Related imageಪಾಂಡವರಿಗೆ ರಾಜ್ಯಪ್ರಾಪ್ತಿ

ಕುರುಗಳಲ್ಲಿ ಪಾಂಡವರ ಕುರಿತಾದ ಸಮಾಲೋಚನೆ

ವಿಮನಸ್ಕ ರಾಜ ದುರ್ಯೋಧನನು ಅಶ್ವತ್ಥಾಮ, ಮಾತುಲ, ಕರ್ಣ, ಕೃಪ ಮತ್ತು ತನ್ನ ಭ್ರಾತೃಗಳ ಸಹಿತ ದ್ರೌಪದಿಯು ಶ್ವೇತವಾಹನನ್ನು ವರಿಸಿದ್ದುದನ್ನು ಕಂಡು ವಿನಿವೃತನಾಗಿ ಹಿಂದಿರುಗಿದನು. ನಾಚಿಕೊಂಡ ದುಃಶಾಸನನು ಅವನಲ್ಲಿ ಪಿಸುಮಾತಿನಲ್ಲಿ ಹೇಳಿದನು:

“ಬ್ರಾಹ್ಮಣನಾಗಿಲ್ಲದಿದ್ದರೆ ಎಂದೂ ಅವನು ದ್ರೌಪದಿಯನ್ನು ಪಡೆಯುತ್ತಿರಲಿಲ್ಲ. ರಾಜನ್! ಯಾರಿಗೂ ಅವನು ಧನಂಜಯನೆಂದು ಗೊತ್ತಾಗಲಿಲ್ಲ. ದೈವವೇ ಪರಮವಾದದ್ದು ಪೌರುಷವು ನಿರರ್ಥಕ ಎನ್ನುವುದು ನನ್ನ ಅಭಿಪ್ರಾಯ. ಪಾಂಡವರು ಇನ್ನೂ ಜೀವದಿಂದಿದ್ದಾರೆಂದರೆ ನಮ್ಮ ಪೌರುಷಕ್ಕೆ ಧಿಕ್ಕಾರ!”

ಈ ರೀತಿ ಮಾತನಾಡುತ್ತಾ ಪುರೋಚನನನ್ನು ನಿಂದಿಸುತ್ತಾ ಆ ವಿಗತಚೇತಸ ದೀನರು ಹಸ್ತಿನಪುರವನ್ನು ಪ್ರವೇಶಿಸಿದರು. ಬೆಂಕಿಯಿಂದ ತಪ್ಪಿಸಿಕೊಂಡು ದ್ರುಪದನನ್ನು ಸೇರಿದ ಆ ಮಹೌಜಸ ಪಾರ್ಥರನ್ನು ನೋಡಿ ಮತ್ತು ಸರ್ವ ಯುದ್ಧ ವಿಶಾರದ ಧೃಷ್ಟಧ್ಯುಮ್ನ, ಶಿಖಂಡಿ ಮತ್ತು ದ್ರುಪದನ ಇತರ ಮಕ್ಕಳನ್ನು ಯೋಚಿಸಿ ಅವರೆಲ್ಲರೂ ವಿಗತಸಂಕಲ್ಪರಾಗಿ ನಡುಗಿದರು.

ಆದರೆ ದ್ರೌಪದಿಯು ಪಾಂಡವರನ್ನು ವರಿಸಿದಳು ಮತ್ತು ಧಾರ್ತರಾಷ್ಟ್ರರ ದರ್ಪವು ಭಗ್ನವಾಗಿ ನಾಚಿಕೊಂಡು ಹಿಂದಿರುಗಿದರು ಎಂದು ಕೇಳಿ ಸಂತೋಷಗೊಂಡ ಕ್ಷತ್ತ ವಿದುರನು ವಿಸ್ಮಿತನಾಗಿ

“ಕುರುಗಳು ವರ್ಧಿಸಿದ್ದಾರೆ!"

ಎಂದು ಧೃತರಾಷ್ಟ್ರನಿಗೆ ಕೂಗಿ ಹೇಳಿದನು. ವಿದುರನ ಈ ಮಾತುಗಳನ್ನು ಕೇಳಿ ಪರಮಪ್ರೀತ ನೃಪ ವೈಚಿತ್ರವೀರ್ಯನು

“ಒಳ್ಳೆಯದೇ ಆಯಿತು! ಒಳ್ಳೆಯದೇ ಆಯಿತು!”

ಎಂದನು. ಪ್ರಾಜ್ಞಚಕ್ಷು ನರೇಶ್ವರನು ಅವಿಜ್ಞಾನದಿಂದ ದ್ರುಪದ ಕನ್ಯೆಯು ತನ್ನ ಜ್ಯೇಷ್ಠ ಪುತ್ರ ದುರ್ಯೋಧನನನ್ನೇ ವರಿಸಿದ್ದಾಳೆ ಎಂದು ಭಾವಿಸಿದ್ದನು. ಅವನು ದ್ರೌಪದಿಗೋಸ್ಕರ ಬಹು ಭೂಷಣಗಳನ್ನು ಮತ್ತು

“ಕೃಷ್ಣೆಯನ್ನು ಕರೆದುಕೊಂಡು ಬಾ!”

ಎಂದು ಪುತ್ರ ದುರ್ಯೋಧನನಿಗೆ ಆಜ್ಞಾಪಿಸಿದನು. ನಂತರ ವಿದುರನು

“ಪಾಂಡವರು ವರಿಸಲ್ಪಟ್ಟಿದ್ದಾರೆ! ಸರ್ವ ವೀರರೂ ಕುಶಲದಿಂದಿದ್ದಾರೆ! ಬಹು ಬಲಸಮನ್ವಿತರೊಂದಿಗೆ ಸಂಬಂಧವನ್ನು ಮಾಡಿಕೊಂಡ ಅವರು ದ್ರುಪದನಿಂದ ಸತ್ಕರಿಸಲ್ಪಟ್ಟಿದ್ದಾರೆ!”

ಎಂದು ವರದಿಮಾಡಿದನು. ಆಗ ಧೃತರಾಷ್ಟ್ರನು ಹೇಳಿದನು:

“ಪಾಂಡುವಿನ ಪುತ್ರರು ಅವನಿಗೆ ಹೇಗೋ ಅದಕ್ಕಿಂತಲೂ ಅಧಿಕವಾಗಿ ನನಗಾಗುತ್ತಾರೆ. ವಿದುರ! ವೀರ ಪಾಂಡವರು ಕುಶಲರಾಗಿದ್ದು ಮಿತ್ರರನ್ನು ಪಡೆದಿದ್ದಾರೆ ಎಂದು ಕೇಳಿ ನನ್ನ ಸಂತೋಷವು ಇನ್ನೂ ಹೆಚ್ಚಾಗಿದೆ ಎಂದು ನನ್ನ ಅನಿಸಿಕೆ. ಸಂಪತ್ತನ್ನು ಕಳೆದುಕೊಂಡ ಮತ್ತು ಬಲಶಾಲಿಯಾಗಬೇಕೆನ್ನುವ ಯಾವ ಪಾರ್ಥಿವನು ದ್ರುಪದ ಮತ್ತು ಅವನ ಬಾಂಧವರ ಮಿತ್ರತ್ವವನ್ನು ಬಯಸುವುದಿಲ್ಲ?”

ಅವನು ಹಾಗೆ ಹೇಳಲು ವಿದುರನು ಉತ್ತರಿಸಿದನು:

“ರಾಜನ್! ನಿನ್ನ ಈ ಬುದ್ಧಿಯು ನೂರು ವರ್ಷಗಳು ಸದಾ ಇರಲಿ!”

ನಂತರ ದುರ್ಯೋಧನ ಮತ್ತು ರಾಧೇಯರು ಧೃತರಾಷ್ಟ್ರನಲ್ಲಿಗೆ ಬಂದು ಈ ಮಾತುಗಳನ್ನಾಡಿದರು:

“ನೃಪ! ವಿದುರನ ಸನ್ನಿಧಿಯಲ್ಲಿ ನಿನ್ನೊಡನೆ ಮಾತನಾಡಲು ಸಾಧ್ಯವಾಗಲಿಲ್ಲ. ಆದುದರಿಂದ ನಾವು ನಿನ್ನಲ್ಲಿ ಏಕಾಂತದಲ್ಲಿ ಕೇಳುತ್ತಿದ್ದೇವೆ. ನೀನು ಈಗ ಏನು ಮಾಡಬೇಕೆಂದು ಯೋಚಿಸಿದ್ದೀಯೆ? ವಿದುರನ ಎದಿರು ಅವರ ಪ್ರಶಂಸೆಯನ್ನು ಮಾಡುತ್ತಿದ್ದೆಯಲ್ಲ! ನಿನ್ನ ಪ್ರತಿಸ್ಪರ್ಧಿಗಳ ಯಶಸ್ಸನ್ನು ನಿನ್ನದೇ ಯಶಸ್ಸೆಂದು ಭಾವಿಸುತ್ತಿದ್ದೀಯಾ? ಒಂದು ಕೆಲಸವನ್ನು ಮಾಡಬೇಕೆಂದಿದ್ದರೆ ಇನ್ನೊಂದನ್ನು ಮಾಡಿಬಿಡುತ್ತೀಯೆ. ಏನಾದರೂ ಮಾಡಿ ನಿತ್ಯವೂ ಅವರ ಬಲವನ್ನು ನಾಶಪಡಿಸಬೇಕು. ಅವರು ನಮ್ಮನ್ನು ಪುತ್ರ ಬಲ ಬಾಂಧವರ ಸಹಿತ ನುಂಗಲಾರದಂತೆ ನಾವೆಲ್ಲರೂ ಏನಾದರೂ ಉಪಾಯವನ್ನು ಯೋಚಿಸುವ ಕಾಲವು ಪ್ರಾಪ್ತವಾಗಿದೆ.”

ಧೃತರಾಷ್ಟ್ರನು ಹೇಳಿದನು:

“ನಿಮ್ಮ ಹಾಗೆ ನಾನೂ ಕೂಡ ಅದರ ಕುರಿತೇ ಚಿಂತಿಸುತ್ತೇನೆ. ವಿದುರನ ಎದಿರು ನನಗನಿಸಿದ್ದುದನ್ನು ಹೇಳಲು ಇಷ್ಟಪಡುವುದಿಲ್ಲ. ವಿದುರನಿಗೆ ನನ್ನ ನಿಜವಾದ ಅಭಿಪ್ರಾಯ ಇಂಗಿತಗಳು ತಿಳಿಯಬಾರದೆಂದು ಅವನ ಎದಿರು ವಿಶೇಷವಾಗಿ ಅವರ ಗುಣಗಳನ್ನೇ ಹೊಗಳುತ್ತಿರುತ್ತೇನೆ. ಸುಯೋಧನ! ಈ ವಿಷಯದಲ್ಲಿ ನಿನಗೇನನ್ನಿಸುತ್ತಿದೆ ಎನ್ನುವುದನ್ನು ಹೇಳು. ರಾಧೇಯ! ನೀನೂ ಕೂಡ ನಿನ್ನ ಅಭಿಪ್ರಾಯವನ್ನು ಹೇಳು.”

ದುರ್ಯೋಧನನು ಹೇಳಿದನು:

“ಪಾಂಡವರಲ್ಲಿಯೇ ಕುಂತಿಪುತ್ರರು ಮತ್ತು ಮಾದ್ರಿಪುತ್ರರಲ್ಲಿ ಭೇದವನ್ನುಂಟು ಮಾಡಲು ಸಮರ್ಥ ಆಪ್ತ ಕುಶಲವಿಪ್ರರನ್ನು ಇಂದೇ ಕಳುಹಿಸೋಣ. ಅಥವಾ ರಾಜ ದ್ರುಪದ, ಅವನ ಪುತ್ರರು ಮತ್ತು ಅಮಾತ್ಯರು ಎಲ್ಲರಿಗೂ ಮಹಾ ವಿತ್ತಸಂಚಯಗಳನ್ನಿತ್ತು ಕುಂತೀಪುತ್ರ ರಾಜ ಯುಧಿಷ್ಠಿರನನ್ನು ಪರಿತ್ಯಜಿಸುವಂತೆ ಮಾಡೋಣ. ಅಥವಾ ಅವರು ಅಲ್ಲಿಯೇ ವಾಸಿಸಲು ಬಯಸುವಂತೆ ಮಾಡೋಣ. ಅವರು ಇಲ್ಲಿ ಬಂದು ವಾಸಮಾಡುವುದರ ದುಷ್ಪರಿಣಾಮಗಳನ್ನು ಪುನಃ ಪುನಃ ಒತ್ತಿಹೇಳಿ ಪಾಂಡವರು ಅಲ್ಲಿಯೇ ವಾಸಿಸಲು ಮನಸ್ಸುಮಾಡುವ ಹಾಗೆ ಮಾಡೋಣ. ಅಥವಾ ಒಳ್ಳೆಯ ಕುಶಲ ಉಪಾಯನಿಪುಣ ಮನುಷ್ಯರ ಮೂಲಕ ಪಾರ್ಥ ಪರಸ್ಪರರಲ್ಲಿ ಭೇದವುಂಟಾಗುವಂತೆ ಮಾಡಬೇಕು. ಅಥವಾ ಅವರು ಅಷ್ಟೊಂದು ಜನರಿದ್ದುದರಿಂದ ಸುಲಭವಾಗಿ ಕೃಷ್ಣೆಯೇ ಅವರ ವಿರುದ್ಧ ಹೋಗುವಹಾಗೆ ಮಾಡಬಹುದು. ಇಲ್ಲವಾದರೆ, ಉಪಾಯಕುಶಲರಿಂದ ಭೀಮಸೇನನ ಸಾವನ್ನು ಏರ್ಪಡಿಸೋಣ. ಅವರಲ್ಲಿ ಎಲ್ಲರಿಗಿಂತ ಹೆಚ್ಚು ಬಲಶಾಲಿಯಾದ ಅವನು ಇಲ್ಲವಾದ ನಂತರ ತಮ್ಮ ತೇಜಸ್ಸುಗಳನ್ನು ಕಳೆದುಕೊಂಡು ಅವರೆಲ್ಲರೂ ಉತ್ಸಾಹಹೀನರಾಗುತ್ತಾರೆ. ಅವರೆಲ್ಲರ ಆಶ್ರಯವು ಅವನೇ ಒಬ್ಬನಾಗಿದ್ದುದರಿಂದ, ಅವನಿಲ್ಲವಾದಾಗ ರಾಜ್ಯದ ಮೇಲಿನ ಅವರ ಪ್ರೀತಿ, ಪ್ರಯತ್ನ ಎರಡೂ ಕಡಿಮೆಯಾಗುತ್ತವೆ. ವೃಕೋದರನ ಬೆಂಬಲಮಾತ್ರದಿಂದ ಸಮರದಲ್ಲಿ ಅರ್ಜುನನು ಅಜೇಯನು. ಅವನಿಲ್ಲದಿದ್ದರೆ ಫಲ್ಗುಣನು ಯುದ್ಧದಲ್ಲಿ ರಾಧೇಯನ ಕಾಲುಭಾಗಕ್ಕೂ ಬರುವುದಿಲ್ಲ! ಭೀಮಸೇನನಿಲ್ಲದೇ ತಮ್ಮ ಮಹಾ ದೌರ್ಬಲ್ಯವನ್ನು ಅರಿತು ಮತ್ತು ನಮ್ಮ ಬಲವನ್ನು ಅರ್ಥಮಾಡಿಕೊಂಡು ಅವರ ಬಲವು ಕ್ರಮೇಣ ನಶಿಸಿಹೋಗುತ್ತದೆ. ಪಾರ್ಥರು ಇಲ್ಲಿಗೆ ಬಂದು ನಮ್ಮ ಆಜ್ಞೆಗಳಿಗೆ ನಡೆದುಕೊಂಡರೆಂದರೆ ಅವರನ್ನು ಸುಲಭವಾಗಿ ನಿರ್ಮೂಲನ ಮಾಡಬಹುದು. ಅಥವಾ ಅವರಿಗೆ ಒಬ್ಬರಾದ ಮೇಲೆ ಇನ್ನೊಬ್ಬ ಸುಂದರ ತರುಣಿಯರನ್ನು ತೋರಿಸಿ ಆಸೆಪಡಿಸೋಣ. ಹೀಗೆ ಕೃಷ್ಣೆಯು ಕೌಂತೇಯರನ್ನು ತಿರಸ್ಕರಿಸುತ್ತಾಳೆ. ಅಥವಾ ರಾಧೇಯನನ್ನು ಕಳುಹಿಸಿ ಅವರನ್ನು ಇಲ್ಲಿಗೆ ಕರೆತರಿಸೋಣ. ದಾರಿಯಲ್ಲಿ ಆಪ್ತ ಢಕಾಯಿತರು ಅವರ ಮೇಲೆ ಆಕ್ರಮಣ ಮಾಡಿ ಕೊಲ್ಲುವ ಹಾಗೆ ಮಾಡೋಣ. ಇವುಗಳಲ್ಲಿ ನಿನಗೆ ಯಾವುದು ನಿರ್ದೋಷವೆನಿಸುತ್ತದೆಯೋ ಅದನ್ನು ತಡವಾಗುವುದರೊಳಗೆ ಕಾರ್ಯಗತಗೊಳಿಸು. ಪಾರ್ಥಿವರ್ಷಭ ದ್ರುಪದನು ಸಂಪೂರ್ಣ ವಿಶ್ವಾಸವನ್ನು ಪಡೆಯುವುದರೊಳಗೆ ಅವರ ಕುರಿತು ಏನಾದರೂ ಮಾಡಲು ಸಾಧ್ಯ. ನಂತರ ಸಾಧ್ಯವಾಗುವುದಿಲ್ಲ. ನನ್ನ ಪ್ರಕಾರ ಇವುಗಳ ಮೂಲಕ ಅವರನ್ನು ನಿಗ್ರಹಿಸಬಲ್ಲೆವು. ರಾಧೇಯ! ನಾನು ಸರಿಯೋ ಅಥವಾ ಅಲ್ಲವೋ? ನಿನಗೇನನ್ನಿಸುತ್ತದೆ?”

ಕರ್ಣನು ಹೇಳಿದನು:

“ದುರ್ಯೋಧನ! ನಿನಗೆ ಪ್ರಜ್ಞೆ ಸರಿಯಿಲ್ಲ ಎಂದು ನನ್ನ ಅಭಿಪ್ರಾಯ. ಉಪಾಯಗಳಿಂದ ಪಾಂಡವರನ್ನು ಗೆಲ್ಲಲು ಶಕ್ಯವಿಲ್ಲ. ಈ ಹಿಂದೆಯೂ ಕೂಡ ಅವರನ್ನು ನಿಗ್ರಹಿಸಲು ನೀನು ಸೂಕ್ಷ್ಮ ಉಪಾಯಗಳನ್ನು ಬಳಸಿದೆ. ಆದರೆ ಅದು ನಿನ್ನಿಂದ ಸಾಧ್ಯವಾಗಲಿಲ್ಲ. ಇನ್ನೂ ರೆಕ್ಕೆಬಾರದಿದ್ದ ಶಿಶುಗಳಾದ ಅವರು ಇಲ್ಲಿಯೇ ನಿನ್ನ ಸಮೀಪದಲ್ಲಿ ಇದ್ದರು. ಆದರೂ ಅವರನ್ನು ಬಾಧಿಸಲು ಸಾಧ್ಯವಾಗಲಿಲ್ಲ. ಈಗ ಅವರೆಲ್ಲರಿಗೆ ರೆಕ್ಕೆಗಳು ಬಂದಿವೆ, ವಿದೇಶದಲ್ಲಿದ್ದಾರೆ, ಬೆಳೆದಿದ್ದಾರೆ. ಈಗ ನಿನ್ನ ಉಪಾಯಗಳಿಂದ ಕೌಂತೇಯರನ್ನು ಗೆಲ್ಲಬಹುದೆಂದು ನನಗನ್ನಿಸುವುದಿಲ್ಲ. ಆ ದಿಷ್ಟಕೃತರನ್ನು ವ್ಯಸನಗಳಿಗೆ ಬಂಧಿಸಲಿಕ್ಕೂ ಆಗುವುದಿಲ್ಲ. ಪಿತೃಪಿತಾಮಹರ ರಾಜ್ಯವನ್ನು ಪಡೆಯಲು ಬಯಸುತ್ತಿರುವ ಅವರು ಶಂಕಿತರಾಗಿದ್ದಾರೆ. ಪರಸ್ಪರರಲ್ಲಿ ಭೇದವನ್ನುಂಟುಮಾಡಲೂ ಶಕ್ಯವಿಲ್ಲ. ಒಬ್ಬಳೇ ಪತ್ನಿಯಲ್ಲಿ ಅನುರಕ್ತರಾದ ಪರಸ್ಪರರಲ್ಲಿ ಭೇದವುಂಟಾಗುವುದಿಲ್ಲ. ಅವರಿಂದ ಕೃಷ್ಣೆಯನ್ನು ಬೇರೆಮಾಡಲಿಕ್ಕೂ ಸಾಧ್ಯವಿಲ್ಲ. ಎಲ್ಲವನ್ನೂ ಕಳೆದುಕೊಂಡಿದ್ದಾಗಲೇ ಅವರನ್ನು ವರಿಸಿದ್ದವಳು ಅವರು ಇನ್ನೂ ಅಭಿವೃದ್ಧಿಪರರಾಗಿದ್ದಾಗ ಏನು ಹೇಳಬಹುದು? ಒಬ್ಬನಿಗಿಂಥ ಹೆಚ್ಚು ಪತಿಯನ್ನು ಹೊಂದಿರುವುದು ಒಂದು ಈಪ್ಸಿತ ಗುಣವೆಂದು ಸ್ತ್ರೀಯರು ಯೋಚಿಸುತ್ತಾರೆ. ಅದನ್ನು ಪಡೆದ ಕೃಷ್ಣೆಯನ್ನು ಅದರಿಂದ ದೂರಮಾಡುವುದು ಅಷ್ಟು ಸುಲಭವಲ್ಲ. ಪೂಜನೀಯ ನಡವಳಿಕೆಯು ರಾಜ ಪಾಂಚಾಲ್ಯನು ಧನಪ್ರಿಯನಲ್ಲ. ರಾಜ್ಯಗಳನ್ನು ಇತ್ತರೂ ಕೂಡ ಅವನು ಕೌಂತೇಯರನ್ನು ತ್ಯಜಿಸುವುದಿಲ್ಲ ಎನ್ನುವುದು ನಿಶ್ಚಯ. ಅವನಂತೆಯೆ ಅವನ ಪುತ್ರನೂ ಕೂಡ ಗುಣವಂತ ಮತ್ತು ಪಾಂಡವರಲ್ಲಿ ಅನುರಕ್ತ. ಆದುದರಿಂದ ಯಾವುದೇ ಉಪಾಯವೂ ಅವರ ಮೇಲೆ ಯಶಸ್ವಿಯಾಗುವುದಿಲ್ಲ ಎನ್ನುವುದು ನನ್ನ ಅನಿಸಿಕೆ. ಆದರೆ ನಾವು ಇಷ್ಟನ್ನು ಮಾಡಬಹುದು. ಎಲ್ಲಿಯೂ ನೆಲೆಯೂರುವುದರೊಳಗೆ ಪಾಂಡವರನ್ನು ಹೊಡೆದುರುಳಿಸಬಹುದು. ಇದು ನಿನ್ನ ವಿಕ್ರಮಕ್ಕೆ ಹಿಡಿಸಬಹುದು. ನಮ್ಮ ಪಕ್ಷವು ದೊಡ್ಡದಾಗಿರುವಾಗ ಮತ್ತು ಪಾಂಚಾಲನ ಪಕ್ಷವು ಸಣ್ಣದಾಗಿರುವಾಗಲೇ ನಾವು ಅವರನ್ನು ಹೊಡೆದುರುಳಿಸಬೇಕು. ಈ ವಿಷಯದಲ್ಲಿ ವಿಳಂಬಮಾಡಬಾರದು. ಗಾಂಧಾರೇ! ಅವರ ವಾಹನಗಳು ಹೆಚ್ಚಾಗುವುದರ ಮತ್ತು ಮಿತ್ರರು ಬಹಳವಾಗುವುದರ ಮೊದಲೇ ಅವರ ಮೇಲೆ ಯುದ್ಧಸಾರಬೇಕು. ಪುತ್ರರೊಂದಿಗೆ ರಾಜ ಪಾಂಚಾಲ್ಯನು ಏನನ್ನಾದರೂ ಮಾಡಲು ಮನಸ್ಸು ಮಾಡುವುದಕ್ಕಿಂತ ಮೊದಲೇ ಅವರ ಮೇಲೆ ಆಕ್ರಮಣಮಾಡು. ಪಾಂಡವರಿಗೆ ರಾಜ್ಯವನ್ನು ದೊರಕಿಸಲು ವಾರ್ಷ್ಣೇಯನು ಯಾದವ ಸೇನೆಯನ್ನು ತರುವುದರ ಮೊದಲೇ ಅವರ ಮೇಲೆ ಆಕ್ರಮಣಮಾಡಬೇಕು. ಪಾಂಡವರಿಗೋಸ್ಕರ ಕೃಷ್ಣನು ತನ್ನ ಸಂಪತ್ತು, ವಿವಿಧ ಭೋಗಗಳು ಮತ್ತೇನು ರಾಜ್ಯವನ್ನೂ ತ್ಯಾಗಮಾಡುತ್ತಾನೆ. ಮಹಾತ್ಮ ಭರತನು ತನ್ನ ವಿಕ್ರಮದಿಂದಲೇ ಈ ಮಹಿಯನ್ನು ಪಡೆದನು. ಪಾಕಶಾಸನನೂ ಕೂಡ ತನ್ನ ವಿಕ್ರಮದಿಂದಲೇ ಮೂರುಲೋಕಗಳನ್ನು ಗೆದ್ದನು. ಕ್ಷತ್ರಿಯರಲ್ಲಿ ವಿಕ್ರಮವನ್ನೇ ಪ್ರಶಂಸಿಸುತ್ತಾರೆ. ಶೂರರಿಗೆ ವಿಕ್ರಮವೇ ಸ್ವಧರ್ಮ. ಮಹಾ ಚತುರಂಗಬಲದಿಂದ ದ್ರುಪದನನ್ನು ಸದೆಬಡಿದು ಶೀಘ್ರವಾಗಿ ಪಾಂಡವರನ್ನು ಇಲ್ಲಿಗೆ ಕರೆತರಬೇಕು. ಸಾಮ, ದಾನ, ಭೇದ, ಯಾವುದರಿಂದಲೂ ಪಾಂಡವರನ್ನು ಜಯಿಸಲು ಸಾಧ್ಯವಿಲ್ಲ. ವಿಕ್ರಮದಿಂದ ಮಾತ್ರ ಅವರನ್ನು ಜಯಿಸಬಹುದು. ವಿಕ್ರಮದಿಂದ ಅವರನ್ನು ಜಯಿಸಿ ಅಖಿಲ ಮೇದಿನಿಯನ್ನು ಭೋಗಿಸು. ಬೇರೆ ಯಾವ ಕಾರ್ಯೋಪಾಯವೂ ನನಗೆ ತೋಚುತ್ತಿಲ್ಲ.”

ರಾಧೇಯನ ಮಾತುಗಳನ್ನು ಕೇಳಿದ ಪ್ರತಾಪಿ ಧೃತರಾಷ್ಟ್ರನು ಅದನ್ನು ಪ್ರಶಂಸಿಸಿ ನಂತರ ಈ ಮಾತುಗಳನ್ನಾಡಿದನು:

“ಮಹಾಪ್ರಜ್ಞ ಕೃತಾಸ್ತ್ರ ಸೂತನಂದನ! ಈ ವಿಕ್ರಮ ಮಾತುಗಳು ನಿನ್ನಂಥವರಿಗೆ ಸರಿಯೆನಿಸುತ್ತದೆ. ಆದರೆ ಭೀಷ್ಮ, ದ್ರೋಣ, ವಿದುರ ಮತ್ತು ನೀವಿಬ್ಬರೂ ಸೇರಿ ನಮಗೆ ಸುಖವನ್ನು ತರುವಂತೆ ಏನಾದರೂ ಯೋಚಿಸಿ.”

ನಂತರ ಆ ಸುಮಹಾಯಶ ಮಹಾರಾಜ ಧೃತರಾಷ್ಟ್ರನು ಆ ಎಲ್ಲ ಮಂತ್ರಿಗಳನ್ನೂ ಕರೆಯಿಸಿ, ಅವರೊಂದಿಗೆ ಮಂತ್ರಾಲೋಚನೆ ಮಾಡಿದನು. ಭೀಷ್ಮನು ಹೇಳಿದನು:

“ಪಾಂಡುಪುತ್ರರೊಂದಿಗೆ ಯುದ್ಧವು ನನಗೆ ಎಂದೂ ಇಷ್ಟವಾಗುವುದಿಲ್ಲ. ನನಗೆ ಧೃತರಾಷ್ಟ್ರನು ಹೇಗೋ ಹಾಗೆ ಪಾಂಡುವೂ ಅಗಿದ್ದನು ಎನ್ನುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲದಿರಲಿ. ಗಾಂಧಾರಿಯರ ಪುತ್ರರ ಹಾಗೆ ನನಗೆ ಕುಂತೀಸುತರೂ ಹೌದು. ಅವರು ಹೇಗೆ ಧೃತರಾಷ್ಟ್ರನ ರಕ್ಷಣೆಯಲ್ಲಿದ್ದಾರೋ ಹಾಗೆ ನನ್ನ ರಕ್ಷಣೆಯಲ್ಲಿಯೂ ಇದ್ದಾರೆ. ಅವರು ನನಗೆ ಮತ್ತು ರಾಜನಿಗೆ ಹೇಗೋ ಹಾಗೆ ದುರ್ಯೋಧನನಿಗೂ ಮತ್ತು ಅನ್ಯ ಕುರುಗಳೆಲ್ಲರಿಗೂ ಹೌದು. ಹೀಗಿರುವಾಗ ನಾನು ಯುದ್ಧವನ್ನು ಬಯಸುವುದಿಲ್ಲ. ಆ ವೀರರೊಂದಿಗೆ ಸಂಧಿಮಾಡಿಕೊಂಡು ಅವರಿಗೆ ಭೂಮಿಯನ್ನು ಕೊಡಬೇಕು. ಪಿತ ಪ್ರಪಿತಾಮಹರ ಈ ರಾಜ್ಯವು ಆ ಕುರೂತ್ತಮರದ್ದೂ ಹೌದು. ದುರ್ಯೋಧನ! ನೀನು ಹೇಗೆ ಈ ರಾಜ್ಯವನ್ನು ನನ್ನ ಪಿತ್ರಾರ್ಜಿತವೆಂದು ಕಾಣುತ್ತೀಯೋ ಹಾಗೆ ಪಾಂಡವರೂ ಕಾಣುತ್ತಾರೆ. ತಪಸ್ವಿ ಪಾಂಡವರಿಗೆ ರಾಜ್ಯ ದೊರೆಯದಿದ್ದರೆ ಇದು ನಿಮಗಾಗಲೀ ಅಥವಾ ಬೇರೆ ಯಾವ ಭಾರತನಿಗಾಗಲೀ ಏಕೆ ದೊರೆಯಬೇಕು? ನೀನು ಈ ರಾಜ್ಯವನ್ನು ಧರ್ಮಪೂರ್ವಕ ಪಡೆದಿದ್ದರೆ ನಿನಗಿಂಥಲೂ ಮೊದಲೇ ಅವರು ರಾಜ್ಯವನ್ನು ಪಡೆದಿದ್ದರು ಎಂದು ನನ್ನ ಅಭಿಪ್ರಾಯ. ಅರ್ಧ ರಾಜ್ಯವನ್ನು ಅವರಿಗೆ ಒಳ್ಳೆಯರೀತಿಯಲ್ಲಿ ನೀಡೋಣ. ಅದೇ ನಮ್ಮೆಲ್ಲರ ಹಿತದಲ್ಲಿದೆ. ಬೇರೆ ಏನು ಮಾಡಿದರೂ ಅದು ನಮಗೆ ಹಿತವಾಗುವುದಿಲ್ಲ. ಮತ್ತು ನಿನ್ನ ಮೇಲೆಯೇ ಸಕಲ ಅಪಕೀರ್ತಿಯೂ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಕೀರ್ತಿಯೇ ಪರಮ ಬಲವು. ಕೀರ್ತಿಯನ್ನು ರಕ್ಷಣೆಮಾಡಿಕೋ. ಕೀರ್ತಿಯನ್ನು ಕಳೆದುಕೊಂಡ ಮನುಷ್ಯನ ಜೀವನವೇ ನಿಷ್ಫಲವೆಂದು ಹೇಳುತ್ತಾರೆ. ಮನುಷ್ಯನ ಕೀರ್ತಿಯು ಅವನ ಜೀವವಿರುವರೆಗೂ ನಶಿಸುವುದಿಲ್ಲ. ಆದರೆ ಕೀರ್ತಿಯನ್ನೇ ಕಳೆದುಕೊಂಡವನ ಜೀವನವೇ ನಶಿಸಿಹೋದಂತೆ. ಈ ನಿನ್ನ ಕುರು ಪೂರ್ವಜರಿಗೆ ಅನುರೂಪ ಕುರುಕುಲೋಚಿತ ಧರ್ಮವನ್ನು ಪರಿಪಾಲಿಸು. ಆ ವೀರರೆಲ್ಲರೂ ಬದುಕಿದ್ದಾರೆ ಎನ್ನುವುದೇ ನಮ್ಮ ಅದೃಷ್ಟ, ಆ ಪೃಥೆಯು ಜೀವಂತವಿದ್ದಾಳೆ ಎನ್ನುವುದೇ ನಮ್ಮ ಅದೃಷ್ಟ, ಮತ್ತು ಅವನ ಉಪಾಯದಲ್ಲಿ ಸಫಲನಾಗದೇ ಪಾಪಿ ಪುರೋಚನನು ಸತ್ತುಹೋದ ಎನ್ನುವುದೇ ನಮ್ಮ ಅದೃಷ್ಟ. ಕುಂತಿಗೆ ನಡೆದುಹೋದದ್ದನ್ನು ಕೇಳಿದಂದಿನಿಂದ ನಾನು ಈ ಲೋಕದಲ್ಲಿ ಜೀವಿಸಿರುವ ಯಾರೊಬ್ಬರ ಮುಖವನ್ನು ನೋಡಲೂ ಶಕ್ಯನಾಗಿರಲಿಲ್ಲ. ಜನರು ನಿನ್ನನ್ನು ದೂಷಿಸುವಷ್ಟು ಪುರೋಚನನನ್ನು ದೂಷಿಸುವುದಿಲ್ಲ. ಅವರು ಜೀವಂತವಾಗಿದ್ದಾರೆ ಎನ್ನುವುದು ನಿನ್ನ ಮೇಲಿರುವ ಅಪವಾದವನ್ನು ತೆಗೆದುಹಾಕಿದೆ. ಪಾಂಡವರ ದರ್ಶನವು ಬಯಸುವಂಥಹುದೇ ಆಗಿದೆ. ಈ ವೀರರು ಜೀವಂತವಿರುವಹಾಗೆ ಸ್ವಯಂ ವಜ್ರಭೃತನೂ ಕೂಡ ಅವರ ಪಿತ್ರೋಂಶವನ್ನು ತೆಗೆದುಕೊಳ್ಳಲು ಶಕ್ಯನಿಲ್ಲ. ಅವರೆಲ್ಲರೂ ಧರ್ಮದಲ್ಲಿ ನಿರತರಾಗಿದ್ದಾರೆ, ಎಲ್ಲರೂ ಒಂದೇ ಮನಸ್ಸುಳ್ಳವರಾಗಿದ್ದಾರೆ ಮತ್ತು ಅವರೂ ಕೂಡ ರಾಜ್ಯದ ಮೇಲೆ ಸಮನಾದ ಹಕ್ಕುಳ್ಳವರಾದರೂ ಅಧರ್ಮಪೂರ್ವಕ ಅವರು ಅದರಿಂದ ವಂಚಿತರಾಗಿದ್ದಾರೆ. ನನಗೆ ಪ್ರೀತಿಯುಕ್ತವಾದುದನ್ನು ಮಾಡಲು ಅಥವಾ ಧರ್ಮಯುಕ್ತ ಕ್ಷೇಮ ಕಾರ್ಯವನ್ನು ಮಾಡಲು ಬಯಸಿದರೆ, ಅವರಿಗೆ ಅರ್ಧರಾಜ್ಯವನ್ನು ಕೊಡಬೇಕು.”

ದ್ರೋಣನು ಹೇಳಿದನು:

“ನಾನೂ ಕೂಡ ಮಹಾತ್ಮ ಭೀಷ್ಮನ ಅಭಿಪ್ರಾಯಗಳನ್ನೇ ಹೊಂದಿದ್ದೇನೆ. ಕೌಂತೇಯರಿಗಾಗಿ ರಾಜ್ಯವನ್ನು ಸವಿಭಜನೆ ಮಾಡಬೇಕು. ಅದೇ ಸನಾತನ ಧರ್ಮ. ತಕ್ಷಣವೇ ದ್ರುಪದನಲ್ಲಿಗೆ ಯಾರಾದರೂ ಒಳ್ಳೆಯದನ್ನೇ ಮಾತನಾಡುವವನನ್ನು ಅವರಿಗಾಗಿ ಬಹು ರತ್ನಗಳೊಂದಿಗೆ ಕಳುಹಿಸಿಕೊಡು. ಅವನು ಗೌರವಾರ್ಥವಾಗಿ ಬಹಳಷ್ಟು ಉಡುಗೊರೆಗಳನ್ನು ತೆಗೆದುಕೊಂಡು ಹೋಗಲಿ ಮತ್ತು ಅಲ್ಲಿ ಎರಡೂ ಕುಲಗಳ ಸಂಯೋಗದಿಂದ ಉಂಟಾದ ಪರಮ ಅಭಿವೃದ್ಧಿಯ ಕುರಿತು ಮಾತನಾಡಲಿ. ನೀನು ಮತ್ತು ದುರ್ಯೋಧನ ಈರ್ವರೂ ಸಂತೋಷಗೊಂಡಿದ್ದೀರಿ ಎಂದು ಪುನಃ ಪುನಃ ಅವನು ದ್ರುಪದ-ದೃಷ್ಟದ್ಯುಮ್ನರ ಎದುರು ಹೇಳಲಿ. ಅವನು ಪುನಃ ಪುನಃ ಕೌಂತೇಯರು ಮತ್ತು ಮಾದ್ರೀ ಪುತ್ರರನ್ನು ಸಂತವಿಸುತ್ತಾ ಈ ಸಂಯೋಗದ ಉಚಿತತ್ವ, ಪ್ರಿಯತ್ವ ಮತ್ತು ಯೋಗವನ್ನೂ ಕೂಡ ವರ್ಣಿಸಲಿ. ನಿನ್ನ ವಚನದಂತೆ ಅವನು ದ್ರೌಪದಿಗೆ ಹಿರಣ್ಮಯ ಶುಭ್ರ ಬಹು ಆಭರಣಗಳನ್ನು ನೀಡಲಿ. ಹಾಗೆಯೇ ದ್ರುಪದನ ಸರ್ವ ಪುತ್ರರಿಗೂ, ಸರ್ವ ಪಾಂಡವರಿಗೂ, ಮತ್ತು ಕುಂತಿಗೂ ಯುಕ್ತವಾದುದ್ದನ್ನು ನೀಡಲಿ. ಈ ರೀತಿ ಪಾಂಡವರೊಡನೆ ದ್ರುಪದನು ಸಂತ್ವಸಮಾಯುಕ್ತನಾದ ನಂತರ ಅವರ ಹಿಂದಿರುಗುವುದರ ಕುರಿತು ಪ್ರಸ್ತಾವಿಸಬೇಕು. ಆ ವೀರರು ಅಲ್ಲಿಂದ ಹೊರಟ ನಂತರ ದುಃಶಾಸನ ಮತ್ತು ವಿಕರ್ಣರು ಶೋಭನೀಯ ಸೇನೆಯನ್ನು ತೆಗೆದುಕೊಂಡು ಹೋಗಿ ಪಾಂಡವರನ್ನು ಇಲ್ಲಿಗೆ ಕರೆತರಲಿ. ಅದರ ನಂತರ ನಿನ್ನಿಂದ ಮತ್ತು ಪುರಜನರ ಸತ್ಕಾರದೊಂದಿಗೆ ಅವರು ತಮ್ಮ ತಂದೆಯ ಸ್ಥಾನವನ್ನು ಸ್ವೀಕರಿಸಲಿ. ಇದೇ ನೀನು ನಿನ್ನ ಮತ್ತು ಅವನ ಪುತ್ರರೊಡನೆ ನಡೆದುಕೊಳ್ಳಬೇಕಾದ ರೀತಿ. ಭೀಷ್ಮನಿಗೂ ಇದರ ಸಮ್ಮತಿಯಿದೆ.”

ಕರ್ಣನು ಹೇಳಿದನು:

“ಸರ್ವಕಾರ್ಯಗಳ ನಂತರವೂ ಇವರೀರ್ವರು ಸಂಪತ್ತಿನಿಂದ ಗೌರವಿತರಾಗಿದ್ದಾರೆ. ಆದರೂ ನಿನ್ನ ಶ್ರೇಯಕ್ಕೆ ಸರಿಯಾದ ಸಲಹೆನೀಡುತ್ತಿಲ್ಲ ಎನ್ನುವುದಕ್ಕಿಂತ ಹೆಚ್ಚಿನ ಅದ್ಭುತವೇನಿದೆ? ದುಷ್ಟಮನಸ್ಸಿನಿಂದ, ತನ್ನ ನಿಜ ಅಭಿಪ್ರಾಯಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಹೇಳಿದ್ದುದನ್ನು ಸತ್ಯವಂತರು ಹೇಗೆ ತಾನೆ ಶ್ರೇಯಸ್ಸೆಂದು ಸ್ವೀಕರಿಸಬಹುದು? ಕಷ್ಟಸಮಯದಲ್ಲಿ ಮಿತ್ರರು ಶ್ರೇಯಸ್ಸನ್ನು ತರಬಹುದು ಅಥವಾ ತರದೇ ಇರಬಹುದು. ದುಃಖ ಅಥವಾ ಸುಖ ಸರ್ವವೂ ವಿಧಿಯನ್ನವಲಂಬಿಸಿದೆ. ಕೃತಪ್ರಜ್ಞನಾಗಿರಲಿ, ಅಕೃತಪ್ರಜ್ಞನಾಗಿರಲಿ, ಬಾಲಕನಾಗಿರಲಿ, ವೃದ್ಧನಾಗಿರಲಿ, ಸಸಹಾಯಕನಾಗಿರಲಿ, ಅಸಹಾಯಕನಾಗಿರಲಿ, ಎಲ್ಲ ಮಾನವರೂ ಎಲ್ಲಕಡೆಯೂ ಇದನ್ನು ತಿಳಿದುಕೊಂಡಿದ್ದಾರೆ. ಹಿಂದೆ ಅಂಬುವೀಚ ಎಂದು ಖ್ಯಾತ ಮಗಧ ಮಹೀಕ್ಷಿತರ ರಾಜನು ರಾಜಗೃಹದಲ್ಲಿ ಇದ್ದನೆಂದು ಕೇಳಿದ್ದೇವೆ. ಆ ನೃಪನು ಅತ್ಯಂತ ಬಲಹೀನನಾಗಿದ್ದು ಕೇವಲ ಉಸಿರಾಡುತ್ತಿದ್ದನು. ತನ್ನ ಎಲ್ಲ ಕಾರ್ಯಗಳಲ್ಲಿಯೂ ಅಮಾತ್ಯನಮೇಲೆ ಅವಲಂಬಿಸಿದ್ದನು. ಆ ಅಮಾತ್ಯ ಮಹಾಕರ್ಣಿಯು ತಾನೇ ಏಕೇಶ್ವರನಾದನು. ಆ ಅಮಾತ್ಯನು ಎಲ್ಲ ಅಧಿಕಾರಗಳನ್ನೂ ತೆಗೆದುಕೊಂಡು ರಾಜನನ್ನು ಕೀಳಾಗಿ ಕಾಣತೊಡಗಿದನು. ಆ ಮೂಢನು ರಾಜನ ಸರ್ವವನ್ನೂ, ಸ್ತ್ರೀಯರು, ರತ್ನಧನಗಳನ್ನು, ಸಕಲ ಐಶ್ವರ್ಯವನ್ನು ತನ್ನದಾಗಿಸಿಕೊಂಡು ಸ್ವಯಂ ಭೋಗಿಸತೊಡಗಿದನು. ತೆಗೆದುಕೊಂಡಷ್ಟೂ ಅವನ ಲೋಭವು ಹೆಚ್ಚಾಯಿತು. ಎಲ್ಲವನ್ನೂ ತೆಗೆದುಕೊಂಡಿದ್ದ ಅವನು ರಾಜ್ಯವನ್ನೂ ತನ್ನದಾಗಿಸಿಕೊಳ್ಳಲು ಬಯಸಿದನು. ತನ್ನ ಎಲ್ಲ ಶಕ್ತಿಯನ್ನೂ ಕಳೆದುಕೊಂಡು ಕೇವಲ ಉಸಿರಾಡುತ್ತಿದ್ದ ಆ ರಾಜನಿಂದ ಅವನು ರಾಜ್ಯವನ್ನು ಪಡೆಯಲು ಶಕ್ತನಾಗಲಿಲ್ಲ ಎಂದು ಕೇಳಿದ್ದೇವೆ. ಅವನ ರಾಜತ್ವವು ವಿಧಿವಿಹಿತವಾದುದಲ್ಲದೇ ಬೇರೆ ಏನಾಗಿತ್ತು? ವಿಶಾಂಪತೇ! ರಾಜ್ಯವು ನಿನ್ನದೆಂದೇ ವಿಧಿವಿಹಿತವಾಗಿದ್ದರೆ ಅದು ಸರ್ವಲೋಕದ ಎದುರು ನಿನ್ನದಾಗಿಯೇ ಒಳಿಯುತ್ತದೆ ಎನ್ನುವುದು ಖಂಡಿತ. ಹಾಗಿರದಿದ್ದರೆ ನೀನು ಎಷ್ಟು ಪ್ರಯತ್ನಿಸಿದರೂ ಬಯಸಿದರೂ ಅದು ನಿನ್ನದಾಗಿರುವುದಿಲ್ಲ. ಇದನ್ನು ತಿಳಿದು ನಿನ್ನ ಮಂತ್ರಿಗಳ ಸಲಹೆಯು ಎಷ್ಟರ ಮಟ್ಟಿಗೆ ಒಳ್ಳೆಯದು ಅಥವಾ ಒಳ್ಳೆಯದಲ್ಲ ಎನ್ನುವುದನ್ನು ತಿಳಿ.”

ದ್ರೋಣನು ಹೇಳಿದನು:

“ನೀನು ಯಾವ ಭಾವದೋಷದಿಂದ ಮತ್ತು ಯಾವ ಅರ್ಥದಿಂದ ಮಾತನಾಡುತ್ತಿದ್ದೀಯೆ ಎಂದು ತಿಳಿದಿದೆ. ದುಷ್ಟನಾದ ನೀನು ಪಾಂಡವರ ಕುರಿತು ನಿನ್ನ ದ್ವೇಶವನ್ನು ಪ್ರತಿಪಾದಿಸುತ್ತಿದ್ದೀಯೆ. ಕರ್ಣ! ಆದರೆ ನಾನು ಹೇಳಿದ್ದುದು ಕುರುವರ್ಧನಕ್ಕೇ ಪರಮ ಹಿತವಾಗಿದ್ದುದು. ಇದನ್ನು ನೀನು ದುಷ್ಟವಾದುದೆಂದು ತಿಳಿಯುವುದಾದರೆ ಪರಮ ಹಿತವಾದುದು ಏನೆಂಬುದನ್ನು ನೀನೇ ಹೇಳು. ನಾನು ಹೇಳಿದ್ದುದು ಪರಮ ಹಿತವಾದುದಲ್ಲ ಅದು ಬೇರೆಯದನ್ನೇ ಸಾಧಿಸುತ್ತದೆ ಎನ್ನುವುದಿದ್ದರೆ ಅಲ್ಪ ಸಮಯದಲ್ಲಿಯೇ ಕುರುಗಳ ವಿನಾಶವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.”

ವಿದುರನು ಹೇಳಿದನು:

“ರಾಜನ್! ನಿನ್ನ ಬಾಂಧವರು ನಿನಗೆ ಶ್ರೇಯಸ್ಸನ್ನು ತರುವ ಮಾತುಗಳನ್ನೇ ಆಡಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಕೇಳಲಿಕ್ಕೆ ಮನಸ್ಸಿಲ್ಲದಿರುವವರಿಗೆ ಆ ಮಾತುಗಳು ಒಳ್ಳೆಯದೆನಿಸುವುದಿಲ್ಲ. ಕುರುಸತ್ತಮ ಭೀಷ್ಮ ಶಾಂತನವನು ನಿನ್ನ ಹಿತಕ್ಕಾಗಿಯೇ ಆ ಮಾತುಗಳನ್ನಾಡಿದನು. ಆದರೆ ನೀನು ಅವುಗಳನ್ನು ಸ್ವೀಕರಿಸಲಿಲ್ಲ. ದ್ರೋಣನೂ ಕೂಡ ನಿನ್ನ ಹಿತವನ್ನುದ್ದೇಶಿಸಿ ಬಹಳಷ್ಟು ಮಾತನಾಡಿದನು. ಆದರೆ ಅವುಗಳು ನಿನಗೆ ಹಿತಕಾರಕವೆಂದು ರಾಧಾಸುತ ಕರ್ಣನು ಸ್ವೀಕರಿಸುವುದಿಲ್ಲ. ಆದರೆ ನನ್ನ ಯೋಚನೆಯಲ್ಲಿ ಈ ಇಬ್ಬರು ಪುರುಷಸಿಂಹರನ್ನು ಬಿಟ್ಟು ಬೇರೆ ಯಾರೂ ನಿನ್ನ ಸುಹೃದಯರಲ್ಲಿ ಉತ್ತಮರೆಂದು ಕಾಣುತ್ತಿಲ್ಲ. ಇವರಿಬ್ಬರೂ ವಯಸ್ಸಿನಲ್ಲಿ, ಪ್ರಜ್ಞೆಯಲ್ಲಿ, ಮತ್ತು ಕಲಿಕೆಯಲ್ಲಿ ವೃದ್ಧರಾಗಿದ್ದಾರೆ. ಮತ್ತು ಇವರಿಗೆ ನೀನು ಮತ್ತು ಪಾಂಡುಸುತರು ಇಬ್ಬರೂ ಒಂದೇ. ಧರ್ಮದಲ್ಲಿಯಾಗಲೀ ಸತ್ಯದಲ್ಲಿಯಾಗಲೀ ಅವರೀರ್ವರೂ ದಾಶರಥಿ ರಾಮ ಮತ್ತು ಗಯನಿಗಿಂಥ ಕಡಿಮೆಯಿಲ್ಲ ಎನ್ನುವುದರಲ್ಲಿ ಸಂಶಯವಿಲ್ಲ. ಹಿಂದೆ ಎಂದೂ ಅವರು ನಿನಗೆ ಅಶ್ರೇಯ ಸಲಹೆಯನ್ನಾಗಲೀ ಅಥವಾ ನಿನಗೆ ಯಾವುದೇ ಅಪಕೃತ ಮಾಡಿದುದನ್ನು ನೀನು ಕಂಡಿಲ್ಲ. ಹಾಗಿದ್ದಾಗ ಈಗ ಏಕೆ ಈ ಸತ್ಯಪರಾಕ್ರಮಿ ಪುರುಷವ್ಯಾಘ್ರರು ನಿನಗೆ ಅಶ್ರೇಯ ಸಲಹೆಯನ್ನು ನೀಡುತ್ತಾರೆ? ಲೋಕದಲ್ಲೇ ಪ್ರಜ್ಞಾವಂತ ಈ ನರಶ್ರೇಷ್ಠರು ನಿನ್ನ ವಿಷಯದಲ್ಲಿ ಎಂದೂ ವಿರುದ್ಧ ಮಾತುಗಳನ್ನಾಡುವುದಿಲ್ಲ. ಇದು ನನ್ನ ಮೂಲಭೂತ ಯೋಚನೆಯಾಗಿದೆ. ಈ ಇಬ್ಬರು ಧರ್ಮಜ್ಞರು ತಮ್ಮ ವೈಯಕ್ತಿಕ ಲಾಭಕ್ಕೋಸ್ಕರ ಯಾವುದೇ ಒಂದು ಪಕ್ಷದ ಪರವಾಗಿ ಮಾತನಾಡುವುದಿಲ್ಲ. ನಿನ್ನ ಪರಮ ಶ್ರೇಯಸ್ಸನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ದುರ್ಯೋಧನರೇ ಮೊದಲಾದವರು ನಿನಗೆ ಹೇಗೆ ಪುತ್ರರೋ ಹಾಗೆ ಪಾಂಡವರೂ ಕೂಡ ನಿನ್ನ ಪುತ್ರರು. ಇದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ವೇಳೆ ನಿನ್ನ ಮಂತ್ರಿಗಳು ಅವಿವೇಕದಿಂದ ಪಾಂಡವರಿಗೆ ಶ್ರೇಯಸ್ಸಾಗದ ಸಲಹೆಗಳನ್ನು ನೀಡಿದರೆ, ಅವರು ವಿಶೇಷವಾಗಿ ನಿನ್ನ ಶ್ರೇಯಸ್ಸನ್ನು ಪರಿಗಣಿಸುತ್ತಿಲ್ಲ ಎಂದು ಸ್ಪಷ್ಟ. ಅಥವಾ, ನಿನ್ನ ಹೃದಯದಲ್ಲಿ ನಿನ್ನ ಮಕ್ಕಳ ಮೇಲೇ ವಿಶೇಷ ಪ್ರೀತಿಯಿದ್ದರೆ, ಅದನ್ನು ನಿನ್ನ ಒಳಗಿದ್ದುದನ್ನು ಬಹಿರಂಗಪಡಿಸುವುದರಿಂದ ನಿನಗೆ ಶ್ರೇಯಸ್ಸಾಗುವುದಿಲ್ಲ ಎನ್ನುವುದೂ ಖಂಡಿತ. ಹಾಗಿದ್ದರೆ, ಈ ಮಹಾತ್ಮ ಮಹಾದ್ಯುತಿಗಳಿಬ್ಬರೂ ಬಹಿರಂಗವಾಗಿ ಮಾತನಾಡದೇ ಇದ್ದರೂ ನಿನ್ನ ನಿರ್ಧಾರಗಳು ಎಂದೂ ಬದಲಾವಣೆಯಾಗಲಾರದು. ಪಾಂಡವರನ್ನು ಗೆಲ್ಲುವುದು ಅಶಕ್ಯ ಎನ್ನುವ ಈ ಪುರುಷರ್ಷಭರ ಮಾತು ಸತ್ಯ. ಇನ್ನು ನಿನಗೆ ಮಂಗಳವಾಗಲಿ. ಶ್ರೀಮಾನ್, ಪರಂತಪ, ಪಾಂಡವ ಸವ್ಯಸಾಚಿಯನ್ನು ಸಂಗ್ರಾಮದಲ್ಲಿ ಮಘವತನಿಗೂ ಕೂಡ ಗೆಲ್ಲಲು ಹೇಗೆ ಶಕ್ಯ? ಮಹಾಬಾಹು, ಆನೆಗಳ ಬಲವನ್ನುಳ್ಳ ಮಹಾ ಭೀಮಸೇನನನ್ನು, ಅಮರರೂ ಕೂಡ ಹೇಗೆ ಯುದ್ಧದಲ್ಲಿ ಜಯಿಸಲು ಶಕ್ಯ? ಹಾಗೆಯೇ ಯಮಸುತರಂತಿರುವ ಯುದ್ಧ ಕೃತಿ ಯಮಳರನ್ನು ಜೀವಂತವಿರಲು ಇಚ್ಛಿಸುವವನು ಹೇಗೆ ರಣದಲ್ಲಿಗೆಲ್ಲಲು ಸಾಧ್ಯ? ಯಾರಲ್ಲಿ ಧೃತಿ, ಅನುಕ್ರೋಶ, ಕ್ಷಮಾ, ಸತ್ಯ ಮತ್ತು ಪರಾಕ್ರಮಗಳು ನಿತ್ಯವೂ ನೆಲೆಸಿರುವೆಯೋ ಆ ಪಾಂಡವಶ್ರೇಷ್ಠನನ್ನು ರಣದಲ್ಲಿ ಹೇಗೆ ಜಯಿಸಬಹುದು? ಯಾರ ಪಕ್ಷಧರನಾಗಿ ರಾಮನಿದ್ದಾನೆಯೋ, ಯಾರ ಮಂತ್ರಿಯಾಗಿ ಜನಾರ್ದನನಿದ್ದಾನೆಯೋ, ಮತ್ತು ಯಾರ ಪಕ್ಷದಲ್ಲಿ ಸಾತ್ಯಕಿಯ ಬೆಂಬಲವಿದೆಯೋ ಅವರು ಗೆಲ್ಲದೇ ಇರುವವರು ಇನ್ನು ಯಾರಿದ್ದಾರೆ? ಮಾವನನ್ನಾಗಿ ದ್ರುಪದನನ್ನು ಪಡೆದ ಮತ್ತು ದೃಷ್ಟದ್ಯುಮ್ನನೇ ಮೊದಲಾದ ಪಾರ್ಷತ ದ್ರುಪದಾತ್ಮಜರನ್ನು ಬಾವಂದಿರನ್ನಾಗಿ ಹೊಂದಿದ ಅವರನ್ನು ಗೆಲ್ಲಲು ಹೇಗೆ ಸಾದ್ಯ? ಅವರನ್ನು ಗೆಲ್ಲುವುದು ಅಶಕ್ಯ ಮತ್ತು ಧರ್ಮದ ಪ್ರಕಾರ ಅವರು ಮೊದಲೇ ಇದರ ದಾಯಾದಿಗಳು ಎಂದು ತಿಳಿದು ಅವರೊಂದಿಗೆ ಒಳ್ಳೆಯದಾಗಿ ನಡೆದುಕೋ. ಪುರೋಚನನ ಕೃತ್ಯದಿಂದ ನಿನಗಾದ ನಿರ್ದಿಗ್ದ ಅಯಶವನ್ನು ಅವರ ಮೇಲೆ ಅನುಗ್ರಹಮಾಡುವುದರ ಮೂಲಕ ನೀನೇ ಶುದ್ಧಪಡೆಸಿಕೋ. ಹಿಂದೆ ಮಹಾರಾಜ ದ್ರುಪದನೂ ಕೂಡ ವೈರವನ್ನು ಸಾಧಿಸುತ್ತಿದ್ದನು. ಅವನ ಸಂಬಧದ ಮೂಲಕ ನಿನ್ನ ಪಕ್ಷವನ್ನು ವೃದ್ಧಿಪಡೆಸಿಕೋ. ಬಹುಸಂಖ್ಯೆಯಲ್ಲಿರುವ ದಾಶಾರ್ಹರು ಬಲವಂತರು. ಅವರು ಕೃಷ್ಣನಿದ್ದಲ್ಲೇ ಇರುತ್ತಾರೆ ಮತ್ತು ಎಲ್ಲಿ ಕೃಷ್ಣನಿರುವನೋ ಅಲ್ಲಿಯೇ ಜಯ. ಸಮಾಚರದಿಂದ ತಡೆಯಬಹುದಾದ ಈ ಯುದ್ಧವನ್ನು ಕೈಗೊಳ್ಳುವ ಯಾರು ತಾನೇ ವಿಧಿಯ ಶಾಪಕ್ಕೊಳಗಾಗಿದ್ದಾನೆ? ನಗರ ಮತ್ತು ಗ್ರಾಮೀಣ ಜನರು ಪಾರ್ಥರು ಜೀವಂತವಿದ್ದಾರೆ ಎಂದು ಕೇಳಿದ್ದಾರೆ ಮತ್ತು ಅವರನ್ನು ನೋಡಲು ಕಾತರರಾಗಿದ್ದಾರೆ. ಅವರಿಗೆ ಆ ಸಂತೋಷವನ್ನು ನೀಡು. ದುರ್ಯೋಧನ, ಕರ್ಣ, ಮತ್ತು ಶಕುನಿ ಸೌಬಲರು ಅಧರ್ಮಯುಕ್ತ ದುಷ್ಪ್ರಜ್ಞ ಬಾಲಕರಾಗಿದ್ದಾರೆ. ಅವರ ಮಾತುಗಳಂತೆ ಮಾಡಬೇಡ! ದುರ್ಯೋಧನನ ಅಪರಾಧದಿಂದ ಈ ರಾಜ್ಯವು ವಿನಾಶವಾಗುತ್ತದೆ ಎಂದು ನಾನು ನಿನಗೆ ಹಿಂದೆಯೇ ಹೇಳಿದ್ದೆ.”

ಧೃತರಾಷ್ಟ್ರನು ಹೇಳಿದನು:

“ವಿದ್ವಾನ್ ಶಾಂತನವ ಭೀಷ್ಮ ಮತ್ತು ಭಗವಾನೃಷಿ ದ್ರೋಣರು ನನಗೆ ಪರಮ ಹಿತವನ್ನು ತರುವಂಥ ಮಾತುಗಳನ್ನು ಹೇಳಿದ್ದಾರೆ. ನೀನೂ ಕೂಡ ನನಗೆ ಸತ್ಯವನ್ನು ನುಡಿದಿದ್ದೀಯೆ. ಧರ್ಮದ ಪ್ರಕಾರ ಆ ವೀರ ಕುಂತೀಪುತ್ರ ಮಹಾರಥಿ ಪಾಂಡುವಿನ ಮಕ್ಕಳು ಹೇಗೋ ಹಾಗೆ ನನ್ನ ಮಕ್ಕಳೂ ಹೌದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಈ ರಾಜ್ಯವು ನನ್ನ ಮಕ್ಕಳಿಗೆ ಹೇಗೆ ವಿಧಿವತ್ತಾಗಿದೆಯೋ ಹಾಗೆ ಪಾಂಡುಪುತ್ರರಿಗೂ ಕೂಡ ಈ ರಾಜ್ಯವಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಕ್ಷತ್ತ! ಹೋಗಿ ಅವರನ್ನು ಅವರ ತಾಯಿ ಮತ್ತು ದೇವರೂಪಿಣಿ ಕೃಷ್ಣೆಯ ಸಹಿತ ಸುಸತ್ಕೃತರಾಗಿ ಕರೆದುಕೊಂಡು ಬಾ. ಅದೃಷ್ಟವಶಾತ್ ಪಾರ್ಥರು ಜೀವಂತವಾಗಿದ್ದಾರೆ. ಅದೃಷ್ಟವಶಾತ್ ಪೃಥಳು ಜೀವಂತವಾಗಿದ್ದಾಳೆ. ಮಹಾರಥಿಗಳು ದ್ರುಪದಕನ್ಯೆಯನ್ನು ಪಡೆದಿದ್ದಾರೆ, ತುಂಬಾ ಒಳ್ಳೆಯದಾಯಿತು. ಒಳ್ಳೆಯದಾಯಿತು ನಾವೆಲ್ಲರೂ ಅಭಿವೃದ್ಧಿ ಹೊಂದುತ್ತಿದ್ದೇವೆ. ಒಳ್ಳೆಯದಾಯಿತು ಪುರೋಚನನು ಸುಮ್ಮನಾಗಿದ್ದಾನೆ. ಒಳ್ಳೆಯದಾಯಿತು. ನನ್ನ ಪರಮ ದುಃಖವನ್ನು ಕೊಂಡೊಯ್ಯಲಾಗಿದೆ.”

ದ್ರುಪದನಗರಿಗೆ ವಿದುರನ ಆಗಮನ

ನಂತರ ಧೃತರಾಷ್ಟ್ರನ ಶಾಸನದಂತೆ ವಿದುರನು ಯಜ್ಞಸೇನ ಮತ್ತು ಪಾಂಡವರ ಬಳಿ ಹೋದನು. ಧರ್ಮಜ್ಞನೂ ಸರ್ವಶಾಸ್ತ್ರವಿಶಾರದನೂ ಆದ ಅವನು ದ್ರುಪದನಲ್ಲಿಗೆ ಹೋಗಿ ನ್ಯಾಯಪೂರ್ವಕ ಸರಿಯಾಗಿ ಬರಮಾಡಿಸಿಕೊಂಡನು. ಅವನೂ ಕೂಡ ವಿದುರನನ್ನು ಧಾರ್ಮಿಕವಾಗಿ ಬರಮಾಡಿಕೊಂಡನು ಮತ್ತು ನ್ಯಾಯದಂತೆ ಪರಸ್ಪರರ ಕುಶಲಪ್ರಶ್ನೆಗಳನ್ನು ಕೇಳಿಕೊಂಡರು. ಅಲ್ಲಿ ಅವನು ಪಾಂಡವರನ್ನು ಮತ್ತು ವಾಸುದೇವನನ್ನು ನೋಡಿದನು ಮತ್ತು ಅವರನ್ನು ಸ್ನೇಹಪೂರ್ವಕ ಆಲಂಗಿಸಿ ಅವರ ಆರೋಗ್ಯದ ಕುರಿತು ವಿಚಾರಿಸಿದನು. ಒಬ್ಬೊಬ್ಬರಾಗಿ ಅವರು ಆ ಅಮಿತಬುದ್ಧಿಯನ್ನು ನಮಸ್ಕರಿಸಿದರು ಮತ್ತು ಅವನು ಧೃತರಾಷ್ಟ್ರನ ಸ್ನೇಹಯುಕ್ತ ಮಾತುಗಳಂತೆ ಪುನಃ ಪುನಃ ಆ ಪಾಂಡುನಂದನರ ಆರೋಗ್ಯದ ಕುರಿತು ಕೇಳಿದನು. ಕೌರವರು ಕಳುಹಿಸಿದ್ದ ವಿವಿಧ ರತ್ನ ಮತ್ತು ಐಶ್ವರ್ಯಗಳನ್ನು ಪಾಂಡವರಿಗೆ, ಕುಂತಿಗೆ, ದ್ರೌಪದಿಗೆ ಮತ್ತು ದ್ರುಪದನ ಪುತ್ರರಿಗೆ ಕೊಟ್ಟನು. ನಂತರ ಆ ಅಮಿತಮತಿ ವಿನಯಾನ್ವಿತನು ಕೇಶವ ಮತ್ತು ಪಾಂಡುಪುತ್ರರ ಸನ್ನಿಧಿಯಲ್ಲಿ ದ್ರುಪದನನ್ನುದ್ದೇಶಿಸಿ ಹೇಳಿದನು:

“ರಾಜನ್! ಅಮಾತ್ಯ ಮತ್ತು ಪುತ್ರರ ಸಹಿತ ನನ್ನ ಮಾತುಗಳನ್ನು ಕೇಳು. ತನ್ನ ಪುತ್ರರು, ಅಮಾತ್ಯರು ಮತ್ತು ಬಾಂಧವರನ್ನು ಸೇರಿ ಧೃತರಾಷ್ಟ್ರನು ಪ್ರೀತಿಯುತವಾಗಿ ಪುನಃ ಪುನಃ ನಿನ್ನ ಕುಶಲದ ಕುರಿತು ಕೇಳಿದ್ದಾನೆ. ನಿನ್ನೊಡನೆ ಸಂಬಂಧವಾದುದರಿಂದ ಅವನು ಅತ್ಯಂತ ಸಂತಸಗೊಂಡಿದ್ದಾನೆ. ಶಾಂತನವ ಭೀಷ್ಮ ಮತ್ತು ಸರ್ವ ಕೌರವರೂ ಕೂಡ ನಿನ್ನ ಮತ್ತು ಎಲ್ಲರ ಕುಶಲತೆಯನ್ನು ಕೇಳಿದ್ದಾರೆ. ನಿನ್ನ ಪ್ರಿಯಸಖ ಮಹೇಷ್ವಾಸ ದ್ರೋಣ ಭಾರದ್ವಾಜನು ನಿನ್ನನ್ನು ಆಲಿಂಗಿಸಿ ನಿನ್ನ ಕುಶಲವನ್ನು ಕೇಳುತ್ತಾನೆ. ನಿನ್ನೊಡನೆ ಸಂಬಂಧವನ್ನು ಪಡೆದ ಧೃತರಾಷ್ಟ್ರ ಮತ್ತು ಹಾಗೆಯೇ ಇತರ ಕೌರವರೂ ತಮ್ಮನ್ನು ತಾವು ಕೃತಾರ್ಥರೆಂದು ಭಾವಿಸುತ್ತಾರೆ. ನಿನ್ನೊಡನೆಯ ಈ ಸಂಬಂಧದಿಂದ ಆದ ಸಂತೋಷವೂ ನಿನ್ನ ರಾಜ್ಯವನ್ನು ಪಡೆದರೆ ಸಿಗುತ್ತಿರಲಿಲ್ಲ. ಇದನ್ನು ತಿಳಿದು ನೀನು ಪಾಂಡವರಿಗೆ ಹೊರಡಲು ಅನುಮತಿಕೊಡಬೇಕು. ಕೌರವರು ಪಾಂಡುದಾಯಾದಿಗಳನ್ನು ನೋಡಲು ತುಂಬ ತವಕದಿಂದಿದ್ದಾರೆ. ಈ ನರರ್ಷಭರು ದೀರ್ಘಕಾಲದವರೆಗೆ ಹೊರಗಡೆಯೇ ಇದ್ದಾರೆ. ಅವರು ಮತ್ತು ಪೃಥೆಯು ನಗರವನ್ನು ನೋಡಲು ಉತ್ಸುಕರಾಗಿರುತ್ತಾರೆ. ದೇಶ, ಪುರ ಮತ್ತು ಕುರುವರಸ್ತ್ರೀಯರೆಲ್ಲರೂ ಪಾಂಚಾಲಿ ಕೃಷ್ಣೆಯನ್ನು ನೋಡಲು ಆಸೆಯಿಂದ ಕಾಯ್ದು ಕೊಂಡಿದ್ದಾರೆ. ತಡಮಾಡದೇ ಪತ್ನಿಯೊಂದಿಗೆ ಪಾಂಡುಪುತ್ರರು ಹೊರಡುವುದಕ್ಕೆ ಮತ್ತು ನನಗೆ ಹಿಂದಿರುಗುವುದಕ್ಕೆ ಅನುಮತಿಯನ್ನು ನೀಡು. ಮಹಾತ್ಮ ಪಾಂಡವರಿಗೆ ಅನುಮತಿಯನ್ನಿತ್ತರೆ ಕುಂತಿ ಮತ್ತು ಕೌಂತೇಯರು ಕೃಷ್ಣೆಯ ಸಹಿತ ಬರುತ್ತಾರೆ ಎಂದು ನಾನು ಧೃತರಾಷ್ಟ್ರನಲ್ಲಿಗೆ ಶೀಘ್ರಗರನ್ನು ಕಳುಹಿಸುತ್ತೇನೆ.”

ದ್ರುಪದನು ಹೇಳಿದನು:

“ಮಹಾಪ್ರಜ್ಞ ವಿದುರ! ನೀನು ನನಗೆ ಹೇಳಿದ ಹಾಗೆಯೇ ನನಗೂ ಕೂಡ ಈ ಸಂಬಂಧವಾದುದರಿಂದ ಪರಮ ಹರ್ಷವಾಗುತ್ತಿದೆ. ಮಹಾತ್ಮರು ತಮ್ಮ ಮನೆಗೆ ತೆರಳುವುದು ಯುಕ್ತವಾಗಿದೆ. ಆದರೆ ಇದನ್ನು ನಾನೇ ನನ್ನ ಮಾತುಗಳಲ್ಲಿ ಹೇಳುವುದು ಸರಿಯೆನಿಸುತ್ತಿರಲಿಲ್ಲ. ವೀರ ಕುಂತೀಪುತ್ರ ಯುಧಿಷ್ಠಿರ, ಭೀಮಸೇನ, ಅರ್ಜುನ, ಮತ್ತು ಪುರುಷರ್ಷಭ ಯಮಳರು ಒಪ್ಪಿದರೆ ಮತ್ತು ಧರ್ಮಜ್ಞ ಬಲರಾಮ-ಕೃಷ್ಣರು ಒಪ್ಪಿಕೊಂಡರೆ ಪಾಂಡವರು ಹೋಗಬಹುದು. ಈ ಈರ್ವರು ಪುರುಷವ್ಯಾಘ್ರರು ಅವರ ಪ್ರಿಯರೂ ಹಿತೈಷಿಗಳೂ ಹೌದು.”

ಯುಧಿಷ್ಠಿರನು ಹೇಳಿದನು:

“ರಾಜನ್! ನಾವೆಲ್ಲರೂ ನಿನ್ನ ಸಹಾನುಗರು ಮತ್ತು ಅವಲಂಬಿಸಿರುವೆವು. ನಮ್ಮ ಒಳ್ಳೆಯದಕ್ಕಾಗಿ ನೀನು ಏನನ್ನು ಹೇಳುತ್ತೀಯೋ ಹಾಗೆಯೇ ಮಾಡುತ್ತೇವೆ.”

“ಸರ್ವಧರ್ಮವನ್ನೂ ತಿಳಿದ ರಾಜ ದ್ರುಪದನು ಒಪ್ಪಿಕೊಂಡರೆ ಅವರು ಹೋಗಬೇಕು ಎನ್ನುವುದು ನನ್ನ ಅಭಿಪ್ರಾಯ”

ಎಂದು ವಾಸುದೇವನು ಹೇಳಿದನುದ್ರುಪದನು ಹೇಳಿದನು:

“ವೀರ ದಾಶಾರ್ಹ ಮಹಾಬಾಹು! ಬುದ್ಧಿನಿಶ್ಚಿತ ಪುರುಷೋತ್ತಮನ ಸಮಯಕ್ಕೆ ಸರಿಯಾದ ಅಭೀಪ್ರಾಯವೇನಿದೆಯೋ ಅದೇ ನನ್ನ ಅಭಿಪ್ರಾಯ. ಯಾಕೆಂದರೆ ಮಹಾಭಾಗ ಕೌಂತೇಯರು ನನಗೆಷ್ಟು ಹತ್ತಿರದವರೋ ಹಾಗೆಯೇ ಪಾಂಡುಪುತ್ರರು ವಾಸುದೇವನ ಹತ್ತಿರದವರೂ ಎನ್ನುವುದರಲ್ಲಿ ಸಂಶಯವಿಲ್ಲ. ಪುರುಷವ್ಯಾಘ್ರ ಕೇಶವನು ಇವರ ಶ್ರೇಯಸ್ಸಿನ ಕುರಿತು ಚಿಂತಿಸುವಷ್ಟು ಕೌಂತೇಯ ಧರ್ಮಪುತ್ರ ಯುಧಿಷ್ಠಿರನೂ ಚಿಂತಿಸುವುದಿಲ್ಲ.”

ನಂತರ ಮಹಾತ್ಮ ದ್ರುಪದನು ಅವರಿಗೆ ಅನುಜ್ಞೆಯನ್ನಿತ್ತನು.

ಪಾಂಡವರು ಹಸ್ತಿನಾಪುರಕ್ಕೆ ಮರಳಿಬಂದು ಇಂದ್ರಪ್ರಸ್ಥದಲ್ಲಿ ರಾಜ್ಯವನ್ನು ಸ್ಥಾಪಿಸಿದುದು

ಪಾಂಡವರು, ಕೃಷ್ಣ, ಮಹಾಮತಿ ವಿದುರ, ಮತ್ತು ಯಶಸ್ವಿನಿ ಕುಂತಿಯು ದ್ರೌಪದಿ ಕೃಷ್ಣೆಯನ್ನು ಕರೆದುಕೊಂಡು ಸುಖವಾಗಿ ಅಲ್ಲಲ್ಲಿ ತಂಗುತ್ತಾ ನಾಗಸಾಹ್ವಯ ನಗರಕ್ಕೆ ಹೋದರು. ಆ ವೀರರು ಬರುತ್ತಿದ್ದಾರೆ ಎಂದು ಕೇಳಿದ ಕೌರವ ಧೃತರಾಷ್ಟ್ರನು ಪಾಂಡವರನ್ನು ಸ್ವಾಗತಿಸಲು ಕೌರವರನ್ನು ಕಳುಹಿಸಿದನು: ವಿಕರ್ಣ, ಚಿತ್ರಸೇನ, ಪರಮೇಷ್ವಾಸ ದ್ರೋಣ ಮತ್ತು ಗೌತಮ ಕೃಪ. ಅವರಿಂದ ಸುತ್ತುವರೆಯಲ್ಪಟ್ಟು ಶೋಭಾಯಮಾನರಾದ ಆ ವೀರ ಮಹಾರಥಿಗಳು ನಿಧಾನವಾಗಿ ಹಸ್ತಿನಾಪುರ ನಗರವನ್ನು ಪ್ರವೇಶಿಸಿದರು. ಶೋಕದುಃಖವಿನಾಶಕ ಪುರುಷವ್ಯಾಘ್ರರು ಪ್ರವೇಶಿಸಿದ ಆ ನಗರವು ಕುತೂಹಲದಿಂದ ಬಿರಿದು ಒಡೆಯುವಂತೆ ತೋರುತ್ತಿತ್ತು. ಅವರ ಪ್ರಿಯರು ಪ್ರೀತಿಯುಕ್ತ ಮಾತುಗಳನ್ನು ಚೀರಿ ಹೇಳುತ್ತಿದ್ದರು. ಅವನ್ನು ಕೇಳಿದ ಪಾಂಡವರ ಹೃದಯವು ತುಂಬಿಬಂದಿತು:

“ಧರ್ಮವಿದ ಪುರುಷವ್ಯಾಘ್ರನು ಪುನಃ ಬಂದಿದ್ದಾನೆ! ತನ್ನ ದಾಯಾದಿಗಳೋ ಎನ್ನುವಂತೆ ಇನ್ನು ನಮ್ಮನ್ನು ಧರ್ಮದಿಂದ ಪರಿರಕ್ಷಿಸುತ್ತಾನೆ. ಇಂದು ವನಪ್ರಿಯ ಮಹಾರಾಜ ಪಾಂಡುವು ವನದಿಂದ ನಮಗೆಲ್ಲ ಒಳ್ಳೆಯದನ್ನು ಮಾಡಲಿಕ್ಕಾಗಿ ಬಂದಂತೆ ತೋರುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ವೀರ ಭರ್ತಾರ ಕುಂತೀಸುತರು ಪುನಃ ಬಂದಿದ್ದಾರೆ ಎನ್ನುವುದನ್ನು ಬಿಟ್ಟು ಇನ್ನೂ ಅತಿಯಾದ ಸಂತೋಷವು ಇಂದು ನಮಗೆ ಎಲ್ಲರಿಗೂ ಬೇರೆ ಯಾವುದಿದೆ? ನಾವು ಎಂದಾದರೂ ದಾನ ಮಾಡಿದ್ದರೆ, ಯಜ್ಞಗಳನ್ನು ಮಾಡಿದ್ದರೆ ಅಥವಾ ತಪಸ್ಸನ್ನು ಮಾಡಿದ್ದರೆ ಅದರ ಕಾರಣದಿಂದಲಾದರೂ ಪಾಂಡವರು ಈ ನಗರದಲ್ಲಿ ನೂರು ಶರದಗಳ ಕಾಲ ನಿಲ್ಲಲಿ!”

ನಂತರ ಅವರು ಧೃತರಾಷ್ಟ್ರ, ಮಹಾತ್ಮ ಭೀಷ್ಮ ಮತ್ತು ಇತರ ಅರ್ಹರ ಪಾದಗಳನ್ನು ಹಿಡಿದು ಅಭಿನಂದಿಸಿದರು, ಮತ್ತು ನಗರದಲ್ಲಿ ಸರ್ವರ ಕುಶಲಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಧೃತರಾಷ್ಟ್ರನ ಹೇಳಿಕೆಯಂತೆ ಅವನ ಅರಮನೆಯನ್ನು ಪ್ರವೇಶಿಸಿದರು. ಆ ಮಾಹಾತ್ಮ ಮಹಾಬಲಿಗಳು ವಿಶ್ರಾಂತಿ ಹೊಂದಿದ ಸ್ವಲ್ಪ ಸಮಯದಲ್ಲಿ ರಾಜ ಧೃತರಾಷ್ಟ್ರ ಮತ್ತು ಶಾಂತನವರು ಅವರನ್ನು ಕರೆಸಿದರು. ಧೃತರಾಷ್ಟ್ರನು ಹೇಳಿದನು:

“ಕೌಂತೇಯ! ಭ್ರಾತೃಗಳ ಸಹಿತ ನನ್ನ ಈ ಮಾತುಗಳನ್ನು ಗಮನವಿಟ್ಟು ಕೇಳು. ಪುನಃ ಮನಸ್ತಾಪವಾಗದಿರಲೆಂದು ನೀನು ಖಾಂಡವಪ್ರಸ್ಥಕ್ಕೆ ಹೋಗು. ತ್ರಿದಶ ವಜ್ರಿಯಂತಿರುವ ಪಾರ್ಥನಿಂದ ರಕ್ಷಿಸಲ್ಪಟ್ಟು ಅಲ್ಲಿ ವಾಸಿಸಿದರೆ ನಿನ್ನನ್ನು ಯಾರೂ ಕೂಡ ಬಾಧಿಸಲು ಶಕ್ಯವಿಲ್ಲ. ಅರ್ಧ ರಾಜ್ಯವನ್ನು ಪಡೆದು ಖಾಂಡವಪ್ರಸ್ಥಕ್ಕೆ ಹೋಗು.”

ನೃಪನ ಆ ಮಾತುಗಳನ್ನು ಸ್ವೀಕರಿಸಿದ ಅವರೆಲ್ಲರೂ ಅವನಿಗೆ ನಮಸ್ಕರಿಸಿದರು. ನಂತರ ಆ ಮನುಜರ್ಷಭರು ಅರ್ಧ ರಾಜ್ಯವನ್ನು ಪಡೆದು ಘೋರ ವನವಾಗಿದ್ದ ಖಾಂಡವಪ್ರಸ್ಥವನ್ನು ಪ್ರವೇಶಿಸಿದರು. ಕೃಷ್ಣನ ಮುಂದಾಳತ್ವದಲ್ಲಿ ಪಾಂಡವರು ಅಲ್ಲಿಗೆ ಹೋಗಿ ಸ್ವರ್ಗದಷ್ಟೇ ಸುಂದರ ಪುರವೊಂದನ್ನು ನಿರ್ಮಿಸಿದರು. ದ್ವೈಪಾಯನನ ನಾಯಕತ್ವದಲ್ಲಿ ಒಂದು ಪುಣ್ಯ ಕಾಲದಲ್ಲಿ ಶುಭ ಪ್ರದೇಶವನ್ನು ಶಾಂತಿಗೊಳಿಸಿ ಮಹಾರಥಿಗಳು ನಗರದ ಮಾಪನ ಮಾಡಿದರು. ಅದು ಸಾಗರದಂತಿದ್ದ ಪರಿಖಗಳಿಂದ ಅಲಂಕೃತವಾಗಿತ್ತು. ಆಕಾಶವನ್ನು ವ್ಯಾಪಿಸಿದ ಸುಂದರ, ಅಭ್ರಪ್ರಕಾಶದಿಂದ ಬಿಳಿಯಾದ, ಅಥವಾ ಹಿಮರಾಶಿಯಂತಿರುವ ಪ್ರಾಕಾರಗಳಿಂದ ಸುತ್ತುವರೆಯಲ್ಪಟ್ಟಿತ್ತು. ನಾಗಗಳಿಂದ ಬೋಗವತಿಯು ಹೇಗೆ ಶೋಭಿಸುತ್ತದೆಯೋ ಹಾಗೆ ಆ ಶ್ರೇಷ್ಠ ಪುರವೂ ಶೋಭಿಸುತ್ತಿತ್ತು. ಅದು ಘೋರವಾಗಿ ಕಾಣುತ್ತಿದ್ದ ಗರುಡನ ಎರಡು ರೆಕ್ಕೆಗಳಂತಿರುವ ದ್ವಾರಗಳಿಂದ ರಕ್ಷಿತವಾಗಿತ್ತು. ದ್ವಾರದ ಗೋಪುರಗಳು ಮಂದರವನ್ನು ಮುಚ್ಚಿರುವ ಮೋಡಗಳಂತೆ ತೋರುತ್ತಿದ್ದವು. ದ್ವಾರಗಳಲ್ಲಿ ತುಂಬಾ ಹರಿತ ವಿವಿಧ ಶಸ್ತ್ರಗಳನ್ನಿಟ್ಟಿದ್ದರು. ಎರಡು ನಾಲಿಗೆಗಳ ಪನ್ನಗಗಳಂತಿರುವ ಶಕ್ತಿಗಳಿಂದ ಸುತ್ತುವರೆಯಲ್ಪಟ್ಟಿತ್ತು. ಖಡ್ಗ ಡಮರುಗಳನ್ನು ಹಿಡಿದ ಶುಭ ಯೋಧರಿಂದ ರಕ್ಷಿಸಲ್ಪಟ್ಟಿತ್ತು. ನೂರಾರು ತೀಕ್ಷ್ಣ ಅಂಕುಶ ಮತ್ತು ಯಂತ್ರಜಾಲಗಳಿಂದ ಶೋಭಿತವಾಗಿತ್ತು ಆ ಉತ್ತಮ ಪುರವು ಆಯಸ ಮಹಾಚಕ್ರಗಳಿಂದ ಶೋಭಿತವಾಗಿತ್ತು. ಅಲ್ಲಿ ಮಹಾರಥಗಳು ಹೋಗಲು ಬೇರೆ ಬೇರೆ ಹೊಂಡ ಅಪಘಾತಗಳು ಆಗದಂತಿದ್ದ, ಎರಡೂ ಕಡೆ ಉತ್ತಮ ಶ್ವೇತವರ್ಣ ಭವನಗಳಿಂದ ಕೂಡಿದ್ದ ವಿಶಾಲ ರಸ್ತೆಗಳಿದ್ದವು. ಸ್ವರ್ಗದಂತೆ ಹೊಳೆಯುತ್ತಿದ್ದ ಇಂದ್ರಪ್ರಸ್ಥವು ಆಕಾಶದಲ್ಲಿ ಮಿಂಚಿನಿಂದ ಸಮಾವೃತ ಮೋಡಗಳ ರಾಶಿಯಂತೆ ಕಾಣುತ್ತಿತ್ತು. ಈ ರಮ್ಯ ಶುಭ ಪ್ರದೇಶದಲ್ಲಿ ಶುಭ ಸಂಪತ್ತು ಅಕ್ಷಯವಾಗಿದೆಯೋ ಎನ್ನುವಂತೆ ಧನಸಂಪೂರ್ಣವಾದ ಕೌರವನ ನಿವೇಶನವಿತ್ತು.

ಸರ್ವವೇದವಿದರಲ್ಲಿ ಶ್ರೇಷ್ಠ ದ್ವಿಜರು ಅಲ್ಲಿಗೆ ಬಂದರು. ಸರ್ವ ಭಾಷೆಯ ಜನರೂ ಅಲ್ಲಿ ವಾಸಿಸಲು ಬಯಸುತ್ತಿದ್ದರು. ಆ ದೇಶಕ್ಕೆ ಎಲ್ಲ ಕಡೆಗಳಿಂದಲೂ ಧನಾರ್ಥಿಗಳಾದ ವ್ಯಾಪಾರಿಗಳು, ವರ್ತಕರು ಬಂದರು ಮತ್ತು ಸರ್ವ ಶಿಲ್ಪ ವಿದ್ವಾಂಸರೂ ಅಲ್ಲಿ ವಾಸಿಸಲು ಬಂದರು. ನಗರವು ಮಾವು, ಅಮ್ರಾತಕ, ನಿಪ, ಅಶೋಕ, ಚಂಪಕ, ಪುನ್ನಾಗ, ನಾಗಪುಷ್ಪ, ಲಕುಚ, ಪನಸ, ಶಾಲತಾಲ, ಕದಂಬ, ಬಕುಲ, ಸಕೇತ, ಮೊದಲಾದ ಮನೋಹರ ಪುಷ್ಪಿತ, ಫಲಗಳ ಭಾರದಿಂದ ಬಾಗಿದ್ದ, ಮರಗಳಿಂದ ಕೂಡಿದ ಸುಂದರ ಉದ್ಯಾನವನಗಳಿಂದ ಆವೃತವಾಗಿತ್ತು. ಆ ವನಗಳು ಗಳಿತ ಅಮಲಕ, ಲೋದ್ರ, ಹೂವಿಟ್ಟ ಅಂಕೋಲಗಳು, ಜಂಬೂ, ಪಾಟಲ, ಕುಬ್ಜಕ, ಅತಿಮುಕ್ತಕ, ಕರವೀರ, ಪಾರಿಜಾತ, ಮತ್ತು ಅನ್ಯ ವಿವಿಧ ಮರಗಳಿಂದ, ನಿತ್ಯವೂ ಪುಷ್ಪ-ಫಲಗಳಿಂದ ತುಂಬಿರುವ ನಾನಾಪಕ್ಷಿಗಳ ಸಂಕುಲಗಳಿಂದ ಕೂಡಿದ, ಮತ್ತಿನಲ್ಲಿದ್ದ ನವಿಲುಗಳ ಮತ್ತು ಸದಾ ಮದದಲ್ಲಿದ್ದ ಕೋಕಿಲಗಳ ಧ್ವನಿಗಳಿಂದ ಕೂಡಿದ್ದವು. ಅದು ಕನ್ನಡಿಗಳಂತೆ ಶುಭ್ರ ಮನೆಗಳಿಂದ, ವಿವಿಧ ಲತಾಗೃಹಗಳಿಂದ, ಬಣ್ಣಬಣ್ಣದ ಮನೋಹರ ಮನೆಗಳಿಂದ, ಸುಖಮಯ ಪರ್ವತಗಳಿಂದ, ಶುದ್ಧ ನೀರು ತುಂಬಿದ ಕೊಳಗಳಿಂದ, ಪದ್ಮ ಕುಸುಮಗಳ ಸುಗಂಧದಿಂದ ತುಂಬಿದ, ಹಂಸ ಬಾತುಕೋಳಿಗಳ ಕಲರವದಿಂದ, ಚಕ್ರವಾಕ ಪಕ್ಷಿಗಳಿಂದ ಶೋಭಿತ ಅತಿರಮ್ಯ ಸುಂದರ ಸರೋವರಗಳಿಂದ, ರಮ್ಯ ವನಗಳಿಂದ ಆವೃತ ವಿವಿಧ ಪುಷ್ಕರಿಣಿಗಳಿಂದ, ಮತ್ತು ಅಗಲ ಮತ್ತು ದೊಡ್ಡ ರಮ್ಯ ಕೆರೆಗಳಿಂದ ಕೂಡಿತ್ತು. ಆ ಪುಣ್ಯಜನೋಪೇತ ಮಹಾ ರಾಷ್ಟ್ರದಲ್ಲಿ ವಾಸಿಸುತ್ತಿದ್ದ ಪಾಂಡವರ ಸಂತೋಷವು ನಿರಂತರವೂ ಹೆಚ್ಚಾಗುತ್ತಿತ್ತು. ಈ ರೀತಿ ಭೀಷ್ಮ ಮತ್ತು ರಾಜನ ಧರ್ಮ ಪ್ರಣಯದಿಂದ ಪಾಂಡವರು ಖಾಂಡವಪ್ರಸ್ಥದಲ್ಲಿ ವಾಸಿಸಲು ಪ್ರಾರಂಭಿಸಿದರು. ಆ ಐದು ಇಂದ್ರಕಲ್ಪ ಮಹೇಷ್ವಾಸರಿದ ಕೂಡಿದ ಆ ಶ್ರೇಷ್ಠ ಪುರವು ನಾಗಗಳಿಂದ ಭೋಗವತಿಯು ಹೇಗೋ ಹಾಗೆ ಶೋಭಿಸುತ್ತಿತ್ತು.

ಅಲ್ಲಿ ಅವರ ತಳವನ್ನೂರಿಸಿ ಕೇಶವನು ವೀರ ರಾಮನ ಸಹಿತ ಪಾಂಡವರ ಅನುಮತಿಯನ್ನು ಪಡೆದು ದ್ವಾರವತಿಗೆ ಹಿಂದಿರುಗಿದನು.

Leave a Reply

Your email address will not be published. Required fields are marked *