ಕೀಚಕವಧೆ
ಕೀಚಕನು ದ್ರೌಪದಿಯನ್ನು ನೋಡಿ ಬಯಸಿದುದು
ಮಹಾರಥಿ ಪಾರ್ಥರು ಮತ್ಯ್ಸನಗರದಲ್ಲಿ ವೇಷಮರೆಸಿ ವಾಸಿಸುತ್ತಿರಲು ಹತ್ತು ತಿಂಗಳುಗಳು ಕಳೆದವು. ಪರಿಚಾರ ಯೋಗ್ಯಳಾದ ಯಾಜ್ಞಸೇನಿ ದ್ರೌಪದಿಯು ಸುದೇಷ್ಣೆಯ ಶುಶ್ರೂಷೆ ಮಾಡುತ್ತಾ ಬಹುದುಃಖದಲ್ಲಿ ವಾಸಿಸುತ್ತಿದ್ದಳು. ಹೀಗೆ ಸುದೇಷ್ಣೆಯ ಅರಮನೆಯಲ್ಲಿ ಸುಳಿದಾಡುತ್ತಿದ್ದ ಕಮಲ ಮುಖಿ ಪಾಂಚಾಲಿಯನ್ನು ವಿರಾಟನ ಸೇನಾಪತಿಯು ನೋಡಿದನು. ದೇವಕನ್ಯೆಯಂತಿದ್ದ, ದೇವತೆಯಂತೆ ಸುಳಿದಾಡುತ್ತಿದ್ದ ಅವಳನ್ನು ನೋಡಿ ಕಾಮಬಾಣಪೀಡಿತನಾದ ಕೀಚಕನು ಅವಳನ್ನು ಕಾಮಿಸಿದನು. ಕಾಮಾಗ್ನಿಸಂತಪ್ತನಾದ ಆ ಸೇನಾನಿಯು ಸುದೇಷ್ಣೆಯ ಬಳಿ ಹೋಗಿ ನಗುತ್ತಾ ಹೇಳಿದನು: “ಇಲ್ಲಿ ವಿರಾಟರಾಜನ ಮನೆಯಲ್ಲಿ ಈ ಮಂಗಳೆಯನ್ನು ನಾನು ಹಿಂದೆಂದೂ ಕಂಡಿಲ್ಲ. ಈಗತಾನೇ ತಯಾರಾದ ಮದ್ಯವು ತನ್ನ ಗಂಧದಿಂದಲೇ ಉನ್ಮಾದಿಸುವಂತೆ ಈ ಭಾಮಿನಿಯು ತನ್ನ ರೂಪದಿಂದಲೇ ವಿಶೇಷವಾಗಿ ನನ್ನನ್ನು ಉನ್ಮಾದಗೊಳಿಸುತ್ತಿದ್ದಾಳೆ. ಈ ದೇವರೂಪಿ ಹೃದಯಂಗಮೆ ಯಾರು? ಈ ಶೋಭನೆಯು ಯಾರು ಮತ್ತು ಎಲ್ಲಿಂದ ಬಂದವಳು ಎನ್ನುವುದನ್ನು ನನಗೆ ಹೇಳು. ನನ್ನ ಚಿತ್ತವನ್ನು ಕಡೆದು ನನ್ನನ್ನು ವಶಪಡಿಸಿಕೊಳ್ಳುತ್ತಿದ್ದಾಳೆ. ಇದಕ್ಕೆ ಇವಳಲ್ಲದೇ ಬೇರೆ ಔಷಧವೇ ಇಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ. ಶುಭೆಯಾದ ನಿನ್ನ ಈ ಪರಿಚಾರಿಕೆ ನನಗೆ ನೂತನರೂಪಿಣಿಯಾಗಿ ತೋರುತ್ತಿದ್ದಾಳೆ. ಇಂಥವಳು ನಿನ್ನ ಕೆಲಸಗಾರ್ತಿಯಾಗಿರುವುದು ಸರಿಯಲ್ಲ. ಇವಳು ನನ್ನನ್ನೂ ನನ್ನದೆಲ್ಲವನ್ನೂ ಆಳಲಿ. ಹೇರಳ ಆನೆ, ಕುದುರೆ, ತೇರುಗಳನ್ನುಳ್ಳ; ಮಹಾಧನವುಳ್ಳ, ಸಮೃದ್ಧ ಪಾನ-ಭೋಜನ ವಿಪುಲತೆಯುಳ್ಳ, ಮನೋಹರ ಚಿನ್ನದ ಚಿತ್ರಗಳಿಂದ ಭೂಷಿತವಾದ ನನ್ನ ದೊಡ್ಡ ಅರಮನೆಯನ್ನು ಇವಳು ಬೆಳಗಲಿ.”
ಕೀಚಕನು ಸುದೇಷ್ಣೆಯೊಡನೆ ಆಲೋಚಿಸಿದ ನಂತರ ರಾಜಪುತ್ರಿ ದ್ರೌಪದಿಯ ಬಳಿಸಾರಿ ವನದಲ್ಲಿ ಸಿಂಹದ ಕನ್ಯೆಯನ್ನು ನರಿಯು ಪುಸಲಾಯಿಸುವಂತೆ ಪುಸಲಾಯಿಸುತ್ತಾ ಹೇಳಿದನು: “ಭಾಮಿನಿ! ನಿನ್ನ ಈ ರೂಪ ಮತ್ತು ಈ ಯೌವನ ಇಂದು ಕೇವಲ ನಿರರ್ಥಕವಾಗಿವೆ. ಧರಿಸದೇ ಇರುವ ಸುಂದರವಾದ ಮಾಲೆಯಂತೆ ಶೋಭನಾ! ನೀನು ಶೋಭಿಸುತ್ತಿದ್ದೀಯೆ. ನನ್ನ ಮೊದಲಿನ ಪತ್ನಿಯರನ್ನು ತೊರೆದು ಅವರನ್ನು ನಿನ್ನ ದಾಸ್ಯದಲ್ಲಿರುಸುತ್ತೇನೆ. ನಾನೂ ಕೂಡ ನಿನ್ನ ದಾಸನಾಗಿದ್ದು ಯಾವಾಗಲೂ ನಿನ್ನ ವಶನಾಗಿರುತ್ತೇನೆ.”
ದ್ರೌಪದಿಯು ಹೇಳಿದಳು: “ಸೂತಪುತ್ರ! ಕೀಳುಜಾತಿಯ, ಜುಗುಪ್ಸೆಯುಂಟುಮಾಡುವ ಮುಡಿಮಾಡುವ ಸೈರಂಧ್ರಿ, ಅಪ್ರಾರ್ಥನೀಯ ನನ್ನನ್ನು ನೀನು ಬಯಸುತ್ತಿದ್ದೀಯೆ! ನಾನು ಪರ ಪತ್ನಿ. ನಿನಗೆ ಮಂಗಳವಾಗಲಿ! ಇದು ನಿನಗೆ ಯುಕ್ತವಲ್ಲ. ಮನುಷ್ಯರಿಗೆ ಅವರ ಪತ್ನಿಯರೇ ಪ್ರಿಯರು ಎನ್ನುವ ಧರ್ಮದ ಕುರಿತು ಚಿಂತಿಸು. ನಿನ್ನ ಬುದ್ಧಿಯು ಪರಸತಿಯರಲ್ಲಿ ಎಂದೂ ತೊಡಗದಿರಲಿ. ಮಾಡಬಾರದ ಕೆಲಸದಿಂದ ದೂರವಿರುವುದೇ ಸತ್ಪುರುಷರ ವ್ರತ. ಅನುಚಿತ ಕಾಮಿಯೂ, ಪಾಪಾತ್ಮನೂ, ಮೋಹಮಗ್ನನೂ ಆದವನು ಘೋರ ಅಪಕೀರ್ತಿಯನ್ನು ಪಡೆಯುತ್ತಾನೆ ಮತ್ತು ಮಹಾಭಯಕ್ಕೆ ಗುರಿಯಾಗುತ್ತಾನೆ. ಹಿಗ್ಗಬೇಡ! ಅಭಿಮಾನಿ ವೀರರಿಂದ ರಕ್ಷಿತಳಾದ ದುರ್ಲಭಳಾದ ನನ್ನನ್ನು ಬಯಸಿ ನೀನು ಇಂದು ಜೀವವನ್ನು ತ್ಯಜಿಸಬೇಡ. ನಾನು ನಿನಗೆ ದೊರಕುವವಳಲ್ಲ. ಗಂಧರ್ವರು ನನ್ನ ಗಂಡಂದಿರು. ಕುಪಿತರಾದ ಅವರು ನಿನ್ನನ್ನು ಕೊಲ್ಲುತ್ತಾರೆ. ಸಾಕು. ಸುಮ್ಮನೆ ನಾಶಹೊಂದಬೇಡ. ಮಾನವರಿಗೆ ಅಸಾಧ್ಯವಾದ ಮಾರ್ಗದಲ್ಲಿ ಹೋಗಬಯಸುತ್ತಿರುವೆ. ಮಂದಾತ್ಮನೂ ನಿರ್ಬಲನೂ ಆದ ಬಾಲಕನು ಒಂದು ದಡದಿಂದ ಮತ್ತೊಂದು ದಡಕ್ಕೆ ದಾಟಿಹೋಗಲು ಬಯಸುವಂತೆ ನೀನೂ ಬಯಸುತ್ತಿದ್ದೀಯೆ. ನೆಲದೊಳಗನ್ನು ಹೊಕ್ಕರೂ, ಆಕಾಶಕ್ಕೆ ಹಾರಿದರೂ, ಸಮುದ್ರದ ಆಚೆ ದಡಕ್ಕೆ ಓಡಿದರೂ ಅವರಿಂದ ನೀನು ತಪ್ಪಿಸಿಕೊಳ್ಳಲಾರೆ. ನನ್ನ ಪತಿಗಳು ಶತ್ರುಗಳನ್ನು ನಾಶಪಡಿಸುವ ದೇವಸುತರು. ಕೀಚಕ! ರೋಗಿಯೋರ್ವನು ಕಾಳರಾತ್ರಿಯನ್ನು ಹೇಗೋ ಹಾಗೆ ನೀನು ನನ್ನನ್ನು ಇಂದು ಏಕೆ ಒತ್ತಾಯಿಸಿ ಬಯಸುತ್ತಿರುವೆ? ತಾಯಿಯ ತೊಡೆಯಮೇಲೆ ಮಲಗಿದ್ದ ಮಗುವು ಚಂದ್ರನನ್ನು ಹಿಡಿಯಬಯಸುವಂತೆ ನನ್ನನ್ನೇಕೆ ಬಯಸುತ್ತಿರುವೆ?”
ದ್ರೌಪದಿಯು ಸುರಾಪಾತ್ರೆಯನ್ನು ಹಿಡಿದು ಕೀಚಕನ ಮನೆಗೆ ಹೋದುದು
ರಾಜಪುತ್ರಿ ದ್ರೌಪದಿಯಿಂದ ಈ ರೀತಿಯ ಉತ್ತರವನ್ನು ಪಡೆದ ಕೀಚಕನು ಮಿತಿಯಿಲ್ಲದ ಘೋರ ಕಾಮದಿಂದ ತುಂಬಿದವನಾಗಿ ಸುದೇಷ್ಣೆಗೆ ಹೇಳಿದನು: “ಕೈಕೇಯೀ! ಸುದೇಷ್ಣೇ! ನನ್ನ ಪ್ರಾಣವು ಹೋಗಬಾರದು ಎನ್ನುವುದಾದರೆ ನಾನು ಸೈರಂಧ್ರಿಯನ್ನು ಸೇರುವಂತೆ ಮಾಡು. ಅವಳು ನನ್ನನ್ನು ಬಯಸುವಂತೆ ಮಾಡು.”
ಅವನ ಆ ಅತಿಯಾದ ರಗಳೆಯ ಮಾತುಗಳನ್ನು ಕೇಳಿ, ಮನಸ್ವಿನೀ ವಿರಾಟಮಹಿಷಿ ದೇವಿಯು ಅವನ ಮೇಲೆ ಕೃಪೆದೋರಿದಳು. ತನ್ನ ಹಿತವನ್ನೂ, ಅವನ ಉದ್ದೇಶವನ್ನೂ ಮತ್ತು ಕೃಷ್ಣೆಯ ಉದ್ವೇಗವನ್ನೂ ಆಲೋಚಿಸಿ ಸುದೇಷ್ಣೆಯು ಸೂತನಿಗೆ ಹೇಳಿದಳು: “ಹಬ್ಬದ ದಿನದಂದು ನೀನು ಮದ್ಯವನ್ನೂ ಊಟವನ್ನೂ ಸಿದ್ಧಗೊಳಿಸು. ಆಗ ಮದ್ಯವನ್ನು ತರಲು ಅವಳನ್ನು ನಿನ್ನ ಬಳಿ ಕಳುಹಿಸುತ್ತೇನೆ. ಅಲ್ಲಿಗೆ ಕಳುಹಲಾಗುವ ಅವಳನ್ನು ಏಕಾಂತದಲ್ಲಿ ಯಾವ ಅಡತಡೆಯೂ ಇಲ್ಲದೇ ಮನಬಂದಂತೆ ಪ್ರಲೋಭನೆಗೊಳಿಸು. ಸಾಂತ್ವನಗೊಂಡು ಅವಳು ನಿನಗೆ ಒಲಿಯಬಹುದು.”
ಅಕ್ಕನ ಮಾತಿನಂತೆ ಕೀಚಕನಾದರೋ ಮನೆಗೆ ತೆರಳಿ ಚೆನ್ನಾಗಿ ಸೋಸಿದ ರಾಜಯೋಗ್ಯ ಮದ್ಯವನ್ನು ತರಿಸಿದನು. ಆಡುಕುರಿಗಳ ಮತ್ತು ಬಗೆಬಗೆಯ ಪ್ರಾಣಿಗಳ ಮಾಂಸದ ಅಡುಗೆಯನ್ನು ಅನ್ನಪಾನಗಳನ್ನು ತಜ್ಞರಿಂದ ಚೆನ್ನಾಗಿ ಅಡುಗೆಮಾಡಿಸಿದನು. ಅದಾದ ನಂತರ ಕೀಚಕನು ಕೇಳಿಕೊಂಡಿದ್ದಂತೆ ದೇವಿ ಸುದೇಷ್ಣೆಯು ಸೈರಂಧ್ರಿಯನ್ನು ಕೀಚಕನ ಮನೆಗೆ ಕಳುಹಿಸಿದಳು.
ಸುದೇಷ್ಣೆಯು ಹೇಳಿದಳು: “ಏಳು ಸೈರಂಧ್ರಿ! ಕೀಚಕನ ಮನೆಗೆ ಹೋಗು. ಪಾನೀಯವನ್ನು ತೆಗೆದುಕೊಂಡು ಬಾ. ಬಾಯಾರಿಕೆಯು ನನ್ನನ್ನು ಕಾಡುತ್ತಿದೆ.”
ದ್ರೌಪದಿಯು ಹೇಳಿದಳು: “ರಾಜಪುತ್ರಿ! ನಾನು ಅವನ ಮನೆಗೆ ಹೋಗಲಾರೆ. ಅವನು ಎಂತಹ ನಿರ್ಲಜ್ಜನೆಂದು ನಿನಗೇ ಗೊತ್ತು. ನಿನ್ನ ಮನೆಯಲ್ಲಿ ಕಾಮಚಾರಣಿಯೂ ಪತಿಗಳಿಗೆ ವ್ಯಭಿಚಾರಿಣಿಯೂ ಆಗುವುದಿಲ್ಲ. ಹಿಂದೆ ನಾನು ನಿನ್ನ ಮನೆಯನ್ನು ಪ್ರವೇಶಿಸುವಾಗ ಮಾಡಿಕೊಂಡ ಒಪ್ಪಂದವು ನಿನಗೆ ತಿಳಿದೇ ಇದೆ. ಮೂಢ ಕೀಚಕನಾದರೋ ಮದನದರ್ಪಿತ. ಅವನು ನನ್ನನ್ನು ಅಪಮಾನಗೊಳಿಸುತ್ತಾನೆ. ನಾನು ಅಲ್ಲಿಗೆ ಹೋದುವುದಿಲ್ಲ. ನಿನಗೆ ಬಹಳ ಮಂದಿ ದಾಸಿಯರಿದ್ದಾರೆ. ಬೇರೆ ಯಾರನ್ನಾದರೂ ಕಳುಹಿಸು. ನಿನಗೆ ಒಳಿತಾಗಲಿ! ಅವನು ನನ್ನನ್ನು ಅಪಮಾನಗೊಳಿಸುತ್ತಾನೆ.”
ಸುದೇಷ್ಣೆಯು ಹೇಳಿದಳು: “ಇಲ್ಲಿಂದ ನಾನು ಕಳುಹಿಸುತ್ತಿರುವ ನಿನ್ನನ್ನು ಅವನು ಹಿಂಸಿಸುವುದೇ ಇಲ್ಲ.”
ಇದನ್ನು ಹೇಳಿ ಅವಳಿಗೆ ಮುಚ್ಚಳವುಳ್ಳ ಚಿನ್ನದ ಪಾನಪಾತ್ರೆಯನ್ನು ಕೊಟ್ಟಳು. ಶಂಕಿತಳಾದ ಅವಳು ಅಳುತ್ತಾ ದೈವದ ಶರಣು ಹೊಕ್ಕು ಮದ್ಯವನ್ನು ತರುವುದಕ್ಕಾಗಿ ಕೀಚಕನ ಮನೆಗೆ ಹೊರಟಳು.
ದ್ರೌಪದಿಯು ಹೇಳಿದಳು: “ಪಾಂಡವರನ್ನು ಹೊರತು ಇತರ ಯಾರನ್ನೂ ನಾನು ಅರಿತವಳಲ್ಲ ಎನ್ನುವುದು ಸತ್ಯವಾಗಿದ್ದರೆ ಅಲ್ಲಿಗೆ ಹೋಗುವ ನನ್ನನ್ನು ಕೀಚಕನು ವಶಪಡೆಸಿಕೊಳ್ಳದಿರಲಿ.”
ಆಗ ಆ ಅಬಲೆಯು ಒಂದುಕ್ಷಣ ಸೂರ್ಯನನ್ನು ಧ್ಯಾನಿಸಿದಳು. ತಕ್ಷಣವೇ ಸೂರ್ಯನು ಆ ತನುಮಧ್ಯಳ ಕುರಿತು ಎಲ್ಲವನ್ನೂ ತಿಳಿದುಕೊಂಡನು. ಆಗ ಅವನು ಅವಳನ್ನು ಅಗೋಚರವಾಗಿ ರಕ್ಷಿಸುವಂತೆ ಒಬ್ಬ ರಾಕ್ಷಸನಿಗೆ ಆಜ್ಞಾಪಿಸಿದನು. ಆ ದೋಷರಹಿತೆಯನ್ನು ಅವನು ಎಲ್ಲ ಸಂದರ್ಭಗಳಲ್ಲಿ ಎಡೆಬಿಡದೆ ನೋಡಿಕೊಳ್ಳುತ್ತಿದ್ದನು. ಹೆದರಿದ ಹರಿಣಿಯಂತೆ ಸಮೀಪಕ್ಕೆ ಬಂದ ಕೃಷ್ಣೆಯನ್ನು ಕಂಡ ಆ ಸೂತನು ಸಮುದ್ರದ ದಡವನ್ನು ಸೇರಬಯಸುವವನಿಗೆ ನಾವೆ ಸಿಕ್ಕಿ ಸಂತೋಷಗೊಳ್ಳುವಂತೆ ಮೇಲೆದ್ದನು.
ಕೀಚಕನಿಂದ ದ್ರೌಪದಿಯು ಕಷ್ಟಕ್ಕೊಳಗಾದುದು
ಕೀಚಕನು ಹೇಳಿದನು: “ಚೆಲುಗೂದಲಿನವಳೇ! ನಿನಗೆ ಸ್ವಾಗತ. ಇರುಳು ನನಗೆ ಸುಪ್ರಭಾತವನ್ನು ತಂದಿದೆ. ನನ್ನ ಒಡತಿಯಂತೆ ನೀನು ಬಂದಿರುವೆ. ನನ್ನನ್ನು ಸಂತೋಷಗೊಳಿಸು. ಚಿನ್ನದ ಸರಗಳನ್ನೂ, ಬಳೆಗಳನ್ನು, ಸುವರ್ಣಕುಂಡಲಗಳನ್ನೂ, ರೇಷ್ಮೆ ವಸ್ತ್ರಗಳನ್ನೂ, ಜಿಂಕೆಯ ಚರ್ಮಗಳನ್ನೂ ತರಿಸುತ್ತೇನೆ. ನಿನಗಾಗಿ ನನ್ನ ಹಾಸಿಗೆ ಶುಭ್ರವಾಗಿ ಅಣಿಯಾಗಿದೆ. ಅಲ್ಲಿಗೆ ಬಾ. ನನ್ನೊಡನೆ ಮಾಧವೀ ಮಧುವನ್ನು ಕುಡಿ.”
ದ್ರೌಪದಿಯು ಹೇಳಿದಳು: “ರಾಜಪುತ್ರಿಯು ನನ್ನನ್ನು ನಿನ್ನ ಬಳಿ ಸುರೆಯನ್ನು ತರುವುದಕ್ಕಾಗಿ ಕಳುಹಿಸಿದ್ದಾಳೆ. ‘ನನಗೆ ಪಾನೀಯವನ್ನು ಬೇಗ ತಾ. ಬಾಯಾರಿಕೆಯಾಗಿದೆ!’ ಎಂದು ಹೇಳಿ ಕಳುಹಿಸಿದ್ದಾಳೆ.”
ಕೀಚಕನು ಹೇಳಿದನು: “ರಾಜಪುತ್ರಿಗೆ ಮದ್ಯವನ್ನು ಬೇರೆಯವರು ಒಯ್ಯುತ್ತಾರೆ.”
ಹೀಗೆ ಹೇಳಿ ಸೂತಪುತ್ರನು ಅವಳ ಬಲಗೈಯನ್ನು ಹಿಡಿದುಕೊಂಡನು. ಹಿಡಿತಕ್ಕೆ ಸಿಕ್ಕಿದ ಅವಳು ನಡುಗುತ್ತಾ ಕೀಚಕನನ್ನು ನೆಲಕ್ಕೆ ಕೆಡವಿ ರಾಜ ಯುಧಿಷ್ಠಿರನಿದ್ದ ಸಭೆಗೆ ರಕ್ಷಣೆಗಾಗಿ ಓಡಿದಳು. ಓಡುತ್ತಿದ್ದ ಅವಳ ಕೇಶವನ್ನು ಕೀಚಕನು ಹಿಡಿದುಕೊಂಡು ರಾಜನು ನೋಡುತ್ತಿದ್ದಂತೆಯೇ ಅವಳನ್ನು ಬೀಳಿಸಿ ಕಾಲಿನಿಂದ ಒದೆದನು. ಆಗ ಸೂರ್ಯನಿಂದ ನಿಯೋಜಿತನಾಗಿದ್ದ ರಾಕ್ಷಸನು ಭಿರುಗಾಳಿಯ ವೇಗದಿಂದ ಕೀಚಕನನ್ನು ತಳ್ಳಿದನು. ರಾಕ್ಷಸನ ಶಕ್ತಿಯುತ ಹೊಡೆತಕ್ಕೆ ಸಿಕ್ಕಿದ ಕೀಚಕನು ತಿರುಗುತ್ತಾ ಬೇರು ಕಡಿದ ಮರದಂತೆ ಪ್ರಜ್ಞೆತಪ್ಪಿ ನೆಲದ ಮೇಲೆ ಬಿದ್ದನು. ಅಲ್ಲಿ ಕುಳಿತಿದ್ದ ಭೀಮಸೇನ-ಯುಧಿಷ್ಠಿರರಿಬ್ಬರೂ ಕೀಚಕನು ಕೃಷ್ಣೆಯನ್ನು ಕಾಲಿನಿಂದ ಒದೆದುದನ್ನು ನೋಡಿ ಕುಪಿತರಾದರು. ಆ ಮಹಾಮನ ಭೀಮನು ಅಲ್ಲಿಯೇ ದುರಾತ್ಮ ಕೀಚಕನನ್ನು ಕೊಲ್ಲ ಬಯಸಿ ರೋಷದಿಂದ ಹಲ್ಲು ಕಡಿದನು. ಆಗ ಧರ್ಮರಾಜನು ತಮ್ಮ ಕುರಿತು ತಿಳಿದುಬಿಡುತ್ತದೆಯೋ ಎನ್ನುವ ಭಯದಿಂದ ಅವನ ಅಂಗುಷ್ಠದಿಂದ ಭೀಮನ ಅಂಗುಷ್ಠವನ್ನು ಅದುಮಿ ತಡೆದನು.
ಸುಂದರಿ ದ್ರೌಪದಿಯು ಅಳುತ್ತಾ, ದೀನಚೇತಸರಾದ ತನ್ನ ಆ ಪತಿಗಳನ್ನು ನೋಡುತ್ತಾ, ಮಾರುವೇಷವನ್ನೂ ಧರ್ಮಸಂಹಿತ ಪ್ರತಿಜ್ಞೆಯನ್ನೂ ಕಾಪಾಡಿಕೊಳ್ಳುತ್ತಾ, ಸಭಾದ್ವಾರವನ್ನು ಸೇರಿ ರೌದ್ರಾಕಾರದ ಕಣ್ಣುಗಳಿಂದ ಮತ್ಸ್ಯನಿಗೆ ಹೇಳಿದಳು: “ಭೂಮಿಯನ್ನು ಕಾಲಿನಿಂದ ಮೆಟ್ಟಿ ಯಾರ ವೈರಿಯು ನಿದ್ರಿಸಲಾರನೋ ಅವರ ಭಾರ್ಯೆಯಾದ ಮಾನಿನಿಯಾದ ನನ್ನನ್ನು ಸೂತಪುತ್ರನು ಒದೆದನಲ್ಲ! ದಾನಿಗಳೂ, ಯಾಚಿಸದವರೂ, ಬ್ರಾಹ್ಮಣಪೂಜಕರೂ, ಸತ್ಯವಾದಿಗಳೂ ಆದವರ ಭಾರ್ಯೆಯಾದ ನನ್ನನ್ನು ಸೂತಪುತ್ರನು ಕಾಲಿನಿಂದ ಒದೆದನಲ್ಲ! ಯಾರ ದುಂದುಭಿಯ ನಿರ್ಘೋಷವೂ, ಬಿಲ್ಲಿನ ಹೆದೆಯ ಘೋಷವೂ ಸದಾ ಕೇಳಿಬರುತ್ತದೆಯೋ ಅವರ ಭಾರ್ಯೆಯಾದ ನನ್ನನ್ನು ಸೂತಪುತ್ರನು ಕಾಲಿನಿಂದ ಒದೆದನಲ್ಲ! ತೇಜಸ್ವಿಗಳೂ ಉದಾರಿಗಳೂ, ಬಲಶಾಲಿಗಳೂ, ಅಭಿಮಾನಿಗಳೂ ಆದವರ ಭಾರ್ಯೆಯೂ ಮಾನಿನಿಯೂ ಆದ ನನ್ನನ್ನು ಸೂತಪುತ್ರನು ಕಾಲಿನಿಂದ ಒದೆದನಲ್ಲ! ಯಾರು ಈ ಸಮಸ್ತ ಲೋಕವನ್ನೇ ನಾಶಮಾಡಬಲ್ಲರೋ, ಧರ್ಮಪಾಶಬದ್ಧರೋ, ಅವರ ಭಾರ್ಯೆಯೂ ಮಾನಿನಿಯೂ ಆದ ನನ್ನನ್ನು ಸೂತ ಪುತ್ರನು ಕಾಲಿನಿಂದ ಒದೆದನಲ್ಲ! ಮೊರೆಹೊಕ್ಕ ಶರಣಾರ್ಥಿಗಳಿಗೆ ಆಶ್ರಯವಾಗುವ, ಲೋಕದಲ್ಲಿ ಗುಪ್ತರಾಗಿ ಸಂಚರಿಸುವ ಆ ಮಹಾರಥರು ಇಂದು ಎಲ್ಲಿ? ಪ್ರಿಯಪತ್ನಿಯನ್ನು ಸೂತಪುತ್ರನು ಒದೆಯುವುದನ್ನು ಬಲಶಾಲಿಗಳೂ, ಮಹಾತೇಜಸ್ವಿಗಳು ಆದ ಅವರು ನಪುಂಸಕರಂತೆ ಹೇಗೆ ತಾನೆ ಸಹಿಸಿಕೊಳ್ಳುತ್ತಾರೆ? ದುರಾತ್ಮನಿಂದ ಒದೆಯಿಸಿಕೊಳ್ಳುತ್ತಿರುವ ಭಾರ್ಯೆಯ ಬಳಿ ಧಾವಿಸದಿರುವ ಅವರ ಕೋಪ, ಪರಾಕ್ರಮ, ತೇಜಸ್ಸು ಎಲ್ಲಿ ಹೋಯಿತು? ತಪ್ಪಿಲ್ಲದೇ ಒದೆಯಿಸಿಕೊಳ್ಳುತ್ತಿರುವ ನನ್ನನ್ನು ನೋಡಿಯೂ ಈ ಧರ್ಮದೂಷಣವನ್ನು ಸಹಿಸಿಕೊಂಡಿರುವ ವಿರಾಟನ ವಿಷಯದಲ್ಲಿ ನಾನೇನು ತಾನೇ ಮಾಡಬಲ್ಲೆ? ಕೀಚಕನ ವಿಷಯದಲ್ಲಿ ನೀನು ರಾಜನಂತೆ ಸ್ವಲ್ಪವೂ ವರ್ತಿಸುತ್ತಿಲ್ಲ. ದಸ್ಯುಗಳದಂತಿರುವ ನಿನ್ನ ಈ ಧರ್ಮವು ಸಭೆಯಲ್ಲಿ ಶೋಭಿಸುವುದಿಲ್ಲ. ಕೀಚಕನು ಸ್ವಧರ್ಮವನ್ನು ಅನುಸರಿಸುತ್ತಿಲ್ಲ. ಮತ್ಸ್ಯರಾಜನೂ ಯಾವಾಗಲೂ ಸ್ವಧರ್ಮವನ್ನು ಪಾಲಿಸಲಿಲ್ಲ. ಈತನನ್ನು ಸೇವಿಸುತ್ತಿರುವ ಸಭಾಸದರೂ ಧರ್ಮಜ್ಞರಲ್ಲ. ವಿರಾಟ ರಾಜ! ಜನರ ಸಭೆಯಲ್ಲಿ ನಿನ್ನನ್ನು ನಿಂದಿಸುವುದಿಲ್ಲ. ನಿನ್ನ ಆಶ್ರಯದಲ್ಲಿದ್ದ ನಾನು ಇವನ ಹಿಂಸೆಗೊಳಗಾಗುವುದು ಯುಕ್ತವಲ್ಲ. ಕೀಚಕನ ಮಿತಿಮೀರಿದ ನಡತೆಯನ್ನು ಸಭಾಸದರೂ ನೋಡಲಿ.”
ವಿರಾಟನು ಹೇಳಿದನು: “ಪರೋಕ್ಷವಾಗಿ ನಡೆದ ನಿಮ್ಮಿಬ್ಬರ ಜಗಳವು ನನಗೆ ತಿಳಿಯದು. ವಸ್ತುಸ್ಥಿತಿಯನ್ನು ಸರಿಯಾಗಿ ತಿಳಿಯದೇ ನಾನು ಹೇಗೆ ತಾನೇ ತೀರ್ಮಾನ ನೀಡುವುದು ಉಚಿತ?”
ಬಳಿಕ ಸಭಾಸದರು ಎಲ್ಲವನ್ನೂ ತಿಳಿದು “ಸಾಧು! ಸಾಧು!” ಎಂದು ಕೃಷ್ಣೆಯನ್ನು ಹೊಗಳಿದರು ಮತ್ತು ಕೀಚಕನನ್ನು ಹಳಿದರು: “ಈ ಸುಂದರಿ ಸರ್ವಾಂಗೀ ಮತ್ತು ವಿಶಾಲ ಕಣ್ಣುಗಳುಳ್ಳವಳು ಯಾರ ಭಾರ್ಯೆಯೋ ಅವನಿಗೆ ಪರಮ ಲಾಭದೊರೆತು ಎಂದೂ ದುಃಖವನ್ನು ಪಡೆಯುವುದಿಲ್ಲ!”
ಹೀಗೆ ಸಭಾಸದರು ಕೃಷ್ಣೆಯನ್ನು ಹೊಗಳುತ್ತಿರುವುದನ್ನು ನೋಡಿದ ಯುಧಿಷ್ಠಿರನ ಹಣೆಯಲ್ಲಿ ಕೋಪದ ಬೆವರು ಇಳಿಯಿತು. ಆಗ ಆ ಕೌರವ್ಯನು ಪ್ರಿಯ ರಾಣಿ ರಾಜಪುತ್ರಿಗೆ ಹೇಳಿದನು: “ಸೈರಂಧ್ರಿ! ಇಲ್ಲಿ ನಿಲ್ಲಬೇಡ! ಸುದೇಷ್ಣೆಯ ಅರಮನೆಗೆ ಹೋಗು! ವೀರಪತ್ನಿಯರು ಪತಿಯನ್ನನುಸರಿಸಿ ಕಷ್ಟವನ್ನು ಸಹಿಸಿಕೊಳ್ಳುತ್ತಾರೆ. ಕಷ್ಟದಲ್ಲಿಯೂ ಅವನ ಒಳಿತನ್ನು ಬಯಸಿ ಪತಿಯ ಕಷ್ಟಗಳನ್ನು ಗೆಲ್ಲುತ್ತಾರೆ. ನಿನ್ನ ಆ ಸೂರ್ಯವರ್ಚಸ ಗಂಧರ್ವ ಗಂಡಂದಿರು ಇದು ಸಿಟ್ಟಿಗೇಳುವ ಸಮಯವಲ್ಲವೆಂದು ತಿಳಿದು ನಿನ್ನನ್ನು ರಕ್ಷಿಸಲು ಇಲ್ಲಿಗೆ ಬರಲಿಲ್ಲವೆಂದು ಭಾವಿಸುತ್ತೇನೆ. ನಿನಗೆ ಸಮಯ ಜ್ಞಾನವಿಲ್ಲ! ನಟಿಯಂತೆ ಇಲ್ಲಿ ಓಡಿಬಂದು ರಾಜಸಂಸದಿಯಲ್ಲಿ ಮತ್ಸ್ಯರಾಜನ ಪಗಡೆಯಾಟಕ್ಕೆ ವಿಘ್ನವನ್ನು ತಂದೊಡ್ಡುತ್ತಿದ್ದೀಯೆ! ಹೋಗು ಸೈರಂಧ್ರಿ! ಗಂಧರ್ವರು ನಿನಗೆ ಒಳ್ಳೆಯದನ್ನು ಮಾಡುತ್ತಾರೆ.”
ದ್ರೌಪದಿಯು ಹೇಳಿದಳು: “ಅತೀವ ಕೃಪಾಳುಗಳಾದ ಅವರಿಗೋಸ್ಕರವಾಗಿಯೇ ನಾನು ಧರ್ಮಚಾರಿಣಿಯಾಗಿದ್ದೇನೆ. ಅವರಲ್ಲಿ ಹಿರಿಯನಾದವನ ಜೂಜಿನಲ್ಲಿರುವ ಪರಮಾಸಕ್ತಿಯ ಕಾರಣದಿಂದಲೇ ಅವರು ಕಷ್ಟಕ್ಕೊಳಗಾಗಿದ್ದಾರೆ.”
ಹೀಗೆ ಹೇಳಿ ಆ ಸುಶ್ರೋಣಿಯು ಮುಡಿಬಿಚ್ಚಿಕೊಂಡು ಕೋಪದಿಂದ ಕೆಂಪಾದ ಕಣ್ಣುಗಳುಳ್ಳವಳಾಗಿ ಸುದೇಷ್ಣೆಯ ಅರಮನೆಗೆ ಓಡಿದಳು. ಒಂದೇಸಮನೆ ಅಳುತ್ತಿದ್ದ ಅವಳ ಮುಖವು ಆಕಾಶದಲ್ಲಿ ಮೋಡಗಳಿಂದ ಬಿಡುಗಡೆಹೊಂದಿದ ಚಂದ್ರಮಂಡಲದಂತೆ ಶೋಭಿಸುತ್ತಿತ್ತು.
ಸುದೇಷ್ಣೆಯು ಹೇಳಿದಳು: “ವರಾರೋಹೇ! ಯಾರು ನಿನ್ನನ್ನು ಹೊಡೆದರು? ಏತಕ್ಕೆ ಅಳುತ್ತಿರುವೆ ಶೋಭನೇ? ಯಾರಿಂದ ನಿನಗೆ ಈ ದುಃಖವು ಪ್ರಾಪ್ತವಾಯಿತು? ಯಾರಿಂದ ನಿನಗೆ ಈ ಅಪ್ರಿಯವಾದುದು ನಡೆಯಿತು?”
ದ್ರೌಪದಿಯು ಹೇಳಿದಳು: “ನಿನಗೆ ಸುರೆಯನ್ನು ತರಲು ಹೋದಾಗ ಅಲ್ಲಿ ನನ್ನನ್ನು ಕೀಚಕನು ಸಭೆಯಲ್ಲಿ ರಾಜನು ನೋಡುತ್ತಿದ್ದಂತೆಯೇ ಯಾರೂ ಇಲ್ಲದೆಡೆಯಲ್ಲಿ ಹೇಗೆ ಒದೆಯುತ್ತಾರೋ ಹಾಗೆ ಒದೆದನು.”
ಸುದೇಷ್ಣೆಯು ಹೇಳಿದಳು: “ಸುಂದರ ಕೂದಲಿನವಳೇ! ನೀನು ಇಷ್ಟಪಟ್ಟರೆ ಕೀಚಕನನ್ನು ಕೊಲ್ಲಿಸುತ್ತೇನೆ. ಕಾಮದಿಂದ ಹುಚ್ಚನಾದ ನಿನ್ನನ್ನು ಪೀಡಿಸುತ್ತಿದ್ದಾನೆ.”
ದ್ರೌಪದಿಯು ಹೇಳಿದಳು: “ಯಾರಿಗೆ ಅವನು ಅಪರಾದವನ್ನೆಸಗಿದ್ದಾನೆಯೋ ಅವರೇ ಅವನನ್ನು ವಧಿಸುತ್ತಾರೆ. ಇಂದೇ ಅವನು ಪರಲೋಕಕ್ಕೆ ಹೋಗುತ್ತಾನೆ ಎನ್ನುವುದು ಸ್ಪಷ್ಟವೆಂದು ಭಾವಿಸುತ್ತೇನೆ.”
ರಾತ್ರಿ ದ್ರೌಪದಿಯು ಭೀಮಸೇನನಲ್ಲಿಗೆ ಹೋಗಿ ಎಬ್ಬಿಸಿ ಮಾತನಾಡಿದುದು
ಸೂತಪುತ್ರನಿಂದ ಪೆಟ್ಟುತಿಂದ ಆ ದ್ರುಪದಾತ್ಮಜೆ, ಭಾಮಿನೀ ರಾಜಪುತ್ರಿ ಕೃಷ್ಣೆಯು ಕೋಪದಿಂದ ಉರಿಯುತ್ತಾ, ಆ ಸೇನಾಪತಿಯ ವಧೆಯನ್ನು ಬಯಸುತ್ತಾ ತನ್ನ ನಿವಾಸಕ್ಕೆ ಹೋದಳು. ಆ ತನುಮಧ್ಯಮೆ ಕೃಷ್ಣೆಯು ಯಥೋಚಿತವಾಗಿ ನೀರಿನಿಂದ ಸ್ನಾನಮಾಡಿ ಬಟ್ಟೆಯನ್ನು ತೊಳೆದು, ಅಳುತ್ತಲೇ - “ಈ ದುಃಖವನ್ನು ಹೋಗಲಾಡಿಸಲು ನಾನು ಏನು ಮಾಡಲಿ? ಎಲ್ಲಿಗೆ ಹೋಗಲಿ? ನನ್ನ ಈ ಕಾರ್ಯವನ್ನು ಹೇಗೆ ನೆರವೇರಿಸಲಿ?” ಎಂದು ಚಿಂತಿಸಿದಳು. ಹೀಗೆ ಚಿಂತಿಸುತ್ತಿರುವಾಗ ಅವಳಿಗೆ ಭೀಮನ ನೆನಪಾಯಿತು. “ಈಗ ಭೀಮನನ್ನು ಬಿಟ್ಟರೆ ಬೇರೆ ಯಾರೂ ನನ್ನ ಮನಸ್ಸಿಗೆ ಬೇಕಾಗಿರುವುದನ್ನು ಮಾಡುವವರಿಲ್ಲ.”
ಆಗ ರಾತ್ರಿಯಲ್ಲಿ ಬಹುದುಃಖದಿಂದ ಕೂಡಿದ ಮನಸ್ಸುಳ್ಳವಳಾದ ಆ ಮನಸ್ವಿನೀ ನಾಥವತೀ ಸತೀ ಕೃಷ್ಣೆಯು ತನ್ನ ಹಾಸಿಗೆಯನ್ನು ಬಿಟ್ಟು ಮೇಲೆದ್ದು ರಕ್ಷಣೆಯನ್ನರಸಿ ಓಡಿದಳು. ವನದಲ್ಲಿ ಹುಟ್ಟಿದ ಮೂರು ವರ್ಷ ವಯಸ್ಸಿನ ಸರ್ವಶ್ವೇತವರ್ಣದ ಹಸುವಿನಂತಿದ್ದ ಆ ಬೆಳ್ನಗೆಯ ಪಾಂಚಾಲಿಯು ಹೆಣ್ಣಾನೆಯು ಮಹಾಗಜವನ್ನು ಸಮೀಪಿಸುವಂತೆ ಅಡುಗೆಯ ಮನೆಯಲ್ಲಿದ್ದ ಭೀಮಸೇನನ ಹತ್ತಿರ ಬಂದಳು. ಗೋಮತೀ ತೀರದಲ್ಲಿ ಹೂಬಿಟ್ಟು ನಿಂತ ಮಹಾಶಾಲವನ್ನು ಲತೆಯು ಅಪ್ಪಿಕೊಳ್ಳುವಂತೆ ಅವನನ್ನು ಆ ಸುಂದರಿಯು ಅಪ್ಪಿಕೊಂಡು, ದುರ್ಗಮ ವನದಲ್ಲಿ ಹೆಣ್ಣುಸಿಂಹವೊಂದು ಮಲಗಿದ ಸಿಂಹವನ್ನು ಎಚ್ಚರಿಸುವಂತೆ ಎಚ್ಚರಿಸಿದಳು. ಆ ಅನಿಂದಿತೆ ಪಾಂಚಾಲಿಯು ಒಳ್ಳೆಯ ಮೂರ್ಛನೆಯುಳ್ಳ ವೀಣೆಯ ಗಾಂಧಾರಸ್ವರದಂತೆ ಸವಿಯಾದ ಧ್ವನಿಯಿಂದ ಭೀಮಸೇನನನ್ನು ಮಾತನಾಡಿಸಿದಳು. “ಏಳು! ಎದ್ದೇಳು! ಸತ್ತವನಂತೆ ಏಕೆ ಮಲಗಿರುವೆ ಭೀಮಸೇನ? ಬದುಕಿರುವವನ ಹೆಂಡತಿಯನ್ನು ಅಪಮಾನಿಸಿದ ಪಾಪಿಯು ಜೀವಿಸಿರಬಾರದು. ನನ್ನ ವೈರಿ ಆ ಪಾಪಿಷ್ಟ ಸೇನಾಪತಿಯು ಈ ಕೆಲಸವನ್ನು ಮಾಡಿಯೂ ಜೀವಿಸಿರುವಾಗ ನೀನು ಇಂದು ಹೇಗೆ ತಾನೇ ನಿದ್ದೆ ಮಾಡುತ್ತಿರುವೆ?”
ರಾಜಪುತ್ರಿಯಿಂದ ಎಬ್ಬಿಸಲ್ಪಟ್ಟ ಮೇಘಸಮಾನನಾದ ಅವನು ಸುಪ್ಪತ್ತಿಗೆಯ ಪರ್ಯಂಕದ ಮೇಲೆ ನಿದ್ದೆಯಿಂದ ಎದ್ದು ಕುಳಿತನು. ನಂತರ ಆ ಕೌರವ್ಯನು ರಾಜಪುತ್ರಿ ಪ್ರಿಯ ರಾಣಿಗೆ ಕೇಳಿದನು: “ಹೀಗೆ ಅವಸರದಲ್ಲಿ ನನ್ನ ಬಳಿ ಬರಲು ಕಾರಣವೇನು? ನಿನ್ನ ಬಣ್ಣವು ಸ್ವಾಭಾವಿಕವಾಗಿಲ್ಲ. ಕೃಶಳಾಗಿಯೂ ಬಿಳಿಚಿಕೊಂಡವಳಾಗಿಯೂ ಕಾಣುತ್ತಿರುವೆ. ಎಲ್ಲವನ್ನು ವಿವರವಾಗಿ ತಿಳಿಸಿ ಹೇಳು. ಸುಖಕರವಾಗಿರಲಿ ದುಃಖಕರವಾಗಿರಲಿ, ಪ್ರೀತಿಯಿಂದ ಮಾಡಿದ್ದಾಗಿರಲಿ ಅಥವಾ ದ್ವೇಷದಿಂದ ಮಾಡಿದ್ದಾಗಿರಲಿ ಯಥಾವತ್ತಾಗಿ ಎಲ್ಲವನ್ನೂ ನನಗೆ ಹೇಳು. ಕೇಳಿದ ನಂತರ ಮುಂದಿನದ್ದರ ಕುರಿತು ಯೋಚಿಸುತ್ತೇನೆ. ಕೃಷ್ಣೇ! ನಾನೇ ನಿನ್ನ ಎಲ್ಲ ಕಾರ್ಯಗಳಲ್ಲಿ ವಿಶ್ವಾಸದಲ್ಲಿರುವವನು. ನಾನಾದರೋ ಪುನಃ ಪುನಃ ನಿನ್ನನ್ನು ಆಪತ್ತುಗಳಿಂದ ಪಾರುಮಾಡುತ್ತೇನೆ. ನೀನು ಯಾವ ಕೆಲಸದ ಕುರಿತು ಹೇಳಬೇಕೆಂದಿರುವೆಯೋ ಅದನ್ನು ಬೇಗನೇ ಹೇಳಿ ಇತರರು ಯಾರೂ ಏಳುವುದರ ಮೊದಲೇ ನಿನ್ನ ಮಲಗುವ ಕೋಣೆಗೆ ಹೋಗು.”
ದ್ರೌಪದಿಯು ತನ್ನ ದುಃಖವನ್ನು ಭೀಮಸೇನನಲ್ಲಿ ಹೇಳಿಕೊಳ್ಳುವುದು
ದ್ರೌಪದಿಯು ಹೇಳಿದಳು: “ಯುಧಿಷ್ಠಿರನಿಗೆ ಪತ್ನಿಯಾಗಿರುವವಳಿಗೆ ಯಾವಾಗ ತಾನೇ ಶೋಕವೆನ್ನುವುದಿರುವುದಿಲ್ಲ? ನನ್ನ ದುಃಖದ ಕುರಿತು ಎಲ್ಲವನ್ನು ತಿಳಿದೂ ನನ್ನನ್ನು ಏಕೆ ಪ್ರಶ್ನಿಸುತ್ತಿರುವೆ? ಅಂದು ನನ್ನನ್ನು ಸೇವಕ ಪ್ರತಿಕಾಮಿಯು ದಾಸೀ ಎಂದು ಕರೆಯುತ್ತಾ ಸಭೆಯ ಮಧ್ಯೆ ಎಳೆದುಕೊಂಡು ಹೋದನಲ್ಲ ಅದು ನನ್ನನ್ನು ಸುಡುತ್ತಿದೆ. ಈ ದ್ರೌಪದಿಯಲ್ಲದೇ ಬೇರೆ ಯಾವ ರಾಜಪುತ್ರಿಯು ತಾನೇ ನನ್ನ ಹಾಗೆ ರೋಷವನ್ನು ಅನುಭವಿಸಿ ಜೀವಿಸಿದ್ದಾಳು? ಎರಡನೆಯ ಬಾರಿ, ವನವಾಸದಲ್ಲಿದ್ದಾಗ ದುರಾತ್ಮ ಸೈಂಧವನು ಮಾಡಿದ್ದುದನ್ನೂ ಸಹಿಸಿಕೊಂಡು ಯಾರುತಾನೇ ಇದ್ದಾಳು? ಮತ್ಸ್ಯರಾಜನ ಸಮಕ್ಷಮದಲ್ಲಿಯೇ, ಆ ದೂರ್ತನು ನೋಡುತ್ತಿದ್ದಂತೆಯೇ, ಕೀಚಕನ ಕಾಲಿನಿಂದ ಒದೆಸಿಕೊಂಡ ಯಾರುತಾನೇ ನನ್ನಹಾಗೆ ಜೀವಿಸಿದ್ದಾಳು? ಹೀಗೆ ಬಹುವಿಧದ ದುಃಖಗಳಿಂದ ಬಾಧಿತಳಾದ ನಾನು ನಿನಗೆ ಅರ್ಥವಾಗುತ್ತಿಲ್ಲ. ಕೌಂತೇಯ! ನಾನು ಬದುಕಿದ್ದು ಫಲವೇನು? ಈ ರಾಜ ವಿರಾಟನ ಸೇನಾನಿಯೂ ಭಾವಮೈದುನನೂ ಆದ ಕೀಚಕ ಎಂಬ ಹೆಸರಿನ ಪರಮ ದುರ್ಮತಿ ದುಷ್ಟನು ರಾಜಭವನದಲ್ಲಿ ಸೈರಂಧ್ರಿಯ ವೇಷದಲ್ಲಿ ವಾಸಿಸುತ್ತಿರುವ ನನ್ನನ್ನು ನಿತ್ಯವೂ ನನಗೆ ಹೆಂಡತಿಯಾಗು ಎಂದು ಕಾಡುತ್ತಿರುತ್ತಾನೆ. ವಧಾರ್ಹನಾದ ಅವನಿಂದ ಹೀಗೆ ಒತ್ತಾಯಕ್ಕೊಳಪಟ್ಟ ನನ್ನ ಹೃದಯವು ಬಹುಕಾಲದಿಂದ ಪಕ್ವವಾಗಿರುವ ಫಲದಂತೆ ಬಿರಿದುಹೋಗಿದೆ. ಮಹಾಜೂಜುಕೋರನಾದ ನಿನ್ನ ಅಣ್ಣನನ್ನು ನಿಂದಿಸು. ಅವನ ಕೆಲಸದಿಂದಲೇ ನಾನು ಈ ಕೊನೆಯಿಲ್ಲದ ದುಃಖವನ್ನು ಅನುಭವಿಸುತ್ತಿದ್ದೇನೆ. ಆ ಜೂಜಾಳಿಯ ಹೊರತು ಬೇರೆ ಯಾರು ತಾನೇ ತನ್ನನ್ನೂ, ರಾಜ್ಯವನ್ನೂ, ಸರ್ವಸ್ವವನ್ನೂ ತೊರೆದು ವನವಾಸಕ್ಕಾಗಿಯೇ ಜೂಜಾಡುತ್ತಾನೆ? ಸಾವಿರ ನಾಣ್ಯಗಳನ್ನೂ ಮತ್ತು ಇನ್ನೂ ಸಾರವತ್ತಾದ ಧನವನ್ನಿಟ್ಟು ಅನೇಕ ವರ್ಷಗಳ ವರೆಗೆ ಬೆಳಿಗ್ಗೆ-ಸಂಜೆ ಜೂಜಾಡುತ್ತಿದ್ದರೂ ಅವನ ಚಿನ್ನ, ಬೆಳ್ಳಿ, ವಸ್ತ್ರ, ವಾಹನ, ರಥ, ಮೇಕೆ ಹಿಂಡು, ಕುದುರೆ, ಮತ್ತು ಹೇಸರಗತ್ತೆಗಳ ಸಮೂಹಗಳು ಕರಗುತ್ತಿರಲಿಲ್ಲ. ಜೂಜಿನ ಹುಚ್ಚಿನಲ್ಲಿ ಸಂಪತ್ತನ್ನು ಕಳೆದುಕೊಂಡು ತಾನು ಮಾಡಿದ್ದುದರ ಕುರಿತು ಚಿಂತಿಸುತ್ತಾ ಈಗ ಮೂಢನಂತೆ ಸುಮ್ಮನೆ ಕುಳಿತಿದ್ದಾನೆ. ತಾನು ಹೊರಟಾಗ ಚಿನ್ನದ ಹಾರಗಳಿಂದ ಮತ್ತು ತಾವರೆಗಳಿಂದ ಅಲಂಕೃತವಾದ ಹತ್ತು ಸಾವಿರ ಆನೆಗಳಿಂದ ಹಿಂಬಾಲಿಸಲ್ಪಡುತ್ತಿದ್ದವನು ಇಂದು ಜೂಜಾಡಿಕೊಂಡು ಅದರಿಂದ ಜೀವಿಸುತ್ತಿದ್ದಾನೆ! ಇಂದ್ರಪ್ರಸ್ಥದಲ್ಲಿ ಮಹಾರಾಜ ಯುಧಿಷ್ಠಿರನನ್ನು ನೂರಾರು ಸಾವಿರಾರು ಅಮಿತತೇಜಸ ಜನರು ಪೂಜಿಸುತ್ತಿದ್ದರು. ಅವನ ಅಡುಗೆ ಮನೆಯಲ್ಲಿ ನಿತ್ಯವೂ ಸಹಸ್ರ ದಾಸಿಯರು ಕೈಯಲ್ಲಿ ಪಾತ್ರೆಗಳನ್ನು ಹಿಡಿದು ಹಗಲಿರುಳು ಅತಿಥಿಗಳಿಗೆ ಊಟ ಬಡಿಸುತ್ತಿದ್ದರು. ಸಹಸ್ರನಾಣ್ಯಗಳನ್ನು ದಾನಮಾಡುತ್ತಿದ್ದ ಶ್ರೇಷ್ಠ ದಾನಿಯು ಇಂದು ದ್ಯೂತದಿಂದಾದ ದೊಡ್ಡ ಅನರ್ಥಕ್ಕೆ ಸಿಲುಕಿಕೊಂಡಿದ್ದಾನೆ. ವಿಮಲ ಮಣಿಕುಂಡಲಗಳನ್ನು ಧರಿಸಿದ್ದ ಸ್ವರಸಂಪನ್ನರಾದ ಬಹುಮಂದಿ ಹೊಗಳು ಭಟರು ಅವನನ್ನು ಸಂಜೆ ಮತ್ತು ಮುಂಜಾನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಪಃಸ್ಸಂಪನ್ನರೂ ವೇದಸಂಪನ್ನರೂ ಎಲ್ಲ ಬಯಕೆಗಳ ಸಿದ್ಧಿಸಿದ್ಧರೂ ಆದ ಸಹಸ್ರ ಋಷಿಗಳು ನಿತ್ಯವೂ ಅವನ ಸಭಾಸದರಾಗಿರುತ್ತಿದ್ದರು. ಯುಧಿಷ್ಠಿರನು ರಾಷ್ಟ್ರದಲ್ಲಿದ್ದ ಎಲ್ಲ ಕುರುಡರನ್ನೂ, ವೃದ್ಧರನ್ನೂ, ಅನಾಥರನ್ನೂ ಮತ್ತು ದುರ್ಗತಿಕರನ್ನು ವಿಮನಸ್ಕನಾಗದೇ ಕರುಣೆಯಿಂದ ನಿತ್ಯವೂ ಪೋಷಿಸುತ್ತಿದ್ದನು. ಅದೇ ರಾಜ ಯುಧಿಷ್ಠಿರನು ಈಗ ದುರವಸ್ಥೆಗೀಡಾಗಿ ಮತ್ಸ್ಯರಾಜನ ಪರಿಚಾರಕನಾಗಿ ಅವನೊಂದಿಗೆ ಸಭೆಯಲ್ಲಿ ದ್ಯೂತವಾಡುತ್ತಾ ಕಂಕನೆಂದು ಕರೆಯಲ್ಪಡುತ್ತಿದ್ದಾನೆ. ಇಂದ್ರಪ್ರಸ್ಥದಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ರಾಜರೆಲ್ಲರೂ ಯಾರಿಗೆ ಕಪ್ಪವನ್ನು ಕೊಡುತ್ತಿದ್ದರೋ ಅವನೇ ಇಂದು ಇತರರ ಆಶ್ರಯವನ್ನು ಕೇಳಿಕೊಂಡಿದ್ದಾನೆ. ಪೃಥಿವೀಪಾಲರಾದ ದೊರೆಗಳು ಯಾರ ವಶವರ್ತಿಗಳಾಗಿದ್ದರೋ ಆ ರಾಜನೇ ಇಂದು ಅಸ್ವತಂತ್ರನಾಗಿ ಇತರರ ವಶದಲ್ಲಿದ್ದಾನೆ. ಸಮಸ್ತ ಪೃಥ್ವಿಯನ್ನು ಸೂರ್ಯನಂತೆ ತೇಜಸ್ಸಿನಿಂದ ಬೆಳಗಿದ ಆ ಯುಧಿಷ್ಠಿರನು ಇಂದು ವಿರಾಟರಾಜನ ಸಭಾಸದನಾಗಿದ್ದಾನೆ. ಸಭೆಯಲ್ಲಿ ಯಾರನ್ನು ರಾಜರು ಮತ್ತು ಋಷಿಗಳು ಪೂಜಿಸುತ್ತಿದ್ದರೋ ಆ ಪಾಂಡವನೇ ಈಗ ಇತರರನ್ನು ಪೂಜಿಸುತ್ತಿರುವುದನ್ನು ನೋಡು. ಜೀವಿತಾರ್ಥಕ್ಕಾಗಿ ಇತರರ ಆಶ್ರಯದಲ್ಲಿರುವ ಮಹಾಪ್ರಾಜ್ಞ ಧರ್ಮಾತ್ಮ ಯುಧಿಷ್ಠಿರನನ್ನು ನೋಡಿ ಯಾರಿಗೆ ತಾನೇ ದುಃಖವಾಗಲಾರದು? ಸಭೆಯಲ್ಲಿ ಯಾರನ್ನು ಇಡೀ ಭೂಮಿಯೇ ಪೂಜಿಸುತ್ತಿತ್ತೋ ಆ ಭಾರತನೇ ಇತರರನ್ನು ಉಪಾಸಿಸುತ್ತಿರುವುದನ್ನು ನೋಡು. ಈ ರೀತಿಯಲ್ಲಿಬಹುವಿಧದ ದುಃಖಗಳಿಂದ ಶೋಕಸಾಗರದ ಮಧ್ಯದಲ್ಲಿ ನಿಂತು ಅನಾಥಳಂತೆ ಪೀಡೆಪಡುತ್ತಿರುವುದು ನಿನಗೆ ಕಾಣುತ್ತಿಲ್ಲವೇ?
“ಭಾರತ! ನನ್ನ ಈ ಮಹಾದುಃಖವನ್ನು ನಿನಗೆ ಹೇಳುತ್ತಿದ್ದೇನೆಂದು ನನ್ನನ್ನು ಅಪೇಕ್ಷಿಸಬೇಡ. ದುಃಖದಿಂದ ಇದನ್ನು ಹೇಳುತ್ತಿದ್ದೇನೆ. ಕೈಕೇಯಿ ಸುದೇಷ್ಣೆಯು ನೋಡಿ ಆನಂದಿಸಲೆಂದು ನೀನು ಅರಮನೆಯಲ್ಲಿ ಹುಲಿ, ಕಾಡು ಕೋಣ ಮತ್ತು ಸಿಂಹಗಳೊಡನೆ ಕಾದಾಡುವಾಗ ನನ್ನ ಮನಸ್ಸು ಕುಗ್ಗುತ್ತದೆ. ಅದನ್ನು ನೋಡಿ ಮೇಲೆದ್ದ ಸುಂದರಿ ಕೈಕೇಯಿಯು ದುಃಖದಿಂದ ಹತಳಾಗಿರುವಂತೆ ತೋರುತ್ತಿದ್ದ ನನ್ನನ್ನು ನೋಡಿ ಆ ಸ್ತ್ರೀಯರಿಗೆ ಹೇಳುತ್ತಾಳೆ: “ಈ ಅಡುಗೆಯವನ ಮೇಲೆ ಇರುವ ಸ್ನೇಹದಿಂದಾಗಿ ಈ ಶುಚಿಸ್ಮಿತೆಯು ಮಹಾವೀರ್ಯರೊಂದಿಗೆ ಹೋರಾಡುತ್ತಿರುವ ಇವನ ಕುರಿತು ಶೋಚಿಸುತ್ತಿದ್ದಾಳೆ! ಸೈರಂಧ್ರಿಯು ಸುಂದರಿ ಮತ್ತು ಬಲ್ಲವನೂ ಅತಿ ಸುಂದರ. ಸ್ತ್ರೀಯರ ಮನಸ್ಸನ್ನು ತಿಳಿಯಲು ಅಸಾಧ್ಯ. ಆದರೂ ಇವರಿಬ್ಬರೂ ಅನುರೂಪರು ಎಂದು ನನ್ನ ಅಭಿಪ್ರಾಯ. ಇವನೊಂದಿಗಿನ ಪ್ರಿಯಸಹವಾಸದಿಂದ ಸೈರಂಧ್ರಿಯು ನಿತ್ಯವೂ ಇವನ ಮೇಲೆ ಕರುಣೆ ತೋರಿಸುತ್ತಾಳೆ. ಈ ರಾಜಕುಲದಲ್ಲಿ ಇವರಿಬ್ಬರೂ ಒಂದೇ ಸಮಯದಿಂದ ವಾಸಿಸುತ್ತಿದ್ದಾರೆ.” ಹೀಗಿನ ಮಾತುಗಳನ್ನಾಡಿ ಅವಳು ಯಾವಾಗಲೂ ನನ್ನನ್ನು ನೋಯಿಸುತ್ತಿರುತ್ತಾಳೆ. ನಾನು ಸಿಟ್ಟಾಗಿರುವುದನ್ನು ನೋಡಿ ನನ್ನನ್ನು ಮತ್ತು ನಿನ್ನನ್ನು ಶಂಕಿಸುತ್ತಾಳೆ. ಅವಳು ನನ್ನಲ್ಲಿ ಹೀಗೆ ಹೇಳುವಾಗ ನನಗೆ ಮಹಾ ದುಃಖವಾಗುತ್ತದೆ. ಯುಧಿಷ್ಠಿರನ ಶೋಕದಲ್ಲಿ ಮುಳುಗಿರುವ ನನಗೆ ಬದುಕುವ ಆಸೆಯಿಲ್ಲ. ದೇವಮಾನವರನ್ನೂ ಸರ್ಪರನ್ನೂ ಏಕರಥನಾಗಿ ಗೆದ್ದ ಯುವಕನು ಇಂದು ವಿರಾಟ ರಾಜನ ಕನ್ಯೆಯರಿಗೆ ನರ್ತಕನಾಗಿದ್ದಾನೆ. ಖಾಂಡವದಲ್ಲಿ ಜಾತವೇದಸನನ್ನು ತೃಪ್ತಿಗೊಳಿಸಿದ ಅಮೇಯಾತ್ಮ ಪಾರ್ಥನು ಇಂದು ಬಾವಿಯಲ್ಲಿ ಅಡಗಿಕೊಂಡ ಅಗ್ನಿಯಂತೆ ಅಂತಃಪುರವನ್ನು ಸೇರಿದ್ದಾನೆ. ಯಾವ ಪುರುಷರ್ಷಭನಿಂದ ಯಾವಾಗಲೂ ಶತ್ರುಗಳು ಭಯಪಡುತ್ತಿದ್ದರೋ ಆ ಧನಂಜಯನು ಇಂದು ಲೋಕನಿಂದ್ಯ ವೇಷದಲ್ಲಿದ್ದಾನೆ. ಯಾರ ಬಿಲ್ಲಿನ ಹೆದೆಯ ಘೋಷದಿಂದ ಶತ್ರುಗಳು ನಡುಗುತ್ತಿದ್ದರೋ ಅವನ ಗೀತಸ್ವನವನ್ನು ಸ್ತ್ರೀಯರು ಇಂದು ಸಂತೋಷದಿಂದ ಆಲಿಸುತ್ತಿದ್ದಾರೆ. ಯಾರ ತಲೆಯ ಮೇಲೆ ಸೂರ್ಯನಂತೆ ಬಿರುಗುತ್ತಿದ್ದ ಕಿರೀಟವು ಶೋಭಿಸುತ್ತಿತ್ತೋ ಆ ಧನಂಜಯನ ತಲೆಗೂದಲು ಇಂದು ಜಡೆಯಿಂದ ವಿಕೃತವಾಗಿದೆ. ಸಮಸ್ತ ದಿವ್ಯಾಸ್ತ್ರಗಳನ್ನುಳ್ಳ ಸರ್ವವಿದ್ಯೆಗಳಿಗೂ ಆಧಾರನಾಗಿರುವ ಮಹಾತ್ಮನು ಇಂದು ಕುಂಡಲಗಳನ್ನು ಧರಿಸಿದ್ದಾನೆ. ದಾಟಲಾಗದ ಮಹಾಸಾಗರದಂತಿರುವ ಇವನನ್ನು ಅಪ್ರತಿಮ ತೇಜಸರಾದ ಸಹಸ್ರಾರು ರಾಜರುಗಳಿಂದಲೂ ಸಮರದಲ್ಲಿ ಜಯಿಸಲಾಗುತ್ತಿರಲಿಲ್ಲ. ಆ ಯುವಕನೇ ಇಂದು ರಾಜ ವಿರಾಟನ ಕನ್ಯೆಯರ ನರ್ತಕನಾಗಿದ್ದಾನೆ. ವೇಷ ಮರೆಸಿಕೊಂಡು ಆ ಕನ್ಯೆಯರ ಪರಿಚಾರಕನಾಗಿದ್ದಾನೆ. ಭೀಮ! ಇವನ ರಥಘೋಷದಿಂದ ಪರ್ವತ ವನಗಳೊಂದಿಗೆ, ಸ್ಥಾವರಜಂಗಮಗಳೊಂದಿಗೆ ಇಡೀ ಬೂಮಿಯು ಕಂಪಿಸುತ್ತಿತ್ತು. ಯಾರ ಹುಟ್ಟಿನಿಂದ ಕುಂತಿಯ ಶೋಕವು ಅಳಿಯಿತೋ ಆ ಮಹಾಭಾಗ, ನಿನ್ನ ತಮ್ಮನ ಕುರಿತು ನನಗೆ ದುಃಖವಾಗುತ್ತದೆ. ಚಿನ್ನದ ಕುಂಡಲಗಳಿಂದ ಅಲಂಕೃತನಾಗಿ ಕೈಯಲ್ಲಿ ಚಿಪ್ಪಿನ ಬಳೆಗಳನ್ನು ತೊಟ್ಟು ಬರುವ ಅವನನ್ನು ನೋಡಿ ನನ್ನ ಮನಸ್ಸು ನೋಯುತ್ತದೆ. ಭಯಂಕರ ಬಿಲ್ಗಾರನಾದ ಅರ್ಜುನನು ತಲೆಗೂದಲನ್ನು ಜಡೆ ಹೆಣೆದುಕೊಂಡು ಕನ್ಯೆಯರಿಂದ ಸುತ್ತುವರೆದಿರುವುದನ್ನು ಕಂಡು ನನ್ನ ಮನಸ್ಸು ನೋಯುತ್ತದೆ. ಮತ್ಸ್ಯರಾಜ ವಿರಾಟನ ಸಮುಪಸ್ಥಿತಿಯಲ್ಲಿ ಹೆಣ್ಣಾನೆಗಳಿಂದ ಸುತ್ತುವರೆಯಲ್ಪಟ್ಟ ಮದ್ದಾನೆಯಂತೆ ಈ ಕನ್ಯೆಯರಿಂದ ಸುತ್ತುವರೆಯಲ್ಪಟ್ಟು ವಾದ್ಯಗಳಿಗೆ ನರ್ತಿಸುವ ಆ ದೇವರೂಪಿಯನ್ನು ನೋಡಿ ನನಗೆ ದಿಕ್ಕೇ ತೋಚದಂತಾಗುತ್ತದೆ. ಜೂಜಿನ ಹುಚ್ಚುಹಿಡಿದಿರುವ ಅಜಾತಶತ್ರು ಕೌರವ್ಯ ಯುಧಿಷ್ಠಿರನಿಗೂ ಮತ್ತು ಧನಂಜಯನಿಗೂ ಬಂದೊದಗಿರುವ ಕಷ್ಟಗಳನ್ನು ಖಂಡಿತವಾಗಿಯೂ ಆರ್ಯೆ ಕುಂತಿಗೆ ತಿಳಿದಿರಲಾರಳು. ಹಾಗೆಯೇ ಭಾರತ! ಯುದ್ಧದಲ್ಲಿ ನಾಯಕನಾದ ನಿಮ್ಮ ಕಿರಿಯವನಾದ ಸಹದೇವನು ಗೋಪಾಲನ ವೇಷದಲ್ಲಿ ಗೋವುಗಳ ಮಧ್ಯೆ ಇರುವುದನ್ನು ನೋಡಿ ನಾನು ಬಿಳಿಚಿಕೊಳ್ಳುತ್ತೇನೆ. ಸಹದೇವನ ಕುರಿತು ಮತ್ತೆ ಮತ್ತೆ ಚಿಂತಿಸುವ ನನಗೆ ಸಹದೇವನು ಯಾವ ಕೆಟ್ಟ ಕೆಲಸವನ್ನು ಮಾಡಿದನೆಂದು ಆ ಸತ್ಯವಿಕ್ರಮನಿಗೆ ಈ ರೀತಿಯ ದುಃಖವು ಪ್ರಾಪ್ತವಾಯಿತು ಎಂದು ನನಗೆ ತಿಳಿಯದಾಗಿದೆ. ಮತ್ಸ್ಯರಾಜನಿಂದ ಗೋವುಗಳ ಮೇಲ್ವಿಚಾರಣೆಗೆ ನೇಮಕಗೊಂಡಿರುವ ಗೂಳಿಯಂತಿರುವ ನಿನ್ನ ಪ್ರಿಯ ತಮ್ಮನನ್ನು ನೋಡಿ ನನಗೆ ನೋವಾಗುತ್ತದೆ. ಸ್ವಾಭಿಮಾನಿಯಾದ ಅವನು ಹೀಗೆ ಕೆಂಪು ಉಡುಗೆಯನ್ನುಟ್ಟು ಗೋಪಾಲ ಪ್ರಮುಖನಾಗಿ ವಿರಾಟನನ್ನು ಸಂತಸಪಡಿಸುತ್ತಿರುವುದನ್ನು ನೋಡಿ ನನಗೆ ಸಂತಾಪವಾಗುತ್ತದೆ. ವೀರ ಸಹದೇವನನನ್ನು ನಿತ್ಯವೂ ಆರ್ಯೆ ಕುಂತಿಯು ನನಗೆ ಈ ರೀತಿ ಹೇಳಿ ಪ್ರಶಂಸಿಸುತ್ತಿದ್ದಳು: “ಅವನು ಸತ್ಕುಲ ಸಂಪನ್ನ. ಒಳ್ಳೆಯ ವರ್ತನೆಯುಳ್ಳವನು. ಶೀಲವಂತ. ಲಜ್ಜಾಪ್ರವೃತ್ತಿಯುಳ್ಳವನು. ಸವಿಯಾಗಿ ಮಾತನಾಡುವವನು. ಧಾರ್ಮಿಕ. ನನಗೆ ಪ್ರಿಯನಾದವನು. ದ್ರೌಪದಿ! ಅವನನ್ನು ನೀನು ಇರುಳಿನಲ್ಲಿಯೂ ಎಚ್ಚರದಿಂದ ನೋಡಿಕೊಳ್ಳಬೇಕು.” ಗೋವುಗಳ ಆರೈಕೆಯಲ್ಲಿ ನಿರತನಾದ, ರಾತ್ರಿಯಲ್ಲಿ ಕರುವಿನ ಚರ್ಮದ ಮೇಲೆ ಮಲಗುವ ಆ ಯೋಧಶ್ರೇಷ್ಠ ಸಹದೇವನನ್ನು ನೋಡಿಯೂ ನಾನು ಬದುಕಬೇಕೆ? ರೂಪ, ಅಸ್ತ್ರ, ಬುದ್ಧಿ ಮೂರರಲ್ಲೂ ಸದಾ ಸಂಪನ್ನನಾಗಿರುವ ಆ ನಕುಲನು ವಿರಾಟನ ಅಶ್ವಪಾಲಕನಾಗಿದ್ದಾನೆ. ಕಾಲದ ವೈಪರೀತ್ಯವನ್ನು ನೋಡು. ಮಹಾರಾಜನು ನೋಡಲೆಂದು ಕುದುರೆಗಳನ್ನು ವೇಗವಾಗಿ ಓಡಿಸುವ ದಾಮಗ್ರಂಥಿಯನ್ನು ನೋಡಲು ಜನಸಮೂಹ ಕಿಕ್ಕಿರಿಯುತ್ತದೆ. ಶ್ರೀಮಂತನೂ, ತೇಜಸ್ವಿಯೂ ಉತ್ತಮನೂ ಆದ ಮತ್ಸ್ಯರಾಜ ವಿರಾಟನ ಎದಿರು ಅವನು ಕುದುರೆಗಳನ್ನು ಪ್ರದರ್ಶಿಸುವುದನ್ನು ನಾನು ನೋಡಿದ್ದೇನೆ. ಯುಧಿಷ್ಠಿರನಿಂದ ಹೀಗೆ ನೂರಾರು ದುಃಖಗಳಿಗೆ ಒಳಗಾಗಿರುವ ನಾನು ಸುಖಿಯೆಂದು ಹೇಗೆ ತಾನೆ ಭಾವಿಸುವೆ? ಇವುಗಳಿಗೂ ವಿಶೇಷವಾದ ಬೇರೆ ದುಃಖಗಳು ನನಗಿವೆ. ಅವುಗಳನ್ನೂ ಹೇಳುತ್ತೇನೆ. ಕೇಳು. ನೀನು ಬದುಕಿರುವಾಗಲೇ ವಿವಿಧ ದುಃಖಗಳು ನನ್ನ ಶರೀರವನ್ನು ಬತ್ತಿಸುತ್ತಿವೆ. ಇದಕ್ಕಿಂತಲೂ ಮಿಗಿಲಾದ ದುಃಖ ಯಾವುದಿದೆ?
“ಆ ಕೆಟ್ಟ ಜೂಜಾಳಿಯ ಕಾರಣದಿಂದ ನಾನು ಸೈರಂಧ್ರಿಯ ವೇಷವನ್ನು ಧರಿಸಿ ಅರಮನೆಯಲ್ಲಿ ಇದ್ದುಕೊಂಡು ಸುದೇಷ್ಣೆಯ ಪರಿಚಾರಿಕೆ ಮಾಡುತ್ತಿದ್ದೇನೆ. ರಾಜಪುತ್ರಿಯಾದ ನನ್ನ ಈ ಅತೀವ ಅಸುಖವನ್ನು ನೋಡು. ಆರ್ತಳಂತೆ ದುಃಖವೆಲ್ಲ ಮುಗಿಯುವ ಸಮಯವನ್ನು ಕಾಯುತ್ತಿದ್ದೇನೆ. ಮನುಷ್ಯರ ಸಂಪತ್ತು, ಸಾಧನೆಗಳು, ಜಯ-ಅಪಜಯಗಳು ಅನಿತ್ಯ ಎಂದು ತಿಳಿದು ಪತಿಗಳ ಪುನರೋದಯವನ್ನು ಕಾಯುತ್ತಿದ್ದೇನೆ. ಪುರುಷನ ಜಯಕ್ಕೆ ಯಾವುದು ಕಾರಣವೋ ಅದೇ ಪರಾಜಯಕ್ಕೂ ಕಾರಣವಾಗುವುದೆಂದು ಕಾಯುತ್ತಿದ್ದೇನೆ. ದಾನನೀಡುವವರು ಬೇಡುತ್ತಾರೆ. ಕೊಲ್ಲುವವರು ಇತರರಿಂದ ಕೊಲ್ಲಿಸಿಕೊಳ್ಳುತ್ತಾರೆ. ಬೀಳಿಸುವವರು ಇತರರಿಂದ ಬೀಳಿಸಿಕೊಳ್ಳುತ್ತಾರೆ ಎಂದು ನಾನು ಕೇಳಿದ್ದೇನೆ. ದೈವಕ್ಕೆ ಯಾವುದೂ ಅತಿ ಭಾರವಲ್ಲ. ದೈವವನ್ನು ಮೀರುವಂತಿಲ್ಲ ಎಂದು ತಿಳಿದು ಅದೃಷ್ಟದ ಪುನರಾಗಮನವನ್ನು ಕಾಯುತ್ತಿದ್ದೇನೆ. ಹಿಂದೆ ನೀರು ಎಲ್ಲಿ ನಿಲ್ಲುತ್ತಿತ್ತೋ ಅಲ್ಲಿಯೇ ಮತ್ತೆ ನಿಲ್ಲುತ್ತದೆ ಎಂದು ತಿಳಿದು ಬದಲಾವಣೆಯನ್ನು ಬಯಸುತ್ತಾ ಪುನರುದಯವನ್ನು ಪ್ರತೀಕ್ಷಿಸುತ್ತಿದ್ದೇನೆ. ಚೆನ್ನಾಗಿ ನಡೆಸಿದರೂ ಯಾರ ಉದ್ದೇಶವು ದೈವದಿಂದ ವಿಪತ್ತಿಗೀಡಾಗುತ್ತದೆಯೋ ಅಂಥವನು ವಿವೇಕಿಯಾಗಿ ಮತ್ತೆ ದೈವವೊದಗುವಂತೆ ಪ್ರಯತ್ನಿಸಬೇಕು. ದುಃಖಿತೆಯಾಗಿ ನಾನು ಹೇಳುವ ಮಾತುಗಳ ಪ್ರಯೋಜನವೇನೆಂದು ನೀನು ಕೇಳು ಅಥವಾ ಕೇಳದಿರು. ನಾನು ಹೇಳುವ ಈ ಮಾತಿನ ಉದ್ದೇಶವನ್ನು ನಿನಗೆ ತಿಳಿಸುತ್ತೇನೆ. ಪಾಂಡುಪುತ್ರರ ರಾಣಿಯಾಗಿದ್ದು ದ್ರುಪದನ ಮಗಳಾಗಿದ್ದು ಈ ಅವಸ್ಥೆಯನ್ನು ಪಡೆದಿರುವ ನನ್ನಂಥಹ ಇನ್ನ್ಯಾರು ತಾನೆ ಜೀವಿಸಿರಲು ಬಯಸುತ್ತಾರೆ? ನನಗೊದಗಿದ ಈ ಕ್ಲೇಶವು ಎಲ್ಲ ಕುರುಗಳನ್ನೂ, ಪಾಂಚಾಲರನ್ನೂ ಮತ್ತು ಪಾಂಡವರನ್ನೂ ಅಪಮಾನಗೊಳಿಸಿದೆ. ಬಹುಜನ ಸೋದರರಿಂದಲೂ, ಮಾವಂದಿರಿಂದಲೂ, ಪುತ್ರರಿಂದಲೂ ಪರಿವೃತಳಾಗಿ ಸಂತೋಷದಿಂದಿರಬೇಕಾದ ಬೇರೆ ಯಾರು ತಾನೇ ಹೀಗೆ ದುಃಖಪಡುತ್ತಾಳೆ? ಬಾಲೆಯಾಗಿದ್ದಾಗ ನಾನು ನಿಶ್ಚಯವಾಗಿಯೂ ವಿಧಿಗೆ ಅಪರಾಧಮಾಡಿದ್ದಿರಬೇಕು. ಅದರ ಪ್ರಸಾದದಿಂದ ಈ ದುರವಸ್ಥೆಗೀಡಾಗಿದ್ದೇನೆ. ನನ್ನ ಬಣ್ಣವು ಹೇಗಾಗಿದೆಯೆಂಬುದನ್ನು ನೋಡು. ಅಂದು ಅಲ್ಲಿ ಪರಮ ದುಃಖದಲ್ಲಿಯೂ ಹೀಗಾಗಿರಲಿಲ್ಲ. ಹಿಂದಿನ ನನ್ನ ಸುಖವನ್ನು ನೀನೊಬ್ಬನೇ ಬಲ್ಲೆ. ಅಂತಹ ನಾನು ದಾಸಿಯಾಗಿದ್ದೇನೆ. ಅವಶಳಾದ ನನಗೆ ಶಾಂತಿಎನ್ನುವುದೇ ಸಿಗುತ್ತಿಲ್ಲ. ಭೀಮಧನ್ವಿ ಮಹಾಬಾಹು ಪಾರ್ಥ ಧನಂಜಯನು ತಣ್ಣಗಾದ ಬೆಂಕಿಯಂತಿರುವುದು ದೈವವಲ್ಲದೇ ಬೇರೆಯಲ್ಲ ಎಂದು ಭಾವಿಸುತ್ತೇನೆ. ಜೀವಿಗಳ ಗತಿಯನ್ನು ತಿಳಿಯಲು ನರರಿಗೆ ಸಾಧ್ಯವಿಲ್ಲ. ನಿಮ್ಮ ಈ ಪತನವು ಮೊದಲೇ ತಿಳಿದಿರಲಿಲ್ಲ ಎಂದು ಭಾವಿಸುತ್ತೇನೆ. ಇಂದ್ರಸಮಾನರಾದ ನೀವು ಅಪ್ಪಣೆಗಾಗಿ ಸದಾ ನನ್ನ ಮುಖವನ್ನು ನೋಡುತ್ತಿದ್ದಿರಿ. ಅಂಥಹ ಶ್ರೇಷ್ಠ ಸತಿ ನಾನೇ ಇಂದು ಅಪ್ಪಣೆಗಾಗಿ ಕೀಳಾದ ಇತರರ ಮುಖವನ್ನು ನೋಡುವವಳಂತಾಗಿದ್ದೇನೆ. ನನ್ನ ಈ ಅವಸ್ಥೆಯನ್ನು ನೋಡು. ನೀವು ಬದುಕಿರುವಾಗ ನನಗೆ ಇದು ತಕ್ಕುದಲ್ಲ. ಕಾಲವಿಪರ್ಯವನ್ನು ನೋಡು. ಸಾಗರಪರ್ಯಂತವಾದ ಪೃಥ್ವಿ ಯಾರ ವಶವರ್ತಿನಿಯಾಗಿತ್ತೋ ಆ ನಾನು ಇಂದು ಸುದೇಷ್ಣೆಯ ವಶವರ್ತಿನಿಯಾಗಿ ಅವಳಿಗೆ ಹೆದರುತ್ತೇನೆ. ಯಾರ ಹಿಂದೆ ಮತ್ತು ಮುಂದೆ ಅನುಚರರು ಇರುತ್ತಿದ್ದರೋ ಆ ನಾನು ಇಂದು ಸುದೇಷ್ಣೇಯ ಹಿಂದೆ ಮುಂದೆ ತಿರುಗುತ್ತಿದ್ದೇನೆ. ನನ್ನ ಈ ಅಸಹ್ಯ ದುಃಖವನ್ನು ಅರ್ಥಮಾಡಿಕೋ. ಯಾರು ಕುಂತಿಯ ಹೊರತು ತನಗಾಗಿ ಕೂಡ ಸುಗಂಧದ್ರವ್ಯವನ್ನು ತೇಯುತ್ತಿರಲಿಲ್ಲವೋ ಆ ನಾನೇ ಇಂದು ಸುದೇಷ್ಣೇಗಾಗಿ ಚಂದನವನ್ನು ತೇಯುತ್ತಿದ್ದೇನೆ. ನನ್ನ ಕೈಗಳನ್ನು ನೋಡು ಕೌಂತೇಯ! ಹಿಂದೆ ಇವು ಹೀಗಿರಲಿಲ್ಲ. ನಿನಗೆ ಮಂಗಳವಾಗಲಿ!”
ಹೀಗೆಂದು ಅವಳು ದಡ್ಡುಗಟ್ಟಿದ ಎರಡೂ ಕೈಗಳನ್ನೂ ಅವನಿಗೆ ತೋರಿಸಿದಳು.
ದ್ರೌಪದಿಯು ಹೇಳಿದಳು: “ಕುಂತಿಗಾಗಲೀ ನಿಮಗಾಗಲೀ ಎಂದೂ ಹೆದರದಿದ್ದ ನಾನು ಇಂದು ವಿರಾಟನ ಮುಂದೆ ಸೇವಕಿಯಾಗಿ ಅನುಲೇಪನ ಚೆನ್ನಾಗಿ ಸಿದ್ಧವಾಗಿದೆಯೋ ಇಲ್ಲವೋ? ನನಗೆ ದೊರೆಯು ಏನೆನ್ನುತ್ತಾನೋ ಎಂದು ಅಳುಕುತ್ತಾ ನಿಂತಿರುತ್ತೇನೆ. ಬೇರೆಯವರು ತೇಯ್ದ ಚಂದನವು ವಿರಾಟನಿಗೆ ಹಿಡಿಸುವುದಿಲ್ಲ.”
ಈ ರೀತಿ ಭೀಮಸೇನನ ಭಾಮಿನಿ ಕೃಷ್ಣೆಯು ತನ್ನ ದುಃಖಗಳನ್ನು ಹೇಳಿಕೊಳ್ಳುತ್ತಾ ಭೀಮಸೇನನ ಮುಖವನ್ನೇ ನೋಡುತ್ತಾ ಮೌನವಾಗಿ ಅತ್ತಳು. ಅವಳು ಮತ್ತೆ ಮತ್ತೆ ನಿಟ್ಟುಸಿರುಬಿಡುತ್ತಾ ಭೀಮಸೇನನ ಹೃದಯವನ್ನು ಕಲಕುತ್ತಾ ಬಾಷ್ಪಗದ್ಗದ ಮಾತುಗಳಿಂದ ಹೀಗೆಂದಳು: “ಭೀಮ! ಹಿಂದೆ ನಾನು ದೇವತೆಗಳಿಗೆಸಗಿದ ಅಪರಾಧವು ಅಲ್ಪವಾಗಿರಲಿಕ್ಕಿಲ್ಲ. ಸಾಯಬೇಕಾಗಿರುವ ಅಭಾಗ್ಯಳಾದ ನಾನು ಬದುಕಿದ್ದೇನೆ.”
ಬಳಿಕ ಆ ಪರವೀರಹ ವೃಕೋದರನು ಕಂಪಿಸುತ್ತಿದ್ದ ದ್ರೌಪದಿಯ ದಡ್ಡುಗಟ್ಟಿ ಊದಿಕೊಂಡಿದ್ದ ಕೈಗಳನ್ನು ತನ್ನ ಮುಖದ ಮೇಲಿಟ್ಟುಕೊಂಡು ಅತ್ತುಬಿಟ್ಟನು. ಪರಾಕ್ರಮಿಯಾದ ಆ ಕೌಂತೇಯನು ಅವುಗಳನ್ನು ಹಿಡಿದುಕೊಂಡು ಪರಮ ದುಃಖಾರ್ತನಾಗಿ ಕಣ್ಣೀರ್ಗರೆಯುತ್ತಾ ಈ ಮಾತುಗಳನ್ನಾಡಿದನು.
ಭೀಮಸೇನನು ದ್ರೌಪದಿಯನ್ನು ಸಂತವಿಸಿದುದು
ಭೀಮಸೇನನು ಹೇಳಿದನು: “ನನ್ನ ಬಾಹುಬಲಕ್ಕೂ ಫಲ್ಗುನನ ಗಾಂಡೀವಕ್ಕೂ ಧಿಕ್ಕಾರ! ಹಿಂದೆ ಕೆಂಪಾಗಿದ್ದ ನಿನ್ನ ಕೈಗಳೆರಡೂ ಈಗ ದಡ್ಡುಗಟ್ಟಿವೆ. ವಿರಾಟನ ಸಭೆಯಲ್ಲಿ ನಾನು ದೊಡ್ಡ ಕದನವನ್ನೇ ಮಾಡುತ್ತಿದ್ದೆ. ಆದರೆ ಅಲ್ಲಿ ಧರ್ಮರಾಜನು ನನ್ನನ್ನು ಕಡೆಗಣ್ಣಿನ ನೋಟದಿಂದ ತಡೆದನು. ಭಾಮಿನಿ! ಅವನ ಆಶಯವನ್ನು ತಿಳಿದು ನಾನು ಸುಮ್ಮನಿದ್ದುಬಿಟ್ಟೆ. ನಾಡಿನಿಂದ ಹೊರದೂಡಿರುವುದು, ಇನ್ನೂ ನಾವು ಕೌರವರನ್ನು ಕೊಲ್ಲದಿರುವುದು, ಸುಯೋಧನ, ಕರ್ಣ, ಸೌಬಲ ಶಕುನಿ ಮತ್ತು ಪಾಪಿ ದುಃಶಾಸನನ ಶಿರಗಳನ್ನು ನಾನು ಕತ್ತರಿಸದೇ ಇರುವುದು ಇವೆಲ್ಲವೂ ನನ್ನ ಹೃದಯವನ್ನು ಶಲ್ಯದಂತೆ ಸುಡುತ್ತಿವೆ. ಧರ್ಮವನ್ನು ತೊರೆಯಬೇಡ. ಕ್ರೋಧವನ್ನು ಬಿಡು. ನಿನ್ನಿಂದ ಈ ನಿಂದೆಯನ್ನೆಲ್ಲ ರಾಜ ಯುಧಿಷ್ಠಿರನು ಕೇಳಿದರೆ ನಿಶ್ಚಯವಾಗಿಯೂ ಅವನು ಪ್ರಾಣ ಬಿಡುತ್ತಾನೆ. ಧನಂಜಯನಾಗಲೀ ಯಮಳರಾಗಲೀ ಮರಣಹೊಂದಿದರೆ ನಾನು ಜೀವಿಸಿರಲಾರೆ. ಹಿಂದೆ ಸುಕನ್ಯಾ ಎಂಬ ಹೆಸರಿನ ಶರ್ಯಾತಿಯ ಮಗಳು ವನದಲ್ಲಿ ತಪಸ್ಸುಮಾಡುತ್ತಾ ಹುತ್ತವಾಗಿದ್ದ ಭೃಗುವಂಶಜ ಚ್ಯವನನನ್ನು ಅರಣ್ಯದಲ್ಲಿ ಅನುಸರಿಸಿದಳು. ಹಿಂದೆ ರೂಪದಲ್ಲಿ ಪ್ರಸಿದ್ಧಳಾದ ನಾಡಾಯಣ ವಂಶದ ಇಂದ್ರಸೇನೆಯು ಸಾವಿರ ವರ್ಷದ ವೃದ್ಧ ಪತಿಯನ್ನು ಅನುಸರಿಸಿದುದನ್ನು ನೀನು ಕೇಳಿಲ್ಲವೇ? ಜನಕನ ಮಗಳಾದ ವೈದೇಹಿಯೂ ಕೂಡ ಮಹಾರಣ್ಯನಿವಾಸಿ ಪತಿಯನ್ನು ಹಿಂಬಾಲಿಸಿದುದನ್ನು ಕೇಳಿಲ್ಲವೇ? ರಾಮನ ಪ್ರಿಯ ಪತ್ನಿಯಾದ ಆ ಸುಂದರಿಯು ರಾಕ್ಷಸರ ನಿಗ್ರಹಕ್ಕೊಳಗಾಗಿ ಕ್ಲೇಶಗೊಂಡರೂ ರಾಮನನ್ನೇ ಅನುಸರಿಸಿದಳು. ಹಾಗೆಯೇ ರೂಪ ಯೌವನಸಂಪನ್ನೆಯಾದ ಲೋಪಾಮುದ್ರೆಯು ಎಲ್ಲ ದಿವ್ಯ ಸುಖಗಳನ್ನೂ ತೊರೆದು ಅಗಸ್ತ್ಯನನ್ನು ಹಿಂಬಾಲಿಸಿದಳು. ನಾನು ಹೇಳಿದ ಈ ರೂಪವತಿಯರೂ ಪತಿವ್ರತೆಯರೂ ಆದ ನಾರಿಯರಂತೆ ನೀನೂ ಕೂಡ ಸರ್ವಗುಣಸಂಪನ್ನೆಯಾಗಿರುವೆ. ವ್ಯಥೆಪಡಬೇಡ! ಇನ್ನು ಉಳಿದಿರುವ ಒಂದೂವರೆ ತಿಂಗಳ ಅಲ್ಪಕಾಲವನ್ನು ತಾಳಿಕೋ. ಹದಿಮೂರನೆಯ ವರ್ಷವು ತುಂಬಿದಾಗ ನೀನು ಮತ್ತೆ ರಾಜನ ರಾಣಿಯಾಗುವೆ.”
ದ್ರೌಪದಿಯು ಹೇಳಿದಳು: “ಭೀಮ! ದುಃಖವನ್ನು ತಡೆದುಕೊಳ್ಳಲಾಗದೇ ಆರ್ತಳಾಗಿ ನಾನು ನಿನ್ನ ಮುಂದೆ ಹೀಗೆ ಕಂಬನಿಗರೆದೆ. ರಾಜನನ್ನು ನಾನು ನಿಂದಿಸುವುದಿಲ್ಲ. ಹಿಂದೆ ಆದುದ್ದನ್ನು ಬಿಟ್ಟುಬಿಡು. ಈಗ ಒದಗಿಬಂದಿರುವ ಕಷ್ಟದ ಪರಿಹಾರಕ್ಕೆ ಸಿದ್ಧನಾಗು. ರೂಪದಲ್ಲಿ ನಾನು ಅವಳನ್ನು ಸೋಲಿಸುವೆನೆಂಬ ಶಂಕೆಯಿಂದ ರಾಜನೆಲ್ಲಿ ನನ್ನನ್ನು ಲಪಟಾಯಿಸಿಬಿಡುತ್ತಾನೋ ಎಂದು ಸುದೇಷ್ಣೆಯು ನಿತ್ಯವೂ ಉದ್ವಿಗ್ನಳಾಗಿದ್ದಾಳೆ. ಅವಳ ಆ ಭಾವವನ್ನರಿತು ಸ್ವತಃ ಕೆಟ್ಟದ್ದನ್ನೇ ಕಾಣುವ ದುಷ್ಟಾತ್ಮ ಆ ಕೀಚಕನು ನನ್ನನ್ನು ಯಾವಾಗಲೂ ಬೇಡುತ್ತಾನೆ. ನಾನು ಕೋಪಗೊಂಡರೂ ಮತ್ತೆ ಕೋಪವನ್ನು ನಿಯಂತ್ರಿಸಿಕೊಂಡು ಕಾಮದಿಂದ ಮೂಢನಾದ ಅವನಿಗೆ ನಾನು “ಕೀಚಕ! ನಿನ್ನನ್ನು ನೀನು ರಕ್ಷಿಸಿಕೋ!” ಎಂದು ಹೇಳಿದೆ. “ನಾನು ಐವರು ಗಂಧರ್ವರ ಭಾರ್ಯೆ. ಪ್ರಿಯಪತ್ನಿ. ತಡೆಯಲು ಅಸಾಧ್ಯರೂ, ಶೂರರೂ, ಸಾಹಸಿಗಳೂ ಆದ ಅವರು ನಿನ್ನನ್ನು ಕೊಲ್ಲುತ್ತಾರೆ.” ಹೀಗೆ ಹೇಳಿದಾಗ ಆ ದುಷ್ಟಾತ್ಮ ಕೀಚಕನು ಮರುನುಡಿದನು: “ಶುಚಿಸ್ಮಿತೇ! ನಾನು ಗಂಧರ್ವರಿಗೆ ಹೆದರುವುದಿಲ್ಲ. ಒಟ್ಟಿಗೆ ಬರುವ ನೂರು ಅಥವಾ ಸಾವಿರ ಗಂಧರ್ವರನ್ನೂ ನಾನು ರಣದಲ್ಲಿ ಕೊಲ್ಲುವೆನು. ಆದುದರಿಂದ ನನಗೆ ನೀನು ಸಂತಸವನ್ನುಂಟುಮಾಡು!” ಹೀಗೆ ಅವನು ಹೇಳಿದಾಗ ನಾನು ಕಾಮಾತುರನಾದ ಆ ಸೂತನಿಗೆ ಮತ್ತೆ ನುಡಿದೆ: “ಕೀರ್ತಿಶಾಲಿಗಳಾದ ಆ ಗಂಧರ್ವರಿಗೆ ಬಲದಲ್ಲಿ ನೀನು ಸಾಟಿಯಲ್ಲ. ಕುಲಶೀಲಸಂಪನ್ನೆಯಾದ ನಾನು ಯಾವಾಗಲೂ ಧರ್ಮಸ್ಥಿತಳಾಗಿದ್ದೇನೆ. ಯಾರ ವಧೆಯನ್ನೂ ನಾನು ಬಯಸುವುದಿಲ್ಲ. ಆದುದರಿಂದಲೇ ಕೀಚಕ! ನೀನು ಇನ್ನೂ ಬದುಕಿದ್ದೀಯೆ!” ಹೀಗೆ ಹೇಳಲು ಆ ದುಷ್ಟಾತ್ಮನು ಗಟ್ಟಿಯಾಗಿ ನಕ್ಕನು. ಅವನು ಸನ್ಮಾರ್ಗದಲ್ಲಿ ನೆಲೆಗೊಳ್ಳುವುದಿಲ್ಲ ಮತ್ತು ಧರ್ಮಕ್ಕಾಗಿ ಯತ್ನಿಸುವುದಿಲ್ಲ. ಆ ಪಾಪಾತ್ಮ, ಪಾಪಭಾವಿ, ಕಾಮರಾಗವಶ, ಅವಿನೀತ, ದುಷ್ಟಾತ್ಮನು ಮತ್ತೆ ಮತ್ತೆ ಪ್ರತಿಭಟಿಸಿದರೂ ನನ್ನನ್ನು ಕಂಡಾಗಲೆಲ್ಲಾ ಹಿಂಸಿಸುತ್ತಾನೆ. ಆದ್ದರಿಂದ ನಾನು ಪ್ರಾಣ ಬಿಡುತ್ತೇನೆ. ಧರ್ಮದಲ್ಲಿ ಪ್ರಯತ್ನಪರರಾಗಿರುವವರ ಮಹಾಧರ್ಮವೇ ಹಾಳಾಗುತ್ತದೆ. ಪ್ರತಿಜ್ಞೆಯನ್ನು ಪರಿಪಾಲಿಸುತ್ತಿರುವ ನಿಮಗೆ ಪತ್ನಿಯೇ ಇಲ್ಲವಾಗುತ್ತಾಳೆ. ಹೆಂಡತಿಯನ್ನು ರಕ್ಷಿಸಿದರೆ ಮಕ್ಕಳು ರಕ್ಷಿತರಾಗಿರುತ್ತಾರೆ. ಮಕ್ಕಳು ರಕ್ಷಣೆಯಲ್ಲಿದ್ದರೆ ಆತ್ಮರಕ್ಷಣೆಯಾಗುತ್ತದೆ. ಬ್ರಾಹ್ಮಣರು ವರ್ಣಧರ್ಮದ ಕುರಿತು ಹೇಳಿದುದನ್ನು ನಾನು ಕೇಳಿದ್ದೇನೆ. ಶತ್ರುಗಳ ನಾಶದ ಹೊರತು ಬೇರೆ ಯಾವುದೂ ಎಂದೂ ಕ್ಷತ್ರಿಯನಿಗೆ ಧರ್ಮವಲ್ಲ. ಧರ್ಮರಾಜನು ನೋಡುತ್ತಿರುವಂತೆಯೇ ನಿನ್ನ ಎದುರಿನಲ್ಲಿ ಕೀಚಕನು ನನ್ನನ್ನು ಕಾಲಿನಿಂದ ಒದೆದನು. ಆ ಘೋರ ಜಟಾಸುರನಿಂದ ನೀನೇ ನನ್ನನ್ನು ಪಾರುಗೊಳಿಸಿದೆ. ಹಾಗೆಯೇ ಸೋದರರೊಡನೆ ಜಯದ್ರಥನನ್ನೂ ನೀನೇ ಗೆದ್ದೆ. ಈಗ ನನ್ನನ್ನು ಅಪಮಾನಿಸಿದ ಪಾಪಿಯನ್ನೂ ನೀನೇ ಕೊಲ್ಲು. ರಾಜನಿಗೆ ಬೇಕಾದವನಾಗಿರುವ ಕೀಚಕನು ನನ್ನನ್ನು ಕಾಡುತ್ತಿದ್ದಾನೆ. ನನಗೆ ಬಹಳಷ್ಟು ಕಷ್ಟಗಳನ್ನು ತಂದೊಡ್ಡಿದ ಆ ಕಾಮದಿಂದ ಹುಚ್ಚನಾದವನನ್ನು ಮಡಕೆಯನ್ನು ಕಲ್ಲಿನ ಮೇಲೆ ಚಪ್ಪಳಿಸಿ ಒಡೆಯುವಂತೆ ನಾಶಮಾಡು. ಬೆಳಿಗ್ಗೆ ಸೂರ್ಯೋದಯದ ವರೆಗೆ ಅವನು ಜೀವಂತನಾಗಿದ್ದರೆ ವಿಷವನ್ನು ಬೆರೆಸಿ ಕುಡಿಯುತ್ತೇನೆ. ಕೀಚಕನ ವಶಳಾಗುವುದಿಲ್ಲ. ನಿನ್ನನ್ನು ಬಿಟ್ಟರೆ ಮರಣವೇ ನನಗೆ ಶ್ರೇಯಸ್ಕರ.”
ಹೀಗೆ ಹೇಳಿ ಕೃಷ್ಣೆಯು ಭೀಮನ ಎದೆಯಮೇಲೊರಗಿ ರೋಧಿಸಿದಳು. ಭೀಮನು ಅವಳನ್ನು ಅಪ್ಪಿಕೊಂಡು ವಿಶೇಷವಾಗಿ ಸಾಂತ್ವನಗೊಳಿಸಿ ಕಟವಾಯಿಗಳನ್ನು ನೆಕ್ಕುತ್ತಾ ಕೀಚಕನ ಕುರಿತು ಯೋಚಿಸತೊಡಗಿದನು.
ಕೀಚಕವಧೆ
ಭೀಮಸೇನನು ಹೇಳಿದನು: “ಭದ್ರೇ! ನೀನು ಹೇಳಿದಂತೆಯೇ ಮಾಡುತ್ತೇನೆ. ಇಂದು ಕೀಚಕನನ್ನು ಅವನ ಬಾಂಧವರೊಡನೆ ಕೊಲ್ಲುತ್ತೇನೆ. ದುಃಖ ಶೋಕಗಳನ್ನು ಕೊಡವಿ ಇಂದು ಸಾಯಂಕಾಲ ಅವನನ್ನು ಭೇಟಿಯಾಗು. ಮತ್ಸ್ಯರಾಜನಿಂದ ನಿರ್ಮಿತವಾದ ನರ್ತನಶಾಲೆಯಲ್ಲಿ ಕನ್ಯೆಯರು ಹಗಲು ಹೊತ್ತು ನೃತ್ಯಮಾಡಿ ರಾತ್ರಿ ಹೊತ್ತು ಮನೆಗೆ ಹೋಗುತ್ತಾರೆ. ಅಲ್ಲಿ ಸುಸ್ಥಿತಿಯಲ್ಲಿರುವ ಗಟ್ಟಿಮುಟ್ಟಾದ ಮಂಚವೊಂದಿದೆ. ಅಲ್ಲಿಯೇ ಅವನಿಗೆ ಅವನ ಪೂರ್ವ ಪಿತಾಮಹರ ಪ್ರೇತಗಳನ್ನು ತೋರಿಸಿಕೊಡುತ್ತೇನೆ. ಅವನೊಂದಿಗೆ ನೀನು ಒಪ್ಪಂದ ಮಾಡಿಕೊಳ್ಳುವಾಗ ನಿನ್ನನ್ನು ಯಾರೂ ಕಾಣದಂತೆ ನೋಡಿಕೊಳ್ಳಬೇಕು. ಅವನು ಅಲ್ಲಿ ಹಾಜರಿರುವಂತೆ ಮಾಡು.”
ಅವರಿಬ್ಬರೂ ಹಾಗೆ ಮಾತನಾಡಿಕೊಂಡು, ದುಃಖದಿಂದ ಕಂಬನಿಗರೆದು ಹೃದಯವನ್ನು ಗಟ್ಟಿಮಾಡಿಕೊಂಡು ಅತ್ಯುಗ್ರವಾದ ಆ ಇರುಳಿನ ಉಳಿದ ಭಾಗವನ್ನು ಸಹಿಸಿಕೊಂಡರು. ಆ ರಾತ್ರಿಯು ಕಳೆಯಲು ಬೆಳಿಗ್ಗೆ ಎದ್ದು ಕೀಚಕನು ಅರಮನೆಗೆ ಹೋಗಿ ದ್ರೌಪದಿಗೆ ಹೀಗೆಂದು ಹೇಳಿದನು: “ಸಭೆಯಲ್ಲಿ ರಾಜನ ಕಣ್ಮುಂದೆಯೇ ನಿನ್ನನ್ನು ಬೀಳಿಸಿ ಕಾಲಿನಿಂದ ಒದ್ದೆ. ನಿನ್ನ ಮೇಲೆ ಬಿದ್ದ ಬಲಿಷ್ಟನಾದ ನನ್ನಿಂದ ನಿನಗೆ ರಕ್ಷಣೆಯೇ ದೊರೆಯಲಿಲ್ಲ. ವಿರಾಟನನ್ನು ಮತ್ಸ್ಯರಾಜನೆಂದು ಹೆಸರಿಗೆ ಮಾತ್ರ ಕರೆಯುತ್ತಾರೆ. ಸೇನಾಪತಿಯಾಗಿರುವ ನಾನೇ ಮತ್ಸ್ಯರಾಜ. ನೀನು ಸುಖವನ್ನು ಪಡೆ. ನಾನು ನಿನಗೆ ದಾಸನಾಗುತ್ತೇನೆ. ದಿನಕ್ಕೆ ನೂರು ನಾಣ್ಯಗಳನ್ನು ನಿನಗೆ ಕೊಡುತ್ತೇನೆ. ನೂರು ದಾಸಿಯರನ್ನೂ ಮತ್ತು ನೂರು ದಾಸರನ್ನೂ, ಹೇಸರೆಗತ್ತೆಗಳನ್ನು ಹೂಡಿದ ರಥವನ್ನೂ ಕೊಡುತ್ತೇನೆ. ಭೀರು! ನಮ್ಮಿಬ್ಬರ ಸಮಾಗಮವಾಗಲಿ!”
ದ್ರೌಪದಿಯು ಹೇಳಿದಳು: “ಕೀಚಕ! ಇಂದು ನನ್ನದೊಂದು ನಿಬಂಧನೆಯುಂಟು. ಅದನ್ನು ನೀನು ನಡೆಸಿಕೊಡು. ನನ್ನೊಡನೆ ನಿನ್ನ ಈ ಸಮಾಗಮವು ನಿನ್ನ ಸ್ನೇಹಿತರಿಗಾಗಲೀ ಸಹೋದರರಿಗಾಗಲೀ ಗೊತ್ತಾಗಕೂಡದು. ಆ ಯಶಸ್ವಿ ಗಂಧರ್ವರಿಗೆ ಇದು ತಿಳಿದುಬಿಡುತ್ತದೆಯೆಂದು ನಾನು ಹೆದರುತ್ತಿದ್ದೇನೆ. ಹೀಗೆ ನೀನು ನನಗೆ ಆಣೆ ಕೊಡು. ಅನಂತರ ನಾನು ನಿನ್ನ ವಶಳಾಗುತ್ತೇನೆ.”
ಕೀಚಕನು ಹೇಳಿದನು: “ಸುಶ್ರೋಣಿ! ಆಗಲಿ. ನೀನು ಹೇಳಿದಂತೆಯೇ ಮಾಡುತ್ತೇನೆ. ಸೂರ್ಯವರ್ಚಸ್ವಿಗಳಾದ ಗಂಧರ್ವರು ನಿನ್ನನ್ನು ಕಂಡುಹಿಡಿಯದಂತೆ, ನಿನ್ನಿಂದ ಮದನಮೋಹಿತನಾದ ನಾನು ನಿನ್ನೊಡನೆ ಸಮಾಗಮಕ್ಕಾಗಿ ಯಾರೂ ಇಲ್ಲದ ನಿನ್ನ ಆವಾಸಕ್ಕೆ ನಾನು ಒಬ್ಬನೇ ಬರುತ್ತೇನೆ.”
ದ್ರೌಪದಿಯು ಹೇಳಿದಳು: “ಮತ್ಯ್ಸರಾಜನಿಂದ ನಿರ್ಮಿತವಾದ ಆ ನೃತ್ಯಮಂದಿರದಲ್ಲಿ ಕನ್ಯೆಯರು ಹಗಲು ನರ್ತಿಸಿ ರಾತ್ರಿ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ. ಕತ್ತಲಲ್ಲಿ ನೀನು ಅಲ್ಲಿಗೆ ಬಾ. ಗಂಧರ್ವರಿಗೆ ಅದು ತಿಳಿಯದು. ಅಲ್ಲಿ ನಮ್ಮ ತಪ್ಪು ಯಾರಿಗೂ ಗೊತ್ತಾಗುವುದಿಲ್ಲ. ಇದರಲ್ಲಿ ಸಂಶಯವಿಲ್ಲ.”
ಈ ಅಭಿಪ್ರಾಯವನ್ನು ಕೀಚಕನಿಗೆ ತಿಳಿಸುವಾಗ ಕೃಷ್ಣೆಗೆ ಅರ್ಧ ದಿವಸವು ತಿಂಗಳಿಗೆ ಸಮಾನವಾಯಿತು. ಆ ಮೇಲೆ ತುಂಬುಹರ್ಷದಲ್ಲಿ ಮುಳುಗಿ ಮನೆಗೆ ಹೋದ ಮೂಢ ಕೀಚಕನಿಗೆ ಸೈರಂಧ್ರೀ ರೂಪದ ಮೃತ್ಯುವಿನ ಅರಿವಾಗಲಿಲ್ಲ. ಕಾಮಮೋಹಿತನಾದ ಅವನು ಗಂಧ, ಆಭರಣ ಮತ್ತು ಮಾಲೆಗಳಿಂದ ತನ್ನನ್ನು ತಾನು ಬೇಗ ವಿಶೇಷವಾಗಿ ಅಲಂಕರಿಸಿಕೊಳ್ಳುವುದರಲ್ಲಿ ಮಗ್ನನಾದನು. ಆ ವಿಶಾಲಾಕ್ಷಿಯನ್ನು ಕುರಿತು ಚಿಂತಿಸುತ್ತ ಕೆಲಸಮಾಡುತ್ತಿದ್ದ ಅವನಿಗೆ ತುಂಬಾ ಸಮಯವು ಕಳೆದಂತಾಯಿತು. ಶೋಭೆಯನ್ನು ತ್ಯಜಿಸಲಿದ್ದ ಅವನ ಶೋಭೆಯು ಆರುವ ಕಾಲದಲ್ಲಿ ಬತ್ತಿಯನ್ನು ಸುಡುವ ದೀಪದಂತೆ ಅತ್ಯಧಿಕವಾಗಿತ್ತು. ದ್ರೌಪದಿಯು ಮೂಡಿಸಿದ್ದ ನಂಬಿಕೆಯಿಂದ ಸಮಾಗಮವನ್ನು ಚಿಂತಿಸುತ್ತಿದ್ದ ಕಾಮಮೋಹಿತ ಕೀಚಕನಿಗೆ ದಿವಸ ಕಳೆದು ಹೋದುದೇ ತಿಳಿಯಲಿಲ್ಲ. ಅನಂತರ ಕಲ್ಯಾಣಿ ದ್ರೌಪದಿಯು ಅಡುಗೆ ಮನೆಗೆ ಹೋಗಿ ಪತಿ ಕೌರವ್ಯ ಭೀಮನ ಸಮೀಪದಲ್ಲಿ ನಿಂತಳು. ಆ ಸುಕೇಶಿಯು ಅವನಿಗೆ ಹೇಳಿದಳು: “ಪರಂತಪ! ನೀನು ಹೇಳಿದಂತೆ ನರ್ತನ ಗೃಹದಲ್ಲಿ ಕೀಚಕನೊಂದಿಗೆ ನನ್ನ ಸಮಾಗಮವು ವ್ಯವಸ್ಥಿತವಾಗಿದೆ. ಆ ನಿರ್ಜನ ನರ್ತನಮಂದಿರಕ್ಕೆ ಕೀಚಕನು ಕತ್ತಲಲ್ಲಿ ಏಕಾಂಗಿಯಾಗಿ ಬರುವನು. ಮಹಾಬಾಹು! ಆ ಕೀಚಕನನ್ನು ಕೊಲ್ಲು. ನರ್ತನಾಗಾರಕ್ಕೆ ಹೋಗಿ ಆ ಮದದರ್ಪಿತ ಸೂತಪುತ್ರ ಕೀಚಕನನ್ನು ನಿರ್ಜೀವನನ್ನಾಗಿ ಮಾಡು. ಆ ಸೂತಪುತ್ರನು ದರ್ಪದಿಂದ ಗಂಧರ್ವರನ್ನು ಅವಮಾನಿಸುತ್ತಾನೆ. ಆನೆಯು ಲಾಳದ ಕಡ್ಡಿಯನ್ನು ಕಿತ್ತೊಗೆಯುವಂತೆ ಅವನನ್ನು ಕಿತ್ತೊಗೆ. ದುಃಖಾಕ್ರಾಂತೆಯಾದ ನನ್ನ ಕಂಬನಿಯನ್ನು ಒರೆಸು. ನಿನಗೂ ನಿನ್ನ ಕುಲಕ್ಕೂ ಗೌರವವನ್ನು ತಾ. ನಿನಗೆ ಮಂಗಳವಾಗಲಿ.”
ಭೀಮಸೇನನು ಹೇಳಿದನು: “ವರಾರೋಹೇ! ನಿನಗೆ ಸ್ವಾಗತ! ನನಗೆ ಪ್ರಿಯವಾದುದನ್ನು ಹೇಳುತ್ತಿರುವೆ. ಇನ್ನು ನನಗೆ ಯಾರ ಸಹಾಯವೂ ಬೇಡ. ಕೀಚಕನ ಸಮಾಗಮದ ಕುರಿತು ನೀನು ಹೇಳಿದುದನ್ನು ಕೇಳಿ ನನಗೆ ಹಿಡಿಂಬನನ್ನು ಕೊಂದಾಗ ಉಂಟಾದ ಸಂತೋಷವೇ ಆಯಿತು. ಸತ್ಯಧರ್ಮಗಳ ಮೇಲೆ ಮತ್ತು ಸೋದರರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ದೇವೇಂದ್ರನು ವೃತ್ರನನ್ನು ಕೊಂದಂತೆ ನಾನು ಕೀಚಕನನ್ನು ಕೊಲ್ಲುತ್ತೇನೆ. ಆ ಕೀಚಕನನ್ನು ರಹಸ್ಯದಲ್ಲಾಗಲೀ ಬಹಿರಂಗದಲ್ಲಾಗಲೀ ಜಜ್ಜಿ ಹಾಕುವೆನು. ಮತ್ಸ್ಯರಿಗೆ ಇದು ತಿಳಿದರೆ ಅವರನ್ನೂ ಖಂಡಿತವಾಗಿ ಕೊಲ್ಲುವೆನು. ಬಳಿಕ ದುರ್ಯೋಧನನನ್ನು ವಧಿಸಿ ಭೂಮಿಯನ್ನು ಮರಳಿ ಪಡೆಯುವೆನು. ಕುಂತೀಪುತ್ರ ಯುಧಿಷ್ಠಿರನು ಮತ್ಯ್ಸನನ್ನು ಮನಬಂದಂತೆ ಓಲೈಸಿಕೊಂಡಿರಲಿ.”
ದ್ರೌಪದಿಯು ಹೇಳಿದಳು: “ವೀರ! ಸತ್ಯವು ಹೊರಬಾರದ ರೀತಿಯಲ್ಲಿ ನನಗಾಗಿ ನೀನು ಕೀಚಕನನ್ನು ರಹಸ್ಯವಾಗಿ ಉರುಳಿಸು.”
ಭೀಮಸೇನನು ಹೇಳಿದನು: “ಭೀರು! ನೀನು ಹೇಳಿದಂತೆಯೇ ಮಾಡುತ್ತೇನೆ. ಅಲಭ್ಯಳಾದ ನಿನ್ನನ್ನು ಬಯಸುವ ಆ ದುರಾತ್ಮ ಕೀಚಕನನ್ನು ಅವನಿಗೆ ಕಾಣಿಸಿಕೊಳ್ಳದಂತೆ ಆಕ್ರಮಿಸಿ, ಆನೆಯು ಬಿಲ್ವವನ್ನು ಜಜ್ಜಿಹಾಕುವಂತೆ ಅವನ ತಲೆಯನ್ನು ಇಂದು ಕತ್ತಲಲ್ಲಿ ಜಜ್ಜಿಹಾಕುವೆನು.”
ಬಳಿಕ ಆ ಭೀಮನು ರಾತ್ರಿಯಲ್ಲಿ ವೇಷ ಮರೆಸಿಕೊಂಡು ಅಲ್ಲಿಗೆ ಮೊದಲೇ ಹೋಗಿ ಕಣ್ಣಿಗೆ ಬೀಳದಂತೆ, ಸಿಂಹವು ಜಿಂಕೆಗಾಗಿ ಕಾಯುವಂತೆ ಕಾದು ಕುಳಿತುಕೊಂಡನು. ಕೀಚಕನಾದರೋ ಯಥೇಚ್ಛವಾಗಿ ಸಿಂಗರಿಸಿಕೊಂಡು ದ್ರೌಪದಿಯನ್ನು ಕೂಡುವ ಆಸೆಯಿಂದ ಆ ವೇಳೆಗೆ ನರ್ತನ ಶಾಲೆಗೆ ಹೋದನು. ಅವನು ಸಂಕೇತವನ್ನು ಸೂಚಿಸುತ್ತಾ ಆ ನರ್ತನ ಶಾಲೆಯನ್ನು ಪ್ರವೇಶಿಸಿದನು. ಗಾಢಾಂಧಕಾರದಿಂದ ಆವೃತವಾಗಿದ್ದ ಆ ಭವನವನ್ನು ಪ್ರವೇಸಿಸಿದ ಆ ದುರ್ಮತಿಯು ಮೊದಲೇ ಅಲ್ಲಿಗೆ ಬಂದು ಏಕಾಂತದಲ್ಲಿದ್ದ ಅಪ್ರತಿಮ ಪರಾಕ್ರಮಿ ಭೀಮನನ್ನು ಸಮೀಪಿಸಿದನು. ಕೃಷ್ಣೆಯ ಅಪಮಾನದಿಂದ ಹುಟ್ಟಿದ ಕೋಪದಿಂದ ಉರಿಯುತ್ತ ಅಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ಮೃತ್ಯುವನ್ನು ಆ ಸೂತನು ಮುಟ್ಟಿದನು. ಕಾಮಮೋಹಿತನಾದ ಆ ಕೀಚಕನು ಅವನನ್ನು ಸಮೀಪಿಸಿ ಹರ್ಷದಿಂದ ಮನಸ್ಸು ಮತ್ತು ಆತ್ಮಗಳು ಕಲಕಿದವನಾಗಿ ನಸುನಗುತ್ತಾ ಹೇಳಿದನು: “ಬಹುವಿಧದ ಕೊನೆಯಿಲ್ಲದ ಐಶ್ವರ್ಯವನ್ನು ನಾನು ನಿನಗೆಂದು ತೆಗೆದುಕೊಂಡು ಆತುರದಿಂದ ಬಂದಿದ್ದೇನೆ. ಮನೆಯಲ್ಲಿರುವ ಹೆಂಗಸರು ಸುವಸ್ತ್ರಶೋಭಿತನೂ ಸುಂದರನೂ ಆದ ನಿನ್ನಂತಹ ಪುರುಷನು ಬೇರೊಬ್ಬನಿಲ್ಲ ಎಂದು ಹೊಗಳುತ್ತಿರುತ್ತಾರೆ. ಅದೇನೂ ಆಕಸ್ಮಿಕವಿಲ್ಲ ತಾನೇ?”
ಭೀಮಸೇನನು ಹೇಳಿದನು: “ಅದೃಷ್ಟವಶಾತ್ ನೀನು ಸುಂದರನಾಗಿರುವೆ. ಅದೃಷ್ಟವಶಾತ್ ನಿನ್ನನ್ನು ನೀನೇ ಹೊಗಳಿಕೊಳ್ಳುತ್ತಿರುವೆ. ಇಂತಹ ಸ್ಪರ್ಶವನ್ನು ನೀನು ಹಿಂದೆಂದೂ ಅನುಭವಿಸಿರಲಾರೆ.”ಹೀಗೆ ಹೇಳಿ ಆ ಮಹಾಬಾಹು ಭೀಮಪರಾಕ್ರಮಿ ಕೌಂತೇಯ ಭೀಮನು ನಕ್ಕು ಮೇಲೆ ನೆಗೆದು ಆ ನರಾಧಮನ ಮಾಲೆಗಳಿಂದ ಕೂಡಿ ಸುಗಂಧಯುತವಾದ ಕೂದಲನ್ನು ಹಿಡಿದುಕೊಂಡನು. ಭೀಮನು ಹೀಗೆ ಬಲವಾಗಿ ಕೂದಲನ್ನು ಹಿಡಿಯಲು ಬಲಿಗಳಲ್ಲಿ ಶ್ರೇಷ್ಠನಾದ ಕೀಚಕನು ರಭಸದಿಂದ ಕೂದಲನ್ನು ಕಿತ್ತು ಬಿಡಿಸಿಕೊಂಡು ಪಾಂಡವನ ತೋಳುಗಳನ್ನು ಹಿಡಿದನು. ವಸಂತ ಋತುವಿನಲ್ಲಿ ಹೆಣ್ಣಾನೆಗಾಗಿ ಎರಡು ಬಲವಾದ ಆನೆಗಳ ನಡುವೆ ನಡೆಯುವಂತೆ ಆ ಇಬ್ಬರು ಕೃದ್ಧರಾದ ನರಶ್ರೇಷ್ಠರ ನಡುವೆ ಬಾಹು ಯುದ್ಧವು ನಡೆಯಿತು. ಬಲಶಾಲಿ ಕೀಚಕನು ತುಸು ತತ್ತರಿಸಿದರೂ ಹೆಜ್ಜೆ ಸಡಿಲಿಸಿದ ಭೀಮನನ್ನು ಕೋಪದಿಂದ ಮಂಡಿಯಿಂದ ಗುದ್ದಿ ನೆಲಕ್ಕೆ ಅದುಮಿದನು. ಬಲಶಾಲಿ ಕೀಚಕನಿಂದ ನೆಲಕ್ಕೆ ಕೆಡುಹಲ್ಪಟ್ಟ ಭೀಮನಾದರೂ ದೊಣ್ಣೆಯಿಂದ ಪೆಟ್ಟುತಿಂದ ಹಾವಿನಂತೆ ವೇಗವಾಗಿ ಮೇಲೆ ಚಿಮ್ಮಿದನು. ಬಲಶಾಲಿಗಳಾದ ಆ ಕೀಚಕ-ಭೀಮರಿಬ್ಬರೂ ಸ್ಪರ್ಧೆಯಿಂದ ಬಲೋನ್ಮತ್ತರಾಗಿ ಆ ನಿರ್ಜನ ತಾಣದಲ್ಲಿ ನಟ್ಟಿರುಳು ಹೋರಾಡಿದರು. ಹೀಗೆ ಸಂಕೃದ್ಧರಾದ ಅವರಿಬ್ಬರೂ ಪರಸ್ಪರ ಗರ್ಜಿಸುತ್ತಿರಲು ಆ ಶ್ರೇಷ್ಠ ಭವನವು ದೃಢವಾಗಿದ್ದರೂ ಕೂಡ ಮತ್ತೆ ಮತ್ತೆ ಕಂಪಿಸುತ್ತಿತ್ತು. ಭೀಮನು ಅಂಗೈಯಿಂದ ಎದೆಗೆ ಗುದ್ದಲು ರೋಷಸಂತಪ್ತನಾದ ಬಲಶಾಲಿ ಕೀಚಕನು ಒಂದು ಹೆಜ್ಜೆಯಷ್ಟೂ ವಿಚಲಿತನಾಗಲಿಲ್ಲ. ಭೀಮನಿಂದ ಬಲವಾಗಿ ಗುದ್ದಲ್ಪಟ್ಟ ಕೀಚಕನು ಲೋಕದಲ್ಲಿ ದುಃಸ್ಸಹವಾದ ಆ ರಭಸವನ್ನು ಮುಹೂರ್ತಕಾಲ ಸಹಿಸಿಕೊಂಡು ಅನಂತರ ಬಲಗುಂದಿದನು. ಅವನು ದುರ್ಬಲನಾದುದನ್ನು ಕಂಡು ಮಹಾಬಲಿ ಭೀಮಸೇನನು ವೇಗದಿಂದ ಅವನನ್ನು ತನ್ನೆಡೆಗೆ ಎಳೆದುಕೊಂಡು ಪ್ರಜ್ಞೆತಪ್ಪುವಂತೆ ಹಿಂಡತೊಡಗಿದನು. ವಿಜಯಿಗಳಲ್ಲಿ ಶ್ರೇಷ್ಠನೂ ಕ್ರೋಧಾವಿಷ್ಟನೂ ಆದ ವೃಕೋದರನು ಜೋರಾಗಿ ಉಸಿರಾಡುತ್ತಾ ಪುನಃ ಅವನ ಕೂದಲನ್ನು ಬಲವಾಗಿ ಹಿಡಿದುಕೊಂಡನು. ಹುಲಿಯು ಮಾಂಸದ ಬಯಕೆಯಿಂದ ದೊಡ್ಡ ಜಿಂಕೆಯನ್ನು ಹಿಡಿದು ಗರ್ಜಿಸುವಂತೆ ಮಹಾಬಲಿ ಬೀಮನು ಕೀಚಕನನ್ನು ಹಿಡಿದುಕೊಂಡು ಗರ್ಜಿಸಿದನು. ಪಿನಾಕಪಾಣಿ ಈಶ್ವರನು ಪಶುವಿಗೆ ಮಾಡಿದಂತೆ ಅವನ ಕೈ ಕಾಲು ತಲೆ ಮತ್ತು ಕತ್ತುಗಳನ್ನು ಸಂಪೂರ್ಣವಾಗಿ ಅವನ ದೇಹದೊಳಕ್ಕೆ ತುರುಕಿದನು. ಎಲ್ಲ ಅಂಗಗಳು ಜಜ್ಜಿಹೋಗಿ ಮಾಂಸದ ಮುದ್ದೆಯಂತಾಗಿದ್ದ ಅವನನ್ನು ಮಹಾಬಲಿ ಭೀಮನು ಕೃಷ್ಣೆಗೆ ತೋರಿಸಿದನು. ಮಹಾತೇಜಸ್ವಿ ಪಾಂಡುನಂದನನು ದ್ರೌಪದಿಗೆ ಹೀಗೆ ಹೇಳಿದನು: “ಪಾಂಚಾಲೀ! ಇವನನ್ನು ನೋಡು. ಈ ಕಾಮುಕನಿಗೆ ಏನಾಗಿದೆಯೆಂಬುದನ್ನು ನೋಡು.”
ಹೀಗೆ ಕೀಚಕನನ್ನು ಕೊಂದು ಕೋಪವನ್ನು ತಣಿಸಿಕೊಂಡ ಆ ಭೀಮನು ದ್ರೌಪದಿ ಕೃಷ್ಣೆಯನ್ನು ಬೀಳ್ಕೊಂಡು ಬೇಗ ಅಡುಗೆಮನೆಗೆ ಹೋದನು. ಸ್ತ್ರೀಯರಲ್ಲಿ ಶ್ರೇಷ್ಠಳಾದ ದ್ರೌಪದಿಯಾದರೋ ಕೀಚಕನನ್ನು ಕೊಲ್ಲಿಸಿ ಹರ್ಷಿತಳಾಗಿ ಸಂತಾಪವನ್ನು ನೀಗಿ ಭವನರಕ್ಷಕರಿಗೆ ಹೇಳಿದಳು: “ಬಂದು ನೋಡಿ! ಪರಸ್ತ್ರೀಕಾಮದಿಂದ ಮತ್ತನಾದ ಈ ಕೀಚಕನು ನನ್ನ ಪತಿಗಳಾದ ಗಂಧರ್ವರಿಂದ ಹತನಾಗಿ ಮಲಗಿದ್ದಾನೆ.” ಅವಳ ಈ ಮಾತುಗಳನ್ನು ಕೇಳಿದ ನಾಟ್ಯಶಾಲೆಯ ರಕ್ಷಕರು ಪಂಜುಗಳನ್ನು ಹಿಡಿದು ಸಹಸ್ರ ಸಂಖ್ಯೆಗಳಲ್ಲಿ ಕೂಡಲೇ ಬಂದರು. ಭವನದಲ್ಲಿ ಪ್ರಾಣವಿಲ್ಲದೇ ರಕ್ತದಿಂದ ತೊಯ್ದು ನೆಲದ ಮೇಲೆ ಬಿದ್ದಿದ್ದ ಕೀಚಕನನ್ನು ಕಂಡರು. ಗಂದರ್ವರಿಂದ ಹತನಾದ ಅವನನ್ನು ನೋಡಿ “ಇವನ ಕೊರಳೆಲ್ಲಿ? ಕಾಲುಗಳೆಲ್ಲಿ? ಕೈಗಳೆಲ್ಲಿ? ತಲೆಯಲ್ಲಿ?” ಎಂದು ಹುಡುಕಾಡಿದರು.
ಉಪಕೀಚಕರ ವಧೆ
ಆ ಹೊತ್ತಿನಲ್ಲಿ ಅವನ ಬಾಂಧವರೆಲ್ಲ ಅಲ್ಲಿಗೆ ಬಂದು ಸುತ್ತಲೂ ನಿಂತು ಕೀಚಕನನ್ನು ನೋಡಿ ಅಳತೊಡಗಿದರು. ನೆಲಕ್ಕೆತ್ತಿ ಹಾಕಿದ್ದ ಆಮೆಯಂತೆ ಎಲ್ಲ ಅಂಗಗಳೂ ಸೇರಿಹೋಗಿದ್ದ ಕೀಚಕನನ್ನು ಕಂಡು ಎಲ್ಲರೂ ರೋಮಾಂಚನಗೊಂಡು ಭೀತಿಗ್ರಸ್ತರಾದರು. ಇಂದ್ರನು ದಾನವನನ್ನು ಜಜ್ಜಿಹಾಕಿದಂತೆ ಭೀಮಸೇನನು ಜಜ್ಜಿಹಾಕಿದ್ದ ಅವನ ಶವವನ್ನು ಕಂಡು ಸಂಸ್ಕಾರಮಾಡಬಯಸಿ ಅವನನ್ನು ಹೊರಕ್ಕೆ ಒಯ್ಯತೊಡಗಿದರು. ಬಂದು ನೆರೆದಿದ್ದ ಆ ಸೂತಪುತ್ರರು ಹತ್ತಿರದಲ್ಲಿ ಕಂಬವೊಂದನ್ನು ಹಿಡಿದು ನಿಂತಿದ್ದ ಸುಂದರಾಂಗಿ ಕೃಷ್ಣೆಯನ್ನು ನೋಡಿದರು. ಸೇರಿದ್ದ ಸೂತರಲ್ಲಿ ಒಬ್ಬ ಉಪಕೀಚಕನು ಅವರಿಗೆ ಹೇಳಿದನು: “ಯಾವ ಕುಲಟೆಗಾಗಿ ಕೀಚಕನು ಹತನಾದನೋ ಅವಳನ್ನು ಶೀಘ್ರವೇ ಕೊಲ್ಲಿ. ಅಥವಾ ಅವಳನ್ನು ಇಲ್ಲಿ ಕೊಲ್ಲುವುದು ಬೇಡ. ಅವಳ ಕಾಮಿಯೊಡನೆ ಸುಡೋಣ. ಮೃತನಾದ ಸೂತಪುತ್ರನಿಗೆ ಇದು ಸರ್ವಥಾ ಪ್ರಿಯವಾಗುತ್ತದೆ.”
ಅನಂತರ ಅವರು ವಿರಾಟನಿಗೆ ಹೇಳಿದರು: “ಇವಳಿಗಾಗಿ ಕೀಚಕನು ಹತನಾದನು. ಆದ್ದರಿಂದ ಅವನೊಡನೆ ಇವಳನ್ನೂ ಇಂದು ಸುಡಬೇಕು. ನೀನು ಅಪ್ಪಣೆ ಕೊಡತಕ್ಕದ್ದು.”
ಆ ಸೂತರ ಪರಾಕ್ರಮವನ್ನು ತಿಳಿದಿದ್ದ ರಾಜನು ಸೂತಪುತ್ರನೊಡನೆ ಸೈರಂಧ್ರಿಯನ್ನು ಸುಡಲು ಅನುಮತಿಯನ್ನಿತ್ತನು. ಹೆದರಿ ಮೂರ್ಛೆಹೋಗುವಂತಿದ್ದ ಆ ಕಮಲೋಚನೆ ಕೃಷ್ಣೆಯನ್ನು ಆ ಕೀಚಕರು ಸಮೀಪಿಸಿ ಗಟ್ಟಿಯಾಗಿ ಹಿಡಿದುಕೊಂಡರು. ಆಗ ಅವರೆಲ್ಲರೂ ಆ ಸುಮಧ್ಯಮೆಯನ್ನು ಬಿಗಿಯಾಗಿ ಕಟ್ಟಿ ಎತ್ತಿಕೊಂಡು ಸ್ಮಶಾನಾಭಿಮುಖವಾಗಿ ಹೊರಟರು. ಆ ಸೂತಪುತ್ರರು ಹೊತ್ತೊಯ್ಯುತ್ತಿದ್ದ ನಾಥವತಿ ಸತೀ ಅನಿಂದಿತೆ ಕೃಷ್ಣೆಯು ರಕ್ಷಕನನ್ನು ಬಯಸುತ್ತಾ ಗಟ್ಟಿಯಾಗಿ ಕೂಗಿದಳು: “ಜಯ, ಜಯಂತ, ವಿಜಯ, ಜಯತ್ಸೇನ ಜಯದ್ಬಲರೇ! ನನ್ನ ಮಾತನ್ನು ಕೇಳಿ! ಸೂತಪುತ್ರರು ನನ್ನನ್ನು ಒಯ್ಯುತ್ತಿದ್ದಾರೆ. ವೇಗಗಾಮಿಗಳೂ ಕೀರ್ತಿಶಾಲಿಗಳೂ ಆದ ಯಾವ ಗಂಧರ್ವರ ಸಿಡಿಲ ಗರ್ಜನೆಯಂಥ ಬಿಲ್ಲಿನ ಹೆದೆಯ ಠೇಂಕಾರ, ಭಯಂಕರ ಗರ್ಜನೆ ಮತ್ತು ಪ್ರಬಲ ರಥಘೋಷವು ಮಹಾಯುದ್ಧದಲ್ಲಿ ಕೇಳಿ ಬರುತ್ತದೆಯೋ ಅವರು ನನ್ನ ಕೂಗನ್ನು ಕೇಳಿಸಿಕೊಳ್ಳಲಿ. ಸೂತಪುತ್ರರು ನನ್ನನ್ನು ಒಯ್ಯುತ್ತಿದ್ದಾರೆ.”
ಕೃಷ್ಣೆಯ ಆ ದೀನ ಮಾತುಗಳನ್ನೂ ಗೋಳನ್ನೂ ಕೇಳಿದ ಭೀಮನು ಸ್ವಲ್ಪವೂ ವಿಚಾರಮಾಡದೇ ಹಾಸಿಗೆಯಿಂದ ಜಿಗಿದೆದ್ದು ಹೇಳಿದನು: “ಸೈರಂಧ್ರಿ! ನಿನ್ನ ಕೂಗನ್ನು ನಾನು ಕೇಳುತ್ತಿದ್ದೇನೆ. ಆದ್ದರಿಂದ ಸೂತಪುತ್ರರಿಂದ ನಿನಗೆ ಭಯವಿಲ್ಲ.”
ಆ ಮಹಾಬಾಹುವು ಹೀಗೆ ಹೇಳಿ ಅವರನ್ನು ಕೊಲ್ಲುವ ಅಪೇಕ್ಷೆಯಿಂದ ವಿಜೃಂಭಿಸಿದನು. ಬಳಿಕ ಅವನು ಮೈಯುಬ್ಬಿಸಿ ವೇಷ ಬದಲಿಸಿಕೊಂಡು ರಹಸ್ಯ ಮಾರ್ಗದಿಂದ ನುಸುಳಿ ಹೊರಹೊರಟನು. ಆ ಭೀಮಸೇನನು ಪ್ರಾಕಾರದಲ್ಲಿದ್ದ ಮರವೊಂದನ್ನು ಬೇಗ ಕಿತ್ತುಕೊಂಡು ಆ ಕೀಚಕರು ಹೋದ ಸ್ಮಶಾನದತ್ತ ಓಡಿದನು. ಕಾಂಡಗಳಿಂದಲೂ ಕೊಂಬೆಗಳಿಂದಲೂ ಕೂಡಿದ ಬಲಿಷ್ಠವಾದ ಹತ್ತು ಮಾರುದ್ದದ ಆ ಮರವನ್ನು ಹಿಡಿದುಕೊಂಡು ಅವನು ದಂಡಪಾಣಿ ಯಮನಂತೆ ಸೂತರ ಬೆನ್ನಟ್ಟಿದನು. ಅವನ ತೊಡೆಗಳ ವೇಗಕ್ಕೆ ಸಿಲುಕಿದ ಆಲ, ಅರಳಿ ಮತ್ತು ಮುತ್ತುಗದ ಮರಗಳು ಗುಂಪು ಗುಂಪಾಗಿ ಉರುಳಿ ನೆಲದ ಮೇಲೆ ಬಿದ್ದವು. ಸಿಂಹದಂತೆ ಕೃದ್ಧನಾಗಿ ಬಂದ ಆ ಗಂಧರ್ವನನ್ನು ಕಂಡು ಸೂತರೆಲ್ಲರೂ ವಿಷಾದ-ಭಯಕಂಪಿತರಾಗಿ ತಲ್ಲಣಿಸಿದರು. ಯಮನಂತೆ ಬಂದ ಗಂಧರ್ವನನ್ನು ನೋಡಿ ಅಣ್ಣನನ್ನು ಸುಡಲು ಬಂದಿದ್ದ ಉಪಕೀಚಕರು ವಿಷಾದ-ಭಯಕಂಪಿತರಾಗಿ ಪರಸ್ಪರರಲ್ಲಿ ಮತನಾಡಿಕೊಂಡರು: “ಬಲಶಾಲಿ ಗಂಧರ್ವನು ಮರವನ್ನು ಎತ್ತಿ ಹಿಡಿದು ಕೃದ್ಧನಾಗಿ ಬರುತ್ತಿದ್ದಾನೆ. ಸೈರಂಧ್ರಿಯನ್ನು ಬೇಗ ಬಿಟ್ಟುಬಿಡಿ. ನಮಗೆ ಮಹಾಭಯವು ಬಂದೊದಗಿದೆ.” ಭೀಮಸೇನನು ಕಿತ್ತು ತಂದಿದ್ದ ಆ ಮರವನ್ನು ಕಂಡು ಅವರು ದ್ರೌಪದಿಯನ್ನು ಅಲ್ಲಿಯೇ ಬಿಟ್ಟು ನಗರದತ್ತ ಓಡಿದರು. ಓಡಿಹೋಗುತ್ತಿದ್ದ ಅವರನ್ನು ಕಂಡು ಭೀಮನು ಇಂದ್ರನು ದಾನವರನ್ನು ಕೊಂದಂತೆ ಆ ನೂರೈದು ಮಂದಿಯನ್ನು ಯಮಾಲಯಕ್ಕಟ್ಟಿದನು. ಅನಂತರ ಆ ಮಹಾಬಾಹುವು ಕೃಷ್ಣೆಯನ್ನು ಬಿಡಿಸಿ ಸಮಾಧಾನಗೊಳಿಸಿದನು. ಅಸಾಧ್ಯನಾದ ಆ ವೃಕೋದರನು ಅಶ್ರುಪೂರ್ಣಮುಖಿಯೂ ದೀನೆಯೂ ಆದ ದ್ರೌಪದಿಗೆ ಹೇಳಿದನು: “ಭೀರು! ತಪ್ಪಿಲ್ಲದ ನಿನ್ನನ್ನು ಕ್ಲೇಶಗೊಳಿಸುವವರು ಹೀಗೆ ಹತರಾಗುತ್ತಾರೆ. ನೀನು ನಗರಕ್ಕೆ ಹೋಗು. ನಿನಗೆ ಇನ್ನು ಭಯವಿಲ್ಲ. ನಾನು ಬೇರೆದಾರಿಯಿಂದ ವಿರಾಟನ ಅಡುಗೆಮನೆಗೆ ಹೋಗುತ್ತೇನೆ.”
ಅಲ್ಲಿ ನೂರೈದುಮಂದಿ ಹತರಾದರು. ಕತ್ತರಿಸಿ ಉರುಳಿದ ಮರಗಳ ಮಹಾವನದಂತೆ ಅವರು ಬಿದ್ದಿದ್ದರು. ಹೀಗೆ ಆ ನೂರೈದುಮಂದಿ ಕೀಚಕರು ಹತರಾದರು. ಮೊದಲೇ ಹತನಾದ ಸೇನಾಪತಿಯೂ ಸೇರಿ ಆ ಸೂತರು ನೂರಾ ಆರು ಮಂದಿ. ಅಲ್ಲಿ ನೆರೆದಿದ್ದ ನರನಾರಿಯರು ಆ ಮಹದಾಶ್ಚರ್ಯವನ್ನು ನೋಡಿ ಪರಮ ವಿಸ್ಮಯಗೊಂಡು ಏನೂ ಮಾತನಾಡಲಿಲ್ಲ.
ಕೀಚಕದಹನ
ಹತರಾಗಿದ್ದ ಸೂತರನ್ನು ನೋಡಿದ ಅವರು ರಾಜನಲ್ಲಿಗೆ ಹೋಗಿ ನಿವೇದಿಸಿದರು: “ರಾಜ! ನೂರಾರು ಮಂದಿ ಸೂತಪುತ್ರರು ಗಂಧರ್ವರಿಂದ ಹತರಾದರು. ವಜ್ರಾಯುಧದಿಂದ ಸೀಳಿಹೋದ ಪರ್ವತದ ಮಹಾಶಿಖರದಂತೆ ಸೂತರು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣುತ್ತಿದೆ. ಸೈರಂಧ್ರಿಯು ಬಿಡುಗಡೆಹೊಂದಿ ಮತ್ತೆ ನಿನ್ನ ಮನೆಗೆ ಇದೋ ಬರುತ್ತಿದ್ದಾಳೆ. ನಿನ್ನ ನಗರವೆಲ್ಲವೂ ಅಪಾಯಕ್ಕೀಡಾಗುತ್ತಿದೆ. ಸೈರಂಧ್ರಿಯು ಅತೀವ ರೂಪವತಿ. ಗಂಧರ್ವರೋ ಮಹಾಬಲರು. ಪುರುಷರಿಗೆ ಸಂಭೋಗವು ಇಷ್ಟವಾದುದು. ಇದರಲ್ಲಿ ಸಂದೇಹವಿಲ್ಲ. ಸೈರಂಧ್ರಿಯ ಕಾರಣದಿಂದ ನಿನ್ನ ಈ ಪುರವು ವಿನಾಶವಾಗದಂತೆ ಬೇಗನೇ ತಕ್ಕ ನೀತಿಯನ್ನು ಯೋಜಿಸು.”
ಅವರ ಆ ಮಾತನ್ನು ಕೇಳಿದ ವಾಹಿನೀಪತಿ ವಿರಾಟನು ಹೇಳಿದನು: “ಈ ಸೂತರ ಅಂತ್ಯಕ್ರಿಯೆಗಳನ್ನು ನೆರವೇರಿಸಿ. ಆ ಕೀಚಕರನ್ನೆಲ್ಲಾ ಚೆನ್ನಾಗಿ ಪ್ರಜ್ವಲಿತವಾಗಿರುವ ಒಂದೇ ಚಿತಾಗ್ನಿಯಲ್ಲಿ ರತ್ನಗಂಧ ಸಹಿತವಾಗಿ ಬೇಗನೆ ದಹನ ಮಾಡತಕ್ಕದ್ದು.”
ಭೀತಿಗೊಂಡ ರಾಜನು ರಾಣಿ ಸುದೇಷ್ಣೆಗೆ ಹೇಳಿದನು: “ಸೈರಂಧ್ರಿಯು ಬಂದಾಗ ನಾನೇ ಹೇಳಿದೆನೆಂದು ಈ ಮಾತನ್ನು ಹೇಳಿಬಿಡು. ‘ಹೋಗು ಸೈರಂಧ್ರಿ! ನಿನಗೆ ಮಂಗಳವಾಗಲಿ! ಅಬಲೇ! ಮನಬಂದಲ್ಲಿ ಹೋಗು. ಗಂಧರ್ವರಿಂದಾದ ಪರಾಭವದಿಂದ ರಾಜನು ಹೆದರಿದ್ದಾನೆ.’ ಗಂಧರ್ವರಿಂದ ರಕ್ಷಿತರಾದ ಅವಳಿಗೆ ಸ್ವತಃ ನಾನೇ ಹೇಳಲು ನನಗೆ ಧೈರ್ಯವಿಲ್ಲ. ಸ್ತ್ರೀಯರು ನಿರ್ದೋಷಿಗಳು. ಆದ್ದರಿಂದ ಅವಳಿಗೆ ಹೇಳಬೇಕೆಂದು ನಿನಗೆ ತಿಳಿಸುತ್ತಿದ್ದೇನೆ.”
ಇತ್ತ ಸೂತಪುತ್ರನನ್ನು ಕೊಂದ ಭೀಮಸೇನನಿಂದ ಬಿಡಿಸಲ್ಪಟ್ಟ ಕೃಷ್ಣೆಯು ಭಯಮುಕ್ತಳಾಗಿ ನಗರದ ಕಡೆ ನಡೆದಳು. ಮನಸ್ವಿನೀ ಆ ಬಾಲೆಯು ಶರೀರವನ್ನೂ ವಸ್ತ್ರಗಳನ್ನೂ ನೀರಿನಿಂದ ಶುಚಿಮಾಡಿಕೊಂಡು ಹುಲಿಗೆ ಹೆದರಿದ ಹರಿಣಿಯಂತೆ ಬರುತ್ತಿದ್ದಳು. ಅವಳನ್ನು ನೋಡಿದ ಜನರು ಗಂಧರ್ವರ ಭಯಪೀಡಿತರಾಗಿ ಹತ್ತು ದಿಕ್ಕಿಗೂ ಓಡಿಹೋದರು. ಕೆಲವರು ಕಣ್ಣು ಮುಚ್ಚಿಕೊಂಡರು. ಅನಂತರ ದ್ರೌಪದಿಯು ಅಡುಗೆಮನೆಯ ಬಾಗಿಲಲ್ಲಿ ಮದಿಸಿದ ಮಹಾಗಜನಂತೆ ನಿಂತಿದ್ದ ಭೀಮಸೇನನನ್ನು ನೋಡಿದಳು. ಅವನನ್ನು ಕುರಿತು ಅಚ್ಚರಿಪಡುತ್ತಾ ಮೆಲ್ಲನೆ ಸನ್ನೆಗಳಿಂದ ಹೀಗೆ ನುಡಿದಳು: “ನನ್ನನ್ನು ಬಿಡಿಸಿದ ಗಂಧರ್ವರಾಜನಿಗೆ ನಮಸ್ಕಾರ!”
ಭೀಮಸೇನನು ಹೇಳಿದನು: “ಯಾರ ವಶವರ್ತಿಗಳಾಗಿ ಇಲ್ಲಿ ಪುರುಷರು ಚರಿಸುತ್ತಿದ್ದಾರೋ ಅವರು ಈ ನಿನ್ನ ಮಾತನ್ನು ಕೇಳಿ ಋಣಮುಕ್ತರಾಗಿರುತ್ತಾರೆ.”
ಬಳಿಕ ಅವಳು ನರ್ತನಶಾಲೆಯಲ್ಲಿ ವಿರಾಟರಾಜನ ಕನ್ಯೆಯರಿಗೆ ನೃತ್ಯವನ್ನು ಕಲಿಸುತ್ತಿದ್ದ ಮಹಾಭುಜ ಧನಂಜಯನನ್ನು ಕಂಡಳು. ಕನ್ಯೆಯರು ಹೇಳಿದರು: “ಸೈರಂಧ್ರಿ! ಅದೃಷ್ಟವಶಾತ್ ನೀನು ಬಿಡುಗಡೆ ಹೊಂದಿದೆ. ಅದೃಷ್ಟವಶಾತ್ ಮರಳಿ ಬಂದೆ. ನಿರಪರಾಧಿಯಾದ ನಿನಗೆ ಕ್ಲೇಶವನ್ನುಂಟುಮಾಡಿದ ಸೂತರು ಅದೃಷ್ಟವಶಾತ್ ಹತರಾದರು.”
ಬೃಹನ್ನಡೆಯು ಹೇಳಿದಳು: “ಸೈರಂಧ್ರಿ! ನೀನು ಬಿಡುಗಡೆಗೊಂಡುದು ಹೇಗೆ? ಆ ಪಾಪಿಗಳು ಹತರಾದುದು ಹೇಗೆ? ಎಲ್ಲವನ್ನೂ ಯಥಾವತ್ತಾಗಿ ನಿನ್ನಿಂದಲೇ ಕೇಳ ಬಯಸುತ್ತೇನೆ.”
ಸೈರಂಧ್ರಿಯು ಹೇಳಿದಳು: “ಬೃಹನ್ನಡೇ! ಯಾವಾಗಲೂ ಈ ಕನ್ಯೆಯರ ಅಂತಃಪುರದಲ್ಲಿ ಸುಖವಾಗಿ ವಾಸಿಸುವ ನಿನಗೆ ಈ ಸೈರಂಧ್ರಿಯಿಂದ ಏನಾಗಬೇಕಾಗಿದೆ? ಸೈರಂಧ್ರಿಯು ಅನುಭವಿಸುತ್ತಿರುವ ದುಃಖವು ನಿನಗೆ ಪ್ರಾಪ್ತಿಯಾಗಿಲ್ಲ. ಆದುದರಿಂದಲೇ ದುಃಖಿತೆಯಾದ ನನ್ನನ್ನು ಹಾಸ್ಯಮಾಡಲು ಹೀಗೆ ಕೇಳುತ್ತಿರುವೆ.”
ಬೃಹನ್ನಡೆಯು ಹೇಳಿದಳು: “ಕಲ್ಯಾಣೀ! ಬೃಹನ್ನಡೆಯೂ ಅಸದೃಶವಾದ ದುಃಖವನ್ನು ಅನುಭವಿಸುತ್ತಿದ್ದಾಳೆ. ಇವಳು ಪ್ರಾಣಿಜನ್ಮದಲ್ಲಿದ್ದಾಳೆ ಎನ್ನುವುದು ನಿನಗೆ ತಿಳಿಯದು.”
ಅನಂತರ ದ್ರೌಪದಿಯು ಆ ಕನ್ಯೆಯರೊಡನೆ ನಿಧಾನವಾಗಿ ಅರಮನೆಯನ್ನು ಹೊಕ್ಕು ಸುದೇಷ್ಣೆಯ ಬಳಿ ಹೋದಳು. ಅವಳಿಗೆ ಆ ರಾಜಪುತ್ರಿಯು ವಿರಾಟನ ಮಾತಿನಂತೆ ಹೀಗೆಂದಳು: “ಸೈರಂಧ್ರಿ! ನಿನಗೆ ಇಷ್ಟಬಂದಲ್ಲಿಗೆ ಬೇಗ ಹೊರಟುಹೋಗು. ಗಂಧರ್ವರಿಂದಾದ ಪರಾಭವದಿಂದ ರಾಜನು ಹೆದರಿದ್ದಾನೆ. ನಿನಗೆ ಮಂಗಳವಾಗಲಿ. ನೀನಾದರೋ ತರುಣಿ. ಲೋಕದಲ್ಲಿ ಅಪ್ರತಿಮ ರೂಪವುಳ್ಳವಳು.”
ಸೈರಂಧ್ರಿಯು ಹೇಳಿದಳು: “ಭಾಮಿನೀ! ಇನ್ನು ಹದಿಮೂರು ದಿನಗಳವರೆಗೆ ಮಾತ್ರ ರಾಜನು ನನ್ನನ್ನು ಸೈರಿಸಿಕೊಳ್ಳಲಿ. ಅಷ್ಟರಲ್ಲಿ ಗಂಧರ್ವರು ನಿಸ್ಸಂದೇಹವಾಗಿ ಕೃತಕೃತ್ಯರಾಗುತ್ತಾರೆ. ಅನಂತರ ಅವರು ನನ್ನನ್ನು ಕರೆದೊಯ್ಯುತ್ತಾರೆ ಮತ್ತು ನಿನಗೆ ಪ್ರಿಯವನ್ನುಂಟುಮಾಡುತ್ತಾರೆ. ರಾಜನೂ ಕೂಡ ಬಾಂಧವರೊಡನೆ ಶ್ರೇಯಸ್ಸನ್ನು ಗಳಿಸುತ್ತಾನೆ.”
Very good narration
Thanks