರನ ಸಲುವಾಗಿ ನಿನ್ನ ಅನುಯಾಯಿಗಳನ್ನು ಸಂಹರಿಸಿದರೂ ನಿನ್ನನ್ನು ಜೀವದಿಂದ ಉಳಿಸಿದ್ದೇನೆ. ಇನ್ನು ಮುಂದೆ ಹೀಗೆ ನಡೆದುಕೊಳ್ಳಬೇಡ! ವೈರವು ಇಲ್ಲಿಗೇ ಉಪಶಮನಗೊಳ್ಳಲಿ! ಬರುವ ಚೈತ್ರದಲ್ಲಾಗುವ ನೃಪನ ಅಶ್ವಮೇಧಕ್ಕೆ ಬರಬೇಕು.”
ಯಜ್ಞಾಯತನಿರ್ಮಾಣ
ಹೀಗೆ ಹೇಳಿ ಪಾರ್ಥನು ಕಾಮಚಾರೀ ಕುದುರೆಯನ್ನು ಅನುಸರಿಸಿ ಹೊರಟನು. ಆಗ ಆ ಕುದುರೆಯು ಹಸ್ತಿನಾಪುರಕ್ಕೆ ಹಿಂದಿರುಗಿತು. ಚಾರರ ಮೂಲಕ ಕುದುರೆಯು ಹಿಂದಿರುಗಿದುದನ್ನೂ ಅರ್ಜುನನು ಕುಶಲಿಯಾಗಿರುವನೂ ಎನ್ನುವುದನ್ನು ತಿಳಿದ ಯುಧಿಷ್ಠಿರನು ಹರ್ಷಿತನಾದನು. ಗಾಂಧಾರದೇಶದಲ್ಲಿ ಮತ್ತು ಹಾಗೆಯೇ ಅನ್ಯ ದೇಶಗಳಲ್ಲಿ ವಿಜಯನ ಆ ಕರ್ಮವನ್ನು ಕೇಳಿ ನೃಪನು ಸುಪ್ರೀತನಾದನು. ಆಗ ಅದು ಪುಷ್ಯ ನಕ್ಷತ್ರದಿಂದ ಕೂಡಿದ ಮಾಘ ಶುಕ್ಲ ದ್ವಾದಶಿಯಾಗಿತ್ತು. ಆಗ ಕೌರವ ಧರ್ಮರಾಜ ಯುಧಿಷ್ಠಿರನು ಮಹಾತೇಜಸ್ವಿಗಳೂ ಮಹಾಮನಸ್ವಿಗಳೂ ಆದ ಎಲ್ಲ ಸಹೋದರರನ್ನೂ – ಭೀಮ, ನಕುಲ, ಸಹದೇವರನ್ನು – ಕರೆಯಿಸಿದನು. ಆ ಸಮಯದಲ್ಲಿ ಧರ್ಮಭೃತರಲ್ಲಿ ಶ್ರೇಷ್ಠನೂ ಮಾತನಾಡುವವರಲ್ಲಿ ಶ್ರೇಷ್ಠನೂ ಆದ ಯುಧಿಷ್ಠಿರನು ಭೀಮಪರಾಕ್ರಮಿ ಭೀಮನನ್ನು ಉದ್ದೇಶಿಸಿ ಈ ಮಾತನ್ನಾಡಿದನು: “ಭೀಮಸೇನ! ಇಗೋ ನಿನ್ನ ತಮ್ಮನು ಕುದುರೆಯೊಂದಿಗೆ ಬರುತ್ತಿದ್ದಾನೆ. ಇದನ್ನು ಧನಂಜಯನನ್ನು ಅನುಸರಿಸಿ ಹೋಗಿದ್ದ ಪುರುಷರು ಮೊದಲಾಗಿ ಬಂದು ಹೇಳಿದ್ದಾರೆ. ಕುದುರೆಯೂ ಕೂಡ ಕಾಲಕ್ಕೆ ಸರಿಯಾಗಿ ಹಿಂದಿರುಗಿ ಬಂದಿದೆ. ಇದು ಮಾಘದ ಹುಣ್ಣಿಮೆ. ಒಂದು ತಿಂಗಳು ಮಾತ್ರ ಉಳಿದಿದೆ. ಆದುದರಿಂದ ವೇದಪಾರಗ ವಿದ್ವಾಂಸ ಬ್ರಾಹ್ಮಣರನ್ನು ಕರೆಯಿಸಬೇಕು. ಅಶ್ವಮೇಧ ಯಜ್ಞಕ್ಕೆ ಪ್ರಶಸ್ತ ಸ್ಥಳವನ್ನು ನೋಡಬೇಕು.”
ಸವ್ಯಸಾಚಿಯು ಬರುತ್ತಿದ್ದಾನೆಂದು ನರಪತಿಯಿಂದ ಕೇಳಿದ ಭೀಮನು ಹೃಷ್ಟನಾಗಿ ನೃಪತಿಶಾಸನದಂತೆ ಮಾಡಬೇಕಾದ ಕಾರ್ಯಗಳಲ್ಲಿ ತೊಡಗಿದನು. ಆಗ ಭೀಮಸೇನನು ಪ್ರಾಜ್ಞ ಸ್ಥಪತಿಗಳು ಮತ್ತು ಯಜ್ಞಕರ್ಮಗಳಲ್ಲಿ ಕುಶಲರಾಗಿದ್ದ ಬ್ರಾಹ್ಮಣರನ್ನು ಮುಂದುಮಾಡಿಕೊಂಡು ಹೊರಟನು. ಕೌರವ್ಯನು ಶಾಲವೃಕ್ಷ ಸಮೂಹಗಳಿಂದ ಕೂಡಿದ್ದ ಭೂಪ್ರದೇಶವನ್ನು ಯಥಾವಿಧಿಯಾಗಿ ಯಜ್ಞವಾಟಿಕೆಗೆ ಅಳತೆಮಾಡಿಸಿದನು. ರಾಜಮಾರ್ಗಗಳಿಂದಲೂ ಸೌದಗಳಿಂದಲೂ ಕೂಡಿದ ಮಣಿಹೇಮವಿಭೂಷಿತವಾದ ಯಜ್ಞಶಾಲೆಯನ್ನು ಕಟ್ಟಿಸಿದನು. ಸ್ತಂಭಗಳಲ್ಲಿ ಚಿನ್ನದ ಚಿತ್ರಗಳಿದ್ದವು. ದೊಡ್ಡ ತೋರಣಗಳಿದ್ದವು. ಯಜ್ಞಾಯತನ ಪ್ರದೇಶದಲ್ಲಿ ಶುದ್ಧ ಕಾಂಚನವನ್ನೇ ಬಳಸಲಾಗಿತ್ತು. ಆ ಧರ್ಮಾತ್ಮನು ಅಲ್ಲಲ್ಲಿ ಯಥಾವಿಧಿಯಾಗಿ ನಾನಾದೇಶನಿವಾಸೀ ರಾಜರಿಗಾಗಿ ಅಂತಃಪುರಗಳನ್ನು ಕಟ್ಟಿಸಿದನು. ನಾನಾ ದೇಶಗಳಿಂದ ಬಂದು ಸೇರಿದ ಬ್ರಾಹ್ಮಣರಿಗಾಗಿ ಅನೇಕ ವಿವಿಧ ಭವನಗಳನ್ನು ಭೀಮನು ಕಟ್ಟಿಸಿದನು. ಹಾಗೆಯೇ ನೃಪತಿಯ ಶಾಸನದಂತೆ ಭೀಮಸೇನನು ಅಕ್ಲಿಷ್ಟಕರ್ಮಿ ರಾಜರಿಗೆ ದೂತರನ್ನು ಕಳುಹಿಸಿದನು. ಕುರುಪತಿಗೆ ಪ್ರಿಯವಾಗಲೆಂದು ನೃಪಸತ್ತಮರು ಅನೇಕ ರತ್ನಗಳನ್ನೂ, ಸ್ತ್ರೀಯರನ್ನೂ, ಅಶ್ವ-ಆಯುಧಗಳನ್ನು ತೆಗೆದುಕೊಂಡು ಆಗಮಿಸಿದರು. ಅವರು ವಾಸಿಸುತ್ತಿದ್ದ ಆ ಸಹಸ್ರಾರು ಶಿಬಿರಗಳಿಂದ ಬಂದ ಸಮುದ್ರದ ಭೋರ್ಗರೆತದಂತಿದ್ದ ಶಬ್ಧವು ಆಕಾಶವನ್ನೇ ಮುಟ್ಟುತ್ತಿತ್ತು. ಆಗಮಿಸಿದ್ದ ಅವರಿಗೆ ರಾಜೀವಲೋಚನ ರಾಜನು ಅತಿಮಾನುಷ ಅನ್ನ-ಪಾನಾದಿಗಳ ಮತ್ತು ಶಯನಗಳ ವ್ಯವಸ್ಥೆಯನ್ನು ಮಾಡಿಸಿದ್ದನು. ಪುರುಷವ್ಯಾಘ್ರ ಧರ್ಮರಾಜನು ವಾಹನಗಳಿಗಾಗಿ ಧಾನ್ಯ, ಕಬ್ಬು ಮತ್ತು ಹಸುವಿನ ಹಾಲಿನಿಂದ ಸಮೃದ್ಧವಾದ ವಿವಿಧ ಭವನಗಳನ್ನು ಬಿಟ್ಟುಕೊಡುವಂತೆ ಆದೇಶವಿತ್ತಿದ್ದನು. ಧೀಮಂತ ಧರ್ಮರಾಜನ ಆ ಮಹಾಯಜ್ಞಕ್ಕೆ ಅನೇಕ ಬ್ರಹ್ಮವಾದೀ ಮುನಿಗಣಗಳು ಬಂದು ಸೇರಿದವು. ಶಿಷ್ಯರೊಂದಿಗೆ ಬಂದು ಸೇರಿದ್ದ ಆ ದ್ವಿಜಾತಿಪ್ರವರರನ್ನು ಕೌರವನು ಸ್ವಾಗತಿಸಿ ಸತ್ಕರಿಸಿದನು. ಮಹಾತೇಜಸ್ವಿ ಯುಧಿಷ್ಠಿರನು ದಂಭವನ್ನು ತ್ಯಜಿಸಿ ಅವರೆಲ್ಲರನ್ನೂ ಅವರವರ ವಾಸಸ್ಥಳಗಳಿಗೆ ತಲುಪುವವರೆಗೂ ಹಿಂಬಾಲಿಸಿ ಹೋಗುತ್ತಿದ್ದನು. ಯಜ್ಞವಿಧಿಯೆಲ್ಲವನ್ನೂ ನಿರ್ಮಿಸಿದ ಸ್ಥಪತಿಗಳು ಮತ್ತು ಅನ್ಯ ಶಿಲ್ಪಿಗಳು ಧರ್ಮರಾಜನಿಗೆ ಬಂದು ನಿವೇದಿಸಿದರು. ಅದನ್ನು ಕೇಳಿ ರಾಜಾ ಅಚ್ಯುತ ಧರ್ಮರಾಜನು ಸಹೋದರರೊಂದಿಗೆ ಎಲ್ಲವೂ ಕುಂದುಗಳಿಲ್ಲದೇ ನೆರವೇರಿತೆಂದು ಹೃಷ್ಟರೂಪನಾದನು.
ಯಜ್ಞಸಮೃದ್ಧಿ
ಆ ಯಜ್ಞವು ನಡೆಯುತ್ತಿರಲಾಗಿ ವಾಗ್ಮಿ ತಾರ್ಕಿಕರು ಪರಸ್ಪರರನ್ನು ಗೆಲ್ಲಲೋಸಗ ಅನೇಕ ತರ್ಕಯುಕ್ತ ವಾದಗಳನ್ನು ಮಂಡಿಸುತ್ತಿದ್ದರು. ದೇವೇಂದ್ರನ ಯಜ್ಞಶಾಲೆಯಂತೆಯೇ ಭೀಮನು ವಿಧಿವತ್ತಾಗಿ ನಿರ್ಮಿಸಿದ್ದ ಆ ಯಜ್ಞಶಾಲೆಯನ್ನು ನೃಪತಿಯರು ನೋಡಿದರು. ಅಲ್ಲಿ ಸುವರ್ಣಖಚಿತ ತೋರಣಗಳನ್ನೂ, ಅನೇಕ ರತ್ನವಿಭೂಷಿತ ಶಯ್ಯಾಸನ ವಿಹಾರಗಳನ್ನೂ ಅವರು ನೋಡಿದರು. ಅಲ್ಲಿ ಚಿನ್ನವಲ್ಲದ ಯಾವ ಘಟಗಳೂ, ಪಾತ್ರೆಗಳೂ, ಕಡಾಯಿಗಳೂ, ಕಲಶಗಳೂ ಮತ್ತು ಶರಾವೆಗಳೂ ಇಲ್ಲದಿದ್ದುದನ್ನು ಪಾರ್ಥಿವರು ನೋಡಿದರು. ಶಾಸ್ತ್ರವಿಧಿಯನ್ನನುಸರಿಸಿ ದಾರುವೃಕ್ಷಗಳಿಂದ ನಿರ್ಮಿಸಿದ್ದ ಯೂಪಗಳೂ ಹೇಮಭೂಷಿತವಾಗಿದ್ದವು. ಅತ್ಯಂತ ವರ್ಚಸ್ಸಿನಿಂದ ಬೆಳಗುತ್ತಿದ್ದ ಅವುಗಳನ್ನು ಯಥಾಕಾಲದಲ್ಲಿ ವಿಧಿವತ್ತಾಗಿ ನಿರ್ಮಿಸಲಾಗಿತ್ತು. ಭೂಮಿಯ ಮೇಲೆ ಮತ್ತು ಜಲದಲ್ಲಿ ವಾಸಿಸುವ ಏನೆಲ್ಲ ಪಶುಗಳಿವೆಯೋ ಅವೆಲ್ಲವನ್ನೂ ಅಲ್ಲಿಗೆ ತಂದಿರುವುದನ್ನು ನೃಪರು ವೀಕ್ಷಿಸಿದರು. ಹಸುಗಳು, ಎಮ್ಮೆಗಳು, ವೃದ್ಧಸ್ತ್ರೀಯರು, ಜಲಚರಪ್ರಾಣಿಗಳು, ಮಾಂಸಾಹಾರಿ ಮೃಗಗಳು, ಪಕ್ಷಿಗಳು, ಜರಾಯುಜ-ಅಂಡಜ-ಸ್ವೇದಜ-ಉದ್ಭಿಜಗಳೆಂಬ ನಾಲ್ಕೂ ಪ್ರಕಾರದ ಪ್ರಾಣಿಗಳು, ಪರ್ವತಪ್ರದೇಶಗಳಲ್ಲಿ ಮತ್ತು ಉಪವನಗಳಲ್ಲಿ ವಾಸಿಸುವ ಪ್ರಾಣಿಗಳನ್ನೂ ಅವರು ನೋಡಿದರು. ಹೀಗೆ ಸರ್ವ ಪಶು-ಗೋ-ಧನ-ಧಾನ್ಯಗಳಿಂದ ಸಮೃದ್ಧವಾಗಿದ್ದ ಆ ಯಜ್ಞವಾಟಿಕೆಯನ್ನು ನೋಡಿ ನೃಪರು ಪರಮ ವಿಸ್ಮಿತರಾದರು. ಬ್ರಾಹ್ಮಣರಿಗೆ ಮತ್ತು ವೈಶ್ಯರಿಗೆ ಅಲ್ಲಿ ಬಹುಮೃಷ್ಟಾನ್ನ ಭೋಜನದ ವ್ಯವಸ್ಥೆಯಿತ್ತು. ಒಂದು ಲಕ್ಷ ವಿಪ್ರರ ಭೋಜನವು ಪೂರ್ಣಗೊಳ್ಳಲು ಮೇಘನಿರ್ಘೋಷದಂತೆ ದುಂದುಭಿಯು ಮೊಳಗುತ್ತಿತ್ತು. ದಿವಸ ದಿವಸದಲ್ಲಿಯೂ ಆ ದುಂದುಭಿಯ ಶಬ್ಧವು ಮತ್ತೆ ಮತ್ತೆ ಕೇಳಿಬರುತ್ತಿತ್ತು. ಹೀಗೆ ಧೀಮತ ಧರ್ಮರಾಜನ ಯಜ್ಞವು ಮುಂದುವರೆಯಿತು. ಪರ್ವತೋಪಮವಾದ ಅನ್ನದ ಅನೇಕ ರಾಶಿಗಳನ್ನೂ, ಮೊಸರಿನ ಕಾಲುವೆಗಳನ್ನೂ, ತುಪ್ಪದ ಕೊಳಗಳನ್ನೂ ರಾಜರು ನೋಡಿದರು. ರಾಜನ ಆ ಮಹಾಕ್ರತುವಿನಲ್ಲಿ ನಾನಾ ದೇಶಗಳಿಂದ ರಾಜರು ಬಂದಿದ್ದರಿಂದ ಜಂಬೂದ್ವೀಪವೆಲ್ಲವೂ ಒಂದೇ ಕಡೆ ಬಂದು ಸೇರಿದೆಯೋ ಎನ್ನುವಂತೆ ತೋರುತ್ತಿತ್ತು. ಅಲ್ಲಿ ಸಹಸ್ರಾರು ಜಾತಿಗಳ ಪುರುಷರು ಅನೇಕ ಧನಗಳನ್ನು ತೆಗೆದುಕೊಂಡು ಎಲ್ಲೆಲ್ಲಿಂದಲೋ ಬಂದಿದ್ದರು. ಸುವರ್ಣದ ಹಾರಗಳನ್ನೂ ಮಣಿಕುಂಡಲಗಳನ್ನೂ ಧರಿಸಿದ್ದ ರಾಜರು ನೂರಾರು ಸಹಸ್ರಾರು ದ್ವಿಜಾಗ್ರರಿಗೆ ಬಡಿಸುತ್ತಿದ್ದರು. ಅವರ ಅನುಯಾಯಿಗಳು ಕೂಡ ಬ್ರಾಹ್ಮಣರಿಗೆ ರಾಜಭೋಗ್ಯವಾದ ವಿಧವಿಧದ ಅನ್ನ-ಪಾನಗಳನ್ನು ಬಡಿಸುತ್ತಿದ್ದರು.
ಅರ್ಜುನಪ್ರತ್ಯಾಗಮನ
ವೇದವಿದ ರಾಜರೂ ಪೃಥ್ವೀಶ್ವರರೂ ಆಗಮಿಸಿರುವುದನ್ನು ನೋಡಿ ರಾಜಾ ಯುಧಿಷ್ಠಿರನು ಭೀಮಸೇನನಿಗೆ ಹೇಳಿದನು: “ಇಲ್ಲಿಗೆ ಆಗಮಿಸಿರುವ ನರವ್ಯಾಘ್ರ ಜಗದೀಶ್ವರರೆಲ್ಲರೂ ಪೂಜಿಸಲ್ಪಡಲಿ! ಈ ನರೇಶ್ವರರು ಪೂಜಾರ್ಹರು.” ಮಹಾತೇಜಸ್ವಿ ಭೀಮಸೇನನು ನಕುಲ-ಸಹದೇವರೊಂದಿಗೆ ಯಶಸ್ವಿ ನರೇಂದ್ರನು ಹೇಳಿದಂತೆಯೇ ಮಾಡಿದನು. ಆಗ ಸರ್ವಪ್ರಾಣಧಾರಿಗಳಲ್ಲಿ ಶ್ರೇಷ್ಠನಾದ ಗೋವಿಂದನು ಧರ್ಮಜ ಬಲದೇವನನ್ನು ಮುಂದೆಮಾಡಿಕೊಂಡು ಯುಯುಧಾನ ಸಾತ್ಯಕಿ, ಪ್ರದ್ಯುಮ್ನ, ಗದ, ನಿಶಠ, ಸಾಂಬ ಮತ್ತು ಕೃತವರ್ಮರೊಂದಿಗೆ ಅಲ್ಲಿಗೆ ಆಗಮಿಸಿದನು. ಮಹಾಭುಜ ಭೀಮನು ಅವರಿಗೆ ಕೂಡ ಪರಮ ಪೂಜೆಯನ್ನು ಮಾಡಿದನು. ಆ ನರರ್ಷಭರು ರತ್ನಖಚಿತ ಅರಮನೆಗಳನ್ನು ಪ್ರವೇಶಿಸಿದರು. ಯುಧಿಷ್ಠಿರನ ಸಮೀಪದಲ್ಲಿ ಮಾತನಾಡುತ್ತಿದ್ದ ಮಧುಸೂದನನು ಕೊನೆಯಲ್ಲಿ ಬಹುಸಂಗ್ರಾಮಗಳಿಂದ ಕೃಶನಾಗಿರುವ ಅರ್ಜುನನ ಕುರಿತು ಮಾತನಾಡಿದನು. ಆಗ ಧರ್ಮರಾಜ ಕೌಂತೇಯನು ಅರಿಂದಮ ಸಹೋದರ ಜಿಷ್ಣುವಿನ ಕುರಿತು ಪುನಃ ಪುನಃ ಕೇಳಲು ಜಗತ್ಪತಿ ಕೃಷ್ಣನು ಅವನಿಗೆ ಹೇಳಿದನು: “ನೃಪ! ನನಗೆ ಆಪ್ತನಾದ ಮತ್ತು ದ್ವಾರಕೆಯಲ್ಲಿಯೇ ವಾಸಿಸುತ್ತಿದ್ದ ಪುರುಷನೋರ್ವನು ನನಗೆ ಪಾಂಡವಶ್ರೇಷ್ಠ ಅರ್ಜುನನು ಅನೇಕ ಸಂಗ್ರಾಮಗಳಲ್ಲಿ ಹೋರಾಡಿ ಕೃಶನಾಗಿರುವನೆಂದು ನನಗೆ ಹೇಳಿದನು. ಆ ಮಹಾಬಾಹುವು ಸಮೀಪದಲ್ಲಿಯೇ ಇರುವನೆಂದೂ ಅವನು ನನಗೆ ಹೇಳಿದನು. ಅಶ್ವಮೇಧದ ಸಿದ್ಧಿಗಾಗಿ ಮಾಡಬೇಕಾದ ಕಾರ್ಯಗಳನ್ನು ಮಾಡು!”
ಇದಕ್ಕೆ ಪ್ರತಿಯಾಗಿ ಧರ್ಮರಾಜ ಯುಧಿಷ್ಠಿರನು ಇಂತೆಂದನು: “ಮಾಧವ! ಸೌಭಾಗ್ಯವಶಾತ್ ಜಿಷ್ಣುವು ಕುಶಲನಾಗಿಯೇ ಹಿಂದಿರುಗುತ್ತಿದ್ದಾನೆ! ಪಾಂಡವರ ಬಲಾಗ್ರಣಿಯು ಏನಾದರೂ ಸಂದೇಶವನ್ನು ಕಳುಹಿಸಿದ್ದರೆ ಅದನ್ನು ನಿನ್ನಿಂದ ಕೇಳ ಬಯಸುತ್ತೇನೆ!”
ಹೀಗೆ ಹೇಳಲು ವೃಷ್ಣಿ-ಅಂಧಕರ ಪತಿ ವಾಗ್ಮಿಯು ಧರ್ಮಾತ್ಮ ಯುಧಿಷ್ಠಿರನಿಗೆ ಉತ್ತರಿಸಿದನು: “ಮಹಾರಾಜ! ಆ ಪುರುಷನು ನನಗೆ “ಕೃಷ್ಣ! ಸಕಾಲದಲ್ಲಿ ಅರ್ಜುನನ ಈ ಮಾತನ್ನೂ ಯುಧಿಷ್ಠಿರನಿಗೆ ತಿಳಿಸಬೇಕು” ಎಂದು ಹೇಳಿದನು. “ಎಲ್ಲ ಕಡೆಗಳಿಂದ ರಾಜರು ಕೌರವರ ಕಡೆ ಬರುತ್ತಿದ್ದಾರೆ. ಅವರಲ್ಲಿ ಒಬ್ಬೊಬ್ಬರನ್ನೂ ಯಥೋಚಿತಾವಾಗಿ ಸತ್ಕರಿಸುವುದು ನಮ್ಮ ಕರ್ತವ್ಯವಾಗಿದೆ!” ಇದರ ನಂತರ “ರಾಜಸೂಯ ಯಾಗದ ಅರ್ಘ್ಯಪ್ರದಾನದ ಸಮಯದಲ್ಲಿ ನಡೆದ ದುರ್ಘಟನೆಯು ಪುನಃ ಉಂಟಾಗಬಾರದು” ಎಂಬ ವಿಜ್ಞಾಪನೆಯನ್ನೂ ಅವನು ನನ್ನಲ್ಲಿ ಮಾಡಿದ್ದಾನೆ. “ಆ ರಾಜನು ಇದನ್ನೇ ಮಾಡಬೇಕಾಗಿದೆ. ಅದಕ್ಕೆ ನಿನ್ನ ಬೆಂಬಲವೂ ಬೇಕು. ರಾಜರ ಪರಸ್ಪರ ದ್ವೇಷದಿಂದ ಪುನಃ ಪ್ರಜೆಗಳು ವಿನಾಶಹೊಂದಬಾರದು!” ಇದಕ್ಕೂ ಹೊರತಾಗಿ ಆ ಪುರುಷನು ಧನಂಜಯನ ಅನ್ಯ ಸಂದೇಶವನ್ನೂ ಹೇಳಿದನು. ಅದನ್ನು ಹೇಳುತ್ತೇನೆ. ಕೇಳು. “ನಮ್ಮ ಯಜ್ಞಕ್ಕೆ ಮಣಿಪೂರದ ನೃಪತಿ ನನ್ನ ಪ್ರೀತಿಯ ಮಗ ಮಹಾತೇಜಸ್ವಿ ಬಭ್ರುವಾಹನನು ಬರುತ್ತಾನೆ. ಅವನು ನನ್ನ ಭಕ್ತನೂ ನನ್ನಲ್ಲಿ ನಿತ್ಯವೂ ಅನುರಕ್ತನಾಗಿರುವುದರಿಂದ ನನಗೋಸ್ಕರವಾಗಿ ನೀನು ಅವನನ್ನು ವಿಧಿವತ್ತಾಗಿ ಗೌರವಿಸಬೇಕು!””
ಈ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಆ ವಾಕ್ಯವನ್ನು ಅಭಿನಂದಿಸುತ್ತಾ ಹೀಗೆ ಹೇಳಿದನು: “ಕೃಷ್ಣ! ನೀನು ಹೇಳಿದ ಅಮೃತರಸದಂತಿರುವ ಅರ್ಜುನನ ಸಂದೇಶವನ್ನು ಕೇಳಿ ನನ್ನ ಮನಸ್ಸು ಆಹ್ಲಾದಗೊಂಡಿದೆ. ಅಲ್ಲಲ್ಲಿ ವಿಜಯ ಮತ್ತು ನರಾಧಿಪರೊಡನೆ ಅನೇಕ ಯುದ್ಧಗಳಾದವೆಂದು ಕೇಳಿದ್ದೇನೆ. ನನ್ನ ಕಾರಣದಿಂದಾಗಿ ಆ ಧೀಮಾನ್ ವಿಜಯ ಪಾರ್ಥನು ಸದಾ ಸುಖದಿಂದ ವಂಚಿತನಾಗಿದ್ದಾನೆ ಎಂದು ನನ್ನ ಮನಸ್ಸು ಅತೀವವಾಗಿ ನೋಯುತ್ತಿದೆ. ಏಕಾಂತದಲ್ಲಿ ಸದಾ ನಾನು ಕುಂತೀಸುತ ಅರ್ಜುನನ ಕುರಿತೇ ಚಿಂತಿಸುತ್ತಿರುತ್ತೇನೆ. ಸರ್ವಲಕ್ಷಣ ಸಂಪನ್ನನಾಗಿರುವ ಅವನ ಶರೀರದಲ್ಲಿ ಯಾವ ಅನಿಷ್ಟ ಲಕ್ಷಣವಿದೆಯೆಂದು ಅವನು ಈ ರೀತಿಯ ದುಃಖವನ್ನು ಅನುಭವಿಸುತ್ತಿದ್ದಾನೆ? ಆ ಕುಂತೀನಂದನನು ಸತತವೂ ದುಃಖಭಾಗಿಯಾಗಿದ್ದಾನೆ. ಅವನ ಶರೀರದಲ್ಲಿ ನಿಂದ್ಯಲಕ್ಷಣಗಳನ್ನೇನೂ ನಾನು ಕಂಡಿಲ್ಲ. ಇದರ ಕುರಿತು ನಾನು ಕೇಳಬಹುದಾಗಿದ್ದರೆ ಅದನ್ನು ನೀನು ಹೇಳಬೇಕು!”
ಇದನ್ನು ಕೇಳಿ ಬಹಳ ಹೊತ್ತು ಧ್ಯಾನಮಗ್ನನಾಗಿ ಭೋಜರಾಜರ ವರ್ಧಕ ಹೃಷೀಕೇಶ ವಿಷ್ಣುವು ರಾಜನಿಗೆ ಇಂತೆಂದನು: “ನೃಪತೇ! ಆ ಪುರುಷಸಿಂಹನ ಮೊಳಕಾಲುಗಳ ಹಿಂಭಾಗಗಳು ಇರಬೇಕಾದುದಕ್ಕಿಂತಲೂ ಸ್ವಲ್ಪ ದಪ್ಪನಾಗಿರುವುದರ ಹೊರತು ಅವನಲ್ಲಿ ಬೇರೆ ಯಾವ ಅನಿಷ್ಟಗಳೂ ಕಾಣಿಸುವುದಿಲ್ಲ. ಅದರಿಂದಾಗಿ ಆ ಪುರುಷವ್ಯಾಘ್ರನು ಸದಾ ಪ್ರಯಾಣಮಾಡುತ್ತಲೇ ಇರಬೇಕಾಗುತ್ತದೆ. ಜಯನ ದುಃಖಕ್ಕೆ ಬೇರೆ ಯಾವ ಕಾರಣವನ್ನೂ ನಾನು ಕಾಣುತ್ತಿಲ್ಲ.”
ಧೀಮತ ಕೃಷ್ಣನ ಈ ಸತ್ಯದ ಮಾತನ್ನು ಕೇಳಿ ಕುರುಶ್ರೇಷ್ಠ ಯುಧಿಷ್ಠಿರನು “ಪ್ರಭೋ! ನೀನು ಹೇಳಿದುದೇ ಸರಿ!” ಎಂದು ವೃಷ್ಣಿಶಾರ್ದೂಲನಿಗೆ ಹೇಳಿದನು. ಆಗ ದ್ರೌಪದೀ ಕೃಷ್ಣೆಯು ಅಸೂಯೆಯಿಂದ ಕೃಷ್ಣನನ್ನು ಕಡೆಗಣ್ಣುಗಳಿಂದ ನೋಡಿದಳು. ಕೇಶಿಹಂತಕ ಕೃಷ್ಣನು ಅವಳ ಆ ವರ್ತನೆಯನ್ನು ಪ್ರಣಯಪೂರ್ವಕವಾಗಿಯೇ ಸ್ವೀಕರಿಸಿದನು. ಸಖ ಹೃಷೀಕೇಶನು ಸಾಕ್ಷಾತ್ ತನ್ನ ಸಖ ಧನಂಜಯನಂತೆಯೇ ತೋರುತ್ತಿದ್ದನು. ಅಲ್ಲಿದ್ದ ಭೀಮಾದಿ ಕುರುಗಳೂ ಮತ್ತು ಯಾದವರೂ ವಿಚಿತ್ರಾರ್ಥವುಳ್ಳ ಧನಂಜಯನ ಕುರಿತಾದ ಮಾತುಗಳನ್ನು ಕೇಳಿ ಆನಂದಿಸಿದರು. ಅರ್ಜುನನ ಕುರಿತಾಗಿ ಅವರು ಹೀಗೆ ಮಾತನಾಡಿಕೊಳ್ಳುತ್ತಿರುವಾಗಲೇ ಮಹಾತ್ಮ ವಿಜಯನ ಸಂದೇಶವನ್ನು ತೆಗೆದುಕೊಂಡು ಪುರುಷನೋರ್ವನು ಅಲ್ಲಿಗೆ ಆಗಮಿಸಿದನು. ಆ ಬುದ್ಧಿವಂತನು ಆಗಮಿಸಿ, ಕುರುಶ್ರೇಷ್ಠನನ್ನು ನಮಸ್ಕರಿಸಿ, ನರವ್ಯಾಘ್ರ ಅರ್ಜುನನು ಬರುತ್ತಿರುವುದನ್ನು ತಿಳಿಸಿದನು. ಅದನ್ನು ಕೇಳಿದ ನೃಪತಿಯು ಹರ್ಷದ ಕಣ್ಣೀರಿನಿಂದ ಕಣ್ಣುಗಳು ತುಂಬಿರಲು, ಪ್ರಿಯವಿಷಯವನ್ನು ತಂದಿರುವುದಕ್ಕಾಗಿ ಅವನಿಗೆ ಬಹಳ ಧನವನ್ನಿತ್ತನು. ಅನಂತರ ಎರಡನೆಯ ದಿವಸ ಪಾಂಡವರ ಧುರಂಧರ ಪುರುಷವ್ಯಾಘ್ರ ಅರ್ಜುನನು ಬರುವ ಮಹಾ ಶಬ್ಧವುಂಟಾಯಿತು. ಉಚ್ಛೈಶ್ರವದಂತಿದ್ದ ಆ ಕುದುರೆಯು ಹತ್ತಿರಕ್ಕೆ ಬರುತ್ತಿರುವಾಗ ಮೇಲೆದ್ದ ಧೂಳು ಆಕಾಶದಲ್ಲಿ ಅದ್ಭುತವಾಗಿ ಕಾಣುತ್ತಿತ್ತು. ಅಲ್ಲಿ “ಅದೃಷ್ಟವಶಾತ್ ಅರ್ಜುನ ಪಾರ್ಥನು ಕುಶಲಿಯಾಗಿದ್ದಾನೆ! ರಾಜಾ ಯುಧಿಷ್ಠಿರನು ಧನ್ಯ!” ಎಂಬ ಜನರ ಹರ್ಷಯುಕ್ತ ಮಾತುಗಳು ಕೇಳಿಬರುತ್ತಿದ್ದವು. “ಅರ್ಜುನನಲ್ಲದೇ ಬೇರೆ ಯಾರುತಾನೇ ಪಾರ್ಥಿವರನ್ನು ಸೋಲಿಸಿ ಈ ಶ್ರೇಷ್ಠ ಕುದುರೆಯನ್ನು ಇಡೀ ಭೂಮಿಯಲ್ಲಿ ಸುತ್ತಾಡಿಸಿಕೊಂಡು ಬರುತ್ತಾರೆ? ಆಗಿ ಹೋಗಿದ್ದ ಸಗರಾದಿ ಮಹಾತ್ಮ ರಾಜರೂ ಇಂತಹ ಕರ್ಮಗಳನ್ನು ಮಾಡಿದ್ದರೆಂದು ನಾವು ಕೇಳಿರಲಿಲ್ಲ! ಈ ಕುರುಕುಲಶ್ರೇಷ್ಠನು ಮಾಡಿದ ದುಷ್ಕರ ಕರ್ಮಗಳನ್ನು ಭವಿಷ್ಯದಲ್ಲಿಯೂ ಬೇರೆ ಯಾವ ಪೃಥಿವೀಪತಿಯೂ ಮಾಡುವುದಿಲ್ಲ!”
ಹೀಗೆ ಮಾತನಾಡಿಕೊಳ್ಳುತ್ತಿದ್ದ ಆ ಜನರ ಕೇಳಲು ಸುಖಕರವಾದ ಮಾತುಗಳನ್ನು ಕೇಳುತ್ತಾ ಧರ್ಮಾತ್ಮ ಫಲ್ಗುನನು ಯಜ್ಞವಾಟಿಕೆಯನ್ನು ಪ್ರವೇಶಿಸಿದನು. ಆಗ ಅಮಾತ್ಯರು ಮತ್ತು ಯದುನಂದನ ಕೃಷ್ಣನೊಡನೆ ರಾಜಾ ಯುಧಿಷ್ಠಿರನು ಧೃತರಾಷ್ಟ್ರನನ್ನು ಮುಂದಿರಿಸಿಕೊಂಡು ಅರ್ಜುನನನ್ನು ಎದಿರುಗೊಂಡನು. ಅರ್ಜುನನು ತಂದೆಯ ಮತ್ತು ಧೀಮತ ಧರ್ಮರಾಜನ ಪಾದಗಳಿಗೆರಗಿ, ಭೀಮಾದಿಗಳನ್ನು ಪೂಜಿಸಿ ಕೇಶವನನ್ನು ಬಿಗಿದಪ್ಪಿಕೊಂಡನು. ಅವರಿಂದ ಸತ್ಕರಿಸಲ್ಪಟ್ಟು ಮತ್ತು ಅವರನ್ನೂ ಯಥಾವಿಧಿಯಾಗಿ ಅರ್ಚಿಸಿ, ಧರ್ಮಾತ್ಮ ಅರ್ಜುನನು ತೀರವನ್ನು ತಲುಪಿದ ಈಸುಗಾರನಂತೆ ವಿಶ್ರಮಿಸಿದನು. ಇದೇ ಸಮಯದಲ್ಲಿ ಧೀಮಂತ ರಾಜಾ ಬಭ್ರುವಾಹನನು ಮಾತೆಯರಿಬ್ಬರೊಡನೆ ಕುರುಗಳಲ್ಲಿಗೆ ಆಗಮಿಸಿದನು. ಅವನು ಕುರುಗಳೆಲ್ಲರನ್ನೂ ಭೇಟಿಮಾಡಿ, ಸರ್ವರಿಂದ ಅಭಿನಂದಿಸಲ್ಪಟ್ಟು, ಅಜ್ಜಿ ಕುಂತಿಯ ಉತ್ತಮ ಭವನವನ್ನು ಪ್ರವೇಶಿಸಿದನು.
ಅವನು ಪಾಂಡವನ ಅರಮನೆಯನ್ನು ಪ್ರವೇಶಿಸಿ ಯಥಾನ್ಯಾಯವಾಗಿ ವಿನೀತನಾಗಿ ಮಧುರಮಾತುಗಳಿಂದ ಪಿತಾಮಹಿಯನ್ನು ನಮಸ್ಕರಿಸಿದನು. ಹಾಗೆಯೇ ದೇವೀ ಚಿತ್ರಾಂಗದೆ ಮತ್ತು ಕೌರವ್ಯಸುತೆ ಉಲೂಪಿಯರು ಒಟ್ಟಾಗಿ ಕುಂತಿ, ಕೃಷ್ಣೆ, ಸುಭದ್ರೆ ಮತ್ತು ಅನ್ಯ ಕುರುಸ್ತ್ರೀಯರನ್ನು ಯಥಾನ್ಯಾಯವಾಗಿ ವಿನಯದಿಂದ ನಮಸ್ಕರಿಸಿದರು. ಕುಂತಿಯು ಅವರಿಬ್ಬರಿಗೆ ವಿವಿಧರತ್ನಗಳನ್ನಿತ್ತಳು. ದ್ರೌಪದೀ ಮತ್ತು ಸುಭದ್ರೆಯರೂ ಉಡುಗೊರೆಗಳನ್ನಿತ್ತರು. ಆ ಇಬ್ಬರು ದೇವಿಯರೂ ಅಮೂಲ್ಯ ಶಯನಾಸನಯುಕ್ತ ಭವನಗಳಲ್ಲಿ ಪಾರ್ಥನಿಗೆ ಪ್ರಿಯವನ್ನುಂಟುಮಾಡುವ ಸ್ವಯಂ ಕುಂತಿಯಿಂದ ಸತ್ಕರಿಸಲ್ಪಟ್ಟು ಉಳಿದುಕೊಂಡರು. ಸತ್ಕರಿಸಲ್ಪಟ್ಟ ಮಹಾವೀರ್ಯ ರಾಜಾ ಬಭ್ರುವಾಹನನು ಯಥಾವಿಧಿಯಾಗಿ ಮಹೀಪಾಲ ಧೃತರಾಷ್ಟ್ರನ ಸೇವೆಗೈದನು. ಮಹಾತೇಜಸ್ವಿ ಬಭ್ರುವಾಹನನು ರಾಜ ಯುಧಿಷ್ಠಿರನನ್ನೂ ಭೀಮಾದಿ ಪಾಂಡವರನ್ನೂ ಸಂಧಿಸಿ ವಿನಯದಿಂದ ಅಭಿವಂದಿಸಿದನು. ಆ ಮಹಾರಥರು ಪ್ರೇಮದಿಂದ ಅವನನ್ನು ಆಲಂಗಿಸಿ ಯಥಾವಿಧಿಯಾಗಿ ಗೌರವಿಸಿ, ಪ್ರೀತಿಯಿಂದ ಅವನಿಗೆ ಬಹು ಧನವನ್ನು ನೀಡಿದರು. ಹಾಗೆಯೇ ಆ ಮಹೀಪಾಲನು ಚಕ್ರಗದಾಧಾರಿ ಕೃಷ್ಣ ಗೋವಿಂದನನ್ನು ಪ್ರದ್ಯುಮ್ನನಂತೆಯೇ ವಿನಯದಿಂದ ಸೇವೆಗೈದನು. ಆ ರಾಜನಿಗೆ ಕೃಷ್ಣನು ಬೆಲೆಬಾಳುವ ಚಿನ್ನದಿಂದ ಅಲಂಕೃತ ರಥವನ್ನೂ ಉತ್ತಮ ದಿವ್ಯಾಶ್ವಗಳನ್ನೂ ಕೊಟ್ಟು ಸತ್ಕರಿಸಿದನು. ಧರ್ಮರಾಜ, ಭೀಮ, ಯಮಳರು ಮತ್ತು ಫಲ್ಗುನರು ಅವನಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಉಡುಗೊರೆಗಳನ್ನಿತ್ತು ಸತ್ಕರಿಸಿದರು.
ಯೂಪೋಚ್ಛ್ರಯ
ಅನಂತರ ಮೂರನೆಯ ದಿವಸ ಸತ್ಯವತೀ ಸುತ ವಾಗ್ಮೀ ಮುನಿ ವ್ಯಾಸನು ಯುಧಿಷ್ಠಿರನನ್ನು ಸಂಧಿಸಿ ಈ ಮಾತುಗಳನ್ನಾಡಿದನು: “ಕೌಂತೇಯ! ಇಂದಿನಿಂದ ನೀನು ದೀಕ್ಷಾಬದ್ಧನಾಗಿ ಯಜ್ಞವನ್ನು ಆರಂಭಿಸು. ಯಜ್ಞದ ಮುಹೂರ್ತವು ಸನ್ನಿಹಿತವಾಗಿದೆಯೆಂದು ಯಾಜಕರು ಪ್ರೇರೇಪಿಸುತ್ತಿದ್ದಾರೆ. ಈ ಕ್ರತುವಿನ ಹೆಸರೇ “ಅಹೀನ” ಅಂದರೆ ಲೋಪವಿಲ್ಲದ್ದು ಎಂದಿದೆ. ಇದರಲ್ಲಿ ಚಿನ್ನವನ್ನು ಬಹುವಾಗಿ ಬಳಸುವುದರಿಂದ ಇದು ಬಹುಸುವರ್ಣಕ ಎಂದೂ ಖ್ಯಾತಿಯಾಗಿದೆ. ಇದಕ್ಕೆ ಪ್ರಧಾನ ಕಾರಣರಾಗಿರುವ ಬ್ರಾಹ್ಮಣರಿಗೆ ಮೂರು ಪಟ್ಟು ಅಧಿಕವಾದ ದಕ್ಷಿಣೆಯನ್ನು ಕೊಟ್ಟು ಮೂರು ಯಜ್ಞಗಳನ್ನು ಮಾಡಿದಂಥವನಾಗು! ಬಹುದಕ್ಷಿಣಾಯುಕ್ತವಾದ ಮೂರು ಅಶ್ವಮೇಧಗಳನ್ನು ಮಾಡಿದವನಾಗಿ ನೀನು ಜ್ಞಾತಿವಧೆಯ ಪಾಪವನ್ನು ಕಳೆದುಕೊಳ್ಳುತ್ತೀಯೆ! ಪರಮ ಪವಿತ್ರವೂ ಪಾವನಗಳಲ್ಲಿ ಪಾವನವೂ ಆಗಿರುವ ಈ ಅಶ್ವಮೇಧದ ಅವಭೃತವನ್ನು ನೀನು ಪಡೆಯುವವನಾಗು!”
ತೇಜಸ್ವೀ ಅಮಿತತೇಜಸ್ವೀ ವ್ಯಾಸನು ಹೀಗೆ ಹೇಳಲು ಆ ಧರ್ಮಾತ್ಮಾ ನರಾಧಿಪ ಯುಧಿಷ್ಠಿರನು ಅಶ್ವಮೇಧದ ದೀಕ್ಷೆಯನ್ನು ಗ್ರಹಣಮಾಡಿ, ಮಹಾಕ್ರತು ಅಶ್ವಮೇಧ ಯಾಗವನ್ನು ನಡೆಸಿದನು. ಅಲ್ಲಿ ಚೆನ್ನಾಗಿ ಪಳಗಿದ್ದ ವೇದವಿದ ಶಾಸ್ತ್ರಜ್ಞ ಯಾಜಕರು ವಿಧಿವತ್ತಾಗಿ ಕರ್ಮಗಳನ್ನು ಕ್ರಮವಾಗಿ ನಡೆಸಿದರು. ಆ ದ್ವಿಜರ್ಷಭರು ಕ್ರಮಯುಕ್ತವಾಗಿ ಎಲ್ಲ ಕರ್ಮಗಳನ್ನೂ ನಡೆಸಿದರು. ಅಲ್ಲಿ ಯಾವುದನ್ನೂ ಬಿಡದೇ ಯಾವುದರಲ್ಲಿಯೂ ತಪ್ಪದೇ ಮಾಡಿಸಿದರು. ಧರ್ಮಜ್ಞ ದ್ವಿಜ ದ್ವಿಜಸತ್ತಮರು ಯಥಾವಿಧಿಯಾಗಿ ಪ್ರವರ್ಗ್ಯವನ್ನು ಮಾಡಿ ವಿಧಿವತ್ತಾಗಿ ಅಭಿಷವ[2]ವನ್ನೂ ನಡೆಸಿದರು. ಅನಂತರ ಸೋಮಪಾನಮಾಡುವುದರಲ್ಲಿ ಶ್ರೇಷ್ಠರಾದ ಅವರು ಸೋಮವನ್ನು ತಯಾರಿಸಿ ಅದರ ಮೂಲಕ ಶಾಸ್ತ್ರಗಳನ್ನನುಸರಿಸಿ ಓಂದಾದರೊಂದಂತೆ ಸವನಗಳನ್ನು ಮಾಡಿದರು. ಅಲ್ಲಿ ಯಾವ ಮಾನವನೂ ಕೃಪಣನಾಗಲೀ, ದರಿದ್ರನಾಗಲೀ, ಹಸಿದವನಾಗಲೀ, ದುಃಖಿತನಾಗಲೀ, ಅಸಂಸ್ಕೃತನಾಗಲೀ ಇರಲಿಲ್ಲ. ರಾಜಶಾಸನದಂತೆ ಮಹಾತೇಜಸ್ವೀ ಭೀಮಸೇನನು ನಿತ್ಯವೂ ಸತತವಾಗಿ ಭೋಜನಾರ್ಥಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡುತ್ತಿದ್ದನು. ಸರ್ವಕರ್ಮಗಳಲ್ಲಿ ಕುಶಲರಾದ ಮತ್ತು ಶಾಸ್ತ್ರಾರ್ಥಗಳನ್ನು ಕಂಡುಕೊಂಡಿದ್ದ ಯಾಜಕರು ಅನುದಿನವೂ ಎಲ್ಲಕರ್ಮಗಳನ್ನೂ ಸರಿಯಾಗಿಯೇ ಮಾಡಿಸುತ್ತಿದ್ದರು. ಧೀಮತ ಯುಧಿಷ್ಠಿರನ ಸದಸ್ಯರಲ್ಲಿ ಷಡಂಗಸಹಿತ ವೇದವನ್ನು ತಿಳಿಯದ, ವ್ರತಾನುಷ್ಠಾನಗಳನ್ನು ಮಾಡಿರದ, ಉಪಾಧ್ಯಾಯನಲ್ಲದ ಮತ್ತು ವಾದಗಳಿಗೆ ಸಕ್ಷಮನಲ್ಲದ ದ್ವಿಜರು ಯಾರೂ ಇರಲಿಲ್ಲ. ಕುರುಪತಿಯ ಕ್ರತುವಿನಲ್ಲಿ ಯೂಪೋಚ್ಛ್ರಯವು ಸನ್ನಿಹಿತವಾದಾಗ ಯಾಜಕರು ಆರು ಬಿಲ್ವ, ಆರು ಖಾದಿರ (ಕಗ್ಗಲಿ), ಆರು ಬಿಲ್ವಸಮಿತ (ಪಲಾಶ), ಎರಡು ದೇವದಾರು, ಮತ್ತು ಒಂದು ಶ್ಲೇಷ್ಮಾತಕ ವೃಕ್ಷಗಳ (ಇಪ್ಪತ್ತೊಂದು) ಯೂಪಗಳನ್ನು ಸ್ಥಾಪಿಸಿದರು. ಧರ್ಮರಾಜನ ಶಾಸನದಂತೆ ಆ ಯೂಪಗಳ ಶೋಭೆಗಾಗಿ ಭೀಮನು ಅವುಗಳನ್ನು ಕಾಂಚನದಿಂದಲೇ ಮಾಡಿಸಿದ್ದನು. ಬಣ್ಣದ ವಸ್ತ್ರಗಳಿಂದ ಶೋಭಿತವಾಗಿದ್ದ ಆ ಯೂಪಸ್ಥಂಭಗಳು ನಭದಲ್ಲಿ ಸಪ್ತರ್ಷಿ ಸಹಿತರಾದ ದೇವತೆಗಳಂತೆಯೇ ವಿರಾಜಿಸುತ್ತಿದ್ದವು. ಚಯನಕ್ಕೆ ಚಿನ್ನದ ಇಟ್ಟಿಗೆಗಳನ್ನೇ ಮಾಡಿಸಲಾಗಿತ್ತು. ಅಲ್ಲಿಯ ಚಯನವು ಪ್ರಜಾಪತಿ ದಕ್ಷನ ಚಯನದಂತೆಯೇ ಶೋಭಿಸಿತು. ಅಲ್ಲಿದ್ದ ನಾಲ್ಕು ಚಿತಿಗಳಲ್ಲಿ ಪ್ರತಿಯೊಂದರ ಉದ್ದಗಲಗಳು ಹದಿನೆಂಟು ಗೇಣುಗಳಾಗಿದ್ದು, ಸುವರ್ಣಮಯ ರೆಕ್ಕೆಗಳುಳ್ಳ ಗರುಡನ ಆಕಾರದಲ್ಲಿ ತ್ರಿಕೋಣಗಳಾಗಿದ್ದವು. ಮನೀಷಿಗಳು ಶಾಸ್ತ್ರಪ್ರಕಾರವಾಗಿ ಆಯಾ ದೇವತೆಗಳನ್ನು ಉದ್ದೇಶಿಸಿ ಪಕ್ಷಿ-ಪಶುಗಳನ್ನು ನಿಯೋಜಿಸಿದ್ದರು. ಆ ಅಗ್ನಿಚಯ ಕರ್ಮದಲ್ಲಿ ಶಾಸ್ತ್ರದಲ್ಲಿ ಹೇಳಿರುವಂತೆ ಋಷಭಗಳನ್ನೂ, ಜಲಚರ ಪ್ರಾಣಿಗಳನ್ನು ಎಲ್ಲವನ್ನೂ ಒಟ್ಟಾಗಿ ಸೇರಿಸಿದ್ದರು. ರಾಜ ಮಾಹಾತ್ಮ ಕೌಂತೇಯನ ಯೂಪಗಳಲ್ಲಿ ಮೂರುನೂರು ಪಶುಗಳನ್ನು ಬಂಧಿಸಿದ್ದರು. ಅವುಗಳಲ್ಲಿ ಕುದುರೆಯು ಪ್ರಧಾನವಾಗಿದ್ದಿತು. ಸಾಕ್ಷಾತ್ ದೇವರ್ಷಿಗಳಿಂದ ಕೂಡಿದ್ದ ಆ ಯಜ್ಞವು ಶೋಭಿಸುತ್ತಿತ್ತು. ಗಂಧರ್ವಗಣಸಂಕೀರ್ಣಗಳಿಂದ ಮತ್ತು ಅಪ್ಸರೆಯರ ಗಣಗಳಿಂದ ಕೂಡಿ ಶೋಭಿಸುತ್ತಿತ್ತು. ಕಿಂಪುರುಷರ ಗೀತೆಗಳಿಂದಲೂ ಕಿನ್ನರರಿಂದಲೂ ಶೋಭಿತವಾಗಿತ್ತು. ಸಿದ್ಧರ ಮತ್ತು ವಿಪ್ರರ ನಿವಾಸಗಳು ಎಲ್ಲೆಡೆಯಲ್ಲಿಯೂ ಸಮಾವೃತವಾಗಿದ್ದವು. ಆ ಯಾಗಸಭೆಯಲ್ಲಿ ಸರ್ವಶಾಸ್ತ್ರಪ್ರಣೇತಾರರಾದ ಯಜ್ಞಕರ್ಮಗಳಲ್ಲಿ ಕುಶಲರಾದ ವ್ಯಾಸಶಿಷ್ಯ ದ್ವಿಜೋತ್ತಮರು ನಿತ್ಯವೂ ಸದಸ್ಯರಾಗಿದ್ದರು. ಅಲ್ಲಿ ನಾರದ, ಮಹಾದ್ಯುತಿ ತುಂಬುರು, ವಿಶ್ವಾವಸು ಮತ್ತು ಚಿತ್ರಸೇನರು ಹಾಗೂ ಅನ್ಯ ಗೀತಕೋವಿದರು ಇದ್ದರು. ಯಜ್ಞಕರ್ಮಗಳ ಮಧ್ಯೆ ಬಿಡುವಿನಲ್ಲಿ ಗೀತಕುಶಲರಾದ ಮತ್ತು ನೃತ್ಯವಿಶಾರದರಾದ ಗಂಧರ್ವರು ಆ ವಿಪ್ರರನ್ನು ರಮಿಸುತ್ತಿದ್ದರು.
ಯಜ್ಞಸಮಾಪ್ತಿ
ದ್ವಿಜಾತಿಯ ದ್ವಿಜಸತ್ತಮರು ಅನ್ಯ ಪಶುಗಳನ್ನು ವಿಧಿವತ್ತಾಗಿ ಹೋಮಮಾಡಿದ ನಂತರ ಆ ತುರಗವನ್ನು ಆಲಂಭನ ಮಾಡಿದರು. ಅನಂತರ ಯಾಜಕರ್ಷಭರು ವಿಧಿವತ್ತಾಗಿ ತುರಗವನ್ನು ಸಂಜ್ಞಾಪಿಸಿ ಅದರ ಬಳಿ ಮೂರು ಕಲೆಗಳಿಂದ ಯುಕ್ತಳಾದ ಮನಸ್ವಿನೀ ದ್ರುಪದಾತ್ಮಜೆಯನ್ನು ಕುಳ್ಳಿರಿಸಿದರು. ಶಾಸ್ತ್ರೋಕ್ತವಾಗಿ ಕುದುರೆಯ ವಪೆಯನ್ನು ತೆಗೆದು ಅವ್ಯಗ್ರ ದ್ವಿಜರ್ಷಭರು ಶಾಸ್ತ್ರಾನುಸಾರವಾಗಿ ಬೇಯಿಸಿದರು. ಅನಂತರ ಸಮಸ್ತ ಪಾಪಗಳನ್ನೂ ಕಳೆಯುವ ಆ ವಪೆಯ ಹೊಗೆಯ ವಾಸನೆಯನ್ನು ಅನುಜರೊಂದಿಗೆ ಧರ್ಮರಾಜನು ಆಘ್ರಾಣಿಸಿದನು. ಕುದುರೆಯ ಉಳಿದ ಅಂಗಗಳನ್ನು ಎಲ್ಲವನ್ನೂ ಹದಿನಾರು ಧೀರ ಋತ್ವಿಜರು ಅಗ್ನಿಯಲ್ಲಿ ಹೋಮಮಾಡಿದರು. ಶಕ್ರತೇಜಸ್ಸಿನಿಂದ ಕೂಡಿದ್ದ ರಾಜನ ಆ ಯಜ್ಞವನ್ನು ಸಂಸ್ಥಾಪಿಸಿ ಶಿಷ್ಯರೊಂದಿಗೆ ಭಗವಾನ್ ವ್ಯಾಸನು ನೃಪನಿಗೆ ಅಭ್ಯುದಯಪೂರ್ವಕ ಆಶೀರ್ವಾದಗಳನ್ನು ನೀಡಿದನು. ಆಗ ಯುಧಿಷ್ಠಿರನು ಯಥಾವಿಧಿಯಾಗಿ ಸದಸ್ಯರಿಗೆ ಸಹಸ್ರ ಕೋಟಿ ಸುವರ್ಣನಾಣ್ಯಗಳನ್ನು ಮತ್ತು ವ್ಯಾಸನಿಗೆ ಇಡೀ ವಸುಂಧರೆಯನ್ನು ದಾನಮಾಡಿದನು. ಧರೆಯನ್ನು ಸ್ವೀಕರಿಸಿ ಸತ್ಯವತೀಸುತ ವ್ಯಾಸನು ಭರತಶ್ರೇಷ್ಠ ಧರ್ಮಾತ್ಮ ಯುಧಿಷ್ಠಿರನಿಗೆ ಇಂತೆಂದನು: “ರಾಜಸತ್ತಮ! ನಿನ್ನ ಈ ಪೃಥ್ವಿಯನ್ನು ನಿನ್ನಲ್ಲಿಯೇ ಇಡುತ್ತೇನೆ. ಇದರ ಬೆಲೆಯನ್ನು ನೀನು ನನಗೆ ಕೊಡು. ಬ್ರಾಹ್ಮಣರು ಧನಾರ್ಥಿಗಳಲ್ಲವೇ?” ಮಹಾತ್ಮ ರಾಜರ ಮಧ್ಯದಲ್ಲಿ ಸಹೋದರರೊಂದಿಗಿದ್ದ ಧೀಮಾನ್ ಮಹಾಮನಸ್ವಿ ಯುಧಿಷ್ಠಿರನು ಆ ವಿಪ್ರರಿಗೆ ಉತ್ತರಿಸಿದನು: “ಅಶ್ವಮೇಧ ಮಹಾಯಜ್ಞದಲ್ಲಿ ಪೃಥ್ವಿಯನ್ನೇ ದಕ್ಷಿಣೆಯನ್ನಾಗಿ ಕೊಡಬೇಕೆಂಬ ವಿಧಿಯಿದೆ. ಅರ್ಜುನನು ಗೆದ್ದ ಇದನ್ನು ನಾನು ಋತ್ವಿಜರಿಗೆ ನೀಡುತ್ತಿದ್ದೇನೆ. ನಾನಿನ್ನು ವನವನ್ನು ಪ್ರವೇಶಿಸುತ್ತೇನೆ. ಈ ಮಹಿಯನ್ನು ನೀವು ವಿಭಜಿಸಿಕೊಳ್ಳಿರಿ. ಚಾತುರ್ಹೋತ್ರ[3]ದ ಪ್ರಮಾಣದಂತೆ ಪೃಥ್ವಿಯನ್ನು ನಾಲ್ಕು ಭಾಗಗಳನ್ನಾಗಿ ಮಾಡಿಕೊಳ್ಳಿ. ಬ್ರಾಹ್ಮಣರಾದ ನಿಮ್ಮ ಸ್ವತ್ತನ್ನು ತೆಗೆದುಕೊಳ್ಳಲು ನಾನು ಇಷ್ಟಪಡುವುದಿಲ್ಲ. ನನ್ನ ಸಹೋದರರ ಮತವೂ ನಿತ್ಯವೂ ಇದೇ ಆಗಿದೆ.”
ಅವನು ಹೀಗೆ ಹೇಳಲು ಸಹೋದರರು ಮತ್ತು ದ್ರೌಪದಿಯೂ “ಇದು ಹೀಗೆಯೇ ಸರಿ” ಎಂದು ಹೇಳಿದರು. ಅದು ರೋಮಾಂಚಕಾರಿಯಾಗಿತ್ತು! ಆಗ ಅಂತರಿಕ್ಷದಲ್ಲಿ “ಸಾಧು! ಸಾಧು!” ಎಂಬ ಮಾತೂ ಕೇಳಿಬಂದಿತು. ಹಾಗೆಯೇ ದ್ವಿಜಸಂಘಗಳ ಪ್ರಶಂಸೆಯ ಧ್ವನಿಗಳೂ ಕೇಳಿಬಂದವು. ಅದನ್ನು ಗೌರವಿಸಿ ವಿಪ್ರರ ಮಧ್ಯದಲ್ಲಿ ಮುನಿ ದ್ವೈಪಾಯನನು ಪುನಃ ಯುಧಿಷ್ಠಿರನಿಗೆ ಹೀಗೆ ಹೇಳಿದನು: “ನನಗೆ ನೀನು ಭೂಮಿಯನ್ನು ಕೊಟ್ಟಿರುವೆ. ಅದನ್ನೇ ನಾನು ನಿನಗೆ ವಹಿಸಿಕೊಡುತ್ತಿದ್ದೇನೆ. ದ್ವಿಜಾತಿಯರಿಗೆ ಭೂಮಿಯ ಪ್ರತ್ಯಾಮ್ನಾಯವಾಗಿ ಸುವರ್ಣವನ್ನು ನೀಡು. ಭೂಮಿಯು ನಿನ್ನ ಅಧಿಕಾರದಲ್ಲಿಯೇ ಇರಲಿ!” ಆಗ ವಾಸುದೇವನು ಧರ್ಮರಾಜ ಯುಧಿಷ್ಠಿರನಿಗೆ “ಭಗವಾನ್ ವ್ಯಾಸನು ಹೇಳಿದಂತೆಯೇ ಮಾಡಬೇಕು!” ಎಂದು ಹೇಳಿದನು. ಕೃಷ್ಣನು ಹೀಗೆ ಹೇಳಲು ಕುರುಶ್ರೇಷ್ಠ ಯುಧಿಷ್ಠಿರನು ಪ್ರೀತಾತ್ಮನಾಗಿ ಸಹೋದರರೊಂದಿಗೆ ಮೂರು ಕ್ರತುಗಳಿಗೆ ಆಗುವಷ್ಟು ಕೋಟಿ ಕೋಟಿಗಟ್ಟಲೆ ದಕ್ಷಿಣೆಗಳನ್ನು ನೀಡಿದನು. “ಮರುತ್ತನನ್ನೇ ಅನುಸರಿಸಿ ನರಾಧಿಪ ಕುರುಸಿಂಹನು ಮಾಡಿದುದನ್ನು ಈ ಲೋಕದಲ್ಲಿ ಬೇರೆ ಯಾರೂ ಮಾಡುವುದಿಲ್ಲ!” ಆ ದ್ರವ್ಯವನ್ನು ಸ್ವೀಕರಿಸಿದ ಪ್ರಭು ಕೃಷ್ಣದ್ವೈಪಾಯನನು ಅದನ್ನು ಋತ್ವಿಜರಿಗೆ ನೀಡಿದರು. ಆ ವಿದ್ವಾನರು ಅದನ್ನು ನಾಲ್ಕು ಭಾಗಗಳನ್ನಾಗಿ ವಿಭಾಗಿಸಿಕೊಂಡರು. ಪೃಥ್ವಿಯ ಬೆಲೆಯನ್ನು ಹಿರಣ್ಯರೂಪದಲ್ಲಿ ನೀಡಿ ಸಹೋದರರೊಂದಿಗೆ ಯುಧಿಷ್ಠಿರನು ಪಾಪಗಳನ್ನು ತೊಳೆದುಕೊಂಡು ಸ್ವರ್ಗವನ್ನೇ ಜಯಿಸಿ ಆನಂದಿಸಿದನು. ಋತ್ವಿಜರು ಆ ಸುವರ್ಣರಾಶಿಯನ್ನು ಪಡೆದು ಉತ್ಸಾಹವಿದ್ದಂತೆ ಯಥಾಬಲವಾಗಿ ದ್ವಿಜಾತಿಯರಲ್ಲಿ ಹಂಚಿಕೊಂಡರು. ಯಜ್ಞವಾಟಿಯಲ್ಲಿ ಇದ್ದ ಏನೆಲ್ಲ ಹಿರಣ್ಯ, ಭೂಷಣ, ತೋರಣ, ಯೂಪ, ಘಟ, ಪಾತ್ರೆ ಮತ್ತು ಎಲ್ಲವನ್ನೂ ಯಥೇಷ್ಟವಾಗಿ ದ್ವಿಜರು, ಯುಧಿಷ್ಠಿರನ ಅಪ್ಪಣೆಯಂತೆ, ತಮ್ಮಲ್ಲಿ ವಿಭಜಿಸಿಕೊಂಡರು. ಅನಂತರ ಹಾಗೆಯೇ ಅಲ್ಲಿದ್ದ ಕ್ಷತ್ರಿಯರು, ವೈಶ್ಯರು, ಶೂದ್ರರು ಮತ್ತು ಅನ್ಯ ಮ್ಲೇಚ್ಛಜಾತಿಯವರು ಬ್ರಾಹ್ಮಣರಿಗೆ ಧನವನ್ನಿತ್ತರು. ಆ ಸಮಯದಲ್ಲಿ ಆಗಾಗ ಮಹಾ ಸುವರ್ಣವನ್ನು ದಾನಮಾಡಲಾಯಿತು. ಮಹಾತ್ಮ ಧರ್ಮರಾಜನ ಆ ಐಶ್ವರ್ಯದಿಂದ ತೃಪ್ತರಾದ ಬ್ರಾಹ್ಮಣರೆಲ್ಲರೂ ಮುದಿತರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಮಹಾದ್ಯುತಿ ಭಗವಾನ್ ವ್ಯಾಸನು ತನ್ನ ಭಾಗಕ್ಕೆ ಬಂದಿದ್ದ ಮಹಾ ಹಿರಣ್ಯರಾಶಿಯನ್ನು ಆದರದಿಂದ ಕುಂತಿಗೆ ನೀಡಿದನು. ಮಾವನಿಂದ ಪ್ರೀತಿಪೂರ್ವಕವಾಗಿ ಪಡೆದ ಆ ಮಹಾಧನವನ್ನು ಪೃಥೆಯು ಪ್ರೀತಿಮನಸ್ಸಿನಿಂದ ಜನರಿಗೆ ಪುಣ್ಯವಾಗುವ ಕಾರ್ಯಗಳನ್ನು ಮಾಡಿದಳು. ಅವಭೃತಸ್ನಾನಗೈದು ಪಾಪಗಳನ್ನು ಕಳೆದುಕೊಂಡು ಸಹೋದರರೊಂದಿಗೆ ರಾಜಾ ಯುಧಿಷ್ಠಿರನು ದೇವತೆಗಳಿಂದ ಸೇವಿಸಲ್ಪಟ್ಟ ಮಹೇಂದ್ರನಂತೆ ಶೋಭಿಸಿದನು. ಬಂದು ಸೇರಿದ್ದ ಮಹೀಪಾಲರಿಂದ ಸುತ್ತುವರೆಯಲ್ಪಟ್ಟ ಪಾಂಡವರೂ ಕೂಡ ಗ್ರಹಗಳಿಂದ ಸುತ್ತುವರೆಯಲ್ಪಟ್ಟ ತಾರಾಗಣಗಳಂತೆ ಶೋಭಿಸಿದರು. ಆಗ ಯುಧಿಷ್ಠಿರನು ರಾಜರಿಗೆ ಕೂಡ ವಿವಿಧ ರತ್ನಗಳನ್ನೂ, ಆನೆ-ಕುದುರೆಗಳ ಅಲಂಕಾರಗಳನ್ನೂ, ಸ್ತ್ರೀಯರನ್ನೂ, ಕಾಂಚನ-ವಸ್ತ್ರಗಳನ್ನೂ ನೀಡಿದನು. ಕೊನೆಯಿಲ್ಲದ ಆ ಧನರಾಶಿಯನ್ನು ದಾನವನ್ನಾಗಿತ್ತ ರಾಜಾ ಪಾರ್ಥನು ಪಾರ್ಥಿವಮಂಡಲದಲ್ಲಿ ವೈಶ್ರವಣ ಕುಬೇರನಂತೆ ಶೋಭಿಸಿದನು. ಹಾಗೆಯೇ ವೀರ ರಾಜ ಬಭ್ರುವಾಹನನನ್ನು ಕರೆಯಿಸಿ ಅವನಿಗೆ ವಿಪುಲ ವಿತ್ತವನ್ನಿತ್ತನು. ಆಗ ಅವನು ತನ್ನ ಮನೆಗೆ ತೆರಳಿದನು. ದುಃಶಲೆಯ ಮೊಮ್ಮಗ ಆ ಬಾಲಕನನ್ನು ಅವನ ತಂದೆಯ ಸ್ವರಾಜ್ಯಕ್ಕೇ ರಾಜನನ್ನಾಗಿ ಅಭಿಷೇಕಿಸಿದನು. ಸಂಯಮಿ ಕುರುರಾಜ ಯುಧಿಷ್ಠಿರನು ಆ ಎಲ್ಲ ರಾಜರನ್ನೂ ಪ್ರತ್ಯೇಕವಾಗಿ ಪೂಜಿಸಿ ಕಳುಹಿಸಿಕೊಟ್ಟನು. ಹೀಗೆ ಬಹಳ ಅನ್ನ-ಧನ-ರತ್ನಗಳ ರಾಶಿಗಳಿದ್ದ ಮತ್ತು ಸುರೆ-ಮೈರೇಯಗಳ ಸಾಗರಗಳಿದ್ದ ಆ ಯಜ್ಞವು ನಡೆಯಿತು. ಅಲ್ಲಿ ತುಪ್ಪವೇ ಕೆಸರಾದ ಸರೋವರಗಳೂ, ಅನೇಕ ಪರ್ವತಗಳಂತಿದ್ದ ಅನ್ನಗಳ ರಾಶಿಗಳೂ, ಕೆಸರಿಲ್ಲದ ರಸಗಳ ಕಾಲುವೆಗಳೂ ಇದ್ದವು. ಅಲ್ಲಿ ಭಕ್ಷ್ಯ-ಭೋಜ್ಯಗಳನ್ನು ಮಾಡುವವರ, ಊಟಮಾಡಿ ಎಂದು ಹೇಳುವವರ, ಮತ್ತು ಪಶುಗಳನ್ನು ವಧಿಸುತ್ತಿದ್ದವರ ಕೊನೆಯೇ ಕಾಣುತ್ತಿರಲಿಲ್ಲ. ಮತ್ತೋನ್ಮತ್ತರಾಗಿ ಆನಂದಿಸುತ್ತಿದ್ದ, ಹಾಡುತ್ತಿದ್ದ ಯುವತೀ ಜನರಿಂದ, ಮೃದಂಗ-ಶಂಖ ಶಬ್ಧಗಳಿಂದ ಅದು ಮನೋರಮವಾಗಿತ್ತು. “ಕೊಡಿ! ಭೋಜನ ಮಾಡಿ!” ಎಂಬ ಕೂಗುಗಳು ಹಗಲು-ರಾತ್ರಿಗಳೂ ಅಲ್ಲಿ ಕೇಳಿಬರುತ್ತಿದ್ದವು. ಆ ಮಹೋತ್ಸವಕ್ಕೆ ಬಂದಿದ್ದ ನಾನಾ ದೇಶನಿವಾಸಿ ಜನರು ಅತ್ಯಂತ ಹರ್ಷಿತರಾಗಿ ಅದರ ಕುರಿತೇ ಮಾತನಾಡಿಕೊಳ್ಳುತ್ತಿದ್ದರು. ಧನ ಮತ್ತು ಬಯಸಿದ ರತ್ನಧನಗಳ ಧಾರೆಗಳನ್ನೇ ಮಳೆಯಾಗಿ ಸುರಿಸಿದ ಆ ಭರತಶ್ರೇಷ್ಠನು ಪಾಪಗಳನ್ನು ಕಳೆದುಕೊಂಡು ಕೃತಾರ್ಥನಾಗಿ ಪುರವನ್ನು ಪ್ರವೇಶಿಸಿದನು.
ಆ ಮಹಾಯಜ್ಞ ಅಶ್ವಮೇಧವು ಮುಗಿಯಲು ಒಂದು ಉತ್ತಮ ಮಹದಾಶ್ಚರ್ಯವು ನಡೆಯಿತು. ದ್ವಿಜಾಗ್ರರು, ಜ್ಞಾತಿ-ಸಂಬಂಧಿ-ಬಂಧುಗಳು ಮತ್ತು ಧೀನ-ಅಂಧ-ಕೃಪಣರು ತೃಪ್ತಿಗೊಳ್ಳಲು, ಮಹಾದಾನಗಳನ್ನು ಸರ್ವದಿಕ್ಕುಗಳಲ್ಲಿಯೂ ಘೋಷಿಸಲು, ಧರ್ಮರಾಜನ ನೆತ್ತಿಯ ಮೇಲೆ ಪುಷ್ಪವೃಷ್ಟಿಯು ಬಿದ್ದಿತು. ಆಗ ಒಂದು ಪಾರ್ಶ್ವವು ಸುವರ್ಣಾಮಯವಾಗಿದ್ದ ಮುಂಗಸಿಯೊಂದು ಬಿಲದಿಂದ ಹೊರಬಂದು ಸಿಡಿಲಿನಂತೆ ಗರ್ಜಿಸಿತು. ಹಾಗೆ ಜೋರಾಗಿ ಕೂಗಿ ಮೃಗ-ಪಕ್ಷಿಗಳನ್ನು ಭಯಪಡಿಸಿದ ಆ ಮಹಾ ಬಿಲಶಾಯಿಯು ಮಾನವ ಧ್ವನಿಯಲ್ಲಿ ಹೀಗೆ ಹೇಳಿತು: “ನರಾಧಿಪರೇ! ಈ ಯಜ್ಞದಲ್ಲಿ ಮಾಡಿದ ದಾನವು ಕುರುಕ್ಷೇತ್ರದಲ್ಲಿ ವಾಸಿಸುವ ಉಂಚವೃತ್ತಿಯವನು ಮಾಡಿದ ಒಂದು ಸೇರು ಹಿಟ್ಟಿನ ದಾನಕ್ಕೂ ಸಮಾನವಲ್ಲ!” ಮುಂಗುಸಿಯ ಆ ಮಾತನ್ನು ಕೇಳಿ ಬ್ರಾಹ್ಮಣರ್ಷಭರೆಲ್ಲರೂ ಪರಮ ವಿಸ್ಮಿತರಾದರು. ಆಗ ಆ ದ್ವಿಜರೆಲ್ಲರೂ ಒಂದಾಗಿ ಮುಂಗುಸಿಯನ್ನು ಕೇಳಿದರು: “ಸಾಧುಗಳು ಬಂದು ಸೇರಿರುವ ಈ ಯಜ್ಞಕ್ಕೆ ನೀನು ಎಲ್ಲಿಂದ ಆಗಮಿಸಿರುವೆ? ನಿನ್ನ ಪರಮ ಬಲವು ಯಾವುದು? ನಿನ್ನ ಪರಿಜ್ಞಾನವು ಏನು? ಯಾರನ್ನಾಶ್ರಯಿಸಿ ಜೀವಿಸುತ್ತಿರುವೆ? ಈ ಯಜ್ಞವನ್ನು ಹೀಗೆ ನಿಂದಿಸುತ್ತಿರುವ ನಿನ್ನನ್ನು ನಾವು ಯಾರೆಂದು ತಿಳಿದುಕೊಳ್ಳಬೇಕು? ನಾನಾವಿಧದ ಯಜ್ಞಸಾಮಾಗ್ರಿಗಳನ್ನು ಸಂಗ್ರಹಿಸಿ ಶಾಸ್ತ್ರವಿಧಿಗೆ ಯಾವ ಲೋಪವೂ ಬರದಂತೆ ಆಗಮಗಳಲ್ಲಿ ಹೇಳಿರುವಂತೆ ಯಥಾನ್ಯಾಯವಾಗಿ ಹೇಗೆ ಮಾಡಬೇಕೋ ಹಾಗೆ ಯಾಜಕರು ಇಲ್ಲಿ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ಶಾಸ್ತ್ರಗಳಲ್ಲಿ ತೋರಿಸಿಕೊಟ್ಟಿರುವಂತೆ ಪೂಜಾರ್ಹರನ್ನು ಇಲ್ಲಿ ವಿಧಿವತ್ತಾಗಿ ಪೂಜಿಸಲಾಗಿದೆ. ಮಂತ್ರಪೂತ ಆಹುತಿಗಳಿಂದ ಅಗ್ನಿಯು ತೃಪ್ತನಾಗಿದ್ದಾನೆ. ಮಾತ್ಸರ್ಯವೇನೂ ಇಲ್ಲದೇ ದಾನಗಳನ್ನು ನೀಡಲಾಗಿದೆ. ಇಲ್ಲ ಬಹುವಿಧದ ದಾನಗಳಿಂದ ದ್ವಿಜರ್ಷಭರು ತುಷ್ಟರಾಗಿದ್ದಾರೆ. ಧರ್ಮಯುದ್ಧದಿಂದ ಕ್ಷತ್ರಿಯರೂ, ಶ್ರಾದ್ಧಗಳಿಂದ ಪಿತಾಮಹರೂ ತೃಪ್ತರಾಗಿದ್ದಾರೆ. ಪಾಲನೆಯಿಂದ ವೈಶ್ಯರು ತುಷ್ಟರಾಗಿದ್ದಾರೆ. ಶ್ರೇಷ್ಠ ಸ್ತ್ರೀಯರು ಕಾಮಗಳಿಂದ ತೃಪ್ತರಾಗಿದ್ದಾರೆ. ದಯೆಯಿಂದ ಶೂದ್ರರೂ, ದಾನಕೊಟ್ಟು ಉಳಿದುದರಿಂದ ಇತರ ಜನರೂ ತೃಪ್ತರಾಗಿದ್ದಾರೆ. ನಮ್ಮ ನೃಪನ ಶೌಚದಿಂದಾಗಿ ಜ್ಞಾತಿ-ಸಂಬಂಧಿಗಳು ತೃಪ್ತರಾಗಿದ್ದಾರೆ. ದೇವತೆಗಳು ಪುಣ್ಯ ಹವಿಸ್ಸುಗಳಿಂದಲೂ ಶರಣಾಗತರು ರಕ್ಷಣೆಯಿಂದಲೂ ತುಷ್ಟರಾಗಿದ್ದಾರೆ. ಇಲ್ಲಿ ಹೀಗಿರುವಾಗ ನೀನು ಏನನ್ನು ಕೇಳಿ ಅಥವಾ ಏನನ್ನು ನೋಡಿ ಹೀಗೆ ಹೇಳುತ್ತಿರುವೆ? ಬ್ರಾಹ್ಮಣರ ಅಪೇಕ್ಷೆಯಂತೆ ದ್ವಿಜಾತಿಯವರು ಕೇಳುವ ಈ ಪ್ರಶ್ನೆಗೆ ಉತ್ತರಿಸು. ನೀನು ಪ್ರಾಜ್ಞನಾಗಿರುವೆ. ದಿವ್ಯರೂಪವನ್ನು ಹೊಂದಿರುವೆ. ಬ್ರಾಹ್ಮಣರೊಂದಿಗೆ ಸೇರಿರುವೆ. ನಿನ್ನ ವಾಕ್ಯದಲ್ಲಿ ಶ್ರದ್ಧೆಯಿದೆ. ತತ್ತ್ವವೇನೆಂದು ನೀನು ಹೇಳಬೇಕು.”
ದ್ವಿಜರು ಹೀಗೆ ಕೇಳಲು ಆ ಮುಂಗಸಿಯು ನಕ್ಕು ಹೇಳಿತು: “ದ್ವಿಜರೇ! ನನ್ನ ಮಾತು ಸುಳ್ಳಲ್ಲ ಅಥವಾ ನಾನು ಇದನ್ನು ದರ್ಪದಿಂದಲೂ ಹೇಳಿಲ್ಲ! “ನರಾಧಿಪರೇ! ಈ ಯಜ್ಞವು ಕುರುಕ್ಷೇತ್ರದಲ್ಲಿ ವಾಸಿಸಿದ್ದ ಉಂಚವೃತ್ತಿಯವನು ನೀಡಿದ ಒಂದು ಸೇರು ಹಿಟ್ಟಿನ ದಾನಕ್ಕೂ ಸಮನಲ್ಲ!” ಎಂಬ ನನ್ನ ಮಾತನ್ನು ನೀವುಗಳು ಕೂಡ ಕೇಳಿಕೊಂಡಿದ್ದೀರಿ. ಆದರೂ ನಿಮಗೆ ನಾನು ಈ ಮಾತುಗಳನ್ನು ಹೇಳುವುದು ಅವಶ್ಯಕವಾಗಿದೆ. ಅವ್ಯಗ್ರಮನಸ್ಕರಾಗಿ ನಾನು ಹೇಳುವುದನ್ನು ಕೇಳುವಂಥವರಾಗಿರಿ! ಕುರುಕ್ಷೇತ್ರದಲ್ಲಿ ವಾಸಿಸುತ್ತಿದ್ದ ಉಂಚವೃತ್ತಿಯನ್ನನುಸರಿಸುತ್ತಿರುವನ ಉತ್ತಮವೂ ಅದ್ಭುತವೂ ಆದ ಆ ನಡತೆಯನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ನನ್ನ ಈ ಅರ್ಧಶರೀರವನ್ನು ಸುವರ್ಣಮಯವನ್ನಾಗಿ ಮಾಡಿಸಿ ಆ ದ್ವಿಜನು ತನ್ನ ಪತ್ನಿ, ಮಗ ಮತ್ತು ಸೊಸೆಯರೊಂದಿಗೆ ಸ್ವರ್ಗವನ್ನು ಪಡೆದನು. ದ್ವಿಜರೇ! ಅಲ್ಪವಾದರೂ ಬ್ರಾಹ್ಮಣನು ನ್ಯಾಯವಾಗಿ ಪಡೆದುದನ್ನು ದಾನಮಾಡಿದುದರ ಮಹಾ ಫಲವೇನೆನ್ನುವುದನ್ನು ಹೇಳುತ್ತೇನೆ. ಕೇಳಿ.” ಆಗ ಮುಂಗುಸಿಯು ಉಂಚವೃತ್ತಿಯಲ್ಲಿ ಜೀವಿಸುತ್ತಿದ್ದ ಕಾಪೋತ ಬ್ರಾಹ್ಮಣನ ಕುರಿತು ಹೇಳಿತು. “ಅವನ ಮನೆಯಲ್ಲಿದ್ದ ಹಿಟ್ಟಿನ ವಾಸನೆಯಿಂದಲೂ, ಚೆಲ್ಲಿದ್ದ ನೀರಿನಲ್ಲಿ ನೆನೆದುದರಿಂದಲೂ, ದಿವ್ಯಪುಷ್ಪಗಳ ಮೇಲೆ ಓಡಾಡಿದುದರಿಂದಲೂ, ಆ ಸಾಧುವು ದಾನಮಾಡಿದ ಹಿಟ್ಟಿನ ಕಣಗಳ ಸಂಪರ್ಕದಿಂದಲೂ, ಮತ್ತು ಆ ವಿಪ್ರನ ತಪಸ್ಸಿನಿಂದಲೂ ನನ್ನ ತಲೆಯು ಕಾಂಚನದ್ದಾಯಿತು. ವಿಪ್ರರೇ! ಆ ಸತ್ಯಸಂಧನ ಸೂಕ್ಷ್ಮ ದಾನದಿಂದಲೇ ನನ್ನ ಶರೀರಾರ್ಧವು ಸುವರ್ಣಮಯವಾಯಿತು. ಆ ಧೀಮಂತನ ವಿಪುಲ ತಪಸ್ಸನ್ನು ನೋಡಿ! ಇದೇರೀತಿ ನನ್ನ ಅನ್ಯ ಪಾರ್ಶ್ವವೂ ಕೂಡ ಹೇಗೆ ಆಗಬಹುದೆಂದು ಸಂತೋಷದಿಂದ ನಾನು ತಪೋವನಗಳು ಮತ್ತು ಯಜ್ಞಗಳಿಗೆ ಪುನಃ ಪುನಃ ಹೋಗುತ್ತಿದ್ದೇನೆ. ಧೀಮತ ಕುರುರಾಜನ ಈ ಯಜ್ಞದ ಕುರಿತು ಕೇಳಿ ಪರಮ ಆಸೆಯಿಂದ ಇಲ್ಲಿಗೆ ಬಂದರೂ ನನ್ನ ಶರೀರವು ಕಾಂಚನದ್ದಾಗಲಿಲ್ಲ. ಆದುದರಿಂದಲೇ ಹಿಟ್ಟಿನುಂಡೆಯ ಆ ದಾನಕ್ಕೆ ಈ ಯಜ್ಞವು ಸರ್ವಥಾ ಸಮನಲ್ಲ ಎನ್ನುವ ಆ ವಾಕ್ಯವನ್ನು ಗಟ್ಟಿಯಾಗಿ ನಗುತ್ತಾ ನಾನು ಹೇಳಿದೆ. ಹಿಟ್ಟಿನುಂಡೆಯ ಕಣಗಳಿಂದಲೇ ನನ್ನ ಶಿರವು ಕಾಂಚನದ್ದಾಯಿತು. ಈ ಮಹಾಯಜ್ಞವು ಅದಕ್ಕೆ ಸಮನಾದುದಲ್ಲ ಎನ್ನುವುದು ನನ್ನ ಮತ.”
ಯಜ್ಞದಲ್ಲಿದ್ದ ದ್ವಿಜಶ್ರೇಷ್ಠರಿಗೆ ಹೀಗೆ ಹೇಳಿ ಮುಂಗುಸಿಯು ಮಾಯವಾಯಿತು. ವಿಪ್ರರು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಮನುಷ್ಯನಂತೆ ಮಾತನಾಡಿದ ಆ ಮುಂಗುಸಿಯು ಕ್ರೋಧನೆನ್ನುವ ಬ್ರಾಹ್ಮಣನಾಗಿದ್ದನು. ಅವನು ಜಮದಗ್ನಿಯ ಪಿತೃಗಳ ಶಾಪದಿಂದ ಮುಂಗುಸಿಯಾದನು. ಶಾಪದ ಅಂತ್ಯವಾಗಲೆಂದು ಅವನು ಅವರ ಕೃಪೆಯನ್ನು ಕೇಳಿದನು. “ಧರ್ಮನನ್ನು ನೀನು ನಿಂದಿಸಿದಾಗ ನಿನಗೆ ಶಾಪದ ವಿಮೋಚನೆಯಾಗುತ್ತದೆ” ಎಂದು ಅವರು ಅವನಿಗೆ ಹೇಳಿದರು. ಅವರು ಹೀಗೆ ಹೇಳಲು ಕ್ರೋಧನು ಜುಗುಪ್ಸೆತಾಳಿ ಯಜ್ಞಪ್ರದೇಶಗಳನ್ನೂ ಧರ್ಮಾರಣ್ಯಗಳನ್ನೂ ಸುತ್ತಾಡಿಕೊಂಡು ಯುಧಿಷ್ಠಿರನ ಯಜ್ಞಕ್ಕೆ ಬಂದು ತಲುಪಿದನು. ಸೇರು ಹಿಟ್ಟಿನ ದಾನದ ಮಹಿಮೆಯನ್ನು ಹೇಳಿ ಧರ್ಮಪುತ್ರನ ಯಜ್ಞವನ್ನು ನಿಂದಿಸಿ, ಶಾಪದಿಂದ ಬಿಡುಗಡೆ ಹೊಂದಿ ಕ್ರೋಧ ಧರ್ಮನು ಯುಧಿಷ್ಠಿರನಲ್ಲಿಯೇ ಸೇರಿಹೋದನು.
[1] ಜರಾಸಂಧನ ಮಗ ಸಹದೇವನ ಮಗ ಮೇಘಸಂಧಿ.
[2] ಸೋಮಲತೆಯನ್ನು ಕುಟ್ಟಿ ಸೋಮರಸವನ್ನು ಹಿಂಡುವ ಕಾರ್ಯ.
[3] ಅಧ್ವರ್ಯು, ಉದ್ಗಾತ್ರ, ಹೋತೃ ಮತ್ತು ಬ್ರಹ್ಮರೂಪವಾದ ನಾಲ್ಕರಿಂದ ನಡೆಯುವ ಯಾಗವೇ ಚಾತುರ್ಹೋತ್ರ ಯಜ್ಞ. ಒಂದೊಂದು ಗುಂಪಿನಲ್ಲಿ ನಾಲ್ಕು ನಾಲ್ಕು ಜನ ಋತ್ವಿಜರು. ಒಟ್ಟು ಹದಿನಾರು ಮಂದಿ. ಅವರಲ್ಲಿ ಪ್ರಧಾನರು ಬ್ರಹ್ಮಾ, ಅಧ್ವರ್ಯು, ಹೋತೃ, ಮತ್ತು ಉದ್ಗಾತ್ರ. ಇವರಲ್ಲಿ ದಕ್ಷಿಣೆಯ ವಿಭಜನಕ್ರಮದ ವರ್ಣನೆಯು ವೇದದಲ್ಲಿ ಹೇಳಲ್ಪಟ್ಟಿದೆ.