ವಿದುರ ನೀತಿ
ಸೂತ ಸಂಜಯನು ಪಾಂಡವರಲ್ಲಿಗೆ ಕೌರವ ರಾಯಭಾರಿಯಾಗಿ ಹೋಗಿ ಮರಳಿದ ರಾತ್ರಿ ಧೃತರಾಷ್ಟ್ರನು ನಿದ್ದೆಬಾರದೇ ಎಚ್ಚೆತ್ತಿದ್ದಾಗ ವಿದುರನನ್ನು ಕರೆಯಿಸಿ ಅವನಿಂದ ಅನೇಕ ನೀತಿಮಾತುಗಳನ್ನು ಕೇಳಿದನು.
“ವಿದುರ! ಸಂಜಯನು ಬಂದು ನನಗೆ ಬೈದು ಹೋಗಿದ್ದಾನೆ. ನಾಳೆ ಅವನು ಸಭಾಮಧ್ಯದಲ್ಲಿ ಅಜಾತಶತ್ರುವಿನ ಸಂದೇಶವನ್ನು ಹೇಳುವವನಿದ್ದಾನೆ. ಕುರುವೀರನ ಸಂದೇಶವೇನೆಂದು ಇಂದು ನನಗೆ ತಿಳಿಯಲಿಕ್ಕಾಗಲಿಲ್ಲ. ಆದುದರಿಂದ ನನ್ನ ದೇಹವು ಸುಡುತ್ತಿದೆ. ನಿದ್ದೆಬರುತ್ತಿಲ್ಲ. ಸುಡುತ್ತಿರುವ ಮತ್ತು ನಿದ್ದೆಮಾಡಲಿಕ್ಕಾಗದೇ ಇರುವವನಿಗೆ ಒಳ್ಳೆಯದು ಏನಾದರೂ ಇದೆಯೇ ಹೇಳು. ನೀನು ಧರ್ಮ ಮತ್ತು ಅರ್ಥಗಳಲ್ಲಿ ಕುಶಲನಾಗಿದ್ದೀಯೆ. ಸಂಜಯನು ಪಾಂಡವರ ಕಡೆಯಿಂದ ಮರಳಿ ಬಂದಾಗಿನಿಂದ ನನ್ನ ಮನಸ್ಸಿಗೆ ಶಾಂತಿಯಿಲ್ಲದಂತಾಗಿದೆ. ಅವನು ಏನು ಹೇಳುತ್ತಾನೋ ಎಂಬ ಚಿಂತೆಯಲ್ಲಿ ಇಂದು ನನ್ನ ಸರ್ವೇಂದ್ರಿಯಗಳೂ ಕೆಟ್ಟು ಹೋಗಿವೆ.”
ವಿದುರನು ಹೇಳಿದನು:
“ಪ್ರಜಾಗರವು (ನಿದ್ದೆಬಾರದಿರುವುದು) ದುರ್ಬಲನನ್ನು, ಬಡವನನ್ನು, ಕಳೆದುಕೊಂಡವನನ್ನು, ಕಾಮಿಯನ್ನು, ಮತ್ತು ಕಳ್ಳನನ್ನು ಆವರಿಸುತ್ತದೆ. ನರಾಧಿಪ! ಇವುಗಳಲ್ಲಿ ಯಾವ ಮಹಾ ದೋಷವೂ ನಿನ್ನನ್ನು ಮುಟ್ಟಿಲ್ಲ ತಾನೇ? ಪರವಿತ್ತವನ್ನು ಕಸಿದುಕೊಂಡು ಪರಿತಪಿಸುತ್ತಿಲ್ಲ ತಾನೇ?”
ಧೃತರಾಷ್ಟ್ರನು ಹೇಳಿದನು:
“ನಿನ್ನಿಂದ ಧರ್ಮವತ್ತಾದ ಪರಮ ಶ್ರೇಯಸ್ಕರ ಮಾತನ್ನು ಕೇಳಬಯಸುತ್ತೇನೆ. ಈ ರಾಜವಂಶದಲ್ಲಿ ಪ್ರಾಜ್ಞರಿಂದ ಸಮ್ಮತಿಯನ್ನು ಪಡೆದವನು ನೀನೊಬ್ಬನೇ.”
ವಿದುರನು ಹೇಳಿದನು:
“ಪ್ರಶಂಸೆಗಳಿಗೆ ಮರುಳಾಗದಿರುವುದು ನಿಂದನೆಗಳಿಗೆ ಗಮನಕೊಡದಿರುವುದು, ಅನಾಸ್ತಿಕನಾಗಿರುವುದು ಮತ್ತು ಶ್ರದ್ಧಾವಂತನಾಗಿರುವುದು ಪಂಡಿತನ ಲಕ್ಷಣ. ಯಾರನ್ನು ಕ್ರೋಧ, ಹರ್ಷ, ದರ್ಪ, ನಾಚಿಕೆ, ಕಪಟ, ಗೌರವಗಳು ಅವರ ಉದ್ದೇಶಗಳಿಂದ ಅಪಕರ್ಷಿಸುವುದಿಲ್ಲವೋ ಅವರನ್ನೇ ಪಂಡಿತರೆಂದು ಕರೆಯುತ್ತಾರೆ. ಯಾರ ಸ್ವತಃ ಆಲೋಚಿಸಿದ ಅಥವಾ ಮಂತ್ರಿಗಳೊಂದಿಗೆ ಆಲೋಚಿಸಿದ ಕೆಲಸಗಳು ಕಾರ್ಯಗತ ಗೊಳಿಸುವುದರ ಒಳಗೆ ಶತ್ರುಗಳಿಗೆ ಗೊತ್ತಿರುವುದಿಲ್ಲವೋ ಅವರನ್ನು ಪಂಡಿತರೆಂದು ಕರೆಯುತ್ತಾರೆ. ಯಾರ ಕೆಲಸವು ಛಳಿ, ಬಿಸಿ, ಭಯ, ಕಾಮ, ಸಮೃದ್ಧಿ ಅಥವಾ ಅಸಮೃದ್ಧಿಗಳಿಂದಾಗಿ ನಿಲ್ಲುವುದಿಲ್ಲವೋ ಅವರನ್ನು ಪಂಡಿತರೆಂದು ಕರೆಯುತ್ತಾರೆ. ಯಾರ ಸಾಂಸಾರಿಕ ಪ್ರಜ್ಞೆಯು ಧರ್ಮ-ಅರ್ಥಗಳನ್ನು ಅನುಸರಿಸುತ್ತದೆಯೋ, ಯಾರು ಕಾಮಕ್ಕಿಂತ ಅರ್ಥವನ್ನು ಆರಿಸಿಕೊಳ್ಳುತ್ತಾರೋ ಅವರನ್ನು ಪಂಡಿತರೆಂದು ಕರೆಯುತ್ತಾರೆ. ಯಥಾಶಕ್ತಿಯಾಗಿ ಪ್ರಯತ್ನಿಸುವವರು, ಯಥಾಶಕ್ತಿಯಾಗಿ ಕಾರ್ಯ ನಿರ್ವಹಿಸುವವರು, ಮತ್ತು ಯಾವುದನ್ನೂ ಮುಖ್ಯವಾದುದೆಲ್ಲವೆಂದು ಕಡೆಗಾಣದೇ ಇರುವವರು ಪಂಡಿತರು. ಬೇಗನೆ ಅರ್ಥಮಾಡಿಕೊಳ್ಳುವವರು, ತಾಳ್ಮೆಯಿಂದ ಕೇಳುವವರು, ವಿಷಯಗಳನ್ನು ತಿಳಿದುಕೊಂಡು, ಕಾಮದಿಂದಲ್ಲ, ಬಯಸುವವರು, ಕೇಳದೆಯೇ ಇತರರ ವಿಷಯದಲ್ಲಿ ತನ್ನ ಉಸಿರನ್ನು ಕಳೆಯದಿರುವವರು ಪಂಡಿತರ ಉಚ್ಛ ಜ್ಞಾನವನ್ನು ಪಡೆದವರು. ಪಂಡಿತರ ಬುದ್ಧಿಯುಳ್ಳ ನರನು ಸಿಗಲಸಾಧ್ಯವಾದವುಗಳ ಹಿಂದೆ ಹೋಗುವುದಿಲ್ಲ; ನಷ್ಟವಾಗಿ ಹೋದುದರ ಕುರಿತು ಶೋಕಿಸುವುದಿಲ್ಲ; ಮತ್ತು ಆಪತ್ತುಗಳು ಬಂದೊದಗಿದಾಗ ಬುದ್ಧಿಯನ್ನು ಕಳೆದುಕೊಳ್ಳುವುದಿಲ್ಲ. ಪ್ರಾರಂಭಿಸಿದ ಕಾರ್ಯವನ್ನು ಅದು ಮುಗಿಯುವ ತನಕ ದುಡಿಯುವನನ್ನು, ಸಮಯವನ್ನು ಕಳೆಯದೇ ಇರುವವನನ್ನು, ಆತ್ಮವನ್ನು ವಶದಲ್ಲಿಟ್ಟುಕೊಂಡಿರುವವನನ್ನು ಪಂಡಿತನೆಂದು ಕರೆಯುತ್ತಾರೆ. ಪಂಡಿತರು ಆರ್ಯಕರ್ಮಗಳಲ್ಲಿ ಸಂತೋಷಪಡುತ್ತಾರೆ, ಅವರಿಗೆ ಹಿತವನ್ನು ತರುವ ಕರ್ಮಗಳನ್ನು ಮಾಡುತ್ತಾರೆ ಮತ್ತು ಒಳ್ಳೆಯದರ ಕುರಿತು ಎಂದೂ ಅಸೂಯೆಪಡುವುದಿಲ್ಲ. ಯಾರು ಆತ್ಮಸನ್ಮಾನದಿಂದ ಹರ್ಷಗೊಳ್ಳದೇ, ಅವಮಾನದಿಂದ ಸುಡದೇ ಗಂಗೆಯ ಸರೋವರದ ನೀರಿನಂತೆ ಇರುತ್ತಾರೋ ಅಂಥವರನ್ನು ಪಂಡಿತರೆಂದು ಕರೆಯುತ್ತಾರೆ. ಸರ್ವಭೂತಗಳ ತತ್ವಗಳನ್ನೂ ತಿಳಿದಿರುವ, ಸರ್ವಕರ್ಮಗಳ ಯೋಗಗಳನ್ನು ತಿಳಿತಿರುವ, ಮನುಷ್ಯರಿಗೆ ಉಪಾಯಗಳನ್ನು ತಿಳಿದಿರುವ ನರನನ್ನು ಪಂಡಿತನೆಂದು ಕರೆಯುತ್ತಾರೆ. ಧಿಟ್ಟನಾಗಿ ಮಾತನಾಡುವವನು, ಬಹಳ ವಿಷಯಗಳ ಕುರಿತು ಮಾತನಾಡುವ ಪ್ರತಿಭೆಯುಳ್ಳವನು, ಗ್ರಂಥಗಳನ್ನು ವಾದಿಸಿ ಮಾತನಾಡಬಲ್ಲವನು ಅಂಥವನನ್ನೇ ಪಂಡಿತನೆಂದು ಕರೆಯುತ್ತಾರೆ. ಯಾರ ಶ್ರುತಿಗಳ ಪಾಂಡಿತ್ಯವು ಪ್ರಜ್ಞೆಯನ್ನು ಅನುಸರಿಸುತ್ತದೆಯೋ, ಯಾರ ಪ್ರಜ್ಞೆಯು ಶ್ರುತಿಗಳನ್ನು ಅನುಸರಿಸಿವೆಯೋ, ಯಾರು ಆರ್ಯರನ್ನು ಮರ್ಯಾದಿಸುವುದರಿಂದ ದೂರವಿರುವುದಿಲ್ಲವೋ ಅವರಿಗೆ ಪಂಡಿತ ಎಂಬ ಹೆಸರು ದೊರೆಯುತ್ತದೆ.
ಶ್ರುತಿಗಳನ್ನು ತಿಳಿದುಕೊಳ್ಳದೇ ಇದ್ದರೂ ಮುನ್ನುಗ್ಗುವ, ದರಿದ್ರನಾಗಿದ್ದರೂ ಸೊಕ್ಕಿರುವ, ಮಾಡಬಾರದ ಕೆಲಸಗಳನ್ನು ಮಾಡಿ ಸಂಪಾದನೆ ಮಾಡುವವನನ್ನು ತಿಳಿದವರು ಮೂಢನೆನ್ನುತ್ತಾರೆ. ತನ್ನ ಧನವನ್ನು ಬಿಟ್ಟು ಇನ್ನೊಬ್ಬರ ಧನದ ಹಿಂದೆ ಯಾರು ಹೋಗುತ್ತಾರೋ, ಮಿತ್ರರಿಗೇ ಯಾರು ಮೋಸಮಾಡುತ್ತಾರೋ ಅವರನ್ನು ಮೂಢರೆಂದು ಕರೆಯುತ್ತಾರೆ. ಯಾರು ಬಯಸಬಾರದುದನ್ನು ಬಯಸುತ್ತಾರೋ, ಬಯಸಬೇಕಾದುದನ್ನು ತೊರೆಯುತ್ತಾರೋ, ಬಲಶಾಲಿಗಳೊಂದಿಗೆ ದ್ವೇಷವನ್ನು ಬೆಳೆಸುತ್ತಾರೋ ಅವರನ್ನು ಮೂಢಚೇತಸರೆಂದು ಹೇಳುತ್ತಾರೆ. ಅಮಿತ್ರರನ್ನು ಮಿತ್ರರನ್ನಾಗಿ ಮಾಡಿಕೊಳ್ಳುವವರನ್ನು, ಮಿತ್ರರನ್ನು ದ್ವೇಷಿಸಿ ದೂರವಿಡುವವರನ್ನು, ದುಷ್ಟಕರ್ಮಗಳನ್ನು ಮಾಡುವವರನ್ನು ಮೂಢಚೇತಸರೆಂದು ಕರೆಯುತ್ತಾರೆ. ಮಾಡುವುದೆಲ್ಲವನ್ನೂ ಹೇಳಿಕೊಳ್ಳುವವನು, ಎಲ್ಲವನ್ನೂ ಪರೀಕ್ಷಿಸುವವನು, ಮತ್ತು ಬೇಗನೇ ಮಾಡಿ ಮುಗಿಸಬಹುದಾದುದನ್ನು ಮಾಡಲು ತುಂಬಾ ಸಮಯ ತೆಗೆದುಕೊಳ್ಳುವವನು ಮೂಢ. ಆಮಂತ್ರಣವಿಲ್ಲದೇ ಪ್ರವೇಶಿಸುವ, ಕೇಳದೆಯೇ ಬಹಳ ಮತನಾಡುವ, ಅಪ್ರಮತ್ತರಾಗಿರುವವರ ಮೇಲೆ ವಿಶ್ವಾಸನ್ನಿಡುವ ನರಾಧಮನು ಮೂಢಚೇತಸ. ತಪ್ಪು ತನ್ನದಾಗಿದ್ದರೂ ಇತರರನ್ನು ದೂಷಿಸುವ, ದುರ್ಬಲನಾಗಿದ್ದರೂ ಕೋಪಗೊಳ್ಳುವ ನರನು ಅತ್ಯಂತ ಮೂಢ. ತನ್ನ ಶಕ್ತಿಯನ್ನು ತಿಳಿದುಕೊಳ್ಳದೆಯೇ ಧರ್ಮಾರ್ಥಗಳನ್ನು ತೊರೆದು, ಸರಿಯಾದ ಯೋಜನೋಪಾಯಗಳನ್ನು ಬಳಸದೇ, ಅಲಭ್ಯವಾದುದನ್ನು ಪಡೆಯಲು ಮುಂದುವರೆದವನನ್ನು ಮೂಢಬುದ್ಧಿಯೆಂದು ಹೇಳುತ್ತಾರೆ. ಯಾರು ಶಿಕ್ಷೆಗೆ ಅನರ್ಹರಾದವರನ್ನು ಶಿಕ್ಷಿಸುತ್ತಾರೋ, ಪೊಳ್ಳಾಗಿರುವವರನ್ನು ಪೂಜಿಸುತ್ತಾರೋ, ಜಿಪುಣರನ್ನು ಬೇಡುತ್ತಾರೋ ಅವರನ್ನು ಮೂಢಚೇತಸರೆನ್ನುತ್ತಾರೆ. ಅತುಲ ಸಂಪತ್ತನ್ನು ಪಡೆದು, ಜೊತೆಗೆ ವಿದ್ಯೆಯ ಐಶ್ವರ್ಯವನ್ನೂ ಪಡೆದು ಸೊಕ್ಕಿಲ್ಲದೇ ನಡೆದುಕೊಳ್ಳುವವನನ್ನು ಪಂಡಿತನೆಂದು ಕರೆಯುತ್ತಾರೆ. ಸಂಪತ್ತಿದ್ದೂ, ಸೇವಕರಲ್ಲಿ ಹಂಚಿಕೊಳ್ಳದೇ, ಒಬ್ಬನೇ ತಿನ್ನುವವನು ಮತ್ತು ಸುಂದರ ವಸ್ತ್ರಗಳನ್ನು ತೊಡುವವನು ಕಠಿಣ ಹೃದಯಿಯಲ್ಲದೇ ಬೇರೆ ಯಾರಿರಬಹುದು? ಒಬ್ಬನೇ ಮಾಡಿದ ಪಾಪದ ಫಲವನ್ನು ಬಹಳ ಮಂದಿ ಉಣ್ಣಬಹುದು. ಆದರೆ ದೋಷವು ಮಾಡಿದವನಿಗೆ ಮಾತ್ರ ತಲುಪುತ್ತದೆ. ಉಣ್ಣುವವರು ಅದರಿಂದ ತೊಂದರೆಯಿಲ್ಲದೇ ತಪ್ಪಿಸಿಕೊಂಡುಬಿಡುತ್ತಾರೆ. ಧನುರ್ಧಾರಿಯು ಒಬ್ಬನನ್ನಾದರೂ ಹೊಡೆಯುವುದರಲ್ಲಿ ಯಶಸ್ವಿಯಾಗಬಹುದು ಅಥವಾ ಯಶಸ್ವಿಯಾಗದೇ ಇರಬಹುದು. ಆದರೆ ಬುದ್ಧಿವಂತನು ತನ್ನ ಬುದ್ಧಿಯನ್ನು ಬಳಸಿ ರಾಜನೊಂದಿಗೆ ರಾಷ್ಟ್ರವನ್ನೂ ನಾಶಗೊಳಿಸಬಹುದು.
ಎರಡರಲ್ಲಿ ಒಂದನ್ನು ನಿಶ್ಚಯಿಸಿ, ನಾಲ್ಕರಲ್ಲಿ ಮೂರನ್ನು ವಶಮಾಡಿಕೋ. ಐದನ್ನು ಗೆದ್ದು, ಆರನ್ನು ಅರ್ಥಮಾಡಿಕೊಂಡು, ಏಳನ್ನು ತೊರೆದು ಸುಖಿಯಾಗಿರು. ವಿಷವು ಒಬ್ಬನನ್ನೇ ಕೊಲ್ಲುತ್ತದೆ. ಖಡ್ಗವು ಅನೇಕರನ್ನು ವಧಿಸುತ್ತದೆ. ಆದರೆ ಕೆಟ್ಟ ಸಲಹೆಗಾರರು ರಾಜ ಮತ್ತು ಪ್ರಜೆಗಳೊಂದಿಗೆ ಸಂಪೂರ್ಣ ರಾಷ್ಟ್ರವನ್ನು ಕೊಲ್ಲುತ್ತಾರೆ. ರುಚಿಯಾಗಿದ್ದುದನ್ನು ಒಬ್ಬನೇ ತಿನ್ನಬಾರದು. ಸಂಪಾದನೆಯ ಕುರಿತು ಒಬ್ಬನೇ ಚಿಂತಿಸಬಾರದು. ಒಬ್ಬನೇ ಪ್ರವಾಸಕ್ಕೆ ಹೋಗಬಾರದು. ಎಲ್ಲರೂ ಮಲಗಿರುವಾಗ ಒಬ್ಬನೇ ಎಚ್ಚೆತ್ತಿರಬಾರದು. ಎರಡನೆಯವನಿಲ್ಲದ ಯಾವ ಏಕನನ್ನು ನೀನು ತಿಳಿದಿಲ್ಲವೋ ಅವನೇ ಸತ್ಯ, ಸ್ವರ್ಗದ ಸೋಪಾನ, ಮತ್ತು ಸಮುದ್ರದಲ್ಲಿರುವ ನಾವೆಯಂತೆ. ಕ್ಷಮಾವಂತನಲ್ಲಿ ಒಂದೇ ಒಂದು ದೋಷವಿದೆ. ಎರಡನೆಯದಿಲ್ಲ. ಅದೇನೆಂದರೆ - ಜನರು ಕ್ಷಮಾಯುಕ್ತನನ್ನು ಅಶಕ್ತನೆಂದು ತಿಳಿದುಬಿಡುತ್ತಾರೆ. ಕ್ಷಮೆಯೇ ಒಂದು ಪರಮ ಶ್ರೇಯಸ್ಕರ ಧರ್ಮ. ಕ್ಷಮೆಯೊಂದೇ ಉತ್ತಮ ಶಾಂತಿ. ತಿಳುವಳಿಕೆಯೊಂದೇ ಪರಮ ದೃಷ್ಟಿ. ಅಹಿಂಸೆಯೊಂದೇ ಪರಮ ಸುಖ.
ಬಿಲದಲ್ಲಿ ವಾಸಿಸುವವುಗಳನ್ನು ಸರ್ಪವು ನುಂಗುವಂತೆ ಭೂಮಿಯು ಇವರಿಬ್ಬರನ್ನು ನುಂಗುತ್ತದೆ: ಹೋರಾಡಲು ಅಸಮರ್ಥನಾದ ರಾಜ ಮತ್ತು ಪ್ರವಾಸಮಾಡದೇ ಇರುವ ಬ್ರಾಹ್ಮಣ. ಎರಡು ಕರ್ಮಗಳನ್ನು ಮಾಡಿ ನರನು ಲೋಕದಲ್ಲಿ ವಿರಾಜಿಸುತ್ತಾನೆ: ಚುಚ್ಚುವ ಮಾತುಗಳನ್ನಾಡದೇ ಇರುವುದರಿಂದ ಮತ್ತು ಸತ್ಪುರುಷರಲ್ಲದವರನ್ನು ಆದರಿಸದೇ ಇರುವುದರಿಂದ. ಇವಿಬ್ಬರಿಗೂ ತಮ್ಮದೇ ಆದ ಕಾರಣಗಳಿಲ್ಲ: ಇತರರು ಕಾಮಿಸುತ್ತಿರುವನನನ್ನು ಕಾಮಿಸುವ ಸ್ತ್ರೀ ಮತ್ತು ಇತರರು ಪೂಜಿಸುತ್ತಾರೆಂದು ಪೂಜಿಸುವವನು. ಇವೆರಡು ಶರೀರವನ್ನು ಪರಿಶೋಷಿಸುವ ತೀಕ್ಷ್ಣ ಕಂಟಕಗಳು: ಬಡವನ ಆಸೆ ಮತ್ತು ಸೇವಕನ ಕೋಪ. ಈ ಈರ್ವರು ಪುರುಷರು ಸ್ವರ್ಗಕ್ಕೂ ಮೇಲೆ ನಿಲ್ಲುತ್ತಾರೆ: ಕ್ಷಮಾವಂತನಾದ ಪ್ರಭು ಮತ್ತು ದಾನಿಯಾಗಿರುವ ದರಿದ್ರ. ನ್ಯಾಯವಾಗಿ ಪಡೆದಿರುವ ಸಂಪತ್ತಿನ ದುರುಪಯೋಗವು ಎರಡು ರೀತಿಯಲ್ಲಾಗುತ್ತದೆ ಎಂದು ತಿಳಿಯಲ್ಪಟ್ಟಿದೆ: ಅಪಾತ್ರನಿಗೆ ದಾನ ಮಾಡುವುದು ಮತ್ತು ಪಾತ್ರನಾದವನಿಗೆ ದಾನವನ್ನು ನಿರಾಕರಿಸುವುದು.
ಮನುಷ್ಯರಿಗೆ ಮೂರು ನ್ಯಾಯಗಳಿವೆಯೆಂದು ಕೇಳಿದ್ದೇವೆ. ಕನಿಷ್ಟ, ಮಧ್ಯಮ ಮತ್ತು ಶ್ರೇಷ್ಠ ಎಂದು ವೇದವಿದರು ತಿಳಿದಿದ್ದಾರೆ. ಮೂರು ವಿಧದ ಪುರುಷರಿದ್ದಾರೆ: ಉತ್ತಮ, ಅಧಮ ಮತ್ತು ಮಧ್ಯಮ. ಅವರ ಗುಣಕ್ಕೆ ತಕ್ಕಂತೆ ಅವರು ಮೂರು ವಿಧದ ಕರ್ಮಗಳಲ್ಲಿ ತೊಡಗಿರಬೇಕು. ಈ ಮೂವರಲ್ಲಿ ತಮ್ಮದೇ ಸಂಪತ್ತು ಇರುವುದಿಲ್ಲ: ಹೆಂಡತಿ, ಸೇವಕ ಮತ್ತು ಮಗ. ಅವರು ಸಂಪಾದಿಸಿದ ಧನವು ಅವರನ್ನು ಪಡೆದವರಿಗೇ ಸೇರುತ್ತದೆ.
ಎಷ್ಟೇ ಬಲಶಾಲಿಯಾಗಿದ್ದರೂ ರಾಜನು ಈ ನಾಲ್ವರ ಸಲಹೆಯನ್ನು ತಿರಸ್ಕರಿಸಬೇಕು ಎಂದು ಪಂಡಿತರು ಅವರ ತಿಳುವಳಿಕೆಯಿಂದ ಹೇಳುತ್ತಾರೆ: ಸಣ್ಣಬುದ್ಧಿಯುಳ್ಳವರು, ವಿಷಯವನ್ನು ಎಳೆಯುವವರು, ಸೋಮಾರಿಗಳು ಮತ್ತು ಹೊಗಳುಭಟ್ಟರು. ಶ್ರೀಮಂತ ಗೃಹಸ್ಥನ ಮನೆಯಲ್ಲಿ ಈ ನಾಲ್ಕು ನೆಲೆಸಿರಬೇಕು: ವೃದ್ಧ ದಾಯಾದಿಗಳು, ಉತ್ತಮ ಕುಲದಲ್ಲಿ ಹುಟ್ಟಿ ಕಷ್ಟದಲ್ಲಿರುವವರು, ದರಿದ್ರನಾಗಿರುವ ಸಖ ಮತ್ತು ಮಕ್ಕಳಿಲ್ಲದಿರುವ ತಂಗಿ. ಸದ್ಯದಲ್ಲಿಯೇ ಫಲವನ್ನು ನೀಡುವ ನಾಲ್ಕು ವಿಷಯಗಳನ್ನು ತ್ರಿದಶೇಂದ್ರನು ಬೃಹಸ್ಪತಿಯಲ್ಲಿ ಕೇಳಿದಾಗ ಅವನು ಹೇಳಿದುದನ್ನು ನನ್ನಿಂದ ಕೇಳು: ದೇವತೆಗಳ ಸಂಕಲ್ಪ, ಧೀಮತರ ಅನುಭವ, ವಿದ್ಯಾವಂತರ ವಿನಯ, ಮತ್ತು ಪಾಪಕರ್ಮಿಗಳ ವಿನಾಶ.
ಮನುಷ್ಯನು ಈ ಪಂಚಾಗ್ನಿಗಳ ಸೇವೆಯನ್ನು ಪ್ರಯತ್ನಪಟ್ಟು ಮಾಡಬೇಕು: ತಂದೆ, ತಾಯಿ, ಅಗ್ನಿ, ಆತ್ಮ ಮತ್ತು ಗುರು. ಕೇವಲ ಈ ಐದನ್ನು ಪೂಜಿಸಿ ಲೋಕದಲ್ಲಿ ಯಶವನ್ನು ಹೊಂದಬಹದು: ದೇವತೆಗಳು, ಪಿತೃಗಳು, ಮನುಷ್ಯರು, ಭಿಕ್ಷುಗಳು ಮತ್ತು ಐದನೆಯದಾಗಿ ಅತಿಥಿಗಳು. ನೀನು ಹೋಗುವಲ್ಲೆಲ್ಲ ಈ ಐದು ನಿನ್ನನ್ನು ಅನುಸರಿಸಿ ಬರುತ್ತವೆ: ಮಿತ್ರರು, ವೈರಿಗಳು, ಮಧ್ಯಸ್ಥರು, ಉಪಜೀವಿಗಳು ಮತ್ತು ಉಪಜೀವಿಗಳಲ್ಲದೇ ಇರುವವರು. ಮನುಷ್ಯನ ಪಂಚೇಂದ್ರಿಯಗಳಲ್ಲಿ ಕೇವಲ ಒಂದು ಇಂದ್ರಿಯದಲ್ಲಿ ತೂತು ಕಂಡುಬಂದರೂ, ಸೀಳುಬಂದ ಗಡಿಗೆಯಿಂದ ಎಲ್ಲ ನೀರೂ ಸುರಿದು ಹೋಗುವಂತೆ ಅಲ್ಲಿಂದ ಅವನ ಪ್ರಜ್ಞೆಯಲ್ಲವೂ ಸುರಿದುಹೋಗುತ್ತದೆ.
ಆಗಬೇಕೆಂದು ಬಯಸುವ ಪುರುಷನು ಈ ಆರು ದೋಷಗಳನ್ನು ತೊರೆಯಬೇಕು: ನಿದ್ರೆ, ಇಂದ್ರಿಯ ಸುಖ, ಭಯ, ಕ್ರೋಧ, ಆಲಸ್ಯ, ಮತ್ತು ವಿಷಯವನ್ನು ಎಳೆದುಕೊಂಡು ಹೋಗುವುದು. ಈ ಆರನ್ನು ಪುರುಷನು ಒಡೆದುಹೋದ ದೋಣಿಯನ್ನು ಸಮುದ್ರದಲ್ಲಿ ಹೇಗೋ ಹಾಗೆ ಬಿಸಾಡಬೇಕು: ಪ್ರವಕ್ತಾರನಲ್ಲದ ಆಚಾರ್ಯ, ಅರ್ಥಮಾಡಿಕೊಳ್ಳದೇ ಇರುವ ಋತ್ವಿಜ, ರಕ್ಷಣೆ ನೀಡಲಾರದ ರಾಜ, ಅಪ್ರಿಯವಾಗಿ ಮಾತನಾಡುವ ಹೆಂಡತಿ, ಊರಿನಲ್ಲಿಯೇ ಉಳಿಯಲು ಬಯಸುವ ಗೋಪಾಲಕ ಮತ್ತು ವನಕ್ಕೆ ಹೋಗಬಯಸುವ ಕ್ಷೌರಿಕ. ಹಾಗೆಯೇ ಈ ಆರು ಗುಣಗಳನ್ನು ಪುರುಷನು ಎಂದೂ ತೊರೆಯಬಾರದು: ಸತ್ಯ, ದಾನ, ಆಲಸ್ಯದಿಂದಿಲ್ಲದಿರುವುದು, ಅಸೂಯೆ ಪದದಿರುವುದು, ಕ್ಷಮೆ ಮತ್ತು ತಾಳ್ಮೆ. ನಿತ್ಯವೂ ಆತ್ಮನಲ್ಲಿ ನೆಲೆಸಿರುವ ಆರು ಐಶ್ವರ್ಯಗಳನ್ನು ಯಾರು ಜಿತೇಂದ್ರಿಯರಾಗಿದ್ದುಕೊಂಡು ಗೆಲ್ಲುತ್ತಾರೋ ಅವರು ಹೇಗೆ ಪಾಪಗಳನ್ನು ಮಾಡುತ್ತಾರೆ ಮತ್ತು ಹೇಗೆ ವಿಪತ್ತನ್ನು ಹೊಂದುತ್ತಾರೆ? ಈ ಆರು ಆರರ ಮೇಲೆ ಜೀವಿಸುತ್ತವೆ: ಕಳ್ಳರು ಜಾಗರೂಕತೆಯಿಂದ ಇಲ್ಲದಿರುವವರ ಮೇಲೆ, ವೈದ್ಯರು ರೋಗವನ್ನು ಪಡೆಯುವವರ ಮೇಲೆ, ಸ್ತ್ರೀಯರು ಕಾಮಿಗಳ ಮೇಲೆ, ಪುರೋಹಿತರು ಯಜಮಾನನ ಮೇಲೆ, ರಾಜನು ಜಗಳಮಾಡುವವರ ಮೇಲೆ ಮತ್ತು ಕೊನೆಯಲ್ಲಿ ಪಂಡಿತರು ಮೂರ್ಖರ ಮೇಲೆ. ರಾಜನು ಸದಾ ವ್ಯಸನವನ್ನು ತರುವ, ಮತ್ತು ಚೆನ್ನಾಗಿ ನೆಲೆಗೊಂಡಿರುವ ಪಾರ್ಥಿವರನ್ನೂ ಪ್ರಾಯಶಃ ವಿನಾಶಮಾಡಬಲ್ಲ,
ಈ ಏಳು ದೋಷಗಳನ್ನು ತೊರೆಯಬೇಕು: ಸ್ತ್ರೀ, ಜೂಜು, ಬೇಟೆ, ಕುಡಿತ, ಐದನೆಯದಾಗಿ ಕ್ರೂರ ಮಾತು, ಮಹಾ ದಂಡನೆ, ಮತ್ತು ಸಂಪತ್ತಿನ ದುರುಪಯೋಗ.
ಮನುಷ್ಯನ ವಿನಾಶವನ್ನು ಈ ಎಂಟು ಲಕ್ಷಣಗಳು ಮೊದಲೇ ಸೂಚಿಸುತ್ತವೆ: ಮೊದಲನೆಯದಾಗಿ ಬ್ರಾಹ್ಮಣರನ್ನು ದ್ವೇಷಿಸುವುದು, ಬ್ರಾಹ್ಮಣರನ್ನು ವಿರೋಧಿಸುವುದು, ಬ್ರಾಹ್ಮಣರ ಸ್ವತ್ತನ್ನು ಕಸಿದುಕೊಳ್ಳುವುದು, ಬ್ರಾಹ್ಮಣರನ್ನು ಕೊಲ್ಲುವುದು, ಅವರ ನಿಂದನೆಯಲ್ಲಿ ಖುಷಿ ಪಡೆಯುವುದು, ಅವರ ಪ್ರಶಂಸನೆಯನ್ನು ಒಪ್ಪಿಕೊಳ್ಳದೇ ಇರುವುದು, ಕಾರ್ಯಗಳಲ್ಲಿ ಅವರನ್ನು ಮರೆತುಬಿಡುವುದು, ಮತ್ತು ಏನನ್ನಾದರೂ ಅವರು ಕೇಳಿದಾಗ ಅವರನ್ನು ಕೀಳಾಗಿ ಕಾಣುವುದು. ಈ ಎಂಟು ಹರ್ಷವನ್ನು ತರುವ ಬೆಣ್ಣೆಗಳು. ಇವೇ ಇಲ್ಲಿ ವರ್ತಮಾನದಲ್ಲಿ ಸುಖವನ್ನು ತರುವವೆಂದು ಕಾಣುತ್ತವೆ: ಸಖಿಯರೊಂದಿಗೆ ಸಮಾಗಮ, ಅತಿ ದೊಡ್ಡ ಧನಲಾಭ, ಪುತ್ರನ ಆಲಿಂಗನ, ಸಂಭೋಗದ ಮಿಲನ, ಸಮಯದಲ್ಲಿ ಪ್ರಿಯರೊಂದಿಗೆ ಸಂಭಾಷಣೆ, ತನ್ನದೇ ಪಕ್ಷವು ಮುಂದುವರೆಯುವುದು, ನಿರೀಕ್ಷಿಸಿದ ಲಾಭವು ದೊರೆಯುವುದು ಮತ್ತು ಜನರ ಸಂಸದಿಯಲ್ಲಿ ಸನ್ಮಾನ.
ಇದು ಒಂಭತ್ತು ದ್ವಾರಗಳುಳ್ಳ, ಮೂರು ಸ್ಥಂಭಗಳನ್ನುಳ್ಳ, ಐದು ಸಾಕ್ಷಿಗಳನ್ನುಳ್ಳ, ಕ್ಷೇತ್ರಜ್ಞನ ಯಜಮಾನಿಕೆಯಲ್ಲಿರುವ ಮನೆ ಎನ್ನುವುದನ್ನು ಯಾವ ವಿದ್ವಾಂಸನು ಅರಿತುಕೊಂಡಿದ್ದಾನೋ ಅವನೇ ಪರಮ ಕವಿ.
ಈ ಹತ್ತು ಮಂದಿಗೆ ಧರ್ಮವೇನೆಂದು ತಿಳಿದಿರುವುದಿಲ್ಲ. ಅವರನ್ನು ತಿಳಿದುಕೋ: ಅಮಲಿನಲ್ಲಿರುವವ, ಮೂರ್ಛೆಗೊಂಡಿರುವವ, ಉನ್ಮತ್ತನಾದವ, ಆಯಾಸಗೊಂಡಿರುವ, ಕ್ರೋಧದಲ್ಲಿರುವವ, ಹಸಿವೆಯಲ್ಲಿರುವವ, ಅವಸರದಲ್ಲಿರುವವ, ಕಪಟ, ಆಸೆಬುರುಕ, ಮತ್ತು ಕಾಮುಕ. ಆದುದರಿಂದ ಈ ಹತ್ತು ಭಾವಗಳಿರುವವರೊಂದಿಗೆ ಪಂಡಿತನು ಸೇರುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಪುರಾತನ ಇತಿಹಾಸವೊಂದಿದೆ. ಪುತ್ರನಿಗಾಗಿ ಅಸುರೇಂದ್ರ ಸುಧನ್ವನು ಹೇಳಿದ ಗೀತೆ.
ಕಾಮ-ಕ್ರೋಧಗಳನ್ನು ತೊರೆದ, ಪಾತ್ರರಿಗೆ ಧನವನ್ನು ನೀಡುವ, ವಿವೇಕವುಳ್ಳ, ಕಲಿತ, ಚುರುಕಾಗಿರುವ ರಾಜನನ್ನು ಸರ್ವಲೋಕಗಳ ಅಧಿಕಾರಿಯೆಂದು ಪರಿಗಣಿಸುತ್ತಾರೆ. ಮನುಷ್ಯರಲ್ಲಿ ವಿಶ್ವಾಸವನ್ನು ಹೇಗೆ ತರಬೇಕು ಎಂದು ತಿಳಿದ, ತಪ್ಪನ್ನು ಸರಿಯಾಗಿ ತಿಳಿದುಕೊಂಡೇ ಶಿಕ್ಷೆಯನ್ನು ನೀಡುವ, ಕ್ಷಮೆಯು ಎಷ್ಟರ ಮಟ್ಟಿಗಿರಬೇಕು ಎಂದು ಚೆನ್ನಾಗಿ ತಿಳಿದುಕೊಂಡಿರುವವನಿಗೆ ಸಮಗ್ರ ಸಂಪತ್ತು ಬರುತ್ತದೆ. ಅತಿ ದುರ್ಬಲನನ್ನೂ ನಿರ್ಲಕ್ಷಿಸದ, ಶತ್ರುವಿನ ವಿಷಯದಲ್ಲಿ ಬುದ್ಧಿಯನ್ನು ಉಪಯೋಗಿಸುವ, ಅವಕಾಶಕ್ಕೆ ಕಾಯುತ್ತಿರುವ, ತನಗಿಂತ ಬಲಶಾಲಿಯಾದವನೊಂದಿಗೆ ದ್ವೇಷವನ್ನು ಬೆಳೆಸದ, ಕಾಲಕ್ಕೆ ಸರಿಯಾಗಿ ತನ್ನ ವಿಕ್ರಮವನ್ನು ತೋರಿಸುವವನೇ ಧೀರನು. ಒಂದು ವೇಳೆ ಆಪತ್ತು ಬಂದರೆ ವ್ಯಥಿತನಾಗದ, ಅಪ್ರಮತ್ತನಾಗದೇ ಉದ್ಯೋಗನಿರತನಾದ, ದುಃಖದ ಸಮಯವು ಬಂದಾಗ ಜಿತಾತ್ಮನಾಗಿ ಸಹಿಸಿಕೊಳ್ಳುವವನೇ ಧುರಂಧರ ಮತ್ತು ಶತ್ರುಗಳನ್ನು ಗೆಲ್ಲುವವನು. ವಿನಾಕಾರಣ ಮನೆಯಿಂದ ಹೊರಗೆ ಜೀವಿಸದೇ ಇರುವ, ಪಾಪಿಗಳೊಂದಿಗೆ ಗೆಳೆತನವನ್ನು ಬೆಳೆಸದಿರುವ, ಇತರರ ಪತ್ನಿಯನ್ನು ಬಯಸದಿರುವ, ಜಂಬವನ್ನು ಕೊಚ್ಚಿಕೊಳ್ಳದಿರುವ, ಕದಿಯದಿರುವ, ಕೃತಘ್ನನಾಗಿರದ, ಮತ್ತು ಮದ್ಯಪಾನ ಮಾಡದಿರುವವನು ಸದಾ ಸುಖಿಯಾಗಿರುವನು. ಅರ್ಥವರ್ಗವನ್ನು ಗಳಿಸಿದರೂ ಜಂಬಪಡದಿರುವ, ಕೇಳಿದಾಗ ಸತ್ಯವನ್ನೇ ಹೇಳುವ, ಮಿತ್ರರಿಗಾಗಿಯಾದರೂ ವಿವಾದದಲ್ಲಿ ತೊಡಗದ, ಅಪಮಾನಿತಗೊಂಡರೂ ಕುಪಿತನಾಗಿರದ ಅವನೇ ಅಮೂಢನು. ಯಾರು ಅಸೂಯೆಪಡೆಯದೇ ಅನುಕಂಪಿತರಾಗಿರುವವರೋ, ದುರ್ಬಲನಾಗಿದ್ದರೆ ಇತರರೊಂದಿಗೆ ಸ್ಪರ್ಧಿಸುವುದಿಲ್ಲವೋ, ಜಂಬದಿಂದ ಮಾತನಾಡುವುದಿಲ್ಲವೋ, ವಿವಾದವನ್ನು ಕ್ಷಮಿಸುತ್ತಾರೋ ಅವರು ಎಲ್ಲೆಡೆಯೂ ಪ್ರಶಂಸೆಯನ್ನು ಪಡೆಯುತ್ತಾರೆ. ಯಾರು ಉದ್ಧಟತನದ ರೂಪವನ್ನು ತೋರಿಸುವುದಿಲ್ಲವೋ, ಅಥವಾ ಇತರರಿಗೆ ತನ್ನ ಪೌರುಷವನ್ನು ಹೇಳಿಕೊಳ್ಳುವುದಿಲ್ಲವೋ, ಅಥವಾ ಎಚ್ಚರವನ್ನು ಕಳೆದುಕೊಂಡು ಕಟುಕಾಗಿ ಮಾತನ್ನಾಡುವುದಿಲ್ಲವೋ ಅಂಥವರನ್ನು ಜನರು ತಮ್ಮ ಪ್ರಿಯರನ್ನಾಗಿ ಸದಾ ಮಾಡಿಕೊಳ್ಳುತ್ತಾರೆ. ತಣ್ಣಗಾಗಿರುವ ವೈರವನ್ನು ಪುನಃ ಉರಿದೆಬ್ಬಿಸದೇ ಇರುವವನನ್ನು, ದರ್ಪದಿಂದ ಮೇಲೇರದಿರುವ ಅಥವಾ ಅಸ್ತವಾಗುವುದಿಲ್ಲವವನನ್ನು, ದುರ್ಗತಿಯನ್ನು ಪಡೆದಿದ್ದೇನೆ ಎಂದು ಸಿಟ್ಟಾಗುವುದಿರುವನನ್ನು ಹಿರಿಯರು ಪರಮ ಆರ್ಯಶೀಲನೆಂದು ಹೇಳುವರು. ತನ್ನದೇ ಸುಖದಲ್ಲಿ ತುಂಬಾ ಹರ್ಷಿತನಾಗದ, ಇತರರ ದುಃಖಕ್ಕೆ ಸಂತೋಷಪಡದ, ದಾನ ಮಾಡಿದ ನಂತರ ಪಶ್ಚಾತ್ತಾಪ ಪಡದವನನ್ನು ಸತ್ಪುರುಷ-ಆರ್ಯಶೀಲನೆಂದು ಕರೆಯುತ್ತಾರೆ. ದೇಶಾಚಾರ-ಪದ್ಧತಿಗಳನ್ನು, ಜಾತಿಧರ್ಮಗಳನ್ನು, ಮತ್ತು ಉತ್ತಮ-ಕನಿಷ್ಟಗಳನ್ನು ತಿಳಿದಿರುವವನು ಎಲ್ಲೆಲ್ಲಿ ಹೋಗುತ್ತಾನೋ ಅಲ್ಲಿ ಸದಾ ಬಹುಜನರ ಅಧಿಪತ್ಯವನ್ನು ನಡೆಸುತ್ತಾನೆ. ಜಂಭ, ಮೋಹ, ಮಾತ್ಸರ್ಯ, ಪಾಪಕೃತ್ಯ, ರಾಜನೊಂದಿಗೆ ದ್ವೇಷ, ಪಶುಗಳಂತೆ ನಡೆದುಕೊಳ್ಳುವುದು, ಹಲವರೊಂದಿಗೆ ವೈರ, ಮತ್ತ-ಉನ್ಮತ್ತ ಮತ್ತು ದುರ್ಜನರೊಂದಿಗೆ ವಾದ ಇವುಗಳನ್ನು ಪಜ್ಞಾವಂತನು ಪ್ರಧಾನವಾಗಿ ತೊರೆಯುತ್ತಾನೆ. ಆತ್ಮ ನಿಗ್ರಹ, ಶೌಚ, ದೇವಪೂಜೆ, ಮಂಗಲ ಕಾರ್ಯಗಳು, ಪ್ರಾಯಶ್ಚಿತ್ತ, ಮತ್ತು ವಿವಿಧ ಲೋಕ ಕಾರ್ಯಗಳನ್ನು ನಿತ್ಯವೂ ಮಾಡುವವನನ್ನು ದೇವತೆಗಳು ಮೇಲಕ್ಕೇರಿಸಲು ಬಯಸುತ್ತಾರೆ. ತನಗೆ ಸಮನಾಗಿರುವವರೊಂದಿಗೆ, ಕೀಳಾಗಿರುವವರೊಂದಿಗಲ್ಲ, ಮದುವೆ ಮಾಡಿಕೊಳ್ಳುವವನು, ಸಮನಾಗಿರುವವರೊಂದಿಗೆ ವ್ಯವಹಾರ ಮಾತುಕಥೆಗಳನ್ನಾಡುವವನು, ಮೊದಲು ಗುಣಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವವನು ವಿವೇಕಿ ಮತ್ತು ಸರಿಯಾದ ನಡತೆಯುಳ್ಳವನು. ಕಡಿಮೆ ಊಟಮಾಡುವ, ಆಶ್ರಿತರೊಂದಿಗೆ ಹಂಚಿಕೊಳ್ಳುವ, ಹೆಚ್ಚುಕೆಲಸಮಾಡುವ ಆದರೆ ಕಡಿಮೆ ನಿದ್ರೆಮಾಡುವ, ಕೇಳಿದರೆ ಅಮಿತ್ರರಿಗೂ ಕೊಡುವವನು ಆತ್ಮವಂತ ಮತ್ತು ಅನರ್ಥವು ಅವನನ್ನು ಸುಳಿಯುವುದಿಲ್ಲ. ಕೆಟ್ಟದ್ದನ್ನು ಮಾಡಬೇಕೆನ್ನುವುದೇ ಪುರುಷನ ಇಚ್ಛೆಯಾಗಿದ್ದಾಗ, ಅವನ ಆ ವಿಚಾರವನ್ನು ಗುಪ್ತವಾಗಿಟ್ಟುಕೊಂಡು ನಡೆಸಿದರೆ ಜನರಿಗೆ ಅವನು ಏನು ಮಾಡಿದನೆಂದೇ ತಿಳಿಯದು. ಅವನ ಕಾರ್ಯದಲ್ಲಿ ಅವನಿಗೆ ಸ್ವಲ್ಪವೂ ತೊಡಕಾಗುವುದಿಲ್ಲ. ಸರ್ವಭೂತಗಳ ಶಾಂತಿಯನ್ನೇ ಬಯಸಿ, ಸತ್ಯ, ಮೃದು, ದಾನ ಮತ್ತು ಶುದ್ಧ ಭಾವಗಳಲ್ಲಿ ಇರುವವನು ಸಂಬಂಧಿಗಳ ಮಧ್ಯದಲ್ಲಿ ಮಹಾಮಣಿಯಂತೆ ಅತೀವವಾಗಿ ಪ್ರಕಾಶಿಸುತ್ತಾನೆ. ತನ್ನ ಕೃತ್ಯದಿಂದಲೇ ನಾಚಿಕೊಳ್ಳುವ ನರನನ್ನು ಸರ್ವಲೋಕದ ಗುರುವೆಂದು ಪರಿಗಣಿಸುತ್ತಾರೆ. ಅನಂತ ತೇಜಸ್ಸುಳ್ಳವನಾಗಿ, ಸುಮನಸ್ಕನಾಗಿ, ಸಮಾಹಿತನಾಗಿ ಅವನು ತನ್ನದೇ ತೇಜಸ್ಸಿನಿಂದ ಸೂರ್ಯನಂತೆ ಬೆಳಗುತ್ತಾನೆ.
ವನದಲ್ಲಿ ಶಾಪದಗ್ಧನಾದ ರಾಜ ಪಾಂಡುವಿಗೆ ಹುಟ್ಟಿದ ಐವರು ಇಂದ್ರರಂತಿರುವ ಪುತ್ರರನ್ನು ನೀನೇ ಬೆಳೆಸಿದೆ, ಶಿಕ್ಷಣ ನೀಡಿದೆ. ಅಂಬಿಕೇಯ! ಈಗ ಅವರು ನಿನ್ನ ಆದೇಶವನ್ನು ಪಾಲಿಸಲು ಕಾಯುತ್ತಿದ್ದಾರೆ. ಅವರಿಗೆ ಉಚಿತವಾದ ರಾಜ್ಯವನ್ನು ಕೊಟ್ಟು ಪುತ್ರರೊಂದಿಗೆ ಮುದದಿಂದ ಸುಖಿಯಾಗಿದ್ದರೆ ನಿನ್ನ ಕುರಿತು ದೇವತೆಗಳಲ್ಲಿಯಾಗಲೀ ಮನುಷ್ಯರಲ್ಲಿಯಾಗಲೀ ಯಾರೂ ಅನುಮಾನಪಡುವುದಿಲ್ಲ.”
ಧೃತರಾಷ್ಟ್ರನು ಹೇಳಿದನು:
“ನಿದ್ದೆ ಬಾರದಿರುವನು ಮತ್ತು ಬೇಗೆಯುಳ್ಳವನು ಏನು ಮಾಡಬೇಕು? ಅದನ್ನು ಹೇಳು! ನೀನೇ ಧರ್ಮಾರ್ಥಕುಶಲನೂ ಶುಚಿಯೂ ಅಲ್ಲವೇ? ವಿದುರ! ಆಜಾತಶತ್ರುವಿಗೆ ಎಲ್ಲರಿಗೂ ಸರಿಯಾಗಿರುವುದು ಏನು ಮತ್ತು ಕುರುಗಳಿಗೆ ಶ್ರೇಯಸ್ಕರವಾದುದು ಏನು ಎಂದು ನಿನಗನ್ನಿಸುತ್ತದೆಯೋ ಅದನ್ನು ಯಥಾವತ್ತಾಗಿ ಹೇಳು. ಮುಂದೆ ಕೆಡುಕಾಗಬಹುದೆಂದು ಶಂಕಿಸಿ ನಾನು ಹಿಂದೆ ಮಾಡಿದ ಪಾಪಗಳನ್ನೇ ಕಾಣುತ್ತಿದ್ದೇನೆ. ವ್ಯಾಕುಲಾತ್ಮನಾಗಿ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಅಜಾತಶತ್ರುವಿನ ಯೋಚನೆಯಲ್ಲಿರಬಹುದಾದುದೆಲ್ಲವನ್ನೂ ನನಗೆ ಯಥಾವತ್ತಾಗಿ ಹೇಳು.”
ವಿದುರನು ಹೇಳಿದನು:
“ಯಾರ ಸೋಲನ್ನು ಬಯಸುವುದಿಲ್ಲವೋ ಅವನಿಗೆ, ಕೇಳದೇ ಇದ್ದರೂ, ಅದು ಅವನಿಗೆ ಶುಭವೆಂದೆನಿಸಲಿ ಅಥವಾ ಪಾಪವೆಂದೆನಿಸಲಿ, ದ್ವೇಷ ಅಥವಾ ಪ್ರಿಯವಾದುದೆಂದೆನಿಸಲಿ, ಸತ್ಯವನ್ನೇ ನುಡಿಯಬೇಕು. ಆದುದರಿಂದ ಕುರುಗಳಿಗೆ ಒಳ್ಳೆಯದನ್ನೇ ಬಯಸಿ ನಿನಗೆ ಶ್ರೇಯಸ್ಕರವಾದ, ಧರ್ಮಯುಕ್ತ ಮಾತುಗಳನ್ನು ಹೇಳುತ್ತಿದ್ದೇನೆ. ಅರ್ಥಮಾಡಿಕೋ! ಮೋಸ ಮತ್ತು ಕೆಟ್ಟ ವಿಧಾನಗಳನ್ನು ಬಳಸಿ ಯಶಸ್ವಿಯಾಗುವ ಕರ್ಮಗಳಲ್ಲಿ ನಿನ್ನ ಮನಸ್ಸನ್ನು ತೊಡಗಿಸಬೇಡ. ಸರಿಯಾಗಿ ಕೈಗೊಂಡ ಉತ್ತಮ ಕಾರ್ಯವು ಸಿದ್ಧಿಯನ್ನು ಕೊಡದಿದ್ದರೂ ಮೇಧಾವಿಯು ತನ್ನ ಮನಸ್ಸು ಆಯಾಸಗೊಳ್ಳಲು ಬಿಡುವುದಿಲ್ಲ. ಕರ್ಮಗಳೊಂದಿಗೆ ಪರಿಣಾಮಗಳು ಜೋಡಿಕೊಂಡಿರುವುದರಿಂದ ಪರಿಣಾಮಗಳ ಕುರಿತು ಯೋಚಿಸಿ ಕಾರ್ಯಗಳನ್ನು ಕೈಗೊಳ್ಳಬೇಕು; ಅವಸರದಲ್ಲಿ ಮಾಡಬಾರದು. ಕರ್ಮಗಳಿಂದ ಮುಂದಾಗುವ ಪರಿಣಾಮಗಳನ್ನು ಮತ್ತು ಅವುಗಳನ್ನು ಸಹಿಸಿಕೊಳ್ಳಲು ತನ್ನಲ್ಲಿರುವ ಶಕ್ತಿಯನ್ನು ನೋಡಿಕೊಂಡು ಅದನ್ನು ಮಾಡಬೇಕೋ ಅಥವಾ ಇಲ್ಲವೋ ಎಂದು ನಿರ್ಧರಿಸಬೇಕು. ಯಾವ ರಾಜನಿಗೆ ಸ್ಥಾನ, ಲಾಭ, ನಷ್ಟ, ಹಣ, ಜನರು ಮತ್ತು ಶಿಕ್ಷೆಗಳ ಪ್ರಮಾಣಗಳು ತಿಳಿದಿಲ್ಲವೋ ಅವನು ಬಹುಕಾಲ ರಾಜನಾಗಿ ಉಳಿಯುವುದಿಲ್ಲ. ಯಾರು ಈ ಹಿಂದೆ ಹೇಳಿದ ಪ್ರಮಾಣಗಳನ್ನು ಧರ್ಮಾರ್ಥಯುಕ್ತನಾಗಿ ತಿಳಿದುಕೊಂಡು ನಡೆಯುತ್ತಾನೋ ಅವನು ರಾಜತ್ವವನ್ನು ಪಡೆಯುತ್ತಾನೆ. ‘ರಾಜ್ಯವನ್ನು ಪಡೆದಿದ್ದೇನೆ!’ ಎಂದು ಒಳ್ಳೆಯದಾಗಿ ನಡೆದುಕೊಳ್ಳದೇ ಇದ್ದರೆ, ಆ ಅವಿನಯತ್ವವು, ವೃದ್ಧಾಪ್ಯವು ಉತ್ತಮ ರೂಪವನ್ನು ಹೇಗೋ ಹಾಗೆ, ಸಂಪತ್ತನ್ನು ನಾಶಗೊಳಿಸುತ್ತದೆ. ಒಂದು ಮೀನು, ತೋರುವಿಕೆಗೆ ಮಾತ್ರ ಹಾರಿ, ಉತ್ತಮ ಆಹಾರದಲ್ಲಿ ಮುಚ್ಚಿಟ್ಟಿರುವ ಉಕ್ಕಿನ ಮುಳ್ಳನ್ನು, ಅದರ ಪರಿಣಾಮವೇನಾಗಬಹುದು ಎಂದು ಯೋಚಿಸದೇ ನುಂಗುತ್ತದೆ. ಒಳ್ಳೆಯದನ್ನು ಬಯಸುವವನು ಏನನ್ನು ತಿನ್ನಬಹುದೋ ಅದನ್ನು ಹುಡುಕುತ್ತಾನೆ, ತಿಂದ ಮೇಲೆ ಅದು ಹೇಗೆ ಜೀರ್ಣವಾಗುತ್ತದೆ ಎನ್ನುವುದರ ಕುರಿತು ಯೋಚಿಸುತ್ತಾನೆ, ಮತ್ತು ಜೀರ್ಣಗೊಂಡ ನಂತರ ಈ ಆಹಾರವು ಒಳ್ಳೆಯದನ್ನು ಉಂಟುಮಾಡಬಲ್ಲದೋ ಎಂದೂ ಯೋಚಿಸುತ್ತಾನೆ. ಮರದಿಂದ ಇನ್ನೂ ಹಣ್ಣಾಗಿರದ ಫಲವನ್ನು ಕಿತ್ತರೆ ಅದರ ರಸವೂ ಸಿಗುವುದಿಲ್ಲ ಮತ್ತು ಅದರಲ್ಲಿರುವ ಬೀಜವೂ ನಷ್ಟವಾಗುತ್ತದೆ. ಆದರೆ ಹಣ್ಣಾದ ಕಾಲದಲ್ಲಿ ಹಣ್ಣನ್ನು ಕಿತ್ತರೆ ಫಲದಿಂದ ರಸವು ದೊರೆಯುತ್ತದೆ ಮತ್ತು ಬೀಜದಿಂದ ಪುನಃ ಫಲವು ದೊರೆಯುತ್ತದೆ. ಜೇನು ಹುಳುಗಳು ಹೇಗೆ ಹೂಗಳನ್ನು ರಕ್ಷಿಸಿ ಜೇನನ್ನು ಮಾತ್ರ ಶೇಕರಿಸುತ್ತವೆಯೋ ಹಾಗೆ ಮನುಷ್ಯನೂ ಕೂಡ ಇತರರನ್ನು ಹಿಂಸಿಸದೇ ಸಂಪತ್ತನ್ನು ಗಳಿಸಬೇಕು. ಮಾಲೆಗಳನ್ನು ಕಟ್ಟಿ ಮಾರುವವನಂತೆ ಹೂವುಗಳನ್ನು ಮಾತ್ರ ಕೀಳಬೇಕೇ ಹೊರತು, ಇದ್ದಲು ಮಾಡಿ ಮಾರುವವನಂತೆ ಬೇರಿನ ಸಹಿತ ಗಿಡವನ್ನು ಕೀಳಬಾರದು. ಇದನ್ನು ಮಾಡಿದರೆ ನನಗೇನಾಗುತ್ತದೇ? ಮಾಡದೇ ಇದ್ದರೆ ನನಗೆ ಏನಾಗುತ್ತದೆ? ಎಂದು ಪುರುಷನು ಪ್ರತಿಯೊಂದು ಕರ್ಮದ ಕುರಿತೂ ಆಲೋಚಿಸಿ ಅದನ್ನು ಮಾಡಬೇಕು ಅಥವಾ ಮಾಡಬಾರದು. ಕೆಲವೊಂದು ವಿಷಯಗಳ ಕುರಿತು ಏನನ್ನೂ ಮಾಡಬಾರದು, ಮತ್ತು ಅವು ಯಾವಾಗಲೂ ಹಾಗೆಯೇ ಇರುತ್ತವೆ. ಏಕೆಂದರೆ ಅದರ ಕುರಿತು ಪುರುಷನು ಎಷ್ಟೇ ಮಾಡಿದರೂ ಅದು ನಿರರ್ಥಕವಾಗುತ್ತದೆ. ಇನ್ನು ಕೆಲವು ಕರ್ಮಗಳು ಸ್ವಲ್ಪವೇ ಬೇರುಗಳಿದ್ದರೂ ಹೆಚ್ಚಿನ ಫಲವನ್ನು ನೀಡುವಂಥಹುದು. ಪ್ರಾಜ್ಞ ನರನು ಅಂಥವುಗಳನ್ನು ಕ್ಷಿಪ್ರವಾಗಿ ಕೈಗೊಳ್ಳುತ್ತಾನೆ ಮತ್ತು ಅಂಥವುಗಳಿಗೆ ವಿಘ್ನವನ್ನು ತರುವುದಿಲ್ಲ.
ಕಣ್ಣುಗಳಿಂದಲೇ ಕುಡಿಯುವಂತೆ ಯಾರು ಎಲ್ಲವನ್ನೂ ನೇರವಾಗಿ ಕಾಣುತ್ತಾರೋ ಅವರು ಸುಮ್ಮನೆ ಕುಳಿತುಕೊಂಡಿದ್ದರೂ ಪ್ರಜೆಗಳು ಸಂತೋಷಗೊಳ್ಳುತ್ತಾರೆ. ಯಾರು ನಾಲ್ಕು ವಿಧಗಳಿಂದ - ದೃಷ್ಟಿ, ಯೋಚನೆ, ಮಾತು ಮತ್ತು ಕೆಲಸ - ಲೋಕವನ್ನು ಪ್ರೀತಿಸುತ್ತಾನೋ ಅವನನ್ನು ಲೋಕವೂ ಪ್ರೀತಿಸುತ್ತದೆ. ಆದರೆ ಅವನಿಗೆ, ಬೇಟೆಗಾರನಿಗೆ ಜಿಂಕೆಗಳು ಹೇಗೋ ಹಾಗೆ, ಪ್ರಜೆಗಳು ಹೆದರಿದರೆ, ಅವನು ಸಾಗರದ ಅಂಚಿನವರೆಗಿನ ಭೂಮಿಯನ್ನು ಪಡೆದಿದ್ದರೂ ತಿರಸ್ಕರಿಸಲ್ಪಡುತ್ತಾನೆ. ತನ್ನದೇ ತೇಜಸ್ಸಿನಿಂದ ಪಿತೃಪೈತಾಮಹರ ರಾಜ್ಯವನ್ನು ಪಡೆಯಬಹುದು. ಆದರೆ ಅವನು ಅನ್ಯಾಯದ ದಾರಿಯಲ್ಲಿ ನಡೆದರೆ ಭಿರುಗಾಳಿಯು ಮೋಡವನ್ನು ಚದುರಿಸುವಂತೆ ಅದನ್ನು ತುಂಡರಿಸಿಬಿಡಬಹುದು. ಮೊದಲಿನಿಂದಲೂ ಸಾಧುಗಳು ಆಚರಿಸಿ ಕೊಂಡು ಬಂದಿರುವ ಧರ್ಮವನ್ನು ಆಚರಿಸುವ ರಾಜನ ಭೂಮಿಯು ಅಭಿವೃದ್ಧಿ ಹೊಂದುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಆದರೆ ಧರ್ಮವನ್ನು ತೊರೆದು ಅಧರ್ಮವವನ್ನು ಅನುಸರಿಸುವವನ ಆಸ್ತಿಯು ಬೆಂಕಿಗೆ ತಗುಲಿದ ಚರ್ಮದಂತೆ ಮುದುಡಿಕೊಳ್ಳುವುದು. ಶತ್ರುಗಳ ರಾಷ್ಟ್ರವನ್ನು ಸದೆಬಡಿಯಲು ಎಷ್ಟು ಪ್ರಯತ್ನ ಮಾಡುತ್ತೇವೆಯೋ ಅಷ್ಟೇ ಪ್ರಯತ್ನವನ್ನು ತನ್ನ ರಾಷ್ಟ್ರದ ಪರಿಪಾಲನೆಯ ಕರ್ತವ್ಯದಲ್ಲಿಯೂ ಮಾಡಬೇಕು. ಧರ್ಮದಿಂದ ರಾಜ್ಯವನ್ನು ಸ್ಥಾಪಿಸಬೇಕು, ಧರ್ಮದಿಂದ ಅದನ್ನು ಪರಿಪಾಲಿಸಬೇಕು. ಧರ್ಮಮೂಲವಾದ ಶ್ರೀಯು ನಷ್ಟವಾಗುವುದಿಲ್ಲ, ಜಯಿಸಲ್ಪಡುವುದೂ ಇಲ್ಲ. ಕಲ್ಲಿನಿಂದ ಕಾಂಚನವನ್ನು ಹೇಗೋ ಹಾಗೆ ಹುಚ್ಚನ ಪ್ರಲಾಪದಿಂದಾಗಲೀ ಹರಿದಾಡುವ ಮಗುವಿನಿಂದಾಗಲೀ ಸಾರವುಳ್ಳ ಏನಾದರೂ ದೊರೆಯುತ್ತದೆಯೇ? ತಿಳಿದವನು, ಶಿಲಾಹಾರಿಯುವ ಶಿಲವನ್ನು ಹೇಗೋ ಹಾಗೆ, ಸಾಧುಗಳು ಆಗಾಗ ಮಾಡಿದ ಸುವ್ಯವಹಾರ-ಸುಕೃತಗಳನ್ನು ಒಟ್ಟು ಹಾಕಿಕೊಂಡು ಮೆಲಕು ಹಾಕುತ್ತಿರುತ್ತಾನೆ. ಗೋವುಗಳು ವಾಸನೆಯಿಂದ ನೋಡುತ್ತವೆ, ಬ್ರಾಹ್ಮಣರು ವೇದಗಳ ಮೂಲಕ ನೋಡುತ್ತಾರೆ, ರಾಜರು ಚಾರರ ಮೂಲಕ ನೋಡುತ್ತಾರೆ ವತ್ತು ಇತರ ಜನರೆಲ್ಲರೂ ಕಣ್ಣುಗಳಿಂದ ನೋಡುತ್ತಾರೆ. ಹಾಲನ್ನು ಕೊಡದೇ ಇರುವ ಗೋವು ಕಷ್ಟವನ್ನು ಅನುಭವಿಸಬಹುದು. ಆದರೆ ಉತ್ತಮ ಹಾಲುಕರೆಯುವವನನ್ನು ಯಾರೂ ಬಗ್ಗಿಸಲಾರರು. ಕಾಯಿಸದೆಯೇ ಬಗ್ಗಿಸಬಹುದಾದುದನ್ನು ಜನರು ಕಾಯಿಸುವುದಿಲ್ಲ. ಸ್ವಯಂ ಬಗ್ಗುವ ಗಿಡವನ್ನು ಬಗ್ಗಿಸಲು ಬಲವನ್ನು ಉಪಯೋಗಿಸುವುದಿಲ್ಲ. ಈ ಉಪಮೇಯದ ಪ್ರಕಾರ ಧೀರನು ತನಗಿಂತ ಹೆಚ್ಚಿನ ಬಲಶಾಲಿಗೆ ಮಣಿಯುತ್ತಾನೆ. ಬಲಶಾಲಿಗೆ ಮಣಿಯುವವರನ್ನು ಇಂದ್ರನೂ ನಮಸ್ಕರಿಸುತ್ತಾನೆ. ಪಶುಗಳಿಗೆ ಮಳೆಯು ನಾಥ, ರಾಜನಿಗೆ ಮಿತ್ರರೇ ಬಾಂಧವರು, ಸ್ತ್ರೀಯರಿಗೆ ಪತಿಗಳೇ ಬಾಂಧವರು, ಮತ್ತು ಬ್ರಾಹ್ಮಣರಿಗೆ ವೇದಗಳೇ ಬಾಂಧವರು. ಧರ್ಮವು ಸತ್ಯದಿಂದ ರಕ್ಷಿಸಲ್ಪಡುತ್ತದೆ, ವಿದ್ಯೆಯು ಯೋಗದಿಂದ ರಕ್ಷಿಸಲ್ಪಡುತ್ತದೆ, ತೊಳೆಯುವುದರಿಂದ ರೂಪವು ರಕ್ಷಿಸಲ್ಪಡುತ್ತದೆ ಮತ್ತು ಕುಲವು ನಡತೆಯಿಂದ ರಕ್ಷಿಸಲ್ಪಡುತ್ತದೆ. ಧಾನ್ಯವು ಅಳತೆಯಿಂದ ರಕ್ಷಿಸಲ್ಪಡುತ್ತದೆ, ಅಶ್ವಗಳು ವ್ಯಾಯಾಮದಿಂದ ರಕ್ಷಿಸಲ್ಪಡುತ್ತವೆ, ಕಾಯುವುದರಿಂದ ಗೋವುಗಳು ರಕ್ಷಿಸಲ್ಪಡುತ್ತವೆ ಮತ್ತು ಸ್ತ್ರೀಯರು ಬಡ ಉಡುಪುಗಳಿಂದ ರಕ್ಷಿಸಲ್ಪಡುತ್ತಾರೆ. ಉತ್ತಮ ನಡತೆಯಿಲ್ಲದವನಿಗೆ ಕುಲವು ಪ್ರಮಾಣವಲ್ಲವೆಂದು ನನ್ನ ಅಭಿಪ್ರಾಯ. ಏಕೆಂದರೆ ಹೀನ ಕುಲದಲ್ಲಿ ಜನಿಸಿದ್ದರೂ ಅವರ ನಡತೆಯು ವಿಶೇಷವಾಗಿರಬಹುದು. ಇನ್ನೊಬ್ಬರ ಸಂಪತ್ತು, ರೂಪ, ವೀರ್ಯ, ಉತ್ತಮ ಕುಲ, ಸುಖ, ಸೌಭಾಗ್ಯ ಮತ್ತು ಸತ್ಕಾರಗಳ ಬಗ್ಗೆ ಅಸೂಯೆ ಪಡುವವರ ವ್ಯಾಧಿಗೆ ಅಂತ್ಯವಿಲ್ಲ.
ಮಾಡಬಾರದ್ದನ್ನು ಮಾಡಿಯೇನು ಎಂದು ಭಯವಿರುವಾಗ, ಅಕಾಲದಲ್ಲಿ ಗೊಂದಲಕ್ಕೀಡಾದಾಗ, ಮತ್ತೇರಿಸುವ ಏನನ್ನೂ ಕುಡಿಯಬೇಡ. ವಿದ್ಯಾಮದ, ಧನಮದ ಮತ್ತು ಮೂರನೆಯದಾಗಿ ಜನಬೆಂಬಲದ ಮದ. ಇವು ಪುರುಷನನ್ನು ಮುಳುಗಿಸುವ ಮದಗಳು. ಇವುಗಳನ್ನೇ ಸಜ್ಜನರು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ಸಂತರು ಅಸಂತರಲ್ಲಿ ಏನಾದರೂ ಒಂದು ಕೆಲಸವನ್ನು ಕೇಳಿದರೂ ಕೂಡ, ಅವರು ಅಸಂತರೆಂದು ವಿಶ್ರುತರಾಗಿದ್ದರೂ ತಮ್ಮನ್ನು ತಾವೇ ಸಂತರೆಂದು ತಿಳಿದುಕೊಂಡುಬಿಡುತ್ತಾರೆ. ಸಂತರು ಆತ್ಮವಂತರ ಗತಿ, ಸಂತರು ಸತ್ಯವಂತರ ಗತಿ. ಅಸತರನ್ನು ಸಂತರು ನಡೆಸಬಲ್ಲರು ಆದರೆ ಅಸಂತರು ಸಂತರನ್ನು ಎಂದೂ ನಡೆಸುವುದಿಲ್ಲ. ಉತ್ತಮ ಉಡುಪನ್ನು ಧರಿಸಿದವನು ಸಭೆಯನ್ನು ಗೆಲ್ಲಬಹುದು. ಹಲವಾರು ಗೋವುಗಳನ್ನು ಹೊಂದಿದ ಶ್ರೀಮಂತನು ಬಡವರನ್ನು ಗೆಲ್ಲಬಹುದು. ವಾಹನವಿರುವವನು ದಾರಿಯನ್ನು ಗೆಲ್ಲಬಹುದು. ಆದರೆ ಶೀಲವಂತನು ಎಲ್ಲವನ್ನೂ ಗೆಲ್ಲುತ್ತಾನೆ. ಪುರುಷನಿಗೆ ಶೀಲವೇ ಪ್ರಧಾನ. ಅದನ್ನು ಕಳೆದುಕೊಂಡರೆ ಅವನಿಗೆ ಜೀವನದಿಂದಲೂ, ಸಂಪತ್ತಿನಿಂದಲೂ, ಬಂಧುಗಳಿಂದಲೂ ಪ್ರಯೋಜನವಾಗುವುದಿಲ್ಲ. ಅತಿ ಶ್ರೀಮಂತನಿಗೆ ಮಾಂಸವು ಪರಮ ಭೋಜನ, ಮಧ್ಯಮರಿಗೆ ಹಸುವಿನ ಹಾಲು ಮತ್ತು ದರಿದ್ರರಿಗೆ ಉಪ್ಪೇ ಪರಮ ಭೋಜನ. ಆದರೂ ದರಿದ್ರರು ಚೆನ್ನಾಗಿ ಊಟಮಾಡುತ್ತಾರೆ; ಹಸಿವೆಯು ಅವರ ಊಟವನ್ನು ರುಚಿಯಾಗಿಸುತ್ತದೆ. ಅದು ಧನಿಕರಿಗೆ ತುಂಬಾ ದುರ್ಲಭ. ಲೋಕದಲ್ಲಿ ಶ್ರೀಮಂತರಿಗೆ ಚೆನ್ನಾಗಿ ಹಸಿವೆಯಾಗುವುದಿಲ್ಲ ಎಂದು ಕಂಡುಬರುತ್ತದೆ. ಆದರೆ ದರಿದ್ರರು ಕಟ್ಟಿಗೆಯನ್ನೂ ಕೂಡ ಜೀರ್ಣಿಸಿಕೊಳ್ಳಬಲ್ಲರು. ಕೆಳಗಿನವರಿಗೆ ಕೆಲಸ ದೊರೆಯದೇ ಇರುವುದರ ಭಯ ಮತ್ತು ಮಧ್ಯಮರಿಗೆ ಮರಣದ ಭಯ. ಉತ್ತಮ ಜನರಿಗೆ ಅವಮಾನವೇ ಪರಮ ಭಯ. ಮದ್ಯಪಾನದಿಂದುಟಾಗುವ ಮತ್ತಿಗಿಂತ ಇಶ್ವರ್ಯಮದವು ಪಾಪಿಷ್ಠವಾದುದು. ಐಶ್ವರ್ಯ ಮದದಿಂದ ಮತ್ತನಾದವನಿಗೆ ಬಿದ್ದರೂ ಬುದ್ಧಿ ಬರುವುದಿಲ್ಲ. ತಮ್ಮ ಆಸೆಗಳನ್ನು ಪೂರೈಸಲು ಕಡಿವಾಣವಿಲ್ಲದೇ ನಡೆದುಕೊಳ್ಳುವವರನ್ನು, ನಕ್ಷತ್ರಗಳನ್ನು ಗ್ರಹಗಳು ಹೇಗೋ ಹಾಗೆ, ಇಂದ್ರಿಯಗಳು ಕಾಡುತ್ತವೆ. ಯಾರ ಸಹಜವಾಗಿರುವ ಐದು ಇಂದ್ರಿಯಗಳು ಆತ್ಮವನ್ನು ಗೆದ್ದು ಎಳೆದುಕೊಂಡು ಹೋಗುತ್ತವೆಯೋ ಅವನ ಆಪತ್ತುಗಳು ಶುಕ್ಲಪಕ್ಷದ ಚಂದ್ರನಂತೆ ವೃದ್ಧಿಯಾಗುತ್ತವೆ. ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳದೇ ತನ್ನ ಅಮಾತ್ಯರನ್ನು ನಿಯಂತ್ರಿಸುವವನು ಮತ್ತು ಅಮಾತ್ಯರನ್ನು ವಶಪಡೆಸಿಕೊಳ್ಳದೇ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸುವವನು ಸೋಲುತ್ತಾನೆ. ದೇಶರೂಪದ ತನ್ನನ್ನೇ ಯಾರು ಮೊದಲು ಗೆಲ್ಲುತ್ತಾನೋ ಅವನಿಗೆ ಅಮಾತ್ಯರನ್ನೂ ಶತ್ರುಗಳನ್ನೂ ಗೆಲ್ಲುವುದು ಕಷ್ಟವಾಗುವುದಿಲ್ಲ. ಇಂದ್ರಿಯಗಳನ್ನು ಗೆದ್ದಿರುವ, ಅಮಾತ್ಯರನ್ನು ಗೆದ್ದಿರುವ, ಅಪರಾಧಿಗಳನ್ನು ಶಿಕ್ಷಿಸುವ, ಚೆನ್ನಾಗಿ ಪರೀಕ್ಷಿಸಿ ಕಾರ್ಯಮಾಡುವ ಧೀರನನ್ನು ಸಂಪತ್ತು ಬಹಳವಾಗಿ ವರಿಸುತ್ತದೆ. ಪುರುಷನ ಶರೀರವು ಒಂದು ರಥವಿದ್ದಂತೆ, ಆತ್ಮವು ಸಾರಥಿ, ಇಂದ್ರಿಯಗಳು ಕುದುರೆಗಳು. ಅಶ್ವಗಳನ್ನು ಚೆನ್ನಾಗಿ ನಿಯಂತ್ರಿಸುವ ಅಪ್ರಮತ್ತ, ಕುಶಲ, ಧೀರ ರಥಿಕನು ಸುಖವನ್ನು ಹೊಂದುತ್ತಾನೆ. ಅವಿಧೇಯ, ನಿಯಂತ್ರಣದಲ್ಲಿಲ್ಲದ ಕುದುರೆಗಳು ಪ್ರಯಾಣಿಸುತ್ತಿರುವ ಸಾರಥಿಗೆ ಹೇಗೋ ಹಾಗೆ ನಿಯಂತ್ರಣದಲ್ಲಿಲ್ಲದ ಇಂದ್ರಿಯಗಳು ಆಪತ್ತುಗಳನ್ನು ತಂದೊಡ್ಡುತ್ತವೆ. ಇಂದ್ರಿಯಗಳಿಂದ ನಡೆಸಲ್ಪಟ್ಟ ಬಾಲಕನು ಲಾಭವಿಲ್ಲದುದನ್ನು ಲಾಭದಾಯಕವೆಂದೂ, ಲಾಭದಾಯಕವಾದುದನ್ನು ಲಾಭವಿಲ್ಲದುದೆಂದೂ ತಿಳಿದು ಅತೀ ದುಃಖವನ್ನು ತರುವಂಥಹುದನ್ನು ಸುಖವೆಂದು ಪರಿಗಣಿಸುತ್ತಾನೆ. ಧರ್ಮಾರ್ಥಗಳನ್ನು ಪರಿತ್ಯಜಿಸಿ ಇಂದ್ರಿಯಗಳ ವಶನಾಗುವವನನ್ನು ಅದೃಷ್ಟ, ಸಂಪತ್ತು, ಪ್ರಾಣ, ಮತ್ತು ಪತ್ನಿ ಬೇಗನೇ ತೊರೆಯುತ್ತವೆ. ಸಂಪತ್ತಿನ ಒಡೆಯನಾಗಿದ್ದರೂ ಇಂದ್ರಿಯಗಳ ಮೇಲೆ ಒಡೆತನವಿಲ್ಲದಿದ್ದರೆ ಒಡೆಯನಿಲ್ಲದ ಇಂದ್ರಿಯಗಳು ಅವನ ಐಶ್ವರ್ಯವನ್ನು ಅವನಿಂದ ದೂರಮಾಡುವವು. ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳನ್ನು ಒಂದುಗೂಡಿಸಿ ತನ್ನ ಆತ್ಮವನ್ನು ತಾನೇ ಹುಡುಕಿಕೊಳ್ಳಬೇಕು. ಆತ್ಮವೇ ತನ್ನ ಬಂಧು ಮತ್ತು ಆತ್ಮವೇ ತನ್ನ ಶತ್ರುವೂ ಕೂಡ. ದುರ್ಬಲ ಜಾಲದಲ್ಲಿ ಹಿಡಿದಿಟ್ಟಿರುವ ಎರಡು ಬಲಶಾಲಿ ಮೀನುಗಳಂತೆ ಕಾಮ-ಕ್ರೋಧಗಳೆರಡೂ ಪ್ರಜ್ಞಾನವನ್ನು ಹರಿದು ಚಿಂದಿ ಮಾಡುತ್ತವೆ. ಧರ್ಮಾರ್ಥಗಳೆರಡನ್ನೂ ನೋಡಿಕೊಂಡು ಅವಶ್ಯವಿರುವವುಗಳನ್ನು ಯಾರು ಒಟ್ಟುಗೂಡಿಸಿಕೊಳ್ಳುತ್ತಾರೋ ಅವರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಂಡು ಸತತವೂ ಸುಖವಾಗಿರುತ್ತಾರೆ. ಒಳಗಿರುವ ಈ ಐದು ಶತ್ರುಗಳನ್ನು ಜಯಿಸದೇ ಯಾರು ಹೊರಗಿನ ಶತ್ರುಗಳನ್ನು ಜಯಿಸಲು ಹೊರಡುತ್ತಾನೋ ಅವನನ್ನು ರಿಪುಗಳೇ ಗೆಲ್ಲುತ್ತಾರೆ. ರಾಜ್ಯದ ಹುಚ್ಚಿನಿಂದಾಗಿ ತಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳದೇ ಇರುವ ದುರಾತ್ಮ ರಾಜರುಗಳು ತಮ್ಮದೇ ಕರ್ಮಗಳಿಂದ ಮರಣಹೊಂದಿದುದನ್ನು ನೋಡಿದ್ದೇವಲ್ಲ!
ಒಣಹುಲ್ಲಿನ ಜೊತೆಗೆ ಅದರೊಡನೆ ಸೇರಿಕೊಂಡಿದ್ದ ಹಸಿ ಹುಲ್ಲುಕೂಡ ಸುಟ್ಟುಹೋಗುವಂತೆ ಪಾಪಕರ್ಮ ಮಾಡುವವರೊಡನಿರುವ ನಿಷ್ಪಾಪಿಗಳೂ ಕೂಡ ಶಿಕ್ಷೆಯನ್ನು ಅನುಭವಿಸುತ್ತಾರೆ. ಆದುದರಿಂದ ಪಾಪಿಷ್ಟರೊಂದಿಗೆ ಸೇರಿಕೊಳ್ಳಬಾರದು. ಯಾವ ನರನು ಮೋಹದಿಂದ ತನ್ನ ಐದು ಪ್ರಯೋಜನಗಳಿಗೆ ಆಸೆಬುರುಕರಾಗಿರುವ ಐವರು ಶತ್ರುಗಳನ್ನು ನಿಗ್ರಹಿಸಿಟ್ಟುಕೊಳ್ಳುವುದೋ ಅವನನ್ನು ಆಪತ್ತು ಹಿಡಿದುಕೊಳ್ಳುತ್ತದೆ. ಅಸೂಯೆಪಡದಿರುವುದು, ಸರಳತೆ, ಶುಚಿತ್ವ, ಸಂತೋಷ, ಪ್ರಿಯವಾಗಿ ಮಾತನಾಡುವುದು, ಆತ್ಮನಿಗ್ರಹ, ಸತ್ಯ, ಅನಾಯಾಸ ಇವು ಎಂದೂ ದುರಾತ್ಮನದ್ದಾಗುವವಲ್ಲ. ಆತ್ಮಜ್ಞಾನ, ಅನಾಯಾಸವಾಗಿ ನಿರಂತರವಾಗಿ ಧರ್ಮದಲ್ಲಿ ನೆಲೆಸಿರುವುದು, ಮಾತು ಮತ್ತು ದಾನಗಳನ್ನು ಗುಪ್ತವಾಗಿಟ್ಟುಕೊಳ್ಳುವುದು ಇವು ಕೀಳು ಜನರಲ್ಲಿ ಇರುವುದಿಲ್ಲ. ಹಿಂಸೆಯಲ್ಲಿ ಅಸಾಧುಗಳ ಬಲವೂ, ರಾಜರಲ್ಲಿ ದಂಡವನ್ನು ವಿಧಿಸಬಲ್ಲ ಶಕ್ತಿಯೂ, ಸ್ತ್ರೀಯರಲ್ಲಿ ಶುಶ್ರೂಷದ ಬಲವೂ ಗುಣವಂತರಲ್ಲಿ ಕ್ಷಮೆಯ ಬಲವೂ ಇವೆ. ವಾಕ್ ಸಂಯಮವು ಎಲ್ಲಕಿಂತ ಸುದುಷ್ಕರವಾದದ್ದು ಎಂಬ ಮತವಿದೆ. ತುಂಬಾ ಮಾತನಾಡುವವನಿಗೆ ಅರ್ಥವತ್ತಾಗಿ ಸ್ವಾರಸ್ಯವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಒಳ್ಳೆಯ ಮಾತು ವಿವಿಧ ಉತ್ತಮ ಫಲಗಳನ್ನು ನೀಡುತ್ತದೆ. ಆದರೆ ಕೆಟ್ಟ ಮಾತು ಅನರ್ಥಗಳನ್ನುಂಟುಮಾಡುತ್ತದೆ. ಬಾಣಗಳಿಂದ ಅಥವಾ ಕೊಡಲಿಯಿಂದ ಕಡಿಯಲ್ಪಟ್ಟ ವನವು ಪುನಃ ಚಿಗುರುತ್ತದೆ. ಆದರೆ ಕೆಟ್ಟ ಮಾತುಗಳಿಂದ ನೊಂದ, ಮುದುಡಿದ ಹೃದಯವು ಮತ್ತೆ ಚಿಗುರುವುದಿಲ್ಲ. ಶರೀರವನ್ನು ಹೊಕ್ಕ ಬಾಣ ಈಟಿ ಮೊದಲಾದ ಆಯುಧಗಳನ್ನು ಕೀಳಬಹುದು. ಆದರೆ ಹೃದಯವನ್ನು ಹೊಕ್ಕ ಮಾತಿನ ಬಾಣವನ್ನು ಕೀಳಲಿಕ್ಕಾಗುವುದಿಲ್ಲ. ಮಾತಿನ ಈಟಿಯು ಬಾಯಿಯಿಂದ ಹೊರಬೀಳುತ್ತದೆ. ಇದರಿಂದ ಪೆಟ್ಟುತಿಂದವನು ರಾತ್ರಿ-ದಿನಗಳಲ್ಲಿ ಚಿಂತಿಸುತ್ತಾನೆ. ಪಂಡಿತರು ಇಂತಹ ಈಟಿಯನ್ನು ಅವರ ಮರ್ಮಗಳನ್ನು ಭೇದಿಸಬಾರದೆಂದು ಇತರರ ಮೇಲೆ ಎಂದೂ ಪ್ರಯೋಗಿಸುವುದಿಲ್ಲ. ಯಾವ ಪುರುಷನ ಪರಾಭವವನ್ನು ದೇವತೆಗಳು ಇಚ್ಛಿಸುತ್ತಾರೋ ಅವನ ಬುದ್ಧಿಯನ್ನು ಅಪಹರಿಸುತ್ತಾರೆ. ಇದರಿಂದ ಅವನು ಬರುತ್ತಿರುವ ಆಪತ್ತನ್ನು ಕಾಣುವುದಿಲ್ಲ. ಬುದ್ಧಿಯು ಕಲುಷಿತವಾದಾಗ ಭೂತಗಳ ವಿನಾಶವು ಹತ್ತಿರವಾಗುತ್ತದೆ. ಅನ್ಯಾಯವು ನ್ಯಾಯವಾಗಿ ತೋರಿ ಹೃದಯವನ್ನು ಸುತ್ತಿಕೊಳ್ಳುತ್ತದೆ.
ಪಾಂಡವರ ವಿರೋಧದಿಂದ ನಿನ್ನ ಪುತ್ರರ ಬುದ್ಧಿಯು ಮಸುಕಾಗಿದೆ ಎನ್ನುವುದು ನಿನಗೆ ತಿಳಿಯುತ್ತಿಲ್ಲ. ಮೂರೂ ಲೋಕಗಳ ರಾಜನೂ ಆಗಬಲ್ಲ ಲಕ್ಷಣ ಸಂಪನ್ನನಾದ ಯುಧಿಷ್ಠಿರನು ನಿನ್ನ ಶಿಷ್ಯ. ಅವನಿಗೆ ಆಳಲು ಬಿಡು. ನಿನ್ನ ಪುತ್ರರೆಲ್ಲರಲ್ಲಿ ಅವನು ತುಂಬಾ ಗೌರವಾನ್ವಿತ ಭಾಗಧೇಯನು. ತೇಜಸ್ಸು ಮತ್ತು ಪ್ರಜ್ಞೆಯಿಂದ ಕೂಡಿದ, ಧರ್ಮಾರ್ಥಗಳ ತತ್ತ್ವವನ್ನು ತಿಳಿದ, ಅನೃಶಂಸನೂ ಅಕ್ರೋಶಾದ್ಯನೂ ಆದ ಈ ಧರ್ಮಭೃತರಲ್ಲಿ ಶ್ರೇಷ್ಠನು ನಿನ್ನ ಗೌರವಕ್ಕಾಗಿ ಬಹಳಷ್ಟು ಕ್ಲೇಶಗಳನ್ನು ಸಹಿಸಿದ್ದಾನೆ.”
ಧೃತರಾಷ್ಟ್ರನು ಹೇಳಿದನು:
“ಮಹಾಬುದ್ಧೇ! ಧರ್ಮಾರ್ಥಸಹಿತ ವಚನಗಳನ್ನು ಇನ್ನೂ ಹೇಳು. ಎಷ್ಟು ಕೇಳಿದರೂ ತೃಪ್ತಿಯಾಗುತ್ತಿಲ್ಲ. ತುಂಬಾ ಚೆನ್ನಾಗಿ ಮಾತನಾಡುತ್ತೀಯೆ.”
ಸುಧನ್ವ-ವಿರೋಚನ-ಪ್ರಹ್ಲಾದರ ಸಂವಾದ
ವಿದುರನು ಹೇಳಿದನು:
“ಸರ್ವತೀರ್ಥಗಳಲ್ಲಿ ಸ್ನಾನಮಾಡುವುದು ಅಥವಾ ಸರ್ವ ಭೂತಗಳ ಮೇಲೆ ದಯೆಯಿಡುವುದು ಇವೆರಡೂ ಒಂದೇ. ಬಹುಷಃ ದಯೆಯೇ ಹೆಚ್ಚಿನದಾಗಿರಬಹುದು. ಪುತ್ರರ ಮೇಲೆ ದಯೆ ತೋರು. ಇದರಿಂದ ಇಲ್ಲಿ ಪರಮ ಕೀರ್ತಿಯನ್ನೂ ಮರಣದ ನಂತರ ಸ್ವರ್ಗವನ್ನೂ ಪಡೆಯುತ್ತೀಯೆ. ಲೋಕಗಳಲ್ಲಿ ಎಲ್ಲಿಯವರೆಗೆ ಮನುಷ್ಯನ ಪುಣ್ಯಗಳನ್ನು ಹಾಡಲಾಗುತ್ತದೆಯೋ ಅಲ್ಲಿಯ ವರೆಗೆ ಆ ಪುರುಷವ್ಯಾಘ್ರನು ಸ್ವರ್ಗಲೋಕದಲ್ಲಿ ಬೆಳಗುತ್ತಾನೆ. ಅದಕ್ಕೆ ಸಂಬಂಧಿಸಿದಂತೆ ಪುರಾತನವಾದ ಇತಿಹಾಸವೊಂದನ್ನು – ಕೇಶಿನಿಯ ಕುರಿತಾಗಿ ಸುಧನ್ವ-ವಿರೋಚನರ ಸಂವಾದವನ್ನು ಉದಾಹರಿಸುತ್ತಾರೆ.
“ಕೇಶಿನಿಯು ಹೇಳಿದಳು: ‘ವಿರೋಚನ! ಬ್ರಾಹ್ಮಣರು ಶ್ರೇಯಸ್ಕರೋ ಅಥವಾ ದಿತಿಯ ಮಕ್ಕಳು ಶ್ರೇಯಸ್ಕರೋ? ಮತ್ತು ಸುಧನ್ವನು ಏಕೆ ಈ ಪರ್ಯಂಕವನ್ನು ಏರಬಾರದು?’ ಆಗ ವಿರೋಚನನು ಹೇಳಿದನು: ‘ಕೇಶಿನಿ! ಪ್ರಜಾಪತಿಯಿಂದಲೇ ಹುಟ್ಟಿದ ನಾವೇ ಸತ್ತಮರು. ಈ ಎಲ್ಲ ಲೋಕಗಳೂ ನಮ್ಮವಲ್ಲವೇ? ಇನ್ನು ದೇವತೆಗಳು ಯಾರು? ದ್ವಿಜರು ಯಾರು?’ ಅದಕ್ಕೆ ಕೇಶಿನಿಯು ಹೇಳಿದಳು: ‘ವಿರೋಚನ! ಇಲ್ಲಿಯೇ ಕುಳಿತುಕೊಂಡು ಪ್ರತೀಕ್ಷಿಸು. ನಾಳೆ ಬೆಳಿಗ್ಗೆ ಸುಧನ್ವನು ಬರುವವನಿದ್ದಾನೆ. ನಿಮ್ಮಿಬ್ಬರನ್ನೂ ಒಟ್ಟಿಗೇ ನೋಡುತ್ತೇನೆ.’ ವಿರೋಚನನು ಹೇಳಿದನು: ‘ಭದ್ರೇ! ನೀನು ಹೇಳಿದಂತೆಯೇ ಮಾಡುತ್ತೇನೆ. ಬೆಳಿಗ್ಗೆ ಸುಧನ್ವನನ್ನೂ ನನ್ನನ್ನೂ ಒಟ್ಟಿಗೇ ನೋಡುವೆಯಂತೆ.’ ಮರುದಿನ ಬೆಳಿಗ್ಗೆ ಸುಧನ್ವನು ಬಂದು ಹೇಳಿದನು: ‘ಪ್ರಾಹ್ರಾದ! ನಿನ್ನ ಈ ಹಿರಣ್ಮಯ ಆಸನವನ್ನು ಮುಟ್ಟಬಹುದು. ಆದರೆ ಅದರ ಮೇಲೆ ನಿನ್ನೊಡನೆ ಕುಳಿತುಕೊಳ್ಳುವುದು ಸರಿಯಲ್ಲವೆಂದು ನನಗನ್ನಿಸುತ್ತದೆ.’ ಆಗ ವಿರೋಚನನು ಹೇಳಿದನು: ‘ಸುಧನ್ವ! ಮಣೆ, ಕೂರ್ಚ ಅಥವಾ ಪ್ರಾಣಿಯ ಚರ್ಮ ಇವುಗಳು ಮಾತ್ರ ನಿನಗೆ ಸರಿಯಾದವುಗಳು. ನನ್ನೊಡನೆ ಆಸನದಲ್ಲಿ ಕುಳಿತುಕೊಳ್ಳುವುದು ನಿನಗೆ ಸಮನಲ್ಲ.’ ಸುಧನ್ವನು ಹೇಳಿದನು: ‘ನಿನ್ನ ತಂದೆಯು ನನಗಿಂತಲೂ ಕೆಳ ಸ್ಥಾನದ ಆಸನದಲ್ಲಿ ಕುಳಿತು ನನ್ನನ್ನು ಗೌರವಿಸುತ್ತಿದ್ದನು. ನೀನು ಬಾಲಕ! ಮನೆಯಲ್ಲಿ ಸುಖದಲ್ಲಿ ಬೆಳೆದವನು. ನಿನಗೆ ಏನೂ ಗೊತ್ತಿಲ್ಲ.’ ವಿರೋಚನನು ಹೇಳಿದನು: ‘ಸುಧನ್ವನ್! ಅಸುರರಲ್ಲಿ ಇರುವ ಚಿನ್ನ, ಗೋವುಗಳು ಮತ್ತು ಏನೆಲ್ಲ ಸಂಪತ್ತು ಇವೆಯೋ ಅವೆಲ್ಲವನ್ನೂ ಪಣವನ್ನಾಗಿಟ್ಟು ತಿಳಿದವರಲ್ಲಿ ಕೇಳೋಣ.’ ಸುಧನ್ವನು ಹೇಳಿದನು: ‘ವಿರೋಚನ! ಚಿನ್ನ ಮತ್ತು ಗೋವುಗಳು ನಿನ್ನದಾದವು. ಪ್ರಾಣವನ್ನೇ ಪಣವನ್ನಾಗಿಟ್ಟು ತಿಳಿದವರಲ್ಲಿ ಪ್ರಶ್ನೆಯನ್ನು ಕೇಳೋಣ.’ ವಿರೋಚನನು ಹೇಳಿದನು: ‘ಪ್ರಾಣವನ್ನು ಪಣವನ್ನಾಗಿಟ್ಟುಕೊಂಡು ನಾವು ಎಲ್ಲಿಗೆ ಹೋಗೋಣ? ನಾನು ದೇವತೆಗಳ ಮುಂದೆ ನಿಲ್ಲುವವನಲ್ಲ, ಮನುಷ್ಯರ ಮುಂದಂತೂ ಎಂದೂ ಇಲ್ಲ.’ ಸುಧನ್ವನು ಹೇಳಿದನು: ‘ಪ್ರಾಣಗಳನ್ನು ಪಣವನ್ನಾಗಿಟ್ಟುಕೊಂಡು ನಿನ್ನ ತಂದೆಯಲ್ಲಿಗೆ ಹೋಗೋಣ. ಪ್ರಹ್ಲಾದನು ಮಗನಿಗೂ ಕೂಡ ಸುಳ್ಳನ್ನು ಹೇಳುವುದಿಲ್ಲ.’
“ಪ್ರಹ್ಲಾದನು ಹೇಳಿದನು: ‘ಎಂದೂ ಒಟ್ಟಿಗೇ ನೋಡಿರದ ಇವರಿಬ್ಬರೂ ಒಂದೇ ಮಾರ್ಗದಲ್ಲಿ ಒಟ್ಟಿಗೇ ಸಿಟ್ಟಿಗೆದ್ದ ವಿಷಸರ್ಪಗಳಂತೆ ಇಲ್ಲಿಗೆ ಬರುತ್ತಿದ್ದಾರೆ. ಹಿಂದೆ ಎಂದೂ ಒಟ್ಟಿಗೇ ನಡೆಯದೇ ಇದ್ದ ನೀವು ಏಕೆ ಒಟ್ಟಿಗೇ ಬರುತ್ತಿದ್ದೀರಿ? ವಿರೋಚನನಲ್ಲಿ ಕೇಳುತ್ತಿದ್ದೇನೆ - ಸುಧನ್ವನೊಂದಿಗೆ ನಿನಗೆ ಯಾವ ತರಹದ ಸಖ್ಯ?’ ವಿರೋಚನನು ಹೇಳಿದನು: ‘ನನಗೆ ಸುಧನ್ವನೊಂದಿಗೆ ಸಖ್ಯವಿಲ್ಲ. ಪ್ರಾಣಗಳನ್ನು ಪಣವಾಗಿಟ್ಟಿದ್ದೇವೆ. ಪ್ರಹ್ಲಾದ! ನಿನಗೆ ಪ್ರಶ್ನೆಯನ್ನು ಕೇಳುತ್ತೇನೆ. ಸುಳ್ಳನ್ನು ಹೇಳಬಾರದು.’ ಪ್ರಹ್ಲಾದನು ಹೇಳಿದನು: ‘ಸುಧನ್ವನಿಗೆ ಉದಕ ಮಧುಪರ್ಕಗಳನ್ನು ತೆಗೆದುಕೊಂಡು ಬನ್ನಿ. ಬ್ರಹ್ಮನ್! ದಷ್ಟಪುಷ್ಟ ಬಿಳಿಯ ಗೋವನ್ನಿತ್ತು ನಿನ್ನನ್ನು ಅರ್ಚಿಸುತ್ತೇನೆ.’ ಸುಧನ್ವನು ಹೇಳಿದನು: ‘ಪ್ರಹ್ಲಾದ! ಉದಕ ಮಧುಪರ್ಕಗಳನ್ನು ನನಗೆ ಅರ್ಪಿಸಿಯಾಯಿತು. ಈಗ ನಾವು ಕೇಳುವ ಪ್ರಶ್ನೆಗೆ ಉತ್ತರವನ್ನು ನೀಡು.’ ಪ್ರಹ್ಲಾದನು ಹೇಳಿದನು: ‘ಬ್ರಹ್ಮನ್! ನನಗೆ ಬೇರೆ ಪುತ್ರರಿಲ್ಲ. ನೀನೂ ಕೂಡ ಇಲ್ಲಿ ಸಾಕ್ಷಾತ್ ನಿಂತಿರುವೆ. ನಿಮ್ಮಿಬ್ಬರು ವಾದಮಾಡಿಕೊಳ್ಳುತ್ತಿರುವ ಪ್ರಶ್ನೆಯ ಕುರಿತು ನಾನು ಹೇಗೆ ಹೇಳಬಲ್ಲೆ? ಸುಧನ್ವನ್! ಸತ್ಯವನ್ನು ಹೇಳದೇ ಸುಳ್ಳನ್ನು ಹೇಳುವವನು ಯಾವ ದುರಾವಸ್ಥೆಯಲ್ಲಿ ವಾಸಿಸುತ್ತಾನೆ ಎಂದು ಕೇಳುತ್ತೇನೆ.’ ಸುಧನ್ವನು ಹೇಳಿದನು: ‘ಸುಳ್ಳನ್ನು ಹೇಳುವವನು ಪರಿತ್ಯಜಿಸಲ್ಪಟ್ಟ ಸ್ತ್ರೀಯು ತನ್ನ ಪತಿಯು ಸವತಿಯ ತೋಳ ಆಲಿಂಗನದಲ್ಲಿರುವುದನ್ನು ನೋಡಿದರೆ ಹೇಗಿರುತ್ತಾಳೋ ಅಂಥಹ ಮತ್ತು ದ್ಯೂತದಲ್ಲಿ ಸೋತವನಿರುವಂಥಹ ದುರಾವಸ್ಥೆಯಲ್ಲಿರುತ್ತಾನೆ. ನಗರಕ್ಕೆ ಪ್ರವೇಶಪಡೆಯದೇ ದ್ವಾರದ ಹೊರಗೇ ನಿಲ್ಲಿಸಲ್ಪಟ್ಟವಂತೆ ಸುಳ್ಳುಹೇಳುವವರು ಮತ್ತೆ ಮತ್ತೆ ತಮ್ಮ ಅಮಿತ್ರರನ್ನು ಭೇಟಿಯಾಗುತ್ತಾ ಇರುತ್ತಾರೆ. ಪಶುವಿಗಾಗಿ ಸುಳ್ಳುಹೇಳುವವನು ಐವರನ್ನು ಕೊಂದಂತೆ, ಗೋವಿಗಾಗಿ ಸುಳ್ಳುಹೇಳಿದರೆ ಹತ್ತುಜನರನ್ನು ಕೊಂದಂತೆ, ಕುದುರೆಗಾಗಿ ಸುಳ್ಳುಹೇಳಿದರೆ ನೂರು ಜನರನ್ನು ಕೊಂದಂತೆ ಮತ್ತು ಮನುಷ್ಯನಿಗಾಗಿ ಸುಳ್ಳು ಹೇಳಿದರೆ ಸಾವಿರ ಜನರನ್ನು ಕೊಂದಂತೆ. ಹಿರಣ್ಯಕ್ಕಾಗಿ ಸುಳ್ಳುಹೇಳಿದರೆ ಹುಟ್ಟಿದ ಮತ್ತು ಹುಟ್ಟಲಿರುವ ಎಲ್ಲರನ್ನೂ ಕೊಂದಂತೆ. ಭೂಮಿಗೋಸ್ಕರ ಸುಳ್ಳು ಹೇಳಿದರೆ ಎಲ್ಲವನ್ನು ಕೊಂದ ಹಾಗೆ. ಆದುದರಿಂದ ಭೂಮಿಗಾಗಿ ಎಂದೂ ಸುಳ್ಳನ್ನು ಹೇಳಬಾರದು.’ ಪ್ರಹ್ಲಾದನು ಹೇಳಿದನು: ‘ವಿರೋಚನ! ನನಗಿಂತಲೂ ಅಂಗಿರಸನು ಮತ್ತು ಸುಧನ್ವನು ನಿನಗಿಂತ ಶ್ರೇಯನು. ಅವನ ತಾಯಿಯೂ ನಿನ್ನ ತಾಯಿಗಿಂತ ಶ್ರೇಯಳು. ಆದುದರಿಂದ ನೀನು ಅವನೊಡನೆ ಸೋತೆ. ವಿರೋಚನ! ಈಗ ಸುಧನ್ವನು ನಿನ್ನ ಪ್ರಾಣದ ಈಶ್ವರ. ಸುಧನ್ವನ್! ಆದರೆ ವಿರೋಚನನನ್ನು ಹಿಂದಿರುಗಿಸು ಎಂದು ನಿನ್ನಲ್ಲಿ ಕೇಳಿಕೊಳ್ಳುತ್ತಿದ್ದೇನೆ.’ ಸುಧನ್ವನು ಹೇಳಿದನು: ‘ನೀನು ಧರ್ಮವನ್ನು ಆರಿಸಿಕೊಂಡಿದ್ದೀಯೆ. ಕಾಮದಿಂದ ಸುಳ್ಳನ್ನು ಹೇಳಲಿಲ್ಲ. ಪ್ರಹ್ಲಾದ! ಆದುದರಿಂದ ನಿನ್ನ ದುರ್ಲಭ ಪುತ್ರನನ್ನು ನಿನಗೆ ಹಿಂದಿರುಗಿಸುತ್ತಿದ್ದೇನೆ. ಪ್ರಹ್ಲಾದ! ಇದೋ ನಾನು ನಿನ್ನ ಪುತ್ರ ವಿರೋಚನನನ್ನು ಕೊಡುತ್ತಿದ್ದೇನೆ. ಇವನು ಈ ಕುಮಾರಿಯ ಸನ್ನಿಧಿಯಲ್ಲಿ ನನ್ನ ಪಾದಗಳನ್ನು ತೊಳೆಯಬೇಕು.’
“ಆದುದರಿಂದ ಭೂಮಿಗಾಗಿ ಸುಳ್ಳನ್ನು ಹೇಳಬಾರದು. ಮಗನ ಮೇಲಿನ ಪ್ರೀತಿಯಿಂದಾಗಿ ಸುಳ್ಳನ್ನು ಹೇಳಿ ಮಕ್ಕಳು ಮಂತ್ರಿಗಳೊಂದಿಗೆ ನಾಶವಾಗಬೇಡ. ದೇವತೆಗಳು ದಂಡವನ್ನು ಹಿಡಿದು ಪಶುಪಾಲಕರಂತೆ ರಕ್ಷಿಸುವುದಿಲ್ಲ. ಯಾರನ್ನು ಅವರು ರಕ್ಷಿಸಲು ಬಯಸುತ್ತಾರೋ ಅವರಲ್ಲಿ ಬುದ್ಧಿಯನ್ನು ಹುಟ್ಟಿಸುತ್ತಾರೆ. ಹೇಗೆ ಹೇಗೆ ಪುರುಷನು ಕಲ್ಯಾಣಕ್ಕೆ ಮನಸ್ಸು ಮಾಡುತ್ತಾನೋ ಹಾಗೆ ಹಾಗೆ ಅವನ ಸರ್ವಾರ್ಥಗಳೂ ಸಿದ್ಧಿಸುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಮೋಸದಿಂದ ನಡೆದುಕೊಳ್ಳುವ ಮೋಸಗಾರನನ್ನು ಅಂತ್ಯಕಾಲದಲ್ಲಿ ರೆಕ್ಕೆಗಳು ಬಲಿತ ಪಕ್ಷಿಗಳು ಗೂಡನ್ನು ಬಿಟ್ಟು ಹೋಗುವಂತೆ ವೇದಗಳು ಬಿಟ್ಟು ಹೋಗುತ್ತವೆ. ಮತ್ತೇರುವವರೆಗೆ ಕುಡಿಯುವುದು, ಕಲಹ, ಬಹುಜನರೊಂದಿಗೆ ವೈರ, ಪತಿ-ಪತ್ನಿಯರ ನಡುವೆ ಅಂತರವನ್ನುಂಟುಮಾಡುವುದು, ದಾಯಾದಿಗಳೊಂದಿಗೆ ಜಗಳ, ರಾಜನೊಂದಿಗೆ ದ್ವೇಷ, ಸ್ತ್ರೀ ಮತ್ತು ಪುರುಷನ ವಿವಾದದಲ್ಲಿ ತಲೆಹಾಕುವುದು ಇವನ್ನು ಮತ್ತು ಎಲ್ಲ ದುಷ್ಟ ಮಾರ್ಗಗಳನ್ನೂ ವರ್ಜಿಸಬೇಕು ಎಂದು ಹೇಳುತ್ತಾರೆ. ಸಾಮುದ್ರಿಕ, ಮೊದಲು ಕಳ್ಳನಾಗಿದ್ದ ವರ್ತಕ, ಶಲಾಕಧೂರ್ತ, ಚಿಕಿತ್ಸಕ, ಶತ್ರು, ಮಿತ್ರ ಮತ್ತು ಕುಶೀಲವ ಇವರು ಏಳು ಮಂದಿ ಸಾಕ್ಷಿಗಳಾಗಿ ಒಳ್ಳೆಯದನ್ನು ಮಾಡುವುದಿಲ್ಲ. ಅಭಿಮಾನದಿಂದ ಮಾಡುವ ಅಗ್ನಿಹೋತ್ರ, ಅಭಿಮಾನದಿಂದ ಕೈಗೊಳ್ಳುವ ಮೌನವ್ರತ, ಅಭಿಮಾನದಿಂದ ಮಾಡುವ ಅಧ್ಯಯನ ಮತ್ತು ಅಭಿಮಾನದಿಂದ ಮಾಡುವ ಯಜ್ಞ ಇವು ನಾಲ್ಕು ಭಯಂಕರವಾಗಿದ್ದು, ಮಾಡುವವನಲ್ಲಿ ಭಯವನ್ನುಂಟು ಮಾಡುತ್ತವೆ. ಮನೆಗೆ ಬೆಂಕಿಯನ್ನಿಡುವವನು, ವಿಷವನ್ನು ಕೊಡುವವನು, ದಲ್ಲಾಳ, ಸೋಮವನ್ನು ಮಾರುವವನು, ಬಾಣಗಳನ್ನು ತಯಾರಿಸುವವನು, ಜ್ಯೋತಿಷ್ಯಗಾರ, ಮಿತ್ರರನ್ನು ಬಾಧಿಸುವವನು, ಪರರ ಸ್ತ್ರೀಯರನ್ನು ಕೂಡುವವನು, ಭ್ರೂಣವನ್ನು ಕೊಂದವನು, ಗುರುವಿನ ಪತ್ನಿಯೊಂದಿಗೆ ಕೂಡಿದವನು, ಮದ್ಯದ ದಾಸನಾಗಿರುವ ದ್ವಿಜ, ಅತಿ ತೀಕ್ಷ್ಣವಾಗಿ ಮಾತನಾಡುವವನು, ಹಳೆಯ ದ್ವೇಷವನ್ನು ಬೆಳೆಸುವವನು, ನಾಸ್ತಿಕ, ವೇದನಿಂದಕ, ಲಂಚವನ್ನು ತೆಗೆದುಕೊಳ್ಳುವವನು, ಗೋವುಗಳನ್ನು ಕೊಲ್ಲುವವನು, ರಕ್ಷಣೆಯನ್ನು ಕೇಳಿದವನನ್ನು ಕೊಲ್ಲುವವನು - ಇವರೆಲ್ಲರೂ ಹಿಂಸೆಯಲ್ಲಿ ಬ್ರಹ್ಮಹತ್ಯೆಯ ಸಮಾನರು.
“ಚಿನ್ನಕ್ಕೆ ಅಗ್ನಿಯೇ ಪರೀಕ್ಷೆ. ಉತ್ತಮ ಕುಲದದಲ್ಲಿ ಹುಟ್ಟಿದವನಿಗೆ ಅವನ ಸ್ವಭಾವವೇ ಪರೀಕ್ಷೆ. ಸಾಧುವಿಗೆ ಅವನ ನಡತೆಯೇ ಪರೀಕ್ಷೆ. ಶೂರನಿಗೆ ಭಯವನ್ನು ನೀಡುವ ಸಂದರ್ಭವೇ ಪರೀಕ್ಷೆ. ಧೀರನಿಗೆ ಕಷ್ಟಗಳೇ ಪರೀಕ್ಷೆ. ಆಪತ್ತೇ ಸ್ನೇಹಿತರ ಪರೀಕ್ಷೆ. ಮುಪ್ಪು ರೂಪವನ್ನು ಅಪಹರಿಸುತ್ತದೆ. ಆಸೆಯು ಧೈರ್ಯವನ್ನು, ಮೃತ್ಯುವು ಪ್ರಾಣವನ್ನು, ಅಸೂಯೆಯೆ ಧರ್ಮಚರ್ಯೆಯನ್ನು, ಕಾಮವು ಮಾನವನ್ನು, ಮತ್ತು ಅಭಿಮಾನವು ಎಲ್ಲವನ್ನೂ ಅಪಹರಿಸುತ್ತದೆ. ಸಂಪತ್ತು ಮಂಗಲ ಕಾರ್ಯಗಳಲ್ಲಿ ಹುಟ್ಟುತ್ತದೆ, ಕೆಲಸಗಾರಿಕೆಯಿಂದ ಬೆಳೆಯುತ್ತದೆ, ದಕ್ಷತೆಯಿಂದ ಬೇರು ಬಿಡುತ್ತದೆ ಮತ್ತು ಸಂಯಮದಿಂದ ನೆಲೆಗೊಳ್ಳುತ್ತದೆ.
“ಈ ಅಷ್ಟಗುಣಗಳು ಪುರುಷನನ್ನು ಬೆಳಗಿಸುತ್ತವೆ: ಪ್ರಜ್ಞೆ, ಉತ್ತಮ ಕುಲದಲ್ಲಿ ಜನ್ಮ, ಆತ್ಮ ನಿಯಂತ್ರಣ, ಶ್ರುತಿಗಳ ಪರಿಚಯ, ಪರಾಕ್ರಮ, ಬಹುಭಾಷಿತಾ, ಯಥಾಶಕ್ತಿ ದಾನ ಮತ್ತು ಕೃತಜ್ಞತೆ. ಈ ಎಲ್ಲ ಗುಣಗಳನ್ನೂ ಹೊಂದಿದ ಮಹಾನುಭಾವನಲ್ಲಿ ಒಂದೇ ಗುಣವು - ಯಾವ ಮನುಷ್ಯನನ್ನು ರಾಜನು ಸತ್ಕರಿಸುತ್ತಾನೋ ಅವನ ಸರ್ವ ಗುಣಗಳನ್ನೂ ಬೆಳಗಿಸಬಲ್ಲದು. ಈ ಎಂಟು ಮನುಷ್ಯಲೋಕದಲ್ಲಿ ಸ್ವರ್ಗಲೋಕದ ನಿದರ್ಶನಗಳು. ಈ ಕೆಳಗಿನವುಗಳಲ್ಲಿ ಮೊದಲನೆಯ ನಾಲ್ಕು ಸಾಧುಗಳಿಗೆ ಜೋಡಿಕೊಂಡಿದ್ದರೆ, ಕೊನೆಯ ನಾಲ್ಕು ಸಂತರನ್ನು ಅನುಸರಿಸುತ್ತವೆ. ಯಜ್ಞ, ದಾನ, ಅಧ್ಯಯನ, ತಪಸ್ಸು ಈ ನಾಲ್ಕು ಸಾದುಗಳಲ್ಲಿರುತ್ತವೆ. ದಮ, ಸತ್ಯ, ದಯೆ, ಮತ್ತು ಅಹಿಂಸೆ ಈ ನಾಲ್ಕು ಸಂತರನ್ನು ಅನುಸರಿಸುತ್ತವೆ. ವೃದ್ಧರು ಇಲ್ಲದ ಸಭೆಯು ಸಭೆಯಲ್ಲ ಮತ್ತು ಧರ್ಮವೇನೆಂದು ಹೇಳದ ವೃದ್ಧರು ವೃದ್ಧರಲ್ಲ. ಸತ್ಯವಿಲ್ಲದುದರಲ್ಲಿ ಧರ್ಮವಿರುವುದಿಲ್ಲ ಮತ್ತು ಛಲ ಮತ್ತು ಮೋಸವಿರುವಲ್ಲಿ ಸತ್ಯವಿರುವುದಿಲ್ಲ.
“ಸತ್ಯ, ರೂಪ, ಶ್ರುತಿಜ್ಞಾನ, ವಿದ್ಯೆ, ಉತ್ತಮ ಕುಲದಲ್ಲಿ ಜನ್ಮ, ಶೀಲ, ಬಲ, ಧನ, ಶೌರ್ಯ ಮತ್ತು ಉತ್ತಮ ಮಾತು ಈ ಹತ್ತು ಯೋನಿಗೆ ಸಂಬಂಧಿಸಿವೆ. ಪಾಪಕೀರ್ತಿಯು ಪಾಪವನ್ನು ಮಾಡಿ ಪಾಪ ಫಲವನ್ನೇ ಪಡೆಯುತ್ತಾನೆ. ಪುಣ್ಯಕೀರ್ತಿಯು ಪುಣ್ಯವನ್ನು ಮಾಡಿ ಪುಣ್ಯಫಲವನ್ನೇ ಪಡೆಯುತ್ತಾನೆ. ಪುನಃ ಪುನಃ ಮಾಡಿದ ಪಾಪಗಳು ಪ್ರಜ್ಞೆಯನ್ನು ನಾಶಪಡಿಸುತ್ತವೆ. ಪ್ರಜ್ಞೆಯನ್ನು ಕಳೆದುಕೊಂಡ ನರನು ನಿತ್ಯವೂ ಪಾಪದಲ್ಲಿಯೇ ನಿರತನಾಗಿರುತ್ತಾನೆ. ಪುನಃ ಪುನಃ ಪುಣ್ಯ ಕರ್ಮಗಳನ್ನು ಮಾಡುವುದರಿಂದ ಪ್ರಜ್ಞೆಯು ವೃದ್ಧಿಯಾಗುತ್ತದೆ ಮತ್ತು ಪ್ರಜ್ಞೆಯು ವೃದ್ಧಿಯಾದಾಗ ನರನು ನಿತ್ಯವೂ ಪುಣ್ಯಕರ್ಮಗಳಲ್ಲಿ ನಿರತನಾಗಿರುತ್ತಾನೆ. ಅಸೂಯೆಪಡುವವನು, ಇನ್ನೊಬ್ಬರಿಗೆ ಹಿಂಸೆಮಾಡುವವನು, ನಿಷ್ಟುರನಾಗಿರುವವನು, ಮತ್ತು ವೈರವನ್ನು ಬೆಳೆಸಿಕೊಂಡು ಹೋಗುವವನು ಈ ಪಾಪಗಳನ್ನು ಆಚರಿಸಿ ಬೇಗನೇ ಮಹಾ ಕಷ್ಟಗಳನ್ನು ಅನುಭವಿಸುತ್ತಾನೆ. ಅಸೂಯೆಪಡದವನು, ಪ್ರಜ್ಞೆಯಲ್ಲಿದ್ದು ಮಾಡುವವನು, ಸದಾ ಚೆನ್ನಾಗಿ ನಡೆದುಕೊಳ್ಳುವವನು ಕಷ್ಟವಿಲ್ಲದೇ ಸುಖವನ್ನು ಪಡೆದು ಎಲ್ಲೆಡೆಯೂ ವಿರಾಜಿಸುತ್ತಾನೆ. ಪ್ರಾಜ್ಞರಿಂದ ಪ್ರಜ್ಞೆಯನ್ನು ಪಡೆಯುವವನೇ ಪಂಡಿತ. ಪ್ರಾಜ್ಞನು ಧರ್ಮ ಅರ್ಥಗಳೆರಡನ್ನು ಹೊಂದಿ ಅಧಿಕ ಸುಖವನ್ನು ಹೊಂದಬಹುದು.
“ರಾತ್ರಿಯನ್ನು ಸುಖವಾಗಿ ಕಳೆಯಬಹುದಾಗಿರುವಂಥಹ ಕೆಲಸವನ್ನೇ ಹಗಲಿನಲ್ಲಿ ಮಾಡಬೇಕು. ಮಳೆಗಾಲದಲ್ಲಿ ಸುಖವಾಗಿರುವುದಕ್ಕೆ ಸಹಾಯವಾಗುವ ಕೆಲಸವನ್ನೇ ಉಳಿದ ಎಂಟು ತಿಂಗಳುಗಳಲ್ಲಿ ಮಾಡಬೇಕು. ಕಿರಿಯ ವಯಸ್ಸಿನಲ್ಲಿ ಮುಂದೆ ವೃದ್ಧಾಪ್ಯದಲ್ಲಿ ಸುಖವಾಗಿ ಜೀವಿಸಲು ಏನು ಬೇಕೋ ಅದನ್ನು ಮಾಡಿಕೊಳ್ಳಬೇಕು. ಜೀವಂತವಾಗಿರುವಾಗ ಮರಣದ ನಂತರ ಸುಖವಾಗಿರಲು ಏನು ಬೇಕಾಗುತ್ತದೆಯೋ ಅದನ್ನು ಮಾಡಬೇಕು.
“ಚೆನ್ನಾಗಿ ಜೀರ್ಣವಾದ ಆಹಾರವನ್ನು, ಯೌವನವನ್ನು ಕಳೆದುಕೊಂಡ ಭಾರ್ಯೆ, ಸಂಗ್ರಾಮವನ್ನು ಮುಗಿಸಿದ ಶೂರನನ್ನು ಮತ್ತು ಸಿದ್ಧಿಯನ್ನು ಪಡೆದ ತಪಸ್ವಿನಿಯನ್ನು ಪ್ರಶಂಸಿಸುತ್ತಾರೆ. ಅಧರ್ಮದಿಂದ ಪಡೆದ ಧನದಲ್ಲಿ ಛಿದ್ರಗಳು ಕಾಣುತ್ತವೆ. ಅದನ್ನು ಮುಚ್ಚಿಡಲು ಪ್ರಯತ್ನಿಸಿದರೂ ಬೇರೆ ಕಡೆಗಳಲ್ಲಿ ಛಿದ್ರವು ಕಾಣಿಸಿಕೊಳ್ಳುತ್ತವೆ. ಆತ್ಮವತರನ್ನು ಗುರುವು ನಿಯಂತ್ರಿಸುತ್ತಾನೆ, ರಾಜನು ದುರಾತ್ಮರನ್ನು ನಿಯಂತ್ರಿಸುತ್ತಾನೆ, ವೈವಸ್ವತ ಯಮನು ಮುಸುಕಿರುವ ಪಾಪಿಗಳನ್ನು ನಿಯಂತ್ರಿಸುತ್ತಾನೆ. ಋಷಿಗಳ, ನದಿಗಳ ಮತ್ತು ಕುಲಗಳ ಮಹಾತ್ಮೆಯನ್ನು ಮತ್ತು ಸ್ತ್ರೀಯರ ದುಶ್ಚರಿತವನ್ನು ತಿಳಿಯಲು ಸಾದ್ಯವಿಲ್ಲ. ದ್ವಿಜಾತಿಯವರ ಪೂಜೆಯಲ್ಲಿ ನಿರತನಾಗಿರುವ, ದಾನಿಯಾದ, ಬಂಧುಗಳೊಡನೆ ಸರಿಯಾಗಿ ನಡೆದುಕೊಳ್ಳುವ ಕ್ಷತ್ರಿಯನು ಬಹುಕಾಲ ಮಹಿಯನ್ನು ಪಾಲಿಸಿ ಸ್ವರ್ಗದಲ್ಲಿ ಭಾಗಿಯಾಗುತ್ತಾನೆ. ಈ ಮೂರು ರೀತಿಯ ಪುರುಷರು ಭೂಮಿಯಿಂದ ಸುವರ್ಣಪುಷ್ಪಗಳನ್ನು ಕೊಯ್ಯುತ್ತಾರೆ - ಶೂರ, ವಿದ್ಯಾವಂತ ಮತ್ತು ಇನ್ನೊಬ್ಬರ ಸೇವೆ ಮಾಡಲು ತಿಳಿದವನು. ಬುದ್ಧಿಯಿಂದ ಮಾಡುವ ಕರ್ಮಗಳು ಶ್ರೇಷ್ಠ, ಬಾಹುಗಳಿಂದ ಮಾಡುವವು ಮಧ್ಯಮ, ತೊಡೆಗಳನ್ನು ಬಳಸಿ ಮಾಡುವ ಮತ್ತು ಭಾರವನ್ನು ಹೊರುವುದು ಕೀಳು ಕರ್ಮಗಳು.
“ದುರ್ಯೋಧನ, ಶಕುನಿ, ಮೂಢ ದುಃಶಾಸನ ಮತ್ತು ಕರ್ಣರ ಮೇಲೆ ಐಶ್ವರ್ಯವನ್ನು ಇರಿಸಿ ಹೇಗೆ ತಾನೆ ನೀನು ಶಾಂತಿಯನ್ನು ಬಯಸುತ್ತೀಯೆ? ಸರ್ವಗುಣಗಳಿಂದ ಕೂಡಿದ ಪಾಂಡವರು ನಿನ್ನಲ್ಲಿ ತಂದೆಯಂತೆ ವರ್ತಿಸುತ್ತಾರೆ. ನೀನೂ ಕೂಡ ಅವರೊಡನೆ ಪುತ್ರರಂತೆ ವರ್ತಿಸು.”
ದತ್ತಾತ್ರೇಯ ಮತ್ತು ಸಾದ್ಯರ ಸಂವಾದ
ವಿದುರನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ನಾವು ಕೇಳಿದ ಪುರಾತನವಾದ ಇತಿಹಾಸ - ಅತ್ರಿಯ ಮಗ ಮತ್ತು ಸಾಧ್ಯರ ಸಂವಾದವಿದೆ. ಹಿಂದೆ ಅತ್ರಿಯ ಮಗ ಸಂಶಿತವ್ರತ ಮಹರ್ಷಿಯು ಹಂಸರೂಪದಲ್ಲಿ ಸಂಚರಿಸುತ್ತಿರುವಾಗ ಆ ಮಹಾಪ್ರಾಜ್ಞನನ್ನು ಸಾಧ್ಯಾ ದೇವತೆಗಳು ಪ್ರಶ್ನಿಸಿದರು: ‘ಮಹರ್ಷೇ! ನಾವು ಸಾಧ್ಯಾ ದೇವತೆಗಳು. ನಿನ್ನನ್ನು ನೋಡಿ ನೀನು ಯಾರೆಂದು ಗುರುತಿಸಲಾರೆವು. ಶ್ರುತಿಗಳಿಂದ ನೀನು ಧೀರ ಮತ್ತು ಬುದ್ಧಿವಂತನೆಂದು ನಮಗನ್ನಿಸುತ್ತದೆ. ಆದುದರಿಂದ ಉದಾರವಾಗಿ ನಮ್ಮೊಂದಿಗೆ ಅರ್ಥಭರಿತ ಮಾತುಗಳನ್ನಾಡಬೇಕು.’ ಹಂಸವು ಹೇಳಿತು: ‘ಅಮರರೇ! ನಾನು ಈ ಕಾರ್ಯವನ್ನು ಚೆನ್ನಾಗಿ ಕೇಳಿದ್ದೇನೆ - ಧೃತಿ, ಶಮ, ಮತ್ತು ಸತ್ಯಧರ್ಮಗಳನ್ನುಪಯೋಗಿಸಿ ಹೃದಯದ ಎಲ್ಲ ಗಂಟುಗಳನ್ನು ಬಿಡಿಸಿ, ಪ್ರಿಯ-ಅಪ್ರಿಯಗಳೆರಡನ್ನೂ ತನ್ನ ವಶದಲ್ಲಿ ತಂದುಕೊಳ್ಳಬೇಕು. ನೋವನ್ನು ನೀಡುವವರಿಗೆ ನೋವನ್ನು ನೀಡಬಾರದು. ಸುಮ್ಮನೇ ಸಹಿಸಿಕೊಂಡರೆ ಅದರಿಂದ ಉಂಟಾಗುವ ಕೋಪವೇ ಆ ನೋವನ್ನು ನೀಡಿದವನನ್ನು ಸುಡುತ್ತದೆ. ನೋವನ್ನು ಅನುಭವಿಸಿದವನಿಗೆ ನೋವನ್ನು ನೀಡಿದವನು ಮಾಡಿದ್ದ ಪುಣ್ಯವು ದೊರೆಯುತ್ತದೆ. ಇನ್ನೊಬ್ಬರನ್ನು ನೋಯಿಸಬೇಡ, ಅಪಮಾನಿಸಬೇಡ. ಮಿತ್ರದ್ರೋಹಿಯಾಗಬೇಡ. ನೀಚರೊಂದಿಗೆ ಸಂಬಂಧವನ್ನಿಟ್ಟುಕೊಳ್ಳಬೇಡ. ಅತಿ ಅಭಿಮಾನಿಯಾಗಿ ಮತ್ತು ಹೀನನಾಗಿ ವರ್ತಿಸಬೇಡ. ಕ್ರೂರವಾದ ಮತ್ತು ರೋಷಯುಕ್ತವಾದ ಮಾತನ್ನು ವರ್ಜಿಸಬೇಕು. ಘೋರ ಮಾತು ಮರ್ಮಗಳನ್ನು, ಎದೆ ಹೃದಯವನ್ನು ಮತ್ತು ಪುರುಷನ ಒಳಕೇಂದ್ರವನ್ನೇ ಸುಡುತ್ತದೆ. ಆದುದರಿಂದ, ಧರ್ಮವಂತನು ರೋಷಯುಕ್ತ, ಕ್ರೂರ ಮಾತನ್ನು ನಿತ್ಯವೂ ವರ್ಜಿಸಬೇಕು. ಕ್ರೂರವಾಗಿ ಮಾತನಾಡುವ, ಮನುಷ್ಯರನ್ನು ಮಾತಿನ ಮುಳ್ಳಿನಿಂದ ಚುಚ್ಚುವ, ನಾಲಿಗೆಯಮೇಲೆ ನರಕವನ್ನು ಹೊತ್ತಿರುವ ಅತ್ಯಂತ ಅಧಮ ಪುರುಷನು ಮನುಷ್ಯರಿಗೆ ಯಾವಾಗಲೂ ಅಲಕ್ಷ್ಮಿಯನ್ನು ತರುವವನೆಂದು ತಿಳಿಯಬೇಕು. ಸುತೀಕ್ಷ್ಣ ಸೂರ್ಯನಂತೆ ಸುಡುತ್ತಿರುವ ಇನ್ನೊಬ್ಬರ ಮಾತಿನ ಬಾಣಗಳಿಂದ ಚೆನ್ನಾಗಿ ಗಾಯಗೊಂಡ ಬುದ್ಧಿವಂತನು ಇದು ನನಗೆ ಅವನ ಪುಣ್ಯಗಳನ್ನು ಕೊಡುತ್ತದೆ ಎಂದು ಅದನ್ನು ಸುಮ್ಮನೇ ಸಹಿಸಿಕೊಳ್ಳುತ್ತಾನೆ. ಯಾವ ಬಣ್ಣದ ಬಟ್ಟೆಯೊಂದಿಗೆ ನೆನೆಸಲ್ಪಟ್ಟಿದೆಯೋ ಆ ಬಟ್ಟೆಯ ಬಣ್ಣವನ್ನು ಪಡೆಯುವಂತೆ, ಯಾವ ಸಂತ, ಅಸಂತ, ತಪಸ್ವಿ, ಕಳ್ಳರ ಸೇವೆಯನ್ನು ಮಾಡುತ್ತೇವೋ ಅವರ ಗುಣಗಳನ್ನು ಪಡೆಯುತ್ತೇವೆ. ಕ್ರೂರವಾಗಿ ಮಾತನಾಡಿದವರಿಗೆ ಅದೇ ಕ್ರೂರತೆಯಿಂದ ಉತ್ತರವನ್ನು ಕೊಡದ, ಘಾಯಕ್ಕೊಳಗಾದರೂ ಘಾಯಗೊಳಿಸಿದವನಿಗೆ ತಿರುಗಿ ಘಾಯಗೊಳಿಸದ, ಪೆಟ್ಟುಕೊಟ್ಟವನಿಗೆ ತಿರುಗಿ ಪೆಟ್ಟುಕೊಡದವರನ್ನು ದೇವತೆಗಳೂ ಅರಸಿಕೊಂಡು ಬರುತ್ತಾರೆ. ಮಾತುನಾಡುವುದಕ್ಕಿಂತ ಮಾತನಾಡದೇ ಇರುವುದು ಶ್ರೇಯ. ಮಾತನಾಡಲೇ ಬೇಕಾಗಿಬಂದರೆ ಮೊದಲನೆಯದಾಗಿ ಶ್ರೇಯವಾದುದನ್ನು ಹೇಳಬೇಕು, ಎರಡನೆಯದಾಗಿ ಸತ್ಯವನ್ನೇ ಮಾತನಾಡಬೇಕು, ಮೂರನೆಯದಾಗಿ ಪ್ರಿಯವಾದುದನ್ನು ಹೇಳಬೇಕು ಮತ್ತು ನಾಲ್ಕನೆಯದಾಗಿ ಧರ್ಮವನ್ನು ಹೇಳಬೇಕು. ಮನುಷ್ಯನು ಯಾರ ಜೊತೆಗೆ ಜೀವಿಸುತ್ತಾನೋ, ಯಾರ ಉಪಸೇವನೆಯನ್ನು ಮಾಡುತ್ತಾನೋ, ಯಾರ ಹಾಗೆ ಆಗಲು ಬಯಸುತ್ತಾನೋ ಅವರ ಹಾಗೆಯೇ ಆಗುತ್ತಾನೆ. ಯಾವ ಯಾವ ವಿಷಯಗಳಿಂದ ದೂರವಿರುತ್ತಾನೋ ಅವುಗಳೆಲ್ಲವುಗಳಿಂದ ಮುಕ್ತಿ ದೊರೆಯುತ್ತದೆ. ಎಲ್ಲವುಗಳಿಂದ ದೂರವಿದ್ದರೆ ದುಃಖವೆನ್ನುವುದೇ ಇರುವುದಿಲ್ಲ. ಅಂಥಹ ವ್ಯಕ್ತಿಯು ಬೇರೆಯವರನ್ನು ಗೆಲ್ಲುವುದಿಲ್ಲ, ಗೆಲ್ಲಲ್ಪಡುವುದಿಲ್ಲ, ವೈರವನ್ನು ಬೆಳೆಸುವುದಿಲ್ಲ, ಬೇರೆಯವರಿಗೆ ಕಷ್ಟವನ್ನು ನೀಡುವುದಿಲ್ಲ ಮತ್ತು ನಿಂದಿಸುವುದಿಲ್ಲ. ನಿಂದೆ ಮತ್ತು ಪ್ರಶಂಸೆಗಳಲ್ಲಿ ಸಮಭಾವವನ್ನಿಟ್ಟುಕೊಂಡು ಶೋಕಿಸುವುದೂ ಇಲ್ಲ ಹರ್ಷಿಸುವುದೂ ಇಲ್ಲ. ಎಲ್ಲರಿಗೂ ಒಳ್ಳೆಯದನ್ನು ಬಯಸುವವನು, ಕೆಟ್ಟದಕ್ಕೆ ಮನಸ್ಸುಮಾಡದವನು, ಸತ್ಯವಾದೀ, ಮೃದು, ದಾಂತನು ಉತ್ತಮ ಪುರುಷನು. ಕಷ್ಟದಲ್ಲಿರುವವರನ್ನು ಸಾಂತ್ವಯಿಸದ, ಮಾತುಕೊಟ್ಟಂತೆ ನೀಡದವನು, ಇನ್ನೊಬ್ಬರ ಅಪರಾಧಗಳನ್ನು ಹುಡುಕುವವನು ಮಧ್ಯಮ ಪುರುಷ. ಇವು ಅಧಮ ಪುರುಷನ ಲಕ್ಷಣಗಳು: ನಿಯಂತ್ರಿಸಲು ಅಸಾಧ್ಯನಾಗಿರುವುದು, ಆಪತ್ತನ್ನು ತರುವುದು, ಸುಲಭವಾಗಿ ಸಿಟ್ಟಾಗುವುದು, ಕೃತಘ್ನತೆ, ಯಾರೊಂದಿಗೂ ಮಿತ್ರನಾಗಿರದೇ ಇರುವುದು, ಮತ್ತು ದುರಾತ್ಮನಾಗಿರುವುದು. ಇತರರು ಮಾಡುವ ಒಳ್ಳೆಯದರ ಮೇಲೆ ಶ್ರದ್ಧೆಯಿಲ್ಲದವನು, ಇತರರನ್ನು ಪಾಪಿಗಳೆಂದು ಶಂಕಿಸುವವನು, ಮಿತ್ರರನ್ನು ದೂರವಿಡುವವನು ಇವನನ್ನು ಕೂಡ ಅಧಮಪುರುಷನೆಂದು ಹೇಳುತ್ತಾರೆ. ತನಗೆ ಶ್ರೇಯಸ್ಸನ್ನು ಬಯಸುವವನು ಉತ್ತಮರ ಸೇವೆಯನ್ನೇ ಮಾಡಬೇಕು. ಸಮಯ ಬಂದರೆ ಮಧ್ಯಮರ ಸೇವೆಯನ್ನೂ ಮಾಡಬಹುದು. ಆದರೆ ಅಧಮರ ಸೇವೆಯನ್ನು ಎಂದೂ ಮಾಡಬಾರದು. ಅಧಮನು ಬಲವನ್ನುಪಯೋಗಿಸಿ, ನಿತ್ಯವೂ ಪ್ರಯತ್ನಪಟ್ಟು, ಬುದ್ಧಿಶಕ್ತಿಯಿಂದ, ಪೌರುಷದಿಂದ ವಿತ್ತವನ್ನು ಗಳಿಸಬಲ್ಲ. ಆದರೆ ಅವನು ತನ್ನ ನಡತೆಯಿಂದ ಮಹಾಕುಲಗಳ ಪ್ರಶಂಸೆಯನ್ನು ಪಡೆಯುವುದಿಲ್ಲ.’”
ಧೃತರಾಷ್ಟ್ರನು ಹೇಳಿದನು: “ವಿದುರ! ದೇವತೆಗಳು ಧರ್ಮಾರ್ಥಗಳಲ್ಲಿ ವೃದ್ಧಿಹೊಂದಿದ ಬಹುಶ್ರುತ ಮಹಾಕುಲಗಳನ್ನು ಪ್ರಶಂಸಿಸುತ್ತಾರೆ. ನಿನ್ನಲ್ಲಿ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಆ ಮಹಾಕುಲಗಳು ಹೇಗಾಗುತ್ತವೆ?”
ವಿದುರನು ಹೇಳಿದನು: “ತಪಸ್ಸು, ಆತ್ಮನಿಯಂತ್ರಣ, ಬ್ರಹ್ಮಜ್ಞಾನ, ಯಜ್ಞಗಳು, ಪುಣ್ಯವಿವಾಹಗಳು, ಸತತ ಅನ್ನದಾನ - ಈ ಏಳು ಗುಣಗಳು ಮಹಾಕುಲಗಳಲ್ಲಿ ಇರುತ್ತವೆ ಮತ್ತು ಅವುಗಳನ್ನು ನಡೆಸಿಕೊಂಡು ಬರುತ್ತವೆ. ಯಜ್ಞಗಳನ್ನು ಮಾಡದೇ ಇರುವುದರಿಂದ, ಪುಣ್ಯ ವಿವಾಹಗಳನ್ನು ಮಾಡದೇ ಇರುವುದರಿಂದ, ವೇದಗಳನ್ನು ತ್ಯಜಿಸುವುದರಿಂದ, ಧರ್ಮವನ್ನು ಅತಿಕ್ರಮಿಸಿ ಮಹಾಕುಲಗಳು ಅಧಮ ಕುಲಗಳಾಗುತ್ತವೆ. ಇನ್ನೊಬ್ಬರು ಇರಿಸಿದ ದ್ರವ್ಯವನ್ನು ವಿನಾಶಗೊಳಿಸುವುದರಿಂದ, ಬ್ರಾಹ್ಮಣರನ್ನು ಅತಿಕ್ರಮಿಸುವುದರಿಂದ, ಬ್ರಾಹ್ಮಣರನ್ನು ಗೌರವಿಸದೇ ಇರುವುದರಿಂದ ಮಹಾಕುಲಗಳು ಕೀಳು ಕುಲಗಳಾಗುತ್ತವೆ. ಬ್ರಾಹ್ಮಣರ ಕುರಿತು ಕೆಟ್ಟದ್ದನ್ನು ಮಾತನಾಡುವುದರಿಂದ, ಅವರೊಂದಿಗೆ ವಾದಿಸುವುದರಿಂದ ಮತ್ತು ನ್ಯಾಸವನ್ನು ಅಪಹರಿಸುವುದರಿಂದ ಮಹಾಕುಲಗಳು ಕೀಳು ಕುಲಗಳಾಗುತ್ತವೆ. ತುಂಬಾ ಜನರಿರುವ, ಸಂಪತ್ತಿರುವ ಕುಲಗಳು ಉತ್ತಮ ನಡತೆಯಿಲ್ಲದಿದ್ದರೆ ಹೀನ ಕುಲಗಳೆಂತೆನಿಸಿಕೊಳ್ಳುತ್ತವೆ. ಸ್ವಲ್ಪವೇ ಜನರಿದ್ದರೂ, ಅಲ್ಪವೇ ಧನವಿದ್ದರೂ ಉತ್ತಮ ನಡತೆಯುಳ್ಳ ಕುಲವು ಮಹಾ ಯಶಸ್ಸನ್ನು ಪಡೆಯುತ್ತದೆ. ನಮ್ಮ ಕುಲದಲ್ಲಿ ಯಾರೂ ವೈರವನ್ನು ಬೆಳೆಸದಿರಲಿ, ರಾಜರಿಗೆ ಅಮಾತ್ಯರಾಗದಿರಲಿ, ಪರರ ಸ್ವತ್ತನ್ನು ಅಪಹರಿಸದಿರಲಿ, ಮಿತ್ರದ್ರೋಹಿಗಳಾಗದಿರಲಿ, ಮೋಸ ಮತ್ತು ಅಪ್ರಾಮಾಣಿಕರಾಗದಿರಲಿ, ಮತ್ತು ಪಿತೃಗಳಿಗೆ, ದೇವತೆಗಳಿಗೆ ಮತ್ತು ಅತಿಥಿಗಳಿಗೆ ನೀಡುವ ಮೊದಲೇ ಊಟಮಾಡದಿರಲಿ. ನಮ್ಮಲ್ಲಿ ಯಾರು ಬ್ರಾಹ್ಮಣರನ್ನು ಕೊಲ್ಲುತ್ತಾನೋ, ಯಾರು ಬ್ರಾಹ್ಮಣರನ್ನು ದ್ವೇಷಿಸುತ್ತಾನೋ, ಕೃಷಿಯನ್ನು ಬೆಂಬಲಿಸುವುದಿಲ್ಲವೋ ಅವರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಬಾರದು. ಚಾಪೆ, ನೆಲ, ನೀರು ಮತ್ತು ಸೌಮ್ಯವಾದ ಮಾತು ಇವು ನಾಲ್ಕು ಉತ್ತಮ ಮನೆಗಳಲ್ಲಿ ಎಂದೂ ಇರುತ್ತವೆ. ಸೂಕ್ಷ್ಮವಾದರೂ ಹೇಗೆ ಗಂಧದ ಮರವು ಇತರ ಮರಗಳ ರೆಂಬೆಗಳ ಭಾರವನ್ನು ಹೊರಲು ಶಕ್ತವಾಗಿರುತ್ತದೆಯೋ ಹಾಗೆ ಮಹಾಕುಲಗಳು ಕೂಡ ಇತರ ಮನುಷ್ಯರ ಭಾರವನ್ನು ಹೊರಲು ಸಮರ್ಥರಾಗಿರುತ್ತವೆ. ಯಾರ ಕೋಪಕ್ಕೆ ಭಯಪಡುತ್ತೇವೋ ಅಥವಾ ಯಾರೊಂದಿಗೆ ಭಯದಿಂದ ನಡೆದುಕೊಳ್ಳಬೇಕಾಗುತ್ತದೆಯೋ ಅವನು ಮಿತ್ರನಲ್ಲ. ಆದರೆ ಯಾವ ಮಿತ್ರನ ಮೇಲೆ ತಂದೆಯ ಮೇಲಿಡುವ ವಿಶ್ವಾಸವನ್ನು ಇಡಬಹುದೋ ಅವನೇ ನಿಜವಾದ ಮಿತ್ರ. ಇತರ ಸಂಬಂಧಗಳು ಮಿತ್ರತ್ವಗಳಲ್ಲ. ರಕ್ತಸಂಬಂಧಿಯಲ್ಲದಿದ್ದರೂ ಯಾರು ಮಿತ್ರಭಾವದಿಂದ ವರ್ತಿಸುತ್ತಾನೋ ಅವನೇ ಬಂಧುವೂ, ಮಿತ್ರನೂ, ಗತಿಯೂ, ತತ್ಪರಾಯಣನೂ ಆಗಿರುತ್ತಾನೆ. ಚಂಚಲ ಚಿತ್ತವನ್ನುಳ್ಳ, ವೃದ್ಧರ ಸೇವೆ ಮಾಡಿರದ ಅಥವಾ ಧೃಢವಾದ ಮನಸ್ಸಿಲ್ಲದ ಪುರುಷನು ಮಿತ್ರರನ್ನು ಮಾಡಿಕೊಳ್ಳಲಾರ. ಚಂಚಲ ಚಿತ್ತವುಳ್ಳ, ತನ್ನಂತಿರದ, ಇಂದ್ರಿಯಗಳ ವಶಕ್ಕೆ ಸಿಲುಕಿದವನನ್ನು ಯಶಸ್ಸು, ಒಣಗಿದ ಸರೋವರವನ್ನು ಹಂಸಗಳು ಬಿಟ್ಟು ಹೋಗುವಂತೆ ತೊರೆಯುತ್ತದೆ. ಅಸಾಧುಗಳಂತೆ ವರ್ತಿಸುವ, ಅಕಸ್ಮಾತ್ತಾಗಿ ಕೋಪಿಸಿಕೊಳ್ಳುವ, ಕಾರಣವಿಲ್ಲದೇ ಸಂತೋಷಗೊಳ್ಳುವವರು ಮೋಡಗಳಂತೆ ಚಂಚಲರಾಗಿತ್ತಾರೆ. ಮಿತ್ರರಿಂದ ಸತ್ಕೃತರಾಗಿ ಕೃತಾರ್ಥರಾಗಿದ್ದರೂ ಕೃತಘ್ನರಾಗಿರುವವರನ್ನು ಸತ್ತನಂತರವೂ ಹದ್ದುಗಳು ತಿನ್ನುವುದಿಲ್ಲ. ಧನಿಕನಾಗಿರಲಿ ಅಥವಾ ಬಡವನಾಗಿರಲಿ ಮಿತ್ರರಿಗೆ ಸಹಾಯಮಾಡಬೇಕು. ಸಹಾಯವನ್ನು ಕೇಳದೇ ಮಿತ್ರರ ಸಾರ ಪಕ್ವತೆಯು ತಿಳಿಯುವುದಿಲ್ಲ. ಸಂತಾಪವು ರೂಪವನ್ನು ಕುಂದಿಸುತ್ತದೆ, ಸಂತಾಪವು ಬಲವನ್ನು ಕುಂದಿಸುತ್ತದೆ, ಸಂತಾಪದಿಂದ ಜ್ಞಾನವು ಕುಂದುತ್ತದೆ, ಮತ್ತು ಸಂತಾಪದಿಂದ ವ್ಯಾಧಿಯು ಹೆಚ್ಚಾಗುತ್ತದೆ. ಶೋಕವು ಬೇಕಾದುದನ್ನು ಪಡೆಯಲು ಸಹಾಯಮಾಡುವುದಿಲ್ಲ. ಶರೀರವನ್ನು ಒಣಗಿಸುತ್ತದೆ. ಇದರಿಂದ ಅಮಿತ್ರರು ಹರ್ಷಪಡುತ್ತಾರೆ. ಆದುದರಿಂದ ಮನಸ್ಸಿನಲ್ಲಿ ಶೋಕಿಸಬೇಡ. ನರರು ಸಾಯುತ್ತಾರೆ ಮತ್ತು ಪುನಃ ಹುಟ್ಟುತ್ತಾರೆ. ನರರು ಬೀಳುತ್ತಾರೆ ಮತ್ತು ಪುನಃ ಏಳುತ್ತಾರೆ. ನರರು ಕೇಳುತ್ತಾರೆ ಮತ್ತು ಪುನಃ ಕೊಡುತ್ತಾರೆ. ನರರು ಶೋಕಿಸುತ್ತಾರೆ ಮತ್ತು ಪುನಃ ಶೋಕವನ್ನು ಕೊಡುತ್ತಾರೆ. ಸುಖ ಮತ್ತು ದುಃಖ, ಇರುವುದು ಮತ್ತು ಇಲ್ಲದಿರುವುದು (ಭಾವ ಮತ್ತು ಅಭಾವ), ಲಾಭ-ನಷ್ಟ ಮತ್ತು ಮರಣ-ಜೀವನ ಇವೆಲ್ಲವೂ ಒಂದರ ನಂತರ ಇನ್ನೊಂದರಂತೆ ಬರುತ್ತಲೇ ಇರುತ್ತವೆ. ಆದುದರಿಂದ ಧೀರನಾದವನು ಹರ್ಷಪಡುವುದೂ ಇಲ್ಲ, ಶೋಕಿಸುವುದೂ ಇಲ್ಲ. ಈ ಆರು ಇಂದ್ರಿಯಗಳು ಯಾವಾಗಲೂ ಚಂಚಲ. ಛಿದ್ರಗಳಿರುವ ಕೊಡದಿಂದ ನೀರು ಹರಿದು ಹೋಗುವಂತೆ, ಇವುಗಳು ಎಲ್ಲೆಲ್ಲಿ ನಡೆಯುತ್ತವೆಯೋ ಅಲ್ಲಲ್ಲಿಗೆ ಬುದ್ಧಿಯು ಹರಿದು ಹೋಗುತ್ತದೆ.”
ಧೃತರಾಷ್ಟ್ರನು ಹೇಳಿದನು: “ಉರಿಯುತ್ತಿರುವ ಅಗ್ನಿ ಜ್ವಾಲೆಯಂತಿರುವ ರಾಜ ಯುಧಿಷ್ಠಿರನಿಗೆ ನಾನು ಮೋಸಮಾಡಿದೆ. ಅವನು ನನ್ನ ಮಂದ ಪುತ್ರರನ್ನು ಯುದ್ಧದಲ್ಲಿ ಮುಗಿಸಿಬಿಡುತ್ತಾನೆ. ಇವೆಲ್ಲವೂ ನನ್ನನ್ನು ನಿತ್ಯವೂ ಉದ್ವಿಗ್ನಗೊಳಿಸುತ್ತಿದೆ, ಈ ಮನಸ್ಸು ನಿತ್ಯವೂ ಉದ್ವಿಗ್ನವಾಗಿರುತ್ತದೆ. ಮಹಾಮತೇ! ನನ್ನನ್ನು ಅನುದ್ವಿಗ್ನನನ್ನಾಗಿ ಮಾಡಬಲ್ಲ ಮಾತುಗಳನ್ನು ಹೇಳು.”
ವಿದುರನು ಹೇಳಿದನು: “ಅನಘ! ವಿದ್ಯೆ-ತಪಸ್ಸುಗಳಲ್ಲದೇ, ಇಂದ್ರಿಯ ನಿಗ್ರಹವಲ್ಲದೇ, ಲೋಭವನ್ನು ತ್ಯಜಿಸುವುದಲ್ಲದೇ ಬೇರೆ ಯಾವುದರಲ್ಲಿಯೂ ನಿನಗೆ ಶಾಂತಿಯು ಕಾಣುತ್ತಿಲ್ಲ. ಬುದ್ಧಿಯಿಂದ ಭಯವು ನಾಶವಾಗುತ್ತದೆ, ತಪಸ್ಸಿನಿಂದ ಮಹತ್ತರವಾದುದನ್ನೂ ಸಾಧಿಸಬಹುದು, ಗುರುಶುಶ್ರೂಷೆಯಿಂದ ಜ್ಞಾನ ಮತ್ತು ತ್ಯಾಗದಿಂದ ಶಾಂತಿಯನ್ನು ಗಳಿಸಬಹುದು. ಸ್ವ-ಅಧ್ಯಯನ, ಧರ್ಮಯುಕ್ತವಾದ ಯುದ್ಧ, ಚೆನ್ನಾಗಿ ಮಾಡಿದ ಕೆಲಸ, ಉತ್ತಮವಾಗಿ ತಪಿಸಿದ ತಪಸ್ಸು ಅಂತ್ಯದಲ್ಲಿ ಸುಖವನ್ನು ನೀಡುತ್ತವೆ. ಉತ್ತಮ ಹಾಸಿಗೆಗಳಿದ್ದರೂ ಸುಖನಿದ್ರೆಯನ್ನು ಪಡೆಯದ ಮತ್ತು ಬಂಧುಗಳೊಂದಿಗೆ ಜಗಳವಾಡುವವರು ಸ್ತ್ರೀಯರಿಂದ ರತಿಸುಖವನ್ನು ಪಡೆಯುವುದಿಲ್ಲ ಮತ್ತು ಸೂತ-ಮಾಗಧರಿಂದ ಸ್ತುತಿಸಲ್ಪಟ್ಟರೂ ಸಂತೋಷವನ್ನು ಹೊಂದುವುದಿಲ್ಲ. ಅಂಥವರು ಧರ್ಮದಲ್ಲಿ ನಡೆಯಲಾರರು. ಅಂಥವರು ಸುಖವನ್ನು ಹೊಂದುವುದಿಲ್ಲ. ಅಂಥವರು ಗೌರವ-ಮಾನಗಳನ್ನು ಪಡೆಯುವುದಿಲ್ಲ. ಮತ್ತು ಅಂಥವರಿಗೆ ಶಾಂತಿಯು ಇಷ್ಟವಾಗುವುದಿಲ್ಲ. ಅವರಿಗೆ ಒಳ್ಳೆಯ ಮಾತುಗಳು ಇಷ್ಟವಾಗುವುದಿಲ್ಲ. ಅವರಿಗೆ ಇಲ್ಲದುದನ್ನು ಪಡೆಯಲೂ ಇದ್ದುದನ್ನು ಉಳಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಅಂಥವರಿಗೆ ವಿನಾಶವೊಂದನ್ನು ಬಿಟ್ಟರೆ ಬೇರೆ ಏನೂ ಗತಿಯು ತಿಳಿಯುವುದಿಲ್ಲ. ಗೋವುಗಳಲ್ಲಿ ಸಂಪನ್ನತೆಯು ಸಂಭವವಿರುವಂತೆ, ಬ್ರಾಹ್ಮಣರಲ್ಲಿ ತಪಸ್ಸು ಸಂಭವವಿರುವಂತೆ, ಸ್ತ್ರೀಯರಲ್ಲಿ ಚಾಪಲ್ಯವು ಸಂಭವವಿರುವಂತೆ, ಬಂಧುಗಳಿಂದ ಭಯವು ಸಂಭವವಿರುತ್ತದೆ. ಒಂದೇ ಅಳತೆಯ ಸಣ್ಣ ಸಣ್ಣ ದಾರಗಳನ್ನು ಒಟ್ಟುಸೇರಿಸಿದ ಜಾಲವು ಬಹಳಷ್ಟು ಭಾರದ, ವೇಗವಾಗಿ ಹೋಗಬಲ್ಲ ವಸ್ತುವನ್ನು ಹೊರಬಲ್ಲದು. ಹಾಗೆಯೇ ಕಟ್ಟಿಗೆಗಳು ಒಂದೊಂದಾಗಿದ್ದರೆ ಕೇವಲ ಹೊಗೆಯನ್ನು ನೀಡುತ್ತವೆ. ಆದರೆ ಒಟ್ಟಾಗಿದ್ದರೆ ಚೆನ್ನಾಗಿ ಉರಿಯುತ್ತವೆ. ಬಂಧುಗಳು ಹಾಗೆ. ಬ್ರಾಹ್ಮಣರನ್ನು, ಸ್ತ್ರೀಯರನ್ನು, ಬಂಧುಗಳನ್ನು ಮತ್ತು ಗೋವುಗಳನ್ನು ಕಾಡಿಸುವವರು ಗಳಿತ ಹಣ್ಣಿನಂತೆ ರೆಂಬೆಯಿಂದ ಬೀಳುತ್ತಾರೆ. ಒಂಟಿಯಾಗಿರುವ ಮರವು, ಎಷ್ಟೇ ದೊಡ್ಡದಾಗಿದ್ದರೂ, ಬಲಶಾಲಿಯಾಗಿದ್ದರೂ, ಚೆನ್ನಾಗಿ ಬೇರೂರಿದ್ದರೂ, ಭಿರುಗಾಳಿಗೆ ಸಿಲುಕಿ ಬೇಗ ರೆಂಬೆ-ಕಾಂಡಗಳು ಮುರಿದು ಕೆಳಗುರುಳುತ್ತದೆ. ಆದರೆ ಒಟ್ಟಿಗೆ ಬೆಳೆದಿರುವ, ಒಟ್ಟಿಗೇ ಬೇರೂರಿರುವ ಮರಗಳು, ಪರಸ್ಪರರ ಬೆಂಬಲದಿಂದ, ಅಂಥಹ ಶೀಘ್ರವಾಗಿ ಬೀಸುವ ಗಾಳಿಗಳನ್ನು ಸಹಿಸಿಕೊಳ್ಳಬಲ್ಲವು. ಹೀಗೆ ಒಂಟಿಯಾಗಿರುವ ಮನುಷ್ಯನನ್ನು, ಎಷ್ಟೇ ಗುಣಗಳಿಂದ ಕೂಡಿದ್ದರೂ, ಒಂಟಿಮರವನ್ನು ಗಾಳಿಯು ಉರುಳಿಸಬಹುದಂತೆ ಉರುಳಿಸಬಹುದು ಎಂದು ಶತ್ರುಗಳು ತಿಳಿದುಕೊಳ್ಳುತ್ತಾರೆ. ಬಂಧುಗಳು ಅನ್ಯೋನ್ಯರನ್ನು ಅವಲಂಬಿಸಿಕೊಂಡು ಅನ್ಯೋನ್ಯರಿಗೆ ಬೆಂಬಲವನ್ನು ನೀಡುತ್ತಾ ಸರೋವರದಲ್ಲಿರುವ ಕಮಲಗಳಂತೆ ಬೆಳೆಯುತ್ತಾರೆ. ಇವರು ಅವಧ್ಯರು: ಬ್ರಾಹ್ಮಣರು, ಗೋವುಗಳು, ಸ್ತ್ರೀಯರು, ಬಾಲಕರು, ಸಂಬಂಧಿಗಳು, ಯಾರ ಅನ್ನವನ್ನು ಉಂಡಿದ್ದೇವೋ ಅವರು ಮತ್ತು ಶರಣಾಗತರಾದವರು. ಕೆಲವು ಮನುಷ್ಯರು ಧನವಂತರಾಗಿದ್ದರೂ ಅನಾರೋಗ್ಯದಿಂದಾಗ ಉತ್ತಮ ಗುಣದ ಜೀವನವನ್ನು ಬದುಕಲಿಕ್ಕಾಗುವುದಿಲ್ಲ. ಏಕೆಂದರೆ, ರೋಗಿಯು ಸತ್ತಹಾಗೆಯೇ. ಸಿಟ್ಟು ವ್ಯಾಧಿಯಿಂದ ಹುಟ್ಟಿರದ, ಕಹಿಯಾದ ತಲೆನೋವು. ಪಾಪಕ್ಕೆ ಅಂಟಿಕೊಂಡಿರುತ್ತದೆ. ಖಾರ, ತೀಕ್ಷ್ಣ ಮತ್ತು ಉಗ್ರವಾದುದು. ಇದನ್ನು ಕುಡಿದು ಸಂತರೂ ಅಸಂತರಾಗುತ್ತಾರೆ. ಅದನ್ನು ನುಂಗಿ ಶಾಂತನಾಗು. ರೋಗದಿಂದ ಭಾದಿತರಾದವರು ಫಲಗಳನ್ನು ಸವಿಯುವುದಿಲ್ಲ. ವಿಷಯ ಭೋಗಗಳಲ್ಲಿರುವ ಸಾರವನ್ನು ಸವಿಯುವುದಿಲ್ಲ. ರೋಗಿಗಳು ನಿತ್ಯವೂ ದುಃಖಿಗಳಾಗಿರುತ್ತಾರೆ. ಧನ-ಭೋಗಗಳ ಸುಖವನ್ನೇ ತಿಳಿಯದವರಾಗಿರುತ್ತಾರೆ.
“ಹಿಂದೆ ದ್ಯೂತದಲ್ಲಿ ದ್ರೌಪದಿಯನ್ನು ಗೆದ್ದಾಗ ನಾನು ನಿನಗೆ ಹೇಳಿದ್ದೆ: ದುರ್ಯೋಧನನನ್ನು ನಿಲ್ಲಿಸು. ಮೋಸದ ಜೂಜನ್ನು ಪಂಡಿತರು ತಿರಸ್ಕರಿಸುತ್ತಾರೆ. ಆದರೆ ನೀನು ಅದನ್ನು ಮಾಡಲಿಲ್ಲ. ಮೃದುತ್ವವನ್ನು ವಿರೋಧಿಸುವುದು ಬಲವಲ್ಲ. ಆದರೆ ಅವುಗಳ ಮಿಶ್ರಣವು ಉತ್ತಮ ಧರ್ಮ. ಅದನ್ನು ಪಾಲಿಸಬೇಕು. ಕ್ರೂರತೆಯಿಂದ ಒಟ್ಟುಗೂಡಿಸಿದ ಸಂಪತ್ತು ನಾಶವಾಗುವಂಥಹುದು. ಆದರೆ ಮೃದುತ್ವ ಮತ್ತು ಪ್ರೌಢತೆಗಳಿಂದ ಒಟ್ಟುಗೂಡಿಸಿದ ಧನವು ಮಕ್ಕಳು-ಮೊಮ್ಮಕ್ಕಳಿಗೂ ಬರುತ್ತದೆ. ಧಾರ್ತರಾಷ್ಟ್ರರು ಪಾಂಡವರನ್ನು ಪಾಲಿಸಲಿ. ಪಾಂಡುವಿನ ಮಕ್ಕಳು ನಿನ್ನ ಮಕ್ಕಳನ್ನು ಪಾಲಿಸಲಿ. ಒಂದೇ ಶತ್ರು-ಮಿತ್ರರನ್ನು ಹೊಂದಿ, ಒಂದೇ ಯೋಚನೆಯಿಂದ ಕುರುಗಳು ಸಮೃದ್ಧರಾಗಿ ಸುಖಿಗಳಾಗಿರಲಿ. ಇಂದು ನೀನು ಕೌರವರ ರಕ್ಷಕ. ಕುರುಕುಲವು ನಿನ್ನ ಅಧೀನದಲ್ಲಿದೆ. ನಿನ್ನ ಕೀರ್ತಿಯನ್ನೂ ರಕ್ಷಿಸಿಕೊಂಡು ವನವಾಸದಿಂದ ಸೋತುಹೋಗಿರುವ ಬಾಲಕ ಪಾರ್ಥರನ್ನು ಪಾಲಿಸು. ಪಾಂಡುಪುತ್ರರೊಂದಿಗೆ ನೀನು ಸಂಧಿಯನ್ನು ಮಾಡಿಕೋ. ಶತ್ರುಗಳಿಗೆ ನಿನ್ನ ದರ್ಬಲತೆಯನ್ನು ತೋರಿಸಬೇಡ. ಅವರೆಲ್ಲರೂ ಸತ್ಯದಲ್ಲಿ ನೆಲೆಸಿದ್ದಾರೆ. ನೀನು ದುರ್ಯೋಧನನನ್ನು ನಿಲ್ಲಿಸು.
“ಸ್ವಾಯಂಭು ಮನುವು ಈ ಹದಿನೇಳು ತರಹದ ಪುರುಷರು ಆಕಾಶವನ್ನು ಮುಷ್ಟಿಯಿಂದ ಹೊಡೆಯುವವರಂತೆ, ಕಾಮನಬಿಲ್ಲನ್ನು ಬಗ್ಗಿಸಲು ಪ್ರಯತ್ನಿಸುವವರಂತೆ, ಮತ್ತು ಸೂರ್ಯನ ಕಿರಣಗಳನ್ನು ಹಿಡಿಯಲು ಪ್ರಯತ್ನಿಸುವವರಂತೆ ಎಂದು ಹೇಳಿದ್ದಾನೆ: ನಿಯಂತ್ರಿಸಲು ಅಸಾಧ್ಯನಾದವನನ್ನು ನಿಯಂತ್ರಿಸಲು ಪ್ರಯತ್ನಿಸುವವನು, ಸ್ವಲ್ಪದರಲ್ಲಿಯೇ ತೃಪ್ತಿಗೊಳ್ಳುವವನು, ದ್ವೇಷಿಸುವವರನ್ನು ವಿನಯಪೂರ್ವಕವಾಗಿ ಮೆಚ್ಚಿಸುವವನು, ಸ್ತ್ರೀಯರ ದೌರ್ಬಲ್ಯತೆಯನ್ನು ಕಡಿಮೆಮಾಡಲು ಪ್ರಯತ್ನಿಸುವವನು, ಯಾರನ್ನು ಕೇಳಬಾರದೋ ಅವನಿಂದ ದಾನವನ್ನು ಕೇಳುವವನು, ಏನು ಮಾಡಿದರೂ ಅಭಿಮಾನದಿಂದ ಹೇಳಿಕೊಳ್ಳುವವನು, ಉತ್ತಮ ಕುಲದಲ್ಲಿ ಜನಿಸಿದ್ದರೂ ಅತ್ಯಾಚಾರದಲ್ಲಿ ತೊಡಗಿರುವವನು, ಅಬಲನಾಗಿದ್ದರೂ ನಿತ್ಯವೂ ಬಲಶಾಲಿಗಳೊಂದಿಗೆ ವೈರವನ್ನು ಬೆಳೆಸುವವನು, ಶ್ರದ್ಧೆಯಿಲ್ಲದೇ ಕೇಳುತ್ತಿರುವವನಿಗೆ ಹೇಳುವವನು, ಆಸೆಪಡಬಾರದುದನ್ನು ಆಸೆಪಡುವವನು, ಮಾವನಾಗಿದ್ದು ಸೊಸೆಯ ಹಾಸ್ಯವನ್ನು ಮಾಡುವವನು, ಸೊಸೆಯಿಂದ ಮನಸ್ಸಿನ ಕಾಮವನ್ನು ಪೂರೈಸಿಕೊಳ್ಳುವವನು, ಬೇರೆಯವರ ಕ್ಷೇತ್ರದಲ್ಲಿ ಬೀಜವನ್ನು ಬಿತ್ತುವವನು, ತನ್ನ ಪತ್ನಿಯ ನಡತೆಯನ್ನು ದೂರುವವನು, ಬೇರೆಯವರಿಂದ ತೆಗೆದುಕೊಂಡು ಮರೆತುಬಿಡುವವನು, ಕೇಳಿದವನಿಗೆ ದಾನವನ್ನಿತ್ತು ಸದಾ ಅದನ್ನೇ ಹೇಳಿಕೊಳ್ಳುವವನು, ಸುಳ್ಳನ್ನು ಸತ್ಯವಾಗಿಸಲು ಪ್ರಯತ್ನಿಸುವವನು. ಮನುಷ್ಯನು ತನ್ನೊಂದಿಗೆ ಹೇಗೆ ನಡೆದುಕೊಳ್ಳುತ್ತಾನೋ ಹಾಗೆ ಇತರರೊಂದಿಗೆ ನಡೆದುಕೊಳ್ಳುವುದು ಧರ್ಮ. ಮೋಸಗಾರನೊಂದಿಗೆ ಮೋಸದಿಂದ ನಡೆದುಕೊಳ್ಳಬಹುದು. ಆದರೆ ಸಾಧುಗಳೊಂದಿಗೆ ಸಧ್ವಾಚಾರದಲ್ಲಿ ನಡೆದುಕೊಳ್ಳಬೇಕು.”
ಧೃತರಾಷ್ಟ್ರನು ಹೇಳಿದನು: “ಮನುಷ್ಯನ ಆಯಸ್ಸು ನೂರುವರ್ಷಗಳೆಂದು ವೇದಗಳಲ್ಲಿ ಹೇಳಿದ್ದಾರೆ. ಆದರೆ ಎಲ್ಲರೂ ಅಷ್ಟು ವರ್ಷಗಳನ್ನು ತಲುಪುವುದಿಲ್ಲ. ಇದು ಯಾವ ಕಾರಣಕ್ಕಾಗಿ?”
ವಿದುರನು ಹೇಳಿದನು: “ಅತಿ ವಾದ, ಅತಿ ಮಾನ, ಅತಿಯಾದ ಆಹಾರ, ಕ್ರೋಧ, ಭೋಗ, ಮತ್ತು ಮಿತ್ರದ್ರೋಹ ಈ ಆರು ದೇಹಿಗಳ ಆಯಸ್ಸನ್ನು ಕತ್ತರಿಸುವ ತೀಕ್ಷ್ಣ ಖಡ್ಗಗಳು. ಇವು ಮಾನವನನ್ನು ಮೃತ್ಯುವಿನಿಂದ ಹೊಡೆಯುತ್ತವೆ ಎಂದು ತಿಳಿ. ವಿಶ್ವಾಸದಿಂದ ತನ್ನಲ್ಲಿಟ್ಟಿರುವ ಪರರ ಪತ್ನಿಯನ್ನು ಬಳಸುವವನು, ಗುರುವಿನ ಹಾಸಿಗೆಯನ್ನು ಉಲ್ಲಂಘಿಸುವವನು, ಶೂದ್ರಳನ್ನ್ನು ಮದುವೆಯಾಗುವ ಅಥವಾ ಕುಡಿಯುವ ಬ್ರಾಹ್ಮಣ, ಶರಣಾಗತರಾದವರನ್ನು ಕೊಲ್ಲುವವನು ಇವರೆಲ್ಲರೂ ಬ್ರಾಹ್ಮಣಹಂತಕರ ಸಮರು. ಇವರ ಜೊತೆಸೇರಿದರೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು ಎಂದು ಶ್ರುತಿಗಳು ಹೇಳುತ್ತವೆ. ವಿವೇಕಿಗಳ ಮಾತುಗಳನ್ನು ಸ್ವೀಕರಿಸುವ, ಪಿತೃ-ದೇವತೆ-ಅತಿಥಿಗಳಿಗೆ ಕೊಟ್ಟು ಉಳಿದ ಆಹಾರವನ್ನು ಸೇವಿಸುವ, ಯಾರನ್ನೂ ಹಿಂಸಿಸದ, ಯಾರನ್ನೂ ದ್ವೇಷಿಸದ, ಕೃತಜ್ಞ, ಸತ್ಯವಂತ, ಮತ್ತು ಮೃದು, ವಿದ್ವಾಂಸನು ಸ್ವರ್ಗವನ್ನು ಸೇರುತ್ತಾನೆ. ಸತತವೂ ಪ್ರಿಯವಾದುದನ್ನೇ ಹೇಳುವ ಪುರುಷರು ಬಹಳ ದೊರೆಯುತ್ತಾರೆ. ಆದರೆ ಅಪ್ರಿಯವಾಗಿದ್ದರೂ ಔಷಧಯುಕ್ತವಾದುದನ್ನು ಹೇಳುವವರೂ ಮತ್ತು ಕೇಳುವವರೂ ದುರ್ಲಭ. ಧರ್ಮವನ್ನು ಆಶ್ರಯಿಸಿ ಪ್ರಿಯ-ಅಪ್ರಿಯಗಳನ್ನು ಗಮನಿಸದೇ ಅಪ್ರಿಯವಾದರೂ ಔಷಧಯುಕ್ತವಾದುದನ್ನು ಹೇಳುವ ಸೇವಕನೇ ರಾಜನಿಗೆ ಸಹಾಯ ಮಾಡುವವನು. ಕುಲಕ್ಕಾಗಿ ವ್ಯಕ್ತಿಯನ್ನು ತ್ಯಜಿಸಬೇಕು; ಗ್ರಾಮಕ್ಕಾಗಿ ಕುಲವನ್ನು ತ್ಯಜಿಸಬೇಕು, ಸಮಾಜಕ್ಕಾಗಿ ಗ್ರಾಮವನ್ನು ತ್ಯಜಿಸಬೇಕು ಮತ್ತು ಆತ್ಮಕ್ಕಾಗಿ ಪೃಥ್ವಿಯನ್ನೇ ತ್ಯಜಿಸಬೇಕು. ಆಪತ್ತು ಬಂದರೆ ಬೇಕೆಂದು ಧನವನ್ನು ರಕ್ಷಿಸಬೇಕು, ಧನದಿಂದ ಪತ್ನಿಯನ್ನು ರಕ್ಷಿಸಬೇಕು. ಪತ್ನಿ ಮತ್ತು ಧನಗಳೆರಡರಿಂದಲೂ ಆತ್ಮನನ್ನು ಸತತವಾಗಿ ರಕ್ಷಿಸಿಕೊಳ್ಳಬೇಕು.
“ದ್ಯೂತದ ಸಮಯದಲ್ಲಿ ಕೂಡ ಅದು ಸರಿಯಲ್ಲವೆಂದು ನಾನು ಹೇಳಿದ್ದೆ. ಆದರೆ ರೋಗಿಯು ಔಷಧಿಯು ಒಳ್ಳೆಯದಾದರೂ ಬೇಡವೆನ್ನುವಂತೆ ನಿನಗೆ ಅದು ಹಿಡಿಸಲಿಲ್ಲ. ಕಾಗೆಗಳಂತಿರುವ ಧಾರ್ತರಾಷ್ಟ್ರರನ್ನು ಬಳಸಿ ನವಿಲುಗಳಂತಿರುವ ಪಾಂಡವರನ್ನು ಗೆದ್ದು ಹೊರಗೋಡಿಸಿದ್ದೀಯೆ. ಸಿಂಹಗಳನ್ನು ತೊರೆದು ನರಿಗಳನ್ನು ಒಟ್ಟುಗೂಡಿಸಿಕೊಂಡು ನೀನು ಕಾಲವು ಪ್ರಾಪ್ತವಾದಾಗ ಶೋಕಿಸುತ್ತೀಯೆ! ಯಾರು ಎಲ್ಲ ಕಾಲದಲ್ಲಿಯೂ ಸಿಟ್ಟಿಗೇಳುವುದಿಲ್ಲವೋ ಅಂಥಹ ಒಡೆಯನ ಹಿತದಲ್ಲಿ ಸೇವಕರು ನಿರತರಾಗಿರುತ್ತಾರೆ. ಅಂಥಹ ಒಡೆಯನ ಮೇಲೆ ಸೇವಕರು ವಿಶ್ವಾಸವನ್ನಿಡುತ್ತಾರೆ ಮತ್ತು ಆಪತ್ತುಗಳು ಬಂದರೂ ಅವರನನ್ನು ಬಿಟ್ಟು ಹೋಗುವುದಿಲ್ಲ. ಸೇವಕರ ಸಂಬಳವನ್ನು ನಿಲ್ಲಿಸಿ ಹೊರಗಿನ ಜನರನ್ನು ಒಟ್ಟುಗೂಡಿಸಲು ಪ್ರಯತ್ನಿಸಬಾರದು. ಏಕೆಂದರೆ ಮೊದಲು ಜೊತೆಗಿದ್ದ ಸೇವಕರು ಸುಖವಿಲ್ಲದಿರುವಾಗ ಬಿಟ್ಟುಹೋಗುತ್ತಾರೆ. ಮಾಡಬೇಕಾದುದೆಲ್ಲವನ್ನೂ ಮೊದಲೇ ಆಲೋಚಿಸಿ, ಆದಾಯ ಖರ್ಚುಗಳಿಗೆ ಅನುರೂಪವಾದ ವೃತ್ತಿಯನ್ನು ಆರಿಸಿಕೊಂಡು, ಅನುರೂಪರಾದ ಸಹಾಯಕರನ್ನು ಒಟ್ಟುಗೂಡಿಸಿಕೊಳ್ಳಬೇಕು. ಏಕೆಂದರೆ ದುಷ್ಕರವಾದವುಗಳನ್ನು ಸಾಧಿಸಲು ಸಹಾಯಕರು ಬೇಕು. ಒಡೆಯನ ಅಭಿಪ್ರಾಯವನ್ನು ತಿಳಿದುಕೊಂಡು ಆಯಾಸಗೊಳ್ಳದೇ ಎಲ್ಲ ಕೆಲಸಗಳನ್ನೂ ಮಾಡಿಕೊಡುವ, ಹಿತವಾದ ಮಾತುಗಳನ್ನಾಡುವ, ಅನುರಕ್ತನಾಗಿರುವ, ಆರ್ಯನಾಗಿರುವ, ಮತ್ತು ತನ್ನ ಶಕ್ತಿಯನ್ನು ತಿಳಿದುಕೊಂಡಿರುವ ಸೇವಕನನ್ನು ತನ್ನ ಹಾಗೆಯೇ ಅನುಕಂಪದಿಂದ ನೋಡಿಕೊಳ್ಳಬೇಕು. ಹೇಳಿದರೂ ಗಮನಿಸದ, ನೀಡಿದ ಆಜ್ಞೆಗೆ ಪ್ರತ್ಯುತ್ತರ ನೀಡುವ, ತನಗೇ ತಿಳಿದಿದೆ ಎಂದು ತಿಳಿದು ತಿರುಗಿ ವಾದಿಸುವ ಸೇವಕನನ್ನು ತಡಮಾಡದೇ ತೆಗೆದು ಹಾಕಬೇಕು. ದೂತನು ಈ ಎಂಟು ಗುಣಗಳನ್ನು ಹೊಂದಿರಬೇಕೆಂದು ಹೇಳುತ್ತಾರೆ: ಅಕಳಂಕನಾಗಿರಬೇಕು, ದುರ್ಬಲನಾಗಿರಬಾರದು, ನಿಧಾನಿಯಾಗಿರಬಾರದು, ಅನುಕಂಪನಾಗಿರಬೇಕು, ಸುಸಂಕೃತನಾಗಿರಬೇಕು, ಆರ್ಯರ ಮಾನನೀಯನಾಗಿರಬೇಕು, ಅರೋಗಿಯಾಗಿರಬೇಕು, ಮತ್ತು ಮಾತಿನಲ್ಲಿ ಉದಾರಿಯಾಗಿರಬೇಕು. ವಿಕಾಲದಲ್ಲಿ ಪರರ ಮನೆಗೆ ಹೋಗುವ, ರಾತ್ರಿವೇಳೆಯಲ್ಲಿ ಚೌಕದಲ್ಲಿ ಅಡಗಿರುವ, ಮತ್ತು ರಾಜಕನ್ಯೆಯನ್ನು ಬಯಸುವ ವಿಶ್ವಾಸವನ್ನು ಬದ್ಧಿಯಿದ್ದ ಯಾರೂ ತಳೆಯುವುದಿಲ್ಲ. ವೇಷಮರೆಸಿಕೊಂಡವರು, ಯಾರ ಸಲಹೆಯು ಮಿಶ್ರಿತವಾಗಿದೆಯೋ, ಯಾರು ಕೆಟ್ಟವರ ಸಹವಾಸದಲ್ಲಿದ್ದಾರೋ, ಅವರಿಗೆ ವಿರುದ್ಧವಾಗಿ ಮಾತನಾಡಬಾರದು. ಅವರಲ್ಲಿ ವಿಶ್ವಾಸವಿಲ್ಲವೆಂದು ಹೇಳಬಾರದು. ಆದರೆ ಬೇರೆ ಏನಾದರೂ ಕಾರಣವನ್ನು ಅಥವಾ ಸನ್ನಿವೇಶವನ್ನು ಹೇಳಬೇಕು. ಇವರೊಂದಿಗೆ ವ್ಯವಹಾರವು ವರ್ಜನೀಯ: ಕರುಣಿ, ರಾಜ, ವೇಶ್ಯೆ, ರಾಜಸೇವಕ, ಮಗ, ಸಹೋದರ, ಬಾಲಕ ಮಗನಿರುವ ವಿಧವೆ, ಸೈನಿಕ, ಮತ್ತು ತುಂಬಾ ಅನುಯಾಯಿಗಳಿರುವವರು. ಸ್ನಾನ ಮಾಡುವವನನ್ನು ಈ ಹತ್ತು ಗುಣಗಳು ಅಲಂಕರಿಸುತ್ತವೆ: ಬಲ, ರೂಪ, ಸ್ವರ-ವರ್ಣ ಪ್ರಶುದ್ಧಿ, ಸ್ಪರ್ಷ-ಗಂಧಗಳ ವಿಶುದ್ಧತೆ, ಅದೃಷ್ಟ, ಯೌವನ, ಮತ್ತು ಸುಂದರ ಸ್ತ್ರೀಯರು. ಕಡಿಮೆ ಊಟಮಾಡುವವನಿಗೆ ಈ ಆರು ಗುಣಗಳು ಇರುತ್ತವೆ: ಆರೋಗ್ಯ, ಆಯುಷ್ಯ, ಸುಖ, ಬಲ, ಅವನಲ್ಲಿ ಹುಟ್ಟುವವರಿಗೂ ರೋಗಗಳಿರುವುದಿಲ್ಲ ಮತ್ತು ಅವನನ್ನು ಯಾರೂ ತಿಂಡಿಪೋತನೆಂದು ದೂರುವುದಿಲ್ಲ. ಸೋಮಾರಿಯಾದವನನ್ನು, ತುಂಬಾ ಊಟಮಾಡುವವನನ್ನು, ಬಹುಮಂದಿಗೆ ಇಷ್ಟವಾಗಿರದವನನ್ನು, ಮೋಸಗಾರನನ್ನು, ಸುಳ್ಳುಹೇಳುವವನನ್ನು, ದೇಶ-ಕಾಲಗಳ ಜ್ಞಾನವಿಲ್ಲದಿರುವವನ್ನು ಮನೆಯಲ್ಲಿ ವಾಸಕ್ಕೆ ಇಟ್ಟುಕೊಳ್ಳಬಾರದು. ತುಂಬಾ ಕಷ್ಟದಲ್ಲಿದ್ದರೂ ಇವರ ಸಹಾಯವನ್ನು ಕೇಳಬಾರದು: ಜಿಪುಣ, ಇನ್ನೊಬ್ಬರಿಗೆ ಅಪವಾದ ಹೊರೆಸುವವನು, ವಿದ್ಯೆಯಿಲ್ಲದವನು, ನಿಷ್ಠೂರಿ, ವೈರವನ್ನು ಬೆಳೆಸುವವನು, ಮತ್ತು ಕೃತಘ್ನ. ಈ ಆರು ಪ್ರಕಾರದ ನರಾಧಮರ ಸೇವೆ ಮಾಡಬಾರದು: ಸಂಕ್ಲಿಷ್ಟಕರ್ಮಿಗಳು, ಅತಿಪ್ರವಾದಿಗಳು, ನಿತ್ಯವೂ ಸುಳ್ಳುಹೇಳುವವರು, ದೃಢಭಕ್ತಿಯಿಲ್ಲದವರು, ವಿಕೃಷ್ಟರಾಗಿಗಳು, ಮತ್ತು ಬಹು ಸೊಕ್ಕಿನವರು. ಲಾಭವು ಸಹಾಯವನ್ನು ಆಧರಿಸಿದೆ; ಸಹಾಯವು ಲಾಭವನ್ನು ಆಧರಿಸಿದೆ. ಅವೆರಡೂ ಅನ್ಯೋನ್ಯರನ್ನು ಅವಲಂಬಿಸಿವೆ, ಮತ್ತು ಒಂದಿಲ್ಲದೇ ಇನ್ನೊಂದು ಸಿದ್ಧಿಯಾಗುವುದಿಲ್ಲ. ಪುತ್ರರಿಗೆ ಜನ್ಮವಿತ್ತು, ಅವರ ಋಣವನ್ನು ಪೂರೈಸಿ, ಅವರನ್ನು ಯಾವುದಾದರೂ ವೃತ್ತಿಯಲ್ಲಿ ತೊಡಗಿಸಿ, ಎಲ್ಲ ಕುಮಾರಿಯರನ್ನು ಉತ್ತಮ ಸ್ಥಾನಗಳಿಗೆ ಕೊಟ್ಟು, ಅರಣ್ಯಕ್ಕೆ ಹೋಗಿ ಮುನಿಗಳಂತೆ ವಾಸಿಸಬೇಕು. ಸರ್ವಭೂತಗಳಿಗೆ ಯಾವುದು ಹಿತವೋ ಮತ್ತು ತನಗೆ ಯಾವುದು ಸುಖವನ್ನು ತರುತ್ತದೆಯೋ ಅದನ್ನು ರಾಜನು ಕೈಗೊಳ್ಳಬೇಕು. ಏಕೆಂದರೆ, ಅದೇ ಧರ್ಮಾರ್ಥಸಿದ್ಧಿಗೆ ಮೂಲ. ಯಾರಲ್ಲಿ ಬುದ್ಧಿ, ಪ್ರಭಾವ, ತೇಜಸ್ಸು, ಸತ್ಯ, ಏಳಿಗೆ, ದುಡಿಮೆಗಳಿವೆಯೋ ಅವನಿಗೆ ವೃತ್ತಿಯ ಕುರಿತು ಯಾವ ಭಯು?
“ಯಾರಿಂದ ದೇವತೆಗಳೂ ಶಕ್ರನೂ ಹೆದರುತ್ತಾರೋ ಅಂಥಹ ಪಾಂಡವರೊಂದಿಗೆ ಜಗಳವಾಡುವುದರ ದುಷ್ಪರಿಣಾಮದ ಕುರಿತು ಯೋಚಿಸು: ಪುತ್ರರೊಂದಿಗೆ ವೈರ, ನಿತ್ಯವೂ ಉದ್ವಿಗ್ನತೆಯ ಬದುಕು, ಕೀರ್ತಿಯ ನಾಶ ಮತ್ತು ಶತ್ರುಗಳಿಗೆ ಸಂತೋಷ. ಇಂದ್ರಕಲ್ಪ ಭೀಷ್ಮನ, ನಿನ್ನ, ದ್ರೋಣನ ಮತ್ತು ರಾಜ ಯುಧಿಷ್ಠಿರನ ಕೋಪವು ಅತಿಯಾಗಿ ಹೆಚ್ಚಾದರೆ ಅದು ಆಕಾಶದಲ್ಲಿರುವ ಬಿಳಿಯ ಧೂಮಕೇತುವಿನಂತೆ ಈ ಲೋಕವನ್ನೇ ಉರುಳಿಸಿಬಿಡುತ್ತದೆ. ನಿನ್ನ ನೂರು ಮಕ್ಕಳು, ಕರ್ಣ ಮತ್ತು ಐವರು ಪಾಂಡವರು ಸಾಗರವೇ ಉಡುಪಾಗಿರುವ ಈ ಅಖಿಲ ಪೃಥ್ವಿಯನ್ನು ಆಳಬಲ್ಲರು. ಧಾರ್ತರಾಷ್ಟ್ರರು ವನವಿದ್ದಂತೆ ಮತ್ತು ಪಾಂಡುಸುತರು ವ್ಯಾಘ್ರಗಳು. ವ್ರ್ಯಾಘ್ರಗಳಿರುವ ಕಾಡನ್ನು ಕಡಿಯಬೇಡ; ಹುಲಿಗಳನ್ನು ಕಾಡಿನಿಂದ ಓಡಿಸಬೇಡ. ಹುಲಿಗಳಿಲ್ಲದೇ ಕಾಡು ಉಳಿಯುವುದಿಲ್ಲ; ಕಾಡಿಲ್ಲದೇ ಹುಲಿಗಳು ಉಳಿಯುವುದಿಲ್ಲ. ಕಾಡೇ ಹುಲಿಗಳನ್ನು ರಕ್ಷಿಸುತ್ತದೆ ಮತ್ತು ಹುಲಿಗಳು ಕಾಡನ್ನು ರಕ್ಷಿಸುತ್ತವೆ. ಪಾಪಚೇತಸರು ಇತರರ ನಿರ್ಗುಣಗಳನ್ನು ಅರಿಯಲು ಆತುರರಾಗಿರುವಷ್ಟು ಅವರ ಕಲ್ಯಾಣ ಗುಣಗಳನ್ನು ತಿಳಿಯಲು ಆತುರರಾಗಿರುವುದಿಲ್ಲ. ಅರ್ಥಸಿದ್ಧಿಯನ್ನು ಬಯಸುವವನು ಧರ್ಮದಲ್ಲಿಯೇ ನಡೆಯಬೇಕು. ಏಕೆಂದರೆ ಸ್ವರ್ಗಲೋಕದಿಂದ ಅಮೃತವು ಬೇರೆಯಾಗದಂತೆ ಧರ್ಮದಿಂದ ಅರ್ಥವು ಬೇರೆಯಾಗುವುದಿಲ್ಲ. ಯಾರ ಆತ್ಮವು ಪಾಪವನ್ನು ತೊರೆದು ಕಲ್ಯಾಣಕಾರ್ಯಗಳಲ್ಲಿ ನಿರತವಾಗಿದೆಯೋ ಅವನಿಗೆ ಪ್ರಕೃತಿ ವಿಕೃತಿಗಳೆಲ್ಲವೂ ತಿಳಿಯುತ್ತದೆ. ಯಾರು ಯಥಾಕಾಲದಲ್ಲಿ ಧರ್ಮ, ಅರ್ಥ, ಕಾಮಗಳನ್ನು ಅರಸುತ್ತಾರೋ ಅವರಿಗೆ ಧರ್ಮಾರ್ಥಕಾಮಗಳ ಒಟ್ಟು ಫಲವು ಇಲ್ಲಿಯೂ ನಂತರವೂ ದೊರೆಯುತ್ತದೆ. ಕ್ರೋಧ-ಹರ್ಷಗಳ ಏರುವಿಕೆಯ ವೇಗವನ್ನು ನಿಯಂತ್ರಿಸಿಕೊಂಡವನಿಗೆ ಅದೃಷ್ಟವು ತುಂಬಿಕೊಳ್ಳುತ್ತದೆ ಮತ್ತು ಅವನನ್ನು ಆಪತ್ತುಗಳು ಕಾಡುವುದಿಲ್ಲ. ಪುರುಷರಿಗೆ ನಿತ್ಯವೂ ಐದು ರೀತಿಯ ಬಲಗಳಿರುತ್ತವೆ ಎಂದು ನನ್ನಿಂದ ತಿಳಿ. ಇವುಗಳಲ್ಲಿ ಬಾಹುಬಲವು ಅತ್ಯಂತ ಕನಿಷ್ಠ ಬಲವೆಂದು ಹೇಳುತ್ತಾರೆ. ಉತ್ತಮ ಅಮಾತ್ಯರನ್ನು ಪಡೆಯುವುದು ಎರಡನೆಯ ಬಲವೆಂದು ಹೇಳುತ್ತಾರೆ. ಜಯವನ್ನು ಬಯಸುವವರಿಗೆ ಧನಲಾಭವು ಮೂರನೆಯ ಬಲವೆಂದು ಹೇಳುತ್ತಾರೆ. ಸಹಜವಾಗಿರುವ ಪಿತೃಪೈತಾಮಹರ ಬಲ, ಹುಟ್ಟಿನ ಬಲವೆಂಬ ಹೆಸರಿನ ಇದನ್ನು ನಾಲ್ಕನೆಯ ಬಲವೆನ್ನುತ್ತಾರೆ. ಆದರೆ ಅವೆಲ್ಲವುಗಳನ್ನೂ ಹಿಡಿದಿಡುವ, ಬಲಗಳಲ್ಲಿಯೇ ಶ್ರೇಷ್ಠಬಲವು ಪ್ರಜ್ಞಾಬಲವೆಂದು ಹೇಳುತ್ತಾರೆ. ಒಬ್ಬನು ಇನ್ನೊಬ್ಬನಿಗೆ ಅಪಕಾರವನ್ನು ಮಾಡಿ ಮೇಲುಗೈ ಸಾಧಿಸಲು ಬಯಸಿದರೆ ಅದರಿಂದುಂಟಾದ ವೈರದಿಂದ ಅವನು ದೂರದಲ್ಲಿದ್ದರೂ ಸುರಕ್ಷಿತನಾಗಿರುವುದಿಲ್ಲ. ಪ್ರಾಜ್ಞರು ಹೇಗೆ ತಾನೇ ಸ್ತ್ರೀಯರಲ್ಲಿ, ರಾಜರಲ್ಲಿ, ಸರ್ಪಗಳಲ್ಲಿ, ಸ್ವಾಧ್ಯಾಯದಲ್ಲಿ, ಶತ್ರುಗಳ ಸೇವೆಯಲ್ಲಿ, ಭೋಗದಲ್ಲಿ ಮತ್ತು ಆಯುಷ್ಯದಲ್ಲಿ ವಿಶ್ವಾಸವನ್ನಿಡಬಲ್ಲರು? ಪ್ರಜ್ಞೆಯ ಬಾಣದ ಹೊಡೆತಕ್ಕೆ ಸಿಕ್ಕಿದವನಿಗೆ ಚಿಕಿತ್ಸಕರಾಗಲೀ ಔಷಧಗಳಾಗಲೀ ಇಲ್ಲ. ಹೋಮ, ಮಂತ್ರ, ಆಶೀರ್ವಾದ, ಅಥವಾ ಔಷಧಗಳು ಅವನಿಗೆ ಸಹಾಯವಾಗಲಾರವು. ಮನುಷ್ಯನು ಸರ್ಪ, ಅಗ್ನಿ, ಸಿಂಹ ಮತ್ತು ಉತ್ತಮ ಕುಲದಲ್ಲಿ ಜನಿಸಿದವನನ್ನು ಅವಹೇಳನ ಮಾಡಬಾರದು. ಏಕೆಂದರೆ ಅವರೆಲ್ಲರೂ ಅತಿ ತೇಜಸ್ಸುಳ್ಳವರು. ಲೋಕದಲ್ಲಿ ಅಗ್ನಿಯು ಮಹಾ ತೇಜಸ್ಸುಳ್ಳದ್ದು. ಅದು ಕಟ್ಟಿಗೆಯಲ್ಲಿ ಅಡಗಿರುತ್ತದೆ. ಇನ್ನೊಂದರಿಂದ ಹತ್ತಿಸದೇ ಅದು ಆ ಕಟ್ಟಿಗೆಯನ್ನು ಸುಡುವುದಿಲ್ಲ. ಆದರೆ ಎರಡು ಮರಗಳಿಗೆ ತಾಗಿ, ಘರ್ಷಿಸಿ ಉರಿದಾಗ ಅದು ಆ ಮರವನ್ನೂ ವನವನ್ನೂ ಉಳಿದುದೆಲ್ಲವನ್ನೂ ತನ್ನ ತೇಜಸ್ಸಿನಿಂದ ಸುಟ್ಟುಹಾಕುತ್ತದೆ. ಹಾಗೆಯೇ ಉತ್ತಮ ಕುಲದಲ್ಲಿ ಜನಿಸಿದವರು ಪಾವಕನಂತೆ ತೇಜಸ್ವಿಗಳಾಗಿರುತ್ತಾರೆ. ಕಾಷ್ಠದಲ್ಲಿ ಅಗ್ನಿಯಿರುವಂತೆ ಕ್ಷಮಾವಂತರೂ ನಿರಾಕಾರರಾಗಿಯೂ ಆಗಿರುತ್ತಾರೆ. ನೀನು ಮತ್ತು ನಿನ್ನ ಮಕ್ಕಳು ಬಳ್ಳಿಗಳಂತೆ ಮತ್ತು ಪಾಂಡುಪುತ್ರರು ಶಾಲವೃಕ್ಷಗಳಂತೆ. ಯಾವ ಬಳ್ಳಿಯೂ ಎತ್ತರದ ಮರವನ್ನು ಆಶ್ರಯಿಸದೇ ಬೆಳೆಯುವುದಿಲ್ಲ. ಪುತ್ರರೊಂದಿಗೆ ನೀನು ಒಂದು ವನದಂತೆ. ಮತ್ತು ಪಾಂಡವರು ವನದಲ್ಲಿರುವ ಸಿಂಹಗಳಂತೆ ಎಂದು ತಿಳಿ. ಸಿಂಹಗಳನ್ನು ಕಳೆದುಕೊಂಡರೆ ವನವು ವಿನಾಶವಾಗುತ್ತದೆ. ವನವಿಲ್ಲದೇ ಸಿಂಹಗಳು ವಿನಾಶಗೊಳ್ಳುತ್ತವೆ.
“ವೃದ್ಧನು ಬಂದಾಗ ಯುವಕನ ಪ್ರಾಣವು ಮೇಲೇರುತ್ತದೆ. ಆದರೆ ಮೇಲೆದ್ದು ಅವನನ್ನು ನಮಸ್ಕರಿಸುವುದರಿಂದ ಅದನ್ನು ಪುನಃ ಹಿಂದೆ ಪಡೆಯುತ್ತಾನೆ. ಬಂದಿರುವ ಸಾಧುವಿಗೆ ಪೀಠವನ್ನು ನೀಡಿ, ನೀರನ್ನು ತಂದು, ಪಾದಗಳನ್ನು ತೊಳೆದು, ಸುಖವನ್ನು ಕೇಳಿ, ತನ್ನ ಪರಿಸ್ಥಿತಿಯ ಕುರಿತು ಹೇಳಿ, ನಂತರ ಗಮನವಿಟ್ಟು ಊಟವನ್ನು ನೀಡಬೇಕು. ಲೋಭದಿಂದಾಗಲೀ, ಭಯದಿಂದಾಗಲೀ, ಕಾರ್ಪಣ್ಯತೆಯಿಂದಾಗಲೀ ಯಾರ ಮನೆಯಲ್ಲಿ ಮಂತ್ರವತ್ತಾಗಿ ನೀರು, ಮಧುಪರ್ಕ ಮತ್ತು ಗೋವಿನ ಸ್ವೀಕಾರವಾಗುವುದಿಲ್ಲವೋ ಅವನ ಜೀವನವು ಅನರ್ಥವಾದುದು ಎಂದು ಆರ್ಯರು ಹೇಳುತ್ತಾರೆ. ಎಷ್ಟೇ ಪ್ರಿಯರಾಗಿದ್ದರೂ ಈ ಅತಿಥಿಗಳು ಅರ್ಘ್ಯಕ್ಕೆ ಅರ್ಹರಲ್ಲ: ಚಿಕಿತ್ಸಕ, ಬಾಣಗಳನ್ನು ಮಾಡುವವನು, ಅಶ್ಲೀಲ ನಡತೆಯುಳ್ಳವನು, ಕಳ್ಳ, ಕ್ರೂರ, ಕುಡುಕ, ಭ್ರೂಣಹಂತಕ, ಸೈನಿಕ, ಮತ್ತು ವೇದಗಳನ್ನು ಮಾರುವವನು. ಇವುಗಳನ್ನು ಮಾರಬಾರದು: ಉಪ್ಪು, ಬೇಯಿಸಿದ ಅನ್ನ, ಮೊಸರು, ಹಾಲು, ಜೇನುತುಪ್ಪ, ಎಣ್ಣೆ, ತುಪ್ಪ, ಎಳ್ಳು, ಮಾಂಸ, ಗೆಡ್ಡೆ-ಹಣ್ಣುಗಳು, ತರಕಾರಿಗಳು, ರಕ್ತ, ಉಡುಪುಗಳು, ಎಲ್ಲ ರೀತಿಯ ಸುಗಂಧಗಳು ಮತ್ತು ಬೆಲ್ಲ. ಸಿಟ್ಟಿಗೇಳದವನು, ಮಣ್ಣು-ಕಾಂಚನಗಳನ್ನು ಸಮನಾಗಿ ಕಾಣುವವನು, ಶೋಕವನ್ನು ತೊರೆದವನು, ಗೆಳೆತನ-ವೈರ, ನಿಂದೆ-ಪ್ರಶಂಸೆ, ಮತ್ತು ಪ್ರಿಯ-ಅಪ್ರಿಯಗಳನ್ನು ದಾಟಿಹೋದವನು, ಉದಾಸೀನನಾಗಿ ಸಂಚರಿಸುವವನೇ ನಿಜವಾದ ಭಿಕ್ಷುಕ. ಕಾಡುಅಕ್ಕಿ, ಗೆಡ್ಡೆಗಳು, ಬೀಜಗಳು, ಮತ್ತು ತಪ್ಪಲು ಪಲ್ಲೆಗಳನ್ನು ತಿಂದು ಜೀವಿಸುವ, ಆತ್ಮವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ, ತಾನಾಗಿಯೇ ಅಗ್ನಿಕಾರ್ಯವನ್ನು ಮಾಡುವ, ವನದಲ್ಲಿ ವಾಸಿಸಿಕೊಂಡೂ ಅತಿಥಿಗಳಿಗೆ ನಿರಾಕರಿಸದವನೇ ಧುರಂಧರ ಪುಣ್ಯವಂತ ತಾಪಸಿ. ಬುದ್ಧಿವಂತನಿಗೆ ಕೆಡುಕನ್ನು ಮಾಡಿ ದೂರದಲ್ಲಿದ್ದೇನೆ ಎಂದು ವಿಶ್ವಾಸದಿಂದಿರಬಾರದು. ಏಕೆಂದರೆ, ಬುದ್ಧಿವಂತರ ಕೈ ತುಂಬಾ ಉದ್ದವಾಗಿರುತ್ತದೆ. ಅದರಿಂದ ಅವರು ಹಿಂಸೆಕೊಟ್ಟವರನ್ನು ಹಿಂಸಿಸುತ್ತಾರೆ. ವಿಶ್ವಾಸವಿಡಬಾರದವರಲ್ಲಿ ವಿಶ್ವಾಸವಿಡಬಾರದು; ವಿಶ್ವಾಸವನ್ನಿಟ್ಟವರಲ್ಲಿ ಅತಿಯಾದ ವಿಶ್ವಾಸವನ್ನಿಡಬಾರದು. ವಿಶ್ವಾಸದಿಂದ ಭಯವು ಹುಟ್ಟುತ್ತದೆ. ಅದು ಮೂಲವನ್ನೇ ಕಿತ್ತೊಗೆಯುತ್ತದೆ. ಯಾರನ್ನೂ ದ್ವೇಷಿಸಬಾರದು. ಪತ್ನಿಯನ್ನು ಸುರಕ್ಷಿತವಾಗಿಟ್ಟುಕೊಂಡಿರಬೇಕು. ಇದ್ದುದನ್ನು ಹಂಚಿಕೊಳ್ಳಬೇಕು. ಪ್ರಿಯವಾದ ಮಾತುಗಳನ್ನಾಡಬೇಕು. ಸ್ತ್ರೀಯರೊಂದಿಗೆ ಮೃದುವಾಗಿ ಮಧುರವಾಗಿ ಮಾತನ್ನಾಡಬೇಕು. ಆದರೆ ಅವರ ವಶನಾಗಬಾರದು. ಮನೆಯ ದೀಪ ಬೆಳಗಿಸುವ ಪೂಜನೀಯ, ಮಹಾಭಾಗ, ಪುಣ್ಯ ಸ್ತ್ರೀಯರು ಮನೆಯ ಸಂಪತ್ತು. ಅವರನ್ನು ವಿಶೇಷವಾಗಿ ರಕ್ಷಿಸಬೇಕು. ಅಂತಃಪುರವನ್ನು ತಂದೆಗೆ ಒಪ್ಪಿಸಬೇಕು, ಅಡುಗೆ ಮನೆಯನ್ನು ತಾಯಿಗೆ ವಹಿಸಬೇಕು, ಗೋವುಗಳನ್ನು ತನ್ನಂತಿರುವವನಿಗೆ ಒಪ್ಪಿಸಬೇಕು, ಮತ್ತು ಕೃಷಿಯನ್ನು ತಾನೇ ಮಾಡಬೇಕು, ಸೇವಕರ ಮೂಲಕ ವ್ಯಾಪಾರಗಳನ್ನು ಮಾಡಿಸಬೇಕು ಮತ್ತು ಪುತ್ರರ ಮೂಲಕ ಬ್ರಾಹ್ಮಣರ ಸೇವೆಯನ್ನು ಮಾಡಬೇಕು. ನೀರಿನಿಂದ ಅಗ್ನಿಯು, ಬ್ರಹ್ಮತ್ವದಿಂದ ಕ್ಷತ್ರಿಯತ್ವವು, ಕಲ್ಲಿನಿಂದ ಲೋಹವು ಉತ್ಪತ್ತಿಯಾಗುತ್ತವೆ. ಆದರೆ ಅವೆಲ್ಲವುಗಳ ತೇಜಸ್ಸು ಯಾವುದರಿಂದ ಅವು ಹುಟ್ಟಿದವೋ ಅವುಗಳಲ್ಲಿ ನಾಶವಾಗುತ್ತದೆ. ಉತ್ತಮ ಕುಲದಲ್ಲಿ ಹುಟ್ಟಿ ನಿತ್ಯವೂ ಸಂತರಾಗಿರುವವರು ಪಾವಕನಂತಿರುವ ತಮ್ಮ ತೇಜಸ್ಸನ್ನು ಕಾಷ್ಠದಲ್ಲಿರುವ ಅಗ್ನಿಯಂತೆ ಕ್ಷಮಾವಂತರಾಗಿ ನಿರಾಕಾರರಾಗಿ ಅಡಗಿಸಿಟ್ಟುಕೊಂಡಿರುತ್ತಾರೆ. ಯಾರ ಉಪಾಯಗಳನ್ನು ಹೊರಗಿನವರೂ ಒಳಗಿನವರೂ ಯಾರೂ ತಿಳಿದಿಲ್ಲವೋ ಅಂಥಹ ರಾಜನು ಎಲ್ಲಕಡೆ ಕಣ್ಣಿಟ್ಟುಕೊಂಡು ಐಶ್ವರ್ಯವನ್ನು ಕಳೆದುಕೊಳ್ಳುವುದಿಲ್ಲ. ಏನು ಮಾಡುವವನಿದ್ದೇನೆಂದು ಹೇಳುವುದಿಲ್ಲ, ಮಾಡಿದ ನಂತರ ಆ ಧರ್ಮಕರ್ಮಾರ್ಥ ಕಾರ್ಯಗಳನ್ನು ತೋರಿಸುತ್ತಾನೆ. ಆಗ ಅವನ ಉಪಾಯವನ್ನು ಭೇದಿಸುವುದಿಲ್ಲ. ಗಿರಿಶಿಖರವನ್ನು ಏರಿ ಅಥವಾ ಮನೆಯ ಪ್ರಾಸಾದದ ಮೇಲಿರುವಾಗ ಅಥವಾ ಅರಣ್ಯದಲ್ಲಿ ಏಕಾಂತದಲ್ಲಿರುವಾಗ ಉಪಾಯವನ್ನು ಮಾಡಬೇಕು. ಸ್ನೇಹಿತನಾಗಿರದವನು ಅಥವಾ ಸ್ನೇಹಿತನಾಗಿದ್ದರೂ ಅಪಂಡಿತನಾಗಿರುವವನು ಅಥವಾ ಪಂಡಿತನಾಗಿದ್ದರೂ ಆತ್ಮವಂತನಲ್ಲದವನು ಅಂತಿಮ ಉಪಾಯವನ್ನು ತಿಳಿದಿರಬಾರದು. ಏಕೆಂದರೆ ಉಪಾಯವನ್ನು ರಕ್ಷಿಸಿ ಅದು ಉತ್ತಮ ಫಲಿತಾಂಶವನ್ನು ನೀಡುವಂತೆ ಮಾಡುವ ಜವಾಬ್ಢಾರಿಯು ಮಂತ್ರಿಯದಾಗಿರುತ್ತದೆ. ಎಲ್ಲ ಕಾರ್ಯಗಳನ್ನು ಮಾಡಿ ಮುಗಿಸಿದ ನಂತರವೇ ಇತರರು ತಿಳಿದ, ಅಲ್ಲಿಯವರೆಗೆ ಗೂಢವಾಗಿರಿಸಿದ್ದ ನೃಪತಿಯ ಉಪಾಯಗಳು ಸಿದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಮೋಹದಿಂದ ಅಪ್ರಶಸ್ತ ಕರ್ಮಗಳನ್ನು ಅನುಷ್ಠಾನಗೊಳಿಸಿದರೆ ಅದು ಮಧ್ಯದಲ್ಲಿ ನಿಂತುಹೋಗುವುದಲ್ಲದೇ ಹಾಗೆ ಮಾಡಿದವನ ಜೀವನವನ್ನೂ ನಾಶಗೊಳಿಸುತ್ತದೆ. ಪ್ರಶಸ್ತ ಕರ್ಮಗಳನ್ನು ಅನುಷ್ಠಾನಗೊಳಿಸಿದರೆ ಸುಖವನ್ನು ತರುತ್ತದೆ. ಅವುಗಳನ್ನು ಕಾರ್ಯಗತಗೊಳಿಸದಿದ್ದರೆ ಮಹತ್ತರ ಪಶ್ಚಾತ್ತಾಪವನ್ನು ಪಡಬೇಕಾಗುತ್ತದೆ. ಯಾರು ಸ್ಥಾನ, ವೃದ್ಧಿ, ಕ್ಷಯಗಳ ಜ್ಞಾನಿಯೋ, ಆರುಗುಣಗಳನ್ನು ತಿಳಿದುಕೊಂಡಿದ್ದಾನೋ, ಕೀಳೆಂದು ಪರಿಗಣಿಸಲ್ಪಟ್ಟ ನಡತೆಯುಳ್ಳವನಲ್ಲವೋ ಅವನಿಗೆ ಪೃಥ್ವಿಯು ಸ್ವಾಧೀನವಾಗಿರುತ್ತದೆ. ಯಾವ ರಾಜ್ಯದ ರಾಜನು ಅವನ ಕ್ರೋಧ-ಹರ್ಷಗಳು ಫಲವನ್ನು ನೀಡುವಂತೆ ಮಾಡುತ್ತಾನೋ, ತಾನೇ ತನ್ನ ಕೆಲಸಗಳನ್ನು ಮಾಡುತ್ತಾನೋ, ಮತ್ತು ತಾನೇ ಎಲ್ಲ ವಿಷಯಗಳನ್ನೂ ತಿಳಿದುಕೊಂಡಿರುತ್ತಾನೋ ಅದು ಕೋಶವನ್ನು ಉಳಿಸಿಕೊಳ್ಳುತ್ತದೆ. ಮಹೀಪತಿಯು ತನ್ನ ಹೆಸರು-ಗೌರವಗಳಿಂದ ಸಂತುಷ್ಟನಾಗಿರಬೇಕು. ಸಂಪತ್ತನ್ನು ತನ್ನ ಅವಲಂಬಿತರೊಂದಿಗೆ ಹಂಚಿಕೊಳ್ಳಬೇಕು. ಎಲ್ಲವನ್ನೂ ತಾನೊಬ್ಬನೇ ಇಟ್ಟುಕೊಳ್ಳಬಾರದು. ಬ್ರಾಹ್ಮನು ಬ್ರಾಹ್ಮಣನನ್ನು ತಿಳಿದಿರುತ್ತಾನೆ. ಹಾಗೆಯೇ ಗಂಡನು ಹೆಂಡತಿಯನ್ನು ತಿಳಿದಿರುತ್ತಾನೆ. ಅಮಾತ್ಯನು ನೃಪತಿಯನ್ನು ತಿಳಿದಿರುತ್ತಾನೆ ಮತ್ತು ರಾಜನೇ ರಾಜನನ್ನು ತಿಳಿದಿರುತ್ತಾನೆ. ವಧೆಗೆ ಅರ್ಹನಾಗಿರುವ ಶತ್ರುವನ್ನು ತನ್ನ ಪಕ್ಷಕ್ಕೆ ಬಂದಿದ್ದಾನೆಂದು ಬಿಡುಗಡೆಮಾಡಬಾರದು. ಅವನು ಸ್ವಲ್ಪವೇ ಸಮಯದಲ್ಲಿ ಭಯಕ್ಕೆ ಕಾರಣನಾಗಬಹುದು. ಯಾವಾಗಲೂ ದೇವರಮೇಲಿನ, ರಾಜನ ಮೇಲಿನ, ಬ್ರಾಹ್ಮಣರ ಮೇಲಿನ, ವೃದ್ಧರು ಮತ್ತು ಬಾಲಕರ ಮೇಲಿನ ಕೋಪವನ್ನು ನಿಯಂತ್ರಿಸಬೇಕು. ಪ್ರಾಜ್ಞನು ಮೂಢರು ನಡೆಸುವ ಅರ್ಥವಿಲ್ಲದ ವಿವಾದಗಳನ್ನು ವರ್ಜಿಸಬೇಕು. ಇದರಿಂದ ಲೋಕದಲ್ಲಿ ಅವನಿಗೆ ಕೀರ್ತಿಯು ದೊರೆಯುತ್ತದೆ ಮತ್ತು ಯಾವುದೇ ಅನರ್ಥವು ಬಂದೊದಗುವುದಿಲ್ಲ. ಷಂಡನನ್ನು ಪತಿಯನ್ನಾಗಿ ಸ್ತ್ರೀಯರು ಹೇಗೆ ಬಯಸುವುದಿಲ್ಲವೋ ಹಾಗೆ ಯಾರ ಕರುಣೆಯು ನಿಷ್ಫಲವಾಗಿದೆಯೋ ಮತ್ತು ಕ್ರೋಧವು ನಿರರ್ಥಕವಾಗಿದೆಯೋ ಅಂಥವರನ್ನು ಒಡೆಯನನ್ನಾಗಿ ಇಚ್ಛಿಸುವುದಿಲ್ಲ. ಬುದ್ಧಿಯು ಯಾವಾಗಲೂ ಧನಲಾಭವನ್ನು ನೀಡುವುದಿಲ್ಲ. ಜಾಡ್ಯತನವು ಯಾವಾಗಲೂ ಅಸಮೃದ್ಧಿಯನ್ನುಂಟುಮಾಡುವುದಿಲ್ಲ. ಲೋಕದಲ್ಲಿ ನಡೆಯುವ ಏರು ಇಳಿತಗಳನ್ನು ಪಾಜ್ಞರು ತಿಳಿದಿರುತ್ತಾರೆ. ಇತರರಿಗೆ ಇದು ತಿಳಿದಿರುವುದಿಲ್ಲ. ಮೂಢರು ವಿದ್ಯಾಶೀಲರನ್ನು, ವಯೋವೃದ್ಧರನ್ನು, ಬುದ್ಧಿವೃದ್ಧರನ್ನು, ಧನ ಮತ್ತು ಅಭಿಜನ ವೃದ್ಧರನ್ನು ನಿತ್ಯವೂ ಅವಮಾನಿಸುತ್ತಾರೆ. ಅನಾರ್ಯನಂತೆ ನಡೆದುಕೊಳ್ಳುವ, ಪ್ರಜ್ಞೆಯಿಲ್ಲದಿರುವ, ಅಸೂಯೆಗೊಳ್ಳುವ, ಅಧಾರ್ಮಿಕ, ದುಷ್ಟಮಾತುಗಳನ್ನಾಡುವ, ಕೋಪಿಷ್ಟನಾದವನಿಗೆ ಅನರ್ಥಗಳು ಬೇಗ ಬೇಗನೇ ಬರುತ್ತಿರುತ್ತವೆ. ಪ್ರಾಮಾಣಿಕತೆ, ದಾನ, ಒಪ್ಪಂದವನ್ನು ಅತಿಕ್ರಮಿಸದೇ ಇರುವುದು, ಮತ್ತು ಸರಿಯಾಗಿ ಮಾತನಾಡುವುದು ಇವು ಇತರರನ್ನು ಹತ್ತಿರ ಆಕರ್ಶಿಸುತ್ತವೆ. ಪ್ರಾಮಾಣಿಕ, ದಕ್ಷ, ಕೃತಜ್ಞ, ಬುದ್ಧಿವಂತ, ಸತ್ಯಶೀಲನು, ಕಡಿಮೆ ಧನವನ್ನು ಹೊಂದಿದ್ದರೂ ಅನುಯಾಯಿಗಳನ್ನು ಪಡೆಯುತ್ತಾನೆ. ಧೃತಿ, ಶಾಂತಿ, ಆತ್ಮನಿಯಂತ್ರಣ, ಶುಚಿತ್ವ, ಕರುಣೆ, ನಿಷ್ಠೂರವಾಗಿ ಮಾತನಾಡದಿರುವುದು, ಮಿತ್ರರಿಗೆ ದ್ರೋಹಮಾಡದೇ ಇರುವುದು - ಈ ಏಳು ಸಂಪತ್ತಿಗೆ ಸಮಿಧಗಳಿದ್ದಂತೆ. ಹಂಚಿಕೊಳ್ಳದೇ ಇರುವ, ದುಷ್ಟಾತ್ಮ, ಕೃತಘ್ನ, ನಾಚಿಕೆಯಿಲ್ಲದಿರುವ ನರಾಧಮನು ಲೋಕದಲ್ಲಿ ವರ್ಜನೀಯ. ತನ್ನದೇ ದೋಷವಾಗಿದ್ದರೂ, ಮನೆಯೊಳಗಿರುವ ನಿರ್ದೋಷೀ ಜನರ ಮೇಲೆ ಕೋಪಗೊಳ್ಳುವವನು ಬಿಲದಲ್ಲಿರುವ ಹಾವಿನಂತೆ ರಾತ್ರಿಯಲ್ಲಿ ಸುಖವಾಗಿ ಮಲಗುವುದಿಲ್ಲ. ಯೋಗಕ್ಷೇಮಕ್ಕೆ ಬಾಧೆತರುವ ದುಷ್ಟರನ್ನು ದೇವತೆಗಳಂತೆ ಸದಾ ಮೆಚ್ಚಿಸುತ್ತಿರಬೇಕು. ಸ್ತ್ರೀಯರಲ್ಲಿ ಸಮಾಸಕ್ತರಾದವರಲ್ಲಿ, ಮೊದಲಿನಿಂದಲೂ ಪತಿತರಾದವರಲ್ಲಿ, ಅನಾರ್ಯರಲ್ಲಿ ಸಮಾಸಕ್ತರಾದವರಲ್ಲಿ ಇರುವ ಧನವೆಲ್ಲವೂ ಸಂಶಯವಾಗಿ ಹೋಗುತ್ತವೆ. ಸ್ತ್ರೀ, ಮಗು ಅಥವಾ ಜೂಜುಗಾರನು ಆಳುತ್ತಿರುವ ದೇಶವು ಕಲ್ಲನ್ನು ಕಟ್ಟಿ ನದಿಯಲ್ಲಿ ಬಿಟ್ಟ ತೆಪ್ಪದಂತೆ ಮುಳುಗಿಹೋಗುತ್ತದೆ. ವಿಶೇಷವಾದವುಗಳಲ್ಲದೇ ಪ್ರಯೋಜನಗಳಲ್ಲಿ ಆಸಕ್ತಿಯಿರುವವರನ್ನು ನಾನು ಪಂಡಿತರೆಂದು ತಿಳಿಯುತ್ತೇನೆ. ಏಕೆಂದರೆ ವಿಶೇಷಗಳು ಪ್ರಾಸಂಗಿಕ. ಯಾರನ್ನು ಜೂಜುಗಾರರು ಪ್ರಶಂಸಿಸುತ್ತಾರೋ, ಯಾರನ್ನು ಚಾರಣರು ಪ್ರಶಂಸಿಸುತ್ತಾರೋ, ಯಾರನ್ನು ವೈಶ್ಯೆಯರು ಪ್ರಶಂಸಿಸುತ್ತಾರೋ ಅಂಥಹ ಮಾನವರು ಜೀವಿಸುವುದಿಲ್ಲ. ಆ ಪರಮೇಷ್ವಾಸ, ಅಮಿತೌಜಸ ಪಾಂಡವರನ್ನು ತೊರೆದು ಭಾರತರ ಐಶ್ವರ್ಯವನ್ನು ದುರ್ಯೋಧನನಿಗಿತ್ತು ನೀನು ಮಹಾ ಅಹಿತವನ್ನು ಮಾಡುತ್ತಿದ್ದೀಯೆ. ಐಶ್ವರ್ಯಮದಸಮ್ಮೂಢ ಬಲಿಯು ಮೂರೂಲೋಕಗಳಿಂದ ಪರಿಭ್ರಷ್ಟನಾದಂತೆ ಇವನೂ ಕೂಡ ಬೇಗನೇ ಪರಿಭ್ರಷ್ಟನಾಗುವುದನ್ನು ನೀನು ನೋಡುತ್ತೀಯೆ.”
ಧೃತರಾಷ್ಟ್ರನು ಹೇಳಿದನು: “ಮನುಷ್ಯನು ಆಗುವ ಅಥವಾ ಆಗದಿರುವವುಗಳಿಗೆ ಒಡೆಯನಲ್ಲ. ಅವನು ದಾರಕ್ಕೆ ಕಟ್ಟಿದ ಒಂದು ಮರದ ಗೊಂಬೆಯಂತೆ. ಧಾತನು ಅವನನ್ನು ದೈವದ ವಶನನ್ನಾಗಿ ಮಾಡಿದ್ದಾನೆ. ಆದುದರಿಂದ ನಿನ್ನನ್ನು ಕೇಳಲು ಬಯಸುತ್ತೇನೆ. ಹೇಳು.”
ವಿದುರನು ಹೇಳಿದನು: “ಭಾರತ! ಸಮಯ ಬರುವುದಕ್ಕೆ ಮೊದಲೇ ಮಾತನ್ನು ಹೇಳಿ ಬುದ್ಧಿಮಾನ ಬೃಹಸ್ಪತಿಯೂ ಕೂಡ ಅಜ್ಞಾನಿಯೆಂದು ಅಪಮಾನಿತನಾದ. ಕೊಡುವುದರಿಂದ ಪ್ರಿಯರೆನಿಸಿಕೊಂಡರೆ ಇತರರು ಚೆನ್ನಾಗಿ ಮಾತನಾಡುವುದರಿಂದ ಪ್ರಿಯರೆನಿಸಿಕೊಳ್ಳುತ್ತಾರೆ. ಇತರರು ಮಂತ್ರ-ಜಡಿಬೂಟಿಗಳ ಬಲದಿಂದ ಪ್ರಿಯರೆನಿಸಿಕೊಂಡರೆ, ನಿಜವಾದ ಪ್ರಿಯರು ಅವರು ತೋರಿಸುವ ಪ್ರೀತಿಯಿಂದ ಮಾತ್ರ ಪ್ರಿಯರೆನಿಸಿಕೊಳ್ಳುತ್ತಾರೆ. ದ್ವೇಷಿಸುವವನು ಒಳ್ಳೆಯನಾಗಿರುವುದಿಲ್ಲ, ಮೇಧಾವಿಯಾಗಿರುವುದಿಲ್ಲ, ಪಂಡಿತನಾಗಿರುವುದಿಲ್ಲ. ಪ್ರೀತಿಸುವುದು ಶುಭಕರ್ಮ, ದ್ವೇಷಿಸುವುದು ಪಾಪ ಕರ್ಮ. ಯಾವ ಕ್ಷಯವು ವೃದ್ಧಿಯನ್ನು ತರುತ್ತದೆಯೋ ಅದು ಕ್ಷಯವಲ್ಲ. ಯಾವುದನ್ನು ಪಡೆದು ಬಹಳಷ್ಟು ನಾಶವಾಗುತ್ತದೆಯೋ ಅದನ್ನು ಕ್ಷಯವೆಂದು ತಿಳಿಯಬೇಕು. ಕೆಲವರು ಗುಣದಿಂದಾಗಿ, ಇತರರು ಧನದಿಂದಾಗಿ ಅಭಿವೃದ್ಧಿ ಹೊಂದುತ್ತಾರೆ. ಆದರೆ ಗುಣಗಳಿಲ್ಲದೇ ಧನದಿಂದಾಗಿ ಅಭಿವೃದ್ಧಿಹೊಂದವರನ್ನು ತೊರೆಯಬೇಕು.”
ಧೃತರಾಷ್ಟ್ರನು ಹೇಳಿದನು: “ನೀನು ಹೇಳುವುದೆಲ್ಲವೂ ಯುಕ್ತವಾಗಿದೆ. ಪ್ರಾಜ್ಞಸಮ್ಮತವಾದುದನ್ನು ಹೇಳುತ್ತಿದ್ದೀಯೆ. ಆದರೆ ಮಗನನ್ನು ತೊರೆಯಲು ಮನಸ್ಸಿಲ್ಲ. ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯವಾಗುತ್ತದೆ.”
ವಿದುರನು ಹೇಳಿದನು: “ಹುಟ್ಟುವಾಗಲೇ ಸ್ವಭಾವದಲ್ಲಿ ಗುಣಸಂಪನ್ನನಾದ ಮತ್ತು ವಿನಯಾನ್ವಿತನಾದವನು ಇರುವವುಗಳ ತುಂಬಾ ಸೂಕ್ಷ್ಮವಾದ ದುಃಖವನ್ನೂ ಕಡೆಗಣಿಸುವುದಿಲ್ಲ. ಪರರನ್ನು ನಿಂದಿಸುವುದರಲ್ಲಿ ನಿರತರಾದವರು, ಸತತವೂ ಪರಸ್ಪರರಲ್ಲಿ ವಿರೋಧವನ್ನುಂಟುಮಾಡಲು ಪ್ರಯತ್ನಿಸುವವರು ಪರರಿಗೆ ದುಃಖವನ್ನೇ ನೀಡುತ್ತಾರೆ. ಯಾರನ್ನು ನೋಡುವುದು ದೋಷವೋ ಯಾರ ಸಹವಾಸವು ಮಹಾಭಯವನ್ನುಂಟುಮಾಡುತ್ತದೆಯೋ ಅವರಿಗೆ ಆರ್ಥಿಕ ದಾನವನ್ನು ಮಾಡುವುದು ಮಹಾದೋಷ. ಕೊಡುವುದು ಮಹಾ ಭಯ. ಯಾರು ಪಾಪಿಗಳೆಂದು ವಿಖ್ಯಾತರಾಗಿದ್ದಾರೋ, ಮಹಾದೋಷಗಳಿಂದ ಕೂಡಿದ್ದಾರೋ, ಅವರ ಜೊತೆ ಸಹವಾಸವನ್ನು ತೊರೆಯಬೇಕು. ಸೌಹಾರ್ದತೆಯು ಕಳೆದುಹೋದಾಗ, ಪ್ರೀತಿಯು ಕಡಿಮೆಯಾದಾಗ, ಆ ಸೌಹಾರ್ದತೆಯಿಂದ ದೊರೆಯುತ್ತಿದ್ದ ಫಲವೂ ಸುಖವೂ ಕಡಿಮೆಯಾಗುತ್ತದೆ. ಅವರಿಗೆ ಅಪವಾದವನ್ನು ಹೊರಿಸಿ, ಅವರ ನಾಶದ ಪ್ರಯತ್ನಗಳನ್ನು ಆರಂಭಿಸುತ್ತಾರೆ. ಸ್ವಲ್ಪ ಅಪಕೃತ್ಯವನ್ನು ಮಾಡಿದರೂ ಮೋಹದಿಂದ ಶಾಂತಿಯನ್ನು ಹೊಂದುವುದಿಲ್ಲ. ವಿದ್ವಾಂಸನು ದೂರದಿಂದಲೇ ತನ್ನ ನಿಪುಣ ಬುದ್ಧಿಯಿಂದ ಪರೀಕ್ಷಿಸಿ ಇಂತಹ ನೀಚ, ನೃಶಂಸ ಅಕೃತಾತ್ಮರ ಸಂಗವನ್ನು ವರ್ಜಿಸುತ್ತಾರೆ. ಯಾರು ದ್ರರಿದ್ರ, ದೀನ, ಆತುರ ಬಂದುಗಳಿಗೆ ಅನುಗ್ರಹಿಸುತ್ತಾನೋ ಅವನು ಪುತ್ರ-ಪಶುಗಳ ಅಭಿವೃದ್ಧಿಯನ್ನು ಹೊಂದಿ ಶಾಶ್ವತ ಯಶಸ್ಸನ್ನು ಪಡೆಯುತ್ತಾನೆ. ತನಗೆ ಶುಭವಾದುದನ್ನು ಬಯಸುವವನು ತನ್ನ ಬಂಧುಗಳ ಅಭಿವೃದ್ಧಿಯನ್ನೂ ನೋಡಿಕೊಳ್ಳಬೇಕು. ಆದುದರಿಂದ ಸಾಧುವಾದ ಕುಲವೃದ್ಧಿಯನ್ನು ನಡೆಸು. ನಿನ್ನ ಬಂಧುಗಳಿಗೆ ಒಳ್ಳೆಯದನ್ನು ಮಾಡಿದರೆ ಶ್ರೇಯಸ್ಸನ್ನು ಪಾಡೆಯುತ್ತೀಯೆ. ಸದ್ಗುಣಿಗಳಲ್ಲದಿದ್ದರೂ ಬಂದುಗಳನ್ನು ಸಂರಕ್ಷಿಸಬೇಕು. ಹೀಗಿರುವಾಗ ಇನ್ನು ನಿನ್ನ ಕರುಣೆಯ ಆಕಾಂಕ್ಷಿಗಳಾದ ಗುಣವಂತರದ್ದೇನು? ದೀನ ಪಾಂಡವರ ಮೇಲೆ ಕರುಣೆಯನ್ನು ತೋರು. ಅವರ ಹೊಟ್ಟೆಪಾಡಿಗೆಂದು ಕೆಲವು ಗ್ರಾಮಗಳನ್ನಾದರೂ ಕೊಡು. ಈ ರೀತಿ ನೀನು ಲೋಕದಲ್ಲಿ ಯಶಸ್ಸನ್ನು ಗಳಿಸುತ್ತೀಯೆ. ನೀನು ವೃದ್ಧ. ಆದುದರಿಂದ ಪುತ್ರರನ್ನು ರಕ್ಷಿಸುವುದು ನಿನ್ನ ಕಾರ್ಯ. ಹಿತವಾಕ್ಯಗಳನ್ನು ನುಡಿಯುವ ನನ್ನನ್ನು ಕೂಡ ನಿನ್ನ ಹಿತೈಷಿಯೆಂದು ತಿಳಿದುಕೋ.
“ಒಳ್ಳೆಯದನ್ನು ಬಯಸುವವನು ಬಂಧುಗಳೊಂದಿಗೆ ಜಗಳವಾಡಬಾರದು. ಸುಖಗಳನ್ನು ಬಂಧುಗಳ ಜೊತೆಗೂಡಿ ಭೋಗಿಸಬೇಕು. ಬಂಧುಗಳೊಡನೇ ಒಟ್ಟಿಗೇ ಊಟಮಾಡಬೇಕು, ಒಟ್ಟಿಗೇ ಪರಸ್ಪರರಲ್ಲಿ ಪ್ರೀತಿಯಿಂದ ಮಾತನಾಡಬೇಕು, ಒಟ್ಟಿಗೇ ಕೆಲಸಮಾಡಬೇಕು. ಎಂದೂ ಪರಸ್ಪರರನ್ನು ವಿರೋಧಿಸಬಾರದು. ಇಲ್ಲಿ ಬಂಧುಗಳೇ ದಾಟಿಸುತ್ತಾರೆ, ಬಂಧುಗಳೇ ಮುಳುಗಿಸುತ್ತಾರೆ ಕೂಡ. ಅವರಲ್ಲಿ ಉತ್ತಮ ನಡತೆಯುಳ್ಳವರು ದಾಟಿಸುತ್ತಾರೆ, ಕೆಟ್ಟ ನಡತೆಯವರು ಮುಳುಗಿಸುತ್ತಾರೆ. ಪಾಂಡವರೊಂದಿಗೆ ಒಳ್ಳೆಯದಾಗಿ ನಡೆದುಕೊಳ್ಳುವವನಾಗು. ಅವರಿಂದ ಸುತ್ತುವರೆಯಲ್ಪಟ್ಟ ನೀನು ನಿನ್ನ ಶತ್ರುಗಳಿಗೆ ಗೆಲ್ಲಲಾರದವನಾಗುತ್ತೀಯೆ. ಶ್ರೀಮಂತ ಬಂಧುವನ್ನು ಸೇರಿ ಯಾವ ಬಂಧುವು, ಬೇಟೆಯಾಡುವವನ ಕೈಗೆ ಸಿಕ್ಕ ಜಿಂಕೆಯಂತೆ ಅವಸಾನವನ್ನು ಹೊಂದುತ್ತಾನೋ, ಆಗ ಅದರ ಪಾಪವು ಶ್ರೀಮಂತನಿಗೆ ಬರುತ್ತದೆ. ಮುಂದೆ ನಿನ್ನ ಮಕ್ಕಳ ಅಥವಾ ಅವರ ಸಾವನ್ನು ಕೇಳಿ ನೀನು ಚಿಂತಿಸುತ್ತೀಯೆ, ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತೀಯೆ. ಜೀವನವೇ ನಿರ್ಧಿಷ್ಠವಾಗಿರದಿರುವಾಗ, ಕಷ್ಟದ ಕೋಣೆಗೆ ಹೋಗಿ ಪರಿತಪಿಸಬೇಕಾಗಿ ಬರಬಹುದಾದಂತಹ ಕರ್ಮಗಳನ್ನು ಮೊದಲಿನಿಂದಲೇ ತೊರೆಯಬೇಕು. ಹಿಂದೆ ದುರ್ಯೋಧನನು ಅವರ ಕುರಿತು ಪಾಪಕೃತ್ಯಗಳನ್ನು ಎಸಗಿದ್ದರೆ ಅವನ್ನು ಸರಿಪಡಿಸುವುದು ಕುಲವೃದ್ಧನಾದ ನಿನ್ನ ಕರ್ತವ್ಯ. ಅವರನ್ನು ಅವರ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ನೀನು ವಿಗತಕಲ್ಮಷನಾಗಿ ಮನುಷ್ಯರಲ್ಲಿ ಪೂಜನೀಯನಾಗುತ್ತೀಯೆ. ಧೀರರ ಒಳ್ಳೆಯ ಮಾತುಗಳನ್ನೂ, ಅವುಗಳ ಪರಿಣಾಮಗಳನ್ನೂ ಚೆನ್ನಾಗಿ ಯೋಚಿಸಿ ಕಾರ್ಯಗಳಲ್ಲಿ ತೊಡಗುವವನು ಶಾಶ್ವತ ಯಶಸ್ಸನ್ನು ಪಡೆಯುತ್ತಾನೆ. ವಿನಯವು ದುರ್ನಡತೆಯನ್ನು ಕೊಲ್ಲುತ್ತದೆ. ಪರಾಕ್ರಮವು ಅನರ್ಥವನ್ನು ಕೊಲ್ಲುತ್ತದೆ. ಕ್ಷಮೆಯು ಯಾವಾಗಲೂ ಕ್ರೋಧವನ್ನು ಕೊಲ್ಲುತ್ತದೆ. ಆಚಾರವು ಅಲಕ್ಷಣವನ್ನು ಕೊಲ್ಲುತ್ತದೆ. ಒಂದು ಕುಲವನ್ನು ಅದರಲ್ಲಿರುವ ಜನರ ಸಂಖ್ಯೆ, ಆಸ್ತಿ, ಮನೆ, ಪರಿಚಾರಕರು, ಭೋಜನ ಮತ್ತು ಉಡುಪುಗಳಿಂದ ಪರೀಕ್ಷಿಸಬೇಕು. ಯಾರ ಚಿತ್ತವು ಚಿತ್ತದೊಂದಿಗೆ, ಗುಟ್ಟುಗಳು ಗುಟ್ಟುಗಳೊಂದಿಗೆ ಮತ್ತು ಪ್ರಜ್ಞೆಯು ಪ್ರಜ್ಞೆಯೊಂದಿಗೆ ಕೂಡುವುದೋ ಅವರ ಮೈತ್ರಿಯು ಕುಂಠಿತವಾಗುವುದಿಲ್ಲ. ಹುಲ್ಲಿನಿಂದ ಮುಚ್ಚಿಕೊಂಡ ಬಾವಿಯಂತಿರುವ ಪ್ರಜ್ಞೆಯಿಲ್ಲದ ದುರ್ಬುದ್ಧಿಯನ್ನು ಮೇಧಾವಿಯು ವರ್ಜಿಸಬೇಕು. ಅವರೊಂದಿಗಿನ ಮೈತ್ರಿಯು ನಾಶವಾಗುತ್ತದೆ. ಜಂಬವಿರುವ, ಮೂರ್ಖ, ರೌದ್ರ ಸಾಹಿಸಿಗಳೊಂದಿಗೆ ಮತ್ತು ಅಧರ್ಮಿಗಳೊಂದಿಗೆ ತಿಳಿದವರು ಮೈತ್ರಿಯನ್ನು ಬೆಳೆಸಬಾರದು. ಕೃತಜ್ಞ, ಧಾರ್ಮಿಕ, ಸತ್ಯವಂತ, ಅಕ್ಷುದ್ರ, ದೃಢಭಕ್ತಿಯುಳ್ಳವ, ಜಿತೇಂದ್ರಿಯ, ಸ್ಥಿರವಾಗಿರುವವನೊಂದಿಗೆ ಮಿತ್ರತ್ವವನ್ನು ಬಯಸಬೇಕು. ಇಂದ್ರಿಯಗಳನ್ನು ಹಿಂದೆ ಎಳೆದಿಟ್ಟುರುವುದು ಸಾವಿಗಿಂತ ಬೇರೆಯದಲ್ಲ. ಅವುಗಳ ಸಂಪೂರ್ಣ ನಿಯಂತ್ರಣವು ದೇವತೆಗಳನ್ನೂ ದೊರಕಿಸುತ್ತದೆ. ಸರ್ವಭೂತಗಳಲ್ಲಿ ದಯೆ, ಅನಸೂಯೆ, ಕ್ಷಮೆ, ಧೃತಿ, ಮತ್ತು ಮಿತ್ರರನ್ನು ಗೌರವಿಸುವುದು ಇವು ಆಯುಷ್ಯವನ್ನು ವರ್ಧಿಸುವವು ಎಂದು ತಿಳಿದವರು ಹೇಳುತ್ತಾರೆ. ತನ್ನ ಬುದ್ಧಿಯನ್ನು ಆಧರಿಸಿ ಸರಿಯಾಗಿ ನಡೆದುಕೊಂಡು ಹೋಗುತ್ತಿರದುದನ್ನು ಸರಿಮಾಡುವುದೇ ಉತ್ತಮ ಪುರುಷರ ಜೀವಧೋರಣೆಯಾಗಿರಬೇಕು. ಭವಿಷ್ಯವನ್ನು ಹೇಗೆ ಎದುರಿಸಬೇಕೆಂದು ತಿಳಿದಿರುವವನು, ವರ್ತಮಾನದಲ್ಲಿ ಧೃಢನಿಶ್ಚಯನಾಗಿರುವವನು ಮತ್ತು ಹಿಂದೆ ಮಾಡಿದ ಕರ್ಮಗಳ ಪರಿಣಾಮಗಳನ್ನು ಅರ್ಥಮಾಡಿಕೊಂಡವನು ತನ್ನ ಸಂಪತ್ತಿನಿಂದ ಎಂದೂ ದೂರನಾಗುವುದಿಲ್ಲ.
“ಕರ್ಮ, ಮನಸ್ಸು ಮತ್ತು ಮಾತುಗಳ ಮೂಲಕ ಏನನ್ನು ಅನುಸರಿಸುತ್ತೀವೋ ಅವೇ ನಮ್ಮನ್ನು ಅಪಹರಿಸಿಕೊಂಡು ಹೋಗುತ್ತವೆ. ಆದುದರಿಂದ ಕಲ್ಯಾಣವಾಗುವ ರೀತಿಯಲ್ಲಿಯೇ ನಡೆದುಕೊಳ್ಳಬೇಕು. ಮಂಗಲಕರವಾದುದನ್ನು ಮಾಡುವುದು, ಯೋಗ, ಅಧ್ಯಯನ, ಆರ್ಜವ, ಸಂತರ ಸೇವೆ ಇವುಗಳು ಅಭಿವೃದ್ಧಿಯನ್ನು ತರುತ್ತವೆ. ದುಃಖವು ನಾಶವಾಗುತ್ತದೆ ಎಂದು ತಿಳಿದು ದುಃಖಪಡದೇ ಇರುವುದು ಸುಖ ಮತ್ತು ಸಂಪತ್ತಿನ ಮೂಲ. ಅನಿರ್ವಿಣ್ಣನಾಗಿರುವವನು ಮಹಾತ್ಮನಾಗಿ ಅತ್ಯಂತ ಸುಖವನ್ನು ಹೊಂದುತ್ತಾನೆ. ಸರ್ವತ್ರವೂ ಸರ್ವದಾ ಕ್ಷಮಿಸುವ ಶಕ್ತಿಶಾಲಿ ಒಡೆಯನಿದ್ದರೆ ಅದಕ್ಕಿಂತಲೂ ಹೆಚ್ಚಿನ ಒಳ್ಳೆಯದು ಮತ್ತು ತೃಪ್ತಿಯು ಬೇರೊಂದಿಲ್ಲ. ಶಕ್ತಿಯಿಲ್ಲದವನು ಎಲ್ಲವನ್ನೂ ಕ್ಷಮಿಸಬೇಕು. ಶಕ್ತಿವಂತನೂ ಧರ್ಮದ ಕಾರಣದಿಂದ ಎಲ್ಲವನ್ನೂ ಕ್ಷಮಿಸಬೇಕು. ಲಾಭ-ನಷ್ಟಗಳು ಸಮನಾಗಿರುವವನು ನಿತ್ಯವೂ ಕ್ಷಮಿಸುತ್ತಾನೆ. ಯಾವ ಸುಖವನ್ನು ಅನುಭವಿಸುದರಿಂದ ಧರ್ಮ ಮತ್ತು ಅರ್ಥಗಳೆರಡೂ ಕ್ಷಣಿಸುವುದಿಲ್ಲವೋ ಅಂಥಹ ಕಾಮವನ್ನು ಬಯಸಬೇಕು. ಮೂಢರ ವರ್ತನೆಯಂತೆ ನಡೆದುಕೊಳ್ಳಬಾರದು. ದುಃಖಾರ್ತರಾದವರಲ್ಲಿ, ಪ್ರಮತ್ತರಾದವರಲ್ಲಿ, ನಾಸ್ತಿಕರಲ್ಲಿ, ಆಲಸಿಗಳಲ್ಲಿ, ನಿಯಂತ್ರಣವಿಲ್ಲದವರಲ್ಲಿ, ಉತ್ಸಾಹವನ್ನು ತೊರೆದವರಲ್ಲಿ ಅದೃಷ್ಟವು ನೆಲೆಸುವುದಿಲ್ಲ. ತನ್ನ ಪ್ರಾಮಾಣಿಕತೆಯನ್ನು ಹೆಚ್ಚಾಗಿ ತೋರಿಸಿಕೊಳ್ಳದೇ ಇದ್ದ ಪ್ರಾಮಾಣಿಕನನ್ನು ಕುಬುದ್ಧಿಗಳು ಅಶಕ್ತ್ರರೆಂದು ತಿಳಿದು ಹಿಂಸಿಸುತ್ತಾರೆ. ಅತಿಯಾದ ಉದಾರಿ ದಾನಿಯ, ಅತಿಶೂರನಾಗಿರುವ ಶೂರನ, ಮತ್ತು ತನ್ನ ಪ್ರಜ್ಞೆಯ ಕುರಿತು ಅಭಿಮಾನಿಯಾಗಿರವ ಮೂಢನ ಬಳಿಹೋಗಲು ಅದೃಷ್ಟವು ಭಯಪಡುತ್ತದೆ. ವೇದಗಳ ಫಲವು ಅಗ್ನಿಹೋತ್ರದಲ್ಲಿದೆ, ವಿದ್ಯೆಯ ಫಲವು ನಡತೆಯಲ್ಲಿದೆ, ಪತ್ನಿಯ ಫಲವು ರತಿಸುಖ ಮತ್ತು ಮಕ್ಕಳಲ್ಲಿದೆ, ಹಾಗೂ ಧನದ ಫಲವು ಕೊಡುವುದರಲ್ಲಿ ಮತ್ತು ಭೋಗಿಸುವುದರಲ್ಲಿದೆ. ಅಧರ್ಮದಿಂದ ಗಳಿಸಿದ ಧನದಿಂದ ಸಾವಿನ ನಂತರಕ್ಕೆಂದು ಏನೆಲ್ಲ ಮಾಡುತ್ತಾನೋ ಅದರ ಫಲವನ್ನು ಸತ್ತ ನಂತರ ಪಡೆಯುವುದಿಲ್ಲ. ಏಕೆಂದರೆ ಅವನ ಧನವು ಕೆಟ್ಟದರಿಂದ ಬಂದಿರುತ್ತದೆ. ಜೀವವು ಇನ್ನೂ ಉಳಿದಿರುವವರಿಗೆ ಕಾಂತಾರ-ವನ-ದುರ್ಗಗಳಲ್ಲಿ, ಕಷ್ಟ-ಆಪತ್ತುಗಳಲ್ಲಿ, ಉದ್ವೇಗಗಳಲ್ಲಿ, ಮೇಲೆತ್ತಿರುವ ಶಸ್ತ್ರಗಳಿಂದ ಭಯವಿಲ್ಲ. ಏಳಿಗೆಗಾಗಿ ಪ್ರಯತ್ನ, ಸಂಯಮ, ದಕ್ಷತೆ, ಪ್ರಮಾದಗೊಳ್ಳದಿರುವುದು, ಧೃತಿ, ಸ್ಮೃತಿ, ಸಮೀಕ್ಷೆ ಮತ್ತು ಒಳ್ಳೆಯ ಆರಂಭಗಳು ಏಳಿಗೆಯ ಮೂಲಗಳೆಂದು ತಿಳಿ. ತಪಸ್ಸು ತಾಪಸರ ಬಲ; ಬ್ರಹ್ಮವು ಬ್ರಹ್ಮವಿದರ ಬಲ; ಹಿಂಸೆಯು ಕೆಟ್ಟವರ ಬಲ ಮತ್ತು ಕ್ಷಮೆಯು ಗುಣವಂತರ ಬಲ. ಈ ಎಂಟು ವ್ರತವನ್ನು ಕೆಡಿಸುವುದಿಲ್ಲ – ನೀರು, ಗೆಡ್ಡೆ, ಹಣ್ಣು, ಹಾಲು, ಹವಿಸ್ಸು, ಬ್ರಾಹ್ಮಣನ ಬಯಕೆ, ಗುರುವಿನ ಮಾತು ಮತ್ತು ಔಷಧ. ಯಾವುದು ತನಗೆ ಪ್ರತಿಕೂಲವಲ್ಲವೋ ಅದನ್ನು ಇತರರಿಗೆ ಮಾಡಬಾರದು. ಇದೇ ಧರ್ಮದ ಸಾರಾಂಶ. ಇದಕ್ಕೆ ಹೊರತಾದುದು ಕಾಮದಿಂದ ನಡೆಯುತ್ತದೆ. ಕ್ರೋಧವನ್ನು ಅಕ್ರೋಧದಿಂದ ಜಯಿಸಬೇಕು; ಅಸಾಧುವಾದನ್ನು ಸಾಧುವಾದುದರಿಂದ ಜಯಿಸಬೇಕು; ಜಿಪುಣತೆಯನ್ನು ದಾನದಿಂದ ಜಯಿಸಬೇಕು ಮತ್ತು ಸುಳ್ಳನ್ನು ಸತ್ಯದಿಂದ ಜಯಿಸಬೇಕು. ಸ್ತ್ರೀಯರಲ್ಲಿ. ಧೂರ್ತರಲ್ಲಿ, ಆಲಸಿಯರಲ್ಲಿ, ಹೇಡಿಗಳಲ್ಲಿ, ಚಂಡರಲ್ಲಿ, ಪೌರುಷದ ಮಾತನಾಡುವವರಲ್ಲಿ, ಚೋರರಲ್ಲಿ, ಕೃತಘ್ನರಲ್ಲಿ, ಮತ್ತು ನಾಸ್ತಿಕರಲ್ಲಿ ವಿಶ್ವಾಸವನ್ನಿಡಬಾರದು. ಅಭಿವಾದನ ನಡತೆಯುಳ್ಳವನ ಮತ್ತು ವೃದ್ಧರ ಸೇವೆಯಲ್ಲಿರುವವನ ಬಳಿ ನಿತ್ಯವೂ ಈ ನಾಲ್ಕು ವೃದ್ಧಿಯಾಗುತ್ತವೆ - ಕೀರ್ತಿ, ಆಯುಷ್ಯ, ಯಶಸ್ಸು ಮತ್ತು ಬಲ.
“ತುಂಬಾ ಕಷ್ಟಪಡಬೇಕಾಗಿರುವ, ಅಥವಾ ಧರ್ಮವನ್ನು ಮೀರಿ ನಡೆದುಕೊಳ್ಳಬೇಕಾಗಿರುವ ಅಥವಾ ಶತ್ರುಗಳಿಗೆ ತಲೆಬಾಗಿಸಬೇಕಾಗಿ ಬರುವ ಸಂಪತ್ತಿನ ಮೇಲೆ ಮನಸ್ಸನ್ನಿಡಬೇಡ. ವಿದ್ಯೆಯಿಲ್ಲದ ಪುರುಷನು ಶೋಚನೀಯ; ಮಕ್ಕಳಿಲ್ಲದ ದಂಪತಿಗಳು ಶೋಚನೀಯರು; ನಿರಾಹಾರರಾಗಿರುವ ಪ್ರಜೆಗಳು ಶೋಚನೀಯರು ಮತ್ತು ರಾಜನಿಲ್ಲದ ರಾಷ್ಟ್ರವು ಶೋಚನೀಯವಾದುದು. ಪ್ರಯಾಣವು ಶರೀರವಿದ್ದವರನ್ನು ಮುಪ್ಪಾಗಿಸುತ್ತದೆ; ಮಳೆಯು ಪರ್ವತಗಳನ್ನು ಮುಪ್ಪಾಗಿಸುತದೆ; ಸಂಭೋಗಮಾಡದೇ ಇರುವುದರಿಂದ ಸ್ತ್ರೀಯರು ಮುಪ್ಪಾಗುತ್ತಾರೆ; ಕಠೋರ ಮಾತುಗಳು ಮನಸ್ಸನ್ನು ಮುಪ್ಪಾಗಿಸುತ್ತವೆ. ಹೇಳದೇ ಇರುವುದರಿಂದ ವೇದಗಳು ಕುಂದುತ್ತವೆ. ವ್ರತಗಳಿಲ್ಲದಿದ್ದರೆ ಬ್ರಾಹ್ಮಣರು ಕುಂದುತ್ತಾರೆ. ಸಾಧ್ವಿಯು ಕುತೂಹಲದಿಂದ ಕುಂದುತ್ತಾಳೆ ಮತ್ತು ಸ್ತ್ರೀಯರು ಮನೆಯ ಹೊರಗೆ ಹೋಗುವುದರಿಂದ ಕುಂದುತ್ತಾರೆ. ಚಿನ್ನವು ಬೆಳ್ಳಿಯಿಂದ ಕೆಡುತ್ತದೆ, ಬೆಳ್ಳಿಯು ತಗಡಿನಿಂದ ಕೆಡುತ್ತದೆ, ತಗಡು ಸೀಸದಿಂದ ಕೆಡುತ್ತದೆ, ಮತ್ತು ಸೀಸವು ಕೊಳೆಯಿಂದ ಕೆಡುತ್ತದೆ. ಇನ್ನೂ ಮಲಗುವುದರಿಂದ ನಿದ್ರೆಯನ್ನು ಗೆಲ್ಲಲಾಗದು; ಕಾಮದಿಂದ ಸ್ತ್ರೀಯನ್ನು ಗೆಲ್ಲಲಾಗದು; ಇಂಧನದಿಂದ ಬೆಂಕಿಯನ್ನು ಗೆಲ್ಲಲಾಗದು ಮತ್ತು ಕುಡಿಯುವುದರಿಂದ ಮದ್ಯವನ್ನು ಗೆಲ್ಲಲಾಗದು. ಕೊಡುವುದರಿಂದ ಮಿತ್ರರನ್ನು ಗಳಿಸಿದವನು, ಶತ್ರುಗಳನ್ನು ಯುದ್ಧದಲ್ಲಿ ಜಯಿಸಿದವನು, ಅನ್ನಪಾನಗಳಿಂದ ಪತ್ನಿಯರನ್ನು ಗೆದ್ದವನ ಜೀವನವು ಸಫಲವಾಗುತ್ತದೆ. ಸಾವಿರವಿದ್ದವರೂ ಜೀವಿಸುತ್ತಾರೆ, ಮತ್ತು ಹಾಗೆಯೇ ನೂರಿದ್ದವರೂ ಕೂಡ ಜೀವಿಸುತ್ತಾರೆ. ಆದುದರಿಂದ ಇಚ್ಛೆಗಳನ್ನು ಬಿಡಬೇಕು. ಬದುಕಲಿಕ್ಕಾಗುವುದಿಲ್ಲ ಎನ್ನುವ ಹಾಗೆ ಏನೂ ಇಲ್ಲ. ಈ ಭೂಮಿಯಲ್ಲಿರುವ ಅಕ್ಕಿ, ಬಂಗಾರ, ಪಶುಗಳು ಮತ್ತು ಸ್ತ್ರೀಯರು ಎಲ್ಲವೂ ಒಬ್ಬನಿಗೂ ಸಾಕಾಗುವುದಿಲ್ಲ. ಇದನ್ನು ನೋಡಿ ಮೋಸಹೋಗಬೇಡ. ಇನ್ನೊಮ್ಮೆ ಹೇಳುತ್ತಿದ್ದೇನೆ. ನಿನ್ನ ಮತ್ತು ಪಾಂಡುವಿನ ಮಕ್ಕಳಲ್ಲಿ ಸಮತೆಯಿಂದ ನೀನು ನಡೆದುಕೊಂಡರೆ ನಿನ್ನ ಮಕ್ಕಳೊಂದಿಗೆ ಚೆನ್ನಾಗಿರಬಲ್ಲೆ.
“ಒಳ್ಳೆಯವರು ಹೇಳಿದಂತೆ, ಏನೂ ಸಿದ್ಧತೆಗಳಿಲ್ಲದೇ, ಬಹಳ ಶಕ್ತಿಯನ್ನುಪಯೋಗಿಸಿದೇ ಕಾರ್ಯವನ್ನು ಮಾಡುವವರಿಗೆ ಬೇಗನೇ ಯಶಸ್ಸು ದೊರೆಯುತ್ತದೆ. ಪ್ರಸನ್ನವಾಗಿದ್ದಾಗಲೇ ಒಳ್ಳೆಯದು ಸುಖವನ್ನು ತರುತ್ತದೆ. ಅಧರ್ಮಯುಕ್ತವಾದ ಮಹಾ ಕಾರ್ಯವನ್ನು ಯಾವ ಸಂತನು ಎಚ್ಚರಿಕೆಯನ್ನು ನೀಡದೇ ನಿಲ್ಲಿಸುತ್ತಾನೋ ಅವನು ಸುಖವಾದ ನಿದ್ದೆಯನ್ನು ಪಡೆಯುತ್ತಾನೆ ಮತ್ತು ಸರ್ಪವು ಪೊರೆಬಿಡುವಂತೆ ತನ್ನ ದುಃಖಗಳನ್ನು ಕಳಚಿಕೊಳ್ಳುತ್ತಾನೆ. ಒಳ್ಳೆಯದಕ್ಕಾಗಿ ಚರ್ಚೆನಡೆಯುತ್ತಿರುವಾಗ ಸುಳ್ಳನ್ನು ಹೇಳುವುದು, ರಾಜ ದ್ರೋಹ, ಮತ್ತು ಗುರುವಿನ ಎದಿರು ಅಪ್ರಮಾಣೀಕನಾಗಿರುವುದು ಇವು ಬ್ರಹ್ಮಹತ್ಯೆಯ ಸಮ. ಅಸೂಯೆ, ಮೃತ್ಯು ಮತ್ತು ಅತಿವಾದದ ಒಂದೇ ಒಂದು ಪದವೂ ಶ್ರೀಯನ್ನು ಕೊಲ್ಲುತ್ತದೆ. ಅವಿಧೇಯತೆ, ಅವಸರ ಮತ್ತು ಶ್ಲಾಘನೆಗಳು ವಿದ್ಯೆಯ ಮೂರು ಶತ್ರುಗಳು. ಸುಖಾರ್ಥಿಯು ಹೇಗೆ ವಿದ್ಯೆಯನ್ನು ಪಡೆಯುತ್ತಾನೆ? ವಿದ್ಯಾರ್ಥಿಗೆ ಸುಖವಿಲ್ಲ. ಸುಖಾರ್ಥಿಯು ವಿದ್ಯೆಯನ್ನು ತೊರೆಯಬೇಕು ಅಥವಾ ವಿದ್ಯಾರ್ಥಿಯು ಸುಖವನ್ನು ತ್ಯಜಿಸಬೇಕು. ಅಗ್ನಿಗೆ ಕಟ್ಟಿಗೆಯ ತೃಪ್ತಿಯೆಂಬುದಿಲ್ಲ, ಸಾಗರಕ್ಕೆ ನದಿಗಳ ತೃಪ್ತಿಯಾಯಿತು ಎನ್ನುವುದಿಲ್ಲ, ಯಮನಿಗೆ ಸರ್ವಭೂತಗಳ ಮತ್ತು ಪುರುಷರಿಗೆ ಸುಂದರ ಕಣ್ಣಿನ ಸ್ತ್ರೀಯರ ತೃಪ್ತಿಯೆನ್ನುವುದಿಲ್ಲ. ಆಸೆಯು ಧೃತಿಯನ್ನು ಕೊಲ್ಲುತ್ತದೆ. ಸಮೃದ್ಧಿಯನ್ನು ಮರಣವು ಕೊಲ್ಲುತ್ತದೆ. ಕ್ರೋಧವು ಶ್ರೀಯನ್ನು ಮತ್ತು ಕದರ್ಯತೆಯು ಯಶಸ್ಸನ್ನು ಕೊಲ್ಲುತ್ತದೆ. ಅಪಾಲನೆಯು ಪಶುಗಳನ್ನು ಕೊಲ್ಲುತ್ತದೆ ಮತ್ತು ಕೃದ್ಧನಾದ ಒಬ್ಬನೇ ಬ್ರಾಹ್ಮಣನು ರಾಷ್ಟ್ರವನ್ನು ಕೊಲ್ಲುತ್ತಾನೆ. ಮನೆಯಲ್ಲಿ ಯಾವಾಗಲೂ ಇವುಗಳನ್ನು ಇಟ್ಟುಕೊಂಡಿರಬೇಕು: ಆಡು, ಕಂಚು, ರಥ, ಮಧು, ಔಷಧಿ, ಪಕ್ಷಿ, ಶ್ರೋತ್ರಿ, ಸಂಬಂಧಿಕನಾದ ವೃದ್ಧ, ಮತ್ತು ಕಷ್ಟದ ದಿನಗಳನ್ನು ಎದುರಿಸುತ್ತಿರುವ ಗೆಳೆಯ. ಅದೃಷ್ಟಕ್ಕೆ ಮತ್ತು ದೇವ, ಬ್ರಾಹ್ಮಣ ಮತ್ತು ಅತಿಥಿಗಳ ಪೂಜನಕ್ಕಾಗಿ ಮನೆಯಲ್ಲಿ ಇವನ್ನು ಇಟ್ಟುಕೊಳ್ಳಬೇಕೆಂದು ಮನುವು ಹೇಳಿದ್ದಾನೆ: ಆಡು, ಎತ್ತು, ಚಂದನ, ವೀಣೆ, ಕನ್ನಡಿ, ಜೇನುತುಪ್ಪ ಮತ್ತು ಬೆಣ್ಣೆ, ವಿಷ, ಔದುಂಬರ, ಶಂಖ, ಸುವರ್ಣ, ಸುಗಂಧ, ಮತ್ತು ರೋಚನ. ಈಗ ನಾನು ಹೇಳುವುದು ಸರ್ವಪರವಾದುದು, ಪುಣ್ಯ ಪದವಾದುದು ಮತ್ತು ಮಹಾವಿಶಿಷ್ಟವಾದುದು. ಕಾಮಕ್ಕಾಗಲೀ, ಭಯಕ್ಕಾಗಲೀ, ಲೋಭಕ್ಕಾಗಲೀ ಮತ್ತು ಜೀವದ ಕಾರಣಕ್ಕಾಗಲೀ ಧರ್ಮವನ್ನು ತ್ಯಜಿಸಬಾರದು. ಧರ್ಮವು ನಿತ್ಯ. ಸುಖ-ದುಃಖಗಳು ಅನಿತ್ಯ. ಜೀವವು ನಿತ್ಯ. ದೇಹವು ಅನಿತ್ಯ. ಅನಿತ್ಯವನ್ನು ತೊರೆದು ನಿತ್ಯದಲ್ಲಿ ನೆಲೆಸು. ಅದರಿಂದ ಸಂತೋಷ, ಅತಿಯಾದ ತೃಪ್ತಿ, ಮತ್ತು ಲಾಭವನ್ನೂ ಪಡೆಯುತ್ತೀಯೆ. ಮಹಾಸೇನೆಗಳನ್ನು ಮಹಾನುಭಾವರನ್ನು ನೋಡು: ಧನಧಾನ್ಯಗಳಿಂದ ತುಂಬಿದ ಭೂಮಿಯನ್ನು ಆಳಿ, ವಿಪುಲ ಭೋಗಗಳನ್ನೂ, ರಾಜ್ಯಗಳನ್ನೂ ತೊರೆದು ನರೇಂದ್ರರು ಅಂತಕನ ವಶರಾಗಿ ಹೋದರು. ಮೃತನ ಪುತ್ರನು ದುಃಖದಿಂದ ತುಂಬಿರಲು ಮನುಷ್ಯರು ಅವನನ್ನು ಎತ್ತಿಕೊಂಡು ಸ್ವಗೃಹದ ಹೊರಗೆ ತೆಗೆದುಕೊಂಡು ಹೋಗಿ, ಆ ಕೂದಲು ಕೆದರಿದ, ಕರುಣವಾಗಿ ರೋದಿಸುತ್ತಿರುವವರು ಅವನನ್ನು ಚಿತೆಯ ಮಧ್ಯದಲ್ಲಿ ಕಟ್ಟಿಗೆಯಂತೆ ಎಸೆಯುತ್ತಾರೆ. ತೀರಿಕೊಂಡವನ ಶರೀರವನ್ನು ಕಾಗೆ-ಅಗ್ನಿಗಳು ಮುಗಿಸುವಂತೆ ಅವನ ಧನವನ್ನು ಬೇರೆಯವರು ಭೋಗಿಸುತ್ತಾರೆ. ಇಲ್ಲಿಂದ ಅಲ್ಲಿಗೆ ಎರಡೇ ವಿಷಯಗಳನ್ನು ತೆಗೆದುಕೊಂಡು ಹೋಗುತ್ತೇವೆ: ಪುಣ್ಯ ಮತ್ತು ಪಾಪ. ಬಾಂಧವರು, ಸ್ನೇಹಿತರು ಮತ್ತು ಮಕ್ಕಳು ಅಗ್ನಿಗೆ ಹಾಕಿ ಹಿಂದಿರುಗಿ ಹೋಗುತ್ತಾರೆ. ಸ್ವಯಂಕೃತ ಕರ್ಮಗಳೇ ಪುರುಷನನ್ನು ಹಿಂಬಾಲಿಸಿ ಬರುತ್ತವೆ.
“ಈ ಲೋಕದ ಮೇಲೂ ಮತ್ತು ಕೆಳಗೂ ಮಹಾ ಅಂಧಕಾರದ ಲೋಕಗಳಿವೆ. ಅಲ್ಲಿಯೇ ಇಂದ್ರಿಯಗಳು ಮಹಾ ಮೋಹಕ್ಕೊಳಗಾಗುತ್ತವೆ ಎಂದು ತಿಳಿದುಕೋ. ಈ ಮಾತುಗಳನ್ನು ಜಾಗ್ರತೆಯಿಂದ ಕೇಳಿಕೊಂಡು ಅದರಂತೆಯೇ ನಡೆದುಕೊಂಡರೆ ನೀನು ಜೀವ ಲೋಕದಲ್ಲಿ ಪರಮ ಯಶಸ್ಸನ್ನು ಪಡೆಯುತ್ತೀಯೆ. ಇಲ್ಲಿ ಅಥವಾ ಅಲ್ಲಿ ನಿನಗೆ ಭಯವಿರುವುದಿಲ್ಲ. ಆತ್ಮವನ್ನು ನದಿಯೆಂದೂ, ಮಾಡಿದ ಪುಣ್ಯಗಳು ಅದರ ತೀರ್ಥಗಳೆಂದು, ಸತ್ಯವು ಅದರಲ್ಲಿರುವ ನೀರೆಂದೂ, ಧೃತಿಯು ಅದರ ದಡವೆಂದೂ, ಕರುಣೆಯು ಅದರ ಅಲೆಗಳೆಂದೂ ಹೇಳುತ್ತಾರೆ. ಪುಣ್ಯಕರ್ಮಿಯು ಅದರಲ್ಲಿ ಸ್ನಾನಮಾಡಿ ಶುದ್ಧನಾಗುತ್ತಾನೆ. ಆತ್ಮವು ಪುಣ್ಯಕರವು. ಕಾಮಕ್ರೋಧಗಳು ಈ ನದಿಯ ಮೊಸಳೆಗಳು, ಪಂಚೇಂದ್ರಿಯಗಳು ನೀರು. ಧೃತಿಯನ್ನು ನಾವೆಯನ್ನಾಗಿ ಮಾಡಿಕೊಂಡು ಜನ್ಮವೆನ್ನುವ ಕಂದರವನ್ನು ದಾಟು. ಯಾರು ಪ್ರಜ್ಞಾವೃದ್ಧ, ಧರ್ಮವೃದ್ಧ, ವಿದ್ಯಾವೃದ್ಧ ಮತ್ತು ವಯಸ್ಸಿನಲ್ಲಿಯೂ ವೃದ್ಧನಾದ ಸ್ವಬಂಧುವನ್ನು ಕಾರ್ಯಾಕಾರ್ಯಗಳಲ್ಲಿ ಪೂಜಿಸಿ, ಸಂತೋಷಗೊಳಿಸಿ, ಕೇಳಿ ತಿಳಿದುಕೊಳ್ಳುತ್ತಾನೋ ಅವನು ಎಂದೂ ದಾರಿ ತಪ್ಪುವುದಿಲ್ಲ. ಧೃತಿಯಿಂದ ಶಿಶ್ನ-ಹೊಟ್ಟೆಗಳನ್ನು, ಕಣ್ಣಿನಿಂದ ಕೈಕಾಲುಗಳನ್ನು, ಮನಸ್ಸಿನಿಂದ ಕಣ್ಣು-ಕಿವಿಗಳನ್ನು ಮತ್ತು ಕರ್ಮಗಳಿಂದ ಮನಸ್ಸು-ಮಾತುಗಳನ್ನು ರಕ್ಷಿಸಿಕೊಳ್ಳಬೇಕು. ನಿತ್ಯವೂ ಸ್ನಾನಮಾಡುವ, ನಿತ್ಯವೂ ಯಜ್ಞೋಪವೀತವನ್ನು ಧರಿಸುವ, ನಿತ್ಯವೂ ಸ್ವಾಧ್ಯಾಯದಲ್ಲಿ ತೊಡಗಿರುವ, ಅಶುದ್ಧ ಆಹಾರವನ್ನು ವರ್ಜಿಸುವ, ಸತ್ಯವನ್ನು ಹೇಳುವ, ಗುರುವಿನ ಕೆಲಸವನ್ನು ಮಾಡಿಕೊಡುವ ಬ್ರಾಹ್ಮಣನು ಬ್ರಹ್ಮಲೋಕದಿಂದ ಬೀಳುವುದಿಲ್ಲ. ವೇದಾಧ್ಯಯನ ಮಾಡಿ, ಅಗ್ನಿಯನ್ನು ಇಷ್ಟಿ-ಯಜ್ಞಗಳಿಂದ ಪರಿಪಾಲಿಸಿಕೊಂಡು ಪ್ರಜೆಗಳನ್ನು ಪಾಲಿಸುವ, ಗೋ-ಬ್ರಾಹ್ಮಣರ ಸಲುವಾಗಿ ಶಸ್ತ್ರಗಳನ್ನುಪಯೋಗಿಸಿ ಅಂತರಾತ್ಮನನ್ನು ಶುದ್ಧೀಕರಿಸಿಕೊಂಡ, ಮತ್ತು ಸಂಗ್ರಾಮದಲ್ಲಿ ಹತನಾದ ಕ್ಷತ್ರಿಯನು ಸ್ವರ್ಗವನ್ನೇರುತ್ತಾನೆ. ಅಧ್ಯಯನ ಮಾಡಿದ, ಕಾಲಕ್ಕೆ ತಕ್ಕಂತೆ ಧನವನ್ನು ಬ್ರಾಹ್ಮಣರಲ್ಲಿ, ಕ್ಷತ್ರಿಯರಲ್ಲಿ ಮತ್ತು ಆಶ್ರಿತರಲ್ಲಿ ಹಂಚಿಕೊಂಡ, ಮೂರು ಅಗ್ನಿಗಳಿಂದ ಶುದ್ಧೀಕರಿಸಲ್ಪಟ್ಟ ಪುಣ್ಯ ಧೂಮವನ್ನು ಆಘ್ರಾಣಿಸಿದ ವೈಶ್ಯನು ಮರಣದ ನಂತರ ಸ್ವರ್ಗದಲ್ಲಿ ದೇವಸುಖವನ್ನು ಭೋಗಿಸುತ್ತಾನೆ. ಕ್ರಮೇಣವಾಗಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯವರ್ಣದವರನ್ನು ಸರಿಯಾಗಿ ಪೂಜಿಸಿದ ಶೂದ್ರನು, ತನ್ನ ಪಾಪಗಳನ್ನು ದಹಿಸಿಕೊಂಡು, ದೇಹವನ್ನು ತೊರೆದ ನಂತರ, ವ್ಯಥೆಗಳಿಲ್ಲದ ಸ್ವರ್ಗಸುಖಗಳನ್ನು ಭೋಗಿಸುತ್ತಾನೆ. ನಾನು ಏಕೆ ನಿನಗೆ ಚಾತ್ರುರ್ವಣ್ಯಗಳ ಧರ್ಮದ ಕುರಿತು ಹೇಳಿದೆನೆನ್ನುವುದನ್ನು ಕೇಳು. ಪಾಂಡುಪುತ್ರನು ಕ್ಷಾತ್ರಧರ್ಮದ ಕೊರತೆಯಲ್ಲಿದ್ದಾನೆ. ನೀನು ಅವನಿಗೆ ರಾಜಧರ್ಮದೊಂದಿಗೆ ಜೋಡಿಸು.”
ಧೃತರಾಷ್ಟ್ರನು ಹೇಳಿದನು: “ಸೌಮ್ಯ! ಇದನ್ನೇ ನೀನು ನಿತ್ಯವೂ ನನಗೆ ಹೇಳಿಕೊಂಡು ಬಂದಿದ್ದೀಯೆ. ನನ್ನ ಬುದ್ಧಿಯೂ ಕೂಡ ನೀನು ಹೇಳುವುದಕ್ಕೆ ಸ್ಪಂದಿಸುತ್ತದೆ. ಸದಾ ನನ್ನ ಬುದ್ಧಿಯು ಪಾಂಡವರ ಕಡೆಯೇ ಇರುತ್ತದೆ. ಆದರೆ ದುರ್ಯೋಧನನೊಡನೆ ಇರುವಾಗ ಪುನಃ ಅದು ಹಿಂದಿರುಗುತ್ತದೆ. ಯಾವ ಮನುಷ್ಯನೂ ತನ್ನ ವಿಧಿಯನ್ನು ಅತಿಕ್ರಮಿಸಲು ಶಕ್ಯನಿಲ್ಲ. ವಿಧಿಯೇ ಎಲ್ಲವನ್ನೂ ಮಾಡುತ್ತದೆ. ಪುರುಷ ಪ್ರಯತ್ನವು ನಿರರ್ಥಕ ಎಂದು ನನಗನ್ನಿಸುತ್ತದೆ. ವಿದುರ! ಇನ್ನೂ ಏನನ್ನಾದರೂ ಹೇಳುವುದಿದ್ದರೆ ಹೇಳು. ನಾನು ಕೇಳಲು ಸಿದ್ಧನಿದ್ದೇನೆ. ನಿನ್ನ ಮಾತು ಸ್ವಾರಸ್ಯವಾಗಿದೆ.”
ವಿದುರನು ಹೇಳಿದನು: “ಧೃತರಾಷ್ಟ್ರ! ಪುರಾಣನೂ ಸನಾತನನೂ ಆದ ಕುಮಾರ ಸನತ್ಸುಜಾತನು ಮೃತ್ಯುವಿಲ್ಲವೆಂದು ಹೇಳಿದನು. ಸರ್ವಬುದ್ಧಿಮತರಲ್ಲಿ ಶ್ರೇಷ್ಠನಾದ ಅವನು ನಿನಗೆ ಗುಹ್ಯವಾಗಿರುವ ಎಲ್ಲದರ ಮೇಲೆ ಬೆಳಕನ್ನು ಬೀರಿ ನಿನ್ನ ಹೃದಯದಲ್ಲಿ ನೆಲೆಸುವಂತೆ ಹೇಳುತ್ತಾನೆ.”
ಧೃತರಾಷ್ಟ್ರನು ಹೇಳಿದನು: “ಆ ಸನಾತನ ಋಷಿಯು ನನಗೆ ಏನನ್ನು ಹೇಳಲಿದ್ದಾನೆಯೋ ಅದು ನಿನಗೆ ತಿಳಿದಿಲ್ಲವೇ? ವಿದುರ! ಅದನ್ನು ನೀನೇ ಹೇಳು. ಅಷ್ಟಕ್ಕೆ ನಿನ್ನಲ್ಲಿ ಪ್ರಜ್ಞೆಯಿದೆ.”
ವಿದುರನು ಹೇಳಿದನು: “ನಾನು ಶೂದ್ರಯೋನಿಯಲ್ಲಿ ಹುಟ್ಟಿದ್ದುದರಿಂದ ನಾನು ಇಷ್ಟರವರಗೆ ಹೇಳಿದುದಕ್ಕಿಂತ ಹೆಚ್ಚು ಹೇಳುವುದಿಲ್ಲ. ಆ ಕುಮಾರನಲ್ಲಿರುವ ವೇದಗಳ ಕುರಿತಾದ ಜ್ಞಾನವು ಶಾಶ್ವತವೆಂದು ನನಗನ್ನಿಸುತ್ತದೆ. ಬ್ರಾಹ್ಮಣ ಯೋನಿಯಲ್ಲಿ ಜನಿಸಿದ ಅವನು ತುಂಬಾ ಗುಹ್ಯವಾದುದನ್ನೂ ತಿಳಿದಿದ್ದಾನೆ. ದೇವತೆಗಳು ಅವನನ್ನು ನಿಂದಿಸುವುದಿಲ್ಲ. ಆದುದರಿಂದ ಇದನ್ನು ನಿನಗೆ ಹೇಳುತ್ತಿದ್ದೇನೆ.”
ಧೃತರಾಷ್ಟ್ರನು ಹೇಳಿದನು: “ವಿದುರ! ಈ ದೇಹದಲ್ಲಿದ್ದುಕೊಂಡು ನಾನು ಹೇಗೆ ಆ ಪುರಾಣ ಸನಾತನನನ್ನು ಸಂದರ್ಶಿಸಬಲ್ಲೆ ಹೇಳು!”
ಆಗ ವಿದುರನು ಆ ಸಂಶಿತವ್ರತ ಋಷಿಯ ಕುರಿತು ಚಿಂತಿಸಿದನು. ಅವನು ಚಿಂತಿಸುತ್ತಿರುವುದನ್ನು ತಿಳಿದು ಋಷಿಯು ಅಲ್ಲಿ ಕಾಣಿಸಿಕೊಂಡನು. ಆಗ ಅವನನ್ನು ವಿಧಿವತ್ತಾಗಿ ಬರಮಾಡಿಕೊಂಡು, ಸುಖವಾಗಿ ಕುಳಿತುಕೊಂಡು, ಸ್ವಲ್ಪ ವಿಶ್ರಾಂತಿಯನ್ನು ಪಡೆಯಲು ವಿದುರನು ಹೇಳಿದನು: “ಭಗವನ್! ಧೃತರಾಷ್ಟ್ರನ ಮನಸ್ಸಿನಲ್ಲಿ ಕೆಲವು ಸಂಶಯಗಳಿವೆ. ನನಗೆ ಶಕ್ಯವಾದಷ್ಟನ್ನು ನಾನು ಹೇಳಿದ್ದೇನೆ. ಯಾವುದನ್ನು ಕೇಳಿ ಈ ಮನುಷ್ಯೇಂದ್ರನು ಸುಖ-ದುಃಖಗಳನ್ನೂ, ಲಾಭಾ-ಲಾಭಗಳನ್ನೂ, ಪ್ರೀತಿ-ದ್ವೇಷಗಳನ್ನೂ, ಮುಪ್ಪು-ಮೃತ್ಯುಗಳನ್ನೂ, ಭಯ-ಮಾತ್ಸರ್ಯಗಳನ್ನೂ, ಹಸಿವು-ಬಾಯಾರಿಕೆಗಳನ್ನೂ, ಮದ ಮತ್ತು ವೈಭವ, ಅರತಿ, ಆಲಸ್ಯ, ಕಾಮ-ಕ್ರೋಧ ಮತ್ತು ಕ್ಷಯ-ಉದಯಗಳನ್ನು ದಾಟಬಹುದೋ ಅದನ್ನು ನೀನೂ ಅವನಿಗೆ ಹೇಳಬೇಕು.” ಆಗ ಮನೀಷೀ ರಾಜಾ ಧೃತರಾಷ್ಟ್ರನು ವಿದುರನ ಮಾತನ್ನು ಗೌರವಿಸಿ, ಪರಮ ಬುದ್ಧಿಯನ್ನು ಪಡೆಯಲೋಸುಗ, ಮಹಾತ್ಮ ಸನತ್ಸುಜಾತನಿಗೆ ರಹಸ್ಯದಲ್ಲಿ ಕೇಳಿದನು.