ಜಾಮದಗ್ನೇಯೋಽಪಖ್ಯಾನ
ಜಹ್ನುವೆನ್ನುವ ರಾಜನಿದ್ದನು. ಅವನ ಮಗನೇ ಅಜ. ಬಲ್ಲವನು ಅಜನ ಮಗನಾಗಿದ್ದನು. ಮಹೀಪತಿ ಬಲ್ಲವನಿಗೆ ಕುಶಿಕ ಎಂಬ ಹೆಸರಿನ ಧರ್ಮಜ್ಞ ಮಗನಿದ್ದನು. ಭುವಿಯಲ್ಲಿ ಸಹಸ್ರಾಕ್ಷನಂತಿದ್ದ ಆ ಕುಶಿಕನು ಅಪರಾಜಿತನಾದ ತ್ರಿಲೋಕಗಳಿಗೂ ಈಶ್ವರನಾಗುವ ಮಗನನ್ನು ಪಡೆಯಲೋಸುಗ ಉಗ್ರವಾದ ತಪಸ್ಸನ್ನು ಆಚರಿಸಿದನು. ಅವನ ಆ ಉಗ್ರತಪಸ್ಸನ್ನು ನೋಡಿ ಸಹಸ್ರಾಕ್ಷ ಪುರಂದರನು, ಕುಶಿಕನು ಬಯಸಿದ ಪುತ್ರನನ್ನು ಪಡೆಯಲು ಸಮರ್ಥನೆಂದು ತಿಳಿದು, ತಾನೇ ಅವನ ಮಗನಾಗಿ ಹುಟ್ಟಿದನು. ಲೋಕೇಶ್ವರ ಈಶ್ವರ ಪಾಕಶಾಸನನು ಗಾದಿ ಎಂಬ ಹೆಸರಿನಲ್ಲಿ ಕುಶಿಕನ ಪುತ್ರನಾಗಿ ಕೌಶಿಕನೆಂದೂ ಕರೆಯಲ್ಪಟ್ಟನು. ಅವನಿಗೆ ಸತ್ಯವತೀ ಎಂಬ ಹೆಸರಿನ ಮಗಳಾದಳು. ಪ್ರಭು ಗಾಧಿಯು ಅವಳನ್ನು ಭೃಗುವಿನ ಮಗ ಋಚೀಕನಿಗೆ ಮದುವೆಮಾಡಿಕೊಟ್ಟನು. ಅದರಿಂದ ಪ್ರೀತನಾದ ಭಾರ್ಗವ ಋಚೀಕನು ತನಗೂ ಮತ್ತು ಮಾವ ಗಾಧಿಗೂ ಪುತ್ರರಾಗಬೇಕೆಂಬ ಇಚ್ಛೆಯಿಂದ ಮಂತ್ರೋಕ್ತವಾದ ಚರುವನ್ನು ಸಿದ್ಧಪಡೆಸಿದನು. ಅನಂತರ ಭಾರ್ಗವ ಋಚೀಕನು ತನ್ನ ಭಾರ್ಯೆಯನ್ನು ಕರೆದು, ವಿಭಾಗಿಸಿದ ಚರುವಿನ ಎರಡು ಭಾಗಗಳನ್ನೂ ತೋರಿಸಿ ಹೇಳಿದನು: “ನೀನು ಒಂದು ಭಾಗವನ್ನೂ ನಿನ್ನ ತಾಯಿಯು ಮತ್ತೊಂದು ಭಾಗವನ್ನೂ ಭಕ್ಷಿಸಿರಿ! ಅವಳಲ್ಲಿ ಪ್ರದೀಪ್ತಮಾನನಾದ ಕ್ಷತ್ರಿಯರ್ಷಭನು ಜನಿಸುತ್ತಾನೆ. ಆ ಕ್ಷತ್ರಿಯರ್ಷಭಸೂದನನು ಕ್ಷತ್ರಿಯ ಲೋಕಗಳನ್ನು ಜಯಿಸುತ್ತಾನೆ. ಕಲ್ಯಾಣೀ! ಚರುವಿನ ಈ ಭಾಗದಿಂದ ನೀನು ದೃತಿಮಂತನೂ, ತಪೋನ್ವಿತನೂ, ಶಾಂತಾತ್ಮನೂ ಆದ ದ್ವಿಜಶ್ರೇಷ್ಠನನ್ನು ಪುತ್ರನನ್ನಾಗಿ ಪಡೆಯುವೆ!”
ತನ್ನ ಪತ್ನಿಗೆ ಹೀಗೆ ಹೇಳಿ ಭೃಗುನಂದನ ಧೀಮಾನ್ ಋಚೀಕನು ತಪಸ್ಸಿಗಾಗಿ ಅರಣ್ಯಕ್ಕೆ ತೆರಳಿದನು. ಇದೇ ಸಮಯದಲ್ಲಿ ತೀರ್ಥಯಾತ್ರೆಗೈಯುತ್ತಿದ್ದ ನೃಪ ಗಾಧಿಯು ಪತ್ನಿಯೊಂದಿಗೆ ಋಚೀಕನ ಆಶ್ರಮಕ್ಕೆ ಬಂದನು. ಆಗ ಸತ್ಯವತಿಯು ಚರುವಿನ ಎರಡು ಭಾಗಗಳನ್ನು ಎತ್ತಿಕೊಂಡು ಹರ್ಷದಿಂದ ತನ್ನ ಪತಿಯ ಮಾತನ್ನು ತಾಯಿಗೆ ತಿಳಿಸಿದಳು. ಆ ತಾಯಿಯಾದರೋ ಅಜ್ಞಾನವಶಾತ್ ತನಗೆಂದು ಅಭಿಮಂತ್ರಿಸಿದ್ದ ಚರುವನ್ನು ತನ್ನ ಮಗಳಿಗೆ ಕೊಟ್ಟು, ಅವಳಿಗೆಂದಿದ್ದ ಚರುವಿನ ಭಾಗವನ್ನು ತಾನೇ ಭುಂಜಿಸಿದಳು. ಆಗ ಸತ್ಯವತಿಯು ಕ್ಷತ್ರಿಯಾಂತಕನಾದ ಪ್ರದೀಪ್ತತೇಜಸ್ಸಿನಿಂದ ಕೂಡಿದ ಘೋರವಾಗಿ ಕಾಣುತ್ತಿದ್ದ ಗರ್ಭವನ್ನು ಧರಿಸಿದಳು. ಆಗ ಋಚೀಕನು ಧ್ಯಾನಯೋಗದಿಂದ ಅದನ್ನು ಕಂಡು ತನ್ನ ವರವರ್ಣಿನೀ ಪತ್ನಿಗೆ ಇಂತೆಂದನು: “ಭದ್ರೇ! ಚರುವು ಅದಲುಬದಲಾಗಿದೆ. ತಾಯಿಯಿಂದ ವಂಚಿತಳಾಗಿರುವೆ. ನಿನಗೆ ಹುಟ್ಟುವ ಮಹಾಬಲಶಾಲೀ ಮಗನು ಕ್ರೂರಕರ್ಮಿಯಾಗುವನು. ತಪಸ್ಸಿನಿಂದ ಸಕಲ ಬ್ರಹ್ಮತೇಜಸ್ಸನ್ನೂ ಸಪರ್ಪಿಸಿದ್ದ ಆ ಚರುವಿನಿಂದ ಹುಟ್ಟುವ ನಿನ್ನ ತಮ್ಮನು ಬ್ರಹ್ಮಭೂತನೂ ತಪೋಧನನೂ ಆಗುವನು.”
ಪತಿಯು ಹೀಗೆ ಹೇಳಲು ಮಹಾಭಾಗೆ ಸತ್ಯವತಿಯು ಸತ್ಯವತಿಯು ತನ್ನ ತಲೆಯನ್ನು ಪತಿಯ ಪಾದಗಳಲ್ಲಿರಿಸಿ ಭಯದಿಂದ ನಡುಗುತ್ತಾ ಹೇಳಿದಳು: “ಮಹಾಮುನೇ! ಬ್ರಾಹ್ಮಣಾಪಸದನಾದ ಮಗನನ್ನು ಪಡೆಯುವೆನಿಂದು ಈ ರೀತಿ ಈಗ ಹೇಳುವುದು ಸರಿಯಲ್ಲ! ನಾನು ಅದಕ್ಕೆ ಅರ್ಹಳಲ್ಲ!”
ಋಚೀಕನು ಹೇಳಿದನು: “ಭದ್ರೇ! ನಾನೂ ಕೂಡ ಆ ಆಸೆಯಿಂದ ಸಂಕಲ್ಪಮಾಡಿರಲಿಲ್ಲ. ಆದರೆ ನಿನ್ನ ತಾಯಿಯಿತ್ತ ಚರುವಿನ ಕಾರಣದಿಂದ ನಿನ್ನ ಮಗನು ಉಗ್ರಕರ್ಮಿಯಾಗುತ್ತಾನೆ!”
ಸತ್ಯವತಿಯು ಹೇಳಿದಳು: “ಮುನೇ! ನೀನು ಇಚ್ಛಿಸಿದರೆ ಲೋಕಗಳನ್ನೇ ಸೃಷ್ಟಿಸಬಲ್ಲೆ! ಹೀಗಿರುವಾಗ ಶಾಂತಾತ್ಮಕ ಪುತ್ರನನ್ನು ನನಗೆ ಕೊಡಲಾರೆಯೇ?”
ಋಚೀಕನು ಹೇಳಿದನು: “ಭದ್ರೇ! ಇದಕ್ಕೆ ಮೊದಲು ಎಂದೂ ನಾನು ಸತ್ಯವಾಗದ ಮಾತನ್ನು ಆಡಿರಲಿಲ್ಲ. ಹೀಗಿರುವಾಗ ಅಗ್ನಿಯನ್ನು ಪ್ರತಿಷ್ಠಾಪಿಸಿ ಮಂತ್ರವನ್ನು ಉಚ್ಛರಿಸಿ ಸಿದ್ಧಪಡಿಸಿದ ಚರುವು ಸುಳ್ಳಾಗಲು ಹೇಗೆ ಸಾಧ್ಯ?”
ಸತ್ಯವತಿಯು ಹೇಳಿದಳು: “ಜಪಿಸುವವರಲ್ಲಿ ಶ್ರೇಷ್ಠನೇ! ನಮ್ಮ ಮೊಮ್ಮಗನು ಬೇಕಾದರೆ ನೀನು ಹೇಳಿದಂತೆ ಹುಟ್ಟಲಿ. ಆದರೆ ನನ್ನಲ್ಲಿ ಮಾತ್ರ ಈಗ ಶಾಂತಸ್ವಭಾವದ ಮಗನೇ ಹುಟ್ಟುವಂತೆ ಅನುಗ್ರಹಿಸು!”
ಋಚೀಕನು ಹೇಳಿದನು: “ವರವರ್ಣಿನೀ! ನನಗೆ ಮಗ-ಮೊಮ್ಮಗರಲ್ಲಿ ವ್ಯತ್ಯಾಸವಿಲ್ಲ. ಭದ್ರೇ! ನೀನು ಹೇಳಿದಂತೆಯೇ ಆಗುತ್ತದೆ!”
ಅನಂತರ ಸತ್ಯವತಿಯು ಶಾಂತನೂ, ತಪಸ್ಸಿನಲ್ಲಿ ನಿರತನೂ, ಸೌಮ್ಯಸ್ವಭಾವವದನೂ ಆದ ಭಾರ್ಗವ ಜಮದಗ್ನಿಯನ್ನು ಪುತ್ರನನ್ನಾಗಿ ಪಡೆದಳು. ಕುಶಿಕನಂದನ ಗಾಧಿಯು ಸಮಸ್ತಬ್ರಾಹ್ಮಣಗುಣಗಳಿಂದ ಕೂಡಿದ ಮತ್ತು ನಂತರ ಬ್ರಹ್ಮರ್ಷಿಪದವಿಯನ್ನೂ ಹೊಂದಿದ ವಿಶ್ವಾಮಿತ್ರನನ್ನು ಮಗನನ್ನಾಗಿ ಪಡೆದನು. ಋಚೀಕನ ಮಗ ಜಮದಗ್ನಿಯು ಸುದಾರುಣನಾದ, ಸರ್ವವಿದ್ಯಾಂತಗನಾದ, ಧನುರ್ವಿದ್ಯಾ ಪಾರಂಗತನಾದ, ಅಗ್ನಿಯಂತೆ ಬೆಳಗುತ್ತಿದ್ದ ಕ್ಷತ್ರಿಯಹಂತಕ ಶ್ರೇಷ್ಠ ರಾಮನಿಗೆ ಜನ್ಮವಿತ್ತನು.
ಇದೇ ಸಮಯದಲ್ಲಿ ಹೈಹಯ ಕುಲದಲ್ಲಿ ಕೃತವೀರ್ಯನ ಮಗ ಅರ್ಜುನ ಎಂಬ ಹೆಸರಿನ ಬಲಶಾಲೀ ತೇಜಸ್ವೀ ಕ್ಷತ್ರಿಯನಿದ್ದನು. ಅವನು ತನ್ನದೇ ಬಾಹುಬಲ ಮತ್ತು ಅಸ್ತ್ರಬಲಗಳಿಂದ ಹಾಗೂ ಪರಮ ಧರ್ಮದಿಂದ ಈ ಸಪ್ತದ್ವೀಪಗಳುಳ್ಳ ಪೃಥ್ವಿಯನ್ನು ಅದರ ಪಟ್ಟಣಗಳೊಂದಿಗೆ ಸುಟ್ಟುಹಾಕಿದನು. ಒಮ್ಮೆ ಹಸಿವು ಬಾಯಾರಿಕೆಗಳಿಂದ ಬಳಲಿದ್ದ ಚಿತ್ರಭಾನು ಅಗ್ನಿಯು ಸಹಸ್ರಬಾಹುಗಳಿದ್ದ ವಿಕ್ರಾಂತ ಕಾರ್ತವೀರ್ಯಾರ್ಜುನನಲ್ಲಿ ಭಿಕ್ಷೆಯನ್ನು ಯಾಚಿಸಿ ಬಂದಿದ್ದನು. ಅವನು ಅಗ್ನಿಗೆ ಭಿಕ್ಷೆಯನ್ನಿತ್ತಿದ್ದನು. ಗ್ರಾಮಗಳನ್ನೂ, ಪುರಗಳನ್ನೂ, ಘೋಷಗಳನ್ನೂ, ಪಟ್ಟಣಗಳನ್ನೂ ಸುಡಲು ಬಯಸಿ ಚಿತ್ರಭಾನುವು ಅರ್ಜುನನ ಬಾಣದ ತುದಿಯಿಂದ ಪ್ರಜ್ವಲಿಸತೊಡಗಿದನು. ಆ ಪುರುಷೇಂದ್ರ ಮಹಾತಪಸ್ವಿ ಕಾರ್ತವೀರ್ಯನ ಪ್ರಭಾವದಿಂದ ಅಗ್ನಿಯು ಶೈಲ-ವನಗಳನ್ನು ಸುಟ್ಟುಹಾಕಿದನು. ವಾಯುವಿನ ಮತ್ತು ಹೈಹಯನ ಸಹಾಯವನ್ನು ಪಡೆದುಕೊಂಡಿದ್ದ ಚಿತ್ರಭಾನುವು ಜನಶೂನ್ಯವಾಗಿದ್ದ ವರುಣನ ಮಗ ವಸಿಷ್ಠನ ಆಶ್ರಮವನ್ನೂ ಸುಟ್ಟುಬಿಟ್ಟನು. ವೀರ್ಯವಾನ್ ಕಾರ್ತವೀರ್ಯನಿಂದ ತನ್ನ ಆಶ್ರಮವು ಸುಟ್ಟುಹೋಗಲು ರೋಷದಿಂದ ಆಪವ ವಸಿಷ್ಠನು ಅರ್ಜುನನನ್ನು ಶಪಿಸಿದನು: “ಅರ್ಜುನ! ಮೋಹದಿಂದ ನೀನು ನನ್ನ ಈ ವನವನ್ನೂ ಬಿಡದೇ ಸುಟ್ಟುಹಾಕಿದ ಕಾರಣ ರಣದಲ್ಲಿ ರಾಮನು ನಿನ್ನ ಬಾಹುಗಳನ್ನು ಕತ್ತರಿಸುತ್ತಾನೆ!”
ಬಲಶಾಲೀ ಅರ್ಜುನನಾದರೋ ನಿತ್ಯವು ಶಮಾತ್ಮಕನಾಗಿದ್ದುಕೊಂಡು ಬ್ರಾಹ್ಮಣರ ಶರಣ್ಯನೂ ದಾನಿಯೂ ಶೂರನೂ ಆಗಿದ್ದನು. ಆದುದರಿಂದ ನಿತ್ಯವೂ ಅಹಿಂಸಿಯಾಗಿದ್ದ ಅವನು ಆ ಶಾಪದ ಕುರಿತು ಚಿಂತಿಸಲೇ ಇಲ್ಲ. ಆದರೆ ಅವನ ಬಲಶಾಲಿ ಮಕ್ಕಳೇ ತಂದೆಯ ವಧೆ ಮತ್ತು ಆ ಶಾಪವು ಫಲಿಸಲು ಕಾರಣರಾದರು. ಹೈಹಯೇಂದ್ರ ಧೀಮಂತ ಕಾರ್ತವೀರ್ಯನಿಗೆ ತಿಳಿಯದಂತೆ ಅವನ ಮಕ್ಕಳು ಜಮದಗ್ನಿಯ ಹೋಮಧೇನುವಿನ ಕರುವನ್ನು ಅಪಹರಿಸಿಕೊಂಡು ಹೋದರು. ಆಗ ಪೌರುಷಾನ್ವಿತನಾದ ಜಮದಗ್ನಿಯ ಮಗ ಪ್ರಭು ರಾಮನು ಅರ್ಜುನನ ಬಾಹುಗಳನ್ನು ತುಂಡರಿಸಿ ಅವನ ಅಂತಃಪುರದಿಂದ ರೋದಿಸುತ್ತಿದ್ದ ಹಸುಕರುವನ್ನು ತನ್ನ ಆಶ್ರಮಕ್ಕೆ ಪುನಃ ಕರೆತಂದನು. ಅನಂತರ ಅರ್ಜುನನ ಮಕ್ಕಳು ಮೂಢತನದಿಂದ ಒಟ್ಟಾಗಿ, ಮಹಾತ್ಮ ರಾಮನು ಸಮಿತ್ತು-ದರ್ಬೆಗಳಿಗಾಗಿ ಹೊರ ಹೋಗಿರಲು, ಭಲ್ಲಗಳಿಂದ ತಪೋನಿರತನಾಗಿದ್ದ ಮಹಾತ್ಮ ಜಮದಗ್ನಿಯ ಶಿರವನ್ನು ಅವನ ಕಾಯದಿಂದ ಬೇರ್ಪಡಿಸಿ ಕೆಳಗುರುಳಿಸಿದರು. ಆಗ ಪಿತೃವಧೆಯನ್ನು ಸಹಿಸಿಕೊಳ್ಳಲಾಗಿದೇ ಅತ್ಯಂತ ಕುಪಿತನಾದ ರಾಮನು ಭೂಮಿಯಲ್ಲಿ ಕ್ಷತ್ರಿಯರೇ ಇಲ್ಲದಂತೆ ಮಾಡುತ್ತೇನೆಂದು ಪ್ರತಿಜ್ಞೆಮಾಡಿ ಶಸ್ತ್ರವನ್ನು ಹಿಡಿದನು. ಆಗ ವೀರ್ಯವಾನ್ ಭೃಗುಶಾರ್ದೂಲನು ವಿಕ್ರಮದಿಂದ ಕಾರ್ತವೀರ್ಯನ ಮಕ್ಕಳು-ಮೊಮ್ಮಕ್ಕಳು ಎಲ್ಲರನ್ನೂ ಸಂಹರಿಸಿದನು. ಸಹಸ್ರಾರು ಹೈಹಯರನ್ನು ಸಂಹರಿಸಿ ಪರಮಕೋಪಿ ಭಾರ್ಗವನು ರಕ್ತದ ಕೆಸರಿನಿಂದ ಭೂಮಿಯನ್ನೇ ತುಂಬಿಸಿಬಿಟ್ಟನು. ಹಾಗೆ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿಸಿ ಆ ಮಹಾತೇಜಸ್ವಿಯು ಪರಮ ಕೃಪಾವಿಷ್ಟನಾಗಿ ವನಕ್ಕೆ ತೆರಳಿದನು. ಸಹಸ್ರವರ್ಷಗಳು ಕಳೆದನಂತರ ಸ್ವಭಾವತಃ ಕೋಪಿಷ್ಟನಾದ ಪ್ರಭು ರಾಮನು ಯಾವುದೋ ಒಂದು ಸಮಿತಿಯಲ್ಲಿ ತನ್ನ ಕುರಿತಾದ ಒಂದು ತೀವ್ರ ಆಕ್ಷೇಪವನ್ನು ಕೇಳಿದನು.
ವಿಶ್ವಾಮಿತ್ರನ ಮೊಮ್ಮಗ, ರೈಭ್ಯನ ಮಗ ಮಹಾತಪಸ್ವೀ ಪರಾವಸುವು ಜನಸಂಸದಿಯಲ್ಲಿ ಪರಶುರಾಮನನ್ನು ಆಕ್ಷೇಪಿಸುತ್ತಾ ಹೀಗೆ ಹೇಳಿದನು: “ರಾಮನೇ! ಯಯಾತಿಯು ಸ್ವರ್ಗಲೋಕದಿಂದ ಭೂಮಿಗೆ ಬಿದ್ದ ಸ್ಥಳದಲ್ಲಿ ಯಜ್ಞದಲ್ಲಿ ಭಾಗವಹಿಸಿದ್ದ ಪ್ರತರ್ದನನೇ ಮೊದಲಾದ ಸತ್ಪುರುಷರು ನಿನ್ನ ಪಾಲಿಗೆ ಕ್ಷತ್ರಿಯರಲ್ಲವೇನು? ನೀನು ಮಿಥ್ಯಾಪ್ರತಿಜ್ಞನು! ಜನಸಂಸಧಿಯಲ್ಲಿ ಹೇಗೆ ನೀನು ನಿನ್ನನ್ನೇ ಪ್ರಶಂಸಿಸಿಕೊಳ್ಳುವೆ? ಕ್ಷತ್ರಿಯ ವೀರರ ಭಯದಿಂದ ನೀನು ಪರ್ವತವನ್ನು ಆಶ್ರಯಿಸಿರುವೆ!”
ಪರಾವಸುವಿನ ಆ ಮಾತನ್ನು ಕೇಳಿ ಭಾರ್ಗವನು ಭೂಮಿಯಲ್ಲಿ ಸಂತಾನಗಳನ್ನು ಪಡೆದಿದ್ದ ನೂರಾರು ಕ್ಷತ್ರಿಯರನ್ನು ಸಂಹರಿಸಲು ಪುನಃ ಶಸ್ತ್ರವನ್ನು ಹಿಡಿದನು. ಜೀವಿತರಾಗಿದ್ದ ನೂರಾರು ಮಹಾವೀರ್ಯ ಕ್ಷತ್ರಿಯರು ವೃದ್ಧರಾಗಿ ಪೃಥ್ವೀಪತಿಗಳಾಗಿದ್ದರು. ಅವನು ಪುನಃ ಅವರನ್ನು, ಬಾಲಕರನ್ನೂ ಬಿಡದೇ, ಸಂಹರಿಸಿದನು. ಆದರೆ ಗರ್ಭಿಣಿಯರಾಗಿದ್ದ ಕ್ಷತ್ರಿಯಸ್ತ್ರೀಯರಿಂದ ಪುನಃ ಭೂಮಿಯು ವ್ಯಾಪ್ತವಾಗಿತ್ತು. ಮಕ್ಕಳು ಹುಟ್ಟುತ್ತಿದ್ದಂತೆಯೇ ಅವರನ್ನೂ ಪುನಃ ರಾಮನು ಸಂಹರಿಸಿದನು. ಆ ಕೆಲವು ಕ್ಷತ್ರಿಯ ಸ್ತ್ರೀಯರು ತಮ್ಮ ಮಕ್ಕಳನ್ನು ರಕ್ಷಿಸಿಕೊಂಡರು. ಪ್ರಭು ರಾಮನು ಇಪ್ಪತ್ತೇಳು ಬಾರಿ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಅಶ್ವಮೇಧದ ಅಂತ್ಯದಲ್ಲಿ ಭೂಮಿಯನ್ನು ಕಶ್ಯಪನಿಗೆ ದಕ್ಷಿಣೆಯನ್ನಾಗಿತ್ತನು. ಆಗ ಉಳಿದ ಕ್ಷತ್ರಿಯರನ್ನು ರಕ್ಷಿಸುವ ಉದ್ದೇಶದಿಂದ ಶ್ರೀಮಾನ್ ಕಶ್ಯಪನು ಕೈಯಲ್ಲಿ ಸ್ರುಕ್ಕನ್ನು ಹಿಡಿದು ಈ ಮಾತನ್ನಾಡಿದನು: “ಮಹಾಮುನೇ! ರಾಮ! ನನ್ನ ಈ ರಾಜ್ಯದಲ್ಲಿ ನೀನು ಯಾವಾಗಲೂ ವಾಸಿಸಬಾರದು. ಸಮುದ್ರದ ದಕ್ಷಿಣತೀರಕ್ಕೆ ಹೊರಟುಹೋಗು!”
ಅನಂತರ ಸಾಗರನು ಜಾಮದಗ್ನಿಯು ತಂಗಲೋಸುಗ ಶೂರ್ಪಾರಕವೆಂಬ ದೇಶವನ್ನು ನಿರ್ಮಿಸಿದನು, ಆ ಭೂಮಿಯನ್ನು ಅಪರಾಂತಭೂಮಿಯೆಂದೂ ಕರೆಯುತ್ತಾರೆ. ಕಶ್ಯಪನಾದರೋ ಈ ಭೂಮಿಯನ್ನು ಸ್ವೀಕರಿಸಿ, ಅದನ್ನು ಬ್ರಾಹ್ಮಣರಿಗೆ ಕೊಟ್ಟು, ಮಹಾವನವನ್ನು ಪ್ರವೇಶಿಸಿದನು. ಆಗ ವೈಶ್ಯ-ಶೂದ್ರರು ದ್ವಿಜಾಗ್ರರ ಪತ್ನಿಯರೊಡನೆ ದುರ್ವ್ಯವಹಾರಗಳಲ್ಲಿ ತೊಡಗಿದರು. ಅರಾಜಕತೆಯಾಗಿ ಜೀವಲೋಕದಲ್ಲಿ ಬಲಶಾಲಿಗಳು ದುರ್ಬಲರನ್ನು ಬಾಧಿಸತೊಡಗಿದರು. ಸಂಪತ್ತು ಯಾರ ಪ್ರಭುತ್ವದಲ್ಲಿಯೂ ಉಳಿಯಲಿಲ್ಲ. ಕಾಲಾಂತರದಲ್ಲಿ ಧರ್ಮರಕ್ಷಿಗಳಾದ ಕ್ಷತ್ರಿಯರಿಂದ ವಿಧಿವತ್ತಾಗಿ ರಕ್ಷಿಸಲ್ಪಡದ ಪೃಥ್ವಿಯು ರಸಾತಲವನ್ನು ಪ್ರವೇಶಿಸಿತು. ಮುಳುಗಿಹೋಗುತ್ತಿರುವ ಆ ಭೂಮಿಯನ್ನು ಕಶ್ಯಪನು ತನ್ನ ತೊಡೆಯಲ್ಲಿ ಧರಿಸಿದನು. ಆದುದರಿಂದಲೇ ಈ ಮಹಿಗೆ ಉರ್ವೀ ಎಂದೂ ಕರೆಯಲ್ಪಡುತ್ತದೆ. ಆಗ ಪೃಥ್ವೀ ದೇವಿಯು ಕಶ್ಯಪನನ್ನು ಪ್ರಸನ್ನಗೊಳಿಸಿ ತನ್ನ ರಕ್ಷಣಾರಾರ್ಥವಾಗಿ ಬಾಹುಶಾಲೀ ಕ್ಷತ್ರಿಯರನ್ನು ಯಾಚಿಸಿದಳು. “ಮುನೇ! ನಾನು ಗೌಪ್ಯವಾಗಿ ಸಂರಕ್ಷಿಸಿದ್ದ ಹೈಹಯ ಕುಲದಲ್ಲಿ ಹುಟ್ಟಿದ ಕ್ಷತ್ರಿಯಪುಂಗವ ನರರಿದ್ದಾರೆ. ಅವರು ನನ್ನನ್ನು ರಕ್ಷಿಸಲಿ! ಪೌರವ ವಿಡೂರರಥನ ಮಗನಿದ್ದಾನೆ. ಅವನು ಋಕ್ಷವತ್ಪರ್ವತದಲ್ಲಿ ಕರಡಿಗಳಿಂದ ಬೆಳೆಸಲ್ಪಟ್ಟಿದ್ದಾನೆ. ಹಾಗೆಯೇ ಯಜ್ಞಪರಾಯಣನಾದ ಅಮಿತ ತೇಜಸ್ವಿಯಾದ ಸೌದಾಸನ ಮಗನನ್ನು ಪರಾಶರನು ಅನುಕಂಪದಿಂದ ರಕ್ಷಿಸಿಕೊಂಡಿದ್ದಾನೆ. ಅವನು ಆ ಋಷಿಯಲ್ಲಿದ್ದುಕೊಂಡು ಶೂದ್ರನಂತೆ ಎಲ್ಲ ಕರ್ಮಗಳನ್ನೂ ಮಾಡುತ್ತಿದ್ದಾನೆ. ಸರ್ವಕರ್ಮನೆಂದು ವಿಖ್ಯಾತನಾಗಿರುವ ಆ ಪಾರ್ಥಿವನು ನನ್ನನ್ನು ರಕ್ಷಿಸಲಿ! ಶಿಬಿಯ ಪುತ್ರ ಮಹಾತೇಜಸ್ವಿಯು ಗೋಪತಿಯೆಂಬ ಹೆಸರಿನಿಂದ ವನದಲ್ಲಿ ಗೋವುಗಳಿಂದ ಸಂರಕ್ಷಿಸಲ್ಪಡುತ್ತಿದ್ದಾನೆ. ಅವನೂ ಕೂಡ ನನ್ನನ್ನು ರಕ್ಷಿಸಲಿ! ಪ್ರತರ್ದನನ ವತ್ಸ ಎಂಬ ಹೆಸರಿನ ಮಗನು ಮಹಾಯಶಸ್ವಿಯು. ಅವನು ಗೋಶಾಲೆಯಲ್ಲಿ ಹಸುಕರುಗಳ ಜೊತೆಗೆ ಬೆಳೆದಿದ್ದಾನೆ. ಆ ಪಾರ್ಥಿವನು ನನ್ನನ್ನು ರಕ್ಷಿಸಲಿ! ದಧಿವಾಹನನ ಮೊಮ್ಮಗ, ದಿವಿರಥನ ಮಗ ಅಂಗನನ್ನು ಗೌತಮನು ಗಂಗಾಕೂಲದಲ್ಲಿ ರಕ್ಷಿಸಿಕೊಂಡಿದ್ದಾನೆ. ಭೂಮಿಯಲ್ಲಿ ಅತ್ಯಂತ ಪುರಸ್ಕೃತನಾದ ಮಹಾಭಾಗ ಮಹಾಬಾಹು ಬೃಹದೃಥನನ್ನು ಗೃಧ್ರಕೂಟದಲ್ಲಿ ಗೋಲಾಂಗೂಲ[1]ಗಳಿಂದ ರಕ್ಷಿಸಲ್ಪಟ್ಟಿದ್ದಾನೆ. ವೀರ್ಯದಲ್ಲಿ ದೇವರಾಜನ ಸಮನಾದ ಮರುತ್ತನ ವಂಶದಲ್ಲಿ ಹುಟ್ಟಿದ ಕ್ಷತ್ರಿಯರಾಜಕುಮಾರನನ್ನು ಸಮುದ್ರನು ರಕ್ಷಿಸಿರುತ್ತಾನೆ. ಅವನೂ ಕೂಡ ನನ್ನನ್ನು ಸಂರಕ್ಷಿಸಲಿ! ಅಲ್ಲಲ್ಲಿಯೇ ವಿಖ್ಯಾತರಾಗಿರುವ ಈ ಕ್ಷತ್ರಿಯ ಕುಮಾರರು ನನ್ನನ್ನು ರಕ್ಷಿಸಿದ್ದೇ ಆದರೆ ನಾನು ನಿಶ್ಚಿಂತಳಾಗಿ ಅಚಲಳಾಗಿ ನನ್ನ ಹಿಂದಿನ ಸ್ಥಾನದಲ್ಲಿಯೇ ನಿಲ್ಲುತ್ತೇನೆ. ಇವರ ತಂದೆಯಂದಿರು ಮತ್ತು ಪಿತಾಮಹರು ನನಗಾಗಿ ಯುದ್ಧದಲ್ಲಿ ಅಕ್ಲಿಷ್ಟಕರ್ಮಣಿ ರಾಮನೊಂದಿಗೆ ಹೋರಾಡಿ ಮಡಿದರು. ಅವರ ಮಕ್ಕಳ ಪ್ರತಿ ಇದು ನನ್ನ ಕರ್ತ್ಯವ್ಯವೂ ಹೌದು ಎನ್ನುವುದರಲ್ಲಿ ಸಂಶಯವಿಲ್ಲ. ನಿತ್ಯವೂ ಕೇವಲ ವಿಕ್ರಾಂತದಿಂದ ರಕ್ಷಿಸುವವನನ್ನು ನಾನು ಬಯಸುವುದಿಲ್ಲ!”
ಆಗ ಕಶ್ಯಪನು ಪೃಥ್ವಿಯು ನಿರ್ದಿಷ್ಟಪಡಿಸಿದ ಆ ವೀರ್ಯಸಂಮತ ಕ್ಷತ್ರಿಯರನ್ನು ಕರೆಯಿಸಿ ಮಹೀಪಾಲರನ್ನಾಗಿ ಅಭಿಷೇಕಿಸಿದನು. ಅವರ ಪುತ್ರ-ಪೌತ್ರರು ಅವರವ ವಂಶಗಳಲ್ಲಿ ರಾಜ್ಯವಾಳಿದರು.
[1] ಗೋವಿನ ಬಾಲದಂಥಹ ಬಾಲವುಳ್ಳ ಒಂದು ಜಾತಿಯ ಕಪಿಗಳು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ