ಉತ್ತರ ಗೋಗ್ರಹಣ - ೨
ಮತ್ಸ್ಯರಾಜನು ಆ ತನ್ನ ಹಸುಗಳನ್ನು ಬಿಡಿಸಿಕೊಳ್ಳುವುದಕ್ಕಾಗಿ ತ್ರಿಗರ್ತರಾಜನೆಡೆಗೆ ಹೋಗಿರಲು, ಇತ್ತ ದುರ್ಯೋಧನನು ಮಂತ್ರಿಗಳೊಡನೆ ವಿರಾಟನ ಮೇಲೆ ಧಾಳಿಮಾಡಿದನು. ಭೀಷ್ಮ, ದ್ರೋಣ, ಕರ್ಣ, ಶ್ರೇಷ್ಠ ಅಸ್ತ್ರಗಳನ್ನು ಬಲ್ಲ ಕೃಪ, ಅಶ್ವತ್ಥಾಮ, ಸೌಬಲ, ದುಃಶಾಸನ, ವಿವಿಂಶತಿ, ವಿಕರ್ಣ, ಚಿತ್ರಸೇನ, ದುರ್ಮುಖ, ದುಃಸಹ, ಮತ್ತು ಇತರ ಮಹಾರಥರು ಇವರೆಲ್ಲರೂ ಮತ್ಸ್ಯದ ಮೇಲೆ ಎರಗಿ, ವಿರಾಟರಾಜನ ತುರುಹಟ್ಟಿಗಳನ್ನು ತ್ವರಿತವಾಗಿ ಆಕ್ರಮಿಸಿ, ಗೋಧನವನ್ನು ಬಲಾತ್ಕಾರವಾಗಿ ವಶಪಡಿಸಿಕೊಂಡರು. ಆ ಕುರುಗಳು ದೊಡ್ದ ರಥಸಮೂಹದೊಡನೆ ಸುತ್ತಲೂ ಮುತ್ತಿ ಅರವತ್ತು ಸಾವಿರ ಗೋವುಗಳನ್ನು ಹಿಡಿದುಕೊಂಡರು. ಭಯಂಕರ ಹೊಡೆದಾಟದಲ್ಲಿ ಆ ಮಹಾರಥರಿಂದ ಪೆಟ್ಟು ತಿಂದ ಗೋಪಾಲರ ಬೊಬ್ಬೆಯು ತುರುಹಟ್ಟಿಗಳಲ್ಲಿ ಜೋರಾಯಿತು. ಆಗ ಹೆದರಿದ ಗೋಮುಖ್ಯಸ್ಥನಾದರೋ ಬೇಗ ರಥವನ್ನೇರಿ, ಆರ್ತನಂತೆ ಹುಯ್ಯಲಿಡುತ್ತಾ ನಗರಕ್ಕೆ ಹೋದನು. ಅವನು ರಾಜನ ಪುರವನ್ನು ಹೊಕ್ಕು, ಅರಮನೆಗೆ ಹೋಗಿ, ಬಳಿಕ ರಥದಿಂದ ಬೇಗ ಇಳಿದು, ನಡೆದುದೆಲ್ಲವನ್ನೂ ಹೇಳಲು ಒಳಹೊಕ್ಕನು.
ಭೂಮಿಂಜಯನೆಂಬ ಹೆಸರಿನ ಮತ್ಸ್ಯರಾಜನ ಮಾನವಂತ ಮಗನನ್ನು ಕಂಡು ಅವನಿಗೆ ನಾಡಿನ ಗೋವುಗಳ ಸೂರೆಯ ಕುರಿತು ಎಲ್ಲವನ್ನೂ ತಿಳಿಸಿದನು: “ಕುರುಗಳು ನಿನ್ನ ಅರವತ್ತು ಸಾವಿರ ಗೋವುಗಳನ್ನು ಹಿಡಿದೊಯ್ಯುತ್ತಿದ್ದಾರೆ. ರಾಷ್ಟ್ರವರ್ಧಕ ಆ ಗೋಧನವನ್ನು ಗೆದ್ದು ತರಲು ಎದ್ದೇಳು! ರಾಜ್ಯದ ಹಿತಾಕಾಂಕ್ಷಿಯಾಗಿ ನೀನು ಸ್ವತಃ ಬೇಗ ಹೊರಡು. ದೊರೆ ಮತ್ಸ್ಯನು ನಿನ್ನನ್ನಿಲ್ಲಿ ಶೂನ್ಯನಗರಕ್ಕೆ ರಕ್ಷಕನನ್ನಾಗಿ ಮಾಡಿದ್ದಾನೆ. ಆ ರಾಜನು ಸಭೆಯ ನಡುವೆ “ನನ್ನ ಮಗನು ನನಗೆ ಅನುರೂಪನಾದವನು. ಶೂರ, ಕುಲೋದ್ಧಾರಕ, ಬಾಣಗಳಲ್ಲಿಯೂ ಅಸ್ತ್ರಗಳಲ್ಲಿಯೂ ನಿಪುಣನಾದ ಯೋಧ. ನನ್ನ ಮಗ ಯಾವಾಗಲೂ ವೀರ” ಎಂದು ನಿನ್ನನ್ನು ಹೊಗಳುತ್ತಿರುತ್ತಾನೆ. ದೊರೆಯ ಆ ಮಾತು ಸತ್ಯವೇ ಆಗಲಿ. ಕುರುಗಳನ್ನು ಗೆದ್ದು ಗೋವುಗಳನ್ನು ಮರಳಿಸು. ನಿನ್ನ ಭಯಂಕರ ಶರತೇಜಸ್ಸಿನಿಂದ ಅವರ ಸೈನ್ಯವನ್ನು ಸುಟ್ಟುಹಾಕು! ಬಿಲ್ಲಿನಿಂದ ಬಿಟ್ಟ, ಚಿನ್ನದ ಗರಿಯುಳ್ಳ, ಗೆಣ್ಣನ್ನು ನೇರ ಮಾಡಿದ ಬಾಣಗಳಿಂದ ಶತ್ರುಸೈನ್ಯಗಳನ್ನು ಗಜೇಂದ್ರನಂತೆ ಭೇದಿಸು. ಎರಡು ತುಡಿಗಟ್ಟುಗಳೇ ಉಪಧಾನವಾಗಿರುವ, ಹೆದೆಯೆಂಬ ತಂತಿಯನ್ನೂ, ಚಾಪವೆಂಬ ದಂಡವನ್ನೂ, ಬಾಣಗಳೆಂಬ ವರ್ಣಗಳನ್ನೂ ಉಳ್ಳ ಮಹಾನಾದವನ್ನುಂಟುಮಾಡುವ ನಿನ್ನ ಧನುಸ್ಸೆಂಬ ವೀಣೆಯನ್ನು ವೈರಿಗಳ ನಡುವೆ ಮಿಡಿಸು. ಬೆಳ್ಳಿಯಂತಹ ನಿನ್ನ ಬಿಳಿಯ ಕುದುರೆಗಳನ್ನು ರಥಕ್ಕೆ ಹೂಡು. ಅದರ ಮೇಲೆ ನಿನ್ನ ಚಿನ್ನದ ಸಿಂಹಧ್ವಜವನ್ನು ಹಾರಿಸು. ನಿನ್ನ ದೃಢ ಬಾಹುಗಳಿಂದ ಬಿಟ್ಟ ಚಿನ್ನದ ಗರಿಗಳುಳ್ಳ, ಹೊಳೆಯುವ ಮೊನೆಗಳನ್ನುಳ್ಳ, ರಾಜರ ಆಯುಷ್ಯವನ್ನು ಮುಗಿಸುವ ಬಾಣಗಳು ಸೂರ್ಯನನ್ನು ಮುಚ್ಚಲಿ. ಇಂದ್ರನು ರಾಕ್ಷಸರನ್ನು ಗೆದ್ದಂತೆ ಕುರುಗಳನ್ನೆಲ್ಲ ಯುದ್ಧದಲ್ಲಿ ಗೆದ್ದು ಮಹಾಯಶವನ್ನು ಪಡೆದು ಮತ್ತೆ ಈ ಪುರವನ್ನು ಪ್ರವೇಶಿಸು. ಮತ್ಸ್ಯರಾಜ ಪುತ್ರನಾದ ನೀನೇ ಈಗ ರಾಷ್ಟ್ರಕ್ಕೆ ಪರಮಗತಿ. ದೇಶವಾಸಿಗಳೆಲ್ಲ ಇಂದು ಗತಿಯುಳ್ಳವರಾಗಲಿ.”
ಸ್ತ್ರೀಯರ ಮುಂದೆ ಉತ್ತರನ ಪೌರುಷ
ಅಂತಃಪುರದಲ್ಲಿ ಹೆಂಗಸರ ನಡುವೆ ಅವನು ಹೀಗೆ ಹೇಳಲು, ಭೂಮಿಂಜಯನು ಧೈರ್ಯಕೊಡುವ ಆ ಮಾತನ್ನು ಹೊಗಳುತ್ತಾ, ಈ ಮಾತುಗಳನ್ನಾಡಿದನು: “ಅಶ್ವಕೋವಿದನಾದ ಯಾವನಾದರೂ ನನಗೆ ಸಾರಥಿಯಾಗುವುದಾದರೆ ದೃಢಧನುರ್ಧರನಾದ ನಾನು ಈ ದಿವಸವೇ ಹಸುಗಳ ಜಾಡನ್ನು ಅನುಸರಿಸುತ್ತೇನೆ. ನನಗೆ ಸಾರಥಿಯಾಗುವ ವ್ಯಕ್ತಿಯನ್ನೇ ನಾನು ಅರಿಯೆನಲ್ಲ! ಆದ್ದರಿಂದ ಹೊರಟಿರುವ ನನಗೆ ತಕ್ಕ ಸಾರಥಿಯನ್ನು ಬೇಗ ಹುಡುಕಿ! ಇಪ್ಪತ್ತೆಂಟು ರಾತ್ರಿಯೋ ಒಂದು ತಿಂಗಳೋ ನಡೆದ ಮಹಾಯುದ್ಧದಲ್ಲಿ ನನ್ನ ಸಾರಥಿ ಹತನಾದುದು ನಿಶ್ಚಯವಷ್ಟೇ! ರಥವನ್ನು ನಡೆಸಬಲ್ಲ ಮತ್ತೊಬ್ಬ ವ್ಯಕ್ತಿ ಸಿಗುವುದಾದಲ್ಲಿ, ನಾನಿಂದು ಮಹಾಧ್ವಜವನ್ನೇರಿಸಿ, ಶೀಘ್ರವಾಗಿ ಹೋಗಿ, ಆನೆ, ಕುದುರೆ ರಥಗಳಿಂದ ಕಿಕ್ಕಿರಿದ ಆ ಶತ್ರುಸೈನ್ಯವನ್ನು ಹೊಕ್ಕು, ಶಸ್ತ್ರ-ಪ್ರತಾಪಗಳಲ್ಲಿ ನಿರ್ವೀರ್ಯ ಕುರುಗಳನ್ನು ಗೆದ್ದು ಹಸುಗಳನ್ನು ಬಿಡಿಸಿ ತರುತ್ತೇನೆ. ಅಲ್ಲಿ ಸೇರಿರುವ ದುರ್ಯೋಧನ, ಭೀಷ್ಮ, ಸೂರ್ಯಪುತ್ರ ಕರ್ಣ, ಕೃಪ, ಪುತ್ರಸಹಿತ ದ್ರೋಣ – ಈ ಎಲ್ಲ ದೊಡ್ಡ ಬಿಲ್ಗಾರರನ್ನೂ ಯುದ್ಧದಲ್ಲಿ ಇಂದ್ರನು ರಾಕ್ಷಸರನ್ನು ಹೆದರಿಸಿದಂತೆ ಹೆದರಿಸಿ, ಈ ಗಳಿಗೆಯಲ್ಲಿ ಹಸುಗಳನ್ನು ಮರಳಿ ತರುತ್ತೇನೆ. ಯಾರೂ ಇಲ್ಲದಿರುವುದನ್ನು ಕಂಡು ಕುರುಗಳು ನಮ್ಮ ಗೋಧನವನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ಅಲ್ಲಿಲ್ಲದಿರುವಾಗ ನಾನು ಏನು ತಾನೆ ಮಾಡುವುದು ಸಾಧ್ಯ? ನಮ್ಮನ್ನು ಬಾಧಿಸುತ್ತಿರುವ ಇವನು ಸಾಕ್ಷಾತ್ ಕುಂತೀಪುತ್ರ ಅರ್ಜುನನೇನು? ಎಂದು ನೆರೆದಿರುವ ಕೌರವರು ಮಾತನಾಡಿಕೊಳ್ಳುತ್ತಾ ನನ್ನ ಪರಾಕ್ರವವನ್ನಿಂದು ಕಾಣುವರು.”
ಸ್ತ್ರೀಯರ ನಡುವೆ ಮತ್ತೆ ಮತ್ತೆ ಆಡುತ್ತಿದ್ದ ಅವನ ಆ ಮಾತನ್ನೂ ಅವನು ಅರ್ಜುನನ ಹೆಸರನ್ನೆತ್ತಿದುದನ್ನೂ ದ್ರೌಪದಿಯು ಸೈರಿಸದಾದಳು. ಬಳಿಕ ಆ ಬಡಪಾಯಿಯು ಸ್ತ್ರೀಮಧ್ಯದಿಂದ ಎದ್ದು ಬಂದು, ಲಜ್ಜೆಯಿಂದೆಂಬಂತೆ ಮೆಲ್ಲಗೆ ಈ ಮಾತುಗಳನ್ನಾಡಿದಳು: “ದೊಡ್ಡ ಆನೆಯಂತಿರುವವನೂ, ಸುಂದರನೂ ಆದ ಬೃಹನ್ನಡೆ ಎಂಬ ಈ ಯುವಕನು ಪಾರ್ಥನ ಪ್ರಸಿದ್ಧ ಸಾರಥಿಯಾಗಿದ್ದನು. ವೀರ! ಆ ಮಹಾತ್ಮನ ಶಿಷ್ಯನೂ ಧನುರ್ವಿದ್ಯೆಯಲ್ಲಿ ಯಾರಿಗೂ ಕಡಿಮೆಯಿಲ್ಲದವನೂ ಆದ ಇವನನ್ನು ಹಿಂದೆ ನಾನು ಪಾಂಡವರೊಡನಿದ್ದಾಗ ನೋಡಿದ್ದೆ. ಆ ದೊಡ್ಡ ಖಾಂಡವವನವನ್ನು ದಾವಾಗ್ನಿಯು ಸುಟ್ಟು ಹಾಕಿದಾಗ ಅರ್ಜನನ ಶ್ರೇಷ್ಠ ಕುದುರೆಗಳನ್ನು ಹಿಡಿದಿದ್ದವನು ಇವನೇ! ಈ ಸಾರಥಿಯೊಡನೆಯೇ ಪಾರ್ಥನು ಖಾಂಡವಪ್ರಸ್ಥದಲ್ಲಿ ಎಲ್ಲ ಜೀವಿಗಳನ್ನೂ ಸಂಪೂರ್ಣವಾಗಿ ಗೆದ್ದನು. ಇವನಿಗೆ ಸದೃಶನಾದ ಸಾರಥಿಯಿಲ್ಲ. ನಿನ್ನ ಈ ಕುಮಾರಿ ಸುಂದರಿ ತಂಗಿಯ ಮಾತನ್ನು ಅವನು ನಿಸ್ಸಂದೇಹವಾಗಿ ನಡೆಸಿಕೊಡುತ್ತಾನೆ. ಅವನು ನಿನಗೆ ಸಾರಥಿಯಾದರೆ ನೀನು ಎಲ್ಲ ಕೌರವರನ್ನೂ ನಿಸ್ಸಂಶಯವಾಗಿ ಗೆದ್ದು ಗೋವುಗಳನ್ನು ಖಂಡಿತವಾಗಿಯೂ ಮರಳಿ ಪಡೆದು ಹಿಂದಿರುಗುವೆ.”
ಸೈರಂಧ್ರಿಯು ಹೀಗೆ ಹೇಳಲು ಅವನು ಸೋದರಿಗೆ ನುಡಿದನು: “ಸುಂದರಿ! ನೀನು ಹೋಗು! ಆ ಬೃಹನ್ನಡೆಯನ್ನು ಕರೆದು ತಾ!”
ಸೋದರನಿಂದ ಕಳುಹಿಸಲ್ಪಟ್ಟ ಅವಳು ಆ ಮಹಾಬಾಹು ಅರ್ಜುನನು ವೇಷಮರೆಸಿಕೊಂಡು ವಾಸಿಸುತ್ತಿದ್ದ ನರ್ತನಗೃಹಕ್ಕೆ ಶೀಘ್ರವಾಗಿ ಹೋದಳು.
ಅರ್ಜುನನು ಉತ್ತರನಿಗೆ ಸಾರಥಿಯಾದುದು
ತನ್ನ ಸಖಿ ಆ ವಿಶಾಲಾಕ್ಷಿ ರಾಜಪುತ್ರಿಯನ್ನು ಕಂಡು ಅವಳ ಮಿತ್ರ ಅರ್ಜುನನು ನಗುತ್ತ “ಬಂದುದೇಕೆ?” ಎಂದು ಕೇಳಿದನು. ರಾಜಪುತ್ರಿಯು ಆ ನರಶ್ರೇಷ್ಠನನ್ನು ಸಮೀಪಿಸಿ ವಿನಯವನ್ನು ತೋರುತ್ತಾ ಸಖಿಯರ ನಡುವೆ ಈ ಮಾತನ್ನಾಡಿದಳು: “ಬೃಹನ್ನಡೇ! ನಮ್ಮ ನಾಡಿನ ಗೋವುಗಳನ್ನು ಕುರುಗಳು ಒಯ್ಯುತ್ತಿದ್ದಾರೆ. ಅವರನ್ನು ಗೆಲ್ಲಲು ನನ್ನ ಸೋದರನು ಧನುರ್ಧರನಾಗಿ ಹೋಗುವನು. ಅವನ ರಥದ ಸಾರಥಿಯು ಯುದ್ಧದಲ್ಲಿ ಸ್ವಲ್ಪ ಹಿಂದೆ ಹತನಾದನು. ಅವನಿಗೆ ಸಮನಾದ ಇವನ ಸಾರಥ್ಯವನ್ನು ಮಾಡುವ ಸೂತ ಬೇರೆಯಿಲ್ಲ. ಸಾರಥಿಗಾಗಿ ಪ್ರಯತ್ನಿಸುತ್ತಿರುವ ಅವನಿಗೆ, ಅಶ್ವಜ್ಞಾನದಲ್ಲಿ ನಿನಗಿರುವ ಕೌಶಲವನ್ನು ಸೈರಂಧ್ರಿಯು ತಿಳಿಸಿದಳು. ನನ್ನ ಸೋದರನ ಸಾರಥ್ಯವನ್ನು ಚೆನ್ನಾಗಿ ಮಾಡು. ನಮ್ಮ ಗೋವುಗಳನ್ನು ಕುರುಗಳು ಇಷ್ಟರಲ್ಲಿ ಬಹುದೂರ ಅಟ್ಟಿಕೊಂಡು ಹೋಗಿರುತ್ತಾರೆ. ವಿಶ್ವಾಸದಿಂದ ನಾನು ನಿಯೋಜಿಸಿ ಹೇಳುತ್ತಿರುವ ಮಾತನ್ನು ನೀನು ನಡೆಸಿಕೊಡದಿದ್ದರೆ ನಾನು ಪ್ರಾಣತ್ಯಾಗ ಮಾಡುತ್ತೇನೆ.”
ಆ ಸುಂದರ ಗೆಳತಿಯು ಹೀಗೆ ಹೇಳಲು ಶತ್ರುನಾಶಕ ಅರ್ಜುನನು ಅಮಿತ ಶಕ್ತಿಶಾಲಿ ರಾಜಪುತ್ರನ ಬಳಿ ಹೋದನು. ಒಡೆದ ಗಂಡಸ್ಥಲವುಳ್ಳ ಆನೆಯಂತೆ ವೇಗವಾಗಿ ಹೋಗುತ್ತಿದ್ದ ಅವನನ್ನು ಹೆಣ್ಣಾನೆಯನ್ನು ಅನುಸರಿಸುವ ಮರಿಯಂತೆ ಆ ವಿಶಾಲಾಕ್ಷಿಯು ಅನುಸರಿಸಿದಳು. ಅವನನ್ನು ದೂರದಿಂದಲೇ ನೋಡಿ ರಾಜಪುತ್ರನು ಹೇಳಿದನು: “ನಿನ್ನನ್ನು ಸಾರಥಿಯನ್ನಾಗಿ ಮಾಡಿಕೊಂಡು ಪಾರ್ಥನು ಖಾಂಡವದಲ್ಲಿ ಅಗ್ನಿಯನ್ನು ತೃಪ್ತಿಪಡಿಸಿದನು. ಅಲ್ಲದೇ ಕುಂತೀಪುತ್ರ ಧನಂಜಯನು ಪೃಥ್ವಿಯನ್ನು ಸಂಪೂರ್ಣವಾಗಿ ಜಯಿಸಿದನು ಎಂದು ಸೈರಂಧ್ರಿಯು ನಿನ್ನ ಕುರಿತು ಹೇಳಿದ್ದಾಳೆ. ಅವಳಿಗೆ ಪಾಂಡವರು ಗೊತ್ತು. ಆದ್ದರಿಂದ ಬೃಹನ್ನಡೇ! ಗೋಧನವನ್ನು ಮತ್ತೆ ತರಲು ಕುರುಗಳೊಡನೆ ಹೋರಾಡುವ ನನ್ನ ಕುದುರೆಗಳನ್ನು ನೀನು ಹಿಂದಿನಂತೆಯೇ ನಡೆಸು. ಹಿಂದೆ ನೀನು ಅರ್ಜುನನ ಪ್ರಿಯ ಸಾರಥಿಯಾಗಿದ್ದೆಯಷ್ಟೆ! ನಿನ್ನ ಸಹಾಯದಿಂದ ಆ ಪಾಂಡವಶ್ರೇಷ್ಠನು ಲೋಕವನ್ನು ಜಯಿಸಿದನು.”
ಉತ್ತರನು ಹೀಗೆ ಹೇಳಲು ಬೃಹನ್ನಡೆಯು ರಾಜಪುತ್ರನಿಗೆ ಮರುನುಡಿದಳು: “ಯುದ್ಧರಂಗದಲ್ಲಿ ಸಾರಥ್ಯಮಾಡಲು ನನಗಾವ ಶಕ್ತಿಯಿದೆ? ಗೀತವೋ ನೃತ್ಯವೋ ವಾದ್ಯವೋ ಮತ್ತಾವುದೋ ಆದರೆ ನಾನು ನಿರ್ವಹಿಸಬಲ್ಲೆ. ನನಗೆ ಸಾರಥ್ಯವೆಲ್ಲಿಯದು? ನಿನಗೆ ಮಂಗಳವಾಗಲಿ.”
ಉತ್ತರನು ಹೇಳಿದನು: “ಬೃಹನ್ನಡೇ! ಮತ್ತೆ ನೀನು ಗಾಯಕನೋ ನರ್ತಕನೋ ಆಗುವೆಯಂತೆ. ಸದ್ಯಕ್ಕೆ ಈಗ ಬೇಗ ನನ್ನ ರಥವನ್ನೇರಿ ಉತ್ತಮಾಶ್ವಗಳನ್ನು ನಿಯಂತ್ರಿಸು.”
ಆ ಪಾಂಡವನು ಎಲ್ಲವನ್ನೂ ಅರಿತಿದ್ದರೂ ಉತ್ತರೆಯ ಮುಂದೆ ವಿನೋದದಿಂದ ನಡೆದುಕೊಂಡನು. ಅವನು ಕವಚವನ್ನು ಮಗುಚಿ ಮೈಗೆ ತೊಟ್ಟುಕೊಂಡನು. ಅದನ್ನು ನೋಡಿ ಅಲ್ಲಿದ್ದ ಬೊಗಸೆಗಣ್ಣಿನ ಕುಮಾರಿಯರು ನಕ್ಕುಬಿಟ್ಟರು. ಆಗ ಅವನು ಗೊಂದಲಗೊಂಡಿದ್ದುದನ್ನು ಕಂಡು ಸ್ವತಃ ಉತ್ತರನು ಬೆಲೆಬಾಳುವ ಕವಚವನ್ನು ಬೃಹನ್ನಡೆಗೆ ತೊಡಿಸಿದನು. ಅವನು ಸ್ವತಃ ಸೂರ್ಯಪ್ರಭೆಯುಳ್ಳ ಶ್ರೇಷ್ಠ ಕವಚವನ್ನು ಧರಿಸಿ, ಸಿಂಹಧ್ವಜವನ್ನೇರಿಸಿ, ಬೃಹನ್ನಡೆಯನ್ನು ಸಾರಥ್ಯದಲ್ಲಿ ತೊಡಗಿಸಿದನು. ಆ ವೀರನು ಬೃಹನ್ನಡೆಯನ್ನು ಸಾರಥಿಯನ್ನಾಗಿ ಮಾಡಿಕೊಂಡು ಅನರ್ಘ್ಯ ಬಿಲ್ಲುಗಳನ್ನೂ, ಹೊಳೆಹೊಳೆಯುವ ಬಹು ಬಾಣಗಳನ್ನೂ ತೆಗೆದುಕೊಂಡು ಹೊರಟನು. ಅಗ ಉತ್ತರೆಯೂ ಸಖೀ ಕನ್ಯೆಯರೂ ಅವನಿಗೆ ಹೇಳಿದರು: “ಬೃಹನ್ನಡೇ! ಯುದ್ಧಕ್ಕೆ ಬಂದಿರುವ ಭೀಷ್ಮ-ದ್ರೋಣ ಪ್ರಮುಖ ಕುರುಗಳನ್ನು ಗೆದ್ದು, ನಮ್ಮ ಗೊಂಬೆಗಳಿಗಾಗಿ ಸುಂದರ ಸೂಕ್ಷ್ಮ ಬಣ್ಣಬಣ್ಣದ ವಿವಿಧ ವಸ್ತ್ರಗಳನ್ನು ತೆಗೆದುಕೊಂಡು ಬಾ.” ಬಳಿಕ, ಪಾಂಡುಪುತ್ರ ಪಾರ್ಥನು ನಗುತ್ತ ಹಾಗೆ ನುಡಿಯುತ್ತಿರುವ ಕನ್ಯೆಯರ ಗುಂಪಿಗೆ ಮೇಘ ದುಂದುಭಿ ಧ್ವನಿಯಿಂದ ಮರುನುಡಿದನು: “ಈ ಉತ್ತರನು ಯುದ್ಧದಲ್ಲಿ ಮಹಾರಥರನ್ನು ಗೆದ್ದರೆ ನಾನು ಆ ದಿವ್ಯ ಸುಂದರ ವಸ್ತ್ರಗಳನ್ನು ತರುತ್ತೇನೆ.” ಹೀಗೆ ನುಡಿದು ಶೂರ ಅರ್ಜುನನು ನಾನಾ ಧ್ವಜ ಪತಾಕೆಗಳಿಂದ ಕೂಡಿದ ಕುರುಸೇನೆಗೆ ಅಭಿಮುಖವಾಗಿ ಕುದುರೆಗಳನ್ನು ಪ್ರಚೋದಿಸಿದನು.
ಕುರುಸೇನೆಯನ್ನು ಎದುರಿಸದೆ ಪಲಾಯನ ಮಾಡುತ್ತಿದ್ದ ಉತ್ತರನನ್ನು ಅರ್ಜುನನು ಪುನಃ ರಥವನ್ನೇರಿಸಿದುದು
ಆ ವಿರಾಟಪುತ್ರ ಭೂಮಿಂಜಯನು ರಾಜಧಾನಿಯಿಂದ ಹೊರಟು, “ಕೌರವರು ಹೋಗಿರುವ ಕಡೆ ನಡೆ!” ಎಂದು ಸೂತನಿಗೆ ಹೇಳಿದನು. “ಜಯಾಕಾಂಕ್ಷೆಯಿಂದ ನೆರೆದಿರುವ ಕೌರವರನ್ನು ಗೆದ್ದು ಗೋವುಗಳನ್ನು ತೆಗೆದುಕೊಂಡು ಬೇಗನೆ ಪಟ್ಟಣಕ್ಕೆ ಹಿಂದಿರುಗುತ್ತೇನೆ.” ಬಳಿಕ ಅರ್ಜುನನು ಆ ಉತ್ತಮ ಕುದುರೆಗಳನ್ನು ಪ್ರಚೋದಿಸಿದನು. ಕಾಂಚನಮಾಲೆಗಲನ್ನು ಧರಿಸಿದ್ದ ವಾಯುವೇಗದ ಕುದುರೆಗಳು ಆ ನರಶ್ರೇಷ್ಠನಿಂದ ಪ್ರಚೋದಿತಗೊಂಡು ಆಕಾಶವನ್ನು ತೀಡುತ್ತಾ ಅವರನ್ನು ಹೊತ್ತೊಯ್ದವು. ಶತ್ರುನಾಶಕ ಉತ್ತರ-ಧನಂಜಯರು ಸ್ವಲ್ಪ ದೂರ ಹೋಗಿ ಬಲಶಾಲಿ ಕುರುಸೇನೆಯನ್ನು ಕಂಡರು. ಶ್ಮಶಾನಾಭಿಮುಖವಾಗಿ ಸಾಗಿ ಕುರುಗಳನ್ನು ಸಮೀಪಿಸಿದರು. ಸಾಗರ ಘೋಷವುಳ್ಳ ಅವರ ಆ ಮಹಾಸೇನೆಯು ಆಕಾಶದಲ್ಲಿ ಚಲಿಸುವ ವೃಕ್ಷಸಮೃದ್ಧ ವನದಂತೆ ಶೋಭಿಸುತ್ತಿತ್ತು. ಅದರ ಚಲನೆಯಿಂದುಂಟಾದ ನೆಲದ ಧೂಳು ಪ್ರಾಣಿಗಳ ಕಣ್ಣನ್ನು ಕುರುಡು ಮಾಡಿ ಮೇಲೆದ್ದು ಆಕಾಶವನ್ನು ಮುಟ್ಟುವಂತೆ ಕಂಡಿತು.
ಆನೆ, ಕುದುರೆ ಮತ್ತು ರಥಗಳಿಂದ ತುಂಬಿದ, ಕರ್ಣ, ದುರ್ಯೋಧನ, ಕೃಪ, ಭೀಷ್ಮರಿಂದಲೂ, ಪುತ್ರಸಹಿತನಾಗಿದ್ದ ಮಹಾಧನುರ್ಧರ ಧೀಮಂತ ದ್ರೋಣನಿಂದಲೂ ರಕ್ಷಿತವಾದ ಆ ಮಹಾಸೈನ್ಯವನ್ನು ಕಂಡು ಉತ್ತರನು ರೋಮಾಂಚಿತನೂ ಭಯೋದ್ವಿಗ್ನನೂ ಆಗಿ ಪಾರ್ಥನಿಗೆ ಹೇಳಿದನು: “ಕುರುಗಳೊಡನೆ ನಾನು ಕಾದಲಾರೆ! ನನ್ನ ಶರೀರದ ರೋಮಾಂಚನವನ್ನು ನೋಡು. ಬಹುವೀರರಿಂದ ಕೂಡಿದ, ದೇವತೆಗಳಿಗೂ ಎದುರಿಸಲಾಗದ ಈ ಅತ್ಯುಗ್ರ ಅನಂತ ಕುರುಸೇನೆಯೊಂದಿಗೆ ನಾನು ಹೋರಾಡಲಾರೆ! ಭಯಂಕರ ಬಿಲ್ಲುಗಳನ್ನು ಹಿಡಿದ, ಆನೆ, ಕುದುರೆ ಮತ್ತು ರಥಗಳಿಂದ ತುಂಬಿದ, ಪದಾತಿ ಮತ್ತು ಧ್ವಜಗಳಿಂದ ಕೂಡಿದ ಭಾರತಸೇನೆಯನ್ನು ನಾನು ಪ್ರವೇಶಿಸಲಾರೆ. ಯುದ್ಧರಂಗದಲ್ಲಿ ವೈರಿಗಳನ್ನು ನೋಡಿಯೇ ನನ್ನ ಜೀವ ನಡುಗುತ್ತಿದೆ. ಅಲ್ಲಿರುವ ದ್ರೋಣ, ಭೀಷ್ಮ, ಕೃಪ, ಕರ್ಣ, ವಿವಿಂಶತಿ, ಅಶ್ವತ್ಥಾಮ, ವಿಕರ್ಣ, ಸೋಮದತ್ತ, ಬಾಹ್ಲೀಕ, ರಥಿಕಶ್ರೇಷ್ಠ ವೀರರಾಜ ದುರ್ಯೋಧನ - ಈ ಎಲ್ಲರೂ ಹೊಳೆಯುವ ಮಹಾಧನುರ್ಧರರು ಮತ್ತು ಯುದ್ಧ ವಿಶಾರದರು. ಯುದ್ಧಸನ್ನದ್ಧರಾದ ಈ ಕುರುಯೋಧರನ್ನು ನೋಡಿಯೇ ನನಗೆ ರೋಮಾಂಚನವಾಗಿದೆ. ನನಗೆ ಮೂರ್ಛೆ ಬಂದಂತೆ ಆಗುತ್ತಿದೆ.”
ಆ ಹೇಡಿ ಮಂದಬುದ್ಧಿ ಉತ್ತರನು ಧೃಷ್ಟ ಧೈರ್ಯಶಾಲಿ ಸವ್ಯಸಾಚಿಯ ಎದುರು ಮೂರ್ಖತನದಿಂದ ಪ್ರಲಾಪಿಸತೊಡಗಿದನು: “ನನ್ನ ತಂದೆಯು ಸೇನೆಯನ್ನು ತೆಗೆದುಕೊಂಡು ಶೂನ್ಯ ನಗರದಲ್ಲಿ ನನ್ನನ್ನಿರಿಸಿ ತ್ರಿಗರ್ತರನ್ನು ಎದುರಿಸಲು ಹೊರಟುಹೋದನು. ನನಗಿಲ್ಲಿ ಸೈನಿಕರಿಲ್ಲ. ಬೃಹನ್ನಡೇ! ಏಕಾಂಗಿಯೂ ಅಸ್ತ್ರಪರಿಶ್ರಮವಿಲ್ಲದ ಬಾಲಕನೂ ಆದ ನಾನು ಅಸ್ತ್ರವಿಶಾರದ ಬಹುಯೋಧರೊಡನೆ ಕಾದಲಾರೆ. ಆದ್ದರಿಂದ ರಥವನ್ನು ಹಿಂದಿರುಗಿಸು.”
ಅರ್ಜುನನು ಹೇಳಿದನು: “ಭಯದಿಂದ ದೀನರೂಪಿಯಾಗಿ ಶತ್ರುಗಳ ಹರ್ಷವನ್ನು ಹೆಚ್ಚಿಸುತ್ತಿರುವೆ. ರಣರಂಗದಲ್ಲಿ ಶತ್ರುಗಳು ಇನ್ನೂ ಏನನ್ನೂ ಮಾಡಿಯೇ ಇಲ್ಲ. ನನ್ನನ್ನು ಕೌರವರೆಡೆಗೆ ಕರೆದುಕೊಂಡು ಹೋಗು ಎಂದು ನನಗೆ ಹೇಳಿದವನು ನೀನೆ. ಅಸಂಖ್ಯ ಧ್ವಜಗಳಿರುವಡೆಗೆ ನಾನು ನಿನ್ನನ್ನು ಒಯ್ಯುವೆನು. ಮಹಾಬಾಹೋ! ಮಾಂಸಕ್ಕಾಗಿ ಬಾಯಿಬಿಡುವ ಹದ್ದುಗಳಂತೆ ಭೂಮಿಯಲ್ಲಿ ನಿಂತು ಯುದ್ಧಮಾಡುತ್ತಿರುವ ಪಾಪಿಷ್ಟ ಕೌರವರ ನಡುವೆ ನಿನ್ನನ್ನು ಒಯ್ಯುವೆನು. ಹಾಗೆ ಸ್ತ್ರೀಯರ ಮುಂದೆ ಪ್ರತಿಜ್ಞೆಮಾಡಿ ಪುರುಷರ ಮುಂದೆ ಪೌರುಷವನ್ನು ಕೊಚ್ಚಿಕೊಂಡು ಹೊರಟುಬಂದು ಈಗ ನೀನು ಏಕೆ ಯುದ್ಧಮಾಡಬಯಸದಿರುವೆ? ಆ ಗೋವುಗಳನ್ನು ಗೆಲ್ಲದೇ ನೀನು ಮನೆಗೆ ಮರಳಿದರೆ ಸ್ತ್ರೀಯರೂ ಪುರುಷರೂ ಒಟ್ಟುಗೂಡಿ ನಿನ್ನನ್ನು ಅಪಹಾಸ್ಯಮಾಡುತ್ತಾರೆ. ಸಾರಥ್ಯಕಾರ್ಯದಲ್ಲಿ ಸೈರಂಧ್ರಿಯಿಂದ ಹೊಗಳಿಸಿಕೊಂಡ ಈ ನಾನು ಕೂಡ ಗೋವುಗಳನ್ನು ಗೆದ್ದುಕೊಳ್ಳದೆ ಪುರಕ್ಕೆ ಹಿಂದಿರುಗಲಾರೆ. ಸೈರಂಧ್ರಿಯ ಸ್ತುತಿಯಿಂದ ಮತ್ತು ನಿನ್ನ ಆ ಮಾತಿನಿಂದ ಪ್ರೇರಿತನಾಗಿರುವ ನಾನು ಎಲ್ಲ ಕುರುಗಳೊಡನೆ ಹೇಗೆ ಹೋರಾಡದಿರಲಿ? ನೀನು ಸ್ಥಿರನಾಗು.”
ಉತ್ತರನು ಹೇಳಿದನು: “ಬೃಹನ್ನಡೇ! ಬೇಕಾದರೆ ಕುರುಗಳು ಮತ್ಸ್ಯರ ವಿಪುಲ ಧನವನ್ನು ಒಯ್ಯಲಿ. ನನ್ನನ್ನು ಕುರಿತು ಸ್ತ್ರೀಯರು ಅಥವಾ ಪುರುಷರು ನಗಲಿ.”
ಭೀತನೂ ಮಂದಾತ್ಮನೂ ಆದ ಅ ಕುಂಡಲಧಾರಿಯು ಹೀಗೆ ಹೇಳಿ, ಮಾನವನ್ನು ತೊರೆದು, ಬಾಣಸಹಿತ ಬಿಲ್ಲನ್ನು ಬಿಸುಟು, ರಥದಿಂದ ಧುಮುಕಿ ಓಡತೊಡಗಿದನು.
ಬ್ರಹನ್ನಡೆಯು ಹೇಳಿದಳು: “ಪಲಾಯನವು ಕ್ಷತ್ರಿಯನ ಧರ್ಮವೆಂದು ಹಿಂದಿನವರು ವಿಧಿಸಿಲ್ಲ. ಯುದ್ಧದಲ್ಲಿ ಮರಣಹೊಂದುವುದು ನಿನಗೆ ಶ್ರೇಯಸ್ಕರ; ಭೀತಿಯಿಂದ ಪಲಾಯನಮಾಡುವುದಲ್ಲ!”
ಕೌಂತೇಯ ಧನಂಜಯನು ಹೀಗೆ ನುಡಿದು ತನ್ನ ನೀಳ ಜಡೆಯೂ ಕೆಂಪುವಸ್ತ್ರಗಳೂ ಹಾರಾಡುತ್ತಿರಲು, ಉತ್ತಮ ರಥದಿಂದ ನೆಗೆದು ಓಡಿಹೋಗುತ್ತಿದ್ದ ಆ ರಾಜಕುಮಾರನನ್ನು ಬೆನ್ನಟ್ಟಿದನು. ಜಡೆಯನ್ನು ಹಾರಾಡಿಸಿಕೊಂಡು ಹೋಗುತ್ತಿದ್ದ ಅರ್ಜುನನನ್ನು ಗುರುತುಹಿಡಿಯಲಾರದೇ ಕೆಲವು ಸೈನಿಕರು ಅವನ ಅಂತಹ ರೂಪವನ್ನು ನೋಡಿ ನಕ್ಕರು. ವೇಗವಾಗಿ ಹಾಗೆ ಓಡುತ್ತಿದ್ದ ಅವನನ್ನು ನೋಡಿ ಕುರುಗಳು ಮಾತನಾಡಿಕೊಂಡರು: “ಬೂದಿ ಮುಚ್ಚಿರುವ ಬೆಂಕಿಯಂತೆ ವೇಷಮರೆಸಿಕೊಂಡಿರುವ ಈತನಾರು? ಇವನ ರೂಪ ಸ್ವಲ್ಪಮಟ್ಟಿಗೆ ಗಂಡಸಿನಂತೆ, ಸ್ವಲ್ಪಮಟ್ಟಿಗೆ ಹೆಂಗಸಿನಂತೆ ಕಾಣುತ್ತಿದೆ. ರೂಪ ಅರ್ಜುನನಂತೆಯೇ ಇದೆ. ಆದರೆ ನಪುಂಸಕರೂಪವನ್ನು ಧರಿಸಿದ್ದಾನೆ. ಅದೇ ತಲೆ, ಅದೇ ಕೊರಳು, ಲಾಳಮುಂಡಿಗೆಯಂತಹ ಅವೇ ತೋಳುಗಳು, ಅಂಥದೇ ನಡುಗೆ ಇವನವು. ಇವನು ಧನಂಜಯನಲ್ಲದೇ ಬೇರೆಯವನಲ್ಲ. ದೇವತೆಗಳಲ್ಲಿ ದೇವೇಂದ್ರನಂತೆ ಮಾನವರಲ್ಲಿ ಧನಂಜಯ. ಲೋಕದಲ್ಲಿ ಧನಂಜಯನಲ್ಲದೆ ಮತ್ತಾವನು ಒಂಟಿಯಾಗಿ ನಮ್ಮನ್ನು ಎದುರಿಸುತ್ತಾನೆ? ವಿರಾಟನ ಒಬ್ಬನೇ ಮಗನನ್ನು ನಿರ್ಜನ ಪಟ್ಟಣದಲ್ಲಿ ಇರಿಸಲಾಯಿತು. ಅವನು ಹುಡುಗತನದಿಂದ ಹೊರಬಂದಿದ್ದಾನೆ. ಪೌರುಷದಿಂದಲ್ಲ. ಆ ಉತ್ತರನು ನಿಶ್ಚಿತವಾಗಿಯೂ ಗುಪ್ತವೇಷದಲ್ಲಿ ಚರಿಸುತ್ತಿರುವ ಕುಂತೀಪುತ್ರ ಅರ್ಜುನನನ್ನು ಸಾರಥಿಯನ್ನಾಗಿಸಿಕೊಂಡು ನಗರದಿಂದ ಹೊರಬಿದ್ದಿದ್ದಾನೆ. ನಮ್ಮ ಬಾವುಟಗಳನ್ನು ನೋಡಿ ಹೆದರಿ ಇಗೋ ಪಲಾಯನ ಮಾಡುತ್ತಿದ್ದಾನೆಂದು ತೋರುತ್ತದೆ. ಓಡುತ್ತಿರುವ ಅವನನ್ನು ಹಿಡಿಯಲು ಈ ಧನಂಜಯನು ಇಚ್ಛಿಸುತ್ತಿರುವುದು ಖಂಡಿತ.”
ಮಾರುವೇಷದಲ್ಲಿದ್ದ ಆ ಪಾಂಡವನನ್ನು ಕಂಡು ಕುರುಗಳೆಲ್ಲರೂ ಹೀಗೆ ಬೇರೆಬೇರೆಯಾಗಿ ಆಲೋಚಿಸಿದರು. ಆದರೆ ಅವರು ಯಾವುದೇ ನಿರ್ಣಯಕ್ಕೆ ಬರಲು ಸಮರ್ಥರಾಗಲಿಲ್ಲ. ಧನಂಜಯನು ಓಡಿಹೋಗುತ್ತಿದ್ದ ಉತ್ತರನನ್ನು ಬೆನ್ನುಹತ್ತಿ ನೂರು ಹೆಜ್ಜೆ ಹೋಗಿ ಅವನ ಜುಟ್ಟನ್ನು ಹಿಡಿದುಕೊಂಡನು. ಅರ್ಜುನನು ಹಿಡಿದ ಉತ್ತರನು ಆಗ ಆರ್ತನಂತೆ ದೀನನಾಗಿ ಬಹುವಾಗಿ ಪ್ರಲಾಪಿಸತೊಡಗಿದನು: “ಶುದ್ಧ ಚಿನ್ನದ ನೂರು ನಾಣ್ಯಗಳನ್ನೂ, ಸುವರ್ಣಖಚಿತ ಮಹಾಪ್ರಕಾಶದ ಎಂಟು ವೈಢೂರ್ಯ ಮಣಿಗಳನ್ನೂ, ಚಿನ್ನದ ದಂಡವುಳ್ಳ ವೇಗದ ಕುದುರೆಗಳನ್ನು ಹೂಡಿದ ರಥವನ್ನೂ, ಹತ್ತು ಮದಗಜಗಳನ್ನೂ ನಿನಗೆ ಕೊಡುತ್ತೇನೆ. ನನ್ನನ್ನು ಬಿಟ್ಟುಬಿಡು ಬೃಹನ್ನಡೇ!”
ಇವೇ ಮುಂತಾದ ಮಾತುಗಳನ್ನು ಎಚ್ಚರತಪ್ಪಿ ಆಡುತ್ತಿದ್ದ ಉತ್ತರನನ್ನು ಆ ಪುರುಷಶ್ರೇಷ್ಠನು ನಗುತ್ತಾ ರಥದ ಬಳಿಗೆ ತಂದನು. ಬಳಿಕ ಪಾರ್ಥನು ಭಯಾರ್ತನೂ ಪ್ರಜ್ಞಾಹೀನನೂ ಆದ ಉತ್ತರನಿಗೆ ಹೀಗೆಂದನು: “ಶತ್ರುನಾಶಕ! ಶತ್ರುಗಳೊಡನೆ ನೀನು ಕಾದಲಾರೆಯಾದರೆ ಬಾ. ನನ್ನ ಕುದುರೆಗಳನ್ನು ನಡೆಸು. ಶತ್ರುಗಳೊಡನೆ ನಾನು ಹೋರಾಡುತ್ತೇನೆ. ನನ್ನ ಬಾಹುಬಲದ ರಕ್ಷಣೆಯನ್ನು ಪಡೆದು ಅತ್ಯಂತ ಅದಮ್ಯವೂ ಘೋರವೂ ಮಹಾರಥಿ ವೀರರಿಂದ ರಕ್ಷಿತವೂ ಆದ ಈ ರಥಸೇನೆಯೊಳಗೆ ನುಗ್ಗು! ರಾಜಪುತ್ರ! ಹೆದರಬೇಡ! ನೀನು ಕ್ಷತ್ರಿಯನಾಗಿರುವೆ. ನಾನು ಕುರುಗಳೊಡನೆ ಯುದ್ಧಮಾಡಿ ನಿನ್ನ ಹಸುಗಳನ್ನು ಗೆದ್ದುಕೊಡುವೆನು. ಈ ಅಜೇಯ ಅಸಾಧ್ಯ ರಥಸೈನ್ಯವನ್ನು ಹೊಕ್ಕು ನಾನು ಕುರುಗಳೊಡನೆ ಕಾದುತ್ತೇನೆ. ನೀನು ನನಗೆ ಸಾರಥಿಯಾಗು!”
ಆ ಅಪರಾಜಿತ ಯೋಧಶ್ರೇಷ್ಠ ಕುಂತೀಪುತ್ರ ಅರ್ಜುನನು ವಿರಾಟಪುತ್ರ ಉತ್ತರನಿಗೆ ಹೀಗೆ ನುಡಿಯುತ್ತ ಅವನನ್ನು ಮುಹೂರ್ತಕಾಲದಲ್ಲಿ ಸಮಾಧಾನಪಡೆಸಿ ಭಯಪೀಡಿತನಾಗಿ, ಯುದ್ಧದ ಆಸೆಯಿಲ್ಲದೇ ಪರದಾಡುತ್ತಿದ್ದ ಅವನನ್ನು ಎತ್ತಿ ರಥದಲ್ಲೇರಿಸಿದನು.
ಕುರುಸೇನೆಯಲ್ಲಿ ಗೊಂದಲ
ಉತ್ತರನನ್ನು ರಥದ ಮೇಲೆ ಕುಳ್ಳಿರಿಸಿಕೊಂಡು ಬನ್ನಿ ಮರದತ್ತ ರಥದಲ್ಲಿ ಹೋಗುತ್ತಿದ್ದ ಆ ನಪುಂಸಕ ವೇಷದ ನರಶ್ರೇಷ್ಠನನ್ನು ನೋಡಿ, ಭೀಷ್ಮ-ದ್ರೋಣಮುಖ್ಯ ಕುರುಗಳ ರಥಿಕ ಶ್ರೇಷ್ಠರೆಲ್ಲ ಧನಂಜಯನಿಂದುಂಟಾದ ಭಯದಿಂದ ತಲ್ಲಣಿಸಿದರು. ಆ ಉತ್ಸಾಹಹೀನರನ್ನೂ ಅದ್ಭುತ ಉತ್ಪಾತಗಳನ್ನೂ ನೋಡಿ ಶಸ್ತ್ರಧರರಲ್ಲಿ ಶ್ರೇಷ್ಠ ಗುರು ದ್ರೋಣನು ನುಡಿದನು: “ವೇಗವಾದ ಕಠೋರ ಶಬ್ಧವುಳ್ಳ ಭಯಂಕರ ಗಾಳಿಯು ಬೀಸುತ್ತಿದೆ; ಬೂದಿಯ ಬಣ್ಣದ ಪ್ರಕಾಶದ ಕತ್ತಲು ಆಗಸವನ್ನು ಆವರಿಸಿದೆ. ರೂಕ್ಷವರ್ಣದ ಮೋಡಗಳು ಅದ್ಭುತವಾಗಿ ತೋರುತ್ತಿವೆ; ನಮ್ಮ ವಿವಿಧ ಶಸ್ತ್ರಗಳು ತಮ್ಮ ಕೋಶಗಳಿಂದ ಹೊರಬರುತ್ತಿವೆ. ಇದೋ! ಉರಿಯುತ್ತಿರುವ ದಿಕ್ಕುಗಳಲ್ಲಿ ನರಿಗಳು ದಾರುಣವಾಗಿ ಊಳಿಡುತ್ತಿವೆ; ಕುದುರೆಗಳು ಕಣ್ಣೀರಿಡುತ್ತಿವೆ; ಅಲ್ಲಾಡಿಸದಿದ್ದರೂ ಬಾವುಟಗಳು ಅಲ್ಲಾಡುತ್ತಿವೆ. ಇಲ್ಲಿ ಈ ಅಶುಭ ಚಿಹ್ನೆಗಳು ಬಹುವಾಗಿ ಕಂಡುಬರುತ್ತಿರುವುದರಿಂದ ನೀವು ಎಚ್ಚರಿಕೆಯಿಂದ ನಿಲ್ಲಿ! ಪ್ರಾಯಃ ಯುದ್ಧವು ಒದಗಿಬಂದಿದೆ. ನಿಮ್ಮನ್ನು ರಕ್ಷಿಸಿಕೊಳ್ಳಿ; ಸೈನ್ಯವನ್ನು ವ್ಯೂಹಗೊಳಿಸಿ. ನಡೆಯಲಿರುವ ಕಗ್ಗೊಲೆಯನ್ನು ನಿರೀಕ್ಷಿಸಿ. ಗೋಧನವನ್ನು ರಕ್ಷಿಸಿಕೊಳ್ಳಿ. ಮಹಾ ಬಿಲ್ಗಾರನೂ ಸರ್ವಶಸ್ತ್ರಧರರಲ್ಲಿ ಶ್ರೇಷ್ಠನೂ ಸಪುಂಸಕವೇಷದಲ್ಲಿ ಬಂದಿರುವವನೂ ಆದ ಈ ವೀರನು ಪಾರ್ಥನೆಂಬುವುದರಲ್ಲಿ ಸಂಶಯವಿಲ್ಲ. ಶತ್ರುನಾಶಕನೂ ಸವ್ಯಸಾಚಿಯೂ ಆದ ಈ ವೀರ ಪಾರ್ಥನು ಸಕಲ ದೇವತಾ ಸಮೂಹದೊಡನೆ ಕೂಡ ಯುದ್ಧ ಮಾಡದೆ ಹಿಮ್ಮೆಟ್ಟುವುದಿಲ್ಲ. ವನದಲ್ಲಿ ಕ್ಲೇಶಪಟ್ಟವನೂ ಇಂದ್ರನಿಂದ ಶಿಕ್ಷಣಪಡೆದವನೂ ಆದ ಈ ಶೂರನು ಕೋಪವಶನಾಗಿ ಬಂದಿದ್ದಾನೆ; ಇವನು ಯುದ್ಧಮಾಡುವುದರಲ್ಲಿ ಸಂಶಯವಿಲ್ಲ. ಕೌರವರೇ! ಅವನಿಗಿಲ್ಲಿ ಎದುರಾಗಿ ಕಾದುವವರು ಯಾರೂ ನನಗೆ ಕಾಣುತ್ತಿಲ್ಲ. ಪಾರ್ಥನು ಮಹಾದೇವನನ್ನೂ ಯುದ್ಧದಲ್ಲಿ ಸಂತೋಷಗೊಳಿಸಿದನೆಂದು ಕೇಳಿದ್ದೇವೆ.”
ಕರ್ಣನು ಹೇಳಿದನು: “ನೀವು ಯಾವಾಗಲೂ ಫಲ್ಗುಣನ ಗುಣಗಳನ್ನು ಹೊಗಳುವುದರ ಮೂಲಕ ನಮ್ಮನ್ನು ನಿಂದಿಸುತ್ತೀರಿ. ಆ ಅರ್ಜುನನು ನನಗಾಗಲೀ ದುರ್ಯೋಧನನಿಗಾಗಲೀ ಹದಿನಾರನೆಯ ಒಂದು ಪೂರ್ಣಾಂಶದಷ್ಟೂ ಸಮಾನನಲ್ಲ.”
ದುರ್ಯೋಧನನು ಹೇಳಿದನು: “ಕರ್ಣ! ಇವನು ಪಾರ್ಥನಾಗಿದ್ದರೆ ನನ್ನ ಕಾರ್ಯವಾಯಿತು! ಗುರುತು ಸಿಕ್ಕಿದ ಪಾಂಡವರು ಮತ್ತೆ ಹನ್ನೆರಡು ವರ್ಷ ಕಾಡಿನಲ್ಲಿ ಅಲೆಯ ಬೇಕಾಗುತ್ತದೆ. ಇವನು ನಪುಂಸಕ ವೇಷದ ಬೇರೆ ಯಾವನೋ ಮನುಷ್ಯನಾಗಿದ್ದರೆ ಇವನನ್ನು ಹರಿತವಾದ ಬಾಣಗಳಿಂದ ನೆಲಕ್ಕೆ ಕೆಡಹುತ್ತೇನೆ.”
ಶತ್ರುನಾಶಕ ದುರ್ಯೋಧನನು ಆ ಮಾತನ್ನಾಡಲು ಭೀಷ್ಮ-ದ್ರೋಣ-ಅಶ್ವತ್ಥಾಮರು ಅವನ ಆ ಪೌರುಷವನ್ನು ಹೊಗಳಿದರು.
ಶಮೀವೃಕ್ಷದಿಂದ ಆಯುಧಗಳನ್ನು ಹಿಂತೆಗೆದುಕೊಂಡಿದ್ದುದು
ಪಾರ್ಥನು ಆ ಬನ್ನೀಮರವನ್ನು ತಲುಪಿ ಉತ್ತರನು ಸುಕುಮಾರನೆಂದೂ ಯುದ್ಧದಲ್ಲಿ ಬಹಳ ಕೋವಿದನಲ್ಲವೆಂದೂ ಅರಿತು ಆ ವಿರಾಟಪುತ್ರನಿಗೆ ನುಡಿದನು: “ಉತ್ತರ! ನನ್ನ ಆದೇಶದಂತೆ ನೀನು ಬಿಲ್ಲುಗಳನ್ನು ಬೇಗ ಮರದಿಂದ ತೆಗೆದು ಕೊಂಡು ಬಾ. ನಿನ್ನ ಈ ಬಿಲ್ಲುಗಳು ನನ್ನ ಬಲವನ್ನು ತಡೆದುಕೊಳ್ಳಲು ಶಕ್ತವಾಗಿಲ್ಲ. ಇವು ಶತ್ರುಗಳನ್ನು ಗೆಲ್ಲುವಾಗ ಮಹಾಭಾರವನ್ನು ಹೊರಲಾಗಲಿ ಆನೆಯನ್ನು ಕೊಲ್ಲಲಾಗಲೀ ನನ್ನ ತೋಳುಬೀಸನ್ನಾಗಲೀ ತಾಳಿಕೊಳ್ಳಲು ಸಮರ್ಥವಲ್ಲ. ಆದ್ದರಿಂದ ದಟ್ಟವಾದ ಎಲೆಗಳಿರುವ ಈ ಬನ್ನಿಮರವನ್ನು ಹತ್ತು. ಇದರಲ್ಲಿ ಶೂರ ಪಾಂಡುಪುತ್ರರ - ಯುಧಿಷ್ಠಿರ, ಭೀಮ, ಅರ್ಜುನ ಮತ್ತು ಯಮಳರ - ಬಿಲ್ಲು, ಬಾಣ, ಬಾವುಟ ಹಾಗೂ ದಿವ್ಯ ಕವಚಗಳನ್ನು ಅಡಗಿಸಿಡಲಾಗಿದೆ. ಅಲ್ಲಿ ಮಹಾಸತ್ವವುಳ್ಳ, ಒಂದೇ ಆದರೂ ಲಕ್ಷಬಿಲ್ಲುಗಳಿಗೆ ಸಮನಾದ, ರಾಷ್ಟ್ರವರ್ಧನಕರವಾದ ಪಾರ್ಥನ ಗಾಂಡೀವಧನುವಿದೆ. ಅದು ಒತ್ತಡವನ್ನು ಚೆನ್ನಾಗಿ ತಡೆದುಕೊಳ್ಳಬಲ್ಲದು. ತಾಳೆ ಮರದಂತೆ ದೊಡ್ಡದು. ಎಲ್ಲ ಆಯುಧಗಳಿಗಿಂತಲೂ ಬೃಹತ್ತಾದದು, ಶತ್ರುಗಳಿಗೆ ಬಾಧೆಯುಂಟು ಮಾಡುವಂಥದು. ಸುವರ್ಣಖಚಿತ, ದಿವ್ಯವಾದ, ನುಣುಪಾದ, ವಿಸ್ತಾರವಾದ, ಗಂಟಿಲ್ಲದ, ದೊಡ್ಡ ಭಾರವನ್ನು ಸಹಿಸಿಕೊಳ್ಳುವಂಥ, ವೈರಿಗಳಿಗೆ ಭಯಂಕರವಾದ, ನೋಡುವುದಕ್ಕೆ ಸುಂದರವಾದ ಅದರಂತೆಯೇ ಉಳಿದವರ ಎಲ್ಲ ಬಿಲ್ಲುಗಳೂ ಬಲ ಮತ್ತು ದೃಢತೆಯನ್ನುಳ್ಳವು.”ಉತ್ತರನು ಹೇಳಿದನು: “ಈ ಮರಕ್ಕೆ ಒಂದು ಮೃತಶರೀರವನ್ನು ಕಟ್ಟಲಾಗಿದೆಯೆಂದು ಕೇಳಿದ್ದೇನೆ. ಆದ್ದರಿಂದ ರಾಜಪುತ್ರನಾದ ನಾನು ಅದನ್ನೆಂತು ಕೈಯಿಂದ ಮುಟ್ಟಲಿ? ಕ್ಷತ್ರಿಯನಾಗಿ ಹುಟ್ಟಿದ, ಮಹಾರಾಜಪುತ್ರ, ಮಂತ್ರಯಜ್ಞವಿದ, ಸತ್ಪುರುಷನಾದ ನಾನು ಹೀಗೆ ಶವವನ್ನು ಮುಟ್ಟುವುದು ಸರಿಯಲ್ಲ. ಬೃಹನ್ನಡೇ! ಮೃತಶರೀರವನ್ನು ನಾನು ಮುಟ್ಟಿದರೆ ಶವವಾಹಕನಂತೆ ಅಶುಚಿಯಾದ ನನ್ನೊಡನೆ ಹೇಗೆ ತಾನೆ ನೀನು ವ್ಯವಹರಿಸೀಯೆ?”
ಬೃಹನ್ನಡೆಯು ಹೇಳಿದಳು: “ರಾಜೇಂದ್ರ! ವ್ಯವಹರಿಸಲು ಯೋಗ್ಯನೂ ಆಗುವೆ; ಶುಚಿಯಾಗಿಯೂ ಉಳಿಯುವೆ. ಹೆದರಬೇಡ! ಇವು ಬಿಲ್ಲುಗಳು. ಇಲ್ಲಿ ಮೃತಶರೀರವಿಲ್ಲ. ಮತ್ಸ್ಯರಾಜನ ಉತ್ತರಾಧಿಕಾರಿಯೂ ಉನ್ನತ ಕುಲದಲ್ಲಿ ಹುಟ್ಟಿದ ದೃಢಮನಸ್ಕನೂ ಆದ ನಿನ್ನಿಂದ ನಾನು ನಿಂದ್ಯವಾದ ಈ ಕಾರ್ಯವನ್ನೇಕೆ ಮಾಡಿಸಲಿ?”
ಪಾರ್ಥನು ಹೀಗೆ ಹೇಳಲು ಕುಂಡಲಧಾರಿ ಆ ವಿರಾಟಪುತ್ರನು ರಥದಿಂದಿಳಿದು ವಿವಶನಾಗಿ ಶಮೀವೃಕ್ಷವನ್ನು ಹತ್ತಿದನು. ಶತ್ರುನಾಶಕ ಧನಂಜಯನು ರಥದಲ್ಲಿ ಕುಳಿತು “ಆ ಕಟ್ಟನ್ನು ಬೇಗ ಬಿಚ್ಚು!” ಎಂದು ಆಜ್ಞಾಪಿಸಿದನು. ಉತ್ತರನು ಅಂತೆಯೇ ಅವುಗಳ ಕಟ್ಟುಗಳನ್ನು ಸುತ್ತಲೂ ಬಿಚ್ಚಿ, ಅಲ್ಲಿ ಬೇರೆ ನಾಲ್ಕು ಬಿಲ್ಲುಗಳೊಡನೆ ಇದ್ದ ಗಾಂಡೀವವನ್ನು ನೋಡಿದನು. ಕಟ್ಟನ್ನು ಕಳಚುತ್ತಿರಲು, ಸೂರ್ಯತೇಜಸ್ಸುಗಳನ್ನುಳ್ಳ ಆ ಬಿಲ್ಲುಗಳ ದಿವ್ಯಪ್ರಭೆ ಗ್ರಹಗಳ ಉದಯಕಾಲದ ಪ್ರಭೆಯಂತೆ ಹೊಮ್ಮಿತು. ವಿಜೃಂಭಿಸುವ ಸರ್ಪಗಳ ರೂಪದಂತಹ ಅವುಗಳ ರೂಪವನ್ನು ಕಂಡ ಅವನು ಕ್ಷಣಮಾತ್ರದಲ್ಲಿ ರೋಮಾಂಚನಗೊಂಡು ಭಯೋದ್ವಿಗ್ನನಾದನು. ಹೊಳೆಹೊಳೆಯುತ್ತಿರುವ ಆ ದೊಡ್ಡ ಬಿಲ್ಲುಗಳನ್ನು ಉತ್ತರನು ಮುಟ್ಟಿ ಈ ಮಾತನ್ನಾಡಿದನು: “ಚಿನ್ನದ ನೂರು ಚಿಕ್ಕೆಗಳನ್ನುಳ್ಳ, ಸಾವಿರಕೋಟಿ ಸುವರ್ಣಗಳ ಈ ಉತ್ತಮ ಬಿಲ್ಲು ಯಾರದ್ದು? ಬೆನ್ನಿನ ಮೇಲೆ ಹೊಳೆಯುವ ಚಿನ್ನದ ಸಲಗಗಳನ್ನು ಕೆತ್ತಿರುವ ಒಳ್ಳೆಯ ಅಂಚು-ಹಿಡಿಗಳನ್ನುಳ್ಳ ಈ ಉತ್ತಮ ಬಿಲ್ಲು ಯಾರದ್ದು? ಬೆನ್ನಿನ ಮೇಲೆ ಬಿಡಿಸಿರುವ ಶುದ್ಧ ಸುವರ್ಣದ ಅರವತ್ತು ಇಂದ್ರಗೋಪ (ಚಿಟ್ಟೆಗಳು) ಗಳು ಶೋಭಿಸುತ್ತಿರುವ ಈ ಉತ್ತಮ ಬಿಲ್ಲು ಯಾರದ್ದು? ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವ ಮೂರು ಸುವರ್ಣ ಸೂರ್ಯರನ್ನು ಕೆತ್ತಿರುವ ಈ ಉತ್ತಮ ಬಿಲ್ಲು ಯಾರದ್ದು? ಪುಟವಿಟ್ಟ ಚಿನ್ನದ ಚಿಟ್ಟೆಗಳನ್ನು ಚಿತ್ರಿಸಿರುವ ಬಂಗಾರ ಮತ್ತು ಮಣಿಗಳನ್ನು ಬಿಡಿಸಿದ ಈ ಉತ್ತಮ ಬಿಲ್ಲು ಯಾರದ್ದು? ಸುತ್ತಲೂ ಗರಿಗಳಿಂದ, ಚಿನ್ನದ ಮೊನೆಗಳಿಂದ ಕೂಡಿದ ಮತ್ತು ಚಿನ್ನದ ಬತ್ತಳಿಕೆಯಲ್ಲಿರುವ ಈ ಸಾವಿರ ಬಾಣಗಳು ಯಾರವು? ಉದ್ದವೂ, ದಪ್ಪವೂ, ಹದ್ದಿನ ಗರಿಗಳುಳ್ಳವೂ, ಕಲ್ಲಿನ ಮೇಲೆ ಮಸೆದವೂ, ಹಳದಿ ಬಣ್ಣದವೂ, ಒಳ್ಳೆಯ ತುದಿಗಳುಳ್ಳವೂ, ಹದಗೊಳಿಸಿದವೂ, ಉಕ್ಕಿನಿಂದ ಮಾಡಿದವೂ ಆದ ಈ ಬಾಣಗಳು ಯಾರವು? ಐದು ಹುಲಿಗಳ ಗುರುತುಗಳನ್ನುಳ್ಳ, ಹಂದಿಯ ಕಿವಿಯನ್ನು ಹೋಲುವ ಮತ್ತು ಹತ್ತು ಬಾಣಗಳನ್ನು ಹೂಡಬದುದಾಗಿರುವ ಈ ಕಪ್ಪು ಬಿಲ್ಲು ಯಾರದ್ದು? ರಕ್ತವನ್ನು ಕುಡಿಯುವಂತಹ, ಪೂರ್ತಿ ಉಕ್ಕಿನಿಂದ ಮಾಡಿದ, ಈ ದಪ್ಪ, ಉದ್ದ, ಏಳು ನೂರು ಬಾಣಗಳು ಯಾರವು? ಪೂರ್ವಾರ್ಧದಲ್ಲಿ ಗಿಣಿಯ ರೆಕ್ಕೆಯಂಥ ಬಣ್ಣದ ಹೊದಿಕೆಯನ್ನುಳ್ಳವೂ, ಉತ್ತರಾರ್ಧದಲ್ಲಿ ಹದಗೊಳಿಸಿದವೂ, ಚಿನ್ನದ ಗರಿಗಳನ್ನುಳ್ಳವೂ, ಉಕ್ಕಿನಿಂದಾದವೂ, ಕಲ್ಲಿನ ಮೇಲೆ ಮಸೆದವೂ ಆದ ಈ ಬಾಣಗಳು ಯಾರವು? ನೆಲಗಪ್ಪೆಯಂತ ಹಿಂಬಾಗ ಮುಂಬಾಗಗಳನ್ನುಳ್ಳ, ವ್ಯಾಘ್ರಚರ್ಮದ ಚೀಲದಲ್ಲಿರಿಸಲಾದ, ಸುಂದರ ಚಿನ್ನದ ಹಿಡಿಯನ್ನುಳ್ಳ ಈ ದೀರ್ಘ ಮಹಾಖಡ್ಗ ಯಾರದ್ದು? ಒಳ್ಳೆಯ ಅಲಗುಳ್ಳದ್ದೂ, ಸುಂದರ ಚೀಲದಲ್ಲಿರುವ ಕಿರುಗೆಜ್ಜೆಗಳಿಂದ ಕೂಡಿದ ಚಿನ್ನದ ಹಿಡಿಯುಳ್ಳ, ತುಂಬ ನುಣುಪಾದ ಈ ದಿವ್ಯ ಮಹಾ ಖಡ್ಗ ಯಾರದ್ದು? ಗೋವಿನ ಚರ್ಮದ ಚೀಲದಲ್ಲಿರಿಸಿದ, ಚಿನ್ನದ ಹಿಡಿಯುಳ್ಳ, ಮುರಿಯಲಾಗದ, ನಿಷಧ ದೇಶದಲ್ಲಿ ಮಾಡಿದ, ಯಾವುದೇ ಕಾರ್ಯವನ್ನೂ ನಿರ್ವಹಿಸಬಲ್ಲ ಈ ವಿಮಲ ಖಡ್ಗ ಯಾರದ್ದು? ಆಡಿನ ಚರ್ಮದ ಚೀಲದಲ್ಲಿರುವ, ಸುವರ್ಣಖಚಿತವಾದ, ಸರಿಯಾದ ಅಳತೆ ಮತ್ತು ಆಕಾರದ, ಹದಗೊಳಿಸಿದ, ಆಕಾಶದ ಬಣ್ಣದ ಈ ಕತ್ತಿ ಯಾರದ್ದು? ಚೆನ್ನಾಗಿ ಉರಿಯುತ್ತಿರುವ ಅಗ್ನಿಯ ಪ್ರಭೆಯುಳ್ಳ, ಪುಟವಿಟ್ಟ ಚಿನ್ನದ ಓರೆಯ, ಭಾರವಾದ, ಹದಗೊಳಿಸಿದ, ತುಂಬ ನುಣುಪಾಗಿರುವ, ಎಲ್ಲಿಯೂ ಭಿನ್ನವಾಗಿರದ ಉದ್ದವಾದ ಈ ಕತ್ತಿ ಯಾರದ್ದು? ಬೃಹನ್ನಡೇ! ನಾನು ಕೇಳಿದ ಈ ಪ್ರಶ್ನೆಗಳಿಗೆ ದಿಟವಾದ ಉತ್ತರ ಕೊಡು. ಈ ಮಹತ್ತಾದುದೆಲ್ಲವನ್ನೂ ಕಂಡು ನನಗೆ ಪರಮ ವಿಸ್ಮಯವಾಗಿದೆ.”
ಬೃಹನ್ನಡೆಯು ಹೇಳಿದಳು: “ನನ್ನನ್ನು ನೀನು ಮೊದಲು ಕೇಳಿದ ಬಿಲ್ಲು ಲೋಕಪ್ರಸಿದ್ಧವೂ ಶತ್ರುಸೇನಾನಾಶಕವೂ ಆದ ಪಾರ್ಥನ ಗಾಂಡೀವವೆಂಬ ಧನುಸ್ಸು. ಎಲ್ಲ ಆಯುಧಗಳಲ್ಲಿ ದೊಡ್ಡದೂ ಸುವರ್ಣಾಲಂಕೃತವೂ ಆದ ಈ ಗಾಂಡೀವವು ಅರ್ಜುನನ ಪರಮಾಯುಧವಾಗಿತ್ತು. ಸಾವಿರ ಆಯುಧಗಳಿಗೆ ಸಮನಾದ, ರಾಷ್ಟ್ರವರ್ಧಕವಾದ ಇದರಿಂದ ಪಾರ್ಥನು ಯುದ್ಧದಲ್ಲಿ ದೇವತೆಗಳನ್ನೂ ಮನುಷ್ಯರನ್ನೂ ಗೆಲ್ಲುತ್ತಾನೆ. ದೇವ-ದಾನವ-ಗಂಧರ್ವರಿಂದ ಬಹುಕಾಲ ಪೂಜಿತವಾದ ಇದನ್ನು ಬ್ರಹ್ಮನು ಸಾವಿರ ವರ್ಷ ಧರಿಸಿದ್ದನು. ಅನಂತರ ಇದನ್ನು ಪ್ರಜಾಪತಿಯು ಐನೂರಾ ಮೂರು ವರ್ಷಗಳು ಮತ್ತು ಬಳಿಕ ಶಕ್ರನು ಎಂಬತ್ತೈದು ವರ್ಷ ಧರಿಸಿದ್ದರು. ಆಮೇಲೆ ಚಂದ್ರನು ಐನೂರು ವರ್ಷ, ರಾಜ ವರುಣನು ನೂರುವರ್ಷ ಧರಿಸಿದರು. ಕಡೆಗೆ ಶ್ವೇತವಾಹನ ಪಾರ್ಥನು ಇದನ್ನು ಅರುವತ್ತೈದು ವರ್ಷ ಧರಿಸಿದ್ದಾನೆ. ಮಹಾ ಸತ್ವವುಳ್ಳದ್ದೂ, ಮಹದ್ದಿವ್ಯವೂ, ಉತ್ತಮವೂ, ಸುರಮರ್ತ್ಯರಲ್ಲಿ ಪೂಜಿತವೂ ಆದ ಈ ಧನುಸ್ಸು ಶ್ರೇಷ್ಠ ಆಕಾರದಲ್ಲಿದೆ. ಒಳ್ಳೆಯ ಪಕ್ಕಗಳನ್ನೂ ಚಿನ್ನದ ಹಿಡಿಯನ್ನೂ ಹೊಂದಿದ ಈ ಮತ್ತೊಂದು ಬಿಲ್ಲು ಭೀಮಸೇನನದು. ಇದರಿಂದ ಆ ಶತ್ರುನಾಶಕ ಭೀಮನು ಪೂರ್ವದಿಕ್ಕನ್ನು ಗೆದ್ದನು. ಇಂದ್ರಗೋಪಗಳನ್ನು ಬಿಡಿಸಿದ ಸುಂದರವಾದ ಆಕೃತಿಯನ್ನುಳ್ಳ ಈ ಉತ್ತಮ ಬಿಲ್ಲು ರಾಜ ಯುಧಿಷ್ಠಿರನದು. ಯಾವುದರಲ್ಲಿ ತೇಜಸ್ಸಿನಿಂದ ಹೊಳೆಯುತ್ತಿರುವ ಮಿರುಗುವ ಚಿನ್ನದ ಸೂರ್ಯರು ಪ್ರಕಾಶಿಸುತ್ತಾರೋ ಆ ಆಯುಧವು ನಕುಲನದು. ಸುವರ್ಣ ಪತಂಗಗಳು ಚಿತ್ರಿತವಾದ ಈ ಪುಟವಿಟ್ಟ ಚಿನ್ನದ ಬಿಲ್ಲು ಮಾದ್ರೀಸುತ ಸಹದೇವನದು. ಗರಿಗಳನ್ನುಳ್ಳ, ಕತ್ತಿಯಂತಿರುವ, ಸರ್ಪದ ವಿಷದಂತೆ ಮಾರಕವಾದ ಈ ಸಾವಿರ ಬಾಣಗಳು ಅರ್ಜುನನವು. ರಣದಲ್ಲಿ ತೇಜಸ್ಸಿನಿಂದ ಪ್ರಜ್ವಲಿಸುವ ಶೀಘ್ರಗಾಮಿಗಳಾದ ಈ ಬಾಣಗಳು ಯುದ್ಧದಲ್ಲಿ ವೀರನು ಶತ್ರುಗಳ ಮೇಲೆ ಪ್ರಯೋಗಿಸಿದಾಗ ಅಕ್ಷಯವಾಗುತ್ತವೆ. ದಪ್ಪವೂ ಉದ್ದವೂ ಅರ್ಧಚಂದ್ರಬಿಂಬದಂತೆ ಕಾಣಿಸುವ ಶತ್ರುನಾಶಕವಾದ ಈ ಹರಿತ ಬಾಣಗಳು ಭೀಮನವು. ಹಳದಿ ಬಣ್ಣದ ಚಿನ್ನದ ಗರಿಗಳನ್ನುಳ್ಳ, ಕಲ್ಲಿನ ಮೇಲೆ ಮಸೆದು ಹರಿತಗೊಳಿಸಿದ ಬಾಣಗಳುಳ್ಳ, ಐದು ಹುಲಿಗಳ ಚಿಹ್ನೆಗಳನ್ನುಳ್ಳ ಈ ಬತ್ತಳಿಕೆ ನಕುಲನದು. ಯುದ್ಧದಲ್ಲಿ ಪಶ್ಚಿಮ ದಿಕ್ಕನ್ನೆಲ್ಲ ಗೆದ್ದ ಈ ಬಾಣ ಸಮೂಹವು ಧೀಮಂತ ಮಾದ್ರೀಪುತ್ರನದಾಗಿತ್ತು. ಸೂರ್ಯನ ಆಕಾರವುಳ್ಳ ಪೂರ್ತಿ ಉಕ್ಕಿನಿಂದ ಮಾಡಿದ ಸುಂದರ ಕ್ರಿಯಾತ್ಮಕ ಈ ಬಾಣಗಳು ಧೀಮಂತ ಸಹದೇವನವು. ಹರಿತವೂ, ಹದಗೊಳಿಸಿದವೂ, ದೊಡ್ಡವೂ, ಉದ್ದವೂ ಆದ, ಚಿನ್ನದ ಗರಿಗಳನ್ನುಳ್ಳ, ಮೂರು ಗೆಣ್ಣುಗಳುಳ್ಳ ಈ ಮಹಾಶರಗಳು ರಾಜ ಯುಧಿಷ್ಠಿರನವು. ಉದ್ದ ನೆಲಗಪ್ಪೆಯಂಥ ಹಿಂಬದಿ ಮತ್ತು ಮೂತಿಯುಳ್ಳ, ಯುದ್ಧದಲ್ಲಿ ಮಹಾಭಾರವನ್ನು ಸಹಿಸಬಲ್ಲ, ಈ ದೃಢ ಕತ್ತಿಯು ಅರ್ಜುನನದು. ವ್ಯಾಘ್ರಚರ್ಮದ ಒರೆಯನ್ನುಳ್ಳ, ಮಹಾಭಾರವನ್ನು ಸಹಿಸಬಲ್ಲ, ಶತ್ರುಗಳಿಗೆ ಭಯಂಕರವಾದ ಈ ದಿವ್ಯ ಮಹಾಖಡ್ಗ ಭೀಮಸೇನನದು. ಒಳ್ಳೆಯ ಅಲಗುಳ್ಳ, ಸುಂದರ ಒರೆಯಲ್ಲಿರುವ, ಅತ್ತ್ಯುತ್ತಮ ಚಿನ್ನದ ಹಿಡಿಯುಳ್ಳ ಈ ಖಡ್ಗವು ಧೀಮಂತ ಕುರುಪುತ್ರ ಧರ್ಮರಾಜನದು. ಆಡಿನ ಚರ್ಮದ ಒರೆಯಲ್ಲಿರಿಸಿದ, ವಿಚಿತ್ರ ಬಳಕೆಗೆ ಬರುವ, ಮಹಾಭಾರವನ್ನು ಸಹಿಸಬಲ್ಲ ದೃಢವಾದ ಈ ಖಡ್ಗವು ನಕುಲನದು. ಗೋವಿನ ಚರ್ಮದ ಒರೆಯಲ್ಲಿರಿಸಿದ ಸರ್ವಭಾರವನ್ನೂ ಸಹಿಸಬಲ್ಲ ಈ ದೃಢ ವಿಮಲ ಖಡ್ಗವು ಸಹದೇವನೆಂದು ತಿಳಿ.”
ಬೃಹನ್ನಡೆಯು ತನ್ನ ನಿಜರೂಪವನ್ನು ಉತ್ತರನಿಗೆ ತಿಳಿಸಿದುದು
ಉತ್ತರನು ಹೇಳಿದನು: “ಮಹಾತ್ಮರೂ, ಶೀಘ್ರಕರ್ಮಿಗಳೂ ಆದ ಪಾಂಡವರ ಈ ಚಿನ್ನದಿಂದ ಮಾಡಿದ ಸುಂದರ ಆಯುಧಗಳು ಪ್ರಕಾಶಿಸುತ್ತಿವೆ. ಆದರೆ ಕುಂತೀಸುತ ಅರ್ಜುನನೆಲ್ಲಿ? ಕೌರವ್ಯ ಯುಧಿಷ್ಠಿರನೆಲ್ಲಿ? ನಕುಲ ಸಹದೇವರೆಲ್ಲಿ? ಪಾಂಡವ ಭೀಮಸೇನನೆಲ್ಲಿ? ಪಗಡೆಯಾಟದಿಂದ ರಾಜ್ಯವನ್ನು ಕಳೆದುಕೊಂಡ ನಂತರ ಆ ಸರ್ವಶತ್ರುನಾಶಕ ಮಹಾತ್ಮರ ವಿಷಯ ಎಂದೂ ಕೇಳಿಬಂದಿಲ್ಲ. ಸ್ತ್ರೀರತ್ನವೆಂದು ಹೆಸರಾದ ಪಾಂಚಾಲಿ ದ್ರೌಪದಿಯೆಲ್ಲಿ? ಆಗ ಕೃಷ್ಣೆಯು ಪಗಡೆಯಾಟದಲ್ಲಿ ಸೋತ ಆ ಪಾಂಡವರನ್ನೆ ಅನುಸರಿಸಿ ಕಾಡಿಗೆ ಹೋದಳಷ್ಟೆ?”
ಅರ್ಜುನನು ಹೇಳಿದನು: “ನಾನೇ ಕುಂತೀಪುತ್ರ ಅರ್ಜುನ. ಆಸ್ಥಾನಿಕನೇ ಯುಧಿಷ್ಠಿರ. ನಿನ್ನ ತಂದೆಗೆ ರುಚಿಕರ ಆಡುಗೆ ಮಾಡುವ ಬಲ್ಲವನೇ ಭೀಮಸೇನ. ಅಶ್ವಪಾಲಕನೇ ನಕುಲ. ಗೋಶಾಲೆಯಲ್ಲಿರುವವನೇ ಸಹದೇವ, ಯಾರಿಗಾಗಿ ಕೀಚಕರು ಹತರಾದರೋ ಆ ಸೈರಂಧ್ರಿಯೇ ದ್ರೌಪದಿಯೆಂದು ತಿಳಿ.”
ಉತ್ತರನು ಹೇಳಿದನು: “ನಾನು ಹಿಂದೆ ಕೇಳಿದ್ದ ಪಾರ್ಥನ ಹತ್ತು ಹೆಸರುಗಳನ್ನು ನೀನು ಹೇಳುವುದಾದರೆ ನಿನ್ನ ಹೇಳಿಕೆಯೆಲ್ಲವನ್ನೂ ನಂಬುತ್ತೇನೆ.”
ಅರ್ಜುನನು ಹೇಳಿದನು: “ನನ್ನ ಹತ್ತು ಹೆಸರುಗಳನ್ನೂ ನಿನಗೆ ಹೇಳುತ್ತೇನೆ: ಅರ್ಜುನ, ಫಲ್ಗುನ, ಜಿಷ್ಣು, ಕಿರೀಟಿ, ಶ್ವೇತವಾಹನ, ಬೀಭತ್ಸು, ವಿಜಯ, ಕೃಷ್ಣ, ಸವ್ಯಸಾಚಿ ಮತ್ತು ಧನಂಜಯ.”
ಉತ್ತರನು ಹೇಳಿದನು: “ಯಾವುದರಿಂದ ನೀನು ವಿಜಯನೆಂದಾದೆ? ಏತರಿಂದ ಶ್ವೇತವಾಹನನಾದೆ? ಏತರಿಂದ ಕಿರೀಟಿ ಎಂದಾದೆ? ಸವ್ಯಸಾಚಿ ಹೇಗಾದೆ? ಏತರಿಂದ ಅರ್ಜುನ, ಫಲ್ಗುನ, ಜಿಷ್ಣು, ಕೃಷ್ಣ, ಬೀಭತ್ಸು, ಧನಂಜಯ ಎಂದೆನಿಸಿಕೊಂಡೆ? ನನಗೆ ನಿಜವಾಗಿ ಹೇಳು. ಆ ವೀರನ ಹೆಸರುಗಳಿಗೆ ಕಾರಣಗಳನ್ನು ಚೆನ್ನಾಗಿ ಕೇಳಿ ಬಲ್ಲೆ.”
ಅರ್ಜುನನು ಹೇಳಿದನು: “ನಾನು ಎಲ್ಲ ದೇಶಗಳನ್ನೂ ಗೆದ್ದು ಐಶ್ವರ್ಯವನ್ನೆಲ್ಲ ಸುಲಿದುಕೊಂಡು ಸಂಪತ್ತಿನ ನಡುವೆ ಇರುತ್ತೇನೆ. ಆದುದರಿಂದ ನನ್ನನ್ನು ಧನಂಜಯನೆಂದು ಕರೆಯುತ್ತಾರೆ. ನಾನು ಯುದ್ಧದುರ್ಮದರನ್ನು ಯುದ್ಧದಲ್ಲಿ ಎದುರಿಸಿದಾಗ ಅವರನ್ನು ಗೆಲ್ಲದೇ ಹಿಂದಿರುಗುವುದಿಲ್ಲ. ಆದುದರಿಂದ ನನ್ನನ್ನು ವಿಜಯನೆಂದು ತಿಳಿಯುತ್ತಾರೆ. ನಾನು ಯುದ್ಧದಲ್ಲಿ ಕಾದುವಾಗ ಚಿನ್ನದ ಕವಚವುಳ್ಳ ಬಿಳಿಯಕುದುರೆಗಳನ್ನು ನನ್ನ ರಥಕ್ಕೆ ಹೂಡಲಾಗುತ್ತದೆ. ಅದರಿಂದ ನಾನು ಶ್ವೇತವಾಹನ. ನಾನು ಉತ್ತರ ಮತ್ತು ಪೂರ್ವ ಫಲ್ಗುನೀ ನಕ್ಷತ್ರದಂದು ಹಿಮವತ್ಪರ್ವತದ ತಪ್ಪಲಿನಲ್ಲಿ ಹುಟ್ಟಿದೆ. ಆದುದರಿಂದ ನನ್ನನ್ನು ಫಲ್ಗುನನೆಂದು ತಿಳಿಯುತ್ತಾರೆ. ಹಿಂದೆ ದಾನವಶ್ರೇಷ್ಠರೊಡನೆ ಯುದ್ಧಮಾಡುವಾಗ ಇಂದ್ರನು ಸೂರ್ಯಸಮಾನ ಕಿರೀಟವನ್ನು ನನ್ನ ತಲೆಗಿಟ್ಟನು. ಆದುದರಿಂದ ನನ್ನನ್ನು ಕಿರೀಟಿಯೆನ್ನುತ್ತಾರೆ. ನಾನು ಯುದ್ಧಮಾಡುವಾಗ ಎಂದೂ ಬೀಭತ್ಸವಾದ ಕರ್ಮವನ್ನೆಸಗುವುದಿಲ್ಲ. ಅದರಿಂದ ದೇವ-ಮಾನವರು ನನ್ನನ್ನು ಬೀಭತ್ಸುವೆಂದು ತಿಳಿಯುತ್ತಾರೆ. ಗಾಂಡೀವವನ್ನು ಸೆಳೆಯುವಾಗ ನನ್ನ ಎರಡು ಕೈಗಳೂ ಬಲಗೈಗಳೇ. ಅದರಿಂದ ದೇವ-ಮಾನವರು ನನ್ನನ್ನು ಸವ್ಯಸಾಚಿಯೆಂದು ತಿಳಿಯುತ್ತಾರೆ. ಚತುಃಸಮುದ್ರಪರ್ಯಂತವಾದ ಈ ಭೂಮಿಯಲ್ಲಿ ನನ್ನ ಬಣ್ಣಕ್ಕೆ ಸಮಾನವಾದ ಬಣ್ಣ ದುರ್ಲಭ. ಅಲ್ಲದೆ ನಾನು ನಿರ್ಮಲವಾದ ಕಾರ್ಯವನ್ನು ಮಾಡುತ್ತೇನೆ. ಅದರಿಂದ ನನ್ನನ್ನು ಅರ್ಜುನನೆಂದು ತಿಳಿಯುತ್ತಾರೆ. ಪಾಕಶಾಸನನ ಮಗನಾದ ನಾನು ಸಮೀಪಿಸಲಾಗದವನು; ಎದುರಿಸಲಾಗದವನು, ಶತ್ರುಗಳನ್ನು ದಮನಮಾಡತಕ್ಕವನು. ಅದರಿಂದ ದೇವ-ಮಾನವರಲ್ಲಿ ನಾನು ಜಿಷ್ಣುವೆಂದು ಪ್ರಸಿದ್ಧನಾಗಿದ್ದೇನೆ. ಬಾಲ್ಯದಲ್ಲಿ ನಾನು ಕಪ್ಪುಬಣ್ಣದಿಂದ ಕೂಡಿ ಹೊಳೆಯುತ್ತಿದ್ದುದರಿಂದಲೂ, ತಂದೆಗೆ ಪ್ರಿಯನಾಗಿದ್ದುದರಿಂದಲೂ ನನ್ನ ತಂದೆಯು ನನಗೆ ಕೃಷ್ಣನೆಂಬ ಹತ್ತನೆಯ ಹೆಸರನ್ನಿಟ್ಟನು.”
ಬಳಿಕ ಆ ವಿರಾಟಪುತ್ರನು ಪಾರ್ಥನನ್ನು ಸಮೀಪಿಸಿ ಅಭಿವಾದನ ಮಾಡಿ ಹೇಳಿದನು: “ನಾನು ಭೂಮಿಂಜಯ. ಉತ್ತರನೆಂಬ ಹೆಸರೂ ನನಗುಂಟು. ಪಾರ್ಥ! ಅದೃಷ್ಟವಶಾತ್ ನಾನು ನಿನ್ನನ್ನು ನೋಡುತ್ತಿದ್ದೇನೆ. ನಿನಗೆ ಸ್ವಾಗತ! ಕೆಂಪು ಕಣ್ಣುಳ್ಳವನೇ! ಗಜರಾಜನ ಸೊಂಡಿಲಿನಂಥ ಮಹಾಬಾಹುಗಳುಳ್ಳವನೇ! ಅಜ್ಞಾನದಿಂದ ನಾನು ನಿನ್ನ ಬಗ್ಗೆ ನುಡಿದುದನ್ನು ಕ್ಷಮಿಸು. ನೀನು ಹಿಂದೆ ಅದ್ಭುತವೂ ದುಷ್ಕರವೂ ಆದ ಕಾರ್ಯಗಳನ್ನು ಮಾಡಿದ್ದವನಾದ್ದರಿಂದ ನನ್ನ ಹೆದರಿಕೆ ಕಳೆಯಿತು. ನಿನ್ನಲ್ಲಿ ನನಗೆ ಪರಮ ಪ್ರೀತಿಯುಂಟಾಗಿದೆ.”
ಉತ್ತರನು ಅರ್ಜುನನ ಸಾರಥಿಯಾದುದು
ಉತ್ತರನು ಹೇಳಿದನು: “ವೀರ! ನಾನು ಸಾರಥಿಯಾಗಿರುವ ಈ ದೊಡ್ಡ ರಥದಲ್ಲಿ ಕುಳಿತು ನೀನು ಯಾವ ಸೈನ್ಯದತ್ತ ಹೋಗಬಯಸಿ ಹೇಳುತ್ತೀಯೋ ಅಲ್ಲಿಗೆ ನಿನ್ನನ್ನು ಒಯ್ಯುತ್ತೇನೆ.”
ಅರ್ಜುನನು ಹೇಳಿದನು: “ಪುರುಷಶ್ರೇಷ್ಠ! ನಿನ್ನ ವಿಷಯದಲ್ಲಿ ಸಂತುಷ್ಟನಾಗಿದ್ದೇನೆ. ನಿನಗಿನ್ನು ಭಯವಿಲ್ಲ. ರಣದಲ್ಲಿ ನಿನ್ನ ವೈರಿಗಳನ್ನು ಓಡಿಸಿಬಿಡುತ್ತೇನೆ. ಸ್ವಸ್ಥನಾಗಿರು. ನಾನು ಈ ಯುದ್ಧದಲ್ಲಿ ಬಯಂಕರವೂ ಮಹತ್ತೂ ಆದುದನ್ನು ಸಾಧಿಸುತ್ತಾ ಶತ್ರುಗಳೊಡನೆ ಹೋರಾಡುವುದನ್ನು ನೋಡು. ಈ ಎಲ್ಲ ಬತ್ತಳಿಕೆಗಳನ್ನೂ ನನ್ನ ರಥಕ್ಕೆ ಬೇಗ ಬಿಗಿ. ಈ ಸುವರ್ಣಖಚಿತ ಕತ್ತಿಯನ್ನು ತೆಗೆದುಕೋ. ನಾನು ಕುರುಗಳೊಡನೆ ಹೋರಾಡುತ್ತೇನೆ. ನಿನ್ನ ಗೋವುಗಳನ್ನು ಗೆದ್ದು ಕೊಡುತ್ತೇನೆ. ನಿನ್ನ ನಗರವು ಈ ರಥದ ಮಧ್ಯಭಾಗದಲ್ಲಿ ಇದೆಯೋ ಎಂಬಂತೆ ನನ್ನಿಂದ ರಕ್ಷಿತವಾಗಿದೆ. ನನ್ನ ಸಂಕಲ್ಪವೇ ನಗರದ ದಾರಿಗಳು ಮತ್ತು ಓಣಿಗಳು. ಬಾಹುಗಳೇ ಕೋಟೆ ಮತ್ತು ಹೆಬ್ಬಾಗಿಲುಗಳು. ರಥದ ಮೂರು ದಂಡಗಳೇ ಮೂರುಬಗೆಯ ಸೇನೆಗಳು. ಬತ್ತಳಿಕೆಯೇ ರಕ್ಷಣಸಾಮಗ್ರಿ. ನನ್ನ ಈ ಧ್ವಜವೇ ನಗರದ ಧ್ವಜಸಮೂಹ. ಈ ನನ್ನ ಬಿಲ್ಲಿನ ಹೆದೆಯೇ ನಗರ ರಕ್ಷಣೆಯ ಫಿರಂಗಿ. ಶತ್ರುನಾಶಕ ಕೋಪವೇ ದೃಢಚಿತ್ತ ಕಾರ್ಯ. ರಥಚಕ್ರದ ಶಬ್ಧವೇ ನಗರದ ದುಂದುಭಿಗಳು. ವಿರಾಟಪುತ್ರ! ಗಾಂಡೀವ ಧನುವನ್ನುಳ್ಳ ನಾನು ಕುಳಿತಿರುವ ಈ ರಥವು ಯುದ್ಧದಲ್ಲಿ ಶತ್ರುಸೇನೆಗೆ ಅಜೇಯವಾದುದು. ನಿನ್ನ ಹೆದರಿಕೆ ತೊಲಗಲಿ.”
ಉತ್ತರನು ಹೇಳಿದನು: “ಇವರಿಗೆ ನಾನು ಇನ್ನು ಹೆದರುವುದಿಲ್ಲ. ಯುದ್ಧದಲ್ಲಿ ನೀನು ಸ್ಥಿರನೆಂಬುವುದನ್ನು ನಾನು ಬಲ್ಲೆ. ಸಂಗ್ರಾಮದಲ್ಲಿ ನೀನು ಸಾಕ್ಷಾತ್ ಕೇಶವನಿಗೆ ಅಥವಾ ಇಂದ್ರನಿಗೆ ಸಮಾನನೆಂದೂ ಬಲ್ಲೆ. ಆದರೆ ಇದನ್ನು ಆಲೋಚಿಸುತ್ತ ನಾನು ಸಂಪೂರ್ಣ ದಿಗ್ಭ್ರಾಂತನಾಗುತ್ತಿದ್ದೇನೆ. ಮಂದ ಬುದ್ಧಿಯವನಾದ ನಾನು ಯಾವುದೇ ನಿರ್ಧಾರಕ್ಕೆ ಬರಲಾರದವನಾಗಿದ್ದೇನೆ. ಇಂಥಹ ವೀರಾಂಗಗಳಿಂದ ಕೂಡಿದ ರೂಪವುಳ್ಳ ಮತ್ತು ಸಲ್ಲಕ್ಷಣಗಳಿಂದ ಶ್ಲಾಘ್ಯನಾದ ನಿನಗೆ ಯಾವ ಕರ್ಮವಿಪಾಕದಿಂದ ಈ ನಪುಂಸಕತ್ವ ಉಂಟಾಯಿತು? ನಪುಂಸಕ ವೇಶದಲ್ಲಿ ಸಂಚರಿಸುವ ಶೂಲಪಾಣಿಯೆಂದು, ಗಂಧರ್ವರಾಜಸಮಾನನೆಂದು ಅಥವಾ ದೇವೇಂದ್ರನೆಂದು ನಿನ್ನನ್ನು ತಿಳಿಯುತ್ತೇನೆ.”
ಅರ್ಜುನನು ಹೇಳಿದನು: “ಇದೋ ನಾನು ನಿನಗೆ ಹೇಳುತ್ತಿರುವುದು ಸತ್ಯ. ಅಣ್ಣನ ಆಜ್ಞೆಯಂತೆ ಈ ಬ್ರಹ್ಮಚರ್ಯವ್ರತವನ್ನು ಒಂದು ವರ್ಷಕಾಲ ಆಚರಿಸುತ್ತಿದ್ದೇನೆ. ಮಹಾಬಾಹೋ! ನಾನು ನಪುಂಸಕನಲ್ಲ. ಪರಾಧೀನನಾಗಿ, ಧರ್ಮಯುಕ್ತನಾಗಿ ವ್ರತವನ್ನು ಮುಗಿಸಿ ದಡಮುಟ್ಟಿದ ರಾಜಪುತ್ರನೆಂದು ನೀನು ನನ್ನನ್ನು ತಿಳಿ.”
ಉತ್ತರನು ಹೇಳಿದನು: “ನನಗೆ ನೀನಿಂದು ಪರಮಾನುಗ್ರವನ್ನುಂಟುಮಾಡಿರುವೆ. ನನ್ನ ತರ್ಕ ವ್ಯರ್ಥವಾಗಲಿಲ್ಲ. ಇಂತಹ ನರೋತ್ತಮರು ಲೋಕದಲ್ಲಿ ನಪುಂಸಕರೂಪದಲ್ಲಿರುವುದಿಲ್ಲ. ಯುದ್ಧದಲ್ಲಿ ನನಗೆ ನೀನು ಸಹಾಯಮಾಡುತ್ತೀಯೆ. ಈಗ ನಾನು ದೇವತೆಗಳೊಡನೆ ಕೂಡ ಹೋರಾಡಬಲ್ಲೆ. ಆ ನನ್ನ ಹೆದರಿಕೆಯು ಅಳಿದುಹೋಯಿತು. ಮುಂದೆ ಏನು ಮಾಡಲಿ? ನನಗೆ ಹೇಳು. ಶತ್ರುರಥಗಳನ್ನು ಮುರಿಯಬಲ್ಲ ನಿನ್ನ ಕುದುರೆಗಳನ್ನು ನಾನು ಹಿಡಿದುಕೊಳ್ಳುತ್ತೇನೆ. ಪುರುಷಶ್ರೇಷ್ಠ! ಸಾರಥ್ಯದಲ್ಲಿ ನಾನು ಆಚಾರ್ಯನಿಂದ ಶಿಕ್ಷಣ ಪಡೆದಿದ್ದೇನೆ. ಸಾರಥ್ಯದಲ್ಲಿ ವಾಸುದೇವನಿಗೆ ದಾರುಕನು ಹೇಗೋ ಇಂದ್ರನಿಗೆ ಮಾತಲಿಯು ಹೇಗೋ ಹಾಗೆ ನಾನು ನಿನಗೆ ಸುಶಿಕ್ಷಿತ ಸಾರಥಿ ಎಂದು ತಿಳಿದುಕೋ. ಬಲಗಡೆಯಲ್ಲಿ ನೊಗಕ್ಕೆ ಕಟ್ಟಿದ ಕುದುರೆ ಸುಗ್ರೀವದಂತಿದೆ. ಅದು ಚಲಿಸುವಾಗ ಹೆಜ್ಜೆಗಳು ಭೂಮಿಯನ್ನು ಸೋಕಿದ್ದು ಕಾಣುವುದಿಲ್ಲ. ರಥದ ಎಡಗಡೆಯ ನೊಗಕ್ಕೆ ಕಟ್ಟಿದ ಸುಂದರವೂ ಕುದುರೆಗಳಲ್ಲಿ ಶ್ರೇಷ್ಠವೂ ಆದ ಇನ್ನೊಂದು ಕುದುರೆ ವೇಗದಲ್ಲಿ ಮೇಘಪುಷ್ಪಕ್ಕೆ ಸಮಾನವಾಗಿದೆಯೆಂದು ಭಾವಿಸುತ್ತೇನೆ. ಸುಂದರ ಚಿನ್ನದ ಕವಚವನ್ನುಳ್ಳ, ಹಿಂಬಾಗದಲ್ಲಿ ಎಡಗಡೆಯಿರುವ ವೇಗದಲ್ಲಿ ಬಲವತ್ತರವಾದ ಈ ಮತ್ತೊಂದು ಕುದುರೆಯನ್ನು ಸೈನ್ಯ ಎಂದು ತಿಳಿಯುತ್ತೇನೆ. ಹಿಂಬಾಗದಲ್ಲಿ ಬಲಗಡೆಯಿರುವ ಈ ಕುದುರೆ ವೇಗದಲ್ಲಿ ಬಲಾಹಕಕ್ಕಿಂತ ಬಲವತ್ತರವಾದುದೆಂದು ನನ್ನ ಅಭಿಪ್ರಾಯ. ಯುದ್ಧದಲ್ಲಿ ಧನುರ್ಧರನಾದ ನಿನ್ನನ್ನೇ ಹೊರಲು ಈ ರಥ ತಕ್ಕುದಾಗಿದೆ. ನೀನು ಕೂಡ ಈ ರಥದಲ್ಲಿ ಕುಳಿತು ಯುದ್ಧಮಾಡಲು ತಕ್ಕವನೆಂದು ನನ್ನ ಅಭಿಪ್ರಾಯ.”
ಬಳಿಕ ಆ ಸತ್ವಶಾಲಿ ಅರ್ಜುನನು ತೋಳುಗಳಿಂದ ಬಳೆಗಳನ್ನು ಕಳಚಿ, ಸುಂದರವಾಗಿ ಹೊಳೆಯುವ ದುಂದುಭಿಯಂತೆ ಧ್ವನಿಮಾಡುವ ಕೈಗಾಪುಗಳನ್ನು ತೊಟ್ಟುಕೊಂಡನು. ಅನಂತರ ಅವನು ಸುರುಳಿ ಸುರುಳಿಯಾಗಿರುವ ಕಪ್ಪುಗೂದಲನ್ನು ಬಿಳಿಯ ಬಟ್ಟೆಯಿಂದ ಮೇಲೆತ್ತಿ ಕಟ್ಟಿ, ಗಾಂಡೀವ ಧನುಸ್ಸಿಗೆ ಬೇಗ ಹೆದೆಯೇರಿಸಿ ಅದನ್ನು ಮಿಡಿದನು. ಮಹಾಪರ್ವತವು ಮಹಾಪರ್ವತಕ್ಕೆ ತಾಗಿದಂತೆ ಅವನಿಂದ ಠೇಂಕಾರಗೊಂಡ ಆ ಬಿಲ್ಲು ಮಹಾಧ್ವನಿಯನ್ನುಂಟುಮಾಡಿತು. ಆಗ ಭೂಮಿಯು ನಡುಗಿತು. ದಿಕ್ಕುದಿಕ್ಕುಗಳಲ್ಲಿ ಗಾಳಿ ಬಲವಾಗಿ ಬೀಸಿತು. ಆಗಸದಲ್ಲಿ ಹಕ್ಕಿಗಳು ದಿಕ್ಕುಗೆಟ್ಟವು. ಮಹಾವೃಕ್ಷಗಳು ನಡುಗಿದವು. ಅರ್ಜುನನು ರಥದಲ್ಲಿ ಕುಳಿತು ಶ್ರೇಷ್ಠವಾದ ಧನುವನ್ನು ತೋಳುಗಳಿಂದ ಮಿಡಿದುದರಿಂದ ಉಂಟಾದ ಆ ಶಬ್ಧವನ್ನು ಸಿಡಿಲಿನ ಆಸ್ಪೋಟವೆಂದು ಕೌರವರು ಭಾವಿಸಿದರು.
ಅರ್ಜುನನ ಶಂಖನಾದದಿಂದ ಕುರುಸೇನೆಯು ಸಂಭ್ರಾಂತಿಗೊಂಡಿದುದು
ಬಳಿಕ ಧನಂಜಯನು ಎಲ್ಲ ಆಯುಧಗಳನ್ನೂ ತೆಗೆದುಕೊಂಡು, ಉತ್ತರನನ್ನು ಸಾರಥಿಯನ್ನಾಗಿ ಮಾಡಿಕೊಂಡು, ಶಮೀವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಹೊರಟನು. ಆ ರಥದಿಂದ ಮಹಾರಥನು ಸಿಂಹಧ್ವಜವನ್ನು ತೆಗೆದು ಶಮೀವೃಕ್ಷದ ಬುಡದಲ್ಲಿರಿಸಿ ಆ ಉತ್ತರ ಸಾರಥಿಯು ಹೊರಟನು. ಅವನು ಸಿಂಹದಂತೆ ಬಾಲವುಳ್ಳ, ವಾನರನ ಚಿಹ್ನೆಯ ತನ್ನ ಕಾಂಚನ ಧ್ವಜವನ್ನು – ವಿಶ್ವಕರ್ಮನಿಂದ ನಿರ್ಮಿತವಾದ ದೈವಮಾಯೆಯನ್ನು – ಆ ರಥಕ್ಕೆ ಕಟ್ಟಿ ಅಗ್ನಿಯ ಕೃಪೆಯನ್ನು ಮನಸ್ಸಿನಲ್ಲಿ ನೆನೆದನು. ಅಗ್ನಿಯು ಅವನ ಬಯಕೆಯನ್ನು ಅರಿತು ಧ್ವಜದಲ್ಲಿ ನೆಲೆಸುವಂತೆ ಭೂತಗಳನ್ನು ಪ್ರೇರಿಸಿದನು. ಆ ಮಹಾರಥ ಬೀಭತ್ಸು, ಶ್ವೇತವಾಹನ ಕುಂತೀಪುತ್ರನು ಪತಾಕೆ ಮತ್ತು ಎತ್ತರ ಪೀಠದಿಂದ ಕೂಡಿದ ಸುಂದರ ರಥದಲ್ಲಿ ಕುಳಿತನು. ಆಮೇಲೆ ಆ ಕಪಿವರಧ್ವಜನು ಖಡ್ಗವನ್ನು ಸೊಂಟಕ್ಕೆ ಬಿಗಿದು, ಕವಚವನ್ನು ಧರಿಸಿ, ಬಿಲ್ಲನ್ನು ಹಿಡಿದು ಉತ್ತರ ದಿಕ್ಕಿಗೆ ಹೊರಟನು. ಆ ಶತ್ರುನಾಶಕ ಬಲಶಾಲಿಯು ಭಾರಿ ಶಬ್ಧಮಾಡುವ, ಶತ್ರುಗಳಿಗೆ ರೋಮಾಂಚನವನ್ನುಂಟುಮಾಡುವ ಮಹಾಶಂಖವನ್ನು ಬಲವನ್ನೆಲ್ಲ ಬಿಟ್ಟು ಊದಿದನು. ಅನಂತರ ಆ ವೇಗಗಾಮಿ ಕುದುರೆಗಳು ನೆಲಕ್ಕೆ ಮೊಣಕಾಲೂರಿದವು. ಉತ್ತರನೂ ಹೆದರಿ ರಥದಲ್ಲಿ ಕುಳಿತುಬಿಟ್ಟನು. ಕುಂತೀಪುತ್ರ ಅರ್ಜುನನು ಕುದುರೆಗಳನ್ನು ಎಬ್ಬಿಸಿ ನಿಲ್ಲಿಸಿ ಕಡಿವಾಣಗಳನ್ನು ಎಳೆದು ಉತ್ತರನನ್ನು ತಬ್ಬಿಕೊಂಡು ಹೀಗೆ ಸಮಾಧಾನಗೊಳಿಸಿದನು: “ಶ್ರೇಷ್ಠ ರಾಜಪುತ್ರ! ಹೆದರಬೇಡ! ನೀನು ಕ್ಷತ್ರಿಯ. ವೈರಿಗಳ ನಡುವೆ ನೀನು ಹೇಗೆ ಎದೆಗುಂದುವೆ? ಶಂಖಗಳ ಶಬ್ಧವನ್ನೂ, ಭೇರಿಗಳ ಶಬ್ಧವನ್ನೂ, ಸೇನಾವ್ಯೂಹಗಳ ನಡುವೆ ನಿಂತ ಆನೆಗಳ ಗರ್ಜನೆಯನ್ನೂ ನೀನೂ ಬೇಕಾದಷ್ಟು ಕೇಳಿದ್ದೀಯೆ. ಅಂತಹ ನೀನು ಇಲ್ಲಿ ಹೆದರಿದ ಸಾಮಾನ್ಯ ಮನುಷ್ಯನಂತೆ ಹೇಗೆ ಈ ಶಂಖದ ಶಬ್ಧದಿಂದ ಭೀತಿಗೊಂಡು ವಿಷಣ್ಣನಾಗಿರುವೆ?”
ಉತ್ತರನು ಹೇಳಿದನು: “ಶಂಖಗಳ ಶಬ್ಧವನ್ನೂ ಭೇರಿಗಳ ಶಬ್ಧವನ್ನೂ ಸೇನಾವ್ಯೂಹಗಳ ಮಧ್ಯೆ ನಿಂತಿರುವ ಆನೆಗಳ ಗರ್ಜನೆಯನ್ನೂ ನಾನು ಬೇಕಾದಷ್ಟು ಕೇಳಿದ್ದೇನೆ. ಆದರೆ ಇಂತಹ ಶಂಖಶಬ್ಧವನ್ನು ಹಿಂದೆ ನಾನೆಂದೂ ಕೇಳಿರಲಿಲ್ಲ. ಇಂತಹ ಧ್ವಜರೂಪವನ್ನು ಹಿಂದೆಂದೂ ನಾನು ಕಂಡಿಲ್ಲ. ಇಂತಹ ಬಿಲ್ಲಿನ ಘೋಷವನ್ನು ಹಿಂದೆ ನಾನು ಎಲ್ಲಿಯೂ ಕೇಳಿಲ್ಲ. ಈ ಶಂಖದ ಶಬ್ಧದಿಂದಲೂ ಬಿಲ್ಲಿನ ಧ್ವನಿಯಿಂದಲೂ ರಥದ ಘೋಷದಿಂದಲೂ ನನ್ನ ಮನಸ್ಸು ಬಹಳ ದಿಗ್ಭ್ರಮೆಗೊಳ್ಳುತ್ತಿದೆ. ನನ್ನ ಪಾಲಿಗೆ ದಿಕ್ಕುಗಳೆಲ್ಲ ಗೊಂದಲಗೊಂಡಿವೆ; ನನ್ನ ಹೃದಯವು ವ್ಯಥೆಗೊಂಡಿದೆ; ಬಾವುಟದಿಂದ ಮುಚ್ಚಿಹೋಗಿ ದಿಕ್ಕುಗಳೆಲ್ಲ ನನಗೆ ಕಾಣುತ್ತಿಲ್ಲ. ಗಾಂಡೀವದ ಶಬ್ಧದಿಂದ ನನ್ನ ಕಿವಿಗಳು ಕಿವುಡಾಗಿವೆ.”
ಅರ್ಜುನನು ಹೇಳಿದನು: “ನೀನು ರಥವನ್ನು ಒಂದುಕಡೆ ನಿಲ್ಲಿಸಿಕೊಂಡು ಪಾದಗಳನ್ನು ಊರಿಕೊಂಡು ನಿಂತು ಕಡಿವಾಣಗಳನ್ನು ಬಲವಾಗಿ ಹಿಡಿದುಕೋ. ನಾನು ಮತ್ತೆ ಶಂಖವನ್ನೂದುತ್ತೇನೆ.”
ಆ ಶಂಖದ ಶಬ್ಧದಿಂದಲೂ ರಥಚಕ್ರದ ಧ್ವನಿಯಿಂದಲೂ ಗಾಂಡೀವದ ಘೋಷದಿಂದಲೂ ಭೂಮಿಯು ನಡುಗಿತು.
ದ್ರೋಣನು ಹೇಳಿದನು: “ರಥನಿರ್ಘೋಷದ ರೀತಿ, ಶಂಖಶಬ್ಧದ ರೀತಿ, ಭೂಕಂಪನದ ರೀತಿ ಇವುಗಳಿಂದ ಹೇಳುವುದಾದರೆ ಇವನು ಅರ್ಜುನನಲ್ಲದೇ ಬೇರೆಯಲ್ಲ. ಶಸ್ತ್ರಗಳು ಹೊಳೆಯುತ್ತಿಲ್ಲ; ಕುದುರೆಗಳು ಹರ್ಷಿಸುತ್ತಿಲ್ಲ; ಚೆನ್ನಾಗಿ ಹೊತ್ತಿಸಿದ ಬೆಂಕಿಯೂ ಜ್ವಲಿಸುತ್ತಿಲ್ಲ. ಇದು ಒಳ್ಳೆಯದಲ್ಲ. ನಮ್ಮ ಪ್ರಾಣಿಗಳೆಲ್ಲ ಸೂರ್ಯನಿಗೆ ಎದುರಾಗಿ ಘೋರವಾಗಿ ಕೂಗಿಕೊಳ್ಳುತ್ತಿವೆ. ಕಾಗೆಗಳು ಧ್ವಜಗಳ ಮೇಲೆ ಕುಳಿತುಕೊಳ್ಳುತ್ತಿವೆ. ಇದು ಒಳ್ಳೆಯದಲ್ಲ. ಬಲಕ್ಕೆ ಹೋಗುತ್ತಿರುವ ಪಕ್ಷಿಗಳು ಮಹಾಭಯವನ್ನು ಸೂಚಿಸುತ್ತಿವೆ. ಈ ನರಿಯು ಸೇನೆಯ ನಡುವೆ ಒರಲುತ್ತ ಓಡಿಹೋಗುತ್ತಿದೆ. ಹೊಡೆತಕ್ಕೆ ಸಿಕ್ಕದೇ ತಪ್ಪಿಸಿಕೊಂಡು ಓಡುತ್ತಿರುವ ಅದು ಮಹಾಭಯವನ್ನು ಸೂಚಿಸುತ್ತಿದೆ. ನಿಮ್ಮ ರೋಮಗಳು ನಿಮಿರಿ ನಿಂತಿರುವುದನ್ನು ಕಾಣುತ್ತಿದ್ದೇನೆ. ನಿಮ್ಮ ಸೇನೆ ಇದಾಗಲೇ ಪರಾಭವಗೊಂಡಂತಿದೆ. ಯಾರೂ ಯುದ್ಧಮಾಡಲು ಇಚ್ಛಿಸುತ್ತಿಲ್ಲ. ಎಲ್ಲ ಯೋಧರ ಮುಖಗಳೂ ಅತಿಯಾಗಿ ಬಿಳಿಚಿಕೊಂಡಿವೆ; ಭ್ರಾಂತರಂತೆ ಆಗಿದ್ದಾರೆ. ಗೋವುಗಳನ್ನು ಮುಂದೆ ಕಳುಹಿಸಿ, ವ್ಯೂಹವನ್ನು ರಚಿಸಿ ಆಯುಧಸನ್ನದ್ದರಾಗಿ ನಿಲ್ಲೋಣ.”
ದುರ್ಯೋಧನನ ಮಾತು
ಬಳಿಕ ರಾಜ ದುರ್ಯೋಧನನು ಯುದ್ಧರಂಗದಲ್ಲಿ ಭೀಷ್ಮನಿಗೂ ರಥಿಕಶ್ರೇಷ್ಠ ದ್ರೋಣನಿಗೂ ಸುಮಹಾರಥ ಕೃಪನಿಗೂ ಹೇಳಿದನು: “ಈ ವಿಷಯವನ್ನು ಅಚಾರ್ಯನಿಗೆ ನಾನೂ ಕರ್ಣನೂ ಅನೇಕಸಲ ಹೇಳಿದ್ದೇವೆ. ಅದನ್ನು ಹೇಳಿ ತೃಪ್ತನಾಗದೇ ಮತ್ತೆ ಹೇಳುತ್ತಿದ್ದೇನೆ. ಅವರು ಜೂಜಿನಲ್ಲಿ ಸೋತರೆ ಹನ್ನೆರಡು ವರ್ಷ ಕಾಡಿನಲ್ಲಿಯೂ ಒಂದು ವರ್ಷ ಅಜ್ಞಾತರಾಗಿ ಯಾವುದಾದರೂ ದೇಶದಲ್ಲಿಯೂ ವಾಸಮಾಡತಕ್ಕದ್ದು – ಇದೇ ಅಲ್ಲವೇ ನಮ್ಮ ಪಣ. ಅವರ ಅಜ್ಞಾತವಾಸದ ಹದಿಮೂರನೆಯ ವರ್ಷ ಮುಗಿದಿಲ್ಲ; ಇನ್ನೂ ನಡೆಯುತ್ತಿದೆ. ಆದರೆ ಅರ್ಜುನನು ನಮ್ಮೆದುರು ಬಂದಿದ್ದಾನೆ. ಅಜ್ಞಾತವಾಸ ಮುಗಿಯದಿರುವಾಗ ಅರ್ಜುನನು ಬಂದಿದ್ದ ಪಕ್ಷದಲ್ಲಿ ಪಾಂಡವರು ಮತ್ತೆ ಹನ್ನೆರಡು ವರ್ಷ ಕಾಡಿನಲ್ಲಿ ವಾಸಮಾಡಬೇಕಾಗುತ್ತದೆ. ಅವರು ರಾಜ್ಯ ಲೋಭದಿಂದ ಅವಧಿಯನ್ನು ಮರೆತಿದ್ದಾರೆಯೋ ಅಥವಾ ನಮಗೇ ಭ್ರಾಂತಿಯುಂಟಾಗಿದೆಯೋ ಅವರ ಅವಧಿಯನ್ನು ಹೆಚ್ಚು ಕಡಿಮೆಗಳನ್ನು ಲೆಕ್ಕಹಾಕಿ ತಿಳಿಸಲು ಭೀಷ್ಮರು ಸಮರ್ಥರು. ವಿಷಯಕ್ಕೆ ಎರಡು ಮುಖಗಳಿರುವಲ್ಲಿ ಯಾವುದು ಸರಿಯೆಂಬುದರ ಬಗ್ಗೆ ಯಾವಾಗಲೂ ಸಂಶಯವುಂಟಾಗುತ್ತದೆ. ಒಂದು ರೀತಿಯಲ್ಲಿ ಚಿಂತಿತವಾದ ವಿಷಯ ಕೆಲವೊಮ್ಮೆ ಮತ್ತೊಂದು ರೀತಿಯಲ್ಲಿ ಪರಿಣಮಿಸುತ್ತದೆ. ಮತ್ಸ್ಯಸೇನೆಯೊಡನೆ ಹೋರಾಡುತ್ತಾ ಉತ್ತರನನ್ನು ನಿರೀಕ್ಷಿಸುತ್ತಿದ್ದ ನಮ್ಮಲ್ಲಿ ಯಾರುತಾನೆ ಅರ್ಜುನ ಬಂದನೆಂದು ಬೆನ್ನುತಿರುಗಿಸಿಯಾರು? ತ್ರಿಗರ್ತರಿಗಾಗಿ ಮತ್ಸ್ಯರೊಂದಿಗೆ ಯುದ್ಧಮಾಡಲು ನಾವು ಇಲ್ಲಿಗೆ ಬಂದೆವು. ಮತ್ಸ್ಯರು ಮಾಡಿದ ಕೆಡಕುಗಳನ್ನು ತ್ರಿಗರ್ತರು ನಮಗೆ ಬಹುವಾಗಿ ಹೇಳುತ್ತಿದ್ದರು. ಭಯಗ್ರಸ್ತರಾದ ಅವರಿಗೆ ನಾವು ನೆರವಿನ ಭರವಸೆ ಕೊಟ್ಟೆವು. ಮೊದಲು ಅವರು ಮತ್ಸ್ಯರ ದೊಡ್ಡ ಗೋಧನವನ್ನು ಸಪ್ತಮಿಯಂದು ಅಪರಾಹ್ಣದಲ್ಲಿ ಹಿಡಿಯತಕ್ಕದ್ದೆಂದೂ ನಾವು ಅಷ್ಟಮಿಯಂದು ಸೂರ್ಯೋದಯದ ಹೊತ್ತಿಗೆ ಇನ್ನಷ್ಟು ಗೋಧನವನ್ನು ಹಿಡಿಯತಕ್ಕದ್ದೆಂದೂ ಅವರಿಗೂ ನಮಗೂ ಒಪ್ಪಂದವಾಗಿತ್ತು. ಅವರಿಗೆ ಗೋವುಗಳು ಸಿಕ್ಕದಿರಬಹುದು ಅಥವಾ ಅವರು ಸೋತಿದ್ದರೆ ನಮ್ಮನ್ನು ವಂಚಿಸಿ ಮತ್ಸ್ಯರಾಜನೊಡನೆ ಸಂಧಿಮಾಡಿಕೊಂಡಿರಬಹುದು. ಅಥವಾ ಮತ್ಸ್ಯನು ಜಾನಪದರೊಡನೆ ಸೇರಿ ಅವರನ್ನೋಡಿಸಿ ಎಲ್ಲ ಸೇನೆಯ ಸಹಿತ ನಮ್ಮೊಡನೆ ಯುದ್ಧ ಮಾಡಲು ಬಂದಿರಬಹುದು. ಅವರಲ್ಲಿ ಯಾರೋ ಒಬ್ಬ ಮಹಾಪರಾಕ್ರಮಶಾಲಿ ಮೊದಲು ನಮ್ಮನ್ನು ಜಯಿಸಲು ಇಲ್ಲಿಗೆ ಬಂದಿದ್ದಾನೆ. ಅಥವಾ ಸ್ವಯಂ ಮತ್ಸ್ಯರಾಜನೇ ಇರಬಹುದು. ಬಂದಿರುವವನು ಮತ್ಸ್ಯರಾಜನೇ ಆಗಿರಲಿ ಅಥವಾ ಅರ್ಜುನನೇ ಆಗಿರಲಿ, ನಾವೆಲ್ಲರೂ ಅವನೊಡನೆ ಹೋರಾಡಬೇಕೆಂಬುದು ನಾವು ಮಾಡಿಕೊಂಡಿರುವ ಒಪ್ಪಂದ. ಭೀಷ್ಮ, ದ್ರೋಣ, ಕೃಪ, ವಿಕರ್ಣ, ಅಶ್ವತ್ಥಾಮ - ಈ ರಥಿಕ ಶ್ರೇಷ್ಠರು ಏತಕ್ಕೆ ರಥಗಳಲ್ಲಿ ಸುಮ್ಮನೆ ನಿಂತುಬಿಟ್ಟಿದ್ದಾರೆ? ಎಲ್ಲ ಮಹಾರಥರೂ ಈಗ ಸಂಭ್ರಾಂತಚಿತ್ತರಾಗಿದ್ದಾರೆ. ಯುದ್ಧಕ್ಕಿಂತ ಶ್ರೇಯಸ್ಕರವಾದುದು ಬೇರೆಯಿಲ್ಲ. ಆದ್ದರಿಂದ ನಾವೆಲ್ಲರೂ ಮನಸ್ಸನ್ನು ಗಟ್ಟಿ ಮಾಡಿಕೊಳ್ಳೋಣ. ಯುದ್ಧದಲ್ಲಿ ದೇವೇಂದ್ರನಾಗಲೀ ಯಮನಾಗಲೀ ಗೋಧನವನ್ನು ನಮ್ಮಿಂದ ಕಿತ್ತುಕೊಂಡರೆ ಯಾರುತಾನೆ ಹಸ್ತಿನಾಪುರಕ್ಕೆ ಓಡಿಹೋಗುತ್ತಾರೆ? ಅಶ್ವಸೇನೆಯು ತಪ್ಪಿಸಿಕೊಳ್ಳುವುದು ಸಂಶಯಾಸ್ಪದವಾಗಿರುವಾಗ ಬಾಣಗಳು ಹಿಂದಿನಿಂದ ಇರಿಯುತ್ತಿರಲು ಭಗ್ನವಾದ ಪದಾತಿಗೆ ಯಾರುತಾನೆ ದಟ್ಟವಾದ ಕಾಡಿನಲ್ಲಿ ಹೋಗಿ ಬದುಕಿಯಾರು? ಆಚಾರ್ಯನನ್ನು ಹಿಂದಿಕ್ಕಿ ಯುದ್ಧನೀತಿಯನ್ನು ರೂಪಿಸತಕ್ಕದ್ದು. ಅವನು ಆ ಪಾಂಡವರ ಅಭಿಪ್ರಾಯವನ್ನು ಬಲ್ಲವನಾಗಿದ್ದು ನಮಗೆ ಹೆದರಿಕೆಯುಂಟುಮಾಡುತ್ತಿದ್ದಾನೆ. ಅರ್ಜುನನ ಮೇಲೆ ಅವನಿಗೆ ಮಿಗಿಲಾದ ಪ್ರೀತಿಯಿರುವುದು ನನಗೆ ಗೊತ್ತು. ಏಕೆಂದರೆ ಅರ್ಜುನನು ಬರುತ್ತಿರುವುದನ್ನು ನೋಡಿಯೇ ಅವನು ಹೊಗಳತೊಡಗುತ್ತಾನೆ. ಸೈನ್ಯ ಭಗ್ನವಾಗದಂತೆ ಯುದ್ಧನೀತಿಯನ್ನು ರೂಪಿಸತಕ್ಕದ್ದು. ಈ ಬೇಸಗೆಯ ಮಹಾರಣ್ಯದಲ್ಲಿ ಸ್ವದೇಶದಲ್ಲಿನ ಸೇನೆ ಶತ್ರುವಶನಾಗಿ ಗಾಬರಿಗೊಳ್ಳದಂತೆ ಯುದ್ಧನೀತಿಯನ್ನು ರೂಪಿಸತಕ್ಕದ್ದು. ಕುದುರೆಗಳ ಕೆನೆತವನ್ನು ಕೇಳಿಯೇ ವೈರಿಯ ವಿಷದಲ್ಲಿ ಎಂಥ ಹೊಗಳಿಕೆ! ನಿಂತಿರಲಿ ಅಥವಾ ಓಡುತ್ತಿರಲಿ, ಕುದುರೆಗಳು ಯಾವಾಗಲೂ ಕೆನೆಯುತ್ತವೆ. ಗಾಳಿ ಯಾವಾಗಲೂ ಬೀಸುತ್ತದೆ. ಇಂದ್ರ ಯಾವಾಗಲೂ ಮಳೆಗರೆಯುತ್ತಾನೆ. ಅಂತೆಯೇ ಮೋಡಗಳ ಮೊಳಗು ಮೇಲಿಂದ ಮೇಲೆ ಕೇಳಿ ಬರುತ್ತದೆ. ಇವುಗಳಲ್ಲಿ ಪಾರ್ಥನದೇನು ಕೆಲಸ? ಏತಕ್ಕಾಗಿ ಅವನನ್ನು ಹೊಗಳಬೇಕು? ಇದೆಲ್ಲ ಕೇವಲ ಅರ್ಜುನನ ಮೇಲಿನ ಪ್ರೀತಿಯಿಂದಾಗಿ ಅಥವಾ ನಮ್ಮ ಮೇಲಿನ ದ್ವೇಷ ಇಲ್ಲವೆ ಕೋಪದಿಂದ ಅಷ್ಟೆ. ಆಚಾರ್ಯರು ಕರುಣಾಳುಗಳು, ಜ್ಞಾನಿಗಳು. ಮುಂಬರುವ ಅಪಾಯಗಳನ್ನು ಕಾಣುವವರು. ಮಹಾಭಯ ಒದಗಿರುವಾಗ ಅವರನ್ನೆಂದೂ ಕೇಳಬಾರದು. ಪಂಡಿತರು ಸುಂದರವಾದ ಅರಮನೆಗಳಲ್ಲಿ ಗೋಷ್ಠಿಗಳಲ್ಲಿ ಮತ್ತು ಶಾಲೆಗಳಲ್ಲಿ ವಿಚಿತ್ರವಾದ ಕಥೆಗಳನ್ನು ಹೇಳುತ್ತಾ ಇದ್ದರೆ ಶೋಭಿಸುತ್ತಾರೆ. ಪಂಡಿತರು ಬಹಳ ಆಶ್ಚರ್ಯಕರವಾದ ವಿಷಯಗಳನ್ನು ಹೇಳುತ್ತಾ ಜನರ ಸಭೆಯಲ್ಲಿ ಬಿಲ್ಲಿಗೆ ಬಾಣವನ್ನು ಸರಿಯಾಗಿ ಸೇರಿಸುವಲ್ಲಿ ಶೋಭಿಸುತ್ತಾರೆ. ಪಂಡಿತರು ಇತರರ ದೋಷಗಳನ್ನು ಪತ್ತೆ ಹಚ್ಚುವಲ್ಲಿ, ಮನುಷ್ಯ ಸ್ವಭಾವವನ್ನು ಅರಿಯುವಲ್ಲಿ, ಅನ್ನಸಂಸ್ಕಾರ ದೋಷಗಳನ್ನು ಕಂಡುಹಿಡಿಯುವಲ್ಲಿ ಶೋಭಿಸುತ್ತಾರೆ. ಅನ್ಯರ ಗುಣಗಳನ್ನು ಹೊಗಳುವ ಪಂಡಿತರನ್ನು ಅಲಕ್ಷಿಸಿ, ವೈರಿಯನ್ನು ವಧಿಸುವಂತಹ ಯುದ್ಧನೀತಿಯನ್ನು ರೂಪಿಸತಕ್ಕದ್ದು. ಗೋವುಗಳನ್ನು ಸುರಕ್ಷಿತವಾಗಿ ಇರಿಸತಕ್ಕದ್ದು. ಸೇನೆ ಬೇಗ ವ್ಯೂಹಗೊಳ್ಳಲಿ. ಶತ್ರುಗಳೊಡನೆ ನಾವು ಹೋರಾಡುವ ಎಡೆಗಳಲ್ಲಿ ಕಾವಲುದಳದ ವ್ಯವಸ್ಥೆ ಮಾಡತಕ್ಕದ್ದು.”
ಕರ್ಣನ ಆತ್ಮ ಶ್ಲಾಘನೆ
ಕರ್ಣನು ಹೇಳಿದನು: “ಈ ಎಲ್ಲ ಆಯುಷ್ಮಂತರೂ ಹೆದರಿದವರಂತೆ, ತಲ್ಲಣಗೊಂಡವರಂತೆ, ಯುದ್ಧಮಾಡಲು ಮನಸ್ಸಿಲ್ಲದವರಂತೆ ಮತ್ತು ಅಸ್ಥಿರರಂತೆ ಕಂಡು ಬರುತ್ತಿದ್ದಾರೆ. ಬಂದಿರುವವನು ಮತ್ಸ್ಯನಾಗಿರಲಿ ಅಥವಾ ಅರ್ಜುನನಾಗಿರಲಿ, ಅವನನ್ನು ದಡವು ಸಮುದ್ರವನ್ನು ತಡೆಯುವಂತೆ ತಡೆಯುತ್ತೇನೆ. ನನ್ನ ಬಿಲ್ಲಿನಿಂದ ಹೊರಟ, ನೇರಗೊಳಿಸಿದ ಗೆಣ್ಣುಗಳನ್ನುಳ್ಳ, ಸರ್ಪಗಳಂತೆ ಹರಿಯುವ ಬಾಣಗಳು ಎಂದೂ ವ್ಯರ್ಥವಾಗಿ ಹಿಂದಿರುಗಿ ಬರುವುದಿಲ್ಲ. ನನ್ನ ಪಳಗಿದ ಕೈಗಳಿಂದ ಹೊರಡುವ ಚಿನ್ನದ ಗರಿಯ ಚೂಪು ಮೊನೆಯ ಬಾಣಗಳು ಮರವನ್ನು ಕವಿಯುವ ಮಿಡತೆಗಳಂತೆ ಪಾರ್ಥನನ್ನು ಕವಿಯಲಿ. ಗರಿಗಳುಳ್ಳ ಬಾಣಗಳ ಮೇಲೆ ಬಲವಾಗಿ ಅಪ್ಪಳಿಸಿದ ಹೆದೆಯಿಂದ ನನ್ನ ಕೈಗಾಪಿನ ಮೇಲೆ ಉಂಟಾಗುವ ಭೇರಿ ಬಾರಿಸಿದಂಥ ಶಬ್ಧವನ್ನು ಶತ್ರುಗಳು ಕೇಳಲಿ. ಹದಿಮೂರು ವರ್ಷ ಸಂಯಮದಿಂದಿದ್ದ ಅರ್ಜುನನು ಈಗ ಯುದ್ಧದಲ್ಲಿ ಆಸಕ್ತಿಯುಳ್ಳವನಾಗಿ ನನ್ನನ್ನು ಬಲವಾಗಿಯೇ ಹೊಡೆಯುತ್ತಾನೆ. ಗುಣಶಾಲಿ ಬ್ರಾಹ್ಮಣನಂತೆ ದಾನಪಾತ್ರನಾಗಿರುವ ಆ ಕುಂತೀಪುತ್ರನು ನಾನು ಬಿಡುವ ಸಾವಿರಾರು ಬಾಣಗಳ ಸಮೂಹವನ್ನು ಸ್ವೀಕರಿಸಲಿ. ಇವನು ಮೂರುಲೋಕಗಳಲ್ಲೂ ಪ್ರಸಿದ್ಧನಾದ ದೊಡ್ಡ ಬಿಲ್ಲುಗಾರ. ಕುರುಶ್ರೇಷ್ಠರೇ! ನಾನು ಕೂಡ ಈ ಅರ್ಜುನನಿಗೆ ಯಾವ ರೀತಿಯಲ್ಲೂ ಕಡಿಮೆಯಿಲ್ಲ. ನಾನು ಎಲ್ಲ ಕಡೆಗಳಲ್ಲೂ ಬಿಡುವ ಹದ್ದಿನ ಗರಿಗಳಿಂದ ಕೂಡಿದ ಚಿನ್ನದ ಬಾಣಗಳಿಂದ ಆಕಾಶವು ಮಿಂಚು ಹುಳುಗಳಿಂದ ತುಂಬಿದಂತಾಗುವುದನ್ನು ಇಂದು ನೋಡಿರಿ. ನಾನಿಂದು ಯುದ್ಧದಲ್ಲಿ ಅರ್ಜುನನನ್ನು ಕೊಂದು ದುರ್ಯೋಧನನಿಗೆ ಹಿಂದೆ ಮಾತುಕೊಟ್ಟಿದ್ದಂತೆ ಅಕ್ಷಯವಾದ ಋಣವನ್ನು ತೀರಿಸಿಬಿಡುತ್ತೇನೆ. ಮಧ್ಯಮಾರ್ಗದಲ್ಲೆ ಕಡಿದುಹೋಗಿ ಬಾಣಗಳ ಉದುರಿದ ಗರಿಗಳ ಸಂಚಾರ ಆಕಾಶದಲ್ಲಿ ಮಿಡತೆಗಳ ಸಂಚಾರದಂತೆ ತೋರಲಿ. ಪಂಜುಗಳು ಆನೆಯನ್ನು ಪೀಡಿಸುವಂತೆ, ಇಂದ್ರನ ವಜ್ರಾಯುಧದಂತೆ ಕಠಿನಸ್ಪರ್ಶದವನೂ ಮಹೇಂದ್ರಸಮಾನವಾದ ತೇಜಸ್ಸುಳ್ಳವನೂ ಆದ ಆ ಪಾರ್ಥನನ್ನು ಪೀಡಿಸುತ್ತೇನೆ. ಎದುರಿಸಲಾಗದ, ಖಡ್ಗ, ಶಕ್ತಿ, ಶರಗಳನ್ನು ಇಂಧನವಾಗುಳ್ಳ, ಶತ್ರುಗಳನ್ನು ಸುಟ್ಟುಹಾಕುವಂತೆ ಜ್ವಲಿಸುವ ಪಾಂಡವಾಗ್ನಿ ಅವನು. ಕುದುರೆಗಳ ವೇಗವೆ ಮುಂದೆ ಹೋಗುವ ಗಾಳಿಯಾಗಿರುವ, ರಥಗಳ ರಭಸವೇ ಗುಡುಗಾಗಿಯೂ ಬಾಣಗಳೇ ಮಳೆಯಾಗಿಯೂ ಉಳ್ಳ ಮಹಾಮೇಘನಾಗಿ ನಾನು ಆ ಬೆಂಕಿಯಂತಹ ಪಾಂಡವನನ್ನು ನಂದಿಸುತ್ತೇನೆ. ಹಾವುಗಳು ಹುತ್ತವನ್ನು ಹೊಗುವಂತೆ ನನ್ನ ಬಿಲ್ಲಿನಿಂದ ಹೊರಡುವ ವಿಷಸರ್ಪ ಸಮಾನ ಬಾಣಗಳು ಪಾರ್ಥನನ್ನು ತಾಗಲಿ. ಋಷಿಶ್ರೇಷ್ಠ ಪರಶುರಾಮನಿಂದ ಅಸ್ತ್ರವನ್ನು ಪಡೆದಿರುವ ನಾನು ಅದರ ಸತ್ವವನ್ನು ಅವಲಂಬಿಸಿ ದೇವೇಂದ್ರನೊಡನೆ ಕೂಡ ಯುದ್ಧಮಾಡುತ್ತೇನೆ. ಅರ್ಜುನನ ಬಾವುಟದ ತುದಿಯಲ್ಲಿರುವ ವಾನರನು ಇಂದೇ ನನ್ನ ಭಲ್ಲೆಯಿಂದ ಹತನಾಗಿ ಭಯಂಕರವಾಗಿ ಶಬ್ಧಮಾಡುತ್ತಾ ರಥದಿಂದ ನೆಲಕ್ಕುರಳಲಿ. ದಿಕ್ಕುಗಳಲ್ಲಿ ಪ್ರತಿಷ್ಠಿತವಾಗಿರುವ ಮತ್ತು ಶತ್ರುಗಳ ಧ್ವಜಗಳಲ್ಲಿ ಬಂದು ವಾಸಿಸುವ ಭೂತಗಳು ನನ್ನಿಂದ ಬಾಧೆಗೊಂಡು ಹೊರಡಿಸುವ ಚೀತ್ಕಾರ ಆಗಸವನ್ನು ಮುಟ್ಟಲಿ. ಇಂದು ಅರ್ಜುನನನ್ನು ರಥದಿಂದ ಕೆಡವಿ ದುರ್ಯೋಧನನ ಹೃದಯದಲ್ಲಿ ಬಹುಕಾಲದಿಂದ ನಾಟಿಕೊಂಡಿರುವ ಮುಳ್ಳನ್ನು ಬೇರುಸಹಿತ ಕಿತ್ತು ಹಾಕುತ್ತೇನೆ. ಕುದುರೆಗಳು ಹತವಾಗಿ ರಥಹೀನರಾಗಿ ಪೌರುಷವನ್ನು ಕಳೆದುಕೊಂಡ ಪಾರ್ಥ ಹಾವಿನಂತೆ ನಿಟ್ಟುಸಿರು ಬಿಡುವುದನ್ನು ಕೌರವರು ಇಂದು ನೋಡಲಿ. ಬೇಕಾದರೆ ಕೌರವರು ಕೇವಲ ಗೋಧನವನ್ನು ತೆಗೆದುಕೊಂಡು ಹೋಗಿಬಿಡಲಿ ಅಥವಾ ರಥಗಳಲ್ಲಿದ್ದು ನನ್ನ ಯುದ್ಧವನ್ನು ನೋಡಲಿ.”
ಕರ್ಣನ ಆತ್ಮಶ್ಲಾಘನೆಗೆ ಕೃಪನ ಪ್ರತಿಕ್ರಿಯೆ
ಕೃಪನು ಹೇಳಿದನು: “ಕರ್ಣ! ನಿನ್ನ ಕ್ರೂರತರ ಮನಸ್ಸು ಯಾವಾಗಲೂ ಯುದ್ಧದಲ್ಲಿ ಆಸಕ್ತವಾಗಿರುತ್ತದೆ. ವಿಷಯಗಳ ಸ್ವರೂಪ ನಿನಗೆ ತಿಳಿಯದು. ಅವುಗಳ ಪರಿಣಾಮವೂ ನಿನಗೆ ಕಾಣುವುದಿಲ್ಲ. ಶಾಸ್ತ್ರಗಳ ಆಧಾರದಿಂದ ಚಿಂತಿತವಾದ ನೀತಿಗಳು ಬಹಳಷ್ಟುಂಟು. ಅವುಗಳಲ್ಲಿ ಯುದ್ಧವು ಪಾಪಪೂರಿತವಾದುದೆಂದು ಹಿಂದಿನದನ್ನು ಬಲ್ಲವರು ಭಾವಿಸುತ್ತಾರೆ. ದೇಶಕಾಲಗಳು ಕೂಡಿಬಂದಾಗ ಮಾತ್ರ ಯುದ್ಧವು ವಿಜಯವನ್ನು ತರುತ್ತದೆ. ಕೆಟ್ಟ ಕಾಲಗಳಲ್ಲಿ ಅದು ಫಲವನ್ನು ಕೊಡುವುದಿಲ್ಲ. ತಕ್ಕ ದೇಶಕಾಲಗಳಲ್ಲಿ ತೋರುವ ಪರಾಕ್ರಮ ಕಲ್ಯಾಣವನ್ನುಂಟುಮಾಡುತ್ತದೆ. ದೇಶಕಾಲಗಳ ಅನುಕೂಲಕ್ಕೆ ತಕ್ಕಂತೆ ಕಾರ್ಯಗಳ ಸಫಲತೆಯನ್ನು ಯೋಚಿಸಿಕೊಳ್ಳಬೇಕು. ರಥ ತಯಾರಿಸುವವನ ಅಭಿಪ್ರಾಯದಂತೆ ಪಂಡಿತರು ಆದರೆ ಯುದ್ಧ ಯೋಗ್ಯತೆಯನ್ನು ನಿರ್ಧರಿಸುವುದಿಲ್ಲ. ಇದನ್ನೆಲ್ಲ ಆಲೋಚಿಸಿದರೆ ಪಾರ್ಥನೊಡನೆ ಯುದ್ಧಮಾಡುವುದು ನಮಗೆ ಉಚಿತವಲ್ಲ. ಅವನು ಒಂಟಿಯಾಗಿಯೇ ಕೌರವರನ್ನು ಗಂಧರ್ವರಿಂದ ರಕ್ಷಿಸಿದವನು. ಒಂಟಿಯಾಗಿಯೇ ಅಗ್ನಿಯನ್ನು ತೃಪ್ತಿಗೊಳಿಸಿದನು. ಅರ್ಜುನನು ಒಂಟಿಯಾಗಿ ಐದು ವರ್ಷ ಬ್ರಹ್ಮಚರ್ಯವನ್ನಾಚರಿಸಿದನು. ಸುಭದ್ರೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಒಂಟಿಯಾಗಿಯೇ ಕೃಷ್ಣನನ್ನು ದ್ವಂದ್ವಯುದ್ಧಕ್ಕೆ ಕರೆದನು. ಈ ವನದಲ್ಲಿಯೇ ಅಪಹೃತಳಾದ ಕೃಷ್ಣೆಯನ್ನು ಗೆದ್ದುಕೊಂಡನು. ಒಂಟಿಯಾಗಿ ಐದು ವರ್ಷ ಇಂದ್ರನಿಂದ ಅಸ್ತ್ರಗಳನ್ನು ಕಲಿತನು. ಒಂಟಿಯಾಗಿಯೇ ಶತ್ರುಗಳನ್ನು ಗೆದ್ದು ಕುರುಗಳಿಗೆ ಯಶವನ್ನುಂಟುಮಾಡಿದನು. ಆ ಶತ್ರುವಿನಾಶಕನು ಗಂಧರ್ವರಾಜ ಚಿತ್ರಸೇನನನ್ನೂ ಅವನ ಅಜೇಯ ಸೈನ್ಯವನ್ನೂ ಯುದ್ಧದಲ್ಲಿ ಒಂಟಿಯಾಗಿಯೇ ಬೇಗ ಸೋಲಿಸಿದ್ದನು. ಹಾಗೆಯೇ ದೇವತೆಗಳೂ ಕೊಲ್ಲಲಾಗದಿದ್ದ ನಿವಾತಕವಚ ಮತ್ತು ಕಾಲಖಂಜರೆಂಬ ರಾಕ್ಷಸರನ್ನೂ ಅವನೊಬ್ಬನೇ ಯುದ್ಧದಲ್ಲಿ ಉರುಳಿಸಿದನು. ಕರ್ಣ! ಆ ಪಾಂಡವರಲ್ಲಿ ಒಬ್ಬೊಬ್ಬರೇ ಅನೇಕ ರಾಜರನ್ನು ವಶಪಡಿಸಿಕೊಂಡಂತೆ ನೀನು ಒಂಟಿಯಾಗಿ ಹಿಂದೆ ಏನನ್ನಾದರೂ ಮಾಡಿರುವೆಯೇನು? ಇಂದ್ರನೂ ಪಾರ್ಥನೊಡನೆ ಯುದ್ಧಮಾಡಲಾರ. ಅವನೊಡನೆ ಯುದ್ಧಮಾಡಬಯಸುವವನಿಗೆ ಯಾವುದಾದರೂ ಔಷಧ ಮಾಡಬೇಕು. ನೀನು ವಿಚಾರಮಾಡದೇ ಬಲಗೈಯನ್ನೆತ್ತಿ ತೋರುಬೆರಳನ್ನು ಚಾಚಿ ರೋಷಗೊಂಡಿರುವ ವಿಷಸರ್ಪದ ಹಲ್ಲನ್ನು ಕೀಳಬಯಸುತ್ತಿರುವೆ. ಅಥವಾ ಒಬ್ಬನೇ ಅರಣ್ಯದಲ್ಲಿ ಅಲೆಯುತ್ತ ಅಂಕುಶವಿಲ್ಲದೆ ಮದಗಜವನ್ನು ಹತ್ತಿ ನಗರಕ್ಕೆ ಹೋಗಬಯಸುತ್ತಿರುವೆ. ಅಥವಾ ತುಪ್ಪ, ಕೊಬ್ಬು, ಮಜ್ಜೆಗಳ ಆಹುತಿಯಿಂದ ಪ್ರಜ್ವಲಿಸುತ್ತಿರುವ ಅಗ್ನಿಯನ್ನು ತುಪ್ಪದಲ್ಲಿ ತೋಯ್ದ ವಸ್ತ್ರವನ್ನು ತೊಟ್ಟುಕೊಂಡು ದಾಟಿಹೋಗಬಯಸುತ್ತಿರುವೆ. ತನ್ನನ್ನು ಹಗ್ಗದಿಂದ ಬಿಗಿದುಕೊಂಡು ಕೊರಳಿನಲ್ಲಿ ದೊಡ್ಡ ಕಲ್ಲೊಂದನ್ನು ಕಟ್ಟಿಕೊಂಡು ತೋಳುಗಳಿಂದ ಈಜಿ ಸಮುದ್ರವನ್ನು ದಾಟುವವನಾರು? ಇದು ಎಂಥ ಪೌರುಷ? ಕರ್ಣ! ಕೃತಾಸ್ತ್ರನೂ ಬಲಶಾಲಿಯೂ ಆದ ಅಂತಹ ಪಾರ್ಥನೊಡನೆ ಯುದ್ಧಮಾಡಬಯಸುವ ಅಸ್ತ್ರ ಪರಿಣಿತಿಯಿಲ್ಲದವನೂ ದುರ್ಬಲನೂ ಆದವನು ದುರ್ಮತಿ. ನಮ್ಮಿಂದ ಹದಿಮೂರು ವರ್ಷಕಾಲ ವಂಚಿತರಾಗಿ ಈಗ ಪಾಶದಿಂದ ಬಿಡುಗಡೆಗೊಂಡಿರುವ ಈ ಸಿಂಹ ನಮ್ಮಲ್ಲಿ ಯಾರನ್ನೂ ಉಳಿಸುವುದಿಲ್ಲ. ಬಾವಿಯಲ್ಲಿ ಅಡಗಿರುವ ಬೆಂಕಿಯಂತೆ ಏಕಾಂತದಲ್ಲಿ ಇದ್ದಂತ ಪಾರ್ಥನನ್ನು ಅಜ್ಞಾನದಿಂದ ಎದುರಿಸಿ ನಾವು ಮಹಾಭಯಕ್ಕೊಳಗಾದೆವು. ಯುದ್ಧೋನ್ಮತ್ತನಾಗಿ ಬಂದಿರುವ ಪಾರ್ಥನೊಡನೆ ನಾವು ಹೋರಾಡೋಣ. ಸೈನ್ಯ ಸನ್ನದ್ಧವಾಗಿ ನಿಲ್ಲಲಿ. ಯೋಧರು ವ್ಯೂಹಗೊಳ್ಳಲಿ. ದ್ರೋಣ, ದುರ್ಯೋಧನ, ಭೀಷ್ಮ, ನೀನು, ಅಶ್ವತ್ಥಾಮ - ನಾವೆಲ್ಲರೂ ಪಾರ್ಥನೊಡನೆ ಯುದ್ಧಮಾಡೋಣ ಕರ್ಣ. ನೀನೊಬ್ಬನೇ ಸಾಹಸಮಾಡಬೇಡ. ಷಡ್ರಥರಾದ ನಾವು ಒಟ್ಟಾಗಿ ನಿಂತರೆ ವಜ್ರಪಾಣಿಯಂತೆ ಸಿದ್ಧವಾಗಿ ಯುದ್ಧಕ್ಕೆ ನಿಶ್ಚಯಿಸಿರುವ ಪಾರ್ಥನೊಡನೆ ಹೋರಾಡಬಲ್ಲೆವು. ವ್ಯೂಹಗೊಂಡು ನಿಂತ ಸೈನ್ಯದೊಡಗೂಡಿದ ಶ್ರೇಷ್ಠ ಧನುರ್ಧರರಾದ ನಾವು ಎಚ್ಚರಿಕೆಯಿಂದ ರಣದಲ್ಲಿ ದಾನವರು ಇಂದ್ರನೊಡನೆ ಯುದ್ಧಮಾಡುವಂತೆ ಅರ್ಜುನನೊಡನೆ ಯುದ್ಧಮಾಡೋಣ.”
ದ್ರೌಣಿ ವಾಕ್ಯ
ಅಶ್ವತ್ಥಾಮನು ಹೇಳಿದನು: “ಕರ್ಣ! ಗೋವುಗಳನ್ನು ಇನ್ನೂ ಗೆದ್ದುಕೊಂಡಿಲ್ಲ. ಅವು ಇನ್ನೂ ಗಡಿದಾಟಿಲ್ಲ ಮತ್ತು ಹಸ್ತಿನಾಪುರವನ್ನು ಸೇರಿಲ್ಲ. ಆಗಲೇ ನೀನು ಜಂಬ ಕೊಚ್ಚಿಕೊಳ್ಳುತ್ತಿರುವೆ! ಹಲವಾರು ಯುದ್ಧಗಳನ್ನು ಗೆದ್ದು ವಿಪುಲ ಧನವನ್ನು ಗಳಿಸಿ ಶತ್ರುರಾಜ್ಯವನ್ನು ಜಯಿಸಿದರೂ ನಿಜವಾದ ಶೂರರು ಪೌರುಷವನ್ನು ಸ್ವಲ್ಪವೂ ಹೇಳಿಕೊಳ್ಳುವುದಿಲ್ಲ. ಅಗ್ನಿ ಮಾತಿಲ್ಲದೇ ಬೇಯಿಸುತ್ತಾನೆ, ಸೂರ್ಯನು ಸದ್ದಿಲ್ಲದೇ ಬೆಳಗುತ್ತಾನೆ. ಭೂಮಿ ಸದ್ದಿಲ್ಲದೇ ಸಚರಾಚರ ಸೃಷ್ಟಿಯನ್ನು ಹೊರುತ್ತದೆ. ವಿದ್ವಾಂಸರು ನಾಲ್ಕು ವರ್ಣಗಳಿಗೂ ಅವು ಮಾಡಬೇಕಾದ ಕರ್ಮಗಳನ್ನು ವಿಧಿಸಿದ್ದಾರೆ. ಅವುಗಳನ್ನು ಅ ವರ್ಣಗಳು ಯಾವುದೇ ದೋಷಕ್ಕೊಳಗಾಗದಂತೆ ಆಚರಿಸಿ ಧನವನ್ನು ಪಡೆಯಬೇಕು. ಬ್ರಾಹ್ಮಣನು ವೇದಾಧ್ಯಯಮಾಡಿ ಯಜ್ಞಗಳನ್ನು ಮಾಡಬೇಕು ಮತ್ತು ಮಾಡಿಸಬೇಕು. ಕ್ಷತ್ರಿಯನು ಧನುಸ್ಸನ್ನು ಆಶ್ರಯಿಸಿ ಯಜ್ಞಗಳನ್ನು ಸ್ವತಃ ಮಾಡಬೇಕು. ಮಾಡಿಸತಕ್ಕದ್ದಲ್ಲ. ವೈಶ್ಯನು ದ್ರವ್ಯವನ್ನು ಆರ್ಜಿಸಿ, ಬ್ರಹ್ಮಕರ್ಮಗಳನ್ನು ಮಾಡಿಸಬೇಕು. ಮಹಾಭಾಗ್ಯಶಾಲಿಗಳಾದವರು ಶಾಸ್ತ್ರಾನುಗುಣವಾಗಿ ನಡೆದುಕೊಳ್ಳುತ್ತ ಈ ಭೂಮಿಯನ್ನು ಪಡೆದು ಕೂಡ ಗುರುಗಳನ್ನು ಗುಣವಿಹೀನರಾಗಿದ್ದರೂ ಸತ್ಕರಿಸುತ್ತಾರೆ. ಬೇರೆ ಯಾವ ಕ್ಷತ್ರಿಯನು ತಾನೇ ಸಾಮಾನ್ಯನಂತೆ ಕ್ರೂರವಾದ ಜೂಜಿನಿಂದ ರಾಜ್ಯವನ್ನು ಪಡೆದು ಸಂತೋಷಪಡಬಲ್ಲ? ಈ ರೀತಿಯಲ್ಲಿ ಕಟುಕತನದಿಂದ ವಂಚನೆಗಳ ಆಶ್ರಯದಿಂದ ಧನವನ್ನು ಸಂಪಾದಿಸಿ ಯಾವ ವಿಚಕ್ಷಣನು ತಾನೇ ಬೇಡನಂತೆ ಜಂಬ ಕೊಚ್ಚುತ್ತಾನೆ? ಯಾವ ದ್ವಂದ್ವರಥಯುದ್ಧದಲ್ಲಿ ನೀನು ಧನಂಜಯನನ್ನಾಗಲೀ, ನಕುಲನನ್ನಾಗಲೀ, ಸಹದೇವನನ್ನಾಗಲೀ ಜಯಿಸಿದ್ದೀಯೆ? ಆದರೆ ಅವರ ಸಂಪತ್ತನ್ನು ನೀನು ಅಪಹರಿಸಿರುವೆ. ಯಾವ ಯುದ್ಧದಲ್ಲಿ ನೀನು ಯುಧಿಷ್ಠಿರನನ್ನೂ ಬಲಶಾಲಿಗಳಲ್ಲಿ ಶ್ರೇಷ್ಠ ಭೀಮನನ್ನೂ ಗೆದ್ದಿದ್ದೀಯೆ? ಯಾವುದರಿಂದ ಹಿಂದೆ ಇಂದ್ರಪ್ರಸ್ಥವನ್ನು ಜಯಿಸಿದೆ? ಅಂತೆಯೇ ಕೃಷ್ಣೆಯನ್ನು ನೀನು ಗೆದ್ದುದು ಯಾವ ಯುದ್ಧದಲ್ಲಿ? ದುಷ್ಟಕರ್ಮಿ! ಏಕವಸ್ತ್ರವುಳ್ಳವಳೂ ರಜಸ್ವಲೆಯೂ ಆದ ಅವಳನ್ನು ಸಭೆಗೆ ಎಳೆದು ತರಲಾಯಿತು. ಸಾರವನ್ನು ಬಯಸುವವನು ಚಂದನ ವೃಕ್ಷವನ್ನು ಕಡಿಯುವಂತೆ ನೀನು ಅವರ ದೊಡ್ಡ ಬೇರನ್ನೇ ಕತ್ತರಿಸಿಹಾಕಿದೆ. ಆ ಕಾರ್ಯವನ್ನು ನೀನು ಮಾಡಿಸಿದೆ. ಆಗ ವಿದುರ ಹೇಳಿದ್ದೇನು? ಮನುಷ್ಯರು ಮತ್ತು ಇತರ ಜೀವಿಗಳಲ್ಲೂ ಹುಳು ಮತ್ತು ಇರುವೆಗಳಲ್ಲಿಯೂ ಸಾಧ್ಯವಾದ ಮಟ್ಟಿಗೆ ಸಹನೆ ಕಂಡುಬರುತ್ತದೆ. ಆದರೆ ದ್ರೌಪದಿಯ ಆ ಪರಿಕ್ಲೇಶವನ್ನು ಪಾಂಡವನು ಕ್ಷಮಿಸಲಾರನು. ಧನಂಜಯನು ಧೃತರಾಷ್ಟ್ರಪುತ್ರರಿಗೆ ದುಃಖವನ್ನುಂಟುಮಾಡುದಕ್ಕಾಗಿಯೇ ಬಂದಿದ್ದಾನೆ. ಮತ್ತೆ ನೀನು ಪಂಡಿತನಾಗಿ ಇಲ್ಲಿ ಮಾತನಾಡಬಯಸುತ್ತಿರುವೆ. ವೈರವನ್ನು ಕೊನೆಗೊಳಿಸುವ ಅರ್ಜುನನು ನಮ್ಮಲ್ಲಿ ಯಾರನ್ನೂ ಉಳಿಸುವುದಿಲ್ಲ. ದೇವತೆಗಳೊಡೆಯನಾಗಲೀ ಗಂಧರ್ವರೊಡೆಯನಾಗಲೀ ಅಸುರರೊಡೆಯನಾಗಲೀ, ರಾಕ್ಷಸರೊಡೆಯನಾಗಲೀ ಕುಂತೀಪುತ್ರ ಈ ಧನಂಜಯನು ಹೆದರಿ ಯುದ್ಧಮಾಡದಿರುವುದಿಲ್ಲ. ಇವನು ಯುದ್ಧದಲ್ಲಿ ಕ್ರುದ್ಧನಾಗಿ ಯಾರ ಯಾರ ಮೇಲೆ ಬೀಳುತ್ತಾನೋ ಅವರನ್ನು ಗರುಡನ ವೇಗದಿಂದ ಮರವನ್ನು ಹೇಗೋ ಹಾಗೆ ಹೊಡೆದು ಹೋಗುತ್ತಾನೆ. ಶೌರ್ಯದಲ್ಲಿ ನಿನಗಿಂತ ಮೇಲಾದ, ಬಿಲ್ಗಾರಿಕೆಯಲ್ಲಿ ದೇವೇಂದ್ರನಿಗೆ ಸಮಾನನಾದ, ಯುದ್ಧದಲ್ಲಿ ವಾಸುದೇವನಿಗೆಣೆಯಾದ ಆ ಪಾರ್ಥನನ್ನು ಯಾರು ತಾನೇ ಗೌರವಿಸುವುದಿಲ್ಲ? ದೈವಾಸ್ತ್ರವನ್ನು ದೈವಾಸ್ತ್ರದಿಂದ, ಮಾನುಷಾಸ್ತ್ರವನ್ನು ಮಾನುಷಾಸ್ತ್ರದಿಂದ ನಿಗ್ರಹಿಸುವ ಅರ್ಜುನನಿಗೆ ಸಮಾನ ಗಂಡಸು ಯಾರು? ಮಗನಿಗೂ ಶಿಷ್ಯನಿಗೂ ಅಂತರವಿಲ್ಲವೆಂದು ಧರ್ಮಜ್ಞರು ತಿಳಿಯುತ್ತಾರೆ. ಈ ಕಾರಣದಿಂದಲೂ ಪಾಂಡವ ಅರ್ಜುನನು ದ್ರೋಣನಿಗೆ ಪ್ರಿಯನಾಗಿದ್ದಾನೆ. ನೀನು ಹೇಗೆ ಜೂಜನ್ನಾಡಿದೆಯೋ, ಇಂದ್ರಪ್ರಸ್ಥವನ್ನು ಹೇಗೆ ಕಿತ್ತುಕೊಂಡೆಯೋ, ಕೃಷ್ಣೆಯನ್ನು ಹೇಗೆ ಸಭೆಗೆಳೆದುತಂದೆಯೋ ಹಾಗೆಯೇ ಅರ್ಜುನನೊಡನೆ ಯುದ್ಧ ಮಾಡು! ಪ್ರಾಜ್ಞನೂ, ಕ್ಷತ್ರಧರ್ಮದಲ್ಲಿ ಕೋವಿದನೂ, ಕೆಟ್ಟ ಜೂಜಿನಲ್ಲಿ ಚತುರನೂ, ಗಾಂಧರದೇಶವನೂ ಆದ ಈ ನಿನ್ನ ಮಾವ ಶಕುನಿಯು ಈಗ ಯುದ್ಧಮಾಡಲಿ. ಗಾಂಡೀವ ಧನುಸ್ಸು ಕೃತ-ದ್ವಾಪರವೆಂಬ ದಾಳಗಳನ್ನು ಎಸೆಯುವುದಿಲ್ಲ. ಅದು ನಿಶಿತವೂ ತೀಕ್ಷ್ಣವೂ ಆದ ಉರಿಯುವ ಬಾಣಗಳನ್ನು ಎಸೆಯುತ್ತದೆ. ಗಾಂಡೀವದಿಂದ ಬಿಡಲಾಗುವ ಹದ್ದಿನ ಗರಿಗಳನ್ನುಳ್ಳ ಪರ್ವತಗಳನ್ನೂ ಸೀಳಿಹಾಕುವ ತೀಕ್ಷ್ಣ ಬಾಣಗಳು ಮಧ್ಯದಲ್ಲಿಯೇ ನಿಂತುಬಿಡುವುದಿಲ್ಲ. ಎಲ್ಲವನ್ನೂ ನಾಶಮಾಡುವ ಅಂತಕ ಮೃತ್ಯು ಮತ್ತು ಬಡಬಾಗ್ನಿ ಇವರು ಸ್ವಲ್ಪವನ್ನಾದರೂ ಉಳಿಸುತ್ತಾರೆ. ಆದರೆ ಕೋಪಗೊಂಡ ಧನಂಜಯನು ಏನನ್ನೂ ಉಳಿಸುವುದಿಲ್ಲ. ಇಷ್ಟವಿದ್ದರೆ ಆಚಾರ್ಯರು ಯುದ್ಧಮಾಡಲಿ. ನಾನು ಧನಂಜಯನೊಡನೆ ಯುದ್ಧಮಾಡುವುದಿಲ್ಲ. ಮತ್ಸ್ಯರಾಜನೇನಾದರೂ ಹಸುಗಳ ಹಾದಿಗೆ ಬಂದರೆ ಅವನೊಡನೆ ನಾವು ಹೋರಾಡಬೇಕು.”
ದ್ರೋಣನಲ್ಲಿ ಕ್ಷಮೆ
ಭೀಷ್ಮನು ಹೇಳಿದನು: “ದ್ರೋಣನು ಹೇಳಿದ್ದು ಸರಿ. ಕೃಪನು ಹೇಳಿದ್ದೂ ಸರಿ. ಕರ್ಣನಾದರೋ ಕ್ಷತ್ರಧರ್ಮದಿಂದ ಪ್ರೇರಿತನಾಗಿ ಯಥೋಚಿತವಾಗಿ ಯುದ್ಧಮಾಡಬಯಸುತ್ತಾನೆ. ತಿಳಿದವರು ಆಚಾರ್ಯನನ್ನು ತೆಗಳಲಾಗದು. ಆದರೆ ದೇಶಕಾಲಗಳನ್ನು ಪರಿಗಣಿಸಿ ಯುದ್ಧಮಾಡಬೇಕೆಂಬುದು ನನ್ನ ಅಭಿಪ್ರಾಯ. ಸೂರ್ಯಸಮಾನರೂ ವೀರರೂ ಆದ ಐವರು ಶತ್ರುಗಳನ್ನುಳ್ಳ ಪಂಡಿತನು ಅವರ ಅಭ್ಯುದಯದ ವಿಷಯದಲ್ಲಿ ಹೊಯ್ದಾಡದಿರುವುದು ಹೇಗೆ? ರಾಜ! ಧರ್ಮವಿದರಾದರೂ ಕೂಡ ಎಲ್ಲ ಜನರೂ ಸ್ವಾರ್ಥದ ವಿಷಯದಲ್ಲಿ ಚಂಚಲರಾಗುತ್ತಾರೆ. ಆದ್ದರಿಂದ ನಿನಗೆ ಹಿಡಿಸುವುದಾದರೆ ಈ ಮಾತನ್ನು ಹೇಳುತ್ತೇನೆ. ಕರ್ಣನು ಆಡಿದ ಮಾತು ನಮ್ಮನ್ನು ಹುರಿದುಂಬಿಸುವುದಕ್ಕಾಗಿ ಅಷ್ಟೆ. ಆಚಾರ್ಯ ಪುತ್ರನು ಕ್ಷಮಿಸಿಬಿಡಲಿ. ಏಕೆಂದರೆ ಮಹತ್ಕಾರ್ಯ ಒದಗಿಬಂದಿದೆ. ಅರ್ಜುನ ಬಂದಿರುವಾಗ ಇದು ವಿರೋಧಕ್ಕೆ ಕಾಲವಲ್ಲ. ನೀನೂ, ಆಚಾರ್ಯನೂ, ಕೃಪನೂ ಎಲ್ಲವನ್ನು ಕ್ಷಮಿಸಬೇಕು. ಸೂರ್ಯನಲ್ಲಿ ಪ್ರಭೆಯಿರುವಂತೆ ನಿಮ್ಮಲ್ಲಿ ಅಸ್ತ್ರಪರಿಣಿತಿಯಿದೆ. ಚಂದ್ರನಿಂದ ಕಲೆ ಹೇಗೆ ಎಂದೂ ಬೇರೆಯಾಗುವುದಿಲ್ಲವೋ ಹಾಗೆ ನಿಮ್ಮಲ್ಲಿ ಬ್ರಾಹ್ಮಣ್ಯವೂ ಬ್ರಹ್ಮಾಸ್ತ್ರವೂ ನೆಲೆಗೊಂಡಿವೆ. ನಾಲ್ಕು ವೇದಗಳು ಒಂದು ಕಡೆ ಇರುತ್ತವೆ; ಕ್ಷಾತ್ರ ಒಂದು ಕಡೆ ಕಂಡುಬರುತ್ತದೆ. ಭಾರತಾಚಾರ್ಯನನ್ನೂ ಅವನ ಮಗನನ್ನೂ ಬಿಟ್ಟರೆ, ಇವೆರಡೂ ಒಬ್ಬನಲ್ಲೇ ಇನ್ನೆಲ್ಲಿಯಾದರೂ ಇರುವುದನ್ನು ನಾವು ಕೇಳಿಲ್ಲ. ಬ್ರಹ್ಮಾಸ್ತ್ರವೂ ವೇದಗಳೂ ಒಟ್ಟಿಗೆ ಮತ್ತೆಲ್ಲಿಯೂ ಕಂಡುಬರುವುದಿಲ್ಲವೆಂದು ನನ್ನ ಅಭಿಪ್ರಾಯ. ಆಚಾರ್ಯಪುತ್ರನು ಕ್ಷಮಿಸಬೇಕು. ನಮ್ಮನಮ್ಮಲ್ಲೆ ಒಡಕಿಗೆ ಇದು ಕಾಲವಲ್ಲ. ನಾವೆಲ್ಲರೂ ಸೇರಿ ಬಂದಿರುವ ಅರ್ಜುನನೊಡನೆ ಕಾದೋಣ. ವಿದ್ವಾಂಸರು ಹೇಳಿರುವ ಸೈನ್ಯದ ವಿಪತ್ತುಗಳಲ್ಲಿ ಮುಖ್ಯವೂ ಕೆಟ್ಟುದೂ ಆದುದು ಯಾವುದೆಂದರೆ ಅದರ ಅನೈಕಮತ್ಯ ಎಂಬುದು ಬಲ್ಲವರ ಅಭಿಪ್ರಾಯ.”
ಅಶ್ವತ್ಥಾಮನು ಹೇಳಿದನು: “ಆಚಾರ್ಯನೇ ಕ್ಷಮಿಸಲಿ; ಇಲ್ಲಿ ಶಾಂತಿಯುಂಟಾಗಲಿ. ಗುರುವನ್ನು ನಿಂದಿಸಲಾಗಿ ಅವರ ಆ ನಡತೆ ರೋಷದಿಂದುಂಟಾಯಿತು.”
ಅನಂತರ ದುರ್ಯೋಧನನು ಕರ್ಣ, ಭೀಷ್ಮ ಹಾಗೂ ಮಹಾತ್ಮ ಕೃಪನೊಡನೆ ದ್ರೋಣನ ಕ್ಷಮೆ ಬೇಡಿದನು.
ದ್ರೋಣನು ಹೇಳಿದನು: “ಶಂತನು ಪುತ್ರ ಭೀಷ್ಮನು ಆಡಿದ ಮೊದಲ ಮಾತಿನಿಂದಲೇ ನಾನು ಪ್ರಸನ್ನನಾದೆನು. ಈಗ ಮುಂದಿನದನ್ನು ಮಾಡಬೇಕು. ದುರ್ಯೋಧನನು ನಮ್ಮನ್ನು ಅವಲಂಬಿಸಿರಲಾಗಿ ಸಾಹಸದಿಂದಾಗಲೀ ಭ್ರಾಂತಿಯಿಂದಾಗಲೀ ಯಾವುದೇ ವಿಪತ್ತು ಸೈನಿಕರನ್ನು ಸಮೀಪಿಸದಂತೆ ಯುದ್ಧನೀತಿಯನ್ನು ರೂಪಿಸಬೇಕು. ವನವಾಸದ ಅವಧಿ ಮುಗಿಯದೆ ಧನಂಜಯನು ಕಾಣಿಸಿಕೊಂಡಿಲ್ಲ. ಅಥವಾ ಗೋಧನವನ್ನು ಪಡೆಯದೇ ನಮ್ಮನ್ನು ಅವನಿಂದು ಕ್ಷಮಿಸಲಾರ. ಅವನು ಯವುದೇ ರೀತಿಯಲ್ಲಿ ಧೃತರಾಷ್ಟ್ರಪುತ್ರರನ್ನು ಆಕ್ರಮಿಸದಂತೆ ಮತ್ತು ನಮಗೆ ಪರಾಜಯವಾಗದಂತೆ ಯುದ್ಧ ನೀತಿಯನ್ನು ರೂಪಿಸತಕ್ಕದ್ದು. ದುರ್ಯೋಧನನು ಹಿಂದೆ ಇಂಥ ಮಾತನ್ನೇ ಹೇಳಿದ್ದನು. ಭೀಷ್ಮ! ಅದನ್ನು ನೆನೆದು ಉಚಿತವಾದುದನ್ನು ಹೇಳಲು ನೀನು ತಕ್ಕವನು.”
ಭೀಷ್ಮನಿಂದ ಸೈನ್ಯವ್ಯೂಹ
ಭೀಷ್ಮನು ಹೇಳಿದನು: “ಅಯ್ಯಾ! ಕಲೆಗಳು, ಮುಹೂರ್ತಗಳು, ದಿನಗಳು, ಅರ್ಧಮಾಸಗಳು, ಮಾಸಗಳು, ನಕ್ಷತ್ರಗಳು, ಗ್ರಹಗಳು, ಋತುಗಳು, ಸಂವತ್ಸರಗಳು - ಈ ಕಾಲವಿಭಾಗಗಳಿಂದ ಕೂಡಿ ಕಾಲಚಕ್ರವು ಉರುಳುತ್ತದೆ. ಅವುಗಳ ಕಾಲಾತಿರೇಕದಿಂದಲೂ ಗ್ರಹನಕ್ಷತ್ರಗಳ ವ್ಯತಿಕ್ರಮದಿಂದಲೂ ಐದೈದು ವರ್ಷಕ್ಕೊಮ್ಮೆ ಎರಡು ಮಾಸಗಳು ಹೆಚ್ಚಾಗಿ ಬರುತ್ತವೆ. ಹೀಗೆ ಲೆಕ್ಕ ಹಾಕಿದರೆ ಹದಿಮೂರುವರ್ಷಗಳಲ್ಲಿ ಐದು ತಿಂಗಳುಗಳೂ ಹನ್ನೆರಡು ರಾತ್ರಿಗಳೂ ಅಧಿಕವಾಗಿ ಬಂದಿವೆಯೆಂದು ನನ್ನ ಬುದ್ಧಿಗೆ ತೋರುತ್ತದೆ. ಈ ಪಾಂಡವರು ಮಾಡಿದ ಪ್ರತಿಜ್ಞೆಯನ್ನೆಲ್ಲಾ ಯಥಾವತ್ತಾಗಿ ನೆರವೇರಿಸಿದ್ದಾರೆ. ಇದು ಹೀಗೆಯೇ ಸರಿ ಎಂದು ನಿಶ್ಚಿತವಾಗಿ ತಿಳಿದುಕೊಂಡೇ ಅರ್ಜುನನು ಬಂದಿದ್ದಾನೆ. ಅವರೆಲ್ಲರೂ ಮಹಾತ್ಮರು; ಎಲ್ಲರೂ ಧರ್ಮಾರ್ಥಕೋವಿದರು. ಅವರಿಗೆ ಯುಧಿಷ್ಠಿರನೇ ರಾಜನಾಗಿರುವಾಗ, ಅವರು ಧರ್ಮದ ವಿಷಯದಲ್ಲಿ ತಪ್ಪು ಮಾಡುವುದಾದರೂ ಹೇಗೆ? ಪಾಂಡವರು ಲೋಭರಹಿತರು; ದುಷ್ಕರವಾದುದನ್ನು ಸಾಧಿಸಿದವರು. ಮಾರ್ಗವಿಲ್ಲದೆ ಅವರು ಸುಮ್ಮನೆ ರಾಜ್ಯವನ್ನು ಬಯಸುವವರಲ್ಲ. ಆ ಕೌರವನಂದನರು ಆಗಲೇ ಮೇಲೆರಗಬಯಸಿದ್ದರು. ಆದರೆ ಧರ್ಮಪಾಶಬದ್ಧರಾಗಿ ಕ್ಷತ್ರಿಯ ವ್ರತದಿಂದ ಕದಲಲಿಲ್ಲ. ಸುಳ್ಳುಗಾರನೆನಿಸಿಕೊಳ್ಳುವುದು, ಪರಾಭವಗೊಳ್ಳುವುದು ಇವುಗಳಲ್ಲೊಂದನ್ನು ನಿರ್ಧರಿಸಬೇಕಾದಲ್ಲಿ ಪಾಂಡವರು ಮರಣವಾದರೂ ಅಪ್ಪಿಯಾರು, ಆದರೆ ಯಾವರೀತಿಯಲ್ಲೂ ಸುಳ್ಳುಗಾರಿಕೆಯನ್ನಪ್ಪುವುದಿಲ್ಲ. ತಕ್ಕ ಕಾಲ ಬಂದಿರುವಾಗ ಅಂತಹ ವೀರ್ಯಶಾಲಿಗಳೂ ನರಶ್ರೇಷ್ಠರೂ ಆದ ಪಾಂಡವರು ತಮಗೆ ಬರಬೇಕಾದುದನ್ನು – ಇಂದ್ರನೇ ಅದನ್ನು ರಕ್ಷಿಸುತ್ತಿದ್ದರೂ ಕೂಡ - ಬಿಡುವುದಿಲ್ಲ. ಎಲ್ಲ ಶಸ್ತ್ರಧರರಲ್ಲಿ ಶ್ರೇಷ್ಠ ಅರ್ಜುನನನ್ನು ನಾವು ಯುದ್ಧದಲ್ಲಿ ಎದುರಿಸಬೇಕಾಗಿದೆ. ಆದ್ದರಿಂದ ಲೋಕದಲ್ಲಿ ಸಜ್ಜನರು ಅನುಸರಿಸುವ ಶುಭಕರ ಕ್ರಮವನ್ನು ಬೇಗ ಕೈಗೊಳ್ಳೋಣ. ನಮ್ಮ ಗೋಧನ ಶತ್ರುಗಳಿಗೆ ಸೇರದಿರಲಿ. ಕೌರವ! ಯುದ್ಧದಲ್ಲಿ ಸಂಪೂರ್ಣ ಗೆಲುವಿನ ಭರವಸೆಯಿರುವುದನ್ನು ಎಂದೂ ನಾನು ಕಂಡಿಲ್ಲ. ಅದರಲ್ಲೂ ಈಗ ಬಂದಿರುವವನು ಧನಂಜಯ. ಯುದ್ಧವೊದಗಿದಾಗ ಲಾಭ-ನಷ್ಟಗಳು, ಜಯಾಪಜಯಗಳು ಒಂದು ಪಕ್ಷಕ್ಕೆ ಅವಶ್ಯವಾಗಿ ತಟ್ಟಲೇಬೇಕು. ಇದು ನಿಸ್ಸಂದೇಹವಾಗಿ ಕಂಡದ್ದು. ಆದ್ದರಿಂದ, ಈಗ ನಾವು ಯುದ್ಧೋಚಿತವಾದ ಅಥವಾ ಧರ್ಮಸಮ್ಮತವಾದ ಕಾರ್ಯವನ್ನು ಬೇಗ ಮಾಡಬೇಕು. ಧನಂಜಯನು ಬಂದುಬಿಟ್ಟಿದ್ದಾನೆ.”
ದುರ್ಯೋಧನನು ಹೇಳಿದನು: “ಅಜ್ಜ! ಪಾಂಡವರಿಗೆ ನಾನು ರಾಜ್ಯವನ್ನು ಕೊಡುವುದಿಲ್ಲ. ಅದ್ದರಿಂದ ಯುದ್ಧೋಚಿತವಾದುದನ್ನು ಶೀಘ್ರವಾಗಿ ಕೈಕೊಳ್ಳಿ.”
ಭೀಷ್ಮನು ಹೇಳಿದನು: “ನಿನಗೆ ರುಚಿಸುವುದಾದರೆ ಈಗ ನಾನು ಹೇಳುವ ಬುದ್ಧಿವಚನವನ್ನು ಕೇಳು. ಸೈನ್ಯದ ನಾಲ್ಕನೆಯ ಒಂದು ಭಾಗವನ್ನು ತೆಗೆದುಕೊಂಡು ಬೇಗ ನಗರಕ್ಕೆ ಹೋಗು. ಅನಂತರ ಇನ್ನೊಂದು ನಾಲ್ಕನೆಯ ಒಂದು ಭಾಗ ಗೋವುಗಳನ್ನಟ್ಟಿಕೊಂಡು ಹೋಗಲಿ. ಅರ್ಧ ಸೈನ್ಯ ಸಹಿತ ನಾವು ಅರ್ಜುನನೊಡನೆ ಯುದ್ಧಮಾಡುತ್ತೇವೆ. ಮತ್ತೆ ಮತ್ಸ್ಯನೇ ಬರಲಿ ಅಥವಾ ದೇವೇಂದ್ರನೇ ಬರಲಿ ಅವನೊಡನೆ ಯುದ್ಧಮಾಡುತ್ತೇವೆ. ಆಚಾರ್ಯನು ನಡುವೆ ನಿಲ್ಲಲಿ, ಅಶ್ವತ್ಥಾಮನು ಎಡಗಡೆ ನಿಲ್ಲಲಿ. ಶಾರದ್ವತ ಧೀಮಂತ ಕೃಪನು ಬಲಗಡೆಯಲ್ಲಿ ರಕ್ಷಿಸಲಿ. ಸೂತಪುತ್ರ ಕರ್ಣನು ಕವಚಧಾರಿಯಾಗಿ ಮುಂದುಗಡೆ ನಿಲ್ಲಲಿ. ನಾನು ಎಲ್ಲ ಸೈನ್ಯದ ಹಿಂದೆ ಅದನ್ನು ರಕ್ಷಿಸುತ್ತ ನಿಲ್ಲುತ್ತೇನೆ.”
ಅರ್ಜುನನು ಗೋವುಗಳನ್ನು ಹಿಂದಿರುಗಿಸಿದುದು
ಹಾಗೆ ಮಹಾರಥಿ ಕೌರವರು ಸೈನ್ಯವ್ಯೂಹವನ್ನು ರಚಿಸಲು ಅರ್ಜುನನು ರಥಘೋಷದಿಂದ ದಿಕ್ಕುಗಳನ್ನು ಮೊಳಗಿಸುತ್ತಾ ಶೀಘ್ರವಾಗಿ ಹತ್ತಿರಕ್ಕೆ ಬಂದೇಬಿಟ್ಟನು. ಅವರು ಅವನ ಬಾವುಟದ ತುದಿಯನ್ನು ನೋಡಿದರು ಮತ್ತು ರಥದ ಶಬ್ಧವನ್ನೂ. ವಿಶೇಷವಾಗಿ ಮಿಡಿಯುತ್ತಿದ್ದ ಗಾಂಡೀವದ ಶಬ್ಧವನ್ನೂ ಕೇಳಿದರು. ಆಗ ದ್ರೋಣನು ಅದನ್ನೆಲ್ಲ ನೋಡಿ ಗಾಂಡೀವಧನುರ್ಧರ ಮಹಾರಥನು ಬಂದಿದ್ದುದನ್ನು ಕಂಡು ಈ ಮಾತನ್ನಾಡಿದನು: “ಪಾರ್ಥನ ಬಾವುಟದ ತುದಿ ಅದೋ ಅಲ್ಲಿ ಹೊಳೆಯುತ್ತಿದೆ. ಈ ರಥದ ಶಬ್ಧ ಮೋಡದ ಗುಡುಗಿನಂತಿದೆ. ವಾನರ ಗರ್ಜಿಸುತ್ತಿದ್ದಾನೆ. ರಥಿಕರಲ್ಲಿ ಶ್ರೇಷ್ಠ, ರಥನಡೆಸುವವರಲ್ಲಿ ಶ್ರೇಷ್ಠ ಅರ್ಜುನನು ರಥದಲ್ಲಿ ಶ್ರೇಷ್ಠವೂ ಸಿಡಿಲಿನಂತೆ ಧ್ವನಿಯುಳ್ಳದ್ದೂ ಆದ ಗಾಂಡೀವವನ್ನು ಸೆಳೆಯುತ್ತಿದ್ದಾನೆ. ಈ ಎರಡು ಬಾಣಗಳು ಒಟ್ಟಿಗೇ ಬಂದು ನನ್ನ ಪಾದಗಳಲ್ಲಿ ಬೀಳುತ್ತಿವೆ. ಉಳಿದ ಬಾಣಗಳು ನನ್ನ ಕಿವಿಗಳನ್ನು ಸೋಕಿ ಮುಂದೆ ಹೋಗುತ್ತಿವೆ. ಪಾರ್ಥನು ವನವಾಸವನ್ನು ಮಾಡಿ, ಅತಿಮಾನುಷ ಕಾರ್ಯವನ್ನು ಎಸಗಿ, ನನಗೆ ಅಭಿನಂದಿಸುತ್ತಿದ್ದಾನೆ ಮತ್ತು ಕಿವಿಯಲ್ಲಿ ಕುಶಲವನ್ನು ಕೇಳುತ್ತಿದ್ದಾನೆ.”
ಅರ್ಜುನನು ಹೇಳಿದನು: “ಸಾರಥಿ! ನನ್ನ ಬಾಣಗಳು ಸೇನೆಯ ಮೇಲೆ ಬೀಳುವಷ್ಟು ದೂರದಲ್ಲಿ ಕುದುರೆಗಳನ್ನು ಬಿಗಿಹಿಡಿ. ಅಷ್ಟರಲ್ಲಿ ಆ ಕುರುಕುಲಾಧಮನು ಈ ಸೈನ್ಯದಲ್ಲಿ ಎಲ್ಲಿದ್ದಾನೆಂಬುದನ್ನು ನೋಡುತ್ತೇನೆ. ಇತರ ಎಲ್ಲರನ್ನೂ ಅಲಕ್ಷಿಸಿ, ಆ ಅತಿ ಅಹಂಕಾರಿಯನ್ನು ಕಂಡು ಅವನ ತಲೆಯ ಮೇಲೆರಗುತ್ತೇನೆ. ಬಳಿಕ ಇವರೆಲ್ಲರೂ ಸೋತಂತೆಯೇ. ಇಗೋ! ದ್ರೋಣನೂ, ಅನಂತರ ಅಶ್ವತ್ಥಾಮನೂ, ದೊಡ್ಡ ಬಿಲ್ಗಾರರಾದ ಭೀಷ್ಮ, ಕೃಪ, ಕರ್ಣರೂ ಅಣಿಯಾಗಿದ್ದಾರೆ. ಆದರೆ ದೊರೆಯು ಅಲ್ಲಿ ಕಾಣುತ್ತಿಲ್ಲ. ಅವನು ಜೀವದ ಮೇಲಿನ ಆಸೆಯಿಂದ ಹಸುಗಳನ್ನಟ್ಟಿಕೊಂಡು ಬಲಮಾರ್ಗದಲ್ಲಿ ಹೋಗುತ್ತಿದ್ದಾನೆಂದು ನನ್ನ ಸಂದೇಹ. ಈ ರಥಸೈನ್ಯವನ್ನು ಬಿಟ್ಟು ಸುಯೋಧನನಿರುವಲ್ಲಿಗೆ ನಡೆ. ಉತ್ತರ! ಅಲ್ಲಿಯೇ ನಾನು ಯುದ್ಧ ಮಾಡುತ್ತೇನೆ. ಆಮಿಷವಿಲ್ಲದ ಯುದ್ಧವಿಲ್ಲ. ಅವನನ್ನು ಗೆದ್ದು ಗೋವುಗಳನ್ನು ಹೊಡೆದುಕೊಂಡು ಹಿಂದಿರುಗುತ್ತೇನೆ.”
ಅರ್ಜುನನು ಹೀಗೆ ಹೇಳಲು ಉತ್ತರನು ಕಡಿವಾಣಗಳನ್ನು ಬಿಗಿಡಿದು ಕುದುರೆಗಳನ್ನು ಯತ್ನಪೂರ್ವಕವಾಗಿ ನಿಯಂತ್ರಿಸಿದನು. ಅನಂತರ ಆ ಕುರುಶ್ರೇಷ್ಠ ದುರ್ಯೋಧನನಿದ್ದೆಡಗೆ ಕುದುರೆಗಳನ್ನು ಪ್ರಚೋದಿಸಿದನು. ಅರ್ಜುನನು ಆ ರಥಸಮೂಹವನ್ನು ಬಿಟ್ಟು ಹೊರಟುಹೋಗಲು ದ್ರೋಣನು ಅವನ ಅಭಿಪ್ರಾಯವನ್ನು ತಿಳಿದು ಈ ಮಾತನ್ನಾಡಿದನು: “ಈ ಅರ್ಜುನನು ರಾಜ ದುರ್ಯೋಧನನನ್ನು ಕಾಣದೇ ನಿಲ್ಲುವುದಿಲ್ಲ. ವೇಗವಾಗಿ ಹೋಗುತ್ತಿರುವ ಅವನ ಬೆನ್ನುಹತ್ತೋಣ. ಕೋಪಗೊಂಡ ಈ ಅರ್ಜುನನನ್ನು ಯುದ್ಧದಲ್ಲಿ ದೇವೇಂದ್ರ ಅಥವಾ ದೇವಕೀಪುತ್ರ ಕೃಷ್ಣನ ಹೊರತು ಬೇರೆ ಯಾರೂ ಏಕಾಕಿಯಾಗಿ ಎದುರಿಸಲಾರರು. ನೌಕೆಯಂತೆ ಮೊದಲು ದುರ್ಯೋಧನನೇ ಪಾರ್ಥನೆಂಬ ಜಲದಲ್ಲಿ ಮುಳುಗಿಹೋದರೆ, ಗೋವುಗಳಿಂದಾಗಲೀ ವಿಪುಲ ಧನದಿಂದಾಗಲೀ ನಮಗೆ ಏನು ಪ್ರಯೋಜನ?”
ಅಂತೆಯೇ ಅರ್ಜುನನು ಆ ಎಡೆಗೆ ಹೋಗಿ ತನ್ನ ಹೆಸರನ್ನು ಘೋಷಿಸಿ ಮಿಡತೆಗಳಂತಹ ತನ್ನ ಬಾಣಗಳಿಂದ ಆ ಸೇನೆಯನ್ನು ಬೇಗ ಮುಸುಕಿದನು. ಪಾರ್ಥನು ಬಿಟ್ಟ ಬಾಣಸಮೂಹದಿಂದ ಮುಚ್ಚಿಹೋದ ಆ ಯೋಧರಿಗೆ ಬಾಣಗಳಿಂದ ಆವೃತವಾದ ಭೂಮಿಯೂ ಆಕಾಶವೂ ಕಾಣದಂತಾದವು. ಅವರಿಗೆ ಯುದ್ಧಮಾಡಬೇಕೆಂಬ ಅಥವಾ ಪಲಾಯನ ಮಾಡಬೇಕೆಂಬ ಬುದ್ಧಿಯೇ ಹುಟ್ಟಲಿಲ್ಲ. ಅವರು ಪಾರ್ಥನ ಬಾಣಪ್ರಯೋಗದ ವೇಗವನ್ನು ಮನಃಪೂರ್ವಕವಾಗಿ ಮೆಚ್ಚಿಕೊಂಡರು. ಅನಂತರ ಆ ಅರ್ಜುನನು ವೈರಿಗಳಿಗೆ ಪುಳಕವನ್ನುಂಟುಮಾಡುವ ಶಂಖವನ್ನು ಊದಿದನು. ಶ್ರೇಷ್ಠ ಬಿಲ್ಲನ್ನು ಮಿಡಿದು ಧ್ವಜದಲ್ಲಿದ್ದ ಭೂತಗಳನ್ನು ಪ್ರೇರಿಸಿದನು. ಅವನ ಶಂಖದ ಶಬ್ದದಿಂದಲೂ, ರಥಚಕ್ರದ ಶಬ್ದದಿಂದಲೂ, ಆ ಧ್ವಜವಾಸಿ ಅಮಾನುಷ ಭೂತಗಳ ಗರ್ಜನೆಯಿಂದಲೂ ಎಲ್ಲ ಕಡೆಗಳಲ್ಲಿಯೂ ಬೆದರಿದ ಗೋವುಗಳು ಬಾಲಗಳನ್ನು ಮೇಲೆತ್ತಿ ಆಡಿಸುತ್ತಾ ಅರಚುತ್ತಾ ದಕ್ಷಿಣದಿಕ್ಕನ್ನು ಹಿಡಿದು ಮರಳಿದವು.