ಶಂತನು-ಗಂಗೆ-ಭೀಷ್ಮ-ಸತ್ಯವತಿ
ವಸು ಉಪರಿಚರ
ಒಂದು ಕಾಲದಲ್ಲಿ ಬೇಟೆಯಾಡುವುದರಲ್ಲಿ ಆಸಕ್ತಿಯನ್ನಿಟ್ಟಿದ್ದ ಧರ್ಮನಿತ್ಯ, ಸತ್ಯವ್ರತ, ಮಹೀಪತಿ, ಉಪರಿಚರ ಎಂಬ ಹೆಸರಿನ ರಾಜನಿದ್ದನು. ಆ ಪೌರವನಂದನ ಮಹೀಪತಿಯು ಇಂದ್ರನ ಉಪದೇಶದಂತೆ ರಮ್ಯ ಸಂಪದ್ಭರಿತ ಚೇದಿರಾಜ್ಯವನ್ನು ತನ್ನದಾಗಿಸಿಕೊಂಡನು. ಶಸ್ತ್ರಗಳನ್ನು ಪರಿತ್ಯಜಿಸಿ ಆಶ್ರಮದಲ್ಲಿ ವಾಸಿಸುತ್ತಾ ತಪೋನಿರತನಾಗಿರಲು ಆ ಮಹೀಪತಿಯ ಬಳಿ ಸಾಕ್ಷಾತ್ ದೇವ ವಜ್ರಿಯೇ ಸ್ವಯಂ ಬಂದನು. ತನ್ನ ತಪಸ್ಸಿನ ಮೂಲಕ ರಾಜನು ಇಂದ್ರತ್ವಕ್ಕೆ ಅರ್ಹನಾಗಬಲ್ಲನೆಂದು ಚಿಂತಿಸಿ ಅವನು ನೃಪನಿಗೆ ತಪಸ್ಸನ್ನು ತೊರೆಯಲು ಸಲಹೆಯನ್ನಿತ್ತನು:
“ಪೃಥ್ವೀಪತೇ! ಪೃಥ್ವಿಯಲ್ಲಿ ಧರ್ಮ ಸಂಕರವು ನಡೆಯದಿರಲಿ. ಧರ್ಮವನ್ನು ರಕ್ಷಿಸು, ಯಾಕೆಂದರೆ ಧೃತ ಧರ್ಮವು ಇಡೀ ಜಗತ್ತನ್ನೇ ಎತ್ತಿ ಹಿಡಿಯುತ್ತದೆ. ನಿತ್ಯಯುಕ್ತನೂ ಸಮಾಹಿತನೂ ಆಗಿ ಲೋಕಧರ್ಮವನ್ನು ಪಾಲಿಸು. ಧರ್ಮಯುಕ್ತನಾಗಿದ್ದರೆ ಲೋಕಗಳಲ್ಲಿ ಶಾಶ್ವತ ಪುಣ್ಯಗಳನ್ನು ಸಂಪಾದಿಸುವೆ. ನಾನು ದಿವಿ ಮತ್ತು ನೀನು ಭುವಿಗೆ ಸೇರಿದ್ದರೂ ನೀನು ನನ್ನ ಪ್ರಿಯ ಸಖನಾಗಿರು. ಪೃಥ್ವಿಯಲ್ಲಿ ಪಶುಭರಿತ, ಪುಣ್ಯ, ಸುಸ್ಥಿರ, ಧನಧಾನ್ಯಗಳಿಂದ ತುಂಬಿದ, ಸುರಕ್ಷ, ಸೌಮ್ಯ, ಸುಗುಣಗಳನ್ನು ಹೊಂದಿದ್ದ ಭೋಗ್ಯಭೂಮಿಯನ್ನು ನಿನ್ನ ದೇಶವನ್ನಾಗಿಸಿ ಆಳು. ಈ ವಸುಧೆಯಲ್ಲಿ ಚೇದಿಯೇ ಧನರತ್ನಭರಿತ, ಸಂಪೂರ್ಣ ಸಂಪತ್ತನ್ನು ಹೊಂದಿದ ದೇಶ. ಅಲ್ಲಿ ವಾಸಿಸು. ನಾಗರಿಕರೆಲ್ಲ ಧರ್ಮಶೀಲರೂ, ಸುಸಂತುಷ್ಠರೂ, ಸಾಧುಗಳೂ ಇದ್ದು ಅಲ್ಲಿ ನಿಜವಾಗಿ ಬಿಡು, ಚೇಷ್ಟೆಗೂ ಕೂಡ ಸುಳ್ಳನ್ನಾಡುವುದಿಲ್ಲ. ಅಲ್ಲಿಯ ಜನರು ಗುರುಹಿತರತರಾಗಿರುತ್ತಾರೆ, ತಂದೆಯಿಂದ ಬೇರೆಯಾಗುವುದಿಲ್ಲ. ನೇಗಿಲಿಗೆ ಅಥವಾ ಬಂಡಿಗಳಿಗೆ ಹಸುಗಳನ್ನು ಕಟ್ಟುವುದಿಲ್ಲ, ಮತ್ತು ಬಡಕಲು ಗೋವುಗಳೂ ಕೂಡ ಸಮೃದ್ಧ ಹಾಲನ್ನು ಕೊಡುತ್ತವೆ. ಚೇದಿಯಲ್ಲಿ ಸರ್ವ ವರ್ಣದವರೂ ಸದಾ ಸ್ವಧರ್ಮ ನಿರತರಾಗಿದ್ದಾರೆ. ಈ ಮೂರೂ ಲೋಕಗಳಲ್ಲಿ ನಿನಗೆ ತಿಳಿಯದೇ ಇರುವಂಥಹದು ಯಾವುದೂ ನಡೆಯುವುದಿಲ್ಲ. ದೇವೋಪಭೋಗ್ಯ ದಿವ್ಯ, ಆಕಾಶದಲ್ಲಿರುವ ಮಹಾ ಸ್ಫಟಿಕದ ಈ ಆಕಾಶಗ ವಿಮಾನವನ್ನು ನಿನಗೆ ನಾನು ಉಡುಗೊರೆಯಾಗಿ ಕೊಡುತ್ತಿದ್ದೇನೆ. ಸರ್ವ ಮರ್ತ್ಯರಲ್ಲಿ ನೀನೊಬ್ಬನೇ ವಿಮಾನದಲ್ಲಿ ಕುಳಿತು ದೇವ ವಿಗ್ರಹನಂತೆ ಸಂಚರಿಸಬಲ್ಲವನಾಗುತ್ತೀಯೆ. ಬಾಡದೇ ಇರುವ ಕಮಲಗಳಿಂದ ರಚಿಸಿದ ಈ ವೈಜಯಂತಿ ಮಾಲೆಯನ್ನು ಕೊಡುತ್ತಿದ್ದೇನೆ. ಇದನ್ನು ಧರಿಸಿದರೆ ಸಂಗ್ರಾಮದಲ್ಲಿ ನಿನಗೆ ಶಸ್ತ್ರಗಳಿಂದ ರಕ್ಷಣೆ ದೊರೆಯುತ್ತದೆ. ಇಂದ್ರಮಾಲಾ ಎಂದು ವಿಖ್ಯಾತ ಈ ಧನ್ಯ, ಅಪ್ರತಿಮ ಮಹತ್ತರ ಮಾಲೆಯು ನಿನಗೆ ದೇವತೆಗಳಿತ್ತ ಗುರುತಾಗಿರುತ್ತದೆ.”
ವೃತ್ರನಿಶೂದನನು ಅವನಿಗೆ ಇಷ್ಟಪ್ರದಾನ ಮತ್ತು ಶಿಷ್ಟ ಪರಿಪಾಲನೆಗೋಸ್ಕರ ಒಂದು ಬಿದುರಿನ ಕಂಬವನ್ನೂ ಕೊಟ್ಟನು. ಒಂದು ಸಂವತ್ಸರವು ಕಳೆದ ನಂತರ ಭೂಮಿಪತಿಯು ಶಕ್ರನ ಪೂಜಾರ್ಥವಾಗಿ ಅದನ್ನು ಭೂಮಿಯಲ್ಲಿ ಹುಗಿಸಿದನು. ಅಂದಿನಿಂದ ಯಾವೆಲ್ಲ ಕ್ಷಿತಿಪತಿಸತ್ತಮರಾದರೋ ಅವರೆಲ್ಲರೂ ಅವನು ಮಾಡಿದ ರೀತಿಯಲ್ಲಿ ಬಿದಿರಿನ ಕಂಬವನ್ನು ಭೂಮಿಯಲ್ಲಿ ಹುಗಿಯುತ್ತಿದ್ದರು. ನಂತರ ನೃಪನು ಅದನ್ನು ನೇರವಾಗಿ ನಿಲ್ಲಿಸಿ ಅದನ್ನು ಪಿಟಕ, ಗಂಧ ಮತ್ತು ಮಾಲೆ ಭೂಷಣಗಳಿಂದ ಅಲಂಕರಿಸಿ ಮಾಲೆಗಳಿಂದ ಸುತ್ತಿ ವಿಧಿವತ್ತಾಗಿ ಪೂಜಿಸುತ್ತಿದ್ದರು. ಈ ರೀತಿ ಪೂಜಿಸಿಕೊಂಡ ಭಗವಾನ್ ಶಂಕರನು ಸ್ವಯಂ ತಾನೇ ಹಂಸರೂಪದಲ್ಲಿ ಬಂದು ಮಹಾತ್ಮ ವಸುವಿನ ಪೂಜೆಯನ್ನು ಸ್ವೀಕರಿಸಿದನು. ವಿಭು ಮಹೇಂದ್ರನಾದರೋ ಈ ಮಂಗಳಕರ ಪೂಜೆಯನ್ನು ನೋಡಿ ಸಂತೃಪ್ತನಾಗಿ ರಾಜಮುಖ್ಯ ವಸುವಿಗೆ ಹೇಳಿದನು:
“ಚೇದಿಪತಿ ನೃಪನ ಹಾಗೆ ಸಂತಸದಿಂದ ಯಾವ ನರ ಅಥವಾ ರಾಜನು ನನ್ನ ಈ ಮಹಾ ಪೂಜೆಯನ್ನು ಮಾಡುತ್ತಾನೋ ಅವನಿಗೆ ಸಂಪತ್ತು, ವಿಜಯ ಮತ್ತು ರಾಜ್ಯಗಳು ದೊರೆಯುತ್ತವೆ. ಅವನ ಜನಪದವೂ ವಿಸ್ತಾರಗೊಳ್ಳುತ್ತದೆ ಮತ್ತು ಸದಾ ಸಂತಸದಲ್ಲಿರುತ್ತದೆ.”
ಈ ರೀತಿ ನರಾಧಿಪ ಮಹಾರಾಜ ವಸುವು ಸಂಪ್ರೀತ ಮಹಾತ್ಮ ಮಹೇಂದ್ರ ಮಘವತನಿಂದ ಹರಸಲ್ಪಟ್ಟನು. ಯಾವ ಮಾನವರು ಸದಾ ಭೂಮಿದಾನ ಮತ್ತು ಇತರ ದಾನಗಳೊಂದಿಗೆ ಈ ಶಕ್ರನ ಉತ್ಸವವನ್ನು ನಡೆಸುತ್ತಾರೋ ಅವರು ಪವಿತ್ರರಾಗುತ್ತಾರೆ. ವರದಾನ ಮಹಾಯಜ್ಞಗಳೊಡಗೂಡಿದ ಈ ಶಕ್ರೋತ್ಸವದಿಂದ ಅವರು ಚೇದಿಪತಿ ವಸುವಿನಂತೆ ಮಘವತನಿಂದ ಸಂಪೂಜಿತರಾಗುತ್ತಾರೆ. ಭೂಮಿಪತಿ ವಸುವು ಚೇದಿಯಲ್ಲಿದ್ದುಕೊಂಡು ಇಡೀ ಪೃಥ್ವಿಯನ್ನು ಧರ್ಮದಿಂದ ಪಾಲಿಸಿದನು ಮತ್ತು ಇಂದ್ರನ ಪ್ರೀತಿಗೋಸ್ಕರ ಇಂದ್ರಮಹವನ್ನು ರಚಿಸಿದನು.
ಅವನಿಗೆ ಐದು ಅಮಿತೌಜಸ ಮಹಾವೀರ್ಯವಂತ ಪುತ್ರರಾದರು ಮತ್ತು ತನ್ನ ಮಕ್ಕಳನ್ನು ನಾನಾ ರಾಜ್ಯಗಳಲ್ಲಿ ಸಾಮ್ರಾಟರನ್ನಾಗಿ ನಿಯೋಜಿಸಿದನು. ಮಹಾರಥಿಯೆಂದು ವಿಶ್ರುತ ಮಗಧರಾಜ ಬೃಹದ್ರಥ, ಪ್ರತ್ಯಗ್ರಹ, ಮಣಿವಾಹನನೆಂದೂ ಕರೆಯಲ್ಪಟ್ಟ ಕುಶಾಂಬ, ಮಚ್ಛಿಲ ಮತ್ತು ಯದು - ಎಲ್ಲರೂ ಅಪರಾಜಿತ ರಾಜರುಗಳು. ಭೂರಿತೇಜಸ ರಾಜರ್ಷಿ ರಾಜನ ಈ ಮಕ್ಕಳು ತಮ್ಮ ಹೆಸರುಗಳನ್ನೇ ಹೊಂದಿದ ದೇಶ ಮತ್ತು ಪುರಗಳನ್ನು ಸ್ಥಾಪಿಸಿದರು; ಈ ಐದು ವಾಸವ ರಾಜರು ಮುಂದೆ ತಮ್ಮ ಶಾಶ್ವತ ವಂಶಗಳನ್ನು ಸ್ಥಾಪಿಸಿದರು. ಇಂದ್ರನು ನೀಡಿದ ಸ್ಪಟಿಕ ವಿಮಾನದಲ್ಲಿ ಆಕಾಶದಲ್ಲಿ ಹೋಗುತ್ತಿರುವಾಗ ಮಹಾತ್ಮ ನೃಪ ವಸುವನ್ನು ಗಂಧರ್ವ ಅಪ್ಸರೆಯರು ಉಪಚರಿಸುತ್ತಿದ್ದರು. ಆದುದರಿಂದ ಅವನಿಗೆ ರಾಜ ಉಪರಿಚರ ಎಂಬ ಹೆಸರು ಬಂದಿತು.
ಒಮ್ಮೆ ಪುರದ ಬಳಿಯಲ್ಲಿ ಹರಿಯುತ್ತಿದ್ದ ಶುಕ್ತಿಮತಿ ನದಿಯನ್ನು ಕೋಲಾಹಲವೆಂಬ ಕಾಮಪೀಡಿತ ಗಿರಿಯು ಬಲತ್ಕಾರಮಾಡಿತು. ಆಗ ವಸುವು ಕೋಲಾಹಲ ಪರ್ವತವನ್ನು ತನ್ನ ಕಾಲಿನಿಂದ ಒದ್ದಾಗ ಅವನ ಈ ಒದೆತದಿಂದ ಉಂಟಾದ ಕಣಿವೆಯಲ್ಲಿ ನದಿಯು ಹರಿಯಲು ಪ್ರಾರಂಭಿಸಿತು. ಸ್ವಯಂ ಪರ್ವತನೊಂದಿಗೆ ಕೂಡಿದ ನದಿಯಲ್ಲಿ ಅವಳಿ ಮಕ್ಕಳು ಜನಿಸಿದರು; ಮತ್ತು ತನಗೆ ಮೋಕ್ಷವನ್ನು ನೀಡಿದ ರಾಜನಿಗೆ ನದಿಯು ಅವರನ್ನು ಸಂತೋಷದಿಂದ ರಾಜನಿಗೆ ಕೊಟ್ಟಳು. ಅವರಲ್ಲಿ ಓರ್ವನು ಹುಡುಗನಾಗಿದ್ದನು. ಆ ಅರಿಂದಮನನ್ನು ರಾಜರ್ಷಿಸತ್ತಮ ವಸುವು ತನ್ನ ಸೇನಾಪತಿಯನಾಗಿ ನಿಯುಕ್ತಿಸಿ ಕೊಂಡನು. ಮಗಳು ಗಿರಿಕೆಯನ್ನು ನೃಪನು ತನ್ನ ಪತ್ನಿಯನ್ನಾಗಿ ಮಾಡಿಕೊಂಡನು. ಒಮ್ಮೆ ವಸುವಿನ ಪತ್ನಿ ಗಿರಿಕೆಯು ತಾನು ಕಾಮಕಾಲದಲ್ಲಿದ್ದೇನೆಂದು ತಿಳಿಸಿ ಋತುಕಾಲವನ್ನು ಮುಗಿಸಿ ಸ್ನಾನಮಾಡಿ ಶುಚಿರ್ಭೂತಳಾಗಿ ಪುಂಸವನಳಾದಳು. ಆದರೆ ಅದೇ ದಿವಸ ಅವನ ಪ್ರೀತ ಪಿತೃಗಳು ಮತಿವಂತರಲ್ಲಿ ಶ್ರೇಷ್ಠ ಆ ರಾಜಸತ್ತಮನಿಗೆ “ಜಿಂಕೆಯನ್ನು ಹೊಡೆದು ತಾ!” ಎಂದರು. ತನ್ನ ಪಿತೃಗಳ ನಿಯೋಗವನ್ನು ಅತಿಕ್ರಮಿಸಲಾಗದೆ ಆ ಪಾರ್ಥಿವನು ಕಾಮದಲ್ಲಿದ್ದ ಸಾಕ್ಷಾತ್ ಶ್ರೀಯನ್ನು ಮೀರಿದ ಅತೀವ ರೂಪಸಂಪನ್ನ ಗರಿಕೆಯನ್ನೇ ನೆನೆಯುತ್ತಾ ಜಿಂಕೆಯನ್ನು ಬೇಟೆಯಾಡಲು ಹೋದನು. ಆ ಸುಂದರ ವನದಲ್ಲಿ ತಿರುಗುತ್ತಿರುವಾಗ ಅವನ ವೀರ್ಯ ಸ್ಖಲನವಾಯಿತು. ಸ್ಖಲನವಾದ ಕೂಡಲೇ ಭೂಮಿಪನು ಆ ವೀರ್ಯವನ್ನು ಒಂದು ಮರದ ಎಲೆಯಲ್ಲಿ ಹಿಡಿದನು. ಹಿಡಿದು
“ನನ್ನ ಈ ಸ್ಖಲಿತ ವೀರ್ಯವು ಹಾಳಾಗಬಾರದು ಮತ್ತು ನನ್ನ ಪತ್ನಿಯ ಋತುಕಾಲವೂ ವ್ಯರ್ಥವಾಗಬಾರದು”
ಎಂದು ಪ್ರಭುವು ಯೋಚಿಸಿದನು. ಈ ಯೋಚನೆ ಬಂದಕೂಡಲೇ ರಾಜನು ಪುನಃ ಪುನಃ ವಿಚಾರಮಾಡಿದನು. ರಾಜಸತ್ತಮನು ವೀರ್ಯವು ಬೀಳುವ ವೇಳೆಯಲ್ಲಿ ರಾಣಿಯು ಋತುಮತಿಯಾಗಿದ್ದಾಳೆ ಎಂದು ತಿಳಿದು ತನ್ನ ವೀರ್ಯವು ನಷ್ಟವಾಗಕೂಡದೆಂದು ನಿಶ್ಚಯಿಸಿದನು. ಧರ್ಮಾರ್ಥಗಳ ಸೂಕ್ಷ್ಮತೆಯನ್ನು ತಿಳಿದಿದ್ದ ಅವನು ವೀರ್ಯವನ್ನು ಅಭಿಮಂತ್ರಿಸಿ ಹತ್ತಿರದಲ್ಲಿಯೇ ಕುಳಿತಿದ್ದ ಒಂದು ವೇಗವಾಹಿನಿ ಗಿಡುಗವನ್ನುದ್ದೇಶಿಸಿ ಹೇಳಿದನು:
“ಸೌಮ್ಯ! ನನ್ನ ಪ್ರಿಯೆಯ ಸಲುವಾಗಿ ಈ ವೀರ್ಯವನ್ನು ತೆಗೆದುಕೊಂಡು ನನ್ನ ಮನೆಗೆ ಹೋಗಿ ಗಿರಿಕೆಗೆ ಕೊಡು. ಇಂದು ಅವಳು ಋತುಮತಿಯಾಗಿದ್ದಾಳೆ.”
ಗಿಡುಗವು ಅದನ್ನು ಹಿಡಿದು ತಕ್ಷಣವೇ ಮೇಲೆ ಹಾರಿತು. ಆ ಪಕ್ಷಿಯು ತಕ್ಷಣವೇ ಅತ್ಯಂತ ವೇಗದಲ್ಲಿ ಹಾರತೊಡಗಿತು. ಬರುತ್ತಿದ್ದ ಗಿಡುಗವನ್ನು ಇನ್ನೊಂದು ಗಿಡುಗವು ನೋಡಿ, ನೋಡಿದಾಕ್ಷಣವೇ, ಅದು ಹಿಡಿದಿದ್ದುದು ಮಾಂಸದ ತುಂಡೆಂದು ಶಂಕಿಸಿ ಅದನ್ನು ಬೆನ್ನಟ್ಟಿತು ಮತ್ತು ಅವೆರಡೂ ಆಕಾಶದಲ್ಲಿ ಕಿತ್ತಾಡ ತೊಡಗಿದವು. ಹೀಗೆ ಕಿತ್ತಾಡುತ್ತಿರುವಾಗ ಆ ವೀರ್ಯವು ಯಮುನಾ ನದಿಯಲ್ಲಿ ಬಿದ್ದಿತು. ಅಲ್ಲಿ ಆದ್ರಿಕ ಎಂಬ ವಿಖ್ಯಾತ ಅಪ್ಸರ ಶ್ರೇಷ್ಠಳು ಬ್ರಹ್ಮಶಾಪದಿಂದಾಗಿ ಮೀನಿನ ರೂಪವನ್ನು ಹೊಂದಿ ಯಮುನೆಯಲ್ಲಿ ಈಸುತ್ತಿದ್ದಳು. ಗಿಡುಗನ ಕಾಲಿನಿಂದ ಬಿದ್ದ ವಾಸವನ ವೀರ್ಯವನ್ನು ತಕ್ಷಣವೇ ಮತ್ಸ್ಯರೂಪಿಣಿಯಾಗಿ ಈಸುತ್ತಿದ್ದ ಆದ್ರಿಕೆಯು ನುಂಗಿದಳು. ಹತ್ತು ತಿಂಗಳುಗಳು ಕಳೆದ ನಂತರ ಒಮ್ಮೆ ಬೆಸ್ತರು ಆ ಮತ್ಸ್ಯೆಯನ್ನು ಹಿಡಿದರು, ಮತ್ತು ಅದರ ಹೊಟ್ಟೆಯಲ್ಲಿ ಒಂದು ಹೆಣ್ಣು ಮತ್ತು ಗಂಡು ಅವಳಿ ನರರನ್ನು ಕಂಡರು. ಆಶ್ಚರ್ಯಗೊಂಡ ಅವರು ರಾಜನಲ್ಲಿಗೆ ಹೋಗಿ ನಿವೇದಿಸಿದರು:
“ರಾಜನ್! ಈ ಮನುಷ್ಯ ಅವಳಿಗಳು ಮತ್ಸ್ಯೆಯ ದೇಹದಿಂದ ಜನಿಸಿದರು.”
ಅವರೀರ್ವರಲ್ಲಿ ಗಂಡುಮಗುವನ್ನು ರಾಜ ಉಪರಿಚರನು ತೆಗೆದುಕೊಂಡನು, ಮತ್ತು ಅವನು ಧಾರ್ಮಿಕ ಸತ್ಯಸಂಗರ ಮತ್ಸ್ಯ ಎಂಬ ಹೆಸರಿನ ರಾಜನಾದನು.
“ಶುಭೇ! ನೀನು ಪ್ರಾಣಿಯೋನಿಯಲ್ಲಿರುವಾಗ ನೀನು ಈರ್ವರು ನರಪುತ್ರರಿಗೆ ಜನ್ಮವಿತ್ತಾಗ ಶಾಪದಿಂದ ವಿಮುಕ್ತಳಾಗುತ್ತೀಯೆ!”
ಎಂದು ಹಿಂದೆ ಭಗವಂತನು ಹೇಳಿದ ಹಾಗೆಯೇ ಆ ಅಪ್ಸರೆಯು ಕ್ಷಣದಲ್ಲಿಯೇ ಶಾಪ ವಿಮುಕ್ತಳಾದಳು. ಅವರೀರ್ವರಿಗೆ ಜನ್ಮವಿತ್ತು ಬೆಸ್ತರಿಂದ ಕೊಲ್ಲಲ್ಪಟ್ಟ ಆ ಅಪ್ಸರ ಶ್ರೇಷ್ಠೆಯು ಮತ್ಸ್ಯರೂಪವನ್ನು ತ್ಯಜಿಸಿ ತನ್ನ ದಿವ್ಯ ರೂಪವನ್ನು ಹೊಂದಿ ಸಿದ್ಧ ಋಷಿ ಚರಣರ ದಾರಿಯಲ್ಲಿ ಹೊರಟು ಹೋದಳು. ಮೀನಿನ ವಾಸನೆಯನ್ನು ಹೊಂದಿದ್ದ ಆ ಮೀನಿನ ಮಗಳು ರೂಪಸತ್ವ ಸಮಾಯುಕ್ತಳಾಗಿದ್ದಳು. ಸರ್ವ ಸುಮದಿತ ಗುಣಗಳಿಂದ ಕೂಡಿದ ಆ ಕನ್ಯೆಯನ್ನು ರಾಜನು ದಾಶನಿಗೆ “ಇವಳು ನಿನ್ನ ಮಗಳಾಗಿರಲಿ!” ಎಂದು ಕೊಟ್ಟನು. ಸತ್ಯವತೀ ಎಂಬ ಹೆಸರಿನ ಆ ಶುಚಿಸ್ಮಿತೆಯು ಬೆಸ್ತರೊಂದಿಗೆ ವಾಸಿಸುತ್ತಿದ್ದುದರಿಂದ ಕೆಲವು ಕಾಲದವರೆಗೆ ಮೀನಿನ ವಾಸನೆಯನ್ನು ಹೊಂದಿದ್ದಳು. ತಂದೆಯ ಶುಶ್ರೂಷೆ ಮಾಡಲೋಸುಗ ನದಿಯಲ್ಲಿ ದೋಣಿಯನ್ನು ನಡೆಸುತ್ತಿದ್ದ ಅವಳನ್ನು ಒಮ್ಮೆ ತೀರ್ಥಯಾತ್ರೆ ಮಾಡುತ್ತಾ ತಿರುಗುತ್ತಿದ್ದ ಪರಾಶರನು ನೋಡಿದನು. ಸಿದ್ಧರ ಮನವನ್ನೂ ಸೆಳೆಯುವ ಆ ಅತೀವ ರೂಪಸಂಪನ್ನೆಯನ್ನು ನೋಡಿದ ಆ ಧೀಮಂತ ವಿದ್ವಾಂಸ ಮುನಿಪುಂಗವನು ಅವಳ ಸೌಂದರ್ಯವನ್ನು ಬಯಸಿ ವಾಸವಿ ಕನ್ಯೆಯೊಡನೆ ಕಾರ್ಯನಿರತನಾದನು. ಅವಳು ಹೇಳಿದಳು:
“ಭಗವನ್! ನೋಡು! ದಂಡೆಗಳಲ್ಲಿ ಋಷಿಗಳು ನಿಂತಿದ್ದಾರೆ. ಅವರು ನಮ್ಮನ್ನು ನೋಡುತ್ತಿದ್ದಂತೆ ನಾವು ಹೇಗೆ ಪರಸ್ಪರ ಸಮಾಗಮ ಹೊಂದೋಣ?”
ಇದನ್ನು ಕೇಳಿದ ಭಗವಾನ್ ಪ್ರಭುವು ಆ ಸ್ಥಳವನ್ನು ಕತ್ತಲೆ ಕವಿಯುವಂತೆ ಮಂಜನ್ನು ನಿರ್ಮಿಸಿದನು. ಪರಮಋಷಿಯು ತಕ್ಷಣವೇ ಸೃಷ್ಟಿಸಿದ ಕತ್ತಲೆಯ ಆವರಣವನ್ನು ಕಂಡು ವಿಸ್ಮಿತ ಮನಸ್ವಿನಿಯು ನಾಚುತ್ತಾ ಹೇಳಿದಳು:
“ಭಗವನ್! ಸದಾ ಪಿತೃವಶದಲ್ಲಿದ್ದು ಅವನನ್ನೇ ಅನುಸರಿಸುತ್ತಿರುವ ಕನ್ಯೆಯೆಂದು ನನ್ನನ್ನು ತಿಳಿ. ನಿನ್ನೊಡನೆ ಸೇರುವುದರಿಂದ ನನ್ನ ಕನ್ಯಾಭಾವದಲ್ಲಿ ದೋಷವುಂಟಾಗುವುದಲ್ಲವೇ? ಕನ್ಯತ್ವ ದೂಷಿತ ನಾನು ಹೇಗೆ ಮನೆಗೆ ಹಿಂದಿರುಗಲಿ? ಆಗ ನಾನು ಮನೆಯಲ್ಲಿ ವಾಸಿಸಲು ಉತ್ಸುಕಳಾಗುವುದಿಲ್ಲ. ಇವೆಲ್ಲವನ್ನೂ ಯೋಚಿಸಿ, ನಂತರ ನಿನಗೆ ತಿಳಿದದ್ದನ್ನು ಮಾಡು.”
ಹೀಗೆ ಹೇಳಿದ ಅವಳಲ್ಲಿ ಬಹಳ ಸಂತಸಗೊಂಡ ಆ ಋಷಿಸತ್ತಮನು
“ನನ್ನ ಪ್ರಿಯ ಕಾರ್ಯವನ್ನು ಮಾಡಿದ ನಂತರವೂ ನೀನು ಕನ್ಯೆಯಾಗಿಯೇ ಉಳಿಯುವೆ”
ಎಂದನು.
“ಭಾಮಿನಿ! ನಿನಗಿಷ್ಟವಾದ ವರವನ್ನು ಕೇಳು. ನನ್ನ ಪ್ರಸಾದವು ಈ ಹಿಂದೆ ಎಂದೂ ವೃಥವಾಗಿಲ್ಲ.”
ಇದನ್ನು ಕೇಳಿದ ಅವಳು ತನ್ನ ದೇಹವು ಉತ್ತಮ ಸುಗಂಧವನ್ನು ಹೊಂದಲಿ ಎಂದು ವರವನ್ನು ಕೇಳಲು ಅವಳ ಮನಸ್ಸಿನ ಆಕಾಂಕ್ಷೆಯನ್ನು ಭಗವಾನ್ ಪ್ರಭುವು ನೀಡಿದನು. ಈ ವರವನ್ನು ಪಡೆದು ಪ್ರೀತಳಾದ ಅವಳು ಸ್ತ್ರೀಭಾವಗುಣ ಭೂಷಿತಳಾಗಿ ಆ ಅದ್ಭುತ ಕರ್ಮಣಿ ಋಷಿಯ ಬಳಿ ಸಾಗಿ ಕೂಡಿದಳು. ಅಂದಿನಿಂದ ಅವಳು ಗಂಧವತೀ ಎಂಬ ಹೆಸರಿನಿಂದ ಭುವಿಯಲ್ಲಿ ಪ್ರಥಿತಗೊಂಡಳು. ಭುವಿಯಲ್ಲಿ ನರರಿಗೆ ಅವಳ ಸುಗಂಧವು ಒಂದು ಯೋಜನ ದೂರದಿಂದಲೂ ಸೂಸುವಂತಿತ್ತು. ಆದುದರಿಂದ ಅವಳು ಯೋಜನಗಂಧಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಾಳೆ. ಭಗವಾನ್ ಪರಾಶರನು ತನ್ನ ನಿವೇಶನಕ್ಕೆ ತೆರಳಿದನು.
ಈ ರೀತಿ ಅನುತ್ತಮ ವರವನ್ನು ಪಡೆದ ಸತ್ಯವತಿಯು ಹರ್ಷಿತಳಾದಳು. ಪರಾಶರನನ್ನು ಸೇರಿದ ದಿನವೇ ಅವಳು ಆ ಯಮುನಾ ದ್ವೀಪದಲ್ಲಿ ವೀರ್ಯವಂತ ಪಾರಶರ್ಯನಿಗೆ ಜನ್ಮವಿತ್ತಳು. ತಪಸ್ಸನ್ನೇ ಮನದಲ್ಲಿಟ್ಟುಕೊಂಡಿದ್ದ ಅವನು ತಾಯಿಯ ಎದುರು ನಿಂತು
“ನೀನು ಎಂದು ನನ್ನನ್ನು ನೆನೆದುಕೊಳ್ಳುತ್ತೀಯೋ ಆಗ ನಿನಗೆ ಕಾಣಿಸಿಕೊಳ್ಳುತ್ತೇನೆ ಮತ್ತು ಬೇಕಾದ ಕಾರ್ಯವನ್ನು ನಡೆಸಿಕೊಡುತ್ತೇನೆ”
ಎಂದು ಹೇಳಿದನು. ಈ ರೀತಿ ದ್ವೈಪಾಯನನು ಪರಾಶರನಿಂದ ಸತ್ಯವತಿಯಲ್ಲಿ ಜನಿಸಿದನು. ದ್ವೀಪದಲ್ಲಿ ಅವನ ಜನ್ಮವಾದುದರಿಂದ ಅವನು ದ್ವೈಪಾಯನನಾದನು. ಯುಗಯುಗದಲ್ಲಿಯೂ ಧರ್ಮದ ಒಂದೊಂದು ಕಾಲು ಕುಂಟಾಗುವುದೆಂದೂ ಮತ್ತು ಮನುಷ್ಯರ ಆಯಸ್ಸು ಮತ್ತು ಶಕ್ತಿಯು ಯುಗನಿಯಮಗಳನ್ನು ಅನುಸರಿಸಿದೆ ಎಂದು ತಿಳಿದ ಅವನು ಬ್ರಹ್ಮ ಮತ್ತು ಬ್ರಾಹ್ಮಣರಿಗೆ ಅನುಗ್ರಹಕಾರ್ಯ ಮಾಡಬೇಕೆಂದು ಬಯಸಿ ವೇದಗಳನ್ನು ವಿಂಗಡಿಸಿದನು, ಮತ್ತು ಇದರಿಂದಲೇ ಅವನು ವ್ಯಾಸನೆಂದು ಪ್ರಸಿದ್ಧನಾದನು. ಆ ವರಿಷ್ಠ ವರದ ಪ್ರಭುವು ವೇದಗಳನ್ನು ಮತ್ತು ಐದನೆಯದಾದ ಮಹಾಭಾರತವನ್ನು ಸುಮಂತ, ಜೈಮಿನಿ, ಪೈಲ, ತನ್ನ ಮಗ ಶುಕ ಮತ್ತು ವೈಶಂಪಾಯನನಿಗೆ ಹೇಳಿಕೊಟ್ಟನು. ಇವರು ತಮ್ಮ ತಮ್ಮ ಶೈಲಿಗಳಲ್ಲಿ ಭಾರತವನ್ನು ಪ್ರಕಾಶಿಸಿದರು.
ಮಹಾಭಿಷ
ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ಮಹಾಭಿಷನೆಂದು ಖ್ಯಾತ ಸತ್ಯವಿಕ್ರಮಿ, ಸತ್ಯವಾಕ್ಯ ಪೃಥ್ವೀಪತಿ ರಾಜನಿದ್ದನು. ಸಾವಿರ ಅಶ್ವಮೇಧ ಮತ್ತು ನೂರು ವಾಜಪೇಯಗಳಿಂದ ಪ್ರಭು ದೇವೇಂದ್ರನನ್ನು ತೃಪ್ತಿಗೊಳಿಸಿ ಅವನು ಸ್ವರ್ಗವನ್ನು ಸೇರಿದನು. ಅಲ್ಲಿ ಒಮ್ಮೆ ಸುರರೆಲ್ಲರೂ ಬ್ರಹ್ಮನ ಉಪಾಸನೆಯಲ್ಲಿ ತೊಡಗಿದ್ದಾಗ ಮಹಾಭಿಷನೂ ಕೂಡಿ ರಾಜರ್ಷಿಗಳು ಆಸೀನರಾಗಿದ್ದರು. ಆಗ ನದಿಗಳಲ್ಲೆಲ್ಲ ಶ್ರೇಷ್ಠ ಗಂಗೆಯು ಪಿತಾಮಹನಿಗೆ ಗೌರವಿಸಲು ಬಂದಳು. ಚಂದ್ರನ ಕಾಂತಿಯನ್ನು ಹೊಂದಿದ್ದ ಅವಳ ವಸ್ತ್ರವು ಗಾಳಿಯಲ್ಲಿ ಹಾರಿಹೋಯಿತು. ಅಲ್ಲಿ ನೆರೆದಿದ್ದ ಸುರಗಣವು ತಕ್ಷಣವೇ ಮುಖಗಳನ್ನು ಕೆಳಗೆ ಮಾಡಿತು. ಆದರೆ ರಾಜರ್ಷಿ ಮಹಾಭಿಷನು ನಿಃಶಂಕೆಯಿಂದ ಅವಳನ್ನೇ ನೋಡುತ್ತಿದ್ದನು. ಭಗವಾನ್ ಬ್ರಹ್ಮನು ಮಹಾಭಿಷನನ್ನು ಅವಹೇಳನ ಮಾಡುತ್ತಾ
“ಮರ್ತ್ಯನಾಗಿ ಹುಟ್ಟಿ ಪುನಃ ಲೋಕಗಳನ್ನು ಹೊಂದುತ್ತೀಯೆ!”
ಎಂದನು. ಆ ನೃಪತಿಯು ಎಲ್ಲಾ ರಾಜರು ಮತ್ತು ತಪೋಧನರನ್ನು ಯೋಚಿಸಿ ಭೂರಿವರ್ಚಸ ಪ್ರತೀಪನನ್ನು ತಂದೆಯನ್ನಾಗಿ ಆರಿಸಿಕೊಂಡನು. ಮಹಾಭಿಷನು ಈ ರೀತಿ ಧೈರ್ಯವನ್ನು ಕಳೆದುಕೊಂಡಿದ್ದುದನ್ನು ನೋಡಿ ಸರಿದ್ವರೆ ನದಿಯು ಆ ನೃಪನನ್ನೇ ಮನಸ್ಸಿನಲ್ಲಿ ನೆನೆಯುತ್ತಾ ಹೋದಳು. ಹೋಗುತ್ತಿರುವ ದಾರಿಯಲ್ಲಿ ಅವಳು ತಮ್ಮ ಕಾಂತಿಯನ್ನು ಕಳೆದುಕೊಂಡು ದುಃಖಿಸುತ್ತಿರುವ ದಿವೌಕಸ ವಪುಷ ವಸು ದೇವತೆಗಳನ್ನು ಕಂಡಳು. ಆ ಪರಿಸ್ಥಿತಿಯಲ್ಲಿ ಅವರನ್ನು ನೋಡಿದ ಗಂಗೆಯು ಕೇಳಿದಳು:
“ಹೀಗೇಕೆ ಏನನ್ನೋ ಕಳೆದುಕೊಂಡವರಂತೆ ಕಾಣುತ್ತಿದ್ದೀರಿ? ದಿವೌಕಸರಿಗೆ ಕ್ಷೇಮವಿಲ್ಲವೇ?”
ಆಗ ವಸು ದೇವತೆಗಳು ಹೇಳಿದರು:
“ಮಹಾನದೀ! ನಮ್ಮ ಒಂದು ಸಣ್ಣ ಅಪರಾಧಕ್ಕಾಗಿ ನಾವು ಮಹಾತ್ಮ ವಸಿಷ್ಠನಿಂದ ಶಪ್ತರಾಗಿದ್ದೇವೆ. ನಾವೆಲ್ಲ ವಿಮೂಢರೂ ಸಂಧ್ಯಾವಂದನೆಗೆಂದು ಕುಳಿತಿದ್ದ ಋಷಿಸತ್ತಮ ವಸಿಷ್ಠನನ್ನು ನೋಡದೆಯೇ ಅವನನ್ನು ಉಲ್ಲಂಘಿಸಿದೆವು. ಅದರಿಂದ ಕೋಪಗೊಂಡ ಅವನು ‘ಯೋನಿಯಲ್ಲಿ ಹುಟ್ಟಿರಿ!’ ಎಂದು ಶಾಪವನ್ನಿತ್ತನು. ಬ್ರಹ್ಮವಾದಿಯ ಮಾತನ್ನು ಬದಲಾಯಿಸಲು ಸಾದ್ಯವಿಲ್ಲ. ಆದುದರಿಂದ ನೀನು ಮಾನುಷಿಯಾಗಿ ಭೂಮಿಯಲ್ಲಿ ವಸುಗಳನ್ನು ಪುತ್ರರನ್ನಾಗಿ ಜನಿಸು. ಮಾನುಷಿಯ ಜಠರವನ್ನು ಪ್ರವೇಶಿಸುವುದು ನಮಗೆ ಅಶುಭ.”
“ಹಾಗೆಯೇ ಆಗಲಿ!” ಎಂದು ವಚನವನ್ನಿತ್ತ ಗಂಗೆಯು ಆ ವಸುಗಳನ್ನುದ್ದೇಶಿಸಿ ಹೇಳಿದಳು:
“ಮರ್ತ್ಯರಲ್ಲಿ ಯಾವ ಪುರುಷಶ್ರೇಷ್ಠನು ನಿಮ್ಮ ಕರ್ತನಾಗುತ್ತಾನೆ?”
ವಸುಗಳು ಹೇಳಿದರು:
“ಶಾಂತನು ಎಂಬ ಹೆಸರಿನ ಧಾರ್ಮಿಕ ರಾಜನೊಬ್ಬನು ಪ್ರತೀಪನ ಮಗನಾಗಿ ಮನುಷ್ಯ ಲೋಕದಲ್ಲಿ ಜನ್ಮವೆತ್ತಲಿದ್ದಾನೆ. ಅವನೇ ನಮ್ಮ ಕರ್ತನಾಗುತ್ತಾನೆ.”
ಗಂಗೆಯು ಹೇಳಿದಳು:
“ಮಾನಘ ದೇವತೆಗಳೇ! ನನ್ನ ಮನಸ್ಸಿನಲ್ಲಿಯೂ ನೀವು ಹೇಳಿದ ಮಾತೇ ಇತ್ತು. ಅವನಿಗೆ ಪ್ರಿಯವಾದುದನ್ನು ಮಾಡುವುದರ ಜೊತೆಗೆ ನಿಮ್ಮ ಇಚ್ಛೆಯನ್ನೂ ನೆರವೇರಿಸುತ್ತೇನೆ.”
ವಸುಗಳು ಹೇಳಿದರು:
“ತ್ರಿಲೋಕಸಂಚಾರಿಣೀ! ಈ ನಿಷ್ಕೃತಿಯನ್ನು ದೀರ್ಘಕಾಲ ಅನುಭವಿಸಲು ಅವಕಾಶಕೊಡದ ರೀತಿಯಲ್ಲಿ ಹುಟ್ಟಿದ ಕೂಡಲೇ ಮಕ್ಕಳನ್ನು ನೀರಿನಲ್ಲಿ ಹಾಕಿಬಿಡು.”
ಗಂಗೆಯು ಹೇಳಿದಳು:
“ಹಾಗೆಯೇ ಮಾಡುತ್ತೇನೆ. ಆದರೆ ಪುತ್ರಾಕಾಂಕ್ಷಿಯಾಗಿ ನನ್ನೊಡನೆ ಸೇರುವ ಅವನ ಯತ್ನವು ನಿಷ್ಪಲವಾಗದ ಹಾಗೆ ಅವನಿಗೆ ಒಬ್ಬನಾದರೂ ಮಗನನ್ನು ಕೊಡಬೇಕು.”
ವಸುಗಳು ಹೇಳಿದರು:
“ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ವೀರ್ಯಗಳ ಎಂಟರಲ್ಲಿ ಒಂದು ಅಂಶವನ್ನು ಬಿಟ್ಟುಕೊಡುತ್ತೇವೆ. ಆ ವೀರ್ಯದಿಂದ ನಿನಗೆ ಮತ್ತು ಅವನಿಗೆ ಇಷ್ಟವಾದ ಮಗನು ಜನಿಸುತ್ತಾನೆ. ಆದರೆ ಅವನು ಮರ್ತ್ಯರಲ್ಲಿ ಪುನಃ ಯಾವ ಸಂತತಿಯನ್ನೂ ಪಡೆಯಲಾರ. ಹೀಗೆ ನಿನ್ನ ವೀರ್ಯವಾನ್ ಪುತ್ರನು ಅಪುತ್ರನಾಗಿಯೇ ಇರುತ್ತಾನೆ.”
ಈ ರೀತಿ ಗಂಗೆಯೊಡನೆ ಒಪ್ಪಂದ ಮಾಡಿಕೊಂಡ ವಸುಗಳು ಸಂತುಷ್ಟರಾಗಿ ತಮಗಿಷ್ಟಬಂದಲ್ಲಿ ತೆರಳಿದರು.
ಪ್ರತೀಪ-ಶಂತನು-ಗಂಗೆ
ಸರ್ವಭೂತಹಿತರತ ಪ್ರತೀಪನೆಂಬ ರಾಜನು ಗಂಗಾನದೀತೀರದಲ್ಲಿ ಅಸಾದ್ಯ ವರ್ಷಗಳ ಪರ್ಯಂತ ಜಪಿಸುತ್ತಿದ್ದನು. ಆಗ ಶ್ರೀಯಂತೆ ರೂಪಿಣಿ ಗುಣೋಪೇತ ಗಂಗೆಯು ಅವನ ಮನಸೆಳೆಯುವ ರೂಪವನ್ನು ಧರಿಸಿ ನೀರಿನಿಂದ ಮೇಲೆದ್ದಳು. ಆ ದಿವ್ಯರೂಪಿ ಮನಸ್ವಿನಿ ಶುಭಾನನೆಯು ಅಧ್ಯಯನ ಮಾಡುತ್ತಿದ್ದ ರಾಜರ್ಷಿಯ ಶಾಲದ ರೆಂಬೆಯಂತಿದ್ದ ಬಲ ತೊಡೆಯಮೇಲೆ ಕುಳಿತುಕೊಂಡಳು. ಮಹೀಪಾಲ ಪ್ರತೀಪನು ಆ ಮನಸ್ವಿನಿಯನ್ನುದ್ದೇಶಿಸಿ ಹೇಳಿದನು:
“ಕಲ್ಯಾಣಿ! ನಿನಗಾಗಿ ನಾನು ಏನು ಮಾಡಲಿ? ನಿನ್ನ ಆಕಾಂಕ್ಷೆಯಂತೆ ಯಾವ ಪ್ರಿಯ ಕಾರ್ಯವನ್ನು ಮಾಡಲಿ?”
ಸ್ತ್ರೀಯು ಹೇಳಿದಳು:
“ರಾಜನ್! ನೀನು ನನ್ನನ್ನು ಕಾಮಿಸಬೇಕೆಂಬುದೇ ನನ್ನ ಬಯಕೆ. ಕಾಮವತಿ ಸ್ತ್ರೀಯನ್ನು ತಿರಸ್ಕರಿಸುವುದು ಸರಿಯಲ್ಲ.”
ಪ್ರತೀಪನು ಹೇಳಿದನು:
“ವರವರ್ಣಿನೀ! ನಾನು ಜಾತಿಯವಳಲ್ಲದ ಪರಸ್ತ್ರೀಯನ್ನು ಕಾಮದಲ್ಲಿ ಹೊಂದುವುದಿಲ್ಲ ಎನ್ನುವ ವ್ರತವನ್ನು ಧರ್ಮವಿದಿವತ್ತಾಗಿ ಆಚರಿಸುತ್ತಿದ್ದೇನೆ ಎನ್ನುವುದು ನಿನಗೆ ತಿಳಿದಿಲ್ಲವೇ?”
ಸ್ತ್ರೀಯು ಹೇಳಿದಳು:
“ರಾಜ! ನಾನೇನು ಅಶ್ರೇಯಸ್ಸಳಲ್ಲ. ಹೊಂದಬಾರದಂಥವಳೂ ಅಲ್ಲ. ಅಥವಾ ಕುಪ್ರಸಿದ್ಧಳೂ ಅಲ್ಲ. ವರಸ್ತ್ರೀ ಕನ್ಯೆ ನಾನು ನಿನ್ನನ್ನು ಕಾಮಿಸುವಂತೆ ನೀನೂ ನನ್ನನ್ನು ಕಾಮಿಸು.”
ಪ್ರತೀಪನು ಹೇಳಿದನು:
“ನಿನಗೆ ಪ್ರಿಯವಾದುದನ್ನು ನಾನು ಮಾಡಬೇಕೆಂಬ ಈ ನಿನ್ನ ಒತ್ತಾಯವನ್ನು ನಾನು ನಿರಾಕರಿಸುತ್ತೇನೆ. ಇಲ್ಲವಾದರೆ ಈ ಅಧರ್ಮವು ನನ್ನನ್ನು ನಾಶಮಾಡಿಬಿಡುತ್ತದೆ. ವರಾಂಗನೇ! ನೀನು ನನ್ನ ಬಲ ತೊಡೆಯ ಮೇಲೆ ಕುಳಿತು ನನ್ನನ್ನು ವರಿಸಿದ್ದೀಯೆ. ಈ ಸ್ಥಳವು ಮಕ್ಕಳು ಅಥವಾ ಸೊಸೆಯಂದಿರು ಕುಳಿತುಕೊಳ್ಳುವ ಸ್ಥಳ. ಎಡಗಡೆಯದ್ದು ಕಾಮಿನಿಯ ಜಾಗ. ಆದರೆ ನೀನು ಅದನ್ನು ತಿರಸ್ಕರಿಸಿದ್ದೀಯೆ. ಆದುದರಿಂದ ನಾನು ನಿನ್ನಲ್ಲಿ ಕಾಮಿಯ ಹಾಗೆ ವರ್ತಿಸುವುದಿಲ್ಲ. ನನ್ನ ಸೊಸೆಯಾಗು. ನಿನ್ನನ್ನು ನನ್ನ ಮಗನಿಗೆ ಆರಿಸುವೆ. ನೀನಾದರೂ ಸೊಸೆಯ ಸ್ಥಳವನ್ನೇ ಆರಿಸಿಕೊಂಡಿದ್ದೀಯೆ.”
ಸ್ತ್ರೀಯು ಹೇಳಿದಳು:
“ಧರ್ಮಜ್ಞ! ಹಾಗೆಯೇ ಆಗಲಿ. ನಿನ್ನ ಮಗನನ್ನು ಕೂಡುವೆ. ಆದರೆ ನನಗೆ ನಿನ್ನ ಮೇಲಿರುವ ಪ್ರೀತಿಯಿಂದಾಗಿಯೇ ನಾನು ಪ್ರಖ್ಯಾತ ಭರತಕುಲವನ್ನು ಪ್ರೀತಿಸುತ್ತೇನೆ. ಈ ಪೃಥ್ವಿಯಲ್ಲಿ ಎಷ್ಟು ಮಂದಿ ಪಾರ್ಥಿವರಿದ್ದರೂ ನಿನ್ನ ವಂಶವು ಪರಾಯಣೀಯವಾದದ್ದು. ನಿನ್ನ ಈ ಅನುತ್ತಮ, ಸಾಧು, ಮತ್ತು ಪ್ರಸಿದ್ಧ ಕುಲದ ಗುಣಗಳನ್ನು ಸಾರಲು ನನಗೆ ನೂರು ವರ್ಷಗಳೂ ಸಾಲದು. ನಾನು ಉಚ್ಛ ಜನ್ಮದವಳೆಂದು ಅವನಿಗೆ ಗೊತ್ತಿರಬಾರದು ಮತ್ತು ನಾನು ಮಾಡಿದ ಯಾವ ಕಾರ್ಯವನ್ನೂ ನಿನ್ನ ಮಗನು ಪ್ರಶ್ನಿಸಬಾರದು. ಈ ರೀತಿ ನಿನ್ನ ಪುತ್ರನೊಂದಿಗೆ ವಾಸಿಸುತ್ತಾ ಅವನ ಸಂತಸವನ್ನು ವರ್ಧಿಸುವೆ ಮತ್ತು ಪ್ರಿಯ ಪುತ್ರರ ಪುಣ್ಯಗಳಿಂದ ನಿನ್ನ ಮಗನು ಸ್ವರ್ಗವನ್ನು ಹೊಂದುವನು.”
“ಹಾಗೆಯೇ ಆಗಲಿ” ಎಂದು ರಾಜನು ಹೇಳಿದಾಗ ಅವಳು ಅಂತರ್ಧಾನಳಾದಳು. ಪುತ್ರನ ಜನ್ಮವನ್ನು ಪ್ರತೀಕ್ಷೆ ಮಾಡುತ್ತಾ ರಾಜನು ಆ ವಿಷಯವನ್ನು ನೆನಪಿನಲ್ಲಿಟ್ಟುಕೊಂಡಿದ್ದನು. ಇದೇ ಸಮಯದಲ್ಲಿ ಕ್ಷತ್ರಿಯರ್ಷಭ ಪ್ರತೀಪನು ಪುತ್ರನಿಗೋಸ್ಕರ ಭಾರ್ಯೆಯ ಸಹಿತ ತಪಸ್ಸನ್ನು ಮಾಡುತ್ತಿದ್ದನು. ವೃದ್ಧರಾಗಿದ್ದರೂ ಕೂಡ ಅವರಲ್ಲಿ ಮಹಾಭಿಷನು ಪುತ್ರನಾಗಿ ಜನಿಸಿದನು. ಹುಟ್ಟಿನಿಂದಲೇ ಶಾಂತ ಸ್ವಭಾವನಾಗಿದ್ದ ಅವನಿಗೆ ಶಂತನುವೆಂಬ ಹೆಸರಾಯಿತು. ಸ್ವಂತ ಕರ್ಮಗಳಿಂದ ಅಕ್ಷಯ ಲೋಕಗಳನ್ನು ಜಯಿಸಿದ್ದುದರ ಸಂಸ್ಕರಣದಿಂದಾಗಿ ಆ ಕುರುಸತ್ತಮ ಶಂತನುವು ಪುಣ್ಯಕರ್ಮಿಯಾಗಿಯೇ ಬೆಳೆದನು. ಪುತ್ರ ಶಂತನುವು ಯೌವನಾವಸ್ಥೆಯನ್ನು ಹೊಂದಿದಾಗ ಪ್ರತೀಪನು ಒಂದು ನಿರ್ದೇಶನವನ್ನಿತ್ತನು:
“ಶಂತನು! ಹಿಂದೆ ಓರ್ವ ಸ್ತ್ರೀಯು ನಿನಗೋಸ್ಕರ ನನ್ನ ಬಳಿ ಬಂದಿದ್ದಳು. ಒಂದು ವೇಳೆ ಕಾಮವನ್ನು ಹುಟ್ಟಿಸುವ ವರವರ್ಣಿನಿ ಆ ದೇವ ಸ್ತ್ರೀಯು ಪುತ್ರಕಾಮಿಯಾಗಿ ಗುಪ್ತವಾಗಿ ನಿನ್ನ ಬಳಿ ಬಂದರೆ ನೀನು ಅವಳು ಯಾರು ಅಥವಾ ಯಾರವಳು ಎಂದು ಪ್ರಶ್ನಿಸಬಾರದು. ಅವಳು ಏನು ಕಾರ್ಯವನ್ನೆಸಗಿದರೂ ನೀನು ಅವಳನ್ನು ಪ್ರಶ್ನಿಸಬಾರದು. ಅವಳು ನಿನ್ನನ್ನು ಹೇಗೆ ಬಯಸುತ್ತಾಳೋ ಹಾಗೆ ನೀನು ಅವಳನ್ನು ಪ್ರೀತಿಸು. ಇದು ನನ್ನ ಕೇಳಿಕೆ.”
ಈ ರೀತಿ ಸಂದೇಶವನ್ನಿತ್ತು ಪ್ರತೀಪನು ತನಯ ಶಂತನುವಿಗೆ ತನ್ನ ರಾಜ್ಯದ ರಾಜಾಭಿಷೇಕವನ್ನು ಮಾಡಿ ವನವನ್ನು ಸೇರಿದನು. ಈ ಧೀಮಂತ ರಾಜ ಶಂತನುವು ಧನುರ್ಧರನಾಗಿ ಪೃಥ್ವಿಯಲ್ಲಿಯೇ ಖ್ಯಾತನಾದನು ಮತ್ತು ಮೃಗಯಾಶೀಲನಾಗಿ ಸತತ ವನಗಳಲ್ಲಿ ಅಲೆಯುತ್ತಿದ್ದನು. ಒಮ್ಮೆ ಜಿಂಕೆ ಮತ್ತು ಕಾಡೆಮ್ಮೆಗಳನ್ನು ಕೆಳಗುರುಳಿಸಿದ ರಾಜ ಸತ್ತಮನು ಒಬ್ಬನೇ ಸಿದ್ಧ ಚಾರಣರಿಂದ ಸೇವಿಸಲ್ಪಟ್ಟ ಗಂಗೆಯನ್ನು ಅನುಸರಿಸುತ್ತಾ ಹೊರಟನು. ಅಲ್ಲಿ ಮಹಾರಾಜನು ಸಾಕ್ಷಾತ್ ಪದ್ಮಿನಿ ಲಕ್ಷ್ಮಿಯಂತೆ ರೂಪದಲ್ಲಿ ಪ್ರಜ್ವಲಿಸುತ್ತಿರುವ ಪರಮ ಸ್ತ್ರೀ ಓರ್ವಳನ್ನು ಕಂಡನು. ಸರ್ವಾನವಧ್ಯ, ಸುದಂತಿ, ಸರ್ವಾಭರಣ ಭೂಷಿತೆ, ಕಮಲದ ಒಡಲಿನಂತೆ ಕಾಂತಿಯುಕ್ತೆ, ತೆಳು ವಸ್ತ್ರವನ್ನು ಧರಿಸಿದ್ದ ಅವಳು ಏಕಾಂಗಿಯಾಗಿದ್ದಳು. ಆ ರೂಪಸಂಪದವನ್ನು ನೋಡಿದ ನರಾಧಿಪನು ವಿಸ್ಮಿತನೂ ರೋಮಹರ್ಷಿತನೂ ಆಗಿ ಒಂದೇ ಸಮನೆ ಅವಳನ್ನು ಕಣ್ಣುಗಳಿಂದಲೇ ಕುಡಿಯ ತೊಡಗಿದನು. ಆ ವಿಲಾಸಿನಿಯಾದರೂ ಸ್ನೇಹದಿಂದ ಅವಳಲ್ಲುಂಟಾದ ಸೌಹಾರ್ದತೆಯಿಂದ ಸಂಚರಿಸುತ್ತಿರುವ ಆ ಮಹಾದ್ಯುತಿ ರಾಜನನ್ನು ಎಷ್ಟು ನೋಡಿದರೂ ಅತೃಪ್ತಳಾಗೇ ಇದ್ದಳು. ಆಗ ಆ ರಾಜನು ಸಾಂತ್ವನ ಶ್ಲಾಘನೀಯ ಮಾತುಗಳಿಂದ ಅವಳನ್ನುದ್ದೇಶಿಸಿ ಹೇಳಿದನು:
“ನೀನು ಓರ್ವ ದೇವಿಯೋ, ದಾನವಿಯೋ, ಗಂಧರ್ವಿಯೋ ಅಥವಾ ಅಪ್ಸರೆಯೋ? ಸುಮಧ್ಯಮೇ! ನೀನು ಯಕ್ಷಿಯೋ ಅಥವಾ ಪನ್ನಗಿಯೋ ಅಥವಾ ಮಾನುಷಿಯೋ? ನೀನು ಯಾರೇ ಆಗಿರಲಿ, ಸುರಕನ್ಯೆಯಂತಿರುವ ನೀನು ನನ್ನ ಪತ್ನಿಯಾಗು.”
ಮುಗುಳ್ನಗೆಯಂತೆ ಮೃದುಸಿಹಿಯಾದ ರಾಜನ ಈ ಮಾತುಗಳನ್ನು ಕೇಳಿದ ಆ ಅನಿಂದಿತೆಯು ವಸುಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ನೆನಪಿಸಿಕೊಂಡು ಅವನ ಬಳಿ ಬಂದಳು. ರಾಜನ ಮನಸ್ಸನ್ನು ಆಹ್ಲಾದಿಸುತ್ತಿರುವ ಮಾತುಗಳಿಂದ ಹೇಳಿದಳು:
“ಮಹೀಪಾಲ! ನಿನ್ನ ವಶದಲ್ಲಿಯೇ ಇರುವ ನಿನ್ನ ಮಹಿಷಿಯಾಗುತ್ತೇನೆ. ಆದರೆ ನನ್ನಿಂದ ಯಾವುದೇ ಶುಭ ಅಥವಾ ಅಶುಭ ಕಾರ್ಯವಾದರೂ ಕೂಡ ನನ್ನನ್ನು ತಡೆಯಬಾರದು ಮತ್ತು ನನ್ನಲ್ಲಿ ಅಪ್ರಿಯ ಮಾತುಗಳನ್ನಾಡಬಾರದು. ನೀನು ಈ ರೀತಿ ವರ್ತಿಸುವೆಯಾದರೆ ನಾನು ನಿನ್ನೊಡನೆ ವಾಸಿಸಬಲ್ಲೆ. ಆದರೆ ನೀನು ನನ್ನನ್ನು ತಡೆದರೆ ಅಥವಾ ನನ್ನೊಡನೆ ಅಪ್ರಿಯ ಮಾತುಗಳನ್ನಾಡಿದರೆ ನಿಸ್ಸಂಶಯವಾಗಿಯೂ ನಾನು ನಿನ್ನನ್ನು ತ್ಯಜಿಸುತ್ತೇನೆ.”
ಆ ರಾಜ ಭರತಸತ್ತಮನು “ಹಾಗೆಯೇ ಆಗಲಿ” ಎಂದು ಹೇಳಿದನು. ಅವಳನ್ನು ಪಡೆದ ಆ ಪಾರ್ಥಿವೋತ್ತಮನು ಅತುಲ ಹರ್ಷವನ್ನು ಹೊಂದಿದನು. ಅವಳನ್ನು ಪಡೆದ ಶಂತನುವು ಮನ ಬಂದಂತೆ ಅವಳನ್ನು ಕಾಮಿಸಿದನು. ಆದರೆ ಅವಳನ್ನು ಪ್ರಶ್ನಿಸಬಾರದೆಂಬುದನ್ನು ನೆನಪಿನಲ್ಲಿಟ್ಟುಕೊಂಡಿದ್ದನು. ಅವಳ ಶೀಲವೃತ್ತಿ, ರೂಪ, ಔದಾರ್ಯಗುಣ, ಉಪಚಾರ, ಮತ್ತು ರಹಸ್ಯಗಳಿಂದ ಆ ಜಗತ್ಪತಿಯು ಸಂತುಷ್ಠನಾಗಿದ್ದನು. ದಿವ್ಯರೂಪಿ, ತ್ರಿಪತಗೆ, ದೇವಿ ಗಂಗಾ ನದಿಯು ವರವರ್ಣಿನಿ ಶ್ರೀಯಂತೆ ಮನುಷ್ಯರೂಪವನ್ನು ತಾಳಿ, ದೇವರಾಜಸಮದ್ಯುತಿ, ರಾಜಸಿಂಹ ಶಂತನುವಿನ ಭಾರ್ಯೆಯಾಗಿ ಅವನ ಭಾಗ್ಯ ಮತ್ತು ಕಾಮಗಳೆರಡನ್ನೂ ವೃದ್ಧಿಸಿದಳು. ಸಂಭೋಗ ಸ್ನೇಹ ಚಾತುರ್ಯದಿಂದ ಮತ್ತು ಮನೋಹರ ಹಾವ ಲಾಸ್ಯಗಳಿಂದ ರಾಜನು ತನ್ನನ್ನು ರಮಿಸುವಂತೆ ಮಾಡಿದಳು ಮತ್ತು ಅವನೂ ಸಹ ಅವಳನ್ನು ರಮಿಸಿದನು. ಆ ಉತ್ತಮ ಸ್ತ್ರೀಯ ಗುಣಗಳಿಂದ ಅಪಹರಿಸಲ್ಪಟ್ಟು ಅವಳಲ್ಲಿಯೇ ರತಿಸಕ್ತನಾದ ರಾಜನಿಗೆ ಎಷ್ಟು ಸಂವತ್ಸರಗಳು, ಋತುಗಳು ಮತ್ತು ಮಾಸಗಳು ಕಳೆದವು ಎಂದೇ ತಿಳಿಯಲಿಲ್ಲ. ಆ ಜನೇಶ್ವರನು ಅವಳನ್ನು ಈ ರೀತಿ ಕಾಮಿಸುತ್ತಿರುವಾಗ ಆ ಅಮರವರ್ಣಿನಿಯಿಂದ ಎಂಟು ಪುತ್ರರನ್ನು ಪಡೆದನು. ಪುತ್ರರು ಹುಟ್ಟುತ್ತಿದ್ದ ಹಾಗೆಯೇ ಅವಳು ಅವರನ್ನು
“ನಿಮಗೆ ಒಳ್ಳೆಯದನ್ನೇ ಮಾಡುತ್ತಿದ್ದೇನೆ!”
ಎಂದು ಹೇಳುತ್ತಾ ಗಂಗಾನದಿಯಲ್ಲಿ ಹಾಕಿ ಅವರನ್ನು ಮುಳುಗಿಸುತ್ತಿದ್ದಳು. ಅವಳ ಈ ಕಾರ್ಯವು ರಾಜ ಶಂತನುವಿಗೆ ಇಷ್ಟವಾಗಲಿಲ್ಲ. ಆದರೂ ಅವಳು ತನ್ನನ್ನು ಬಿಟ್ಟು ಹೋಗುತ್ತಾಳೆ ಎಂಬ ಭೀತಿಯಿಂದ ಮಹೀಪಾಲನು ಅವಳಿಗೆ ಏನನ್ನೂ ಹೇಳಲಿಲ್ಲ. ಎಂಟನೆಯ ಪುತ್ರನು ಜನಿಸಿದಾಗ ಅವಳು ಮುಗುಳ್ನಗುತ್ತಿರುವುದನ್ನು ಕಂಡು ತನ್ನ ಪುತ್ರನಿಗೋಸ್ಕರ ಹಂಬಲಿಸುತ್ತಾ ದುಃಖಾರ್ತನಾಗಿ ಹೇಳಿದನು:
“ಇವನನ್ನು ಕೊಲ್ಲಬೇಡ! ನೀನು ಯಾರು ಮತ್ತು ಯಾರವಳು? ಈ ರೀತಿ ನನ್ನ ಮಕ್ಕಳನ್ನು ಏಕೆ ಕೊಲ್ಲುತ್ತಿರುವೆ? ಪುತ್ರಹತ್ಯೆಯ ಮಹತ್ತರ ಪಾಪ ಮಾಡಬೇಡ. ಗರ್ವಿತೇ! ನಿಲ್ಲು!”
“ಪುತ್ರವಂತರಲ್ಲಿ ಶ್ರೇಷ್ಠ! ಪುತ್ರನನ್ನು ಬಯಸುತ್ತಿರುವವನೇ! ನಿನ್ನ ಈ ಪುತ್ರನನ್ನು ಕೊಲ್ಲುವುದಿಲ್ಲ. ಆದರೆ ನಾವು ಮಾಡಿಕೊಂಡ ಒಪ್ಪಂದದಂತೆ ನಿನ್ನೊಡನೆ ನನ್ನ ವಾಸವು ಕೊನೆಯಾಯಿತು. ನಾನು ಮಹರ್ಷಿಗಣಸೇವಿತೆ ಜಹ್ನುಸುತೆ ಗಂಗೆ. ದೇವಕಾರ್ಯವೊಂದನ್ನು ಸಿದ್ಧಿಗೊಳಿಸಲು ನಿನ್ನೊಡನೆ ಬಾಳ್ವೆ ಮಾಡಿದೆ. ಅವರು ಮಹೌಜಸರಾದ ಎಂಟು ವಸುದೇವತೆಗಳು. ವಸಿಷ್ಠನ ಶಾಪದೋಶದಿಂದಾಗಿ ಮನುಷ್ಯತ್ವವನ್ನು ಪಡೆದಿದ್ದರು. ಈ ಭುವಿಯಲ್ಲಿ ಅವರನ್ನು ಹುಟ್ಟಿಸುವವರು ನಿನ್ನ ಹೊರತು ಯಾರೂ ಇಲ್ಲ ಮತ್ತು ನನ್ನಂಥಹ ಮಾನುಷಿಯು ಈ ಧರಿತ್ರಿಯಲ್ಲಿಯೇ ಇಲ್ಲ. ಆದುದರಿಂದ ಅವರ ಜನನಿಯಾಗಲೋಸುಗವೇ ನಾನು ಮಾನುಷಿಯಾಗಿ ಬಂದಿದ್ದೇನೆ. ಈ ಎಂಟು ವಸುಗಳ ಜನ್ಮವಿತ್ತು ನೀನು ಅಕ್ಷಯ ಲೋಕಗಳನ್ನು ಗೆದ್ದಿದ್ದೀಯೆ. ಪ್ರತಿಯೊಬ್ಬರನ್ನೂ ಹುಟ್ಟುತ್ತಿದ್ದಾಗಲೇ ಮಾನುಷ ಜನ್ಮದಿಂದ ಬಿಡುಗಡೆ ಮಾಡಬೇಕೆಂದು ನನ್ನ ಮತ್ತು ಈ ವಸುದೇವತೆಗಳ ನಡುವಿನ ಒಪ್ಪಂದವಾಗಿತ್ತು. ಈ ರೀತಿ ಅವರು ಮಹಾತ್ಮ ಆಪವನ ಶಾಪದಿಂದ ವಿಮುಕ್ತರಾಗಿದ್ದಾರೆ. ನಿನಗೆ ಮಂಗಳವಾಗಲಿ. ನಾನು ಹೋಗುತ್ತಿದ್ದೇನೆ. ಈ ಮಹಾವ್ರತ ಪುತ್ರನನ್ನು ಪಾಲಿಸು. ವಸುಗಳ ಸನ್ನಿಧಿಯಲ್ಲಿ ಮಾಡಿದ ನನ್ನ ಈ ವಾಸವು ತಾತ್ಕಾಲಿಕವಾದದ್ದು. ನನ್ನ ಈ ಮಗನನ್ನು ಗಂಗಾದತ್ತನೆಂದು ತಿಳಿ.”
ಧ್ಯೌ-ದೇವವ್ರತ
ಶಂತನುವು ಹೇಳಿದನು:
“ಈ ಆಪವನೆಂಬ ಹೆಸರಿನವನು ಯಾರು? ವಸುಗಳು ಮಾಡಿದ ದುಷ್ಕೃತವಾದರೂ ಏನಿತ್ತು? ಮತ್ತು ಈ ಕುಮಾರ ಗಂಗಾದತ್ತನು ಏನು ಮಾಡಿದ್ದಾನೆಂದು ಈಗ ಮನುಷ್ಯರಲ್ಲಿ ಬದುಕಬೇಕು? ವಸುಗಳು ಸರ್ವಲೋಕಗಳ ಒಡೆಯರು. ಅಂಥವರು ಏಕೆ ಮನುಷ್ಯರಾಗಿ ಹುಟ್ಟಿದರು ಎನ್ನುವುದನ್ನು ನನಗೆ ಹೇಳು ಜಾಹ್ನವಿ!”
ರಾಜನ ಈ ಮಾತುಗಳಿಗೆ ಉತ್ತರವಾಗಿ ದೇವಿ ಜಹ್ನುಪುತ್ರಿ ಗಂಗೆಯು ಪತಿ ಪುರುಷರ್ಷಭ ಶಂತನುವನ್ನುದ್ದೇಶಿಸಿ ಹೇಳಿದಳು:
“ಭರತಸತ್ತಮ! ಹಿಂದೆ ವರುಣನು ಪುತ್ರನೋರ್ವನನ್ನು ಪಡೆದನು. ಅವನು ವಸಿಷ್ಠನೆಂಬ ಹೆಸರಿನ ಮುನಿ. ಅವನು ಆಪವನೆಂದೂ ಖ್ಯಾತ. ಅವನ ಪುಣ್ಯ ಆಶ್ರಮ ಸಂಕುಲವು ನಗೇಂದ್ರ ಮೇರುವಿನ ಪಾರ್ಶ್ವದಲ್ಲಿತ್ತು ಮತ್ತು ಅದು ಮೃಗಪಕ್ಷಿಗಣಗಳಿಂದ ಹಾಗೂ ಸದಾಕಾಲ ಕುಸುಮಗಳಿಂದ ತುಂಬಿಕೊಂಡಿತ್ತು. ಸ್ವಾದಿಷ್ಟವಾದ ಫಲ-ಮೂಲ-ಜಲಗಳಿಂದೊಡಗೂಡಿದ ಆ ವನದಲ್ಲಿ ಪುಣ್ಯಕೃತರಲ್ಲಿ ಶ್ರೇಷ್ಠ ವಾರುಣಿಯು ತಪಸ್ಸಿನಲ್ಲಿ ನಿರತನಾಗಿದ್ದನು. ದಕ್ಷನಿಗೆ ಸುರಭಿ ಎನ್ನುವ ಅತಿಗರ್ವಿತೆ ಮಗಳೊಬ್ಬಳಿದ್ದಳು. ಈ ದೇವಿಯು ಜಗತ್ತಿನ ಅನುಗ್ರಹಾರ್ಥಕ್ಕಾಗಿ ಕಶ್ಯಪನಿಂದ ಸರ್ವಕಾಮಗಳನ್ನೂ ಪೂರೈಸುವ ಹಾಲುಳ್ಳ ಶ್ರೇಷ್ಠ ಗೋವೊಂದಕ್ಕೆ ಜನ್ಮವಿತ್ತಳು. ಆ ಹಸುವನ್ನು ತನ್ನ ಹೋಮಧೇನುವಾಗಿ ಧರ್ಮಾತ್ಮ ವಾರುಣಿಯು ಪಡೆದನು. ಆ ಹಸುವು ತಪಸ್ವಿಗಳ ಆ ಅರಣ್ಯದಲ್ಲಿ ಮುನಿಗಳಿಂದ ಸೇವಿಸಲ್ಪಡುತ್ತಾ, ರಮ್ಯ ಹುಲ್ಲುಗಾವಲಿನಲ್ಲಿ ನಿರ್ಭಯಳಾಗಿ ಮೇಯುತ್ತಾ ವಾಸಿಸುತ್ತಿದ್ದಳು. ಒಮ್ಮೆ ದೇವದೇವರ್ಷಿಸೇವಿತ ಸರ್ವ ವಸುಗಳೂ ಪೃಥುವಿನ ನಾಯಕತ್ವದಲ್ಲಿ ಆ ವನಕ್ಕೆ ಆಗಮಿಸಿದರು. ತಮ್ಮ ತಮ್ಮ ಪತ್ನಿಗಳೊಂದಿಗೆ ಆ ವನವನ್ನೆಲ್ಲಾ ಸುತ್ತಿದರು ಮತ್ತು ಆ ರಮಣೀಯ ಪರ್ವತ-ವನಗಳಲ್ಲಿ ರಮಿಸಿದರು. ಅವರಲ್ಲಿ ಓರ್ವ ವಸುವಿನ ಪತ್ನಿಯು ವನದಲ್ಲಿ ಸಂಚರಿಸುತ್ತಿದ್ದಾಗ ಮುನಿ ವಸಿಷ್ಠನ ಸರ್ವಕಾಮಗಳನ್ನು ಪೂರೈಸಬಲ್ಲ, ಆ ಉತ್ತಮ ಸುಂದರ ಗೋವನ್ನು ಕಂಡಳು. ಆ ಗೋವಿನ ಶೀಲತೆ ಮತ್ತು ದ್ರವಿಣಸಂಪತ್ತನ್ನು ನೋಡಿ ವಿಸ್ಮಿತಳಾದ ಅವಳು ಆ ಉತ್ತಮ, ಶೀಲವಂತ, ಸರ್ವಗುಣೋಪೇತ, ಸುಂದರ, ಸುಂದರ ಬಾಲ ಮತ್ತು ಮುಖಗಳನ್ನು ಹೊಂದಿದ, ಒಳ್ಳೆಯ ಹಾಲನ್ನು ನೀಡುವ ಹಸುವನ್ನು ದ್ಯೌವಿಗೆ ತೋರಿಸಿದಳು. ಈ ರೀತಿ ಗುಣಸಮಾಯುಕ್ತ ಹಸುವನ್ನು ವಸುನಂದಿನಿಯು ವಸುವಿಗೆ ತೋರಿಸಿದಳು. ಆ ಹಸುವನ್ನು ನೋಡಿದೊಡನೆಯೇ ಧ್ಯೌ ಅದರ ರೂಪಗುಣಗಳನ್ನು ಹೊಗಳುತ್ತಾ ತನ್ನ ದೇವಿಗೆ ಹೇಳಿದನು:
‘ವರಾರೋಹೇ! ಈ ಕಪ್ಪು ಕಣ್ಣುಗಳುಳ್ಳ ಉತ್ತಮ ಗೋವು ಈ ಉತ್ತಮ ವನಗಳ ಒಡೆಯ ವಾರುಣಿಗೆ ಸೇರಿದ್ದುದು. ಇದರ ಸ್ವಾದಿಷ್ಟ ಹಾಲನ್ನು ಕುಡಿದ ಮರ್ತ್ಯನು ಹತ್ತು ಸಾವಿರ ವರ್ಷಗಳ ಪರ್ಯಂತ ಸ್ಥಿರಯೌವನಿಯಾಗಿ ಜೀವಿಸಬಲ್ಲ.’
ಆ ಸುಮಧ್ಯಮೆ ಅನವದ್ಯಾಂಗಿಯು ಈ ಮಾತನ್ನು ಕೇಳಿ ತನ್ನ ದೀಪ್ತತೇಜಸ ಪತಿಯನ್ನುದ್ದೇಶಿಸಿ ಹೇಳಿದಳು:
‘ನನಗೆ ಮನುಷ್ಯಲೋಕದಲ್ಲಿ ರೂಪಯೌವನಶಾಲಿ ನರದೇವಾತ್ಮಜೆ ಜಿನವತಿ ಎಂಬ ಹೆಸರಿನ ಸಖಿಯೊಬ್ಬಳಿದ್ದಾಳೆ. ಧೀಮಂತ, ಸತ್ಯಸಂಧ, ರಾಜರ್ಷಿ ಉಶೀನರನ ಮಗಳಾದ ಅವಳು ತನ್ನ ರೂಪ ಸಂಪತ್ತಿನಿಂದ ಮಾನುಷ ಲೋಕದಲ್ಲಿಯೇ ಪ್ರಸಿದ್ಧಳಾಗಿದ್ದಾಳೆ. ಅವಳಿಗೋಸ್ಕರ ಈ ಗೋವು ಮತ್ತು ಅದರ ಕರು ನನಗೆ ಬೇಕು. ಬೇಗನೆ ಅದನ್ನು ತೆಗೆದುಕೊಂಡು ಬಾ. ಅದರ ಹಾಲನ್ನು ಕುಡಿದು ನನ್ನ ಸಖಿಯು ಮನುಷ್ಯಲೋಕದಲ್ಲಿ ವೃದ್ಧಾಪ್ಯ ಮತ್ತು ರೋಗ ವರ್ಜಿತಳಾದ ಒಬ್ಬಳೇ ಒಬ್ಬಳೆಂದು ಎನಿಸಿಕೊಳ್ಳುತ್ತಾಳೆ. ನನಗಾಗಿ ಇದನ್ನೊಂದನ್ನು ನೀನು ಮಾಡಬೇಕು. ಇದನ್ನು ಬಿಟ್ಟು ಬೇರೆ ಏನೂ ನನಗೆ ಸಂತೋಷವನ್ನು ಕೊಡುವುದಿಲ್ಲ.’
ದೇವಿಯ ಈ ವಚನಗಳನ್ನು ಕೇಳಿದ ಧ್ಯೌ ಅವಳಿಗೆ ಪ್ರಿಯವಾದದ್ದನ್ನು ಮಾಡಲೋಸುಗ ಪೃಥುವಿನ ನಾಯಕತ್ವದಲ್ಲಿ ತನ್ನ ಸಹೋದರರನ್ನು ಸೇರಿ ಆ ಹಸುವನ್ನು ಅಪಹರಿಸಿ ತಂದನು. ಆ ಕಮಲಪತ್ರಾಕ್ಷಿಯಿಂದ ನಿಯುಕ್ತಗೊಂಡ ಧ್ಯೌ ಆ ಋಷಿಯ ತೀವ್ರ ತಪಸ್ಸನ್ನು ನಿರೀಕ್ಷಿಸಲು ಅಸಮರ್ಥನಾದನು ಮತ್ತು ಆ ಹಸುವನ್ನು ಅಪಹರಿಸುವುದರಿಂದಾಗಬಹುದಾದ ತನ್ನ ಅಧೋಗತಿಯ ಕುರಿತು ಯೋಚಿಸಲಿಲ್ಲ. ಫಲಗಳನ್ನು ತೆಗೆದುಕೊಂಡು ಆಶ್ರಮಪದವನ್ನು ಸೇರಿದ ವಾರುಣಿಯು ಆ ಉತ್ತಮ ಕಾನನದಲ್ಲಿ ಕರುವಿನ ಸಹಿತ ಗೋವನ್ನು ಕಾಣಲಿಲ್ಲ. ಆ ತಪೋಧನನು ಆಗ ವನವಿಡೀ ಅದನ್ನು ಹುಡುಕಿದನು. ಎಷ್ಟು ಹುಡುಕಿದರೂ ಆ ಉದಾರ ಮನಸ್ಸಿನ ಮುನಿಗೆ ಗೋ ಕಾಣಲಿಲ್ಲ. ತನ್ನ ದಿವ್ಯ ದೃಷ್ಟಿಯಿಂದ ಹಸುವು ವಸುಗಳಿಂದ ಅಪಹರಣವಾಗಿದೆ ಎಂದು ತಿಳಿದ ಅವನು ತಕ್ಷಣವೇ ಕ್ರೋಧವಶನಾಗಿ ವಸುಗಳಿಗೆ ಶಾಪವನ್ನಿತ್ತನು:
‘ವಸುಗಳು ನನ್ನ ಸುಂದರ ಬಾಲವನ್ನುಳ್ಳ ಹಾಲನ್ನೀಯುವ ಹಸುವನ್ನು ಕದ್ದಿರುವುದರಿಂದ ಅವರೆಲ್ಲರೂ ನಿಸ್ಸಂಶಯವಾಗಿ ಮಾನುಷರಲ್ಲಿ ಜನಿಸುತ್ತಾರೆ!’
ಈ ರೀತಿ ಮುನಿಸತ್ತಮ ಭಗವಾನ್ ಆಪವನು ಕೋಪವಶನಾಗಿ ವಸುಗಳನ್ನು ಶಪಿಸಿದನು. ಅವರನ್ನು ಶಪಿಸಿ ಆ ಮಹಾಭಾಗನು ತಪಸ್ಸಿನಲ್ಲಿಯೇ ತನ್ನ ಮನವನ್ನಿತ್ತನು. ಈ ರೀತಿ ಆ ಎಂಟು ವಸುಗಳು ರೋಷಸಮನ್ವಿತ ತಪೋಧನ, ಮಹಾಪ್ರಭಾವೀ, ಬ್ರಹ್ಮರ್ಷಿ ದೇವನಿಂದ ಶಪಿಸಲ್ಪಟ್ಟರು. ಶಪಿಸಲ್ಪಟ್ಟಿದ್ದೇವೆ ಎಂದು ತಿಳಿದ ಮಹಾತ್ಮರುಗಳು ಆಶ್ರಮಪದವನ್ನು ತಲುಪಿ ಋಷಿಯ ಬಳಿ ಬಂದರು. ವಸುಗಳು ಆ ಋಷಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೂ ಸರ್ವಧರ್ಮ ವಿಶಾರದ ಋಷಿಸತ್ತಮ ಆಪವನಿಂದ ಆಶೀರ್ವಾದವು ದೊರೆಯಲಿಲ್ಲ. ಧರ್ಮಾತ್ಮನು ಹೇಳಿದನು:
‘ನಿಮ್ಮಲ್ಲಿ ಧರ ಮೊದಲಾದ ಏಳು ಜನರು ಇಂದಿನಿಂದ ಒಂದು ವರ್ಷದೊಳಗೆ ಶಾಪದಿಂದ ವಿಮುಕ್ತರಾಗುತ್ತೀರಿ. ಯಾರ ಕೆಲಸದಿಂದ ನೀವೆಲ್ಲರೂ ನನ್ನಿಂದ ಶಪಿಸಲ್ಪಟ್ಟಿದ್ದೀರೋ ಆ ಧ್ಯೌ ಮಾತ್ರ ತನ್ನ ಕರ್ಮದಿಂದಾಗಿ ಮನುಷ್ಯ ಲೋಕದಲ್ಲಿ ದೀರ್ಘಕಾಲ ವಾಸಿಸುತ್ತಾನೆ. ನಿಮ್ಮ ಮೇಲಿನ ಕ್ರೋಧದಿಂದಾಗಲೀ ಅಥವಾ ಸುಳ್ಳನ್ನು ಹೇಳಲೋಸುಗ ಈ ಮಾತನ್ನು ಹೇಳುತ್ತಿಲ್ಲ. ಆ ಮಹಾತ್ಮನು ಮನುಷ್ಯ ಲೋಕದಲ್ಲಿ ಸಂತತಿಯನ್ನು ಪಡೆಯುವುದಿಲ್ಲ. ಅವನೊಬ್ಬ ಧರ್ಮಾತ್ಮನೂ, ಸರ್ವಶಾಸ್ತ್ರವಿಶಾರದನೂ, ಪಿತನ ಪ್ರಿಯಕಾರ್ಯ ನಿರತನೂ, ಆಗಿ ಸ್ತ್ರೀಭೋಗವನ್ನು ವರ್ಜಿಸುತ್ತಾನೆ.’
ಎಲ್ಲ ವಸುಗಳಿಗೂ ಈ ರೀತಿ ಹೇಳಿದ ಭಗವಾನ್ ಋಷಿಯು ತೆರಳಿದನು. ಆನಂತರ, ಸಮಸ್ತ ವಸುಗಳೂ ನನ್ನ ಬಳಿ ಬಂದಾಗ ನಾನು ಅವರಿಗೆ ಒಂದು ವರವನ್ನು ಇತ್ತೆ. ಆಗ ಅವರು
‘ಗಂಗೇ! ನಾವು ಹುಟ್ಟಿದಾಕ್ಷಣವೇ ಸ್ವಯಂ ನೀನು ನೀರಿನಲ್ಲಿ ಹಾಕಿಬಿಡು!’
ಎಂದು ಯಾಚಿಸಿದರು. ಶಪಿತ ಆ ದೇವತೆಗಳನ್ನು ಮನುಷ್ಯ ಲೋಕದಿಂದ ಮುಕ್ತಿ ನೀಡಲೋಸುಗವೇ ನಾನು ಇದನ್ನೆಲ್ಲ ಮಾಡಿದೆ. ಆದರೆ ಈ ಧ್ಯೌ ಒಬ್ಬನು ಮಾತ್ರ ಋಷಿಯ ಶಾಪದಂತೆ ಮನುಷ್ಯ ಲೋಕದಲ್ಲಿ ದೀರ್ಘಕಾಲ ವಾಸಿಸುತ್ತಾನೆ.”
ಈ ರೀತಿ ಕಥೆಯನ್ನು ಹೇಳಿದ ದೇವಿಯು ಅಲ್ಲಿಯೇ ಅಂತರ್ಧಾನಳಾದಳು. ಹೋಗುವಾಗ ಆ ಕುಮಾರನನ್ನೂ ಕರೆದುಕೊಂಡು ಹೋದಳು. ಗುಣಗಳಲ್ಲಿ ಶಂತನುವನ್ನೂ ಮೀರಿದ ಶಂತನು ಪುತ್ರನು ಎರಡು ಹೆಸರುಗಳಿಂದ ಕರೆಯಲ್ಪಟ್ಟನು: ದೇವವ್ರತ ಮತ್ತು ಗಾಂಗೇಯ. ಶಂತನವು ಶೋಕಾರ್ತನಾಗಿ ತನ್ನ ಪುರಕ್ಕೆ ತೆರಳಿದನು.
ದೇವವ್ರತ-ಭೀಷ್ಮ
ದೇವರಾಜರ್ಷಿಸತ್ಕೃತ ದೀಮಾನ್ ಧರ್ಮಾತ್ಮ ಶಂತನುವು ಸರ್ವಲೋಕಗಳಲ್ಲಿ ಸತ್ಯವಾದಿಯೆಂದು ವಿಶೃತನಾಗಿದ್ದನು. ದಮ, ದಾನ, ಕ್ಷಮೆ, ಬುದ್ಧಿ, ಧೃತಿ, ತೇಜಸ್ಸು ಮುಂತಾದ ಉತ್ತಮ ಮಹಾಸತ್ವಗಳು ಪುರುಷರ್ಷಭ ಶಂತನುವಿನಲ್ಲಿ ನಿತ್ಯವೂ ವಾಸಿಸಿದ್ದವು. ಈ ರೀತಿ ಗುಣಸಂಪನ್ನನಾದ, ಧರ್ಮಾರ್ಥಕುಶಲನಾದ ನೃಪನು ಭರತವಂಶದ ಮತ್ತು ಸಾಧುಜನರ ನಾಯಕನಾಗಿದ್ದನು. ಶಂಖದಂತ ಕುತ್ತಿಗೆ, ವಿಸ್ತಾರವಾದ ಹೆಗಲು, ಮದಿಸಿದ ಆನೆಯ ಪರಾಕ್ರಮ, ಕಾಮ ಮತ್ತು ಅರ್ಥಕ್ಕಿಂತಲೂ ಧರ್ಮವೇ ಶ್ರೇಷ್ಠವೆಂಬ ನಿಲುವು, ಈ ಎಲ್ಲ ಮಹಾಸತ್ವಗಳನ್ನೊಳಗೊಂಡ ಭರತರ್ಷಭ ಧರ್ಮಿ ಶಂತನುವಿನ ಸದೃಶ ಬೇರೊಬ್ಬ ಕ್ಷತ್ರಿಯನು ಎಲ್ಲಿಯೂ ಇರಲಿಲ್ಲ. ಸ್ವಯಂ ಧರ್ಮದಲ್ಲಿ ನಡೆಯುತ್ತಿದ್ದು ಸರ್ವಧರ್ಮವಿದ್ವಾಂಸರಲ್ಲಿ ಶ್ರೇಷ್ಠನೆಂದೆನಿಸಿಕೊಂಡ ಆ ಮಹೀಪಾಲನನ್ನು ಭೂಮಿಯ ರಾಜರೆಲ್ಲರೂ ರಾಜ ರಾಜನೆಂದು ಅಭೀಷೇಕಿಸಿದ್ದರು. ಆ ಭಾರತನನ್ನು ನಾಯಕನನ್ನಾಗಿ ಪಡೆದ ಭೂಮಿಪರೆಲ್ಲರೂ ವೀತಶೋಕಭಯಾಬಾಧರಾಗಿ, ಸುಖಸ್ವಪ್ನದೊಂದಿಗೆ ಏಳುತ್ತಿದ್ದರು. ಲೋಕದ ನೃಪತಿಯರೆಲ್ಲರಿಗೂ ಶಂತನುವು ಪ್ರಮುಖನಾಗಿದ್ದಾಗ ಸರ್ವ ವರ್ಣಗಳನ್ನೂ ಹಿಡಿತದಲ್ಲಿಟ್ಟಿದ್ದ ಬ್ರಾಹ್ಮಣತ್ವವು ಉನ್ನತ ಸ್ಥಾನವನ್ನು ಪಡೆದಿತ್ತು. ಕ್ಷತ್ರಿಯರು ಬ್ರಾಹ್ಮಣರ ಪರಿಚಾರಕರಾಗಿದ್ದರು, ವೈಶ್ಯರು ಕ್ಷತ್ರಿಯರನ್ನು ಅನುಸರಿಸುತ್ತಿದ್ದರು ಮತ್ತು ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರನ್ನು ಶೂದ್ರರು ಪರಿಚರಿಸುತ್ತಿದ್ದರು. ಕುರುಗಳ ಕೇಂದ್ರಬಿಂದು ರಮ್ಯ ಹಸ್ತಿನಾಪುರದಲ್ಲಿ ವಾಸಿಸುತ್ತಾ, ಅವನು ಸಾಗರಪರ್ಯಂತ ಇಡೀ ಭೂಮಿಯನ್ನು ಆಳಿದನು. ಧರ್ಮಜ್ಞನೂ, ಸತ್ಯವಾಗ್ಮಿಯೂ, ಋಜುವೂ ಆಗಿದ್ದ ಅವನು ದೇವರಾಜಸದೃಶನಾಗಿದ್ದನು. ಅವನ ದಾನ-ಧರ್ಮ-ತಪೋಯೋಗಗಳಿಂದ ಅತ್ಯುತ್ತಮ ಸಂಪತ್ತೂ ಅವನದ್ದಾಗಿತ್ತು. ರಾಗದ್ವೇಷಗಳಿಲ್ಲದ, ಚಂದ್ರನಂತೆ ಪ್ರಿಯದರ್ಶನನಾದ, ತೇಜಸ್ಸಿನಲ್ಲಿ ಸೂರ್ಯಸಂಕಾಶನಾದ, ವಾಯುವೇಗಸಮನಾದ, ಅವನು ಕೋಪದಲ್ಲಿ ಯಮನ ಸಮನಾಗಿದ್ದನು ಮತ್ತು ಕ್ಷಮೆಯಲ್ಲಿ ಪೃಥ್ವಿಯ ಸಮನಾಗಿದ್ದನು. ಶಂತನುವು ಪೃಥಿವೀಪಾಲನಾಗಿದ್ದಾಗ ಯಾವುದೇ ಪಶುವಾಗಲೀ ವರಾಹವಾಗಲೀ, ಮೃಗಪಕ್ಷಿಗಳಾಗಲೀ ವೃಥಾ ಸಾಯುತ್ತಿರಲಿಲ್ಲ. ಧರ್ಮ ಮತ್ತು ಬ್ರಾಹ್ಮಣತ್ವಕ್ಕೆ ಪ್ರಾಮುಖ್ಯತೆಯಿದ್ದ ರಾಜ್ಯದಲ್ಲಿ ಶಂತನುವು ಸರ್ವ ಜೀವಿಗಳನ್ನು ಕಾಮರಾಗವಿವರ್ಜಿತನಾಗಿ ತನ್ನ ಸಮಾನರೆಂದು ತಿಳಿದು ಆಳಿದನು. ಅವನ ಕಾಲದಲ್ಲಿ ದೇವರ್ಷಿ, ಪಿತೃಗಳ ಯಜ್ಞವು ಸಮಯಕ್ಕೆ ಸರಿಯಾಗಿ ನಡೆಯುತ್ತಿದ್ದವು. ಉಸಿರಾಡುವ ಯಾವ ಪ್ರಾಣಿಗಳೂ ಅಧರ್ಮದಿಂದ ಸಾಯುತ್ತಿರಲಿಲ್ಲ. ಅಸುಖಿಗಳಿಗೆ, ಅನಾಥರಿಗೆ, ಮತ್ತು ಪ್ರಾಣಿಯೋನಿಯಲ್ಲಿ ಜಸಿಸಿದ ಎಲ್ಲವಕ್ಕೂ ಎಲ್ಲ ಜೀವಿಗಳಿಗೂ ರಾಜನೇ ತಂದೆಯಂತಿದ್ದನು. ಆ ಕುರುಪತಿಶ್ರೇಷ್ಠ ರಾಜರಾಜೇಶ್ವರನ ಕಾಲದಲ್ಲಿ ಮಾತು ಸತ್ಯಕ್ಕೇ ಹೊಂದಿಕೊಂಡಿತ್ತು ಮತ್ತು ಮನಸ್ಸು ದಾನ-ಧರ್ಮಗಳಲ್ಲಿ ನೆಲಸಿತ್ತು. ಅವನು ಒಬ್ಬೊಬ್ಬರಲ್ಲಿ ಎಂಟುವರ್ಷಗಳಂತೆ ೩೨ ವರ್ಷಗಳು ಸ್ತ್ರೀಯರಲ್ಲಿ ರತಿಸುಖವನ್ನು ಹೊಂದಿ ವನವನ್ನು ತೆರಳಿದನು.
ಅವನ ಮಗ ಗಾಂಗೇಯ, ದೇವವ್ರತನೆಂಬ ಹೆಸರು ಪಡೆದ ವಸುವು ರೂಪ, ಆಚಾರ, ಶ್ರೇಷ್ಠತೆ, ವಿದ್ಯೆಗಳಲ್ಲಿ ಅವನಂತೆಯೇ ಇದ್ದನು. ಸರ್ವಾಸ್ತ್ರ ನಿಷ್ಣಾತನಾಗಿ ಇತರ ಎಲ್ಲ ಪಾರ್ಥಿವರಿಗಿಂಥ ಮಹಾಬಲಶಾಲಿಯೂ, ಮಹಾಸತ್ವನೂ, ಮಹಾವೀರನೂ, ಮಹಾರಥಿಯೂ ಆಗಿದ್ಡನು. ಒಮ್ಮೆ ಒಂದು ಜಿಂಕೆಯನ್ನು ಹೊಡೆದು ಅದನ್ನು ಅನುಸರಿಸುತ್ತಾ ಗಂಗಾನದೀತೀರದಲ್ಲಿ ಹೋಗುತ್ತಿರುವಾಗ ನೃಪ ಶಾಂತನುವು ಭಾಗಿರಥಿಯಲ್ಲಿನ ನೀರು ತುಂಬಾ ಕಡಿಮೆಯಾದದ್ದನ್ನು ಗಮನಿಸಿದನು. ಅದನ್ನು ನೋಡಿ ಪುರುಷರ್ಷಭ ಶಂತನುವು
‘ಯಾವ ಕಾರಣದಿಂದಾಗಿ ನದಿಗಳಲ್ಲೆಲ್ಲ ಶ್ರೇಷ್ಠ ನದಿಯು ಮೊದಲಿನ ಹಾಗೆ ಹರಿಯುತ್ತಿಲ್ಲ?’
ಎಂದು ಚಿಂತಿಸಿದನು. ಇದರ ಕಾರಣವೇನಿರಬಹುದೆಂದು ಹುಡುಕುತ್ತಿದ್ದ ಆ ಮಹಾಮನನು ಅತಿಗಾತ್ರಿ, ರೂಪಸಂಪನ್ನ, ನೋಡಲು ಸುಂದರನಾದ ಕುಮಾರನೋರ್ವನು ದಿವ್ಯ ಬಿಲ್ಲನ್ನು ಹಿಡಿದು ದೇವ ಪುರಂದರನಂತೆ ತೀಕ್ಷ್ಣ ಶರಗಳಿಂದ ಇಡೀ ಗಂಗೆಯನ್ನೇ ತಡೆಹಿಡಿದಿದ್ದುದನ್ನು ಕಂಡನು. ಬಾಣಗಳಿಂದ ಆವೃತಗೊಂಡು ತಡೆಹಿಡಿಯಲ್ಪಟ್ಟ ಗಂಗಾನದಿಯನ್ನು ಮತ್ತು ಆ ಅತಿ ಮಾನುಷ ಕರ್ಮವನ್ನು ಕಂಡ ರಾಜನು ವಿಸ್ಮಿತನಾದನು. ಹಿಂದೆ ಹುಟ್ಟಿದಾಗ ಮಾತ್ರ ನೋಡಿದ್ದ ತನ್ನ ಪುತ್ರನನ್ನು ಧೀಮಂತ ಶಂತನುವು ತನ್ನದೇ ಪುತ್ರನೆಂದು ನೆನಪಿಸಿ ಗುರುತಿಸಲು ಅಶಕ್ಯನಾದನು. ಆದರೆ ಅವನ ಮಗನು ತನ್ನ ತಂದೆಯನ್ನು ಕಂಡು ಮಾಯೆಯಿಂದ ಅವನನ್ನು ಮೋಹಿಸಿ ಸಂಮೋಹನನ್ನಾಗಿ ಮಾಡಿ ತಕ್ಷಣವೇ ಅಲ್ಲಿಂದ ಅಂತರ್ಧಾನನಾದನು. ಆ ಅದ್ಭುತವನ್ನು ಕಂಡ ರಾಜ ಶಂತನುವು ಅನುಮಾನಗೊಂಡು “ಮಗನನ್ನು ತೋರಿಸು!””ಎಂದು ಗಂಗೆಗೆ ಹೇಳಿದನು. ಉತ್ತಮ ರೂಪದಿಂದ ಹೊಳೆಯುತ್ತಾ ಅಲಂಕೃತ ಕುಮಾರನ ಕೈಗಳನ್ನು ತನ್ನ ಬಲಗೈಯಲ್ಲಿ ಹಿಡಿದು ಗಂಗೆಯು ಕಾಣಿಸಿಕೊಂಡಳು.
ಆಭರಣಗಳಿಂದ ಅಲಂಕೃತಳಾದ, ಧೂಳೇ ಇಲ್ಲದ ವಸ್ತ್ರಗಳನ್ನು ಧರಿಸಿದ ಸತಿಯನ್ನು ಹಿಂದೆ ನೋಡಿದ್ದರೂ ಸಹ ಶಂತನುವಿಗೆ ಗುರುತಿಸಲಾಗಲಿಲ್ಲ.
ಗಂಗೆಯು ಹೇಳಿದಳು:
“ಪುರುಷವ್ಯಾಘ್ರ ರಾಜನ್! ನನ್ನಲ್ಲಿ ಹಿಂದೆ ಜನಿಸಿದ ನಿನ್ನ ಅಷ್ಟಮ ಪುತ್ರನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗು. ಇವನು ವಸಿಷ್ಠನಿಂದ ಶಾಖೆಗಳ ಸಹಿತ ವೇದಗಳನ್ನು ಕಲಿತಿದ್ದಾನೆ ಮತ್ತು ಯುದ್ಧದಲ್ಲಿ ದೇವರಾಜನಿಗೆ ಸಮನಾದ ಕೃತಾಸ್ತ್ರನೂ ಪರಮೇಷ್ವಾಸನೂ ಆಗಿದ್ದಾನೆ. ಸುರ-ಅಸುರರಿಂದ ನಿತ್ಯವೂ ಗೌರವಿಸಲ್ಪಟ್ಟ ಉಶಾನನಲ್ಲಿದ್ದ ಸರ್ವ ವೇದ ಶಾಸ್ತ್ರಗಳೂ ಇವನಲ್ಲಿವೆ. ಮಹಾಬಾಹುವೂ ಮಹಾತ್ಮನೂ ಆದ ನಿನ್ನ ಈ ಪುತ್ರನಲ್ಲಿ ಸುರಾಸುರನಮಸ್ಕೃತ ಆಂಗಿರಸ ಪುತ್ರನು ತಿಳಿದಿರುವ ವೇದ ಶಾಸ್ತ್ರಗಳೆಲ್ಲವನ್ನೂ ಸಹ ಇವೆ. ಯಾರಿಂದಲೂ ಅಪರಾಜಿತನಾಗದೇ ಇದ್ದ ಪ್ರತಾಪವಾನ್ ಜಮದಗ್ನಿಯ ಮಗ ಋಷಿ ರಾಮನಿಗೆ ತಿಳಿದಿದ್ದ ಎಲ್ಲ ಅಸ್ತ್ರಗಳೂ ಇವನಲ್ಲಿವೆ. ರಾಜಧರ್ಮಾರ್ಥಕೋವಿದ ಈ ಮಹೇಷ್ವಾಸನು ನಾನು ನಿನಗಿತ್ತ ನಿಜ ಪುತ್ರ. ಈ ವೀರನನ್ನು ಮನೆಗೆ ಕರೆದುಕೊಂಡು ಹೋಗು.”
ಈ ರೀತಿ ಅವಳಿಂದ ಅನುಜ್ನೆಯನ್ನು ಪಡೆದ ಶಂತನುವು ಆದಿತ್ಯನಂತೆ ಬೆಳಗುತ್ತಿರುವ ತನ್ನ ಪುತ್ರನನ್ನು ಕರೆದುಕೊಂಡು ತನ್ನ ನಗರವನ್ನು ಸೇರಿದನು. ಪುರಂದರಪುರದಂತಿದ್ದ ತನ್ನ ನಗರವನ್ನು ಸೇರಿದ ಪೌರವನು ತನ್ನ ಸರ್ವಕಾಮಗಳೂ ಪೂರೈಸಿದವೆಂದು ತನ್ನಲ್ಲಿಯೇ ಯೋಚಿಸಿದನು. ನಂತರ ತನ್ನ ಪುತ್ರನಿಗೆ ಪೌರವರ ಯುವರಾಜನನ್ನಾಗಿ ಅಭಿಷೇಕವನ್ನು ನೆರವೇರಿಸಿದನು. ಆ ಪೌರವ ಶಂತನುವಿನ ಮಹಾಯಶಸ್ವಿ ಪುತ್ರನು ತನ್ನ ತಂದೆ, ರಾಷ್ಟ್ರ ಮತ್ತು ಪುರಜನರೆಲ್ಲರನ್ನೂ ರಂಜಿಸಿದನು. ಹೀಗೆ ಅಮಿತವಿಕ್ರಮಿ ಮಹೀಪತಿಯು ತನ್ನ ಪುತ್ರನೊಂದಿಗೆ ಸಂತೋಷದಿಂದ ನಾಲ್ಕು ವರ್ಷಗಳನ್ನು ಕಳೆದನು.
ಒಮ್ಮೆ ಮಹೀಪತಿಯು ಯಮುನಾನದಿಯ ಬಳಿಯ ವನಕ್ಕೆ ಹೋದಾಗ ಒಂದು ಅನಿರ್ದಿಷ್ಟ ಉತ್ತಮ ಸುಗಂಧವನ್ನು ಆಘ್ರಾಣಿಸಿದನು. ಅದರ ಮೂಲವನ್ನು ಅರಸುತ್ತಾ ಎಲ್ಲೆಡೆಯೂ ಅಲೆದಾಡಿ ದೇವರೂಪಿಣಿ ದಾಶ ಕನ್ಯೆಯೋರ್ವಳನ್ನು ಕಂಡನು. ಆ ಅಸಿತಲೋಚನೆ ಕನ್ಯೆಯನ್ನು ನೋಡಿದಾಕ್ಷಣವೇ ಅವಳಲ್ಲಿ ಕೇಳಿದನು:
“ಭೀರು! ನೀನು ಯಾರವಳು ಮತ್ತು ನೀನು ಇಲ್ಲಿ ಏನು ಮಾಡುತ್ತಿರುವೆ?”
ಅವಳು ಹೇಳಿದಳು:
“ನಾನು ಓರ್ವ ದಾಶಕನ್ಯೆ. ನನ್ನ ತಂದೆ ಮಹಾತ್ಮ ದಾಶರಾಜನ ಆದೇಶದಂತೆ ಧರ್ಮಾರ್ಥ ದೋಣಿಯನ್ನು ನಡೆಸುತ್ತಿದ್ದೇನೆ. ನಿನಗೆ ಮಂಗಳವಾಗಲಿ.”
ರೂಪ, ಮಾಧುರ್ಯ, ಮತ್ತು ಸುಗಂಧ ಸಂಯುಕ್ತೆ ಆ ದೇವರೂಪಿಣಿ ದಾಶೇಯಿಯನ್ನು ನೋಡಿದ ರಾಜ ಶಂತನುವು ಅವಳನ್ನು ಬಯಸಿದನು. ಅವಳ ತಂದೆಯಲ್ಲಿಗೆ ಹೋಗಿ ಅವಳನ್ನು ತನಗಾಗಿ ಅವಳ ತಂದೆಯಿಂದ ಕೇಳಿದನು. ಆಗ ದಾಶರಾಜನು ಮಹೀಪತಿಗೆ ಹೇಳಿದನು:
“ಜನೇಶ್ವರ! ಇವಳು ಹುಟ್ಟಿದಾಗಲೇ ಈ ವರವರ್ಣಿನಿಯನ್ನು ವರನೋರ್ವನಿಗೆ ಕೊಡಲೇ ಬೇಕು ಎನ್ನುವುದನ್ನು ತಿಳಿದಿದ್ದೆ. ಆದರೆ ಆಗಲೇ ನನ್ನ ಹೃದಯದಲ್ಲಿ ಯಾರಿಗೂ ಹೇಳದ ಆಸೆಯೊಂದಿತ್ತು. ಅದನ್ನು ಕೇಳು. ಒಂದುವೇಳೆ ನೀನು ಇವಳನ್ನು ನಿನ್ನ ಧರ್ಮಪತ್ನಿಯಾಗಿ ಕೇಳುತ್ತಿರುವೆಯಾದರೆ ಸತ್ಯವಂತನಾಗಿ ನನ್ನಲ್ಲಿ ನಿಜವಾದ ಒಪ್ಪಂದವೊಂದನ್ನು ಮಾಡಿಕೋ. ಈ ಒಪ್ಪಂದವಾದರೆ ಈ ಕನ್ಯೆಯನ್ನು ನಿನಗೆ ಕೊಡುತ್ತೇನೆ. ನನಗೆ ನಿನ್ನಂಥ ವರನು ಎಂದೂ ದೊರೆಯಲಿಕ್ಕಿಲ್ಲ.”
ಶಂತನು ಹೇಳಿದನು:
“ದಾಶ! ನೀನು ಕೇಳುವ ವರವನ್ನು ಕೇಳಿದ ನಂತರವೇ ಅದರ ಪರವಾಗಿ ಅಥವಾ ವಿರುದ್ಧವಾಗಿ ನಿಶ್ಚಯಿಸುತ್ತೇನೆ. ಕೊಡುವಂಥದ್ದಾಗಿದ್ದರೆ ಕೊಡುತ್ತೇನೆ. ಕೊಡುವಂಥದಲ್ಲದಿದ್ದರೆ ಖಂಡಿತವಾಗಿಯೂ ಕೊಡುವುದಿಲ್ಲ.”
ದಾಶನು ಹೇಳಿದನು:
“ಪೃಥಿವೀಪತಿ! ಇವಳಲ್ಲಿ ಯಾರು ಪುತ್ರನಾಗಿ ಹುಟ್ಟುತ್ತಾನೋ ಅವನನ್ನೇ ನಿನ್ನ ನಂತರದ ರಾಜನನ್ನಾಗಿ ಅಭಿಷೇಕಿಸಬೇಕು. ಬೇರೆ ಯಾರೂ ಎಂದೂ ರಾಜನಾಗಬಾರದು.”
ಶರೀರಜ್ವರದಿಂದ ತೀವ್ರವಾಗಿ ಸುಡುತ್ತಿದ್ದರೂ ಶಂತನುವು ದಾಶನಿಗೆ ಆ ವರವನ್ನು ಕೊಡಲು ಇಷ್ಟಪಡಲಿಲ್ಲ. ದಾಶಕನ್ಯೆಯ ಕುರಿತೇ ಯೋಚಿಸುತ್ತಾ ಶೋಕದಿಂದ ಹತಚೇತನನಾಗಿ ಮಹೀಪತಿಯು ಹಸ್ತಿನಾಪುರಕ್ಕೆ ಹಿಂದಿರುಗಿದನು.
ಒಮ್ಮೆ ಪುತ್ರ ದೇವವ್ರತನು ಚಿಂತೆ-ಶೋಕಗಳಿಂದ ಯೋಚನಾ ಮಗ್ನನಾಗಿದ್ದ ಶಂತನುವಿನ ಬಳಿಬಂದು ತಂದೆಯನ್ನುದ್ದೇಶಿಸಿ ಹೇಳಿದನು:
“ಎಲ್ಲ ಕಡೆಯಿಂದಲೂ ನೀನು ಕ್ಷೇಮದಿಂದಿದ್ದೀಯೆ. ಸರ್ವ ಪಾರ್ಥಿವರೂ ನಿನಗೆ ವಿಧೇಯರಾಗಿದ್ಡಾರೆ. ಹೀಗಿರುವಾಗ ಯಾವ ಕಾರಣದಿಂದ ನೀನು ಈ ರೀತಿ ತುಂಬಾ ನೋವಿನಿಂದಿರುವಂತೆ ದುಃಖಿತನಾಗಿ ಚಿಂತಿಸುತ್ತಿರುವೆ? ಏನೂ ಮಾತನಾಡದೇ ಯಾವುದರ ಧ್ಯಾನದಲ್ಲಿ ತೊಡಗಿದ್ದೀಯೆ?”
ಈ ರೀತಿ ಕೇಳಿದ ಪುತ್ರನಿಗೆ ಶಂತನುವು ಉತ್ತರಿಸಿದನು:
“ನೀನು ಹೇಳಿದ ಹಾಗೆ ನಿಸ್ಸಂಶಯವಾಗಿಯೂ ನಾನು ಏನನ್ನೋ ಯೋಚಿಸುತ್ತಿದ್ದೇನೆ. ಈ ಮಹಾಕುಲದಲ್ಲಿ ನೀನೊಬ್ಬನೇ ನನ್ನ ಮಗ. ಪುತ್ರಕ! ನಮ್ಮಂಥಹ ಮರ್ತ್ಯರ ಅನಿತ್ಯತೆಯ ಕುರಿತು ಶೋಕಿಸುತ್ತಿದ್ದೇನೆ. ನಿನಗೇನಾದರೂ ವಿಪತ್ತು ಬಂದರೆ ಈ ಕುಲವೇ ಇಲ್ಲವಾಗುತ್ತದೆ. ನಿಸ್ಸಂಶಯವಾಗಿಯೂ ನೀನೊಬ್ಬನೇ ನೂರು ಪುತ್ರರಿಗಿಂತಲೂ ಶ್ರೇಷ್ಠ. ನಾನೂ ಕೂಡ ವೃಥಾ ಇನ್ನೊಬ್ಬಳು ಪತ್ನಿಯನ್ನು ಮಾಡಿಕೊಳ್ಳಲು ಉತ್ಸುಕನಾಗಿಲ್ಲ. ಆದರೂ ನಾನು ಸಂತಾನವು ವಿನಾಶವಾಗಬಾರದೆಂದು ಬಯಸುತ್ತೇನೆ. ನಿನಗೆ ಮಂಗಳವಾಗಲಿ. ಒಂದೇ ಮಗನನ್ನು ಹೊಂದಿರುವುದು ಮತ್ತು ಮಕ್ಕಳನ್ನೇ ಪಡೆಯದಿರುವುದು ಇವೆರಡೂ ಒಂದೇ ಎಂದು ಧರ್ಮವಾದಿಗಳು ಹೇಳುತ್ತಾರೆ. ಅಗ್ನಿಹೋತ್ರ, ಮೂರು ವೇದಗಳು, ಮತ್ತು ದಕ್ಷಿಣಯುಕ್ತ ಯಜ್ಞ ಇವುಗಳೆಲ್ಲವನ್ನೂ ಸೇರಿಸಿದರೂ ಮಗನ ಹದಿನಾರರ ಒಂದಂಶದ ಯೋಗ್ಯತೆಯನ್ನು ಪಡೆಯುವುದಿಲ್ಲ. ಪುತ್ರನನ್ನು ಹೊಂದುವುದು ಸರ್ವ ಪ್ರಜೆಗಳಲ್ಲಿದ್ದಂತೆ ಮನುಷ್ಯನಲ್ಲಿಯೂ ಕೂಡ ಇದೆ ಎನ್ನುವುದರಲ್ಲಿ ನನಗೆ ಸ್ವಲ್ಪವೂ ಸಂಶಯವಿಲ್ಲ. ಇದು ಪುರಾಣಗಳಲ್ಲಿರುವ ಅನುತ್ತಮ ಶಾಶ್ವತ ವಿಚಾರ. ನೀನಾದರೂ ಶೂರ, ಸದಾಮರ್ಷಿ ಮತ್ತು ಶಸ್ತ್ರನಿತ್ಯ. ಶಸ್ತ್ರದ ಹೊರತು ಬೇರೆ ಯಾವುದರಿಂದಲೂ ನಿನಗೆ ಸಾವಾಗಲಾರದು. ನಿನಗೇನಾದರೂ ಆಪತ್ತಾಗಬಹುದೆಂಬ ಸಂಶವಿದ್ದಾಗ ನಾನು ಹೇಗೆ ತಾನೆ ಶಾಂತನಾಗಿರಲಿ? ಮಗೂ ಇದೇ ನನ್ನ ದುಃಖದ ಸಂಪೂರ್ಣ ಕಾರಣ.”
ಇದೇ ಸಂಪೂರ್ಣಕಾರಣವೆಂದು ತಿಳಿದ ಮಹಾಬುದ್ಧಿ ದೇವವ್ರತನು ಪುನರಾಲೋಚನೆಯನ್ನು ಮಾಡುತ್ತಾ ಹಿಂದಿರುಗಿದನು. ತಕ್ಷಣವೇ ತನ್ನ ತಂದೆಯ ಹಿತೈಷಿ ವೃದ್ಧ ಅಮಾತ್ಯನೋರ್ವನ ಬಳಿಬಂದು ಅವನಲ್ಲಿ ತಂದೆಯ ಶೋಕಕ್ಕೆ ಕಾರಣವನ್ನು ಕೇಳಿದನು. ಈ ರೀತಿ ಕೇಳಿದಾಗ ಅವನು ಕುರುಮುಖ್ಯನಿಗೆ ಕನ್ಯೆಯು ಕೇಳಿದ ವರದ ಕುರಿತು ಎಲ್ಲವನ್ನೂ ಹೇಳಿದನು. ನಂತರ ದೇವವ್ರತನು ಆ ವೃದ್ಧ ಕತ್ರಿಯನ ಜೊತೆಗೂಡಿ ದಾಶರಾಜನಲ್ಲಿಗೆ ಹೋಗಿ ತಾನೇ ತನ್ನ ತಂದೆಗೆ ಆ ಕನ್ಯೆಯನ್ನು ಕೇಳಿದನು. ದಾಶನು ಅವನನ್ನು ಸ್ವಾಗತಿಸಿ ವಿಧಿವತ್ತಾಗಿ ಪೂಜಿಸಿ, ರಾಜಸಂಸದಿಯಲ್ಲಿ ಕುಳಿತಿದ್ದಾಗ ಹೇಳಿದನು:
“ಪುರುಷರ್ಷಭ! ನೀನು ಶಂತನುವಿಗೆ ಪರ್ಯಾಪ್ತ ನಾಥ. ಪುತ್ರವಂತರಲ್ಲಿ ಶ್ರೇಷ್ಠನಾದವನ ಪುತ್ರ. ನಿನ್ನ ಮಾತನ್ನು ನಾನು ಹೇಗೆ ವಿರೋಧಿಸಲಿ? ಯಾರುತಾನೇ ಸಾಕ್ಷಾತ್ ಶತಕ್ರತುವಿನಂತಿರುವ, ಶ್ಲಾಘನೀಯ, ಬಯಸಿದ್ದ ಕುಲದೊಂದಿಗೆ ಸಂಬಂಧವನ್ನು ಅತಿಕ್ರಮಿಸಿ ಪಶ್ಚಾತ್ತಾಪ ಹೊಂದುವುದಿಲ್ಲ? ಗುಣಗಳಲ್ಲಿ ನಿಮ್ಮಂಥಹ ಆರ್ಯನ ಮಗಳಿವಳು. ಅವನ ವೀರ್ಯದಿಂದ ಈ ಯಶಸ್ವಿನೀ ಸತ್ಯವತಿಯು ಜನಿಸಿದಳು. ಅವನು ನನಗೆ ಅನೇಕ ಬಾರಿ ಸರ್ವರಾಜರುಗಳಲ್ಲಿ ‘ಅವನೇ ಸತ್ಯವತಿಯನ್ನು ವಿವಾಹವಾಗಲು ಅರ್ಹ!’ ಎಂದು ನಿನ್ನ ತಂದೆಯನ್ನು ಪ್ರಶಂಸಿಸುತ್ತಿದ್ದನು. ಹಿಂದೆ ಋಷಿಸತ್ತಮ ದೇವರ್ಶಿ ಅಸಿತನೂ ಕೂಡ ಸತ್ಯವತಿಯನ್ನು ತುಂಬಾ ಕೇಳಿಕೊಂಡು ಬಂದಿದ್ದ. ಆದರೆ ಅವನನ್ನೂ ನಾನು ತಿರಸ್ಕರಿಸಿದ್ದೆ. ಕನ್ಯೆಯ ತಂದೆಯಾಗಿ ನಾನು ನಿನ್ನಲ್ಲಿ ಕೆಲವನ್ನು ಹೇಳಬೇಕು. ಇಲ್ಲಿ ನಾನು ಕೇವಲ ಸಪತ್ನತ್ವದ (ದಾಯವಾದಿತ್ವದ ಅಥವಾ ಸ್ಪರ್ಧೆಯ) ದೋಷವನ್ನು ಮಾತ್ರ ಕಾಣುತ್ತಿದ್ದೇನೆ. ನಿನಗೆ ಎದುರಾದವನು ಗಂಧರ್ವ ಅಸುರ ಯಾರೇ ಇರಲಿ, ನೀನು ಸಿಟ್ಟಾದೆಯೆಂದರೆ ಅವನು ಎಂದೂ ಸುಖದಿಂದಿರಲು ಸಾಧ್ಯವಿಲ್ಲ. ಇಷ್ಟೇ ದೋಷವು ನನಗೆ ತೋರುತ್ತಿದೆ. ಬೇರೆ ಏನೂ ಇಲ್ಲ. ಕೊಡುವುದು ತೆಗೆದುಕೊಳ್ಳುವುದರಲ್ಲಿ ನಿನಗೆ ಮಂಗಳವಾಗಲಿ.”
ಈ ಮಾತುಗಳಿಗೆ ಗಾಂಗೇಯನು ತನ್ನ ತಂದೆಗೋಸ್ಕರವಾಗಿ, ಭೂಮಿಪಾಲರೆಲ್ಲರೂ ಕೇಳುತ್ತಿದಂತೆ, ಯಥೋಕ್ತ ಉತ್ತರವನ್ನಿತ್ತನು.
“ಸತ್ಯವಂತರಲ್ಲಿ ಶ್ರೇಷ್ಠ! ನನ್ನ ಮನಸ್ಸಿನ ಈ ಸತ್ಯವನ್ನು ಕೇಳು. ಇದೇ ರೀತಿ ಉತ್ಸಾಹದಿಂದ ಹೇಳುವ ಇನ್ನೊಬ್ಬನು ಹುಟ್ಟಿಲ್ಲ ಮುಂದೆ ಹುಟ್ಟುವುದೂ ಇಲ್ಲ. ನೀನು ಹೇಳುವ ಹಾಗೆಯೇ ಮಾಡುತ್ತೇನೆ. ಇವಳಲ್ಲಿ ಹುಟ್ಟಿದ ಪುತ್ರನೇ ರಾಜನಾಗುತ್ತಾನೆ.”
ಇದನ್ನು ಕೇಳಿದ ದಾಶನು ಪುನಃ ಉತ್ತರಿಸಿದನು:
“ಭರತರ್ಷಭ! ರಾಜ್ಯಕ್ಕಾಗಿ ದುಷ್ಕರ ಕರ್ಮವನ್ನೇ ಮಾಡಿದ್ದೀಯೆ. ಅಮಿತದ್ಯುತಿ ಶಂತನುವಿಗೆ ಪರ್ಯಾಪ್ತ ನಾಥನೇ ನೀನು. ಕನ್ಯೆಯ ಪ್ರಭುವೂ ಮತ್ತು ಕೊಡುವವನ ಈಶ್ವರನೂ ನೀನೆ. ಮಗಳನ್ನು ಪ್ರೀತಿಸುವವನಂತೆ ಇನ್ನೂ ಮಾಡಬೇಕಾದುದರ ಕುರಿತಾದ ನನ್ನ ಒಂದು ಮಾತನ್ನು ಕೇಳು. ಈ ರಾಜರ ಮಧ್ಯದಲ್ಲಿ ಸತ್ಯಧರ್ಮಪರಾಯಣನಾದ ನೀನು ಸತ್ಯವತಿಗಾಗಿ ಮಾಡಿದ ಪ್ರತಿಜ್ಞೆಯು ನಿನಗೆ ಅನುರೂಪವಾಗಿಯೇ ಇದೆ. ಅದರಂತೆಯೇ ಆಗುತ್ತದೆ ಎನ್ನುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ಆದರೆ ನಿನ್ನಲ್ಲಿ ಆಗುವ ಮಕ್ಕಳಲ್ಲಿ ಮಹಾ ಸಂಶಯವಿದೆ.”
ಅವನ ಮತವೇನೆಂದು ತಿಳಿದ ಆ ಸತ್ಯಧರ್ಮಪರಾಯಣನು ತನ್ನ ತಂದೆಗೆ ಪ್ರಿಯವಾದುದನ್ನು ಮಾಡಲೋಸುಗ ಈ ಭರವಸೆಯನ್ನಿತ್ತನು:
“ದಾಶರಾಜ! ನನ್ನ ತಂದೆಗೋಸ್ಕರ ಈ ಭೂಮಿಪಾಲರು ಕೇಳುವಂತೆ ಹೇಳುವ ಈ ಮಾತುಗಳನ್ನು ಆಲಿಸು. ರಾಜ್ಯವನ್ನು ನಾನು ಮೊದಲೇ ಪರಿತ್ಯಜಿಸಿದ್ದೇನೆ. ಈಗ ನಾನು ನನ್ನ ಮಕ್ಕಳ ಕುರಿತೂ ನಿಶ್ಚಯಿಸುತ್ತೇನೆ. ಈ ದಿನದಿಂದ ನಾನು ಬ್ರಹ್ಮಚಾರಿಯಾಗಿಯೇ ಇರುತ್ತೇನೆ. ಮಕ್ಕಳಿಲ್ಲದಿದ್ದರೂ ನನಗೆ ಅಕ್ಷಯ ದೇವಲೋಕವು ದೊರೆಯುತ್ತದೆ.”
ಅವನ ಈ ಮಾತುಗಳನ್ನು ಕೇಳಿ ಹರ್ಷದಿಂದ ನಡುಗುತ್ತಿದ್ದ ಧರ್ಮಾತ್ಮ ದಾಶನು “ಕೊಡುತ್ತೇನೆ!” ಎಂದು ಉತ್ತರಿಸಿದನು.
ಆಗ ಅಂತರಿಕ್ಷದಲ್ಲಿ ಅಪ್ಸರೆಯರು, ದೇವತೆಗಳು, ಋಷಿಗಣಗಳು “ಭೀಷ್ಮ! ಭೀಷ್ಮ!” ಎನ್ನುತ್ತಾ ಹೂಮಳೆಯನ್ನು ಸುರಿಸಿದರು. ಅನಂತರ ತನ್ನ ತಂದೆಗೋಸ್ಕರಳಾದ ಆ ಯಶಸ್ವಿನಿಗೆ ಹೇಳಿದನು:
“ಮಾತೆ! ರಥವನ್ನೇರು! ನಮ್ಮ ಮನೆಗೆ ಹೋಗೋಣ.”
ಹೀಗೆ ಹೇಳಿದ ಭೀಷ್ಮನು ಆ ಭಾಮಿನಿಯನ್ನು ರಥದಲ್ಲಿ ಕುಳಿಸಿ ಹಸ್ತಿನಾಪುರಕ್ಕೆ ಬಂದು ಶಂತನುವಿಗೆ ಒಪ್ಪಿಸಿದನು. ಅವನ ಈ ದುಷ್ಕರ ಕರ್ಮವನ್ನು ಪ್ರಶಂಸಿಸುತ್ತಾ ನರಾಧಿಪರು ಒಟ್ಟಾಗಿ ಒಂದೇ ವಾಖ್ಯದಲ್ಲಿ ಪುನಃ ಪುನಃ “ಇವನು ಭೀಷ್ಮ!” ಎಂದು ಉದ್ಗರಿಸಿದರು. ಭೀಷ್ಮನು ಮಾಡಿದ ಈ ದುಷ್ಕರ ಕೃತ್ಯವನ್ನು ಸ್ವಯಂ ನೋಡಿ ಸಂತುಷ್ಟನಾದ ತಂದೆ ಶಂತನುವು “ನಿನಗೆ ಸ್ವಚ್ಛಂದಮರಣವಿರಲಿ!” ಎಂದು ವರವನ್ನಿತ್ತನು.
Good work sir . If it written in normal Kannada means it will soon understood by everyone since the level of Kannada is quite related to dramatic and Sanskrit felt bored and tough to understand
Thanks very much for the feedback. I am sorry that everyone will probably not able to relate to the dramatic and Sanskritized Kannada that is used here. Unfortunately, this is the translation of the original Sanskrit Shlokas that are probably very old – at least 5000 years old. Sanskrit being a very concise language, I have tried to retain most of the original Sanskrit terms, which fortunately are also used in Kannada Puranic literature. Hence this product. I am sorry about that.
ನಮಸ್ಕಾರ ಶ್ರೀ ಮಂಜಪ್ಪನವರೆ ಇದು ಅದ್ಭುತವಾಗಿ ಊಂಟು. ಬಾರೀ ಒಳ್ಳೇ ಕೆಲಸ ಮಾಡಿದ್ದೀರಿ. ನಾನು ಇದನ್ನು 3 ಬರಿ ನಿದಾನಕ್ಕೆ ಇಡೀ ಒದಿದೆ. ಅಂತ ಸೊಗಸಾಗಿ ಬರೆದಿದ್ದೀರಿ. ದಯವಿಟ್ಟು ಒಂದು ಚೂರೂ ಬದಲಾಯಿಸಬೇಡಿ. ಅಷ್ತು ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಈ ಕಥೆಗಳನ್ನು ನಮ್ಮೂರಿನ ಯಕ್ಷಗಾನ ಮತ್ತು ತಾಳಮದ್ದಳೆಯಲ್ಲಿ ಕೇಳಿದ್ದೆ, ಬರವಣಿಗೆಯಲ್ಲಿ ನೋಡಿರಲಿಲ್ಲ. ಈಗ ಅವೆರಡರನ್ನು + ನಿಮ್ಮದನ್ನೂ ಸೇರಿಸಿ ನನ್ನದು ನಿರ್ಮಿಸಿದೆ. ಈ ತರಹ ವೀರ್ಯವನ್ನು ರಣಾಂಗಣದಿಂದ ಊರಲ್ಲಿ ಇರುವ ಹೆಂಡತಿಗೆ ಕಳಿಸುವುದು Greek, Inca ಮತಿತರ ಜನಾಂಗದಲ್ಲೂ ಇತ್ತೆಂದು ಕೇಳಿದ್ದೇನೆ. ಈಗಿನ ವೈಜ್ಞಾನಿಕ ಆವಿಶ್ಕಾರವನ್ನು ಆಗಲೇ ಇದ್ದುದು ಅಶ್ಚರ್ಯ. ಆದರೆ ನಮ್ಮ ಪುರಾಣಾಗಳಲ್ಲಿ 9 ತಿಂಗಳು ಗರ್ಬಿಣಿ ಆಗಿ ಹೆತ್ತವರು ಕಡಿಮೆ. ಎಲ್ಲ ಈ ತರಹದ ವೀರ್ಯ ಚಮತ್ಕಾರಗಳಿಂದಲೇ ಹುಟ್ಟಿದ್ದು.
ಮಹದುಪಕಾರವಾಯಿತು ಸ್ವಾಮಿ. ನಾನು ಬರೆದದ್ದು ಇಂತಿದೆ:
ಬನ್ನಿ ನನ್ನೋಡನೆ ದ್ವಾಪರಯುಗಕ್ಕೆ ಹೋಗೋಣ, ನನ್ನ ಜನನದ ರಹಸ್ಯ ಭೇದಿಸೋಣ. ರಾಜರುಗಳು, ಯೋಧರು, ವರ್ತಕರು ತಮ್ಮ ಯೌವನದ ಶಿಖರದಲ್ಲಿ ತಮ್ಮ ಹೆಚ್ಚು ಸಮಯವನ್ನು ಯುದ್ಧ, ರಾಜ್ಯ, ವಾಣಿಜ್ಯ ವಿಸ್ತರಣದಲ್ಲಿ , ಮನೆಯಿಂದ ದೂರದಲ್ಲಿ ಕಳೆಯುತ್ತಾರೆ. ಆದರೆ ಸಂತಾನಪ್ರಾಪ್ತಿಗೆ ಯೋಗ್ಯವಾದ ವಯಸ್ಸಲ್ಲಿ ತಮ್ಮ ತಮ್ಮ ಭಾರ್ಯೆ, ಇಲ್ಲ ಭಾರ್ಯೆಯರಿಂದ, ಧೀರ್ಘಕಾಲ ಬೇರೆಯಾಗಿರಬೇಕಾದ ಪ್ರಸಂಗದಲ್ಲಿ ಪರ್ಯಟನಾ ವೀರ್ಯ ಸ್ಕಲನ, ವೀರ್ಯ ಪ್ರಸರಣ ಮತ್ತು ವೀರ್ಯ ಸೇವನ ನಿತ್ಯದ ಪರಿಪಾಠವಾಗಿತ್ತು. ವೀರ್ಯ ಪ್ರಸರಣಕ್ಕೆ ನುರಿತ ರಣ ಹದ್ದುಗಳುನ್ನು ಉಪಯೋಗಿಸುತ್ತಿದ್ದರು. ಈ ಪರಿಯಲ್ಲಿ ರಾಜರ್ಷಿಸತ್ತಮ ವಸುವು ಒಮ್ಮೆ ಬೇಟೆಯಾಡಲು ಹೋಗಿರಲು, ಅವನ ವೀರ್ಯವನ್ನು ಪ್ರಸರಣ ಮಾಡುತ್ತಿರಲಾಗಿ, ರಣ ಹದ್ದಿಗೆ ಮಧ್ಯದಾರಿಯಲ್ಲಿ ಚಂಚಲತೆ ಬರಲು, ವೀರ್ಯದ ಲಕೋಟೆ ಕೆಳಗೆ ನೀರಿಗೆ ಬೀಳಲು, ಅಲ್ಲೇ ಶಾಪಗ್ರಸ್ತಳಾದ ಅಪ್ಸರೆ ಮೀನಿನ ಜನ್ಮತಾಳಿ ತನ್ನ ಮೋಕ್ಷಕ್ಕೆ ಕಾಯುತ್ತಿದ್ದಳು. ಆ ಅಪ್ಸರೆ ಮೀನು ಅದನ್ನು ನುಂಗಲು ಅದು ಗರ್ಭವತಿಯಾಯಿತು. ಬೆಸ್ತರ ನಾಯಕ ದಾಶರಾಜ ಆ ಮೀನನ್ನು ಹಿಡಿದು ಸೀಳಲಾಗಿ ನನ್ನ ಜನನವಾಯಿತು, ಅಪ್ಸರೆಗೆ ಮೋಕ್ಷವಾಯಿತು. ಪರಾಶರ ಮಹಾಮುನಿಗಳ ಕೃಪೆಯಿಂದ ನಾನು ಮತ್ಸ್ಯಗಂಧಿ, ಸುಗಂಧವನ್ನು ಪಡೆದು ಯೋಜನಾಗಂಧಿಯಾದೆ.
ನಮಸ್ಕಾರ. ನಿಮ್ಮ ಬರಹವೂ ತುಂಬಾ ಸೊಗಸಾಗಿದೆ. ನಿಮ್ಮ ಪ್ರೋತ್ಸಾಹನೆಗೆ ಧನ್ಯವಾದಗಳು.