ಯುಧಿಷ್ಠಿರ ಸಾಂತ್ವನ; ಅಶ್ವಮೇಧದ ಸೂಚನೆ
ಮಹಾಬಾಹು ಯುಧಿಷ್ಠಿರನು ಭೀಷ್ಮನಿಗೆ ಜಲತರ್ಪಣವನ್ನಿತ್ತು ರಾಜಾ ಧೃತರಾಷ್ಟ್ರನನ್ನು ಮುಂದೆಮಾಡಿಕೊಂಡು ವ್ಯಾಕುಲಚಿತ್ತನಾಗಿ ಗಂಗಾನದಿಯ ತಟವನ್ನೇರಿದನು. ಮೇಲೇರುತ್ತಲೇ ಕಣ್ಣೀರಿನವ್ಯಾಕುಲಕಣ್ಣುಗಳ ಆ ಮಹೀಪಾಲನು ಬೇಟೆಗಾರನಿಂದ ಹೊಡೆಯಲ್ಪಟ್ಟ ಆನೆಯಂತೆ ಗಂಗಾನದಿಯ ತೀರದಲ್ಲಿಯೇ ಬಿದ್ದುಬಿಟ್ಟನು. ಕುಸಿಯುತ್ತಿದ್ದ ಅವನನ್ನು ಕೃಷ್ಣನ ಹೇಳಿಕೆಯಂತೆ ಭೀಮನು ಹಿಡಿದುಕೊಂಡನು. ಪರಬಲಾರ್ದನ ಕೃಷ್ಣನು “ಹೀಗಾಗಬೇಡ!” ಎಂದು ಯುಧಿಷ್ಠಿರನಿಗೆ ಹೇಳಿದನು. ಆರ್ತನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ನೆಲದ ಮೇಲೆ ಬಿದ್ದ ಧರ್ಮಾತ್ಮ ಯುಧಿಷ್ಠಿರನನ್ನು ಪಾಂಡವರು ನೋಡಿದರು. ಸತ್ವವನ್ನು ಕಳೆದುಕೊಂಡು ದೀನಮನಸ್ಕನಾಗಿದ್ದ ಜನೇಶ್ವರನನ್ನು ನೋಡಿ ಇನ್ನೂ ಶೋಕಸಮಾವಿಷ್ಟರಾಗಿ ಪಾಂಡವರು ಅವನ ಬಳಿಯಲ್ಲಿಯೇ ಕುಳಿತುಕೊಂಡರು. ಆಗ ಮಹಾಭುಜ ಮಹಾಪ್ರಾಜ್ಞ ರಾಜಾ ಧೃತರಾಷ್ಟ್ರನು ಮಹಾಶೋಕದಿಂದ ಪೀಡಿತನಾಗಿ ಕುಳಿತಿದ್ದ ಯುಧಿಷ್ಠಿರನಿಗೆ ಹೇಳಿದನು: “ಕುರುಶಾರ್ದೂಲ! ಎದ್ದೇಳು! ನಂತರದ ಕಾರ್ಯಗಳನ್ನು ಮಾಡುವವನಾಗು! ಕ್ಷತ್ರಧರ್ಮದಿಂದಲೇ ನೀನು ಈ ಅವನಿಯನ್ನು ಗೆದ್ದಿರುವೆ! ಸಹೋದರರು ಮತ್ತು ಸ್ನೇಹಿತರೊಂದಿಗೆ ಅದನ್ನು ಭೋಗಿಸು! ನಿನ್ನ ಈ ಶೋಕಕ್ಕೆ ಯಾವ ಕಾರಣವನ್ನೂ ನಾನು ಕಾಣುತ್ತಿಲ್ಲ. ಕನಸಿನಲ್ಲಿ ಕಂಡ ಧನದಂತೆ ಪುತ್ರರನ್ನೂ ರಾಜ್ಯವನ್ನೂ ಕಳೆದುಕೊಂಡು ನಾನು ಮತ್ತು ಗಾಂಧಾರಿ ಶೋಕಿಸಬೇಕಾಗಿದೆ. ನನ್ನ ಹಿತವನ್ನೇ ಬಯಸಿದ್ದ ಮಹಾತ್ಮ ವಿದುರನ ಮಹಾ ಅರ್ಥಗಳಿದ್ದ ಮಾತುಗಳನ್ನು ಕೇಳದೇ ದುರ್ಮತಿಯಾದ ನಾನು ಪರಿತಪಿಸುತ್ತಿದ್ದೇನೆ. ಆ ಧರ್ಮಾತ್ಮಾ ದಿವ್ಯದರ್ಶನನು ನನಗೆ ಹಿಂದೆಯೇ ಈ ರೀತಿ ಹೇಳಿದ್ದನು: “ದುರ್ಯೋಧನನ ಅಪರಾಧದಿಂದ ನಿನ್ನ ಕುಲವು ನಾಶವಾಗುತ್ತದೆ. ರಾಜನ್! ನಿನ್ನ ಮತ್ತು ನಿನ್ನ ಕುಲದ ಒಳಿತನ್ನು ಬಯಸುವೆಯಾದರೆ ಈ ಮೂಢ ದುಷ್ಟಾತ್ಮ ರಾಜಾ ಸುಯೋಧನನನ್ನು ವಧಿಸು. ಕರ್ಣ-ಶಕುನಿಯರು ಅವನನ್ನು ಎಂದೂ ನೋಡದಂತೆಯಾದರೂ ಮಾಡು. ಅಥವಾ ಅವರು ದ್ಯೂತಕ್ಕೆ ಸಿಲುಕಿ ಅಪ್ರಮತ್ತರಾಗುವುದನ್ನಾದರೂ ತಡೆ! ಧರ್ಮಾತ್ಮ ಯುಧಿಷ್ಠಿರನನ್ನು ರಾಜನನ್ನಾಗಿ ಅಭಿಷೇಕಿಸು. ಅವನು ಧರ್ಮವನ್ನು ಅನುಸರಿಸಿ ಈ ಪೃಥ್ವಿಯನ್ನು ಪಾಲಿಸುತ್ತಾನೆ! ಒಂದುವೇಳೆ ನಿನಗೆ ಕುಂತೀಪುತ್ರ ಯುಧಿಷ್ಠಿರನು ರಾಜನಾಗುವುದು ಇಷ್ಟವಿರದೇ ಇದ್ದರೆ ನೀನೇ ಮೇಟಿಯ ಕಂಬದಂತವನಾಗಿ ರಾಜ್ಯವನ್ನು ಸ್ವೀಕರಿಸು! ಸರ್ವಭೂತಗಳಲ್ಲಿಯೂ ಸಮನಾಗಿ ವರ್ತಿಸುವ ನಿನ್ನನ್ನು ಅನುಸರಿಸಿ ನಿನ್ನ ಎಲ್ಲ ಜ್ಞಾತಿಬಾಂಧವರೂ ವರ್ಧಿಸಲಿ!” ದೀರ್ಘದರ್ಶಿನಿಯಾದ ವಿದುರನು ಹೀಗೆ ಹೇಳಿದ್ದರೂ ವೃಥಾಮತಿಯಾದ ನಾನು ಪಾಪಿ ದುರ್ಯೋಧನನನ್ನು ಅನುಸರಿಸಿದೆ. ಆ ವೀರನ ಮಧುರ ಮಾತುಗಳನ್ನು ಕೇಳದೇ ಈ ಮಹಾದುಃಖವನ್ನು ಪಡೆದು ಶೋಕಸಾಗರದಲ್ಲಿ ಮುಳುಗಿ ಹೋಗಿದ್ದೇನೆ. ದುಃಖದಲ್ಲಿರುವ ನಿನ್ನ ಈ ವೃದ್ಧ ತಂದೆ-ತಾಯಿಯರನ್ನು ನೋಡು. ನಮ್ಮನ್ನು ನೋಡಿ ನೀನು ಶೋಕಿಸಬಾರದು!”
ಧೀಮಂತ ರಾಜಾ ಧೃತರಾಷ್ಟ್ರನ ಈ ಮಾತುಗಳನ್ನು ಕೇಳಿ ಸುಮ್ಮನಾಗಿದ್ದ ಮೇಧಾವೀ ಯುಧಿಷ್ಠಿರನಿಗೆ ಕೇಶವನು ಹೇಳಿದನು: “ಜನಾಧಿಪ! ಮನಸಾ ಅತೀವ ಶೋಕವನ್ನು ಮಾಡುವುದರಿಂದ ನೀನು ಈ ಮೊದಲೇ ತೀರಿಹೋಗಿರುವ ಪಿತಾಮಹರನ್ನು ಸಂತಾಪಗೊಳಿಸುತ್ತಿದ್ದೀಯೆ. ಅನೇಕ ಆಪ್ತದಕ್ಷಿಣೆಗಳಿಂದೊಡಗೂಡಿದ ವಿವಿಧ ಯಜ್ಞಗಳನ್ನು ಮಾಡಿ ಸೋಮರಸದಿಂದ ದೇವತೆಗಳನ್ನೂ ಸ್ವಧಾರಸದಿಂದ ಪಿತೃಗಳನ್ನೂ ತೃಪ್ತಿಗೊಳಿಸು. ಇವಕ್ಕೆ ಸಿದ್ಧತೆಗಳನ್ನು ಮಾಡುವುದಿದೆ ಎನ್ನುವುದನ್ನು ತಿಳಿದುಕೋ! ಮಾಡಬೇಕಾದುದು ಏನು ಎಂದು ನಿನಗೆ ತಿಳಿದಿದೆ ಮತ್ತು ಮಾಡಬೇಕಾದುದನ್ನು ನೀನು ಮಾಡಿದ್ದೀಯೆ ಕೂಡ! ಭಾಗೀರಥೀ ಸುತ ಭೀಷ್ಮ, ಕೃಷ್ಣ ದ್ವೈಪಾಯನ, ನಾರದ ಮತ್ತು ವಿದುರರಿಂದ ರಾಜಧರ್ಮಗಳ ಕುರಿತೂ ನೀನು ಕೇಳಿದ್ದೀಯೆ. ನೀನು ಮೂಡರ ಈ ವೃತ್ತಿಯನ್ನು ಅನುಸರಿಸುವುದು ಸರಿಯಲ್ಲ. ನಿನ್ನ ಪಿತೃ-ಪಿತಾಮಹರ ವೃತ್ತಿಯನ್ನು ಅನುಸರಿಸು! ಕ್ಷತ್ರಿಯನಿಗೆ ಯುದ್ಧದಲ್ಲಿ ಯಶಸ್ಸನ್ನು ಬಯಸುವುದಕ್ಕಿಂತ ಸ್ವರ್ಗವನ್ನು ಪಡೆಯುವ ಬಯಕೆಯೇ ಹೆಚ್ಚಿನದು ಎನ್ನುವುದರಲ್ಲಿ ಸಂಶಯವಿಲ್ಲ. ಈಗ ಸತ್ತ ಶೂರರಲ್ಲಿ ಪರಾಙ್ಮುಖರಾದವರು ಯಾರೂ ಇಲ್ಲ. ನೀನು ಶೋಕವನ್ನು ಬಿಡು! ಅದು ಹಾಗೆಯೇ ಆಗಬೇಕಾಗಿತ್ತು. ಈ ರಣದಲ್ಲಿ ಹತರಾದವನ್ನು ಪುನಃ ನೀನು ನೋಡಲು ಶಕ್ಯನಿಲ್ಲ.”
ಧರ್ಮರಾಜ ಯುಧಿಷ್ಠಿರನಿಗೆ ಹೀಗೆ ಹೇಳಿ ಗೋವಿಂದನು ಸುಮ್ಮನಾದನು. ಆಗ ಮಹಾತೇಜಸ್ವಿ ಯುಧಿಷ್ಠಿರನು ಅವನಿಗೆ ಉತ್ತರಿಸಿದನು: “ಗೋವಿಂದ! ನನ್ನ ಮೇಲೆ ನಿನಗೆ ಪ್ರೀತಿಯಿದೆ ಎನ್ನುವುದನ್ನು ನಾನು ತಿಳಿದಿದ್ದೇನೆ. ಸ್ನೇಹ ಮತ್ತು ಪ್ರೀತಿಗಳಿಂದ ನೀನು ಸದಾ ನನ್ನ ಮೇಲೆ ಅನುಕಂಪವನ್ನೇ ತೋರಿಸುತ್ತಿರುವೆ. ಚಕ್ರ-ಗದಾಧರ! ಯಾದವನಂದನ! ನೀನೇನಾದರೂ ನನಗೆ ತಪೋವನಕ್ಕೆ ಹೋಗಲು ಅನುಮತಿಯನ್ನಿತ್ತಿದ್ದರೆ ನನಗೆ ಪ್ರೀತಿಯಾದುದೆಲ್ಲವನ್ನೂ ಮಾಡಿದಂತಾಗುತ್ತಿತ್ತು. ಪಿತಾಮಹನನ್ನು ಮತ್ತು ಸಂಗ್ರಾಮದಲ್ಲಿ ಪಲಾಯನಮಾಡದಿದ್ದ ಪುರುಷವ್ಯಾಘ್ರ ಕರ್ಣನನ್ನು ಕೊಂದು ನನಗೆ ಶಾಂತಿಯೇ ಇಲ್ಲವಾಗಿದೆ. ಯಾವ ಕರ್ಮಗಳನ್ನು ಮಾಡುವುದರಿಂದ ನಾನು ಈ ಕ್ರೂರ ಪಾಪದಿಂದ ಬಿಡುಗಡೆಹೊಂದುತ್ತೇನೋ ಮತ್ತು ನನ್ನ ಮನಸ್ಸು ಶುದ್ಧಿಯಾಗುತ್ತದೆಯೋ ಆ ಕರ್ಮಗಳ ಕುರಿತು ನನಗೆ ಹೇಳು!”
ವ್ಯಾಸವಾಕ್ಯ
ಕೃಷ್ಣನೊಡನೆ ಹೀಗೆ ಮಾತನಾಡುತ್ತಿದ್ದ ಅವನನ್ನು ಸಮಾಧಾನಗೊಳಿಸುತ್ತಾ ಧರ್ಮವಿದು ಸುಮಹಾತೇಜಸ್ವಿ ವ್ಯಾಸನು ಅರ್ಥವತ್ತಾದ ಈ ಶುಭ ಮಾತುಗಳನ್ನಾಡಿದನು: “ಮಗೂ! ನಿನ್ನ ಬುದ್ಧಿಯು ಇನ್ನೂ ಬೆಳೆದಿಲ್ಲ. ಪುನಃ ಬಾಲಕನಂತೆ ಮೋಹಕ್ಕೊಳಗಾಗುತ್ತಿದ್ದೀಯೆ. ಮಧ್ಯದಲ್ಲಿ ನಾವೆಲ್ಲರೂ ಏಕೆ ಹೀಗೆ ಪುನಃ ಪುನಃ ಪ್ರಲಾಪಮಾಡುತ್ತಿದ್ದೇವೆ! ಯುದ್ಧದಿಂದಲೇ ಜೀವನ ನಡೆಸುವ ಕ್ಷತ್ರಿಯರ ಧರ್ಮವೆಲ್ಲವೂ ನಿನಗೆ ತಿಳಿದೇ ಇದೆ. ಹಾಗೆ ನಡೆದುಕೊಳ್ಳುವ ನೃಪತಿಯು ಈ ರೀತಿಯ ಶೋಕದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಿಲ್ಲ. ಮೋಕ್ಷಧರ್ಮವನ್ನೂ ಸಂಪೂರ್ಣವಾಗಿ ನೀನು ಇದ್ದಹಾಗೆ ಕೇಳಿದ್ದೀಯೆ. ನಿನಗೆ ಸಂದೇಹಗಳಿದ್ದಾಗಲೆಲ್ಲಾ ನೀನು ಬಯಸಿದಂತೆ ಎಲ್ಲವನ್ನೂ ಹೇಳಿದ್ದೇನೆ. ಆದರೆ ನಿನ್ನ ದುರ್ಬುದ್ಧಿಯಿಂದಾಗಿ ನನ್ನ ಮಾತುಗಳ ಮೇಲೆ ನಿನಗೆ ಶ್ರದ್ಧೆಯೇ ಇಲ್ಲವಾಗಿದೆ. ಅಥವಾ ನಿಜವಾಗಿ ನಿನ್ನ ಸ್ಮರಣಶಕ್ತಿಯೇ ಕಳೆದುಹೋಗಿದೆ. ನೀನು ಹೀಗೆಂದೂ ಆಡಬೇಡ. ಮತ್ತು ಈ ರೀತಿ ಅಜ್ಞಾನವನ್ನು ತೋರಿಸಿಕೊಳ್ಳುವುದು ನಿನಗೆ ಸರಿಯಲ್ಲ. ಪ್ರಾಯಶ್ಚಿತ್ತಗಳೆಲ್ಲವೂ ನಿನಗೆ ತಿಳಿದೇ ಇದೆ. ಯುದ್ಧಧರ್ಮ ಮತ್ತು ದಾನಧರ್ಮಗಳೆಲ್ಲವನ್ನೂ ನೀನು ಕೇಳಿರುವೆ. ಸರ್ವಧರ್ಮಜ್ಞನೂ ಸರ್ವ ಆಗಮ ವಿಶಾರದನೂ ಆಗಿರುವವನು ಹೇಗೆ ತಾನೇ ಹೀಗೆ ಪುನಃ ಪುನಃ ಅಜ್ಞಾನಿಯಂತೆ ಮೋಹಗೊಳ್ಳುತ್ತಾನೆ? ಯುಧಿಷ್ಠಿರ! ನಿನ್ನ ಪ್ರಜ್ಞೆಯು ಸರಿಯಿಲ್ಲವೆಂದು ನನಗನ್ನಿಸುತ್ತದೆ. ಮನುಷ್ಯನು ಯಾವಾಗಲೂ ತನ್ನ ವಶದಲ್ಲಿಯೇ ಇದ್ದುಕೊಂಡು ಕ್ರಿಯಗಳನ್ನು ಮಾಡುವುದಿಲ್ಲ. ಮಾನವನಿಗೆ ಒಳ್ಳೆಯದು-ಕೆಟ್ಟದ್ದು ಎಲ್ಲವೂ ಈಶ್ವರನಿಂದ ನಿಯುಕ್ತವಾಗಿರುತ್ತವೆ. ಮನುಷ್ಯನು ಕೇವಲ ಕರ್ಮವನ್ನು ಮಾಡುತ್ತಿರುತ್ತಾನೆ. ಅದರಲ್ಲಿ ಏಕೆ ಶೋಕಿಸಬೇಕು? ಕೊನೆಗೂ ನೀನು ಪಾಪಕರ್ಮವನ್ನೇ ಮಾಡಿದ್ದೀಯೆಂದು ತಿಳಿದುಕೊಂಡರೆ ಆ ಪಾಪವನ್ನು ಹೇಗೆ ತೊಳೆದುಕೊಳ್ಳಬೇಕು ಎನ್ನುವುದನ್ನು ಕೇಳು. ತಪಸ್ಸು, ಕ್ರತು ಮತ್ತು ದಾನಗಳು ಪಾಪಮಾಡಿದ ಪುರುಷನನ್ನು ನಿತ್ಯವೂ ಪಾರುಮಾಡುತ್ತವೆ. ಯಜ್ಞ, ತಪಸ್ಸು ಮತ್ತು ದಾನಗಳು ದುಷ್ಕೃತಗಳನ್ನು ಮಾಡಿದ ಮನುಷ್ಯರನ್ನು ಪಾವನಗೊಳಿಸುತ್ತವೆ. ಪುಣ್ಯಸಂಪಾದನೆಗಾಗಿ ಅಸುರರೂ ಸುರರೂ ಯಜ್ಞಕಾರ್ಯಗಳನ್ನು ಮಾಡುತ್ತಾರೆ. ಆದುದರಿಂದ ಮಹಾತ್ಮರು ಯಜ್ಞಗಳಲ್ಲಿಯೇ ತೊಡಗಿರುತ್ತಾರೆ. ಯಜ್ಞದಿಂದಲೇ ಮಹಾತ್ಮ ದೇವ ಸುರರು ಅಧಿಕ ಬಲಶಾಲಿಗಳೂ ಕ್ರಿಯಾವಂತರೂ ಆಗಿ ದಾನವರನ್ನು ಸದೆಬಡಿದರು. ನೀನೂ ಕೂಡ ರಾಜಸೂಯ, ಅಶ್ವಮೇಧ, ಸರ್ವಮೇಧ ಮತ್ತು ನರಮೇಧ ಯಜ್ಞಗಳನ್ನು ಮಾಡು. ದಾಶರಥಿ ರಾಮನಂತೆ ಮತ್ತು ನಿನ್ನ ಪೂರ್ವಪಿತಾಮಹ ದುಃಶಂತ-ಶಕುಂತಲೆಯರ ಮಗ ಪೃಥಿವೀಪತಿ ರಾಜ ಮಹಾವೀರ್ಯ ಭರತನಂತೆ ವಿಧಿವತ್ತಾಗಿ ಮನೋವಾಂಛಿತ ಸಂಪತ್ತು-ದಕ್ಷಿಣೆಗಳೊಂದಿಗೆ ಅಶ್ವಮೇಧವನ್ನು ಯಾಜಿಸು.”
ಯುಧಿಷ್ಠಿರನು ಹೇಳಿದನು: “ಅಶ್ವಮೇಧವು ಇಡೀ ಭೂಮಿಯನ್ನೇ ಪಾವನಗೊಳಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರ ಕುರಿತು ನನ್ನ ಒಂದು ಅಭಿಪ್ರಾಯವಿದೆ. ಅದನ್ನು ನೀನು ಕೇಳಬೇಕು. ದ್ವಿಜೋತ್ತಮ! ಈ ಮಹಾ ಜ್ಞಾತಿವಧೆಯನ್ನು ಮಾಡಿ ನನ್ನಲ್ಲಿ ವಿತ್ತವೇ ಇಲ್ಲವಾಗಿದೆ. ಸ್ವಲ್ಪವೂ ಕೂಡ ದಾನ ಮಾಡಲು ಶಕ್ಯನಿಲ್ಲ. ಯುದ್ಧದ ಹುಣ್ಣುಗಳು ಇನ್ನೂ ಮಾಸದೇ ಕಷ್ಟದಲ್ಲಿರುವ ದೀನ ಬಾಲಕ ರಾಜಕುಮಾರರಿಂದ ಧನವನ್ನು ಯಾಚಿಸಲೂ ನನಗೆ ಮನಸ್ಸಿಲ್ಲ. ನಾನೇ ಈ ಭೂಮಿಯನ್ನು ವಿನಾಶಗೊಳಿಸಿ, ಶೋಕದಲ್ಲಿ ಮುಳುಗಿರುವವರಿಂದ, ಯಜ್ಞಕ್ಕಾಗಿ ಕರವನ್ನು ಹೇಗೆ ಕಸಿದುಕೊಳ್ಳಲಿ? ದುರ್ಯೋಧನನ ಅಪರಾಧದಿಂದಾಗಿ ಭೂಮಿ ಮತ್ತು ವಸುಧಾಧಿಪರು ನಾಶಗೊಂಡರು ಮತ್ತು ನಾವೂ ಅಪಕೀರ್ತಿಗೊಳಗಾದೆವು. ವಿತ್ತಕಾರಣದಿಂದ ದುರ್ಯೋಧನನು ಭೂಮಿಯನ್ನು ನಾಶಗೊಳಿಸಿದನು. ದುರ್ಮತಿ ಧಾರ್ತರಾಷ್ಟ್ರನಿಂದಾಗಿ ಈ ಕೋಶವೂ ಬರಿದಾಗಿಹೋಗಿದೆ. ಅಶ್ವಮೇಧದಲ್ಲಿ ಪೃಥ್ವಿಯನ್ನೇ ಮುಖ್ಯ ದಕ್ಷಿಣೆಯನ್ನಾಗಿ ಕೊಡಬೇಕೆಂದು ವಿದ್ವಾಂಸರು ಕಲ್ಪಿಸಿದ ವಿಧಿಯಾಗಿದೆ. ಅದರಂತೆ ಮಾಡದಿದ್ದರೆ ಶಿಷ್ಟರು ಹಾಕಿಕೊಟ್ಟ ವಿಧಿಗೆ ವ್ಯತ್ಯಾಸವಾದಂತಾಗುತ್ತದೆ. ಭೂಮಿಗೆ ಬದಲಾಗಿ ದಕ್ಷಿಣೆಗಳನ್ನು ಕೊಡಲು ಬಯಸುವುದಿಲ್ಲ. ಇದರ ಕುರಿತು ನಾನು ಏನು ಮಾಡಿದರೆ ಒಳ್ಳೆಯದು ಎನ್ನುವ ಸಲಹೆಯನ್ನು ನೀಡಬೇಕು.”
ಪಾರ್ಥನು ಹೀಗೆ ಹೇಳಲು ಕೃಷ್ಣದ್ವೈಪಾಯನನು ಒಂದು ಕ್ಷಣ ಯೋಚಿಸಿ ಧರ್ಮರಾಜನಿಗೆ ಹೀಗೆ ಹೇಳಿದನು: “ಪಾರ್ಥ! ಮಹೀಪತಿ ಮರುತ್ತನ ಯಜ್ಞದಲ್ಲಿ ಬ್ರಾಹ್ಮಣರು ಬಿಟ್ಟುಹೋದ ಸಂಪತ್ತು ಹಿಮವತ್ಪರ್ವತದಲ್ಲಿ ಇದೆಯೆಂದು ತಿಳಿದಿದೆ. ಅದನ್ನು ತೆಗೆದುಕೊಂಡು ಬಾ! ಅದು ನಿನಗೆ ಸಾಕಾಗುತ್ತದೆ.”
ಯುಧಿಷ್ಠಿರನು ಹೇಳಿದನು: “ಮರುತ್ತನ ಯಜ್ಞದಲ್ಲಿ ಹೇಗೆ ಆ ದ್ರವ್ಯಗಳನ್ನು ಸೇರಿಸಲಾಯಿತು? ಆ ನೃಪನು ಯಾವ ಕಾಲದಲ್ಲಿದ್ದನು?”
ವ್ಯಾಸನು ಹೇಳಿದನು: “ಪಾರ್ಥ! ನಿನಗೆ ಕೇಳಬೇಕೆಂದರೆ ಕರಂಧಮನ ಮಗ ಆ ಮಹಾವೀರ್ಯ ನೃಪ ಮಹಾಧನ ರಾಜನಿದ್ದ ಕಾಲದ ಕುರಿತು ಕೇಳು.”
ಯುಧಿಷ್ಠಿರನು ಹೇಳಿದನು: “ಅನಘ! ದ್ವೈಪಾಯನ! ಧರ್ಮಜ್ಞ! ಆ ರಾಜರ್ಷಿ ಮರುತ್ತನ ಕಥೆ ಮತ್ತು ಅವನ ಕುರಿತಾದ ಕೀರ್ತನೆಯನ್ನು ಹೇಳು!”
ಆಗ ವ್ಯಾಸನು ಯುಧಿಷ್ಠಿರನಿಗೆ ಮರುತ್ತ-ಸಂವರ್ತರ ಕಥೆಯನ್ನು ಹೇಳಿದನು. ಸತ್ಯವತಿಯ ಸುತನ ಮಾತನ್ನು ಕೇಳಿ ರಾಜ ಪಾಂಡವನು ಹೃಷ್ಟರೂಪನಾಗಿ ಆ ವಿತ್ತದಿಂದ ಯಜ್ಞಮಾಡಲು ಮನಸ್ಸು ಮಾಡಿದನು. ಪುನಃ ಅಮಾತ್ಯರೊಂದಿಗೆ ಸಮಾಲೋಚನೆ ನಡೆಸಿದನು.
ವಾಸುದೇವವಾಕ್ಯ
ಅದ್ಭುತ ಕರ್ಮಿ ವ್ಯಾಸನು ನೃಪತಿಗೆ ಹೀಗೆ ಹೇಳಲು ಮಹಾತೇಜಸ್ವಿ ವಾಸುದೇವನು ಅವನಿಗೆ ಈ ಮಾತುಗಳನ್ನಾಡಿದನು. ಜ್ಞಾತಿಬಾಂಧವರ ಸಂಹಾರದಿಂದ ದೀನಮನಸ್ಕನಾಗಿದ್ದ, ಮುಳುಗುತ್ತಿರುವ ಸೂರ್ಯನಂತಿದ್ದ ಮತ್ತು ಹೊಗೆಯಿರುವ ಅಗ್ನಿಯಂತಿದ್ದ, ನಿರ್ವಿಣ್ಣ ಮನಸ್ಕನಾದ ಪಾರ್ಥ ನೃಪನನ್ನು ಅರ್ಥಮಾಡಿಕೊಂಡ ವೃಷ್ಣಿಕುಲೋದ್ವಹನು ಧರ್ಮಸುತನನ್ನು ಸಮಾಧಾನಪಡಿಸುತ್ತಾ ಹೇಳಲು ಉಪಕ್ರಮಿಸಿದನು.
ವಾಸುದೇವನು ಹೇಳಿದನು: “ಕುಟಿಲತೆಯು ಮೃತ್ಯುವಿಗೆ ದಾರಿ ಮತ್ತು ಸರಳತೆಯು ಬ್ರಹ್ಮಪದ. ಈ ವಿಷಯವನ್ನು ತಿಳಿದ ನೀನು ಏಕೆ ಪ್ರಲಪಿಸುತ್ತಿರುವೆ? ಇನ್ನೂ ನೀನು ಮಾಡಬೇಕಾದ ಕರ್ಮಗಳೆಲ್ಲವನ್ನೂ ಮಾಡಿಮುಗಿಸಿಲ್ಲ ಮತ್ತು ನಿನ್ನ ಶತ್ರುಗಳೆಲ್ಲರನ್ನೂ ನೀನು ಜಯಿಸಿಲ್ಲ. ನಿನ್ನ ಶರೀರದಲ್ಲಿಯೇ ಇರುವ ಶತ್ರುವನ್ನು ನೀನು ಹೇಗೆ ಅರಿತುಕೊಳ್ಳುತ್ತಿಲ್ಲ? ಇದಕ್ಕೆ ಸಂಬಂಧಿಸಿದಂತೆ ವೃತ್ರನೊಂದಿಗೆ ನಡೆದ ಯುದ್ಧದ ಕುರಿತು ಯಥಾಧರ್ಮವಾಗಿ ಕೇಳಿದಂತೆ ನಿನಗೆ ಹೇಳುತ್ತೇನೆ. ನರಾಧಿಪ! ಹಿಂದೆ ವೃತ್ರನಿಂದ ಇಡೀ ಪೃಥ್ವಿಯೇ ವ್ಯಾಪ್ತವಾಗಿಬಿಟ್ಟಿತ್ತಲ್ಲವೇ? ಅವನು ಪೃಥ್ವಿಯನ್ನು ವ್ಯಾಪಿಸಿ ಭೂಮಿಯಿಂದ ಅದರ ಸುಗಂಧವನ್ನೂ ಅಪಹರಿಸಿಬಿಟ್ಟಿದ್ದನು. ಆಗ ಭೂಮಿಯಲ್ಲೆಲ್ಲ ದುರ್ಗಂಧವೇ ಪಸರಿಸಿತು. ಭೂಮಿಯಿಂದ ಗಂಧವನ್ನು ಅಪಹರಿಸಲು ಶತಕ್ರತುವಿಗೆ ಕೋಪವುಂಟಾಯಿತು. ಕ್ರುದ್ಧನಾದ ಅವನು ವೃತ್ರನ ಮೇಲೆ ಘೋರ ವಜ್ರವನ್ನು ಪ್ರಯೋಗಿಸಿದನು. ಅತ್ಯಂತ ತೇಜಸ್ಸಿದ್ದ ವಜ್ರದಿಂದ ಕೊಲ್ಲಲ್ಪಡುತ್ತಿದ್ದ ವೃತ್ರನು ಒಡನೆಯೇ ಭೂಮಿಯನ್ನು ಬಿಟ್ಟು ಜಲಪ್ರದೇಶವನ್ನು ಆವರಿಸಿದನು. ನೀರಿನಲ್ಲಿ ವ್ಯಾಪ್ತನಾದ ವೃತ್ರನು ಅದರಲ್ಲಿರುವ ರಸವನ್ನು ಅಪಹರಿಸಲು ಶತಕ್ರತುವು ಪುನಃ ಕ್ರುದ್ಧನಾಗಿ ಅವನ ಮೇಲೆ ವಜ್ರವನ್ನು ಪ್ರಯೋಗಿಸಿದನು. ಅತ್ಯಂತ ತೇಜೋಯುಕ್ತ ವಜ್ರದಿಂದ ವಧಿಸಲ್ಪಡುತ್ತಿದ್ದ ವೃತ್ರನು ಕೂಡಲೆ ಜ್ಯೋತಿಯನ್ನು ಪ್ರವೇಶಿಸಿ ಆ ಪ್ರದೇಶವನ್ನು ಆವರಿಸಿದನು. ಜ್ಯೋತಿಯನ್ನು ವ್ಯಾಪಿಸಿ ವೃತ್ರನು ಅದರಲ್ಲಿರುವ ರೂಪವನ್ನು ಅಪಹರಿಸಲು ಶತುಕ್ರತುವು ಕ್ರುದ್ಧನಾಗಿ ಪುನಃ ಅವನ ಮೇಲೆ ವಜ್ರವನ್ನು ಪ್ರಯೋಗಿಸಿದನು. ಅತ್ಯಂತ ತೇಜೋಯುಕ್ತ ವಜ್ರದಿಂದ ವಧಿಸಲ್ಪಡುತ್ತಿದ್ದ ವೃತ್ರನು ಕೂಡಲೇ ವಾಯುವನ್ನು ಪ್ರವೇಶಿಸಿ ಅದನ್ನು ವ್ಯಾಪಿಸಿದನು. ವಾಯುವನ್ನು ವ್ಯಾಪಿಸಿ ವೃತ್ರನು ಅದರಲ್ಲಿರುವ ಸ್ಪರ್ಶಗುಣವನ್ನು ಅಪಹರಿಸಲು ಶತಕ್ರತುವು ಕ್ರುದ್ಧನಾಗಿ ಅವನ ಮೇಲೆ ಪುನಃ ವಜ್ರವನ್ನು ಪ್ರಯೋಗಿಸಿದನು. ಆ ಅಮಿತ ತೇಜಸ್ವೀ ವಜ್ರದಿಂದ ವಧಿಸಲ್ಪಡುತ್ತಿದ್ದ ವೃತ್ರನು ಕೂಡಲೇ ಆಕಾಶಕ್ಕೆ ಹಾರಿ ಆ ಪ್ರದೇಶವನ್ನು ವ್ಯಾಪಿಸಿದನು. ಅಕಾಶವನ್ನು ವ್ಯಾಪಿಸಿ ವೃತ್ರನು ಅದರಲ್ಲಿರುವ ಶಬ್ಧವನ್ನು ಅಪಹರಿಸಲು ಕ್ರುದ್ಧನಾದ ಶತಕ್ರತುವು ಅವನ ಮೇಲೆ ಪುನಃ ವಜ್ರವನ್ನು ಪ್ರಯೋಗಿಸಿದನು. ಆ ಅಮಿತ ತೇಜಸ ವಜ್ರದಿಂದ ವಧಿಸಲ್ಪಡುತಿದ್ದ ವೃತ್ರನು ಕೂಡಲೇ ಶಕ್ರನನ್ನು ಪ್ರವೇಶಿಸಿ ಅವನ ವಿಷಯವನ್ನು ವ್ಯಾಪಿಸಿದನು. ವೃತ್ರಾಸುರನು ಹಿಡಿದ ಅವನಲ್ಲಿ ಮಹಾ ಮೋಹವುಂಟಾಯಿತು. ಆಗ ರಥಂತರ ಮಂತ್ರದಿಂದ ವಸಿಷ್ಠನು ಶಕ್ರನನ್ನು ಪುನಃ ಎಚ್ಚರಗೊಳಿಸಿದನು. ಆಗ ಶರೀರಸ್ಥನಾಗಿದ್ದ ವೃತ್ರನನ್ನು ಶತಕ್ರತುವು ಅದೃಶ್ಯ ವಜ್ರದಿಂದಲೇ ಸಂಹರಿಸಿದನೆಂದು ನಾವು ಕೇಳಿದ್ದೇವೆ. ಈ ಧರ್ಮರಹಸ್ಯವನ್ನು ಇಂದ್ರನೇ ಮಹರ್ಷಿಗಳಿಗೆ ಹೇಳಿದನು. ಋಷಿಗಳು ನನಗೆ ಹೇಳಿದುದನ್ನು ನೀನು ಕೇಳು.
“ಶಾರೀರಿಕ ಮತ್ತು ಮಾನಸಿಕ ಎಂದು ಎರಡು ರೀತಿಯ ವ್ಯಾಧಿಗಳಿವೆ. ಶರೀರ ಮತ್ತು ಮನಸ್ಸು ಇವುಗಳ ಪರಸ್ಪರ ಸಹಯೋಗವಿಲ್ಲದೇ ವ್ಯಾಧಿಯು ಹುಟ್ಟುವುದಿಲ್ಲ. ಶರೀರದಿಂದ ಹುಟ್ಟುವ ವ್ಯಾಧಿಯು ಶಾರೀರಿಕವ್ಯಾಧಿಯೆನ್ನುವುದರಲ್ಲಿ ಸಂಶಯವಿಲ್ಲ. ಮನಸ್ಸಿನಿಂದ ಹುಟ್ಟುವ ವ್ಯಾಧಿಯು ಮಾನಸಿಕ ಎನ್ನುವುದು ನಿಶ್ಚಿತ. ಶೀತ, ಉಷ್ಣ ಮತ್ತು ವಾಯುಗಳು ಶರೀರದ ಗುಣಗಳು. ಆ ಗುಣಗಳ ಸಾಮ್ಯವು ಆರೋಗ್ಯದ ಲಕ್ಷಣಗಳೆಂದು ಹೇಳುತ್ತಾರೆ. ಉಷ್ಣದಿಂದ ಶೀತವನ್ನು ಹೋಗಲಾಡಿಸಬಹುದು ಮತ್ತು ಶೀತದಿಂದ ಉಷ್ಣವನ್ನು ಹೋಗಲಾಡಿಸಬಹುದು. ಸತ್ವ, ರಜ, ಮತ್ತು ತಮಗಳೆಂಬ ಮೂರು ಆತ್ಮದ ಗುಣಗಳೆಂದು ಹೇಳುತ್ತಾರೆ. ಆ ಗುಣಗಳ ಸಾಮ್ಯತೆಯು ಆರೋಗ್ಯದ ಲಕ್ಷಣವೆಂದು ಹೇಳುತ್ತಾರೆ. ಇವುಗಳಲ್ಲಿ ಯಾವುದೊಂದು ಗುಣವೂ ಅಧಿಕವಾಗಿದ್ದರೆ ಅದನ್ನು ಇನ್ನೊಂದು ಗುಣದೊಂದಿಗೆ ಸೇರಿಸಿಕೊಳ್ಳಬೇಕೆಂಬ ವಿಧಾನವನ್ನು ಉಪದೇಶಿಸಿದ್ದಾರೆ. ಹರ್ಷದಿಂದ ಶೋಕವು ದೂರವಾಗುತ್ತದೆ ಮತ್ತು ಶೋಕದಿಂದ ಹರ್ಷವು ದೂರವಾಗುತ್ತದೆ. ಒಂದು ವೇಳೆ ವರ್ತಮಾನದಲ್ಲಿ ದುಃಖವು ಆಗುತ್ತಿದ್ದರೆ ಸುಖದ ವೇಳೆಯನ್ನು ಸ್ಮರಿಸಿಕೊಳ್ಳಬೇಕು. ಒಂದು ವೇಳೆ ವರ್ತಮಾನದಲ್ಲಿ ಸುಖವು ಆಗುತ್ತಿದ್ದರೆ ದುಃಖದ ವೇಳೆಯನ್ನು ಸ್ಮರಿಸಿಕೊಳ್ಳಬೇಕು. ಆದರೆ ನೀನು ದುಃಖಿಯಾಗಿದ್ದುಕೊಂಡು ದುಃಖದ ನಿವಾರಣೆಗಾಗಿ ಸುಖವನ್ನು ಸ್ಮರಿಸಿಕೊಳ್ಳುತ್ತಿಲ್ಲ. ಸುಖಿಯಾಗಿದ್ದುಕೊಂಡು ಆ ಸುಖವನ್ನು ಸಮನ್ವಯಗೊಳಿಸುವುದಕ್ಕಾಗಿ ನೀನು ದುಃಖವನ್ನೂ ನೆನಪಿಸಿಕೊಳ್ಳುತ್ತಿಲ್ಲ. ದೈವವೇ ಬಲವತ್ತರವೆನ್ನುವುದನ್ನು ಸ್ಮರಿಸಿಕೊಳ್ಳಬೇಕು. ಅಥವಾ ದುಃಖಿಸುತ್ತಿರುವುದೇ ನಿನ್ನ ಸ್ವಭಾವವೂ ಆಗಿರಬಹುದು. ಪಾಂಡವರು ನೋಡುತ್ತಿದ್ದಂತೆಯೇ ಏಕವಸ್ತ್ರದಲ್ಲಿದ್ದ ರಜಸ್ವಲೆ ಕೃಷ್ಣೆಯನ್ನು ಸಭೆಗೆ ಎಳೆದುತಂದ ದೃಶ್ಯವನ್ನು ಈಗ ನೀನು ಸ್ಮರಿಸಿಕೊಳ್ಳುತ್ತಿಲ್ಲ! ಜಿನಗಳನ್ನುಟ್ಟು ನಗರದಿಂದ ಹೊರಬಂದಿದ್ದುದನ್ನು, ಮತ್ತು ಮಹಾರಣ್ಯದಲ್ಲಿ ವಾಸಿಸುದನ್ನು ನೀನು ಈಗ ನೆನಪಿಸಿಕೊಳ್ಳುತ್ತಿಲ್ಲ! ಜಟಾಸುರನಿಂದುಂಟಾದ ಕಷ್ಟವನ್ನು, ಚಿತ್ರಸೇನನೊಡನೆ ನಡೆದ ಯುದ್ಧವನ್ನು, ಮತ್ತು ಸೈಂಧವನಿಂದುಂಟಾದ ಕಷ್ಟವನ್ನು ನೀನು ನೆನಪಿಸಿಕೊಳ್ಳಲು ಬಯಸುತ್ತಿಲ್ಲ! ಪುನಃ ಅಜ್ಞಾತವಾಸದಲ್ಲಿ ಪರಿಚಾರಿಕೆಗಳನ್ನು ಮಾಡಿದುದು, ಯಾಜ್ಞಸೇನಿಯನ್ನು ಕೀಚಕನು ಕಾಲಿನಿಂದ ಒದೆದುದು ಇದನ್ನು ನೀನು ನೆನಪಿಸಿಕೊಳ್ಳಲು ಬಯಸುತ್ತಿಲ್ಲ. ನೀನು ದ್ರೋಣ-ಭೀಷ್ಮರೊಂದಿಗೆ ಮಾಡಿದ ಯುದ್ಧವನ್ನು ಮಾತ್ರ ನೆನಪಿಸಿಕೊಳ್ಳುತ್ತಿದ್ದೀಯೆ. ನಿನ್ನ ಮನಸ್ಸಿನಲ್ಲಿರುವ ಈ ಯುದ್ಧವನ್ನೇ ನೀನು ಹೋರಾಡಬೇಕು. ಆ ಯುದ್ಧದಿಂದ ಗೆದ್ದು ನೀನು ಮೇಲೆ ಬರಬೇಕು! ಸ್ವಕರ್ಮಗಳಿಂದ ಮನಸ್ಸನ್ನು ಗೆದ್ದು ಪರಮ ಅವ್ಯಕ್ತರೂಪನನ್ನು ಪಡೆಯಬೇಕು. ಅಲ್ಲಿ ಶರಗಳದ್ದಾಗಲೀ, ಸೇವಕರದ್ದಾಗಲೀ ಮತ್ತು ಬಂಧುಗಳದ್ದಾಗಲೀ ಯಾವ ಕಾರ್ಯವೂ ಇಲ್ಲ. ಅಲ್ಲಿರುವ ಯುದ್ಧವನ್ನು ಆತ್ಮನೊಬ್ಬನೇ ಹೋರಾಡಬೇಕು. ಅಂಥಹ ಯುದ್ಧವನ್ನು ಗೆಲ್ಲದೇ ಇದ್ದರೆ ನೀನು ಎಂತಹ ಅವಸ್ಥೆಯನ್ನು ಹೊಂದುವೆ ಎನ್ನುವುದನ್ನು ತಿಳಿದುಕೊಂಡರೂ ನೀನು ಕೃತಕೃತ್ಯನಾಗುವೆ! ಭೂತಗಳ ಆಗು ಹೋಗುಗಳ ಕುರಿತು ಹೀಗೆ ಬುದ್ಧಿಯಲ್ಲಿ ನಿಶ್ಚಯಿಸಿ ನಿನ್ನ ಪಿತೃ-ಪಿತಾಮಹರ ವೃತ್ತಿಯನ್ನನುಸರಿಸಿ ಯಥೋಚಿತವಾಗಿ ರಾಜ್ಯವನ್ನಾಳು!
“ಭಾರತ! ಬಾಹ್ಯ ಸಂಪತ್ತನ್ನು ತೊರೆದರೆ ಸಿದ್ಧಿಯು ದೊರಕುವುದಿಲ್ಲ. ಶಾರೀರಿಕ ದ್ರವ್ಯವನ್ನು[1] ತೊರೆದರೆ ಸಿದ್ಧಿಯು ದೊರಕಬಹುದು ಅಥವಾ ದೊರಕದೆಯೂ ಇರಬಹುದು. ಬಾಹ್ಯಧರ್ಮವನ್ನು ತ್ಯಜಿಸಿ ಶಾರೀರಿಕ ದ್ರವ್ಯಗಳಿಗೆ ಅಂಟಿಕೊಂಡಿರುವವನ ಧರ್ಮ ಮತ್ತು ಸುಖಗಳು ನಿನ್ನ ಶತ್ರುಗಳಲ್ಲಿ ಮಾತ್ರ ಇರಲಿ! ಎರಡು ಅಕ್ಷರಗಳಿಂದ ಮೃತ್ಯುವಾಗುತ್ತದೆ ಮತ್ತು ಮೂರು ಅಕ್ಷರಗಳಿಂದ ಶಾಶ್ವತ ಬ್ರಹ್ಮನಾಗುತ್ತದೆ. “ಮಮ” ಎನ್ನುವ ಎರಡಕ್ಷರಗಳು ಮೃತ್ಯು ಮತ್ತು “ನ ಮಮ” ಎನ್ನುವ ಮೂರು ಅಕ್ಷರಗಳು ಶಾಶ್ವತ. ಬ್ರಹ್ಮ-ಮೃತ್ಯುಗಳೆರಡೂ ಆತ್ಮನಲ್ಲಿಯೇ ನೆಲೆಸಿರುತ್ತವೆ. ನಿಶ್ಚಯವಾಗಿಯೂ ಅವು ಭೂತಗಳಿಗೆ ಅದೃಶ್ಯವಾಗಿದ್ದುಕೊಂಡು ಪರಸ್ಪರರೊಡನೆ ಯುದ್ಧಮಾಡುತ್ತಿರುತ್ತವೆ. ಯಾರು ತಮ್ಮನ್ನು ತಾವೇ ನಿಯಂತ್ರಿಸಿಕೊಂಡು ಅವಿನಾಶತ್ವವನ್ನು ಆತ್ಮನಲ್ಲಿ ಕಂಡಿರುತ್ತಾರೋ ಅವರು ಭೂತಗಳ ಶರೀರಗಳನ್ನು ಭೇದಿಸಿದರೂ ಹಿಂಸೆಮಾಡಿದ ಪಾಪವನ್ನು ಪಡೆಯುವುದಿಲ್ಲ[2]. ಸ್ಥಾವರ-ಜಂಗಮಗಳೊಂದಿಗೆ ಪೃಥ್ವಿಯೆಲ್ಲವನ್ನು ಪಡೆದುಕೊಂಡರೂ ಯಾರಲ್ಲಿ ಮಮತ್ವವೆನ್ನುವುದು ಇಲ್ಲವೋ ಅವನಿಗೆ ಅದರಿಂದ ಏನಾಗುತ್ತದೆ?[3] ಅಥವಾ ವನದಲ್ಲಿದ್ದು ವನ್ಯಜೀವನವನ್ನು ನಡೆಸುವವನಿಗೆ ದ್ರವ್ಯಗಳಲ್ಲಿ ಮಮತೆಯಿದ್ದರೆ ಅವನು ಮೃತ್ಯುವಿನ ಬಾಯಿಯಲ್ಲಿರುವನೆಂದೇ ಆಗುತ್ತದೆ. ಹೊರಗಿನ ಮತ್ತು ಒಳಗಿನ ಶತ್ರುಗಳ ಸ್ವಭಾವವನ್ನು ನೋಡು. ಇದನ್ನು ಕಂಡುಕೊಂಡವನು ಮಹಾಭಯದಿಂದ ಮುಕ್ತನಾಗುತ್ತಾನೆ. ಕಾಮಾತ್ಮನನ್ನು ಲೋಕವು ಪ್ರಶಂಸಿಸುವುದಿಲ್ಲ. ಆದರೆ ಅಕಾಮನೆಯಿಂದ ಯಾವುದೇ ಪ್ರವೃತ್ತಿಯು ಇರುವುದಿಲ್ಲ. ಇದನ್ನು ತಿಳಿದವನು ದಾನ, ವೇದಾಧ್ಯಯನ, ತಪಸ್ಸು, ಮತ್ತು ವೈದಿಕ ಕಾಮ ಕರ್ಮಗಳು, ವ್ರತ, ಯಜ್ಞ, ನಿಯಮಾನುಷ್ಟಾನಗಳು, ದ್ಯಾನಯೋಗಗಳು ಇವನ್ನು ಕಾಮನಾಪೂರ್ವಕವಾಗಿ ಅನುಷ್ಟಾನ ಮಾಡುವುದಿಲ್ಲ. ಇವುಗಳಿಂದ ಕಾಮನೆಗಳನ್ನು ಅಪೇಕ್ಷಿಸುವುದು ಧರ್ಮವಲ್ಲ. ಕಾಮನೆಗಳನ್ನು ನಿಯಂತ್ರಿಸಿಕೊಳ್ಳುವುದೇ ಧರ್ಮದ ಮೂಲವಾಗಿರುತ್ತದೆ.
“ಈ ವಿಷಯದಲ್ಲಿ ಹಿಂದೆ ತಿಳಿದವರು ಕಾಮಗೀತೆಯನ್ನು ಕೀರ್ತನೆಮಾಡುತ್ತಾರೆ. ಆ ಸಂಕೀರ್ತನೆಯನ್ನು ಸಂಪೂರ್ಣವಾಗಿ ಕೇಳು. “ಉಪಾಯಗಳಿಲ್ಲದೇ ಯಾವ ಜೀವಿಯೂ ನನ್ನನ್ನು ಕೊಲ್ಲಲು ಶಕ್ಯವಿಲ್ಲ. ಹೊಡೆಯುವುದರಲ್ಲಿ ತನ್ನ ಬಲವಿದೆಯೆಂದು ತಿಳಿದುಕೊಂಡವನು ನನ್ನನ್ನು ಹೊಡೆಯಲು ಪ್ರಯತ್ನಿಸಿದರೆ ಆ ಹೊಡೆತದಲ್ಲಿ ಕೂಡ ನಾನು ಪುನಃ ಹುಟ್ಟಿಕೊಳ್ಳುತ್ತೇನೆ. ವಿವಿಧ ದಕ್ಷಿಣಾಯುಕ್ತ ಯಜ್ಞಗಳಿಂದ ನನ್ನನ್ನು ಸಂಹರಿಸಲು ಪ್ರಯತ್ನಿಸಿದರೆ ಅವನಲ್ಲಿಯೂ ನಾನು ಜಂಗಮಗಳಲ್ಲಿ ಕರ್ಮಾತ್ಮನು ಹುಟ್ಟುವಂತೆ ಪುನಃ ಹುಟ್ಟಿಕೊಳ್ಳುತ್ತೇನೆ. ವೇದ-ವೇದಾಂತ ಸಾಧನೆಗಳಿಂದ ನನ್ನನ್ನು ಸಂಹರಿಸಲು ಪ್ರಯತ್ನಿಸಿದರೆ ಅವರಲ್ಲಿಯೂ ನಾನು ಸ್ಥಾವರಗಳಲ್ಲಿ ಶಾಂತಾತ್ಮನು ಪ್ರಕಟವಾಗುವಂತೆ ಪುನಃ ಹುಟ್ಟಿಕೊಳ್ಳುತ್ತೇನೆ. ಯಾರು ಧೃತಿ ಮತು ಸತ್ಯಪರಾಕ್ರಮಗಳಿಂದ ನನ್ನನ್ನು ಸಂಹರಿಸಲು ಪ್ರಯತ್ನಿಸುತ್ತಾನೋ ಅವನಲ್ಲಿ ಕೂಡ ನಾನು ಭಾವನೆಗಳಾಗಿ ಸೇರಿಕೊಳ್ಳುತ್ತೇನೆ. ಯಾವ ಸಂಶಿತವ್ರತನು ತಪಸ್ಸಿನಿಂದ ನನ್ನನ್ನು ಸಂಹರಿಸಲು ಪ್ರಯತ್ನಿಸುತ್ತಾನೋ ಅವನ ತಪಸ್ಸಿನಲ್ಲಿಯೇ ಪುನಃ ನಾನು ಹುಟ್ಟಿಕೊಳ್ಳುತ್ತೇನೆ. ಯಾವ ಪಂಡಿತನು ಮೋಕ್ಷವನ್ನು ಅವಲಂಬಿಸಿ ನನ್ನನ್ನು ಸಂಹರಿಸಲು ಪ್ರಯತ್ನಿಸುತ್ತಾನೋ ಅವನ ಮೋಕ್ಷದ ಉದ್ದೇಶದಲ್ಲಿಯೇ ನಿಂತು ನಗುತ್ತೇನೆ ಮತ್ತು ನರ್ತಿಸುತ್ತೇನೆ. ಸರ್ವಜೀವಿಗಳಿಂದಲೂ ಅವಧ್ಯನಾದ ನಾನು ಸನಾತನ.” ಆದುದರಿಂದ ವಿವಿಧದಕ್ಷಿಣಗಳಿಂದ ಕೂಡಿದ ಯಜ್ಞಗಳಿಂದ ಧರ್ಮವನ್ನು ಮಾಡು. ವಿವಿಧ ದಕ್ಷಿಣೆಗಳಿಂದ ಕೂಡಿದ ಅಶ್ವಮೇಧವನ್ನು ಯಾಜಿಸು. ಸಮೃದ್ಧ ಆಪ್ತದಕ್ಷಿಣೆಗಳಿಂದ ಕೂಡಿದ ಅನ್ಯ ವಿವಿಧ ಯಜ್ಞಗಳನ್ನೂ ಮಾಡು. ಹತರಾದ ಬಂಧುಗಳನ್ನು ನೋಡಿ ಪುನಃ ಪುನಃ ವ್ಯಥೆಪಡಬೇಡ. ರಣರಂಗದಲ್ಲಿ ಹತರಾದ ಅವರನ್ನು ಪುನಃ ನೋಡಲು ನಿನಗೆ ಶಕ್ಯವಿಲ್ಲ. ಸಮೃದ್ಧ ಆಪ್ತದಕ್ಷಿಣೆಗಳಿಂದ ಮಹಾಯಜ್ಞಗಳನ್ನು ಮಾಡಿ ಲೋಕದಲ್ಲಿ ಪರಮ ಕೀರ್ತಿಯನ್ನು ಗಳಿಸಿ ಉತ್ತಮ ಗತಿಯನ್ನು ಪಡೆಯುತ್ತೀಯೆ.”
ಹಸ್ತಿನಾಪುರ ಪ್ರವೇಶ
ಈ ರೀತಿ ಮುನಿಗಳು ಮತ್ತು ತಪೋಧನರ ಬಹುವಿಧದ ಮಾತುಗಳನ್ನು ಕೇಳಿ ಬಂಧುಗಳನ್ನು ಕಳೆದುಕೊಂಡಿದ್ದ ರಾಜರ್ಷಿ ಯುಧಿಷ್ಠಿರನು ಸಮಾಧಾನಗೊಂಡನು. ಸ್ವಯಂ ಭಗವಂತ ಕೃಷ್ಣ, ದ್ವೈಪಾಯನ ಕೃಷ್ಣ, ಋಷಿ ದೇವಸ್ಥಾನ, ನಾರದ, ಭೀಮ, ನಕುಲ, ಕೃಷ್ಣೆ ದ್ರೌಪದಿ, ಸಹದೇವ, ಧೀಮಂತ ವಿಜಯ ಅರ್ಜುನ, ಅನ್ಯ ಪುರುಷವ್ಯಾಘ್ರರು, ಮತ್ತು ಶಾಸ್ತ್ರದೃಷ್ಟಿಯನ್ನರಿತ ಬ್ರಾಹ್ಮಣರು ಮೊದಲಾದವರಿಂದ ಸಾಂತ್ವನಗೊಳಿಸಲ್ಪಟ್ಟ ಪಾರ್ಥಿವ ಯುಧಿಷ್ಠಿರನು ಮಾನಸಿಕ ಶೋಕ, ದುಃಖ, ಸಂತಾಪಗಳನ್ನು ಕಳೆದುಕೊಂಡನು. ನೃಪ ಯುಧಿಷ್ಠಿರನು ಬಂಧುಗಳ ಪ್ರೇತಕಾರ್ಯಗಳನ್ನು ಮಾಡಿ ಪುನಃ ದೇವತೆಗಳನ್ನೂ ಬ್ರಾಹ್ಮಣರನ್ನೂ ಅರ್ಚಿಸತೊಡಗಿದನು. ಆ ಧರ್ಮಾತ್ಮನು ಸಾಗರವನ್ನೇ ವಸ್ತ್ರವನ್ನಾಗಿ ಉಟ್ಟುಕೊಂಡ ಪೃಥ್ವಿಯನ್ನು ಆಳತೊಡಗಿದನು. ಸ್ವರಾಜ್ಯವನ್ನು ಪಡೆದು ಶಾಂತ ಚೇತಸನಾದ ಕೌರವ್ಯ ನೃಪನು ವ್ಯಾಸ, ನಾರದ ಮತ್ತು ಅನ್ಯರನ್ನು ಕುರಿತು ಹೇಳಿದನು: “ವೃದ್ಧರು ಮತ್ತು ಮುನಿಪುಂಗವರಿಂದ ನನಗೆ ಪುನಃ ಪುನಃ ಆಶ್ವಾಸನೆಗಳು ದೊರಕಿವೆ. ಈಗ ನನ್ನಲ್ಲಿ ಸೂಕ್ಷ್ಮವಾದಷ್ಟೂ ದುಃಖವಿಲ್ಲ. ನೀವು ಸೂಚಿಸಿದಂತೆ ಅತಿದೊಡ್ಡ ಸಂಪತ್ತು ಸಿಗುವುದರಲ್ಲಿದೆ. ನಿಮ್ಮೆಲ್ಲರನ್ನೂ ಮುಂದಿರಿಸಿಕೊಂಡು ನಾನು ಯಜ್ಞವನ್ನು ಮಾಡಿ ದೇವತೆಗಳನ್ನು ತೃಪ್ತಿಗೊಳಿಸುತ್ತೇನೆ. ದ್ವಿಜಸತ್ತಮ! ನೀನು ರಕ್ಷಿಸುತ್ತಿರುವ ಹಿಮಾಲಯ ಪರ್ವತದ ಆ ಸ್ಥಳಕ್ಕೆ ಹೋಗೋಣ! ಆ ಪ್ರದೇಶವು ಅನೇಕ ಆಶ್ಚರ್ಯಗಳಿಂದ ಕೂಡಿದೆಯೆಂದು ಕೇಳಿದ್ದೇವೆ. ಪೂಜ್ಯನಾದ ನೀನೂ, ದೇವರ್ಷಿ ನಾರದ ಮತ್ತು ದೇವಸ್ಥಾನರೂ ಕಲ್ಯಾಣಕರವಾದ ಅನೇಕ ವಿಚಿತ್ರ ಮಾತುಗಳನ್ನಾಡಿದ್ದೀರಿ. ಸೌಭಾಗ್ಯಶಾಲಿಯಲ್ಲದ ಯಾವ ಪುರುಷನೂ ಕಷ್ಟಸಮಯದಲ್ಲಿ ಇಂತಹ ಸಾಧುಸಮ್ಮತ ಹಿತೈಷಿ ಗುರುಗಳನ್ನು ಪಡೆಯಲಾರನು!”
ರಾಜನು ಹೀಗೆ ಹೇಳಲು ಎಲ್ಲ ಮಹರ್ಷಿಗಳು ರಾಜನಿಂದ ಮತ್ತು ಹಾಗೆಯೇ ಕೃಷ್ಣ-ಫಲ್ಗುನರಿಂದ ಬೀಳ್ಕೊಂಡರು. ಅವರೆಲ್ಲರೂ ನೋಡುತ್ತಿದ್ದಂತೆಯೇ ಅವರು ಅಲ್ಲಿಯೇ ಅದೃಶ್ಯರಾದರು. ಆಗ ರಾಜಾ ಪ್ರಭು ಧರ್ಮಸುತನು ಅಲ್ಲಿಯೇ ಕುಳಿತುಕೊಂಡನು. ಸ್ವಲ್ಪ ಕಾಲದ ನಂತರ ಅವನು ಹಿಂದಿರುಗಿದನು. ನಿಧನ ಹೊಂದಿದ ಭೀಷ್ಮನ ಶೌಚಕರ್ಮಗಳನ್ನು ಮಾಡಿ ಔರ್ಧ್ವದೈಹಿಕ ಕರ್ಮಗಳನ್ನು ಮಾಡಿ ವಿಪ್ರರಿಗೆ ಮಹಾದಾನಗಳನ್ನು ನೀಡಿದನು. ಧೃತರಾಷ್ಟ್ರನೊಂದಿಗೆ ಕುರುನಂದನನು ಭೀಷ್ಮ-ಕರ್ಣರೇ ಮೊದಲಾದ ಕುರುಗಳ ಔರ್ಧ್ವದೈಹಿಕ ಕರ್ಮಗಳನ್ನು ನೆರವೇರಿಸಿದನು. ಅನಂತರ ಪಾಂಡವರ್ಷಭನು ಧೃತರಾಷ್ಟ್ರನನ್ನು ಮುಂದಿರಿಸಿಕೊಂಡು ಹಸ್ತಿನಾಪುರವನ್ನು ಪ್ರವೇಶಿಸಿದನು. ಪ್ರಜ್ಞಾಚಕ್ಷು ತಂದೆ ಈಶ್ವರನನ್ನು ಸಮಾಧಾನಗೊಳಿಸುತ್ತಾ ಧರ್ಮಾತ್ಮ ಯುಧಿಷ್ಠಿರನು ಸಹೋದರರೊಂದಿಗೆ ಭೂಮಿಯನ್ನು ಆಳತೊಡಗಿದನು.
[1] ಶಬ್ಧ-ಸ್ಪರ್ಷ-ರೂಪ-ರಸ-ಗಂಧಾದಿಗಳು
[2] ಮಮಕಾರವನ್ನು ತೊರೆದು ಆತ್ಮನಲ್ಲಿ ಶಾಶ್ವತ ಬ್ರಹ್ಮನನ್ನು ಕಂಡವನು ಜೀವಿಗಳನ್ನು ಕೊಂದರೂ ಅಹಿಂಸಕನಾಗಿಯೇ ಇರುತ್ತಾನೆ. ಅವನಿಗೆ ಕೊಂದ ಪಾಪವು ತಗಲುವುದಿಲ್ಲ.
[3] ಯಾವುದೂ ನನ್ನದಲ್ಲ ಎಂದುಕೊಂಡವನಿಗೆ ಭೂಮಿ-ಐಶ್ವರ್ಯಗಳು ಸಿಕ್ಕಿದರೆ ಅಥವಾ ಸಿಗದಿದ್ದರೆ ಸುಖ-ದುಃಖಗಳೇನೂ ಆಗುವುದಿಲ್ಲ.