ಷೋಡಶ-ರಾಜಕೀಯೋಽಪಖ್ಯಾನ
ನಾರದ-ಪರ್ವತರು
ಋಷಿಗಳಾದ ನಾರದ-ಪರ್ವತರು ಲೋಕಪೂಜಿತರು. ಹಿಂದೊಮ್ಮೆ ಆ ಸೋದರಮಾವ-ಸೋದರಳಿಯಂದಿರು ಮನುಷ್ಯಲೋಕದಲ್ಲಿ ಸಂಚರಿಸಬೇಕೆಂದು ಬಯಸಿ ದೇವಲೋಕದಿಂದ ಇಲ್ಲಿಗಿಳಿದರು. ತಾಪಸಿಗಳಾಗಿದ್ದ ಸೋದರಮಾವ ನಾರದ ಮತ್ತು ಸೋದರಳಿಯ ಪರ್ವತರು ಪವಿತ್ರವಾದ ಹವಿಸ್ಸನ್ನೂ, ದೇವಭೋಜನಕ್ಕೆ ಯೋಗ್ಯವಾದ ಆಹಾರಪದಾರ್ಥಗಳನ್ನೂ ತಿನ್ನುತ್ತಾ, ಮನುಷ್ಯರ ಭೋಗಗಳನ್ನು ಭೋಗಿಸುತ್ತಾ ಸ್ವೇಚ್ಛೆಯಿಂದ ಭೂಮಿಯಲ್ಲಿ ಸಂಚರಿಸುತ್ತಿದ್ದರು. ಪರಸ್ಪರ ಪ್ರೀತಿಪಾತ್ರರಾಗಿದ್ದ ಅವರು ತಮ್ಮ-ತಮ್ಮಲ್ಲಿಯೇ ಒಂದು ಒಪ್ಪಂದವನ್ನು ಮಾಡಿಕೊಂಡರು: “ಯಾರೊಬ್ಬರಲ್ಲಿ ಯಾವುದೇ ಶುಭ ಅಥವಾ ಅಶುಭ ಸಂಕಲ್ಪವು ಮೂಡಿಕೊಂಡರೂ ಅದನ್ನು ಅನ್ಯೋನ್ಯರಲ್ಲಿ ಹೇಳಿಕೊಳ್ಳಬೇಕು. ಅದನ್ನು ಹೇಳಿಕೊಳ್ಳದೇ ಇದ್ದರೆ ಅಥವಾ ಸುಳ್ಳನ್ನು ಹೇಳಿದರೆ ಅವರು ಶಾಪಕ್ಕೆ ಗುರಿಯಾಗಬೇಕು.” ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿ ಆ ಇಬ್ಬರು ಲೋಕಪೂಜಿತ ಮಹರ್ಷಿಗಳೂ ಶ್ವೇತಪುತ್ರನ ಮಗ ರಾಜಾ ಸೃಂಜಯನಲ್ಲಿ ಹೋಗಿ ಇಂತೆಂದರು: “ಪೃಥಿವೀಪಾಲ! ನಿನ್ನ ಹಿತಕ್ಕಾಗಿ ನಾವು ಕೆಲವು ಕಾಲ ನಿನ್ನ ಬಳಿಯಲ್ಲಿಯೇ ವಾಸಿಸುತ್ತೇವೆ. ನಾವಿರುವಲ್ಲಿಯವರೆಗೆ ನಮಗೆ ಅನುಕೂಲಕರನಾಗಿರು!” ಹಾಗೆಯೇ ಆಗಲೆಂದು ಹೇಳಿ ರಾಜನು ಅವರಿಬ್ಬರನ್ನೂ ಸತ್ಕರಿಸಿ ಉಪಚರಿಸಿದನು. ಆಗ ಒಮ್ಮೆ ಪರಮಪ್ರೀತನಾದ ರಾಜನು ತನ್ನ ವರವರ್ಣಿನೀ ಮಗಳನ್ನು ಆ ಮಹಾತ್ಮರ ಬಳಿ ಕರೆದುಕೊಂಡು ಹೋಗಿ ಹೀಗೆಂದನು: “ಅನವದ್ಯಾಂಗಿಯೂ ಶೀಲಚಾರಿತ್ರ್ಯಗಳಿಂದ ಕೂಡಿದವಳೂ, ಕಮಲದ ಕುಸುಮದಂತೆ ಕಾಂತಿಯುಕ್ತಳಾಗಿ ಸುಂದರ ಯುವತಿ ಈ ನನ್ನ ಓರ್ವಳೇ ಮಗಳು ಕುಮಾರೀ ಸುಕುಮಾರಿಯು ನಿಮ್ಮ ಸೇವೆಯನ್ನು ಮಾಡುತ್ತಾಳೆ!” “ತುಂಬಾ ಒಳ್ಳೆಯದಾಯಿತು!” ಎಂದು ಅವರು ಹೇಳಲು ರಾಜನು ಅವಳಿಗೆ “ಕನ್ಯೇ! ದೇವ-ಪಿತೃಗಳಂತೆ ಈ ವಿಪ್ರರನ್ನು ಉಪಚರಿಸು!” ಎಂದು ಶಾಸನವನ್ನಿತ್ತನು. ಆ ಧರ್ಮಚಾರಿಣೀ ಕನ್ಯೆಯು ತಂದೆಗೆ ಹಾಗೆಯೇ ಆಗಲೆಂದು ಹೇಳಿ, ರಾಜನ ನಿರ್ದೇಶನದಂತೆ ಅವರಿಬ್ಬರನ್ನೂ ಸತ್ಕರಿಸಿ ಉಪಚರಿಸಿದಳು.
ಅವಳ ಉಪಚಾರಗಳಿಂದ ಮತ್ತು ಅಪ್ರತಿಮ ರೂಪದಿಂದ ನಾರದನ ಹೃದಯದಲ್ಲಿ ಮಲಗಿದ್ದ ಕಾಮನು ಒಮ್ಮೆಲೇ ಎದ್ದು ಅವನನ್ನು ಆಕ್ರಮಣಿಸಲಾರಂಭಿಸಿದನು. ಶುಕ್ಲಪಕ್ಷದಲ್ಲಿ ಉಡುರಾಜ ಚಂದ್ರನು ಹೇಗೆ ಮೆಲ್ಲ ಮೆಲ್ಲನೇ ವರ್ಧಿಸುತ್ತಾನೋ ಹಾಗೆ ಆ ಮಹಾತ್ಮನ ಹೃದಯದಲ್ಲಿ ಕಾಮವು ವೃದ್ಧಿಯಾಗತೊಡಗಿತು. ಆದರೆ ಧರ್ಮವಿದುವಾದ ಅವನು ನಾಚಿಕೊಂಡು ತನಗಾಗುತ್ತಿದ್ದ ಮನ್ಮಥನ ತೀವ್ರತೆಯನ್ನು ಸೋದರಳಿಯ ಮಹಾತ್ಮ ಪರ್ವತನಲ್ಲಿ ಹೇಳಿಕೊಳ್ಳಲೇ ಇಲ್ಲ. ತನ್ನ ತಪಸ್ಸಿನ ಪ್ರಭಾವದಿಂದ ಅವನ ಇಂಗಿತವನ್ನು ತಿಳಿದುಕೊಂಡ ಪರ್ವತನು ಕ್ರುದ್ಧನಾಗಿ ಕಾಮಾರ್ತನಾದ ನಾರದನಿಗೆ ಭಯಂಕರವಾದ ಈ ಶಾಪವನ್ನಿತ್ತನು: "“ಏನೇನು ಶುಭಾಶುಭ ಸಂಕಲ್ಪಗಳು ಹುಟ್ಟುತ್ತವೆಯೋ ಅವುಗಳನ್ನು ಅನ್ಯೋನ್ಯರಲ್ಲಿ ಹೇಳಬೇಕು” ಎಂದು ಅವ್ಯಗ್ರನಾಗಿ ನನ್ನೊಡನೆ ಒಪ್ಪಂದ ಮಾಡಿಕೊಂಡಿರುವ ನೀನು ಆ ವಚನಕ್ಕೆ ಸುಳ್ಳಾಗಿ ಮಾಡುತ್ತಿರುವೆ! ಬ್ರಹ್ಮನ್! ಆದುದರಿಂದ ನಾನು ನಿನಗೆ ಹೀಗೆ ಹೇಳುತ್ತಿದ್ದೇನೆ. ಕುಮಾರಿ ಸುಕುಮಾರಿಯ ಕುರಿತು ನಿನ್ನಲ್ಲಿ ಹುಟ್ಟಿರುವ ಈ ಕಾಮದ ಕುರಿತು ನೀನು ನನಗೆ ಈ ಮೊದಲೇ ಹೇಳಲಿಲ್ಲ! ಆದುದರಿಂದ ನಾನು ನಿನ್ನನ್ನು ಶಪಿಸುತ್ತಿದ್ದೇನೆ. ಬ್ರಹ್ಮವಾದಿಯೂ, ಗುರುವೂ, ತಪಸ್ವೀ ಬ್ರಾಹ್ಮಣನೂ ಆಗಿರುವ ನೀನು ನಮ್ಮಿಬ್ಬರ ನಡುವೆ ಮಾಡಿಕೊಂಡ ಒಪ್ಪಂದವನ್ನು ಮುರಿದಿರುವೆ! ಆದುದರಿಂದ ಸಂಕ್ರುದ್ಧನಾಗಿ ನಾನು ನಿನ್ನನ್ನು ಶಪಿಸುತ್ತಿದ್ದೇನೆ. ನಾನು ಹೇಳುವುದನ್ನು ಕೇಳು! ಸುಕುಮಾರಿಯು ನಿನ್ನ ಪತ್ನಿಯಾಗುತ್ತಾಳೆ ಎನ್ನುವುದರಲ್ಲಿ ಸಂಶಯವಿಲ್ಲ! ಆದರೆ ಆ ಕನ್ಯೆಯನ್ನು ವಿವಾಹವಾದೊಡನೆಯೇ ನೀನು ವಾನರ ರೂಪವನ್ನು ತಾಳುತ್ತೀಯೆ! ಸ್ವರೂಪವನ್ನು ಕಳೆದುಕೊಂಡು ಕಪಿಮುಖನಾಗುವ ನಿನ್ನನ್ನು ಜನರು ನೋಡುತ್ತಾರೆ!”
ಪರ್ವತನ ಆ ಮಾತನ್ನು ಕೇಳಿದ ಸೋದರ ಮಾವ ನಾರದನೂ ಕೂಡ ಕುಪಿತನಾಗಿ ತನ್ನ ಅಳಿಯನನ್ನೂ ಶಪಿಸಿದನು: “ತಪಸ್ಸು, ಬ್ರಹ್ಮಚರ್ಯ, ಸತ್ಯ ಮತ್ತು ದಮಗಳಿಂದ ಯುಕ್ತನಾಗಿದ್ದರೂ, ಧರ್ಮನಿತ್ಯನಾಗಿದ್ದರೂ, ನಿನಗೆ ಸ್ವರ್ಗವಾಸವು ದೊರಕುವುದಿಲ್ಲ!” ಹೀಗೆ ಕ್ರುದ್ಧರಾಗಿ ಪರಸ್ಪರರನ್ನು ಘೋರವಾಗಿ ಶಪಿಸಿ ಕ್ರುದ್ಧ ಗಜೋತ್ತಮರಂತೆ ಒಬ್ಬರನ್ನೊಬ್ಬರು ಸಹಿಸಿಕೊಳ್ಳಲಾಗದೇ ಅಗಲಿ ಹೊರಟುಹೋದರು.
ಮಹಾಮುನಿ ಪರ್ವತನು, ತನ್ನದೇ ತೇಜಸ್ಸಿನಿಂದ ಯಥಾನ್ಯಾಯವಾಗಿ ಪೂಜಿಸಲ್ಪಡುತ್ತಾ, ಭೂಮಿಯನ್ನಿಡೀ ಸಂಚರಿಸಿದನು. ಅನಂತರ ಧರ್ಮಪ್ರವರ ನಾರದನು ಸೃಂಜಯನ ಮಗಳು ಅನಿಂದಿತೆ ಕನ್ಯೆ ಸುಕುಮಾರಿಯನ್ನು ಧರ್ಮಪ್ರಕಾರವಾಗಿ ಪಡೆದುಕೊಂಡನು. ಪಾಣಿಗ್ರಹಣ ಮಂತ್ರಗಳು ಮತ್ತು ಪ್ರಯೋಗಗಳು ಮುಗಿದಾಕ್ಷಣವೇ ಆ ಕನ್ಯೆಯು, ಶಾಪವಿದ್ದಂತೆ, ನಾರದನನ್ನು ವಾನರರೂಪದಲ್ಲಿ ಕಂಡಳು. ವಾನರನಂಥಹ ಮುಖವನ್ನು ಹೊಂದಿದ್ದ ದೇವರ್ಷಿಯನ್ನು ಸುಕುಮಾರಿಯೂ ಅವಮಾನಗೊಳಿಸಲಿಲ್ಲ. ಅವನ ಮೇಲೆ ಪ್ರೀತಿಭಾವವನ್ನೇ ಹೊಂದಿದ್ದಳು. ಪತಿಯ ಸೇವನಿರತಳಾಗಿದ್ದ ಅವಳು ಮನಸ್ಸಿನಲ್ಲಿ ಕೂಡ ದೇವ, ಮುನಿ, ಯಕ್ಷರು ಮತ್ತು ಬೇರೆ ಯಾರಲ್ಲಿ ಕೂಡ ಪತಿತ್ವವನ್ನು ಕಾಣಲಿಲ್ಲ.
ಹೀಗಿರಲು ಒಮ್ಮೆ ಭಗವಾನ್ ಪರ್ವತನು ಯಾವುದೋ ಕಾರಣಕ್ಕಾಗಿ ವನದಲ್ಲಿ ವಿಹರಿಸುತ್ತಿರುವಾಗ ಅಲ್ಲಿ ನಾರದನನ್ನು ಕಂಡನು. ಆಗ ಪರ್ವತನು ನಾರದನನ್ನು ಅಭಿವಂದಿಸಿ “ಪ್ರಭೋ! ನಿನ್ನ ಕರುಣೆಯಿಂದ ನಾನು ಸ್ವರ್ಗಕ್ಕೆ ಹೋಗುವಂತೆ ಮಾಡು!” ಎಂದು ಕೇಳಿಕೊಂಡನು. ತನಗಿಂತಲೂ ದೀನನಾಗಿ ಕೈಮುಗಿದು ಕುಳಿತುಕೊಂಡು ಯಾಚಿಸುತ್ತಿದ್ದ ಪರ್ವತನನ್ನು ನೋಡಿ ನಾರದನು ಅವನಿಗೆ ಇಂತೆಂದನು: “ನೀನೇ ನನ್ನನ್ನು ಮೊದಲು ವಾನರನಾಗೆಂದು ಶಪಿಸಿದೆ. ಇದನ್ನು ಕೇಳಿದ ನಾನು ಮತ್ಸರದಿಂದ ಇಂದಿನಿಂದ ನಿನಗೆ ಸ್ವರ್ಗವಾಸವು ದೊರೆಯದಿರಲಿ ಎಂದು ನಿನ್ನನ್ನೂ ಪ್ರತಿಯಾಗಿ ಶಪಿಸಿದೆನು. ನನ್ನ ಪುತ್ರಸ್ಥಾನದಲ್ಲಿರುವ ನೀನು ಈ ರೀತಿ ಮಾಡಬಾರದಾಗಿತ್ತು!”
ಅನಂತರ ಆ ಇಬ್ಬರು ಮುನಿಗಳೂ ಅನ್ಯೋನ್ಯರಿಗಿತ್ತಿದ್ದ ಶಾಪವನ್ನು ಹಿಂದೆ ತೆಗೆದುಕೊಂಡರು. ಆಗ ಕಾಂತಿಯುಕ್ತನಾಗಿದ್ದ ದೇವರೂಪೀ ಆ ನಾರದನನ್ನು ನೋಡಿ ಸುಕುಮಾರಿಯು ಪರಪುರುಷನೆಂಬ ಸಂದೇಹದಿಂದ ಓಡಿಹೋದಳು. ಓಡಿಹೋಗುತ್ತಿದ್ದ ಆ ಅನಿಂದಿತೆಯನ್ನು ನೋಡಿ ಪರ್ವತನು ಇಂತೆಂದನು: “ಇವನೇ ನಿನ್ನ ಪತಿ. ಅದರಲ್ಲಿ ವಿಚಾರಮಾಡಬೇಕಾದುದೇ ಇಲ್ಲ! ಈ ಋಷಿ, ಪರಮ ಧರ್ಮಾತ್ಮಾ ಭಗವಾನ್ ಪ್ರಭು ನಾರದನು ನಿನ್ನ ಅಭೇದ್ಯಹೃದಯ ಪತಿ. ಅದರಲ್ಲಿ ನಿನಗೆ ಸಂಶಯವಾಗದಿರಲಿ!” ಆ ಮಹಾತ್ಮ ಪರ್ವತನು ಬಹುವಿಧವಾಗಿ ಅವಳನ್ನು ಒಪ್ಪಿಸಲು, ತನ್ನ ಪತಿಯು ಶಾಪದೋಷಕ್ಕೊಳಗಾಗಿದ್ದುದನ್ನೂ ಕೇಳಿ ಸುಕುಮಾರಿಯು ಸ್ವಸ್ಥಚಿತ್ತಳಾದಳು. ಆಗ ಪರ್ವತನು ಸ್ವರ್ಗಕ್ಕೂ ನಾರದನು ಪತ್ನಿಯೊಡನೆ ತನ್ನ ಮನೆಗೂ ತೆರಳಿದರು.
ಸುವರ್ಣಷ್ಠೀವಿ
ನಾರದ ಮತ್ತು ಅವನ ಸೋದರಿಯ ಮಗ ಮಹಾಮುನಿ ಪರ್ವತನೂ ವಿಜಯಿಗಳಲ್ಲಿ ಶ್ರೇಷ್ಠ ಸೃಂಜಯನಲ್ಲಿ ಸ್ವಲ್ಪಕಾಲ ಉಳಿಯಲು ಹೋಗಿದ್ದರು. ಅಲ್ಲಿ ಅವನಿಂದ ವಿಧಿಪೂರ್ವಕ ಕರ್ಮಗಳಿಂದ ಸಂಪೂಜಿತರಾಗಿ, ಸರ್ವಕಾಮನ ವಸ್ತುಗಳಿಂದ ಸುವಿಹಿತರಾಗಿ ಅವನ ಮನೆಯಲ್ಲಿ ಉಳಿದುಕೊಂಡಿದ್ದರು. ಅನೇಕ ವರ್ಷಗಳು ಕಳೆದು ಅವರು ಹೊರಡುವ ಸಮಯ ಬಂದಾಗ ಪರ್ವತನು ನಾರದನೊಡನೆ ಕಾಲಕ್ಕೆ ಉಚಿತವಾದ ಈ ಮಾತನ್ನು ಹೇಳಿದನು: “ಬ್ರಹ್ಮನ್! ನಾವಿಬ್ಬರೂ ಪರಮಪೂಜಿತರಾಗಿ ಈ ನರೇಂದ್ರನ ಮನೆಯಲ್ಲಿ ವಾಸಮಾಡಿಕೊಂಡಿದ್ದೇವೆ. ಈಗ ಹೊರಡುವ ಸಮಯದಲ್ಲಿ ಅವನಿಗೆ ಉಪಕಾರವನ್ನೆಸಗುವ ಕುರಿತು ಚಿಂತಿಸಬೇಕು.”
ಆಗ ನಾರದನು ಶುಭದರ್ಶನ ಪರ್ವತನಿಗೆ ಇಂತೆಂದೆನು: “ಅಳಿಯನೇ! ನೀನೇ ಎಲ್ಲವನ್ನೂ ನಿರ್ಧರಿಸು. ರಾಜನು ಬಯಸಿದ ವರವನ್ನು ನೀಡಿ ಸಂತುಷ್ಟಿಗೊಳಿಸೋಣ! ನಿನಗೆ ಒಪ್ಪಿಗೆಯಿದ್ದರೆ ನಮ್ಮ ತಪಸ್ಸಿನ ಸಿದ್ಧಿಯಿಂದ ಅವನಿಗೆ ಇಷ್ಟವಾದುದನ್ನು ಮಾಡಿಕೊಡೋಣ!”
ಹೀಗೆ ನಾರದನ ಅನುಮತಿಯನ್ನು ಪಡೆದ ಮುನಿಪುಂಗವ ಪರ್ವತನು ಶುಭದರ್ಶನ ಸೃಂಜಯನನ್ನು ಕರೆಯಿಸಿ ಈ ಮಾತನ್ನಾಡಿದನು: “ನೃಪ! ಅತ್ಯಂತ ಸರಳತೆಯಿಂದಲೂ ಪ್ರೀತಿ-ವಿಶ್ವಾಸಗಳಿಂದಲೂ ನೀನು ಮಾಡಿದ ಸತ್ಕಾರದಿಂದ ನಾವಿಬ್ಬರೂ ಸಂತೋಷಗೊಂಡಿದ್ದೇವೆ. ನಿನಗೆ ವರವನ್ನು ನೀಡಲು ನಮ್ಮಿಬ್ಬರಲ್ಲೂ ಅನುಮತಿಯಿದೆ. ಯಾವ ವರಬೇಕೆಂದು ಯೋಚಿಸಿ ಹೇಳು! ದೇವತೆಗಳಿಗೆ ಹಿಂಸೆಯಾಗದಂಥಹ ಮತ್ತು ಮನುಷ್ಯರು ನಾಶವಾಗದಂಥಹ ವರವನ್ನು ಪಡೆ! ನೀನು ಪೂಜಾರ್ಹನೆಂದು ನಮ್ಮಿಬ್ಬರ ಮತ!”
ಸೃಂಜಯನು ಹೇಳಿದನು: “ನೀವು ಸುಪ್ರೀತರಾಗಿದ್ದೀರಿ ಎನ್ನುವುದರಿಂದಲೇ ನಾನು ಕೃತಕೃತ್ಯನಾಗಿದ್ದೇನೆ. ಇದೇ ನನಗೆ ದೊರಕಿರುವ ಪರಮ ಮಹಾ ಫಲವಾಗಿದೆ!”
ಇದನ್ನೇ ಮತ್ತೆ ಮತ್ತೆ ಹೇಳುತ್ತಿದ್ದ ಅವನಿಗೆ ಪರ್ವತನು ಪುನಃ ಹೇಳಿದನು: “ರಾಜನ್! ನಿನ್ನ ಹೃದಯದಲ್ಲಿ ಬಹುಕಾಲದಿಂದ ಸಂಕಲ್ಪವೇನಿದೆಯೋ ಅದನ್ನೇ ಕೇಳಿಕೋ!”
ಸೃಂಜಯನು ಹೇಳಿದನು: “ವೀರನೂ, ವೀರ್ಯವಂತನೂ, ದೃಢವ್ರತನೂ, ಆಯುಷ್ಮಂತನೂ, ದೇವರಾಜನ ಸಮದ್ಯುತಿಯೂ ಆದ ಮಹಾಭಾಗ ಪುತ್ರನನ್ನು ಬಯಸುತ್ತೇನೆ!”
ಪರ್ವತನು ಹೇಳಿದನು: “ನಿನ್ನ ಈ ಕಾಮನೆಯು ಈಡೇರುತ್ತದೆ. ಆದರೆ ಅವನು ಆಯುಷ್ಮಾನನಾಗುವುದಿಲ್ಲ. ಏಕೆಂದರೆ ನಿನ್ನ ಹೃದಯದಲ್ಲಿ ದೇವರಾಜನನ್ನು ಪರಾಭವಗೊಳಿಸುವ ಸಂಕಲ್ಪವಿದೆ! ಸುವರ್ಣಷ್ಠೀವನಾಗಿರುವುದರಿಂದ ಅವನು ಸ್ವರ್ಣಷ್ಠೀವಿ ಎಂದೆನಿಸಿಕೊಳ್ಳುತ್ತಾನೆ. ದೇವರಾಜ ಸಮದ್ಯುತಿಯಾದ ಅವನನ್ನು ದೇವರಾಜನಿಂದ ರಕ್ಷಿಸಿಕೊಳ್ಳಬೇಕು!”
ಮಹಾತ್ಮ ಪರ್ವತನ ಆ ಮಾತನ್ನು ಕೇಳಿದ ಸೃಂಜಯನು “ಹೀಗಾಗಬಾರದು!” ಎಂದು ಪ್ರಸನ್ನಗೊಳಿಸಲು ಪ್ರಾರ್ಥಿಸಿದನು. “ಮುನೇ! ನಿಮ್ಮ ತಪಸ್ಸಿನಿಂದ ನನ್ನ ಮಗನು ಆಯುಷ್ಮಂತನಾಗಬೇಕು!” ಆದರೂ ಇಂದ್ರನ ಮೇಲಿನ ಗೌರವದಿಂದ ಪರ್ವತನು ಏನನ್ನೂ ಹೇಳಲಿಲ್ಲ. ದೀನನಾಗಿದ್ದ ಆ ನೃಪತಿಗೆ ನಾರದನು ಪುನಃ ಹೇಳಿದನು: “ಮಹಾರಾಜ! ನನ್ನನ್ನು ಸ್ಮರಿಸಿಕೋ! ಸ್ಮರಿಸಿದಾಗಲೆಲ್ಲಾ ನಾನು ನಿನಗೆ ಕಾಣಿಸಿಕೊಳ್ಳುತ್ತೇನೆ! ಪ್ರೇತರಾಜನ ವಶನಾಗುವ ನಿನ್ನ ಪ್ರಿಯಪುತ್ರನನ್ನು ಅದೇ ರೂಪದಲ್ಲಿ ಪುನಃ ನಿನಗೆ ದೊರಕಿಸಿಕೊಡುತ್ತೇನೆ. ಶೋಕಿಸದಿರು!”
ನೃಪತಿಗೆ ಹೀಗೆ ಹೇಳಿ ಅವರಿಬ್ಬರೂ ಬೇಕಾದಲ್ಲಿಗೆ ಹೊರಟುಹೋದರು. ಸೃಂಜಯನೂ ಕೂಡ ಇಚ್ಛಾನುಸಾರವಾಗಿ ತನ್ನ ಅರಮನೆಯನ್ನು ಪ್ರವೇಶಿಸಿದನು. ಕೆಲವು ಸಮಯವು ಕಳೆಯಲು ಆ ರಾಜರ್ಷಿ ಸೃಂಜಯನಿಗೆ ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವಂಥಹ ಮಹಾವೀರ್ಯ ಪುತ್ರನು ಜನಿಸಿದನು. ಸರೋವರದಲ್ಲಿ ನೈದಿಲೆಯು ಹೇಗೋ ಹಾಗೆ ಸಮಯಹೋದಂತೆ ಅವನು ಬೆಳೆಯತೊಡಗಿದನು. ಅವನ ಹೆಸರಿನ ಯತಾರ್ಥದಂತೆ ಅವನು ಸುವರ್ಣವನ್ನೇ ಉಗುಳುತ್ತಿದ್ದನು. ಆ ಅದ್ಭುತವು ಲೋಕದಲ್ಲಿಯೇ ಪ್ರಚಾರವಾಯಿತು. ಮಹಾತ್ಮರ ವರದಾನದಿಂದ ಅವನು ಹುಟ್ಟಿರುವನೆಂದು ದೇವೇಂದ್ರನೂ ತಿಳಿದುಕೊಂಡನು. ಬೃಹಸ್ಪತಿಯ ಸಲಹೆಯಂತೆ ನಡೆದುಕೊಳ್ಳುತ್ತಿದ್ದ ಆ ಬಲವೃತ್ರಹನು ಕುಮಾರ ಸ್ವರ್ಣಷ್ಠೀವಿಯ ಭಯದಿಂದ ಅವನನ್ನು ವಧಿಸಲು ಅವಕಾಶವನ್ನು ಹುಡುಕುತ್ತಿದ್ದನು. ಪ್ರಭು ಇಂದ್ರನು ಮೂರ್ತಿಮತ್ತಾಗಿ ನಿಂತಿದ್ದ ದಿವ್ಯಾಸ್ತ್ರ ವಜ್ರಕ್ಕೆ “ವ್ಯಾಘ್ರನಾಗಿ ಆ ರಾಜಪುತ್ರನನ್ನು ಸಂಹರಿಸು!” ಎಂದು ಪ್ರಚೋದಿಸಿದನು. “ವಜ್ರ! ವೀರ್ಯದಿಂದ ಪ್ರವೃದ್ಧನಾಗುವ ಸೃಂಜಯನ ಈ ಮಗನು ನನ್ನನ್ನೇ ಪರಾಜಗೊಳಿಸುತ್ತಾನೆ. ಹಾಗೆಯೇ ಪರ್ವತನು ವರವನ್ನಿತ್ತಿದ್ದನು!” ಶಕ್ರನು ಹೀಗೆ ಹೇಳಲು ಪರಪುರಂಜಯ ವಜ್ರವು ಕುಮಾರನನ್ನು ಸಂಹರಿಸುವ ಸಲುವಾಗಿ ಸಮಯವನ್ನೇ ಕಾಯುತ್ತಾ ನಿತ್ಯವೂ ಅವನನ್ನು ಅನುಸರಿಸಿಯೇ ಇರುತ್ತಿತ್ತು. ಸೃಂಜಯನೂ ಕೂಡ ಕಾಂತಿಯಲ್ಲಿ ದೇವರಾಜನ ಸಮನಾಗಿದ್ದ ಪುತ್ರನನ್ನು ಪಡೆದು ಪರಮ ಹೃಷ್ಟನಾಗಿ ಪತ್ನಿಯೊಡನೆ ಯಾವಾಗಲೂ ವನದಲ್ಲಿಯೇ ಇರುತ್ತಿದ್ದನು. ಹೀಗಿರಲು ಒಮ್ಮೆ ಭಾಗಿರಥೀತೀರದ ನಿರ್ಜನ ಪ್ರದೇಶದಲ್ಲಿ ದಾದಿಯೊಬ್ಬಳೊಡನಿದ್ದ ಬಾಲಕನು ಅತ್ತಿತ್ತ ಓಡುತ್ತಾ ಆಟವಾಡುತ್ತಿದ್ದನು. ಐದುವರ್ಷದ ಬಾಲಕನಾಗಿದ್ದರೂ ಆನೆಯಂತೆ ವಿಕ್ರಮಿಯಾಗಿದ್ದ ಆ ಮಹಾಬಲಶಾಲಿಯ ಮೇಲೆ ಒಮ್ಮೆಲೇ ಹುಲಿಯೊಂದು ಎರಗಿ ಬಿದ್ದಿತು. ತನ್ನನ್ನು ನೋಡಿ ನಡುಗುತ್ತಿದ್ದ ಆ ರಾಜಕುಮಾರನನ್ನು ಹುಲಿಯು ಅಗೆಯಲು ಪ್ರಾಣಶೂನ್ಯನಾದ ಬಾಲಕನು ನೆಲದ ಮೇಲೆ ಬಿದ್ದನು. ದಾದಿಯು ಗಟ್ಟಿಯಾಗಿ ಚೀರಿಕೊಂಡಳು. ದೇವರಾಜನ ಮಾಯೆಯಿಂದ ಬಂದಿದ್ದ ಆ ಹುಲಿಯು ರಾಜಪುತ್ರನನ್ನು ಸಂಹರಿಸಿ ಅಲ್ಲಿಯೇ ಅಂತರ್ಧಾನವಾಯಿತು. ಪರಮ ಆರ್ತಳಾಗಿ ರೋದಿಸುತ್ತಿರುವ ದಾದಿಯ ನಿನಾದವನ್ನು ಕೇಳಿ ಸ್ವಯಂ ಮಹೀಪತಿಯೇ ಆ ಸ್ಥಳಕ್ಕೆ ಧಾವಿಸಿ ಬಂದನು. ಅಸುನೀಗಿ ಮಲಗಿದ್ದ, ರಕ್ತವನ್ನು ಕಳೆದುಕೊಂಡಿದ್ದ, ಆಕಾಶದಿಂದ ಕೆಳಬಿದ್ದ ಚಂದ್ರನಂತೆ ಆನಂದವನ್ನು ಕಳೆದುಕೊಂಡಿದ್ದ ಮಗನನ್ನು ರಾಜನು ನೋಡಿದನು. ಪರಿಪೀಡಿತ ಹೃದಯನಾಗಿ ಅವನು ರಕ್ತದಿಂದ ತೋಯ್ದುಹೋಗಿದ್ದ ಪುತ್ರನನ್ನು ತನ್ನ ತೊಡೆಯಮೇಲಿರಿಸಿಕೊಂಡು ಆತುರನಾಗಿ ಪರಿತಪಿಸಿದನು. ಅವನ ತಾಯಂದಿರೂ ಕೂಡ ಶೋಕಕರ್ಶಿತರಾಗಿ ರೋದಿಸುತ್ತಾ ರಾಜಾ ಸೃಂಜಯನಿದ್ದ ಪ್ರದೇಶಕ್ಕೆ ಓಡಿ ಬಂದರು. ಆಗ ಆ ರಾಜನು ತನ್ನ ಮನಸ್ಸಿನಲ್ಲಿಯೇ ನಾರದನನ್ನು ಸ್ಮರಿಸಿದನು.
ಅವನು ತನ್ನನ್ನೇ ಧ್ಯಾನಿಸುತ್ತಿದ್ದಾನೆಂದು ತಿಳಿದು ನಾರದನು ಅಲ್ಲಿಗೆ ಹೋಗಿ ದರ್ಶನ ನೀಡಿದನು.
ಷೋಡಷ-ರಾಜಕೀಯೋಽಪಖ್ಯಾನ
ಪುತ್ರಶೋಕಾರ್ತನಾದ ಸೃಂಜಯನಿಗೆ ನಾರದನು ಇದನ್ನು ಹೇಳಿದನು. “ಸೃಂಜಯ! ನಾನಾಗಲೀ, ನೀನಾಗಲೀ, ಈ ಎಲ್ಲ ಪ್ರಜೆಗಳಾಗಲೀ ಯಾರೂ ಸುಖ-ದುಃಖಗಳಿಂದ ವಿಮುಕ್ತರಾಗಿರುವುದಿಲ್ಲ. ನಾವೆಲ್ಲರೂ ಒಂದು ದಿನ ಸಾಯುತ್ತೇವೆ. ಅದಕ್ಕಾಗಿ ದುಃಖಿಸುವುದೇಕೆ? ನಾನು ಈಗ ವರ್ಣಿಸುವ ರಾಜರ ಪರಮ ಮಹಾಭಾಗ್ಯದ ಕುರಿತು ಕೇಳು. ಆಗಿ ಹೋಗಿರುವ ಇವರ ವಿಷಯವನ್ನು ಕೇಳಿ ನಿನ್ನ ದುಃಖವು ದೂರವಾಗಬಹುದು! ಮೃತರಾಗಿಹೋಗಿರುವ ಮಹಾನುಭಾವ ಮಹೀಪತಿಗಳ ಕುರಿತು ಕೇಳಿ ಸಂತಾಪವನ್ನು ಕಳೆದುಕೋ! ವಿಸ್ತಾರವಾಗಿ ಇದನ್ನು ನನ್ನಿಂದ ಕೇಳು! ಅವಿಕ್ಷಿತನ ಮಗ ಮರುತ್ತನೂ ಮೃತನಾದನೆಂದು ಕೇಳಿದ್ದೇವೆ. ಆ ರಾಜ ಮಹಾತ್ಮನ ಯಜ್ಞದಲ್ಲಿ ವರುಣ-ಬೃಹಸ್ಪತಿಗಳೊಂದಿಗೆ ಇಂದ್ರನನ್ನು ಮುಂದಿಟ್ಟುಕೊಂಡು ದೇವತೆಗಳು ಮತ್ತು ಪ್ರಜಾಪತಿಯೂ ಬಂದಿದ್ದರು. ಅವನು ಯಜ್ಞದಲ್ಲಿ ದೇವರಾಜ ಶತುಕ್ರತುವಿನೊಂದಿಗೆ ಸ್ಪರ್ಧಿಸಿ ಅವನನ್ನೂ ಸೋಲಿಸಿದ್ದನು. ಆಗ ಶಕ್ರಪ್ರಿಯ ವಿದ್ವಾನ್ ಬೃಹಸ್ಪತಿಯು ಯಜ್ಞಮಾಡಿಸುವುದಿಲ್ಲವೆಂದು ನಿರಾಕರಿಸಿದಾಗ ಬೃಹಸ್ಪತಿಯ ತಮ್ಮ ಸಂವರ್ತನು ಮರುತ್ತನಿಂದ ಯಜ್ಞಮಾಡಿಸಿದನು. ನೃಪತಿಗಳಲ್ಲಿ ಶ್ರೇಷ್ಠ ಆ ನೃಪಸತ್ತಮನು ರಾಜ್ಯವಾಳುತ್ತಿದ್ದಾಗ ಚೈತ್ಯಗಳ ಮಾಲೆಗಳಿಂದ ಕೂಡಿದ್ದ ಭೂಮಿಯಲ್ಲಿ ಕೃಷಿಯಿಲ್ಲದೇ ಬೆಳೆಗಳು ಬೆಳೆಯುತ್ತಿದ್ದವು. ಆವಿಕ್ಷಿತ ಮರುತ್ತನ ಆ ಸತ್ರದಲ್ಲಿ ವಿಶ್ವೇದೇವರು ಸಭಾಸದರಾಗಿದ್ದರು. ಮಹಾತ್ಮ ಮರುದ್ಗಣಗಳು ಮತ್ತು ಸಾಧ್ಯರು ಯಜ್ಞದಲ್ಲಿ ಭಾಗವಹಿಸಿದ್ದವರಿಗೆ ಉಣಬಡಿಸುವ ಪರಿಚಾರಕರಾಗಿದ್ದರು[1]. ಮರುತ್ತನ ಆ ಯಜ್ಞದಲ್ಲಿ ಮರುದ್ಗಣಗಳು ಸೋಮವನ್ನು ಕುಡಿದರು. ಮರುತ್ತನು ಕೊಟ್ಟ ದಕ್ಷಿಣೆಯು ದೇವ-ಮನುಷ್ಯ-ಗಂಧರ್ವರು ಯಜ್ಞಗಳಲ್ಲಿ ಕೊಡುವ ದಕ್ಷಿಣೆಗಳಿಗಿಂತ ಹೆಚ್ಚಾಗಿತ್ತು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯ ಈ ನಾಲ್ಕರಲ್ಲಿ ನಿನಗಿಂತಲೂ ಅಧಿಕನಾಗಿದ್ದ, ಮತ್ತು ನಿನ್ನ ಪುತ್ರನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಮರುತ್ತನೇ ಮರಣಹೊಂದಿದನೆಂದರೆ ನಿನ್ನ ಪುತ್ರನ ವಿಷಯವಾಗಿ ಹೇಳುವುದೇನಿದೆ? ಆದುದರಿಂದ ನಿನ್ನ ಮಗನ ವಿಯೋಗಕ್ಕಾಗಿ ದುಃಖಿಸಬೇಡ!
“ಅತಿಥಿಸತ್ಕಾರದಲ್ಲಿ ನಿರತನಾಗಿದ್ದ ಸುಹೋತ್ರನೂ ಮೃತನಾದನೆಂದು ಕೇಳಿದ್ದೇವೆ. ಅವನ ದೇಶದಲ್ಲಿ ಮಗವತ ಇಂದ್ರನು ಒಂದು ವರ್ಷದ ಕಾಲ ಚಿನ್ನದ ಮಳೆಯನ್ನೇ ಸುರಿಸಿದ್ದನು. ಸುಹೋತ್ರನನ್ನು ರಾಜನನ್ನಾಗಿ ಪಡೆದ ಭೂಮಿಯು ವಸುಮತೀ ಎಂಬ ಹೆಸರಿನ ಸಾರ್ಥಕತೆಯನ್ನು ಪಡೆಯಿತು. ಆ ಜನಪದೇಶ್ವರದಲ್ಲಿ ನದಿಗಳು ಸುವರ್ಣದ ನೀರಿನಿಂದ ಹರಿಯುತ್ತಿದ್ದವು. ಲೋಕಪೂಜಿತ ಮಘವ ಇಂದ್ರನು ಆ ನದಿಗಳಲ್ಲಿ ಚಿನ್ನದ ಆಮೆ-ಏಡಿ-ಮೊಸಳೆ-ಮೀನು-ಕಡಲಹಂದಿಗಳನ್ನು ಬಿಟ್ಟಿದ್ದನು. ನೂರಾರು ಸಾವಿರಾರು ಹಿರಣ್ಮಯ ಮೀನು-ಮೊಸಳೆ-ಆಮೆಗಳು ಬಿದ್ದುದನ್ನು ನೋಡಿ ಅತಿಥಿಸತ್ಕಾರಗಳಲ್ಲಿಯೇ ಆಸಕ್ತನಾಗಿದ್ದ ಸುಹೋತ್ರನು ವಿಸ್ಮಯಗೊಂಡನು. ಕುರುಜಾಂಗಲದ ಎಲ್ಲಕಡೆ ವ್ಯಾಪಿಸಿದ್ದ ಆ ಹಿರಣ್ಯವನ್ನು ಸಮಾಹಿತನಾದ ಸುಹೋತ್ರನು ಯಜ್ಞಗಳನ್ನು ನಡೆಸಿ ಬ್ರಾಹ್ಮಣರಿಗೆ ದಕ್ಷಿಣೆಯನ್ನಾಗಿತ್ತನು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಸುಹೋತ್ರನೂ ಮೃತನಾದನೆಂದಮೇಲೆ ನಿನ್ನ ಪುತ್ರನ ವಿಷಯದಲ್ಲಿ ಹೇಳುವುದೇನಿದೆ? ದಕ್ಷಿಣೆಗಳನ್ನು ನೀಡದಿದ್ದ, ಯಜ್ಞಗಳನ್ನು ಯಾಜಿಸದಿದ್ದ ಅವನ ಕುರಿತು ಶೋಕಿಸಬೇಡ. ಸಮಾಧಾನ ತಾಳು!
“ಸೃಂಜಯ! ಅಂಗದೇಶದ ರಾಜ ಬೃಹದ್ರಥನೂ ಕೂಡ ಮೃತನಾದನೆಂದು ಕೇಳಿದ್ದೇವೆ. ಅವನು ಮಾಡದ ವಿಸ್ತಾರವಾದ ಯಜ್ಞದಲ್ಲಿ ಹತ್ತು ಲಕ್ಷ ಬಿಳೀ ಕುದುರೆಗಳನ್ನು ಸಿಂಗರಿಸಿ, ಹತ್ತು ಲಕ್ಷ ಹೇಮವಿಭೂಷಿತ ಕನ್ಯೆಯರೊಂದಿಗೆ ದಕ್ಷಿಣೆಯನ್ನಾಗಿತ್ತಿದ್ದನು. ಅವನು ಹತ್ತು ಲಕ್ಷ ಹೇಮಮಾಲೆಗಳನ್ನು ಧರಿಸಿದ್ದ ಹೋರಿಗಳನ್ನು ಮತ್ತು ಗೋವುಗಳನ್ನೂ ಸಹಸ್ರ ಅನುಚರರೊಂದಿಗೆ ದಕ್ಷಿಣೆಯನಾಗಿತ್ತಿದ್ದನು. ವಿಷ್ಣುಪದ ಗಿರಿಯಲ್ಲಿ ಅಂಗರಾಜನು ಯಜ್ಞಮಾಡಿದಾಗ ಇಂದ್ರನು ಸೋಮದಿಂದ ಮತ್ತು ಬ್ರಾಹ್ಮಣರು ದಕ್ಷಿಣೆಗಳಿಂದ ಮತ್ತರಾಗಿ ಹೋದರು! ಈ ರೀತಿ ಬೃಹದ್ರಥನು ದೇವ-ಮನುಷ್ಯ-ಗಂಧರ್ವರು ಯಜ್ಞಗಳಲ್ಲಿ ನೀಡುವ ದಕ್ಷಿಣೆಗಳಿಗಿಂತ ಹೆಚ್ಚು ದಕ್ಷಿಣೆಗಳನ್ನಿತ್ತು ನೂರಾರು ಯಜ್ಞಗಳನ್ನು ಮಾಡಿದನು. ಅಂಗರಾಜನು ಏಳು ಸೋಮಸಂಸ್ಥ[2]ಗಳಲ್ಲಿ ಎಷ್ಟು ವಿತ್ತವನ್ನು ಬ್ರಾಹ್ಮಣರಿಗೆ ದಕ್ಷಿಣೆಯನ್ನಾಗಿತ್ತನೋ ಅಷ್ಟು ವಿತ್ತವನ್ನು ದಾನಮಾಡಿದವರು ಹಿಂದೆಯೂ ಹುಟ್ಟಲಿಲ್ಲ, ಮುಂದೆಯೂ ಹುಟ್ಟುವುದಿಲ್ಲ. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಬೃಹದ್ರಥನೂ ಮೃತನಾದನೆಂದಮೇಲೆ ನಿನ್ನ ಪುತ್ರನ ವಿಷಯದಲ್ಲಿ ಶೋಕಿಸಬೇಡ.
“ಸೃಂಜಯ! ಉಶೀನರನ ಮಗ ಶಿಬಿಯೂ ಕೂಡ ಮೃತನಾದನೆಂದು ಕೇಳಿದ್ದೇವೆ. ಅವನು ಇಡೀ ಪೃಥ್ವಿಯನ್ನು ಚರ್ಮವನ್ನು ಹೊದಿಸಿದಂತೆ ತನ್ನ ಸ್ವಾಧೀನದಲ್ಲಿಟ್ಟುಕೊಂಡಿದ್ದನು. ಅವನು ಮಹಾ ರಥಘೋಷದಿಂದ ಇಡೀ ಪೃಥ್ವಿಯಲ್ಲಿಯೇ ಪ್ರತಿಧ್ವನಿಗೊಳಿಸುತ್ತಾ ಒಂದೇ ಒಂದು ರಥಯಾತ್ರೆಯಿಂದ ಇಡೀ ಭೂಮಿಯನ್ನು ಒಂದು ಶಾಸನದಡಿಗೆ ತಂದನು. ಔಶೀನರ ಶಿಬಿಯು ಇಂದು ಎಷ್ಟು ಗೋವುಗಳಿವೆಯೋ ಮತ್ತು ಅರಣ್ಯಗಳಲ್ಲಿ ಎಷ್ಟು ಪಶುಗಳಿವೆಯೋ ಅಷ್ಟೇ ಸಂಖ್ಯೆಯ ಗೋವುಗಳನ್ನು ಯಜ್ಞಗಳಲ್ಲಿ ದಾನವನ್ನಾಗಿತ್ತಿದ್ದನು. ಎಲ್ಲ ರಾಜರುಗಳಿಗೆ ತುಲನೆ ಮಾಡಿದರೆ, ಇಂದ್ರವಿಕ್ರಮಿ ರಾಜರ್ಷಿ ಔಶೀನರನಂತೆ ರಾಜ್ಯಭಾರವನ್ನಾಗಲೀ ಮತ್ತು ಕಾರ್ಯಭಾರವನ್ನಾಗಲೀ ವಹಿಸಲು ಸಮರ್ಥರಾಜನು ಬೇರೆ ಯಾರೂ ಇರಲಿಲ್ಲ ಮತ್ತು ಮುಂದೆ ಇರುವುದಿಲ್ಲ ಎನ್ನುವುದು ಪ್ರಜಾಪತಿಯ ಅಭಿಪ್ರಾಯವಾಗಿತ್ತು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಶಿಬಿಯೂ ಮೃತನಾದನೆಂದಮೇಲೆ ನಿನ್ನ ಪುತ್ರನ ವಿಷಯದಲ್ಲಿ ಹೇಳುವುದೇನಿದೆ? ದಕ್ಷಿಣೆಗಳನ್ನು ನೀಡದಿದ್ದ, ಯಜ್ಞಗಳನ್ನು ಯಾಜಿಸದಿದ್ದ ಅವನ ಕುರಿತು ಶೋಕಿಸಬೇಡ. ಸಮಾಧಾನ ತಾಳು!
“ಸೃಂಜಯ! ದುಃಷಂತ-ಶಕುಂತಲೆಯರ ಮಗ, ಮಹೇಶ್ವಾಸ, ಮಹಾ ಧನಿಕನೂ ತೇಜಸ್ವಿಯೂ ಆಗಿದ್ದ ಭರತನೂ ಮೃತನಾದನೆಂದು ಕೇಳಿದ್ದೇವೆ. ಅವನು ದೇವತೆಗಳ ಸಲುವಾಗಿ ಯಮುನಾನದಿಯ ತಟದಲ್ಲಿ ಮುನ್ನೂರು, ಸರಸ್ವತೀ ತೀರದಲ್ಲಿ ಇಪ್ಪತ್ತು ಮತ್ತು ಗಂಗಾತೀರದಲ್ಲಿ ಹದಿನಾಲ್ಕು ಅಶ್ವಮೇಧ ಯಜ್ಞಗಳನ್ನು ನಡೆಸಿದನು. ಹಿಂದೆ ದುಃಷಂತನ ಮಗ ಮಹಾತೇಜಸ್ವೀ ಭರತನು ಸಹಸ್ರ ಅಶ್ವಮೇಧಗಳಿಂದಲೂ ಮತ್ತು ನೂರು ರಾಜಸೂಯ ಯಜ್ಞಗಳಿಂದಲೂ ದೇವತೆಗಳನ್ನು ತೃಪ್ತಿಪಡಿಸಿದ್ದನು. ಮನುಷ್ಯನು ತನ್ನೆರಡು ಬಾಹುಗಳ ಮಾತ್ರದಿಂದ ಆಕಾಶವನ್ನೇರನು ಹೇಗೆ ಸಾಧ್ಯವಿಲ್ಲವೋ ಹಾಗೆ ವಿಶ್ವದ ಎಲ್ಲ ರಾಜ-ಪಾರ್ಥಿವರೂ ಭರತನಂಥಹ ಮಹಾಕಾರ್ಯಗಳನ್ನು ಮಾಡಲಾರದೇ ಹೋದರು. ಭರತನು ಸಾವಿರಕ್ಕೂ ಅಧಿಕ ಕುದುರೆಗಳನ್ನು ಕಟ್ಟಿ ವೇದಿಗಳನ್ನು ವಿಸ್ತರಿಸಿ ಅಶ್ವಮೇಧಯಾಗಗಳನ್ನು ಮಾಡಿದನು. ಯಜ್ಞಗಳಲ್ಲಿ ಅವನು ಕಣ್ವನಿಗೆ ಸಹಸ್ರ ಚಿನ್ನದ ಕಮಲಗಳನ್ನು ದಾನವಾಗಿ ಕೊಟ್ಟಿದ್ದನು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಭರತನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ನಿತ್ಯವೂ ತನ್ನ ಔರಸಪುತ್ರರಂತೆ ಪ್ರಜೆಗಳನ್ನು ಅನುಕಂಪದಿಂದ ಕಾಣುತ್ತಿದ್ದ ದಾಶರಥಿ ರಾಮನೂ ಕೂಡ ಮೃತನಾದನೆಂದು ಕೇಳಿದ್ದೇವೆ. ರಾಮನು ರಾಜ್ಯವಾಳುತ್ತಿದ್ದಾಗ ಅವನ ರಾಜ್ಯದಲ್ಲಿ ಅನಾಥ ವಿಧವೆಯರ್ಯಾರೂ ಇರಲಿಲ್ಲ. ಅವನು ಸರ್ವರಿಗೂ ಪಿತೃಸಮನಾಗಿದ್ದನು. ರಾಮನು ರಾಜ್ಯವಾಳುತ್ತಿದ್ದಾಗ ಪರ್ಜನ್ಯನು ಕಾಲಕ್ಕೆ ಸರಿಯಾಗಿ ಮಳೆಸುರಿಸುತ್ತಿದ್ದನು. ಸಸ್ಯಗಳು ರಸವತ್ತಾಗಿದ್ದವು. ರಾಮನು ರಾಜ್ಯವಾಳುತ್ತಿದ್ದಾಗ ಪ್ರಾಣಿಗಳು ನೀರಿನಲ್ಲಿ ಮುಳುಗಿ ಸಾಯುತ್ತಿರಲಿಲ್ಲ. ಅನರ್ಥಕವಾಗಿ ಅಗ್ನಿಯು ಯಾರನ್ನೂ ಸುಡುತ್ತಿರಲಿಲ್ಲ. ಯಾರಿಗೂ ಸರ್ಪಗಳ ಭಯವಿರಲಿಲ್ಲ. ರಾಮನು ರಾಜ್ಯವಾಳುತ್ತಿದ್ದಾಗ ಸ್ತ್ರೀಯರು ಸಾವಿರವರ್ಷ ಜೀವಿಸುತ್ತಿದ್ದರು ಮತ್ತು ಸಾವಿರ ಮಕ್ಕಳನ್ನು ಪಡೆಯುತ್ತಿದ್ದರು. ಸರ್ವರೂ ಸಿದ್ಧಾರ್ಥರಾಗಿ ಅರೋಗಿಗಳಾಗಿದ್ದರು. ರಾಮನು ರಾಜ್ಯವಾಳುತ್ತಿದ್ದಾಗ ಅನ್ಯೋನ್ಯ ಸ್ತ್ರೀಯರಲ್ಲಿಯೇ ಯಾವುದೇ ವಿವಾದಗಳಿರುತ್ತಿರಲಿಲ್ಲ. ಇನ್ನು ಅನ್ಯೋನ್ಯ ಪುರುಷರಲ್ಲಿ ವಿವಾದಗಳೇನು? ಪ್ರಜೆಗಳು ನಿತ್ಯವೂ ಧರ್ಮನಿರತರಾಗಿದ್ದರು. ರಾಮನು ರಾಜ್ಯವಾಳುತ್ತಿದ್ದಾಗ ಮರಗಳು ಉಪದ್ರವಗಳಿಲ್ಲದೇ ನಿತ್ಯವೂ ಪುಷ್ಪ-ಫಲಗಳನ್ನು ನೀಡುತ್ತಿದ್ದವು. ಎಲ್ಲ ಹಸುಗಳೂ ಪಾತ್ರೆಗಳ ತುಂಬ ಹಾಲನ್ನು ನೀಡುತ್ತಿದ್ದವು. ಮಹಾತಪಸ್ವಿ ರಾಮನು ಹದಿನಾಲ್ಕು ವರ್ಷ ವನವಾಸವನ್ನು ಮುಗಿಸಿ ದಶಾಶ್ವಮೇಧಗಳನ್ನು ನೆರವೇರಿಸಿ ನಿರರ್ಗಲ ಭೋಜನಗಳನ್ನಿತ್ತನು. ಶ್ಯಾಮವರ್ಣದ ಯುವಕ, ಲೋಹಿತಾಕ್ಷ, ಮದಿಸಿದ ಆನೆಯ ವಿಕ್ರಮವುಳ್ಳ ರಾಮನು ಹತ್ತು ಸಾವಿರ ವರ್ಷಗಳು ರಾಜ್ಯಭಾರವನ್ನು ಮಾಡಿದನು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ರಾಮನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ರಾಜಾ ಭಗೀರಥನೂ ಮೃತನಾದನೆಂದು ಕೇಳಿದ್ದೇವೆ. ಅವನ ಯಜ್ಞದಲ್ಲಿ ಭಗವಾನ್ ಪಾಕಶಾಸನ ಸುರಸತ್ತಮ ಇಂದ್ರನು ಸೋಮವನ್ನು ಕುಡಿದು ಮತೋತ್ಕಟನಾಗಿ ತನ್ನ ಬಾಹುವೀರ್ಯದಿಂದ ಅನೇಕ ಸಹಸ್ರ ಅಸುರರನ್ನು ಗೆದ್ದನು. ಅವನು ಯಜ್ಞಮಾಡುತ್ತಿರುವಾಗ ಹತ್ತು ಲಕ್ಷ ಹೇಮವಿಭೂಷಿತ ಕನ್ಯೆಯರನ್ನು ದಕ್ಷಿಣೆಯಾಗಿ ನೀಡಿದ್ದನು. ಆ ಕನ್ಯೆಗಳೆಲ್ಲರೂ ಪ್ರತ್ಯೇಕ ರಥಗಳಲ್ಲಿ ಕುಳಿತಿದ್ದರು. ಪ್ರತಿ ರಥಕ್ಕೂ ನಾಲ್ಕು ಕುದುರೆಗಳನ್ನು ಕಟ್ಟಿದ್ದರು. ಪ್ರತಿಯೊಂದು ರಥದ ಹಿಂದೂ ಪದ್ಮಗಳಿಂದ ಅಲಂಕೃತಗೊಂಡ ಹೇಮಮಾಲೀ ನೂರು ಆನೆಗಳು ಹೋಗುತ್ತಿದ್ದವು. ಒಂದೊಂದು ಆನೆಯ ಹಿಂದೆಯೂ ಸಾವಿರ ಕುದುರೆಗಳು ಅನುಸರಿಸಿ ಹೋಗುತ್ತಿದ್ದವು. ಒಂದೊಂದು ಕುದುರೆಯ ಹಿಂದೆ ಸಹಸ್ರ ಗೋವುಗಳಿದ್ದವು ಮತ್ತು ಒಂದೊಂದು ಗೋವಿನ ಹಿಂದೆಯೂ ಸಹಸ್ರ ಆಡುಗಳಿದ್ದವು. ಹಿಂದೆ ಅವನು ಗಂಗಾತೀರದಲ್ಲಿ ವಾಸಿಸುತ್ತಿದ್ದಾಗ ಗಂಗೆಯು ಬಂದು ಅವನ ತೊಡೆಯಮೇಲೆ ಕುಳಿತುಕೊಳ್ಳುತ್ತಿದ್ದಳು. ಅದರಿಂದ ಅವಳಿಗೆ ಭಾಗೀರಥೀ ಮತ್ತು ಉರ್ವಶೀ ಎಂಬ ಹೆಸರುಗಳು ಬಂದವು. ಭೂರಿದಕ್ಷಿಣೆಗಳನ್ನು ನೀಡುತ್ತಾ ಯಜ್ಞಮಾಡುತ್ತಿದ್ದ ಇಕ್ಷ್ವಾಕು ಕುಲದ ಭಗೀರಥನನ್ನು ತ್ರಿಲೋಕಪಥಗೆ ಗಂಗೆಯು ತಂದೆಯನ್ನಾಗಿ ಮಾಡಿಕೊಂಡಳು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಭಗೀರಥನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ಯಾರ ಮಹತ್ಕಾರ್ಯಗಳನ್ನು ಬ್ರಾಹ್ಮಣರು ಈಗಲೂ ಹೇಳಿಕೊಳ್ಳುತ್ತಾರೋ ಆ ದಿಲೀಪನೂ ಕೂಡ ಮೃತನಾದನೆಂದು ಕೇಳಿದ್ದೇವೆ. ಆ ವಸುಧಾಧಿಪನು ವಸುಸಂಪನ್ನವಾದ ಈ ವಸುಧೆಯನ್ನು ಮಹಾಯಜ್ಞದಲ್ಲಿ ಬಂದು ಸೇರಿದ್ದ ಬ್ರಾಹ್ಮಣರಿಗೆ ದಾನವನ್ನಾಗಿತ್ತನು. ಅವನು ಯಜಮಾನನಾಗಿದ್ದ ಯಜ್ಞ-ಯಜ್ಞಗಳಲ್ಲಿಯೂ ಪುರೋಹಿತನು ಸಹಸ್ರ ಸುವರ್ಣದ ಆನೆಗಳನ್ನು ದಕ್ಷಿಣಾರೂಪವಾಗಿ ಕೊಂಡೊಯ್ಯುತ್ತಿದ್ದನು. ಅವನ ಯಜ್ಞದಲ್ಲಿ ಶ್ರೀಮಂತವಾದ ಸುವರ್ಣಮಯ ಮಹಾನ್ ಯೂಪವನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಕರ್ಮಗಳನ್ನು ಮಾಡುತ್ತಾ ಇಂದ್ರನೇ ಮೊದಲಾದ ದೇವತೆಗಳು ಆ ಯೂಪವನ್ನು ಆಶ್ರಯಿಸಿ ಕುಳಿತುಕೊಳ್ಳುತ್ತಿದ್ದರು. ಆ ಹಿರಣ್ಮಯ ಯೂಪಸ್ಥಂಭದ ಸುವರ್ಣದ ಬಳೆಯ ಸುತ್ತಲೂ ಅರವತ್ತು ಸಾವಿರ ದೇವಗಂಧರ್ವರು ಏಳು ರೀತಿಯ ನರ್ತನಗಳನ್ನು ಮಾಡುತ್ತಿದ್ದರು. ಅದರ ಮಧ್ಯೆ ಸ್ವಯಂ ವಿಶ್ವಾವಸುವು ವೀಣೆಯನ್ನು ನುಡಿಸುತ್ತಿರಲು ಎಲ್ಲ ಜೀವಿಗಳೂ ಅವನು ತನಗಾಗಿಯೇ ನುಡಿಸುತ್ತಿದ್ದಾನೆ ಎಂದು ಭಾವಿಸುತ್ತಿದ್ದರು. ರಾಜ ದಿಲೀಪನಂತಹ ಕರ್ಮಗಳನ್ನು ಮಾಡಲು ಇತರ ರಾಜರು ಸಮರ್ಥರಿರಲಿಲ್ಲ. ಸುವರ್ಣಾಭರಣಗಳನ್ನು ಧರಿಸಿದ್ದ ಸ್ತ್ರೀಯರು ಮತ್ತರಾಗಿ ರಸ್ತೆಯ ಮೇಲೆಯೇ ಮಲಗುತ್ತಿದ್ದರು. ಸತ್ಯವಾದಿಯೂ ಉಗ್ರಧನ್ವಿಯೂ ಆಗಿದ್ದ ರಾಜಾ ಮಹಾತ್ಮಾ ದಿಲೀಪದನ್ನು ಸಂದರ್ಶಿಸಿದವರೆಲ್ಲರೂ ಸ್ವರ್ಗಕ್ಕೆ ಹೋದರು! ದಿಲೀಪನ ಅರಮನೆಯಲ್ಲಿ ಸ್ವಾಧ್ಯಾಯಘೋಷ, ಮೌರ್ವಿಯ ಟೇಂಕಾರ ಶಬ್ಧ ಮತ್ತು “ದಾನಮಾಡಿರಿ!” ಎನ್ನುವ ಈ ಮೂರು ಶಬ್ಧಗಳು ನಿಲ್ಲಲೇ ಇಲ್ಲ. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ದಿಲೀಪನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ಯಾರನ್ನು ಮರುತ್ತ ದೇವತೆಗಳು ಅವನ ತಂದೆ ಯುವನಾಶ್ವನ ಬೆನ್ನಿನಿಂದ ಹೊರತೆಗೆದರೋ ಆ ಮಾಂಧಾತನೂ ಮೃತನಾದನೆಂದು ಕೇಳಿದ್ದೇವೆ. ತ್ರಿಲೋಕ ವಿಜಯಿಯಾಗಿದ್ದ ಆ ಶ್ರೀಮಾನ್ ನೃಪ ಮಹಾತ್ಮನು ಮೊಸರು ಬೆರೆಸಿದ ಹಾಲನ್ನು ಕುಡಿದ ಯುವನಾಶ್ವನ ಜಠರದಲ್ಲಿ ಬೆಳೆದವನಾಗಿದ್ದನು. ತಂದೆಯ ತೊಡೆಯಮೇಲೆ ಮಲಗಿದ್ದ ಆ ದೇವರೂಪಿಣೀ ಶಿಶುವನ್ನು ಕಂಡು ದೇವತೆಗಳು ಪರಸ್ಪರರಲ್ಲಿ “ಇವನು ಯಾರ ಹಾಲನ್ನು ಕುಡಿಯುತ್ತಾನೆ?” ಎಂದು ಚರ್ಚಿಸಿದ್ದರು. “ನಾನು ಇವನಿಗೆ ಹಾಲುಣ್ಣಿಸುತ್ತೇನೆ!” ಎಂದು ಇಂದ್ರನೇ ಮುಂದೆಬಂದನು. ಶತಕ್ರತುವೇ ಅವನಿಗೆ “ಮಾಂಧಾತ” ಎಂಬ ಹೆಸರನ್ನಿಟ್ಟಿದ್ದನು. ಆ ಮಹಾತ್ಮ ಯೌವನಾಶ್ವ ಮಾಂಧಾತನ ಪುಷ್ಟಿಗಾಗಿ ಅವನ ಬಾಯಿಯಲ್ಲಿಟ್ಟ ಇಂದ್ರನ ಬೆರಳೇ ಹಾಲಿನ ಧಾರೆಯನ್ನು ಸುರಿಸಿತ್ತು! ಇಂದ್ರನ ಬೆರಳಿನಿಂದ ಕುಡಿದ ಅವನು ಹನ್ನೆರಡು ದಿನಗಳಲ್ಲಿಯೇ ಹನ್ನೆರಡು ವರ್ಷದಷ್ಟು ದೊಡ್ಡದಾಗಿ ಬೆಳೆದಿದ್ದನು! ಯುದ್ಧದಲ್ಲಿ ಇಂದ್ರಸಮನಾಗಿದ್ದ ಆ ಧರ್ಮಾತ್ಮ ಮಹಾತ್ಮನು ಇಡೀ ಭೂಮಿಯನ್ನೇ ಒಂದು ಆಡಳಿತದ ಅಧೀನವನ್ನಾಗಿಸಿದನು. ಮಾಂಧಾತನು ಸಮರದಲ್ಲಿ ಆಂಗಾರನನ್ನೂ, ಮರುತ್ತನನ್ನೂ, ಅಸಿತನನ್ನೂ, ಗಯನನ್ನೂ, ಅಂಗರಾಜ ಬೃಹದ್ರಥನನ್ನೂ ಜಯಿಸಿದ್ದನು. ಯೌವನಾಶ್ವನು ಆಂಗಾರನನ್ನು ಸಮರದಲ್ಲಿ ಎದುರಿಸಿ ಯುದ್ಧಮಾಡುತ್ತಿದ್ದಾಗಿ ಅವನ ಧನುಸ್ಸಿನ ಟೇಂಕಾರವನ್ನು ಕೇಳಿ ದೇವತೆಗಳು ಅವನು ಆಕಾಶವನ್ನೇ ಸೀಳಿಬಿಡುತ್ತಿದ್ದಾನೋ ಎಂದು ಅಂದುಕೊಂಡಿದ್ದರು. ಸೂರ್ಯನು ಉದಯಿಸುವ ಸ್ಥಳದಿಂದ ಹಿಡಿದು ಅವನು ಅಸ್ತಮಿಸುವ ಸ್ಥಳದ ವರೆಗಿನ ಎಲ್ಲವೂ ಯೌವನಾಶ್ವ ಮಾಂಧಾತನ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿತ್ತು. ಆ ಮಹೀಪತಿಯು ನೂರು ಅಶ್ವಮೇಧಗಳನ್ನೂ ನೂರು ರಾಜಸೂಯಗಳನ್ನೂ ಮಾಡಿ ಬ್ರಾಹ್ಮಣರಿಗೆ ಹತ್ತು ಯೋಜನಗಳಷ್ಟು ದಪ್ಪವಾಯಿಯೂ ಒಂದು ಯೋಜನದಷ್ಟು ಎತ್ತರವಾಗಿಯೂ ಇರುವ ಸುವರ್ಣಮಯ ರೋಹಿತ ಮತ್ಸ್ಯಗಳನ್ನು ದಾನವನ್ನಾಗಿತ್ತಿದ್ದನು. ಉಳಿದುದನ್ನು ಇತರ ದ್ವಿಜಾತಿಯವರು ಹಂಚಿಕೊಂಡಿದ್ದರು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಮಂಧಾತನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ಸಾಗರಪರ್ಯಂತವಾದ ಈ ಇಡೀ ಪೃಥ್ವಿಯನ್ನು ಗೆದ್ದ ನಹುಷನ ಮಗ ಯಯಾತಿಯೂ ಮೃತನಾದನೆಂದು ಕೇಳಿದ್ದೇವೆ! ಶಮ್ಯಾಪಾತ[3]ದಿಂದ ಭೂಮಿಯನ್ನು ಗುರುತಿಸುತ್ತಾ ಅವನು ಅಲ್ಲಲ್ಲಿಯೇ ಯಜ್ಞ ವೇದಿಗಳನ್ನು ಪ್ರತಿಷ್ಠಾಪಿಸಿ ಪುಣ್ಯ ಕ್ರತುಗಳನ್ನು ಯಾಜಿಸುತ್ತಾ ಭೂಮಿಯನ್ನೇ ಸುತ್ತಿದನು. ಅವನು ಮೂರು ಕಾಂಚನ ಪರ್ವತಗಳಷ್ಟು ದಾನವನ್ನಿತ್ತು ಸಹಸ್ರ ಇಷ್ಟಿ ಕ್ರತುಗಳಿಂದಲೂ ನೂರು ಅಶ್ವಮೇಧಗಳಿಂದದ್ಲೂ ದೇವೇಂದ್ರನನ್ನು ತೃಪ್ತಿಗೊಳಿಸಿದ್ದನು. ನಹುಷನ ಮಗ ಯಯಾತಿಯು ದೇವಾಸುರ ಯುದ್ಧದಲ್ಲಿ ವ್ಯೂಹದಲ್ಲಿದ್ದ ದೈತ್ಯ-ದಾನವರನ್ನು ಸಂಹರಿಸಿ ಇಡೀ ಭೂಮಿಯನ್ನೇ ತನ್ನ ಮಕ್ಕಳಲ್ಲಿ ವಿಭಜಿಸಿದ್ದನು. ಯದು-ದ್ರುಹ್ಯ ಮೊದಲಾದ ಮಕ್ಕಳನ್ನು ಅಲ್ಲಲ್ಲಿ ಸಂಸ್ಥಾಪಿಸಿ, ಪೂರುವಿಗೆ ರಾಜ್ಯಾಭಿಷೇಕವನ್ನು ಮಾಡಿ, ಪತ್ನಿಯೊಂದಿಗೆ ವನವಾಸಗೈದನು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಯಯಾತಿಯೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ಪ್ರಜೆಗಳು ಯಾರನ್ನು ಪುಣ್ಯ ರಕ್ಷಕನೆಂದು ತಿಳಿದುಕೊಂಡಿದ್ದರೋ ಆ ನಭಾಗನ ಮಗ ಅಂಬರೀಷನೂ ಮೃತನಾದನೆಂದು ಕೇಳಿದ್ದೇವೆ. ಅವನು ಯಜ್ಞ ಮಾಡುತ್ತಿರುವಾಗ ಒಂದು ಲಕ್ಷ ಹತ್ತು ಸಾವಿರ ರಾಜರನ್ನು ಬ್ರಾಹ್ಮಣರ ಸೇವೆಗಾಗಿ ನಿಯಮಿಸಿದ್ದನು. “ಈ ಹಿಂದೆ ಇದನ್ನು ಯಾರೂ ಮಾಡಿರಲಿಲ್ಲ ಮತ್ತು ಮುಂದೆ ಕೂಡ ಮಾಡುವವರಿಲ್ಲ!” ಎಂದು ಜನರು ನಾಭಾಗ ಅಂಬರೀಷನ ದಕ್ಷಿಣೆಗಳನ್ನು ಪ್ರಶಂಸಿಸಿದ್ದರು. ಅವನ ಯಜ್ಞದಲ್ಲಿ ಪಾಲ್ಗೊಂಡಿದ್ದ ಒಂದು ಲಕ್ಷ ಹತ್ತು ಸಾವಿರ ರಾಜರೆಲ್ಲರೂ ಕೂಡ ದಕ್ಷಿಣಾಯನ ಮಾರ್ಗವಾಗಿ ಪುಣ್ಯಲೋಕಗಳನ್ನು ಸೇರಿದರು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಅಂಬರೀಷನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ಚಿತ್ರರಥನ ಮಗ ಶಶಬಿಂದುವೂ ಮೃತ್ಯುವಶನಾದನೆಂದು ಕೇಳಿದ್ದೇವೆ. ಆ ಮಹಾತ್ಮನಿಗೆ ಒಂದು ಲಕ್ಷ ಪತ್ನಿಯರಿದ್ದರು. ಶಶಬಿಂದುವಿಗೆ ಹತ್ತು ಲಕ್ಷ ಮಕ್ಕಳಿದ್ದರು. ಅವರೆಲ್ಲರೂ ಹಿರಣ್ಯ ಕವಚಗಳನ್ನು ಧರಿಸಿದ್ದರು. ಎಲ್ಲರೂ ಉತ್ತಮ ಧನ್ವಿಗಳಾಗಿದ್ದರು. ಒಬ್ಬೊಬ್ಬ ರಾಜಪುತ್ರನನ್ನೂ ನೂರು ನೂರು ಕನ್ಯೆಯರು ಅನುಸರಿಸಿ ಹೋಗುತ್ತಿದ್ದರು. ಪ್ರತಿಯೊಬ್ಬ ಕನ್ಯೆಯ ಹಿಂದೆಯೂ ನೂರು ನೂರು ಆನೆಗಳು, ಪ್ರತಿಯೊಂದು ಆನೆಯನ್ನೂ ನೂರು ನೂರು ರಥಗಳೂ, ಪ್ರತಿಯೊಂದು ರಥವನ್ನೂ ನೂರು ನೂರು ಸುವರ್ಣಮಾಲೆಗಳಿಂದ ಅಲಂಕೃತವಾದ ನೂರು ನೂರು ಉತ್ತಮ ಜಾತಿಯ ಕುದುರೆಗಳೂ, ಪ್ರತಿಯೊಂದು ಕುದುರೆಯನ್ನೂ ನೂರು ನೂರು ಗೋವುಗಳು, ಮತ್ತು ಪ್ರತಿಯೊಂದು ಗೋವನ್ನೂ ನೂರು ನೂರು ಆಡು-ಕುರಿಗಳು ಹಿಂಬಾಲಿಸಿ ಹೋಗುತ್ತಿದ್ದವು. ಮಹಾರಾಜ ಶಶಬಿಂದುವು ಮಹಾ ಮಖ ಅಶ್ವಮೇಧದಲ್ಲಿ ಬ್ರಾಹ್ಮಣರಿಗೆ ಇಷ್ಟೊಂದು ಅಪಾರ ಧನವನ್ನು ದಾನವನ್ನಾಗಿತ್ತಿದ್ದನು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಶಶಬಿಂದುವೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ಅಮೂರ್ತರಯಸನ ಮಗ ಗಯನೂ ಮೃತನಾದನೆಂದು ಕೇಳಿದ್ದೇವೆ. ಆ ರಾಜನು ನೂರು ವರ್ಷಗಳ ಕಾಲ ಯಜ್ಞಮಾಡಿ ಯಜ್ಞಾವಶೇಷವನ್ನೇ ಭುಂಜಿಸಿದನು. ಅದರಿಂದ ತೃಪ್ತನಾದ ಅಗ್ನಿಯು ಅವನಿಗೆ ವರಗಳನ್ನು ನೀಡಿದಾಗ ಗಯನು ಈ ವರಗಳನ್ನು ಕೇಳಿದ್ದನು: “ಹುತಾಶನ! ದಾನ ಕೊಡುತ್ತಿದ್ದಂತೆಲ್ಲಾ ಅಕ್ಷಯವಾದ ಧನವು ಹಾಗೂ ಧರ್ಮದಲ್ಲಿ ಶ್ರದ್ಧೆಯು ವೃದ್ಧಿಯಾಗುತ್ತಿರಲಿ. ನನ್ನ ಮನಸ್ಸು ಸತ್ಯದಲ್ಲಿಯೇ ಅನುರಕ್ತವಾಗಿರುವಂತೆ ಅನುಗ್ರಹಿಸು!” ಪಾವಕನಿಂದ ಅವನು ತನ್ನ ಎಲ್ಲ ಕಾಮನೆಗಳನ್ನೂ ಪಡೆದುಕೊಂಡನೆಂದು ಕೇಳಿದ್ದೇವೆ. ಮಹಾತೇಜಸ್ವಿಯಾದ ಅವನು ಒಂದು ಸಾವಿರ ವರ್ಷಗಳಿಗೆ ಪುನಃ ಪುನಃ ದರ್ಶ, ಪೌರ್ಣಮಾಸ ಮತ್ತು ಚಾತುರ್ಮಾಸ ಯಜ್ಞಗಳನ್ನು ಯಾಜಿಸಿದನು. ಅವನು ಸಹಸ್ರ ವರ್ಷಗಳ ವರೆಗೆ ಪ್ರತಿದಿನವೂ ಮುಂಜಾನೆ ಏಳುತ್ತಲೇ ಒಂದು ಲಕ್ಷ ಹಸುಗಳನ್ನೂ ಮತ್ತು ಹತ್ತು ಸಾವಿರ ಕುದುರೆಗಳನ್ನೂ ದಾನವನ್ನಾಗಿ ಕೊಡುತ್ತಿದ್ದನು. ಆ ಪುರುಷರ್ಷಭನು ಸೋಮದ ಮೂಲಕ ದೇವತೆಗಳನ್ನೂ, ವಿತ್ತದಿಂದ ದ್ವಿಜಾತಿಯವರನ್ನೂ, ಶ್ರಾದ್ಧ-ತರ್ಪಣಾದಿಗಳಿಂದ ಪಿತೃಗಳನ್ನೂ ಮತ್ತು ತನ್ನ ಸ್ತ್ರೀಯರನ್ನು ಕಾಮಗಳಿಂದಲೂ ತೃಪ್ತಿಗೊಳಿಸಿದನು. ಹತ್ತು ವ್ಯಾಮ ಅಗಲವಾಗಿಯೂ ಇಪ್ಪತ್ತು ವ್ಯಾಮ ಉದ್ದವಾಗಿಯೂ ಇರುವ ಸುವರ್ಣಭುಮಿಯನ್ನು ಕಲ್ಪಿಸಿ ಅಶ್ವಮೇಧದ ಮಹಾಮಖದಲ್ಲಿ ದಕ್ಷಿಣೆಯನ್ನಾಗಿ ಅವನು ಕೊಟ್ಟಿದ್ದನು. ಗಂಗಾತೀರದಲ್ಲಿ ಎಷ್ಟು ಮರಳು ಕಣಗಳಿವೆಯೋ ಅಷ್ಟೇ ಸಂಖ್ಯೆಯ ಗೋವುಗಳನ್ನು ಅಮೂರ್ತರಯಸನ ಮಗ ಪುರುಷರ್ಷಭ ಗಯನು ದಾನವನ್ನಾಗಿತ್ತಿದ್ದನು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಗಯನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸುಕೃತಿಯ ಮಗ ಮಹಾಯಶಸ್ವಿ ರಂತಿದೇವನೂ ಮೃತನಾದನೆಂದು ಕೇಳಿದ್ದೇವೆ. ಅವನು ಶಕ್ರನನ್ನು ಚೆನ್ನಾಗಿ ಆರಾಧಿಸಿ ಈ ವರವನ್ನು ಪಡೆದುಕೊಂಡಿದ್ದ: “ನಮ್ಮಲ್ಲಿಗೆ ಬರುವ ಅತಿಥಿಗಳಿಗೆ ಸಾಕಾಗುವಷ್ಟು ನಮ್ಮಲ್ಲಿ ಅನ್ನವು ವೃದ್ಧಿಯಾಗಿರಲಿ. ನಮ್ಮಿಂದ ಯಾವಾಗಲೂ ಧರ್ಮಶ್ರದ್ಧೆಯು ದೂರವಾಗದಿರಲಿ. ಯಾರಿಂದಲೂ ಯಾಚಿಸದಿರುವಂತಾಗಲಿ!” ಸಂಶಿತವ್ರತನಾಗಿದ್ದ ಯಶಸ್ವೀ ಮಹಾತ್ಮ ರಂತಿದೇವನ ಬಳಿ ಗ್ರಾಮ್ಯ ಮತ್ತು ಅರಣ್ಯ ಪಶುಗಳು ಸ್ವಯಂ ತಾವಾಗಿಯೇ ಬರುತ್ತಿದ್ದವು! ಈ ಪ್ರಾಣಿಗಳ ಮೈತೊಳೆದ ನೀರಿನಿಂದಲೇ ಹುಟ್ಟಿದ್ದರಿಂದ ಆ ನದಿಯು ಚರ್ಮಣ್ವತೀ[4] ಎಂಬ ಹೆಸರಿನಿಂದ ಪ್ರಖ್ಯಾತವಾಯಿತು! ಆ ನೃಪನು ಯಜ್ಞದ ಸದಸ್ಸಿನಲ್ಲಿ ಬ್ರಾಹ್ಮಣರಿಗೆ ಸುವರ್ಣನಾಣ್ಯಗಳನ್ನು ಯಥೇಚ್ಛವಾಗಿ ಕೊಟ್ಟನು. ಅಲ್ಲಿ ದ್ವಿಜರು “ಈ ನಿಷ್ಕಗಳು ನಿನಗೆ! ನಿನಗೆ!” ಎಂದು ಕೂಗುತ್ತಿರಲು ರಂತಿದೇವನು ಆ ಬ್ರಾಹ್ಮಣರಿಗೆ “ನೀವೇ ಈ ಸಹಸ್ರ ನಿಷ್ಕಗಳನ್ನು ಸ್ವೀಕರಿಸಿ!” ಎಂದು ನೀಡುತ್ತಿದ್ದನು. ಧೀಮಂತ ರಂತಿದೇವನ ಯಜ್ಞದಲ್ಲಿ ಅನ್ವಾಹಾರ್ಯಾಗ್ನಿಯಲ್ಲಿ ಹೋಮಮಾಡಲು ಬೇಕಾದ ದ್ರವ್ಯ-ಉಪಕರಣಗಳು – ಕೊಡಗಳು, ಪಾತ್ರೆಗಳು, ಕಡಾಯಿಗಳು, ಸ್ಥಾಲಿಗಳು, ಮಡಕೆಗಳು ಎಲ್ಲವೂ ಚಿನ್ನದ್ದೇ ಆಗಿದ್ದವು. ಸುವರ್ಣಮಯವಾಗಿರದ ಯಾವ ವಸ್ತುವೂ ಅಲ್ಲಿರುತ್ತಿರಲಿಲ್ಲ. ಸಂಕೃತಿಯ ಮಗ ರಂತಿದೇವನ ಮನೆಯಲ್ಲಿ ರಾತ್ರಿ ಉಳಿದ ಅತಿಥಿಗಳು ಇಪ್ಪತ್ತು ಸಾವಿರದ ನೂರು ಗೋವುಗಳನ್ನು ಪಡೆಯುತ್ತಿದ್ದರು. ಮಣಿಕುಂಡಲಗಳನ್ನು ಧರಿಸಿದ್ದ ಅವನ ಅಡುಗೆಬಟ್ಟರು “ಇಂದಿನ ಭೋಜನವು ಹಿಂದಿನಂತಿಲ್ಲ. ಆದುದರಿಂದ ಚೆನ್ನಾಗಿ ಭೋಜನ ಮಾಡಿ!” ಎಂದು ಕೂಗಿ ಹೇಳುತ್ತಿದ್ದರು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ರಂತಿದೇವನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ಇಕ್ಷ್ವಾಕುವಂಶಜ, ಪುರುಷವ್ಯಾಘ್ರ, ಅತಿಮಾನುಷವಿಕ್ರಮಿ ಮಹಾತ್ಮ ಸಗರನೂ ಕೂಡ ಮೃತನಾದನೆಂದು ಕೇಳಿದ್ದೇವೆ! ಮಳೆಗಾಲದ ನಂತರ ಆಕಾಶದಲ್ಲಿ ನಕ್ಷತ್ರರಾಜ ಚಂದ್ರನನ್ನು ನಕ್ಷತ್ರಗಣಗಳು ಹೇಗೋ ಹಾಗೆ ಸಗರನನ್ನು ಅವನ ಅರವತ್ತು ಸಾವಿರ ಮಕ್ಕಳು ಹಿಂಬಾಲಿಸಿ ಹೋಗುತ್ತಿದ್ದರು. ಅವನ ಬಾಹುಬಲದಿಂದ ಹಿಂದೆ ಇಡೀ ಭೂಮಿಯು ಒಂದೇ ಛತ್ರದಡಿಯಲ್ಲಿ ಇತ್ತು. ಅವನು ಸಹಸ್ರ ಅಶ್ವಮೇಧಯಜ್ಞಗಳಿಂದ ದೇವತೆಗಳನ್ನು ತೃಪ್ತಿಪಡಿಸಿದನು. ಕಾಂಚನದ ಕಂಬಗಳಿದ್ದ ಸರ್ವವೂ ಕಾಂಚನಮಯವಾಗಿದ್ದ, ಪದ್ಮದಲಾಯತಾಕ್ಷೀ ಸ್ತ್ರೀಯರಿಂದ ಸಂಪನ್ನವಾಗಿದ್ದ, ಶಯನಗಳಿಂದ ಕೂಡಿದ್ದ ಪ್ರಾಸಾದವನ್ನೂ ವಿಧ-ವಿಧದ ಕಾಮೋಪಭೋಗ ಸಾಮಾಗ್ರಿಗಳನ್ನೂ ಯೋಗ್ಯ ದ್ವಿಜಾತಿಯವರಿಗೆ ದಾನಮಾಡಿದನು. ಅವನ ಆದೇಶದಂತೆ ದ್ವಿಜಾತಿಯವರು ಆ ವಿತ್ತವನ್ನು ತಮ್ಮಲ್ಲಿಯೇ ಹಂಚಿಕೊಂಡಿದ್ದರು. ಒಮ್ಮೆ ಕುಪಿತನಾದ ಅವನು ಈಗ ಸಾಗರವೆಂದು ಹೇಳಿಸಿಕೊಳ್ಳುವ ಭೂಭಾಗವನ್ನು ಅಗೆಯಿಸಿದ್ದನು. ಅವನ ಹೆಸರಿನಿಂದಲೇ ಸಮುದ್ರವು ಸಾಗರವೆಂದು ಕರೆಯಲ್ಪಟ್ಟಿತು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಸಗರನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ಮಹಾರಣ್ಯದಲ್ಲಿ ಮಹರ್ಷಿಗಳೆಲ್ಲರೂ ಸೇರಿ ರಾಜನೆಂದು ಅಭಿಷೇಕಿಸಿದ, ವೇನನ ಮಗ ಪೃಥುವೂ ಕೂಡ ಮೃತನಾದನೆಂದು ಕೇಳಿದ್ದೇವೆ! “ಧರ್ಮಮರ್ಯಾದೆಯನ್ನು ಲೋಕದಲ್ಲಿ ಸ್ಥಾಪಿಸುತ್ತಾನೆ” ಎಂದು ಅವನನ್ನು ಪೃಥುವೆಂದು ಕರೆದರು. ಆಪತ್ತಿನಿಂದ ರಕ್ಷಿಸುವವನಾದುದರಿಂದ ಅವನು ಕ್ಷತ್ರಿಯನೆಂದು ಕರೆಯಲ್ಪಟ್ಟನು. ವೈನ್ಯ ಪೃಥುವನ್ನು ನೋಡಿದ ಪ್ರಜೆಗಳು “ಇವನಲ್ಲಿ ನಾವು ಅನುರಕ್ತರಾಗಿದ್ದೇವೆ!” ಎಂದರು. ಅವರ ಅನುರಾಗದಿಂದ ಅವನಿಗೆ “ರಾಜ” ಎನ್ನುವ ಹೆಸರೂ ಹುಟ್ಟಿಕೊಂಡಿತು. ಪೃಥುವಿನ ರಾಜ್ಯಭಾರದಲ್ಲಿ ಉತ್ತು-ಬಿತ್ತದೇ ಇದ್ದರೂ ಬೆಳೆಯು ಬೆಳೆಯುತ್ತಿತ್ತು. ಎಲೆ-ಎಲೆಗಳಲ್ಲಿ ಜೇನು ಸುರಿಯುತ್ತಿತ್ತು. ಹಸುಗಳು ಬಳ್ಳ-ಬಳ್ಳದಷ್ಟು ಹಾಲನ್ನು ಕರೆಯುತ್ತಿದ್ದವು. ಮನುಷ್ಯರೆಲ್ಲರೂ ಅರೋಗಿಗಳಾಗಿದ್ದರು. ಬೇಕಾದುದನ್ನು ಪಡೆದುಕೊಳ್ಳುತ್ತಿದ್ದರು. ಯಾರಿಗೂ ಭಯವಿರಲಿಲ್ಲ. ಎಲ್ಲರೂ ಅವರವರ ಇಷ್ಟದಂತೆ ಮನೆಗಳಲ್ಲಿಯೋ ಹೊರಗಡೆಯೋ ನಿಶ್ಚಿಂತರಾಗಿ ವಾಸಿಸುತ್ತಿದ್ದರು. ಅವನು ಸಮುದ್ರವನ್ನು ದಾಟಲು ಹೋಗುವಾಗ ಅದರ ನೀರು ಸ್ತಂಭವಾಗುತ್ತಿತ್ತು. ನದಿಗಳ ಪ್ರವಾಹಗಳೂ ಇಳಿದುಹೋಗುತ್ತಿದ್ದವು. ಅವನ ಧ್ವಜವು ಎಂದೂ ಮುರಿಯಲಿಲ್ಲ! ಅಶ್ವಮೇಧ ಮಹಾಮಖದಲ್ಲಿ ಆ ರಾಜನು ಬ್ರಾಹ್ಮಣರಿಗೆ ಸಾವಿರದ ಇನ್ನೂರು ಮೊಳಗಳಷ್ಟು ಎತ್ತರವಿರುವ ಇಪ್ಪತ್ತೊಂದು ಸುವರ್ಣ ಪರ್ವತಗಳನ್ನು ದಾನವಾಗಿ ಕೊಟ್ಟಿದ್ದನು. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಪೃಥುವೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
“ಸೃಂಜಯ! ನೀನು ಏಕೆ ಸುಮ್ಮನೇ ಯೋಚನಾಮಗ್ನನಾಗಿರುವೆ? ನನ್ನ ಈ ಮಾತುಗಳನ್ನು ನೀನು ಕೇಳುತ್ತಿಲ್ಲವೇ? ಸಾಯುವವನಿಗೆ ಚಿಕಿತ್ಸೆಯು ವ್ಯರ್ಥವಾಗುವಂತೆ ನನ್ನ ಈ ಪ್ರಲಾಪವು ವ್ಯರ್ಥವಾಗಿಲ್ಲ ತಾನೇ?”
ಸೃಂಜಯನು ಹೇಳಿದನು: “ನಾರದ! ನನ್ನ ಈ ಶೋಕವನ್ನು ವಿನಾಶಗೊಳಿಸಲೋಸುಗ ಪುಣ್ಯಕೃತ ಮಹಾತ್ಮ ರಾಜರ್ಷಿಗಳ ಕೀರ್ತಿಯುಕ್ತವಾಗಿರುವ ಮತ್ತು ಪವಿತ್ರಗಂಧಸೂಸುವ ಮಾಲೆಯಂತೆ ವಿಚಿತ್ರಾರ್ಥಗಳುಳ್ಳ ನಿನ್ನ ಮಾತುಗಳನ್ನು ನಾನು ಕೇಳುತ್ತಿದ್ದೇನೆ. ನಿನ್ನ ಈ ಮಾತುಗಳು ಖಂಡಿತವಾಗಿಯು ವ್ಯರ್ಥವಾಗಿಲ್ಲ. ನಿನ್ನನ್ನು ನೋಡಿದಾಕ್ಷಣವೇ ನಾನು ಶೋಕರಹಿತನಾದೆನು. ಅಮೃತಸೇವನೆಗೆ ಸಮನಾಗಿದ್ದ ನಿಮ್ಮ ಮಾತುಗಳಿಂದ ಇನ್ನೂ ತೃಪ್ತನಾಗದೇ ಸುಮ್ಮನೇ ಕೇಳುತ್ತಲೇ ಇದ್ದೆ! ನನ್ನ ಮೇಲೆ ಪ್ರಸನ್ನತೆಯಿದ್ದರೆ ಪುತ್ರಶೋಕದಿಂದ ಸುಟ್ಟುಹೋಗಿರುವ ನನ್ನ ಮೃತನಾದ ಮಗನನ್ನು ಪುನಃ ಬದುಕಿಸಿಕೊಡಬೇಕು! ನಿನ್ನ ಪ್ರಸಾದದಿಂದ ನನಗೆ ನನ್ನ ಮಗನೊಡನೆ ಸಮಾಗಮವಾಗಲಿ!”
ನಾರದನು ಹೇಳಿದನು: “ಪರ್ವತನು ನಿನಗೆ ಅನುಗ್ರಹಿಸಿದ್ದ ಸ್ವರ್ಣಷ್ಠೀವೀ ಎಂಬ ಹೆಸರಿನ ಪುತ್ರನು ಹೊರಟುಹೋಗಿದ್ದಾನೆ, ಅವನು ಇನ್ನಿಲ್ಲ. ಆದರೆ ನಾನು ನಿನಗೆ ಸಹಸ್ರವರ್ಷ ಆಯುಸ್ಸುಳ್ಳ ಹಿರಣ್ಯನಾಭನೆನ್ನುವ ಮಗನನ್ನು ನೀಡುತ್ತೇನೆ!”
ಅನಂತರ ವಾಸವನ ಅನುಮತಿಯನ್ನು ಪಡೆದು ನಾರದನು ಆ ಮಗುವನ್ನು ಪುನಃ ಬದುಕಿಸಿದನು. ಅದು ಹಾಗೆಯೇ ಆಗಬೇಕಾಗಿದ್ದಿತು. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಬಳಿಕ ಮಹಾಯಶೋವಂತನೂ ವೀರ್ಯವಂತನೂ ಆದ ಕುಮಾರ ಸ್ವರ್ಣಷ್ಠೀವಿಯು ತನ್ನ ತಂದೆ-ತಾಯಿಗಳ ಚಿತ್ತವನ್ನು ಪ್ರಸನ್ನಗೊಳಿಸಿದನು. ತನ್ನ ತಂದೆಯು ಸ್ವರ್ಗಗತನಾದ ನಂತರ ಆ ಭೀಮವಿಕ್ರಮಿ ವಿಭುವು ಹನ್ನೊಂದು ಸಾವಿರ ವರ್ಷಗಳ ಪರ್ಯಂತ ರಾಜ್ಯಭಾರವನ್ನು ಮಾಡಿದನು. ಆ ಮಹಾದ್ಯುತಿಯು ಆಗ ಅನೇಕ ಭೂರಿದಕ್ಷಿಣೆಗಳಿದ್ದ ಮಹಾಯಜ್ಞಗಳಿಂದ ದೇವತೆಗಳನ್ನೂ ಪಿತೃಗಳನ್ನೂ ತೃಪ್ತಿಪಡೆಸಿದನು. ಕುಲದ ಸಂತಾನವನ್ನು ಮುಂದುವರಿಸಿಕೊಂಡು ಹೋಗುವ ಅನೇಕ ಪುತ್ರರನ್ನು ಹುಟ್ಟಿಸಿ ದೀರ್ಘ ಸಮಯದ ನಂತರ ಅವನು ಕಾಲಧರ್ಮಕ್ಕೊಳಗಾದನು.
[1] ಐತ್ತರೇಯ ಬ್ರಾಹ್ಮಣದಲ್ಲಿ ಈ ಶ್ಲೋಕವು ಮಂತ್ರರೂಪದಲ್ಲಿದೆ: ಮರುತಃ ಪರಿವೇಷ್ಟಾರೋ ಮರುತ್ತ ಸ್ಯಾವ ಸಂಗೃಹೇ| ಆವಿಕ್ಷಿತಸ್ಯ ಕಾಮಪ್ರೇರ್ವಿಶ್ವೇದೇವಾಃ ಸಭಾಸದಃ||
[2] ಅಗ್ನಿಷ್ಟೋಮ, ಅತ್ಯಗ್ನಿಷ್ಟೋಮ, ಉಕ್ಥ್ಯ, ಷೋಡಶೀ, ವಾಜಪೇಯ, ಅತಿರಾತ್ರ ಮತ್ತು ಆಪ್ತೋರ್ಯಾಮ ಯಜ್ಞಗಳು ಏಳು ಸೋಮಸಂಸ್ಥಗಳು.
[3] ಶಮ್ಯಾ ಎಂದರೆ ಸ್ಥೂಲಬುಧ್ನಃ ಕಾಷ್ಠ ದಂಡಃ – ಸ್ಥೂಲವಾದ ಬುಡವಿರುವ ಮರದ ಕೋಲು. ಅದನ್ನು ಬೀಸಿ ಅದು ಬಿದ್ದಲ್ಲೆಲ್ಲಾ ಯಯಾತಿಯು ಯಜ್ಞವೇದಿಗಳನ್ನು ನಿರ್ಮಿಸಿದ್ದನು. ಹೀಗೆ ಮಾಡುತ್ತಾ ಅವನು ಇಡೀ ಭೂಮಿಯನ್ನೇ ತಿರುಗಿದ್ದನು.
[4] ಚರ್ಮರಾಶಿ ಎಂದರೆ ಪ್ರಾಣಿಗಳ ಉತ್ಕ್ಲೇದಾತ್ ಎಂದರೆ ಬೆವರಿನಿಂದ ಹರಿದ ನದಿ – ಚರ್ಮಣ್ವತೀ – ಇಂದಿನ ಚಂಬಲ್ ನದಿ.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ