ಎಂಟನೆಯ ದಿನದ ಯುದ್ಧ

ಕೌರವರ ಮತ್ತು ಪಾಂಡವರ ಕಡೆಯ ಜನೇಶ್ವರರು ಆ ರಾತ್ರಿಯಲ್ಲಿ ಸುಖವಾಗಿ ಮಲಗಿ ಬೆಳಗಾಗುತ್ತಲೇ ಪುನಃ ಯುದ್ಧಕ್ಕೆ ತೆರಳಿದರು. ಯುದ್ಧಕ್ಕೆ ಹೊರಡುವ ಆ ಎರಡೂ ಸೇನೆಗಳಲ್ಲಿ ಮಹಾಸಾಗರದ ಭೋರ್ಗರೆತದಂತೆ ಮಹಾ ಶಬ್ಧವುಂಟಾಯಿತು. ಆಗ ಕೌರವರ ಮಹಾಸೇನೆಯ ರಾಜ ದುರ್ಯೋಧನ, ಚಿತ್ರಸೇನ, ವಿವಿಂಶತಿ, ರಥಿಗಳಲ್ಲಿ ಶ್ರೇಷ್ಠ ಭೀಷ್ಮ, ದ್ವಿಜ ಭಾರದ್ವಾಜ ಇವರೆಲ್ಲರೂ ಸಂಘಟಿತರಾಗಿ ಸುಸನ್ನದ್ಧರಾಗಿ ಪಾಂಡವರೊಂದಿಗೆ ಯುದ್ಧಮಾಡಲು ಕವಚಗಳನ್ನು ಧರಿಸಿ ವ್ಯೂಹವನ್ನು ರಚಿಸಿದರು. ಭೀಷ್ಮನು ಸಾಗರದಂತೆ ಘೋರವಾಗಿರುವ ವಾಹನಗಳೇ ಅಲೆಗಳಾಗಿರುವ ಮಹಾವ್ಯೂಹವನ್ನು ರಚಿಸಿದನು. ಸರ್ವ ಸೇನೆಗಳ ಅಗ್ರಭಾಗದಲ್ಲಿ ಭೀಷ್ಮ ಶಾಂತನವನು ಮಾಲವ, ದಾಕ್ಷಿಣಾತ್ಯರು, ಮತ್ತು ಅವಂತಿಯವರಿಂದ ಸುತ್ತುವರೆಯಲ್ಪಟ್ಟು ಹೊರಟನು. ಅವನ ನಂತರದಲ್ಲಿ ಪುಲಿಂದರು, ಪಾರದರು ಮತ್ತು ಕ್ಷುದ್ರಕಮಾಲರೊಂದಿಗೆ ಪ್ರತಾಪವಾನ್ ಭಾರದ್ವಾಜನಿದ್ದನು. ದ್ರೋಣನ ನಂತರದಲ್ಲಿ ಪ್ರತಾಪವಾನ್ ಭಗದತ್ತನು ಮಾಗಧ, ಕಲಿಂಗ ಮತ್ತು ಪಿಶಾಚರೊಂದಿಗೆ ಹೊರಟನು. ಪ್ರಾಗ್ಜ್ಯೋತಿಷರಾಜನನ್ನು ಅನುಸರಿಸಿ ಕೋಸಲದ ರಾಜ ಬೃಹದ್ಬಲನು ಮೇಕಲ, ತ್ರಿಪುರ ಮತ್ತು ಚಿಚ್ಛಿಲರಿಂದ ಕೂಡಿಕೊಂಡು ಹೋದನು. ಬೃಹದ್ಬಲನ ನಂತರ ಪ್ರಸ್ಥಲಾಧಿಪ ಶೂರ ತ್ರಿಗರ್ತನು ಅನೇಕ ಕಾಂಬೋಜರಿಂದ ಮತ್ತು ಸಹಸ್ರಾರು ಯವನರಿಂದ ಕೂಡಿಕೊಂಡು ಹೊರಟನು. ತ್ರಿಗರ್ತನನ್ನು ಅನುಸರಿಸಿ ಶೂರ ದ್ರೌಣಿಯು ರಭಸದಿಂದ ಸಿಂಹನಾದದಿಂದ ಧರಾತಲವನ್ನು ಮೊಳಗಿಸುತ್ತಾ ನಡೆದನು. ಹಾಗೆಯೇ ದ್ರೌಣಿಯ ನಂತರ ರಾಜಾ ದುರ್ಯೋಧನನು ಸೋದರರಿಂದ ಪರಿವಾರಿತನಾಗಿ ಸರ್ವ ಸೈನ್ಯದೊಂದಿಗೆ ಹೊರಟನು. ದುರ್ಯೋಧನನನ್ನು ಅನುಸರಿಸಿ ಶಾರದ್ವತ ಕೃಪನು ಹೊರಟನು. ಹೀಗೆ ಸಾಗರೋಪಮವಾಗಿದ್ದ ಮಹಾವ್ಯೂಹವು ಹೊರಟಿತು.

ಅಲ್ಲಿ ಪತಾಕೆಗಳು ಶ್ವೇತ ಚತ್ರಗಳು, ಬಹುಮೂಲ್ಯದ ಚಿತ್ರ-ವಿಚಿತ್ರವಾದ ಭುಜಬಂದಿಗಳೂ, ಧನುಸ್ಸುಗಳೂ ಪ್ರಕಾಶಿಸಿದವು. ಕೌರವರ ಆ ಮಹಾವ್ಯೂಹವನ್ನು ನೋಡಿ ಮಹಾರಥ ಯುಧಿಷ್ಠಿರನು ತಕ್ಷಣವೇ ಪೃತನಾಪತಿ ಪಾರ್ಷತನಿಗೆ ಹೇಳಿದನು: ಮಹೇಷ್ವಾಸ! ಸಾಗರದಂತೆ ನಿರ್ಮಿತವಾಗಿರುವ ವ್ಯೂಹವನ್ನು ನೋಡು! ತಡಮಾಡದೇ ನೀನೂ ಕೂಡ ಅದಕ್ಕೆ ಪ್ರತಿಯಾದ ವ್ಯೂಹವನ್ನು ರಚಿಸು.

ಆಗ ಶೂರ ಪಾರ್ಷತನು ಪರವ್ಯೂಹವನ್ನು ನಾಶಪಡಿಸಬಲ್ಲ ಸುದಾರುಣವಾದ ಶೃಂಗಾಟಕ ವ್ಯೂಹವನ್ನು ರಚಿಸಿದನು. ಎರಡೂ ಶೃಂಗಗಳಲ್ಲಿ ಅನೇಕ ಸಹಸ್ರ ರಥಿಗಳಿಂದ ಮತ್ತು ಅಶ್ವಾರೋಹಿ-ಪದಾತಿಸೇನೆಗಳೊಂದಿಗೆ ಮಹಾರಥಿ ಭೀಮಸೇನ-ಸಾತ್ಯಕಿಯರಿದ್ದರು. ನಾಭಿಭಾಗದಲ್ಲಿ ನರಶ್ರೇಷ್ಠ ಶ್ವೇತಾಶ್ವ ವಾನರಧ್ವಜನಿದ್ದನು. ಮಧ್ಯದಲ್ಲಿ ರಾಜ ಯುಧಿಷ್ಠಿರ ಮತ್ತು ಇಬ್ಬರು ಮಾದ್ರೀಪುತ್ರ ಪಾಂಡವರಿದ್ದರು. ಇತರ ಮಹೇಷ್ವಾಸ ವ್ಯೂಹಶಾಸ್ತ್ರ ವಿಶಾರದ ನರಾಧಿಪರು ವ್ಯೂಹವನ್ನು ಪೂರೈಸಿದರು. ಅವರ ನಂತರ ಅಭಿಮನ್ಯು, ಮಹಾರಥ ವಿರಾಟ, ಸಂಹೃಷ್ಟರಾದ ದ್ರೌಪದೇಯರು ಮತ್ತು ರಾಕ್ಷಸ ಘಟೋತ್ಕಚರಿದ್ದರು. ಹೀಗೆ ಶೂರ ಪಾಂಡವರು ಮಹಾವ್ಯೂಹವನ್ನು ರಚಿಸಿಕೊಂಡು ಜಯವನ್ನು ಬಯಸಿ ಯುದ್ಧಮಾಡಲು ಇಚ್ಛಿಸಿ ಸಮರದಲ್ಲಿ ನಿಂತರು.

ತುಮುಲ ಭೇರಿಶಬ್ಧವು ಶಂಖನಾದದಿಂದ ಮಿಶ್ರಿತವಾಗಿ, ಸಿಂಹನಾದ ಮತ್ತು ಭುಜಗಳನ್ನು ತಟ್ಟುವುದರಿಂದಲೂ ಎಲ್ಲ ಕಡೆಗಳಿಂದ ಭಯಂಕರ ಶಬ್ಧವುಂಟಾಯಿತು. ಆಗ ಶೂರರು ಸಮರದಲ್ಲಿ ಎದುರಿಸಿ ಕೋಪದಿಂದ ಪರಸ್ಪರರನ್ನು ಎವೆಯಿಕ್ಕದೇ ನೋಡತೊಡಗಿದರು. ಮೊದಲು ಆ ಯೋಧರು ತಮಗೆ ಅನುರೂಪರಾದವರನ್ನು ಪರಸ್ಪರ ಯುದ್ಧಕ್ಕೆ ಕರೆದು ಅವರೊಂದಿಗೆ ಯುದ್ಧಮಾಡುತ್ತಿದ್ದರು. ಆಗ ಇತರೇತರನ್ನು ಸಂಹರಿಸುವ ಕೌರವರ ಮತ್ತು ಶತ್ರುಗಳ ನಡುವೆ ಭಯವನ್ನುಂಟುಮಾಡುವ ಘೋರರೂಪದ ಯುದ್ಧವು ನಡೆಯಿತು. ಬಾಯ್ದೆರೆದಿರುವ ಭಯಂಕರ ಸರ್ಪಗಳ ಗುಂಪಿನಂತೆ ನಿಶಿತವಾದ ನಾರಾಚಗಳು ಗುಂಪುಗುಂಪಾಗಿ ರಣಾಂಗಣದಲ್ಲಿ ಬೀಳುತ್ತಿದ್ದವು. ಮೋಡದಿಂದ ಹೊರಬರುವ ಹೊಳೆಯುತ್ತಿರುವ ಮಿಂಚುಗಳಂತೆ ತೈಲದಲ್ಲಿ ಅದ್ದಿದ್ದ ತೇಜಸ್ಸುಳ್ಳ ಹೊಳೆಯುವ ಶಕ್ತಿಗಳು ಬೀಳುತ್ತಿದ್ದವು. ಸುವರ್ಣಭೂಷಿತವಾದ, ವಿಮಲ ಪಟ್ಟಿಗಳಿಂದ ಕಟ್ಟಲ್ಪಟ್ಟಿದ್ದ, ಪರ್ವತಶಿಖರಗಳತೆ ಚೂಪಾಗಿದ್ದ, ಶುಭ ಗದೆಗಳು ಅಲ್ಲಲ್ಲಿ ಬೀಳುತ್ತಿದ್ದುದು ಕಾಣುತ್ತಿತ್ತು. ನಿರ್ಮಲ ಆಕಾಶದಂತಹ ಖಡ್ಗಗಳೂ ವಿರಾಜಿಸುತ್ತಿದ್ದವು. ಎತ್ತಿನ ಚರ್ಮಗಳಿಂದ ಮಾಡಲ್ಪಟ್ಟ ನೂರು ಚಂದ್ರರ ಕವಚಗಳು ರಣದಲ್ಲಿ ಎಲ್ಲಕಡೆ ಬಿದ್ದು ಶೋಭಿಸುತ್ತಿದ್ದವು. ಅನ್ಯೋನ್ಯರೊಡನೆ ಯುದ್ಧಮಾಡುತ್ತಿದ್ದ ಆ ಸೇನೆಗಳು ಹೋರಾಡುತ್ತಿರುವ ದೈತ್ಯ-ದೇವ ಸೇನೆಗಳಂತೆ ಶೋಭಿಸಿದವು. ಅವರು ಸಮರದಲ್ಲಿ ಅನ್ಯೋನ್ಯರನ್ನು ಸುತ್ತುವರೆದು ಆಕ್ರಮಣಿಸುತ್ತಿದ್ದರು.

ಆ ಪರಮ ಯುದ್ಧದಲ್ಲಿ ರಥಿಗಳಿಂದ ಬೇಗನೇ ಕಳುಹಿಸಲ್ಪಟ್ಟ ಪಾರ್ಥಿವರ್ಷಭರು ನೂಕುಗಳಿಂದ ನೂಕುಗಳಿಗೆ ತಾಗಿಸಿ ಯುದ್ಧಮಾಡುತ್ತಿದ್ದರು. ದಂತಗಳಿಂದ ಹೊಡೆದಾಡುತ್ತಿದ್ದ ಆನೆಗಳ ಸಂಘರ್ಷದಿಂದ ಬೆಂಕಿಯು ಹುಟ್ಟಿ ಹೊಗೆಯೊಂದಿಗೆ ಅದು ಎಲ್ಲೆಡೆ ಹರಡಿತು. ಪ್ರಾಸಗಳಿಂದ ಹೊಡೆಯಲ್ಪಟ್ಟು ಕೆಲವು ಗಜಯೋಧರು ಗಿರಿಶೃಂಗಗಳಂತೆ ಆನೆಗಳ ಮೇಲಿಂದ ಬೀಳುತ್ತಿರುವುದು ಎಲ್ಲೆಡೆ ಕಂಡುಬಂದಿತು. ವಿಚಿತ್ರರೂಪಗಳನ್ನು ಧರಿಸಿದ್ದ, ನಖ-ಪ್ರಾಸಾಯುಧಗಳಿಂದ ಯುದ್ಧಮಾಡುತ್ತಿದ್ದ ಶೂರ ಪದಾತಿಗಳು ಪರಸ್ಪರರನ್ನು ಕೊಲ್ಲುತ್ತಿದ್ದುದು ಕಂಡುಬಂದಿತು. ಆ ಕುರು-ಪಾಂಡವ ಸೈನಿಕರು ಅನ್ಯೋನ್ಯರನ್ನು ಎದುರಿಸಿ ನಾನಾವಿಧದ ಘೋರ ಶಸ್ತ್ರಗಳಿಂದ ರಣದಿಂದ ಯಮಾಲಯಕ್ಕೆ ಕಳುಹಿಸುತ್ತಿದ್ದರು. ಆಗ ಶಾಂತನವ ಭೀಷ್ಮನು ರಥಘೋಷದಿಂದ ಗರ್ಜಿಸುತ್ತಾ ಧನುಸ್ಸಿನ ಶಬ್ಧದಿಂದ ಪಾಂಡವರನ್ನು ಮೋಹಿಸುತ್ತಾ ರಣರಂಗದಲ್ಲಿ ಆಕ್ರಮಣಿಸಿದನು. ಪಾಂಡವರ ರಥರೂ ಕೂಡ ಭೈರವಸ್ವರದಲ್ಲಿ ಕೂಗುತ್ತಾ ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಯುದ್ಧಸನ್ನದ್ಧರಾಗಿ ಆಕ್ರಮಣಿಸಿದರು. ಆಗ ಕೌರವರ ಮತ್ತು ಪಾಂಡವರ ನಡುವೆ ನರ-ಅಶ್ವ-ರಥ-ಆನೆಗಳ ಪರಸ್ಟರ ಘರ್ಷಣೆಯ ಯುದ್ಧವು ನಡೆಯಿತು.

ಕ್ರುದ್ಧನಾಗಿ ಎಲ್ಲ ಕಡೆಗಳಲ್ಲಿ ದಹಿಸುತ್ತಿದ್ದ ಭೀಷ್ಮನನ್ನು ಸುಡುತ್ತಿರುವ ಭಾಸ್ಕರನನಂತೆ ಪಾಂಡವರು ನೋಡಲು ಅಶಕ್ಯರಾದರು. ಆಗ ಧರ್ಮಪುತ್ರನ ಶಾಸನದಂತೆ ಸೈನ್ಯಗಳೆಲ್ಲವೂ ಗಾಂಗೇಯನನ್ನು ಆಕ್ರಮಿಸಿ ನಿಶಿತ ಶರಗಳಿಂದ ಗಾಯಗೊಳಿಸಿದರು. ರಣಶ್ಲಾಘೀ ಭೀಷ್ಮನಾದರೋ ಸೃಂಜಯರೊಂದಿಗೆ ಸೋಮಕರನ್ನು ಮತ್ತು ಮಹೇಷ್ವಾಸ ಪಾಂಚಾಲರನ್ನು ಸಾಯಕಗಳಿಂದ ಉರುಳಿಸಿದನು. ಭೀಷ್ಮನಿಂದ ವಧಿಸಲ್ಪಡುತ್ತಿದ್ದ ಸೋಮಕರೊಡನೆ ಪಾಂಚಾಲರು ಸಾವಿನ ಭಯವನ್ನು ತೊರೆದು ಭೀಷ್ಮನನ್ನೇ ಪುನಃ ಆಕ್ರಮಣಿಸಿದರು. ಆದರೆ ಯುದ್ಧದಲ್ಲಿ ವೀರ ಭೀಷ್ಮ ಶಾಂತನವನು ಕೂಡಲೇ ಆ ರಥಿಗಳ ಬಾಹುಗಳು ಶಿರಸ್ಸುಗಳನ್ನು ತುಂಡರಿಸಿದನು. ದೇವವ್ರತನು ರಥಿಗಳನ್ನು ವಿರಥರನ್ನಾಗಿ ಮಾಡಿದನು. ಅಶ್ವಾರೋಹಿಗಳ ಮತ್ತು ಕುದುರೆಗಳ ಶಿರಗಳನ್ನು ಉರುಳಿಸಿದನು. ಭೀಷ್ಮನ ಅಸ್ತ್ರಗಳಿಂದ ಪ್ರಮೋಹಿತವಾಗಿ, ಮಾವುತರಿಲ್ಲದೇ ಮಲಗಿದ್ದ ಪರ್ವತೋಪಮ ಆನೆಗಳು ಕಂಡವು. ರಥಿಗಳಲ್ಲಿ ಶ್ರೇಷ್ಠ ಮಹಾಬಲ ಭೀಮಸೇನನಲ್ಲದೇ ಪಾಂಡವ ಸೇನೆಯಲ್ಲಿ ಬೇರೆ ಯಾವ ಪುರುಷನೂ ಇರಲಿಲ್ಲ.

ಭೀಮಸೇನನಿಂದ ಧೃತರಾಷ್ಟ್ರನ ಎಂಟು ಮಕ್ಕಳ ವಧೆ

ಅವನೇ ಭೀಷ್ಮನನ್ನು ಎದುರಿಸಿ ಪ್ರಹರಿಸತೊಡಗಿದನು. ಆಗ ಭೀಷ್ಮ-ಭೀಮ ಸಮಾಗಮದ ಘೋರ ಯುದ್ಧವು ನಡೆಯಿತು. ಅವನು ಎಲ್ಲ ಸೇನೆಗಳಿಗೂ ಘೋರರೂಪಿ ಭಯಾನಕನಾಗಿ ಕಂಡನು. ಪಾಂಡವರು ಹೃಷ್ಟರಾಗಿ ಸಿಂಹನಾದಗೈದರು. ಆಗ ರಾಜಾ ದುರ್ಯೋಧನನು ಸೋದರರಿಂದ ಸುತ್ತುವರೆಯಲ್ಪಟ್ಟು ಜನಕ್ಷಯವು ನಡೆಯುತ್ತಿರುವ ಸಮರದಲ್ಲಿ ಭೀಷ್ಮನನ್ನು ರಕ್ಷಿಸಿದನು. ರಥಿಗಳಲ್ಲಿ ಶ್ರೇಷ್ಠ ಅರಿಹ ಭೀಮನಾದರೋ ಭೀಷ್ಮನ ಸಾರಥಿಯನ್ನು ಕೊಂದು, ನಿಯಂತ್ರಣವಿಲ್ಲದೇ ಅವನ ರಥದ ಕುದುರೆಗಳು ಎಲ್ಲ ಕಡೆ ಓಡಿಹೋಗುತ್ತಿರಲು ಶರದಿಂದ ಸುನಾಭನ ತಲೆಯನ್ನು ಕತ್ತರಿಸಿದನು. ಸುತೀಕ್ಷ್ಣ ಕ್ಷುರಪ್ರದಿಂದ ಹತನಾಗಿ ಅವನು ಭೂಮಿಯ ಮೇಲೆ ಬಿದ್ದನು. ಅವನು ಹತನಾಗಲು ಧೃತರಾಷ್ಟ್ರನ ಮಹಾರಥ ಶೂರ ಪುತ್ರರು ಏಳು ಮಂದಿ ಸೋದರರು ರಣದಲ್ಲಿ ಅದನ್ನು ಸಹಿಸಿಕೊಳ್ಳಲಿಲ್ಲ. ಆದಿತ್ಯಕೇತು, ಬಹ್ವಾಶೀ, ಕುಂಡಧಾರ, ಮಹೋದರ, ಅಪರಾಜಿತ, ಪಂಡಿತಕ ಮತ್ತು ವಿಶಾಲಾಕ್ಷ ಈ ಅರಿಮರ್ದನರು ಸನ್ನದ್ಧರಾಗಿ, ವಿಚಿತ್ರ ಕವಚ-ಧ್ವಜಗಳೊಂದಿಗೆ ಯುದ್ಧಮಾಡಲು ಬಯಸಿ ಸಂಗ್ರಾಮದಲ್ಲಿ ಪಾಂಡವನನ್ನು ಆಕ್ರಮಣಿಸಿದರು. ಮಹೋದರನಾದರೋ ಸಮರದಲ್ಲಿ ವೃತ್ರಹನು ನಮುಚಿಯನ್ನು ಹೇಗೋ ಹಾಗೆ ಒಂಭತ್ತು ವಜ್ರಸಂಕಾಶ ಪತ್ರಿಗಳಿಂದ ಭೀಮನನ್ನು ಹೊಡೆದನು. ಶತ್ರುವನ್ನು ಗೆಲ್ಲಲು ಆದಿತ್ಯಕೇತುವು ಏಳರಿಂದ, ಬಹ್ವಾಶಿಯು ಐದರಿಂದ, ಕುಂಡಧಾರನು ಒಂಭತ್ತರಿಂದ, ವಿಶಾಲಾಕ್ಷನು ಏಳರಿಂದ, ಮತ್ತು ಅಪರಾಜಿತನು ಅನೇಕ ಶರಗಳಿಂದ ಮಹಾಬಲ ಭೀಮಸೇನನನ್ನು ಹೊಡೆದರು. ಅಪಂಡಿತಕನೂ ಕೂಡ ರಣದಲ್ಲಿ ಮೂರು ಬಾಣಗಳಿಂದ ಹೊಡೆದನು. ಶತ್ರುಗಳ ಆ ಪ್ರಹಾರಗಳನ್ನು ಭೀಮನು ಸಹಿಸಿಕೊಳ್ಳಲಿಲ್ಲ. ಆ ಅಮಿತ್ರಕರ್ಶನನು ಧನುಸ್ಸನ್ನು ಎಡಗೈಯಿಂದ ಮೀಟಿ ನತಪರ್ವ ಶರದಿಂದ ಸಂಯುಗದಲ್ಲಿ ಅಪರಾಜಿತನ ಸುನಸ ಶಿರವನ್ನು ಕತ್ತರಿಸಿದನು. ಭೀಮನಿಂದ ಅಪರಾಜಿತನ ಶಿರವು ಭೂಮಿಯ ಮೇಲೆ ಬಿದ್ದಿತು. ಆಗ ಇನ್ನೊಂದು ಭಲ್ಲದಿಂದ, ಸರ್ವಲೋಕವೂ ನೋಡುತ್ತಿದ್ದಂತೆ ಕುಂಡಧಾರನನ್ನು ಮೃತ್ಯುಲೋಕಕ್ಕೆ ಕಳುಹಿಸಿದನು. ಆಗ ಪುನಃ ಆ ಅಮೇಯಾತ್ಮನು ಶಿಲೀಮುಖಿಯನ್ನು ಹೂಡಿ ಸಮರದಲ್ಲಿ ಪಂಡಿತನ ಮೇಲೆ ಪ್ರಯೋಗಿಸಿದನು. ಕಾಲಚೋದಿತ ಸರ್ಪವು ಮನುಷ್ಯನನ್ನು ಕಚ್ಚಿ ಬಿಲವನ್ನು ಸೇರಿಕೊಳ್ಳುವಂತೆ ಆ ಶರವು ಪಂಡಿತನನ್ನು ಸಂಹರಿಸಿ ಧರಣೀತಲವನ್ನು ಪ್ರವೇಶಿಸಿತು. ಹಿಂದಿನ ಕ್ಲೇಶಗಳನ್ನು ಸ್ಮರಿಸಿಕೊಂಡು ಆ ಅದೀನಾತ್ಮನು ವಿಶಾಲಾಕ್ಷನ ಶಿರವನ್ನು ಕತ್ತರಿಸಿ ಭೂಮಿಯ ಮೇಲೆ ಬೀಳಿಸಿದನು. ಮಹೋದರನ ಎದೆಗೆ ನಾರಾಚದಿಂದ ಹೊಡೆಯಲು ಅವನು ಹತನಾಗಿ ಭೂಮಿಯ ಮೇಲೆ ಬಿದ್ದನು. ಅರಿಹನು ಸಂಯುಗದಲ್ಲಿ ಬಾಣದಿಂದ ಆದಿತ್ಯಕೇತುವಿನ ಧ್ವಜವನ್ನು ಕತ್ತರಿಸಿ ತುಂಬಾ ತೀಕ್ಷ್ಣವಾದ ಭಲ್ಲದಿಂದ ಅವನ ಶಿರಸ್ಸನ್ನು ತುಂಡರಿಸಿದನು. ಭೀಮನು ಸಂಕ್ರುದ್ಧನಾಗಿ ನತಪರ್ವ ಶರದಿಂದ ಬಹ್ವಾಶಿಯನ್ನೂ ಯಮಸದನಕ್ಕೆ ಕಳುಹಿಸಿದನು.

ಧೃತರಾಷ್ಟ್ರನ ಇತರ ಮಕ್ಕಳು ಇವನು ಅಂದು ಸಭೆಯಲ್ಲಿ ಆಡಿದುದನ್ನು ಸತ್ಯವಾಗಿಸುತ್ತಾನೆ ಎಂದು ಅಂದುಕೊಂಡು ಅಲ್ಲಿಂದ ಪಲಾಯನಗೈದರು. ರಾಜಾ ದುರ್ಯೋಧನನು ತನ್ನ ಸಹೋದರ ವಧೆಯಿಂದಾದ ವ್ಯಸನದಿಂದ ಸಂಕಟಪಟ್ಟು ಕೌರವ ಯೋಧರಿಗೆ “ಯುದ್ಧದಲ್ಲಿ ಈ ಭೀಮನನ್ನು ಕೊಲ್ಲಿ!” ಎಂದು ಆಜ್ಞಾಪಿಸಿದನು. ಈ ರೀತಿ ತಮ್ಮ ಸಹೋದರರು ಹತರಾದುದನ್ನು ನೋಡಿ ಧೃತರಾಷ್ಟ್ರನ ಮಹೇಷ್ವಾಸ ಮಕ್ಕಳು ಮಹಾಪ್ರಾಜ್ಞ ಕ್ಷತ್ತನು ಹೇಳಿದ್ದ ಹಿತವೂ ಆನಾಮಯವೂ ಆದ ಆ ವಚನಗಳನ್ನು ಸ್ಮರಿಸಿಕೊಂಡು ಆ ದಿವ್ಯದರ್ಶಿಯ ಮಾತುಗಳು ಇಂದು ಪ್ರತ್ಯಕ್ಷವಾಗಿ ಕಾರ್ಯರೂಪಕ್ಕೆ ಬಂದಿದೆ ಎಂದುಕೊಂಡರು. ಧೃತರಾಷ್ಟ್ರ ಪುತ್ರರ ವಧೆಗೋಸ್ಕರವಾಗಿಯೇ ಬಲಶಾಲೀ ಪಾಂಡವನು ಹುಟ್ಟಿದ್ದಾನೋ ಎನ್ನುವಂತೆ ಆ ಮಹಾಬಾಹುವು ಕೌರವರನ್ನು ಸಂಹರಿಸುತ್ತಿದ್ದನು.

ಆಗ ರಾಜಾ ದುರ್ಯೋಧನನು ಭೀಷ್ಮನ ಬಳಿಸಾರಿ ಮಹಾ ದುಃಖದಿಂದ ಆವಿಷ್ಟನಾಗಿ ಸಂಕಟದಿಂದ ರೋದಿಸಿದನು: ನನ್ನ ಶೂರ ಸಹೋದರರು ಯುದ್ಧದಲ್ಲಿ ಭೀಮಸೇನನಿಂದ ಹತರಾಗಿದ್ದಾರೆ. ಪ್ರಯತ್ನಪಟ್ಟರೂ ಕೂಡ ನನ್ನ ಸೈನಿಕರೆಲ್ಲರೂ ಹತರಾಗುತ್ತಿದ್ದಾರೆ. ನೀನಾದರೋ ಮಧ್ಯಸ್ಥನಾಗಿದ್ದುಕೊಂಡು ನಿತ್ಯವೂ ನಮ್ಮನ್ನು ಉಪೇಕ್ಷಿಸುತ್ತಿರುವೆ. ನಾನಾದರೋ ವಿನಾಶದ ಮಾರ್ಗವನ್ನೇ ಹಿಡಿದುಬಿಟ್ಟಿದ್ದೇನೆ. ನನ್ನ ಈ ದೈವವನ್ನು ನೋಡು!

ಕ್ರೂರವಾದ ಈ ಮಾತನ್ನು ಕೇಳಿ ದೇವವ್ರತನು ಕಣ್ಣೀರು ತುಂಬಿದ ದುರ್ಯೋಧನನಿಗೆ ಈ ಮಾತನ್ನಾಡಿದನು:ಹಿಂದೆಯೇ ನಾನು, ದ್ರೋಣ, ವಿದುರ, ಯಶಸ್ವಿನಿ ಗಾಂಧಾರಿಯರು ನಿನಗೆ ಇದನ್ನು ಹೇಳಿದ್ದೆವು. ಮಗೂ! ಆಗ ನೀನು ಅದರ ಅರ್ಥವನ್ನು ತಿಳಿದುಕೊಳ್ಳಲಿಲ್ಲ. ಹಿಂದೆಯೇ ನಾನು ನಿನಗೆ ಸಲಹೆಯನ್ನು ನೀಡಿದ್ದೆನು - ನಿಮ್ಮಿಬ್ಬರ ನಡುವಿನ ಯುದ್ಧದಲ್ಲಿ ನನ್ನನ್ನೂ ಆಚಾರ್ಯ ದ್ರೋಣನನ್ನೂ ಎಂದೂ ನಿಯೋಜಿಸಕೂಡದೆಂದು. ಸಂಯುಗದಲ್ಲಿ ಭೀಮನು ಯಾರ್ಯಾರು ಧಾರ್ತರಾಷ್ಟ್ರರನ್ನು ನೋಡುತ್ತಾನೋ ಅವರನ್ನೆಲ್ಲ ರಣದಲ್ಲಿ ಸಂಹರಿಸುತ್ತಾನೆ. ಸತ್ಯವನ್ನೇ ನಿನಗೆ ನಾನು ಹೇಳುತ್ತೇನೆ. ಆದುದರಿಂದ ನೀನು ಸ್ಥಿರನಾಗಿದ್ದುಕೊಂಡು, ರಣದಲ್ಲಿ ಬುದ್ಧಿಯನ್ನು ದೃಢವಾಗಿರಿಸಿಕೊಂಡು, ಸ್ವರ್ಗವನ್ನೇ ಅಂತಿಮಾಶ್ರವನ್ನಾಗಿರಿಸಿಕೊಂಡು ರಣದಲ್ಲಿ ಪಾರ್ಥರೊಂದಿಗೆ ಯುದ್ಧಮಾಡು. ಇಂದ್ರನೊಂದಿಗೆ ಸುರಾಸುರರಿಗೂ ಪಾಂಡವರನ್ನು ಜಯಿಸಲು ಸಾಧ್ಯವಿಲ್ಲ. ಆದುದರಿಂದ ಯುದ್ಧದಲ್ಲಿ ಬುದ್ಧಿಯನ್ನು ಸ್ಥಿರವಾಗಿರಿಸಿಟ್ಟುಕೊಂಡು ಯುದ್ಧಮಾಡು!

ಅಂದಿನ ಮದ್ಯಾಹ್ನ ಲೋಕಕ್ಷಯವನ್ನುಂಟುಮಾಡುವ ಮಹಾ ರೌದ್ರ ಸಂಗ್ರಾಮವು ನಡೆಯಿತು. ಸೈನ್ಯಗಳೆಲ್ಲವೂ ಧರ್ಮಪುತ್ರನ ಶಾಸನದಂತೆ ಸಂರಬ್ಧರಾಗಿ ಭೀಷ್ಮನನ್ನೇ ಕೊಲ್ಲಲು ಅವನನ್ನೇ ಆಕ್ರಮಣಿಸಿದವು. ಧೃಷ್ಟದ್ಯುಮ್ನ, ಶಿಖಂಡೀ ಮತ್ತು ಮಹಾರಥ ಸಾತ್ಯಕಿಯರು ಸೇನೆಗಳನ್ನೊಡಗೂಡಿ ಭೀಷ್ಮನನ್ನೇ ಆಕ್ರಮಿಸಿದರು. ಅರ್ಜುನ, ದ್ರೌಪದಿಯ ಮಕ್ಕಳು ಮತ್ತು ಚೇಕಿತಾನರು ದುರ್ಯೋಧನನು ಕಳುಹಿಸಿದ್ದ ರಾಜರೆಲ್ಲರ ಮೇಲೆ ಧಾಳಿ ಮಾಡಿದರು. ಹಾಗೆಯೇ ವೀರ ಅಭಿಮನ್ಯು, ಮಹಾರಥ ಹೈಡಿಂಬಿ ಮತ್ತು ಭೀಮಸೇನರು ಸಂಕ್ರುದ್ಧರಾಗಿ ಕೌರವರನ್ನು ಎದುರಿಸಿದರು. ಪಾಂಡವರು ಯುದ್ಧದಲ್ಲಿ ಮೂರು ವಿಭಾಗಗಳಾಗಿ ಕೌರವರನ್ನು ವಧಿಸುತ್ತಿದ್ದರು. ಹಾಗೆಯೇ ರಣದಲ್ಲಿ ಕೌರವರೂ ಕೂಡ ಶತ್ರುಗಳನ್ನು ವಧಿಸುತ್ತಿದ್ದರು. ರಥಿಗಳಲ್ಲಿ ಶ್ರೇಷ್ಠನಾದ ದ್ರೋಣನಾದರೋ ಸೃಂಜಯರೊಂದಿಗಿದ್ದ ಸೋಮಕರನ್ನು ಸಂಕ್ರುದ್ಧನಾಗಿ ಆಕ್ರಮಿಸಿ, ಯಮಲೋಕಕ್ಕೆ ಕಳುಹಿಸಿದನು. ಧನ್ವಿ ಭಾರದ್ವಾಜನಿಂದ ವಧಿಸಲ್ಪಡುತ್ತಿದ್ದ ಮಹಾತ್ಮಾ ಸೃಂಜಯರಲ್ಲಿ ಮಹಾ ಆಕ್ರಂದನವು ಉಂಟಾಯಿತು. ಅಲ್ಲಿ ದ್ರೋಣದಲ್ಲಿ ನಿಹತರಾದ ಹಲವಾರು ಕ್ಷತ್ರಿಯರು ರಣದಲ್ಲಿ ವ್ಯಾಧಿಪೀಡಿತರಾದ ಮನುಷ್ಯರಂತೆ ಸಂಕಟದಿಂದ ಹೊರಳಾಡುತ್ತಿದ್ದುದು ಕಾಣುತ್ತಿತ್ತು. ಹಸಿವೆಯಿಂದ ಬಳಲಿದವರಂತೆ ಗಾಯಗೊಂಡು ಬಿದ್ದಿರುವವರ ಕೂಗು, ಅಳು ಮತ್ತು ಕಿರುಚಾಟಗಳು ಕೇಳಿ ಬರುತ್ತಿದ್ದವು. ಹಾಗೆಯೇ ಕೌರವರೊಡನೆಯೂ ಮಹಾಬಲ ಭೀಮಸೇನನು ಇನ್ನೊಬ್ಬ ಕ್ರುದ್ಧನಾದ ಕಾಲನಂತೆ ಘೋರವಾದ ಕದನವನ್ನು ನಡೆಸಿದನು. ಸೇನೆಗಳು ಅನ್ಯೋನ್ಯರನ್ನು ವಧಿಸುತ್ತಿರುವ ಆ ಮಹಾರಣದಲ್ಲಿ ರಕ್ತ-ಮಾಂಸಗಳೇ ಹರಿದಿದ್ದ ಘೋರ ನದಿಯು ಹುಟ್ಟಿತು. ಯಮರಾಷ್ಟ್ರವನ್ನು ವೃದ್ಧಿಗೊಳಿಸುವ ಕುರು-ಪಾಂಡವರ ಆ ಮಹಾ ಸಂಗ್ರಾಮವು ಘೋರ ರೂಪವನ್ನು ತಾಳಿತು.

ಆಗ ಭೀಮನು ರಣದಲ್ಲಿ ಕ್ರುದ್ಧನಾಗಿ ವಿಶೇಷ ರಭಸದಿಂದ ಗಜಸೇನೆಯ ಮೇಲೆ ಧಾಳಿ ನಡೆಸಿ ಅವುಗಳನ್ನು ಮೃತ್ಯುವಿಗೆ ಕಳುಹಿಸಿದನು. ಅಲ್ಲಿ ಭೀಮನ ನಾರಾಚಗಳಿಂದ ಹೊಡೆಯಲ್ಪಟ್ಟ ಆನೆಗಳು ಬೀಳುತ್ತಿದ್ದವು, ಕಿರುಚಿಕೊಳ್ಳುತ್ತಿದ್ದವು, ಮರಣಹೊಂದಿದ್ದವು ಮತ್ತು ದಿಕ್ಕಾಪಾಲಾಗಿ ತಿರುಗುತ್ತಿದ್ದವು. ಸೊಂಡಿಲುಗಳು ತುಂಡಾಗಿ ಅಥವಾ ಕಾಲು ತುಂಡಾಗಿ ಮಹಾ ಗಜಗಳು ಕ್ರೌಂಚಗಳಂತೆ ಕೂಗುತ್ತಾ ಭೀತರಾಗಿ ಭೂಮಿಯ ಮೇಲೆ ಮಲಗಿದ್ದವು. ನಕುಲ-ಸಹದೇವರು ಕುದುರೆಗಳ ಸೇನೆಯನ್ನು ಆಕ್ರಮಿಸಿದರು. ಅವರು ಕಾಂಚನ ಆಭರಣಗಳಿಂದ ಮತ್ತು ಮೇಲು ಹೊದಿಕೆಗಳಿಂದ ಅಲಂಕೃತಗೊಂಡಿದ್ದ ನೂರಾರು ಸಹಸ್ರಾರು ಕುದುರೆಗಳನ್ನು ವಧಿಸುತ್ತಿರುವುದು ಕಂಡುಬಂದಿತು. ಕೆಳಗೆ ಬಿದ್ದಿದ್ದ ಕುದುರೆಗಳಿಂದ ಮೇದಿನಿಯು ತುಂಬಿ ಹೋಗಿತ್ತು. ನಾಲಿಗೆಗಳಿರಲಿಲ್ಲ, ದೀರ್ಘ ನಿಟ್ಟುಸಿರು ಬಿಡುತ್ತಿದ್ದವು, ಕೂಗುತ್ತಿದ್ದವು, ಮತ್ತು ತೀರಿಕೊಂಡಿದ್ದವು. ಹೀಗೆ ಕುದುರೆಗಳು ನಾನಾ ರೂಪಗಳನ್ನು ಧರಿಸಿದ್ದವು. ರಣದಲ್ಲಿ ಅರ್ಜುನನಿಂದ ಹತವಾದ ಕುದುರೆಗಳಿಂದ ವಸುಧೆಯು ಅಲ್ಲಲ್ಲಿ ಘೋರವಾಗಿ ಕಾಣುತ್ತಿತ್ತು. ಭಗ್ನವಾಗಿದ್ದ ರಥಗಳಿಂದ, ತುಂಡಾದ ಮಹಾಪ್ರಭೆಯ ಧ್ವಜ-ಚತ್ರಗಳಿಂದ, ಸುವರ್ಣಮಯ ಹಾರಗಳಿಂದ, ಕೇಯೂರ-ಕುಂಡಲಗಳನ್ನು ಧರಿಸಿದ್ದ ಶಿರಗಳಿಂದ, ಬಿಚ್ಚಿಹೋದ ಶಿರಸ್ತ್ರಾಣಗಳಿಂದ, ತುಂಡಾದ ಪತಾಕೆಗಳಿಂದ, ಸುಂದರ ನೊಗದ ಕೆಳಭಾಗಗಳಿಂದಲೂ, ಕಡಿವಾಣಗಳಿಂದಲೂ ವ್ಯಾಪ್ತವಾಗಿದ್ದ ರಣಭೂಮಿಯು ವಸಂತ ಋತುವಿನಲ್ಲಿ ಕುಸುಮಗಳಿಂದ ಆಚ್ಛಾದಿತವಾದ ಭೂಪ್ರದೇಶದಂತೆ ಕಾಣುತ್ತಿತ್ತು. ಹೀಗೆಯೇ ಕ್ರುದ್ಧ ಶಾಂತನವ ಭೀಷ್ಮನಿಂದ, ರಥಸತ್ತಮ ದ್ರೋಣನಿಂದ, ಅಶ್ವತ್ಥಾಮನಿಂದ, ಕೃಪನಿಂದ ಮತ್ತು ಕೃತವರ್ಮನಿಂದ ಪಾಂಡವರ ನಾಶವೂ ನಡೆಯಿತು. ಹಾಗೆಯೇ ಕ್ರುದ್ಧರಾದ ಅವರಿಂದ ಕೌರವರೂ ಹತರಾದರು.

ಇರಾವನನ ವಧೆ

ಹಾಗೆ ನಡೆಯುತ್ತಿರುವ ವೀರವರಕ್ಷಯ ರೌದ್ರ ಯುದ್ದದಲ್ಲಿ ಸೌಬಲ ಶಕುನಿಯು ಪಾಂಡವರನ್ನು ಎದುರಿಸಿದನು. ಹಾಗೆಯೇ ಪರವೀರಹ ಸಾತ್ವತ ಹಾರ್ದಿಕ್ಯನೂ ಕೂಡ ಪಾಂಡವರ ಸೇನೆಯನ್ನು ಆಕ್ರಮಣಿಸಿದನು. ಆಗ ಕಾಂಬೋಜಮುಖ್ಯ ಮತ್ತು ನದಿಗಳಲ್ಲಿ ಹುಟ್ಟಿದ ಕುದುರೆಗಳಿಂದ, ಅರಟ್ಟರು, ಮಹೀಜರು ಮತ್ತು ಸಿಂಧುಜರಿಂದ ಸುತ್ತುವರೆಯಲ್ಪಟ್ಟು, ವನಾಯುಜರು, ಶುಭ್ರರು ಮತ್ತು ಪರ್ವತವಾಸಿಗಳಿಂದ, ಮತ್ತು ಇತರ ತಿತ್ತಿರಜ ಮೊದಲಾದ ವಾಯುವೇಗವುಳ್ಳ ಸುವರ್ಣಾಲಂಕೃತಗೊಂಡ, ಕವಚಕಗಳನ್ನು ಧರಿಸಿದ್ದ ಸುಕಲ್ಪಿತವಾದ, ಹಯಗಳೊಡನೆ ಪಾಂಡವನ ಬಲಶಾಲೀ ಮಗ ಹೃಷ್ಟರೂಪ ಪರಂತಪನು ಆ ಸೈನ್ಯವನ್ನು ಎದುರಿಸಿದನು. ಇವನು ಇರಾವನ್ ಎಂಬ ಹೆಸರಿನ ಅರ್ಜುನನ ವೀರ್ಯವಾನ್ ಮಗ. ನಾಗರಾಜನ ಮಗಳಲ್ಲಿ ಧೀಮತ ಪಾರ್ಥನಿಂದ ಹುಟ್ಟಿದವನು. ಗರುಡನಿಂದ ತನ್ನ ಪತಿಯನ್ನು ಕಳೆದುಕೊಂಡ ಮಕ್ಕಳಿರದ, ದೀನಚೇತನಳಾಗಿದ್ದ, ಕೃಪಣಳಾಗಿದ್ದ ಅವಳನ್ನು ಮಹಾತ್ಮ ಐರಾವತನು ಅವನಿಗೆ ಕೊಟ್ಟಿದ್ದನು. ಕಾಮವಶಾನುಗನಾದ ಪಾರ್ಥನು ಅವಳನ್ನು ಪತ್ನಿಯನ್ನಾಗಿ ಸ್ವೀಕರಿಸಿದ್ದನು. ಇವನೇ ಇನ್ನೊಬ್ಬನ ಹೆಂಡತಿಯಲ್ಲಿ (ಪರಕ್ಷೇತ್ರದಲ್ಲಿ) ಹುಟ್ಟಿದ ಅರ್ಜುನನ ಮಗ. ಪಾರ್ಥನ ದ್ವೇಷದಿಂದಾಗಿ ಚಿಕ್ಕಪ್ಪನಿಂದ ಪರಿತ್ಯಕ್ತನಾದ ಅವನು ನಾಗಲೋಕದಲ್ಲಿ ತಾಯಿಯಿಂದ ಪರಿರಕ್ಷಿತನಾಗಿ ಬೆಳೆದನು. ರೂಪವಂತನೂ, ಗುಣವಂತನೂ, ವೀರ್ಯಸಂಪನ್ನನೂ, ಸತ್ಯವಿಕ್ರಮಿಯೂ ಆದ ಅವನು ಅಲ್ಲಿಗೆ ಅರ್ಜುನನು ಹೋಗಿದ್ದುದನ್ನು ಕೇಳಿ ಇಂದ್ರಲೋಕಕ್ಕೆ ಹೋಗಿದ್ದನು. ಆ ಅವ್ಯಗ್ರನು ಅಲ್ಲಿಗೆ ಹೋಗಿ ತಂದೆ ಮಹಾತ್ಮ ಸತ್ಯವಿಕ್ರಮಿಗೆ ವಿನಯದಿಂದ ಕೈಮುಗಿದು ನಮಸ್ಕರಿಸಿ ಹೇಳಿದ್ದನು: ಪ್ರಭೋ! ನಾನು ಇರಾವಾನ್. ನಿನ್ನ ಮಗ. ಅವನು ತಾಯಿಯನ್ನು ಎಂದು ಭೇಟಿಯಾಗಿದ್ದನು ಎಲ್ಲವನ್ನೂ ಹೇಳಿಕೊಂಡನು. ಅವೆಲ್ಲವನ್ನು ನಡೆದ ಹಾಗೆಯೇ ಪಾಂಡವನು ನೆನಪಿಸಿಕೊಂಡನು. ದೇವರಾಜ ನಿವೇಶನದಲ್ಲಿ ಪಾರ್ಥನು ತನ್ನದೇ ಸಮಾನ ಗುಣಗಳನ್ನು ಹೊಂದಿದ್ದ ಮಗನನ್ನು ಪ್ರೀತಿಯಿಂದ ಅಪ್ಪಿಕೊಂಡು ಸಂತೋಷಭರಿತನಾಗಿದ್ದನು. ಆಗ ದೇವಲೋಕದಲ್ಲಿ ಮಹಾಬಾಹು ಅರ್ಜುನನು ಸ್ವಕಾರ್ಯಕ್ಕಾಗಿ ಪ್ರೀತಿಪೂರ್ವಕವಾಗಿ ಯುದ್ಧಕಾಲದಲ್ಲಿ ನಮಗೆ ನಿನ್ನ ಸಹಾಯವನ್ನು ನೀಡು ಎಂದು ಆಜ್ಞೆಯಿತ್ತಿದ್ದನು. ಒಳ್ಳೆಯದು ಎಂದು ಹೇಳಿ ಅವನು ಯುದ್ಧಕಾಲದಲ್ಲಿ ಅನೇಕ ಕಾಮವರ್ಣಗಳ, ವೇಗಶಾಲೀ ಕುದುರೆಗಳಿಂದ ಸಂವೃತನಾಗಿ ಬಂದನು.

ಕಾಂಚನದೇಹದ, ನಾನಾವರ್ಣಗಳ, ಮನಸ್ಸಿನ ವೇಗವುಳ್ಳ ಆ ಕುದುರೆಗಳು ಒಮ್ಮಿಂದೊಮ್ಮೆಲೇ ಹಂಸಗಳಂತೆ ಮಹಾಸಾಗರದಿಂದ ಮೇಲೆದ್ದವು. ಅವು ಕೌರವ ಸೇನೆಯ ಕುದುರೆಗಳ ಗುಂಪನ್ನು ತಲುಪಿ ಮೂಗಿನಿಂದ ಮೂಗುಗಳನ್ನು, ಕುತ್ತಿಗೆಗಳನ್ನು ಪರಸ್ಪರ ಹೊಡೆಯಲು ಕೌರವರ ಕುದುರೆಗಳು ತಕ್ಷಣವೇ ಭೂಮಿಯ ಮೇಲೆ ಬಿದ್ದವು. ಆ ಕುದುರೆಗಳ ಸಮೂಹಗಳು ಪರಸ್ಪರರನ್ನು ಹೊಡೆದು ಬೀಳಿಸುವಾಗ ಗರುಡನು ಕೆಳಗಿಳಿಯುವಂತೆ ದಾರುಣ ಶಬ್ಧವು ಕೇಳಿಬಂದಿತು. ಹಾಗೆಯೇ ಯುದ್ಧದಲ್ಲಿ ಅನ್ಯೋನ್ಯರನ್ನು ತಾಗಿ ಆ ಅಶ್ವಾರೋಹಿಗಳು ಘೋರವಾದ ಪರಸ್ಪರವಧೆಯಲ್ಲಿ ತೊಡಗಿದರು. ನಡೆಯುತ್ತಿದ್ದ ಆ ತುಮುಲ ಸಂಕುಲ ಯುದ್ಧದಲ್ಲಿ ಎರಡೂ ಕಡೆಯ ಕುದುರೆಗಳು ಗುಂಪು ಗುಂಪಾಗಿ ಎಲ್ಲ ಕಡೆ ಓಡುತ್ತಿದ್ದವು. ಸಾಯಕಗಳಿಂದ ಗಾಯಗೊಂಡು, ಅಶ್ವಗಳನ್ನು ಕಳೆದುಕೊಂಡು ಆಯಾಸಗೊಂಡ ಶೂರರು ಪರಸ್ಪರರನ್ನು ಎದುರಿಸಿ ನಾಶ ಹೊಂದಿದರು. ಕುದುರೆಗಳ ಸೇನೆಗಳು ನಾಶವಾಗಿ ಸ್ವಲ್ಪವೇ ಉಳಿದಿರಲು ಸೌಬಲನ ಶೂರ ಮಕ್ಕಳು ರಣಮೂರ್ಧನಿಗೆ ತೆರಳಿದರು. ಗಜ, ಗವಾಕ್ಷ, ವೃಷಕ, ಚರ್ಮವಾನ್, ಆರ್ಜವ ಮತ್ತು ಶುಕ ಈ ಆರು ಬಲಸಂಪನ್ನರು ಮುಟ್ಟಿದರೆ ವಾಯುವೇಗದಲ್ಲಿ ಹೋಗಬಲ್ಲ, ವೇಗದಲ್ಲಿ ವಾಯುವಿನ ಸಮನಾಗಿರುವ, ಶೀಲಸಂಪನ್ನ, ತರುಣ, ಉತ್ತಮ ಕುದುರೆಗಳನ್ನೇರಿ, ಮಹಾ ಸೇನೆಯೊಂದಿಗೆ ಬಂದರು. ಸ್ವಯಂ ಶಕುನಿಯಿಂದ ಮತ್ತು ಮಹಾಬಲ ಯೋಧರಿಂದ ತಡೆಯಲ್ಪಟ್ಟರೂ ಕೂಡ ಆ ರೌದ್ರರೂಪೀ ಯುದ್ಧ ಕುಶಲ ಮಹಾಬಲರು ಸನ್ನದ್ಧರಾದರು. ಯುದ್ಧ ದುರ್ಮದರಾಗಿದ್ದ ಹೃಷ್ಟರಾಗಿದ್ದ ಗಾಂಧಾರರು ಸ್ವರ್ಗ ಅಥವಾ ವಿಜಯವನ್ನು ಬಯಸಿ ಮಹಾ ಸೇನೆಯೊಡಗೂಡಿ ಪರಮ ದುರ್ಜಯವಾದ ಆ ಸೇನೆಯನ್ನು ಭೇದಿಸಿ ಒಳಹೊಕ್ಕರು.

ಅವರು ಹಾಗೆ ಪ್ರವೇಶಿಸಿದನ್ನು ನೋಡಿ ವೀರ್ಯವಾನ್ ಇರಾವಾನನೂ ಕೂಡ ವಿಚಿತ್ರ ಆಭರಣ ಆಯುಧಗಳನ್ನು ಧರಿಸಿದ್ದ ಯೋಧರಿಗೆ ಹೇಳಿದನು:ಅನುಚರರು ಮತ್ತು ವಾಹನಗಳೊಂದಿಗೆ ಬಂದಿರುವ ಈ ಧಾರ್ತರಾಷ್ಟ್ರನ ಯೋಧರು ಎಲ್ಲರು ಸಮರದಲ್ಲಿ ಮೃತ್ಯುವನ್ನಪ್ಪುವಂಥಹ ನೀತಿಯನ್ನು ಕೈಗೊಳ್ಳಿರಿ!

ಒಳ್ಳೆಯದು ಎಂದು ಹೇಳಿ ಇರಾವತನ ಎಲ್ಲ ಯೋಧರೂ ಸಮರದಲ್ಲಿ ಶತ್ರುಗಳಿಗೆ ದುರ್ಜಯರಾದ ಆ ಶತ್ರುಸೇನೆಯನ್ನು ಸಂಹರಿಸಿದರು. ಅವನ ಸೇನೆಯಿಂದ ತಮ್ಮ ಸೇನೆಯು ಬಿದ್ದುದನ್ನು ನೋಡಿ ರಣದಲ್ಲಿ ಉದ್ರಿಕ್ತರಾಗಿ ಸುಬಲನ ಮಕ್ಕಳೆಲ್ಲರೂ ಇರಾವಂತನನ್ನು ಎದುರಿಸಿ ಎಲ್ಲ ಕಡೆಗಳಿಂದ ಸುತ್ತುವರೆದರು. ಹರಿತ ಪ್ರಾಸಗಳಿಂದ ಹೊಡೆಯುತ್ತಾ, ಪರಸ್ಪರರನ್ನು ಪ್ರಚೋದನೆಗೊಳಿಸುತ್ತಾ ಆ ಶೂರರು ಅವನನ್ನು ಸುತ್ತುವರೆದು ಮಹಾ ವ್ಯಾಕುಲವನ್ನುಂಟುಮಾಡಿದರು. ಆ ಮಹಾತ್ಮರ ತೀಕ್ಷ್ಣ ಪ್ರಾಸಗಳಿಂದ ಗಾಯಗೊಂಡು ಇರಾವಾನನು ರಕ್ತದಿಂದ ತೋಯ್ದು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ವ್ಯಾಕುಲಗೊಂಡನು. ಒಬ್ಬನಾಗಿದ್ದರೂ ಅನೇಕರು ಎದುರಿನಿಂದ, ಹಿಂದಿನಿಂದ ಮತ್ತು ಪಕ್ಕಗಳಿಂದ ಚೆನ್ನಾಗಿ ಪ್ರಹರಿಸುತ್ತಿದ್ದರೂ ಅವನು ಧೈರ್ಯವನ್ನು ಕಳೆದುಕೊಳ್ಳಲಿಲ್ಲ. ಆಗ ಸಂಕ್ರುದ್ಧನಾದ ಪರಪುರಂಜಯ ಇರಾವಾನನು ಅವರೆಲ್ಲರನ್ನೂ ನಿಶಿತ ಶರಗಳಿಂದ ಹೊಡೆದು ಮೂರ್ಛೆಗೊಳಿಸಿದನು. ತನ್ನ ಶರೀರರ ಸರ್ವಾಂಗಗಳಿಗೆ ಚುಚ್ಚಿಕೊಂಡಿದ್ದ ಪ್ರಾಸಗಳನ್ನು ಕಿತ್ತು ತೆಗೆದು ಅವುಗಳಿಂದಲೇ ರಣದಲ್ಲಿ ಸುಬಲನ ಮಕ್ಕಳನ್ನು ಪ್ರಹರಿಸಿದನು. ಅನಂತರ ನಿಶಿತ ಖಡ್ಗವನ್ನು ಎಳೆದು ತೆಗೆದುಕೊಂಡು ಗುರಾಣಿಯನ್ನೂ ಹಿಡಿದು ತಕ್ಷಣವೇ ಆ ಸೌಬಲರನ್ನು ಯುದ್ಧದಲ್ಲಿ ಸಂಹರಿಸಲು ಪದಾತಿಯಾಗಿಯೇ ನಡೆದನು.

ಆಗ ಪುನಃ ಎಚ್ಚೆತ್ತಿದ್ದ ಆ ಎಲ್ಲ ಸುಬಲಾತ್ಮಜರು ಪುನಃ ಕ್ರೋಧಸಮಾವಿಷ್ಟರಾಗಿ ಇರವಂತನನ್ನು ಆಕ್ರಮಣಿಸಿದರು. ಬಲದರ್ಪಿತ ಇರವಾನನೂ ಕೂಡ ಖಡ್ಗದಲ್ಲಿ ತನ್ನ ಕೈಚಳಕವನ್ನು ತೋರಿಸುತ್ತಾ ಅವರೆಲ್ಲ ಸೌಬಲರನ್ನೂ ಎದರಿಸಿದನು. ಚಾಕಚಕ್ಯತೆಯಿಂದ ಓಡಾಡುತ್ತಿದ್ದ ಆ ಸುಬಲಾತ್ಮಜರೆಲ್ಲರೂ ಶೀಘ್ರವಾಗಿ ಚಲಿಸುತ್ತಿರುವ ಅವನನ್ನು ಹೊಡೆಯಲು ಅವಕಾಶವನ್ನೇ ಪಡೆಯಲಿಲ್ಲ. ಯುದ್ಧದಲ್ಲಿ ನೆಲದ ಮೇಲೆ ನಿಂತಿದ್ದ ಅವನನ್ನು ನೋಡಿ ಅವರೆಲ್ಲರೂ ಅವನನ್ನು ಸುತ್ತುವರೆದು ಪುನಃ ಪುನಃ ಸೆರೆಹಿಡಿಯಲು ಪ್ರಯತ್ನಿಸಿದರು. ಆಗ ಮೇಲೆ ಬೀಳುತ್ತಿದ್ದ ಆ ಅಮಿತ್ರಕರ್ಶನನು ಅವರ ಎರಡೂ ಹಸ್ತಗಳನ್ನು ಕತ್ತರಿಸಿ ಶರೀರಗಳನ್ನೂ ತುಂಡರಿಸಿದನು. ಅವರೆಲ್ಲರ ಆಯುಧಗಳು ಮತ್ತು ಭೂಷಿತ ಬಾಹುಗಳು ಬಿದ್ದು ಅಂಗಗಳು ತುಂಡಾಗಿ ಅಸುನೀಗಿ ಅವರು ಭೂಮಿಯ ಮೇಲೆ ಬಿದ್ದರು. ವೃಷಕನು ಮಾತ್ರ ಹೆಚ್ಚಾಗಿ ಗಾಯಗೊಂಡು ವೀರರನ್ನು ತುಂಡರಿಸುವ ಆ ಮಹಾರೌದ್ರ ಯುದ್ಧದಿಂದ ತಪ್ಪಿಸಿಕೊಂಡನು.

ಅವರೆಲ್ಲರೂ ಬಿದ್ದುದನ್ನು ನೋಡಿ ಭೀತನಾದ ದುರ್ಯೋಧನನು ಸಂಕ್ರುದ್ಧನಾಗಿ ಘೋರದರ್ಶನ ಮಹೇಷ್ವಾಸ ಮಾಯಾವೀ ಅರಿಂದಮ ಬಕವಧದ ಕಾರಣದಿಂದ ಹಿಂದಿನಿಂದಲೇ ಭೀಮಸೇನನ ವೈರಿಯಾಗಿದ್ದ ರಾಕ್ಷಸ ಆರ್ಶ್ಯಶೃಂಗಿಗೆ ಹೇಳಿದನು:ವೀರ! ಹೇಗೆ ಈ ಫಲ್ಗುನನ ಬಲಶಾಲೀ ಮಾಯಾವೀ ಮಗನು ನನ್ನ ಸೇನೆಯನ್ನು ನಾಶಗೊಳಿಸಿ ವಿಪ್ರಿಯವಾದ ಘೋರ ಕೃತ್ಯವನ್ನೆಸಗಿದ್ದಾನೆ ನೋಡು! ನೀನೂ ಕೂಡ ಬಯಸಿದಲ್ಲಿಗೆ ಹೋಗಬಲ್ಲೆ. ಮಾಯಾಸ್ತ್ರಗಲ್ಲಿ ವಿಶಾರದನಾಗಿದ್ದೀಯೆ. ಪಾರ್ಥನೊಂದಿಗೆ ವೈರವನ್ನೂ ಸಾಧಿಸುತ್ತಿದ್ದೀಯೆ. ಆದುದರಿಂದ ರಣದಲ್ಲಿ ಇವನನ್ನು ಕೊಲ್ಲು!

ಆಗಲೆಂದು ಹೇಳಿ ಘೋರದರ್ಶನ ರಾಕ್ಷಸನು ಸಿಂಹನಾದದೊಂದಿಗೆ ಅರ್ಜುನನ ಯುವ ಮಗನಿರುವಲ್ಲಿಗೆ ಹೊರಟನು. ಯುದ್ಧ ಕುಶಲರಾದ ಹರಿತ ಪ್ರಾಸಗಳನ್ನು ಹಿಡಿದ ಅಶ್ವಾರೋಹಿ ವೀರ ಯೋಧರಿಂದ ಪ್ರಹಾರಿಗಳಿಂದ ತನ್ನದೇ ಸೈನಿಕರಿಂದ ಸುತ್ತುವರೆಯಲ್ಪಟ್ಟ ಅವನು ಸಮರದಲ್ಲಿ ಮಹಾಬಲ ಇರಾವಂತನನ್ನು ಸಂಹರಿಸಲು ಬಯಸಿದನು. ಪರಾಕ್ರಮೀ ಅಮಿತ್ರಘ್ನ ಇರಾವನನೂ ಕೂಡ ಸಂಕ್ರುದ್ಧನಾಗಿ ಆ ರಾಕ್ಷಸನನ್ನು ಕೊಲ್ಲಲು ಬಯಸಿ ತ್ವರೆಮಾಡಿ ಆಕ್ರಮಣಿಸಿದನು. ಮೇಲೆ ಬೀಳುತ್ತಿದ್ದ ಅವನನ್ನು ನೋಡಿ ಮಹಾಬಲ ರಾಕ್ಷಸನು ತ್ವರೆಮಾಡಿ ಮಾಯೆಯನ್ನುಪಯೋಗಿಸ ತೊಡಗಿದನು. ಆಗ ಅವನು ಇರಾವಾನನ ಅಶ್ವಾರೋಹಿಗಳಿಗೆ ಪ್ರತಿಯಾಗಿ ಮಾಯೆಯಿಂದ ಕುದುರೆಗಳನ್ನೇರಿದ ಶೂಲ ಪಟ್ಟಿಶಗಳನ್ನು ಹಿಡಿದಿರುವ ಘೊರ ರಾಕ್ಷಸರ ಪಡೆಯನ್ನು ನಿರ್ಮಿಸಿದನು. ಆ ಎರಡು ಸಾವಿರ ಪ್ರಹಾರಿಣರು ಎದುರಾಗಿ ಬೇಗನೇ ಪರಸ್ಪರರನ್ನು ಪ್ರೇತಲೋಕಗಳಿಗೆ ಕಳುಹಿಸಿದರು. ಆ ಸೇನೆಗಳು ಹಾಗೆ ನಾಶವಾಗಲು ಅವರಿಬ್ಬರು ಯುದ್ಧ ದುರ್ಮದರೂ ಸಂಗ್ರಾಮದಲ್ಲಿ ವೃತ್ರ-ವಾಸವರಂತೆ ಎದುರಾಗಿ ನಿಂತರು. ಯುದ್ಧದುರ್ಮದನಾದ ರಾಕ್ಷಸನು ಮುಂದೆ ಬಂದುದನ್ನು ನೋಡಿ ಕ್ರೋಧಸಂರಬ್ಧನಾದ ಮಹಾಬಲ ಇರಾವಾನನು ಎದುರಾದನು.

ತುಂಬಾ ಹತ್ತಿರಕ್ಕೆ ಬಂದಿದ್ದ ಆ ದುರ್ಮತಿಯ ಬಿಲ್ಲು ಭತ್ತಳಿಕೆಗಳನ್ನು ಖಡ್ಗದಿಂದ ಕತ್ತರಿಸಿದನು. ತನ್ನ ಧನುಸ್ಸು ತುಂಡಾಗಿದುದನ್ನು ನೋಡಿ ಅವನು ಕ್ರುದ್ಧನಾದ ಇರಾವಂತನನ್ನು ಮೋಹಗೊಳಿಸಲೋಸುಗ ಮಾಯೆಯಿಂದ ವೇಗದಿಂದ ಆಕಾಶವನ್ನು ಸೇರಿದನು. ಆಗ ಸರ್ವಮರ್ಮಗಳನ್ನೂ ತಿಳಿದಿದ್ದ, ಕಾಮರೂಪೀ, ದುರಾಸದ ಇರಾವಾನನೂ ಕೂಡ ಅಂತರಿಕ್ಷಕ್ಕೆ ಹಾರಿ ರಾಕ್ಷಸನನ್ನು ತನ್ನ ಮಾಯೆಯಿಂದ ಭ್ರಾಂತಗೊಳಿಸಿ ಅವನ ಶರೀರವನ್ನು ಸಾಯಕಗಳಿಂದ ಗಾಯಗೊಳಿಸಿದನು. ಹಾಗೆ ಆ ರಾಕ್ಷಸ ಶ್ರೇಷ್ಠನನ್ನು ಪುನಃ ಪುನಃ ಶರಗಳಿಂದ ಗಾಯಗೊಳಿಸಿದ ಹಾಗೆಲ್ಲ ಅವನು ಹೊಸ ಹೊಸ ಶರೀರಗಳನ್ನು ಪಡೆಯುತ್ತಿದ್ದನು ಮತ್ತು ಯೌವನವನ್ನು ತಾಳುತ್ತಿದ್ದನು. ಮಾಯಾವಿಗಳಿಗೆ ಸಹಜವಾಗಿ ಬೇಕಾದ ರೂಪ ವಯಸ್ಸು ದೊರೆಯುತ್ತವೆ. ಹೀಗೆ ಆ ರಾಕ್ಷಸನ ಅಂಗಗಳು ಕತ್ತರಿಸಿದಂತೆಲ್ಲಾ ಪುನಃ ಪುನಃ ಬೆಳೆಯುತ್ತಿದ್ದವು. ಇರಾವಾನನೂ ಕೂಡ ಸಂಕ್ರುದ್ಧನಾಗಿ ಆ ಮಹಾಬಲ ರಾಕ್ಷಸನನ್ನು ತೀಕ್ಷ್ಣ ಪರಶುವಿನಿಂದ ಪುನಃ ಪುನಃ ಕತ್ತರಿಸಿದನು. ಮರದಂತೆ ಆ ವೀರನನ್ನು ಬಲಶಾಲಿಯು ಕಡಿಯುತ್ತಿದ್ದಂತಲೆಲ್ಲಾ ರಾಕ್ಷಸನು ಘೋರವಾಗಿ ಕೂಗುತ್ತಿದ್ದನು. ತುಮುಲ ಶಬ್ಧವುಂಟಾಯಿತು. ಪರಶುವಿನಿಂದ ಗಾಯಗೊಂಡ ರಾಕ್ಷಸನು ಬಹಳಷ್ಟು ರಕ್ತವನ್ನು ಸುರಿಸಿದನು. ಅದರಿಂದ ಕ್ರೋಧಗೊಂಡ ಬಲವಾನನು ವೇಗವಾಗಿ ಯುದ್ಧ ಮಾಡತೊಡಗಿದನು. ತನ್ನ ಶತ್ರುವು ವರ್ಧಿಸುತ್ತಿರುವುದನ್ನು ನೋಡಿ ಆರ್ಶ್ಯಶೃಂಗಿಯು ಮಹಾ ಘೋರ ರೂಪವನ್ನು ತಾಳಿ ಸಂಗ್ರಾಮದ ಮಧ್ಯೆ ಎಲ್ಲರೂ ನೋಡುತ್ತಿರುವಂತೆಯೇ ಅವನನ್ನು ಹಿಡಿಯಲು ಮುಂದಾದನು. ಮಹಾತ್ಮ ರಾಕ್ಷಸನ ಆ ಮಾಯೆಯನ್ನು ನೋಡಿ ಇರಾವಾನನೂ ಕೂಡ ಸಂಕ್ರುದ್ಧನಾಗಿ ಅದರಂತಹ ಮಾಯೆಯನ್ನು ಸೃಷ್ಟಿಸಲು ತೊಡಗಿದನು. ಯುದ್ಧದಿಂದ ಹಿಂದೆಸರಿಯದ ಕ್ರೋಧಾಭಿಭೂತನಾದ ಇರಾವಾನನಿಗೆ ಅವನ ತಾಯಿಯ ಕಡೆಯವರು ಅವನಿಗೆ ನೆರವಾಗಲು ಬಂದರು.

ಹೆಚ್ಚಾಗಿ ನಾಗಗಳಿಂದಲೇ ಎಲ್ಲಕಡೆಗಳಿಂದ ಸುತ್ತುವರೆಯಲ್ಪಟ್ಟಿದ್ದ ಅವನು ಹೆಡೆಯುಳ್ಳ ಅನಂತನ ಮಹಾ ರೂಪವನ್ನೇ ತಾಳಿದನು. ಆಗ ಅವನು ಬಹುವಿಧದ ನಾಗಗಳಿಂದ ರಾಕ್ಷಸನನ್ನು ಮುಚ್ಚಿದನು. ಸರ್ಪಗಳಿಂದ ಆಚ್ಛಾದಿದನಾದ ಆ ರಾಕ್ಷಸಪುಂಗವನು ಒಂದು ಕ್ಷಣ ಯೋಚಿಸಿ ಗರುಡನ ರೂಪವನ್ನು ತಾಳಿ ನಾಗಗಳನ್ನು ಭಕ್ಷಿಸತೊಡಗಿದನು. ಅವನನ್ನು ಅನುಸರಿಸಿ ಬಂದಿದ್ದ ಅವನ ತಾಯಿಯ ಕಡೆಯವರನ್ನು ಮಾಯೆಯಿಂದ ಭಕ್ಷಿಸಿ, ಇರಾವಂತನನ್ನು ಮೋಹಗೊಳಿಸಿ ರಾಕ್ಷಸನು ಖಡ್ಗದಿಂದ ಅವನನ್ನು ವಧಿಸಿದನು. ಕುಂಡಲ ಮುಕುಟಗಳಿಂದ ಕೂಡಿದ, ಪದ್ಮ ಮತ್ತು ಚಂದ್ರನ ಕಾಂತಿಯುಳ್ಳ ಇರಾವತನ ಶಿರವನ್ನು ರಾಕ್ಷಸನು ಭೂಮಿಯ ಮೇಲೆ ಕೆಡವಿದನು. ರಾಕ್ಷಸನಿಂದ ಅರ್ಜುನನನ ಆ ವೀರ ಮಗನು ಹತನಾಗಲು ಧಾರ್ತರಾಷ್ಟ್ರರು ಇತರ ರಾಜರೊಂದಿಗೆ ಶೋಕ ರಹಿತರಾದರು. ಭಯಂಕರ ಸ್ವರೂಪವನ್ನು ತಾಳಿದ್ದ ಆ ಮಹಾ ಸಂಗ್ರಾಮದಲ್ಲಿ ಎರಡು ಸೇನೆಗಳ ನಡುವೆ ಪುನ ಮಹಾ ಘೋರ ಯುದ್ಧವು ಪ್ರಾರಂಭವಾಯಿತು.

ಕುದುರೆ, ಆನೆ ಮತ್ತು ಪದಾತಿಗಳು ಮಿಶ್ರಿತವಾಗಿ ಆನೆಗಳಿಂದ ಹತವಾದರು. ರಥಿಗಳು ಮತ್ತು ಆನೆಗಳು ಪದಾತಿಗಳಿಂದ ಸಂಹರಿಸಲ್ಪಟ್ಟರು. ಹಾಗೆಯೇ ಪದಾತಿ-ರಥಸಮೂಹಗಳು ಮತ್ತು ಬಹಳಷ್ಟು ಕುದುರೆಗಳು ಕೌರವರ ಮತ್ತು ಪಾಂಡವರ ಸಂಕುಲ ರಣದಲ್ಲಿ ರಥಿಗಳಿಂದ ಹತವಾದವು. ಅರ್ಜುನನಾದರೋ ತನ್ನ ಹಿರಿಯ ಮಗನ ಸಾವನ್ನು ತಿಳಿಯದೆಯೇ ಭೀಷ್ಮನಿಂದ ರಕ್ಷಿತವಾದ ಶೂರರಾಜರನ್ನು ಸಮರದಲ್ಲಿ ಸಂಹರಿಸಿದನು. ಹಾಗೆಯೇ ಕೌರವರು ಮತ್ತು ಮಹಾಬಲ ಸೃಂಜಯರು ಸಮರವೆಂಬ ಅಗ್ನಿಯಲ್ಲಿ ಆಹುತಿಗಳನ್ನಾಗಿತ್ತು ಪರಸ್ಪರರ ಪ್ರಾಣಗಳನ್ನು ತೆಗೆದರು. ಕೂದಲು ಕೆದರಿ, ಕವಚಗಳಿಲ್ಲದೇ, ರಥಗಳನ್ನು ಕಳೆದುಕೊಂಡು, ಧನುಸ್ಸುಗಳು ತುಂಡಾಗಿರಲು ಪರಸ್ಪರರನ್ನು ಸೇರಿ ಬಾಹುಗಳಿಂದಲೇ ಯುದ್ಧ ಮಾಡುತ್ತಿದ್ದರು. ಆಗ ಮಹಾಬಲ ಭೀಷ್ಮನು ಮರ್ಮಸ್ಥಳಗಳನ್ನು ಭೇದಿಸುವ ಬಾಣಗಳಿಂದ ಮಹಾರಥರನ್ನು ಸಂಹರಿಸಿ ಪಂಡವರ ಸೇನೆಯನ್ನು ನಡುಗಿಸಿದನು. ಅವನಿಂದ ಯುಧಿಷ್ಠಿರನ ಸೇನೆಯಲ್ಲಿ ಬಹಳಷ್ಟು ಮನುಷ್ಯರು, ಆನೆಗಳು, ಅಶ್ವಾರೋಹಿಗಳು, ರಥಿಗಳು ಮತ್ತು ಕುದುರೆಗಳು ಹತರಾದವು. ಅಲ್ಲಿ ಭೀಷ್ಮನ ಪರಾಕ್ರಮವನ್ನು ನೋಡಿ ಶಕ್ರನದೇ ಅತ್ಯದ್ಭುತ ಪರಾಕ್ರಮವನ್ನು ನೋಡಿದಂತಾಯಿತು. ಹಾಗೆಯೇ ಧನ್ವಿಗಳಾದ ಭೀಮಸೇನನ, ಪಾರ್ಷತನ ಮತ್ತು ಸಾತ್ತ್ವತನ ಯುದ್ಧವೂ ರೌದ್ರವಾಗಿತ್ತು.

ದ್ರೋಣನ ವಿಕ್ರಾಂತವನ್ನು ನೋಡಿ ಪಾಂಡವರಿಗೆ ಭಯವು ತುಂಬಿಕೊಂಡಿತು. ರಣದಲ್ಲಿ ಅವನೊಬ್ಬನೇ ಸೈನಿಕರೊಂದಿಗೆ ನಮ್ಮನ್ನು ಸಂಹರಿಸಲು ಶಕ್ತ. ಇನ್ನು ಲ್ಲಿ ಸೇರಿರುವ ಪೃಥ್ವಿಯ ಶೂರರೆಲ್ಲರದ್ದೇನು? ಎಂದು ರಣದಲ್ಲಿ ದ್ರೋಣನಿಂದ ಪೀಡಿತರಾದವರು ಹೇಳಿಕೊಂಡರು. ಹಾಗೆ ನಡೆಯುತ್ತಿದ್ದ ರೌದ್ರ ಸಂಗ್ರಾಮದಲ್ಲಿ ಎರಡೂ ಸೇನೆಗಳ ಶೂರರು ಪರಸ್ಪರರನ್ನು ಸಹಿಸಿಕೊಳುತ್ತಿರಲಿಲ್ಲ. ಆ ಮಹಾಬಲ ಧನ್ವಿಗಳು – ಕೌರವರು ಮತ್ತು ಪಾಂಡವೇಯರು - ರಾಕ್ಷಸ ಭೂತಗಳಿಂದ ಆವಿಷ್ಟರಾದ್ವರಂತೆ ಸಂರಬ್ಧರಾಗಿ ಯುದ್ಧ ಮಾಡುತ್ತಿದ್ದರು. ದೈತ್ಯರದ್ದಂತಿದ್ದ ಆ ಸಂಗ್ರಾಮದಲ್ಲಿ ಯಾವ ಯೋಧನೂ ತನ್ನ ಪ್ರಾಣಗಳನ್ನು ರಕ್ಷಿಸಿಕೊಳ್ಳುತ್ತಿರಲಿಲ್ಲ.

ಘಟೋತ್ಕಚನ ಯುದ್ಧ

ಇರಾವಂತನು ಹತನಾದುದನ್ನು ನೋಡಿ ರಾಕ್ಷಸ ಭೈಮಸೇನಿ ಘಟೋತ್ಕಚನು ಮಹಾಗರ್ಜನೆಯನ್ನು ಗರ್ಜಿಸಿದನು. ಅವನ ಕೂಗಿನ ಶಬ್ಧದಿಂದ ಪೃಥ್ವಿ, ಸಾಗರ, ಆಕಾಶ, ಪರ್ವತ-ವನಗಳು, ಅಂತರಿಕ್ಷ, ದಿಕ್ಕುಗಳು, ಉಪದಿಕ್ಕುಗಳು ಎಲ್ಲವೂ ನಡುಗಿದವು. ಆ ಮಹಾನಾದವನ್ನು ಕೇಳಿ ಕೌರವರ ಸೇನೆಯಲ್ಲಿರುವವರ ತೊಡೆಗಳು ಕಂಭಗಳಂತಾದವು ಮತ್ತು ಅವರ ಬೆವರಿಳಿಯಿತು. ಕೌರವರೆಲ್ಲರೂ ದೀನ ಚೇತಸರಾಗಿ ಸರ್ಪಗಳಂತೆ ಸುರುಳಿಸುತ್ತಿಕೊಂಡರು ಮತ್ತು ಸಿಂಹಕ್ಕೆ ಹೆದರಿದ ಆನೆಗಳಂತಾದರು. ಆ ಮಹಾ ಗರ್ಜನೆಯನ್ನು ಗರ್ಜಿಸಿ ರಾಕ್ಷಸನು ವಿಭೀಷಣ ರೂಪವನ್ನು ಮಾಡಿಕೊಂಡು, ಪ್ರಜ್ವಲಿಸುತ್ತಿರುವ ಶೂಲವನ್ನು ಎತ್ತಿಕೊಂಡು ನಾನಾ ಪ್ರಹರಣಗಳನ್ನು ಹಿಡಿದ ಘೋರ ರಾಕ್ಷಸಪುಂಗವರಿಂದ ಆವೃತನಾಗಿ ಕಾಲಾಂತಕ ಯಮನಂತೆ ಸಂಕ್ರುದ್ಧನಾಗಿ ಬಂದನು. ಸಂಕ್ರುದ್ಧನಾದ ಭೀಮದರ್ಶನನಾದ ಅವನು ಮೇಲೆ ಬೀಳುವುದನ್ನು ನೋಡಿ ಅವನ ಭಯದಿಂದ ಕೌರವ ಸೇನೆಯ ಹೆಚ್ಚು ಭಾಗವು ಪಲಾಯನ ಮಾಡಿತು. ಆಗ ರಾಜಾ ದುರ್ಯೋಧನನು ವಿಪುಲ ಚಾಪವನ್ನು ಹಿಡಿದು ಸಿಂಹದಂತೆ ಪುನಃ ಪುನಃ ಗರ್ಜಿಸುತ್ತಾ ಘಟೋತ್ಕಚನ ಮೇಲೆ ಎರಗಿದನು.

ಅವನನ್ನು ಅನುಸರಿಸಿ ಮದೋದಕವನ್ನು ಸ್ರವಿಸುತ್ತಿರುವ ಪರ್ವತಗಳಂತಿರುವ ಹತ್ತು ಸಾವಿರ ಆನೆಗಳೊಂದಿಗೆ ಸ್ವಯಂ ವಂಗರಾಜನು ಹೋದನು. ಗಜಸೇನೆಯೊಂದಿಗೆ ಆವೃತನಾಗಿ ಆಕ್ರಮಣಿಸತ್ತಿರುವ ದುರ್ಯೋಧನನನ್ನು ನೋಡಿ ನಿಶಾಚರನು ಕುಪಿತನಾದನು. ಆಗ ರಾಕ್ಷಸರ ಮತ್ತು ದುರ್ಯೋಧನನ ಸೇನೆಗಳ ನಡುವೆ ರೋಮಾಂಚಕಾರೀ ತುಮುಲ ಯುದ್ಧವು ನಡೆಯಿತು. ಮೋಡಗಳ ಗುಂಪಿನಂತೆ ಮೇಲೇರಿ ಬರುತ್ತಿದ್ದ ಆ ಗಜಸೇನೆಯನ್ನು ನೋಡಿ ಶಸ್ತ್ರಗಳನ್ನು ಹಿಡಿದಿದ್ದ ಸಂಕ್ರುದ್ಧ ರಾಕ್ಷಸರು ಮುಂದೆ ಧಾವಿಸಿದರು. ವಿದ್ಯುತ್ತಿನಿಂದ ಕೂಡಿದ ಮೇಘಗಳಂತೆ ವಿವಿಧ ಗರ್ಜನೆಗಳನ್ನು ಮಾಡುತ್ತಾ ಅವರು ಬಾಣ-ಶಕ್ತಿ-ಋಷ್ಟಿ-ನಾರಾಚಗಳಿಂದ ಗಜಯೋಧಿಗಳನ್ನು ಸಂಹರಿಸಿದರು. ಭಿಂಡಿಪಾಲ, ಶೂಲ, ಮುದ್ಗರ, ಪರಶಾಯುಧ, ಪರ್ವತ ಶಿಖರಗಳು ಮತ್ತು ಮರಗಳಿಂದ ಆ ಮಹಾಗಜಗಳನ್ನು ಸಂಹರಿಸಿದರು. ನಿಶಾಚರರಿಂದ ವಧಿಸಲ್ಪಟ್ಟ ಕುಂಭಗಳು ಒಡೆದುಹೋಗಿರುವ, ಶರೀರಗಳು ರಕ್ತದಲ್ಲಿ ತೋಯ್ದು ಹೋಗಿರುವ, ಒಡೆದು ಹೋಗಿರುವ ಆನೆಗಳು ಕಂಡವು. ಆ ಗಜಯೋಧಿಗಳು ಭಗ್ನರಾಗಿ ಕಡಿಮೆಯಾಗಲು ದುರ್ಯೋಧನನು ರಾಕ್ಷಸರನ್ನು ಆಕ್ರಮಣಿಸಿದನು. ಕೋಪದ ವಶದಲ್ಲಿ ಬಂದು, ತನ್ನ ಜೀವಿತವನ್ನೇ ತ್ಯಜಿಸಿ ಆ ಮಹಾಬಲನು ರಾಕ್ಷಸರ ಮೇಲೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ಮಹೇಷ್ವಾಸ ದುರ್ಯೋಧನನು ಅಲ್ಲಿ ಸಂಕ್ರುದ್ಧನಾಗಿ ಪ್ರಧಾನ ರಾಕ್ಷಸರನ್ನು ಸಂಹರಿಸಿದನು. ಆ ಮಹಾರಥನು ವೇಗವಂತ, ಮಹಾರೌದ್ರ, ವಿದ್ಯುಜ್ಜಿಹ್ವ ಮತ್ತು ಪ್ರಮಾಥಿ ಈ ನಾಲ್ವರನ್ನು ನಾಲ್ಕು ಶರಗಳಿಂದ ಸಂಹರಿಸಿದನು. ಆಗ ಪುನಃ ಆ ಅಮೇಯಾತ್ಮನು ದುರಾಸದ ಶರವೃಷ್ಟಿಯನ್ನು ನಿಶಾಚರಸೇನೆಯ ಮೇಲೆ ಪ್ರಯೋಗಿಸಿದನು. ಅವನ ಆ ಮಹತ್ಕಾರ್ಯವನ್ನು ನೋಡಿ ಮಹಾಬಲ ಭೈಮಸೇನಿಯು ಕ್ರೋಧದಿಂದ ಭುಗಿಲೆದ್ದನು. ಇಂದ್ರನ ವಜ್ರದ ಧ್ವನಿಯಿರುವ ಮಹಾ ಧನುಸ್ಸನ್ನು ಟೇಂಕರಿಸಿ ಅರಿಂದಮ ದುರ್ಯೋಧನನನ್ನು ವೇಗದಿಂದ ಆಕ್ರಮಣಿಸಿದನು. ಕಾಲನಿಂದ ಬಿಡಲ್ಪಟ್ಟ ಅಂತಕನಂತಿರುವ ಅವನು ಮೇಲೆ ಬೀಳುವುದನ್ನು ನೋಡಿ ದುರ್ಯೋಧನನು ವ್ಯಥಿತನಾಗಲಿಲ್ಲ.

ಆಗ ಆ ಕ್ರೂರನು ಕ್ರೋಧದಿಂದ ಸಂರಕ್ತಲೋಚನನಾಗಿ ಹೇಳಿದನು: ರಾಜನ್! ದುರ್ಬುದ್ಧೇ! ಕುಲಾಧಮ! ಪಾಂಡವರನ್ನು ಮೋಸದಿಂದ ಸೋಲಿಸಿ ಕ್ರೂರತನದಿಂದ ದೀರ್ಘಕಾಲ ಹೊರಗಟ್ಟಿದುದರ, ರಜಸ್ವಲೆಯಾಗಿದ್ದ ಏಕವಸ್ತ್ರವನ್ನು ಧರಿಸಿದ್ದ ಕೃಷ್ಣೆ ದ್ರೌಪದಿಯನ್ನು ಸಭೆಗೆ ಎಳೆದುತಂದು ಬಹುರೀತಿಯಾಗಿ ಕಷ್ಟಕೊಟ್ಟಿದುದರ, ನಿನಗೆ ಪ್ರಿಯವಾದುದನ್ನು ಬಯಸಿ ಆಶ್ರಮಸ್ಥರಾಗಿದ್ದ ನನ್ನ ತಂದೆಯಂದಿರನ್ನು ಆ ದುರಾತ್ಮ ಸೈಂಧವನು ಕಾಡಿದುದರ ಈ ಎಲ್ಲ ಮತ್ತು ಇತರ ಅನ್ಯಾಯಗಳನ್ನು ಇಂದು, ರಣವನ್ನು ಬಿಟ್ಟು ನೀನು ಹೋಗದೇ ಇದ್ದರೆ, ಅಂತ್ಯಗೊಳಿಸಿಯೇ ಹೋಗುತ್ತೇನೆ. ಹೀಗೆ ಹೇಳಿ ಹೈಡಿಂಬಿಯು ಧನುಸ್ಸನ್ನು ಜೋರಾಗಿ ಎಳೆದು ಹತ್ತು ಬಾಣಗಳನ್ನು ಹೂಡಿ ತುಟಿಕಚ್ಚಿ, ಕಟವಾಯಿಗಳನ್ನು ನೆಕ್ಕುತ್ತಾ, ಮೋಡಗಳು ಮಳೆಯನೀರಿಂದ ಪರ್ವತವನ್ನು ಹೇಗೋ ಹಾಗೆ ಮಹಾ ಶರವರ್ಷದಿಂದ ದುರ್ಯೋಧನನನ್ನು ಮುಚ್ಚಿದನು.

ರಾಜೇಂದ್ರನು ದಾನವರಿಗೂ ಸಹಿಸಲಸಾಧ್ಯವಾದ ಅವನ ಆ ಬಾಣಗಳ ಮಳೆಯನ್ನು ಆನೆಯು ಹೇಗೆ ಮಳೆಯನ್ನು ಸಹಿಸಿಕೊಳ್ಳುತ್ತದೆಯೋ ಹಾಗೆ ಸಹಿಸಿಕೊಂಡನು. ಆಗ ಕ್ರೋಧಸಮಾವಿಷ್ಟನಾಗಿ, ಹಾವಿನಂತೆ ನಿಟ್ಟುಸಿರುಬಿಡುತ್ತಾ ದುರ್ಯೋಧನು ಪರಮ ಸಂಶಯವನ್ನು ತಾಳಿದನು. ಅವನು ಇಪ್ಪತ್ತೈದು ನಿಶಿತ ತೀಕ್ಷ್ಣ ನಾರಾಚಗಳನ್ನು ಪ್ರಯೋಗಿಸಿದನು. ತಕ್ಷಣವೇ ಅವು ಕೋಪಗೊಂಡ ಸರ್ಪಗಳು ಗಂಧಮಾದನ ಪರ್ವತವನ್ನು ಹೇಗೋ ಹಾಗೆ ಆ ರಾಕ್ಷಸ ಪುಂಗವನ ಮೇಲೆ ಬಿದ್ದವು. ಅವುಗಳಿಂದ ಗಾಯಗೊಂಡು ಕುಂಭಸ್ಥಳವು ಒಡೆದು ಆನೆಯಂತೆ ರಕ್ತವನ್ನು ಸುರಿಸುತ್ತಾ ರಾಜನ ವಿನಾಶವನ್ನು ನಿಶ್ಚಯಿಸಿದನು. ಆಗ ಪರ್ವತವನ್ನೂ ಸೀಳಬಲ್ಲ, ರಕ್ತವನ್ನು ಕುಡಿಯುವ ಮಹಾ ಶಕ್ತಿಯನ್ನು ಹಿಡಿದುಕೊಂಡನು. ಆ ಮಹಾಉಲ್ಕೆಯಂತೆ ಉರಿಯುತ್ತಿರುವ, ಮಘವತನ ವಜ್ರದಂತಿರುವ ಅದನ್ನು ಮಹಾಬಾಹುವು ದುರ್ಯೋಧನನನ್ನು ಕೊಲ್ಲಲೋಸುಗ ಪ್ರಯೋಗಿಸಿದನು. ಅದು ಬೀಳುತ್ತಿರುವುದನ್ನು ನೋಡಿ ವಂಗದ ಅಧಿಪತಿಯು ತ್ವರೆಮಾಡಿ ಪರ್ವತದಂತಿರುವ ಆನೆಯೊಂದನ್ನು ರಾಕ್ಷಸನ ಕಡೆ ಓಡಿಸಿದನು. ಅವನು ಶ್ರೇಷ್ಠವಾದ, ಬಲಶಾಲಿಯಾದ, ವೇಗವಾಗಿ ಹೋಗಬಲ್ಲ ಆನೆಯ ಮೇಲೆ ಕುಳಿತು ದುರ್ಯೋಧನನ ರಥದ ಮಾರ್ಗಕ್ಕೆ ಅಡ್ಡಬಂದು ಆ ಆನೆಯಿಂದ ದುರ್ಯೋಧನನ ರಥವನ್ನು ತಡೆದನು.

ಧೀಮತ ವಂಗರಾಜನು ಮಾರ್ಗವನ್ನು ತಡೆದುದನ್ನು ನೋಡಿ ಕ್ರೋಧದಿಂದ ಕಣ್ಣುಗಳನ್ನು ಕೆಂಪಾಗಿಸಿಕೊಂಡು ಘಟೋತ್ಕಚನು ಎತ್ತಿ ಹಿಡಿದಿದ್ದ ಮಹಾಶಕ್ತಿಯನ್ನು ಆ ಆನೆಯ ಮೇಲೆ ಎಸೆದನು. ಅವನ ಬಾಹುಗಳಿಂದ ಹೊರಟ ಅದರಿಂದ ಹತವಾದ ಆನೆಯು ರಕ್ತವನ್ನು ಸುರಿಸಿ ನೋವಿನಿಂದ ಬಿದ್ದು ಸತ್ತುಹೋಯಿತು. ಆನೆಯು ಕೆಳಗೆ ಬೀಳುತ್ತಿದ್ದರೂ ಬಲಶಾಲೀ ವಂಗರಾಜನು ವೇಗದಿಂದ ಭೂಮಿಯ ಮೇಲೆ ಹಾರಿ ಇಳಿದನು. ದುರ್ಯೋಧನನೂ ಕೂಡ ಶ್ರೇಷ್ಠ ಆನೆಯು ಬಿದ್ದುದನ್ನು ನೋಡಿ ಮತ್ತು ತನ್ನ ಸೇನೆಯು ಭಗ್ನವಾದುದನ್ನು ನೋಡಿ ಪರಮ ವ್ಯಥಿತನಾದನು. ಕ್ಷತ್ರಧರ್ಮವನ್ನು ಗೌರವಿಸಿ, ಆತ್ಮಾಭಿಮಾನದಿಂದ ಪಲಾಯನಕ್ಕೆ ಸಂದರ್ಭವಾಗಿದ್ದರೂ ರಾಜನು ಪರ್ವತದಂತೆ ಅಚಲವಾಗಿದ್ದನು. ಪರಮ ಕ್ರುದ್ಧನಾಗಿ ಕಾಲಾಗ್ನಿತೇಜಸ್ಸಿನಿಂದ ಕೂಡಿದ್ದ ಹರಿತ ಬಾಣವನ್ನು ಹೂಡಿ ಅದನ್ನು ಘೋರ ನಿಶಾಚರನ ಮೇಲೆ ಪ್ರಯೋಗಿಸಿದನು. ಇಂದ್ರನ ವಜ್ರದ ಪ್ರಭೆಯುಳ್ಳ ಆ ಬಾಣವು ಬೀಳುತ್ತಿರುವುದನ್ನು ನೋಡಿ ಮಹಾಕಾಯ ಘಟೋತ್ಕಚನು ಲಾಘವದಿಂದ ಅದನ್ನು ತಪ್ಪಿಸಿಕೊಂಡನು. ಇನ್ನೊಮ್ಮೆ ಅವನು ಕ್ರೋಧಸಂರಕ್ತಲೋಚನನಾಗಿ ಯುಗಾಂತದಲ್ಲಿ ಮೋಡಗಳು ಹೇಗೋ ಹಾಗೆ ಸರ್ವಭೂತಗಳನ್ನೂ ನಡುಗಿಸುತ್ತಾ ಜೋರಾಗಿ ಗರ್ಜಿಸಿದನು. ರಾಕ್ಷಸನ ಆ ಭಯಂಕರ ಘೋರ ಕೂಗನ್ನು ಕೇಳಿ ಭೀಷ್ಮ ಶಾಂತನವನು ಆಚಾರ್ಯನ ಬಳಿಬಂದು ಹೇಳಿದನು:ರಾಕ್ಷಸನ ಈ ಘೋರ ಗರ್ಜನೆಯು ಕೇಳಿಬರುತ್ತಿದೆಯಲ್ಲವೇ? ಹೈಡಿಂಬಿಯು ರಾಜಾ ದುರ್ಯೋಧನನೊಡನೆ ನೇರ ಯುದ್ಧವನ್ನು ಮಾಡುತ್ತಿರುವಂತಿದೆ. ಇವನನ್ನು ಸಂಗ್ರಾಮದಲ್ಲಿ ಯಾವ ಜೀವಿಯು ಗೆಲ್ಲಲು ಶಕ್ಯವಿಲ್ಲ. ನೀವು ಅಲ್ಲಿಗೆ ಹೋಗಿ ರಾಜನನ್ನು ರಕ್ಷಿಸಿರಿ! ದುರಾತ್ಮ ರಾಕ್ಷಸನು ಮಹಾಭಾಗನನ್ನು ಆಕ್ರಮಣಿಸಿದ್ದಾನೆ. ಪರಂತಪರೇ! ಅವನನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ!

ಪಿತಾಮಹನ ಮಾತನ್ನು ಕೇಳಿ ಮಹಾರಥರು ತ್ವರೆಮಾಡಿ ಉತ್ತಮ ವೇಗದಿಂದ ಕೌರವನಿದ್ದಲ್ಲಿಗೆ ಹೊರಟರು. ದ್ರೋಣ, ಸೋಮದತ್ತ, ಬಾಹ್ಲಿಕ, ಜಯದ್ರಥ, ಕೃಪ, ಭೂರಿಶ್ರವ, ಶಲ್ಯ, ಚಿತ್ರಸೇನ, ವಿವಿಂಶತಿ, ಅಶ್ವತ್ಥಾಮ, ವಿಕರ್ಣ, ಅವಂತಿಯವರು, ಬೃಹದ್ಬಲ, ಮತ್ತು ಅವರನ್ನು ಹಿಂಬಾಲಿಸಿ ಅನೇಕ ಸಹಸ್ರ ರಥಗಳು ದುರ್ಯೋಧನನನ್ನು ರಕ್ಷಿಸಲು ಧಾವಿಸಿ ಬಂದರು. ಲೋಕ ಸತ್ತಮರಿಂದ ಪಾಲಿತವಾದ ಆ ಅನಾಧೃಷ್ಠ ಸೇನೆಯೊಂದಿಗೆ ಬರುತ್ತಿದ್ದ ಆ ಆತತಾಯಿಯನ್ನು ನೋಡಿ ರಾಕ್ಷಸ ಸತ್ತಮ ಮಹಾಬಾಹುವು ಮೈನಾಕ ಪರ್ವತದಂತೆ ಅಲುಗಾಡಲಿಲ್ಲ. ಶೂಲ-ಮುದ್ಗರಗಳನ್ನೂ ನಾನಾ ಪ್ರಹರಣಗಳನ್ನೂ ಹಿಡಿದ ಜ್ಞಾತಿಗಳಿಂದ ಸುತ್ತುವರೆಯಲ್ಪಟ್ಟಿದ್ದ ಅವನು ವಿಪುಲವಾದ ಧನುಸ್ಸನ್ನು ಎತ್ತಿಕೊಂಡನು. ಆಗ ರಾಕ್ಷಸ ಮುಖ್ಯ ಮತ್ತು ದುರ್ಯೋಧನನ ಸೇನೆಯ ನಡುವೆ ರೋಮಾಂಚಕಾರಿಯಾದ ತುಮುಲ ಯುದ್ಧವು ನಡೆಯಿತು. ಧನುಸ್ಸುಗಳ ಟೇಂಕಾರದ ಶಬ್ಧವು ಎಲ್ಲಕಡೆ ಜೋರಾಗಿ ಬಿದಿರು ಮೆಳೆಗಳು ಸುಡುತ್ತಿರುವಂತೆ ಕೇಳಿ ಬರುತ್ತಿತ್ತು. ಶರೀರಗಳ ಕವಚಗಳ ಮೇಲೆ ಬೀಳುತ್ತಿದ್ದ ಶಸ್ತ್ರಗಳ ಶಬ್ಧವು ಪರ್ವತಗಳು ಸೀಳುತ್ತಿವೆಯೋ ಎಂಬಂತೆ ಕೇಳಿಬರುತ್ತಿತ್ತು. ವೀರಬಾಹುಗಳು ಪ್ರಯೋಗಿಸಿದ ತೋಮರಗಳು ಆಕಾಶದಲ್ಲಿ ತೀವ್ರಗತಿಯಲ್ಲಿ ಚಲಿಸುವ ಸರ್ಪಗಳಂತಿದ್ದವು.

ಆಗ ಮಹಾಬಾಹು ರಾಕ್ಷಸೇಂದ್ರನು ಮಹಾ ಧನುಸ್ಸನ್ನು ಟೇಂಕರಿಸಿ ಭೈರವ ಕೂಗನ್ನು ಕೂಗಿದನು. ಅವನು ಕ್ರುದ್ಧನಾಗಿ ಆಚಾರ್ಯನ ಧನುಸ್ಸನ್ನು ಅರ್ಧಚಂದ್ರ ಬಾಣದಿಂದ ಕತ್ತರಿಸಿದನು. ಭಲ್ಲದಿಂದ ಸೋಮದತ್ತನ ಧ್ವಜವನ್ನು ಹಾರಿಸಿ ಗರ್ಜಿಸಿದನು. ಮೂರು ಬಾಣಗಳಿಂದ ಬಾಹ್ಲಿಕನ ಎದೆಗೆ ಹೊಡೆದನು. ಒಂದರಿಂದ ಕೃಪನನ್ನೂ ಮೂರು ಶರಗಳಿಂದ ಚಿತ್ರಸೇನನನ್ನೂ ಹೊಡೆದನು. ಚೆನ್ನಾಗಿ ಸಂಪೂರ್ಣವಾಗಿ ಧನುಸ್ಸನ್ನು ಎಳೆದು ವಿಕರ್ಣನ ಜತ್ರುದೇಶಕ್ಕೆ ಗುರಿಯಿಟ್ಟು ಹೊಡೆದನು. ಅವನು ರಕ್ತದಿಂದ ರಥದಲ್ಲಿಯೇ ಕುಸಿದು ಬಿದ್ದನು. ಪುನಃ ಆ ಅಮೇಯಾತ್ಮನು ಸಂಕ್ರುದ್ಧನಾಗಿ ಹದಿನೈದು ಬಾಣಗಳನ್ನು ಭೂರಿಶ್ರವನ ಮೇಲೆ ಪ್ರಯೋಗಿಸಿದನು. ಅವು ಅವನ ಕವಚವನ್ನು ಭೇದಿಸಿ ಶೀಘ್ರವಾಗಿ ಭೂಮಿಯ ಒಳಹೊಕ್ಕವು. ವಿವಿಂಶತಿ ಮತ್ತು ದ್ರೌಣಿಯರ ಸಾರಥಿಗಳನ್ನು ಹೊಡೆಯಲು ಅವರಿಬ್ಬರೂ ಕುದುರೆಗಳ ಕಡಿವಾಣಗಳನ್ನು ಬಿಟ್ಟು ರಥದಿಂದ ಕೆಳಕ್ಕೆ ಬಿದ್ದರು. ಅರ್ಧಚಂದ್ರ ಬಾಣದಿಂದ ವಾರಾಹ ಚಿಹ್ನೆಯ ಸ್ವರ್ಣಭೂಷಿತವಾದ ಸಿಂಧುರಾಜನ ಧ್ವಜವನ್ನು ಕತ್ತರಿಸಿ ಕೆಡವಿದನು. ಎರಡನೆಯದರಿಂದ ಅವನ ಬಿಲ್ಲನ್ನು ತುಂಡರಿಸಿದನು. ಆಗ ಕ್ರೋಧಸಂರಕ್ತಲೋಚನನಾದ ಆ ಮಹಾತ್ಮನು ಅವಂತಿಯವನ ನಾಲ್ಕು ಕುದುರೆಗಳನ್ನು ನಾಲ್ಕು ನಾರಾಚಗಳಿಂದ ಸಂಹರಿಸಿದನು. ಸಂಪೂರ್ಣವಾಗಿ ಎಳೆದು ಬಿಟ್ಟ ನಿಶಿತ ಬಾಣದಿಂದ ರಾಜಪುತ್ರ ಬೃಹದ್ಬಲನನ್ನು ಹೊಡೆದನು. ಆಳವಾಗಿ ಗಾಯಗೊಂಡ ಅವನು ವ್ಯಥಿತನಾಗಿ ರಥದಲ್ಲಿಯೇ ಕುಳಿತುಕೊಂಡನು. ಬಹಳ ಕೋಪದಿಂದ ಆವಿಷ್ಟನಾಗಿ ರಥದಲ್ಲಿ ನಿಂತಿದ್ದ ರಾಕ್ಷಸಾಧಿಪನು ಸರ್ಪಗಳ ವಿಷಕ್ಕೆ ಸಮಾನವಾದ ನಿಶಿತ ತೀಕ್ಷ್ಣ ಶರಗಳನ್ನು ಯುದ್ಧವಿಶಾರದ ಶಲ್ಯನ ಮೇಲೆ ಎಸೆಯಲು ಅವು ಅವನ ಶರೀರವನ್ನು ಭೇದಿಸಿದವು.

ಯುದ್ಧದಲ್ಲಿ ಅವರೆಲ್ಲರನ್ನೂ ವಿಮುಖರನ್ನಾಗಿ ಮಾಡಿ ರಾಕ್ಷಸನು ಕೊಲ್ಲಲು ಬಯಸಿ ದುರ್ಯೋಧನನನ್ನು ಆಕ್ರಮಣಿಸಿದನು. ರಾಜನ ಮೇಲೆ ವೇಗದಿಂದ ಬೀಳುತ್ತಿದ್ದ ಅವನನ್ನು ನೋಡಿ ಯುದ್ಧದುರ್ಮದರಾದ ಕೌರವರು ಅವನನ್ನು ಸಂಹರಿಸುವ ಸಲುವಾಗಿ ಧಾವಿಸಿ ಬಂದರು. ತಾಲಪ್ರಮಾಣದ (ಸುಮಾರು ನಲ್ಕು ಮೊಳ ಉದ್ದದ) ಬಿಲ್ಲುಗಳನ್ನು ಎಳೆಯುತ್ತಾ ಮತ್ತು ಸಿಂಹಗಳ ಹಿಂಡಿನಂತೆ ಗರ್ಜಿಸುತ್ತಾ ಆ ಮಹಾಬಲರು ಅವನೊಬ್ಬನನ್ನೇ ಆಕ್ರಮಣಿಸಿದರು. ಆಗ ಅವನನ್ನು ಎಲ್ಲ ಕಡೆಗಳಿಂದ ಸುತ್ತುವರೆದು ಮೋಡಗಳು ಪರ್ವತವನ್ನು ಮಳೆಯ ನೀರಿನಿಂದ ಮುಚ್ಚಿಬಿಡುವಂತೆ ಬಾಣಗಳ ಮಳೆಯಿಂದ ಮುಚ್ಚಿದರು. ಗಾಢವಾಗಿ ಗಾಯಗೊಂಡು ಅಂಕುಶಗಳಿಂದ ತಿವಿಯಲ್ಪಟ್ಟ ಆನೆಯಂತೆ ವ್ಯಥಿತನಾಗಿ ಅವನು ಎಲ್ಲಕಡೆ ಹಾರಬಲ್ಲ ವೈನತೇಯನಂತೆ ಆಕಾಶಕ್ಕೆ ಹಾರಿದನು. ಕರ್ಕಶಧ್ವನಿಯುಳ್ಳ ಅವನು ಶರದೃತುವಿನ ಮೇಘದಂತೆ ದಿಕ್ಕುಗಳನ್ನೂ, ಆಕಾಶವನ್ನೂ, ಉಪದಿಕ್ಕುಗಳನ್ನೂ ಮೊಳಗಿಸುವಂತೆ ಜೋರಾಗಿ ಗರ್ಜಿಸಿದನು. ರಾಕ್ಷಸನ ಆ ಶಬ್ಧವನ್ನು ಕೇಳಿ ಭರತಶ್ರೇಷ್ಠ ರಾಜಾ ಯುಧಿಷ್ಠಿರನು ಭೀಮಸೇನನಿಗೆ ಹೇಳಿದನು:  “ಅಯ್ಯಾ! ಭೈರವ ಸ್ವರದಲ್ಲಿ ಕೂಗುತ್ತಿರುವುದನ್ನು ಕೇಳಿದರೆ ರಾಕ್ಷಸನು ಮಹಾರಥ ಧಾರ್ತರಾಷ್ಟ್ರರೊಂದಿಗೆ ಯುದ್ಧ ಮಾಡುತ್ತಿರುವನೆಂದು ತೋರುತ್ತಿದೆ. ಅಲ್ಲಿ ಅವನು ಅತಿ ಭಾರವಾದ ಕೆಲಸವನ್ನೇ ಮಾಡುತ್ತಿದ್ದಾನೆ. ಪಿತಾಮಹನೂ ಕೂಡ ಸಂಕ್ರುದ್ಧನಾಗಿ ಪಾಂಚಾಲರನ್ನು ಕೊಲ್ಲಲು ತೊಡಗಿದ್ದಾನೆ. ಅವರನ್ನು ರಕ್ಷಿಸಲೋಸುಗ ಫಲ್ಗುನನು ಶತ್ರುಗಳೊಂದಿಗೆ ಯುದ್ಧಮಾಡುತ್ತಿದ್ದಾನೆ. ಮಹಾಬಾಹೋ! ಇದನ್ನು ಕೇಳಿದರೆ ಎರಡು ಕಾರ್ಯಗಳು ಬಂದೊದಗಿವೆ. ಹೋಗು! ಪರಮ ಸಂಶಯದಲ್ಲಿರುವ ಹೈಡಿಂಬಿಯನ್ನು ರಕ್ಷಿಸು!

ಅಣ್ಣನ ಮಾತನ್ನು ತಿಳಿದುಕೊಂಡು ವೃಕೋದರನು ತ್ವರೆಮಾಡಿ ಸಿಂಹನಾದದಿಂದ ಸರ್ವ ಪಾರ್ಥಿವರನ್ನು ನಡುಗಿಸುತ್ತಾ, ಪರ್ವಕಾಲದಲ್ಲಿ ಸಾಗರವು ಹೇಗೋ ಹಾಗೆ ಮಹಾ ವೇಗದಿಂದ ಆಗಮಿಸಿದನು. ಅವನನ್ನೇ ಹಿಂಬಾಲಿಸಿ ಸತ್ಯಧೃತಿ, ಯುದ್ಧದುರ್ಮದ ಸೌಚಿತ್ತಿ, ಶ್ರೇಣಿಮಾನ್, ವಸುದಾನ, ಕಾಶಿರಾಜನ ಮಗ ಅಭಿಭೂ, ಅಭಿಮನ್ಯುವಿನ ನಾಯಕತ್ವದಲ್ಲಿ ಮಹಾರಥ ದ್ರೌಪದೇಯರು, ಪರಾಕ್ರಮಿ ಕ್ಷತ್ರದೇವ, ಕ್ಷತ್ರಧರ್ಮ, ಹಾಗೆಯೇ ಅನೂಪಾಧಿಪ ಸ್ವಬಲಾಶ್ರಯಿ ನೀಲ ಇವರು ಮಹಾ ರಥಗುಂಪುಗಳಿಂದ ಬಂದು ಹೈಡಿಂಬನನ್ನು ಸುತ್ತುವರೆದರು. ಆರು ಸಾವಿರ ಸದಾ ಮತ್ತಿನಲ್ಲಿರುವ ಆನೆಗಳು ಮತ್ತು ಪ್ರಹಾರಿಗಳು ಒಟ್ಟಿಗೇ ರಾಕ್ಷಸೇಂದ್ರ ಘಟೋತ್ಕಚನನ್ನು ರಕ್ಷಿಸುತ್ತಿದ್ದರು. ಮಹಾಸಿಂಹನಾದದಿಂದ, ರಥದ ಗಾಲಿಗಳ ಘೋಷದಿಂದ, ಕುದುರೆಗಳ ಖುರಪುಟಗಳ ಶಬ್ಧಗಳಿಂದ ಅವರು ಭೂಮಿಯನ್ನೇ ನಡುಗಿಸಿದರು. ಅವರು ಹೀಗೆ ಮೇಲೆ ಎರಗಿ ಬರುವ ಶಬ್ಧವನ್ನು ಕೇಳಿ ಕೌರವ ಸೇನೆಯು ಭೀಮಸೇನನ ಭಯದಿಂದ ಉದ್ವಿಗ್ನವಾಗಿ ಮುಖದ ಕಳೆಯನ್ನು ಕಳೆದುಕೊಂಡು ಘಟೋತ್ಕಚನನ್ನು ಮುತ್ತಿಗೆ ಹಾಕುವುದನ್ನು ನಿಲ್ಲಿಸಿತು. ಆಗ ಅಲ್ಲಲ್ಲಿ ಸಂಗ್ರಾಮದಿಂದ ಹಿಂದೆಸರಿಯದೇ ಇದ್ದ ಮಹಾತ್ಮಕೌರವರ ಮತ್ತು ಪಾಂಡವರ ನಡುವೆ ಯುದ್ಧವು ಪ್ರಾರಂಭವಾಯಿತು.

ಸಂಕುಲಯುದ್ಧ

ನಾನಾ ರೂಪದ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಆ ಮಹಾರಥರು ಅನ್ಯೋನ್ಯರ ಮೇಲೆ ಎರಗಿ ಪ್ರಹಾರಮಾಡ ತೊಡಗಿದರು. ಭೀರುಗಳಿಗೆ ಭಯವನ್ನುಂಟುಮಾಡುವ ಮಹಾರೌದ್ರ ಸಂಕುಲ ಯುದ್ಧವು ಅಲ್ಲಿ ನಡೆಯಿತು. ಮಹಾಯಶಸನ್ನು ಬಯಸಿದ ಕುದುರೆಗಳು ಆನೆಗಳನ್ನು ಮತ್ತು ಪದಾತಿಗಳು ರಥಿಗಳನ್ನು ಎದುರಿಸಿ ಸಮರದಲ್ಲಿ ಅನ್ಯೋನ್ಯರನ್ನು ಆಕ್ರಮಣಿಸಿದರು. ಗಜಾಶ್ವರಥಪದಾತಿಗಳ ಪದಸಂಘಟ್ಟನೆಯಿಂದ ಮತ್ತು ರಥಚಕ್ರಗಳಿಂದ ಮಹಾ ಧೂಳು ತೀವ್ರವಾಗಿ ಹುಟ್ಟಿತು. ಹುಟ್ಟಿದ ಧೂಳು ಸ್ವಲ್ಪ ಹೊತ್ತಿನಲ್ಲಿಯೇ ರಣಾಂಗಣವನ್ನು ಆವರಿಸಿತು. ಅಲ್ಲಿ ಕೌರವರ ಕಡೆಯವರಾಗಲೀ ಶತ್ರುಗಳ ಕಡೆಯವರಾಗಲೀ ಯಾರು ಯಾರೆಂಬುದನ್ನು ತಿಳಿಯಲೂ ಸಾಧ್ಯವಾಗುತ್ತಿರಲಿಲ್ಲ. ಮರ್ಯಾದೆಯೇ ಇಲ್ಲದ, ರೋಮಾಂಚಕಾರಿಯಾದ, ಜೀವಿಗಳ ಸಂಹಾರಕಾರಿಯಾದ ಆ ಯುದ್ಧದಲ್ಲಿ ತಂದೆಯು ಮಗನನ್ನಾಗಲೀ ಮಗನು ತಂದೆಯನ್ನಾಗಲೀ ಗುರುತಿಸಲಾಗುತ್ತಿರಲಿಲ್ಲ. ಶಸ್ತ್ರಗಳ ಮತ್ತು ಮನುಷ್ಯರ ಗರ್ಜನೆಯಿಂದ ಬಿದಿರುಮೆಳೆಗಳು ಸುಡುತ್ತಿರುವಂತೆ ಮಹಾ ಶಬ್ಧವುಂಟಾಯಿತು. ಆನೆ-ಕುದುರೆ-ಮನುಷ್ಯರ ರಕ್ತವೇ ನೀರಾಗಿ, ಕರುಳುಗಳೇ ಪ್ರವಾಹವಗಿರುವ, ತಲೆಗೂದಲುಗಳೇ ಪಾಚಿ ಹುಲ್ಲುಗಳಾಗಿರುವ ನದಿಯು ಅಲ್ಲಿ ಹರಿಯಿತು. ರಣದಲ್ಲಿ ಮನುಷ್ಯರ ದೇಹದಿಂದ ಬೀಳುತ್ತಿರುವ ತಲೆಗಳಿಂದ ಕಲ್ಲುಗಳು ಬೀಳುವಂತೆ ಮಹಾ ಶಬ್ಧವು ಕೇಳಿಬರುತ್ತಿತ್ತು. ಶಿರಗಳಿಲ್ಲದ ಮನುಷ್ಯರಿಂದಲೂ, ಛಿನ್ನ-ಭಿನ್ನವಾದ ಆನೆಗಳ ದೇಹಗಳಿಂದಲೂ, ಕತ್ತರಿಸಲ್ಪಟ್ಟ ಕುದುರೆಗಳ ದೇಹಗಳಿಂದಲೂ ವಸುಂಧರೆಯು ತುಂಬಿಹೋಯಿತು. ನಾನಾವಿಧವಾದ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಮಹಾರಥರು ಅನ್ಯೋನ್ಯರನ್ನು ಆಕ್ರಮಣಿಸಿ ಹೊಡೆಯ ತೊಡಗಿದರು.

ಅಶ್ವಾರೋಹಿಗಳಿಂದ ಕಳುಹಿಸಲ್ಪಟ್ಟ ಕುದುರೆಗಳು ಕುದುರೆಗಳೊಡನೆ ಅನ್ಯೋನ್ಯರೊಡನೆ ಹೋರಾಡಿ ರಣದಲ್ಲಿ ಜೀವವನ್ನು ತೊರೆದು ಬೀಳುತ್ತಿದ್ದವು. ತುಂಬಾ ಕ್ರೋಧದಿಂದ ಕಣ್ಣುಗಳನ್ನು ಕೆಂಪು ಮಾಡಿಕೊಂಡು ಮನುಷ್ಯರು ಮನುಷ್ಯರನ್ನು ಅನ್ಯೋನ್ಯರನ್ನು ಬಿಗಿದಪ್ಪಿ ಹಿಗ್ಗಾಮುಗ್ಗಾಗಿ ಸೆಳೆದಾಡಿ ಬೀಳಿಸಿ ಸಂಹರಿಸುತ್ತಿದ್ದರು. ಕಳುಹಿಸಲ್ಪಟ್ಟ ಮಹಾಗಾತ್ರದ ಆನೆಗಳು ಶತ್ರುಗಳ ಆನೆಗಳನ್ನು ಸೊಂಡಿಲುಗಳಿಂದ ಹಿಡಿದೆಳೆದು ಸಂಯುಗದಲ್ಲಿ ದಂತಗಳಿಂದ ತಿವಿದು ಗಾಯಗೊಳಿಸುತ್ತಿದ್ದವು. ಪತಾಕೆಗಳಿಂದ ಅಲಂಕೃತವಾಗಿದ್ದ ಅವುಗಳು ರಕ್ತಮಯವಾಗಿ ವಿದ್ಯುತ್ತಿನಿಂದ ಕೂಡಿದ ಮೇಘಗಳಂತೆ ತೋರುತ್ತಿದ್ದವು. ಕೆಲವುಗಳ ಅಗ್ರಭಾಗಗಳು ಒಡೆದಿದ್ದವು. ಕೆಲವುಗಳ ಕುಂಭಗಳು ತೋಮರಗಳಿಂದ ಒಡೆದುಹೋಗಿದ್ದವು. ಅವು ಮೋಡಗಳಂತೆ ಗರ್ಜಿಸುತ್ತಾ ಓಡಿ ಹೋಗುತ್ತಿದ್ದವು. ಕೆಲವುಗಳ ಸೊಂಡಿಲುಗಳು ತುಂಡಾಗಿದ್ದವು. ಇನ್ನು ಕೆಲವುಗಳ ಶರೀರವೇ ತುಂಡಾಗಿತ್ತು. ರೆಕ್ಕೆಗಳು ಕತ್ತರಿಸಲ್ಪಟ್ಟ ಪರ್ವತಗಳಂತೆ ಅವು ರಣಾಂಗಣದಲ್ಲಿ ಬಿದ್ದಿದ್ದವು. ಇತರ ಶ್ರೇಷ್ಠ ಆನೆಗಳ ಪಕ್ಕೆಗಳನ್ನು ಇತರ ಆನೆಗಳು ಇರಿದು ಅವು ಖನಿಜವನ್ನು ಸುರಿಸುವ ಪರ್ವತಗಳಂತೆ ರಕ್ತವನ್ನು ಸುರಿಸುತ್ತಿದ್ದವು. ಕೆಲವು ನಾರಾಚಗಳಿಂದ ಹತವಾಗಿದ್ದವು. ಕೆಲವು ತೋಮರಗಳಿಂದ ಹೊಡೆಯಲ್ಪಟ್ಟಿದ್ದವು. ಆರೋಹಿಗಳು ಹತರಾಗಿ ಅವು ಶೃಂಗಗಳಿಲ್ಲದ ಪರ್ವತಗಳಂತೆ ತೋರುತ್ತಿದ್ದವು. ಕೆಲವು ಮದಾಂಧರಾಗಿ ಕ್ರೋಧಸಮಾವಿಷ್ಟಗೊಂಡು, ನಿಯಂತ್ರಣವಿಲ್ಲದೇ ರಣದಲ್ಲಿ ನೂರಾರು ರಥ-ಕುದುರೆ-ಪದಾತಿಗಳನ್ನು ತುಳಿದು ನಾಶಪಡಿಸಿದವು. ಹಾಗೆಯೇ ಪ್ರಾಸತೋಮರಗಳಿಂದ ಹಯಾರೋಹಿಗಳಿಂದ ಹೊಡೆಯಲ್ಪಟ್ಟ ಕುದುರೆಗಳು ದಿಕ್ಕುಗೆಟ್ಟು ಓಡುತ್ತಾ ವ್ಯಾಕುಲವನ್ನುಂಟುಮಾಡುತ್ತಾ ಓಡಿ ಹೋಗುತ್ತಿದ್ದವು. ಕುಲಪುತ್ರರಾದ ರಥಿಗಳು ದೇಹವನ್ನು ತ್ಯಜಿಸಿ ಭೀತಿಯಿಲ್ಲದೆ ಇತರ ರಥಿಗಳೊಂದಿಗೆ ಪರಮ ಶಕ್ತಿಯನ್ನು ಉಪಯೋಗಿಸಿ ಹೋರಾಡಿದರು. ಯಶಸ್ಸು ಅಥವಾ ಸ್ವರ್ಗವನ್ನು ಬಯಸಿದ ಆ ಯುದ್ಧಶಾಲಿಗಳು ಸ್ವಯಂವರದಂತೆ ಪರಸ್ಪರರನ್ನು ಆರಿಸಿಕೊಂಡು ಪ್ರಹರಿಸುತ್ತಿದ್ದರು. ಹಾಗೆ ನಡೆಯುತ್ತಿದ್ದ ರೋಮಾಂಚಕಾರೀ ಸಂಗ್ರಾಮದಲ್ಲಿ ಧಾರ್ತರಾಷ್ಟ್ರನ ಮಹಾ ಸೈನ್ಯದ ಹೆಚ್ಚು ಭಾಗವು ಯುದ್ಧದಿಂದ ಹಿಂದೆ ಸರಿಯಿತು.

ಭೀಮ-ಘಟೋತ್ಕಚರ ಪರಾಕ್ರಮ

ತನ್ನ ಸೈನ್ಯವು ನಾಶವಾಗುತ್ತಿರುವುದನ್ನು ನೋಡಿ ರಾಜಾ ದುರ್ಯೋಧನನು ಸಂಕೃದ್ಧನಾಗಿ ಸ್ವಯಂ ತಾನೇ ಅರಿಂದಮ ಭೀಮಸೇನನನ್ನು ಎದುರಿಸಿದನು. ಇಂದ್ರನ ವಜ್ರಾಯುಧಕ್ಕೆ ಸಮನಾದ ಅತಿದೊಡ್ಡ ಧನುಸ್ಸನ್ನು ತೆಗೆದುಕೊಂಡು ಮಹಾ ಶರವರ್ಷದಿಂದ ಪಾಂಡವನನ್ನು ಮುಚ್ಚಿದನು. ತೀಕ್ಷ್ಣವಾದ ಲೋಮವಾಹಿನಿ ಅರ್ಧಚಂದ್ರವನ್ನು ಹೂಡಿ ಕ್ರೋಧಸಮನ್ವಿತನಾದ ಅವನು ಭೀಮಸೇನನ ಚಾಪವನ್ನು ಕತ್ತರಿಸಿದನು. ಅನಂತರ ಅದೇ ಸರಿಯಾದ ಸಮಯವೆಂದು ಭಾವಿಸಿ ಅತ್ಯವಸರದಿಂದ ಆ ಮಹಾರಥನು ಪರ್ವತವನ್ನೂ ಸೀಳಬಲ್ಲ ನಿಶಿತ ಬಾಣವನ್ನು ಹೂಡಿ ಅದರಿಂದ ಮಹಾಬಾಹು ಭೀಮನ ಎದೆಗೆ ಹೊಡೆದನು. ಆಳವಾಗಿ ಗಾಯಗೊಂಡು ನೋವಿನಿಂದ ನೊಂದ ತೇಜಸ್ವಿ ಭೀಮನು ಕಟವಾಯಿಗಳನ್ನು ನೆಕ್ಕುತ್ತಾ ಸುವರ್ಣಭೂಷಿತವಾದ ಧ್ವಜದಂಡವನ್ನೇ ಅವಲಂಬನೆಯನ್ನಾಗಿ ಹಿಡಿದು ಕುಳಿತುಕೊಂಡನು. ಭೀಮಸೇನನು ಹಾಗೆ ವಿಮನಸ್ಕನಾಗಿದುದನ್ನು ನೋಡಿ ಘಟೋತ್ಕಚನು ಕ್ರೋಧದಿಂದ ವಿಶ್ವವನ್ನೇ ಸುಡಲಿಚ್ಛಿಸುವ ಅಗ್ನಿಯಂತೆ ಪ್ರಜ್ವಲಿಸಿದನು. ಅಭಿಮನ್ಯುವಿನ ನಾಯಕತ್ವದಲ್ಲಿದ್ದ ಪಾಂಡವರ ಮಹಾರಥರೂ ಕೂಡ ಕೂಗುತ್ತಾ ಸಂಭ್ರಮದಿಂದ ಅಲ್ಲಿಗೆ ಧಾವಿಸಿದರು. ಸಂಭ್ರಮದಿಂದ ಸಂಕ್ರುದ್ಧರಾಗಿ ಮೇಲೆ ಎರಗುತ್ತಿರುವ ಅವರನ್ನು ನೋಡಿ ಭಾರದ್ವಾಜನು ಕೌರವ ಮಹಾರಥರಿಗೆ ಹೇಳಿದನು: ನಿಮಗೆ ಮಂಗಳವಾಗಲಿ! ಬೇಗನೆ ಹೋಗಿ! ರಾಜನನ್ನು ಪರಿರಕ್ಷಿಸಿ. ಚಿಂತೆಯೆಂಬ ಸಾಗರದಲ್ಲಿ ಮುಳುಗಿರುವ ಅವನು ಉಳಿಯುತ್ತಾನೋ ಇಲ್ಲವೋ ಎಂಬ ಪರಮ ಸಂಶಯವು ಹುಟ್ಟಿದೆ! ಪಾಂಡವರ ಮಹೇಷ್ವಾಸ ಮಹಾರಥರು ಕ್ರುದ್ಧರಾಗಿ ಭೀಮಸೇನನನ್ನು ಮುಂದಿರಿಸಿಕೊಂಡು, ವಿಜಯವನ್ನೇ ಉದ್ದೇಶವನ್ನಾಗಿಟ್ಟುಕೊಂಡು, ನಾನಾವಿಧದ ಶಸ್ತ್ರಗಳನ್ನು ಪ್ರಯೋಗಿಸುತ್ತಾ, ಭೈರವ ಕೂಗುಗಳನ್ನು ಕೂಗಿ ಈ ಭೂಮಿಯನ್ನು ನಡುಗಿಸುತ್ತಾ ದುರ್ಯೋಧನನನ್ನು ಆಕ್ರಮಣಿಸಿದ್ದಾರೆ.

ಆಚಾರ್ಯನ ಆ ಮಾತನ್ನು ಕೇಳಿ ಸೋಮದತ್ತನೇ ಮೊದಲಾದ ಕೌರವರು ಪಾಂಡವರ ಸೇನೆಯನ್ನು ಎದುರಿಸಿದರು. ಕೃಪ, ಭೂರಿಶ್ರವ, ಶಲ್ಯ, ದ್ರೋಣಪುತ್ರ, ವಿವಿಂಶತಿ, ಚಿತ್ರಸೇನ, ವಿಕರ್ಣ, ಸೈಂಧವ, ಬೃಹದ್ಬಲ, ಮತ್ತು ಅವಂತಿಯ ಮಹೇಷ್ವಾಸರಿಬ್ಬರು ಕೌರವನನ್ನು ಸುತ್ತುವರೆದರು. ಅವರು ಇಪ್ಪತ್ತು ಹೆಜ್ಜೆಗಳಷ್ಟು ಮುಂದೆ ಹೋಗಿ ಪಾಂಡವರು ಮತ್ತು ಧಾರ್ತರಾಷ್ಟ್ರರು ಪರಸ್ಪರರನ್ನು ಸಂಹರಿಸಲು ಬಯಸಿ ಯುದ್ಧವನ್ನು ಪ್ರಾರಂಭಿಸಿದರು. ಹೀಗೆ ಹೇಳಿ ಮಹಾಬಾಹು ಭಾರದ್ವಾಜನು ಧನುಸ್ಸನ್ನು ಜೋರಾಗಿ ಟೇಂಕರಿಸಿ ಭೀಮನನ್ನು ಇಪ್ಪತ್ತಾರು ಬಾಣಗಳಿಂದ ಪ್ರಹರಿಸಿದನು. ಪುನಃ ಆ ಮಹಾಬಾಹುವು ಶೀಘ್ರವಾಗಿ ಮಳೆಗಾಲದಲ್ಲಿ ಮೋಡವು ಮಳೆನೀರನ್ನು ಪರ್ವತದ ಮೇಲೆ ಸುರಿಸುವಂತೆ ಅವನ ಮೇಲೆ ಬಾಣಗಳನ್ನು ಸುರಿದು ಮುಚ್ಚಿದನು. ಆಗ ಮಹೇಷ್ವಾಸ ಮಹಾಬಲ ಭೀಮಸೇನನು ಅವುಗಳಿಗೆ ಪ್ರತಿಯಾಗಿ ತ್ವರೆಮಾಡಿ ಹತ್ತು ಶಿಲೀಮುಖಗಳಿಂದ ಅವನ ಎಡ ಪಾರ್ಶ್ವಕ್ಕೆ ಹೊಡೆದನು. ಗಾಢವಾಗಿ ಪೆಟ್ಟುತಿಂದು ವ್ಯತಿಥನಾದ ಆ ವಯೋವೃದ್ಧನು ಸಂಜ್ಞೆಗಳನ್ನು ಕಳೆದುಕೊಂಡು ರಥದಲ್ಲಿ ಕುಸಿದು ಕುಳಿತುಕೊಂಡನು. ಗುರುವನ್ನು ನೋಯಿಸಿದುದನ್ನು ನೋಡಿ ಸ್ವಯಂ ರಾಜಾ ದುರ್ಯೋಧನ ಮತ್ತು ದ್ರೌಣಿ ಇಬ್ಬರೂ ಸಂಕ್ರುದ್ಧರಾಗಿ ಭೀಮಸೇನನ ಮೇಲೆ ಎರಗಿದರು.

ಕಾಲಾಂತಕ ಯಮರಂತಿರುವ ಅವರಿಬ್ಬರೂ ಮೇಲೆ ಬೀಳುತ್ತಿರುವುದನ್ನು ನೋಡಿ ಮಹಾಬಾಹು ಭೀಮಸೇನನು ಭಾರವಾದ ಗದೆಯನ್ನು ತೆಗೆದುಕೊಂಡು ತಕ್ಷಣವೇ ರಥದಿಂದ ಕೆಳಗೆ ಹಾರಿ, ಯಮದಂಡದಂತಿರುವ ಆ ಭಾರವಾದ ಗದೆಯನ್ನು ಎತ್ತಿ ಹಿಡಿದು ರಣದಲ್ಲಿ ಪರ್ವತದಂತೆ ಅಚಲವಾಗಿ ನಿಂತನು. ಶಿಖರದಿಂದ ಕೂಡಿದ ಕೈಲಾಸಪರ್ವತದಂತೆ ಗದೆಯನ್ನೆತ್ತಿ ನಿಂತಿದ್ದ ಅವನನ್ನು ನೋಡಿ ಕೌರವ ಮತ್ತು ದ್ರೋಣಪುತ್ರರು ಒಟ್ಟಿಗೇ ಆಕ್ರಮಣಿಸಿದರು. ಅವರಿಬ್ಬರು ಬಲಿಗಳಲ್ಲಿ ಶ್ರೇಷ್ಠರು ಒಟ್ಟಿಗೇ ತ್ವರೆಮಾಡಿ ಮೇಲೆ ಬೀಳುತ್ತಿರಲು ವೃಕೋದರನೂ ಕೂಡಿ ತ್ವರೆಮಾಡಿ ವೇಗದಿಂದ ಅವರ ಮೇಲೆ ಎರಗಿದನು. ಸಂಕ್ರುದ್ಧನಾದ, ನೋಡಲು ಭಯಂಕರನಾಗಿದ್ದ ಅವನನ್ನು ನೋಡಿ ಕೌರವರ ಮಹಾರಥರು ತ್ವರೆಮಾಡಿ ಮುಂದೆ ಬಂದರು. ಭಾರದ್ವಾಜಪ್ರಮುಖರೆಲ್ಲರೂ ಭೀಮಸೇನನನ್ನು ಕೊಲ್ಲಲು ಬಯಸಿ ನಾನಾವಿಧದ ಶಸ್ತ್ರಗಳನ್ನು ಭೀಮಸೇನನ ಎದೆಯ ಮೇಲೆ ಪ್ರಯೋಗಿಸಿ, ಎಲ್ಲರೂ ಒಟ್ಟಿಗೇ ಎಲ್ಲ ಕಡೆಗಳಿಂದ ಪಾಂಡವನನ್ನು ಪೀಡಿಸಿದರು. ಪೀಡಿತನಾಗಿದ್ದ ಆ ಮಹಾರಥನನ್ನು ನೋಡಿ ಸಂಶಯವನ್ನು ತಾಳಿ ಅಭಿಮನ್ಯುವೇ ಮೊದಲಾದ ಪಾಂಡವರ ಮಹಾರಥರು ತಮ್ಮ ಪ್ರಾಣಗಳನ್ನು ತ್ಯಜಿಸಿ ಅವನನ್ನು ಪರಿರಕ್ಷಿಸಲು ಅವನ ಬಳಿ ಧಾವಿಸಿ ಬಂದರು. ಆಗ ಅನೂಪಾಧಿಪತಿ, ಶೂರ, ಭೀಮನ ಪ್ರಿಯ ಮಿತ್ರ, ನಿತ್ಯವೂ ದ್ರೋಣಸುತನೊಡನೆ ಸ್ಪರ್ಧಿಸುವ ನೀಲಾಂಬುದನೆಂದು ಪ್ರಖ್ಯಾತನಾದ ನೀಲನು ಸಂಕ್ರುದ್ಧನಾಗಿ ದ್ರೌಣಿಯನ್ನು ಆಕ್ರಮಣಿಸಿದನು. ಅವನು ಮಹಾಚಾಪವನ್ನು ಟೇಂಕರಿಸಿ ದ್ರೌಣಿಯನ್ನು ಹಿಂದೆ ಹೇಗೆ ಶಕ್ರನು ತನ್ನ ತೇಜಸ್ಸು ಮತ್ತು ಕ್ರೋಧದಿಂದ ಮೂರು ಲೋಕಗಳನ್ನೂ ನಡುಗಿಸುತ್ತಿದ್ದ ದಾನವ, ದೇವತೆಗಳ ಭಯಂಕರ, ದುರಾಧರ್ಷ, ವಿಪ್ರಚಿತ್ತಿಯನ್ನು ಹೇಗೋ ಹಾಗೆ ಪತ್ರಿಗಳಿಂದ ಹೊಡೆದನು. ಹಾಗೆ ನೀಲನ ಸುಮುಖ ಪತತ್ರಿಗಳಿಂದ ಗಾಯಗೊಂಡು ರಕ್ತ ಸುರಿಸಿ ಪೀಡಿತನಾದ ದ್ರೌಣಿಯು ಕ್ರೋಧಸಮನ್ವಿತನಾದನು.

ಆ ಮತಿಮತರಲ್ಲಿ ಶ್ರೇಷ್ಠನು ಇಂದ್ರನ ವಜ್ರಾಯುಧದ ನಿಸ್ವನಕ್ಕೆ ಸಮನಾಗಿ ಚಿತ್ರ ಧನುಸ್ಸನ್ನು ಟೇಂಕರಿಸಿ ನೀಲನ ವಿನಾಶಮಾಡಲು ನಿಶ್ಚಯಿಸಿದನು. ಆಗ ಕಮ್ಮಾರನಿಂದ ಪರಿಸ್ಕರಿಸಲ್ಪಟ್ಟ ವಿಮಲ ಭಲ್ಲಗಳನ್ನು ಹೂಡಿ ಅವನ ನಾಲ್ಕು ಕದುರೆಗಳನ್ನು ಕೊಂದನು ಮತ್ತು ಧ್ವಜವನ್ನು ಬೀಳಿಸಿದನು. ಏಳನೆಯ ಭಲ್ಲದಿಂದ ನೀಲನ ಎದೆಗೆ ಹೊಡೆದನು. ಅದು ಗಾಢವಾಗಿ ಒಳಹೊಕ್ಕಿದುದರಿಂದ ವ್ಯಥಿತನಾಗಿ ಅವನು ರಥದಲ್ಲಿಯೇ ಕುಳಿತುಕೊಂಡನು. ಮೋಡಗಳ ಸಮೂಹದಂತಿದ್ದ ರಾಜಾ ನೀಲನು ಮೂರ್ಛಿತನಾದುದನ್ನು ನೋಡಿ ಸಂಕೃದ್ಧನಾದ ಘಟೋತ್ಕಚನೂ ಕೂಡ ಸಹೋದರರನ್ನು ಕೂಡಿಕೊಂಡು ವೇಗದಿಂದ ಆಹವಶೋಭಿ ದ್ರೌಣಿಯನ್ನು ಎದುರಿಸಿದನು. ಆಗ ಇತರ ಯುದ್ಧದುರ್ಮದ ರಾಕ್ಷಸರೂ ಅವನನ್ನು ಅನುಸರಿಸಿ ಬಂದರು. ತನ್ನ ಮೇಲೆ ಬೀಳುತ್ತಿದ್ದ ಘೋರದರ್ಶನ ರಾಕ್ಷಸನನ್ನು ನೋಡಿ ತೇಜಸ್ವೀ ಭಾರದ್ವಾಜನ ಮಗನು ತ್ವರೆಮಾಡಿ ಅವನನ್ನು ಎದುರಿಸಿದನು.

ಆ ರಾಕ್ಷಸನ ಮುಂದೆನಿಂತು ಯುದ್ಧಮಾಡುತ್ತಿದ್ದ ಕ್ರುದ್ಧರಾದ ಭೀಮದರ್ಶನ ರಾಕ್ಷಸರನ್ನು ಅವನು ಸಂಕ್ರುದ್ಧನಾಗಿ ಸಂಹರಿಸಿದನು. ದ್ರೌಣಿಯ ಬಿಲ್ಲಿನಿಂದ ಹೊರಟ ಬಾಣಗಳಿಂದ ಅವರು ವಿಮುಖರಾದುದನ್ನು ನೋಡಿ ಮಹಾಯಾಕ ಭೈಮಸೇನಿ ಘಟೋತ್ಕಚನು ಅತ್ಯಂತ ಕುಪಿತನಾದನು. ಮಾಯಾವಿ ರಾಕ್ಷಸಾಧಿಪನು ಸಮರದಲ್ಲಿ ದ್ರೌಣಿಯನ್ನು ಮೋಹಗೊಳಿಸುತ್ತಾ ಘೋರರೂಪವಾದ, ಸುದಾರುಣವಾದ ಮಹಾಮಾಯೆಯನ್ನು ನಿರ್ಮಿಸಿದನು. ಆಗ ನಿನ್ನವರೆಲ್ಲರೂ ಆ ಮಾಯೆಯಿಂದ ಹಿಮ್ಮೆಟ್ಟಿದರು. ಅವರು ಅನ್ಯೋನ್ಯರು ಕತ್ತರಿಸಲ್ಪಟ್ಟು, ರಕ್ತದಿಂದ ತೋಯ್ದು ಕೃಪಣರಾಗಿ ಭೂಮಿಯ ಮೇಲೆ ಹೊರಳಾಡುತ್ತಿರುವಂತೆ, ದ್ರೋಣ, ದುರ್ಯೋಧನ, ಶಲ್ಯ, ಅಶ್ವತ್ಥಾಮ ಮೊದಲಾದ ಪ್ರಧಾನ ಕೌರವ ಮಹೇಷ್ವಾಸರು ಪ್ರಾಯಶಃ ವಿಧ್ವಂಸರಾದರೆಂದೂ, ಎಲ್ಲ ರಥ-ಆನೆ-ಕುದುರೆಗಳೂ ವಿನಾಶಗೊಂಡು ಬಿದ್ದಿವೆಯೆಂದೂ, ಸಾವಿರರು ಕುದುರೆಗಳು ಆರೋಹಿಗಳೊಂದಿಗೆ ತುಂಡಾಗಿ ಬಿದ್ದುರುವುದೆಂದೂ ಅವರು ನೋಡಿದರು. ಅದನ್ನು ಕಂಡು ಶಿಬಿರದ ಕಡೆ ಓಡಿ ಹೋಗುತ್ತಿದ್ದ ಕೌರವ ಸೇನೆಯನ್ನು ದೇವವ್ರತ್-ಸಂಜಯರು ಇಬ್ಬರೂ ಕೂಗಿ ಕರೆದರು: ಯುದ್ಧಮಾಡಿ! ಓಡಿಹೋಗಬೇಡಿ! ಇದು ರಣದಲ್ಲಿಯ ರಾಕ್ಷಸೀ ಮಾಯೆ. ಇದು ಘಟೋತ್ಕಚನ ಕೆಲಸ. ಇದರಿಂದ ಮೋಹಿತರಾಗಬೇಡಿ. ನಿಲ್ಲಿ! ಆದರೂ ಭಯದಿಂದ ಅವರು ಆ ಮಾತಿನಲ್ಲಿ ನಂಬಿಕೆಯನ್ನಿಡಲಿಲ್ಲ. ಅವರು ಪಲಾಯನ ಮಾಡುತ್ತಿರುವುದನ್ನು ನೋಡಿ ಜಯಗಳಿಸಿದ ಪಾಂಡವರು ಘಟೋತ್ಕಚನನ್ನೊಡಗೂಡಿ ಸಿಂಹನಾದಗೈದರು. ಶಂಖದುಂದುಭಿಗಳ ಘೋಷದಿಂದ ನಾಲ್ಕೂ ದಿಕ್ಕುಗಳನ್ನು ಮೊಳಗಿಸಿದರು. ಹೀಗೆ ಸೂರ್ಯಾಸ್ತಮನದ ವೇಳೆಯಲ್ಲಿ ದುರಾತ್ಮ ಹೈಡಿಂಬಿಯಿಂದ ಭಗ್ನಗೊಳಿಸಲ್ಪಟ್ಟು ದಿಕ್ಕಾಪಾಲಾಗಿ ಓಡಿ ಹೋಯಿತು.

ಭೀಮ-ಘಟೋತ್ಕಚರೊಡನೆ ಭಗದತ್ತನ ಯುದ್ಧ

ಆ ಮಹಾ ಸಂಕ್ರಂದಲ್ಲಿ ರಾಜಾ ದುರ್ಯೋಧನನು ಗಾಂಗೇಯನ ಬಳಿಸಾರಿ, ವಿನಯದಿಂದ ನಮಸ್ಕರಿಸಿ ಅವನಿಗೆ ಘಟೋತ್ಕಚನ ವಿಜಯವನ್ನೂ ತನ್ನವರ ಪರಾಜಯವೆಲ್ಲವನ್ನೂ ನಡೆದಂತೆ ಹೇಳಲು ಪ್ರಾರಂಭಿಸಿದನು. ಆ ದುರ್ಧರ್ಷನು ಪುನಃ ಪುನಃ ನಿಟ್ಟುಸಿರು ಬಿಡುತ್ತಾ ವರದಿಮಾಡಿದ ನಂತರ ಕುರುಪಿತಾಮಹ ಭೀಷ್ಮನಿಗೆ ಹೇಳಿದನು:  “ಪ್ರಭು! ಶತ್ರುಗಳು ವಾಸುದೇವನನ್ನು ಹೇಗೋ ಹಾಗೆ ನಾನು ನಿನ್ನನ್ನು ಆಶ್ರಯಿಸಿ ಪಾಂಡವರೊಂದಿಗೆ ಈ ಘೋರ ಯುದ್ಧವನ್ನು ಕೈಗೊಂಡೆನು. ನನಗಾಗಿ ಹನ್ನೊಂದು ಅಕ್ಷೌಹಿಣಿ ಸೇನೆಗಳು ಸೇರಿ ನಿನ್ನ ನಿರ್ದೇಶನಕ್ಕೆ ಕಾದು ನಿಂತಿವೆ. ಆದರೆ ಘಟೋತ್ಕಚನನ್ನು ಆಶ್ರಯಿಸಿ ಭೀಮಸೇನನೇ ಮೊದಲಾದ ಪಾಂಡವರು ಯುದ್ಧದಲ್ಲಿ ನನ್ನನ್ನು ಸೋಲಿಸಿದರು. ಅದು ನನ್ನ ದೇಹವನ್ನು ಒಣಗಿದ ಮರವನ್ನು ಬೆಂಕಿಯು ಸುಡುವಂತೆ ಸುಡುತ್ತಿದೆ. ಆದುದರಿಂದ ನಿನ್ನ ಪ್ರಸಾದದಿಂದ ಆಪತ್ತನ್ನು ತರುತ್ತಿರುವ ಆ ರಾಕ್ಷಸನನ್ನು ಸ್ವಯಂ ನಾನೇ ಕೊಲ್ಲಲು ಬಯಸುತ್ತೇನೆ. ನಿನ್ನನ್ನು ಆಶ್ರಯಿದ ನನಗೆ ಆ ದುರ್ಧರ್ಷವಾದುದನ್ನು ಮಾಡಲು ಬಿಡಬೇಕು.

ರಾಜನ ಆ ಮಾತನ್ನು ಕೇಳಿ ಭೀಷ್ಮ ಶಾಂತನವನು ದುರ್ಯೋಧನನಿಗೆ ಈ ಮಾತನ್ನಾಡಿದನು: ರಾಜನ್! ನಾನು ಏನು ಹೇಳುತ್ತೇನೋ ಅದನ್ನು ಕೇಳು. ಅದರಂತೆಯೇ ನೀನು ನಡೆದುಕೊಳ್ಳಬೇಕು. ಮಗೂ! ಸರ್ವಾವಸ್ಥೆಯಲ್ಲಿ ನಿನ್ನನ್ನು ನೀನು ಸದಾ ರಕ್ಷಿಸಿಕೊಳ್ಳಬೇಕು. ಸಂಗ್ರಾಮದಲ್ಲಿ ಸದಾ ಧರ್ಮರಾಜನೊಂದಿಗೆ ಅಥವಾ ಅರ್ಜುನ, ಯಮಳರು ಅಥವಾ ಪುನಃ ಭೀಮಸೇನನೊಂದಿಗೆ ಯುದ್ಧಮಾಡುವುದು ನಿನ್ನ ಕಾರ್ಯ. ರಾಜಧರ್ಮವನ್ನು ಗೌರವಿಸಿ ರಾಜನು ರಾಜನೊಂದಿಗೆ ಯುದ್ಧಮಾಡುತ್ತಾನೆ. ನಿನಗೋಸ್ಕರವಾಗಿ ಆ ಮಹಾಬಲ ರಾಕ್ಷಸನೊಂದಿಗೆ ನಾನು, ದ್ರೋಣ, ಕೃಪ, ದ್ರೌಣಿ, ಕೃತವರ್ಮ, ಶಲ್ಯ, ಸೌಮದತ್ತಿ, ವಿಕರ್ಣ, ಮತ್ತು ದುಃಶಾಸನನೇ ಮೊದಲಾದ ನಿನ್ನ ಭ್ರಾತರರು ಎದುರಿಸಿ ಯುದ್ಧಮಾಡುತ್ತೇವೆ. ಆ ರೌದ್ರ ರಾಕ್ಷಸೇಂದ್ರನ ಮೇಲೆ ಹೆಚ್ಚಿನ ಕೋಪವಿದ್ದರೆ, ಆ ದುರ್ಮತಿಯೊಂದಿಗೆ ಯುದ್ಧಮಾಡಲು ಯುದ್ಧದಲ್ಲಿ ಪುರಂದರನ ಸಮನಾದ ಈ ಮಹೀಪಾಲ ಭಗದತ್ತನಾದರೂ ಹೋಗಲಿ.

ರಾಜನಿಗೆ ಹೀಗೆ ಹೇಳಿ, ಪಾರ್ಥಿವೇಂದ್ರನ ಸಮಕ್ಷಮದಲ್ಲಿಯೇ ಆ ವಾಕ್ಯವಿಶಾರದನು ಭಗದತ್ತನಿಗೆ ಈ ಮಾತನ್ನಾಡಿದನು:ಮಹಾರಾಜ! ಶೀಘ್ರದಲ್ಲಿಯೇ ಹೋಗು! ಯುದ್ಧ ದುರ್ಮದ ಹೈಡಿಂಬನನ್ನು ರಣದಲ್ಲಿ ಸರ್ವಧನ್ವಿಗಳೂ ನೋಡುತ್ತಿರಲು, ಹಿಂದೆ ಇಂದ್ರನು ಕ್ರೂರಕರ್ಮಿ ರಾಕ್ಷಸ ತಾರಕನನ್ನು ಹೇಗೋ ಹಾಗೆ ತಡೆದು ನಿಲ್ಲಿಸು. ನಿನ್ನಲ್ಲಿ ದಿವ್ಯಾಸ್ತ್ರಗಳಿವೆ. ವಿಕ್ರಮವಿದೆ. ಈ ಮೊದಲೇ ನೀನು ಅನೇಕ ಅಸುರರೊಂದಿಗೆ ಯುದ್ಧಮಾಡಿರುವೆ. ಮಹಾಹವದಲ್ಲಿ ನೀನು ಅವನೊಂದಿಗೆ ಪ್ರತಿಯುದ್ಧಮಾಡಬಲ್ಲೆ. ಸ್ವಬಲದಿಂದ ಪರಿವೃತನಾಗಿ ರಾಕ್ಷಸಪುಂಗವನನ್ನು ಸಂಹರಿಸು!

ಸೇನಾಪತಿ ಭೀಷ್ಮನ ಈ ಮಾತನ್ನು ಕೇಳಿ ಅವನು ಸಿಂಹನಾದ ಗೈಯುತ್ತಾ ಶೀಘ್ರವಾಗಿ ಶತ್ರುಗಳನ್ನು ಎದುರಿಸಲು ಹೊರಟನು. ಮಳೆಗಾಲದ ಮೋಡದಂತೆ ಗರ್ಜಿಸುತ್ತಾ ಬರುತ್ತಿದ್ದ ಅವನನ್ನು ನೋಡಿ ಸಂಕ್ರುದ್ಧರಾದ ಮಹಾರಥ ಪಾಂಡವರು ಎದುರಿಸಿದರು. ಸುಪ್ರತೀಕದ ಮೇಲೆ ಬರುತ್ತಿದ್ದ ಭಗದತ್ತನನ್ನು ಭೀಮಸೇನ, ಅಭಿಮನ್ಯು, ರಾಕ್ಷಸ ಘಟೋತ್ಕಚ, ದ್ರೌಪದೇಯರು, ಸತ್ಯಧೃತಿ, ಕ್ಷತ್ರದೇವ, ಚೇದಿಪತಿ, ವಸುದಾನ ಮತ್ತು ದಶಾರ್ಣಾಧಿಪತಿ ಇವರು ಎದುರಿಸಿ ಯುದ್ಧ ಮಾಡಿದರು. ಆಗ ಪಾಂಡವರು ಮತ್ತು ಭಗದತ್ತನ ನಡುವೆ ಘೋರರೂಪವಾದ, ಭಯಾನಕವಾದ, ಯಮರಾಷ್ಟ್ರವನ್ನು ಹೆಚ್ಚಿಸುವ ಯುದ್ಧವು ನಡೆಯಿತು. ರಥಿಗಳು ಪ್ರಯೋಗಿಸಿದ ಭೀಮವೇಗದ ಸುತೇಜಸ ಬಾಣಗಳು ಆನೆಗಳ ಮೇಲೂ ರಥಗಳ ಮೇಲೂ ಬಿದ್ದವು. ಮಾವುತರಿಂದ ನಿರ್ದೇಶಿಸಲ್ಪಟ್ಟ ಮದಿಸಿದ ಮಹಾಗಜಗಳು ಪರಸ್ಪರರೊಡನೆ ನಿರ್ಭೀತಿಯಿಂದ ಕಾದಾಡಿದವು. ಮದಾಂಧರಾಗಿ, ರೋಷಸಂರಬ್ಧರಾಗಿ ಆ ಮಹಾಹವದಲ್ಲಿ ಒನಕೆಗಳಂತಿದ್ದ ಕೋರೆದಾಡೆಗಳಿಂದ ಪರಸ್ಪರರನ್ನು ಇರಿದು ಸೀಳುತ್ತಿದ್ದವು. ಚಾಮರಗಳನ್ನು ಕಟ್ಟಿದ್ದ, ಮೇಲೆ ಪ್ರಾಸಗಳನ್ನು ಹಿಡಿದು ಕುಳಿತಿದ್ದ ಸವಾರರಿಂದ ಪ್ರಚೋದಿತರಾಗಿ ಕುದುರೆಗಳು ಕ್ಷಿಪ್ರವಾಗಿ ಇತರ ಕುದುರೆಗಳ ಮೇಳೆ ಬೀಳುತ್ತಿದ್ದವು. ಪದಾತಿಗಳು ಶತ್ರು ಪದಾತಿಗಳ ಶಕ್ತಿ-ತೋಮರಗಳಿಂದ ಹೊಡೆಯಲ್ಪಟ್ಟು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಭೂಮಿಯಮೇಲೆ ಬಿದ್ದಿದ್ದರು. ಹಾಗೆಯೇ ರಥಿಗಳೂ ಕೂಡ ಕರ್ಣಿ, ನಾಲೀಕ ಮತ್ತು ಸಾಯಕಗಳಿಂದ ಸಮರದಲ್ಲಿ ವೀರರನ್ನು ಸಂಹರಿಸಿ ಸಿಂಹನಾದ ಮಾಡಿ ವಿನೋದಿಸುತ್ತಿದ್ದರು. ಹೀಗೆ ಅಲ್ಲಿ ಲೋಮಹರ್ಷಣ ಸಂಗ್ರಾಮವು ನಡೆಯುತ್ತಿರಲು, ಮಹೇಷ್ವಾಸ ಭಗದತ್ತನು ಭೀಮಸೇನನ ಮೇಲೆ ಧಾಳಿಮಾಡಿದನು.

ಎಲ್ಲ ಕಡೆಗಳಿಂದ ನೀರನ್ನು ಸುರಿಸುತ್ತಿರುವ ಪರ್ವತದಂತೆ ಏಳು ಕಡೆಗಳಲ್ಲಿ ಮದೋದಕವನ್ನು ಸುರಿಸುತ್ತಿರುವ ಮದಿಸಿದ ಆನೆ ಸುಪ್ರತೀಕನ ಶಿರದ ಮೇಲೆ ಕುಳಿತು ಐರಾವತದ ಮೇಲೆ ಕುಳಿತ ಇಂದ್ರನಂತೆ ಸಹಸ್ರಾರು ಶರಗಳ ಮಳೆಯನ್ನು ಸುರಿಸಿದನು. ವರ್ಷಋತುವಿನಲ್ಲಿ ಮೇಘವು ಪರ್ವತವನ್ನು ಜಲಧಾರೆಗಳಿಂದ ಮುಚ್ಚುವಂತೆ ಆ ಪಾರ್ಥಿವನು ಭೀಮನನ್ನು ಶರಧಾರೆಗಳಿಂದ ಪ್ರಹರಿಸಿದನು. ಮಹೇಷ್ವಾಸ ಭೀಮಸೇನನಾದರೂ ಸಂಕ್ರುದ್ಧನಾಗಿ ಶರವೃಷ್ಟಿಯಿಂದ ಶತ್ರುಗಳ ನೂರಾರು ಪಾದರಕ್ಷಕರನ್ನು ಸಂಹರಿಸಿದನು. ಸಂಹರಿಸುತ್ತಿದ್ದ ಅವನನ್ನು ನೋಡಿ ಪ್ರತಾಪವಾನ್ ಭಗದತ್ತನು ಗಜೇಂದ್ರನನ್ನು ಭೀಮಸೇನನ ಕಡೆ ನಡೆಸಿದನು. ಶಿಂಜಿನಿಯಿಂದ ಪ್ರಯೋಗಿಸಲ್ಪಟ್ಟ ಬಾಣದಂತೆ ಅವನಿಂದ ನಡೆಸಲ್ಪಟ್ಟ ಆ ಆನೆಯು ವೇಗದಿಂದ ಅರಿಂದಮ ಭೀಮಸೇನನ ಕಡೆ ಓಡಿಬಂದಿತು. ವೇಗದಿಂದ ಮುಂದುವರೆದು ಬರುತ್ತಿದ್ದ ಅದನ್ನು ನೋಡಿ ಪಾಂಡವ ಮಹಾರಥರು - ಕೇಕಯರು, ಅಭಿಮನ್ಯು, ದ್ಪದೇಯರೆಲ್ಲರು, ದಶಾರ್ಣಾಧಿಪತಿ, ಶೂರ ಕ್ಷತ್ರದೇವ, ಚೇದಿಪತಿ, ಚಿತ್ರಕೇತು ಇವರೆಲ್ಲರೂ ಕ್ರುದ್ಧರಾಗಿ ಭೀಮಸೇನನನ್ನು ಮುಂದಿರಿಸಿಕೊಂಡು ಅದರ ಮೇಲೆ ಆಕ್ರಮಣ ಮಾಡಿದರು. ಉತ್ತಮ ದಿವ್ಯಾಸ್ತ್ರಗಳನ್ನು ಪ್ರದರ್ಶಿಸುತ್ತಾ ಕ್ರುದ್ಧರಾದ ಆ ಮಹಾಬಲರು ಅದೇ ಒಂದು ಆನೆಯನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಅನೇಕ ಬಾಣಗಳಿಂದ ಗಾಯಗೊಂಡು ಪೀಡಿತವಾದ ಆ ಮಹಾಗಜವು ಬಣ್ಣ ಬಣ್ಣದ ಧತುಗಳನ್ನು ಸುರಿಸುವ ಪರ್ವತದಂತೆ ರಕ್ತವನ್ನು ಸುರಿಸಿತು. ಆಗ ದಶಾರ್ಣಾಧಿಪತಿಯು ಕೂಡ ಪರ್ವತೋಪಮವಾದ ಆನೆಯ ಮೇಲೆ ಕುಳಿತು ಭಗದತ್ತನ ಆನೆಯ ಕಡೆ ಧಾವಿಸಿದನು. ಸಮರದಲ್ಲಿ ಮೇಲೆ ಬೀಳಲು ಬರುತ್ತಿದ್ದ ಆ ಗಜವನ್ನು ಗಜಪತಿ ಸುಪ್ರತೀಕವು ತೀರವು ಸಮುದ್ರವನ್ನು ತಡೆಯುವಂತೆ ತಡೆದನು. ಮಹಾತ್ಮ ದಶಾರ್ಣನ ಗಜೇಂದ್ರನನ್ನು ತಡೆದುದನ್ನು ನೋಡಿ ಸಾಧು ಸಾಧು ಎಂದು ಪಾಂಡವ ಸೈನ್ಯಗಳು ಅದನ್ನು ಗೌರವಿಸಿದರು. ಆಗ ಕ್ರುದ್ಧನಾದ ಪ್ರಾಗ್ಜೋತಿಷನು ಮುಂದೆ ನಿಂತಿದ್ದ ಆನೆಯ ಮುಖಕ್ಕೆ ಹದಿನಾಲ್ಕು ತೋಮರಗಳಿಂದ ಹೊಡೆದನು. ಹಾವುಗಳು ಹುತ್ತವನ್ನು ಪ್ರವೇಶಿಸುವಂತೆ ಅವನು ಬಿಟ್ಟ ತೋಮರಗಳು ಸುವರ್ಣಮಯವಾದ ಶ್ರೇಷ್ಠ ಆನೆಯ ಕವಚವನ್ನು ಭೇದಿಸಿ ಅದರ ದೇಹದ ಒಳಹೊಕ್ಕವು.

ಆಳವಾಗಿ ಚುಚ್ಚಲ್ಪಟ್ಟು ವ್ಯಥಿತವಾದ ಆ ಆನೆಯು ಬೇಗನೇ ವೇಗವಾಗಿ ಹಿಂದೆ ಓಡಿಹೋಯಿತು. ಚಂಡಮಾರುತವು ಮರಗಳನ್ನು ಉರುಳಿಸುವಂತೆ ವೇಗದಿಂದ ಭೈರವವಾದ ಕೂಗನ್ನು ಕೂಗುತ್ತಾ ತನ್ನ ಸೇನೆಯವರನ್ನೇ ತುಳಿದು ಉರುಳಿಸುತ್ತಾ ಓಡಿ ಹೋಯಿತು. ಆ ಆನೆಯು ಪರಾಜಿತವಾದರೂ ಪಾಂಡವರ ಮಹಾರಥರು ವಿಚಲಿತರಾಗದೇ ಯುದ್ಧದಲ್ಲಿ ನಿರತರಾಗಿದ್ದರು. ಆಗ ಭೀಮನನ್ನು ಮುಂದೆಮಾಡಿಕೊಂಡು ನಾನಾ ವಿಧಧ ಬಾಣಗಳನ್ನೂ ವಿವಿಧ ಶಸ್ತ್ರಗಳನ್ನೂ ಪ್ರಯೋಗಿಸುತ್ತಾ ಭಗದತ್ತನನ್ನು ಮುತ್ತಿದರು. ಮೇಲೆ ಬೀಳುತ್ತಿರುವ ಆ ಸಂಕ್ರುದ್ಧ ಅಮರ್ಷಿಗಳ ಘೋರವಾದ ನಿನಾದವನ್ನು ಕೇಳಿ ಭಯವನ್ನಿರಿಯದ ಮಹೇಷ್ವಾಸ ಭಗದತ್ತನು ತನ್ನ ಆನೆಯನ್ನು ಪ್ರಚೋದಿಸಿದನು. ಅಂಕುಶದ ಅಂಗುಷ್ಠದಿಂದ ಒತ್ತಲ್ಪಟ್ಟ ಆ ಗಜಪ್ರವರವು ಯುದ್ಧದಲ್ಲಿ ಆ ಕ್ಷಣದಲ್ಲಿ ಸಂವರ್ತಕ ಅಗ್ನಿಯಂತಾಯಿತು. ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡುತ್ತಾ ಸಂಕ್ರುದ್ಧವಾದ ಆ ಅನೆಯು ನೂರಾರು ಸಹಸ್ರಾರು ರಥಸಂಘಗಳನ್ನೂ, ಸವಾರರೊಂದಿಗೆ ಕುದುರೆಗಳನ್ನೂ, ಪದಾತಿಗಳನ್ನೂ ತುಳಿದು ಹಾಕಿತು. ಅದರಿಂದ ವಿನಾಶಗೊಂಡ ಪಾಂಡವರ ಆ ಮಹಾ ಸೇನೆಯು ಬೆಂಕಿಯಿಂದ ಸುಡಲ್ಪಟ್ಟ ಚರ್ಮದಲ್ಲಿ ಸಂಕೋಚಗೊಂಡಿತು. ಧೀಮತ ಭಗದತ್ತನಿಂದ ತನ್ನ ಸೇನೆಯು ಭಗ್ನವಾದುದನ್ನು ನೋಡಿ ಸಂಕ್ರುದ್ಧನಾದ ಘಟೋತ್ಕಚನು ಭಗದತ್ತನನ್ನು ಆಕ್ರಮಣಿಸಿದನು.

ವಿಕಟ ಪುರುಷನಾಗಿ, ದೀಪ್ತ ಮುಖವುಳ್ಳವನಾಗಿ, ದೀಪ್ತಲೋಚನನಾಗಿ, ರೋಷದಿಂದ ಪ್ರಜ್ವಲಿಸುತ್ತಿರುವಂತಹ ವಿಭೀಷಣ ರೂಪವನ್ನು ತಾಳಿ ಆ ಮಹಾಬಲನು ಗಿರಿಗಳನ್ನೂ ಸೀಳಬಲ್ಲಂತಹ ವಿಪುಲ ಶೂಲವನ್ನು ಹಿಡಿದು ಆ ಆನೆಯನ್ನು ಕೊಲ್ಲಲು ವೇಗವಾಗಿ ಅದರ ಮೇಲೆ ಎಸೆದನು. ಎಲ್ಲ ಕಡೆಗಳಿಂದಲೂ ಬೆಂಕಿಯ ಕಿಡಿಗಳಿಂದ ಸುತ್ತುವರೆದು ವೇಗವಾಗಿ ಬೀಳುತ್ತಿದ್ದ ಆ ಜ್ವಾಲಾರಾಶಿಯನ್ನು ರಣದಲ್ಲಿ ನೋಡಿ ಪಾರ್ಥಿವನು ತೀಕ್ಷ್ಣವಾದ ಸುಂದರವಾದ ಅರ್ಧಚಂದ್ರವನ್ನು ಪ್ರಯೋಗಿಸಿ ವೇಗವಾದ ಬಾಣದಿಂದ ಆ ಮಹಾಶೂಲವನ್ನು ತುಂಡರಿಸಿದನು. ಆ ಹೇಮಪರಿಷ್ಕೃತವಾದ ಶೂಲವು ಎರಡಾಗಿ ಆಕಾಶದಲ್ಲಿ ಶಕ್ರನು ಬಿಟ್ಟ ವಜ್ರವು ವ್ಯರ್ಥವಾಗಿ ಆಕಾಶದಲ್ಲಿ ಹೋಗುವಂತೆ ಕೆಳಗೆ ಬಿದ್ದಿತು. ಕತ್ತರಿಸಲ್ಪಟ್ಟ ಆ ಶೂಲವು ಎರಡಾಗಿ ಬಿದ್ದುದನ್ನು ನೋಡಿ ಪಾರ್ಥಿವನು ಬಂಗಾರದ ದಂಡವುಳ್ಳ ಅಗ್ನಿಶಿಖೆಯಂತಿರುವ ಮಹಾಶಕ್ತಿಯನ್ನು ಹಿಡಿದು ಅದನ್ನು ರಾಕ್ಷಸನ ಮೇಲೆ ಎಸೆದು “ನಿಲ್ಲು! ನಿಲ್ಲು!” ಎಂದನು. ವಜ್ರಾಯುಧದಂತೆ ತನ್ನ ಮೇಲೆ ಬೀಳುತ್ತಿರುವ ಅದನ್ನು ನೋಡಿ ರಾಕ್ಷಸನು ತಕ್ಷಣವೇ ಹಾರಿ ಅದನ್ನು ಹಿಡಿದು ನಕ್ಕನು. ಬೇಗನೇ ಅದನ್ನು ತೊಡೆಯಮೇಲಿರಿಸಿ ಒತ್ತಿ ಮುರಿದುದನ್ನು ನೋಡುತ್ತಿದ್ದ ಪಾರ್ಥಿವೇಂದ್ರರಿಗೆ ಅದೊಂದು ಅದ್ಭುತವೆನಿಸಿತು.

ರಾಕ್ಷಸನು ಆ ಬಲಶಾಲಿ ಕರ್ಮವನ್ನು ಮಾಡಿದುದನ್ನು ನೋಡಿ ದಿವಿಯಲ್ಲಿ ಗಂಧರ್ವರೊಂದಿಗೆ ದೇವತೆಗಳೂ, ಮುನಿಗಳೂ ವಿಸ್ಮಿತರಾದರು. ಭೀಮಸೇನನೇ ಮೊದಲಾದ ಪಾಂಡವ ಮಹೇಷ್ವಾಸರು ಸಾಧು ಸಾಧು ಎಂಬ ಕೂಗಿನಿಂದ ಭೂಮಿಯನ್ನೇ ಮೊಳಗಿಸಿದರು. ಪ್ರಹೃಷ್ಟರಾದ ಮಹಾತ್ಮರ ಆ ಮಹಾನಾದವನ್ನು ಕೇಳಿದ ಪ್ರತಾಪವಾನ್ ಮಹೇಷ್ವಾಸ ಭಗದತ್ತನು ಸಹಿಸಲಾರದೇ ಹೋದನು. ಇಂದ್ರನ ವಜ್ರಾಯುಧದಂತೆ ಮೊಳಗುತ್ತಿದ್ದ ಮಹಾಚಾಪವನ್ನು ಟೇಂಕರಿಸಿ ಅವನು ಮಿವಲ ತೀಕ್ಷ್ಣ ಜ್ವಲನಪ್ರಭೆಗಳುಳ್ಳ ನಾರಾಚಗಳನ್ನು ಪ್ರಯೋಗಿಸುತ್ತಾ ವೇಗದಿಂದ ಪಾಂಡವರ ಮಹಾರಥರ ಮೇಲೆ ಎರಗಿದನು. ಭೀಮನನ್ನು ಒಂದರಿಂದ, ರಾಕ್ಷಸನನ್ನು ಒಂಭತ್ತು ಶರಗಳಿಂದ, ಅಭಿಮನ್ಯುವನ್ನು ಮೂರರಿಂದ ಮತ್ತು ಕೇಕಯರನ್ನು ಐದರಿಂದ ಹೊಡೆದನು. ಶಿಂಜಿನಿಯನ್ನು ಕರ್ಣಪರ್ಯಂತವಾಗಿ ಎಳೆದು ಸ್ವರ್ಣಪುಂಖಗಳಿರುವ ಪತ್ರಿಯಿಂದ ಆಹವದಲ್ಲಿ ಕ್ಷತ್ರದೇವನ ಬಲತೋಳನ್ನು ಕತ್ತರಿಸಿದನು. ಕೂಡಲೇ ಅವನ ಉತ್ತಮ ಧನುವು ಬಾಣದೊಂದಿಗೆ ಕೆಳಗೆ ಬಿದ್ದಿತು. ಅನಂತರ ಐದು ಬಾಣಗಳಿಂದ ಐವರು ದ್ರೌಪದೇಯರನ್ನು ಹೊಡೆದು ಕ್ರೋಧದಿಂದ ಭೀಮಸೇನನ ಕುದುರೆಗಳನ್ನು ಸಂಹರಿಸಿದನು.

ಅವನ ಕೇಸರಿ ಧ್ವಜವನ್ನು ಮೂರು ವಿಶಿಖಗಳಿಂದ ತುಂಡರಿಸಿದನು ಮತ್ತು ಅನ್ಯ ಮೂರು ಪತ್ರಿಗಳಿಂದ ಅವನ ಸಾರಥಿಯನ್ನು ಹೊಡೆದನು. ಭಗದತ್ತನಿಂದ ಸಂಯುಗದಲ್ಲಿ ಗಾಢವಾದ ಪೆಟ್ಟುತಿಂದು ವ್ಯಥಿತನಾದ ವಿಶೋಕನು ರಥದಲ್ಲಿಯೇ ಕುಳಿತುಕೊಂಡನು. ಆಗ ರಥಿಗಳಲ್ಲಿ ಶ್ರೇಷ್ಠನಾದ ಭೀಮನು ರಥವಿಲ್ಲದವನಾಗಿ ಗದೆಯನ್ನು ಹಿಡಿದು ವೇಗದಿಂದ ಆ ಮಹಾರಥದಿಂದ ಕೆಳಗೆ ಧುಮುಕಿದನು. ಶೃಂಗದಿಂದೊಡಗೂಡಿದ ಪರ್ವತದಂತಿರುವ ಅವನು ಧಾವಿಸಿ ಬರುತ್ತಿರುವುದನ್ನು ನೋಡಿ ಕೌರವರಲ್ಲಿ ಘೋರ ಭಯವುಂಟಾಯಿತು.

ಇದೇ ಸಮಯದಲ್ಲಿ ಕೃಷ್ಣಸಾರಥಿ ಪಾಂಡವನು ಸಹಸ್ರಾರು ಶತ್ರುಗಳನ್ನು ಸಂಹರಿಸಿ, ಪ್ರಾಗ್ಜ್ಯೋತಿಷನೊಂದಿಗೆ ಎಲ್ಲಿ ಪುರುಷವ್ಯಾಘ್ರ, ಪರಂತಪ, ತಂದೆ-ಮಗ ಭೀಮಸೇನ-ಘಟೋತ್ಕಚರು ಯುದ್ಧದಲ್ಲಿ ತೊಡಗಿದ್ದರೋ ಅಲ್ಲಿಗೆ ಆಗಮಿಸಿದನು. ಯುದ್ಧಮಾಡುತ್ತಿರುವ ಆ ಮಹಾರಥರನ್ನು ನೋಡಿ ಪಾಂಡವನು ತ್ವರೆಮಾಡಿ ಅಲ್ಲಿ ಶರಗಳನ್ನು ತೂರಿದನು. ಆಗ ಮಹಾರಥ ರಾಜಾ ದುರ್ಯೋಧನನು ತ್ವರೆಮಾಡಿ ತನ್ನ ರಥ-ಆನೆ-ಅಶ್ವಸಂಕುಲಗಳ ಸೇನೆಯನ್ನು ಕ್ಷಿಪ್ರವಾಗಿ ಪ್ರೇರೇಪಿಸಿದನು. ತನ್ನ ಮೇಲೆ ಒಮ್ಮೆಲೇ ಬೀಳುತ್ತಿದ್ದ ಕೌರವರ ಆ ಮಹಾಸೇನೆಯನ್ನು ವೇಗದಿಂದ ಶ್ವೇತವಾಹನ ಪಾಂಡವನು ಎದುರಿಸಿದನು. ಭಗದತ್ತನೂ ಕೂಡ ತನ್ನ ಆನೆಯಿಂದ ಪಾಂಡವ ಸೇನೆಯನ್ನು ಧ್ವಂಸಮಾಡಿ ಯುಧಿಷ್ಠಿರನ ಸಮೀಪಕ್ಕೆ ಹೋದನು. ಆಗ ಆಯುಧಗಳನ್ನು ಎತ್ತಿ ಹಿಡಿದಿದ್ದ ಪಾಂಚಾಲ-ಸೃಂಜಯ-ಕೇಕಯರೊಂಡನೆ ಭಗದತ್ತನ ತುಮುಲ ಯುದ್ಧವು ನಡೆಯಿತು. ಸಮರದಲ್ಲಿ ಭೀಮಸೇನನೂ ಕೂಡ ಕೇಶವಾರ್ಜುನರಿಬ್ಬರಿಗೂ ಉತ್ತಮ ಇರಾವತನ ವಧೆಯ ವೃತ್ತಾಂತವನ್ನು ಕೇಳಿಸಿದನು.

ಎಂಟನೇ ದಿನದ ಯುದ್ಧ ಸಮಾಪ್ತಿ

ಮಗ ಇರಾವತನ ಮರಣವನ್ನು ಕೇಳಿ ದುಃಖದಿಂದ ಮಹಾ ಆವಿಷ್ಟನಾಗಿ ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಅರ್ಜುನನು ವಾಸುದೇವನಿಗೆ ಹೇಳಿದನು:ಇದನ್ನೇ ಮಹಾಪ್ರಾಜ್ಞ ವಿದುರನು ಹಿಂದೆ ನೋಡಿದ್ದನು. ಕುರುಗಳ ಮತ್ತು ಪಾಂಡವರ ಘೋರಕ್ಷಯವಾಗುತ್ತದೆಯೆಂದು ಆ ಮಹಾಮತಿಯು ಜನೇಶ್ವರ ಧೃತರಾಷ್ಟ್ರನನ್ನು ತಡೆಯುತ್ತಿದ್ದನು. ಮಧುಸೂದನ! ಸಂಗ್ರಾಮದಲ್ಲಿ ಅವಧ್ಯರಾದ ಅನೇಕ ವೀರರು ಹೋರಾಡುವಾಗ ಕೌರವರಿಂದ ಮತ್ತು ನಮ್ಮಿಂದ ಹತರಾಗಿದ್ದಾರೆ. ಧನಕ್ಕಾಗಿ ಕುತ್ಸಿತ ಕರ್ಮಗಳನ್ನು ಮಾಡಲಾಗುತ್ತದೆ. ಯಾವುದಕ್ಕಾಗಿ ಈ ಜ್ಞಾತಿಸಂಕ್ಷಯವು ನಡೆಯುತ್ತಿದೆಯೋ ಆ ಧನಕ್ಕೆ ಧಿಕ್ಕಾರ. ಜ್ಞಾತಿವಧೆಯಿಂದ ಗಳಿಸಿದ ಧನಕ್ಕಿಂತಲೂ ಅಧನನ ಮೃತ್ಯುವು ಶ್ರೇಯಸ್ಕರವಾದುದು. ಇಲ್ಲಿ ಸೇರಿರುವ ಬಾಂಧವರನ್ನು ಕೊಂದು ನಾವು ಏನನ್ನು ಪಡೆಯಲಿದ್ದೇವೆ? ದುರ್ಯೋಧನ ಮತ್ತು ಸೌಬಲ ಶಕುನಿಯರ ಅಪರಾಧದಿಂದ ಮತ್ತು ಕರ್ಣನ ದುರ್ಮಂತ್ರದಿಂದ ಕ್ಷತ್ರಿಯರು ಸಾಯುತ್ತಿದ್ದಾರೆ. ಅಂದು ರಾಜನು ಅರ್ಧ ರಾಜ್ಯವನ್ನಾಗಲೀ ಅಥವಾ ಐದು ಗ್ರಾಮಗಳನ್ನಾಗಲೀ ಬೇಡಿದ ಸುಕೃತವು ಇಂದು ನನಗೆ ಅರ್ಥವಾಗುತ್ತಿದೆ. ಆದರೆ ದುರ್ಮತಿ ದುರ್ಯೋಧನನು ಅದಕ್ಕೂ ಒಪ್ಪಿಕೊಳ್ಳಲಿಲ್ಲ. ಧರಣೀತಲದಲ್ಲಿ ಮಲಗಿರುವ ಕ್ಷತ್ರಿಯ ಶೂರರನ್ನು ನೋಡಿ ನನ್ನನ್ನೇ ನಿಂದಿಸಿಕೊಳ್ಳುತ್ತೇನೆ. ಈ ಕ್ಷತ್ರಿಯ ಜೀವನಕ್ಕೆ ಧಿಕ್ಕಾರ! ರಣದಲ್ಲಿ ಕ್ಷತ್ರಿಯರು ನನ್ನನ್ನು ಅಶಕ್ತನೆಂದೇ ತಿಳಿದುಕೊಳ್ಳಬಹುದು. ಬಾಂಧವರೊಡನೆ ಯುದ್ಧಮಾಡುವುದು ನನಗೆ ಇಷ್ಟವಾಗುವುದಿಲ್ಲ. ಬೇಗನೆ ಕುದುರೆಗಳನ್ನು ಧಾರ್ತರಾಷ್ಟ್ರರ ಸೇನೆಯ ಕಡೆ ಓಡಿಸು. ಸಮರವೆಂಬ ಈ ಮಹಾಸಾಗರವನ್ನು ಭುಜಗಳೆರಡರಿಂದ ಈಸಿ ದಾಟುತ್ತೇನೆ. ಇದು ವ್ಯರ್ಥವಾಗಿ ಕಾಲಕಳೆಯುವ ಸಮಯವಲ್ಲ.

ಪಾರ್ಥನು ಹೀಗೆ ಹೇಳಲು ಪರವೀರಹ ಕೇಶವನು ಗಾಳಿಯ ವೇಗವುಳ್ಳ ಆ ಬಿಳೀ ಕುದುರೆಗಳನ್ನು ಓಡಿಸಿದನು. ಆಗ ಹುಣ್ಣಿಮೆಯ ದಿನ ಗಾಳಿಯು ಬೀಸುವುದರಿಂದ ವೇಗವಾಗಿ ಉಕ್ಕಿಬರುವ ಸಮುದ್ರದಂತೆ ಕೌರವ ಸೇನೆಯಲ್ಲಿ ಮಹಾ ಕೋಲಾಹಲ ಶಬ್ಧವುಂಟಾಯಿತು. ಅಪರಾಹ್ಣದಲ್ಲಿ ಮೇಘಗರ್ಜನೆಗೆ ಸಮಾನವಾದ ಬೀಷ್ಮ-ಪಾಂಡವರ ನಡುವಿನ ಯುದ್ಧವು ಪ್ರರಂಭವಾಯಿತು. ಆಗ ವಾಸವನನ್ನು ವಸುಗಳಂತೆ ಧೃತರಾಷ್ಟ್ರನ ಸುತರು ದ್ರೋಣನನ್ನು ಸುತ್ತುವರೆದುಕೊಂಡು ಭೀಮಸೇನನನ್ನು ಎದುರಿಸಿದರು. ಆಗ ಶಾಂತನವ ಭೀಷ್ಮ, ರಥಿಗಳಲ್ಲಿ ಶ್ರೇಷ್ಠ ಕೃಪ, ಭಗದತ್ತ ಮತ್ತು ಸುಶರ್ಮರು ಅರ್ಜುನನ ಮೇಲೆ ಎರಗಿದರು. ಹಾರ್ದಿಕ್ಯ-ಬಾಹ್ಲೀಕರು ಸಾತ್ಯಕಿಯನ್ನು ಎದುರಿಸಿದರು. ನೃಪತಿ ಅಂಬಷ್ಠಕನು ಅಭಿಮನ್ಯುವನ್ನು ತಡೆದನು. ಉಳಿದವರು ಅನ್ಯ ಮಹಾರಥರನ್ನು ಎದುರಿಸಲು ಆಗ ಘೋರರೂಪವಾದ, ಭಯಾವಹವಾದ ಯುದ್ಧವು ನಡೆಯಿತು. ಧೃತರಾಷ್ಟ್ರನ ಪುತ್ರರನ್ನು ನೋಡಿ ಭೀಮಸೇನನು ರಣದಲ್ಲಿ ಆಹುತಿಯಿಂದ ಯಜ್ಞೇಶ್ವರನಂತೆ ಕ್ರುದ್ಧನಾಗಿ ಭುಗಿಲೆದ್ದನು. ಧೃತರಾಷ್ಟ್ರನ ಪುತ್ರರಾದರೋ ಮೋಡಗಳು ಪರ್ವತವನ್ನು ಹೇಗೋ ಹಾಗೆ ಕೌಂತೇಯನನ್ನು ಶರಗಳ ಮಳೆಯಿಂದ ಮುಚ್ಚಿದರು. ಧೃತರಾಷ್ಟ್ರನ ಪುತ್ರರಿಂದ ಬಹಳವಾಗಿ ಮುಚ್ಚಲ್ಪಟ್ಟ ಆ ವೀರ ದರ್ಪಿತನು ಹುಲಿಯಂತೆ ಕಟವಾಯಿಗಳನ್ನು ನೆಕ್ಕಿದನು. ಆಗ ಭೀಮನು ತೀಕ್ಷ್ಣವಾದ ಕ್ಷುರಪ್ರದಿಂದ ವ್ಯೋಢರಸ್ಕನ್ನು ಉರುಳಿಸಲು ಅವನು ಗತಜೀವಿತನಾದನು. ಇನ್ನೊಂದು ಹಳದಿ ಬಣ್ಣದ ನಿಶಿತ ಭಲ್ಲದಿಂದ ಕ್ಷುದ್ರಮೃಗವನ್ನು ಸಿಂಹವು ಹೇಗೋ ಹಾಗೆ ಕುಂಡಲಿನಿಯನ್ನು ಬೀಳಿಸಿದನು. ತಕ್ಷಣವೇ ನಿಶಿತವಾದ ಹಳದೀ ಬಣ್ಣದ ಶಿಲೀಮುಖಗಳನ್ನು ತೆಗೆದುಕೊಂಡು ಅವನು ಧೃತರಾಷ್ಟ್ರನ ಏಳು ಮಕ್ಕಳಿಗೆ ಗುರಿಯಿಟ್ಟು ಹೊಡೆದನು. ಆ ದೃಢಧನ್ವಿ ಭೀಮಸೇನನು ಪ್ರಯೋಗಿಸಿದ ಶರಗಳು ತಾಗಿ ಧೃತರಾಷ್ಟ್ರನ ಸುಮಹಾರಥ ಮಕ್ಕಳು - ಅನಾಧೃಷ್ಟಿ, ಕುಂಡಭೇದ, ವೈರಾಟ, ದೀರ್ಘಲೋಚನ, ದೀರ್ಘಬಾಹು, ಸುಬಾಹು, ಮತ್ತು ಕನಕಧ್ವಜ - ರಥಗಳಿಂದ ಬಿದ್ದರು. ಬೀಳುವಾಗ ಆ ವೀರರು ವಸಂತಕಾಲದಲ್ಲಿ ಗಳಿದ ಶಬಲಪುಷ್ಪಗಳಂತೆ ಶೋಭಿಸುತ್ತಿದ್ದರು. ಆಗ ಮಹಾಬಲ ಭೀಮಸೇನನನ್ನು ಕಾಲನೆಂದು ಅಭಿಪ್ರಾಯಪಟ್ಟು ಉಳಿದ ಧೃತರಾಷ್ಟ್ರನ ಮಕ್ಕಳು ಪಲಾಯನಗೈದರು. ಧೃತರಾಷ್ಟ್ರನ ಮಕ್ಕಳನ್ನು ದಹಿಸುತ್ತಿದ್ದ ಆ ವೀರನನ್ನು ದ್ರೋಣನು ನೀರಿನ ಮಳೆಯಿಂದ ಗಿರಿಯನ್ನು ಹೇಗೋ ಹಾಗೆ ಎಲ್ಲ ಕಡೆಗಳಿಂದ ಶರಗಳಿಂದ ಮುಚ್ಚಿದನು. ದ್ರೋಣನು ತಡೆಯುತ್ತಿದ್ದರೂ ಧೃತರಾಷ್ಟ್ರನ ಪುತ್ರರೊಂದಿಗೆ ಹೋರಾಡುತ್ತಿದ್ದ ಕುಂತೀಪುತ್ರನ ಅದ್ಭುತ ಪೌರುಷವು ಅಲ್ಲಿ ಕಂಡಿತು. ಮಳೆಯು ಸುರಿಯುತ್ತಿದ್ದರೂ ಗೂಳಿಯೊಂದು ಹೇಗೆ ಅದನ್ನು ಸಹಿಸಿಕೊಳ್ಳುತ್ತದೆಯೋ ಹಾಗೆ ದ್ರೋಣನು ಪ್ರಯೋಗಿಸಿದ ಶರವರ್ಷವನ್ನು ಭೀಮನು ತಡೆದುಕೊಂಡನು. ಯುದ್ಧದಲ್ಲಿ ಧೃತರಾಷ್ಟ್ರನ ಪುತ್ರರನ್ನು ವಧಿಸಿದ್ದುದು ಮತ್ತು ದ್ರೋಣನು ಮುಂದುವರೆಯದಂತೆ ತಡೆಗಟ್ಟಿದುದು - ಇದು ಅಲ್ಲಿ ವೃಕೋದರನು ನಡೆಸಿದ ಅದ್ಭುತವಾಗಿತ್ತು. ಮಹಾಬಲಿಷ್ಟ ವ್ಯಾಘ್ರವು ಮೃಗಗಳ ಹಿಂಡುಗಳ ಮಧ್ಯೆ ಸಂಚರಿಸುವಂತೆ ಅರ್ಜುನಪೂರ್ವಜನು ವೀರರಾದ ಧೃತರಾಷ್ಟ್ರನ ಮಕ್ಕಳ ನಡುವೆ ಆಟವಾಡುತ್ತಿದ್ದನು. ಪಶುಗಳ ಮಧ್ಯೆ ನಿಂತು ತೋಳವು ಹೇಗೆ ಪಶುಗಳನ್ನು ಓಡಿಸುತ್ತದೆಯೋ ಹಾಗೆ ವೃಕೋದರನು ಧೃತರಾಷ್ಟ್ರನ ಸುತರನ್ನು ರಣದಿಂದ ಓಡಿಸಿದನು. ಗಾಂಗೇಯ, ಭಗದತ್ತ ಮತ್ತು ಮಹಾರಥ ಗೌತಮರು ರಭಸದಿಂದ ಯುದ್ಧಮಾಡುತ್ತಿದ್ದ ಅರ್ಜುನ ಪಾಂಡವನನ್ನು ತಡೆದರು.

ಅವರ ಅಸ್ತ್ರಗಳನ್ನು ಅಸ್ತ್ರಗಳಿಂದ ನಿವಾರಣೆಗೊಳಿಸುತ್ತಾ ಆ ಅತಿರಥನು ರಣದಲ್ಲಿ ಕೌರವ ಸೇನೆಯ ಪ್ರವೀರರನ್ನು ಮೃತ್ಯುವಿಗೆ ಕಳುಹಿಸಿದನು. ಅಭಿಮನ್ಯುವಾದರೋ ಲೋಕವಿಶ್ರುತನಾದ ರಥಿಗಳಲ್ಲಿ ಶ್ರೇಷ್ಠ ರಾಜಾ ಅಂಬಷ್ಠನನ್ನು ಸಾಯಕಗಳಿಂದ ವಿರಥನನ್ನಾಗಿ ಮಾಡಿದನು. ವಿರಥನಾಗಿ ಯಶಸ್ವಿ ಸೌಭದ್ರನಿಂದ ವಧಿಸಲ್ಪಡುತ್ತಿದ್ದ ಮನುಜಾಧಿಪನು ನಾಚಿ ತಕ್ಷಣವೇ ರಥದಿಂದ ಕೆಳಗೆ ಹಾರಿ, ಸೌಭದ್ರನ ಮೇಲೆ ಖಡ್ಗವನ್ನು ಎಸೆದು ಹಾರ್ದಿಕ್ಯನ ರಥವನ್ನೇರಿದನು. ಯುದ್ಧ ಮಾರ್ಗವಿಶಾರದನಾದ ಪರವೀರಹ ಸೌಭದ್ರನು ಬೀಳುತ್ತಿರುವ ಆ ಖಡ್ಗದ ಮಾರ್ಗವನ್ನೇ ಚಳಕಂದಿಂದ ಬದಲಾಯಿಸಿದನು. ರಣದಲ್ಲಿ ಆ ಖಡ್ಗವನ್ನು ತಪ್ಪಿಸಿದುದನ್ನು ನೋಡಿ ಸೈನ್ಯಗಳಲ್ಲಿ ಸೌಭದ್ರನನ್ನು ಹೊಗಳಿ “ಸಾಧು! ಸಾಧು!” ಎಂಬ ಕೂಗು ಕೇಳಿಬಂದಿತು. ಧೃಷ್ಟದ್ಯುಮ್ನನನ್ನು ಮುಂದಿಟ್ಟುಕೊಂಡು ಅನ್ಯರು ಕೌರವ ಸೇನೆಯೊಡನೆ ಯುದ್ಧ ಮಾಡಿದರು. ಹಾಗೆಯೇ ಕೌರವರೆಲ್ಲರೂ ಪಾಂಡವಸೇನೆಯೊಂದಿಗೆ ಯುದ್ಧ ಮಾಡಿದರು. ಅನ್ಯೋನ್ಯರನ್ನು ಕೊಲ್ಲುವ ದುಷ್ಕರ ಕರ್ಮವನ್ನು ಮಾಡುತ್ತಿದ್ದ ಕೌರವರು ಮತ್ತು ಅವರಲ್ಲಿ ಮಹಾ ಆಕ್ರಂದನವುಂಟಾಯಿತು. ರಣದಲ್ಲಿ ಶೂರರು ಅನ್ಯೋನ್ಯರ ಕೂದಲನ್ನು ಎಳೆದು, ಉಗುರು, ಹಲ್ಲು, ಆಯುಧ, ಮುಷ್ಟಿ, ತೊಡೆ, ತೋಳು, ಅಂಗೈ ಮತ್ತು ಹರಿತ ಖಡ್ಗಗಳಿಂದ ಸಮಯ ನೋಡಿ ಅನ್ಯೋನ್ಯರನ್ನು ಯಮಸಾದನಕ್ಕೆ ಕಳುಹಿಸುತ್ತಿದ್ದರು. ತಂದೆಯು ಮಗನನ್ನೂ ಮಗನು ತಂದೆಯನ್ನೂ ಕೊಲ್ಲುತ್ತಿದ್ದರು. ವ್ಯಾಕುಲರಾಗಿದ್ದರೂ ಅಲ್ಲಿ ಜನರು ಕೊನೆಯವರೆಗೂ ಹೋರಾಡುತ್ತಿದ್ದರು. ಹತರಾದವರಿಂದ ಕೆಳಗೆ ಬಿದ್ದಿದ್ದ ಸುಂದರವಾದ ಬಂಗಾರದ ಬೆನ್ನುಳ್ಳ ಧನುಸ್ಸುಗಳು, ಅಮೂಲ್ಯವಾದ ಬತ್ತಳಿಕೆಗಳೂ, ಸುವರ್ಣಮಯವಾದ, ರಜತಮಯವಾದ, ರೆಕ್ಕೆಗಳಿಂದ ಕೂಡಿದ್ದ ಎಣ್ಣೆಯಲ್ಲಿ ನೆನೆಸಿದ್ದ ನಿಶಿತ ಬಾಣಗಳು ರಣದಲ್ಲಿ ಬಿದ್ದಿದ್ದು ಪೊರೆಯನ್ನು ಬಿಟ್ಟ ಸರ್ಪಗಳಂತೆ ಪ್ರಕಾಶಿಸುತ್ತಿದ್ದವು. ಆನೆಯ ದಂತದ ಹಿಡಿಯುಳ್ಳ ಬಂಗಾರದಿಂದ ಅಲಂಕರಿಸಲ್ಪಟ್ಟ ಖಡ್ಗಗಳನ್ನು, ಧನುಷ್ಮಂತರ ಬಂಗಾರದ ಹಿಡಿಯುಳ್ಳ ಅನೇಕ ಗುರಾಣಿಗಳನ್ನೂ, ಚಾಪಗಳನ್ನೂ, ಬಂಗಾರದಿಂದ ಮಾಡಲ್ಪಟ್ಟಿದ್ದ ಪ್ರಾಸಗಳನ್ನೂ, ಹೇಮಭೂಷಿತ ಪಟ್ಟಿಶಗಳನ್ನೂ, ಬಂಗಾರಮಯವಾದ ಋಷ್ಟಿಗಳನ್ನೂ, ಕನಕೋಜ್ವಲ ಶಕ್ತಿಗಳನ್ನೂ, ಮುರಿದು ಬಿದ್ದಿರುವ ಭಾರವಾದ ಮುಸಲಗಳನ್ನೂ, ಪರಿಘಗಳನ್ನೂ, ಪಟ್ಟಿಶಗಳನ್ನೂ, ಬಿಂಡಿಪಾಲಗಳನ್ನೂ, ಬಿದ್ದಿರುವ ಬಂಗಾರದಿಂದ ಮಾಡಲ್ಪಟ್ಟಿದ್ದ ಬಣ್ಣ ಬಣ್ಣದ ತೋಮರಗಳನ್ನೂ, ನಾನಾ ಅಳತೆಯ ಆನೆಯ ಮೇಲೆ ಹೊದಿಸುವ ಚಿತ್ರಗಂಬಳಿಗಳನ್ನೂ, ಚಾಮರ-ವ್ಯಜನಗಳನ್ನೂ ರಣದಲ್ಲಿ ನೋಡಬಹುದಾಗತ್ತು. ನಾನಾ ವಿಧದ ಶಸ್ತ್ರಗಳನ್ನು ಬಿಸುಟು ಬಿದ್ದಿದ್ದ ಮಹಾರಥ ನರರು ಗತಾಸುಗಳಾಗಿದ್ದರೂ ಜೀವಂತರಾಗಿರುವಂತೆ ಕಾಣುತ್ತಿದ್ದರು. ಭೂಮಿಯ ಮೇಲೆ ಬಿದ್ದಿದ್ದ ಯೋಧರಲ್ಲಿ ಕೆಲವರು ಗದೆಯಿಂದ ಜಜ್ಜಿಹೋಗಿದ್ದರು. ಕೆಲವರ ತಲೆಗಳು ಮುಸಲಗಳಿಂದ ಒಡೆಯಲ್ಪಟ್ಟಿದ್ದವು. ಕೆಲವರು ರಥ, ಆನೆ, ಕುದುರೆಗಳಿಂದ ತುಳಿಯಲ್ಪಟ್ಟಿದ್ದರು. ಹಾಗೆಯೇ ಅಶ್ವ-ಪದಾತಿ-ಗಜಗಳ ಶರೀರಗಳಿಂದ ತುಂಬಿಹೋಗಿದ್ದ ರಣಾಂಗಣವು ಪರ್ವತಗಳಿಂದ ತುಂಬಿದೆಯೋ ಎನ್ನುವಂತೆ ತೋರುತ್ತಿತ್ತು. ಸಮರದಲ್ಲಿ ಬಿದ್ದ ಶಕ್ತಿ, ಋಷ್ಟಿ, ಶರ, ತೋಮರ, ಖಡ್ಗ, ಪಟ್ಟಿಶ, ಪ್ರಾಸ, ಅಯಸ್ಕುಂತ (ಲೋಹದಂಡ, ಹಾರೆ), ಪರಶು, ಪರಿಘ, ಭಿಂಡಿಪಾಲ, ಶತಘ್ನೀ ಮತ್ತು ಹಾಗೆಯೇ ಶಸ್ತ್ರಗಳಿಂದ ತುಂಡಾದ ಶರೀರಗಳಿಂದ ರಣಭೂಮಿಯು ತುಂಬಿಹೋಗಿತ್ತು. ದೇಹವು ರಕ್ತದಿಂದ ತೋಯ್ದುಹೋಗಿರುವ, ನಿಃಶಬ್ಧರಾಗಿರುವ, ಅಲ್ಪ ಶಬ್ದಮಾಡುತ್ತಿರುವವರ, ಸತ್ತವರ ಶರೀರಗಳಿಂದ ಭೂಮಿಯು ತುಂಬಿಹೋಗಿತ್ತು. ಕೈಚೀಲಗಳೊಡನೆ, ಕೇಯೂರಗಳಿಂದ ಅಲಂಕೃತವಾದ ಚಂದನವನ್ನು ಬಳಿದುಕೊಂಡಿರುರುವ ತೋಳುಗಳೊಡನೆ, ಆನೆಯ ಸೊಂಡಿಲುಗಳಂತಿರುವ ತೊಡೆಗಳ ತರಸ್ವಿಗಳ, ಚೂಡಾಮಣಿಗಳನ್ನು ಕಟ್ಟಿ ಧರಿಸಿರುವ ಕುಂಡಲಗಳೊಂದಿರುವ ಕೆಳಗೆ ಬಿದ್ದಿರುವ ವೃಷಭಾಕ್ಷರ ಶಿರಗಳು ಮೇದಿನಿಯನ್ನು ತುಂಬಿದ್ದವು. ಅಲ್ಲಲ್ಲಿ ಹರಡಿದ್ದ ರಕ್ತದಿಂದ ತೋಯ್ದ ಕಾಂಚನ ಕವಚಗಳಿಂದ ಭೂಮಿಯು ಜ್ವಾಲೆಯಿಲ್ಲದೇ ಬರೀ ಕೆಂಡಗಳೇ ಉಳಿದಿರುವ ಅಗ್ನಿಗಳಂತೆ ಶೋಭಿಸಿತು. ಎಸೆಯಲ್ಪಟ್ಟಿದ್ದ ಬತ್ತಳಿಕೆಗಳಿಂದಲೂ, ಬಿದ್ದಿದ್ದ ಧನುಸ್ಸುಗಳಿಂದಲೂ, ಎಲ್ಲಕಡೆ ಹರಡಿದ್ದ ರುಕ್ಮಪುಂಖ ಶರಗಳಿಂದಲೂ, ಭಗ್ನಗೊಂಡಿದ್ದ ಹಲವಾರು ಕಿಂಕಿಣೀಮಾಲೆಗಳಿಂದ ಕೂಡಿದ ರಥಗಳಿಂದಲೂ, ನಾಲಿಗೆಯನ್ನು ಹೊರಚಾಚಿ ರಕ್ತದ ಮಡುವಿನಲ್ಲಿ ಸತ್ತುಬಿದ್ದಿದ್ದ ಕುದುರೆಗಳಿಂದಲೂ, ಪಾತಕೆಗಳಿಂದಲೂ, ಉಪಾಸಾಂಗಗಳಿಂದಲೂ, ಧ್ವಜಗಳಿಂದಲೂ, ಹರಡಿದ್ದ ಪ್ರವೀರರ ಬಿಳೀ ಮಹಾಶಂಖಗಳಿಂದಲೂ, ಸೊಂಡಿಲುಗಳು ಕತ್ತರಿಸಿ ಮಲಗಿದ್ದ ಆನೆಗಳಿಂದಲೂ ಆ ರಣಭೂಮಿಯು ನಾನಾರೂಪಗಳ ಅಲಂಕಾರಗಳಿಂದ ಅಲಂಕರಿಸಿಕೊಂಡ ನಾರಿಯಂತೆ ತೋರಿತು. ಕೆಲವು ಆನೆಗಳು ಅಲ್ಲಿ ಪ್ರಾಸಗಳು ಆಳವಾಗಿ ನೆಟ್ಟಿರುವುದರಿಂದ ವೇದನೆಯನ್ನು ತಾಳಲಾರದೇ ಸೊಂಡಿಲುಗಳ ಮೂಲಕ ಘೀಳಿಡುತ್ತಿದ್ದವು ಮತ್ತು ಸೊಂಡಿಲಿನ ಹೊಳ್ಳೆಗಳಿಂದ ಹೊರಬರುತ್ತಿದ್ದ ನೀರಿನ ತುಂತುರುಗಳಿಂದ ಆ ರಣಭೂಮಿಯು ನೀರನ್ನು ಸ್ರವಿಸುತ್ತಿರುವ ಪರ್ವತಗಳಿಂದ ಕೂಡಿದೆಯೋ ಎಂದು ತೋರಿತು.

ಆನೆಗಳಿಗೆ ಹೊದಿಸುವ ನಾನಾಬಣ್ಣದ ಕಂಬಳಿಗಳಿಂದಲೂ, ಕೆಳಗೆ ಬಿದ್ದಿರುವ ವೈಡೂರ್ಯಮಣಿದಂಡಗಳನ್ನು ಹೊಂದಿರುವ ಸುಂದರ ಅಂಕುಶಗಳಿಂದಲೂ, ಎಲ್ಲಾಕಡೆ ಬಿದ್ದಿರುವ ಗಜೇಂದ್ರಗಳ ಘಂಟೆಗಳಿಂದಲೂ, ಹರಿದುಹೋದ ಬಣ್ಣಬಣ್ಣದ ಕಂಬಳಿಗಳಿಗಳಿಂದಲೂ, ವಿಚಿತ್ರ ಕಂಠಾಭರಣಗಳಿಂದಲೂ, ಸುವರ್ಣಮಯ ಹಗ್ಗಗಳಿಂದಲೂ, ಮುರಿದಿದ್ದ ಅನೇಕ ಯಂತ್ರಗಳಿಂದ, ಸುವರ್ಣಮಯ ತೋಮರಗಳಿಂದಲೂ, ಧೂಳಿನಿಂದ ಮಸುಕಾಗಿದ್ದ ಕುದುರೆಗಳ ಎದೆಗೆ ತೊಡಿಸುವ ಸುವರ್ಣಮಯ ಕವಚಗಳಿಂದಲೂ, ಅಂಗದಗಳೂ ಕೂಡಿ ಕತ್ತರಿಸಲ್ಪಟ್ಟು ಬಿದ್ದಿದ್ದ ಕುದುರೆಸವಾರರ ತೋಳುಗಳಿಂದ, ಹೊಳೆಯುತ್ತಿರುವ ಪಸಗಳಿಂದಲೂ, ತೀಕ್ಷ್ಣವಾಗಿ ಮಿಂಚುತ್ತಿದ್ದ ಅರ್ಷ್ಟಿಗಳಿಂದಲೂ, ಅಲ್ಲಲ್ಲಿ ಬಿದಿದ್ದ ಶಿರಸ್ತ್ರಾಣಗಳಿಂದಲೂ, ಬಂಗಾರದಿಂದ ಮಾಡಲ್ಪಟ್ಟ ವಿಚಿತ್ರ ಅರ್ಧಚಂದ್ರದ ಬಾಣಗಳಿಂದಲೂ, ಕುದುರೆಯ ಮೇಲೆ ಹಾಕುವ ಜೀನು ಮೊದಲಾದ ಹೊದಿಕೆಗಳಿಂದಲೂ, ನರೇಂದ್ರರ ಬೆಲೆಬಾಳುವ ಬಣ್ಣಬಣ್ಣದ ಚೂಡಾಮಣಿಗಳಿಂದಲೂ, ಬಿದ್ದಿದ್ದ ಚತ್ರ-ಚಾಮರ-ವ್ಯಜನಗಳಿಂದಲೂ, ಸುಂದರ ಕುಂಡಲಗಳಿಂದ ಪದ್ಮೇಂದುವಂತೆ ಹೊಳೆಯುತ್ತಿರುವ ವದನಗಳಿಂದ, ವೀರಯೋಧರ ಕಿವಿಗಳಿಂದ ಕಳಚಿ ಬಿದ್ದಿದ್ದ ಸುವರ್ಣದಿಂದ ಪ್ರಜ್ವಲಿಸುತ್ತಿದ್ದ ಕರ್ಣಕುಂಡಲಗಳಿಂದಲೂ ಅಚ್ಛಾದಿತವಾದ ಆ ರಣಭೂಮಿಯು ಗ್ರಹ-ನಕ್ಷತ್ರಗಳಿಂದ ಅಚ್ಛಾದಿತವಾದ ಆಕಾಶದಂತೆ ಕಾಣುತ್ತಿತ್ತು. ಈ ರೀತಿಯಲ್ಲಿ ಅಲ್ಲಿ ನಿನ್ನ ಮತ್ತು ಅವರ ಮಹಾಸೇನೆಯು ಪರಸ್ಪರರನ್ನು ಎದುರಿಸಿ ವಿನಾಶಗೊಂಡಿತು.

ಅವರು ಆಯಾಸಗೊಂಡಿರಲು, ಭಗ್ನಗೊಂಡಿರಲು, ಮರ್ದಿತರಾಗಿರಲು ಘೋರ ರಾತ್ರಿಯಾಯಿತು ಮತ್ತು ರಣದಲ್ಲಿ ಕಾಣದಂತಾದೆವು. ಆಗ ಆ ಘೋರ ನಿಶಾಮುಖದಲ್ಲಿ ರೌದ್ರವಾಗಿ ಸುದಾರುಣವಾಗಿ ನಡೆಯುತ್ತಿದ್ದ ಯುದ್ಧದಿಂದ ಕುರುಪಾಂಡವರು ಸೈನ್ಯಗಳನ್ನು ಹಿಂದೆ ತೆಗೆದುಕೊಂಡರು. ಕುರು-ಪಾಂಡವರು ಒಟ್ಟಿಗೇ ಹಿಂದೆಸರಿದು ತಮ್ಮ ತಮ್ಮ ಶಿಬಿರಗಳಿಗೆ ತೆರಳಿ ಕಾಲಾವಕಾಶವಿದ್ದಂತೆ ವಿಶ್ರಮಿಸಿದರು.

ದುರ್ಯೋಧನನ ಮಂತ್ರಾಲೋಚನೆ

ಆಗ ರಾಜಾ ದುರ್ಯೋಧನ, ಸೌಬಲ ಶಕುನಿ, ದುಃಶಾಸನ ಮತ್ತು ಸೂತಪುತ್ರರು ಸೇರಿಕೊಂಡು “ಪಾಂಡುಸುತರನ್ನು ಗಣಗಳೊಂದಿಗೆ ಯುದ್ಧದಲ್ಲಿ ಹೇಗೆ ಗೆಲ್ಲಬೇಕು” ಎಂದು ಮಂತ್ರಾಲೋಚನೆ ಮಾಡಿದರು. ಆಗ ರಾಜಾ ದುರ್ಯೋಧನನು ಸೂತಪುತ್ರನನ್ನೂ ಸೌಬಲನನ್ನೂ ಸಂಭೋಧಿಸಿ ತನ್ನ ಮಂತ್ರಿಗಳೆಲ್ಲರಿಗೆ ಹೇಳಿದನು: “ದ್ರೋಣ, ಭೀಷ್ಮ, ಕೃಪ, ಶಲ್ಯ ಮತ್ತು ಸೌಮದತ್ತಿಗಳು ಪಾರ್ಥರಿಗೆ ಯಾವುದೇ ರೀತಿಯ ಬಾಧೆಗಳನ್ನೂ ಉಂಟುಮಾಡುತ್ತಿಲ್ಲ. ಇದರ ಕಾರಣವು ಅರ್ಥವಾಗುತ್ತಿಲ್ಲ. ಕರ್ಣ! ಅವಧ್ಯರಾಗಿರುವುದಲ್ಲದೇ ಅವರು ನನ್ನ ಸೇನೆಯನ್ನು ನಾಶಗೊಳಿಸುತ್ತಿದ್ದಾರೆ. ಸಂಯುಗದಲ್ಲಿ ಕ್ಷೀಣಬಲನೂ ಕ್ಷೀಣಶಸ್ತ್ರನೂ ಆಗುತ್ತಿದ್ದೇನೆ. ದೇವತೆಗಳಿಂದಲೂ ಅವಧ್ಯರಾದ ಶೂರ ಪಾಂಡವರಿಂದ ಪರಾಜಿತನಾಗುತ್ತಿರುವ ನನಗೆ ಸಂಶಯವಾಗುತ್ತಿದೆ. ರಣದಲ್ಲಿ ಹೇಗೆ ಯುದ್ಧಮಾಡಬೇಕು?

ಸೂತಪುತ್ರನು ನರಾಧಿಪನಿಗೆ ಹೇಳಿದನು: ಭರತಶ್ರೇಷ್ಠ! ಶೋಕಿಸಬೇಡ! ನಿನಗೆ ಪ್ರಿಯವಾದುದನ್ನು ಮಾಡುತ್ತೇನೆ. ಆದಷ್ಟು ಬೇಗನೆ ಮಹಾರಣದಿಂದ ಭೀಷ್ಮ ಶಾಂತನವನು ಹೊರಟು ಹೋಗಲಿ. ಗಾಂಗೇಯನು ಯುದ್ಧದಿಂದ ನಿವೃತ್ತನಾಗಿ ಶಸ್ತ್ರಗಳನ್ನು ಕೆಳಗಿಟ್ಟರೆ, ನಿನ್ನಾಣೆ! ಸತ್ಯವಾಗಿಯೂ ನಾನು ಯುದ್ಧದಲ್ಲಿ ಭೀಷ್ಮನು ನೋಡುತ್ತಿದ್ದಂತೆಯೇ ಸರ್ವಸೋಮಕರೊಂದಿಗೆ ಪಾರ್ಥರನ್ನು ಕೊಲ್ಲುತ್ತೇನೆ. ಭೀಷ್ಮನು ಸದಾ ಪಾಂಡವರ ಮೇಲೆ ದಯೆಯನ್ನು ತೋರಿಸುತ್ತಾ ಬರಲಿಲ್ಲವೇ? ರಣದಲ್ಲಿ ಭೀಷ್ಮನು ಈ ಮಹಾರಥರನ್ನು ಗೆಲ್ಲಲು ಅಶಕ್ತನಾಗಿದ್ದಾನೆ. ರಣಪ್ರಿಯನಾದ ಭೀಷ್ಮನು ನಿತ್ಯವೂ ರಣದಲ್ಲಿ ಅಭಿಮಾನಿಯಾಗಿರುವವನು. ಹೀಗಿರುವಾಗಿ ಯುದ್ಧದಲ್ಲಿ ಅವನು ಒಟ್ಟಾಗಿ ಬಂದಿರುವ ಪಾಂಡವರನ್ನು ಹೇಗೆ ತಾನೇ ಜಯಿಸಿಯಾನು? ಆದುದರಿಂದ ನೀನು ಈಗ ಶೀಘ್ರವೇ ಭೀಷ್ಮನ ಶಿಬಿರಕ್ಕೆ ಹೋಗಿ ಅನುನಯದಿಂದ ರಣದಲ್ಲಿ ಭೀಷ್ಮನು ಶಸ್ತ್ರನ್ಯಾಸಮಾಡುವಂತೆ ಮಾಡು. ಭೀಷ್ಮನು ಶಸ್ತ್ರನ್ಯಾಸ ಮಾಡಿದೊಡನೆಯೇ ನಾನೊಬ್ಬನೇ ರಣದಲ್ಲಿ ಸುಹೃದಯರು ಮತ್ತು ಬಾಂಧವಗಳೊಂದಿಗೆ ಪಾಂಡವರನ್ನು ಸಂಹರಿಸುವುದನ್ನು ನೋಡು!

ಕರ್ಣನು ಹೀಗೆ ಹೇಳಲು ದುರ್ಯೋಧನನು ಅಲ್ಲಿದ್ದ ತಮ್ಮ ದುಃಶಾಸನನಿಗೆ ಹೇಳಿದನು:ದುಃಶಾಸನ! ನಮ್ಮವರು ಎಲ್ಲರೂ ಸುತ್ತುವರೆದು ನನ್ನನ್ನು ಹಿಂಬಾಲಿಸುವಂತೆ ವ್ಯವಸ್ಥೆ ಮಾಡು. ಬೇಗನೇ ಈ ಎಲ್ಲ ಕೆಲಸವನ್ನು ಮಾಡಿ ಮುಗಿಸು.

ಹೀಗೆ ಹೇಳಿ ಜನೇಶ್ವರನು ಕರ್ಣನಿಗೆ ಹೇಳಿದನು: ರಣದಲ್ಲಿ ಭೀಷ್ಮನನ್ನು ಒಪ್ಪಿಸಿ ಇಲ್ಲಿಗೆ ಬರುತ್ತೇನೆ. ಅರಿಂದಮ! ನಂತರ ನಿನ್ನಲ್ಲಿಗೆ ಬೇಗನೇ ಬರುತ್ತೇನೆ. ಆಗ ನೀನು ಸಂಯುಗದಲ್ಲಿ ಮಾಡಿ ತೋರಿಸುವಿಯಂತೆ.

ಆಗ ದುರ್ಯೋಧನನು ಎಲ್ಲ ದೇವತಗಳೊಂದಿಗೆ ಶತಕ್ರತುವಂತೆ ತನ್ನ ಸಹೋದರರೊಂದಿಗೆ ಬೇಗನೇ ಹೊರಟನು. ಆಗ ತಕ್ಷಣವೇ ಭ್ರಾತಾ ದುಃಶಾಸನನು ಶಾರ್ದೂಲಸಮವಿಕ್ರಮ ನೃಪಶಾರ್ದೂಲನನ್ನು ಕುದುರೆಯ ಮೇಲೆ ಹತ್ತಿಸಿದನು. ಅಂಗದಗಳನ್ನು ಧರಿಸಿದ್ದ, ಕಿರೀಟವನ್ನು ಹಸ್ತಾಭರಣಗಳನ್ನು ಧರಿಸಿದ್ದ ನೃಪ ಧಾರ್ತರಾಷ್ಟ್ರನು ಮಹೇಂದ್ರನಂತೆ ಕಂಗೊಳಿಸಿದನು. ಶಿರೀಷಪುಷ್ಪ ಸದೃಶನಾಗಿದ್ದ, ಚಿನ್ನದ ಹೊಂಬಣ್ಣದ, ಸುಂಗಂಧಯುಕ್ತವಾದ ಬಹುಮೂಲ್ಯದ ಚಂದನವನ್ನು ಲೇಪಿಸಿಕೊಂಡಿದ್ದ, ಧೂಳಿಲ್ಲದ ಶುಭ್ರ ವಸ್ತ್ರಗಳನ್ನು ತೊಟ್ಟಿದ್ದ, ಮದೋನ್ಮತ್ತ ಸಿಂಹದ ನಡುಗೆಯ ನೃಪನು ಶರದೃತುವಿನ ವಿಮಲ ಆಕಾಶದಲ್ಲಿರುವ ದಿವಾಕರನಂತೆ ಶೋಭಿಸಿದನು. ಭೀಷ್ಮನ ಶಿಬಿರದ ಕಡೆ ಹೋಗುತ್ತಿರುವ ಆ ನರವ್ಯಾಘ್ರನನ್ನು ಸರ್ವಲೋಕದ ಧನ್ವಿಗಳಾದ ಮಹೇಷ್ವಾಸರೂ ಸಹೋದರರೂ ವಾಸವನನ್ನು ತ್ರಿದಶರಂತೆ ಹಿಂಬಾಲಿಸಿದರು. ಕೆಲವರು ಕುದುರೆಗಳನ್ನೇರಿ, ಅನ್ಯರು ಆನೆಗಳನ್ನೇರಿ, ಅನ್ಯ ನರಶ್ರೇಷ್ಠರು ರಥಗಳನ್ನೇರಿ ಎಲ್ಲ ಕಡೆಗಳಿಂದಲೂ ಸುತ್ತುವರೆದಿದ್ದರು. ಮಹೀಪತಿಯ ರಕ್ಷಣಾರ್ಥವಾಗಿ ಸುಹೃದಯರು ಶಸ್ತ್ರಗಳನ್ನು ಹಿಡಿದು ದಿವಿಯಲ್ಲಿ ಅಮರರು ಶಕ್ರನಂತೆ ಹಿಂಬಾಲಿಸಿದರು. ಕುರುಗಳಿಂದ ಮತ್ತು ಕೌರವರ ಮಹಾರಥರಿಂದ ಸಂಪೂಜ್ಯಮಾನನಾಗಿ ಆ ಯಶಸ್ವಿ ನೃಪನು ಎಲ್ಲಕಡೆಗಳಲ್ಲಿ ಸೋದರರನ್ನೊಡಗೂಡಿ ಗಾಂಗೇಯನ ಸದನದ ಕಡೆ ಪ್ರಯಾಣಿಸಿದನು.

ಆ ಬಲಸಮಯದಲ್ಲಿ ಸರ್ವಶತ್ರುಗಳನ್ನೂ ಸಂಹಾರಮಾಡಲ್ಲ, ಆನೆಯ ಸೊಂಡಲಿನಂತಿದ್ದ, ನೈಪುಣ್ಯತೆಯನ್ನು ಹೊಂದಿದ್ದ ಬಲಗೈಯನ್ನು ಮೇಲೆತ್ತಿ ಎಲ್ಲ ದಿಕ್ಕುಗಳಲ್ಲಿಯು ಅಂಜಲೀ ಬದ್ಧರಾಗಿ ಅರ್ಪಿಸುತ್ತಿದ್ದ ಪ್ರಣಾಮಗಳನ್ನು ಸ್ವೀಕರಿಸುತ್ತಾ ನಾನಾದೇಶ ನಿವಾಸಿಗಳ ಮಧುರ ವಚನವನ್ನು ಕೇಳಿದನು. ಸಂಸ್ತುತಿಸುತ್ತಿದ್ದ ಸೂತರಿಂದ, ಮಹಾಯಶ ಮಾಗಧರಿಂದ ಎಲ್ಲರಿಂದ ಪೂಜಿಸಿಕೊಳ್ಳುತ್ತಾ ಸರ್ವಲೋಕೇಶ್ವರೇಶ್ವರನು ಹೊಳೆಯುತ್ತಿರುವ ಕಾಂಚನಗಳಿಂದ ಮತ್ತು ಸುಗಂಧಿತ ತೈಲಾವಸೇಚನೆಗೊಂಡ ಮಹಾತ್ಮರಿಂದ ಸುತ್ತುವರೆಯಲ್ಪಟ್ಟು ಪ್ರಜ್ವಲಿಸುತ್ತಾ ಮುಂದುವರೆದನು. ಶುಭ ಕಾಂಚನಗಳಿಂದ ಹೊಳೆಯುತ್ತಿರುವವರಿಂದ ಪರಿವೃತನಾದ ರಾಜನು ಉರಿಯುತ್ತಿರುವ ಮಹಾಗ್ರಹಗಳಿಂದ ಯುಕ್ತನಾದ ಚಂದ್ರಮನಂತೆ ಶೋಭಿಸಿದನು. ಕಂಚುಕ ಉಷ್ಣೀಷಿಣಗಳನ್ನು ಧರಿಸಿದ್ದ ಝರ್ಝರಗಳನ್ನು ಹಿಡಿದಿದ್ದ ವೇತ್ರರು ಎಲ್ಲಕಡೆಯಿಂದ ಮುನ್ನುಗ್ಗುತ್ತಿದ್ದ ಜನಸ್ತೋಮವನ್ನು ಮೆಲ್ಲನೇ ಹಿಂದೆ ಸರಿಸುತ್ತಿದ್ದರು. ಆಗ ರಾಜ ಜನೇಶ್ವರನು ಭೀಷ್ಮನ ಶುಭ ಸದನವನ್ನು ತಲುಪಿ ಕುದುರೆಯಿಂದ ಇಳಿದು ಭೀಷ್ಮನನ್ನು ಸಮೀಪಿಸಿದನು. ಭೀಷ್ಮನನ್ನು ಅಭಿವಂದಿಸಿ, ಮೆತ್ತನೆಯ ಕಾಂಚನದ ಸರ್ವತೋಭದ್ರಾಸನ ಪರಮಾಸನದಲ್ಲಿ ಕುಳಿತುಕೊಂಡು ಅಂಜಲೀ ಬದ್ಧನಾಗಿ ಬಾಷ್ಪಕಂಠದಲ್ಲಿ ಅಶ್ರುಲೋಚನನಗಿ ಭೀಷ್ಮನಿಗೆ ಹೇಳಿದನು:ಶತ್ರುಸೂದನ! ನಾವು ನಿನ್ನನ್ನು ಸಮಾಶ್ರಯಿಸಿ ಸಂಯುಗದಲ್ಲಿ ಇಂದ್ರನನ್ನೂ ಸುರಾಸುರರನ್ನೂ ರಣದಲ್ಲಿ ಗೆಲ್ಲಲು ಉತ್ಸಾಹಿತರಾಗಿದ್ದೇವೆ. ಇನ್ನು ಸುಹೃದಯರು ಮತ್ತು ಬಾಂಧವಗಣಗಳೊಂದಿಗಿರುವ ವೀರ ಪಾಂಡುಸುತರು ಯಾವ ಲೆಕ್ಕಕ್ಕೆ? ಆದುದರಿಂದ ಗಾಂಗೇಯ! ನನ್ನ ಮೇಲೆ ಕೃಪೆ ಮಾಡಲು ಮಹೇಂದ್ರನು ದಾನವರನ್ನು ಹೇಗೋ ಹಾಗೆ ನೀನು ವೀರ ಪಾಂಡುಸುತರನ್ನು ಗೆಲ್ಲು. ಹಿಂದೆ ನೀನು ಸೋಮಕರನ್ನೂ, ಪಾಂಚಾಲರನ್ನೂ, ಕರೂಷರನ್ನೂ ಪಾಂಡವರೊಂದಿಗೆ ಸಂಹರಿಸುತ್ತೇನೆ ಎಂದು ಹೇಳಿದ್ದೆ. ಆ ವಚನವನ್ನು ಸತ್ಯವಾಗಿಸಲು ಸಮಾಗತರಾಗಿರುವ ಪಾರ್ಥರನ್ನು ಮತ್ತು ಮಹೇಷಸ ಸೋಮಕರನ್ನು ಗೆಲ್ಲು. ಸತ್ಯವಾಗ್ಮಿಯಾಗು. ಅವರ ಮೇಲಿನ ದಯೆಯಿಂದಲೋ ನನ್ನ ಮೇಲೆನ ದ್ವೇಷದಿಂದಲೋ ಅಥವಾ ನನ್ನ ದೌರ್ಭಾಗ್ಯದಿಂದಲೋ ನೀನು ಪಾಂಡವರನ್ನು ರಕ್ಷಿಸುವೆಯಾದರೆ ಸಮರದಲ್ಲಿ ಆಹವಶೋಭಿ ಕರ್ಣನಿಗೆ ಅನುಮತಿಯನ್ನು ನೀಡು. ಅವನು ರಣದಲ್ಲಿ ಸುಹೃದಯರು ಬಾಂಧವರ ಗಣಗಳೊಂದಿಗೆ ಪಾರ್ಥರನ್ನು ಗೆಲ್ಲುತ್ತಾನೆ. ಹೀಗೆ ಹೇಳಿ ನೃಪತಿ ದುರ್ಯೋಧನನು ಭೀಮಪರಾಕ್ರಮಿ ಭೀಷ್ಮನಿಗೆ ಬೇರೆ ಏನನ್ನೂ ಹೇಳಲಿಲ್ಲ.

ದುರ್ಯೋಧನನ ಮಾತೆಂಬ ಮುಳ್ಳುಗಳಿಂದ ಬಹಳ ಆಳದವರೆಗೂ ಚುಚ್ಚಲ್ಪಟ್ಟ ಪಿತಾಮಹನು ಮಹಾ ದುಃಖದಿಂದ ಆವಿಷ್ಟನಾದರೂ ಅಪ್ರಿಯವಾದುದೇನನ್ನೂ ಹೇಳಲಿಲ್ಲ. ದುಃಖರೋಷಸಮನ್ವಿತನಾದ ಲೋಕವಿದರಲ್ಲಿ ಶ್ರೇಷ್ಠನು ಅಂಕುಶದಿಂದ ನೋಯಿಸಲ್ಪಟ್ಟ ಆನೆಯಂತೆ ನಿಟ್ಟುಸಿರು ಬಿಡುತ್ತಾ, ಕೋಪದಿಂದ ದೇವಾಸುರಗಂಧರ್ವರೊಡನೆ ಲೋಕಗಳನ್ನು ಸುಟ್ಟುಬಿಡುವನೋ ಎನ್ನುವಂತೆ ಕಣ್ಣುಗಳನ್ನು ಮೇಲೆತ್ತಿ ಬಹಳ ಹೊತ್ತು ಆಲೋಚಿಸಿ ಅವನಿಗೆ ಸಾಮದಿಂದ ಕೂಡಿದ ಈ ಮಾತನ್ನಾಡಿದನು:ದುರ್ಯೋಧನ! ಏಕೆ ಹೀಗೆ ನನ್ನನ್ನು ಮಾತೆಂಬ ಶಲ್ಯಗಳಿಂದ ನೋಯಿಸುತ್ತಿರುವೆ? ನಿನಗೆ ಪ್ರಿಯವಾದುದನ್ನು ಮಾಡಲು ಯಥಶಕ್ತಿಯಾಗಿ ಪ್ರಯತ್ನಿಸುತ್ತಿದ್ದೇನೆ. ನಿನ್ನ ಹಿತವನ್ನೇ ಬಯಸಿ ಸಮರಾಗ್ನಿಯಲ್ಲಿ ಪ್ರಾಣಗಳನ್ನು ಅರ್ಪಿಸುತ್ತಿದ್ದೇನೆ. ಎಂದು ಶೂರ ಪಾಂಡವನು ರಣದಲ್ಲಿ ಶಕ್ರನನ್ನು ಪರಾಜಯಗೊಳಿಸಿ ಖಾಂಡವವನ್ನಿತ್ತು ಅಗ್ನಿಯನ್ನು ತೃಪ್ತಿಪಡಿಸಿದನೋ ಅದೇ ಪರ್ಯಾಪ್ತವಾದ ನಿದರ್ಶನ. ಎಂದು ಅಪಹರಿಸಲ್ಪಟ್ಟ ನಿನ್ನನ್ನು ಗಂಧರ್ವರಿಂದ ಪಾಂಡವನು ಬಿಡುಗಡೆ ಮಾಡಿದನೋ ಅದೇ ಪರ್ಯಾಪ್ತ ನಿದರ್ಶನವು. ನಿನ್ನ ಶೂರ ಸೋದರರು ಮತ್ತು ಸೂತಪುತ್ರ ರಾಧೇಯನು ಓಡಿಹೋದದ್ದೇ ಪರ್ಯಾಪ್ತ ನಿದರ್ಶನವು. ನಾವೆಲ್ಲರೂ ವಿರಾಟನಗರದಲ್ಲಿ ಒಟ್ಟಿಗೇ ಇದ್ದಾಗ ಅವನು ಒಬ್ಬನೇ ನಮ್ಮೊಡನೆ ಯುದ್ಧಮಾಡಿ ಜಯಿಸಿದುದೇ ಪರ್ಯಾಪ್ತ ನಿದರ್ಶನವು. ಯುದ್ಧದಲ್ಲಿ ದ್ರೋಣನನ್ನೂ ದಿಗ್ಭ್ರಮೆಗೊಳಿಸಿ, ನನ್ನನ್ನೂ, ಕರ್ಣನನ್ನೂ, ದ್ರೌಣಿಯನ್ನೂ, ಸುಮಹಾರಥ ಕೃಪನನ್ನೂ ಸಂಯುಗದಲ್ಲಿ ಸೋಲಿಸಿ, ವಸ್ತ್ರಗಳನ್ನು ತೆಗೆದುಕೊಂಡು ಹೋದ ಅದೇ ಪರ್ಯಾಪ್ತ ನಿದರ್ಶನವು. ಯುದ್ಧದಲ್ಲಿ ವಾಸವನಿಗೂ ಜಯಿಸಲಸಾದ್ಯರಾದ ನಿವಾತಕವಚರನ್ನು ಸಮರದಲ್ಲಿ ಗೆದ್ದ ಪಾರ್ಥನೇ ಪರ್ಯಾಪ್ತ ನಿದರ್ಶನವು. ರಣದಲ್ಲಿ ರಭಸನಾಗಿರುವ ಪಾಂಡವನನ್ನು ರಣದಲ್ಲಿ ಗೆಲ್ಲಲು ಯಾರುತಾನೇ ಶಕ್ತರು? ಮೋಹದಿಂದ ನೀನು ಏನನ್ನು ಹೇಳಬೇಕು ಏನನ್ನು ಹೇಳಬಾರದು ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಗಾಂಧಾರೇ! ಮರಣವು ಸನ್ನಿಹಿತವಾದಾಗ ಮನುಷ್ಯನು ಎಲ್ಲ ವೃಕ್ಷಗಳನ್ನೂ ಕಾಂಚನದವುಗಳೆಂದೇ ಕಾಣುತ್ತಾನೆ. ಹಾಗೆ ನೀನೂ ಕೂಡ ವಿಪರೀತಗಳನ್ನು ಕಾಣುತ್ತಿದ್ದೀಯೆ. ಸ್ವಯಂ ನೀನೇ ಸೃಂಜಯರು ಮತ್ತು ಪಾಂಡವರೊಂದಿಗೆ ಮಹಾ ವೈರವನ್ನು ಕಟ್ಟಿಕೊಂಡಿರುವೆ. ಇಂದು ನೀನೇ ರಣದಲ್ಲಿ ಯುದ್ಧಮಾಡು. ಪುರುಷನಾಗು. ನೋಡುತ್ತೇವೆ. ನಾನಾದರೋ ಶಿಖಂಡಿಯನ್ನು ಬಿಟ್ಟು ಸೇರಿರುವ ಸರ್ವ ಸೋಮಕರನ್ನೂ ಪಾಂಚಾಲರನ್ನೂ ಸಂಹರಿಸುತ್ತೇನೆ. ಯುದ್ಧದಲ್ಲಿ ಅವರಿಂದಲಾದರೂ ಹತನಾಗಿ ಯಮಸಾದನಕ್ಕೆ ಹೋಗುತ್ತೇನೆ. ಅಥವಾ ಅವರನ್ನು ಸಂಗ್ರಾಮದಲ್ಲಿ ಸಂಹರಿಸಿ ನಿನಗೆ ಪ್ರೀತಿಯಾದುದನ್ನು ಕೊಡುತ್ತೇನೆ. ಶಿಖಂಡಿಯು ಹಿಂದೆ ರಾಜಮನೆಯಲ್ಲಿ ಸ್ತ್ರೀಯಾಗಿಯೇ ಹುಟ್ಟಿದ್ದನು. ಸ್ತ್ರೀಯಾಗಿದ್ದ ಶಿಖಂಡಿನಿಯು ವರದಾನದಿಂದ ಪುರುಷನಾದನು. ಪ್ರಾಣತ್ಯಾಗ ಮಾಡಬೇಕಾಗಿ ಬಂದರೂ ನಾನು ಅವನನ್ನು ಸಂಹರಿಸುವುದಿಲ್ಲ. ಧಾತ್ರನಿಂದ ನಿರ್ಮಿತಳಾಗಿದ್ದ ಶಿಖಂಡಿನಿಯು ಈಗಲೂ ಸ್ತ್ರೀಯೆಂದೇ ಮನ್ನಿಸುತ್ತೇನೆ. ಸುಖವಾಗಿ ನಿದ್ದೆಮಾಡು. ಎಲ್ಲಿಯವರೆಗೆ ಮೇದಿನಿಯಿರುವಳೋ ಅಲ್ಲಿಯವರೆಗೆ ಜನರು ಮಾತನಾಡಿಕೊಳ್ಳುವಂಥಹ ಮಹಾರಣವನ್ನು ನಾನು ನಾಳೆ ನಿರ್ಮಿಸುತ್ತೇನೆ.

ಹೀಗೆ ಹೇಳಲು ದುರ್ಯೋಧನನು ಗುರುವಿಗೆ ತಲೆಬಾಗಿ ನಮಸ್ಕರಿಸಿ ತನ್ನ ಬಿಡಾರಕ್ಕೆ ತೆರಳಿದನು. ಆಗಮಿಸಿ ರಾಜನು ಮಹಾಜನರನ್ನು ಕಳುಹಿಸಿದನು. ಆ ಶತ್ರುಕ್ಷಯಂಕರ ಪಾರ್ಥಿವನು ತಕ್ಷಣವೇ ಡೇರೆಯನ್ನು ಪ್ರವೇಶಿಸಿ ರಾತ್ರಿಯನ್ನು ಕಳೆದನು.

Leave a Reply

Your email address will not be published. Required fields are marked *