ಸೌಭವಧೋಽಪಾಖ್ಯಾನ

ಸೌಭವಧೆಯ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಕೈರಾತ ಪರ್ವ (ಅಧ್ಯಾಯ ೧೫-೨೩) ದಲ್ಲಿ ಬರುತ್ತದೆ. ದ್ಯೂತದ ಸಮಯದಲ್ಲಿ ಕೃಷ್ಣನು ದ್ವಾರಕೆಯಲ್ಲಿ ಏಕೆ ಇರಲಿಲ್ಲ ಎಂದು ಯುಧಿಷ್ಠಿರನು ಕಾಮ್ಯಕ ವನದಲ್ಲಿ ಕೇಳಿದಾಗ ಕೃಷ್ಣನು ಈ ಕಥೆಯನ್ನು ಹೇಳಿದನು.

ಮಹಾಬಾಹು ನೃಪ ಶ್ರೌತಶ್ರವ ಶಿಶುಪಾಲನು ಕೃಷ್ಣನಿಂದ ಹತನಾದನು ಎಂದು ಕೇಳಿ ಶಾಲ್ವನು ಉಪಾಯದಿಂದ ದ್ವಾರವತೀ ಪುರಕ್ಕೆ ಧಾಳಿಯಿಟ್ಟನು. ಆ ಸುದುಷ್ಟಾತ್ಮ ಶಾಲ್ವನು ಎಲ್ಲ ಕಡೆಯಿಂದಲೂ ಮತ್ತು ಆಕಾಶದಿಂದಲೂ ತನ್ನ ಸೇನೆಯೊಂದಿಗೆ ಪುರವನ್ನು ಮುತ್ತಿಗೆ ಹಾಕಿದನು. ಪುರವನ್ನು ಹಿಡಿದಿಟ್ಟು ನಿಂತ ಆ ಮಹೀಪಾಲನು ಯುದ್ಧಮಾಡಿದನು. ಅಲ್ಲಿ ಎಲ್ಲಕಡೆಯಲ್ಲಿಯೂ ಎಲ್ಲರ ನಡುವೆಯೂ ಯುದ್ಧವು ನಡೆಯಿತು. ಆ ಪುರಿಯು ಎಲ್ಲೆಲ್ಲಿಯೂ ಸುರಕ್ಷತೆಯ ತಯಾರಿ ನಡೆಸಿತ್ತು - ಎಲ್ಲೆಡೆಯೂ ಪತಾಕೆಗಳು, ತೋರಣಗಳು, ಚಕ್ರಗಳು, ಪಹರೆಗಳು, ಶೌಚಾಲಯಗಳು, ಯಂತ್ರಗಳು, ಕಂದಕಗಳು, ಬೇಕಾದಲ್ಲಿ ಸಾಗಿಸಬಲ್ಲ ಮಂಚಗಳು, ಅಟ್ಟಗಳು, ಏಣಿಗಳು, ಗೋಪುರಗಳು, ಕೂದಲು ಎಳೆಯುವ ಸಾಧನಗಳು, ದೀವಟಿಗೆ ಮತ್ತು ಬೆಂಕಿಯ ಚಂಡುಗಳನ್ನು ಹಾರಿಸಬಲ್ಲ ಚಾಟಿಬಿಲ್ಲುಗಳು, ಒಂಟೆಗಳು, ಭೇರಿ-ನಗಾರಿಗಳು, ಉರಿಸಲು ಕಟ್ಟಿಗೆ ಮತ್ತು ಹುಲ್ಲು, ನೂರಾರು ಕೊಲ್ಲುವ ಆಯುಧಗಳು - ಕಲ್ಲುಗಳು, ಬೆಂಕಿಚಂಡುಗಳು, ಕಬ್ಬಿಣದ ಮತ್ತು ಚರ್ಮದ ಆಯುಧಗಳು, ಕೊಡಲಿಗಳು, ಮಲವನ್ನು ಎಸೆಯುವವರು ಹೀಗೆ ಶಾಸ್ತ್ರದಲ್ಲಿ ತೋರಿಸಿದ ವಿಧದಲ್ಲಿಯೇ ತಯಾರಿಗೊಂಡಿತ್ತು. ಅನೇಕ ವಿಧದ ದ್ರವ್ಯಗಳಿಂದ ತುಂಬಿದ್ದ ಪುರಿಯನ್ನು ಗದ, ಸಾಂಬ ಮತ್ತು ಉದ್ಧವ ಮೊದಲಾದ ಹಿಂದಿರುಗಿ ಆಕ್ರಮಿಸಬಲ್ಲ, ಯುದ್ಧದಲ್ಲಿ ತಮ್ಮ ವೀರತ್ವವನ್ನು ಹಿಂದೆ ತೋರಿಸಿದ್ದ, ಅಭಿಖ್ಯಾತ ಕುಲಗಳಲ್ಲಿ ಹುಟ್ಟಿದ್ದ ಸಮರ್ಥ ಪುರುಷರು ಕಾಯುತ್ತಿದ್ದರು. ಅದರ ಸಾರಕ್ಕೆ ಹೆಸರಾದ ಸೇನೆಯು ಮಧ್ಯದಲ್ಲಿ ಉತ್ತಮ ಸೇನೆಯಿಂದಲೂ ಕುದುರೆಗಳಿಂದಲೂ ಪದಾತಿಗಳಿಂದಲೂ ರಕ್ಷಿತಗೊಂಡಿತ್ತು. ಉಗ್ರಸೇನ, ಉದ್ಧವ ಮೊದಲಾದ ಅಧಿಕಾರಿಗಳು, ಪ್ರಮಾದವಾಗಬಾರದೆಂದು ನಗರದಲ್ಲಿ ಯಾರೂ ಮದ್ಯಸೇವನೆ ಮಾಡಬಾರದು ಎಂದು ಆದೇಶವನ್ನು ಘೋಷಿಸಿದರು. ಕುಡಿದ ಅಮಲಿನಲ್ಲಿದ್ದರೆ ನರಾಧಿಪ ಶಾಲ್ವನು ತಮ್ಮನ್ನು ಸುಲಭವಾಗಿ ನಾಶಪಡಿಸಬಲ್ಲನು ಎಂದು ಎಲ್ಲ ವೃಷ್ಣಿ ಅಂಧಕರೂ ಕುಡಿಯದೇ ಇದ್ದರು. ಅನಾರ್ತದ ಎಲ್ಲ ನಟ, ನರ್ತಕ, ಗಾಯಕರನ್ನು ಪುರದ ಹೊರಗೆ ವಾಸಿಸುವಂತೆ ಎಲ್ಲ ವಿತ್ತಸಂಚಯದ ರಕ್ಷಕರು ಏರ್ಪಡಿಸಿದರು. ಸೇತುವೆಗಳನ್ನು ಒಡೆಯಲಾಯಿತು ಮತ್ತು ಎಲ್ಲ ನೌಕೆಗಳ ಪ್ರಯಾಣವನ್ನೂ ಪ್ರತಿಬಂಧಿಸಲಾಯಿತು. ಎಲ್ಲ ಗೋಡೆಗಳನ್ನೂ ಮೊಳೆಗಳನ್ನಿರಿಸಿ ಸುರಕ್ಷಿತಗೊಳಿಸಲಾಯಿತು ಮತ್ತು ಕಣಿವೆ ಕಂದರಗಳನ್ನು ಮುಚ್ಚಿಸಲಾಯಿತು. ಎರಡು ಯೋಜನೆಯ ದೂರದವರೆಗೆ ಪುರದ ಸುತ್ತಲೂ ಭೂಮಿಯನ್ನು ವಿಷಮವನ್ನಾಗಿ ಮಾಡಲಾಯಿತು. ಪ್ರಾಕೃತಿಕವಾಗಿ ನಮ್ಮ ದುರ್ಗವು ವಿಷಮವಾದುದು, ಮತ್ತು ಪ್ರಾಕೃತಿಕವಾಗಿ ಸುರಕ್ಷಿತವಾಗಿದೆ, ಮತ್ತು ವಿಶೇಷವಾಗಿ ಪ್ರಾಕೃತಿಕವಾಗಿ ಆಯುಧಗಳಿಂದ ತುಂಬಿದೆ. ಸುರಕ್ಷಿತವೂ, ಗುಪ್ತವೂ, ಸರ್ವಾಯುಧಗಳಿಂದ ಕೂಡಿದ ಆ ಪುರವು ಇಂದ್ರನ ಪುರದಂತೆ ತೋರುತ್ತಿತ್ತು. ಸೌಭನು ಆಕ್ರಮಣ ಮಾಡಿದ ಸಮಯದಲ್ಲಿ ವೃಷ್ಣಿ-ಅಂಧಕರ ಪುರದಿಂದ ಮುದ್ರೆಯಿಲ್ಲದೇ ಯಾರೂ ಹೊರಹೋಗಲು ಸಾಧ್ಯವಿರಲಿಲ್ಲ ಮತ್ತು ಮುದ್ರೆಯಿಲ್ಲದೇ ಒಳಬರಲೂ ಸಾಧ್ಯವಿರಲಿಲ್ಲ. ಪ್ರತಿಯೊಂದು ರಥದಾರಿಗಳಲ್ಲೂ ಮತ್ತು ಎಲ್ಲ ಚೌಕಗಳಲ್ಲಿಯೂ ಕುದುರೆ ಮತ್ತು ಆನೆಗಳನ್ನೇರಿದ ಸೈನಿಕರು ಇರುತ್ತಿದ್ದರು. ಸೇನೆಗೆ ವೇತನಭತ್ತೆಗಳನ್ನು ಕೊಡಲಾಗಿತ್ತು. ಆಯುಧ-ಕವಚಗಳನ್ನು ಕೊಡಲಾಗಿತ್ತು ಮತ್ತು ಅಲ್ಲಿಯವರೆಗೆ ಸೇನೆಗೆ ಕೊಡಬೇಕಾದ ಎಲ್ಲವನ್ನೂ ಕೊಡಲಾಗಿತ್ತು. ಯಾರೂ ತನ್ನ ವೇತನದ ಕುರಿತು ಸಿಟ್ಟುಮಾಡಿರಲಿಲ್ಲ. ಯಾರಿಗೂ ಅಧಿಕ ವೇತನವನ್ನು ನೀಡಿರಲಿಲ್ಲ. ಯಾರಿಗೂ ವಿಶೇಷ ಅನುಗ್ರಹವಿರಲಿಲ್ಲ ಮತ್ತು ಯಾರ ಪರಾಕ್ರಮವನ್ನೂ ನೋಡದೇ ಇರಲಿಲ್ಲ. ಹೀಗೆ ದ್ವಾರಕೆಯು ಚೆನ್ನಾದ ವೇತನವನ್ನು ಹೊಂದಿದ್ದ ಸೇನೆಯೊಂದಿಗೆ ಆಹುಕನಿಂದ ರಕ್ಷಿತಗೊಂಡಿತ್ತು.

ಆದರೆ ಸೌಭಪತಿ ಶಾಲ್ವನು ಸೈನಿಕರು ಮತ್ತು ಆನೆಗಳಿಂದ ತುಂಬಿದ ಸೇನೆಯೊಂದಿಗೆ ನಗರವನ್ನು ಆಕ್ರಮಣಿಸಿದನು. ಶಾಲ್ವರಾಜನಿಂದ ಪಾಲಿತ ಆ ಚತುರಂಗಬಲವು ನೀರಿನ ಸೌಲಭ್ಯವು ಚೆನ್ನಾಗಿರುವ ಸಮಪ್ರದೇಶದಲ್ಲಿ ತಂಗಿತು. ಶ್ಮಶಾನಗಳನ್ನೂ, ದೇವಾಲಯಗಳನ್ನೂ ಹುತ್ತಗಳನ್ನೂ ಬಿಟ್ಟು ಉಳಿದ ಎಲ್ಲ ಕಡೆ ಅವನ ಸೇನೆಯು ಬೀಳುಬಿಟ್ಟಿತ್ತು. ಶಾಲ್ವನ ಸೇನಾಶಿಬಿರಗಳು ಅನೇಕ ಭಾಗಗಳಾಗಿ ವಿಭಜನೆಗೊಂಡು ಆರು ಮಾರ್ಗಗಳಲ್ಲಿಯೂ, ಒಂಭತ್ತು ಇಳಿಜಾರುಗಳಲ್ಲಿಯೂ ಹರಡಿಕೊಂಡಿತ್ತು. ಸರ್ವಾಯುಧಗಳಿಂದ ಕೂಡಿದ, ಸರ್ವಶಸ್ತ್ರವಿಶಾರದರನ್ನೂ, ರಥ, ಆನೆ, ಕುದುರೆಗಳಿಂದ ಕೂಡಿದ, ಪದಾತಿ-ಧ್ವಜಸಂಕುಲಗಳನ್ನು, ವೀರಲಕ್ಷಣಗಳಿಂದ ಲಕ್ಷಿತ ತುಷ್ಟಪುಷ್ಟ ಜನರನ್ನೂ, ವಿಚಿತ್ರಧ್ವಜಸನ್ನಾಹಗಳನ್ನೂ, ವಿಚಿತ್ರವಾಗಿ ರಚಿತಗೊಂಡ ರಥಗಳನ್ನೂ, ದ್ವಾರಗಳಲ್ಲಿ ನಿಲ್ಲಿಸಿ, ಪತಗೇಂದ್ರನಂತೆ ವೇಗದಿಂದ ಮುತ್ತಿಗೆಹಾಕಿದನು. ಶಾಲ್ವಪತಿಯ ಸೇನೆಯ ಆಕ್ರಮಣವನ್ನು ನೋಡಿದ ವೃಷ್ಣಿನಂದನ ಕುಮಾರರು ಯುದ್ಧಕ್ಕೆ ಸಜ್ಜರಾಗಿ ಹೊರಟರು. ಶಾಲ್ವರಾಜನನ್ನು ಎದುರಿಸಿ ಹೋರಾಡಲು ಚಾರುದೇಷ್ಣ, ಸಾಂಬ, ಮತ್ತು ಮಹಾರಥಿ ಪ್ರದ್ಯುಮ್ನರು ಹೊರಟರು. ಅವರ ವಿಚಿತ್ರ ಆಭರಣ-ಧ್ವಜಗಳಿಂದ ಅಲಂಕೃತ ರಥಗಳಲ್ಲಿ ಸರ್ವರೂ ಶಾಲ್ವರಾಜನ ಬಹುಸಂಖ್ಯೆಯಲ್ಲಿದ್ದ ಯೋಧಪುಂಗವರೊಂದಿಗೆ ಯುದ್ಧ ನಿರತರಾದರು. ಧನುಸ್ಸನ್ನು ಹಿಡಿದು ಸಂತೋಷದಿಂದ ಸಾಂಬನು ಶಾಲ್ವನ ಸಚಿವ, ಚಮೂಪತಿ, ಕ್ಷೇಮವೃದ್ಧಿಯೊಂದಿಗೆ ರಣದಲ್ಲಿ ಹೋರಾಡಿದನು. ಜಾಂಬವತಿಯ ಮಗನು ಸಹಸ್ರಾಕ್ಷನು ಮಳೆಯನ್ನು ಸುರಿಸುವಂತೆ ಅವನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದನು. ಆ ಚಮೂಪತಿ ಕ್ಷೇಮವೃದ್ಧಿಯಾದರೂ ಅವನ ಬಾಣಗಳ ಮಳೆಯ ತುಮುಲವನ್ನು ಸಹಿಸಿಕೊಂಡು ಹಿಮವತ್ಪರ್ವತದಂತೆ ನಿಶ್ಚಲವಾಗಿ ನಿಂತನು. ಆಗ ಕ್ಷೇಮವೃದ್ಧಿಯೂ ಸಹ ಸಾಂಬನ ಮೇಲೆ ಮಯಾವಿಹಿತ ಮಹತ್ತರ ಶರಜಾಲವನ್ನು ಬಿಟ್ಟನು. ನಂತರ ಆ ಮಾಯಾಜಾಲವನ್ನು ತನ್ನದೇ ಮಾಯೆಯಿಂದ ತುಂಡುಮಾಡಿ, ಸಾಂಬನು ಅವನ ರಥದ ಮೇಲೆ ಸಹಸ್ರ ಶರಗಳ ಮಳೆಯನ್ನೇ ಸುರಿಸಿದನು. ಸಾಂಬನಿಂದ ಹೊಡೆತತಿಂದ ಆ ಚಮೂಪತಿ ಕ್ಷೇಮವೃದ್ಧಿಯು ಸಾಂಬನ ಬಾಣಗಳಿಂದ ಪೀಡಿತನಾಗಿ ವೇಗವಾಗಿ ಅಶ್ವಗಳನ್ನು ಹಿಂದೆ ಸರಿಸಿದನು. ಶಾಲ್ವನ ಆ ಕ್ರೂರ ಚಮೂಪತಿಯು ಪಲಾಯನ ಮಾಡಲು ವೇಗವಾನ್ ಎಂಬ ಹೆಸರಿನ ಬಲಶಾಲಿ ದೈತ್ಯನು ಕೃಷ್ಣನ ಮಗನ ಮೇಲೆ ಆಕ್ರಮಣ ಮಾಡಿದನು. ಆಕ್ರಮಣಕ್ಕೊಳಗಾದ ವೃಷ್ಣಿಕುಲೋದ್ದಹ ವೀರ ಸಾಂಬನು ವೇಗದಿಂದ ಬರುತ್ತಿದ್ದ ವೇಗವತನನ್ನು ಎದುರಿಸಿ ನಿಂತನು. ವೀರ ಸತ್ಯವಿಕ್ರಮ ಸಾಂಬನು ವೇಗವತನ ಮೇಲೆ ವೇಗದಿಂದ ತನ್ನ ಗದೆಯನ್ನು ಬೀಸಿ ಎಸೆದು ತಕ್ಷಣವೇ ಅವನನ್ನು ಘಾತಿಗೊಳಿಸಿದನು. ಅವನಿಂದ ಹೊಡೆತತಿಂದ ವೇಗವಾನನು, ಬೇರುಗಳು ಜೀರ್ಣವಾಗಿದ್ದ ವನಸ್ಪತಿಯು ಭಿರುಗಾಳಿಗೆ ಸಿಲುಕಿ ಬೀಳುವಂತೆ ನೆಲದ ಮೇಲೆ ವೇಗದಿಂದ ಉರುಳಿದನು. ಗದಾಪ್ರಹಾರಕ್ಕೆ ಸಿಲುಕಿದ ಆ ವೀರ ಮಹಾ ಅಸುರನು ಕೆಳಗೆ ಬೀಳಲು ಕೃಷ್ಣನ ಮಗನು ಮಹಾ ಸೇನೆಯೊಂದಿಗೆ ಯುದ್ಧಕ್ಕೆ ಪ್ರವೇಶಮಾಡಿದನು. ಮಹಾರಥಿ ಮತ್ತು ಮಹಾಧನ್ವಿಯೆಂದು ತಿಳಿಯಲ್ಪಟ್ಟ ವಿವಿಂಧ್ಯ ಎನ್ನುವ ಹೆಸರಿನ ದಾನವನು ಚಾರುದೇಷ್ಣನೊಂದಿಗೆ ಯುದ್ಧದಲ್ಲಿ ತೊಡಗಿದನು. ಆಗ ಹಿಂದೆ ವೃತ್ರ ಮತ್ತು ವಾಸವರ ಮಧ್ಯೆ ಹೇಗೆ ನಡೆಯಿತೋ ಹಾಗೆ ಚಾರುದೇಷ್ಣ ಮತ್ತು ವಿವಿಂಧ್ಯರ ನಡುವೆ ತುಮುಲ ಯುದ್ಧವು ನಡೆಯಿತು. ಅವರು ಅನ್ಯೋನ್ಯರಲ್ಲಿ ಕೋಪಗೊಂಡು ಅನ್ಯೋನ್ಯರನ್ನು ಶರಗಳಿಂದ ಗಾಯಗೊಳಿಸಿದರು ಮತ್ತು ಅವರೀರ್ವರು ಮಹಾಬಲರೂ ಸಿಂಹಗಳಂತೆ ಘರ್ಜಿಸಿದರು.

ರುಕ್ಮಿಣಿಯ ಮಗನು ಅಗ್ನಿ ಮತ್ತು ಅರ್ಕನ ವರ್ಚಸ್ಸಿಗೆ ಸಮನಾದ ಬಾಣವನ್ನು ಅಭಿಮಂತ್ರಿಸಿ, ಶತ್ರುಗಳನ್ನು ನಾಶಪಡಿಸಬಲ್ಲ ಮಹಾಸ್ತ್ರವನ್ನು ಧನುಸ್ಸಿಗೆ ಸಂಧಿಸಿದನು. ವಿವಿಂಧ್ಯನ ಮೇಲೆ ಸಂಕೃದ್ಧನಾದ ಕೃಷ್ಣನ ಮಗ ಮಹಾರಥಿಯು ಅದನ್ನು ಅ ಅಸುರನ ಮೇಲೆ ಎಸೆಯಲು ಅವನು ಅಸುನೀಗಿ ಬಿದ್ದನು. ವಿವಿಂಧ್ಯನು ಮರಣಹೊಂದಿದನ್ನು ಮತ್ತು ಸೈನ್ಯವು ಚದುರಿ ಹೋಗುತ್ತಿರುವುದನ್ನು ನೋಡಿದ ಶಾಲ್ವನು ಬೇಕಾದಲ್ಲಿ ಹೋಗಬಲ್ಲ ಸೌಭವನ್ನು ಏರಿ ಹಿಂದಿರುಗಿದನು. ದ್ವಾರಕಾವಾಸಿ ಆ ಸೇನೆಯಲ್ಲಿ ಎಲ್ಲರೂ ಸೌಭವನ್ನೇರಿ ಭೂಮಿಯ ಕಡೆ ಬರುತ್ತಿದ್ದ ಮಹಾಬಾಹು ಶಾಲ್ವನನ್ನು ನೋಡಿ ವ್ಯಾಕುಲಿತಗೊಂಡರು. ಆಗ ಆನರ್ತರ ಆ ಬಲವನ್ನು ವ್ಯವಸ್ಥೆಯಲ್ಲಿ ತರಲು ಹೊರಟ ಪ್ರದ್ಯುಮ್ನನು ಹೇಳಿದನು: “ನೀವೆಲ್ಲರೂ ನಿಮ್ಮ ನಿಮ್ಮ ಸ್ಥಾನಗಳಲ್ಲಿ ನಿಂತು ನಾನು ಸಂಗ್ರಾಮದಲ್ಲಿ ಬಲದಿಂದ ಯುದ್ಧಮಾಡಿ ರಾಜನೊಂದಿಗೆ ಸೌಭವನ್ನು ತಡೆಹಿಡಿಯುವುದನ್ನು ನೋಡಿ! ಯಾದವರೇ! ಇಂದು ನಾನು ಸೌಭಪತಿಯ ಈ ಸೇನೆಯನ್ನು ನನ್ನ ಧನುಸ್ಸಿನ ಭುಜದಿಂದ ಬಿಡಲ್ಪಟ್ಟ ಸರ್ಪಗಳಂತಿರುವ ಕಬ್ಬಿಣದ ಬಾಣಗಳಿಂದ ನಾಶಪಡಿಸುತ್ತೇನೆ! ಉಸಿರಾಡಿ! ಭಯಪಡಬೇಡಿ! ಇಂದು ಸೌಭರಾಜನು ನಾಶಹೊಂದುತ್ತಾನೆ. ನನ್ನಿಂದ ಹೊಡೆತತಿಂದು ಆ ದುಷ್ಟಾತ್ಮನು ಸೌಭದೊಂದಿಗೆ ವಿನಾಶಹೊಂದುತ್ತಾನೆ.” ಹೀಗೆ ಸಂಹೃಷ್ಟನಾಗಿ ಪ್ರದ್ಯುಮ್ನನು ಕೂಗಿ ಹೇಳಲು ಅವನ ಸೇನೆಯು ತನ್ನ ಸ್ಥಾನದಲ್ಲಿಯೇ ನಿಂತು ಉತ್ತಮ ಹೋರಾಟವನ್ನು ನೀಡಿತು.

ರೌಕ್ಮಿಣೇಯನು ಯಾದವರಿಗೆ ಈ ರೀತಿ ಹೇಳಿ, ಮೊನಚಾದ ಬಾಣಗಳನ್ನು ತೆಗೆದುಕೊಂಡು, ವೇಗವಾಗಿ ಹೋಗಬಲ್ಲ ಶ್ರೇಷ್ಠ ಕುದುರೆಗಳನ್ನು ಕಟ್ಟಿದ, ಬಾಯಿತೆರದ ಮೊಸಳೆಯ ಅಲಂಕೃತ ಧ್ವಜವು ಮೇಲೆ ಹಾರಾಡುತ್ತಿದ್ದ, ಕಾಂಚನ ರಥವನ್ನೇರಿದನು. ಗಾಳಿಯಲ್ಲಿ ಹಾರಿಹೋಗುತ್ತಿವೆಯೋ ಎಂದು ಅವನ ಕುದುರೆಗಳು ತೋರುತ್ತಿರಲು ತೂರಣಖಡ್ಗಗಳನ್ನು ಧರಿಸಿ, ಕೈ ಮತ್ತು ಬೆರಳುಗಳಿಗೆ ಕಟ್ಟಿಕೊಂಡು ಆ ಧನುಃಶ್ರೇಷ್ಠ, ಮಹಾಬಲ ಶೂರನು ಧಾಳಿಯಿಟ್ಟನು. ಅವನು ಮಿಂಚಿನಿಂದ ಧನುಸ್ಸನ್ನು ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾಯಿಸುತ್ತಾ ಸೌಭದಲ್ಲಿದ್ದ ದೈತ್ಯರೆಲ್ಲರನ್ನೂ ಕಂಗಾಲುಗೊಳಿಸಿದನು. ಯಾರೂ ಕೂಡ ಅವನು ಬಾಣವನ್ನು ಹೂಡುವ ಮತ್ತು ಬಿಡುವುದರ ನಡುವಿನ ಅಂತರವನ್ನು ನೋಡಲಾಗುತ್ತಿರಲಿಲ್ಲ. ಹಾಗೆ ಅವನು ಶತ್ರುಗಳನ್ನು ರಣದಲ್ಲಿ ಒಂದೇ ಸಮನೆ ಕೊಲ್ಲುತ್ತಾ ಹೋದನು. ಅವನ ಮುಖದ ಬಣ್ಣವು ಬದಲಾಗಲಿಲ್ಲ. ಅವನ ದೇಹದಲ್ಲಿ ಕೂಡ ಏನೊಂದು ಕಂಪನವೂ ಕಂಡುಬರಲಿಲ್ಲ. ಆ ಅದ್ಭುತ ರೂಪಿ ನಾಯಕನು ಜೋರಾಗಿ ಗರ್ಜಿಸಿ ಸಿಂಹನಾದ ಮಾಡಿದ್ದುದನ್ನು ಲೋಕವೇ ಕೇಳಿಸಿಕೊಂಡಿತು. ಕಾಂಚನದ ಧ್ವಜಸ್ಥಂಭದಮೇಲಿದ್ದ ದೊಡ್ಡದಾಗಿ ಬಾಯಿತೆರೆದಿದ್ದ ಜಲಚರ ಮೊಸಳೆಯು ರಥದ ಮೇಲೆ ಹಾರಾಡುತ್ತಾ ಸಾಲ್ವನ ಸೇನೆಯಲ್ಲಿ ಭಯದ ಬೀಜವನ್ನು ಬಿತ್ತಿತು. ಆಗ ಆ ಶತ್ರುಕರ್ಶನ ಪ್ರದ್ಯುಮ್ನನು ವೇಗದಿಂದ ಮುನ್ನುಗ್ಗಿ ಹೋರಾಟಕ್ಕೆ ತಯಾರಾಗಿ ಶಾಲ್ವನ ಮೇಲೆ ಎರಗಿದನು. ಆದರೆ ಮಹಾಹವ ಸಂಕೃದ್ಧ ಶಾಲ್ವನು ವೀರ ಪ್ರದ್ಯುಮ್ನನ ಆಕ್ರಮಣದಿಂದ ಕಷ್ಟಪಡಲಿಲ್ಲ. ರೋಷಮದಮತ್ತನಾದ ಆ ಪರಪುರಂಜಯ ಶಾಲ್ವನು ಕಾಮಗವನ್ನು ಏರಿ ಪ್ರದ್ಯುಮ್ನನೊಡನೆ ಯುದ್ಧಮಾಡಲು ತೊಡಗಿದನು. ಬಲಿ ಮತ್ತು ವಾಸವರೊಡನೆ ನಡೆದ ಯುದ್ಧದಂತಿದ್ದ ಶಾಲ್ವ ಮತ್ತು ವೃಷ್ಣಿಪ್ರವೀರನ ನಡುವಿನ ತುಮುಲ ಯುದ್ಧವನ್ನು ನೋಡಲು ಜನರು ಒಟ್ಟು ಸೇರಿದರು. ಆ ವೀರನ ಧ್ವಜಯುಕ್ತ, ಪತಾಕಯುಕ್ತ, ಗಾಲಿಗಳನ್ನು ಹೊಂದಿದ, ಭತ್ತಳಿಕೆಗಳನ್ನು ಹೊಂದಿದ ರಥವು ಮಾಯೆಯಿಂದ ಕೂಡಿದ್ದು ಚಿನ್ನದಿಂದ ಮಾಡಲ್ಪಟ್ಟಿತ್ತು. ಶ್ರೀಮಾನನು ಆ ಶ್ರೇಷ್ಠ ರಥವನ್ನು ಏರಿ ಮಹಾಬಲ ಪ್ರದ್ಯುಮ್ನನ ಮೇಲೆ ಬಾಣಗಳನ್ನು ಪ್ರಯೋಗಿಸಿದನು. ಆ ಯುದ್ಧದಲ್ಲಿ ಪ್ರದ್ಯುಮ್ನನು ತನ್ನ ಭುಜವೇಗದಿಂದ ಶಾಲ್ವನನ್ನು ಮೋಹಗೊಳಿಸುವಂತೆ ವೇಗವಾಗಿ ಬಾಣಗಳ ಮಳೆಯನ್ನೇ ಸುರಿಸಿದನು. ಈ ರೀತಿಯ ಅಸಂಖ್ಯ ಬಾಣಗಳನ್ನು ತಡೆಯಲಾಗದೇ ಸೌಭರಾಜನು ಕೃಷ್ಣನ ಮಗನ ಮೇಲೆ ಉರಿಯುತ್ತಿರುವ ಬೆಂಕಿಯಂತಿರುವ ಬಾಣಗಳನ್ನು ಪ್ರಯೋಗಿಸಿದನು. ಶಾಲ್ವನ ಬಾಣಗಳ ಹೊಡೆತಕ್ಕೆ ಸಿಲುಕಿದ ರುಕ್ಮಿಣಿನಂದನನು ತಕ್ಷಣವೇ ಶತ್ರುವಿನ ದುರ್ಬಲ ಸ್ಥಾನವನ್ನು ಹುಡುಕಿಕೊಂಡು ಹೋಗುವ ಮರ್ಮಭೇದಿನಿ ಬಾಣವನ್ನು ಪ್ರಯೋಗಿಸಿದನು. ಕೃಷ್ಣನ ಮಗನು ಬಿಟ್ಟ ಆ ಬಾಣವು ಅವನ ಕವಚವನ್ನು ಬೇಧಿಸಿ ಹೃದಯವನ್ನು ಚುಚ್ಚಲು, ಅವನು ಮೂರ್ಛೆತಪ್ಪಿ ಬಿದ್ದನು. ವೀರ ಶಾಲ್ವರಾಜನು ವಿಚೇತಸನಾಗಿ ಬೀಳಲು ದಾನವೇಂದ್ರರು ಭೂಮಿಯನ್ನೇ ಸೀಳಿಬಿಡುವರೋ ಎನ್ನುವಂತೆ ಮುನ್ನುಗ್ಗಿದರು.

ಸೌಭಪತಿಯು ಮೂರ್ಛೆ ತಪ್ಪಿ ಕೆಳಗೆ ಬೀಳಲು ಶಾಲ್ವನ ಸೈನ್ಯವು ಹಾಹಾಕಾರವನ್ನು ಮಾಡಿತು. ಅನಂತರ ಪುನಃ ಚೇತರಿಸಿಕೊಂಡು ಎದ್ದು ತಕ್ಷಣವೇ ಮಹಾಬಲ ಪ್ರದ್ಯುಮ್ನನ ಮೇಲೆ ಬಾಣವನ್ನು ಪ್ರಯೋಗಿಸಿದನು. ಸಮರದಲ್ಲಿ ಎದುರಿಸಿ ನಿಂತಿದ್ದ ಮಹಾಬಾಹು ವೀರ ಪ್ರದ್ಯುಮ್ನನು ಅವನಿಂದ ಜತ್ರುಪ್ರದೇಶದಲ್ಲಿ ಹೊಡೆತ ತಿಂದು ರಥದಲ್ಲಿಯೇ ಕುಸಿದು ಬಿದ್ದನು. ರುಕ್ಮಿಣೀನಂದನನನ್ನು ಈ ರೀತಿ ಹೊಡೆದು ಶಾಲ್ವನು ಸಿಂದನಾದವನ್ನು ಗೈದು ತನ್ನ ನಿನಾದದಿಂದ ಇಡೀ ಭೂಮಿಯನ್ನೇ ತುಂಬಿಸಿದನು. ಕೃಷ್ಣನ ಮಗನು ಮೂರ್ಛೆ ಹೊಂದಿರಲು ಅವನು ಪುನಃ ಇನ್ನೂ ತಡೆಯಲಸಾದ್ಯ ಬಾಣಗಳನ್ನು ಪ್ರಯೋಗಿಸಿದನು. ಆ ರಣರಂಗದಲ್ಲಿ ಪ್ರದ್ಯುಮ್ನನು ಬಹಳ ಬಾಣಗಳಿಂದ ಚುಚ್ಚಲ್ಪಟ್ಟು ಮೂರ್ಛಿತನಾಗಿ ನಿಶ್ಚೇಷ್ಟನಾಗಿದ್ದನು.

ಬಲಿಶ್ರೇಷ್ಠ ಪ್ರದ್ಯುಮ್ನನನ್ನು ಶಾಲ್ವನ ಬಾಣಗಳು ಚುಚ್ಚಲು, ಹೋರಾಡಲು ಬಂದಿದ್ದ ವೃಷ್ಣಿಗಳು ಗುರಿತಪ್ಪಿ ಬುದ್ಧಿಯನ್ನು ಕಳೆದುಕೊಂಡರು. ಪ್ರದ್ಯುಮ್ನನು ಕೆಳಗುರುಳಲು ವೃಷ್ಣಿ ಮತ್ತು ಅಂಧಕರ ಸೇನೆಯು ಹಾಹಾಕಾರವನ್ನುಂಟುಮಾಡಿತು ಮತ್ತು ಶತ್ರುಸೇನೆಯು ಸಂತಸಗೊಂಡಿತು. ಅವನು ಮೂರ್ಛೆಗೊಂಡಿದುದನ್ನು ನೋಡಿ, ಅವನ ಕುಶಲ ಸಾರಥಿ ದಾರುಕನು ಅವನನ್ನು ತಕ್ಷಣವೇ ಅತಿವೇಗದ ಕುದುರೆಗಳೊಂದಿಗೆ ರಣರಂಗದಿಂದ ಆಚೆ ಕರೆದುಕೊಂಡು ಹೋದನು. ರಥವು ಹೋಗುತ್ತಿರಲು ಸ್ವಲ್ಪ ದೂರದಲ್ಲಿಯೇ ಶತ್ರುಗಳ ರಥಗಳನ್ನು ತಡೆಹಿಡಿಯುವುದರಲ್ಲಿ ಪ್ರವೀಣನು ಎಚ್ಚೆದ್ದು ಧನುಸ್ಸನ್ನು ಎತ್ತಿ ಹಿಡಿದು ಸಾರಥಿಗೆ ಹೇಳಿದನು: “ಸೌತಿ! ಏನೆಂದು ಯೋಚಿಸಿ ಈ ರಥವನ್ನು ಹಿಂದೆ ತೆಗೆದುಕೊಂಡು ಹೋಗುತ್ತಿದ್ದೀಯೆ? ಇದು ವೃಷ್ಣಿಪ್ರವೀರರು ರಣರಂಗದಲ್ಲಿ ಅನುಸರಿಸುವ ಧರ್ಮ ಎಂದು ಹೇಳುವುದಿಲ್ಲವೇ? ಈ ಮಹಾಯುದ್ಧದಲ್ಲಿ ಶಾಲ್ವನನ್ನು ನೋಡಿ ನಿನ್ನ ಬುದ್ಧಿಯನ್ನು ಕಳೆದುಕೊಂಡಿಲ್ಲ ತಾನೇ? ಅಥವಾ ರಣವನ್ನು ನೋಡಿ ವಿಷಾದಗೊಂಡೆಯೇ? ಯಥಾವತ್ತಾಗಿ ನೀನು ನನಗೆ ಹೇಳು!”

ಸೂತನು ಹೇಳಿದನು: “ನನಗೆ ಬುದ್ಧಿನಾಶವೂ ಆಗಲಿಲ್ಲ ಅಥವಾ ಭಯವೂ ಆವರಿಸಲಿಲ್ಲ. ಕೇಶವನಂದನ! ಆದರೆ ಶಾಲ್ವನು ನಿನಗೆ ಅತಿ ಭಾರದವನು ಎಂದು ನನಗನ್ನಿಸುತ್ತದೆ. ಆ ಪಾಪಿಯು ಹೆಚ್ಚು ಬಲಶಾಲಿಯಾದುದರಿಂದ ನಾನು ನಿಧಾನವಾಗಿ ಹಿಂದೆ ಸರಿದೆನು. ರಣರಂಗದಲ್ಲಿ ಮೂರ್ಛೆತಪ್ಪಿ ಬಿದ್ದ ಶೂರನನ್ನು ರಥದ ಸಾರಥಿಯು ರಕ್ಷಿಸಬೇಕು. ನೀನು ಹೇಗೆ ನನ್ನನ್ನು ರಕ್ಷಿಸುತ್ತೀಯೋ ಹಾಗೆ ನಾನೂ ಕೂಡ ಸದಾ ನಿನ್ನನ್ನು ರಕ್ಷಿಸಬೇಕು. ರಥಿಯನ್ನು ಯಾವಾಗಲೂ ರಕ್ಷಿಸಬೇಕು ಎಂದು ನಾನು ಹಿಂದೆ ಸರಿದೆನು. ನೀನಾದರೋ ಒಬ್ಬನೇ ಇದ್ದೀಯೆ. ದಾನವರು ಬಹುಸಂಖ್ಯೆಯಲ್ಲಿ ಇದ್ದಾರೆ. ರೌಕ್ಮಿಣೇಯ! ಯುದ್ಧವು ಅಸಮವಾಗಿದೆ ಎಂದು ತಿಳಿದು ನಾನು ಹಿಂದೆ ಸರಿದೆ.”

ಸೂತನು ಈ ರೀತಿ ಮಾತನಾಡುತ್ತಿರಲು ಆ ಮಕರಕೇತುವು ಸೂತನಿಗೆ “ರಥವನ್ನು ಪುನಃ ಹಿಂದೆ ತೆಗೆದುಕೊಂಡು ಹೋಗು!” ಎಂದು ಆಜ್ಞೆಯನ್ನಿತ್ತನು. “ದಾರುಕಾತ್ಮಜ! ಇನ್ನು ಮುಂದೆ ಎಂದೂ ಈ ರೀತಿ ನಾನು ಜೀವಂತವಿರುವಾಗಲೇ ರಣದಿಂದ ಹಿಂದೆಸರಿಯುವ ಕೆಲಸವನ್ನು ಪುನಃ ಮಾಡಬೇಡ!  ವೃಷ್ಣಿಕುಲದಲ್ಲಿ ಹುಟ್ಟಿದ ಯಾರೂ ಸಂಗರವನ್ನು ಬಿಟ್ಟುಬರುವುದಿಲ್ಲ ಅಥವಾ ಬಿದ್ದವನನ್ನು ಕೊಲ್ಲುವುದಿಲ್ಲ ಮತ್ತು ಶರಣು ಬಂದವನನ್ನು ಕೊಲ್ಲುವುದಿಲ್ಲ. ಹಾಗೆಯೇ ಯಾರೂ ಸ್ತ್ರೀ, ವೃದ್ಧ, ಅಥವಾ ಬಾಲಕನನ್ನು, ರಥದಿಂದ ಬಿದ್ದವನನ್ನು, ಗುಂಪಿನಿಂದ ಬೇರೆಯಾದವನನ್ನು, ಶಸ್ತ್ರ-ಆಯುಧಗಳು ತುಂಡಾಗಿರುವವನನ್ನು ಕೊಲ್ಲುವುದಿಲ್ಲ. ನೀನಾದರೋ ಸೂತಕರ್ಮದಲ್ಲಿ ಪಳಗಿದ ಸೂತಕುಲದಲ್ಲಿ ಜನಿಸಿದ್ದೀಯೆ ಮತ್ತು ದಾರುಕ! ನೀನು ಮಹೇಷ್ವಾಸ ವೃಷ್ಣಿಯರ ಧರ್ಮವನ್ನು ತಿಳಿದಿದ್ದೀಯೆ. ಯುದ್ಧದ ಎದುರಿನಲ್ಲಿ ವೃಷ್ಣಿಗಳ ನಡತೆಯ ಕುರಿತು ಚೆನ್ನಾಗಿ ತಿಳಿದುಕೊಂಡಿದ್ದ ನೀನು ಪುನಃ ಎಂದೂ ಯಾವುದೇ ಸಂದರ್ಭದಲ್ಲಿಯೂ ಈ ರೀತಿ ಹಿಂದೆ ಸರಿಯಕೂಡದು! ಹಿಂಜರಿದರೆ, ಹಿಂದಿನಿಂದ ಹೊಡೆದರೆ ಅಥವಾ ಭಯದಿಂದ ರಣಪಲಾಯನ ಮಾಡಿದರೆ ಗದಾಗ್ರಜ, ದುರಾಧರ್ಷ ಮಾಧವನು ನನ್ನ ಕುರಿತು ಏನೆಂದು ಯೋಚಿಸುವುದಿಲ್ಲ? ಮತ್ತು ಕೇಶವನ ಅಣ್ಣ ಆ ನೀಲವಸ್ತ್ರಧಾರಿ, ಮದೋತ್ಕಟ, ಮಹಾಬಾಹು, ಬಲದೇವನು ಹಿಂದಿರುಗಿ ಬಂದು ಏನು ಹೇಳಿಯಾನು? ನಾನು ರಣದಿಂದ ಪಲಾಯನಮಾಡಿದೆನೆಂದರೆ ಶಿನಿಯ ಮೊಮ್ಮಗ, ನರಸಿಂಹ, ಮಹಾಧನು ಸಮಿತಿಂಜಯ, ಸಾಂಬ, ದುರ್ಧರ್ಷ ಚಾರುದೇಷ್ಣ, ಗದ ಮತ್ತು ಸಾರಣರು, ಮಹಾಬಾಹು ಅಕ್ರೂರನೂ ಏನು ಹೇಳಿಯಾರು? ವೃಷ್ಣಿವೀರರು ಶೂರರೂ ಸಂಭಾವಿತರೂ, ಸಂತರೂ ಮತ್ತು ನಿತ್ಯವೂ ಪುರುಷರೆಂದು ಅಭಿಪ್ರಾಯ ಪಟ್ಟಿರುವ ಸ್ತ್ರೀಯರು ಒಟ್ಟಿಗೇ ನನ್ನ ಕುರಿತು ಏನು ಮಾತನಾಡಿಕೊಂಡಾರು? ಪ್ರದ್ಯುಮ್ನನು ಭಯಪಟ್ಟುಕೊಂಡಿದ್ದಾನೆ! ಮಹಾಯುದ್ಧವನ್ನು ತ್ಯಜಿಸಿ ಓಡಿಹೋಗುತ್ತಾನೆ! ಅವನಿಗೆ ಧಿಕ್ಕಾರ! ಎಂದು ಹೇಳುತ್ತಾರೆ. ಅವನು ಸಾಧು ಎಂದು ಹೇಳುವುದಿಲ್ಲ! ನನಗೆ ಧಿಕ್ಕಾರವನ್ನು ಹೇಳಿ ಪರಿಹಾಸಮಾಡುವುದಕ್ಕಿಂತ ನನ್ನ ಸಾವೇ ನನಗೆ ಒಳ್ಳೆಯದು. ನನ್ನನ್ನು ಪುನಃ ಹಿಂದೆ ಕರೆದುಕೊಂಡು ಬರಬೇಡ. ಮಧುಸಂಹಾರಕ ಹರಿಯು ನನ್ನ ಮೇಲೆ ಭಾರವನ್ನು ಒಪ್ಪಿಸಿ ಅಮಿತತೇಜಸ ಭರತಸಿಂಹ ಪಾರ್ಥನ ಯಜ್ಞಕ್ಕೆ ಹೋದನು. ವೀರ ಕೃತವರ್ಮನು ಶಾಲ್ವನನ್ನು ನಾನು ತಡೆಯುತ್ತೇನೆ, ನೀನು ನಿಲ್ಲು ಎಂದು ಹೇಳಿ ನನ್ನನ್ನು ತಡೆಗಟ್ಟಿದ್ದ. ಆ ಹೃದಿಕಾತ್ಮಜನಿಗೆ ಹಿಂದಿರುಗಿ ಬರಬೇಡ ಎಂದು ಹೇಳಿದ್ದ. ಈಗ ನಾನು ರಣವನ್ನು ತ್ಯಜಿಸಿ ಹಿಂದಿರುಗಿ ಬಂದು ಆ ಮಹಾರಥಿಗೆ ಏನು ಹೇಳಲಿ? ದುರಾದರ್ಷ, ಶಂಖಚಕ್ರಗದಾಧರ, ಪುರುಷ, ಪುಂಡರೀಕಾಕ್ಷ, ಮಹಾಭುಜನು ಮರಳಿ ಬಂದಾಗ ಅವನಿಗೆ ನಾನು ಏನು ಹೇಳಲಿ? ಸಾತ್ಯಕಿ, ಬಲದೇವ ಮತ್ತು ನನ್ನೊಂದಿಗೆ ಸತತವೂ ಸ್ಪರ್ಧಿಸುತ್ತಿರುವ ಇತರ ಅಂಧಕವೃಷ್ಣಿಗಳಿಗೆ ನಾನು ಏನು ಹೇಳಲಿ? ವಿವಶನಾಗಿರುವಾಗ ಈ ರಣವನ್ನು ತ್ಯಜಿಸಿ ನಿನ್ನಿಂದ ಹಿಂದೆ ಕರೆತರಲ್ಪಟ್ಟ ನನ್ನ ಹಿಂದಿನಿಂದ ಬಿದ್ದ ಬಾಣಗಳಿಂದ ನಾನು ಹೇಗೆ ತಾನೇ ಜೀವಿಸಲಿ? ತಕ್ಷಣವೇ ಈ ರಥವನ್ನು ಹಿಂದಿರುಗಿಸು ಮತ್ತು ಇಂಥಹ ಕೆಲಸವನ್ನು ಎಂದೂ ಯಾವುದೇ ಸಂದರ್ಭದಲ್ಲಿಯೂ ಮಾಡಬೇಡ! ಭೀತನಾಗಿ ರಣದಿಂದ ಓಡಿಹೋಗುತ್ತಿರುವಾಗ ಹಿಂದಿನಿಂದ ಶರಗಳ ಪೆಟ್ಟುತಿಂದ ನಾನು ನನ್ನ ಜೀವದ ಕುರಿತು ಎಂದೂ ಆಲೋಚಿಸುವುದಿಲ್ಲ! ಕಾಪುರುಷನಂತೆ (ಹೇಡಿಯಂತೆ) ನಾನು ಭಯಾರ್ದಿತನಾಗಿ ರಣವನ್ನು ತೊರೆದು ಓಡಿಹೋಗಿದ್ದುದನ್ನು ನೀನು ಎಂದಾದರೂ ನೋಡಿದ್ದೀಯಾ? ಯುದ್ಧದಲ್ಲಿ ನನಗೆ ಇನ್ನೂ ಆಸೆಯಿರುವಾಗ ಸಂಗ್ರಾಮವನ್ನು ಬಿಟ್ಟು ಬಂದಿದ್ದುದು ನಿನಗೆ ಯುಕ್ತವಲ್ಲ. ರಣರಂಗಕ್ಕೆ ಹಿಂದಿರುಗು!”

ಈ ಮಾತುಗಳಿಗೆ ಸೂತಪುತ್ರನು ರಣರಂಗದಲ್ಲಿಯೇ ಪ್ರದ್ಯುಮ್ನನಿಗೆ ಶ್ಲಾಘನೀಯ ಮಧುರ ಮಾತುಗಳಿಂದ ಉತ್ತರಿಸಿದನು: “ರೌಕ್ಮಿಣೇಯ! ಕುದುರೆಗಳನ್ನು ಓಡಿಸುವ ನನಗೆ ಸಂಗ್ರಾಮದಲ್ಲಿ ಯಾವುದೇ ರೀತಿಯ ಭಯವಿಲ್ಲ. ವೃಷ್ಣಿಗಳು ಹೇಗೆ ಯುದ್ಧಮಾಡುತ್ತಾರೆಂದು ನನಗೆ ತಿಳಿದಿದೆ. ಈ ವಿಷಯದಲ್ಲಿ ನೀನು ಹೇಳಿದುದಕಿಂತ ಹೊರತಾಗಿ ಏನೂ ಇಲ್ಲ. ಆದರೆ ಸಾರಥ್ಯದಲ್ಲಿ ತೊಡಗಿರುವ ನಮಗೆ ಒಂದು ಉಪದೇಶವಿದೆ: ಎಲ್ಲ ಸಂದರ್ಭಗಳಲ್ಲಿಯೂ ಕಷ್ಟದಲ್ಲಿರುವ ರಥಿಯನ್ನು ರಕ್ಷಿಸಬೇಕು. ನೀನಾದರೋ ಶಾಲ್ವನು ಪ್ರಯೋಗಿಸಿದ ಬಾಣಗಳಿಂದ ಚೆನ್ನಾಗಿ ಹೊಡೆತ ತಿಂದು ಮೂರ್ಛಿತನಾಗಿದ್ದೆ. ಆದುದರಿಂದಲೇ ನಾನು ಹಿಂದೆ ಸರಿದೆ. ಈಗ ನೀನು ನಿನ್ನ ಎಚ್ಚರವನ್ನು ಪುನಃ ಪಡೆದುಕೊಂಡಿರುವೆಯಾದುದರಿಂದ ಕುದುರೆಗಳನ್ನು ಓಡಿಸುವುದರಲ್ಲಿ ನನ್ನಲ್ಲಿದ್ದ ಕುಶಲತೆಯನ್ನು ನೋಡು! ದಾರುಕನಿಂದ ಉತ್ಪನ್ನನಾದ ನಾನು ಅವನಿಂದ ಯಥಾವತ್ತಾಗಿ ತರಬೇತಿಯನ್ನು ಪಡೆದಿದ್ದೇನೆ. ಏನೂ ಭಯವಿಲ್ಲದೇ ಶಾಲ್ವನ ಮಹಾಸೇನೆಯನ್ನು ಪ್ರವೇಶಿಸುತ್ತೇನೆ.”

ಹೀಗೆ ಹೇಳಿ ಅವನು ಕುದುರೆಗಳನ್ನು ರಣರಂಗದಲ್ಲಿ ಮುಂದೆಹೋಗುವಂತೆ ಗಾಳದಿಂದ ಚೋದಿಸಿ, ವೇಗವಾಗಿ ಮುನ್ನುಗ್ಗಿದನು. ಆಗ ಬಾರಿಕೋಲಿನಿಂದ ಪ್ರಚೋದಿಸಲ್ಪಟ್ಟ, ಗಾಳಗಳಿಂದ ನಿಯಂತ್ರಿಸಲ್ಪಟ್ಟ ಆ ಉತ್ತಮ ಕುದುರೆಗಳು ವಿಚಿತ್ರ ವೃತ್ತಾಕಾರದಲ್ಲಿ, ಬಲ ಮತ್ತು ಎಡದಿಕ್ಕುಗಳಲ್ಲಿ ಎಲ್ಲೆಲ್ಲೂ ವಿಚಿತ್ರವಾಗಿ ಓಡುತ್ತಾ  ಅವು ಆಕಾಶದಲ್ಲಿ ಹಾರುತ್ತಿವೆಯೋ ಎಂಬಂತೆ ತೋರಿದವು. ದಾರುಕನ ಹಸ್ತಕೌಶಲವನ್ನು ತಿಳಿದ ಆ ಕುದುರೆಗಳ ಹೆಜ್ಜೆಗಳು ಭೂಮಿಯನ್ನು ಮುಟ್ಟುತ್ತಿರುವಾಗಲೆಲ್ಲ ಬೆಂಕಿಯ ಕಿಡಿಗಳನ್ನು ಹಾರಿಸುತ್ತಾ ಓಡಿದವು. ಏನೂ ಕಷ್ಟವಿಲ್ಲದೇ ಅವನು ಶಾಲ್ವನ ಸೇನೆಯನ್ನು ಎಡಬದಿಯಿಂದ ಬಂದು ಸುತ್ತುಹಾಕಿದನು. ಇದೊಂದು ಅದ್ಭುತವೇ ಆಗಿತ್ತು! ಪ್ರದ್ಯುಮ್ನನ ಕಿರುಕುಳಕ್ಕೊಳಗಾದ ಆ ಸೌಭರಾಜನು ತಕ್ಷಣವೇ ತನ್ನ ಬಲಗಡೆಯಲ್ಲಿದ್ದ ಸಾರಥಿಯ ಮೇಲೆ ಮೂರು ತೀಕ್ಷ್ಣ ಬಾಣಗಳನ್ನು ಪ್ರಯೋಗಿಸಿದನು. ಆದರೆ ದಾರಕನ ಮಗನು ಆ ಬಾಣಗಳಿಗೆ ಲಕ್ಷ್ಯಕೊಡದೇ ತನ್ನ ಮಾತನ್ನು ಕೇಳುತ್ತಿದ್ದ ಕುದುರೆಗಳನ್ನು ಇನ್ನೂ ಮುಂದುವರೆಸಿದನು. ಆಗ ಪುನಃ ಸೌಭರಾಜನು ಬಹುವಿಧದ ಬಾಣಗಳನ್ನು ನನ್ನ ಮಗ ವೀರ ರುಕ್ಮಿಣೀನಂದನನ ಮೇಲೆ ಪ್ರಯೋಗಿಸಿದನು. ಅವು ತಲುಪುವುದರೊಳಗೇ ಆ ಪರವೀರಹನು ತನ್ನ ತೀಕ್ಷ್ಣ ಬಾಣಗಳಿಂದ ಅವುಗಳನ್ನು ತುಂಡರಿಸಿದನು ಮತ್ತು ತನ್ನ ಹಸ್ತಲಾಘವವನ್ನು ತೋರಿಸಿ ರೌಕ್ಮಿಣೇಯನು ಮುಗುಳ್ನಕ್ಕನು. ಅವನ ಬಾಣಗಳನ್ನು ಪ್ರದ್ಯುಮ್ನನು ತುಂಡರಿಸಿದುದನ್ನು ನೋಡಿದ ಸೌಭರಾಜನು ದಾರುಣ ಅಸುರೀ ಮಾಯೆಯನ್ನುಪಯೋಗಿಸಿ ಬಾಣಗಳನ್ನು ಬಿಟ್ಟನು. ಆದರೆ ದೈತೇಯಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾನೆ ಎಂದು ತಿಳಿದ ಮಹಾಬಲನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಅವುಗಳನ್ನು ಮಧ್ಯದಲ್ಲಿಯೇ ತುಂಡರಿಸಿದನು. ರಕ್ತವನ್ನು ಕುಡಿಯುವ ಆ ಅಸ್ತ್ರವು ಅವನ ಬಾಣಗಳನ್ನು ದಾಟಿ ಮುಂದೆ ಹೋಗಿ ಅವನ ತಲೆ, ಎದೆ ಮತ್ತು ಮುಖಗಳನ್ನು ಹೊಡೆಯಲು ಅವನು ಮೂರ್ಛಿತನಾಗಿ ಕೆಳಗೆ ಬಿದ್ಡನು. ಬಾಣದ ಹೊಡೆತದಿಂದ ಪೀಡಿತನಾದ ಆ ಕ್ಷುದ್ರ ಶಾಲ್ವನು ಕೆಳಗುರುಳಲು ರೌಕ್ಮಿಣೇಯನು ಇನ್ನೊಂದು ಶತ್ರುನಾಶಕ ಬಾಣವನ್ನು ಹೂಡಿದನು. ಬಿಲ್ಲಿನ ಹೆದೆಗೇರಿಸಿದ ಸರ್ವ ದಾಶಾರ್ಹರೂ ಪೂಜಿಸುವ, ಸೂರ್ಯನ ತಾಪದಂತೆ ಬೆಳಗುತ್ತಿದ್ದ ಆ ಶರವನ್ನು ನೋಡಿ ಅಂತರಿಕ್ಷದಲ್ಲಿ ಹಾಹಾಕಾರವುಂಟಾಯಿತು. ಆಗ ಇಂದ್ರ ಮತ್ತು ಧನೇಶ್ವರನೂ ಸೇರಿ ಎಲ್ಲ ದೇವಗಣಗಳೂ ನಾರದ ಮತ್ತು ಮಹಾಬಲ ವಾಯುವನ್ನು ಕಳುಹಿಸಿದರು. ಅವರಿಬ್ಬರೂ ರೌಕ್ಮಿಣೇಯನಲ್ಲಿಗೆ ಬಂದು ದಿವೌಕಸರ ಸಂದೇಶವನ್ನು ಕೊಟ್ಟರು: “ವೀರ! ಶಾಲ್ವರಾಜನು ಎಂದೂ ನಿನ್ನಿಂದ ವಧೆಗೊಳ್ಳಲು ಸಾಧ್ಯವಿಲ್ಲ! ಎಷ್ಟೇ ಬಾರಿ ಬಾಣಗಳನ್ನು ಪ್ರಯೋಗಿಸಿದರೂ ರಣದಲ್ಲಿ ಇವನು ನಿನ್ನಿಂದ ಮರಣಹೊಂದುವುದಿಲ್ಲ. ನೀನು ಬಿಲ್ಲಿಗೇರಿಸಿದ ಈ ಶ್ರೇಷ್ಠ ಬಾಣವು ಎಂದೂ ಇವನನ್ನು ಕೊಲ್ಲುವುದಿಲ್ಲ. ರಣದಲ್ಲಿ ಇವನ ಮೃತ್ಯುವು ದೇವಕಿನಂದನ ಕೃಷ್ಣನಿಂದ ಎಂದು ಧಾತ್ರನ ಸಂಕಲ್ಪವಾಗಿದೆ. ಅದು ಸುಳ್ಳಾಗುವುದಿಲ್ಲ!”

ಆಗ ಪರಮಸಂಹೃಷ್ಟ ಪ್ರದ್ಯುಮ್ನನು ಆ ಉತ್ತಮ ಶರವನ್ನು ತನ್ನ ಆ ಶ್ರೇಷ್ಠ ಧನುಸ್ಸಿನಿಂದ ಹಿಂದೆ ತೆಗೆದುಕೊಂಡು ಭತ್ತಳಿಕೆಯಲ್ಲಿ ಇರಿಸಿದನು. ಆಗ ಶಾಲ್ವನು ಪರಮ ದುರ್ಬಲನಾಗಿ ಮೇಲೆದ್ದು, ಪ್ರದ್ಯುಮ್ನನ ಶರಗಳಿಂದ ಪೀಡಿತನಾಗಿ ತನ್ನ ಸೇನೆಯೊಂದಿಗೆ ಹಿಂದೆ ಸರಿದನು. ವೃಷ್ಣಿಗಳಿಂದ ಪೆಟ್ಟುತಿಂದ ಆ ಕ್ರೂರನು ದ್ವಾರಕೆಯನ್ನು ಬಿಟ್ಟು ಸೌಭವನ್ನೇರಿ ಆಕಾಶದ ಕಡೆ ಪ್ರಯಾಣಿಸಿದನು.

ಅನಾರ್ತನಗರವು ಮುಕ್ತವಾದ ನಂತರ, ಯುಧಿಷ್ಠಿರನ ಮಹಾಕ್ರತು ರಾಜಸೂಯದಿಂದ ಕೃಷ್ಣನು ಅಲ್ಲಿಗೆ ಹಿಂದಿರುಗಿ ಬಂದನು. ಆಗ ಅವನು ಸತ್ವವನ್ನು ಕಳೆದುಕೊಂಡಿದ್ದ ದ್ವಾರಕೆಯನ್ನು, ಅದರ ಸ್ವಾಧ್ಯಾಯ ವಷಟ್ಕಾರಗಳು ನಿಂತಿರುವುದನ್ನೂ, ಆಭರಣಗಳನ್ನು ಧರಿಸದೇ ಇದ್ದ ವರಸ್ತ್ರೀಯರನ್ನೂ ನೋಡಿದನು ದ್ವಾರಕೆಯ ಉಪವನಗಳು ಗುರುತಿಸಲಾಗದಂತಿರುವುದನ್ನು ನೋಡಿ ಶಂಕೆಗೊಳಗಾಗಿ ಅವನು ಹೃದಿಕಾತ್ಮಜನನ್ನು (ಕೃತವರ್ಮನನ್ನು) ಕೇಳಿದನು: “ವೃಷ್ಣಿಪುರದ ನರನಾರಿಯರು ತುಂಬಾ ಅಸ್ವಸ್ಥರಾಗಿರುವರಂತೆ ತೋರುತ್ತಿದ್ದಾರೆ! ನರಶಾರ್ದೂಲ! ಇದು ಏಕೆ ಎಂದು ಕೇಳಲು ಬಯಸುತ್ತೇನೆ.”

ಕೃಷ್ಣನು ಹೀಗೆ ಕೇಳಲು ಆ ಹಾರ್ದಿಕ್ಯನು ಶಾಲ್ವನು ಪುರವನ್ನು ಮುತ್ತಿಗೆ ಹಾಕಿದುದರ ಮತ್ತು ಅವನಿಂದ ಬಿಡುಗಡೆಹೊಂದಿದುದರ ಕುರಿತು ವಿಸ್ತಾರವಾಗಿ ಹೇಳಿದನು. ಅದೆಲ್ಲವನ್ನೂ ಕೃಷ್ಣನು ಸಂಪೂರ್ಣವಾಗಿ ಕೇಳಿ, ಶಾಲ್ವರಾಜನ ವಿನಾಶದ ಕುರಿತು ಮನಸ್ಸು ಮಾಡಿದನು. ಅನಂತರ ಅವನು ಪುರಜನರನ್ನು ಮತ್ತು ರಾಜ ಆಹುಕನನ್ನು, ಹಾಗೆಯೇ ಅನಕದುಂದುಭಿಯನ್ನು, ಸರ್ವ ವೃಷ್ಣಿಪ್ರವೀರರನ್ನು ಸಮಾಧಾನಪಡಿಸಿ ಸಂತೋಷದಿಂದ ಹೇಳಿದನು: “ಯಾದವರ್ಷಭರೇ! ಸದಾ ನಗರದ ರಕ್ಷಣೆಯಲ್ಲಿಯೇ ನಿರತರಾಗಿರಿ. ಶಾಲ್ವರಾಜನ ವಿನಾಶಕ್ಕಾಗಿ ನಾನು ಹೊರಡುತ್ತಿದ್ದೇನೆ. ಅವನನ್ನು ಕೊಲ್ಲದೆಯೇ ನಾನು ದ್ವಾರವತೀ ನಗರಕ್ಕೆ ಹಿಂದಿರುಗುವುದಿಲ್ಲ ಎಂದು ತಿಳಿಯಿರಿ. ಶಾಲ್ವನೊಂದಿಗೆ ಸೌಭನಗರವನ್ನೂ ನಾಶಪಡಿಸಿಯೇ ನಾನು ನಿಮ್ಮನ್ನು ಪುನಃ ನೋಡುತ್ತೇನೆ. ಮೂರೂ ಸಾಮಗಳಲ್ಲಿ ಶತ್ರುಭೀಷಣ ದುಂದುಭಿಯನ್ನು ಮೊಳಗಿಸಿ.”

ಅವನಿಂದ ಯಥಾವತ್ತಾಗಿ ಆಶ್ವಾಸಿತರಾದ ಆ ವೀರರು ಎಲ್ಲರೂ ಸಂತೋಷದಿಂದ “ಹೊರಡು! ಶತ್ರುವನ್ನು ಕತ್ತರಿಸಿಹಾಕು!” ಎಂದು ಕೃಷ್ಣನಿಗೆ ಕೂಗಿ ಹೇಳಿದರು. ಆ ಪ್ರಹೃಷ್ಟ ವೀರರಿಂದ ಆಶೀರ್ವಾದ ಅಭಿನಂದನೆಗಳನ್ನು ಪಡೆದು, ದ್ವಿಜಶ್ರೇಷ್ಠರು ವಾಚನಮಾಡಿದ ನಂತರ, ಆಹುಕನಿಗೆ ಶಿರಸಾ ಪ್ರಣಮಿಸಿ, ಸೈನ್ಯ-ಸುಗ್ರೀವರಿಂದ ಕೂಡಿದ ರಥವನ್ನೇರಿ, ಅದರ ಶಬ್ಧವು ದಿಕ್ಕುಗಳಲ್ಲಿ ಮೊಳಗುತ್ತಿರಲು ತನ್ನ ಶ್ರೇಷ್ಠ ಶಂಖ ಪಾಂಚಜನ್ಯವನ್ನು ಮೊಳಗಿಸುತ್ತಾ, ವಿಜಯವನ್ನೇ ಗುರಿಯನ್ನಾಗಿಟ್ಟುಕೊಂಡ, ಚತುರಂಗ ಬಲದ ಮಹಾ ಸೇನೆಯಿಂದ ಸುತ್ತುವರೆಯಲ್ಪಟ್ಟು ಕೃಷ್ಣನು ಹೊರಟನು. ಬಹಳಷ್ಟು ದೇಶಗಳನ್ನೂ, ಗಿರಿಗಳನ್ನೂ, ವನಗಳನ್ನೂ, ಸರೋವರಗಳನ್ನೂ, ಝರಿಗಳನ್ನೂ ದಾಟಿ ಮಾರ್ತ್ತಿಕಾವತವನ್ನು ತಲುಪಿದನು. ಅಲ್ಲಿ ಅವನಿಗೆ ಶಾಲ್ವನು ನಗರವನ್ನು ಬಿಟ್ಟು, ಸೌಭವನ್ನೇರಿ ಹತ್ತಿರದಲ್ಲಿಯೇ ಹೋಗಿದ್ದಾನೆ ಎಂದು ತಿಳಿಯಿತು ಮತ್ತು ಅವನನ್ನು ಹುಡುಕಿಕೊಂಡು ಹಿಂಬಾಲಿಸಿದನು. ಸಾಗರತೀರವನ್ನು ಸೇರಿ, ಸಮುದ್ರದ ಮಧ್ಯದಲ್ಲಿ ಮಹಾ ಅಲೆಗಳಿಂದ ಆವೃತ ದ್ವೀಪದಲ್ಲಿ ಸೌಭವನ್ನೇರಿ ಶಾಲ್ವನು ಇದ್ದಾನೆ ಎಂದು ಅವನಿಗೆ ತಿಳಿಯಿತು. ಕೃಷ್ಣನು ಬರುತ್ತಿರುವುದನ್ನು ದೂರದಿಂದಲೇ ನೋಡಿದ ಆ ದುಷ್ಟನು ಮುಗುಳ್ನಗುತ್ತಾ ಮತ್ತೆ ಮತ್ತೆ ಯುದ್ಧಕ್ಕೆ ಆಹ್ವಾನಿಸಿದನು. ತನ್ನ ಶಾಂಙ್ರಧನುಸ್ಸಿನಿಂದ ಪ್ರಯೋಗಿಸಿದ ಬಾಣಗಳು ಅವನ ಪುರವನ್ನು ತಲುಪುವುದರೊಳಗೇ ಕತ್ತರಿಸಿ ಬೀಳಲು ಕೃಷ್ಣನಿಗೆ ಅತ್ಯಂತ ರೋಷವುಂಟಾಯಿತು. ಆ ಪಾಪಪ್ರಕೃತಿಯ ದೈತ್ಯನು ಒಂದೇ ಸಮನೆ ಕೃಷ್ಣನ ಮೇಲೆ, ಅವನ ಸೈನಿಕರ ಮೇಲೆ, ಸೂತ ಮತ್ತು ಕುದುರೆಗಳ ಮೇಲೆ ಸಹಸ್ರಾರು ದುರ್ಧರ್ಷ ಶರಗಳ ಮಳೆಯನ್ನೇ ಸುರಿಸಿದನು. ಆ ಶರಗಳ ಕುರಿತು ಯೋಚನೆ ಮಾಡದೇ ಕೃಷ್ಣನು ಯುದ್ಧದಲ್ಲಿ ಮುಂದುವರಿದನು. ಶಾಲ್ವನನ್ನು ಅನುಸರಿಸಿ ಹೋರಾಡುತ್ತಿದ್ದ ವೀರ ಅಸುರರು ನೂರಾರು ಸಾವಿರಾರು ನುಣುಪಾದ, ಮರ್ಮಭೇದಿ ಬಾಣಗಳನ್ನು ಕೃಷ್ಣನ ಮೇಲೆ, ಅವನ ಕುದುರೆಗಳ ಮೇಲೆ, ರಥದ ಮೇಲೆ ಮತ್ತು ದಾರುಕನ ಮೇಲೆ ಪ್ರಯೋಗಿಸಿದರು. ಕೃಷ್ಣನ ಕುದುರೆಗಳಾಗಲೀ, ರಥವಾಗಲೀ, ದಾರುಕನಾಗಲೀ ಅಥವಾ ಸೈನಿಕರಾಗಲೀ ಆ ಶರಗಳ ದಟ್ಟ ಮುಸುಕಿನಲ್ಲಿ ಅವನಿಗ್ ಕಾಣುತ್ತಿರಲಿಲ್ಲ. ಕೃಷ್ಣನೂ ಕೂಡ ತನ್ನ ದಿವ್ಯ ಧನುಸ್ಸಿನಿಂದ ಬಹಳಷ್ಟು ರೀತಿಯ ಬಾಣಗಳನ್ನು ಅಭಿಮಂತ್ರಿಸಿ ಪ್ರಯೋಗಿಸಿದನು. ಆದರೆ ಅವನಿಗಾಗಲೀ ಅವನ ಸೈನ್ಯಕ್ಕಾಗಲೀ ಗುರಿಯೇ ಇರಲಿಲ್ಲ. ಯಾಕೆಂದರೆ ಶಾಲ್ವನು ಕ್ರೋಷಮಾತ್ರದಲ್ಲಿ ಸೌಭದಲ್ಲಿ ಆಕಾಶದಲ್ಲಿ ತಿರುಗಾಡುತ್ತಿದ್ದನು. ಆಗ ಅಲ್ಲಿ ಸುತ್ತುವರೆದು ನಿಂತಿದ್ದ ಪ್ರೇಕ್ಷಕರೆಲ್ಲರೂ ಹರ್ಷಿತರಾಗಿ ಸಿಂಹನಾದ ಮತ್ತು ಚಪ್ಪಾಳೆಗಳಿಂದ ಕೃಷ್ಣನನ್ನು ಹುರಿದುಂಬಿಸಿದರು. ಆ ಮಹಾರಣದಲ್ಲಿ ಅವನ ಧನುಸ್ಸಿನಿಂದ ಹೊರಟ ಬಾಣಗಳು ರಕ್ತದಾಹಿಗಳಾದ ಕೀಟಗಳಂತೆ ಹಾರಿ ದಾನವರ ಅಂಗಗಳನ್ನು ಚುಚ್ಚಿದವು. ಸೌಭದ ಮಧ್ಯದಲ್ಲಿ ಹಾಹಾಕಾರ ಶಬ್ಧವು ಹೆಚ್ಚಾಯಿತು ಮತ್ತು ತೀಕ್ಷ್ಣ ಬಾಣಗಳಿಂದ ಸತ್ತವರು ಮಹಾಸಾಗರದಲ್ಲಿ ಬಿದ್ದರು. ಭುಜಗಳಿಂದ ಕತ್ತರಿಸಲ್ಪಟ್ಟ ಬಾಹುಗಳ ಕದಂಬಾಕೃತಿಯಲ್ಲಿ ಕಾಣುತ್ತಿದ್ದ ದಾನವರು ಭೈರವ ಕೂಗನ್ನು ಕೂಗುತ್ತಾ ಒಂದೇ ಸಮನೆ ಬೀಳುತ್ತಿದ್ದರು. ಆಗ ಗೋವಿನ ಹಾಲಿನ, ಮಲ್ಲಿಗೆಯ, ಚಂದ್ರನ, ತಾವರೆಯ ಮತ್ತು ಬೆಳ್ಳಿಯ ಪ್ರಭೆಯುಳ್ಳ ಜಲಜ ಪಾಂಚಜನ್ಯಕ್ಕೆ ತನ್ನ ಉಸಿರನ್ನು ತುಂಬಿಸಿ ಕೃಷ್ಣನು ಮೊಳಗಿಸಿದನು.

ರಣರಂಗದಲ್ಲಿ ಅವರು ಬೀಳುತ್ತಿರುವುದನ್ನು ನೋಡಿದ ಸೌಭಪತಿ ಶಾಲ್ವನು ಕೃಷ್ಣನೊಂದಿಗೆ ಮಹಾ ಮಾಯಯುದ್ಧವನ್ನು ಪ್ರಾರಂಭಿಸಿದನು. ಅವನು ಒಂದೇ ಸಮನೆ ಕೃಷ್ಣನ ಮೇಲೆ ಹುಡಹುಡಾ, ಪ್ರಾಸ, ಶಕ್ತಿ, ಶೂಲ, ಪರಶು, ಪಟ್ಟಿಷ, ಮತ್ತು ಭುಶುಂಡಗಳನ್ನು ಎಸೆಯತೊಡಗಿದನು. ಅವುಗಳನ್ನು ಅವನು ತನ್ನದೇ ಮಾಯೆಯಿಂದ ಹಿಡಿದು ನಾಶಪಡಿಸಿದನು. ಮಾಯೆಯನ್ನು ನಾಶಪಡಿಸಿದ ನಂತರ ಶಾಲ್ವನು ಕೃಷ್ಣನೊಡನೆ ಗಿರಿಶೃಂಗಗಳಿಂದ ಯುದ್ಧ ಮಾಡತೊಡಗಿದನು. ಒಂದು ಕ್ಷಣದಲ್ಲಿ ರಾತ್ರಿಯಾಗುತ್ತಿತ್ತು, ಇನ್ನೊಂದು ಕ್ಷಣದಲ್ಲಿ ಬೆಳಗಾಗುತ್ತಿತ್ತು. ದುರ್ದಿನವಾಗುತ್ತಿತ್ತು, ಸುದಿನವೆನಿಸುತ್ತಿತ್ತು, ಛಳಿಯಾಗುತ್ತಿತ್ತು, ಮತ್ತು ಸೆಖೆಯಾಗುತ್ತಿತ್ತು. ಈ ರೀತಿ ಆ ಶತ್ರುವು ಕೃಷ್ಣನೊಡನೆ ಮಾಯೆಯಿಂದ ಮೋಸಗೊಳಿಸಿ ಯುದ್ಧಮಾಡಿದನು. ಅದನ್ನು ತಿಳಿದ ಕೃಷ್ಣನು ಸ್ವಲ್ಪ ಸಮಯದಲ್ಲಿಯೇ ಮಾಯಾಯುದ್ಧದ ಬಾಣಗಳಿಂದ ಎಲ್ಲವನ್ನೂ ಎಲ್ಲಕಡೆಯೂ ನಾಶಪಡಿಸಿದನು. ಆಕಾಶದಲ್ಲಿ ಶತಸೂರ್ಯಗಳಿರುವಂತೆ, ಶತಚಂದ್ರಗಳಿರುವಂತೆ ಮತ್ತು ಸಹಸ್ರ ನಕ್ಷತ್ರಗಳಿರುವಂತೆ ತೋರಿತು. ಆಗ ಹಗಲಾಗಲೀ, ರಾತ್ರಿಯಾಗಲೀ, ದಿಕ್ಕುಗಳಾಗಲೀ ಗೊತ್ತಾಗುತ್ತಿರಲಿಲ್ಲ. ಮೋಹವಾಚ್ಛಾದಿಸಿದ ಕೃಷ್ಣನು ಆಗ ಪ್ರಜ್ಞಾಸ್ತ್ರವನ್ನು ಹೂಡಿದನು ಮತ್ತು ಅದು ಅವನ ಅಸ್ತ್ರಗಳನ್ನು ಹತ್ತಿಯ ಎಸಳುಗಳಂತೆ ಹಾರಿಸಿತು. ಕೃಷ್ಣನು ಶತ್ರುವನ್ನೂ ಮತ್ತು ಇತರ ದೃಶ್ಯಗಳನ್ನೂ ಕಾಣಲು ಶಕ್ತನಾದ ನಂತರ ಪುನಃ ಮೈನವಿರೇಳಿಸುವ ತುಮುಲ ಯುದ್ಧವು ನಡೆಯಿತು.

ಹೀಗೆ ಆ ಮಹಾರಿಪು ಶಾಲ್ವರಾಜನು ಕೃಷ್ಣನೊಡನೆ ಯುದ್ಧಮಾಡುತ್ತಿರಲು ಅವನು ಪುನಃ ಆಕಾಶವನ್ನೇರಿದನು. ಆಗ ವಿಜಯವನ್ನು ಬಯಸುತ್ತಿದ್ದ ಆ ಮಂದಬುದ್ಧಿ ಶಾಲ್ವನು ರೋಷದಿಂದ ಕೃಷ್ಣನ ಮೇಲೆ ಕೊಲ್ಲುವ ನೂರು ಮಹಾ ಗದೆಗಳನ್ನೂ, ಉರಿಯುತ್ತಿರುವ ಶೂಲ-ಮುಸಲ-ಖಡ್ಗಗಳನ್ನು ಎಸೆದನು. ಆಕಾಶದಲ್ಲಿ ಮಿಂಚಿ ಹಾರಿ ತನ್ನ ಕಡೆ ಬಂದು ಬೀಳುತ್ತಿದ್ದ ಅವುಗಳನ್ನು ಕೃಷ್ಣನು ವೇಗವಾಗಿ ಹೋಗುತ್ತಿದ್ದ ಶರಗಳಿಂದ ತಡೆಹಿಡಿದು ಅಂತರಿಕ್ಷದಲ್ಲಿಯೇ ಎರಡು ಮೂರು ತುಂಡುಗಳನ್ನಾಗಿ ಕತ್ತರಿಸಿದಾಗ ಆಕಾಶದಲ್ಲಿ ದೊಡ್ಡ ತುಮುಲವುಂಟಾಯಿತು. ಶಾಲ್ವನು ಕೃಷ್ಣನ ಮೇಲೆ, ದಾರುಕ-ಕುದುರೆ-ರಥಗಳ ಮೇಲೆ ನೂರಾರು ಸಹಸ್ರಾರು ನುಣುಪಾದ ಬಾಣಗಳನ್ನು ಸುರಿಸಿ ಮುಚ್ಚಿದನು. ವೀರ ದಾರುಕನು ವಿಹ್ವಲನಾಗಿ ಕೃಷ್ಣನಿಗೆ ಹೇಳಿದನು: “ಶಾಲ್ವಬಾಣಗಳಿಂದ ಪೀಡಿತನಾಗಿ ನನಗೆ ಸುಧಾರಿಸಿಕೊಳ್ಳಬೇಕಾಗಿದೆ. ಸುಧಾರಿಸಿಕೊಳ್ಳುತ್ತೇನೆ.”

ಸಾರಥಿಯ ಈ ಕರುಣಾಜನಕ ಮಾತುಗಳನ್ನು ಕೇಳಿ ಕೃಷ್ಣನು ಅವನ ಕಡೆ ನೋಡಿದನು. ಅವನು ಶರಗಳಿಂದ ಹೊಡೆತತಿಂದುದನ್ನು ನೋಡಿದನು. ಅವನ ತಲೆಯ ಮೇಲೆ, ದೇಹದ ಮೇಲೆ, ಎರಡೂ ಭುಜಗಳ ಮೇಲೆ ಶರಗಳಿಂದ ಚುಚ್ಚಲ್ಪಡದ ಭಾಗವನ್ನೇ ಅವನು ಕಾಣಲಿಲ್ಲ! ಆ ಬಾಣದ ಮಳೆಯ ಆಘಾತಕ್ಕೆ ಸಿಲುಕಿದ ಅವನ ರಕ್ತವು ಧಾರಾಕಾರವಾಗಿ ಸುರಿಯುತ್ತಿರಲು ಅವನು ಮಳೆಸುರಿಯುತ್ತಿದ್ದ ಕೆಂಪು ಧಾತುವಿನ ಗುಡ್ದದಂತೆ ತೋರಿದನು. ಕೃಷ್ಣನ ಸಾರಥಿಯು ರಥದ ಗಾಳಗಳನ್ನು ಹಿಡಿದುಕೊಂಡಿದ್ದರೂ, ಎಚ್ಚರತಪ್ಪಿ ಬೀಳುವುದರಲ್ಲಿದ್ದನು. ಆಗ ಕೃಷ್ಣನು ಶಾಲ್ವನ ಬಾಣಗಳಿಂದ ಪೀಡಿತನಾದ ಅವನನ್ನು ಹಿಡಿದು ನಿಲ್ಲಲು ಸಹಾಯಮಾಡಿದನು. ಆಗ ದ್ವಾರಕೆಯಿಂದ ಬಂದಿದ್ದ ಆಹುಕನ ಗೆಳೆಯನಾಗಿದ್ದ, ವಿಷಣ್ಣನೂ ಸಂಕಟದಲ್ಲಿದ್ದವನೂ ಆದ ಒಬ್ಬ ಪುರುಷನೂ ಅವಸರದಲ್ಲಿ ಕೃಷ್ಣನ ರಥದ ಬಳಿ ಬಂದು ಅವನಿಗೆ ಒಂದು ಸಂದೇಶವನ್ನು ಹೇಳಿದನು: “ವೀರ! ಕೇಶವ! ನಾನು ದ್ವಾರಕಾಧಿಪತಿ ಆಹುಕ ನಿನಗೆ ಈ ಮಾತನ್ನು ಹೇಳುತ್ತಿದ್ದೇನೆ. ನಿನ್ನ ತಂದೆಯ ಸಖನೆಂದು ನನ್ನನ್ನು ತಿಳಿ. ಇಂದು ಶಾಲ್ವನು ದ್ವಾರಕೆಯನ್ನು ಮುತ್ತಿಗೆಹಾಕಿದ್ದಾನೆ ಮತ್ತು ನಿನ್ನನ್ನು ಎದುರಿಸಿ ತಡೆಯುತ್ತಿದ್ದಾನೆ. ಅವನು ಶೂರನ ಮಗನನ್ನು ಬಲದಿಂದ ಸಂಹರಿಸಿದ್ದಾನೆ. ನಿನ್ನ ಯುದ್ಧವು ಸಾಕು. ಹಿಂದಿರುಗು. ದ್ವಾರಕೆಯನ್ನೇ ರಕ್ಷಿಸುವುದು ನಿನ್ನ ಮಹತ್ವದ ಕರ್ತವ್ಯವಾಗಿದೆ.”

ಆ ಸಂದೇಶವನ್ನು ಕೇಳಿ ಕೃಷ್ಣನು ಪರಮ ದುಃಖಿತನಾದನು. ತನ್ನ ಕರ್ತವ್ಯವು ಏನು ಎನ್ನುವುದನ್ನು ನಿಶ್ಚಯಿಸಲು ಅಸಮರ್ಥನಾದನು. ಆ ಅಪ್ರಿಯ ಮಾತನ್ನು ಕೇಳಿ ಮನದಲ್ಲಿಯೇ ಸಾತ್ಯಕಿ, ಬಲದೇವ, ಮಹಾರಥಿ ಪ್ರದ್ಯುಮ್ನರನ್ನು ದೂರಿದನು. ಯಾಕೆಂದರೆ ಸೌಭನನ್ನು ಸೋಲಿಸಲು ಹೊರಡುವಾಗ ದ್ವಾರಕೆಯ ಮತ್ತು ತಂದೆಯ ರಕ್ಷಣೆಯನ್ನು ಕೃಷ್ಣನೇ ಅವರ ಮೇಲಿರಿಸಿದ್ದನು. ಮಹಾಬಾಹು ಬಲದೇವ, ಶತ್ರುಹ ಸಾತ್ಯಕಿ, ರೌಕ್ಮಿಣೇಯ ವೀರವಾನ್ ಚಾರುದೇಷ್ಣ ಮತ್ತು ಸಾಂಬನ ನಾಯಕತ್ವದಲ್ಲಿರುವ ಇತರರು ಜೀವದಿಂದಿರಬಹುದೇ ಎನ್ನುವ ಕೆಟ್ಟ ಯೋಚನೆಯು ಅವನ ಮನಸ್ಸನ್ನು ಕಾಡಿತು. ಯಾಕೆಂದರೆ ಈ ನರವ್ಯಾಘ್ರರು ಜೀವಂತವಿರುವಾಗಲೇ ಎಂದೂ ಶೂರಸುತನನ್ನು ಸಂಹರಿಸಲು ಸ್ವಯಂ ವಜ್ರಭೃತನಿಗೂ ಶಕ್ಯವಿಲ್ಲ. ಶೂರಸುತನು ಹತನಾದುದು ನಿಶ್ವಯವೆಂದರೆ ಬಲದೇವನ ನಾಯಕತ್ವದಲ್ಲಿದ್ದ ಅವರೂ ಕೂಡ ಪರಾಭವ ಹೊಂದಿದ್ದುದು ನಿಶ್ಚಯ ಎಂದು ಕೃಷ್ಣನು ಮನಸ್ಸಿನಲ್ಲಿಯೇ ನಿರ್ಧರಿಸಿದನು. ಪುನಃ ಪುನಃ ಅವರ ಸರ್ವವಿನಾಶವಾದುದರ ಕುರಿತು ಚಿಂತಿಸಿದನು. ಆಗ ತುಂಬಾ ವಿಹ್ವಲನಾಗಿ ಪುನಃ ಶಾಲ್ವನೊಂದಿಗೆ ಯುದ್ಧಮಾಡಿದನು.

ಕೃಷ್ಣನು ಸೌಭದಿಂದ ವೀರ ಶೂರಸುತನು (ವಸುದೇವನು) ಬೀಳುತ್ತಿರುವುದನ್ನು ನೋಡಿದನು. ತನ್ನ ಪುಣ್ಯವನ್ನು ಕಳೆದುಕೊಂಡು ಸ್ವರ್ಗದಿಂದ ಭೂಮಿಯ ಕಡೆಗೆ ಬೀಳುತ್ತಿದ್ದ ಯಯಾತಿಯಂತೆ ತನ್ನ ತಂದೆಯು ಬೀಳುತ್ತಿರುವ ದೃಶ್ಯವನ್ನು ನೋಡಿ ಅವನಿಗೆ ಮೂರ್ಛೆ ಆವರಿಸಿತು. ವಸುದೇವನ ಮುಂಡಾಸು ಹೊರಬಿದ್ದಿತ್ತು, ಅವನ ವಸ್ತ್ರಗಳು ಚೆಲ್ಲಪಿಲ್ಲಿಯಾಗಿದ್ದವು, ಮತ್ತು ಅವನ ತಲೆಕೂದಲು ಕೆದರಿತ್ತು. ಪುಣ್ಯವನ್ನು ಕಳೆದುಕೊಂಡ ಗ್ರಹವು ಬೀಳುತ್ತಿರುವಂತೆ ಅವನು ಕಂಡನು. ಆಗ ಕೃಷ್ಣನ ಶ್ರೇಷ್ಠ ಧನುಸ್ಸು ಶಾಙ್ರವು ಕೈಯಿಂದ ಬಿದ್ದಿತು ಮತ್ತು ದುಃಖ ಉಕ್ಕಿಬಂದು ಅವನು ರಥದಲ್ಲಿಯೇ ಕುಸಿದು ಬಿದ್ದನು. ಅವನು ಎಚ್ಚರ ತಪ್ಪಿ ಜೀವಕಳೆದುಕೊಂಡವನಂತೆ ರಥದಲ್ಲಿ ಕುಸಿದುದನ್ನು ನೋಡಿ ಅವನ ಸರ್ವ ಸೈನ್ಯವೂ ಹಾಹಾಕಾರಮಾಡಿತು. ಪಕ್ಷಿಯು ಬೀಳುವಂತೆ ಕೈಕಾಲುಗಳನ್ನು ಬೀಸಿ ತನ್ನ ತಂದೆಯು ಬೀಳುತ್ತಿರುವ ದೃಶ್ಯವನ್ನು ಕೃಷ್ಣನು ನೋಡಿದನು. ಅವನು ಬೀಳುತ್ತಿರುವಾಗ ಶೂಲ-ಪಟ್ಟಿಶಗಳನ್ನು ಹಿಡಿದು ಚೆನ್ನಾಗಿ ಹೊಡೆಯುತ್ತಿರುವುದನ್ನು ನೋಡಿ ಅವನ ಚೇತನವು ಕಂಪಿಸಿತು. ಒಂದು ಕ್ಷಣ ಅವನ ಚೇತನವು ಗರಗರನೆ ತಿರುಗಿತು. ಆದರೆ ಅದೇ ಕ್ಷಣದಲ್ಲಿ ಅವನು ಚೇತರಿಸಿಕೊಂಡನು. ಆಗ ಅವನು ಸೌಭವನ್ನೂ ನೋಡಲಿಲ್ಲ, ಶತ್ರುವನ್ನೂ ಕಾಣಲಿಲ್ಲ, ಶಾಲ್ವನನ್ನೂ ಕಾಣಲಿಲ್ಲ ಮತ್ತು ಅವನ ವೃದ್ಧ ತಂದೆಯನ್ನೂ ಕಾಣಲಿಲ್ಲ. ಆಗ ಅವನು ಮನಸ್ಸಿನಲ್ಲಿ ಇದು ಮಾಯೆ ಎಂದು ತಿಳಿದು ನಿಶ್ಚಯ ಮಾಡಿದನು. ಪುನಃ ಎಚ್ಚೆತ್ತು ನೂರಾರು ಶರಗಳನ್ನು ಹರಡಿಸಿದನು.

ಆಗ ಕೃಷ್ಣನು ಸುಂದರ ಧನುಸ್ಸನ್ನು ಹಿಡಿದು ಸೌಭದಲ್ಲಿದ್ದ ದೇವತೆಗಳ ಶತ್ರುಗಳನ್ನು ಶರಗಳಿಂದ ತುಂಡರಿಸಿದನು. ಅವನ ಶಾರ್ಙದಿಂದ ವಿಷವನ್ನು ಕಾರುತ್ತಿದ್ದ ಸರ್ಪಗಳಂತಿರುವ ಅಗ್ನಿಯ ತೇಜಸ್ಸಿನಿಂದ ಮೇಲೆ ಹಾರುವ ಮೊನಚಾದ ಬಾಣಗಳನ್ನು ಪ್ರಯೋಗಿಸಿ ಶಾಲ್ವರಾಜನೆಡೆಗೆ ಎಸೆದನು. ಆಗ ಸೌಭವು ಅದೃಶ್ಯವಾಯಿತು. ಮಾಯೆಯಿಂದ ಅದು ಅದೃಶ್ಯವಾದುದನ್ನು ನೋಡಿ ಕೃಷ್ಣನು ವಿಸ್ಮಿತನಾದನು. ಆಗ ಅವನು ನಿಂತಿರುವಂತೆಯೇ ವಿಕಾರ ಮುಖ-ಹಣೆಗಳ ದಾನವರ ಗುಂಪು ಜೋರಾಗಿ ಕಿರಿಚಿತು. ತಕ್ಷಣವೇ ಅವನು ಮಹಾರಣದಲ್ಲಿ ಅವರನ್ನು ವಧಿಸಲು ಶಬ್ಧಸಾಹ ಅಸ್ತ್ರವನ್ನು (ಶಬ್ಧವನ್ನು ಹುಡುಕಿ ಕೊಲ್ಲುವ ಅಸ್ತ್ರ) ಪ್ರಯೋಗಿಸಲು ಅವರ ಶಬ್ಧವು ನಿಂತಿತು. ಶಬ್ಧಸಾಧನಗಳಿಂದ ಹೊರಟ ಆದಿತ್ಯನಂತೆ ಉರಿಯುತ್ತಿರುವ ಶರಗಳಿಂದ ಆ ಎಲ್ಲ ದಾನವರೂ ಹತರಾಗಿ ಅವರ ಶಬ್ಧವು ಕಡಿಮೆಯಾಯಿತು. ಆ ಶಬ್ಧವು ಕಡಿಮೆಯಾಗಲು ಪುನಃ ಇನ್ನೊಂದು ಕಡೆಯಿಂದ ಹೊಸ ತುಮುಲವು ಪ್ರಾರಂಭವಾಯಿತು. ಆ ಕಡೆ ಕೂಡ ಕೃಷ್ಣನು ಬಾಣಗಳನ್ನು ಪ್ರಯೋಗಿಸಿದನು. ಹೀಗೆ ಹತ್ತೂ ದಿಕ್ಕುಗಳಲ್ಲಿ ಮೇಲೆ ಮತ್ತು ಕೆಳಗೆ ಎಲ್ಲಕಡೆಯಿಂದ ಅಸುರರು ಕಿರುಚಲು ಅವರೆಲ್ಲರನ್ನೂ ಅವನು ಸಂಹರಿಸಿದನು.

ಆಗ ಬೇಕಾದಲ್ಲಿ ಹೋಗಬಲ್ಲ ಸೌಭವು ಪ್ರಾಗ್ಜ್ಯೋತಿಷಕ್ಕೆ ಹೋಗಿ ಪುನಃ ಕಾಣಿಸಿಕೊಂಡಿತು ಮತ್ತು ಕೃಷ್ಣನ ಕಣ್ಣುಗಳನ್ನು ಕುರುಡುಮಾಡಿತು. ನಂತರ ತಕ್ಷಣವೇ ಲೋಕಾಂತಕನಂತೆ ತೋರುತ್ತಿದ್ದ ದಾನವನು ವಾನರ ವೇಶದಲ್ಲಿ ಬಂದು ಕೃಷ್ಣನ ಮೇಲೆ ದೊಡ್ಡ ದೊಡ್ಡ ಕಲ್ಲುಗಳ ಮಳೆಯನ್ನೇ ಸುರಿಸಿದನು. ಕೃಷ್ಣನು ಎಲ್ಲ ಕಡೆಗಳಿಂದಲೂ ಪರ್ವತಗಳ ಮಳೆಯ ಹೊಡೆತಕ್ಕೆ ಸಿಕ್ಕನು ಮತ್ತು ಅವನು ಪರ್ವತಗಳಿಂದ ಮುಚ್ಚಲ್ಪಟ್ಟ ಒಂದು ಹುತ್ತದಂತೆ ಆದನು. ಸಾರಥಿಯೊಂದಿಗೆ ಮತ್ತು ಧ್ವಜದೊಂದಿಗೆ ಅವನು ಪರ್ವತಗಳ ಕೆಳಗಿ ಹುಗಿಯಲ್ಪಟ್ಟು ಸಂಪೂರ್ಣವಾಗಿ ಕಾಣದೇ ಹೋದನು. ಅವನೊಡನಿದ್ದ ವೃಷ್ಣಿ ಪ್ರವೀರ ಸೈನಿಕರೆಲ್ಲಾ ಆಗ ಭಯಾರ್ತರಾಗಿ ಎಲ್ಲ ದಿಕ್ಕುಗಳಲ್ಲಿ ಅವಸರದಿಂದ ಓಡಿಹೋಗ ತೊಡಗಿದರು. ಕೃಷ್ಣನು ಹಾಗೆ ಕಾಣದಂತಾಗಲು ಇಡೀ ಆಕಾಶ, ಭೂಮಿ, ದೇವಲೋಕ ಸರ್ವವೂ ಹಾಹಾಕಾರಮಾಡಿದವು. ಅವನ ಸ್ನೇಹಿತರು ವಿಷಣ್ಣ ಮನಸ್ಕರಾಗಿ ದುಃಖಶೋಕಸಮನ್ವಿತರಾಗಿ ರೋದಿಸಿದರು ಮತ್ತು ಅತ್ತರು. ಆಗ ವೈರಿಗಳು ಹರ್ಷಿತರಾದರು ಮತ್ತು ಸ್ನೇಹಿತರು ದುಃಖಿತರಾದರು. ಕೃಷ್ಣನು ಸರ್ವ ಪಾಶಾಣಗಳನ್ನೂ ಬೇದಿಸಬಲ್ಲ ವಜ್ರಾಸ್ತ್ರವನ್ನು ತೆಗೆದುಕೊಂಡು ಆ ಎಲ್ಲ ಪರ್ವತಗಳನ್ನೂ ಪುಡಿಪುಡಿಮಾಡಿದನು. ಪರ್ವತಗಳ ಭಾರದಿಂದ ಕಷ್ಟಪಟ್ಟ ಅವನ ಕುದುರೆಗಳು ತಮ್ಮ ಉಸಿರು ಮತ್ತು ಚಲನೆಗಳನ್ನು ಕಳೆದುಕೊಂಡು ನಡುಗುತ್ತಿದ್ದವು. ಮೇಘಜಾಲಮುಕ್ತ ಆಕಾಶದಿಂದ ಮೇಲೇಳುವ ರವಿಯಂತೆ ಮೇಲೆದ್ದ ಅವನನ್ನು ನೋಡಿದ ಸರ್ವ ಬಾಂಧವರೂ ಪುನಃ ಹರ್ಷಿತರಾದರು. ಆಗ ಅಂಜಲೀಬದ್ಧನಾಗಿ ನಮಸ್ಕರಿಸಿ ಸೂತನು ಅವನಿಗೆ ಹೇಳಿದನು: “ವಾರ್ಷ್ಣೇಯ! ನಿಂತಿರುವ ಸೌಭಪತಿಯನ್ನು ಚೆನ್ನಾಗಿ ನೋಡು! ಅಪಮಾನಗೊಳಿಸುವ ಇದನ್ನು ಸಾಕುಮಾಡು. ಇನ್ನೂ ಒಳ್ಳೆಯ ಪ್ರಯತ್ನವನ್ನು ಮಾಡು. ಶಾಲ್ವನ ಮೇಲಿದ್ದ ನಿನ್ನ ಸಖ್ಯಭಾವವನ್ನು ಅಥವಾ ಮೃದುತ್ವವನ್ನು ಹಿಂದೆ ತೆಗೆದುಕೋ! ಶಾಲ್ವನನ್ನು ಜೀವಂತ ಬಿಡಬೇಡ! ನಿನ್ನ ಎಲ್ಲ ಪರಾಕ್ರಮವನ್ನೂ ಬಳಸಿ ಈ ಶತ್ರುವನ್ನು ವಧಿಸು! ಶತ್ರುವು ಎಷ್ಟೇ ದುರ್ಬಲನಾಗಿದ್ದರೂ, ಕಾಲಕೆಳಗಿನವನಾಗಿದ್ದರೂ, ಸಮರದಲ್ಲಿ ಎದುರಾದಾಗ ಬಲಶಾಲಿಯು ಅಪಮಾನಿಸ ಕೂಡದು. ಸರ್ವ ಯತ್ನಗಳಿಂದ ನೀನು ಈ ಶತ್ರುವನ್ನು ಕೊಲ್ಲಬೇಕು. ಪುನಃ ಸುಮ್ಮನೆ ಕಾಲವನ್ನು ಕಳೆಯಬೇಡ. ಮೃದುತ್ವದಿಂದ ಅವನನ್ನು ಗೆಲ್ಲಲು ಸಾಧ್ಯವಿಲ್ಲ. ದ್ವಾರಕೆಯನ್ನು ಅಸ್ತವ್ಯಸ್ತಗೊಳಿಸಿ ನಿನ್ನೊಡನೆ ಯುದ್ಧ ಮಾಡುತ್ತಿರುವ ಅವನು ನಿನ್ನ ಸಖನಲ್ಲ ಎಂದು ನನ್ನ ಅಭಿಪ್ರಾಯ!”

ಈ ರೀತಿಯ ಮಾತುಗಳನ್ನು ಸಾರಥಿಯಿಂದ ಕೇಳಿದ ಕೃಷ್ಣನು ಅವನು ಹೇಳಿದುದು ಸತ್ಯ ಎಂದು ತಿಳಿದು ಯುದ್ಧದಲ್ಲಿ ಶಾಲ್ವರಾಜನ ವಧೆ ಮತ್ತು ಸೌಭವನ್ನು ಉರುಳಿಸುವ ಕುರಿತು ಮನಸ್ಸನ್ನಿಟ್ಟನು. “ಒಂದು ಕ್ಷಣ ನಿಲ್ಲು!” ಎಂದು ದಾರುಕನಿಗೆ ಹೇಳಿದನು. ನಂತರ ಅವನು ಯಾರನ್ನೂ ಸಂಹರಿಸಬಲ್ಲ, ದಿವ್ಯ, ಅಭೇದ್ಯ, ಅತಿವೀರ್ಯವಂತ, ಮಹಾಪ್ರಭೆಯನ್ನುಳ್ಳ, ಸರ್ವಸಾಹ, ಯಕ್ಷ-ರಾಕ್ಷಸ-ದಾನವರನ್ನು, ಮತ್ತು ಅಧರ್ಮಿ ರಾಜರನ್ನು ಒಟ್ಟಿಗೇ ಭಸ್ಮಮಾಡಬಲ್ಲ, ತೀಕ್ಷ್ಣ ಕೊನೆಗಳನ್ನುಳ್ಳ, ಅಮಲ, ಕಾಲಾಂತಕ ಯಮನಂತಿದ್ದ, ಆಗ್ನೇಯಾಸ್ತ್ರ ಚಕ್ರವನ್ನು ಹಿಡಿದು, ಶತ್ರುಗಳನ್ನು ಸಂಹರಿಸಬಲ್ಲ, ಸರಿಸಾಟಿಯಿಲ್ಲದ ಅದನ್ನು ಅಭಿಮಂತ್ರಿಸಿದನು: “ನಿನ್ನ ವೀರತ್ವದಿಂದ ಸೌಭವನ್ನು ಮತ್ತು ಅದರಲ್ಲಿರುವ ನಾನಾ ಶತ್ರುಗಳನ್ನು ಕೊಲ್ಲು!” ಎಂದು ಹೇಳಿ ರೋಷಗೊಂಡು ತನ್ನ ಬಾಹುಬಲದಿಂದ ಅದನ್ನು ಪ್ರಯೋಗಿಸಿದನು. ಆಕಾಶದಲ್ಲಿ ಹಾರಿಹೋಗುತ್ತಿದ್ದ ಆ ಸುದರ್ಶನವು ಯುಗಾಂತದಲ್ಲಿ ಪ್ರಕಾಶಿತ ಎರಡನೇ ಸೂರ್ಯನೋ ಎನ್ನುವಂತೆ ತೋರುತ್ತಿತ್ತು. ಅದು ಸತ್ವವನ್ನು ಕಳೆದುಕೊಂಡ ಸೌಭನಗರವನ್ನು ತಲುಪಿ ಗರಗಸದಂತೆ ಅದನ್ನು ಮಧ್ಯದಲ್ಲಿ ಎರಡನ್ನಾಗಿ ಕತ್ತರಿಸಿತು. ಸುದರ್ಶನದ ಬಲಕ್ಕೆ ಸಿಲುಕಿ ಎರಡಾಗಿ ತುಂಡಾದ ಆ ಸೌಭವು ಮಹೇಶ್ವರನ ಶರದಿಂದ ಒಡೆದು ಕೆಳಗೆ ಬಿದ್ದ ತ್ರಿಪುರದಂತೆ ಕಂಡಿತು. ಸೌಭವು ಕೆಳಗುರುಳಲು ಚಕ್ರವು ಕೃಷ್ಣನ ಕೈಗೆ ಬಂದು ಸೇರಿತು. ಪುನಃ ಅದನ್ನು ಪ್ರಯೋಗಿಸುತ್ತಾ ಅವನು “ವೇಗದಿಂದ ಶಾಲ್ವನನ್ನು ಕೊಲ್ಲು!” ಎಂದು ಹೇಳಿದನು. ಆ ಮಹಾಯುದ್ಧದಲ್ಲಿ ಶಾಲ್ವನು ಭಾರೀ ಗದೆಯನ್ನು ಪ್ರಹಾರಿಸಲು ಮುಂದೆಬರುತ್ತಿರುವಾಗ ಅದು ತಕ್ಷಣವೇ ಅವನನ್ನು ಎರಡಾಗಿ ಕತ್ತರಿಸಿ ತೇಜಸ್ಸಿನಿಂದ ಬೆಳಗಿತು. ಆ ವೀರನು ಕೆಳಗೆ ಬೀಳಲು ವೀರ ದಾನವರು ಅಸ್ತ್ರದಿಂದ ತತ್ತರಿಸಿ, ಕೃಷ್ಣನ ಬಾಣಗಳಿಂದ ಪೀಡಿತರಾಗಿ ಹಾಹಾಕಾರ ಮಾಡುತ್ತಾ ದಿಕ್ಕು ದಿಕ್ಕಿಗೆ ಚದುರಿದರು. ಸೌಭದ ಬಳಿಯಲ್ಲಿ ರಥವನ್ನು ನಿಲ್ಲಿಸಿ ಕೃಷ್ಣನು ಸಂತೋಷದಿಂದ ಶಂಖವನ್ನು ಊದಿ ತನ್ನ ಸ್ನೇಹಿತರಿಗೆ ಹರ್ಷವನ್ನುಂಟುಮಾಡಿದನು. ಮೇರುಶಿಖರದ ಆಕಾರದಲ್ಲಿದ್ದ ಮಹಾದ್ವಾರಗಳು ಮತ್ತು ಗೋಪುರಗಳಿಂದ ಕೂಡಿದ್ದ ಅದು ಉರಿಯುತ್ತಿರುವುದನ್ನು ನೋಡಿ ಸ್ತ್ರೀಯರು ಓಡಿ ಹೋದರು. ಈ ರೀತಿ ಸಮರದಲ್ಲಿ ಶಾಲ್ವನನ್ನು ಕೊಂದು ಸೌಭವನ್ನು ಕೆಳಗುರುಳಿಸಿ, ಆನರ್ತರ ಪುರಕ್ಕೆ ಹಿಂದಿರುಗಿ ಕೃಷ್ಣನು ಸುಹೃದಯರಿಗೆ ಸಂತೋಷವನ್ನು ತಂದನು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

2 Comments

  1. Manoj S Halemani

    Story is so beautiful and all parts are very interesting… and it is best for our knowledge….

    THANK YOU

Leave a Reply

Your email address will not be published. Required fields are marked *