ಇಂದ್ರಪ್ರಸ್ಥದಲ್ಲಿ ಕೃಷ್ಣಾರ್ಜುನರ ಸಭಾವಿಹಾರ; ಕೃಷ್ಣನು ದ್ವಾರಕೆಗೆ ತೆರಳಿದುದು
ಪಾಂಡವರಿಗೆ ವಿಜಯವಾಗಿ ಅವರು ಪ್ರಶಾಂತರಾಗಲು ವಾಸುದೇವ-ಧನಂಜಯರು ಹರ್ಷಿತರಾದರು. ಮುದಿತರಾಗಿ ಅವನು ತಮ್ಮ ಅನುಯಾಯಿಗಳೊಂದಿಗೆ ದಿವಿಯಲ್ಲಿ ದೇವೇಶ್ವರರಂತೆ ವಿಚಿತ್ರ ವನ-ಪರ್ವತಗಳಲ್ಲಿ ವಿಹರಿಸಿದರು. ಅಶ್ವಿನಿಯರು ನಂದನ ವನದಲ್ಲಿ ಹೇಗೋ ಹಾಗೆ ಅವರಿಬ್ಬರೂ ರಮಣೀಯ ಶೈಲಗಳಲ್ಲಿ ಮತ್ತು ನದಿ-ತೀರ್ಥಗಳಲ್ಲಿ ವಿಹರಿಸುತ್ತಾ ಹರ್ಷಿತರಾದರು. ಮಹಾತ್ಮ ಕೃಷ್ಣ-ಪಾಂಡವರು ಇಂದ್ರಪ್ರಸ್ಥದಲ್ಲಿ ರಮಿಸಿದರು. ಆ ರಮ್ಯ ಸಭೆಯನ್ನು ಪ್ರವೇಶಿಸಿ ವಿಹರಿಸಿದರು. ಅಲ್ಲಿ ಅವರಿಬ್ಬರೂ ವಿಚಿತ್ರ ಯುದ್ಧಕಥೆಗಳನ್ನೂ, ತಮಗಾದ ಪರಿಕ್ಲೇಶಗಳನ್ನೂ ಹೇಳಿಕೊಳ್ಳುತ್ತಾ, ಮಾತುಕಥೆಗಳಲ್ಲಿಯೇ ಕಾಲವನ್ನು ಕಳೆದರು. ಪುರಾಣ ಋಷಿಸತ್ತಮರಾದ ಅವರಿಬ್ಬರು ಮಹಾತ್ಮರೂ ಪ್ರೀತಿಯಿಂದ ಋಷಿಗಳ ಮತ್ತು ದೇವತೆಗಳ ವಂಶಗಳ ಕಥೆಗಳನ್ನು ಹೇಳಿಕೊಳ್ಳುತ್ತಿದ್ದರು. ನಿಶ್ಚಯಜ್ಞ ಕೇಶವನು ಪಾರ್ಥನಿಗೆ ಮಧುರವಾದ ವಿಚಿತ್ರ ಪದ ನಿಶ್ಚಯಗಳುಳ್ಳ ಕಥೆಗಳನ್ನು ಹೇಳತೊಡಗಿದನು. ಪುತ್ರಶೋಕದಿಂದ ಮತ್ತು ಸಹಸ್ರಾರು ಜ್ಞಾತಿಬಾಂಧವರ ಮರಣದಿಂದ ಸಂತಪ್ತನಾಗಿದ್ದ ಪಾರ್ಥನನ್ನು ಶೌರಿ ಜನಾರ್ಧನನು ಕಥೆಗಳ ಮೂಲಕ ಸಮಾಧಾನಪಡಿಸಿದನು. ವಿಧಾನಜ್ಞ ಮಹಾತಪಸ್ವಿ ಸಾತ್ವತನು ಅರ್ಜುನನನ್ನು ವಿಧಿವತ್ತಾಗಿ ಸಮಾಧಾನಗೊಳಿಸಿ ತಾನು ಹೊತ್ತಿದ್ದ ಭಾರವನ್ನು ಕೆಳಗಿಳಿಸಿ ವಿಶ್ರಮಿಸಿದಂತೆ ತೋರಿದನು.
ಸ್ವರಾಜ್ಯವನ್ನು ಪಡೆದು ಪಾರ್ಥನು ಕೃಷ್ಣನೊಂದಿಗೆ ಆ ರಮ್ಯಸಭೆಯಲ್ಲಿ ಮುದಿತನಾಗಿ ವಿಹರಿಸಿದನು. ಸ್ವರ್ಗದ ಪ್ರದೇಶದಂತಿತ್ತ ಆ ಸಭಾಪ್ರದೇಶದಲ್ಲಿ ಅವರಿಬ್ಬರೂ ಸ್ವಜನರಿಂದ ಪರಿವೃತರಾಗಿ ಮೋದದಿಂದ ತಿರುಗಾಡಿದರು. ಆಗ ಆ ರಮ್ಯ ಸಭೆಯನ್ನು ನೋಡುತ್ತಾ ಕೃಷ್ಣನ ಸಹಿತ ನಡೆಯುತ್ತಿದ್ದ ಪಾಂಡವ ಅರ್ಜುನನು ಈ ಮಾತನ್ನಾಡಿದನು: “ದೇವಕೀಪುತ್ರ! ಸಂಗ್ರಾಮವು ಪ್ರಾರಂಭವಾಗುವಾಗ ನಾನು ನಿನ್ನ ಮಹಾತ್ಮೆಯನ್ನೂ ಈಶ್ವರನ ರೂಪವನ್ನೂ ತಿಳಿದುಕೊಂಡೆನು. ಅಂದು ಸೌಹಾರ್ದತೆಯಿಂದ ನೀನು ಏನೆಲ್ಲವನ್ನು ಹೇಳಿದ್ದೆಯೋ ಅವೆಲ್ಲವನ್ನೂ ನಷ್ಟಚೇತನನಾದ ನಾನು ಮರೆತುಹೋಗಿದ್ದೇನೆ. ಸ್ವಲ್ಪಸಮಯದಲ್ಲಿಯೇ ನೀನು ದ್ವಾರಕೆಗೆ ಹೋಗುವನಿದ್ದೀಯೆ! ಅದಕ್ಕೆ ಮೊದಲು ನಿನ್ನಿಂದ ಅದರ ಅರ್ಥವನ್ನು ಪುನಃ ತಿಳಿದುಕೊಳ್ಳಲು ನನಗೆ ಕುತೂಹಲವಾಗಿದೆ.”
ಹೀಗೆ ಹೇಳಲು ಮಹಾತೇಜಸ್ವಿ, ಮಾತನಾಡುವವರಲ್ಲಿ ಶ್ರೇಷ್ಠ ಕೃಷ್ಣನು ಫಲ್ಗುನನನ್ನು ಬಿಗಿದಪ್ಪಿ ಈ ಮಾತುಗಳನ್ನಾಡಿದನು: “ಪಾರ್ಥ! ಗುಹ್ಯವೂ ಸನಾತನವೂ ಆದ ಸರ್ವಲೋಕಗಳಲ್ಲಿ ಶಾಶ್ವತ ಧರ್ಮದ ಸ್ವರೂಪ ಜ್ಞಾನವನ್ನು ನಿನಗೆ ನಾನು ಹೇಳಿದ್ದೆನು. ಆದರೆ ನೀನು ಬುದ್ಧಿಯಿಲ್ಲದೇ ಅದನ್ನು ಗ್ರಹಿಸಿಕೊಳ್ಳಲಿಲ್ಲ ಎನ್ನುವುದು ನನಗೆ ಬಹಳ ಅಪ್ರಿಯವಾಗಿದೆ. ನೀನು ತುಂಬಾ ಅಶ್ರದ್ಧೆಯುಳ್ಳವನೂ ಮಂದಬುದ್ಧಿಯುಳ್ಳವನೂ ಆಗಿರುವೆ. ಏಕೆಂದರೆ ಬ್ರಹ್ಮಪದವನ್ನು ಪಡೆಯುವುದಕ್ಕೆ ಅದು ತುಂಬಾ ಪರ್ಯಾಪ್ತವಾಗಿತ್ತು. ಅದನ್ನು ಪುನಃ ಸಂಪೂರ್ಣವಾಗಿ ಹೇಳಲು ನನ್ನಿಂದ ಶಕ್ಯವಿಲ್ಲ. ಆಗ ನಾನು ಯೋಗಯುಕ್ತನಾಗಿದ್ದುದರಿಂದ ಆ ಬ್ರಹ್ಮತತ್ತ್ವವನ್ನು ವಿವರಿಸಿ ಹೇಳಿದ್ದೆನು. ಆದರೆ ಅದೇ ಅರ್ಥಕೊಡುವ ಪುರಾತನ ಇತಿಹಾಸವನ್ನು ನಿನಗೆ ಹೇಳುತ್ತೇನೆ. ಆ ಬುದ್ಧಿಯಲ್ಲಿದ್ದುಕೊಂಡರೆ ನೀನು ಉತ್ತಮ ಲೋಕಗಳಿಗೆ ಹೋಗುತ್ತೀಯೆ. ಕೇಳು. ಎಲ್ಲವನ್ನೂ ನಿನಗೆ ಹೇಳುತ್ತೇನೆ.” ಆಗ ಕೃಷ್ಣನು ಅರ್ಜುನನಿಗೆ ಅನುಗೀತೆಯನ್ನು ಉಪದೇಶಿಸಿದನು.
ಕಥೆಗಳ ಕೊನೆಯಲ್ಲಿ ಗೋವಿಂದನು ಗುಡಾಕೇಶನನ್ನು ಮಧುರಮಾತುಗಳಿಂದ ಸಾಂತ್ವನಗೊಳಿಸುತ್ತಾ ಅರ್ಥಯುಕ್ತವಾದ ಈ ಮಾತುಗಳನ್ನಾಡಿದನು: “ಸವ್ಯಸಾಚಿ! ನಿನ್ನ ಬಾಹುಬಲವನ್ನು ಆಶ್ರಯಿಸಿ ರಾಜಾ ಧರ್ಮಸುತನು ಈ ಇಡೀ ಭೂಮಿಯನ್ನೇ ಗೆದ್ದಿದ್ದಾಯಿತು! ಭೀಮಸೇನ ಮತ್ತು ಯಮಳರ ಪ್ರಭಾವದಿಂದ ಧರ್ಮರಾಜ ಯುಧಿಷ್ಠಿರನು ದಾಯಾದಿಗಳಿಲ್ಲದ ಈ ಮಹಿಯನ್ನು ಭೋಗಿಸುತ್ತಿದ್ದಾನೆ ಧರ್ಮಜ್ಞ ರಾಜನು ಧರ್ಮದಿಂದಲೇ ಕಂಟಕವಿಲ್ಲದ ರಾಜ್ಯವನ್ನು ಪಡೆದುಕೊಂಡನು. ಧರ್ಮದಿಂದಲೇ ರಾಜಾ ಸುಯೋಧನನು ಯುದ್ಧದಲ್ಲಿ ಮಡಿದನು. ಅಧರ್ಮದಲ್ಲಿಯೇ ರುಚಿಯನ್ನಿಟ್ಟಿದ್ದ, ಸದಾ ಅಪ್ರಿಯವಾದುದನ್ನೇ ಮಾತನಾಡುತ್ತಿದ್ದ, ಆಸೆಬುರುಕ ದುರಾತ್ಮ ಧಾರ್ತರಾಷ್ಟ್ರರು ಬಾಂಧವರೊಂದಿಗೆ ಕೆಳಗುರುಳಿದ್ದಾರೆ. ನೀನು ರಕ್ಷಿಸುತ್ತಿರುವ ಈ ಪ್ರಶಾಂತ ಅಖಿಲ ಪೃಥ್ವಿಯನ್ನು ಪೃಥ್ವೀಪತಿ ಧರ್ಮಸುತ ರಾಜನು ಭೋಗಿಸುತ್ತಿದ್ದಾನೆ. ನಿನ್ನೊಡನೆ ನಾನು ನಿರ್ಜನ ಅರಣ್ಯದಲ್ಲಿಯೂ ರಮಿಸಬಲ್ಲೆನು. ಇನ್ನು ಜನರಿರುವ ಮತ್ತು ಅತ್ತೆ ಪೃಥಾಳಿರುವ ಇಲ್ಲಿ ಇನ್ನೇನು? ಎಲ್ಲಿ ರಾಜಾ ಧರ್ಮಸುತನಿರುವನೋ, ಎಲ್ಲಿ ಮಹಾಬಲ ಭೀಮನಿರುವನೋ, ಎಲ್ಲಿ ಮಾದ್ರವತೀ ಪುತ್ರರಿರುವರೋ ಅಲ್ಲಿ ನನಗೆ ಪರಮ ಆನಂದವಾಗುತ್ತದೆ. ಸ್ವರ್ಗದಂತಿರುವ ಈ ರಮಣೀಯ ಪುಣ್ಯ ಸಭಾಪ್ರದೇಶದಲ್ಲಿ ನಿನ್ನೊಡನೆ ಇದ್ದೇನೆ. ಶೂರಪುತ್ರ ವಸುದೇವನನ್ನು, ಬಲದೇವನನ್ನು ಮತ್ತು ಹಾಗೆಯೇ ಇತರ ವೃಷ್ಣಿಪುಂಗವರನ್ನು ಕಾಣದೇ ಬಹಳ ಕಾಲವು ಕಳೆದುಹೋಯಿತು. ಆದುದರಿಂದ ದ್ವಾರವತೀ ಪುರಿಯ ಕಡೆ ಹೋಗಲು ಬಯಸುತ್ತೇನೆ. ನಾನು ಮತ್ತು ನೀನು ಇಬ್ಬರೂ ಅಲ್ಲಿಗೆ ಹೋಗಬೇಕೆಂದು ಅನಿಸುತ್ತಿದೆ. ಶೋಕಿಸುತ್ತಿದ್ದ ರಾಜಾ ಯುಧಿಷ್ಠಿರನಿಗೆ ಭೀಷ್ಮನೊಂದಿಗೆ ನಾವೂ ಕೂಡ ಅಲ್ಲಲ್ಲಿ ಬಹುವಿಧವಾಗಿ ಹೇಳಿದೆವು. ಪಾಂಡವ ಯುಧಿಷ್ಠಿರನಾದರೋ ನಮ್ಮಿಂದ ಉಪದೇಶಗಳನ್ನು ಪಡೆದು ಆಳುತ್ತಿದ್ದಾನೆ. ಆ ಮಹಾತ್ಮನು ನಮ್ಮ ವಚನಗಳೆಲ್ಲವನ್ನೂ ಸಂಪೂರ್ಣವಾಗಿ ಸ್ವೀಕರಿಸಿದ್ದಾನೆ. ಧರ್ಮಜ್ಞ ಕೃತಜ್ಞ ಸತ್ಯವಾದಿನಿ ಧರ್ಮಪುತ್ರನಲ್ಲಿ ಸತತವೂ ಸತ್ಯ-ಧರ್ಮಗಳು ಮತ್ತು ಉನ್ನತ ಬುದ್ಧಿಯು ಸ್ಥಿರವಾಗಿ ನೆಲೆಸಿವೆ. ನೀನು ಬಯಸುವೆಯಾದರೆ ಆ ಮಹಾತ್ಮನಲ್ಲಿಗೆ ಹೋಗಿ ನಮ್ಮ ಪ್ರಯಾಣದ ಕುರಿತು ಜನಾಧಿಪನಿಗೆ ಹೇಳು. ಪ್ರಾಣತ್ಯಾಗಕ್ಕೂ ಸಿದ್ಧನಾಗಿದ್ದ ಅವನಿಗೆ ಅಪ್ರಿಯವಾದುದನ್ನು ಮಾಡಿ ನಾವು ದ್ವಾರವತೀ ಪುರಿಗೆ ಹೇಗೆ ಹೋಗಬಲ್ಲೆವು? ಇವೆಲ್ಲವನ್ನೂ ನಿನ್ನ ಪ್ರೀತಿ-ಹಿತಗಳನ್ನು ಬಯಸಿ ಹೇಳುತ್ತಿದ್ದೇನೆ. ನಿನಗೆ ಸತ್ಯವನ್ನೇ ಹೇಳುತ್ತೇನೆ. ಸುಳ್ಳನೆಂದೂ ಹೇಳುವುದಿಲ್ಲ. ನಾನು ಇಲ್ಲಿ ಇದ್ದು ಆಗಬೇಕಾಗಿದ್ದ ಪ್ರಯೋಜನವು ಆಗಿಹೋಯಿತು. ರಾಜಾ ಧಾರ್ತರಾಷ್ಟ್ರನು ಅವನ ಸೇನೆ ಮತ್ತು ಅನುಯಾಯಿಗಳೊಂದಿಗೆ ಹತನಾದನು. ಪೃಥ್ವಿಯೂ ಕೂಡ ಧೀಮಂತ ಧರ್ಮಪುತ್ರನ ವಶವಾಯಿತು. ಸಮುದ್ರವೇ ವಸ್ತ್ರವಾಗುಳ್ಳ ಶೈಲ-ವನ-ಕಾನನ ಯುಕ್ತಳಾದ ಬಹುವಿಧದ ರತ್ನಗಳ ಖನಿಯಾದ ಭೂಮಿಯು ಕುರುರಾಜನದ್ದಾಗಿದೆ. ಅನೇಕ ಮಹಾತ್ಮ ಸಿದ್ಧರಿಂದ ಉಪಾಸಿಸಲ್ಪಟ್ಟು ಮತ್ತು ಬಂದಿಗಳಿಂದ ಸತತವೂ ಸ್ತುತಿಸಲ್ಪಡುತ್ತಿರುವ ಧರ್ಮಜ್ಞ ರಾಜನು ಇಡೀ ವಸುಂಧರೆಯನ್ನು ಧರ್ಮದಿಂದ ಪಾಲಿಸಲಿ! ಇಂದು ನೀನು ನನ್ನೊಡನೆ ಕುರುವರ್ಧನ ರಾಜನಲ್ಲಿಗೆ ಹೋಗಿ ದ್ವಾರಕೆಗೆ ಹೋಗುವ ಕುರಿತು ಕೇಳು. ಈ ಶರೀರ ಮತ್ತು ನನ್ನ ಮನೆಯಲ್ಲಿ ಏನೆಲ್ಲ ಸಂಪತ್ತಿದೆಯೋ ಅದು ಸದಾ ಯುಧಿಷ್ಠಿರನಿಗೇ ಮುಡುಪಾಗಿದೆ. ಕುರುಗಳ ಅಧಿಪ ಮಹಾಮತಿ ಯುಧಿಷ್ಠಿರನು ನನಗೆ ಪ್ರಿಯನಾದವನೂ ಮತ್ತು ಮಾನ್ಯನೂ ಆಗಿದ್ದಾನೆ. ನಿನ್ನೊಡನೆ ಇರುವ ಸುಖವಲ್ಲದೇ ಇಲ್ಲಿ ನಾನು ಇನ್ನೂ ಉಳಿದುಕೊಂಡರೆ ಯಾವ ಪ್ರಯೋಜನವನ್ನೂ ನಾನು ಕಾಣುತ್ತಿಲ್ಲ. ಈ ಪೃಥ್ವಿಯೇ ನಿನ್ನ ಗುರುವೂ ಉತ್ತಮ ನಡತೆಯುಳ್ಳವನೂ ಆದ ಯುಧಿಷ್ಠಿರನ ಶಾಸನದಲ್ಲಿದೆ!”
ಆ ಮಹಾತ್ಮ ಜನಾರ್ದನನು ಹೀಗೆ ಹೇಳಲು ಅಮಿತ ವಿಕ್ರಮಿ ಅರ್ಜುನನು “ಕೃಷ್ಣ! ಗಜಸಾಹ್ವಯ ನಗರಕ್ಕೆ ಇಂದೇ ಹೋಗೋಣ! ಅಲ್ಲಿ ರಾಜಾ ಧರ್ಮಾತ್ಮ ಯುಧಿಷ್ಠಿರನನ್ನು ಸಂಧಿಸಿ, ಆ ದುರ್ಧರ್ಷನ ಅನುಜ್ಞೆಯನ್ನು ಪಡೆದು ನಿನ್ನ ಪುರಿಗೆ ನೀನು ಪ್ರಯಾಣಿಸಬಹುದು!” ಎಂದು ಹೇಳಿ ಜನಾರ್ದನನನ್ನು ಪೂಜಿಸಿದನು.
ಕೃಷ್ಣನು ದ್ವಾರಕೆಗೆ ಪ್ರಯಾಣಿಸಿದುದು
ಬಳಿಕ ಕೃಷ್ಣನು ರಥವನ್ನು ಸಿದ್ಧಪಡಿಸುವಂತೆ ದಾರುಕನಿಗೆ ಹೇಳಿದನು. ಸ್ವಲ್ಪ ಹೊತ್ತಿನಲ್ಲಿಯೇ ರಥವು ಸಿದ್ಧವಾಗಿದೆಯೆಂದು ದಾರುಕನು ಬಂದು ಹೇಳಿದನು. ಹಾಗೆಯೇ ಪಾಂಡವ ಅರ್ಜುನನೂ ಕೂಡ “ರಥವನ್ನು ಸಿದ್ಧಪಡಿಸಿ. ಹಸ್ತಿನಾಪುರ ನಗರಕ್ಕೆ ಪ್ರಯಾಣಿಸೋಣ!” ಎಂದು ಆಜ್ಞಾಪಿಸಿದನು. ಹೀಗೆ ಹೇಳಲು ಅವನ ಸೈನಿಕರು ಸಿದ್ಧರಾಗಿ ರಥಗಳು ಸಿದ್ಧವಾಗಿವೆ ಎಂದು ಅಮಿತತೇಜಸ್ವಿ ಪಾರ್ಥನಿಗೆ ಬಂದು ಹೇಳಿದರು. ಆಗ ಕೃಷ್ಣಾರ್ಜುನರು ರಥದಲ್ಲಿ ಕುಳಿತು, ವಿಚಿತ್ರ ಮಾತುಕಥೆಗಳನ್ನಾಡುತ್ತಾ ಸಂತೋಷದಿಂದ ಪ್ರಯಾಣಿಸಿದರು. ರಥದಲ್ಲಿ ಕುಳಿತಿದ್ದ ವಾಸುದೇವನಿಗೆ ಮಹಾತೇಜಸ್ವೀ ಧನಂಜಯನು ಪುನಃ ಈ ಮಾತುಗಳನ್ನಾಡಿದನು: “ವೃಷ್ಣಿಕುಲೋದ್ವಹ! ನಿನ್ನ ಅನುಗ್ರಹದಿಂದಲೇ ರಾಜಾ ಯುಧಿಷ್ಠಿರನಿಗೆ ಜಯವು ದೊರಕಿತು. ಶತ್ರುಗಳನ್ನು ಸಂಹರಿಸಿ ಕಂಟಕವಿಲ್ಲದ ಈ ರಾಜ್ಯವನ್ನು ಅವನು ಪಡೆದನು. ಮಧುಸೂದನ! ನಿನ್ನಿಂದ ನಾವು ನಾಥವಂತರಾದೆವು. ನಿನ್ನನ್ನೇ ನೌಕೆಯನ್ನಾಗಿಸಿಕೊಂಡು ನಾವು ಕುರುಸಾಗರವನ್ನು ದಾಟಿದೆವು. ವಿಶ್ವಕರ್ಮನೇ! ವಿಶ್ವಾತ್ಮನೇ! ವಿಶ್ವಸಂಭವನೇ! ನಿನಗೆ ನಮಸ್ಕಾರವು. ನಾನು ನಿನಗೆ ತುಂಬಾ ಬೇಕಾದವನು ಎಂದು ತಿಳಿದುಕೊಂಡೆನು. ಮಧುಸೂದನ! ವಿಭೋ! ನಿನ್ನ ತೇಜಸ್ಸಿನಿಂದಲೇ ನಿತ್ಯವೂ ಎಲ್ಲವೂ ಹುಟ್ಟಿಕೊಳ್ಳುತ್ತವೆ. ಎಲ್ಲವೂ ಲಯವಾಗುತ್ತವೆ. ಕ್ರೀಡಾಮಯವಾದ ಈ ಭೂಮಿಯೇ ನಿನಗೆ ಮನೋರಂಜನೆಯ ಸ್ಥಾನವು. ಆಕಾಶ-ಭೂಮಿಗಳು ನಿನ್ನ ಮಾಯೆಯೇ ಆಗಿವೆ. ಈ ಸ್ಥಾವರ-ಜಂಗಮ ವಿಶ್ವವೆಲ್ಲವೂ ನಿನ್ನಲ್ಲಿಯೇ ನೆಲೆಸಿವೆ. ಸನಾತನನಾದ ನೀನೇ ಸರ್ವ ಭೂತಗಣಗಳನ್ನೂ ಸೃಷ್ಟಿಸಿರುವೆ. ಪೃಥ್ವಿ, ಅಂತರಿಕ್ಷ, ಮತ್ತು ಹಾಗೆಯೇ ಸ್ಥಾವರ-ಜಂಗಮಗಳು ನಿನ್ನಿಂದಲೇ ಆಗಿವೆ. ನಿರ್ಮಲ ಬೆಳದಿಂಗಳೇ ನಿನ್ನ ಮುಗುಳ್ನಗೆ ಮತ್ತು ಋತುಗಳೇ ನಿನ್ನ ಇಂದ್ರಿಯಗಳು. ಸತತವೂ ಚಲಿಸುವ ವಾಯುವೇ ನಿನ್ನ ಪ್ರಾಣ. ಸನಾತನ ಮೃತ್ಯುವೇ ನಿನ್ನ ಕ್ರೋಧ. ಮಹಾಮತೇ! ನಿನ್ನ ಪ್ರಸನ್ನತೆಯಲ್ಲಿ ಪದ್ಮಾ ಶ್ರೀಯು ನೆಲಸಿರುತ್ತಾಳೆ. ಅನಘ! ನಿನ್ನಲ್ಲಿಯೇ ರತಿ, ತುಷ್ಟಿ, ಧೃತಿ, ಮತ್ತು ಕಾಂತಿಗಳು ಹಾಗೂ ಈ ಚರಾಚರಜಗತ್ತು ನೆಲೆಸಿವೆ. ಯುಗಾಂತದಲ್ಲೆ ನಿನ್ನನ್ನೇ ನಿಧನ ಎಂದೂ ಹೇಳುತ್ತಾರೆ. ಸುದೀರ್ಘ ಕಾಲವಾದರೂ ನನಗೆ ನಿನ್ನ ಗುಣಗಳನ್ನು ವರ್ಣಿಸಲು ಶಕ್ಯವಿಲ್ಲ. ನಲಿನೇಕ್ಷಣ! ನೀನು ಆತ್ಮ ಮತ್ತು ಪರಮಾತ್ಮನು. ನಿನಗೆ ನಮಸ್ಕಾರವೆಂದು ಹೇಳುತ್ತಿದ್ದೇನೆ. ದುರ್ಧರ್ಷ! ನಾರದ, ದೇವಲ, ಕೃಷ್ಣದ್ವೈಪಾಯನ ಮತ್ತು ಹಾಗೆಯೇ ಕುರುಪಿತಾಮಹನಿಂದ ನಿನ್ನ ಮಹಾತ್ಮೆಯನ್ನು ತಿಳಿದುಕೊಂಡಿದ್ದೇನೆ. ಎಲ್ಲವೂ ನಿನ್ನಲ್ಲಿಯೇ ಸೇರಿವೆ. ನೀನೊಬ್ಬನೇ ಸಮಸ್ತ ಜನರಿಗೂ ಈಶ್ವರನು. ಅನಘ! ಜನಾರ್ದನ! ಯಾವ ಅನುಗ್ರಹದೊಂದಿಗೆ ನೀನು ನನಗೆ ಉಪದೇಶಿಸಿದ್ದೀಯೋ ಅವೆಲ್ಲವನ್ನೂ ನಾನು ಚೆನ್ನಾಗಿ ಆಚರಿಸುತ್ತೇನೆ. ನಮಗೆ ಪ್ರಿಯವಾದುದನ್ನು ಮಾಡಲು ಬಯಸಿ ನೀನು ಇದೊಂದು ಅದ್ಭುತವನ್ನೇ ಮಾಡಿಬಿಟ್ಟೆ. ಯುದ್ಧದಲ್ಲಿ ಧೃತರಾಷ್ಟ್ರಜ ಪಾಪಿ ಕೌರವ್ಯನು ಹತನಾದನು. ನಿನ್ನ ತೇಜಸ್ಸಿನಿಂದ ಸುಟ್ಟುಹೋಗಿದ್ದ ಆ ಸೇನೆಯನ್ನು ಯುದ್ಧದಲ್ಲಿ ನಾನು ಜಯಿಸಿದೆ! ನೀನು ಮಾಡಿದ ಕರ್ಮಗಳಿಂದಲೇ ನನಗೆ ಜಯವು ದೊರಕಿತು. ನಿನ್ನ ಬುದ್ಧಿಪರಾಕ್ರಮಗಳಿಂದಲೇ ನಾವು ಸಂಗ್ರಾಮದಲ್ಲಿ ದುರ್ಯೋಧನನ, ಕರ್ಣನ, ಸೈಂಧವನ ಮತ್ತು ಪಾಪಿ ಭೂರಿಶ್ರವಸನ ವಧೋಪಾಯಗಳನ್ನು ಕಂಡುಕೊಂಡೆವು. ದೇವಕಿನಂದನ! ನಾನೂ ಕೂಡ ನಿನಗೆ ಪ್ರಿಯವಾದುದನ್ನು ಮಾಡಲೋಸುಗ ನೀನು ಏನೆಲ್ಲ ಹೇಳುತ್ತೀಯೋ ಅವೆಲ್ಲವನ್ನೂ ಮಾಡುತ್ತೇನೆ. ಅದರಲ್ಲಿ ವಿಚಾರಮಾಡಬೇಕಾದುದು ಏನೂ ಇಲ್ಲ. ಧರ್ಮಾತ್ಮ! ಅನಘ! ರಾಜಾ ಧರ್ಮಾತ್ಮ ಯುಧಿಷ್ಠಿರನ ಬಳಿಸಾರಿ ದ್ವಾರಕೆಗೆ ನೀನು ಹೋಗಲು ಅನುಮತಿಯನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ಪ್ರಭೋ! ಮಧುಸೂದನ! ನನಗೂ ಕೂಡ ನೀನು ದ್ವಾರಕೆಗೆ ಹೋಗಿ ಬೇಗನೇ ಮಾವ ವಸುದೇವನನ್ನೂ, ದುರ್ಧರ್ಷ ಬಲದೇವನನ್ನೂ ಮತ್ತು ಹಾಗೆಯೇ ಅನ್ಯ ವೃಷ್ಣಿಪುಂಗವರನ್ನೂ ಕಾಣುವುದು ಸರಿಯೆನಿಸುತ್ತಿದೆ.”
ಹೀಗೆ ಮಾತನಾಡುತ್ತಿರುವಾಗಲೇ ಅವರಿಬ್ಬರೂ ಹಸ್ತಿನಾಪುರವನ್ನು ತಲುಪಿದರು ಮತ್ತು ಸಂಪ್ರಹೃಷ್ಟ ಪ್ರಜಾಸ್ತೋಮದಿಂದ ಕೂಡಿದ್ದ ಆ ನಗರವನ್ನು ಪ್ರವೇಶಿಸಿದರು. ಅವರಿಬ್ಬರೂ ಇಂದ್ರನ ಅರಮನೆಯಂತಿದ್ದ ಧೃತರಾಷ್ಟ್ರನ ಅರಮನೆಗೆ ಹೋಗಿ ಅಲ್ಲಿ ಜನೇಶ್ವರ ಧೃತರಾಷ್ಟ್ರನನ್ನೂ, ಬಹಾಬುದ್ಧಿ ವಿದುರನನ್ನೂ, ರಾಜಾ ಯುಧಿಷ್ಠಿರನನ್ನೂ, ದುರ್ಧರ್ಷ ಭೀಮಸೇನನನ್ನೂ, ಪಾಂಡವ ಮಾದ್ರೀಪುತ್ರರೀರ್ವರನ್ನೂ, ಧೃತರಾಷ್ಟ್ರನ ಹತ್ತಿರ ಕುಳಿತಿದ್ದ ಅಪರಾಜಿತ ಯುಯುತ್ಸುವನ್ನೂ, ಮಹಾಪ್ರಾಜ್ಞೆ ಗಾಂಧಾರಿಯನ್ನೂ, ಕುಂತಿಯನ್ನೂ, ಭಾಮಿನೀ ಕೃಷ್ಣೆಯನ್ನೂ, ಸುಭದ್ರೆಯನ್ನೂ, ಮತ್ತು ಸರ್ವ ಭರತಸ್ತ್ರೀಯರನ್ನೂ ಕಂಡರು. ಅವರೆಲ್ಲರೂ ಗಾಂಧಾರಿಯನ್ನು ಸುತ್ತುವರೆದಿದ್ದುದನ್ನು ನೋಡಿದರು. ಅನಂತರ ರಾಜಾ ಧೃತರಾಷ್ಟ್ರನ ಬಳಿಹೋಗಿ ಅವರಿಬ್ಬರು ಅರಿಂದಮರೂ ತಮ್ಮ ತಮ್ಮ ನಾಮಧೇಯಗಳನ್ನು ಹೇಳಿಕೊಂಡು ಅವನ ಪಾದಗಳನ್ನು ಹಿಡಿದು ನಮಸ್ಕರಿಸಿದರು. ಆ ಇಬ್ಬರು ಮಹಾತ್ಮರೂ ಗಾಂಧಾರೀ, ಪೃಥೆ, ಧರ್ಮರಾಜ, ಮತ್ತು ಭೀಮಸೇನರ ಪಾದಗಳನ್ನು ಹಿಡಿದು ನಮಸ್ಕರಿಸಿದರು. ಕ್ಷತ್ತ ವಿದುರನನ್ನೂ ನಮಸ್ಕರಿಸಿ, ಕುಶಲ-ಆರೋಗ್ಯದ ಕುರಿತು ಪ್ರಶ್ನಿಸಿ ಅವರು ವೃದ್ಧ ನೃಪತಿಯೊಡನೆ ಸ್ವಲ್ಪ ಸಮಯ ತಂಗಿದರು. ರಾತ್ರಿಯಾಗುತ್ತಲೇ ಮೇಧಾವೀ ಧೃತರಾಷ್ಟ್ರನು ಕುರೂದ್ವಹರನ್ನೂ ಮತ್ತು ಜನಾರ್ದನನನ್ನು ತಮ್ಮ ತಮ್ಮ ಮನೆಗಳಿಗೆ ಬೀಳ್ಕೊಟ್ಟನು. ನೃಪತಿಯಿಂದ ಹಾಗೆ ಆಜ್ಞೆಪಡೆದು ಎಲ್ಲರೂ ತಮ್ಮ ತಮ್ಮ ಅರಮನೆಗಳಿಗೆ ತೆರಳಿದರು. ವೀರ್ಯವಾನ್ ಕೃಷ್ಣನಾದರೋ ಧನಂಜಯನ ಅರಮನೆಗೇ ಹೋದನು. ಧನಂಜಯನ ಸಹಾಯಕನಾಗಿದ್ದ ಮೇಧಾವೀ ಕೃಷ್ಣನು ಅಲ್ಲಿ ಸರ್ವಕಾಮಗಳ ವ್ಯವಸ್ಥೆಗಳಿಂದ ಯಥಾನ್ಯಾಯವಾಗಿ ಅರ್ಚಿತನಾಗಿ ಮಲಗಿದನು.
ರಾತ್ರಿಕಳೆದು ಬೆಳಗಾಗುತ್ತಲೇ ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ಅವರಿಬ್ಬರು ಪರಮಾರ್ಚಿತರೂ ಧರ್ಮರಾಜನ ಭವನಕ್ಕೆ ಹೋದರು. ಅಲ್ಲಿ ಮಹಾಮನಸ್ವಿ ಧರ್ಮರಾಜನು ಅಮಾತ್ಯರೊಂದಿಗಿದ್ದನು. ಅಶ್ವಿನೀ ದೇವತೆಗಳಂತಿದ್ದ ಆ ಈರ್ವರು ಮಹಾಬಲರೂ ಭವನವನ್ನು ಪ್ರವೇಶಿಸಿ ದೇವರಾಜನಂತೆ ಆಸೀನನಾಗಿದ್ದ ಧರ್ಮರಾಜನನ್ನು ಕಂಡರು. ರಾಜನನ್ನು ಸಮೀಪಿಸಿದ ಆ ಇಬ್ಬರು ವಾರ್ಷ್ಣೇಯ-ಕುರುಪುಂಗವರೂ ಪ್ರೀತಿಯಿಂದ ಸ್ವಾಗತಿಸಲ್ಪಟ್ಟು, ಅನುಜ್ಞಾತರಾಗಿ ಕುಳಿತುಕೊಂಡರು. ಅನಂತರ ಮೇಧಾವೀ, ಮಾತನಾಡುವವರಲ್ಲಿ ಶ್ರೇಷ್ಠ, ರಾಜಸತ್ತಮ ರಾಜನು ಅವರಿಬ್ಬರನ್ನೂ ನೋಡಿ ಅವರು ಏನೋ ಹೇಳಲಿಕ್ಕೆ ಬಂದಿರುವರೆಂದು ಊಹಿಸಿ ಈ ಮಾತುಗಳನ್ನಾಡಿದನು. “ವೀರ ಯದುಕುರೂದ್ವಹರೇ! ನೀವಿಬ್ಬರೂ ಎನನ್ನೋ ಹೇಳಲು ಬಯಸಿರುವಿರೆಂದು ತಿಳಿದಿದ್ದೇನೆ. ಅದನ್ನು ಹೇಳಿರಿ. ಅವೆಲ್ಲವನ್ನೂ ನಾನು ಬೇಗನೇ ಮಾಡುತ್ತೇನೆ. ಅದರಲ್ಲಿ ವಿಚಾರಿಸುವುದು ಬೇಡ!”
ಹೀಗೆ ಹೇಳಲು ವಾಕ್ಯವಿಶಾರದ ಫಲ್ಗುನನು ವಿನೀತನಾಗಿ ಧರ್ಮರಾಜನನ್ನು ಸಮೀಪಿಸಿ ಈ ಮಾತುಗಳನ್ನಾಡಿದನು: “ರಾಜನ್! ಈ ಪ್ರತಾಪವಾನ್ ವಾಸುದೇವನು ಇಲ್ಲಿ ಬಹಳ ಸಮಯ ಉಳಿದುಕೊಂಡಿದ್ದಾನೆ. ನಿನ್ನ ಅನುಜ್ಞೆಯನ್ನು ಪಡೆದು ಅವನು ತನ್ನ ತಂದೆಯನ್ನು ನೋಡಲು ಬಯಸುತ್ತಿದ್ದಾನೆ. ನೀನು ಅಭಿಪ್ರಾಯಪಟ್ಟರೆ ಮತ್ತು ಅನುಜ್ಞೆಯನ್ನಿತ್ತರೆ ಈ ವೀರನು ಆನರ್ತನಗರಿಗೆ ಹೋಗುತ್ತಾನೆ. ಅವನಿಗೆ ಅನುಜ್ಞೆಯನ್ನು ನೀಡಬೇಕು!”
ಯುಧಿಷ್ಠಿರನು ಹೇಳಿದನು: “ಪುಂಡರೀಕಾಕ್ಷ! ನಿನಗೆ ಮಂಗಳವಾಗಲಿ! ಮಧುಸೂದನ! ಇಂದೇ ನೀನು ಪ್ರಭು ಶೂರಸುತನನ್ನು ಕಾಣಲು ದ್ವಾರವತೀ ಪುರಿಗೆ ಹೋಗು. ಮಹಾಬಾಹೋ! ಕೇಶವ! ನೀನು ಅಲ್ಲಿಗೆ ತೆರಳುವುದು ಸಮುಚಿತವೆಂದು ನನಗೂ ತೋರುತ್ತಿದೆ. ಮಾವ ಮತ್ತು ದೇವೀ ದೇವಕಿಯನ್ನು ನೀನು ನೋಡದೆ ಬಹಳ ಸಮಯವಾಯಿತು. ಮಾಧವ! ಮಹಾಪ್ರಾಜ್ಞ! ಸೋದರ ಮಾವ ವಸುದೇವ ಮತ್ತು ಬಲದೇವರನ್ನು ನೀನು ನನ್ನ ಪರವಾಗಿ ಯಥಾಯೋಗ್ಯವಾಗಿ ಸತ್ಕರಿಸು. ಮಾಧವ! ನಿತ್ಯವೂ ನೀನು ನನ್ನನ್ನು, ಬಲಿಗಳಲ್ಲಿ ಶ್ರೇಷ್ಠ ಭೀಮನನ್ನು, ಫಲ್ಗುನನನ್ನು ಮತ್ತು ನಕುಲ-ಸಹದೇವರನ್ನು ನೆನಪಿಸಿಕೊಳ್ಳುತ್ತಲೇ ಇರಬೇಕು. ಮಹಾಭುಜ! ಅನಘ! ಆನರ್ತರನ್ನೂ ತಂದೆಯನ್ನೂ ಮತ್ತು ವೃಷ್ಣಿಗಳನ್ನೂ ಕಂಡು ಪುನಃ ನನ್ನ ಅಶ್ವಮೇಧಕ್ಕೆ ನೀನು ಆಗಮಿಸಬೇಕು. ಸಾತ್ವತ! ರತ್ನಗಳನ್ನೂ, ವಿವಿಧ ಐಶ್ವರ್ಯಗಳನ್ನೂ, ನಿನಗೆ ಮನೋಜ್ಞವಾದ ಇತರ ವಸ್ತುಗಳನ್ನೂ ತೆಗೆದುಕೊಂಡು ಹೋಗು! ಮಾಧವ! ವೀರ! ನಿನ್ನ ಪ್ರಸಾದದಿಂದಲೇ ನಾವು ಶತ್ರುಗಳನ್ನು ವಧಿಸಿ ಈ ಸರ್ವ ವಸುಧೆಯನ್ನೂ ಪಡೆದುಕೊಂಡಿದ್ದೇವೆ.”
ಕೌರವ್ಯ ಧರ್ಮರಾಜ ಯುಧಿಷ್ಠಿರನು ಹೀಗೆ ಹೇಳಲು ಪುರುಷಶ್ರೇಷ್ಠ ವಾಸುದೇವನು ಇಂತೆಂದನು: “ಮಹಾಭುಜ! ರತ್ನಗಳು, ಧನ, ಸಮಗ್ರ ಭೂಮಂಡಲ ಇವೆಲ್ಲವೂ ಇಂದು ನಿನ್ನದೇ ಆಗಿವೆ. ಇಷ್ಟೇ ಅಲ್ಲದೇ ನನ್ನ ಅರಮನೆಯಲ್ಲಿರುವ ಎಲ್ಲ ಸಂಪತ್ತೂ ನಿನಗೇ ಸೇರಿದ್ದು. ಅವುಗಳಿಗೆ ನೀನೇ ಒಡೆಯ!”
ಧರ್ಮಸುತನು ಹಾಗೆಯೇ ಆಗಲೆಂದು ಹೇಳಿ ಅವನನ್ನು ಪುರಸ್ಕರಿಸಲು ಗದಾಗ್ರಜ ವೀರ್ಯವಾನ್ ಕೃಷ್ಣನು ತನ್ನ ತಂದೆಯ ತಂಗಿ ಕುಂತಿಯ ಬಳಿ ಹೋಗಿ ಯಥಾವಿಧಿಯಾಗಿ ಅವಳನ್ನು ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಪೂಜಿಸಿದನು. ಅವಳಿಂದ ಪ್ರತಿನಂದಿಸಲ್ಪಟ್ಟು ಮತ್ತು ಹಾಗೆಯೇ ವಿದುರಾದಿ ಎಲ್ಲರಿಂದ ಬೀಳ್ಕೊಂಡು ಗದಾಗ್ರಜ ಜತುರ್ಭುಜ ಹರಿಯು ದಿವ್ಯರಥದಲ್ಲಿ ಕುಳಿತು ಹಸ್ತಿನಾಪುರದಿಂದ ಹೊರಟನು. ಯುಧಿಷ್ಠಿರನ ಮತ್ತು ಅತ್ತೆ ಕುಂತಿಯ ಅನುಮತಿಯನ್ನು ಪಡೆದು ಮಹಾಭುಜ ಜನಾರ್ದನನು ಭಾಮಿನೀ ಸುಭದ್ರೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಪೌರಜನರಿಂದ ಬೀಳ್ಕೊಂಡು ಹೊರಟನು. ಕಪಿಧ್ವಜ ಅರ್ಜುನ, ಸಾತ್ಯಕಿ, ಮಾದ್ರೀಸುತರೀರ್ವರು, ಅಗಾಧ ಬುದ್ಧಿ ವಿದುರ ಮತ್ತು ಗಜರಾಜ ವಿಕ್ರಮಿ ಸ್ವಯಂ ಬೀಮ ಇವರು ಸ್ವಲ್ಪ ದೂರದವರೆಗೆ ಮಾಧವನನ್ನು ಅನುಸರಿಸಿ ಹೋದರು. ವಿದುರ ಮತ್ತು ಇತರ ಎಲ್ಲ ಕುರುರಾಷ್ಟ್ರವರ್ಧನರನ್ನೂ ಹಿಂದಿರುಗಲು ಹೇಳಿ ವೀರ್ಯವಾನ್ ಜನಾರ್ದನನು ಕುದುರೆಗಳನ್ನು ವೇಗವಾಗಿ ಹೋಗಲು ಪ್ರಚೋದಿಸುವಂತೆ ದಾರುಕ ಮತ್ತು ಸಾತ್ಯಕಿಯರಿಗೆ ಹೇಳಿದನು. ಅನಂತರ ಶತ್ರುಗಣಪ್ರಮರ್ದನ ಪ್ರತಾಪವಾನ್ ಜನಾರ್ದನನು ಶಿನಿಪ್ರವೀರನೊಂದಿಗೆ ಅರಿಗಣಗಳನ್ನು ಸಂಹರಿಸಿ ಶತಕ್ರತುವು ಸ್ವರ್ಗಕ್ಕೆ ಹೇಗೋ ಹಾಗೆ ಆನರ್ತಪುರಿಯನ್ನು ತಲುಪಿದನು.
ಉತ್ತಂಕ
ಹೀಗೆ ವಾರ್ಷ್ಣೇಯನು ದ್ವಾರಕೆಗೆ ಹೊರಡುವಾಗ ಪರಂತಪ ಭರತರ್ಷಭರು ಅವನನ್ನು ಗಾಢವಾಗಿ ಆಲಂಗಿಸಿ ಬೀಳ್ಕೊಟ್ಟು ಸೇವಕರೊಡನೆ ಹಿಂದಿರುಗಿದರು. ಫಲ್ಗುನನು ವಾರ್ಷ್ಣೇಯನನ್ನು ಪುನಃ ಪುನಃ ತಬ್ಬಿಕೊಂಡನು. ಅವನು ಕಾಣುವವರೆಗೆ ಪುನಃ ಪುನಃ ಅವನ ಕಡೆ ನೋಡುತ್ತಲೇ ಇದ್ದನು. ಗೋವಿಂದನನ್ನೇ ನೋಡುತ್ತಿದ್ದ ಪಾರ್ಥನು ಅವನು ಕಾಣದಂತಾದಾಗ ಕಷ್ಟದಿಂದಲೇ ತನ್ನ ದೃಷ್ಟಿಯನ್ನು ಹಿಂದೆ ತೆಗೆದುಕೊಂಡನು. ಅಪರಾಜಿತ ಕೃಷ್ಣನೂ ಕೂಡ ಹಾಗೆಯೇ ಮಾಡಿದನು. ಆ ಮಹಾತ್ಮನು ಪ್ರಯಾಣಿಸುವಾಗ ಅನೇಕ ಅದ್ಭುತ ನಿಮಿತ್ತಗಳು ಕಂಡುಬಂದವು. ಭಿರುಗಾಳಿಯು ವೇಗದಿಂದ ರಥದ ಮುಂದೆ ಬೀಸಿ ಮಾರ್ಗದಲ್ಲಿ ಕಲ್ಲು, ಧೂಳು ಮತ್ತು ಮುಳ್ಳುಗಳು ಇರದಂತೆ ಮಾಡಿತು. ಇಂದ್ರನೂ ಕೂಡ ಶಾಂಙ್ರಧನ್ವಿಯ ಎದಿರು ಶುಭ್ರವೂ ಸುಗಂಧಯುಕ್ತವೂ ಆದ ಮಳೆಯನ್ನೂ ದಿವ್ಯ ಪುಷ್ಪಗಳನ್ನೂ ಸುರಿಸಿದನು.
ಆ ಮಹಾಬಾಹುವು ಸಮಪ್ರದೇಶಗಳಲ್ಲಿ ಮತ್ತು ಮರುಭೂಮಿಗಳಲ್ಲಿ ಪ್ರಯಾಣಿಸುತ್ತಿದ್ದಾಗ ಅಲ್ಲಿ ಅಮಿತೌಜಸ ಮುನಿಶ್ರೇಷ್ಠ ಉತ್ತಂಕನನ್ನು ಕಂಡನು. ವಿಶಾಲಾಕ್ಷನು ಆ ತೇಜಸ್ವೀ ಮುನಿಯನ್ನು ಪೂಜಿಸಿದನು. ಅವನಿಂದ ಪ್ರತಿಪೂಜೆಯನ್ನು ಪಡೆದು ಕೃಷ್ಣನು ಅವನ ಯೋಗಕ್ಷೇಮವನ್ನು ವಿಚಾರಿಸಿದನು. ಕುಶಲ ಪ್ರಶ್ನೆಯನ್ನು ಕೇಳಿದ ಮಧುಸೂದನನನ್ನು ಪೂಜಿಸಿ ಬ್ರಾಹ್ಮಣಶ್ರೇಷ್ಠ ಉತ್ತಂಕನು ಮಾಧವನನ್ನು ಪ್ರಶ್ನಿಸಿದನು: “ಶೌರೇ! ನೀನು ಕುರು-ಪಾಂಡವರ ಸದನಗಳಿಗೆ ಹೋಗಿ ಎರಡೂ ಪಂಗಡಗಳಲ್ಲಿ ಉತ್ತಮ ಭ್ರಾತೃಭಾವವನ್ನು ಉಂಟುಮಾಡಿಸಿ ಬಂದೆಯಾ? ಅದರ ಕುರಿತು ನೀನು ನನಗೆ ಹೇಳಬೇಕು. ಸತತವೂ ನಿನ್ನ ಸಂಬಂಧಿಗಳೂ ಪ್ರೀತಿಪಾತ್ರರೂ ಆದ ಆ ವೀರರ ನಡುವೆ ಸಂಧಿಯನ್ನು ನಡೆಸಿಕೊಟ್ಟು ಬಂದೆಯಾ? ಐವರು ಪಾಂಡುಸುತರು ಮತ್ತು ಧೃತರಾಷ್ಟ್ರನ ಮಕ್ಕಳು ನಿನ್ನೊಡನೆ ಲೋಕಗಳಲ್ಲಿ ವಿಹರಿಸುತ್ತಿದ್ದಾರೆ ತಾನೇ? ನಾಥನಾದ ನೀನು ಕೌರವರಲ್ಲಿ ಶಾಂತಿಯನ್ನು ಏರ್ಪಡಿಸಿದ ನಂತರ ರಾಜರು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಸುಖದಿಂದ ಇರುವರು ತಾನೇ? ನೀನು ಹಾಗೆಯೇ ಮಾಡುತ್ತೀಯೆ ಎಂದು ನನಗೆ ಸಂಪೂರ್ಣವಾದ ಭರವಸೆಯಿದ್ದಿತು. ಏಕೆಂದರೆ ಭಾರತರ ಪ್ರತಿ ನಿನಗಿರುವ ಪ್ರೀತಿಯಿಂದಾಗಿ ಸಂಧಿಯು ಸಫಲವಾಗಲೇ ಬೇಕಿತ್ತು!”
ವಾಸುದೇವನು ಹೇಳಿದನು: “ಬ್ರಹ್ಮನ್! ಕೌರವರಲ್ಲಿ ಪರಸ್ಪರ ಸೌಭ್ರಾತೃತ್ವವನ್ನುಂಟುಮಾಡಲು ನಾನು ಪ್ರಯತ್ನಿಸಿದೆ. ಆದರೆ ಅಧರ್ಮದಲ್ಲಿಯೇ ಆಸಕ್ತರಾದ ಅವರು ಸಂಧಿಮಾಡಿಕೊಳ್ಳುವಂತೆ ಮಾಡಲು ನನಗೆ ಶಕ್ಯವಾಗಲಿಲ್ಲ. ಅನಂತರ ಅವರೆಲ್ಲರೂ ಮಕ್ಕಳು-ಬಾಂಧವರೊಂದಿಗೆ ನಿಧನಹೊಂದಿದರು. ಬುದ್ಧಿ ಅಥವಾ ಬಲಗಳಿಂದ ದೈವವನ್ನು ಅತಿಕ್ರಮಿಸಲು ಶಕ್ಯವಿಲ್ಲ. ಇವೆಲ್ಲವೂ ನಿನಗೆ ತಿಳಿದಿದ್ದೇ ಆಗಿವೆ! ಮಹಾಮತಿ ಭೀಷ್ಮ ಮತ್ತು ವಿದುರರ ಸಲಹೆಗಳನ್ನು ಅತಿಕ್ರಮಿಸಿ ಅವರು ಪರಸ್ಪರರರೊಡನೆ ಹೋರಾಡಿ ಯಮಕ್ಷಯಕ್ಕೆ ಹೋದರು. ಮಕ್ಕಳನ್ನೂ ಮಿತ್ರರನ್ನು ಕಳೆದುಕೊಂಡ ಐವರು ಪಾಂಡವರು ಮಾತ್ರ ಉಳಿದುಕೊಂಡಿದ್ದಾರೆ. ಧಾರ್ತರಾಷ್ಟ್ರರೆಲ್ಲರೂ ಮಕ್ಕಳು-ಬಾಂಧವರೊಡನೆ ಹತರಾಗಿದ್ದಾರೆ.”
ಕೃಷ್ಣನು ಹೀಗೆ ಹೇಳಲು ಉತ್ತಂಕನು ಅತ್ಯಂತ ಕ್ರೋಧಸಮನ್ವಿತನಾದನು. ರೋಷದಿಂದ ಕಣ್ಣುಗಳನ್ನು ಅರಳಿಸಿಕೊಂಡು ಅವನು ಈ ಮಾತುಗಳನ್ನಾಡಿದನು: “ಕೃಷ್ಣ! ಶಕ್ತನಾಗಿದ್ದರೂ ಸಂಬಂಧಿಗಳೂ ಪ್ರಿಯರೂ ಆಗಿದ್ದ ಕುರು-ಪಾಂಡವರನ್ನು ನೀನು ರಕ್ಷಿಸಲಿಲ್ಲ. ಆದುದರಿಂದ ನಿನ್ನನ್ನೀಗ ಶಪಿಸುತ್ತೇನೆ. ಇದರಲ್ಲಿ ಸಂಶಯವೇ ಇಲ್ಲ! ಬಲವನ್ನು ಪ್ರಯೋಗಿಸಿಯಾದರೂ ನೀನು ಅವರನ್ನು ತಡೆಯಬಹುದಾಗಿತ್ತು. ವಿನಾಶದಿಂದ ಪಾರುಮಾಡಬಹುದಾಗಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. ಇದರಿಂದ ಕುಪಿತನಾಗಿ ನಾನು ನಿನ್ನನ್ನು ಶಪಿಸುತ್ತೇನೆ. ತಡೆಯಲು ಶಕ್ತನಾಗಿದ್ದರೂ ನೀನು ಪರಸ್ಪರರನ್ನು ನಾಶಗೊಳಿಸಿದ ಕುರುಶ್ರೇಷ್ಠರನ್ನು ಮಿಥ್ಯಾಚಾರದಿಂದ ಉಪೇಕ್ಷಿಸಿದೆ!”
ವಾಸುದೇವನು ಹೇಳಿದನು: “ಭೃಗುನಂದನ! ನೀನು ತಪಸ್ವಿಯಾಗಿರುವೆ! ಕೋಪಗೊಳ್ಳಬೇಡ! ನಾನು ಹೇಳುವುದನ್ನು ಸಮಗ್ರವಾಗಿ ಕೇಳಿ ನನ್ನ ಪ್ರಾರ್ಥನೆಯನ್ನು ಅಂಗೀಕರಿಸು. ನನ್ನಿಂದ ಆಧ್ಯಾತ್ಮತತ್ತ್ವವನ್ನು ಕೇಳಿದನಂತರ ನೀನು ನನಗೆ ಶಾಪವನ್ನು ಕೊಡಬಹುದು. ಅಲ್ಪ ತಪಸ್ಸಿನಿಂದ ಯಾವ ಪುರುಷನೂ ನನ್ನನ್ನು ತಿರಸ್ಕರಿಸಲಾರನು. ನಿನ್ನ ತಪಸ್ಸು ನಾಶವಾಗುವುದನ್ನು ನಾನು ಬಯಸುವುದಿಲ್ಲ. ಗುರುವನ್ನು ತೃಪ್ತಿಗೊಳಿಸುರುವ ನಿನ್ನ ತಪಸ್ಸು ಮಹಾ ದೀಪ್ತವಾದುದು. ಬಾಲ್ಯದಿಂದಲೇ ನೀನು ಬ್ರಹ್ಮಚರ್ಯವನ್ನು ಪಾಲಿಸುತ್ತಿರುವೆ ಎಂದು ತಿಳಿದಿದ್ದೇನೆ. ಆದುದರಿಂದ ಕಷ್ಟದಿಂದ ಸಂಪಾದಿಸಿದ ನಿನ್ನ ಈ ತಪಸ್ಸನ್ನು ವ್ಯಯಗೊಳಿಸಲು ನಾನು ಇಷ್ಟಪಡುವುದಿಲ್ಲ.”
ಉತ್ತಂಕನು ಹೇಳಿದನು: “ಕೇಶವ! ಅನಿಂದಿತ ಆಧ್ಯಾತ್ಮತತ್ತ್ವವನ್ನು ಹೇಳು. ಅದನ್ನು ಕೇಳಿ ನಿನ್ನ ಶ್ರೇಯಸ್ಸಿಗೆ ಆಶೀರ್ವಾದವನ್ನಾದರೂ ಮಾಡುತ್ತೇನೆ ಅಥವಾ ಶಾಪವನ್ನಾದರೂ ಕೊಡುತ್ತೇನೆ.”
ವಾಸುದೇವನು ಹೇಳಿದನು: “ದ್ವಿಜ! ತಮ, ರಜ ಮತ್ತು ಸತ್ತ್ವಗುಣಗಳು ನನ್ನನ್ನೇ ಆಶ್ರಯಿಸಿದ ನನ್ನ ಭಾವಗಳು. ಹಾಗೆಯೇ ರುದ್ರರು ಮತ್ತು ವಸುಗಳೂ ನನ್ನಿಂದಲೇ ಆವಿರ್ಭವಿಸಿದರು ಎನ್ನುವುದನ್ನು ತಿಳಿ. ನನ್ನಲ್ಲಿ ಸರ್ವ ಭೂತಗಳೂ ಮತ್ತು ಸರ್ವಭೂತಗಳಲ್ಲಿ ನಾನೂ ನೆಲೆಗೊಂಡಿವೆ ಎನ್ನುವುದನ್ನು ತಿಳಿ. ಅದರಲ್ಲಿ ಸಂಶಯ ಬೇಡ. ಹಾಗೆಯೇ ಸರ್ವ ದೈತ್ಯಗಣಗಳೂ, ಯಕ್ಷ-ರಾಕ್ಷಸ-ಪನ್ನಗ ಗಣಗಳೂ, ಗಂಧರ್ವ-ಅಪ್ಸರೆಯರೂ ನನ್ನಿಂದಲೇ ಹುಟ್ಟಿದವೆಂದು ತಿಳಿ. ಸತ್-ಅಸತ್, ಅವ್ಯಕ್ತ-ವ್ಯಕ್ತ ಮತ್ತು ಅಕ್ಷರ-ಕ್ಷರ ಎಂದು ಯಾವುದನ್ನು ಕರೆಯುವರೋ ಅವೆಲ್ಲವೂ ನನ್ನದೇ ಸ್ವರೂಪಗಳು. ನಾಲ್ಕು ಆಶ್ರಮಗಳ ಧರ್ಮಗಳೂ ದೈವಕರ್ಮಗಳೂ ಎಲ್ಲವೂ ನನ್ನ ಸ್ವರೂಪವೇ ಎನ್ನುವುದನ್ನು ತಿಳಿದುಕೋ. ಅವ್ಯಕ್ತ ಮತ್ತು ವ್ಯಕ್ತಾವ್ಯಕ್ತ, ಇವುಗಳ ಆಚೆಯಿರುವ ವಿಶ್ವವೂ ದೇವದೇವನಾದ ಸನಾತನನಾದ ನನ್ನ ಹೊರತಿಲ್ಲ. ಓಂಕಾರದಿಂದ ಪ್ರಾರಂಭವಾಗುವ ವೇದಗಳೂ ನಾನೆಂದು ತಿಳಿ. ಯಜ್ಞದಲ್ಲಿಯ ಯೂಪ, ಸೋಮ, ಮತ್ತು ಹಾಗೆಯೇ ದೇವತೆಗಳಿಗೆ ತೃಪ್ತಿಯನ್ನುಂಟು ಮಾಡುವ ಹೋತಾರ, ಹವ್ಯ, ಅಧ್ವರ್ಯು, ಕಲ್ಪಕ, ಮತ್ತು ಪರಮಸಂಸ್ಕೃತ ಹವಿಸ್ಸು ಎಲ್ಲವೂ ನನ್ನ ಸ್ವರೂಪಗಳೇ ಆಗಿವೆ ಎನ್ನುವುದನ್ನು ತಿಳಿದುಕೋ. ಮಹಾಧ್ವರಗಳಲ್ಲಿ ಉದ್ಗಾತರು ಗೀತಘೋಷಗಳಿಂದ ನನ್ನನ್ನೇ ಸ್ತುತಿಸುತ್ತಾರೆ. ಪ್ರಾಯಶ್ಚಿತ್ತ ಕರ್ಮಗಳಲ್ಲಿ ಶಾಂತಿಮಂಗಲವಾಚಕ ದ್ವಿಜಸತ್ತಮರು ಸತತವಾಗಿ ವಿಶ್ವಕರ್ಮನಾದ ನನ್ನನ್ನೇ ಸ್ತುತಿಸುತ್ತಾರೆ. ಸರ್ವಭೂತದಯಾತ್ಮಕನಾದ ಧರ್ಮನು ನನ್ನ ಪ್ರೀತಿಯ ಹಿರಿಯ ಮಾನಸಪುತ್ರನೆಂದು ತಿಳಿ. ನಿವೃತ್ತಧರ್ಮದಲ್ಲಿ ನಡೆದುಕೊಳ್ಳುವ ಮನುಷ್ಯರೊಂದಿಗೆ ನಾನಿರುತ್ತೇನೆ. ಧರ್ಮಸಂರಕ್ಷಣೆಗೋಸ್ಕರ ಮತ್ತು ಧರ್ಮಸಂಸ್ಥಾಪನೆಗೋಸ್ಕರ ನಾನು ಮೂರು ಲೋಕಗಳಲ್ಲಿಯೂ ಬಹುವಿಧದ ಯೋನಿಗಳಲ್ಲಿ ಅವತರಿಸಿ, ಆಯಾ ಯೋನಿಗಳಿಗೆ ಅನುರೂಪವಾದ ರೂಪ-ವೇಷ-ವ್ಯವಹಾರಗಳಿಂದ ಕೂಡಿರುತ್ತೇನೆ. ನಾನು ವಿಷ್ಣು. ನಾನು ಬ್ರಹ್ಮ. ಇಂದ್ರನೂ ನನ್ನಿಂದಲೇ ಹುಟ್ಟಿದ್ದಾನೆ. ಸಕಲ ಭೂತಗ್ರಾಮಗಳ ಉತ್ಪತ್ತಿ-ವಿನಾಶಗಳಿಗೆ ನಾನೇ ಕಾರಣನಾಗಿದ್ದೇನೆ. ಅಧರ್ಮದಲ್ಲಿ ನಡೆದುಕೊಳ್ಳುವ ಎಲ್ಲರನ್ನೂ ನಾನೇ ಶಿಕ್ಷಿಸುತ್ತೇನೆ. ಪ್ರಜೆಗಳ ಹಿತವನ್ನೇ ಬಯಸಿ ಒಂದಾದ ಮೇಲೊಂದು ಬರುತ್ತಿರುವ ಯುಗಗಳಲ್ಲಿ ನಾನು ಆಯಾ ಯೋನಿಗಳನ್ನು ಪ್ರವೇಶಿಸಿ ಧರ್ಮದ ಸೇತುವೆಗಳನ್ನು ಕಟ್ಟುತ್ತೇನೆ. ನಾನು ದೇವಯೋನಿಯಲ್ಲಿ ಅವತರಿಸಿದಾಗ ಎಲ್ಲದರಲ್ಲಿಯೂ ದೇವತೆಯಂತೆಯೇ ವರ್ತಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಗಂಧರ್ವಯೋನಿಯಲ್ಲಿ ಜನಿಸಿದಾಗ ನಾನು ಎಲ್ಲದರಲ್ಲಿಯೂ ಗಂಧರ್ವನಂತೆಯೇ ವರ್ತಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ನಾಗಯೋನಿಯಲ್ಲಿ ಜನಿಸಿದಾಗ ನಾಗದಂತೆಯೇ ವರ್ತಿಸುತ್ತೇನೆ. ಯಕ್ಷ-ರಾಕ್ಷಸ ಯೋನಿಗಳಲ್ಲಿ ಜನಿಸಿದಾಗಲೂ ನಾನು ಅವರಂತೆಯೇ ವರ್ತಿಸುತ್ತೇನೆ. ಈಗ ಮನುಷ್ಯ ಯೋನಿಯಲ್ಲಿ ಅವತರಿಸಿರುವ ನಾನು ಮನುಷ್ಯನಂತೆಯೇ ನಡೆದುಕೊಂಡು ದೀನನಾಗಿ ಪಾಂಡವರೊಡನೆ ಸಂಧಿಮಾಡಿಕೊಳ್ಳುವಂತೆ ಕೌರವರನ್ನು ಪ್ರಾರ್ಥಿಸಿದೆನು. ಆದರೆ ಮೋಹಗ್ರಸ್ತರಾಗಿದ್ದ ಅವರು ನನ್ನ ಹಿತವಚನಗಳನ್ನು ಸ್ವೀಕರಿಸಲಿಲ್ಲ. ಮಹಾಭಯವನ್ನುಂಟುಮಾಡಿಯೂ ನಾನು ಕುರುಗಳನ್ನು ಬೆದರಿಸಿದೆನು. ಕ್ರುದ್ಧನಾಗಿಯೂ ಕೂಡ ಪುನಃ ಅವರಿಗೆ ವಿಷಯವೇನೆಂದು ತಿಳಿಸಿದನು. ಆದರೆ ಅಧರ್ಮಸಂಯುಕ್ತರಾದ ಮತ್ತು ಕಾಲಧರ್ಮಕ್ಕೆ ಒಳಗಾದ ಅವರು ಧರ್ಮಯುದ್ಧದಲ್ಲಿ ಹತರಾಗಿ ಸ್ವರ್ಗವನ್ನು ಸೇರಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಪಾಂಡವರು ಲೋಕಗಳಲ್ಲಿ ಖ್ಯಾತಿಯನ್ನು ಹೊಂದಿದರು. ಇದೋ ನೀನು ಕೇಳಿರುವುದಕ್ಕೆ ಎಲ್ಲವನ್ನೂ ನಾನು ನಿನಗೆ ಹೇಳಿದ್ದೇನೆ.”
ಉತ್ತಂಕನು ಹೇಳಿದನು: “ಜನಾರ್ದನ! ನೀನೇ ಈ ಜಗತ್ತಿನ ಕರ್ತಾರನೆಂದು ತಿಳಿದುಕೊಂಡಿದ್ದೇನೆ. ಈ ಆಧ್ಯಾತ್ಮತತ್ತ್ವವು ನಿನ್ನ ಪ್ರಸಾದದಿಂದಲೇ ನನಗೆ ದೊರೆಯಿತು ಎನ್ನುವುದರಲ್ಲಿ ಸಂಶಯವಿಲ್ಲ. ಅಚ್ಯುತ! ನಿನ್ನಮೇಲಿನ ಭಕ್ತಿಯಿಂದ ನನ್ನ ಚಿತ್ತವು ಪ್ರಸನ್ನವಾಗಿದೆ. ನನ್ನ ಕೋಪವೂ ಹೊರಟುಹೋಯಿತೆಂದು ತಿಳಿ. ನಿನ್ನ ಅನುಗ್ರಹಕ್ಕೆ ನಾನು ಸ್ವಲ್ಪವಾದರೂ ಅರ್ಹನಾಗಿದ್ದರೆ ನಿನ್ನ ಈಶ್ವರೀ ರೂಪವನ್ನು ನೋಡಲು ಬಯಸುತ್ತೇನೆ. ಅದನ್ನು ತೋರಿಸು!””
ಆಗ ಧೀಮಾನ್ ಕೃಷ್ಣನು ಪ್ರೀತಾತ್ಮನಾಗಿ ಧನಂಜಯನಿಗೆ ತೋರಿಸಿದ್ದ ಶಾಶ್ವತ ವೈಷ್ಣವೀ ರೂಪವನ್ನು ಉತ್ತಂಕನಿಗೂ ತೋರಿಸಿದನು. ವಿಪ್ರನು ಆ ಮಹಾತ್ಮ ವಿಶ್ವರೂಪ ಮಹಾಭುಜನನ್ನು ನೋಡಿದನು. ಅವನ ಈಶ್ವರೀಯ ರೂಪವನ್ನು ನೋಡಿ ವಿಸ್ಮಿತನಾದನು. ಉತ್ತಂಕನು ಹೇಳಿದನು: “ವಿಶ್ವಕರ್ಮನ್! ಈ ರೂಪವಿರುವ ನಿನಗೆ ನಮಸ್ಕಾರಗಳು. ನಿನ್ನ ಪಾದಗಳು ಭೂಮಿಯನ್ನು ವ್ಯಾಪಿಸಿವೆ ಮತ್ತು ಶಿರಸ್ಸು ನಭವನ್ನು ಆವರಿಸಿದೆ! ಆಕಾಶ-ಪೃಥ್ವಿಗಳ ನಡುವಿನ ಭಾಗವು ನಿನ್ನ ಜಠರಿಂದಲೇ ವ್ಯಾಪ್ತವಾಗಿದೆ. ಅಚ್ಯುತ! ನಿನ್ನ ಎರಡು ಭುಜಗಳಿಂದ ದಿಕ್ಕುಗಳೆಲ್ಲವೂ ವ್ಯಾಪ್ತವಾಗಿವೆ. ಹೀಗೆ ಎಲ್ಲವನ್ನೂ ನೀನೇ ಆವರಿಸಿರುವೆ! ದೇವ! ನಿನ್ನ ಈ ಅಕ್ಷಯ ಅನುತ್ತಮ ರೂಪವನ್ನು ಪುನಃ ಹಿಂದೆ ತೆಗೆದುಕೋ! ಪುನಃ ನಿನ್ನ ಅದೇ ಶಾಶ್ವತ ರೂಪದಿಂದ ನೋಡಲು ಬಯಸುತ್ತೇನೆ.”
ಪ್ರಸನ್ನನಾದ ಗೋವಿಂದನು ಅವನಿಗೆ “ವರವನ್ನು ಕೇಳಿಕೋ!” ಎಂದು ಹೇಳಿದನು. ಆಗ ಉತ್ತಂಕನು ಹೇಳಿದನು: “ಮಹಾದ್ಯುತೇ! ಕೃಷ್ಣ! ನಿನ್ನ ಈ ವಿಶ್ವರೂಪವನ್ನೇನು ನಾನು ಕಾಣುತ್ತಿರುವೆನೋ ಅದೇ ಇಂದು ನೀನು ನನಗೆ ನೀಡಿರುವ ವರ!” ಕೃಷ್ಣನು ಪುನಃ ಅವನಿಗೆ “ನನ್ನ ಈ ವಿಶ್ವರೂಪ ದರ್ಶನವು ಅಮೋಘವಾದುದು. ಆದುದರಿಂದ ನೀನು ಅವಶ್ಯವಾಗಿ ವರವನ್ನು ಕೇಳಿಕೋ! ಅದರಲ್ಲಿ ವಿಚಾರಿಸಬೇಡ!” ಎಂದನು.
ಉತ್ತಂಕನು ಹೇಳಿದನು: “ವಿಭೋ! ನಾನು ಅವಶ್ಯವಾದುದನ್ನು ಮಾಡಲೇಬೇಕೆಂದು ನಿನ್ನ ಅಭಿಪ್ರಾಯವಾದರೆ ಇಷ್ಟವಾದಲ್ಲಿ ನೀರು ದೊರಕುವಂತೆ ಬಯಸುತ್ತೇನೆ. ಈ ಮರುಭೂಮಿಯಲ್ಲಿ ನೀರು ದುರ್ಲಭವಾಗಿದೆ.”
ಅನಂತರ ಈಶ್ವರ ಕೃಷ್ಣನು ತನ್ನ ತೇಜಸ್ಸನ್ನು ಹಿಂದೆತೆಗೆದುಕೊಂಡು “ನಿನಗೆ ನೀರು ಬೇಕಾದಾಗಲೆಲ್ಲಾ ನನ್ನನ್ನು ಸ್ಮರಿಸು!” ಎಂದು ಹೇಳಿ ದ್ವಾರಕೆಗೆ ತೆರಳಿದನು.
ವಸುದೇವನಿಗೆ ವಾಸುದೇವನಿಂದ ಯುದ್ಧಾಖ್ಯಾನ
ಉತ್ತಂಕನಿಗೆ ವರವನ್ನಿತ್ತು ಸಾತ್ಯಕಿಯೊಡನೆ ಮಹಾಹಯಗಳ ಶೀಘ್ರ ವೇಗದೊಂದಿಗೆ ಗೋವಿಂದನು ದ್ವಾರಕೆಗೆ ಹೋದನು. ವಿವಿಧ ಸರೋವರಗಳನ್ನೂ, ನದಿಗಳನ್ನೂ ಮತ್ತು ವನಗಳನ್ನೂ ದಾಟಿ ಅವನು ರಮ್ಯ ದ್ವಾರವತೀ ಪುರವನ್ನು ತಲುಪಿದನು. ರೈವತಕ ಗಿರಿಯಲ್ಲಿ ನಡೆಯುತ್ತಿದ್ದ ಮಹಾ ಉತ್ಸವಕ್ಕೆ ಪುಂಡರೀಕಾಕ್ಷನು ಯುಯುಧಾನ ಸಾತ್ಯಕಿಯೊಡನೆ ನೇರವಾಗಿ ಹೋದನು. ಆ ಗಿರಿಯಾದರೋ ನಾನಾ ರೂಪ-ಬಣ್ಣಗಳಿಂದ ಸುವರ್ಣದಿಂದ ಮಾಡಿದ್ದ ಡೇರೆಗಳಿಂದ ಎಲ್ಲೆಲ್ಲೂ ಅಲಂಕೃತವಾಗಿತ್ತು. ಶ್ರೇಷ್ಠವೂ ಸುಮನೋಹರವೂ ಆದ ಸುವರ್ಣ ಹಾರಗಳಿಂದಲೂ, ವಸ್ತ್ರಗಳಿಂದಲೂ ಆ ಮಹಾಶೈಲವು ಅಲಂಕೃತಗೊಂಡಿತ್ತು. ಸುತ್ತಲೂ ಕಲ್ಪವೃಕ್ಷಗಳಿದ್ದವು. ಸುವರ್ಣಮಯ ದೀಪವೃಕ್ಷಗಳಿಂದ ಆ ಪರ್ವತದ ಗುಹೆ-ಚಿಲುಮೆಗಳ ಪ್ರದೇಶಗಳಲ್ಲಿ ಸದಾ ಹಗಲಾಗಿರುವಂತೆಯೇ ಕಾಣುತ್ತಿತ್ತು. ಸುತ್ತಲೂ ಹಾರಾಡುತ್ತಿದ್ದ ಘಂಟೆಗಳಿಂದ ಕೂಡಿದ ಪತಾಕೆಗಳಿಂದಲೂ ಮತ್ತು ಸ್ತ್ರೀ-ಪುರುಷರ ಗುಂಪುಮಾತುಗಳಿಂದಲೂ ಸಂಗೀತಮಯವಾಗಿದ್ದ ಆ ಪರ್ವತವು ಮುನಿಗಣಗಳಿಂದ ಕಂಗೊಳಿಸುವ ಮೇರು ಪರ್ವತದಂತೆ ಪ್ರೇಕ್ಷಣೀಯವಾಗಿತ್ತು. ಆ ಪರ್ವತೇಂದ್ರನ ಮೇಲೆ ಸಂತಸದಿಂದ ಮತ್ತೇರಿದ ಸ್ತ್ರೀ-ಪುರುಷರ ಗಾಯನಗಳು ಆಕಾಶವನ್ನು ತಟ್ಟುತ್ತಿರುವವೋ ಎಂಬಂತೆ ಕೇಳಿಬರುತ್ತಿತ್ತು. ಪ್ರಮತ್ತ, ಮತ್ತ ಮತ್ತು ಸಮ್ಮತ್ತ ಗುಂಪುಗಳ ಕಿಲ-ಕಿಲ ಶಬ್ಧಗಳಿಂದ ಆ ಪರ್ವತವು ಸುಮನೋಹರವಾಗಿತ್ತು. ಅದು ಅಂಗಡಿ-ಮಾರುಕಟ್ಟೆಗಳಿಂದಲೂ, ರಮ್ಯವಾದ ಭಕ್ಷ-ಭೋಜ್ಯ ವಿಹಾರಗಳಿಂದಲೂ, ವಸ್ತ್ರ-ಮಾಲೆಗಳ ರಾಶಿಗಳಿಂದಲೂ, ವೇಣು-ಮೃದಂಗ ವಾದಿಗಳಿಂದಲೂ ತುಂಬಿಹೋಗಿತ್ತು. ಸುರಾ-ಮೈರೇಯ ಮಿಶ್ರಿತ ಭಕ್ಷ್ಯ-ಭೋಜ್ಯಗಳನ್ನು ದೀನ-ಅಂಧ-ಕೃಪಣರಿಗೆ ನಿರಂತರವಾಗಿ ನೀಡುತ್ತಿದ್ದ ಆ ಮಹಾಗಿರಿಯ ಮಹೋತ್ಸವು ಪರಮಕಲ್ಯಾಣಯುಕ್ತವಾಗಿತ್ತು. ಅಲ್ಲಿ ಪುಣ್ಯಕರ್ಮಿಗಳು ವಾಸಿಸಲು ಪುಣ್ಯ ಶಿಬಿರಗಳಿದ್ದವು. ಆ ರೈವತಕದ ಮಹೋತ್ಸವದಲ್ಲಿ ವೃಷ್ಣಿವೀರರ ವಿಹಾರಕ್ಕಾಗಿ ನಿರ್ಮಿಸಿದ್ದ ಆ ಭವನ-ಸಂಕೀರ್ಣಗಳಿಂದ ಅದು ದೇವಲೋಕದಂತೆಯೇ ಕಂಗೊಳಿಸುತ್ತಿತ್ತು. ಆಗ ಕೃಷ್ಣನ ಸಾನ್ನಿಧ್ಯವನ್ನು ಪಡೆದ ಆ ಶೈಲರಾಜನು ಇಂದ್ರನ ಅರಮನೆಯಂತೆಯೇ ಕಂಗೊಳಿಸಿದನು. ಆಗ ಪೂಜಿಸಲ್ಪಟ್ಟು ಗೋವಿಂದನು ಶುಭ ಭವನವನ್ನು ಪ್ರವೇಶಿಸಿದನು. ಸಾತ್ಯಕಿಯೂ ಕೂಡ ತನ್ನ ಭವನವನ್ನು ಪ್ರವೇಶಿಸಿದನು. ದಾನವರನ್ನು ಸಂಹರಿಸಿದ ಇಂದ್ರನಂತೆ ದುಷ್ಕರ ಕರ್ಮವನ್ನು ಮಾಡಿ ದೀರ್ಘ ಪ್ರವಾಸದ ನಂತರ ಹಿಂದಿರುಗಿದ ಕೃಷ್ಣನು ಹೃಷ್ಟಾತ್ಮನಾಗಿ ತನ್ನ ಭವನವನ್ನು ಪ್ರವೇಶಿಸಿದನು. ದೇವತೆಗಳು ಶತಕ್ರತು ಇಂದ್ರನನ್ನು ಹೇಗೋ ಹಾಗೆ ಭೋಜ-ವೃಷ್ಣಿ-ಅಂಧಕರು ಮುಂದೆಹೋಗಿ ಮಹಾತ್ಮ ವಾರ್ಷ್ಣೇಯನನ್ನು ಸ್ವಾಗತಿಸಿದರು. ಅವರನ್ನೂ ಗೌರವಿಸಿ, ಅವರ ಕುಶಲಗಳನ್ನು ಕೇಳಿ ಮೇಧಾವೀ ಕೃಷ್ಣನು ಪ್ರೀತನಾಗಿ ತನ್ನ ತಂದೆ-ತಾಯಂದಿರನ್ನು ಅಭಿವಾದಿಸಿದನು. ಅವರಿಬ್ಬರೂ ಅವನನ್ನು ತಬ್ಬಿಕೊಂಡು ಸಂತೈಸಿದರು. ಅವರೊಂದಿಗೆ ಕುಳಿತುಕೊಂಡ ಮಹಾಭುಜ ಕೃಷ್ಣನ ಸುತ್ತಲೂ ಸರ್ವ ವೃರ್ಷ್ಣಿಗಳೂ ಕುಳಿತುಕೊಂಡರು. ಕೈಕಾಲುಗಳನ್ನು ತೊಳೆದುಕೊಂಡು ವಿಶ್ರಾಂತಿಪಡೆದ ಕೃಷ್ಣನು ತಂದೆಯ ಪ್ರಶ್ನೆಗೆ ಮಹಾಯುದ್ಧದ ಕುರಿತು ಹೇಳತೊಡಗಿದನು.
ವಸುದೇವನು ಹೇಳಿದನು: “ವಾರ್ಷ್ಣೇಯ! ಪರಮ ಅದ್ಭುತವಾದ ಆ ಸಂಗ್ರಾಮದ ಕುರಿತು ಜನರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇನೆ. ಪುತ್ರ! ಅನುದಿನದ ಯುದ್ಧದ ಕುರಿತು ಹೇಳು! ನೀನಾದರೋ ಅದರ ಪ್ರತ್ಯಕ್ಷದರ್ಶಿಯೂ ಕಾರ್ಯಜ್ಞನೂ ಆಗಿರುವೆ. ಆದುದರಿಂದ ಆ ಸಂಗ್ರಾಮವು ಹೇಗೆ ನಡೆಯಿತೋ ಹಾಗೆ ಹೇಳು! ಮಹಾತ್ಮ ಪಾಂಡವರೊಡನೆ ನಡೆದ ಭೀಷ್ಮ-ಕರ್ಣ-ಕೃಪ-ದ್ರೋಣ-ಶಲ್ಯರೇ ಮೊದಲಾದವರ ಮತ್ತು ನಾನಾದೇಶ ನಿವಾಸಿಗಳ, ನಾನಾವೇಷ-ಆಕೃತಿ-ಬುದ್ಧಿಗಳಿದ್ದ ಅನೇಕ ಅಸ್ತ್ರಕೋವಿದ ಅನ್ಯ ಕ್ಷತ್ರಿಯರ ಆ ಯುದ್ಧವು ಹೇಗೆ ನಡೆಯಿತು?”
ಹೀಗೆ ಕೇಳಲು ಬಳಿಯಲ್ಲಿದ್ದ ತಂದೆ-ತಾಯಿಯರಿಗೆ ಪುಂಡರೀಕಾಕ್ಷನು ಕುರುವೀರರ ಸಂಗ್ರಾಮ-ನಿಧನಗಳ ಕುರಿತು ವರ್ಣಿಸಿದನು. ವಾಸುದೇವನು ಹೇಳಿದನು: “ಮಹಾತ್ಮ ಕ್ಷತ್ರಿಯರ ಅತಿ ಅದ್ಭುತ ಕರ್ಮಗಳು ಬಹಳವಾಗಿದ್ದವು. ಅವುಗಳನ್ನು ವರ್ಣಿಸಲು ನೂರು ವರ್ಷಗಳೂ ಸಾಕಾಗುವುದಿಲ್ಲ. ಪೃಥ್ವೀಶರ ಕರ್ಮಗಳಲ್ಲಿ ಪ್ರಧಾನವಾದವುಗಳನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ. ಕೇಳು. ದೇವತೆಗಳಿಗೆ ವಾಸವ ಇಂದ್ರನು ಹೇಗೋ ಹಾಗೆ ಕೌರವರ ಹನ್ನೊಂದು ಅಕ್ಷೋಹಿಣೀ ಸೇನೆಗಳಿಗೆ ಕೌರವ್ಯ ಭೀಷ್ಮನು ಸೇನಾಪತಿಯಾಗಿದ್ದನು. ಪಾಂಡುಪುತ್ರರ ಏಳು ಅಕ್ಷೋಹಿಣಿಗೆ ಧೀಮಾನ್ ಶಿಖಂಡಿಯು, ಧೀಮತ ಸವ್ಯಸಾಚಿಯಿಂದ ರಕ್ಷಣೆಯಡಿಯಲ್ಲಿ, ನೇತಾರನಾಗಿದ್ದನು[1]. ಮಹಾತ್ಮ ಕುರು-ಪಾಂಡವರ ನಡುವೆ ಹತ್ತು ದಿನಗಳು ರೋಮಾಂಚಕಾರೀ ಮಹಾ ಯುದ್ಧವು ನಡೆಯಿತು. ಅನಂತರ ಮಹಾರಣದಲ್ಲಿ ಯುದ್ಧಮಾಡುತ್ತಿದ್ದ ಗಾಂಗೇಯನನ್ನು ಗಾಂಡೀವಧನ್ವಿಯೊಡನೆ ಶಿಖಂಡಿಯು ಅನೇಕ ಬಾಣಗಳಿಂದ ಹೊಡೆದನು. ಆಗ ಶರತಲ್ಪಗತನಾದ ಆ ಮುನಿಯು ದಕ್ಷಿಣಾಯನವನ್ನು ಕಳೆದು ಉತ್ತರಾಯಣವು ಬಂದಾಗ ಕಾಲನ ವಶನಾದನು. ಅನಂತರ ದೈತ್ಯರಿಗೆ ಕಾವ್ಯನು ಹೇಗೋ ಹಾಗೆ ಕೌರವೇಂದ್ರನಿಗೆ ಅಸ್ತ್ರವಿದುಷರಲ್ಲಿ ಶ್ರೇಷ್ಠ ಪ್ರವೀರ ದ್ರೋಣನು ಸೇನಾಪತಿಯಾದನು. ದ್ವಿಜಸತ್ತಮ ಸಮರಶ್ಲಾಘೀ ದ್ರೋಣನು ಕೃಪ-ಕರ್ಣಾದಿಗಳಿಂದ ರಕ್ಷಿತಗೊಂಡಿದ್ದ ಕೌರವರ ಅಳಿದುಳಿದ ಒಂಭತ್ತು ಅಕ್ಷೋಹಿಣೀ ಸೇನೆಯ ನೇತಾರನಾಗಿದ್ದನು. ಮಿತ್ರನಿಂದ ವರುಣನು ಹೇಗೋ ಹಾಗೆ ತೇಜಸ್ವೀ ಭೀಮನಿಂದ ರಕ್ಷಿಸಲ್ಪಟ್ಟ ಮಹಾಸ್ತ್ರವಿದು ಧೃಷ್ಟದ್ಯುಮ್ನನು ಪಾಂಡವರ ನೇತಾರನಾದನು. ಐದು ಅಕ್ಷೋಹಿಣೀ ಸೇನೆಗಳಿಂದ ಪರಿವೃತನಾದ ಆ ಮಹಾಮನಸ್ವೀ ಧೃಷ್ಟದ್ಯುಮ್ನನು ದ್ರೋಣನಿಂದ ತನ್ನ ತಂದೆಗಾದ ಅಪಮಾನವನ್ನು ಸ್ಮರಿಸಿಕೊಳ್ಳುತ್ತಾ ರಣದಲ್ಲಿ ಮಹಾಕರ್ಮಗಳನ್ನೆಸಗಿದನು. ದ್ರೋಣ-ಪಾರ್ಷತರ ಆ ಸಂಗ್ರಾಮದಲ್ಲಿ ನಾನಾ ದಿಕ್ಕುಗಳಿಂದ ಆಗಮಿಸಿದ್ದ ಪ್ರಾಯಶಃ ಎಲ್ಲ ವೀರ ಪೃಥ್ವೀಪಾಲರ ನಿಧನವಾಯಿತು. ಆ ಪರಮದಾರುಣ ಯುದ್ಧವು ಐದು ದಿನಗಳು ನಡೆಯಿತು. ನಂತರ ಪರಿಶ್ರಾಂತನಾದ ದ್ರೋಣನು ಧೃಷ್ಟದ್ಯುಮ್ನನ ವಶನಾದನು. ಅನಂತರ ದುರ್ಯೋಧನನ ಸೇನೆಯಲ್ಲಿ ಯುದ್ಧದಲ್ಲಿ ಅಳಿದುಳಿದಿದ್ದ ಐದು ಅಕ್ಷೋಹಿಣೀ ಸೇನೆಗೆ ಕರ್ಣನು ಸೇನಾಪತಿಯಾದನು. ಆಗ ಪಾಂಡುಪುತ್ರರ ಮೂರು ಅಕ್ಷೋಹಿಣೀ ಸೇನೆಯನ್ನು ಬೀಭತ್ಸುವು ರಕ್ಷಿಸುತ್ತಿದ್ದನು. ಬಹಳಷ್ಟು ಪ್ರವೀರರು ಹತರಾಗಿದ್ದರೂ ಅದು ಯುದ್ಧಸನ್ನದ್ಧವಾಗಿತ್ತು. ಅನಂತರ ಎರಡನೆಯ ದಿನದ ದಾರುಣ ಯುದ್ಧದಲ್ಲಿ ಪತಂಗವು ಪಾವಕದ ಕಡೆ ಹಾರಿ ಹೋಗುವಂತೆ ಪಾರ್ಥನನ್ನು ಎದುರಿಸಿ ಸೌತಿಯು ಪಂಚತ್ವವನ್ನು ಹೊಂದಿದನು. ಕರ್ಣನು ಹತನಾಗಲು ನಿರುತ್ಸಾಹಗೊಂಡ ಹತೌಜಸ ಕೌರವ್ಯರ ಮೂರು ಅಕ್ಷೋಹಿಣೀ ಸೇನೆಗೆ ಮದ್ರೇಶನು ನಾಯಕನಾದನು. ಅನೇಕ ವಾಹನಗಳನ್ನು ಕಳೆದುಕೊಂಡು ನಿರುತ್ಸಾಹಗೊಂಡಿದ್ದ ಅಳಿದುಳಿದ ಪಾಂಡವರ ಒಂದು ಅಕ್ಷೋಹಿಣೀ ಸೇನೆಗೆ ಯುಧಿಷ್ಠಿರನು ನಾಯಕನಾದನು. ಅಂದಿನ ಅರ್ಧ ದಿನದಲ್ಲಿಯೇ ಮದ್ರರಾಜನನ್ನು ಸಂಹರಿಸಿ ಕುರುರಾಜ ಯುಧಿಷ್ಠಿರನು ದುಷ್ಕರ ಕರ್ಮವನ್ನೆಸಗಿದನು. ಶಲ್ಯನು ಹತನಾಗಲು ಮಹಾಮನಸ್ವಿ ಅಮಿತವಿಕ್ರಮಿ ಸಹದೇವನು ಆ ಕಲಹಕ್ಕೆ ಮೂಲಕಾರಣನಾಗಿದ್ದ ಶಕುನಿಯನ್ನು ಸಂಹರಿಸಿದನು. ಶಕುನಿಯು ಹತನಾದ ನಂತರ ಧಾರ್ತರಾಷ್ಟ್ರ ದುರ್ಮನಸ್ವಿ ರಾಜ ದುರ್ಯೋಧನನು ಗದಾಪಾಣಿಯಾಗಿ ಹತರಾಗದೇ ಉಳಿದಿದ್ದ ಸೈನಿಕರನ್ನು ಬಿಟ್ಟು ಹೊರಟುಹೋದನು. ಸಂಕ್ರುದ್ಧನಾದ ಪ್ರತಾಪವಾನ್ ಭೀಮಸೇನನು ಅವನನ್ನೇ ಹಿಂಬಾಲಿಸಿ ಹೋಗಿ ದ್ವೈಪಾಯನ ಸರೋವರದಲ್ಲಿ ನೀರಿನೊಳಗೆ ಕುಳಿತಿದ್ದ ಅವನನ್ನು ನೋಡಿದನು. ಆಗ ಪಂಚ ಪಾಂಡವರು ಹೃಷ್ಟರಾಗಿ ಉಳಿದ ಸೇನೆಗಳಿಂದ ಸರೋವರದಲ್ಲಿದ್ದ ಅವನನ್ನು ಸುತ್ತುವರೆದು ನಿಂತರು. ನೀರಿನೊಳಗಿದ್ದ ದುರ್ಯೋಧನನು ಪಾಂಡವರ ವಾಗ್ಬಾಣಗಳಿಂದ ಅತ್ಯಂತ ಗಾಸಿಯಾಗಿ ಯುದ್ಧಮಾಡಲು ಗದಾಪಾಣಿಯಾಗಿ ನೀರಿನಿಂದ ಮೇಲೆದ್ದನು. ಆಗ ಪೃಥ್ವೀಪಾಲರು ನೋಡುತ್ತಿದ್ದಂತೆಯೇ ನಡೆದ ಮಹಾ ಯುದ್ಧದಲ್ಲಿ ರಾಜಾ ಧಾರ್ತರಾಷ್ಟ್ರನು ಭೀಮಸೇನನ ವಿಕ್ರಮದಿಂದ ಹತನಾದನು. ಅನಂತರ ಪಿತುರ್ವಧೆಯನ್ನು ಸಹಿಸಿಕೊಳ್ಳಲಾರದ ದ್ರೋಣಪುತ್ರನು ರಾತ್ರಿ ಶಿಬಿರದಲ್ಲಿ ಮಲಗಿದ್ದ ಪಾಂಡವ ಸೇನೆಯನ್ನು ಸಂಹರಿಸಿದನು. ನಾನು, ಎರಡನೆಯವನಾಗಿ ಯುಯುಧಾನ ಸಾತ್ಯಕಿ ಮತ್ತು ಐವರು ಪಾಂಡವರು ಇವರನ್ನು ಬಿಟ್ಟು ಸೇನೆಗಳೆಲ್ಲವೂ ನಾಶವಾದವು, ಪುತ್ರರು ಹತರಾದರು ಮತ್ತು ಮಿತ್ರರೂ ಹತರಾದರು. ಅವರ ಕಡೆಯಲ್ಲಿ ಕೃಪ-ಭೋಜ ಕೃತವರ್ಮರೊಂದಿಗೆ ದ್ರೌಣಿಯು ಯುದ್ಧದಿಂದ ಮುಕ್ತರಾಗಿ ಬದುಕುಳಿದರು. ಕೌರವ್ಯ ಯುಯುತ್ಸುವೂ ಕೂಡ ಪಾಂಡವರ ಆಶ್ರಯವನ್ನು ಪಡೆದುದರಿಂದ ಉಳಿದುಕೊಂಡನು. ಅನುಯಾಯಿಗಳೊಂದಿಗೆ ಕೌರವೇಂದ್ರ ಸುಯೋಧನನು ಹತನಾಗಲು ವಿದುರ-ಸಂಜಯರು ಧರ್ಮರಾಜನನ್ನೇ ಆಶ್ರಯಿಸಿದರು. ಹದಿನೆಂಟು ಅಕ್ಷೋಹಿಣೀ ಸೇನೆಗಳು ಮತ್ತು ಪೃಥ್ವೀಪಾಲರು ಹತರಾಗಿ ಸ್ವರ್ಗವನ್ನು ಸೇರಿದ ಆ ಮಹಾಯುದ್ಧವು ಈ ರೀತಿ ನಡೆಯಿತು.” ಆ ರೋಮಹರ್ಷಣ ಕಥೆಯನ್ನು ಕೇಳಿದ ವೃಷ್ಣಿಗಳು ದುಃಖ-ಹರ್ಷಗಳಿಂದ ಪೀಡಿತರಾದರು.
ತಂದೆಗೆ ಮಹಾಭಾರತಯುದ್ಧದ ಕಥೆಯನ್ನು ಹೇಳುತ್ತಿರುವಾಗ ಪ್ರತಾಪವಾನ್ ವಾಸುದೇವ ಕೃಷ್ಣನು ವೀರ ಅಭಿಮನ್ಯುವಿನ ವಧೆಯನ್ನು ಬಿಟ್ಟು ಹೇಳಿದ್ದನು. ಅಪ್ರಿಯವಾದುದನ್ನು ವಸುದೇವನಿಗೆ ಹೇಳಬಾರದು ಮತ್ತು ಮೊಮ್ಮಗನ ವಧೆಯ ಕುರಿತು ಕೇಳಿ ವಸುದೇವನು ಮಹಾ ದುಃಖ-ಶೋಕಗಳಿಂದ ಸಂತಪ್ತನಾಗುತ್ತಾನೆಂದು ಆ ಮಹಾಮನಸ್ವಿ ಮಹಾಮತಿಯು ಹೀಗೆ ಮಾಡಿದ್ದನು. ರಣದಲ್ಲಿ ತನ್ನ ಮಗನ ವಧೆಯಾದುದನ್ನು ಕೃಷ್ಣನು ಬಿಟ್ಟಿರುವುದನ್ನು ನೋಡಿದ ಸುಭದ್ರೆಯು “ಕೃಷ್ಣ! ಸೌಭದ್ರನ ವಧೆಯಕುರಿತು ಹೇಳು!” ಎಂದು ಹೇಳುತ್ತಿದ್ದಂತೆಯೇ ಮೂರ್ಛಿತಳಾಗಿ ನೆಲದ ಮೇಲೆ ಬಿದ್ದಳು. ಅವಳು ಭೂಮಿಯ ಮೇಲೆ ಬಿದ್ದುದನ್ನು ನೋಡಿದ ವಸುದೇವನೂ ಕೂಡ ದುಃಖದಿಂದ ಮೂರ್ಛಿತನಾಗಿ ಭೂಮಿಯ ಮೇಲೆ ಬಿದ್ದನು.
ಆಗ ಮೊಮ್ಮಗನ ವಧೆಯ ಕುರಿತು ಕೇಳಿ ದುಃಖಶೋಕಸಮನ್ವಿತನಾದ ವಸುದೇವನು ಕೃಷ್ಣನಿಗೆ ಇಂತೆಂದನು: “ಪುಂಡರೀಕಾಕ್ಷ! ನೀನು ಸತ್ಯವಾದಿಯೆಂದು ಭುವಿಯಲ್ಲಿ ವಿಶ್ರುತನಾಗಿರುವೆ ತಾನೇ? ಆದರೂ ಇಂದು ನೀನು ಮೊಮ್ಮಗನ ವಧೆಯಕುರಿತು ನನಗೆ ಹೇಳಲಿಲ್ಲವಲ್ಲ? ನಿನ್ನ ಸೋದರಳಿಯನ ಮರಣದ ಕುರಿತು ನಡೆದಂತೆ ನನಗೆ ಹೇಳು. ನಿನ್ನಂಥಹುದೇ ಕಣ್ಣುಗಳಿದ್ದ ಅವನನ್ನು ಶತ್ರುಗಳು ಹೇಗೆ ರಣದಲ್ಲಿ ಸಂಹರಿಸಿದರು? ಕಾಲಪ್ರಾಪ್ತವಾಗದೇ ಮರಣಹೊಂದುವುದು ನರರಿಗೆ ಬಹಳ ಕಷ್ಟವಾದುದು. ದುಃಖದಿಂದ ನನ್ನ ಹೃದಯವು ನೂರು ಚೂರುಗಳಾಗಿ ಒಡೆಯುತ್ತಿಲ್ಲವಲ್ಲ! ನನಗೆ ಪ್ರಿಯನಾಗಿದ್ದ ಆ ಚಪಲಾಕ್ಷನು ಸಂಗ್ರಾಮದಲ್ಲಿ ನಿನಗೆ ಏನು ಹೇಳಿದನು? ತಾಯಿ ಸುಭದ್ರೆ ಮತ್ತು ನನ್ನ ಕುರಿತು ಏನಾದರೂ ಹೇಳಿದನೇ? ಯುದ್ಧಕ್ಕೆ ಬೆನ್ನುಹಾಕಿ ಹೋಗುತ್ತಿರುವಾಗ ಶತ್ರುಗಳು ಅವನನ್ನು ಸಂಹರಿಸಲಿಲ್ಲ ತಾನೇ? ಆಗ ಅವನ ಮುಖವು ಭಯದಿಂದ ವಿಕಾರಗೊಳ್ಳಲಿಲ್ಲ ತಾನೇ? ಆ ಮಹಾತೇಜಸ್ವೀ ಪ್ರಭುವು ಹುಡುಗತನದಿಂದ ನನ್ನ ಎದಿರು ತನ್ನ ವಿಜಯಗಳನ್ನು ತಾನೇ ಹೊಗಳಿಕೊಳ್ಳುತ್ತಿದ್ದನು. ಆ ಬಾಲಕನು ದ್ರೋಣ-ಕರ್ಣ-ಕೃಪಾದಿಗಳ ವಂಚನೆಯಿಂದ ಹತನಾಗಿ ಧರಣಿಯ ಮೇಲೆ ಮಲಗಲಿಲ್ಲ ತಾನೇ? ಅದರ ಕುರಿತು ನನಗೆ ಹೇಳು! ನನ್ನ ಆ ಮೊಮ್ಮಗನು ನಿತ್ಯವೂ ರಣದಲ್ಲಿ ದ್ರೋಣ, ಭೀಷ್ಮ, ರಥಿಗಳಲ್ಲಿ ಶ್ರೇಷ್ಠ ಕರ್ಣ ಇವರೊಡನೆ ಸ್ಪರ್ಧಿಸುತ್ತಲೇ ಇದ್ದನು.”
ಹೀಗೆ ಅತ್ಯಂತ ದುಃಖಿತನಾಗಿ ವಿಲಪಿಸುತ್ತಿದ್ದ ತಂದೆಗೆ ಇನ್ನೂ ಹೆಚ್ಚು ದುಃಖದಲ್ಲಿದ್ದ ಗೋವಿಂದನು ಈ ಮಾತುಗಳನ್ನಾಡಿದನು: “ಸಂಗ್ರಾಮದ ಎದಿರು ಯುದ್ಧಮಾಡುತ್ತಿದ್ದ ಅಭಿಮನ್ಯುವು ಯಾವಾಗಲೂ ತನ್ನ ಮುಖವನ್ನು ಭಯದಿಂದ ವಿಕಾರಗೊಳಿಸಲಿಲ್ಲ. ದುಸ್ತರ ಸಂಗ್ರಾಮದಿಂದ ಅವನು ಎಂದೂ ಬೆನ್ನುಹಾಕಲಿಲ್ಲ. ಅವನು ಲಕ್ಷಗಟ್ಟಲೆ ಪೃಥ್ವೀಪಾಲರನ್ನು ಸಂಹರಿಸಿ, ದ್ರೋಣ-ಕರ್ಣರಿಂದ ದುಃಖಿತನಾಗಿ ಅಂತ್ಯದಲ್ಲಿ ದುಃಶಾಸನನ ಮಗನಿಂದ ಹತನಾದನು. ಒಬ್ಬನು ಓರ್ವ ಇನ್ನೊಬ್ಬನೊಡನೆಯೇ ಯುದ್ಧಮಾಡುತ್ತಿದ್ದರೆ ಸಂಗ್ರಾಮದಲ್ಲಿ ಅವನನ್ನು ವಜ್ರಿ ಇಂದ್ರನಿಗೂ ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ. ಸಂಶಪ್ತಕರು ಪಾರ್ಥನನ್ನು ಸಂಗ್ರಾಮಕ್ಕೆ ಆಹ್ವಾನಿಸಿದ್ದಾಗ ಸಂಕ್ರುದ್ಧ ದ್ರೋಣಾದಿಗಳು ಯುದ್ಧದಲ್ಲಿ ಅಭಿಮನ್ಯುವನ್ನು ಸುತ್ತುವರೆದಿದ್ದರು. ಆಗ ರಣದಲ್ಲಿ ಮಹಾಶತ್ರುಕ್ಷಯವನ್ನುಂಟುಮಾಡಿ ನಿನ್ನ ಮಗಳ ಮಗ ವಾರ್ಷ್ಣೇಯನು ದುಃಶಾಸನನ ಮಗನಿಂದ ಹತನಾದನು. ಅವನು ನಿಶ್ಚಯವಾಗಿಯೂ ಸ್ವರ್ಗಕ್ಕೇ ಹೋಗಿರಬೇಕು. ಶೋಕವನ್ನು ತೊರೆ! ಉತ್ತಮ ಪುರುಷರು ಎಂದೂ ವ್ಯಸನ ಹೊಂದಿ ಕುಸಿಯುವುದಿಲ್ಲ! ರಣದಲ್ಲಿ ಮಹೇಂದ್ರನಂತಿದ್ದ ದ್ರೋಣ-ಕರ್ಣಾದಿಗಳು ಯಾರನ್ನು ಎದುರಿಸಿ ಯುದ್ಧಮಾಡಿದರೋ ಅವನು ಹೇಗೆ ತಾನೇ ಸ್ವರ್ಗವನ್ನು ಪಡೆದಿರಲಿಕ್ಕಿಲ್ಲ? ಶೋಕವನ್ನು ಬಿಡು! ಕೋಪಕ್ಕೆ ವಶನಾಗಬೇಡ! ಆ ಪರಪುರಂಜಯ ಅಭಿಮನ್ಯುವು ಶಸ್ತ್ರಗಳಿಂದ ಪವಿತ್ರರಾದವರು ಹೋಗುವ ಮಾರ್ಗದಲ್ಲಿಯೇ ಹೋಗಿದ್ದಾನೆ. ಆ ವೀರ ಸುಭದ್ರೇಯನು ಹತನಾಗಲು ದುಃಖಾರ್ತಳಾದ ನನ್ನ ತಂಗಿ ಸುಭದ್ರೆಯು ಪೃಥಾ ಕುಂತಿಯ ಬಳಿಸಾರಿ ಕುರರಿಯಂತೆ ರೋದಿಸಿದ್ದಳು. ದ್ರೌಪದಿಯನ್ನೂ ಸಂಧಿಸಿ ದುಃಖಿತಳಾದ ಅವಳು “ಆರ್ಯೇ! ಎಲ್ಲ ಮಕ್ಕಳೂ ಎಲ್ಲಿದ್ದಾರೆ? ಅವರನ್ನು ನೋಡ ಬಯಸುತ್ತೇನೆ!” ಎಂದು ಕೇಳಿದ್ದಳು. ಅವಳ ಮಾತನ್ನು ಕೇಳಿ ಆ ಎಲ್ಲ ಕುರುಸ್ತ್ರೀಯರೂ ಅವಳ ಭುಜಗಳನ್ನು ಹಿಡಿದು ಪರಮ ಆರ್ತರಾಗಿ ಅಳುತ್ತಿದ್ದರು. ಸುಭದ್ರೆಯು ಉತ್ತರೆಯನ್ನು ಕುರಿತು ಹೀಗೆ ಹೇಳಿದ್ದಳು: “ಭದ್ರೇ! ನಿನ್ನ ಪತಿಯು ಎಲ್ಲಿಗೆ ಹೋಗಿರುವನು? ಅವನ ಆಗಮನವನ್ನು ಬೇಗನೇ ನನಗೆ ಬಂದು ಹೇಳಬೇಕು! ವೈರಾಟೀ! ಹಿಂದೆ ನನ್ನ ಧ್ವನಿಯನು ಕೇಳುತ್ತಲೇ ತನ್ನ ಭವನದಿಂದ ಹೊರಬರುತ್ತಿದ್ದ ನಿನ್ನ ಪತಿಯು ಇಂದೇಕೆ ಹೊರಬರುತ್ತಿಲ್ಲ? ಅಭಿಮನ್ಯೋ! ಮಹಾರಥರಾದ ನಿನ್ನ ಸೋದರ ಮಾವಂದಿರು ಕುಶಲರಾಗಿದ್ದಾರೆ. ಅವರು ಯುದ್ಧಕ್ಕೆಂದು ಆಗಮಿಸಿರುವ ನಿನ್ನ ಕುಶಲವನ್ನು ಕೇಳುತ್ತಿದ್ದಾರೆ. ಅರಿಂದಮ! ಹಿಂದಿನಂತೆ ಇಂದೂ ಕೂಡ ಸಂಗ್ರಾಮದ ಕುರಿತು ವರದಿಮಾಡು. ವಿಲಪಿಸುತ್ತಿರುವ ನನಗೇಕೆ ಇಂದು ನೀನು ಉತ್ತರಿಸುತ್ತಿಲ್ಲ?” ಇದೇ ಮುಂತಾಗಿ ವಿಲಪಿಸುತ್ತಿದ್ದ ವಾರ್ಷ್ಣೇಯಿಯನ್ನು ಕೇಳಿ ದುಃಖಾರ್ತಳಾಗಿದ್ದ ಪೃಥೆಯು ಅವಳಿಗೆ ಮೆಲ್ಲನೇ ಈ ಮಾತುಗಳನ್ನಾಡಿದ್ದಳು: “ಸುಭದ್ರೇ! ರಣದಲ್ಲಿ ವಾಸುದೇವ, ಸಾತ್ಯಕಿ ಮತ್ತು ತಂದೆ ಅರ್ಜುನರಿಂದ ಪಾಲಿತನಾಗಿದ್ದ ಈ ಬಾಲಕನು ಕಾಲಧರ್ಮಾನುಸಾರವಾಗಿ ಹತನಾಗಿದ್ದಾನೆ. ಯದುನಂದಿನಿ! ಮನುಷ್ಯಧರ್ಮವೇ ಈ ರೀತಿಯಿರುವಾಗ ಅದಕ್ಕೆ ನೀನು ಶೋಕಿಸಬೇಡ! ದುರ್ಧರ್ಷನಾಗಿದ್ದ ನಿನ್ನ ಪುತ್ರನು ಪರಮ ಗತಿಯನ್ನೇ ಪಡೆದಿದ್ದಾನೆ. ಮಹಾತ್ಮ ಕ್ಷತ್ರಿಯರ ಮಹಾಕುಲದಲ್ಲಿ ಜನಿಸಿರುವೆ. ಕಮಲದ ದಳದಂಥಹ ಕಣ್ಣುಗಳುಳ್ಳ ನೀನು ಆ ಚಪಲಾಕ್ಷನ ಕುರಿತು ಶೋಕಿಸಬೇಡ! ಶುಭೇ! ಗರ್ಭಿಣಿಯಾಗಿರುವ ಉತ್ತರೆಯನ್ನಾದರೂ ನೋಡಿ ಶೋಕಿಸುವುದನ್ನು ನಿಲ್ಲಿಸು! ಭಾಮಿನೀ! ಅವನ ಮಗನಿಗೇ ಇವಳು ಜನ್ಮನೀಡುವವಳಿದ್ದಾಳೆ!” ಯದುಕುಲೋದ್ವಹ! ಕುಂತಿಯು ಹೀಗೆ ಸುಭದ್ರೆಯನ್ನು ಸಂತೈಸಿ ಸಹಿಸಲಸಾಧ್ಯ ಶೋಕವನ್ನು ತೊರೆದು ಅವನ ಶ್ರಾದ್ಧಕ್ಕೆ ಸಿದ್ಧತೆಗಳನ್ನು ಮಾಡಿದ್ದಳು. ಅವಳು ಧರ್ಮಜ್ಞ ರಾಜ, ಭೀಮಸೇನ ಮತ್ತು ಯಮೋಪಮರಾದ ಯಮಳರ ಒಪ್ಪಿಗೆಯಂತೆ ಅನೇಕ ದಾನಗಳನ್ನು ನೀಡಿದಳು. ಯದೂದ್ವಹ! ಬ್ರಾಹ್ಮಣರಿಗೆ ಅನೇಕ ಗೋವುಗಳನ್ನು ದಾನವಾಗಿತ್ತು ಸಮಾಧಾನಮಾಡಿಕೊಂಡ ವಾರ್ಷ್ಣೇಯಿ ಕುಂತಿಯು ವೈರಾಟೀ ಉತ್ತರೆಗೆ ಹೇಳಿದಳು: “ವೈರಾಟೀ! ಪತಿಯ ಕುರಿತು ಸಂತಾಪಪಡುವ ಕಾರ್ಯ ನಿನ್ನದಲ್ಲ! ನೀನು ಗರ್ಭದಲ್ಲಿರುವ ಶಿಶುವನ್ನು ರಕ್ಷಿಸಿಕೊಳ್ಳಬೇಕು!” ಹೀಗೆ ಹೇಳಿ ಕುಂತಿಯು ಸುಮ್ಮನಾದಳು. ಆಗ ನಾನು ಅವಳ ಅನುಮತಿಯನ್ನು ಪಡೆದು ಸುಭದ್ರೆಯನ್ನು ಇಲ್ಲಿಗೆ ಕರೆದುಕೊಂಡು ಬಂದೆನು. ಹೀಗೆ ನಿನ್ನ ಮಗಳ ಮಗನು ನಿಧನಹೊಂದಿದನು. ಸಂತಾಪವನ್ನು ತೊರೆ ಮತ್ತು ನಿನ್ನ ಮನಸ್ಸನ್ನು ಶೋಕಕ್ಕೊಳಗಾಗಿಸಬೇಡ!”
ಧರ್ಮಾತ್ಮ ಶೂರಾತ್ಮಜ ವಸುದೇವನು ಮಗ ಕೃಷ್ಣನ ಈ ಮಾತನ್ನು ಕೇಳಿ ಶೋಕವನ್ನು ತೊರೆದು ಅಭಿಮನ್ಯುವಿಗೆ ಅನುತ್ತಮ ಶ್ರಾದ್ಧವನ್ನಿತ್ತನು. ಹಾಗೆಯೇ ವಾಸುದೇವ ಕೃಷ್ಣನೂ ಕೂಡ ತಂಗಿಯ ಮಗನಾದ ಮತ್ತು ಅವನ ತಂದೆಗೆ ಪ್ರಿಯನಾಗಿದ್ದ ಮಹಾತ್ಮ ಅಭಿಮನ್ಯುವಿನ ಔರ್ಧ್ವದೈಹಿಕ ಕ್ರಿಯೆಗಳನ್ನು ಮಾಡಿದನು. ಆ ಮಹಾಭುಜನು ಅರವತ್ತು ಲಕ್ಷ ಬ್ರಾಹ್ಮಣರಿಗೆ ಸರ್ವಗುಣಾನ್ವಿತ ಭೋಜನವನ್ನು ವಿಧಿವತ್ತಾಗಿ ಭೋಜನಮಾಡಿಸಿದನು. ಆ ಮಹಾಬಾಹುವು ಬ್ರಾಹ್ಮಣರಿಗೆ ವಸ್ತ್ರಗಳನ್ನು ಹೊದ್ದಿಸಿ ಮುಂದೆ ಎಂದೂ ಅವರಿಗೆ ಧನದ ಬಯಕೆಯೇ ಉಂಟಾಗದಂತೆ ಮಾಡಿದನು. ಕೃಷ್ಣನ ಆ ಕಾರ್ಯವು ರೋಮಾಂಚನಕಾರಿಯಾಗಿತ್ತು. ಸುವರ್ಣ, ಗೋವುಗಳು, ಶಯನ-ವಸ್ತ್ರಗಳನ್ನು ನೀಡುತ್ತಿದ್ದಾಗ ವಿಪ್ರರು “ಹೆಚ್ಚಾಗಲಿ!” ಎಂದು ಆಶೀರ್ವದಿಸುತ್ತಿದ್ದರು. ಅನಂತರ ದಾಶಾರ್ಹ ವಾಸುದೇವ, ಬಲದೇವ, ಸಾತ್ಯಕಿ ಮತ್ತು ಸತ್ಯಕರೂ ಕೂಡ ಅಭಿಮನ್ಯುವಿನ ಶ್ರಾದ್ಧವನ್ನು ನೆರವೇರಿಸಿದರು. ಅತೀವ ದುಃಖಸಂತಪ್ತರಾದ ಅವರಿಗೆ ಶಾಂತಿಯೇ ಇಲ್ಲದಾಗಿತ್ತು.
[1] ಸಂಜಯನು ಧೃತರಾಷ್ಟ್ರನಿಗೆ ನೀಡಿದ ಯುದ್ಧವಿವರಣೆಯ ಪ್ರಕಾರ ಮಹಾಭಾರತ ಯುದ್ಧದ ಮೊದಲಿನಿಂದ ಕಡೆಯವರೆಗೂ ಧೃಷ್ಟದ್ಯುಮ್ನನೇ ಪಾಂಡವರ ಸೇನಾನಾಯಕನಾಗಿದ್ದನು. ಆದರೆ ಭೀಷ್ಮನನ್ನು ಸಂಹರಿಸಲು ಶಿಖಂಡಿಯನ್ನು ಅವನ ಎದಿರು ನಿಲ್ಲಿಸಲು ಪಾಂಡವರು ಪ್ರಯತ್ನಪಟ್ಟಿದ್ದುದರಿಂದ ಕೃಷ್ಣನು ಭೀಷ್ಮನ ವಧೆಯ ಪ್ರಸಂಗದಲ್ಲಿ ಶಿಖಂಡಿಯೇ ಪಾಂಡವರ ನಾಯಕನಾಗಿದ್ದನೆಂದು ಹೇಳುತ್ತಾನೆ.