ಧೃತರಾಷ್ಟ್ರ-ಪಾಂಡು-ವಿದುರರ ಜನನ, ವಿವಾಹ
ಕುರುವಂಶಾಭಿವೃದ್ಧಿಯ ಕುರಿತು ಸತ್ಯವತಿ-ಭೀಷ್ಮರ ಸಂವಾದ
ಮೊಮ್ಮಕ್ಕಳನ್ನು ಬೇಡುತ್ತಿದ್ದ ದೀನ, ಕೃಪಣ ಸತ್ಯವತಿಯು ತನ್ನ ಸೊಸೆಯರನ್ನು ಕೂಡಿ ಮಗನ ಕರ್ಮಗಳನ್ನು ನೆರವೇರಿಸಿದಳು. ಧರ್ಮ, ಪಿತೃವಂಶ ಮತ್ತು ಮಾತೃವಂಶಗಳ ಕುರಿತು ಯೋಚಿಸಿದ ಆ ಮಾನಿನಿಯು ಮಹಾಭಾಗ ಗಾಂಗೇಯನಿಗೆ ಹೇಳಿದಳು:
“ಧರ್ಮನಿತ್ಯ ಶಂತನು ಮತ್ತು ಯಶಸ್ವಿ ಕೌರವ್ಯನ ಪಿಂಡ, ಕೀರ್ತಿ ಮತ್ತು ಸಂತಾನವು ನಿನ್ನನ್ನವಲಂಬಿಸಿದೆ. ಶುಭಕರ್ಮವನ್ನು ಮಾಡುವುದರಿಂದ ಸ್ವರ್ಗೋಪಗಮನವು ಎಷ್ಟು ಖಂಡಿತವೋ, ಸತ್ಯದಿಂದ ದೀರ್ಘಾಯುಸ್ಸು ಎಷ್ಟು ಖಂಡಿತವೋ ಅಷ್ಟೇ ನಿನ್ನಿಂದ ಧರ್ಮವೂ ಕೂಡ ಖಂಡಿತ. ಧರ್ಮಜ್ನ! ನೀನು ಧರ್ಮವನ್ನು ಪೂರ್ತಿಯಾಗಿ ಮತ್ತು ಬಿಡಿಬಿಡಿಯಾಗಿ ಅರಿತಿರುವೆ. ವಿವಿಧ ಶೃತಿ-ವೇದಗಳೆಲ್ಲವನ್ನೂ ತಿಳಿದಿರುವೆ. ನಿನ್ನಲ್ಲಿ ನಾನು ಶುಕ್ರ ಆಂಗಿರಸರಲ್ಲಿರುವ ಧಾರ್ಮಿಕ ನಡವಳಿಕೆ, ಕುಲಾಚಾರ ದೃಷ್ಠಿ, ಮತ್ತು ಕಷ್ಟದಲ್ಲಿ ಪರಿಹಾರ ಇವೆಲ್ಲವನ್ನೂ ಕಂಡಿದ್ದೇನೆ. ನೀನು ನನ್ನ ದುಃಖಗಳನ್ನು ಹೋಗಲಾಡಿಸಬಲ್ಲೆ ಎನ್ನುವ ನಂಬಿಕೆಯಿಂದ ಧರ್ಮವಾದಿಗಳಲ್ಲಿ ಶ್ರೇಷ್ಠ ನಿನ್ನಲ್ಲಿ ನಾನು ಒಂದು ಕಾರ್ಯವನ್ನು ವಹಿಸುತ್ತೇನೆ. ಅದನ್ನು ಕೇಳಿ ಮಾಡಿಕೊಡು. ನನ್ನ ಮಗ ನಿನ್ನ ಭ್ರಾತ ವೀರ್ಯವಂತನು ನಿನಗೆ ಬಹು ಪ್ರಿಯನಾಗಿದ್ದನು. ಮಕ್ಕಳಿಲ್ಲದೆ ಬಾಲ್ಯದಲ್ಲಿಯೇ ಅವನು ಸ್ವರ್ಗವನ್ನು ಸೇರಿದನು. ರೂಪಯೌವನಸಂಪನ್ನ ಶುಭಾಂಗಿ ನಿನ್ನ ತಮ್ಮನ ರಾಣಿಯರಾದ ಕಾಶಿರಾಜಸುತೆಯರು ಪುತ್ರರನ್ನು ಬಯಸುತ್ತಾರೆ. ಕುಲಸಂತಾನಕ್ಕಾಗಿ ಅವರಲ್ಲಿ ಮಕ್ಕಳನ್ನು ಪಡೆ. ಇದನ್ನು ನನ್ನ ಹೇಳಿಕೆಯಂತೆ ಧರ್ಮವೆಂದು ತಿಳಿದು ಮಾಡಿಕೊಡಬೇಕು. ರಾಜ್ಯಾಭಿಷೇಕವನ್ನು ಮಾಡಿಕೊಂಡು ಭಾರತದೇಶವನ್ನು ಆಳು. ಧರ್ಮಪೂರ್ವಕ ಮದುವೆಯಾಗು. ನಿನ್ನ ಪಿತಾಮಹರು ಮುಳುಗಿಹೋಗದಂತೆ ನೋಡಿಕೋ.”
ತನ್ನ ತಾಯಿ ಸಹೃದಯಿಯಿಂದ ಈ ಮಾತುಗಳನ್ನು ಕೇಳಿದ ಪರಂತಪ ಧರ್ಮಾತ್ಮನು ಈ ಧಾರ್ಮಿಕ ಉತ್ತರವನ್ನಿತ್ತನು:
“ತಾಯಿ! ನೀನು ಹೇಳಿದ್ದುದು ಪರಮ ಧರ್ಮ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೂ ನಾನು ಮಕ್ಕಳನ್ನು ಪಡೆಯುವುದಿಲ್ಲ ಎಂದು ಕೈಗೊಂಡ ಪರಮ ಪ್ರತಿಜ್ಞೆಯೂ ನಿನಗೆ ತಿಳಿದಿದೆ. ನಿನ್ನ ವಧುಶುಲ್ಕವನ್ನು ಕೊಡುವ ಸಮಯದಲ್ಲಿ ನಡೆದುದೆಲ್ಲವೂ ನಿನಗೆ ತಿಳಿದೇ ಇದೆ. ಅಂದಿನ ಸತ್ಯವನ್ನೇ ಇಂದು ನಾನು ಪುನಃ ಹೇಳುತ್ತೇನೆ. ನಾನು ತ್ರೈಲೋಕ್ಯವನ್ನು, ರಾಜ್ಯವನ್ನು, ದೇವತೆಗಳನ್ನು, ಅಥವಾ ಇವೆಲ್ಲಕ್ಕೂ ಅಧಿಕವಾದದ್ದನ್ನು ಪರಿತ್ಯಜಿಸಿಯೇನು. ಆದರೆ ಸತ್ಯವನ್ನು ಎಂದೂ ಪರಿತ್ಯಜಿಸುವುದಿಲ್ಲ. ಪೃಥ್ವಿಯು ತನ್ನ ಸುಗಂಧವನ್ನು, ನೀರು ತನ್ನ ರುಚಿಯನ್ನು ತ್ಯಜಿಸಬಹುದು. ಜ್ಯೋತಿಯು ತನ್ನ ರೂಪವನ್ನು ತ್ಯಜಿಸಬಹುದು ಅಥವಾ ವಾಯುವು ಸ್ಪರ್ಷಗುಣವನ್ನು ತ್ಯಜಿಸಬಹುದು. ಸೂರ್ಯನು ತನ್ನ ಪ್ರಭೆಯನ್ನು ಅಥವಾ ದೂಮಕೇತು ತನ್ನ ಉಷ್ಣತೆಯನ್ನು ತ್ಯಜಿಸಬಹುದು. ಆಕಾಶವು ಶಬ್ಧವನ್ನು ತ್ಯಜಿಸಬಹುದು, ಅಥವಾ ಚಂದ್ರನು ತನ್ನ ಶೀತಗುಣವನ್ನು ತ್ಯಜಿಸಬಹುದು. ಇಂದ್ರನು ತನ್ನ ಪರಾಕ್ರಮವನ್ನು ಮತ್ತು ಧರ್ಮರಾಜನು ತನ್ನ ಧರ್ಮವನ್ನೇ ತ್ಯಜಿಸಬಹುದು. ಆದರೆ ನಾನು ಎಂದೂ ನನ್ನ ಸತ್ಯವನ್ನು ತ್ಯಜಿಸುವುದಿಲ್ಲ ಎನ್ನುವುದು ನನ್ನ ದೃಢ ನಿಶ್ಚಯ.”
ತನ್ನ ಭೂರಿದ್ರವಿಣತೇಜಸ ಮಗನು ಈ ರೀತಿ ಹೇಳಿದಾಗ, ಮಾತಾ ಸತ್ಯವತಿಯು ಭೀಷ್ಮನಿಗೆ ಹೇಳಿದಳು:
“ಪರಮ ಸತ್ಯಪರಾಕ್ರಮಿ! ನೀನು ಸತ್ಯದಲ್ಲಿಯೇ ನಿರತನಾಗಿದ್ದೀಯೆಂದು ನಾನು ತಿಳಿದಿದ್ದೇನೆ. ನೀನು ಇಚ್ಛಿಸಿದರೆ ನಿನ್ನ ಈ ತೇಜಸ್ಸಿನಿಂದ ಬೇರೆಯೇ ಮೂರು ಲೋಕಗಳನ್ನು ಸೃಷ್ಟಿಸಬಲ್ಲೆ. ನನಗೋಸ್ಕರ ನೀನು ಆ ಭಾಷೆಗಳನ್ನು ಕೊಟ್ಟಿದ್ದೀಯೆ ಎಂದೂ ನಾನು ತಿಳಿದಿದ್ದೇನೆ. ಆದರೆ ಪಿತಾಮಹರಿಗೊದಗಿರುವ ಈ ಆಪದ್ಧರ್ಮವನ್ನೂ ನೋಡು. ಕುಲತಂತು ಮತ್ತು ಧರ್ಮದ ಪರಾಭವವಾಗದ ಹಾಗೆ, ಸುಹೃದಯರಿಗೆ ಸಂತೋಷವನ್ನು ತರುವ ಹಾಗೆ ನಡೆದುಕೋ.”
ಈ ರೀತಿ ಪುತ್ರರು ಬೇಕೆಂಬ ಹಸಿವಿನಿಂದ ಬೇಡಿ ಹಲುಬಿ ಧರ್ಮದ ಹೊರತಾಗಿ ಮಾತನಾಡುತ್ತಿದ್ದ ಅವಳಿಗೆ ಭೀಷ್ಮನು ಪುನಃ ಹೇಳಿದನು:
“ರಾಜ್ಞಿ! ಧರ್ಮದ ಕುರಿತು ಯೋಚಿಸು. ಇಲ್ಲವಾದರೆ ಸರ್ವವೂ ವಿನಾಶವಾಗುತ್ತದೆ. ಸತ್ಯಕ್ಕೆ ಚ್ಯುತಿಯನ್ನು ತರುವುದು ಕ್ಷತಿಯರ ಧರ್ಮವಲ್ಲ. ಶಂತನುವಿನ ಸಂತಾನವು ಭೂಮಿಯಲ್ಲಿ ಅಕ್ಷಯವಾಗಿಸಬಲ್ಲ, ಸನಾತನ ಕ್ಷಾತ್ರಧರ್ಮದ ಕುರಿತು ಹೇಳುತ್ತೇನೆ. ಇದನ್ನು ಕೇಳಿದ ನೀನು ನಿನ್ನ ಪ್ರಾಜ್ಞ ಪುರೋಹಿತರೊಂದಿಗೆ ತ್ರೈಲೋಕ್ಯಗಳಿಗೂ ಕುಶಲವನ್ನುಂಟುಮಾಡುವ ಈ ಆಪದ್ಧರ್ಮವನ್ನು ಸ್ವೀಕರಿಸಬಹುದು. ತನ್ನ ತಂದೆಯ ವಧೆಯಿಂದ ಕೃದ್ಧನಾದ ಜಾಮದಗ್ನಿ ರಾಮನು ಹೈಹಯಾಧಿಪತಿ ಅರ್ಜುನನ ಹತ್ತು ಸಾವಿರ ಬಾಹುಗಳನ್ನೂ ಕತ್ತರಿಸಿ ಕೊಂದನು. ಧನುಸ್ಸನ್ನು ಹಿಡಿದು ರಥವನ್ನೇರಿ ಮಹಾಸ್ತ್ರಗಳನ್ನು ಬಿಡುತ್ತಾ ಮೇಲಿಂದ ಮೇಲೆ ಕ್ಷತ್ರಿಯ ಕುಲವನ್ನು ಸುಟ್ಟುಹಾಕಿದನು. ಈ ರೀತಿ ಮಹಾತ್ಮ ಭಾರ್ಗವನು ಹಿಂದೆ ವಿವಿಧಾಸ್ತ್ರಗಳಿಂದ ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯವನ್ನಾಗಿ ಮಾಡಿದನು. ಆದರೆ ಎಲ್ಲಕಡೆಯೂ ಎಲ್ಲ ಕ್ಷತ್ರಿಯರೂ ನಿಯತಾತ್ಮ ಬ್ರಾಹ್ಮಣರ ಮೂಲಕ ಮಕ್ಕಳನ್ನು ಪಡೆದರು. ಪಾಣಿಗ್ರಹಣ ಮಾಡಿದವನೇ ತನಯ ಎಂದು ವೇದಗಳಲ್ಲಿ ನಿಶ್ಚಿತವಾಗಿದೆ. ಕ್ಷಾತ್ರಿಣಿಯರು ಧರ್ಮವನ್ನೇ ಮನಸ್ಸಿನಲ್ಲಿಟ್ಟುಕೊಂಡು ಬ್ರಾಹ್ಮಣರನ್ನು ಕೂಡಿದರು. ಹೀಗಾಗಿ ಕ್ಷತ್ರಿಯರ ಪುನರ್ಭವವು ಕಂಡುಬಂದಿತು. ಹಿಂದೆ ಉತಥ್ಯ ಎಂದು ಖ್ಯಾತ ಧೀಮಂತ ಋಷಿಯಿದ್ದನು. ಅವನಿಗೆ ಮಮತಾ ಎಂಬ ಹೆಸರಿನ ಪರಮಸಮ್ಮತ ಪತ್ನಿಯಿದ್ದಳು. ಒಮ್ಮೆ ಉತಥ್ಯನ ತಮ್ಮ, ತ್ರಿದಿವೌಕಸರ ಪುರೋಹಿತ, ಮಹಾ ತೇಜಸ್ವಿ ಬೃಹಸ್ಪತಿಯು ಮಮತಳನ್ನು ಬಯಸಿದನು. ತನ್ನ ಶ್ರೇಷ್ಠ ಬಾವನಿಗೆ ಮಮತೆಯು ಹೇಳಿದಳು:
“ನಿನ್ನ ಅಣ್ಣನಿಂದ ನಾನು ಗರ್ಭವತಿಯಾಗಿದ್ದೇನೆ. ನಿಲ್ಲು. ಮಹಾಭಾಗ ಬೃಹಸ್ಪತಿ! ಉತಥ್ಯನ ಈ ಮಗುವು ನನ್ನ ಹೊಟ್ಟೆಯಲ್ಲಿಯೇ ವೇದ ಮತ್ತು ಅದರ ಆರೂ ಅಂಗಗಳನ್ನೂ ಕಲಿತಿದ್ದಾನೆ. ಈಗ ನೀನು ನಿನ್ನ ವೀರ್ಯವನ್ನು ನನ್ನಲ್ಲಿಟ್ಟರೆ ಅದು ವ್ಯರ್ಥವಾಗುವುದು. ಆದುದರಿಂದ ನೀನು ಈಗ ತಡೆಹಿಡಿದುಕೋ.”
ಅವಳು ಈ ರೀತಿ ಹೇಳುತ್ತಿದ್ದರೂ ಮಹಾ ತೇಜಸ್ವಿ ಬೃಹಸ್ಪತಿಯು ತನ್ನ ಕಾಮಾತ್ಮವನ್ನು ನಿಯಂತ್ರಿಸಿಕೊಳ್ಳಲಾಗದೇ ಅವಳು ಬಯಸದಿದ್ದರೂ ಅವಳನ್ನು ಸೇರಿ ಅವಳಲ್ಲಿ ತನ್ನ ವೀರ್ಯವನ್ನು ಬಿಟ್ಟನು. ಆಗ ಅಲ್ಲಿದ್ದ ಗರ್ಭವು ಹೇಳಿತು:
“ಚಿಕ್ಕಪ್ಪ! ಇಲ್ಲಿ ಇಬ್ಬರಿಗೆ ಸ್ಥಳವಿಲ್ಲ. ನಾನು ಇಲ್ಲಿ ಮೊದಲೇ ಇದ್ದೆ. ನಿನ್ನ ವೀರ್ಯವು ಸುಮ್ಮನೇ ವ್ಯರ್ಥವಾಯಿತು!”
ಇದನ್ನು ಕೇಳಿದ ಭಗವಾನ್ ಋಷಿ ಬೃಹಸ್ಪತಿಯು ಕೃದ್ಧನಾಗಿ ತನ್ನನ್ನು ಅವಹೇಳನಮಾಡಿದ ಉತಥ್ಯಪುತ್ರನಿಗೆ ಶಾಪವನ್ನಿತ್ತನು:
“ಸರ್ವಭೂತಗಳೂ ಆನಂದಿಸಲು ಬಯಸುವ ಕಾಲಸ್ಥಿತಿಯಲ್ಲಿ ನಾನಿರುವಾಗ ಈ ರೀತಿ ಮಾತನಾಡಿದ್ದುದಕ್ಕಾಗಿ ನೀನು ದೀರ್ಘಕಾಲದವರೆಗೂ ಕತ್ತಲೆಯಲ್ಲಿಯೇ ಇರುತ್ತೀಯೆ!”
ಈ ರೀತಿ ಬಹುಕೀರ್ತಿವಂತ ಬೃಹಸ್ಪತಿಯ ಶಾಪದಿಂದ ದೀರ್ಘತಮ ಎಂಬ ಹೆಸರಿನ ಋಷಿಯು ಹುಟ್ಟಿದನು. ಅವನು ಗೌತಮರೇ ಮೊದಲಾದ ಮಹಾಯಶಸ್ವಿ ಪುತ್ರರನ್ನು ಹುಟ್ಟಿಸಿ, ಋಷಿ ಉತಥ್ಯನ ಸಂತಾನ ಕುಲವೃದ್ಧಿಯಾಗುವಂತೆ ಮಾಡಿದನು. ಲೋಭಮೋಹಿ ಗೌತಮರೇ ಮೊದಲಾದ ಪುತ್ರರು ‘ಕುರುಡನೂ ವೃದ್ಧನೂ ಆದ ಇವನನ್ನು ನಾವು ನೋಡಿಕೊಳ್ಳುವ ಅವಶ್ಯಕತೆಯಿಲ್ಲ’ ಎಂದು ಯೋಚಿಸಿ ಅವನನ್ನು ಒಂದು ಒಣಗಿದ ಮರಕ್ಕೆ ಕಟ್ಟಿ ವಿಶಾಲ ಗಂಗೆಯಲ್ಲಿ ಎಸೆದು ತಮ್ಮ ಮನೆಗೆ ಹೊರಟು ಹೋದರು. ಆ ಕುರುಡ ಋಷಿಯು ತೇಲುತ್ತಾ ಬಹು ದೇಶಗಳನ್ನು ದಾಟಿ ಒಂದು ರಾಜನಿದ್ದಲ್ಲಿಗೆ ಬಂದನು. ಬಲಿಯೆಂಬ ಹೆಸರಿನ ಸರ್ವಧರ್ಮ ವಿಶಾರದ ರಾಜನು ಸ್ನಾನಮಾಡುತ್ತಿರಲು ನದಿಯಲ್ಲಿ ತೇಲಿಕೊಂಡು ಬರುತ್ತಿದ್ದ ಅವನನ್ನು ನೋಡಿದನು. ಸತ್ಯಪರಾಕ್ರಮಿ ಧರ್ಮಾತ್ಮ ಮನುಜರ್ಷಭ ಬಲಿಯು ಅವನನ್ನು ಗುರುತಿಸಿ ಮೇಲಿತ್ತಿದನು ಮತ್ತು ಮಕ್ಕಳನ್ನು ಪಡೆಯುವುದಕ್ಕೋಸ್ಕರ ಅವನನ್ನು ತನ್ನಲ್ಲಿಯೇ ಇಟ್ಟುಕೊಂಡನು.
“ಮಹಾಭಾಗ! ಮಾನದ! ನನ್ನ ಭಾರ್ಯೆಯರಲ್ಲಿ ನನ್ನ ಸಂತಾನವಾಗಿ ಧರ್ಮಾರ್ಥಕುಶಲ ಮಕ್ಕಳನ್ನು ಪಡೆಯಬೇಕು”
ಎಂದು ಕೇಳಿಕೊಂಡನು. “ಹಾಗೆಯೇ ಆಗಲಿ” ಎಂದು ಹೇಳಿದ ಆ ತೇಜಸ್ವಿ ಋಷಿಯು ರಾಜನ ಭಾರ್ಯೆ ಸುದೇಷ್ಣೆಯನ್ನು ಬರುವಂತೆ ಕೇಳಿಕೊಂಡನು. ಅವನು ವೃದ್ಧನೂ ಕುರುಡನೂ ಆಗಿದ್ದಾನೆಂದು ತಿಳಿದ ದೇವಿಯು ಅವನಲ್ಲಿಗೆ ಹೋಗಲಿಲ್ಲ. ತನ್ನ ಧಾತ್ರೇಯಿಕರಲ್ಲಿ ಓರ್ವಳನ್ನು ಆ ವೃದ್ಧನ ಬಳಿ ಕಳುಹಿಸಿದಳು. ಶೂದ್ರಯೋನಿಯಲ್ಲಿ ಜನಿಸಿದ್ದ ಅವಳಲ್ಲಿ ಆ ಧರ್ಮಾತ್ಮನು ಕಾಕ್ಷೀವತನೇ ಮೊದಲಾದ ಹನ್ನೊಂದು ಪುತ್ರರಿಗೆ ಜನ್ಮವಿತ್ತನು. ಕಾಕ್ಷೀವತ ಮೊದರಾದವನ್ನು ನೋಡಿದ ವೀರ್ಯವಾನ್ ರಾಜನು “ಇವರೆಲ್ಲರೂ ನನ್ನ ಮಕ್ಕಳು!” ಎಂದು ಆ ಋಷಿಗೆ ಹೇಳಿದನು.
“ಅಲ್ಲ! ಇವರೆಲ್ಲರೂ ನನ್ನವರು! ಕಾಕ್ಷೀವತನೇ ಮೊದಲಾದವರು ನನ್ನಿಂದ ಶೂದ್ರಯೋನಿಯಲ್ಲಿ ಹುಟ್ಟಿದವರು”
ಎಂದು ಆ ಮಹರ್ಷಿಯು ಹೇಳಿದನು.
“ನಿನ್ನ ರಾಣಿ ಸುದೇಷ್ಣಳು ನಾನು ಅಂಧನೂ ವೃದ್ಧನೂ ಇದ್ದೇನೆಂದು ತಿಳಿದು ಮೂಢಳಾಗಿ ತನ್ನ ಧಾತ್ರೇಯಿಕೆ ಶೂದ್ರಳೋರ್ವಳನ್ನು ನನ್ನ ಕಡೆ ಕಳುಹಿಸಿದ್ದಳು.”
ಆಗ ಬಲಿಯು ಪುನಃ ಆ ಋಷಿಸತ್ತಮನನ್ನು ಸಂತೋಷಗೊಳಿಸಿ ತನ್ನ ಭಾರ್ಯೆ ಸುದೇಷ್ಣೆಯನ್ನು ಅವನಲ್ಲಿಗೆ ಪುನಃ ಕಳುಹಿಸಿದನು. ದೀರ್ಘತಮನು ಆ ದೇವಿಯ ಅಂಗಗಳನ್ನು ಸ್ಪರ್ಷಿಸಿ
“ನಿನಗೆ ಸತ್ಯವಾಗ್ಮಿಯೂ ತೇಜಸ್ವಿಯೂ ಆದ ಮಗನಾಗುತ್ತಾನೆ”
ಎಂದನು. ಹೀಗೆ ಸುದೇಷ್ಣೆಯಲ್ಲಿ ಅಂಗ ಎಂಬ ಹೆಸರಿನ ರಾಜರ್ಷಿಯು ಜನಿಸಿದನು. ಇದೇ ರೀತಿ ಭೂಮಿಯಲ್ಲಿ ಮಹೇಷ್ವಾಸ ಕ್ಷತ್ರಿಯರು ಬ್ರಾಹ್ಮಣರಿಂದ ಪರಮಧರ್ಮಜ್ಞ, ವೀರ್ಯಾವಂತ, ಮಹಾಬಲಶಾಲಿ ಮಕ್ಕಳನ್ನು ಪಡೆದರು. ಮಾತೆ! ಇದನ್ನು ಕೇಳಿದ ನೀನು ಕೂಡ ನಿನಗಿಷ್ಟವಾದುದ್ದನ್ನು ಮಾಡು. ಭರತವಂಶದ ಪುನಃ ಸಂತಾನ ವೃದ್ಧಿಯನ್ನು ಹೇಗೆ ಮುಂದುವರೆಸಿಕೊಂಡು ಹೋಗಬಹುದೆಂದು ಹೇಳುತ್ತೇನೆ. ಕೇಳು. ಯಾರಾದರೂ ಗುಣವಂತ ಬ್ರಾಹ್ಮಣನಿಗೆ ಧನವನ್ನಿತ್ತು, ವಿಚಿತ್ರವೀರ್ಯನ ಪತ್ನಿಯರಲ್ಲಿ ಮಕ್ಕಳನ್ನು ಪಡೆಯಲು ಕರೆಯಿಸು.”
ಆಗ ಸತ್ಯವತಿಯು ನಾಚಿಕೊಂಡು ಮುಗುಳ್ನಗುತ್ತಾ ನಡುಗುತ್ತಿರುವ ದನಿಯಲ್ಲಿ ಭೀಷ್ಮನಿಗೆ ಹೇಳಿದಳು:
“ಮಹಾಬಾಹು ಭಾರತ! ನೀನು ಸತ್ಯವನ್ನೇ ಹೇಳಿದ್ದೀಯೆ. ನಿನ್ನ ಮೇಲೆ ನನಗೆ ವಿಶ್ವಾಸವಿದೆ. ಕುಲದ ಸಂತಾನಕ್ಕಾಗಿ ನಾನು ಹೇಳುತ್ತೇನೆ. ಈ ಆಪತ್ತಿನ ಸಮಯದಲ್ಲಿ ಈ ವಿಧಿಯನ್ನು ನಿನಗೆ ಹೇಳಲು ನನಗೆ ಯಾವುದೇ ರೀತಿಯ ಶಂಕೆಯೂ ಆಗುತ್ತಿಲ್ಲ. ನೀನೇ ಈ ಕುಲದ ಧರ್ಮ, ಸತ್ಯ ಮತ್ತು ಪರಮ ಗತಿ. ಆದುದರಿಂದ ನನ್ನ ಈ ಮಾತುಗಳನ್ನು ಕೇಳಿದ ನಂತರ ನಿನಗೆ ಸರಿಯೆನಿಸಿದುದನ್ನು ಮಾಡು. ಧರ್ಮಯುಕ್ತ ಧರ್ಮಾತ್ಮ ನನ್ನ ತಂದೆಯು ಒಂದು ದೋಣಿಯನ್ನು ಹೊಂದಿದ್ದನು. ನಾನು ಯೌವನವನ್ನು ಪಡೆದ ಮೊದಲ ದಿನಗಳಲ್ಲಿ ಒಮ್ಮೆ ಅದನ್ನು ನಡೆಸಲು ಹೋಗಿದ್ದೆ. ಆಗ ಧರ್ಮಭೃತರಲ್ಲಿ ಶ್ರೇಷ್ಠ ಪರಮರ್ಷಿ ಧೀಮಾನ್ ಪರಾಶರನು ಯಮುನಾ ನದಿಯನ್ನು ದಾಟಲು ಬಯಸಿ ನನ್ನ ದೋಣಿಯ ಬಳಿ ಬಂದನು. ಯಮುನಾ ನದಿಯನ್ನು ದಾಟಿಸುತ್ತಿರುವಾಗ ಆ ಕಾಮಾರ್ತ ಮುನಿಶ್ರೇಷ್ಠನು ನನ್ನಲ್ಲಿ ಬಂದು ಸಾಂತ್ವನದ ಮಧುರ ಮಾತುಗಳನ್ನಾಡಿದನು. ಅವನ ಶಾಪದ ಭೀತಿಯಿಂದ, ನನ್ನ ತಂದೆಯ ಭೀತಿಯಿಂದ ಮತ್ತು ಸುಲಭವಾಗಿ ದೊರೆಯದಿರುವ ವರಗಳಿಗೋಸ್ಕರ ನಾನು ಅವನನ್ನು ತಿರಸ್ಕರಿಸಲಾರದೇ ಹೋದೆ. ತನ್ನ ತೇಜಸ್ಸಿನಿಂದ ಸುತ್ತಲೂ ಕತ್ತಲೆಯು ಆವರಿಸುವಂತೆ ಮಾಡಿ ಬಾಲಕಿ ನನ್ನನ್ನು ಆ ನೌಕೆಯಲ್ಲಿಯೇ ವಶೀಕರಿಸಿ ತನ್ನವಳನ್ನಾಗಿ ಮಾಡಿಕೊಂಡನು. ಅದರ ಹಿಂದೆ ನನಗೆ ಜಿಗುಪ್ಸೆಯನ್ನು ತರುತ್ತಿದ್ದ ಅತಿ ತೀಕ್ಷ್ಣ ಮೀನಿನ ವಾಸನೆಯಿತ್ತು. ಅದನ್ನು ಹಿಂತೆಗೆದುಕೊಂಡು ಆ ಮುನಿಯು ನನಗೆ ಈ ಶುಭ ಸುಗಂಧವನ್ನಿತ್ತನು. ಅವನ ಮಗುವನ್ನು ನಾನು ನದಿಯ ಮದ್ಯದ ಒಂದು ದ್ವೀಪದಲ್ಲಿ ಹೆತ್ತ ನಂತರವೂ ನಾನು ಕನ್ಯೆಯಾಗಿಯೇ ಉಳಿಯುತ್ತೇನೆ ಎಂದೂ ಆ ಮುನಿಯು ಹೇಳಿದನು. ಈ ರೀತಿ ಮಹಾಯೋಗಿ ಮಹಾನ್ ಋಷಿ ಪಾರಶರ್ಯನು ನನ್ನ ಕನ್ಯಾಪುತ್ರನಾಗಿ ಹುಟ್ಟಿದನು ಮತ್ತು ದ್ವೈಪಾಯನನೆಂದು ಖ್ಯಾತನಾದನು. ತನ್ನ ತಪಸ್ಸಿನಿಂದ ಆ ಭಗವಾನ್ ಋಷಿಯು ನಾಲ್ಕೂ ವೇದಗಳನ್ನು ವಿಂಗಡಿಸಿದನು. ಇದರಿಂದ ಅವನಿಗೆ ವ್ಯಾಸನೆಂಬ ಹೆಸರು ಬಂದಿತು. ಕಪ್ಪಾದ ಅವನಿಗೆ ಕೃಷ್ಣ ಎಂದೂ ಕರೆಯುತ್ತಾರೆ. ಸತ್ಯವಾದಿಯೂ, ಶಮಪರ ತಪಸ್ವಿಯೂ, ದಗ್ಧಕಿಲ್ಬಿಷನೂ ಅಮಿತದ್ಯುತಿಯೂ ಆದ ಅವನು, ನಾನು ಮತ್ತು ನೀನು ಕೇಳಿಕೊಂಡರೆ, ನಿನ್ನ ತಮ್ಮನ ಪತ್ನಿಯರಲ್ಲಿ ಕಲ್ಯಾಣವನ್ನು ತರುವ ಮಕ್ಕಳನ್ನು ಪಡೆಯಬಹುದು. ‘ಏನಾದರೂ ಆಗಬೇಕೆಂದಿದ್ದಾಗ ನನ್ನನ್ನು ನೆನಪಿಸಿಕೋ. ಬರುತ್ತೇನೆ’’ಎಂದು ಅವನು ಮಾತುಕೊಟ್ಟಿದ್ದಾನೆ. ಭೀಷ್ಮ! ನೀನು ಬೇಕೆಂದರೆ ಈಗಲೇ ನಾನು ಅವನನ್ನು ಸ್ಮರಿಸುತ್ತೇನೆ. ನಿನ್ನ ಅನುಮತಿಯ ನಂತರವೇ ಆ ಮಹಾತಪಸ್ವಿಯು ವಿಚಿತ್ರವೀರ್ಯನ ಪತ್ನಿಯರಲ್ಲಿ ಪುತ್ರರನ್ನು ಪಡೆಯಬಹುದು.”
ಮಹರ್ಷಿಯ ಕುರಿತು ಹೇಳಿದ್ದುದನ್ನು ಕೇಳಿದ ಭೀಷ್ಮನು ಕೈಮುಗಿದು ಹೇಳಿದನು:
“ಧರ್ಮ, ಅರ್ಥ, ಕಾಮ ಈ ಮೂರನ್ನೂ ಯಾರು ನೋಡಿಕೊಳ್ಳುತ್ತಾನೋ, ಅರ್ಥ-ಅರ್ಥಾನುಬಂಧಗಳನ್ನೂ, ಧರ್ಮ-ಧರ್ಮಾನುಬಂಧಗಳನ್ನೂ, ಕಾಮ-ಕಾಮಾನುಬಂಧಗಳನ್ನೂ ಮತ್ತು ಇವುಗಳ ವಿಪರೀತಗಳ ಕುರಿತು ಪುನಃ ಪುನಃ ಬುದ್ಧಿಪೂರ್ವಕವಾಗಿ ಚಿಂತಿಸಿ ಒಳ್ಳೆಯ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಾನೋ ಅವನು ಬುದ್ಧಿವಂತನೇ ಸರಿ. ನೀನು ಹೇಳಿದ್ದುದು ಧರ್ಮಯುಕ್ತವೂ ಹೌದು ಮತ್ತು ನಮ್ಮ ಕುಲಕ್ಕೆ ಹಿತಕಾರಿಯೂ ಹೌದು. ಇದು ಶ್ರೇಯಕಾರಕವಾದುದು. ನನಗೆ ಇದು ತುಂಬಾ ಇಷ್ಟವಾಯಿತು.”
ಧೃತರಾಷ್ಟ್ರ, ಪಾಂಡು ಮತ್ತು ವಿದುರರ ಜನನ; ವಿವಾಹ
ಕುರುನಂದನ ಭೀಷ್ಮನ ಒಪ್ಪಿಗೆಯನ್ನು ಪಡೆದ ಆ ಕಪ್ಪುವರ್ಣದವಳು ಮುನಿ ಕೃಷ್ಣದ್ವೈಪಾಯನನನ್ನು ಸ್ಮರಿಸಿದಳು. ವೇದಾಧ್ಯಯನಮಾಡುತ್ತಿದ್ದ ಆ ಧೀಮಂತನು ತಾಯಿಯು ಸ್ಮರಿಸುತ್ತಿರುವುದನ್ನು ತಿಳಿದು ಅದೇ ಕ್ಷಣದಲ್ಲಿ ಯಾರಿಗೂ ತಿಳಿಯದ ರೀತಿಯಲ್ಲಿ ಅವಳ ಎದುರು ಕಾಣಿಸಿಕೊಂಡನು. ಸುತನಿಗೆ ವಿಧಿಪೂರ್ವಕ ಪೂಜೆಯನ್ನಿತ್ತು, ಬಾಹುಗಳಿಂದ ಬಿಗಿದಪ್ಪಿ, ಕಣ್ಣೀರಿನಿಂದ ತೋಯಿಸಿದಳು. ಬಹಳ ಕಾಲದ ನಂತರ ಪುತ್ರನನ್ನು ಕಂಡ ಆ ದಾಶೇಯಿಯು ಕಣ್ಣೀರು ಸುರಿಸಿದಳು. ಹಿರಿಯ ಪುತ್ರ ಮಹರ್ಷಿ ವ್ಯಾಸನು ತನ್ನ ಆರ್ತ ತಾಯಿಯನ್ನು ನೀರಿನಿಂದ ಪರಿಶಿಂಚಿಸಿ ನಮಸ್ಕರಿಸಿ, ಈ ಮಾತುಗಳನ್ನಾಡಿದನು:
“ನಿನ್ನ ಮನಸ್ಸಿನಲ್ಲಿರುವುದನ್ನು ನಡೆಸಿಕೊಡಲು ಇಲ್ಲಿಗೆ ಬಂದಿದ್ದೇನೆ. ಧರ್ಮತತ್ವಜ್ಞಳಾಗಿದ್ದೀಯೆ. ನಿನಗೆ ಪ್ರಿಯವಾದ ಏನನ್ನು ಮಾಡಬೇಕು. ಅಪ್ಪಣೆ ಕೊಡು.”
ಕುಲ ಪುರೋಹಿತರು ಆ ಪರಮ ಋಷಿಯನ್ನು ಬರಮಾಡಿಕೊಂಡು ವಿಧಿವತ್ತಾಗಿ ಮಂತ್ರಪೂರಕ ಪೂಜೆ ಸತ್ಕಾರಗಳನ್ನು ಸಲ್ಲಿಸಿದರು. ಅವನು ಆಸನವನ್ನು ಸ್ವೀಕರಿಸಿದ ನಂತರ ತಾಯಿಯು ಅವನ ಅವ್ಯಯ ಕುಶಲತೆಯ ಕುರಿತು ಪ್ರಶ್ನಿಸಿದಳು. ನಂತರ ಸತ್ಯವತಿಯು ಅವನನ್ನೇ ನೋಡುತ್ತಾ ಹೇಳಿದಳು:
“ಕವಿಯೇ! ಪುತ್ರರು ತಂದೆ ಮತ್ತು ತಾಯಿ ಇಬ್ಬರದ್ದೂ ಆಗಿ ಹುಟ್ಟಿರುತ್ತಾರೆ. ಅವರ ಮೇಲೆ ತಂದೆಗೆ ಎಷ್ಟು ಅಧಿಕಾರವಿದೆಯೋ ಅಷ್ಟೇ ತಾಯಿಗೂ ಇದೆ ಎನ್ನುವುದರಲ್ಲಿ ಸಂಶಯವಿಲ್ಲ. ನೀನು ಹೇಗೆ ನನ್ನ ವಿಧಾತವಿಹಿತ ಪ್ರಥಮ ಸುತನೋ ಹಾಗೆಯೇ ವಿಚಿತ್ರವೀರ್ಯನು ನನ್ನ ಕೊನೆಯ ಮಗ. ನೀನು ಒಪ್ಪಿಕೊಳ್ಳುವೆಯಾದರೆ, ತಂದೆಯ ಕಡೆಯಿಂದ ಅವನಿಗೆ ಭೀಷ್ಮನು ಹೇಗೆ ಅಣ್ಣನಾಗುತ್ತಾನೋ ಹಾಗೆ ನೀನು ಅವನಿಗೆ ತಾಯಿಯ ಕಡೆಯಿಂದ ಅಣ್ಣನಾಗುತ್ತೀಯೆ. ಸತ್ಯವಿಕ್ರಮ ಈ ಶಾಂತನುವು ಸತ್ಯವನ್ನು ಪರಿಪಾಲಿಸಿ ರಾಜ್ಯಾನುಶಾಸನಕ್ಕಾಗಿ ಮಕ್ಕಳನ್ನು ಪಡೆಯುವ ಮನಸ್ಸನ್ನು ಮಾಡುತ್ತಿಲ್ಲ. ಈಗ ನೀನು ನಿನ್ನ ತಮ್ಮನ ಮೇಲಿನ ಗೌರವದಿಂದ, ಕುಲಸಂತಾನಕ್ಕಾಗಿ, ನನ್ನ ಮತ್ತು ಭೀಷ್ಮನ ವಚನ ನಿಯೋಗದಂತೆ, ಜೀವಿಗಳ ಮೇಲಿನ ಅನುಕಂಪದಿಂದ, ಸರ್ವರ ರಕ್ಷಣೆಗೋಸ್ಕರ, ಯಾವುದೇ ರೀತಿಯ ಬೇಸರವಿಲ್ಲದೆ ನಾನು ಹೇಳುವುದನ್ನು ಮಾಡಬೇಕು. ನಿನ್ನ ತಮ್ಮನ ಸುರಸುತೆಯರಂತಿರುವ ರೂಪಯೌವನಸಂಪನ್ನ ಭಾರ್ಯೆಯರು ಧರ್ಮಪೂರ್ವಕವಾಗಿ ಪುತ್ರರನ್ನು ಪಡೆಯಲು ಬಯಸುತ್ತಿದ್ದಾರೆ. ಪುತ್ರಕ! ಅವರಲ್ಲಿ ನೀನು ಈ ಕುಲಕ್ಕೆ ಅನುರೂಪರಾದ ಈ ಸಂತತಿಯನ್ನು ಮುಂದುವರೆಸಿಕೊಂಡು ಹೋಗಬಲ್ಲ ಮಕ್ಕಳನ್ನು ಪಡೆ. ಇದಕ್ಕೆ ನೀನು ಸಮರ್ಥನಾಗಿದ್ದೀಯೆ.”
ವ್ಯಾಸನು ಹೇಳಿದನು:
“ಸತ್ಯವತಿ! ನೀನು ಪರ ಮತ್ತು ಅಪರ ಧರ್ಮಗಳೆರಡನ್ನೂ ತಿಳಿದಿರುವೆ. ಧರ್ಮಜ್ಞಳಾದ ನಿನ್ನ ಮನಸ್ಸು ಸದಾ ಧರ್ಮದಲ್ಲಿಯೇ ನಿರತವಾಗಿದೆ. ಆದುದರಿಂದ ನಿನ್ನ ನಿಯೋಗದಂತೆ, ಧರ್ಮವನ್ನು ಗೌರವಿಸುವ ಕಾರಣದಿಂದ, ನಿನ್ನ ಇಷ್ಟದಂತೆ ಮಾಡುತ್ತೇನೆ. ಇದು ಒಂದು ಪುರಾತನ ಪದ್ಧತಿಯಾಗಿದೆ. ನನ್ನ ತಮ್ಮನಿಗೆ ಮಿತ್ರ ವರುಣರ ಸಮಾನ ಪುತ್ರರನ್ನು ನೀಡುತ್ತೇನೆ. ಆ ದೇವಿಯರೀರ್ವರೂ ಒಂದು ಸಂವತ್ಸರ ಪರ್ಯಂತ ನಾನು ಹೇಳಿದ ನಿರ್ದಿಷ್ಟ ವ್ರತವನ್ನು ಪಾಲಿಸಿ ಶುದ್ಧರಾಗಬೇಕು. ಯಾಕೆಂದರೆ ಆ ವ್ರತವನ್ನು ಮಾಡದ ಯಾವ ಸ್ತ್ರೀಗೂ ನನ್ನೊಡನೆ ಕೂಡಲಿಕ್ಕಾಗದು.”
ಸತ್ಯವತಿಯು ಹೇಳಿದಳು:
“ಈಗ ಸದ್ಯದಲ್ಲಿಯೇ ದೇವಿಯು ಗರ್ಭವತಿಯಾಗುವ ಹಾಗೆ ಮಾಡು. ಯಾಕೆಂದರೆ, ರಾಜನಿಲ್ಲದ ರಾಷ್ಟ್ರದಲ್ಲಿ ಮಳೆಯೂ ದೇವತೆಗಳೂ ಬರುವುದಿಲ್ಲ. ರಾಜನಿಲ್ಲದ ರಾಷ್ಟ್ರವನ್ನು ಹೇಗೆ ತಾನೇ ಕಾಪಾಡಿಕೊಂಡು ಬರಲು ಸಾದ್ಯ? ಆದುದರಿಂದ ಗರ್ಭವನ್ನು ನೀಡು. ಅದರ ಬೆಳವಣಿಗೆಯನ್ನು ಭೀಷ್ಮನು ನೋಡಿಕೊಳ್ಳುತ್ತಾನೆ.”
ವ್ಯಾಸನು ಹೇಳಿದನು:
“ತಕ್ಷಣವೇ ಕಾಲಬರುವ ಮೊದಲೇ ಪುತ್ರರನ್ನು ನೀಡಬೇಕಾದರೆ ನನ್ನ ವಿರೂಪವನ್ನು ಸಹಿಸುವುದೇ ಅವಳಿಗೆ ಒಂದು ಪರಮ ವ್ರತ. ಒಂದುವೇಳೆ ಅವಳು ನನ್ನ ಈ ವಾಸನೆ, ರೂಪ, ವೇಷ, ಮತ್ತು ದೇಹವನ್ನು ಸಹಿಸುತ್ತಾಳಾದರೆ, ಕೌಸಲ್ಯೆಗೆ ಇಂದೇ ವಿಶಿಷ್ಠ ಗರ್ಭವನ್ನು ನೀಡುತ್ತೇನೆ.”
“ಸಮಾಗಮಕ್ಕೆ ಕಾಯುತ್ತಿರಲಿ” ಎಂದು ಹೇಳಿ ಆ ಮುನಿಯು ಅಂತರ್ಗತನಾದನು. ನಂತರ ಆ ದೇವಿಯು ತನ್ನ ಸೊಸೆಯನ್ನು ಗೌಪ್ಯವಾಗಿ ಭೆಟ್ಟಿಯಾಗಿ ಧರ್ಮಾರ್ಥಸಮಾಯುಕ್ತ ಈ ಹಿತನುಡಿಗಳನ್ನಾಡಿದಳು:
“ಕೌಸಲ್ಯಾ! ನಾನು ಹೇಳುವ ಈ ಧರ್ಮತಂತ್ರವನ್ನು ಕೇಳು. ಭರತ ಕುಲವು ನಿಂತುಹೋಗಿರುವುದು ನನ್ನ ದುರ್ಭಾಗ್ಯ. ಭೀಷ್ಮನು ನನ್ನ ಈ ವ್ಯಥೆಯನ್ನು ಮತ್ತು ಅವನ ಪಿತೃವಂಶದ ಪೀಡನೆಯನ್ನು ಗಮನಿಸಿ, ಧರ್ಮವನ್ನು ವೃದ್ಧಿಸುವ ಬುದ್ಧಿವಂತ ಮಾರ್ಗವನ್ನು ತೋರಿಸಿದ್ದಾನೆ. ಆದರೆ ಇದು ನಿನ್ನ ಮನಸ್ಸನ್ನು ಅವಲಂಬಿಸಿದೆ ಎಂದು ನನಗೆ ತಿಳಿದಿದೆ. ನಷ್ಟವಾಗುತ್ತಿರುವ ಭರತ ವಂಶವನ್ನು ಪುನಃ ಉದ್ಧರಿಸು. ದೇವರಾಜಸಮಪ್ರಭ ಪುತ್ರನಿಗೆ ಜನ್ಮನೀಡು. ಅವನೇ ಈ ಕುಲ ಮತ್ತು ರಾಜ್ಯಭಾರಗಳೆರಡರ ಭಾರವನ್ನೂ ಹೊರುತ್ತಾನೆ.”
ಆ ಧರ್ಮಚಾರಿಣಿಯನ್ನು ಹೇಗಾದರೂ ಮಾಡಿ ಧರ್ಮದೆಡೆಗೆ ಕೊಂಡೊಯ್ಯುವುದರಲ್ಲಿ ಯಶಸ್ವಿಯಾದ ಅವಳು ವಿಪ್ರರಿಗೂ ದೇವರ್ಷಿಗಳಿಗೂ ಅತಿಥಿಗಳಿಗೂ ಭೋಜನವನ್ನು ನೀಡಿದಳು. ಸೊಸೆಯು ಋತುಮತಿಯಾಗಿ ಸ್ನಾನಮುಗಿಸಿದ ನಂತರ ಸತ್ಯವತಿಯು ಅವಳನ್ನು ಹಾಸಿಗೆಯಲ್ಲಿ ಮಲಗಿಸಿ ಮೆಲ್ಲನೆ ಈ ಮಾತುಗಳನ್ನಾಡಿದಳು:
“ಕೌಸಲ್ಯೆ! ನಿನಗೊಬ್ಬ ಬಾವನಿದ್ದಾನೆ. ಅವನು ಈ ರಾತ್ರಿ ನಿನ್ನಲ್ಲಿಗೆ ಬರುತ್ತಾನೆ. ಎಚ್ಚರವಿದ್ದು ಅವನಿಗೆ ಕಾಯಿ. ಅವನು ದಟ್ಟ ರಾತ್ರಿಯಲ್ಲಿ ಬರುತ್ತಾನೆ.”
ಅತ್ತೆಯು ಹೇಳಿದ ಮಾತುಗಳನ್ನು ಕೇಳಿದ ಶುಭೆಯು ಹಾಸಿಗೆಯಲ್ಲಿ ಮಲಗಿಕೊಂಡೇ ಅವನು ಕುರುಪುಂಗವ ಭೀಷ್ಮನೇ ಇರಬೇಕೆಂದು ಯೋಚಿಸತೊಡಗಿದಳು. ಮೊದಲು ಅಂಬಿಕೆಯ ಬಳಿ ಹೋಗಲು ಸತ್ಯವಾನ್ ಋಷಿಯು ದೀಪಗಳು ಇನ್ನೂ ಉರಿಯುತ್ತಿರುವಾಗಲೇ ಶಯನವನ್ನು ಪ್ರವೇಶಿಸಿದನು. ಆ ಕೃಷ್ಣನ ಕಪಿಲ ಜಟೆ, ಪ್ರಜ್ವಲಿಸುತ್ತಿರುವ ಕಣ್ಣುಗಳು ಮತ್ತು ಕೆಂಪು ಗಡ್ಡವನ್ನು ನೋಡಿದ ಆ ದೇವಿಯು ಕಣ್ಣುಗಳನ್ನು ಮುಚ್ಚಿಬಿಟ್ಟಳು. ತಾಯಿಯು ಬಯಸಿದ್ದುದನ್ನು ನೆರವೇರಿಸಲು ಬಂದಿದ್ದ ಅವನು ಅವಳೊಂದಿಗೆ ಇಡೀ ರಾತ್ರಿಯನ್ನು ಕಳೆದರೂ ಹೆದರಿಕೆಯಿಂದ ಅವಳು ಅವನ ಕಡೆ ನೋಡಲೇ ಇಲ್ಲ. ಅವನು ಹೊರಬಂದಾಗ ಭೆಟ್ಟಿಯಾದ ತಾಯಿಯು ಮಗನಲ್ಲಿ ಕೇಳಿದಳು:
“ಮಗನೇ! ಅವಳಲ್ಲಿ ಗುಣವಂತ ರಾಜಪುತ್ರನಾಗುತ್ತಾನೆಯೇ?”
ತಾಯಿಯ ಈ ಪ್ರಶ್ನೆಯನ್ನು ಕೇಳಿ ಪರಮಬುದ್ಧಿಶಾಲಿ ಅತೀಂದ್ರಿಯ ಜ್ಞಾನಿ ವ್ಯಾಸನು ಸ್ವಲ್ಪ ಯೋಚಿಸಿ ವಿಧಿ ಪ್ರಚೋದಿತನಾಗಿ ಹೇಳಿದನು:
“ಎರಡು ಆನೆಗಳಷ್ಟು ಶಕ್ತಿಯುತ, ವಿದ್ವಾಂಸ, ರಾಜರ್ಷಿಸತ್ತಮ, ಮಹಾಭಾಗ, ಮಹಾವೀರ್ಯವಂತ, ಮಹಾಬುದ್ಧಿಶಾಲಿಯು ಜನಿಸುತ್ತಾನೆ. ಅವನಿಗೆ ನೂರು ಮಹಾಬಲಶಾಲಿ ಪುತ್ರರು ಜನಿಸುತ್ತಾರೆ. ಆದರೆ ತನ್ನ ತಾಯಿಯ ಗುಣದೋಷದಿಂದ ಕುರುಡನಾಗಿ ಜನಿಸುತ್ತಾನೆ.”
ಅವನ ಆ ಮಾತುಗಳನ್ನು ಕೇಳಿದ ಮಾತೆಯು ಪುತ್ರನಿಗೆ ಹೇಳಿದಳು:
“ತಪೋಧನ! ಅಂಧ ನೃಪತಿಯು ಕುರುಗಳಿಗೆ ಅನುರೂಪನಲ್ಲ! ನಿನ್ನ ಜಾತಿವಂಶ ಗೋಪ್ತಾರನಾಗುವ, ಪಿತೃವಂಶವರ್ಧನ ಕುರುವಂಶದ ಎರಡನೆಯ ರಾಜನನ್ನು ಕೊಡಬೇಕು.”
“ಹಾಗೆಯೇ ಆಗಲಿ” ಎಂದು ಭರವಸೆಯನ್ನಿತ್ತ ಆ ಮಹಾತಪಸ್ವಿಯು ಹಿಂತೆರಳಿದನು. ಸಮಯ ಕಳೆದನಂತರ ಕೌಸಲ್ಯೆಯು ಕುರುಡು ಮಗನಿಗೆ ಜನ್ಮವಿತ್ತಳು.
ದೇವಿ ಅನಿಂದಿತೆ ಸತ್ಯವತಿಯು ತನ್ನ ಇನ್ನೊಬ್ಬ ಸೊಸೆಯನ್ನು ಮನವೊಲಿಸಿ ಹಿಂದಿನಂತೆಯೇ ಋಷಿಯನ್ನು ಬರಮಾಡಿಕೊಂಡಳು. ಅದೇರೀತಿಯಲ್ಲಿ ಮಹರ್ಷಿಯು ಅವಳ ಬಳಿ ಹೋದನು. ಅಂಬಾಲಿಕೆಯೂ ಕೂಡ ಬಂದೊಡನೆ ಋಷಿಯನ್ನು ನೋಡಿ ವಿಷಣ್ಣಳಾಗಿ ಪಾಂಡುವರ್ಣವನ್ನು ತಾಳಿದಳು. ಭೀತಳಾಗಿ ಪಾಂಡುವರ್ಣವನ್ನು ತಾಳಿ ವಿಷಣ್ಣಳಾದ ಅವಳನ್ನು ನೋಡಿದ ಸತ್ಯವತೀ ಪುತ್ರ ವ್ಯಾಸನು ಹೇಳಿದನು:
“ನನ್ನ ಈ ವಿರೂಪವನ್ನು ನೋಡಿ ಪಾಂಡುತ್ವವನ್ನು ಪಡೆದ ನಿನ್ನ ಈ ದೋಷದಿಂದ ನಿನ್ನ ಮಗನು ಪಾಂಡುವೇ ಆಗುತ್ತಾನೆ. ಶುಭಾನನೆ! ಅವನ ಹೆಸರೂ ಕೂಡ ಅದೇ ಆಗುತ್ತದೆ.”
ಹೀಗೆ ಹೇಳಿ ಭಗವಾನ್ ಋಷಿಸತ್ತಮನು ಹೊರ ಬಂದನು. ಅವನು ಹೊರಬರುವುದನ್ನು ನೋಡಿದ ಸತ್ಯವತಿಯು ಪುತ್ರನಲ್ಲಿ ಕೇಳಿದಾಗ, ಅವನು ಬಾಲಕನ ಪಾಂಡುತ್ವದ ಕುರಿತು ಹೇಳಿದನು. ಅವನ ತಾಯಿಯು ಪುನಃ ಇನ್ನೊಬ್ಬ ಪುತ್ರನನ್ನು ಕೇಳಿದಾಗ ಮಹರ್ಷಿಯು ತನ್ನ ತಾಯಿಗೆ ಹಾಗೆಯೇ ಆಗಲಿ ಎಂದು ಉತ್ತರಿಸಿದನು. ಕಾಲವು ಬಂದಾಗ ಆ ದೇವಿಯು ಪಾಂಡುವರ್ಣದ, ಶ್ರೀಯಂತೆ ಬೆಳಗುತ್ತಿರುವ ಲಕ್ಷಣಸಂಪನ್ನ ಕುಮಾರನಿಗೆ ಜನ್ಮವಿತ್ತಳು. ಅವನಿಗೆ ಮಹೇಷ್ವಾಸ ಪಂಚ ಪಾಂಡವರು ಪುತ್ರರಾಗಿ ಜನಿಸಿದರು.
ಹಿರಿಯ ಸೊಸೆಯು ಪುನಃ ಋತುಕಾಲವನ್ನು ಹೊಂದಿದಾಗ ಪುನಃ ಅವನನ್ನು ಸೇರುವಂತೆ ಹೇಳಿದಳು. ಸುರಸುತೆಯಂತಿದ್ದ ಅವಳಾದರೂ ಮಹರ್ಷಿಯ ರೂಪ ಮತ್ತು ವಾಸನೆಯನ್ನು ನೆನಪಿಸಿಕೊಂಡು ಭಯದಿಂದ ದೇವಿಯ ವಚನದಂತೆ ನಡೆದುಕೊಳ್ಳಲಿಲ್ಲ. ಆ ಕಾಶಿಪತಿಯ ಮಗಳು ತನ್ನ ದಾಸಿಯೊಬ್ಬಳನ್ನು ಸರ್ವಭೂಷಣಗಳಿಂದ ಅಪ್ಸರೆಯಂತೆ ಸಿಂಗರಿಸಿ ಕೃಷ್ಣನಲ್ಲಿಗೆ ಕಳುಹಿಸಿದಳು. ಋಷಿಯು ಬಂದಕೂಡಲೇ ಆ ದಾಸಿಯು ಮೇಲೆದ್ದು ಅಭಿನಂದಿಸಿ, ಅನುಜ್ಞೆಯಂತೆ ಅವನ ಸತ್ಕಾರ ಉಪಚಾರಗಳನ್ನು ಮಾಡಿದಳು. ಕಾಮಭೋಗದಿಂದ ಅವಳಲ್ಲಿ ಋಷಿಯು ಸಂತುಷ್ಟನಾದನು. ಆ ಮಹರ್ಷಿಯು ಸಂತೋಷಗೊಂಡು ಅವಳೊಂದಿಗೆ ಪ್ರೀತಿಯಿಂದ ಇಡೀ ರಾತ್ರಿಯನ್ನು ಕಳೆದನು. ಮೇಲೆದ್ದಾಗ ಅವನು ಅವಳಿಗೆ ಹೇಳಿದನು:
“ನಿನ್ನ ದಾಸಿತ್ವವು ಇಂದಿಗೆ ಮುಗಿಯಿತು. ಶುಭೇ! ಇಂದು ಓರ್ವ ಶ್ರೀಮಂತನು ನಿನ್ನ ಉದರ ಗರ್ಭದಲ್ಲಿ ಬಂದಿದ್ದಾನೆ. ಅವನು ಲೋಕದಲ್ಲಿಯೇ ಶ್ರೇಷ್ಠನೂ ಧರ್ಮಾತ್ಮನೂ ಸರ್ವ ಬುದ್ಧಿವಂತನೂ ಆಗುತ್ತಾನೆ.”
ಹೀಗೆ ಧೃತರಾಷ್ಟ್ರ ಮತ್ತು ಪಾಂಡುಗಳ ತಮ್ಮ ಅಮಿತ ಬುದ್ಧಿವಂತ ವಿದುರನೆಂಬ ಹೆಸರಿನ ಕೃಷ್ಣದ್ವೈಪಾಯನನ ಮಗನು ಜನಿಸಿದನು. ಮಹಾತ್ಮ ಮಾಂಡವ್ಯನ ಶಾಪದಿಂದಾಗಿ ಧರ್ಮನೇ ಕಾಮಕ್ರೋಧವಿವರ್ಜಿತ ಅರ್ಥತತ್ವಜ್ಞ ವಿದುರನ ರೂಪದಲ್ಲಿ ಜನಿಸಿದನು. ಈ ರೀತಿ ಧರ್ಮನ ಋಣವನ್ನು ತೀರಿಸಿದ ಅವನು ತನ್ನ ತಾಯಿಯನ್ನು ಭೇಟಿಯಾಗಿ “ಅವಳು ಗರ್ಭವತಿಯಾಗಿದ್ದಾಳೆ” ಎಂದು ಹೇಳಿ ಅಂತರ್ಧಾನನಾದನು. ಈ ರೀತಿ ವಿಚಿತ್ರವೀರ್ಯನ ಪತ್ನಿಯರಲ್ಲಿ ದ್ವೈಪಾಯನನಿಂದ ದೇವಗರ್ಭಗಳಂತೆ ಬೆಳಗುತ್ತಿರುವ ಕುರುವಂಶವಿವರ್ಧನರು ಜನಿಸಿದರು.
ಆ ಮೂವರು ಕುಮಾರರ ಜನ್ಮದಿಂದ ಕುರುಜಂಗಲ, ಕುರುಕ್ಷೇತ್ರ, ಮತ್ತು ಕುರುವಂಶ ಇವು ಮೂರೂ ಅಭಿವೃದ್ಧಿ ಹೊಂದಿದವು. ಬೆಳೆಗಳು ಎತ್ತರವಾಗಿ ಬೆಳೆದವು. ಭೂಮಿಯು ಸಸ್ಯ-ಫಲಗಳಿಂದ ಭರಿತವಾಯಿತು. ಪರ್ಜನ್ಯನು ಕಾಲಕ್ಕೆ ಸರಿಯಾಗಿ ಮಳೆಸುರಿಸಿದನು. ದ್ರುಮಗಳು ಪುಷ್ಪ-ಫಲಗಳಿಂದ ತುಂಬಿಕೊಂಡವು. ಮೃಗಪಕ್ಷಿಗಳೂ ವಾಹನಗಳೂ ಮುದಿತರಾಗಿ ಸಂತಸದಿಂದಿದ್ದರು. ಮಾಲೆಗಳು ಸುಗಂಧವನ್ನು ಸೂಸುತ್ತಿದ್ದವು, ಫಲಗಳು ರಸಭರಿತವಾಗಿದ್ದವು. ನಗರಗಳು ವರ್ತಕ-ಶಿಲ್ಪಿಗಳಿಂದ ತುಂಬಿತ್ತು. ಜನರು ಶೂರರೂ, ವಿದ್ಯಾವಂತರೂ, ಸಂತರೂ ಮತ್ತು ಸುಖಿಗಳೂ ಆಗಿದ್ದರು. ದಸ್ಯುಗಳೇ ಇರಲಿಲ್ಲ. ಅಪರಾಧ ಅಧರ್ಮಗಳಲ್ಲಿ ಅಭಿರುಚಿಯಿದ್ದ ಜನರೇ ಇರಲಿಲ್ಲ. ರಾಷ್ಟ್ರದ ಎಲ್ಲ ಪ್ರದೇಶಗಳೂ ಕೃತಯುಗವೋ ಎಂಬಂತೆ ತೋರುತ್ತಿದ್ದವು. ದಾನಕ್ರಿಯೆ ಮತ್ತು ಧರ್ಮಶೀಲ, ಯಜ್ಞವ್ರತಪರಾಯಣ, ಅನ್ಯೋನ್ಯ ಪ್ರೀತಿಸಂಯುಕ್ತ ಪ್ರಜೆಗಳು ವೃದ್ಧಿಸಿದರು. ಮಾನ-ಕ್ರೋಧ ವಿಹೀನ, ಲೋಭವಿವರ್ಜಿತ ಜನರು ಅನ್ಯೋನ್ಯರ ವಿಕಾಸವನ್ನು ಬಯಸುತ್ತಿದ್ದರು. ಧರ್ಮವು ಅತ್ಯುತ್ತಮ ಸ್ಥಾನವನ್ನು ಪಡೆದಿತ್ತು. ತುಂಬಿಹೋಗಿದ್ಡ ನಗರವು ಮಹಾ ಸಾಗರದಂತೆ ತೋರುತ್ತಿತ್ತು. ದ್ವಾರ, ತೋರಣ, ಮೋಡಗಳನ್ನು ಮುಟ್ಟುತ್ತಿವೆಯೋ ಎಂದು ತೋರುವ ನೂರಾರು ಮಹಡಿಗಳ ಎತ್ತರ ಕಟ್ಟಡಗಳಿಂದ ಅದು ಮಹೇಂದ್ರಪುರವನ್ನು ಹೋಲುತ್ತಿತ್ತು. ನದಿಗಳಲ್ಲಿ, ವನಖಂಡಗಳಲ್ಲಿ, ಕೊಳ-ಸರೋವರಗಳಲ್ಲಿ, ಗಿರಿಶಿಖರಗಳ ಮೇಲೆ, ಮತ್ತು ರಮ್ಯ ಕಾನನಗಳಲ್ಲಿ ಜನರು ಮುದಿತರಾಗಿ ವಿಹರಿಸುತ್ತಿದ್ದರು. ಆಗಿನ ಕಾಲದಲ್ಲಿ ದಕ್ಷಿಣ ಕುರುಗಳು ಉತ್ತರ ಕುರುಗಳೊಂದಿಗೆ ಸ್ಪರ್ಧಿಸುತ್ತಿರುವರೋ ಎನ್ನುವಂತೆ ಸಿದ್ಧ, ಋಷಿ, ಚರಣರೊಂದಿಗೆ ವ್ಯವಹರಿಸುತ್ತಿದ್ದರು. ಯಾರೂ ಬಡವರಿರಲಿಲ್ಲ, ಯಾವ ಸ್ತ್ರೀಯೂ ವಿಧವೆಯಾಗಿರಲಿಲ್ಲ. ರಮ್ಯ ಗ್ರಾಮೀಣಪ್ರದೇಶಗಳಲ್ಲಿ ಕುರುಗಳು ಬಹಳಷ್ಟು ಬಾವಿಗಳನ್ನು, ಸಭೆಗಳನ್ನು, ಕೆರೆಗಳನ್ನು, ಬ್ರಾಹ್ಮಣರಿಗೆ ಮನೆಗಳನ್ನೂ ಕಟ್ಟಿಸಿದರು. ಭೀಷ್ಮನಿಂದ ಆಳಲ್ಪಟ್ಟ ಆ ರಾಜ್ಯವು ಎಲ್ಲೆಡೆಯಿಂದ ಸುರಕ್ಷಿತವಾಗಿತ್ತು. ರಮಣೀಯ ಚೈತ್ಯ ಯೂಪಷಗಳಿಂದ ಕೂಡಿದ್ದ ಆ ದೇಶವು ಪರರಾಷ್ಟ್ರಗಳನ್ನೂ ಸೇರಿಸಿಕೊಳ್ಳುತ್ತಾ ಬೆಳೆಯುತ್ತಿತ್ತು. ಭೀಷ್ಮನಿಂದ ಆಳಲ್ಪಟ್ಟ ಆ ರಾಷ್ಟ್ರವು ಧರ್ಮಚಕ್ರದ ಮೇಲೆಯೇ ನಡೆಯುತ್ತಿತ್ತು. ಮಹಾತ್ಮ ಕುಮಾರರು ತಮ್ಮ ತಮ್ಮ ಕೃತ್ಯದಲ್ಲಿ ತೊಡಗಿರುವಾಗ ನಗರ ಮತ್ತು ಗ್ರಾಮೀಣ ಜನರೆಲ್ಲರೂ ಸದಾ ಉತ್ಸವವನ್ನಾಚರಿಸುತ್ತಿದ್ದರು. ಕುರುಮುಖ್ಯರ ಮತ್ತು ಪೌರರ ಮನೆಗಳಲ್ಲಿ ಕೊಡೋಣ, ಭೋಜನವನ್ನು ನೀಡೋಣ ಎಂಬ ಮಾತುಗಳು ಎಲ್ಲೆಡೆಯೂ ಎಲ್ಲರಿಂದಲೂ ಕೇಳಿಬರುತ್ತಿದ್ದವು. ಧೃತರಾಷ್ಟ್ರ, ಪಾಂಡು ಮತ್ತು ಮಹಾಮತಿ ವಿದುರರನ್ನು ಹುಟ್ಟಿದಾಗಿನಿಂದ ಭೀಷ್ಮನು ತನ್ನದೇ ಮಕ್ಕಳಂತೆ ಪರಿಪಾಲಿಸಿದನು. ಸಂಸ್ಕಾರಗಳಿಂದ ಸಂಸ್ಕೃತ, ವ್ರತಾಧ್ಯಯನ ಸಂಯುತ, ಮತ್ತು ಶ್ರಮ ವ್ಯಾಯಾಮ ಕುಶಲರಾದ ಅವರು ಯೌವನವನ್ನು ಪ್ರವೇಶಿಸಿದರು. ಧನುರ್ವೇದ, ಕುದುರೆ ಸವಾರಿ, ಗದಾಯುದ್ಧ, ಖಡ್ಗ ಯುದ್ಧ, ರಾಜಶಿಕ್ಷಣ ಮತ್ತು ನೀತಿ ಶಾಸ್ತ್ರಗಳಲ್ಲಿ ಪಾರಂಗತರಾದರು. ಇತಿಹಾಸ ಪುರಾಣಗಳು, ನಾನಾ ಶಿಕ್ಷಣಗಳು, ವೇದವೇದಾಂಗ ತತ್ವಜ್ಞಾನ ಎಲ್ಲವನ್ನೂ ಶ್ರಮಿಸಿ ಕಲಿತುಕೊಂಡರು. ವಿಕ್ರಾಂತ ಪಾಂಡುವು ಧನುರ್ವಿದ್ಯೆಯಲ್ಲಿ ಎಲ್ಲರನ್ನೂ ಮೀರಿಸಿದನು. ಮಹೀಪತಿ ಧೃತರಾಷ್ಟ್ರನು ಬೇರೆ ಎಲ್ಲರಿಗಿಂತ ಬಲಶಾಲಿಯಾಗಿದ್ದನು. ಧರ್ಮನಿತ್ಯತೆ, ರಾಜಧರ್ಮ, ಮತ್ತು ಪರಮ ಗತಿಯಲ್ಲಿ ವಿದುರನ ಸರಿಸಮಾನರಾದವರು ಮೂರೂ ಲೋಕಗಳಲ್ಲಿ ಯಾರೂ ಇರಲಿಲ್ಲ. ನಷ್ಟವಾಗುತ್ತಿದ್ದ ಶಂತನುವಿನ ವಂಶವು ಪುನರುತ್ಥಾನವಾದದ್ದನ್ನು ನೋಡಿದ ಸರ್ವರಾಷ್ಟ್ರಗಳ ಜನರಲ್ಲಿ ಒಂದು ಮಾತು ಕೇಳಿಬರುತ್ತಿತ್ತು.
“ಕಾಶಿಸುತೆಯರ ಮಕ್ಕಳೇ ವೀರರು! ದೇಶಗಳಲ್ಲಿಯೇ ಕುರುಜಂಗಲ! ಸರ್ವಧರ್ಮವಿದರಲ್ಲಿ ಭೀಷ್ಮ ಮತ್ತು ನಗರಗಳಲ್ಲಿ ಗಜಸಾಹ್ವಯ!”
ತನ್ನ ಕುರುಡತ್ವದಿಂದಾಗಿ ಧೃತರಾಷ್ಟ್ರನು, ಮತ್ತು ಜಾತಿಸಂಕರದಿಂದ ಜನಿಸಿದ ವಿದುರನು ರಾಜ್ಯವನ್ನು ಪಡೆಯಲಿಲ್ಲ. ಪಾಂಡುವು ಮಹೀಪತಿಯಾದನು.
ಗಾಂಧಾರಿ
ಭೀಷ್ಮನು ಹೇಳಿದನು:
“ಸುಗುಣಗಳಿಂದ ಸಮುದಿತ ಈ ಪ್ರಖ್ಯಾತ ಕುಲವು ಭೂಮಿಯಲ್ಲಿನ ಅನ್ಯ ಎಲ್ಲ ಪೃಥ್ವೀಪಾಲರಮೇಲೆ ಪ್ರಭುತ್ವವನ್ನು ಸ್ಥಾಪಿಸಿದೆ. ಪೂರ್ವದಲ್ಲಿ ಮಹಾತ್ಮ ಧರ್ಮವಿಧ್ವಾಂಸ ರಾಜರಿಂದ ರಕ್ಷಿಸಿಕೊಂಡು ಬಂದ ಈ ಕುಲವು ಎಂದೂ ಅಧೋಗತಿಯನ್ನು ಹೊಂದಿಲ್ಲ. ಇದನ್ನು ಕುಲತಂತುಗಳಾದ ನಿಮ್ಮ ಮೇಲೆ ಸತ್ಯವತಿ, ಮಹಾತ್ಮ ಕೃಷ್ಣ ಮತ್ತು ನಾನು ಹೊರಿಸಿದ್ದೇವೆ. ಪುತ್ರ! ಈ ಕುಲವು ಸಾಗರದಂತೆ ವರ್ಧಿಸಲು, ನನಗಿಂಥ ಹೆಚ್ಚು, ನೀನು ವಿಶೇಷವಾದ ಕಾಳಜಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕುಲಕ್ಕೆ ಅನುರೂಪ ಯಾದವೀ ಕನ್ಯೆಯೊಬ್ಬಳು, ಸುಬಲನ ಮಗಳು ಮತ್ತು ಮದ್ರೇಶ್ವರನ ಮಗಳ ಕುರಿತು ಕೇಳಿದ್ದೇನೆ. ಇವರೆಲ್ಲರೂ ಕುಲೀನರೂ, ರೂಪವತಿಯರೂ, ರಕ್ಷಣೆಯಲ್ಲಿದ್ದವರೂ ಆಗಿದ್ದು ಆ ಎಲ್ಲ ಕ್ಷತ್ರಿಯರ್ಷಭರೂ ನಮ್ಮೊಡನೆ ಸಂಬಂಧವನ್ನು ಕಲ್ಪಿಸಿಕೊಳ್ಳಲು ಸರಿಯಾದವರೇ ಆಗಿದ್ದಾರೆ. ಈ ಕುಲದ ಸಂತಾನಾರ್ಥವಾಗಿ ಇವರನ್ನು ವರಿಸಬೇಕೆಂದು ನನ್ನ ಮತ. ಧೀಮಂತರಲ್ಲಿ ಶ್ರೇಷ್ಠ ವಿದುರ, ಇದರ ಕುರಿತು ನಿನ್ನ ಮತವೇನು?”
ವಿದುರನು ಹೇಳಿದನು:
“ನೀನು ನಮ್ಮೆಲ್ಲರ ಪಿತ, ಮಾತ ಮತ್ತು ಪರಮ ಗುರು. ನಮ್ಮ ಈ ಕುಲಕ್ಕೆ ಹಿತವಾದದ್ದನ್ನು ನೀನೇ ಸ್ವಯಂ ವಿಚಾರಿಸಿ ನೆರವೇರಿಸಿಕೊಡು.”
ಆಗ ಸುಬಲಾತ್ಮಜೆ ಶುಭೆ ಗಾಂಧಾರಿಯು ವರದ ದೇವ ಭಗನೇತ್ರಹರ ಹರನನ್ನು ಆರಾಧಿಸಿ ನೂರು ಮಕ್ಕಳ ವರವನ್ನು ಪಡೆದಿದ್ದಾಳೆ ಎಂದು ವಿಪ್ರರ ಮೂಲಕ ಕೇಳಿದನು. ಇದನ್ನು ಕೇಳಿದ ಕುರುಪಿತಾಮಹ ಭೀಷ್ಮನು ದೂತನೋರ್ವನನ್ನು ಗಾಂಧಾರರಾಜನಲ್ಲಿಗೆ ಕಳುಹಿಸಿದನು. ಕುರುಡನೆಂದು ಚಿಂತಿಸಿ ಸುಬಲನು ಹಿಂಜರಿದನು. ಆದರೂ ಕುಲ, ಖ್ಯಾತಿ, ಇತಿಹಾಸವನ್ನು ಬುದ್ಧಿಪೂರ್ವಕ ಸಮೀಕ್ಷಿಸಿ ಅವನು ಧರ್ಮಚಾರಿಣಿ ಗಾಂಧಾರಿಯನ್ನು ಧೃತರಾಷ್ಟ್ರನಿಗೆ ಕೊಟ್ಟನು. ಗಾಂಧಾರಿಯಾದರೂ ಧೃತರಾಷ್ಟ್ರನು ಕುರುಡ ಮತ್ತು ತಂದೆ ತಾಯಿಯರು ತನ್ನನ್ನು ಅವನಿಗೆ ಕೊಡಲು ಬಯಸುತ್ತಿದ್ದಾರೆಂದು ಕೇಳಿದಳು. ಆಗ ಆ ಪತಿವ್ರತಾಪರಾಯಣೆ ಶುಭೆಯು ಒಂದು ಪಟ್ಟಿಯನ್ನು ತೆಗೆದುಕೊಂಡು ಅದರಲ್ಲಿ ಹಲವು ಮಡಿಕೆಗಳನ್ನು ಮಾಡಿ ತನ್ನ ಕಣ್ಣುಗಳನ್ನು ಕಟ್ಟಿಕೊಂಡು ತನ್ನ ಪತಿಗಿಂಥ ಅಧಿಕ ಅನುಭವವು ತನಗೆ ಬೇಡ ಎಂಬ ದೃಢನಿಶ್ಚಯ ಮಾಡಿದಳು. ನಂತರ ಗಾಂಧಾರರಾಜ ಪುತ್ರ ಶಕುನಿಯು ಅತ್ಯಂತ ಸಂಪತ್ತಿನೊಡನೆ ತನ್ನ ಅಕ್ಕನನ್ನು ಕೌರವನಿಗೋಸ್ಕರ ಕರೆತಂದನು. ತಕ್ಕುದಾದ ಬಳುವಳಿಗಳೊಂದಿಗೆ ತನ್ನ ಅಕ್ಕನನ್ನಿತ್ತು ಭೀಷ್ಮನಿಂದ ಸತ್ಕರಿಸಲ್ಪಟ್ಟು ಆ ವೀರನು ತನ್ನ ನಗರಕ್ಕೆ ಹಿಂದಿರುಗಿದನು. ವರಾರೋಹೆ ಗಾಂಧಾರಿಯು ಶೀಲಾಚಾರ ವಿಚೇಷ್ಠೆಗಳಿಂದ ಕುರುಗಳೆಲ್ಲರನ್ನೂ ಸಂತುಷ್ಟಗೊಳಿಸಿದಳು. ಅವರೆಲ್ಲರನ್ನೂ ತನ್ನ ನಡವಳಿಕೆಯಲ್ಲಿ ಆರಾಧಿಸಿದಳು. ಅವಳು ಎಷ್ಟು ಪತಿವ್ರತೆಯಾಗಿದ್ದಳೆಂದರೆ ಆ ಸುವ್ರತೆಯು ಅನ್ಯ ಪುರುಷರ ಕುರಿತು ಮಾತನ್ನೂ ಆಡುತ್ತಿರಲಿಲ್ಲ.
ಕುಂತಿ-ಕರ್ಣ
ವಸುದೇವನ ತಂದೆ ಶೂರ ಎಂಬ ಹೆಸರಿನ ಯದುಶ್ರೇಷ್ಠನಿದ್ದನು. ಅವನಿಗೆ ಭುವಿಯಲ್ಲಿಯೆ ರೂಪದಲ್ಲಿ ಅಸದೃಶ ಪೃಥಾ ಎಂಬ ಹೆಸರಿನ ಮಗಳಿದ್ದಳು. ಆ ವೀರ್ಯವಂತನು ಮಕ್ಕಳನ್ನು ಹೊಂದಿರದಿದ್ದ ತಂದೆಯ ತಂಗಿಯ ಮಗನಿಗೆ ತನ್ನ ಮೊದಲ ಮಗುವನ್ನು ಕೊಡುತ್ತೇನೆಂದು ಪ್ರತಿಜ್ಞೆ ಮಾಡಿಕೊಂಡಿದ್ದನು. ಆ ಹಿರಿಯ ಮಗಳನ್ನು ಪಡೆಯಲು ಬಯಸಿದ ಸಖ ಮಹಾತ್ಮ ಕುಂತಿಭೋಜನಿಗೆ ಕೊಟ್ಟನು. ಹೊಸ ತಂದೆಯ ಮನೆಯಲ್ಲಿ ಅವಳು ದೇವತೆ ಮತ್ತು ಅತಿಥಿಪೂಜನೆಯಲ್ಲಿ ನಿರತಳಾಗಿದ್ದಳು. ಹೀಗಿರುವಾಗ ಒಮ್ಮೆ ಅವಳು ಪರ್ಯಟಿಸುತ್ತಾ ಬಂದ ಸಂಶಿತವ್ರತ, ನಿಗೂಢ ಧರ್ಮನಿಶ್ಚಯಿ, ಉಗ್ರ, ಘೋರ ಬ್ರಾಹ್ಮಣ ದುರ್ವಾಸನನ್ನು ಸತ್ಕರಿಸುವ ಅವಕಾಶವನ್ನು ಪಡೆದುಕೊಂಡಳು. ಆ ಉಗ್ರ ಸಂಶಿತಾತ್ಮನನ್ನು ಸರ್ವಯತ್ನಗಳಿಂದ ತೃಪ್ತಿಗೊಳಿಸಿದಳು. ಮುಂದೆ ಬರಬಹುದಾದ ಆಪತ್ತನ್ನು ಕಂಡ ಆ ಮುನಿಯು ಅವಳಿಗೆ ಅಭಿಚಾರ ಸಂಯುಕ್ತ ಮಂತ್ರಗಳನ್ನಿತ್ತು ಹೇಳಿದನು:
“ಈ ಮಂತ್ರಗಳಿಂದ ನೀನು ಯಾವ ಯಾವ ದೇವತೆಯನ್ನು ಆಹ್ವಾನಿಸುತ್ತೀಯೋ ಆಯಾ ದೇವತೆಗಳ ಪ್ರಸಾದದಿಂದ ನಿನಗೆ ಪುತ್ರರಾಗುತ್ತಾರೆ.”
ವಿಪ್ರನ ಈ ಮಾತುಗಳನ್ನು ಕೇಳಿ ಕುತೂಹಲಗೊಂಡ ಆ ಯಶಸ್ವಿನೀ ಸತಿ ಕನ್ಯೆಯು ಅರ್ಕದೇವನನ್ನು ಅಹ್ವಾನಿಸಿದಳು. ಆಗ ಅಲ್ಲಿ ಅವಳು ಲೋಕಭಾವನ ಭಾಸ್ಕರನು ಬರುತ್ತಿರುವುದನ್ನು ನೋಡಿದಳು. ಆ ಮಹದದ್ಭುತವನ್ನು ನೋಡಿದ ಆ ಅನವದ್ಯಾಂಗಿಯು ವಿಸ್ಮಿತಳಾದಳು. ಆ ಪ್ರಕಾಶಕರ್ಮಿ ತಪನನು ಅವಳಿಗೆ ಗರ್ಭವನ್ನಿತ್ತನು. ಅವನಿಂದ ಸರ್ವಶಸ್ತ್ರಿಗಳಲ್ಲಿ ಶ್ರೇಷ್ಠ, ಕವಚಧಾರಿ, ಶ್ರಿಯಾವೃತ, ಶ್ರೀಮಾನ್ ದೇವಗರ್ಭ ವೀರನನ್ನು ಪಡೆದಳು. ಸರ್ವ ಲೋಕಗಳಲ್ಲಿ ಕರ್ಣನೆಂದು ವಿಶೃತ ಈ ಮಗನು ಸಹಜ ಕವಚ ಮತ್ತು ಮುಖವನ್ನು ಬೆಳಗಿಸುತ್ತಿದ್ದ ಹೊಳೆಯುವ ಕುಂಡಲಗಳನ್ನು ಧರಿಸಿಯೇ ಹುಟ್ಟಿದನು. ಆ ಪರಮದ್ಯುತಿಯು ಕೊಡುವುದರಲ್ಲೆಲ್ಲಾ ಶ್ರೇಷ್ಠ ಕೊಡುಗೆಯನ್ನಿತ್ತು ಅವಳ ಕನ್ಯೆತ್ವವನ್ನು ಪುನಃ ಹಿಂದಿರುಗಿಸಿ ಆಕಾಶವನ್ನು ಸೇರಿದನು. ಬಂಧುಪಕ್ಷಗಳ ಭಯದಿಂದ ಮತ್ತು ಅಪಚಾರವನ್ನು ಮುಚ್ಚಿಡುವುದಕ್ಕಾಗಿ ಕುಂತಿಯು ಆ ಸಲಕ್ಷಣ ಕುಮಾರನನ್ನು ನೀರಿನಲ್ಲಿ ಬಿಟ್ಟಳು. ಬಿಸುಟಲ್ಪಟ್ಟ ಆ ಮಗುವನ್ನು ಮಹಾಯಶಸ್ವಿ ರಾಧೆಯ ಪತಿಯು ತನ್ನ ಪತ್ನಿಯೊಂದಿಗೆ ತಮ್ಮದೇ ಮಗುವೆಂದು ಸ್ವೀಕರಿಸಿದನು. ಹೀಗೆ ಅವನು ಸೂತನಂದನನೆಂದು ತಿಳಿಯಲ್ಪಟ್ಟನು. ವಸುವಿನ ಸಹಿತ ಹುಟ್ಟಿದ ಇವನು ವಸುಷೇಣನೆಂದಾಗಲಿ ಎಂದು ಅವರು ಆ ಬಾಲಕನಿಗೆ ಹೆಸರನ್ನಿಟ್ಟರು. ದೊಡ್ಡವನಾಗುತ್ತಿದ್ದಂತೆ ಅವನು ಸರ್ವಶಸ್ತ್ರಗಳಿಂದಲೂ ಹೋರಾಡುವ ಬಲಶಾಲಿಯಾದನು. ಆ ವೀರ್ಯವಂತನು ತನ್ನ ಬೆನ್ನು ಸುಡುವವರೆಗೂ ಆದಿತ್ಯನನ್ನು ಉಪಾಸಿಸುತ್ತಿದ್ದನು. ಜಪವನ್ನಾಚರಿಸುತ್ತಿದ್ದ ಸಮಯದಲ್ಲಿ ಆ ಸತ್ಯಸಂಗರ ಮಹಾತ್ಮ ವೀರನು ಬ್ರಾಹ್ಮಣರಿಗೆ ಏನನ್ನೂ ನಿರಾಕರಿಸುತ್ತಿರಲಿಲ್ಲ. ಒಮ್ಮೆ ಭೂತಭಾವನ ಇಂದ್ರನು ಬ್ರಾಹ್ಮಣನಾಗಿ ಬಂದು ಭಿಕ್ಷೆಯಾಗಿ ಆ ಮಹಾದ್ಯುತಿಯ ಕವಚ ಕುಂಡಲಗಳನ್ನು ಪ್ರಾರ್ಥಿಸಿದನು. ಏನನ್ನೂ ಯೋಚಿಸದೇ ಖಡ್ಗದಿಂದ ರಕ್ತಸುರಿಯುತ್ತಿರುವ ಕವಚವನ್ನು ಕಡಿದು, ಕರ್ಣಗಳಿಂದ ಕುಂಡಲಗಳನ್ನು ಕಿತ್ತು ಅವನಿಗೆ ಅಂಜಲೀ ಬದ್ಧನಾಗಿ ಕೊಟ್ಟನು. ವಿಸ್ಮಿತ ಶಕ್ರನು ಅವನಿಗೆ ಶಕ್ತಿಯನ್ನಿತ್ತು ಹೇಳಿದನು: “ದೇವ, ಅಸುರ, ಮನುಷ್ಯ ಅಥವಾ ಗಂಧರ್ವ ಉರಗ ರಾಕ್ಷರು ಯಾರ ಮೇಲೆ ನೀನು ಇದನ್ನು ಎಸೆಯುತ್ತೀಯೋ ಅವರು ಗಾಯಗೊಂಡು ಸಾಯುತ್ತಾರೆ.” ಅವನ ಮೊದಲನೆಯ ಹೆಸರು ವಸುಷೇಣ ಎಂದು ಇತ್ತು. ಆದರೆ ಅವನ ಕರ್ಮದಿಂದ ಅವನು ವೈಕರ್ತನ ಕರ್ಣನಾದನು.
ಕುಂತಿ-ಪಾಂಡು-ಮಾದ್ರಿ
ಕುಂತಿಭೋಜನ ಮಗಳು ರೂಪಸತ್ವಗುಣೋಪೇತಳಾಗಿದ್ದಳು. ಧರ್ಮನಿರತಳೂ ಮಹಾ ವ್ರತನಿರತಳೂ ಆಗಿದ್ದಳು. ಅವಳ ತಂದೆಯು ಅವಳ ಸ್ವಯಂವರವನ್ನು ಏರ್ಪಡಿಸಿದನು. ಸಹಸ್ರಾರು ಭೂಮಿಪಾಲರ ಮಧ್ಯೆ ಸಿಂಹದಂಷ್ಟ್ರ, ಗಜಸ್ಕಂಧ, ಋಷಭಾಕ್ಷ, ಮಹಾಬಲಶಾಲಿ ಪಾಂಡುವನ್ನು ನೋಡಿ ಮೆಚ್ಚಿದಳು. ಆ ಅಮಿತಸೌಭಾಗ್ಯಶಾಲಿ ಕುರುನಂದನನು ಕುಂತಿಭೋಜನ ಮಗಳನ್ನು ಇಂದ್ರನು ಪೌಲೋಮಿಯನ್ನು ಸೇರಿದಂತೆ ಸೇರಿದನು. ನಂತರ ದೇವವ್ರತ ಭೀಷ್ಮನು ಮದ್ರರ ರಾಜಧಾನಿಗೆ ಹೋಗಿ ಅಲ್ಲಿಂದ ಮೂರೂ ಲೋಕಗಳಲ್ಲಿ ವಿಶೃತ, ರೂಪದಲ್ಲಿ ಭುವಿಯಲ್ಲಿಯೇ ಅಸದೃಶಳೆಂದು ಸರ್ವರಾಜರುಗಳಲ್ಲಿ ವಿಖ್ಯಾತ, ಮದ್ರಪತಿಯ ಮಗಳು ಮಾದ್ರಿಯನ್ನು ಪಾಂಡುವಿಗೋಸ್ಕರ ಬಹಳಷ್ಟು ಧನವನ್ನಿತ್ತು ಖರೀದಿಸಿ ತಂದು ಮಹಾತ್ಮ ಪಾಂಡುವಿನೊಡನೆ ಅವಳ ವಿವಾಹವನ್ನು ನೆರವೇರಿಸಿದನು. ಸಿಂಹೋರಸ್ಕ, ಗಜಸ್ಕಂಧ, ಋಷಭಾಕ್ಷ ಮನಸ್ವಿ ನರವ್ಯಾಘ್ರ ಪಾಂಡುವನ್ನು ನೋಡಿ ಭೂಮಿಯ ನರರೆಲ್ಲರೂ ವಿಸ್ಮಿತರಾಗಿದ್ದರು. ವಿವಾಹಿತ ಪಾಂಡುವು ಬಲೋತ್ಸಾಹ ಸಮನ್ವಿತನಾಗಿ ಇಡೀ ಭೂಮಿಯನ್ನೇ ಗೆಲ್ಲುವ ಉದ್ದೇಶದಿಂದ ಅನೇಕ ಶತ್ರುಗಳನ್ನು ಎದುರಿಸಿ ಹೋದನು. ಮೊದಲು ಅಗಸ್ಕೃತ ದಶಾರ್ಣರ ಬಳಿ ಹೋದ ಆ ಕೌರವರ ಯಶಸ್ಸನ್ನು ವೃದ್ಧಿಸುವ ನರಸಿಂಹ ಪಾಂಡುವು ಅವರನ್ನು ಸಮರದಲ್ಲಿ ಜಯಿಸಿದನು. ಅನಂತರ ಪಾಂಡುವು ನಾನಾ ವಿಧದ ಧ್ವಜಗಳನ್ನೂ, ಹಸ್ತಿ, ಅಶ್ವರಥಗಳನ್ನೂ, ಕಾಲಾಳುಗಳ ಗಣಸಂಕುಲಗಳನ್ನೂ ಕೂಡಿದ ಸೇನೆಯನ್ನು ತೆಗೆದುಕೊಂಡು ಹೊರಟನು. ಸರ್ವ ವೀರರ, ಸರ್ವ ರಾಜರ ವೈರಿ ಮಗಧರಾಷ್ಟ್ರದ ದುಷ್ಟ ರಾಜ ದಾರ್ವನನ್ನು ರಾಜಗೃಹದಲ್ಲಿ ಸಂಹರಿಸಿದನು. ಅಲ್ಲಿಯ ಕೋಶ, ವಾಹನಗಳು, ಮತ್ತು ಸೇನೆಗಳನ್ನು ತೆಗೆದುಕೊಂಡು ಪಾಂಡುವು ಮಿಥಿಲೆಗೆ ಹೋಗಿ ಅಲ್ಲಿ ವಿದೇಹರನ್ನು ಸಮರದಲ್ಲಿ ಜಯಿಸಿದನು. ಈ ರೀತಿ ಕುರುಗಳ ಯಶಸ್ಸನ್ನು ತನ್ನ ಬಾಹುಬಲವೀರ್ಯದಿಂದ ಆ ಭರತರ್ಷಭ ಪಾಂಡುವು ಕಾಶಿ ಮತ್ತು ಸುಹ್ಮರಲ್ಲಿ ಪಸರಿಸಿದನು. ಆ ಪಾವಕ ಸದೃಶ ಅರಿಂದಮ ಪಾಂಡುವಿನ ಮಹಾಜ್ವಾಲೆಯಂತೆ ಉರಿಯುತ್ತಿರುವ ಶರ ಮತ್ತು ಅಸ್ತ್ರಗಳಿಗೆ ಸಿಲುಕಿದ ನರಾಧಿಪರೆಲ್ಲರೂ ಸುಟ್ಟು ಭಸ್ಮವಾದರು. ಆ ನೃಪರು ಪಾಂಡು ಮತ್ತು ಅವನ ಸೇನೆಯಿಂದ ವಿಧ್ವಂಸಗೊಂಡು ಅಬಲರಾಗಿ ವಶಪಡಿಸಲ್ಪಟ್ಟು ಕಪ್ಪ ಕಾಣಿಕೆಗಳನ್ನು ಕೊಡುವಂತಾದರು. ಅವನಿಂದ ಜಯಿಸಲ್ಪಟ್ಟ ಇಡೀ ಪೃಥ್ವಿಯ ಸರ್ವ ಪಾರ್ಥಿವರೂ ದೇವತೆಗಳಲ್ಲಿ ಪುರಂದರನು ಹೇಗೋ ಹಾಗೆ ಅವನೊಬ್ಬನೇ ಶೂರನೆಂದು ಮನ್ನಿಸಿದರು. ಸರ್ವ ವಸುಧಾಧಿಪರೂ ಅಂಜಲೀ ಬದ್ಧರಾಗಿ ಅವನನ್ನು ನಮಸ್ಕರಿಸಲು ಧನ, ವಿವಿಧ ರತ್ನಗಳು, ಮಣಿ, ಮುಕ್ತಾ ಪ್ರವಾಲ, ಸುವರ್ಣ, ರಜತ, ಗೋರತ್ನ, ಅನ್ಯ ರತ್ನಗಳು, ರಥ ರತ್ನಗಳು, ಕುಂಜರಗಳು, ಕತ್ತೆಗಳು, ಎಮ್ಮೆಗಳು, ಕುದುರೆಗಳು, ಮತ್ತು ಇನ್ನೂ ಅನೇಕ ಪ್ರಾಣಿಗಳು ಇವೆಲ್ಲವನ್ನೂ ತೆಗೆದುಕೊಂಡು ನಾಗಪುರಾಧಿಪ ರಾಜನಲ್ಲಿಗೆ ಬಂದರು. ಇವೆಲ್ಲವುಗಳನ್ನು ತೆಗೆದುಕೊಂಡು ತನ್ನ ಸೇನೆಯನ್ನೊಡಗೂಡಿ ತನ್ನ ರಾಷ್ಟ್ರಕ್ಕೆ ಹರ್ಷವನ್ನೀಯುತ್ತಾ ತನ್ನ ಪುರ ಗಜಸಾಹ್ವಯವನ್ನು ಪ್ರವೇಶಿಸಿದನು. ಕಳೆದುಹೋಗಿದ್ದ ರಾಜಸಿಂಹ ಶಂತನು ಮತ್ತು ಧೀಮಂತ ಭರತನ ವಿಜಯ ದುಂದುಭಿಯನ್ನು ಪಾಂಡುವು ಪುನಃ ಕೇಳಿಬರುವಂತೆ ಮಾಡಿದನು. ಹಿಂದೆ ಕುರು ರಾಷ್ಟ್ರಗಳನ್ನು ಮತ್ತು ಕುರು ಸಂಪತ್ತನ್ನು ತೆಗೆದುಕೊಂಡಿದ್ದವರೆಲ್ಲರನ್ನೂ ನಾಗಪುರಸಿಂಹ ಪಾಂಡುವು ಕರವನ್ನು ಕೊಡುವವರಂತೆ ಮಾಡಿದನು. ಅಲ್ಲಿ ಸೇರಿದ್ದ ರಾಜರು ಮತ್ತು ರಾಜ ಅಮಾತ್ಯರು, ಪ್ರತೀತಮನಸ ಹೃಷ್ಟ ನಗರ ಮತ್ತು ಗ್ರಾಮೀಣ ಜನರು ಎಲ್ಲರೂ ಸೇರಿ ಇದೇ ರೀತಿಯ ಮಾತುಗಳನ್ನಾಡುತ್ತಿದ್ದರು.
ಅವನು ಹಿಂದಿರುಗಿದಾಗ ಭೀಷ್ಮನ ಮುಂದಾಳತ್ವದಲ್ಲಿ ಎಲ್ಲರೂ ಅವನನ್ನು ಭೆಟ್ಟಿಯಾಗಲು ಹೊರ ಬಂದರು. ನಾಗಪುರದ್ವಾರಗಳು ಇನ್ನೂ ಸ್ವಲ್ಪದೂರದಲ್ಲಿದೆ ಎನ್ನುತ್ತಿರುವಂತೆಯೇ ಅಲ್ಲಿ ಸೇರಿದ್ದ ಜನರು ಹರ್ಷಿತರಾಗಿ ಮಹಾ ಸಾಗರದಂತೆ ರತ್ನಗಳನ್ನು ನಾನಾ ವಾಹನಗಳಲ್ಲಿರಿಸಿಕೊಂಡು. ಅತ್ಯುತ್ತಮ ಆನೆ, ಕುದುರೆಗಳು, ರಥರತ್ನಗಳು, ಹಸುಗಳು, ಒಂಟೆಗಳು, ಮತ್ತು ಕುರಿಗಳನ್ನೂ ಕರೆದುಕೊಂಡು ಬರುತ್ತಿರುವ ನಾನಾ ಪ್ರದೇಶಗಳ ಜನರನ್ನು ನೋಡಿ ಹರ್ಷಿತರಾದರು. ಭೀಷ್ಮನೊಂದಿಗೆ ಬಂದಿದ್ದ ಕೌರವರು ಅಂತ್ಯವೇ ಕಾಣದಂಥಹ ಈ ಅಸಾಧ್ಯ ಪಡೆಯನ್ನು ನೋಡಿದರು. ಅವನು ತಂದೆಯ ಪಾದಗಳಿಗೆ ನಮಸ್ಕರಿಸಿ ಕೌಸಲ್ಯೆಯ ಖುಷಿಯನ್ನು ಹೆಚ್ಚಿಸಿದನು. ಪೌರಜನರನ್ನೂ ಕೂಡ ಯಥಾರ್ಹವಾಗಿ ಮನ್ನಿಸಿದನು. ಪರರಾಷ್ಟ್ರಗಳನ್ನು ಸೋಲಿಸಿ ಕೃತಾರ್ಥನಾಗಿ ಹಿಂದಿರುಗಿದ ಪುತ್ರನನ್ನು ಪಡೆದ ಭೀಷ್ಮನಾದರೂ ಹರ್ಷದಿಂದ ಕಣ್ಣೀರು ಸುರಿಸಿದನು. ನೂರಾರು ತೂರ್ಯ ಭೇರಿಗಳ ಮಹಾನಾದದೊಂದಿಗೆ ಸರ್ವ ಪೌರರನ್ನೂ ಸಂತೋಷಗೊಳಿಸುತ್ತಾ ಅವನು ಗಜಸಾಹ್ವಯವನ್ನು ಪ್ರವೇಶಿಸಿದನು.
ಧೃತರಾಷ್ಟ್ರನ ಅನುಜ್ಞೆಯಂತೆ ತನ್ನ ಬಾಹುಬಲದಿಂದ ಗೆದ್ದಿದ್ದ ಧನವನ್ನು ಭೀಷ್ಮ, ಸತ್ಯವತಿ ಮತ್ತು ತಾಯಂದಿರಿಗೆ ಸಮರ್ಪಿಸಿದನು. ಪಾಂಡುವು ಆ ಧನವನ್ನು ವಿದುರನಿಗೂ ಕೂಡ ಕಳುಹಿಸಿಕೊಟ್ಟನು. ಆ ಧರ್ಮಾತ್ಮನು ತನ್ನ ಸುಹೃದಯರನ್ನೂ ಧನವನ್ನಿತ್ತು ತೃಪ್ತಿಗೊಳಿಸಿದನು. ನಂತರ ಭೀಷ್ಮನು ಪಾಂಡುವು ಗೆದ್ದು ತಂದಿದ್ದ ರತ್ನಗಳಿಂದ ಸತ್ಯವತಿ ಮತ್ತು ಯಶಸ್ವಿನಿ ಶುಭೆ ಕೌಸಲ್ಯೆಯರನ್ನೂ ಸಂತುಷ್ಟಗೊಳಿಸಿದನು. ಆನಂದಿತ ತಾಯಿ ಕೌಸಲ್ಯೆಯು ಆ ನರರ್ಷಭ ಅಪ್ರತಿಮ ತೇಜಸ್ವಿಯನ್ನು ಪೌಲೋಮಿಯು ಜಯಂತನನ್ನು ಹೇಗೋ ಹಾಗೆ ಆಲಂಗಿಸಿದಳು. ಆ ವೀರ ವಿಕ್ರಾಂತನು ಗೆದ್ದು ಬಂದಿದ್ದ ಧನದಿಂದ ಧೃತರಾಷ್ಟ್ರನು ನೂರು ಸಾವಿರ ದಕ್ಷಿಣೆಗಳನ್ನೊಡಗೂಡಿದ, ನೂರು ಅಶ್ವಮೇಧ ಯಜ್ಞಗಳಿಗೆ ಸರಿಸಾಟಿ ಮಹಾ ಯಜ್ಞಗಳನ್ನು ನೆರವೇರಿಸಿದನು. ಬಿಡುವಿನ ವೇಳೆಯನ್ನು ಗಳಿಸಿದ್ದ ಭರತರ್ಷಭ ಪಾಂಡುವು ಕುಂತಿ ಮತ್ತು ಮಾದ್ರಿಗಳ ಜೊತೆ ವನವಿಹಾರಕ್ಕೆಂದು ಹೋದನು. ಬೇಟೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಅವನು ಅರಮನೆ ಮತ್ತು ಸುಂದರ ಶಯನಗಳನ್ನು ಪರಿತ್ಯಜಿಸಿ, ಅರಣ್ಯದಲ್ಲಿಯೇ ವಾಸಿಸಿ ನಿತ್ಯವೂ ಬೇಟೆಯಾಡುತ್ತಿದ್ದನು. ಅವನು ರಮ್ಯ ಹಿಮಾಲಯ ಗಿರಿಯ ದಕ್ಷಿಣ ಇಳುಕಲಿನಲ್ಲಿ, ಗಿರಿಪೃಷ್ಟಗಳಲ್ಲಿ, ಮಹಾಶಾಲಗಳ ವನಗಳಲ್ಲಿ ವಾಸಿಸತೊಡಗಿದನು. ಆ ವನದಲ್ಲಿ ಕುಂತಿ ಮತ್ತು ಮಾದ್ರಿಗಳೊಡನೆ ವಾಸಿಸುತ್ತಿದ್ದ ಪಾಂಡುವು ಎರಡು ಹೆಣ್ಣಾನೆಗಳ ಮದ್ಯೆ ಇರುವ ಶ್ರೀಮಾನ್ ಗಜೇಂದ್ರನಂತೆ ರಂಜಿಸಿದನು. ಬಾಣಖಡ್ಗಧನುರ್ಧರನಾಗಿ, ವಿಚಿತ್ರಕವಚಧಾರಿಯಾಗಿ ದೇವನಂತೆ ತನ್ನ ಪತ್ನಿಯರೊಂದಿಗೆ ಚಲಿಸುತ್ತಿರುವ ಆ ವೀರ, ಪರಮಾಸ್ತ್ರಕೋವಿದ ನೃಪ ಭಾರತನನ್ನು ವನವಾಸಿಗಳು ಕಂಡರು. ಅವನ ಕಾಮ-ಭೋಗಗಳಿಗೆ ಬೇಕಾದುದೆಲ್ಲವನ್ನೂ, ಧೃತರಾಷ್ಟ್ರನ ಹೇಳಿಕೆಯಂತೆ, ಸ್ವಲ್ಪವೂ ಆಯಾಸ ಹೊಂದದ ಜನರು ನಿತ್ಯವೂ ಆ ವನಪ್ರದೇಶಕ್ಕೆ ತಂದು ಕೊಡುತ್ತಿದ್ದರು. ಆಗ ಆಪಗಸುತ ಭೀಷ್ಮನು ಮಹೀಪತಿ ದೇವಕನಿಗೆ ಬೇರೆಯವಳಲ್ಲಿ ಹುಟ್ಟಿದ್ದ ರೂಪಯೌವನಸಂಪನ್ನ ಕನ್ಯೆಯ ಕುರಿತು ಕೇಳಿದನು. ಆ ಪುರುಷರ್ಷಭನು ಅವಳನ್ನು ವರಿಸಿ ಕರೆದುಕೊಂಡು ಬಂದು ಮಹಾಮತಿ ವಿದುರನಿಗೆ ವಿವಾಹ ಮಾಡಿಸಿದನು. ಕುರುನಂದನ ವಿದುರನು ಅವಳಲ್ಲಿ, ಗುಣಗಳಲ್ಲಿ ತನ್ನ ಹಾಗೆಯೇ ಇದ್ದ, ವಿನಯಸಂಪನ್ನ ಪುತ್ರರಿಗೆ ಜನ್ಮವಿತ್ತನು.
Superab
Thank you