ಪಾಂಡವರು ವಿರಾಟನಗರಿಯಲ್ಲಿ ಅಜ್ಞಾತರಾಗಿ ವಾಸಿಸಿದುದು

ಅಜ್ಞಾತವಾಸಕ್ಕೆ ವಿರಾಟ ನಗರದ ಆಯ್ಕೆ

ಧರ್ಮಭೃತರಲ್ಲಿ ಶ್ರೇಷ್ಠ ಯುಧಿಷ್ಠಿರನು ಧರ್ಮನಿಂದ ವರಗಳನ್ನು ಪಡೆದು ಆಶ್ರಮಕ್ಕೆ ತೆರಳಿ ಬ್ರಾಹ್ಮಣರಿಗೆ ನಡೆದುದೆಲ್ಲವನ್ನೂ ವರದಿಮಾಡಿದನು. ಅದೆಲ್ಲವನ್ನೂ ಬ್ರಾಹ್ಮಣರಿಗೆ ಹೇಳಿದ ಯುಧಿಷ್ಠಿರನು ಅರಣೀಸಹಿತ ಕಾಷ್ಠವನ್ನು ಬ್ರಾಹ್ಮಣನಿಗೆ ಒಪ್ಪಿಸಿದನು. ನಂತರ ಮಹಾಮನ ಧರ್ಮಪುತ್ರ ರಾಜ ಯುಧಿಷ್ಠಿರನು ತನ್ನ ಅನುಜರೆಲ್ಲರನ್ನೂ ಕರೆದು ಹೇಳಿದನು: “ರಾಷ್ಟ್ರದಿಂದ ಹೊರಹಾಕಲ್ಪಟ್ಟು ಹನ್ನೆರಡು ವರ್ಷಗಳು ಕಳೆದವು. ಈಗ ಪರಮದುರ್ವಸ ಕಷ್ಟಕರ ಹದಿಮೂರನೆಯ ವರ್ಷವು ಬಂದಿದೆ. ಕೌಂತೇಯ ಅರ್ಜುನ! ಶತ್ರುಗಳಿಗೆ ತಿಳಿಯದಂತೆ ನಾವೆಲ್ಲರೂ ವಾಸಿಸಬಹುದಾದಂಥ ವಾಸಸ್ಥಳವೊಂದನ್ನು ಆರಿಸು.”

ಅರ್ಜುನನು ಹೇಳಿದನು: “ಭರತರ್ಷಭ! ಕೇವಲ ಧರ್ಮನ ವರದಾನದಿಂದ ನಾವು ನರರಿಗೆ ತಿಳಿಯದಂತೆ ಸಂಚರಿಸಬಲ್ಲೆವು. ಆದರೆ, ರಮಣೀಯವೂ ಗೌಪ್ಯವೂ ಆಗಿರಬಲ್ಲ ಕೆಲವು ರಾಷ್ಟ್ರಗಳನ್ನು ಹೇಳುತ್ತೇನೆ. ಅವುಗಳಲ್ಲಿ ನಿನಗಿಷ್ಟವಾದುದನ್ನು ಆರಿಸಿಕೊಳ್ಳಬಹುದು. ಕುರುದೇಶವನ್ನು ಸುತ್ತುವರೆದ ಒಂಭತ್ತು ಶ್ರೀಮಂತ, ರಮ್ಯ ರಾಷ್ಟ್ರ-ಜನಪದಗಳಿವೆ: ಪಾಂಚಾಲ, ಚೇದಿ, ಮತ್ಯ್ಸ, ಶೂರಸೇನ, ಪಟಚ್ಚರ, ದಶಾರ್ಹ, ಮಲ್ಲ, ಶಾಲ್ವ, ಮತ್ತು ಯುಗಂಧರ. ಇವುಗಳಲ್ಲಿ ನಿನಗೆ ಯಾವುದು ಇಷ್ಟವಾಗುತ್ತದೆಯೋ ಅಲ್ಲಿಯೇ ನಾವು ಈ ಸಂವತ್ಸರವನ್ನು ಕಳೆಯೋಣ.”

ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಇದು ಸರಿ. ಆ ಸರ್ವಭೂತೇಶ ಭಗವಾನ್ ಪ್ರಭು ಧರ್ಮನು ಹೇಳಿದುದಕ್ಕಿಂತ ಬೇರೆಯದಾಗಿ ಆಗುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಆಲೋಚಿಸಿ ವಾಸಕ್ಕೆ ರಮಣೀಯವೂ, ಮಂಗಲಕರವೂ, ಸುಖಕರವೂ, ಎಲ್ಲ ಕಡೆಗಳಿಂದ ನಿರ್ಭಯವೂ ಆಗಿರುವ ಸ್ಥಳವನ್ನು ಆರಿಸುವುದು ಅವಶ್ಯಕ. ಧರ್ಮಶೀಲನೂ, ಬಲವಂತನೂ, ಉದಾರನೂ, ಮಹಾಧನವಂತನೂ ಆದ ವೃದ್ಧ ಮತ್ಸ್ಯ ವಿರಾಟನು ಪಾಂಡವರನ್ನು ರಕ್ಷಿಸಬಲ್ಲನು. ಅವನ ಕೆಲಸಗಳನ್ನು ಮಾಡುತ್ತಾ ನಾವು ವಿರಾಟನಗರದಲ್ಲಿ ಈ ಸಂವತ್ಸರವನ್ನು ಕಳೆಯೋಣ. ನಾವು ಯಾವ ಯಾವ ಕೆಲಸಗಳನ್ನು ಮಾಡಬಲ್ಲೆವು ಮತ್ತು ಏನೇನು ಕೆಲಸಗಳನ್ನು ಮಾಡಬೇಕು ಎನ್ನುವುದನ್ನು ಹೇಳಿ.”

ಪಾಂಡವರ ಪಾತ್ರ ನಿಶ್ಚಯ

ಅರ್ಜುನನು ಹೇಳಿದನು: “ನರದೇವ! ವಿರಾಟನೃಪತಿಯ ರಾಷ್ಟ್ರದಲ್ಲಿ ನೀನು ಯಾವ ಕೆಲಸವನ್ನು ಮಾಡುತ್ತೀಯೆ? ಯಾವ ಕೆಲಸದಲ್ಲಿ ನಿನಗೆ ಆಸಕ್ತಿಯಿದೆ? ಕಷ್ಟದ ಸ್ಥಿತಿಯಲ್ಲಿರುವ ಮೃದು, ಉದಾರ, ಲಜ್ಜಾನ್ವಿತ, ಧಾರ್ಮಿಕ, ಸತ್ಯವಿಕ್ರಮ ಪಾಂಡವ ರಾಜ ನೀನು ಏನು ಮಾಡುವೆ? ಇತರ ಜನರಂತೆ ನೀನು ಇಂಥಹ ಕಷ್ಟವನ್ನು ಸ್ವಲ್ಪವೂ ಅರಿತವನಲ್ಲ. ಒದಗಿರುವ ಈ ಘೋರ ಆಪತ್ತನ್ನು ಹೇಗೆ ದಾಟುವೆ?”

ಯುಧಿಷ್ಠಿರನು ಹೇಳಿದನು: “ಕುರುನಂದನರೇ! ಪುರುಷರ್ಷಭ ರಾಜ ವಿರಾಟನ ಬಳಿ ಸೇರಿ ಏನು ಕೆಲಸವನ್ನು ಮಾಡುತ್ತೇನೆ ಎನ್ನುವುದನ್ನು ಕೇಳಿ. ಪಗಡೆಯಾಟದಲ್ಲಿ ನಿಪುಣನೂ ವಿನೋದಪ್ರಿಯನೂ ಆದ ಕಂಕ ಎಂಬ ಹೆಸರಿನ ದ್ವಿಜನಾಗಿ ಆ ಮಹಾತ್ಮ ರಾಜನ ಸಭಾಸದನಾಗಿರುತ್ತೇನೆ. ವೈಡೂರ್ಯ, ಕಾಂಚನ ಮತ್ತು ದಂತಗಳಿಂದ ಮಾಡಿದ ಹೊಳೆಯುವ ಕಪ್ಪು, ಕೆಂಪು, ಹಳದಿ, ಮತ್ತು ಹಸಿರು ಬಣ್ಣದ ಪಗಡೆ ಕಾಯಿಗಳನ್ನು ನಡೆಸುತ್ತೇನೆ. ರಾಜನು ಕೇಳಿದರೆ, ಹಿಂದೆ ನಾನು ಯುಧಿಷ್ಠಿರನ ಪ್ರಾಣಸಖನಂತಿದ್ದೆ ಎಂದು ಹೇಳುತ್ತೇನೆ. ನಾನು ಹೇಗೆ ವಾಸಿಸುವೆನು ಎಂದು ಹೇಳಿದೆ. ವೃಕೋದರ! ವಿರಾಟನಲ್ಲಿ ನೀನು ಯಾವ ಕೆಲಸ ಮಾಡಲು ಇಚ್ಛಿಸುವೆ?”

ಭೀಮನು ಹೇಳಿದನು: “ಬಲ್ಲವನೆಂಬ ಹೆಸರನ್ನಿಟ್ಟುಕೊಂಡು ಅಡುಗೆಯವನೆಂದು ಹೇಳಿಕೊಂಡು ರಾಜ ವಿರಾಟನಲ್ಲಿಗೆ ಹೋಗುತ್ತೇನೆಂದು ನನ್ನ ಅಭಿಮತ. ಅಡುಗೆಯಲ್ಲಿ ಭಾರೀ ಕುಶಲನಾಗಿದ್ದೇನೆ, ಸೂಪಗಳನ್ನು ತಯಾರಿಸಬಲ್ಲೆ, ಇದಕ್ಕೂ ಮೊದಲು ಪಳಗಿದವರು ಮಾಡಿದ ಪದಾರ್ಥಗಳಿಗೂ ಮೀರಿದ ಅಡುಗೆಯನ್ನು ಮಾಡಬಲ್ಲೆ ಎಂದು ತೋರಿಸಿ ಅವನನ್ನು ಸಂತೋಷ ಪಡಿಸುವೆನು. ಎಷ್ಟೇ ಭಾರಿಯಾಗಿದ್ದರೂ ಕಟ್ಟಿಗೆಗಳ ಹೊರೆಯನ್ನು ಹೊತ್ತು ತರುತ್ತೇನೆ. ಇಂಥಹ ಭಾರಿ ಕೆಲಸಗಳನ್ನು ನೋಡಿದ ರಾಜನು ಸಂತೋಷಗೊಳ್ಳುತ್ತಾನೆ. ಬಲಶಾಲಿ ಆನೆಗಳನ್ನಾಗಲೀ ಮಹಾಬಲಿ ಹೋರಿಗಳನ್ನಾಗಲೀ ನಿಗ್ರಹಿಸಬೇಕಾಗಿ ಬಂದರೆ ಅವುಗಳನ್ನೂ ನಿಗ್ರಹಿಸುತ್ತೇನೆ. ಯಾರಾದರೂ ಜಟ್ಟಿಗಳು ಮಲ್ಲಯುದ್ಧ ಮಾಡಬಯಸಿದರೆ ಅವರನ್ನೂ ಹೊಡೆದುಹಾಕಿ ಅವನ ಸಂತೋಷವನ್ನು ಹೆಚ್ಚಿಸುತ್ತೇನೆ. ಆದರೂ ನನ್ನೊಡನೆ ಹೋರಾಡುವವರನ್ನು ಕೊಲ್ಲುವುದಿಲ್ಲ, ನಾಶ ಪಡಿಸದೇ ಅವರನ್ನು ಕೆಡಹುತ್ತೇನೆ. ಯಾರಾದರೂ ಕೇಳಿದರೆ ಯುಧಿಷ್ಠಿರನಲ್ಲಿ ಅಡುಗೆಯವನಾಗಿ ಅನ್ನ, ಮಾಂಸ ಮತ್ತು ಸಾರನ್ನು ತಯಾರಿಸುವವನೂ ಜಟ್ಟಿಯೂ ಆಗಿದ್ದೆನೆಂದು ಹೇಳುತ್ತೇನೆ. ನನ್ನನ್ನು ನಾನು ರಕ್ಷಿಸಿಕೊಂಡು ಇರುತ್ತೇನೆ. ಈ ರೀತಿಯಲ್ಲಿ ನಾನು ಇರುತ್ತೇನೆಂದು ತಿಳಿದಿದ್ದೇನೆ.”

ಯುಧಿಷ್ಠಿರನು ಹೇಳಿದನು: “ಹಿಂದೆ ಖಾಂಡವವನ್ನು ಸುಡಲು ಬಯಸಿದ ಅಗ್ನಿಯು ಬ್ರಾಹ್ಮಣನಾಗಿ ದಾಶಾರ್ಹನ ಜೊತೆಗಿದ್ದ ಯಾವ ನರಶ್ರೇಷ್ಠ, ಮಹಾಬಲಿ, ಮಹಾಬಾಹು, ಅಜಿತ, ಕುರುನಂದನನ ಬಳಿ ಬಂದಿದ್ದನೋ ಆ ಕೌಂತೇಯ ಧನಂಜಯನು ಯಾವ ಕೆಲಸವನ್ನು ಮಾಡುತ್ತಾನೆ? ಅಲ್ಲಿಗೆ ಹೋಗಿ ಏಕರಥದಲ್ಲಿ ಇಂದ್ರನನ್ನು ಗೆದ್ದು ಪನ್ನಗರಾಕ್ಷಸರನ್ನು ಸಂಹರಿಸಿ ಪಾವಕನನ್ನು ತೃಪ್ತಿಪಡಿಸಿದ ಪ್ರತಿಯುಧರಲ್ಲಿ ಶ್ರೇಷ್ಠನೆಂದು ಹೆಸರನ್ನು ಹೊತ್ತ ಅರ್ಜುನನು ಏನು ಮಾಡುತ್ತಾನೆ? ಪ್ರತಪತರಲ್ಲಿ ಸೂರ್ಯನು ಶ್ರೇಷ್ಠ, ದ್ವಿಪದರಲ್ಲಿ ಬ್ರಾಹ್ಮಣನು ಶ್ರೇಷ್ಠ, ಸರ್ಪಗಳಲ್ಲಿ ಆಶೀವಿಷ ಮತ್ತು ತೇಜಸ್ವಿಗಳಲ್ಲಿ ಅಗ್ನಿಯು ಶ್ರೇಷ್ಠ, ಆಯುಧಗಳಲ್ಲಿ ವಜ್ರ ಶ್ರೇಷ್ಠ, ಗೋವುಗಳಲ್ಲಿ ಹೋರಿಯು ಶ್ರೇಷ್ಠ, ನೀರುಗಳಲ್ಲಿ ಸಮುದ್ರವು ಶ್ರೇಷ್ಠ, ಮೋಡಗಳಲ್ಲಿ ಪರ್ಜನ್ಯವು ಶ್ರೇಷ್ಠ, ನಾಗಗಳಲ್ಲಿ ಧೃತರಾಷ್ಟ್ರನೂ, ಹಸ್ತಿಗಳಲ್ಲಿ ಐರಾವತನೂ ಶ್ರೇಷ್ಠ, ಪ್ರಿಯರಲ್ಲಿ ಪುತ್ರನು ಅಧಿಕ ಮತ್ತು ಸುಹೃದಯರಲ್ಲಿ ಭಾರ್ಯೆಯು ಶ್ರೇಷ್ಠ. ಆಯಾಯಾ ಜಾತಿಗಳಲ್ಲಿ ಇವು ವಿಶಿಷ್ಟವಾಗಿರುವಂತೆ ಯುವಕರಲ್ಲಿ ಈ ಸರ್ವಧನುಷ್ಮತ ಗುಡಾಕೇಶನು ಶ್ರೇಷ್ಠ. ಇಂದ್ರ-ವಾಸುದೇವರಿಗೂ ಕಡಿಮೆಯಿಲ್ಲದ, ಗಾಂಡೀವ ಧನುರ್ಧಾರಿ, ಶ್ವೇತಾಶ್ವ ಈ ಬೀಭತ್ಸುವು ಏನು ಮಾಡುತ್ತಾನೆ? ಸಹಸ್ರಾಕ್ಷನ ಮನೆಯಲ್ಲಿ ಪ್ರಕಾಶಿಸುವ ದೇವರೂಪದಿಂದ ಐದು ವರ್ಷಗಳು ಉಳಿದು ದಿವ್ಯಾಸ್ತ್ರಗಳನ್ನು ಪಡೆದ, ಹನ್ನೆರಡನೆಯ ರುದ್ರನೆಂದೂ ಹದಿಮೂರನೆಯ ಆದಿತ್ಯನೆಂದೂ ಮನ್ನಣೆ ಪಡೆದಿರುವ, ಬಿಲ್ಲಿನ ಆಘಾತದಿಂದಾದ ಕಠಿಣ ಚರ್ಮದ, ಗೂಳಿಯ ಹಿಣಿಲುಗಳಂತೆ ಸಮ ಮತ್ತು ದೀರ್ಘವಾದ ಎಡ ಮತ್ತು ಬಲ ಬಾಹುಗಳನ್ನು ಹೊಂದಿರುವ, ಪರ್ವತಗಳಲ್ಲಿ ಹಿಮವಂತನಂತೆ, ಜಲಾಶಯಗಳಲ್ಲಿ ಸಮುದ್ರದಂತೆ, ತ್ರಿದಶರಲ್ಲಿ ಶಕ್ರನಂತೆ, ಮತ್ತು ವಸುಗಳಲ್ಲಿ ಇಂದ್ರನಂತೆ, ಮೃಗಗಳಲ್ಲಿ ಶಾರ್ದೂಲನಂತೆ, ಮತ್ತು ಪಕ್ಷಿಗಳಲ್ಲಿ ಗರುಡನಂತಿರುವ ಯೋದ್ಧರಲ್ಲಿ ಶ್ರೇಷ್ಠ ಅರ್ಜುನನು ಏನು ಮಾಡುತ್ತಾನೆ?”

ಅರ್ಜುನನು ಹೇಳಿದನು: “ಮಹೀಪತೇ! ಷಂಢಕನಾಗಿದ್ದೇನೆಂದು ಪ್ರತಿಜ್ಞೆ ಮಾಡುತ್ತೇನೆ. ಬಿಲ್ಲಿನ ಆಘಾತದ ಗುರುತುಳ್ಳ ನನ್ನ ಈ ಮಹಾ ತೋಳುಗಳನ್ನು ಮುಚ್ಚಿಡಲು ಕಷ್ಟವಾಗುತ್ತದೆ. ಅಗ್ನಿಜ್ವಾಲೆಯಂತೆ ಹೊಳೆಯುವ ಕುಂಡಲಗಳನ್ನು ಕಿವಿಯಲ್ಲಿ ಧರಿಸಿ, ತಲೆಯಲ್ಲಿ ಜಡೆ ಹಾಕಿಕೊಂಡು, ಬೃಹನ್ನಡಾ ಎನ್ನುವ ಹೆಸರಿನವಳಾಗಿ, ಸ್ತ್ರೀ ಭಾವದಿಂದ ಪುನಃ ಪುನಃ ಕಥೆಗಳನ್ನು ಹೇಳುತ್ತಾ, ಮಹೀಪಾಲನ ಅಂತಃಪುರದ ಜನರನ್ನು ರಂಜಿಸುತ್ತೇನೆ. ವಿರಾಟಭವನದಲ್ಲಿ ಸ್ತ್ರೀಯರಿಗೆ ನಾನು ಗೀತ, ಅದ್ಭುತ ನೃತ್ಯ, ವಿವಿಧ ವಾದನಗಳನ್ನು ಹೇಳಿಕೊಡುತ್ತೇನೆ. ಪ್ರಜೆಗಳ ಒಳ್ಳೆಯ ನಡವಳಿಕೆಗಳನ್ನೂ, ಮಾಡಿದ ಕೆಲಸಗಳನ್ನೂ ಬಹಳಷ್ಟು ಹೊಗಳುತ್ತಾ ಮಾಯೆಯಿಂದ ನನ್ನನ್ನು ನಾನು ಮರೆಮಾಡಿಸಿಕೊಂಡಿರುತ್ತೇನೆ. ರಾಜನು ಒಮ್ಮೆ ಕೇಳಿದರೆ, ನಾನು ಯುಧಿಷ್ಠಿರನ ಮನೆಯಲ್ಲಿ ದ್ರೌಪದಿಯ ಪರಿಚಾರಿಕೆಯಾಗಿದ್ದೆ ಎಂದು ಹೇಳುತ್ತೇನೆ. ಈ ರೀತಿಯಲ್ಲಿ ನಾನು ನಲನಂತೆ ಕೃತಕನಾಗಿ ಮರೆಸಿಕೊಂಡು ವಿರಾಟಭವನದಲ್ಲಿ ಸುಖದಿಂದ ಕಾಲ ಕಳೆಯುತ್ತೇನೆ.”

ಯುಧಿಷ್ಠಿರನು ಹೇಳಿದನು: “ಮಗು ನಕುಲ! ಸುಕುಮಾರನೂ, ಸುಂದರನೂ, ಸುಖಾರ್ಹನೂ, ಶೂರನೂ ಆದ ನೀನು ಅಲ್ಲಿ ಏನು ಮಾಡುವೆ?”

ನಕುಲನು ಹೇಳಿದನು: “ನಾನು ವಿರಾಟನೃಪನಲ್ಲಿ ಅಶ್ವಬಂಧುವಾಗುತ್ತೇನೆ. ಗ್ರಂಥಿಕನೆಂಬ ಹೆಸರನ್ನಿಟ್ಟುಕೊಂಡು ನನಗೆ ಪ್ರಿಯವಾದ ಈ ಕೆಲಸವನ್ನು ಮಾಡುತ್ತೇನೆ. ಅಶ್ವಶಿಕ್ಷೆಯಲ್ಲಿ ಹಾಗೂ ಅಶ್ವ ಚಿಕಿತ್ಸೆಯಲ್ಲಿ ಕುಶಲನಾಗಿರುವ ನನಗೂ ಕೂಡ ನಿನ್ನಂತೆ ಅಶ್ವಗಳು ಸತತವೂ ಪ್ರಿಯ. ವಿರಾಟನಗರದ ಜನರು ನನ್ನನ್ನು ಕೇಳಿದರೆ ಇದನ್ನೇ ಹೇಳಿಕೊಂಡು ವಾಸಿಸುತ್ತೇನೆ.”

ಯುಧಿಷ್ಠಿರನು ಹೇಳಿದನು: “ಮಗು ಸಹದೇವ! ಅವನಲ್ಲಿ ನೀನು ಹೇಗೆ ವಾಸಿಸುವೆ? ನೀನು ಹೇಗೆ ವೇಷ ಮರೆಸಿಕೊಂಡಿರುವೆ?”

ಸಹದೇವನು ಹೇಳಿದನು: “ಮಹೀಪತಿ ವಿರಾಟನ ಗೋಸಂಖ್ಯಾತನಾಗುತ್ತೇನೆ. ಗೋವುಗಳನ್ನು ಪಳಗಿಸುವುದರಲ್ಲಿ, ಹಾಲುಕರೆಯುವುದರಲ್ಲಿ ಮತ್ತು ಎಣಿಸುವುದರಲ್ಲಿ ನಾನು ಕುಶಲ. ತಂತಿಪಾಲನೆಂಬ ಖ್ಯಾತನಾಮದಿಂದ ನಿಪುಣನಾಗಿ ನಡೆದುಕೊಳ್ಳುತ್ತೇನೆ. ಇದನ್ನು ತಿಳಿದು ನಿನ್ನ ಮಾನಸಿಕ ಕಳವಳ ತೊಲಗಲಿ. ಹಿಂದೆ ನಾನೇ ನಿನ್ನ ಗೋವುಗಳ ಕೆಲಸವನ್ನು ಸತತವೂ ನಿರ್ವಹಿಸುತ್ತಿದ್ದೆ. ಆ ಕೆಲಸದಲ್ಲಿ ನನ್ನ ಕೌಶಲ್ಯವನ್ನು ನೀನು ತಿಳಿದಿದ್ದೀಯೆ. ಗೋವುಗಳ ಲಕ್ಷಣ, ಚರಿತ ಮತ್ತು ಮಂಗಲ ಎಲ್ಲವನ್ನೂ ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಯಾವುದರ ಕೇವಲ ಮೂತ್ರವನ್ನು ಮೂಸಿ ಗೊಡ್ಡು ಹಸುಗಳೂ ಕೂಡ ಈಯುತ್ತವೆಯೋ ಅಂಥಹ ಪೂಜಿತಲಕ್ಷಣಗಳನ್ನುಳ್ಳ ಹೋರಿಗಳನ್ನೂ ತಿಳಿದಿದ್ದೇನೆ. ಸದಾ ನನಗೆ ಸಂತೋಷವನ್ನು ನೀಡುವ ಈ ರೀತಿಯಲ್ಲಿಯೇ ಅಲ್ಲಿ ವಾಸಿಸುವೆನು. ಇತರರು ನನ್ನನ್ನು ತಿಳಿಯಲಾರರು. ನಿನಗೆ ಇದು ಇಷ್ಟವಾಗುತ್ತದೆ.”

ಯುಧಿಷ್ಠಿರನು ಹೇಳಿದನು: “ಮಾತೆಯಂತೆ ಪರಿಪಾಲನ ಯೋಗ್ಯಳಾದ, ಅಕ್ಕನಂತೆ ಪೂಜನೀಯಳಾದ, ನಮ್ಮ ಪ್ರಾಣಗಳಿಗಿಂಥಲೂ ದೊಡ್ಡವಳಾದ ನಮ್ಮ ಪ್ರಿಯ ಭಾರ್ಯೆ, ಇತರ ಸ್ತ್ರೀಯರಂತೆ ಯಾವ ಕೆಲಸವನ್ನೂ ಮಾಡಲರಿಯದ ದ್ರೌಪದಿ ಕೃಷ್ಣೆಯು ಯಾವ ಕಾರ್ಯವನ್ನು ಮಾಡುವಳು? ಹುಟ್ಟಿದಾಗಿನಿಂದ ಮಾಲೆ, ಸುಗಂಧ, ಅಲಂಕಾರ ಮತ್ತು ವಿವಿಧವಸ್ತ್ರಗಳ ಹೊರತಾಗಿ ಬೇರೆ ಏನನ್ನೂ ತಿಳಿಯದಿರುವ ಈ ಭಾಮಿನೀ, ಸುಕುಮಾರಿ, ಬಾಲಕಿ, ರಾಜಪುತ್ರಿ, ಯಶಸ್ವಿನೀ, ಪತಿವ್ರತೆ, ಮಹಾಭಾಗೆಯು ಹೇಗೆ ನಡೆದುಕೊಳ್ಳುವಳು?”

ದ್ರೌಪದಿಯು ಹೇಳಿದಳು: “ಭಾರತ! ಲೋಕದಲ್ಲಿ ರಕ್ಷಣೆಯಿಲ್ಲದ ಸೈರಂಧ್ರಿಯರೆಂಬ ದಾಸಿಯರಿರುತ್ತಾರೆ. ಇತರ ಸ್ತ್ರೀಯರು ಇವರಂತೆ ಇರುವುದಿಲ್ಲವೆನ್ನುವುದು ಲೋಕನಿಶ್ಚಯ. ನೀನು ನನ್ನನ್ನು ಕೇಳಿದುದಕ್ಕೆ ನಾನು ಕೇಶಕರ್ಮದಲ್ಲಿ ಕುಶಲಳಾದ ಸೈರಂಧ್ರಿ ಎಂದು ಹೇಳಿಕೊಂಡು ನನ್ನನ್ನು ಅಡಗಿಸಿಕೊಂಡಿರುತ್ತೇನೆ. ಯಶಸ್ವಿನೀ ರಾಜಭಾರ್ಯೆ ಸುದೇಷ್ಣೆಯ ಬಳಿ ಇರುತ್ತೇನೆ. ನನ್ನನ್ನು ಪಡೆದ ಅವಳು ರಕ್ಷಿಸುತ್ತಾಳೆ. ಇದರ ಕುರಿತು ನಿನಗೆ ದುಃಖ ಬೇಡ.”

ಯುಧಿಷ್ಠಿರನು ಹೇಳಿದನು: “ಕೃಷ್ಣೇ! ಕುಲದಲ್ಲಿ ಹುಟ್ಟಿದವರಂತೆ ಮಂಗಳಕರ ಒಳ್ಳೆಯ ಮಾತುಗಳನ್ನೇ ಆಡಿದ್ದೀಯೆ. ಸಾಧ್ವೀವ್ರತದಲ್ಲಿರುವ ನೀನು ಪಾಪವನ್ನರಿತಿಲ್ಲ.”

ಧೌಮ್ಯನ ಉಪದೇಶ

ಯುಧಿಷ್ಠಿರನು ಹೇಳಿದನು: “ನೀವು ಹೇಳಿದ ಕೆಲಸಗಳನ್ನೇ ಮಾಡಿ. ನನಗೆ ಕೂಡ ಆಲೋಚಿಸಿದ ಈ ವಿನಿಶ್ಚಯವು ಹಿಡಿಸುತ್ತದೆ. ಈ ನಮ್ಮ ಪುರೋಹಿತನು ಅಡುಗೆಯವರೊಡನೆ ದ್ರುಪದನ ಅರಮನೆಯನ್ನು ಸೇರಿ ಅಗ್ನಿಹೋತ್ರಗಳನ್ನು ರಕ್ಷಿಸಲಿ. ಇಂದ್ರಸೇನ ಮೊದಲಾದವರು ಬರಿದಾದ ರಥಗಳನ್ನು ತೆಗೆದುಕೊಂಡು ಶೀಘ್ರವೇ ದ್ವಾರವತಿಗೆ ಹೋಗಲಿ ಎಂದು ನನಗನ್ನಿಸುತ್ತದೆ. ದ್ರೌಪದಿಯ ಸರ್ವ ಸ್ತ್ರೀ ಪರಿಚಾರಿಕೆಯರೂ ಸಹ ಅಡುಗೆಯವರೊಂದಿಗೆ ಪಾಂಚಾಲಕ್ಕೇ ಹೋಗಲಿ. ಎಲ್ಲರೂ ಕೂಡ ಪಾಂಡವರು ಎಲ್ಲಿದ್ದಾರೆಂದು ನಮಗೆ ಗೊತ್ತಿಲ್ಲ. ಅವರೆಲ್ಲರೂ ನಮ್ಮನ್ನು ತೊರೆದು ದ್ವೈತವನದಿಂದ ಹೊರಟು ಹೋದರು ಎಂದು ಹೇಳಬೇಕು.”

ಧೌಮ್ಯನು ಹೇಳಿದನು: “ತಿಳಿದಿದ್ದರೂ ಸ್ನೇಹಿತರು ಪ್ರೀತಿಯಿಂದ ಹೇಳುತ್ತಾರೆ. ಹಾಗೆ ನಾನು ಕೂಡ ಹೇತುಮಾತ್ರವಾಗಿ ಹೇಳುತ್ತೇನೆ. ತಿಳಿದುಕೊಳ್ಳಿ. ರಾಜಪುತ್ರರೇ! ಅರಮನೆಯ ಸೇವಕನಾದವನು ಅರಮನೆಯಲ್ಲಿದ್ದುಕೊಂಡು ವಿಪತ್ತಿಗೀಡಾಗದಂತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ನಿಮಗೆ ಹೇಳುತ್ತೇನೆ. ನೀವು ಬಲ್ಲವರಿಗೆ ಅಜ್ಞಾತರಾಗಿ ರಾಜಗೃಹದಲ್ಲಿ ಒಂದು ವರ್ಷ ವಾಸ ಮಾಡುವುದು ಕಷ್ಟವೇ ಸರಿ. ಬಾಗಿಲಲ್ಲಿ ಅಪ್ಪಣೆಪಡೆದು ಹೋಗಬೇಕು. ರಾಜನಲ್ಲಿ ವಿಶ್ವಾಸವಿಡಬಾರದು. ಬೇರೆಯವರು ಬಯಸದ ಆಸನವನ್ನೇ ಬಯಸಬೇಕು. ಅವನಿಗೆ ಸಮ್ಮತನೆಂದು ತಿಳಿದು ಅವನ ವಾಹನವನ್ನಾಗಲೀ, ಹಾಸಿಗೆಯನ್ನಾಗಲೀ, ಪೀಠವನ್ನಾಗಲೀ, ಗಜವನ್ನಾಗಲೀ, ರಥವನ್ನಾಗಲೀ ಏರದಿರುವವನು ರಾಜನ ಅರಮನೆಯಲ್ಲಿ ವಾಸಿಸಬಹುದು. ಎಲ್ಲಿ ಕುಳಿತುಕೊಂಡರೆ ದುಷ್ಟಚಾರಿಗಳು ಸಂಶಯಪಡುತ್ತಾರೋ ಅಲ್ಲಿ ಕುಳಿತುಕೊಳ್ಳದೇ ಇರುವವನು ರಾಜವಸತಿಯಲ್ಲಿ ವಾಸಿಸಬಹುದು. ಕೇಳದೇ ರಾಜನಿಗೆ ಉಪದೇಶವನ್ನು ನೀಡಬಾರದು. ಕಾಲೋಚಿತವಾಗಿ ಗೌರವಿಸುತ್ತಾ, ಸುಮ್ಮನೇ ಅವನ ಸೇವೆ ಮಾಡುತ್ತಿರಬೇಕು. ಸುಳ್ಳುಹೇಳುವ ಜನರನ್ನು ರಾಜರು ಸಹಿಸುವುದಿಲ್ಲ. ಹಾಗೆಯೇ ಸುಳ್ಳುಹೇಳುವ ಮಂತ್ರಿಗಳನ್ನು ಅವರು ಅವಮಾನಿಸುತ್ತಾರೆ. ಪ್ರಾಜ್ಞರು ಯಾವಕಾರಣಕ್ಕೂ ಇವರ ಪತ್ನಿಯರೊಂದಿಗಾಗಲೀ ಅಂತಃಪುರದ ಜನರೊಡನೆಯಾಗಲೀ, ದ್ವೇಷಿಗಳೊಡನೆಯಾಗಲೀ, ಅಹಿತರೊಡನೆಯಾಗಲೀ ಮೈತ್ರಿಯನ್ನು ಮಾಡುವುದಿಲ್ಲ. ಅತ್ಯಂತ ಹಗುರಾದ ಕೆಲಸವನ್ನೂ ಕೂಡ ಅವನಿಗೆ ತಿಳಿಯುವಂತೆಯೇ ಮಾಡಬೇಕು. ರಾಜನೊಡನೆ ಹೀಗೆ ನಡೆದುಕೊಳ್ಳುವವನಿಗೆ ಯಾವಾಗಲೂ ಹಾನಿಯುಂಟಾಗುವುದಿಲ್ಲ. ಅಗ್ನಿ ದೇವನಂತೆ ಅವನನ್ನು ಯತ್ನಪೂರ್ವಕವಾಗಿ ಉಪಚರಿಸಬೇಕಾಗುತ್ತದೆ. ನಿಸ್ಸಂಶಯವಾಗಿಯೂ ಅವನು ಹುಸಿ ಉಪಚಾರಮಾಡುವವನನ್ನು ಹಿಂಸಿಸುತ್ತಾನೆ. ಒಡೆಯನು ಏನನ್ನು ವಿಧಿಸುತ್ತಾನೋ ಅದನ್ನೇ ಅನುಸರಿಸಬೇಕು. ಪ್ರಮಾದ, ಅವಹೇಳನೆ ಮತ್ತು ಕೋಪವನ್ನು ಬಿಟ್ಟುಬಿಡಬೇಕು. ಸಮರ್ಥನೆ ನೀಡಬೇಕಾಗಿ ಬಂದಾಗಲೆಲ್ಲಾ ಹಿತ ಮತ್ತು ಪ್ರಿಯವಾದುದನ್ನೇ ಪ್ರತಿಪಾದಿಸಬೇಕು. ಅದರಲ್ಲೂ ಪ್ರಿಯವಾದುದಕ್ಕಿಂತ ಹಿತವಾದುದನ್ನು ಹೇಳಬೇಕು. ಎಲ್ಲ ವಿಷಯಗಳಲ್ಲಿಯೂ ಮಾತುಕಥೆಗಳಲ್ಲಿಯೂ ಅನುಕೂಲಕರನಾಗಿರಬೇಕು. ಅಪ್ರಿಯವೂ ಅಹಿತವೂ ಆಗಿದ್ದುದನ್ನು ಹೇಳಬಾರದು. ಪಂಡಿತನಾದವನು ನಾನು ಇವನಿಗೆ ಪ್ರಿಯನಾದವನಲ್ಲ ಎಂದು ತಿಳಿದುಕೊಂಡೇ ಸೇವಿಸುತ್ತಾನೆ. ಅಪ್ರಮತ್ತನಾಗಿದ್ದುಕೊಂಡು ಸಂಯಮದಿಂದ ಹಿತವನ್ನೂ ಪ್ರಿಯವನ್ನೂ ಉಂಟುಮಾಡಬೇಕು. ಅವನಿಗೆ ಇಷ್ಟವಲ್ಲದ್ದನ್ನು ಮಾಡಕೂಡದು. ಅಹಿತರಾದವರೊಡನೆ ಇರಕೂಡದು. ಸ್ವಸ್ಥಾನದಿಂದ ಕದಲಬಾರದು. ಅಂಥವನು ರಾಜವಸತಿಯಲ್ಲಿ ವಾಸಿಸಬಹುದು. ಪಂಡಿತನು ರಾಜನ ಪಕ್ಕ ಎಡಗಡೆ ಅಥವಾ ಬಲಗಡೆ ಕುಳಿತುಕೊಳ್ಳುಬೇಕು. ಶಸ್ತ್ರಧಾರಿ ರಕ್ಷಕರ ಸ್ಥಾನವು ಹಿಂದುಗಡೆ. ಎದುರುಗಡೆಯ ಎತ್ತರದ ಆಸನವು ಎಂದೂ ನಿಷಿದ್ಧವಾದುದು. ಸಂದರ್ಶನದ ಸಮಯದಲ್ಲಿ ಅತಿ ದೊಡ್ಡ ಮಾತುಗಳನ್ನು ಆಡಬಾರದು. ಇದು ಅತ್ಯಂತ ದರಿದ್ರ ಮತ್ತು ಕೆಳಸ್ಥಾನಕ್ಕೆ ಕಾರಣವಾಗುತ್ತದೆ. ರಾಜನಾಡಿದ ಸುಳ್ಳನ್ನು ಜನರಮುಂದೆ ಪ್ರಕಟಿಸಬಾರದು. ರಾಜನು ಸೈರಿಸದ ವ್ಯಕ್ತಿಯೊಡನೆ ಮಾತನಾಡಕೂಡದು. ನಾನು ಶೂರ, ಬುದ್ಧಿವಂತ ಎಂದು ಅಹಂಕಾರ ಪಡಬಾರದು. ರಾಜನಿಗೆ ಮೆಚ್ಚಿಗೆಯಾಗುವಂತೆ ನಡೆದುಕೊಳ್ಳುವವನು ಸುಖಿಯೂ ಭೋಗವಂತನೂ ಆಗುತ್ತಾನೆ. ಪಡೆಯಲಾಗದ ಐಶ್ವರ್ಯವನ್ನೂ ಪ್ರೀತಿಯನ್ನೂ ರಾಜನಿಂದ ಪಡೆದು, ರಾಜನಿಗೆ ಪ್ರಿಯವಾದವುಗಳಲ್ಲಿ ಮತ್ತು ಹಿತವಾದವುಗಳಲ್ಲಿ ಅಪ್ರಮತ್ತನಾಗಿರಬೇಕು. ಯಾರ ಕೋಪವು ಮಹಾಬಾಧೆಯೂ ಪ್ರಸಾದವು ಮಹಾಫಲವೂ ಆಗಿರುತ್ತದೆಯೋ ಅವನಿಗೆ ಪ್ರಾಜ್ಞಸಮ್ಮತನಾದ ಯಾರು ತಾನೇ ಮನಸ್ಸಿನಲ್ಲಿಯಾದರೂ ಅನರ್ಥವನ್ನು ಬಯಸುತ್ತಾನೆ? ರಾಜನ ಮುಂದೆ ತುಟಿಗಳನ್ನು ಕಚ್ಚಬಾರದು, ಸುಮ್ಮನೇ ಬಾಯಿ ಹಾಕಬಾರದು, ಮತ್ತು ಯಾವಾಗಲೂ ಮೆಲ್ಲಗೆ ಸೀನಬೇಕು, ಹೂಸಬೇಕು ಮತ್ತು ಉಗುಳಬೇಕು. ಅವನೇನಾದರೂ ಹಾಸ್ಯಾಸ್ಪದವಾಗಿ ನಡೆದುಕೊಂಡರೆ, ಜೋರಾಗಿ ನಗಬಾರದು ಮತ್ತು ಉನ್ಮತ್ತನಂತೆ ಖುಷಿಪಡಬಾರದು. ಅತಿ ಧೈರ್ಯದಿಂದ ವರ್ತಿಸಬಾರದು ಮತ್ತು ಗಾಂಭೀರ್ಯವನ್ನು ತಾಳಬಾರದು. ಪ್ರಸನ್ನತೆಯ ಮೃದುವಾದ ನಸುನಗೆಯನ್ನು ತೋರಿಸಬೇಕು. ಲಾಭವಾದಾಗ ಹಿಗ್ಗದವನು, ಅಪಮಾನವಾದಾಗ ವ್ಯಥೆಪಡೆದಿರುವವನು, ಯಾವಾಗಲೂ ಜಾಗರೂಕನಾಗಿರುವವನು ರಾಜವಸತಿಯಲ್ಲಿ ವಾಸಿಸಬಲ್ಲನು. ರಾಜನನ್ನು ರಾಜಪುತ್ರರನ್ನು ಸದಾ ಅನುಸರಿಸುವ ಪಂಡಿತನು ಅಮಾತ್ಯನಾಗಿ ಚಿರವಾದ ಸಂಪತ್ತನ್ನು ಹೊಂದುತ್ತಾನೆ. ಪುರಸ್ಕೃತನಾಗಿದ್ದ ಅಮಾತ್ಯನು ಯಾವುದೋ ಕಾರಣಗಳಿಂದ ತಿರಸ್ಕೃತನಾಗಿದ್ದರೆ, ಅದಕ್ಕಾಗಿ ರಾಜನನ್ನು ವಿರೋಧಿಸದಿದ್ದರೆ ಅವನು ಪುನಃ ಅನುಗ್ರಹವನ್ನು ಪಡೆಯುವನು. ರಾಜನ ಉಪಜೀವಿಯಾಗಿ ಅವನ ನಾಡಿನಲ್ಲಿ ವಾಸಿಸುವ ವಿಚಕ್ಷಣನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವನ ಗುಣವಾದಿಯಾಗಿರಬೇಕು. ಬಲವಂತದಿಂದ ಭೋಗಿಸಲು ರಾಜನನ್ನು ಪ್ರಾರ್ಥಿಸುವ ಅಮಾತ್ಯನು ಬಹುಕಾಲ ಸ್ಥಾನದಲ್ಲಿರುವುದಿಲ್ಲ ಮತ್ತು ಪ್ರಾಣಾಪಾಯಕ್ಕೆ ಗುರಿಯಾಗುವನು. ತನ್ನ ಶ್ರೇಯಸ್ಸನ್ನೇ ನೋಡಿಕೊಂಡು ರಾಜನ ಶತ್ರುವಿನೊಡನೆ ಎಂದೂ ಮಾತನಾಡಬಾರದು. ಯೋಗ್ಯತೆಯ ವಿಷಯದಲ್ಲಿ ರಾಜನನ್ನು ಎಂದೂ ಕೀಳಾಗಿ ಕಾಣಬಾರದು. ಕಳೆಗುಂದದವನು, ಬಲವಂತನು, ಶೂರನು, ನೆರಳಿನಂತೆ ಸದಾ ಜೊತೆಗಿರುವವನು, ಸತ್ಯವಾದೀ, ಮೃದು, ಮತ್ತು ಸಂಯಮಿಯಾದವನು ರಾಜವಸತಿಯಲ್ಲಿ ವಾಸಿಸಬಲ್ಲನು. ಇನ್ನೊಬ್ಬನನ್ನು ಕಳುಹಿಸುತ್ತಿರುವಾಗ ಮುಂದೆ ಬಂದು ನಾನೇನು ಮಾಡಲಿ ಎಂದು ಕೇಳುವವನು ರಾಜವಸತಿಯಲ್ಲಿ ವಾಸಿಸಬಲ್ಲನು. ಬೇಸಿಗೆಯಲ್ಲಾಗಲೀ, ಛಳಿಯಲ್ಲಾಗಲೀ, ರಾತ್ರಿಯಾಗಲೀ, ದಿನವಾಗಲೀ, ಅಪ್ಪಣೆ ಕೊಟ್ಟಾಗ ಹಿಂದೆಮುಂದೆ ನೋಡದವನು ರಾಜವಸತಿಯಲ್ಲಿ ವಾಸಿಸಬಲ್ಲನು. ಮನೆಯಿಂದ ದೂರವಿದ್ದೂ ಪ್ರಿಯರನ್ನು ನೆನೆಯದೆ ದುಃಖ ಮತ್ತು ಸುಖವನ್ನು ಅನುಭವಿಸುವವನು ರಾಜವಸತಿಯಲ್ಲಿ ವಾಸಿಸಬಲ್ಲನು. ತನ್ನಹಾಗಿನ ವಸ್ತ್ರವನ್ನು ಧರಿಸದ, ತನ್ನ ಸನ್ನಿಧಿಯಲ್ಲಿ ಗಟ್ಟಿಯಾಗಿ ನಗದ, ಮಂತ್ರಾಲೋಚನೆಯನ್ನು ಬಯಲು ಮಾಡದವನು ರಾಜನಿಗೆ ಪ್ರಿಯಕರನಾಗಿರುತ್ತಾನೆ. ಕೆಲಸದಲ್ಲಿ ನಿಯುಕ್ತನಾದವನು ಎಂದೂ ಸ್ವಲ್ಪವೂ ಧನವನ್ನು ಮುಟ್ಟಬಾರದು. ದ್ರವ್ಯಾಪಹರಣ ಮಾಡಿದವನು ಬಂಧನ ಅಥವಾ ವಧೆಗೆ ಗುರಿಯಾಗುತ್ತಾನೆ. ಅವನು ಕೊಟ್ಟ ವಾಹನ, ವಸ್ತ್ರ, ಅಲಂಕಾರ ಮತ್ತು ಇತರ ವಸ್ತುಗಳನ್ನು ಯಾವಾಗಲೂ ಬಳಸಬೇಕು. ಇದರಿಂದ ಅವನಿಗೆ ಪ್ರಿಯಕನರಾಗುತ್ತಾನೆ. ಮಕ್ಕಳೇ! ಈ ವರ್ಷವನ್ನು ಹೀಗೆಯೇ ನಡೆದುಕೊಂಡು ಕಳೆಯಿರಿ. ನಂತರ ಸ್ವದೇಶವನ್ನು ಸೇರಿ ನಿಮಗಿಷ್ಟಬಂದಂತೆ ನಡೆದುಕೊಳ್ಳಬಹುದು.”

ಯುಧಿಷ್ಠಿರನು ಹೇಳಿದನು: “ಮಾತೆ ಕುಂತಿ ಮತ್ತು ಮಹಾಮತಿ ವಿದುರನನ್ನು ಬಿಟ್ಟು ಇದನ್ನೆಲ್ಲ ನಮಗೆ ಹೇಳುವವರು ಬೇರೆ ಯಾರೂ ಇಲ್ಲ. ನಿನ್ನಿಂದ ಅನುಶಿಷ್ಟರಾಗಿದ್ದೇವೆ. ನಿನಗೆ ಮಂಗಳವಾಗಲಿ. ದುಃಖವನ್ನು ದಾಟಲು ಈ ಪ್ರಯಾಣವು ವಿಜಯವಾಗಲೆಂದು ಮುಂದಿನ ಕಾರ್ಯಗಳನ್ನು ನೀನು ನಡೆಸಿಕೊಡಬೇಕು.”

ರಾಜನು ಹೀಗೆ ಹೇಳಲು ದ್ವಿಜಸತ್ತಮ ಧೌಮ್ಯನು ಪ್ರಸ್ಥಾನವೇಳೆಗೆ ತಕ್ಕುದಾದ ಎಲ್ಲವನ್ನೂ ವಿಧಿವತ್ತಾಗಿ ನೆರವೇರಿಸಿದನು. ಅವರ ಸಮೃದ್ಧಿ, ವೃದ್ಧಿ, ಲಾಭ ಮತ್ತು ಪಥ್ವೀವಿಜಯಕ್ಕಾಗಿ ಉರಿಯುತ್ತಿರುವ ಅಗ್ನಿಯಲ್ಲಿ ಮಂತ್ರವತ್ತಾಗಿ ಹೋಮ ಮಾಡಿಸಿದನು. ಅಗ್ನಿಯನ್ನೂ ತಪೋಧನ ಬ್ರಾಹ್ಮಣರನ್ನೂ ಪ್ರದಕ್ಷಿಣೆಮಾಡಿ ಯಾಜ್ಞಸೇನಿಯನ್ನು ಮುಂದಿಟ್ಟುಕೊಂಡು ಆ ಆರು ಮಂದಿಯೂ ಹೊರಟರು.

ಅಸ್ತ್ರಗಳನ್ನು ಮುಚ್ಚಿಟ್ಟಿದುದು

ಆ ವೀರರು ಖಡ್ಗಗಳನ್ನು ಬಿಗಿದು, ಆಯುಧಧಾರಿಗಳಾಗಿ, ತೋಳ್ಬಂದಿ ಮತ್ತು ಬೆರಳು ಬಂದಿಗಳನ್ನು ಕಟ್ಟಿಕೊಂಡು ಕಾಲಿಂದೀ ನದಿಯೆಡೆಗೆ ನಡೆದರು. ನಂತರ ಆ ಧನ್ವಿಗಳು ಗಿರಿದುರ್ಗ ವನದುರ್ಗಗಳಲ್ಲಿ ತಂಗುತ್ತಾ ಕಾಲ್ನಡುಗೆಯಲ್ಲಿ ದಕ್ಷಿಣ ತೀರಕ್ಕೆ ಸಾಗಿದರು. ಆ ಮಹೇಶ್ವಾಸ ಮಹಾಬಲ ಪಾಂಡವರು ಮೃಗಗಳನ್ನು ಬೇಟೆಯಾಡುತ್ತಾ ಉತ್ತರದಲ್ಲಿ ದಶಾರ್ಣ ಮತ್ತು ದಕ್ಷಿಣದಲ್ಲಿ ಪಾಂಚಾಲಗಳ ಮಧ್ಯೆ ಯಕೃಲ್ಲೋಮ ಶೂರಸೇನಗಳ ಮೂಲಕ, ಬೇಡರೆಂದು ಹೇಳಿಕೊಳ್ಳುತ್ತಾ, ಕಾಡಿನ ಕಡೆಯಿಂದ ಮತ್ಸ್ಯದೇಶವನ್ನು ಪ್ರವೇಶಿಸಿದರು. ಜನಪದವನ್ನು ಸೇರಿದ ನಂತರ ಕೃಷ್ಣೆಯು ರಾಜನಿಗೆ ಹೇಳಿದಳು: “ಒಂದು ಕಾಲುದಾರಿಯೂ ಹಲವಾರು ಹೊಲಗದ್ದೆಗಳೂ ಕಾಣುತ್ತಿವೆ. ನೋಡು! ವಿರಾಟನ ರಾಜಧಾನಿಯು ಇನ್ನೂ ದೂರದಲ್ಲಿದೆ ಎಂದು ತೋರುತ್ತದೆ. ಇನ್ನೊಂದು ರಾತ್ರಿಯನ್ನು ಇಲ್ಲಿಯೇ ಕಳೆಯೋಣ. ನನಗೆ ಆಯಾಸವಾಗುತ್ತಿದೆ.”

ಯುಧಿಷ್ಠಿರನು ಹೇಳಿದನು: “ಧನಂಜಯ! ಪಾಂಚಾಲಿಯನ್ನು ಎತ್ತಿಕೊಂಡು ನಡೆ! ಕಾಡನ್ನು ದಾಟಿ ರಾಜಧಾನಿಯಲ್ಲಿಯೇ ತಂಗೋಣ!”

ಅರ್ಜುನನು ಗಜರಾಜನಂತೆ ದ್ರೌಪದಿಯನ್ನು ಎತ್ತಿಕೊಂಡು ನಗರವನ್ನು ತಲುಪಿ ಅವಳನ್ನು ಕೆಳಗಿಳಿಸಿದನು. ರಾಜಧಾನಿಯನ್ನು ತಲುಪಿ ಕೌಂತೇಯನು ಅರ್ಜುನನಿಗೆ ಹೇಳಿದನು: “ಆಯುಧಗಳನ್ನು ನಾವು ಎಲ್ಲಿರಿಸಿ ಪುರವನ್ನು ಪ್ರವೇಶಿಸೋಣ? ಆಯುಧಗಳೊಂದಿಗೆ ನಾವು ಪುರವನ್ನು ಪ್ರವೇಶಿಸಿದರೆ ಜನರಲ್ಲಿ ಉದ್ವೇಗವನ್ನುಂಟುಮಾಡುತ್ತೇವೆ ಎನ್ನುವುದರಲ್ಲಿ ಸಂಶಯವಿಲ್ಲ. ನಮ್ಮವರಲ್ಲಿ ಒಬ್ಬರಾದರೂ ಗುರುತಿಸಲ್ಪಟ್ಟರು ಎಂದರೆ ಪುನಃ ಹನ್ನೆರಡು ವರ್ಷಗಳ ವನವಾಸವನ್ನು ಪ್ರವೇಶಿಸುತ್ತೇವೆ ಎಂದು ಪ್ರತಿಜ್ಞೆಯನ್ನೇ ಮಾಡಿಲ್ಲವೇ?”

ಅರ್ಜುನನು ಹೇಳಿದನು: “ಮನುಷ್ಯೇಂದ್ರ! ಈ ದುರಾರೋಹ ಶ್ಮಶಾನದ ಸಮೀಪದಲ್ಲಿಯೇ ಗುಡ್ಡದ ಮೇಲೆ ದಟ್ಟವಾದ ವಿಶಾಲ ರೆಂಭೆಗಳನ್ನುಳ್ಳ ದೊಡ್ಡ ಶಮೀ ವೃಕ್ಷವಿದೆ. ಮೃಗಸರ್ಪಗಳಿಂದ ಕೂಡಿದ ಕಾಡಿನ ದಾರಿಯಲ್ಲಿರುವ ಈ ಮರದ ಬಳಿ ಯಾವ ಮನುಷ್ಯರ ಸುಳಿಯೂ ಕಾಣುತ್ತಿಲ್ಲ. ಆಯುಧಗಳನ್ನು ಇದರಲ್ಲಿ ಕಟ್ಟಿಟ್ಟು ನಾವು ನಗರಕ್ಕೆ ಹೋಗೋಣ. ಅಲ್ಲಿ ನಾವು ಬೇಕಾದಷ್ಟು ಸಮಯ ಇರಬಹುದು.”

ಧರ್ಮಾತ್ಮ ಯುಧಿಷ್ಠಿರನಿಗೆ ಈ ರೀತಿ ಹೇಳಿ ಅವನು ಶಸ್ತ್ರಗಳನ್ನು ಇರಿಸಲು ಹೊರಟನು. ಯಾವುದರಿಂದ ದೇವ-ಮನುಷ್ಯ-ಸರ್ಪಗಳನ್ನೂ, ಅನೇಕ ಜನಪದಗಳನ್ನೂ ಏಕರಥನಾಗಿ ಜಯಿಸಿದನೋ ಆ ಉದಾರ ಮಹಾಘೋಷವನ್ನುಂಟುಮಾಡುವ, ಶತ್ರುಗಣಗಳನ್ನು ಸಂಹರಿಸುವ ಆ ಭಯಂಕರ ಗಾಂಡೀವದ ಹೆದೆಯನ್ನು ಕುರುನಂದನನು ಸಡಿಲಿಸಿದನು. ಪರಂತಪ ವೀರ ಯುಧಿಷ್ಠಿರನು ಯಾವುದರಿಂದ ಕುರುಕ್ಷೇತ್ರವನ್ನು ರಕ್ಷಿಸಿದನೋ ಆ ಸವೆಯದ ಧನುಸ್ಸಿನ ಹೆದೆಯನ್ನು ಬಿಚ್ಚಿದನು. ಯಾವುದರಿಂದ ಪ್ರಭು ಭೀಮಸೇನನು ಸಂಗ್ರಾಮದಲ್ಲಿ ಪಾಂಚಾಲರನ್ನು ಜಯಿಸಿದ್ದನೋ, ದಿಗ್ವಿಜಯದಲ್ಲಿ ಬಹುಶತ್ರುಗಳನ್ನು ಏಕಾಂಗಿಯಾಗಿ ತಡೆದಿದ್ದನೋ, ಛೇದಿತ ಪರ್ವತದ ಅಥವಾ ಸಿಡಿಲಿನ ಸ್ಫೋಟದಂತಿದ್ದ ಯಾವುದರ ಠೇಂಕಾರವನ್ನು ಕೇಳಿ ಶತ್ರುಗಳು ರಣದಿಂದ ಓಡಿಹೋಗುತ್ತಿದ್ದರೋ, ಯಾವುದರಿಂದ ರಾಜ ಸೈಂಧವನನ್ನು ಸದೆಬಡಿದಿದ್ದನೋ, ಆ ಬಿಲ್ಲಿನ ಹೆದೆಯನ್ನು ಭೀಮಸೇನನು ಇಳಿಸಿದನು. ಯಾವುದರಿಂದ ಪಶ್ಚಿಮ ದಿಕ್ಕನ್ನು ಗೆದ್ದಿದ್ದನೋ, ಯಾವುದನ್ನು ಎಳೆದು ಯುದ್ಧದಲ್ಲಿ ಅರಿಗಳನ್ನು ಗೋಳಾಡಿಸಿದ್ದನೋ ಆ ಬಿಲ್ಲಿನ ಹೆದೆಯನ್ನು ಪಾಂಡವ ನಕುಲನು ಸಡಿಸಿಲಿದನು. ವೀರ, ದಾಕ್ಷಿಣ್ಯಶೀಲ ಪ್ರಭು ಸಹದೇವನು ದಕ್ಷಿಣ ದಿಕ್ಕನ್ನು ಜಯಿಸಿದ ಆಯುಧದ ಹೆದೆಯನ್ನು ಬಿಚ್ಚಿದನು. ಹೊಂಬಣ್ಣದ ನೀಳ ಖಡ್ಗಗಳನ್ನೂ, ಬಹುಬೆಲೆಯ ಭತ್ತಳಿಕೆಗಳನ್ನೂ, ಚೂಪಾದ ಮೊನೆಯ ಬಾಣಗಳನ್ನೂ, ಬಿಲ್ಲುಗಳೊಡನೆ ಇರಿಸಿದರು. ಸ್ವತಃ ನಕುಲನೇ ಆ ಮರವನ್ನು ಹತ್ತಿ ಸುರಕ್ಷಿತವಾಗಿರಲೆಂದು ತಾನು ತಿಳಿದೆಡೆಗಳಲ್ಲಿ ಬಿಲ್ಲುಗಳನ್ನು ಇರಿಸಿದನು. ಮಳೆಯ ನೀರಿನಿಂದ ತೋಯುತ್ತದೆಯೆಂದು ಕಂಡುಬಂದಲ್ಲೆಲ್ಲಾ ಅವುಗಳನ್ನು ಗಟ್ಟಿ ಹಗ್ಗಗಳಿಂದ ಬಿಗಿಯಾಗಿ ಕಟ್ಟಿದನು. ದೂರದಿಂದಲೇ ದುರ್ಗಂಧವನ್ನು ಮೂಸಿ ಇಲ್ಲಿ ಶವವನ್ನು ಕಟ್ಟಿದೆಯೆಂದು ತಿಳಿದು ಮನುಷ್ಯರು ಈ ಶಮೀ ವೃಕ್ಷವನ್ನು ವರ್ಜಿಸುವರೆಂದು ಪಾಂಡವರು ಮೃತಶರೀರವೊಂದನ್ನು ಅದಕ್ಕೆ ಕಟ್ಟಿದರು. ದನಕಾಯುವವರು ಮತ್ತು ಕುರಿಕಾಯುವವರು ಕೇಳಿದರೆ “ಇವಳು ನೋರೆಂಭತ್ತು ವರ್ಷಗಳ ನಮ್ಮ ತಾಯಿ. ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಕುಲಧರ್ಮದಂತೆ ನಾವು ಅವಳ ಶರೀರವನ್ನು ಮರಕ್ಕೆ ತಗುಲಿಹಾಕಿದ್ದೇವೆ” ಎಂದು ಹೇಳುತ್ತಾ, ಆ ಪರಂತಪ, ಶತ್ರುನಾಶಕ ಪಾಂಡವರು ನಗರವನ್ನು ಪ್ರವೇಶಿಸಿದರು. ಯುಧಿಷ್ಠಿರನು ತಮಗೆ ಜಯ, ಜಯಂತ, ವಿಜಯ, ಜಯತ್ಸೇನ ಮತ್ತು ಜಯದ್ಬಲ ಎಂದು ಗುಪ್ತನಾಮಗಳನ್ನು ಇಟ್ಟುಕೊಂಡನು. ನಂತರ ಪ್ರತಿಜ್ಞೆಯಂತೆ ಹದಿಮೂರನೆಯ ವರ್ಷದಲ್ಲಿ ಜನರಮಧ್ಯೆ ವೇಷ ಮರೆಯಿಸಿಕೊಂಡು ವಾಸಿಸಲು ಆ ಮಹಾನಗರವನ್ನು ಪ್ರವೇಶಿಸಿದರು.

ವಿರಾಟಸಭೆಗೆ ಪಾಂಡವರ ಪ್ರವೇಶ

ಮೊದಲು ವೈಡೂರ್ಯರೂಪದ ಚಿನ್ನದ ದಾಳಗಳನ್ನು ವಸ್ತ್ರದಲ್ಲಿ ಕಟ್ಟಿ ಕಂಕುಳಲ್ಲಿ ಇಟ್ಟುಕೊಂಡು ರಾಜ ಯುಧಿಷ್ಠಿರನು ಸಭೆಯಲ್ಲಿ ಕುಳಿತಿದ್ದ ವಿರಾಟನ ಬಳಿ ಬಂದನು. ಆ ನರಾಧಿಪ, ರಾಷ್ಟ್ರಪತಿ, ಯಶಸ್ವಿನಿ, ಮಹಾಯಶ, ಕೌರವವಂಶವರ್ಧನ, ಮಹಾನುಭಾವ, ನರರಾಜಸತ್ಕೃತನು ಜಯಿಸಲಸಾಧ್ಯ ತೀಕ್ಷ್ಣವಿಷದ ಸರ್ಪದಂತಿದ್ದನು. ಅಮರರಂತೆ ಬಲದಲ್ಲಿ ವೀರ್ಯವಂತನೂ, ರೂಪದಲ್ಲಿ ಕಾಂತಿಯುಕ್ತನೂ ಆಗಿದ್ದ ಆ ಮಹಾ ನರರ್ಷಭನು ಭಾರಿ ಮೋಡಗಳಿಂದ ಆವೃತ ಸೂರ್ಯನಂತೆ ಮತ್ತು ಬೂದಿಮುಚ್ಚಿದ ಕೆಂಡದಂತಿದ್ದನು. ಮೋಡಮುಸುಕಿದ ಚಂದ್ರನಂತೆ ಹತ್ತಿರ ಬರುತ್ತಿದ್ದ ಆ ಪಾಂಡವನನ್ನು ಕಂಡು ರಾಜಾ ವಿರಾಟನು “ಮೊದಲಬಾರಿ ಸಭೆಯಲ್ಲಿ ತೋರಿಸಿಕೊಂಡ ಇವನು ಯಾರು?” ಎಂದು ಸಭೆಯಲ್ಲಿ ಕುಳಿತಿದ್ದ ಮಂತ್ರಿದ್ವಿಜರನ್ನು, ಸೂತಮುಖ್ಯರನ್ನು ಮತ್ತು ಇತರ ಸಭಾಸದರನ್ನು ಕೇಳಿದನು. “ಈ ನರೋತ್ತಮನು ದ್ವಿಜನಿರಲಾರ. ಇವನು ರಾಜನೆಂದು ನನ್ನ ಅಭಿಪ್ರಾಯ. ಆದರೂ ಇವನಲ್ಲಿ ದಾಸರಿಲ್ಲ, ರಥವಿಲ್ಲ, ಕುಂಡಲಗಳಿಲ್ಲ! ಆದರೆ ಇವನು ಇಂದ್ರನಂತೆ ಹೊಳೆಯುತ್ತಿದ್ದಾನೆ. ಇವನು ಮೂರ್ಧಾಭಿಷಿಕ್ತನಾಗಿದ್ದಾನೆಂದು ಇವನ ಶರೀರ ಲಕ್ಷಣಗಳು ನನ್ನ ಮನಸ್ಸಿಗೆ ಸೂಚಿಸುತ್ತಿವೆ. ಮದೋತ್ಕಟ ಆನೆಯು ತಾವರೆಕೊಳಕ್ಕೆ ಬರುವಂತೆ ಇವನು ನಿಶ್ಚಿಂತನಾಗಿ ನನ್ನ ಕಡೆ ಬರುತ್ತಿದ್ದಾನೆ! ”

ಆಗ ಆ ನರರ್ಷಭ ಯುದಿಷ್ಠಿರನು ಹೀಗೆ ತರ್ಕಿಸುತ್ತಿರುವ ವಿರಾಟನಿಗೆ ಹೇಳಿದನು: “ಸಾಮ್ರಾಟ! ಸರ್ವವನ್ನೂ ಕಳೆದುಕೊಂಡು ಜೀವಿತಾರ್ಥಿಯಾಗಿ ಬಂದಿರುವ ದ್ವಿಜನೆಂದು ತಿಳಿ! ಸ್ವತಂತ್ರವಾಗಿ ಇಲ್ಲಿ ನಿನ್ನಲ್ಲಿ ವಾಸಿಸಬಯಸುತ್ತೇನೆ!” ಸಂತೋಷಗೊಂಡ ರಾಜನು “ಸ್ವಾಗತ!” ಎಂದು ಹೇಳಿ ಅವನನ್ನು ಪರಿಗ್ರಹಿಸಿದನು. “ಮಗೂ! ಪ್ರೀತಿಯಿಂದ ನಾನು ನಿನ್ನನ್ನು ಕೇಳುತ್ತಿದ್ದೇನೆ - ಯಾವ ರಾಜನ ನಾಡಿನಿಂದ ನೀನು ಇಲ್ಲಿಗೆ ಬಂದಿದ್ದೀಯೆ? ನಿನ್ನ ನಿಜವಾದ ಗೋತ್ರವನ್ನೂ ಹೆಸರನ್ನೂ, ಮತ್ತು ನೀನು ಮಾಡಲು ಯಾವ ಉದ್ಯೋಗವನ್ನು ಬಲ್ಲೆ ಎನ್ನುವುದನ್ನೂ ಹೇಳು.”

ಯುಧಿಷ್ಠಿರನು ಹೇಳಿದನು: “ಹಿಂದೆ ನಾನು ಯುಧಿಷ್ಠಿರನ ಸಖನಾಗಿದ್ದೆ. ಮತ್ತು ವೈಯಾಘ್ರಪದ ಗೋತ್ರದ ಬ್ರಾಹ್ಮಣ. ಜೂಜಿನಲ್ಲಿ ದಾಳಗಳನ್ನು ಎಸೆಯುವುದರಲ್ಲಿ ಪರಿಣಿತನಾಗಿದ್ದೇನೆ. ವಿರಾಟ! ಕಂಕ ಎಂಬ ಹೆಸರಿನಿಂದ ಕರೆಯಲ್ಪಡುತ್ತೇನೆ.”

ವಿರಾಟನು ಹೇಳಿದನು: “ಅಯ್ಯಾ! ನೀನು ಬಯಸಿದ ವರವನ್ನು ನಿನಗೆ ಕೊಡುತ್ತೇನೆ. ನಾನು ನಿನ್ನ ವಶನಾಗಿದ್ದೇನೆ. ಮತ್ಸ್ಯರನ್ನು ಆಳು! ಧೂರ್ತ ಜೂಜುಕೋರರು ನನಗೆ ಯಾವಾಗಲೂ ಪ್ರಿಯರು. ದೇವಸದೃಶನಾದ ನೀನು ರಾಜ್ಯಕ್ಕೆ ಅರ್ಹನಾಗಿದ್ದೀಯೆ!”

ಯುಧಿಷ್ಠಿರನು ಹೇಳಿದನು: “ವಿಶಾಂಪತೇ! ನನ್ನಿಂದ ಸೋತವನು ನನ್ನೊಂದಿಗೆ ಎಂದೂ ಜಗಳವಾಡಬಾರದು ಮತ್ತು ಗೆದ್ದವನು ಎಂದೂ ನನ್ನಿಂದ ಪಣವನ್ನು ಕೇಳಬಾರದು! ನಿನ್ನ ಕೃಪೆಯಿಂದ ಈ ವರವು ನನ್ನದಾಗಲಿ!” 

ವಿರಾಟನು ಹೇಳಿದನು: “ನಿನಗೆ ಅಪ್ರಿಯವಾಗಿ ನಡೆದುಕೊಂಡವರನ್ನು ಅವಧ್ಯರಾಗಿದ್ದರೂ ಕೊಲ್ಲುತ್ತೇನೆ! ಅಥವಾ ಅಂಥಹ ದ್ವಿಜರನ್ನು ದೇಶದ ಹೊರಹಾಕುತ್ತೇನೆ! ಇಲ್ಲಿ ನೆರೆದಿರುವ ಪ್ರಜೆಗಳೆಲ್ಲರೂ ಕೇಳಿಸಿಕೊಳ್ಳಿ! ನಾನು ಈ ದೇಶಕ್ಕೆ ಹೇಗೋ ಹಾಗೆ ಈ ಕಂಕನೂ ಪ್ರಭು! ನನ್ನ ಸಖನಾಗಿದ್ದು ವಾಹನಗಳಿಗೂ, ಉತ್ತಮ ವಸ್ತ್ರಗಳಿಗೂ, ಬಹಳಷ್ಟು ಪಾನ ಭೋಜನಗಳಿಗೂ ನೀನು ನನ್ನ ಸರಿಸಮನಾಗಿರುವೆ. ಯಾವಾಗಲೂ ನೀನು ನನ್ನ ಒಳಗಿನ ಮತ್ತು ಹೊರಗಿನ ವ್ಯವಹಾರಗಳಿಗೆ ಸಾಕ್ಷಿಯಾಗಿರುವೆ. ನಿನಗೆ ನನ್ನ ದ್ವಾರವು ತೆರೆದಿದೆ. ಏನೂ ಮಾಡದೆಯೂ ತೊಂದರೆಗೊಳಗಾದವರು ನಿನ್ನಲ್ಲಿ ಹೇಳಿಕೊಂಡರೆ ಆ ಮಾತುಗಳನ್ನು ನನಗೆ ಯಾವಾಗಲೂ ನೀನು ಹೇಳಬೇಕು. ಆಗ ನಾನು ಎಲ್ಲವನ್ನೂ ಕೊಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲದಿರಲಿ. ನನ್ನ ಸನ್ನಿಧಿಯಲ್ಲಿ ನಿನಗೆ ಭಯವೆನ್ನುವುದಿರುವುದಿಲ್ಲ.”

ಹೀಗೆ ಆ ವೀರ ನರರ್ಷಭನು ವಿರಾಟರಾಜನನ್ನು ಸೇರಿ ವರವನ್ನು ಪಡೆದು ಪರಮ ಗೌರವದಿಂದ ಸುಖಿಯಾಗಿ ವಾಸಿಸಿದನು. ಅವನ ಕುರಿತು ಯಾರಿಗೂ ಏನೂ ತಿಳಿಯಲಿಲ್ಲ.

ಬಳಿಕ ಭೀಮಬಲನೂ, ಸಿಂಹದ ನಡುಗೆಯ ವಿಲಾಸಿಯೂ ಆದ, ಕಾಂತಿಯಿಂದ ಜ್ವಲಿಸುತ್ತಿದ್ದ ಇನ್ನೊಬ್ಬನು ಕೈಯಲ್ಲಿ ಕಡೆಗೋಲನ್ನೂ, ಸೌಟನ್ನೂ, ಒರೆಹಚ್ಚಿದ, ಕಲೆಯಿಲ್ಲದೇ ಹೊಳೆಯುತ್ತಿರುವ ಕತ್ತಿಯನ್ನೂ ಹಿಡಿದು ಅಲ್ಲಿಗೆ ಆಗಮಿಸಿದನು. ಕಪ್ಪುಡುಗೆಯನ್ನುಟ್ಟು ಅಡುಗೆಯವನ ರೂಪಧರಿಸಿದ್ದ, ಹಿಮಾಲಯದಂತೆ ಸತ್ವಯುತನಾಗಿದ್ದ, ಪರಮ ತೇಜಸ್ಸಿನಿಂದ ರವಿಯಂತೆ ಲೋಕವನ್ನೇ ಬೆಳಗುತ್ತಾ ಅವನು ಮತ್ಸ್ಯರಾಜನ ಬಳಿಬಂದು ನಿಂತನು. ವರವನ್ನು ಕೇಳಲು ಬಂದಿದ್ದ ಅವನನ್ನು ನೋಡಿದ ರಾಜನು ಅಲ್ಲಿ ನೆರೆದಿದ್ದ ಪ್ರಜೆಗಳಲ್ಲಿ ಕೇಳಿದನು: “ಸಿಂಹದಂತೆ ಉನ್ನತ ಭುಜವುಳ್ಳವನೂ, ಅತೀವ ರೂಪವಂತನೂ ಆದ ಈ ನರರ್ಷಭ ಯುವಕನು ಯಾರು? ರವಿಯಂತಿರುವ ಈ ವ್ಯಕ್ತಿಯನ್ನು ನಾನು ಹಿಂದೆಲ್ಲೂ ಕಂಡಿಲ್ಲ. ಎಷ್ಟೇ ವಿಚಾರ ಮಾಡಿದರೂ ಇವನ ಹುರುಳನ್ನು ನಾನು ಹಿಡಿಯಲಾರೆ. ಎಷ್ಟೇ ತರ್ಕ ಮಾಡಿದರೂ ಇವನ ಚಿತ್ತವೇನೆಂಬುದು ಇಂದು ನನಗೆ ಸರಿಯಾಗಿ ತಿಳಿಯುತ್ತಿಲ್ಲ.” ಆಗ ದೀನರೂಪನೂ ಮಹಾಮನಸ್ವಿಯೂ ಆದ ಆ ಪಾಂಡವನು ವಿರಾಟನನ್ನು ಸಮೀಪಿಸಿ ನುಡಿದನು: “ರಾಜ! ನಾನು ಬಲ್ಲವ ಎನ್ನುವ ಅಡುಗೆಯವನು. ಉತ್ತಮ ಅಡುಗೆಯನ್ನು ಮಾಡುವ ನನ್ನನ್ನು ನೇಮಿಸಿಕೋ!”

ವಿರಾಟನು ಹೇಳಿದನು: “ಮಾನದ! ನೀನು ಅಡುಗೆಯವನು ಎನ್ನುವುದನ್ನು ನಾನು ನಂಬುವುದಿಲ್ಲ. ಇಂದ್ರನ ಹಾಗೆ ಕಾಣುತ್ತಿದ್ದೀಯೆ. ಕಾಂತಿ, ರೂಪ, ಮತ್ತು ವಿಕ್ರಮಗಳಲ್ಲಿ ಇಲ್ಲಿರುವ ಎಲ್ಲರಿಗಿಂತಲೂ ಹೆಚ್ಚು ಹೊಳೆಯುತ್ತಿರುವೆ.”

ಭೀಮನು ಹೇಳಿದನು: “ನರೇಂದ್ರ! ನಾನು ನಿನಗೆ ಅಡುಗೆಯವನು ಮತ್ತು ಪರಿಚಾರಕ. ಮೊದಲನೆಯದಾಗಿ ನನಗೆ ಉತ್ತಮ ಅಡುಗೆಗಳನ್ನು ಮಾಡಲು ಮಾತ್ರ ಗೊತ್ತು. ಹಿಂದೆ ನೃಪ ಯುಧಿಷ್ಠಿರನೂ ಕೂಡ ಅವೆಲ್ಲವನ್ನೂ ಆಸ್ವಾದಿಸುತ್ತಿದ್ದ. ಬಲದಲ್ಲಿ ನನ್ನ ಸರಿಸಮನಾದವರು ಯಾರೂ ಇಲ್ಲ, ಮತ್ತು ನಾನು ಯಾವಾಗಲೂ ಮಲ್ಲಯುದ್ಧದಲ್ಲಿ ತೊಡಗುತ್ತೇನೆ. ಆನೆ ಸಿಂಹಗಳನ್ನು ಎದುರಿಸಿ ಹೋರಾಡುವ ನಾನು ನಿನಗೆ ಯಾವಾಗಲೂ ಪ್ರಿಯವಾದುದ್ದನ್ನೇ ಮಾಡುವೆ.”

ವಿರಾಟನು ಹೇಳಿದನು: “ನಿನಗೆ ನಾನು ವರವನ್ನು ನೀಡುತ್ತೇನೆ. ರಾಜಭವನದ ಅಡುಗೆಮನೆಯಲ್ಲಿ ನಿನಗೆ ಮನಬಂದಂತೆ ಮಾಡಿಕೊಂಡಿರು. ನೀನು ಬಹಳ ಕುಶಲವಾಗಿ ಮಾತನಾಡುತ್ತೀಯೆ. ಈ ಕೆಲಸವು ನಿನಗೆ ಸರಿಸಮನಾದುದೆಂದು ನನಗನ್ನಿಸುವುದಿಲ್ಲ. ನೀನು ಸಮುದ್ರವೇ ದಡವಾಗಿರುವ ಭೂಮಿಗೆ ಅರ್ಹನಾಗಿದ್ದೀಯೆ. ನೀನು ಬಯಸಿದಂತೆಯೇ ಮಾಡಿದ್ದೇನೆ. ನನ್ನಿಂದ ಪುರಸ್ಕೃತನಾಗಿ ಅಡುಗೆಮನೆಯಲ್ಲಿ ಇರು. ನಿನಗಿಂತ ಮೊದಲು ನಿಯೋಜಿಸಿದವರಿಗೆ ನೀನು ಮುಖ್ಯಸ್ಥನಾಗಿ ನನ್ನಿಂದ ನೇಮಕಗೊಂಡಿರು.”

ಹೀಗೆ ಭೀಮನು ರಾಜಭವನದ ಅಡುಗೆಮನೆಯಲ್ಲಿ ನೇಮಕಗೊಂಡು ವಿರಾಟರಾಜನಿಗೆ ತುಂಬಾ ಪ್ರಿಯನಾಗಿ ವಾಸಮಾಡುತ್ತಿದ್ದನು. ಅಲ್ಲಿ ಅವನನ್ನು ಸಾಮಾನ್ಯ ಪ್ರಜೆಗಳಾಗಲೀ ರಾಜನ ಅನುಚರರಾಗಲೀ ಗುರುತಿಸಲಿಲ್ಲ.

ಅನಂತರ ಅಸಿತಲೋಚನೆ ಕೃಷ್ಣೆ ದ್ರೌಪದಿಯು ತುದಿಯಲ್ಲಿ ಗುಂಗುರಾಗಿದ್ದ ದೋಷರಹಿತ ಮೃದು ಕೂದಲನ್ನು ಮೇಲೆತ್ತಿ ಬಲಗಡೆ ಅಡಗಿಸಿಟ್ಟುಕೊಂಡು, ತುಂಬಾ ಕೊಳಕಾದ ಒಂದೇ ಒಂದು ಕಪ್ಪು ವಸ್ತ್ರವನ್ನು ಧರಿಸಿ, ಸೈರಂಧ್ರಿಯ ವೇಷವನ್ನು ತಳೆದು ಆರ್ತಳಂತೆ ಓಡಾಡುತ್ತಿದ್ದಳು. ಅಲೆದಾಡುತ್ತಿದ್ದ ಅವಳನ್ನು ಕಂಡ ಸ್ತ್ರೀ-ಪುರುಷರು ಓಡಿ ಬಂದು “ಯಾರು ನೀನು? ಏನು ಮಾಡಬಯಸುತ್ತೀಯೆ?” ಎಂದು ಅವಳನ್ನು ಕೇಳಿದರು. ಅವಳು ಅವರಿಗೆ “ನಾನು ಸೈರಂಧ್ರಿ. ನನ್ನನ್ನು ಸಾಕುವವರಿಗೆ ಕೆಲಸಮಾಡುವ ಇಚ್ಛೆಯಿಂದ ಬಂದಿದ್ದೇನೆ” ಎಂದು ಹೇಳಿದಳು. ಅವಳ ರೂಪ, ವೇಷ ಮತ್ತು ಮಧುರ ಮಾತುಗಳಿಂದಾಗಿ ಅವಳು ಊಟಕ್ಕೋಸ್ಕರ ದಾಸಿಯಾಗಲು ಬಂದಿದ್ದಾಳೆ ಎಂದು ಜನರು ನಂಬಲಿಲ್ಲ. ಉಪ್ಪರಿಗೆಯಿಂದ ನೋಡುತ್ತಿದ್ದ ವಿರಾಟನ ಅಚ್ಚುಮೆಚ್ಚಿನ ಪತ್ನಿಯೂ, ಕೇಕಯ ರಾಜಪುತ್ರಿಯೂ ಆದ ಸುದೇಷ್ಣೆಯು ದ್ರುಪದನ ಪುತ್ರಿಯನ್ನು ಕಂಡಳು. ಅಂಥಹ ರೂಪವತಿಯೂ, ಅನಾಥಳೂ, ಒಂದೇ ವಸ್ತ್ರವನ್ನು ದರಿಸಿದವಳೂ ಆಗಿದ್ದ ಅವಳನ್ನು ನೋಡಿ ಕರೆಯಿಸಿ ಕೇಳಿದಳು: “ಭದ್ರೇ! ನೀನು ಯಾರು? ಮತ್ತು ಏನು ಮಾಡಬಯಸುತ್ತೀಯೆ?”

ಅವಳು ಹೇಳಿದಳು: “ನಾನು ಸೈರಂಧ್ರಿ. ನನ್ನನ್ನು ಸಾಕುವವರಿಗೆ ಕೆಲಸಮಾಡುವ ಇಚ್ಛೆಯಿಂದ ಬಂದಿದ್ದೇನೆ.”

ಸುದೇಷ್ಣೆಯು ಹೇಳಿದಳು: “ಭಾಮಿನಿ! ನಿನ್ನಂತೆ ಮಾತನಾಡುವವರು ಹೀಗೆ ರೂಪವತಿಯರಾಗಿರುವುದಿಲ್ಲ. ಬಹುಮಂದಿ ದಾಸ-ದಾಸಿಯರಿಗೆ ಅಪ್ಪಣೆಮಾಡುವವರು ಹೀಗಿರುತ್ತಾರೆ. ನಿನ್ನ ಹಿಮ್ಮಡಿಯು ಅಡಕವಾಗಿದೆ, ತೊಡೆಗಳು ತಾಗುತ್ತಿವೆ, ಮೂರು ಅಂಗಗಳು ಗಂಭೀರವಾಗಿವೆ, ಆರು ಅಂಗಗಳು ಉನ್ನತವಾಗಿವೆ, ಐದು ಅಂಗಗಳು ಕೆಂಪಾಗಿವೆ, ನಿನ್ನ ಮಾತು ಹಂಸದ ಸ್ವರದಂತಿದೆ, ನೀಳ ಕೂದಲನ್ನು ಹೊಂದಿದ್ದೀಯೆ, ಒಳ್ಳೆಯ ಮೊಲೆಗಳನ್ನು ಪಡೆದಿದ್ದೀಯೆ, ಶ್ಯಾಮವರ್ಣದವಳಾಗಿದ್ದೀಯೆ, ಉಬ್ಬಿದ ನಿತಂಬ ಮತ್ತು ಪಯೋಧರೆಯುಳ್ಳವಳಾಗಿದ್ದೀಯೆ. ಕಾಶ್ಮೀರದ ಕುದುರೆಯಂತೆ ಬೇಕು ಬೇಕಾದಲ್ಲಿ ಸುಂದರಳಾಗಿದ್ದೀಯೆ. ನಿನ್ನ ಕಣ್ಣಿನ ರೆಪ್ಪೆಗಳು ಗುಂಗುರಾಗಿವೆ, ಕೆಳದುಟಿ ತೊಂಡೆಯ ಹಣ್ಣಿನಂತಿದೆ, ಸೊಂಟ ಸಣ್ಣದಾಗಿದೆ, ಕೊರಳು ಶಂಖದಂತಿದೆ, ರಕ್ತನಾಳಗಳು ಎದ್ದು ಕಾಣುತ್ತಿಲ್ಲ ಮತ್ತು ನಿನ್ನ ಮುಖವು ಪೂರ್ಣ ಚಂದ್ರನಂತಿದೆ. ನೀನು ಯಾರೆಂದು ಹೇಳು! ನೀನು ದಾಸಿಯಂತೂ ಅಲ್ಲ! ನೀನು ಯಕ್ಷಿಯಾಗಿರಬಹುದು ಅಥವಾ ದೇವಿಯಾಗಿರಬಹುದು ಅಥವಾ ಗಂಧರ್ವಿಯಾಗಿರಬಹುದು ಅಥವಾ ಅಪ್ಸರೆಯಾಗಿರಬಹುದು. ಶುಭೇ! ನೀನು ಯಾರು? ಅಲಂಬುಸೆಯೋ, ಮಿಶ್ರಕೇಶಿಯೋ, ಪುಂಡರೀಕೆಯೋ, ಅಥವಾ ಮಾಲಿನಿಯೋ? ಇಂದ್ರಾಣಿಯೋ, ವಾರುಣಿಯೋ, ಅಥವಾ ತ್ವಷ್ಟ, ಧಾತು ಅಥವಾ ಪ್ರಜಾಪತಿ ಈ ವಿಖ್ಯಾತ ದೇವತೆಗಳ ದೇವಿಯರಲ್ಲಿ ನೀನು ಯಾರು?”

ದ್ರೌಪದಿಯು ಹೇಳಿದಳು: “ನಾನು ದೇವಿಯಲ್ಲ, ಗಂಧರ್ವಿಯಲ್ಲ, ಅಸುರಿಯಲ್ಲ ಮತ್ತು ರಾಕ್ಷಸಿಯೂ ಅಲ್ಲ. ಇನ್ನೊಬ್ಬರನ್ನು ಅವಲಂಬಿಸಿರುವ ಸೈರಂಧ್ರಿ ನಾನು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಕೇಶಾಲಂಕಾರವನ್ನು ಬಲ್ಲೆ. ಒಳ್ಳೆಯ ಲೇಪನವನ್ನು ಅರೆದು ತಯಾರಿಸಬಲ್ಲೆ. ಬಣ್ಣಬಣ್ಣದ ಪರಮ ಸುಂದರ ಮಾಲೆಗಳನ್ನು ಕಟ್ಟಬಲ್ಲೆ. ಕೃಷ್ಣ್ನನ ಪ್ರಿಯ ಮಹಿಷಿಯಾದ ಸತ್ಯಭಾಮೆಯನ್ನು ಮತ್ತು ಕುರುಗಳಲ್ಲಿಯೇ ಏಕೈಕ ಸುಂದರಿಯಾದ ಪಾಂಡವರ ಪತ್ನಿ ಕೃಷ್ಣೆಯನ್ನೂ ನಾನು ಸಿಂಗರಿಸುತ್ತಿದ್ದೆ. ಹೀಗೆ ಅಲ್ಲಲ್ಲಿ ತಿರುಗಾಡುತ್ತಾ ಉತ್ತಮ ಗಳಿಕೆ ಮಾಡುತ್ತೇನೆ. ಎಲ್ಲಿಯವರೆಗೆ ಉಳಿಯುವುದಕ್ಕೆ ದೊರಕುವುದೋ ಅಲ್ಲಿಯವರೆಗೆ ಅಲ್ಲಿಯೇ ಸಂತೋಷದಿಂದ ಇರುತ್ತೇನೆ. ಸ್ವಯಂ ಆ ದೇವಿಯೇ ನನಗೆ ಮಾಲಿನಿಯೆಂಬ ಹೆಸರನ್ನಿಟ್ಟಳು. ದೇವಿ ಸುದೇಷ್ಣೆ! ಅಂಥಹ ನಾನು ನಿನ್ನ ಅರಮನೆಗೆ ಬಂದಿದ್ದೇನೆ.”

ಸುದೇಷ್ಣೆಯು ಹೇಳಿದಳು: “ರಾಜನು ಸಂಪೂರ್ಣ ಮನಸ್ಸಿನಿಂದ ನಿನ್ನಲ್ಲಿಗೇ ಹೋಗುತ್ತಾನೆ ಎಂದು ನನಗೆ ತಿಳಿಯದೇ ಇದ್ದಿದ್ದರೆ ನಾನು ನಿನ್ನನ್ನು ನನಗಿಂತಲೂ ಎತ್ತರದಲ್ಲಿರಿಸಿಕೊಳ್ಳುತ್ತಿದ್ದೆ! ರಾಜಕುಲದ ಮತ್ತು ನನ್ನ ಮನೆಯ ಸ್ತ್ರೀಯರು ನಿನ್ನನ್ನೇ ಆಸಕ್ತಿಯಿಂದ ನೋಡುತ್ತಿರುವುದನ್ನು ನೋಡು! ಇನ್ನು ಯಾವ ಪುರುಷನು ತಾನೇ ಮೋಹಗೊಳ್ಳುವುದಿಲ್ಲ? ನನ್ನ ಮನೆಯಲ್ಲಿರುವ ಮರಗಳೂ ಕೂಡ ನಿನಗೆ ನಮಸ್ಕರಿಸುತ್ತಿವೆಯೋ ಎನ್ನುವಂತೆ ಕೆಳಗೆ ಬಗ್ಗಿವೆ. ಇನ್ನು ಯಾವ ಪುರುಷನು ತಾನೇ ಮೋಹಗೊಳ್ಳುವುದಿಲ್ಲ? ನಿನ್ನ ಈ ಅಮಾನುಷ ದೇಹವನ್ನು ಕಂಡು ರಾಜಾ ವಿರಾಟನು ನನ್ನನ್ನು ತೊರೆದು ಸಂಪೂರ್ಣ ಮನಸ್ಸಿನಿಂದ ನಿನ್ನ ಬಳಿಗೆ ಬಂದಾನು! ನಿನ್ನನ್ನು ಎಡೆಬಿಡದೇ ನೋಡುವ ಯಾವ ನರನೂ ಕಾಮವಶನಾಗಿ ಬಿಡುತ್ತಾನೆ. ಈ ರೀತಿ ಸರ್ವಾಂಗಗಳಲ್ಲಿಯೂ ಕುಂದಿರದ ನಿನ್ನನ್ನು ಸತತವಾಗಿ ಯಾರು ನೋಡುತ್ತಾನೋ ಅವನು ಅನಂಗವಶನಾಗಿಬಿಡುತ್ತಾನೆ! ನಿನಗೆ ಆಶ್ರಯವನ್ನು ಕೊಡುವುದು ಹೆಣ್ಣು ಚೇಳುವು ಮೃತ್ಯುವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿರುವ ಹಾಗೆ ಎಂದು ತಿಳಿಯುತ್ತೇನೆ.”

ದ್ರೌಪದಿಯು ಹೇಳಿದಳು: “ಭಾಮಿನೀ! ವಿರಾಟನಿಗೆ ಮತ್ತು ಇತರರಿಗೆ ನಾನು ಎಂದೂ ಲಭ್ಯಳಾಗುವವಳಲ್ಲ. ಮಹಾಸತ್ವನಾದ ಗಂಧರ್ವರಾಜನೋರ್ವನ ಪುತ್ರರಾದ ಐವರು ಯುವ ಗಂಧರ್ವರು ನನಗೆ ಗಂಡಂದಿರು. ಅವರು ನನ್ನನ್ನು ನಿತ್ಯವೂ ರಕ್ಷಿಸುತ್ತಾರೆ. ಹಾಗಾಗಿ ನಾನು ದುಃಖವನ್ನು ಅನುಭವಿಸುವ ಹಾಗಿಲ್ಲ. ಯಾರು ನನಗೆ ಎಂಜಲನ್ನು ಉಣಲಿಕ್ಕೆ ಕೊಡುವುದಿಲ್ಲವೋ ಮತ್ತು ಕಾಲುಗಳನ್ನು ತೊಳೆಯಿಸಿಕೊಳ್ಳುವುದಿಲ್ಲವೋ ಅಂಥವರ ಮನೆಯಲ್ಲಿ ವಾಸಿಸಿದರೆ ನನ್ನ ಗಂಧರ್ವ ಪತಿಗಳು ಸಂತೋಷಪಡುತ್ತಾರೆ. ನನ್ನನ್ನು ಓರ್ವ ಸಾಮಾನ್ಯ ಸ್ತ್ರೀಯಂತೆ ಕಾಮಿಸುವ ಪುರುಷನು ಅಲ್ಲಿಯೇ ಅದೇ ರಾತ್ರಿ ಮರಣಹೊಂದುವನು. ನನ್ನನ್ನು ವಿಚಲಿತಳನ್ನಾಗಿಸಲೂ ಯಾರಿಗೂ ಶಕ್ಯವಿಲ್ಲ. ನನ್ನ ಗಂಧರ್ವರು ಕಷ್ಟವನ್ನು ಎದುರಿಸಬಲ್ಲ ಮಹಾ ಬಲಶಾಲಿಗಳು.”

ಸುದೇಷ್ಣೆಯು ಹೇಳಿದಳು: “ನಂದಿನೀ! ನೀನು ಹೇಗೆ ಬಯಸುತ್ತೀಯೋ ಹಾಗೆ ನಿನ್ನನ್ನು ಇಟ್ಟುಕೊಳ್ಳುತ್ತೇನೆ. ಯಾವ ಸಮಯದಲ್ಲಿಯೂ ನೀನು ಇನ್ನೊಬ್ಬರ ಕಾಲುಗಳನ್ನಾಗಲೀ ಎಂಜಲನ್ನಾಗಲೀ ಮುಟ್ಟಬೇಕಾಗಿಲ್ಲ.”

ಈ ರೀತಿ ಕೃಷ್ಣೆಯು ವಿರಾಟನ ಮಡದಿಯಿಂದ ಸಾಂತ್ವನವನ್ನು ಪಡೆದಳು. ಅವಳ ನಿಜಸ್ವರೂಪವು ಏನೆಂದು ಅಲ್ಲಿರುವ ಯಾರಿಗೂ ತಿಳಿಯಲಿಲ್ಲ.

ಸಹದೇವನೂ ಕೂಡ ಅತ್ಯುತ್ತಮವಾಗಿ ಗೋಪಾಲಕನ ವೇಷವನ್ನು ಮಾಡಿಕೊಂಡು ಅವರದೇ ಭಾಷೆಯನ್ನು ಬಳಸುತ್ತಾ ವಿರಾಟನ ಬಳಿ ಬಂದನು. ಆ ಹೊಳೆಯುತ್ತಿರುವ ನರರ್ಷಭ ಕುರುನಂದನನನ್ನು ನೋಡಿ ರಾಜನು ಅವನ ಹತ್ತಿರ ಹೋಗಿ ಕೇಳಿದನು: “ಮಗೂ! ನೀನು ಯಾರವನು? ಎಲ್ಲಿಂದ ಬಂದೆ? ಏನು ಮಾಡುತ್ತೀಯೆ? ನಿನ್ನನ್ನು ನಾನು ಈ ಹಿಂದೆ ನೋಡಿದಂತಿಲ್ಲ. ಸತ್ಯವನ್ನು ಹೇಳು.”

ಆ ಅಮಿತ್ರತಾಪನನು ರಾಜನ ಬಳಿ ಬಂದು ಮಹಾಮೇಘದ ಗುಡುಗಿನಂತಿರುವ ಧ್ವನಿಯಲ್ಲಿ ನುಡಿದನು: “ನಾನು ಅರಿಷ್ಟನೇಮಿ ಎಂಬ ಹೆಸರಿನ ವೈಶ್ಯ. ಕುರುಪುಂಗವನ ಗೋಶಾಸ್ತ್ರಜ್ಞನಾಗಿದ್ದೆ. ನಿನ್ನಲ್ಲಿ ಉಳಿದುಕೊಳ್ಳಲು ಬಯಸುತ್ತೇನೆ. ಆ ರಾಜಸಿಂಹ ಪಾರ್ಥರು ಎಲ್ಲಿದ್ದಾರೆಂದು ತಿಳಿಯೆನು. ಬೇರೆ ಕೆಲಸಗಳನ್ನು ಮಾಡಿಕೊಂಡು ನಾನು ಜೀವಿಸಲಾರೆ. ನೀನಲ್ಲದೇ ಬೇರೆಯವರಲ್ಲಿ ನನಗೆ ಇಷ್ಟವಿಲ್ಲ.”

ವಿರಾಟನು ಹೇಳಿದನು: “ನೀನು ಬ್ರಾಹ್ಮಣ ಅಥವಾ ಕ್ಷತ್ರಿಯನಾಗಿರುವೆ. ಇಡೀ ಭೂಮಿಯ ಒಡೆಯನಂಥ ರೂಪವನ್ನು ಹೊಂದಿರುವೆ. ನನಗೆ ಸತ್ಯವೇನೆಂಬುದನ್ನು ಹೇಳು. ಈ ವೈಶ್ಯರ ಕೆಲಸವು ನಿನಗೆ ಸರಿಯಾಗಿ ಕಾಣುವುದಿಲ್ಲ. ಯಾವ ರಾಜನ ನಾಡಿನಿಂದ ಇಲ್ಲಿಗೆ ಬಂದಿರುವೆ? ನಿನಗೆ ಯಾವ ಕೆಲಸದಲ್ಲಿ ಕುಶಲತೆ ಇದೆ? ನೀನು ನಮ್ಮಲ್ಲಿ ಹೇಗೆ ಸದಾ ವಾಸಿಸುವೆ? ನಿನ್ನ ಸಂಬಳ ಏನೆಂಬುದನ್ನೂ ಹೇಳು.”

ಸಹದೇವನು ಹೇಳಿದನು: “ಐವರು ಪಾಂಡುಪುತ್ರರಲ್ಲಿ ರಾಜಾ ಯುಧಿಷ್ಠಿರನು ಹಿರಿಯವನು. ಅವನಲ್ಲಿ ನೂರುನೂರರ ಗುಂಪಿನಂತೆ ಎಂಟು ಲಕ್ಷ ಹಸುಗಳಿದ್ದವು. ಇನ್ನೊಂದರಲ್ಲಿ ಒಂದು ಲಕ್ಷ, ಮತ್ತೊಂದರಲ್ಲಿ ಅದೇ ರೀತಿ ಎರಡು ಲಕ್ಷ ಹಸುಗಳಿದ್ದವು. ನಾನು ಅವುಗಳ ಗೋಶಾಸ್ತ್ರಜ್ಞನಾಗಿದ್ದೆ. ನನ್ನನ್ನು ತಂತಿಪಾಲನೆಂದು ಕರೆಯುತ್ತಿದ್ದರು. ಸುತ್ತ ಹತ್ತು ಯೋಜನೆಯೊಳಗೆ ನಡೆದದ್ದು, ನಡೆಯುತ್ತಿರುವುದು, ನಡೆಯಬಹುದಾದದ್ದು ಮತ್ತು ಸಂಖ್ಯೆಯಾಗಲೀ ನನಗೆ ತಿಳಿಯದೇ ಇದ್ದುದು ಯಾವುದೂ ಇಲ್ಲ. ಆ ಮಹಾತ್ಮನಿಗೆ ನನ್ನ ಗುಣಗಳು ಚೆನ್ನಾಗಿ ತಿಳಿದಿದ್ದವು. ಕುರುರಾಜ ಯುಧಿಷ್ಠಿರನು ನನ್ನಿಂದ ಸಂತುಷ್ಟನಾಗಿದ್ದನು. ಬಹುಬೇಗ ಗೋವುಗಳು ಹೆಚ್ಚಾಗುವಂತೆ ಮತ್ತು ಅವುಗಳಿಗೆ ಯಾವುದೇ ರೀತಿಯ ರೋಗಗಳು ಬಾರದಂತೆ ಮಾಡುವ ಉಪಾಯಗಳನ್ನು ನಾನು ಬಲ್ಲೆ. ಈ ಕೌಶಲಗಳು ನನ್ನಲ್ಲಿವೆ. ಯಾವಹೋರಿಗಳ ಮೂತ್ರವನ್ನು ಮೂಸಿ ಬಂಜೆಹಸುಗಳೂ ಕೂಡ ಈಯುತ್ತವೋ ಅಂಥಹ ಶ್ರೇಷ್ಠ ಹೋರಿಗಳನ್ನೂ ಕೂಡ ಗುರುತಿಸಬಲ್ಲೆ.”

ವಿರಾಟನು ಹೇಳಿದನು: “ಬೇರೆ ಬೇರೆ ಥಳಿಗಳ ಗುಣಗಳಿಂದೊಡಗೂಡಿದ ನೂರು ಸಾವಿರ ಗೋವುಗಳು ನನ್ನಲ್ಲಿವೆ. ಆ ಪಶುಗಳನ್ನು ಅವುಗಳ ಪಾಲಕರೊಡನೆ ನಿನಗೊಪ್ಪಿಸುತ್ತಿದ್ದೇನೆ. ಇನ್ನು ನನ್ನ ಹಸುಗಳು ನಿನ್ನ ಆಶ್ರಯದಲ್ಲಿರಲಿ.”

ಹಾಗೆ ಆ ನರೇಶ್ವರನು ರಾಜನಿಗೆ ಗುರುತು ಸಿಗದಂತೆ ಅಲ್ಲಿಯೇ ಸುಖವಾಗಿ ವಾಸಿಸುತ್ತಿದ್ದನು. ಬೇರೆ ಯಾರೂ ಕೂಡ ಅವನನ್ನು ಯಾವರೀತಿಯಿಂದಲೂ ಗುರುತಿಸಲಿಲ್ಲ. ಅವನು ಬಯಸಿದಷ್ಟು ಭತ್ಯವು ಅವನಿಗೆ ದೊರೆಯುತ್ತಿತ್ತು.

ಬಳಿಕ ರೂಪಸಂಪದದಿಂದ ಕೂಡಿ ಸ್ತ್ರೀಯರ ಅಲಂಕಾರವನ್ನು ಧರಿಸಿದ್ದ, ದೀರ್ಘ ಕುಂಡಲಗಳನ್ನೂ, ಸುಂದರವಾದ ಶಂಖದ ತೋಳ್ಬಳೆಗಳನ್ನೂ ತೊಟ್ಟಿದ್ದ ಮತ್ತೊಬ್ಬ ಬೃಹತ್ ಪುರುಷನು ಪ್ರಾಕಾರದ್ವಾರದಲ್ಲಿ ಕಾಣಿಸಿಕೊಂಡನು. ಮದಿಸಿದ ಆನೆಯ ನಡುಗೆಯ ಆ ಮಹಾಭುಜನು ದಟ್ಟವಾದ ನೀಳವಾದ ಕೂದಲನ್ನು ಇಳಿಬಿಟ್ಟುಕೊಂಡು, ನಡುಗೆಯಿಂದ ಭೂಮಿಯನ್ನೇ ನಡುಗಿಸುತ್ತ, ಸಭೆಯನ್ನು ಪ್ರವೇಶಿಸಿ ವಿರಾಟನ ಬಳಿ ಬಂದನು. ವೇಷಮರೆಸಿಕೊಂಡು ಸಭೆಗೆ ಬಂದ ಆ ಶತ್ರುನಾಶಕ, ಪರಮವರ್ಚಸ್ಸಿನಿಂದ ವಿರಾಜಮಾನನಾಗಿದ್ದ, ಗಜೇಂದ್ರವಿಕ್ರಮಿ, ಮಹೇಂದ್ರ ಸುತ ಅರ್ಜುನನನ್ನು ನೋಡಿ ರಾಜನು “ಇವನು ಎಲ್ಲಿಂದ ಬರುತ್ತಿದ್ದಾನೆ? ಇದಕ್ಕೂ ಮೊದಲು ನಾನು ಇವನ ಬಗ್ಗೆ ಕೇಳಿರಲಿಲ್ಲ” ಎಂದು ಸಮೀಪದಲ್ಲಿದ್ದವರೆಲ್ಲರನ್ನು ಪ್ರಶ್ನಿಸಿದನು. “ನಮಗೂ ಇವನು ಗೊತ್ತಿಲ್ಲ” ಎಂದು ಜನರಾಡಲು, ವಿಸ್ಮಿತನಾಗಿ ದೊರೆಯು ಈ ಮಾತನ್ನಾಡಿದನು: “ಸರ್ವಲಕ್ಷಣ ಸಂಪನ್ನನಾದ ಮನೋರಮ ಪುರುಷ! ಶ್ಯಾಮವರ್ಣದ ಯುವಕ! ಆನೆಯ ಹಿಂಡಿನ ಒಡೆಯನಂತಿರುವೆ. ಸುಂದರ ಸ್ವರ್ಣಖಚಿತ ತೋಳ್ಬಳೆಗಳನ್ನೂ, ಜಡೆಯನ್ನೂ, ಕುಂಡಲಗಳನ್ನೂ ತೊಟ್ಟು, ಜುಟ್ಟು ಮತ್ತು ಉತ್ತಮ ಕೇಶವುಳ್ಳವನಾಗಿರುವೆ. ಧನುಸ್ಸು, ಕವಚ ಮತ್ತು ಬಾಣಗಳ ಸಹಿತ ವಾಹನವನ್ನೇರಿ ಸಂಚರಿಸುವವನಾಗಿರು. ನನ್ನ ಮಕ್ಕಳಿಗೆ ಅಥವಾ ನನಗೆ ನೀನು ಸಮಾನನಾಗಿರು. ವೃದ್ಧನಾದ ನಾನು ಪರಿಹಾರವನ್ನು ಬಯಸುತ್ತಿದ್ದೇನೆ. ನಿನ್ನ ಶಕ್ತಿಯಿಂದ ಮತ್ಸ್ಯರೆಲ್ಲರನ್ನೂ ಪಾಲಿಸು. ಇಂಥವರು ಯಾವರೀತಿಯಲ್ಲಿಯೂ ನಪುಂಸಕರಾಗಿರುವುದಿಲ್ಲ ಎಂದು ನನ್ನ ಮನಸ್ಸಿಗೆ ತೋರುತ್ತಿದೆ.”

ಅರ್ಜುನನು ಹೇಳಿದನು: “ಹಾಡುತ್ತೇನೆ, ನರ್ತಿಸುತ್ತೇನೆ ಮತ್ತು ವಾದ್ಯಗಳನ್ನು ನುಡಿಸುತ್ತೇನೆ. ನೃತ್ಯದಲ್ಲಿ ನಿಪುಣ, ಗಾಯದಲ್ಲಿ ಕುಶಲ. ನರದೇವ! ಸ್ವಯಂ ನನ್ನನ್ನು ಉತ್ತರೆಗೆ ಕೊಡು. ಆ ದೇವಿಗೆ ನಾನು ನಾಟ್ಯವನ್ನು ಕಲಿಸುವೆ. ನನ್ನ ಈ ರೂಪವು ಹೇಗೆ ಬಂದಿತೆಂದು ಯಾತಕ್ಕೆ? ಅದನ್ನು ವಿವರಿಸುವುದರಿಂದ ನನ್ನ ಶೋಕವು ಅತಿಯಾಗುತ್ತದೆ. ನನ್ನನ್ನು ಬೃಹನ್ನಡೆಯೆಂದು, ತಾಯಿತಂದೆಗಳಿಂದ ದೂರನಾದ ಮಗ ಅಥವಾ ಮಗಳೆಂದು ತಿಳಿ.”

ವಿರಾಟನು ಹೇಳಿದನು: “”ಬೃಹನ್ನಡೇ! ನಿನಗೆ ವರವನ್ನು ಕೊಡುತ್ತೇನೆ. ಮಗಳಿಗೂ ಮತ್ತು ಅವಳಂಥವರಿಗೂ ನರ್ತನವನ್ನು ಕಲಿಸು. ಈ ಕೆಲಸವು ನಿನಗೆ ಸಮನಾದುದಲ್ಲವೆಂದು ನನ್ನ ಅಭಿಪ್ರಾಯ. ಸಮುದ್ರವೇ ಗಡಿಯಾಗಿರುವ ಇಡೀ ಭೂಮಿಗೆ ನೀನು ಅರ್ಹನಾಗಿದ್ದೀಯೆ.”

ಮತ್ಸ್ಯರಾಜನು ಆ ಬೃಹನ್ನಡೆಯನ್ನು ಕಲೆಗಳಲ್ಲಿ, ನೃತ್ಯದಲ್ಲಿ, ಮತ್ತು ವಾದನದಲ್ಲಿ ಪರೀಕ್ಷಿಸಿ ಮತ್ತು ಅವನ ನಪುಂಸಕತ್ವವೂ ಸ್ಥಿರವಾದುದೆಂದು ನಿಶ್ಚಯಿಸಿದ ನಂತರ ಅವನನ್ನು ಕುಮಾರಿಯರ ಅಂತಃಪುರಕ್ಕೆ ಕಳುಹಿಸಿದನು. ಪ್ರಭು ಧನಂಜಯನು ವಿರಾಟನ ಮಗಳಿಗೆ ಗಾಯನ ವಾದನಗಳನ್ನು ಕಲಿಸತೊಡಗಿದನು. ಆ ಪಾಂಡವನು ಅವಳ ಸಖಿಯರಿಗೂ ಪರಿಚಾರಿಕೆಯರಿಗೂ ಪ್ರಿಯನಾಗಿ ಅವಳಲ್ಲಿ ಇದ್ದನು. ಆ ಅತ್ಮವಂತ ಧನಂಜಯನು ಹಾಗೆ ಅವರಿಗೆ ಪ್ರಿಯವಾದುದನ್ನು ಮಾಡುತ್ತಾ ಅವರೊಡನೆ ಮಾರುವೇಷದಲ್ಲಿ ವಾಸಮಾಡುತ್ತಿದ್ದನು. ಹಾಗೆ ಇದ್ದ ಅವನನ್ನು ಅಲ್ಲಿ ಹೊರಗಿನವರಾಗಲೀ ಒಳಗಿನವರಾಗಲೀ ಗುರುತಿಸಲಿಲ್ಲ.

ಅನಂತರ ತನ್ನ ಕುದುರೆಗಳನ್ನು ನೋಡುತ್ತಿದ್ದ ವಿರಾಟರಾಜನಿಗೆ ಇನ್ನೊಬ್ಬ ಪಾಂಡವ ಪ್ರಭು ಕಾಣಿಸಿಕೊಂಡನು. ಮೋಡದಿಂದ ಮುಕ್ತನಾಗಿ ಮೇಲೇರಿ ಬರುತ್ತಿರುವ ಸೂರ್ಯಮಂಡಲದಂತಿದ್ದ ಅವನನ್ನು ಪ್ರತಿಯೊಬ್ಬರೂ ನೋಡಿದನು. ಅವನು ಕೂಡ ಕುದುರೆಗಳನ್ನು ನೋಡುತ್ತಿದ್ದನು. ಹಾಗೆ ನೋಡುತ್ತಿದ್ದ ಅವನನ್ನು ಮತ್ಸ್ಯರಾಜನು ಕಂಡನು. ಬಳಿಕ ಆ ಶತ್ರುನಾಶಕನು ತನ್ನ ಅನುಚರರಲ್ಲಿ ಕೇಳಿದನು: “ದೇವತೆಗಳಂತೆ ಹೊಳೆಯುತ್ತಿರುವ ಈ ವ್ಯಕ್ತಿ ಎಲ್ಲಿಂದ ಬರುತ್ತಿದ್ದಾನೆ? ನನ್ನ ಕುದುರೆಗಳನ್ನು ಚೆನ್ನಾಗಿ ನೋಡುತ್ತಿರುವ ಇವನು ವಿಚಕ್ಷಣನಾದ ಹಯಜ್ಞನಾಗಿರಲೇ ಬೇಕು. ದೇವತೆಯಂತೆ ಹೊಳೆಯುತ್ತಿರುವ ಆ ವೀರನನ್ನು ನನ್ನ ಬಳಿ ಬೇಗ ಬರಮಾಡಿ.” ಆ ಶತ್ರುನಾಶಕನು ರಾಜನ ಬಳಿ ಹೋಗಿ ಹೇಳಿದನು: “ಅರಸ! ನಿನಗೆ ಜಯವಾಗಲಿ! ಮಂಗಳವಾಗಲಿ! ದೊರೆಯೇ! ಕುದುರೆಗಳ ವಿಷಯದಲ್ಲಿ ಚೆನ್ನಾಗಿ ತಿಳಿದಿರುವ ನಾನು ಸದಾ ಸಮ್ಮತನಾಗಿದ್ದೇನೆ. ನಾನು ನಿನ್ನ ಕುದುರೆಗಳಿಗೆ ನಿಪುಣನಾದ ಸೂತನಾಗುವೆ.”

ವಿರಾಟನು ಹೇಳಿದನು: “ನಿನಗೆ ವಾಹನಗಳನ್ನೂ, ಹಣವನ್ನೂ, ಮನೆಯನ್ನೂ ಕೊಡುತ್ತೇನೆ. ನನ್ನ ಕುದುರೆಗಳಿಗೆ ಸೂತನಾಗಲು ಅರ್ಹನಾಗಿದ್ದೀಯೆ. ನೀನು ಎಲ್ಲಿಂದ ಬಂದೆ, ಯಾರ ಮಗ, ಹೇಗೆ ಬಂದೆ ಎನ್ನುವುದನ್ನೂ ನೀನು ಬಲ್ಲ ಕುಶಲತೆಯನ್ನೂ ತಿಳಿಸು.”

ನಕುಲನು ಹೇಳಿದನು: “ಶತ್ರುಕರ್ಶನ! ಐವರು ಪಾಂಡುಪುತ್ರರಲ್ಲಿ ಹಿರಿಯನಾದವನು ರಾಜಾ ಯುಧಿಷ್ಠಿರ. ಅವನು ತನ್ನ ಕುದುರೆಗಳನ್ನು ನೋಡಿಕೊಳ್ಳಲು ನನ್ನನ್ನು ಹಿಂದೆ ನೇಮಿಸಿಕೊಂಡಿದ್ದನು. ಕುದುರೆಗಳ ಪ್ರಕೃತಿ, ಅವುಗಳಿಗೆ ಶಿಕ್ಷಣವನ್ನು ಕಲಿಸುವುದನ್ನೂ, ದುಷ್ಟ ಕುದುರೆಗಳನ್ನು ಪಳಗಿಸುವುದನ್ನೂ ಮತ್ತು ಅವುಗಳಿಗೆ ಎಲ್ಲ ರೀತಿಯ ಚಿಕಿತ್ಸೆಗಳನ್ನೂ ನಾನು ತಿಳಿದಿದ್ದೇನೆ. ನನ್ನ ಕೈಯಲ್ಲಿ ಯಾವ ಕುದುರೆಯೂ ಬೆದರುವುದಿಲ್ಲ. ನಾನು ಪಳಗಿಸಿದ ಹೆಣ್ಣು ಕುದುರೆಗಳು ತಂಟೆ ಮಾಡುವುದಿಲ್ಲ. ಇನ್ನು ಗಂಡುಕುದುರುಗಳು ಹೇಗಿದ್ದಾವು! ಜನರು ಮತ್ತು ಪಾಂಡವ ಯುಧಿಷ್ಠಿರನೂ ನನ್ನನ್ನು ಗ್ರಂಥಿಕನೆಂಬ ಹೆಸರಿನಿಂದ ಕರೆಯುತ್ತಿದ್ದರು.”

ವಿರಾಟನು ಹೇಳಿದನು: “ಇಂದಿನಿಂದ ನನ್ನ ಕುದುರೆಗಳು ಮತ್ತು ರಥಗಳೆಲ್ಲವೂ ನಿನ್ನ ಅಧೀನದಲ್ಲಿರಲಿ. ನನ್ನ ಅಶ್ವಯೋಜಕರೂ ಸಾರಥಿಗಳೂ ನಿನ್ನ ಆಶ್ರಯದಲ್ಲಿರಲಿ. ಸುರೋಪಮ! ನಿನಗೆ ಇದು ಇಷ್ಟವಾದರೆ ನೀನು ಬಯಸುವ ವೇತನವನ್ನು ತಿಳಿಸು. ಹಯಕರ್ಮ ನಿನಗೆ ಅನುರೂಪವಾದದ್ದಲ್ಲ ಎಂದು ನನಗನ್ನಿಸುತ್ತದೆ. ರಾಜನಂತೆ ಹೊಳೆಯುತ್ತಿರುವ ನೀನು ನನ್ನ ಸಮ್ಮತನಾಗಿರುವೆ. ನಿನ್ನ ಈ ದರ್ಶನವು ನನಗೆ ಯುಧಿಷ್ಠಿರನ ದರ್ಶನಕ್ಕೆ ಸಮನಾಗಿದೆ. ದೋಷರಹಿತನಾದ ಆ ಪಾಂಡವನು ಸೇವಕರಿಲ್ಲದೇ ವನದಲ್ಲಿ ಹೇಗೆ ವಾಸಿಸುತ್ತಿದ್ದಾನೆ? ಹೇಗೆ ಸಂತೋಷಪಡುತ್ತಿದ್ದಾನೆ?”

ಹಾಗೆ ಆ ಗಂಧರ್ವರಾಜಸಮನಾದ ಯುವಕನು ಹರ್ಷಿತ ವಿರಾಟರಾಜನಿಂದ ಸತ್ಕೃತನಾದನು. ನಗರದಲ್ಲಿ ಪ್ರಿಯನೂ ಸಂತೋಷದಾಯಕನೂ ಆಗಿ ಓಡಾಡುತ್ತಿದ್ದ ಅವನನ್ನು ಬೇರೆ ಯಾರೂ ಗುರುತಿಸಲಿಲ್ಲ.

ಸಮಯಪಾಲನ

ಈ ರೀತಿಯಲ್ಲಿ ಆ ಅಮೋಘದರ್ಶನ ಪಾಂಡವರು ಮತ್ಸ್ಯರಾಜನ ಬಳಿಯಲ್ಲಿ ವಾಸಿಸುತ್ತಿದ್ದರು. ಸಮುದ್ರಪರ್ಯಂತವಾದ ಭೂಮಿಯ ಒಡೆಯರು ತಮ್ಮ ಪ್ರತಿಜ್ಞೆಗನುಸಾರವಾಗಿ ತುಂಬ ದುಃಖಿತರಾಗಿ ಆದರೂ ಸಮಾಧಾನಚಿತ್ತರಾಗಿ ಅಜ್ಞಾತವಾಸವನ್ನು ಮಾಡುತ್ತಿದ್ದರು. ಸಭಾಸದನಾಗಿದ್ದ ಯುಧಿಷ್ಠಿರನು ಸಭಾಜನರಿಗೂ ಅಂತೆಯೇ ವಿರಾಟನಿಗೂ ಆತನ ಪುತ್ರರಿಗೂ ಪ್ರಿಯನಾದನು. ಪಗಡೆಯಾಟದ ರಹಸ್ಯವನ್ನು ತಿಳಿದಿದ್ದ ಆ ಪಾಂಡವನು ದಾರದಿಂದ ಕಟ್ಟಿದ ಹಕ್ಕಿಯನ್ನು ಆಡಿಸುವಂತೆ ಪಗಡೆಯಾಟದಲ್ಲಿ ಅವರನ್ನು ಆಟವಾಡಿಸುತ್ತಿದ್ದನು. ಆ ಪುರುಷವ್ಯಾಘ್ರ ಧರ್ಮರಾಜನು ವಿರಾಟನ ಸಂಪತ್ತನ್ನು ಗೆದ್ದು ಯಾರಿಗೂ ತಿಳಿಯದ ಹಾಗೆ ತನ್ನ ತಮ್ಮಂದಿರಿಗೆ ಅವರಿಗೆ ಬೇಕಾದಷ್ಟನ್ನು ಕೊಡುತ್ತಿದ್ದನು. ಭೀಮಸೇನನೂ ಮತ್ಸ್ಯರಾಜನಿಂದ ದೊರಕಿದ ಮಾಂಸ ಮತ್ತು ವಿವಿಧ ಭಕ್ಷ್ಯಗಳನ್ನು ಯುಧಿಷ್ಠಿರನಿಗೆ ಮಾರುತ್ತಿದ್ದನು. ಅರ್ಜುನನು ಅಂತಃಪುರದಲ್ಲಿ ದೊರೆತ ಹಳೆಯ ಬಟ್ಟೆಗಳನ್ನು ಪಾಂಡವರೆಲ್ಲರಿಗೂ ಮಾರುತ್ತಿದ್ದನು. ಗೊಲ್ಲನ ವೇಷದಲ್ಲಿದ್ದ ಪಾಂಡವ ಸಹದೇವನು ಇತರ ಪಾಂಡವರಿಗೆ ಹಾಲು ತುಪ್ಪಗಳನ್ನು ಕೊಡುತ್ತಿದ್ದನು. ನಕುಲನು ಅಶ್ವನಿರ್ವಹಣೆಯಿಂದ ಸಂತುಷ್ಟನಾದ ರಾಜನಿಂದ ಧನವನ್ನು ಪಡೆದು ಪಾಂಡವರಿಗೆ ಕೊಡುತ್ತಿದ್ದನು. ಆ ತಪಸ್ವಿನಿ ಭಾಮಿನಿ ದ್ರೌಪದಿಯಾದರೋ ಆ ಸಹೋದರರನ್ನು ನೋಡುತ್ತಾ ತನ್ನ ಗುರುತು ಸಿಗದಂತೆ ನಡೆದುಕೊಳ್ಳುತ್ತಿದ್ದಳು. ಹೀಗೆ ಆ ಮಹಾರಥಿಗಳು ಅನ್ಯೋನ್ಯರ ಬೇಕು-ಬೇಡಗಳನ್ನು ಪೂರೈಸುತ್ತಾ ದ್ರೌಪದಿಯನ್ನು ನೋಡಿಕೊಳ್ಳುತ್ತಾ ವೇಷಮರೆಸಿಕೊಂಡಿದ್ದರು.

ನಾಲ್ಕನೆಯ ತಿಂಗಳಿನಲ್ಲಿ ಸಮೃದ್ಧ ಮತ್ಸ್ಯದ ಜನರಿಗೆ ಸಂತೋಷವನ್ನು ತರುವ ಬ್ರಹ್ಮಮಹೋತ್ಸವವು ಬಂದಿತು. ಕಾಲಖಂಜ ರಾಕ್ಷಸರಂತಿರುವ ಮಹಾಕಾಯ, ಮಹಾವೀರ ಮಲ್ಲರು ಸಹಸ್ರಾರು ಸಂಖ್ಯೆಗಳಲ್ಲಿ ದಿಕ್ಕುದಿಕ್ಕುಗಳಿಂದ ಅಲ್ಲಿಗೆ ಆಗಮಿಸಿದರು. ವೀರ್ಯೋನ್ಮತ್ತರೂ, ಬಲದಲ್ಲಿ ಮೇಲಾದವರೂ, ರಾಜನಿಂದ ಪುರಸ್ಕರಿಸಲ್ಪಟ್ಟವರೂ, ಸಿಂಹದಂಥಹ ಹೆಗಲು, ಸೊಂಟ ಮತ್ತು ಕೊರಳುಗಳುಳ್ಳವರೂ, ಸ್ವಚ್ಛ ಶರೀರಿಗಳೂ, ದೃಢಮನಸ್ಕರೂ ಆದ ಅವರು ರಾಜನ ಸಮ್ಮುಖದಲ್ಲಿ ಕಣದಲ್ಲಿ ಮಲ್ಲಯುದ್ಧಮಾಡಿ ಗೆಲ್ಲುತ್ತಿದ್ದರು. ಅವರಲ್ಲಿಯೇ ಒಬ್ಬ ಮಹಾಮಲ್ಲನು ಇತರ ಮಲ್ಲರೆಲ್ಲರನ್ನೂ ಕೂಗಿ ಕರೆದು ಕಣದಲ್ಲಿ ಸುತ್ತುವರೆಯುತ್ತಿದ್ದನು. ಆದರೆ ಅವನನ್ನು ಎದುರಿಸಲು ಯಾರೂ ಮುಂದೆಬರಲಿಲ್ಲ. ಆ ಜಟ್ಟಿಗಳೆಲ್ಲ ನಿರುತ್ಸಾಹಗೊಂಡು ಹತಚೇತಸರಾದಾಗ ಮತ್ಸ್ಯರಾಜನು ತನ್ನ ಅಡುಗೆಯವನಿಗೆ ಆ ಮಲ್ಲನೊಡನೆ ಹೋರಾಡಲು ಹೇಳಿದನು.

ಈ ರೀತಿ ರಾಜನಿಂದ ಪ್ರಚೋದಿತನಾದ ಬೀಮನು ಈ ರಾಜನೆದುರು ಬಹಿರಂಗವಾಗಿ ಹೋರಾಡಲು ಅವಕಾಶವಿಲ್ಲವಲ್ಲಾ ಎಂದು ದುಃಖಿಸಿದನು. ಆಗ ಆ ಪುರುಷವ್ಯಾಘ್ರನು ಶಾರ್ದೂಲದಂತೆ ಸಲೀಸಾಗಿ ಹೆಜ್ಜೆಗಳನ್ನಿಡುತ್ತಾ ಮಹಾರಂಗವನ್ನು ಪ್ರವೇಶಿಸಿ ವಿರಾಟನಿಗೆ ಸಂತೋಷವನ್ನಿತ್ತನು. ಅಲ್ಲಿದ್ದ ಜನರಿಗೆ ಹರ್ಷವನ್ನೀಯುತ್ತಾ ಕೌಂತೇಯ ಭೀಮನು ಸೊಂಟಕ್ಕೆ ಕಟ್ಟನ್ನು ಕಟ್ಟಿ ಆ ವೃತ್ರಾಸುರನಂತಿದ್ದ ಮಲ್ಲನನ್ನು ಎದುರಿಸಿದನು. ಮಹೋತ್ಸಾಹಿಗಳಾದ ತೀವ್ರಪರಾಕ್ರಮಿಗಳಾಗಿದ್ದ ಅವರೀರ್ವರೂ ಮತ್ತೇರಿದ ಅರವತ್ತು ವರ್ಷದ ಅತೀದೊಡ್ಡ ಆನೆಗಳಂತೆ ಕಾಣುತ್ತಿದ್ದರು. ಶತ್ರುಹಂತಕ ಭೀಮನು ಘೀಳಿಡುತ್ತಿರುವ ಆನೆಯನ್ನು ಶಾರ್ದೂಲವು ಎತ್ತಿ ಹಿಡಿಯುವಂತೆ ಆ ಮಲ್ಲನ ತೋಳುಗಳಿಂದ ಮೇಲೆತ್ತಿ ಹಿಡಿದು ಗರ್ಜಿಸಿದನು. ಆ ವೀರ್ಯವಂತನು ಅವನನ್ನು ಮೇಲೆತ್ತಿ ತಿರುಗಿಸುತ್ತಿದ್ದನ್ನು ನೋಡಿ ಮಲ್ಲರೂ ಮತ್ಸ್ಯ ಜನರೂ ಪರಮ ವಿಸ್ಮಿತರಾದರು. ಮಹಾಬಾಹು ವೃಕೋದರನು ಆ ಮಲ್ಲನನ್ನು ನೂರುಸಲ ತಿರುಗಿಸಿ ಸತ್ವವನ್ನು ಕಳೆದುಕೊಂಡು ಮೂರ್ಛೆ ಹೋಗಿದ್ದ ಅವನನ್ನು ನೆಲಕ್ಕಿಕ್ಕಿ ಹುಡಿಗುಟ್ಟಿದನು. ಲೋಕವಿಶ್ರುತ ಮಲ್ಲ ಜೀಮೂತನು ಈ ರೀತಿ ಹತನಾಗಲು ವಿರಾಟನು ತನ್ನ ಬಾಂಧವರೊಂದಿಗೆ ಅತೀವ ಸಂತೋಷಗೊಂಡನು. ಆ ದೊಡ್ಡಮನಸ್ಸಿನ ರಾಜನು ಸಂತೋಷದಿಂದ ಆ ಮಹಾರಂಗದಲ್ಲಿಯೇ ಬಲ್ಲವನಿಗೆ ಕುಬೇರನಂತೆ ಬಹಳಷ್ಟು ಹಣವನ್ನಿತ್ತನು.

ಹೀಗೆ ಆ ಭೀಮನು ಬಹುಮಂದಿ ಮಲ್ಲರನ್ನೂ ಮಹಾಬಲಶಾಲಿ ಪುರುಷರನ್ನೂ ಕೊಂದು ಮತ್ಯ್ಸರಾಜನಿಗೆ ಅತಿಶಯ ಆನಂದವನ್ನು ತಂದನು. ಅವನಿಗೆ ಸರಿಸಮಾನ ವ್ಯಕ್ತಿಗಳು ಯಾರೂ ಅಲ್ಲಿ ಇಲ್ಲದಿದ್ದಾಗ ಅವನನ್ನು ಹುಲಿ, ಸಿಂಹ ಅಥವಾ ಆನೆಗಳೊಡನೆ ಕಾದಾಡಿಸುತ್ತಿದ್ದನು. ಮತ್ತು ವಿರಾಟನು ತನ್ನ ಅಂತಃಪುರದ ಸ್ತ್ರೀಯರ ನಡುವೆ, ಮದಿಸಿದ ಮಹಾಬಲಶಾಲಿ ಸಿಂಹಗಳೊಡನೆ ವೃಕೋದರನು ಕಾದುವಂತೆ ಮಾಡುತ್ತಿದ್ದನು.

ಪಾಂಡವ ಅರ್ಜುನನೂ ಕೂಡ ತನ್ನ ಗೀತ ನೃತ್ಯಗಳಿಂದ ಅಂತಃಪುರದ ಸ್ತ್ರೀಯರೊಂದಿಗೆ ವಿರಾಟನನ್ನು ಸಂತೋಷಗೊಳಿಸುತ್ತಿದ್ದನು. ನಾನಾಕಡೆಗಳಿಂದ ಬಂದ ವೇಗಗಾಮಿ ಕುದುರೆಗಳಿಗೆ ತರಬೇತಿಯನ್ನಿತ್ತು ನಕುಲನು ರಾಜನನ್ನು ಸಂತೋಷಪಡಿಸುತ್ತಿದ್ದನು. ಸಹದೇವನಿಂದ ಸುರಕ್ಷಿತವಾಗಿದ್ದ ಗೂಳಿಗಳನ್ನು ನೋಡಿ ರಾಜನು ಪ್ರೀತನಾಗಿ ಅವನಿಗೆ ಕೊಡಬೇಕಾದಷ್ಟು ಬಹುಧನವನ್ನು ನೀಡುತ್ತಿದ್ದನು. ಹೀಗೆ ಆ ಪುರುಷಶ್ರೇಷ್ಠರು ವಿರಾಟರಾಜನ ಕೆಲಸ ಮಾಡುತ್ತಾ ಅಲ್ಲಿ ವೇಷಮರೆಸಿಕೊಂಡು ವಾಸಿಸುತ್ತಿದ್ದರು.

Leave a Reply

Your email address will not be published. Required fields are marked *