ಸನತ್ಸುಜಾತೀಯ
ಮನೀಷೀ ರಾಜಾ ಧೃತರಾಷ್ಟ್ರನು ವಿದುರನ ಮಾತನ್ನು ಗೌರವಿಸಿ, ಪರಮ ಬುದ್ಧಿಯನ್ನು ಪಡೆಯಲೋಸುಗ, ಮಹಾತ್ಮ ಸನತ್ಸುಜಾತನಿಗೆ ರಹಸ್ಯದಲ್ಲಿ ಕೇಳಿದನು:
“ಸನತ್ಸುಜಾತ! ಮೃತ್ಯುವೇ ಇಲ್ಲವೆಂದು ನಿನ್ನ ಉಪದೇಶವೆಂದು ನಾನು ಕೇಳಿದ್ದೇನೆ. ಆದರೂ ದೇವಾಸುರರು ಬ್ರಹ್ಮಚರ್ಯವನ್ನು ಆಚರಿಸಿ ಅಮೃತತ್ವವನ್ನು ಪಡೆದರು. ಇವುಗಳಲ್ಲಿ ಯಾವುದು ಸತ್ಯ?”
ಸನತ್ಸುಜಾತನು ಹೇಳಿದನು:
“ಮೃತ್ಯುವು ಕರ್ಮಗಳಿಂದಾಗುತ್ತದೆಯೆಂದು ಕೆಲವರು ಹೇಳಿದರೆ ಮೃತ್ಯುವೇ ಇಲ್ಲವೆಂದು ಇತರರು ಹೇಳುತ್ತಾರೆ. ರಾಜನ್! ಈಗ ನಾನು ಹೇಳುವುದನ್ನು ಕೇಳು. ಇದರಿಂದ ನಿನ್ನಲ್ಲಿ ಶಂಕೆಗಳು ಉಳಿಯುವುದಿಲ್ಲ. ಇವೆರಡು ಸತ್ಯಗಳೂ ಪೂರ್ವಪೀಡಿತವಾದವುಗಳು. ಕವಿಗಳು ಮೃತ್ಯುವೆಂದು ಯಾವುದಕ್ಕೆ ಸಮ್ಮತಿಸುತ್ತಾರೋ ಅದು ಮೋಹ. ನಾನು ಪ್ರಮಾದವೇ ಮೃತ್ಯುವೆಂದು ಹೇಳುತ್ತೇನೆ. ಸದಾ ಅಪ್ರಮಾದನಾಗಿರುವುದೇ ಅಮೃತತ್ವವೆಂದು ಹೇಳುತ್ತೇನೆ. ಪ್ರಮಾದದಿಂದಲೇ ಅಸುರರು ಸೋತರು. ಅಪ್ರಮಾದರಾಗಿದ್ದವರು ಬ್ರಹ್ಮಭೂತರಾಗಿರುತ್ತಾರೆ. ಆದರೂ ಮೃತ್ಯುವು ಜೀವಿಗಳನ್ನು ತಿನ್ನುವ ಹುಲಿಯಲ್ಲ. ಇದಕ್ಕೆ ಯಾವ ರೂಪವನ್ನೂ ದೊರಕಿಸಿ ಕೊಟ್ಟಿಲ್ಲ. ಕೆಲವರು ಬ್ರಹ್ಮಚಾರಿ, ಆತ್ಮವಾಸಿ, ಮರಣವಿಲ್ಲದ ಯಮನೇ ಮೃತ್ಯುವೆಂದು ಹೇಳುತ್ತಾರೆ. ಆ ದೇವನು ಪುಣ್ಯವಂತರಿಗೆ ಸುಖಪ್ರದನೂ ಪಾಪಿಗಳಿಗೆ ದುಃಖಪ್ರದನೂ ಆಗಿ ಪಿತೃಲೋಕದ ರಾಜ್ಯವನ್ನಾಳುತ್ತಾನೆ. ಅಲ್ಲಿಂದ ಅವನು ನರರಿಗೆ ಕ್ರೋಧ, ಪ್ರಮಾದ, ಮತ್ತು ಮೋಹರೂಪದ ಮೃತ್ಯುವನ್ನು ಕಳುಹಿಸುತ್ತಾನೆ. ಅವರು ಮೋಹಿತರಾಗಿ ಇವುಗಳ ವಶಕ್ಕೆ ಬಂದು ಅದರಂತೆ ನಡೆದು ಪ್ರೇತಗಳಾಗಿ ಅಲ್ಲಿಗೆ ಪುನಃ ಬೀಳುತ್ತಾರೆ. ವಿಷಯಾಸಕ್ತವಾದ ಇಂದ್ರಿಯಗಣಗಳೂ ಜೀವವನ್ನು ಹಿಂಬಾಲಿಸಿ ಹೋಗುತ್ತವೆ. ಆದುದರಿಂದ ಮೃತ್ಯುವನ್ನು ಮರಣವೆಂದೂ ಕರೆಯುತ್ತಾರೆ. ಯಾರು ಕರ್ಮಫಲಗಳನ್ನು ಬಯಸಿ ಕರ್ಮಗಳ ಹಿಂದೆ ಹೋಗುತ್ತಾರೋ ಅವರು ಮೃತ್ಯುವನ್ನು ದಾಟುವುದಿಲ್ಲ. ಯಾರು ತಿಳಿದು ಮೇಲಿಂದ ಮೇಲೆ ಹುಟ್ಟಿಬರುವ ಇಂದ್ರಿಯಭೋಗಗಳ ಬಯಕೆಗಳನ್ನು ಅನಾದರಿಸಿ ಎದುರಿಸಿ ನಾಶಪಡಿಸುತ್ತಾನೋ ಅವನೇ ಮೃತ್ಯುವಿಗೆ ಮೃತ್ಯುವಿನಂತಾಗುತ್ತಾನೆ. ಯಾರು ಕಾಮಗಳನ್ನು ಸಂಹರಿಸುತ್ತಾನೋ ಅವನೇ ವಿಧ್ವಾಂಸನೆನಿಸಿಕೊಳ್ಳುತ್ತಾನೆ. ಕಾಮವನ್ನೇ ಅನುಸರಿಸಿ ಹೋಗುವ ಪುರುಷನು ಕಾಮಗಳೊಂದಿಗೇ ವಿನಾಶಹೊಂದುತ್ತಾನೆ. ಕಾಮಗಳನ್ನು ದೂರವಿಟ್ಟರೆ ಪುರುಷನು ತನ್ನಲ್ಲಿರುವ ಏನನ್ನೂ ಕೊಡವಿ ಹಾಕಬಹುದು. ಪ್ರಕಾಶವೇ ಇಲ್ಲದ ಈ ಕತ್ತಲೆಯು ಭೂತಗಳಿಗೆ ನರಕವೆಂದೇ ತೋರುತ್ತದೆ. ಭೂತಹಿಡಿದವರಂತೆ ಅದರ ಕಡೆಗೇ ಓಡಿ ಹೋಗಿ ಪ್ರಪಾತದಲ್ಲಿ ಬೀಳುತ್ತವೆ.
‘ನಾನು’ ಎಂಬ ಅವಿದ್ಯೆಯು ಮೊದಲು ಕೊಲ್ಲುತ್ತದೆ. ನಂತರ ಕಾಮಕ್ರೋಧಗಳೆರಡೂ ಹಿಡಿದು ಕೊಲ್ಲುತ್ತವೆ. ಇವು ಬಾಲಕ ಮುಗ್ಧನಿಗೆ ಮೃತ್ಯುವನ್ನು ತರುತ್ತವೆ. ಆದರೆ ಧೀರರು ಧೈರ್ಯದಿಂದ ಮೃತ್ಯುವನ್ನು ದಾಟುತ್ತಾರೆ. ಇತರ ಯಾವುದನ್ನೂ ಅನಾದರಿಸಿದವನನ್ನು ಹುಲ್ಲಿನಿಂದ ಮಾಡಲ್ಪಟ್ಟ ಹುಲಿಯಂತೆ ಅದು ಮೇಲೆರಗುವುದಿಲ್ಲ. ಕ್ರೋಧ ಲೋಭಗಳ ಮೋಹಕ್ಕೊಳಗಾದ ಅಂತರಾತ್ಮವು ಶರೀರದ ಒಳಗೇ ಇರುವ ಮೃತ್ಯು. ಈ ರೀತಿ ಮೃತ್ಯುವಿನ ಹುಟ್ಟನ್ನು ತಿಳಿದು, ಜ್ಞಾನದಲ್ಲಿಯೇ ಇರುವವನು ಮೃತ್ಯುವಿಗೆ ಹೆದರುವುದಿಲ್ಲ. ವಿಷಯಗಳನ್ನು ಹೊಂದಿ ಮರ್ತ್ಯನು ಹೇಗೆ ಮೃತ್ಯುವನ್ನೂ ಪಡೆಯುತ್ತಾನೋ ಹಾಗೆ ವಿಷಯಗಳು ವಿನಾಶವಾದಾಗ ಅವನ ಮೃತ್ಯುವೂ ವಿನಾಶವಾಗುತ್ತದೆ.”
ಧೃತರಾಷ್ಟ್ರನು ಹೇಳಿದನು:
“ಇಲ್ಲಿರುವ ಕೆಲವರು ಧರ್ಮವನ್ನು ಆಚರಿಸುವುದಿಲ್ಲ. ಹಾಗೆಯೇ ಕೆಲವರು ಧರ್ಮವನ್ನು ಆಚರಿಸುತ್ತಾರೆ. ಪಾಪವು ಧರ್ಮವನ್ನು ಕೊಲ್ಲುತ್ತದೆಯೋ ಅಥವಾ ಧರ್ಮವು ಪಾಪವನ್ನು ಕೊಲ್ಲುತ್ತದೆಯೋ ಹೇಳು!”
ಸನತ್ಸುಜಾತನು ಹೇಳಿದನು:
“ಎರಡೂ ಆಗಬಹುದು - ಧರ್ಮದ ಫಲ ಮತ್ತು ಅಧರ್ಮದ ಫಲ. ವಿದ್ವಾನನು ಧರ್ಮದಿಂದ ಅಧರ್ಮವನ್ನು ನಾಶಗೊಳಿಸುತ್ತಾನೆ. ಧರ್ಮವೇ ಬಲವಾದುದೆಂದು ಅವನಿಗೆ ತಿಳಿದಿರುತ್ತದೆ.”
ಧೃತರಾಷ್ಟ್ರನು ಹೇಳಿದನು:
“ದ್ವಿಜಾತಿಯ ಪುಣ್ಯಕರ್ಮಿಗಳು ತಮ್ಮ ಧರ್ಮಗಳಿಂದ ಪಡೆಯುವ ಸನಾತನ ಲೋಕಗಳ ಪರಿಕ್ರಮಗಳು ಬೇರೆ ಬೇರೆಯೆಂದು ಹೇಳುತ್ತಾರೆ. ಅವು ಮಾಡಿದ ಕರ್ಮಕ್ಕೆ ತಕ್ಕಂತೆ ಇರುತ್ತವೆಯಲ್ಲವೇ?”
ಸನತ್ಸುಜಾತನು ಹೇಳಿದನು:
“ಬಲಶಾಲಿಗಳಲ್ಲಿ ಹೇಗೆ ಬಲದ ಕುರಿತು ಸ್ಪರ್ಧಾಭಾವವಿರುತ್ತದೆಯೋ ಹಾಗೆ ಸ್ಪರ್ಧಿಸದ ಬ್ರಾಹ್ಮಣರು ಮರಣದ ನಂತರ ಸ್ವರ್ಗಲೋಕದಲ್ಲಿ ಪ್ರಕಾಶಿಸುತ್ತಾರೆ. ಮಳೆಗಾಲದಲ್ಲಿ ಹುಲ್ಲು ಹೇರಳವಾಗಿರುವಂತೆ ಎಲ್ಲಿ ಸಾಕಷ್ಟು ಅನ್ನ ಪಾನಗಳು ದೊರೆಯುತ್ತವೆಯೋ ಅಲ್ಲಿ ಬ್ರಾಹ್ಮಣನು ಜೀವನಯಾತ್ರೆಯನ್ನು ನಡೆಸಬೇಕು. ಎಲ್ಲಿ ಅವನು ಮಾತನಾಡದೇ ಇರುವಾಗ ಇತರ ಜನರು ಅವನಿಗೆ ಅಮಂಗಳಕರವಾದುದನ್ನು, ಭಯವನ್ನೂ ನೀಡಿ ಅತಿಕ್ರಮಿಸುವುದಿಲ್ಲವೋ ಅಲ್ಲಿ ಅವನು ಶ್ರೇಯಸ್ಸನ್ನು ಪಡೆಯುತ್ತಾನೆ. ಮೌನಿಯಾಗಿರುವ ಆತ್ಮನಿಗೆ ಯಾರು ಸಂತಾಪವನ್ನುಂಟುಮಾಡುವುದಿಲ್ಲವೋ, ಅವನ ಬ್ರಹ್ಮತ್ವ ಸಾಧನೆಗೆ ಸಾಧಕವಾದವುಗಳನ್ನು ಅಪಹರಿಸುವುದಿಲ್ಲವೋ ಅವನ ಅನ್ನವು ಸಂತರಿಗೆ ಸಮ್ಮತವಾದುದು. ಯಾರು ಸ್ವವೀರ್ಯದಿಂದ ಉಪಜೀವನವನ್ನು ಮಾಡುತ್ತಾರೋ ಅವರು ನಿತ್ಯವೂ ತನ್ನ ವಾಂತಿಯನ್ನು ತಿನ್ನುವ ನಾಯಿಯಂತೆ ತಾವೇ ಕಕ್ಕಿದ್ದುದನ್ನು ಉಂಡು ಅನರ್ಥಕ್ಕೆ ಕಾರಣರಾಗುತ್ತಾರೆ. ಬ್ರಾಹ್ಮಣನು ‘ನನ್ನ ಆಚರಣೆಗಳು ಅಜ್ಞಾತವಾಗಿರಲಿ (ಯಾರಿಗೂ ತಿಳಿಯದಿರಲಿ)!’ ಎಂದು ಯೋಚಿಸುತ್ತಾನೆ. ಇದರಿಂದ ಬಂಧು-ಬಾಂಧವರ ಮಧ್ಯದಲ್ಲಿ ಅವನು ವಾಸಿಸುತ್ತಿದ್ದರೂ ಅವನ ಕುರಿತು ಯಾರಿಗೂ ಏನೂ ತಿಳಿದಿರುವುದಿಲ್ಲ. ಯಾವ ಬ್ರಾಹ್ಮಣನೂ ಅಂತರಾತ್ಮನನ್ನು ಘಾತಿಗೊಳಿಸಬಾರದು. ಅದರಿಂದ ಬ್ರಹ್ಮನು ಇರುವುದನ್ನು ಸ್ವಲ್ಪವಾದರೂ ಕಂಡುಕೊಳ್ಳುತ್ತಾನೆ. ಶ್ರಮಯುಕ್ತನಾಗಿರದ, ದಾನಗಳನ್ನು ಸ್ವೀಕರಿಸದ, ನಿರುಪದ್ರವಿಯಾದ, ಶಿಷ್ಟನೆಂದು ಸಮ್ಮಾನಿತನಾದರೂ ಶಿಷ್ಟನೆಂದು ತೋರಿಸಿಕೊಳ್ಳದ ಬ್ರಾಹ್ಮಣನೇ ಬ್ರಹ್ಮನನ್ನು ತಿಳಿದ ಕವಿ. ಮಾನುಷ ಸಂಪತ್ತಿನಲ್ಲಿ ಬಡವರಾಗಿರುವ ಆದರೆ ವೇದಗಳಲ್ಲಿ ಶ್ರೀಮಂತರಾಗಿರುವ ದ್ವಿಜರು ಗೆಲ್ಲಲಸಾಧ್ಯರು, ಅಲುಗಾಡಿಸಲಸಾಧ್ಯರು. ಅವು ಬ್ರಾಹ್ಮಣನ ತನುವೆಂದು ತಿಳಿದುಕೋ. ಇಷ್ಟಾರ್ಥಸಿದ್ಧಿಗಳನ್ನು ಮಾಡುವ ಎಲ್ಲ ದೇವತೆಗಳನ್ನೂ ಅರಿತಿರುವವನೂ, ಯಾರಕುರಿತು ಪ್ರಯತ್ನಿಸುತ್ತಿರುತ್ತಾನೋ ಸ್ವಯಂ ಆ ದೇವತೆಗಳೂ ಕೂಡ ಇಂತಹ ಬ್ರಾಹ್ಮಣನಿಗೆ ಸಮಾನರಾಗುವುದಿಲ್ಲ. ತಟಸ್ಥನಾಗಿರುವವನು ಗೌರವಿಸಿದರೆ ಹಿಗ್ಗುವುದಿಲ್ಲ. ಒಂದುವೇಳೆ ಜನರು ಅಪಮಾನ ಮಾಡಿದರೂ ಕುಗ್ಗುವುದಿಲ್ಲ. ವಿದ್ವಾಂಸರು ಗೌರವಿಸುತ್ತಿದ್ದಾರೆ ಎಂದು ಗೌರವಿಸಿಕೊಂಡವನು ತಿಳಿದುಕೊಳ್ಳುತ್ತಾನೆ. ಅಪಮಾನಿತನಾದವನು ಧರ್ಮವನ್ನು ತಿಳಿಯದ ಮೂಢರು, ಲೋಕಶಾಸ್ತ್ರಗಳನ್ನು ತಿಳಿಯದವರು ಗೌರವಿಸಬೇಕಾದವರನ್ನು ಗೌರವಿಸುವುದಿಲ್ಲ ಎಂದು ತಿಳಿದುಕೊಳ್ಳುತ್ತಾನೆ. ಮಾನ ಮತ್ತು ಮೌನಗಳು ಸದಾ ಒಟ್ಟಿಗೇ ಇರುವುದಿಲ್ಲ. ಈ ಲೋಕವು ಮಾನಕ್ಕೆ ಸೇರಿದ್ದುದು. ನಂತರದ್ದು ಮೌನಕ್ಕೆ ಸೇರಿದ್ದುದು ಎಂದು ತಿಳಿ.
ಈ ಲೋಕದಲ್ಲಿ ಸಂಪತ್ತು ಸುಖಕರವಾದುದು. ಆದರೆ ಅದು ಮಾರ್ಗದಲ್ಲಿರುವ ಅಡಚಣೆ. ಪ್ರಜ್ಞಾಹೀನನಿಗೆ ಬ್ರಹ್ಮ ಸಂಪತ್ತು ದೊರಕುವುದು ಕಷ್ಟ. ಅದಕ್ಕೆ (ಬ್ರಾಹ್ಮೀ ಸಂಪತ್ತಿಗೆ) ಬಹುಪ್ರಕಾರದ, ಮುಚ್ಚಲು ಕಷ್ಟಕರವಾದ, ದ್ವಾರಗಳಿವೆಯೆಂದು ಸಂತರು ಹೇಳುತ್ತಾರೆ. ಸತ್ಯ (ಪ್ರಾಣಿಗಳಿಗೆ ಹಿತಕರವೂ ಯಥಾರ್ಥವೂ ಆದ ಮಾತು), ಆರ್ಜವ (ಕುಟಿಲತೆ ಇಲ್ಲದೇ ಇರುವುದು), ಹ್ರೀ (ಅಕೃತ್ಯವನ್ನು ಮಾಡಲು ನಾಚಿಕೆ), ದಮ (ಮನಸ್ಸಿನ ನಿಗ್ರಹ), ಶೌಚ (ಪಾಪವನ್ನು ತೊಳೆದುಕೊಳ್ಳುವುದು), ವಿದ್ಯೆ (ಬ್ರಹ್ಮವಿದ್ಯೆ) ಈ ಆರು ಮೋಹವನ್ನು ನಾಶಗೊಳಿಸುತ್ತವೆ.”
ಧೃತರಾಷ್ಟ್ರನು ಹೇಳಿದನು:
“ಯಾವ ದ್ವಿಜನು ಋಗ್-ಯಜು-ಸಾಮವೇದಗಳನ್ನು ಅಧ್ಯಯನ ಮಾಡುತ್ತಾನೋ ಅವನೇ ಪಾಪಗಳನ್ನು ಮಾಡಿದರೆ ಪಾಪವು ಅವನಿಗೆ ತಾಗುತ್ತದೆಯೋ ಅಥವಾ ತಾಗುವುದಿಲ್ಲವೋ?”
ಸನತ್ಸುಜಾತನು ಹೇಳಿದನು:
“ಸಾಮ-ಋಗ್-ಯಜುರ್ವೇದಗಳು ವೇದಾಧ್ಯಾಯಿಯನ್ನು ಪಾಪಕರ್ಮಗಳ ಫಲದಿಂದ ಮುಕ್ತಗೊಳಿಸುವುದಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಮಾಯಾವಿ ಮಿಥ್ಯಾಚಾರಿಯನ್ನು ವೇದಗಳು ಪಾಪದಿಂದ ರಕ್ಷಿಸುವುದಿಲ್ಲ. ರೆಕ್ಕೆಬಂದ ಪಕ್ಷಿಗಳು ಗೂಡನ್ನು ಬಿಟ್ಟು ಹೊರಟುಹೋಗುವಂತೆ ಮರಣಕಾಲದಲ್ಲಿ ವೇದಗಳು ಪಾಪಿಯನ್ನು ತೊರೆದುಬಿಡುತ್ತವೆ.”
ಧೃತರಾಷ್ಟ್ರನು ಹೇಳಿದನು:
“ವಿಚಕ್ಷಣ! ವೇದಗಳೇ ವೇದವಿದನನ್ನು ರಕ್ಷಿಸಲು ಅಶಕ್ತವೆಂದಾದರೆ ಏಕೆ ಬ್ರಾಹ್ಮಣರು ಈ ಸನಾತನ ಪ್ರಲಾಪವನ್ನು ಮಾಡಿಕೊಂಡು ಬಂದಿದ್ದಾರೆ?”
ಸನತ್ಸುಜಾತನು ಹೇಳಿದನು:
“ಈ ಲೋಕದಲ್ಲಿ ತಪಿಸಿದ ತಪಸ್ಸಿನ ಫಲವು ಅನ್ಯತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಬ್ರಾಹ್ಮಣರ ತಪಸ್ಸು ಈ ಲೋಕದಲ್ಲಿಯೇ ವೃದ್ಧಿಯಾಗುತ್ತದೆ.”
ಧೃತರಾಷ್ಟ್ರನು ಹೇಳಿದನು:
“ತಪಸ್ಸು ಹೇಗೆ ಸಮೃದ್ಧ ಅಥವಾ ಕೇವಲವಾಗುತ್ತದೆ? ಸನತ್ಸುಜಾತ! ಅದನ್ನು ನಮಗೆ ತಿಳಿಯುವಂತೆ ಹೇಳು.”
ಸನತ್ಸುಜಾತನು ಹೇಳಿದನು:
“ರಾಜನ್! ಕ್ರೋಧವೇ ಮೊದಲಾದ ಹನ್ನೆರಡು ಹಾಗೂ ಕ್ರೂರತೆ ಮೊದಲಾದ ಆರು ಅದರ ದೋಷಗಳು. ಧರ್ಮ, ದಯೆ ಮೊದಲಾದ ಹನ್ನೆರಡು ಗುಣಗಳು ದ್ವಿಜರದ್ದು ಎಂದು ಶಾಸ್ತ್ರಗಳಲ್ಲಿ ವಿದಿತವಾಗಿವೆ. ಕ್ರೋಧ, ಕಾಮ, ಲೋಭ, ಮೋಹ, ಪ್ರಾಪಂಚಿಕ ವ್ಯವಹಾರಗಳಲ್ಲಿ ಆಸಕ್ತಿ, ನಿಷ್ಠುರತೆ, ಅಸೂಯೆ, ಜಂಭ, ಶೋಕ, ಆಸೆ, ಹೊಟ್ಟೆಕಿಚ್ಚು, ಮತ್ತು ಜುಗುಪ್ಸೆ ಈ ಹನ್ನೆರಡು ಮಾನುಷ ದೋಷಗಳನ್ನು ನರನು ಸದಾ ವರ್ಜಿಸಬೇಕು. ಇವುಗಳಲ್ಲಿ ಒಂದೊಂದೂ ಮನುಷ್ಯನನ್ನು ಪರ್ಯುಪಾಸಿಸಿ ಬೇಟೆಗಾರನು ಸಮಯ ಕಾದು ಎಚ್ಚರತಪ್ಪಿರುವ ಪ್ರಾಣಿಗಳನ್ನು ಬೇಟೆಯಾಡುವಂತೆ ಅಜಾಗರೂಕನಾಗಿರುವವನ ವಿನಾಶಕ್ಕೆ ಕಾರಣವಾಗುತ್ತವೆ. ಆತ್ಮಶ್ಲಾಘನೆ, ದುರಾಸೆ, ಜಂಭದಿಂದ ಇತರರನ್ನು ಅವಮಾನಿಸುವುದು, ಕಾರಣವಿಲ್ಲದೇ ಕೋಪಗೊಳ್ಳುವುದು, ಚಪಲತೆ, ಅರಕ್ಷಣೆ ಈ ಆರು ಧರ್ಮಗಳನ್ನು ಪಾಪಿಷ್ಟ ನರರು ಪಾಲಿಸುತ್ತಾರೆ. ಕಷ್ಟದ ಸಮಯದಲ್ಲಿದ್ದರೂ ಅವರು ಇವುಗಳನ್ನು ಮಾಡಲು ಹೆದರುವುದಿಲ್ಲ. ಸಂಭೋಗದ ಕುರಿತೇ ಯೋಚಿಸುವುದು, ಇನ್ನೊಬ್ಬರಿಗೆ ವಿಷದಂತೆ ಉಪದ್ರವವನ್ನಿತ್ತು ಸಂತೋಷಪಡುವುದು, ದಾನವನ್ನಿತ್ತು ಪಶ್ಚಾತ್ತಾಪಪಡುವುದು, ಕೃಪಣತೆ, ದುರ್ಬಲತೆ, ಇಂದ್ರಿಯಗಣಗಳನ್ನೇ ಪ್ರಶಂಸಿಸುವುದು, ವನಿತೆಯರನ್ನು ದ್ವೇಷಿಸುವುದು - ಇವೇ ಏಳು ಆ ಕ್ರೂರ ಧರ್ಮಗಳು. ಧರ್ಮ, ಸತ್ಯ, ದಮ, ತಪಸ್ಸು, ಅಮಾತ್ಸರ್ಯ, ಅಕೃತ್ಯದ ವಿಷಯದಲ್ಲಿ ನಾಚಿಕೆ ಪಡುವುದು, ಕಾರಣವಿಲ್ಲದೇ ಕೋಪಗೊಳ್ಳದಿರುವುದು, ಅಸೂಯೆಪಡದಿರುವುದು, ಯಜ್ಞ, ದಾನ, ಧೃತಿ, ಅಧ್ಯಯನ ಇವೇ ಬ್ರಾಹ್ಮಣನ ಹನ್ನೆರಡು ಮಹಾವ್ರತಗಳು. ಈ ಹನ್ನೆರಡು ಗುಣಗಳಿಂದಲೂ ಸಂಪನ್ನರಾಗಿರುವವನು ಈ ಪೃಥ್ವಿಯಲ್ಲವನ್ನೂ ಆಳುತ್ತಾನೆ. ಮೂರು, ಅಥವಾ ಎರಡು ಅಥವಾ ಒಂದಾದರೂ ಇದ್ದರೂ ಉಳಿದ ಹನ್ನೆರಡನ್ನೂ ಅವನು ಸಾಧಿಸಿಕೊಳ್ಳಬಹುದು ಎಂದು ತಿಳಿಯಬೇಕು. ದಮ, ತ್ಯಾಗ ಮತ್ತು ಅಪ್ರಮಾದತೆ ಇವುಗಳಲ್ಲಿ ಅಮೃತತ್ವವಿದೆಯೆಂದೂ, ಇವು ಸತ್ಯವನ್ನು ಸಾಧಿಸಲು ಪ್ರಮುಖವಾದವುಗಳೆಂದೂ ತಿಳಿದವರು ಹೇಳುತ್ತಾರೆ. ದಮಕ್ಕೆ ಇರುವ ಹದಿನೆಂಟು ದೋಷಗಳಲ್ಲಿ ಒಂದನ್ನು ಆಚರಿಸಿದರೂ ಅದಕ್ಕೆ ಪ್ರತಿಕೂಲವಾಗುತ್ತದೆ: ಅನೃತ, ಅಸೂಯೆ, ಕಾಮ, ಅರ್ಥ, ಆಸೆ, ಕ್ರೋಧ, ಶೋಕ, ತೃಷ್ಣೆ, ಲೋಭ, ಪೈಶುನ, ಮತ್ಸರ, ಅಂಟಿಕೊಂಡಿರುವುದು, ಪರಿತಾಪ, ರತಿ, ಅಪಸ್ಮಾರ, ಮತ್ತು ಅತಿವಾದ. ಈ ದೋಷಗಳಿಂದ ವಿಮುಕ್ತನಾದವನು ದಮದಿಂದ ಆತ್ಮ ನಿಯಂತ್ರಣ ಮಾಡಿಕೊಂಡಿದ್ದಾನೆ ಎಂದು ಸಾಧುಗಳು ಹೇಳುತ್ತಾರೆ. ಆರು ವಿಧದ ತ್ಯಾಗಗಳು ಶ್ರೇಯಸ್ಕರವಾದವು. ಪ್ರಿಯವಾದುದನ್ನು ಪಡೆದು ಹರ್ಷಗೊಳ್ಳದಿರುವುದು; ಅಪ್ರಿಯವಾದುದು ಬಂದೊದಗಿದಾಗ ವ್ಯಥೆಗೊಳ್ಳದಿರುವುದು; ಅರ್ಹನಾದವನು ಬೇರೆಯಾರನ್ನೂ ಕೇಳದೇ ಪತ್ನಿಯಾಗಲೀ, ಮಗನನ್ನಾಗಲೀ ಕೇಳಿದಾಗ, ಅವನು ಹೇಳಬಾರದುದನ್ನು ಹೇಳಿದರೂ, ಕೊಡುವುದು - ಇದನ್ನು ಮೂರನೆಯ ಶ್ರೇಷ್ಠ ತ್ಯಾಗವೆನ್ನುತ್ತಾರೆ. ವಸ್ತುಗಳನ್ನು ತ್ಯಜಿಸುವುದು, ಆಸೆಯಿಂದ ಅವುಗಳನ್ನು ಬಳಸದೇ ಇರುವುದು, ಕರ್ಮಗಳಲ್ಲಿ ಆಸೆಗಳನ್ನಿಟ್ಟುಕೊಳ್ಳದಿರುವುದು, ಎಲ್ಲ ವಸ್ತುಗಳಿದ್ದೂ, ಶಿಷ್ಯನ ಬುದ್ಧಿಯಂತೆ ಗುಣಯುಕ್ತನಾಗಿರಬೇಕು. ಅಪ್ರಮಾದವನ್ನು ಎಂಟು ದೋಷಗಳು ಕಾಡುತ್ತವೆ. ಆ ದೋಷಗಳನ್ನು ಪರಿತ್ಯಜಿಸಬೇಕು. ಅವು ಐದು ಇಂದ್ರಿಯಗಳು, ಮನಸ್ಸು, ಅತೀತ ಮತ್ತು ಭವಿಷ್ಯ. ಇವುಗಳಿಂದ ಮುಕ್ತನಾದವನು ಸುಖಿಯಾಗುತ್ತಾನೆ. ಈ ದೋಷಗಳಿಂದ ವಿಮುಕ್ತವಾದ ಮತ್ತು ಈ ಗುಣಗಳಿಂದ ಕೂಡಿದ ತಪಸ್ಸು ಮಾತ್ರ ವೃದ್ಧಿಯಾಗುತ್ತದೆ. ನೀನು ಕೇಳಿದ್ದುದಕ್ಕೆ ಉತ್ತರಿಸಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”
ಧೃತರಾಷ್ಟ್ರನು ಹೇಳಿದನು:
“ಕೆಲವು ಜನರು ಐದು ವೇದಗಳನ್ನೂ ಓದಿ ಪಂಚವೇದಿಗಳೆಂದು ಕರೆಯಲ್ಪಡುತ್ತಾರೆ. ಇನ್ನು ಕೆಲವರು ನಾಲ್ಕು ವೇದಗಳನ್ನು, ಮತ್ತೆ ಕೆಲವರು ಮೂರು ವೇದಗಳನ್ನು, ದ್ವಿವೇದಗಳನ್ನು, ಇನ್ನು ಇತರರು ಒಂದೇ ವೇದವನ್ನು, ಮತ್ತು ವೇದವನ್ನು ಕಲಿಯದವರೂ ಇದ್ದಾರೆ. ಇವರಲ್ಲಿ ಯಾರು ಅಧಿಕರು? ಯಾರನ್ನು ಬ್ರಾಹ್ಮಣರೆಂದು ಕರೆಯಬೇಕು?”
ಸನತ್ಸುಜಾತನು ಹೇಳಿದನು:
“ರಾಜೇಂದ್ರ! ಒಂದೇ ವೇದದ ಅಜ್ಞಾನದಿಂದ ಒಂದೇ ಸತ್ಯದ ಬಹಳ ವೇದಗಳುಂಟಾದವು. ಅವುಗಳಲ್ಲಿ ಪ್ರತಿಯೊಂದೂ ಸತ್ಯವನ್ನು ಆಧರಿಸಿವೆ. ಈ ರೀತಿ ವೇದವನ್ನು ದಾಟಿ ಇರುವುದರ ಮಹತ್ತಿನ ಕುರಿತು ಪ್ರಜ್ಞೆಯನ್ನುಂಟುಮಾಡುತ್ತದೆ. ದಾನ, ವೇದಾಧ್ಯಯನ ಮತ್ತು ಯಜ್ಞಗಳನ್ನು ಲೋಭದಿಂದ ಮಾಡಿದರೆ, ಸಂಕಲ್ಪವು ಸತ್ಯದಿಂದ ಕಳಚಿಬಿದ್ದು ಸುಳ್ಳಾಗುತ್ತದೆ. ಆದುದರಿಂದ ಸತ್ಯವನ್ನು ಅವಧರಿಸಿಯೇ ಯಜ್ಞಗಳನ್ನು ಮಾಡಬೇಕು. ಮನಸಾ, ವಾಚಾ ಮತ್ತು ಕರ್ಮಗಳಿಂದ ಸಂಕಲ್ಪಸಿದ್ಧ ಪುರುಷನ ಸಂಕಲ್ಪಗಳೂ ಪೂರೈಸುತ್ತವೆ. ಸಂಕಲ್ಪವನ್ನು ಗೌಪ್ಯವಾಗಿಡದೇ ದೀಕ್ಷೆಯ ವ್ರತವನ್ನಾಚರಿಸಬೇಕು. ಧಾತು ‘ಸತ್ಯ’ದಿಂದಲೇ ಪರಮ ಸಂತರೆಂದು ಬಂದಿದೆ. ಜ್ಞಾನವು ಪ್ರತ್ಯಕ್ಷವಾಗಿದ್ದರೆ ತಪಸ್ಸು ಪರೋಕ್ಷವಾಗಿರುತ್ತದೆ. ಬಹುಪಾಠಿಗಳಂತೆ ಪಠಿಸುವ ಬ್ರಾಹ್ಮಣರನ್ನು ತಿಳಿದಿರಬೇಕು. ಆದುದರಿಂದ ಕೇವಲ ಪಠಿಸುವುದರಿಂದ ಬ್ರಾಹ್ಮಣನಾಗುವುದಿಲ್ಲ. ಯಾರು ಸತ್ಯವನ್ನು ಬಿಟ್ಟು ಹೋಗುವುದಲ್ಲವೋ ಅಂಥವರನ್ನು ನೀನು ಬ್ರಾಹ್ಮಣರೆಂದು ತಿಳಿ. ಹಿಂದೆ ಅಥರ್ವನು ಋಷಿಗಳನ್ನು ಸೃಷ್ಟಿಸುವಾಗ ಹೇಳಿದುದನ್ನು ವೇದಗಳೆಂದು ಹೇಳುತ್ತಾರೆ. ಚಂದಗಳನ್ನು ಅಧ್ಯಯನಮಾಡಿಯೂ ಯಾರು ವೇದವು ಏನನ್ನು ತಿಳಿಸುತ್ತದೆಯೋ ಅದನ್ನು ಅರ್ಥಮಾಡಿಕೊಳ್ಳದವನು ವೇದವಿದುವಲ್ಲ. ವೇದಗಳ ಅಕ್ಷರಗಳನ್ನು ತಿಳಿದವರಿದ್ದಾರೆಯೇ ಹೊರತು, ವೇದಗಳನ್ನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡವರು ಯಾರೂ ಇಲ್ಲ. ಯಾರು ವೇದವೇದ್ಯನನ್ನು ತಿಳಿದಿಲ್ಲವೋ ಅವನು ವೇದವಿದನಲ್ಲ. ಸತ್ಯದಲ್ಲಿ ನೆಲೆಸಿರುವವನು ವೇದವಿದನು. ಇದರ ವಿಚಕ್ಷಣಕ್ಕೆ ಯಾರು ವ್ಯಾಖ್ಯಾನಮಾಡಬಲ್ಲರೋ, ಯಾರು ಇತರರ ಎಲ್ಲ ಸಂಶಯಗಳನ್ನೂ ನಿವಾರಿಸಬಲ್ಲರೋ ಅವರನ್ನು ನಾನು ಬ್ರಾಹ್ಮಣರೆಂದು ತಿಳಿಯುತ್ತೇನೆ. ಅದರ ಅನ್ವೇಷಣೆಗೆ ಪೂರ್ವಕ್ಕಾಗಲೀ ದಕ್ಷಿಣಕ್ಕಾಗಲೀ, ಅಡ್ಡವಾಗಲೀ, ಉದ್ದವಾಗಲೀ, ಎಲ್ಲಿಯೂ ಹೋಗಬೇಕಾಗಿಲ್ಲ. ಮನಸ್ಸನ್ನೂ ಹಂದಾಡಿಸದೇ ಸುಮ್ಮನೆ ಕುಳಿತುಕೊಂಡರೆ ಅಂತರಾತ್ಮದಲ್ಲಿ ವಾಸಿಸಿರುವ ಬ್ರಹ್ಮನು ತಾನಾಗಿಯೇ ಬರುತ್ತಾನೆ. ಮೌನದಿಂದ ಮುನಿಯಾಗುತ್ತಾನೆ; ಅರಣ್ಯದಲ್ಲಿ ವಾಸಿಸುವುದರಿಂದಲ್ಲ. ಯಾರು ಅಕ್ಷರವಾದುದನ್ನು ತಿಳಿದುಕೊಂಡಿರುವನೋ ಅವನನ್ನೇ ಶ್ರೇಷ್ಠ ಮುನಿಯೆಂದು ಹೇಳುತ್ತಾರೆ. ಎಲ್ಲ ಪದ-ಅರ್ಥಗಳನ್ನೂ ಬಿಡಿಸಿ ವಿಂಗಡಿಸಿ ತೋರಿಸುವವನು ವೈಯಾಕರಣಿಯೆನಿಸುವನು. ಲೋಕಗಳು ಪ್ರತ್ಯಕ್ಷವಾಗಿ ಕಾಣುವ ನರನು ಸರ್ವದರ್ಶಿಯಾಗುತ್ತಾನೆ. ಒಂದರ ನಂತರ ಇನ್ನೊಂದು ವೇದಗಳನ್ನು ತಿಳಿದು ಸತ್ಯದಲ್ಲಿ ನೆಲೆಸಿರುವ ಬ್ರಾಹ್ಮಣನು ಬ್ರಹ್ಮನನ್ನು ಕಾಣುತ್ತಾನೆ ಎಂದು ಹೇಳುತ್ತೇನೆ.”
ಬ್ರಹ್ಮಚರ್ಯ ನಿರೂಪಣೆ
ಧೃತರಾಷ್ಟ್ರನು ಹೇಳಿದನು:
“ಸನತ್ಸುಜಾತ! ನೀನು ಸರ್ವೋತ್ತಮವಾದ, ಬ್ರಹ್ಮಸಂಬಂಧಿಯಾದ, ಬಹುರೂಪದ ಮಾತನ್ನಾಡಿದ್ದೀಯೆ. ಕಾಮಗಳಲ್ಲಿ ಈ ವಿಷಯದ ಕುರಿತ ಮಾತುಕಥೆಯು ದುರ್ಲಭ. ಆದುದರಿಂದ ಇದನ್ನು ಇನ್ನೂ ವಿಸ್ತಾರವಾಗಿ ಹೇಳಬೇಕು.”
ಸನತ್ಸುಜಾತನು ಹೇಳಿದನು:
“ಸಂತೋಷದಿಂದ ನೀನು ನನ್ನನ್ನು ಕೇಳುತ್ತಿರುವ ಈ ಬ್ರಹ್ಮವಿದ್ಯೆಯು ಅವಸರ ಮಾಡಿದರೆ ದೊರೆಯುವುದಿಲ್ಲ. ಈ ಪುರಾಣ, ಅವ್ಯಕ್ತ ವಿದ್ಯೆಯನ್ನು ಬ್ರಹ್ಮಚರ್ಯದಿಂದ ಸಿದ್ಧಿಪಡಿಸಿಕೊಳ್ಳಬಹುದು.”
ಧೃತರಾಷ್ಟ್ರನು ಹೇಳಿದನು:
“ಬ್ರಹ್ಮಚರ್ಯದಿಂದ ಸಿದ್ಧಿಯಾಗಬಲ್ಲ ಈ ಸನಾತನ ಅವ್ಯಕ್ತ ವಿದ್ಯೆಯ ಕುರಿತು ನೀನು ಹೇಳು. ಅನಾರಭ್ಯವಾದ ಆರ್ಯಕಾಲದಲ್ಲಿ ನೆಲಸಿರುವ ಬ್ರಾಹ್ಮಣ್ಯದ ಅಮೃತತ್ವವನ್ನು ಹೇಗೆ ಪಡೆಯಬಹುದು?”
ಸನತ್ಸುಜಾತನು ಹೇಳಿದನು:
“ಯಾರು ಈ ಲೋಕದಲ್ಲಿಯೇ ಇದ್ದುಕೊಂಡು ಕಾಮಗಳನ್ನೂ ಜಯಿಸಿ ಬಾಹ್ಮೀ ಸ್ಥಿತಿಯನ್ನು ಅಪೇಕ್ಷಿಸುತ್ತಾ ಇರುವರೋ ಅವರು ಮುಂಜದ ಹುಲ್ಲಿನಿಂದ ಅದರ ಒಳಗಿರುವ ಮೃದುವಾದ ಕಾಂಡವನ್ನು ಬೇರ್ಪಡಿಸುವಂತೆ, ಆತ್ಮವನ್ನು ದೇಹದಿಂದ ಪ್ರತ್ಯೇಕಿಸುತ್ತಿರುತ್ತಾರೆ. ತಂದೆ-ತಾಯಿಯರು ಈ ಶರೀರವನ್ನು ಮಾತ್ರ ಮಾಡುತ್ತಾರೆ. ಆದರೆ ಆಚಾರ್ಯನ ಉಪದೇಶದಿಂದ ಯಾವುದು ಹುಟ್ಟುತ್ತದೆಯೋ ಅದು ಸತ್ಯವೂ ಅಜರಾಮರವೂ (ಹುಟ್ಟು-ಸಾವಿಲ್ಲದೂ) ಆದುದು. ಯಾರು ಆಚಾರ್ಯಯೋನಿಯನ್ನು ಪ್ರವೇಶಿಸಿ ಗರ್ಭವಾಗಿ ಬ್ರಹ್ಮಚರ್ಯವನ್ನು ಆಚರಿಸಿಸುತ್ತಾರೋ ಅವರು ಇಲ್ಲಿಯೇ ಶಾಸ್ತ್ರಕಾರರಾಗುತ್ತಾರೆ. ದೇಹವನ್ನು ತೊರೆದು ಪರಮ ಯೋಗವನ್ನು ಹೊಂದುತ್ತಾರೆ. ಯಾರು ಸುಳ್ಳನ್ನು ಸತ್ಯದಿಂದ ಆವೃತಗೊಳಿಸುತ್ತಾನೋ, ಎಲ್ಲವಕ್ಕೂ ಅಮೃತತ್ವವನ್ನು ನೀಡುತ್ತಾನೋ ಅಂಥವನನ್ನು ತಂದೆ-ತಾಯಿಯೆಂದು ಮನ್ನಿಸಬೇಕು. ಅವನಿಗೆ ಮನಸ್ಸಿನಲ್ಲಿಯೂ ದ್ರೋಹವನ್ನೆಸಗಬಾರದು. ಶಿಷ್ಯನು ಗುರುವಿಗೆ ನಿತ್ಯವೂ ಅಭಿವಂದಿಸಬೇಕು. ಶುಚಿಯಾಗಿದ್ದುಕೊಂಡು, ಅಪ್ರಮತ್ತನಾಗಿ, ಸ್ವಾಧ್ಯಾಯದಲ್ಲಿ ನಿರತನಾಗಿರಬೇಕು. ಅಭಿಮಾನ ಪಡಬಾರದು. ರೋಷಗೊಳ್ಳಬಾರದು. ಇವು ಬ್ರಹ್ಮಚರ್ಯದ ಮೊದಲನೆಯ ಪಾದದ ನಿಯಮಗಳು. ಪ್ರಾಣದ ಮೂಲಕವಾದರೂ ಅಥವಾ ಧನದ ಮೂಲಕವಾದರೂ, ಕರ್ಮ, ಮನಸ್ಸು, ಮಾತುಗಳಲ್ಲಿ ಆಚಾರ್ಯನಿಗೆ ಪ್ರಿಯವಾದುದನ್ನು ಮಾಡಬೇಕು. ಇದನ್ನು ಎರಡನೆಯ ಪಾದವೆಂದು ಹೇಳುತ್ತಾರೆ. ಗುರುವಿನೊಂದಿಗೆ ಯಾವ ರೀತಿಯ ವರ್ತನೆಯಿರುತ್ತದೆಯೋ ಅದಕ್ಕೆ ಸಮನಾದುದು ಗುರುಪತ್ನಿಯಲ್ಲಿಯೂ ಇರಬೇಕು. ಪ್ರಿಯಕೃತ್ಯವನ್ನು ಮಾಡಬೇಕು ಎನ್ನುವುದನ್ನು ಮೂರನೆಯ ಪಾದವೆಂದು ಹೇಳುತ್ತಾರೆ. ಆಚಾರ್ಯನಿಗೆ ವರದಿಮಾಡುವಾಗ ಪ್ರಾಜ್ಞನು ನಾನು ಇದನ್ನು ಮಾಡಲಿಲ್ಲ ಎಂದು ಹೇಳಬಾರದು. ಹಾಗೆ ತಿಳಿದುಕೊಂಡರೂ ಹೇಳಬಾರದು. ಇದೇ ಬ್ರಹ್ಮಚರ್ಯದ ನಾಲ್ಕನೆಯ ಪಾದ. ಹೀಗೆ ವಾಸಿಸುವಾಗ ಏನನ್ನು ಗಳಿಸುತ್ತಾನೋ ಆ ಧನವನ್ನು ಆಚಾರ್ಯನಿಗೆ ಕೊಡಬೇಕು. ಇದರಿಂದ ಸಂತರ ಸಂಪತ್ತು ಇಮ್ಮಡಿಯಾಗಿ ಬೆಳೆಯುತ್ತದೆ. ಹೀಗೆಯೇ ಗುರುಪುತ್ರನಲ್ಲಿಯೂ ನಡೆದುಕೊಳ್ಳಬೇಕು. ಹೀಗೆ ವಾಸಿಸುವಾಗ ಅವನ ಎಲ್ಲವೂ ವೃದ್ಧಿಯಾಗುತ್ತದೆ: ಬಹಳ ಪುತ್ರರೂ ಪ್ರತಿಷ್ಠೆಯೂ ದೊರೆಯುತ್ತದೆ. ಎಲ್ಲ ದಿಕ್ಕುಗಳಿಂದಲೂ ಮಳೆಯು ಸುರಿಯುತ್ತದೆ. ಬಹಳ ಜನರು ಅವನಲ್ಲಿ ಬ್ರಹ್ಮಚರ್ಯದಲ್ಲಿ ವಾಸಿಸುತ್ತಾರೆ. ಈ ರೀತಿಯ ಬ್ರಹ್ಮಚರ್ಯದಿಂದ ದೇವತೆಗಳು ದೇವತ್ವವನ್ನು, ಮಹಾಭಾಗ ಮನೀಷೀ ಋಷಿಗಳು ಬ್ರಹ್ಮಲೋಕವನ್ನು, ಗಂಧರ್ವ-ಅಪ್ಸರೆಯರು ತಮ್ಮ ರೂಪವನ್ನು ಪಡೆದರು. ಇದೇ ಬ್ರಹ್ಮಚರ್ಯದಿಂದ ಸೂರ್ಯನು ದಿನದಲ್ಲಿ ಹುಟ್ಟುತ್ತಾನೆ. ಯಾರು ತಪಸ್ಸನ್ನು ತಪಿಸಿ ಶರೀರವೆಲ್ಲವನ್ನೂ ಮಲಗಿಸಿ ಹೊಡೆಯುತ್ತಾನೋ ಅವನು ಬಾಲ್ಯವನ್ನು ಮೀರಿ ವಿದ್ವಾಂಸನಾಗುತ್ತಾನೆ ಮತ್ತು ಕೊನೆಯಲ್ಲಿ ಮೃತ್ಯುವನ್ನೂ ಜಯಿಸುತ್ತಾನೆ. ಜನರು ಕರ್ಮದಿಂದ ಗೆಲ್ಲುವ ಲೋಕಗಳು ನಿರ್ಮಾಣದಲ್ಲಿ ಕೊನೆಯುಳ್ಳವುಗಳು. ಬ್ರಹ್ಮವನ್ನು ತಿಳಿದುಕೊಳ್ಳುವುದರಿಂದ ವಿದ್ವಾಂಸನು ಬ್ರಹ್ಮವೆಲ್ಲವನ್ನೂ ಪಡೆಯುತ್ತಾನೆ. ಅದಕ್ಕೆ ಬೇರೆ ಯಾವ ಮಾರ್ಗವೂ ತಿಳಿದಿಲ್ಲ.”
ಧೃತರಾಷ್ಟ್ರನು ಹೇಳಿದನು:
“ಈ ವಿದ್ವಾಂಸ ಬ್ರಾಹ್ಮಣನು ಕಾಣುವ ಆ ಅಮೃತ, ಅಕ್ಷರವು ಎಲ್ಲಿರುತ್ತದೆ ಮತ್ತು ಯಾವರೂಪದ್ದು? ಬೆಳ್ಳಗಿರುವುದೋ? ಕೆಂಪಾಗಿರುವುದೋ? ಅಥವಾ ಅಂಜನದಂತೆ ಕಪ್ಪಾಗಿರುವುದೋ? ಅಥವಾ ಬೂದುಬಣ್ಣದ್ದಾಗಿರುವುದೋ?”
ಸನತ್ಸುಜಾತನು ಹೇಳಿದನು:
“ಅದು ಬಿಳಿಯಾಗಿಯೂ, ಕೆಂಪಾಗಿಯೂ, ಕಪ್ಪಾಗಿಯೂ, ಬೂದುಬಣ್ಣದ್ದಾಗಿಯೂ, ಸೂರ್ಯನ ಬೆಳಕಿನಂತೆಯೂ ಹೊಳೆಯುವುದಿಲ್ಲ. ಅದು ಭೂಮಿಯ ಮೇಲಿಲ್ಲ, ಅಂತರಿಕ್ಷದಲ್ಲಿಲ್ಲ. ಸಮುದ್ರದ ನೀರೂ ಕೂಡ ಅದನ್ನು ಹೊತ್ತಿರುವುದಿಲ್ಲ. ಅದು ನಕ್ಷತ್ರಗಳಲ್ಲಿಲ್ಲ; ವಿದ್ಯುತ್ತಿನಲ್ಲಿರುವುದಿಲ್ಲ, ಮತ್ತು ಅದರ ರೂಪವು ಮೋಡಗಳಲ್ಲಿ ಕಾಣಿಸುವುದಿಲ್ಲ. ಅದು ಗಾಳಿಯಲ್ಲಿಲ್ಲ, ದೇವತೆಗಳಲ್ಲಿಯೂ ಇಲ್ಲ. ಅದು ಸೂರ್ಯನಲ್ಲಿಯೂ, ಚಂದ್ರನಲ್ಲಿಯೂ ಕಾಣಿಸುವುದಿಲ್ಲ. ಅದು ಋಕ್ಕಿನಲ್ಲಿ ದೊರೆಯುವುದಿಲ್ಲ, ಯಜುರ್ವೇದದಲ್ಲಿಲ್ಲ, ಅಥರ್ವದಲ್ಲಿಯೂ ಇಲ್ಲ ಮತ್ತು ಅಮಲ ಸಾಮದಲ್ಲಿಯೂ, ರಥಂತರ-ಬಾರ್ಹತಗಳಲ್ಲಿಯೂ ಕಾಣುವುದಿಲ್ಲ. ಮತ್ತು ಮಹಾವ್ರತದಲ್ಲಿಯೂ ಅದು ಕಾಣುವುದಿಲ್ಲವೆನ್ನುವುದು ಸತ್ಯ. ಕತ್ತಲೆಗಿಂತಲೂ ಆಚೆ ಅದಕ್ಕೆ ಹೋಗಲಿಕ್ಕಿಲ್ಲ. ವಿನಾಶಕಾಲದಲ್ಲಿ ಅಂತಕನೂ ಅದರಲ್ಲಿ ಸಾಯುತ್ತಾನೆ. ಅದು ಕತ್ತಿಯ ಅಲುಗಿಗಿಂತ ತೀಕ್ಷ್ಣವಾದುದು ಆದರೆ ಪರ್ವತದಂತೆ ಅತಿ ದೊಡ್ಡ ರೂಪವುಳ್ಳದ್ದು. ಆ ಅಮೃತವಾದುದು ಲೋಕ ಮತ್ತು ಬ್ರಹ್ಮನ ಅಧಾರ. ಅದರಿಂದ ಇರುವವು ಹುಟ್ಟುತ್ತವೆ ಮತ್ತು ಅದರಲ್ಲಿಯೇ ಪ್ರಲಯವಾಗಿ ಹೋಗುತ್ತವೆ. ಅನಾಮಯ, ಉಲ್ಭಣಗೊಳ್ಳುವ ಆ ಮಹಾ ಯಶಸ್ಸು ಮಾತಿನ ವಿಕಾರವೆಂದು ಕವಿಗಳು ಹೇಳುತ್ತಾರೆ. ಅದರಿಂದಲೇ ಈ ಜಗತ್ತೆಲ್ಲವೂ ನಿಂತಿದೆ. ಅದನ್ನು ತಿಳಿದುಕೊಂಡವರು ಮೃತ್ಯುವನ್ನು ಜಯಿಸಿದವರಾಗುತ್ತಾರೆ.”
ಬ್ರಹ್ಮವಸ್ತು ನಿರೂಪಣೆ
ಸನತ್ಸುಜಾತನು ಹೇಳಿದನು:
“ಯಾವ ವೀರ್ಯ, ಬೆಳಗುತ್ತಿರುವ ಮಹಾಜ್ಯೋತಿ, ಮಹಾ ಯಶಸ್ಸಿನಿಂದ ಸೂರ್ಯನು ವಿರಾಜಿಸುತ್ತಾನೋ ಅದನ್ನೇ ದೇವತೆಗಳು ಉಪಾಸಿಸುತ್ತಾರೆ. ಯೋಗಿಗಳು ಅದನ್ನು ಭಗವಂತ, ಸನಾತನನೆಂದು ಕಾಣುತ್ತಾರೆ. ಈ ವೀರ್ಯದಿಂದ ಬ್ರಹ್ಮನು ಹುಟ್ಟುತ್ತಾನೆ, ಈ ವೀರ್ಯದಿಂದಲೇ ಬ್ರಹ್ಮನು ವರ್ಧಿಸುತ್ತಾನೆ. ಆ ಶುಕ್ರ ಜ್ಯೋತಿಯೇ ತಾಪಸಿಗಳ ತಪಸ್ಸಿನ ಮಧ್ಯದಲ್ಲಿ ಉರಿಯುತ್ತದೆ. ಯೋಗಿಗಳು ಅದನ್ನು ಭಗವಂತ, ಸನಾತನನೆಂದು ಕಾಣುತ್ತಾರೆ. ಸಾಗರದಲ್ಲಿರುವ ನೀರಿನಲ್ಲಿ ನೀರಾಗಿರುವ ಮತ್ತು ಅಂತರಿಕ್ಷದಲ್ಲಿರುವ ಇಬ್ಬರು ದೇವತೆಗಳು ದಿಕ್ಕುಗಳನ್ನೂ ಉಪದಿಕ್ಕುಗಳನ್ನೂ ಆವರಿಸಿ ಇಬ್ಬರೂ ಭೂಮಿ-ಆಕಾಶಗಳನ್ನು ಹಿಡಿದಿಡುತ್ತಾರೆ. ಅದನ್ನು ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಇಬ್ಬರು ದೇವತೆಗಳೂ ಭೂಮಿ-ಆಕಾಶಗಳನ್ನು, ದಿಕ್ಕುಗಳನ್ನೂ, ಶುಕ್ರನನ್ನೂ, ಭುವನವನ್ನೂ ಹೊರುತ್ತಾರೆ. ಅದರಿಂದ ದಿಕ್ಕುಗಳೂ ನದಿಗಳೂ ಹರಿಯುತ್ತವೆ. ಅದರಲ್ಲಿಯೇ ಮಹಾಂತ ಸಮುದ್ರಗಳು ಹುಟ್ಟುತ್ತವೆ. ಅದನ್ನು ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಅವ್ಯಯವಾಗಿ ದೃಢವಾಗಿ ಚಲಿಸುತ್ತಿರುವ ಧ್ವಜವನ್ನು ಹೊಂದಿದ ರಥದ ಚಕ್ರಗಳಲ್ಲಿದ್ದುಕೊಂಡು, ದಿವಿಯಲ್ಲಿ ಅಶ್ವಗಳಾಗಿ ಹಾರಿಸಿಕೊಂಡು ಹೋಗುವ ಆ ದಿವ್ಯ ಅಜರವನ್ನು ಯೋಗಿಗಳು ಸನಾತನ ಭಗವಂತನೆಂದು ಕಾಣತ್ತಾರೆ. ಅವನ ರೂಪಕ್ಕೆ ಸಮನಾದುದು ಯಾವುದೂ ಇಲ್ಲ. ಯಾರೂ ಕಣ್ಣುಗಳಿಂದ ಅವನನ್ನು ಕಾಣಲಾರರು. ಆದರೆ ಮನಸ್ಸು ಮತ್ತು ಹೃದಯಗಳಿಂದ ಅವನನ್ನು ಅರ್ಥಮಾಡಿಕೊಂಡ ಮನೀಷಿಗಳು ಅಮೃತರಾಗುತ್ತಾರೆ. ದೇವರಕ್ಷಿತವಾದ ಮಧುವಿನಂತಿರುವ ಹನ್ನೆರಡು ಗುಂಪುಗಳ ನದಿಯಲ್ಲಿ ಈಶನು ಘೋರ ಪ್ರಯಾಣವನ್ನು ಮಾಡುತ್ತಾನೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಭ್ರಮರವು ಮಧುವನ್ನು ಕೂಡಿಟ್ಟುಕೊಂಡು ಅರ್ಧತಿಂಗಳಿಗೊಮ್ಮೆ ಕುಡಿಯುತ್ತವೆ. ಈಶ್ವರನು ಸರ್ವಭೂತಗಳಲ್ಲಿ ಇದನ್ನು ಹವಿಸ್ಸನ್ನಾಗಿ ಕಲ್ಪಿಸಿದ್ದಾನೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ರೆಕ್ಕೆಗಳಿಲ್ಲದ ಪಕ್ಷಿಗಳಾಗಿ ಬಂಗಾರದ ಬಣ್ಣದ ಎಲೆಗಳುಳ್ಳ ಅಶ್ವತ್ಥವೃಕ್ಷದ ಮೇಲೆ ಬಂದು ಕುಳಿತುಕೊಂಡು, ರೆಕ್ಕೆಗಳನ್ನು ಪಡೆದು ಬೇರೆ ಬೇರೆ ದಿಕ್ಕುಗಳಿಗೆ ಹಾರಿ ಹೋಗುತ್ತವೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಪೂರ್ಣದಿಂದ ಪೂರ್ಣವನ್ನು ತೆಗೆಯುತ್ತಾರೆ; ಪೂರ್ಣದಿಂದ ಪೂರ್ಣವನ್ನು ಮಾಡುತ್ತಾರೆ. ಪೂರ್ಣದಿಂದ ಪೂರ್ಣವನ್ನು ಕಳೆದರೂ ಪೂರ್ಣವೇ ಉಳಿದುಕೊಳ್ಳುತ್ತದೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಅದರಿಂದ ವಾಯುವು ಹುಟ್ಟಿ ಅದರಲ್ಲಿಯೇ ಲಯಹೊಂದುತ್ತಾನೆ. ಅದರಿಂದಲೇ ಅಗ್ನಿ, ಸೋಮಗಳು. ಅದರಿಂದಲೇ ಪ್ರಾಣವೂ ಆವರಿಸಿದೆ. ಅದರಿಂದ ಎಲ್ಲವನ್ನೂ ತಿಳಿದುಕೊಳ್ಳಬಹುದು. ಆದರೆ ಅದನ್ನು ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಅದನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಪ್ರಾಣವು ಅಪಾನವನ್ನು ನುಂಗುತ್ತದೆ. ಚಂದ್ರಮನು ಪ್ರಾಣವನ್ನು ನುಂಗುತ್ತಾನೆ. ಆದಿತ್ಯನು ಚಂದ್ರನನ್ನು ನುಂಗುತ್ತಾನೆ. ಪರಮಾತ್ಮನು ಸೂರ್ಯನನ್ನು ನುಂಗುತ್ತಾನೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ನೀರನ್ನು ಬಿಟ್ಟು ಹಾರುವಾಗ ಹಂಸವು ಒಂದು ಕಾಲನ್ನು ಎತ್ತುವುದಿಲ್ಲ. ಆ ಕಾಲನ್ನೂ ಅದು ಎತ್ತಿದರೆ ಅಲ್ಲಿ ಮೃತ್ಯುವೂ ಇರುವುದಿಲ್ಲ, ಅಮೃತತ್ವವೂ ಇರುವುದಿಲ್ಲ. ಅದನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಹೀಗೆ ಮಹಾತ್ಮ ದೇವ ಪುರುಷನು ಬೆಂಕಿಯನ್ನು ನುಂಗುತ್ತಾನೆ. ಯಾರು ಆ ಪುರುಷನನ್ನು ತಿಳಿದುಕೊಳ್ಳುತ್ತಾರೋ ಅವರ ಆತ್ಮವು ವಿನಾಶವಾಗುವುದಿಲ್ಲ. ಅದನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಸಾವಿರ ಸಾವಿರ ರೆಕ್ಕೆಗಳನ್ನು ಬಿಚ್ಚಿ ಹಾರಿ, ಮಧ್ಯದ ಕೇಂದ್ರಕ್ಕೆ ಹೋಗುವಾಗ ಅವನು ಮನೋವೇಗದಲ್ಲಿರುತ್ತಾನೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಅವನ ರೂಪವು ದೃಷ್ಟಿಗೆ ಸಿಲುಕಲಾರದ್ದು. ಕೇವಲ ವಿಶುದ್ಧ ಸತ್ತ್ವರು ಅವನನ್ನು ಕಾಣುತ್ತಾರೆ. ಹಿತಾಕಾಂಕ್ಷಿ ಮನೀಷಿಗಳು ಅವನನ್ನು ಮನಸ್ಸಿನಿಂದ ನೋಡುತ್ತಾರೆ. ಅವನಿಗೆ ಶರಣುಹೋದವರು ಅಮೃತತ್ವರಾಗಿದ್ದಾರೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಬಿಲಗಳಲ್ಲಿರುವ ಸರ್ಪದಂತೆ ಮನುಷ್ಯರು ಕಲಿಯುವ ನೆಪದಲ್ಲಿ ಅಥವಾ ಉತ್ತಮ ನಡತೆಯ ನೆಪದಲ್ಲಿ ಅವನನ್ನು ಮುಚ್ಚಿಡುತ್ತಾರೆ. ವಿಮೂಢ ಜನರು ಅದರಿಂದ ಮೋಸಹೋಗುತ್ತಾರೆ ಮತ್ತು ಭಯವನ್ನು ನೀಡುವ ಮಾರ್ಗವನ್ನು ಬಯಸುತ್ತಾರೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಸದಾ ಇರುವುದಕ್ಕೆ ಮೃತ್ಯು ಮತ್ತು ಅಮೃತ್ಯುವು ಎಲ್ಲಿಂದ? ಸತ್ಯ-ಅಸತ್ಯಗಳೆರಡೂ ಸತ್ಯದ ಸಮಾನಬಂಧುಗಳು. ಇರುವ ಮತ್ತು ಇಲ್ಲದಿರುವ ಎಲ್ಲದರ ಮೂಲವೂ ಒಂದೇ. ಅದನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಮನುಷ್ಯನು ಸಾಧುವಾಗಿರಲಿ ಅಥವಾ ಅಸಾಧುವಾಗಿರಲಿ, ಅವನಲ್ಲಿರುವುದು ಒಂದೇ ಆಗಿ ಕಾಣುವುದು. ಅದು ಅಮೃತದ ಸಮಾನವಾದುದು ಎಂದು ತಿಳಿ.
ಈ ರೀತಿ ಯುಕ್ತನಾಗಿ ಅವನು ಮಧುವನ್ನು ಸವಿಯಲಿ. ಅದನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಅಪವಾದಗಳು ಅವನ ಹೃದಯವನ್ನು ಸುಡುವುದಿಲ್ಲ. ಕಲಿತಿಲ್ಲದ ಪಾಠವೂ, ಆಹುತಿಯನ್ನು ನೀಡದ ಅಗ್ನಿಹೋತ್ರವೂ ಅವನನ್ನು ಕಾಡುವುದಿಲ್ಲ. ಮನಸ್ಸು ಬ್ರಾಹ್ಮೀ ಎಂಬ ಲಘುತ್ವವನ್ನು ಪಡೆಯಬೇಕು. ಪ್ರಜ್ಞಾವಂತರು ಅವನ ಮನಸ್ಸನ್ನು ತಿಳಿದುಕೊಳ್ಳುತ್ತಾರೆ. ಅವನನ್ನೇ ಯೋಗಿಗಳು ಸನಾತನ ಭಗವಂತನೆಂದು ಕಾಣುತ್ತಾರೆ. ಈ ರೀತಿಯಾಗಿ ಯಾರು, ಅವರವರ ಕೆಲಸಗಳಲ್ಲಿ ನಿರತರಾದ ಸರ್ವಭೂತಗಳಲ್ಲಿ ತನ್ನನ್ನೇ ನೋಡುತ್ತಾನೋ, ಅವನಿಗೆ ಇನ್ನೂ ಹೆಚ್ಚಿನ ಚಿಂತೆಯಾದರೂ ಏಕೆ? ನೀರು ತುಂಬಿ ಹರಿಯುತ್ತಿರುವ ದೊಡ್ಡ ಬಾವಿಯು ಎಷ್ಟು ಪ್ರಯೋಜನಕಾರಿಯೋ ಹಾಗೆ ಎಲ್ಲ ವೇದಗಳಲ್ಲಿಯೂ ಬ್ರಾಹ್ಮಣನಿಗೆ ತಿಳಿದುಕೊಳ್ಳಲು ಸಾಕಷ್ಟಿವೆ. ಅಂಗುಷ್ಠಮಾತ್ರವಾಗಿರುವ ಮಹಾತ್ಮ ಪುರುಷನು ಹೃದಯದಲ್ಲಿ ಎಲ್ಲಿರುವನೆಂದು ಕಾಣುವುದಿಲ್ಲ. ಹುಟ್ಟಿಲ್ಲದ ಅವನು ದಿನರಾತ್ರಿ ಆಯಾಸವಿಲ್ಲದೇ ಸಂಚರಿಸುತ್ತಿರುತ್ತಾನೆ. ಕವಿಗಳು ಅವನನ್ನು ತಿಳಿದು ಪ್ರಸನ್ನರಾಗಿರುತ್ತಾರೆ. ನಾನು ನಾನೇ. ನಾನೇ ತಾಯಿ. ನಾನೇ ತಂದೆ. ನಾನೇ ಪುನಃ ಪುತ್ರನಾಗುತ್ತೇನೆ. ಇರುವ ಮತ್ತು ಇಲ್ಲದಿರುವ ಎಲ್ಲದರ ಆತ್ಮವೂ ನಾನೇ. ನಾನು ಸ್ಥವಿರ ಪಿತಾಮಹ, ಪಿತ ಮತ್ತು ಪುತ್ರನೂ ಕೂಡ. ನೀನು ನನ್ನ ಆತ್ಮದಲ್ಲಿ ನೆಲೆಸಿದ್ದೀಯೆ. ಆದರೆ ನೀನು ನನ್ನದಲ್ಲ. ನಾನು ನಿನ್ನದಲ್ಲ. ನನ್ನ ಆತ್ಮವೇ ಸ್ಥಾನ. ನನ್ನ ಆತ್ಮವೇ ಜನ್ಮ. ವೇದವು ಹೇಳಿರುವ ಮುಪ್ಪಿಲ್ಲದ ತಳಪಾಯವೇ ನಾನು. ಅಣುವಿಗಿಂತಲೂ ಸೂಕ್ಷ್ಮವಾಗಿರುವ, ಸುಮನಸ್ಕನಾದ ನಾನು ಸರ್ವಭೂತಗಳಲ್ಲಿ ಜಾಗೃತನಾಗಿರುತ್ತೇನೆ. ಸರ್ವಭೂತಗಳ ಪುಷ್ಕರದಲ್ಲಿರುವ ತಂದೆಯನ್ನು ಅವರು ತಿಳಿದಿರುತ್ತಾರೆ.”
ಹೀಗೆ ಸನತ್ಸುಜಾತ ಮತ್ತು ಧೀಮತ ವಿದುರನೊಂದಿಗೆ ರಾಜನು ಮಾತುಕಥೆಯನ್ನಾಡುತ್ತಿರಲು, ರಾತ್ರಿಯು ಕಳೆಯಿತು.
The other spiritual discourses in Mahabharata (Kannada):
- ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
- ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
- ಯುಧಿಷ್ಠಿರ-ಮಾರ್ಕಂಡೇಯ ಸಂವಾದ
- ಸರಸ್ವತೀಗೀತೆ
- ಕೌಶಿಕ-ಪತಿವ್ರತೆ-ಧರ್ಮವ್ಯಾಧ
- ವಿದುರನೀತಿ
- ಸನತ್ಸುಜಾತಿಯ
- ಭೌಮಗುಣಕಥನ
- ಶ್ರೀಮದ್ಭಗವದ್ಗೀತಾ
- ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
- ಪಿತಾಪುತ್ರ ಸಂವಾದ
- ಶಮ್ಯಾಕಗೀತೆ
- ಮಂಕಿಗೀತೆ
- ಭೃಗು-ಭರದ್ವಾಜ ಸಂವಾದ
- ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ