ತೀರ್ಥಯಾತ್ರಾ ಮಹಾತ್ಮೆ: ಪುಲಸ್ತ್ಯ-ಭೀಷ್ಮರ ಸಂವಾದ
ಹಿಂದೆ ಧಾರ್ಮಿಕರಲ್ಲಿ ಶ್ರೇಷ್ಠ, ಮಹಾತೇಜಸ್ವಿ ಭೀಷ್ಮನು ಪಿತೃ ವ್ರತವನ್ನು ಪಾಲಿಸುತ್ತಾ ದೇವಗಂಧರ್ವರಿಂದ, ದೇವರ್ಷಿಗಳಿಂದ ಸೇವಿಸಲ್ಪಟ್ಟ ಸುಂದರ ಪ್ರದೇಶ, ಪುಣ್ಯಪ್ರದೇಶ ಗಂಗಾತಟದಲ್ಲಿ ಮುನಿಯಂತೆ ವಾಸಿಸುತ್ತಿದ್ದನು. ಆ ಪರಮದ್ಯುತಿಯು ಪಿತೃ ದೇವ ಮತ್ತು ಋಷಿ ತರ್ಪಣಗಳನ್ನಿತ್ತು ಅವರನ್ನು ವಿಧಿವತ್ತಾದ ಕರ್ಮಗಳಿಂದ ತೃಪ್ತಿಗೊಳಿಸುತ್ತಿದ್ದನು. ಕೆಲವು ಸಮಯದ ನಂತರ ಜಪದಲ್ಲಿ ನಿರತನಾಗಿದ್ದ ಆ ಮಹಾತಪಸ್ವಿಯು ಅದ್ಭುತಸಂಕಾಶ ಋಷಿಸತ್ತಮ ಪುಲಸ್ತ್ಯನನ್ನು ಕಂಡನು. ತೇಜಸ್ಸಿನಿಂದ ಬೆಳಗುತ್ತಿರುವ ಆ ಉಗ್ರತಪಸ್ವಿಯನ್ನು ನೋಡಿ ಅವನು ಅತುಲ ಹರ್ಷ ಮತ್ತು ವಿಸ್ಮಯ ಎರಡರಿಂದಲೂ ಪೀಡಿತನಾದನು. ಧಾರ್ಮಿಕರಲ್ಲಿ ಶ್ರೇಷ್ಠ ಭೀಷ್ಮನು ಅವನನ್ನು ಕುಳ್ಳಿರಿಸಿ ವಿಧಿವತ್ತಾದ ಕರ್ಮಗಳಿಂದ ಪೂಜಿಸಿದನು. ಅರ್ಘ್ಯವನ್ನು ಶಿರದಲ್ಲಿ ಧರಿಸಿ ಶುಚಿಯಾದ ಮತ್ತು ತೀಕ್ಷ್ಣಮನಸ್ಸಿನಿಂದ ಆ ಬ್ರಹ್ಮರ್ಷಿಸತ್ತಮನಿಗೆ ತನ್ನ ಹೆಸರನ್ನು ಹೇಳಿಕೊಂಡನು: “ನಿನಗೆ ಮಂಗಳವಾಗಲಿ. ಸುವ್ರತ! ನಾನು ಭೀಷ್ಮ ನಿನ್ನ ದಾಸನಾಗಿದ್ದೇನೆ. ನಿನ್ನ ಸಂದರ್ಶನ ಮಾತ್ರದಿಂದ ಸರ್ವ ಕಿಲ್ಬಿಶಗಳಿಂದ ಮುಕ್ತನಾಗಿದ್ದೇನೆ.”
ಧಾರ್ಮಿಕರಲ್ಲಿ ಶ್ರೇಷ್ಠ ಭೀಷ್ಮನು ಹೀಗೆ ಹೇಳಿ ಮಾತುಗಳು ಹೊರಬರದೇ ಅಂಜಲೀಬದ್ಧನಾಗಿ ಸುಮ್ಮನೇ ನಿಂತುಕೊಂಡನು. ನಿಯಮ ಮತ್ತು ಸ್ವಾಧ್ಯಾಯಗಳಿಂದ ಕೃಶನಾಗಿದ್ದ ಕುರುಕುಲಶ್ರೇಷ್ಠ ಭೀಷ್ಮನನ್ನು ನೋಡಿ ಮುನಿ ಪುಲಸ್ತ್ಯನು ಪ್ರೀತ ಮನಸ್ಕನಾಗಿ ಹೇಳಿದನು: “ಧರ್ಮಜ್ನ! ನಿನ್ನ ಈ ಪ್ರಶ್ರಯ, ದಮ ಮತ್ತು ಸತ್ಯ ಎಲ್ಲದರಿಂದ ನಾನು ತುಷ್ಟನಾಗಿದ್ದೇನೆ. ನಿನ್ನ ಈ ಧರ್ಮ ಮತ್ತು ಪಿತೃಭಕ್ತಿಯಲ್ಲಿ ನಿರತನಾಗಿರುವುದರಿಂದಲೇ ನನ್ನನ್ನು ನೀನು ಕಾಣುತ್ತಿದ್ದೀಯೆ. ನಾನೂ ಕೂಡ ನಿನ್ನ ಮೇಲಿನ ಪ್ರೀತಿಯಿಂದ ಕಾಣಿಸಿಕೊಂಡಿದ್ದೇನೆ. ನಾನು ಅಮೋಘದರ್ಶಿ. ನಿನಗೆ ನನ್ನಿಂದ ಏನಾಗಬೇಕು ಹೇಳು. ನಿನಗೆ ಬೇಕಾದ್ದನ್ನು ಕೊಡುತ್ತೇನೆ.”
ಆಗ ಭೀಷ್ಮನು ಹೇಳಿದನು: “ಮಹಾಭಾಗ! ಸರ್ವಲೋಕಪೂಜಿತನಾದ ನೀನು ಪ್ರೀತನಾದೆಯೆಂದರೆ ನನ್ನ ಕೆಲಸವು ಆದ ಹಾಗೆಯೇ. ಯಾಕೆಂದರೆ ಪ್ರಭು ನಿನ್ನಲ್ಲಿಯೇ ನನ್ನ ದೃಷ್ಠಿಯಿತ್ತು. ನನ್ನ ಮೇಲೆ ನಿನ್ನ ಅನುಗ್ರಹವಿದ್ದರೆ ನನ್ನ ಹೃದಯದಲ್ಲಿರುವ ಸಂದೇಹವೊಂದನ್ನು ಹೇಳಿಕೊಳ್ಳುತ್ತೇನೆ. ಅದನ್ನು ಬಗೆಹರಿಸು. ನನಗೆ ತೀರ್ಥಗಳ ಕುರಿತು ಒಂದು ಧರ್ಮಸಂಶಯವಿದೆ. ನಿನ್ನಿಂದ ಇವುಗಳ ಸಂಕೀರ್ತನೆಯನ್ನು ಕೇಳಲು ಇಚ್ಛಿಸುತ್ತೇನೆ. ಪೃಥಿವಿಯನ್ನು ಪ್ರದಕ್ಷಿಣೆ ಮಾಡಿದವನಿಗೆ ಯಾವ ಫಲವು ದೊರೆಯುತ್ತದೆ ಎನ್ನುವುದನ್ನು ಹೇಳು.”
ಪುಲಸ್ತ್ಯನು ಹೇಳಿದನು: “ಋಷಿಗಳ ಅಂತಿಮ ಗುರಿ ತೀರ್ಥಗಳ ಫಲವನ್ನು ಹೇಳುತ್ತೇನೆ. ಮಗೂ! ಏಕಾಗ್ರಮನಸ್ಕನಾಗಿ ಕೇಳು. ಯಾರು ಹಸ್ತ, ಪಾದ, ಮನಸ್ಸು, ವಿದ್ಯೆ, ತಪಸ್ಸು ಮತ್ತು ಕೀರ್ತಿಗಳನ್ನು ಗೆದ್ದಿದ್ದಾನೆಯೋ ಅವನು ತೀರ್ಥಫಲವನ್ನು ಹೊಂದುತ್ತಾನೆ. ಯಾರು ವಸ್ತುಗಳಿಂದ ನಿವೃತ್ತಿಹೊಂದಿ, ಸಂತುಷ್ಟನಾಗಿ, ಹಿಡಿತದಲ್ಲಿದ್ದು ಅಹಂಕಾರ ನಿವೃತ್ತನಾಗಿದ್ದಾನೋ ಅವನಿಗೆ ತೀರ್ಥಫಲವು ದೊರೆಯುತ್ತದೆ. ವಂಚನೆಯಿಲ್ಲದ, ಯೋಜನೆಗಳನ್ನು ಇಟ್ಟುಕೊಂಡಿರದ, ಅಲ್ಪಾಹಾರಿ, ಜಿತೇಂದ್ರಿಯ, ಸರ್ವ ದೋಷಗಳಿಂದ ವಿಮುಕ್ತನಾದವನಿಗೆ ತೀರ್ಥಫಲವು ದೊರೆಯುತ್ತದೆ. ಸಿಟ್ಟೇ ಇಲ್ಲದ, ಸತ್ಯಶೀಲ, ಧೃಢವ್ರತ, ಸರ್ವ ಭೂತಗಳಲ್ಲಿ ತನ್ನನ್ನೇ ಕಾಣುವವನಿಗೆ ತೀರ್ಥಫಲವು ದೊರೆಯುತ್ತದೆ. ವೇದಗಳಲ್ಲಿ ಋಷಿಗಳು ಕ್ರತುಗಳ ಯಥಾಕ್ರಮಗಳನ್ನು ಹಾಗೂ ಇಹ-ಪರಗಳಲ್ಲಿ ಅವುಗಳಿಂದ ದೊರೆಯುವ ಫಲಗಳನ್ನೆಲ್ಲವನ್ನೂ ಯಥಾವತ್ತಾಗಿ ಹೇಳಿದ್ದಾರೆ. ದರಿದ್ರರು ಯಜ್ನಗಳನ್ನು ನಡೆಸಲು ಶಕ್ಯರಿರುವುದಿಲ್ಲ. ಯಾಕೆಂದರೆ ಯಜ್ನಕ್ಕೆ ಬಹಳ ಉಪಕರಣಗಳು ಮತ್ತು ವಿಸ್ತಾರವಾದ ನಾನಾ ಸಂಗ್ರಹಗಳು ಬೇಕಾಗುತ್ತವೆ. ಪಾರ್ಥಿವರು ಅಥವಾ ಸಮೃದ್ಧಿಯನ್ನು ಹೊಂದಿದ ನರರು ಮಾತ್ರ ಇವುಗಳನ್ನು ನೆರವೇರಿಸಬಹುದೇ ಹೊರತು ಸಾಧನ ಉಪಕರಣಗಳನ್ನು ಹೊಂದದೇ ಇರುವವರು, ಒಬ್ಬಂಟಿಗರು ಅಥವಾ ನೆಲೆಯಿಲ್ಲದವರಿಂದ ಇವು ಆಗುವಂತಹುದ್ದಲ್ಲ. ಈ ದರಿದ್ರರೂ ಕೂಡ ಯಜ್ಞಫಲ ಸಮಾನ ಪುಣ್ಯವನ್ನು ಪಡೆಯಲು ಶಕ್ಯವಾಗಿರುವ ವಿಧಿಯ ಕುರಿತು ಕೇಳು. ತೀರ್ಥಯಾತ್ರೆಯ ಪುಣ್ಯವು ಯಜ್ಞಗಳಿಗಿಂತ ವಿಶೇಷವಾದದ್ದು ಎನ್ನುವುದು ಋಷಿಗಳ ಒಂದು ಪರಮ ಗುಟ್ಟು. ಯಾರು ಮೂರು ರಾತ್ರಿಯೂ ಉಪವಾಸ ಮಾಡಲಿಲ್ಲವೋ, ತೀರ್ಥಯಾತ್ರೆಯನ್ನು ಮಾಡಲಿಲ್ಲವೋ ಮತ್ತು ಕಾಂಚನ-ಗೋವುಗಳನ್ನು ಕೊಡಲಿಲ್ಲವೋ ಅವನನ್ನು ದರಿದ್ರನೆಂದು ಕರೆಯಲಾಗುತ್ತದೆ. ತೀರ್ಥಯಾತ್ರೆಯಿಂದ ಪಡೆದುಕೊಳ್ಳುವಷ್ಟು ಫಲವನ್ನು ವಿಪುಲ ದಕ್ಷಿಣೆಗಳನ್ನಿತ್ತು ಅಗ್ನಿಷ್ಠೋಮ ಯಾಗವನ್ನು ಮಾಡುವುದರಿಂದಲೂ ದೊರೆಯುವುದಿಲ್ಲ.
“ನರಲೋಕದಲ್ಲಿ ಮಹಾಭಾಗ್ಯವಂತನು ತ್ರೈಲೋಕ್ಯವಿಶೃತ ಪುಷ್ಕರ ಎಂಬ ಹೆಸರಿನಿಂದ ವಿಖ್ಯಾತ ದೇವದೇವನ ತೀರ್ಥವನ್ನು ನೋಡುವನು. ತ್ರಿಸಂಧ್ಯಾ ಸಮಯಗಳಲ್ಲಿ ಪುಷ್ಕರದಲ್ಲಿ ಹತ್ತು ಕೋಟಿ ಸಹಸ್ರ ತೀರ್ಥಗಳು ಸಾನ್ನಿಧ್ಯವಾಗಿರುತ್ತವೆ. ಅಲ್ಲಿ ಆದಿತ್ಯರು, ವಸುಗಳು, ರುದ್ರರು, ಸಾಧ್ಯರು, ಮರುತ್, ಗಂಧರ್ವ ಮತ್ತು ಅಪ್ಸರ ಗಣಗಳು ನಿತ್ಯವೂ ಸನ್ನಿಹಿತವಾಗಿರುತ್ತಾರೆ. ಅಲ್ಲಿಯೇ ದೇವತೆಗಳು, ದೈತ್ಯರು ಮತ್ತು ಬ್ರಹ್ಮರ್ಷಿಗಳು ತಪಸ್ಸನ್ನು ತಪಿಸಿ ಮಹತ್ತರ ಪುಣ್ಯ ಮತ್ತು ದಿವ್ಯಯೋಗಗಳನ್ನು ಪಡೆದರು. ಯಾವ ಮನಸ್ವಿಯು ಪುಷ್ಕರವನ್ನು ನೋಡುವ ಅಭಿಲಾಷೆಯನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಿರುತ್ತಾನೋ ಅವನು ಸರ್ವಪಾಪಗಳಿಂದಲೂ ಮುಕ್ತಿ ಹೊಂದಿ ಸ್ವರ್ಗದ ಬಾಗಿಲಿನಲ್ಲಿ ಪೂಜಿಸಲ್ಪಡುತ್ತಾನೆ. ಅದೇ ತೀರ್ಥದಲ್ಲಿ ದೇವದಾನವಸಮ್ಮತ ಪಿತಾಮಹನು ಪರಮ ಪ್ರೀತನಾಗಿ ವಾಸಿಸುತ್ತಾನೆ. ಋಷಿಗಳ ನಾಯಕತ್ವದಲ್ಲಿ ದೇವತೆಗಳು ಪುಷ್ಕರದಲ್ಲಿ ಮಹತ್ತರ ಪುಣ್ಯ-ಸಿದ್ಧಿಗಳನ್ನು ಹೊಂದಿದರು. ಪಿತೃದೇವಾರ್ಚನರತರು ಅಲ್ಲಿ ಸ್ನಾನ ಮಾಡಿದರೆ ಅವರಿಗೆ ಅಶ್ವಮೇಧದ ಹತ್ತು ಪಟ್ಟು ಪುಣ್ಯವು ದೊರೆಯುತ್ತದೆ ಎಂದು ತಿಳಿದವರು ಹೇಳುತ್ತಾರೆ. ಪುಷ್ಕರದ ಅರಣ್ಯದಲ್ಲಿ ವಾಸಿಸುವ ಒಬ್ಬ ವಿಪ್ರನಿಗಾದರೂ ಭೋಜನವಿತ್ತರೆ ಅವನು ಇಹದಲ್ಲಿಯೂ ಮತ್ತು ಪರದಲ್ಲಿಯೂ ಸುಖವನ್ನು ಹೊಂದುವನು. ಯಾರು ಸ್ವಯಂ ಶಾಕಮೂಲಫಲಗಳ ಮೇಲೆ ಜೀವಿಸಿ, ಅವುಗಳನ್ನು ಬ್ರಾಹ್ಮಣರಿಗೆ ಶ್ರದ್ಧಾಪೂರ್ವಕವಾಗಿ ಅಸೂಯೆಯಿಲ್ಲದೇ ಕೊಡುತ್ತಾರೋ ಅಂತಹ ಪ್ರಾಜ್ಞ ನರರು ಹಯಮೇಧಫಲವನ್ನು ಹೊಂದುತ್ತಾರೆ. ಮಹಾತ್ಮ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರರು ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಅವರು ಹೀನ ಯೋನಿಗಳಲ್ಲಿ ಹುಟ್ಟುವುದಿಲ್ಲ. ವಿಶೇಷವಾಗಿ ಯಾರು ಕಾರ್ತೀಕ ಹುಣ್ಣಿಮೆಯ ದಿನ ಪುಷ್ಕರಕ್ಕೆ ಹೋಗುತ್ತಾರೋ ಅವರ ಫಲವು ಅಕ್ಷಯವಾಗಿ ವೃದ್ಧಿಯಾಗುತ್ತದೆ. ಅಂಜಲೀ ಬದ್ಧನಾಗಿ ಸಾಯಂ ಪ್ರಾತಗಳಲ್ಲಿ ಪುಷ್ಕರವನ್ನು ಸ್ಮರಿಸುವುದು ಸರ್ವ ತೀರ್ಥಗಳಲ್ಲಿ ಸ್ನಾನಮಾಡಿದ ಹಾಗೆ. ಮತ್ತು ಆ ನರನು ಬ್ರಹ್ಮಲೋಕದಲ್ಲಿ ಅಕ್ಷಯ ಸ್ಥಾನವನ್ನು ಪಡೆಯುತ್ತಾನೆ. ಪುಷ್ಕರದಲ್ಲಿ ಸ್ನಾನ ಮಾತ್ರದಿಂದ ಸ್ತ್ರೀ ಅಥವಾ ಪುರುಷರ ಜನ್ಮಪ್ರಭೃತಿ ಪಾಪಗಳೆಲ್ಲವೂ ನಾಶವಾಗುತ್ತವೆ. ಹೇಗೆ ಸರ್ವ ಸುರರ ಆದಿಯು ಮಧುಸೂದನನೋ ಹಾಗೆ ತೀರ್ಥಗಳ ಆದಿ ಪುಷ್ಕರವೆಂದು ಹೇಳಲಾಗಿದೆ. ಪುಷ್ಕರದಲ್ಲಿ ಹನ್ನೆರಡು ವರ್ಷಗಳು ಶುಚಿಯಾಗಿ ನಿಯತ್ತಿನಿಂದ ವಾಸಿಸುವವನು ಸರ್ವ ಕ್ರತುಗಳ ಫಲವನ್ನು ಹೊಂದುತ್ತಾನೆ ಮತ್ತು ಬ್ರಹ್ಮಲೋಕವನ್ನು ಸೇರುತ್ತಾನೆ. ಸಂಪೂರ್ಣವಾಗಿ ಒಂದು ನೂರು ವರ್ಷಗಳು ಪುಷ್ಕರದಲ್ಲಿ ಅಗ್ನಿಹೋತ್ರವನ್ನು ಮಾಡುವುದೂ ಮತ್ತು ಅಲ್ಲಿ ಕಾರ್ತೀಕದ ಒಂದು ಹುಣ್ಣಿಮೆಯನ್ನು ಕಳೆಯುವುದು ಎರಡೂ ಒಂದೇ. ಪುಷ್ಕರಕ್ಕೆ ಹೋಗುವುದೇ ದುಷ್ಕರ, ಪುಷ್ಕರದಲ್ಲಿ ತಪಸ್ಸನ್ನು ಮಾಡುವುದು ದುಷ್ಕರ, ಪುಷ್ಕರದಲ್ಲಿ ದಾನಮಾಡುವುದು ದುಷ್ಕರ, ಮತ್ತು ಅಲ್ಲಿ ವಾಸಿಸುವುದು ಇನ್ನೂ ದುಷ್ಕರ.
“ಪುಷ್ಕರದಲ್ಲಿ ಹನ್ನೆರಡು ರಾತ್ರಿಗಳನ್ನು ನಿಯತ್ತಿನಿಂದ ಮತ್ತು ಲಘು ಆಹಾರದಿಂದ ಕಳೆದ ನಂತರ ಅದಕ್ಕೆ ಒಂದು ಪ್ರದಕ್ಷಿಣೆಯನ್ನು ಮಾಡಿ ಜಂಬೂಮಾರ್ಗವನ್ನು ಪ್ರವೇಶಿಸಬೇಕು. ದೇವ, ಋಷಿ ಮತ್ತು ಪಿತೃ ಸೇವಿತ ಜಂಬೂಮಾರ್ಗವನ್ನು ಪ್ರವೇಶಿಸಿದವನು ಅಶ್ವಮೇಧಫಲವನ್ನು ಹೊಂದಿ ವಿಷ್ಣುಲೋಕವನ್ನು ಸೇರುತ್ತಾನೆ. ಆರರಲ್ಲಿ ಒಂದು ಬಾರಿ ಮಾತ್ರ ಆಹಾರ ಸೇವಿಸುತ್ತಾ ಅಲ್ಲಿ ಐದು ರಾತ್ರಿಗಳನ್ನು ಕಳೆದ ನರನು ದುರ್ಗತಿಯನ್ನು ಹೊಂದದೇ ಉತ್ತಮ ಸಿದ್ಧಿಯನ್ನು ಪಡೆಯುತ್ತಾನೆ.
“ಜಂಬೂಮಾರ್ಗದಿಂದ ಹೊರಟು ಅವನು ತಂಡುಲಿಕಾಶ್ರಮಕ್ಕೆ ಹೋಗುವುದರಿಂದ ದುರ್ಗತಿಯನ್ನು ಹೊಂದದೇ ಸ್ವರ್ಗಲೋಕದಲ್ಲಿ ಪೂಜಿಸಿಕೊಳ್ಳುತ್ತಾನೆ. ಅಲ್ಲಿಂದ ಅಗಸ್ತ್ಯಸರೋವರವನ್ನು ತಲುಪಿ ಅಲ್ಲಿ ಮೂರು ರಾತ್ರಿ ಪಿತೃದೇವಾರ್ಚನೆಗಳಲ್ಲಿ ನಿರತನಾದವನಿಗೆ ಅಗ್ನಿಷ್ಟೋಮ ಫಲವು ದೊರೆಯುತ್ತದೆ. ಶ್ರೀಜುಷ್ಟ ಲೋಕಪೂಜಿತ ಕಣ್ವಾಶ್ರಮವನ್ನು ಸೇರಿ ಅಲ್ಲಿ ಫಲ ಮತ್ತು ಶಾಕಾಹಾರಿಯಾಗಿ ಇರುವವನು ಕೌಮಾರಪದವನ್ನು ಪಡೆಯುತ್ತಾನೆ. ಆ ಧರ್ಮಾರಣ್ಯದಲ್ಲಿ ಕಾಲಿಡುತ್ತಲೇ ಪುಣ್ಯವನ್ನು ಪಡೆದು ಪಾಪಗಳಿಂದ ವಿಮೋಚನಗೊಳ್ಳುತ್ತಾರೆ. ಅಲ್ಲಿ ನಿಯಮಿತ ಆಹಾರವನ್ನು ತಿಂದು, ನಿಯತ್ತಿನಿಂದ ಪಿತೃ-ದೇವತೆಗಳನ್ನು ಅರ್ಚಿಸುವವನು ಸರ್ವಕಾಮಗಳನ್ನೂ ನೀಡಬಲ್ಲ ಯಜ್ಞದ ಫಲವನ್ನು ಹೊಂದುತ್ತಾನೆ. ಕಣ್ವಾಶ್ರಮಕ್ಕೆ ಪ್ರದಕ್ಷಿಣೆಮಾಡಿ ಯಯಾತಿಯು ಬಿದ್ದ ಸ್ಥಳಕ್ಕೆ ಹೋಗಬೇಕು. ಅಲ್ಲಿ ಅವನು ಅಶ್ವಮೇಧ ಯಜ್ಞದ ಫಲವನ್ನು ಪಡೆಯುತ್ತಾನೆ. ಅಲ್ಲಿಂದ ನಿಯತನಾಗಿ, ನಿಯಮಿತ ಆಹಾರವನ್ನು ತೆಗೆದುಕೊಂಡು, ಮಹಾಕಾಲನಲ್ಲಿಗೆ ಹೋಗಬೇಕು. ಅಲ್ಲಿ ಕೋಟಿತೀರ್ಥದಲ್ಲಿ ಸ್ನಾನಮಾಡಿದರೆ ಅಶ್ವಮೇಧದ ಫಲವು ದೊರೆಯುತ್ತದೆ. ನಂತರ ಭದ್ರವಟ ಎಂಬ ಹೆಸರಿನಿಂದ ಮೂರೂ ಲೋಕಗಳಲ್ಲಿ ಪ್ರಸಿದ್ಧವಾದ ಉಮಾಪತಿಯ ಪುಣ್ಯಸ್ಥಾನಕ್ಕೆ ಹೋಗಬೇಕು. ಅಲ್ಲಿರುವ ಈಶ್ವರನ ಬಳಿ ಹೋದರೆ ಸಾವಿರ ಗೋವುಗಳನ್ನು ದಾನವನ್ನಿತ್ತ ಫಲವು ದೊರೆಯುತ್ತದೆ ಮತ್ತು ಮಹಾದೇವನ ಪ್ರಸಾದದಿಂದ ಗಣಸ್ಥಾನವನ್ನು ಪಡೆಯುತ್ತಾನೆ. ಮೂರು ಲೋಕಗಳಿಲ್ಲಿಯೂ ಪ್ರಸಿದ್ಧ ನರ್ಮದಾ ನದಿಯನ್ನು ಸೇರಿ ಪಿತೃ ಮತ್ತು ದೇವತೆಗಳಿಗೆ ತರ್ಪಣಗಳನ್ನಿತ್ತರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ. ದಕ್ಷಿಣ ನದಿಯನ್ನು ಸೇರಿ ಬ್ರಹ್ಮಚಾರಿಯಾಗಿ, ಇಂದ್ರಿಯಗಳನ್ನು ಗೆದ್ದವನು ಅಗ್ನಿಷ್ಟೋಮ ಯಾಗದ ಫಲವನ್ನು ಹೊಂದುತ್ತಾನೆ ಮತ್ತು ವಿಮಾನವನ್ನು ಏರುತ್ತಾನೆ. ನಿಯತನಾಗಿ, ನಿಯಮಿತ ಆಹಾರವನ್ನು ಸೇವಿಸುತ್ತಾ ಚರ್ಮಣ್ವತಿಯನ್ನು ಸೇರಿದರೆ ಅಲ್ಲಿ ರಂತಿದೇವನ ಕೃಪೆಗೆ ಪಾತ್ರನಾಗಿ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ. ನಂತರ ಹಿಮಾಲಯದ ಮಗ ಅರ್ಬುದಕ್ಕೆ ಹೋಗಬೇಕು. ಅಲ್ಲಿ ಹಿಂದೆ ಭೂಮಿಯ ಕಿಂಡಿಯಿತ್ತು. ಅಲ್ಲಿ ಮೂರು ಲೋಕಗಳಲ್ಲಿಯೂ ವಿಶ್ರುತ ವಸಿಷ್ಠನ ಆಶ್ರಮವಿದೆ. ಅಲ್ಲಿ ಒಂದು ರಾತ್ರಿಯನ್ನು ಕಳೆದವನಿಗೆ ಸಾವಿರ ಗೋವುಗಳನ್ನು ದಾನವಿತ್ತ ಫಲವು ದೊರೆಯುತ್ತದೆ. ಬ್ರಹ್ಮಚಾರಿಯಾಗಿದ್ದುಕೊಂಡು, ಜಿತೇಂದ್ರಿಯನಾಗಿದ್ದುಕೊಂಡು ಪಿಂಗತೀರ್ಥದಲ್ಲಿ ಸ್ನಾನಮಾಡಿದರೆ ಒಂದು ನೂರು ಕೆಂಪು ಗೋವುಗಳನ್ನು ದಾನಮಾಡಿಕೊಟ್ಟ ಪುಣ್ಯವು ದೊರೆಯುತ್ತದೆ.
“ನಂತರ ಲೋಕವಿಶ್ರುತ ಪ್ರಭಾಸಕ್ಕೆ ಹೋಗಬೇಕು. ಅಲ್ಲಿ ಸ್ವಯಂ ದೇವತೆಗಳ ಮುಖ, ವೀರ, ಅನಿಲ ಸಾರಥಿ, ಅನಲ ಹುತಾಶನನು ಸದಾ ಇರುತ್ತಾನೆ. ಆ ಶ್ರೇಷ್ಠ ತೀರ್ಥದಲ್ಲಿ ಸ್ನಾನಮಾಡಿ ಶುಚಿಯಾಗಿ ವಿನಯಮನಸ್ಕನಾಗಿರುವ ಮನುಷ್ಯನಿಗೆ ಅಗ್ನಿಷ್ಟೋಮ ಮತ್ತು ಅತಿರಾತ್ರಿ ಯಾಗಗಳ ಫಲವು ದೊರೆಯುತ್ತದೆ. ನಂತರ ಸರಸ್ವತಿ ಸಾಗರಗಳ ಸಂಗಮಕ್ಕೆ ಹೋದರೆ ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಪಡೆದು ಸ್ವರ್ಗಲೋಕದಲ್ಲಿ ನಿತ್ಯವೂ ಅಗ್ನಿಯಂತೆ ಬೆಳಗುತ್ತಿರುವ ಉನ್ನತ ಸ್ಥಾನವು ದೊರೆಯುತ್ತದೆ. ಅಲ್ಲಿ ಮೂರು ರಾತ್ರಿಗಳು ಉಳಿದು ಪಿತೃಗಳಿಗೆ ಮತ್ತು ದೇವತೆಗಳಿಗೆ ತರ್ಪಣವನ್ನು ನೀಡಿದರೆ ಸೋಮನಂತೆ ಪ್ರಭೆಯನ್ನು ಹೊಂದುತ್ತಾನೆ ಮತ್ತು ಅಶ್ವಮೇಧದ ಫಲವನ್ನು ಪಡೆಯುತ್ತಾನೆ. ನಂತರ ಎಲ್ಲಿ ವಿಷ್ಣುವು ದುರ್ವಾಸನಿಗೆ ವರವನ್ನಿತ್ತನೋ ಆ ವರದಾನ ಎನ್ನುವ ತೀರ್ಥಕ್ಕೆ ಹೋಗಬೇಕು. ವರದಾನದಲ್ಲಿ ಮಿಂದ ನರನು ಸಹಸ್ರಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಪಡೆಯುತ್ತಾನೆ. ನಂತರ ನಿಯತನಾಗಿ, ನಿಯಮಿತ ಆಹಾರವನ್ನು ಸೇವಿಸುತ್ತಾ ದ್ವಾರವತಿಗೆ ಹೋಗಬೇಕು. ಪಿಂಡಾರಕದಲ್ಲಿ ಸ್ನಾನಮಾಡಿದ ನರನಿಗೆ ಬಹಳಷ್ಟು ಚಿನ್ನವನ್ನು ದಾನಮಾಡಿದ ಪುಣ್ಯವು ದೊರೆಯುತ್ತದೆ. ಆ ತೀರ್ಥದಲ್ಲಿ ಉತ್ತಮ ಲಕ್ಷಣಗಳನ್ನು ಹೊಂದಿದ ಅದ್ಭುತ ಮುದ್ರೆಗಳನ್ನು ಹೊಂದಿದ ಕಮಲಗಳು ಈಗಲೂ ಕಾಣುತ್ತವೆ. ಆ ಕಮಲಗಳಲ್ಲಿ ತ್ರಿಶೂಲದ ಆಕಾರವು ಕಾಣುತ್ತದೆ. ಮತ್ತು ಅಲ್ಲಿಯೇ ಮಹಾದೇವನ ಸಾನ್ನಿಧ್ಯವೂ ಇದೆ. ಸಾಗರ ಮತ್ತು ಸಿಂಧುನದಿಯ ಸಂಗಮವನ್ನು ಸೇರಿ ಸಲಿಲರಾಜನ ತೀರ್ಥದಲ್ಲಿ ಸ್ನಾನಮಾಡಿ, ವಿನಯಮನಸ್ಕನಾಗಿ, ಪಿತೃಗಳಿಗೂ, ದೇವತೆಗಳಿಗೂ, ಋಷಿಗಳಿಗೂ ತರ್ಪಣವನ್ನಿತ್ತರೆ, ತನ್ನದೇ ತೇಜಸ್ಸಿನಿಂದ ಬೆಳಗುತ್ತಾ ವರುಣಲೋಕವನ್ನು ಹೊಂದುತ್ತಾನೆ. ದೇವ ಶಂಕುಕರ್ಣೇಶ್ವರನನ್ನು ಅರ್ಚಿಸಿದ ಮನುಷ್ಯನು ಅಶ್ವಮೇಧಯಾಗದ ಹತ್ತರಷ್ಟು ಪುಣ್ಯವನ್ನು ಪಡೆಯುತ್ತಾನೆ. ಅದನ್ನು ಪ್ರದಕ್ಷಿಣೆಮಾಡಿ ದೃಮ ಎಂಬ ಹೆಸರಿನಿಂದ ಮೂರೂ ಲೋಕಗಳಲ್ಲಿಯೂ ವಿಶ್ರುತವಾದ, ಸರ್ವಪಾಪವಿಮೋಚಕವೆಂದು ವಿಖ್ಯಾತವಾದ ತೀರ್ಥಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳು ಮಹೇಶ್ವರನನ್ನು ಉಪಾಸಿಸುತ್ತಾರೆ. ಅಲ್ಲಿ ಸ್ನಾನಮಾಡಿ, ದೇವಗಣಗಳಿಂದ ಸುತ್ತುವರೆಯಲ್ಪಟ್ಟ ರುದ್ರನನ್ನು ಪೂಜಿಸಿದ ನರನು ಹುಟ್ಟಿದಾಗಿನಿಂದ ಮಾಡಿದ ಪಾಪಗಳಿಂದ ದೂರವಾಗುತ್ತಾನೆ. ಸರ್ವದೇವತೆಗಳು ಅಲ್ಲಿರುವ ದೃಮಿಯನ್ನು ಪ್ರಶಂಸಿಸುತ್ತಾರೆ. ಅಲ್ಲಿ ಸ್ನಾನ ಮಾಡಿ ಅಶ್ವಮೇಧದ ಫಲವನ್ನು ಹೊಂದಬಹುದು. ಇಲ್ಲಿಯೇ ಮಹಾಪ್ರಾಜ್ಞ ಪ್ರಭು ವಿಷ್ಣುವು ದೇವತೆಗಳ ಕಂಟಕರನ್ನು ಸಂಹರಿಸಿ ತನ್ನನ್ನು ಶುಚಿಪಡಿಸಿಕೊಂಡನು.
“ಅಲ್ಲಿಂದ ಪ್ರಶಂಸೆಗೆ ಪಾತ್ರ ವಸೋರ್ಧಾರಕ್ಕೆ ಹೋಗಬೇಕು. ಅಲ್ಲಿಗೆ ಕೇವಲ ಹೋಗುವುದರಿಂದಲೇ ಅಶ್ವಮೇಧದ ಫಲವು ದೊರೆಯುತ್ತದೆ. ಅಲ್ಲಿ ಸ್ನಾನಮಾಡಿ ದೇವತೆಗಳಿಗೆ ಮತ್ತು ಪಿತೃಗಳಿಗೆ ತರ್ಪಣವನ್ನಿತ್ತ ಮಾನವನು ವಿಷ್ಣುಲೋಕವನ್ನು ಹೊಂದುತ್ತಾನೆ. ಅಲ್ಲಿ ಶ್ರೇಷ್ಠವಾದ ಪುಣ್ಯಕರ ವಸುಗಳ ತೀರ್ಥವಿದೆ. ಅಲ್ಲಿ ಸ್ನಾನ ಮಾಡಿ ನೀರು ಕುಡಿದವರು ವಸುಗಳ ಪ್ರೀತಿಪಾತ್ರರಾಗುತ್ತಾರೆ. ಅಲ್ಲಿ ಸಿಂಧೂತ್ತಮ ಎಂದು ವಿಖ್ಯಾತ ಸರ್ವಪಾಪಗಳನ್ನೂ ನಾಶಪಡಿಸಬಲ್ಲ ತೀರ್ಥವಿದೆ. ಅಲ್ಲಿ ಸ್ನಾನಮಾಡಿದವನು ಬಹಳಷ್ಟು ಬಂಗಾರವನ್ನು ಪಡೆಯುತ್ತಾನೆ. ಬ್ರಹ್ಮತುಂಗವನ್ನು ಸೇರಿ ಅಲ್ಲಿ ಶುಚಿಯಾಗಿ, ಪ್ರಯತಮನಸ್ಕನಾಗಿ, ಉತ್ತಮ ಕೃತ್ಯಗಳನ್ನು ಮಾಡಿ, ಉತ್ಸುಕನಾಗಿರುವವನು ಬ್ರಹ್ಮಲೋಕವನ್ನು ಪಡೆಯುತ್ತಾನೆ. ಸಿದ್ಧರಿಂದ ಸೇವಿತ ಶಕ್ರನ ಕುಮಾರಿಗಳ ತೀರ್ಥದಲ್ಲಿ ಸ್ನಾನಮಾಡಿದ ನರನು ಕ್ಷಿಪ್ರವಾಗಿ ಶಕ್ರಲೋಕವನ್ನು ಹೊಂದುತ್ತಾನೆ. ಅಲ್ಲಿಯೇ ದೇವತೆಗಳು ಬರುವ ರೇಣುಕೆಯ ತೀರ್ಥವಿದೆ. ಅಲ್ಲಿ ಸ್ನಾನಮಾಡಿದ ವಿಪ್ರನು ಚಂದ್ರಮನಂತೆ ವಿಮಲನಾಗುತ್ತಾನೆ. ಅಲ್ಲಿಂದ ಪಂಚನದಕ್ಕೆ ಹೋಗಿ ನಿಯತನಾಗಿ, ನಿಯಮಿತ ಆಹಾರವನ್ನು ಸೇವಿಸಿಕೊಂಡಿದ್ದರೆ ಕ್ರಮೇಣವಾಗಿ ಪ್ರಶಂಸೆಗೊಳಗಾದ ಐದು ಯಜ್ಞಗಳ ಫಲವನ್ನು ಪಡೆಯುತ್ತಾನೆ. ನಂತರ ಭೀಮನ ಉತ್ತಮ ಸ್ಥಾನಗಳಿಗೆ ಹೋಗಬೇಕು. ಅಲ್ಲಿ ಸ್ನಾನಮಾಡಿದ ನರನು ದೇವಿಯ ಯೋನಿಯಲ್ಲಿ ಪುತ್ರನಾಗಿ ಜನಿಸುತ್ತಾನೆ. ಚಿನ್ನದ ಕರ್ಣಕುಂಡಲಗಳನ್ನು ಧರಿಸಿ ಅವನು ನೂರು ಸಾವಿರ ಗೋವುಗಳನ್ನು ಮಹಾ ಫಲವನ್ನಾಗಿ ಪಡೆಯುತ್ತಾನೆ. ಮೂರು ಲೋಕಗಳಲ್ಲಿ ವಿಶ್ರುತ ಗಿರಿಮುಂಜವನ್ನು ಸೇರಿ ಅಲ್ಲಿ ಪಿತಾಮಹನನ್ನು ನಮಸ್ಕರಿಸಿ ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಪಡೆಯಬಹುದು. ನಂತರ ಉತ್ತಮವಾದ ವಿಮಲ ತೀರ್ಥಕ್ಕೆ ಹೋಗಬೇಕು. ಈಗಲೂ ಕೂಡ ಅಲ್ಲಿ ಬಂಗಾರದ ಮತ್ತು ಬೆಳ್ಳಿಯ ಮೀನುಗಳನ್ನು ನೋಡಬಹುದು. ಅಲ್ಲಿ ಸ್ನಾನಮಾಡಿ ವಾಜಪೇಯ ಯಜ್ಞದ ಫಲವನ್ನು ಪಡೆಯಬಹುದು ಮತ್ತು ಸರ್ವಪಾಪಗಳನ್ನು ಕಳೆದುಕೊಂಡು ಶುದ್ಧಾತ್ಮನಾಗಿ ಪರಮ ಗತಿಯನ್ನು ಪಡೆಯಬಹುದು.
“ಅಲ್ಲಿಂದ ಮೂರು ಲೋಕಗಳಲ್ಲಿಯೂ ವಿಶ್ರುತ ಮಲದಕ್ಕೆ ಹೋಗಬೇಕು ಮತ್ತು ಸಾಯಂಕಾಲದ ಸಂಧ್ಯಾಸಮಯದಲ್ಲಿ ಯಥಾವಿಧಿಯಾಗಿ ಸಂಧ್ಯಾವಂದನೆಯನ್ನು ಮಾಡಬೇಕು. ಅಲ್ಲಿ ಯಥಾಶಕ್ತಿಯಾಗಿ ಚರುವನ್ನು ಅಗ್ನಿಗೆ ಆಹುತಿಯನ್ನಾಗಿ ನೀಡಬೇಕು. ಅಲ್ಲಿ ಪಿತೃಗಳಿಗೆ ನೀಡಿದುದು ಅಕ್ಷಯವಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಚರುವಿನ ಹೋಮವು ನೂರು ಸಾವಿರ ಗೋದಾನಗಳ ಫಲ, ನೂರು ರಾಜಸೂಯ ಯಜ್ಞಗಳ ಫಲ, ಮತ್ತು ಸಾವಿರ ಅಶ್ವಮೇಧ ಯಾಗಗಳ ಫಲಕ್ಕಿಂತ ಶ್ರೇಯಸ್ಸಾದುದು. ಅಲ್ಲಿಂದ ಹಿಂದಿರುಗಿ ವಸ್ತ್ರಾಪದದ ಕಡೆ ಹೋಗಬೇಕು. ಅಲ್ಲಿಯ ಮಹಾದೇವನಲ್ಲಿಗೆ ಹೋಗಿ ಅಶ್ವಮೇಧದ ಫಲವನ್ನು ಪಡೆಯಬಹುದು. ಮಣಿಮಂತಕ್ಕೆ ಹೋಗಿ ಬ್ರಹ್ಮಚಾರಿಯಾಗಿ, ಎಚ್ಚರದಿಂದಿದ್ದು, ಒಂದು ರಾತ್ರಿಯನ್ನು ಕಳೆದರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ. ಅಲ್ಲಿಂದ ಲೋಕವಿಶ್ರುತ ದೇವಿಕಕ್ಕೆ ಹೋಗಬೇಕು. ಮೂರು ಲೋಕಗಳಲ್ಲಿ ವಿಶ್ರುತವಾದ ಆ ತ್ರಿಶೂಲಪಾಣಿ ಶಿವನ ಸ್ಥಾನದಲ್ಲಿಯೇ ಬ್ರಾಹ್ಮಣರು ಹುಟ್ಟಿದರು ಎಂದು ಕೇಳಿದ್ದೇವೆ. ದೇವಿಕದಲ್ಲಿ ಸ್ನಾನಮಾಡಿ ಮಹೇಶ್ವರನನ್ನು ಪೂಜಿಸಿ ಯಥಾಶಕ್ತಿಯಾಗಿ ಚರುವನ್ನು ನಿವೇದಿಸಿದ ನರನು ಸರ್ವಕಾಮಸಮೃದ್ಧಿ ಯಜ್ಞದ ಫಲವನ್ನು ಪಡೆಯುತ್ತಾನೆ. ಅಲ್ಲಿ ದೇವರ್ಷಿಸೇವಿತ ಕಾಮ ಎನ್ನುವ ಹೆಸರಿನ ರುದ್ರನ ತೀರ್ಥವಿದೆ. ಅಲ್ಲಿ ಸ್ನಾನಮಾಡಿದ ನರನು ಕ್ಷಿಪ್ರದಲ್ಲಿಯೇ ಸಿದ್ಧಿಯನ್ನು ಹೊಂದುತ್ತಾನೆ. ಹಾಗೆಯೇ ಯಜನ, ಯಾಜನ ಮತ್ತು ಬ್ರಹ್ಮಾವಲುಕಗಳಿಗೆ ಹೋಗಿ ಅಲ್ಲಿ ಪುಷ್ಪನ್ಯಾಸದಲ್ಲಿ ಸ್ನಾನಮಾಡಿದನಂತರ ಮರಣದ ಕುರಿತು ಚಿಂತಿಸಬೇಕಾಗಿಲ್ಲ. ದೇವತೆಗಳು ಮತ್ತು ಋಷಿಗಳಿಂದ ಸೇವಿತಗೊಂಡ ಪುಣ್ಯ ದೇವಿಕವು ಅರ್ಧಯೋಜನ ವಿಸ್ತಾರವೂ ಐದು ಯೋಜನ ಅಗಲವೂ ಇದೆ ಎಂದು ಹೇಳುತ್ತಾರೆ.
“ಅನಂತರ ಕ್ರಮೇಣವಾಗಿ ದೀರ್ಘಸತ್ರಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳು, ಸಿದ್ಧರು, ಪರಮ ಋಷಿಗಳು ಯತವ್ರತರಾಗಿದ್ದು ದಕ್ಷಿಣೆಗಳಿಂದ ಕೂಡಿದ ದೀರ್ಘ ಸತ್ರವನ್ನು ನಡೆಸಿದ್ದರು. ದೀರ್ಘಸತ್ರಕ್ಕೆ ಹೋಗುವುದರಿಂದ ಮಾತ್ರ ಮಾನವರು ರಾಜಸೂಯ ಮತ್ತು ಅಶ್ವಮೇಧಗಳ ಫಲವನ್ನು ಹೊಂದುತ್ತಾರೆ. ಅನಂತರ ಉಪವಾಸದಲ್ಲಿದ್ದು, ನಿಯಮಿತ ಆಹಾರವನ್ನು ಸೇವಿಸುತ್ತಾ, ನಿಯತಕ್ಕೆ ಹೋಗಬೇಕು. ಅಲ್ಲಿ ಸರಸ್ವತಿಯು ಮರುಭೂಮಿಯಲ್ಲಿ ಮರೆಯಾಗಿ ಚಮಸಭೇದ, ಶಿವಭೇದ ಮತ್ತು ನಾಗಭೇದಗಳಾಗಿ ಕಾಣಿಸಿಕೊಳ್ಳುತ್ತಾಳೆ. ಚಮಸೋದ್ಭೇದದಲ್ಲಿ ಸ್ನಾನಮಾಡಿದರೆ ಅಗ್ನಿಷ್ಟೋಮದ ಫಲವು ದೊರೆಯುತ್ತದೆ. ಶಿವೋದ್ಬೇದದಲ್ಲಿ ಸ್ನಾನಮಾಡಿದ ಮನುಷ್ಯನಿಗೆ ಸಹಸ್ರಗೋವುಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ. ನಾಗೋದ್ಭೇದದಲ್ಲಿ ಸ್ನಾನಮಾಡಿ ಮನುಷ್ಯನು ನಾಗಲೋಕವನ್ನು ಸೇರುತ್ತಾನೆ. ನಂತರ ದುರ್ಲಭವಾದ ಶಶಾಯಾನ ತೀರ್ಥಕ್ಕೆ ಹೋಗಬೇಕು. ಅಲ್ಲಿ ಕಮಲಗಳು ವರ್ಷಪರ್ಯಂತ ಮೊಲಗಳ ರೂಪದಲ್ಲಿ ಅಡಗಿದ್ದು ಕಾರ್ತೀಕ ಹುಣ್ಣಿಮೆಯಂದು ಸರಸ್ವತಿಯಲ್ಲಿ ಮೀಯುತ್ತವೆ. ಅಲ್ಲಿ ಮೀಯುವುದರಿಂದ ಚಂದ್ರನಂತೆ ಹೊಳೆಯುತ್ತಾನೆ ಮತ್ತು ಸಹಸ್ರ ಗೋವುಗಳನ್ನು ದಾನವನ್ನಿತ್ತ ಫಲವನ್ನು ಪಡೆಯುತ್ತಾನೆ. ಕುಮಾರಕೋಟಿಯನ್ನು ತಲುಪಿ ನಿಯತನಾಗಿದ್ದು ಅಭೀಷೇಕಮಾಡಿ, ಪಿತೃ-ದೇವತೆಗಳ ಅರ್ಚನೆಯಲ್ಲಿ ತೊಡಗುವವನು ಗವಾಮಯನಾಗುತ್ತಾನೆ ಮತ್ತು ಅವನ ಕುಲವೂ ಉದ್ಧಾರಗೊಳ್ಳುತ್ತದೆ.
“ಅನಂತರ ಸಮಾಹಿತನಾಗಿ ರುದ್ರಕೋಟಿಗೆ ಹೋಗಬೇಕು. ಅಲ್ಲಿ ಹಿಂದೆ ಕೋಟಿ ಋಷಿಗಳು ಸಂತೋಷದಿಂದ ಸಂವಿಷ್ಟರಾಗಿ ದೇವನ ದರ್ಶನವನ್ನು ಬಯಸಿ ಸೇರಿದ್ದರು. “ವೃಷಭಧ್ವಜನನ್ನು ನಾನು ಮೊದಲು ನೋಡುತ್ತೇನೆ! ನಾನು ಮೊದಲು ನೋಡುತ್ತೇನೆ!” ಎಂದು ಋಷಿಗಳು ಅಲ್ಲಿ ನೆರೆದಿದ್ದರು ಎಂದು ಹೇಳುತ್ತಾರೆ. ಆಗ ಯೋಗೇಶ್ವರನೂ ಕೂಡ ಯೋಗಸ್ಥನಾಗಿ, ಆ ಭವಿತಾತ್ಮ ಋಷಿಗಳು ಕೋಪಗೊಳ್ಳಬಾರದೆಂದು ಕೋಟಿ ರುದ್ರರನ್ನು ಸೃಷ್ಟಿಸಿ ಪ್ರತಿಯೊಬ್ಬರೂ ಮುಂದೆ ನಿಂತುಕೊಂಡು ನಾನೇ ಅವನನ್ನು ಎಲ್ಲರಗಿಂತ ಮೊದಲು ನೋಡಿದೆ ಎಂದು ಪ್ರತಿಯೊಬ್ಬರೂ ಹೇಳಿಕೊಳ್ಳುವಂತೆ ಮಾಡಿದನು. ಅವರ ಪರಮ ಭಕ್ತಿಯಿಂದ ಸಂತುಷ್ಟನಾದ ಮಹಾದೇವನು ಉಗ್ರತೇಜಸ್ವಿ ಋಷಿಗಳಿಗೆ “ಇಂದಿನಿಂದ ನಿಮ್ಮ ಧರ್ಮವು ವೃದ್ಧಿಯಾಗುತ್ತದೆ!” ಎಂದು ವರವನ್ನಿತ್ತನು. ಅಲ್ಲಿ ಸ್ನಾನಮಾಡಿ ಶುಚಿಯಾದ ನರನು ಅಶ್ವಮೇಧದ ಫಲವನ್ನು ಹೊಂದಿ ತನ್ನ ಕುಲವನ್ನು ಉದ್ಧರಿಸುತ್ತಾನೆ. ಅಲ್ಲಿಂದ, ಎಲ್ಲಿ ಬ್ರಹ್ಮಾದಿ ದೇವತೆಗಳು, ಋಷಿಗಳು ಮತ್ತು ಸಿದ್ಧ ಚಾರಣರು ಚೈತ್ರ ಶುದ್ಧ ಚತುರ್ದಶಿಯಂದು ಜನಾರ್ದನನನ್ನು ಪೂಜಿಸಲು ಆಗಮಿಸುತ್ತಾರೋ ಆ ಲೋಕವಿಶ್ರುತ ಮಹಾಪುಣ್ಯ ಸರಸ್ವತಿಯ ಸಂಗಮಕ್ಕೆ ಹೋಗಿ ಜನಾರ್ದನನನ್ನು ಪೂಜಿಸಬೇಕು. ಅಲ್ಲಿ ಸ್ನಾನಮಾಡಿದವನು ಬಹಳಷ್ಟು ಚಿನ್ನವನ್ನು ಪಡೆಯುವನು ಮತ್ತು ಸರ್ವಪಾಪಗಳನ್ನು ಕಳೆದುಕೊಂಡು ಶುದ್ಧಾತ್ಮನಾಗಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ. ಋಷಿಗಳು ಸತ್ರಗಳನ್ನು ಪೂರೈಸಿದ್ದ ಸತ್ರಾವಸಾನಕ್ಕೆ ಹೋದರೆ ಸಹಸ್ರ ಗೋವುಗಳ ದಾನದ ಫಲವು ದೊರೆಯುತ್ತದೆ.
“ಅಲ್ಲಿಂದ ತುಂಬಾ ಪ್ರಶಂಸನೆಗೊಳಗಾದ ಕುರುಕ್ಷೇತ್ರಕ್ಕೆ ಹೋಗಬೇಕು. ಅಲ್ಲಿ ಹೋದ ಸರ್ವ ಜೀವಿಗಳ ಪಾಪವಿಮೋಚನೆಯಾಗುತ್ತದೆ. “ಕುರುಕ್ಷೇತ್ರಕ್ಕೆ ಹೋಗುತ್ತೇನೆ! ಕುರುಕ್ಷೇತ್ರದಲ್ಲಿ ವಾಸಿಸುತ್ತೇನೆ!” ಎಂದು ಯಾರು ಸದಾ ಹೇಳುತ್ತಿರುತ್ತಾರೋ ಅಂಥವರೂ ಪಾಪಗಳಿಂದ ಮುಕ್ತರಾಗುತ್ತಾರೆ. ಎಲ್ಲಿ ಬ್ರಹ್ಮಾದಿ ದೇವತೆಗಳೂ, ಋಷಿ-ಸಿದ್ಧಚಾರಣರೂ, ಗಂಧರ್ವ-ಅಪ್ಸರೆಯರೂ, ಯಕ್ಷ-ಪನ್ನಗರೂ ಮಹಾಪುಣ್ಯವನ್ನು ಪಡೆದರೋ ಆ ಸರಸ್ವತೀ ತೀರದ ಬ್ರಹ್ಮಕ್ಷೇತ್ರದಲ್ಲಿ ಒಂದು ತಿಂಗಳು ವಾಸಿಸಬೇಕು. ಕುರುಕ್ಷೇತ್ರಕ್ಕೆ ಮನಸಾ ಹೋಗಲು ಬಯಸಿದರೂ ಪಾಪಗಳನ್ನು ಕಳೆದುಕೊಂಡು ಬ್ರಹ್ಮಲೋಕಕ್ಕೆ ಹೋಗುತ್ತಾರೆ. ಶ್ರದ್ಧಾಯುಕ್ತನಾಗಿ ಕುರುಕ್ಷೇತ್ರಕ್ಕೆ ಹೋಗುವುದರಿಂದ ಮಾನವನು ರಾಜಸೂಯ ಮತ್ತು ಅಶ್ವಮೇಧ ಯಾಗಗಳೆರಡರ ಫಲವನ್ನು ಪಡೆಯುತ್ತಾನೆ. ಅಲ್ಲಿಯ ದ್ವಾರಪಾಲ ಮಹಾಬಲಿ ಯಕ್ಷ ಮಚಕ್ರುಕನನ್ನು ನಮಸ್ಕರಿಸುವುದರಿಂದ ಸಹಸ್ರ ಗೋವುಗಳನ್ನು ದಾನಮಾಡಿದ ಫಲವು ದೊರೆಯುತ್ತದೆ. ಅನಂತರ ಎಲ್ಲಿ ಸತತವೂ ಹರಿನಾಮ ಮತ್ತು ಸಾನ್ನಿಧ್ಯವು ಇದೆಯೋ ಆ ಅನುತ್ತಮ ವಿಷ್ಣುಸ್ಥಾನಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿ ತ್ರಿಲೋಕ ಪ್ರಭವ ಹರಿಯನ್ನು ಅರ್ಚಿಸುವುದರಿಂದ ಅಶ್ವಮೇಧಯಾಗ ಫಲವನ್ನು ಪಡೆದು ವಿಷ್ಣುಲೋಕಕ್ಕೆ ಹೋಗುತ್ತಾರೆ. ಅಲ್ಲಿಂದ ಮೂರು ಲೋಕಗಳಲ್ಲಿಯೂ ವಿಶ್ರುತವಾದ ಪಾರಿಪ್ಲವ ತೀರ್ಥಕ್ಕೆ ಹೋಗಬೇಕು. ಅಲ್ಲಿ ಮಾನವನು ಅಗ್ನಿಷ್ಟೋಮ ಮತ್ತು ಅತಿರಾತ್ರಿ ಯಾಗಗಳ ಫಲವನ್ನು ಪಡೆಯುತ್ತಾನೆ. ಪೃಥ್ವಿ ತೀರ್ಥಕ್ಕೆ ಹೋದರೆ ಸಹಸ್ರಗೋವುಗಳ ದಾನದ ಫಲವು ದೊರೆಯುತ್ತದೆ. ನಂತರ ಶಾಲೂಕಿನಿಗೆ ಹೋಗಿ ಅಲ್ಲಿ ಸ್ನಾನಮಾಡಿದ ತೀರ್ಥಯಾತ್ರಿಯು ದಶಾಶ್ವಮೇಧದ ಫಲವನ್ನು ಪಡೆಯುತ್ತಾನೆ. ನಾಗಗಳ ಉತ್ತಮ ತೀರ್ಥ ಸರ್ಪದರ್ವಿಗೆ ಹೋದವನು ಅಗ್ನಿಷ್ಟೋಮಯಾಗ ಫಲ ಮತ್ತು ನಾಗಲೋಕವನ್ನು ಹೊಂದುತ್ತಾನೆ.
“ಅಲ್ಲಿಂದ ದ್ವಾರಪಾಲ ತರಂತುಕಕ್ಕೆ ಹೋಗಬೇಕು. ಅಲ್ಲಿ ಒಂದು ರಾತ್ರಿಯನ್ನು ಕಳೆದರೂ ಸಹಸ್ರಗೋವುಗಳನ್ನು ದಾನವಿತ್ತ ಫಲವು ದೊರೆಯುತ್ತದೆ. ಅಲ್ಲಿಂದ ಪಂಚನಂದಕ್ಕೆ ಹೋಗಿ ನಿಯಮದಿಂದಿದ್ದು ಅಲ್ಪಾಹಾರಿಯಾಗಿದ್ದು ಕೋಟಿತೀರ್ಥದಲ್ಲಿ ಸ್ನಾನಮಾಡಿದರೆ ಹಯಮೇಧಫಲವು ದೊರೆಯುತ್ತದೆ. ಅಶ್ವಿನೀ ತೀರ್ಥಕ್ಕೆ ಹೋದರೆ ರೂಪವಂತನಾಗುತ್ತಾನೆ. ಅಲ್ಲಿಂದ ಉತ್ತಮ ವರಾಹತೀರ್ಥಕ್ಕೆ ಹೋಗಬೇಕು. ಅಲ್ಲಿ ಹಿಂದೆ ವಿಷ್ಣುವು ವರಾಹ ರೂಪದಲ್ಲಿದ್ದನು. ಅಲ್ಲಿ ಸ್ನಾನಮಾಡಿದರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ. ಅನಂತರ ಜಯಂತದಲ್ಲಿರುವ ಸೋಮತೀರ್ಥವನ್ನು ತಲುಪಬೇಕು. ಅಲ್ಲಿ ಸ್ನಾನಮಾಡಿದ ಮಾನವನು ರಾಜಸೂಯ ಯಾಗದ ಫಲವನ್ನು ಪಡೆಯುತ್ತಾನೆ. ಏಕಹಂಸದಲ್ಲಿ ಸ್ನಾನಮಾಡಿದರೆ ಸಹಸ್ರ ಗೋವುಗಳನ್ನು ದಾನವಾಗಿತ್ತ ಫಲವು ದೊರೆಯುತ್ತದೆ. ಕೃತಾಶೌಚವನ್ನು ತಲುಪಿ ಅಲ್ಲಿ ಸ್ನಾನಮಾಡಿದ ತೀರ್ಥಸೇವಿ ನರನು ಪುಂಡರೀಕವನ್ನು ಹೊಂದುತ್ತಾನೆ. ಅನಂತರ ಧೀಮಂತ ಮಹಾದೇವನ ಮುಂಜವಟ ಎನ್ನುವಲ್ಲಿ ಒಂದು ರಾತ್ರಿಯನ್ನು ಕಳೆದವನು ಗಣಪತಿಯ ಸ್ಥಾನವನ್ನು ಪಡೆಯುತ್ತಾನೆ. ಅಲ್ಲಿಯೇ ಲೋಕವಿಖ್ಯಾತ ಯಕ್ಷಿಯಿದ್ದಾಳೆ. ಅವಳನ್ನು ಪೂಜಿಸುವುದರಿಂದ ಪುಣ್ಯಲೋಕಗಳು ದೊರೆಯುತ್ತವೆ.
“ಇದು ಕುರುಕ್ಷೇತ್ರ ದ್ವಾರವೆಂದು ವಿಶ್ರುತವಾಗಿದೆ. ಪುಷ್ಕರದಂತಿರುವ ಈ ಸ್ಥಳವನ್ನು ಪ್ರದಕ್ಷಿಣೆಮಾಡಿ ಸ್ನಾನಮಾಡಿದ ತೀರ್ಥಯಾತ್ರಿಯು ಪಿತೃಗಳನ್ನೂ ದೇವತೆಗಳನ್ನೂ ಪೂಜಿಸಬೇಕು. ಮಹಾತ್ಮ ಜಾಮದಗ್ನಿ ರಾಮನಿಂದ ನಿರ್ಮಿತವಾದ ಇದರಲ್ಲಿ ಕೃತಕೃತ್ಯನಾದವನು ಅಶ್ವಮೇಧಯಾಗದ ಫಲವನ್ನು ಹೊಂದುತ್ತಾನೆ. ಅಲ್ಲಿಂದ ತೀರ್ಥಸೇವಿಯು ರಾಮಸರೋವರಗಳಿಗೆ ಹೋಗಬೇಕು. ಅಲ್ಲಿ ದೀಪ್ತತೇಜಸ್ವಿ ರಾಮನು ತನ್ನ ವೀರ್ಯದಿಂದ ಕ್ಷತ್ರಿಯರನ್ನು ಸಂಹರಿಸಿ, ಅವರ ರಕ್ತವನ್ನು ತುಂಬಿಸಿ ಐದು ಸರೋವರಗಳನ್ನು ನಿರ್ಮಿಸಿದನೆಂದು ಕೇಳಿದ್ದೇವೆ. ಹೀಗೆ ಸರ್ವ ಪಿತ-ಪಿತಾಮಹರೆಲ್ಲರನ್ನು ತೃಪ್ತಿಗೊಳಿಸಿದನು. ಆಗ ಆ ಪಿತೃಗಳು ಪ್ರೀತಿಯಿಂದ ರಾಮನಿಗೆ ಹೇಳಿದರು: “ರಾಮ! ನಾವು ನಿನ್ನ ಈ ಪಿತೃಭಕ್ತಿ ಮತ್ತು ವಿಕ್ರಮದಿಂದ ಸಂತೋಷಗೊಂಡಿದ್ದೇವೆ. ನಿನಗೆ ಮಂಗಳವಾಗಲಿ! ನೀನು ಏನನ್ನು ಬಯಸುತ್ತೀಯೋ ಆ ವರವನ್ನು ಕೇಳಿಕೋ!” ಇದನ್ನು ಕೇಳಿದ ಆ ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ಅಂಜಲೀಬದ್ಧನಾಗಿ ಗಗನದಲ್ಲಿ ನಿಂತಿದ್ದ ತನ್ನ ಪಿತೃಗಳಿಗೆ ಹೇಳಿದನು: “ನನ್ನಿಂದ ಸಂತೋಷಗೊಂಡಿದ್ದರೆ ಮತ್ತು ನನ್ನ ಮೇಲೆ ನಿಮ್ಮ ಅನುಗ್ರಹವಿದೆ ಎಂದಾದರೆ ಪಿತೃಗಳ ಪ್ರಸಾದದಿಂದ ನನ್ನ ತಪಸ್ಸಿನ ಫಲವನ್ನು ಪುನಃ ಪಡೆಯಲು ಬಯಸುತ್ತೇನೆ. ನಿಮ್ಮ ತೇಜಸ್ಸಿನಿಂದ ನಾನು ರೋಷಕ್ಕೊಳಗಾಗಿ ಕ್ಷತ್ರಿಯರನ್ನು ನಾಶಪಡಿಸಿದ ಪಾಪದಿಂದ ನನಗೆ ಮುಕ್ತಿ ದೊರಕಲಿ ಮತ್ತು ನಾನು ನಿರ್ಮಿಸಿದ ಈ ಸರೋವರಗಳು ಭೂಮಿಯಲ್ಲಿ ತೀರ್ಥಗಳಾಗಿ ಪ್ರಸಿದ್ಧಿಹೊಂದಲಿ!” ರಾಮನ ಈ ಶುಭ ಮಾತುಗಳನ್ನು ಕೇಳಿದ ಅವನ ಪಿತೃಗಳು ಪರಮಪ್ರೀತರಾಗಿ, ಹರ್ಷಸಮನ್ವಿತರಾಗಿ ರಾಮನಿಗೆ ಉತ್ತರಿಸಿದರು: “ವಿಶೇಷವಾದ ಪಿತೃಭಕ್ತಿಯನ್ನುಳ್ಳ ನಿನ್ನ ತಪಸ್ಸು ವೃದ್ಧಿಯಾಗುತ್ತದೆ. ರೋಷಾಭಿಭೂತನಾಗಿ ನಿನ್ನಿಂದಾದ ಕ್ಷತ್ರಿಯರ ನಾಶದ ಪಾಪದಿಂದಲೂ ನೀನು ಮುಕ್ತನಾಗಿರುವೆ. ಅವರದೇ ಕರ್ಮದಿಂದ ಅವರು ನಾಶಗೊಂಡರು. ನಿನ್ನ ಸರೋವರಗಳೂ ತೀರ್ಥಗಳಾಗುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾರು ಈ ಸರೋವರಗಳಲ್ಲಿ ಸ್ನಾನಮಾಡಿ ಪಿತೃಗಳಿಗೆ ತರ್ಪಣ ನೀಡುತ್ತಾನೋ ಅವನ ಪಿತೃಗಳು ಸಂತೋಷಗೊಂಡು ಭೂಮಿಯಲ್ಲಿ ಅದು ಎಷ್ಟೇ ದುರ್ಲಭವಾಗಿದ್ದರೂ, ಅವನ ಮನಸ್ಸಿನ ಬಯಕೆಯನ್ನು, ಮತ್ತು ಶಾಶ್ವತ ಸ್ವರ್ಗಲೋಕವನ್ನು ನೀಡುತ್ತಾರೆ.” ಹೀಗೆ ವರಗಳನ್ನಿತ್ತು ರಾಮನ ಪಿತೃಗಳು ಸಂತೋಷದಿಂದ ಭಾರ್ಗವನನ್ನು ಬೀಳ್ಕೊಂಡು ಅಲ್ಲಿಯೇ ಅಂತರ್ಧಾನರಾದರು. ಈ ರೀತಿ ಮಹಾತ್ಮ ಭಾರ್ಗವ ರಾಮನ ಸರೋವರಗಳು ಪುಣ್ಯಕರವಾದವು. ಮಂಗಳವ್ರತ ಬ್ರಹ್ಮಚಾರಿಯು ರಾಮನ ಸರೋವರಗಳಲ್ಲಿ ಸ್ನಾನಮಾಡಿ ರಾಮನನ್ನು ಅರ್ಚಿಸುವುದರಿಂದ ಬಹಳಷ್ಟು ಸಂಪತ್ತನ್ನು ಪಡೆಯುತ್ತಾನೆ.
“ವಂಶಮೂಲವನ್ನು ತಲುಪಿ ತೀರ್ಥಯಾತ್ರಿಯು ವಂಶಮೂಲದಲ್ಲಿ ಸ್ನಾನಮಾಡಿ ತನ್ನ ವಂಶವನ್ನೇ ಉದ್ಧರಿಸುತ್ತಾನೆ. ಕಾಯಶೋಧನ ತೀರ್ಥಕ್ಕೆ ಹೋಗಿ ಆ ತೀರ್ಥದಲ್ಲಿ ಸ್ನಾನಮಾಡುವುದರಿಂದ ಶರೀರಶುದ್ಧಿಯನ್ನು ಹೊಂದಿ, ಆ ಶುದ್ಧದೇಹದಿಂದ ನಿಸ್ಸಂಶಯವಾಗಿಯೂ ಅನುತ್ತಮ ಶುಭಲೋಕಗಳನ್ನು ಸೇರುತ್ತಾನೆ. ಅಲ್ಲಿಂದ ಮೂರುಲೋಕಗಳಲ್ಲಿ ವಿಶೃತವಾದ, ಹಿಂದೆ ಎಲ್ಲಿ ಪ್ರಭುವಿಷ್ಣುವು ಲೋಕಗಳನ್ನು ಉದ್ಧರಿಸಿದ್ದನೋ ಆ ವಿಷ್ಣು ತೀರ್ಥಕ್ಕೆ ಹೋಗಬೇಕು. ಮೂರುಲೋಕಗಳಲ್ಲಿ ವಿಶ್ರುತವಾದ ಲೋಕೋದ್ಧಾರ ತೀರ್ಥವನ್ನು ತಲುಪಿ ಆ ಶ್ರೇಷ್ಠ ತೀರ್ಥದಲ್ಲಿ ಸ್ನಾನಮಾಡಿ ತನ್ನ ಲೋಕಗಳನ್ನು ಉದ್ಧರಿಸಿಕೊಳ್ಳಬಹುದು. ಮತ್ತು ಶ್ರೀ ತೀರ್ಥಕ್ಕೆ ಹೋದರೆ ಉತ್ತಮ ಸಂಪತ್ತನ್ನು ಪಡೆಯಬಹುದು. ಕಪಿಲಾ ತೀರ್ಥಕ್ಕೆ ಹೋಗಿ ಅಲ್ಲಿ ಬ್ರಹ್ಮಚಾರಿಯಾಗಿದ್ದು ಸ್ನಾನಮಾಡಿ ದೇವತೆಗಳನ್ನೂ ಪಿತೃಗಳನ್ನು ಅರ್ಚಿಸಿದ ಮಾನವನು ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಹೊಂದುತ್ತಾನೆ. ಸೂರ್ಯತೀರ್ಥಕ್ಕೆ ಹೋಗಿ ಅಲ್ಲಿ ನಿಯತಮಾನಸನಾಗಿ, ಉಪವಾಸಪರಾಯಣನಾಗಿದ್ದು ಪಿತೃ-ದೇವತೆಗಳನ್ನು ಅರ್ಚಿಸಿದರೆ ಅಗ್ನಿಷ್ಟೋಮಯಾಗದ ಫಲವನ್ನು ಪಡೆದು ಸೂರ್ಯಲೋಕಕ್ಕೆ ಹೋಗುತ್ತಾನೆ. ಗೋಭವನಕ್ಕೆ ಹೋಗಿ ಯಥಾಕ್ರಮವಾಗಿ ಅಲ್ಲಿ ಸ್ನಾನಮಾಡುವ ತೀರ್ಥಸೇವಿಗೆ ಸಹಸ್ರ ಗೋವುಗಳ ದಾನದ ಫಲವು ದೊರೆಯುತ್ತದೆ. ತೀರ್ಥಸೇವಿ ನರನು ಶಂಖಿನಿಯನ್ನು ತಲುಪಿ ಅಲ್ಲಿ ದೇವಿಯ ತೀರ್ಥದಲ್ಲಿ ಸ್ನಾನಮಾಡಿದರೆ ಉತ್ತಮ ರೂಪವನ್ನು ಪಡೆಯುತ್ತಾನೆ. ಅಲ್ಲಿಂದ ದ್ವಾರಪಾಲ ಅರಂತುಕಕ್ಕೆ ಹೋಗಬೇಕು. ಅಲ್ಲಿ ಸರಸ್ವತಿಯಲ್ಲಿ ಮಹಾತ್ಮ ಯಕ್ಷೇಂದ್ರನ ತೀರ್ಥದಲ್ಲಿ ಸ್ನಾನಮಾಡಿದ ನರನು ಅಗ್ನಿಷ್ಟೋಮ ಯಾಗದ ಫಲವನ್ನು ಪಡೆಯುತ್ತಾನೆ.
“ಅಲ್ಲಿಂದ ಬ್ರಹ್ಮಾವರ್ತಕ್ಕೆ ಹೋಗಬೇಕು. ಬ್ರಹ್ಮಾವರ್ತದಲ್ಲಿ ಸ್ನಾನಮಾಡಿ ನರನು ಬ್ರಹ್ಮಲೋಕವನ್ನು ಪಡೆಯುತ್ತಾನೆ. ಅಲ್ಲಿಂದ ದೇವತೆಗಳೊಂದಿಗೆ ಪಿತೃಗಳು ನಿತ್ಯವೂ ಸನ್ನಿಹಿತರಾಗಿರುವ ಅನುತ್ತಮ ಸುತೀರ್ಥಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿ ಪಿತೃ-ದೇವತೆಗಳ ಅರ್ಚನೆಯಲ್ಲಿ ನಿರತನಾದವನು ಅಶ್ವಮೇಧಯಾಗದ ಫಲವನ್ನು ಪಡೆದು ಪಿತೃಲೋಕವನ್ನು ಸೇರುತ್ತಾನೆ. ಅಲ್ಲಿಂದ ಅಂಬುವಶ್ಯವನ್ನು ತಲುಪಿ ಯಥಾಕ್ರಮವಾಗಿ ಕೋಶೇಶ್ವರ (ಕುಬೇರ) ನ ತೀರ್ಥದಲ್ಲಿ ಸ್ನಾನಮಾಡಿದವನು ಸರ್ವವ್ಯಾಧಿಗಳಿಂದ ವಿಮುಕ್ತನಾಗಿ ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ. ಅಲ್ಲಿಯೇ ಮಾತೃತೀರ್ಥದಲ್ಲಿ ಸ್ನಾನಮಾಡಿದವನ ವಂಶವು ವೃದ್ಧಿಯಾಗುವುದು ಮತ್ತು ಕೊನೆಯಿಲ್ಲದ ಅಭಿವೃದ್ಧಿಯನ್ನು ಹೊಂದುತ್ತಾನೆ. ಅನಂತರ ನಿಯತನಾಗಿ, ನಿಯತಾಹಾರಿಯಾಗಿ ಶೀತವನಕ್ಕೆ ಹೋಗಬೇಕು. ಬೇರೆಲ್ಲಿಯೂ ದೊರೆಯದ ಮಹಾ ಪುಣ್ಯವು ಅಲ್ಲಿಯ ತೀರ್ಥದ ದರ್ಶನದಿಂದಲೇ ದೊರೆಯುತ್ತದೆ. ಕೂದಲಿಗೆ ಪ್ರೋಕ್ಷಣೆ ಮಾಡಿಕೊಂಡರೂ ಕೂಡ ಆ ತೀರ್ಥದಿಂದ ಪುಣ್ಯ ದೊರೆಯುತ್ತದೆ. ಆ ತೀರ್ಥದಲ್ಲಿ ಶ್ವಾನಲೋಮಾಪಹ ಎನ್ನುವ ಸ್ಥಳವಿದೆ. ಅಲ್ಲಿ ವಿದ್ವಾಂಸ ವಿಪ್ರನು ತೀರ್ಥತತ್ಪರನಾಗಿದ್ದಾನೆ. ಶ್ವಾನಲೋಮಾಪನ ತೀರ್ಥದಲ್ಲಿ ದ್ವಿಜೋತ್ತಮರು ಪ್ರಾಣಾಯಾಮದ ಮೂಲಕ ನಾಯಿಯ ರೋಮವನ್ನು ಕೀಳುತ್ತಾರೆ. ಪುಣ್ಯವಂತರು ಪರಮ ಗತಿಯನ್ನು ಪಡೆಯುತ್ತಾರೆ. ಆ ತೀರ್ಥದಲ್ಲಿ ಸ್ನಾನಮಾಡಿದವರು ಹತ್ತು ಅಶ್ವಮೇಧಯಾಗಗಳ ಫಲವನ್ನು ಪಡೆದು ಪರಮಗತಿಯನು ಪಡೆಯುತ್ತಾರೆ.
“ಅಲ್ಲಿಂದ ಲೋಕವಿಶ್ರುತವಾದ ಮಾನುಷಕ್ಕೆ ಹೋಗಬೇಕು. ಆ ಸರೋವರದಲ್ಲಿ ಓರ್ವ ಬೇಟೆಗಾರನಿಂದ ಪರಿಪೀಡಿತವಾದ ಕೃಷ್ಣಮೃಗವೊಂದು ಹಾರಿ ಬೀಳಲು ಅದು ಮನುಷ್ಯರೂಪವನ್ನು ತಾಳಿತು. ಆ ತೀರ್ಥದಲ್ಲಿ ಸ್ನಾನಮಾಡಿದ ಬ್ರಹ್ಮಚಾರಿ ಜಿತೇಂದ್ರಿಯ ನರನು ಸರ್ವಪಾಪಗಳನ್ನೂ ತೊಳೆದು ವಿಶುದ್ಧಾತ್ಮನಾಗಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ. ಮಾನುಷದ ಪೂರ್ವಕ್ಕೆ ಕ್ರೋಶಮಾತ್ರದಲ್ಲಿ ಆಪಗಾ ಎಂಬ ಹೆಸರಿನ ವಿಖ್ಯಾತ ನದಿಯು ಸಿದ್ಧರಿಂದ ಸೇವಿತಗೊಂಡಿದೆ. ಅಲ್ಲಿ ಧಾನ್ಯದ ಭೋಜನವನ್ನು ದೇವತೆಗಳಿಗೆ ಮತ್ತು ಪಿತೃಗಳಿಗೆ ನೀಡುವ ಮಾನವನಿಗೆ ಮಹಾ ಧರ್ಮಫಲವು ದೊರೆಯುತ್ತದೆ. ಓರ್ವನೇ ವಿಪ್ರನಿಗೆ ಭೋಜನವನ್ನಿತ್ತರೂ ಅದು ಕೋಟಿ ವಿಪ್ರರಿಗೆ ಭೋಜನ ನೀಡಿದಂತಾಗುತ್ತದೆ. ಅಲ್ಲಿ ಸ್ನಾನಮಾಡಿ ದೇವತೆಗಳನ್ನೂ ಪಿತೃಗಳನ್ನೂ ಅರ್ಚಿಸಿ, ಒಂದು ರಾತ್ರಿಯನ್ನು ಅಲ್ಲಿಯೇ ಕಳೆದವನಿಗೆ ಅಗ್ನಿಷ್ಟೋಮಯಾಗದ ಫಲವು ದೊರೆಯುತ್ತದೆ. ಅಲ್ಲಿಂದ ಬ್ರಹ್ಮೋದುಂಬರ ಎಂದು ಭೂಮಿಯ ಮೇಲೆ ಪ್ರಸಿದ್ಧವಾದ ಬ್ರಹ್ಮನ ಉತ್ತಮ ಸ್ಥಾನಕ್ಕೆ ಹೋಗಬೇಕು. ಅಲ್ಲಿ ಸಪ್ತರ್ಷಿಕುಂಡದಲ್ಲಿ ಮತ್ತು ಮಹಾತ್ಮ ಕಪಿಷ್ಠಲದ ಕೇದಾರದಲ್ಲಿ ಸ್ನಾನಮಾಡಿದರೆ, ಶುಚಿಯಾಗಿ ಪ್ರಯತಮಾನಸನಾಗಿ ಬ್ರಹ್ಮನಿಂದ ಆಕರ್ಶಿತನಾಗಿ ಸರ್ವಪಾಪಗಳನ್ನೂ ಕಳೆದುಕೊಂಡು ವಿಶುದ್ಧಾತ್ಮನಾಗಿ ಬ್ರಹ್ಮಲೋಕವನ್ನು ಸೇರುತ್ತಾರೆ. ನೋಡಲು ಕಷ್ಟವಾದ ಕಪಿಸ್ಥಲದ ಕೇದಾರಕ್ಕೆ ಹೋದರೆ ತಪಸ್ಸಿನಿಂದ ಪಾಪಗಳು ಸುಟ್ಟು ಭಸ್ಮವಾಗಿ ಅಂತರ್ಧಾನಫಲವನ್ನು ಪಡೆಯುತ್ತಾನೆ. ಅಲ್ಲಿಂದ ಲೋಕವಿಶ್ರುತವಾದ ಸರಕಕ್ಕೆ ಹೋಗಬೇಕು. ಅಲ್ಲಿ ಕೃಷ್ನಪಕ್ಷದ ಚತುರ್ದಶಿಯಂದು ವೃಷಧ್ವಜನನ್ನು ಪೂಜಿಸಿದರೆ ಸರ್ವಕಾಮಗಳು ಪೂರೈಸುತ್ತವೆ ಮತ್ತು ಸ್ವರ್ಗಲೋಕವು ದೊರೆಯುತ್ತದೆ. ಸರಕದಲ್ಲಿ ಮೂರು ಕೋಟಿ ತೀರ್ಥಗಳಿವೆ ಮತ್ತು ಅಲ್ಲಿಯ ಬಾವಿ-ಸರೋವರಗಳಲ್ಲಿ ಕೋಟಿರುದ್ರರಿದ್ದಾರೆ. ಅಲ್ಲಿಯೇ ಇಲಾಸ್ಪದ ತೀರ್ಥವಿದೆ. ಅಲ್ಲಿ ಸ್ನಾನಮಾಡಿ ಪಿತೃ-ದೇವತೆಗಳನ್ನು ಪೂಜಿಸಿದರೆ ದುರ್ಗತಿಯನ್ನು ಹೊಂದದೇ ವಾಜಪೇಯದ ಫಲವನ್ನು ಹೊಂದುತ್ತಾನೆ. ಕಿಂದಾನ ಮತ್ತು ಕಿಂಜಪ್ಯಗಳಲ್ಲಿ ಸ್ನಾನಮಾಡಿದ ನರನು ಅಮಿತ ದಾನ ಮತ್ತು ಜಪಗಳ ಫಲವನ್ನು ಹೊಂದುತ್ತಾನೆ. ಶ್ರದ್ಧದಾನನಾಗಿ ಜಿತೇಂದ್ರಿಯನಾಗಿ ಕಲಶದಲ್ಲಿ ಸ್ನಾನಮಾಡಿದ ಮಾನವನಿಗೆ ಅಗ್ನಿಷ್ಟೋಮಯಾಗದ ಫಲವು ದೊರೆಯುತ್ತದೆ. ಸರಕದ ಪೂರ್ವದಲ್ಲಿ ಅನಾಜನ್ಮ ಎಂದು ವಿಶ್ರುತವಾದ ಮಹಾತ್ಮ ನಾರದನ ತೀರ್ಥವಿದೆ. ಆ ತೀರ್ಥದಲ್ಲಿ ಸ್ನಾನಮಾಡಿ ಪ್ರಾಣತ್ಯಾಗಮಾಡಿದವನು ನಾರದನ ಅನುಜ್ಞೆಯಂತೆ ದುರ್ಲಭ ಲೋಕಗಳನ್ನು ಪಡೆಯುತ್ತಾನೆ.
“ಶುಕ್ಲಪಕ್ಷದ ದಶಮಿಯಂದು ಪುಂಡರೀಕವನ್ನು ತಲುಪಬೇಕು. ಅಲ್ಲಿ ಸ್ನಾನಮಾಡಿದ ನರನಿಗೆ ಪುಂಡರೀಕದ ಫಲವು ದೊರೆಯುತ್ತದೆ. ಅಲ್ಲಿಂದ ಮೂರು ಲೋಕಗಳಲ್ಲಿ ವಿಶ್ರುತವಾದ ತ್ರಿವಿಷ್ಟಪಕ್ಕೆ ಹೋಗಬೇಕು. ಅಲ್ಲಿ ಪಾಪಪ್ರಮೋಚನೀ ಪುಣ್ಯ ನದಿ ವೈತರಣಿ ಇದೆ. ಅಲ್ಲಿ ಸ್ನಾನಮಾಡಿ ಶೂಲಪಾಣಿ ವೃಷಧ್ವಜನನ್ನು ಅರ್ಚಿಸಿದರೆ ಸರ್ವಪಾಪಗಳನ್ನೂ ಕಳೆದುಕೊಂಡು ವಿಶುದ್ಧಾತ್ಮನಾಗಿ ಪರಮ ಗತಿಯನ್ನು ಹೊಂದುತ್ತಾನೆ. ಅಲ್ಲಿಂದ ಉತ್ತಮ ಫಲಕೀವನಕ್ಕೆ ಹೋಗಬೇಕು. ಆ ಫಲಕೀವನದಲ್ಲಿ ಸದಾಕಾಲವೂ ದೇವತೆಗಳು ಸಮಾಶ್ರಿತರಾಗಿ, ಬಹಳ ಸಹಸ್ರಾರು ವರ್ಷಗಳ ವಿಪುಲ ತಪಸ್ಸನ್ನು ಮಾಡಿದ್ದಾರೆ. ದೃಷದ್ವತಿಯಲ್ಲಿ ಸ್ನಾನಮಾಡಿ ದೇವತೆಗಳಿಗೆ ತರ್ಪಣೆಯನ್ನಿತ್ತ ನರನಿಗೆ ಅಗ್ನಿಷ್ಟೋಮ ಮತ್ತು ಅತಿರಾತ್ರಿ ಈ ಎರಡರ ಫಲವೂ ದೊರೆಯುತ್ತದೆ. ಸರ್ವದೇವತೆಗಳ ತೀರ್ಥದಲ್ಲಿ ಸ್ನಾನಮಾಡಿದ ಮಾನವನಿಗೆ ಸಹಸ್ರ ಗೋವುಗಳನ್ನು ದಾನವಾಗಿತ್ತ ಫಲವು ದೊರೆಯುತ್ತದೆ. ಪಾಣಿಖಾತದಲ್ಲಿ ಸ್ನಾನಮಾಡಿ ದೇವತೆಗಳಿಗೆ ತರ್ಪಣೆಯನ್ನಿತ್ತ ನರನಿಗೆ ರಾಜಸೂಯಯಾಗದ ಫಲವು ದೊರಕಿ ಅವನು ಋಷಿಲೋಕಕ್ಕೆ ಹೋಗುತ್ತಾನೆ. ಅಲ್ಲಿಂದ ಉತ್ತಮ ತೀರ್ಥವಾದ ಮಿಶ್ರಕಕ್ಕೆ ಹೋಗಬೇಕು. ಅಲ್ಲಿ ಬ್ರಾಹ್ಮಣರಿಗೋಸ್ಕರ ಮಹಾತ್ಮ ವ್ಯಾಸನು ತೀರ್ಥಗಳ ಮಿಶ್ರಣವನ್ನು ಮಾಡಿದ್ದಾನೆ ಎಂದು ನಾವು ಕೇಳಿದ್ದೇವೆ. ಮಿಶ್ರಕದಲ್ಲಿ ಸ್ನಾನಮಾಡಿದ ನರನು ಸರ್ವತೀರ್ಥಗಳಲ್ಲಿ ಸ್ನಾನಮಾಡಿದ ಹಾಗೆ. ಅಲ್ಲಿಂದ ನಿಯತನೂ ನಿಯತಾಶನನೂ ಆಗಿ ವ್ಯಾಸವನಕ್ಕೆ ಹೋಗಬೇಕು. ಮನೋಜವದಲ್ಲಿ ಸ್ನಾನಮಾಡಿದ ನರನಿಗೆ ಸಹಸ್ರ ಗೋವುಗಳನ್ನು ದಾನವಾಗಿತ್ತ ಫಲವು ದೊರೆಯುತ್ತದೆ. ಮಧುವಟಿಗೆ ಹೋಗಿ ಅಲ್ಲಿ ದೇವೀ ತೀರ್ಥದಲ್ಲಿ ಶುಚಿಯಾಗಿ ಸ್ನಾನಮಾಡಿ, ಪಿತೃಗಳನ್ನೂ ದೇವತೆಗಳನ್ನೂ ಪೂಜಿಸಿದ ನರನಿಗೆ ದೇವಿಯ ಅನುಜ್ಞೆಯಂತೆ ಸಹಸ್ರ ಗೋವುಗಳನ್ನು ದಾನವಿತ್ತ ಫಲವು ದೊರೆಯುತ್ತದೆ. ನಿಯತಾಹಾರನಾಗಿ ಕೌಶಿಕೀ ಮತ್ತು ದೃಷದ್ವತೀ ಸಂಗಮದಲ್ಲಿ ಯಾರು ಸ್ನಾನಮಾಡುತ್ತಾನೋ ಅವನು ಸರ್ವಪಾಪಗಳನ್ನು ಕಳೆದುಕೊಳ್ಳುತ್ತಾನೆ.
“ಅನಂತರ ವ್ಯಾಸಸ್ಥಲೀ ಎಂಬ ಹೆಸರಿನ ಕೇತ್ರವಿದೆ. ಅಲ್ಲಿ ದೀಮಂತ ವ್ಯಾಸನು ಪುತ್ರಶೋಕದಿಂದ ಪರಿತಪ್ತನಾಗಿ ದೇಹತ್ಯಾಗಮಾಡಲು ನಿಶ್ಚಯಿಸಿದಾಗ ದೇವತೆಗಳು ಅವನನ್ನು ಪುನಃ ಮೇಲಿತ್ತಿದರು. ಅವನ ಈ ಸ್ಥಳಕ್ಕೆ ಬಂದರೆ ಸಹಸ್ರಗೋವುಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ. ಕಿಂದತ್ತ ಬಾವಿಗೆ ಹೋಗಿ ಅಲ್ಲಿ ಒಂದು ಮುಷ್ಟಿ ತಿಲವನ್ನು ನೀಡಿದವನು ಪರಮ ಸಿದ್ಧಿಯನ್ನು ಹೊಂದಿ ಋಣಗಳಿಂದ ಮುಕ್ತನಾಗುತ್ತಾನೆ. ಅಹ ಮತ್ತು ಸುದಿನ ಈ ಎರಡು ತೀರ್ಥಗಳು ಬಹು ದುರ್ಲಭವಾದವುಗಳು. ಅವುಗಳಲ್ಲಿ ಸ್ನಾನಮಾಡಿದವನು ಸೂರ್ಯಲೋಕವನ್ನು ತಲುಪುತ್ತಾನೆ. ಅನಂತರ ಮೂರು ಲೋಕಗಳಲ್ಲಿ ವಿಶ್ರುತವಾದ ಮೃಗಧೂಮಕ್ಕೆ ಹೋಗಬೇಕು. ಅಲ್ಲಿ ಗಂಗಾ ಸರೋವರದಲ್ಲಿ ಸ್ನಾನಮಾಡಿ ಶೂಲಪಾಣಿ ಮಹಾದೇವನನ್ನು ಅರ್ಚಿಸಿದ ಮಾನವನಿಗೆ ಅಶ್ವಮೇಧದ ಫಲವು ದೊರೆಯುತ್ತದೆ. ದೇವತೀರ್ಥದಲ್ಲಿ ಸ್ನಾನಮಾಡಿದ ನರನು ಸಹಸ್ರಗೋವುಗಳ ದಾನದ ಫಲವನ್ನು ಪಡೆಯುತ್ತಾನೆ. ಅನಂತರ ಮೂರುಲೋಕಗಳಲ್ಲಿ ವಿಶ್ರುತವಾದ ವಾಮನಕಕ್ಕೆ ಹೋಗಬೇಕು. ಅಲ್ಲಿ ವಿಷ್ಣುಪಾದದಲ್ಲಿ ಸ್ನಾನಮಾಡಿ ವಾಮನನನ್ನು ಅರ್ಚಿಸಿದರೆ ಸರ್ವಪಾಪಗಳನ್ನೂ ಕಳೆದುಕೊಂಡು ವಿಶುದ್ಧಾತ್ಮನಾಗಿ ವಿಷ್ಣುಲೋಕವನ್ನು ಪಡೆಯುತ್ತಾನೆ. ಕುಲಂಪುನದಲ್ಲಿ ಸ್ನಾನಮಾಡಿದ ನರನು ತನ್ನ ಕುಲವನ್ನು ಪುಣ್ಯಗೊಳಿಸುತ್ತಾನೆ. ಮರುತ್ತರ ಉತ್ತಮ ತೀರ್ಥವೆನಿಸಿದ ಪವನ ಸರೋವರಕ್ಕೆ ಹೋಗಿ ಅಲ್ಲಿ ಸ್ನಾನಮಾಡಿದ ನರನು ವಾಯುಲೋಕದಲ್ಲಿ ಮೆರೆಯುತ್ತಾನೆ. ಅಮರರ ಸರೋವರದಲ್ಲಿ ಸ್ನಾನಮಾಡಿ ಅಮರರ ಪ್ರಭಾವದಿಂದ ಅಮರರ ಮಧ್ಯದಲ್ಲಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ. ಶಾಲಿಶೂರ್ಪದಲ್ಲಿ ಶಾಲಿಹೋತ್ರದಲ್ಲಿ ಯಥಾವಿಧಿಯಲ್ಲಿ ಸ್ನಾನಮಾಡಿದರೆ ಸಹಸ್ರ ಗೋವುಗಳ ದಾನದ ಫಲವು ದೊರೆಯುತ್ತದೆ. ಸರಸ್ವತಿಯಲ್ಲಿ ಶ್ರೀಕುಂಜ ತೀರ್ಥದಲ್ಲಿ ಸ್ನಾನಮಾಡಿದ ನರನಿಗೆ ಅಗ್ನಿಷ್ಟೋಮಯಾಗದ ಫಲವು ದೊರೆಯುತ್ತದೆ. ಅನಂತರ ನೈಮಿಷಕುಂಜಕ್ಕೆ ಹೋಗಬೇಕು. ಹಿಂದೆ ನೈಮಿಷಾರಣ್ಯದ ತಪೋಧನ ಋಷಿಗಳು ತೀರ್ಥಯಾತ್ರೆಗೆ ಹೋದಾಗ ಮೊದಲು ಕುರುಕ್ಷೇತ್ರಕ್ಕೆ ಹೋಗಿದ್ದರು. ಆಗ ಅವರು ಸರಸ್ವತಿಯಲ್ಲಿ ಋಷಿಗಳಿಗೆ ತೃಪ್ತಿಗೊಳಿಸುವ ವಿಶಾಲ ಜಾಗವೆಂದು ಕುಂಜವನ್ನು ಮಾಡಿದ್ದರು. ಆ ಕುಂಜದಲ್ಲಿ ಸ್ನಾನಮಾಡಿದ ನರನು ಸಹಸ್ರ ಗೋವುಗಳ ದಾನದ ಫಲವನ್ನು ಪಡೆಯುತ್ತಾನೆ. ಕನ್ಯಾತೀರ್ಥದಲ್ಲಿ ಸ್ನಾನಮಾಡಿ ನರನು ಅಗ್ನಿಷ್ಟೋಮ ಯಾಗದ ಫಲವನ್ನು ಪಡೆಯುತ್ತಾನೆ. ಅಲ್ಲಿಂದ ಉತ್ತಮವಾದ ಬ್ರಹ್ಮಸ್ಥಾನಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿದ ಕೆಳವರ್ಣದ ನರನು ಬ್ರಾಹ್ಮಣ್ಯತ್ವವನ್ನು ಪಡೆಯುತ್ತಾನೆ. ಮತ್ತು ಬ್ರಾಹ್ಮಣನು ವಿಶುದ್ಧಾತ್ಮನಾಗಿ ಪರಮ ಗತಿಯನ್ನು ಸೇರುತ್ತಾನೆ. ಅಲ್ಲಿಂದ ಅನುತ್ತಮ ಸೋಮತೀರ್ಥಕ್ಕೆ ಹೋಗಿ ಅಲ್ಲಿ ಸ್ನಾನಮಾಡಿದ ನರನು ಸೋಮಲೋಕವನ್ನು ಸೇರುತ್ತಾನೆ. ಅಲ್ಲಿಂದ ಸಪ್ತಸಾರಸ್ವತ ತೀರ್ಥಕ್ಕೆ ಹೋಗಬೇಕು. ಅಲ್ಲಿ ಲೋಕವಿಶ್ರುತ ಸಿದ್ಧ ಮಂಕಣಕನಿದ್ದನು.
“ಹಿಂದೆ ಮಂಕಣಕನು ದರ್ಬೆಯ ತುದಿಯಿಂದ ತನ್ನ ಕೈಯನ್ನು ಕೌಯ್ದಾಗ ಆ ಗಾಯದಿಂದ ತರಕಾರಿಯ ರಸವು ಹರಿಯಿತು ಎಂದು ಕೇಳಿಲ್ಲವೇ? ಆ ಶಾಕರಸವನ್ನು ನೋಡಿ ಹರ್ಷಾವಿಷ್ಟನಾಗಿ ಮಹಾತಪಸ್ವಿ ವಿಪ್ರರ್ಷಿಯು ವಿಸ್ಮಯದಿಂದ ಕಣ್ಣು ಬಿಟ್ಟು ಕುಣಿದಾಡಿದನು. ಅವನು ಹಾಗೆ ಕುಣಿಯುತ್ತಿದ್ದಾಗ ಸ್ಥಾವರ ಜಂಗಮಗಳೆಲ್ಲವೂ ಅವನ ತೇಜಸ್ಸಿನಿಂದ ಮೋಹಿತರಾಗಿ ಅವನೊಂದಿಗೆ ಕುಣಿಯತೊಡಗಿದವು. ಬ್ರಹ್ಮಾದಿ ಸುರರೂ, ಋಷಿಗಳೂ, ತಪೋಧನರೂ ಮಹಾದೇವನಲ್ಲಿ ಆ ಋಷಿಯ ಕುರಿತಾಗಿ ಪ್ರಸ್ತಾವಿಸಿದರು: “ದೇವ! ಇವನು ಕುಣಿಯದಹಾಗೆ ನೀನು ಮಾಡಬೇಕು.” ಸುರರ ಹಿತಕಾಮಿ ದೇವನು ಹರ್ಷಾವಿಷ್ಟ ಚೇತಸನಾಗಿ ಕುಣಿಯುತ್ತಿದ್ದ ಋಷಿಯ ಬಳಿ ಬಂದು ಹೇಳಿದನು: “ಅಹೋ ಮಹರ್ಷೇ! ಏಕೆ ಕುಣಿಯುತ್ತಿದ್ದೀಯೆ? ನೀನು ಇಂದು ಇಷ್ಟು ಹರ್ಷದಿಂದಿರಲು ಏನು ಕಾರಣ?” ಅದಕ್ಕೆ ಋಷಿಯು ಹೇಳಿದನು: “ದೇವ! ನನ್ನ ಕೈಯಿಂದ ಶಾಕರಸವು ಸ್ರವಿಸುತ್ತಿರುವುದು ನಿನಗೆ ಕಾಣುವುದಿಲ್ಲವೇ? ಅದನ್ನು ನೋಡಿದಾಗ ಮಹಾ ಹರ್ಷದಿಂದ ಕೂಡಿದವನಾಗಿ ಕುಣಿಯಲು ಪ್ರಾರಂಭಿಸಿದೆ.” ಮುನಿಯ ರಾಗ ಮೋಹಕ್ಕೆ ಮುಗುಳ್ನಕ್ಕು ದೇವನು ಹೇಳಿದನು: “ವಿಪ್ರ! ಆದರೆ ನಾನು ಇದರಿಂದ ವಿಸ್ಮಿತನಾಗಲಿಲ್ಲ. ನನ್ನನ್ನು ನೋಡು!” ಹೀಗೆ ಹೇಳಿದ ಧೀಮಂತ ಮಹಾದೇವನು ತನ್ನ ಉಗುರಿನಿಂದ ಹೆಬ್ಬೆರಳನ್ನು ಚುಚ್ಚಲು ಆ ಗಾಯದಿಂದ ಹಿಮಸನ್ನಿಭ ಭಸ್ಮವು ಹೊರಚಿಮ್ಮಿತು. ಅದನ್ನು ನೋಡಿ ನಾಚಿದ ಆ ಮುನಿಯು ಅವನ ಪಾದಗಳಿಗೆರಗಿ ಹೇಳಿದನು: “ರುದ್ರ, ಮಹಾ ಪರತರ, ಸುರಾಸುರರ, ಜಗತ್ತಿನ ಗತಿಯಾದ ಶೂಲಧಾರಿ ನಿನ್ನನ್ನಲ್ಲದೇ ಬೇರೆ ಯಾವ ದೇವನನ್ನೂ ನಾನು ಮನ್ನಿಸುವುದಿಲ್ಲ! ಈ ವಿಶ್ವ, ತ್ರೈಲೋಕ್ಯ ಮತ್ತು ಸಚರಾಚರವೂ ನಿನ್ನಿಂದಲೇ ಸೃಷ್ಟಿಯಾದವುಗಳು. ಭಗವನ್! ಯುಗಕ್ಷಯದಲ್ಲಿ ಎಲ್ಲವೂ ನಿನ್ನಲ್ಲಿಯೇ ಲೀನವಾಗುತ್ತವೆ. ದೇವತೆಗಳೂ ಕೂಡ ನಿನ್ನನ್ನು ಸಂಪೂರ್ಣ ತಿಳಿದುಕೊಳ್ಳಲು ಆಗದಿರುವಾಗ ನನಗೆ ಅದು ಹೇಗೆ ಸಾಧ್ಯ? ಬ್ರಹ್ಮಾದಿ ಸುರರೆಲ್ಲರೂ ನಿನ್ನಲ್ಲಿಯೇ ಕಾಣುತ್ತಾರೆ. ಸರ್ವ ಲೋಕಗಳ ಕರ್ತ ಮತ್ತು ಕಾರಣನು ನೀನೇ. ನಿನ್ನ ಪ್ರಸಾದದಿಂದ ಸರ್ವ ಸುರರೂ ಭಯವನ್ನು ಕಳೆದುಕೊಂಡು ಸಂತೋಷದಿಂದ ಇದ್ದಾರೆ.” ಹೀಗೆ ಮಹಾದೇವನನ್ನು ಸ್ತುತಿಸಿ ಆ ಋಷಿಯು ಪ್ರಣಾಮ ಮಾಡಿ ಪುನಃ ಹೇಳಿದನು: “ಮಹಾದೇವ! ನಿನ್ನ ಪ್ರಸಾದದಿಂದ ನನ್ನ ತಪಸ್ಸು ಎಂದೂ ಕ್ಷಣಿಸದಿರಲಿ!” ಆಗ ಸಂತೋಷಗೊಂಡ ದೇವನು ಬ್ರಹ್ಮರ್ಷಿಗೆ ಹೇಳಿದನು: “ವಿಪ್ರ! ನನ್ನ ಪ್ರಸಾದದಿಂದ ನಿನ್ನ ತಪಸ್ಸು ಸಹಸ್ರಪಟ್ಟು ವೃದ್ಧಿಯಾಗುತ್ತದೆ. ನಿನ್ನೊಂದಿಗೆ ನಾನು ಈ ಆಶ್ರಮದಲ್ಲಿ ವಾಸಿಸುತ್ತೇನೆ. ಸಪ್ತಸರಸ್ವತಿಯಲ್ಲಿ ಸ್ನಾನಮಾಡಿ ನನ್ನನ್ನು ಅರ್ಚಿಸುವವರಿಗೆ ಈ ಲೋಕದಲ್ಲಿ ಯಾವುದೂ ದುರ್ಲಭವೆಸಿಸುವುದಿಲ್ಲ ಮತ್ತು ಅವರು ಸಾರಸ್ವತ ಲೋಕಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯುವೇ ಇಲ್ಲ.”
“ಅಲ್ಲಿಂದ ಮೂರು ಲೋಕಗಳಲ್ಲೂ ವಿಶ್ರುತ ಔಶನಸಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳೂ, ಋಷಿ-ತಪೋಧನರೂ ಇದ್ದಾರೆ. ಭಾರ್ಗವನನ್ನು ಸಂತೋಷಗೊಳಿಸಲು ಕಾರ್ತಿಕೇಯನು ಅಲ್ಲಿ ಮೂರೂ ಸಂಧ್ಯಾಸಮಯಗಳಲ್ಲಿ ಸಾನ್ನಿಧ್ಯವನ್ನು ಮಾಡುವುದಿಲ್ಲವೇ? ಅಲ್ಲಿ ಸರ್ವಪಾಪಪ್ರಮೋಚನ ಕಪಾಲಮೋಚನ ತೀರ್ಥದಲ್ಲಿ ಸ್ನಾನಮಾಡಿ ಸರ್ವಪಾಪಗಳಿಂದ ವಿಮೋಚಿತರಾಗುತ್ತಾರೆ. ಅಲ್ಲಿಂದ ಅಗ್ನಿತೀರ್ಥಕ್ಕೆ ಹೋಗಿ ಅಲ್ಲಿ ಸ್ನಾನಮಾಡಿದರೆ ಅಗ್ನಿಲೋಕವು ದೊರೆಯುತ್ತದೆ ಮತ್ತು ಕುಲವು ಉದ್ಧಾರವಾಗುತ್ತದೆ. ಅಲ್ಲಿಯೇ ವಿಶ್ವಾಮಿತ್ರನ ತೀರ್ಥವಿದೆ. ಅಲ್ಲಿ ಸ್ನಾನಮಾಡಿದರೆ ಬ್ರಾಹ್ಮಣನಾಗಿ ಹುಟ್ಟುತ್ತಾನೆ. ಶುಚಿಯಾಗಿ, ಪ್ರಯತಮಾನಸನಾಗಿ ಬ್ರಹ್ಮಯೋನಿಗೆ ಹೋಗಿ ಅಲ್ಲಿ ಸ್ನಾನಮಾಡಿ ಬ್ರಹ್ಮಲೋಕವನ್ನು ಪಡೆಯುತ್ತಾರೆ ಮತ್ತು ಏಳು ತಲೆಮಾರುಗಳವರೆಗೆ ಕುಲವನ್ನು ಪುನೀತಗೊಳಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅಲ್ಲಿಂದ ಮೂರುಲೋಕಗಳಲ್ಲಿ ವಿಶ್ರುತ ಪೃಥೂದಕ ಎಂದು ಖ್ಯಾತಗೊಂಡ ಕಾರ್ತಿಕೇಯನ ತೀರ್ಥಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿ ಪಿತೃಗಳ ಮತ್ತು ದೇವತೆಗಳ ಅರ್ಚನೆಯಲ್ಲಿ ನಿರತನಾಗಬೇಕು. ಅಲ್ಲಿ ಸ್ನಾನಮಾಡುವುದರಿಂದ ಸ್ತ್ರೀಯಾಗಿರಲಿ ಅಥವಾ ಪುರುಷನಾಗಿರಲಿ, ಮಾನುಷ ಬುದ್ಧಿಯಿಂದ, ಅರಿತೂ ಅಥವಾ ಅರಿಯದೇ ಮಾಡಿದ ಏನಾದರೂ ಪಾಪಕರ್ಮಗಳೆಲ್ಲವನ್ನೂ ನಾಶಗೊಳಿಸಿ ಅಶ್ವಮೇಧಯಾಗದ ಫಲವನ್ನು ಪಡೆದು ಸ್ವರ್ಗಲೋಕವನ್ನು ಸೇರುತ್ತಾರೆ. ಕುರುಕ್ಷೇತ್ರವು ಪುಣ್ಯ. ಕುರುಕ್ಷೇತ್ರಕ್ಕಿಂತ ಸರಸ್ವತಿಯು ಪುಣ್ಯ. ಸರಸ್ವತಿಗಿಂತ ತಿರ್ಥಗಳು ಮತ್ತು ತೀರ್ಥಗಳಿಗಿಂತ ಪೃಥೂದಕವು ಪುಣ್ಯವೆಂದು ಹೇಳುತ್ತಾರೆ. ಸರ್ವತೀರ್ಥಗಳಲ್ಲಿ ಉತ್ತಮ ಪೃಥೂದಕದಲ್ಲಿ ಜಪನಿರತನಾಗಿ ತನ್ನ ದೇಹವನ್ನು ತೊರೆದವನಿಗೆ ಮರಣದ ಭಯವು ಎಂದೂ ಕಾಡುವುದಿಲ್ಲ. ಪೃಥೂದಕಕ್ಕೆ ಹೋಗಬೇಕೆಂದು ಸನತ್ಕುಮಾರಮತ್ತು ಮಹಾತ್ಮ ವ್ಯಾಸರು ಹಾಡಿದ್ದಾರೆ ಮತ್ತು ವೇದಗಳಲ್ಲಿ ಹೇಳಲಾಗಿದೆ. ಪೃಥೂದಕಕ್ಕಿಂತ ಪುಣ್ಯತರ ತೀರ್ಥವಿನ್ನೊಂದಿಲ್ಲ. ಇದು ಪವಿತ್ರ ಮತ್ತು ಪಾವನ ಎನ್ನುವುದರಲ್ಲಿ ಸಂಶಯವಿಲ್ಲ. ಪೃಥೂದಕದಲ್ಲಿ ಸ್ನಾನಮಾಡಿ ಪಾಪಕೃತ ಜನರೂ ಸ್ವರ್ಗಕ್ಕೆ ಹೋಗುತ್ತಾರೆ ಎಂದು ತಿಳಿದವರು ಹೇಳುತ್ತಾರೆ. ಅಲ್ಲಿ ಮಧುಸ್ರವ ತೀರ್ಥವಿದೆ. ಅಲ್ಲಿ ಸ್ನಾನಮಾಡಿದ ನರನು ಸಹಸ್ರ ಗೋವುಗಳನ್ನು ದಾನಮಾಡಿದ ಫಲವನ್ನು ಪಡೆಯುತ್ತಾನೆ. ಅನಂತರ ಯಥಾಕ್ರಮವಾಗಿ ಸರಸ್ವತೀ ಮತ್ತು ಅರುಣಗಳ ಸಂಗಮ ಲೋಕವಿಶ್ರುತ ದೇವೀ ತೀರ್ಥಕ್ಕೆ ಮುಂದುವರೆಯಬೇಕು. ಮೂರುರಾತ್ರಿಗಳು ಉಪವಾಸವಿದ್ದು ಅಲ್ಲಿ ಸ್ನಾನಮಾಡಿದವನು ಬ್ರಹ್ಮಹತ್ಯಾ ದೋಷದಿಂದ ವಿಮುಕ್ತನಾಗುತ್ತಾನೆ. ಅಗ್ನಿಷ್ಠೋಮ ಮತ್ತು ಅತಿರಾತ್ರಿ ಈ ಎರಡು ಯಜ್ಞಗಳ ಫಲವನ್ನು ಹೊಂದುತ್ತಾನೆ ಮತ್ತು ಅವನ ಕುಲದ ಏಳು ತಲೆಮಾರುಗಳನ್ನು ಪುನೀತಗೊಳಿಸುತ್ತಾನೆ.
“ಅಲ್ಲಿಯೇ ವಿಪ್ರರಮೇಲಿನ ಅನುಕಂಪದಿಂದ ದರ್ಭಿಯು ಹಿಂದೆ ನಿರ್ಮಿಸಿದ್ದ ಅವತೀರ್ಣ ತೀರ್ಥವಿದೆ. ವ್ರತ, ಉಪನಯನ, ಉಪವಾಸ ಮತ್ತು ಕ್ರಿಯಾಮಂತ್ರ ಸಂಯುಕ್ತ ದ್ವಿಜನು ನಿಜವಾಗಿಯೂ ಬ್ರಾಹ್ಮಣ. ಆದರೆ ಕ್ರಿಯಮಂತ್ರವಿಹೀನನೂ ಕೂಡ ಅಲ್ಲಿ ಸ್ನಾನಮಾಡುವುದರಿಂದ ವ್ರತಸಿದ್ಧ ಬ್ರಾಹ್ಮಣನಾಗುತ್ತಾನೆ ಎಂದು ಬಹಳ ಹಿಂದಿನಿಂದಲೂ ಕಂಡಿದ್ದೇವೆ. ದರ್ಭಿಯು ಇಲ್ಲಿ ನಾಲ್ಕೂ ಸಮುದ್ರಗಳನ್ನೂ ಉಟ್ಟುಗೂಡಿಸಿದ್ದಾನೆ. ಇವುಗಳಲ್ಲಿ ಸ್ನಾನಮಾಡಿದವನು ದುರ್ಗತಿಯನ್ನು ಹೊಂದುವುದಿಲ್ಲ ಮತ್ತು ಅವನು ನಾಲ್ಕು ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಹೊಂದುತ್ತಾನೆ. ಅನಂತರ ಶತಸಹಸ್ರಕ ಮತ್ತು ಅಲ್ಲಿಯೇ ಇರುವ ಸಹಸ್ರಕ ಈ ಎರಡು ಲೋಕವಿಶ್ರುತ ತೀರ್ಥಗಳಿಗೆ ಹೋಗಬೇಕು. ಇವೆರಡರಲ್ಲಿ ಸ್ನಾನಮಾಡಿದ ನರನು ಸಾವಿರ ಗೋವುಗಳನ್ನು ದಾನವಿತ್ತ ಫಲವನ್ನು ಪಡೆಯುತ್ತಾನೆ ಮತ್ತು ಅವನು ಮಾಡಿದ ದಾನ-ಉಪವಾಸಗಳು ಸಾವಿರಪಟ್ಟು ಆಗುತ್ತವೆ. ಅನಂತರ ಅನುತ್ತಮ ರೇಣುಕಾತೀರ್ಥಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿ ಪಿತೃ-ದೇವತಾರ್ಚನೆಗಳಲ್ಲಿ ನಿರತನಾದವನು ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಅಗ್ನಿಷ್ಠೋಮಯಾಗದ ಫಲವನ್ನು ಪಡೆಯುತ್ತಾನೆ. ವಿಮೋಚನದಲ್ಲಿ ಸ್ನಾನಮಾಡಿ ಸಿಟ್ಟನ್ನು ಗೆದ್ದ ಜಿತೇಂದ್ರಿಯನು ಗಳಿಸುವುದರಲ್ಲಿ ಮಾಡಿದ ಸರ್ವ ದೋಷಗಳಿಂದ ಮುಕ್ತನಾಗುತ್ತಾನೆ. ಅನಂತರ ಪಂಚವಟಿಗೆ ಹೋಗಿ ಜಿತೇಂದ್ರಿಯನಾಗಿದ್ದ ಬ್ರಹ್ಮಚಾರಿಯು ಮಹಾ ಪುಣ್ಯದಿಂದೊಡಗೂಡಿ ಸತ್ಯವಂತರ ಲೋಕದಲ್ಲಿ ಗೌರವಿಸಲ್ಪಡುತ್ತಾನೆ. ಅಲ್ಲಿ ಸ್ವಯಂ ಯೋಗೇಶ್ವರ ಸ್ಥಾಣು ವೃಷಧ್ವಜನಿದ್ದಾನೆ. ಅಲ್ಲಿಗೆ ಹೋಗಿ ಆ ದೇವೇಶನನ್ನು ಪೂಜಿಸಿದವನು ಸಿದ್ಧಿಯನ್ನು ಹೊಂದುತ್ತಾನೆ. ವರುಣ ತೀರ್ಥ ಔಜಸವು ತನ್ನದೇ ಕಾಂತಿಯಿಂದ ಬೆಳಗುತ್ತದೆ. ಅಲ್ಲಿ ಗುಹನು ಬ್ರಹ್ಮನೇ ಮೊದಲಾಗಿ ದೇವತೆಗಳು ಮತ್ತು ತಪೋಧನ ಋಷಿಗಳಿಂದ ದೇವತೆಗಳ ಸೇನಾಪತಿಯಾಗಿ ಅಭಿಷಿಕ್ತನಾದನು.
“ಔಜಸದ ಪೂರ್ವದಲ್ಲಿ ಕುರುತೀರ್ಥವಿದೆ. ಬ್ರಹ್ಮಚಾರಿಯೂ ಜಿತೇಂದ್ರಿಯನೂ ಆಗಿದ್ದು ಕುರುತೀರ್ಥದಲ್ಲಿ ಸ್ನಾನಮಾಡಿದ ನರನು ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಕುರುಲೋಕವನ್ನು ಪಡೆಯುತ್ತಾನೆ. ಅನಂತರ ನಿಯತನಾಗಿ ನಿಯತಾಶನನಾಗಿ ಸ್ವರ್ಗದ್ವಾರಕ್ಕೆ ಹೋದರೆ ಸ್ವರ್ಗಲೋಕವು ದೊರೆಯುತ್ತದೆ ಮತ್ತು ಬ್ರಹ್ಮಲೋಕಕ್ಕೆ ಹೋಗುತ್ತಾರೆ. ಅನಂತರ ತೀರ್ಥಯಾತ್ರಿಯು ಅನರಕಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿದ ನರನು ದುರ್ಗತಿಯನ್ನು ಹೊಂದುವುದಿಲ್ಲ. ಅಲ್ಲಿ ಸ್ವಯಂ ಬ್ರಹ್ಮನು ದೇವತೆಗಳೊಡಗೂಡಿ ನಾರಾಯಣನನ್ನು ಮುಂದಿಟ್ಟುಕೊಂಡು ಅವನನ್ನು ಪೂಜಿಸುತ್ತಾನೆ. ಅಲ್ಲಿಯೇ ರುದ್ರಪತ್ನಿಯ ಸನ್ನಿಧಿಯೂ ಇದೆ. ಆ ದೇವಿಯ ಬಳಿಸಾರಿದರೆ ದುರ್ಗತಿಯನ್ನು ಹೊಂದುವುದಿಲ್ಲ, ಅಲ್ಲಿಯೇ ಉಮಾಪತಿ ವಿಶ್ವೇಶ್ವರ ಮಹಾದೇವನ ಬಳಿಸಾರಿದರೆ ಸರ್ವ ಪಾಪಗಳಿಂದ ಬಿಡುಗಡೆ ದೊರೆಯುತ್ತದೆ. ಅರಿಂದಮ ಪದ್ಮನಾಭ ನಾರಾಯಣನ ಬಳಿಸಾರಿದರೆ ಶೋಭಾಯಮಾನ ವಿಷ್ಣುಲೋಕವನ್ನು ಪಡೆಯುತ್ತಾರೆ. ಸರ್ವದೇವ ತೀರ್ಥದಲ್ಲಿ ಸ್ನಾನಮಾಡಿದವನು ಸರ್ವದುಃಖಗಳಿಂದ ದೂರನಾಗಿ ಸದಾ ಚಂದ್ರನಂತೆ ಬೆಳಗುತ್ತಾನೆ. ಅಲ್ಲಿಂದ ತೀರ್ಥಯಾತ್ರಿಯು ಸ್ವಸ್ತಿಪುರಕ್ಕೆ ಹೋಗಬೇಕು. ಆ ಪಾವನ ತೀರ್ಥವನ್ನು ಸೇರಿ ಪಿತೃಗಳಿಗೆ ಮತ್ತು ದೇವತೆಗಳಿಗೆ ತರ್ಪಣವನ್ನಿತ್ತ ಮಾನವನು ಅಗ್ನಿಷ್ಟೋಮ ಯಾಗದ ಫಲವನ್ನು ಪಡೆಯುತ್ತಾನೆ. ಅಲ್ಲಿಯೇ ಗಂಗಾ ಸರೋವರ ಮತ್ತು ಬಾವಿಗಳಿವೆ. ಆ ಬಾವಿಯಲ್ಲಿ ಮೂರುಕೋಟಿ ತೀರ್ಥಗಳಿವೆ. ಅಲ್ಲಿ ಸ್ನಾನಮಾಡಿದ ನರನು ಸ್ವರ್ಗಲೋಕವನ್ನು ಹೊಂದುತ್ತಾನೆ. ಆಪಗ ಗಂಗೆಯಲ್ಲಿ ಮಿಂದು ಮಹೇಶ್ವರನನ್ನು ಅರ್ಚಿಸಿದ ನರನು ಗಾಣಪತ್ಯವನ್ನು ಪಡೆದು ತನ್ನ ಕುಲವನ್ನು ಉದ್ಧಾರಮಾಡುತ್ತಾನೆ. ಅನಂತರ ಲೋಕವಿಶ್ರುತ ಸ್ಥಾಣುವಟಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿ ಒಂದು ರಾತ್ರಿ ಉಳಿದವನು ರುದ್ರಲೋಕವನ್ನು ಹೊಂದುತ್ತಾನೆ. ಅನಂತರ ನರನು ವಸಿಷ್ಠನ ಆಶ್ರಮ ಬದರೀಪಾಚನಕ್ಕೆ ಹೋಗಬೇಕು ಮತ್ತು ಅಲ್ಲಿ ಬದರಿ ಹಣ್ಣುಗಳನ್ನು ತಿಂದು ಮೂರುರಾತ್ರಿಗಳನ್ನು ಕಳೆಯಬೇಕು. ಹನ್ನೆರಡು ವರ್ಷಗಳು ಒಂದೇಸಮನೆ ಬದರಿ ಹಣ್ಣುಗಳನ್ನು ತಿನ್ನುವುದೂ ಮತ್ತು ಅಲ್ಲಿ ಮೂರು ರಾತ್ರಿಗಳನ್ನು ಕಳೆಯುವುದೂ ಒಂದೇ ಸಮ. ತೀರ್ಥಯಾತ್ರಿಯು ಇಂದ್ರಮಾರ್ಗವನ್ನು ಸೇರಿ ಒಂದು ದಿನ ಮತ್ತು ರಾತ್ರಿ ಉಪವಾಸವಿರುವುದರಿಂದ ಶಕ್ರಲೋಕದಲ್ಲಿ ಮೆರೆಯುತ್ತಾನೆ. ನಿಯತನೂ ಸತ್ಯವಾದಿಯೂ ಆಗಿದ್ದು ಏಕರಾತ್ರಿಯನ್ನು ತಲುಪಿ ಅಲ್ಲಿ ಒಂದು ರಾತ್ರಿ ಉಳಿದ ನರನು ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ.
“ಅಲ್ಲಿಂದ ಮೂರುಲೋಕಗಳಲ್ಲಿ ವಿಶ್ರುತ ತೇಜೋರಾಶಿ ಮಹಾತ್ಮ ಆದಿತ್ಯನ ಆಶ್ರಮಕ್ಕೆ ಹೋಗಬೇಕು. ಆ ತೀರ್ಥದಲ್ಲಿ ಸ್ನಾನಮಾಡಿ ವಿಭಾವಸುವನ್ನು ಪೂಜಿಸಿದ ನರನು ಆದಿತ್ಯಲೋಕವನ್ನು ಸೇರುತ್ತಾನೆ ಮತ್ತು ತನ್ನ ಕುಲವನ್ನೂ ಉದ್ಧರಿಸುತ್ತಾನೆ. ಸೋಮತೀರ್ಥದಲ್ಲಿ ಸ್ನಾನಮಾಡಿದ ನರನು ಸೋಮಲೋಕವನ್ನು ಸೇರುತ್ತಾನೆ ಎನ್ನುವುದಲ್ಲಿ ಸಂಶಯವೇ ಇಲ್ಲ. ಅನಂತರ ಮಹಾತ್ಮ ದಧೀಚಿಯ ಪುಣ್ಯತಮ ಲೋಕವಿಶ್ರುತ ತೀರ್ಥಕ್ಕೆ ಹೋಗಬೇಕು. ಇಲ್ಲಿ ಸಾರಸ್ವತ ಅಂಗಿರಸನ ತಪೋನಿಧಿಯಿದೆ. ಆ ತೀರ್ಥದಲ್ಲಿ ಸ್ನಾನಮಾಡಿದ ನರನಿಗೆ ವಾಜಪೇಯದ ಫಲವು ದೊರೆಯುತ್ತದೆ ಮತ್ತು ಅವನಿಗೆ ಸಾರಸ್ವತಿಯ ಗತಿಯೂ ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅಲ್ಲಿಂದ ನಿಯತನಾಗಿ ಬ್ರಹ್ಮಚಾರಿಯಾಗಿದ್ದುಕೊಂಡು ಕನ್ಯಾಶ್ರಮಕ್ಕೆ ಹೋಗಬೇಕು. ಅಲ್ಲಿ ಉಪವಾಸ ಪರಾಯಣನಾಗಿ ಮೂರು ರಾತ್ರಿಗಳನ್ನು ಕಳೆದವನಿಗೆ ನೂರು ದಿವ್ಯ ಕನ್ಯೆಯರು ದೊರೆಯುತ್ತಾರೆ ಮತ್ತು ಅವನು ಬ್ರಹ್ಮಲೋಕಕ್ಕೆ ಹೋಗುತ್ತಾನೆ. ಅನಂತರ ಸನ್ನಿಹಿತೀ ತೀರ್ಥಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮನೇ ಮೊದಲಾದ ದೇವತೆಗಳು, ತಪೋಧನ ಋಷಿಗಳು ಪ್ರತಿ ತಿಂಗಳೂ ಸೇರುತ್ತಾರೆ ಮತ್ತು ಅಲ್ಲಿ ಮಹಾ ಪುಣ್ಯವನ್ನು ನೀಡುತ್ತಾರೆ. ದಿವಾಕರನು ರಾಹುಗ್ರಸ್ತನಾಗಿದ್ದಾಗ ಸನ್ನಿಹಿತಿಯಲ್ಲಿ ಮಿಂದವನ ನೂರು ಅಶ್ವಮೇಧಯಾಗಗಳು ಶಾಶ್ವತವಾಗುತ್ತವೆ. ಭೂಮಿಯ ಮೇಲಿರುವ ಮತ್ತು ಆಕಾಶದಲ್ಲಿ ಹರಿಯುವ ಏನೆಲ್ಲ ತೀರ್ಥಗಳು, ನದ ನದಿಗಳು, ಕೆರೆ-ಚಿಲುಮೆಗಳು, ಸರೋವರ-ಬಾವಿಗಳು ಮತ್ತು ಪುಣ್ಯಪ್ರದೇಶಗಳು ಪ್ರತಿ ತಿಂಗಳೂ ಸನ್ನಿಹಿತಿಯಲ್ಲಿ ಬಂದು ಸೇರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಸ್ತ್ರೀಯಾಗಿರಲಿ ಅಥವಾ ಪುರುಷನಾಗಿರಲಿ ಏನೆಲ್ಲ ಕರ್ಮಗಳನ್ನು ಮಾಡಿರುತ್ತಾರೋ ಅವೆಲ್ಲವೂ ಅಲ್ಲಿ ಸ್ನಾನಮಾಡುವುದರಿಂದ ನಾಶಹೊಂದುತ್ತವೆ ಮತ್ತು ಅವರು ಪದ್ಮವರ್ಣದ ಯಾನದಲ್ಲಿ ಬ್ರಹ್ಮಲೋಕಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
“ಅನಂತರ ದ್ವಾರಪಾಲಕ ಅರಂತುಕನನ್ನು ಅಭಿವಂದಿಸಿ ಕೋಟಿರೂಪದಲ್ಲಿ ಸ್ನಾನಮಾಡಿದವನಿಗೆ ಬಹು ಸುವರ್ಣವು ದೊರೆಯುತ್ತದೆ. ಅಲ್ಲಿಯೇ ಗಂಗಾಸರೋವರವೊಂದಿದೆ. ಅಲ್ಲಿ ಬ್ರಹ್ಮಚಾರಿಯಾಗಿದ್ದುಕೊಂಡು ಸ್ನಾನಮಾಡುವುದರಿಂದ ರಾಜಸೂಯ ಮತ್ತು ಅಶ್ವಮೇಧಯಾಗಗಳ ಶಾಶ್ವತ ಫಲವು ದೊರೆಯುತ್ತದೆ. ಭೂಮಿಯ ಮೇಲೆ ನೈಮಿಷವು ಪುಣ್ಯ ಮತ್ತು ಅಂತರಿಕ್ಷದಲ್ಲಿ ಪುಷ್ಕರವು ಪುಣ್ಯ. ಆದರೆ ಮೂರೂ ಲೋಕಗಳಲ್ಲಿ ಕುರುಕ್ಷೇತ್ರವು ವಿಶೇಷವಾಗಿದ್ದುದು. ಕುರುಕ್ಷೇತ್ರದಲ್ಲಿ ಗಾಳಿಯಿಂದ ತೂರಿಬಂದ ಧೂಳೂ ಕೂಡ ಕೆಟ್ಟ ಕರ್ಮಗಳನ್ನು ಮಾಡಿದವರಿಗೂ ಸಹ ಪರಮ ಗತಿಯನ್ನು ನೀಡುತ್ತದೆ. ಸರಸ್ವತೀ ನದಿಯ ದಕ್ಷಿಣದಲ್ಲಿ ಮತ್ತು ದೃಷ್ಟದ್ವತೀ ನದಿಯ ಉತ್ತರದಲ್ಲಿರುವ ಕುರುಕ್ಷೇತ್ರದಲ್ಲಿ ವಾಸಿಸುವರು ಸ್ವರ್ಗದಲ್ಲಿ ವಾಸಿಸುವವರಂತೆ. ಕುರುಕ್ಷೇತ್ರಕ್ಕೆ ಹೋಗುತ್ತೇನೆ ಕುರುಕ್ಷೇತ್ರದಲ್ಲಿ ವಾಸಿಸುತ್ತೇನೆ ಎನ್ನುವ ವಾಕ್ಯವನ್ನು ಉಚ್ಚರಿಸುವವನೂ ಕೂಡ ಸರ್ವಪಾಪಗಳಿಂದ ಮುಕ್ತಿಹೊಂದುತ್ತಾನೆ. ಬ್ರಹ್ಮರ್ಷಿ ಸೇವಿತ ಬ್ರಹ್ಮನ ವೇದಿಕೆಯೆನಿಸಿದ ಪುಣ್ಯ ಕುರುಕ್ಷೇತ್ರದಲ್ಲಿ ವಾಸಿಸುವವನು ಯಾವ ರೀತಿಯಲ್ಲಿಯೂ ದುಃಖಿಸುವುದಿಲ್ಲ. ತರಂತುಕ ಮತ್ತು ಅರಂತುಕದ ಮಧ್ಯ ಮತ್ತು ಪರಶುರಾಮ ಮತ್ತು ಮಚಕ್ರುಕರ ಸರೋವರಗಳ ಮಧ್ಯ ಇರುವ ಪ್ರದೇಶವೇ ಸಮಂತಪಂಚಕ ಕುರುಕ್ಷೇತ್ರ. ಇದನ್ನೇ ಪಿತಾಮಹ ಬ್ರಹ್ಮನ ಉತ್ತರ ವೇದಿ ಎಂದು ಕರೆಯುತ್ತಾರೆ.
“ಅನಂತರ ಪುರಾತನ ಧರ್ಮತೀರ್ಥಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿದ ಧರ್ಮಶೀಲ ಸಮಾಹಿತ ನರನು ಕುಲದ ಏಳು ತಲೆಮಾರುಗಳನ್ನು ಪುನೀತಗೊಳಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಅನಂತರ ಅನುತ್ತಮ ಕಾರಾಪತನಕ್ಕೆ ಹೋಗಬೇಕು. ಅದರಿಂದ ಅಗ್ನಿಷ್ಟೋಮಯಾಗದ ಫಲವನ್ನು ಪಡೆದು ಮುನಿಲೋಕವನ್ನು ಸೇರುತ್ತಾರೆ. ಅನಂತರ ಸೌಗಂಧಿಕಾ ವನಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳು ಮತ್ತು ತಪೋಧನ ಋಷಿಗಳು, ಸಿದ್ಧ-ಚಾರಣ-ಗಂಧರ್ವರು, ಕಿನ್ನರರು ಮತ್ತು ನಾಗಗಳು ಸೇರಿರುತ್ತಾರೆ. ಆ ವನದ ಪ್ರವೇಶ ಮಾತ್ರದಿಂದ ಮಾನವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ. ಅನಂತರ ನದಿಗಳಲ್ಲೇ ಉತ್ತಮ ನದಿ ಶ್ರೇಷ್ಠ ನದಿ ಮಹಾಪುಣ್ಯಕಾರಿಣಿ ಪ್ಲಕ್ಷದಿಂದ ಹರಿಯುವ ಸರಸ್ವತೀ ನದಿಯಿದೆ. ಅಲ್ಲಿ ಹುತ್ತದಿಂದ ಹರಿಯುವ ನೀರಿನಲ್ಲಿ ಸ್ನಾನಮಾಡಿ ಪಿತೃ ದೇವತೆಗಳನ್ನು ಪೂಜಿಸಿದರೆ ಅಶ್ವಮೇಧಯಾಗದ ಫಲವು ದೊರೆಯುತ್ತದೆ. ಅಲ್ಲಿ ಹುತ್ತದಿಂದ ಶಮೆಯ ಆರು ಎಸೆತಗಳ ದೂರದಲ್ಲಿ ನೋಡಲು ದುರ್ಲಭವಾದ ಈಶಾನಾಧ್ಯುಷಿತ ಎಂಬ ಹೆಸರಿನ ತೀರ್ಥವಿದೆ ಎಂದು ಹೇಳುತ್ತಾರೆ. ಪುರಾಣಗಳ ಪ್ರಕಾರ ಅಲ್ಲಿ ಸ್ನಾನಮಾಡಿದವನು ಸಹಸ್ರ ಗೋವುಗಳನ್ನು ದಾನಮಾಡಿದ ಮತ್ತು ಅಶ್ವಮೇಧಯಾಗದ ಫಲವನ್ನು ಪಡೆಯುತ್ತಾನೆ ಎಂದಿದೆ. ಸುಗಂಧಾ, ಶತಕುಂಭಾ ಮತ್ತು ಪಂಚಯಜ್ಞಗಳಿಗೆ ಹೋದವರು ಸ್ವರ್ಗಲೋಕದಲ್ಲಿ ಮೆರೆಯುತ್ತಾರೆ. ಅಲ್ಲಿಯೇ ತ್ರಿಶೂಲಖಾತ ತೀರ್ಥಕ್ಕೆ ಹೋಗಿ ಅಲ್ಲಿ ಸ್ನಾನಮಾಡಿ ಪಿತೃದೇವತೆಗಳ ಅರ್ಚನೆಯಲ್ಲಿ ನಿರತನಾದವನು ದೇಹವನ್ನು ತೊರೆದು ಗಾಣಪತ್ಯ ಪದವಿಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
“ಅನಂತರ ಬಹಳ ದುರ್ಲಭವಾದ ಮೂರು ಲೋಕಗಳಲ್ಲಿ ವಿಶ್ರುತ ಶಾಕಂಭರೀ ಎಂದು ವಿಖ್ಯಾತ ದೇವೀ ಸ್ಥಾನಕ್ಕೆ ಹೋಗಬೇಕು. ಅವಳು ಪ್ರತಿ ತಿಂಗಳೂ ತರಕಾರಿಗಳನ್ನೇ ತಿಂದುಕೊಂಡು ಒಂದು ಸಹಸ್ರ ದಿವ್ಯವರ್ಷಗಳ ಪರ್ಯಂತ ಅಲ್ಲಿ ವ್ರತವನ್ನಾಚರಿಸಿದಳು. ದೇವಿಯ ಮೇಲಿನ ಭಕ್ತಿಯಿಂದ ತಪೋಧನ ಋಷಿಗಳು ಅಭ್ಯಾಗತರಾಗಿ ಅಲ್ಲಿಗೆ ಬಂದಾಗ ಅವಳು ಅವರ ಆತಿಥ್ಯವನ್ನು ತರಕಾರಿಗಳಿಂದಲೇ ಮಾಡಿದಳು. ಆದುದರಿಂದಲೇ ಅವಳ ಹೆಸರು ಶಾಕಂಭರೀ ಎಂದು ನಿಂತುಬಿಟ್ಟಿತು. ಶಾಕಂಭರಿಗೆ ಬಂದು ಬ್ರಹ್ಮಚಾರಿಯೂ ಸಮಾಹಿತನೂ ಆಗಿದ್ದು ನಿಯತನೂ ಶುಚಿಯೂ ಆಗಿದ್ದು ಮೂರುರಾತ್ರಿಗಳು ಉಳಿದು ತರಕಾರಿಗಳನ್ನು ಸೇವಿಸಬೇಕು. ಹನ್ನೆರಡು ವರ್ಷಗಳ ಪರ್ಯಂತ ತರಕಾರಿಗಳನ್ನೇ ಆಹಾರವನ್ನಾಗಿಸಿಕೊಳ್ಳುವುದರಿಂದ ದೊರೆಯುವ ಫಲವು ದೇವಿಯ ಈ ಪ್ರಿಯಸ್ಥಳಕ್ಕೆ ಹೋಗುವುದರಿಂದ ದೊರೆಯುತ್ತದೆ. ಅಲ್ಲಿಂದ ಮೂರು ಲೋಕಗಳಲ್ಲಿ ವಿಶ್ರುತ ಸುವರ್ಣಾಕ್ಷಕ್ಕೆ ಹೋಗಬೇಕು. ಅಲ್ಲಿ ವಿಷ್ಣುವು ಹಿಂದೆ ಪ್ರಸಾದಕ್ಕಾಗಿ ರುದ್ರನನ್ನು ಆರಾಧಿಸಿದ್ದನು. ಅವನು ದೇವತೆಗಳಿಗೂ ಬಹಳ ದುರ್ಲಭವಾದ ಬಹಳಷ್ಟು ವರಗಳನ್ನು ಪಡೆದನು. ಪರಿತುಷ್ಟನಾದ ತ್ರಿಪುರಘ್ನನು ಹೀಗೆ ಹೇಳಿದನು: “ಕೃಷ್ಣ! ನೀನು ಲೋಕದಲ್ಲಿ ಇನ್ನೂ ಹೆಚ್ಚು ಪ್ರಿಯತರನಾಗುವೆ. ನಿನ್ನ ಮುಖವೇ ಇಡೀ ಜಗತ್ತಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.” ಅಲ್ಲಿ ಹೋಗಿ ವೃಷಧ್ವಜನನ್ನು ಪೂಜಿಸಿದರೆ ಅಶ್ವಮೇಧದ ಫಲವನ್ನು ಪಡೆದು ಗಾಣಪತ್ಯವನ್ನು ಪಡೆಯುತ್ತಾರೆ.
“ಅಲ್ಲಿಂದ ಧೂಮಾವತಿಗೆ ಹೋಗಬೇಕು. ಅಲ್ಲಿ ಮೂರು ರಾತ್ರಿಗಳು ತಂಗಿ ಮನಸಾರಿ ಪ್ರಾರ್ಥಿಸಿಕೊಂಡರೆ ನರನ ಆಸೆಗಳು ಪೂರ್ಣಗೊಳ್ಳುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ದೇವಿಯ ದಕ್ಷಿಣಭಾಗದಲ್ಲಿರುವ ರಥಾವರ್ತವನ್ನು ಶ್ರದ್ಧಾವಂತನಾಗಿ ಜಿತೇಂದ್ರಿಯನಾಗಿ ಏರಿದರೆ ಮಹಾದೇವನ ಪ್ರಸಾದದಿಂದ ಪರಮ ಗತಿಯನ್ನು ಹೊಂದುತ್ತಾರೆ. ಅದನ್ನು ಪ್ರದಕ್ಷಿಣೆ ಮಾಡಿ ಮುಂದುವರೆದು ಧಾರಾ ಎನ್ನುವ ಸರ್ವಪಾಪಗಳನ್ನೂ ನಾಶಗೊಳಿಸುವಲ್ಲಿಗೆ ಹೋಗಬೇಕು. ಅಲ್ಲಿ ಸ್ನಾನಮಾಡಿದರೆ ದುಃಖವಿರುವುದಿಲ್ಲ. ಅಲ್ಲಿಂದ ಮಹಾಗಿರಿಯನ್ನು ನಮಸ್ಕರಿಸಿ ನಿಃಸಂಶಯವಾಗಿಯೂ ಸ್ವರ್ಗದ ದ್ವಾರಕ್ಕೆ ಸಮನಾದ ಗಂಗಾದ್ವಾರಕ್ಕೆ ಹೋಗಬೇಕು. ಅಲ್ಲಿ ಸಮಾಹಿತನಾಗಿ ಕೋಟಿತೀರ್ಥದಲ್ಲಿ ಸ್ನಾನಮಾಡಿದರೆ ಪುಂಡರೀಕ ಪದವನ್ನು ಪಡೆದು ಕುಲದ ಉದ್ದಾರವಾಗುತ್ತದೆ. ಸಪ್ತಗಂಗೆ, ತ್ರಿಗಂಗೆ ಮತ್ತು ಶಕಾವರ್ತದಲ್ಲಿ ದೇವತೆ ಪಿತೃಗಳಿಗೆ ವಿಧಿವತ್ತಾಗಿ ತರ್ಪವನ್ನಿತ್ತರೆ ಪುಣ್ಯಲೋಕದಲ್ಲಿ ಮೆರೆಯಬಹುದು. ಅನಂತರ ಕನಖಲದಲ್ಲಿ ಸ್ನಾನಮಾಡಿ ಮೂರುರಾತ್ರಿಗಳನ್ನು ಕಳೆದ ನರನು ಅಶ್ವಮೇಧಯಾಗದ ಫಲವನ್ನು ಪಡೆದು ಸ್ವರ್ಗಲೋಕಕ್ಕೆ ಹೋಗುತ್ತಾನೆ. ಅಲ್ಲಿಂದ ತೀರ್ಥಯಾತ್ರಿಯು ಕಪಿಲಾವಟಕ್ಕೆ ಹೋಗಿ ಅಲ್ಲಿ ಒಂದು ರಾತ್ರಿಯನ್ನು ಕಳೆದರೆ ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ. ನಂತರ ಸರ್ವಲೋಕ ವಿಶ್ರುತ ಮಹಾತ್ಮ ನಾಗರಾಜ ಕಪಿಲನ ತೀರ್ಥವಿದೆ. ಆ ನಾಗತೀರ್ಥದಲ್ಲಿ ಸ್ನಾನಮಾಡಿದ ಮಾನವನಿಗೆ ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ.
“ಅಲ್ಲಿಂದ ಉತ್ತಮ ತೀರ್ಥಗಳಾದ ಲಲಿತಿಕ ಮತ್ತು ಶಂತನುಗಳಿಗೆ ಹೋಗಬೇಕು. ಅಲ್ಲಿ ಸ್ನಾನಮಾಡಿದ ನರನಿಗೆ ದುರ್ಗತಿಯು ಪ್ರಾಪ್ತವಾಗುವುದಿಲ್ಲ. ಗಂಗೆಯು ಕೂಡುವ ಸಂಗಮದಲ್ಲಿ ಯಾವ ನರನು ಸ್ನಾನಮಾಡುತ್ತಾನೋ ಅವನಿಗೆ ದಶಾಶ್ವಮೇಧದ ಪುಣ್ಯವು ದೊರೆಯುತ್ತದೆ ಮತ್ತು ಅವನ ಕುಲವು ಉದ್ಧಾರವಾಗುತ್ತದೆ. ಅನಂತರ ಲೋಕವಿಶ್ರುತ ಸುಗಂಧಕ್ಕೆ ಹೋದವನು ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ. ಅನಂತರ ತಿರ್ಥಯಾತ್ರಿಯು ರುದ್ರಾವರ್ತಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿದ ನರನು ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ. ಗಂಗಾ ಮತ್ತು ಸರಸ್ವತಿಗಳ ಸಂಗಮದಲ್ಲಿ ಸ್ನಾನಮಾಡಿದವನಿಗೆ ಅಶ್ವಮೇಧದ ಪುಣ್ಯವು ದೊರೆಯುತ್ತದೆ ಮತ್ತು ಅವನು ಸ್ವರ್ಗಲೋಕಕ್ಕೆ ಹೋಗುತ್ತಾನೆ. ಭದಕರ್ಣೇಶ್ವರಕ್ಕೆ ಹೋಗಿ ಯಥಾವಿಧಿಯಾಗಿ ದೇವನನ್ನು ಪೂಜಿಸಿದರೆ ದುರ್ಗತಿಯನ್ನು ಹೊಂದುವುದಿಲ್ಲ ಮತ್ತು ಸ್ವರ್ಗಲೋಕಕ್ಕೆ ಹೋಗುತ್ತಾನೆ. ಅನಂತರ ಯಥಾಕ್ರಮವಾಗಿ ತೀರ್ಥಸೇವಿಯು ಕುಬ್ಜಾಮ್ರಕಕ್ಕೆ ಹೋದರೆ, ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಪುಣ್ಯವನ್ನು ಪಡೆದು ಸ್ವರ್ಗಲೋಕವನ್ನು ಸೇರುತ್ತಾನೆ. ಅನಂತರ ತೀರ್ಥಸೇವಿಯು ಅರುಂಧತೀವಟಕ್ಕೆ ಹೋಗಬೇಕು. ಅಲ್ಲಿ ಸಮುದ್ರದಲ್ಲಿ ಸ್ನಾನಮಾಡಿ ಮೂರು ರಾತ್ರಿಗಳನ್ನು ತಂಗಿದ ನರನು ಸಹಸ್ರ ಗೋದಾನದ ಫಲವನ್ನು ಪಡೆದು ತನ್ನ ಕುಲವನ್ನು ಉದ್ಧರಿಸುತ್ತಾನೆ. ಅನಂತರ ಬ್ರಹ್ಮಚಾರಿಯಾಗಿದ್ದು ಸಮಾಹಿತನಾಗಿದ್ದು ಬ್ರಹ್ಮಾವರ್ತಕ್ಕೆ ಹೋದರೆ ಅಶ್ವಮೇಧಫಲವನ್ನು ಪಡೆದು ಸ್ವರ್ಗಲೋಕವನ್ನು ಸೇರುತ್ತಾರೆ. ಯಮುನಾಪ್ರಭವಕ್ಕೆ ಹೋಗಿ ಯಮುನೆಯಲ್ಲಿ ಮಿಂದರೆ ಅಶ್ವಮೇಧಫಲವನ್ನು ಪಡೆದು ಸ್ವರ್ಗಲೋಕದಲ್ಲಿ ಮೆರೆಯುತ್ತಾರೆ. ಮೂರು ಲೋಕಗಳಲ್ಲಿ ವಿಶ್ರುತ ದರ್ವೀಸಂಕ್ರಮಣ ತೀರ್ಥವನ್ನು ತಲುಪಿ, ಅಶ್ವಮೇಧದ ಫಲವನ್ನು ಪಡೆದು ಸ್ವರ್ಗಲೋಕಕ್ಕೆ ಹೋಗುವರು. ಸಿಧಗಂಧರ್ವ ಸೇವಿತ ಸಿಂಧೂನದಿಯ ಮೂಲಕ್ಕೆ ಹೋಗಿ ಐದು ರಾತ್ರಿಗಳನ್ನು ಕಳೆದರೆ ಬಹಳ ಚಿನ್ನವು ದೊರೆಯುತ್ತದೆ. ಅನಂತರ ಹೋಗಲು ಬಹಳ ಕಷ್ಟಕರವಾದ ವೇದಿಗೆ ನರನು ಹೋದರೆ, ಅಶ್ವಮೇಧದ ಫಲವನ್ನು ಪಡೆಯುತ್ತಾನೆ ಮತ್ತು ಉಶಾನಸನ ಗತಿಯಲ್ಲಿ ಹೋಗುತ್ತಾನೆ.
“ಅನಂತರ ಋಷಿಕುಲ್ಯ ಮತ್ತು ವಾಸಿಷ್ಠಕ್ಕೆ ಹೋಗಬೇಕು. ವಾಸಿಷ್ಠವನ್ನು ದಾಟಿದ ಎಲ್ಲ ವರ್ಣದವರೂ ದ್ವಿಜರೆನಿಸಿಕೊಳ್ಳುತ್ತಾರೆ. ಋಷಿಕುಲ್ಯದಲ್ಲಿ ಸ್ನಾನಮಾಡಿದ ನರನು, ಅಲ್ಲಿಯೇ ಶಾಕಾಹಾರಿಯಾಗಿದ್ದು ಒಂದು ತಿಂಗಳು ವಾಸಿಸಿದರೆ ಋಷಿಲೋಕವನ್ನು ಪಡೆಯುತ್ತಾನೆ. ಭೃಗುತುಂಗಕ್ಕೆ ಹೋದರೆ ಅಶ್ವಮೇಧದ ಫಲವು ದೊರೆಯುತ್ತದೆ. ವೀರಪ್ರಮೋಕ್ಷಕ್ಕೆ ಹೋದರೆ ಸರ್ವಪಾಪಗಳಿಂದ ಮುಕ್ತಿ ದೊರೆಯುತ್ತದೆ. ಕೃತ್ತಿಕಾ ಮತ್ತು ಮಘ ತೀರ್ಥಗಳನ್ನು ಭೇಟಿಮಾಡಿ ಅಗ್ನಿಷ್ಟೋಮ ಮತ್ತು ಅತಿರಾತ್ರಿ ಯಾಗಗಳ ಫಲವನ್ನು ಪಡೆಯುತ್ತಾರೆ. ಅಲ್ಲಿಂದ ಅನುತ್ತಮ ವಿಧ್ಯಾತೀರ್ಥಕ್ಕೆ ಹೋಗಿ ಸಂಧ್ಯಾಸಮಯದಲ್ಲಿ ಸ್ನಾನಮಾಡಿದವನು ಸರ್ವ ವಿಧ್ಯೆಗಳಲ್ಲಿ ಪಾರಂಗತನಾಗುತ್ತಾನೆ. ಸರ್ವಪಾಪಗಳ ವಿಮೋಚನೆಗೆ ಮಹಾಶ್ರಮದಲ್ಲಿ ಒಂದು ರಾತ್ರಿ ನಿರಾಹಾರಿಯಾಗಿ ತಂಗಬೇಕು. ಇದರಿಂದ ಶುಭ ಲೋಕಗಳನ್ನು ತನ್ನ ನಿವಾಸವಾಗಿಸಕೊಳ್ಳಬಹುದು. ಮಹಾಲಯ ಮಾಸದಲ್ಲಿ ಮೂರು ದಿನಗಳಿಗೊಮ್ಮೆ ಆಹಾರವನ್ನು ಸೇವಿಸಿಕೊಂಡು ಅಲ್ಲಿ ವಾಸಿಸಿದರೆ ಬಹಳ ಚಿನ್ನವನ್ನು ಪಡೆಯುತ್ತಾರೆ. ಅನಂತರ ಪಿತಾಮಹ ಬ್ರಹ್ಮನು ಸೇವಿಸುವ ವೇತಸಿಕಕ್ಕೆ ಹೋಗಿ, ಅಶ್ವಮೇಧಫಲವನ್ನು ಪಡೆಯಬಹುದು ಮತ್ತು ಉಶನಸನ ಗತಿಯಲ್ಲಿ ಹೋಗಬಹುದು. ಅನಂತರ ಸಿದ್ಧಸೇವಿತ ಸುಂದರಿಕಾ ತೀರ್ಥಕ್ಕೆ ಹೋದರೆ ರೂಪವಂತನಾಗುತ್ತಾನೆ ಎಂದು ಪುರಾಣಗಳಲ್ಲಿ ಕಂಡಿದ್ದಾರೆ. ಅನಂತರ ಬ್ರಹ್ಮಾಣಿಗೆ ಹೋಗಿ ಬ್ರಹ್ಮಚಾರಿಯೂ ಜಿತೇಂದ್ರಿಯನೂ ಆಗಿದ್ದರೆ ಪದ್ಮವರ್ಣದ ಯಾನದಲ್ಲಿ ಬ್ರಹ್ಮಲೋಕಕ್ಕೆ ಹೋಗಬಹುದು. ಅಲ್ಲಿಂದ ಸಿದ್ಧರು ಸೇವಿಸುವ ಪುಣ್ಯ ನೈಮಿಷಕ್ಕೆ ಹೋಗಬೇಕು. ಅಲ್ಲಿ ದೇವಗಣಗಳಿಂದ ಆವೃತ ಬ್ರಹ್ಮನು ನಿತ್ಯವೂ ವಾಸಿಸುತ್ತಾನೆ. ನೈಮಿಷಕ್ಕೆ ಹೋಗಲು ಬಯಸುವುದರಿಂದಲೇ ಪಾಪದ ಅರ್ಧಭಾಗವು ನಾಶವಾಗುತ್ತದೆ. ಅದನ್ನು ಪ್ರವೇಶಿಸುವುದರ ಮಾತ್ರದಿಂದಲೇ ನರನು ಸರ್ವಪಾಪಗಳಿಂದ ಬಿಡುಗಡೆಹೊಂದುತ್ತಾನೆ. ತೀರ್ಥಯಾತ್ರಿಯು ನೈಮಿಷದಲ್ಲಿ ಒಂದು ತಿಂಗಳು ವಾಸಿಸಬೇಕು. ಪೃಥ್ವಿಯಲ್ಲಿ ಯಾವ ಯಾವ ತೀರ್ಥಗಳಿವೆಯೋ ಅವೆಲ್ಲವೂ ನೈಮಿಷದಲ್ಲಿವೆ. ನಿಯತನೂ ನಿಯತಾಶನನೂ ಆಗಿ ನೈಮಿಷದಲ್ಲಿ ಸ್ನಾನಮಾಡಿದರೆ ಗಾವಾಮಯ ಯಜ್ಞದ ಫಲವನ್ನು ಪಡೆಯುತ್ತಾನೆ. ತನ್ನ ಕುಲದ ಏಳು ತಲೆಮಾರುಗಳವರನ್ನೂ ಪುಣ್ಯರನ್ನಾಗಿ ಮಾಡುತ್ತಾನೆ. ಉಪವಾಸಪರಾಯಣನಾಗಿದ್ದು ನೈಮಿಷದಲ್ಲಿ ಪ್ರಾಣವನ್ನು ತೊರೆದವನೂ ಸ್ವರ್ಗಲೋಕವನ್ನು ಸೇರಿ ಅಲ್ಲಿ ಸಂತೋಷಿಸುತ್ತಾನೆ ಎಂದು ತಿಳಿದವರು ಹೇಳುತ್ತಾರೆ. ನೈಮಿಷವು ನಿತ್ಯವೂ ಪುಣ್ಯಕರವಾದುದು ಮತ್ತು ಮೇಧ್ಯವಾದುದು.
“ಗಂಗೋದ್ಭೇದವನ್ನು ಸೇರಿ ಅಲ್ಲಿ ಮೂರುರಾತ್ರಿಗಳು ಉಪವಾಸದಲ್ಲಿ ಕಳೆದ ನರನು ಅಶ್ವಮೇಧಫಲವನ್ನು ಪಡೆದು ಬ್ರಹ್ಮಭೂತನಾಗುತ್ತಾನೆ. ಸರಸ್ವತಿಗೆ ಹೋಗಿ ಪಿತೃದೇವತೆಗಳಿಗೆ ತರ್ಪಣವನ್ನಿತ್ತರೆ ಸಾರಸ್ವತ ಲೋಕಗಳಲ್ಲಿ ಸಂತೋಷದಿಂದಿರುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅನಂತರ ಬ್ರಹ್ಮಚಾರಿಯಾಗಿದ್ದು ಸಮಾಹಿತನಾಗಿದ್ದು ಬಾಹುದಕ್ಕೆ ಹೋಗಬೇಕು. ಅದರಿಂದ ಮಾನವನು ದೇವಸತ್ರ ಯಜ್ಞದ ಫಲವನ್ನು ಪಡೆಯುತ್ತಾನೆ. ಅನಂತರ ಪುಣ್ಯತಮರಿಂದ ಕೂಡಿದ, ಪುಣ್ಯ ಚೀರವತಿಗೆ ಹೋಗಿ ಪಿತೃದೇವತೆಗಳ ಅರ್ಚನದಲ್ಲಿ ನಿರತನಾದವನಿಗೆ ಅಶ್ವಮೇಧದ ಫಲವು ದೊರೆಯುತ್ತದೆ. ವಿಮಲಶೋಕವನ್ನು ಸೇರಿ ಚಂದ್ರನಂತೆ ವಿರಾಜಮಾನನಾಗುತ್ತಾನೆ. ಅಲ್ಲಿ ಒಂದು ರಾತ್ರಿಯನ್ನು ಕಳೆದರೂ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ. ಅನಂತರ ಸರಸ್ವತಿಯ ಉತ್ತಮ ತೀರ್ಥ ಗೋಪ್ರತಾರಕ್ಕೆ ಹೋಗಬೇಕು. ಅಲ್ಲಿ ರಾಮನು ತನ್ನ ಸೇವಕರು, ಸೇನೆ ಮತ್ತು ವಾಹನಗಳೊಂದಿಗೆ ಸ್ವರ್ಗಕ್ಕೆ ಹೋದನು. ಅಲ್ಲಿ ದೇಹವನ್ನು ತ್ಯಜಿಸಿದವನು ಆ ತೀರ್ಥದ ತೇಜಸ್ಸಿನಿಂದ ಮತ್ತು ರಾಮನ ಅನುಗ್ರಹ-ಪ್ರಯತ್ನಗಳಿಂದ ದೇವಲೋಕಕ್ಕೆ ಹೋಗುತ್ತಾರೆ. ಗೋಪ್ರತಾರ ತೀರ್ಥದಲ್ಲಿ ಸ್ನಾನಮಾಡಿದ ನರನು ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ. ಗೋಮತಿಯ ರಾಮತೀರ್ಥದಲ್ಲಿ ಸ್ನಾನಮಾಡಿದ ನರನು ಅಶ್ವಮೇಧ ಫಲವನ್ನು ಪಡೆದು ಅವನ ಕುಲವನ್ನು ಪುನೀತಗೊಳಿಸುತ್ತಾನೆ. ಅಲ್ಲಿ ಶತಸಾಹಸ್ರಿಕ ಎನ್ನುವ ತೀರ್ಥವಿದೆ. ಅಲ್ಲಿ ನಿಯತನೂ ನಿಯತಾಶನನೂ ಆಗಿದ್ದು ಸ್ನಾನಮಾಡಿದವನು ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಪಡೆಯುತ್ತಾನೆ. ಅನಂತರ ಅನುತ್ತಮ ಸ್ಥಾನ ಭರ್ತೃವಿಗೆ ಹೋಗಬೇಕು. ಕೋಟಿತೀರ್ಥದಲ್ಲಿ ಸ್ನಾನಮಾಡಿ ಗುಹನನ್ನು ಪೂಜಿಸಿದ ನರನು ಸಹಸ್ರ ಗೋವುಗಳ ದಾನದ ಫಲವನ್ನು ಪಡೆದು ತೇಜಸ್ವಿ ನರನಾಗುತ್ತಾನೆ.
“ಅನಂತರ ವಾರಣಸೀಗೆ ಹೋಗಿ ವೃಷಧ್ವಜನನ್ನು ಪೂಜಿಸಿ, ಕಪಿಲ ಸರೋವರದಲ್ಲಿ ಸ್ನಾನಮಾಡಿದ ನರನಿಗೆ ರಾಜಸೂಯದ ಫಲವು ದೊರೆಯುತ್ತದೆ. ದುರ್ಲಭವಾದ ಮಾರ್ಕಂಡೇಯ ತೀರ್ಥಕ್ಕೆ ಹೋಗಿ ಲೋಕವಿಶ್ರುತ ಗೋಮತೀ ಮತ್ತು ಗಂಗೆಯರ ಸಂಗಮಕ್ಕೆ ಹೋದರೆ ಅಗ್ನಿಷ್ಟೋಮ ಯಾಗದ ಫಲವನ್ನು ಪಡೆದು ಕುಲವನ್ನೇ ಉದ್ಧರಿಸಿದಂತಾಗುತ್ತದೆ. ಅನಂತರ ಬ್ರಹ್ಮಚಾರಿಯೂ ಜಿತೇಂದ್ರಿಯನೂ ಆಗಿದ್ದು ಗಯಕ್ಕೆ ಹೋಗಬೇಕು. ಅಲ್ಲಿ ಹೋದಮಾತ್ರಕ್ಕೆ ಅಶ್ವಮೇಧಯಾಗದ ಫಲವು ದೊರೆಯುತ್ತದೆ. ಅಲ್ಲಿಯೇ ಮೂರು ಲೋಕಗಳಲ್ಲಿ ವಿಶ್ರುತ ಅಕ್ಷವಟ ಎಂಬ ಹೆಸರಿನ ಪ್ರದೇಶವಿದೆ. ಅಲ್ಲಿ ಪಿತೃಗಳಿಗೆ ನೀಡಿದುದೆಲ್ಲವೂ ಅಕ್ಷಯವಾಗುತ್ತವೆ. ಮಹಾನದಿಯಲ್ಲಿ ಮಿಂದು ಪಿತೃಗಳಿಗೂ ದೇವತೆಗಳಿಗೂ ತರ್ಪಣವನ್ನಿತ್ತರೆ ಅಕ್ಷಯ ಲೋಕಗಳನ್ನು ಪಡೆಯುತ್ತಾನೆ ಮತ್ತು ಕುಲದ ಉದ್ಧಾರವೂ ಆಗುತ್ತದೆ. ಅನಂತರ ಧರ್ಮಾರಣ್ಯದಿಂದ ಶೋಭಿತ ಬ್ರಹ್ಮಸರೋವರಕ್ಕೆ ಹೋಗಬೇಕು. ರಾತ್ರಿಕಳೆದು ಅಲ್ಲಿ ಪ್ರಭಾತವನ್ನು ನೋಡಿದರೆ ಪೌಂಡರೀಕಪದವಿಯನ್ನು ಪಡೆಯುತ್ತಾನೆ. ಆ ಸರೋವರದಲ್ಲಿ ಬ್ರಹ್ಮನ ಯಜ್ಞಸ್ಥಂಭವು ಮೇಲೆದ್ದು ಕಾಣುತ್ತದೆ. ಆ ಯೂಪವನ್ನು ಪ್ರದಕ್ಷಿಣೆ ಮಾಡಿದರೆ ವಾಜಪೇಯದ ಫಲವು ದೊರೆಯುತ್ತದೆ. ಅಲ್ಲಿಂದ ಲೋಕವಿಶ್ರುತ ಧೇನುಕಕ್ಕೆ ಹೋಗಬೇಕು. ಅಲ್ಲಿ ತಿಲ ಮತ್ತು ಹಸುಗಳನ್ನು ದಾನವನ್ನಾಗಿತ್ತು ಒಂದು ರಾತ್ರಿ ತಂಗಿದರೆ ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಅವನು ನಿಶ್ಚಯವಾಗಿಯೂ ಸೋಮಲೋಕದಲ್ಲಿ ಮೆರೆಯುತ್ತಾನೆ. ಅಲ್ಲಿ ಈಗಲೂ ಒಂದು ಕುರುಹಿದೆ ಎನ್ನುವುದರಲ್ಲಿ ಸಂಶಯವಿಲ್ಲ. ತನ್ನ ಕರುವಿನೊಂದಿಗೆ ಪರ್ವತದಲ್ಲಿ ತಿರುಗಾಡುತ್ತಿರುವ ಹಸುವಿನ ಹೆಜ್ಜೆ ಗುರುತುಗಳು ಈಗಲೂ ಅಲ್ಲಿ ಕಾಣುತ್ತವೆ. ಆ ಹೆಜ್ಜೆ ಗುರುತುಗಳಿರುವಲ್ಲಿ ಸ್ನಾನಮಾಡಿದರೆ ಅಲ್ಲಿಯ ವರೆಗೆ ಏನೇನು ಅಶುಭಕರ್ಮಗಳನ್ನು ಮಾಡಿದ್ದನೋ ಅವೆಲ್ಲವೂ ನಾಶವಾಗುತ್ತವೆ. ಅಲ್ಲಿಂದ ಧೀಮತ ದೇವನ ಸ್ಥಾನ ಗೃಧ್ರವಟಕ್ಕೆ ಹೋಗಬೇಕು. ಅಲ್ಲಿ ಭಸ್ಮದಲ್ಲಿ ಸ್ನಾನಮಾಡಿ ವೃಷಧ್ವಜನನ್ನು ಪೂಜಿಸಬೇಕು. ಅಂಥವನು ಬ್ರಾಹ್ಮಣನಾಗಿದ್ದರೆ ಅದು ಹನ್ನೆರಡು ವರ್ಷಗಳು ಆಚರಿಸಿದ ವ್ರತಕ್ಕೆ ಸಮನಾಗುತ್ತದೆ. ಇತರ ವರ್ಣದವರು ಇದನ್ನು ಮಾಡಿದರೆ ಅವರು ಸರ್ವಪಾಪಗಳನ್ನು ಕಳೆದುಕೊಳ್ಳುತ್ತಾರೆ.
“ಅಲ್ಲಿಂದ ಗೀತನಾದದಿಂದ ತುಂಬಿದ್ದ ಉಧ್ಯಂತ ಪರ್ವತಕ್ಕೆ ಹೋಗಬೇಕು. ಅಲ್ಲಿ ಸಾವಿತ್ರಿಯ ಪಾದದ ಗುರುತನ್ನು ನೋಡಬಹುದು. ಅಲ್ಲಿ ಸಂಶಿತವ್ರತ ಬ್ರಾಹ್ಮಣನು ಸಂಧ್ಯಾವಂದನೆಯನ್ನು ಮಾಡಿದರೆ, ಅದು ಹನ್ನೆರಡು ವರ್ಷಗಳು ಸಂಧ್ಯಾವಂದನೆಯನ್ನು ಮಾಡಿದುದಕ್ಕೆ ಸಮನಾಗುತ್ತದೆ. ಅಲ್ಲಿಯೇ ವಿಶ್ರುತ ಯೋನಿದ್ವಾರವಿದೆ. ಅಲ್ಲಿಗೆ ಹೋದರೆ ಪುರುಷನು ಯೋನಿಸಂಕರದಿಂದುಂಟಾದ ಪಾಪಗಳಿಂದ ಮುಕ್ತಿ ಹೊಂದುತ್ತಾನೆ. ಕೃಷ್ಣ ಮತ್ತು ಶುಕ್ಲ ಈ ಎರಡೂ ಪಕ್ಷಗಳಲ್ಲಿ ಗಯೆಯಲ್ಲಿ ವಾಸಿಸುವ ನರನು ತನ್ನ ಕುಲವನ್ನು ಏಳುತಲೆಮಾರುಗಳವರೆಗೂ ಪುನೀತರನ್ನಾಗಿ ಮಾಡುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಗಯೆಗೆ ಒಂಟಿಯಾಗಿ ಹೋದರೆ ಅಥವಾ ಅಶ್ವಮೇಧಯಾಗವನ್ನು ಮಾಡಿದರೆ ಅಥವಾ ಕಪ್ಪು ಹೋರಿಯನ್ನು ಬಿಟ್ಟರೆ ಬಹಳ ಪುತ್ರರನ್ನು ಆಶಿಸಬಹುದು. ತೀರ್ಥಯಾತ್ರಿಯು ಅಲ್ಲಿಂದ ಫಲ್ಗುವಿಗೆ ಹೋಗಬೇಕು. ಅಂಥವನು ಅಶ್ವಮೇಧಯಾಗದ ಫಲವನ್ನು ಪಡೆಯುತ್ತಾನೆ ಮತ್ತು ಮಹಾ ಸಿದ್ಧಿಯನ್ನು ಪಡೆಯುತ್ತಾನೆ. ಅನಂತರ ಸಮಾಹಿತನಾಗಿ ಧರ್ಮಪುಷ್ಠಕ್ಕೆ ಹೋಗಬೇಕು. ಅಲ್ಲಿ ಧರ್ಮನು ನಿತ್ಯವೂ ಇರುತ್ತಾನೆ. ಅಲ್ಲಿಗೆ ಹೋದರೆ ಅಶ್ವಮೇಧದ ಫಲವು ದೊರೆಯುತ್ತದೆ. ಅಲ್ಲಿಂದ ಅನುತ್ತಮ ಬ್ರಹ್ಮಣ ತೀರ್ಥಕ್ಕೆ ಹೋಗಬೇಕು. ಅಲ್ಲಿ ಅಮಿತೌಜಸ ಬ್ರಹ್ಮನನ್ನು ಪೂಜಿಸಿದರೆ ಮಾನವನು ರಾಜಸೂಯ ಮತ್ತು ಅಶ್ವಮೇಧಯಾಗಗಳ ಫಲವನ್ನು ಪಡೆಯುತ್ತಾನೆ. ಅನಂತರ ತೀರ್ಥಯಾತ್ರಿಯು ರಾಜಗೃಹಕ್ಕೆ ಹೋಗಬೇಕು. ಅಲ್ಲಿ ಬಿಸಿನೀರಿನ ಚಿಲುಮೆಗಳಲ್ಲಿ ಸ್ನಾನಮಾಡಿ ಕಕ್ಷೀವಾನನಂತೆ ಮೋದಿಸುತ್ತಾರೆ. ಅಲ್ಲಿ ಶುಚಿಯಾಗಿದ್ದು ಪುರುಷನು ಯಕ್ಷಿಗೆ ಹಾಕುವ ದಿನನಿತ್ಯದ ಬಲಿಯ ರುಚಿನೋಡಿದರೆ, ಯಕ್ಷಿಣಿಯ ಪ್ರಸಾದದಿಂದ ಭ್ರೂಣಹತ್ಯಾದೋಶದಿಂದ ಮುಕ್ತಿದೊರೆಯುತ್ತದೆ. ಅಲ್ಲಿಂದ ಮಣಿನಾಗಕ್ಕೆ ಹೋಗಿ ಮಾನವನು ಮಣಿನಾಗನಿಗೆ ನೀಡುವ ನೈತ್ಯಕ ನೈವೇದ್ಯವನ್ನು ಪ್ರಸಾದರೂಪದಲ್ಲಿ ಭುಂಜಿಸಿದರೆ ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ. ಅಲ್ಲಿ ಒಂದು ರಾತ್ರಿ ತಂಗಿದರೂ ಸರ್ವಪಾಪಗಳಿಂದ ಬಿಡುಗಡೆಹೊಂದುತ್ತಾನೆ ಮತ್ತು ಸರ್ಪದಿಂದ ಕಚ್ಚಲ್ಪಟ್ಟರೂ ವಿಷವು ಅವನಿಗೆ ತಟ್ಟುವುದಿಲ್ಲ.
“ಅಲ್ಲಿಂದ ಬ್ರಹ್ಮರ್ಷಿ ಗೌತಮನ ವನಕ್ಕೆ ಹೋಗಬೇಕು. ಅಲ್ಲಿ ಅಹಲ್ಯೆಯ ಸರೋವರದಲ್ಲಿ ಸ್ನಾನಪಾಡಿ ಪರಮ ಗತಿಯನ್ನು ಪಡೆಯಬಹುದು. ಶ್ರೀಗೆ ಹೋಗಿ ಉತ್ತಮ ಸಂಪತ್ತನ್ನು ಪಡೆಯಬಹುದು. ಅಲ್ಲಿಯೇ ಮೂರುಲೋಕಗಳಲ್ಲಿ ವಿಶ್ರುತ ಚಿಲುಮೆಯೊಂದಿದೆ. ಅಲ್ಲಿ ಸ್ನಾನಮಾಡಿದವನು ಅಶ್ವಮೇಧಫಲವನ್ನು ಪಡೆಯುತ್ತಾನೆ. ಅನಂತರ ಮೂವತ್ತು ದೇವತೆಗಳು ಪೂಜಿಸುವ ರಾಜರ್ಷಿ ಜನಕನ ಬಾವಿಯಿದೆ. ಅಲ್ಲಿ ಸ್ನಾನಮಾಡಿದರೆ ವಿಷ್ಣುಲೋಕವನ್ನು ಪಡೆಯಬಹುದು. ಅನಂತರ ಸರ್ವಪಾಪಪ್ರಮೋಚಕ ವಿನಶನಕ್ಕೆ ಹೋಗಬೇಕು. ಅಂಥವನು ಅಶ್ವಮೇಧದ ಫಲವನ್ನು ಪಡೆಯುತ್ತಾನೆ ಮತ್ತು ಸೋಮಲೋಕಕ್ಕೆ ಹೋಗುತ್ತಾನೆ. ಸರ್ವತೀರ್ಥಗಳ ನೀರು ಉದ್ಭವಿಸುವ ಗಂಡಕಿಗೆ ಹೋದರೆ ಅಶ್ವಮೇಧದ ಫಲವು ದೊರೆಯುತ್ತದೆ ಮತ್ತು ಸೂರ್ಯಲೋಕಕ್ಕೆ ಹೋಗುತ್ತಾರೆ. ಅನಂತರ ಅಧಿವಂಶ್ಯ ತಪೋವನವನ್ನು ಪ್ರವೇಶಿಸಿದರೆ ಅವನು ಗುಹ್ಯಕರೊಡನೇ ಸಂತೋಷದಿಂದಿರುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಸಿದ್ಧರು ಸೇವಿಸುವ ಕಂಪನಾ ನದಿಗೆ ಹೋದರೆ ಪುಂಡರೀಕ ಪದವಿಯನ್ನು ಪಡೆಯುತ್ತಾರೆ ಮತ್ತು ಸೂರ್ಯಲೋಕಕ್ಕೆ ಹೋಗುತ್ತಾರೆ. ಅನಂತರ ತ್ರೈಲೋಕ್ಯ ವಿಶ್ರುತ ವಿಶಾಲಾ ನದಿಗೆ ಹೋದರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ ಮತ್ತು ಸ್ವರ್ಗಲೋಕಕ್ಕೆ ಹೋಗುತ್ತಾರೆ. ಅನಂತರ ಮಾಹೇಶ್ವರೀ ಜಲಪಾತಕ್ಕೆ ಹೋದರೆ ಅಶ್ವಮೇಧ ಫಲವು ದೊರೆಯುತ್ತದೆ ಮತ್ತು ಕುಲವು ಉದ್ಧಾರವಾಗುತ್ತದೆ. ಶುಚಿಯಾಗಿದ್ದು ದಿವೌಕಸರ ಸರೋವರಕ್ಕೆ ಹೋದರೆ ದುರ್ಗತಿಯನ್ನು ಹೊಂದುವುದಿಲ್ಲ ಮತ್ತು ವಾಜಪೇಯದ ಫಲವು ದೊರೆಯುತ್ತದೆ. ಬ್ರಹ್ಮಚಾರಿಯೂ ಸಮಾಹಿತನೂ ಆಗಿದ್ದು ಮಹೇಶ್ವರ ಪದಕ್ಕೆ ಹೋಗಬೇಕು. ಮಹೇಶ್ವರ ಪದದಲ್ಲಿ ಸ್ನಾನಮಾಡಿದರೆ ಅಶ್ವಮೇಧದ ಫಲವು ದೊರೆಯುತ್ತದೆ. ಅಲ್ಲಿ ಕೋಟಿಗಟ್ಟಲೆ ತೀರ್ಥಗಳಿವೆಯೆಂದು ಕೇಳಿದ್ದೇವೆ. ಅವುಗಳನ್ನು ಹಿಂದೆ ದುರಾತ್ಮ ಅಸುರನು ಅಪಹರಿಸಿಕೊಂಡು ಹೋಗಿದ್ದ. ಅದನ್ನು ಕೂರ್ಮರೂಪದ ಕಾಂತಿಯುಕ್ತ ವಿಷ್ಣುವು ಪುನಃ ತಂದಿಟ್ಟ. ಆ ತಿರ್ಥಕೋಟಿಯಲ್ಲಿ ಸ್ನಾನಮಾಡಿದವನಿಗೆ ಪುಂಡರೀಕಪದವಿಯು ದೊರೆಯುತ್ತದೆ ಮತ್ತು ವಿಷ್ಣುಲೋಕಕ್ಕೆ ಹೋಗುತ್ತಾರೆ.
“ಅಲ್ಲಿಂದ ನಾರಾಯಣನ ಸ್ಥಾನಕ್ಕೆ ಹೋಗಬೇಕು. ಅದ್ಭುತಕರ್ಮಿ ವಿಷ್ಣು ಹರಿಯು ಸದಾ ಸನ್ನಿಹಿತನಾಗಿ ವಾಸಿಸಿರುವ ಅದು ಶಾಲಗ್ರಾಮ ಎಂದು ಖ್ಯಾತಗೊಂಡಿದೆ. ಅಲ್ಲಿ ಅವ್ಯಯ ವರದ ತ್ರಿಲೋಕೇಶ ವಿಷ್ಣುವಿರುವಲ್ಲಿಗೆ ಹೋದರೆ ಅಶ್ವಮೇಧದ ಫಲವನ್ನು ಪಡೆಯುತ್ತಾರೆ ಮತ್ತು ವಿಷ್ಣುಲೋಕಕ್ಕೆ ಹೋಗುತ್ತಾರೆ. ಅಲ್ಲಿ ಸರ್ವಪಾಪಗಳಿಂದಲೂ ವಿಮೋಚನೆ ನೀಡುವ ನಾಲ್ಕು ಸಮುದ್ರಗಳು ಸದಾ ಸನ್ನಿಹಿತವಾಗಿರುವ ಬಾವಿಯಿದೆ. ಆ ನೀರನ್ನು ಮುಟ್ಟಿದರೆ ದುರ್ಗತಿಗೊಳಗಾಗುವುದಿಲ್ಲ. ಅವ್ಯಯ ಮಹಾದೇವ ವರದ ವಿಷ್ಣುವಿನಲ್ಲಿಗೆ ಹೋದವರು ಸೋಮನಂತೆ ವಿರಾಜಿಸುತ್ತಾರೆ ಮತ್ತು ಋಣಮುಕ್ತರಾಗುತ್ತಾರೆ. ಶುಚಿ ಮತ್ತು ಪ್ರಯತಮನಸ್ಕನಾಗಿದ್ದು ಜಾತಿಸ್ಮರದ ನೀರಿನಲ್ಲಿ ಸ್ನಾನಮಾಡಬೇಕು. ಅಲ್ಲಿ ಸ್ನಾನಮಾಡಿದರೆ ಹಿಂದಿನ ಜನ್ಮಗಳು ನೆನಪಿಗೆ ಬರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ವಟೇಶ್ವರಕ್ಕೆ ಹೋಗಿ ಅಲ್ಲಿ ಉಪವಾಸಮಾಡಿ ಕೇಶವನನ್ನು ಪೂಜಿಸುವುದರಿಂದ ಆಸೆಗಳು ಈಡೇರುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅನಂತರ ಸರ್ವಪಾಪಪ್ರಮೋಚಕ ವಾಮನಕ್ಕೆ ಹೋಗಿ ದೇವ ಹರಿಯನ್ನು ಪೂಜಿಸಿದರೆ ದುರ್ಗತಿ ಉಂಟಾಗುವುದಿಲ್ಲ. ಸರ್ವಪಾಪಪ್ರಮೋಚಕ ಭರತನ ಆಶ್ರಮಕ್ಕೆ ಹೋಗಿ ಅಲ್ಲಿ ಮಹಾಪಾತಕನಾಶಿನಿ ಕೌಶಿಕಿಯನ್ನು ಪೂಜಿಸಬೇಕು. ಅದರಿಂದ ಮಾನವನಿಗೆ ರಾಜಸೂಯ ಯಾಗದ ಫಲವು ದೊರೆಯುತ್ತದೆ. ಅನಂತರ ಉತ್ತಮ ಚಂಪಕಾರಣ್ಯಕ್ಕೆ ಹೋಗಿ ಅಲ್ಲಿ ಒಂದು ರಾತ್ರಿಯಾದರೂ ಉಳಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ಅನಂತರ ಪರಮಸಮ್ಮತ ಜ್ಯೋಷ್ಠಿಲಕ್ಕೆ ಹೋಗಿ ಅಲ್ಲಿ ಉಪವಾಸವಿದ್ದು ಒಂದು ರಾತ್ರಿಯನ್ನಾದರೂ ಕಳೆದರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ. ಅಲ್ಲಿ ದೇವಿಯ ಸಹಿತ ಮಹಾದ್ಯುತಿ ವಿಶ್ವೇಶ್ವರನನ್ನು ನೋಡಿದರೆ ಮಿತ್ರಾವರುಣರ ಲೋಕವನ್ನು ಪಡೆಯುತ್ತಾರೆ.
“ಕನ್ಯಾಸಂವೇಧ್ಯಕ್ಕೆ ಹೋಗಿ ನಿಯತನೂ ನಿಯತಾಶನನೂ ಆಗಿದ್ದರೆ ಮನು ಪ್ರಜಾಪತಿಯ ಲೋಕವನ್ನು ಪಡೆಯುತ್ತಾನೆ. ಕನ್ಯಾಸಂವೇಧ್ಯದಲ್ಲಿ ದಾನಮಾಡಿದ ಅನ್ನ ಮತ್ತು ಪಾನೀಯಗಳು ಅಕ್ಷಯವಾಗುತ್ತವೆ ಎಂದು ಸಂಶಿತವ್ರತ ಋಷಿಗಳು ಹೇಳುತ್ತಾರೆ. ಮೂರು ಲೋಕಗಳಲ್ಲೂ ವಿಶ್ರುತ ನಿಶ್ಚೀರಾಕ್ಕೆ ಹೋದರೆ ಅಶ್ವಮೇಧಯಾಗದ ಫಲವು ದೊರೆಯುತ್ತದೆ ಮತ್ತು ವಿಷ್ಣುಲೋಕಕ್ಕೆ ಹೋಗುತ್ತಾರೆ. ನಿಶ್ಚೀರ ಸಂಗಮದಲ್ಲಿ ದಾನಮಾಡಿದವರು ಬ್ರಹ್ಮಲೋಕಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅಲ್ಲಿಯೇ ಮೂರುಲೋಕಗಳಲ್ಲಿಯೂ ವಿಶ್ರುತ ವಸಿಷ್ಠನ ಆಶ್ರಮವಿದೆ. ಅಲ್ಲಿ ಸ್ನಾನಮಾಡುವವರಿಗೆ ವಾಜಪೇಯ ಯಾಗದ ಫಲವು ದೊರೆಯುತ್ತದೆ. ಬ್ರಹ್ಮರ್ಷಿಗಣಸೇವಿತ ದೇವಕೂಟಕ್ಕೆ ಹೋದರೆ ಅಶ್ವಮೇಧಫಲವು ದೊರೆಯುತ್ತದೆ ಮತ್ತು ಕುಲವು ಉದ್ಧಾರವಾಗುತ್ತದೆ. ಅನಂತರ ಕೌಶಿಕ ಮುನಿಯ ಸರೋವರಕ್ಕೆ ಹೋಗಬೇಕು. ಅಲ್ಲಿ ಕೌಶಿಕ ವಿಶ್ವಾಮಿತ್ರನು ಪರಮ ಸಿದ್ಧಿಯನ್ನು ಪಡೆದನು. ಅಲ್ಲಿ ಕೌಶಿಕಿಯಲ್ಲಿ ಒಂದು ತಿಂಗಳು ತಂಗಿದರೆ ಒಂದೇ ಒಂದು ತಿಂಗಳಿನಲ್ಲಿ ಅಶ್ವಮೇಧದ ಪುಣ್ಯವು ಬರುತ್ತದೆ. ಸರ್ವತೀರ್ಥಗಳಲ್ಲಿ ಶ್ರೇಷ್ಠ ಮಹಾಹೃದದಲ್ಲಿ ಯಾರು ವಾಸಮಾಡುತ್ತಾರೋ ಅವರಿಗೆ ದುರ್ಗತಿಯುಂಟಾಗುವುದಿಲ್ಲ ಮತ್ತು ಬಹಳ ಸಂಪತ್ತು ದೊರೆಯುತ್ತದೆ. ಕುಮಾರಕ್ಕೆ ಹೋಗಿ ಅಲ್ಲಿ ವೀರಾಶ್ರಮದಲ್ಲಿ ವಾಸಿಸುವ ನರನಿಗೆ ಅಶ್ವಮೇಧದ ಫಲವು ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮೂರು ಲೋಕಗಳಲ್ಲಿ ವಿಶ್ರುತ ಅಗ್ನಿಧಾರೆಗೆ ಹೋದರೆ ಅಗ್ನಿಷ್ಟೋಮದ ಫಲವು ದೊರೆಯುತ್ತದೆ ಮತ್ತು ಸ್ವರ್ಗದಿಂದ ಹಿಂದಿರುಗುವುದಿಲ್ಲ. ಶೈಲರಾಜನಿಂದ ಪ್ರತಿಷ್ಠಿತಗೊಂಡ ಪಿತಾಮಹಸರೋವರಕ್ಕೆ ಹೋಗಿ ಅಲ್ಲಿ ಸ್ನಾನಮಾಡಿದವರಿಗೆ ಅಗ್ನಿಷ್ಟೋಮದ ಫಲವು ದೊರೆಯುತ್ತದೆ. ಪಿತಾಮಹ ಸರೋವರದಿಂದ ಲೋಕಪಾವನೀ ಮೂರು ಲೋಕಗಳಲ್ಲಿ ವಿಶ್ರುತ ಕುಮಾಧಾರೆಯು ಹರಿಯುತ್ತದೆ. ಅಲ್ಲಿ ಸ್ನಾನಮಾಡಿದವನು ಕೃತಾರ್ಥನಾಗಿ ತನ್ನ ಅತ್ಮವನ್ನು ಅರಿಯುತ್ತಾನೆ ಮತ್ತು ಅಲ್ಲಿ ಮೂರು ದಿನಕ್ಕೊಮ್ಮೆ ಮಾತ್ರ ಆಹಾರಸೇವಿಸಿ ಉಳಿದರೆ ಬ್ರಹ್ಮಹತ್ಯಾದೋಷದಿಂದ ಬಿಡುಗಡೆ ದೊರೆಯುತ್ತದೆ. ತ್ರಿಲೋಕವಿಶ್ರುತ ಮಹಾದೇವಿ ಗೌರಿಯ ಶಿಖರವನ್ನೇರಿ, ಶ್ರದ್ಧೆಯಿಂದ ಸ್ತನಕುಂಡವನ್ನು ಪ್ರವೇಶಿಸಿ, ಅಲ್ಲಿ ಸ್ನಾನಮಾಡಿ, ಪಿತೃದೇವತೆಗಳನ್ನು ಪೂಜಿಸುವ ನರನು ಅಶ್ವಮೇಧಫಲವನ್ನು ಪಡೆಯುತ್ತಾನೆ ಮತ್ತು ಶಕ್ರಲೋಕಕ್ಕೆ ಹೋಗುತ್ತಾನೆ.
“ಬ್ರಹ್ಮಚಾರಿಯೂ ಸಮಾಹಿತನೂ ಆಗಿದ್ದು ತಾಮ್ರಾರುಣಕ್ಕೆ ಹೋದರೆ ಅಶ್ವಮೇಧಫಲವನ್ನು ಪಡೆಯುತ್ತಾನೆ ಮತ್ತು ಶಕ್ರಲೋಕಕ್ಕೆ ಹೋಗುತ್ತಾನೆ. ಮೂವತ್ತು ದೇವತೆಗಳು ಸೇವಿಸುವ ನಂದಿನೀ ಬಾವಿಗೆ ಹೋದರೆ ನರಮೇಧದ ಪುಣ್ಯವು ದೊರೆಯುತ್ತದೆ. ಕೌಶಿಕಿ ಮತ್ತು ಆರುಣಿಗಳ ಸಂಗಮ ಕಾಲಿಕಾದಲ್ಲಿ ಸ್ನಾನಮಾಡಿ ಮೂರುರಾತ್ರಿಗಳು ಉಪವಾಸವಿದ್ದ ವಿದ್ವಾನನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ. ಅನಂತರ ಊರ್ವಶೀ ತೀರ್ಥಕ್ಕೆ ಹೋಗಿ, ಅಲ್ಲಿಂದ ಸೋಮಾಶ್ರಮಕ್ಕೆ ಹೋಗಿ, ನಂತರ ಕುಂಭಕರ್ಣಾಶ್ರಮದಲ್ಲಿ ಸ್ನಾನಮಾಡಿದ ಮಾನವನನ್ನು ಬುದ್ಧಿವಂತರು ಭೂಮಿಯಲ್ಲಿ ಪೂಜಿಸುತ್ತಾರೆ. ಬ್ರಹ್ಮಚಾರಿಯಾಗಿದ್ದು ಯತವ್ರತನಾಗಿದ್ದು ಪುಣ್ಯ ಕೋಕಾಮುಖದಲ್ಲಿ ಸ್ನಾನಮಾಡಿದರೆ ಕಳೆದ ಜನ್ಮಗಳ ನೆನಪಾಗುತ್ತದೆ ಎಂದು ಪುರಾಣಗಳಲ್ಲಿ ಕಂಡಿದ್ದಾರೆ. ನಂದಕ್ಕೆ ಹೋದರೆ ದ್ವಿಜನು ಕೃತಾತ್ಮನಾಗುತ್ತಾನೆ, ಮತ್ತು ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಶಕ್ರಲೋಕಕ್ಕೆ ಹೋಗುತ್ತಾನೆ. ವೃಷಭದ್ವೀಪಕ್ಕೆ ಹೋಗಿ ಕ್ರೌಂಚನಿಷೂದನನನ್ನು ಪೂಜಿಸಿ, ಸರಸ್ವತಿಯಲ್ಲಿ ಮಿಂದರೆ ವಿಮಾನಸ್ಥನಾಗಿ ವಿರಾಜಿಸುತ್ತಾನೆ. ಮುನಿನಿಷೇವಿತ ಔದ್ಧಾಲಕ ತೀರ್ಥದಲ್ಲಿ ಸ್ನಾನಮಾಡಿದವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ. ಬ್ರಹ್ಮರ್ಷಿಸೇವಿತ ಪುಣ್ಯ ಧರ್ಮತೀರ್ಥಕ್ಕೆ ಹೋದ ನರನು ವಾಜಪೇಯದ ಫಲವನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಚಂಪಾಕ್ಕೆ ಹೋಗಿ ಭಾಗೀರಥಿಯ ನೀರನ್ನು ಮುಟ್ಟಿ ದಂಡಾರ್ಕಕ್ಕೆ ಹೋದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ಅನಂತರ ಪುಣ್ಯೋಪಸೇವಿತ ಪುಣ್ಯ ಲವೇಡಿಕಕ್ಕೆ ಹೋದರೆ ವಾಜಪೇಯದ ಫಲವು ದೊರೆಯುತ್ತದೆ ಮತ್ತು ವಿಮಾನದಲ್ಲಿ ಪೂಜಿತನಾಗುತ್ತಾನೆ.
“ಅನಂತರ ಉತ್ತಮ ತೀರ್ಥ ಸಂವೇಧ್ಯಕ್ಕೆ ಸಂಧ್ಯಾಸಮಯದಲ್ಲಿ ಹೋಗಿ ಸ್ನಾನಮಾಡಿದ ನರನು ವಿದ್ವಾನನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಹಿಂದೆ ರಾಮನ ಪ್ರಸಾದದಿಂದ ರಚಿಸಲ್ಪಟ್ಟ ಲೋಹಿತ ನದಿಗೆ ಹೋದರೆ ಬಹಳಷ್ಟು ಚಿನ್ನವನ್ನು ಪಡೆಯುತ್ತಾರೆ. ಕರತೋಯಕ್ಕೆ ಹೋಗಿ ಅಲ್ಲಿ ಮೂರುರಾತ್ರಿಗಳು ಉಳಿದು ಪಿತೃಗಳ ಕಾರ್ಯವನ್ನು ವಿಧಿವತ್ತಾಗಿ ಮಾಡಿದ ನರನು ಅಶ್ವಮೇಧದ ಫಲವನ್ನು ಪಡೆಯುತ್ತಾನೆ. ಗಂಗಾ ಮತ್ತು ಸಾಗರಗಳ ಸಂಗಮದಲ್ಲಿ ಅಶ್ವಮೇಧದ ಫಲವು ಹತ್ತುಪಟ್ಟಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಗಂಗೆಯ ಇನ್ನೊಂದು ದಡದಲ್ಲಿರುವ ದ್ವೀಪಕ್ಕೆ ಹೋಗಿ ಅಲ್ಲಿ ಸ್ನಾನಮಾಡಿ, ಮೂರುರಾತ್ರಿಗಳು ತಂಗಿದವನು ಸರ್ವ ಕಾಮಗಳನ್ನು ಈಡೇರಿಸಿಕೊಳ್ಳುತ್ತಾನೆ. ಅನಂತರ ಪಾಪಪ್ರಮೋಚನೀ ವೈತರಣಿಗೆ ಹೋಗಿ, ವಿರಜ ತೀರ್ಥಕ್ಕೆ ಹೋದರೆ ಶಶಿಯಂತೆ ವಿರಾಜಿಸುತ್ತಾನೆ. ಅವನು ಪುಣ್ಯಕುಲದಲ್ಲಿ ಹುಟ್ಟುತ್ತಾನೆ ಮತ್ತು ಸರ್ವಪಾಪಗಳನ್ನು ತೊಳೆದುಕೊಳ್ಳುತ್ತಾನೆ. ಆ ನರನು ಸಹಸ್ರಗೋದಾನದ ಫಲವನ್ನು ಪಡೆದು ತನ್ನ ಕುಲವನ್ನೂ ಪುನೀತಗೊಳಿಸುತ್ತಾನೆ. ಶೋಣ ಮತ್ತು ಜ್ಯೋತಿರಥದ ಸಂಗಮದಲ್ಲಿ ಶುಚಿಯಾಗಿ ವಾಸಿಸಿ, ಪಿತೃ ಮತ್ತು ದೇವತೆಗಳಿಗೆ ತರ್ಪಣೆಯನ್ನಿತ್ತರೆ ಅಗ್ನಿಷ್ಟೋಮಫಲವು ದೊರೆಯುತ್ತದೆ. ಶೋಣ ಮತ್ತು ನರ್ಮದಾ ನದಿಗಳ ಉದ್ಭವಸ್ಥಾನ ವಂಶಗುಲ್ಮದಲ್ಲಿ ಸ್ನಾನಮಾಡಿದರೆ ಅಶ್ವಮೇಧದ ಫಲವು ದೊರೆಯುತ್ತದೆ. ಕೋಶಲದ ಋಷಭ ತೀರ್ಥಕ್ಕೆ ಹೋಗಿ ಮೂರು ರಾತ್ರಿಗಳು ತಂಗಿದ ನರನು ವಾಜಪೇಯದ ಫಲವನ್ನು ಪಡೆಯುತ್ತಾನೆ. ಕೋಶಲದಲ್ಲಿಯೇ ಕಾಲತೀರ್ಥಕ್ಕೆ ಹೋದರೆ ಹನ್ನೊಂದು ಹೋರಿಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಪುಷ್ಪವತಿಯಲ್ಲಿ ಸ್ನಾನಮಾಡಿ ಮೂರುರಾತ್ರಿಗಳು ತಂಗಿದ ನರನಿಗೆ ಸಹಸ್ರ ಗೋದಾನಫಲವು ದೊರೆಯುತ್ತದೆ ಮತ್ತು ಕುಲವೂ ಉದ್ದಾರವಾಗುತ್ತದೆ. ಅನಂತರ ಪ್ರಯತಮಾನಸನಾಗಿ ಬದರಿಕಾ ತೀರ್ಥದಲ್ಲಿ ಸ್ನಾನಮಾಡಿದರೆ ದೀರ್ಘಾಯಸ್ಸು ದೊರೆಯುತ್ತದೆ ಮತ್ತು ಸ್ವರ್ಗಲೋಕಕ್ಕೆ ಹೋಗುತ್ತಾರೆ. ಜಾಮದಗ್ನಿ ರಾಮನು ವಾಸಿಸುತ್ತಿದ್ದ ಮಹೇಂದ್ರಕ್ಕೆ ಹೋಗಿ ರಾಮತೀರ್ಥದಲ್ಲಿ ಸ್ನಾನಮಾಡಿದ ನರನಿಗೆ ಅಶ್ವಮೇಧದ ಫಲವು ದೊರೆಯುತ್ತದೆ. ಅಲ್ಲಿಯೇ ಮತಂಗ ಕೇದಾರದಲ್ಲಿ ಸ್ನಾನಮಾಡಿದ ನರನಿಗೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ಶ್ರೀಪರ್ವತಕ್ಕೆ ಹೋಗಿ ಅಲ್ಲಿ ನದೀತೀರದಲ್ಲಿ ಸ್ನಾನಮಾಡಿದರೆ ಅಶ್ವಮೇಧಫಲವು ದೊರೆಯುತ್ತದೆ ಮತ್ತು ಸ್ವರ್ಗಲೋಕಕ್ಕೆ ಹೋಗುತ್ತಾನೆ. ಶ್ರೀ ಪರ್ವತದಲ್ಲಿ ದೇವಿಯ ಸಹಿತ ಮಹಾದ್ಯುತಿ ಮಹಾದೇವನು ಬ್ರಹ್ಮ ಮತ್ತು ಮೂವತ್ತು ದೇವತೆಗಳಿಂದ ಆವೃತನಾಗಿ ಪರಮಪ್ರೀತನಾಗಿ ವಾಸಿಸುತ್ತಾನೆ. ಅಲ್ಲಿ ದೇವಸರೋವರದಲ್ಲಿ ಶುಚಿಯಾಗಿಯೂ ಪ್ರಯತಾತ್ಮನಾಗಿಯೂ ಆಗಿದ್ದು ಸ್ನಾನಮಾಡಿದರೆ ಅಶ್ವಮೇದಫಲವು ದೊರೆಯುತ್ಟದೆ ಮತ್ತು ಪರಮ ಸಿದ್ಧಿಯನ್ನು ಪಡೆಯುತ್ತಾನೆ.
“ಪಾಂಡ್ಯದಲ್ಲಿ ಸುರಪೂಜಿತ ಋಷಭಪರ್ವತಕ್ಕೆ ಹೋದರೆ ವಾಜಪೇಯಫಲವು ದೊರೆಯುತ್ತದೆ ಮತ್ತು ಸ್ವರ್ಗದ್ವಾರದಲ್ಲಿ ಮೋದಿಸುತ್ತಾರೆ. ಅನಂತರ ಅಪ್ಸರ ಗಣಗಳ ಬೀಡಾಗಿದ್ದ ಕಾವೇರಿಗೆ ಹೋಗಬೇಕು. ಅಲ್ಲಿ ಸ್ನಾನಮಾಡಿದ ನರನಿಗೆ ಸಹಸ್ರಗೋದಾನದ ಫಲವು ದೊರೆಯುತ್ತದೆ. ಅನಂತರ ಸಮುದ್ರದೀರದಲ್ಲಿ ಕನ್ಯಾತೀರ್ಥದಲ್ಲಿ ಸ್ನಾನಮಾಡಬೇಕು. ಅಲ್ಲಿ ಸ್ನಾನಮಾಡಿದರೆ ಸರ್ವಪಾಪಗಳಿಂದ ವಿಮೋಚನೆ ದೊರೆಯುತ್ತದೆ. ಅನಂತರ ಮೂರು ಲೋಕಗಳಲ್ಲಿ ವಿಶ್ರುತ, ಸಮುದ್ರದ ಮಧ್ಯದಲ್ಲಿರುವ ಗೋಕರ್ಣಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳೂ, ಋಷಿಗಳೂ, ತಪೋಧನರೂ, ಭೂತ-ಯಕ್ಷ-ಪಿಶಾಚಿಗಳೂ, ಕಿನ್ನರ-ಉರಗಗಳೂ, ಸಿದ್ದ-ಚಾರಣ-ಗಂಧರ್ವರೂ, ಮನುಷ್ಯ-ಪನ್ನಗಗಳು, ನದಿ-ಸಾಗರ-ಪರ್ವತಗಳು ಉಮಾಪತಿಯನ್ನು ಪೂಜಿಸುತ್ತಾರೆ. ಅಲ್ಲಿ ಈಶನನ್ನು ಅರ್ಚಿಸಿ, ಉಪವಾಸದಲ್ಲಿದ್ದು ಮೂರುರಾತ್ರಿಗಳು ಕಳೆದರೆ ಹತ್ತು ಅಶ್ವಮೇಧಗಳ ಫಲವು ದೊರೆಯುತ್ತದೆ ಮತ್ತು ಗಾಣಪತ್ಯವೂ ದೊರೆಯುತ್ತದೆ. ಹನ್ನೆರಡು ರಾತ್ರಿಗಳನ್ನು ಅಲ್ಲಿ ಕಳೆದ ನರನು ಕೃತಾತ್ಮನಾಗುತ್ತಾನೆ. ಅಲ್ಲಿಂದ ತ್ರೈಲೋಕ್ಯವಿಶ್ರುತ ಗಾಯತ್ರಿಯ ಸ್ಥಾನಕ್ಕೆ ಹೋಗಿ ಅಲ್ಲಿ ಮೂರು ರಾತ್ರಿಗಳು ತಂಗಿದರೆ ಸಾವಿರ ಗೋದಾನದ ಫಲವು ದೊರೆಯುತ್ತದೆ. ಅಲ್ಲಿ ಬ್ರಾಹ್ಮಣರ ಒಂದು ಪ್ರತ್ಯಕ್ಷ ನಿದರ್ಶನವಿದೆ. ಯೋನಿಸಂಕರದಿಂದ ಹುಟ್ಟಿದವರು ಅಲ್ಲಿ ಗಾಯತ್ರಿಯನ್ನು ಪಠಿಸಿದರೆ ಅದು ವೇದದಲ್ಲಿರದಂತೆ ಅಥವಾ ಸಾಮಾನ್ಯ ಗಾಯನದಂತೆ ಕೇಳುತ್ತದೆ. ದುರ್ಲಭವಾದ ವಿಪ್ರರ್ಷಿ ಸಂವರ್ತನ ಸರೋವರಕ್ಕೆ ಹೋದರೆ ಅತ್ಯಂತ ರೂಪವಂತನಾಗುತ್ತಾನೆ ಮತ್ತು ಪ್ರೇಮದಲ್ಲಿ ಅದೃಷ್ಟವಂತನಾಗುತ್ತಾನೆ. ಅನಂತರ ವೇಣ್ಣವನ್ನು ಸೇರಿ ಅಲ್ಲಿ ಪಿತೃ-ದೇವತೆಗಳಿಗೆ ತರ್ಪಣವನ್ನು ನೀಡಿದ ನರನಿಗೆ ನವಿಲು ಮತ್ತು ಹಂಸಗಳಿಂದ ಎಳೆಯಲ್ಪಟ್ಟ ದಿವ್ಯ ವಿಮಾನವು ದೊರೆಯುತ್ತದೆ. ಅನಂತರ ನಿತ್ಯವೂ ಸಿದ್ಧರಿಂದ ಕೂಡಿದ ಗೋದಾವರಿಗೆ ಹೋದರೆ ಗವಾಮಯವು ದೊರೆಯುತ್ತದೆ ಮತ್ತು ವಾಸುಕಿಯ ಲೋಕವು ದೊರೆಯುತ್ತದೆ. ವೇಣ್ಣಿಯ ಸಂಗಮದಲ್ಲಿ ಸ್ನಾನಮಾಡಿದರೆ ವಾಜಪೇಯದ ಫಲವು ದೊರೆಯುತ್ಟದೆ. ವರದಾ ಸಂಗಮದಲ್ಲಿ ಸ್ನಾನಮಾಡಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ಬ್ರಹ್ಮಸ್ಥಾನಕ್ಕೆ ಹೋಗಿ ಮೂರುರಾತ್ರಿಗಳನ್ನು ಕಳೆದ ನರನಿಗೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ ಮತ್ತು ಅವನು ಸ್ವರ್ಗಲೋಕಕ್ಕೆ ಹೋಗುತ್ತಾನೆ. ಕುಶಪ್ಲವಕ್ಕೆ ಹೋಗಿ ಅಲ್ಲಿ ಬ್ರಹ್ಮಚಾರಿಯಾಗಿ ಸಮಾಹಿತನಾಗಿ ಮೂರುರಾತ್ರಿಗಳು ಉಳಿದು ಸ್ನಾನಮಾಡಿದರೆ ಅಶ್ವಮೇಧಫಲವು ದೊರೆಯುತ್ತದೆ. ಅನಂತರ ಕೃಷ್ಣವೇಣೀ ನದಿಯ ಉಗಮ ಸ್ಥಾನವಾದ ರಮ್ಯ ದೇವಹೃದ ಮತ್ತು ಜಾತಿಮಾತ್ರಹೃದ ಹಾಗೂ ನೂರು ಯಾಗಗಳನ್ನು ಮಾಡಿ ದೇವರಾಜನು ಸ್ವರ್ಗಕ್ಕೆ ಸೇರಿದ ಸ್ಥಳವಾದ ಕನ್ಯಾಶ್ರಮಗಳಿಗೆ ಹೋದರೂ ಕೂಡ ನೂರು ಅಗ್ನಿಷ್ಟೋಮ ಯಾಗಗಳ ಫಲವು ದೊರೆಯುತ್ತದೆ.
“ಸರ್ವದೇವ ಸರೋವರದಲ್ಲಿ ಸ್ನಾನಮಾಡಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ಜಾತಿಮಾತ್ರಸರೋವರದಲ್ಲಿ ಸ್ನಾನಮಾಡಿದ ನರನಿಗೆ ಹಿಂದಿನ ಜನ್ಮಗಳ ನೆನಪು ಬರುತ್ತದೆ. ಅನಂತರ ನದಿಗಳಲ್ಲೇ ಶ್ರೇಷ್ಠ ಮಹಾಪುಣ್ಯ ಪಯೋಷ್ಣಿಗೆ ಹೋಗಿ ಪಿತೃ-ದೇವತೆಗಳನ್ನು ಪೂಜಿಸಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ದಂಡಕಾರಣ್ಯಕ್ಕೆ ಹೋಗಿ ಅಲ್ಲಿಯ ನೀರಿನಲ್ಲಿ ಕೇವಲ ಸ್ನಾನಮಾಡಿದರೂ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ಮಹಾತ್ಮ ಶುಕನ ಶರಭಂಗಾಶ್ರಮಕ್ಕೆ ಹೋದರೆ ದುರ್ಗತಿಯು ಪ್ರಾಪ್ತವಾಗುವುದಿಲ್ಲ ಮತ್ತು ಅಂಥಹ ನರನ ಕುಲವು ಪುನೀತವಾಗುತ್ತದೆ. ಅನಂತರ ಜಾಮದಗ್ನಿ ರಾಮನು ಹೋಗಿದ್ದ ಶೂರ್ಪಾರಕಕ್ಕೆ ಹೋಗಬೇಕು. ರಾಮತೀರ್ಥದಲ್ಲಿ ಸ್ನಾನಮಾಡಿದ ನರನಿಗೆ ಬಹಳಷ್ಟು ಬಂಗಾರವು ದೊರೆಯುತ್ತದೆ. ನಿಯತನೂ ನಿಯತಾಶನನೂ ಆಗಿ ಸಪ್ತಗೋದಾವರಿಯಲ್ಲಿ ಸ್ನಾನಮಾಡಿದವನಿಗೆ ಮಹಾ ಪುಣ್ಯವು ದೊರೆಯುತ್ತದೆ ಮತ್ತು ಅವನು ದೇವಲೋಕಕ್ಕೆ ಹೋಗುತ್ತಾನೆ. ಅಲ್ಲಿಂದ ನಿಯತನೂ ನಿಯತಾಶನನೂ ಆಗಿ ದೇವಪಥಕ್ಕೆ ಹೋದ ಮಾನವನಿಗೆ ದೇವಸತ್ರದಿಂದ ಯಾವ ಪುಣ್ಯವು ದೊರೆಯುತ್ತದೆಯೋ ಆ ಪುಣ್ಯವು ದೊರೆಯುತ್ತದೆ. ಬ್ರಹ್ಮಚಾರಿಯೂ ಜಿತೇಂದ್ರಿಯನೂ ಆಗಿದ್ದು ತುಂಗಕಾರಣ್ಯಕ್ಕೆ ಹೋಗಬೇಕು. ಅಲ್ಲಿ ಹಿಂದೆ ಋಷಿ ಸಾರಸ್ವತನು ವೇದವನ್ನು ಹೇಳಿಕೊಡುತ್ತಿದ್ದನು. ಅಲ್ಲಿ ಮುನಿ ಅಂಗಿರಸನ ಮಗನು ಕಳೆದುಹೋಗಿದ್ದ ವೇದಗಳನ್ನು ಮಹರ್ಷಿಗಳ ಉತ್ತರೀಯದ ಮೇಲೆ ಕುಳಿತು ಓಂಕಾರದೊಂದಿಗೆ ಯಥಾನ್ಯಾಯವಾಗಿ ಎಲ್ಲವನ್ನೂ ಉಚ್ಚರಿಸಿದನು ಮತ್ತು ಅವನು ಹಿಂದೆ ಏನನ್ನು ಮರೆತುಬಿಟ್ಟಿದ್ದನೋ ಅವೆಲ್ಲವನ್ನೂ ನೆನಪಿಗೆ ಬಂದವು. ಅಲ್ಲಿ ಋಷಿಗಳೂ, ದೇವತೆಗಳೂ, ವರುಣ, ಅಗ್ನಿ, ಪ್ರಜಾಪತಿ, ಹರಿ ನಾರಾಯಣ ದೇವ, ಮಹಾದೇವ ಮತ್ತು ದೇವತೆಗಳೊಂದಿಗೆ ಭಗವಾನ್ ಮಹಾದ್ಯುತಿ ಪಿತಾಮಹನೂ, ಮಹಾದ್ಯುತಿ ಭೃಗುವಿಗೆ ಯಜ್ಞದ ಯಜಮಾನತ್ವವನ್ನು ವಹಿಸಿದರು. ಅನಂತರ ಭಗವಂತನು ಎಲ್ಲ ಋಷಿಗಳಿಗೆ ವಿಧಿವತ್ತಾಗಿ ಯಜ್ಞ ಕರ್ಮಾಂಗಗಳನ್ನು ಹೇಳಿಕೊಟ್ಟನು. ಯಥಾವಿಧಿಯಾಗಿ ನೀಡಿದ ಆಜ್ಯಭಾಗಗಳಿಂದ ತೃಪ್ತರಾದ ದೇವತೆಗಳು ತ್ರಿಭುವನಕ್ಕೆ ತೆರಳಿದರು ಮತ್ತು ಋಷಿಗಳು ತಮಗಿಷ್ಟವಾದಲ್ಲಿಗೆ ಹೋದರು. ಈಗ ಆ ತುಂಗಕ ವನವನ್ನು ಸ್ತ್ರೀಯಾಗಲೀ ಪುರುಷನಾಗಲೀ ಪ್ರವೇಶಿಸಿದರೆ ಸರ್ವ ಪಾಪಗಳೂ ನಾಶವಾಗುತ್ತವೆ. ಅಲ್ಲಿ ನಿಯತನೂ ನಿಯತಾಶನನೂ ಆಗಿ ಒಂದು ತಿಂಗಳು ವಾಸಿಸುವ ವಿವೇಕಿಯು ಬ್ರಹ್ಮಲೋಕಕ್ಕೆ ಹೋಗುತ್ತಾನೆ ಮತ್ತು ಅವನ ಕುಲವನ್ನು ಪುನೀತಗೊಳಿಸುತ್ತಾನೆ.
“ಮೇಧಾವಿಕಕ್ಕೆ ಹೋಗಿ ಪಿತೃಗಳಿಗೂ ದೇವತೆಗಳಿಗೂ ತರ್ಪಣವನ್ನಿತ್ತರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ ಮತ್ತು ನೆನಪು ಮತ್ತು ಬುದ್ಧಿಶಕ್ತಿಗಳನ್ನು ಪಡೆಯುತ್ತಾನೆ. ಅಲ್ಲಿಂದ ಲೋಕವಿಶ್ರುತ ಕಾಲಂಜರ ಪರ್ವತಕ್ಕೆ ಹೋಗಿ ಅಲ್ಲಿ ದೇವಸರೋವರದಲ್ಲಿ ಸ್ನಾನ ಮಾಡಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ಕಾಲಂಜರ ಗಿರಿಯಲ್ಲಿ ಆತ್ಮ ಸಾಧನೆಯನ್ನು ಮಾಡಿದರೆ ಮನುಷ್ಯನು ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅನಂತರ ಗಿರಿವರಶ್ರೇಷ್ಠ ಚಿತ್ರಕೂಟದಲ್ಲಿರುವ ಪಾಪಪ್ರಮೋಚನೀ ಮಂದಾಕಿನೀ ನದಿಗೆ ಹೋಗಬೇಕು. ಅಲ್ಲಿ ಸ್ನಾನಮಾಡಿ ಪಿತೃ-ದೇವತೆಗಳ ಪೂಜೆಯನ್ನು ನಿರತನಾದವನು ಅಶ್ವಮೇಧದ ಫಲವನ್ನು ಪಡೆಯುತ್ತಾನೆ ಮತ್ತು ಪರಮ ಗತಿಯನ್ನು ಹೊಂದುತ್ತಾನೆ. ಅಲ್ಲಿಂದ ಅನುತ್ತಮ ಭರ್ತೃಸ್ಥಾನಕ್ಕೆ ಹೋಗಬೇಕು. ಅಲ್ಲಿ ದೇವ ಮಹಾಸೇನನು ಸದಾ ನೆಲೆಸಿರುತ್ತಾನೆ. ಅಲ್ಲಿ ಹೋಗುವ ಮಾತ್ರದಿಂದಲೇ ಪುರುಷನು ಸಿದ್ಧಿಯನ್ನು ಹೊಂದುತ್ತಾನೆ. ಕೋಟಿತೀರ್ಥದಲ್ಲಿ ಸ್ನಾನಮಾಡಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ. ಅದನ್ನು ಪ್ರದಕ್ಷಿಣೆ ಮಾಡಿದ ನಂತರ ನರನು ಜ್ಯೇಷ್ಠಸ್ಥಾನಕ್ಕೆ ಹೋಗಬೇಕು. ಅಲ್ಲಿ ಮಹಾದೇವನನ್ನು ಪೂಜಿಸಿದರೆ ಶಶಿಯಂತೆ ವಿರಾಜಿಸುತ್ತಾನೆ. ಅಲ್ಲಿ ನಾಲ್ಕು ಸಮುದ್ರಗಳೂ ಸೇರಿರುವ ವಿಶ್ರುತ ಬಾವಿಯಿದೆ. ಅಲ್ಲಿ ಮನುಷ್ಯನು ನಿಯತಾತ್ಮನಾಗಿ ಸ್ನಾನಮಾಡಿದರೆ ಅಥವಾ ಪ್ರದಕ್ಷಿಣೆ ಮಾಡಿದರೂ ಕೂಡ ಪುನೀತನಾಗಿ ಪರಮ ಗತಿಯನ್ನು ಹೊಂದುತ್ತಾನೆ. ಅಲ್ಲಿಂದ ಮಹಾ ಶೃಂಗವೇರಪುರಕ್ಕೆ ಹೋಗಬೇಕು. ಅಲ್ಲಿ ಹಿಂದೆ ದಾಶರಥಿ ರಾಮನು ಗಂಗೆಯನ್ನು ದಾಟಿದ್ದನು. ಆ ಗಂಗೆಯಲ್ಲಿ ಬ್ರಹ್ಮಚಾರಿಯೂ ಸಮಾಹಿತನೂ ಆಗಿದ್ದು ಸ್ನಾನಮಾಡಿದರೆ ಪಾಪಗಳನ್ನು ತೊಳೆದುಕೊಂಡು ವಾಜಪೇಯ ಯಾಗದ ಫಲವು ದೊರೆಯುತ್ತದೆ. ಮಹಾದೇವನಲ್ಲಿಗೆ ಹೋಗಿ ಅವನಿಗೆ ಪ್ರದಕ್ಷಿಣೆ ನಮಸ್ಕಾರಗಳಿಂದ ಪೂಜಿಸಿದರೆ ಗಾಣಪತ್ಯ ಪದವಿಯನ್ನು ಹೊಂದುತ್ತಾರೆ.
“ಅನಂತರ ಋಷಿಗಳು ಸಂಸ್ತುತಿಸುವ ಪ್ರಯಾಗಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳು, ದಿಕ್ಪಾಲಕರೊಂದಿಗೆ ದಿಕ್ಕುಗಳು, ಲೋಕಪಾಲಕರು, ಸಾಧ್ಯರು, ನೈಋತರು, ಪಿತೃಗಳು, ಸನತ್ಕುಮಾರರೇ ಪ್ರಮುಖರಾದ ಪರಮ ಋಷಿಗಳು, ಅಂಗಿರಸ ಪ್ರಮುಖರು, ಮತ್ತು ಇತರ ಬ್ರಹ್ಮರ್ಷಿಗಳು, ಹಾಗೆಯೇ ನಾಗಗಳೂ, ಪಕ್ಷಿಗಳೂ, ಸಿದ್ದರೂ ಚಕ್ರಚರರೂ, ನದಿಗಳೂ, ಸಾಗರಗಳೂ, ಗಂಧರ್ವ-ಅಪ್ಸರೆಯರೂ, ಮತ್ತು ಪ್ರಜಾಪತಿಯನ್ನು ಮುಂದಿಟ್ಟುಕೊಂಡು ಭಗವಾನ್ ಹರಿಯೂ ನೆಲೆಸಿರುತ್ತಾರೆ. ಅಲ್ಲಿರುವ ಮೂರು ಅಗ್ನಿಕುಂಡಗಳ ಮಧ್ಯದಿಂದ ಸರ್ವತೀರ್ಥ ಪುರಸ್ಕೃತೆ ಜಾಹ್ನವಿಯು ಪ್ರಯಾಗದಿಂದ ಹೊರ ಹರಿಯುತ್ತಾಳೆ. ಅಲ್ಲಿ ಮೂರು ಲೋಕಗಳಲ್ಲಿ ವಿಶ್ರುತ ತಪನನ ಮಗಳು ಯಮುನೆಯು ಲೋಕಪಾವನಿ ಗಂಗೆಯೊಡನೆ ಕೂಡಿ ಹರಿಯುತ್ತಾಳೆ. ಗಂಗಾ ಮತ್ತು ಯಮುನೆಯರ ಮಧ್ಯವನ್ನು ಭೂಮಿಯ ಯೋನಿಯೆಂದು ತಿಳಿಯುತ್ತಾರೆ. ಪ್ರಯಾಗವನ್ನು ಯೋನಿಯ ಮುಖವೆಂದು ಋಷಿಗಳು ತಿಳಿದಿದ್ದಾರೆ. ಪ್ರಯಾಗ, ಪ್ರತಿಷ್ಠಾನ, ಕಂಬಲ, ಅಶ್ವತರ, ಮತ್ತು ಭೋಗವತೀ ತೀರ್ಥಗಳನ್ನು ಪ್ರಜಾಪತಿಯ ಯಜ್ಞವೇದಿಕೆಗಳೆಂದೂ ಹೇಳುತ್ತಾರೆ. ಅಲ್ಲಿ ವೇದಗಳೂ ಯಜ್ಞಗಳೂ ಮೂರ್ತಿವತ್ತಾಗಿವೆ. ಮಹಾವ್ರತ ಋಷಿಗಳು ಪ್ರಜಾಪತಿಯನ್ನು ಆರಾಧಿಸುತ್ತಾರೆ. ದೇವತೆಗಳೂ ಚಕ್ರಚರರೂ ಕ್ರತುಗಳನ್ನು ನಡೆಸುತ್ತಿರುತ್ತಾರೆ. ಅದಕ್ಕಿಂತಲೂ ಪುಣ್ಯತಮವಾದದ್ದು ಮೂರು ಲೋಕಗಳಲ್ಲಿಯೂ ಇಲ್ಲ. ಸರ್ವತೀರ್ಥಗಳಿಗಿಂಥಲೂ ಪ್ರಯಾಗದ ಪ್ರಭಾವವು ಅತ್ಯಧಿಕ. ಈ ತೀರ್ಥದ ಕುರಿತು ಕೇಳುವುದರಿಂದ, ಅಥವಾ ಕೇವಲ ನಾಮ ಸಂಕೀರ್ತನೆ ಮಾಡುವುದರಿಂದಲೂ, ಅಥವಾ ಅಲ್ಲಿಯ ಮಣ್ಣನ್ನು ತೆಗೆದುಕೊಂಡು ಹೋಗುವುದರಿಂದಲೂ ನರನು ಪಾಪಗಳಿಂದ ಮುಕ್ತನಾಗುತ್ತಾನೆ. ಆ ಸಂಗಮದಲ್ಲಿ ಸಂಶಿತವ್ರತನಾಗಿ ಸ್ನಾನಮಾಡಿದರೆ ರಾಜಸೂಯ ಮತ್ತು ಅಶ್ವಮೇಧಗಳ ಪುಣ್ಯ ಫಲವು ದೊರೆಯುತ್ತದೆ. ಇದನ್ನು ಯಾಗಭೂಮಿಯೆಂದು ದೇವತೆಗಳು ಪೂಜಿಸುತ್ತಾರೆ. ಅಲ್ಲಿ ಅಲ್ಪವನ್ನು ಕೊಟ್ಟರೂ ಮಹತ್ತರವಾಗುತ್ತದೆ. ವೇದವಚನವಾಗಲೀ ಲೋಕವಚನವಾಗಲೀ ಪ್ರಯಾಗದಲ್ಲಿ ಮರಣಹೊಂದಬೇಕು ಎನ್ನುವ ನಿರ್ಧಾರವನ್ನು ಅತಿಕ್ರಮಿಸಬೇಡ! ಅಲ್ಲಿ ಆರುಕೋಟಿ ಹತ್ತುಸಾವಿರ ತೀರ್ಥಗಳು ಸನ್ನಿಹಿತವಾಗಿವೆ ಎಂದು ಹೇಳುತ್ತಾರೆ. ಚತುರ್ವೇದಗಳನ್ನು ಓದಿದರೆ ಮತ್ತು ಸತ್ಯವನ್ನು ಮಾತನಾಡಿದರೆ ಏನು ಪುಣ್ಯವು ದೊರೆಯುತ್ತದೆಯೋ ಅಷ್ಟೇ ಪುಣ್ಯವು ಆ ಗಂಗಾ-ಯಮುನೆಯರ ಸಂಗಮದಲ್ಲಿ ಸ್ನಾನಮಾಡುವುದರಿಂದ ಮಾತ್ರ ದೊರೆಯುತ್ತದೆ.
“ಅಲ್ಲಿ ಭೋಗವತೀ ಎಂಬ ಹೆಸರಿನ ವಾಸುಕಿಯ ಉತ್ತಮ ತೀರ್ಥವಿದೆ. ಅಲ್ಲಿ ಸ್ನಾನಮಾಡಿದರೆ ಅಶ್ವಮೇಧದ ಫಲವು ದೊರೆಯುತ್ತದೆ. ಅಲ್ಲಿ ಗಂಗೆಯಲ್ಲಿ ತ್ರಿಲೋಕವಿಶ್ರುತ ಹಂಸಪ್ರಪತನ ಎನ್ನುವ ತೀರ್ಥವೂ ದಶಾಶ್ವಮೇಧ ಎನ್ನುವ ತೀರ್ಥವೂ ಇವೆ. ಗಂಗೆಯು ತಪೋವನವನ್ನು ಸೇರುವಲ್ಲಿ, ಗಂಗಾತೀರದಲ್ಲಿರುವ ಪ್ರದೇಶವನ್ನು ಸಿದ್ಧಕ್ಷೇತ್ರ ಎಂದು ತಿಳಿಯಲ್ಪಟ್ಟಿದೆ. ಈ ಸತ್ಯವನ್ನು ದ್ವಿಜಾತಿಯವರ, ಸಾಧುಗಳ, ತನ್ನ ಮಗನ, ಸುಹೃದಯರ, ಶಿಷ್ಯನ ಮತ್ತು ಅನುಸರಿಸಿ ಬಂದವರ ಕಿವಿಯಲ್ಲಿ ಜಪಿಸಬೇಕು. ಇದು ಧರ್ಮ. ಇದು ಪುಣ್ಯ. ಇದು ಒಳ್ಳೆಯದು. ಇದು ಸುಖ. ಇದು ಸ್ವರ್ಗ. ಇದು ಸುಂದರ. ಇದು ಪಾವನ ಮತ್ತು ಇದು ಉತ್ತಮ! ಇದು ಸರ್ವಪಾಪಗಳಿಂದ ಬಿಡುಗಡೆಯನ್ನು ನೀಡಬಲ್ಲ ಮಹರ್ಷಿಗಳ ಗುಟ್ಟು. ದ್ವಿಜರ ಮಧ್ಯದಲ್ಲಿ ಇದನ್ನು ಕಲಿತುಕೊಂಡವನಿಗೆ ನಿರ್ಮಲತ್ವವು ಪ್ರಾಪ್ತವಾಗುತ್ತದೆ. ಸದಾ ಶುಚಿಯಾಗಿದ್ದು ನಿತ್ಯವೂ ತೀರ್ಥಕ್ಷೇತ್ರಗಳ ಪುಣ್ಯವನ್ನು ಕೇಳಿದವನಿಗೆ ಹಲವಾರು ಜನ್ಮಗಳ ನೆನಪುಂಟಾಗುತ್ತದೆ ಮತ್ತು ಸ್ವರ್ಗಲೋಕದಲ್ಲಿ ಮೋದಿಸುತ್ತಾನೆ. ಹೋಗಬಲ್ಲ ಮತ್ತು ಹೋಗಲಾಗದ ತೀರ್ಥಗಳ ಕುರಿತು ಹೇಳುತ್ತಾರೆ - ಎಲ್ಲ ತೀರ್ಥಗಳನ್ನೂ ನೋಡಬಯಸಿದರೆ ನೋಡಲಿಕ್ಕಾಗದ ತೀರ್ಥಗಳನ್ನು ಮನಸ್ಸಿನಲ್ಲಿಯಾದರೂ ಹೋಗಬೇಕು. ಸುಕೃತಗಳನ್ನು ಅರೆಸಲೋಸುಗ ವಸುಗಳು, ಸಾಧ್ಯರು, ಆದಿತ್ಯರು, ಮರುತರು, ಅಶ್ವಿನೀ ದೇವತೆಗಳು, ಋಷಿಗಳು, ಮತ್ತು ದೇವಕಲ್ಪರು ಇವುಗಳನ್ನು ನೋಡಿದ್ದಾರೆ. ಅದೇ ರೀತಿ ನೀನೂ ಕೂಡ ವಿಧಿವತ್ತಾಗಿ ನಿಯತನಾಗಿ ತೀರ್ಥಯಾತ್ರೆಗೆ ಹೊರಡು. ಪುಣ್ಯಕರ್ಮದಿಂದ ಪುಣ್ಯವು ಹೆಚ್ಚಾಗುತ್ತದೆ. ಭಾವಿತರಾಗಿದ್ದುಕೊಂಡು, ಉದ್ದೇಶವನ್ನಿಟ್ಟುಕೊಂಡು, ಮೊದಲೇ ಯೋಚಿಸಿದವರಾಗಿದ್ದುಕೊಂಡು, ವೇದದಲ್ಲಿ ಹೇಳಿರುವ ಸಿದ್ಧಿ, ಶಿಷ್ಟಾಚಾರಗಳಿಂದಿದ್ದುಕೊಂಡು ಹಿಂದೆ ಅವರಿಗೆ ಈ ತೀರ್ಥಗಳನ್ನು ನೋಡಲಿಕ್ಕಾಯಿತು. ವ್ರತಗಳಿಲ್ಲದವನು, ಕೃತಾತ್ಮನಾಗಿರದವನು, ಅಶುಚಿಯಾಗಿದ್ದವನು, ಅಥವಾ ಕಳ್ಳನು ಈ ತೀರ್ಥಗಳಲ್ಲಿ ಸ್ನಾನಮಾಡುವುದಿಲ್ಲ. ನೀನಾದರೋ ನಿನ್ನ ಒಳ್ಳೆಯ ನಡತೆಯಿಂದ ನಿತ್ಯವೂ ಧರ್ಮವನ್ನು ಕಂಡುಕೊಂಡವನಾಗಿರುವುದರಿಂದ, ನಿನ್ನ ಪಿತ, ಪಿತಾಮಹ ಮತ್ತು ಪ್ರಪಿತಾಮಹರನ್ನು ಉದ್ಧರಿಸುತ್ತೀಯೆ! ಪಿತಾಮಹನನ್ನು ಮುಂದಿಟ್ಟುಕೊಂಡು ಎಲ್ಲ ದೇವ ಮತ್ತು ಋಷಿಗಣಗಳು ನಿನ್ನ ಧರ್ಮದಿಂದ ನಿತ್ಯವೂ ಸಂತುಷ್ಟರಾಗಿದ್ದಾರೆ. ನೀನು ವಸುಗಳ ಲೋಕಗಳನ್ನು ಹೊಂದುತ್ತೀಯೆ ಮತ್ತು ಭೂಮಿಯಲ್ಲಿ ಶಾಶ್ವತವಾದ ಮಹಾ ಕೀರ್ತಿಯನ್ನು ಪಡೆಯುತ್ತೀಯೆ.”
ಹೀಗೆ ಹೇಳಿ ಬೀಳ್ಕೊಂಡು ಭಗವಾನ್ ಋಷಿ ಪುಲಸ್ತ್ಯನು ಸಂತೋಷದಿಂದ ಪ್ರೀತಮನಸ್ಕನಾಗಿ ಅಲ್ಲಿಯೇ ಅಂತರ್ಧಾನನಾದನು. ಶಾಸ್ತ್ರಗಳ ತತ್ವಾರ್ಥಗಳನ್ನು ಕಂಡುಕೊಂಡಿದ್ದ ಕುರುಶಾರ್ದೂಲ ಭೀಷ್ಮನಾದರೋ ಪುಲಸ್ತ್ಯನ ವಚನದಂತೆ ಪೃಥ್ವಿಯಲ್ಲಿ ತಿರುಗಾಡಿದನು.
The other spiritual discourses in Mahabharata (Kannada):
- ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
- ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
- ಯುಧಿಷ್ಠಿರ-ಮಾರ್ಕಂಡೇಯ ಸಂವಾದ
- ಸರಸ್ವತೀಗೀತೆ
- ಕೌಶಿಕ-ಪತಿವ್ರತೆ-ಧರ್ಮವ್ಯಾಧ
- ವಿದುರನೀತಿ
- ಸನತ್ಸುಜಾತಿಯ
- ಭೌಮಗುಣಕಥನ
- ಶ್ರೀಮದ್ಭಗವದ್ಗೀತಾ
- ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
- ಪಿತಾಪುತ್ರ ಸಂವಾದ
- ಶಮ್ಯಾಕಗೀತೆ
- ಮಂಕಿಗೀತೆ
- ಭೃಗು-ಭರದ್ವಾಜ ಸಂವಾದ
- ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ
Dr. Ramesh, you have a wonderful job of this translation of Vyasa’s Mahabharata, in Kannada and made available, free of charge, for usage by people like us.
Thank you very much, for this great and painstakingly effort and service.