ವನಕ್ಕೆ ಋಷಿ ಬೃಹದಶ್ವನ ಆಗಮನ

ವನದಲ್ಲಿ ಪಾಂಡವರ ಆಹಾರ; ಅರ್ಜುನನ ಕುರಿತಾದ ಚಿಂತೆ

ಶುದ್ಧಬಾಣಗಳಿಂದ ವನ್ಯ ಮೃಗಗಳನ್ನು ಬೇಟೆಯಾಡಿ ಅದನ್ನು ಮೊದಲು ಬ್ರಾಹ್ಮಣರಿಗೆ ಬಡಿಸಿ ನಂತರ ಆ ಪುರುಷರ್ಷಭ ಪಾಂಡವರು ಸೇವಿಸುತ್ತಿದ್ದರು. ಆ ಶೂರ ಮಹೇಷ್ವಾಸರು ವನದಲ್ಲಿ ವಾಸಿಸುವಾಗ ಅಗ್ನಿಯನ್ನು ಹೊಂದಿದ್ದ ಮತ್ತು ಅಗ್ನಿಯನ್ನು ಹೊಂದಿರದ ಬ್ರಾಹ್ಮಣರು ಅವರನ್ನು ಅನುಸರಿಸಿ ಹೋಗಿದ್ದರು. ಯುಧಿಷ್ಠಿರನ ಆಶ್ರಯದಲ್ಲಿ ಮೋಕ್ಷದ ಹತ್ತು ಬಗೆಗಳನ್ನೂ ತಿಳಿದಿದ್ದ ಸಹಸ್ರಾರು ಮಹಾತ್ಮ ಸ್ನಾತಕ ಬ್ರಾಹ್ಮಣರು ಇದ್ದರು. ರುರು, ಕೃಷ್ಣಮೃಗ, ಮತ್ತು ಆಹಾರಕ್ಕೆ ಅನುಗುಣವಾದ ಇತರ ವನ್ಯಪ್ರಾಣಿಗಳನ್ನು ಬಾಣಗಳಿಂದ ಬೇಟೆಯಾಡಿ, ವಿಧಿವತ್ತಾಗಿ ಬ್ರಾಹ್ಮಣರಿಗೆ ನೀಡುತ್ತಿದ್ದರು. ಅವರಲ್ಲಿ ಒಬ್ಬನೂ ವಿವರ್ಣನಾದವನು, ರೋಗಹೊಂದಿದವನು, ಬಡಕಲಾಗಿ ಅಥವಾ ದುರ್ಬಲನಾಗಿ, ದೀನನಾಗಿ ಅಥವಾ ಭೀತನಾಗಿ ಇರುವ ಮನುಷ್ಯನು ಕಾಣುತ್ತಿರಲಿಲ್ಲ. ಕೌರವಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಅವರನ್ನು ಪ್ರಿಯಪುತ್ರರಂತೆ, ಬಂಧುಗಳಂತೆ, ಸಹೋದರ ತಮ್ಮಂದಿರಂತೆ ಪೋಷಿಸಿದನು. ತಾಯಿಯಂತೆ ಯಶಸ್ವಿನೀ ದ್ರೌಪದಿಯು ಮೊದಲು ಎಲ್ಲ ಬ್ರಾಹ್ಮಣರಿಗೂ, ಗಂಡಂದಿರಿಗೂ ಬಡಿಸಿ ನಂತರ ಉಳಿದ ಆಹಾರವನ್ನು ಸೇವಿಸುತ್ತಿದ್ದಳು. ರಾಜನು ಪೂರ್ವದಲ್ಲಿ, ಭೀಮಸೇನನು ದಕ್ಷಿಣದಲ್ಲಿ, ಯಮಳರು ಪಶ್ಚಿಮ ಮತ್ತು ಉತ್ತರ ದಿಕ್ಕುಗಳಲ್ಲಿ ತಮ್ಮ ಧನುಸ್ಸುಗಳನ್ನು ಹಿಡಿದು ನಿತ್ಯವೂ ಮೃಗಗಳನ್ನು ಮಾಂಸಕ್ಕಾಗಿ ಬೇಟೆಯಾಡುತ್ತಿದ್ದರು. ಹೀಗೆ ಅವರು ಕಾಮ್ಯಕ ವನದಲ್ಲಿ ಅರ್ಜುನನಿಲ್ಲದೇ ಉತ್ಸಾಹಹೀನರಾಗಿ ವಾಸಿಸಿ, ಅಧ್ಯಯನ, ಜಪ ಮತ್ತು ಹೋಮಗಳಲ್ಲಿ ಐದು ವರ್ಷಗಳನ್ನು ಕಳೆದರು.

ಮಹಾತ್ಮ ಪಾರ್ಥನು ಅಸ್ತ್ರಗಳಿಗೋಸ್ಕರ ಶಕ್ರಲೋಕಕ್ಕೆ ಹೋದ ಬಳಿಕ ಆ ಪುರುಷರ್ಷಭರು ಕೃಷ್ಣೆಯಿಂದೊಡಗೂಡಿ ಕಾಮ್ಯಕ ವನದಲ್ಲಿ ವಾಸಿಸಿದರು. ಒಂದು ದಿನ ಆ ಭರತಶ್ರೇಷ್ಠರು ಕೃಷ್ಣೆಯೊಂದಿಗೆ ನಿರ್ಜನ ಹುಲ್ಲುಗಾವಲಿನಲ್ಲಿ ದುಖಾರ್ತರಾಗಿ ಕುಳಿತಿದ್ದರು. ಅವರೆಲ್ಲರೂ ಧನಂಜಯನ ಕುರಿತು ಶೋಕಿಸುತ್ತಾ, ಧನಂಜಯನ ಅಗಲಿಕೆ ಮತ್ತು ತಮ್ಮ ರಾಜ್ಯನಾಶದ ಕುರಿತು ಯೋಜಿಸುತ್ತಾ ಅಶ್ರುಕಂಠರಾಗಿ ಶೋಕಸಾಗರದಲ್ಲಿ ಮುಳುಗಿದ್ದರು. ಆಗ ಮಹಾಬಾಹು ಭೀಮನು ಯುಧಿಷ್ಠಿರನಿಗೆ ಹೇಳಿದನು: “ಮಹಾರಾಜ! ಪಾಂಡುಪುತ್ರರ ಪ್ರಾಣವು ಯಾರ ಮೇಲೆ ಅವಲಂಬಿಸಿದೆಯೋ ಆ ಪುರುಷರ್ಷಭ ಅರ್ಜುನನು ನಿನ್ನ ಆದೇಶದ ಮೇಲೆಯೇ ಹೋಗಿದ್ದಾನೆ. ಒಂದುವೇಳೆ ಅವನಿಗೇನಾದರೂ ವಿನಷ್ಟವಾದರೆ, ಪುತ್ರಸಮೇತರಾಗಿ ನಾವು, ಪಾಂಚಾಲರು, ಸಾತ್ಯಕಿ-ವಾಸುದೇವ ಎಲ್ಲರೂ ವಿನಾಶಹೊಂದುತ್ತೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ನಿನ್ನ ಆದೇಶದ ಮೇರೆಗೆ ತೇಜಸ್ವಿ ಬೀಭತ್ಸುವು ಮುಂದಿನ ಹಲವಾರು ಕ್ಲೇಶಗಳ ಕುರಿತು ಚಿಂತಿಸದೆಯೇ ಹೊರಟುಹೋದ ಎನ್ನುವುದಕ್ಕಿಂತ ದುಃಖತರವಾದದ್ದು ಇನ್ನೇನಿದೆ? ನಮ್ಮ ಶತ್ರುಗಳನ್ನು ಯುದ್ಧದಲ್ಲಿ ಸೋಲಿಸಿ ಈ ಮೇದಿನಿಯನ್ನು ಪಡೆಯಬಹುದೆನ್ನುವ ಯೋಚನೆಯಿಂದ ನಾವೆಲ್ಲರೂ ಆ ಮಹಾತ್ಮನ ಬಾಹುಗಳ ಆಶ್ರಯ ಹೊಂದಿದ್ದೆವು. ಧಾರ್ತರಾಷ್ಟ್ರರು ಮತ್ತು ಸೌಬಲನನ್ನು ಸಭಾಮದ್ಯದಲ್ಲಿ ನಾನು ಕೊಲ್ಲುವುದನ್ನು ತಡೆಹಿಡಿದಿದ್ದುದೇ ಆ ಧನುಷ್ಮತನ ಪ್ರಭಾವದಿಂದ. ವಾಸುದೇವನಿಂದ ಪಾಲಿತರಾದ ಮತ್ತು ಬಾಹುಬಲಿಗಳಾದ ನಾವು, ನಮ್ಮ ಕ್ರೋಧವನ್ನು ನಿನ್ನಿಂದ ಹುಟ್ಟಿದ ಸಹನಾಶಕ್ತಿಯಿಂದ ಸಹಿಸಿಕೊಳ್ಳುತ್ತಿದ್ದೇವೆ. ಯಾಕೆಂದರೆ, ಒಂದು ವೇಳೆ ಕೃಷ್ಣನ ಸಹಿತ ನಾವು ಕರ್ಣನ ಮುಖಂಡತ್ವದಲ್ಲಿರುವ ಶತ್ರುಗಳನ್ನು ಕೊಂದಿದ್ದರೆ, ಸ್ವ-ಬಾಹುಗಳಿಂದ ಗೆದ್ದ ಈ ಎಲ್ಲ ಭೂಮಿಯನ್ನು ಆಳಬಹುದಾಗಿತ್ತು! ಪೌರುಷತ್ವದ ಯಾವುದೂ ಕೊರತೆಯಿಲ್ಲದ, ಬಲಿಗಳಿಗಿಂಥ ಬಲವತ್ತರಾದ ನಾವೆಲ್ಲಾ ಈ ದು:ಸ್ತಿಥಿಗೆ ಬರಲು ನಿನ್ನ ದ್ಯೂತ ದೋಷವೇ ಕಾರಣ! ಕ್ಷಾತ್ರಧರ್ಮವನ್ನು ಸಮವೇಕ್ಷಿಸು. ವನಾಶ್ರಯವು ಕ್ಷತ್ರಿಯನ ಧರ್ಮವಲ್ಲ. ರಾಜ್ಯವೇ ಕ್ಷತ್ರಿಯನ ಪರಮ ಧರ್ಮ ಎಂದು ತಿಳಿದವರು ತಿಳಿದಿರುತ್ತಾರೆ. ಕ್ಷತ್ರಧರ್ಮವನ್ನು ತಿಳಿದಂತಹ ರಾಜ! ಧರ್ಮಪಥವನ್ನು ನಾಶಮಾಡಬೇಡ. ಹನ್ನೆರಡು ವರುಷಗಳು ಮುಗಿಯುವುದರೊಳಗೇ ಧಾರ್ತರಾಷ್ಟ್ರರನ್ನು ಕೊಂದು ಬಿಡೋಣ. ವನದಿಂದ ಹಿಂದಿರುಗಿ, ಪಾರ್ಥ-ಜನಾರ್ದನರನ್ನು ಕರೆದುಕೊಂಡು, ಮಹಾ ಯುದ್ಧದಲ್ಲಿ ಅವರೆಲ್ಲ ಪಡೆಗಳನ್ನೂ ಬಹುಬೇಗ ನಾಶಮಾಡಿಬಿಡೋಣ. ನಾನು ಧಾರ್ತರಾಷ್ಟ್ರರೆಲ್ಲರನ್ನೂ ಬೇರೆ ಲೋಕಕ್ಕೆ ಕಳುಹಿಸಿಬಿಡುತ್ತೇನೆ. ನಾನು ಸೌಬಲ ಸಹಿತರಾದ ಆ ಎಲ್ಲ ಧಾರ್ತರಾಷ್ಟ್ರರನ್ನು ದುರ್ಯೋಧನ, ಕರ್ಣ, ಮತ್ತು ಪ್ರತಿಸ್ಪರ್ಧಿಸುವ ಎಲ್ಲರನ್ನೂ ಸಂಹಾರ ಮಾಡುತ್ತೇನೆ. ನಾನು ಅವರೆಲ್ಲರನ್ನೂ ಮುಗಿಸಿದ ಬಳಿಕ ನೀನು ವನದಿಂದ ಮರಳಬಹುದು. ಹೀಗೆ ಮಾಡುವುದರಿಂದ ನಿನಗೆ ಯಾವುದೇ ದೋಷವೂ ಬರುವುದಿಲ್ಲ. ಇದರಿಂದ ಯಾವುದೇ ಪಾಪವನ್ನು ಮಾಡಿದ್ದೇವೆಂದಾದರೆ, ಅವೆಲ್ಲವನ್ನೂ ಒಂದಲ್ಲ ಒಂದು ಯಜ್ಞದಿಂದ ತೊಳೆದು ಉತ್ತಮ ಸ್ವರ್ಗಕ್ಕೆ ಹೋಗೋಣ. ನಮ್ಮ ರಾಜನು ಬಾಲಿಶನಾಗಿರದಿದ್ದರೆ ಅಥವಾ ದೀರ್ಘಸೂತ್ರನಾಗಿರದಿದ್ದರೆ, ಇದು ಹೀಗೆಯೇ ಆಗಬೇಕಾಗಿತ್ತು.  ಆದರೆ ನೀನು ಧರ್ಮಪರಾಯಣನಾಗಿದ್ದೀಯೆ. ಮೋಸಗೊಳಿಸುವವರನ್ನು ಮೋಸದಿಂದಲೇ ಕೊಲ್ಲಬೇಕೆಂದು ನಿಶ್ಚಯವಾಗಿದೆ. ಕೃತ್ರಿಮರನ್ನು ಕೃತ್ರಿಮದಿಂದ ಕೊಂದರೆ ಪಾಪವಿಲ್ಲ ಎಂದು ಹೇಳುತ್ತಾರೆ. ಇದೂ ಅಲ್ಲದೇ ಧರ್ಮಜ್ನರು ಒಂದು ಅಹೋರಾತ್ರಿಯು ಒಂದು ವರ್ಷಕ್ಕೆ ಸಮ ಎಂದು ಧರ್ಮಗಳಲ್ಲಿ ಕಂಡುಕೊಂಡಿದ್ದಾರೆ. ಈ ತರಹ ಕಷ್ಟಕಾಲದಲ್ಲಿ ವರ್ಷಗಳು ಪೂರ್ಣವಾಗುತ್ತವೆ ಎಂದು ನಿತ್ಯವೂ ವೇದವಚನವನ್ನು ಕೇಳುತ್ತೇವೆ. ವೇದಗಳೇ ನಿನ್ನ ಪ್ರಮಾಣಗಳಾಗಿದ್ದರೆ, ಒಂದೇ ದಿನದ ನಂತರ ಹದಿಮೂರು ವರ್ಷಗಳ ಅವಧಿಯೂ ಮುಗಿಯಿತು ಎಂದು ತಿಳಿ. ದುರ್ಯೋಧನನು ಇಡೀ ಪೃಥ್ವಿಯನ್ನು ತನ್ನಡಿಯಲ್ಲಿ ಮಾಡಿಕೊಳ್ಳುವ ಮೊದಲೇ ಅವನು ಮತ್ತು ಅವನ ಸಂಬಂಧಿಗಳೆಲ್ಲರನ್ನೂ ಸಂಹಾರ ಮಾಡಲು ಇದೇ ಸಮಯ.”

ಈ ರೀತಿ ಮಾತನಾಡುತ್ತಿದ್ದ ಪಾಂಡವ ಭೀಮನ ಶಿರವನ್ನು ಆಘ್ರಾಣಿಸಿ, ಸಂತಯಿಸುತ್ತಾ ಧರ್ಮರಾಜ ಯುಧಿಷ್ಠಿರನು ಹೇಳಿದನು: “ಮಹಾಬಾಹು! ನಿಸ್ಸಂಶಯವಾಗಿ ಗಾಂಡೀವ ಧನುರ್ಧಾರಿಯ ಜೊತೆಗೂಡಿ ನೀನು ಸುಯೋಧನನನ್ನು ಕೊಲ್ಲುತ್ತೀಯೆ. ಆದರೆ ಹದಿಮೂರು ವರ್ಷಗಳ ನಂತರ. ನೀನೇನು ಹೇಳುತ್ತಿದ್ದೀಯೆ - ಪ್ರಭು! ಕಾಲ ಪ್ರಾಪ್ತಿಯಾಗಿದೆ - ಎಂದು? ಅನೃತವನ್ನು ಹೇಳಲು ನನಗೆ ಇಷ್ಟವಿಲ್ಲ. ಯಾಕೆಂದರೆ ನನಗೆ ಅದು ಗೊತ್ತಿಲ್ಲ. ಕೌಂತೇಯ! ಮೋಸವನ್ನು ಪಾಪಿಗಳೇ ನಿಶ್ಚಯಿಸುತ್ತಾರೆ. ಆದರೂ ನೀನು ಬಂಧುಸಮೇತ ಸುಯೋಧನನನ್ನು ಕೊಲ್ಲುತ್ತೀಯೆ.”

ಬೃಹದಶ್ವನಿಂದ ನಲೋಪಾಖ್ಯಾನ ಮತ್ತು ಅಕ್ಷಹೃದಯ

ಧರ್ಮರಾಜ ಯುಧಿಷ್ಠಿರನು ಈ ರೀತಿ ಭೀಮನಿಗೆ ಹೇಳುತ್ತಿರಲು, ಮಹಾಭಾಗ, ಮಹಾನೃಷಿ ಬೃಹದಶ್ವನು ಅಲ್ಲಿಗೆ ಆಗಮಿಸಿದನು. ಆ ಧರ್ಮಚಾರಿಯು ಆಗಮಿಸಿದ್ದುದನ್ನು ನೋಡಿ ಧರ್ಮಾತ್ಮ ಧರ್ಮರಾಜನು ಶಾಸ್ತ್ರೋಕ್ತವಾಗಿ ಮಧುಪರ್ಕದಿಂದ ಪೂಜಿಸಿದನು. ಅತಿಥಿಯು ಕುಳಿತುಕೊಂಡು ವಿಶ್ರಾಂತಿಸಿದ ನಂತರ ಮಹಾಬಾಹು ಯುಧಿಷ್ಠಿರನು ಅವನ ಎದುರಿನಲ್ಲಿ ಶೋಕತಪ್ತನಾಗಿ ಹೇಳಿದನು: “ಭಗವನ್! ಧನ ಮತ್ತು ರಾಜ್ಯವನ್ನು ದ್ಯೂತದಲ್ಲಿ ಪಣವಿಡಿಸಿಕೊಂಡು ಮೋಸ ಮತ್ತು ದ್ಯೂತ ಎರಡರಲ್ಲೂ ಪ್ರವೀಣರಾದ ಮೋಸಕೋರರು ಅಪಹರಿಸಿದರು. ನನಗೆ ಜೂಜಾಡುವುದು ಗೊತ್ತಿರಲಿಲ್ಲ. ಆದರೂ ಆ ಪಾಪನಿಶ್ಚಯಿಗಳು ನನ್ನನ್ನು ಮೋಸಗೊಳಿಸಿ, ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿದ್ದ ನನ್ನ ಭಾರ್ಯೆಯನ್ನು ಸಭೆಗೆ ಎಳೆದು ತಂದರು. ನನಗಿಂಥಲೂ ಹೆಚ್ಚು ಭಾಗ್ಯಹೀನನಾದ ರಾಜನು ಬೇರೆ ಯಾರಾದರೂ - ನೀನು ನೋಡಿದ ಹಾಗೆ ಅಥವಾ ಕೇಳಿದ ಹಾಗೆ - ಇದ್ದನೇ ಈ ಭುವಿಯಲ್ಲಿ? ನನ್ನ ಅಭಿಪ್ರಾಯದಂತೆ ನನಗಿಂಥ ಹೆಚ್ಚಿನ ದುಃಖವನ್ನು ಅನುಭವಿಸಿದ ಮನುಷ್ಯನು ಇಲ್ಲವೇ ಇಲ್ಲ.”

ಬೃಹದಶ್ವನು ಹೇಳಿದನು: “ಮಹಾರಾಜ! ನಿನಗಿಂಥಲೂ ಅಲ್ಪಭಾಗ್ಯಶಾಲಿ ಬಹುಷಃ ಇಲ್ಲ ಎಂದು ಹೇಳುತ್ತಿದ್ದೀಯಾ? ನಿನಗೆ ಇಷ್ಟವಾದರೆ, ಇದಕ್ಕೆ ಒಂದು ಕಥೆಯನ್ನು ಹೇಳುತ್ತೇನೆ. ನಿನಗಿಂಥಲೂ ಹೆಚ್ಚು ದುಃಖಿತನಾದ ರಾಜನೊಬ್ಬನಿದ್ದ.”

ಯುಧಿಷ್ಠಿರನು ಹೇಳಿದನು: “ಭಗವಾನ್! ಹೇಳು. ನನ್ನ ಈ ಅವಸ್ಥೆಯನ್ನೇ ಹೊಂದಿದ್ದ ಪಾರ್ಥಿವನ ಕುರಿತು ಕೇಳಲು ಬಯಸುತ್ತೇನೆ.”

ಬೃಹದಶ್ವನು ಹೇಳಿದನು: “ರಾಜನ್! ಭ್ರಾತೃಗಳ ಸಹಿತ ನಿನಗಿಂಥ ಹೆಚ್ಚು ದುಃಖವನ್ನನುಭವಿಸಿದ ರಾಜ ಪೃಥಿವೀಪತಿಯ ಕುರಿತು ಗಮನವಿಟ್ಟು ಕೇಳು. ವೀರಸೇನ ಎನ್ನುವ ನಿಷಧದ ಮಹೀಪಾಲನಿದ್ದನು. ಅವನಿಗೆ ಧರ್ಮಾರ್ಥದರ್ಶಿಯಾದ ನಳ ಎಂಬ ಹೆಸರಿನ ಪುತ್ರನಿದ್ದನು. ಪುಷ್ಕರನು ಮೋಸದಿಂದ ಅವನನ್ನು ಗೆದ್ದನು ಮತ್ತು ದುಃಖಕ್ಕೆ ಅನರ್ಹನಾದ ಅವನು ಭಾರ್ಯೆಯ ಸಹಿತ ವನವಾಸವನ್ನು ಅನುಭವಿಸಿದನು ಎಂದು ಕೇಳಿದ್ದೇವೆ. ವನದಲ್ಲಿ ವಾಸಿಸುತ್ತಿದ್ದ ಆ ರಾಜನಿಗೆ ಯಾವುದೇರೀತಿಯ ಸಹಾಯಗಳಿರಲಿಲ್ಲ: ಅಶ್ವಗಳಿರಲಿಲ್ಲ, ರಥವಿರಲಿಲ್ಲ, ಸಹೋದರರಿರಲಿಲ್ಲ, ಬಾಂಧವರಿರಲಿಲ್ಲ. ನೀನಾದರೂ ದೇವಸಮ್ಮಿತ ವೀರ ಭ್ರಾತೃಗಳಿಂದ ಮತ್ತು ಬ್ರಹ್ಮಕಲ್ಪರಾದ ದ್ವಿಜಾಗ್ರರಿಂದ ಸುತ್ತುವರೆದಿದ್ದೀಯೆ. ನೀನು ಶೋಕಿಸುವುದು ಸರಿಯಲ್ಲ.”

ಯುಧಿಷ್ಠಿರನು ಹೇಳಿದನು: “ಸುಮಹಾತ್ಮ ನಳನ ಚರಿತವನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ. ಶ್ರೇಷ್ಠನಾದ ನೀನು ನನಗೆ ಆ ಕಥೆಯನ್ನು ಹೇಳುವಂಥವನಾಗು.” ಆಗ ಬೃಹದಶ್ವನು ಯುಧಿಷ್ಠಿರನಿಗೆ ನಲೋಪಾಽಖ್ಯಾನವನ್ನು ಹೇಳಿದನು.

ಬೃಹದಶ್ವನು ಹೇಳಿದನು: “ರಾಜೇಂದ್ರ! ನೀನೂ ಕೂಡ ಸುಹೃದಯರೊಡಗೂಡಿ ಶೀಘ್ರದಲ್ಲಿಯೇ ಇದರಿಂದ ಹೊರಬರುತ್ತೀಯೆ. ಪರಪುರಂಜಯ ನಳನು ಈ ರೀತಿ ದ್ಯೂತದಿಂದ ಪತ್ನಿಯೊಡನೆ ದುಃಖಗಳನ್ನು ಅನುಭವಿಸಿದನು. ಏಕಾಕಿಯಾಗಿದ್ದರೂ ನಳನು ಘೋರ ದುಃಖವನ್ನು ಅನುಭವಿಸಿ ಪುನಃ ಅಭ್ಯುದಯವನ್ನು ಹೊಂದಿದನು. ನೀನಾದರೂ ಬ್ರಾತೃ ಮತ್ತು ಕೃಷ್ಣೆಯ ಸಹಿತ ಇದ್ದೀಯೆ. ಈ ಮಹಾರಣ್ಯದಲ್ಲಿ ಧರ್ಮದ ಕುರಿತು ಮಾತ್ರ ಚಿಂತಿಸುತ್ತಾ ಆನಂದವಾಗಿರು. ವೇದ-ವೇದಾಂಗ ಪಾರಗರಾದ ಈ ಮಹಾಭಾಗ ಬ್ರಾಹ್ಮಣರೊಡನೆ ನಿತ್ಯವೂ ವಾಸಿಸುತ್ತಿರುವ ರಾಜನಿಗೆ ಪರಿವೇದನೆ ಏನು? ಈ ಇತಿಹಾಸವು ಕಲಿಯನ್ನು ನಾಶಮಾಡುತ್ತದೆ ಎನ್ನುತ್ತಾರೆ. ವಿಶಾಂಪತೇ! ಇದನ್ನು ಕೇಳಿದ ನಿನ್ನಂಥವರಿಗೆ ಅಶ್ವಾಸನೆಯನ್ನು ನೀಡಲೂ ಶಕ್ಯವಿದೆ. ಮನುಷ್ಯನ ಭಾಗ್ಯದ ಅಸ್ಥಿರತೆಯನ್ನು ನಿತ್ಯವೂ ಸ್ಮರಿಸುತ್ತಾ ಅದರ ಆಗು-ಹೋಗುಗಳನ್ನು ಸಮನಾಗಿ ಕಾಣು. ದುಃಖಿಸಬೇಡ. ನಳನ ಈ ಮಹತ್ ಚರಿತೆಯನ್ನು ಯಾರು ಕಥನ ಮತ್ತು ಸದಾ ಶ್ರವಣ ಮಾಡುತ್ತಾನೋ ಅವನಿಗೆ ಅಲಕ್ಷ್ಮಿಯಾಗುವುದಿಲ್ಲ. ಸಂಪತ್ತು ಅವನ ಬಳಿಗೆ ಹರಿದು ಬರುತ್ತದೆ ಮತ್ತು ಅವನು ಧನವಂತನಾಗುತ್ತಾನೆ. ಪುರಾತನ ಈ ಉತ್ತಮ ಇತಿಹಾಸವನ್ನು ಕೇಳಿದರೆ, ಪುತ್ರರು, ಪೌತ್ರರು, ಪಶುಗಳು ಮತ್ತು ನರರಲ್ಲಿ ಅಗ್ರಸ್ಥಾನವನ್ನು ಹೊಂದುತ್ತಾರೆ ಮತ್ತು ಆರೋಗ್ಯ-ಪ್ರೀತಿಗಳನ್ನು ಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅಕ್ಷಜ್ಞನಿಂದ ಪುನಃ ನೀನು ಪರಾಜಯಗೊಳ್ಳುವೆ ಎನ್ನುವ ನಿನ್ನ ಈ ಭಯವನ್ನು ನಾನು ನಿವಾರಿಸುತ್ತೇನೆ. ನಾನು ಅಕ್ಷಹೃದಯವನ್ನು ಪರಿಪೂರ್ಣವಾಗಿ ತಿಳಿದಿದ್ದೇನೆ. ನನ್ನಿಂದ ತಿಳಿದುಕೊ. ನಿನಗೆ ಹೇಳಲು ನನಗೆ ಸಂತೋಷವಾಗುತ್ತದೆ.”

ನಂತರ ಹೃಷ್ಟಮನಸ್ಕ ರಾಜನು ಬೃಹದಶ್ವನಿಗೆ ಹೇಳಿದನು: “ಭಗವನ್! ನಿನ್ನಿಂದ ಅಕ್ಷಹೃದಯವನ್ನು ತಿಳಿಯಲು ಇಚ್ಛಿಸುತ್ತೇನೆ.” ನಂತರ ಬೃಹದಶ್ವನು ಮಹಾತ್ಮ ಪಾಂಡವನಿಗೆ ಅಕ್ಷಹೃದಯವನ್ನು ಕೊಟ್ಟನು. ಹೀಗೆ ಕೊಟ್ಟು ಆ ಮಹಾತಪನು ಸ್ನಾನಕ್ಕೆಂದು ಅಶ್ವಶಿರಕ್ಕೆ ತೆರಳಿದನು.

ಬೃಹದಶ್ವನು ಹೋದ ನಂತರ ದೃಢವೃತ ಪಾರ್ಥನು ಅಲ್ಲಲ್ಲಿ ತೀರ್ಥ-ಶೈಲಗಳಿಂದ ಬಂದು ಸೇರಿದ್ದ ತಪಸ್ವಿ ಬ್ರಾಹ್ಮಣರಿಂದ ಸವ್ಯಸಾಚಿಯು ವರ್ತಮಾನದಲ್ಲಿ ಕೇವಲ ವಾಯುವನ್ನು ಸೇವಿಸುತ್ತಾ ಉಗ್ರ ತಪಸ್ಸಿನಲ್ಲಿ ನಿರತನಾಗಿದ್ದಾನೆ; ಮಹಾಬಾಹುರ್ದರ ಪಾರ್ಥನು ಪೂರ್ವದಲ್ಲಿ ಯಾರೂ ನೋಡಿದರದಂಥ ಉಗ್ರತಪಸ್ಸನ್ನು ತಪಿಸುತ್ತಿದ್ದಾನೆ; ಶ್ರಿಮಾನ್ ಧರ್ಮ ವಿಗ್ರಹನಂತೆ ಪಾರ್ಥ ಧನಂಜಯನು ನಿಯತವ್ರತ ತಪಸ್ವಿ ಮತ್ತು ಒಂಟಿ ಮುನಿಯಾಗಿದ್ದಾನೆ ಎಂದು ಕೇಳಿದನು. ಮಹಾರಣ್ಯದಲ್ಲಿ ಪಾಂಡವನು ತಪಸ್ಸುಮಾಡುತ್ತಿರುವುದನ್ನು ಕೇಳಿ ಕೌಂತೇಯನು ತನ್ನ ಪ್ರಿಯ ಭ್ರಾತಾ ಜಯನನ್ನು ಕುರಿತು ಶೋಕಿಸಿದನು.

ಅರ್ಜುನನಿಗಾಗಿ ದ್ರೌಪದಿಯೊಡನೆ ಪಾಂಡವರ ಸಂವಾದ

ಆ ಸವ್ಯಸಾಚಿ ಪಾಂಡವನು ಕಾಮ್ಯಕದಿಂದ ಹೊರಟುಹೋದ ನಂತರ ಆ ಕೌರವರು ದುಃಖ ಮತ್ತು ಶೋಕದಲ್ಲಿ ಮುಳುಗಿಹೋದರು. ಆ ಎಲ್ಲ ಪಾಂಡವರೂ ದಾರ ಕಡಿದ ಮಣಿಗಳಂತೆ ಅಥವಾ ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿಗಳಂತೆ ಅಪ್ರೀತಮನಸ್ಕರಾಗಿದ್ದರು. ಅಕ್ಲಿಷ್ಟಕರ್ಮಣಿಯನ್ನು ಕಳೆದುಕೊಂಡ ಆ ವನವು ಕುಬೇರನನ್ನು ಕಳೆದುಕೊಂಡ ಚೈತ್ರರಥದಂತೆ ಆಗಿತ್ತು. ಆ ಪುರುಷವ್ಯಾಘ್ರನಿಲ್ಲದೇ ಪಾಂಡವರು ಕಾಮ್ಯಕದಲ್ಲಿ ಸಂತೋಷವೇ ಇಲ್ಲದೇ ವಾಸಿಸುತ್ತಿದ್ದರು. ಆ ಪರಾಕ್ರಾಂತ ಮಹಾರಥರು ಬಾಹ್ಮಣರಿಗೋಸ್ಕರ ಬಹುವಿಧದ ಮೇದ್ಯ ಮೃಗಗಳನ್ನು ಶುದ್ಧ ಬಾಣಗಳಿಂದ ಸಂಹರಿಸಿಸುತ್ತಿದ್ದರು. ನಿತ್ಯವೂ ಆ ಪುರುಷವ್ಯಾಘ್ರ ಅರಿಂದಮರು ವನದಲ್ಲಿ ದೂರ ದೂರ ಹೋಗಿ ಆಹಾರಗಳನ್ನು ತಂದು ಬ್ರಾಹ್ಮಣರಿಗೆ ನಿವೇದಿಸುತ್ತಿದ್ದರು. ಹೀಗೆ ಧನಂಜಯನು ಹೊರಟು ಹೋದ ನಂತರ ಆ ಪುರುಷರ್ಷಭರು ಖುಷಿಯೇ ಇಲ್ಲದೇ ಅಹೃಷ್ಠಮನಸ್ಕರಾಗಿ ಅಲ್ಲಿ ವಾಸಿಸುತ್ತಿದ್ದರು. ಆಗ ಪಾಂಚಾಲಿಯು ಜೊತೆಯಲ್ಲಿ ಇಲ್ಲದ ತನ್ನ ಮಧ್ಯಮ ಪತಿ ವೀರನನ್ನು ಸ್ಮರಿಸುತ್ತಾ ಪಾಂಡವಶ್ರೇಷ್ಠನಿಗೆ (ಹಿರಿಯ ಪಾಂಡವನಿಗೆ) ಈ ಮಾತುಗಳನ್ನು ಹೇಳಿದಳು: “ಪಾಂಡವಶ್ರೇಷ್ಠ! ಬಹುರ್ಬಾಹು ಅರ್ಜುನನ ಸರಿಸಮನಾದ ಆ ದ್ವಿಬಾಹು ಅರ್ಜುನನಿಲ್ಲದೇ ಈ ವನವು ನನಗೆ ಹಿಡಿಸುತ್ತಿಲ್ಲ. ಈ ಮಹಿಯು ಎಲ್ಲೆಡೆಯಲ್ಲಿಯೂ ಶೂನವಾಗಿ ಕಾಣುತ್ತಿದೆ. ಕುಸುಮ ದ್ರುಮಗಳಿಂದ ಕೂಡಿದ ಬಹು ಆಶ್ಚರ್ಯದಾಯಕ ಈ ವನವೂ ಕೂಡ ಸವ್ಯಸಾಚಿಯು ಇಲ್ಲದಿದರಿಂದ ರಮಣೀಯವಾಗಿ ತೋರುತ್ತಿಲ್ಲ. ಮಳೆಯ ಮೋಡಗಳಂತೆ ಕತ್ತಲೆಯಿಂದೊಡಗೂಡಿದ, ಮತ್ತಮಾತಂಗಗಳಿಂದೊಡಗೂಡಿದ ಈ ಕಾಮ್ಯಕವು ಆ ಪುಂಡರೀಕಾಕ್ಷನಿಲ್ಲದೇ ಸಂತಸವನ್ನು ಕೊಡುತ್ತಿಲ್ಲ. ಯಾರ ಧನುರ್ಘೋಷವು ಸಿಡಿಲಿನಂತೆ ಕೇಳಿಬರುತ್ತಿತ್ತೋ ಆ ಸವ್ಯಸಾಚಿಯನ್ನು ಸ್ಮರಿಸುತ್ತಿರುವ ನನಗೆ ಆಸರೆಯೇ ಇಲ್ಲದಂತಾಗಿದೆ.”

ಈ ರೀತಿ ಲಲಾಪಿಸುತ್ತಿರುವ ದ್ರೌಪದಿಯನ್ನು ಕುರಿತು ಶತ್ರುವೀರರ ಸಂಹಾರಿ ಭೀಮಸೇನನು ಹೇಳಿದನು: “ಸುಮದ್ಯಮೇ! ನೀನು ಏನನ್ನು ಹೇಳುತ್ತಿದ್ದೇಯೋ ಅದು ನನ್ನ ಮನಸ್ಸನ್ನು ಸಂತಸಗೊಳಿಸುತ್ತಿದೆ ಮತ್ತು ನನ್ನ ಹೃದಯಕ್ಕೆ ಅಮೃತದ ರುಚಿಯನ್ನು ಇತ್ತಹಾಗೆ ಆಗಿದೆ. ಅವನ ಎರಡೂ ಭುಜಗಳು ಉದ್ದವಾಗಿದ್ದವು, ನುಣುಪಾಗಿದ್ದವು ಮತ್ತು ಪರಿಘದಂತೆ ದಷ್ಟಪುಷ್ಟವಾಗಿದ್ದವು, ಬಿಲ್ಲು, ಖಡ್ಗ, ಮತ್ತು ಗಧಾಯುಧಗಳನ್ನು ಹಿಡಿದ ಗುರುತುಗಳಿದ್ದವು, ಹಾಗೂ ಮೇಲ್ತೋಳಿನ ಬಿಗಿಯಾದ ಬಳೆಗಳಿಂದ ಕೂಡಿದವುಗಳಾಗಿ ಐದು ತಲೆಯ ನಾಗನಂತೆ ತೋರುತ್ತಿದ್ದವು. ಅಂತಹ ಪುರುಷವ್ಯಾಘ್ರನಿಲ್ಲದೇ ಈ ವನವು ತನ್ನ ಸೂರ್ಯನನ್ನು ಕಳೆದುಕೊಂಡಂತಿದೆ. ಪಾಂಚಾಲರು ಮತ್ತು ಕುರುಗಳು ಆ ಮಹಾಬಾಹುವಿನ ಆಶ್ರಯದಲ್ಲಿಯೇ ಇದ್ದಾರೆ ಮತ್ತು ಅವನ ಎದಿರು ಸುರರನ್ನು ತಂದು ಕೂಡಿಸಿದರೂ ಹಿಂಜರಿಯುವವನಲ್ಲ. ನಾವೆಲ್ಲರೂ ಆ ಮಹಾತ್ಮನ ಬಾಹುಗಳಲ್ಲಿ ಆಶ್ರಯವನ್ನು ಪಡೆದಿದ್ದೆವು ಮತ್ತು ಶತ್ರುಗಳನ್ನು ಯದ್ಧದಲ್ಲಿ ಗೆದ್ದು ಮೇದಿನಿಯನ್ನು ಪಡೆಯುವ ಯೋಚನೆಯಲ್ಲಿದ್ದೆವು. ವೀರ ಫಾಲ್ಗುನನಿಲ್ಲದೇ ಕಾಮ್ಯಕದಲ್ಲಿ ಮನಸ್ಸಿಲ್ಲ ಮತ್ತು ಈ ಮಹಿಯ ಎಲ್ಲೆಡೆ ನೋಡಿದರೂ ಖಾಲಿ ಖಾಲಿ ಕಾಣಿಸುತ್ತಿದೆ.”

ನಕುಲನು ಹೇಳಿದನು: “ರಾಜನ್! ಆ ಶ್ರೀಮಾನ್ ವಾಸವಿಯು ಉತ್ತರದಿಶೆಯಲ್ಲಿ ಹೋಗಿ ಮಹಾಬಲರನ್ನು ಯುದ್ಧದಲ್ಲಿ ಗೆದ್ದು ಅಕಲ್ಮಶ ತಿತ್ತಿರಿ ಬಣ್ಣದ, ವಾಯುವಿನಷ್ಟೇ ವೇಗಗಳುಳ್ಳ ನೂರಾರು ಗಂಧರ್ವ ಹಯಗಳನ್ನು ಪಡೆದು ರಾಜಸೂಯ ಮಹಾಕ್ರತುವಿನಲ್ಲಿ ತನ್ನ ಪ್ರಿಯ ಅಣ್ಣನಿಗೆ ಪ್ರೇಮದಿಂದ ಒಪ್ಪಿಸಿದನು. ಭೀಮಧನುಸ್ಸನ್ನು ಹಿಡಿದ, ಅಮರರ ಸಮಾನ, ಭೀಮಸೇನನ ಅನುಜನಿಲ್ಲದೇ ಈ ಕಾಮ್ಯಕದಲ್ಲಿ ವಾಸಿಸಲು ಇಷ್ಟವಾಗುತ್ತಿಲ್ಲ.”

ಸಹದೇವನು ಹೇಳಿದನು: “ಹಿಂದೆ ಅವನು ಯುದ್ಧದಲ್ಲಿ ಮಹಾರಥಿಗಳನ್ನು ಗೆದ್ದು ಧನ-ಕನ್ಯೆಯರನ್ನು ತಂದು ಮಹಾಕ್ರತು ರಾಜಸೂಯದಲ್ಲಿ ರಾಜನಿಗೆ ಸಮರ್ಪಿಸಿದನು. ಆ ಅಮಿತದ್ಯುತಿಯು ವಾಸುದೇವನ ಸಮ್ಮತಿಯಂತೆ ಸೇರಿರುವ ಯಾದವರನ್ನೆಲ್ಲಾ ಒಬ್ಬನೇ ಯುದ್ಧದಲ್ಲಿ ಗೆದ್ದು ಸುಭದ್ರೆಯನ್ನು ಅಪಹರಿಸಿಕೊಂಡು ಬಂದ. ನಮ್ಮ ಈ ನಿವೇಶನದಲ್ಲಿ ಆ ಜಿಷ್ಣುವಿನ ಬರಿದಾದ ಹಾಸಿಗೆಯನ್ನು ನೋಡಿ ನನ್ನ ಹೃದಯಕ್ಕೆ ಶಾಂತಿಯೇ ಇಲ್ಲವಾಗಿದೆ. ಈ ವನದಲ್ಲಿ ಇನ್ನು ವಾಸಿಸಬಾರದು ಎಂದು ನನ್ನ ಯೋಚನೆ. ಯಾಕೆಂದರೆ ಆ ವೀರನಿಲ್ಲದೆ ಈ ವನವು ನಮಗೆಲ್ಲರಿಗೂ ರಮಣೀಯವೆನಿಸುತ್ತಿಲ್ಲ.”

Leave a Reply

Your email address will not be published. Required fields are marked *