ಉತ್ತರ ಗೋಗ್ರಹಣ - ೧
ದುರ್ಯೋಧನನಿಗೆ ಗೂಢಚರರ ವರದಿ
ತಮ್ಮಂದಿರೊಡನೆ ಕೀಚಕನು ಹತನಾಗಲು ಆ ವಿಪತ್ತಿನ ಕುರಿತು ಯೋಚಿಸುತ್ತಾ ಇತರ ಜನರು ಆಶ್ಚರ್ಯಪಟ್ಟರು. ಮಹಾಸತ್ವನಾದ ಕೀಚಕನು ರಾಜನಿಗೆ ಪ್ರಿಯನಾಗಿದ್ದನು. ಆ ದುರ್ಮತಿಯು ಜನರನ್ನು ಹಿಂಸಿಸುತ್ತಿದ್ದನು ಮತ್ತು ಪರಸತಿಯರಲ್ಲಿ ಆಸಕ್ತನಾಗಿದ್ದನು. ಪಾಪಾತ್ಮನಾದ ಆ ದುಷ್ಟ ಪುರುಷನು ಗಂಧರ್ವರಿಂದ ಹತನಾದನು ಎಂದು ಆ ನಗರದಲ್ಲೂ ದೇಶದಲ್ಲೂ ಎಲ್ಲೆಡೆ ಮಾತುಕತೆ ನಡೆಯುತ್ತಿತ್ತು. ಪರಸೈನ್ಯ ನಾಶಕನೂ ಎದುರಿಸಲು ಅಸಾಧ್ಯನೂ ಆಗಿದ್ದ ಆ ಕೀಚಕನ ಕುರಿತು ಜನರು ದೇಶ ದೇಶಗಳಲ್ಲಿ ಹೀಗೆ ಮಾತನಾಡಿಕೊಳ್ಳುತ್ತಿದ್ದರು.
ಅಷ್ಟರಲ್ಲಿಯೇ ದುರ್ಯೋಧನನಿಂದ ನಿಯುಕ್ತರಾಗಿದ್ದ ಗೂಢಚರರು ಬಹಳ ಗ್ರಾಮಗಳನ್ನೂ, ರಾಷ್ಟ್ರಗಳನ್ನೂ, ನಗರಗಳನ್ನು ಹುಡುಕಿ ತಮಗೆ ಕೊಟ್ಟಿದ್ದ ರಾಜ್ಯಶೋಧನೆಯ ಆದೇಶವನ್ನು ನೆರವೇರಿಸಿ ಚಿಂತಾಕ್ರಾಂತರಾಗಿ ಹಸ್ತಿನಾಪುರಕ್ಕೆ ಮರಳಿದರು. ಅಲ್ಲಿ ದ್ರೋಣ, ಕರ್ಣ, ಕೃಪರೊಡನೆ, ಮಹಾತ್ಮ ಭೀಷ್ಮನೊಡನೆ, ಸೋದರರೊಡನೆ, ಮಹಾರಥಿ ತ್ರಿಗರ್ತರೊಡನೆ ಸಭಾಮಧ್ಯದಲ್ಲಿ ಕುಳಿತಿದ್ದ ಧೃತರಾಷ್ಟ್ರ ಪುತ್ರ, ಕೌರವರಾಜ ದುರ್ಯೋಧನನನ್ನು ಕಂಡು ಹೇಳಿದರು: “ರಾಜನ್! ನಿರ್ಜನವಾದ, ಮೃಗಗಳಿಂದ ತುಂಬಿದ, ನಾನಾ ವೃಕ್ಷ-ಲತೆಗಳಿಂದ ಮುಸುಕಿದ, ಲತೆಗಳು ಬಹಳವಾಗಿ ಹರಡಿದ್ದ, ಹಲವು ಪೊದೆಗಳಿಂದ ಇಕ್ಕಿರಿದ ಆ ಮಹಾವನದಲ್ಲಿ ಪಾಂಡವರನ್ನು ಹುಡುಕುವ ಪರಮ ಪ್ರಯತ್ನವನ್ನು ನಿರಂತರವಾಗಿ ಮಾಡಿದೆವು. ಆದರೆ ದೃಢವಿಕ್ರಮಿ ಪಾರ್ಥರು ಹೋದ ದಾರಿ ನಮಗೆ ತಿಳಿಯಲಿಲ್ಲ. ಎಲ್ಲೆಡೆಗಳಲ್ಲಿಯೂ ಅವರ ಹೆಜ್ಜೆಗುರುತುಗಳನ್ನು ಹುಡುಕಿದೆವು. ಎತ್ತರವಾದ ಗಿರಿಶಿಖರಗಳಲ್ಲಿ, ನಾನಾ ಜನಪದಗಳಲ್ಲಿ, ಜನಭರಿತ ದೇಶಗಳಲ್ಲಿ, ಬೆಟ್ಟದೂರುಗಳಲ್ಲಿ, ಮತ್ತು ಪುರಗಳಲ್ಲಿ ಬಹಳವಾಗಿ ಹುಡುಕಿದೆವು. ಆದರೂ ಪಾಂಡವರನ್ನು ಕಾಣಲಿಲ್ಲ. ಅವರು ಸಂಪೂರ್ಣವಾಗಿ ನಾಶಹೊಂದಿದ್ದಾರೆ. ನಿನಗೆ ಮಂಗಳವಾಗಲಿ! ಅವರ ರಥಗಳ ಜಾಡನ್ನು ಅರಸುತ್ತಾ ನಾವು ಸ್ವಲ್ಪ ಕಾಲ ಅವರ ಸೂತರನ್ನು ಅನುಸರಿಸಿದೆವು. ಯಥೋಚಿತವಾಗಿ ಹುಡುಕುತ್ತಾ ಕಡೆಗೆ ಹುರುಳನ್ನರಿತುಕೊಂಡೆವು. ಪಾಂಡವರಿಲ್ಲದೇ ಸೂತರು ದ್ವಾರಾವತಿಯನ್ನು ಸೇರಿದರು. ಅಲ್ಲಿ ಪಾಂಡವರಾಗಲೀ ಪತಿವ್ರತೆಯಾದ ಕೃಷ್ಣೆಯಾಗಲೀ ಇಲ್ಲ. ಅವರು ಸಂಪೂರ್ಣವಾಗಿ ನಾಶಹೊಂದಿದ್ದಾರೆ. ನಿನಗೆ ವಂದನೆಗಳು. ಮಹಾತ್ಮ ಆ ಪಾಂಡವರ ಗತಿಯಾಗಲೀ ವಾಸಸ್ಥಾನವಾಗಲೀ, ಪ್ರವೃತ್ತಿಯಾಗಲೀ, ಮಾಡಿದ ಕಾರ್ಯವಾಗಲೀ ನಮಗೆ ತಿಳಿದು ಬರಲಿಲ್ಲ. ಮುಂದೇನಾಗಬೇಕೆಂದು ಅಪ್ಪಣೆ ಮಾಡು. ಪಾಂಡವರ ಅನ್ವೇಷಣೆಗಾಗಿ ಇನ್ನೇನು ಮಾಡಬೇಕು? ಇದಲ್ಲದೇ ಮಂಗಳಕರವಾದ ಶುಭಕರವಾದ ಮತ್ತು ಪ್ರಿಯವಾದ ನಮ್ಮ ಈ ಮಾತನ್ನು ಕೇಳು. ತನ್ನ ಮಹಾಬಲದಿಂದ ತ್ರಿಗರ್ತರನ್ನು ಸೋಲಿಸಿದ ಮತ್ಸ್ಯರಾಜನ ಸೂತನೂ ಮಹಾಸತ್ವನೂ ದುಷ್ಟಾತ್ಮನೂ ಆದ ಕೀಚಕನು ಅಗೋಚರರಾದ ಗಂಧರ್ವರಿಂದ ತನ್ನ ತಮ್ಮಂದಿರೊಡನೆ ಇರುಳಿನಲ್ಲಿ ಹತನಾಗಿ ಬಿದ್ದನು. ಶತ್ರುಪರಾಭವದ ಈ ಪ್ರಿಯವಿಷವನ್ನಾಲಿಸಿ ಕೃತಕೃತ್ಯನಾಗಿ ಮುಂದಿನದನ್ನು ಆಜ್ಞಾಪಿಸು.”
ಸಭಾಸದರೊಡನೆ ದುರ್ಯೋಧನನ ಸಮಾಲೋಚನೆ
ಅನಂತರ ರಾಜ ದುರ್ಯೋಧನನು ಅವರ ಮಾತನ್ನು ಕೇಳಿ ಬಹಳ ಹೊತ್ತು ಮನಸ್ಸಿನಲ್ಲಿಯೇ ಆಲೋಚಿಸಿ ಸಭಾಸದರಿಗೆ ಹೀಗೆಂದನು: “ಕಾರ್ಯಗಳ ಗತಿಯನ್ನು ನಿಶ್ಚಿತವಾಗಿ ತಿಳಿಯುವುದು ಕಷ್ಟವೇ ಸರಿ. ಆದ್ದರಿಂದ ಪಾಂಡವರು ಎಲ್ಲಿ ಇರಬಹುದು ಎಂಬುದನ್ನು ಎಲ್ಲರೂ ಕಂಡು ಹಿಡಿಯಿರಿ. ಅವರು ಅಜ್ಞಾತವಾಸದಲ್ಲಿ ಇರಬೇಕಾದ ಈ ಹದಿಮೂರನೆಯ ವರ್ಷದಲ್ಲಿ ಕಡೆಗೂ ಬಹುಭಾಗ ಕಳೆದುಹೋಗಿದೆ. ಇನ್ನು ಸ್ವಲ್ಪ ಕಾಲವೇ ಉಳಿದಿದೆ. ಈ ವರ್ಷದ ಉಳಿದ ಅವಧಿಯನ್ನು ಪಾಂಡವರು ಕಳೆದುಬಿಟ್ಟರೆ ಆ ಸತ್ಯವ್ರತ ಪರಾಯಣರು ತಮ್ಮ ಪ್ರತಿಜ್ಞೆಯನ್ನು ಮುಗಿಸುತ್ತಾರೆ. ಮದೋದಕವನ್ನು ಸುರಿಸುವ ಗಜೇಂದ್ರರಂತೆ ಅಥವಾ ವಿಷಪೂರಿತ ಸರ್ಪಗಳಂತೆ ಅವರು ಆವೇಶಗೊಂಡು ಕೌರವರಿಗೆ ದುಃಖವನ್ನುಂಟುಮಾಡುವುದು ಖಚಿತ. ಕಾಲಕ್ಕೆ ಮೊದಲೇ ಗುರುತಿಸಿಬಿಟ್ಟರೆ ಅವರು ದುಃಖಕರ ವೇಷವನ್ನು ಧರಿಸಿ ಕ್ರೋಧವನ್ನು ಹತ್ತಿಕ್ಕಿಕೊಂಡು ಪುನಃ ಕಾಡಿಗೆ ಹೋಗುವರು. ಆದ್ದರಿಂದ ನಮ್ಮ ರಾಜ್ಯ ಸದಾ ಅಕ್ಷಯವೂ ಕಲಹ ರಹಿತವೂ ಶಾಂತವೂ ಶತ್ರುರಹಿತವೂ ಆಗಿರಬೇಕೆಂದಾದರೆ ಅವರನ್ನು ಬೇಗ ಹುಡುಕಿ.”
ಆಗ ಕರ್ಣನು ನುಡಿದನು: “ಭಾರತ! ಧೂರ್ತತರರೂ ದಕ್ಷರೂ ಗುಪ್ತರೂ ಚೆನ್ನಾಗಿ ಕಾರ್ಯಸಾಧನೆ ಮಾಡುವವರೂ ಆದ ಬೇರೆಯವರು ಬೇಗ ಹೋಗಲಿ. ಅವರು ವೇಷ ಮರೆಸಿಕೊಂಡು ಜನಭರಿತವಾದ ಜನಪದಗಳನ್ನುಳ್ಳ ವಿಶಾಲ ದೇಶಗಳಲ್ಲಿಯೂ ಇತರ ಗೋಷ್ಠಿಗಳಲ್ಲಿಯೂ ಬಳಿಕ ಸಿದ್ಧಾಶ್ರಮಗಳಲ್ಲೂ, ಮಾರ್ಗಗಳಲ್ಲೂ, ತೀರ್ಥಕ್ಷೇತ್ರಗಳಲ್ಲೂ, ವಿವಿಧ ಗಣಿಗಳಲ್ಲೂ ಸಂಚರಿಸಲಿ. ಜನರು ಅವರನ್ನು ಸುಶಿಕ್ಷಿತ ತರ್ಕದಿಂದ ಪತ್ತೆಮಾಡಬಹುದು. ವೇಷಮರೆಸಿಕೊಂಡು ವಾಸಿಸುತ್ತಿರುವ ಪಾಂಡವರನ್ನು ತತ್ಪರರೂ, ಸಂಪೂರ್ಣತಜ್ಞರಾದವರೂ, ನಿಪುಣತೆಯಿಂದ ವೇಷ ಮರೆಸಿಕೊಂಡವರೂ ಆದ ವಿವಿಧ ಗೂಢಚರರು ನದೀ ಕುಂಜಗಳಲ್ಲಿಯೂ, ತೀರ್ಥಗಳೂ, ಗ್ರಾಮ ನಗರಗಳಲ್ಲಿಯೂ, ಆಶ್ರಮಗಳಲ್ಲಿಯೂ, ರಮ್ಯ ಪರ್ವತಗಳಲ್ಲಿಯೂ, ಗುಹೆಗಳಲ್ಲೂ ಎಚ್ಚರಿಕೆಯಿಂದ ಹುಡುಕಬೇಕು.”
ಅನಂತರ ಆ ವಿಷಯದಲ್ಲಿ ತಮ್ಮನಾದ ದುಃಶಾಸನನು ಪಾಪಭಾವದಲ್ಲಿ ಆಸಕ್ತನಾದ ಹಿರಿಯ ಅಣ್ಣನಿಗೆ ಹೇಳಿದನು: “ಕರ್ಣನು ಹೇಳಿದುದೆಲ್ಲವೂ ನನಗೂ ಸರಿಕಾಣುತ್ತದೆ. ನಿರ್ದೇಶಿಸಿದ ರೀತಿಯಲ್ಲಿ ಚರರೆಲ್ಲರೂ ಅಲ್ಲಲ್ಲಿ ಹುಡುಕಲಿ. ಅವರೂ ಇನ್ನೂ ಇತರರೂ ಕ್ರಮವರಿತು ದೇಶದಿಂದ ದೇಶಕ್ಕೆ ಹೋಗಿ ಹುಡುಕಲಿ. ಅವರ ಗತಿಯಾಗಲೀ ವಾಸಸ್ಥಾನವಾಗಲೀ ಉದ್ಯೋಗವಾಗಲೀ ತಿಳಿಯಬರುತ್ತಿಲ್ಲ. ಅವರು ಅತ್ಯಂತ ಗುಪ್ತವಾಗಿ ಅಡಗಿಕೊಂಡಿದ್ದಾರೆ. ಇಲ್ಲವೆ ಸಮುದ್ರದಾಚೆಗೆ ಹೋಗಿದ್ದಾರೆ. ಶೂರರೆಂದು ತಿಳಿದಿರುವ ಅವರು ಮಹಾರಣ್ಯದಲ್ಲಿ ದುಷ್ಟಮೃಗಗಳಿಂದ ಭಕ್ಷಿತರಾಗಿದ್ದಾರೆ ಇಲ್ಲವೇ ವಿಷಮ ಪರಿಸ್ಥಿತಿಗೆ ಸಿಕ್ಕಿ ಶಾಶ್ವತ ನಾಶಕ್ಕೀಡಾಗಿದ್ದಾರೆ. ಆದರಿಂದ ಮನಸ್ಸನ್ನು ಸಮಾಧಾನಗೊಳಿಸಿಕೊಂಡು ಆಲೋಚಿಸಿದ ಕಾರ್ಯವನ್ನು ಯಥಾಶಕ್ತಿಯಾಗಿ ಮಾಡು.”
ಆಗ ಮಹಾವೀರ್ಯನೂ ತತ್ವಾರ್ಥದರ್ಶಿಯೂ ಆದ ದ್ರೋಣನು ನುಡಿದನು: “ಅಂಥವರು ನಾಶಹೊಂದುವುದಿಲ್ಲ ಅಥವಾ ಪರಾಭವಹೊಂದುವುದಿಲ್ಲ. ಅವರು ಶೂರರು. ವಿದ್ಯಾಪಾರಂಗತರು. ಬುದ್ದಿವಂತರು. ಜಿತೇಂದ್ರಿಯರು. ಧರ್ಮಜ್ಞರು. ಕೃತಜ್ಞರು. ಮತ್ತು ಧರ್ಮರಾಜನಿಗೆ ಅನುವ್ರತರು. ಆ ಸೋದರರು ನೀತಿಧರ್ಮಾರ್ಥ ತತ್ತ್ವಜ್ಞನೂ, ತಂದೆಯಂತೆ ಅತ್ಯಾಸಕ್ತನೂ, ಧರ್ಮಸ್ಥಿತನೂ, ದೃಢಸತ್ಯನೂ, ಹಿರಿಯರನ್ನು ಪೂಜಿಸುವವನೂ, ಅಜಾತಶತ್ರುವೂ, ಸಂಕೋಚಶೀಲನೂ, ಮಹಾತ್ಮನೂ ಆದ ಹಿರಿಯಣ್ಣನಿಗೆ ನಿಷ್ಠೆಯುಳ್ಳವರು. ಅವನೂ ಸೋದರರಿಗೆ ನಿಷ್ಠೆಯುಳ್ಳವನು. ಹಾಗೆ ವಿಧೇಯರೂ ವಿನಯಶೀಲರೂ ಮಹಾತ್ಮರೂ ಆದವರಿಗೆ ಆ ನೀತಿವಂತನಾದ ಯುಧಿಷ್ಠಿರನಿಂದ ಶ್ರೇಯಸ್ಸುಂಟಾಗದೇ ಇರುವುದೆಂತು? ಆದ್ದರಿಂದ ಕಾಲಬರುವುದನ್ನು ಅವರು ಯತ್ನಪೂರ್ವಕವಾಗಿ ಕಾಯುತ್ತಿದ್ದಾರೆ. ಅವರು ನಾಶಗೊಳ್ಳುವುದಿಲ್ಲವೆಂದು ನನ್ನ ಬುದ್ಧಿಗೆ ತೋರುತ್ತದೆ. ಈಗ ಏನು ಮಾಡಬೇಕೆಂಬುದನ್ನು ಚೆನ್ನಾಗಿ ಆಲೋಚಿಸಿ, ಕಾಲ ಮೀರುವುದಕ್ಕೆ ಮೊದಲೇ ಬೇಗ ಮಾಡು. ಅಂತೆಯೇ, ಸರ್ವಾರ್ಥಗಳಲ್ಲೂ ಆತ್ಮಧೃತರಾದ ಪಾಂಡುಪುತ್ರರ ವಾಸಸ್ಥಾನದ ಕುರಿತು ಆಲೋಚಿಸು. ಶೂರರೂ ಪಾಪರಹಿತರೂ ತಪಸ್ವಿಗಳೂ ಆದ ಅವರನ್ನು ಪತ್ತೆ ಹಚ್ಚುವುದು ಅಸಾಧ್ಯ. ಯುಧಿಷ್ಠಿರನು ಶುದ್ಧಾತ್ಮ, ಗುಣವಂತ, ಸತ್ಯವಂತ, ನೀತಿವಂತ, ಶುಚಿ, ತೇಜೋರಾಶಿ, ಎದುರಿಸಲಾಗದವನು ಮತ್ತು ಕಣ್ಣುಗಳನ್ನೂ ಸೆರೆಹಿಡಿವುವಂಥವನು. ಆದಕಾರಣ, ಇವೆಲ್ಲವನ್ನೂ ತಿಳಿದು ಅಗತ್ಯವಾದುದನ್ನು ಮಾಡು. ಬ್ರಾಹ್ಮಣರ, ಚಾರರ, ಸಿದ್ಧರ ಮತ್ತು ಅವರನ್ನು ಬಲ್ಲ ಇತರ ಜನರ ಮೂಲಕ ಮತ್ತೊಮ್ಮೆ ಅವರನ್ನು ಹುಡುಕೋಣ.”
ಆಗ ಭರತರ ಪಿತಾಮಹ, ವೇದಪಾರಂಗತ, ದೇಶಕಾಲಜ್ಞ, ತತ್ತ್ವಜ್ಞ, ಸರ್ವಧರ್ಮಜ್ಞ, ಶಂತನುಪುತ್ರ ಭೀಷ್ಮನು ಆಚಾರ್ಯನ ಮಾತು ನಿಂತ ಬಳಿಕ, ಅದಕ್ಕೆ ಒಪ್ಪಿಗೆ ಕೊಡುತ್ತ ಅವರ ಹಿತಾರ್ಥವಾಗಿ ಭಾರತರ ಕುರಿತು ಈ ಮಾತುಗಳನ್ನಾಡಿದನು. ಧರ್ಮವನ್ನು ಆಶ್ರಯಿಸಿದ ಧರ್ಮಜ್ಞನಾದ ಯುಧಿಷ್ಠಿರನಲ್ಲಿ ಆಸಕ್ತಿ ತೋರುವ ದುರ್ಜನರಿಗೆ ದುರ್ಲಭವೂ ಸತ್ಪುರುಷರಿಗೆ ಸದಾ ಸಮ್ಮತವೂ ಸಾಧುಪೂಜಿತವೂ ಆದ ಮಾತನ್ನು ಭೀಷ್ಮನು ಅಲ್ಲಿ ಆಡಿದನು: “ಸರ್ವಾರ್ಥತತ್ತ್ವವನ್ನೂ ಬಲ್ಲ ಈ ಬ್ರಾಹ್ಮಣ ದ್ರೋಣನು ಹೇಳಿದ್ದುದು ಸರಿ. ಸರ್ವಲಕ್ಷಣಸಂಪನ್ನರಾದ ಪಾಂಡವರು ನಾಶಹೊಂದುವವರಲ್ಲ. ವೇದಜ್ಞರೂ, ಶೀಲಸಂಪನ್ನರೂ, ಒಳ್ಳೆಯ ವ್ರತಗಳನ್ನುಳ್ಳವರೂ, ಹಿರಿಯರ ಅನುಶಾಸನಕ್ಕೆ ನಿಷ್ಠರೂ, ಸತ್ಯವ್ರತಪರಾಯಣರೂ, ಸಮಯಜ್ಞರೂ, ಕಟ್ಟುಪಾಡನ್ನು ಪಾಲಿಸುವವರೂ, ಶುಚಿವ್ರತರೂ, ಸತ್ಪುರುಷರ ಕರ್ತವ್ಯವನ್ನು ನಿರ್ವಹಿಸುವವರೂ ಆದ ಅವರು ನಾಶಗೊಳ್ಳತಕ್ಕವರಲ್ಲ. ಧರ್ಮದಿಂದಲೂ ಸ್ವಪರಾಕ್ರಮದಿಂದಲೂ ರಕ್ಷಿತರಾದ ಆ ಪಾಂಡವರು ನಾಶಗೊಳ್ಳುವುದಿಲ್ಲ ಎಂದು ನನ್ನ ಬುದ್ಧಿಗೆ ತೋರುತ್ತದೆ. ಆದ್ದರಿಂದ ಭಾರತ! ಪಾಂಡವರನ್ನು ಕುರಿತ ನನ್ನ ಆಲೋಚನೆಗಳನ್ನು ಮುಂದಿಡುತ್ತೇನೆ. ನೀತಿಜ್ಞನ ನೀತಿಯನ್ನು ಕಂಡುಹಿಡಿಯುವುದು ಶತ್ರುಗಳಿಗೆ ಸಾಧ್ಯವಿಲ್ಲ. ಆ ಪಾಂಡವರಿಗೆ ಈಗ ನಾವೇನು ಮಾಡಲು ಸಾಧ್ಯವೆಂಬುದನ್ನು ಬುದ್ಧಿಯಿಂದ ಚಿಂತಿಸಿ ಹೇಳುತ್ತೇನೆ. ದ್ರೋಹದಿಂದ ಹೇಳುವುದಿಲ್ಲ. ಇದನ್ನು ತಿಳಿದುಕೋ. ಹಿರಿಯರ ಅನುಶಾಸನವನ್ನು ಪಾಲಿಸುವ ಸತ್ಯಶೀಲನಿಗೆ ಎಂದೂ ಒಳ್ಳೆಯ ನೀತಿಯನ್ನು ಹೇಳಬೇಕೇ ಹೊರತು ಅನೀತಿಯನ್ನಲ್ಲ. ಸಜ್ಜನರ ನಡುವೆ ಮಾತನಾಡುವ ಧೀರನು ಎಲ್ಲ ಸಂದರ್ಭಗಳಲ್ಲಿಯೂ ಅವಶ್ಯವಾಗಿ ತನ್ನ ಬುದ್ಧಿಗೆ ತೋಚಿದಂತೆ ಧರ್ಮಾರ್ಜನೆಯ ಆಸೆಯಿಂದ ಮಾತನಾಡಬೇಕು. ನಾನು ಈಗ ಈ ಇತರೆ ಜನರಂತೆ ಭಾವಿಸುವುದಿಲ್ಲ. ಪುರದಲ್ಲಾಗಲೀ ಜನಪದದಲ್ಲಾಗಲೀ ದೊರೆ ಯುಧಿಷ್ಠಿರನಿರುವಲ್ಲಿ ಅಸೂಯೆ ಉಳ್ಳವನಾಗಲೀ, ಈರ್ಷ್ಯೆ ಉಳ್ಳವನಾಗಲೀ, ಅತಿಮಾತಿನವನಾಗಲೀ, ಹೊಟ್ಟೆಕಿಚ್ಚಿನವನಾಗಲೀ ಇರುವುದಿಲ್ಲ. ಅಲ್ಲಿ ಪ್ರತಿಯೊಬ್ಬನೂ ಧರ್ಮವನ್ನು ಆಚರಿಸುತ್ತಿರುತ್ತಾನೆ. ಅಲ್ಲಿ ವೇದಘೋಷಗಳೂ, ಅಂತೆಯೇ ವಿಪುಲವಾದ ಪೂರ್ಣಾಹುತಿಗಳೂ, ಯಾಗಗಳೂ, ಭೂರಿದಕ್ಷಿಣೆಗಳೂ ಇರುತ್ತವೆ. ಅಲ್ಲಿ ಯಾವಾಗಲೂ ಮೋಡಗಳು ನಿಸ್ಸಂದೇಹವಾಗಿ ಸಮೃದ್ಧವಾದ ಮಳೆ ಸುರಿಸುತ್ತವೆ. ಭೂಮಿಯು ಸಸ್ಯಸಂಪನ್ನವಾಗಿ ಈತಿಬಾಧೆಗಳಿಲ್ಲದೆ ಇರುತ್ತದೆ. ಧಾನ್ಯಗಳು ರಸದಿಂದಲೂ, ಫಲಗಳು ಗುಣಗಳಿಂದಲೂ, ಮಾಲೆಗಳು ಗಂಧದಿಂದಲೂ, ಮಾತುಗಳು ಶುಭಶಬ್ಧಗಳಿಂದಲೂ ಕೂಡಿರುತ್ತವೆ. ರಾಜ ಯುಧಿಷ್ಠಿರನಿರುವಲ್ಲಿ ಗಾಳಿಯು ಸುಖಸ್ಪರ್ಶ ಹಿತಕರವಾಗಿರುತ್ತದೆ. ಜನರ ಸಮಾಗಮಗಳು ನಿರಾತಂಕವಾಗಿರುತ್ತವೆ. ಭಯ ಅಲ್ಲಿಗೆ ಪ್ರವೇಶಿಸುವುದಿಲ್ಲ. ಅಲ್ಲಿ ಬೇಕಾದಷ್ಟು ಹಸುಗಳು ಇರುತ್ತವೆ. ಅವು ಬಡಕಲಾಗಿರುವುದಿಲ್ಲ. ಹಾಲು ಕೊಡದಿರುವುದಿಲ್ಲ. ಹಾಲು, ಮೊಸರು, ತುಪ್ಪಗಳು ಸವಿಯಾಗಿಯೂ ಹಿತವಾಗಿಯೂ ಇರುತ್ತವೆ. ಯುಧಿಷ್ಠಿರನಿರುವ ದೇಶದಲ್ಲಿ ಪಾನೀಯಗಳು ಗುಣಯುಕ್ತವಾಗಿಯೂ ಭೋಜ್ಯಗಳು ರಸವತ್ತಾಗಿಯೂ ಇರುತ್ತವೆ. ಯುಧಿಷ್ಠಿರನಿರುವಲ್ಲಿ ರಸ, ಸ್ಪರ್ಶ, ಗಂಧ, ಶಬ್ಧಗಳು ಗುಣಾನ್ವಿತವಾಗಿಯೂ ದೃಶ್ಯಗಳು ಪ್ರಸನ್ನವಾಗಿಯೂ ಇರುತ್ತವೆ. ಈ ಹದಿಮೂರನೆಯ ವರ್ಷದಲ್ಲಿ ಪಾಂಡವರಿರುವ ದೇಶದಲ್ಲಿ ಜನರು ತಮ್ಮ ತಮ್ಮ ಗುಣಧರ್ಮಗಳಿಂದ ಕೂಡಿರುತ್ತಾರೆ. ಅಲ್ಲಿ ಜನರು ಸಂಪ್ರೀತರೂ, ಸಂತುಷ್ಟರೂ, ಶುಚಿಗಳೂ, ಕ್ಷೀಣಸ್ಥಿತಿ ಇಲ್ಲದವರೂ, ದೇವತೆಗಳ ಮತ್ತು ಅತಿಥಿಗಳ ಪೂಜೆಗಳಲ್ಲಿ ತೊಡಗಿದವರೂ, ಸರ್ವಜೀವಿಗಳಲ್ಲಿ ಅನುರಾಗವುಳ್ಳವರೂ ಆಗಿರುತ್ತಾರೆ. ರಾಜ ಯುಧಿಷ್ಠಿರನಿರುವಲ್ಲಿ ಜನರು ದಾನ ಕೊಡುವುದರಲ್ಲಿ ಆಸಕ್ತರೂ, ಮಹೋತ್ಸಾಹವುಳ್ಳವರೂ, ಸದಾ ಧರ್ಮ ಪರಾಯಣರೂ, ಅಶುಭವನ್ನು ದ್ವೇಷಿಸುವವರೂ, ಶುಭಾಕಾಂಕ್ಷಿಗಳೂ, ನಿತ್ಯ ಯಜ್ಞಮಾಡುವವರೂ, ಶುಭವ್ರತವುಳ್ಳವರೂ ಆಗಿರುತ್ತಾರೆ. ರಾಜ ಯುಧಿಷ್ಠಿರನಿರುವಲ್ಲಿ ಜನರು ಸುಳ್ಳುಹೇಳುವುದನ್ನು ತೊರೆದವರೂ, ಶುಭ ಕಲ್ಯಾಣ ಮಂಗಳ ಕಾರ್ಯಪರರೂ, ಶುಭಾರ್ಥವನ್ನು ಬಯಸುವವರೂ, ಶುಭಮತಿಗಳೂ, ಸದಾ ಪ್ರಿಯವ್ರತರ ಆಸಕ್ತರಾಗಿರುವವರೂ ಆಗಿರುತ್ತಾರೆ. ಸತ್ಯ, ಧೃತಿ, ದಾನ, ಪರಮಶಾಂತಿ, ಕ್ಷಮೆ, ಸ್ಥಿರವಾದ ಬುದ್ಧಿ, ವಿನಯ, ಸಂಪತ್ತು, ಕೀರ್ತಿ, ಪರಮ ತೇಜಸ್ಸು, ಕರುಣೆ, ಸರಳತೆಗಳು ನೆಲೆಗೊಂಡಿರುವ ಆ ಧರ್ಮಾತ್ಮನು ಕೊನೆಯದಾಗಿ ಬ್ರಾಹ್ಮಣರಿಗೂ ಕಾಣದಂತಿದ್ದಾನೆ. ಇನ್ನು ಆ ಯುಧಿಷ್ಠಿರನನ್ನು ಕಂಡುಹಿಡಿಯುವುದು ಸಾಮಾನ್ಯ ಜನರಿಗೆ ಸಾಧ್ಯವೇ? ಆದ್ದರಿಂದ ಆ ಧೀಮಂತನು ವೇಷ ಮರೆಸಿಕೊಂಡು ವಾಸಿಸುತ್ತಿದ್ದಾನೆ. ಇದಕ್ಕಿಂತ ಶ್ರೇಷ್ಠವಾದ ಅವನ ಮಾರ್ಗದ ಕುರಿತು ನಾನು ಮತ್ತೇನನ್ನೂ ಹೇಳಲಾರೆ. ನಿನಗೆ ನನ್ನಲ್ಲಿ ನಂಬಿಕೆಯಿದ್ದರೆ ಇದರ ಕುರಿತು ಹೀಗೆ ಆಲೋಚಿಸಿ, ನಿನಗೆ ಹಿತವೆನಿಸುವ ಕಾರ್ಯವನ್ನು ಬೇಗ ಮಾಡು.”
ಅನಂತರ ಶಾರದ್ವತ ಕೃಪನು ಹೀಗೆ ನುಡಿದನು: “ಹಿರಿಯನಾದ ಭೀಷ್ಮನು ಪಾಂಡವರ ವಿಷಯದಲ್ಲಿ ಹೇಳಿದ್ದುದು ಯುಕ್ತವೂ, ಸಂದರ್ಭೋಚಿತವೂ, ಧರ್ಮಾರ್ಥಸಹಿತವೂ, ಸುಂದರವೂ, ತಾತ್ವಿಕವೂ, ಸಕಾರಣವೂ, ಅವನಿಗೆ ತಕ್ಕದ್ದೂ ಆಗಿದೆ. ಇದರ ಬಗ್ಗೆ ನನ್ನ ಮಾತನ್ನೂ ಕೇಳು. ಅವರ ಜಾಡು, ನಿವಾಸದ ಕುರಿತು ಹಿರಿಯರೊಡನೆ ಸಮಾಲೋಚಿಸಬೇಕು. ಹಿತಕರವಾಗುವ ನೀತಿಯನ್ನೀಗ ಅನುಸರಿಸಬೇಕು. ಶತ್ರುವು ಸಾಮಾನ್ಯನಾದರೂ, ಅಭ್ಯುದಯಾಕಾಂಕ್ಷಿಯು. ಅವನನ್ನು ಅಲಕ್ಷಿಸಬಾರದು. ಇನ್ನು ಯುದ್ಧದಲ್ಲಿ ಸರ್ವಾಸ್ತ್ರಕುಶಲರಾದ ಪಾಂಡವರನ್ನು ಅಲಕ್ಷಿಸುವುದೇ? ಆದ್ದರಿಂದ, ಮಹಾತ್ಮ ಪಾಂಡವರು ವೇಷ ಮರೆಸಿಕೊಂಡು, ಗೂಢವಾಗಿ ಅಡಗಿರಲು ಹಾಗೂ ಅವರ ಅಭ್ಯುದಯ ಕಾಲವು ಬಂದಿರಲು, ಸ್ವರಾಷ್ಟ್ರದಲ್ಲೂ ಪರರಾಷ್ಟ್ರದಲ್ಲೂ ನಿನಗಿರುವ ಬಲವನ್ನು ತಿಳಿದುಕೊಳ್ಳಬೇಕು. ಒಳ್ಳೆಯ ಕಾಲ ಒದಗಿ ಬಂದಾಗ ಪಾಂಡವರು ಏಳಿಗೆ ಹೊಂದುವುದರಲ್ಲಿ ಸಂಶಯವಿಲ್ಲ. ಪ್ರತಿಜ್ಞೆಯನ್ನು ಪೂರೈಸಿದ ಮಹಾತ್ಮರೂ ಮಹಾಬಲರೂ ಆದ ಪಾಂಡವರು ನಿಸ್ಸಂಶಯವಾಗಿ ಮಹೋತ್ಸಾಹಶಾಲಿಗಳೂ ಅತಿ ತೇಜಸ್ವಿಗಳೂ ಆಗಿಬಿಡುತ್ತಾರೆ. ಅದ್ದರಿಂದ ನಿನ್ನ ಬಲವನ್ನೂ ಕೋಶವನ್ನೂ ನೀತಿಯನ್ನೂ ನಿರ್ಧರಿಸಿಕೋ; ಅವರ ಉದಯಕಾಲ ಬಂದಾಗ ಅವರೊಡನೆ ಅನುಕೂಲವಾದ ಸಂಧಿಯನ್ನು ಮಾಡಿಕೊಳ್ಳೋಣ. ಬಲಶಾಲಿಗಳೂ ಅಬಲರೂ ಆದ ಎಲ್ಲ ಮಿತ್ರರಲ್ಲಿ ನಿನಗಿರುವ ಬಲವನ್ನೆಲ್ಲ ನೀನು ಖಚಿತವಾಗಿ ತಿಳಿದುಕೊಳ್ಳಬೇಕೆಂದು ಭಾವಿಸುತ್ತೇನೆ. ನಿನ್ನ ಸೈನ್ಯ ಉತ್ತಮವಾಗಿದೆಯೋ, ಮಧ್ಯಸ್ಥವಾಗಿದೆಯೋ, ಅಧಮವಾಗಿದೆಯೋ, ಸಂತುಷ್ಟವಾಗಿದೆಯೋ, ಅಸಂತುಷ್ಟವಾಗಿದೆಯೋ, ಎಂಬುದನ್ನು ತಿಳಿದುಕೊಂಡು ಅನಂತರ ಶತ್ರುಗಳೊಡನೆ ಸಂಧಿ ಮಾಡಿಕೊಳ್ಳೋಣ. ಸಾಮ, ಭೇದ, ದಾನ, ದಂಡಗಳಿಂದ, ಕಾಣಿಕೆಗಳಿಂದ, ನ್ಯಾಯದಿಂದ, ವೈರಿಗಳನ್ನು ಮಣಿಸಿ, ಬಲಪ್ರಯೋಗದಿಂದ ದುರ್ಬರಲನ್ನು ಮಣಿಸಿ, ಮಿತ್ರರನ್ನು ತೃಪ್ತಿಗೊಳಿಸಿ, ಸೈನ್ಯದೊಡನೆ ಸವಿನುಡಿಗಳನ್ನಾಡಿದರೆ ನಿನ್ನ ಕೋಶಬಲಗಳು ವೃದ್ಧಿಸಿ ನೀನು ಉತ್ತಮ ಸಿದ್ಧಿಯನ್ನು ಪಡೆಯುವೆ. ಹೀಗೆ ಮಾಡಿದಲ್ಲಿ ಎದುರುಬಿದ್ದ ಬಲಶಾಲಿಗಳಾದ ಅನ್ಯ ಶತ್ರುಗಳೊಡನಾಗಲಿ ಸ್ವಸೈನ್ಯ ವಾಹನಗಳಿಲ್ಲದ ಪಾಂಡವರೊಡನಾಗಲಿ ನೀನು ಹೋರಾಡಬಲ್ಲೆ. ಹೀಗೆ ಸ್ವಧರ್ಮಾನುಸಾರವಾಗಿ ಕಾಲೋಚಿತವಾಗಿ ನಿಶ್ಚಯಿಸಿ ಎಲ್ಲ ಕಾರ್ಯವನ್ನೂ ಮಾಡಿದರೆ ನೀನು ಶಾಶ್ವತವಾದ ಸುಖವನ್ನು ಪಡೆಯುವೆ.”
ತ್ರಿಗರ್ತರಿಂದ ವಿರಾಟನ ಗೋಗ್ರಹಣ
ಹಿಂದೆ ಮತ್ಸ್ಯರಿಂದಲೂ ಸಾಲ್ವೀಯಕರಿಂದಲೂ ಕೂಡಿದ ಮತ್ಸ್ಯರಾಜನ ಸೂತನಾದ ಕೀಚಕನಿಂದ ಮತ್ತೆ ಮತ್ತೆ ಅನೇಕ ಸಲ ಪರಾಜಿತನಾಗಿದ್ದ ತ್ರಿಗರ್ತರ ರಾಜನೂ ರಥಸಮೂಹದ ಒಡೆಯನೂ ತನ್ನ ಬಂಧುಗಳೊಡನೆ ಆ ಬಲಶಾಲಿಯಿಂದ ಉಗ್ರವಾಗಿ ಬಾಧಿತನಾಗಿದ್ದವನೂ ಆದ ಸುಶರ್ಮನು ಕರ್ಣನನ್ನು ಕಣ್ಣೆತ್ತಿ ನೋಡಿ, ಆಗ ಈ ಕಾಲೋಚಿತವಾದ ಅನೇಕ ಮಾತುಗಳನ್ನು ಅವಸರವಾಗಿ ದುರ್ಯೊಧನನಿಗೆ ಹೇಳಿದನು: “ನನ್ನ ರಾಷ್ಟ್ರವು ಮತ್ಸ್ಯರಾಜನ ಶಕ್ತಿಯಿಂದ ಎಷ್ಟೋ ಸಲ ಬಾಧಿತವಾಗಿದೆ. ಬಲಶಾಲಿಯಾದ ಕೀಚಕನು ಹಿಂದೆ ಅವನ ಸೇನಾಪತಿಯಾಗಿದ್ದನು. ಕ್ರೂರಿಯೂ ಕೋಪಿಯೂ ದುಷ್ಟಾತ್ಮನೂ ಲೋಕದಲ್ಲಿ ಪ್ರಖ್ಯಾತ ಪರಾಕ್ರಮವುಳ್ಳವನೂ ಪಾಪಕರ್ಮನೂ ನಿರ್ದಯನೂ ಆದ ಆ ಕೀಚಕನು ಅಲ್ಲಿ ಗಂಧರ್ವರಿಂದ ಹತನಾಗಿದ್ದಾನೆ. ಅವನು ಹತನಾಗಲು ದರ್ಪಹೀನನೂ ನಿರಾಶ್ರಯನೂ ಆದ ವಿರಾಟನು ನಿರುತ್ಸಾಹಗೊಳ್ಳುತ್ತಾನೆ ಎಂದು ನನ್ನ ಅನಿಸಿಕೆ. ನಿನಗೆ, ಎಲ್ಲ ಕೌರವರಿಗೂ, ಮಹಾತ್ಮನಾದ ಕರ್ಣನಿಗೂ ಇಷ್ಟವಾಗುವುದಾದರೆ ಅಲ್ಲಿಗೆ ದಾಳಿ ಮಾಡಬೇಕೆಂದು ನನ್ನ ಅಭಿಪ್ರಾಯ. ತುರ್ತಾದ ನಮಗೆ ಹಿತಕರವಾದ ಕಾರ್ಯವೀಗ ಒದಗಿದೆಯೆಂದು ಭಾವಿಸುತ್ತೇನೆ. ಬಹುಧಾನ್ಯಭರಿತವಾದ ಅವನ ದೇಶಕ್ಕೆ ಕೂಡಲೇ ಹೋಗೋಣ. ಅವನ ರತ್ನಗಳನ್ನೂ, ವಿವಿಧ ಸಂಪತ್ತನ್ನೂ ವಶಪಡಿಸಿಕೊಳ್ಳೋಣ. ಅವನ ಗ್ರಾಮಗಳನ್ನೂ ರಾಷ್ಟ್ರಗಳನ್ನೂ ಒಂದೊಂದಾಗಿ ತೆಗೆದುಕೊಳ್ಳೋಣ. ಅಥವಾ ಅವನ ಪುರವನ್ನು ಬಲಾತ್ಕಾರದಿಂದ ಹಾಳುಗೆಡವಿ ಶ್ರೇಷ್ಠವಾದ ವಿವಿಧ ಜಾತಿಯ ಅನೇಕ ಸಾವಿರ ಗೋವುಗಳನ್ನು ಅಪಹರಿಸೋಣ. ಕೌರವರೂ ತ್ರಿಗರ್ತರೂ ಎಲ್ಲರೂ ಒಟ್ಟಾಗಿ ಸೇರಿ ಅವನ ಗೋವುಗಳನ್ನು ಬೇಗ ಅಪಹರಿಸೋಣ. ಅವನೊಂದಿಗೆ ಸಂಧಿ ಮಾಡಿಕೊಂಡು ಅವನ ಪೌರುಷವನ್ನು ತಡೆಯೋಣ ಅಥವಾ ಅವನ ಸೈನ್ಯವನ್ನು ಸಂಪೂರ್ಣವಾಗಿ ನಾಶಮಾಡಿ ಅವನನ್ನು ವಶಪಡಿಸಿಕೊಳ್ಳೋಣ. ನ್ಯಾಯಮರ್ಗದಿಂದ ಅವನನ್ನು ವಶಮಾಡಿಕೊಂಡು ನಾವು ಸುಖವಾಗಿ ಇರೋಣ; ನಿನ್ನ ಬಲವೂ ನಿಸ್ಸಂಶಯವಾಗಿ ಹೆಚ್ಚುತ್ತದೆ.”
ಅವನ ಮಾತನ್ನು ಕೇಳಿ ಕರ್ಣನು ದೊರೆಗೆ ಹೇಳಿದನು: “ಸುಶರ್ಮನು ಕಾಲೋಚಿತವೂ ನಮಗೆ ಹಿತಕರವೂ ಆದ ಮಾತನ್ನು ಚೆನ್ನಾಗಿ ಆಡಿದ್ದಾನೆ. ಆದ್ದರಿಂದ ಸೈನ್ಯವನ್ನು ಯೋಜಿಸಿ, ವಿಭಾಗಿಸಿ, ಶೀಘ್ರವಾಗಿ ಹೊರಡೋಣ. ಅಥವಾ ನಿನ್ನ ಅಭಿಪ್ರಾಯದಂತೆ ಆಗಲಿ. ನಮ್ಮೆಲ್ಲರ ಪಿತಾಮಹ ಈ ಪ್ರಜ್ಞಾವಂತ ಕುರುವೃದ್ಧ, ಅಂತೆಯೇ ಆಚಾರ್ಯ ದ್ರೋಣ, ಶಾರದ್ವತ ಕೃಪ - ಇವರೆಲ್ಲ ಆಲೋಚಿಸುವ ಹಾಗೆ ದಾಳಿ ನಡೆಯಲಿ. ಇವರೊಡನೆ ಮಂತ್ರಾಲೋಚನೆ ಮಾಡಿ ದೊರೆಯ ಗುರಿ ಸಾಧಿಸುವುದಕ್ಕೆ ಬೇಗ ಹೋಗೋಣ. ಅರ್ಥ, ಬಲ, ಪೌರುಷಗಳಿಲ್ಲದ ಪಾಂಡವರೊಡನೆ ನಮಗೇನು ಕೆಲಸ? ಅವರು ಸಂಪೂರ್ಣವಾಗಿ ಹಾಳಾಗಿದ್ದಾರೆ ಅಥವಾ ಯಮಸದನವನ್ನು ಸೇರಿದ್ದಾರೆ. ನಾವು ನಿರ್ಭಯನಾಗಿ ವಿರಾಟನ ದೇಶಕ್ಕೆ ಹೋಗೋಣ. ಅವನ ಗೋವುಗಳನ್ನೂ ವಿವಿಧ ಸಂಪತ್ತನ್ನೂ ತೆಗೆದುಕೊಳ್ಳೋಣ.”
ಬಳಿಕ ರಾಜ ದುರ್ಯೊಧನನು ಸೂರ್ಯಪುತ್ರ ಕರ್ಣನ ಮಾತನ್ನು ಒಪ್ಪಿ ತನ್ನ ಆಜ್ಞೆಯನ್ನು ಯಾವಾಗಲೂ ಪಾಲಿಸುವ ತಮ್ಮನಾದ ದುಃಶಾಸನನಿಗೆ “ಹಿರಿಯರೊಡನೆ ಸಮಾಲೋಚಿಸಿ ಸೈನ್ಯವನ್ನು ಬೇಗ ಯೋಜಿಸು!” ಎಂದು ಸ್ವತಃ ಅಪ್ಪಣೆ ಮಾಡಿದನು. “ಎಲ್ಲ ಕೌರವರೊಡನೆ ಗೊತ್ತುಪಡಿಸಿದ ಸ್ಥಳಕ್ಕೆ ಹೋಗೋಣ. ಮಹಾರಥ ರಾಜ ಸುಶರ್ಮನು ಸಮಗ್ರ ಸೈನ್ಯ ಮತ್ತು ವಾಹನಸಮೇತನಾಗಿ ತ್ರಿಗರ್ತರೊಡನೆ ಕೂಡಿ ಮತ್ಸ್ಯನ ದೇಶಕ್ಕೆ ಮೊದಲೇ ಹೋಗಲಿ. ಅವನ ಹಿಂದೆ, ಮರುದಿವಸ ನಾವು ಒಗ್ಗಟ್ಟಾಗಿ ಮತ್ಸ್ಯರಾಜನ ಸುಸಮೃದ್ಧ ದೇಶಕ್ಕೆ ಹೋಗೋಣ. ಅವರು ವಿರಾಟನಗರಕ್ಕೆ ಥಟ್ಟನೇ ಹೋಗಿ, ಬೇಗ ಗೋಪಾಲಕರನ್ನು ಆಕ್ರಮಿಸಿ ವಿಪುಲ ಗೋಧನವನ್ನು ಹಿಡಿಯಲಿ. ನಾವು ಕೂಡ ಸೈನ್ಯವನ್ನು ಎರಡು ಭಾಗ ಮಾಡಿಕೊಂಡು ಶುಭಲಕ್ಷಣ ಸಂಪನ್ನವೂ ಉತ್ತಮವೂ ಆದ ಶತ ಸಹಸ್ರ ಗೋವುಗಳನ್ನು ಹಿಡಿಯೋಣ.”
ಅನಂತರ ದೊರೆ ಸುಶರ್ಮನು ಗೊತ್ತೊಪಡಿಸಿದಂತೆ ಕೃಷ್ಣಪಕ್ಷದ ಸಪ್ತಮಿಯಂದು ಆಗ್ನೇಯ ದಿಕ್ಕಿಗೆ ಹೋಗಿ ಗೋವುಗಳನ್ನು ಹಿಡಿದನು. ಮರುದಿವಸ ಅಷ್ಟಮಿಯಂದು ಕೌರವರೆಲ್ಲರೂ ಸೇರಿ ಆ ಸಾವಿರ ಸಾವಿರ ಗೋವುಗಳ ಹಿಂಡನ್ನು ಹಿಡಿದರು.
ವೇಷಮರೆಸಿಕೊಂಡು ವಿರಾಟನಗರವನ್ನು ಪ್ರವೇಶಿಸಿ ಆ ಶ್ರೇಷ್ಠ ನಗರದಲ್ಲಿ ವಿರಾಟರಾಜನ ಕೆಲಸಗಳನ್ನು ಮಾಡುತ್ತ ವಾಸಿಸುತ್ತಿದ್ದ ಅಮಿತತೇಜಸ್ವಿಗಳೂ ಮಹಾತ್ಮರೂ ಆದ ಆ ಪಾಂಡವರ ಅಜ್ಞಾತವಾಸದ ಅವಧಿಯು ಕಳೆಯಿತು. ಆಗ ಆ ಹದಿಮೂರನೆಯ ವರ್ಷದ ಕೊನೆಯಲ್ಲಿ ಸುಶರ್ಮನು ವಿರಾಟನ ಗೋಧನವನ್ನು ವಿಪುಲ ಸಂಖ್ಯೆಯಲ್ಲಿ ಶೀಘ್ರವಾಗಿ ಹಿಡಿದನು.
ತ್ರಿಗರ್ತ ಮತ್ತು ವಿರಾಟರ ನಡುವೆ ಯುದ್ಧ
ಆಗ ಗೋಪಾಲಕರು ಮಹಾವೇಗದಿಂದ ನಗರಕ್ಕೆ ಬಂದರು. ಕುಂಡಲಧಾರಿಯಾದ ಒಬ್ಬನು ರಥದಿಂದ ಕೆಳಕ್ಕೆ ನೆಗೆದು ಅಂಗದ ಕುಂಡಲಗಳನ್ನು ಧರಿಸಿದ ಶೂರ ಯೋಧರಿಂದಲೂ, ಸಜ್ಜನ ಮಂತ್ರಿಗಳಿಂದಲೂ, ನರಶ್ರೇಷ್ಠ ಪಾಂಡವರಿಂದಲೂ ಪರಿವೃತನಾಗಿದ್ದ ಮತ್ಯ್ಸರಾಜನನ್ನು ಕಂಡನು. ಆ ಬಳಿಕ ಅವನು ಸಭೆಯಲ್ಲಿ ಕುಳಿತಿದ್ದ ರಾಷ್ಟ್ರವರ್ಧನ ಆ ವಿರಾಟ ಮಹಾರಾಜನ ಬಳಿಗೆ ಬಂದು ನಮಸ್ಕರಿಸಿ ಹೀಗೆ ಹೇಳಿದನು: “ರಾಜ! ತ್ರಿಗರ್ತರು ನಮ್ಮ ಬಾಂಧವರೊಡನೆ ನಮ್ಮನ್ನು ಯುದ್ಧದಲ್ಲಿ ಸೋಲಿಸಿ ಅವಮಾನಿಸಿ ನಿನ್ನ ನೂರಾರು ಸಾವಿರಾರು ಗೋವುಗಳನ್ನು ಹಿಡಿಯುತ್ತಿದ್ದಾರೆ. ಅವುಗಳನ್ನು ರಕ್ಷಿಸು. ನಿನ್ನ ಗೋವುಗಳು ನಷ್ಟವಾಗದಿರಲಿ.” ಅದನ್ನು ಕೇಳಿ ದೊರೆಯು ರಥ, ಆನೆ, ಕುದುರೆಗಳಿಂದಲೂ ಪದಾತಿ ಧ್ವಜಗಳಿಂದಲೂ ತುಂಬಿದ ಮತ್ಯ್ಸಸೇನೆಯನ್ನು ಸಜ್ಜುಗೊಳಿಸಿದನು. ರಾಜರು ಮತ್ತು ರಾಜಪುತ್ರರು ಪ್ರಕಾಶಮಾನವೂ ಸುಂದರವೂ ಧರಿಸಲು ಯೋಗ್ಯವೂ ಆದ ಕವಚಗಳನ್ನು ಸ್ಥಾನೋಚಿತವಾಗಿ ಧರಿಸಿದರು. ವಿರಾಟನ ಪ್ರಿಯ ಸೋದರ ಶತಾನೀಕನು ವಜ್ರಸಹಿತವಾದ ಉಕ್ಕಿನ ಒಳಭಾಗವನ್ನುಳ್ಳ ಪುಟವಿಟ್ಟ ಚಿನ್ನದ ಕವಚವನ್ನು ಧರಿಸಿದನು. ಶತಾನೀಕನ ತಮ್ಮ ಮದಿರಾಶ್ವನು ಸುಂದರ ಹೊದಿಕೆಯನ್ನುಳ್ಳ, ಪೂರ್ತಿಯಾಗಿ ಉಕ್ಕಿನಿಂದ ಮಾಡಿದ್ದ ಗಟ್ಟಿ ಕವಚವನ್ನು ಧರಿಸಿದನು. ಮತ್ಸ್ಯರಾಜನು ನೂರು ಸೂರ್ಯ, ನೂರು ಸುಳಿ, ನೂರು ಚುಕ್ಕಿ, ಮತ್ತು ನೂರು ಕಣ್ಣಿನ ಆಕೃತಿಗಳಿಂದ ಕೂಡಿದ ಅಭೇದ್ಯವಾದ ಕವಚವನ್ನು ಧರಿಸಿದನು. ಉಬ್ಬಿದ ಭಾಗದಲ್ಲಿ ನೂರು ಸೌಗಂಧಿಕ ಕಮಲಪುಷ್ಪ ಹೊಂದಿದ್ದ, ಸುವರ್ಣ ಖಚಿತವೂ ಸೂರ್ಯಸಮಾನವೂ ಆದ ಕವಚವನ್ನು ಸೂರ್ಯದತ್ತನು ತೊಟ್ಟನು. ವಿರಾಟನ ಹಿರಿಯ ಮಗ ವೀರ ಶಂಖನು ದೃಢವೂ, ಉಕ್ಕಿನಿಂದ ನಿರ್ಮಿತವೂ, ನೂರು ಕಣ್ಣುಗಳುಳ್ಳದ್ದೂ ಆದ ಬಿಳಿಯ ಕವಚವನ್ನು ತೊಟ್ಟನು. ಹೀಗೆ ಆ ನೂರಾರು ದೇವಸದೃಶ ಮಹಾರಥಿ ಯೋಧರು ಯುದ್ಧೋತ್ಸಾಹವುಳ್ಳವರಾಗಿ ತಮತಮಗೆ ತಕ್ಕ ಕವಚಗಳನ್ನು ತೊಟ್ಟರು. ಆ ಮಹಾರಥರು ಯುದ್ಧ ಸಾಮಗ್ರಿಗಳಿಂದ ತುಂಬಿದ ಶುಭ್ರ, ಶ್ರೇಷ್ಠ ರಥಗಳಿಗೆ ಚಿನ್ನದ ಕವಚಗಳ ಕುದುರೆಗಳನ್ನು ಹೂಡಿದರು. ಆಗ ವಿರಾಟನ ದಿವ್ಯ ರಥದ ಮೇಲೆ ಸೂರ್ಯ ಚಂದ್ರ ಸಮಾನ ಶ್ರೇಷ್ಠ ಚಿನ್ನದ ಬಾವುಟವನ್ನು ಹಾರಿಸಲಾಯಿತು. ಬಳಿಕ ಆ ಕ್ಷತ್ರಿಯ ಶೂರರು ಚಿನ್ನದಿಂದ ಅಲಂಕೃತವಾದ ವಿವಿಧಾಕಾರಗಳ ಇತರ ತಮ್ಮ ತಮ್ಮ ಬಾವುಟಗಳನ್ನು ರಥಗಳ ಮೇಲೆ ಕಟ್ಟಿದರು.
ಅನಂತರ ಮತ್ಸ್ಯರಾಜನು ತಮ್ಮ ಶತಾನೀಕನಿಗೆ ಹೇಳಿದನು: “ಕಂಕ, ವಲ್ಲವ, ಗೋಪಾಲ, ವೀರ್ಯವಂತ ದಾಮಗ್ರಂಥಿ ಇವರೂ ಕೂಡ ಯುದ್ಧಮಾಡುವವರೆಂದು ನನ್ನ ಬುದ್ಧಿಗೆ ತೋರುತ್ತದೆ. ಇದರಲ್ಲಿ ಸಂಶಯವಿಲ್ಲ. ಧ್ವಜಪತಾಕೆಗಳಿಂದ ಕೂಡಿದ ರಥಗಳನ್ನು ಅವರಿಗೂ ಕೊಡು. ಸುಂದರವೂ ದೃಢವೂ ಮೃದುವೂ ಆದ ಕವಚಗಳನ್ನು ಅವರು ಶರೀರಗಳಲ್ಲಿ ಧರಿಸಿಕೊಳ್ಳಲಿ. ಅವರಿಗೆ ಆಯುಧಗಳನ್ನೂ ಕೊಡು. ವೀರೋಚಿತವಾದ ಅಂಗ ಮತ್ತು ರೂಪವುಳ್ಳವರೂ, ಗಜರಾಜನ ಸೊಂಡಿಲಿನಂತಹ ತೋಳುಗಳುಳ್ಳವರೂ ಆದ ಆ ಪುರುಷರು ಯುದ್ಧಮಾಡಲಾರರೆಂದು ನನ್ನ ಬುದ್ಧಿಗೆ ತೋರುವುದಿಲ್ಲ.”
ದೊರೆಯ ಆ ಮಾತನ್ನು ಕೇಳಿದ ಶೀಘ್ರಬುದ್ಧಿ ಶತಾನೀಕನು ಪಾಂಡವರಿಗೆ - ಸಹದೇವ, ರಾಜ ಯುಧಿಷ್ಠಿರ, ಭೀಮ ಮತ್ತು ನಕುಲರಿಗೆ ರಥಗಳನ್ನು ಕೊಡುವಂತೆ ಆಜ್ಞಾಪಿಸಿದನು. ಬಳಿಕ ಸೂತರು ಹರ್ಷಿತರಾಗಿ, ರಾಜಭಕ್ತಿಪುರಸ್ಸರವಾಗಿ, ದೊರೆಯಿಂದ ನಿರ್ದಿಷ್ಟ ರಥಗಳನ್ನು ಬೇಗ ಸಜ್ಜುಗೊಳಿಸಿದರು. ಸುಂದರವೂ ದೃಢವೂ ಮೃದುವೂ ಆದ ಕವಚಗಳನ್ನು ಅನಾಯಾಸವಾಗಿ ಕೆಲಸಮಾಡಬಲ್ಲಂಥ ಆ ಪಾಂಡವರಿಗೆ ಕೊಡುವಂತೆ ವಿರಾಟನು ಅಪ್ಪಣೆ ಮಾಡಿದನು. ಅವುಗಳನ್ನು ಬಿಚ್ಚಿ ಆ ಶತ್ರುನಾಶಕರ ಮೈಗಳಿಗೆ ತೊಡಿಸಲಾಯಿತು. ವೇಷ ಮರೆಸಿಕೊಂಡವರೂ, ಶಕ್ತರೂ, ಯುದ್ಧವಿಶಾರದರೂ, ಕುರುಶ್ರೇಷ್ಠರೂ, ಶೂರರೂ, ಸತ್ಯವಿಕ್ರಮರೂ ಆದ ಆ ಎಲ್ಲ ನಾಲ್ವರು ಪಾಂಡವ ಸಹೋದರರು ಒಟ್ಟಿಗೆ ವಿರಾಟನನ್ನು ಹಿಂಬಾಲಿಸಿದರು.
ಆಮೇಲೆ, ಭಯಂಕರವಾದ, ಒಳ್ಳೆಯ ದಂತಗಳನ್ನುಳ್ಳ, ಅರುವತ್ತ ವರ್ಷ ತುಂಬಿದ, ಒಡೆದ ಕಪೋಲಗಳ ಮದ್ದಾನೆಗಳು ಮೋಡಗಳಂತೆ ಮದೋದಕವನ್ನು ಸುರಿಸುತ್ತ ತಮ್ಮ ಮೇಲೇರಿದ ಯುದ್ಧಕುಶಲರಿಂದಲೂ ಸುಶಿಕ್ಷಿತರಾದ ಮಾವಟಿಗರಿಂದಲೂ ಕೂಡಿ ಚಲಿಸುವ ಪರ್ವತಗಳಂತೆ ರಾಜನನ್ನು ಅನುಸರಿಸಿದವು. ವಿಶಾರದರೂ, ವಿಧೇಯರೂ, ಸಂತುಷ್ಟರೂ ಆದ ಮತ್ಸ್ಯನ ಅನುಯಾಯಿಗಳಿಗೆ ಸೇರಿದ ಎಂಟುಸಾವಿರ ರಥಗಳೂ, ಒಂದು ಸಾವಿರ ಆನೆಗಳೂ, ಅರವತ್ತು ಸಾವಿರ ಕುದುರೆಗಳೂ ಹಿಂದೆ ಸಾಗಿದವು. ಗೋವುಗಳ ಹೆಜ್ಜೆಗಳನ್ನು ಅನುಸರಿಸುತ್ತಾ ಸಾಗುತ್ತಿದ್ದ ವಿರಾಟನ ಆ ಸೈನ್ಯವು ಶೋಭಿಸುತ್ತಿತ್ತು. ಮುಂದೆ ಸಾಗುತ್ತಿದ್ದ ವಿರಾಟನ ಆ ಶ್ರೇಷ್ಠ ಸೈನ್ಯವು ದೃಢ ಆಯುಧಗಳನ್ನು ಹಿಡಿದ ಜನರಿಂದಲೂ ಆನೆ ಕುದುರೆ ರಥಗಳಿಂದಲೂ ತುಂಬಿ ಕಂಗೊಳಿಸುತ್ತಿತ್ತು.
ಮತ್ಸ್ಯದೇಶದ ಶೂರ ಯೋಧರು ನಗರದಿಂದ ಹೊರಟು ಸೈನ್ಯವ್ಯೂಹವನ್ನು ರಚಿಸಿಕೊಂಡು, ಹೊತ್ತು ಇಳಿದಾಗ ತ್ರಿಗರ್ತರನ್ನು ತಾಗಿದರು. ಕೋಪೋದ್ರಿಕ್ತರೂ, ಗೋವುಗಳ ಮೇಲೆ ಆಶೆಯುಳ್ಳವರೂ, ಯುದ್ಧೋನ್ಮತ್ತರೂ, ಮಹಾಬಲರೂ ಆದ ಆ ತ್ರಿಗರ್ತರು ಮತ್ತು ಮತ್ಸ್ಯರು ಪರಸ್ಪರ ಗರ್ಜನೆ ಮಾಡಿದರು. ಆಗ ಸೈನ್ಯ ವಿಭಾಗ ಪ್ರಮುಖರೂ ಕುಶಲರಾದ ಗಜಾರೋಹಕರೂ ಏರಿ ಕುಳಿತ ಭಯಂಕರ ಮದಗಜಗಳು ತೋಮರಗಳಿಂದಲೂ ಅಂಕುಶಗಳಿಂದಲೂ ಪ್ರಚೋದಿತಗೊಂಡವು. ಹೊತ್ತು ಇಳಿಯುವ ಸಮಯದಲ್ಲಿ ಅವರ ಘೋರ ಮತ್ತು ರೋಮಾಂಚಕಾರಿ ತುಮುಲಯುದ್ಧವು ದೇವಾಸುರರ ಯುದ್ಧಕ್ಕೆ ಸಮಾನವಾಗಿತ್ತು. ನೆಲದ ಧೂಳು ಮೇಲೆದ್ದಿತು; ಅದರಿಂದಾಗಿ ಏನೊಂದೂ ಗೊತ್ತಾಗುತ್ತಿರಲಿಲ್ಲ. ಸೈನ್ಯದ ಧೂಳು ಕವಿದ ಪಕ್ಷಿಗಳು ನೆಲಕ್ಕೆ ಬಿದ್ದವು. ಪ್ರಯೋಗಿಸುತ್ತಿದ್ದ ಬಾಣಗಳಿಂದ ಸೂರ್ಯನು ಕಣ್ಮರೆಯಾದನು. ಆಕಾಶವು ಮಿಂಚು ಹುಳುಗಳಿಂದ ಕೂಡಿದಂತೆ ವಿರಾಜಿಸಿತು. ಬಲಗೈ, ಎಡಗೈಗಳಿಂದ ಬಾಣ ಬಿಡುತ್ತಿದ್ದ ಲೋಕಪ್ರಸಿದ್ಧ ವೀರ ಬಿಲ್ಗಾರರು ಬಿದ್ದಾಗ, ಚಿನ್ನದ ಹಿಂಬಾಗವುಳ್ಳ ಅವರ ಬಿಲ್ಲುಗಳು ಪರಸ್ಪರ ತೊಡರಿಕೊಳ್ಳುತ್ತಿದ್ದವು. ರಥಗಳು ರಥಗಳನ್ನೂ, ಪದಾತಿಗಳು ಪದಾತಿಗಳನ್ನೂ, ಮಾವುತರು ಮಾವುತರನ್ನೂ, ಗಜಗಳು ಮಹಾಗಜಗಳನ್ನೂ ಎದುರಿಸಿದವು. ಕೃದ್ಧರಾದ ಆ ಯೋಧರು ಕತ್ತಿಗಳಿಂದಲೂ, ಪಟ್ಟಿಶ, ಭರ್ಜಿ, ಶಕ್ತಿ, ತೋಮರಗಳಿಂದಲೂ ಯುದ್ಧದಲ್ಲಿ ಒಬ್ಬರನ್ನೊಬ್ಬರು ಹೊಡೆದರು. ಪರಿಘದಂಥಹ ತೋಳುಗಳನ್ನುಳ್ಳ ಆ ಶೂರರು ಯುದ್ಧದಲ್ಲಿ ಕುಪಿತರಾಗಿ ಪರಸ್ಪರ ಹೊಡೆದಾಡುತ್ತಿದ್ದರೂ ಒಂದು ಪಕ್ಷದ ಶೂರರು ಮತ್ತೊಂದು ಪಕ್ಷದ ಶೂರರನ್ನು ವಿಮುಖರಾಗುವಂತೆ ಮಾಡಲು ಸಮರ್ಥರಾಗಲಿಲ್ಲ. ಮೇಲ್ದುಟಿ ಹರಿದುಹೋದ, ಸುಸ್ಥಿತವಾದ ಮೂಗಿನ, ಅಲಂಕೃತವಾದ ಕೂದಲು ಕತ್ತರಿಸಿಹೋದ, ಕುಂಡಲ ಸಹಿತವಾಗಿ ಧೂಳು ಮುಚ್ಚಿದ ರುಂಡಗಳು ಅಲ್ಲಿ ಕಂಡು ಬರುತ್ತಿದ್ದವು. ಆ ಮಹಾಯುದ್ಧದಲ್ಲಿ ಬಾಣಗಳಿಂದ ತುಂಡುತುಂಡಾಗಿ ಕತ್ತರಿಸಿಹೋದ ಕ್ಷತ್ರಿಯರ ದೇಹಗಳು ಶಾಲವೃಕ್ಷದ ಕಾಂಡಗಳಂತೆ ಕಾಣುತ್ತಿದ್ದವು. ಹಾವಿನ ಹೆಡೆಗಳಿಗೆ ಸಮಾನ ಚಂದನ ಲೇಪಿತ ಬಾಹುಗಳಿಂದಲೂ, ಕುಂಡಲಸಹಿತ ತಲೆಗಳಿಂದಲೂ ಆ ರಣಭೂಮಿಯು ತುಂಬಿಹೋಗಿತ್ತು. ಹರಿಯುತ್ತಿದ್ದ ರಕ್ತದಲ್ಲಿ ನೆಲದ ಧೂಳು ಅಡಗಿಹೋಯಿತು. ಅದರಿಂದ ಘೋರವೂ ಅಪರಿಮಿತವೂ ಆದ ಕೆಸರುಂಟಾಯಿತು.
ಶತಾನೀಕನು ನೂರುಮಂದಿ ಶತ್ರುಗಳನ್ನೂ, ವಿಶಾಲಾಕ್ಷನು ನಾನೂರುಮಂದಿಯನ್ನೂ ಕೊಂದು ಆ ಇಬ್ಬರು ಮಹಾರಥರು ತ್ರಿಗರ್ತರ ಮಹಾಸೇನೆಯನ್ನು ಹೊಕ್ಕರು. ಬಹು ರೋಷಾವೇಶದಿಂದ ಕೇಶಾಕೇಶಿಯಾಗಿ ನಖಾನಖಿಯಾಗಿ ಶತ್ರುಗಳೊಡನೆ ಕಾದಾಡಿದರು. ಅವರು ತ್ರಿಗರ್ತರ ರಥಸಮೂಹವನ್ನು ಲಕ್ಷಿಸಿ ನುಗ್ಗಿದರು; ಅವರ ಹಿಂದೆ ಸೂರ್ಯದತ್ತನೂ ಮದಿರಾಶ್ವನೂ ಹೋದರು. ರಥ ಸೇನಾನಿ ವಿರಾಟನು ರಥದಲ್ಲಿ ಕುಳಿತು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತ ಆ ರಣದಲ್ಲಿ ಐನೂರು ರಥಗಳನ್ನು ನಾಶಮಾಡಿ, ನೂರು ಕುದರೆಗಳನ್ನೂ, ಐವರು ಮಹಾರಥರನ್ನೂ ಕೊಂದು, ತ್ರಿಗರ್ತರ ರಾಜ ಸುಶರ್ಮನ ಸುವರ್ಣರಥವನ್ನು ಎದುರಿಸಿದನು. ಅಲ್ಲಿ ಮಹಾತ್ಮರೂ, ಮಹಾಬಲರೂ ಆದ ಅಬರಿಬ್ಬರೂ ಹೋರಾಡುತ್ತಾ, ಕೊಟ್ಟಿಗೆಯಲ್ಲಿ ಎರಡು ಗೂಳಿಗಳು ಗರ್ಜಿಸುವಂತೆ ಪರಸ್ಪರ ಗರ್ಜನೆ ಮಾಡುತ್ತಿದ್ದರು. ಬಳಿಕ ಆ ರಥಿಕರು ರಥಗಳಲ್ಲಿ ಕುಳಿತು ಸುತ್ತಲೂ ತಿರುಗುತ್ತ, ಮೋಡಗಳು ಮಳೆಯ ಧಾರೆಯನ್ನು ಕರೆಯುವಂತೆ ಶೀಘ್ರ ಬಾಣಗಳನ್ನು ಸುರಿಸಿದರು. ಪರಸ್ಪರ ಅತಿ ಕೋಪಾವಿಷ್ಟರೂ ಅಸಹನೆಯುಳ್ಳವರೂ ಆದ, ಖಡ್ಗ, ಶಕ್ತಿ, ಗದೆಗಳನ್ನು ಧರಿಸಿದ ಅ ಅಸ್ತ್ರ ವಿಶಾರದರು ಹರಿತ ಬಾಣಗಳನ್ನು ಪ್ರಯೋಗಿಸುತ್ತಾ ಚಲಿಸುತ್ತಿದ್ದರು. ಅನಂತರ ವಿರಾಟರಾಜನು ಸುಶರ್ಮನನ್ನು ಹತ್ತು ಬಾಣಗಳಿಂದ ಘಾತಿಸಿದನು; ಅವನ ನಾಲ್ಕು ಕುದುರೆಗಳನ್ನು ಐದೈದು ಬಾಣಗಳಿಂದ ಭೇದಿಸಿದನು. ಹಾಗೆಯೇ, ಯುದ್ಧೋನ್ಮತ್ತನೂ, ಪರಮಾಸ್ತ್ರವಿದನೂ ಆದ ಸುಶರ್ಮನು ಮತ್ಯ್ಸರಾಜನನ್ನು ಐವತ್ತು ನಿಶಿತ ಬಾಣಗಳಿಂದ ಹೊಡೆದನು. ಆಗ ಧೂಳು ಮುಸುಕಿದ ಸಂಜೆಯಲ್ಲಿ ಮತ್ಸ್ಯರಾಜ ಸುಶರ್ಮರ ಸೇನೆಗಳು ಒಂದನ್ನೊಂದು ಆವರಿಸಿಕೊಂಡು ಪರಸ್ಪರ ಗುರುತಿಸಲಾಗುತ್ತಿರಲಿಲ್ಲ.
ಲೋಕವು ಕತ್ತಲೆಯಿಂದಲೂ ಧೂಳಿನಿಂದಲೂ ತುಂಬಿ ಹೋಗಲು ಸೈನ್ಯವ್ಯೂಹದಲ್ಲಿದ್ದ ಯೋಧರು ಮುಹೂರ್ತಕಾಲ ಹಾಗೆಯೇ ನಿಂತರು. ಬಳಿಕ ಚಂದ್ರನು ಕತ್ತಲೆಯನ್ನು ಹೋಗಲಾಡಿಸಿ, ರಾತ್ರಿಯನ್ನು ನಿರ್ಮಲಗೊಳಿಸಿ, ರಣದಲ್ಲಿ ಕ್ಷತ್ರಿಯರನ್ನು ಸಂತೋಷಗೊಳಿಸಿ ಉದಿಸಿದನು. ಬೆಳಕು ಬರಲು ಘೋರರೂಪ ಯುದ್ಧವು ಮತ್ತೆ ಮುಂದುವರೆಯಿತು. ಆಗ ಅವರು ಒಬ್ಬರನ್ನೊಬ್ಬರು ನೋಡಲಾಗುತ್ತಿರಲಿಲ್ಲ. ಬಳಿಕ, ತ್ರಿಗರ್ತ ಸುಶರ್ಮನು ತಮ್ಮನೊಡನೆ ಎಲ್ಲ ರಥಸಮೂಹದೊಡನೆ ಮತ್ಯ್ಸರಾಜನತ್ತ ನುಗ್ಗಿದನು. ಆ ಕ್ಷತ್ರಿಯಶ್ರೇಷ್ಠ ಗದಾಪಾಣಿ ಸೋದರರು ರಥಗಳಿಂದ ಧುಮುಕಿ ಕೋಪಾವಿಶದಿಂದ ಶತ್ರುವಿನ ಕುದುರೆಗಳತ್ತ ನುಗ್ಗಿದರು. ಅಂತೆಯೆ ಅವರ ಆ ಸೈನ್ಯಗಳೂ ಕೂಡ ಕ್ರೋಧಗೊಂಡು ಗದೆಗಳಿಂದಲೂ, ಹದಗೊಳಿಸಿದ, ಚೂಪಾದ ಮೊನೆ ಮತ್ತು ಹರಿತ ಅಲಗುಗಳನ್ನುಳ್ಳ ಖಡ್ಗ, ಗಂಡು ಗೊಡಲಿ, ಭರ್ಜಿಗಳಿಂದಲೂ ಪರಸ್ಪರರ ಆಕ್ರಮಣ ಮಾಡಿದವು. ತ್ರಿಗರ್ತಾಧಿಪಧಿ ರಾಜ ಸುಶರ್ಮನು ತನ್ನ ಸೈನ್ಯದಿಂದ ಮತ್ಸ್ಯರಾಜನ ಸಮಸ್ತ ಸೈನ್ಯವನ್ನೂ ಅತಿಯಾಗಿ ಕಲಕಿ ಗೆದ್ದು, ಬಲಶಾಲಿ ಮತ್ಸ್ಯ ವಿರಾಟನತ್ತ ನುಗ್ಗಿದನು. ಅವರಿಬ್ಬರೂ ಎದುರಾಳಿಯ ಎರಡು ಕುದುರೆಗಳನ್ನೂ, ಕುದುರೆಗಳ ಸಾರಥಿಗಳನ್ನೂ ಕೊಂದು ವಿರಥನಾದ ಮತ್ಸ್ಯರಾಜನನ್ನು ಜೀವಂತವಾಗಿ ಸೆರೆಹಿಡಿದರು. ಸುಶರ್ಮನು ಅಳುತ್ತಿರುವ ಯುವತಿಯನ್ನು ಎಳೆದೊಯ್ಯುವಂತೆ ಅವನನ್ನು ಚೆನ್ನಾಗಿ ಥಳಿಸಿ ತನ್ನ ರಥದ ಮೇಲೇರಿಸಿಕೊಂಡು ಶೀಘ್ರವಾಗಿ ಹೊರಟುಹೋದನು.
ಸೆರೆಯಾದ ವಿರಾಟನನ್ನು ಪಾಂಡವರು ಮುಕ್ತಗೊಳಿಸಿದ್ದುದು
ಬಲಶಾಲಿ ವಿರಾಟನು ವಿರಥನಾಗಿ ಸೆರೆಸಿಕ್ಕಲಾಗಿ ಮತ್ಸ್ಯರು ತ್ರಿಗರ್ತರಿಂದ ಬಹಳ ಬಾಧಿತರಾಗಿ ಭಯಗೊಂಡು ಚೆಲ್ಲಾಪಿಲ್ಲಿಯಾದರು. ಅವರು ಹಾಗೆ ಭಯಗ್ರಸ್ತರಾಗಲು ಕುಂತೀಪುತ್ರ ಯುಧಿಷ್ಠಿರನು ಮಹಾಬಾಹು ಶತ್ರುನಾಶಕ ಭೀಮಸೇನನಿಗೆ ಹೇಳಿದನು: “ಮತ್ಸ್ಯರಾಜನು ತ್ರಿಗರ್ತ ಸುಶರ್ಮನ ಹಿಡಿತಕ್ಕೆ ಸಿಕ್ಕಿದ್ದಾನೆ. ಅವನನ್ನು ಬಿಡಿಸು. ಅವನು ಶತ್ರುಗಳಿಗೆ ವಶನಾಗಬಾರದು. ವಿರಾಟನಗರದಲ್ಲಿ ನಾವೆಲ್ಲರೂ ಎಲ್ಲ ಬಯಕೆಗಳನ್ನೂ ತೀರಿಸಿಕೊಂಡು ವಾಸಿಸಿದ್ದೇವೆ. ಭೀಮಸೇನ! ಆ ನಮ್ಮ ವಾಸದ ಋಣವನ್ನು ತೀರಿಸುವುದು ನಿನ್ನ ಕರ್ತವ್ಯ.”
ಭೀಮಸೇನನು ಹೇಳಿದನು: “ರಾಜ! ನಿನ್ನ ಆಜ್ಞೆಯಂತೆ ಅವನನ್ನು ನಾನು ರಕ್ಷಿಸುತ್ತೇನೆ. ಸ್ವಬಾಹುಬಲವನ್ನು ನೆಮ್ಮಿ ಶತ್ರುಗಳೊಡನೆ ಯುದ್ಧಮಾಡುವ ನನ್ನ ಸಾಹಸವನ್ನು ನೋಡು. ಸಹೋದರರೊಡನೆ ಒಂದು ಕಡೆ ನಿಂತು ನನ್ನ ಪರಾಕ್ರಮವನ್ನಿಂದು ನೋಡು. ದೊಡ್ಡ ಕಾಂಡವನ್ನುಳ್ಳ ಈ ಮಹಾವೃಕ್ಷವು ಗದೆಯಂತೆ ನಿಂತಿದೆ. ಇದನ್ನು ಕಿತ್ತು ಪ್ರಯೋಗಿಸಿ ವೈರಿಗಳನ್ನು ಓಡಿಸಿಬಿಡುತ್ತೇನೆ.”
ಮದಗಜದಂತೆ ಮರವನ್ನು ನೋಡುತ್ತಿದ್ದ ಆ ವೀರ ಸೋದರನಿಗೆ ಧರ್ಮರಾಜ ಯುಧಿಷ್ಠಿರನು ಹೇಳಿದನು: “ಭೀಮ! ಈ ಸಾಹಸವನ್ನು ಮಾಡಬೇಡ. ಆ ಮರ ಅಲ್ಲಿಯೇ ಇರಲಿ. ಮರದ ಮೂಲಕ ಅತಿಮಾನುಷ ಕಾರ್ಯವನ್ನು ನೀನು ಮಾಡಕೂಡದು. ಏಕೆಂದರೆ ಇವನು ಭೀಮನೆಂದು ಜನ ನಿನ್ನನ್ನು ಗುರುತು ಹಿಡಿದು ಬಿಟ್ಟಾರು! ಬೇರೆ ಯಾವುದಾದರೂ ಮಾನುಷವಾದ ಆಯುಧವನ್ನು – ಬಿಲ್ಲು ಅಥವಾ ಶಕ್ತ್ಯಾಯುಧ ಅಥವಾ ಖಡ್ಗ, ಅಥವಾ ಗಂಡುಗೊಡಲಿಯನ್ನು – ತೆಗೆದುಕೋ! ಮಾನುಷವಾದ ಆಯುಧವನ್ನೇ ತೆಗೆದುಕೊಂಡು ಬೇರೆಯವರು ಗಮನಿಸದಂತೆ ದೊರೆಯನ್ನು ಬೇಗ ಬಿಡಿಸು. ಮಹಾಬಲ ಯಮಳರು ನಿನ್ನ ಪಡೆಗಳನ್ನು ರಕ್ಷಿಸುವರು. ಯುದ್ಧದಲ್ಲಿ ನೀವು ಒಟ್ಟುಗೂಡಿ ಮತ್ಸ್ಯರಾಜನನ್ನು ಬಿಡಿಸಿ.”
ಬಳಿಕ ಅವರೆಲ್ಲರೂ ಕುದುರೆಗಳನ್ನು ಪ್ರಚೋದಿಸಿದರು. ಕೋಪದಿಂದ ದಿವ್ಯಾಸ್ತ್ರವನ್ನು ತ್ರಿಗರ್ತರ ಮೇಲೆ ಪ್ರಯೋಗಿಸಿದರು. ರಥವನ್ನು ಹೊರಡಿಸಿದ ಪಾಂಡವರನ್ನು ನೋಡಿ ವಿರಾಟನ ಆ ಮಹಾಸೈನ್ಯವು ಬಹಳ ಕೋಪದಿಂದ ಅತ್ಯದ್ಭುತವಾಗಿ ಯುದ್ಧಮಾಡಿತು. ಕುಂತೀಪುತ್ರ ಯುಧಿಷ್ಠಿರನು ಅಲ್ಲಿ ಸಾವಿರ ಯೋಧರನ್ನು ಕೊಂದನು; ಭೀಮನು ಏಳುನೂರು ಮಂದಿ ಯೋಧರಿಗೆ ಪರಲೋಕವನ್ನು ತೋರಿಸಿದನು; ನಕುಲನೂ ಬಾಣಗಳಿಂದ ಏಳುನೂರು ಮಂದಿಯನ್ನು ಪರಲೋಕಕ್ಕೆ ಕಳುಹಿಸಿದನು. ಯುಧಿಷ್ಠಿರನಿಂದ ಆಜ್ಞೆಗೊಂಡ ಪುರುಷಶ್ರೇಷ್ಠ, ಪ್ರತಾಪಶಾಲೀ ಸಹದೇವನು ತಿಗರ್ತರ ಆ ಮಹಾಸೈನ್ಯವನ್ನು ಭೇದಿಸಿ ಮುನ್ನೂರು ಮಂದಿ ಶೂರರನ್ನು ಕೊಂದನು. ಬಳಿಕ ಮಹಾರಥಿ ರಾಜ ಯುಧಿಷ್ಠಿರನು ಸುಶರ್ಮನತ್ತ ತ್ವರೆಯಿಂದ ನುಗ್ಗಿ, ಬಾಣಗಳಿಂದ ಅವನನ್ನು ಬಹುವಾಗಿ ಹೊಡೆದನು. ಸುಶರ್ಮನೂ ಕೃದ್ಧನಾಗಿ ತ್ವರೆಯಿಂದ ಯುಧಿಷ್ಠಿರನನ್ನು ಒಂಭತ್ತು ಬಾಣಗಳಿಂದಲೂ, ಅವನ ನಾಲ್ಕು ಕುದುರೆಗಳನ್ನು ನಾಲ್ಕು ಬಾಣಗಳಿಂದಲೂ ಹೊಡೆದನು. ಆಗ ಶೀಘ್ರಕರ್ಮಿ ಕುಂತೀಪುತ್ರ ವೃಕೋದರನು ಸುಶರ್ಮನ ಬಳಿಸಾರಿ ಅವನ ಕುದುರೆಗಳನ್ನು ಜಜ್ಜಿ ಹಾಕಿದನು. ಅಲ್ಲದೇ ಅವನ ಬೆಂಗಾಲಿನವರನ್ನು ಮಹಾಬಾಣಗಳಿಂದ ಕೊಂದು, ಅನಂತರ ಕೋಪದಿಂದ ಅವನ ಸಾರಥಿಯನ್ನು ರಥದ ಒಳಗಿನಿಂದ ಎಳೆದು ಹಾಕಿದನು. ಆಗ ತ್ರಿಗರ್ತರಾಜನು ವಿರಥನಾದುದನ್ನು ಕಂಡು ಶೂರನೂ ಪ್ರಸಿದ್ಧನೂ ಆದ ಶೋಣಾಶ್ವನೆಂಬ ಅವನ ಚಕ್ರ ರಕ್ಷಕನು ಭಯದಿಂದ ಬಿಟ್ಟೋಡಿದನು. ಬಳಿಕ ಬಲಶಾಲಿ ವಿರಾಟನು ಸುಶರ್ಮನ ರಥದಿಂದ ಧುಮುಕಿ, ಅವನ ಗದೆಯನ್ನು ಕಿತ್ತುಕೊಂಡು ಅವನನ್ನು ಹೊಡೆದನು. ಅವನು ವೃದ್ಧನಾಗಿದ್ದರೂ ತರುಣನಂತೆ ಗದಾಪಾಣಿಯಾಗಿ ರಣರಂಗದಲ್ಲಿ ಸಂಚರಿಸಿದನು.
ಭಯಂಕರವಾಗಿ ಮೆರೆಯುತ್ತಿದ್ದ ಕುಂಡಲಧಾರಿ ಭೀಮನಾದರೋ ತನ್ನ ರಥದಿಂದ ಧುಮುಕಿ, ಸಿಂಹವು ಜಿಂಕೆಮರಿಯನ್ನು ಹಿಡಿಯುವಂತೆ ತ್ರಿಗರ್ತರಾಜನನ್ನು ಹಿಡಿದನು. ವಿರಥನಾದ ಆ ತ್ರಿಗರ್ತರ ಮಹಾರಥನು ಹಾಗೆ ಹಿಡಿತಕ್ಕೆ ಸಿಗಲು, ಭೀಮನು ತ್ರಿಗರ್ತರ ಆ ಭಯಗ್ರಸ್ತ ಸೈನ್ಯವನ್ನೆಲ್ಲ ಭಗ್ನಗೊಳಿಸಿದನು. ಅನಂತರ, ಮಹಾಬಲರೂ, ಸ್ವಬಾಹು ಬಲಸಂಪನ್ನರೂ, ವಿನಯಶೀಲರೂ, ವ್ರತನಿರತರೂ ಆದ ಪಾಂಡುಪುತ್ರರೆಲ್ಲರೂ ಸುಶರ್ಮನನ್ನು ಸೋಲಿಸಿ, ಗೋವುಗಳೆಲ್ಲವನ್ನೂ ಮರಳಿಸಿ, ಅವರ ಎಲ್ಲ ಧನವನ್ನೂ ತೆಗೆದುಕೊಂಡು, ಮುಖ್ಯ ಯುದ್ಧ ಭೂಮಿಯ ಮಧ್ಯೆ ಅಂದಿನಿರುಳು ಸುಖವಾಗಿದ್ದರು. ಬಳಿಕ, ವಿರಾಟನು ಅತಿಮಾನುಷ ಪರಾಕ್ರಮಿ ಮಹಾರಥ ಕೌಂತೇಯರನ್ನು ಧನ-ಸನ್ಮಾನಗಳಿಂದ ಗೌರವಿಸಿದನು.
ವಿರಾಟನು ಹೇಳಿದನು: “ರತ್ನಗಳು ಹೇಗೆ ನನ್ನವೋ ಹಾಗೆ ನಿಮ್ಮವೂ ಕೂಡ. ಅವುಗಳಿಂದ ನಿಮ್ಮ ನಿಮ್ಮ ಬಯಕೆಗೆ ಸುಖಕ್ಕೆ ತಕ್ಕಂತೆ ಎಲ್ಲರೂ ಕಾರ್ಯಮಾಡಿಕೊಳ್ಳಿ. ಶತ್ರುನಾಶಕರೇ! ಅಲಂಕೃತ ಕನ್ಯೆಯರನ್ನೂ, ವಿವಿಧ ಸಂಪತ್ತುಗಳನ್ನೂ, ನಿಮ್ಮ ಮನಸ್ಸು ಬಯಸಿದುದನ್ನೂ ಕೊಡುತ್ತೇನೆ. ನಿಮ್ಮ ಪರಾಕ್ರಮದಿಂದ ನಾನಿಂದು ಬಿಡುಗಡೆಗೊಂಡು ಇಲ್ಲಿ ಕುಶಲದಿಂದಿದ್ದೇನೆ. ಆದ್ದರಿಂದ ನೀವೆಲ್ಲರೂ ಮತ್ಸ್ಯರಿಗೆ ಒಡೆಯರು.”
ಹಾಗೆ ಹೇಳಿದ ಮತ್ಸ್ಯರಾಜನಿಗೆ ಆ ಪಾಂಡವರೆಲ್ಲರೂ ಯುಧಿಷ್ಠಿರನನ್ನು ಮುಂದುಮಾಡಿಕೊಂಡು ಒಬ್ಬೊಬ್ಬರೂ ಕೈಮುಗಿದು ಹೇಳಿದರು: “ರಾಜ! ನಿನ್ನೆಲ್ಲ ಮಾತಿನಿಂದ ನಾವು ಆನಂದಿತರಾಗಿದ್ದೇವೆ. ನೀನಿಂದು ಹಗೆಗಳಿಂದ ಮುಕ್ತನಾದೆ. ಅದರಿಂದಲೇ ನಾವು ಸಂತುಷ್ಟರಾಗಿದ್ದೇವೆ.”
ಆಗ ಮಹಾಬಾಹು, ರಾಜಶ್ರೇಷ್ಠ ಮತ್ಸ್ಯರಾಜ ವಿರಾಟನು ಮತ್ತೆ ಯುಧಿಷ್ಠಿರನಿಗೆ ಸಂತುಷ್ಟನಾಗಿ ಹೇಳಿದನು: “ಬಾ! ನಿನಗೆ ಅಭಿಷೇಕ ಮಾಡುತ್ತೇನೆ, ನೀನು ನಮ್ಮ ಮತ್ಸ್ಯಕ್ಕೆ ರಾಜನಾಗು! ನೀನು ಮನಸ್ಸಿನಲ್ಲಿ ಇಷ್ಟಪಟ್ಟುದನ್ನು ಕೊಡುತ್ತೇನೆ. ನಮ್ಮದೆಲ್ಲಕ್ಕೂ ನೀನು ಅರ್ಹನಾಗಿರುವೆ. ವೈಯಾಘ್ರಪದ ಗೋತ್ರದ ಬ್ರಾಹ್ಮಣಶ್ರೇಷ್ಠನೇ! ರತ್ನಗಳು, ಗೋವುಗಳು, ಚಿನ್ನ, ಮಣಿ, ಮುತ್ತು ಮುಂತಾದುದೆಲ್ಲವನ್ನೂ ನಿನಗೆ ಕೊಡುತ್ತೇನೆ. ನಿನಗೆ ಎಲ್ಲ ರೀತಿಯಲ್ಲೂ ನಮಸ್ಕಾರ! ನಿನ್ನಿಂದಾಗಿಯೇ ನಾನಿಂದು ಮತ್ತೆ ನನ್ನ ರಾಜ್ಯವನ್ನು ಕಾಣುತ್ತಿದ್ದೇನೆ. ನನಗೆ ಕಳವಳವನ್ನುಂಟುಮಾಡಿದ ಆ ಶತ್ರುವು ಈಗ ನನ್ನ ವಶನಾಗಿದ್ದಾನೆ.”
ಆಗ ಯುಧಿಷ್ಠಿರನು ಮತ್ಸ್ಯನಿಗೆ ಮತ್ತೆ ಹೇಳಿದನು: “ಮತ್ಸ್ಯ! ನಿನ್ನ ಮಾತಿನಿಂದ ನನಗೆ ಸಂತೋಷವಾಗುತ್ತಿದೆ. ನೀನು ಮನೋಜ್ಞವಾಗಿ ಮಾತನಾಡುತ್ತಿರುವೆ. ಯಾವಾಗಲೂ ದಯಾಪರನಾಗಿದ್ದುಕೊಂಡು ನಿತ್ಯ ಸುಖಿಯಾಗಿರು. ಮಿತ್ರರಿಗೆ ಪ್ರಿಯವನ್ನು ತಿಳಿಸುವುದಕ್ಕಾಗಿ ದೂತರು ಬೇಗ ನಿನ್ನ ನಗರಕ್ಕೆ ಹೋಗಲಿ. ನಿನ್ನ ಜಯವನ್ನು ಸಾರಲಿ.”
ಬಳಿಕ, ಆ ಮಾತಿನಂತೆ ಮತ್ಸ್ಯರಾಜನು ದೂತರಿಗೆ ಅಪ್ಪಣೆಮಾಡಿದನು: “ಪುರಕ್ಕೆ ಹೋಗಿ ಯುದ್ಧದಲ್ಲಿ ನಮ್ಮ ಗೆಲುವನ್ನು ಸಾರಿರಿ. ಕುಮಾರರು ಚೆನ್ನಾಗಿ ಅಲಂಕರಿಸಿಕೊಂಡು ನನ್ನ ಪುರದಿಂದ ಹೊರಬರಲಿ. ಎಲ್ಲ ವಾದ್ಯಗಳೂ, ಚೆನ್ನಾಗಿ ಸಿಂಗರಿಸಿಕೊಂಡ ವೇಶ್ಯೆಯರೂ ಬರಲಿ.”
ಆ ದೂತರು ಒಂದೇ ರಾತ್ರಿಯಲ್ಲಿ ಅಲ್ಲಿಗೆ ಹೋಗಿ ಸೂರ್ಯೋದಯದಲ್ಲಿ ವಿರಾಟ ನಗರದ ಸಮೀಪದಲ್ಲಿ ಜಯವನ್ನು ಘೋಷಿಸಿದರು.