ಅಭಿಮನ್ಯು ವಿವಾಹ
ವಿಜಯಶಾಲೀ ಉತ್ತರ ಬೃಹನ್ನಡೆಯರ ಪುರಪ್ರವೇಶ
ಸೈನ್ಯಾಧಿಪತಿ ವಿರಾಟನು ಗೋಧನವನ್ನು ಗೆದ್ದು ಹರ್ಷಿತನಾಗಿ ನಾಲ್ವರು ಪಾಂಡವರೊಡನೆ ನಗರವನ್ನು ಪ್ರವೇಶಿಸಿದನು. ಆ ಮಹಾರಾಜನು ಯುದ್ಧದಲ್ಲಿ ತ್ರಿಗರ್ತರನ್ನು ಗೆದ್ದು ಗೋವುಗಳನ್ನೆಲ್ಲ ಮರಳಿಸಿ ತಂದು ಕಾಂತಿಯುತನಾಗಿ ಪಾಂಡವರೊಡನೆ ಶೋಭಿಸಿದನು. ಆಸನದಲ್ಲಿ ಕುಳಿತ, ಸ್ನೇಹಿತರ ಸಂತೋಷವನ್ನು ಹೆಚ್ಚಿಸುವ ಆ ವೀರನ ಬಳಿ ಎಲ್ಲ ಪ್ರಜೆಗಳೂ ಬ್ರಾಹ್ಮಣರೊಡಗೂಡಿ ನಿಂತರು. ಆಗ ಅವರಿಂದ ಸನ್ಮಾನಗೊಂಡ ಸೈನ್ಯಸಹಿತ ಮತ್ಸ್ಯರಾಜನು ಬ್ರಾಹ್ಮಣರನ್ನೂ ಅಂತೆಯೇ ಪ್ರಜೆಗಳನ್ನೂ ಪ್ರತಿಯಾಗಿ ಅಭಿನಂದಿಸಿ ಕಳುಹಿಸಿಕೊಟ್ಟನು. ಬಳಿಕ ಮತ್ಸ್ಯ ಸೇನಾಧಿಪತಿ ವಿರಾಟರಾಜನು “ಉತ್ತರನೆಲ್ಲಿ ಹೋದ?” ಎಂದು ಉತ್ತರನ ವಿಷಯದಲ್ಲಿ ಪ್ರಶ್ನಿಸಿದನು. ಅರಮನೆಯ ಸ್ತ್ರೀಯರೂ, ಕನ್ಯೆಯರೂ, ಅಂತಃಪುರದ ಹೆಂಗಸರೂ ಅವನಿಗೆ ಸಂತೋಷದಿಂದ ತಿಳಿಸಿದರು:
“ಕೌರವರು ನಮ್ಮ ಗೋಧನವನ್ನು ಅಪಹರಿಸಿದರು. ಆದ್ದರಿಂದ ಕೋಪಗೊಂಡ ಉತ್ತರನು ಬಂದಿರುವ ಅತಿರಥ ದ್ರೋಣ, ಭೀಷ್ಮ, ಕೃಪ, ಕರ್ಣ, ದುರ್ಯೋಧನ, ಅಶ್ವತ್ಥಾಮ - ಈ ಷಡ್ರಥರನ್ನು ಗೆಲ್ಲಲು ಬೃಹನ್ನಡೆಯನ್ನು ಸಹಾಯವನ್ನಾಗಿಟ್ಟುಕೊಂಡು ಏಕಾಂಗಿಯಾಗಿ ಅತಿ ಸಾಹಸದಿಂದ ಹೋಗಿದ್ದಾನೆ."
ಆಗ ಯುದ್ಧವೀರ ಮಗನು ಏಕರಥನಾಗಿ ಬೃಹನ್ನಡೆಯನ್ನು ಸಾರಥಿಯನ್ನಾಗಿ ಮಾಡಿಕೊಂಡು ಹೋದನೆಂಬುದನ್ನು ಕೇಳಿ ಅತಿಯಾಗಿ ದುಃಖಿತನಾದ ವಿರಾಟರಾಜನು ಮಂತ್ರಿಮುಖ್ಯರಿಗೆಲ್ಲ ನುಡಿದನು:
“ತ್ರಿಗರ್ತರು ಸೋತರೆಂಬುದನ್ನು ಕೇಳಿದ ನಂತರ ಆ ಕೌರವರೂ ಇತರ ರಾಜರೂ ಎಂದಿಗೂ ಸುಮ್ಮನೆ ಇರಲಾರರು. ಆದುದರಿಂದ ತ್ರಿಗರ್ತರಿಂದ ಗಾಯಗೊಳ್ಳದಿರುವ ನನ್ನ ಸೈನಿಕರುದೊಡ್ಡ ಸೈನ್ಯದಿಂದ ಕೂಡಿ ಉತ್ತರನ ರಕ್ಷಣೆಗಾಗಿ ಹೊರಡಲಿ.”
ಅನಂತರ ಅವನು ಕುದುರೆಗಳನ್ನೂ, ಆನೆಗಳನ್ನೂ, ರಥಗಳನ್ನೂ, ವಿಚಿತ್ರ ಶಸ್ತ್ರ - ಆಭರಣಗಳನ್ನು ಧರಿಸಿದ ವೀರ ಪದಾತಿ ಪಡೆಗಳನ್ನೂ ಮಗನಿಗಾಗಿ ಬೇಗ ಕಳುಹಿಸಿಕೊಟ್ಟನು. ಅಕ್ಷೌಹಿಣೀ ಸೇನೆಗೆ ಒಡೆಯ ಆ ಮತ್ಸ್ಯರಾಜ ವಿರಾಟನು ಹೀಗೆ ಆ ಚತುರಂಗ ಸೈನ್ಯಕ್ಕೆ ಬೇಗ ಆಜ್ಞಾಪಿಸಿದನು:
“ಕುಮಾರನು ಬದುಕಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಬೇಗ ತಿಳಿಯಿರಿ. ನಪುಂಸಕನನ್ನು ಸಾರಥಿಯನ್ನಾಗಿ ಮಾಡಿಕೊಂಡಿರುವ ಅವನು ಬದುಕಿಲ್ಲವೆಂದೇ ನನ್ನ ಭಾವನೆ.”
ಕೌರವರಿಂದ ದುಃಖಾರ್ತನಾಗಿದ್ದ ಆ ವಿರಾಟನಿಗೆ ಧರ್ಮರಾಜನು ನಕ್ಕು ಹೇಳಿದನು:
“ರಾಜನ್! ಬೃಹನ್ನಡೆಯು ಉತ್ತರನ ಸಾರಥಿಯಾಗಿರುವಾಗ ಶತ್ರುಗಳು ಇಂದು ನಿನ್ನ ಹಸುಗಳನ್ನು ಕೊಂಡೊಯ್ಯಲಾರರು. ಆ ಸಾರಥಿಯಿಂದ ರಕ್ಷಿತ ನಿನ್ನ ಮಗನು ಕೌರವರನ್ನೂ, ಎಲ್ಲ ದೊರೆಗಳನ್ನೂ, ಅಂತೆಯೇ ದೇವತೆಗಳನ್ನೂ, ಅಸುರ, ಯಕ್ಷ-ನಾಗರನ್ನೂ ಯುದ್ಧದಲ್ಲಿ ಗೆಲ್ಲಬಲ್ಲನು.”
ಆಗ ಉತ್ತರನು ಕಳುಹಿಸಿದ್ದ ಶೀಘ್ರಗಾಮಿ ದೂತರು ವಿರಾಟನಗರವನ್ನು ಸೇರಿ ಜಯವನ್ನು ನಿವೇದಿಸಿದರು. ಆಗ ಮಂತ್ರಿಯು ಉತ್ತರನ ಶ್ರೇಷ್ಠ ವಿಜಯವನ್ನೂ, ಕೌರವರ ಸೋಲನ್ನೂ, ಅಂತೆಯೇ ಉತ್ತರನು ಬರುತ್ತಿರುವುದನ್ನೂ ರಾಜನಿಗೆ ತಿಳಿಸಿದನು.
“ಶತ್ರುನಾಶಕ! ಎಲ್ಲ ಹಸುಗಳನ್ನೂ ಗೆದ್ದುಕೊಂಡಿದ್ದಾಯಿತು. ಕೌರವರು ಪರಾಜಯಗೊಂಡರು. ಸಾರಥಿಯೊಡನೆ ಉತ್ತರನು ಕ್ಷೇಮದಿಂದಿದ್ದಾನೆ.”
ಕಂಕನು ಹೇಳಿದನು:
“ರಾಜಶ್ರೇಷ್ಠ! ಅದೃಷ್ಠವಶಾತ್, ನಿನ್ನ ಹಸುಗಳನ್ನು ಗೆದ್ದುಕೊಂಡದ್ದಾಯಿತು. ಕೌರವರನ್ನು ಸೋಲಿಸಿದ್ದಾಯಿತು? ಅದೃಷ್ಠವಶಾತ್ ನಿನ್ನ ಮಗನು ಬದುಕಿದ್ದಾನೆಂದು ಕೇಳುತ್ತಿದ್ದೇವೆ. ನಿನ್ನ ಮಗನು ಕೌರವರನ್ನು ಗೆದ್ದುದು ಅದ್ಭುತವೆಂದು ನಾನು ಭಾವಿಸುವುದಿಲ್ಲ. ಬೃಹನ್ನಡೆಯನ್ನು ಸಾರಥಿಯಾಗಿ ಉಳ್ಳ ಯಾರಿಗಾದರೂ ಜಯ ಕಟ್ಟಿಟ್ಟದ್ದು.”
ಆಗ ಆ ಅಮಿತ ಬಲಶಾಲಿ ಮಗನ ಗೆಲುವನ್ನು ಕೇಳಿದ ವಿರಾಟರಾಜನು ಹರ್ಷಪುಲಕಿತನಾಗಿ ದೂತರಿಗೆ ಉಡುಗೊರೆ ಕೊಟ್ಟು ಮಂತ್ರಿಗಳಿಗೆ ಆಜ್ಞಾಪಿಸಿದನು.
“ರಾಜಮಾರ್ಗಗಳು ಬಾವುಟಗಳಿಂದ ಅಲಂಕೃತವಾಗಲಿ. ಎಲ್ಲ ದೇವತೆಗಳೂ ಹೂ ಕಾಣಿಕೆಗಳಿಂದ ಅರ್ಚಿತಗೊಳ್ಳಲಿ. ರಾಜಕುಮಾರರೂ, ಯೋಧ ಮುಖ್ಯರೂ, ವೇಶ್ಯೆಯರೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಎಲ್ಲ ವಾದ್ಯಗಳೊಂದಿಗೆ ನನ್ನ ಮಗನನ್ನು ಎದುರುಗೊಳ್ಳಲಿ. ಘಂಟೆ ಬಾರಿಸುವವನು ಬೇಗ ಮದಗಜವನ್ನೇರಿ ನಾಲ್ಕು ದಾರಿಗಳು ಸೇರುವಡೆಗಳಲ್ಲೆಲ್ಲ ನನ್ನ ವಿಜಯವನ್ನು ಸಾರಲಿ. ಉತ್ತರೆಯೂ ಬಹುಮಂದಿ ಕುಮಾರಿಯರೊಡಗೂಡಿ ಶೃಂಗಾರ ವೇಷಾಭರಣಗಳನ್ನು ಧರಿಸಿ ಬೃಹನ್ನಡೆಯನ್ನು ಎದಿರುಗೊಳ್ಳಲಿ.”
ರಾಜನ ಆ ಮಾತುಗಳನ್ನು ಕೇಳಿ ಮಂಗಳದ್ರವ್ಯಗಳನ್ನು ಕೈಯಲ್ಲಿ ಹಿಡಿದುಕೊಂಡು, ಭೇರಿ ತೂರ್ಯ, ಶಂಖಗಳಿಂದೊಡಗೂಡಿದ ಎಲ್ಲ ಪ್ರಜೆಗಳೂ, ಶ್ರೇಷ್ಠ ವಸ್ತ್ರಗಳನ್ನು ಧರಿಸಿದ ಶುಭಾಂಗಿ ಪ್ರಮದೆಯರೂ, ಅಂತೆಯೇ ನಂದೀವಾದ್ಯ ಪಣವ ತೂರ್ಯ ವಾದ್ಯಗಳಿಂದೊಡಗೂಡಿದ ಸೂತ ಮಾಗಧರೂ, ಮಹಾಬಲಶಾಲಿಗಳೂ ವಿರಾಟನ ನಗರದಿಂದ ಹೊರಟು ಅನಂತ ಪರಾಕ್ರಾಮಶಾಲಿ ವಿರಾಟಪುತ್ರನನ್ನು ಎದಿರುಗೊಂಡರು.
ಸೈನ್ಯವನ್ನೂ ಹಾಗೂ ಚೆನ್ನಾಗಿ ಅಲಂಕಾರ ಮಾಡಿಕೊಂಡ ಕನ್ಯೆಯರು ಮತ್ತು ವೇಶ್ಯೆಯರನ್ನು ಕಳುಹಿಸಿ ಮಹಾಪ್ರಾಜ್ಞ ಮತ್ಸ್ಯರಾಜನು ಸಂತೋಷದಿಂದ ಹೀಗೆಂದನು:
“ಸೈರಂಧ್ರಿ! ಪಗಡೆಕಾಯಿಗಳನ್ನು ತೆಗೆದುಕೊಂಡು ಬಾ. ಕಂಕ! ಪಗಡೆಯಾಟ ನಡೆಯಲಿ!”
ಹಾಗೆ ಹೇಳಿದ ಅವನನ್ನು ನೋಡಿ ಯುಧಿಷ್ಠಿರನು ಮರುನುಡಿದನು.
“ಹರ್ಷಿತನಾಗಿರುವ ಜೂಜುಗಾರನೊಂದಿಗೆ ಆಟವಾಡಬಾರದೆಂದು ಕೇಳಿದ್ದೇವೆ. ಈಗ ಸಂತೋಷಭರಿತನಾಗಿರುವ ನಿನ್ನೊಡನೆ ಆಟವಾಡಲು ನನಗೆ ಮನಸ್ಸಿಲ್ಲ. ಆದರೂ ನಿನಗೆ ಪ್ರಿಯವನ್ನುಂಟುಮಾಡಲು ಬಯಸುತ್ತೇನೆ. ನಿನಗೆ ಇಷ್ಟವಿದ್ದರೆ ಆಟ ನಡೆಯಲಿ.”
ವಿರಾಟನು ಹೇಳಿದನು:
“ನಾನು ಆಟವಾಡದಿದ್ದರೂ ನನ್ನ ಸ್ತ್ರೀಯರು, ಗೋವುಗಳು, ಚಿನ್ನ ಮತ್ತು ಇತರ ಐಶ್ವರ್ಯಗಳನ್ನು ಏನನ್ನೂ ನೀನು ರಕ್ಷಿಸಲಾರೆ.”
ಕಂಕನು ಹೇಳಿದನು:
“ರಾಜೇಂದ್ರ! ಮಾನದ! ಬಹುದೋಷಪೂರಿತ ಜೂಜಿನಿಂದ ನಿನಗೇನು ಪ್ರಯೋಜನ? ಜೂಜಾಟದಲ್ಲಿ ಬಹಳ ಕೆಡಕುಗಳಿವೆ. ಆದ್ದರಿಂದ ಅದನ್ನು ಬಿಡಬೇಕು. ಪಾಂಡುಪುತ್ರ ಯುಧಿಷ್ಠಿರನ ವಿಷಯವನ್ನು ನೀನು ಕೇಳಿರಬಹುದು. ಅವನು ಸಮೃದ್ಧ ರಾಜ್ಯವನ್ನೂ, ದೇವತೆಗಳಂತಹ ಸೋದರರನ್ನೂ, ಸರ್ವಸ್ವವನ್ನೂ ಜೂಜಿನಲ್ಲಿ ಕಳೆದುಕೊಂಡನು. ಆದ್ದರಿಂದ ಜೂಜು ನಿನಗೆ ಹಿಡಿಸದು. ಆಡಲೇಬೇಕೆಂದು ನೀನು ಇಷ್ಟಪಟ್ಟರೆ ಆಡೋಣ.”
ಜೂಜಾಟವು ನಡೆಯುತ್ತಿರಲು ವಿರಾಟನು ಯುದಿಷ್ಠಿರನಿಗೆ ಹೇಳಿದನು:
“ನೋಡು! ಯುದ್ಧದಲ್ಲಿ ನನ್ನ ಮಗನಿಗೆ ಅಂತಹ ಕೌರವರು ಸೋತುಹೋದರು.”
ಆಗ ಧರ್ಮಪುತ್ರ ಯುಧಿಷ್ಠಿರನು ಮತ್ಸ್ಯರಾಜನಿಗೆ ಹೇಳಿದನು:
“ಬೃಹನ್ನಡೆಯನ್ನು ಸಾರಥಿಯನ್ನಾಗಿ ಮಾಡಿಕೊಂಡ ಯಾವನು ತಾನೇ ಗೆಲ್ಲದಿರುವುದು ಸಾಧ್ಯ?”
ಹೀಗೆನ್ನಲು ಕುಪಿತನಾದ ಮತ್ಸ್ಯರಾಜನು ಯುಧಿಷ್ಠಿರನಿಗೆ ಹೇಳಿದನು:
“ಬ್ರಾಹ್ಮಣಾಧಮ! ನಪುಂಸಕನನ್ನು ನನ್ನ ಮಗನಿಗೆ ಸಮಾನವಾಗಿ ಹೊಗಳುತ್ತಿರುವೆಯಲ್ಲ? ಯಾವುದನ್ನು ಆಡಬೇಕು ಯಾವುದನ್ನು ಆಡಬಾರದು ಎಂಬುದೇ ನಿನಗೆ ಗೊತ್ತಿಲ್ಲ. ನೀನು ನನ್ನನ್ನು ಅವಮಾನಿಸುತ್ತಿದ್ದೀಯೆ. ಭೀಷ್ಮ-ದ್ರೋಣಗಳಾದಿಗಳನ್ನೆಲ್ಲ ಅವನೇಕೆ ಜಯಿಸಬಾರದು? ಸ್ನೇಹದಿಂದ ನಿನ್ನ ಈ ಅಪರಾಧವನ್ನು ಕ್ಷಮಿಸುತ್ತಿದ್ದೇನೆ. ನಿನಗೆ ಬದುಕುವ ಆಸೆಯಿದ್ದರೆ ಮತ್ತೆ ಹೀಗೆ ನೀನು ಮಾತನಾಡಬಾರದು.”
ಯುಧಿಷ್ಠಿರನು ಹೇಳಿದನು:
“ರಾಜೇಂದ್ರ! ದ್ರೋಣ, ಬೀಷ್ಮ, ಅಶ್ವತ್ಥಾಮ, ಕರ್ಣ, ಕೃಪ, ದುರ್ಯೋಧನ ಮತ್ತು ಇತರ ಮಹಾರಥಿಗಳು ಇರುವಲ್ಲಿ ಅಥವಾ ದೇವತೆಗಳಿಂದೊಡಗೂಡಿದ ಸ್ವತಃ ಇಂದ್ರನೇ ಇರುವಲ್ಲಿ, ಬೃಹನ್ನಡೆಯ ಹೊರತು ಮತ್ತ್ಯಾರು ಅವರೆಲ್ಲರೊಡನೆ ಯುದ್ಧಮಾಡಬಲ್ಲನು?”
ವಿರಾಟನು ಹೇಳಿದನು:
“ಮತ್ತೆ ಮತ್ತೆ ನಾನು ನಿಷೇದಿಸಿದರೂ ನೀನು ಮಾತನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಿಲ್ಲ. ನಿಯಂತ್ರಕನಿಲ್ಲದಿದ್ದರೆ ಯಾರೂ ಧರ್ಮವನ್ನು ಆಚರಿಸುವುದಿಲ್ಲ.”
ಬಳಿಕ ರೋಷಗೊಂಡ ರಾಜನು “ಮತ್ತೆ ಹೀಗಾಗಕೂಡದು!” ಎಂದು ಗದರಿಸುತ್ತಾ ಕೋಪದಿಂದ ಯುಧಿಷ್ಠಿರನ ಮುಖಕ್ಕೆ ಬಲವಾಗಿ ದಾಳಗಳಿಂದ ಹೊಡೆದನು. ಬಲವಾಗಿ ಪೆಟ್ಟುತಿಂದ ಅವನ ಮೂಗಿನಿಂದ ರಕ್ತ ಬಂದಿತು. ಅದು ನೆಲಕ್ಕೆ ಬೀಳುವ ಮುನ್ನವೇ ಯುಧಿಷ್ಠಿರನು ಅದನ್ನು ಕೈಗಳಲ್ಲಿ ಹಿಡಿದುಕೊಂಡನು. ಆ ಧರ್ಮಾತ್ಮನು ಪಕ್ಕದಲ್ಲಿ ನಿಂತಿದ್ದ ದ್ರೌಪದಿಯತ್ತ ನೊಡಿದನು. ಪತಿಯ ಇಷ್ಟಾನುಸಾರ ವರ್ತಿಸುವ ಅವಳು ಅವನ ಅಭಿಪ್ರಾಯವನ್ನು ಅರಿತುಕೊಂಡಳು. ಆ ದೋಷರಹಿತೆಯು ಯುಧಿಷ್ಠಿರನ ಮೂಗಿನಿಂದ ಸುರಿಯುತ್ತಿದ್ದ ರಕ್ತವನ್ನು ನೀರು ತುಂಬಿದ ಚಿನ್ನದ ಪಾನಪಾತ್ರೆಯಲ್ಲಿ ಹಿಡಿದಳು.
ಆಗ ಜನರು ಮಂಗಳಕರ ಗಂಧಗಳನ್ನೂ ಬಗೆಬಗೆಯ ಮಾಲೆಗಳನ್ನೂ ಎರಚುತ್ತಿರಲು ಉತ್ತರನು ಹರ್ಷಚಿತ್ತನಾಗಿ ಸಲೀಲವಾಗಿ ನಗರಕ್ಕೆ ಬಂದನು. ಹೆಂಗಸರಿಂದಲೂ, ಪಟ್ಟಣಿಗರಿಂದಲೂ, ಹಳ್ಳಿಗರಿಂದಲೂ ಹಾಗೆ ಸನ್ಮಾನಿತನಾದ ಅವನು ಅರಮನೆಯ ಬಾಗಿಲಿಗೆ ಬಂದು ತಂದೆಗೆ ಹೇಳಿ ಕಳುಹಿಸಿದನು. ಆಗ ದ್ವಾರಪಾಲಕನು ಒಳಗೆ ಹೋಗಿ ವಿರಾಟನಿಗೆ ಹೀಗೆಂದನು:
“ನಿನ್ನ ಮಗ ಉತ್ತರನು ಬೃಹನ್ನಡೆಯೊಡಗೂಡಿ ಬಾಗಿಲಲ್ಲಿ ನಿಂತಿದ್ದಾನೆ.”
ಆಗ ಹರ್ಷಿತ ಮತ್ಸ್ಯರಾಜನು ದ್ವಾರಪಾಲಕನಿಗೆ ಹೀಗೆ ಹೇಳಿದನು:
“ಇಬ್ಬರನ್ನೂ ಬೇಗ ಕರೆದು ತಾ. ಅವರನ್ನು ನೋಡಲು ನಾನು ಕಾತರನಾಗಿದ್ದೇನೆ.”
ಆಗ ದ್ವಾರಪಾಲಕನ ಕಿವಿಯಲ್ಲಿ ಕುರುರಾಜ ಯುಧಿಷ್ಠಿರನು ಪಿಸುಗುಟ್ಟಿದನು:
“ಉತ್ತರನೊಬ್ಬನೇ ಒಳಬರಲಿ. ಬೃಹನ್ನಡೆಯನ್ನು ಒಳಗೆ ಬಿಡಬೇಡ. ಬೃಹನ್ನಡೆಯು ಕೈಗೊಂಡಿರುವ ಪ್ರತಿಜ್ಞೆಯಿದು. ಯುದ್ಧವಲ್ಲದೇ ಬೇರೆ ಸಂದರ್ಭದಲ್ಲಿ ನನ್ನ ಶರೀರದಲ್ಲಿ ಗಾಯವನ್ನುಂಟುಮಾಡುವವನು ಅಥವಾ ರಕ್ತ ಬರಿಸುವವನು ಖಂಡಿತ ಬದುಕಲಾರ. ನೆತ್ತರುಗೂಡಿದ ನನ್ನನ್ನು ನೋಡಿದ ಮಾತ್ರಕ್ಕೆ ತಾಳ್ಮೆಗೆಟ್ಟು ಬಹಳ ಕೋಪಗೊಂಡು ವಿರಾಟನನ್ನು ಅವನ ಮಂತ್ರಿಗಳು, ಸೇನೆ ಹಾಗೂ ವಾಹನಸಮೇತ ಕೊಂದುಬಿಡುವನು!”
ಅನಂತರ ರಾಜನ ಹಿರಿಯ ಮಗ ಉತ್ತರನು ಪ್ರವೇಶಿಸಿ ತಂದೆಯ ಪಾದಗಳಿಗೆ ಅಬಿವಂದಿಸಿ, ರಕ್ತದಿಂದ ತೊಯ್ದ, ಉದ್ವಿಗ್ನಚಿತ್ತ, ದೋಷರಹಿತ, ಆಸ್ಥಾನದ ಒಂದು ಕೊನೆಯಲ್ಲಿ ಸೈರಂಧ್ರಿಯೊಡನೆ ನೆಲದ ಮೇಲೆ ಕುಳಿತ ದರ್ಮರಾಜನನ್ನು ನೋಡಿದನು. ಆಗ ಉತ್ತರನು ಅವಸರದಿಂದ ತಂದೆಯನ್ನು ಕೇಳಿದನು:
“ರಾಜನ್! ಇವನನ್ನು ಹೊಡೆದವರು ಯಾರು? ಈ ಪಾಪವನ್ನಾರು ಮಾಡಿದರು?”
ವಿರಾಟನು ಹೇಳಿದನು:
“ಈ ದುಷ್ಟನನ್ನು ನಾನೇ ಹೊಡೆದೆನು. ಇವನಿಗೆ ಇಷ್ಟೇ ಸಾಲದು. ಶೂರನಾದ ನಿನ್ನನ್ನು ನಾನು ಹೊಗಳುತ್ತಿರುವಾಗ ಇವನು ನಪುಂಸಕನನ್ನು ಹೊಗಳುತ್ತಾನೆ.”
ಉತ್ತರನು ಹೇಳಿದನು:
“ರಾಜನ್! ನೀನು ಅಕಾರ್ಯವನ್ನು ಮಾಡಿದೆ. ಬೇಗ ಇವನು ಪ್ರಸನ್ನನಾಗುವಂತೆ ಮಾಡು. ಬ್ರಾಹ್ಮಣನ ಘೋರ ವಿಷ ನಿನ್ನನ್ನು ಬುಡಸಹಿತ ಸುಟ್ಟು ಹಾಕದಿರಲಿ!”
ರಾಷ್ಟ್ರವರ್ಧನ ವಿರಾಟನು ಮಗನ ಮಾತನ್ನು ಕೇಳಿ ಬೂದಿ ಮುಸುಕಿದ ಬೆಂಕಿಯಂತಿದ್ದ ಯುಧಿಷ್ಠಿರನ ಕ್ಷಮೆಯನ್ನು ಬೇಡಿದನು. ಕ್ಷಮೆಕೇಳುತ್ತಿದ್ದ ರಾಜನಿಗೆ ಯುಧಿಷ್ಠಿರನು ಮರುನುಡಿದನು:
“ರಾಜನ್! ಈ ಮೊದಲೇ ಇದನ್ನು ಕ್ಷಮಿಸಿಬಿಟ್ಟಿದ್ದೇನೆ. ನನಗೇನೂ ಕೋಪವಿಲ್ಲ. ಮಹಾರಾಜ! ನನ್ನ ಮೂಗಿನಿಂದ ಸುರಿದ ರಕ್ತ ನೆಲಕ್ಕೆ ಬಿದ್ದಿದ್ದರೆ ನೀನು ದೇಶಸಹಿತ ಖಂಡಿತ ನಾಶವಾಗುತ್ತಿದ್ದೆ. ದೋಷವಿಲ್ಲದವನನ್ನು ಹೊಡೆದುದಕ್ಕಾಗಿ ನಿನ್ನನ್ನು ನಾನು ನಿಂದಿಸುವುದಿಲ್ಲ. ಬಲಶಾಲಿಗಳಿಗೆ ಬೇಗ ಕ್ರೌರ್ಯವುಂಟಾಗುತ್ತದೆ.”
ರಕ್ತ ಸುರಿಯುವುದು ನಿಂತಾಗ ಬೃಹನ್ನಡೆಯು ಪ್ರವೇಶಿಸಿ ವಿರಾಟನಿಗೂ ಕಂಕನಿಗೂ ನಮಸ್ಕರಿಸಿ ನಿಂತುಕೊಂಡಳು. ಅರ್ಜುನನು ಕೇಳಿಸಿಕೊಳ್ಳವಂತೆಯೇ ಯುಧಿಷ್ಠಿರನ ಕ್ಷಮೆ ಬೇಡಿದ ಮತ್ಸ್ಯರಾಜನು ಯುದ್ಧರಂಗದಿಂದ ಬಂದ ಉತ್ತರನನ್ನು ಹೊಗಳಿದನು.
“ಸುದೇಷ್ಣೆಯ ಆನಂದವನ್ನು ಹೆಚ್ಚಿಸುವವನೇ! ನಿನ್ನಿಂದ ನಾನು ಉತ್ತರಾಧಿಕಾರಿಯುಳ್ಳವನಾದೆ. ನಿನ್ನಂತಹ ಮಗನು ನನಗೆ ಹಿಂದೆ ಇರಲಿಲ್ಲ, ಮುಂದೆ ಇರುವುದಿಲ್ಲ. ಮಗೂ! ಸಾವಿರ ಹೆಜ್ಜೆ ನಡೆದರೂ ಒಂದು ಹೆಜ್ಜೆಯನ್ನೂ ತಪ್ಪದ ಆ ಕರ್ಣನನ್ನು ನೀನು ಹೇಗೆ ಎದುರಿಸಿದೆ? ಮಗೂ! ಇಡೀ ಮಾನವಲೋಕದಲ್ಲಿ ಸಮಾನರಿಲ್ಲದ, ಸಮುದ್ರದಂತೆ ಅಚಲನಾದ, ಕಾಲಾಗ್ನಿಯಂತೆ ಸಹಿಸಲಾಗದ ಆ ಭೀಷ್ಮನನ್ನು ನೀನು ಹೇಗೆ ಎದುರಿಸಿದೆ? ಮಗೂ! ವೃಷ್ಣಿವೀರರ, ಪಾಂಡವರ ಮತ್ತು ಎಲ್ಲ ಕ್ಷತ್ರಿಯರ ಆಚಾರ್ಯನೂ ಬ್ರಾಹ್ಮಣನೂ ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನೂ ಆದ ಆ ದ್ರೋಣನನ್ನು ನೀನು ಹೇಗೆ ಎದುರಿಸಿದೆ? ಆಚಾರ್ಯಪುತ್ರನೂ, ಸರ್ವ ಶಸ್ತ್ರಧಾರಿಗಳಲ್ಲಿ ಶೂರನೂ, ಅಶ್ವತ್ಥಾಮನೆಂದು ಹೆಸರಾಂತವನೂ ಆದ ಅವನನ್ನು ಹೇಗೆ ಎದುರಿಸಿದೆ? ಮಗೂ! ಯುದ್ಧದಲ್ಲಿ ಯಾರನ್ನು ನೋಡಿದರೆ ಎಲ್ಲರೂ ತಮ್ಮದೆಲ್ಲವನ್ನೂ ಕಳೆದುಕೊಂಡ ವರ್ತಕರಂತೆ ಕುಗ್ಗಿಹೋಗುತ್ತಾರೋ ಆ ಕೃಪನನ್ನು ಹೇಗೆ ಎದುರಿಸಿದೆ? ತನ್ನ ಮಹಾಬಾಣಗಳಿಂದ ಪರ್ವತವನ್ನು ಭೇದಿಸುವ ರಾಜಪುತ್ರ ಆ ದುರ್ಯೋಧನನನ್ನು ನೀನು ಹೇಗೆ ಎದುರಿಸಿದೆ?”
ಉತ್ತರನು ಹೇಳಿದನು:
“ನಾನು ಹಸುಗಳನ್ನು ಗೆಲ್ಲಲಿಲ್ಲ. ಶತ್ರುಗಳನ್ನು ನಾನು ಸೋಲಿಸಲಿಲ್ಲ. ಆ ಕಾರ್ಯವನ್ನೆಲ್ಲ ಯಾವನೋ ಒಬ್ಬ ದೇವಪುತ್ರನು ಮಾಡಿದನು. ದೇವೇಂದ್ರ ಸಮಾನನಾದ ಆ ತರುಣ ದೇವಪುತ್ರನು ಹೆದರಿ ಓಡಿಹೋಗುತ್ತಿದ್ದ ನನ್ನನ್ನು ತಡೆದು ರಥದಲ್ಲಿ ಕುಳಿತನು. ಅವನು ಆ ಹಸುಗಳನ್ನು ಗೆದ್ದು ಆ ಕೌರವರನ್ನು ಸೋಲಿಸಿದನು. ತಂದೇ! ಅದು ಆ ವೀರನ ಕಾರ್ಯ. ನಾನು ಅದನ್ನು ಮಾಡಲಿಲ್ಲ. ಬಾಣಗಳಿಂದ ಕೃಪ, ದ್ರೋಣ, ಪರಾಕ್ರಮಶಾಲಿ ಅಶ್ವತ್ಠಾಮ, ಕರ್ಣ, ಭೀಷ್ಮರನ್ನು ಅವನು ಮುಖ ತಿರುಗಿಸುವಂತೆ ಮಾಡಿದನು. ಆನೆಗಳೊಳಗೂಡಿದ ಸಲಗದಂತೆ ಯುದ್ಧದಲ್ಲಿ ಭೀತನೂ ಭಗ್ನನೂ ಆಗಿದ್ದ ಮಹಾಬಲಶಾಲಿ ರಾಜಪುತ್ರ ದುರ್ಯೋಧನನಿಗೆ ಅವನು ಹೇಳಿದನು:
“ಕೌರವಾತ್ಮಜ! ನಿನಗೆ ಹಸ್ತಿನಾಪುರದಲ್ಲಿ ಏನೇನೂ ರಕ್ಷಣೆಯಿರುವಂತೆ ನನಗೆ ತೋರುವುದಿಲ್ಲ. ಆದ್ದರಿಂದ ಹೋರಾಟದಿಂದ ಪ್ರಾಣವನ್ನು ರಕ್ಷಿಸಿಕೋ. ರಾಜನ್! ನೀನು ಪಲಾಯನ ಮಾಡಿ ತಪ್ಪಿಸಿಕೊಳ್ಳಲಾರೆ. ಯುದ್ಧಕ್ಕೆ ಮನಸ್ಸು ಮಾಡು. ಗೆದ್ದರೆ ಭೂಮಿಯನ್ನು ಆಳುತ್ತೀಯೆ. ಸತ್ತರೆ ಸ್ವರ್ಗವನ್ನು ಪಡೆಯುತ್ತೀಯೆ."
ನರಶ್ರೇಷ್ಠ ಆ ರಾಜನು ಆಗ ವಜ್ರಸದೃಶ ಬಾಣಗಳನ್ನು ಬಿಡುತ್ತ ಸರ್ಪದಂತೆ ಬುಸುಗುಟ್ಟುತ್ತ ಸಚಿವರೊಡಗೂಡಿ ರಥದಲ್ಲಿ ಹಿಂದಿರುಗಿದನು. ಅಪ್ಪಾ! ಆಗ ನನಗೆ ರೋಮಾಂಚನವುಂಟಾಯಿತು. ನನ್ನ ತೊಡೆಗಳು ಮರಗಟ್ಟಿದವು. ಏಕೆಂದರೆ ಆ ದೇವಪುತ್ರನು ಆ ದಟ್ಟ ಸೇನೆಯನ್ನು ಬಾಣಗಳಿಂದ ಭೇದಿಸಿದನು. ಸಿಂಹದಂತಹ ಶರೀರವುಳ್ಳ ಆ ಬಲಶಾಲಿ ಯುವಕನು ರಥಸಮೂಹವನ್ನು ಚದುರಿಸಿ, ನಗುನಗುತ್ತಲೇ ಕೌರವರ ವಸ್ತ್ರಗಳನ್ನು ತೆಗೆದುಕೊಂಡನು. ಕಾಡಿನಲ್ಲಿ ಹುಲ್ಲುತಿನ್ನುವ ಜಿಂಕೆಗಳನ್ನು ಮದಿಸಿದ ಒಂದೇ ಹುಲಿಯು ಆಕ್ರಮಿಸುವಂತೆ ಒಂಟಿಯಾಗಿಯೇ ಆ ವೀರನು ಷಡ್ರಥರನ್ನು ಮುತ್ತಿದನು.”
ವಿರಾಟನು ಹೇಳಿದನು:
“ಯುದ್ಧದಲ್ಲಿ ಕೌರವರು ಹಿಡಿದಿದ್ದ ನನ್ನ ಗೋಧನವನ್ನು ಗೆದ್ದು ತಂದ ಆ ವೀರ ಮಹಾಬಾಹು ಮಹಾಯಶಸ್ವಿ ದೇವಪುತ್ರನೆಲ್ಲಿ? ಹಸುಗಳನ್ನೂ ನಿನ್ನನ್ನೂ ರಕ್ಷಿಸಿದ ಆ ಮಹಾಬಲಶಾಲಿ ದೇವಪುತ್ರನನ್ನು ನೋಡಲು ಮತ್ತು ಗೌರವಿಸಲು ಬಯಸುತ್ತೇನೆ.”
ಉತ್ತರನು ಹೇಳಿದನು:
“ತಂದೇ! ಆ ಪ್ರತಾಪಶಾಲೀ ದೇವಪುತ್ರನು ಅದೃಶ್ಯನಾಗಿಬಿಟ್ಟನು. ಆದರೆ ನಾಳೆಯೋ ಅಥವಾ ನಾಡಿದ್ದೋ ಅವನು ಕಾಣಿಸಿಕೊಳ್ಳುತ್ತಾನೆಂದು ನಾನು ಭಾವಿಸುತ್ತೇನೆ.”
ಹೀಗೆ ವರ್ಣಿಸುತ್ತಿರಲು ವೇಷಮರೆಸಿಕೊಂಡು ಅಲ್ಲಿ ವಾಸಿಸುತ್ತಿರುವ ಆ ಪಾಂಡುಪುತ್ರ ಕುಂತೀಸುತ ಅರ್ಜುನನನ್ನು ವಿರಾಟನು ಗುರುತಿಸಲೇ ಇಲ್ಲ.
ಆಗ ಮಹಾತ್ಮ ವಿರಾಟನ ಅಪ್ಪಣೆ ಪಡೆದ ಪಾರ್ಥನು ಆ ವಸ್ತ್ರಗಳನ್ನು ವಿರಾಟನ ಮಗಳಿಗೆ ಸ್ವತಃ ಕೊಟ್ಟನು. ಆ ಭಾಮಿನಿ ಉತ್ತರೆಯಾದರೋ ನವಿರಾದ ಆ ಅಮೂಲ್ಯ ವಿವಿಧ ವಸ್ತ್ರಗಳನ್ನು ತೆಗೆದುಕೊಂಡು ಸಂತೋಷಪಟ್ಟಳು. ಆಗ ಅರ್ಜುನನು ಮಹಾರಾಜ ಯುಧಿಷ್ಠಿರನಿಗೆ ಸಂಬಂಧಿಸಿದಂತೆ ಮಾಡಬೇಕಾದ ಎಲ್ಲವನ್ನೂ ಉತ್ತರನೊಡಗೂಡಿ ರಹಸ್ಯವಾಗಿ ಯೋಜಿಸಿದನು. ಆಮೇಲೆ ಆ ಭರತಶ್ರೇಷ್ಠನು ಮತ್ಸ್ಯರಾಜನ ಮಗನೊಡನೆ ಹಾಗೆಯೇ ಅದನ್ನು ಸಂತಸದಿಂದ ನೆರವೇರಿಸಿದನು.
ಪಾಂಡವರು ತಮ್ಮ ನಿಜರೂಪವನ್ನು ವಿರಾಟನಿಗೆ ತೋರಿಸಿಕೊಂಡಿದುದು
ಅನಂತರ ನಿಗದಿತ ಕಾಲದಲ್ಲಿ ಪ್ರತಿಜ್ಞೆ ಪೂರೈಸಿದ ಐವರು ಮಹಾರಥ ಪಾಂಡವ ಸಹೋದರರು ಮೂರನೆಯ ದಿವಸ ಮಿಂದು ಬಿಳಿಯ ಬಟ್ಟೆಗಳನ್ನುಟ್ಟು ಸರ್ವಾಭರಣಗಳಿಂದ ಅಲಂಕೃತರಾಗಿ ಯುಧಿಷ್ಠಿರನನ್ನು ಮುಂದಿಟ್ಟುಕೊಂಡು ಪದ್ಮಚಿಹ್ನೆಗಳನ್ನುಳ್ಳ ಆನೆಗಳಂತೆ ಪ್ರಕಾಶಿಸಿದರು. ಬಳಿಕ ಆ ಅಗ್ನಿಸಮಾನರೆಲ್ಲರೂ ವಿರಾಟನ ಸಭಾಭವನಕ್ಕೆ ಹೋಗಿ ಯಜ್ಞವೇದಿಗಳಲ್ಲಿ ಅಗ್ನಿಗಳು ನೆಲೆಗೊಳ್ಳುವಂತೆ ರಾಜಾಸನಗಳಲ್ಲಿ ಕುಳಿತರು. ಅವರು ಅಲ್ಲಿ ಕುಳಿತಿರಲು ದೊರೆ ವಿರಾಟನು ರಾಜಕಾರ್ಯಗಳನ್ನೆಲ್ಲ ನಿರ್ವಹಿಸುವುದಕ್ಕಾಗಿ ಸಭೆಗೆ ಬಂದನು. ಆಗ ಅಗ್ನಿಗಳಂತೆ ಜ್ವಲಿಸುತ್ತಿದ್ದ ಶ್ರೀಯುತ ಪಾಂಡವರನ್ನು ನೋಡಿ ಮರುತ್ತುಗಳಿಂದ ಕೂಡಿದ ದೇವೇಂದ್ರನಂತೆ ಕುಳಿತಿದ್ದ ದೇವರೂಪಿ ಕಂಕನಿಗೆ ಮತ್ಯ್ಸರಾಜನು ಹೀಗೆಂದನು:
“ನಿನ್ನನ್ನು ನಾನು ಪಗಡೆಯಾಟದವನನ್ನಾಗಿ, ಸಭಾಸದಸ್ಯನನ್ನಾಗಿ ಮಾತ್ರ ಮಾಡಿದ್ದೆನು. ನೀನು ಅಲಂಕಾರ ಮಾಡಿಕೊಂಡು ರಾಜಾಸನದಲ್ಲಿ ಕುಳಿತಿದ್ದೇಕೆ?”
ವಿರಾಟನ ಆ ಮಾತನ್ನು ಕೇಳಿದ ಅರ್ಜುನನು ಪರಿಹಾಸಮಾಡುವ ಬಯಕೆಯಿಂದ ಮುಗುಳ್ನಗುತ್ತ ಈ ಮಾತನ್ನಾಡಿದನು.
“ರಾಜನ್! ಬ್ರಾಹ್ಮಣರನ್ನು ಸೇವಿಸುವ, ಈ ವಿಧ್ವಾಂಸ, ತ್ಯಾಗಿ, ಯಜ್ಞನಿರತ, ಧೃಢವ್ರತನು ಇಂದ್ರನ ಆಸನವನ್ನಾದರೂ ಏರಲು ಯೋಗ್ಯ. ಇವನು ಕುರುವಂಶದಲ್ಲಿ ಶ್ರೇಷ್ಠ, ಕುಂತೀಪುತ್ರ ಯುಧಿಷ್ಠಿರನು. ಇವನ ಕೀರ್ತಿ ಮೇಲೇರುತ್ತಿರುವ ಸೂರ್ಯನ ಪ್ರಭೆಯಂತೆ ಲೋಕದಲ್ಲಿ ನೆಲೆಗೊಂಡಿದೆ. ಉದಯಸೂರ್ಯನ ತೇಜಸ್ಸಿನ ಕಿರಣಗಳಂತೆ ಇವನ ಕೀರ್ತಿಯ ಕಿರಣಗಳು ಎಲ್ಲ ದಿಕ್ಕುಗಳನ್ನೂ ವ್ಯಾಪಿಸಿವೆ. ಇವನು ಕುರುವಂಶದವರ ನಡುವೆ ವಾಸಮಾಡುತ್ತಿದ್ದಾಗ ಹತ್ತು ಸಾವಿರ ವೇಗಶಾಲಿ ಆನೆಗಳು ಇವನನ್ನು ಹಿಂಬಾಲಿಸುತ್ತಿದ್ದವು. ಮೂವತ್ತು ಸಾವಿರ ಸುವರ್ಣಮಾಲೆಗಳನ್ನು ಧರಿಸಿದ ಉತ್ತಮ ಕುದುರೆಗಳಿಂದ ಕೂಡಿದ ರಥಗಳು ಇವನನ್ನು ಯಾವಾಗಲೂ ಅನುಸರಿಸುತ್ತಿದ್ದವು. ಹಿಂದೆ ಋಷಿಗಳು ಇಂದ್ರನನ್ನು ಹೊಗಳುತ್ತಿದ್ದಂತೆ ಹೊಳೆಯುವ ಮಣಿಕುಂಡಲಗಳನ್ನು ಧರಿಸಿದ ಎಂಟುನೂರು ಸೂತರು ಮಾಗಧರ ಸಹಿತ ಇವನನ್ನು ಹೊಗಳುತ್ತಿದ್ದರು. ದೇವತೆಗಳು ಕುಬೇರನನ್ನು ಸೇವಿಸುವಂತೆ ಇವನನ್ನು ಕುರುವಂಶದವರೆಲ್ಲರೂ, ಇತರ ಎಲ್ಲ ದೊರೆಗಳೂ ಕಿಂಕರರ ಹಾಗೆ ಯಾವಾಗಲೂ ಸೇವಿಸುತ್ತಿದ್ದರು. ಮಹಾರಾಜ! ಆಗ ಇವನು ವೈಶ್ಯರಿಂದ ಪಡೆಯುವಂತೆ ಎಲ್ಲ ರಾಜರಿಂದಲೂ - ಅವರು ಸಮರ್ಥರಾಗಿರಲಿ ಅಥವಾ ದುರ್ಬಲರಾಗಿರಲಿ – ಕಪ್ಪವನ್ನು ಪಡೆಯುತ್ತಿದ್ದನು. ವ್ರತಗಳನ್ನು ಚೆನ್ನಾಗಿ ಆಚರಿಸುತ್ತಿದ್ದ ಈ ರಾಜನನ್ನು ಎಂಬತ್ತೆರಡು ಸಾವಿರ ಮಹಾತ್ಮ ಸ್ನಾತಕರು ಆಶ್ರಯಿಸಿದ್ದರು. ಇವನು ವೃದ್ದರೂ ಅನಾಥರೂ ಅಂಗಹೀನರೂ ಹೆಳವರೂ ಆದ ಪ್ರಜೆಗಳನ್ನು ಪುತ್ರರೆಂಬಂತೆ ಧರ್ಮದಿಂದ ಪಾಲಿಸುತ್ತಿದ್ದನು. ಈ ರಾಜನು ಧರ್ಮಪರ, ಇಂದ್ರಿಯನಿಗ್ರಹಿ, ಕೋಪದಲ್ಲಿ ಸಂಯಮಿ, ಉದಾರಿ, ಬ್ರಾಹ್ಮಣರನ್ನು ಸೇವಿಸುವವನು ಮತ್ತು ಸತ್ಯವನ್ನಾಡುವವನು. ಆ ರಾಜ ಸುಯೋಧನನು ತನ್ನ ಗುಂಪಿನೊಡನೆ ಮತ್ತು ಕರ್ಣ-ಶಕುನಿಯರ ಸಮೇತ ಇವನ ಶ್ರೀ ಪ್ರತಾಪದಿಂದ ಪರಿತಪಿಸುತ್ತಾನೆ. ಇವನ ಗುಣಗಳನ್ನು ಎಣಿಸುವುದು ಅಸಾಧ್ಯ. ಇವನು ಯಾವಾಗಲೂ ಧರ್ಮಪರ, ದಯಾಶೀಲ ಪಾಂಡುಪುತ್ರ. ಹೀಗಿರುವ ಈ ಗುಣಯುಕ್ತ, ಮಹಾರಾಜ, ಕ್ಷತ್ರಿಯಶ್ರೇಷ್ಠ, ಪಾಂಡವ ಭೂಪತಿಯು ರಾಜಯೋಗ್ಯ ಆಸನದಲ್ಲಿ ಕುಳಿತಿರಲು ಹೇಗೆ ತಾನೇ ಅರ್ಹನಾಗುವುದಿಲ್ಲ?”
ವಿರಾಟನು ಉತ್ತರೆ-ಅರ್ಜುನರ ವಿವಾಹವನ್ನು ಪ್ರಸ್ತಾವಿಸಿದುದು
ವಿರಾಟನು ಹೇಳಿದನು:
“ಇವನು ಕುರುವಂಶಕ್ಕೆ ಸೇರಿದ ಕುಂತೀಪುತ್ರ ಯುಧಿಷ್ಠಿರ ರಾಜನಾಗಿದ್ದರೆ ಇವನ ಸೋದರ ಅರ್ಜುನನೆಲ್ಲಿ? ಬಲಶಾಲಿ ಭೀಮನೆಲ್ಲಿ? ನಕುಲ-ಸಹದೇವರೆಲ್ಲಿ? ಯಶಸ್ವಿನಿ ದ್ರೌಪದಿಯೆಲ್ಲಿ? ಜೂಜಿನಲ್ಲಿ ಸೋತಮೇಲೆ ಆ ಕುಂತೀಪುತ್ರರ ವಿಷಯವನ್ನು ಯಾರೂ ಎಲ್ಲೂ ಅರಿಯರು.”
ಅರ್ಜುನನು ಹೇಳಿದನು:
“ರಾಜನ್! ನಿನ್ನ ಅಡುಗೆಯವನೆಂದು ಹೇಳಲಾಗಿರುವ ಬಲ್ಲವನೆಂಬುವವನೇ ಮಹಾಬಾಹು, ಭಯಂಕರ ವೇಗ-ಪರಾಕ್ರಮಗಳನ್ನುಳ್ಳ ಭೀಮ. ಗಂಧಮಾದನ ಪರ್ವತದಲ್ಲಿ ಕೋಪವಶನಾಗಿ ರಾಕ್ಷಸರನ್ನು ಕೊಂದು ದ್ರೌಪದಿಗಾಗಿ ದಿವ್ಯ ಸೌಗಂಧಿಕ ಪುಷ್ಪಗಳನ್ನು ತಂದವನು ಇವನೇ. ದುರಾತ್ಮ ಕೀಚಕನನ್ನು ಕೊಂದ ಗಂಧರ್ವನು ಇವನೇ. ನಿನ್ನ ಅಂತಃಪುರದಲ್ಲಿ ಹುಲಿ, ಕರಡಿ, ಹಂದಿಗಳನ್ನು ಕೊಂದವನೂ ಇವನೇ. ನಿನ್ನ ಅಶ್ವಪಾಲಕನಾಗಿದ್ದವನು ಈ ಶತ್ರುನಾಶಕ ನಕುಲ. ಗೋಪಾಲಕನಾಗಿದ್ದವನು ಸಹದೇವ. ಈ ಮಾದ್ರಿ ಪುತ್ರರು ಮಹಾಥರು. ಈ ಪುರುಷಶ್ರೇಷ್ಠರಿಬ್ಬರೂ ವಸ್ತ್ರಾಭರಣಗಳಿಂದ ಅಲಂಕೃತರು. ರೂಪವಂತರು. ಯುಶಸ್ವಿಗಳು. ಸಾವಿರಾರು ಮಂದಿ ರಥಿಕರ ಸಮಾನ ಶಕ್ತಿಯುಳ್ಳವರು. ಕಮಲದ ಎಸಳುಗಳಂತೆ ಕಣ್ಣುಳ್ಳವಳೂ, ಸುಂದರ ನಡುವುಳ್ಳವಳೂ, ಮಧುರ ಮುಗುಳ್ನಗೆಯುಳ್ಳವಳೂ ಆದ ಈ ಸೈರಂಧ್ರಿಯೇ ದ್ರೌಪದಿ. ಇವಳಿಗಾಗಿಯೇ ಕೀಚಕರು ಹತರಾದರು. ನಾನೇ ಅರ್ಜುನ. ನನ್ನ ವಿಷಯ ಈಗಾಗಲೇ ನಿನ್ನ ಕಿವಿಗೆ ಬಿದ್ದಿದೆಯಷ್ಟೇ? ನಾನು ಭೀಮನಿಗೆ ಕಿರಿಯನಾದ ಪಾರ್ಥ. ಯಮಳರಿಗೆ ಹಿರಿಯನು. ಮಕ್ಕಳು ಗರ್ಭವಾಸವನ್ನು ಕಳೆಯುವಂತೆ ನಾವು ನಿನ್ನ ಅರಮನೆಯಲ್ಲಿ ಸುಖವಾಗಿ ಅಜ್ಞಾತವಾಸವನ್ನು ಕಳೆದೆವು.”
ಆ ವೀರರು ಪಂಚ ಪಾಂಡವರೆಂದು ಅರ್ಜುನನು ವಿವರಿಸಿದ ನಂತರ ವಿರಾಟಪುತ್ರನು ಅರ್ಜುನನ ಪರಾಕ್ರಮವನ್ನು ವರ್ಣಿಸಿದನು.
“ಇವನು ಜಿಂಕೆಗಳ ನಡುವೆ ಸಿಂಹದಂತೆ ಅವರಲ್ಲಿ ಮುಖ್ಯ ಮುಖ್ಯರಾದವರೆನ್ನೆಲ್ಲ ಕೊಲ್ಲುತ್ತ ವೈರಿಗಳ ರಥಸಮೂಹಗಳ ನಡುವೆ ಸಂಚರಿದನು. ಇವನು ದೊಡ್ಡ ಆನೆಯೊಂದನ್ನು ಯುದ್ಧದಲ್ಲಿ ಒಂದೇ ಬಾಣದಿಂದ ಹೊಡೆದು ಕೊಂದನು. ಸುವರ್ಣಾಲಂಕೃತ ಗವಸಣಿಗೆಗಳಿಂದ ಕೂಡಿದ ಆ ಅನೆಯು ದಂತಗಳನ್ನೂರಿ ನೆಲಕ್ಕೊರಗಿತು. ಇವನು ಹಸುಗಳನ್ನು ಗೆದ್ದನು. ಯುದ್ಧದಲ್ಲಿ ಕೌರವರನ್ನು ಗೆದ್ದನು. ಇವನ ಶಂಖಧ್ವನಿಯಿಂದ ನನ್ನ ಕಿವಿಗಳು ಕಿವುಡಾಗಿಹೋದವು.”
ಅವನ ಆ ಮಾತನ್ನು ಕೇಳಿ ಯುಧಿಷ್ಠಿರನ ವಿಷಯದಲ್ಲಿ ತಪ್ಪುಮಾಡಿದ ಪ್ರತಾಪಶಾಲಿ ಮತ್ಸ್ಯರಾಜನು ಉತ್ತರನಿಗೆ ಮರುನುಡಿದನು.
“ಪಾಂಡುಪುತ್ರನನ್ನು ಪ್ರಸನ್ನನಾಗಿಸಲು ಸಮಯ ಒದಗಿದೆಯೆಂದು ಭಾವಿಸುತ್ತೇನೆ. ನಿನಗೆ ಒಪ್ಪಿಗೆಯಾದರೆ ಪಾರ್ಥನಿಗೆ ಉತ್ತರೆಯನ್ನು ಕೊಡುತ್ತೇನೆ.”
ಉತ್ತರನು ಹೇಳಿದನು:
“ಪಾಂಡವರು ಪೂಜ್ಯರು. ಮಾನ್ಯರು. ಅವರನ್ನು ಗೌರವಿಸುವ ಕಾಲ ಒದಗಿಬಂದಿದೆಯೆಂದು ನನ್ನ ಅಭಿಪ್ರಾಯ. ಪೂಜಾಯೋಗ್ಯರೂ ಮಹಾಭಾಗ್ಯಶಾಲಿಗಳೂ ಆದ ಪಾಂಡವರು ಸತ್ಕಾರಗೊಳ್ಳಲಿ.”
ವಿರಾಟನು ಹೇಳಿದನು:
“ಯುದ್ಧದಲ್ಲಿ ಶತ್ರುಗಳಿಗೆ ವಶನಾದ ನನ್ನನ್ನು ಭೀಮಸೇನನು ಬಿಡಿಸಿದನು. ಅಂತೆಯೇ ಹಸುಗಳನ್ನು ಗೆದ್ದನು. ಇವನ ಬಾಹುಬಲದಿಂದ ನಮಗೆ ಯುದ್ಧದಲ್ಲಿ ಜಯವುಂಟಾಗಿದೆ. ನಾವೆಲ್ಲರೂ ಸಚಿವರೊಡನೆ ತಮ್ಮಂದಿರೊಡಗೂಡಿದ ಕುಂತೀಪುತ್ರ ಪಾಂಡವಶ್ರೇಷ್ಠ ಯುಧಿಷ್ಠಿರನನ್ನು ಪ್ರಸನ್ನಗೊಳಿಸೋಣ. ನಾವು ತಿಳಿಯದಂತೆ ಏನನ್ನಾದರೂ ಆಡಿದ್ದರೆ ಈ ರಾಜನು ಅವೆಲ್ಲವನ್ನೂ ಕ್ಷಮಿಸಬೇಕು. ಏಕೆಂದರೆ ಪಾಂಡುಪುತ್ರನು ಧರ್ಮಾತ್ಮನು.”
ಅನಂತರ ವಿರಾಟನು ಬಹಳ ಸಂತೋಷಗೊಂಡು ಆ ರಾಜನ ಬಳಿ ಹೋಗಿ ಒಪ್ಪಂದ ಮಾಡಿಕೊಂಡನು. ಸೇನೆ, ಕೋಶ, ಪುರಸಹಿತವಾಗಿ ರಾಜ್ಯವನ್ನೆಲ್ಲ ಆ ಮಹಾತ್ಮನು ಯುಧಿಷ್ಠಿರನಿಗೆ ಬಿಟ್ಟುಕೊಟ್ಟನು. ಆಗ ಆ ಪ್ರತಾಪಶಾಲಿ ಮತ್ಸ್ಯರಾಜನು ಧನಂಜಯನನ್ನು ವಿಶೇಷವಾಗಿ ಪುರಸ್ಕರಿಸುತ್ತಾ ಎಲ್ಲ ಪಾಂಡವರಿಗೆ “ನನ್ನ ಅದೃಷ್ಟ! ಅದೃಷ್ಟ!” ಎಂದನು. ಅವನು ಯುಧಿಷ್ಠಿರ, ಭೀಮ, ಮತ್ತು ಪಾಂಡವ ಮಾದ್ರೀಪುತ್ರರ ನೆತ್ತಿಯನ್ನು ಮೂಸಿ ಮತ್ತೆ ಮತ್ತೆ ಆಲಂಗಿಸಿದನು. ಸೇನಾಪತಿ ವಿರಾಟನು ಅವರ ದರ್ಶನದಿಂದ ತೃಪ್ತನಾಗದೇ ಪ್ರೀತಿಯಿಂದ ರಾಜ ಯುಧಿಷ್ಠಿರನಿಗೆ ನುಡಿದನು:
“ನೀವೆಲ್ಲರೂ ದೈವವಶಾತ್ ಕಾಡಿನಿಂದ ಕ್ಷೇಮವಾಗಿ ಬಂದಿರಿ. ಆ ದುರಾತ್ಮರಿಗೆ ಗೊತ್ತಾಗದಂತೆ ಭಾಗ್ಯವಶಾತ್ ಕಷ್ಟಕರ ಅಜ್ಞಾತವಾಸವನ್ನು ಕಳೆದಿರಿ. ಪಾಂಡವರೇ! ನನ್ನ ರಾಜ್ಯ ಮತ್ತು ಇತರ ಐಶ್ವರ್ಯವೆಲ್ಲವನ್ನೂ ನೀವು ಯಾವುದೇ ಶಂಕೆಯಿಲ್ಲದೇ ಸ್ವೀಕರಿಸಿ. ಸವ್ಯಸಾಚೀ ಧನಂಜಯನು ಉತ್ತರೆಯನ್ನು ಸ್ವೀಕರಿಸಲಿ. ಆ ಪುರುಷಶ್ರೇಷ್ಠನು ಅವಳಿಗೆ ಪತಿಯಾಗಲು ತಕ್ಕವನು.”
ವಿರಾಟನು ಹೀಗೆ ಹೇಳಲು ಧರ್ಮರಾಜನು ಕುಂತೀಪುತ್ರ ಧನಂಜಯನನ್ನು ನೋಡಿದನು. ಅಣ್ಣನು ನೋಡಿದಾಗ ಅರ್ಜುನನು ಮತ್ಸ್ಯರಾಜನಿಗೆ ಹೇಳಿದನು:
“ರಾಜನ್! ನಿನ್ನ ಮಗಳನ್ನು ಸೊಸೆಯನ್ನಾಗಿ ನಾನು ಸ್ವೀಕರಿಸುತ್ತೇನೆ. ಭಾರತವಂಶದ ಶ್ರೇಷ್ಠರಾದ ನಮಗೆ ಮತ್ಸ್ಯವಂಶದ ಈ ಸಂಬಂಧವು ಉಚಿತವೇ ಸರಿ.”
ಉತ್ತರೆ-ಅಭಿಮನ್ಯು ವಿವಾಹ
ವಿರಾಟನು ಹೇಳಿದನು:
“ಪಾಂಡವಶ್ರೇಷ್ಠ! ನಿನಗೆ ನಾನಿಲ್ಲಿ ಕೊಡುತ್ತಿರುವ ನನ್ನ ಮಗಳನ್ನು ನೀನು ಹೆಂಡತಿಯನ್ನಾಗಿ ಏಕೆ ಸ್ವೀಕರಿಸುತ್ತಿಲ್ಲ?”
ಅರ್ಜುನನು ಹೇಳಿದನು:
“ನಿನ್ನ ಅಂತಃಪುರದಲ್ಲಿ ವಾಸಿಸುತ್ತಿದ್ದ ನಾನು ನಿನ್ನ ಮಗಳನ್ನು ಯಾವಾಗಲೂ ನೋಡುತ್ತಿದ್ದೆ. ಅವಳೂ ಕೂಡ ಏಕಾಂತ-ಬಹಿರಂಗಗಳಲ್ಲಿ ನನ್ನಲ್ಲಿ ತಂದೆಯಂತೆ ನಂಬಿಕೆಯಿಟ್ಟಿದ್ದಳು. ನರ್ತಕನಾಗಿ ಗೀತಕೋವಿದನಾಗಿ ನಾನು ಅವಳಿಗೆ ಇಷ್ಟನೂ ಗೌರವಾರ್ಹನೂ ಆಗಿದ್ದೆ. ನಿನ್ನ ಮಗಳು ಯಾವಾಗಲೂ ನನ್ನನ್ನು ಆಚಾರ್ಯನೆಂಬಂತೆ ಭಾವಿಸುತ್ತಿದ್ದಳು. ಹರಯಕ್ಕೆ ಬಂದ ಅವಳೊಡನೆ ನಾನು ಒಂದು ವರ್ಷ ವಾಸಮಾಡಿದೆ. ಆದ್ದರಿಂದ ನಿನಗೆ ಸಹಜವಾಗಿ ಅತಿಯಾದ ಶಂಕೆಯುಂಟಾದೀತು. ರಾಜನ್! ಆದ್ದರಿಂದ ನಿನ್ನ ಮಗಳನ್ನು ನನ್ನ ಮಗನಿಗೆ ಕೊಡೆಂದು ಕೇಳುತ್ತಿದ್ದೇನೆ. ಇದರಿಂದ ಶುದ್ಧನೂ ಜಿತೇಂದ್ರಿಯನೂ ಸಂಯಮಿಯೂ ಆದ ನಾನು ಅವಳು ಶುದ್ಧಳೆಂಬುದನ್ನು ತೋರಿಸಿದಂತಾಗುತ್ತದೆ. ಸೊಸೆಗೂ ಮಗಳಿಗೂ, ಮಗನಿಗೂ ತನಗೂ ಏನೂ ಅಂತರವಿಲ್ಲ. ಈ ವಿಷಯದಲ್ಲಿ ಶಂಕೆಗೆ ಅವಕಾಶ ಕಾಣುತ್ತಿಲ್ಲ. ಆದ್ದರಿಂದ ನಮ್ಮ ಶುದ್ಧಿ ಸಿದ್ದವಾಗುತ್ತದೆ. ಆರೋಪ ಮತ್ತು ಮಿಥ್ಯಾಚಾರಕ್ಕೆ ನಾನು ಹೆದರುತ್ತೇನೆ. ರಾಜನ್! ನಿನ್ನ ಮಗಳು ಉತ್ತರೆಯನ್ನು ನಾನು ಸೊಸೆಯಾಗಿ ಸ್ವೀಕರಿಸುತ್ತೇನೆ. ನನ್ನ ಮಗ ಅಭಿಮನ್ಯುವು ಮಹಾಬಾಹು. ಸಾಕ್ಷಾತ್ ದೇವಕುಮಾರನಂತಿರುವನು. ವಾಸುದೇವನಿಗೆ ಸೋದರಳಿಯ. ಆ ಚಕ್ರಪಾಣಿಗೆ ಪ್ರಿಯನಾದವನು. ಬಾಲಕನಾಗಿಯೂ ಅಸ್ತ್ರಕೋವಿದ. ಅವನು ನಿನಗೆ ಅಳಿಯನಾಗಲು ಮತ್ತು ನಿನ್ನ ಮಗಳಿಗೆ ಪತಿಯಾಗಲು ತಕ್ಕವನು.”
ವಿರಾಟನು ಹೇಳಿದನು:
“ಕುರುವಂಶದಲ್ಲಿ ಶ್ರೇಷ್ಠನೂ ಕುಂತೀಪುತ್ರನೂ ಆದ ಧನಂಜಯನಿಗೆ ಈ ಮಾತು ಯೋಗ್ಯವೇ. ಈ ಪಾಂಡುಪುತ್ರನು ಧರ್ಮನಿರತ ಮತ್ತು ಜ್ಞಾನಿ. ನೀನು ಆಲೋಚಿಸುವ ಕಾರ್ಯವನ್ನು ಕೂಡಲೆ ಮಾಡು. ಅರ್ಜುನನನ್ನು ಸಂಬಂಧಿಯನ್ನಾಗಿ ಪಡೆದ ನನ್ನ ಎಲ್ಲ ಬಯಕೆಗಳೂ ಚೆನ್ನಾಗಿ ಸಿದ್ಧಿಸಿದವು.”
ಆ ರಾಜೇಂದ್ರನು ಹೀಗೆ ಹೇಳಲು ಕುಂತೀಪುತ್ರ ಯುಧಿಷ್ಠಿರನು ವಿರಾಟ-ಪಾರ್ಥರ ನಡುವೆ ಆದ ಒಪ್ಪಂದಕ್ಕೆ ಆಗಲೇ ಸಮ್ಮತಿಯಿತ್ತನು. ಆಗ ಕುಂತೀಪುತ್ರ-ವಿರಾಟರಾಜರು ಎಲ್ಲ ಮಿತ್ರರಿಗೂ ವಾಸುದೇವನಿಗೂ ಆಹ್ವಾನವನ್ನು ಕಳುಹಿಸಿದರು. ಬಳಿಕ ಹದಿಮೂರನೆಯ ವರ್ಷವು ಕಳೆಯಲು ಐವರು ಪಾಂಡವರೂ ವಿರಾಟನ ಉಪಪ್ಲವದಲ್ಲಿ ಒಟ್ಟಿಗೇ ವಾಸಮಾಡತೊಡಗಿದರು.
ಅಲ್ಲಿ ವಾಸಿಸುತ್ತಿರುವಾಗ ಪಾಂಡುಪುತ್ರ ಅರ್ಜುನನು ಕೃಷ್ಣನನ್ನೂ ಅನರ್ತ ದೇಶದಿಂದ ಯಾದವರನ್ನೂ ಅಭಿಮನ್ಯುವನ್ನೂ ಕರೆಯಿಸಿಕೊಂಡನು. ಯುಧಿಷ್ಠಿರನಿಗೆ ಪ್ರಿಯರಾದ ಕಾಶೀರಾಜನೂ, ಶೈಬ್ಯನೂ ಅಕ್ಷೌಹಿಣೀ ಸೇನೆಯೊಡನೆ ಆಗಮಿಸಿದರು. ತೇಜಸ್ವಿ, ಮಹಾಬಲಶಾಲಿ ದ್ರುಪದನು ಅಕ್ಷೌಹಿಣಿಯೊಂದಿಗೆ ಬಂದನು. ದ್ರೌಪದಿಯ ವೀರ ಪುತ್ರರೂ, ಸೋಲಿಲ್ಲದ ಶಿಖಂಡಿಯೂ ಬಂದರು. ಎದುರಿಸಲಾಗದ, ಎಲ್ಲ ಶಸ್ತ್ರಧಾರಿಗಳಲ್ಲಿಯೂ ಶ್ರೇಷ್ಠನಾದ, ದೃಷ್ಟಧ್ಯುಮ್ನನು ಬಂದನು. ಎಲ್ಲ ಅಕ್ಷೌಹಿಣೀಪತಿಗಳೂ, ಯಜ್ಞಮಾಡಿ ಅಪಾರ ದಕ್ಷಿಣೆ ಕೊಡುವವರೂ, ಎಲ್ಲ ಶೂರರೂ, ಯುದ್ಧದಲ್ಲಿ ದೇಹತ್ಯಾಗಮಾಡುವವರೂ ಬಂದರು. ಧರ್ಮಧರರಲ್ಲಿ ಶ್ರೇಷ್ಠ ಮತ್ಸ್ಯರಾಜನು ಅವರೆಲ್ಲರೂ ಆಗಮಿಸಿದುದನ್ನು ನೋಡಿ ಅಭಿಮನ್ಯುವಿಗೆ ಆ ಮಗಳನ್ನು ಕೊಟ್ಟು ಸಂತುಷ್ಟನಾದನು. ಬೇರೆ ಬೇರೆ ಕಡೆಗಳಿಂದ ರಾಜರು ಆಗಮಿಸಿದ ನಂತರ ವನಮಾಲಿ ವಾಸುದೇವ, ಬಲರಾಮ, ಕೃತವರ್ಮ, ಹಾರ್ದಿಕ್ಯ, ಯುಯುಧಾನ, ಸಾತ್ಯಕಿಯರು ಅಲ್ಲಿಗೆ ಬಂದರು. ಅನಾದೃಷ್ಠಿ, ಅಕ್ರೂರ, ಸಾಂಬ ಹಾಗೂ ನಿಶಥ - ಈ ಶತ್ರುಸಂತಾಪಕರು ಅಭಿಮನ್ಯುವನ್ನು ಅವನ ತಾಯಿಯೊಡನೆ ಕರೆದುಕೊಂಡು ಬಂದರು. ಒಂದು ವರ್ಷ ದ್ವಾರಕೆಯಲ್ಲಿ ವಾಸಿಸಿದ ಇಂದ್ರಸೇನ ಮೊದಲಾದವರೆಲ್ಲ ಅಲಂಕೃತ ರಥಗಳೊಡನೆ ಬಂದರು. ಹತ್ತು ಸಾವಿರ ಆನೆಗಳೂ, ಲಕ್ಷಾಂತರ ಕುದುರೆಗಳೂ, ಕೋಟಿ ಸಂಖ್ಯೆಯ ರಥಗಳೂ, ನೂರು ಕೋಟಿ ಸಂಖ್ಯೆಯು ಕಾಲಾಳುಗಳೂ ಬಂದರು. ಬಹಳ ಮಂದಿ ವೃಷ್ಣಿಗಳೂ ಅಂಧಕರೂ, ಪರಮ ಬಲಶಾಲಿಗಳಾದ ಭೋಜರೂ ವೃಷ್ಣಿಶ್ರೇಷ್ಠನಾದ ಮುಹಾತೇಜಸ್ವಿಯಾದ ಕೃಷ್ಣನನ್ನು ಅನುಸರಿಸಿ ಬಂದರು. ಕೃಷ್ಣನು ಮಹಾತ್ಮ ಪಾಂಡವರಿಗೆ ಬೇರೆಬೇರೆಯಾಗಿ ಅನೇಕ ಸ್ತ್ರೀಯುರನ್ನೂ ರತ್ನಗಳನ್ನೂ ಅಸ್ತ್ರಗಳನ್ನೂ ಉಡುಗೊರೆಯನ್ನಾಗಿ ಕೊಟ್ಟನು.
ಅನಂತರ ಮತ್ಸ್ಯ -ಪಾರ್ಥರ ಮನೆತನಗಳ ನಡುವೆ ಮದುವೆಯು ವಿಧಿಪೂರ್ವಕವಾಗಿ ನಡೆಯಿತು. ಪಾಂಡವರ ನಂಟುಗೊಂಡ ಮತ್ಸ್ಯರಾಜನ ಅರಮನೆಯಲ್ಲಿ ಶಂಖಗಳೂ ಭೇರಿಗಳೂ ಗೋಮುಖಾಡಂಬರ ವಾದ್ಯಗಳೂ ಮೊಳಗಿದವು. ಬಗೆಬಗೆಯ ಜಿಂಕೆಗಳನ್ನೂ, ನೂರಾರು ತಿನ್ನಲು ಯೋಗ್ಯ ಪ್ರಾಣಿಗಳನ್ನೂ ಕೊಂದರು. ಸುರೆ ಮತ್ತು ಮೈನೇರ ಪಾನೀಯಗಳನ್ನು ಸಮೃದ್ಧವಾಗಿ ಸೇವಿಸಿದರು. ಗಾಯನ ಆಖ್ಯಾನಗಳಲ್ಲಿ ಪರಿಣಿತ ನಟರೂ, ವೈತಾಳಿಕರೂ, ಸೂತರೂ, ಮಾಗಧರೂ ಆ ರಾಜರನ್ನು ಹೊಗಳುತ್ತಾ ಅಲ್ಲಿಗೆ ಬಂದರು. ಶ್ರೇಷ್ಠ ಮತ್ತು ಸರ್ವಾಂಗಸುಂದರಿಯರಾದ ಮತ್ಸ್ಯರಾಜನ ಸ್ತ್ರೀಯರು ಮಿರುಗುವ ಮಣಿಕುಂಡಲಗಳನ್ನು ಧರಿಸಿ ಸುದೇಷ್ಣೆಯನ್ನು ಮುಂದಿಟ್ಟುಕೊಂಡು ವಿವಾಹ ಮಂಟಪಕ್ಕೆ ಬಂದರು. ಚೆನ್ನಾಗಿ ಅಲಂಕರಿಸಿಕೊಂಡಿದ್ದ, ಒಳ್ಳೆಯ ಬಣ್ಣ ಮತ್ತು ರೂಪದಿಂದ ಕೂಡಿದ ಆ ಹೆಂಗಸರನೆಲ್ಲ ದ್ರೌಪದಿಯು ರೂಪ ಕೀರ್ತಿ ಕಾಂತಿಗಳಲ್ಲಿಮೀರಿಸಿದ್ದಳು. ಅವರು ಮಹೇಂದ್ರನ ಮಗಳನ್ನೆಂತೋ ಅಂತೆ ಅಲಂಕೃತೆಯಾಗಿದ್ದ ರಾಜಪುತ್ರಿ ಉತ್ತರೆಯನ್ನು ಸುತ್ತುವರೆದು ಮುಂದಿಟ್ಟುಕೊಂಡು ಅಲ್ಲಿಗೆ ಬಂದರು. ಆಗ ಕುಂತೀಪುತ್ರ ಧನಂಜಯನು ಆ ಸುಂದರಿ ಉತ್ತರೆಯನ್ನು ಸುಭದ್ರೆಯ ಮಗನಿಗಾಗಿ ಸ್ವೀಕರಿಸಿದನು. ಇಂದ್ರನ ರೂಪವನ್ನು ಮೆರೆಯುತ್ತ ಅಲ್ಲಿದ್ದ ಕುಂತೀಪುತ್ರ ಮಹಾರಾಜ ಯುಧಿಷ್ಠಿರನು ಅವಳನ್ನು ಸೊಸೆಯಾಗಿ ಸ್ವೀಕರಿಸಿದನು. ಯುಧಿಷ್ಠಿರನು ಕೃಷ್ಣನ್ನು ಮುಂದಿಟ್ಟುಕೊಂಡು ಅವಳನ್ನು ಸ್ವೀಕರಿಸಿ ಮಹಾತ್ಮ ಅಭಿಮನ್ಯುವಿನ ಮದುವೆಯವನ್ನು ನೆರವೇರಿಸಿದನು. ಆಗ ವಿರಾಟನು ಅವನಿಗೆ ವಾಯುವೇಗವುಳ್ಳ ಏಳು ಸಾವಿರ ಕುದುರೆಗಳನ್ನೂ, ಇನ್ನೂರು ಉತ್ತಮ ಆನೆಗಳನ್ನೂ, ಬಹಳ ಧನವನ್ನೂ ಕೊಟ್ಟನು. ವಿವಾಹದ ಬಳಿಕ ಧರ್ಮಪುತ್ರ ಯುಧಿಷ್ಠಿರನು ಕೃಷ್ಣನು ತಂದಿದ್ದ ಐಶ್ವರ್ಯವನ್ನೂ, ಸಾವಿರ ಗೋವುಗಳನ್ನೂ, ರತ್ನಗಳನ್ನೂ, ವಿವಿಧ ವಸ್ತ್ರಗಳನ್ನೂ, ಶ್ರೇಷ್ಠ ಆಭರಣಗಳನ್ನೂ, ವಾಹನ ಶಯನಗಳನ್ನೂ ಬ್ರಾಹ್ಮಣರಿಗಿತ್ತನು. ಹರ್ಷಿತರೂ ಪುಷ್ಟರೂ ಆದ ಜನರಿಂದ ತುಂಬಿದ ಆ ಮತ್ಸ್ಯರಾಜನ ನಗರಿಯು ಮಹೋತ್ಸವ ಸದೃಶವಾಗಿ ತೋರಿತು.