ಒಂಭತ್ತನೆಯ ದಿನದ ಯುದ್ಧ
ರಾತ್ರಿಯು ಕಳೆದು ಬೆಳಗಾಗುತ್ತಲೇ ಎದ್ದು ನೃಪನು ರಾಜರನ್ನು ಕರೆಯಿಸಿ ಆಜ್ಞಾಪಿಸಿದನು: “ಸೇನೆಯನ್ನು ಸಿದ್ಧಗೊಳಿಸಿ. ಇಂದು ಭೀಷ್ಮನು ರಣದಲ್ಲಿ ಕ್ರುದ್ಧನಾಗಿ ಸೋಮಕರನ್ನು ಸಂಹರಿಸುತ್ತಾನೆ.” ರಾತ್ರಿಯಲ್ಲಿ ದುರ್ಯೋಧನನು ಬಹಳವಾಗಿ ಅಳುತ್ತಾ ಹೇಳಿದನ್ನು ಕೇಳಿ, ಅದು ತನ್ನನ್ನು ಯುದ್ಧದಿಂದ ಹಿಂದೆಸರಿಯಲು ಹೇಳಿದುದೆಂದು ಮನಗಂಡು ಬಹಳ ಖಿನ್ನನ್ನಾಗಿ ಪರಾಧಿನತೆಯನ್ನು ನಿಂದಿಸಿ ಶಾಂತನವನು ರಣದಲ್ಲಿ ಅರ್ಜುನನೊಡನೆ ಯುದ್ಧ ಮಾಡಲು ಬಯಸಿ ದೀರ್ಘ ಯೋಚನೆಯಲ್ಲಿ ಮುಳುಗಿದನು. ಗಾಂಗೇಯನು ಚಿಂತಿಸುತ್ತಿರುವುದನ್ನು ಅವನ ಮುಖಭಾವದಿಂದಲೇ ಅರ್ಥಮಾಡಿಕೊಂಡ ದುರ್ಯೋಧನನು ದುಃಶಾಸನನನ್ನು ಕರೆದು ಆಜ್ಞಾಪಿಸಿದನು: “ದುಃಶಾಸನ! ಭೀಷ್ಮನನ್ನು ರಕ್ಷಿಸಲು ಸಮರ್ಥವಾದ ರಥಗಳನ್ನು ಕೂಡಲೇ ಸಿದ್ಧಗೊಳಿಸು. ನಮ್ಮಲ್ಲಿರುವ ಇಪ್ಪತ್ತೆರಡು ಅನೀಕಗಳನ್ನೂ ಇದಕ್ಕಾಗಿಯೇ ಮೀಸಲಿಡು. ಬಹಳ ವರ್ಷಗಳಿಂದ ಯೋಚಿಸಿಕೊಂಡು ಬಂದಿದ್ದ ಸಮಯವು ಈಗ ಬಂದೊದಗಿದೆ. ಸೈನ್ಯದೊಂದಿಗೆ ಪಾಂಡವರ ವಧೆ ಮತ್ತು ರಾಜ್ಯಪ್ರಾಪ್ತಿ ಇವೆರಡೂ ಆಗಲಿವೆ. ಅದರಲ್ಲಿ ಭೀಷ್ಮನ ಅಭಿರಕ್ಷಣೆಯೇ ಮಾಡಬೇಕಾದ್ದು ಎಂದು ನನ್ನ ಅಭಿಪ್ರಾಯ. ಅವನನ್ನು ನಾವು ರಕ್ಷಿಸಿದರೆ ಅವನು ನಮ್ಮ ಸಹಾಯಕನಾಗಿ ಪಾರ್ಥರನ್ನು ಯುದ್ಧದಲ್ಲಿ ಸಂಹರಿಸಬಲ್ಲನು. ಆದರೆ ಆ ವಿಶುದ್ಧಾತ್ಮನು ನನಗೆ ಹೇಳಿದ್ದನು - “ನಾನು ಶಿಖಂಡಿಯನ್ನು ಕೊಲ್ಲುವುದಿಲ್ಲ. ಮೊದಲು ಅವನು ಹೆಣ್ಣಾಗಿ ಹುಟ್ಟಿದ್ದನು. ಆದುದರಿಂದ ಅವನು ರಣದಲ್ಲಿ ನನಗೆ ವರ್ಜ್ಯ. ನಾನು ತಂದೆಗೆ ಇಷ್ಟವಾದುದನ್ನು ಮಾಡಲು ಏನು ಮಾಡಿದೆನೆಂದು ಲೋಕವೇ ತಿಳಿದಿದೆ. ಹಿಂದೆಯೇ ನಾನು ಸಂಪದ್ಭರಿತ ರಾಜ್ಯ ಮತ್ತು ಸ್ತ್ರೀಯನ್ನು ತ್ಯಜಿಸಿದ್ದೇನೆ. ನಾನು ಸ್ತ್ರೀಯನ್ನು, ಮೊದಲು ಸ್ತ್ರೀಯಾಗಿ ಹುಟ್ಟಿದವರನ್ನು ಎಂದೂ ಯುದ್ಧದಲ್ಲಿ ಕೊಲ್ಲುವುದಿಲ್ಲ. ನಿನಗೆ ಈ ಸತ್ಯವನ್ನು ಹೇಳುತ್ತಿದ್ದೇನೆ. ಈ ಶಿಖಂಡಿಯು ಮೊದಲು ಸ್ತ್ರೀಯಾಗಿದ್ದನು ಎಂದು ನೀನೂ ಕೇಳಿರಬಹುದು. ಯುದ್ಧದ ತಯಾರಿಯಲ್ಲಿಯೇ ನಿನಗೆ ಹೇಳಿದಂತೆ ಇವನು ಶಿಖಂಡಿನಿಯಾಗಿ ಹುಟ್ಟಿದ್ದನು. ಕನ್ಯೆಯಾಗಿ ಹುಟ್ಟಿ ಪುರುಷನಾದ ಅವನೂ ಯುದ್ಧಮಾಡುತ್ತಿದ್ದಾನೆ. ಅವನ ಮೇಲೆ ನಾನು ಎಂದೂ ಬಾಣಗಳನ್ನು ಪ್ರಯೋಗಿಸುವುದಿಲ್ಲ. ಆದರೆ ಯುದ್ಧದಲ್ಲಿ ಪಾಂಡವರ ಜಯವನ್ನು ಬಯಸಿ ನನ್ನೊಡನೆ ಯುದ್ಧಮಾಡಬರುವ ಕ್ಷತ್ರಿಯರೆಲ್ಲರನ್ನೂ ಸಂಹರಿಸುತ್ತೇನೆ.” ಹೀಗೆ ನನಗೆ ಶಾಸ್ತ್ರವಿದು ಭರತಶ್ರೇಷ್ಠ ಗಾಂಗೇಯನು ಹೇಳಿದ್ದನು. ಆದುದರಿಂದ ಸರ್ವಪ್ರಕಾರದಿಂದಲೂ ಭೀಷ್ಮನನ್ನು ರಕ್ಷಿಸಬೇಕೆಂಬ ಅಭಿಪ್ರಾಯ. ಮಹಾವನದಲ್ಲಿ ರಕ್ಷಣೆಯಿಲ್ಲದ ಸಿಂಹವನ್ನು ತೋಳವೇ ಕೊಲ್ಲಬಹುದು. ಶಿಖಂಡಿಯೆಂಬ ತೋಳವು ಈ ಸಿಂಹವನ್ನು ಕೊಲ್ಲಬಾರದು. ಸೋದರಮಾವ ಶಕುನಿ, ಶಲ್ಯ, ಕೃಪ, ದ್ರೋಣ, ವಿವಿಂಶತಿ ಇವರು ಪ್ರಯತ್ನಪಟ್ಟು ಗಾಂಗೇಯನನ್ನು ರಕ್ಷಿಸಲಿ. ಇವನನ್ನು ರಕ್ಷಿಸಿದರೆ ಜಯವು ಖಂಡಿತ.”
ದುರ್ಯೋಧನನ ಮಾತನ್ನು ಕೇಳಿ ರಾಜರು ರಥಸೇನೆಗಳಿಂದ ಗಾಂಗೇಯನನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದರು. ಧೃತರಾಷ್ಟ್ರನ ಪುತ್ರರೂ ಕೂಡ ಗಾಂಗೇಯನನ್ನು ಸುತ್ತುವರೆದು ತಮ್ಮ ನಡುಗೆಯಿಂದ ಭೂಮಿಯನ್ನು ನಡುಗಿಸುತ್ತಾ ಪಾಂಡವರನ್ನು ಕ್ಷೋಭಿಸುತ್ತಾ ಸಂತೋಷದಿಂದ ಮುಂದುವರೆದರು. ಉತ್ತಮವಾಗಿ ಸುಸಜ್ಜಿತವಾದ ರಥಗಳಿಂದ ಮತ್ತು ಆನೆಗಳಿಂದ ಕೂಡಿ, ಕವಚಗಳನ್ನು ಧರಿಸಿ ಸಮವಸ್ಥಿತರಾಗಿ ಮಹಾರಥರು ರಣದಲ್ಲಿ ಭೀಷ್ಮನನ್ನು ಸುತ್ತುವರೆದರು. ದೇವಾಸುರರ ಯುದ್ಧದಲ್ಲಿ ತ್ರಿದಶರು ವಜ್ರಧಾರಿಣಿಯ ಹೇಗೋ ಹಾಗೆ ಅವರು ಆ ಮಹಾರಥನನ್ನು ರಕ್ಷಿಸುತ್ತಾ ನಿಂತಿದ್ದರು. ಆಗ ರಾಜಾ ದುರ್ಯೋಧನನು ಪುನಃ ಸಹೋದರನಿಗೆ ಹೇಳಿದನು: “ಅರ್ಜುನನ ರಥದ ಬಲಚಕ್ರವನ್ನು ಯುಧಾಮನ್ಯುವೂ ಎಡಚಕ್ರವನ್ನು ಉತ್ತಮೌಜಸನೂ ಕಾಯುತ್ತಿದ್ದಾರೆ. ಅರ್ಜುನನು ಶಿಖಂಡಿಯನ್ನು ರಕ್ಷಿಸುತ್ತಿದ್ದಾನೆ. ದುಃಶಾಸನ! ಪಾರ್ಥನ ರಕ್ಷಣೆಯಲ್ಲಿದ್ದ ಅವನು ನಮ್ಮಿಂದ ತಪ್ಪಿಸಿಕೊಂಡು ಭೀಷ್ಮನನ್ನು ಕೊಲ್ಲದಂತೆ ಮಾಡು!”
ಅಣ್ಣನ ಆ ಮಾತನ್ನು ಕೇಳಿ ದುಃಶಾಸನನು ಭೀಷ್ಮನನ್ನು ಮುಂದಾಳುವಾಗಿ ಮಾಡಿಕೊಂಡು ಸೇನೆಯೊಂದಿಗೆ ಹೊರಟನು. ರಥಸೇನೆಗಳಿಂದ ಪರಿವೃತನಾಗಿರುವ ಭೀಷ್ಮನನ್ನು ನೋಡಿ ರಥಿಗಳಲ್ಲಿ ಶ್ರೇಷ್ಠ ಅರ್ಜುನನು ಧೃಷ್ಟದ್ಯುಮ್ನನಿಗೆ ಹೇಳಿದನು: “ನರವ್ಯಾಘ್ರ! ಇಂದು ಭೀಷ್ಮನ ಎದುರಿಗೆ ಅವನಿಗೆ ರಕ್ಷಣೆಯನ್ನಿತ್ತು ಶಿಖಂಡಿಯನ್ನು ನಿಲ್ಲಿಸು.”
ಆಗ ಶಾಂತನವ ಭೀಷ್ಮನು ಸೇನೆಯೊಂದಿಗೆ ಹೊರಟನು. ಅವನು ಆಹವದಲ್ಲಿ ಸರ್ವತೋಭದ್ರ ಮಹಾ ವ್ಯೂಹವನ್ನು ರಚಿಸಿದನು. ಕೃಪ, ಕೃತವರ್ಮ, ಶೈಬ್ಯ, ಶಕುನಿ, ಸೈಂಧವ, ಕಾಂಬೋಜದ ಸುದಕ್ಷಿಣ, ಮತ್ತು ಧೃತರಾಷ್ಟ್ರನ ಪುತ್ರರೆಲ್ಲರೂ ಭೀಷ್ಮನೊಂದಿಗೆ ವ್ಯೂಹದ ಅಗ್ರಭಾಗದಲ್ಲಿ ಸರ್ವ ಸೇನೆಗಳ ಪ್ರಮುಖರಾಗಿ ನಿಂತರು. ದ್ರೋಣ, ಭೂರಿಶ್ರವ, ಶಲ್ಯ, ಭಗದತ್ತ ಇವರು ಕವಚಗಳನ್ನು ಧರಿಸಿ ವ್ಯೂಹದ ಎಡಭಾಗದಲ್ಲಿದ್ದರು. ಅಶ್ವತ್ಥಾಮ, ಸೋಮದತ್ತ ಮತ್ತು ಅವಂತಿಯ ಮಹಾರಥರಿಬ್ಬರೂ ಮಹಾಸೇನೆಯಿಂದೊಡಗೂಡಿ ಬಲಭಾಗವನ್ನು ರಕ್ಷಿಸಿದರು. ದುರ್ಯೋಧನನು ತ್ರಿಗರ್ತರಿಂದ ಎಲ್ಲಕಡೆಗಳಿಂದಲೂ ಆವೃತನಾಗಿ ಪಾಂಡವರನ್ನು ಎದುರಿಸಿ ವ್ಯೂಹಮಧ್ಯದಲ್ಲಿ ನಿಂತಿದ್ದನು. ರಥಶ್ರೇಷ್ಠ ಅಲಂಬುಸ ಮತ್ತು ಮಹಾರಥ ಶ್ರುತಾಯು ಇಬ್ಬರೂ ಕವಚಧಾರಿಗಳಾಗಿ ಸರ್ವಸೇನೆಗಳ ವ್ಯೂಹದ ಹಿಂಭಾಗದಲ್ಲಿ ನಿಂತಿದ್ದರು. ಹೀಗೆ ವ್ಯೂಹವನ್ನು ಮಾಡಿಕೊಂಡು ಕೌರವರು ಸನ್ನದ್ಧರಾಗಿ ಅಗ್ನಿಯಂತೆ ಉರಿಯುತ್ತಿದ್ದರು.
ಆಗ ರಾಜಾ ಯುಧಿಷ್ಠಿರ, ಪಾಂಡವ ಭೀಮಸೇನ, ಮಾದ್ರೀಪುತ್ರ ನಕುಲ-ಸಹದೇವರಿಬ್ಬರೂ ಕವಚಧಾರಿಗಳಾಗಿ ಸರ್ವಸೇನೆಗಳ ವ್ಯೂಹದ ಅಗ್ರಭಾಗದಲ್ಲಿ ನಿಂತಿದ್ದರು. ಶತ್ರುಸೇನವಿನಾಶಿಗಳಾದ ಧೃಷ್ಟದ್ಯುಮ್ನ, ವಿರಾಟ, ಮಹಾರಥಿ ಸಾತ್ಯಕಿ ಇವರು ಮಹಾ ಸೇನೆಗಳೊಂದಿಗೆ ನಿಂತಿದ್ದರು. ಶಿಖಂಡೀ, ವಿಜಯ, ರಾಕ್ಷಸ ಘಟೋತ್ಕಚ, ಮಹಾಬಾಹು ಚೇಕಿತಾನ, ವೀರ್ಯವಾನ್ ಕುಂತಿಭೋಜ ಇವರು ಮಹಾ ಸೇನೆಗಳಿಂದ ಆವೃತರಾಗಿ ರಣದಲ್ಲಿ ನಿಂತಿದ್ದರು. ಮಹೇಷ್ವಾಸ ಅಭಿಮನ್ಯು, ಮಹಾರಥ ದ್ರುಪದ, ಮಹಾರಥ ದ್ರುಪದ, ಐವರ ಕೇಕಯ ಸಹೋದರರು ಕವಚಧಾರಿಗಳಾಗಿ ಯುದ್ಧಕ್ಕೆ ನಿಂತಿದ್ದರು. ಹೀಗೆ ಪಾಂಡವ ಶೂರರೂ ಕೂಡ ಸುದುರ್ಜಯವೆಂಬ ಪ್ರತಿವ್ಯೂಹವನ್ನು ರಚಿಸಿಕೊಂಡು ಸಮರದಲ್ಲಿ ಯುದ್ಧಕ್ಕಾಗಿ ನಿಂತರು. ರಣದಲ್ಲಿ ಕೌರವರ ಕಡೆಯ ನರಾಧಿಪರು ಭೀಷ್ಮನನ್ನು ಅಗ್ರನನ್ನಾಗಿ ಮಾಡಿಕೊಂಡು ಪಾರ್ಥರನ್ನು ಎದುರಿಸಿ ಯುದ್ಧಮಾಡಿದರು. ಹಾಗೆಯೇ ಪಾಂಡವರು ಭೀಮಸೇನನನ್ನು ಮುಂದಿರಿಸಿಕೊಂಡು ಸಂಗ್ರಾಮದಲ್ಲಿ ಜಯವನ್ನು ಬಯಸಿ ಭೀಷ್ಮನನ್ನು ಎದುರಿಸಿ ಯುದ್ಧಮಾಡಿದರು. ಗರ್ಜನೆ ಮತ್ತು ಕಿಲಕಿಲ ಶಬ್ಧಗಳಿಂದ, ಕ್ರಕಚ-ಗೋವಿಷಾಣಿಕಗಳನ್ನು ಊದುತ್ತಾ, ಭೇರಿ-ಮೃದಂಗ-ಪಣವಗಳನ್ನು ಬಾರಿಸುತ್ತಾ, ಶಂಖಗಳನ್ನು ಊದುತ್ತಾ, ಭೈರವ ಕೂಗುಗಳನ್ನು ಕೂಗುತ್ತಾ ಪಾಂಡವರು ಧಾವಿಸಿ ಬಂದರು. ಭೇರೀ-ಮೃದಂಗ-ಶಂಖಗಳ ಮತ್ತು ದುಂದುಭಿಗಳ ನಿಸ್ವನಗಳಿಂದ, ಜೋರಾದ ಸಿಂಹನಾದಗಳಿಂದ, ವಿವಿಧ ಕೂಗುಗಳಿಂದ ಕೌರವರೂ ಕೂಡ ಅವರಿಗೆ ಪ್ರತಿಸ್ಪಂದಿಸಿ ಕೂಗುತ್ತಾ ಅವರ ಮೇಲೆ ಒಮ್ಮಿಂದೊಮ್ಮೆಲೇ ಕ್ರುದ್ಧರಾಗಿ ಎರಗಿದರು. ಆಗ ಮಹಾ ತುಮುಲವುಂಟಾಯಿತು.
ಆಗ ಓಡಿಹೋಗಿ ಅನ್ಯೋನ್ಯರನ್ನು ಕೊಲ್ಲುವುದನ್ನು ಮಾಡತೊಡಗಿದರು. ಮಹಾ ಶಬ್ಧದಿಂದ ವಸುಂಧರೆಯು ನಡುಗಿದಳು. ಮಹಾಘೋರ ಪಕ್ಷಿಗಳು ಆಕಾಶದಲ್ಲಿ ಹಾರಡತೊಡಗಿದವು. ಉತ್ತಮ ಪ್ರಭೆಯಿಂದ ಉದಿಸಿದ ಸೂರ್ಯನು ತನ್ನ ಪ್ರಭೆಯನ್ನು ಕಳೆದುಕೊಳ್ಳತೊಡಗಿದನು. ಮಹಾ ಭಯವನ್ನು ಸೂಚಿಸುತ್ತಾ ಭಿರುಗಾಳಿಯು ಬೀಸತೊಡಗಿತು. ಬರಲಿರುವ ಮಹಾ ಕಷ್ಟವನ್ನು ತಿಳಿಸುತ್ತಾ ಅಲ್ಲಿ ತೋಳಗಳು ಘೋರವಾಗಿ ಅಮಂಗಳವಾಗಿ ಕೂಗಿಕೊಂಡವು. ದಿಕ್ಕುಗಳನ್ನು ಪ್ರಜ್ವಲಿಸುತ್ತಾ ರಕ್ತ ಮತ್ತು ಮೂಳೆಗಳ ಸಮ್ಮಿಶ್ರವಾದ ಮಾಂಸದ ಮಳೆಯು ಬಿದ್ದಿತು. ಅಳುತ್ತಿದ್ದ ವಾಹನ-ಪ್ರಾಣಿಗಳ ಕಣ್ಣುಗಳಲ್ಲಿ ಕಣ್ಣೀರು ಹರಿಯಿತು. ಬೆದರಿ ಮಲ-ಮೂತ್ರಗಳನ್ನು ವಿಸರ್ಜಿಸಿದವು. ಅಡಗಿದ್ದ ನರಭಕ್ಷ ರಾಕ್ಷಸರು ಕೂಗುತ್ತಿದ್ದ ಭೈರವ ರವ ಮಹಾನಾದವು ಕೇಳಿಬಂದಿತು. ನರಿಗಳು, ಹದ್ದುಗಳು, ಕಾಗೆಗಳು ಮತ್ತು ನಾಯಿಗಳು ಅಲ್ಲಿ ಬಹುವಿಧದಲ್ಲಿ ಕೂಗುತ್ತಾ ಬೀಳುತ್ತಿದ್ದವು. ಉರಿಯುತ್ತಿರುವ ಮಹಾ ಉಲ್ಕೆಗಳು ದಿವಾಕರನ ಮಂಡಲಕ್ಕೆ ತಾಗಿ ತಕ್ಷಣವೀ ಭೂಮಿಯ ಮೇಲೆ ಬಿದ್ದು ಮಹಾ ಭಯವನ್ನು ಸೂಚಿಸಿದವು. ಆಗ ಅಲ್ಲಿ ಸೇರಿದ್ದ ಪಾಂಡವ-ಧಾರ್ತರಾಷ್ಟ್ರರ ಮಹಾ ಸೇನೆಗಳು ಶಂಖ-ಮೃದಂಗ ನಿಸ್ವನಗಳಿಂದ ಭಿರುಗಾಳಿಯಿಂದ ವನಗಳು ಅಲ್ಲಾಡುವಂತೆ ಕಂಪಿಸಿದವು. ನರೇಂದ್ರರಿಂದಲೂ, ಗಜ-ಅಶ್ವ ಸಮಾಕುಲಗಳಿಂದ ಕೂಡಿದ, ಅಶುಭ ಮುಹೂರ್ತದಲ್ಲಿ ಹೊರಟಿದ್ದ ಸೈನ್ಯಗಳ ಭಯಂಕರ ಶಬ್ಧವು ಭಿರುಗಾಳಿಯಿಂದ ಅಲ್ಲೋಲ-ಕಲ್ಲೋಲವಾದ ಸಮುದ್ರಗಳ ಭೋರ್ಗರೆತಕ್ಕೆ ಸಮಾನವಾಗಿತ್ತು.
ಅಲಂಬುಷ-ಅಭಿಮನ್ಯು ಯುದ್ಧ
ರಥೋದಾರನಾದ ತೇಜಸ್ವಿ ಅಭಿಮನ್ಯುವು ಪಿಂಗಳವರ್ಣದ ಉತ್ತಮ ಕುದುರೆಗಳಿಂದ ಕೂಡಿದ ರಥದಲ್ಲಿ ಕುಳಿತು ಮೋಡಗಳು ಮಳೆಯನ್ನು ಸುರಿಸುವಂತೆ ಬಾಣಗಳ ಮಳೆಯನ್ನು ಸುರಿಸುತ್ತಾ ದುರ್ಯೋಧನನ ಮಹಾ ಸೇನೆಯ ಮೇಲೆ ದಾಳಿಮಾಡಿದನು. ರಾಶಿ ರಾಶಿ ಶಸ್ತ್ರಗಳಿಂದ ಕೂಡಿದ್ದ ಅಕ್ಷಯವಾದ ಸೇನಾಸಾಗರವನ್ನು ಒಳಹೊಗುತ್ತಿದ್ದ ಕ್ರುದ್ಧ ಅರಿಸೂದನ ಸೌಭದ್ರನನ್ನು ತಡೆಯಲು ಕೌರವರ ಕಡೆಯ ಕುರುಪುಂಗವರಿಗೆ ಸಾಧ್ಯವಾಗಲಿಲ್ಲ. ಅವನು ಬಿಟ್ಟ ಶತ್ರುಗಳನ್ನು ನಾಶಪಡಿಸಬಲ್ಲ ಬಾಣಗಳು ಶೂರ ಕ್ಷತ್ರಿಯರನ್ನು ಪ್ರೇತರಾಜನ ಮನೆಗೆ ಕೊಂಡೊಯ್ಯುತ್ತಿದ್ದವು. ಸೌಭದ್ರನು ಕ್ರುದ್ಧನಾಗಿ ಯಮದಂಡಕ್ಕೆ ಸಮಾನವಾದ ಪ್ರಜ್ವಲಿತ ಮುಖವುಳ್ಳ ಸರ್ಪಗಳಂತಿದ್ದ ಸಾಯಕಗಳನ್ನು ಪ್ರಯೋಗಿಸುತ್ತಿದ್ದನು. ಪಾಲ್ಗುನಿಯು ತಕ್ಷಣವೇ ರಥಗಳಲ್ಲಿದ್ದ ರಥಿಗಳನ್ನೂ, ಕುದುರೆಯನ್ನೇರಿದ್ದ ಸವಾರರನ್ನೂ, ಆನೆಗಳೊಂದಿಗೆ ಗಜಾರೋಹಿಗಳನ್ನೂ ಕೆಳಗುರುಳಿಸಿದನು. ಯುದ್ಧದಲ್ಲಿ ಅವನು ಮಾಡುತ್ತಿರುವ ಮಹಾ ಕಾರ್ಯಗಳನ್ನು ನೋಡಿ ರಾಜರು ಸಂತೋಷಗೊಂಡು ಫಾಲ್ಗುನಿಯನ್ನು ಬಹಳವಾಗಿ ಹೊಗಳಿದರು ಮತ್ತು ಗೌರವಿಸಿದರು. ಭಿರುಗಾಳಿಯು ಹತ್ತಿಯ ರಾಶಿಯನ್ನು ಎಲ್ಲ ದಿಕ್ಕುಗಳಲ್ಲಿಯೂ ಹಾರಿಸಿಬಿಡುವಂತೆ ಸೌಭದ್ರನು ಆ ಸೇನೆಗಳನ್ನು ಓಡಿಸಿ ಬಹುವಾಗಿ ಶೋಭಿಸಿದನು. ಆಳವಾದ ಕೆಸರಿನಲ್ಲಿ ಸಿಲುಕಿಕೊಂಡ ಆನೆಗಳಿಗೆ ರಕ್ಷಕರೇ ಇಲ್ಲದಿರುವಂತೆ ಅವನಿಂದ ಓಡಿಸಲ್ಪಟ್ಟ ಕೌರವ ಸೇನೆಗಳಿಗೆ ಯಾರೂ ಇಲ್ಲದಂತಾಯಿತು.
ಕೌರವರ ಸರ್ವ ಸೇನೆಗಳನ್ನು ಓಡಿಸಿ ನರೋತ್ತಮ ಅಭಿಮನ್ಯುವು ಹೊಗೆಯಿಲ್ಲದ ಬೆಂಕಿಯಂತೆ ಉರಿಯುತ್ತಾ ನಿಂತನು. ಕಾಲಚೋದಿತ ಪತಂಗಗಳು ಉರಿಯುತ್ತಿರುವ ಪಾವಕನನ್ನು ಸಹಿಸಿಕೊಳ್ಳಲಾರದಂತೆ ಅರಿಘಾತಿಯ ಪ್ರಹಾರವನ್ನು ಕೌರವರಲ್ಲಿ ಯಾರಿಗೂ ಸಹಿಸಿಕೊಳ್ಳಲಾಗಲಿಲ್ಲ. ಸರ್ವಶತ್ರುಗಳ ಪ್ರಹಾರ ಮಾಡಿ ಪಾಂಡವರ ಮಹಾರಥ ಮಹೇಷ್ವಾಸನು ವಜ್ರದೊಂದಿಗೆ ವರ್ಜಭೃತುವಿನಂತೆ ಅದೃಶ್ಯನಾಗುತ್ತಿದ್ದನು. ದಿಕ್ಕು ದಿಕ್ಕುಗಳಲ್ಲಿ ತಿರುಗುತ್ತಿದ್ದ ಅವನ ಬಂಗಾರದ ಬೆನ್ನಿನ ಬಿಲ್ಲು ಮೋಡಗಳಲ್ಲಿ ಹೊಳೆಯುವ ಮಿಂಚುಗಳಂತೆ ಕಾಣುತ್ತಿತ್ತು. ವನದಲ್ಲಿ ಹೂಬಿಟ್ಟ ಮರಗಳನ್ನು ಹುಡುಕಿಕೊಂಡು ಹಾರಿ ಹೋಗುವ ದುಂಬಿಗಳಂತೆ ಅವನ ಹೊಂಬಣ್ಣದ ನಿಶಿತ ಶರಗಳು ಸಂಗ್ರಾಮದಲ್ಲಿ ಸುಯ್ಯನೆ ಹೋಗುತ್ತಿದ್ದವು. ಹಾಗೆಯೇ ಮೇಘಘೋಷದಿಂದ ರಥದಲ್ಲಿ ಸಂಚರಿಸುತ್ತಿದ್ದ ಮಹಾತ್ಮ ಸೌಭದ್ರನ ಗತಿಯಲ್ಲಿಯೂ ಜನರು ಯಾವ ಅಂತರವನ್ನೂ ಕಾಣುತ್ತಿರಲಿಲ್ಲ.
ಕೃಪ, ದ್ರೋಣ, ದ್ರೌಣಿ, ಬೃಹದ್ಬಲ ಮತ್ತು ಮಹೇಷ್ವಾಸ ಸೈಂಧವನನ್ನು ಮೋಹಗೊಳಿಸುತ್ತಾ ಅವನು ಶೀಘ್ರವಾಗಿ ಸಂಚರಿಸುತ್ತಿದ್ದನು. ಕೌರವ ಸೇನೆಯನ್ನು ಸುಡುತ್ತಿದ್ದ ಅವನ ಧನುಸ್ಸು ಯಾವಾಗಲೂ ಸೂರ್ಯಮಂಡಲದಂತೆ ಮಂಡಲಾಕಾರದಲ್ಲಿರುವುದೇ ಕಾಣುತ್ತಿತ್ತು. ಶರಗಳೆಂಬ ಕಿರಣಗಳಿಂದ ಸುಡುತ್ತಿದ್ದ ಅವನ ಕರ್ಮಗಳನ್ನು ನೋಡಿ ಶೂರ ಕ್ಷತ್ರಿಯರು ಅವನು ಲೋಕದಲ್ಲಿ ಎರಡನೆಯ ಫಲ್ಗುನನನೆಂದು ಭಾವಿಸಿದರು. ಅವನಿಂದ ಆರ್ದಿತವಾದ ಆ ಭಾರತರ ಮಹಾ ಸೇನೆಯು ಕಾಮಪರವಶಳಾದ ಸ್ತ್ರೀಯಂತೆ ಮತಿಗೆಟ್ಟು ತೂರಾಡುತ್ತಿತ್ತು. ಆ ಸೈನ್ಯವನ್ನು ಓಡಿಸುತ್ತಾ, ಮಹಾರಥರನ್ನು ಕಂಪಿಸುತ್ತಾ, ಮಯನನ್ನು ಜಯಿಸಿದ ವಾಸವನಂತೆ ಸುಹೃದಯರನ್ನು ಹರ್ಷಗೊಳಿಸಿದನು. ಅವನಿಂದ ಹೊಡೆದೋಡಿಸಲ್ಪಟ್ಟ ಕೌರವ ಸೈನ್ಯಗಳು ಮೋಡಗಳ ಗುಡುಗಿನಂತೆ ಘೋರವಾಗಿ ಆರ್ತಸ್ವರದಲ್ಲಿ ಕೂಗಿಕೊಳ್ಳುತ್ತಿತ್ತು. ಪರ್ವಕಾಲದಲ್ಲಿ ಭಿರುಗಾಳಿಗೆ ಸಿಲುಕಿದ ಸಮುದ್ರದಂತಿದ್ದ ಕೌರವ ಸೈನ್ಯದ ಆ ಘೋರ ನಿನಾದವನ್ನು ಕೇಳಿ ರಾಜಾ ದುರ್ಯೋಧನನು ಆರ್ಶ್ಯಶೃಂಗಿಗೆ ಹೇಳಿದನು: “ಈ ಮಹೇಷ್ವಾಸ ಕಾರ್ಷ್ಣಿಯು ಎರಡನೆಯ ಅರ್ಜುನನೋ ಎನ್ನುವಂತೆ ಕ್ರೋಧದಿಂದ ವೃತ್ರನು ದೇವಸಮೂಹದಂತೆ ನಮ್ಮ ಸೇನೆಗಳನ್ನು ಓಡಿಸುತ್ತಿದ್ದಾನೆ. ರಾಕ್ಷಸಶ್ರೇಷ್ಠ! ಸರ್ವ ವಿದ್ಯೆಗಳಲ್ಲಿ ಪಾರಂಗತನಾದ ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಅವನ ಚಿಕಿತ್ಸಕನನ್ನು ನಾನು ಕಾಣಲಾರೆನು. ಬೇಗನೇ ನೀನು ಹೋಗಿ ಆಹವದಲ್ಲಿ ಸೌಭದ್ರನನ್ನು ಕೊಲ್ಲು. ನಾವು ಭೀಷ್ಮ-ದ್ರೋಣರ ನೇತೃತ್ವದಲ್ಲಿ ಪಾರ್ಥರನ್ನು ಕೊಲ್ಲುತ್ತೇವೆ.”
ಹೀಗೆ ಹೇಳಲು ಬಲವಾನ್ ಪ್ರತಾಪವಾನ್ ರಾಕ್ಷಸೇಂದ್ರನು ತಕ್ಷಣವೇ ದುರ್ಯೋಧನನ ಶಾಸನದಂತೆ ಮಳೆಗಾಲದಲ್ಲಿ ಮೋಡಗಳು ಗರ್ಜಿಸುವಂತೆ ಜೋರಾಗಿ ಗರ್ಜಿಸುತ್ತ ಸಮರಕ್ಕೆ ಹೊರಟನು. ಅವನ ಆ ಜೋರಿನ ಕೂಗಿನಿಂದ ಪಾಂಡವರ ಮಹಾ ಸೇನೆಯು ತುಂಬಿ ಉಕ್ಕುವ ಸಮುದ್ರದಂತೆ ಎಲ್ಲಕಡೆಗಳಿಂದ ಕ್ಷೋಭೆಗೊಂಡಿತು. ಅವನ ಕೂಗಿಗೆ ಹೆದರಿ ಎಷ್ಟೋ ಜನರು ಪ್ರಿಯ ಪ್ರಾಣಗಳನ್ನು ತೊರೆದು ನೆಲದ ಮೇಲೆ ಬಿದ್ದರು. ಕಾರ್ಷ್ಣಿಯಾದರೋ ಸಂತೋಷದಿಂದ ರಥದಲ್ಲಿ ನಿಂತು ನರ್ತಿಸುತ್ತಿರುವನೋ ಎನ್ನುವಂತೆ ಧನುಸ್ಸನ್ನು ಹಿಡಿದು ಆ ರಾಕ್ಷಸನ ಮೇಲೆ ಆಕ್ರಮಣಿಸಿದನು. ಆಗ ಆ ರಾಕ್ಷಸನು ರಣದಲ್ಲಿ ಆರ್ಜುನಿಯ ಸಮೀಪಕ್ಕೆ ಬಂದು ಕ್ರುದ್ಧನಾಗಿ ಅನತಿದೂರದಲ್ಲಿಯೇ ನಿಂತು ಅವನ ಸೇನೆಯನ್ನು ಓಡಿಸತೊಡಗಿದನು. ಬಲಿಯಿಂದ ದೇವಸೇನೆಯು ಹೇಗೋ ಹಾಗೆ ರಣದಲ್ಲಿ ಆ ರಾಕ್ಷಸನಿಂದ ವಧಿಸಲ್ಪಡುತ್ತಿದ್ದ ಪಾಂಡವರ ಮಹಾಸೇನೆಯು ಸಮರದಿಂದ ಪಲಾಯನ ಮಾಡಿತು. ಘೋರರೂಪದ ಆ ರಾಕ್ಷಸನಿಂದ ವಧಿಸಲ್ಪಡುತ್ತಿದ್ದ ಅವನ ಸೈನ್ಯದಲ್ಲಿ ಮಹಾನಾಶವುಂಟಾಯಿತು. ಆಗ ರಾಕ್ಷಸನು ತನ್ನ ಪರಾಕ್ರಮವನ್ನು ಪ್ರದರ್ಶಿಸುತ್ತಾ ಸಹಸ್ರಾರು ಬಾಣಗಳಿಂದ ಪಾಂಡವರ ಮಹಾಸೇನೆಯನ್ನು ರಣದಿಂದ ಓಡಿಸಿದನು. ಹಾಗೆ ಘೋರರೂಪದ ರಾಕ್ಷಸನಿಂದ ವಧಿಸಲ್ಪಡುತ್ತಿರುವ ಪಾಂಡವರ ಸೇನೆಯು ಭಯಪಟ್ಟು ರಣದಿಂದ ಪಲಾಯನ ಮಾಡಿತು. ಕಮಲ ಪುಷ್ಪಗಳಿಂದ ತುಂಬಿದ ಸರೋವರವನ್ನು ಆನೆಯು ಹೇಗೆ ಧ್ವಂಸಿಸುತ್ತದೆಯೋ ಹಾಗೆ ಆ ಸೇನೆಯನ್ನು ಧ್ವಂಸಿಸಿ ಅವನು ರಣದಲ್ಲಿ ಮಹಾಬಲ ದ್ರೌಪದೇಯರನ್ನು ಆಕ್ರಮಣಿಸಿದನು.
ಪ್ರಹಾರಿಗಳಾದ ಆ ಮಹೇಷ್ವಾಸ ದ್ರೌಪದೇಯರು ಎಲ್ಲರೂ ಕ್ರುದ್ಧರಾಗಿ ಐದು ಗ್ರಹಗಳು ರವಿಯನ್ನು ಹೇಗೋ ಹಾಗೆ ರಾಕ್ಷಸನ ಮೇಲೆ ಎರಗಿದರು. ಯುಗಕ್ಷಯದಲ್ಲಿ ಚಂದ್ರಮನು ಐದು ಘೋರ ಗ್ರಹಗಳಿಂದ ಪೀಡಿಸಲ್ಪಡುವಂತೆ ಆ ರಾಕ್ಷಸೋತ್ತಮನು ವೀರರಾದ ಅವರಿಂದ ಪೀಡಿತನಾದನು. ಆಗ ಮಹಾಬಲ ಪ್ರತಿವಿಂಧ್ಯನು ಉಕ್ಕಿನಿಂದಲೇ ಮಾಡಲ್ಪಟ್ಟ ನೇರವಾದ ಮುಂಬಾಗವನ್ನು ಹೊಂದಿದ್ದ ನಿಶಿತ ಶರಗಳಿಂದ ರಾಕ್ಷಸನನ್ನು ಭೇದಿಸಿದನು. ಅವುಗಳಿಂದ ಒಡೆದ ಕವಚದಿಂದ ಆ ರಾಕ್ಷಸೋತ್ತಮನು ಸೂರ್ಯನ ಕಿರಣಗಳಿಂದ ಸಮ್ಮಿಶ್ರವಾದ ದೊಡ್ಡ ಕಪ್ಪು ಮೋಡದೋಪಾದಿಯಲ್ಲಿ ಶೋಭಿಸಿದನು. ಸುವರ್ಣದ ರೆಕ್ಕೆಗಳುಳ್ಳ ಆ ಬಾಣಗಳು ಆಶ್ರ್ಯಶೃಂಗಿಯ ಶರೀರದೊಳಕ್ಕೆ ನೆಟ್ಟಿಕೊಂಡು ಅವನು ಬೆಳಗುತ್ತಿರುವ ಶಿಖರಗಳುಳ್ಳ ಪರ್ವತದಂತೆ ಕಂಡನು. ಆಗ ಆ ಇವರು ಸಹೋದರರೂ ಮಹಾಹವದಲ್ಲಿ ರಕ್ಷಸೇಂದ್ರನನ್ನು ಸುವರ್ಣ ಭೂಷಿತವಾದ ನಿಶಿತ ಬಾಣಗಳಿಂದ ಹೊಡೆದರು. ಕುಪಿತಸರ್ಪಗಳಂತಿದ್ದ ಘೋರ ಶರಗಳಿಂದ ಗಾಯಗೊಂಡ ಅಲಂಬುಸನು ಅಂಕುಶದಿಂದ ಚುಚ್ಚಲ್ಪಟ್ಟ ಗಜರಾಜನಂತೆ ತುಂಬಾ ಕ್ರುದ್ಧನಾದನು. ಆ ಮಹಾರಥರಿಂದ ಅತಿಯಾಗಿ ಪೀಡಿತನಾಗಿ ಗಾಯಗೊಂಡ ಅವನು ಮುಹೂರ್ತಕಾಲ ದೀರ್ಘ ತಮಸ್ಸಿನ ಮೂರ್ಛೆಯನ್ನು ಹೊಂದಿದನು. ಆಗ ಸಂಜ್ಞೆಯನ್ನು ಹಿಂದೆ ಪಡೆದುಕೊಂಡು ಎರಡು ಪಟ್ಟು ಕ್ರೋಧಾನ್ವಿತನಾಗಿ ಸಾಯಕಗಳಿಂದ ಅವರ ಧ್ವಜಗಳನ್ನೂ ಧನುಸ್ಸುಗಳನ್ನೂ ತುಂಡರಿಸಿದನು. ಮಹಾರಥ ಅಲಂಬುಸನು ನಗುತ್ತಾ ರಥದಲ್ಲಿಯೇ ನಿಂತು ನರ್ತಿಸುತ್ತಿರುವಂತೆ ಅವರೊಬ್ಬೊಬ್ಬರನ್ನೂ ಮೂರು ಮೂರು ಬಾಣಗಳಿಂದ ಹೊಡೆದನು. ತ್ವರೆಮಾಡಿ ಸಂಕ್ರುದ್ಧನಾದ ಮಹಾಬಲ ರಾಕ್ಷಸನು ಆ ಮಹಾತ್ಮರ ಕುದುರೆಗಳನ್ನೂ ಸಾರಥಿಗಳನ್ನೂ ಸಂಹರಿಸಿದನು.
ಪುನಃ ಸಂಹೃಷ್ಟನಾಗಿ ಅವರನ್ನು ಸುಸಂಶಿತ ಬಹವಿಧದ ಆಕಾರದ ನೂರಾರು ಸಹಸ್ರಾರು ಶರಗಳಿಂದ ಗಾಯಗೊಳಿಸಿದನು. ಆ ಮಹೇಷ್ವಾಸರನ್ನು ವಿರಥರನ್ನಾಗಿ ಮಾಡಿ ಆ ನಿಶಾಚರ ರಾಕ್ಷಸನು ಅವರನ್ನು ಕೊಲ್ಲಲು ಬಯಸಿ ವೇಗದಿಂದ ಅವರ ಮೇಲೆ ಎರಗಿದನು. ಆ ದುರಾತ್ಮ ರಾಕ್ಷಸನಿಂದ ಅವರು ಆರ್ದಿತರಾದುದನ್ನು ನೋಡಿ ಅರ್ಜುನನ ಮಗನು ಯುದ್ಧದಲ್ಲಿ ರಾಕ್ಷಸನನ್ನು ಎದುರಿಸಿದನು. ವೃತ್ರ-ವಾಸವರ ನಡುವಿನಂತೆ ಅವರಿಬ್ಬರ ನಡುವೆ ಯುದ್ಧವು ನಡೆಯಿತು. ಅದನ್ನು ಮಹಾರಥರಾದ ಕೌರವರು ಮತ್ತು ಪಾಂಡವರು ಎಲ್ಲರೂ ನೋಡಿದರು. ಮಹಾ ಯುದ್ದದಲ್ಲಿ ತೊಡಗಿದ್ದ ಅವರಿಬ್ಬರು ಮಹಾಬಲರೂ ಕ್ರೋಧದಿಂದ ಉರಿಯುತ್ತಿದ್ದು, ಕ್ರೋಧದಿಂದ ಕಣ್ಣುಗಳನ್ನು ಕೆಂಪು ಮಾಡಿಕೊಂಡು, ಪರಸ್ಪರರನ್ನು ಕಾಲಾನಲರಂತೆ ನೋಡುತ್ತಿದ್ದರು. ದೇವಾಸುರರ ಯುದ್ಧದಲ್ಲಿ ಶಕ್ರ-ಶಂಬರರ ನಡುವೆ ನಡೆದಂತೆ ಅವಬ್ಬರ ನಡುವೆ ಘೋರವಾದ ಅಪ್ರಿಯವಾದ ಯುದ್ಧವಾಯಿತು.
ಅಲಂಬುಸನಾದರೋ ಸಮರದಲ್ಲಿ ಮಹಾರಥ ಅಭಿಮನ್ಯುವನ್ನು ಪುನಃ ಪುನಃ ಮಹಾನಾದಗೈದು ಬೆದರಿಸುತ್ತಾ ವೇಗದಿಂದ ಧಾವಿಸಿ ಬಂದು “ನಿಲ್ಲು! ನಿಲ್ಲು!” ಎಂದನು. ಸೌಭದ್ರನೂ ಕೂಡ ರಣದಲ್ಲಿ ಮತ್ತೆ ಮತ್ತೆ ಸಿಂಹದಂತೆ ಗರ್ಜಿಸಿ ತನ್ನ ತಂದೆಯ ಅತ್ಯಂತ ವೈರಿ ಮಹೇಷ್ವಾಸ ಆರ್ಶ್ಯಶೃಂಗಿಯನ್ನು ಎದುರಿಸಿದನು. ಆಗ ಯುದ್ಧದಲ್ಲಿ ತ್ವರೆಮಾಡಿ ರಥಿಗಳಲ್ಲಿ ಶ್ರೇಷ್ಠರಾದ ರಥಿಗಳಿಬ್ಬರೂ, ಮಾಯಾವೀ ರಾಕ್ಷಸಶ್ರೇಷ್ಠ ಮತ್ತು ದಿವ್ಯಾಸ್ತ್ರಜ್ಞ ಫಾಲ್ಗುನಿ ನರ-ರಾಕ್ಷಸರಿಬ್ಬರೂ ದೇವ-ದಾನವರಂತೆ ಹೋರಾಡಿದರು. ಆಗ ಕಾರ್ಷ್ಣಿಯು ಮೂರು ನಿಶಿತ ಸಾಯಕಗಳಿಂದ ಆರ್ಶ್ಯಶೃಂಗಿಯನ್ನು ರಣದಲ್ಲಿ ಹೊಡೆದು ಪುನಃ ಐದರಿಂದ ಹೊಡೆದನು. ಅಲಂಬುಸನೂ ಕೂಡ ಸಂಕ್ರುದ್ಧನಾಗಿ ಮಹಾಗಜವನ್ನು ಅಂಕುಶದಿಂದ ತಿವಿಯುವಂತೆ ಕಾರ್ಷ್ಣಿಯ ಎದೆಗೆ ಒಂಭತ್ತು ಆಶುಗಗಳಿಂದ ಹೊಡೆದನು. ಆಗ ಕ್ಷಿಪ್ರಕಾರೀ ನಿಶಾಚರನು ರಣದಲ್ಲಿ ಸಹಸ್ರಾರು ಶರಗಳಿಂದ ಅರ್ಜುನನ ಮಗನನ್ನು ಪೀಡಿಸಿದನು. ಆಗ ಅಭಿಮನ್ಯುವು ಕ್ರುದ್ಧನಾಗಿ ನಿಶಿತವಾದ ತೊಂಭತ್ತು ನತಪರ್ವಣ ಶರಗಳನ್ನು ರಾಕ್ಷಸನ ವಿಶಾಲ ಎದೆಯಮೇಲೆ ಪ್ರಯೋಗಿಸಿದನು. ಅವು ತಕ್ಷಣವೇ ಅವನ ಶರೀರವನ್ನು ಹೊಕ್ಕು ಮರ್ಮಗಳನ್ನು ಚುಚ್ಚಿದವು. ಅವುಗಳಿಂದ ಸರ್ವಾಂಗಗಳಲ್ಲಿ ಗಾಯಗೊಂಡ ಆ ರಕ್ಷಸೋತ್ತಮನು ಪರ್ವತವನ್ನು ತುಂಬಿದ ಪುಷ್ಪಭರಿತ ಕಿಂಶುಕದಂತೆ ಶೋಭಿಸಿದನು. ಬಂಗಾರದ ರೆಕ್ಕೆಗಳನ್ನುಳ್ಳ ಆ ಬಾಣಗಳನ್ನು ಧರಿಸಿದ ಮಹಾಬಲ ರಾಕ್ಷಸಶ್ರೇಷ್ಠನು ಹತ್ತಿ ಉರಿಯುತ್ತಿರುವ ಪರ್ವತದಂತೆ ಕಂಡನು. ಆಗ ಕ್ರುದ್ಧನಾದ ಮಹಾಬಲ ಆರ್ಶ್ಯಶೃಂಗಿಯು ಮಹೇಂದ್ರನಂತಿದ್ದ ಕಾರ್ಷ್ಣಿಯನ್ನು ಪತ್ರಿಗಳಿಂದ ಮುಚ್ಚಿದನು.
ಅವನು ಪ್ರಯೋಗಿಸಿದ ಯಮದಂಡದಂತಿರುವ ನಿಶಿತ ವಿಶಿಖಗಳು ಅಭಿಮನ್ಯುವನ್ನು ಹೊಕ್ಕು ಗಾಯಗೊಳಿಸಿ ಭೂಮಿಯನ್ನು ಪ್ರವೇಶಿಸಿದವು. ಹಾಗೆಯೇ ಆರ್ಜುನಿಯು ಬಿಟ್ಟ ಕಾಂಚನಭೂಷಣ ಶರಗಳು ಅಲಂಬುಸನನ್ನು ಹೊಕ್ಕು ಗಾಯಗೊಳಿಸಿ ಭೂಮಿಯನ್ನು ಪ್ರವೇಶಿಸಿದವು. ಆಹವದಲ್ಲಿ ಶಕ್ರನು ಮಯನನ್ನು ಹೇಗೋ ಹಾಗೆ ರಣದಲ್ಲಿ ಸೌಭದ್ರನು ರಾಕ್ಷಸನನ್ನು ಸನ್ನತಪರ್ವಗಳಿಂದ ಹೊಡೆದು ಹಿಂದೆ ಸರಿಯುವಂತೆ ಮಾಡಿದನು. ಹೀಗೆ ಶತ್ರುವಿನಿಂದ ಪೆಟ್ಟುತಿಂದ ರಣದಿಂದ ಹಿಂದೆಸರಿದ ಪರತಾಪನ ರಾಕ್ಷಸನು ಮಹಾಮಾಯೆಯಿಂದ ಕತ್ತಲೆಯನ್ನು ಆವರಿಸುವಂತೆ ಮಾಡಿದನು. ಆಗ ಅವನ ಆ ಕತ್ತಲೆಯಿಂದ ಭೂಮಿಯ ಮೇಲೆ ಎಲ್ಲವೂ ಕಳೆದು ಹೋದಂತಾಯಿತು. ರಣದಲ್ಲಿ ಅಭಿಮನ್ಯುವೂ ಕಾಣಲಿಲ್ಲ. ಕೌರವರು ಪಾಂಡವರು ಯಾರೂ ಕಾಣಲಿಲ್ಲ. ಆ ಘೋರರೂಪವಾದ ಮಹಾ ಕತ್ತಲೆಯನ್ನು ನೋಡಿ ಕುರುನಂದನ ಅಭಿಮನ್ಯುವು ಅತಿ ಉಗ್ರವಾದ ಭಾಸ್ಕರ ಅಸ್ತ್ರವನ್ನು ಪ್ರಯೋಗಿಸಿದನು. ಆಗ ಜಗತ್ತಿನ ಎಲ್ಲ ಕಡೆ ಪ್ರಕಾಶವಾಯಿತು. ಆ ದುರಾತ್ಮ ರಾಕ್ಷಸನ ಮಾಯೆಯೂ ಕೂಡ ನಾಶವಾಯಿತು.
ಮಹಾವೀರ್ಯ ನರೋತ್ತಮನು ಸಂಕ್ರುದ್ಧನಾಗಿ ರಾಕ್ಷಸೇಂದ್ರನನ್ನು ಸಮರದಲ್ಲಿ ಸನ್ನತಪರ್ವಗಳಿಂದ ಮುಚ್ಚಿದನು. ಆ ರಾಕ್ಷಸನು ಇನ್ನೂ ಇತರ ಅನೇಕ ಮಾಯೆಗಳನ್ನು ಬಳಸಿದನು. ಸರ್ವಾಸ್ತ್ರಗಳನ್ನು ತಿಳಿದುಕೊಂಡಿದ್ದ ಅಮೇಯಾತ್ಮ ಫಾಲ್ಗುನಿಯು ಅವುಗಳನ್ನೂ ನಿಲ್ಲಿಸಿದನು. ತನ್ನ ಮಾಯೆಯನ್ನು ಕಳೆದುಕೊಂಡು ಮತ್ತು ಸಾಯಕಗಳಿಂದ ಹೊಡೆಯಲ್ಪಟ್ಟು ರಾಕ್ಷಸನು ಅಲ್ಲಿಯೇ ರಥವನ್ನು ಬಿಟ್ಟು ಮಹಾ ಭಯದಿಂದ ಓಡಿ ಹೋದನು. ಆ ಕೂಟಯೋಧಿನಿ ರಾಕ್ಷಸನನ್ನು ಕಳುಹಿಸಿ ತಕ್ಷಣವೇ ಆರ್ಜುನಿಯು ಕೌರವರ ಸೇನೆಯನ್ನು ಕಾಡಿನ ಮದಾಂಧ ಆನೆಯು ಪದ್ಮಗಳಿರುವ ಸರೋವರವನ್ನು ಹೇಗೋ ಹಾಗೆ ಮರ್ದಿಸಿದನು.
ಆಗ ಶಾಂತನವ ಭೀಷ್ಮನು ಸೈನ್ಯವು ಓಡಿ ಹೋಗುತ್ತಿರುವುದನ್ನು ನೋಡಿ ಮಹಾ ರಥಸೇನೆಯಿಂದ ಸೌಭದ್ರನನ್ನು ಸುತ್ತುವರೆದನು. ಧಾರ್ತರಾಷ್ಟ್ರ ಮಹಾರಥರು ಆ ಶೂರನ ಸುತ್ತಲೂ ಮಂಡಲಾಕಾರದಲ್ಲಿದ್ದುಕೊಂಡು ಯುದ್ಧದಲ್ಲಿ ಅನೇಕರು ಒಬ್ಬನನ್ನು ದೃಢ ಸಾಯಕಗಳಿಂದ ಹೊಡೆಯತೊಡಗಿದರು. ತಂದೆಗೆ ಸಮನಾಗಿ ಪರಾಕ್ರಮಿಯಾಗಿದ್ದ, ವಿಕ್ರಮ ಮತ್ತು ಬಲಗಳಲ್ಲಿ ವಾಸುದೇವನಂತಿದ್ದ, ಎಲ್ಲ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ಆ ವೀರನು ಕೌರವರ ರಥಿಗಳಿಗೆ ತನ್ನ ತಂದೆ ಮತ್ತು ಸೋದರ ಮಾವ ಇಬ್ಬರಿಗೂ ಸದೃಶವಾದ ಬಹುವಿಧದ ಕೆಲಸಗಳನ್ನು ಮಾಡಿದನು. ಆಗ ಅಮರ್ಷಣ ಧನಂಜಯುನು ಕೌರವ ಸೈನಿಕರನ್ನು ಸಂಹರಿಸುತ್ತ ಪುತ್ರನಿಗಾಗಿ ಭೀಷ್ಮನಲ್ಲಿಗೆ ತಲುಪಿದನು. ಹಾಗೆಯೇ ದೇವವ್ರತನೂ ಕೂಡ ಸ್ವಯಂಭಾನುವು ಇನ್ನೊಬ್ಬ ಭಾಸ್ಕರನನ್ನು ಹೇಗೋ ಹಾಗೆ ಪಾರ್ಥನನ್ನು ತಲುಪಿದನು. ಆಗ ರಥ-ಆನೆ-ಕುದುರೆಗಳಿಂದೊಡಗೂಡಿ ಧೃತರಾಷ್ಟ್ರನ ಪುತ್ರರು ರಣದಲ್ಲಿ ಗುಂಪುಗುಂಪಾಗಿ ಭೀಷ್ಮನನ್ನು ಎಲ್ಲಕಡೆಗಳಿಂದ ಸುತ್ತುವರೆದರು. ಹಾಗೆಯೇ ಪಾಂಡವರು ಧನಂಜಯನನ್ನು ಮಹಾಸೇನೆಯಿಂದ ಕೂಡಿ, ಕವಚಗಳನ್ನು ಧರಿಸಿ ಸುತ್ತುವರೆದರು.
ಆಗ ಭೀಷ್ಮನ ಮುಂದೆ ನಿಂತಿದ್ದ ಶಾರದ್ವತನು ಅರ್ಜುನನನ್ನು ಇಪ್ಪತ್ತೈದು ಸಾಯಕಗಳಿಂದ ಚುಚ್ಚಿದನು. ಪಾಂಡವರಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಸಾತ್ಯಕಿಯು ಸಿಂಹವೊಂದು ಆನೆಯನ್ನು ಹೇಗೋ ಹಾಗೆ, ಮುಂದೆಬಂದು ಅವನನ್ನು ನಿಶಿತ ಶರಗಳಿಂದ ಹೊಡೆದನು. ಗೌತಮನೂ ಕೂಡ ತ್ವರೆಮಾಡಿ ಸಂಕ್ರುದ್ಧನಾಗಿ ಮಾಧವ ಸಾತ್ಯಕಿಯನ್ನು ಒಂಭತ್ತು ಕಂಕಪತ್ರಗಳಿಂದ ಕೂಡಿದ್ದ ಶರಗಳಿಂದ ಹೃದಯಕ್ಕೆ ಗುರಿಯಿಟ್ಟು ಹೊಡೆದನು. ಮಹಾರಥ ಶೈನೇಯನೂ ಕೂಡ ತುಂಬಾ ಕ್ರುದ್ಧನಾಗಿ ಗೌತಮನನ್ನು ಕೊನೆಗೊಳಿಸಬಲ್ಲ ಘೋರವಾದ ಶಿಲೀಮುಖವನ್ನು ತೆಗೆದುಕೊಂಡು ಹೊಡೆದನು. ಶಕ್ರನ ವಜ್ರದಂತೆ ಬೆಳಗುತ್ತಾ ವೇಗದಿಂದ ಬಂದು ಬೀಳುತ್ತಿದ್ದ ಅದನ್ನು ಪರಮ ಕೋಪಿ ದ್ರೌಣಿಯು ಸಂಕ್ರುದ್ಧನಾಗಿ ಎರಡಾಗಿ ತುಂಡರಿಸಿದನು. ಆಗ ಶೈನೇಯನು ರಥಿಗಳಲ್ಲಿ ಶ್ರೇಷ್ಠ ಗೌತಮನನ್ನು ಅಲ್ಲಿಯೇ ಬಿಟ್ಟು ರಾಹುವು ಶಶಿಯನ್ನು ಹೇಗೋ ಹಾಗೆ ದ್ರೌಣಿಯ ಮೇಲೆ ಎರಗಿದನು. ದ್ರೋಣನ ಮಗನು ಅವನ ಧನುಸ್ಸನ್ನು ಎರಡಾಗಿ ಕತ್ತರಿಸಿದನು ಮತ್ತು ಧನುಸ್ಸು ತುಂಡಾದ ಅವನನ್ನು ಸಾಯಕಗಳಿಂದ ಹೊಡೆದನು. ಆಗ ಸಾತ್ಯಕಿಯು ಇನ್ನೊಂದು ಶತ್ರುಗಳನ್ನು ಸಂಹರಿಸುವ, ಭಾರವಾದ ಬಿಲ್ಲನ್ನು ತೆಗೆದುಕೊಂಡು ದ್ರೌಣಿಯ ಬಾಹುಗಳು ಮತ್ತು ಎದೆಗೆ ಅರವತ್ತು ಬಾಣಗಳನ್ನು ತಾಗಿಸಿದನು. ಗಾಯಗೊಂಡ ಅವನು ವ್ಯಥಿತನಾಗಿ ಒಂದು ಕ್ಷಣ ಮೂರ್ಛಿತನಾಗಿ, ಧ್ವಜದ ದಂಡವನ್ನು ಹಿಡಿದು ರಥದಲ್ಲಿಯೇ ಕುಸಿದು ಬಿದ್ದನು.
ಆಗ ಸಂಜ್ಞೆಯನ್ನು ಪಡೆದು ಪ್ರತಾಪವಾನ್ ದ್ರೋಣಪುತ್ರನು ಕ್ರುದ್ಧನಾಗಿ ವಾರ್ಷ್ಣೇಯನನ್ನು ನಾರಾಚಗಳಿಂದ ಹೊಡೆದನು. ಅದು ಶೈನೇಯನನ್ನು ಒಳಹೊಕ್ಕು ಹೊರಬಂದು ವಸಂತಕಾಲದಲ್ಲಿ ಬಲವಾನ್ ಸರ್ಪಶಿಶುವು ಬಿಲವನ್ನು ಹೊಗುವಂತೆ ಭೂಮಿಯನ್ನು ಹೊಕ್ಕಿತು. ಅನಂತರ ಇನ್ನೊಂದು ಭಲ್ಲದಿಂದ ಮಾಧವನ ಉತ್ತಮ ಧ್ವಜವನ್ನು ಸಮರದಲ್ಲಿ ಕತ್ತರಿಸಿ ದ್ರೌಣಿಯು ಸಿಂಹನಾದಗೈದನು. ಪುನಃ ಘೋರ ಶರಗಳಿಂದ ಇವನನ್ನು, ಬೇಸಗೆಯ ಕೊನೆಯಲ್ಲಿ ಮೋಡಗಳು ಸೂರ್ಯನನ್ನು ಹೇಗೋ ಹಾಗೆ, ಮುಚ್ಚಿದನು. ಸಾತ್ಯಕಿಯೂ ಕೂಡ ಆ ಶರಜಾಲವನ್ನು ನಾಶಪಡಿಸಿ ತಕ್ಷಣವೇ ದ್ರೌಣಿಯನ್ನು ಅನೇಕ ಶರಜಾಲಗಳಿಂದ ಆಕ್ರಮಣಿಸಿದನು. ಪರವೀರಹ ಶೈನೇಯನು ದ್ರೌಣಿಯನ್ನು, ಮೇಘಜಾಲಗಳಿಂದ ವಿಮುಕ್ತನಾದ ಸೂರ್ಯನು ಹೇಗೋ ಹಾಗೆ ಸುಡತೊಡಗಿದನು. ಪುನಃ ಅವನನ್ನು ಸಹಸ್ರಾರು ಬಾಣಗಳಿಂದ ಹೊಡೆದು ಮುಚ್ಚಿಸಿ ಮಹಾಬಲ ಸಾತ್ಯಕಿಯು ಗರ್ಜಿಸಿದನು. ರಾಹುವಿನಿಂದ ನಿಶಾಕರನು ಗ್ರಸ್ತನಾದಂತಿದ್ದ ಮಗನನ್ನು ನೋಡಿ ಪ್ರತಾಪವಾನ್ ಭಾರದ್ವಾಜನು ಧಾವಿಸಿ ಬಂದು ಶೈನೇಯನ ಮೇಲೆ ಎರಗಿದನು. ಅವನು ಸುತೀಕ್ಷ್ಣವಾದ ಪೃಷತ್ಕದಿಂದ ವಾರ್ಷ್ಣೇಯನನ್ನು ಹೊಡೆದು ಅವನಿಂದ ಪರಿತಪ್ತನಾದ ಮಗನನ್ನು ಬಿಡಿಸಿದನು. ಸಾತ್ಯಕಿಯಾದರೋ ರಣದಲ್ಲಿ ಮಹಾರಥ ಗುರುಪುತ್ರನನ್ನು ಗೆದ್ದು, ದ್ರೋಣನನ್ನು ಇಪ್ಪತ್ತು ಸರ್ವಪಾರಶ ಶರಗಳಿಂದ ಹೊಡೆದನು. ಅದರ ನಂತರ ಅಮೇಯಾತ್ಮ ಶ್ವೇತವಾಹನ ಮಹಾರಥ ಕೌಂತೇಯನು ಕ್ರುದ್ಧನಾಗಿ ದ್ರೋಣನೊಡನೆ ಯುದ್ಧಮಾಡತೊಡಗಿದನು. ಆಗ ನಭಸ್ತಲದಲ್ಲಿ ಬುಧ ಮತ್ತು ಶುಕ್ರರ ನಡುವಿನಂತೆ ದ್ರೋಣ ಮತ್ತು ಪಾರ್ಥರೊಡನೆ ಮಹಾ ಯುದ್ಧವು ನಡೆಯಿತು.
ಯುದ್ಧದಲ್ಲಿ ದ್ರೋಣನು ಪಾರ್ಥನನ್ನು ತನಗೆ ಪ್ರಿಯನಾದವನೆಂದು ಗುರುತಿಸುವುದಿಲ್ಲ. ಅಥವಾ ಪಾರ್ಥನೂ ಕ್ಷತ್ರಧರ್ಮವನ್ನು ಗೌರವಿಸಿ ಯುದ್ಧದದಲ್ಲಿ ಅವನನ್ನು ಗುರುವೆಂದು ಗುರುತಿಸುವುದಿಲ್ಲ. ಕ್ಷತ್ರಿಯರು ರಣದಲ್ಲಿ ಎಂದೂ ಒಬ್ಬರನ್ನೊಬ್ಬರು ತಿರಸ್ಕರಿಸುವುಲ್ಲ. ನಿರ್ಮರ್ಯಾದೆಯಿಂದ ತಂದೆ-ಸಹೋದರರೊಡನೆಯೂ ಯುದ್ಧ ಮಾಡುತ್ತಾರೆ. ರಣದಲ್ಲಿ ದ್ರೋಣನು ಪಾರ್ಥನಿಂದ ಮೂರು ಬಾಣಗಳಿಂದ ಹೊಡೆಯಲ್ಪಟ್ಟನು. ಆದರೆ ಅವನು ಪಾರ್ಥನ ಚಾಪದಿಂದ ಹೊರಟುಬಂದ ಆ ಬಾಣಗಳನ್ನು ಪರಿಗಣಿಸಲೇ ಇಲ್ಲ. ರಣದಲ್ಲಿ ಪುನಃ ಪಾರ್ಥನನ್ನು ಶರವೃಷ್ಟಿಯಿಂದ ಮುಚ್ಚಿದನು ಮತ್ತು ರೋಷದಿಂದ ಗಹನವಾದ ವನವು ಸುಡುತ್ತಿದೆಯೋ ಎನ್ನುವಂತೆ ಉರಿದನು. ಆಗ ತಡಮಾಡದೇ ದ್ರೋಣನು ಸನ್ನತಪರ್ವ ಶರಗಳಿಂದ ಅರ್ಜುನನನ್ನು ನಿಲ್ಲಿಸಿದನು. ರಾಜಾ ದುರ್ಯೋಧನನು ದ್ರೋಣನ ರಥದ ಹಿಂಬಾಗದ ರಕ್ಷಕನಾಗಿರುವಂತೆ ಸುಶರ್ಮನಿಗೆ ನಿರ್ದೇಶಿಸಿದನು. ತ್ರಿಗರ್ತರಾಜನೂ ಕೂಡ ಕ್ರುದ್ಧನಾಗಿ ಸಮರದಲ್ಲಿ ಕಾರ್ಮುಕವನ್ನು ಚೆನ್ನಾಗಿ ಎಳೆದು ಪಾರ್ಥನನ್ನು ಬಾಣಗಳಿಂದ ಮುಚ್ಚಿದನು. ಅವರಿಬ್ಬರು ಬಿಟ್ಟ ಆ ಬಾಣಗಳು ಶರತ್ಕಾಲದಲ್ಲಿ ಆಕಾಶದಲ್ಲಿ ಹಾರಾಡುವ ಹಂಸಗಳಂತೆ ಪ್ರಕಾಶಿಸಿದವು. ರುಚಿಕರ ಹಣ್ಣುಗಳ ಭಾರದಿಂದ ಬಗ್ಗಿರುವ ವೃಕ್ಷಕ್ಕೆ ಹಕ್ಕಿಗಳು ಮುತ್ತಿಕೊಳ್ಳುವಂತೆ ಅವರ ಶರಗಳು ಅರ್ಜುನನ ಶರೀರದ ಸುತ್ತಲೂ ಚುಚ್ಚಿಕೊಂಡವು. ರಥಿಗಳಲ್ಲಿ ಶ್ರೇಷ್ಠನಾದ ಅರ್ಜುನನಾದರೋ ರಣದಲ್ಲಿ ಸಿಂಹನಾದ ಮಾಡಿ ಸಮರದಲ್ಲಿ ಪುತ್ರನೊಂದಿಗೆ ತ್ರಿಗರ್ತರಾಜನನ್ನು ಶರಗಳಿಂದ ಹೊಡೆದನು.
ಪ್ರಲಯಕಾಲದಲ್ಲಿ ಕಾಲಪುರುಷನಂತೆ ಪಾರ್ಥನಿಂದ ಪ್ರಹೃತರಾದ ಅವರು ಮರಣದ ನಿಶ್ಚಯವನ್ನು ಮಾಡಿ ಪಾರ್ಥನನ್ನೇ ಎದುರಿಸಿ, ಪಾಂಡವನ ರಥದ ಮೇಲೆ ಬಾಣಗಳ ಮಳೆಯನ್ನು ಸುರಿಸಿದರು. ಅಚಲವಾಗಿದ್ದು ಪರ್ವತವು ನೀರಿನ ಮಳೆಯನ್ನು ಸ್ವೀಕರಿಸುವಂತೆ ಅವರು ಸುರಿಸಿದ ಬಾಣಗಳ ಮಳೆಯನ್ನು ಪಾಂಡವನು ತಡೆದುಕೊಂಡನು. ಅಲ್ಲಿ ಎಲ್ಲರೂ ಬೀಭತ್ಸುವಿನ ಕೈಚಳಕದ ಅದ್ಭುತವನ್ನು ನೋಡಿದರು. ಅನೇಕ ಶೂರರು ಸುರಿಸಿದ ಸಹಿಸಲಸಾದ್ಯವಾದ ಬಾಣಗಳ ಮಳೆಯನ್ನು ಅವನೊಬ್ಬನೇ ಭಿರುಗಾಳಿಯು ಮೋಡಗಳ ಸಮೂಹವನ್ನು ಹೇಗೋ ಹಾಗೆ ಚದುರಿಸಿ ತಡೆದನು. ಪಾರ್ಥನ ಆ ಕೆಲಸದಿಂದ ದೇವ-ದಾನವರು ಸಂತುಷ್ಟರಾದರು. ಆಗ ಕ್ರುದ್ಧನಾಗಿ ರಣದಲ್ಲಿ ಪಾರ್ಥನು ತ್ರಿಗರ್ತರ ಮೇಲೆ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು. ಅದರಿಂದ ಭಿರುಗಾಳಿಯು ಹುಟ್ಟಿ ನಭಸ್ತಲವೇ ಅಲ್ಲೋಲಕಲ್ಲೋಲವಾಯಿತು. ಅನೇಕ ವೃಕ್ಷಗಳನ್ನು ಕೆಡವಿ ಸೈನಿಕರನ್ನೂ ಧ್ವಂಸಮಾಡಿತು. ಆಗ ದ್ರೋಣನು ಸುದಾರುಣವಾದ ವಾಯವ್ಯಾಸ್ತ್ರವನ್ನು ನೋಡಿ ಬೇರೆ ಘೋರವಾದ ಶೈಲಾಸ್ತ್ರವನ್ನು ಪ್ರಯೋಗಿಸಿದನು. ಯುದ್ಧದಲ್ಲಿ ಮಹಾರಣದಲ್ಲಿ ದ್ರೋಣನು ಬಿಟ್ಟ ಆ ಅಸ್ತ್ರವು ಭಿರುಗಾಳಿಯನ್ನು ಪ್ರಶಮನಗೊಳಿಸಿತು. ದಿಕ್ಕುಗಳು ಪ್ರಸನ್ನವಾದವು.
ಭೀಮನ ಪರಾಕ್ರಮ
ಆಗ ವೀರ ಪಾಂಡುಸುತ ಭೀಮನು ತ್ರಿಗರ್ತನ ರಥಸೇನೆಯನ್ನು ರಣದಲ್ಲಿ ನಿರುತ್ಸಾಹಿಗಳನ್ನಾಗಿಯೂ, ವಿಮುಖರನ್ನಾಗಿಯೂ, ಪರಾಕ್ರಮ ಹೀನರನ್ನಾಗಿಯೂ ಮಾಡಿದನು. ಆಗ ರಾಜಾ ದುರ್ಯೋಧನ, ರಥಿಗಳಲ್ಲಿ ಶ್ರೇಷ್ಠ ಕೃಪ, ಅಶ್ವತ್ಥಾಮ, ಶಲ್ಯ, ಕಾಂಬೋಜದ ಸುದಕ್ಷಿಣ, ಅವಂತಿಯ ವಿಂದಾನುವಿಂದರು ಮತ್ತು ಬಾಹ್ಲಿಕರೊಂದಿಗೆ ಬಾಹ್ಲೀಕ ಇವರುಗಳು ಮಹಾ ರಥಸೇನೆಯಿಂದ ಪಾರ್ಥನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಹಾಗೆಯೇ ಭಗದತ್ತ ಮತ್ತು ಮಹಾಬಲ ಶ್ರುತಾಯು ಇವರು ಗಜಸೇನೆಗಳಿಂದ ಭೀಮನನ್ನು ಎಲ್ಲ ಕಡೆಗಳಿಂದಲೂ ತಡೆದರು. ಭೂರಿಶ್ರವ, ಶಲ, ಮತ್ತು ಸೌಬಲರು ತಕ್ಷಣವೇ ವಿವಿಧ ಶರಜಾಲಗಳಿಂದ ಮಾದ್ರೀಪುತ್ರರನ್ನು ತಡೆದರು. ಭೀಷ್ಮನಾದರೋ ಎಲ್ಲ ಧಾರ್ತರಾಷ್ಟ್ರರ ಎಲ್ಲ ಸೈನಿಕರೊಂದಿಗೆ ಯುಧಿಷ್ಠರನನ್ನು ಎದುರಿಸಿ ಎಲ್ಲ ಕಡೆಗಳಿಂದ ಸುತ್ತುವರೆದರು. ಮೇಲೆ ಬೀಳುತ್ತಿದ್ದ ಗಜಸೇನೆಯನ್ನು ನೋಡಿ ಪಾರ್ಥ ವೃಕೋದರ ವೀರನು ಕಾನನದಲ್ಲಿರುವ ಮೃಗರಾಜನಂತೆ ತನ್ನ ಕಟವಾಯಿಗಳನ್ನು ನೆಕ್ಕಿದನು. ಆಗ ರಥಿಗಳಲ್ಲಿ ಶ್ರೇಷ್ಠನು ಮಹಾಹವದಲ್ಲಿ ಗದೆಯನ್ನು ಹಿಡಿದು ತಕ್ಷಣವೇ ರಥದಿಂದ ಕೆಳಗೆ ಹಾರಿ ನಿನ್ನ ಸೈನ್ಯವನ್ನು ಹೆದರಿಸಿದನು. ಗದಾಪಾಣಿಯಾಗಿ ನಿಂತಿದ್ದ ಭೀಮಸೇನನನ್ನು ನೋಡಿ ಗಜಾರೋಹಿಗಳೂ ರಣದಲ್ಲಿ ಪ್ರಯತ್ನಟ್ಟು ಅವನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಆನೆಗಳ ಮಧ್ಯವನ್ನು ಸೇರಿ ಪಾಂಡವನು ಮಹಾ ಮೇಘ ಜಾಲಗಳ ನಡುವೆ ಕಾಣುವ ರವಿಯಂತೆ ವಿರಾಜಿಸಿದನು. ಪಾಂಡವರ್ಷಭನು ಆ ಗಜಸೇನೆಯನ್ನು ಭಿರುಗಾಳಿಯು ಮಹಾ ಮೋಡಗಳ ಜಾಲವನ್ನು ಹೇಗೋ ಹಾಗೆ ಎಲ್ಲಕಡೆ ಚದುರಿಸಿದನು. ಬಲಶಾಲಿ ಭೀಮಸೇನನಿಂದ ವಧಿಸಲ್ಪಡುತ್ತಿದ್ದ ಆ ಆನೆಗಳು ರಣದಲ್ಲಿ ಮೋಡಗಳು ಗುಡುಗುವಂತೆ ಗರ್ಜಿಸಿದವು. ರಣಮೂರ್ಧನಿಯಲ್ಲಿ ಅನೇಕ ಆನೆಗಳಿಂದ ಸೀಳಲ್ಪಟ್ಟ ಮತ್ತು ಗಾಯಗೊಂಡ ಪಾರ್ಥನು ಹೂಬಿಟ್ಟ ಅಶೋಕವೃಕ್ಷದಂತೆ ಶೋಭಿಸಿದನು. ತಿವಿಯಲು ಬಂದ ದಂತವನ್ನೇ ಹಿಡಿದು ಜಗ್ಗಾಡಿ ಕಿತ್ತು ಅವುಗಳಿಂದಲೇ ದಂಡವನ್ನು ಹಿಡಿದ ಅಂತಕನಂತೆ ಆನೆಗಳ ಕುಂಭಸ್ಥಳಗಳನ್ನು ತಿವಿದು ಸಾಯಿಸುತ್ತಿದ್ದನು. ರಕ್ತದಿಂದ ನೆನೆದಿದ್ದ ಗದೆಯನ್ನು ಹಿಡಿದು, ಮೇಡಸ್ಸು, ಮಜ್ಜೆಗಳು ಶರೀರದ ಮೇಲೆ ಹಾರಿ ಪ್ರಕಾಶಿಸುತ್ತಿದ್ದ ಅವನು ರಕ್ತದಿಂದ ಅಭ್ಯಂಜನ ಮಾಡಿದ ರುದ್ರನಂತೆ ತೋರಿದನು. ಹೀಗೆ ವಧಿಸಲ್ಪಟ್ಟು ಉಳಿದಿದ್ದ ಮಹಾಗಜಗಳು ತಮ್ಮದೇ ಸೇನೆಯನ್ನು ಧ್ವಂಸಮಾಡುತ್ತಾ ಎಲ್ಲಾಕಡೆ ಓಡಿಹೋದವು. ಎಲ್ಲ ಕಡೆಗಳಿಂದಲೂ ಗಜಸೈನ್ಯಗಳು ಪಲಾಯನ ಮಾಡತ್ತಿದ್ದುದರಿಂದ ಉಳಿದ ದುರ್ಯೋಧನನ ಸೇಲೆಯೆಲ್ಲವೂ ಪರಾಙ್ಮುಖವಾಯಿತು.
ಸಂಕುಲಯುದ್ಧ
ಮಧ್ಯಾಹ್ನದಲ್ಲಿ ಸೋಮಕರೊಂದಿಗೆ ಭೀಷ್ಮನ ಲೋಕಕ್ಷಯಕಾರಕ ರೌದ್ರ ಸಂಗ್ರಾಮವು ಪ್ರಾರಂಭವಾಯಿತು. ರಥಿಗಳಲ್ಲಿ ಶ್ರೇಷ್ಠ ಗಾಂಗೇಯನು ನಿಶಿತ ಬಾಣಗಳಿಂದ ಪಾಂಡವರ ಸೇನೆಗಳನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದನು. ದೇವವ್ರತನು ಹುಲ್ಲಿನಿಂದ ಧಾನ್ಯಗಳನ್ನು ಬೇರ್ಪಡಿಸಲು ಎತ್ತುಗಳು ತುಳಿಯುವಂತೆ ಆ ಸೇನೆಯನ್ನು ಮರ್ದಿಸಿದನು. ಧೃಷ್ಟದ್ಯುಮ್ನ, ಶಿಖಂಡಿ, ವಿರಾಟ ಮತ್ತು ದ್ರುಪದರು ಸಮರದಲ್ಲಿ ಆ ಮಹಾರಥ ಭೀಷ್ಮನ ಹತ್ತಿರ ಹೋಗಿ ಬಾಣಗಳಿಂದ ಹೊಡೆದು ಆಕ್ರಮಣಿಸಿದರು. ಆಗ ಅವನು ಧೃಷ್ಟದ್ಯುಮ್ನ ಮತ್ತು ವಿರಾಟರನ್ನು ಮೂರು ಬಾಣಗಳಿಂದ ಹೊಡೆದು, ದ್ರುಪದನ ಮೇಲೆ ನಾರಾಚವನ್ನು ಪ್ರಯೋಗಿಸಿದನು. ಸಮರದಲ್ಲಿ ಆ ಮಹೇಷ್ವಾಸ ಅಮಿತ್ರಕರ್ಶಿ ಭೀಷ್ಮನಿಂದ ಹೊಡೆಯಲ್ಪಟ್ಟ ಅವರು ಕಾಲಿನಿಂದ ತುಳಿಯಲ್ಪಟ್ಟ ಸರ್ಪಗಳಂತೆ ಕ್ರೋಧಿತರಾದರು. ಭಾರತರ ಪಿತಾಮಹನನ್ನು ಶಿಖಂಡಿಯು ಹೊಡೆದರೂ ಕೂಡ ಅವನ ಸ್ತ್ರೀತ್ವವನ್ನು ಮನಸ್ಸಿಗೆ ತಂದುಕೊಂಡು ಆ ಅಚ್ಯುತನು ಅವನನ್ನು ಪ್ರಹರಿಸಲಿಲ್ಲ. ಧೃಷ್ಟದ್ಯುಮ್ನನಾದರೋ ಕ್ರೋಧದಿಂದ ಅಗ್ನಿಯಂತೆ ಪ್ರಜ್ವಲಿಸುತ್ತಾ ಪಿತಾಮಹನನ್ನು ಮೂರು ಬಾಣಗಳಿಂದ ಪಿತಾಮಹನ ಎದೆಗೆ ಹೊಡೆದನು. ಭೀಷ್ಮನನ್ನು ದ್ರುಪದನು ಇಪ್ಪತ್ತೈದರಿಂದ, ವಿರಾಟನು ಹತ್ತು ಬಾಣಗಳಿಂದ, ಮತ್ತು ಶಿಖಂಡಿಯು ಇಪ್ಪತ್ತೈದು ಸಾಯಕಗಳಿಂದ ಹೊಡೆದರು. ಯುದ್ಧದಲ್ಲಿ ಆ ಮಹಾತ್ಮರಿಂದ ಹೀಗೆ ಅತಿಯಾಗಿ ಗಾಯಗೊಂಡ ಭೀಷ್ಮನು ವಸಂತಕಾಲದಲ್ಲಿ ಪುಷ್ಪ-ಚಿಗುರುಗಳಿಂದ ಕೂಡಿದ ಅಶೋಕವೃಕ್ಷದಂತೆ ಕೆಂಪಾಗಿ ತೋರಿದನು.
ಅವರನ್ನು ಮೂರು ಮೂರು ಜಿಹ್ಮಗಗಳಿಂದ ತಿರುಗಿ ಹೊಡೆದು ಗಾಂಗೇಯನು ಭಲ್ಲದಿಂದ ದ್ರುಪದನ ಧನುಸ್ಸನ್ನು ಕತ್ತರಿಸಿದನು. ರಣನೆತ್ತಿಯಲ್ಲಿ ಅವನು ಇನ್ನೊಂದು ಬಿಲ್ಲನ್ನು ಎತ್ತಿಕೊಂಡು ಭೀಷ್ಮನನ್ನು ಐದು ಮತ್ತು ಸಾರಥಿಯನ್ನು ಮೂರು ನಿಶಿತ ಬಾಣಗಳಿಂದ ಹೊಡೆದನು. ಆಗ ಯುಧಿಷ್ಠಿರನ ಹಿತವನ್ನು ಅಪೇಕ್ಷಿಸಿ ಮತ್ತು ರಣಮುಖದಲ್ಲಿ ಪಾಂಚಾಲ್ಯ ಧೃಷ್ಟದ್ಯುಮ್ನನನ್ನು ರಕ್ಷಿಸುವ ಸಲುವಾಗಿ ಭೀಮನು ದ್ರೌಪದಿಯ ಐದು ಮಕ್ಕಳು, ಕೇಕಯದ ಐವರು ಸಹೋದರರು ಮತ್ತು ಸಾತ್ವತ ಸಾತ್ಯಕಿಯನ್ನೊಡಗೂಡಿ ಗಾಂಗೇಯನನ್ನು ಅಕ್ರಮಣಿಸಿದನು. ಹಾಗೆಯೇ ಕೌರವರೆಲ್ಲರೂ ಭೀಷ್ಮನ ರಕ್ಷಣೆಗಾಗಿ ಉದ್ಯುಕ್ತರಾಗಿ ಸೇನೆಗಳೊಂದಿಗೆ ಪಾಂಡುಸೇನೆಯನ್ನು ಎದುರಿಸಿ ಹೋರಾಡಿದರು. ಆಗ ಅಲ್ಲಿ ಕೌರವರ ಮತ್ತು ಪಾಂಡವರ ನಡುವೆ ಯಮರಾಷ್ಟ್ರವನ್ನು ವೃದ್ಧಿಗೊಳಿಸುವ ಪದಾತಿ-ಕುದುರೆ-ರಥ-ಆನೆಗಳ ಮಹಾ ಸಂಕುಲ ಯುದ್ಧವು ನಡೆಯಿತು. ರಥಿಗಳು ರಥಿಗಳ ಮೇಲೆ ಆಕ್ರಮಣಮಾಡಿ ಯಮಸಾದನಕ್ಕೆ ಕಳುಹಿಸುತ್ತಿದ್ದರು. ಇತರರು ಅಲ್ಲಲ್ಲಿ ಪದಾತಿ-ಆನೆ-ಕುದುರೆ ಸವಾರರನ್ನು ಸನ್ನತಪರ್ವ ಶರಗಳಿಂದ ಮತ್ತು ವಿವಿಧ ಘೋರ ಅಸ್ತ್ರಗಳಿಂದ ಪರಲೋಕಗಳಿಗೆ ಕಳುಹಿಸುತ್ತಿದ್ದರು. ರಥಗಳಿಗೆ ಕಟ್ಟಿದ್ದ ಕುದುರೆಗಳು ರಥಿಗಳನ್ನು ಕಳೆದುಕೊಂಡು ಮತ್ತು ಸಾರಥಿಗಳನ್ನು ಕಳೆದುಕೊಂಡು ಸಮರದಲ್ಲಿ ಎಲ್ಲ ಕಡೆಗಳಲ್ಲಿ ಓಡಿಹೋಗುತ್ತಿದ್ದವು. ರಣದಲ್ಲಿ ಬಹಳಷ್ಟು ಮನುಷ್ಯರನ್ನು ಮತ್ತು ಕುದುರೆಗಳನ್ನು ಮರ್ದಿಸುತ್ತಿರುವ ಆ ರಥಗಳು ಗಂಧರ್ವನಗರಗಳಂತೆ ಕಾಣುತ್ತಿದ್ದವು.
ಹೊಳೆಯುತ್ತಿರುವ ಕವಚಗಳನ್ನು ಧರಿಸಿದ್ದ, ಕುಂಡಲ-ಕಿರೀಟಗಳಿಂದ ಮತ್ತು ಸರ್ವಾಂಗಗಳಲ್ಲಿ ವಿಭೂಷಿತರಾದ, ರೂಪದಲ್ಲಿ ದೇವಪುತ್ರರ ಸಮನಾದ, ಯುದ್ಧ ಶೌರ್ಯದಲ್ಲಿ ಶಕ್ರನ ಸಮನಾದ, ವೈಶ್ರವಣನಂತೆ ಶ್ರೀಮಂತರಾದ, ನ್ಯಾಯಗಳಲ್ಲಿ ಬೃಹಸ್ಪತಿಯಂತಿರುವ, ಸರ್ವಲೋಕೇಶ್ವರರಂತಿರುವ ಶೂರ ರಥರು ರಥಹೀನರಾಗಿ ಸಾಧಾರಣ ಮನುಷ್ಯರಂತೆ ಅಲ್ಲಲ್ಲಿ ಓಡಿಹೋಗುತ್ತಿರುವುದು ಕಂಡುಬಂದಿತು. ಆನೆಗಳೂ ಕೂಡ ಮಾವುತರನ್ನು ಕಳೆದುಕೊಂಡು ತಮ್ಮ ಸೈನಿಕರನ್ನೇ ತುಳಿಯುತ್ತಾ ಜೋರಾಗಿ ಕೂಗಿಕೊಂಡು ಎಲ್ಲ ಕಡೆ ಓಡಿಹೋಗುತ್ತಿದ್ದವು. ಕಪ್ಪುಮೋಡಗಳಂತೆ ಹೊಳೆಯುವ ಮತ್ತು ಮೋಡಗಳಿಂದ ಗರ್ಜಿಸುವ ಆನೆಗಳು ಕವಚಗಳನ್ನು, ಚಾಮರ-ಚತ್ರಗಳನ್ನು, ಪತಾಕೆಗಳನ್ನು, ಕಕ್ಷ್ಯಗಳನ್ನು, ಘಂಟೆಗಳನ್ನು, ಮತ್ತು ತೋಮರಗಳನ್ನು ಕಳೆದುಕೊಂಡು ಹತ್ತೂ ದಿಕ್ಕುಗಳಲ್ಲಿ ಓಡಿ ಹೋಗುತ್ತಿರುವುದು ಕಂಡುಬಂದಿತು. ಹಾಗೆಯೇ ಕೌರವರ ಮತ್ತು ಪಾಂಡವರ ಸಂಕುಲಗಳಲ್ಲಿ ಆನೆಗಳನ್ನು ಕಳೆದುಕೊಂಡ ಗಜಾರೋಹಿಗಳು ಓಡಿಹೋಗುತ್ತಿರುವುದು ಕಾಣುತ್ತಿತ್ತು. ನಾನಾ ದೇಶಗಳಲ್ಲಿ ಹುಟ್ಟಿದ್ದ, ಹೇಮಭೂಷಿತ, ವಾಯುವಿನ ವೇಗವುಳ್ಳ ನೂರಾರು ಸಹಸ್ರಾರು ಕುದುರೆಗಳು ಓಡಿಹೋಗುತ್ತಿರುವುದು ತೋರುತ್ತಿತ್ತು. ಅಶ್ವಾರೋಹಿಗಳು ಖಡ್ಗಗಳನ್ನು ಹಿಡಿದು ಕುದುರೆಗಳನ್ನು ಓಡಿಸಿಕೊಂಡು ಹೋಗುತ್ತಿರುವುದನ್ನೂ, ಕುದುರೆಗಳು ಅವರನ್ನು ಓಡಿಸಿಕೊಂಡು ಹೋಗುತ್ತಿರುವುದನ್ನೂ ಸಮರದಲ್ಲಿ ಎಲ್ಲಕಡೆ ಎಲ್ಲರೂ ನೋಡಿದರು. ಆನೆಯು ಆನೆಯನ್ನು ಸೇರಿಕೊಂಡು ಮಹಾರಣದಲ್ಲಿ ಪದಾತಿಗಳನ್ನೂ ಕುದುರೆಗಳನ್ನೂ ಧ್ವಂಸಮಾಡಿ ಓಡಿ ಹೋಗುತ್ತಿರುವುದನ್ನೂ ಕಂಡರು.
ಹಾಗೆಯೇ ರಣದಲ್ಲಿ ಆನೆಗಳು ರಥಗಳನ್ನು ಧ್ವಂಸಮಾಡಿದವು. ರಥಗಳೂ ಕೂಡ ಪದಾತಿಗಳು ಮತ್ತು ಕುದುರೆಗಳ ಮೇಲೆ ಬಿದ್ದು ಧ್ವಂಸಮಾಡಿದವು. ಸಮರದಲ್ಲಿ ಕುದುರೆಗಳು ರಣದಲ್ಲಿದ್ದ ಪದಾತಿಗಳನ್ನು ತುಳಿದು ಧ್ವಂಸಮಾಡಿದವು. ಹೀಗೆ ಪರಸ್ಪರರನ್ನು ಬಹಳವಾಗಿ ಧ್ವಂಸಮಾಡಲಾಯಿತು. ನಡೆಯುತ್ತಿದ್ದ ಆ ಮಹಾಭಯಂಕರ ರೌದ್ರ ಯುದ್ಧದಲ್ಲಿ ರಕ್ತ ಮತ್ತು ಕರುಳುಗಳು ತರಂಗಗಳಾಗಿದ್ದ ಘೋರ ನದಿಯೊಂದು ಹುಟ್ಟಿ ಹರಿಯಿತು. ಮೂಳೆಗಳ ರಾಶಿಗಳು ಬಂಡೆಗಳಂತಿದ್ದವು, ಕೂದಲುಗಳು ಪಾಚೆಹುಲ್ಲಿನಂತಿದ್ದವು, ರಥಗಳ ಗುಂಪುಗಳು ಮಡುವುಗಳಾಗಿದ್ದವು, ಮತ್ತು ಕುದುರೆಗಳು ದುರಾಸದವಾಗಿದ್ದ ಅದರ ಮೀನುಗಳಾಗಿದ್ದವು. ತಲೆಬುರುಡೆಗಳಿಂದ ತುಂಬಿಹೋಗಿತ್ತು. ಆನೆಗಳು ಅದರ ಮೊಸಳೆಗಳಂತಿದ್ದವು. ಕವಚ ಮತ್ತು ಶಿರಸ್ತ್ರಾಣಗಳು ನೊರೆಗಳಂತಿದ್ದವು. ಧನುಸ್ಸುಗಳು ಪ್ರವಾಹದಂತೆಯೂ ಕತ್ತಿಗಳು ಆಮೆಗಳಂತೆಯೂ ಇದ್ದವು. ಪತಾಕೆ ಮತ್ತು ಧ್ವಜಗಳು ತೀರವೃಕ್ಷಗಳಂತಿದ್ದವು. ಸತ್ತವರ ಹೆಣಗಳೆಂಬ ತೀರವನ್ನು ಕೊಚ್ಚಿಕೊಂಡು ಹೋಗುತ್ತಿದ್ದು. ಮಾಂಸಾಹಾರಿ ಪ್ರಾಣಿ-ಪಕ್ಷಿಗಳು ಆ ನದಿಯ ಹಂಸಗಳಾಗಿದ್ದವು. ಯಮರಾಷ್ಟ್ರವಿವರ್ಧಿನಿಯಾದ ಆ ನದಿಯನ್ನು ಶೂರ ಕ್ಷತ್ರಿಯರು ರಥ-ಆನೆ-ಕುದುರೆಗಳನ್ನೇ ದೋಣಿಗಳನ್ನಾಗಿಸಿಕೊಂಡು ಭಯವನ್ನು ತ್ಯಜಿಸಿ ಆ ಮಹಾಹವದಲ್ಲಿ ದಾಟುತ್ತಿದ್ದರು. ವೈತರಣಿಯು ಹೇಗೆ ಪ್ರೇತಗಳನ್ನು ಪ್ರೇತರಾಜಪುರಕ್ಕೆ ಕೊಂಡೊಯ್ಯುತ್ತದೆಯೋ ಹಾಗೆ ರಣದಲ್ಲಿಯ ಆ ನದಿಯು ಸಂಕೋಚಪಟ್ಟವರನ್ನು, ಕಳವಳದಿಂದಿರುವವರನ್ನು ಒಯ್ಯುತ್ತಿತ್ತು. ಅಲ್ಲಿ ಆ ಮಹಾವಿನಾಶವನ್ನು ನೋಡಿ ಕ್ಷತ್ರಿಯರೆಲ್ಲರೂ ಸಂಕಟದಿಂದ ಕೂಗಿದರು: “ದುರ್ಯೋಧನನ ಅಪರಾಧದಿಂದ ಕೌರವರು ಕ್ಷಯವಾಗುತ್ತಿದ್ದಾರೆ. ಜನೇಶ್ವರ ಪಾಪಾತ್ಮಾ ಲೋಭಮೋಹಿತ ಧಾರ್ತರಾಷ್ಟ್ರನು ಹೇಗೆ ತಾನೇ ಗುಣವಂತರಾದ ಪಾಂಡುಪುತ್ರರೊಂದಿಗೆ ದ್ವೇಷವನ್ನು ಸಾಧಿಸುತ್ತಾನೆ?”
ಹೀಗೆ ಬಹುವಿಧವಾದ ಮಾತುಗಳನ್ನು ಅಲ್ಲಿ ಪಾಂಡವರು ಮತ್ತು ಧೃತರಾಷ್ಟ್ರನ ಪುತ್ರರ ಸುದಾರುಣ ಸಮಾಗಮದಲ್ಲಿ ಕೇಳಿಬರುತ್ತಿದ್ದವು. ಸರ್ವ ಯೋಧರು ಹೇಳಿಕೊಳ್ಳುತ್ತಿದ್ದ ಆ ಮಾತನ್ನು ಕೇಳಿ ಸರ್ವಲೋಕವನ್ನೂ ಅನಾದರಿಸುವ ದುರ್ಯೋಧನನು ಭೀಷ್ಮ, ದ್ರೋಣ, ಕೃಪ ಮತ್ತು ಶಲ್ಯರಿಗೆ “ಅಹಂಕಾರವನ್ನು ಬಿಟ್ಟು ಯುದ್ಧಮಾಡಿ! ಏಕೆ ತಡಮಾಡುತ್ತಿದ್ದೀರಿ?” ಎಂದನು.
ಆಗ ಅಕ್ಷದ್ಯೂತವನ್ನಾಡಿದ ಕುರುಗಳ ಮತ್ತು ಪಾಂಡವರ ನಡುವೆ ಸುಘೋರವಾದ ವಿನಾಶಕಾರಿ ಯುದ್ಧವು ನಡೆಯಿತು. ಸಮರದಲ್ಲಿ ಪಾಂಡುಸುತರಾಗಲೀ ಅಥವಾ ಕೌರವರಾಗಲೀ, ಅವರ ಸೇನೆಗಳಾಗಲೀ, ಅವರ ಅನುಯಾಯಿಗಳಾಗಲೀ ತಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳುತ್ತಿಲ್ಲ.
ಅರ್ಜುನನಾದರೋ ಸುಶರ್ಮನ ನಾಯಕತ್ವದಲ್ಲಿದ್ದ ನೃಪರನ್ನು ನಿಶಿತ ಸಾಯಕಗಳಿಂದ ಪ್ರೇತರಾಜನ ಭವನಕ್ಕೆ ಕಳುಹಿಸಿದನು. ಸುಶರ್ಮನೂ ಕೂಡ ಸಂಯುಗದಲ್ಲಿ ಬಾಣಗಳಿಂದ ಪಾರ್ಥನನ್ನು ಮತ್ತು ಪುನಃ ಏಳರಿಂದ ವಾಸುದೇವನನ್ನು ಹಾಗೂ ಎಂಭತ್ತರಿಂದ ಪಾರ್ಥನನ್ನು ಹೊಡೆದನು. ಅವನನ್ನು ಶರೌಘಗಳಿಂದ ತಡೆದು ಮಹಾರಥ ಶಕ್ರಸೂನುವು ರಣದಲ್ಲಿ ಸುಶರ್ಮನ ಯೋಧರನ್ನು ಯಮಸಾದನಕ್ಕೆ ಕಳುಹಿಸಿದನು. ಯುಗಕ್ಷಯದಲ್ಲಿ ಕಾಲನಂತೆ ಪಾರ್ಥನಿಂದ ವಧಿಸಲ್ಪಟ್ಟ ಆ ಮಹಾರಥರಿಗೆ ಭಯವು ಹುಟ್ಟಿ ಪಲಾಯನ ಮಾಡಿದರು. ಕೆಲವರು ಕುದುರೆಗಳನ್ನು ಬಿಟ್ಟು, ಕೆಲವರು ರಥಗಳನ್ನು ಬಿಟ್ಟು, ಇನ್ನು ಕೆಲವರು ಆನೆಗಳನ್ನು ಬಿಟ್ಟು ಹತ್ತೂ ಕಡೆಗಳಲ್ಲಿ ಓಡತೊಡಗಿದರು. ಇನ್ನು ಕೆಲವರು ತಮ್ಮೊಂದಿಗೆ ಕುದುರೆ, ರಥ, ಆನೆಗಳನ್ನು ಕರೆದುಕೊಂಡು ತ್ವರೆಮಾಡಿ ರಣದಿಂದ ಪಲಾಯನ ಮಾಡುತ್ತಿದ್ದರು. ಪದಾತಿಗಳು ಕೂಡ ಮಹಾರಣದಲ್ಲಿ ಶಸ್ತ್ರಗಳನ್ನು ಬಿಸುಟು ಇತರರ ಮೇಲೆ ಅನುಕಂಪವಿಲ್ಲದೇ ಅಲ್ಲಲ್ಲಿ ಓಡಿ ಹೋಗುತ್ತಿದ್ದರು.
ತ್ರೈಗರ್ತ ಸುಶರ್ಮ ಮತ್ತು ಇತರ ಪಾರ್ಥಿವಶ್ರೇಷ್ಠರು ಅವರನ್ನು ಬಹಳವಾಗಿ ತಡೆದರೂ ಸಂಯುಗದಲ್ಲಿ ಅವರು ನಿಲ್ಲಲಿಲ್ಲ. ಆ ಸೇನೆಯು ಪಲಾಯನ ಮಾಡುತ್ತಿರುವುದನ್ನು ನೋಡಿ ದುರ್ಯೋಧನನು ಭೀಷ್ಮನನ್ನು ಮುಂದಿಟ್ಟುಕೊಂಡು, ಸರ್ವಸೇನೆಗಳನ್ನು ಕರೆದುಕೊಂಡು ಎಲ್ಲರನ್ನೂ ಒಟ್ಟುಗೂಡಿಕೊಂಡು ತ್ರಿಗರ್ತರಾಜನ ಜೀವವನ್ನುಳಿಸಲು ಧನಂಜಯನ ಮೇಲೆರಗಿದನು. ಅವನೊಬ್ಬನೇ ಬಹವಿಧದ ಬಾಣಗಳನ್ನು ಬೀರುತ್ತಾ ತನ್ನ ಸಹೋದರರೊಂದಿಗೆ ಸಮರದಲ್ಲಿ ನಿಂತಿದ್ದನು. ಉಳಿದವರೆಲ್ಲರೂ ಪಲಾಯನ ಮಾಡಿದ್ದರು. ಹಾಗೆಯೇ ಪಾಂಡವರೂ ಕೂಡ ಸರ್ವಸೇನೆಗಳಿಂದೊಡಗೂಡಿ ಕವಚಗಳನ್ನು ಧರಿಸಿ ಫಲ್ಗುನನಿಗಾಗಿ ಭೀಷ್ಮನಿದ್ದಲ್ಲಿಗೆ ಬಂದರು. ಗಾಂಡೀವಧನ್ವಿಯ ಘೋರ ಶೌರ್ಯವನ್ನು ತಿಳಿದಿದ್ದರೂ ಅವರು ಹಾಹಾಕಾರಗೈಯುತ್ತಾ ಉತ್ಸಾಹದಿಂದ ಹೋಗಿ ಭೀಷ್ಮನನ್ನು ಸುತ್ತುವರೆದರು. ಆಗ ಶೂರ ತಾಲದ್ವಜನು ಸಮರದಲ್ಲಿ ಪಾಂಡವರ ಸೇನೆಯನ್ನು ಸನ್ನತಪರ್ವ ಶರಗಳಿಂದ ಮುಚ್ಚಿಬಿಟ್ಟನು. ಸೂರ್ಯನು ನಡುನೆತ್ತಿಯ ಮೇಲೆ ಬರಲು ಕುರುಗಳು ಎಲ್ಲರೂ ಒಂದಾಗಿ ಪಾಂಡವರೊಂದಿಗೆ ಯುದ್ಧಮಾಡುತ್ತಿದ್ದರು.
ಸಾತ್ಯಕಿಯ ಪರಾಕ್ರಮ
ಶೂರ ಸಾತ್ಯಕಿಯು ಕೃತವರ್ಮನನ್ನು ಐದು ಆಯಸಗಳಿಂದ ಹೊಡೆದು ಸಹಸ್ರಾರು ಬಾಣಗಳನ್ನು ಹರಡಿ ಯುದ್ಧದಲ್ಲಿ ತೊಡಗಿದನು. ಹಾಗೆಯೇ ರಾಜ ದ್ರುಪದನು ದ್ರೋಣನನ್ನು ನಿಶಿತ ಶರಗಳಿಂದ ಹೊಡೆದು ಪುನಃ ಅವನನ್ನು ಏಳರಿಂದ ಮತ್ತು ಸಾರಥಿಯನ್ನು ಏಳರಿಂದ ಹೊಡೆದನು. ಭೀಮಸೇನನಾದರೋ ಪ್ರಪಿತಾಮಹ ರಾಜಾ ಬಾಹ್ಲೀಕನನ್ನು ಹೊಡೆದು ಕಾನನದಲ್ಲಿ ಸಿಂಹದಂತೆ ಮಹಾನಾದಗೈದನು. ಚಿತ್ರಸೇನನಿಂದ ಅನೇಕ ಆಶುಗಗಳಿಂದ ಹೊಡೆಯಲ್ಪಟ್ಟ ಆರ್ಜುನಿಯು ಚಿತ್ರಸೇನನ ಹೃದಯವನ್ನು ಮೂರು ಬಾಣಗಳಿಂದ ಚೆನ್ನಾಗಿ ಹೊಡೆದನು. ದಿವಿಯಲ್ಲಿ ಮಹಾಘೋರರಾದ ಬುಧ-ಶನೈಶ್ಚರರಂತೆ ರಣದಲ್ಲಿ ಸೇರಿದ್ದ ಆ ಮಹಾಕಾಯರಿಬ್ಬರೂ ಬೆಳಗಿದರು. ಪರವೀರಹ ಸೌಭದ್ರನು ಅವನ ನಾಲ್ಕೂ ಕುದುರೆಗಳನ್ನೂ ಸೂತನನ್ನೂ ಒಂಭತ್ತು ಶರಗಳಿಂದ ಸಂಹರಿಸಿ ಜೋರಾಗಿ ಕೂಗಿದನು. ಅಶ್ವಗಳು ಹತರಾಗಲು ಆ ಮಹಾರಥನು ತಕ್ಷಣವೇ ರಥದಿಂದ ಧುಮುಕಿ ದುರ್ಮುಖನ ರಥವನ್ನೇರಿದರು. ಪರಾಕ್ರಮೀ ದ್ರೋಣನು ದ್ರುಪದನನ್ನು ಸನ್ನತಪರ್ವ ಶರಗಳಿಂದ ಹೊಡೆದು ತಕ್ಷಣವೇ ಅವನ ಸಾರಥಿಯನ್ನೂ ಹೊಡೆದನು. ಸೇನಾಮುಖದಲ್ಲಿ ಹಾಗೆ ಪೀಡೆಗೊಳಗಾದ ರಾಜಾ ದ್ರುಪದನು ಹಿಂದಿನ ವೈರವನ್ನು ಸ್ಮರಿಸಿಕೊಂಡು ವೇಗಶಾಲಿ ಕುದುರೆಗಳ ಮೇಲೇರಿ ಪಲಾಯನ ಮಾಡಿದನು. ಭೀಮಸೇನನಾದರೋ ಮುಹೂರ್ತದಲ್ಲಿಯೇ ಎಲ್ಲ ಸೇನೆಗಳೂ ನೋಡುತ್ತಿರುವಂತೆ ರಾಜ ಬಾಹ್ಲೀಕನ ಕುದುರೆಗಳು, ಸಾರಥಿ ಮತ್ತು ರಥವನ್ನು ಧ್ವಂಸ ಮಾಡಿದನು.
ಆಗ ಗಾಭರಿಗೊಂಡು ಅತೀವ ಸಂಶಯದಿಂದ ಪುರುಷೋತ್ತಮ ಬಾಹ್ಲೀಕನು ವಾಹನದಿಂದ ಕೆಳಗೆ ಹಾರಿ ತಕ್ಷಣವೇ ಮಹಾರಥ ಲಕ್ಷ್ಮಣನ ರಥವನ್ನೇರಿದನು. ಕೃತವರ್ಮನನ್ನು ತಡೆಹಿದಿದು ಮಹಾರಥ ಸಾತ್ಯಕಿಯು ಬಹುವಿಧದ ಶರಗಳಿಂದ ಪಿತಾಮಹನನ್ನು ಎದುರಿಸಿದನು. ಅವನು ಭಾರತನನ್ನು ಅರವತ್ತು ನಿಶಿತ ಲೋಮವಾಹಿಗಳಿಂದ ಹೊಡೆದನು. ಅವನು ಮಹಾಧನುಸ್ಸನ್ನು ಅಲುಗಾಡಿಸುತ್ತಾ ರಥದಲ್ಲಿ ನಿಂತು ನರ್ತಿಸುವಂತಿದ್ದನು. ಅವನ ಮೇಲೆ ಪಿತಾಮಹನು ಹೇಮಚಿತ್ರದ, ಮಹಾವೇಗದ, ನಾಗಕನ್ಯೆಯಂತೆ ಶುಭವಾಗಿದ್ದ ಮಹಾ ಶಕ್ತಿಯನ್ನು ಎಸೆದನು. ತನ್ನ ಮೇಲೆ ಬೀಳಲು ಬರುತ್ತಿದ್ದ ಮೃತ್ಯುವನಂತಿದ್ದ ಆ ತೇಜಸ್ಸುಳ್ಳದ್ದನ್ನು ವಾರ್ಷ್ಣೇಯನು ತಕ್ಷಣವೇ ಕೈಚಳಕದಿಂದ ಧ್ವಂಸಮಾಡಿದನು. ವಾರ್ಷೇಯನನ್ನು ತಲುಪದ ಆ ಪರಮದಾರುಣ ಶಕ್ತಿಯು ಪ್ರಭೆಯನ್ನು ಕಳೆದುಕೊಂಡು ಮಹಾಉಲ್ಕದಂತೆ ಭೂಮಿಯ ಮೇಲೆ ಬಿದ್ದಿತು. ಆಗ ವಾರ್ಷ್ಣೇಯನಾದರೋ ನೋಡಲು ಘೋರವಾಗಿದ್ದ ತನ್ನದೇ ಶಕ್ತಿಯನ್ನು ಹಿಡಿದು ವೇಗದಿಂದ ಪಿತಾಮಹನ ರಥದ ಮೇಲೆ ಎಸೆದನು.
ವಾರ್ಷ್ಣೇಯನ ಭುಜವೇಗದಿಂದ ಪ್ರಯಾಣಿಸಿದ ಅದು ಮಹಾಹವದಲ್ಲಿ ಕಾಲರಾತ್ರಿಯಂತೆ ಧಾವಿಸಿ ಬಂದಿತು. ಬರುತ್ತಿದ್ದ ಅದನ್ನು ಭಾರತನು ತೀಕ್ಷ್ಣವಾದ ಎರಡು ಕ್ಷುರಪ್ರಗಳಿಂದ ತಕ್ಷಣವೇ ಎರಡಾಗಿ ಕತ್ತರಿಸಿ, ನೆಲದ ಮೇಲೆ ಬೀಳಿಸಿದನು. ಶಕ್ತಿಯನ್ನು ಗೆದ್ದು ಶತ್ರುಕರ್ಶನ ಗಾಂಗೇಯನು ಜೋರಾಗಿ ನಕ್ಕು ಸಾತ್ಯಕಿಯನ್ನು ಎದೆಯಲ್ಲಿ ಒಂಭತ್ತು ಶರಗಳಿಂದ ಹೊಡೆದನು. ಆಗ ಮಾಧವನು ಕಷ್ಟದಲ್ಲಿದ್ದುದರಿಂದ ಪಾಂಡವರು ರಥ-ಆನೆ-ಕುದುರೆಗಳೊಂದಿಗೆ ರಣದಲ್ಲಿ ಭೀಷ್ಮನನ್ನು ಸುತ್ತುವರೆದರು. ಆಗ ಸಮರದಲ್ಲಿ ವಿಜಯವನ್ನು ಬಯಸಿದ ಪಾಂಡವರ ಮತ್ತು ಕುರುಗಳ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.
ಯುಧಿಷ್ಠಿರ-ಮಾದ್ರೀಪುತ್ರರ ಪರಾಕ್ರಮ
ಆಕಾಶದಲ್ಲಿ ಬೇಸಗೆಯ ಕೊನೆಯಲ್ಲಿ ಮೋಡಗಳು ಭಾಸ್ಕರನನ್ನು ಹೇಗೋ ಹಾಗೆ ರಣದಲ್ಲಿ ಪಾಂಡವರು ಭೀಷ್ಮನನ್ನು ಮುತ್ತಿಕೊಂಡಿರುವುದನ್ನು ನೋಡಿ ಕ್ರುದ್ಧನಾದ ದುರ್ಯೋಧನನು ದುಃಶಾಸನನಿಗೆ ಹೇಳಿದನು: “ಭರತರ್ಷಭ! ಈ ಶೂರ ಮಹೇಷ್ವಾಸ ಶತ್ರುನಿಶೂದನ ಭೀಷ್ಮನನ್ನು ಶೂರ ಪಾಂಡವರು ಎಲ್ಲ ಕಡೆಗಳಿಂದ ಮುತ್ತಿಗೆ ಹಾಕಿದ್ದಾರೆ. ಆ ಸುಮಹಾತ್ಮನ ರಕ್ಷಣೆಯ ಕಾರ್ಯವು ನಿನ್ನದು. ಏಕೆಂದರೆ ಸಮರದಲ್ಲಿ ನಮ್ಮನ್ನು ರಕ್ಷಿಸುತ್ತಿರುವ ಪಿತಾಮಹನನ್ನು ಸಂಹರಿಸಲು ಪಾಂಡವರೊಂದಿಗೆ ಪಾಂಚಾಲರು ಪ್ರಯತ್ನಿಸುತ್ತಿದ್ದಾರೆ. ಅಲ್ಲಿ ಭೀಷ್ಮನನ್ನು ರಕ್ಷಿಸುವುದೇ ಕಾರ್ಯವೆಂದು ನನಗನ್ನಿಸುತ್ತಿದೆ. ಈ ಮಹೇಷ್ವಾಸ ಭೀಷ್ಮ ಪಿತಾಮಹನೇ ನಮ್ಮ ರಕ್ಷಕ. ನೀನು ಸರ್ವಸೇನೆಗಳೊಂದಿಗೆ ಪಿತಾಮಹನನ್ನು ಸುತ್ತುವರೆದು ಸಮರದಲ್ಲಿ ದುಷ್ಕರವಾದ ಅವನನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು.”
ಇದನ್ನು ಕೇಳಿ ದುಃಶಾಸನನು ಮಹಾ ಸೇನೆಯೊಂದಿಗೆ ಆವೃತನಾಗಿ ಭೀಷ್ಮನನ್ನು ಸುತ್ತುವರೆದು ನಿಂತನು. ಆಗ ಸುಬಲಾತ್ಮಜನು ಒಂದುಲಕ್ಷ ಕುದುರೆಗಳನ್ನುಳ್ಳ, ಹೊಳೆಯುತ್ತಿರುವ ಪ್ರಾಸಗಳನ್ನು ಹಿಡಿದಿರುವ, ಋಷ್ಟಿ-ತೋಮರ ಧಾರಿಗಳ, ದರ್ಪಿತರಾದ, ಒಳ್ಳೆಯ ವೇಗವುಳ್ಳ, ಪ್ರಬಲರಾಗಿರುವ, ಪತಾಕೆಗಳಿಂದ ಕೂಡಿದ, ಯುದ್ಧದಲ್ಲಿ ತರಬೇತಿ ಹೊಂದಿ ಕುಶಲರಾಗಿರುವ ನರೋತ್ತಮರೊಡಗೂಡಿ ನಕುಲ, ಸಹದೇವ, ಮತ್ತು ನರಶ್ರೇಷ್ಠ ಪಾಂಡವ ಧರ್ಮರಾಜನನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದು ತಡೆದು ನಿಲ್ಲಿಸಿದನು. ಆಗ ರಾಜಾ ದುರ್ಯೋಧನನು ಪಾಂಡವರನ್ನು ನಿವಾರಿಸಲು ಹತ್ತುಸಾವಿರ ಶೂರ ಅಶ್ವಾರೋಹಿಗಳನ್ನು ಕಳುಹಿಸಿಕೊಟ್ಟನು. ಮಹಾವೇಗದಿಂದ ಒಂದೇ ಸಮನೆ ಅನೇಕ ಗರುಡಗಳಂತೆ ಬಂದೆರಗಿದ ಅವುಗಳ ಖುರಪುಟಗಳಿಂದಾಗಿ ಭೂಮಿಯು ಕಂಪಿಸಿತು ಮತ್ತು ಕೂಗಿಕೊಂಡಿತು. ಪರ್ವತದ ಮೇಲೆ ಬಿದಿರಿನ ಮಹಾವನವು ಸುಡುತ್ತಿದೆಯೋ ಎನ್ನುವಂತೆ ಆ ಕುದುರೆಗಳ ಖುರಪುಟಗಳ ಮಹಾ ಶಬ್ಧವು ಕೇಳಿಬಂದಿತು. ಅವು ಭೂಮಿಯ ಮೇಲೆ ಹೋಗುತ್ತಿರಲು ಮೇಲೆದ್ದ ಮಹಾ ಧೂಳಿನ ರಾಶಿಯು ದಿವಾಕರ ಪಥವನ್ನು ತಲುಪಿ ಭಾಸ್ಕರನನ್ನು ಮುಸುಕಿದವು.
ವೇಗದಿಂದ ಬಂದೆರಗಿದ ಆ ಕುದುರೆಗಳಿಂದ ಪಾಂಡವ ಸೇನೆಯು ಮಹಾ ವೇಗದಿಂದ ಹಂಸಗಳು ಬಂದು ಮಹಾ ಸರೋವರದಲ್ಲಿ ಬಿದ್ದರೆ ಹೇಗೋ ಹಾಗೆ ಕ್ಷೋಭೆಗೊಂಡಿತು. ಅವುಗಳ ಹೇಷಾವರ ಶಬ್ಧದಿಂದ ಬೇರೆ ಏನೂ ಕೇಳುತ್ತಿರಲಿಲ್ಲ. ಆಗ ರಾಜ ಯುಧಿಷ್ಠಿರ ಮತ್ತು ಮಾದ್ರೀಪುತ್ರ ಪಾಂಡವರಿಬ್ಬರೂ ವೇಗವಾಗಿ ಬಂದ ಅಶ್ವಾರೋಹಿಗಳನ್ನು ಮಳೆಗಾಲದ ಹುಣ್ಣಿಮೆಯಲ್ಲಿ ಉಕ್ಕಿ ಮೇಲೆ ಬರುವ ಮಹಾಸಾಗರವನ್ನು ದಡಗಳು ಹೇಗೋ ಹಾಗೆ ಬೇಗನೇ ತಡೆದರು. ಆಗ ಆ ರಥಿಗಳು ಸನ್ನತಪರ್ವ ಶರಗಳಿಂದ ಅಶ್ವಾರೋಹಿಗಳ ಶಿರಗಳನ್ನು ದೇಹದಿಂದ ಕತ್ತರಿಸಿದರು. ದೃಢಧನ್ವಿಗಳಿಂದ ನಿಹತರಾದ ಅವರು ಮಹಾಗಜದಿಂದ ನೂಕಲ್ಪಟ್ಟು ಗಿರಿಗುಹ್ವರದಲ್ಲಿ ಬೀಳುವ ಆನೆಗಳಂತೆ ಬಿದ್ದರು. ಅವರು ಪ್ರಾಸಗಳಿಂದ ಮತ್ತು ನಿಶಿತ ಸನ್ನತಪರ್ವ ಶರಗಳಿಂದ ಶಿರಗಳನ್ನು ಕತ್ತರಿಸುತ್ತಾ ಹತ್ತೂ ದಿಕ್ಕುಗಳಲ್ಲಿ ಸಂಚರಿಸಿದರು. ಹೀಗೆ ಋಷ್ಟಿ ಮತ್ತು ಖಡ್ಗಗಳಿಂದ ಹೊಡೆಯಲ್ಪಟ್ಟ ಆ ಅಶ್ವಾರೋಹಿಗಳ ಶಿರಗಳು ದೊಡ್ಡ ಮರದಿಂದ ಹಣ್ಣುಗಳು ಉದುರುವಂತೆ ಉದುರಿ ಬಿದ್ದವು. ಅಲ್ಲಿ ನೂರಾರು ಸಹಸ್ರಾರು ಸವಾರರು ಸಂಹರಿಸಲ್ಪಟ್ಟು ಕುದುರೆಗಳ ಮೇಲಿನಿಂದ ಬಿದ್ದಿದ್ದರು ಮತ್ತು ಬೀಳುತ್ತಿದ್ದರು. ವಧಿಸಲ್ಪಡುತ್ತಿರುವ ಕುದುರೆಗಳು ಸಿಂಹವನ್ನು ಕಂಡ ಜಿಂಕೆಗಳು ಪ್ರಾಣಗಳನ್ನು ಉಳಿಸುಕೊಳ್ಳಲು ಓಡಿಹೋಗುವಂತೆ ಭಯಾರ್ದಿತರಾಗಿ ಓಡಿಹೋಗುತ್ತಿದ್ದವು.
ಪಾಂಡವರಾದರೋ ಶತ್ರುಗಳನ್ನು ಗೆದ್ದು ಶಂಖಗಳನ್ನು ಮೊಳಗಿಸಿ ಭೇರಿಗಳನ್ನು ಬಾರಿಸಿದರು. ಆಗ ತನ್ನ ಸೈನ್ಯವು ನಾಶವಾದುದನ್ನು ನೋಡಿ ದುರ್ಯೋಧನನು ದೀನನಾಗಿ ಮದ್ರರಾಜನಿಗೆ ಈ ಮಾತನ್ನಾಡಿದನು: “ಸೋದರಮಾವ! ಈ ಜ್ಯೇಷ್ಠ ಪಾಂಡುಸುತನು ನನ್ನವರನ್ನು ಗೆದ್ದು ನೀನು ನೋಡುತ್ತಿರುವಂತೆಯೇ ಸೇನೆಗಳನ್ನು ಓಡಿಸುತ್ತಿದ್ದಾನೆ. ನೀನು ಅವರನ್ನು ಸಮುದ್ರವನ್ನು ಭೂಮಿಯು ತಡೆಯುವಂತೆ ತಡೆದು ನಿಲ್ಲಿಸು. ನೀನು ಅಸಹ್ಯ ಬಲ ವಿಕ್ರಮನೆಂದು ಪ್ರಸಿದ್ಧನಾಗಿದ್ದೀಯೆ.”
ದುರ್ಯೋಧನನ ಆ ಮಾತನ್ನು ಕೇಳಿ ಪ್ರತಾಪವಾನ್ ಶಲ್ಯನು ರಥಸಮೂಹಗಳೊಂದಿಗೆ ರಾಜಾ ಯುಧಿಷ್ಠಿರನಿದ್ದಲ್ಲಿಗೆ ಹೊರಟನು. ಸಮರದಲ್ಲಿ ತನ್ನ ಮೇಲೆ ಒಮ್ಮಿಂದೊಮ್ಮೆಲೇ ಬಂದು ಎರಗಿದ ಮಹಾವೇಗವುಳ್ಳ ಶಲ್ಯನ ಮಹಾಸೇನೆಯನ್ನು ಪಾಂಡವನು ತಡೆದನು. ತಕ್ಷಣವೇ ಮಹಾರಥ ಧರ್ಮರಾಜನು ಮದ್ರರಾಜನ ಎದೆಗೆ ಹತ್ತು ಸಾಯಕಗಳನ್ನು ಮತ್ತು ನಕುಲ ಸಹದೇವರು ಮೂರು ಮೂರು ಜಿಹ್ಮಗಗಳಿಂದ ಹೊಡೆದರು. ಮದ್ರರಾಜನೂ ಕೂಡ ಅವರೆಲ್ಲರನ್ನು ಮೂರು ಮೂರು ಬಾಣಗಳಿಂದ ಹೊಡೆದನು. ಪುನಃ ಯುಧಿಷ್ಠಿರನನ್ನು ಅರವತ್ತು ನಿಶಿತ ಬಾಣಗಳಿಂದ ಹೊಡೆದನು. ಸಂರಬ್ಧರಾಗಿ ಮಾದ್ರೀಪುತ್ರರಿಬ್ಬರನ್ನು ಎರೆಡೆರಡು ಬಾಣಗಳಿಂದ ಹೊಡೆದನು. ಆಗ ಮಹಾಬಾಹು ಭೀಮನು ರಾಜನು ಮೃತ್ಯುವಿನ ಬಾಯಿಯ ಬಳಿಯಂತೆ ಮದ್ರರಾಜನ ವಶದಲ್ಲಿದ್ದುದನ್ನು ನೋಡಿ ಅಮಿತ್ರಜಿತು ಯುಧಿಷ್ಠಿರನ ಬಳಿ ಧಾವಿಸಿ ಬಂದನು. ಸೂರ್ಯನು ಇಳಿಮುಖದಲ್ಲಿ ಬೆಳಗುತ್ತಿರುವಾಗ ಸುದಾರುಣವಾದ ಮಹಾಘೋರ ಯುದ್ಧವು ನಡೆಯಿತು.
ಒಂಭತ್ತನೇ ದಿನದ ಯುದ್ಧ ಸಮಾಪ್ತಿ
ಆಗ ಭೀಷ್ಮನು ಕ್ರುದ್ಧನಾಗಿ ನಿಶಿತ ಉತ್ತಮ ಸಾಯಕಗಳಿಂದ ರಣದಲ್ಲಿ ಸೇನೆಗಳೊಂದಿಗೆ ಎಲ್ಲೆಡೆಯಿಂದಲೂ ಪಾರ್ಥರನ್ನು ಹೊಡೆದನು. ಭೀಮನನ್ನು ಹನ್ನೆರಡರಿಂದ ಹೊಡೆದು ಸಾತ್ಯಕಿಯನ್ನು ಒಂಭತ್ತು ಶರಗಳಿಂದ, ಮತ್ತು ನಕುಲನನ್ನು ಮೂರು ಬಾಣಗಳಿಂದ, ಸಹದೇವನನ್ನು ಏಳರಿಂದ, ಮತ್ತು ಯುಧಿಷ್ಠಿರನನ್ನು ತೋಳು-ತೊಡೆಗಳಲ್ಲಿ ಹನ್ನೆರಡು ಬಾಣಗಳಿಂದ ಹೊಡೆದನು. ನಂತರ ಧೃಷ್ಟದ್ಯುಮ್ನನನ್ನು ಹೊಡೆದು ಆ ಮಹಾಬಲನು ಜೋರಾಗಿ ಕೂಗಿದನು. ಅದಕ್ಕೆ ಪ್ರತಿಯಾಗಿ ಪಿತಾಮಹನನ್ನು ನಕುಲನು ಹನ್ನೆರಡು ಶರಗಳಿಂದ, ಮಾಧವನು ಮೂರರಿಂದ, ಧೃಷ್ಟದ್ಯುಮ್ನನು ಏಳರಿಂದ, ಭೀಮಸೇನನು ಐದರಿಂದ ಮತ್ತು ಯುಧಿಷ್ಠಿರನು ಹನ್ನೆರಡರಿಂದ ಹೊಡೆದರು. ದ್ರೋಣನಾದರೋ ಸಾತ್ಯಕಿಯನ್ನು ಹೊಡೆದು ಭೀಮಸೇನನನ್ನು ಹೊಡೆದನು. ಒಬ್ಬೊಬ್ಬರನ್ನೂ ಯಮದಂಡದಂತಿರುವ ನಿಶಿತ ಐದೈದು ಬಾಣಗಳಿಂದ ಹೊಡೆದನು. ಮಾವಟಿಗನು ಮಹಾಗಜವನ್ನು ಅಂಕುಶದಿಂದ ತಿವಿಯುವಂತೆ ಬ್ರಾಹ್ಮಣಪುಂಗವ ದ್ರೋಣನನ್ನು ಅವರಿಬ್ಬರೂ ಮೂರು ನೇರ ಹೋಗುವ ಬಾಣಗಳಿಂದ ತಿರುಗಿ ಹೊಡೆದರು. ಸೌವೀರರು, ಕಿತವರು, ಪೂರ್ವದೇಶೀಯರು, ಪಶ್ಚಿಮ ದೇಶೀಯರು, ಉತ್ತರ ದೇಶೀಯರು, ಮಾಲವರು, ಅಭೀಷಾಹರು, ಶೂರಸೇನರು, ಶಿಬಿಗಳು ಮತ್ತು ವಸಾತಿಗಳು - ಇವರೆಲ್ಲರು ಸಂಗ್ರಾಮದಲ್ಲಿ ನಿಶಿತ ಶರಗಳಿಂದ ಪ್ರಹರಿತರಾದರೂ ಭೀಷ್ಮನನ್ನು ಬಿಟ್ಟು ಹೋಗಲಿಲ್ಲ. ಹೀಗೆ ವಿವಿಧಾಯುಧಗಳನ್ನು ಹಿಡಿದು ಪಾಂಡವರನ್ನು ಹೋರಾಡುತ್ತಿದ್ದ ಅನ್ಯರೂ ಕೂಡ ಮಹಾತ್ಮ ಪಾಂಡವೇಯರಿಂದ ವಧಿಸಲ್ಪಡುತ್ತಿದ್ದರು. ಹಾಗೆಯೇ ಪಾಂಡವರು ಪಿತಾಮಹನನ್ನು ಸುತ್ತುವರೆದರು. ಎಲ್ಲಕಡೆಗಳಿಂದ ರಥಗಳ ಗುಂಪುಗಳಿಂದ ಸುತ್ತುವರೆಯಲ್ಪಟ್ಟ ಆ ಅಪರಾಜಿತನಾದರೋ ಗಹನ ಅರಣ್ಯದಲ್ಲಿ ಹಬ್ಬಿದ ಬೆಂಕಿಯಂತೆ ಶತ್ರುಗಳನ್ನು ಸುಡುತ್ತಾ ಪ್ರಜ್ವಲಿಸಿದನು. ಭೀಷ್ಮನ ರಥವೇ ಅಗ್ನಿಗಾರವಾಗಿತ್ತು. ಧನುಸ್ಸೇ ಜ್ವಾಲೆಯಾಗಿತ್ತು. ಖಡ್ಗ, ಶಕ್ತಿ ಮತ್ತು ಗದೆಗಳೇ ಇಂಧನಗಳಾಗಿದ್ದವು. ಶರಗಳು ಕಿಡಿಗಳಂತಿದ್ದವು. ಹೀಗೆ ಅವನು ಕ್ಷತ್ರಿಯರ್ಷಭರನ್ನು ಸುಟ್ಟು ಭಸ್ಮಮಾಡಿದನು.
ಸುವರ್ಣಭೂಷಿತವದ, ಹದ್ದಿನ ರೆಕ್ಕೆಗಳಿಂದ ಕೂಡಿದ, ನಿಶಿತ ಬಾಣಗಳಿಂದಲೂ, ಕರ್ಣಿ-ನಾಲೀಕ-ನಾರಾಚಗಳಿಂದನು ಆ ಸೇನೆಯನ್ನು ಮುಚ್ಚಿಬಿಟ್ಟನು. ನಿಶಿತ ಶರಗಳಿಂದ ಧ್ವಜಗಳನ್ನು ಮತ್ತು ರಥಿಗಳನ್ನು ಉರುಳಿಸಿದನು. ರಥ ಸೇನೆಯನ್ನು ತಲೆಯಿಲ್ಲದ ತಾಲದ ಮರದಂತೆ ಮಾಡಿದನು. ಆ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಮಹಾಬಾಹುವು ಸಂಯುಗದಲ್ಲಿ ರಥ-ಆನೆ-ಕುದುರೆಗಳನ್ನು ನಿರ್ಮನುಷ್ಯರನ್ನಾಗಿ ಮಾಡಿದನು. ಸಿಡಿಲಿನ ಗರ್ಜನೆಯಂತೆ ಕೇಳಿ ಬರುತ್ತಿದ್ದ ಅವನ ಬಿಲ್ಲಿನ ಟೇಂಕಾರಶಬ್ಧವನ್ನು ಕೇಳಿ ಸರ್ವಪ್ರಾಣಿಗಳೂ ನಡುಗಿದವು. ಭೀಷ್ಮನು ಪ್ರಯೋಗಿಸುತ್ತಿದ್ದ ಬಾಣಗಳು ಒಮ್ಮೆಯೂ ವ್ಯರ್ಥವಾಗುತ್ತಿರಲಿಲ್ಲ. ಭೀಷ್ಮನಿಂದ ಹೊರಟ ಬಾಣಗಳು ಅವರ ದೇಹವನ್ನು ಭೇದಿಸಿ ಹೊರಬರುತ್ತಿದ್ದವು. ವೀರರನ್ನು ಕಳೆದುಕೊಂಡು ರಥಗಳನ್ನು ಕುದುರೆಗಳು ಮಾತ್ರ ಎಳೆದುಕೊಂಡು ರಣರಂಗದಲ್ಲಿ ಓಡಿಹೋಗುತ್ತಿರುವುದು ಕಾಣುತ್ತಿತ್ತು. ಹದಿನಾಲ್ಕು ಸಾವಿರ ಸತ್ಕುಲ ಪ್ರಸೂತ, ಪ್ರಾಣವನ್ನೇ ಮುಡುಪಾಗಿಟ್ಟಿರುವ, ವಿಖ್ಯಾತರಾದ, ಯುದ್ಧದಲ್ಲಿ ಹಿಮ್ಮೆಟ್ಟದೇ ಇರುವ, ಸುವರ್ಣಭೂಷಿತ ಧ್ವಜವುಳ್ಳ ಚೇದಿ-ಕಾಶಿ-ಕರೂಷ ಮಹಾರಥರು ಬಾಯಿಕಳೆದ ಅಂತಕನಂತಿರುವ ಭೀಷ್ಮನೊಡನೆ ಯುದ್ಧಮಾಡಿ ಕುದುರೆ-ರಥ-ಆನೆಗಳೊಂದಿಗೆ ನಾಶರಾಗಿ ಪರಲೋಕವನ್ನು ಸೇರಿದರು. ಅಲ್ಲಿ ಭಗ್ನವಾಗಿದ್ದ ಧುರಿಗಳುಳ್ಳ, ಸಲಕರಣೆಗಳು ಹೊರಬಿದ್ದಿದ್ದ, ಗಾಲಿಗಳು ಮುರಿದಿದ್ದ ನೂರಾರು ಸಹಸ್ರಾರು ರಥಗಳು ಎಲ್ಲ ಕಡೆ ಕಾಣುತ್ತಿದ್ದವು.
ನೊಗಗಳು ತುಂಡಾಗಿದ್ದ ರಥಗಳಿಂದ, ಕೆಳಗಿ ಬಿದ್ದ ರಥಿಗಳಿಂದ, ಬಾಣಗಳು, ಒಡೆದ ಕವಚಗಳಿಂದ, ಪಟ್ಟಿಶಗಳಿಂದ, ಗದೆ-ಮುಸಲಗಳಿಂದ, ನಿಶಿತ ಶಿಲೀಮುಖಗಳಿಂದಲೂ, ರಥದ ತೋಳುಮರಗಳಿಂದಲೂ, ಮುರಿದಿದ್ದ ಚಕ್ರಗಳಿಂದಲೂ, ಕೈಗಳಿಂದಲೂ, ಬಿಲ್ಲುಗಳಿಂದಲೂ, ಖಡ್ಗಗಳಿಂದಲೂ, ಕುಂಡಲಗಳಿದ್ದ ತಲೆಗಳಿಂದ, ಕೈಚೀಲಗಳಿಂದ, ಬೆರಳಿಗೆ ಹಾಕಿಕೊಳ್ಳುವ ಚರ್ಮದ ಸಾಧನಗಳಿಂದ, ಕೆಳಕ್ಕೆ ಬಿದ್ದ ಧ್ವಜಗಳಿಂದ, ಅನೇಕ ತುಂಡುಗಳಾಗಿದ್ದ ಚಪಗಳಿಂದ ರಣಭೂಮಿಯು ತುಂಬಿಹೋಗಿತ್ತು. ಏರಿದ್ದವರನ್ನು ಕಳೆದುಕೊಂಡ ಆನೆಗಳು, ಸವಾರರನ್ನು ಕಳೆದುಕೊಂದ ಕುದುರೆಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಅಲ್ಲಿ ಸತ್ತು ಬಿದ್ದಿದ್ದವು. ಓಡುತ್ತಿರುವ ಮಹಾರಥರನ್ನು ತಡೆಯಲು ಅವರ ವೀರರು ಎಷ್ಟೇ ಪ್ರಯತ್ನಿಸಿದರೂ ಭೀಷ್ಮನ ಬಾಣಗಳಿಂದ ಪೀಡಿತರಾದ ಅವರನ್ನು ನಿಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ಮಹೇಂದ್ರನಿಗೆ ಸಮನಾದ ವೀರ್ಯದಿಂದ ವಧಿಸಲ್ಪಟ್ಟಿದ್ದ ಮಹಾಸೇನೆಯು ಸಂಪೂರ್ಣವಾಗಿ ನಾಶವಾಯಿತು. ಇಬ್ಬರು ಒಟ್ಟಾಗಿ ಓಡಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹಾಹಾಕಾರ ಮಾಡಿಕೊಂಡು ಚೇತನವನ್ನೇ ಕಳೆದುಕೊಂಡ ಪಾಂಡುಪುತ್ರರ ಸೇನೆಯ ರಥ-ಆನೆ-ಕುದುರೆಗಳನ್ನು ಹೊಡೆದನು ಮತ್ತು ಧ್ವಜ ದಂಡಗಳನ್ನು ಉರುಳಿಸಿದನು. ದೈವಬಲದಿಂದಲೇ ಪ್ರೇರಿತರಾಗಿ ಅಲ್ಲಿ ತಂದೆಯಂದಿರು ಮಕ್ಕಳನ್ನೂ, ಹಾಗೆಯೇ ಮಕ್ಕಳು ತಂದೆಯರನ್ನೂ, ಗೆಳೆಯರು ಗೆಳೆಯರನ್ನೂ ಕರೆದು ಕೊಲ್ಲುತ್ತಿದ್ದರು. ಪಾಂಡುಪುತ್ರನ ಕೆಲವು ಸೈನಿಕರು ಕವಚಗಳನ್ನು ಕಳಚಿ, ಕೂದಲು ಬಿಚ್ಚಿ ಹರಡಿಕೊಂಡು ಓಡಿ ಹೋಗುತ್ತಿರುವುದು ಕಂಡುಬಂದಿತು. ಹುಲಿಯನ್ನು ಕಂಡ ಗೋವುಗಳ ಸಮೂಹದಂತೆ ಭ್ರಾಂತವಾಗಿದ್ದ, ತಲೆಕೆಳಗಾದ ಮೂಕಿಗಳ ರಥಗಳಿಂದ ಕೂಡಿದ್ದ ಪಾಂಡುಪುತ್ರನ ಸೈನ್ಯವು ಆರ್ತಸ್ವರದಿಂದ ಕೂಗುತ್ತಿದ್ದುದು ಕಂಡುಬಂದಿತು. ಪುಡಿಪುಡಿಯಾದ ಆ ಸೈನ್ಯವನ್ನು ನೋಡಿ ಯಾದವನಂದನನು ಉತ್ತಮ ರಥವನ್ನು ನಿಲ್ಲಿಸಿ ಪಾರ್ಥ ಬೀಭತ್ಸುವಿಗೆ ನುಡಿದನು: “ಪಾರ್ಥ! ಯಾವ ಸಮಯವನ್ನು ನಾವೆಲ್ಲ ಬಯಸಿ ನಿರೀಕ್ಷಿಸಿದ್ದೆವೋ ಆ ಸಮಯವು ಬಂದೊದಗಿದೆ. ನೀನೀಗ ವ್ಯಾಮೋಹದಿಂದ ಮೋಹಿತನಾಗಿರದೇ ಇದ್ದರೆ ಈಗಲೇ ಭೀಷ್ಮನನ್ನು ಪ್ರಹರಿಸು. ಹಿಂದೆ ವಿರಾಟನಗರದಲ್ಲಿ ರಾಜರ ಸಮಾಗಮದಲ್ಲಿ ಸಂಜಯನಿರುವಾಗ “ಭೀಷ್ಮ-ದ್ರೊಣ ಪ್ರಮುಖರಾದ ಧಾರ್ತರಾಷ್ಟ್ರನ ಸೈನಿಕರೆಲ್ಲರನ್ನೂ, ಅವರ ಅನುಯಾಯಿಗಳೊಂದಿಗೆ ಯಾರು ನನ್ನೊಂದಿಗೆ ಸಂಯುಗದಲ್ಲಿ ಯುದ್ಧಮಾಡುತ್ತಾರೋ ಅವರನ್ನು ಸಂಹರಿಸುತ್ತೇನೆ” ಎಂದು ಏನನ್ನು ನೀನು ಹೇಳಿದ್ದೆಯೋ ಆ ವಾಕ್ಯವನ್ನು ಸತ್ಯವನ್ನಾಗಿಸು. ಕ್ಷತ್ರಧರ್ಮವನ್ನು ನೆನಪಿಸಿಕೊಂಡು ಅದರಂತೆ ಯುದ್ಧಮಾಡು!”
ವಾಸುದೇವನು ಹೀಗೆ ಹೇಳಲು ಮುಖವನ್ನು ಕೆಳಗೆ ಮಾಡಿಕೊಂಡು ಓರೆನೋಟದಿಂದ ಇಚ್ಛೆಯೇ ಇಲ್ಲದವನಂತೆ ಬೀಭತ್ಸುವು ಈ ಮಾತನ್ನಾಡಿದನು: “ಅವಧ್ಯರನ್ನು ವಧೆಮಾಡಿ ನರಕಕ್ಕಿಂತಲೂ ನಿಂದ್ಯವಾದ ರಾಜ್ಯವು ಉತ್ತಮವೇ? ವನವಾಸದಲ್ಲಿದ್ದು ದುಃಖವನ್ನು ಅನುಭವಿಸುವುದು ಒಳ್ಳೆಯದೇ? ಭೀಷ್ಮನೆಲ್ಲಿರುವನೋ ಅಲ್ಲಿಗೆ ಕುದುರೆಗಳನ್ನು ಓಡಿಸು. ನಿನ್ನ ಮಾತಿನಂತೆಯೇ ಮಾಡುತ್ತೇನೆ. ವೃದ್ಧ ಕುರುಪಿತಾಮಹ ದುರ್ಧರ್ಷನನ್ನು ಕೆಡವುತ್ತೇನೆ.” ಆಗ ಮಾಧವನು ಸೂರ್ಯನಂತೆ ನೋಡಲೂ ಕಷ್ಟನಾಗಿದ್ದ ಭೀಷ್ಮನು ಎಲ್ಲಿದ್ದನೋ ಅಲ್ಲಿಗೆ ಆ ಬೆಳ್ಳಿಯ ಬಣ್ಣದ ಕುದುರೆಗಳನ್ನು ಓಡಿಸಿದನು. ಮಹಾಬಾಹು ಪಾರ್ಥನು ಭೀಷ್ಮನನ್ನು ರಣದಲ್ಲಿ ಎದುರಿಸಿ ಬರಲು ಯುಧಿಷ್ಠಿರನ ಮಹಾಸೇನೆಯು ಹಿಂದಿರುಗಿತು. ಆಗ ಕುರುಶ್ರೇಷ್ಠ ಭೀಷ್ಮನು ಸಿಂಹದಂತೆ ಪದೇ ಪದೇ ಗರ್ಜಿಸುತ್ತಾ ಶೀಘ್ರದಲ್ಲಿಯೇ ಧನಂಜಯನ ರಥವನ್ನು ಬಾಣಗಳ ಮಳೆಯಿಂದ ಮುಚ್ಚಿದನು.
ಕ್ಷಣದಲ್ಲಿಯೇ ಆ ಶರವರ್ಷದಿಂದಾಗಿ ಮಹಾ ರಥವಾಗಲೀ, ಸಾರಥಿಯಾಗಲೀ ರಥದಲ್ಲಿದ್ದವನಾಗಲೀ ಕಾಣಲೇ ಇಲ್ಲ. ಸಾತ್ವತ ವಾಸುದೇವನೂ ಸ್ವಲ್ಪವೂ ಭ್ರಾಂತನಾಗದೇ ಧೈರ್ಯವನ್ನು ತಾಳಿ ಭೀಷ್ಮನ ಸಾಯಕಗಳಿಂದ ತತ್ತರಿಸಿದ ಆ ಕುದುರೆಗಳನ್ನು ಪ್ರಚೋದಿಸಿದನು. ಆಗ ಪಾರ್ಥನು ಮೇಘಕ್ಕೆ ಸಮನಾದ ಧ್ವನಿಯುಳ್ಳ ದಿವ್ಯ ಧನುಸ್ಸನ್ನು ಹಿಡಿದು ನಿಶಿತ ಬಾಣಗಳಿಂದ ಭೀಷ್ಮನ ಧನುಸ್ಸನ್ನು ಕತ್ತರಿಸಿ ಬೀಳಿಸಿದನು. ಧನುಸ್ಸು ತುಂಡಾಗಲು ಕೌರವ್ಯ ಭೀಷ್ಮನು ಪುನಃ ಇನ್ನೊಂದು ಮಹಾಧನುಸ್ಸನ್ನು ತೆಗೆದುಕೊಂಡು ನಿಮಿಷಮಾತ್ರದಲ್ಲಿ ಶಿಂಜಿನಿಯನ್ನು ಬಿಗಿದು ಸಜ್ಜು ಗೊಳಿಸಿದನು. ಆಗ ಮೇಘಕ್ಕೆ ಸಮನಾದ ಧ್ವನಿಯುಳ್ಳ ಆ ಧನುಸ್ಸನ್ನು ಎರಡೂ ಕೈಗಳಿಂದ ಸೆಳೆಯಲು ಆ ಧನುಸ್ಸನ್ನೂ ಕೂಡ ಅರ್ಜುನನು ಕ್ರುದ್ಧನಾಗಿ ತುಂಡರಿಸಿದನು. ಅವನ ಆ ಲಾಘವವನ್ನು ಶಂತನುವಿನ ಮಗನು “ಸಾಧು ಪಾರ್ಥ ಮಹಾಬಾಹೋ! ಸಾಧು ಕುಂತೀಸುತ!” ಎಂದು ಗೌರವಿಸಿದನು. ಹೀಗೆ ಹೇಳಿ ಇನ್ನೊಂದು ಸುಂದರ ಧನುಸ್ಸನ್ನು ತೆಗೆದುಕೊಂಡು ಭೀಷ್ಮನು ಪಾರ್ಥನ ರಥದ ಮೇಲೆ ಶರಗಳನ್ನು ಪ್ರಯೋಗಿಸಿದನು. ವಾಸುದೇವನು ಅನೇಕ ವಿಧದ ಮಂಡಲಕ್ರಮಗಳಲ್ಲಿ ಕುದುರೆಗಳನ್ನು ತಿರುಗಿಸಿ ಅವನ ಶರಗಳನ್ನು ವ್ಯರ್ಥಗೊಳಿಸಿ ಕುದುರೆ ಓಡಿಸುವುದರಲ್ಲಿ ತನಗಿದ್ದ ಅತ್ಯಂತ ಶಕ್ತಿಯನ್ನು ಪ್ರದರ್ಶಿಸಿದನು. ಎದುರಾದ ಗೂಳಿಯ ಕೊಂಬುಗಳ ತಿವಿತದಿಂದ ಗಾಯಗೊಂಡು ರೋಷಗೊಂಡ ಎರಡು ಎತ್ತುಗಳಂತೆ ಬಾಣಗಳಿಂದ ಗಾಯಗೊಂಡ ಭೀಷ್ಮ-ಪಾರ್ಥ ನರವ್ಯಾಘ್ರರಿಬ್ಬರೂ ಶೋಭಿಸಿದರು.
ಪಾರ್ಥನು ಮೃದುವಾಗಿ ಯುದ್ಧ ಮಾಡುತ್ತಿರುವುದನ್ನೂ, ಯುದ್ಧದಲ್ಲಿ ನಿಲುಗಡೆಯಿಲ್ಲದೇ ಬಾಣಗಳ ಮಳೆಯನ್ನು ಸುರಿಸುತ್ತಿರುವ ಭೀಷ್ಮನನ್ನೂ, ಎರಡೂ ಸೇನೆಗಳ ಮಧ್ಯೆ ಸುಡುತ್ತಿರುವ ಆದಿತ್ಯನಂತೆ ಪಾಂಡುಪುತ್ರರ ಸೈನಿಕರನ್ನು ಆಯ್ದು ಆಯ್ದು ಸಂಹರಿಸತ್ತಿದ್ದ, ಯುಧಿಷ್ಠಿರನ ಸೇನೆಯನ್ನು ಯುಗಾಂತನಂತೆ ಮಾಡುತ್ತಿದ್ದ ಭೀಷ್ಮನನ್ನು ನೋಡಿ ಮಹಾಬಾಹು, ಮಾಧವ, ಪರವೀರಹ ವಾಸುದೇವನು ಸಹಿಸಲಾರದೇ ಹೋದನು. ಆಗ ಪಾರ್ಥನ ಬೆಳ್ಳಿಯ ಬಣ್ಣದ ಕುದುರೆಗಳ ಕಡಿವಾಣಗಳನ್ನು ಬಿಸುಟು ಕ್ರುದ್ಧನಾದ ಆ ಮಹಾಯೋಗಿಯು ಮಹಾರಥದಿಂದ ದುಮುಕಿದನು. ಭುಜಗಳನ್ನೇ ಆಯುಧಗಳನ್ನಾಗಿರಿಸಿಕೊಂಡ ಆ ಬಲಶಾಲಿಯು ಚಾವಟಿಯನ್ನೇ ಕೈಯಲ್ಲಿ ಹಿಡಿದು ಪುನಃ ಪುನಃ ಸಿಂಹನಾದ ಗೈಯುತ್ತಾ, ಹೆಜ್ಜೆಗಳಿಂದ ಜಗತ್ತನ್ನೇ ಸೀಳಿ ಬಿಡುವಂತೆ ಆ ಜಗತೀಶ್ವರನು, ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡ ಆ ಕೃಷ್ಣನು, ಮಹಾಹವದಲ್ಲಿ ಕೌರವರ ಚೇತನಗಳನ್ನು ಸೆಳೆದುಕೊಳ್ಳುವನೋ ಎನ್ನುವಂತಿರುವ ಆ ಅಮಿತದ್ಯುತಿಯು ಕೊಲ್ಲಬೇಕೆಂದು ಭೀಷ್ಮನ ಕಡೆಗೆ ಓಡಿದನು, ಗರ್ಜಿಸುತ್ತಾ ಭೀಷ್ಮನ ಕಡೆ ಬರುತ್ತಿದ್ದ ಮಾಧವನನ್ನು ನೋಡಿ “ಆಹವದಲ್ಲಿ ಭೀಷ್ಮನು ಹತನಾದನು! ಭೀಷ್ಮನು ಹತನಾದನು!” ಎಂದು ಅಲ್ಲಿದ್ದ ಸೈನಿಕರು ಕೂಗಿಕೊಂಡು ಎಲ್ಲರೂ ವಾಸುದೇವನ ಭಯದಿಂದ ಓಡಿಹೋದರು. ಪೀತಕೌಶೇಯಗಳನ್ನು ಧರಿಸಿದ್ದ ಮಣಿಶ್ಯಾಮ ಜನಾರ್ದನನು ಭೀಷ್ಮನೆಡೆಗೆ ಓಡಿ ಬರುವಾಗ ಮಿಂಚಿನ ಮಾಲೆಯನ್ನು ಧರಿಸಿದ್ದ ಕಪ್ಪು ಮೋಡದಂತೆ ಶೋಭಿಸಿದನು. ಸಿಂಹವು ಮದಗಜವನ್ನು ಅಟ್ಟಿಸಿಕೊಂಡು ಹೋಗುವಂತೆ, ಪಡೆಯಾದ ಹೋರಿಯು ಗೂಳಿಯನ್ನು ಅಟ್ಟಿಸಿಕೊಂಡು ಹೋಗುವಂತೆ ಆ ತೇಜಸ್ವಿ ಯಾದವರ್ಷಭನು ಗರ್ಜಿಸುತ್ತಾ ಓಡಿ ಬಂದನು. ಆಹವದಲ್ಲಿ ತನ್ನ ಕಡೆ ಧಾವಿಸಿ ಬರುತ್ತಿದ್ದ ಪುಂಡರೀಕಾಕ್ಷನನ್ನು ನೋಡಿ ರಣದಲ್ಲಿ ಭೀಷ್ಮನು ಗಾಬರಿ ಗೊಳ್ಳಲಿಲ್ಲ. ಮಹಾಧನುಸ್ಸನ್ನು ಸೆಳೆದು ಭ್ರಾಂತಿಗೊಂಡಿರದ ಚೇತಸ್ಸಿನಿಂದ ಗೋವಿಂದನಿಗೆ ಇದನ್ನು ನುಡಿದನು: “ಬಾ! ಬಾ! ಪುಂಡರೀಕಾಕ್ಷ! ದೇವದೇವ! ನಿನಗೆ ವಂದನೆಗಳು. ಸಾತ್ವತಶ್ರೇಷ್ಠ! ಇಂದು ಈ ಮಹಾಹವದಲ್ಲಿ ನನ್ನನ್ನು ಸಂಹರಿಸು! ದೇವ! ಅನಘ! ನಿನ್ನಿಂದ ನಾನು ಸಂಗ್ರಾಮದಲ್ಲಿ ಹತನಾದರೂ ನನಗೆ ಲೋಕದಲ್ಲಿ ಪರಮ ಕಲ್ಯಾಣವೇ ದೊರೆಯುತ್ತದೆ. ಗೋವಿಂದ! ಇಂದು ನಾನು ಸಂಯುಗಲ್ಲಿ ಮೂರು ಲೋಕಗಳಲ್ಲಿಯೂ ಸಂಭಾವಿತನಾಗಿದ್ದೇನೆ.”
ಅವನ ಹಿಂದೆ ಓಡಿ ಬರುತ್ತಿದ್ದ ಮಹಾಬಾಹು ಪಾರ್ಥನು ಕೇಶವನನ್ನು ಎರಡೂ ಕೈಗಳಿಂದ ಹಿಡಿದುಕೊಂಡನು. ಪಾರ್ಥನು ಹಿಡಿದುಕೊಂಡರೂ ಪುರುಷೋತ್ತಮ ರಾಜೀವಲೋಚನ ಕೃಷ್ಣನು ಅವನನ್ನೂ ಎಳೆದುಕೊಂಡು ವೇಗವಾಗಿ ಮುಂದಾದನು. ಪರವೀರಹ ಪಾರ್ಥನು ಬಲವಾಗಿ ಅವನ ಚರಣಗಳನ್ನು ಹಿಡಿದುಕೊಂಡರೂ ಹೃಷೀಕೇಶನು ಸುಮಾರು ಹತ್ತು ಹೆಜ್ಜೆಗಳಷ್ಟು ಹೋಗಿಬಿಟ್ಟಿದ್ದನು. ಆಗ ಪರವೀರಹ ಅರ್ಜುನನು ಆರ್ತನಾಗಿ, ಕಣ್ಣುಗಳು ಕ್ರೋಧದಿಂದ ಕೂಡಿದವನಾಗಿ, ನಾಗರ ಹಾವಿನಂತೆ ದೀರ್ಘ ನಿಟ್ಟುಸಿರು ಬಿಡುತ್ತಾ ಈ ಮಾತನ್ನಾಡಿದನು: “ಮಹಾಬಾಹೋ! ಹಿಂದಿರುಗು! ಹಿಂದೆ ನೀನು ಯುದ್ಧ ಮಾಡುವುದಿಲ್ಲವೆಂದು ಏನು ಹೇಳಿದ್ದೆಯೋ ಅದನ್ನು ಸುಳ್ಳಾಗಿಸಬಾರದು. ನಿನ್ನನ್ನು ಜನರು ಸುಳ್ಳುಬುರುಕ ಎಂದು ಕರೆಯುತ್ತಾರೆ. ಯುದ್ಧಮಾಡುವ ಸಂಪೂರ್ಣ ಭಾರವೂ ನನ್ನದು. ಈ ಯತವ್ರತನನ್ನು ನಾನು ಸಂಹರಿಸುತ್ತೇನೆ. ಇದನ್ನು ನಾನು ಸಖ್ಯ, ಸತ್ಯ ಮತ್ತು ಸುಕೃತಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ. ನಾನು ಎಲ್ಲ ಶತ್ರುಗಳನ್ನೂ ಕೊನೆಗಾಣಿಸುತ್ತೇನೆ. ಪೂರ್ಣಚಂದ್ರನಂತಿರುವ ದುರ್ಧರ್ಷನಾದ ಮಹಾವ್ರತನನ್ನು ಇಂದೇ ಅವನ ಇಚ್ಛೆಯಂತೆಯೇ ಸಂಹಾರಮಾಡುವುದನ್ನು ನೀನು ಕಾಣುವೆ.”
ಮಹಾತ್ಮ ಮಾಧವನಾದರೋ ಫಲ್ಗುನನ ಮಾತನ್ನು ಕೇಳಿ ಏನನ್ನೂ ಹೇಳದೇ ಸಿಟ್ಟಿನಿಂದ ಪುನಃ ರಥವನ್ನೇರಿದನು. ಅವರಿಬ್ಬರೂ ನರವ್ಯಾಘ್ರರು ರಥದಲ್ಲಿ ಕುಳಿತುಕೊಳ್ಳಲು ಭೀಷ್ಮ ಶಾಂತನವನು ಪುನಃ ಅವರ ಮೇಲೆ ಮೋಡವು ಪರ್ವತದ ಮೇಲೆ ಸುರಿಸುವಂತೆ ಬಾಣಗಳ ಮಳೆಯನ್ನು ಸುರಿಸಿದನು. ಗಭಸ್ತಿ ಆದಿತ್ಯನು ಶಿಶಿರ ಋತುವಿನಲ್ಲಿ ತೇಜಸ್ಸುಗಳನ್ನು ಹೀರಿಕೊಳ್ಳುವಂತೆ ದೇವವ್ರತನು ಯೋಧರ ಪ್ರಾಣಗಳನ್ನು ತೆಗೆದುಕೊಂಡನು. ಯುದ್ಧದಲ್ಲಿ ಕುರುಗಳ ಸೇನೆಯನ್ನು ಪಾಂಡವ ಅರ್ಜುನನು ಹೇಗೆ ಸದೆಬಡಿದನೋ ಹಾಗೆ ಭೀಷ್ಮನೂ ಕೂಡ ಪಾಂಡವ ಸೇನೆಗಳನ್ನು ಯುದ್ಧದಲ್ಲಿ ಸದೆಬಡಿದನು. ಹತರಾಗಿ, ನಿರುತ್ಸಾಹರಾಗಿ, ವಿಚೇತಸರಾಗಿ ಸೇನೆಗಳು ರಣದಲ್ಲಿ ಮಧ್ಯಾಹ್ನದ ಸೂರ್ಯನಂತೆ ತನ್ನದೇ ತೇಜಸ್ಸಿನಿಂದ ಉರಿಯುತ್ತಿದ್ದ ಅಪ್ರತಿಮ ಭೀಷ್ಮನನ್ನು ನೋಡಲೂ ಶಕ್ಯರಾಗಲಿಲ್ಲ. ಭೀಷ್ಮನು ಯುಗಕ್ಷಯದಲ್ಲಿನ ಕಾಲನಂತೆ ಅವರನ್ನು ವಧಿಸುತ್ತಿದ್ದುದನ್ನು ನೋಡಿ ಪಾಂಡವರು ಭಯಪೀಡಿತರಾದರು. ಕೆಸರಿನಲ್ಲಿ ಸಿಲುಕಿಕೊಂಡಿದ್ದ ಗೋವುಗಳಂತೆ ತ್ರಾತಾರರನ್ನು ಕಾಣದೇ ಆ ಬಲಿಗಳು ರಣದಲ್ಲಿ ಪಿಪೀಲಿಕಗಳಂತೆ ದುರ್ಬಲರೂ ಕ್ಷುಣ್ಣರೂ ಆದರು. ಮಹಾರಥ, ದುಷ್ಪ್ರಧರ್ಷ, ಶರೌಘಗಳಿಂದ ನರೇಂದ್ರರನ್ನು ಸುಡುತ್ತಿದ್ದ, ಶರಗಳೇ ಕಿರಣಗಳಾಗಿರುವ ಸೂರ್ಯನಂತೆ ಸುಡುತ್ತಿದ್ದ ಆ ಭೀಷ್ಮನನ್ನು ನೋಡಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅವನು ಹೀಗೆ ಪಾಂಡುಸೇನೆಯನ್ನು ಮರ್ದಿಸುತ್ತಿರಲು ಸಹಸ್ರರಶ್ಮಿ ಸೂರ್ಯನು ಅಸ್ತನಾದನು. ಆಗ ಆಯಾಸಗೊಂಡಿರುವ ಸೇನೆಗಳಿಗೆ ಹಿಂದೆಸರಿಯುವ ಕುರಿತು ಮನಸ್ಸು ಮಾಡಿದರು.
ಪಾಂಡವರು ಭೀಷ್ಮನ ವಧೋಪಾಯವನ್ನು ತಿಳಿದುಕೊಂಡಿದುದು
ಅವರಿನ್ನೂ ಯುದ್ಧಮಾಡುತ್ತಿರುವಾಗಲೇ ಭಾಸ್ಕರನು ಅಸ್ತಂಗತನಾಗಿ ಘೋರ ಸಂಜೆಯಾಯಿತು. ರಣದಲ್ಲಿ ಏನೂ ಕಾಣದಾಯಿತು. ಆಗ ರಾಜಾ ಯುಧಿಷ್ಠಿರನು ಸಂಜೆಯಾದುದನ್ನೂ, ಅಮಿತ್ರಘಾತಿ ಭೀಷ್ಮನು ಸೇನೆಯನ್ನು ಸಂಹರಿಸುತ್ತಿರುವುದನ್ನೂ, ಶಸ್ತ್ರಗಳನ್ನು ಬಿಸುಟು ಹಿಮ್ಮೆಟ್ಟಿ ಪಲಯನಮಾಡುತ್ತಿರುವವರನ್ನೂ, ಯುದ್ಧದಲ್ಲಿ ಕ್ರುದ್ಧನಾದ ಭೀಷ್ಮನು ಮಹಾರಥರನ್ನು ಸಂಹರಿಸುತ್ತಿರುವುದನ್ನೂ, ಸೋಮಕರೂ ಪರಾಜಿತರಾದುದನ್ನು, ಮಹಾರಥರ ನಿರುತ್ಸಾಹವನ್ನೂ ನೋಡಿ ತತ್ಕಾಲದಲ್ಲಿ ಸೇನೆಯನ್ನು ಹಿಂದೆತೆಗೆದುಕೊಳ್ಳುವುದೇ ಸೂಕ್ತವೆಂದು ಯೋಚಿಸಿದನು. ಆಗ ರಾಜಾ ಯುಧಿಷ್ಠಿರನು ತನ್ನ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಂಡನು. ಹಾಗೆಯೇ ಕೌರವ ಸೇನೆಯೂ ಯುದ್ಧದಿಂದ ಹಿಂದೆ ಸರಿಯಿತು. ಅಲ್ಲಿ ಸೇನೆಗಳನ್ನು ಹಿಂದೆ ತೆಗೆದುಕೊಂಡು ಸಂಗ್ರಾಮದಲ್ಲಿ ಕ್ಷತ-ವಿಕ್ಷತರಾದ ಮಹಾರಥರು ಡೇರೆಗಳನ್ನು ಪ್ರವೇಶಿಸಿ ವಿಶ್ರಾಂತಿ ಪಡೆದರು. ಭೀಷ್ಮನಿಂದ ತುಂಬಾ ಪೀಡಿತರಾದ ಪಾಂಡವರು ಸಮರದಲ್ಲಿ ಭೀಷ್ಮನ ಕರ್ಮಗಳ ಕುರಿತು ಯೋಚಿಸಿ ಶಾಂತಿಯನ್ನೇ ಪಡೆಯಲಿಲ್ಲ. ಭೀಷ್ಮನೂ ಕೂಡ ಸೃಂಜಯರೊಂದಿಗೆ ಪಾಂಡವರನ್ನು ಸಮರದಲ್ಲಿ ಗೆದ್ದು, ಧೃತರಾಷ್ಟ್ರನ ಸುತರಿಂದ ಪೂಜಿತನಾಗಿ, ವಂದಿಸಿಕೊಂಡು, ಸುತ್ತುವರೆದ ಹೃಷ್ಟರೂಪರಾದ ಕುರುಗಳೊಂದಿಗೆ ಡೇರೆಯನ್ನು ಪ್ರವೇಶಿಸಿದನು. ಆ ರಾತ್ರಿಯು ಸರ್ವಭೂತಗಳಿಗೂ ಪ್ರಮೋಹನಕಾರಿಯಾಯಿತು.
ಆ ರಾತ್ರಿಯ ಮೊದಲನೆಯ ಜಾವದಲ್ಲಿ ದುರಾದರ್ಷ ಪಾಂಡವರು ವೃಷ್ಣಿ-ಸೃಂಜಯರೊಂದಿಗೆ ಮಂತ್ರಾಲೋಚನೆಗೆ ಕುಳಿತುಕೊಂಡರು. ಮಂತ್ರನಿಶ್ಚಯಕೋವಿದರಾದ ಆ ಎಲ್ಲ ಮಹಾಬಲರೂ ಕಾಲಕ್ಕೆ ತಕ್ಕುದಾದ ತಮಗೆ ಶ್ರೇಯಸ್ಕರವಾದುದರ ಕುರಿತು ಅವ್ಯಗ್ರರಾಗಿ ಮಂತ್ರಾಲೋಚನೆ ಮಾಡಿದರು. ಬಹುಕಾಲ ಮಂತ್ರಾಲೋಚನೆ ಮಾಡಿದ ನಂತರ ರಾಜಾ ಯುಧಿಷ್ಠಿರನು ವಾಸುದೇವನ ಕಡೆ ತಿರುಗಿ ಈ ಮಾತುಗಳನ್ನಾಡಿದನು: “ನೋಡು ಕೃಷ್ಣ! ಭೀಮಪರಾಕ್ರಮಿ ಮಹಾತ್ಮ ಭೀಷ್ಮನು ಆನೆಯೊಂದು ಬೆಂಡಿನ ವನವನ್ನು ಹೇಗೋ ಹಾಗೆ ನನ್ನ ಬಲವನ್ನು ಧ್ವಂಸಗೊಳಿಸುತ್ತಿದ್ದಾನೆ. ಉರಿಯುತ್ತಿರುವ ಪಾವಕನಂತೆ ಸೇನೆಗಳನ್ನು ನೆಕ್ಕುತ್ತಿರುವ ಆ ಮಹಾತ್ಮನನ್ನು ನೋಡಲೂ ಕೂಡ ನಮಗೆ ಉತ್ಸಾಹವಿಲ್ಲ. ರಣದಲ್ಲಿ ಪ್ರತಾಪಿ ಭೀಷ್ಮನ ತೀಕ್ಷ್ಣಶಸ್ತ್ರಗಳು ವಿಷೋಲ್ಬಣನಾದ ಘೋರ ಮಹಾನಾಗ ತಕ್ಷಕನಂತಿವೆ. ಕ್ರುದ್ಧನಾದ ಯಮನನ್ನಾಗಲೀ, ವಜ್ರಪಾಣಿ ದೇವರಾಜನನ್ನಾಗಲೀ, ಪಾಶವನ್ನು ಹಿಡಿದ ವರುಣನನ್ನಾಗಲೀ, ಗದೆಯೊಂದಿಗಿರುವ ಧನೇಶ್ವರನನ್ನಾಗಲೀ ಗೆಲ್ಲಲು ಶಕ್ಯವಿದೆ. ಆದರೆ ಸಮರದಲ್ಲಿ ಚಾಪವನ್ನು ಹಿಡಿದು ನಿಶಿತ ಶರಗಳನ್ನು ಪ್ರಯೋಗಿಸುತ್ತಿರುವ, ಸಂಕ್ರುದ್ಧನಾಗಿರುವ ಭೀಷ್ಮನನ್ನು ಜಯಿಸಲು ಶಕ್ಯವಿಲ್ಲ. ಹೀಗಿರುವಾಗ, ನನ್ನದೇ ಬುದ್ಧಿದೌರ್ಬಲ್ಯದಿಂದ ಸಮರದಲ್ಲಿ ಭೀಷ್ಮನನ್ನು ಎದುರಿಸಿ ನಾನು ಶೋಕಸಾಗರದಲ್ಲಿ ಮುಳುಗಿಹೋಗಿದ್ದೇನೆ. ವನಕ್ಕೆ ಹೋಗುತ್ತೇನೆ. ಅಲ್ಲಿ ಹೋಗುವುದೇ ನನಗೆ ಶ್ರೇಯಸ್ಕರವಾದುದು. ಯುದ್ಧವು ಇಷ್ಟವಾಗುತ್ತಿಲ್ಲ. ಏಕೆಂದರೆ ನಾವು ಎಂದೂ ಭೀಷ್ಮನನ್ನು ಕೊಲ್ಲಲಾರೆವು. ಹೇಗೆ ಪತಂಗಗಳು ಪ್ರಜ್ವಲಿಸುವ ಬೆಂಕಿಯ ಮೇಲೆರಗಿ ಒಮ್ಮೆಗೇ ಮೃತ್ಯುವನ್ನುಪ್ಪವವೋ ಹಾಗಿ ನಾವೂ ಕೂಡ ಭೀಷ್ಮನನ್ನು ಎದುರಿಸುತ್ತಿದ್ದೇವೆ. ರಾಜ್ಯದ ಕಾರಣಕ್ಕಾಗಿ ಪರಾಕ್ರಮದಿಂದ ಕ್ಷಯವನ್ನು ತಂದುಕೊಂಡಿದ್ದೇನೆ. ನನ್ನ ಶೂರ ಸಹೋದರರು ಸಾಯಕಗಳಿಂದ ತುಂಬಾ ಪೀಡಿತರಾಗಿದ್ದಾರೆ. ನನ್ನದೇ ಕಾರಣದಿಂದಾಗಿ ರಾಜ್ಯಭ್ರಷ್ಟರಾಗಿ ಕೇವಲ ಭಾತೃಸೌಹಾರ್ದತೆಯಿಂದ ಅರಣ್ಯಕ್ಕೆ ಬಂದರು. ಕೃಷ್ಣೆಯೂ ಕೂಡ ನನ್ನಿಂದಾಗಿಯೇ ಕಷ್ಟಗಳನ್ನು ಅನುಭವಿಸಿದಳು. ಜೀವಿತವನ್ನು ನಾನು ಬಹಳ ಮನ್ನಿಸುತ್ತೇನೆ. ಆದರೆ ಇಂದು ಜೀವಿತವಾಗಿರುವುದೇ ದುರ್ಲಭವಾಗಿಬಿಟ್ಟಿದೆ. ಆದುದರಿಂದ ಇಂದು ಉಳಿದ ಜೀವಿತದಲ್ಲಿಯಾದರೂ ಉತ್ತಮ ಧರ್ಮಾಚರಣೆಯಲ್ಲಿ ಕಳೆಯುತ್ತೇನೆ. ನಿನಗೆ ಭ್ರಾತೃಗಳ ಸಹಿತ ನನ್ನ ಮೇಲೆ ಅನುಗ್ರಹವಿದ್ದರೆ, ಸ್ವಧರ್ಮಕ್ಕೆ ವಿರೋಧವಾಗದಂತೆ ಏನಾದರೂ ಉಪಾಯವನ್ನು ಹೇಳು ಕೇಶವ!”
ಅವನ ಈ ಬಹುವಿಸ್ತರವಾದ ಕಾರುಣ್ಯದ ಮಾತುಗಳನ್ನು ಕೇಳಿ ಕೃಷ್ಣನು ಯುಧಿಷ್ಠಿರನನ್ನು ಸಂತವಿಸುತ್ತಾ ಉತ್ತರಿಸಿದನು: “ಧರ್ಮಪುತ್ರ! ನೀನು ವಿಷಾದಿಸಬೇಡ. ನಿನ್ನ ತಮ್ಮಂದಿರು ಶೂರರೂ, ದುರ್ಜಯರೂ, ಶತ್ರುಸೂದನರೂ ಆಗಿದ್ದಾರೆ. ಅರ್ಜುನ-ಭೀಮಸೇನರು ವಾಯು-ಅಗ್ನಿಯರ ಸಮತೇಜಸ್ವಿಗಳು. ಮಾದ್ರೀಪುತ್ರರೂ ಕೂಡ ತ್ರಿದಶರ ಈಶ್ವರನಂತೆ ವಿಕ್ರಾಂತರು. ಅಥವಾ ಸೌಹಾರ್ದತೆಯಿಂದ ಭೀಷ್ಮನೊಂದಿಗೆ ಯುದ್ಧಮಾಡಲು ನನ್ನನ್ನು ನಿಯುಕ್ತಿಸು. ಏಕೆಂದರೆ ನಾನು ನಿನಗಾಗಿ ಮಹಾಹವದಲ್ಲಿ ಏನನ್ನೂ ಸಹ ಮಾಡುತ್ತೇನೆ. ಒಂದು ವೇಳೆ ಫಲ್ಗುನನು ಇಚ್ಛಿಸಿದರೆ ಧಾರ್ತರಾಷ್ಟ್ರರು ನೋಡುತ್ತಿದ್ದಂತೆಯೇ ಪುರುಷರ್ಷಭ ಭೀಷ್ಮನನ್ನು ರಣದಲ್ಲಿ ಆಹ್ವಾನಿಸಿ ಕೊಲ್ಲುತ್ತೇನೆ. ಭೀಷ್ಮನು ಹತನಾದರೆ ಜಯವನ್ನು ಕಾಣುತ್ತೀಯೆ. ಇಂದೇ ಕುರುವೃದ್ಧ ಪಿತಾಮಹನನ್ನು ಒಂದೇ ರಥದಲ್ಲಿ ಕೊಲ್ಲುತ್ತೇನೆ. ಸಂಗ್ರಾಮದಲ್ಲಿ ಮಹೇಂದ್ರನಂತಿರುವ ನನ್ನ ವಿಕ್ರಮವನ್ನು ನೋಡು. ಮಹಾಸ್ತ್ರಗಳನ್ನು ಪ್ರಯೋಗಿಸಿ ಅವನನ್ನು ರಥದಿಂದ ಉರುಳಿಸುತ್ತೇನೆ. ಯಾರು ಪಾಂಡುಪುತ್ರರ ಶತ್ರುವೋ ಅವರು ನನ್ನ ಶತ್ರು ಎನ್ನುವುದರಲ್ಲಿ ಸಂಶಯವಿಲ್ಲ. ನನಗಾಗಿರುವವರು ನಿನಗಾಗಿಯೂ ಇರುವರು. ನನ್ನವರು ನಿನ್ನವರು ಕೂಡ. ನಿನ್ನ ತಮ್ಮನು ನನ್ನ ಸಖ, ಸಂಬಂಧೀ ಮತ್ತು ಶಿಷ್ಯನು ಕೂಡ. ಅರ್ಜುನನಿಗಾಗಿ ನಾನು ನನ್ನ ಮಾಂಸಗಳನ್ನೂ ಕಿತ್ತು ಕೊಡುತ್ತೇನೆ. ಈ ನರವ್ಯಾಘ್ರನೂ ಕೂಡ ನನಗಾಗಿ ಜೀವಿತವನ್ನೂ ತ್ಯಜಿಸುತ್ತಾನೆ. ಯಾವುದೇ ಸಮಯದಲ್ಲಿಯೂ ಪರಸ್ಪರರನ್ನು ದಾಟಿಸಬೇಕೆಂಬುದು ನಮ್ಮ ಒಪ್ಪಂದ. ನನ್ನನ್ನು ನಿಯೋಜಿಸು. ನಾನು ನಿನಗೆ ಆಶ್ರಯವಾಗುತ್ತೇನೆ. ಹಿಂದೆ ಉಪಪ್ಲವದದಲ್ಲಿ ಉಲೂಕನ ಸನ್ನಿಧಿಯಲ್ಲಿ ಗಾಂಗೇಯನನ್ನು ಕೊಲ್ಲುತ್ತೇನೆ ಎಂದು ಪಾರ್ಥನು ಪ್ರತಿಜ್ಞೆ ಮಾಡಿದ್ದನು. ಧೀಮತ ಪಾರ್ಥನ ಆ ಮಾತನ್ನು ನಾನು ರಕ್ಷಿಸಬೇಕಾಗಿದೆ. ಪಾರ್ಥನು ಅನುಜ್ಞೆಯಿತ್ತರೆ ಆ ಕಾರ್ಯವನ್ನು ನಾನು ಮಾಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಅಥವಾ ಫಲ್ಗುನನೇ ಅದನ್ನು ಮಾಡಬೇಕೆಂದರೂ ಅದು ಅವನಿಗೆ ಭಾರವೇನೂ ಅಲ್ಲ. ಸಂಗ್ರಾಮದಲ್ಲಿ ಅವನು ಪರಪುರಂಜಯ ಭೀಷ್ಮನನ್ನು ಸಂಹರಿಸಬಲ್ಲನು. ಮನಸ್ಸುಮಾಡಿದರೆ ಪಾರ್ಥನು ರಣದಲ್ಲಿ ಅಶಕ್ಯವಾದರೂ ಮಾಡಬಲ್ಲನು ಎಂದು ತಿಳಿ. ತ್ರಿದಶರು, ದೈತ್ಯದಾನವರ ಸಹಿತ ಯುದ್ಧಮಾಡಲು ಬಂದರೂ ಅರ್ಜುನನು ಅವರನ್ನು ಹತಗೊಳಿಸಬಲ್ಲನು. ಇನ್ನು ಭೀಷ್ಮನು ಯಾವ ಲೆಕ್ಕಕ್ಕೆ? ಭೀಷ್ಮ ಶಾಂತನವನು ಮಹಾವೀರ್ಯನಾದರೂ ಸತ್ತ್ವವನ್ನು ಕಳೆದುಕೊಂಡು ಅಲ್ಪಜೀವಿತನಾಗಿದ್ದಾನೆ. ಈ ಸಮಯದಲ್ಲಿ ತನ್ನ ಕರ್ತವ್ಯವೇನೆಂಬುದನ್ನು ತಿಳಿದುಕೊಂಡಿಲ್ಲ.”
ಯುಧಿಷ್ಠಿರನು ಹೇಳಿದನು: “ಮಾಧವ! ಇದು ನೀನು ಹೇಳದಂತೆಯೇ ಇದೆ. ಅವರೆಲ್ಲರೂ ನಿನ್ನ ವೇಗವನ್ನು ತಡೆದುಕೊಳ್ಳಲಾರರು. ಯಾರ ಮಹಾಬಲಕ್ಕೆ ನೀನು ನಾಥನಾಗಿದ್ದೀಯೋ ಆ ನಾನು ಬಯಸಿದ ಎಲ್ಲವನ್ನೂ ಪಡೆದೇ ಪಡೆಯುತ್ತೇನೆ. ನಿನ್ನನ್ನು ನಾಥನನ್ನಾಗಿ ಪಡೆದ ನಾನು ರಣದಲ್ಲಿ ಇಂದ್ರನೊಡನೆ ದೇವತೆಗಳನ್ನು ಕೂಡ ಜಯಿಸಬಲ್ಲೆ. ಇನ್ನು ಮಹಾಹವದಲ್ಲಿ ಭೀಷ್ಮನು ಯಾವ ಲೆಕ್ಕಕ್ಕೆ? ಸ್ವಾರ್ಥವನ್ನು ಸಾಧಿಸುವುದಕ್ಕಾಗಿ ನಿನ್ನನ್ನು ಅಸತ್ಯವಾದಿಯನ್ನಾಗಿ ಮಾಡಲು ನನಗೆ ಮನಸ್ಸಿಲ್ಲ. ಮಾತುಕೊಟ್ಟಹಾಗೆ ಯುದ್ಧಮಾಡದೆಯೇ ಸಹಾಯಮಾಡು. “ನಿನ್ನ ಹಿತದಲ್ಲಿ ಸಲಹೆಯನ್ನು ನೀಡುತ್ತೇನೆ. ಆದರೆ ನಿನ್ನ ಪರವಾಗಿ ಎಂದೂ ಯುದ್ಧಮಾಡುವುದಿಲ್ಲ. ದುರ್ಯೋಧನನ ಸಲುವಾಗಿ ಯುದ್ಧಮಾಡುತ್ತೇನೆ. ಇದು ಸತ್ಯ” ಎಂದು ಒಮ್ಮೆ ಭೀಷ್ಮನು ನನ್ನೊಡನೆ ಒಪ್ಪಂದವನ್ನು ಮಾಡಿಕೊಂಡಿದ್ದನು. ಏಕೆಂದರೆ ಅವನೇ ನನಗೆ ರಾಜ್ಯವನ್ನು ಕೊಡುವವನು ಮತ್ತು ರಾಜ್ಯವನ್ನು ಪಡೆಯುವುದರ ಕುರಿತು ಸಲಹೆ ನೀಡುವವನು. ಆದುದರಿಂದ ದೇವವ್ರತನ ವಧೋಪಾಯವನ್ನು ಅವನಿಂದಲೇ ನಿನ್ನನ್ನೂ ಕೂಡಿ ನಾವೆಲ್ಲರೂ ಹೋಗಿ ಕೇಳೋಣ. ನಿನಗೆ ಇಷ್ಟವಾದರೆ ಈಗಲೇ ಒಟ್ಟಿಗೇ ಹೋಗಿ ನರೋತ್ತಮ ಕೌರವ ಭೀಷ್ಮನ ಸಲಹೆಯನ್ನು ಕೇಳೋಣ. ಅವನು ನಮಗೆ ಹಿತವಾದ ಸತ್ಯವಾದ ಮಾತನ್ನೇ ಹೇಳುತ್ತಾನೆ. ಅವನು ಹೇಗೆ ಹೇಳುತ್ತಾನೋ ಹಾಗೇ ನಾನು ಸಂಗ್ರಾಮದಲ್ಲಿ ಮಾಡುತ್ತೇನೆ. ಆ ಧೃತವ್ರತನೇ ನಮಗೆ ಜಯವನ್ನು ಕೊಡುವವನು ಮತ್ತು ಜಯಗಳಿಸಲು ಸಲಹೆಯನ್ನು ನೀಡುವವನು. ತಂದೆಯನ್ನು ಕಳೆದುಕೊಂಡು ಬಾಲಕರಾಗಿದ್ದಾಗ ಅವನೇ ನಮ್ಮನ್ನು ಬೆಳೆಸಿದನು. ಆ ನನ್ನ ಪಿತಾಮಹ, ತಂದೆಗೆ ತಂದೆಯಂತಿದ್ದ, ವೃದ್ಧನನ್ನು ಕೊಲ್ಲಲು ಬಯಸುತ್ತಿದ್ದೇನಲ್ಲ! ಈ ಕ್ಷತ್ರಿಯ ಜೀವನಕ್ಕೆ ಧಿಕ್ಕಾರ!”
ಆಗ ವಾರ್ಷ್ಣೇಯನು ಕುರುನಂದನನಿಗೆ ಹೇಳಿದನು: “ಮಹಾಬಾಹೋ! ನನಗೆ ನೀನಾಡಿದುದು ಯಾವಾಗಲೂ ಇಷ್ಟವಾಗುತ್ತದೆ. ದೇವವ್ರತ ಭೀಷ್ಮನು ಪುಣ್ಯಕರ್ಮಿ. ದೃಷ್ಠಿಮಾತ್ರದಿದ ದಹಿಸಬಲ್ಲನು. ಅವ್ನ ವಧೋಪಾಯವನ್ನು ಕೇಳಲು ಸಾಗರಗೆಯ ಮಗನ ಬಳಿ ಹೋಗೋಣ. ವಿಶೇಷವಾಗಿ ನೀನೇ ಇದನ್ನು ಕೇಳಿದರು ಅವನು ಸತ್ಯವನ್ನೇ ಹೇಳುತ್ತಾನೆ. ನಾವೆಲ್ಲರೂ ಈಗಲೇ ಕುರುಪಿತಾಮಹನನ್ನು ಕೇಳಲು ಅಲ್ಲಿಗೆ ಹೋಗೋಣ! ಶಿರಸಾ ನಮಸ್ಕರಿಸಿ ಸಲಹೆಯನ್ನು ಕೇಳೋಣ. ಅವನು ಏನು ಸಲಹೆಯನ್ನು ಕೊಡುತ್ತಾನೋ ಅದರಂತೆಯೇ ಶತ್ರುಗಳೊಡನೆ ಹೋರಾಡೋಣ.”
ಹೀಗೆ ಮಂತ್ರಾಲೋಚನೆ ಮಾಡಿ ವೀರ ಪಾಂಡವರು ಎಲ್ಲರೂ ವೀರ್ಯವಾನ್ ವಾಸುದೇವನನ್ನೊಡಗೂಡಿ, ಶಸ್ತ್ರ-ಕವಚಗಳನ್ನು ಬಿಚ್ಚಿಟ್ಟು, ಪಾಂಡುಪೂರ್ವಜ ಭೀಷ್ಮನ ಬಿಡಾರದ ಕಡೆ ಹೊರಟರು. ಪ್ರವೇಶಿಸಿ ಭೀಷ್ಮನಿಗೆ ತಲೆಬಾಗಿ ನಮಸ್ಕರಿಸಿದರು. ಪಾಂಡವರು ಭೀಷ್ಮನನ್ನು ಶಿರಸಾ ವಂದಿಸಿ ಪೂಜಿಸಿ ಶರಣು ಹೋದರು. ಮಹಾಬಾಹು ಭೀಷ್ಮ ಕುರುಪಿತಾಮಹನು ಅವರನ್ನುದ್ದೇಶಿಸಿ ಹೇಳಿದನು: “ವಾರ್ಷ್ಣೇಯ! ನಿನಗೆ ಸ್ವಾಗತ! ಧನಂಜಯ! ನಿನಗೆ ಸ್ವಾಗತ! ಧರ್ಮಪುತ್ರನಿಗೆ, ಭೀಮನಿಗೆ ಮತ್ತು ಯಮಳರಿಗೂ ಸ್ವಾಗತ! ನಿಮ್ಮ ಪ್ರೀತಿಯನ್ನು ವೃದ್ಧಿಗೊಳಿಸಲು ಇಂದು ನಾನು ಯಾವ ಕಾರ್ಯವನ್ನು ಮಾಡಲಿ? ಅದು ಎಷ್ಟೇ ಸುದುಷ್ಕರವಾದರೂ ಸರ್ವಾತ್ಮನಾ ಅದನ್ನು ಮಾಡಿಕೊಡುತ್ತೇನೆ.”
ಹೀಗೆ ಗಾಂಗೇಯನು ಪ್ರೀತಿಯುಕ್ತನಾಗಿ ಪುನಃ ಪುನಃ ಹೇಳಲು ಧರ್ಮಪುತ್ರ ಯುಧಿಷ್ಠಿರನು ದೀನಾತ್ಮನಾಗಿ ಈ ಮಾತನ್ನಾಡಿದನು: “ಧಮಜ್ಞ! ಹೇಗೆ ನಾವು ಜಯಗಳಿಸಬಲ್ಲೆವು? ಹೇಗೆ ನಾವು ರಾಜ್ಯವನ್ನು ಪಡೆಯಬಹುದು? ಪ್ರಜೆಗಳು ನಾಶವಾಗದೇ ಇರುವುದು ಹೇಗೆ? ಅದನ್ನು ನನಗೆ ಹೇಳು. ನೀನೇ ನಿನ್ನ ವಧೋಪಾಯವನ್ನೂ ನಮಗೆ ಹೇಳಬೇಕು. ಸಮರದಲ್ಲಿ ನಿನ್ನನ್ನು ಹೇಗೆ ಸೋಲಿಸಬಲ್ಲೆವು? ನಿನ್ನಲ್ಲಿ ಸೂಕ್ಷ್ಮವಾದ ರಂಧ್ರವೂ ಕೂಡ ಕಾಣುವುದಕ್ಕೆ ಸಿಗುವುದಿಲ್ಲ. ಸಂಯುಗದಲ್ಲಿ ನೀನು ಸದಾ ವೃತ್ತಾಕಾರದಲ್ಲಿ ಧನುಸ್ಸನ್ನು ತಿರುಗಿಸುತ್ತಿರುವುದೇ ಕಂಡು ಬರುತ್ತದೆ. ರವಿಯಂತೆ ರಥದಲ್ಲಿರುವ ನೀನು ಬಾಣಗಳನ್ನು ಭತ್ತಳಿಕೆಯಿಂದ ತೆಗೆದುಕೊಳ್ಳುವುದಾಗಲೀ, ಅದನ್ನು ಧನುಸ್ಸಿಗೆ ಅನುಸಂಧಾನಮಾಡುವುದಾಗಲೀ, ಮತ್ತು ಶಿಂಜಿನಿಯನ್ನು ಸೆಳೆದು ಬಿಡುವುದಾಗಲೀ ನಾವು ನೋಡಲಾರೆವು. ರಥಾಶ್ವಗಜಪದಾತಿಗಳನ್ನು ಸಂಹಾರಿಸುವ ನಿನ್ನನ್ನು ಯಾವ ಪುರುಷನು ತಾನೇ ಕೊಲ್ಲಲು ಉತ್ಸಾಹಿತನಾಗುತ್ತಾನೆ? ಶರಗಳ ಮಹಾ ಮಳೆಯನ್ನು ಸುರಿಸಿ ನೀನು ನನ್ನ ಸೇನೆಗೆ ಮಹಾ ಕ್ಷಯವನ್ನು ತಂದಿದ್ದೀಯೆ. ನಾವು ಯುದ್ಧದಲ್ಲಿ ನಿನ್ನನ್ನು ಜಯಿಸುವುದು ಹೇಗೆ, ಹೇಗೆ ರಾಜ್ಯವು ನನ್ನದಾಗಬಲ್ಲದು, ಅಥವಾ ನನ್ನ ಸೈನ್ಯಕ್ಕೆ ಶಾಂತಿ ದೊರೆಯುವುದು ಅದನ್ನು ನನಗೆ ಹೇಳು.”
ಆಗ ಪಾಂಡವನಿಗೆ ಪಾಂಡುಪೂರ್ವಜ ಶಾಂತನವನು ಹೇಳಿದನು: “ಕೌಂತೇಯ! ನಾನು ಬದುಕಿರುವವರೆಗೆ ಎಂದೂ ಸಂಯುಗದಲ್ಲಿ ನಿನ್ನ ಏಳ್ಗೆಯು ಕಾಣಿಸುವುದಿಲ್ಲ. ಸತ್ಯವನ್ನೇ ಹೇಳುತ್ತಿದ್ದೇನೆ. ಆದರೆ ಯುದ್ಧದಲ್ಲಿ ನನ್ನನ್ನು ಸೋಲಿಸಿದರೆ ಖಂಡಿತವಾಗಿ ಕೌರವರನ್ನು ಗೆಲ್ಲುತ್ತೀಯೆ. ರಣದಲ್ಲಿ ಜಯವನ್ನು ಬಯಸುವೆಯಾದರೆ ಬೇಗನೆ ನನ್ನನ್ನು ಕೊಲ್ಲು. ಪಾರ್ಥರೇ! ಯಥಾಸುಖವಾಗಿ ನನ್ನನ್ನು ಹೊಡೆಯಿರಿ. ಅನುಜ್ಞೆಯನ್ನು ನೀಡುತ್ತೇನೆ. ಹೀಗೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುವುದೆಂದು ನನಗೆ ತಿಳಿದಿದೆ. ನಾನು ಸತ್ತರೆ ಅವರೆಲ್ಲರೂ ಸತ್ತ ಹಾಗೆ ಎಂದು ತಿಳಿದುಕೋ.”
ಯುಧಿಷ್ಠಿರನು ಹೇಳಿದನು: “ಸಮರದಲ್ಲಿ ಕ್ರುದ್ಧನಾಗಿ ದಂಡಪಾಣಿ ಅಂತಕನಂತಿರುವ ನಿನ್ನನ್ನು ನಾವು ಯುದ್ಧದಲ್ಲಿ ಜಯಿಸಬಲ್ಲಂತಹ ಉಪಾಯವನ್ನು ಹೇಳು. ವಜ್ರಧರನನ್ನೂ, ವರುಣನನ್ನೂ, ಯಮನನ್ನೂ ಸಹ ಜಯಿಸಬಲ್ಲೆವು. ಆದರೆ ಸಮರದಲ್ಲಿ ನಿನ್ನನ್ನು ಗೆಲ್ಲಲು ಇಂದ್ರನೊಂದಿಗೆ ಸುರಾಸುರರಿಗೂ ಶಕ್ಯವಿಲ್ಲ.”
ಭೀಷ್ಮನು ಹೇಳಿದನು: “ಪಾಂಡವ! ಸತ್ಯವನ್ನೇ ಮಾತನಾಡುತ್ತಿದ್ದೀಯೆ. ರಣದಲ್ಲಿ ಶ್ರೇಷ್ಠ ಕಾರ್ಮುಕವನ್ನು ನಾನು ಹಿಡಿದಿರುವವರೆಗೆ, ಶಸ್ತ್ರಾಸ್ತ್ರಗಳು ನನ್ನ ಕೈಯಲ್ಲಿರುವವರೆಗೆ ನನ್ನನ್ನು ಗೆಲ್ಲಲು ಇಂದ್ರನೊಂದಿಗೆ ಸುರಾಸುರರಿಗೂ ಶಕ್ಯವಿಲ್ಲ. ನಾನು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟಾಗ ಮಾತ್ರ ಈ ಮಹಾರಥರು ನನ್ನನ್ನು ಸಂಹರಿಸಬಲ್ಲರು. ಶಸ್ತ್ರವನ್ನು ಕೆಳಗಿಟ್ಟವನೊಡನೆ, ಕೆಳಕ್ಕೆ ಬಿದ್ದವನೊಡನೆ, ಕವಚ-ಧ್ವಜಗಳಿಲ್ಲದವನೊಡನೆ, ಓಡಿಹೋಗುತ್ತಿರುವವನೊಡನೆ, ಭೀತಿಗೊಂಡಿರುವವನೊಡನೆ, ‘ನಾನು ನಿನ್ನವನಾಗಿದ್ದೇನೆ’ ಎಂದು ಹೇಳುವವನೊಂದಿಗೆ, ಸ್ತ್ರೀಯೊಂದಿಗೆ, ಸ್ತ್ರೀಯ ಹೆಸರಿನ್ನಿಟ್ಟುಕೊಂಡವನೊಂದಿಗೆ, ಅಂಗವಿಕಲರೊಡನೆ, ಏಕಮಾತ್ರ ಪುತ್ರನಾಗಿರುವವನೊಡನೆ, ಅಪ್ರಸೂತನೊಂದಿಗೆ, ದುಷ್ಪ್ರೇಕ್ಷನೊಂದಿಗೆ ಯುದ್ಧಮಾಡುವುದು ನನಗೆ ಇಷ್ಟವಿಲ್ಲ. ಹಿಂದೆ ನಾನು ಮಾಡಿದ್ದ ಮತ್ತೊಂದು ಸಂಕಲ್ಪದ ಕುರಿತೂ ಕೇಳು. ಅಮಂಗಲ ಸೂಚಕ ಚಿಹ್ನೆಯಿರುವ ಧ್ವಜವನ್ನು ನೋಡಿದರೂ ನಾನು ಖಂಡಿತವಾಗಿ ಯುದ್ಧ ಮಾಡುವುದಿಲ್ಲ. ನಿನ್ನ ಸೇನೆಯಲ್ಲಿ ದ್ರೌಪದ ಮಹಾರಥ ಸಮರಾಕಾಂಕ್ಷೀ ಸಮಿತಿಂಜಯ ಶೂರ ಶಿಖಂಡಿಯಿದ್ದಾನಲ್ಲ? ಅವನು ಮೊದಲು ಸ್ತ್ರೀಯಾಗಿದ್ದು ನಂತರ ಪುರುಷನಾದನು. ಇವೆಲ್ಲವನ್ನೂ ನಡೆದಂತೆ ನಿನಗೂ ತಿಳಿದೇ ಇದೆ. ಸಮರದಲ್ಲಿ ಶೂರ ಅರ್ಜುನನು ಶಿಖಂಡಿಯನ್ನು ಮುಂದಿರಿಸಿಕೊಂಡು ಕವಚನ್ನು ಧರಿಸಿದವನಾಗಿ ತೀಕ್ಷ್ಣ ಬಾಣಗಳಿಂದ ನನ್ನನ್ನೇ ಹೊಡೆಯಲಿ. ಅಮಂಗಲಧ್ವಜವಿರುವ ಮತ್ತು ವಿಶೇಷವಾಗಿ ಅವನು ಹಿಂದೆ ಸ್ತ್ರೀಯಾಗಿದ್ದುದರಿಂದ ಅವನನ್ನು ನಾನು ಧನುರ್ಬಾಣಗಳನ್ನೂ ಹಿಡಿದಿದ್ದರೂ ಹೊಡೆಯಲು ಎಂದೂ ಇಚ್ಛಿಸುವುದಿಲ್ಲ. ಆ ಅವಕಾಶದಲ್ಲಿ ಪಾಂಡವ ಧನಂಜಯನು ನನ್ನ ಬಳಿಸಾರಿ ಕ್ಷಿಪ್ರವಾಗಿ ಎಲ್ಲ ಕಡೆಗಳಿಂದ ನನ್ನನ್ನು ಶರಗಳಿಂದ ಹೊಡೆದು ಸಂಹರಿಸಲಿ. ಯುದ್ಧದಲ್ಲಿ ತೊಡಗಿರುವ ಈ ನನ್ನನ್ನು ಕೊಲ್ಲುವವರು, ಮಹಾಭಾಗ ಕೃಷ್ಣ ಮತ್ತು ಪಾಂಡವ ಧನಂಜಯನ ಹೊರತಾಗಿ ಈ ಲೋಕಗಳಲ್ಲಿ ಬೇರೆ ಯಾರನ್ನೂ ಕಾಣೆ. ಹೀಗೆ ಅವನನ್ನು ಅಥವಾ ಬೇರೆ ಯಾರಾದರೂ ಅಂಥವನನ್ನು ನನ್ನ ಮುಂದೆ ನಿಲ್ಲಿಸಿ ಬೀಭತ್ಸುವೇ ನನ್ನನ್ನು ಬೀಳಿಸಬೇಕು. ಇದರಿಂದಲೇ ನಿನಗೆ ವಿಜಯವಾಗುವುದು. ಕೌಂತೇಯ! ನಾನು ಹೇಳಿದ ಮಾತಿನಂತೆಯೇ ಮಾಡು. ಆಗ ಸಂಗ್ರಾಮದಲ್ಲಿ ಎದುರಾಗಿರುವ ಧಾರ್ತರಾಷ್ಟ್ರರನ್ನು ಜಯಿಸುತ್ತೀಯೆ.”
ಅವನಿಂದ ಅಪ್ಪಣೆಯನ್ನು ಪಡೆದು, ಕುರುಪಿತಾಮಹ ಮಹಾತ್ಮ ಭೀಷ್ಮನನ್ನು ನಮಸ್ಕರಿಸಿ ಪಾರ್ಥರು ತಮ್ಮ ಶಿಬಿರದ ಕಡೆ ನಡೆದರು. ಹಾಗೆ ಪರಲೋಕದ ದೀಕ್ಷೆಯನ್ನು ತೆಗೆದುಕೊಂಡಿದ್ದ ಗಾಂಗೇಯನು ಹೇಳಿದಾಗಿನಿಂದ ಅರ್ಜುನನು ದುಃಖ ಸಂತಪ್ತನೂ ನಾಚಿಕೊಂಡವನೂ ಆಗಿ ಹೇಳಿದನು: “ಮಾಧವ! ಗುರು, ಕುಲವೃದ್ಧ, ಕೃತಪ್ರಜ್ಞ, ಧೀಮತ ಪಿತಾಮಹನೊಂದಿಗೆ ನಾನು ಸಂಗ್ರಾಮದಲ್ಲಿ ಹೇಗೆ ಯುದ್ಧಮಾಡಬಲ್ಲೆ? ಬಾಲ್ಯದಲ್ಲಿ ನಾನು ಆಡಿ ಮೈಯೆಲ್ಲ ಧೂಳುತುಂಬಿ ಬಂದಾಗ ಈ ಮಹಾಮನ ಮಹಾತ್ಮನು ನನ್ನನ್ನೆತ್ತಿಕೊಂಡು ತಾನೂ ಧೂಳಿನಿಂದ ತುಂಬಿಕೊಳ್ಳುತ್ತಿದ್ದನು. ಬಾಲಕನಾಗಿದ್ದಾಗ ನಾನು ಅವನ ತೊಡೆಯ ಮೇಲೆ ಕುಳಿತು ಮಹಾತ್ಮ ಪಾಂಡವನ ತಂದೆಯಾದ ಅವನನ್ನು ತಂದೆಯೆಂದು ಕರೆದಾಗ “ಭಾರತ! ನಾನು ನಿನ್ನ ತಂದೆಯಲ್ಲ. ನಿನ್ನ ತಂದೆಯ ತಂದೆ!” ಎಂದು ಬಾಲ್ಯದಲ್ಲಿ ನನಗೆ ಹೇಳುತ್ತಿದ್ದ ಅವನನ್ನು ಹೇಗೆ ತಾನೇ ನಾನು ವಧಿಸಬಲ್ಲೆ? ಬೇಕಾದರೆ ಅವನು ನನ್ನ ಸೇನೆಯನ್ನು ವಧಿಸಲಿ. ಆದರೆ ನಾನು ಆ ಮಹಾತ್ಮನೊಂದಿಗೆ ಯುದ್ಧ ಮಾಡುವುದಿಲ್ಲ. ಜಯವಾಗಲಿ ಅಥವಾ ವಧೆಯಾಗಲಿ. ನಿನಗೆ ಹೇಗನ್ನಿಸುತ್ತದೆ?”
ಶ್ರೀಕೃಷ್ಣನು ಹೇಳಿದನು: “ಜಿಷ್ಣೋ! ಹಿಂದೆ ನೀನು ಭೀಷ್ಮವಧೆಯ ಪ್ರತಿಜ್ಞೆಯನ್ನು ಮಾಡಿದ್ದೀಯೆ. ಕ್ಷತ್ರಧರ್ಮದಲ್ಲಿರುವ ನೀನು ಏಕೆ ಈಗ ಸಂಹರಿಸುವುದಿಲ್ಲ? ಸಿಡಿಲು ಬಡಿದ ಮರದಂತೆ ಇವನನ್ನು ರಥದಿದ ಬೀಳಿಸು. ಗಾಂಗೇಯನನ್ನು ಕೊಲ್ಲದೇ ಯುದ್ಧದಲ್ಲಿ ನಿನಗೆ ವಿಜಯವಾಗುವುದಿಲ್ಲ. ಪೂರ್ವೇಂದ್ರನಾಗಿದ್ದ ನೀನೇ ಅವಶ್ಯವಾಗಿ ಭೀಷ್ಮನನ್ನು ಕೊಲ್ಲುತ್ತೀಯೆ ಎಂದು ಹಿಂದೆಯೇ ದೈವನಿರ್ಧರಿತವಾಗಿತ್ತು. ಇದಲ್ಲದೇ ಬೇರೆ ಆಗುವುದಿಲ್ಲ. ಅಂತಕನಂತೆ ಬಾಯಿಕಳೆದಿರುವ ದುರಾದರ್ಷ ಭೀಷ್ಮನನ್ನು ನಿನ್ನನ್ನು ಬಿಟ್ಟು ಸ್ವಯಂ ವಜ್ರಧರನೇ ಕೊಲ್ಲಲು ಶಕ್ಯವಿಲ್ಲ. ಭೀಷ್ಮನನ್ನು ಕೊಲ್ಲು. ಹಿಂದೆ ಮಹಾಬುದ್ಧಿ ಬೃಹಸ್ಪತಿಯು ಶಕ್ರನಿಗೆ ಹೇಳಿದಂತೆ ನನ್ನ ಈ ಮಾತನ್ನು ಕೇಳು. ಅತ್ಯಂತ ಹಿರಿಯನಾದರೂ, ವೃದ್ಧನಾದರೂ, ಸಕಲ ಸದ್ಗುಣಗಳಿಂದ ಸಮನ್ವಿತನಾಗಿದ್ದರೂ ಶಸ್ತ್ರಹಿಡಿದು ಕೊಲ್ಲಲು ಬಂದರೆ ಅಂತಹ ಆತತಾಯಿಯನ್ನು ಕೊಲ್ಲಬೇಕು. ಇದು ಕ್ಷತ್ರಿಯರು ನೆಲೆಸಿರುವ ಶಾಶ್ವತ ಧರ್ಮ. ಅಸೂಯೆಯಿಲ್ಲದೇ ಯುದ್ಧಮಾಡಬೇಕು. ಶಿಷ್ಟರನ್ನು ರಕ್ಷಿಸಬೇಕು. ಯಜ್ಞ ಮಾಡಬೇಕು.”
ಅರ್ಜುನನು ಹೇಳಿದನು: “ಕೃಷ್ಣ! ನಿಜವಾಗಿಯೂ ಶಿಖಂಡಿಯೇ ಭೀಷ್ಮನ ನಿಧನಕ್ಕೆ ಕಾರಣನಾಗುತ್ತಾನೆ. ಪಾಂಚಾಲ್ಯನನ್ನು ನೋಡಿದೊಡನೆಯೇ ಸದಾ ಭೀಷ್ಮನು ಹಿಮ್ಮೆಟ್ಟುತ್ತಾನೆ. ಆದುದರಿಂದ ನಾವು ಅವನ ಮುಂದೆ ಶಿಖಂಡಿಯನ್ನು ಇರಿಸಿ ಗಾಂಗೇಯನನ್ನು ಸಂಹರಿಸೋಣ. ಇದೇ ಉಪಾಯವೆಂದು ನನಗನ್ನಿಸುತ್ತದೆ. ನಾನು ಸಾಯಕಗಳಿಂದ ಅನ್ಯ ಮಹೇಷ್ವಾಸರನ್ನು ತಡೆಯುತ್ತೇನೆ. ಯೋಧಶ್ರೇಷ್ಠ ಶಿಖಂಡಿಯು ಭೀಷ್ಮನನ್ನೇ ಎದುರಿಸಲಿ. “ಮೊದಲು ಕನ್ಯೆಯಾಗಿದ್ದು ನಂತರ ಪುರುಷನಾದ ಈ ಶಿಖಂಡಿಯನ್ನು ನಾನು ಕೊಲ್ಲುವುದಿಲ್ಲ” ಎಂದು ಕುರುಮುಖ್ಯನನ್ನು ನೀನು ಕೇಳಿದ್ದೀಯೆ.”
ಮಾಧವನೊಂದಿಗೆ ಹೀಗೆ ನಿಶ್ಚಯವನ್ನು ಮಾಡಿ ಪುರುಷರ್ಷಭ ಪಾಂಡವರು ತಮ್ಮ ತಮ್ಮ ಶಯನಗಳಲ್ಲಿ ಪವಡಿಸಿ ವಿಶ್ರಾಂತಿ ಪಡೆದರು.