ಮಂಡೂಕ-ವಾಮದೇವ
ಮಂಡೂಕ-ವಾಮದೇವರ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೯೦) ದಲ್ಲಿ ಬರುತ್ತದೆ. ಕಾಮ್ಯಕ ವನದಲ್ಲಿ ಋಷಿ ಮಾರ್ಕಂಡೇಯನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು.
ಅಯೋಧ್ಯೆಯ ಇಕ್ಷ್ವಾಕುಕುಲೋತ್ಪನ್ನನಾದ ಪರಿಕ್ಷಿತ ಎಂಬ ಹೆಸರಿನ ರಾಜನು ಬೇಟೆಗೆ ಹೋದನು. ಅವನು ಒಂದು ಕುದುರೆಯ ಮೇಲೆ ಕುಳಿತು ಜಿಂಕೆಯೊಂದನ್ನು ಅರಸಲು ಜಿಂಕೆಯು ಅವನನ್ನು ಬಹುದೂರ ಕೊಂಡೊಯ್ಯಿತು. ದಾರಿಯಲ್ಲಿ ಅವನು ತುಂಬಾ ಆಯಾಸಗೊಂಡು ಹಸಿವು ಬಾಯಾರಿಕೆಗಳಿಂದ ಬಳಲಿ ಯಾವುದೋ ಒಂದು ದಟ್ಟವಾದ ಮರಗಳಿದ್ದ ಪ್ರದೇಶವನ್ನು ಕಂಡನು. ಅದನ್ನು ಪ್ರವೇಶಿಸಿದನು. ಆ ವನಕೂಟದ ಮಧ್ಯೆ ಅತೀವ ರಮಣೀಯವಾದ ಸರೋವರವನ್ನು ನೋಡಿ ಅವನು ಮತ್ತು ಕುದುರೆಗಳು ಅದರಲ್ಲಿ ಮುಳುಗಿದರು. ಆಯಾಸ ಕಳೆದು ರಾಜನು ಕಮಲದ ದಂಟುಗಳನ್ನು ಕುದುರೆಯ ಮುಂದಿರಿಸಿ ಆ ಪುಷ್ಕರಿಣೀ ತೀರದಲ್ಲಿ ಸುತ್ತಾಡತೊಡಗಿದನು. ಅಲ್ಲಿ ಅವನು ಮಲಗಿಕೊಂಡನು ಮತ್ತು ಗೀತಶಬ್ಧವನ್ನು ಕೇಳಿದನು. ಅದನ್ನು ಕೇಳಿ “ಇಲ್ಲಿ ಮನುಷ್ಯರ ಕುರುಹನ್ನು ಕಾಣುತ್ತಿಲ್ಲ. ಆದರೆ ಈ ಗೀತಶಬ್ಧವು ಎಲ್ಲಿಂದ?” ಎಂದು ಯೋಚಿಸಿದನು. ಆಗ ಅವನು ನೋಡಲು ಪರಮ ರೂಪವತಿಯಾದ, ಪುಷ್ಪಗಳನ್ನು ಕೀಳುತ್ತಾ ಹಾಡುತ್ತಿರುವವಳನ್ನು ಕಂಡನು. ಆಗ ಅವಳು ರಾಜನ ಸಮೀಪಕ್ಕೆ ಮುಂದುವರೆದು ಬಂದಳು. ರಾಜನು ಅವಳಿಗೆ “ಸುಭಗೇ! ನೀನು ಯಾರವಳು?” ಎಂದು ಕೇಳಿದನು. “ನಾನು ಕನ್ಯೆ” ಎಂದು ಅವಳು ಉತ್ತರಿಸಿದಳು. ಅವಳಿಗೆ ರಾಜನು “ನಿನ್ನನ್ನು ಬಯಸುತ್ತೇನೆ” ಎಂದು ಹೇಳಿದನು. ಆಗ ಕನ್ಯೆಯು “ಒಂದು ಶರತ್ತಿನಂತೆ ಮಾತ್ರ ನೀನು ನನ್ನನ್ನು ಪಡೆಯಬಲ್ಲೆ. ಅನ್ಯಥಾ ಅಲ್ಲ” ಎಂದು ಹೇಳಿದಳು. ಶರತ್ತೇನೆಂದು ರಾಜನು ಕೇಳಲು ಕನ್ಯೆಯು “ನನಗೆ ಎಂದೂ ನೀರನ್ನು ತೋರಿಸಬಾರದು!” ಎಂದು ಹೇಳಿದಳು. “ಎಂದೂ ಇಲ್ಲ” ಎಂದು ಹೇಳಿ ರಾಜನು ಅವಳನ್ನು ಸೇರಿ ಬಳಿಯಲ್ಲಿ ಕುಳಿತುಕೊಂಡನು. ರಾಜನು ಕುಳಿತಲ್ಲಿಗೆ, ಅವನ ಹೆಜ್ಜೆಯ ಗುರುತುಗಳನ್ನೇ ನೋಡಿಕೊಳ್ಳುತ್ತಾ ಅವನ ಸೇನೆಯು ಅಲ್ಲಿಗೆ ಬಂದು ಅವನನ್ನು ಸುತ್ತುವರೆದು ನಿಂತಿತು. ಸ್ವಲ್ಪ ವಿಶ್ರಮಿಸಿ ರಾಜನು ಅವಳನ್ನು ಒಂದು ಶಿಬಿಕೆಯಲ್ಲಿರಿಸಿಕೊಂಡು ಹೊರಟನು. ತನ್ನ ನಗರವನ್ನು ತಲುಪಿ ಅವಳೊಂದಿಗೆ ರಹಸ್ಯದಲ್ಲಿ, ಬೇರೆ ಏನನ್ನೂ ನೋಡದೇ ರಮಿಸುತ್ತಿದ್ದನು.
ಪ್ರಧಾನ ಮಂತ್ರಿಯು ರಾಜನ ಪರಿಚಾರಕ ಸ್ತ್ರೀಯರೊಡನೆ ಇದರ ಪ್ರಯೋಜನವೇನು? ಎಂದು ಪ್ರಶ್ನಿಸಿದನು. ಸ್ತ್ರೀಯರು ಹೇಳಿದರು: “ನಾವು ಒಂದು ವಿಶೇಷವನ್ನು ನೋಡಿದೆವು. ಇಲ್ಲಿಗೆ ನೀರನ್ನು ಮಾತ್ರ ತರುವಂತಿಲ್ಲ!” ಎಂದು. ಅದರಂತೆ ಅಮಾತ್ಯನು ನೀರಿಲ್ಲದ, ಬೇಕಾದಷ್ಟು ಮರಗಳುಳ್ಳ, ಬಹಳಷ್ಟು ಗೆಡ್ಡೆ, ಪುಷ್ಪ, ಫಲಗಳನ್ನುಳ್ಳ ಒಂದು ವನವನ್ನು ಮಾಡಿಸಿ, ರಹಸ್ಯದಲ್ಲಿ ರಾಜನಲ್ಲಿಗೆ ಬಂದು ಹೇಳಿದನು: “ಈ ಉದಾರ ವನವು ನೀರಿಲ್ಲದುದು. ಇಲ್ಲಿ ನೀನು ಚೆನ್ನಾಗಿ ರಮಿಸಬಹುದು.” ಅವನ ವಚನದಂತೆ ಅವನು ದೇವಿಯ ಸಹಿತ ಆ ವನವನ್ನು ಪ್ರವೇಶಿಸಿದನು. ಒಂದು ದಿನ ಅವನು ಅವಳೊಡನೆ ಆ ವನದಲ್ಲಿ ವಿಹರಿಸುತ್ತಿದ್ದನು. ಆಗ ಅವನು ಹಸಿವು ಬಾಯಾರಿಕೆಗಳಿಂದ ಬಳಲಿರಲು ಒಂದು ಅತಿಮುಕ್ತಗಳ ವನವನ್ನು ಕಂಡನು. ರಾಜನು ಪ್ರಿಯೆಯೊಂದಿಗೆ ಅದನ್ನು ಪ್ರವೇಶಿಸಿ, ಶುದ್ಧವಾದ ನೀರಿನಿಂದ ತುಂಬಿದ ಆದರೆ ಸುಧಾತಲದಿಂದ ಮುಚ್ಚಲ್ಪಟ್ಟ ಹೊಂಡವೊಂದನ್ನು ನೋಡಿದನು. ಅದನ್ನು ನೋಡಿದೊಡನೆಯೇ ತನ್ನ ದೇವಿಯೊಡನೇ ಆ ಹೊಂಡವನ್ನು ಪ್ರವೇಶಿಸಿದನು. ರಾಜನು ದೇವಿಗೆ “ಬಾ! ನೀರಿರುವ ಈ ಹೊಂಡದಲ್ಲಿ ಇಳಿ” ಎಂದು ಕರೆದನು. ಅವಳು ಆ ಮಾತನ್ನು ಕೇಳಿ ನೀರಿಗಿಳಿದಳು. ಆದರೆ ಪುನಃ ಮೇಲೆ ಬರಲಿಲ್ಲ. ರಾಜನು ಹುಡುಕಾಡಿದನು; ಆದರೆ ಅವಳನ್ನು ಕಾಣಲಿಲ್ಲ. ಅವನು ಆ ಹೊಂಡವನ್ನು ಬರಿದುಮಾಡಿಸಿದನು ಮತ್ತು ನೀರಿನ ಚಿಲುಮೆಯ ಬಾಯಿಯಲ್ಲಿ ಒಂದು ಕಪ್ಪೆಯನ್ನು ಕಂಡನು. ಅವನು ಕ್ರುದ್ಧನಾಗಿ ಆಜ್ಞಾಪಿಸಿದನು: “ಎಲ್ಲ ಕಪ್ಪೆಗಳನ್ನೂ ಕೊಲ್ಲಿ! ನನ್ನಿಂದ ಏನನ್ನಾದರೂ ಬಯಸುವವರು ಸತ್ತ ಕಪ್ಪೆಗಳನ್ನು ನನಗೆ ಕಾಣಿಕೆಯಾಗಿ ತರಬೇಕು.”
ಘೋರವಾದ ಮಂಡೂಕವಧ ಕ್ರಿಯೆಯು ದಿಕ್ಕುಗಳಲ್ಲಿ ನಡೆಯಲು ಎಲ್ಲ ಮಂಡೂಕಗಳಿಗೂ ಭಯವು ಆವರಿಸಿತು. ಆಗ ಮಂಡೂಕಗಳ ರಾಜನು ತಾಪಸನ ವೇಷವನ್ನು ಧರಿಸಿ ರಾಜನಲ್ಲಿಗೆ ಆಗಮಿಸಿ ಹೇಳಿದನು: “ರಾಜನ್! ಕ್ರೋಧವಶನಾಗಬೇಡ. ಕರುಣೆ ನೀಡು. ಅನಪರಾಧಿಗಳಾದ ಮಂಡೂಕಗಳನ್ನು ಕೊಲ್ಲುವ ಕೆಲಸವು ಸಲ್ಲದು. ಅಚ್ಯುತ! ಮಂಡೂಕಗಳನ್ನು ಕೊಲ್ಲಬೇಡ! ಕೋಪವನ್ನು ಸಹಿಸಿಕೋ! ಅಜ್ಞಾನಿಗಳಾಗಿಯೇ ಇರುವ ಜನರ ಧನವು ಕ್ಷೀಣವಾಗುತ್ತದೆ. ಅವರನ್ನು ನೋಡಿದಾಗಲೆಲ್ಲ ನೀನು ಅವರಮೇಲಿನ ನಿನ್ನ ಕ್ರೋಧವನ್ನು ತೊರೆಯುತ್ತೀಯೆ ಎಂದು ಭರವಸೆಯನ್ನು ನೀಡು. ಶುರುಮಾಡಿದ ಅಧರ್ಮವನ್ನು ನಿಲ್ಲಿಸು! ಸತ್ತ ಮಂಡೂಕಗಳಿಂದ ನಿನಗೇನು ಪ್ರಯೋಜನ?”
ತನ್ನ ಪ್ರಿಯೆಯ ಕುರಿತು ಶೋಕಪರೀತಾತ್ಮನಾಗಿದ್ದ ರಾಜನು ಅವನಿಗೆ ಹೇಳಿದನು: “ನಾನು ಇದನ್ನು ಕ್ಷಮಿಸಲಾರೆ! ಅವರನ್ನು ಕೊಲ್ಲುತ್ತೇನೆ. ಈ ದುರಾತ್ಮರೇ ನನ್ನ ಪ್ರಿಯೆಯನ್ನು ತಿಂದಿದ್ದಾರೆ. ಮಂಡೂಕಗಳು ಸರ್ವಥಾ ನನ್ನಿಂದ ವಧಿಸಲ್ಪಡುತ್ತವೆ. ಇದರ ಕುರಿತು ನನ್ನನ್ನು ತಡೆಯುವುದು ಸರಿಯಲ್ಲ.” ಆ ವಾಕ್ಯಗಳನ್ನು ಕೇಳಿದ ಅವನು ವ್ಯಥಿತೇಂದ್ರಿಯನಾಗಿ ಉತ್ತರಿಸಿದನು: “ಕರುಣೆ ತೋರು ರಾಜನ್! ನಾನು ಆಯು ಎಂಬ ಹೆಸರಿನ ಮಂಡೂಕರಾಜ. ನನ್ನ ಮಗಳು ಸುಶೋಭನ ಎಂಬ ಹೆಸರಿನವಳೇ ಅವಳು. ಅವಳಿಗೆ ಈ ದುಷ್ಟ ನಡವಳಿಕೆಯಿದೆ. ಈ ಹಿಂದೆಯೂ ಕೂಡ ಬಹಳ ರಾಜರನ್ನು ಈ ರೀತಿ ಮೋಸಮಾಡಿದ್ದಾಳೆ.”
ಆಗ ರಾಜನು ಹೇಳಿದನು: “ನನಗೆ ಅವಳು ಬೇಕು. ಅವಳನ್ನು ನನಗೆ ಕೊಡು!” ಆಗ ತಂದೆಯು ಅವಳನ್ನು ರಾಜನಿಗೆ ಕೊಟ್ಟು “ಈ ರಾಜನ ಶುಶ್ರೂಷೆಮಾಡು” ಎಂದು ಹೇಳಿದನು. ಅವನು ತನ್ನ ಮಗಳಿಗೆ ಹೇಳಿದನು: “ನೀನು ರಾಜರನ್ನು ಮೋಸಗೊಳಿಸಿರುವುದರಿಂದ, ನಿನ್ನ ಈ ದುಷ್ಕೃತದಿಂದ ನಿನ್ನಲ್ಲಿ ಹುಟ್ಟುವ ಮಕ್ಕಳು ಅಬ್ರಾಹ್ಮಣರಾಗುತ್ತಾರೆ.” ಆ ರಾಜನು ಅವಳನ್ನು ಪಡೆದು ಅವಳೊಡನೆ ಸುರತಗುಣನಿಬದ್ಧ ಹೃದಯನಾಗಿ, ಲೋಕತ್ರಯಗಳ ಐಶ್ವರ್ಯವನ್ನೇ ಪಡೆದಷ್ಟು ಹರ್ಷಿತನಾಗಿ, ಗದ್ಗದ ಕಂಠನಾಗಿ, ಕೈಮುಗಿದು, ಪೂಜಿಸಿ, ಮಂಡೂಕರಾಜನಿಗೆ “ಅನುಗೃಹೀತನಾಗಿದ್ದೇನೆ” ಎಂದು ಹೇಳಿದನು. ಮಂಡೂಕರಾಜನು ತನ್ನ ಅಳಿಯನನ್ನು ಬೀಳ್ಕೊಂಡು ಎಲ್ಲಿಂದ ಬಂದಿದ್ದನೋ ಅಲ್ಲಿಗೆ ತೆರಳಿದನು.
ಕೆಲವು ಕಾಲದಲ್ಲಿ ಅವಳಲ್ಲಿ ರಾಜನಿಗೆ ಮೂವರು ಕುಮಾರರು ಜನಿಸಿದರು - ಶಲ, ದಲ ಮತ್ತು ಬಲರೆಂದು. ಅವರಲ್ಲಿ ಹಿರಿಯವನಾದ ಶಲನಿಗೆ ಸಮಯದಲ್ಲಿ ರಾಜ್ಯಾಬಿಷೇಕವನ್ನು ಮಾಡಿ ತಂದೆಯು ಧೃತಾತ್ಮನಾಗಿ ವನಕ್ಕೆ ತೆರಳಿದನು. ಈ ಶಾಲನು ಒಮ್ಮೆ ಬೇಟೆಗೆಂದು ಹೋದನು. ಜಿಂಕೆಯೊಂದನ್ನು ಕಂಡು ಅದನ್ನು ರಥದ ಮೇಲೆ ಕುಳಿತು ಬೆನ್ನತ್ತಿದನು. ಅವನು ಸೂತನಿಗೆ ಶೀಘ್ರವಾಗಿ ನನ್ನನ್ನು ತೆಗೆದುಕೊಂಡು ಹೋಗು ಎಂದು ಹೇಳಿದನು. ಹೀಗೆ ಹೇಳಲು ಸೂತನು ರಾಜನಿಗೆ ಹೇಳಿದನು: “ಒತ್ತಾಯವನ್ನು ಮಾಡಬೇಡ! ನಿನ್ನ ರಥಕ್ಕೆ ವಾಮ್ಯ ಕುದುರೆಗಳನ್ನು ಕಟ್ಟಿದ್ದರೂ ಈ ಜಿಂಕೆಯನ್ನು ಹಿಡಿಯಲು ನಿನ್ನಿಂದ ಆಗುವುದಿಲ್ಲ.”
ರಾಜನು ಸೂತನಿಗೆ ಹೇಳಿದನು: “ನನಗೆ ವಾಮ್ಯಗಳ ಕುರಿತು ಹೇಳು. ಇಲ್ಲವಾದರೆ ನಾನು ನಿನ್ನನ್ನು ಕೊಲ್ಲುತ್ತೇನೆ!” ಹೀಗೆ ಹೇಳಲು ರಾಜಭಯದಿಂದ ಮತ್ತು ವಾಮದೇವನ ಶಾಪದ ಭಯದಿಂದಲೂ ಅವನು ರಾಜನಿಗೆ “ವಾಮದೇವನ ಕುದುರೆಗಳು ಮನೋವೇಗದ ವಾಮ್ಯಗಳು” ಎಂದು ಹೇಳಿದನು. ರಾಜನು ಅವನಿಗೆ ಹೇಳಿದನು: “ವಾಮದೇವನ ಆಶ್ರಮಕ್ಕೆ ಕರೆದೊಯ್ಯಿ!” ವಾಮದೇವನ ಆಶ್ರಮಕ್ಕೆ ಹೋಗಿ ಅವನು ಋಷಿಗೆ ಹೇಳಿದನು: “ಭಗವನ್! ನಾನು ಹೊಡೆದ ಜಿಂಕೆಯೊಂದು ಓಡಿಹೋಯಿತು. ನಾನು ಅದನ್ನು ಪಡೆಯಬೇಕು. ದಯವಿಟ್ಟು ನನಗೆ ವಾಮ್ಯಗಳನ್ನು ಕೊಡಬೇಕು.” ಅವನಿಗೆ ಋಷಿಯು ಹೇಳಿದನು: “ನಿನಗೆ ವಾಮ್ಯಗಳನ್ನು ಕೊಡುತ್ತೇನೆ. ನಿನ್ನ ಕಾರ್ಯವಾದ ತಕ್ಷಣವೇ ನನಗೆ ಅವುಗಳನ್ನು ಹಿಂದಿರುಗಿಸು.” ಅವನು ಎರಡೂ ಕುದುರೆಗಳನ್ನೂ ತೆಗೆದುಕೊಂಡು, ಋಷಿಯನ್ನು ಬೀಳ್ಕೊಂಡು, ವ್ಯಾಮ್ಯಗಳನ್ನು ಕಟ್ಟಿದ ತನ್ನ ರಥದ ಮೇಲೆ ಮೃಗವನ್ನು ಹಿಂಬಾಲಿಸಿ ಹೋದನು. ಹೋಗುತ್ತಿರುವಾಗ ತನ್ನ ಸಾರಥಿಗೆ ಹೇಳಿದನು: “ಈ ಕುದುರೆಗಳು ರತ್ನಗಳು! ಇವು ಬ್ರಾಹ್ಮಣನಿಗೆ ಅಯೋಗ್ಯವು. ನಾನು ಇವುಗಳನ್ನು ವಾಮದೇವನಿಗೆ ಹಿಂದಿರುಗಿಸುವುದಿಲ್ಲ.” ಹೀಗೆ ಹೇಳಿ, ಜಿಂಕೆಯನ್ನು ಹಿಡಿದು, ಸ್ವನಗರಕ್ಕೆ ತೆರಳಿ ಅಶ್ವಗಳನ್ನು ಅಂತಃಪುರದಲ್ಲಿ ಇರಿಸಿದನು.
ಈಗ ಆ ಮಹರ್ಷಿಯು ಚಿಂತಿಸಿದನು: “ಈ ತರುಣ ರಾಜಪುತ್ರನು ಈ ಸುಂದರ ಕುದುರೆಗಳನ್ನು ಪಡೆದು ಖುಷಿಪಡುತ್ತಿದ್ದಾನೆ. ನನಗೆ ಅವನು ಅವುಗಳನ್ನು ಹಿಂದಿರುಗಿಸುವುದಿಲ್ಲ. ಇದೊಂದು ಕಷ್ಟವಾಯಿತಲ್ಲ!” ಮನಸ್ಸಿನಲ್ಲಿ ನಿಶ್ಚಯಿಸಿ ತಿಂಗಳು ಪೂರ್ಣವಾದಾಗ ಶಿಷ್ಯನಿಗೆ ಹೇಳಿದನು: “ಅತ್ರೇಯ! ಹೋಗು! ರಾಜನಿಗೆ ಹೇಳು. ಕಾರ್ಯ ಮುಗಿದಿದೆಯಾದರೆ ವಾಮ್ಯಗಳನ್ನು ಉಪಾಧ್ಯಾಯನಿಗೆ ಹಿಂದಿರುಗಿಸು.” ರಾಜನು ಅವನಿಗೆ ಉತ್ತರಿಸಿದನು: “ಇದು ರಾಜನ ವಾಹನ. ಈ ರತ್ನವನ್ನು ಇಟ್ಟುಕೊಳ್ಳಲು ಬ್ರಾಹ್ಮಣರು ಅನರ್ಹರು. ನೀನು ಹಿಂದಿರುಗಿದರೆ ಒಳ್ಳೆಯದು.” ಅವನು ಹೋಗಿ ಉಪಾಧ್ಯಾಯನಿಗೆ ಎಲ್ಲವನ್ನೂ ಹೇಳಿದನು. ಆ ಅಪ್ರಿಯ ಮಾತನ್ನು ಕೇಳಿ ವಾಮದೇವನು ಕ್ರೋಧಿತನಾಗಿ ಅಶ್ವಗಳಿಗೋಸ್ಕರ ಸ್ವಯಂ ತಾನೇ ರಾಜನಲ್ಲಿಗೆ ಹೋಗಿ ಕೇಳಿದನು. ರಾಜನು ನಿರಾಕರಿಸಿದನು.
ಆಗ ವಾಮದೇವನು ಹೇಳಿದನು: “ಪಾರ್ಥಿವ! ನನಗೆ ವಾಮ್ಯಗಳನ್ನು ಕೊಡು. ಅನ್ಯರು ಮಾಡದಂಥಹುದನ್ನು ನೀನು ಮಾಡಿದ್ದೀಯೆ. ವರುಣನು ಘೋರ ಪಾಶಗಳಿಂದ ನಿನ್ನನ್ನು ವಧಿಸದಿರಲಿ. ಬ್ರಾಹ್ಮಣ ಮತ್ತು ಕ್ಷತ್ರಿಯರನ್ನು ಒಡೆಯುತ್ತಿದ್ದೀಯೆ.”
ರಾಜನು ಹೇಳಿದನು: “ವಾಮದೇವ! ವಿಪ್ರರಿಗೆ ವಾಹನವಾಗಿ ಈ ಎರಡು ತರಬೇತಿಹೊಂದಿದ ಸಾಧು ಎತ್ತುಗಳೇ ಲೇಸು. ಇವೆರಡರಿಂದ ನಿನಗೆಲ್ಲಿಬೇಕೋ ಅಲ್ಲಿ ಹೋಗು. ನನ್ನಂತವರಾದ ಬೇರೆ ಯಾರಲ್ಲಿ ಬೇಕಾದರೂ ಇವು ಕೊಂಡೊಯ್ಯುತ್ತವೆ.”
ವಾಮದೇವನು ಹೇಳಿದನು: “ನನ್ನಂಥವರನ್ನು ವೇದಗಳು ಕೊಂಡೊಯ್ಯುತ್ತವೆ. ಆದರೆ ಅವು ಈ ಲೋಕದಿಂದ ಕೊಂಡೊಯ್ಯುತ್ತವೆ. ಈ ಲೋಕದಲ್ಲಿ ಇವೇ ನನ್ನ ವಾಹನಗಳು. ನನ್ನಂಥ ಅನ್ಯರದ್ದು ಕೂಡ ಇವೇ ವಾಹನಗಳು.”
ರಾಜನು ಹೇಳಿದನು: “ನಿನ್ನನ್ನು ನಾಲ್ಕು ಕತ್ತೆಗಳು, ಅಥವಾ ಶ್ರೇಷ್ಠ ಕುದುರೆಗಳು ಅಥವಾ ಹರಿ ತುರಂಗಗಳು ಕೊಂಡೊಯ್ಯಲಿ. ಅವುಗಳನ್ನು ಹೊಡೆದುಕೊಂಡು ಹೋಗು. ಆದರೆ ಈ ವಾಮ್ಯಗಳು ಕ್ಷತ್ರಿಯನವು. ನೋಡು. ನನ್ನಂತೆ ಅವುಗಳು ನಿನ್ನದಾಗಲಾರವು.”
ವಾಮದೇವನು ಹೇಳಿದನು: “ಬ್ರಾಹ್ಮಣನ ವ್ರತವು ಘೋರವೆಂದು ಹೇಳುತ್ತಾರೆ. ರಾಜನ್! ನಾನು ಇಲ್ಲಿ ಈ ವ್ರತದಲ್ಲಿ ಜೀವಿಸಿರುವೆನಾದರೆ, ಈಗಲೇ ಘೋರರೂಪರೂ ಮಹಾಕಾಯರೂ ಆದವರು ನಿನ್ನ ಮೇಲೆ ನಾಲ್ಕೂ ಕಡೆಗಳಿಂದ ಹರಿತ ಶೂಲಗಳನ್ನು ಪ್ರಹಾರಮಾಡುತ್ತಾರೆ.”
ರಾಜನು ಹೇಳಿದನು: “ಬ್ರಾಹ್ಮಣ ವಾಮದೇವ! ನೀನು ಮಾತಿನಿಂದ, ಮನಸ್ಸಿನಿಂದ, ಅಥವಾ ಕಾರ್ಯದಿಂದ ಕೊಲ್ಲುವೆಯೆಂದಾದರೆ, ನನ್ನ ಆಜ್ಞೆಯಂತೆ ಅವರು ನಿನ್ನನ್ನೂ ನಿನ್ನ ಶಿಷ್ಯರನ್ನೂ ಹರಿತ ಶೂಲಗಳಿಂದ ಇರಿಯಲಿ.”
ವಾಮದೇವನು ಹೇಳಿದನು: “ರಾಜನ್! ಮಾತಿನಿಂದ, ಮನಸ್ಸಿನಿಂದ ಅಥವಾ ಕಾರ್ಯದಿಂದ ಬ್ರಾಹ್ಮಣರನ್ನು ಪ್ರಶ್ನಿಸಬಾರದು. ತಪಸ್ಸಿನಿಂದ ಬ್ರಹ್ಮನನ್ನು ತಲುಪಿದ ಬ್ರಾಹ್ಮಣನು ಎಷ್ಟೇ ಶ್ರೇಷ್ಠನಾಗಿರಲಿ ಅವನ ಸೊಕ್ಕನ್ನು ಮುರಿಯಬಲ್ಲ.”
ವಾಮದೇವನು ಹೀಗೆ ಹೇಳಲು ಘೋರರೂಪಿ ರಾಕ್ಷಸರು ಉದ್ಭವಿಸಿದರು. ಅವರು ಶೂಲದಿಂದ ರಾಜನನ್ನು ಹೊಡೆಯಲು ಅವನು ಉಚ್ಛಸ್ವರದಲ್ಲಿ ಇದನ್ನು ಕೂಗಿ ಹೇಳಿದನು. “ಬ್ರಹ್ಮನ್! ಇಕ್ಷ್ವಾಕುಗಳು ಅಥವಾ ದಲ ಅಥವಾ ಅನ್ಯ ಜನರು ನನಗೆ ವಿಧೇಯರಾಗಿದ್ದಾರೆಂದರೆ, ನಾನು ವಾಮದೇವನ ವಾಮ್ಯಗಳನ್ನು ಬಿಟ್ಟು ಕೊಡುವುದಿಲ್ಲ. ಅವರು ಹೀಗೆ ಧರ್ಮಶೀಲರಾಗುವುದಿಲ್ಲ.”
ಹೀಗೆ ಹೇಳುತ್ತಿರುವಾಗಲೇ ಕ್ಷಿತೀಶನನ್ನು ಆ ರಾಕ್ಷಸರು ಹೊಡೆದು ಭೂಮಿಯ ಮೇಲೆ ಬೀಳಿಸಿದರು. ರಾಜನು ಕೆಳಗುರುಳಿದ್ದುದನ್ನು ತಿಳಿದು ಇಕ್ಷ್ವಾಕುಗಳು ದಲನನ್ನು ಅಭಿಷೇಕಿಸಿದರು. ಆಗ ರಾಜ್ಯಕ್ಕೆ ಹೋಗಿ ಆ ವಿಪ್ರ ವಾಮದೇವನು ರಾಜ ದಲನಿಗೆ ಈ ಮಾತುಗಳನ್ನಾಡಿದನು: “ರಾಜನ್! ಬ್ರಾಹ್ಮಣರಿಗೆ ಕೊಡಬೇಕೆಂದು ಸರ್ವ ಧರ್ಮಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಅಧರ್ಮಕ್ಕೆ ನೀನು ಹೆದರುವವನಾದರೆ ಶೀಘ್ರವಾಗಿ ಇಂದೇ ನನಗೆ ವಾಮ್ಯಗಳನ್ನು ಕೊಡು!”
ವಾಮದೇವನ ಈ ಮಾತನ್ನು ಕೇಳಿ ಆ ಪಾರ್ಥಿವನು ರೋಷದಿಂದ ಸೂತನಿಗೆ ಹೇಳಿದನು: “ಹೋಗಿ ಇಟ್ಟಿರುವ ನನ್ನ ಚಿತ್ರರೂಪದ ಬಾಣಗಳಲ್ಲಿ ಒಂದನ್ನು ವಿಷದಲ್ಲಿ ಮುಳುಗಿಸಿ ತೆಗೆದುಕೊಂಡು ಬಾ! ಅದರಿಂದ ಚುಚ್ಚಲ್ಪಟ್ಟು ವಾಮದೇವನು ಮಲಗಿ ಆರ್ತರೂಪನಾಗಿ ನಾಯಿಗಳಿಂದ ಹರಿಯಲ್ಪಡಲಿ!”
ವಾಮದೇವನು ಹೇಳಿದನು: “ನರೇಂದ್ರ! ನಿನಗೆ ರಾಣಿಯಲ್ಲಿ ಜನಿಸಿದ ಹತ್ತುವರ್ಷ ವಯಸ್ಸಿನ ಶ್ಯೇನಜಿತುವೆಂಬ ಮಗನಿದ್ದಾನೆಂದು ತಿಳಿದಿದ್ದೇನೆ. ನನ್ನ ಮಾತಿನ ಪ್ರಭಾವದಿಂದ ನೀನು ನಿನ್ನ ಪ್ರಿಯ ಮಗನನ್ನು ಈಗ ಘೋರರೂಪದ ಬಾಣದಿಂದ ಕೊಲ್ಲುತ್ತೀಯೆ!”
ವಾಮದೇವನು ಹೀಗೆ ಹೇಳಲು ಬಿಟ್ಟ ಅತಿವೇಗದ ಆ ಬಾಣವು ಅಂತಃಪುರದಲ್ಲಿ ರಾಜಪುತ್ರನನ್ನು ಸಂಹರಿಸಿತು. ಇದನ್ನು ಕೇಳಿ ದಲನು ಈ ಮಾತುಗಳನ್ನಾಡಿದನು: “ಇಕ್ಷ್ವಾಕುಗಳೇ! ಈ ಬ್ರಾಹ್ಮಣನನ್ನು ಕೊಂದು ನಾಶಪಡಿಸಿ. ನಿಮಗೆ ಪ್ರಿಯವಾದುದನ್ನು ಮಾಡುತ್ತೇನೆ. ಹೋಗಿ ಇನ್ನೊಂದು ವೇಗವಾಗಿ ಹೋಗಬಲ್ಲ ಬಾಣವನ್ನು ತೆಗೆದುಕೊಂಡು ಬನ್ನಿ ಮತ್ತು ನನ್ನ ವೀರ್ಯವನ್ನು ಇಂದು ನೋಡಿ!”
ವಾಮದೇವನು ಹೇಳಿದನು: “ಮಾನವೇಂದ್ರ! ವಿಷದಲ್ಲಿ ಅದ್ದಿದ ಈ ಘೋರರೂಪಿ ಬಾಣವನ್ನು ಧನುಸ್ಸಿಗೆ ಹೂಡಿ ನನ್ನ ಮೇಲೆ ಗುರಿಯಿಟ್ಟಿದ್ದೀಯಲ್ಲಾ, ಈ ಶ್ರೇಷ್ಠ ಶರವನ್ನು ಪ್ರಯೋಗಿಸುವುದಕ್ಕಾಗಲೀ ನನಗೆ ಗುರಿಯಿಡುವುದಕ್ಕಾಗಲೀ ನೀನು ಸಮರ್ಥನಾಗುವುದಿಲ್ಲ!”
ರಾಜನು ಹೇಳಿದನು: “ಇಕ್ಷ್ವಾಕುಗಳೇ! ನಾನು ಗರಬಡೆದಿರುವುದನ್ನು ನೋಡಿ! ಈ ಶರವನ್ನು ಪ್ರಯೋಗಿಸಲು ಅಶಕ್ಯನಾಗಿದ್ದೇನೆ! ಅವನನ್ನು ಕೊಲ್ಲಲು ನನಗೆ ಸಾಧ್ಯವಾಗುತ್ತಿಲ್ಲ. ಆಯುಷ್ಮಂತನಾಗಿರುವ ವಾಮದೇವನು ಜೀವಿಸಲಿ!”
ವಾಮದೇವನು ಹೇಳಿದನು: “ಈ ಬಾಣದಿಂದ ನಿನ್ನ ರಾಣಿಯನ್ನು ಮುಟ್ಟು. ಅದರಿಂದ ನೀನು ನಿನ್ನ ಪಾಪದಿಂದ ಮುಕ್ತನಾಗುತ್ತೀಯೆ!”
ರಾಜನು ಅವನಿಗೆ ಹೇಳಿದಂತೆ ಮಾಡಿದನು. ಆಗ ರಾಜಪುತ್ರಿಯು ಮುನಿಗೆ ಹೇಳಿದಳು: “ವಾಮದೇವ! ನಾನು ನನ್ನ ಪತಿಯೊಡನೆ ಸರಿಯಾಗಿ ಮಾತನಾಡಿದ್ದರೆ, ಪ್ರತಿದಿನವು ಅವನೊಂದಿಗೇ ಮಲಗಿದ್ದರೆ, ಬ್ರಾಹ್ಮಣರಿಂದ ಆಶೀರ್ವಾದಗಳನ್ನು ಬೇಡಿದ್ದರೆ, ನಾನು ಪುಣ್ಯಲೋಕವನ್ನು ಪಡೆಯುವಂತಾಗಲಿ.”
ವಾಮದೇವನು ಹೇಳಿದನು: “ಶುಭೇಕ್ಷಣೇ! ನೀನು ರಾಜಕುಲವನ್ನು ಉದ್ಧರಿಸಿದ್ದೀಯೆ. ಅಪ್ರತಿಮ ವರವನ್ನು ಕೇಳು. ನಿನಗೆ ಕೊಡುತ್ತೇನೆ. ನಿನ್ನ ಜನರನ್ನು ಮತ್ತು ಇಕ್ಷ್ವಾಕುಗಳ ಈ ಮಹಾ ರಾಜ್ಯವನ್ನು ಆಳು.”
ರಾಜಪುತ್ರಿಯು ಹೇಳಿದಳು: “ಭಗವನ್! ಒಂದೇ ಒಂದು ವರವನ್ನು ಕೇಳುತ್ತೇನೆ. ನನ್ನ ಪತಿಯು ಇಂದು ಕಿಲ್ಬಿಷದಿಂದ ಮುಕ್ತನಾಗಲಿ ಮತ್ತು ಪುತ್ರ-ಬಾಂಧವರೊಡನೆ ಅವನಿಗೆ ಮಂಗಳವಾಗಲಿ. ಇದೇ ನಾನು ಕೇಳುವ ವರ!”
ರಾಜಪುತ್ರಿಯ ಮಾತುಗಳನ್ನು ಕೇಳಿದ ಮುನಿಯು ಹಾಗೇ ಆಗಲೆಂದು ಹೇಳಿದನು. ಆಗ ರಾಜನು ಸಂತೋಷಗೊಂಡನು ಮತ್ತು ಅವನಿಗೆ ನಮಸ್ಕರಿಸಿ ವಾಮ್ಯಗಳನ್ನಿತ್ತನು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ