ಸೌಗಂಧಿಕಾ ಹರಣ

ಗಂಧಮಾಧನ ಪರ್ವತದಲ್ಲಿ ಆ ವೀರ ಪುರುಷವ್ಯಾಘ್ರ ಪಾಂಡವರು ವಿಹರಿಸುತ್ತಾ ರಂಜಿಸಿಕೊಳ್ಳುತ್ತಾ ಅತ್ಯಂತ ಶುಚಿಯಾಗಿದ್ದುಕೊಂಡು ಧನಂಜಯನನ್ನು ನೋಡುವ ಆಕಾಂಕ್ಷೆಯಿಂದ ಆರು ರಾತ್ರಿಗಳನ್ನು ಕಳೆದರು. ಮನೋಜ್ಞವಾದ, ಸರ್ವಭೂತಗಳಿಗೂ ಮನೋರಮವಾದ, ಆ ಶ್ರೇಷ್ಠ ಕಾನನದಲ್ಲಿ, ಹೂಗಳ ಗೊಂಚಲುಗಳಿಂದ ತೂಗುತ್ತಿದ್ದ, ಹಣ್ಣಿನ ಭಾರದಿಂದ ಬಾಗಿನಿಂತಿದ್ದ ಮರಗಳಿಂದ ಶೋಭಿತವಾದ, ಎಲ್ಲೆಲ್ಲೂ ಸುಂದರವಾಗಿದ್ದ, ಗಂಡುಕೋಗಿಲೆಗಳ ಕೂಗಿನಿಂದ ತುಂಬಿದ್ದ, ದಟ್ಟವಾದ ಚಿಗುರೆಲೆಗಳಿಂದ ಕೂಡಿದ್ದ, ಮನೋರಮವಾದ ತಣ್ಣಗಿನ ನೆರಳನ್ನು ಹೊಂದಿದ್ದ, ತಿಳಿನೀರಿನ ವಿಚಿತ್ರ ಸರೋವರಗಳಿಂದ ಕೂಡಿದ್ದ, ಕಮಲಗಳಿಂದ ಮತ್ತು ತಾವರೆಗಳಿಂದ ಎಲ್ಲೆಡೆಯೂ ಹೊಳೆಯುತ್ತಿದ್ದ ಸುಂದರ ರೂಪಗಳನ್ನು ನೋಡುತ್ತಾ ಅಲ್ಲಿ ಪಾಂಡವರು ರಮಿಸಿದರು. ಅಲ್ಲಿ ಪುಣ್ಯವಾದ ಸುವಾಸನೆಯನ್ನು ಹೊತ್ತ ಸಂತೋಷವನ್ನು ನೀಡುವ ಮಂದಮಾರುತವು ದ್ರೌಪದಿಯೊಂದಿಗೆ ಪಾಂಡವರನ್ನೂ ಬ್ರಾಹ್ಮಣರನ್ನೂ ಆಹ್ಲಾದಗೊಳಿಸಿ ಬೀಸಿತು. ಆಗ ಪೂರ್ವೋತ್ತರ ಗಾಳಿಯು ಬೀಸತೊಡಗಿತು ಮತ್ತು ಅದು ಸಹಸ್ರ ದಳಗಳ ಪ್ರಭೆಯನ್ನು ಹೊಂದಿದ್ದ ದಿವ್ಯ ಪದ್ಮವನ್ನು ಹೊತ್ತು ತಂದಿತು. ಗಾಳಿಯು ಹೊತ್ತು ತಂದು ನೆಲದ ಮೇಲೆ ಬೀಳುತ್ತಿದ್ದ ಶುಚಿಯಾಗಿದ್ದ ಮನೋರಮವಾಗಿದ್ದ ದಿವ್ಯಸುವಾಸನೆಯನ್ನು ಹೊಂದಿದ್ದ ಆ ಕಮಲವನ್ನು ಪಾಂಚಾಲಿ ದ್ರೌಪದಿಯು ನೋಡಿದಳು. ಆ ಶುಭೆಯು ಶುಭವಾಗಿದ್ದ ಅನುತ್ತಮವಾಗಿದ್ದ ಆ ಸೌಗಂಧಿಕಾ ಪುಷ್ಪವನ್ನು ಪಡೆದು ಅತೀವ ಸಂತೋಷಗೊಂಡಳು ಮತ್ತು ಭೀಮಸೇನನಿಗೆ ಹೇಳಿದಳು: “ಭೀಮ! ಈ ದಿವ್ಯವಾದ ಸುಂದರವಾದ ಅನುತ್ತಮವಾದ ಒಳ್ಳೆಯ ಸುಗಂಧವನ್ನು ಹೊಂದಿರುವ ನನ್ನ ಮನಸ್ಸಿಗೆ ಆನಂದವನ್ನು ನೀಡುತ್ತಿರುವ ಈ ಪುಷ್ಪವನ್ನು ನೋಡು! ಇದನ್ನು ಧರ್ಮರಾಜನಿಗೆ ಒಪ್ಪಿಸುತ್ತೇನೆ ಮತ್ತು ನನ್ನ ಸಂತೋಷಕ್ಕಾಗಿ ಇದನ್ನು ಕಾಮ್ಯಕದಲ್ಲಿರುವ ನಮ್ಮ ಆಶ್ರಮಕ್ಕೂ ಕೊಂಡೊಯ್ಯುತ್ತೇನೆ. ನೀನು ನನ್ನನ್ನು ಪ್ರೀತಿಸುವೆಯಾದರೆ ಇನ್ನೂ ಅನೇಕ ಹೂವುಗಳನ್ನು ತಂದುಕೊಡು. ಅವುಗಳನ್ನು ನಾನು ನಮ್ಮ ಕಾಮ್ಯಕವನದ ಆಶ್ರಮಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತೇನೆ.”

ಭೀಮಸೇನನಿಗೆ ಹೀಗೆ ಹೇಳಿ ಅನಿಂದೆತೆ ಪಾಂಚಾಲಿಯು ಧರ್ಮರಾಜನಲ್ಲಿಗೆ ಹೋಗಿ ಆ ಪುಷ್ಪವನ್ನು ಅವನಿಗೆ ಒಪ್ಪಿಸಿದಳು. ರಾಣಿಯ ಅಭಿಪ್ರಾಯವನ್ನು ತಿಳಿದ ಪುರುಷರ್ಷಭ ಭೀಮನು, ಪ್ರಿಯರಿಗೆ ಪ್ರೀತಿಯಾಗುವುದನ್ನು ಮಾಡುವ ಆ ಭೀಮಪರಾಕ್ರಮ ಭೀಮನು, ಆ ಪುಷ್ಪವನ್ನು ಹೊತ್ತು ತಂದ ಗಾಳಿಯು ಬರುವ ಕಡೆ ಮುಖಮಾಡಿ, ಬಂಗಾರದ ಕೊನೆಯಿರುವ ಧನುಸ್ಸನ್ನು ಮತ್ತು ಸರ್ಪಗಳಂತಿರುವ ಶರಗಳನ್ನು ಎತ್ತಿಕೊಂಡು, ಕೃದ್ಧನಾದ ಸಿಂಹನಂತೆ ಮತ್ತು ಮದವೇರಿದ ಆನೆಯಂತೆ, ಇನ್ನೂ ಅನೇಕ ಪುಷ್ಪಗಳನ್ನು ತರಲೆಂದು ತಕ್ಷಣವೇ ಹೊರಟನು. ದ್ರೌಪದಿಯ ಸಂತೋಷದ ಕುರಿತು ಯೋಚಿಸುತ್ತಾ ಮತ್ತು ತನ್ನ ಬಲವನ್ನು ಆಶ್ರಯಿಸಿ ಆ ಬಲಿಯು ಭಯ ಸಮ್ಮೋಹಗಳನ್ನು ತೊರೆದು ಪರ್ವತದ ಕಡೆ ನಡೆದನು. ಅರಿಹರನು ಆ ಸುಂದರವಾದ, ಕಿನ್ನರರು ಸಂಚರಿಸುತ್ತಿದ್ದ, ನೀಲಿ ಕಲ್ಲುಗಳ ನೆಲದ, ಮರ ಮತ್ತು ಬಳ್ಳಿಗಳಿಂದ ತುಂಬಿದ ಗಿರಿಯಲ್ಲಿ ಸಂಚರಿಸಿದನು. ಬಣ್ಣಬಣ್ಣದ ಧಾತುಗಳಿಂದ, ಮರಗಳಿಂದ, ಮೃಗಗಳಿಂದ ಮತ್ತು ಪಕ್ಷಿಗಳಿಂದ ಕೂಡಿದ ಆ ಪರ್ವತವು ಸರ್ವಾಭರಣ ಭೂಷಿತವಾದ ಭೂಮಿಯ ಒಂದು ತೋಳಿನಂತೆ ತೋರುತ್ತಿತ್ತು. ಎಲ್ಲ ಋತುಗಳಲ್ಲಿಯೂ ರಮಣೀಯವಾಗಿದ್ದ ಗಂಧಮಾದನ ಶಿಖರದ ಮೇಲೆ ಅವನ ಕಣ್ಣು ಅಭಿಪ್ರಾಯಗಳೆರಡನ್ನೂ ಇಟ್ಟು ಹೃದಯದಲ್ಲಿ ಚಿಂತಿಸಿದನು. ಗಂಡುಕೋಕಿಲಗಳ ನಿನಾದದಿಂದ ಮತ್ತು ದುಂಬಿಗಳ ಝೇಂಕಾರದಿಂದ ತುಂಬಿದ್ದ ಆ ಪರ್ವತದೆಡೆಗೆ ತನ್ನ ಕಿವಿ-ಕಣ್ಣುಗಳನ್ನಿರಿಸಿ ಆ ಅಮಿತವಿಕ್ರಮನು ನಡೆದನು. ಸರ್ವಋತುಗಳಲ್ಲಿರುವ ಆ ಪುಷ್ಪದಿಂದ ಹೊರಹೊಮ್ಮುತ್ತಿದ್ದ ಸುವಾಸನೆಯ ಮಾರ್ಗವನ್ನು ಹಿಂಬಾಲಿಸುತ್ತಾ ಆ ಮಹಾತೇಜಸ್ವಿಯು ಮದವೇರಿದ ಆನೆಯಂತೆ ಮೂಸುತ್ತಾ ಗಂಧಮಾದನದ ಕಡೆ ಹೊರಟನು. ಅವನ ತಂದೆಯು ಗಂಧಮಾದನದಿಂದ ಬೀಸುವ ಛಳಿ ಗಾಳಿಯ ಮೂಲಕ ಅವನ ಆಯಾಸವನ್ನು ಕಡಿಮೆಮಾಡಿದನು ಮತ್ತು ಮೈ ನವಿರೇಳಿಸಿ ಸಂತೋಷಗೊಳಿಸಿದನು.

ಹೀಗೆ ಪುಷ್ಪದ ಕಾರಣದಿಂದಾಗಿ ಅರಿಂದಮನು ಆ ಯಕ್ಷ-ಗಂಧರ್ವ-ಸುರ-ಬ್ರಹ್ಮರ್ಷಿಗಣಗಳು ಪೂಜಿಸುವ ಜಾಗಗಳಿಂದ ಹಾದು ಹೋದನು. ವಿವಿಧ ವರ್ಣಗಳ - ಕಪ್ಪು, ಚಿನ್ನ, ಮತ್ತು ಬೆಳ್ಳಿ ಬಣ್ಣಗಳ ಧಾತುಗಳು, ಸಮ ಪ್ರಕಾರಗಳಲ್ಲಿ ಹೊಳೆಯುತ್ತಿರಲು ಆ ಶೈಲಕ್ಕೆ ಬೆರಳುಗಳಿಂದ ಬಣ್ಣ ಹಚ್ಚಲಾಗಿದೆಯೋ ಎಂದು ತೋರುತ್ತಿತ್ತು. ಎರಡೂ ಪಕ್ಕಗಳಲ್ಲಿ ಮೋಡಗಳು ತಾಗಿಕೊಂಡು ಅದು ರೆಕ್ಕೆಗಳೊಂದಿಗೆ ಕುಣಿಯುತ್ತಿದೆಯೋ ಎಂದು ತೋರುತ್ತಿತ್ತು. ಧುಮುಕುತ್ತಿರುವ ನದೀ ಧಾರೆಗಳು ಮುತ್ತಿನ ಹಾರಗಳಂತೆ ತೋರುತ್ತಿದ್ದವು. ಅದರ ನದಿಗಳು, ವನಗಳು, ಜಲಪಾತಗಳು ಮತ್ತು ಕಂದರಗಳು ಸುಂದರವಾಗಿದ್ದವು ಮತ್ತು ನವಿಲುಗಳು ಅಪ್ಸರೆಯರ ಕಾಲ್ಗೆಜ್ಜೆಯ ನಾದಕ್ಕೆ ಕುಣಿಯುತ್ತಿದ್ದವು. ದಿಕ್ಕುಗಳನ್ನು ಕಾಯುವ ದಿಗ್ಗಜಗಳು ತಮ್ಮ ಸೊಂಡಿಲುಗಳ ತುಟಿಗಳಿಂದ ಶಿಲಾತಲವನ್ನು ತಿಕ್ಕಲು ಅದರಿಂದ ಹೊರಚಿಮ್ಮಿದ ನದಿಯು ಪರ್ವತದ ಕೆಳಗೆ ಹರಿದುಬಂದು ತನ್ನ ಶುದ್ಧ ಜಲದಿಂದ ಪರ್ವತದ ಪಕ್ಕೆಗಳನ್ನು ತೊಳೆಯುತ್ತಿರುವಂತೆ ಕಾಣುತ್ತಿತ್ತು. ಭಯವನ್ನೇ ಅರಿಯದ ಆರೋಗ್ಯದಿಂದಿದ್ದ ಜಿಂಕೆಗಳು ಬಾಯಿತುಂಬಾ ಹುಲ್ಲನ್ನು ತಿನ್ನುತ್ತಾ ಕುತೂಹಲದಿಂದ ಅವನನ್ನು ಹತ್ತಿರದಿಂದಲೇ ನೋಡುತ್ತಿದ್ದವು. ತನ್ನ ತೊಡೆಗಳ ಬಲದಿಂದ ಬಳ್ಳಿಗಳ ಗಂಟುಗಳನ್ನು ಹರಿಯುತ್ತಾ ಆಟವಾಡುತ್ತಾ ಪ್ರಿಯೆಯ ಮನೋರಥವನ್ನು ಪೂರೈಸಲೋಸುಗ ಮದಿಸಿದ ಆನೆಯ ನಡುಗೆಯಲ್ಲಿ, ಮದಿಸಿದ ಆನೆಯ ವೇಗದಲ್ಲಿ, ಮದಿಸಿದ ಆನೆಯಂತೆ ತಾಮ್ರದ ಬಣ್ಣದ ಕಣ್ಣುಗಳಿರುವ ಅವನು ಇನ್ನೊಂದು ಮದಿಸಿದ ಆನೆಯನ್ನು ಎದುರಿಸಬಲ್ಲನೋ ಎನ್ನುವಂತೆ ಮುದುವರೆಯುತ್ತಿದ್ದ ಆ ಸುಂದರ ಕಣ್ಣಿನ, ತರುಣ ಸಿಂಹದಂತೆ ದೇಹವನ್ನು ಹೊಂದಿದ್ದ, ಬಂಗಾರದ ತಾಳವೃಕ್ಷದಂತೆ ಎತ್ತರವಾಗಿದ್ದ, ವಾಯುಪುತ್ರ ಶ್ರೀಮಾನ್ ಕೌಂತೇಯನನ್ನು ಅದೃಶ್ಯರಾಗಿ ತಮ್ಮ ಸಂಗಾತಿಗಳೊಡನೆ ಕುಳಿತು ಕಾಮಚೇಷ್ಟೆಗಳಲ್ಲಿ ತೊಡಗಿದ್ದ ಯಕ್ಷರೂ ಗಂಧರ್ವರೂ ನೋಡಿದರು. ರೂಪದ ಹೊಸ ಅವತಾರವನ್ನೇ ಮಾರಾಟಕ್ಕಿಟ್ಟಿದ್ದಾನೋ ಎನ್ನುವಂತೆ ಆ ಪಾಂಡವನು ರಮಣೀಯ ಗಂಧಮಾದನದ ಕಣಿವೆಗಳಲ್ಲಿ ಮುಂದುವರೆದನು. ವನವಾಸಿನಿಯಾಗಿದ್ದ ದ್ರೌಪದಿಗೆ ಪ್ರಿಯವಾದುದನ್ನು ಮಾಡಲೋಸುಗ ಹೊರಟ ಅವನು ದುರ್ಯೋಧನನು ನೀಡಿದ್ದ ಹಲವಾರು ಕಷ್ಟಗಳನ್ನು ನೆನಪಿಸಿಕೊಂಡನು. ಹಾಗೆಯೇ ಚಿಂತಿಸತೊಡಗಿದನು: “ಅರ್ಜುನನು ಸ್ವರ್ಗಕ್ಕೆ ಹೋದಮೇಲೆ ಮತ್ತು ನಾನೂ ಕೂಡ ಈ ಹೂವಿನ ಕಾರಣದಿಂದ ಹೋದನಂತರ ಆರ್ಯ ಯುಧಿಷ್ಠಿರನು ಏನು ಮಾಡುತ್ತಾನೆ? ಅವರಿಬ್ಬರ ಮೇಲಿನ ಪ್ರೀತಿಯಿಂದ ಮತ್ತು ವನದ ಕುರಿತು ಅವನಿಗಿದ್ದ ಅವಿಶ್ವಾಸದಿಂದ ನರವರ ಯುಧಿಷ್ಠಿರನು ನಕುಲ ಸಹದೇವರನ್ನೂ ಕಳುಹಿಸಿಕೊಡಲಾರ! ಅತಿ ಶೀಘ್ರದಲ್ಲಿ ಈ ಹೂವುಗಳನ್ನು ಹೇಗೆ ಪಡೆಯಲಿ?” ಎಂದು ಚಿಂತಿಸುತ್ತಾ ಆ ನರಶಾರ್ದೂಲನು ಪಕ್ಷಿರಾಜನಂತೆ ವೇಗದಿಂದ, ತನ್ನ ಹೆಜ್ಜೆಗಳ ಹೊಡೆತಕ್ಕೆ ಸಿಲುಕಿ ಪರ್ವಕಾಲವೋ ಎನ್ನುವಂತೆ ಭೂಮಿಯನ್ನು ನಡುಗಿಸುತ್ತಾ, ಆನೆಗಳ ಹಿಂಡುಗಳನ್ನು ಬೆದರಿಸುತ್ತಾ ನಡೆದನು. ಹುಲಿ-ಸಿಂಹಗಳನ್ನು ಹೊಡೆಯುತ್ತಾ, ತನ್ನ ಎದೆಯೊಡ್ಡಿ ಮಹಾ ಮರಗಳನ್ನು ಕಿತ್ತೆಸೆಯುತ್ತಾ, ಬಳ್ಳಿಗಳನ್ನು ಹರಿಯುತ್ತಾ ವೇಗದಿಂದ ಆ ಮಹಾಬಲಿ ಪಾಂಡುನಂದನ ವೃಕೋದರನು, ಪರ್ವತದ ತುದಿಗೆ ಹೋಗಲು ಮೇಲಿಂದ ಮೇಲೆ ಹತ್ತುತ್ತಿದ್ದ ಮಿಂಚಿನ ಅಂಚುಗಳ ಮೋಡದಂತೆ ಘರ್ಜಿಸುತ್ತಾ ಮುಂದುವರೆದನು. ಅವನ ಆ ಘೋರ ಶಬ್ಧ ಮತ್ತು ಧನುರ್ಘೋಷವನ್ನು ಕೇಳಿ ಮೃಗಗಳ ಹಿಂಡುಗಳು ಹೆದರಿ ಚೆಲ್ಲಪಿಲ್ಲಿಯಾಗಿ ಓಡಿದವು.

ಆಗ ಆ ಮಹಾಬಾಹುವು ಗಂಧಮಾದನ ಪರ್ವತದ ಕಂದರದಲ್ಲಿ ಸುಂದರವಾಗಿದ್ದ ಬಹುಯೋಜನ ವಿಸ್ತಾರವಾಗಿದ್ದ ಒಂದು ಬಾಳೆಯ ವನವನ್ನು ಕಂಡನು. ಮಹಾಬಲಿ ಭೀಮನು ಅದನ್ನು ನಾಶಗೊಳಿಸಲು ವೇಗದಿಂದ ಅಲ್ಲಿಗೆ ಹೋಗಿ ಕೆನ್ನೆಯೊಡೆದ ಮಹಾ ಆನೆಯಂತೆ ಹಲವಾರು ಬಾಳೆಯ ಮರಗಳನ್ನು ತುಳಿದು ಧ್ವಂಸ ಮಾಡಿದನು. ಬಲಶಾಲಿಗಳಲ್ಲಿಯೇ ಶ್ರೇಷ್ಠ ಭೀಮನು ತಾಳೆಯ ಮರಗಳಂತೆ ಎತ್ತರವಾಗಿದ್ದ ಹಲವಾರು ಬಾಳೆಯ ಮರಗಳನ್ನು ಕಿತ್ತು ಎಲ್ಲೆಡೆಯಲ್ಲಿಯೂ ಎಸೆದನು. ಆಗ ಅಲ್ಲಿಂದ ಹಲವಾರು ಮಹಾ ಮೃಗಗಳು - ರುರು ಜಿಂಕೆಗಳು, ಎಮ್ಮೆಗಳು, ಮಂಗಗಳು ಮತ್ತು ನೀರಿನಲ್ಲಿರುವ ಪ್ರಾಣಿಗಳು - ಹೊರಗೆ ಓಡಿಬಂದವು. ಸಿಟ್ಟಿಗೆದ್ದ ಹುಲಿ-ಸಿಂಹಗಳು ಮಹಾರೌದ್ರವಾಗಿ ಘರ್ಜಿಸುತ್ತ ಅತಿಭೀಷಣರಾಗಿ ಭೀಮಸೇನನ ಮೇಲೆ ಎರಗಿದವು. ಆಗ ವಾಯುಸುತ ಭೀಮನು ಸಿಟ್ಟಿನಿಂದ ತನ್ನ ಬಾಹುಬಲದಿಂದ ಆನೆಗಳನ್ನು ಆನೆಗಳಿಂದ ಹೊಡೆದು, ಸಿಂಹಗಳನ್ನು ಸಿಂಹಗಳಿಂದ ಹೊಡೆದು ಮತ್ತು ಇತರ ಪ್ರಾಣಿಗಳನ್ನು ತನ್ನ ಅಂಗೈಗಳಿಂದ ಹೊಡೆದು ಸಾಯಿಸಿದನು. ಈ ರೀತಿ ಸಾಯಿಸುತ್ತಿದ್ದ ಭೀಮನನ್ನು ನೋಡಿ ಸಿಂಹ, ಹುಲಿ ಮತ್ತು ಹಯೀನಗಳೆಲ್ಲವೂ ಭಯದಿಂದ ಮಲಮೂತ್ರಗಳನ್ನು ವಿಸರ್ಜಿಸುತ್ತಾ ಹಿಂದೆಸರಿದವು.

ಆ ಜಲಪಕ್ಷಿಗಳನ್ನು ಕಂಡ ಭರತರ್ಷಭನು ಅವುಗಳನ್ನೇ ಅನುಸರಿಸಿ ಹೋಗಿ ಅತಿ ದೊಡ್ಡ ರಮ್ಯ ಸರೋವರವನ್ನು ಕಂಡನು. ದಡದ ಮೇಲೆ ಬೆಳೆದಿದ್ದ ಬಾಳೆಯ ಮರದ ಎಲೆಗಳು ಗಾಳಿಯನ್ನು ಬೀಸುತ್ತಿರಲು ನಿಧಾನವಾಗಿ ಅಲೆಗಳು ಆ ಸರೋವರದಲ್ಲಿ ಕಾಣುತ್ತಿದ್ದವು. ತಕ್ಷಣವೇ ಅವನು ಕೆಂಪು ಮತ್ತು ನೀಲಿ ಕಮಲಗಳುಳ್ಳ ಆ ಸರೋವರಕ್ಕೆ ಧುಮುಕಿದನು ಮತ್ತು ಆ ಮಹಾಬಲಶಾಲಿಯು, ಬಂಧನವಿಲ್ಲದ ಮಹಾಗಜದಂತೆ ನೀರನ್ನು ಸೋಕಿ ಬಹಳ ಹೊತ್ತು ಆಡಿ ಸರೋವರದಿಂದ ಮೇಲೆದ್ದನು. ಅನಂತರ ವೇಗದಲ್ಲಿ ಆ ದಟ್ಟ ಅರಣ್ಯವನ್ನು ಹೊಕ್ಕು ಪಾಂಡವನು ಜೋರಾಗಿ ತನ್ನ ಶಂಖವನ್ನು ಊದಿದನು.   ಭೀಮಸೇನನ ಶಂಖದ ಧ್ವನಿ ಮತ್ತು ಕೂಗು ಬಹಳಷ್ಟು ಧ್ವನಿಗಳಾಗಿ ಆ ಗಿರಿಯ ಗುಹೆಗಳಿಂದ ಪ್ರತಿಧ್ವನಿಸಿತು. ವಜ್ರಾಯುಧದಿಂದ ತಟ್ಟುತ್ತಿರುವಂತಿದ್ದ ಆ ಗುಡುಗಿನ ಶಬ್ಧವನ್ನು ಕೇಳಿ ಗುಹೆಗಳಲ್ಲಿ ಮಲಗಿದ್ದ ಸಿಂಹಗಳು ಎಚ್ಚೆತ್ತು ಜೋರಾಗಿ ಗರ್ಜಿಸಿದವು. ಆ ಸಿಂಹಗಳ ಗರ್ಜನೆಯು ಆನೆಗಳನ್ನು ಹೆದರಿಸಲು, ಭಾರತ, ಆನೆಗಳ ಘೀಳಿನ ಧ್ವನಿಯು ಪರ್ವತವನ್ನು ತುಂಬಿತು.

ಅವನ ಆ ನಾದವನ್ನು ಕೇಳಿ ಮಲಗಿದ್ದ ಮಹಾಕಾಯ, ಹನೂಮಾನ್ ಎಂಬ ಹೆಸರಿನ ವಾನರ ಪುಂಗವ ವಾನರನು ಆಕಳಿಸಿದನು. ಬಾಳೆಯ ಮರಗಳ ಮಧ್ಯೆ ಮಲಗಿದ್ದ ಇಂದ್ರನ ಧ್ವಜದಷ್ಟು ಎತ್ತರವಾಗಿದ್ದ ಆ ಅತಿ ದೊಡ್ಡ ವಾನರನು ಆಕಳಿಸಿ ವಜ್ರದಂತಿರುವ ತನ್ನ ಬಾಲವನ್ನು ನೆಲಕ್ಕೆ ಹೊಡೆದನು. ಹೀಗೆ ಅವನು ಬಾಲವನ್ನು ಹೊಡೆದಿದ್ದುದರ ಧ್ವನಿಯು ಪರ್ವತದ ಕಣಿವೆಗಳಲೆಲ್ಲ ಪ್ರತಿಧ್ವನಿಸಿತು. ಮದಿಸಿದ ಆನೆಗಳ ಘೀಳನ್ನೂ ಮುಚ್ಚಿಸುವ ಅವನ ಬಾಲದ ಹೊಡೆತದ ಗುಡುಗಿನ ಧ್ವನಿಯು ಬಣ್ಣ ಬಣ್ಣದ ಗಿರಿಶಿಖರಗಳಲ್ಲಿ ಮೊಳಗಿತು. ಅದನ್ನು ಕೇಳಿದ ಭೀಮಸೇನನ ದೇಹದಮೇಲಿನ ಕೂದಲುಗಳು ಎದ್ದುನಿಂತವು. ಆ ಶಬ್ಧವು ಎಲ್ಲಿಂದ ಬಂದಿತೆಂದು ಅವನು ಇಡೀ ಬಾಳೆಯ ವನವನ್ನು ಹುಡುಕಾಡಿದನು. ಆಗ ಆ ಮಹಾಬಾಹುವು ಬಾಳೆಯ ವನದ ಮಧ್ಯದಲ್ಲಿ ಒಂದು ಕಲ್ಲಿನ ಗಸೆಯ ಮೇಲೆ ಕಣ್ಣು ಕೋರೆಗೊಳಿಸುವ ಮಿಂಚಿನಂತೆ ಹೊಳೆಯುತ್ತಾ, ಮಿಂಚಿನಂತೆ ಹಳದೀ ಬಣ್ಣದ, ಮಿಂಚಿನಂತೆ ಕಾಣುತ್ತಿದ್ದ, ಮಿಂಚಿನಂತೆ ಚಂಚಲನಾಗಿ ಕುಳಿತಿದ್ದ ವಾನರಾಧಿಪತಿಯನ್ನು ನೋಡಿದನು. ಅವನ ಬಲಿಷ್ಠ ಕುಳ್ಳಗಿನ ಕತ್ತು ತೋಳುಗಳ ಮೇಲೆ ನಿಂತಿತ್ತು, ಅವನ ವಿಶಾಲ ಬಾಹುಗಳ ಕೆಳಗೆ ಸೊಂಟವು ಅತ್ಯಂತ ಸಣ್ಣದಾಗಿತ್ತು ಮತ್ತು ಉದ್ದವಾದ ಕೂದಲುಗಳಿಂದ ಕೂಡಿದ ಬಾಲವು ತುದಿಯಲ್ಲಿ ಸ್ವಲ್ಪ ಬಾಗಿದ್ದು, ಎತ್ತರದ ಬಾವುಟದಂತೆ ಹೊಳೆಯುತ್ತಿತ್ತು. ಚಂದ್ರನಂತೆ ಹೊಳೆಯುತ್ತಿದ್ದ ಅವನ ಮುಖದಲ್ಲಿ ಕೆಂಪು ತುಟಿಗಳು, ತಾಮ್ರದಂತೆ ಕೆಂಪಾಗಿದ್ದ ನಾಲಿಗೆಗಳು, ಗುಲಾಬಿ ಬಣ್ಣದ ಕಿವಿಗಳು, ಮೊನಚಾದ ಹುಬ್ಬುಗಳು, ಮತ್ತು ಮೊಂಡಾದ ಹೊರಚಾಚಿದ ಕೋರೆದಾಡೆಗಳಿದ್ದವು. ಅವನ ಬಾಯಿಯೊಳಗಿದ್ದ ಹಲ್ಲುಗಳು ಹೊಳೆಯುತ್ತಿದ್ದವು ಮತ್ತು ಅಶೋಕ ಪುಷ್ಪಗಳಂತೆ ಅವನ ಕಿತ್ತಳೆ ಬಣ್ಣದ ಕೂದಲು ಮುಖದ ಮೇಲೆ ರಾರಾಜಿಸುತ್ತಿತ್ತು. ಬಂಗಾರದ ಬಣ್ಣದ ಬಾಳೆಯ ವನದ ಮಧ್ಯದಲ್ಲಿ ಉರಿಯುತ್ತಿರುವ ಬೆಂಕಿಯಂತೆ ತನ್ನ ದೇಹದ ಬೆಳಗಿನಿಂದಲೇ ಬೆಳಗುತ್ತಾ ಜೇನುಹನಿಯ ಬಣ್ಣದ ಕಣ್ಣುಗಳಿಂದ ಯಾರನ್ನೋ ನಿರೀಕ್ಷಿಸುತ್ತಿರುವಂತೆ ಅಲ್ಲಿ ಕುಳಿತುಕೊಂಡಿದ್ದನು.

ಭೀಮ ಪರಾಕ್ರಮಿ ಭೀಮನು ಬೇಗನೇ ಆ ವಾನರಶ್ರೇಷ್ಠ, ವೀರ, ಅತಿಕಾಯ, ಮಹಾಬಲನ ಹತ್ತಿರ ಹೋಗಿ ಆ ಕಪಿಗೆ ಕೇಳುವಂತೆ ಜೋರಾಗಿ ಸಿಂಹನಾದವನ್ನು ಮಾಡಿದನು. ಆ ಭೀಮನ ಶಬ್ಧದಿಂದ ಮೃಗಪಕ್ಷಿಗಳು ಗಡಗಡನೆ ನಡುಗಿದವು. ಮಹಾಸತ್ವಶಾಲಿ ಹನುಮಂತನು ಕಣ್ಣನ್ನು ಸ್ವಲ್ಪವೇ ತೆರೆದು ತನ್ನ ಜೇನಿನ ಬಣ್ಣದ ಕಣ್ಣುಗಳಿಂದ ತಿರಸ್ಕಾರಭಾವದಿಂದ ದೃಷ್ಟಿಯನ್ನು ಕೆಳಮಾಡಿ ನೋಡಿದನು. ಮುಗುಳ್ನಗುತ್ತಾ ಆ ವಾನರನು ನರ ಕೌಂತೇಯನಿಗೆ ಹೇಳಿದನು: “ಆರೋಗ್ಯ ಚೆನ್ನಾಗಿಲ್ಲದೇ ಸುಖ ನಿದ್ದೆಯನ್ನು ಮಾಡುತ್ತಿರುವ ನನ್ನನ್ನು ನೀನು ಏಕೆ ಎಬ್ಬಿಸಿದೆ? ತಿಳಿದಿರುವ ನೀನು ಎಲ್ಲ ಜೀವಿಗಳಿಗೂ ದಯೆಯನ್ನು ತೋರಬಾರದೇ? ಪ್ರಾಣಿಯೋನಿಯಲ್ಲಿ ಹುಟ್ಟಿದ ನಮಗೆ ಧರ್ಮವೇನೆಂದು ತಿಳಿಯದು. ಆದರೆ ಬುದ್ಧಿಸಂಪನ್ನರಾದ ಮನುಷ್ಯರು ಜೀವಿಗಳಿಗೆ ದಯೆಯನ್ನು ತೋರಿಸುತ್ತಾರೆ. ಬುದ್ಧಿವಂತನಾದ ನೀನು ಹೇಗೆ ತಾನೆ ದೇಹ, ಮಾತು ಮತ್ತು ಮನಸ್ಸುಗಳನ್ನು ಕಲುಷಿತಗೊಳಿಸುವ ಕ್ರೂರಕರ್ಮವನ್ನೆಸಗಿ ಧರ್ಮಘಾತಿ ಮಾಡುತ್ತಿರುವೆ? ನಿನಗೆ ಧರ್ಮವೆನ್ನುವುದೇನೆಂದು ತಿಳಿದಿಲ್ಲ ಮತ್ತು ನೀನು ವೃದ್ಧರ ಸೇವೆಯನ್ನು ಮಾಡಿದಂತಿಲ್ಲ. ನಿನ್ನ ಅಲ್ಪಬುದ್ಧಿಯಿಂದ ವನದಲ್ಲಿ ವಾಸಿಸುವ ಮೃಗಗಳನ್ನು ಮೇಲೆಬ್ಬಿಸುತ್ತಿದ್ದೀಯೆ. ಹೇಳು! ನೀನು ಯಾರು? ಮತ್ತು ಮನುಷ್ಯರು ಬಾರದೇ ಇರುವ ಈ ವನಕ್ಕೆ ಏಕೆ ಬಂದಿದ್ದೀಯೆ? ಇಲ್ಲಿಂದ ಮುಂದೆ ಈ ಪರ್ವತವನ್ನೇರಲು ಸಾಧ್ಯವಿಲ್ಲ. ಸಿದ್ಧರಿಗಲ್ಲದೇ ಬೇರೆ ಯಾರಿಗೂ ಹೋಗಲಿಕ್ಕೆ ಆಗುವುದಿಲ್ಲ. ನಿನಗೆ ಮುಂದೆ ಹೋಗಲಿಕ್ಕೆ ಏನೂ ಇಲ್ಲ. ನಿನ್ನ ಮೇಲಿನ ಕರುಣೆಯಿಂದಾಗಿ ಮತ್ತು ಮಿತ್ರತ್ವದಿಂದಾಗಿ ನಾನು ನಿನ್ನನ್ನು ತಡೆಯುತ್ತಿದ್ದೇನೆ. ಇಲ್ಲಿಂದ ಮುಂದೆ ನಿನಗೆ ಹೋಗಲು ಸಾಧ್ಯವಿಲ್ಲ. ಇಲ್ಲಿಯೇ ನಿಲ್ಲು. ನನ್ನ ಮಾತನ್ನು ಸ್ವೀಕರಿಸುವೆ ಎಂದಾದರೆ ಅಮೃತಕ್ಕೆ ಸಮಾನವಾದ ಈ ಫಲ ಮೂಲಗಳನ್ನು ತಿಂದು ಹಿಂದಿರುಗು.”

ಆ ಧೀಮಂತ ವಾನರೇಂದ್ರನ ಮಾತುಗಳನ್ನು ಕೇಳಿ ಅಮಿತ್ರಕರ್ಶನ ವೀರ ಭೀಮಸೇನನು ಉತ್ತರಿಸಿದನು: “ನೀನು ಯಾರು? ಯಾವ ಕಾರಣಕ್ಕೆ ನೀನು ಈ ರೀತಿ ಕಪಿಯ ರೂಪವನ್ನು ತಳೆದಿರುವೆ? ಬ್ರಾಹ್ಮಣರ ನಂತರದ ಜಾತಿಯವ ಕ್ಷತ್ರಿಯನು ನಿನ್ನನ್ನು ಪ್ರಶ್ನಿಸುತ್ತಿದ್ದೇನೆ. ಕೌರವ, ಸೋಮವಂಶದವನು, ಕುಂತಿಯ ಗರ್ಭದಲ್ಲಿ ಹುಟ್ಟಿದ, ಪಾಂಡವ, ವಾಯುತನಯ ಭೀಮಸೇನನೆಂದು ಕರೆಯುತ್ತಾರೆ.”

ಭೀಮಸೇನನ ಆ ಮಾತುಗಳನ್ನು ನಸುನಕ್ಕು ಸ್ವೀಕರಿಸಿದ ವಾಯುತನಯ ಹನುಮಂತನು ವಾಯುಪುತ್ರನಿಗೆ ಹೇಳಿದನು: “ನಾನೊಬ್ಬ ವಾನರ ಮತ್ತು ನಾನು ನಿನಗೆ ಇಷ್ಟವಾದಂತೆ ಮಾರ್ಗವನ್ನು ನೀಡುವುದಿಲ್ಲ. ನೀನು ಹಿಂದುರಿಗೆ ಹೋದರೆ ಒಳ್ಳೆಯದು. ಇಲ್ಲವಾದರೆ ನಿನ್ನ ನಾಶವನ್ನು ಹೊಂದುತ್ತೀಯೆ.”

ಭೀಮನು ಹೇಳಿದನು: “ವಾನರ! ನನ್ನ ನಾಶವಾಗುತ್ತದೆಯೋ ಇಲ್ಲವೋ ಎಂದು ನಾನು ನಿನ್ನಲ್ಲಿ ಕೇಳುತ್ತಿಲ್ಲ. ಎದ್ದೇಳು ಮತ್ತು ನನಗೆ ದಾರಿಯನ್ನು ಮಾಡಿಕೊಡು. ಇಲ್ಲವಾದರೆ ನೀನೇ ನಿನ್ನ ನಾಶವನ್ನು ಹೊಂದುತ್ತೀಯೆ.”

ಹನುಮಂತನು ಹೇಳಿದನು: “ನಾನು ವ್ಯಾಧಿಯಿಂದ ಪೀಡಿತನಾಗಿದ್ದೇನೆ. ಏಳುವುದಕ್ಕೆ ಆಗುತ್ತಿಲ್ಲ. ಒಂದುವೇಳೆ ನಿನಗೆ ಮುಂದೆ ಹೋಗಬೇಕಾದರೆ ನನ್ನ ಮೇಲೆ ಹಾರಿ ಹೋಗು.”

ಭೀಮನು ಹೇಳಿದನು: “ನಿರ್ಗುಣನೆನೆಸಿಕೊಂಡ ಪರಮಾತ್ಮನು ನಿನ್ನ ದೇಹದಲ್ಲಿ ವ್ಯಾಪ್ತವಾಗಿದ್ದಾನೆ. ವಿಶೇಷ ಜ್ಞಾನದಿಂದ ಮಾತ್ರ ತಿಳಿಯಬಹುದಾದಂಥಹ ಅವನ ಮೇಲೆ ಹಾರಿ ಅವನನ್ನು ಅಪಮಾನಿಸಲು ಬಯಸುವುದಿಲ್ಲ. ಆ ಭೂತಭಾವನನ ಕುರಿತು ಅಧ್ಯಯನ ಮಾಡಿ ತಿಳಿದುಕೊಳ್ಳದೇ ಇದ್ದಿದ್ದರೆ ನಾನೂ ಕೂಡ ಹನುಮಂತನು ಸಾಗರವನ್ನೇ ಹೇಗೆ ಹಾರಿ ದಾಟಿದನೋ ಹಾಗೆ ನಿನ್ನನ್ನೂ ಈ ಪರ್ವತವನ್ನೂ ಹಾರಿ ಹೋಗುತ್ತಿದ್ದೆ!”

ಹನುಮಂತನು ಹೇಳಿದನು: “ಸಾಗರವನ್ನು ಲಂಘಿಸಿ ದಾಟಿದ ಆ ಹನುಮಂತನೆನ್ನುವನು ಯಾರು? ಇದನ್ನು ಕೇಳುತ್ತಿದ್ದೇನೆ. ನಿನಗೆ ಸಾಧ್ಯವಾದರೆ ಉತ್ತರಿಸು.”

ಭೀಮನು ಹೇಳಿದನು: “ಗುಣವಂತನೂ, ಬುದ್ಧಿ, ಸತ್ವ ಬಲಾನ್ವಿತನೂ ಆದ ಅವನು ನನ್ನ ಅಣ್ಣ. ರಾಮಾಯಣದಲ್ಲಿ ಶೂರನೆಂದೂ, ವಾನರಪುಂಗವನೆಂದೂ ಖ್ಯಾತಿಗೊಂಡವನು. ರಾಮನ ಪತ್ನಿಯ ಸಲುವಾಗಿ ಅವನು ನೂರುಯೋಜನ ಅಗಲವಾಗಿದ್ದ ಸಾಗರವನ್ನು ಈ ಕಪೀಂದ್ರನು ಒಂದೇ ಒಂದು ನೆಗೆತವನ್ನು ಹಾರಿ ದಾಟಿದನು. ಆ ಮಹಾವೀರನು ನನ್ನ ಅಣ್ಣ. ನಾನೂ ಕೂಡ ತೇಜಸ್ಸು, ಬಲ ಮತ್ತು ಪರಾಕ್ರಮದಲ್ಲಿ ಅವನಂತೆಯೇ ಇದ್ದೇನೆ. ನಿನ್ನನ್ನು ಯುದ್ಧದಲ್ಲಿ ನಿಗ್ರಹಿಸಲು ಸಮರ್ಥನಾಗಿದ್ದೇನೆ. ಎದ್ದೇಳು. ನನಗೆ ದಾರಿಯನ್ನು ಬಿಟ್ಟುಕೊಡು. ಇಲ್ಲವಾದರೆ ಇಂದು ನನ್ನ ಪೌರುಷವನ್ನು ನೋಡು. ನನ್ನ ಆಜ್ಞೆಯನ್ನು ಪಾಲಿಸದೇ ಯಮಲೋಕಕ್ಕೆ ಪ್ರಯಾಣಮಾಡಬೇಡ!””

ಅವನು ಬಲೋನ್ಮತ್ತನಾಗಿದ್ದಾನೆ ಮತ್ತು ಬಾಹುವೀರ್ಯದಿಂದ ಗರ್ವಿತನಾಗಿದ್ದಾನೆ ಎಂದು ತಿಳಿದು ಹನುಮಂತನು ಹೃದಯದಲ್ಲಿಯೇ ಅವನ ಕುರಿತು ನಕ್ಕು ಹೇಳಿದನು: “ನನ್ನ ಮೇಲೆ ಕೃಪೆತೋರು! ನನಗೆ ಏಳಲು ಆಗುತ್ತಿಲ್ಲ! ನಾನು ಮುದುಕ! ನನ್ನ ಮೇಲೆ ಅನುಕಂಪ ತೋರಿಸಿ ನನ್ನ ಈ ಬಾಲವನ್ನು ಎತ್ತಿ ಸರಿಸಿ ಮುಂದೆ ಸಾಗಬೇಕು!”

ತುಚ್ಛಭಾವನೆಯ ಮುಗುಳ್ನಗೆಯನ್ನು ನಗುತ್ತಾ ಭೀಮನು ತನ್ನ ಎಡಗೈಯಿಂದ ಆ ಮಹಾಕಪಿಯ ಬಾಲವನ್ನು ಹಿಡಿದನು. ಆದರೆ ಅದನ್ನು ಅಲುಗಾಡಿಸಲೂ ಅವನಿಗೆ ಆಗಲಿಲ್ಲ. ಅನಂತರ ಇಂದ್ರಾಯುಧದಂತೆ ಎತ್ತರವಾಗಿ ಬೆಳೆದಿದ್ದ ಅದನ್ನು ತನ್ನ ಎರಡೂ ಕೈಗಳಿಂದ ಎಳೆದಾಡಿದನು. ತನ್ನ ಎರಡೂ ಕೈಗಳಿಂದಲೂ ಆ ಮಹಾಬಲಿ ಭೀಮನು ಅದನ್ನು ಎತ್ತಲು ಅಶಕ್ತನಾದನು. ಕಣ್ಣಿನ ಹುಬ್ಬುಗಳನ್ನು ಬಿಗಿದು, ಕಣ್ಣುಗಳನ್ನು ಅಗಲುಮಾಡಿ, ಕಣ್ಣುಗಳನ್ನು ಮೇಲೆ ಕಳಗೆ ಮಾಡಿ ಎತ್ತಿದರೂ ಅವನ ಬಾಹುಗಳು ಬೆವರಿದವೇ ಹೊರತು ಆ ಭೀಮನು ಅದನ್ನು ಹಂದಾಡಿಸಲೂ ಅಶಕ್ತನಾದನು. ಬಹಳಷ್ಟು ಪ್ರಯತ್ನಿಸಿ ಸೋತುಹೋದ ಭೀಮನು ಆ ಮಹಾಕಪಿಯ ಪಕ್ಕದಲ್ಲಿ ನಾಚಿಕೆಯಿಂದ ತಲೆಬಾಗಿಸಿ ನಿಂತುಕೊಂಡನು. ಕೌಂತೇಯನು ಅಂಜಲೀ ಬದ್ಧನಾಗಿ ಕೈಮುಗಿದು ಹೇಳಿದನು: “ಕಪಿಶಾರ್ದೂಲ! ಕೃಪೆತೋರು! ನನ್ನ ಅಪಮಾನಗೊಳಿಸುವ ಮಾತುಗಳನ್ನು ಕ್ಷಮಿಸು. ವಾನರರೂಪವನ್ನು ಧರಿಸಿರುವ ನೀನು ಯಾರು? ಸಿದ್ಧನೋ, ಅಥವಾ ದೇವತೆಯೋ, ಗಂಧರ್ವನೋ ಅಥವಾ ಗುಹ್ಯಕನೋ? ನಾನು ಕೇಳಿದ ಪ್ರಶ್ನೆಗೆ ಉತ್ತರಿಸುವ ಕೃಪೆತೋರು.”

ಹನುಮಂತನು ಹೇಳಿದನು: “ಪಾಂಡವನಂದನ! ನನ್ನ ಕುರಿತು ತಿಳಿದುಕೊಳ್ಳಲು ನಿನಗೆ ಎಷ್ಟು ಕುತೂಹಲವಿದೆಲ್ಲವೋ ಅದೆಲ್ಲವನ್ನೂ ನಿನಗೆ ಹೇಳುತ್ತೇನೆ. ಕೇಳು. ನಾನು ಕೇಸರಿಯ ಗರ್ಭದಲ್ಲಿ ವಾಯುವಿನಿಂದ ಹುಟ್ಟಿದ್ದೇನೆ ಮತ್ತು ಹನೂಮಾನ್ ಎಂಬ ಹೆಸರಿನ ನಾನೊಬ್ಬ ವಾನರ. ವಾನರರೆಲ್ಲರ ರಾಜರಾದ ಸೂರ್ಯಪುತ್ರ ಸುಗ್ರೀವ ಮತ್ತು ಇಂದ್ರನ ಮಗ ವಾಲಿ ಇಬ್ಬರನ್ನೂ ಎಲ್ಲ ಮಹಾವೀರ ವಾನರ ಪಂಗಡಗಳೂ ಸೇವಿಸುತ್ತಿದ್ದರು. ನಾನು ಮತ್ತು ಆ ಅಮಿತ್ರಕರ್ಷಣ ಸುಗ್ರೀವನು ಬೆಂಕಿಯೊಂದಿಗೆ ಗಾಳಿಯು ಹೇಗೋ ಹಾಗೆ ಪ್ರೀತಿಯಿಂದ ಅನ್ಯೋನ್ಯರಾಗಿದ್ದೆವು. ಯಾವುದೋ ಕಾರಣಾಂತರದಿಂದ ತನ್ನ ಅಣ್ಣನಿಂದ ಮೋಸಗೊಂಡು ಸುಗ್ರೀವನು ನನ್ನೊಡನೆ ಋಷ್ಯಮೂಕ ಪರ್ವತದಲ್ಲಿ ವಾಸಿಸುತ್ತಿದ್ದನು. ಆಗ ದಶರಥನ ಮಗ ರಾಮನೆಂಬ ಹೆಸರಿನ ವೀರ ಮಹಾಬಲಶಾಲಿ, ಮನುಷ್ಯರೂಪದಲ್ಲಿದ್ದ ವಿಷ್ಣುವು ಈ ಭೂಮಿಯುಲ್ಲಿ ಅಲೆದಾಡುತ್ತಿದ್ದನು. ತನ್ನ ತಂದೆಗೆ ಪ್ರಿಯವಾದುದನ್ನು ಮಾಡಲೋಸುಗ ಧನ್ವಿಗಳಲ್ಲಿ ಶ್ರೇಷ್ಠನಾದ ಅವನು ಪತ್ನಿಯೊಂದಿಗೆ ಮತ್ತು ತಮ್ಮನೊಂದಿಗೆ ದಂಡಕಾರಣ್ಯದಲ್ಲಿ ವಾಸಿಸಿದನು. ಅವನ ಪತ್ನಿಯನ್ನು ರಾವಣನು ಜನಸ್ಥಾನದಲ್ಲಿ ಜಿಂಕೆಯ ರೂಪದಲ್ಲಿ ಆ ಮಹಾಬುದ್ಧಿ ರಾಘವನನ್ನು ಮೋಸಗೊಳಿಸಿ ಬಲಾತ್ಕಾರವಾಗಿ ಅಪಹರಿಸಿದನು. ಪತ್ನಿಯನ್ನು ಕಳೆದುಕೊಂಡ ರಾಘವನು ಅವಳನ್ನು ಹುಡುಕುತ್ತಾ ಪರ್ವತಶಿಖರದಲ್ಲಿದ್ದ ವಾನರರ್ಷಭ ಸುಗ್ರೀವನನ್ನು ಕಂಡನು. ಅಲ್ಲಿ ಮಹಾತ್ಮ ರಾಘವನಿಗೆ ಅವನೊಂದಿಗೆ ಸಖ್ಯವಾಯಿತು. ಅವನು ವಾಲಿಯನ್ನು ಕೊಂದು ರಾಜ್ಯವನ್ನು ಸುಗ್ರೀವನಿಗಿತ್ತನು. ಅನಂತರ ಅವನು ಸೀತೆಯನ್ನು ಹುಡುಕಲು ಕಪಿಗಳನ್ನು ಕಳುಹಿಸಿದನು. ಕೋಟಿಗಟ್ಟಲೆ ವಾನರರೊಂದಿಗೆ ಕಳುಹಿಸಲ್ಪಟ್ಟ ನಾವೂ ಕೂಡ ಒಂದು ದಿಕ್ಕಿನಲ್ಲಿ ಹೊರಟಿದ್ದೆವು. ಅಲ್ಲಿ ಒಂದು ಹದ್ದು ನಮಗೆ ಸೀತೆಯ ಕುರಿತು ವಿಷಯವನ್ನು ತಿಳಿಸಿತು. ಆಗ ಅಕ್ಲಿಷ್ಟಕರ್ಮಿ ರಾಮನ ಸಿದ್ದಿಗೋಸ್ಕರವಾಗಿ ನಾನು ನೂರು ಯೋಜನ ವಿಸ್ತೀರ್ಣದ ಮಹಾಸಾಗರವನ್ನು ಒಂದೇ ಸಾರಿ ಹಾರಿ ದಾಟಿದೆನು. ಅಲ್ಲಿ ರಾವಣನ ರಾಜ್ಯದಲ್ಲಿ ಆ ದೇವಿಯನ್ನು ನೋಡಿದೆನು ಮತ್ತು ನನ್ನ ಹೆಸರನ್ನು ಅಲ್ಲಿ ಪುನಃ ಪ್ರಕಟಿಸಿ ಹಿಂದಿರುಗಿದೆನು. ಅನಂತರ ವೀರ ರಾಮನು ಆ ಎಲ್ಲ ರಾಕ್ಷಸರನ್ನು ಸಂಹರಿಸಿ, ವೇದಶ್ರುತಿಗಳಂತೆ ಕಳೆದುಹೋಗಿದ್ದ ತನ್ನ ಭಾರ್ಯೆಯನ್ನು ಪುನಃ ಸ್ವೀಕರಿಸಿದನು. ವೀರ ರಾಮನು ಹಿಂದಿರುಗಿದ ನಂತರ ನಾನು ಅವನಲ್ಲಿ ಕೇಳಿಕೊಂಡಿದ್ದೆನು: “ವೀರ! ಶತ್ರುಹರ! ಎಲ್ಲಿಯವರೆಗೆ ರಾಮಕಥೆಯು ಲೋಕಗಳಲ್ಲಿರುವುದೋ ಅಲ್ಲಿಯ ವರೆಗೆ ನಾವು ಜೀವಿಸಿರಲಿ” ಎಂದು. ಅದಕ್ಕೆ ಅವನು ಹಾಗೆಯೇ ಆಗಲಿ ಎಂದಿದ್ದನು. ಹನ್ನೊಂದು ಸಾವಿರ ವರ್ಷಗಳು ರಾಜ್ಯಭಾರವನ್ನು ಮಾಡಿ ರಾಮನು ದೇವಲೋಕವನ್ನು ಸೇರಿದನು. ಈಗ ಇಲ್ಲಿ ಅಪ್ಸರೆಯರೂ ಗಂಧರ್ವರೂ ಆ ವೀರನ ಚರಿತ್ರೆಯನ್ನು ಹಾಡುತ್ತಾ ನನ್ನನ್ನು ರಂಜಿಸುತ್ತಾರೆ. ಈ ಮಾರ್ಗವಾದರೋ ಮನುಷ್ಯರು ಹೋಗುವಂಥಹುದಲ್ಲ. ಅದಕ್ಕಾಗಿಯೇ ನಾನು ಈ ಮಾರ್ಗದಲ್ಲಿ ಹೋಗುವುದನ್ನು ತಡೆಹಿಡಿದಿದ್ದೇನೆ. ದೇವಸೇವತವಾದ ಈ ಮಾರ್ಗದಲ್ಲಿ ಯಾರೂ ನಿನ್ನನ್ನು ಘಾತಿಗೊಳಿಸಬಾರದು ಅಥವಾ ಶಪಿಸಬಾರದು. ಇದು ದೇವತೆಗಳು ಬಳಸುವ ದಿವ್ಯ ಮಾರ್ಗ. ಅಲ್ಲಿ ಮನುಷ್ಯರು ಹೋಗುವುದಿಲ್ಲ. ಆದರೆ ನೀನು ಯಾವ ಸರೋವರಕ್ಕಾಗಿ ಬಂದಿರುವೆಯೋ ಅದು ಹತ್ತಿರದಲ್ಲಿಯೇ ಇದೆ.”

ಈ ಮಾತುಗಳನ್ನು ಕೇಳಿದ ಮಹಾಬಾಹು ಪ್ರತಾಪಿ ಭೀಮಸೇನನು ಪ್ರೀತಿಯಿಂದ ಅವನಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಸಂತೋಷದಿಂದ ಮೃದುವಾದ ಮಾತುಗಳಿಂದ ತನ್ನ ಅಣ್ಣ ಕಪೀಶ್ವರ ಹನೂಮಂತನಿಗೆ ಹೇಳಿದನು: “ನಿನ್ನನ್ನು ನೋಡಿದ ನನ್ನಷ್ಟು ಧನ್ಯನು ಇನ್ನು ಯಾರೂ ಇರಲಿಕ್ಕಿಲ್ಲ. ನಿನ್ನ ದರ್ಶನದಿಂದ ನಾನು ತುಂಬಾ ಅನುಗ್ರಹೀತನಾಗಿದ್ದೇನೆ ಮತ್ತು ಮಹಾ ತೃಪ್ತಿಯನ್ನು ಪಡೆದಿದ್ದೇನೆ. ಆರ್ಯ! ಇಂದು ನಿನಗೆ ಪ್ರಿಯಕರವಾದ ಇದನ್ನೂ ಕೂಡ ಮಾಡುತ್ತೀಯೆಂದು ಬಯಸುತ್ತೇನೆ. ಮಕರಾಲಯ ಸಾಗರವನ್ನು ಜಿಗಿಯುವಾಗ ನೀನು ಯವ ರೂಪವನ್ನು ಧರಿಸಿದ್ದೆಯೋ ಆ ರೂಪವನ್ನು ನೋಡಲು ಬಯಸುತ್ತೇನೆ. ಹೀಗೆ ನಾನು ಸಂತುಷ್ಟನಾಗುತ್ತೇನೆ ಮತ್ತು ನಿನ್ನ ಮಾತುಗಳನ್ನು ನಂಬುತ್ತೇನೆ.”

ಇದನ್ನು ಕೇಳಿದ ಆ ತೇಜಸ್ವಿ ಕಪಿಯು ನಗುತ್ತಾ ಹೇಳಿದನು: “ಆ ರೂಪವನ್ನು ನೀನಾಗಲೀ ಅಥವಾ ಇನ್ನ್ಯಾರೇ ಆಗಲೀ ನೋಡಲಿಕ್ಕಾಗುವುದಿಲ್ಲ. ಯಾಕೆಂದರೆ ಆಗ ಇದ್ದಿದ್ದ ಕಾಲಾವಸ್ಥೆಯು ಬೇರೆಯಾಗಿತ್ತು. ಅದು ಈಗ ಇಲ್ಲ. ಕೃತಯುಗವು ತ್ರೇತಾಯುಗಕ್ಕಿಂತ ಬೇರೆ ಮತ್ತು ಅದಕ್ಕಿಂತಲೂ ಬೇರೆ ದ್ವಾಪರಯುಗ. ಇದು ಕ್ಷೀಣಿಸುತ್ತಿರುವ ಕಾಲ. ಈಗ ನನಗೆ ಆ ರೂಪವಿಲ್ಲ. ಭೂಮಿ, ನದಿಗಳೂ, ಪರ್ವತಗಳು, ಶಿಖರಗಳು, ಸಿದ್ಧರು, ದೇವತೆಗಳು ಮತ್ತು ಮಹರ್ಷಿಗಳು ಕಾಲಕ್ಕೆ ತಕ್ಕಂತೆ ವರ್ತಿಸುತ್ತಾರೆ. ಯುಗಯುಗದ ಭಾವದಂತೆ ಜೀವಿಗಳ ಶಕ್ತಿ, ಗಾತ್ರ, ಮತ್ತು ಪ್ರಭಾವಗಳು ಕ್ಷೀಣಿಸುತ್ತವೆ ಮತ್ತು ಪುನಃ ವೃದ್ಧಿಯಾಗುತ್ತವೆ. ಆದುದರಿಂದ ನನ್ನ ಆ ರೂಪವನ್ನು ನೋಡುವ ನಿನ್ನ ಈ ಬಯಕೆಯು ಸಾಕು. ನಾನೂ ಕೂಡ ಯುಗವನ್ನು ಅನುಸರಿಸುತ್ತೇನೆ. ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲ.”

ಭೀಮನು ಹೇಳಿದನು: “ಯುಗಗಳ ಸಂಖ್ಯೆಯನ್ನೂ ಮತ್ತು ಯುಗಯುಗಗಳಲ್ಲಿರುವ ಆಚಾರಗಳನ್ನೂ, ಧರ್ಮ, ಕಾಮ ಮತ್ತು ಅರ್ಥಗಳ ಭಾವವನ್ನೂ, ಗಾತ್ರ, ವೀರ್ಯ ಮತ್ತು ಇರುವುದು ಮತ್ತು ಇಲ್ಲದಿರುವುದರ ಕುರಿತು ಹೇಳು.”

ಹನುಮಂತನು ಹೇಳಿದನು: “ಮಗೂ! ಕೃತ ಎಂಬ ಹೆಸರಿನ ಯುಗದಲ್ಲಿ ಸನಾತನ ಧರ್ಮವಿದೆ. ಮಾಡಬೇಕಾದುದು ಯಾವುದೂ ಇರದೇ ಎಲ್ಲವನ್ನೂ ಮಾಡಿಯಾಗಿರುತ್ತದೆಯಾದುದರಿಂದ ಆ ಕಾಲವನ್ನು ಉತ್ತಮ ಯುಗವೆಂದು ಕರೆಯುತ್ತಾರೆ. ಅಲ್ಲಿ ಧರ್ಮವು ಕ್ಷಣಿಸುವುದಿಲ್ಲ. ಜೀವಿಗಳು ಕ್ಷೀಣಿಸುವುದಿಲ್ಲ. ಆದುದರಿಂದ ಅದಕ್ಕೆ ಕೃತಯುಗವೆಂದು ಹೆಸರು. ಕಾಲಾಂತರದಲ್ಲಿ ಇದು ಅತ್ಯಂತ ಉತ್ತಮವೆಂದೆನಿಸಿಕೊಂಡಿತು. ಕೃತಯುಗದಲ್ಲಿ ದೇವತೆಗಳು, ದಾನವರು, ಗಂಧರ್ವರು, ಯಕ್ಷರು, ರಾಕ್ಷಸರು ಮತ್ತು ನಾಗಗಳು ಯಾರೂ ಇರುವುದಿಲ್ಲ. ಮಗೂ ಅಲ್ಲಿ ಕ್ರಯವಿಕ್ರಯಗಳೂ ಇರುವುದಿಲ್ಲ. ಸಾಮ, ಯಜುರ್ ಮತ್ತು ಋಕ್ ಗಳೆಂಬ ವಿಂಗಡಣೆಯಿಲ್ಲ, ಮಾನವೀಯ ಶ್ರಮವೂ ಅಲ್ಲಿಲ್ಲ. ನೆನೆಸಿದ ಹಾಗೆ ಫಲವು ದೊರೆಯುತ್ತದೆ ಮತ್ತು ಸನ್ಯಾಸವೇ ಅಲ್ಲಿಯ ಧರ್ಮ. ಆ ಯುಗಸಂಸರ್ಗದಲ್ಲಿ ವ್ಯಾಧಿಯಿರುವುದಿಲ್ಲ. ಇಂದ್ರಿಯ ಕ್ಷೀಣವಾಗುವುದಿಲ್ಲ. ಅಸೂಯೆಯಾಗಲೀ, ಕಣ್ಣೀರಾಗಲೀ, ದರ್ಪವಾಗಲೀ, ಶ್ರಮವಾಗಲೀ, ಹತೋಟಿಯಲ್ಲಿ ಇಟ್ಟುಕೊಳ್ಳುವುದಾಗಲೀ, ಸೋಮಾರಿತನವಾಗಲೀ, ದ್ವೇಷವಾಗಲೀ, ಮೋಸವಾಗಲೀ, ಭಯವಾಗಲೀ, ಸಂತಾಪವಾಗಲೀ, ಹೊಟ್ಟೆಕಿಚ್ಚಾಗಲೀ, ಮತ್ಸರವಾಗಲೀ ಇರುವುದಿಲ್ಲ. ಆಗ ಪರಬ್ರಹ್ಮನೇ ಯೋಗಿಗಳು ಹೊಂದುವ ಪರಮಗತಿ. ಸರ್ವಭೂತಗಳ ಆತ್ಮಗಳು ಶುಕ್ಲ ನಾರಾಯಣನು. ಕೃತಯುಗದಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಲಕ್ಷಣಗಳಲ್ಲಿ ಒಂದೇ ಆಗಿರುತ್ತಾರೆ ಮತ್ತು ಪ್ರಜೆಗಳು ತಮ್ಮ ಕರ್ಮಗಳಲ್ಲಿ ನಿರತರಾಗಿರುತ್ತಾರೆ. ಆಶ್ರಮಗಳು ಒಂದೇಸಮನಾಗಿರುತ್ತವೆ. ಆಚಾರಗಳು ಒಂದೇ ಸಮನಾಗಿರುತ್ತವೆ. ಜ್ಞಾನ, ಬುದ್ಧಿ ಮತ್ತು ಬಲಗಳು ಒಂದೇ ಸಮನಾಗಿರುತ್ತವೆ. ಮತ್ತು ವರ್ಣಗಳು ಒಂದೇ ರೀತಿಯ ಧರ್ಮವನ್ನು ಅನುಸರಿಸುತ್ತಾರೆ. ಒಂದೇ ಒಂದು ವೇದವನ್ನು ಹೊಂದಿದ್ದು, ವಿಧಿಕ್ರಿಯೆಗಳಲ್ಲಿ ಒಂದೇ ಮಂತ್ರವನ್ನು ಬಳಸಿ ಅವರು ಎಲ್ಲರೂ ಒಂದೇ ಒಂದು ಧರ್ಮವನ್ನು ಒಂದೇ ವೇದವನ್ನು ಅನುಸರಿಸುತ್ತಿದ್ದರು. ಒಂದೇ ಧರ್ಮದಂತೆ ನಡೆದುಕೊಳ್ಳುತ್ತಿದ್ದರು. ಕಾಲಕ್ಕೆ ಸರಿಯಾದ ನಾಲ್ಕು ಆಶ್ರಮಗಳನ್ನು ಅನುಸರಿಸಿ ಯಾವುದೇ ಫಲವನ್ನು ಬಯಸದೇ ಮಾಡುವ ಕರ್ಮಗಳಿಂದ ಪರಮ ಗತಿಯನ್ನು ಹೊಂದುತ್ತಿದ್ದರು. ಕೃತಯುಗದಲ್ಲಿ ಆತ್ಮಯೋಗದಿಂದೊಡಗೂಡಿದ ಇದೇ ಧರ್ಮವನ್ನು ನಾಲ್ಕೂ ವರ್ಣದವರು ನಾಲ್ಕೂ ಪಾದಗಳಲ್ಲಿ ಶಾಶ್ವತವಾಗಿ ಅನುಸರಿಸುತ್ತಿದ್ದರು. ತ್ರಿಗುಣಗಳನ್ನು ವರ್ಜಿಸಿದ ಇದರ ಹೆಸರು ಕೃತಯುಗ.

“ಈಗ ಯಾಗಗಳು ಕಂಡುಬರುವ ತ್ರೇತಾಯುಗದ ಕುರಿತು ಕೇಳು. ಧರ್ಮವು ಒಂದು ಪಾದ ಕಡಿಮೆಯಾಗುತ್ತದೆ. ಮತ್ತು ಅಚ್ಯುತ ನಾರಾಯಣನು ಕೆಂಪುಬಣ್ಣದವನಾಗುತ್ತಾನೆ. ಮನುಷ್ಯರು ಸತ್ಯವ್ರತರಾಗಿದ್ದು ಧರ್ಮಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ತ್ರೇತಾಯುಗದಲ್ಲಿ ಯಜ್ಞಗಳು ಮತ್ತು ಧರ್ಮದ ವಿವಿಧ ಕಾರ್ಯಗಳು ನಡೆಯುತ್ತವೆ. ಭಾವಸಂಕಲ್ಪದಿಂದ ಫಲವನ್ನು ನೀಡುವ ದಾನಾದಿ ಕ್ರಿಯೆಗಳು ನಡೆಯುತ್ತವೆ. ತ್ರೇತಾಯುಗದಲ್ಲಿ ಧರ್ಮ, ತಪಸ್ಸು, ಮತ್ತು ದಾನಗಳಲ್ಲಿ ನಿರತರಾಗಿದ್ದು ಸ್ವಧರ್ಮದಲ್ಲಿಯೇ ಇದ್ದುಕೊಂಡು ಕ್ರಿಯಾವಂತರಾಗಿ ಧರ್ಮದಿಂದ ವಿಚಲಿತರಾಗುವುದಿಲ್ಲ.

“ದ್ವಾಪರಯುಗದಲ್ಲಿ ಧರ್ಮವು ಅರ್ಧಭಾಗದಲ್ಲಿ ಮಾತ್ರ ನಡೆಯುತ್ತದೆ. ವಿಷ್ಣುವು ಹಳದಿಬಣ್ಣವನ್ನು ಹೊಂದುತ್ತಾನೆ ಮತ್ತು ವೇದಗಳೂ ಕೂಡ ನಾಲ್ಕು ಭಾಗಗಳಾಗಿ ವಿಭಜಿಸಲ್ಪಡುತ್ತದೆ. ಕೆಲವರು ನಾಲ್ಕೂ ವೇದಗಳನ್ನೂ ತಿಳಿದಿರುತ್ತಾರೆ, ಮತ್ತೆ ಕೆಲವರು ಮೂರು ಅಥವಾ ಎರಡು ಅಥವಾ ಒಂದನ್ನೇ ತಿಳಿದುಕೊಂಡಿರುತ್ತಾರೆ. ಇನ್ನುಳಿದವರಿಗೆ ವೇದಗಳೇ ತಿಳಿದಿರುವುದಿಲ್ಲ. ಈ ರೀತಿ ಶಾಸ್ತ್ರಗಳು ಭಿನ್ನವಾಗಿ ಬಹಳ ರೀತಿಯ ಕ್ರಿಯೆಗಳು ನಡೆಯುತ್ತವೆ. ತಪೋದಾನಪ್ರವೃತ್ತರಾದ ಪ್ರಜೆಗಳು ರಾಜಸ ಭಾವವನ್ನು ತಳೆಯುತ್ತಾರೆ. ಒಂದೇ ವೇದವನ್ನು ಅರಿತಿಲ್ಲವಾದುದರಿಂದ ವೇದಗಳು ಬಹಳಾಗಿ ವಿಂಗಡಣೆಗೊಳ್ಳುತ್ತವೆ. ಸತ್ಯವು ಒಂದೇ ಆಗಿಲ್ಲದಿದುರಿಂದ ಕೆಲವರು ಮಾತ್ರ ಸತ್ಯದಲ್ಲಿ ನೆಲೆಸಿರುತ್ತಾರೆ. ಸತ್ಯದಿಂದ ಪ್ರಚಲಿತರಾದವರಿಗೆ ಬಹಳಷ್ಟು ವ್ಯಾಧಿಗಳು ಉಂಟಾಗುತ್ತವೆ. ವಿಧಿಯ ಕಾರಣದಿಂದ ಕಾಮ ಮತ್ತು ಉಪದ್ರವಗಳು ಉಂಟಾಗುತ್ತವೆ. ಇದರಿಂದಾಗಿ ಕೆಲವು ಮಾನವರು ತುಂಬಾ ಕಠಿಣ ತಪಸ್ಸಿನಲ್ಲಿ ನಿರತರಾಗಿರುತ್ತಾರೆ ಮತ್ತು ಇನ್ನುಳಿದವರು ಆಸೆಗಳಿಂದ ಪ್ರಚೋದಿತರಾಗಿ ಸ್ವರ್ಗವನ್ನು ಬಯಸಿ ಯಜ್ಞ-ಯಾಗಾದಿಗಳನ್ನು ಕೈಗೊಳ್ಳುತ್ತಾರೆ. ದ್ವಾಪರಯುಗದಲ್ಲಿ ಹೀಗೆ ಅಧರ್ಮದಿಂದ ಪ್ರಜೆಗಳು ಕ್ಷೀಣಿಸುತ್ತಾರೆ.

“ಕಲಿಯುಗದಲ್ಲಿ ಧರ್ಮವು ಒಂದೇ ಕಾಲಿನ ಮೇಲೆ ನಿಂತಿರುತ್ತದೆ. ಈ ತಾಮಸ ಯುಗವು ಬಂದಾಗ ಕೇಶವ ನಾರಾಯಣನು ಕಪ್ಪುಬಣ್ಣದವನಾಗುತ್ತಾನೆ. ವೇದಾಚಾರಗಳೂ ಧರ್ಮ ಯಜ್ಞಗಳೂ ಅಳಿದುಹೋಗುತ್ತವೆ. ಬೆಳೆಗಳು ನಾಶವಾಗುತ್ತವೆ. ವ್ಯಾಧಿಗಳು, ಸೋಮಾರಿತನ, ಮತ್ತು ಕ್ರೋಧಾದಿ ದೋಷಗಳು, ಉಪದ್ರವಗಳು ನಡೆಯುತ್ತವೆ. ರೋಗ ವ್ಯಾಧಿಗಳು ಇರುತ್ತವೆ. ಒಂದನ್ನು ಅನುಸರಿಸಿ ಬರುವ ಯುಗಗಳಲ್ಲಿ ಪ್ರತಿಬಾರಿಯೂ ಧರ್ಮವು ಕ್ಷೀಣವಾಗುತ್ತದೆ. ಧರ್ಮವು ಕ್ಷೀಣವಾಗುತ್ತಿದ್ದಂತೆ ಜನರೂ ಕ್ಷೀಣರಾಗುತ್ತಾರೆ. ಜನರು ಕ್ಷೀಣರಾಗುತ್ತಿದ್ದಂತೆ ಪ್ರಪಂಚವನ್ನು ವಿಕಸನದತ್ತ ತೆಗೆದುಕೊಂಡು ಹೋಗುವ ಶಕ್ತಿಗಳು ಕ್ಷೀಣವಾಗುತ್ತವೆ. ಈ ಯುಗಕ್ಷಯದಿಂದಾಗಿ ಧರ್ಮಗಳು ಪ್ರಾರ್ಥನೆಗಳಾಗಿ ವಿಕಾರಗೊಳ್ಳುತ್ತವೆ. ಈ ಕಲಿಯುಗ ಎನ್ನುವುದು ಸ್ವಲ್ಪವೇ ಸಮಯದಲ್ಲಿ ಬರುತ್ತದೆ. ಚಿರಂಜೀವಿಗಳು ಈ ಯುಗಗಳು ಬದಲಾದ ಹಾಗೆಲ್ಲ ತಾವೂ ಬದಲಾಗುತ್ತಾರೆ. ತಿಳಿದುಕೊಂಡಿರುವ ಮನುಷ್ಯನು ಅನರ್ಥವಾಗಿರುವುದರಲ್ಲಿ ಏಕೆ ಆಸಕ್ತಿಯನ್ನು ತೋರಿಸುತ್ತಾನೆ ಎನ್ನುವಂತಿದೆ ನನ್ನನ್ನು ಸರಿಯಾಗಿ ತಿಳಿದುಕೊಳ್ಳುವ ನಿನ್ನ ಈ ಕುತೂಹಲವು. ನೀನು ನನ್ನಲ್ಲಿ ಕೇಳಿದುದೆಲ್ಲವನ್ನೂ ಯುಗಸಂಖ್ಯೆಗಳನ್ನೂ ನಾನು ನಿನಗೆ ಹೇಳಿದ್ದೇನೆ. ನಿನಗೆ ಮಂಗಳವಾಗಲಿ. ಈಗ ಹೊರಟು ಹೋಗು!”

ಭೀಮನು ಹೇಳಿದನು: “ನಿನ್ನ ಹಿಂದಿನ ರೂಪವನ್ನು ನೋಡದೇ ನಾನು ಹೋಗುವುದೇ ಇಲ್ಲ. ನನ್ನ ಮೇಲೆ ನಿನಗೆ ಅನುಗ್ರಹವಿದೆ ಎಂದಾದರೆ ನಿನ್ನ ಆತ್ಮ ಸ್ವರೂಪವನ್ನು ನನಗೆ ತೋರಿಸು!” ಭೀಮನು ಹೀಗೆ ಹೇಳಲು ಆ ಕಪಿಯು ಮುಗುಳ್ನಕ್ಕು ಸಾಗರಲಂಘನದ ಸಮಯದ ರೂಪವನ್ನು ತೋರಿಸಿದನು. ತಮ್ಮನನ್ನು ಸಂತೋಷಗೊಳಿಸಲೋಸುಗ ಅವನು ಅತಿ ಮಹಾ ದೇಹವನ್ನು ತಾಳಿದನು ಮತ್ತು ಅವನ ದೇಹವು ಎತ್ತರ ಮತ್ತು ವಿಸ್ತಾರದಲ್ಲಿ ಅತೀವವಾಗಿ ಬೆಳೆಯಿತು. ಆ ಅಮಿತದ್ಯುತಿ ವಾನರನ ರೂಪವು ಬಾಳೆಯ ವನವನ್ನೂ ಮೀರಿ ಒಂದು ಪರ್ವತವೇ ಅಲ್ಲಿ ಬಂದು ನಿಂತುಕೊಂಡಂತೆ ತೋರಿತು. ಎರಡನೆಯ ಪರ್ವತವೋ ಎನ್ನುವಂತೆ ಎತ್ತರಕ್ಕೆ ಬೆಳೆದ ಆ ಮಹಾಕಾಯ ಕಪಿಯು ತನ್ನ ತಾಮ್ರದ ಕೆಂಪಿನ ಕಣ್ಣುಗಳಿಂದ, ತೀಕ್ಷ್ಣವಾದ ಹಲ್ಲುಗಳಿಂದ, ಗಂಟುಕಟ್ಟಿದ ಕಣ್ಣುಗಳಿಂದ, ಉದ್ದವಾದ ಬಾಲದಿಂದ ದಿಕ್ಕುಗಳನ್ನೇ ವ್ಯಾಪಿಸಿ ನಿಂತುಕೊಂಡನು. ಅಣ್ಣನ ಆ ಮಹಾ ರೂಪವನ್ನು ನೋಡಿದ ಕೌರವನಂದನ ಭೀಮನು ವಿಸ್ಮಿತನಾದನು ಮತ್ತು ಪುನಃ ಪುನಃ ಪುಳಕಿತಗೊಂಡನು. ತೇಜಸ್ಸಿನಲ್ಲಿ ಸೂರ್ಯನಂತಿರುವ, ಬಂಗಾರದ ಪರ್ವತದಂತಿರುವ, ಆಕಾಶವೇ ಬೆಳಗುತ್ತಿದೆಯೋ ಎಂದಿರುವ ಅವನನ್ನು ನೋಡಿ ಭೀಮನು ಕಣ್ಣು ಮುಚ್ಚಿದನು. ಮೆಲ್ಲನೆ ಮುಗುಳ್ನಕ್ಕು ಹನುಮಂತನು ಭೀಮಸೇನನಿಗೆ ಹೇಳಿದನು: “ಅನಘ! ನನ್ನ ಇಷ್ಟೇ ದೇಹ ರೂಪವನ್ನು ನೋಡಲು ನೀನು ಶಕ್ಯನಾಗಿದ್ದೀಯೆ. ನಾನು ಇದಕ್ಕಿಂತಲೂ ದೊಡ್ಡವನಾಗಿ, ಎಷ್ಟು ಬೇಕಾದಷ್ಟು ದೊಡ್ಡದಾಗಿ ಬೆಳೆಯಬಲ್ಲೆ. ಶತ್ರುವಿನೊಂದಿಗೆ ಹೋರಾಡುವಾಗ ನನ್ನ ದೇಹವೂ ತೇಜಸ್ಸೂ ತುಂಬಾ ಬೆಳೆಯುತ್ತವೆ.”

ಆ ಅದ್ಭುತವಾದ ಮಹಾ ರೌದ್ರವಾದ ವಿಂಧ್ಯ ಮತ್ತು ಮಂದರ ಪರ್ವತಗಳಂತೆ ತೋರುತ್ತಿದ್ದ ಹನೂಮಂತನ ಆ ರೂಪವನ್ನು ನೋಡಿ ಪವನಾತ್ಮಜನು ಸಂಭ್ರಾಂತನಾದನು. ಸಂತೋಷದಿಂದ ಮೈನಡುಗಿದ ಭೀಮನು ದೀನಾತ್ಮನಾಗಿ, ಅಂಜಲೀಬದ್ಧನಾಗಿ ಹಾಗೆಯೇ ನಿಂತಿರುವ ಹನೂಮಂತನಿಗೆ ಹೇಳಿದನು: “ವಿಭೋ! ನಿನ್ನ ವಿಪುಲ ಪ್ರಮಾಣದ ಶರೀರವನ್ನು ನೋಡಿದೆ. ಈಗ ನೀನೇ ನಿನ್ನ ಈ ರೂಪವನ್ನು ಹಿಂತೆಗೆದುಕೋ! ಉದಯಿಸುವ ಸೂರ್ಯನಂತಿರುವ ನಿನ್ನನ್ನು ನೋಡಲು ನಾನು ಶಕ್ಯನಾಗಿಲ್ಲ. ಮೈನಾಕ ಪರ್ವತದಂತಿರುವ ನೀನು ಅಪ್ರಮೇಯ ಮತ್ತು ಅನಾದೃಷ್ಯ. ಪಕ್ಕದಲ್ಲಿ ನಿನ್ನಂಥವನಿರುವಾಗಲೂ ಸ್ವಯಂ ರಾಮನೇ ರಾವಣನನ್ನು ಎದುರಿಸಿದನು ಎಂದು ಇಂದು ನನ್ನ ಮನಸ್ಸು ಬಹಳಷ್ಟು ವಿಸ್ಮಯಗೊಂಡಿದೆ. ನೀನೊಬ್ಬನೇ ಯೋದ್ಧರೊಂದಿಗೆ ಮತ್ತು ವಾಹನಗಳೊಂದಿಗೆ ಲಂಕೆಯನ್ನು ನಿನ್ನ ಬಾಹುಗಳನ್ನು ಮತ್ತು ತೇಜಸ್ಸನ್ನು ಆಶ್ರಯಿಸಿ ವಿನಾಶಗೊಳಿಸಲು ಸಾಧ್ಯವಾಗುತ್ತಿತ್ತು. ಮಾರುತಾತ್ಮಜ! ನಿನಗೆ ಅಸಾದ್ಯವೆನ್ನುವುದು ಏನೂ ಇರಲಿಕ್ಕಿಲ್ಲ! ಯುದ್ಧದಲ್ಲಿ ತನ್ನ ಸೇನೆಯ ಸಹಿತ ರಾವಣನು ನಿನಗೊಬ್ಬನಿಗೂ ಸರಿಸಮನಾಗಿರಲಿಕ್ಕಿರಲಿಲ್ಲ!”

ಭೀಮನು ಹೀಗೆ ಹೇಳಲು ಪ್ಲವಗರ್ಷಭ ಹನೂಮಂತನು ಕರುಣೆತುಂಬಿದ ಗಂಭೀರ ಧ್ವನಿಯಲ್ಲಿ ಉತ್ತರವನ್ನಿತ್ತನು: “ಭಾರತ! ನೀನು ಹೇಳಿದುದು ಸರಿ. ಆ ರಾಕ್ಷಸಾಧಮನು ನನಗೆ ಸರಿಸಮನಾಗಿರಲಿಲ್ಲ! ಲೋಕಕಂಟಕ ರಾವಣನನ್ನು ನಾನು ಸಂಹರಿಸಿದ್ದರೆ ರಾಘವನ ಕೀರ್ತಿಗೆ ಕೊರತೆಯಾಗುತ್ತಿತ್ತು. ಆದುದರಿಂದ ನಾನು ಹಾಗೆ ಮಾಡಲಿಲ್ಲ! ಆ ವೀರನು ಸೇನೆಗಳೊಂದಿಗೆ ಆ ರಾಕ್ಷಸಾಧಿಪನನ್ನು ಸಂಹರಿಸಿ ಸೀತೆಯನ್ನು ತನ್ನ ನಗರಕ್ಕೆ ಕೊಂಡೊಯ್ದು ಲೋಕದಲ್ಲಿ ಕೀರ್ತಿವಂತನಾದನು. ನನ್ನ ಪ್ರಜ್ಞಾವಂತ ತಮ್ಮನೇ! ಈಗ ನೀನು ವಾಯುವಿನಿಂದ ರಕ್ಷಣೆಯನ್ನು ಪಡೆದು ಕ್ಷೇಮ-ಸುರಕ್ಷಿತವಾಗಿರುವ ಮಾರ್ಗದಲ್ಲಿ ಹೊರಟು ಹೋಗು. ಈ ದಾರಿಯು ನಿನ್ನನ್ನು ಸೌಗಂಧಿಕಾ ವನಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ಯಕ್ಷ-ರಾಕ್ಷಸರ ಕಾವಲಿನಲ್ಲಿರುವ ಧನದ ಕುಬೇರನ ಉದ್ಯಾನವನವಿದೆ. ಆದರೆ ನೀನು ಒಂದೇ ಸಮನೆ ಹೂವನ್ನು ಕೀಳಲು ಪ್ರಾರಂಭಿಸಬಾರದು. ವಿಶೇಷವಾಗಿ ಪುರುಷರು ಸ್ವಯಂ ದೇವತೆಗಳನ್ನು ಮನ್ನಿಸಬೇಕಾಗುತ್ತದೆ. ಭಕ್ತಿಯಿಂದ ಬಲಿ, ಹೋಮ, ನಮಸ್ಕಾರ ಮತ್ತು ಮಂತ್ರಗಳ ಮೂಲಕ ದೇವತೆಗಳು ಪ್ರಸೀದರಾಗುತ್ತಾರೆ. ಸಾಹಸಕ್ಕೆ ತೊಡಗಬೇಡ! ನಿನ್ನ ಧರ್ಮವನ್ನು ಅನುಸರಿಸು. ಸ್ವಧರ್ಮದಲ್ಲಿದ್ದುಕೊಂಡೇ ಪರಮ ಧರ್ಮವು ಏನೆಂದು ಆಗಮಗಳಿಂದ ತಿಳಿಯಬಹುದು. ವೃದ್ಧರ ಸೇವೆಯನ್ನು ಮಾಡದೇ ಧರ್ಮವನ್ನು ತಿಳಿಯಲು ಆಗದು. ಧರ್ಮವನ್ನು ಬೃಹಸ್ಪತಿ, ಅಮರರಿಗೂ ಕೂಡ ತಿಳಿದುಕೊಳ್ಳುವುದು ಕಷ್ಟ. ಎಲ್ಲಿ ಅಧರ್ಮವನ್ನು ಧರ್ಮವೆಂದು ಹೇಳಲಾಗುತ್ತದೆಯೋ ಧರ್ಮವನ್ನು ಅಧರ್ಮವೆಂದು ತಿಳಿದುಕೊಳ್ಳುತ್ತಾರೋ ಅಲ್ಲಿ ತಿಳಿದವರೂ ತಿಳಿಯದೇ ಇದ್ದವರು ಎಲ್ಲರೂ ಗೊಂದಲಕ್ಕೊಳಗಾಗುತ್ತಾರೆ. ಆಚಾರದಿಂದಲೇ ಧರ್ಮವು ಹುಟ್ಟುತ್ತದೆ ಮತ್ತು ಧರ್ಮದಿಂದ ವೇದಗಳು ಹುಟ್ಟುತ್ತವೆ. ವೇದದಿಂದ ಯಜ್ಞವು ಹುಟ್ಟುತ್ತದೆ ಮತ್ತು ಯಜ್ಞಗಳಲ್ಲಿ ದೇವತೆಗಳು ನೆಲೆಸಿರುತ್ತಾರೆ. ವೇದಗಳಲ್ಲಿ ಹೇಳಿರುವಂತೆ ನಡೆದುಕೊಳ್ಳುವುದರಿಂದ ಮತ್ತು ಯಜ್ಞಗಳಿಂದ ದೇವತೆಗಳು ವೃದ್ಧಿಸುತ್ತಾರೆ. ಮಾನವರು ಬೃಹಸ್ಪತಿ ಮತ್ತು ಉಶಾನರು ಹೇಳಿದ ವ್ಯಾಪಾರ, ವಾಣಿಜ್ಯ, ಕೃಷಿ, ಮತ್ತು ಪಶುಸಾಕಣಿಕೆಗಳಿಂದ, ಧರ್ಮದಲ್ಲಿರುವುದರಿಂದ ಮತ್ತು ಬ್ರಾಹ್ಮಣರಿಂದ ವರ್ಧಿಸುತ್ತಾರೆ. ತಿಳಿದವರಿಗೆ ಮೂರು ಜ್ಞಾನಕ್ಷೇತ್ರಗಳಿವೆ - ವಿದ್ಯೆ, ಉದ್ಯೋಗ ಮತ್ತು ಶಾಸನ. ಈ ಮೂರನ್ನೂ ಸರಿಯಾಗಿ ಬಳಸಿದಾಗ ಲೋಕಗಳಿಗೆ ಒಳ್ಳೆಯದಾಗುತ್ತದೆ. ಧರ್ಮಕ್ರಿಯೆಗಳು ನಡೆಯದೇ ಇದ್ದರೆ, ಶಾಸನವಿಲ್ಲದಿದ್ದರೆ ಈ ಭೂಮಿಗೆ ಮರ್ಯಾದೆ ಎನ್ನುವುದೇ ಇರುತ್ತಿರಲಿಲ್ಲ. ವ್ಯಾಪಾರ ಮತ್ತು ಧರ್ಮಗಳು ಇಲ್ಲದೇ ಇದ್ದಿದ್ದರೆ ಪ್ರಜೆಗಳು ವಿನಾಶ ಹೊಂದುತ್ತಿದ್ದರು. ಈ ಮೂರೂ ಧರ್ಮಗಳನ್ನು ಪಾಲಿಸುವುದರಿಂದಲೇ ಪ್ರಜೆಗಳು ಅಭಿವೃದ್ಧಿ ಹೊಂದುತ್ತಾರೆ. ಏಕವರ್ಣಿ ದ್ವಿಜರ ಅಮೃತ ಧರ್ಮವು ಒಂದೇ: ಯಜ್ಞ, ಅಧ್ಯಯನ ಧ್ಯಾನ ಈ ಮೂರು ಸಾಧಾರಣ ಧರ್ಮವೆಂದು ಹೇಳಲ್ಪಟ್ಟಿದೆ. ಯಜ್ಞಮಾಡಿಸುವುದು ಮತ್ತು ಅಧ್ಯಾಪನ ಇವೆರಡೂ ಬ್ರಾಹ್ಮಣರ ಧರ್ಮ. ಕ್ಷತ್ರಿಯರ ಧರ್ಮವು ಪಾಲನೆ ಮತ್ತು ವೈಶ್ಯರ ಧರ್ಮವು ಪೋಷಣೆ. ಗುರುಕುಲದಲ್ಲಿ ವಾಸಿಸುವರಿಗಿರುವಂತೆ ದ್ವಿಜರ ಶುಶ್ರೂಷೆಯೇ ಶೂದ್ರರ ಪರಮ ಧರ್ಮವೆಂದು ಹೇಳಲಾಗಿದೆ. ಆದರೂ ಅವರಿಗೆ ಭಿಕ್ಷೆ, ಹೋಮ ಮತ್ತು ವ್ರತಗಳು ವರ್ಜಿತ. ನಿನ್ನದು ಕ್ಷತ್ರಿಯ ಧರ್ಮ. ಇನ್ನೊಬ್ಬರಿಗೆ ರಕ್ಷಣೆಯನ್ನು ಕೊಡುವುದೇ ನಿನ್ನ ಧರ್ಮ. ವಿನೀತನಾಗಿ, ನಿಯತೇಂದ್ರಿಯನಾಗಿ ಸ್ವಧರ್ಮವನ್ನು ಪರಿಪಾಲಿಸು. ವೃದ್ಧರೊಂದಿಗೆ ಸಮಾಲೋಚಿಸಿ ಒಳ್ಳೆಯವರ ಮತ್ತು ಬುದ್ಧಿವಂತರನ್ನು ಕೇಳಿ ನಡೆಯುವವರು ಸುಸ್ಥಿತವಾಗಿ ಇರುತ್ತಾರೆ. ದಂಡದ ವ್ಯಸನಿಯು ನಾಶಹೊಂದುತ್ತಾನೆ. ರಾಜನು ನಿಗ್ರಹ ಅನುಗ್ರಹಗಳಲ್ಲಿ ಸರಿಯಾಗಿ ನಡೆದುಕೊಳ್ಳುತ್ತಿದ್ದರೆ ಲೋಕದ ಮರ್ಯಾದೆಯು ಸುವ್ಯವಸ್ಥಿತವಾಗಿರುತ್ತದೆ. ಆ ಉದ್ದೇಶದಿಂದಲೇ ನಿತ್ಯವೂ ಗೂಢಚಾರರಿಂದ ರಾಜ್ಯದಲ್ಲಿರುವ ಕೋಟೆಗಳು, ಶತ್ರುಗಳು, ಮಿತ್ರರು, ಸೇನೆ ಮತ್ತು ವೃದ್ಧಿ ಕ್ಷಯಗಳ ಕುರಿತು ತಿಳಿದುಕೊಂಡಿರಬೇಕು. ರಾಜನಿಗೆ ನಾಲ್ಕು ರೀತಿಯ ಉಪಾಯಗಳಿವೆ: ಬುದ್ಧಿವಂತರೊಡನೆ ಸಮಾಲೋಚನೆ, ಪರಾಕ್ರಮ, ನಿಗ್ರಹಾನುಗ್ರ ಮತ್ತು ಕಾರ್ಯವನ್ನು ಸಾಧಿಸುವ ದಕ್ಷತೆ. ಸಾಮ, ದಾನ, ಭೇದ, ದಂಡ ಮತ್ತು ಉಪೇಕ್ಷಣ ಇವು ಒಂದೊಂದಾಗಿ ಅಥವಾ ಒಟ್ಟಾಗಿ ಕಾರ್ಯಗಳಲ್ಲಿ ಸಾಧನಗಳನ್ನಾಗಿ ಬಳಗಿಸಿಕೊಳ್ಳಬಹುದು. ಎಲ್ಲ ಧೋರಣೆಗಳೂ ಸಮಾಲೋಚನೆಯಿಂದ ಮತ್ತು ಗೂಢಚಾರರ ಮೂಲಕ ಹುಟ್ಟಬೇಕು. ಸರಿಯಾದ ಸಮಾಲೋಚನೆಗಳಿಂದ ಹುಟ್ಟಿದ ನೀತಿಗಳು ಸಿದ್ಧಿಯಾಗುತ್ತವೆ. ಮತ್ತು ತಿಳಿದಿರುವವರಲ್ಲಿ ಸಮಾಲೋಚನೆ ಮಾಡಬೇಕು. ಗೌಪ್ಯವಾಗಿರುವ ವಿಷಯಗಳನ್ನು ಸ್ತ್ರೀಯಲ್ಲಿ, ಮೂಢನಲ್ಲಿ, ಆಸೆಬುರುಕನಲ್ಲಿ, ಬಾಲಕರಲ್ಲಿ, ಹಗುರದವರಲ್ಲಿ, ಮತ್ತು ಹುಚ್ಚಿನ ಲಕ್ಷಣಗಳಿರುವವರಲ್ಲಿ ಸಮಾಲೋಚಿಸಕೂಡದು. ತಿಳಿದವರೊಂದಿಗೆ ಸಮಾಲೋಚನೆಮಾಡಬೇಕು. ಸಮರ್ಥರಿಂದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಮತ್ತು ನೀತಿಗಳನ್ನು ವಿಶ್ವಾಸವಿರುವವರಿಂದ ರೂಪಿಸಿಕೊಳ್ಳಬೇಕು. ಮೂರ್ಖರನ್ನು ಯಾವಾಗಲೂ ದೂರವಿಡಬೇಕು. ಧಾರ್ಮಿಕರನ್ನು ಧರ್ಮಕಾರ್ಯಗಳಲ್ಲಿ, ಪಂಡಿತರನ್ನು ಹಣಕಾಸಿನ ವಿಷಯಗಳಲ್ಲಿ, ನಪುಂಸಕರನ್ನು ಸ್ತ್ರೀಯರ ವಿಷಯಗಳಲ್ಲಿ ಮತ್ತು ಕ್ರೂರರನ್ನು ಕ್ರೂರಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ತನ್ನ ಮತ್ತು ಇತರರ ಕಾರ್ಯದಿಂದ ಮತ್ತು ಅಕಾರ್ಯದಿಂದ ಉಂಟಾದವುಗಳನ್ನು ಹಾಗೂ ಶತ್ರುಗಳ ಬಲಾಬಲಗಳನ್ನೂ ಬುದ್ಧಿ ಮತ್ತು ಕಾರ್ಯಗಳ ಮೂಲಕ ತಿಳಿದುಕೊಳ್ಳಬೇಕು. ಬುದ್ಧಿಯಿಂದ ತಮ್ಮನ್ನು ತಾವು ಅರಿತುಕೊಂಡವರನ್ನು ಮಾತ್ರ ಒಳ್ಳೆಯವರೆಂದು ಪರಿಗ್ರಹಿಸಬೇಕು. ವಿದ್ಯಾವಂತರಾಗಿಲ್ಲದವರನ್ನು ಮತ್ತು ಮರ್ಯಾದೆಯಿಲ್ಲದೆ ಇರುವವರನ್ನು ನಿಗ್ರಹಿಸಬೇಕು. ರಾಜನು ಸರಿಯಾದ ರೀತಿಯಲ್ಲಿ ನಿಗ್ರಹ ಪ್ರಗ್ರಹದಲ್ಲಿ ತೊಡಗಿದ್ದರೆ ಲೋಕದ ಮರ್ಯಾದೆಯು ಸುವ್ಯವಸ್ಥಿತವಾಗಿರುತ್ತದೆ. ಪಾರ್ಥ! ಇದೇ ನಿನಗೆ ವಿಹಿತವಾಗಿರುವ ಘೋರವಾಗಿರುವ ಮತ್ತು ಕಷ್ಟಕರವಾಗಿರುವ ಧರ್ಮ. ಇದನ್ನು ನೀನು ಸ್ವಧರ್ಮವಿಭಾಗದ ಮೂಲಕ ವಿನಯನಾಗಿ ಅನುಸರಿಸು. ಹೇಗೆ ಬ್ರಾಹ್ಮಣರು ತಪಸ್ಸು, ಧರ್ಮ, ಸ್ವನಿಯಂತ್ರಣ ಮತ್ತು ಆಹುತಿಗಳನ್ನು ನೀಡುವುದರ ಮೂಲಕ ಸ್ವರ್ಗಕ್ಕೆ ಹೋಗುತ್ತಾರೋ, ಮತ್ತು ದಾನ, ಆತಿಥ್ಯ ಮತ್ತು ಕ್ರಿಯಾಧರ್ಮಗಳಿಂದ ಸದ್ಗತಿಯನ್ನು ಪಡೆಯುತ್ತಾರೋ ಹಾಗೆ ಕ್ಷತ್ರಿಯರು ನಿಗ್ರಹ ಮತ್ತು ಪಾಲನೆಗಳ ಮೂಲಕ ಸ್ವರ್ಗಕ್ಕೆ ಹೋಗುತ್ತಾರೆ. ಕಾಮ ದ್ವೇಷಗಳನ್ನು ತೊರೆದು ಏನೂ ಆಸೆಗಳನ್ನು ಇಟ್ಟುಕೊಳ್ಳದೇ, ಯಾವುದೇ ರೀತಿಯಲ್ಲಿ ಕುಪಿತನಾಗಿರದೇ ಸರಿಯಾದ ದಂಡವನ್ನು (ಶಿಕ್ಷೆಯನ್ನು) ನೀಡುವವರು ಸತ್ಯ ಲೋಕವನ್ನು ಪಡೆಯುತ್ತಾರೆ.”

ಆಗ ಆ ಕಪಿಯು ಬೇಕಾದಷ್ಟು ಬೆಳೆಸಿದ್ದ ತನ್ನ ದೇಹವನ್ನು ಕುಗ್ಗಿಸಿ, ಭೀಮಸೇನನನ್ನು ತನ್ನ ಬಾಹುಗಳಿಂದ ಅಪ್ಪಿಕೊಂಡನು. ಅಣ್ಣನು ಹೀಗೆ ಅಪ್ಪಿಕೊಳ್ಳಲು ಭಾರತ ಭೀಮನ ಆಯಾಸವು ನಾಶವಾಯಿತು ಮತ್ತು ಪುನಃ ಎಲ್ಲವೂ ಒಳ್ಳೆಯದೆನಿಸಿತು. ಕಣ್ಣೀರು ತುಂಬಿದ ಕಣ್ಣುಗಳಿಂದ ಆ ವಾನರನು ಪುನಃ ಸ್ನೇಹಭಾವದಿಂದ, ಕಣ್ಣೀರಿನಿಂದ ಕಟ್ಟಿದ ಕಂಠದಿಂದ ಭೀಮನಿಗೆ ಹೇಳಿದನು: “ಕುರುಶ್ರೇಷ್ಠ! ನಿನ್ನ ಮನೆಗೆ ಹೋಗು. ನಂತರವೂ ನನ್ನನ್ನು ನೆನಪಿಸಿಕೋ. ಆದರೆ ನಾನು ಇಲ್ಲಿರುವೆನೆಂದು ಯಾರಿಗೂ ಹೇಳಬೇಡ. ಧನದ ಕುಬೇರನ ಮನೆಯಿಂದ ದೇವತೆಗಳು ಮತ್ತು ಗಂಧರ್ವರು ಹೊರಟು ಬರುವ ಸ್ಥಳ ಮತ್ತು ಸಮಯವಿದು. ನನ್ನ ಕಣ್ಣುಗಳೂ ಸಫಲವಾದವು. ನಿನ್ನೊಂದಿಗಿದ್ದು, ಇನ್ನೊಬ್ಬ ಮನುಷ್ಯನ ದೇಹವನ್ನು ಸ್ಪರ್ಷಿಸಿ ನನಗೆ ರಾಘವನ ನೆನಪು ಮರಳಿ ಬಂದಿತು. ನನ್ನ ಈ ದರ್ಶನವು ನಿನಗೆ ಮಂಗಳವನ್ನುಂಟುಮಾಡಲಿ. ನನ್ನ ಭ್ರಾತೃತ್ವವನ್ನು ಗೌರವಿಸಿ ವರವನ್ನು ಕೇಳು. ನಾನು ಹಸ್ತಿನಾಪುರಕ್ಕೆ ಹೋಗಿ ಕ್ಷುದ್ರ ಧಾರ್ತರಾಷ್ಟ್ರರನ್ನು ಸಂಹರಿಸಬೇಕೆಂದರೆ ಅದನ್ನೂ ಮಾಡುತ್ತೇನೆ. ಅಥವಾ ಬಂಡೆಯಿಂದ ಆ ನಗರವನ್ನು ಧ್ವಂಸಗೊಳಿಸುತ್ತೇನೆ. ಇಂದು ನೀನು ಬಯಸಿದುದನ್ನು ನಾನು ಮಾಡಿಕೊಡುತ್ತೇನೆ.”

ಆ ಮಹಾತ್ಮನ ಮಾತುಗಳನ್ನು ಕೇಳಿದ ಭೀಮಸೇನನು ಒಳಗಿಂದೊಳಗೇ ಸಂತೋಷಗೊಂಡು ಹನೂಮಂತನಿಗೆ ಉತ್ತರಿಸಿದನು: “ವಾನರ ಪುಂಗವ! ನನಗೆ ನೀನು ಈಗಾಗಲೇ ಇಲ್ಲವನ್ನೂ ಮಾಡಿದ್ದೀಯೆ. ನಿನಗೆ ಮಂಗಳವಾಗಲಿ! ನನ್ನನ್ನು ಕ್ಷಮಿಸು. ನನ್ನಮೇಲೆ ನಿನ್ನ ಕರುಣೆಯಿರಲಿ. ನಿನ್ನಂಥ ವೀರನಲ್ಲಿ ಅನಾಥರಾದ ಪಾಂಡವರೆಲ್ಲರೂ ನಾಥನನ್ನು ಪಡೆದಿದ್ದಾರೆ. ನಿನ್ನ ತೇಜಸ್ಸಿನಿಂದಲೇ ನಾವು ಎಲ್ಲ ಶತ್ರುಗಳನ್ನೂ ಜಯಿಸುತ್ತೇವೆ.”

ಭೀಮಸೇನನ ಈ ಮಾತುಗಳಿಗೆ ಹನೂಮಂತನು ಹೇಳಿದನು: “ನಿನ್ನಲ್ಲಿರುವ ಭ್ರಾತೃತ್ವ ಮತ್ತು ಸ್ನೇಹದಿಂದ ನಿನಗೊಂದು ಪ್ರಿಯವಾದುದನ್ನು ಮಾಡುತ್ತೇನೆ. ಶತ್ರುಗಳ ಸೇನೆಯನ್ನು ಬಾಣ ಮತ್ತು ಈಟಿಗಳಿಂದ ಆಕ್ರಮಣ ಮಾಡಿದಾಗ ಮಹಾಬಲ ವೀರ ನೀನು ಸಿಂಹನಾದವನ್ನು ಮಾಡಿದಾಗ ನಾನೂ ಕೂಡ ದೊಡ್ಡದಾಗಿ ನಿನ್ನ ಕೂಗಿಗೆ ತಕ್ಕುದಾಗಿ ಕೂಗುತ್ತೇನೆ. ವಿಜಯ ಅರ್ಜುನನ ಧ್ವಜದಲ್ಲಿದ್ದುಕೊಂಡು ನಿನ್ನ ಶತ್ರುಗಳಲ್ಲಿ ಭಯವನ್ನುಂಟುಮಾಡುವಂತೆ ಘರ್ಜಿಸುತ್ತೇನೆ” ಎಂದು ಹೇಳಿ ಅಲ್ಲಿಯೇ ಅಂತರ್ಧಾನನಾದನು. ಆ ವಾನರ ಶ್ರೇಷ್ಠನು ಹೊರಟುಹೋದನಂತರ ಬಲಶಾಲಿಗಳಲ್ಲಿ ಶ್ರೇಷ್ಠ ಭೀಮನಾದರೋ ಅದೇ ಮಾರ್ಗದಲ್ಲಿ ವಿಪುಲ ಗಂಧಮಾದನದ ಕಡೆ ನಡೆದನು. ಭುವಿಯಲ್ಲಿ ಅಪ್ರತಿಮವಾಗಿದ್ದ ಅವನ ದೇಹವನ್ನೂ ಮತ್ತು ಕಾಂತಿಯನ್ನೂ, ದಾಶರಥಿ ರಾಮನೊಂದಿಗೆ ಅವನಿಗಾಗಿದ್ದ ಅನುಭವವನ್ನೂ ನೆನಪಿಸಿಕೊಳ್ಳುತ್ತಾ ಮುಂದುವರೆದನು.

ಸೌಗಂಧಿಕಾ ವನದ ಕಡೆ ಭಿರುಸಾಗಿ ನಡೆಯುತ್ತಿರುವಾಗ ಆ ರಮಣೀಯ ವನ ಮತ್ತು ಉಪವನಗಳು ಅಲ್ಲಾಡಿದವು. ಅಲ್ಲಿ ಅವನು ಬಹುಬಣ್ಣಗಳ ಅರಳಿದ ಕಮಲದ ಹೂವುಗಳಿರುವ ವನಗಳನ್ನು, ಮೈಮೇಲೆ ಕೆಸರನ್ನು ಎರಚಿಕೊಂಡು ಮಳೆಗಾಲದ ಮೋಡಗಳ ಗುಂಪಿನಂತೆ ತೋರುತ್ತಿದ್ದ ಮದಿಸಿದ ಆನೆಗಳ ಹಿಂಡುಗಳನ್ನು ಕಂಡನು. ದಾರಿಯಲ್ಲಿ ಜಿಂಕೆಗಳು ಮತ್ತು ಜಿಂಕೆ ಮರಿಗಳು, ಬಾಯಿತುಂಬ ಹುಲ್ಲನ್ನು ತಿನ್ನುತ್ತಾ ತಮ್ಮ ಸುಂದರ ಕಣ್ಣುಗಳಿಂದ ಜೋರಾಗಿ ಮುಂದುವರೆಯುತ್ತಿದ್ದ ಆ ಶ್ರೀಮಂತನನ್ನು ನೋಡಿದವು. ಅನಂತರ ಭಯವೇ ಇಲ್ಲದ ಆ ಭೀಮಸೇನನು ಶೌರ್ಯದಿಂದ ಕಾಡುಕೋಣ, ಹಂದಿ ಮತ್ತು ಹುಲಿಗಳು ವಾಸಿಸುತ್ತಿದ್ದ ಗಿರಿಯ ಮೇಲೆ ಬಿದ್ದನು. ಅವನನ್ನು ಸ್ವಾಗತಿಸುತ್ತಿವೆಯೋ ಎನ್ನುವಂತೆ ಆ ಅರಣ್ಯದಲ್ಲಿಯ ಮರಗಳು ಗಾಳಿಬೀಸಿ ಹೂತುಂಬಿದ ರೆಂಬೆಗಳನ್ನು ಬೀಸಿ ಕೋಮಲ ಪುಷ್ಪಗಳನ್ನು ಅವನ ಮೇಲೆ ಸುರಿಸುತ್ತಿದ್ದವು. ದಾರಿಯಲ್ಲಿ ಕೈಮುಗಿದು ನಿಂತಿವೆಯೋ ಎಂದು ತೋರುತ್ತಿರುವ ದುಂಬಿಗಳು ಸುತ್ತುವರೆದಿದ್ದ ಕಮಲಗಳ ಸರೋವರಗಳನ್ನು, ಸುಂದರ ತೀರ್ಥಗಳನ್ನು ದಾಟಿದನು. ಅವನ ಮನಸ್ಸು ಮತ್ತು ದೃಷ್ಟಿ ಹೂವನ್ನು ಹೊತ್ತಿದ್ದ ಪರ್ವತದ ಮೇಲೆಯೇ ಇತ್ತು. ದ್ರೌಪದಿಯ ಮಾತುಗಳನ್ನೇ ಮೆಲಕುಹಾಕುತ್ತಾ ಭೀಮನು ಶೀಘ್ರವಾಗಿ ಮುಂದುವರೆದನು. ದಿನವು ಮುಂದುವರೆದ ಹಾಗೆ ಅವನು ಜಿಂಕೆಗಳು ತುಂಬಿಕೊಂಡಿದ್ದ ವನದಲ್ಲಿ ಶುದ್ಧವಾದ ಕಾಂಚನ ಪದ್ಮಗಳು ತುಂಬಿಕೊಂಡಿದ್ದ, ಮತ್ತ ಕಾರಂಡಗಳಿಂದ ಕೂಡಿದ್ದ, ಚಕ್ರವಾಕಗಳಿಂದ ಶೋಭಿಸುತ್ತಿದ್ದ, ಆ ಪರ್ವತಕ್ಕೆ ಶುದ್ಧ ಕಮಲಗಳ ಮಾಲೆಯನ್ನು ರಚಿಸಲಾಗಿದೆಯೋ ಎನ್ನುವಂತೆ ಇರುವ ನದಿಯನ್ನು ಕಂಡನು. ಆ ನದಿಯ ತಿರುವಿನಲ್ಲಿ ಮಹಾಸತ್ವನು ಸೌಗಂಧಿಕಾ ಮಹಾವನವನ್ನು ಕಂಡನು ಮತ್ತು ಕೂಡಲೇ ಅವನಲ್ಲಿ ಕಾಂತಿಯಲ್ಲಿ ಉದಯಿಸುವ ಸೂರ್ಯನಂತಿರುವ ಸಂತೋಷವು ಹುಟ್ಟಿತು. ಅದನ್ನು ಕಂಡ ಪಾಂಡುನಂದನನು ತಾನು ಬಯಸಿದ್ದುದು ದೊರೆಯಿತೆಂದು ಯೋಚಿಸಿದನು ಮತ್ತು ಅವನ ಮನಸ್ಸು ವನದಲ್ಲಿ ಕಷ್ಟಪಡುತ್ತಿರುವ ತನ್ನ ಪ್ರಿಯೆಯ ಕಡೆ ಹೋಯಿತು.

ಹೋಗಿ ಕೈಲಾಸ ಶಿಖರದ ಆ ಶುಭಕಾನನದಲ್ಲಿ ಸುಂದರವಾಗಿ ಕಾಣುತ್ತಿದ್ದ, ಕುಬೇರನ ಮನೆಯ ಪಕ್ಕದಲ್ಲಿದ್ದ, ಪರ್ವತದ ಜಲಪಾತಗಳಿಂದ ಹುಟ್ಟಿದ್ದ, ನಾನಾ ದ್ರುಮಲತೆಗಳಿಂದ ಸುತ್ತುವರೆಯಲ್ಪಟ್ಟು ಸಾಕಷ್ಟು ನೆರಳಿನಲ್ಲಿದ್ದ ಸುರಮ್ಯವಾದ, ಹಳದೀ ಬಣ್ಣದ ನೈದಿಲೆಗಳಿಂದ ಮತ್ತು ತೇಲಾಡುತ್ತಿರುವ ಲೋಕವನ್ನೇ ಸುಂದರಗೊಳಿಸಬಲ್ಲ ಬಂಗಾರದ ಕಮಲಗಳಿಂದ ಕೂಡಿದ್ದ, ದಿವ್ಯವಾದ, ನೋಡಲಿಕ್ಕೆ ಅದ್ಭುತವಾಗಿದ್ದ, ರಾಕ್ಷಸರಿಂದ ರಕ್ಷಿಸಲ್ಪಟ್ಟ ಆ ರಮ್ಯ ಸರೋವರಕ್ಕೆ ಹೋದನು. ಅಲ್ಲಿ ಕುಂತೀಸುತ ಪಾಂಡವನು ಅಮೃತದಂತೆ ರುಚಿಯಾಗಿದ್ದ ತಣ್ಣಗಿನ, ಹಗುರಾಗಿದ್ದ, ಶುಭವಾಗಿದ್ದ, ಶುದ್ಧವಾಗಿದ್ದ, ಬಹಳ ಮಂಗಳಕರವಾಗಿದ್ದ ನೀರನ್ನು ಕಂಡನು. ಆ ಸುಂದರ ಸರೋವರವು ವೈಡೂರ್ಯದ ತೊಟ್ಟುಗಳುಳ್ಳ. ಬಹುಬಣ್ಣದ, ಮನೋಹರವಾದ, ಸೌಗಂಧಿಕಾ ಪದ್ಮಗಳಿಂದ, ಪರಮ ಸುಗಂಧದಿಂದ ಕೂಡಿದ್ದ ಬಂಗಾರದ ಪದ್ಮಗಳಿಂದ ತುಂಬಿಕೊಂಡಿತ್ತು ಮತ್ತು ಹಂಸ ಕಾರಂಡಗಳಿಂದ ಕದಡಿಸಲ್ಪಟ್ಟು ಬಿಳೀ ಹೂಧೂಳಿಯನ್ನು ಹೊಮ್ಮುತ್ತಿತ್ತು. ಇದು ಯಕ್ಷರಾಜ ಮಹಾತ್ಮ ಕುಬೇರನ ಆಟದ ಸ್ಥಳವಾಗಿತ್ತು. ಅದನ್ನು ಗಂಧರ್ವ, ಅಪ್ಸರ ಮತ್ತು ದೇವತೆಗಳು ಅತಿಯಾಗಿ ಬಯಸುತ್ತಿದ್ದರು. ದೇವರ್ಷಿಗಳಿಂದ, ಯಕ್ಷರಿಂದ, ಹಾಗೆಯೇ ಕಿಂಪುರುಷರಿಂದ, ರಾಕ್ಷಸರಿಂದ, ಕಿನ್ನರರಿಂದ ಸೇವಿಸಲ್ಪಟ್ಟ ಅದನ್ನು ವೈಶ್ರವಣನು ರಕ್ಷಿಸುತ್ತಿದ್ದನು. ಆ ದಿವ್ಯ ಸರೋವರದ ಬಳಿಹೋಗಿ ಅದನ್ನು ನೋಡಿದೊಡನೆಯೇ ಕೌಂತೇಯ ಮಹಾಬಲ ಭೀಮಸೇನನು ಪರಮ ಸಂಪ್ರೀತನಾದನು. ಕ್ರೋಧವಶರೆಂಬ ಹೆಸರಿನ ನೂರಾರು ಸಹಸ್ರಾರು ರಾಕ್ಷಸರು ವಿಚಿತ್ರ ಆಯುಧಗಳನ್ನು ಹಿಡಿದು ಅವರ ರಾಜನ ಶಾಸನದಂತೆ ಅದನ್ನು ಕಾಯುತ್ತಿದ್ದರು.

ಹೂಗಳನ್ನು ಕೀಳಲು ಮುಂದಾಗುತ್ತಿದ್ದ ಜಿನವನ್ನು ಧರಿಸಿದ್ದ ಕೌಂತೇಯ ವೀರ ಭೀಮಪರಾಕ್ರಮಿ ರುಕ್ಮಾಂಗದಧರ, ಆಯುಧಗಳನ್ನು ಹಿಡಿದಿದ್ದ, ಖಡ್ಗವನ್ನು ಹಿಡಿದಿದ್ದ ಭಯವನ್ನೇ ತೋರಿಸದಿದ್ದ ಆ ಅರಿಂದಮ ಭೀಮನನ್ನು ನೋಡಿದೊಡನೆಯೇ ಅವರು ಪರಸ್ಪರರಲ್ಲಿ ಕೂಗಾಡತೊಡಗಿದರು: “ಜಿನವನ್ನು ಸುತ್ತಿಕೊಂಡು ಆಯುಧಗಳನ್ನು ಹಿಡಿದಿರುವ ಈ ಪುರುಷಶರ್ದೂಲನನ್ನು ಅವನು ಯಾರು ಮತ್ತು ಇಲ್ಲಿಗೆ ಏಕೆ ಬಂದಿದ್ದಾನೆಂದು ಕೇಳಿ!” ಆಗ ಅವರೆಲ್ಲರೂ ಮಹಾಬಾಹು ವೃಕೋದರನ ಬಳಿಬಂದು ಆ ತೇಜೋಯುಕ್ತನನ್ನು ಕೇಳಿದರು: “ನೀನು ಯಾರೆಂದು ಹೇಳು! ನೀನು ಮುನಿಗಳ ವೇಷವನ್ನು ಧರಿಸಿದ್ದೀಯೆ ಮತ್ತು ನಾರುಡೆಗಳನ್ನು ಉಟ್ಟಿರುವಂತೆ ಕಾಣುತ್ತಿದ್ದೀಯೆ. ಮಹಾದ್ಯುತೇ! ನೀನು ಇಲ್ಲಿಗೆ ಯಾವ ಕಾರಣದಿಂದ ಬಂದಿದ್ದೀಯೆ. ಹೇಳು!”

ಭೀಮನು ಹೇಳಿದನು: “ರಾಕ್ಷಸರೇ! ನಾನು ಪಾಂಡವ ಭೀಮಸೇನ. ಧರ್ಮಪುತ್ರನ ತಮ್ಮ. ಸಹೋದರರೊಂದಿಗೆ ವಿಶಾಲವಾದ ಬದರಿಗೆ ಬಂದಿದ್ದೇನೆ. ಅಲ್ಲಿ ಪಾಂಚಾಲೀ ದ್ರೌಪದಿಯು ಗಾಳಿಯಲ್ಲಿ ಬೀಸಿ ಬಂದ ಅನುತ್ತಮ ಸೌಗಂಧಿಕಾ ಪುಷ್ಪವನ್ನು ಕಂಡಳು. ತಕ್ಷಣವೇ ಅವಳು ಅಂಥಹ ಬಹಳಷ್ಟು ಪುಷ್ಪಗಳನ್ನು ಬಯಸಿದಳು. ನನ್ನ ಆ ಅನವದ್ಯಾಂಗೀ ಧರ್ಮಪತ್ನಿ ಪ್ರಿಯೆಗೋಸ್ಕರವಾಗಿ ಪುಷ್ಪಗಳನ್ನು ಕೊಂಡೊಯ್ಯಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಯಿರಿ.”

ರಾಕ್ಷಸರು ಹೇಳಿದರು: “ಪುರುಷರ್ಷಭ! ಇದು ಕುಬೇರನ ಅತೀ ಅಚ್ಚುಮೆಚ್ಚಿನ ಕ್ರೀಡಾಸ್ಥಳ. ಮೃತ್ಯುಧರ್ಮಿಗಳಾದ ಮನುಷ್ಯರು ಇಲ್ಲಿ ವಿಹರಿಸಲು ಶಕ್ಯವಿಲ್ಲ. ದೇವರ್ಷಿಗಳೂ, ಯಕ್ಷರೂ, ದೇವತೆಗಳೂ, ಯಕ್ಷಪ್ರವರ ಕುಬೇರನ ಅನುಮತಿಯಿಂದ ಮಾತ್ರ ಇಲ್ಲಿಯ ನೀರನ್ನು ಕುಡಿಯಬಲ್ಲರು ಮತ್ತು ಇಲ್ಲಿ ವಿಹರಿಸಬಲ್ಲರು. ಹೀಗೆ ಗಂಧರ್ವ ಅಪ್ಸರೆಯರೂ ಇಲ್ಲಿ ವಿಹರಿಸುತ್ತಾರೆ. ಧನೇಶ್ವರನನ್ನು ಅಪಮಾನಿಸಿ ಇಲ್ಲಿ ಯಾರಾದರೂ ವಿಹರಿಸಲು ಬಯಸಿದರೆ ಆ ಕೆಟ್ಟ ಕೆಲಸವನ್ನು ಮಾಡುವವನು ವಿನಾಶಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವನನ್ನು ತಿರಸ್ಕರಿಸಿ ಬಲಾತ್ಕಾರವಾಗಿ ಇಲ್ಲಿಂದ ಹೂವುಗಳನ್ನು ಅಪಹರಿಸಿಕೊಂಡು ಹೋಗಲು ಬಯಸುವ ನೀನು ಹೇಗೆ ತಾನೆ ಧರ್ಮರಾಜನ ತಮ್ಮನೆಂದು ಹೇಳಿಕೊಳ್ಳುತ್ತೀಯೆ?”

ಭೀಮನು ಹೇಳಿದನು: “ರಾಕ್ಷಸರೇ! ಇಲ್ಲಿ ಹತ್ತಿರದಲ್ಲಿ ಎಲ್ಲಿಯೂ ನಾನು ಧನೇಶ್ವರ ಕುಬೇರನನ್ನು ಕಾಣುತ್ತಿಲ್ಲ. ಒಂದು ವೇಳೆ ಅವನನ್ನು ನೋಡಿದರೂ ಆ ಮಹಾರಾಜನಲ್ಲಿ ಬೇಡುವ ಕಷ್ಟವನ್ನು ಮಾಡುವುದಿಲ್ಲ. ಯಾಕೆಂದರೆ ರಾಜರು ಬೇಡುವುದಿಲ್ಲ. ಇದೇ ಸನಾತನ ಧರ್ಮ. ಮತ್ತು ನಾನು ಆ ಕ್ಷಾತ್ರಧರ್ಮವನ್ನು  ತೊರೆಯಲು ಎಂದೂ ಬಯಸುವುದಿಲ್ಲ. ಈ ರಮ್ಯ ಸರೋವರವು ಪರ್ವತಗಳ ಝರಿಗಳಿಂದ ಹುಟ್ಟಿದೆ ಮತ್ತು ಮಹಾತ್ಮ ಕುಬೇರನ ಪ್ರದೇಶಕ್ಕೆ ಸೇರಿಲ್ಲ. ವೈಶ್ರವಣ ಕುಬೇರನನ್ನೂ ಸೇರಿ ಸರ್ವರೂ ಇದಕ್ಕೆ ಸರಿಸಮನಾಗಿ ಒಡೆಯರೇ. ಹೀಗಿರುವಾಗ ಯಾರು ಯಾರಲ್ಲಿ ಏಕೆ ಬೇಡಬೇಕು?”

ಹೀಗೆ ಎಲ್ಲ ರಾಕ್ಷಸರಿಗೂ ಹೇಳಿ ಭೀಮಸೇನನು ಸರೋವರದಲ್ಲಿ ಧುಮುಕಿದನು. ಆಗ ರಾಕ್ಷಸರೆಲ್ಲರೂ ಸರೋವರವನ್ನು ಸುತ್ತುವರೆದು ಬೇಡ ಬೇಡ ಎಂದು ಸಿಟ್ಟಿನಿಂದ ಹೇಳುತ್ತಾ ಆ ಪ್ರತಾಪವಂತನನ್ನು ತಡೆದರು ಮತ್ತು ಬೈದರು. ಅವನನ್ನು ತಡೆಯುತ್ತಿರುವ ಆ ಎಲ್ಲ ರಾಕ್ಷಸರನ್ನು ಗಮನಿಸದೇ ಆ ಮಹಾತೇಜಸ್ವಿ ಭೀಮವಿಕ್ರಮನು ಸರೋವರದಲ್ಲಿಳಿದನು. “ಅವನನ್ನು ಹಿಡಿಯಿರಿ, ಕಟ್ಟಿರಿ, ಕೊಲ್ಲಿರಿ! ಭೀಮಸೇನನನ್ನು ಅಡುಗೆಮಾಡಿ ತಿನ್ನೋಣ!” ಎಂದು ಕೂಗುತ್ತಾ ಕೃದ್ಧರಾದ ಅವರು, ಶಸ್ತ್ರಗಳನ್ನು ಮೇಲಕ್ಕೆತ್ತಿ ಕಣ್ಣುಗಳನ್ನು ತಿರುಗಿಸುತ್ತಾ ಅವನನ್ನು ಬೆನ್ನಟ್ಟಿದರು. ಆಗ ಅವನು ತನ್ನ ಅತಿ ಭಾರವಾಗಿದ್ದ ಯಮದಂಡದಂತಿರುವ ಬಂಗಾರದ ಪಟ್ಟಿಯಿಂದ ಸುತ್ತಲ್ಪಟ್ಟ ಮಹಾ ಗದೆಯನ್ನು ಎತ್ತಿ ಹಿಡಿದನು. ನಿಲ್ಲಿ ನಿಲ್ಲಿ ಎಂದು ಕೂಗುತ್ತಾ ಸಿಟ್ಟಿಗೆದ್ದ ಬೀಮನು ಅವರ ಮೇಲೆರಗಿದನು. ಆಗ ಅವರು ತಮ್ಮ ತೋಮರ ಪಟ್ಟಿಶಗಳಿಂದ ಒಂದೇ ಸಮನೆ ಅವನ ಮೇಲೆರಗಿದರು. ಮಹಾ ಭಯಂಕರರಾಗಿದ್ದ ಕ್ರೋಧವಶರು ಕೋಪದಿಂದ ಭೀಮನನ್ನು ಸುತ್ತುವರೆದರು. ವಾಯುವಿನಿಂದ ಕುಂತಿಯಲ್ಲಿ ಜನಿಸಿದ, ವಿರೋಧಿಗಳನ್ನು ಸಂಹರಿಸಲು ಚಡಪಡಿಸುವ, ಸತ್ಯ ಮತ್ತು ಧರ್ಮಗಳಲ್ಲಿ ಸದಾ ನಿರತನಾಗಿದ್ದ ಆ ಬಲವಾನ ಶೂರನು ಪರಾಕ್ರಮದಿಂದ ಶತ್ರುಗಳ ದಾರಿಯನ್ನೇ ಕಡಿದನು. ಅವರ ಶಸ್ತ್ರಗಳನ್ನೇ ಮುರಿದು ಹಾಕಿ ಆ ಮಹಾತ್ಮರ ವಿವಿಧ ಮಾರ್ಗಗಳನ್ನೂ ತಡೆದು, ಸರೋವರದ ಸಮೀಪದಲ್ಲಿ ನೂರಕ್ಕೂ ಹೆಚ್ಚು ಪ್ರಮುಖರನ್ನು ಆ ವೀರನು ಸಂಹರಿಸಿದನು. ಆಗ ಅವನ ವೀರ್ಯ ಮತ್ತು ಬಲವನ್ನು, ಹಾಗೆಯೇ ವಿದ್ಯಾಬಲ ಮತ್ತು ಬಾಹುಬಲವನ್ನು ಕಂಡು ತಮ್ಮ ಸಂಖ್ಯೆಯಿಂದಲೂ ಅವನನ್ನು ಎದುರಿಸಲಾಗದೇ ನಾಯಕರನ್ನು ಕಳೆದುಕೊಂಡು ಅವರು ತಕ್ಷಣವೇ ಹಿಂಗಾಲಿಕ್ಕಿದರು. ಸಂಪೂರ್ಣವಾಗಿ ಪೀಡೆಗೊಳಗಾಗಿ ತಮ್ಮ ಚೇತನವನ್ನೇ ಕಳೆದುಕೊಂಡ ಆ ಸೇನೆಯು ತಕ್ಷಣವೇ ಆಕಾಶ ಮಾರ್ಗವನ್ನೇರಿತು. ಭೀಮನಿಂದ ಸದೆಬಡಿಯಲ್ಪಟ್ಟ ಕ್ರೋಧವಶರು ಭಗ್ನರಾಗಿ ಕೈಶಾಸಶಿಖರರದ ಕಡೆ ಓಡಿದರು. ರಣದಲ್ಲಿ ತನ್ನ ವಿಕ್ರಮದಿಂದ ಶತ್ರುಗಳನ್ನು ಗೆದ್ದ ಇಂದ್ರನಂತೆ ಆ ದಾನವ ದೈತ್ಯರನ್ನು ಕೆಳಗುರುಳಿಸಿದನು. ಶತ್ರುಗಳನ್ನು ಸೋಲಿಸಿದ ಅವನು ಆ ಸರೋವರಕ್ಕೆ ಧುಮುಕಿ ತನಗಿಷ್ಟಬಂದಹಾಗೆ ಆ ನೀರಲ್ಲಿ ಬೆಳೆದಿದ್ದ ಹೂವುಗಳನ್ನು ಕಿತ್ತನು. ಅನಂತರ ಅವನು ಅಮೃತಸಮಾನ ನೀರನ್ನು ಕುಡಿದು ವೀರ್ಯ ಮತ್ತು ತೇಜಸ್ಸಿನಲ್ಲಿ ಇನ್ನೂ ಉತ್ತಮನಾದನು. ಅವನು ಅತ್ಯುತ್ತಮ ಸುಗಂಧವನ್ನು ಹೊಂದಿದ್ದ ನೀರಿನಲ್ಲಿ ಹುಟ್ಟಿದ್ದ ಸೌಗಂಧಿಕಗಳನ್ನು ಕಿತ್ತು ಒಟ್ಟುಹಾಕಿದನು.

ಭೀಮನ ಬಲಕ್ಕೆ ಸಿಲುಕಿ ಸೋತ ಕ್ರೋಧವಶರು ಒಂದಾಗಿ ಧನೇಶ್ವರ ಕುಬೇರನನ್ನು ಭೇಟಿಯಾದರು. ಅತೀವ ದೀನರಾಗಿದ್ದ ಅವರು ಯುದ್ಧದಲ್ಲಿ ಭೀಮನಿಗಿದ್ದ ವೀರ್ಯ ಮತ್ತು ಬಲಗಳ ಕುರಿತು ಹೇಗಿತ್ತೋ ಹಾಗೆ ಹೇಳಿದರು. ಅವರ ಮಾತುಗಳನ್ನು ಕೇಳಿದ ದೇವನು ನಗುತ್ತಾ ರಾಕ್ಷಸರಿಗೆ ಹೇಳಿದನು: “ಸರೋವರದಲ್ಲಿ ಹುಟ್ಟಿದ ಪುಷ್ಪಗಳನ್ನು ಭೀಮನು ತನಗೆ ಬೇಕಾದಷ್ಟು ತೆಗೆದುಕೊಂಡು ಹೋಗುತ್ತಾನೆ. ಕೃಷ್ಣೆಯ ಉದ್ದೇಶವನ್ನು ನಾನು ತಿಳಿದಿದ್ದೇನೆ.” ಅನಂತರ ಧನೇಶ್ವರ ಕುಬೇರನು ಅವರಿಗೆ ಅನುಮತಿಯನ್ನಿತ್ತನು. ಅವರು ರೋಷವನ್ನು ತೊರೆದು ಕುರುಗಳ ನಾಯಕನಲ್ಲಿಗೆ ಹೋದರು. ಅಲ್ಲಿ ಸರೋವರದಲ್ಲಿ ಒಬ್ಬನೇ ತನಗಿಷ್ಟಬಂದಂತೆ ಆಡುತ್ತಿರುವ ಭೀಮನನ್ನು ನೋಡಿದರು. ಅನಂತರ ಭರತರ್ಷಭನು ಆ ಮಹಾಮೌಲ್ಯದ, ಬಹುರೂಪಗಳ, ಧೂಳಿಲ್ಲದ ತುಂಬಾ ದಿವ್ಯ ಪುಷ್ಪಗಳನ್ನು ಒಟ್ಟುಮಾಡಿಕೊಂಡನು.

ಆಗ ಶೀಘ್ರವಾಗಿ ಬೀಸುವ, ಧೂಳನ್ನು ಮೇಲಕ್ಕೆತ್ತಿ ಹಾಕುವ, ತಾಗಿದರೆ ಕೊರೆಯುವ, ಸಂಗ್ರಾಮದ ಸುಳಿವನ್ನು ಕೊಡುವ ಭಿರುಗಾಳಿಯು ಬೀಸತೊಡಗಿತು. ಮಹಾಪ್ರಭೆಯುಳ್ಳ ಅತಿದೊಡ್ಡ ಉಲ್ಕೆಯೊಂದು ಆ ಭಿರುಗಾಳಿಯಲ್ಲಿ ಬಿದ್ದಿತು. ಅದರಿಂದಾಗಿ ಸೂರ್ಯನು ತನ್ನ ಪ್ರಭೆಯನ್ನು ಕಳೆದುಕೊಂಡನು ಮತ್ತು ಎಲ್ಲೆಡೆಯೂ ಕತ್ತಲೆಯು ಆವರಿಸಿತು. ಭೀಮನು ಆ ವಿಕ್ರಮಕಾರ್ಯವನ್ನೆಸಗುತ್ತಿರಲು ಭಯಂಕರವಾದ ಸುಂಟರಗಾಳಿಯು ಬೀಸಿಬಂದು ಭೂಮಿಯನ್ನೇ ಅಡುಗಿಸಿತು ಮತ್ತು ಧೂಳಿನ ಮಳೆಯನ್ನು ಸುರಿಸಿತು. ಆಕಾಶವು ಕೆಂಪಾಯಿತು, ಮೃಗಪಕ್ಷಿಗಳು ಚೀರಾಡಿದವು, ಎಲ್ಲಕಡೆಯೂ ಕತ್ತಲೆಯು ಆವರಿಸಿತು ಮತ್ತು ಏನೂ ಕಾಣಿಸುತ್ತಿರಲಿಲ್ಲ. ಆ ಅದ್ಭುತವನ್ನು ನೋಡಿ ಮಾತನಾಡುವವರಲ್ಲಿ ಶ್ರೇಷ್ಠ ಧರ್ಮಪುತ್ರ ಯುಧಿಷ್ಠಿರನು ಹೇಳಿದನು: “ಯಾರೋ ನಮ್ಮನ್ನು ಧಾಳಿಯಿಡುತ್ತಿದ್ದಾರೆ. ಸುರಕ್ಷಿತರಾಗಿರಿ! ಯುದ್ಧದುರ್ಮದ ಪಾಂಡವರೇ! ಸಿದ್ಧರಾಗಿರಿ! ಕಾಣುತ್ತಿರುವುದನ್ನು ನೋಡಿದರೆ ಪರಾಕ್ರಮದಲ್ಲಿ ನಾವೇ ಮೇಲಾಗುತ್ತೇವೆ ಎಂದು ತೋರುತ್ತದೆ!” ಹೀಗೆ ಹೇಳಿದ ರಾಜನು ಸುತ್ತಲೂ ನೋಡಿದನು. ಆಗ ಧರ್ಮರಾಜ ಯುದಿಷ್ಠಿರನು ಭೀಮನನ್ನು ಕಾಣಲಿಲ್ಲ. ಆ ಅರಿಂದಮನು ಅಲ್ಲಿ ಹತ್ತಿರದಲ್ಲಿ ನಿಂತಿದ್ದ ಕೃಷ್ಣೆ ಮತ್ತು ಯಮಳರಲ್ಲಿ ತನ್ನ ತಮ್ಮ ಮಹಾಯುದ್ಧದಲ್ಲಿ ಭಯಂಕರವಾಗಿ ಹೋರಾಡುವ ಭೀಮನ ಕುರಿತು ಕೇಳಿದನು: “ಪಾಂಚಾಲೀ! ಭೀಮನು ಏನನ್ನಾದರೂ ಮಾಡಲು ಬಯಸಿದನೇ? ಅಥವಾ ಆ ಸಾಹಸಪ್ರಿಯ ವೀರನು ಏನಾದರೂ ಸಾಹಸಕೃತ್ಯವನ್ನು ಮಾಡಿದನೇ? ಯಾಕೆಂದರೆ ಅಕಸ್ಮಾತ್ತಾಗಿ ಎಲ್ಲೆಡೆಯಲ್ಲಿಯೂ ಕಂಡುಬರುವ ತೀವ್ರ ಭಯವನ್ನುಂಟುಮಾಡುವ ಈ ಉತ್ಪಾತಗಳು ಮಹಾ ಸಮರವನ್ನು ಸೂಚಿಸುತ್ತವೆ.”

ಆಗ ಮಾತನಾಡುವ ಮನಸ್ವಿನೀ ಪ್ರಿತಿಯ ರಾಣಿ, ಚಾರುಹಾಸಿನಿ ಕೃಷ್ಣೆಯು ತನ್ನ ಪ್ರಿಯನಿಗೆ ಸಂತೋಷಗೊಳಿಸಲು ಹೇಳಿದಳು: “ರಾಜನ್! ಇಂದು ನನಗೆ ಸಂತೋಷವನ್ನು ನೀಡಿದ, ಗಾಳಿಯಲ್ಲಿ ತೇಲಿಬಂದ ಸೌಗಂಧಿಕಾ ಪುಷ್ಪಗಳನ್ನು ತರಲು ಭೀಮಸೇನನಿಗೆ ಒಪ್ಪಿಸಿದ್ದೆ. ಒಂದು ವೇಳೆ ಅಂಥಹ ಪುಷ್ಪಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಗಳಲ್ಲಿ ಕಂಡರೆ ಶೀಘ್ರವಾಗಿ ಅವುಗಳೆಲ್ಲವನ್ನೂ ತರಲು ಆ ವೀರನಿಗೆ ಹೇಳಿದ್ದೆ. ನನಗೆ ಪ್ರಿಯವಾದುದನ್ನು ಮಾಡಲು ಆ ಮಹಾಬಾಹು ಪಾಂಡವನು ಅವುಗಳನ್ನು ತರಲು ಈಶಾನ್ಯದಿಕ್ಕಿಗೆ ನಿಜವಾಗಿಯೂ ಹೋಗಿರಬಹುದು.”

ಅವಳ ಮಾತುಗಳನ್ನು ಕೇಳಿದೊಡನೆಯೇ ರಾಜನು ಯಮಳರಿಗೆ ಹೇಳಿದನು: “ಹಾಗಿದ್ದರೆ ನಾವು ಕೂಡಲೇ ವೃಕೋದರ ಭೀಮನು ಹೋದಲ್ಲಿಗೆ ಒಟ್ಟಿಗೇ ಹೋಗೋಣ. ರಾಕ್ಷಸರು ಯಾರೆಲ್ಲ ಆಯಾಸಗೊಂಡಿದ್ದಾರೋ, ಕೃಶರಾಗಿದ್ದಾರೋ ಅಂಥಹ ಬ್ರಾಹ್ಮಣರನ್ನು ಹೊತ್ತುಕೊಂಡು ಹೋಗಲಿ, ಮತ್ತು ಘಟೋತ್ಕಚ! ಅಮರರಂತಿರುವ ನೀನು ಕೃಷ್ಣೆ ದ್ರೌಪದಿಯನ್ನು ಎತ್ತಿಕೊಂಡು ಹೋಗು. ವೇಗದಲ್ಲಿ ವಾಯುವಿನ ಸಮನಾಗಿರುವ ಭೀಮನು ಹೋಗಿ ಬಹಳ ಸಮಯವಾಗಿರುವುದರಿಂದ ಖಂಡಿತವಾಗಿಯೂ ಅವನು ಬಹಳ ದೂರ ಹೋಗಿದ್ದಾನೆ ಎಂದು ನನಗನ್ನಿಸುತ್ತದೆ. ಅವನು ಭೂಮಿಯಲ್ಲಿ ಗರುಡನಂತೆ ಹಾರಿಹೋಗುತ್ತಾನೆ. ಅವನು ಆಕಾಶದಲ್ಲಿ ಹಾರಿ ಬೇಕಾದಲ್ಲಿ ಇಳಿಯುತ್ತಾನೆ. ರಜನೀಚರ ರಾಕ್ಷಸರೇ! ನಿಮ್ಮ ಪ್ರಭಾವದಿಂದ ನಾವು ಬ್ರಹ್ಮವಾದಿಗಳಾದ ಸಿದ್ಧರನ್ನು ಉಲ್ಲಂಘಿಸುವುದರ ಮೊದಲೇ ಅವನಿರುವಲ್ಲಿಗೆ ಹೋಗೋಣ.”

ಅವರೆಲ್ಲರೂ “ಹಾಗೆಯೇ ಆಗಲಿ” ಎಂದರು. ಹೈಡಿಂಬಿ ಘಟೋತ್ಕಚನ ನಾಯಕತ್ವದಲ್ಲಿ ಕುಬೇರನ ಸರೋವರವಿರುವ ಸ್ಥಳವನ್ನು ಅರಿತಿದ್ದ ಆ ರಾಕ್ಷಸರು ಪಾಂಡವರನ್ನೂ, ಲೋಮಹರ್ಷಣನೊಂದಿಗೆ ಇತರ ಅನೇಕ ಬ್ರಾಹ್ಮಣರನ್ನೂ ಎತ್ತಿಕೊಂಡು ಸಂತೋಷದಿಂದ ಹೊರಟರು. ಹೀಗೆ ಎಲ್ಲರೂ ಒಟ್ಟಿಗೇ ಹೋಗಿ ಅಲ್ಲಿ ಕಾಡಿನಲ್ಲಿ ಅರಳುತ್ತಿರುವ ಕಮಲಗಳಿಂದ ತುಂಬಿದ್ದ ಸುಮನೋಹರ ಸರೋವರವನ್ನು ಕಂಡರು. ಅಲ್ಲಿ ಅವರು ಸರೋವರದ ತೀರದ ಮೇಲೆ ನಿಂತಿರುವ ಮಹಾತ್ಮ ಭೀಮನನ್ನು ಮತ್ತು ಅವನಿಂದ ನಿಹತರಾದ ತೆರದ ಕಣ್ಣುಗಳ ಯಕ್ಷರನ್ನೂ ಕಂಡರು. ಪ್ರಜೆಗಳನ್ನು ನಾಶಗೊಳಿಸುವ ಸಮಯದಲ್ಲಿ ಅಂತಕ ಯಮನು ತನ್ನ ದಂಡವನ್ನು ಹೇಗೋ ಹಾಗೆ ಗದೆಯನ್ನು ಎತ್ತಿ ಹಿಡಿದು ನದೀತೀರದಲ್ಲಿ ನಿಂತಿದ್ದ ಭೀಮನನ್ನು ಕಂಡರು. ಅವನನ್ನು ಕಂಡ ಧರ್ಮರಾಜನು ಪುನಃ ಪುನಃ ಅವನನ್ನು ಆಲಂಗಿಸಿದನು ಮತ್ತು ಮೃದುವಾದ ಮಾತುಗಳಲ್ಲಿ ಕೇಳಿದನು: “ಕೌಂತೇಯ! ಇದೇನು ಮಾಡಿದೆ? ದೇವರಿಗೆ ಅಪ್ರಿಯವಾದ ಈ ಸಾಹಸವನ್ನೇಕೆ ಮಾಡಿದೆ? ನನಗೆ ಸಂತೋಷವಾದುದನ್ನು ಮಾಡಲು ಬಯಸುವೆಯಾದರೆ ಇಂತಹ ಕಾರ್ಯವನ್ನು ಪುನಃ ಮಾಡಬೇಡ!”

ಈ ರೀತಿ ಕೌಂತೇಯನನ್ನು ನಿಯಂತ್ರಿಸಿ ಅವರು ಪದ್ಮಗಳನ್ನು ಒಟ್ಟುಗೂಡಿಸಿಕೊಂಡು ಆ ಸರೋವರದಲ್ಲಿ ಅಮರರಂತೆ ವಿಹರಿಸಿದರು. ಅದೇ ಸಮಯದಲ್ಲಿ ಆ ಉದ್ಯಾನವನದ ರಕ್ಷಣೆಯಲ್ಲಿದ್ದ ಮಹಾಕಾಯರು ಶಿಲಾಯುಧಗಳನ್ನು ಹಿಡಿದು ಅಲ್ಲಿಗೆ ಆಗಮಿಸಿದರು. ಧರ್ಮರಾಜನನ್ನು, ದೇವರ್ಷಿ ಲೋಮಶನನ್ನು, ನಕುಲ ಸಹದೇವರನ್ನು ಮತ್ತು ಇತರ ಬ್ರಾಹ್ಮಣರ್ಷಭರನ್ನು ಕಂಡು ಅವರೆಲ್ಲರೂ ವಿನಯದಿಂದ ತಲೆಬಾಗಿ ನಮಸ್ಕರಿಸಿದರು. ಧರ್ಮರಾಜನು ಆ ರಾಕ್ಷಸರನ್ನು ಸಂತವಿಸಿದಾಗ ಅವರು ಶಾಂತರಾದರು. ಅನಂತರ ಆ ಕುರೂದ್ಧಹ ನರಪುಂಗವರು ಕುಬೇರನಿಗೆ ತಿಳಿದಿದ್ದಹಾಗೆ ಅಲ್ಲಿಯೇ ಕೆಲ ಸಮಯ ಉಳಿದು ರಮಿಸಿದರು.

Leave a Reply

Your email address will not be published. Required fields are marked *