ಅಂಬೋಪಾಽಖ್ಯಾನ
ಭೀಷ್ಮನು ಸ್ವಯಂವರದಿಂದ ಕಾಶಿಕನ್ಯೆಯರನ್ನು ಅಪಹರಿಸಿದುದು
ಭೀಷ್ಮನ ತಂದೆ ಭರತರ್ಷಭ ಧರ್ಮಾತ್ಮ ಮಹಾರಾಜಾ ಶಂತನುವು ಸಮಯದಲ್ಲಿ ದೈವನಿಶ್ಚಿತ ಅಂತ್ಯವನ್ನು ಸೇರಿದನು. ಆಗ ಭೀಷ್ಮನು ಪ್ರತಿಜ್ಞೆಯನ್ನು ಪರಿಪಾಲಿಸಿ ತಮ್ಮ ಚಿತ್ರಾಂಗದನನ್ನು ಮಹಾರಾಜನನ್ನಾಗಿ ಅಭಿಷೇಕಿಸಿದನು. ಅವನು ನಿಧನವನ್ನು ಹೊಂದಲು ಸತ್ಯವತಿಯ ಸಲಹೆಯಂತೆ ನಡೆದುಕೊಂಡು ಯಥಾವಿಧಿಯಾಗಿ ವಿಚಿತ್ರವೀರ್ಯನನ್ನು ರಾಜನನ್ನಾಗಿ ಅಭಿಷೇಕಿಸಲಾಯಿತು. ಇನ್ನೂ ಚಿಕ್ಕವನಾಗಿದ್ದರೂ ವಿಚಿತ್ರವೀರ್ಯನನ್ನು ಧರ್ಮತಃ ಭೀಷ್ಮನು ಅಭಿಷೇಕಿಸಿದನು. ಆ ಧರ್ಮಾತ್ಮನಾದರೋ ಸಲಹೆಗಳಿಗೆ ಭೀಷ್ಮನನ್ನೇ ನೋಡುತ್ತಿದ್ದನು. ಅವನಿಗೆ ವಿವಾಹ ಮಾಡಲು ಬಯಸಿ ಭೀಷ್ಮನು ಅವನಿಗೆ ಅನುರೂಪವಾದ ಕುಲವು ಯಾವುದೆಂದು ಮನಸ್ಸಿನಲ್ಲಿಯೇ ಚಿಂತಿಸತೊಡಗಿದನು. ಆಗ ರೂಪದಲ್ಲಿ ಅಪ್ರತಿಮರಾದ, ಎಲ್ಲ ಮೂವರು ಕಾಶೀರಾಜ ಸುತೆ ಕನ್ಯೆಯರ - ಅಂಬಾ, ಅಂಬಿಕಾ ಮತ್ತು ಇನ್ನುಬ್ಬಳು ಅಂಬಾಲಿಕಾ - ಸ್ವಯಂವರವೆಂದು ಕೇಳಿದನು. ಪೃಥ್ವಿಯ ಎಲ್ಲ ರಾಜರನ್ನೂ ಆಹ್ವಾನಿಸಲಾಗಿತ್ತು. ಹಿರಿಯವಳು ಅಂಬಾ. ಅಂಬಿಕೆಯು ಮಧ್ಯದವಳು. ರಾಜಕನ್ಯೆ ಅಂಬಾಲಿಕೆಯು ಕಿರಿಯವಳು. ಆಗ ಭೀಷ್ಮನು ಒಬ್ಬನೇ ರಥದಲ್ಲಿ ಕಾಶೀಪತಿಯ ಪುರಿಗೆ ಹೋದನು. ಅಲ್ಲಿ ಸ್ವಲಂಕೃತರಾದ ಮೂವರು ಕನ್ಯೆಯರನ್ನೂ, ಸುತ್ತುವರೆದಿದ್ದ ಪಾರ್ಥಿವ ರಾಜರನ್ನೂ ನೋಡಿದನು. ಆಗ ಅವನು ನಿಂತ ಆ ನೃಪರೆಲ್ಲರನ್ನೂ ಸಮರಕ್ಕೆ ಆಹ್ವಾನಿಸಿ, ಆ ಕನ್ಯೆಯರನ್ನು ರಥದ ಮೇಲೇರಿಸಿಕೊಂಡನು. ಅವರನ್ನು ವೀರ್ಯಶುಲ್ಕವೆಂದು ತಿಳಿದು ರಥದ ಮೇಲೇರಿಸಿಕೊಂಡು ಅಲ್ಲಿ ಸಮಾಗತರಾಗಿದ್ದ ಸರ್ವ ಪಾರ್ಥಿವರಿಗೆ ಕೂಗಿ “ಭೀಷ್ಮ ಶಾಂತನವನು ಕನ್ಯೆಯರನ್ನು ಅಪಹರಿಸುತ್ತಿದ್ದಾನೆ” ಎಂದು ಪುನಃ ಪುನಃ ಹೇಳಿದನು: “ಸರ್ವ ಪಾರ್ಥಿವರೇ! ಪರಮ ಶಕ್ತಿಯನ್ನುಪಯೋಗಿಸಿ ಇವರನ್ನು ನೀವು ಬಿಡಿಸಿಕೊಳ್ಳಿ! ನರಾಧಿಪರೇ! ನಿಮ್ಮ ಕಣ್ಣೆದುರಿಗೇ ನಾನು ಇವರನ್ನು ಬಲಾತ್ಕಾರವಾಗಿ ಕೊಂಡೊಯ್ಯುತ್ತಿದ್ದೇನೆ!”
ಆಗ ಪೃಥಿವೀಪಾಲರು ಕೃದ್ಧರಾಗಿ ಆಯುಧಗಳನ್ನು ಹಿಡಿದೆತ್ತಿ “ರಥಗಳನ್ನು ಹೂಡಿ! ಹೂಡಿ!” ಎಂದು ಸಾರಥಿಗಳನ್ನು ಪ್ರಚೋದಿಸಿದರು. ಮೇಘಗಳಂತೆ ಗರ್ಜಿಸುವ ರಥಗಳ ಮೇಲೆ, ಗಜಗಳ ಮೇಲೆ ಗಜಯೋದ್ಧರು, ಇತರ ಮಹೀಪಾಲರು ರಥಗಳ ಮೇಲೆ ಆಯುಧಗಳನ್ನು ಎತ್ತಿ ಹಿಡಿದು ಆಕ್ರಮಣಿಸಿದರು. ಆಗ ಆ ಮಹೀಪಾಲರೆಲ್ಲರೂ ರಥಗಳ ಮಹಾ ಸಮೂಹದೊಂದಿಗೆ ಎಲ್ಲ ಕಡೆಯಿಂದ ಭೀಷ್ಮನನ್ನು ಸುತ್ತುವರೆದರು. ಅವನು ಮಹಾ ಶರವರ್ಷದಿಂದ, ದೇವರಾಜನು ದಾನವರನ್ನು ಹೇಗೋ ಹಾಗೆ ಆ ಎಲ್ಲ ನೃಪರನ್ನೂ ಸೋಲಿಸಿ ತಡೆದನು. ಒಂದೊಂದೇ ಬಾಣಗಳಿಂದ ಅವರ ಬಣ್ಣಬಣ್ಣದ ಬಂಗಾರದಿಂದ ಪರಿಷ್ಕೃತಗೊಂಡಿದ್ದ ಧ್ವಜಗಳನ್ನು ಅವನು ಭೂಮಿಯ ಮೇಲೆ ಬೀಳಿಸಿದನು. ರಣದಲ್ಲಿ ನಗುತ್ತಾ, ಉರಿಯುವ ಶರಗಳಿಂದ ಅವರ ಕುದುರೆಗಳನ್ನು, ಆನೆಗಳನ್ನು ಮತ್ತು ಸಾರಥಿಗಳನ್ನೂ ಕೆಳಗುರುಳಿಸಿದನು. ಭೀಷ್ಮನ ಲಾಘವವನ್ನು ನೋಡಿ ಅವರು ಭಗ್ನರಾಗಿ ನಿವೃತ್ತರಾದರು. ಮಹೀಕ್ಷಿತರನ್ನು ಗೆದ್ದು ಅವನು ಹಸ್ತಿನಪುರಕ್ಕೆ ಬಂದನು. ಅಲ್ಲಿ ಅವನು ಸತ್ಯವತಿಗೆ ತಮ್ಮನಿಗಾಗಿ ತಂದ ಆ ಕನ್ಯೆಯರ ಮತ್ತು ನಡೆದ ಕಾರ್ಯಗಳ ಕುರಿತು ನಿವೇದಿಸಿದನು.
ಅಂಬೆಯು ಶಾಲ್ವನ ಬಳಿ ಹೋಗಲು ಭೀಷ್ಮನಲ್ಲಿ ಅನುಮತಿಯನ್ನು ಕೇಳಿದುದು
ಆಗ ಭೀಷ್ಮನು ತಾಯಿ ದಾಶೇಯಿಯ ಬಳಿಹೋಗಿ ನಮಸ್ಕರಿಸಿ ಹೇಳಿದನು: “ಪಾರ್ಥಿವರನ್ನು ಸೋಲಿಸಿ ವೀರ್ಯ ಶುಲ್ಕವಾಗಿ ಈ ಕಾಶೀಪತಿಯ ಕನ್ಯೆಯರನ್ನು ವಿಚಿತ್ರವೀರ್ಯನಿಗೆಂದು ಗಳಿಸಿದ್ದೇನೆ.” ಆಗ ನೆತ್ತಿಯನ್ನು ಆಘ್ರಾಣಿಸಿ ಕಣ್ಣಲ್ಲಿ ನೀರನ್ನು ತುಂಬಿಸಿಕೊಂಡು ಸತ್ಯವತಿಯು ಹೇಳಿದಳು: “ಪುತ್ರ! ನೀನು ಗೆದ್ದು ಬಂದುದು ಒಳ್ಳೆಯದಾಯಿತು. ಹರ್ಷವಾಯಿತು.” ಸತ್ಯವತಿಯ ಅನುಮತಿಯಂತೆ ವಿವಾಹವನ್ನಿಟ್ಟುಕೊಳ್ಳಲಾಯಿತು. ಆಗ ಕಾಶಿಪತಿಯ ಹಿರಿಯ ಮಗಳು ನಾಚಿಕೊಂಡು ಈ ಮಾತನ್ನಾಡಿದಳು: “ಭೀಷ್ಮ! ನೀನು ಧರ್ಮಜ್ಞನಾಗಿದ್ದೀಯೆ. ಸರ್ವಶಾಸ್ತ್ರವಿಶಾರದನಾಗಿದ್ದೀಯೆ. ನನ್ನ ಈ ಧರ್ಮದ ಮಾತುಗಳನ್ನು ಕೇಳಿ ಅಗತ್ಯವಾದುದನ್ನು ಮಾಡಬೇಕು. ಹಿಂದೆಯೇ ನಾನು ಶಾಲ್ವಪತಿಯನ್ನು ಮನಸಾರೆ ವರನೆಂದು ಆರಿಸಿಕೊಂಡಿದ್ದೆ. ಅವನೂ ಕೂಡ ನನ್ನನ್ನು ಹಿಂದೆ ವರಿಸಿದ್ದನು. ಆದರೆ ಇದು ತಂದೆಗೆ ತಿಳಿಯದೇ ರಹಸ್ಯವಾಗಿಯೇ ಇತ್ತು. ಶಾಸ್ತ್ರಗಳನ್ನು ತಿಳಿದಿರುವ ನೀನು ಹೇಗೆ ತಾನೇ ಇನ್ನೊಬ್ಬನನ್ನು ಬಯಸುವವಳನ್ನು ಮನೆಯಲ್ಲಿ, ವಿಶೇಷವಾಗಿ ಕೌರವರ ಮನೆಯಲ್ಲಿ, ವಾಸಿಸಲು ಬಿಡಬಲ್ಲೆ? ಇದನ್ನು ತಿಳಿದು ಯೋಚಿಸಿ ನಿಶ್ಚಯಿಸಿ ಮಾಡಬೇಕಾದುದನ್ನು ಮಾಡಬೇಕು. ಶಾಲ್ವರಾಜನು ನನಗೆ ನಿಶ್ಚಿತನಾದವನೆಂದು ತೋರುತ್ತದೆ. ಹೋಗಲು ಬಿಡು! ನನ್ನ ಮೇಲೆ ಕೃಪೆ ಮಾಡು. ನೀನು ಭೂಮಿಯಲ್ಲಿಯೇ ಸತ್ಯವ್ರತನೂ ವೀರನೂ ಎಂದು ನಾನು ಕೇಳಿದ್ದೇನೆ.”
ಶಾಲ್ವನು ಅಂಬೆಯನ್ನು ತಿರಸ್ಕರಿಸಿದುದು
ಆಗ ಭೀಷ್ಮನು ಕಾಲೀ ಸತ್ಯವತಿಯ, ಹಾಗೆಯೇ ಮಂತ್ರಿಗಳು, ದ್ವಿಜರು ಮತ್ತು ಪುರೋಹಿತರ ಅನುಜ್ಞೆಯನ್ನು ಪಡೆದು ಆ ಹಿರಿಯ ಕನ್ಯೆ ಅಂಬೆಗೆ ಅನುಜ್ಞೆಯನ್ನಿತ್ತನು. ಅವನಿಂದ ಅನುಜ್ಞಾತಳಾಗಿ ಆ ಕನ್ಯೆಯು ಶಾಲ್ವಪತಿಯ ಪುರಕ್ಕೆ ಹೋದಳು. ಹೋಗುವಾಗ ಅವಳು ವೃದ್ಧ ದ್ವಿಜರಿಂದ ರಕ್ಷಿತಳಾಗಿದ್ದಳು. ಅವಳನ್ನು ಓರ್ವ ದಾಸಿಯೂ ಅನುಸರಿಸಿ ಹೋದಳು. ಆ ದೂರವನ್ನು ಪ್ರಯಾಣಿಸಿ ನರಾಧಿಪನನ್ನು ತಲುಪಿದಳು. ರಾಜ ಶಾಲ್ವನ ಬಳಿಹೋಗಿ ಅವಳು ಈ ಮಾತುಗಳನ್ನಾಡಿದಳು: “ಮಹಾಬಾಹೋ! ನಿನ್ನನ್ನು ಬಯಸಿ ನಾನು ಬಂದಿದ್ದೇನೆ.”
ಶಾಲ್ವಪತಿಯು ಮುಗುಳ್ನಗುತ್ತಾ ಅವಳಿಗೆ ಹೇಳಿದನು: “ವರವರ್ಣಿನೀ! ಈ ಮೊದಲು ಬೇರೆಯವನಳಾಗಿದ್ದವಳನ್ನು ನನ್ನ ಭಾರ್ಯೆಯನ್ನಾಗಿಸಿಕೊಳ್ಳಲು ಬಯಸುವುದಿಲ್ಲ. ಪುನಃ ಆ ಭಾರತನ ಬಳಿ ಹೋಗು. ಭೀಷ್ಮನು ಬಲಾತ್ಕರಿಸಿ ಕರೆದುಕೊಂಡು ಹೋದವಳನ್ನು ನಾನು ಇಚ್ಛಿಸುವುದಿಲ್ಲ. ಮಹಾಯುದ್ಧಲ್ಲಿ ಪೃಥಿವೀಪತಿಗಳನ್ನು ಗೆದ್ದು ನಿನ್ನನ್ನು ಕರೆದುಕೊಂಡು ಹೋಗುವಾಗ ನೀನು ಸಂತೋಷದಿಂದಲೇ ಅವನನ್ನು ಅನುಸರಿಸಿ ಹೋಗಿದ್ದೆ. ಈ ಮೊದಲು ಇನ್ನೊಬ್ಬನದ್ದಾಗಿರುವವಳನ್ನು ನಾನು ಪತ್ನಿಯನ್ನಾಗಿ ಬಯಸುವುದಿಲ್ಲ. ನನ್ನಂತಹ ವಿಜ್ಞಾನಗಳನ್ನು ತಿಳಿದವನು ಮತ್ತು ಇತರರಿಗೆ ಧರ್ಮದ ಆದೇಶವನ್ನು ನೀಡುವವನು ಹೇಗೆ ತಾನೇ ಇನ್ನೊಬ್ಬನ ಅರಮನೆಯನ್ನು ಪ್ರವೇಶಿಸಿದವಳನ್ನು ಸ್ವೀಕರಿಸಿಯಾನು? ಕಾಲವನ್ನು ವ್ಯರ್ಥಮಾಡಬೇಡ. ನಿನಗಿಷ್ಟವಾದಲ್ಲಿಗೆ ಹೋಗು.”
ಅನಂಗಶರಪೀಡಿತಳಾದ ಅಂಬೆಯು ಅವನಿಗೆ ಹೇಳಿದಳು: “ಮಹೀಪಾಲ! ಹೀಗೆ ಹೇಳಬೇಡ! ಹಾಗೇನೂ ನಡೆದಿಲ್ಲ. ಭೀಷ್ಮನು ಕರೆದುಕೊಂಡು ಹೋಗುವಾಗ ನಾನು ಸಂತೋಷಪಟ್ಟಿರಲಿಲ್ಲ. ಅವನು ಪೃಥಿವೀಪತಿಗಳನ್ನು ಗೆದ್ದು ಬಲಾತ್ಕಾರವಾಗಿ ಕರೆದೊಯ್ಯುತ್ತಿರುವಾಗ ನಾನು ಅಳುತ್ತಿದ್ದೆ. ನನ್ನನ್ನು – ಈ ಬಾಲೆ, ಭಕ್ತೆ, ಅನಾಗಸಳನ್ನು - ಪ್ರೀತಿಸು! ಭಕ್ತರನ್ನು ಪರಿತ್ಯಜಿಸುವುದನ್ನು ಧರ್ಮವೆಂದು ಹೇಳಲ್ಪಡುವುದಿಲ್ಲ. ಸಮರದಿಂದ ಹಿಂಜರಿಯದ ಗಾಂಗೇಯನ ಸಲಹೆಯನ್ನು ಕೇಳಿ, ಅವನಿಂದ ಅನುಜ್ಞಾತಳಾಗಿ ನಾನು ನಿನ್ನ ಮನೆಗೆ ಬಂದಿದ್ದೇನೆ. ಆ ಮಹಾಬಾಹು ಭೀಷ್ಮನಾದರೋ ನನ್ನನ್ನು ಬಯಸುವುದಿಲ್ಲ. ತನ್ನ ತಮ್ಮನಿಗಾಗಿ ಭೀಷ್ಮನು ಇದನ್ನು ಮಾಡಿದನೆಂದು ನಾನು ಕೇಳಿದ್ದೇನೆ. ಕರೆದುಕೊಂಡ ಹೋದ ನನ್ನ ತಂಗಿಯರಾದ ಅಂಬಿಕಾ-ಅಂಬಾಲಿಕೆಯರನ್ನು ಗಾಂಗೇಯನು ತನ್ನ ತಮ್ಮ ವಿಚಿತ್ರವೀರ್ಯನಿಗೆ ಕೊಟಿದ್ದಾನೆ. ನನ್ನ ನೆತ್ತಿಯ ಮೇಲೆ ಕೈಯಿಟ್ಟು ಹೇಳುತ್ತಿದ್ದೇನೆ - ನಿನ್ನನ್ನು ಬಿಟ್ಟು ಬೇರೆ ಯಾವ ನರನನ್ನೂ ನಾನು ಎಂದೂ ಯೋಚಿಸಿಲ್ಲ. ಹಿಂದೆ ಇನ್ನೊಬ್ಬರವಳಾಗಿ ನಾನು ನಿನ್ನ ಬಳಿ ಬಂದಿಲ್ಲ. ನನ್ನ ಆತ್ಮದ ಮೇಲೆ ಆಣೆಯಿಟ್ಟು ಸತ್ಯವನ್ನೇ ಹೇಳುತ್ತಿದ್ದೇನೆ. ತಾನಾಗಿಯೇ ಬಂದಿರುವ, ಇದಕ್ಕೂ ಮೊದಲು ಬೇರೆಯವರದ್ದಾಗಿರದ, ನಿನ್ನ ಕರುಣೆಯನ್ನು ಬಯಸುವ ಕನ್ಯೆ ನನ್ನನ್ನು ಪ್ರೀತಿಸು.”
ಈ ರೀತಿ ಅವಳು ಮಾತನಾಡಿದರೂ ಶಾಲ್ವನು ಕಾಶೀಪತಿಯ ಮಗಳನ್ನು ಹಾವು ಜೀರ್ಣವಾದ ಚರ್ಮವನ್ನು ಹೇಗೋ ಹಾಗೆ ತೊರೆದನು. ಈ ರೀತಿ ಬಹುವಿಧಗಳಲ್ಲಿ ಮಾತುಗಳಲ್ಲಿ ಬೇಡಿಕೊಂಡರೂ ಶಾಲ್ವಪತಿಯು ಆ ಕನ್ಯೆಯಲ್ಲಿ ಆಸಕ್ತಿಯನ್ನು ತೋರಿಸಲಿಲ್ಲ. ಆಗ ಆ ಕಾಶಿಪತಿಯ ಹಿರಿಯ ಮಗಳು ಕೋಪಾವಿಷ್ಟಳಾಗಿ, ಕಣ್ಣೀರು ಸುರಿಸಿ, ಕಣ್ಣೀರು ಉದ್ವೇಗಗಳು ತುಂಬಿದ ಧ್ವನಿಯಲ್ಲಿ ಹೇಳಿದಳು: “ವಿಶಾಂಪತೇ! ನಿನ್ನಿಂದ ತ್ಯಕ್ತಳಾಗಿ ನಾನು ಎಲ್ಲೆಲ್ಲಿ ಹೋಗುತ್ತೇನೋ ಅಲ್ಲಿ ಸಂತರು ನನ್ನನ್ನು ರಕ್ಷಿಸುತ್ತಾರೆ. ಸತ್ಯವನ್ನೇ ಹೇಳುತ್ತೇನೆ.”
ಈ ರೀತಿ ಮಾತನಾಡಿದರೂ ಶಾಲ್ವರಾಜನು ಕರುಣೆಯಿಂದ ಪರಿವೇದಿಸುತ್ತಿರುವ ಅವಳನ್ನು ಕ್ರೂರವಾಗಿ ಪರಿತ್ಯಜಿಸಿದನು. “ಹೋಗು! ಹೋಗು! ಸುಶ್ರೋಣೀ! ಭೀಷ್ಮನಿಗೆ ಹೆದರುತ್ತೇನೆ. ಮತ್ತು ನೀನು ಭೀಷ್ಮನ ಸ್ವತ್ತು” ಎಂದು ಶಾಲ್ವನು ಪುನಃ ಪುನಃ ಹೇಳಿದನು. ದೀರ್ಘದರ್ಶಿಯಲ್ಲದ ಶಾಲ್ವನು ಹೀಗೆ ಹೇಳಲು ಅವಳು ದೀನಳಾಗಿ ಕುರರಿಯಂತೆ ರೋದಿಸುತ್ತಾ ಪುರದಿಂದ ಹೊರಬಂದಳು.
ಶೈತವಕ್ಯ-ಅಂಬೆಯರ ಸಂವಾದ
ನಗರದಿಂದ ಹೊರಡುವಾಗ ಅವಳು ಚಿಂತಿಸಿದಳು: “ನನ್ನಂತಹ ವಿಷಮ ಪರಿಸ್ಥಿತಿಯಲ್ಲಿರುವ ಯುವತಿಯು ಭೂಮಿಯ ಮೇಲೇ ಇಲ್ಲ. ಬಾಂಧವರನ್ನು ಕಳೆದುಕೊಂಡಿದ್ದೇನೆ. ಶಾಲ್ವನಿಂದ ನಿರಾಕೃತಳಾಗಿದ್ದೇನೆ. ನಾನು ಪುನಃ ವಾರಣಾಸಾಹ್ವಯಕ್ಕೆ ಹೋಗಲು ಶಕ್ಯಳಿಲ್ಲ. ಶಾಲ್ವನನ್ನು ಬಯಸಿದ ಕಾರಣದಿಂದ ಭೀಷ್ಮನಿಂದ ಅನುಜ್ಞಾತಳಾಗಿದ್ದೇನೆ. ಆಹೋ! ನನ್ನನ್ನೇ ನಿಂದಿಸಲೇ ಅಥವಾ ದುರಾಸದನಾದ ಭೀಷ್ಮನನ್ನು ದೂರಲೇ? ಅಥವಾ ನನ್ನ ಸ್ವಯಂವರವನ್ನು ಆಯೋಜಿಸಿದ ಮೂಢ ತಂದೆಯನ್ನು ದೂರಲೇ? ಹಿಂದೆ ಘೋರ ಯುದ್ಧವು ನಡೆಯುತ್ತಿರುವಾಗ ನಾನು ಭೀಷ್ಮನ ರಥದಿಂದ ಕೆಳಗೆ ಹಾರಿ ಶಾಲ್ವನಿಗಾಗಿ ಓಡಿ ಹೋಗದೇ ಇದ್ದುದೇ ನಾನು ಮಾಡಿದ ತಪ್ಪು. ಅದರ ಫಲವನ್ನೇ ಮೂಢಳಂತೆ ನಾನು ಈಗ ಅನುಭವಿಸಬೇಕಾಗಿದೆ! ಭೀಷ್ಮನಿಗೆ ಧಿಕ್ಕಾರ! ನನ್ನನ್ನು ಈ ರೀತಿ ವೀರ್ಯಶುಲ್ಕದ ಸ್ತ್ರೀಪಣವನ್ನಾಗಿ ಇರಿಸಿದ ನನ್ನ ಮಂದ ಮೂಢಚೇತಸ ತಂದೆಗೆ ಧಿಕ್ಕಾರ. ನನಗೇ ಧಿಕ್ಕಾರ! ಶಾಲ್ವರಾಜನಿಗೆ ಧಿಕ್ಕಾರ! ಧಾತಾರನಿಗೂ ಧಿಕ್ಕಾರ! ಇವರ ದುರ್ನೀತಭಾವದಿಂದ ನಾನು ಈ ಅಧಿಕ ಆಪತ್ತನ್ನು ಹೊಂದಿದ್ದೇನೆ. ಮಾನವನು ಎಂದೂ ಭಾಗ್ಯವು ಕೊಟ್ಟಿರುವುದನ್ನು ಪಡೆಯುತ್ತಾನೆ. ಆದರೆ ಭೀಷ್ಮ ಶಾಂತನವನು ನನ್ನ ಕಷ್ಟಗಳನ್ನು ತಂದವರಲ್ಲಿ ಮುಖ್ಯನು. ಆದುದರಿಂದ ತಪಸ್ಸನ್ನು ಮಾಡಿ ಅಥವಾ ಯುದ್ಧವನ್ನು ಮಾಡಿ ಭೀಷ್ಮನೊಂದಿಗೆ ಸೇಡು ತೀರಿಸಿಕೊಳ್ಳುವುದೇ ಸರಿಯೆಂದು ತೋರುತ್ತಿದೆ. ಏಕೆಂದರೆ ನನ್ನ ದುಃಖಗಳಿಗೆ ಅವನೇ ಕಾರಣನೆಂದು ನನಗನ್ನಿಸುತ್ತದೆ. ಆದರೆ ಯಾವ ಮಹೀಪತಿಯು ತಾನೇ ಯುದ್ಧದಲ್ಲಿ ಭೀಷ್ಮನನ್ನು ಜಯಿಸಲು ಮುಂದೆ ಬರುತ್ತಾನೆ?”
ಹೀಗೆ ನಿಶ್ಚಯಿಸಿ ಅವಳು ನಗರದಿಂದ ಹೊರಬಂದಳು. ಪುಣ್ಯಶೀಲ ಮಹಾತ್ಮ ತಾಪಸರ ಆಶ್ರಮವನ್ನು ತಲುಪಿ ಅಲ್ಲಿ ತಾಪಸರಿಂದ ಪರಿವಾರಿತಳಾಗಿ ರಾತ್ರಿಯನ್ನು ಕಳೆದಳು. ತನಗೆ ನಡೆದುದೆಲ್ಲವನ್ನೂ - ಅಪಹರಣ, ಬಿಡುಗಡೆ ಮತ್ತು ಶಾಲ್ವನಿಂದ ತಿರಸ್ಕೃತಳಾದುದು - ಎಲ್ಲವನ್ನೂ ವಿಸ್ತಾರವಾಗಿ ಏನನ್ನೂ ಬಿಡದೇ ಆ ಶುಚಿಸ್ಮಿತೆಯು ಅವರಿಗೆ ಹೇಳಿದಳು. ಆಗ ಅಲ್ಲಿ ಶೈಖಾವತ್ಯದ ಮಹಾನ್‌ಬ್ರಾಹ್ಮಣ, ಸಂಶಿತವ್ರತ, ತಪೋವೃದ್ಧ, ಶಾಸ್ತ್ರ-ಅರಣ್ಯಕಗಳ ಗುರುವಿದ್ದನು. ಆ ಮಹಾತಪಸ್ವಿ ಮುನಿ ಶೈಖಾವತ್ಯನು ಆರ್ತಳಾದ, ಬಿಸಿಯುಸಿರು ಬಿಡುತ್ತಿದ್ದ, ಸತೀ, ಬಾಲಕಿ, ದುಃಖಶೋಕಪರಾಯಣೆಗೆ ಹೇಳಿದನು: “ಭದ್ರೇ! ಹೀಗಿರುವಾಗ ಆಶ್ರಮದಲ್ಲಿರುವ ಮಹಾಭಾಗ ತಪೋನಿತ್ಯ ಮಹಾತ್ಮ ತಪಸ್ವಿಗಳಾದರೋ ಏನು ಮಾಡಲು ಶಕ್ಯರು?” ಅವಳು ಅವನಿಗೆ ಹೇಳಿದಳು: “ನನಗೆ ಅನುಗ್ರಹವನ್ನು ಮಾಡಬೇಕು. ನಾನು ಪ್ರವ್ರಾಜಿತಳಾಗಲು ಬಯಸುತ್ತೇನೆ. ದುಶ್ಚರ ತಪಸ್ಸನ್ನು ತಪಿಸುತ್ತೇನೆ. ಹಿಂದಿನ ದೇಹಗಳಲ್ಲಿರುವಾಗ ನಾನು ಮೂಢ ಕರ್ಮಗಳನ್ನು ಮಾಡಿದ್ದಿರಬಹುದು. ಮಾಡಿದ ಪಾಪಗಳಿಗೆ ಈ ಫಲವು ದೊರಕಿದೆ ಎನ್ನುವುದು ಖಂಡಿತ. ತಾಪಸರೇ! ಶಾಲ್ವನಿಂದ ತನ್ನವಳೆಂದು ಹೇಳಿಸಿಕೊಳ್ಳದೇ, ಸಮಾಧಾನವನ್ನು ಪಡೆಯದೇ, ನಿರಾಕೃತಳಾಗಿ ನನ್ನವರ ಬಳಿ ಪುನಃ ಹೋಗಲು ಬಯಸುವುದಿಲ್ಲ. ತಪಸ್ಸಿನ ಕುರಿತು ಉಪದೇಶವನ್ನು ಪಡೆಯಲು ಬಯಸುತ್ತೇನೆ. ದೇವಸಂಕಾಶರಾದ ನೀವು ನನಗೆ ಕೃಪರಾಗಬೇಕು.”
ಅವನು ಆ ಕನ್ಯೆಗೆ ಆಶ್ವಾಸನೆಯನ್ನಿತ್ತನು. ದೃಷ್ಟಾಂತ, ಆಗಮ, ಕಾರಣಗಳಿಂದ ಸಂತವಿಸಿದನು. ದ್ವಿಜರೊಂದಿಗೆ ಕಾರ್ಯವನ್ನು ಮಾಡುತ್ತೇವೆಂದು ಪ್ರತಿಜ್ಞೆಗೈದನು.
ಹೋತ್ರವಾಹನ-ಅಂಬಾ ಸಂವಾದ
ಆಗ ಆ ಎಲ್ಲ ತಾಪಸರೂ ಆ ಕನ್ಯೆಗೆ ಧರ್ಮವತ್ತಾದ ಯಾವ ಕಾರ್ಯವನ್ನು ಮಾಡಬೇಕೆಂದು ಚಿಂತಿಸುತ್ತಾ ಕಾರ್ಯವಂತರಾದರು. ಕೆಲವು ತಾಪಸರು ಅವಳನ್ನು ತಂದೆಯ ಮನೆಗೆ ಕಳುಹಿಸಬೇಕೆಂದು ಹೇಳಿದರು. ಕೆಲವು ದ್ವಿಜೋತ್ತಮರು ನಮ್ಮನ್ನೇ ದೂರುವ ಮನಸ್ಸುಮಾಡಿದರು. ಕೆಲವರು ಶಾಲ್ಪಪತಿಯ ಬಳಿ ಹೋಗಿ ಅವನನ್ನು ಒಪ್ಪಿಸಬೇಕೆಂದು ಅಭಿಪ್ರಾಯಪಟ್ಟರು. ಇನ್ನು ಕೆಲವರು ಅವಳನ್ನು ಅವನು ತ್ಯಜಿಸಿದ್ದಾನಾದ್ದರಿಂದ ಬೇಡ ಎಂದರು. ಹೀಗೆ ಕೆಲ ಸಮಯವು ಕಳೆಯಲು ಎಲ್ಲ ಸಂಶಿತವ್ರತ ತಾಪಸರೂ ಅವಳಿಗೆ ಪುನಃ ಹೇಳಿದರು: “ಭದ್ರೇ! ಮನೀಷಿಗಳು ಈ ವಿಷಯದಲ್ಲಿ ಏನು ತಾನೇ ಮಾಡಬಲ್ಲರು? ಈ ರೀತಿ ಅಲೆದಾಡುವುದನ್ನು ಬಿಡು. ಹಿತವಚನವನ್ನು ಕೇಳು. ನಿನ್ನ ತಂದೆಯ ಮನೆಗೆ ಹೋಗುವುದು ನಿನಗೆ ಒಳ್ಳೆಯದು. ನಿನ್ನ ತಂದೆ ರಾಜನು ಅನಂತರ ಏನು ಮಾಡಬೇಕೋ ಅದನ್ನು ಮಾಡುತ್ತಾನೆ. ಅಲ್ಲಿ ನೀನು ಸರ್ವ ಗುಣಗಳಿಂದ ಸುತ್ತುವರೆಯಲ್ಪಟ್ಟು ಸುಖದಿಂದ ವಾಸಿಸುವೆ. ತಂದೆಯಂತಹ ಗತಿಯು ನಾರಿಗೆ ಬೇರೆ ಯಾರೂ ಇಲ್ಲ. ನಾರಿಗೆ ಪತಿ ಅಥವ ಪಿತರೇ ಗತಿಯು. ಸುಖದಲ್ಲಿರುವಾಗ ಪತಿಯು ಗತಿಯಾದರೆ ಕಷ್ಟದಲ್ಲಿರುವಾಗ ಪಿತನು ಗತಿ. ವಿಶೇಷವಾಗಿ ಸುಕುಮಾರಿಯಾಗಿರುವ ನಿನಗೆ ಪರಿವ್ರಾಜಕತ್ವವು ತುಂಬಾ ದುಃಖಕರವಾದುದು. ರಾಜಪುತ್ರಿಯಾಗಿರುವ ನೀನು ಪ್ರಕೃತಿಯಲ್ಲಿಯೇ ಕುಮಾರಿಯಾಗಿರುವೆ. ಆಶ್ರಮವಾಸದಲ್ಲಿ ಬಹಳ ದೋಷಗಳಿವೆಯೆಂದು ತಿಳಿದಿದ್ದೇವೆ. ಇವ್ಯಾವುದೂ ನಿನ್ನ ತಂದೆಯ ಮನೆಯಲ್ಲಿ ಇರುವುದಿಲ್ಲ.”
ಆಗ ಆ ಬ್ರಾಹ್ಮಣರು ತಪಸ್ವಿನಿಗೆ ಈ ಮಾತನ್ನೂ ಹೇಳಿದರು: “ನಿರ್ಜನವಾದ ಗಹನ ವನದಲ್ಲಿ ಏಕಾಂಗಿಯಾರುವ ನಿನ್ನನ್ನು ನೋಡಿ ರಾಜೇಂದ್ರರು ನಿನ್ನನ್ನು ಬಯಸುತ್ತಾರೆ. ಆದುದರಿಂದ ಆ ಮಾರ್ಗದಲ್ಲಿ ಹೋಗಲು ಮನಸ್ಸು ಮಾಡಬೇಡ!”
ಅಂಬೆಯು ಹೇಳಿದಳು: “ಕಾಶೀನಗರದಲ್ಲಿ ತಂದೆಯ ಮನೆಗೆ ಪುನಃ ಹೋಗಲು ಶಕ್ಯವಿಲ್ಲ. ಬಾಂಧವರಿಗೆ ನಾನು ಗೊತ್ತಿಲ್ಲದವಳಾಗಿಬಿಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ತಾಪಸರೇ! ಏಕೆಂದರೆ ನಾನು ಬಾಲ್ಯದಲ್ಲಿ ತಂದೆಯ ಮನೆಯಲ್ಲಿ ವಾಸಿಸಿದ್ದುದು ಬೇರೆಯಾಗಿತ್ತು. ನನ್ನ ತಂದೆಯಿರುವಲ್ಲಿಗೆ ಹೋಗಿ ಅಲ್ಲಿ ವಾಸಿಸುವುದಿಲ್ಲ. ನಿಮಗೆ ಮಂಗಳವಾಗಲಿ. ತಾಪಸರಿಂದ ಪರಿಪಾಲಿತಳಾಗಿ ತಪಸ್ಸನ್ನು ತಪಿಸಲು ಬಯಸುತ್ತೇನೆ. ಇದರ ನಂತರದ ಲೋಕದಲ್ಲಿ ನನಗೆ ಈ ರೀತಿಯ ದೌರ್ಭಾಗ್ಯವಾಗಲೀ ಆಪತ್ತಾಗಲೀ ಬರದಿರಲೆಂದು ನಾನು ತಪಸ್ಸನ್ನು ತಪಿಸುತ್ತೇನೆ.”
ಹೀಗೆ ಆ ವಿಪ್ರರು ಅದು ಇದು ಎಂದು ಯೋಚಿಸುತ್ತಿರುವಾಗ ಆ ವನಕ್ಕೆ ರಾಜರ್ಷಿ ತಪಸ್ವೀ ಹೋತ್ರವಾಹನನು ಬಂದನು. ಆಗ ಆ ತಾಪಸರೆಲ್ಲರೂ ಆ ನೃಪನನ್ನು ಪೂಜಿಸಿದರು. ಪೂಜೆ, ಆಸನ, ಉದಕಗಳನ್ನಿತ್ತು ಸ್ವಾಗತಿಸಿದರು. ಅವನು ಕುಳಿತುಕೊಂಡು ವಿಶ್ರಾಂತಿಯನ್ನು ಪಡೆದು ಪರಸ್ಪರರನ್ನು ಕೇಳಿದ ನಂತರ ವನೌಕಸರು ಮಾತುಕಥೆಯನ್ನು ಪುನಃ ಕನ್ಯೆಯ ಕಡೆ ನಡೆಸಿದರು. ಕಾಶೀರಾಜನ ಅಂಬೆಯ ಆ ಕಥೆಯನ್ನು ಕೇಳಿ ಅವಳ ತಾಯಿಯ ತಂದೆಯಾದ ಅವನು ನಡುಗುತ್ತಾ ಮೇಲೆದ್ದು, ಕನ್ಯೆಯನ್ನು ತೊಡೆಯ ಮೇಲೇರಿಸಿಕೊಂಡು ಸಮಾಧಾನಗೊಳಿಸಿದನು. ಅವನು ಅವಳ ವ್ಯಸನದ ಮೂಲವನ್ನು ಸಂಪೂರ್ಣವಾಗಿ ಕೇಳಲು ಅವಳೂ ಕೂಡ ಅವನಿಗೆ ನಡೆದುದೆಲ್ಲವನ್ನೂ ವಿಸ್ತಾರದಿಂದ ನಿವೇದಿಸಿದಳು. ಆಗ ಆ ರಾಜರ್ಷಿಯು ತುಂಬಾ ದುಃಖಶೋಕಸಮನ್ವಿತನಾದನು. ಏನು ಮಾಡಬೇಕೆಂದು ಆ ಸುಮಹಾತಪಸ್ವಿಯು ಯೋಚಿಸಿದನು. ಕಂಪಿಸುತ್ತಾ ಅವನು ಆರ್ತಳೂ ಸುದುಃಖಿತಳೂ ಆಗಿದ್ದ ಕನ್ಯೆಗೆ ಹೇಳಿದನು: “ಭದ್ರೇ! ತಂದೆಯ ಮನೆಗೆ ಹೋಗಬೇಡ! ನಿನ್ನ ತಾಯಿಯ ತಂದೆ ನಾನು. ನಾನು ನಿನ್ನ ದುಃಖವನ್ನು ಕಳೆಯುತ್ತೇನೆ. ಮಗಳೇ! ನನ್ನಲ್ಲಿ ವಿಶ್ವಾಸವಿಡು. ನಿನ್ನ ಮನಸ್ಸನ್ನು ಒಣಗಿಸುತ್ತಿರುವ ಬಯಕೆಯನ್ನು ನಾನು ಪೂರೈಸಿಕೊಡುತ್ತೇನೆ. ನನ್ನ ಮಾತಿನಂತೆ ಜಾಮದಗ್ನಿ ತಪಸ್ವಿ ರಾಮನಲ್ಲಿಗೆ ಹೋಗು. ರಾಮನು ನಿನ್ನ ಮಹಾ ದುಃಖ ಶೋಕಗಳನ್ನು ನಿವಾರಿಸುತ್ತಾನೆ. ಅವನ ಮಾತಿನಂತೆ ನಡೆದುಕೊಳ್ಳದೇ ಇದ್ದರೆ ಭೀಷ್ಮನನ್ನು ಅವನು ರಣದಲ್ಲಿ ಕೊಲ್ಲುತ್ತಾನೆ. ಕಾಲಾಗ್ನಿಸಮನಾದ ತೇಜಸ್ಸುಳ್ಳ ಆ ಭಾರ್ಗವಶ್ರೇಷ್ಠನಲ್ಲಿಗೆ ಹೋಗು. ಆ ಮಹಾತಪಸ್ವಿಯು ನಿನ್ನನ್ನು ಸಮ ಮಾರ್ಗದಲ್ಲಿ ನೆಲೆಸುತ್ತಾನೆ.”
ಆಗ ಒಂದೇಸಮನೆ ಕಣ್ಣೀರು ಸುರಿಸುತ್ತಿದ್ದ ಅವಳು ತನ್ನ ತಾಯಿಯ ತಂದೆ ಹೋತ್ರವಾನನನಿಗೆ ಪುನಃ ಪುನಃ ಹೇಳಿದಳು: “ತಲೆಬಾಗಿ ನಮಸ್ಕರಿಸಿ ನಿನ್ನ ಶಾಸನದಂತೆ ಹೋಗುತ್ತೇನೆ. ಆದರೆ ಲೋಕವಿಶ್ರುತನಾದ ಆ ಅರ್ಯನನ್ನು ಇಂದು ನಾನು ಕಾಣಬಲ್ಲೆನೇ? ಭಾರ್ಗವನು ಹೇಗೆ ನನ್ನ ಈ ತೀವ್ರ ದುಃಖವನ್ನು ಕೊನೆಗೊಳಿಸಬಲ್ಲನು? ಇದನ್ನು ಕೇಳಲು ಬಯಸುತ್ತೇನೆ. ನಂತರ ಅಲ್ಲಿಗೆ ಹೋಗುತ್ತೇನೆ.”
ಅಕೃತವ್ರಣ-ಅಂಬಾ ಸಂವಾದ
ಹೋತ್ರವಾಹನನು ಹೇಳಿದನು: “ವತ್ಸೇ! ಮಹಾವನದಲ್ಲಿ ಉಗ್ರತಪಸ್ಸಿನಲ್ಲಿ ನಿರತನಾಗಿರುವ ಸತ್ಯಸಂಧ ಮಹಾಬಲ ಜಾಮದಗ್ನಿಯನ್ನು ನೀನು ಕಾಣುತ್ತೀಯೆ. ಗಿರಿಶ್ರೇಷ್ಠವಾದ ಮಹೇಂದ್ರದಲ್ಲಿ ಋಷಿಗಳು, ವೇದವಿದುಷರು, ಮತ್ತು ಗಂಧರ್ವಾಪ್ಸರೆಯರು ನಿತ್ಯವೂ ರಾಮನನ್ನು ಉಪಾಸಿಸುತ್ತಾರೆ. ಅಲ್ಲಿಗೆ ಹೋಗು! ನಿನಗೆ ಮಂಗಳವಾಗಲಿ. ಮೊದಲು ಆ ತಪೋವೃದ್ಧ ದೃಢವ್ರತನಿಗೆ ಶಿರಸಾ ವಂದಿಸಿ ನಾನು ಹೇಳಿದುದನ್ನು ಅವನಿಗೆ ಹೇಳು. ಯಾವ ಕಾರ್ಯವಾಗಬೇಕೆಂದು ಬಯಸುತ್ತೀಯೋ ಅದನ್ನೂ ಹೇಳು. ನನ್ನ ಹೆಸರನ್ನು ಹೇಳು. ರಾಮನು ಎಲ್ಲವನ್ನೂ ನಿನಗೆ ಮಾಡುತ್ತಾನೆ. ವೀರ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠ, ಜಮದಗ್ನಿಸುತ ರಾಮನು ನನ್ನ ಸಖ. ಪ್ರೀತಿಯ ಸ್ನೇಹಿತ.”
ಪಾರ್ಥಿವ ಹೋತ್ರವಾಹನನು ಕನ್ಯೆಗೆ ಹೀಗೆ ಹೇಳುತ್ತಿರಲು ಅಲ್ಲಿಗೆ ರಾಮನ ಪ್ರಿಯ ಅನುಚರ ಅಕೃತವ್ರಣನು ಆಗಮಿಸಿದನು. ಆಗ ಸಹಸ್ರಾರು ಸಂಖ್ಯೆಗಳಲ್ಲಿ ಆ ಮುನಿಗಳೆಲ್ಲರೂ ಒಟ್ಟಿಗೇ ಮೇಲೆದ್ದರು. ರಾಜಾ ವಯೋವೃದ್ಧ ಸೃಂಜಯ ಹೋತ್ರವಾಹನನೂ ಕೂಡ ಹಾಗೆಯೇ ಮಾಡಿದನು. ಆಗ ಆ ವನೌಕಸರಿಬ್ಬರೂ ಯಥಾನ್ಯಾಯವಾಗಿ ಅನ್ಯೋನ್ಯರನ್ನು ಪ್ರಶ್ನಿಸಿ, ಒಟ್ಟಿಗೇ ಸುತ್ತುವರೆಯಲ್ಪಟ್ಟು ಕುಳಿತು ಕೊಂಡರು. ಆಗ ಅವರಿಬ್ಬರೂ ಪ್ರೀತಿ, ಹರ್ಷ, ಮುದದಿಂದ ಕೂಡಿದ ಮನೋರಮ ದಿವ್ಯ ಕಥೆಗಳನ್ನು ಹೇಳಿ ಮಾತನಾಡಿದರು. ಆಗ ಮಾತಿನ ಕೊನೆಯಲ್ಲಿ ರಾಜರ್ಷಿ ಮಹಾತ್ಮ ಹೋತ್ರವಾಹನನು ಶ್ರೇಷ್ಠ ರಾಮನ ಕುರಿತು ಮಹರ್ಷಿ ಅಕೃತವ್ರಣನಲ್ಲಿ ಕೇಳಿದನು: “ಮಹಾಬಾಹೋ! ಪ್ರತಾಪವಾನ್ ಜಾಮದಗ್ನಿಯು ಈಗ ಎಲ್ಲಿ ಕಾಣಲು ಸಿಗುತ್ತಾನೆ? ವೇದವಿದರಲ್ಲಿ ಶ್ರೇಷ್ಠನಾದ ಅವನನ್ನು ನೋಡಲು ಶಕ್ಯವಿದೆಯೇ?”
ಅಕೃತವ್ರಣನು ಹೇಳಿದನು: “ಪ್ರಭೋ! ರಾಮನು ರಾಜರ್ಷಿ ಸೃಂಜಯನು ನನ್ನ ಪ್ರಿಯ ಸಖನೆಂದು ಸತತವಾಗಿ ನಿನ್ನ ಕುರಿತೇ ಹೇಳುತ್ತಿರುತ್ತಾನೆ. ನಾಳೆ ಪ್ರಭಾತದಲ್ಲಿ ರಾಮನು ಇಲ್ಲಿರುತ್ತಾನೆಂದು ನನಗನ್ನಿಸುತ್ತದೆ. ನಿನ್ನನ್ನು ನೋಡಲು ಬಯಸಿ ಇಲ್ಲಿಗೇ ಬರುವ ಅವನನ್ನು ನೀನು ಕಾಣುತ್ತೀಯೆ. ಈ ಕನ್ಯೆಯಾದರೋ ಏಕೆ ವನಕ್ಕೆ ಬಂದಿದ್ದಾಳೆ? ಇವಳು ಯಾರವಳು? ಮತ್ತು ನಿನಗೇನಾಗಬೇಕು? ಇದನ್ನು ತಿಳಿಯಲು ಬಯಸುತ್ತೇನೆ.”
ಹೋತ್ರವಾಹನನು ಹೇಳಿದನು: “ವಿಭೋ! ಇವಳು ನನ್ನ ಮಗಳ ಮಗಳು. ಕಾಶಿರಾಜ ಸುತೆ. ಈ ಶುಭೆ ಹಿರಿಯವಳು ಸ್ವಯಂವರದಲ್ಲಿ ತನ್ನ ಇಬ್ಬರು ತಂಗಿಯರೊಂದಿಗೆ ನಿಂತಿದ್ದಳು. ಇವಳು ಅಂಬೆಯೆಂದು ವಿಖ್ಯಾತಳಾದ ಕಾಶಿಪತಿಯ ಜೇಷ್ಠ ಮಗಳು. ಅಂಬಿಕಾ ಮತ್ತು ಅಂಬಾಲಿಕೆಯರು ಇವಳ ಇತರ ಕಿರಿಯರು. ಆಗ ಕಾಶಿಪುರಿಯಲ್ಲಿ ಕ್ಷತ್ರಿಯ ಪಾರ್ಥಿವರೆಲ್ಲರೂ ಕನ್ಯನಿಮಿತ್ತವಾಗಿ ಸೇರಿದ್ದರು. ಅಲ್ಲಿ ಮಹಾ ಉತ್ಸವವೇ ನಡೆದಿತ್ತು. ಆಗ ಮಹಾವೀರ್ಯಶಾಲೀ ಶಾಂತನವ ಭೀಷ್ಮನು ಮಹಾತೇಜಸ್ವಿ ನೃಪರನ್ನು ಸದೆಬಡಿದು ಮೂವರು ಕನ್ಯೆಯರನ್ನೂ ಅಪಹರಿಸಿದನು. ಪೃಥಿವೀಪಾಲರನ್ನು ಗೆದ್ದು ಆ ವಿಶುಧ್ಧಾತ್ಮ ಭಾರತ ಭೀಷ್ಮನು ಕನ್ಯೆಯರೊಡನೆ ಗಜಾಹ್ವಯಕ್ಕೆ ಹಿಂದಿರುಗಿದನು. ಅನಂತರ ಸತ್ಯವತಿಗೆ ಹೇಳಿ ಪ್ರಭುವು ತಮ್ಮ ವಿಚಿತ್ರವೀರ್ಯನ ವಿವಾಹವನ್ನು ಆಜ್ಞಾಪಿಸಿದನು. ಆಗ ವಿವಾಹದ ಸಿದ್ಧತೆಗಳನ್ನು ನೋಡಿ ಈ ಕನ್ಯೆಯು ಮಂತ್ರಿಗಳ ಮಧ್ಯದಲ್ಲಿ ಗಾಂಗೇಯನಿಗೆ ಹೇಳಿದಳು: “ವೀರ! ಶಾಲ್ವಪತಿಯನ್ನು ನಾನು ಮನಸಾರೆ ಪತಿಯನ್ನಾಗಿ ಆರಿಸಿಕೊಂಡಿದ್ದೇನೆ. ಇನ್ನೊಬ್ಬನ ಮೇಲೆ ಮನಸ್ಸಿಟ್ಟಿರುವ ನನ್ನನ್ನು ಕೊಡುವುದು ಸರಿಯಲ್ಲ.” ಅವಳ ಮಾತನ್ನು ಕೇಳಿ ಭೀಷ್ಮನು ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿ ಸತ್ಯವತಿಯ ಅಭಿಪ್ರಾಯದಂತೆಯೂ ಇವಳನ್ನು ವಿಸರ್ಜಿಸಲು ನಿಶ್ಚಯಿಸಿದನು. ಭೀಷ್ಮನಿಂದ ಅನುಜ್ಞಾತಳಾಗಿ ಸಂತೋಷಗೊಂಡು ಈ ಕನ್ಯೆಯು ಸೌಭಪತಿಗೆ ಹೇಳಿದಳು: “ಪಾರ್ಥಿವರ್ಷಭ! ಭೀಷ್ಮನು ನನ್ನನ್ನು ಬಿಟ್ಟಿದ್ದಾನೆ. ಧರ್ಮವನ್ನು ಪ್ರತಿಪಾದಿಸು. ಹಿಂದೆಯೇ ನಾನು ನಿನ್ನನ್ನು ಮನಸಾ ಆರಿಸಿಕೊಂಡಿದ್ದೆ.” ಇವಳ ಚಾರಿತ್ರವನ್ನು ಶಂಕಿಸಿ ಶಾಲ್ವನೂ ಕೂಡ ಇವಳನ್ನು ತ್ಯಜಿಸಿದನು. ಆ ಇವಳು ಈ ತಪೋವನವನ್ನು ಸೇರಿ ತುಂಬಾ ತಪಸ್ಸಿನಲ್ಲಿ ನಿರತಳಾಗಿದ್ದಾಳೆ. ಅವಳ ವಂಶದ ವಿವರಗಳನ್ನು ಹೇಳಿಕೊಂಡಾಗ ನಾನು ಇವಳನ್ನು ಗುರುತಿಸಿದೆ. ಭೀಷ್ಮನೇ ಈ ದುಃಖಕ್ಕೆ ಕಾರಣನೆಂದು ಇವಳ ಅಭಿಪ್ರಾಯ.”
ಅಂಬೆಯು ಹೇಳಿದಳು: “ಭಗವನ್! ಪೃಥಿವೀಪತಿಯು ಹೇಳಿದಂತೆಯೇ ನಡೆದಿದೆ. ಸೃಂಜಯ ಹೋತ್ರವಾಹನನು ನನ್ನ ತಾಯಿಯ ಶರೀರಕರ್ತ. ನನ್ನ ನಗರಕ್ಕೆ ಹಿಂದಿರುಗಲು ಉತ್ಸಾಹವಿಲ್ಲ. ಅವಮಾನ ಭಯವೂ ಇದೆ. ನಾಚಿಕೆಯೂ ಆಗುತ್ತಿದೆ. ಭಗವಾನ್ ರಾಮನು ಏನು ಹೇಳುತ್ತಾನೋ ಅದನ್ನೇ ಮಾಡಬೇಕೆಂದು ನನಗನ್ನಿಸುತ್ತಿದೆ.”
ಪರಶುರಾಮ-ಅಂಬಾ ಸಂವಾದ
ಅಕೃತವ್ರಣನು ಹೇಳಿದನು: “ಭದ್ರೇ! ಇಲ್ಲಿ ಎರಡು ದುಃಖಗಳಿವೆ. ಯಾವುದನ್ನು ಹೋಗಲಾಡಿಸಲು ಬಯಸುವೆ? ಯಾವುದರ ಪ್ರತೀಕಾರವನ್ನು ಬಯಸುತ್ತೀಯೆ? ಸತ್ಯವನ್ನು ನನಗೆ ಹೇಳು! ಒಂದುವೇಳೆ ಸೌಭಪತಿಯನ್ನು ಸೇರಬೇಕೆಂದು ನಿನ್ನ ಮನಸ್ಸಿದ್ದರೆ ಮಹಾತ್ಮ ರಾಮನು ನಿನಗೋಸ್ಕರವಾಗಿ ಅವನ ಮೇಲೆ ನಿಬಂಧನೆಯನ್ನು ಹಾಕಬಲ್ಲನು. ಅಥವಾ ಆಪಗೇಯ ಭೀಷ್ಮನನ್ನು ರಣದಲ್ಲಿ ಸೋಲುವುದನ್ನು ನೋಡಬೇಕೆಂದು ಇಚ್ಛಿಸಿದರೆ ಆ ಧೀಮತ ಭಾರ್ಗವ ರಾಮನು ಅದನ್ನೂ ಮಾಡಬಲ್ಲನು. ನಿನ್ನ ಮತ್ತು ಸೃಂಜಯನ ಮಾತನ್ನು ಕೇಳಿ ಅನಂತರ ಯಾವುದನ್ನು ಮಾಡಬೇಕೆಂದು ಯೋಚಿಸೋಣ.”
ಅಂಬೆಯು ಹೇಳಿದಳು: “ಭಗವನ್! ಭೀಷ್ಮನು ತಿಳಿಯದೆಯೇ ನನ್ನನ್ನು ಅಪಹರಿಸಿದನು. ಏಕೆಂದರೆ ಭೀಷ್ಮನಿಗೆ ನನ್ನ ಮನಸ್ಸು ಶಾಲ್ವನಿಗೆ ಹೋಗಿತ್ತೆಂದು ತಿಳಿದಿರಲಿಲ್ಲ. ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಯಥಾನ್ಯಾಯವಾದ ಉಪಾಯವನ್ನು ನೀವೇ ನಿಶ್ಚಯಿಸಬೇಕು ಮತ್ತು ಅದರಂತೆ ಮಾಡಬೇಕು. ಕುರುಶಾರ್ದೂಲ ಭೀಷ್ಮ ಅಥವಾ ಶಾಲ್ವರಾಜ ಇಬ್ಬರಲ್ಲಿ ಒಬ್ಬರ ಮೇಲೆ ಅಥವಾ ಇಬ್ಬರ ಮೇಲೂ, ಯಾವುದು ಸರಿಯೋ, ಅದನ್ನು ಮಾಡು. ನನ್ನ ದುಃಖದ ಮೂಲವನ್ನು ಯಥಾವತ್ತಾಗಿ ಹೇಳಿದ್ದೇನೆ. ಅದರ ಕುರಿತು ಯಾವುದು ಸರಿಯೋ ಅದನ್ನು ಮಾಡಬೇಕು.”
ಅಕೃತವ್ರಣನು ಹೇಳಿದನು: “ಭದ್ರೇ! ನೀನು ಹೇಳಿದುದೆಲ್ಲವೂ ಧರ್ಮದ ಪ್ರಕಾರವೇ ಇವೆ. ಇನ್ನು ನನ್ನ ಮಾತನ್ನೂ ಕೇಳು. ಒಂದುವೇಳೆ ಆಪಗೇಯನು ನಿನ್ನನ್ನು ಗಜಸಾಹ್ವಯಕ್ಕೆ ಕರೆದುಕೊಂಡು ಹೋಗದೇ ಇದ್ದಿದ್ದರೆ ರಾಮನ ಹೇಳಿಕೆಯನ್ನು ತಲೆಯಲ್ಲಿ ಹೊತ್ತು ಶಾಲ್ವನು ನಿನ್ನನ್ನು ಸ್ವೀಕರಿಸುತ್ತಿದ್ದನು. ಆದರೆ ನಿನ್ನನ್ನು ಅವನು ಗೆದ್ದು ಅಪಹರಿಸಿಕೊಂಡು ಹೋದುದರಿಂದ ಶಾಲ್ವರಾಜನಿಗೆ ನಿನ್ನ ಮೇಲೆ ಸಂಶಯ ಬಂದಿದೆ. ಭೀಷ್ಮನು ಪೌರುಷದ ಸೊಕ್ಕಿನಲ್ಲಿದ್ದಾನೆ. ಗೆದ್ದ ಜಂಬದಲ್ಲಿದ್ದಾನೆ. ಆದುದರಿಂದ ನೀನು ಭೀಷ್ಮನಿಗೆ ಪ್ರತಿಕ್ರಿಯೆ ಮಾಡಿಸುವುದು ಯುಕ್ತವಾಗಿದೆ.”
ಅಂಬೆಯು ಹೇಳಿದಳು: “ಬ್ರಹ್ಮನ್! ಒಂದುವೇಳೆ ನಾನು ರಣದಲ್ಲಿ ಭೀಷ್ಮನನ್ನು ಕೊಲ್ಲಬಹುದಾಗಿದ್ದರೆ ಎನ್ನುವ ಮಹಾ ಕಾಮವು ನಿತ್ಯವೂ ನನ್ನ ಹೃದಯದಲ್ಲಿ ಬೆಳೆಯುತ್ತಿದೆ. ದೋಷವು ಭೀಷ್ಮನ ಮೇಲಾದರೂ ಅಥವಾ ಶಾಲ್ವರಾಜನ ಮೇಲಾದರೂ ಹೋಗಲಿ. ಆದರೆ ಯಾರ ಕೃತ್ಯದಿಂದ ನಾನು ತುಂಬಾ ದುಃಖಿತಳಾಗಿದ್ದೇನೋ ಅವನನ್ನು ಶಿಕ್ಷಿಸಬೇಕು.”
ಈ ರೀತಿ ಅವರು ಮಾತನಾಡಿಕೊಳ್ಳುತ್ತಿರುವಾಗ ದಿನವು ಕಳೆಯಿತು. ಮತ್ತು ಸುಖ ಶೀತೋಷ್ಣ ಮಾರುತವು ಬೀಸಿ ರಾತ್ರಿಯೂ ಕಳೆಯಿತು. ಆಗ ಶಿಷ್ಯರಿಂದ ಪರಿವೃತನಾಗಿ ಜಟಾಚೀರಧರ ಮುನಿ ರಾಮನು ಪ್ರಜ್ವಲಿಸುವ ತೇಜಸ್ಸಿನೊಂದಿಗೆ ಆಗಮಿಸಿದನು. ಕೈಯಲ್ಲಿ ಧನುಸ್ಸು, ಖಡ್ಗ ಮತ್ತು ಪರಶುಗಳನ್ನು ಹಿಡಿದು ಧೂಳಿಲ್ಲದೇ ಹೊಳೆಯುತ್ತಾ ಅವನು ಸೃಂಜಯರ ನೃಪನನ್ನು ಸಮೀಪಿಸಿದನು. ಆಗ ಆ ತಾಪಸನನ್ನು ನೋಡಿ ಆ ರಾಜ ಮಹಾತಪಸ್ವಿ, ಆ ತಪಸ್ವಿನಿ ಕನ್ಯೆ ಮತ್ತು ಎಲ್ಲರೂ ಕೈಮುಗಿದು ನಿಂತುಕೊಂಡರು. ಭಾರ್ಗವನನ್ನು ಮಧುಪರ್ಕದಿಂದ ಪೂಜಿಸಿದರು. ಯಥಾಯೋಗವಾಗಿ ಪೂಜಿಸಲ್ಪಟ್ಟು ಅವನು ಅವರೊಂದಿಗೆ ಕುಳಿತುಕೊಂಡನು. ಆಗ ರಾಜರ್ಷಿ ಸೃಂಜಯ ಮತ್ತು ಜಾಮದಗ್ನಿ ಇಬ್ಬರೂ ಹಿಂದೆ ನಡೆದುದರ ಕುರಿತು ಮಾತುಕಥೆಯನ್ನಾಡಿದರು. ಆಗ ಮಾತಿನ ಕೊನೆಯಲ್ಲಿ ಮಧುರ ಕಾಲದಲ್ಲಿ ರಾಜರ್ಷಿಯು ಮಹಾಬಲ ಭೃಗುಶ್ರೇಷ್ಠ ರಾಮನಿಗೆ ಅರ್ಥವತ್ತಾದ ಈ ಮಾತುಗಳನ್ನಾಡಿದನು: “ರಾಮ! ಇವಳು ನನ್ನ ಮಗಳ ಮಗಳು, ಕಾಶಿರಾಜಸುತೆ. ಇವಳನ್ನು ಕೇಳಿ ಹೇಗೆ ತಿಳಿಯುತ್ತದೆಯೋ ಹಾಗೆ ಮಾಡು.” “ಆಗಲಿ. ಹೇಳು!” ಎಂದು ರಾಮನು ಅವಳಿಗೆ ಹೇಳಲು ಅವಳು ಬೆಂಕಿಯಂತ ಕಣ್ಣೀರನ್ನು ಸುರಿಸುತ್ತಾ ರಾಮನಲ್ಲಿಗೆ ಬಂದಳು. ಆ ಶುಭೆಯು ರಾಮನ ಚರಣಗಳಿಗೆ ಶಿರಸಾ ನಮಸ್ಕರಿಸಿ, ಪದ್ಮದಲಗಳಂತಿರುವ ಕೈಗಳಿಂದ ಮುಟ್ಟಿ, ನಿಂತುಕೊಂಡಳು. ಕಣ್ಣೀರುತುಂಬಿದ ಕಣ್ಣುಗಳ ಆ ಶೋಕವತಿಯು ರೋದಿಸಿದಳು. ಶರಣ್ಯ ಭೃಗುನಂದನನ ಶರಣು ಹೊಕ್ಕಳು.
ರಾಮನು ಹೇಳಿದನು: “ನೃಪಾತ್ಮಜೇ! ಸೃಂಜಯನಿಗೆ ನೀನು ಹೇಗೋ ಹಾಗೆ ನನಗೂ ಕೂಡ. ನಿನ್ನ ಮನೋದುಃಖವೇನೆಂದು ಕೇಳು. ನಿನ್ನ ಮಾತನ್ನು ಮಾಡಿಕೊಡುತ್ತೇನೆ.”
ಅಂಬೆಯು ಹೇಳಿದಳು: “ಮಹಾವ್ರತ! ಇಂದು ನಿನ್ನ ಶರಣು ಹೊಕ್ಕಿದ್ದೇನೆ. ನನ್ನನ್ನು ಘೋರವಾದ ಈ ಶೋಕದ ಕೆಸರು-ಕೂಪದಿಂದ ಉದ್ಧರಿಸು.”
ಅವಳ ರೂಪ, ವಯಸ್ಸು, ಅಭಿನವ ಮತ್ತು ಪರಮ ಸೌಕುಮಾರ್ಯವನ್ನು ನೋಡಿ ರಾಮನು ಚಿಂತಾಪರನಾದನು. “ಇವಳು ಏನನ್ನು ಹೇಳಲಿದ್ದಾಳೆ?” ಎಂದು ವಿಮರ್ಶಿಸಿ ಭೃಗುಸತ್ತಮ ರಾಮನು ಒಂದು ಕ್ಷಣ ಯೋಚಿಸಿ ಕೃಪೆಯಿಂದ ಅವಳನ್ನು ನೋಡಿದನು. “ಹೇಳು!” ಎಂದು ಪುನಃ ರಾಮನು ಹೇಳಲು ಶುಚಿಸ್ಮಿತೆಯು ಭಾರ್ಗವನಿಗೆ ನಡೆದುದೆಲ್ಲವನ್ನೂ ಹೇಳಿದಳು. ರಾಜಪುತ್ರಿಯ ಆ ಮಾತುಗಳನ್ನು ಕೇಳಿ ಜಾಮದಗ್ನಿಯು ನಿಶ್ಚಿತಾರ್ಥವನ್ನು ಆ ವರಾರೋಹೆಗೆ ತಿಳಿಸಿದನು. “ಭಾಮಿನೀ! ಕುರುಶ್ರೇಷ್ಠ ಭೀಷ್ಮನಿಗೆ ಹೇಳಿ ಕಳುಹಿಸುತ್ತೇನೆ. ಆ ನರಾಧಿಪನು ನನ್ನ ಮಾತುಗಳನ್ನು ಕೇಳಿ ಧರ್ಮಯುಕ್ತವಾದುದನ್ನು ಮಾಡುತ್ತಾನೆ. ನಾನು ಹೇಳಿದ ಮಾತಿನಂತೆ ನಡೆದುಕೊಳ್ಳದೇ ಇದ್ದರೆ ನಾನು ಅಸ್ತ್ರತೇಜಸ್ಸಿನಿಂದ ಅಮಾತ್ಯರೊಂದಿಗೆ ಜಾಹ್ನವೀಸುತನನ್ನು ರಣದಲ್ಲಿ ಸುಟ್ಟುಹಾಕುತ್ತೇನೆ. ಅಥವಾ ನಿನಗೆ ಆ ಕಡೆ ಮನಸ್ಸು ತಿರುಗಿದರೆ ಮೊದಲು ನಾನು ವೀರ ಶಾಲ್ವಪತಿಯನ್ನು ಕಾರ್ಯಗತನಾಗುವಂತೆ ಮಾಡುತ್ತೇನೆ.”
ಅಂಬೆಯು ಹೇಳಿದಳು: “ಭೃಗುನಂದನ! ಮೊದಲೇ ನನ್ನ ಮನಸ್ಸು ಶಾಲ್ವರಾಜನ ಮೇಲೆ ಹೋಗಿದೆ ಎಂದು ತಿಳಿದಕೂಡಲೇ ಭೀಷ್ಮನು ನನ್ನನ್ನು ಬಿಟ್ಟುಬಿಟ್ಟಿದ್ದಾನೆ. ಸೌಭರಾಜನಲ್ಲಿಗೆ ಹೋಗಿ ಅವನಿಗೆ ನನ್ನ ಕಷ್ಟದ ಮಾತುಗಳನ್ನಾಡಿದೆನು. ಅವನಾದರೋ ನನ್ನ ಚಾರಿತ್ರವನ್ನು ಶಂಕಿಸಿ ನನ್ನನ್ನು ಸ್ವೀಕರಿಸಲಿಲ್ಲ.ಇವೆಲ್ಲವನ್ನೂ ಸ್ವಬುದ್ಧಿಯಿಂದ ವಿಮರ್ಶಿಸಿ ಈ ವಿಷಯದಲ್ಲಿ ಏನನ್ನು ಮಾಡಬೇಕೆನ್ನುವುದನ್ನು ಚಿಂತಿಸಬೇಕಾಗಿದೆ. ಅಲ್ಲಿ ನನ್ನನ್ನು ವಶಮಾಡಿಕೊಂಡು ಬಲಾತ್ಕಾರವಾಗಿ ಎತ್ತಿಕೊಂಡು ಹೋದ ಮಹಾವ್ರತ ಭೀಷ್ಮನೇ ನನ್ನ ಈ ವ್ಯಸನದ ಮೂಲ. ಈ ರೀತಿಯ ದುಃಖವನ್ನು ನನಗೆ ತಂದೊದಗಿಸಿದ, ಯಾರಿಂದ ಈ ಮಹಾ ದುಃಖವನ್ನು ಹೊತ್ತು ತಿರುಗುತ್ತಿದ್ದೇನೋ ಆ ಭೀಷ್ಮನನ್ನು ಕೊಲ್ಲು! ಅವನು ಲುಬ್ಧ, ಸೊಕ್ಕಿನವ, ವಿಜಯಶಾಲಿಯೆಂದು ಜಂಬವಿದೆ. ಆದುದರಿಂದ ಅವನೊಂದಿಗೆ ಸೇಡು ತೀರಿಸಿಕೊಳ್ಳುವುದು ಯುಕ್ತವಾಗಿದೆ. ಭಾರತನು ನನ್ನನ್ನು ಅಪಹರಿಸಿಕೊಂಡು ಹೋಗುತ್ತಿರುವಾಗ ಆ ಮಹಾವ್ರತನನ್ನು ಕೊಲ್ಲಬೇಕೆನ್ನುವ ಸಂಕಲ್ಪವು ನನ್ನ ಹೃದಯದಲ್ಲಿ ಬಂದಿತ್ತು. ನನ್ನ ಬಯಕೆಯನ್ನು ಪೂರೈಸು. ಪುರಂದರನು ವೃತ್ರನನ್ನು ಹೇಗೋ ಹಾಗೆ ಭೀಷ್ಮನನ್ನು ಸಂಹರಿಸು!”
ಪರಶುರಾಮನು ಅಂಬೆಯೊಂದಿಗೆ ಭೀಷ್ಮನಲ್ಲಿಗೆ ಹೊರಟಿದುದು
ಹೀಗೆ ಭೀಷ್ಮನನ್ನು ಕೊಲ್ಲು! ಎಂದು ಅವಳು ಹೇಳಲು ರಾಮನು ರೋದಿಸುತ್ತಿರುವ ಆ ಕನ್ಯೆಯನ್ನು ಒತ್ತಾಯಿಸುತ್ತಾ ಪುನಃ ಪುನಃ ಹೇಳಿದನು: “ಕಾಶ್ಯೇ! ಬ್ರಹ್ಮವಿದರ ಕಾರಣಕ್ಕಲ್ಲದೇ ನಾನು ಇಷ್ಟಪಟ್ಟು ಶಸ್ತ್ರಗಳನ್ನು ಹಿಡಿಯುವುದಿಲ್ಲ. ನಾನು ನಿನಗಾಗಿ ಇನ್ನೇನು ಮಾಡಬೇಕು? ಭೀಷ್ಮ ಮತ್ತು ಶಾಲ್ವ ಇಬ್ಬರು ರಾಜರೂ ನನ್ನ ಇಚ್ಛೆಯಂತೆ ನಡೆದುಕೊಳ್ಳುತ್ತಾರೆ. ಅದನ್ನು ನಾನು ಮಾಡುತ್ತೇನೆ. ಶೋಕಿಸಬೇಡ! ಆದರೆ ಬ್ರಾಹ್ಮಣರ ನಿಯೋಗವಿಲ್ಲದೇ ಶಸ್ತ್ರಗಳನ್ನು ಎಂದೂ ಹಿಡಿಯುವುದಿಲ್ಲ. ಅದು ನಾನು ಮಾಡಿದ ಪ್ರತಿಜ್ಞೆ.”
ಅಂಬೆಯು ಹೇಳಿದಳು: “ಹೇಗಾದರೂ ಮಾಡಿ ಭೀಷ್ಮನಿಂದುಂಟಾದ ನನ್ನ ಈ ದುಃಖವನ್ನು ಹೋಗಲಾಡಿಸು. ಈಶ್ವರ! ಬೇಗನೇ ಅವನನ್ನು ಕೊಲ್ಲು!”
ರಾಮನು ಹೇಳಿದನು: “ಕಾಶಿಕನ್ಯೇ! ಇನ್ನೊಮ್ಮೆ ಹೇಳು. ಬೇಕಾದರೆ ಭೀಷ್ಮನು ನಿನ್ನ ಚರಣಗಳಿಗೆ ಶಿರಸಾ ವಂದಿಸಿಯಾನು. ಅವನು ನನ್ನ ಮಾತನ್ನು ಸ್ವೀಕರಿಸುತ್ತಾನೆ.”
ಅಂಬೆಯು ಹೇಳಿದಳು: “ರಾಮ! ನನಗೆ ಪ್ರಿಯವಾದುದನ್ನು ಮಾಡಲು ಬಯಸುವೆಯಾದರೆ ರಣದಲ್ಲಿ ಭೀಷ್ಮನನ್ನು ಸಂಹರಿಸು. ನೀನು ಭರವಸೆಯಿತ್ತುದನ್ನು ಸತ್ಯವಾಗಿಸಬೇಕು!”
ರಾಮ ಮತ್ತು ಅಂಬೆಯರು ಈ ರೀತಿ ಮಾತನಾಡಿಕೊಳ್ಳುತ್ತಿರಲು ಅಕೃತವ್ರಣನು ಜಾಮದಗ್ನಿಗೆ ಈ ಮಾತನ್ನಾಡಿದನು: “ಮಹಾಬಾಹೋ! ಶರಣಾಗತಳಾಗಿರುವ ಕನ್ಯೆಯನ್ನು ತ್ಯಜಿಸಬಾರದು. ಅಸುರನಂತೆ ಗರ್ಜಿಸುತ್ತಿರುವ ಭೀಷ್ಮನನ್ನು ರಣದಲ್ಲಿ ಕೊಲ್ಲು. ಒಂದುವೇಳೆ ನೀನು ಭೀಷ್ಮನನ್ನು ರಣಕ್ಕೆ ಕರೆದರೆ ಅವನು ಸೋತಿದ್ದೇನೆಂದು ಅಥವಾ ನಿನ್ನ ಮಾತಿನಂತೆ ಮಾಡುತ್ತೇನೆ ಎಂದು ಹೇಳುತ್ತಾನೆ. ಆಗ ಈ ಕನ್ಯೆಯ ಕಾರ್ಯವನ್ನು ಮಾಡಿಕೊಟ್ಟಾದ ಹಾಗಾಗುತ್ತದೆ ಮತ್ತು ನಿನ್ನ ಮಾತನ್ನೂ ಸತ್ಯವಾಗಿಸಿದಂತಾಗುತ್ತದೆ. ಕ್ಷತ್ರಿಯರೆಲ್ಲರನ್ನೂ ಗೆದ್ದು ನೀನು ಬ್ರಾಹ್ಮಣರಿಗೆ ಕೇಳಿಸುವಂತೆ ನೀನು ಈ ಪ್ರತಿಜ್ಞೆಯನ್ನೂ ಮಾಡಿದ್ದೆ. ರಣದಲ್ಲಿ ಬ್ರಾಹ್ಮಣನಾಗಲೀ, ಕ್ಷತ್ರಿಯನಾಗಲೀ, ವೈಶ್ಯನಾಗಲೀ, ಶೂದ್ರನಾಗಲೀ ಬ್ರಹ್ಮದ ವಿರುದ್ಧರಾದವರನ್ನು ಕೊಲ್ಲುತ್ತೇನೆ ಎಂದು. ಜೀವದ ಆಸೆಯಿಂದ ಭೀತರಾಗಿ ಶರಣು ಬಂದ ಪ್ರಪನ್ನರನ್ನು ನಾನು ಜೀವಂತವಿರುವಾಗ ಎಂದೂ ಪರಿತ್ಯಜಿಸಲಾರೆ. ಯಾರಾದರೂ ರಣದಲ್ಲಿ ಸೇರಿರುವ ಎಲ್ಲ ಕ್ಷತ್ರಿಯರನ್ನು ಜಯಿಸಿದರೂ ಆ ಸೊಕ್ಕಿನವನನ್ನು ನಾನು ಕೊಲ್ಲುತ್ತೇನೆ ಎಂದು. ಇದೇ ರೀತಿ ಕುರುಕುಲೋದ್ವಹ ಭೀಷ್ಮನು ವಿಜಯವನ್ನು ಸಾಧಿಸಿದ್ದಾನೆ. ಸಂಗ್ರಾಮದದಲ್ಲಿ ಅವನನ್ನು ಎದುರಿಸಿ ಯುದ್ಧ ಮಾಡು!”
ರಾಮನು ಹೇಳಿದನು: “ಋಷಿಸತ್ತಮ! ಹಿಂದೆ ಮಾಡಿದ ಪ್ರತಿಜ್ಞೆಯನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ಸಾಮದಿಂದ ಏನು ದೊರೆಯುತ್ತದೆಯೋ ಅದನ್ನು ಮಾಡುತ್ತೇನೆ. ಕಾಶಿಕನ್ಯೆಯ ಮನಸ್ಸಿನಲ್ಲಿರುವುದು ಮಹಾ ಕಾರ್ಯವು. ಕನ್ಯೆಯನ್ನು ಕರೆದುಕೊಂಡು ಸ್ವಯಂ ನಾನೇ ಅವನಿರುವಲ್ಲಿಗೆ ಹೋಗುತ್ತೇನೆ. ಒಂದುವೇಳೆ ರಣಶ್ಲಾಘೀ ಭೀಷ್ಮನು ನನ್ನ ಮಾತಿನಂತೆ ಮಾಡದಿದ್ದರೆ ಆ ಉದ್ರಿಕ್ತನನ್ನು ಕೊಲ್ಲುತ್ತೇನೆ. ಇದು ನನ್ನ ನಿಶ್ಚಯ. ಏಕೆಂದರೆ ನಾನು ಬಿಟ್ಟ ಬಾಣಗಳು ಶರೀರಿಗಳ ದೇಹವನ್ನು ಹೊಗುವುದಿಲ್ಲ. ಇದನ್ನು ನೀನು ಹಿಂದೆ ಕ್ಷತ್ರಿಯರೊಂದಿಗಿನ ಸಂಗರದಲ್ಲಿ ತಿಳಿದುಕೊಂಡಿದ್ದೀಯೆ.”
ಹೀಗೆ ಹೇಳಿ ರಾಮನು ಮಹಾಮನಸ್ವಿ ಬ್ರಹ್ಮವಾದಿಗಳೊಂದಿಗೆ ಪ್ರಯಾಣದ ಮನಸ್ಸು ಮಾಡಿ ಮೇಲೆದ್ದನು. ರಾತ್ರಿಯನ್ನು ಅಲ್ಲಿಯೇ ಕಳೆದು, ತಾಪಸರು ಅಗ್ನಿಗಳಲ್ಲಿ ಆಹುತಿಗಳನ್ನಿತ್ತು, ಜಪಗಳನ್ನು ಜಪಿಸಿ, ಭೀಷ್ಮನನ್ನು ಕೊಲ್ಲಲೋಸುಗ ಹೊರಟರು. ಆಗ ರಾಮನು ಆ ಬ್ರಾಹ್ಮಣರ್ಷಭರೊಂದಿಗೆ ಮತ್ತು ಕನ್ಯೆಯೊಂದಿಗೆ ಕುರುಕ್ಷೇತ್ರಕ್ಕೆ ಆಗಮಿಸಿದನು. ಮಹಾತ್ಮ ಭೃಗುಶ್ರೇಷ್ಠನ ನಾಯಕತ್ವದಲ್ಲಿ ಎಲ್ಲ ತಾಪಸರೂ ಸರಸ್ವತೀ ತೀರದಲ್ಲಿ ಬೀಡುಬಿಟ್ಟರು.
ಪರಶುರಾಮ-ಭೀಷ್ಮರ ಸಂವಾದ
ಸಮ ಪ್ರದೇಶದಲ್ಲಿ ನೆಲೆಸಿದ ಮೂರನೆಯ ದಿವಸದಲ್ಲಿ ಆ ಮಹಾವ್ರತನು ತಾನು ಬಂದಿದ್ದೇನೆ ಎಂದು ಸಂದೇಶವನ್ನು ಭೀಷ್ಮನಿಗೆ ಕಳುಹಿಸಿದನು. ತನ್ನ ದೇಶದ ಗಡಿಗೆ ಆ ಮಹಾಬಲ ತೇಜೋನಿಧಿ ಪ್ರಭುವು ಬಂದಿದ್ದಾನೆಂದು ಕೇಳಿ ಭೀಷ್ಮನು ಪ್ರೀತಿಯಿಂದ ಗೋವುಗಳನ್ನು ಮುಂದಿರಿಸಿಕೊಂಡು ಬ್ರಾಹ್ಮಣರು, ಮತ್ತು ದೇವಕಲ್ಪ ಋತ್ವಿಗರು ಹಾಗೂ ಪುರೋಹಿತರಿಂದ ಸುತ್ತುವರೆಯಲ್ಪಟ್ಟು ಅವನಲ್ಲಿಗೆ ಹೋದನು. ಅವನು ಬಂದಿದುದನ್ನು ನೋಡಿ ಪ್ರತಾಪವಾನ್ ಜಾಮದಗ್ನಿಯು ಆ ಪೂಜೆಯನ್ನು ಸ್ವೀಕರಿಸಿ ಈ ಮಾತುಗಳನ್ನಾಡಿದನು: “ಭೀಷ್ಮ! ಯಾವ ಬುದ್ಧಿಯನ್ನು ಬಳಸಿ ನೀನು ಮೊದಲು ಬಯಸದೇ ಇದ್ದ ಕಾಶಿರಾಜಸುತೆಯನ್ನು ಕರೆದುಕೊಂಡು ಹೋದೆ, ಮತ್ತು ನಂತರ ಅವಳನ್ನು ವಿಸರ್ಜಿಸಿದೆ? ನಿನ್ನ ಕಾರಣದಿಂದ ಇವಳು ಧರ್ಮದ ಮೇಲ್ಮಟ್ಟದಿಂದ ಕೀಳುಮಟ್ಟಕ್ಕೆ ತಳ್ಳಲ್ಪಟ್ಟಿದ್ದಾಳೆ. ಏಕೆಂದರೆ ನಿನ್ನಿಂದ ಮುಟ್ಟಲ್ಪಟ್ಟ ಇವಳೊಂದಿಗೆ ಯಾರು ತಾನೇ ಹೋಗಲು ಬರುತ್ತದೆ? ನಿನ್ನಿಂದ ಕರೆದುಕೊಂಡು ಹೋದವಳೆಂದು ಶಾಲ್ವನೂ ಕೂಡ ಇವಳನ್ನು ಹಿಂದೆ ಕಳುಹಿಸಿದ್ದಾನೆ. ಆದುದರಿಂದ ನನ್ನ ನಿಯೋಗದಂತೆ ಇವಳನ್ನು ನೀನು ಸ್ವೀಕರಿಸು. ಈ ರಾಜಪುತ್ರಿಯು ಸ್ವಧರ್ಮವನ್ನು ಪಡೆಯಲಿ. ರಾಜನಾದ ನೀನು ಇವಳನ್ನು ಅಪಮಾನಿಸುವುದು ಸರಿಯಲ್ಲ.
ಅವನು ತುಂಬಾ ಕುಪಿತನಾಗಿಲ್ಲವೆಂದು ಗ್ರಹಿಸಿ ಭೀಷ್ಮನು ಹೇಳಿದನು: “ಬ್ರಹ್ಮನ್! ಇವಳನ್ನು ನಾನು ಪುನಃ ನನ್ನ ತಮ್ಮನಿಗೆ ಏನು ಮಾಡಿದರೂ ಕೊಡಲಾರೆ. ಇವಳು ಮೊದಲು “ನಾನು ಶಾಲ್ವನವಳು” ಎಂದು ನನಗೆ ಹೇಳಿದಳು. ಆದರ ನಂತರವೇ ನಾನು ಸೌಭಪುರಕ್ಕೆ ಹೋಗಲು ಅನುಮತಿಯನ್ನು ಕೂಡ ಕೊಟ್ಟೆ. ಭಯದಿಂದಾಗಲೀ, ಅನುಕ್ರೋಷದಿಂದಾಗಲೀ, ಅರ್ಥ-ಕಾಮಗಳ ಲೋಭದಿಂದಾಗಲೀ ಕ್ಷತ್ರ ಧರ್ಮವನ್ನು ತೊರೆಯುವುದಿಲ್ಲ. ಇದು ನಾನು ನಡೆಸಿಕೊಂಡು ಬಂದಿರುವ ವ್ರತ.”
ಆಗ ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ರಾಮನು ಭೀಷ್ಮನಿಗೆ “ಕುರುಪುಂಗವ! ನನ್ನ ಮಾತಿನಂತೆ ಮಾಡದೇ ಇದ್ದರೆ ಇಂದೇ ಅಮಾತ್ಯರೊಂದಿಗೆ ನಿನ್ನನ್ನು ಕೊಲ್ಲುತ್ತೇನೆ” ಎಂದು ಪುನಃ ಪುನಃ ಹೇಳಿದನು.
ರಾಮನು ಹೀಗೆ ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ಆವೇಶದಲ್ಲಿ ಹೇಳಿದನು. ಭೀಷ್ಮನು ಪುನಃ ಪುನಃ ಆ ಅರಿಂದಮನನ್ನು ಪ್ರೀತಿಯ ಮಾತುಗಳಿಂದ ಯಾಚಿಸಿದನು. ಆದರೂ ಭೃಗುಶಾರ್ದೂಲನು ಶಾಂತನಾಗಲಿಲ್ಲ.
ಆಗ ಭೀಷ್ಮನು ಆ ಬ್ರಾಹ್ಮಣಸತ್ತಮನಿಗೆ ಇನ್ನೊಮ್ಮೆ ಶಿರಸಾ ನಮಸ್ಕರಿಸಿ ಕೇಳಿದನು: “ಯಾವ ಕಾರಣಕ್ಕಾಗಿ ನೀನು ನನ್ನೊಡನೆ ಯುದ್ಧ ಮಾಡಲು ಬಯಸುತ್ತೀಯೆ?
ಮಹಾಬಾಹೋ! ಬಾಲಕನಾಗಿರುವಾಗಲೇ ನನಗೆ ಚತುರ್ವಿಧದ ಅಸ್ತ್ರಗಳನ್ನು ನೀನು ಉಪದೇಶಿಸಿದ್ದೆ. ನಾನು ನಿನ್ನ ಶಿಷ್ಯ ಭಾರ್ಗವ!”
ಆಗ ರಾಮನು ಕ್ರೋಧದಿಂದ ರಕ್ತಲೋಚನನಾಗಿ ಅವನಿಗೆ ಹೇಳಿದನು: “ಭೀಷ್ಮ! ನಾನು ನಿನ್ನ ಗುರುವೆಂದು ನೀನು ತಿಳಿದಿದ್ದೀಯೆ. ಆದರೂ ನೀನು ನನ್ನ ಪ್ರೀತಿಗಾಗಿ ಈ ಕಾಶಿಸುತೆಯನ್ನು ಹಿಂದೆ ತೆಗೆದುಕೊಳ್ಳುತ್ತಿಲ್ಲವಲ್ಲ! ಅನ್ಯಥಾ ನಿನಗೆ ಶಾಂತಿಯಿಲ್ಲವೆಂದು ತಿಳಿದುಕೋ! ಇವಳನ್ನು ಸ್ವೀಕರಿಸಿ ನಿನ್ನ ಕುಲವನ್ನು ರಕ್ಷಿಸು. ನಿನ್ನಿಂದ ಕೀಳುಸ್ಥಾನಕ್ಕೆ ತಳ್ಳಲ್ಪಟ್ಟ ಅವಳು ಭರ್ತಾರನನ್ನು ಪಡೆಯುವುದಿಲ್ಲ.”
ಹೀಗೆ ಹೇಳುತ್ತಿರುವ ಪರಪುರಂಜಯ ರಾಮನಿಗೆ ಭೀಷ್ಮನು ಹೇಳಿದನು: “ಬ್ರಹ್ಮರ್ಷೇ! ಇದು ಹೀಗೆ ಆಗುವುದೇ ಇಲ್ಲ. ನೀನು ಏಕೆ ಸುಮ್ಮನೆ ಶ್ರಮಪಡುತ್ತೀಯೆ? ನನ್ನ ಪುರಾತನ ಗುರುವೆಂದು ನಿನ್ನಲ್ಲಿ ಪ್ರಸಾದವನ್ನು ಬೇಡುತ್ತಿದ್ದೇನೆ. ಇವಳನ್ನು ನಾನು ಹಿಂದೆಯೇ ತ್ಯಜಿಸಿಯಾಗಿದೆ. ಸ್ತ್ರೀಯರ ಮಹಾದೋಷಗಳನ್ನು ತಿಳಿದಿರುವ ಯಾರುತಾನೇ ಇನ್ನೊಬ್ಬನಲ್ಲಿ ಪ್ರೀತಿಯನ್ನಿಟ್ಟುಕೊಂಡಿರುವವಳನ್ನು ಹಾವಿನಂತೆ ತನ್ನ ಮನೆಯಲ್ಲಿ ಇರಿಸಿಕೊಳ್ಳುತ್ತಾನೆ? ವಾಸವನ ಭಯದಿಂದಲೂ ನಾನು ಧರ್ಮವನ್ನು ತೊರೆಯುವುದಿಲ್ಲ ನನ್ನ ಮೇಲೆ ಕರುಣೆ ತೋರು. ಅಥವಾ ನನಗೇನು ಮಾಡಬೇಕೋ ಅದನ್ನು ಬೇಗನೇ ಮಾಡು. ಮಹಾಬುದ್ಧಿ ಮಹಾತ್ಮ ಮರುತ್ತನು ಪುರಾಣಗಳಲ್ಲಿ ಈ ಗೀತ ಶ್ಲೋಕವನ್ನು ಹೇಳಿದ್ದಾನೆ: “ಗುರುವು ಬಯಸಿದುದನ್ನು ಮಾಡಬೇಕು. ಅವನು ತಿಳಿಯದೇ ಇದ್ದಿರಬಹುದು. ತಪ್ಪು-ಸರಿಗಳನ್ನು ಅರಿಯದೇ ಇದ್ದಿರಬಹುದು. ಅಥವಾ ಧರ್ಮದ ದಾರಿಯನ್ನು ತಪ್ಪಿರಬಹುದು.” ನೀನು ಗುರುವೆಂಬ ಪ್ರೇಮದಿಂದ ನಾನು ನಿನ್ನನ್ನು ತುಂಬಾ ಸಮ್ಮಾನಿಸುತ್ತೇನೆ. ಗುರುವಿನ ನಡತೆಯು ನಿನಗೆ ತಿಳಿದಿಲ್ಲ. ಆದುದರಿಂದ ನಾನು ನಿನ್ನೊಂದಿಗೆ ಯುದ್ಧ ಮಾಡುತ್ತೇನೆ. ಆದರೆ ಸಮರದಲ್ಲಿ ಗುರುವನ್ನು, ಅದರಲ್ಲೂ ವಿಶೇಷವಾಗಿ ಬ್ರಾಹ್ಮಣನನ್ನು, ನಾನು ಕೊಲ್ಲುವುದಿಲ್ಲ. ತಪೋವೃದ್ಧನಾದ ನಿನ್ನಲ್ಲಿ ನನಗೆ ವಿಶೇಷವಾದ ಕ್ಷಾಂತಿಯಿದೆ. ಆದರೆ ಆಯುಧವನ್ನು ಹಿಡಿದೆತ್ತಿ ಹೋರಾಡುವ ಅಥವಾ ಯುದ್ಧದಲ್ಲಿ ಪಲಾಯನ ಮಾಡದೇ ಇದ್ದ ಬ್ರಾಹ್ಮಣನನ್ನು ಕ್ಷತ್ರಿಯನಾದವನು ಕೊಂದರೆ ಅವನಿಗೆ ಬ್ರಹ್ಮಹತ್ಯಾ ದೋಷವಿಲ್ಲವೆಂದು ಧರ್ಮನಿಶ್ಚಯವಿದೆ. ಕ್ಷತ್ರಿಯರ ಧರ್ಮದಲ್ಲಿರುವ ಕ್ಷತ್ರಿಯನು ನಾನು. ಇನ್ನೊಬ್ಬನು ಹೇಗೆ ವರ್ತಿಸುತ್ತಾನೋ ಅದರ ಪ್ರಕಾರ ಪ್ರವರ್ತಿಸಿದರೆ ಅವನು ಅಧರ್ಮವನ್ನು ಪಡೆಯುವುದಿಲ್ಲ. ಅಂಥಹ ನರನು ಶ್ರೇಯಸ್ಸನ್ನು ಪಡೆಯುತ್ತಾನೆ. ಅರ್ಥ, ಧರ್ಮ, ಅಥವಾ ದೇಶಕಾಲಗಳಲ್ಲಿ ಸಮರ್ಥನಾದವನು ಅವನಿಗಾಗುವ ಲಾಭಗಳ ಕುರಿತು ಸಂಶಯವಿದ್ದರೆ ಆ ಸಂಶಯವನ್ನು ಹೋಗಲಾಡಿಸಿಕೊಂಡರೆ ಒಳ್ಳೆಯದು. ಅಸಂಶಯವಾಗಿದ್ದುದನ್ನು ನ್ಯಾಯವೆಂದು ನಿರ್ಣಯಿಸಿ ನೀನು ವರ್ತಿಸುತ್ತಿರುವುದರಿಂದ ನಾನು ನಿನ್ನೊಂದಿಗೆ ಮಹಾರಣದಲ್ಲಿ ಯುದ್ಧಮಾಡುತ್ತೇನೆ. ನನ್ನ ಬಾಹುವೀರ್ಯವನ್ನೂ ಅತಿಮಾನುಷ ವಿಕ್ರಮವನ್ನೂ ನೋಡು! ಇಲ್ಲಿಯ ವರೆಗೆ ಬಂದೂ ನನಗೆ ಏನು ಶಕ್ಯವಾಗುತ್ತದೆಯೋ ಅದನ್ನು ಮಾಡುತ್ತೇನೆ. ನಿನ್ನೊಂದಿಗೆ ಕುರುಕ್ಷೇತ್ರದಲ್ಲಿ ಹೋರಾಡುತ್ತೇನೆ. ಇಷ್ಟವಾದಷ್ಟೂ ದ್ವಂದ್ವಯುದ್ಧ ಮಾಡು! ಸಿದ್ಧನಾಗು! ಅಲ್ಲಿ ನಿನ್ನನ್ನು ಕೊಲ್ಲುತ್ತೇನೆ. ನನ್ನ ನೂರಾರು ಶರಗಳಿಂದ ಹೊಡೆಯಲ್ಪಟ್ಟು ಮಹಾರಣದಲ್ಲಿ ನನ್ನ ಶಸ್ತ್ರಗಳಿಂದ ಪುನೀತನಾಗಿ ಗೆದ್ದ ಲೋಕಗಳನ್ನು ಸೇರುತ್ತೀಯೆ! ಆದುದರಿಂದ ಹೋಗಿ ಕುರುಕ್ಷೇತ್ರಕ್ಕೆ ಹಿಂದಿರುಗು. ಅಲ್ಲಿಯೇ ನಿನ್ನನ್ನು ಯುದ್ಧದಲ್ಲಿ ಭೇಟಿಯಾಗುತ್ತೇನೆ. ಹಿಂದೆ ಎಲ್ಲಿ ನೀನು ನಿನ್ನ ಪಿತೃಗಳಿಗೆ ಪವಿತ್ರವಾಗಿದ್ದೆಯೋ ಅಲ್ಲಿಯೇ ನಿನ್ನನ್ನು ಕೊಂದು ನಾನು ಶೌಚವನ್ನು ಮಾಡುತ್ತೇನೆ. ಅಲ್ಲಿ ಬೇಗ ಹೋಗು. ಹಿಂದಿನಿಂದ ನಿನಗಿರುವ ಈ ಬ್ರಾಹ್ಮಣನೆಂಬ ದರ್ಪವನ್ನು ಕಳೆಯುತ್ತೇನೆ. ನಾನೊಬ್ಬನೇ ಲೋಕದ ಕ್ಷತ್ರಿಯರನ್ನು ಸೋಲಿಸಿದೆ ಎಂದು ಬಹಳಷ್ಟು ಪರಿಷತ್ತುಗಳಲ್ಲಿ ಕೊಚ್ಚಿಕೊಳ್ಳುತ್ತಾ ಬಂದಿದ್ದೀಯೆ! ನನ್ನನ್ನು ಕೇಳು! ಆ ಸಮಯದಲ್ಲಿ ಭೀಷ್ಮನು ಹುಟ್ಟಿರಲಿಲ್ಲ. ಅಥವಾ ಯುದ್ಧದಲ್ಲಿ ನಿನಗಿರುವ ದರ್ಪ ಮತ್ತು ಆಸೆಯನ್ನು ಕಳೆಯುವ ನನ್ನಂಥಹ ಕ್ಷತ್ರಿಯನೂ ಕೂಡ ಇರಲಿಲ್ಲ. ಈಗ ನಾನು - ಪರಪುರಂಜಯ ಭೀಷ್ಮನು - ಹುಟ್ಟಿದ್ದೇನೆ. ಯುದ್ಧದಲ್ಲಿ ನಿನ್ನ ದರ್ಪವನ್ನು ಮುರಿಯುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”
ಪರಶುರಾಮ-ಭೀಷ್ಮರು ಕುರುಕ್ಷೇತ್ರದಲ್ಲಿ ಯುದ್ಧಕ್ಕೆ ಅಣಿಯಾದುದು
ಆಗ ರಾಮನು ನಗುತ್ತಾ ಭೀಷ್ಮನಿಗೆ ಹೇಳಿದನು: “ಭೀಷ್ಮ! ಒಳ್ಳೆಯದಾಯಿತು! ನನ್ನೊಡನೆ ಸಂಗರದಲ್ಲಿ ಯುದ್ಧಮಾಡಲು ಇಚ್ಛಿಸುತ್ತಿದ್ದೀಯೆ. ನಾನು ನಿನ್ನೊಂದಿಗೆ ಕುರುಕ್ಷೇತ್ರಕ್ಕೆ ಹೋಗುತ್ತೇನೆ. ಹೇಳಿದಂತೆ ಮಾಡುತ್ತೇನೆ. ನೀನೂ ಕೂಡ ಅಲ್ಲಿಗೆ ಹೋಗು! ಅಲ್ಲಿ ನನ್ನ ನೂರಾರು ಶರಗಳ ಚಿತೆಯ ಮೇಲೆ ನೀನು ನನ್ನಿಂದ ಕೊಲ್ಲಲ್ಪಟ್ಟು ಹದ್ದು, ಬಕ ಮತ್ತು ಕಾಗೆಗಳಿಗೆ ಆಹಾರವಾಗುವುದನ್ನು ನಿನ್ನ ತಾಯಿ ಜಾಹ್ನವಿಯು ನೋಡಲಿ! ನನ್ನಿಂದ ಕೊಲ್ಲಲ್ಪಟ್ಟು ಕೃಪಣನಾಗಿರುವ ನಿನ್ನನ್ನು ನೋಡಿ ಸಿದ್ಧಚಾರಣಸೇವಿತೆ ದೇವಿಯು ಇಂದು ರೋದಿಸಲಿ! ಯುದ್ಧಕಾಮುಕನಾದ, ಆತುರನಾದ, ಬುದ್ಧಿಯಿಲ್ಲದ ನಿನ್ನಂತವನನ್ನು ಜೀವಂತ ನೋಡಲು ಮಹಾಭಾಗೆ ನದೀ ಭಗೀರಥಸುತೆಯು ಅರ್ಹಳಲ್ಲ. ಬಾ! ನನ್ನೊಂದಿಗೆ ನಡೆ! ಇದೇ ಆ ಯುದ್ಧವು ನಡೆಯಲಿ! ರಥಾದಿ ಸರ್ವವನ್ನೂ ತೆಗೆದುಕೊಂಡು ಬಾ!”
ಹೀಗೆ ಹೇಳಲು ಭೀಷ್ಮನು ಪರಪುರಂಜಯ ರಾಮನಿಗೆ ಶಿರಸಾ ನಮಸ್ಕರಿಸಿ ಹಾಗೆಯೇ ಆಗಲಿ ಎಂದನು. ಹೀಗೆ ಹೇಳಿ ರಾಮನು ಯುದ್ಧೋತ್ಸುಕನಾಗಿ ಕುರುಕ್ಷೇತ್ರಕ್ಕೆ ಹೋದನು. ಭೀಷ್ಮನು ನಗರವನ್ನು ಪ್ರವೇಶಿಸಿ ಸತ್ಯವತಿಗೆ ನಿವೇದಿಸಿ, ತಾಯಿಯನ್ನು ನಮಸ್ಕರಿಸಿದನು. ಸ್ವಸ್ತಿ ಅಯನಗಳನ್ನು ಪೂರೈಸಿದನು. ದ್ವಿಜಾತಿಯವರು ಪುಣ್ಯಾಹ ಸ್ವಸ್ತಿಗಳನ್ನು ವಾಚಿಸಿದರು. ಬಿಳಿಯ ಕುದುರೆಗಳನ್ನು ಕಟ್ಟಿದ್ದ, ಎಲ್ಲ ಅನುಕೂಲಗಳನ್ನು ಹೊಂದಿದ್ದ, ದೃಢವಾಗಿ ಕಟ್ಟಲ್ಪಟ್ಟಿದ್ದ, ಹುಲಿಯ ಚರ್ಮವನ್ನು ಹೊದಿಸಿದ್ದ, ಮಹಾಶಸ್ತ್ರಗಳು ಮತ್ತು ಸರ್ವ ಉಪಕರಣಗಳಿಂದ ಕೂಡಿದ್ದ, ಸುಂದರ ಬೆಳ್ಳಿಯ ರಥವನ್ನೇರಿದನು. ಅದನ್ನು ವೀರ, ಕುಲೀನ, ಹಯಶಾಸ್ತ್ರವಿಶಾರದನಾದ, ಶಿಷ್ಟ, ಬಹಳಷ್ಟು ಯುದ್ಧಗಳನ್ನು ನೋಡಿದ್ದ ಸೂತನು ನಡೆಸುತ್ತಿದ್ದನು. ಭೀಷ್ಮನು ಬಿಳಿಯ ಬಂಗಾರದ ಕವಚವನ್ನು ಧರಿಸಿದ್ದನು. ಬಿಳಿಯ ಧನುಸ್ಸನ್ನೂ ಹಿಡಿದು ಹೊರಟನು. ಬಿಳಿಯ ಕೊಡೆಯನ್ನು ಅವನ ನೆತ್ತಿಯ ಮೇಲೆ ಹಿಡಿಯಲಾಗಿತ್ತು. ಬಿಳಿಯ ಚಾಮರಗಳನ್ನೂ ಬೀಸುತ್ತಿದ್ದರು. ಅವನ ಬಟ್ಟೆ ಬಿಳಿಯಾಗಿತ್ತು, ಕಿರೀಟವು ಬಿಳಿಯಾಗಿತ್ತು ಮತ್ತು ಸರ್ವ ಆಭರಣಗಳು ಬಿಳಿಯವಾಗಿದ್ದವು. ಜಯದ ಕುರಿತು ಆಶೀರ್ವಚನಗಳನ್ನು ಸ್ತುತಿಸುತ್ತಿರಲು ಭೀಷ್ಮನು ಗಜಸಾಹ್ವಯದಿಂದ ಹೊರಟು ರಣಕ್ಷೇತ್ರ ಕುರುಕ್ಷೇತ್ರಕ್ಕೆ ಬಂದನು. ಮನಸ್ಸು ಮಾರುತಗಳ ವೇಗವನ್ನು ಹೊಂದಿದ್ದ ಆ ಕುದುರೆಗಳು ಸೂತನಿಂದ ಚೋದಿತರಾಗಿ ಅವನನ್ನು ಆ ಪರಮ ಯುದ್ಧಕ್ಕೆ ಕರೆತಂದವು. ಆಗ ಭೀಷ್ಮ ಮತ್ತು ಪ್ರತಾಪವಾನ್ ರಾಮ ಇಬ್ಬರೂ ಪರಸ್ಪರರ ಪರಾಕ್ರಾಂತರಾಗಿ ಯುದ್ಧಕ್ಕೆ ಕಾತರರಾಗಿ ಕುರುಕ್ಷೇತ್ರಕ್ಕೆ ಬಂದರು. ಆ ಅತಿತಪಸ್ವಿನಿ ರಾಮನನ್ನು ನೋಡಿದಾಗ ಭೀಷ್ಮನು ತನ್ನ ಶಂಖಪ್ರವರವನ್ನು ಹಿಡಿದು ಜೋರಾಗಿ ಊದಿದನು. ಆಗ ಅಲ್ಲಿ ರಣದಲ್ಲಿ ದ್ವಿಜರು, ತಾಪಸರು, ವನೌಕಸರು ಮತ್ತು ಆಕಾಶದಲ್ಲಿ ಋಷಿಗಣಗಳೊಂದಿಗೆ ದೇವತೆಗಳು ಕಂಡುಬಂದರು. ಹಾಗೆಯೇ ದಿವ್ಯ ಮಾಲೆಗಳೂ, ದಿವ್ಯವಾದ್ಯಗಳು, ಮೇಘವೃಂದಗಳು ಮತ್ತೆ ಮತ್ತೆ ಕೇಳಿಬಂದವು. ಆಗ ಭಾರ್ಗವನನ್ನು ಹಿಂಬಾಲಿಸಿ ಬಂದಿದ್ದ ತಾಪಸರೆಲ್ಲರೂ ರಣವನ್ನು ಸುತ್ತುವರೆದು ಪ್ರೇಕ್ಷಕರಾದರು. ಸರ್ವಭೂತಹಿತೈಷಿಣೀ ಮಾತಾ ದೇವಿಯು ಕಾಣಿಸಿಕೊಂಡು ಭೀಷ್ಮನಿಗೆ ಹೇಳಿದಳು: “ರಾಜನ್! ಇದೇನು ಮಾಡುತ್ತಿರುವೆ? ನಾನು ಜಾಮದಗ್ನಿಗೆ ಹೋಗಿ ಪುನಃ ಪುನಃ ಕೇಳಿಕೊಳ್ಳುತ್ತೇನೆ - ಭೀಷ್ಮನೊಂದಿಗೆ ಯುದ್ಧಮಾಡಬೇಡ! ಅವನು ನಿನ್ನ ಶಿಷ್ಯ” ಎಂದು. ಪುತ್ರ! ವಿಪ್ರನಿಗೆ ನಿರ್ಬಂಧಗಳನ್ನು ಮಾಡಬೇಡ. ಜಾಮದಗ್ನಿಯೊಡನೆ ಸಮರದಲ್ಲಿ ಯುದ್ಧಮಾಡಬೇಡ!” ಎಂದು ಭೀಷ್ಮನನ್ನು ಬೈದಳು. “ಈ ಕ್ಷತ್ರಿಯಹರನು ಹರತುಲ್ಯಪರಾಕ್ರಮಿಯೆಂದು ನಿನಗೆ ತಿಳಿದಿಲ್ಲವೇ? ಅಂತಹ ರಾಮನೊಂದಿಗೆ ನೀನು ಯುದ್ಧಮಾಡಲು ಇಚ್ಛಿಸುತ್ತಿರುವೆಯಲ್ಲ?”
ಆಗ ಭೀಷ್ಮನು ಕೈಮುಗಿದು ನಮಸ್ಕರಿಸಿ ದೇವಿಗೆ ಸ್ವಯಂವರದಲ್ಲಿ ನಡೆದುದೆಲ್ಲವನ್ನೂ ಮತ್ತು ಹೇಗೆ ಅವನು ಮೊದಲು ರಾಮನ ಕರುಣೆಯನ್ನು ಯಾಚಿಸಿದ್ದ ಎನ್ನುವುದನ್ನೂ, ಹಿಂದೆ ಕಾಶಿರಾಜಸುತೆಯು ಮಾಡಿದುದೆಲ್ಲವನ್ನೂ ಹೇಳಿದನು. ಆಗ ಅವನ ಜನನಿ ಮಹಾನದಿಯು ರಾಮನ ಬಳಿ ಹೋದಳು. ಆ ದೇವಿಯು ಭೀಷ್ಮನಿಗೋಸ್ಕರವಾಗಿ ಋಷಿ ಭಾರ್ಗವನಲ್ಲಿ ಕ್ಷಮೆಯನ್ನು ಕೇಳಿಕೊಂಡಳು. “ಶಿಷ್ಯನಾದ ಭೀಷ್ಮನೊಂದಿಗೆ ಯುದ್ಧಮಾಡಬೇಡ” ಎಂದೂ ಹೇಳಿದಳು. ಆಗ ಅವನು ಯಾಚಿಸುತ್ತಿರುವ ಅವಳಿಗೆ ಹೇಳಿದನು: “ಭೀಷ್ಮನನ್ನೇ ಹಿಂದಿರುಗುವಂತೆ ಮಾಡು! ನನಗೆ ಬೇಕಾದುದನ್ನು ಅವನು ಮಾಡುತ್ತಿಲ್ಲ! ಆದುದರಿಂದಲೇ ಇಲ್ಲಿಗೆ ಬಂದಿದ್ದೇವೆ.”
ಆಗ ಗಂಗೆಯು ಮಗನ ಮೇಲಿನ ಪ್ರೀತಿಯಿಂದ ಪುನಃ ಭೀಷ್ಮನಲ್ಲಿಗೆ ಬಂದಳು. ಆಗ ಅವನು ಕ್ರೋಧದಿಂದ ಕಣ್ಣುಗಳನ್ನು ತಿರುಗಿಸಿ ಅವಳ ಮಾತಿನಂತೆ ಮಾಡಲಿಲ್ಲ. ಆಗ ಧರ್ಮಾತ್ಮ ಭೃಗುಶ್ರೇಷ್ಠ ಮಹಾತಪಸ್ವಿ ದ್ವಿಜಸತ್ತಮನು ಕಾಣಿಸಿಕೊಂಡು ಪುನಃ ಯುದ್ಧಕ್ಕೆ ಆಹ್ವಾನಿಸಿದನು.
ಪರಶುರಾಮ-ಭೀಷ್ಮರ ಯುದ್ಧ
ರಣದಲ್ಲಿ ನಿಂತಿದ್ದ ಅವನಿಗೆ ಭೀಷ್ಮನು ನಗುತ್ತಾ ಹೇಳಿದನು: “ರಥದ ಮೇಲೆ ನಿಂತು ನೆಲದ ಮೇಲೆ ನಿಂತಿರುವ ನಿನ್ನೊಂದಿಗೆ ಯುದ್ಧಮಾಡಲು ಉತ್ಸಾಹವಾಗುತ್ತಿಲ್ಲ. ರಣದಲ್ಲಿ ನನ್ನೊಂದಿಗೆ ಯುದ್ಧಮಾಡಲು ಬಯಸುವೆಯಾದರೆ ರಥವನ್ನೇರು! ಕವಚವನ್ನು ಧರಿಸು!”
ಆಗ ಆ ರಣದಲ್ಲಿ ರಾಮನು ನಗುತ್ತಾ ಭೀಷ್ಮನಿಗೆ ಹೇಳಿದನು: “ಭೀಷ್ಮ! ಮೇದಿನಿಯೇ ನನ್ನ ರಥ. ವೇದಗಳು ನಡೆಸುವ ಅಶ್ವಗಳಂತೆ. ಗಾಳಿಯು ನನ್ನ ಸಾರಥಿ. ವೇದಮಾತರೆಯು ನನ್ನ ಕವಚ. ಇವುಗಳಿಂದ ಸುರಕ್ಷಿತನಾಗಿ ನಾನು ರಣದಲ್ಲಿ ನಿನ್ನೊಂದಿಗೆ ಯುದ್ಧ ಮಾಡುತ್ತೇನೆ.”
ಹೀಗೆ ಹೇಳಿ ಸತ್ಯವಿಕ್ರಮಿ ರಾಮನು ಭೀಷ್ಮನನ್ನು ಮಹಾ ಶರಗಳ ಮಳೆಯಿಂದ ಎಲ್ಲ ಕಡೆಯಿಂದಲೂ ಮುಚ್ಚಿದನು. ಆಗ ಭೀಷ್ಮನು ಜಾಮದಗ್ನ್ಯನನ್ನು ದಿವ್ಯ ರಥದ ಮೇಲೆ ಸರ್ವಾಯುಧಧರನಾಗಿ, ಶ್ರೀಮತ್ ಅದ್ಭುತ ಸುಂದರನಾಗಿ ವ್ಯವಸ್ಥಿತನಾಗಿದ್ದುದು ಕಂಡುಬಂದಿತು. ಅವನ ಪುಣ್ಯ ಮನಸ್ಸಿನಿಂದ ನಿರ್ಮಿಸಿದ ರಥವು ನಗರದಂತೆ ವಿಸ್ತೀರ್ಣವಾಗಿತ್ತು. ಕಾಂಚನಗಳಿಂದ ವಿಭೂಷಿತರಾದ ದಿವ್ಯಾಶ್ವಗಳನ್ನು ಕಟ್ಟಲಾಗಿತ್ತು. ಸನ್ನದ್ಧವಾಗಿತ್ತು. ಆ ಮಹಾಬಾಹುವುವಿನ ಧ್ವಜವು ಸೋಮಾಲಂಕೃತ ಲಕ್ಷಣದ್ದಾಗಿತ್ತು. ಆ ಧನುರ್ಧರನು ತೂಣೀರಗಳನ್ನು ಕಟ್ಟಿಕೊಂಡಿದ್ದನು. ಉಗುರುಗಳಿಗೆ ಗೋಧಗಳನ್ನು ಕಟ್ಟಿಕೊಂಡಿದ್ದನು. ಆ ಯೋಧನಿಗೆ ಭಾರ್ಗವನ ಅತ್ಯಂತ ಪ್ರಿಯ ಸಖ, ವೇದವಿದ ಅಕೃತವ್ರಣನು ಸಾರಥ್ಯವನ್ನು ಮಾಡುತ್ತಿದ್ದನು. ಮನಸ್ಸಿನಲ್ಲಿ ಅತೀವ ಹರ್ಷಗೊಂಡು ಭಾರ್ಗವನು ಯುದ್ಧದಲ್ಲಿ ಭೀಷ್ಮನನ್ನು ಮುಂದೆ ಬಾ ಎಂದು ಪುನಃ ಪುನಃ ಕೂಗಿ ಕರೆಯುತ್ತಿದ್ದನು. ಆಗ ಆದಿತ್ಯನಂತೆ ಬೆಳಗುತ್ತಿದ್ದ, ಅನಾದೃಷ್ಯನಾದ, ಮಹಾಬಲ ಕ್ಷತ್ರಿಯಾಂತಕ ರಾಮನನ್ನು ಭೀಷ್ಮನು ಏಕನಾಗಿ ಏಕನನ್ನು ಎದುರಿಸಿದನು. ರಾಮನು ಮೂರು ಬಾಣಗಳನ್ನು ಬಿಟ್ಟು ಅವನ ಕುದುರೆಗಳನ್ನು ತಡೆದಾಗ ಭೀಷ್ಮನು ರಥದಿಂದ ಕೆಳಗಿಳಿದು ಧನುಸ್ಸನ್ನು ಆ ಋಷಿಸತ್ತಮನ ಪಾದಗಳಲ್ಲಿಟ್ಟನು. ಆಗ ದ್ವಿಜಸತ್ತಮ ರಾಮನನ್ನು ಅರ್ಚಿಸಿ ವಿಧಿವತ್ತಾಗಿ ಅಭಿವಂದಿಸಿ ಈ ಉತ್ತಮ ವಾಕ್ಯಗಳನ್ನು ಹೇಳಿದನು: “ರಾಮ! ನನಗಿಂತ ನೀನು ವಿಶಿಷ್ಟನಾಗಿದ್ದೀಯೆ. ಮತ್ತು ಅಧಿಕನಾಗಿದ್ದೀಯೆ. ಆದರೂ ಗುರು ಧರ್ಮಶೀಲನಾದ ನಿನ್ನೊಂದಿಗೆ ಯುದ್ಧ ಮಾಡುತ್ತಿದ್ದೇನೆ. ನನಗೆ ಜಯವನ್ನು ಆಶೀರ್ವದಿಸು!”
ರಾಮನು ಹೇಳಿದನು: “ಮಹಾಬಾಹೋ! ಒಳ್ಳೆಯದನ್ನು ಬಯಸುವವನಿಗೆ ಇದೇ ಕರ್ತವ್ಯ. ತಮಗಿಂತಲೂ ವಿಶಿಷ್ಟವಾಗಿರುವವರೊಂದಿಗೆ ಯುದ್ಧಮಾಡುವವರ ಧರ್ಮವೇ ಇದು. ಈ ರೀತಿ ಬರದೇ ಇದ್ದಿದ್ದರೆ ನಾನು ನಿನ್ನನ್ನು ಶಪಿಸತ್ತಿದ್ದೆನು. ಈಗ ಹೋಗು! ನಿನ್ನಲ್ಲಿರುವ ಬಲವನ್ನು ಅವಲಂಬಿಸಿ ರಣದಲ್ಲಿ ಯುದ್ಧಮಾಡು. ಆದರೆ ನಾನು ಜಯವನ್ನು ಬಯಸುವುದಿಲ್ಲ. ಏಕೆಂದರೆ ನಿನ್ನನ್ನು ಗೆಲ್ಲಲೇ ನಾನು ಇಲ್ಲಿ ನಿಂತಿದ್ದೇನೆ. ಹೋಗು! ಧರ್ಮದಿಂದ ಯುದ್ಧಮಾಡು! ನಿನ್ನ ನಡತೆಯನ್ನು ಮೆಚ್ಚಿದ್ದೇನೆ.”
ಆಗ ಭೀಷ್ಮನು ಅವನನ್ನು ನಮಸ್ಕರಿಸಿ ಬೇಗನೇ ರಥವನ್ನೇರಿದನು. ಇನ್ನೊಮ್ಮೆ ಹೇಮ ವಿಭೂಷಿತ ಶಂಖವನ್ನು ರಣದಲ್ಲಿ ಊದಿದನು. ಆಗ ಪರಸ್ಪರರನ್ನು ಗೆಲ್ಲಲು ಬಯಸಿದ ಅವನ ಮತ್ತು ಭೀಷ್ಮನ ನಡುವೆ ಬಹಳ ದಿನಗಳ ಮಹಾ ಯುದ್ಧವು ನಡೆಯಿತು. ರಣದಲ್ಲಿ ಮೊದಲು ಅವನು ಭೀಷ್ಮನನ್ನು ಒಂಬೈನೂರಾ ಅರವತ್ತು ಅಗ್ನಿವರ್ಚಸ ಕಂಕಪತ್ರಿ ಬಾಣಗಳಿಂದ ಹೊಡೆದನು. ಭೀಷ್ಮನ ನಾಲ್ಕು ಕುದುರೆಗಳು ಮತ್ತು ಸೂತನು ತಡೆಹಿಡಿಯಲ್ಪಟ್ಟರು. ಆದರೆ ಅವನು ಸಮರದಲ್ಲಿ ಕವಚಗಳಿಂದ ರಕ್ಷಿತನಾಗಿ ನಿಂತನು. ದೇವತೆಗಳಿಗೂ ಬ್ರಾಹ್ಮಣರಿಗೂ ನಮಸ್ಕರಿಸಿ ಭೀಷ್ಮನು ನಗುತ್ತಾ ರಣದಲ್ಲಿ ನಿಂತಿದ್ದ ರಾಮನಿಗೆ ಹೇಳಿದನು: “ನೀನು ಮರ್ಯಾದೆಗಳನ್ನು ದಾಟಿದರೂ ಆಚಾರ್ಯನೆಂದು ಗೌರವಿಸಿದೆ. ಬ್ರಹ್ಮನ್! ಧರ್ಮಸಂಗ್ರಹದ ಮಾರ್ಗವೇನೆಂದು ಇನ್ನೊಮ್ಮೆ ನನ್ನನ್ನು ಕೇಳು. ನಿನ್ನ ದೇಹದಲ್ಲಿ ನೆಲೆಸಿರುವ ವೇದಗಳನ್ನು, ಬ್ರಾಹ್ಮಣ್ಯವನ್ನು ಮತ್ತು ಸುಮಹತ್ತರವಾಗಿ ತಪಿಸಿದ ತಪವನ್ನು ನಾನು ಹೊಡೆಯಲಾರೆನು. ನೀನು ಸಮಾಸ್ಥಿತನಾಗಿರುವ ಕ್ಷತ್ರಧರ್ಮಕ್ಕೆ ಹೊಡೆಯುತ್ತೇನೆ. ಏಕೆಂದರೆ ಶಸ್ತ್ರಗಳನ್ನು ಹಿಡಿದು ಬ್ರಾಹ್ಮಣನು ಕ್ಷತ್ರಿಯತ್ವವನ್ನು ಪಡೆಯುತ್ತಾನೆ. ನನ್ನ ಧನುಸ್ಸಿನ ವೀರ್ಯವನ್ನು ನೋಡು! ನನ್ನ ಬಾಹುಗಳ ಬಲವನ್ನು ನೋಡು! ನಾನು ನಿನ್ನ ಬಿಲ್ಲು ಬಾಣಗಳನ್ನು ತುಂಡರಿಸುತ್ತೇನೆ!”
ಆಗ ಭೀಷ್ಮನು ಹರಿತಾದ ಭಲ್ಲವನ್ನು ರಾಮನ ಮೇಲೆ ಎಸೆಯಲು ಅದು ಅವನ ದನುಸ್ಸಿನ ತುದಿಯನ್ನು ತುಂಡುಮಾಡಿ ನೆಲಕ್ಕೆ ಬೀಳಿಸಿತು. ಭೀಷ್ಮನು ಜಾಮದಗ್ನಿಯ ರಥದ ಮೇಲೆ ಒಂಬೈನೂರು ನೇರ ಕಂಕಪತ್ರಿ ಬಾಣಗಳನ್ನು ಪ್ರಯೋಗಿಸಿದನು. ಅವನ ದೇಹಕ್ಕೆ ಗುರಿಯಾಗಿಟ್ಟ, ಗಾಳಿಯಿಂದ ವೇಗವಾಗಿ ಹೋದ ಆ ಶರಗಳು ರಕ್ತಕಾರುವ ನಾಗಗಳಂತೆ ಹಾರಿಹೋದವು. ಅವನ ಇಡೀ ದೇಹವು ಗಾಯಗಳಿಂದ ಒದ್ದೆಯಾಗಿ ರಕ್ತವು ಸುರಿಯಲು ರಾಮನು ಧಾತುಗಳನ್ನು ಸುರಿಸುತ್ತಿದ್ದ ಮೇರು ಪರ್ವತದಂತೆ ತೋರಿದನು. ಹೇಮಂತ ಋತುವಿನ ಅಂತ್ಯದಲ್ಲಿ ಕೆಂಪು ಹೂವುಗಳಿಂದ ತುಂಬಿದ ಅಶೋಕದಂತೆ ಅಥವಾ ಕಿಂಶುಕವೃಕ್ಷದಂತೆ ರಾಮನು ಕಾಣಿಸಿದನು. ಆಗ ಕ್ರೋಧಸಮನ್ವಿತನಾಗಿ ರಾಮನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಹೇಮಪುಂಖಗಳ, ಹರಿತ ಬಾಣಗಳ ಮಳೆಯನ್ನು ಸುರಿಸಿದನು. ಆ ರೌದ್ರ ಮರ್ಮಭೇದೀ ಸರ್ಪಾನಲವಿಷಗಳಂತಿರುವ ಬಹು ಬಾಣಗಳು ಭೀಷ್ಮನನ್ನು ಹೊಡೆದು ತತ್ತರಿಸುವಂತೆ ಮಾಡಿದವು. ಆಗ ಅವನು ಪುನಃ ಚೇತರಿಸಿಕೊಂಡು ಕೋಪದಿಂದ ರಾಮನನ್ನು ನೂರಾರು ಬಾಣಗಳಿಂದ ಹೊಡೆದನು. ಆ ಅಗ್ನಿ-ಅರ್ಕ ಸಂಕಾಶ, ವಿಷಗಳಂತಿದ್ದ ಹರಿತ ಬಾಣಗಳ ರಾಶಿಯಿಂದ ಹೊಡೆತ ತಿಂದು ರಾಮನು ಮೂರ್ಛೆಗೊಂಡಂತಾದನು. ಆಗ ಭೀಷ್ಮನು ಕೃಪಾವಿಷ್ಟನಾಗಿ “ಕ್ಷತ್ರಧರ್ಮಕ್ಕೆ ಧಿಕ್ಕಾರ! ಯುದ್ಧಕ್ಕೆ ಧಿಕ್ಕಾರ!” ಎಂದು ಹೇಳಿ ತನ್ನನ್ನು ನಾನೇ ನಿಂದಿಸಿಕೊಂಡನು. ಶೋಕವೇಗಪರಿಪ್ಲುತನಾಗಿ ತಪ್ಪಾಯಿತೆಂದು ಹೇಳಿದನು: “ಅಹೋ! ಕ್ಷತ್ರನಾಗಿ ನಾನು ಇಂದು ಈ ಪಾಪವನ್ನು ಮಾಡಿದೆನು. ನನ್ನ ಗುರು, ಧರ್ಮಾತ್ಮಾ ಬ್ರಾಹ್ಮಣನನ್ನು ಈ ರೀತಿಯಾಗಿ ಬಾಣಗಳಿಂದ ಪೀಡಿಸಿದೆನಲ್ಲ!” ಆಗ ಅವನು ಜಾಮದಗ್ನಿಗೆ ಇನ್ನು ಹೊಡೆಯಲಿಲ್ಲ! ಅಷ್ಟರಲ್ಲಿಯೇ ಸಹಸ್ರಾಂಶುವು ಪೃಥ್ವಿಯನ್ನು ಬೆಳಗಿಸಿ ದಿವಸಕ್ಷಯದಲ್ಲಿ ಅಸ್ತಮವಾಗಲು ಅವರ ಯುದ್ಧವೂ ನಿಂತಿತು.
ಕುಶಲಸಮ್ಮತನಾದ ಸೂತನು ತನ್ನ, ಕುದುರೆಗಳ ಮತ್ತು ಭೀಷ್ಮನ ದೇಹಗಳಿಂದ ಚುಚ್ಚಿಕೊಂಡಿದ್ದ ಬಾಣಗಳನ್ನು ಕಿತ್ತನು. ಪ್ರಭಾತದಲ್ಲಿ ಸೂರ್ಯನು ಉದಯಿಸಲು, ಕುದುರೆಗಳಿಗೆ ಸ್ನಾನಮಾಡಿಸಿ, ಹುಲ್ಲಿನಲ್ಲಿ ಹೊರಳಾಡಿಸಿ, ನೀರು ಕುಡಿಸಿ, ಆಯಾಸವನ್ನು ಕಳೆದುಕೊಂಡು ಯುದ್ಧಕ್ಕೆ ಹಿಂದಿರುಗಿದನು. ತನ್ನ ರಥದ ಮೇಲೆ ಕುಳಿತು ಕವಚಗಳನ್ನು ಧರಿಸಿ ಮೊದಲೇ ಬಂದಿದ್ದ ಭೀಷ್ಮನನ್ನು ನೋಡಿ ಪ್ರತಾಪವಾನ್ ರಾಮನು ಸಿದ್ಧತೆಗಳನ್ನು ಮಾಡಿಕೊಂಡನು. ಆಗ ಭೀಷ್ಮನು ಸಮರಕಾಂಕ್ಷಿಣಿಯಾಗಿ ಬರುತ್ತಿದ್ದ ರಾಮನನ್ನು ನೋಡಿ ತಕ್ಷಣವೇ ಶ್ರೇಷ್ಠ ಧನುಸ್ಸನ್ನು ಬದಿಗಿಟ್ಟು ರಥದಿಂದ ಕೆಳಗಿಳಿದನು. ಅವನನ್ನು ನಮಸ್ಕರಿಸಿ ರಥವನ್ನೇರಿ ಯುದ್ಧಮಾಡಲೋಸುಗ ಭಯವಿಲ್ಲದೇ ಜಾಮದಗ್ನಿಯ ಎದುರು ನಿಂತನು. ಆಗ ಅವನು ಭೀಷ್ಮನನ್ನು ಮಹಾ ಶರವರ್ಷದಿಂದ ಮುಚ್ಚಿದನು. ಭೀಷ್ಮನೂ ಕೂಡ ಶರವರ್ಷವನ್ನು ಸುರಿಸಿ ಅವನನ್ನು ಮುಚ್ಚಿದನು. ಸಂಕ್ರುದ್ಧ ಜಾಮದಗ್ನಿಯು ಪುನಃ ಬೆಂಕಿಯನ್ನು ಕಾರುವ ಸರ್ಪಗಳಂತಿರುವ ಪತತ್ರಿ ಬಾಣಗಳನ್ನು ಭೀಷ್ಮನ ಮೇಲೆ ಪ್ರಯೋಗಿಸಿದನು. ತಕ್ಷಣವೇ ಅವನು ಅವುಗಳನ್ನು ನೂರಾರು ಸಹಸ್ರ ಹರಿತ ಭಲ್ಲೆಗಳಿಂದ ಅಂತರಿಕ್ಷದಲ್ಲಿಯೇ ಪುನಃ ಪುನಃ ತುಂಡರಿಸಿದನು. ಆಗ ಪ್ರತಾಪವಾನ್ ಜಾಮದಗ್ನಿಯು ದಿವ್ಯಾಸ್ತ್ರಗಳನ್ನು ಭೀಷ್ಮನ ಮೇಲೆ ಪ್ರಯೋಗಿಸತೊಡಗಿದನು. ಅವುಗಳನ್ನೂ ಅವನು ತಡೆಹಿಡಿದೆನು.
ಅಸ್ತ್ರಗಳಿಂದಲೇ ಭೀಷ್ಮನ ಕ್ರಿಯೆಯು ಅಧಿಕವಾಗಲು ದಿವಿಯಲ್ಲಿ ಎಲ್ಲೆಡೆಯಿಂದ ಮಹಾನಾದವುಂಟಾಯಿತು. ಆಗ ಅವನು ವಾಯುವಾಸ್ತ್ರವನ್ನು ಜಾಮದಗ್ನಿಯ ಮೇಲೆ ಪ್ರಯೋಗಿಸಿದನು. ಗುಹ್ಯಕಾಸ್ತ್ರದಿಂದ ರಾಮನು ಅದನ್ನು ತುಂಡರಿಸಿದನು. ಭೀಷ್ಮನು ಆಗ್ನೇಯಾಸ್ತ್ರವನ್ನು ಅನುಮಂತ್ರಿಸಿ ಪ್ರಯೋಗಿಸಲು ವಿಭು ರಾಮನು ಅದನ್ನು ವಾರುಣದಿಂದ ತಡೆದನು. ಹೀಗೆ ಭೀಷ್ಮನು ರಾಮನ ದಿವ್ಯಾಸ್ತ್ರಗಳನ್ನು ತಡೆಗಟ್ಟಲು ತೇಜಸ್ವಿ ದಿವ್ಯಾಸ್ತ್ರವಿದು ಅರಿಂದಮ ರಾಮನೂ ಕೂಡ ಅವನ ಅಸ್ತ್ರಗಳನ್ನು ತಡೆದನು. ಆಗ ಆ ದ್ವಿಜೋತ್ತಮ ಜಾಮದಗ್ನ್ಯ ಮಹಾಬಲ ರಾಮನು ಸಂಕ್ರುದ್ಧನಾಗಿ ಭೀಷ್ಮನ ಬಲದಿಯಲ್ಲಿ ಬಂದು ಎದೆಯನ್ನು ಚುಚ್ಚಿದನು. ಆಗ ಭೀಷ್ಮನು ನೋವಿನಿಂದ ಬಳಲಿ ಆ ಉತ್ತಮ ರಥದಲ್ಲಿಯೇ ಒರಗಿದನು. ಎದೆಯಲ್ಲಿ ರಾಮಬಾಣಪೀಡಿತನಾಗಿ ನೋವಿನಲ್ಲಿದ್ದ ಅವನನ್ನು ಮತ್ತು ರಥವನ್ನು ಸೂತನು ಯುದ್ಧದಿಂದ ದೂರ ಕರೆದೊಯ್ದನು. ಭೀಷ್ಮನು ಅಚೇತಸನಾಗಿ ಒಯ್ಯಲ್ಪಡುತ್ತಿದ್ದುದನ್ನು ನೋಡಿದ ಅಕೃತವ್ರಣ ಮತ್ತು ಕಾಶಿಕನ್ಯೆಯೇ ಮೊದಲಾದ ರಾಮನ ಅನುಚರರೆಲ್ಲರೂ ಸಂತೋಷಗೊಂಡು ಕೂಗಿದರು. ಆಗ ಭೀಷ್ಮನಿಗೆ ಎಚ್ಚರ ಬಂದು ಸೂತನಿಗೆ ಹೇಳಿದನು: “ಸೂತ! ರಾಮನಿರುವಲ್ಲಿಗೆ ಕರೆದುಕೊಂಡು ಹೋಗು! ವೇದನೆಯು ಕಳೆದು ನಾನು ಸಿದ್ಧನಾಗಿದ್ದೇನೆ.”
ಆಗ ಸೂತನು ಅವನನ್ನು ಗಾಳಿಯಂತೆ ಹೋಗಬಲ್ಲ ಪರಮ ಶೋಭಿತ ಕುದುರೆಗಳಿಂದ ರಣಕ್ಕೆ ಕರೆದೊಯ್ದನು. ಆಗ ಅವನು ರಾಮನನ್ನು ಸೇರಿ ಸಿಟ್ಟಿನಿಂದ ಆ ಸಿಟ್ಟಾಗುವವನನ್ನು ಗೆಲ್ಲಲು ಬಯಸಿ ಅವನನ್ನು ಬಾಣಜಾಲಗಳಿಂದ ಮುಚ್ಚಿದನು. ಆದರೆ ರಾಮನು ಅವನ ಪ್ರತಿಯೊಂದಕ್ಕೂ ಮೂರು ಬಾಣಗಳನ್ನು ಬಿಟ್ಟು, ಭೀಷ್ಮನ ಬಾಣಗಳು ಅವನನ್ನು ತಲುಪುವ ಮೊದಲೇ ಕತ್ತರಿಸಿದನು. ಆ ಮಹಾಹವದಲ್ಲಿ ಭೀಷ್ಮನ ಸುಸಂಶಿತ ನೂರಾರು ಬಾಣಗಳನ್ನು ರಾಮನ ಬಾಣಗಳು ಎರಡಾಗಿ ತುಂಡರಿಸಲು ಅವರೆಲ್ಲರೂ ಸಂತೋಷಗೊಂಡರು. ಆಗ ಭೀಷ್ಮನು ಜಾಮದಗ್ನಿ ರಾಮನನ್ನು ಕೊಲ್ಲಬೇಕೆಂದು ಬಯಸಿ ಉರಿಯುತ್ತಿರುವ ಪ್ರಭೆಯುಳ್ಳ, ಮೃತ್ಯುವನ್ನು ಕೂಡಿರುವ ಶರವನ್ನು ಪ್ರಯೋಗಿಸಿದನು. ಆ ಬಾಣದಿಂದ ಗಾಢವಾಗಿ ಹೊಡೆತತಿಂದು ರಾಮನು ತಕ್ಷಣವೇ ಮೂರ್ಛೆಗೊಂಡು ನೆಲದ ಮೇಲೆ ಬಿದ್ದನು. ರಾಮನು ನೆಲದ ಮೇಲೆ ಮಲಗಿರಲು ಎಲ್ಲರೂ ಹಾಹಾಕಾರ ಮಾಡಿದರು. ಸೂರ್ಯನೇ ಕೆಳಗೆ ಬಿದ್ದನೋ ಎನ್ನುವಂತೆ ಜಗತ್ತು ಸಂವಿಗ್ನಗೊಂಡಿತು.
ಆಗ ಸುಸಂವಿಗ್ನರಾದ ಎಲ್ಲ ತಪೋಧರನೂ ಕಾಶ್ಯೆಯೊಂದಿಗೆ ತಕ್ಷಣವೇ ಭೃಗುನಂದನನಲ್ಲಿಗೆ ಧಾವಿಸಿದರು. ಅವನನ್ನು ಮೆಲ್ಲಗೆ ತಬ್ಬಿಕೊಂಡು, ಕೈಗಳಿಂದ ತಣ್ಣೀರನ್ನು ಚುಮುಕಿಸಿ ಜಯ ಆಶೀರ್ವಚನಗಳಿಂದ ಆಶ್ವಾಸವನ್ನಿತ್ತರು. ವಿಹ್ವಲನಾದ ರಾಮನು ಮೇಲೆದ್ದು ಧನುಸ್ಸಿಗೆ ಬಾಣವನ್ನು ಹೂಡಿ “ಭೀಷ್ಮ! ನಿಲ್ಲು! ನಿನ್ನನ್ನು ಕೊಲ್ಲುತ್ತೇನೆ!” ಎಂದು ಹೇಳಿದನು. ಮಹಾಹವದಲ್ಲಿ ಬಿಟ್ಟ ಆ ಬಾಣವು ಭೀಷ್ಮನ ಎಡಬದಿಗೆ ಬಂದು ಪೆಟ್ಟುತಿಂದ ಮರದಂತೆ ಅವನನ್ನು ಚೆನ್ನಾಗಿ ಗಾಯಗೊಳಿಸಿ ಸಂವಿಗ್ನನನ್ನಾಗಿಸಿತು. ಮಹಾಹವೆಯಲ್ಲಿ ಶೀಘ್ರಾಸ್ತ್ರದಿಂದ ರಾಮನು ಭೀಷ್ಮನ ಕುದುರೆಗಳನ್ನು ಕೊಂದು ಲೋಮವಾಹಿ ಬಾಣಗಳನ್ನು ಅವನ ಮೇಲೆ ಪ್ರಯೋಗಿಸಿದನು. ಆಗ ಭೀಷ್ಮನೂ ಕೂಡ ತಡೆಯಲಸಾಧ್ಯವಾದ ಶ್ರೀಘ್ರಾಸ್ತ್ರವನ್ನು ಪ್ರಯೋಗಿಸಲು ಆ ಶರಗಳು ಮಧ್ಯದಲ್ಲಿಯೇ ನಿಂತುಕೊಂಡವು. ಅವನ ಮತ್ತು ರಾಮನ ಬಾಣಗಳು ಆಕಾಶವನ್ನು ಎಲ್ಲೆಡೆಯಲ್ಲಿಯೂ ಆವೃತಗೊಂಡವು. ಶರಜಾಲದಿಂದ ಸಮಾವೃತನಾದ ಸೂರ್ಯನು ಸುಡಲಿಲ್ಲ. ಮೋಡಗಳೋ ಎನ್ನುವಂತಿರುವ ಅವುಗಳ ಮೂಲಕ ಗಾಳಿಯು ಸುಳಿದಾಡಿ ಶಬ್ಧವನ್ನುಂಟು ಮಾಡಿತು. ಆಗ ಗಾಳಿಯು ಉಂಟಾಗಿಸಿದ ಘರ್ಷಣೆ ಮತ್ತು ಸೂರ್ಯನ ಕಿರಣಗಳು ಸೇರಿ ಅಲ್ಲಿ ಪ್ರಾಕೃತಿಕವಾಗಿಯೇ ಬೆಂಕಿ ಎದ್ದಿತು. ತಮ್ಮಲ್ಲಿಯೇ ಉಂಟಾದ ಬೆಂಕಿಯಿಂದ ಸುಟ್ಟು ಆ ಬಾಣಗಳೆಲ್ಲವೂ ಉರಿದು ಭಸ್ಮೀಭೂತವಾಗಿ ಭೂಮಿಯ ಮೇಲೆ ಬಿದ್ದವು. ಸಂಕ್ರುದ್ಧನಾಗಿ ರಾಮನು ಭೀಷ್ಮನ ಮೇಲೆ ನೂರುಗಟ್ಟಲೆ, ಸಾವಿರಗಟ್ಟಲೆ, ಕೋಟಿಗಟ್ಟಲೆ, ಹತ್ತು ಸಾವಿರ, ನೂರುಕೋಟಿಗಟ್ಟಲೆ ಬಾಣಗಳನ್ನು ಪ್ರಯೋಗಿಸಲು ಅವನು ರಣದಲ್ಲಿ ನಾಗಗಳಂಥಹ ಶರಗಳಿಂದ ಅವುಗಳನ್ನು ಕತ್ತರಿಸಿ ಸರ್ಪಗಳಂತೆ ಅವುಗಳನ್ನು ಭೂಮಿಯ ಮೇಲೆ ಬೀಳಿಸಿದನು. ಹೀಗೆ ಆಗಿನ ಆ ಯುದ್ಧವು ನಡೆಯಿತು. ಸಂಧ್ಯಾಕಾಲವು ಕಳೆಯಲು ಭೀಷ್ಮನ ಗುರುವು ಯುದ್ಧದಿಂದ ಹಿಂದೆಸರಿದನು.
ಅವನನ್ನು ಪುನಃ ಎದುರಿಸಿದಾಗ ಭೀಷ್ಮ ಮತ್ತು ರಾಮನ ನಡುವೆ ಇನ್ನೊಂದು ಅತಿದಾರುಣ ತುಮುಲಯುದ್ಧವು ನಡೆಯಿತು. ಆಗ ದಿವಸ ದಿವಸವೂ ಆ ದಿವ್ಯಾಸ್ತ್ರವಿದು ಧರ್ಮಾತ್ಮ ವಿಭು ಶೂರನು ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದನು. ಭೀಷ್ಮನು ತ್ಯಜಿಸಲು ದುಷ್ಕರವಾದ ಪ್ರಾಣವನ್ನೂ ತ್ಯಜಿಸಿ ಆ ತುಮುಲಯುದ್ಧದಲ್ಲಿ ಅವುಗಳನ್ನು ಪ್ರತಿಘಾತಿಸುವ ಅಸ್ತ್ರಗಳಿಂದ ನಿಷ್ಫಲಗೊಳಿಸಿದನು. ಸಂಯುಗದಲ್ಲಿ ಬಹಳಷ್ಟು ಅಸ್ತ್ರಗಳನ್ನು ಅಸ್ತ್ರಗಳಿಂದ ಹತಗೊಳಿಸಲು ಆ ಮಹಾತೇಜಸ್ವಿ ಭಾರ್ಗವನು ಪ್ರಾಣವನ್ನೂ ತ್ಯಜಿಸಿ ಕ್ರೋಧಿತನಾದನು. ಆಗ ಮಹಾತ್ಮ ಜಾಮದಗ್ನಿಯು ಕೋಪದಿಂದ ಘೋರರೂಪದ ಕಾಲನೇ ಬಿಸುಟ ಅಸ್ತ್ರದಂತಿರುವ, ಉಲ್ಕೆಯಂತೆ ಉರಿಯುತ್ತಿರುವ, ಬಾಯಿ ತೆರೆದಿರುವ, ತೇಜಸ್ಸಿನಿಂದ ಲೋಕಗಳನ್ನು ಆವರಿಸಿದ ಶಕ್ತಿಯನ್ನು ಭೀಷ್ಮನ ಮೇಲೆ ಎಸೆದನು. ಆಗ ಅವನು ಉರಿಯುತ್ತಾ ಅಂತಕಾಲದಂತೆ, ಸೂರ್ಯನಂತೆ ಬೆಳಗುತ್ತಾ ಹತ್ತಿರ ಬರುತ್ತಿದ್ದ ಅದನ್ನು ಮೂರುತುಂಡುಗಳನ್ನಾಗಿಸಿ ಭೂಮಿಯ ಮೇಲೆ ಬೀಳಿಸಿದನು. ಆಗ ಪುಣ್ಯಗಂಧೀ ಗಾಳಿಯು ಬೀಸಿತು. ಅದು ತುಂಡಾಗಲು ಕ್ರೋಧದೀಪ್ತನಾದ ರಾಮನು ಇನ್ನೂ ಹನ್ನೆರಡು ಘೋರ ಶಕ್ತಿಗಳನ್ನು ಎಸೆದನು. ಅವುಗಳ ರೂಪವನ್ನು ವರ್ಣಿಸಲು, ಅವುಗಳ ತೇಜಸ್ಸು ಮತ್ತು ಲಾಘವಗಳ ಕುರಿತು ಹೇಳಲೂ ಅಸಾಧ್ಯವಾಗಿತ್ತು. ಎಲ್ಲ ಕಡೆಗಳಿಂದಲೂ ಮಹಾ ಉಲ್ಕೆಗಳಂತಿರುವ, ಅಗ್ನಿಗಳಂತಿರುವ, ಲೋಕಸಂಕ್ಷಯದಲ್ಲಿ ದ್ವಾದಶಾದಿತ್ಯಾರು ಹೇಗೋ ಹಾಗೆ ನಾನಾರೂಪಗಳಲ್ಲಿ ಉಗ್ರ ತೇಜಸ್ಸಿನಿಂದ ಉರಿಯುತ್ತಿರುವ ಅವುಗಳನ್ನು ನೋಡಿ ಭೀಷ್ಮನು ವಿಹ್ವಲನಾದನು. ಬಂದೆರಗುತ್ತಿದ್ದ ಆ ಬಾಣಗಳ ಜಾಲವನ್ನು ನೋಡಿ ತನ್ನದೇ ಶರಜಾಲದಿಂದ ಒಡೆದು ಆ ಹನ್ನೆರಡೂ ಘೋರರೂಪೀ ಶಕ್ತಿಗಳನ್ನು ರಣದಲ್ಲಿ ಭೀಷ್ಮನು ತುಂಡರಿಸಿದನು. ಆಗ ಮಹಾತ್ಮ ಜಾಮದಗ್ನಿಯು ಇನ್ನೊಂದು ಹೇಮದಂಡದ ಘೋರ ಶಕ್ತಿಗಳನ್ನು ಎಸೆದನು. ಬಂಗಾರದಿಂದ ಮಾಡಲ್ಪಟ್ಟಿದ್ದ ಅದು ವಿಚಿತ್ರವಾಗಿದ್ದು ಮಹಾ ಉಲ್ಕೆಗಳಂತೆ ಜ್ವಲಿಸುತ್ತಿದ್ದವು. ಅವುಗಳನ್ನೂ ಕೂಡ ತೋಮರಗಳಿಂದ ತಡೆದು ಖಡ್ಗದಿಂದ ಭೀಷ್ಮನು ಕೆಳಗೆ ಬೀಳಿಸಿ, ದಿವ್ಯ ಬಾಣಗಳಿಂದ ಜಾಮದಗ್ನಿಯ ದಿವ್ಯ ರಥವನ್ನೂ ಕುದುರೆಗಳನ್ನೂ ಸಾರಥಿಯೊಂದಿಗೆ ಮುಚ್ಚಿದನು. ಅವನು ಪ್ರಯೋಗಿಸಿದ ಹಾವುಗಳಂತಿದ್ದ ಹೇಮಚಿತ್ರ ಶಕ್ತಿಗಳನ್ನು ನೋಡಿ ಕ್ರೋಧಾವಿಷ್ಟನಾದ ಆ ಮಹಾತ್ಮ ಹೈಹಯೇಶಪ್ರಮಾಥಿಯು ಪುನಃ ದಿವ್ಯಾಸ್ತ್ರಗಳನ್ನು ಬಳಸಿದನು. ಆಗ ಮಿಡತೆಗಳ ಗುಂಪಿನಂತಿರುವ, ತುದಿಗಳಲ್ಲಿ ರೆಕ್ಕೆಗಳನ್ನುಳ್ಳ, ಉರಿಯುತ್ತಿರುವ ಬಾಣಗಳ ರಾಶಿಯು ಭೀಷ್ಮನ ಶರೀರವನ್ನು, ಕುದುರೆಗಳನ್ನು, ರಥದೊಂದಿಗೆ ಸೂತನನ್ನು ತುಂಬಾ ಆಳವಾಗಿ ಚುಚ್ಚಿದವು. ಅದರ ಹೊಡೆತದಿಂದಾಗ ಅವನ ರಥ, ಕುದುರೆಗಳು ಮತ್ತು ಸಾರಥಿಯೂ, ರಥದ ಎರಡು ಚಕ್ರಗಳೊಂದಿಗೆ ಎಲ್ಲ ರೀತಿಯಲ್ಲಿ ಮುರಿದು ಬಿದ್ದವು. ಆ ಬಾಣವರ್ಷವು ಮುಗಿಯಲು ಭೀಷ್ಮನೂ ಕೂಡ ಶರಗಳ ಮಳೆಯನ್ನು ಗುರುವಿನ ಮೇಲೆ ಸುರಿಸಿದನು. ಬಾಣಗಳಿಂದ ಗಾಯಗೊಂಡ ಆ ಬ್ರಹ್ಮರಾಶಿಯು ತುಂಬಾ ಕಡೆಗಳಿಂದ ಒಂದೇ ಸಮನೆ ರಕ್ತವನ್ನು ಸುರಿಸಿದನು. ರಾಮನು ಹೇಗೆ ಬಾಣಜಾಲಗಳಿಂದ ನೋಯುತ್ತಿದ್ದನೋ ಹಾಗೆ ಭೀಷ್ಮನೂ ಕೂಡ ಗಾಢವಾಗಿ ತುಂಬಾ ನೋವಿನಲ್ಲಿದ್ದನು. ಕೊನೆಯಲ್ಲಿ ಮಧ್ಯಾಹ್ನದ ನಂತರ ಸೂರ್ಯನು ಅಸ್ತವಾಗಲು ಅವರ ಯುದ್ಧವೂ ನಿಂತಿತು.
ಪ್ರಭಾತದಲ್ಲಿ ವಿಮಲ ಸೂರ್ಯನು ಉದಯವಾಗಲು ಪುನಃ ಭೀಷ್ಮನೊಡನೆ ಭಾರ್ಗವನ ಯುದ್ಧವು ನಡೆಯಿತು. ಆಗ ಬೆಳಗುತ್ತಾ ನಿಂತಿದ್ದ ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ಭೀಷ್ಮನ ಮೇಲೆ ಶಕ್ರನು ಪರ್ವತಗಳ ಮೇಲೆ ಹೇಗೋ ಹಾಗೆ ಶರವರ್ಷಗಳನ್ನು ಸುರಿಸಿದನು. ಆ ಶರವರ್ಷದಿಂದ ಹೊಡೆಯಲ್ಪಟ್ಟ ಅವನ ಸೂತನು ರಥದಲ್ಲಿಯೇ ಕುಸಿದು ಬಿದ್ದು ಭೀಷ್ಮನ ಮನಸ್ಸನ್ನು ದುಃಖಗೊಳಿಸಿದನು. ಆಗ ಅವನಲ್ಲಿ ಮಹಾ ಕಶ್ಮಲವು ಪ್ರವೇಶಿಸಿ ಭೀಷ್ಮನ ಸೂತನು ಶರಘಾತದಿಂದ ಮೂರ್ಛೆಗೊಂಡು ಭೂಮಿಯ ಮೇಲೆ ಬಿದ್ದನು. ರಾಮಬಾಣಪೀಡಿತನಾಗಿ ಅವನು ಅಸುವನ್ನು ನೀಗಿದನು. ಒಂದು ಕ್ಷಣ ಭೀಷ್ಮನಲ್ಲಿ ಭೀತಿಯು ಆವೇಶಗೊಂಡಿತು. ಸೂತನು ಹತನಾಗಲು ಅವನು ಪ್ರಮತ್ತಮನಸ್ಕನಾಗಿದ್ದಾಗ ರಾಮನು ಭೀಷ್ಮನ ಮೇಲೆ ಮೃತ್ಯುಸಮ್ಮಿತ ಶರಗಳನ್ನು ಎಸೆದನು. ಸೂತನ ವ್ಯಸನದಿಂದ ತತ್ತರಿಸುತ್ತಿದ್ದ ಅವನ ಮೇಲೆ ಆ ಭಾರ್ಗವನು ಬಲವಾದ ಧನುಸ್ಸನ್ನು ಜೋರಾಗಿ ಎಳೆದು ಬಾಣಗಳಿಂದ ಹೊಡೆದನು. ರಕ್ತಕುಡಿಯುವ ಆ ಶರವು ಅವನನ್ನು ಚುಚ್ಚಿ ಹೊರಬಂದು ಭೀಷ್ಮನೊಂದಿಗೇ ನೆಲದ ಮೇಲೆ ಬಿದ್ದಿತು. ಭೀಷ್ಮನು ನಿಹತನಾದೆನೆಂದು ತಿಳಿದು ರಾಮನು ಮೇಘದಂತೆ ಜೋರಾಗಿ ಪುನಃ ಪುನಃ ಹರ್ಷೋದ್ಗಾರ ಮಾಡಿದನು. ಭೀಷ್ಮನು ಹಾಗೆ ಬೀಳಲು ರಾಮನು ಸಂತೋಷಗೊಂಡು ಅವನ ಅನುಯಾಯಿಗಳೊಂದಿಗೆ ಮಹಾನಾದವನ್ನು ಕೂಗಿದನು. ಆದರೆ ಯುದ್ಧವನ್ನು ನೋಡಲು ಬಂದಿದ್ದ ಕೌರವರು ಭೀಷ್ಮನ ಪಕ್ಕದಲ್ಲಿ ನಿಂತು ಅವನು ಬಿದ್ದುದನ್ನು ನೋಡಿ ಆರ್ತರಾದರು.
ಅಲ್ಲಿ ಬಿದ್ದಾಗ ಭೀಷ್ಮನು ಸೂರ್ಯ-ಹುತಾಶನರಂತೆ ಹೊಳೆಯುತ್ತಿದ್ದ ಎಂಟು ದ್ವಿಜರನ್ನು ನೋಡಿದನು. ಅವರು ಅವನನ್ನು ರಣದ ಮಧ್ಯದಲ್ಲಿ ತಮ್ಮ ಬಾಹುಗಳಿಂದ ಮೇಲೆತ್ತಿ ಹಿಡಿದು ನಿಲ್ಲಿಸಿದರು. ಆ ವಿಪ್ರರಿಂದ ಹಿಡಿಯಲ್ಪಟ್ಟ ಭೀಷ್ಮನು ನೆಲವನ್ನು ಮುಟ್ಟಲಿಲ್ಲ. ಆ ವಿಪ್ರ ಬಾಂಧವರ ಬೆಂಬಲದಿಂದ ಅಂತರಿಕ್ಷದಲ್ಲಿಯೇ ನಿಂತಿದ್ದನು. ಅವರು ಅಂತರಿಕ್ಷದಿಂದ ನೀರಿನ ಹನಿಗಳನ್ನು ಚುಮುಕಿಸಿದರು. ಆಗ ಆ ಬ್ರಾಹ್ಮಣರು ಅವನನ್ನು ಹಿಡಿದು “ಹೆದರಬೇಡ! ಎಲ್ಲವೂ ಸರಿಯಾಗುತ್ತದೆ!” ಎಂದು ಉಪಚರಿಸಿದರು. ಆಗ ಅವರ ಮಾತುಗಳಿಂದ ತೃಪ್ತನಾಗಿ ಭೀಷ್ಮನು ಒಮ್ಮೆಲೇ ಮೇಲೆದ್ದನು. ರಥದಲ್ಲಿದ್ದ ಮಾತೆ ಶ್ರೇಷ್ಠ ಸರಿತಾಳನ್ನು ನೋಡಿದನು. ಯುದ್ಧದಲ್ಲಿ ಆ ಮಹಾನದಿಯೇ ಅವನ ಕುದುರೆಗಳ ಕಡಿವಾಣಗಳನ್ನು ಹಿಡಿದು ನಡೆಸುತ್ತಿದ್ದಳು. ಭೀಷ್ಮನಾದರೋ ಅರ್ಷ್ಟಿಷೇಣನನ್ನು ಹೇಗೋ ಹಾಗೆ ಜನನಿಯ ಪಾದಗಳನ್ನು ಪೂಜಿಸಿ ರಥವನ್ನೇರಿದನು. ಅವಳು ಅವನ ರಥವನ್ನೂ ಕುದುರೆಗಳನ್ನೂ ಉಪಕರಣಗಳನ್ನೂ ರಕ್ಷಿಸಿದ್ದಳು. ಪುನಃ ಕೈಮುಗಿದು ನಮಸ್ಕರಿಸಿ ಭೀಷ್ಮನು ಅವಳನ್ನು ಕಳುಹಿಸಿಕೊಟ್ಟನು. ಆಗ ಅವನು ಆ ಗಾಳಿಯ ವೇಗವುಳ್ಳ ಕುದುರೆಗಳನ್ನು ಸ್ವಯಂ ನಿಯಂತ್ರಿಸುತ್ತಾ ದಿನವು ಕಳೆಯುವವರೆ ಜಾಮದಗ್ನಿಯೊಂದಿಗೆ ಯುದ್ಧ ಮಾಡಿದನು. ಆಗ ಅವನು ವೇಗವಂತ ಮಹಾಬಲಶಾಲಿ ಬಾಣವನ್ನು ಬಿಟ್ಟು ರಾಮನ ಹೃದಯವನ್ನು ಚುಚ್ಚಿದನು. ಬಾಣದ ವೇಗದಿಂದ ಪೀಡಿತನಾದ ರಾಮನು ಧನುವನ್ನು ಬಿಟ್ಟು ತೊಡೆಗಳನ್ನೂರಿ ನೆಲದ ಮೇಲೆ ಬಿದ್ದು ಮೋಹವಶನಾದನು. ಸಹಸ್ರಭೂರಿಗಳನ್ನಿತ್ತ ರಾಮನು ಹಾಗೆ ಬೀಳಲು ಮೋಡಗಳು ಆಕಾಶವನ್ನು ಕವಿದು ರಕ್ತದ ಮಳೆಯನ್ನು ಸುರಿಸಿದವು. ಭಿರುಗಾಳಿ ಮತ್ತು ಭೂಕಂಪಗಳೊಡನೆ ನೂರಾರು ಉಲ್ಕೆಗಳು ಬಿದ್ದವು. ಒಮ್ಮಿಂದೊಮ್ಮೆಲೇ ಸ್ವರ್ಭಾನುವು ಉರಿಯುತ್ತಿರುವ ಸೂರ್ಯನನ್ನು ಮುಚ್ಚಿದನು. ಚಂಡಮಾರುತವು ಬೀಸಿತು. ಭೂಮಿಯು ನಡುಗಿತು. ಹದ್ದು, ಕಾಗೆಗಳು ಮತ್ತು ಬಕಪಕ್ಷಿಗಳು ಗುಂಪಾಗಿ ಸಂತೋಷದಿಂದ ಹಾರಾಡತೊಡಗಿದವು. ಕೆಂಪಾಗಿದ್ದ ದಿಗಂತದಲ್ಲಿ ನರಿಯು ದಾರುಣವಾಗಿ ಮತ್ತೆ ಮತ್ತೆ ಕೂಗಿತು. ಹೊಡೆಯದೆಯೇ ದುಂದುಭಿಗಳು ಅತಿ ಜೋರಾಗಿ ಶಬ್ಧಮಾಡಿದವು. ಮಹಾತ್ಮ ರಾಮನು ಮೂರ್ಛಿತನಾಗಿ ನೆಲದ ಮೇಲೆ ಬೀಳಲು ಈ ಘೋರ ಉತ್ಪಾತಗಳು ನಡೆದವು. ಕೋಮಲ ಕಿರಣಗಳ ಮಸುಕಿದ ರವಿಯು ಮರೀಚಿಮಂಡಲದಲ್ಲಿ ಅಸ್ತನಾದನು. ಸುಖ ಶೀತ ಮಾರುತಗಳೊಂದಿಗೆ ರಾತ್ರಿಯು ಪಸರಿಸಿತು. ಆಗ ಅವರಿಬ್ಬರೂ ಯುದ್ಧದಿಂದ ಹಿಂದೆ ಸರಿದರು. ಹೀಗೆ ಯುದ್ಧಕ್ಕೆ ವಿರಾಮವಾಯಿತು. ಬೆಳಗಾಗಲು ಪುನಃ ಘೋರಯುದ್ಧವು ನಡೆಯಿತು. ಹೀಗೆ ಕಾಲ ಕಾಲದಲ್ಲಿ ಇಪ್ಪತ್ತು ಮತ್ತು ಅನ್ಯ ಮೂರು ದಿನಗಳು ನಡೆಯಿತು.
ಆ ರಾತ್ರಿ ಭೀಷ್ಮನು ಬ್ರಾಹ್ಮಣರಿಗೆ, ಪಿತೃಗಳಿಗೆ, ದೇವತೆಗಳೆಲ್ಲರಿಗೂ, ರಾತ್ರಿ ಸಂಚರಿಸುವ ಎಲ್ಲ ಭೂತಗಳಿಗೂ, ರಾತ್ರಿಗೂ ತಲೆಬಾಗಿ ನಮಸ್ಕರಿಸಿ, ಏಕಾಂತದ ಶಯನವನ್ನು ತಲುಪಿ ಮನಸ್ಸಿನಲ್ಲಿಯೇ ಚಿಂತಿಸಿದನು: “ಜಾಮದಗ್ನಿ ಮತ್ತು ನನ್ನ ಈ ಪರಮದಾರುಣ ಮತ್ತು ಮಹಾತ್ಯಯ ಯುದ್ಧವು ಈಗ ಬಹಳ ದಿನಗಳಿಂದ ನಡೆಯುತ್ತಿದೆ. ನಾನು ಮಹಾವೀರ್ಯ, ಮಹಾಬಲ, ವಿಪ್ರ ಜಾಮದಗ್ನಿ ರಾಮನನ್ನು ಸಮರ ರಣದಲ್ಲಿ ಜಯಿಸಲು ಸಾದ್ಯನಾಗಿಲ್ಲ. ಪ್ರತಾಪವಾನ್ ಜಾಮಗ್ನಿಯನ್ನು ನಾನು ಜಯಿಸಲು ಶಕ್ಯನೆಂದಾದರೆ ಪ್ರಸನ್ನರಾಗಿ ದೇವತೆಗಳು ಈ ರಾತ್ರಿ ನನಗೆ ಕಾಣಿಸಿಕೊಳ್ಳಲಿ.” ಹೀಗೆ ಯೋಚಿಸುತ್ತಾ ರಾತ್ರಿ ಅವನು ಬಾಣಗಳಿಂದ ಗಾಯಗೊಂಡ ಬಲಭಾಗದಲ್ಲಿ ಮಲಗಿದನು. ಬೆಳಗಾಗುತ್ತದೆ ಎನ್ನುವ ಸಮಯದಲ್ಲಿ ಅವನು ರಥದಿಂದ ಬಿದ್ದಾಗ ಮೇಲೆತ್ತಿ ಹೆದರಬೇಡ ಎಂದು ಸಂತವಿಸಿ ಧೈರ್ಯವನ್ನಿತ್ತಿದ್ದ ವಿಪ್ರರೇ ಸ್ವಪ್ನದಲ್ಲಿ ಕಾಣಿಸಿಕೊಂಡರು. ಅವನನ್ನು ಸುತ್ತುವರೆದು ಹೇಳಿದರು: “ಎದ್ದೇಳು! ಗಾಂಗೇಯ! ಭಯಪಡಬೇಡ! ನಿನಗೆ ಯಾವ ರೀತಿಯ ಭಯವೂ ಇಲ್ಲ. ನಮ್ಮದೇ ಶರೀರವಾಗಿರುವ ನಿನ್ನನ್ನು ನಾವು ರಕ್ಷಿಸುತ್ತೇವೆ! ಜಾಮದಗ್ನಿ ರಾಮನು ರಣದಲ್ಲಿ ಎಂದೂ ನಿನ್ನನ್ನು ಗೆಲ್ಲಲಾರನು. ನೀನೇ ಸಮರದಲ್ಲಿ ರಾಮನನ್ನು ಗೆಲ್ಲುತ್ತೀಯೆ. ನೀನು ಈ ಪ್ರಿಯವಾದ ಅಸ್ತ್ರವನ್ನು ಗುರುತಿಸುತ್ತೀಯೆ. ಏಕೆಂದರೆ ನಿನ್ನ ಪೂರ್ವದ ದೇಹಧಾರಣೆಯಲ್ಲಿ ಇದನ್ನು ನೀನು ತಿಳಿದಿದ್ದೆ. ಪ್ರಸ್ವಾಪವೆಂಬ ಹೆಸರಿನ ಇದನ್ನು ಪ್ರಜಾಪತಿಗಾಗಿ ವಿಶ್ವಕರ್ಮನು ನಿರ್ಮಿಸಿದನು. ಇದು ರಾಮನಿಗೂ ಅಥವಾ ಭೂಮಿಯಲ್ಲಿರುವ ಯಾವ ಪುರುಷನಿಗೂ ಗೊತ್ತಿಲ್ಲ. ಅದನ್ನು ಸ್ಮರಿಸಿಕೊಂಡು ಚೆನ್ನಾಗಿ ಪ್ರಯೋಗಿಸು. ಈ ಅಸ್ತ್ರದಿಂದ ರಾಮನು ಸಾಯುವುದಿಲ್ಲ. ಇದರಿಂದ ನೀನು ಯಾವುದೇ ಪಾಪವನ್ನೂ ಹೊಂದುವುದಿಲ್ಲ. ಈ ಬಾಣದ ಬಲದಿಂದ ಪೀಡಿತನಾಗಿ ಜಾಮದಗ್ನಿಯು ನಿದ್ದೆಮಾಡುತ್ತಾನೆ ಅಷ್ಟೆ. ಇದರಿಂದ ಅವನನ್ನು ಸೋಲಿಸಿ ನಿನಗೆ ಪ್ರಿಯವಾದ ಸಂಬೋದನಾಸ್ತ್ರದಿಂದ ಅವನನ್ನು ಪುನಃ ಎಚ್ಚರಿಸಬಲ್ಲೆ. ಪ್ರಭಾತದಲ್ಲಿ ರಥದಲ್ಲಿದ್ದು ಹೀಗೆ ಮಾಡು. ಮಲಗಿರುವ ಅಥವಾ ಸತ್ತಿರುವವರನ್ನು ನಾವು ಸಮನಾಗಿ ಕಾಣುತ್ತೇವಲ್ಲವೇ? ರಾಮನು ಎಂದೂ ಸಾಯುವುದಿಲ್ಲ. ಆದುದರಿಂದ ನೆನಪಿಗೆ ತಂದುಕೊಂಡು ಈ ಪ್ರಸ್ವಾಪವನ್ನು ಬಳಸು.” ಹೀಗೆ ಹೇಳಿ ಆ ಎಂಟು ಒಂದೇ ರೂಪದವರಾದ, ಭಾಸ್ವರಮೂರ್ತರಾದ ದ್ವಿಜೋತ್ತಮರೆಲ್ಲರೂ ಅಂತರ್ಹಿತರಾದರು.
ಪರಶುರಾಮ-ಭೀಷ್ಮರ ಪರಸ್ಪರ ಬ್ರಹ್ಮಾಸ್ತ್ರ ಪ್ರಯೋಗ
ರಾತ್ರಿಯು ಕಳೆದು ಭೀಷ್ಮನು ಎಚ್ಚೆತ್ತನು. ಕಂಡ ಸ್ವಪ್ನದ ಕುರಿತು ಯೋಚಿಸಿ ಅವನಿಗೆ ಉತ್ತಮ ಹರ್ಷವಾಯಿತು. ಆಗ ಸರ್ವಭೂತಗಳ ರೋಮಹರ್ಷಣವನ್ನುಂಟುಮಾಡುವ ಅವನ ಮತ್ತು ರಾಮನ ಅದ್ಭುತ ತುಮುಲ ಯುದ್ಧವು ನಡೆಯಿತು. ಭಾರ್ಗವನು ಭೀಷ್ಮನ ಮೇಲೆ ಬಾಣಮಯ ಮಳೆಯನ್ನು ಸುರಿಸಿದನು. ಅವನು ಅದನ್ನು ಶರಜಾಲದಿಂದ ತಡೆದನು. ಪರಮಸಂಕ್ರುದ್ಧ ಆ ಮಹಾತಪಸ್ವಿಯು ಪುನಃ ಭೀಷ್ಮನ ಮೇಲೆ ಶಕ್ತಿಯನ್ನು ಎಸೆದನು. ಇಂದ್ರನ ವಜ್ರದಂತೆ ಕಠಿನವಾಗಿದ್ದ, ಯಮದಂಡದಂತೆ ಪ್ರಭೆಯುಳ್ಳ, ಅಗ್ನಿಯಂತೆ ಜ್ವಲಿಸುತ್ತಿರುವ ಅದು ರಣಭೂಮಿಯನ್ನು ಎಲ್ಲಕಡೆಯಿಂದಲೂ ಕಬಳಿಸುತ್ತಿರುವಂತಿತ್ತು. ಆಗ ಅದು ಆಕಾಶದಲ್ಲಿ ಸಂಚರಿಸುವ ಮಿಂಚಿನಂತೆ ಭೀಷ್ಮನ ಭುಜದ ಮೇಲೆ ಬಿದ್ದಿತು ರಾಮನಿಂದ ಹೊಡೆಯಲ್ಪಟ್ಟ ಅವನ ದೇಹದಿಂದ ಗಿರಿಯಿಂದ ಖನಿಜಗಳು ಸುರಿಯುವಂತೆ ಕೆಂಪು ರಕ್ತವು ಸುರಿಯಿತು. ಆಗ ಅವನು ಜಾಮದಗ್ನಿಯ ಮೇಲೆ ತುಂಬಾ ಕೋಪಗೊಂಡು ಸರ್ಪವಿಷೋಪಮವಾದ, ಮೃತ್ಯುಸಂಕಾಶ ಬಾಣವನ್ನು ಕಳುಹಿಸಿದನು. ಅದು ಅವನ ಹಣೆಯನ್ನು ಹೊಡೆಯಲು ಆ ವೀರ ದ್ವಿಜಸತ್ತಮನು ಶೃಂಗವಿರುವ ಪರ್ವತದಂತೆ ಶೋಭಿಸಿದನು. ಅವನು ಬಲವನ್ನುಪಯೋಗಿಸಿ ಅದನ್ನು ಕಿತ್ತೊಗೆದು ಕಾಲಾಂತಕನಂತಿರುವ ಘೋರ ಶತ್ರುನಿಬರ್ಹಣ ಬಾಣವನ್ನು ಬಲವಾಗಿ ಎಳೆದು ಹೂಡಿದನು. ಹಾವಿನಂತೆ ಭುಸುಗುಟ್ಟುತ್ತ ಬಂದು ಅದು ಭೀಷ್ಮನ ಎದೆಯಮೇಲೆ ಬಿದ್ದಿತು. ಆಗ ಅವನು ರಕ್ತವನ್ನು ಕಾರುತ್ತಾ ಮೂರ್ಛೆಹೊಂದಿ ನೆಲದ ಮೇಲೆ ಬಿದ್ದನು. ಪುನಃ ಎಚ್ಚೆತ್ತು ಅವನು ಧೀಮತ ಜಮದಗ್ನಿಯ ಮೇಲೆ ವಿಮಲವಾದ ಅಗ್ನಿಯಂತೆ ಉರಿಯುತ್ತಿರುವ ಶಕ್ತಿಯನ್ನು ಎಸೆದನು. ಅದು ಆ ದ್ವಿಜಮುಖ್ಯನ ಎದೆಯ ಮೇಲೆ ಬಿದ್ದಿತು. ವಿಹ್ವಲನಾದ ಅವನು ನಡುಗಿದನು. ಆಗ ಅವನ ಸಖ, ವಿಪ್ರ, ಮಹಾತಪಸ್ವಿ ಅಕೃತವ್ರಣನು ಅವನನ್ನು ಅಪ್ಪಿಕೊಂಡು ಶುಭವಾಕ್ಯಗಳಿಂದ ಆಶ್ವಾಸನೆಗಳನ್ನಿತ್ತನು. ಆಗ ಕ್ರೋಧಾಮರ್ಷಸಮನ್ವಿತನಾದ ಮಹಾವ್ರತ ರಾಮನು ಪರಮಾಸ್ತ್ರ ಬ್ರಹ್ಮವನ್ನು ಪ್ರಯೋಗಿಸತೊಡಗಿದನು. ಅದನ್ನು ಎದುರಿಸಲು ಭೀಷ್ಮನೂ ಕೂಡ ಆ ಉತ್ತಮ ಬ್ರಹ್ಮಾಸ್ತ್ರವನ್ನು ಹೂಡಿದನು. ಅದು ಯುಗಾಂತದ ಜ್ವಾಲೆಗಳಂತೆ ತೋರಿತು. ಭೀಷ್ಮನನ್ನಾಗಲೀ ರಾಮನನ್ನಾಗಲೀ ತಾಗಲು ಅಸಮರ್ಥರಾದ ಆ ಎರಡು ಬ್ರಹ್ಮಾಸ್ತ್ರಗಳು ಮಧ್ಯದಲ್ಲಿಯೇ ಕೂಡಿದವು. ಆಗ ಇಡೀ ಆಕಾಶವೇ ಹತ್ತಿ ಉರಿಯುತ್ತಿರುವಂತೆ ತೋರಿತು. ಎಲ್ಲ ಭೂತಗಳೂ ಆರ್ತರಾದರು. ಅಸ್ತ್ರತೇಜದಿಂದ ಪೀಡಿತರಾದ ಋಷಿಗಳು, ಗಂಧರ್ವರು ಮತ್ತು ದೇವತೆಗಳು ಕೂಡ ಪರಮ ಸಂತಾಪವನ್ನು ಹೊಂದಿದರು. ಪರ್ವತ-ವನ-ವೃಕ್ಷಗಳಿಂದ ಕೂಡಿದ ಭೂಮಿಯು ನಡುಗಿತು. ಸಂತಪ್ತರಾದ ಭೂತಗಳು ಉತ್ತಮ ವಿಷಾದವನ್ನೂ ಹೊಂದಿದರು. ದಶ ದಿಕ್ಕುಗಳಲ್ಲಿ ಹೊಗೆಯು ತುಂಬಿ ಆಕಾಶವು ಹತ್ತಿ ಉರಿಯತೊಡಗಿತು. ಆಕಾಶಗಾಮಿಗಳು ಆಕಾಶದಲ್ಲಿ ನಿಲ್ಲದಂತಾದರು. ದೇವಾಸುರರಾಕ್ಷಸರಿಂದ ಕೂಡಿದ ಲೋಕಗಳು ಹಾಹಾಕಾರ ಮಾಡುತ್ತಿರಲು ಇದೇ ಸಮಯವೆಂದು ಭೀಷ್ಮನು ಬ್ರಹ್ಮವಾದಿಗಳು ಹೇಳಿದ ಪ್ರಿಯವಾದ ಪ್ರಸ್ವಾಪ ಅಸ್ತ್ರವನ್ನು ಹೂಡಲು ಬಯಸಿದನು. ಹೀಗೆ ಯೋಚಿಸಲು ಆ ಅಸ್ತ್ರವೂ ಕೂಡ ಅವನ ಮನಸ್ಸಿನಲ್ಲಿ ಹೊಳೆಯಿತು.
ಪರಶುರಾಮ-ಭೀಷ್ಮರು ಯುದ್ಧದಿಂದ ಹಿಂದೆಸರಿದುದು
ಆಗ “ಭೀಷ್ಮ! ಪ್ರಸ್ವಾಪವನ್ನು ಪ್ರಯೋಗಿಸಬೇಡ!” ಎಂದು ದಿವಿಯಲ್ಲಿ ಮಹಾ ಹಲಹಲ ಶಬ್ಧವು ಕೇಳಿಬಂದಿತು. ಹೀಗೆ ಹೇಳಿದರೂ ಅವನು ಆ ಅಸ್ತ್ರವನ್ನು ಭೃಗುನಂದನನ ಮೇಲೆ ಗುರಿಯಿಟ್ಟನು. ಅವನು ಪ್ರಸ್ವಾಪವನ್ನು ಪ್ರಯೋಗಿಸುವುದರಲ್ಲಿರುವಾಗ ನಾರದನು ಹೇಳಿದನು: “ಕೌರವ್ಯ! ಯೋಚಿಸು! ದೇವಗಣಗಳು ದಿವಿಯಲ್ಲಿ ನಿಂತಿರುವರು. ಇಂದು ಅವರೂ ಕೂಡ ನಿನ್ನನ್ನು ತಡೆಯುತ್ತಿದ್ದಾರೆ. ಪ್ರಸ್ವಾಪವನ್ನು ಪ್ರಯೋಗಿಸಬೇಡ! ರಾಮನು ತಪಸ್ವೀ, ಬ್ರಹ್ಮಣ್ಯ, ಬ್ರಾಹ್ಮಣ ಮತ್ತು ನಿನ್ನ ಗುರು. ಅವನ ಅಪಮಾನವನ್ನು ಎಂದೂ ಮಾಡಬೇಡ!”
ಆಗ ಭೀಷ್ಮನು ದಿವಿಯಲ್ಲಿದ್ದ ಆ ಎಂಟು ಬ್ರಹ್ಮವಾದಿಗಳನ್ನು ನೋಡಿದೆನು. ಅವರು ಮುಗುಳ್ನಗುತ್ತಾ ಮೆಲ್ಲನೆ ನನಗೆ ಹೇಳಿದರು: “ಭರತಶ್ರೇಷ್ಠ! ನಾರದನು ಹೇಳಿದಂತೆಯೇ ಮಾಡು. ಇದು ಲೋಕಗಳ ಪರಮ ಶ್ರೇಯಸ್ಸನ್ನು ತರುತ್ತದೆಯೆಂದು ತಿಳಿ.”
ಆಗ ಭೀಷ್ಮನು ಪ್ರಸ್ವಾಪನವನ್ನು ಹಿಂದೆತೆಗೆದುಕೊಂಡನು. ಆ ಯುದ್ಧದಲ್ಲಿ ಯಥಾವಿಧಿಯಾಗಿ ಬ್ರಹ್ಮಾಸ್ತ್ರವನ್ನು ಬೆಳಗಿಸಿದನು! ಆ ಅಸ್ತ್ರವನ್ನು ಹಿಂದೆ ತೆಗೆದುಕೊಂಡುದುದನ್ನು ನೋಡಿದ ರಾಮನು ರೋಷಗೊಂಡು “ಮಂದಬುದ್ಧಿಯವನಾದ ನಾನು ಭೀಷ್ಮನಿಂದ ಗೆಲ್ಲಲ್ಪಟ್ಟೆ!” ಎಂದು ಹೇಳಿ ಒಮ್ಮೆಲೇ ಯುದ್ಧವನ್ನು ತ್ಯಜಿಸಿದನು. ಆಗ ಜಾಮದಗ್ನಿಯು ತನ್ನ ತಂದೆಯನ್ನೂ ಇತರ ಪಿತೃಗಳನ್ನೂ ನೋಡಿದನು. ಅವರು ಅವನನ್ನು ಸುತ್ತುವರೆದು ನಿಂತು ಈ ಸಾಂತ್ವನದ ಮಾತುಗಳನ್ನಾಡಿದರು: “ವತ್ಸ! ಸಾಹಸಿಯೊಂದಿಗೆ ಇಂತಹ ಸಾಹಸವನ್ನು – ವಿಶೇಷತಃ ಭೀಷ್ಮನಂತಹ ಕ್ಷತ್ರಿಯನೊಂದಿಗೆ ಯುದ್ಧ ಮಾಡಲು - ಎಂದೂ ಮಾಡಬೇಡ! ಯುದ್ಧಮಾಡುವುದಾದರೋ ಕ್ಷತ್ರಿಯರ ಧರ್ಮ. ಸ್ವಾಧ್ಯಾಯ ವ್ರತಚರ್ಯೆಗಳು ಬ್ರಾಹ್ಮಣರ ಪರಮ ಧನ. ಹಿಂದೆ ಯಾವುದೋ ಕಾರಣದಿಂದ ನಾವು ನಿನಗೆ ಶಸ್ತ್ರಧಾರಣದ ಉಪದೇಶವನ್ನು ನೀಡಿದ್ದೆವು. ಅದರಿಂದ ನೀನು ಉಗ್ರ ಕಾರ್ಯವನ್ನು ಎಸಗಿದ್ದೀಯೆ. ಭೀಷ್ಮನೊಡನೆ ಮಾಡಿದ ಈ ಯುದ್ಧದೊಂದಿಗೆ ಮುಗಿಸು. ಸಾಕಷ್ಟು ಯುದ್ಧ ಮಾಡಿದ್ದೀಯೆ. ಇನ್ನು ನಿಲ್ಲಿಸು! ನಿನಗೆ ಮಂಗಳವಾಗಲಿ! ಇದನ್ನು ಸಮಾಪ್ತಗೊಳಿಸು. ಧನುರ್ಧಾರಣೆಯನ್ನು ವಿಸರ್ಜಿಸಿ ತಪಸ್ಸನ್ನು ತಪಿಸು! ಈ ಶಾಂತನವ ಭೀಷ್ಮನನ್ನು ಎಲ್ಲ ದೇವತೆಗಳೂ ತಡೆಯುತ್ತಿದ್ದಾರೆ. ಈ ರಣದಿಂದ ಹಿಂದಿರುಗು ಎಂದು ಪ್ರಚೋದಿಸುತ್ತಿದ್ದಾರೆ. ಪುನಃ ಪುನಃ “ರಾಮನೊಂದಿಗೆ ಹೋರಾಡಬೇಡ. ಅವನು ನಿನ್ನ ಗುರು ಎಂದೂ, ರಾಮನನ್ನು ರಣದಲ್ಲಿ ಗೆಲ್ಲಲು ನಿನಗೆ ಅಥವಾ ಅನ್ಯರಿಗೆ ಸಾಧ್ಯವಿಲ್ಲ” ಎಂದೂ ಹೇಳುತ್ತಿದ್ದಾರೆ. ನಿನಗೆ ನಾವು ಗುರುಗಳು. ಆದುದರಿಂದ ನಿನ್ನನ್ನು ತಡೆಯುತ್ತಿದ್ದೇವೆ. ಭೀಷ್ಮನು ವಸುಗಳಲ್ಲಿಯೇ ಶ್ರೇಷ್ಠನಾದವನು. ಅದೃಷ್ಟ! ನೀನು ಬದುಕಿರುವೆ. ಶಂತನು ಪುತ್ರ ಗಾಂಗೇಯನು ಮಹಾಯಶಸ್ವಿ ವಸುಗಳಲ್ಲೊಬ್ಬನು. ಅವನನ್ನು ನೀನು ಹೇಗೆ ರಣದಲ್ಲಿ ಗೆಲ್ಲಲು ಶಕ್ಯ? ಹಿಂದೆ ಸರಿ. ಪಾಂಡವಶ್ರೇಷ್ಠ, ಪುರಂದರಸುತ, ಬಲೀ, ನರ, ಪಜಾಪತಿ, ವೀರ, ಪೂರ್ವದೇವ, ಸನಾತನ, ಸವ್ಯಸಾಚಿ, ಮೂರು ಲೋಕಗಳಲ್ಲಿಯೂ ವೀರ್ಯವಂತನೆಂದು ವಿಖ್ಯಾತನಾದ ಅರ್ಜುನನು ಕಾಲಬಂದಾಗ ಮೃತ್ಯುವಾಗುತ್ತಾನೆ ಎಂದು ಸ್ವಯಂಭುವು ವಿಹಿಸಿದ್ದಾನೆ.”
ಹೀಗೆ ಹೇಳಿದ ತಂದೆ ಮತ್ತು ಪಿತೃಗಳಿಗೆ ರಾಮನು ಹೇಳಿದನು: “ನಾನು ಯುದ್ಧದಿಂದ ಹಿಂದೆ ಸರಿಯುವುದಿಲ್ಲವೆಂದು ವ್ರತವನ್ನಿಟ್ಟುಕೊಂಡಿದ್ದೇನೆ. ಈ ಹಿಂದೆ ನಾನು ಎಂದೂ ರಣದ ನೆತ್ತಿಯಿಂದ ಹಿಂಜರಿದಿರಲಿಲ್ಲ. ಬೇಕಾದರೆ ಪಿತಾಮಹರು ಆಪಗೇಯನನ್ನು ಯುದ್ಧದಿಂದ ಹಿಂದೆಸರಿಸಿ. ನಾನು ಮಾತ್ರ ಎಂದೂ ಯುದ್ಧದಿಂದ ಹಿಂದೆಸರಿಯುವುದಿಲ್ಲ.”
ಆಗ ಋಚೀಕನ ಮುಂದಾಳುತ್ವದಲ್ಲಿ ನಾರದನೂ ಸೇರಿ ಮುನಿಗಳು ಒಟ್ಟಾಗಿ ಬಂದು ಭೀಷ್ಮನಿಗೆ ಹೇಳಿದರು: “ಮಗೂ! ರಣದಿಂದ ಹಿಂದೆಸರಿ. ದ್ವಿಜೋತ್ತಮನನ್ನು ಗೌರವಿಸು.” “ಇಲ್ಲ” ಎಂದು ಭೀಷ್ಮನು ಕ್ಷತ್ರಧರ್ಮವನ್ನು ಅಪೇಕ್ಷಿಸದೆಯೇ ಅವರಿಗೆ ಹೇಳಿದನು. “ಲೋಕದಲ್ಲಿ ಇದು ನನ್ನ ವ್ರತ! ನಾನು ಎಂದೂ ಯುದ್ಧದಿಂದ ಬೆನ್ನಮೇಲೆ ಬಾಣಗಳಿಂದ ಪೆಟ್ಟು ತಿನ್ನದೇ ವಿಮುಖನಾಗಿ ಹಿಂದಿರುಗುವುದಿಲ್ಲವೆಂದು! ಇದನ್ನು ನಾನು ಶಾಶ್ವತವಾಗಿ ಲೋಭಕ್ಕಾಗಲೀ, ಕಾರ್ಪಣ್ಯದಿಂದಾಗಲೀ, ಭಯದಿಂದಾಗಲೀ, ಅರ್ಥಕ್ಕಾಗಲೀ ತ್ಯಜಿಸುವುದಿಲ್ಲ ಎಂದು ನನ್ನ ಬುದ್ಧಿಯು ನಿಶ್ಚಯಿಸಿದೆ.” ಆಗ ನಾರದಪ್ರಮುಖ ಮುನಿಗಳೆಲ್ಲರೂ ಭೀಷ್ಮನ ಮಾತೆ ಭಾಗೀರಥಿಯೂ ರಣಮಧ್ಯವನ್ನು ಪ್ರವೇಶಿಸಿದರು. ಆಗಲೂ ಅವನು ಮೊದಲಿನಂತೆ ಶರವನ್ನು ಧನುಸ್ಸಿಗೆ ಹೂಡಿದ್ದನು, ದೃಢನಿಶ್ಚಯನಾಗಿ ಆಹವದಲ್ಲಿ ಯುದ್ಧಮಾಡಲು ನಿಂತಿದ್ದನು. ಆಗ ಅವರು ಎಲ್ಲರೂ ಒಟ್ಟಿಗೆ ಇನ್ನೊಮ್ಮೆ ಭೃಗುನಂದನ ರಾಮನಿಗೆ ಹೇಳಿದರು: “ಭಾರ್ಗವ! ವಿಪ್ರರ ಹೃದಯವು ಬೆಣ್ಣೆಯಿಂದ್ದಂತೆ. ಶಾಂತನಾಗು! ಈ ಯುದ್ಧದಿಂದ ಹಿಂದೆಸರಿ! ಭೀಷ್ಮನಿಂದ ನೀನು ಅವಧ್ಯ. ಭೀಷ್ಮನೂ ನಿನ್ನಿಂದ ಅವಧ್ಯ.”
ಹೀಗೆ ಅವರೆಲ್ಲರೂ ಯುದ್ಧವನ್ನು ತಡೆದರು ಮತ್ತು ಪಿತೃಗಳು ಭೃಗುನಂದನನನ್ನು ಶಸ್ತ್ರವನ್ನು ಕೆಳಗಿಡುವಂತೆ ಮಾಡಿದರು. ಆಗ ಭೀಷ್ಮನು ಪುನಃ ಮೇಲೇರುತ್ತಿರುವ ದೀಪ್ಯಮಾನ ಗ್ರಹಗಳಂತಿದ್ದ ಆ ಎಂಟು ಬ್ರಹ್ಮವಾದಿಗಳನ್ನು ನೋಡಿದನು. ಸಮರದಲ್ಲಿ ನಿಂತಿದ್ದ ಭೀಷ್ಮನಿಗೆ ಅವರು ಪ್ರೀತಿಯಿಂದ ಹೇಳಿದರು: “ಮಹಾಬಾಹೋ! ಗುರು ರಾಮನಲ್ಲಿಗೆ ಹೋಗಿ ಲೋಕಕ್ಕೆ ಹಿತವಾದುದನ್ನು ಮಾಡು.” ಸುಹೃದಯರ ಮಾತಿನಂತೆ ರಾಮನು ಹಿಂದೆಸರಿದುದನ್ನು ನೋಡಿ ಲೋಕಗಳ ಹಿತವನ್ನು ಮಾಡಲೋಸುಗ ಅವನಿಗೆ ಹೇಳಿದ ಮಾತನ್ನು ಭೀಷ್ಮನು ಅನುಸರಿಸಿದನು. ಅವನು ರಾಮನ ಬಳಿ ಹೋಗಿ, ತುಂಬಾ ಗಾಯಗೊಂಡವನಂತೆ ವಂದಿಸಿದನು. ಮಹಾತಪಸ್ವಿ ರಾಮನಾದರೋ ಪ್ರೀತಿಯಿಂದ ಮುಗುಳ್ನಗುತ್ತಾ ಅವನಿಗೆ ಹೇಳಿದನು: “ನಿನ್ನಂಥಹ ಕ್ಷತ್ರಿಯನು ಭೂಮಿಯ ಮೇಲೆ ನಡೆಯುವವ ಯಾರೂ ಲೋಕದಲ್ಲಿಯೇ ಇಲ್ಲ. ಭೀಷ್ಮ! ಹೋಗುವವನಾಗು! ನಿನ್ನಿಂದ ಈ ಯುದ್ಧದಲ್ಲಿ ನಾನು ತುಂಬಾ ತೃಪ್ತನಾಗಿದ್ದೇನೆ.”
ಭೀಷ್ಮನ ಸಮಕ್ಷಮದಲ್ಲಿಯೇ ಆ ಕನ್ಯೆ ಅಂಬೆಯನ್ನು ಕರೆದು ಭಾರ್ಗವನು ತಪಸ್ವಿಗಳ ಮಧ್ಯೆ ಈ ದೀನ ಮಾತುಗಳನ್ನಾಡಿದನು: “ಭಾಮಿನೀ! ಈ ಲೋಕಗಳೆಲ್ಲವುಗಳ ಮುಂದೆ ನನ್ನಲ್ಲಿದ್ದ ಪರಮ ಶಕ್ತಿಯನ್ನುಪಯೋಗಿಸಿ ಮಹಾ ಪೌರಷವನ್ನು ತೋರಿಸಿದ್ದೇನೆ. ನನ್ನ ಉತ್ತಮ ಅಸ್ತ್ರಗಳನ್ನು ತೋರಿಸಿಯೂ ನಾನು ಶಸ್ತ್ರಭೃತರಲ್ಲಿ ಶ್ರೇಷ್ಠನಾದ ಭೀಷ್ಮನನ್ನು ಯುದ್ಧದಲ್ಲಿ ಮೀರಿಸಲು ಶಕ್ಯನಾಗಲಿಲ್ಲ. ಇದು ನನ್ನ ಶಕ್ತಿಯ ಮಿತಿ. ಇದು ನನ್ನ ಬಲದ ಮಿತಿ. ನಿನಗಿಷ್ಟವಾದಲ್ಲಿಗೆ ಹೋಗುವವಳಾಗು. ಅಥವಾ ನಿನಗೆ ಬೇರೆ ಏನಾದರೂ ಮಾಡಲೇ? ಭೀಷ್ಮನನ್ನೇ ಶರಣು ಹೋಗು. ನಿನಗೆ ಬೇರೆ ಗತಿಯೇ ಇಲ್ಲವೆನಿಸುತ್ತದೆ. ಏಕೆಂದರೆ ಮಹಾಸ್ತ್ರಗಳನ್ನು ಪ್ರಯೋಗಿಸಿ ಭೀಷ್ಮನು ನನ್ನನ್ನು ಗೆದ್ದಿದ್ದಾನೆ.”
ಹೀಗೆ ಹೇಳಿ ಮಹಾಮನಸ್ವಿ ರಾಮನು ನಿಟ್ಟಿಸುರು ಬಿಡುತ್ತಾ ಸುಮ್ಮನಾದನು. ಆಗ ಕನ್ಯೆಯು ಭೃಗುನಂದನನಿಗೆ ಹೇಳಿದಳು: “ಭಗವನ್! ಇನ್ನು ನೀನು ಹೇಳಿದಂತೆಯೇ! ಈ ಉದಾರಧೀ ಭೀಷ್ಮನು ಯುದ್ಧದಲ್ಲಿ ದೇವತೆಗಳಿಗೂ ಅಜೇಯನು. ಯಥಾಶಕ್ತಿಯಾಗಿ ಯಥೋತ್ಸಾಹವಾಗಿ ನೀನು, ರಣದಲ್ಲಿ ನಿನ್ನ ವಿವಿಧ ವೀರ್ಯ ಅಸ್ತ್ರಗಳನ್ನು ಕೆಳಗಿಡದೆಯೇ ನನ್ನ ಕೆಲಸವನ್ನು ಮಾಡಿದ್ದೀಯೆ. ಕೊನೆಯಲ್ಲಿಯೂ ಯುದ್ಧದಲ್ಲಿ ಅವನನ್ನು ಮೀರಿಸಲು ಸಾಧ್ಯವಾಗಲಿಲ್ಲ. ಆದರೆ ನಾನು ಪುನಃ ಎಂದೂ ಭೀಷ್ಮನಲ್ಲಿಗೆ ಹೋಗುವುದಿಲ್ಲ. ಎಲ್ಲಿ ಸ್ವಯಂ ನಾನೇ ಭೀಷ್ಮನನ್ನು ಸಮರದಲ್ಲಿ ಬೀಳಿಸಬಲ್ಲೆನೋ ಅಲ್ಲಿಗೆ ಹೋಗುತ್ತೇನೆ.”
ಹೀಗೆ ಹೇಳಿ ರೋಷವ್ಯಾಕುಲಲೋಚನಳಾದ ಆ ಕನ್ಯೆಯು ಭೀಷ್ಮನ ವಧೆಯನ್ನೇ ಚಿಂತಿಸುತ್ತಾ ತಪಸ್ಸಿನ ಧೃತ ಸಂಕಲ್ಪವನ್ನು ಮಾಡಿ ಹೊರಟು ಹೋದಳು. ಆ ಮುನಿ ಭೃಗುಸತ್ತಮ ರಾಮನು ನನ್ನನ್ನು ಬೀಳ್ಕೊಂಡು ಎಲ್ಲಿಂದ ಬಂದಿದ್ದನೋ ಆ ಮಹೇಂದ್ರ ಪರ್ವತಕ್ಕೆ ಮುನಿಗಳ ಸಹಿತ ಹೊರಟು ಹೋದನು. ಭೀಷ್ಮನು ನಾನು ರಥವನ್ನೇರಿ, ದ್ವಿಜಾತಿಯವರು ಸ್ತುತಿಸುತ್ತಿರಲು ನಗರವನ್ನು ಪ್ರವೇಶಿಸಿ ತಾಯಿ ಸತ್ಯವತಿಗೆ ನಡೆದುದೆಲ್ಲವನ್ನೂ ನಿವೇದಿಸಿದನು. ಅವಳೂ ಕೂಡ ಭೀಷ್ಮನನ್ನು ಅಭಿನಂದಿಸಿದಳು. ಆ ಕನ್ಯೆಯ ಕೆಲಸಗಳ ವೃತ್ತಾಂತವನ್ನು ತಿಳಿಯಲೋಸುಗ ಭೀಷ್ಮನು ಪ್ರಾಜ್ಞ ಪುರುಷರನ್ನು ನಿಯೋಜಿಸಿದನು. ಅವರು ಅವನ ಪ್ರಿಯಹಿತಗಳಲ್ಲಿ ನಿರತರಾಗಿ ದಿವಸ ದಿವಸವೂ ಅಂಬೆಯ ಓಡಾಟಗಳನ್ನು, ಮಾತುಗಳನ್ನು ಮತ್ತು ನಡತೆಗಳನ್ನು ಅವನಿಗೆ ವರದಿ ಮಾಡಿದರು.
ಅವಳು ತಪಸ್ಸಿಗೆ ಹಠಮಾಡಿ ವನಕ್ಕೆ ಹೋದಾಗಿನಿಂದಲೇ ಭೀಷ್ಮನು ವ್ಯಥಿತನೂ, ದೀನನೂ, ಬುದ್ಧಿಕಳೆದುಕೊಂಡಂಥವನೂ ಆದನು. ಏಕೆಂದರೆ ಬ್ರಹ್ಮವಿದನಾದ ಸಂಶಿತವ್ರತ ತಾಪಸನನ್ನು ಬಿಟ್ಟು ಬೇರೆ ಯಾವ ಕ್ಷತ್ರಿಯನೂ ವೀರ್ಯದಿಂದ ಅವನನ್ನು ಯುದ್ಧದಲ್ಲಿ ಜಯಿಸಲಾರನು! ಭಯದಿಂದ ಅವನು ಇದನ್ನು ನಾರದ ಮತ್ತು ವ್ಯಾಸನಿಗೂ ಕೂಡ ಹೇಳುವ ಕಾರ್ಯವನ್ನು ಮಾಡಿದನು. ಅವರು ಅವನಿಗೆ ಹೇಳಿದರು: “ಭೀಷ್ಮ! ಕಾಶಿಸುತೆಯ ಕುರಿತು ವಿಷಾದಪಡಬೇಡ. ದೈವವನ್ನು ಪುರುಷ ಕಾರಣಗಳಿಂದ ಯಾರುತಾನೇ ತಡೆಯಲು ಪ್ರಯತ್ನಿಸಬೇಕು?”
ಅಂಬೆಯ ತಪಸ್ಸು
ಕನ್ಯೆ ಅಂಬೆಯಾದರೋ ಯಮುನಾತೀರದ ಆಶ್ರಮಮಂಡಲವನ್ನು ಪ್ರವೇಶಿಸಿ ಅತಿಮಾನುಷ ತಪಸ್ಸನ್ನು ತಪಿಸಿದಳು. ಆ ತಪೋಧನೆಯು ನಿರಾಹಾರಳಾಗಿ, ಕೃಶಳಾಗಿ, ರೂಕ್ಷಳಾಗಿ, ಜಟಿಲಳಾಗಿ, ಹೊಲಸುತುಂಬಿಕೊಂಡು ಆರು ತಿಂಗಳು ಗಾಳಿಯನ್ನೇ ಸೇವಿಸುತ್ತಾ ಅಲುಗಾಡದೇ ನಿಂತಿದ್ದಳು. ಇನ್ನೊಂದು ವರ್ಷ ಆ ಭಾಮಿನಿಯು ಯಮುನಾತೀರವನ್ನು ಸೇರಿ ನಿರಾಹಾರಳಾಗಿ ನೀರಿನಲ್ಲಿಯೇ ವಾಸಿಸಿ ಕಳೆದಳು. ಅನಂತರ ತೀವ್ರಕೋಪದಿಂದ ಪಾದದ ಅಂಗುಷ್ಠದ ಮೇಲೆ ನಿಂತುಕೊಂಡು ಕೇವಲ ಒಂದು ಒಣ ಎಲೆಯನ್ನು ತಿಂದುಕೊಂಡು ಒಂದು ವರ್ಷವನ್ನು ಕಳೆದಳು. ಹೀಗೆ ಆ ರೋದಸಿಯು ಹನ್ನೆರಡು ವರ್ಷಗಳು ತಪಿಸಿದಳು. ಅವಳ ಬಾಂಧವರೂ ಕೂಡ ಅವಳನ್ನು ತಡೆಯಲು ಶಕ್ಯರಾಗಲಿಲ್ಲ. ಆಗ ಅವಳು ಸಿದ್ಧಚಾರಣಸೇವಿತ ಮಹಾತ್ಮ ತಾಪಸ ಪುಣ್ಯಶೀಲರ ಆಶ್ರಮ ಭೂಮಿಗೆ ಹೋದಳು. ಅಲ್ಲಿ ಪುಣ್ಯದೇಶಗಳಲ್ಲಿ ಸ್ನಾನಮಾಡುತ್ತಾ ಹಗಲು ರಾತ್ರಿ ಕಾಶಿಕನ್ಯೆಯು ತನಗಿಷ್ಟವಾದ ಹಾಗೆ ತಿರುಗಾಡಿದಳು. ನಂದಾಶ್ರಮ, ನಂತರ ಶುಭ ಉಲೂಕಾಶ್ರಮ, ಚ್ಯವನಾಶ್ರಮ, ಬ್ರಹ್ಮಸ್ಥಾನ, ದೇವರು ಯಾಜಿಸಿದ, ದೇವರ ಅರಣ್ಯ ಪ್ರಯಾಗ, ಭೋಗವತಿ, ಕೌಶಿಕಾಶ್ರಮ, ಮಾಂಡವ್ಯಾಶ್ರಮ, ದಿಲೀಪನ ಆಶ್ರಮ, ರಾಮಸರೋವರ, ಪೈಲಗಾರ್ಗನ ಆಶ್ರಮ - ಈ ತಿರ್ಥಗಳಲ್ಲಿ ಕಾಶಿಕನ್ಯೆಯು ದೇಹವನ್ನು ತೊಳೆದು ತೀವ್ರ ತಪಸ್ಸಿನಲ್ಲಿದ್ದಳು. ಆಗ ಭೀಷ್ಮನ ಮಾತೆಯು ಜಲದಿಂದ ಮೇಲೆದ್ದು ಅವಳಿಗೆ ಹೇಳಿದಳು: “ಭದ್ರೇ! ಏಕೆ ಈ ಕಷ್ಟಪಡುತ್ತಿರುವೆ? ಕಾರಣವನ್ನು ನನಗೆ ಹೇಳು.” ಅವಳಿಗೆ ಆ ಅನಿಂದಿತೆಯು ಕೈಮುಗಿದು ಹೇಳಿದಳು: “ಚಾರುಲೋಚನೇ! ಭೀಷ್ಮನು ಸಮರದಲ್ಲಿ ರಾಮನನ್ನು ಗೆದ್ದನು. ಯುದ್ಧ ಮಾಡಲು ಬರುವ ಆ ಮಹೀಪತಿಯೊಡನೆ ಬೇರೆ ಯಾರುತಾನೇ ಹೋರಾಡಲು ಬಯಸುವರು? ನಾನು ಭೀಷ್ಮನ ವಿನಾಶಕ್ಕೆ ಈ ಸುದಾರುಣ ತಪಸ್ಸನ್ನು ತಪಿಸುತ್ತಿದ್ದೇನೆ. ದೇವೀ! ಆ ನೃಪನನ್ನು ಕೊಲ್ಲಬಹುದೆಂದು ನಾನು ಭೂಮಿಯಲ್ಲಿ ಅಲೆದಾಡುತ್ತಿದ್ದೇನೆ. ಈ ದೇಹದಲ್ಲಿ ಅಥವಾ ಇನ್ನೊಂದರಲ್ಲಿ ಇದೇ ನನ್ನ ವ್ರತದಿಂದ ಬಯಸುವ ಫಲ.”
ಆಗ ಸಾಗರಗೆಯು ಅವಳಿಗೆ ಹೇಳಿದಳು: “ಭಾಮಿನೀ! ನೀನು ಸುತ್ತಿ ಬಳಸಿ ಹೋಗುತ್ತಿದ್ದೀಯೆ. ನಿನ್ನ ಈ ಆಸೆಯನ್ನು ಪೂರೈಸಲು ನೀನು ಶಕ್ಯಳಾಗುವುದಿಲ್ಲ. ಭೀಷ್ಮನ ವಿನಾಶಕ್ಕಾಗಿ ನೀನು ವ್ರತವನ್ನು ಆಚರಿಸುತ್ತಿದ್ದೀಯೆ. ಒಂದುವೇಳೆ ವ್ರತಸ್ಥಳಾಗಿದ್ದುಕೊಂಡೇ ನೀನು ಶರೀರವನ್ನು ತೊರೆದರೆ ಮಳೆನೀರಿನಿಂದ ತುಂಬಿಕೊಳ್ಳುವ ಕುಟಿಲ ನದಿಯಾಗುತ್ತೀಯೆ. ಅಸಾದ್ಯ ತೀರ್ಥವಾಗುತ್ತೀಯೆ. ಮಳೆನೀರಿನಿಂದ ತುಂಬಿ ಭಯಂಕರ ಪ್ರವಾಹವಾಗಿ ಎಂಟು ತಿಂಗಳು ಎಲ್ಲರಿಗೂ ಘೋರವೂ ಭಯಂಕರಿಯೂ ಆಗುತ್ತೀಯೆ.” ಹೀಗೆ ಕಾಶಿಕನ್ಯೆಗೆ ಹೇಳಿ ಭೀಷ್ಮನ ಮಾತೆ ಮಹಾಭಾಗೆ ಭಾಮಿನಿಯು ಮುಗುಳ್ನಗುತ್ತಾ ಹಿಂದಿರುಗಿದಳು.
ಆ ವರವರ್ಣಿನಿಯು ಕೆಲವೊಮ್ಮೆ ಎಂಟು ತಿಂಗಳು ಮತ್ತು ಕೆಲವೊಮ್ಮ ಹತ್ತು ತಿಂಗಳು ಏನನ್ನೂ ತಿನ್ನದೇ ನೀರನ್ನೂ ಕುಡಿಯದೇ ಪುನಃ ತಪಸ್ಸನ್ನಾಚರಿಸಿದಳು. ಆ ಕಾಶಿಪತಿಯ ಸುತೆಯು ಅಲ್ಲಿ ಇಲ್ಲಿ ತಿರುಗಾಡುತ್ತ ತೀರ್ಥದ ಆಸೆಯಿಂದ ಪುನಃ ವತ್ಸಭೂಮಿಗೆ ಆಗಮಿಸಿದಳು. ಅವಳು ವತ್ಸಭೂಮಿಯಲ್ಲಿ ಮಳೆನೀರಿನಿಂದ ತುಂಬಿ ಹರಿಯುವ ಬಹಳ ಮೊಸಳೆಗಳಿರುವ, ಕಷ್ಟದ ತೀರ್ಥ, ಕುಟಿಲ ನದಿಯಾದಳೆಂದು ಹೇಳುತ್ತಾರೆ. ತಪಸ್ಸಿನ ಪ್ರಭಾವದಿಂದ ಆ ಕನ್ಯೆಯ ಅರ್ಧಭಾಗವು ನದಿಯಾಗಿ ಹರಿಯಿತು ಮತ್ತು ಇನ್ನೊಂದು ಅರ್ಧಭಾಗವು ಕನ್ಯೆಯಾಗಿಯೇ ಉಳಿಯಿತು.
ಅಂಬೆಯ ಅಗ್ನಿಪ್ರವೇಶ
ಆಗ ಅಲ್ಲಿದ್ದ ತಾಪಸರೆಲ್ಲ ತಪಸ್ಸಿನಲ್ಲಿ ಧೃತನಿಶ್ಚಯಳಾದ ಅವಳು ಹಿಂದಿರುಗದೇ ಇದ್ದುದನ್ನು ನೋಡಿ “ಏನು ಕಾರ್ಯ?” ಎಂದು ಅವಳನ್ನು ಪ್ರಶ್ನಿಸಿದರು. ಆಗ ಆ ಕನ್ಯೆಯು ತಪೋವೃದ್ಧ ಋಷಿಗಳಿಗೆ ಹೇಳಿದಳು: “ಭೀಷ್ಮನಿಂದ ನಿರಾಕೃತಳಾಗಿ ಪತಿಧರ್ಮದಿಂದ ವಂಚಿತಳಾಗಿದ್ದೇನೆ. ತಪೋಧನರೇ! ಅವನ ವಧೆಗೋಸ್ಕರ ದೀಕ್ಷಿತಳಾಗಿದ್ದೇನೆಯೇ ಹೊರತು ಉತ್ತಮ ಲೋಕಗಳಿಗಲ್ಲ. ಭೀಷ್ಮನನ್ನು ಕೊಂದು ಶಾಂತಿಯು ದೊರೆಯುತ್ತದೆ ಎಂದು ನಿಶ್ಚಯಿಸಿದ್ದೇನೆ. ಯಾರಿಂದಾಗಿ ನಾನು ಈ ನಿರಂತರ ದುಃಖವನ್ನು ಅನುಭವಿಸುತ್ತಿರುವೆನೋ, ಯಾರಿಂದಾಗಿ ಶಾಶ್ವತವಾಗಿ ಪತಿಲೋಕವನ್ನು ಕಳೆದುಕೊಂಡಿದ್ದೇನೋ, ಯಾರಿಂದಾಗಿ ನಾನು ಹೆಣ್ಣು ಅಲ್ಲದ ಪುರುಷನೂ ಅಲ್ಲದ ಜೀವನವನ್ನು ನಡೆಸುತ್ತಿದ್ದೇನೋ ಆ ಗಾಂಗೇಯನನ್ನು ಯುದ್ಧದಲ್ಲಿ ಸಂಹರಿಸಿ ನಾನು ಹಿಂದೆ ಸರಿಯುತ್ತೇನೆ. ಇದು ನನ್ನ ಹೃದಯದ ಸಂಕಲ್ಪ. ಇದರ ಹೊರತಾದ ಉದ್ದೇಶವಿಲ್ಲ. ಸ್ತ್ರೀಯಾಗಿದ್ದುಕೊಂಡು ನನಗೆ ಮಾಡಬೇಕಾದುದು ಏನೂ ಇಲ್ಲ. ಪುರುಷನಾಗಲು ನಿಶ್ಚಯಿಸಿದ್ದೇನೆ. ಇದರಿಂದ ಭೀಷ್ಮನಿಗೆ ಪ್ರತೀಕಾರ ಮಾಡಬಲ್ಲೆ. ನನ್ನನ್ನು ಪುನಃ ತಡೆಯಬೇಡಿ.”
ಆಗ ಆ ಮಹರ್ಷಿಗಳ ಮಧ್ಯದಲ್ಲಿಯೇ ತನ್ನದೇ ರೂಪದಲ್ಲಿ ಶೂಲಪಾಣಿ ದೇವ ಉಮಾಪತಿಯು ಆ ಭಾಮಿನಿಗೆ ಕಾಣಿಸಿಕೊಂಡನು. ವರವೇನನ್ನು ಕೊಡಲೆಂದು ಕೇಳಲು ಅವಳು ನನ್ನ ಪರಾಜಯವನ್ನು ಕೇಳಿಕೊಂಡಳು. “ವಧಿಸುತ್ತೀಯೆ!” ಎಂದು ದೇವನು ಆ ಮನಸ್ವಿನಿಗೆ ಉತ್ತರಿಸಿದನು. ಆಗ ಪುನಃ ಆ ಕನ್ಯೆಯು ರುದ್ರನನ್ನು ಕೇಳಿದಳು: “ದೇವ! ಸ್ತ್ರೀಯಾಗಿರುವ ನಾನು ಯುದ್ಧದಲ್ಲಿ ಜಯವನ್ನು ಪಡೆಯಲು ಹೇಗೆ ಸಾಧ್ಯ? ಸ್ತ್ರೀಭಾವದಿಂದ ನನ್ನ ಮನಸ್ಸು ಗಾಢವಾದ ಶಾಂತಿಯನ್ನು ಪಡೆದಿದೆ. ನೀನು ಭೀಷ್ಮಪರಾಜಯವನ್ನು ಕೇಳಿಸಿದ್ದೀಯೆ. ಅದು ಹೇಗೆ ಸತ್ಯವಾಗಿಸಬಹುದೋ, ಹೇಗೆ ನಾನು ಭೀಷ್ಮ ಶಾಂತನವನನ್ನು ಯುದ್ಧದಲ್ಲಿ ಎದುರಿಸಿ ಕೊಲ್ಲಬಲ್ಲೆನೋ, ಹಾಗೆ ಮಾಡು.”
ಮಹಾದೇವ ವೃಷಧ್ವಜನು ಆ ಕನ್ಯೆಗೆ ಹೇಳಿದನು: “ಭದ್ರೇ! ನನ್ನ ಮಾತು ಸುಳ್ಳಾಗುವುದಿಲ್ಲ. ಹೇಳಿದುದು ಸತ್ಯವಾಗುತ್ತದೆ. ರಣದಲ್ಲಿ ಭೀಷ್ಮನನ್ನು ವಧಿಸುತ್ತೀಯೆ. ಮತ್ತು ಪುರುಷತ್ವವನ್ನೂ ಪಡೆಯುತ್ತೀಯೆ. ಅನ್ಯ ದೇಹಕ್ಕೆ ಹೋದಾಗಲೂ ಕೂಡ ಇವೆಲ್ಲವನ್ನೂ ನೆನಪಿಸಿಕೊಳ್ಳುತ್ತೀಯೆ. ಮಹಾರಥಿ ದ್ರುಪದನ ಕುಲದಲ್ಲಿ ಹುಟ್ಟಿ ಸುಸಮ್ಮತನಾದ ಶೀಘ್ರಾಸ್ತ್ರನೂ ಚಿತ್ರಯೋಧಿಯೂ ಆಗುತ್ತೀಯೆ. ಏನು ಹೇಳಿದೆನೋ ಅವೆಲ್ಲವೂ ನಡೆಯುತ್ತವೆ. ಕಾಲಬಂದಾಗ ನಂತರ ಹೇಗೋ ನೀನು ಪುರುಷನಾಗುತ್ತೀಯೆ.”
ಹೀಗೆ ಹೇಳಿ ಆ ವಿಪ್ರರು ನೋಡುತ್ತಿದ್ದಂತೆಯೇ ಮಹಾತೇಜಸ್ವಿ ಕಪರ್ದೀ ವೃಷಭಧ್ವಜನು ಅಲ್ಲಿಯೇ ಅಂತರ್ಧಾನನಾದನು. ಆಗ ಆ ಅನಿಂದಿತೆ ವರವರ್ಣಿನಿಯು ಆ ಮಹರ್ಷಿಗಳು ನೋಡುತ್ತಿದ್ದಂತೆಯೇ ವನದಲ್ಲಿದ್ದ ಕಟ್ಟಿಗೆಗಳನ್ನು ಒಟ್ಟುಹಾಕಿದಳು. ಹಿರಿಯ ಕಾಶಿಸುತೆಯು ಯಮುನಾನದಿಯ ತೀರದಲ್ಲಿ ಅತಿದೊಡ್ಡ ಚಿತೆಯನ್ನು ಮಾಡಿ, ಹುತಾಶನನನ್ನು ಹಚ್ಚಿ, ಉರಿಯುತ್ತಿರುವ ಅಗ್ನಿಯಲ್ಲಿ ರೋಷದಿಂದ ಉರಿಯುವ ಚೇತನದಿಂದ “ಭೀಷ್ಮವಧಾಯ” ಎಂದು ಹೇಳಿ ಹುತಾಶನನನ್ನು ಪ್ರವೇಶಿಸಿದಳು.
ಅಂಬೆಯು ದ್ರುಪದನಲ್ಲಿ ಮಗಳಾಗಿ ಹುಟ್ಟಿದುದು; ಶಿಖಂಡಿಯೆಂಬ ಮಗನಾಗಿ ಪಾಲನೆಗೊಂಡಿದುದು
ಮಹೀಪತಿ ದ್ರುಪದನ ಪ್ರಿಯ ಮಹಿಷಿಯು ಅಪುತ್ರವತಿಯಾಗಿದ್ದಳು. ಇದೇ ಸಮಯದಲ್ಲಿ ಮಹೀಪತಿ ದ್ರುಪದನು ಮಕ್ಕಳಿಗೋಸ್ಕರ ಶಂಕರನನ್ನು ತೃಪ್ತಿಪಡಿಸಿದನು. ಭೀಷ್ಮನ ವಧೆಗೋಸ್ಕರ ನಿಶ್ಚಯಿಸಿ ಘೋರ ತಪಸ್ಸಿನಲ್ಲಿ ನಿರತನಾದನು. ತನಗೆ ಪುತ್ರನಾಗಲಿ ಎಂದು ಕೇಳಿಕೊಂಡು ಅವನು ಮಹಾದೇವನಿಂದ ಕನ್ಯೆಯನ್ನು ಪಡೆದನು. “ಭಗವನ್! ಭೀಷ್ಮನಿಗೆ ಪ್ರತೀಕಾರವನ್ನುಂಟುಮಾಡುವ ಮಗನನ್ನು ಇಚ್ಛಿಸುತ್ತೇನೆ.” ಎಂದು ಕೇಳಿಕೊಳ್ಳಲು ದೇವದೇವನು “ನಿನಗೆ ಹೆಣ್ಣು ಮತ್ತು ಗಂಡಾಗಿರುವುದು ಆಗುತ್ತದೆ. ಮಹೀಪಾಲ! ಹಿಂದಿರುಗು! ಇದಕ್ಕಿಂತ ಬೇರೆಯಾದುದು ಆಗುವುದಿಲ್ಲ.”
ಅವನು ನಗರಕ್ಕೆ ಹೋಗಿ ಇದನ್ನು ಪತ್ನಿಗೆ ಹೇಳಿದನು: “ದೇವೀ! ಪುತ್ರನಿಗಾಗಿ ಮಹಾ ತಪಸ್ಸನ್ನಾಚರಿಸಿ ಪ್ರಯತ್ನಿಸಿದೆ. ಕನ್ಯೆಯಾಗಿ ಮುಂದೆ ಪುರುಷನಾಗುತ್ತಾನೆಂದು ಶಂಭುವು ಹೇಳಿದ್ದಾನೆ. ಪುನಃ ಪುನಃ ಬೇಡಿಕೊಳ್ಳಲು ದೇವ ಶಿವನು ಆಗಲಿರುವುದಕ್ಕಿಂತ ಬೇರೆಯಾಗಿ ಆಗುವುದಿಲ್ಲ ಎಂದನು.”
ಆಗ ಆ ಮನಸ್ವಿನೀ, ದ್ರುಪದರಾಜನ ಪತ್ನಿಯು ಋತುಕಾಲದಲ್ಲಿ ನಿಯತಳಾಗಿರಲು ದ್ರುಪದನು ಅವಳನ್ನು ಸೇರಿದನು. ಯಥಾಕಾಲದಲ್ಲಿ ವಿಧಿಯು ಕಂಡ ಕಾರಣದಿಂದ ಪಾರ್ಷತನು ಅವಳಿಗೆ ಗರ್ಭವನ್ನು ನೀಡಿದನು. ದ್ರುಪದನ ಪ್ರಿಯ ಭಾರ್ಯೆ ಆ ದೇವಿ ರಾಜೀವಲೋಚನೆಯು ಆ ಗರ್ಭವನ್ನು ಹೊತ್ತಳು. ಪುತ್ರಸೇಹದಿಂದ ಆ ಮಹಾಬಾಹುವು ಅವಳ ಸುಖಕ್ಕಾಗಿ ಉಪಚಾರ ಮಾಡಿದನು. ಅಪುತ್ರನಾಗಿದ್ದ ರಾಜ ದೃಪದ ಮಹೀಪತಿಗೆ ಅವಳು ಸುಂದರ ಕನ್ಯೆಗೆ ಜನ್ಮವಿತ್ತಳು. ಆದರೆ ದ್ರುಪದನ ಯಶಸ್ವಿನೀ ಪತ್ನಿಯು ಅಪುತ್ರನಾಗಿದ್ದ ಆ ರಾಜನಿಗೆ “ನನಗೆ ಪುತ್ರನು ಹುಟ್ಟಿದ್ದಾನೆ” ಎಂದು ಹೇಳಿದಳು. ಆಗ ರಾಜ ದ್ರುಪದನು ಆ ಮುಚ್ಚಿಟ್ಟ ಮಗಳಿಗೆ ಪುತ್ರನಂತೆ ಎಲ್ಲ ಪುತ್ರಕರ್ಮಗಳನ್ನೂ ನೆರವೇರಿಸಿದನು. ಇವನು ಮಗನೆಂದು ಹೇಳುತ್ತಾ ದ್ರುಪದನ ಮಹಿಷಿಯು ಸರ್ವಯತ್ನದಿಂದ ಆ ಸುಳ್ಳನ್ನು ರಕ್ಷಿಸಿದಳು. ಪಾರ್ಷತಳನ್ನು ಬಿಟ್ಟು ಬೇರೆ ಯಾರಿಗೂ ಇಡೀ ನಗರದಲ್ಲಿ ಅದು ಗೊತ್ತಿರಲಿಲ್ಲ. ಅವಳ ಮಾತಿನಲ್ಲಿ ಶ್ರದ್ಧೆಯನ್ನಿಟ್ಟ ಆ ದೇವ ಅದ್ಭುತತೇಜಸನು ಆ ಕನ್ಯೆಯನ್ನು ಗಂಡೆಂದೇ ಹೇಳಿಕೊಂಡು ಬಂದನು. ಪಾರ್ಥಿವನು ಗಂಡು ಮಗುವಿಗೆ ಮಾಡಬೇಕಾದ ಜಾತಕರ್ಮಗಳೆಲ್ಲವನ್ನೂ ಅವಳಿಗೆ ಮಾಡಿಸಿ ಶಿಖಂಡೀ ಎಂಬ ಹೆಸರನ್ನಿತ್ತನು. ಭೀಷ್ಮನೊಬ್ಬನೇ ಚಾರರ ಮತ್ತು ನಾರದನ ಮಾತುಗಳಿಂದ, ದೇವವಾಕ್ಯದಿಂದ ಮತ್ತು ಅಂಬೆಯ ತಪಸ್ಸಿನಿಂದ ಸತ್ಯವನ್ನು ತಿಳಿದಿದ್ದನು.
ಹಿರಣ್ಯವರ್ಮನ ಕನ್ಯೆಯೊಡನೆ ಕನ್ಯೆ ಶಿಖಂಡಿಯ ವಿವಾಹ
ದ್ರುಪದನು ತನ್ನ ಸ್ವಜನರಲ್ಲಿ ಸರ್ವ ಬಹಳ ಯತ್ನಗಳನ್ನೂ ಮಾಡಿದನು. ಅವನು ಚಿತ್ರಕಲೆಯಲ್ಲಿ ಮತ್ತು ಶಿಲ್ಪಕಲೆಯಲ್ಲಿ ಪಾರಂಗತನಾದನು. ಅವನು ಅಸ್ತ್ರಗಳನ್ನು ಕಲಿಯಲು ದ್ರೋಣನ ಶಿಷ್ಯನೂ ಆದನು. ಅವನ ತಾಯಿ ವರವರ್ಣಿನಿಯು ರಾಜನಲ್ಲಿ ತನ್ನ ಪುತ್ರನಂತಿದ್ದ ಕನ್ಯೆಗೆ ಪತ್ನಿಯನ್ನು ಹುಡುಕಲು ಒತ್ತಾಯಿಸಿದಳು. ತನ್ನ ಕನ್ಯೆಯು ಯೌವನವನ್ನು ಪಡೆದುದನ್ನು ನೋಡಿ ಪಾರ್ಷತನು ಆಗ ಅವಳನ್ನು ಸ್ತ್ರೀಯೆಂದು ತಿಳಿದು ಚಿಂತಿಸಿ ತನ್ನ ಪತ್ನಿಯೊಡನೆ ಹೇಳಿದನು: “ನನ್ನ ಮಗಳು ಯೌವನವನ್ನು ಪಡೆದು ನನ್ನ ಶೋಕವನ್ನು ಹೆಚ್ಚಿಸಿದ್ದಾಳೆ. ಶೂಲಪಾಣಿಯ ವಚನದಂತೆ ನಾನು ಇವಳನ್ನು ಅಡಗಿಸಿಟ್ಟೆ. ಮಹಾರಾಜ್ಞಿ! ಅದು ಎಂದೂ ಸುಳ್ಳಾಗುವುದಿಲ್ಲ! ಹೇಗೆ ತಾನೇ ತ್ರೈಲೋಕ್ಯಕರ್ತನು ಸುಳ್ಳು ಹೇಳಿಯಾನು?”
ಭಾರ್ಯೆಯು ಹೇಳಿದಳು: “ರಾಜನ್! ಇಷ್ಟವಾದರೆ ನಾನು ಹೇಳುವುದನ್ನು ಕೇಳು. ನನ್ನ ಮಾತನ್ನು ಕೇಳಿ ನಿನ್ನ ಕಾರ್ಯವನ್ನು ಮಾಡಬೇಕು. ಇವನಿಗೆ ವಿಧಿವತ್ತಾಗಿ ಪತ್ನಿಯನ್ನು ಪಡೆಯುವ ಕಾರ್ಯವನ್ನು ಮಾಡೋಣ. ಅವನ ಮಾತು ಸತ್ಯವಾಗುತ್ತದೆ ಎಂದು ನನ್ನ ಬುದ್ಧಿಯು ನಿಶ್ಚಯಿಸಿದೆ.”
ಹೀಗೆ ಆ ಕಾರ್ಯದ ಕುರಿತು ನಿಶ್ಚಯ ಮಾಡಿದ ದಂಪತಿಗಳು ದಶಾರ್ಣಾಧಿಪದಿಯ ಮಗಳು ಕನ್ಯೆಯನ್ನಾಗಿ ಆರಿಸಿದರು. ಆಗ ರಾಜಾ ದ್ರುಪದನು ಎಲ್ಲ ರಾಜಕುಲಗಳನ್ನು ವಿಚಾರಿಸಿ ದಾಶಾರ್ಣಕ ನೃಪನ ತನುಜೆಯನ್ನು ಶಿಖಂಡಿಯ ಪತ್ನಿಯನ್ನಾಗಿ ವರಿಸಿದನು. ದಾಶಾರ್ಣಕ ನೃಪನು ಹಿರಣ್ಯವರ್ಮನೆಂದು ಖ್ಯಾತನಾಗಿದ್ದನು. ಆ ಮಹೀಪಾಲನು ತನ್ನ ಕನ್ಯೆಯನ್ನು ಶಿಖಂಡಿಗೆ ಕೊಟ್ಟನು. ಆ ರಾಜನು ದಶಾರ್ಣರಿಗೆ ಮಹಾ ಮಹೀಪತಿಯಾಗಿದ್ದನು. ಹಿರಣ್ಯವರ್ಮನು ದುರ್ಧರ್ಷನೂ, ಮಹಾಸೇನನೂ, ಮಹಾಮನಸ್ವಿಯೂ ಆಗಿದ್ದನು. ವಿವಾಹವು ಮುಗಿದನಂತರ ಆ ಕನ್ಯೆಯು ಕನ್ಯೆ ಶಿಖಂಡಿನಿಯಂತೆ ಯೌವನವನ್ನು ಪಡೆದಳು. ಪತ್ನಿಯನ್ನು ಮಾಡಿಕೊಂಡು ಶಿಖಂಡಿಯು ಕಾಂಪಿಲ್ಯ ನಗರಕ್ಕೆ ಹಿಂದಿರುಗಿದನು. ಆದರೆ ಕೆಲ ಸಮಯ ಆ ಕನ್ಯೆಯು ಅವನು ಸ್ತ್ರೀಯೆಂದು ತಿಳಿಯಲೇ ಇಲ್ಲ.
ಶಿಖಂಡಿನಿಯ ಕುರಿತು ಗೊತ್ತಾದ ನಂತರ ಹಿರಣ್ಯವರ್ಮನ ಕನ್ಯೆಯು ನಾಚಿಕೊಳ್ಳುತ್ತಾ ಶಿಖಂಡಿನಿಯು ಪಂಚಾಲರಾಜನ ಮಗಳೆಂದು ತನ್ನ ದಾಸಿಯರಿಗೂ ಸಖಿಗಳಿಗೂ ಹೇಳಿದಳು. ಆಗ ದಾಶಾರ್ಣಿಕ ದಾಸಿಯರು ಪರಮ ದುಃಖಿತರಾಗಿ ಆರ್ತರಾಗಿ ವಿಷಯವನ್ನು ಅಲ್ಲಿಗೆ ಹೇಳಿಕಳುಹಿಸಿದರು. ಕಳುಹಿಸಿದವರು ಎಲ್ಲವನ್ನು – ಮೋಸವು ಹೇಗೆ ನಡೆಯಿತೋ ಹಾಗೆ - ನಿವೇದಿಸಿದರು. ಆಗ ಪಾರ್ಥಿವನು ಕುಪಿತನಾದನು. ಆದರೆ ಶಿಖಂಡಿಯು ಪುರುಷನಂತೆಯೇ ರಾಜಕುಲದಲ್ಲಿ ಸ್ತ್ರೀತ್ವವನ್ನು ಉಲ್ಲಂಘಿಸಿ ಸಂತೋಷದಿಂದ ಓಡಾಡಿಕೊಂಡಿದ್ದನು. ಇದನ್ನು ಕೇಳಿದ ರಾಜೇಂದ್ರ ಹಿರಣ್ಯವರ್ಮನು ರೋಷದಿಂದ ಆರ್ತನಾದನು. ತೀವ್ರಕೋಪಸಮನ್ವಿತನಾದ ರಾಜಾ ದಾಶಾರ್ಣಕನು ದ್ರುಪದನ ನಿವೇಶನಕ್ಕೆ ದೂತನನ್ನು ಕಳುಹಿಸಿಕೊಟ್ಟನು. ಹಿರಣ್ಯವರ್ಮನ ದೂತನು ದ್ರುಪದನ ಬಳಿ ಬಂದು, ಒಬ್ಬನನ್ನೇ ಏಕಾಂತದಲ್ಲಿ ಕರೆದು ರಹಸ್ಯದಲ್ಲಿ ಈ ಮಾತನ್ನಾಡಿದನು: “ರಾಜನ್! ನಿನ್ನಿಂದ ಮೋಸಗೊಂಡು, ಅಪಮಾನಿತನಾಗಿ ದಾಶಾರ್ಣರಾಜನು ನಿನಗೆ ಈ ಮಾತನ್ನು ಹೇಳಿಕಳುಹಿಸಿದ್ದಾನೆ. “ನೃಪತೇ! ನನ್ನನ್ನು ನೀನು ಅಪಮಾನಗೊಳಿಸಿದ್ದೀಯೆ. ನೀನು ಕೆಟ್ಟ ಸಲಹೆಗಳನ್ನು ಕೊಟ್ಟಿದ್ದೀಯೆ. ನನ್ನ ಕನ್ಯೆಯನ್ನು ನಿನ್ನ ಕನ್ಯೆಗೋಸ್ಕರ ಮೋಸಗೊಳಿಸಿ ತೆಗೆದುಕೊಂಡಿದ್ದೀಯೆ. ಇಂದು ಆ ಮೋಸದ ಫಲವನ್ನು ನೀನು ಪಡೆಯುತ್ತೀಯೆ! ನಿನ್ನನ್ನು ನಿನ್ನ ಜನರು ಅಮಾತ್ಯರೊಂದಿಗೆ ಮುಗಿಸಿಬಿಡುತ್ತೇನೆ. ಸ್ಥಿರನಾಗು!””
ದ್ರುಪದನ ಸಂದಿಗ್ದತೆ
ದೂತನು ಹೀಗೆ ಹೇಳಲು ದೃಪದನು ಕಳ್ಳತನ ಮಾಡುವಾಗಲೇ ಸಿಕ್ಕಿಬಿದ್ದವನಂತೆ ಏನನ್ನೂ ಮಾತನಾಡಲಿಲ್ಲ. ಅದು ಹಾಗಲ್ಲವೆಂದು ಸೂಚನೆಯನ್ನು ನೀಡಲು ತನ್ನ ಸಂಬಂಧಿಗಳ ಅನುಸಾಂತ್ವನದ ಮೂಲಕ, ಮಧುರ ಸಂಭಾಷಣೆ ಮಾಡಬಲ್ಲ ದೂತರ ಮೂಲಕ ತೀವ್ರ ಪ್ರಯತ್ನ ಮಾಡಿದನು. ಆ ರಾಜನು ಇನ್ನೊಮ್ಮೆ ಆ ಪಾಂಚಾಲಸುತೆಯು ಕನ್ಯೆಯೆಂದು ಪರೀಕ್ಷಿಸಿ ಸತ್ಯವನ್ನು ತಿಳಿದುಕೊಂಡು ತ್ವರೆಮಾಡಿ ಹೊರಟನು. ಅವನು ತನ್ನ ಧಾತ್ರಿಗಳ ಮಾತಿನಂತೆ ಮಗಳಿಗೆ ಮೋಸವಾಗಿದೆ ಎಂದು ತನ್ನ ಎಲ್ಲ ಅಮಿತೌಜಸ ಮಿತ್ರರಿಗೆ ಹೇಳಿ ಕಳುಹಿಸಿದನು. ಆ ರಾಜಸತ್ತಮನು ಸೇನೆಗಳನ್ನು ಒಟ್ಟುಗೂಡಿಸಿ ದ್ರುಪದನ ಮೇಲೆ ಧಾಳಿಯಿಡಲು ನಿಶ್ಚಯಿಸಿದನು. ಆಗ ಮಹೀಪತಿ ಹಿರಣ್ಯವರ್ಮನು ಪಾಂಚಾಲ್ಯ ರಾಜನ ಕುರಿತು ತನ್ನ ಮಿತ್ರರೊಡನೆ ಸಮಾಲೋಚನೆ ಮಾಡಿದನು. ಆ ಮಹಾತ್ಮ ರಾಜರು ನಿಶ್ಚಯಿಸಿದರು: “ಒಂದುವೇಳೆ ರಾಜನ ಶಿಖಂಡಿನಿಯು ಕನ್ಯೆಯೇ ಆಗಿದ್ದರೆ ನಾವು ಪಾಂಚಾಲರಾಜನನ್ನು ಮನೆಯಿಂದ ಬಂಧಿಸಿ ಕರೆದುಕೊಂಡು ಬರೋಣ. ಇನ್ನೊಬ್ಬನನ್ನು ಪಾಂಚಾಲ ನರೇಶ್ವರನನ್ನಾಗಿ ಮಾಡಿ ನೃಪತಿ ದ್ರುಪದನನ್ನು ಶಿಖಂಡಿಯೊಡನೆ ಸಂಹರಿಸೋಣ!”
ಆಗ ಆ ಕ್ಷತ್ತಾರರ ಈಶ್ವರನು ದೂತನನ್ನು ಪುನಃ ಪಾರ್ಷತನಿಗೆ “ನಿನ್ನನ್ನು ಕೊಲ್ಲುತ್ತೇವೆ. ನಿಲ್ಲು!” ಎಂದು ಹೇಳಿ ಕಳುಹಿಸಿದನು. ಸ್ವಭಾವದಲ್ಲಿ ನಾಚಿಕೆಯುಳ್ಳವನಾದ, ತಪಿತಸ್ಥನಾದ ನರಾಧಿಪ ಪೃಥಿವೀಪತಿ ದ್ರುಪದನು ತೀವ್ರ ಭಯಪಟ್ಟನು. ಶೋಕಕರ್ಶಿತ ನರಾಧಿಪ ದ್ರುಪದನು ದಾಶಾರ್ಣನಿಗೆ ದೂತನನ್ನು ಕಳುಹಿಸಿ, ಏಕಾಂತದಲ್ಲಿ ಪತ್ನಿಯೊಡನೆ ಮಾತನಾಡಿದನು. ಮಹಾ ಭಯದಿಂದ ಆವಿಷ್ಟನಾದ, ಶೋಕದಿಂದ ಹೃದಯವನ್ನು ಕಳೆದುಕೊಂಡ ಪಾಂಚಾಲರಾಜನು ಶಿಖಂಡಿಯ ತಾಯಿ ಪ್ರಿಯೆಗೆ ಹೇಳಿದನು: “ನನ್ನ ಸಂಬಂಧೀ ಸುಮಹಾಬಲ ನೃಪತಿ ಹಿರಣ್ಯವರ್ಮನು ಕೋಪದಿಂದ ದೊಡ್ಡ ಸೇನೆಯೊಂದಿಗೆ ನನ್ನನ್ನು ಆಕ್ರಮಣಿಸಲಿದ್ದಾನೆ. ಮೂಢನಾದ ನಾನು ಈ ಕನ್ಯೆಯ ಕುರಿತು ಈಗ ಏನು ಮಾಡಲಿ? ನಿನ್ನ ಪುತ್ರ ಶಿಖಂಡಿಯು ಕನ್ಯೆಯೆಂದು ಶಂಕಿಸುತ್ತಿದ್ದಾರೆ. ಇದರಲ್ಲಿ ಸತ್ಯವೇನೆಂದು ನಿಶ್ಚಯಿಸಿ ಮಿತ್ರರು, ಅನುಯಾಯಿಗಳ ಸೇನೆಗಳೊಂದಿಗೆ ನಾನು ಅವನನ್ನು ವಂಚಿಸಿದ್ದೇನೆ ಎಂದು ತೀರ್ಮಾನಿಸಿ ನನ್ನನ್ನು ಕಿತ್ತೊಗೆಯಲು ಬಯಸಿದ್ದಾನೆ. ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದನ್ನು ಹೇಳು. ನಿನ್ನಿಂದ ಸತ್ಯವಾಕ್ಯವನ್ನು ಕೇಳಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಸಂಶಯಕ್ಕೊಳಗಾಗಿರುವ ನನಗೆ, ಬಾಲಕಿ ಶಿಖಂಡಿನಿಗೆ ಮತ್ತು ನಿನಗೂ ಮಹಾ ಕಷ್ಟವು ಬಂದೊದಗಿದೆ. ನಾನು ಕೇಳುತ್ತಿದ್ದೇನೆ. ನಮ್ಮನ್ನೆಲ್ಲರನ್ನೂ ಬಿಡುಗಡೆಗೊಳಿಸಲು ಸತ್ಯವನ್ನು ಹೇಳು. ಸತ್ಯವನ್ನು ತಿಳಿದುಕೊಂಡು ಇದರ ಕುರಿತು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಶಿಖಂಡಿನಿಗೆ ನೀನು ಹೆದರಬೇಡ! ಈ ವಿಷಯದಲ್ಲಿ ಸತ್ಯವನ್ನು ತಿಳಿದುಕೊಂಡೇ ಮುಂದುವರೆಯುತ್ತೇನೆ. ಪುತ್ರಧರ್ಮತನಾದ ನಾನೇ ವಂಚಿತನಾಗಿದ್ದೇನೆ. ಅಂಥಹ ನನ್ನಿಂದ ಮಹೀಪತಿ ರಾಜಾ ದಾಶಾರ್ಣಕನು ವಂಚಿತನಾಗಿದ್ದಾನೆ. ಆದುದರಿಂದ ಇದರಲ್ಲಿ ನಿನಗೆ ತಿಳಿದಿರುವುದನ್ನು ಸತ್ಯವಾಗಿ ಹೇಳು!”
ತನಗೆ ಗೊತ್ತಿದ್ದರೂ ಶತ್ರುವನ್ನು ತನಗಿದು ಗೊತ್ತಿರಲಿಲ್ಲವೆಂದು ತೋರಿಸಿಕೊಡಲು ನರೇಂದ್ರನು ಹೀಗೆ ಒತ್ತಾಯಿಸಿ ಕೇಳಲು ಆ ದೇವಿಯು ಮಹೀಪತಿಗೆ ಉತ್ತರಿಸಿದಳು. ಆಗ ಶಿಖಂಡಿನಿಯ ಮಾತೆಯು ಕನ್ಯೆ ಶಿಖಂಡಿನಿಯ ಕುರಿತು ಇದ್ದಹಾಗೆ ನರಾಧಿಪ ಪತಿಗೆ ಹೇಳಿದಳು: “ರಾಜನ್! ಪುತ್ರನಿಲ್ಲದಿರುವ ನಾನು ಸವತಿಯರ ಭಯದಿಂದ ಕನ್ಯೆ ಶಿಖಂಡಿಯು ಗಂಡೆಂದು ಅವಳು ಹುಟ್ಟಿದಾಗಿನಿಂದ ಹೇಳಿಕೊಂಡು ಬಂದಿದ್ದೇನೆ. ನೀನು ನನ್ನ ಮೇಲಿನ ಪ್ರೀತಿಯಿಂದ ಈ ಕನ್ಯೆಗೆ ಪುತ್ರನಿಗಾಗಬೇಕಾದ ಕರ್ಮಗಳನ್ನು ಮಾಡಿದೆ. ದಶಾರ್ಣಾಧಿಪತಿಯ ಮಗಳನ್ನು ಅವನಿಗೆ ಪತ್ನಿಯನ್ನಾಗಿ ಮಾಡಿದೆ. ಇವಳು ಕನ್ಯೆಯಾಗಿ ನಂತರ ಗಂಡಾಗುತ್ತಾಳೆಂದು ಹಿಂದೆ ದೇವವಾಕ್ಯವು ತೋರಿಸಿಕೊಟ್ಟಿದುದರಿಂದ ಇದನ್ನು ನೀನು ಉಪೇಕ್ಷಿಸಿದೆ.”
ಇದನ್ನು ಕೇಳಿ ಯಜ್ಞಸೇನ ದ್ರುಪದನು ಎಲ್ಲ ಸತ್ಯವನ್ನೂ ತನ್ನ ಮಂತ್ರಿಗಳಿಗೆ ನಿವೇದಿಸಿದನು. ಆಗ ರಾಜನು ಮಂತ್ರಿಗಳೊಂದಿಗೆ ಪ್ರಜೆಗಳ ರಕ್ಷಣೆಗೆ ಏನು ಮಾಡಬೇಕೆಂದು ಮಂತ್ರಾಲೋಚನೆ ಮಾಡಿದನು. ದಾಶಾರ್ಣಕನೊಂದಿಗೆ ಇನ್ನೂ ಸಂಬಂಧವಿದೆ ಎಂದು ತಿಳಿದು ತಾನೇ ಮೋಸವನ್ನು ಮಾಡಿದ್ದೇನೆಂದು ಸ್ವೀಕರಿಸಿ ಮಂತ್ರಿಗಳೊಂದಿಗೆ ಒಂದು ನಿಶ್ಚಯಕ್ಕೆ ಬಂದನು. ಸ್ವಭಾವತಃ ಸುರಕ್ಷಿತವಾಗಿದ್ದ ನಗರವನ್ನು ಆಪತ್ಕಾಲದಲ್ಲಿ ಇನ್ನೂ ಹೆಚ್ಚಿನ ರಕ್ಷಣೆಯನ್ನು ಎಲ್ಲಕಡೆಯಲ್ಲಿ ಎಲ್ಲವನ್ನೂ ಮಾಡಿ ನೀಡಿದನು. ದಶಾರ್ಣಪತಿಯೊಡನೆ ವಿರೋಧವನ್ನು ತಂದುಕೊಂಡು ರಾಜನು ಪತ್ನಿಯೊಂದಿಗೆ ಪರಮ ಆರ್ತನಾದನು. “ಸಂಬಂಧಿಯೊಂದಿಗೆ ನಾನು ಹೇಗೆ ಈ ಮಹಾ ಯುದ್ಧವನ್ನು ಮಾಡಬಲ್ಲೆ?” ಎಂದು ಚಿಂತಿಸಿ ಮನಸ್ಸಿನಲ್ಲಿಯೇ ದೈವವನ್ನು ಅರ್ಚಿಸಿದನು. ಅವನು ದೇವಪರನಾಗಿದ್ದು ಅರ್ಚನೆಗಳನ್ನು ಮಾಡುತ್ತಿರುವುದನ್ನು ನೋಡಿ ದೇವಿ ಭಾರ್ಯೆಯು ಅವನಿಗೆ ಹೇಳಿದಳು: “ದೇವತೆಗಳಿಗೆ ಶರಣುಹೋಗುವುದನ್ನು ಸದಾ ಸತ್ಯವೆಂದು ಸಾಧುಗಳು ಅಭಿಪ್ರಾಯ ಪಡುತ್ತಾರೆ. ಅದರಲ್ಲೂ ನಾವು ದುಃಖದ ಸಾಗರವನ್ನು ಸೇರಿ ತುಂಬಾ ಅರ್ಚಿಸುತ್ತಿದ್ದೇವೆ. ಭೂರಿದಕ್ಷಿಣೆಗಳನ್ನಿತ್ತು ಸರ್ವ ದೇವತೆಗಳ ಪೂಜೆಗಳು ನಡೆಯಲಿ. ದಾಶಾರ್ಣನನ್ನು ತಡೆಯಲು ಅಗ್ನಿಯಗಳಲ್ಲಿ ಹೋಮಗಳೂ ನಡೆಯಲಿ. ಯುದ್ಧಮಾಡದೇ ಇವನನ್ನು ಹೇಗೆ ಹಿಂದೆ ಕಳುಹಿಸಬಹುದು ಎನ್ನುವುದರ ಕುರಿತು ಚಿಂತಿಸು. ದೇವತೆಗಳ ಪ್ರಸಾದದಿಂದ ಎಲ್ಲವೂ ಆಗುತ್ತದೆ. ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿ ನಿರ್ಧರಿಸಿದಂತೆ ಪುರದ ಅವಿನಾಶಕ್ಕೆ ಏನು ಬೇಕೋ ಅದನ್ನು ಮಾಡು. ದೈವವು ನಿಶ್ಚಯಿಸಿದ್ದುದು ಮನುಷ್ಯನ ಪ್ರಯತ್ನದಿಂದ ಚೆನ್ನಾಗಿ ಸಿದ್ಧಿಯಾಗುತ್ತದೆ. ಪರಸ್ಪರ ವಿರೋಧವಾಗಿದ್ದರೆ ಯಾವುದೂ ಸಿದ್ಧಿಯಾಗುವುದಿಲ್ಲ. ಆದುದರಿಂದ ಸಚಿವರೊಂದಿಗೆ ನಗರಕ್ಕೆ ಬೇಕಾದುದನ್ನು ಮಾಡು. ಇಷ್ಟವಾದಂತೆ ದೇವತೆಗಳ ಅರ್ಚನೆಯನ್ನೂ ಮಾಡು.”
ಅವರಿಬ್ಬರೂ ಶೋಕಪರಾಯಣರಾಗಿ ಹೀಗೆ ಮಾತನಾಡಿಕೊಳ್ಳುತ್ತಿರುವುದನ್ನು ನೋಡಿ ಆ ಮನಸ್ವಿನೀ ಕನ್ಯೆ ಶಿಖಂಡಿನಿಯು ನಾಚಿಕೆಗೊಂಡಳು. “ನನ್ನಿಂದಾಗಿ ಇವರಿಬ್ಬರೂ ದುಃಖಿತರಾಗಿದ್ದಾರೆ!” ಎಂದು ಅವಳು ಚಿಂತಿಸಿದಳು. ಹೀಗೆ ಯೋಚಿಸಿ ಅವಳು ಪ್ರಾಣವನ್ನು ಕಳೆದುಕೊಳ್ಳಲು ನಿಶ್ಚಯಿಸಿದಳು. ತುಂಬಾ ಶೋಕಪರಾಯಣಳಾದ ಅವಳು ಹೀಗೆ ನಿಶ್ಚಯಿಸಿ ಭವನವನ್ನು ತೊರೆದು ಗಹನ ನಿರ್ಜನ ವನಕ್ಕೆ ತೆರಳಿದಳು. ಆ ಸ್ಥಳವನ್ನು ಯಕ್ಷ ಸ್ಥೂಣಾಕರ್ಣನು ಪಾಲಿಸುತ್ತಿದ್ದನು. ಅವನ ಭಯದಿಂದ ಜನರು ಆ ವನವನ್ನು ವಿಸರ್ಜಿಸಿದ್ದರು. ಸ್ಥೂಣನು ಅಲ್ಲಿ ಲಾಜದ ಹೊಗೆಯಿಂದ ಕೂಡಿದ, ಎತ್ತರ ಗೋಡೆಗಳು ಮತ್ತು ತೋರಣಗಳಿದ್ದ, ಸುಣ್ಣವನ್ನು ಬಳಿದ ಇಟ್ಟಿಗೆಯ ಮನೆಯನ್ನು ಹೊಂದಿದ್ದನು. ಅದನ್ನು ಪ್ರವೇಶಿಸಿ ದ್ರುಪದನ ಮಗಳು ಶಿಖಂಡಿಯು ಬಹುದಿನಗಳು ಊಟಮಾಡದೇ ಶರೀರವನ್ನು ಒಣಗಿಸಿದಳು. ಜೇನಿನ ಬಣ್ಣದ ಕಣ್ಣುಗಳ ಯಕ್ಷ ಸ್ಥೂಣನು ಅವಳಿಗೆ ಕಾಣಿಸಿಕೊಂಡು ಕೇಳಿದನು. “ಏನನ್ನು ಮಾಡಲು ಹೊರಟಿರುವೆ? ಬೇಗನೆ ಹೇಳು. ಅದನ್ನು ನಾನು ಮಾಡುತ್ತೇನೆ.” ಅದು ಅಶಕ್ಯವೆಂದು ಅವಳು ಯಕ್ಷನಿಗೆ ಪುನಃ ಪುನಃ ಹೇಳಿದಳು. ಗುಹ್ಯಕನು ಅವಳಿಗೆ ಮಾಡುತ್ತೇನೆ ಎಂದು ಉತ್ತರಿಸಿದನು: “ನೃಪಾತ್ಮಜೇ! ಧನೇಶ್ವರನ ಅನುಚರನು ನಾನು. ವರಗಳನ್ನು ನೀಡುತ್ತೇನೆ. ಕೊಡಲಾಗದಂತಿದ್ದರೂ ಕೊಡುತ್ತೇನೆ. ಏನನ್ನು ಹುಡುಕುತ್ತಿದ್ದೀಯೋ ಅದನ್ನು ಹೇಳು.” ಆಗ ಶಿಖಂಡಿಯು ಆ ಯಕ್ಷಪ್ರಧಾನ ಸ್ಥೂಣಾಕರ್ಣನಿಗೆ ಎಲ್ಲವನ್ನೂ ನಿವೇದಿಸಿದಳು: “ಯಕ್ಷ! ನನ್ನ ತಂದೆಯು ತೊಂದರೆಯಲ್ಲಿದ್ದಾನೆ ಮತ್ತು ಬೇಗನೇ ವಿನಾಶ ಹೊಂದುತ್ತಾನೆ. ಸಂಕ್ರುದ್ಧನಾದ ದಶಾರ್ಣಾಧಿಪತಿಯು ಅವನ ಮೇಲೆ ಧಾಳಿಯಿಡುತ್ತಿದ್ದಾನೆ. ಆ ನೃಪ ಹೇಮಕವಚನು ಮಹಾಬಲಶಾಲಿ ಮತ್ತು ಮಹೋತ್ಸಾಹೀ. ಆದುದರಿಂದ ನನ್ನನ್ನೂ, ನನ್ನ ಮಾತಾಪಿತೃಗಳನ್ನೂ ರಕ್ಷಿಸು. ನನ್ನ ದುಃಖವನ್ನು ಕಳೆಯುತ್ತೀಯೆಂದು ನೀನು ಪ್ರತಿಜ್ಞೆಯನ್ನು ಮಾಡಿರುವೆ. ನಿನ್ನ ಪ್ರಸಾದದಿಂದ ನಾನು ಅನಿಂದಿತ ಪುರುಷನಾಗಲಿ. ಆ ರಾಜನು ನನ್ನ ಪುರಕ್ಕೆ ಬರುವುದರೊಳಗೆ ನೀನು ನನ್ನ ಮೇಲೆ ಕರುಣೆಯನ್ನು ತೋರಿಸು.”
ಕನ್ಯೆ ಶಿಖಂಡಿನಿಗೆ ಪುರುಷತ್ವ ಪ್ರಾಪ್ತಿ
ಶಿಖಂಡಿಯ ಮಾತನ್ನು ಕೇಳಿ ದೈವದಿಂದ ಪೀಡಿತನಾದ ಯಕ್ಷನು ಮನಸ್ಸಿನಲ್ಲಿಯೇ ಚಿಂತಿಸಿ ಉತ್ತರಿಸಿದನು: “ಭದ್ರೇ! ನಿನಗಿಷ್ಟವಾದುದನ್ನು ಮಾಡುತ್ತೇನೆ. ಆದರೆ ನನ್ನ ಒಪ್ಪಂದವನ್ನು ಕೇಳು. ಕೆಲವೇ ಕಾಲದವರೆಗೆ ನಾನು ನಿನಗೆ ನನ್ನ ಈ ಪುರುಷನ ಲಿಂಗವನ್ನು ನೀಡುತ್ತೇನೆ. ನಂತರ ನೀನು ಬರಬೇಕು. ಸತ್ಯವನ್ನು ಹೇಳುತ್ತಿದ್ದೇನೆ. ಸಂಕಲ್ಪಿಸಿದುದನ್ನು ಸಿದ್ಧಿಯಾಗಿಸುವುದರಲ್ಲಿ ನಾನು ಪ್ರಭು. ಕಾಮರೂಪಿ ವಿಹಂಗಮ. ನನ್ನ ಪ್ರಸಾದದಿಂದ ನಿನ್ನ ಬಂಧುಗಳನ್ನೂ ಪುರವನ್ನೂ ಉಳಿಸುತ್ತಿದ್ದೇನೆ. ನಿನ್ನ ಈ ಸ್ತ್ರೀಲಿಂಗವನ್ನು ಧರಿಸುತ್ತೇನೆ. ಸತ್ಯವಾಗಿ ಭರವಸೆಯನ್ನು ನೀಡು. ನಿನಗೆ ಪ್ರಿಯವಾದುದನ್ನು ಮಾಡುತ್ತೇನೆ.”
ಶಿಖಂಡಿಯು ಹೇಳಿದಳು: “ನಿನ್ನ ಈ ಲಿಂಗವನ್ನು ಪುನಃ ನಿನಗೆ ಕೊಡುತ್ತೇನೆ. ನಿಶಾಚರ! ಕೆಲವು ಕಾಲದ ಸ್ತ್ರೀತ್ವವನ್ನು ಧರಿಸು. ಪಾರ್ಥಿವ ಹೇಮವರ್ಮಣಿ ದಾಶಾರ್ಣನು ಹಿಂದಿರುಗಿದ ನಂತರ ನಾನು ಕನ್ಯೆಯಾಗುತ್ತೇನೆ. ನೀನು ಪುರುಷನಾಗುತ್ತೀಯೆ.” ಹೀಗೆ ಹೇಳಿ ಅವರಿಬ್ಬರೂ ಅಲ್ಲಿ ಒಪ್ಪಂದವನ್ನು ಮಾಡಿಕೊಂಡರು. ಅನ್ಯೋನ್ಯರ ಲಿಂಗಗಳನ್ನು ಬದಲಾಯಿಸಿಕೊಂಡರು. ಯಕ್ಷ ಸ್ಥೂಣನು ಸ್ತ್ರೀಲಿಂಗವನ್ನು ಧರಿಸಿದನು. ಶಿಖಂಡಿಯು ಯಕ್ಷನ ದೀಪ್ತ ರೂಪವನ್ನು ಪಡೆದನು.
ಪಾಂಚಾಲ್ಯ ಶಿಖಂಡಿಯು ಪುಂಸತ್ವವನ್ನು ಪಡೆದು ಹೃಷ್ಟನಾಗಿ ನಗರವನ್ನು ಪ್ರವೇಶಿಸಿ ತಂದೆಯ ಬಳಿ ಹೋದನು. ನಡೆದುದೆಲ್ಲವನ್ನೂ ದ್ರುಪದನಿಗೆ ಹೇಳಿದನು. ಅದನ್ನು ಕೇಳಿ ದ್ರುಪದನು ಪರಮ ಹರ್ಷವನ್ನು ತಾಳಿದನು. ಪತ್ನಿಯೊಂದಿಗೆ ಮಹೇಶ್ವರನ ಮಾತನ್ನು ಸ್ಮರಿಸಿಕೊಂಡನು. ಆಗ ನೃಪನು ದಶಾರ್ಣಾಧಿಪತಿಗೆ “ನನ್ನ ಈ ಮಗನು ಪುರುಷನೇ. ನನ್ನನ್ನು ನೀನು ನಂಬಬೇಕು!” ಎಂದು ಹೇಳಿ ಕಳುಹಿಸಿದನು. ಅಷ್ಟರಲ್ಲಿಯೇ ದುಃಖ ಮತ್ತು ಕೋಪ ಸಮನ್ವಿತ ದಾಶಾರ್ಣಕ ರಾಜನು ಪಾಂಚಾಲರಾಜ ದ್ರುಪದನಲ್ಲಿಗೆ ಬಂದುಬಿಟ್ಟಿದ್ದನು. ಕಾಂಪಿಲ್ಯವನ್ನು ಸೇರಿ ದಶರ್ಣಾಧಿಪತಿಯು ಬ್ರಹ್ಮವಿದರಲ್ಲಿ ಶ್ರೇಷ್ಠನೋರ್ವನನ್ನು ಸತ್ಕರಿಸಿ ದೂತನನ್ನಾಗಿ ಕಳುಹಿಸಿದನು: “ನನ್ನ ವಚನದಂತೆ ದೂತ! ನೃಪಾಧಮ ಪಾಂಚಾಲ್ಯನಿಗೆ ಹೇಳು. “ದುರ್ಮತೇ! ನನ್ನ ಕನ್ಯೆಯನ್ನು ನಿನ್ನ ಕನ್ಯೆಗೆ ತೆಗೆದುಕೊಂಡಿರುವೆಯಲ್ಲ ಅದರ ಫಲವನ್ನು ಇಂದು ನೀನು ಪಡೆಯುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.””
ಹೀಗೆ ಹೇಳಲು ದಾಶಾರ್ಣನೃಪತಿಯ ಹೇಳಿಕೆಯಂತೆ ಆ ದೂತನು ನಗರಕ್ಕೆ ಹೊರಟನು. ಆ ಪುರೋಹಿತನು ದ್ರುಪದನ ಪುರವನ್ನು ಸೇರಿದನು. ಆಗ ರಾಜಾ ಪಾಂಚಾಲಕನು ಶಿಖಂಡಿಯೊಡನೆ ಅವನನ್ನು ಗೋವು-ಅರ್ಘ್ಯಗಳನ್ನಿತ್ತು ಸತ್ಕರಿಸತೊಡಗಿದನು. ಆ ಪೂಜೆಗಳನ್ನು ಸ್ವೀಕರಿಸದೇ ಅವನು ಇದನ್ನು ಹೇಳಿದನು: “ವೀರ ರಾಜ ಕಾಂಚನವರ್ಮನು ನಿನಗೆ ಇದನ್ನು ಹೇಳಿ ಕಳುಹಿಸಿದ್ದಾನೆ. “ದುರ್ಮತೇ! ನಿನ್ನ ಮಗಳಿಗಾಗಿ ನೀನು ನಡೆಸಿದ ಈ ಅಧಮಾಚಾರ ವಂಚನೆಗಳ ಪಾಪಗಳನ್ನು ಮಾಡಿದ್ದುದರ ಫಲವನ್ನು ಹೊಂದುತ್ತೀಯೆ. ಇಂದು ರಣಮೂರ್ಧನಿಯಲ್ಲಿ ನನಗೆ ಯುದ್ಧವನ್ನು ನೀಡು. ಸದ್ಯ ನಿನ್ನನ್ನು ಅಮಾತ್ಯ-ಸುತ-ಬಾಂಧವರೊಂದಿಗೆ ಮುಗಿಸುತ್ತೇನೆ.”
ದಶಾರ್ಣಪತಿಯ ದೂತನು ಮಂತ್ರಿಗಳ ಮಧ್ಯದಲ್ಲಿ ಹೇಳಿದ ಆ ನಿಂದನೆಯ ಮಾತುಗಳನ್ನು ಪಾರ್ಥಿವನು ಬಲಾತ್ಕಾರವಾಗಿ ಕೇಳಬೇಕಾಯಿತು. ಆಗ ದ್ರುಪದನು ಶಿರಬಾಗಿ ಹೇಳಿದನು: “ಬ್ರಹ್ಮನ್! ನೀನು ಹೇಳಿದ ನನ್ನ ಸಂಬಂಧಿಯ ಮಾತುಗಳಿಗೆ ಉತ್ತರವನ್ನು ನಮ್ಮ ದೂತನೇ ಪ್ರತಿಯಾಗಿ ಹೇಳುತ್ತಾನೆ.” ಆಗ ದ್ರುಪದನೂ ಕೂಡ ಮಹಾತ್ಮ ಹಿರಣ್ಯವರ್ಮಣನಲ್ಲಿಗೆ ವೇದಪಾಂಗತ ಬ್ರಾಹ್ಮಣನನ್ನು ದೂತನನ್ನಾಗಿ ಕಳುಹಿಸಿದನು. ಅವನು ರಾಜ ದಶಾರ್ಣಪತಿಯ ಬಂದು ದ್ರುಪದನು ಹೇಳಿ ಕಳುಹಿಸಿದುದನ್ನು ಹೇಳಿದನು: “ನನ್ನ ಮಗನು ನಿಜವಾಗಿಯೂ ಕುಮಾರನು. ಶೋಧನೆಯಾಗಲಿ. ಯಾರೋ ಸುಳ್ಳುಹೇಳಿದ್ದಾರೆ. ಅವರು ಹೇಳಿದುದನ್ನು ನಂಬಬಾರದು.”
ದ್ರುಪದನನ್ನು ಕೇಳಿ ಆ ರಾಜನು ವಿಮರ್ಶಿಸಿ ಸುಂದರ ರೂಪಿನ ಉತ್ತಮ ಯುವತಿಯರನ್ನು ಶಿಖಂಡಿಯು ಸ್ತ್ರೀಯೋ ಪುರುಷನೋ ಎಂದು ತಿಳಿಯಲು ಕಳುಹಿಸಿದನು. ಕಳುಹಿಸಲ್ಪಟ್ಟ ಅವರು ಸತ್ಯವೇನೆಂದು ತಿಳಿದು ಸಂತೋಷದಿಂದ ಅವೆಲ್ಲವನ್ನೂ – ಶಿಖಂಡಿಯು ಪುರುಷನೆಂದು- ಮಹಾನುಭಾವ ದಶಾರ್ಣರಾಜ ರಾಜನಿಗೆ ವರದಿಮಾಡಿದರು. ಇದನ್ನು ಕೇಳಿ ರಾಜನು ಅತ್ಯಂತ ಹರ್ಷಿತನಾದನು. ತನ್ನ ಸಂಬಂಧಿಯನ್ನು ಭೇಟಿಮಾಡಿ ಸಂತೋಷದಲ್ಲಿ ಅಲ್ಲಿ ತಂಗಿದನು. ಆ ಜನೇಶ್ವರನು ಸಂತೋಷದಿಂದ ಶಿಖಂಡಿಗೆ ಬಹು ಸಂಪತ್ತನ್ನು-ಆನೆಗಳು, ಕುದುರೆಗಳು, ಗೋವುಗಳು ಮತ್ತು ದಾಸಿಯರನ್ನು ಬಹು ನೂರು ಸಂಖ್ಯೆಗಳಲ್ಲಿ ಕೊಟ್ಟು, ಗೌರವಿಸಲ್ಪಟ್ಟು, ತನ್ನ ಮಗಳನ್ನು ಹಿಂದಿರುಗಿಸಿ, ಮರಳಿದನು. ತನ್ನ ಮೇಲಿದ್ದ ಆರೋಪವನ್ನು ಕಳೆದುಕೊಂಡ ಶಿಖಂಡಿಯು ಪಾರ್ಥಿವ ಹೇಮವರ್ಮಣಿ ದಾಶಾರ್ಣನು ಹಿಂದಿರುಗಲು ಸಂತೋಷಗೊಂಡನು.
ಅಷ್ಟರಲ್ಲಿಯೇ ಸ್ವಲ್ಪ ಕಾಲದ ನಂತರ ಲೋಕಾನುಯಾತ್ರೆಯನ್ನು ಮಾಡುತ್ತಾ ನರವಾಹನ ಕುಬೇರನು ಸ್ಥೂಣನ ಮನೆಗೆ ಬಂದನು. ಅವನ ಮನೆಯ ಮೇಲೇ ಹಾರಾಡುತ್ತಾ ಆ ಧನಾಧಿಗೋಪ್ತನು ಅವಲೋಕಿಸಿದನು. ಈ ಸ್ವಲಂಕೃತವಾದ ವಿಚಿತ್ರ ಮಾಲೆಗಳಿಂದ ಕೂಡಿದ ಇದು ಯಕ್ಷ ಸ್ಥೂಣನ ಮನೆಯೆಂದು ಗುರುತಿಸಿದನು. ಲಾಜ, ಗಂಧ, ಚಪ್ಪರಗಳಿಂದ, ಅಭ್ಯರ್ಚಿಸಿದ ಧೂಪದ ಕಂಪಿನಿಂದ ತುಂಬಿದ, ಧ್ವಜ-ಪತಾಕೆಗಳಿಂದ ಅಲಂಕೃತವಾದ, ಭಕ್ಷಾನ್ನ, ಪಾನೀಯಗಳ ಹೊಳೆಯೇ ಹರಿದಿತ್ತು. ಸರ್ವತವೂ ಸಮಲಂಕೃತವಾದ ಅವನ ಆ ಸ್ಥಾನವನ್ನು ನೋಡಿ ಯಕ್ಷಪತಿಯು ಅನುಸರಿಸಿ ಬಂದ ಯಕ್ಷರಿಗೆ ಹೇಳಿದನು: “ಅಮಿತವಿಕ್ರಮಿಗಳೇ! ಈ ಸ್ವಲಂಕೃತ ಮನೆಯು ಸ್ಥೂಣನದು. ಆದರೆ ಆ ಮಹಾಮಂದಬುದ್ಧಿಯು ಹೊರಬಂದು ನನ್ನ ಮುಂದೆ ಹೊರಳುವುದಿಲ್ಲವಲ್ಲ? ನಾನು ಇಲ್ಲಿದ್ದೇನೆಂದೂ ತಿಳಿದೂ ಆ ಸುಮಂದಾತ್ಮನು ನನ್ನ ಮುಂದೆ ಹರಿದು ಬರುತ್ತಿಲ್ಲ. ಆದುದರಿಂದ ಅವನಿಗೆ ಮಹಾದಂಡವನ್ನು ವಿಧಿಸಬೇಕೆಂದು ನನಗನ್ನಿಸುತ್ತದೆ.”
ಯಕ್ಷರು ಹೇಳಿದರು: “ರಾಜನ್! ರಾಜ ದ್ರುಪದನಿಗೆ ಶಿಖಂಡಿನೀ ಎಂಬ ಮಗಳು ಜನಿಸಿದ್ದಳು. ಯಾವುದೋ ಕಾರಣದಿಂದ ಇವನು ಅವಳಿಗೆ ತನ್ನ ಪುರುಷಲಕ್ಷಣವನ್ನು ಕೊಟ್ಟಿದ್ದಾನೆ. ಅವಳ ಸ್ತ್ರೀಲಕ್ಷಣವನ್ನು ಸ್ವೀಕರಿಸಿ ಸ್ತ್ರೀಯಂತೆ ಅವನು ಮನೆಯ ಒಳಗೆಯೇ ಇರುತ್ತಾನೆ. ಸ್ತ್ರೀರೂಪವನ್ನು ಧರಿಸಿರುವ ಅವನು ನಾಚಿಕೊಂಡು ನಿನ್ನ ಎದುರು ಬರುತ್ತಿಲ್ಲ. ಇದೇ ಕಾರಣದಿಂದ ಸ್ಥೂಣನು ಇಂದು ನಿನಗೆ ಕಾಣುತ್ತಿಲ್ಲ. ಇದನ್ನು ಕೇಳಿ ವಿಮಾನದಲ್ಲಿದ್ದುಕೊಂಡೇ ನ್ಯಾಯವಾದುದನ್ನು ಮಾಡು.”
“ಸ್ಥೂಣನನ್ನು ಕರೆತನ್ನಿ! ಅವನನ್ನು ಶಿಕ್ಷಿಸುತ್ತೇನೆ!” ಎಂದು ಯಕ್ಷಾಧಿಪನು ಪುನಃ ಪುನಃ ಹೇಳಿದನು. ಯಕ್ಷೇಂದ್ರನು ಕರೆಯಿಸಿಕೊಳ್ಳಲು ಅವನು ಸ್ತ್ರೀಸ್ವರೂಪದಲ್ಲಿ ಬಂದು ಬಹುನಾಚಿಕೆಯಿಂದ ನಿಂತುಕೊಂಡನು. ಸಂಕೃದ್ಧನಾದ ಧನದನು ಅವನಿಗೆ ಶಪಿಸಿದನು: “ಗುಹ್ಯಕರೇ! ಈ ಪಾಪಿಯು ಸ್ತ್ರೀಯಾಗಿಯೇ ಇರಲಿ!” ಮಹಾತ್ಮ ಯಕ್ಷಪತಿಯು ಹೀಗೆ ಹೇಳಿದನು: “ಪಾಪಬುದ್ಧೆ! ಶಿಖಂಡಿಯಿಂದ ಸ್ತ್ರೀಲಕ್ಷಣವನ್ನು ತೆಗೆದುಕೊಂಡು ನೀನು ಯಕ್ಷರನ್ನು ಅಪಮಾನಿಸಿರುವೆ. ಇದೂವರೆಗೂ ಯಾರೂ ಮಾಡದಿರುವುದನ್ನು ನೀನು ಮಾಡಿದ್ದೀಯೆ. ಆದುದರಿಂದ ಇಂದಿನಿಂದ ನೀನು ಸ್ತ್ರೀಯಾಗಿಯೂ ಅವನು ಪುರುಷನಾಗಿಯೂ ಇರುತ್ತೀರಿ.” ಆಗ ಅವನ ಶಾಪಕ್ಕೆ ಅಂತ್ಯವನ್ನು ಮಾಡಬೇಕೆಂದು ಸ್ಥೂಣನ ಪರವಾಗಿ ಯಕ್ಷರು ಪುನಃ ಪುನಃ ವೈಶ್ರವಣನನ್ನು ಬೇಡಿಕೊಂಡರು. ಆಗ ಮಹಾತ್ಮ ಯಕ್ಷೇಂದ್ರನು ತನ್ನ ಅನುಗಾಮಿ ಎಲ್ಲ ಯಕ್ಷಗಣಗಳಿಗೆ ಶಾಪದ ಅಂತ್ಯದ ಕುರಿತು ಹೇಳಿದನು: “ರಣದಲ್ಲಿ ಶಿಖಂಡಿನಿಯು ಸತ್ತ ನಂತರ ಯಕ್ಷ ಸ್ಥೂಣನು ಸ್ವರೂಪವನ್ನು ಪಡೆಯುತ್ತಾನೆ. ಮಹಾಮನಸ್ವಿ ಸ್ಥೂಣನು ಉದ್ವೇಗಪಡದಿರಲಿ.” ಹೀಗೆ ಹೇಳಿ ಭಗವಾನ ದೇವ ಯಕ್ಷಪೂಜಿತನು ಆ ಎಲ್ಲ ನಿಮೇಷಾಂತರಚಾರಿಗಳೊಂದಿಗೆ ಹೊರಟು ಹೋದನು. ಸ್ಥೂಣನಾದರೋ ಶಾಪವನ್ನು ಪಡೆದು ಅಲ್ಲಿಯೇ ವಾಸಿಸಿದನು.
ಸ್ವಲ್ಪ ಸಮಯದಲ್ಲಿಯೇ ಶಿಖಂಡಿಯು ಆ ಕ್ಷಪಾಚರನಲ್ಲಿಗೆ ಬಂದನು. ಅವನ ಬಳಿಬಂದು “ಭಗವನ್! ಬಂದಿದ್ದೇನೆ!” ಎಂದು ಹೇಳಿದನು. ಅವನಿಗೆ ಸ್ಥೂಣನು “ಸಂತೋಷವಾಯಿತು!” ಎಂದು ಪುನಃ ಪುನಃ ಪುನಃ ಹೇಳಿದನು. ಪ್ರಾಮಾಣಿಕನಾಗಿ ಬಂದಿರುವ ರಾಜಪುತ್ರ ಶಿಖಂಡಿಯನ್ನು ನೋಡಿ ಅವನು ನಡೆದ ವೃತ್ತಾಂತವೆಲ್ಲವನ್ನೂ ಶಿಖಂಡಿಗೆ ಹೇಳಿದನು: “ಪಾರ್ಥಿವಾತ್ಮಜ! ನಿನ್ನಿಂದಾಗಿ ನಾನು ವೈಶ್ರವಣನಿಂದ ಶಪಿಸಲ್ಪಟ್ಟಿದ್ದೇನೆ. ಹೊರಟು ಹೋಗು! ನಿನಗಿಚ್ಛೆಬಂದಂತೆ ಸುಖವಾಗುವ ಹಾಗೆ ಲೋಕಗಳನ್ನು ಸಂಚರಿಸು. ಇಲ್ಲಿಗೆ ನೀನು ಬಂದಿರುವುದು ಮತ್ತು ಪೌಲಸ್ತ್ಯನ ದರ್ಶನ ಎಲ್ಲವೂ ಹಿಂದೆ ವಿಧಿ ನಿರ್ಮಿತವಾದುದೆಂದು ಅನಿಸುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ.”
ಯಕ್ಷ ಸ್ಥೂಣನು ಹೀಗೆ ಹೇಳಲು ಶಿಖಂಡಿಯು ಮಹಾಹರ್ಷದಿಂದ ನಗರಕ್ಕೆ ಹಿಂದಿರುಗಿದನು. ವಿವಿಧ ಗಂಧ-ಮಾಲೆ-ಮಹಾಧನಗಳಿಂದ ದ್ವಿಜಾತಿಯವರನ್ನೂ, ದೇವತೆಗಳನ್ನೂ ಚೈತ್ಯಗಳಲ್ಲಿಯೂ ಚೌರಾಹಗಳಲ್ಲಿಯೂ ಪೂಜಿಸಿದನು. ಪಾಂಚಾಲ್ಯ ದ್ರುಪದನೂ ಸಹ ಬಾಂಧವರೊಂದಿಗೆ ಶಿಖಂಡಿಯ ಸಿದ್ಧಿ-ಏಳಿಗೆಗಳಿಂದ ಪರಮ ಸಂತೋಷವನ್ನು ಹೊಂದಿದನು. ಮೊದಲು ಸ್ತ್ರೀಯಾಗಿದ್ದ ಪುತ್ರ ಶಿಖಂಡಿಯನ್ನು ಅವನು ಶಿಷ್ಯನನ್ನಾಗಿ ದ್ರೋಣನಿಗೆ ಕೊಟ್ಟನು. ಕೌರವ-ಪಾಂಡವರೊಂದಿಗೆ ನೃಪಾತ್ಮಜ ಶಿಖಂಡಿಯೂ ಪಾರ್ಷತ ಧೃಷ್ಟದ್ಯುಮ್ನನೂ ನಾಲ್ಕು ಭಾಗಗಳ ಧನುರ್ವೇದವನ್ನು ಕಲಿತರು. ಭೀಷ್ಮನು ದ್ರುಪದನಲ್ಲಿ ನಿಯೋಜಿಸಿದ್ದ ಜಡ, ಕುರುಡ, ಕಿವುಡರಂತೆ ನಟಿಸುತ್ತಿದ್ದ ಚಾರರು ಅವನಿಗೆ ನಡೆದ ಇವೆಲ್ಲವನ್ನೂ ಹೇಳಿದರು. ಹೀಗೆ ದ್ರುಪದಾತ್ಮಜ ಶಿಖಂಡೀ ರಥಸತ್ತಮನು ಹೆಣ್ಣಾಗಿದ್ದು ಗಂಡಾದನು. ಅಂಬಾ ಎಂಬ ಹೆಸರಿನಿಂದ ವಿಶ್ರುತಳಾದ ಕಾಶಿಪತಿಯ ಜೇಷ್ಠ ಕನ್ಯೆಯು ದ್ರುಪದನ ಕುಲದಲ್ಲಿ ಶಿಖಂಡಿಯಾಗಿ ಹುಟ್ಟಿದಳು.