ಆರನೆಯ ದಿನದ ಯುದ್ಧ

ಸ್ವಲ್ಪ ಹೊತ್ತು ವಿಶ್ರಮಿಸಿ ರಾತ್ರಿಯು ಕಳೆದ ನಂತರ ಕುರುಪಾಂಡವರು ಒಟ್ಟಿಗೇ ಪುನಃ ಯುದ್ಧಮಾಡಲು ಹೊರಟರು. ಕೌರವರಲ್ಲಿ ಮತ್ತು ಪಾಂಡವರಲ್ಲಿ ರಥಮುಖ್ಯರು ರಥಗಳನ್ನು ಕಟ್ಟುವುದು, ಆನೆಗಳನ್ನು ಸಜ್ಜುಗೊಳಿಸಿದುದು, ಪದಾತಿ-ಕುದುರೆಗಳು ಅಣಿಯಾಗುವುದು ಇವೇ ಮೊದಲಾದ ಮಹಾಶಬ್ಧವುಂಟಾಯಿತು. ಎಲ್ಲಕಡೆ ಶಂಖದುಂದುಭಿಗಳ ನಾದಗಳ ತುಮುಲವೂ ಉಂಟಾಯಿತು. ಆಗ ರಾಜಾ ಯುಧಿಷ್ಠಿರನು ಧೃಷ್ಟದ್ಯುಮ್ನನಿಗೆ ಹೇಳಿದನು: ಮಹಾಬಾಹೋ! ಶತ್ರುತಾಪನ ಮಕರ ವ್ಯೂಹವನ್ನು ರಚಿಸು! ಪಾರ್ಥನು ಹೀಗೆ ಹೇಳಲು ಮಹಾರಥ ರಥಿಗಳಲ್ಲಿ ಶ್ರೇಷ್ಠ ಧೃಷ್ಟದ್ಯುಮ್ನನು ರಥಿಗಳಿಗೆ ಆದೇಶವನ್ನಿತ್ತನು. ಅದರ ಶಿರದಲ್ಲಿ ದೃಪದನೂ ಪಾಂಡವ ಧನಂಜಯರೂ ಇದ್ದರು. ಮಹಾರಥ ನಕುಲ-ಸಹದೇವರು ಕಣ್ಣುಗಳಾಗಿದ್ದರು. ಮಹಾಬಲ ಭೀಮಸೇನನು ಅದರ ಕೊಕ್ಕಾಗಿದ್ದನು. ಸೌಭದ್ರ, ದ್ರೌಪದೇಯರು, ರಾಕ್ಷಸ ಘಟೋತ್ಕಚ, ಸಾತ್ಯಕಿ ಮತ್ತು ಧರ್ಮರಾಜರು ವ್ಯೂಹದ ಕುತ್ತಿಗೆಯ ಭಾಗದಲ್ಲಿದ್ದರು. ಅದರ ಪೃಷ್ಠಭಾಗದಲ್ಲಿ ವಾಹಿನೀಪತಿ ವಿರಾಟನು ಮಹಾ ಸೇನೆಯಿಂದ ಆವೃತನಾಗಿ ಧೃಷ್ಟದ್ಯುಮ್ನನೊಂದಿಗೆ ಇದ್ದನು. ಐವರು ಕೇಕಯರು ಬಲಭಾಗದಲ್ಲಿದ್ದರು. ನರವ್ಯಾಘ್ರ ಧೃಷ್ಟಕೇತು ಮತ್ತು ವೀರ್ಯವಾನ್ ಕರಕರ್ಷರು ಎಡಭಾಗದಲ್ಲಿ ವ್ಯೂಹದ ರಕ್ಷಣೆಗೆ ನಿಂತಿದ್ದರು. ಅದರ ಪಾದಗಳಲ್ಲಿ ಶ್ರೀಮಾನ್ ಮಹಾರಥ ಕುಂತಿಭೋಜ ಶತಾನೀಕನು ಮಹಾ ಸೇನೆಯಿಂದ ಆವೃತನಾಗಿ ನಿಂತಿದ್ದನು. ಮಕರದ ಬಾಲವಾಗಿ ಮಹೇಷ್ವಾಸ ಬಲೀ ಶಿಖಂಡಿಯು ಸೋಮಕರಿಂದ ಸಂವೃತನಾಗಿ ಮತ್ತು ಇರಾವಾನನು ವ್ಯವಸ್ಥಿತರಾಗಿದ್ದರು. ಹೀಗೆ ಮಹಾವ್ಯೂಹವನ್ನು ರಚಿಸಿ ಕವಚಗಳನ್ನು ಧರಿಸಿ ಪಾಂಡವರು ಸೂರ್ಯೋದಯದಲ್ಲಿ ಪುನಃ ಯುದ್ಧಕ್ಕೆ ಹೊರಟರು.

ಕೌರವರೂ ಕೂಡ ತಕ್ಷಣವೇ ಆನೆ-ಕುದುರೆ-ರಥ-ಪದಾತಿಗಳೊಂದಿಗೆ ಚಿತ್ರವಾದ ಧ್ವಜಗಳಿಂದ ಹೊದಿಕೆಗಳಿಂದ ಮತ್ತು ಹೊಳೆಯುವ ಹರಿತ ಶಸ್ತ್ರಗಳೊಂದಿಗೆ ಹೊರಟರು. ಆ ಸೈನ್ಯವನ್ನು ನೋಡಿ ದೇವವ್ರತನು ಸೇನೆಯನ್ನು ಮಹಾ ಕ್ರೌಂಚ ವ್ಯೂಹವಾಗಿ ರಚಿಸಿದನು. ಅದರ ಕೊಕ್ಕಿನಲ್ಲಿ ಮಹೇಷ್ವಾಸ ಭಾರದ್ವಾಜನು ವಿರಾಜಿಸಿದನು. ಅಶ್ವತ್ಥಾಮ ಮತ್ತು ಕೃಪರು ಅದರ ಕಣ್ಣುಗಳಾದರು. ಕಾಂಬೋಜ, ಆರಟ್ಟ ಮತ್ತು ಬಾಹ್ಲೀಕರೊಂದಿಗೆ ನರಶ್ರೇಷ್ಠ, ಸರ್ವ ಧನುಷ್ಮತರಲ್ಲಿ ಶ್ರೇಷ್ಠ ಕೃತವರ್ಮನು ಅದರ ಶಿರೋಭಾಗದಲ್ಲಿದ್ದನು. ಅದರ ಕಂಠದಲ್ಲಿ ದುರ್ಯೋಧನನು ಅನೇಕ ರಾಜರಿಂದ ಆವೃತನಾಗಿದ್ದನು. ಪ್ರಾಗ್ಜ್ಯೋತಿಷದವನೊಡನೆ ಮದ್ರ-ಸೌವೀರ-ಕೇಕಯರು ಮಹಾ ಸೇನೆಗಳಿಂದ ಆವೃತರಾಗಿ ಅದರ ತೊಡೆಗಳಾದರು. ಪ್ರಸ್ಥಲಾಧಿಪ ಸುಶರ್ಮನು ತನ್ನ ಸೇನೆಯ ಸಹಿತ ಕವಚಗಳನ್ನು ಧರಿಸಿ ವ್ಯೂಹದ ಬಲಭಾಗವನ್ನು ರಕ್ಷಿಸುತ್ತಿದ್ದನು. ತುಷಾರರು, ಯವನರು ಮತ್ತು ಶಕರು ಚೂಚುಪರೊಂದಿಗೆ ವ್ಯೂಹದ ಎಡಭಾಗವನ್ನು ಆಶ್ರಯಿಸಿ ನಿಂತಿದ್ದರು. ಶ್ರುತಾಯು, ಶತಾಯು ಮತ್ತು ಸೌಮದತ್ತಿಯರು ವ್ಯೂಹದ ಜಘನ ಪ್ರದೇಶದಲ್ಲಿ ಪರಸ್ಪರರನ್ನು ರಕ್ಷಿಸಲು ನಿಂತರು. ಆಗ ಪಾಂಡವರು ಕೌರವರು ಒಟ್ಟಿಗೆ ಯುದ್ಧಕ್ಕಾಗಿ ಬಂದು ಸೇರಿದರು. ಸೂರ್ಯೋದಯದಲ್ಲಿ ಮಹಾ ಯುದ್ಧವು ನಡೆಯಿತು.

ರಥಿಗಳು ಆನೆಗಳ ಮೇಲೂ, ಆನೆಗಳು ರಥಿಗಳ ಮೇಲೂ ಎರಗಿದವು. ಅಶ್ವಾರೋಹಿಗಳು ಅಶ್ವಾರೋಹಿಗಳನ್ನೂ ರಥಿಗಳು ಅಶ್ವಾರೋಹಿಗಳನ್ನೂ ಎದುರಿಸಿದರು. ಮಹಾರಣದಲ್ಲಿ ರಥಿಗಳು ಸಾರಥಿ ಮುತ್ತು ಆನೆಗಳನ್ನೂ, ಆನೆಗಳ ಸವಾರರು ರಥಾರೋಹರನ್ನೂ, ರಥಿಗಳು ಅಶ್ವಾರೋಹಿಗಳನ್ನೂ, ರಥಿಗಳು ಪದಾತಿಗಳನ್ನು, ಹಾಗೆಯೇ ಅಶ್ವಾರೋಹಿಗಳು ಪದಾತಿಗಳನ್ನೂ, ಅನ್ಯೋನ್ಯರನ್ನು ಸಮರದಲ್ಲಿ ಕೋಪದಿಂದ ಮುನ್ನುಗ್ಗಿ ಆಕ್ರಮಣಿಸಿದರು. ಭೀಮಸೇನ, ಅರ್ಜುನ, ಯಮಳರು ಮತ್ತು ಅನ್ಯ ಮಹಾರಥರಿಂದ ರಕ್ಷಿಸಲ್ಪಟ್ಟ ಪಾಂಡವೀ ಸೇನೆಯು ರಾತ್ರಿಯಲ್ಲಿ ನಕ್ಷತ್ರಗಳಂತೆ ಶೋಭಿಸಿತು. ಹಾಗೆಯೇ ಭೀಷ್ಮ, ಕೃಪ, ದ್ರೋಣ, ಶಲ್ಯ, ದುರ್ಯೋಧನಾದಿಗಳಿಂದ ರಕ್ಷಿತವಾದ ಕೌರವ ಸೇನೆಯೂ ಕೂಡ ಆಕಾಶದಲ್ಲಿ ಸೇರಿರುವ ಗ್ರಹಗಳಂತೆ ಹೊಳೆಯಿತು. ಪರಾಕ್ರಮೀ ಕೌಂತೇಯ ಭೀಮಸೇನನಾದರೋ ದ್ರೋಣನನ್ನು ನೋಡಿ ವೇಗದ ಅಶ್ವಗಳಿಂದ ಭಾರದ್ವಾಜನ ಸೇನೆಯನ್ನು ಎದುರಿಸಿದನು. ಕ್ರುದ್ಧನಾದ ವೀರ್ಯವಾನ್ ದ್ರೋಣನಾದರೋ ಭೀಮನನ್ನು ಒಂಭತ್ತು ಆಯಸಗಳಿಂದ ಮರ್ಮಗಳಿಗೆ ಗುರಿಯಿಟ್ಟು ಹೊಡೆದನು. ದೃಢವಾಗಿ ಹೊಡೆಯಲ್ಪಟ್ಟ ಭೀಮನು ಭಾರದ್ವಾಜನ ಸಾರಥಿಯನ್ನು ಯಮನ ಸದನಕ್ಕೆ ಕಳುಹಿಸಿದನು. ಆಗ ಪ್ರತಾಪವಾನ್ ಭರದ್ವಾಜನು ಕುದುರೆಗಳನ್ನು ಸ್ವಯಂ ತಾನೇ ನಿಯಂತ್ರಿಸುತ್ತಾ ಪಾಂಡವೀ ಸೇನೆಯನ್ನು ಅಗ್ನಿಯು ಹತ್ತಿಯ ರಾಶಿಯಂತೆ ನಾಶಪಡಿಸಿದನು. ದ್ರೋಣ ಮತ್ತು ಭೀಷ್ಮರಿಂದ ವಧಿಸಲ್ಪಟ್ಟ ಸೃಂಜಯರು ಮತ್ತು ಕೇಕಯುರು ಒಟ್ಟಿಗೇ ಪರಾಭವಗೊಂಡು ಪಲಾಯನಗೈದರು. ಹಾಗೆಯೇ ಕೌರವರ ಸೈನ್ಯವೂ ಭೀಮಾರ್ಜುನರಿಂದ ಪೀಡಿತರಾಗಿ ವರಾಂಗನೆಯು ಸೊಕ್ಕಿನಿಂದ ನಿಂತುಕೊಳ್ಳುವಂತೆ ಅಲ್ಲಿಯೇ ಗರಬಡಿದಂತೆ ನಿಂತುಬಿಟ್ಟಿತು. ಆ ವೀರವರಕ್ಷಯದ ವ್ಯೂಹಗಳಲ್ಲಿ ಕೌರವರ ಮತ್ತು ಪಾಂಡವರ ಘೋರ ನಷ್ಟಗಳಾದವು. ಕೌರವರು ಶತ್ರುಗಳೊಂದಿಗೆ ಜೀವವನ್ನೂ ತೊರೆದು ಹೋರಾಡುತ್ತಿದ್ದರು. ಮಹಾರಥರಾದ ಪಾಂಡವರು ಮತ್ತು ಕೌರವರು ಅಸ್ತ್ರಗಳನ್ನು ತಿರುಗಿ ಪ್ರಯೋಗಿಸುತ್ತಾ ಅನ್ಯೋನ್ಯರೊಡನೆ ಯುದ್ಧಮಾಡಿದರು.

ಭೀಮಪರಾಕ್ರಮ

ಭೀಮಸೇನನಾದರೋ ನಿಶಿತಬಾಣಗಳಿಂದ ಮಹಾಚಮುವನ್ನು ಭೇದಿಸಿ ದುರ್ಯೋಧನನ ಅನುಜರೆಲ್ಲರನ್ನೂ ಎದುರಿಸಿದನು. ಭೀಷ್ಮನಿಂದ ರಕ್ಷಿಸಲ್ಪಟ್ಟಿದ್ದ ಸಮೀಪದಲ್ಲಿದ್ದ ದುಃಶಾಸನ, ದುರ್ವಿಷಹ, ದುಃಸ್ಸಹ, ದುರ್ಮದ, ಜಯ, ಜಯತ್ಸೇನ, ವಿಕರ್ಣ, ಚಿತ್ರಸೇನ, ಸುದರ್ಶನ, ಚಾರುಚಿತ್ರ, ಸುವರ್ಮ, ದುಷ್ಕರ್ಣ, ಕರ್ಣ ಮೊದಲಾದ ಅನೇಕ ಸಂಕ್ರುದ್ಧ ಮಹಾರಥ ಧಾರ್ತರಾಷ್ಟ್ರರನ್ನು ನೋಡಿ ಮಹಾಬಲ ಭೀಮನು ಮಹಾಚಮುವನ್ನು ಪ್ರವೇಶಿಸಿದನು. ಹಾಗೆ ನುಗ್ಗಿ ಬರುತ್ತಿರುವ ವೃಕೋದರನನ್ನು ಸಮೀಪಿಸಿ ಕೌರವ ಸೇನೆಯ ನರಾಧಿಪರು ಅನ್ಯೋನ್ಯರಲ್ಲಿ “ಇವನನ್ನು ಜೀವಸಹಿತವಾಗಿಯೇ ಸೆರೆಹಿಡಿಯೋಣ!” ಎಂದು ಮಾತನಾಡಿಕೊಂಡರು. ಹೀಗೆ ನಿಶ್ಚಯಮಾಡಿಕೊಂಡ ಸಹೋದರರು ಪ್ರಜಾಸಂಹರಣ ಕಾಲದಲ್ಲಿ ಕ್ರೂರ ಮಹಾಗ್ರಹಗಳು ಸೂರ್ಯನನ್ನು ಸುತ್ತುವರೆಯುವಂತೆ ಪಾರ್ಥನನ್ನು ಸುತ್ತುವರೆದರು. ದೇವಾಸುರರ ಯುದ್ಧದಲ್ಲಿ ದಾನವರನ್ನು ತಲುಪಿದ ಮಹೇಂದ್ರನಿಗೆ ಹೇಗೆ ಭೀತಿಯುಂಟಾಗಲಿಲ್ಲವೋ ಹಾಗೆ ವ್ಯೂಹದ ಮಧ್ಯವನ್ನು ಪ್ರವೇಶಿಸಿದ ಪಾಂಡವನನ್ನು ಭಯವೆಂಬುದೇ ಆಗಲಿಲ್ಲ. ಆಗ ನೂರಾರು ಸಹಸ್ರಾರು ರಥಿಗಳು ಎಲ್ಲ ಕಡೆಗಳಿಂದಲೂ ಘೋರ ಶರಗಳನ್ನು ಸುರಿಸುತ್ತಾ ಏಕಾಂಗಿಯಾಗಿದ್ದ ಅವನನ್ನು ಆಕ್ರಮಿಸಿದರು. ಆದರೆ ಆ ಶೂರನು ಧಾರ್ತರಾಷ್ಟ್ರರನ್ನು ಗಮನಕ್ಕೆ ತೆಗೆದುಕೊಳ್ಳದೇ ಕೌರವ ಪಕ್ಷದ ಶ್ರೇಷ್ಠ ಯೋಧರನ್ನೂ, ರಥ-ಅಶ್ವ-ಆನೆ-ಪದಾತಿಗಳ ಸೇನೆಗಳನ್ನೂ ಅಪಾರ ಸಂಖ್ಯೆಗಳಲ್ಲಿ ಸಂಹರಿಸಿದನು. ಅವರು ತನ್ನನ್ನು ಸೆರೆಹಿಡಿಯಲು ವ್ಯವಸ್ಥಿತರಾಗಿದ್ದಾರೆಂದು ತಿಳಿದ ಭೀಮಸೇನನು ಮಹಾಮನಸ್ಕರಾದ ಅವರೆಲ್ಲರನ್ನೂ ವಧಿಸಲು ಮನಸ್ಸು ಮಾಡಿದನು. ಆಗ ಪಾಂಡವನು ಗದೆಯನ್ನು ಹಿಡಿದು ರಥದಿಂದಿಳಿದು ಮಹಾಸಾಗರದಂತಿದ್ದ ಧಾರ್ತರಾಷ್ಟ್ರರ ಆ ಸೇನೆಯನ್ನು ಧ್ವಂಸಮಾಡಿದನು.

ಭೀಮಸೇನನು ಸೇನೆಯನ್ನು ಪ್ರವೇಶಿಸಿದ ನಂತರ ಪಾರ್ಷತ ಧೃಷ್ಟದ್ಯುಮ್ನನು ದ್ರೋಣನೊಡನೆ ಯುದ್ಧಮಾಡುವುದನ್ನು ಬಿಟ್ಟು ಸೌಬಲನಿದ್ದಲ್ಲಿಗೆ ಅವಸರದಿಂದ ಬಂದನು. ಕೌರವ ಮಹಾಸೇನೆಯನ್ನು ಸೀಳಿಕೊಂಡು ಬಂದ ಅವನು ಭೀಮಸೇನನ ಖಾಲಿ ರಥವನ್ನು ನೋಡಿದನು. ಸಮರದಲ್ಲಿ ಭೀಮಸೇನನ ಸಾರಥಿ ವಿಶೋಕನೊಬ್ಬನನ್ನೇ ನೋಡಿ ಧೃಷ್ಟದ್ಯುಮ್ನನು ದುಃಖಿತನೂ ಬುದ್ಧಿಗೆಟ್ಟವನೂ ಆದನು. ಸುದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಕಣ್ಣೀರು ತುಂಬಿದವನಾಗಿ ಗದ್ಗದ ಸ್ವರದಲ್ಲಿ “ನನ್ನ ಪ್ರಾಣಗಳಿಗಿಂತಲೂ ಪ್ರಿಯತಮನಾದ ಭೀಮನೆಲ್ಲಿ?” ಎಂದು ದುಃಖಿತನಾಗಿ ಕೇಳಿದನು. ಆಗ ವಿಶೋಕನು ಧೃಷ್ಟದ್ಯುಮ್ನನಿಗೆ ಕೈಮುಗಿದು ಹೇಳಿದನು: ನನ್ನನ್ನು ಇಲ್ಲಿರಿಸಿ ಪ್ರತಾಪವಾನ್ ಬಲಶಾಲಿ ಪಾಂಡವೇಯನು ಮಹಾಸಾಗರದಂತಿರುವ ಧಾರ್ತರಾಷ್ಟ್ರರ ಈ ಸೇನೆಯನ್ನು ಪ್ರವೇಶಿಸಿದನು. ಅವನು ನನಗೆ ಈ ಪ್ರೀತಿಯುಕ್ತವಾದ ಮಾತುಗಳನ್ನಾಡಿದನು: ಸೂತ! ನೀನು ಮುಹೂರ್ತಕಾಲ ಈ ಅಶ್ವಗಳನ್ನು ತಡೆಹಿಡಿದುಕೊಂಡು ಪ್ರತಿಪಾಲಿಸು. ನನ್ನನ್ನು ವಧಿಸಲು ಉದ್ಯುಕ್ತರಾಗಿರುವ ಇವರನ್ನು ಈಗಲೇ ಸಂಹರಿಸಿ ಬಂದುಬಿಡುತ್ತೇನೆ. ಆಗ ಗದೆಯನ್ನು ಹಿಡಿದು ಓಡಿ ಬರುತ್ತಿರುವ ಮಹಾಬಲನನ್ನು ನೋಡಿ ಎಲ್ಲರ ಸೇನೆಗಳೊಂದಿಗೆ ಸಂಘರ್ಷವುಂಟಾಯಿತು. ಭಯಾನಕವಾದ ತುಮುಲ ಯುದ್ಧವು ನಡೆಯುತ್ತಿರಲು ನಿನ್ನ ಸಖನು ಮಹಾವ್ಯೂಹವನ್ನು ಭೇದಿಸಿ ಪ್ರವೇಶಿಸಿದನು.

ವಿಶೋಕನ ಮಾತನ್ನು ಕೇಳಿ ಮಹಾಬಲ ಪಾರ್ಷತ ಧೃಷ್ಟದ್ಯುಮ್ನನು ರಣಮಧ್ಯದಲ್ಲಿ ಸೂತನಿಗೆ ಹೇಳಿದನು: ಸೂತ! ರಣದಲ್ಲಿ ಭೀಮಸೇನನನ್ನು ಬಿಟ್ಟು ಪಾಂಡವರ ಸ್ನೇಹವನ್ನೂ ಕಳೆದುಕೊಂಡು ಜೀವಿಸಿರುವುದರಲ್ಲಿ ಪ್ರಯೋಜನವಿಲ್ಲ. ಒಬ್ಬನೇ ಹೋಗಿರುವ ಭೀಮನನ್ನು ಯುದ್ಧದಲ್ಲಿ ಹಾಗೆಯೇ ಬಿಟ್ಟು ಭೀಮನಿಲ್ಲದೇ ನಾನು ಹಿಂದಿರುಗಿದರೆ ಕ್ಷತ್ರಿಯರು ನನ್ನನ್ನು ಏನೆಂದು ಹೇಳಿಕೊಂಡಾರು? ಸಹಾಯಕನನ್ನು ಬಿಟ್ಟು ತಾನು ಸುಕುಶಲಿಯಾಗಿ ಮನೆಗೆ ಹೋಗುವವನಿಗೆ ಅಗ್ನಿಯೇ ಮೊದಲಾದ ದೇವತೆಗಳು ಕೆಟ್ಟದ್ದನ್ನು ಮಾಡುತ್ತಾರೆ. ನನಗೆ ಭೀಮನು ಸಖನೂ ಹೌದು. ಅ ಮಹಾಬಲನು ಸಂಬಂಧಿಯೂ ಹೌದು. ಅವನು ನಮ್ಮ ಭಕ್ತ. ನಾವೂ ಆ ಅರಿನಿಶೂದನನ ಭಕ್ತರು. ಆದುದರಿಂದ ನಾನೂ ಕೂಡ ವೃಕೋದರನು ಎಲ್ಲಿ ಹೋಗಿದ್ದಾನೋ ಅಲ್ಲಿಗೆ ಹೋಗುತ್ತೇನೆ. ವಾಸವನು ದಾನವರನ್ನು ಹೇಗೋ ಹಾಗೆ ನಾನು ಅರಿಗಳನ್ನು ಸಂಹರಿಸುವುದನ್ನು ನೋಡು!

ಹೀಗೆ ಹೇಳಿ ವೀರನು ಗದೆಗಳಿಂದ ಆನೆಗಳನ್ನು ಸಂಹರಿಸಿ ಹೋಗಿದ್ದ ಭೀಮಸೇನನ ಮಾರ್ಗದಲ್ಲಿಯೇ ಹೋಗಿ ಭಾರತೀ ಸೇನೆಯ ಮಧ್ಯಕ್ಕೆ ಬಂದನು. ಅಲ್ಲಿ ರಿಪುವಾಹಿನಿಯನ್ನು ದಹಿಸುತ್ತಿದ್ದ, ಭಿರುಗಾಳಿಯು ಮರಗಳನ್ನು ಭಗ್ನಗೊಳಿಸುವಂತೆ ರಣದಲ್ಲಿ ನೃಪರನ್ನು ಬಲವಾಗಿ ಧ್ವಂಸಿಸುತ್ತಿದ್ದ ಭೀಮನನ್ನು ನೋಡಿದನು. ಸಮರದಲ್ಲಿ ಅವನಿಂದ ವಧಿಸಲ್ಪಡುತ್ತಿದ್ದ ರಥಿಗಳು, ಅಶ್ವಾರೋಹಿಗಳು, ಪದಾತಿಗಳು ಮತ್ತು ಆನೆಗಳು ಜೋರಾಗಿ ಆರ್ತಸ್ವರದಲ್ಲಿ ಕೂಗುತ್ತಿದ್ದರು. ಆ ಚಿತ್ರಯೋಧಿ ಯುದ್ಧಕುಶಲಿ ಭೀಮಸೇನನಿಂದ ವಧಿಸಲ್ಪಡುತ್ತಿದ್ದ ಕೌರವ ಸೇನೆಯಲ್ಲಿ ದೊಡ್ಡ ಹಾಹಾಕಾರವೆದ್ದಿತು. ಆಗ ಅಸ್ತ್ರಗಳಲ್ಲಿ ಪರಿಣಿತರಾದವರು ಎಲ್ಲರೂ ಭಯಪಡದೇ ವೃಕೋದರನನ್ನು ಸುತ್ತುವರೆದು ಶಸ್ತ್ರವೃಷ್ಟಿಯಿಂದ ಎಲ್ಲ ಕಡೆಗಳಿಂದಲೂ ಆಕ್ರಮಿಸಿದರು. ಧಾವಿಸಿಬಂದು ಶಸ್ತ್ರಭೃತರಲ್ಲಿ ಶ್ರೇಷ್ಠನಾದ, ಲೋಕವೀರರಿಂದ ಎಲ್ಲಕಡೆಗಳಿಂದ ಮುತ್ತಲ್ಪಟ್ಟ, ಘೋರ ಸೇನೆಯೊಂದಿಗೆ ಚೆನ್ನಾಗಿ ಯುದ್ಧಮಾಡುತ್ತಿದ್ದ ಬಲೀ ಭೀಮಸೇನನನ್ನು ನೋಡಿ ಪಾರ್ಷತನು ಅಂಗಾಂಗಳಲ್ಲಿ ಗಾಯಗೊಂಡಿದ್ದ, ಕ್ರೋಧವಿಷವನ್ನು ಕಾರುತ್ತಾ ನೆಲದ ಮೇಲೆಯೇ ನಿಂತು ಯುದ್ಧಮಾಡುತ್ತಿರುವ ಅಂತಕಾಲದಲ್ಲಿ ಕಾಲನಂತೆ ಗದೆಯನ್ನು ಹಿಡಿದಿರುವ ಭೀಮಸೇನನಿಗೆ ಆಶ್ವಾಸನೆ ನೀಡಿದನು. ಆ ಮಹಾತ್ಮನು ತಕ್ಷಣವೇ ಭೀಮಸೇನನನ್ನು ತನ್ನ ರಥದ ಮೇಲೇರಿಸಿಕೊಂಡು ಅವನ ಅಂಗಾಂಗಳೆಲ್ಲವನ್ನೂ ಚುಚ್ಚಿದ್ದ ಬಾಣಗಳನ್ನು ತೆಗೆದು ಗಾಂಢವಾಗಿ ಆಲಂಗಿಸಿ ಶತ್ರುಗಳ ಮಧ್ಯದಲ್ಲಿ ಅವನನ್ನು ಸಂತೈಸಿದನು.

ಆ ಮಹಾ ವಿಮರ್ದನ ಕಾರ್ಯವು ನಡೆಯುತ್ತಿರಲು ದುರ್ಯೋಧನನು ಸಹೋದರರನ್ನು ಸಮೀಪಿಸಿ ಹೇಳಿದನು: ಈ ದುರಾತ್ಮಾ ದ್ರುಪದನ ಮಗನು ಭೀಮಸೇನನ ನೆರವಿಗೆ ಬಂದುಬಿಟ್ಟನಲ್ಲ! ಇವನನ್ನು ಎಲ್ಲರೂ ಒಟ್ಟಿಗೇ ಸಂಹರಿಸಲು ಆಕ್ರಮಣಿಸೋಣ. ಈ ಶತ್ರುವು ನಮ್ಮ ಸೇನೆಗೆ ಹಾನಿಯನ್ನುಂಟುಮಾಡದಂತೆ ನೋಡಿಕೊಳ್ಳಬೇಕು.

ಅವನ ಮಾತುಗಳನ್ನು ಕೇಳಿ, ಧೃಷ್ಟದ್ಯುಮ್ನನನ್ನು ಸಹಿಸಿಕೊಳ್ಳದೇ, ಹಿರಿಯಣ್ಣನ ಆಜ್ಞೆಯಿಂದ ಚೋದಿತರಾದ ಧಾರ್ತರಾಷ್ಟ್ರರು ಯುಗಕ್ಷಯದದಲ್ಲಿ ಉಗ್ರ ಧೂಮಕೇತುಗಳಂತೆ ಆಯುಧಗಳನ್ನೆತ್ತಿಕೊಂಡು ಅವನನ್ನು ವಧಿಸಲು ಅವನ ಮೇಲೆ ಎರಗಿದರು. ಆ ವೀರರು ಚಿತ್ರ ಧನುಸ್ಸುಗಳನ್ನು ಹಿಡಿದು ರಥಚಕ್ರನೇಮಿಗಳ ಗಡ-ಗಡಾಶಬ್ಧದಿಂದ ಭೂಮಿಯನ್ನು ನಡುಗಿಸುತ್ತಾ ಮೇಘಗಳು ಪರ್ವತದ ಮೇಲೆ ಮಳೆಗರೆಯುವಂತೆ ದ್ರುಪದನ ಮಗನನ್ನು ಬಾಣಗಳಿಂದ ಮುಚ್ಚಿದರು. ಆದರೆ ಆ ಚಿತ್ರಯೋಧಿ ವೀರನು ಅವರ ಸುತೀಕ್ಷ್ಣ ಶರಗಳು ಮೇಲೆ ಬೀಳುತ್ತಿದ್ದರೂ ಸಮರದಲ್ಲಿ ವಿಚಲಿತನಾಗದೇ ಧಾರ್ತರಾಷ್ಟ್ರರ ಬಾಣಗಳನ್ನು ತನ್ನದೇ ಬಾಣಗಳಿಂದ ಕತ್ತರಿಸಿ ರಣದಲ್ಲಿ ನಿಂತನು. ಧಾರ್ತರಾಷ್ಟ್ರರ ಮೇಲೆ ತುಂಬಾ ಕ್ರುದ್ಧನಾಗಿ ಅವರನ್ನು ಕೊಲ್ಲಲು ದ್ರುಪದಾತ್ಮಜ ಯುವಕ ಮಹಾರಥನು ದೈತ್ಯರ ಮೇಲೆ ಸಮರದಲ್ಲಿ ಮಹೇಂದ್ರನು ಹೇಗೋ ಹಾಗೆ ಪ್ರಮೋಹನಾಸ್ತ್ರವನ್ನು ಹೂಡಿದನು. ಆಗ ನರವೀರರು ಪ್ರಮೋಹನಾಸ್ತ್ರದಿಂದ ಹೊಡೆಯಲ್ಪಟ್ಟು ಬುದ್ಧಿಸತ್ತ್ವಗಳನ್ನು ಕಳೆದುಕೊಂಡು ಪ್ರಜ್ಞಾಹೀನರಾದರು. ಆಯುಸ್ಸನ್ನು ಕಳೆದುಕೊಂಡವರಂತೆ ಪ್ರಜ್ಞಾಹೀನರಾಗಿ ಬಿದ್ದಿರುವ ಧಾರ್ತರಾಷ್ಟ್ರರನ್ನು ನೋಡಿ ಕುರುಗಳೆಲ್ಲರೂ ಕುದುರೆ-ಆನೆ-ರಥಗಳೊಂದಿಗೆ ಎಲ್ಲಕಡೆ ಪಲಾಯನಮಾಡತೊಡಗಿದರು.

ಇದೇ ಸಮಯದಲ್ಲಿ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನು ದ್ರುಪದನನ್ನು ಎದುರಿಸಿ ಅವನನ್ನು ಮೂರು ದಾರುಣ ಶರಗಳಿಂದ ಹೊಡೆದನು. ದ್ರೋಣನಿಂದ ಪ್ರಹಾರದಿದ ಬಹುವಾಗಿ ಗಾಯಗೊಂಡ ದ್ರುಪದನು ಹಿಂದಿನ ವೈರವನ್ನು ಸ್ಮರಿಸುತ್ತಾ ರಣದಿಂದ ಬಹುದೂರ ಹೊರಟುಹೋದನು. ದ್ರುಪದನನ್ನು ಗೆದ್ದು ಪ್ರತಾಪವಾನ್ ದ್ರೋಣನು ಶಂಖವನ್ನು ಊದಿದನು. ಅವನ ಶಂಖಸ್ವನವನ್ನು ಕೇಳಿ ಸರ್ವ ಸೋಮಕರೂ ನಡುಗಿದರು. ಆಗ ತೇಜಸ್ವೀ ದ್ರೋಣನು ಧಾರ್ತರಾಷ್ಟ್ರರು ಪ್ರಮೋಹನಾಸ್ತ್ರದಿಂದ ಮೂರ್ಛಿತರಾಗಿದ್ದಾರೆಂದು ಕೇಳಿದನು. ರಾಜಗೃದ್ಧೀ ದ್ರೋಣನು ತ್ವರೆಮಾಡಿ ಆ ರಣಕ್ಕೆ ಧಾವಿಸಿದನು. ಅಲ್ಲಿ ಪ್ರತಾಪವಾನ್ ಮಹೇಷ್ವಾಸ ಭಾರದ್ವಾಜನು ಮಹಾರಣದಲ್ಲಿ ಸಂಚರಿಸುತ್ತಿರುವ ಧೃಷ್ಟದ್ಯುಮ್ನನನ್ನೂ ಭೀಮನನ್ನೂ ನೋಡಿದನು. ಮೋಹಾವಿಷ್ಟರಾಗಿದ್ದ ಧೃತರಾಷ್ಟ್ರ ಪುತ್ರರನ್ನು ನೋಡಿ ಆ ಮಹಾರಥನು ಪ್ರಜ್ಞಾಸ್ತ್ರವನ್ನು ಬಳಸಿ ಮೋಹನಾಸ್ತ್ರವನ್ನು ನಾಶಗೊಳಿಸಿದನು. ಹಿಂದೆ ಪ್ರಾಣವನ್ನು ಪಡೆದ ಧಾರ್ತರಾಷ್ಟ್ರ ಮಹಾರಥರು ಪುನಃ ಸಮರದಲ್ಲಿ ಭೀಮ-ಪಾರ್ಷತರೊಂದಿಗೆ ಯುದ್ಧ ಮಾಡತೊಡಗಿದರು.

ಆಗ ಯುಧಿಷ್ಠಿರನು ತನ್ನ ಸೈನಿಕರನ್ನು ಒಟ್ಟುಗೂಡಿಸಿ ಕರೆದು ಹೇಳಿದನು: ನೀವು ಒಟ್ಟು ಶಕ್ತಿಯಿಂದ ಯುದ್ಧದಲ್ಲಿ ಭೀಮ-ಪಾರ್ಷತರಿಗೆ ಸಹಾಯಮಾಡಿ. ಸೌಭದ್ರನೇ ಮೊದಲಾದ ಹನ್ನೆರಡು ಮಂದಿ ವೀರ ರಥರು ಕವಚಗಳನ್ನು ಧರಿಸಿ ಅವರಿದ್ದಲ್ಲಿಗೆ ಹೋಗಿ. ಇಲ್ಲವಾದರೆ ನನ್ನ ಮನಸ್ಸು ನಿಶ್ಚಿಂತವಾಗಿರಲಾರದು.

ಹೀಗೆ ಅನುಜ್ಞಾತರಾದ ಶೂರ ವಿಕ್ರಾಂತಯೋಧಿಗಳು ಹಾಗೆಯೇ ಆಗಲೆಂದು ಹೇಳಿ ಆ ಎಲ್ಲ ಪುರುಷಮಾನಿನರೂ ಸೂರ್ಯನು ಮಧ್ಯಾಕಾಶದಲ್ಲಿ ಬರಲು ಭೀಮ-ಧೃಷ್ಟದ್ಯುಮ್ನರಿದ್ದಲ್ಲಿಗೆ ತೆರಳಿದರು. ಕೇಕಯರು, ದ್ರೌಪದೇಯರು, ಮತ್ತು ವೀರ್ಯವಾನ್ ಧೃಷ್ಟಕೇತುವು ಅಭಿಮನ್ಯುವನ್ನು ಮುಂದೆ ಮಾಡಿಕೊಂಡು ಮಹಾಸೇನೆಯಿಂದ ಆವೃತರಾಗಿ ಸುಚೀಮುಖವೆಂಬ ವ್ಯೂಹವನ್ನು ರಚಿಸಿಕೊಂಡು ಧಾರ್ತರಾಷ್ಟ್ರರ ಆ ರಥಸೇನೆಯನ್ನು ಭೇದಿಸಿದರು. ಅಭಿಮನ್ಯುವನ್ನು ಮುಂದಿಟ್ಟುಕೊಂಡು ಆ ಮಹೇಷ್ವಾಸರು ಬರಲು ಭೀಮಸೇನನಿಂದ ಭಯಾವಿಷ್ಟರಾಗಿದ್ದ ಮತ್ತು ಧೃಷ್ಟದ್ಯುಮ್ನನಿಂದ ವಿಮೋಹಿತರಾಗಿದ್ದ ಕೌರವ ಸೇನೆಯು ತಡೆದುಕೊಳ್ಳಲಾರದೇ ಮತ್ತೇರಿದವರಂತೆ ಅಥವಾ ಮೂರ್ಛಿತರಾದವರಂತೆ ಕೂಗಾಡುತ್ತಾ ನಿಂತಿತ್ತು. ಸುವರ್ಣವಿಕೃತ ಧ್ವಜಗಳನ್ನು ಹೊಂದಿದ್ದ ಆ ಮಹೇಷ್ವಾಸರು ಧೃಷ್ಟದ್ಯುಮ್ನ-ವೃಕೋದರರಿಗೆ ಸಹಾಯ ಮಾಡಲು ಧಾವಿಸಿ ಬಂದರು. ಬೆಂಗಾವಲಾಗಿ ಬಂದ ಅಭಿಮನ್ಯುಪುರೋಗಮ ಮಹೇಷ್ವಾಸರನ್ನು ನೋಡಿ ಕೌರವ ಸೇನೆಯನ್ನು ಸಂಹರಿಸುವಲ್ಲಿ ನಿರತರಾಗಿದ್ದ ಭೀಮ-ಧೃಷ್ಟದ್ಯುಮ್ನರಿಬ್ಬರೂ ಸಂತೋಷಗೊಂಡರು.

ಅವರಿಗೆ ಸಹಾಯುಕನಾಗಿ ಬರುತ್ತಿದ್ದ ಗುರು ದ್ರೋಣನನ್ನು ನೋಡಿ ಪಾಂಚಾಲ್ಯ ಪಾರ್ಷತ ವೀರನು ಧಾರ್ತರಾಷ್ಟ್ರರನ್ನು ವಧಿಸಲು ಮನಸ್ಸು ಮಾಡಲಿಲ್ಲ. ಆಗ ವೃಕೋದರನನ್ನು ಕೇಕಯನ ರಥದ ಮೇಲೇರಿಸಿ ಸುಸಂಕ್ರುದ್ಧನಾದ ಧೃಷ್ಟದ್ಯುಮ್ನನು ಅಸ್ತ್ರಪಾರಗ ದ್ರೋಣನನ್ನು ಎದುರಿಸಿದನು. ಅವನು ತಮ್ಮ ಮೇಲೆ ಬೇಗನೆ ಬೀಳುತ್ತಿದ್ದುದನ್ನು ನೋಡಿ ಪ್ರತಾಪವಾನ್ ಶತ್ರುನಿಷೂದನ ಭಾರದ್ವಾಜನು ಕ್ರುದ್ಧನಾಗಿ ಅವನ ಬಿಲ್ಲನ್ನು ಒಂದೇ ಒಂದು ಭಲ್ಲದಿಂದ ತುಂಡರಿಸಿದನು. ಅನ್ನವಿಟ್ಟ ಸ್ವಾಮಿಯನ್ನು ಸ್ಮರಿಸುತ್ತಾ ದುರ್ಯೋಧನನ ಹಿತಕ್ಕಾಗಿ ಪಾರ್ಷತನ ಮೇಲೆ ಅನ್ಯ ನೂರಾರು ಬಾಣಗಳನ್ನು ಪ್ರಯೋಗಿಸಿದನು. ಆಗ ಇನ್ನೊಂದು ಬಿಲ್ಲನ್ನು ಎತ್ತಿಕೊಂಡು ಪರವೀರಹ ಪಾರ್ಷತನು ದ್ರೋಣನನ್ನು ಏಳು ಶಿಲಾಶಿತ ರುಕ್ಮಪುಂಖಗಳಿಂದ ಹೊಡೆದನು. ಅಮಿತ್ರಕರ್ಶನ ದ್ರೋಣನು ಪುನಃ ಅವನ ಚಾಪವನ್ನು ಕತ್ತರಿಸಿದನು ಮತ್ತು ನಾಲ್ಕು ಉತ್ತಮ ಸಾಯಕಗಳಿಂದ ಬೇಗನೇ ಅವನ ನಾಲ್ಕು ಕುದುರೆಗಳನ್ನು ಘೋರವಾದ ವೈವಸ್ವತಕ್ಷಯಕ್ಕೆ ಕಳುಹಿಸಿದನು. ವೀರ್ಯವಾನನು ಭಲ್ಲದಿಂದ ಅವನ ಸಾರಥಿಯನ್ನು ಮೃತ್ಯುಲೋಕಕ್ಕೆ ಕಳುಹಿಸಿದನು. ಅಶ್ವಗಳು ಹತರಾಗಲು ತಕ್ಷಣವೇ ಆ ಮಹಾರಥನು ರಥದಿಂದ ಹಾರಿ ಮಹಾಬಾಹು ಅಭಿಮನ್ಯುವಿನ ಮಹಾರಥವನ್ನೇರಿದನು.

ಆಗ ಭೀಮಸೇನ-ಪಾರ್ಷತರು ನೋಡುತ್ತಿದ್ದಂತೆಯೇ ರಥ-ಆನೆ-ಕುದುರೆಗಳೊಂದಿಗೆ ಸೇನೆಯು ನಡುಗುತ್ತಿರುವುದು ಕಂಡುಬಂದಿತು. ಅಮಿತತೇಜಸ್ವಿ ದ್ರೋಣನಿಂದ ಸದೆಬಡಿಯಲ್ಪಡುತ್ತಿದ್ದ ಸೇನೆಯನ್ನು ನೋಡಿ ಆ ಮಹಾರಥರು ಎಷ್ಟೇ ಪ್ರಯತ್ನಿಸಿದರೂ ಅವನನ್ನು ತಡೆಯಲು ಶಕ್ಯರಾಗಲಿಲ್ಲ. ದ್ರೋಣನ ನಿಶಿತ ಶರಗಳಿಂದ ವಧಿಸಲ್ಪಡುತ್ತಿದ್ದ ಆ ಸೇನೆಯು ಅಲ್ಲೋಲಕಲ್ಲೋಲವಾದ ಮಹಾ ಸಾಗರದಂತೆ ಅಲ್ಲಲ್ಲಿಯೇ ಸುತ್ತಿ ಸುತ್ತಿ ಬರುತ್ತಿತ್ತು. ಆ ರೀತಿಯಲ್ಲಿದ್ದ ಅವರನ್ನು ಕಂಡು ಕೌರವ ಸೇನೆಯವರು ಬಹಳ ಹರ್ಷಿತರಾದರು. ಕ್ರುದ್ಧನಾಗಿ ಶತ್ರುಸೇನೆಯನ್ನು ಸುಡುತ್ತಿದ್ದ ಆಚಾರ್ಯನನ್ನು ನೋಡಿ ಎಲ್ಲಕಡೆಗಳಿಂದ ಯೋಧರು “ಸಾಧು! ಸಾಧು!” ಎಂದು ಕೂಗಿದರು.

ಆಗ ರಾಜಾ ದುರ್ಯೋಧನನು ಮೂರ್ಛೆಯಿಂದ ಎಚ್ಚೆತ್ತು ಪುನಃ ಅಚ್ಯುತ ಭೀಮನನ್ನು ಶರವರ್ಷಗಳಿಂದ ಆಕ್ರಮಣಿಸಿದನು. ಪುನಃ ಧೃತರಾಷ್ಟ್ರನ ಮಹಾರಥ ಪುತ್ರರು ಒಂದಾಗಿ ಸೇರಿ ಭೀಮನೊಂದಿಗೆ ಯುದ್ಧಮಾಡತೊಡಗಿದರು. ಮಹಾಬಾಹು ಭೀಮಸೇನನೂ ಕೂಡ ಪುನಃ ತನ್ನ ರಥವನ್ನು ಪಡೆದು ಅದನ್ನೇರಿ ಧಾರ್ತರಾಷ್ಟ್ರರನ್ನು ಎದುರಿಸಿದನು. ಮಹಾವೇಗವುಳ್ಳ ಬಂಗಾರದಿಂದ ಅಲಂಕರಿಸಲ್ಪಟ್ಟ ದೃಢವಾದ ಬಣ್ಣದ ಬಿಲ್ಲನ್ನು ಹಿಡಿದು ರಣದಲ್ಲಿ ಧಾರ್ತರಾಷ್ಟ್ರರನ್ನು ಶರಗಳಿಂದ ಹೊಡೆದನು. ಆಗ ರಾಜಾ ದುರ್ಯೋಧನನು ಮಹಾಬಲ ಭೀಮಸೇನನನ್ನು ತೀಕ್ಷ್ಣ ನಾರಾಚಗಳಿಂದ ಮರ್ಮಗಳಿಗೆ ಚೆನ್ನಾಗಿ ಹೊಡೆದನು. ಅವನಿಂದ ಅತಿಯಾಗಿ ಪೆಟ್ಟುತಿಂದ ಆ ಮಹೇಷ್ವಾಸ ಭೀಮನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ವೇಗದಿಂದ ಧನುಸ್ಸನ್ನು ಎತ್ತಿ ದುರ್ಯೋಧನನನ್ನು ಮೂರುಬಾಣಗಳಿಂದ ಅವನ ಬಾಹುಗಳಿಗೂ ಎದೆಗೂ ಹೊಡೆದನು. ಅವನಿಂದ ಪೆಟ್ಟುತಿಂದರೂ ರಾಜನು ಅಲುಗಾಡದೇ ಪರ್ವತದಂತಿದ್ದನು. ಸಮರದಲ್ಲಿ ಕ್ರುದ್ಧರಾಗಿ ಪರಸ್ಪರರನ್ನು ಹೊಡೆಯುತ್ತಿದ್ದ ಅವರಿಬ್ಬರನ್ನು ನೋಡಿ ಜೀವವನ್ನೇ ತೊರೆಯಲು ಸಿದ್ಧರಾಗಿದ್ದ ದುರ್ಯೋಧನನ ಶೂರ ತಮ್ಮಂದಿರೆಲ್ಲರೂ ಭೀಮನನ್ನು ಹಿಡಿಯುವ ತಮ್ಮ ಹಿಂದಿನ ಉಪಾಯದಂತೆ ಮನಸ್ಸು ಮಾಡಿ ಅವನನ್ನು ಸೆರೆಹಿಡಿಯಲು ಪ್ರಯತ್ನಿಸಿದರು. ಅವರು ಅವನ ಮೇಲೆ ಎರಗಲು ಮಹಾಬಲ ಭೀಮಸೇನನು ಎದುರಾಳಿ ಆನೆಯನ್ನು ಇನ್ನೊಂದು ಆನೆಯು ಹೇಗೋ ಹಾಗೆ ಎದುರಿಸಿ ಯುದ್ಧ ಮಾಡಿದನು.

ತುಂಬಾ ಕ್ರುದ್ಧನಾದ ಆ ತೇಜಸ್ವಿಯು ಮಹಾಯಶಸ್ವಿ ಧೃತರಾಷ್ಟ್ರನ ಮಗ ಚಿತ್ರಸೇನನನ್ನು ನಾರಾಚಗಳಿಂದ ಹೊಡೆದನು. ಹಾಗೆಯೇ ಧೃತರಾಷ್ಟ್ರನ ಇತರ ಮಕ್ಕಳನ್ನೂ ವೇಗವುಳ್ಳ ಅನೇಕ ವಿಧದ ರುಕ್ಮಪುಂಖ ಶರಗಳಿಂದ ಹೊಡೆದನು. ಆಗ ಭೀಮಸೇನನನ್ನು ಅನುಸರಿಸಿ ಹೋಗಬೇಕೆಂದು ಧರ್ಮರಾಜನು ಅಭಿಮನ್ಯುವಿನ ನಾಯಕತ್ವದಲ್ಲಿ ಕಳುಹಿಸಿದ್ದ ಹನ್ನೆರಡು ಮಹಾರಥರು ತಮ್ಮ ಎಲ್ಲ ಸೇನೆಗಳೊಂದಿಗೆ ಬಂದು ಧಾರ್ತರಾಷ್ಟ್ರರನ್ನು ಎದುರಿಸಿ ಯುದ್ಧಮಾಡಿದರು. ಆ ಶೂರರ ಸೂರ್ಯಾಗ್ನಿಸಮತ್ತೇಜಸ್ಸಿನ ರಥಗಳನ್ನೂ, ಶ್ರೀಯಿಂದ ಆವೃತರಾಗಿ ಬೆಳಗುತ್ತಿರುವ ಆ ಮಹೇಷ್ವಾಸರನ್ನೂ, ಸುವರ್ಣಕವಚಗಳ ಬೆಳಕಿನಿಂದ ಬೆಳಗುತ್ತಿರುವ ಅವರನ್ನು ನೋಡಿ ಮಹಾಬಲ ಧಾರ್ತರಾಷ್ಟ್ರರು ಅವನನ್ನು ತ್ಯಜಿಸಿದರು.

ಅವರು ಜೀವಸಹಿತರಾಗಿ ಹೊರಟುಹೋದುದನ್ನು ಕೌಂತೇಯನು ಸಹಿಸಲಿಲ್ಲ. ಅವರನ್ನು ಬೆನ್ನಟ್ಟಿಹೋಗಿ ಪುನಃ ಪೀಡಿಸಿದನು. ಆಗ ಭೀಮಸೇನ ಮತ್ತು ಪಾರ್ಷತರೊಡನೆ ಅಭಿಮನ್ಯುವು ಇರುವುದನ್ನು ನೋಡಿ ಕೌರವ ಸೇನೆಯಲ್ಲಿದ್ದ ದುರ್ಯೋಧನನೇ ಮೊದಲಾದ ಮಹಾರಥರು ಧನ್ನುಸ್ಸುಗಳನ್ನು ಹಿಡಿದು ಉತ್ತಮ ಅಶ್ವಗಳಿಂದ ಎಳೆಯಲ್ಪಟ್ಟ ರಥಗಳಲ್ಲಿ ಅವರಿರುವಲ್ಲಿಗೆ ಧಾವಿಸಿದರು. ಆಗ ಅಪರಾಹ್ಣದಲ್ಲಿ ಕೌರವರ ಮತ್ತು ಬಲಶಾಲಿ ಪಾಂಡವರ ನಡುವೆ ಮಹಾ ರಣವಾಯಿತು.

ಸಂಕುಲ ಯುದ್ಧ

ಅಭಿಮನ್ಯುವು ವಿಕರ್ಣನ ಮಹಾವೇಗದ ಕುದುರೆಗಳನ್ನು ಕೊಂದು ಇಪ್ಪತ್ತೈದು ಕ್ಷುದ್ರಕಗಳಿಂದ ಅವನನ್ನು ಹೊಡೆದನು. ಅಶ್ವವು ಹತವಾಗಲು ಮಹಾರಥ ವಿಕರ್ಣನು ಚಿತ್ರಸೇನನ ಹೊಳೆಯುವ ರಥವನ್ನು ಏರಿದನು. ಒಂದೇ ರಥದಲ್ಲಿ ನಿಂತಿದ್ದ ಆ ಇಬ್ಬರು ಕುರುವರ್ಧನ ಸಹೋದರರನ್ನು ಆರ್ಜುನಿಯು ಶರಜಾಲಗಳಿಂದ ಮುಚ್ಚಿದನು. ಆಗ ದುರ್ಜಯ ಮತ್ತು ವಿಕರ್ಣರು ಕಾರ್ಷ್ಣಿಯನ್ನು ಐದು ಆಯಸಗಳಿಂದ ಹೊಡೆದರೂ ಕಾರ್ಷ್ಣಿಯು ಮೇರುವಿನಂತೆ ಅಲುಗಾಡದೇ ಅಚಲವಾಗಿದ್ದನು. ದುಃಶಾಸನನಾದರೋ ಸಮರದಲ್ಲಿ ಐವರು ಕೇಕಯರೊಂದಿಗೆ ಯುದ್ಧಮಾಡತೊಡಗಿದನು. ಅದು ಅದ್ಭುತವಾಗಿತ್ತು. ದ್ರೌಪದೇಯರು ರಣದಲ್ಲಿ ಕ್ರುದ್ಧರಾಗಿ ದುರ್ಯೋಧನನನ್ನು ಸುತ್ತುವರೆದು ಒಬ್ಬೊಬ್ಬರೂ ಮೂರು ಬಾಣಗಳಿಂದ ಹೊಡೆದರು. ದುರ್ಯೋಧನನೂ ಕೂಡ ರಣದಲ್ಲಿ ದ್ರೌಪದೇಯರನ್ನು ಪ್ರತ್ಯೇಕ ಪ್ರತ್ಯೇಕವಾಗಿ ನಿಶಿತ ಸಾಯಕಗಳಿಂದ ಹೊಡೆದನು. ಅವರಿಂದಲೂ ಪೆಟ್ಟುತಿಂದ ಅವನು ರಕ್ತದಿಂದ ತೋಯ್ದು ಗೈರಿಕಾದಿ ಧಾತುಗಳ ಸಮ್ಮಿಶ್ರಣಗಳಿಂದ ಕೂಡಿದ ಝರಿಗಳಿರುವ ಗಿರಿಯಂತೆ ಶೋಭಿಸಿದನು. ಭೀಷ್ಮನೂ ಕೂಡ ಸಮರದಲ್ಲಿ ಗೋಪಾಲಕನು ಹಸುಗಳನ್ನು ತರುಬುವಂತೆ ಪಾಂಡವರ ಸೇನೆಯನ್ನು ತಡೆದಿದ್ದನು. ಆಗ ರಣಭೂಮಿಯ ದಕ್ಷಿಣಭಾಗದಿಂದ ಸೇನೆಗಳನ್ನು ಸಂಹರಿಸುತ್ತಿದ್ದ ಪಾರ್ಥನ ಗಾಂಡೀವ ನಿರ್ಘೋಷವು ಕೇಳಿಬಂದಿತು.

ಅಲ್ಲಿ ಕುರುಗಳ ಮತ್ತು ಪಾಂಡವರ ಸೇನೆಗಳಲ್ಲಿ ಎಲ್ಲ ಕಡೆ ಸಂಹೃತರಾದವರ ಮುಂಡಗಳು ಎದ್ದು ನಿಂತಿದ್ದವು. ಸೈನ್ಯವೆಂಬ ಸಾಗರದಲ್ಲಿ ರಕ್ತವೇ ನೀರಾಗಿತ್ತು. ಬಾಣಗಳು ಸುಳಿಯಾಗಿದ್ದವು. ಆನೆಗಳು ದ್ವೀಪಗಳಂತಿದ್ದವು. ಕುದುರೆಗಳು ಅಲೆಗಳಾಗಿದ್ದವು. ರಥಗಳು ನರವ್ಯಾಘ್ರರು ದಾಟಲು ಬಳಸಿದ ನೌಕೆಗಳಂತಿದ್ದವು. ಅಲ್ಲಿ ಕೈಗಳು ಕತ್ತರಿಸಿದ, ಕವಚಗಳಿಲ್ಲದ, ದೇಹವೇ ಇಲ್ಲದ ನೂರಾರು ಸಾವಿರಾರು ನರೋತ್ತಮರು ಅಲ್ಲಿ ಬಿದ್ದಿರುವುದು ಕಾಣುತ್ತಿತ್ತು. ರಕ್ತದಿಂದ ತೋಯಿಸಲ್ಪಟ್ಟು ನಿಹತವಾದ ಮತ್ತ ಮಾತಂಗಗಳು ನೆಲದ ಮೇಲೆ ಪರ್ವತಗಳಂತೆ ತೋರುತ್ತಿದ್ದವು. ಅಂತಹ ಅಲ್ಲಿಯೂ ಒಂದು ಪರಮಾದ್ಭುತವು ಕಂಡುಬಂದಿತು. ಕೌರವರಲ್ಲಿಯಾಗಲೀ ಪಾಂಡವರಲ್ಲಿಯಾಗಲೀ ಯುದ್ಧವು ಬೇಡವೆಂದು ಹೇಳುವವರು ಯಾರೂ ಇರಲಿಲ್ಲ. ಹೀಗೆ ಮಹಾಯಶಸ್ಸನ್ನು ಬಯಸುತ್ತಾ ಕೌರವ ವೀರರು ಯುದ್ಧದಲ್ಲಿ ಜಯವನ್ನೇ ಬಯಸಿ ಪಾಂಡವರೊಂದಿಗೆ ಯುದ್ಧಮಾಡಿದರು.

ಆರನೆಯ ದಿವಸದ ಯುದ್ಧದ ಮುಕ್ತಾಯ

ಭಾಸ್ಕರನು ಕೆಂಪಾಗುತ್ತಿರಲು ರಾಜಾ ದುರ್ಯೋಧನನು ಭೀಮನನ್ನು ಕೊಲ್ಲಲು ಬಯಸಿ ರಭಸದಿಂದ ಸಮರಕ್ಕೆ ಧಾವಿಸಿದನು. ಆ ನರವೀರ ದೃಢವೈರಿಯು ಬರುತ್ತಿರುವುದನ್ನು ನೋಡಿ ತುಂಬಾ ಕ್ರುದ್ಧನಾದ ಭೀಮಸೇನನು ಈ ಮಾತುಗಳನ್ನಾಡಿದನು:  “ಬಹಳ ವರ್ಷಗಳಿಂದ ಕಾಯುತ್ತಿದ್ದ ಸಮಯವು ಇಗೋ ಇಂದು ಬಂದೊದಗಿದೆ. ರಣವನ್ನು ಬಿಟ್ಟು ಓಡಿ ಹೋಗದೇ ಇದ್ದರೆ ಇಂದು ನಿನ್ನನ್ನು ಕೊಲ್ಲುತ್ತೇನೆ. ಇಂದು ನಿನ್ನನ್ನು ಕೊಂದು ಕುಂತಿಯ ಪರಿಕ್ಲೇಶವನ್ನು, ಸಂಪೂರ್ಣ ವನವಾಸದ ಕಷ್ಟಗಳನ್ನು ಮತ್ತು ದ್ರೌಪದಿಯ ಪರಿಕ್ಲೇಶವನ್ನು ಕೊನೆಗೊಳಿಸುತ್ತೇನೆ. ಗಾಂಧಾರೇ! ಅಸೂಯೆಗೊಳಗಾಗಿ ನೀನು ಪಾಂಡವರನ್ನು ಅಪಮಾನಿಸಿದ್ದೀಯೆ. ಆ ಪಾಪದಿಂದಲೇ ಬಂದಿರುವ ಈ ವ್ಯಸನವನ್ನು ನೋಡು. ಕರ್ಣನ ಮತ್ತು ಸೌಬಲನ ಸಲಹೆಗಳಂತೆ ಹಿಂದೆ ನೀನು ಕಾಮದಿಂದ ಪಾಂಡವರ ಕುರಿತು ಯೋಚಿಸದೆಯೇ ಇಷ್ಟವಾದಂತೆ ಮಾಡಿದ್ದೆ. ಬೇಡಿಕೊಂಡ ದಾಶಾರ್ಹನನ್ನು ಮೋಹದಿಂದ ಅಪಮಾನಿಸಿದ್ದೆ. ಉಲೂಕನ ಮೂಲಕ ಸಂದೇಶವನ್ನು ಕಳುಹಿಸಿ ಸಂತೋಷದಿಂದ ಯುದ್ಧವನ್ನು ಬಯಸಿ ಪ್ರಾರಂಭಿಸಿದೆ. ಇಂದು ನಿನ್ನನ್ನು ಬಾಂಧವರು ಮತ್ತು ಅನುಯಾಯಿಗಳೊಂದಿಗೆ ಸಂಹರಿಸುತ್ತೇನೆ. ಹಿಂದೆ ನೀನು ಮಾಡಿದ ಪಾಪಕ್ಕೆ ಸುಡುತ್ತೇನೆ.

ಹೀಗೆ ಹೇಳಿ ಅವನು ಘೋರ ಧನುಸ್ಸನ್ನು ಎಳೆದು ಜೋರಾಗಿ ಟೇಂಕರಿಸಿ ಸೂರ್ಯನ ಕಿರಣಗಳಂತೆ ಹೊಳೆಯುತ್ತಿದ್ದ ಘೋರ ಶರಗಳನ್ನು ಹೂಡಿದನು. ತಕ್ಷಣವೇ ಕ್ರುದ್ಧನಾಗಿ ಸುಯೋಧನನ ಮೇಲೆ ಇಪ್ಪತ್ತಾರು ವಜ್ರಗಳಂತೆ ಮೊನಚಾಗಿದ್ದ, ಅಗ್ನಿಶಿಖರಗಳಂತೆ ಉರಿಯುತ್ತಿದ್ದ ಬಾಣಗಳನ್ನು ಪ್ರಯೋಗಿಸಿದನು. ಆಗ ಎರಡರಿಂದ ಅವನ ಬಿಲ್ಲನ್ನೂ ಎರಡರಿಂದ ಸೂತನನ್ನೂ ಹೊಡೆದು ನಾಲ್ಕರಿಂದ ಅವನ ಕುದುರೆಗಳನ್ನು ಯಮಸಾದನಕ್ಕೆ ಕಳುಹಿಸಿದನು. ಆ ಅರಿಮರ್ದನನು ತನ್ನ ಉತ್ತಮ ರಥದಿಂದ ಎರಡು ಶರಗಳನ್ನು ಪ್ರಯೋಗಿಸಿ ರಾಜನ ಛತ್ರವನ್ನು ತುಂಡರಿಸಿದನು. ಮತ್ತು ಮೂರು ಬಾಣಗಳಿಂದ ಅವನ ಪ್ರಜ್ವಲಿಸುತ್ತಿರುವ ಉತ್ತಮ ಧ್ವಜವನ್ನು ಕತ್ತರಿಸಿದನು. ಅದನ್ನು ಕತ್ತರಿಸಿ ದುರ್ಯೋಧನನು ನೋಡುತ್ತಿದ್ದಂತೆಯೇ ಜೋರಾಗಿ ಗರ್ಜಿಸಿದನು. ನಾನಾ ರತ್ನವಿಭೂಷಿತ ಆ ಶ್ರೀಮಾನ್ ಧ್ವಜವು ತಕ್ಷಣವೇ ರಥದಿಂದ ಮಿಂಚಿನಿಂದೊಡಗೂಡಿದ ಮೋಡದಂತೆ ನೆಲದ ಮೇಲೆ ಬಿದ್ದಿತು. ಕುರುಪತಿಯ ಆ ಸೂರ್ಯನಂತೆ ಬೆಳಗುತ್ತಿದ್ದ, ಮಣಿಮಯ ಆನೆಯ ಚಿಹ್ನೆಯುಳ್ಳ ಶುಭ ಧ್ವಜವು ತುಂಡಾದುದನ್ನು ಸರ್ವ ಪಾರ್ಥಿವರೂ ನೋಡಿದರು. ಆ ಮಹಾರಥ ಭೀಮನು ರಣದಲ್ಲಿ ನಗುತ್ತಾ ಹತ್ತು ಬಾಣಗಳಿಂದ ಮಹಾಗಜವನ್ನು ಅಂಕುಶದಿಂದ ಚುಚ್ಚುವಂತೆ ಅವನನ್ನು ಹೊಡೆದನು. ಆಗ ಸಿಂಧುಗಳ ರಾಜಾ ರಥಶ್ರೇಷ್ಠ ಜಯದ್ರಥನು ಸತ್ಪುರುಷರಿಗೆ ಉಚಿತವಾದಂತೆ ದುರ್ಯೋಧನನ ಪಾರ್ಷ್ಣಿಯನ್ನು ಹಿಡಿದುಕೊಂಡನು. ರಥಿಗಳಲ್ಲಿ ಶ್ರೇಷ್ಠ ಕೃಪನು ಅಮಿತೌಜಸ ಕೌರವ್ಯ ಅಮರ್ಷಣ ದುರ್ಯೋಧನನನ್ನು ತನ್ನ ರಥದ ಮೇಲೇರಿಸಿಕೊಂಡನು. ಭೀಮಸೇನನಿಂದ ಗಾಢವಾಗಿ ಗಾಯಗೊಂಡ ದುರ್ಯೋಧನನು ವ್ಯಥಿತನಾಗಿ ರಥದಲ್ಲಿಯೇ ಕುಳಿತುಕೊಂಡನು.

ಆಗ ಭೀಮನನ್ನು ಕೊಲ್ಲಲು ಬಯಸಿ ಜಯದ್ರಥನು ಅನೇಕ ಸಾವಿರ ರಥಗಳಿಂದ ಭೀಮನನ್ನು ಎಲ್ಲಕಡೆಗಳಿಂದಲೂ ಮುತ್ತಿಗೆ ಹಾಕಿದನು. ಧೃಷ್ಟಕೇತು, ವೀರ್ಯವಾನ್ ಅಭಿಮನ್ಯು, ಕೇಕಯರು ಮತ್ತು ದ್ರೌಪದೇಯರು ಧಾರ್ತರಾಷ್ಟ್ರರನ್ನು ಎದುರಿಸಿ ಯುದ್ಧಮಾಡಿದರು. ಚಿತ್ರಸೇನ, ಸುಚಿತ್ರ, ಚಿತ್ರಾಶ್ವ, ಚಿತ್ರದರ್ಶನ, ಚಾರುಚಿತ್ರ, ಸುಚಾರು, ನಂದ, ಉಪನಂದ ಈ ಎಂಟು ಮಹೇಷ್ವಾಸ ಯಶಸ್ವಿ ಸುಕುಮಾರರು ಅಭಿಮನ್ಯುವಿನ ರಥವನ್ನು ಎಲ್ಲಕಡೆಗಳಿಂದಲೂ ಸುತ್ತುವರೆದರು. ಮಹಾಮನಸ್ವಿ ಅಭಿಮನ್ಯುವು ತಕ್ಷಣವೇ ಅವರಲ್ಲಿ ಒಬ್ಬೊಬ್ಬರನ್ನೂ ಭೋರ್ಗರೆಯುತ್ತಿರುವ ತನ್ನ ಚಿತ್ರ ಧನುಸ್ಸಿನಿಂದ ವಜ್ರಮೃತ್ಯುಸಮನಾಗಿರುವ ಐದೈದು ಸನ್ನತಪರ್ವಶರಗಳಿಂದ ಹೊಡೆದು ಗಾಯಗೊಳಿಸಿದನು. ಅದನ್ನು ಸಹಿಸಲಾರದೇ ಅವರೆಲ್ಲರೂ ರಥಸತ್ತಮ ಸೌಭದ್ರನ ಮೇಲೆ ಮೋಡಗಳು ಮೇರುವಿನ ಮೇಲೆ ಮಳೆ ಸುರಿಸುವಂತೆ ತೀಕ್ಷ್ಣ ಮಾರ್ಗಣಗಳ ಮಳೆಯನ್ನು ಸುರಿಸಿದರು. ಸಮರದಲ್ಲಿ ಪೀಡಿತನಾದ ಆ ಕೃತಾಸ್ತ್ರ ಯುದ್ಧದುರ್ಮದ ಅಭಿಮನ್ಯುವು ದೇವಾಸುರರ ಯುದ್ಧದಲ್ಲಿ ವಜ್ರಪಾಣಿಯು ಮಹಾಸುರರನ್ನು ಹೇಗೋ ಹಾಗೆ ಕೌರವರು ನಡುಗುವಂತೆ ಮಾಡಿದನು. ಆ ರಥಶ್ರೇಷ್ಠನು ವಿಕರ್ಣನ ಮೇಲೆ ಘೋರ ಸರ್ಪಗಳ ವಿಷದಂತಿದ್ದ ಹದಿನಾಲ್ಕು ಭಲ್ಲಗಳನ್ನು ಪ್ರಯೋಗಿಸಿ, ಅವನ ದ್ವಜ, ಸಾರಥಿ, ಮತ್ತು ಕುದುರೆಗಳನ್ನು ತುಂಡರಿಸಿ ಯುದ್ಧದಲ್ಲಿ ನರ್ತಿಸಿದನು. ಪುನಃ ವಿಕರ್ಣನ ಮೇಲೆ ಮಹಾಬಲ ಸೌಭದ್ರನು ಅನ್ಯ ಶಿಲಾಶಿತ ಪೀತ ಕುಂಠಾಗ್ರ ಶರಗಳನ್ನು ಪ್ರಯೋಗಿಸಿದನು. ಆ ಕಂಕಪುಕ್ಕಗಳನ್ನು ಹೊಂದಿದ್ದ ಶರಗಳು ವಿಕರ್ಣನಿಗೆ ತಾಗಿ ಅವನ ದೇಹವನ್ನು ಭೇದಿಸಿ ಭೂಮಿಯ ಮೇಲೆ ಉರಿಯುತ್ತಿರುವ ಪನ್ನಗಗಳಂತೆ ಬಿದ್ದವು. ಆ ಹೇಮಪುಂಖಾಗ್ರ ಶರಗಳು ವಿಕರ್ಣನ ರಕ್ತವನ್ನು ಕುಡಿದು ಭೂಮಿಯಮೇಲೆ ಕಾರುತ್ತಿರುವಂತೆ ತೋರಿದವು. ವಿಕರ್ಣನಿಗೆ ಗಾಯವಾದುದನ್ನು ನೋಡಿ ಅವನ ಅನ್ಯ ಸಹೋದರರು ಧಾವಿಸಿ ಅಭಿಮನ್ಯುವಿನ ನಾಯಕತ್ವದಲ್ಲಿದ್ದ ರಥರನ್ನು ಎದುರಿಸಿದರು. ಹೀಗೆ ಸೂರ್ಯವರ್ಚಸ ರಥಗಳಲ್ಲಿ ನಿಂತು ಆ ಯುದ್ಧದುರ್ಮದರು ಸಂರಬ್ಧರಾಗಿ ಬರಲು ಸಮರದಲ್ಲಿ ಅನ್ಯೋನ್ಯರನ್ನು ಹೊಡೆದರು.

ದುರ್ಮುಖನು ಶ್ರುತಕರ್ಮನನ್ನು ಏಳು ಆಶುಗಗಳಿಂದ ಹೊಡೆದು, ಧ್ವಜವನ್ನು ಒಂದರಿಂದಲೂ ಸಾರಥಿಯನ್ನು ಏಳರಿಂದಲೂ ತುಂಡರಿಸಿದನು. ಕುದುರೆಗಳನ್ನು ಬಂಗಾರದ ಬಾಣಗಳ ಜಾಲಗಳಿಂದ ಮುಚ್ಚಿ ಕೊಂದನು ಮತ್ತು ಆರರಿಂದ ಅವನ ಸಾರಥಿಯನ್ನು ಬೀಳಿಸಿದನು. ಕುದುರೆಗಳು ಆ ರಥದಲ್ಲಿಯೇ ನಿಂತು ಮಹಾರಥ ಶ್ರುತಕರ್ಮನು ಸಂಕ್ರುದ್ಧನಾಗಿ ಮಹಾ ಉಲ್ಕೆಯಂತೆ ಉರಿಯುತ್ತಿರುವ ಶಕ್ತಿಯನ್ನು ಎಸೆದನು. ಅದು ಯಶಸ್ವಿ ದುರ್ಮುಖನ ಕವಚವನ್ನು ಸೀಳಿ ಒಳಹೊಕ್ಕು ತೇಜಸ್ಸಿನಿಂದ ಬೆಳಗುತ್ತಾ ಭೂಮಿಯನ್ನು ಪ್ರವೇಶಿಸಿತು. ಅಲ್ಲಿ ವಿರಥನಾಗಿದ್ದ ಅವನನ್ನು ನೋಡಿ ಮಹಾಬಲ ಸುತಸೋಮನು ಸರ್ವ ಸೇನೆಗಳೂ ನೋಡುತ್ತಿದ್ದಂತೆ ಅವನನ್ನು ತನ್ನ ರಥದ ಮೇಲೇರಿಸಿಕೊಂಡನು. ಆಗ ವೀರ ಶ್ರುತಕೀರ್ತಿಯು ಧೃತರಾಷ್ಟ್ರನ ಮಗ ಯಶಸ್ವಿ ಜಯತ್ಸೇನನನ್ನು ಕೊಲ್ಲಲು ಬಯಸಿ ಅವನನ್ನು ಎದುರಿಸಿದನು. ಮಹಾತ್ಮ ಶ್ರುತಕೀರ್ತಿಯು ಎಳೆದು ಹಿಡಿದಿದ್ದ ಚಾಪವನ್ನು ಸಮರದಲ್ಲಿ ಜಯತ್ಸೇನನು ನಗುತ್ತಾ ತೀಕ್ಷ್ಣವಾದ ಕ್ಷುರಪ್ರಗಳಿಂದ ತುಂಡುಮಾಡಿದನು. ಸಹೋದರನ ಬಿಲ್ಲು ತುಂಡಾದುದನ್ನು ನೋಡಿದ ತೇಜಸ್ವೀ ಶತಾನೀಕನು ಸಿಂಹದಂತೆ ಗರ್ಜಿಸುತ್ತಾ ಮುಂದೆ ಬಂದನು. ಶತಾನೀಕನಾದರೋ ಸಮರದಲ್ಲಿ ಬಿಲ್ಲನ್ನು ದೃಢವಾಗಿ ಟೇಂಕರಿಸಿ ಬೇಗನೇ ಹತ್ತು ಶಿಲೀಮುಖಗಳಿಂದ ಜಯತ್ಸೇನನನ್ನು ಹೊಡೆದನು. ಶತಾನೀಕನು ತಕ್ಷಣವೇ ಇನ್ನೊಂದು ತೀಕ್ಷ್ಣ ಸರ್ವಾವರಣಗಳನ್ನೂ ಭೇದಿಸಬಲ್ಲ ಬಾಣದಿಂದ ಜಯತ್ಸೇನನ ಹೃದಯವನ್ನು ಜೋರಾಗಿ ಹೊಡೆದನು. ಹೀಗೆ ನಡೆಯುತ್ತಿರುವಾಗ ಸಹೋದರನ ಹತ್ತಿರದಲ್ಲಿ ಇದ್ದ ದುಷ್ಕರ್ಣನು ಸಮರದಲ್ಲಿ ಕ್ರೋಧಮೂರ್ಛಿತನಾಗಿ ನಾಕುಲ ಶತಾನೀಕನ ಧನುಸ್ಸನ್ನು ತುಂಡರಿಸಿದನು. ಆಗ ಇನ್ನೊಂದು ಭಾರ ಉತ್ತಮ ಧನುಸ್ಸನ್ನು ತೆಗೆದುಕೊಂಡು ಮಹಾಬಲ ಶತಾನೀಕನು ಹರಿತ ಬಾಣಗಳನ್ನು ಹೂಡಿ “ನಿಲ್ಲು! ನಿಲ್ಲು!” ಎಂದು ಅಣ್ಣನ ಮುಂದೆ ನಿಂತಿದ್ದ ದುಷ್ಕರ್ಣನನ್ನು ಕರೆದು ಪನ್ನಗಗಳಂತೆ ಜ್ವಲಿಸುತ್ತಿದ್ದ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ಅವನು ಒಂದರಿಂದ ಧನುಸ್ಸನ್ನೂ, ಎರಡರಿಂದ ಸೂತನನ್ನೂ ಮತ್ತು ಪುನಃ ಏಳು ಬಾಣಗಳಿಂದ ದುಷ್ಕರ್ಣನನ್ನೂ ಹೊಡೆದನು. ಅನಂತರ ಹನ್ನೆರಡು ಶರಗಳಿಂದ ಮನಸ್ಸಿನ ವೇಗವನ್ನುಳ್ಳ, ಕೊಳೆಯೇ ಇಲ್ಲದ ಕಲ್ಮಾಷ ಕುದುರೆಗಳೆಲ್ಲವನ್ನೂ ಬೇಗನೆ ಕೊಂದನು. ಆಗ ಚೆನ್ನಾಗಿ ಪ್ರಯೋಗಿಸಲ್ಪಟ್ಟ ಇನ್ನೊಂದು ಭಲ್ಲದಿಂದ ಕ್ರುದ್ಧನಾಗಿ ದುಷ್ಕರ್ಣನ ಹೃದಯಕ್ಕೆ ಹೊಡೆದನು. ದುಷ್ಕರ್ಣನು ಹತನಾಗಿ ಬಿದ್ದುದನ್ನು ನೋಡಿ ಐವರು ಮಹಾರಥರು ಶತಾನೀಕನನ್ನು ಕೊಲ್ಲಲು ಬಯಸಿ ಅವನನ್ನು ಎಲ್ಲಕಡೆಗಳಿಂದ ಸುತ್ತುವರೆದರು.

ಶರವ್ರಾತಗಳಿಂದ ಯಶಸ್ವಿ ಶತಾನೀಕನನ್ನು ಹೊಡೆಯುತ್ತಿದ್ದ ಆ ಸಂರಬ್ಧರನ್ನು ಕೇಕಯದ ಐವರು ಸೋದರರು ಧಾವಿಸಿ ಬಂದು ಎದುರಿಸಿದರು. ಅವರು ಆಕ್ರಮಣ ಮಾಡುತ್ತಿರುವುದನ್ನು ಧೃತರಾಷ್ಟನ ಮಹಾರಥ ಪುತ್ರರು ಮಹಾಗಜಗಳನ್ನು ಗಜಗಳು ಹೇಗೋ ಹಾಗೆ ಎದುರಿಸಿ ಯುದ್ಧಮಾಡಿದರು. ದುರ್ಮುಖ, ದುರ್ಜಯ, ದುರ್ಮರ್ಷಣ, ಶತ್ರುಂಜಯ, ಶತ್ರುಸಹ ಎಲ್ಲ ಯಶಸ್ವಿಗಳೂ ಕ್ರುದ್ಧರಾಗಿ ಕೇಕಯ ಸಹೋದರರೊಂದಿಗೆ ಸರಿಸಾಟಿಗಳಾಗಿ ಯುದ್ಧಮಾಡಿದರು. ಮನೋವೇಗಗಳ ಕುದುರೆಗಳನ್ನು ಕಟ್ಟಿದ್ದ, ನಾನಾ ವರ್ಣವಿಚಿತ್ರ ಪತಾಕೆಗಳಿಂದ ಅಲಂಕೃತವಾಗಿದ್ದ ನಗರಗಳಂತಿರುವ ರಥಗಳಲ್ಲಿ, ಶ್ರೇಷ್ಠ ಧನುಸ್ಸುಗಳನ್ನು, ವಿಚಿತ್ರ ಕವಚ-ಧ್ವಜಗಳನ್ನು ಧರಿಸಿ ಆ ವೀರರು ವನದಿಂದ ಇನ್ನೊಂದು ವನಕ್ಕೆ ಹೊಗುವ ಸಿಂಹದಂತೆ ಶತ್ರುಗಳ ಸೈನ್ಯವನ್ನು ಪ್ರವೇಶಿಸಿದರು. ರಥಸೈನ್ಯಗಳಿಂದಲೂ ಗಜಸೈನ್ಯಗಳಿಂದಲೂ ಕೂಡಿದ್ದ ಅವರ ಇತರೇತರರನ್ನು ಸಂಹರಿಸುವ, ಅನ್ಯೋನ್ಯರನ್ನು ಹೊಡೆಯುವ, ಯಮರಾಷ್ಟ್ರವನ್ನು ಹೆಚ್ಚುಗೊಳಿಸುವ ಆ ತುಮುಲ ಮಹಾರೌದ್ರ ಯುದ್ಧವು ನಡೆಯಿತು.

ಸೂರ್ಯನು ಅಸ್ತಮಿಸುತ್ತಿದ್ದ ಮುಹೂರ್ತದಲ್ಲಿಯೂ ಸಹಸ್ರಾರು ರಥಿಗಳು ಮತ್ತು ಕುದುರೆ ಸವಾರರನ್ನು ಬೀಳಿಸುತ್ತಾ ಆ ಸುದಾರುಣ ಯುದ್ಧವನ್ನು ನಡೆಸಿದರು. ಆಗ ಶಾಂತನವ ಭೀಷ್ಮನು ಕ್ರುದ್ಧನಾಗಿ ಸನ್ನತಪರ್ವ ಶರಗಳಿಂದ ಆ ಮಹಾತ್ಮ ಪಾಂಚಾಲರ ಸೈನ್ಯಗಳನ್ನು ಯಮಕ್ಷಯಕ್ಕೆ ಕಳುಹಿಸಿ ನಾಶಪಡಿಸಿದನು. ಹೀಗೆ ಪಾಂಡವರ ಸೇನೆಗಳನ್ನು ಭೇದಿಸಿ ಆ ಮಹೇಷ್ವಾಸನು ಸೈನ್ಯಗಳನ್ನು ಹಿಂತೆಗೆದುಕೊಂಡು ತನ್ನ ಶಿಬಿರಕ್ಕೆ ತೆರಳಿದನು. ಧರ್ಮರಾಜನೂ ಕೂಡ ಧೃಷ್ಟದ್ಯುಮ್ನ-ವೃಕೋದರರನ್ನು ನೋಡಿ ಸಂಹೃಷ್ಟನಾಗಿ ಅವರ ನೆತ್ತಿಯನ್ನು ಆಘ್ರಾಣಿಸಿ ತನ್ನ ಶಿಬಿರಕ್ಕೆ ತೆರಳಿದನು.

Leave a Reply

Your email address will not be published. Required fields are marked *