ಯಕ್ಷಯುದ್ಧ
ರಾಕ್ಷಸ ಜಟಾಸುರನನ್ನು ಕೊಂದನಂತರ ಪ್ರಭು ರಾಜ ಕೌಂತೇಯನು ಪುನಃ ನಾರಾಯಣಾಶ್ರಮಕ್ಕೆ ಹೋಗಿ ಅಲ್ಲಿ ವಾಸಿಸತೊಡಗಿದನು. ಒಂದು ದಿನ ಅವನು ದ್ರೌಪದಿಯ ಸಹಿತ ಎಲ್ಲ ತಮ್ಮಂದಿರನ್ನೂ ಸೇರಿಸಿ, ತಮ್ಮ ಜಯನನ್ನು ನೆನಪಿಸಿಕೊಳ್ಳುತ್ತಾ ಹೇಳಿದನು: “ನಾವು ವನದಲ್ಲಿ ಸಂತೋಷದಿಂದ ತಿರುಗಾಡುತ್ತಾ ನಾಲ್ಕು ವರ್ಷಗಳು ಕಳೆದು ಹೋದವು. ಐದನೆಯ ವರ್ಷದಲ್ಲಿ ತನ್ನ ಉದ್ದೇಶಗಳನ್ನು ಪೂರೈಸಿದ ನಂತರ ಪರ್ವತರಾಜ, ಶ್ರೇಷ್ಠ ಶ್ವೇತಶಿಖರಕ್ಕೆ ಬೀಭತ್ಸುವು ಬರುವವನಿದ್ದಾನೆ. ನಾವೂ ಕೂಡ ಅವನನ್ನು ಭೇಟಿಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿರಬೇಕು. ಅಮಿತ ತೇಜಸ್ವಿ ಪಾರ್ಥನು ಐದು ವರ್ಷಗಳ ಕಾಲ ವಿದ್ಯಾರ್ಥಿಯಾಗಿ ವಾಸಿಸುತ್ತೇನೆ ಎಂದು ನನ್ನೊಂದಿಗೆ ಹಿಂದೆ ಮಾತುಕೊಟ್ಟಿದ್ದ. ಅಲ್ಲಿ ನಾವು ದೇವಲೋಕದಿಂದ ಅಸ್ತ್ರಗಳನ್ನು ಪಡೆದು ಈ ಲೋಕಕ್ಕೆ ಹಿಂದಿರುಗುವ ಅರಿಂದಮ ಗಾಂಡೀವಧನ್ವಿಯನ್ನು ನೋಡುತ್ತೇವೆ.” ಹೀಗೆ ಹೇಳಿ ಪಾಂಡವನು ಎಲ್ಲ ಬ್ರಾಹ್ಮಣರನ್ನೂ ಕರೆದು ಆ ತಪಸ್ವಿಗಳಿಗೆ ಕಾರಣವನ್ನು ತಿಳಿಸಿ ಅವರೊಂದಿಗೆ ಆಲೋಚಿಸಿದನು. ಪಾರ್ಥನು ಆ ಉಗ್ರತಪಸ್ವಿಗಳಿಗೆ ಪ್ರದಕ್ಷಿಣೆ ಮಾಡಲು ಅವರು ಸಂತೋಷಗೊಂಡು ಅದು ಮಂಗಳಕರವೂ ಕುಶಲವೂ ಆದುದೆಂದು ಅನುಮೋದಿಸಿದರು: “ಭರತರ್ಷಭ! ಕಷ್ಟಗಳು ಬೇಗನೇ ಸುಖಗಳಾಗಿ ಫಲಿಸುತ್ತವೆ. ಕ್ಷಾತ್ರಧರ್ಮದ ಪ್ರಕಾರ ನಡೆದು ನೀನು ಈ ಭೂಮಿಯನ್ನು ಪರಿಪಾಲಿಸುತ್ತೀಯೆ!”
ಆಗ ರಾಜ ಪರಂತಪನು ತಪಸ್ವಿಗಳ ಮಾತನ್ನು ಸ್ವೀಕರಿಸಿ, ವಿಪ್ರರು ಮತ್ತು ತಮ್ಮಂದಿರೊಂದಿಗೆ, ದ್ರೌಪದಿಯನ್ನೊಡಗೂಡಿ, ಘಟೋತ್ಕಚನೇ ಮೊದಲಾದ ರಾಕ್ಷಸರು ಹಿಂಬಾಲಿಸಿ ಬರುತ್ತಿರಲು, ಲೋಮಶನ ರಕ್ಷಣೆಯಲ್ಲಿ ಹೊರಟನು. ಕೆಲವು ದೂರ ಕಾಲ್ನಡಿಗೆಯಲ್ಲಿ ಹೋದರೆ, ಇನ್ನು ಕೆಲವು ದೂರ ಅಲ್ಲಲ್ಲಿ ಆ ಮಹಾತೇಜಸ್ವಿ ಸುವ್ರತನು ಸಹೋದರರೊಂದಿಗೆ ರಾಕ್ಷಸರನ್ನೇರಿ ಪ್ರಯಾಣಿಸಿದರು. ಅನಂತರ ತನ್ನ ಬಹಳ ಕಷ್ಟಗಳ ಕುರಿತು ಚಿಂತಿಸುತ್ತಾ ರಾಜ ಯುಧಿಷ್ಠಿರನು ಸಿಂಹ, ಹುಲಿ ಮತ್ತು ಆನೆಗಳ ಗುಂಪುಗಳಿಂದ ಕೂಡಿದ ಉತ್ತರ ದಿಕ್ಕಿಗೆ ಪ್ರಯಾಣಿಸಿದನು. ಕೈಲಾಸ ಮತ್ತು ಮೈನಾಕ ಪರ್ವತಗಳನ್ನು, ಗಂಧಮಾದನ ಪರ್ವತದ ಬುಡವನ್ನೂ, ಕಲ್ಲುಬಂಡೆಗಳ ರಾಶಿಯಂತಿರುವ ಮೇರುಪರ್ವತದ ಶಿಖರವನ್ನೂ, ಮಂಗಳಕರ ನದಿಗಳನ್ನೂ ನೋಡುತ್ತಾ ಹದಿನೇಳನೇ ದಿನದಲ್ಲಿ ಪುಣ್ಯ ಹಿಮಾಲಯದ ತಪ್ಪಲಿಗೆ ಬಂದನು. ಗಂಧಮಾದನದ ಹತ್ತಿರ ಹಿಮಾಲಯದ ಮಡಿಲಲ್ಲಿ ಹರಿಯುತ್ತಿರುವ ಪುಣ್ಯ ನದಿಯ ಅಂಚಿನಲ್ಲಿ ಹುಟ್ಟಿದ ನಾನಾ ದ್ರುಮ-ಲತೆಗಳಿಂದ ಸುತ್ತುವರೆಯಲ್ಪಟ್ಟ, ವೃಷಪರ್ವನ ಪುಣ್ಯಕರ ಆಶ್ರಮವನ್ನು ಪಾಂಡವರು ಕಂಡರು. ಅರಿಂದಮ ಪಾಂಡವರು ರಾಜರ್ಷಿ ವೃಷಪರ್ವನಲ್ಲಿಗೆ ಹೋಗಿ ಅವನನ್ನು ಅಭಿನಂದಿಸಿ ಅಲ್ಲಿ ಆಯಾಸವನ್ನು ಕಳೆದುಕೊಂಡರು. ಆ ರಾಜರ್ಷಿಯು ಭರತರ್ಷಭರನ್ನು ಮಕ್ಕಳಂತೆ ಬರಮಾಡಿಕೊಂಡನು ಮತ್ತು ಆ ಅರಿಂದಮರು ಅಲ್ಲಿ ಸತ್ಕೃತರಾಗಿ ಏಳುರಾತ್ರಿಗಳು ತಂಗಿದರು. ಎಂಟನೇ ದಿನಬಂದಾಗ ಆ ಲೋಕವಿಶ್ರುತ ಋಷಿ ವೃಷಪರ್ವನೊಂದಿಗೆ ವಿಚಾರಮಾಡಿ ಪ್ರಯಾಣ ಬೆಳೆಸಲು ನಿರ್ಧರಿಸಿದರು. ಹಿಂದಿರುಗಿ ಬರುವವರೆಗೆ ಪ್ರತಿಯೊಬ್ಬ ಬ್ರಾಹ್ಮಣನನ್ನೂ ನೆಂಟರಂತೆ ಸತ್ಕೃತರನ್ನಾಗಿಸಿ ಇಟ್ಟುಕೊಳ್ಳಲು ಅವರನ್ನು ವೃಷಪರ್ವನಿಗೆ ಒಪ್ಪಿಸಿದರು. ಅನಂತರ ಪಾಂಡವರು ತಮ್ಮ ಉತ್ತಮ ಉಡುಪುಗಳನ್ನೂ ಸುಂದರ ಆಭರಣಗಳನ್ನೂ ವೃಷಪರ್ವನ ಆ ಆಶ್ರಮದಲ್ಲಿ ಇರಿಸಿದರು. ಭೂತ-ಭವಿಷ್ಯಗಳನ್ನು ಅರಿತಿದ್ದ, ಕುಶಲನೂ ಸರ್ವಧರ್ಮವಿದುವೂ ಆದ ಆ ಧರ್ಮಜ್ಞನು ಮಕ್ಕಳಂತಿದ್ದ ಭರತರ್ಷಭರಿಗೆ ಉಪದೇಶ ನೀಡಿದನು. ಅವನಿಂದ ಬೀಳ್ಕೊಂಡು ಆ ಮಹಾತ್ಮ ವೀರರು ಕೃಷ್ಣೆಯೊಂದಿಗೆ ಮತ್ತು ಮಹಾತ್ಮ ಬ್ರಾಹ್ಮಣರೊಂದಿಗೆ ಉತ್ತರ ದಿಕ್ಕಿನಲ್ಲಿ ಹೊರಟರು. ಮಹೀಪತಿ ವೃಷಪರ್ವನು ಪಾಂಡವರನ್ನು ಮಹಾತೇಜಸ್ವಿ ಬ್ರಾಹ್ಮಣರಿಗೆ ಒಪ್ಪಿಸಿ ಆ ಕೌಂತೇಯರನ್ನು ತನ್ನ ಶುಭ ಆಶೀರ್ವಾದಗಳೊಂದಿಗೆ ಅನುಸಂಧಿಸಿ, ಹೊರಟ ಅವರನ್ನು ಹಿಂಬಾಲಿಸಿ ಅವರಿಗೆ ದಾರಿಯನ್ನು ತೋರಿಸಿ ಹಿಂದಿರುಗಿದನು.
ಸತ್ಯವಿಕ್ರಮ ಕೌಂತೇಯ ಯುಧಿಷ್ಠಿರನು ತನ್ನ ತಮ್ಮಂದಿರೊಡನೆ ನಾನಾ ಮೃಗಗಣಗಳಿಂದ ಕೂಡಿದ ದಾರಿಯನ್ನು ಹಿಡಿದನು. ನಾನಾ ವೃಕ್ಷಗಳಿಂದ ಸುತ್ತುವರೆಯಲ್ಪಟ್ಟ ಗಿರಿಕಂದರಗಳಲ್ಲಿ ತಂಗುತ್ತಾ ನಾಲ್ಕನೆಯ ದಿನ ಪಾಂಡವರು ಶ್ವೇತ ಪರ್ವತಕ್ಕೆ ಬಂದರು. ಆ ಶುಭ ಶೈಲವು ಮಹಾ ಮೋಡದಂತೆ ತೋರುತ್ತಿತ್ತು. ಯಥೇಚ್ಛ ನೀರಿನಿಂದ ತುಂಬಿತ್ತು. ಮಣಿಕಾಂಚನಗಳಿಂದ ಸುಂದರವಾಗಿತ್ತು ಮತ್ತು ಅನೇಕ ಶಿಖರಗಳನ್ನು ಹೊಂದಿತ್ತು. ವೃಶಪರ್ವನು ಹೇಳಿದ್ದ ದಾರಿಯನ್ನೇ ಹಿಡಿದು ವಿವಿಧ ಪರ್ವತಗಳನ್ನು ನೋಡುತ್ತಾ ಸುಖದಿಂದ ಇನ್ನೂ ಮೇಲಿನ ಪರ್ವತಗಳನ್ನು, ಪರಮ ದುರ್ಗಮ ಗುಹೆಗಳನ್ನೂ, ಬಹಳಷ್ಟು ದುರ್ಗಗಳನ್ನೂ ದಾಟಿ ಮುಂದುವರೆದರು. ಧೌಮ್ಯ, ಕೃಷ್ಣೆ, ಪಾರ್ಥರು, ಮತ್ತು ಮಹಾನೃಷಿ ಲೋಮಶ ಒಟ್ಟಿಗೆ ಅಲ್ಲಿಯವರೆಗೆ ಏನೂ ಆಯಾಸವಿಲ್ಲದೇ ಬಂದರು. ಆ ಮಹಾವೀರರು ಮೃಗಪಕ್ಷಿಗಳಿಂದ ಕೂಡಿದ್ದ, ನಾನಾ ಪಕ್ಷಿ ಸಂಕುಲಗಳಿಂದ ಕೂಡಿದ್ದ, ರೆಂಬೆಯಿಂದ ರೆಂಬೆಗೆ ಹಾರುತ್ತಿದ್ದ ಮಂಗಗಳ ಗುಂಪುಗಳಿಂದ ಕೂಡಿದ್ದ, ಸುಮನೋಹರವಾದ, ಪುಣ್ಯ ಪದ್ಮಗಳಿಂದಿರುವ ಸರೋವರಗಳಿರುವ, ಮತ್ತು ದಟ್ಟ ಅರಣ್ಯದಿಂದ ಕೂಡಿದ್ದ ಮಹಾಗಿರಿ ಮಾನ್ಯವಂತವನ್ನು ತಲುಪಿದರು. ಅನಂತರ ಕಿಂಪುರುಷರ ವಾಸಸ್ಥಾನವಾದ, ಸಿದ್ಧಚಾರಣರು ಸೇವಿಸುವ ಗಂಧಮಾದನ ಪರ್ವತವನ್ನು ನೋಡಿ, ಅವರ ರೋಮಗಳು ನಿಮಿರಿ ನಿಂತವು. ಅಲ್ಲಿ ವಿಧ್ಯಾಧರರು ಮತ್ತು ಕಿನ್ನರಿಯರು ಅಲೆದಾಡುತ್ತಿದ್ದರು. ಆನೆ ಸಿಂಹಗಳ ಹಿಂಡುಗಳು, ಮತ್ತೇರಿದ ಶರಭಗಳು, ಮೃದುನಿನಾದಗೈಯುವ ಇನ್ನೂ ಇತರ ಮೃಗಗಳಿಂದ ಕೂಡಿದ್ದ ಆ ಗಂಧಮಾದನ ವನವು ನಂದನವನದಂತಿತ್ತು. ಪಾಂಡುವಿನ ವೀರ ಮಕ್ಕಳು ಮನಸ್ಸು-ಹೃದಯಗಳಿಗೆ ಆನಂದ ನೀಡುವ ಆ ಶುಭ ಅರಣ್ಯ ಕಾನನವನ್ನು ಸಂತೋಷದಿಂದ ಕ್ರಮೇಣವಾಗಿ ಪ್ರವೇಶಿಸಿದರು.
ದ್ರೌಪದಿ ಮತ್ತು ಮಹಾತ್ಮ ಬ್ರಾಹ್ಮಣರೊಂದಿಗೆ ಆ ವೀರರು ಪ್ರೀತಿಯನ್ನು ಹುಟ್ಟಿಸುವ, ಸಿಹಿಯಾದ, ಮಧುರವಾದ, ಶುಭವಾದ, ಕಿವಿತುಂಬುವ, ಸುಮಧುರ ಹಕ್ಕಿಗಳ ನಿನಾದಗಳನ್ನು ಕೇಳಿದರು. ಹಣ್ಣುಗಳ ಭಾರದಿಂದ ಬಗ್ಗಿರುವ ಎಲ್ಲ ಕಾಲಗಳಲ್ಲಿಯೂ ಹಣ್ಣುಗಳಿಂದ ತುಂಬಿರುವ, ಎಲ್ಲ ಕಾಲಗಳಲ್ಲಿಯೂ ಹೂವುಗಳಿಂದ ತುಂಬಿರುವ ಮರಗಳನ್ನು –ಮಾವು, ಆಮ್ರತಕ (ಹಲಸು), ತೆಂಗು, ತಿಂದುಕ, ಮುಂಜಾತಕ, ಮಾದಲ, ಅಂಜೂರ, ದಾಳಿಂಬೆ, ಸೀಬೆ, ಖರ್ಜೂರ, ದ್ರಾಕ್ಷಿ, ಹುಣಿಸೆ, ನಿಂಬೆ, ಬೇವು, ಬಿಲ್ವ, ಕಪಿತ್ಥ (ಬೇಲ), ನೇರಳೆ, ಪಾರಾವತ, ಕಾಶ್ಮರೀ, ಬದರೀ, ಪ್ಲಕ್ಷ, ಉದುಂಬರ (ಅತ್ತಿ), ಆಲ, ಅಶ್ವತ್ಥ, ಕ್ಷೀರಿಕ, ಭಲ್ಲತಕ, ಆಮಲಕ (ನೆಲ್ಲಿ), ಹರೀತಕ, ಬಿಭೀತಕ, ಇಂಗುದ, ತಿಂದುಕ, ಕರಮರ್ತ ಇವೇ ಮೊದಲಾದ ನಾನಾಜಾತಿಯ ಅಮೃತಸದೃಶ ಫಲಭರಿತ ಮರಗಿಡಗಳನ್ನು ಆ ಗಂಧಮಾದನ ಪರ್ವತದ ಕಣಿವೆಗಳಲ್ಲಿ ನೋಡಿದರು. ಹಾಗೆಯೇ ಹೂಗಳಿಂದ ತುಂಬಿದ ಚಂಪಕ, ಅಶೋಕ, ಪುನ್ನಾಗ, ಕೇದಗೆ, ವಕುಲ, ಸಪ್ತಪರ್ಣ, ಕರ್ಣಿಕಾರ, ಪಾಟಲ, ಕುಟಜ, ಮಂದಾರ, ಇಂದೀವರ, ಪಾರಿಜಾತ, ಕೋವಿದಾರ, ದೇವದಾರು, ಶಾಲ, ತಾಲ, ತಮಾಲ, ಪಿಪ್ಪಲ, ಹಿಂಗುಕ, ಶಾಲ್ಮಲೀ, ಕಿಂಶುಕ, ಶಿಂಶುಪ, ಸರಲ ಮುಂತಾದ ಸಾವಿರಾರು ಜಾತಿಯ ಪುಷ್ಪವೃಕ್ಷಗಳನ್ನೂ ನೋಡಿದರು. ಅಲ್ಲಿ ಅಗಣಿತ ಸಂಖ್ಯೆಯಲ್ಲಿದ್ದ ಚಕೋರ, ಶತಪತ್ರ, ಭೃಂಗರಾಜ, ಗಿಣಿ, ಕೋಕಿಲ, ಕಲವಿಂಡ (ಗುಬ್ಬಚ್ಚಿ), ಹಾರೀತ, ಜೀವಜೀವಕ, ಪ್ರಿಯಕ, ಜಾತಕ ಇವೇ ಮುಂತಾದ ಸುಮಧುರವಾಗಿ ಇಂಪಾಗಿ ನಿನಾದಗೈಯುತ್ತಿದ್ದ ನಾನಾಜಾತಿಯ ಪಕ್ಷಿಗಳನ್ನೂ ನೋಡಿದರು. ಮತ್ತು ಪ್ರಸನ್ನ ನೀರಿರುವ, ಕುಮುದ, ಬಿಳಿಯ ಕುಮುದಿಲೆ, ನೀಲಿ ಕುಮುದಿಲೆ, ಕೆಂಪು ಕುಮುದಿಲೆ ಮತ್ತು ಕಮಲಗಳಿಂದ ತುಂಬಿರುವ ವಿಚಿತ್ರ ಸರೋವರಗಳನ್ನು ಕಂಡರು. ಕದಂಬ, ಚಕ್ರವಾಕ, ಕುರ, ನೀರುಕೋಳಿ, ಕಾರಂಡ, ಪ್ಲವ, ಹಂಸ, ಕೌರ್ಮದಗಳು ಮತ್ತು ಇತರ ಜಲಪಕ್ಷಿಗಳು ಎಲ್ಲೆಡೆಯಲ್ಲಿಯೂ ತುಂಬಿಕೊಂಡಿದ್ದವು. ಆ ಸರೋವರಗಳಲ್ಲಿದ್ದ ಪುಷ್ಪಗಳ ಮಕರಂದವನ್ನು ಸವಿದು ಮದಿಸಿದ ದುಂಬಿಗಳು ಝೇಂಕಾರನಿನಾದಗಳನ್ನು ಮಾಡುತ್ತಿದ್ದವಲ್ಲದೇ, ಪದ್ಮಪುಷ್ಪಗಳ ಪರಾಗದಿಂದ ಆಚ್ಛಾದಿತವಾಗಿದ್ದ ದುಂಬಿಗಳು ಕೆಂಪಾಗಿಯೂ ಕಾಣುತ್ತಿದ್ದವು. ಅಂತಹ ಸುಂದರ ಅನೇಕಾನೇಕ ದೃಶ್ಯಗಳನ್ನು ನೋಡುತ್ತಾ ಪಾಂಡವರು ಪ್ರಯಾಣಿಸುತ್ತಿದ್ದರು. ಒಂದೆಡೆಯಲ್ಲಿ ಅವರು ನವಿಲುಗಳ ಸಮೂಹಗಳನ್ನು ಕಂಡರು. ಕೆಲವು ಗಂಡು ನವಿಲುಗಳು ಹೆಣ್ಣು ನವಿಲುಗಳೊಡನೆ ಸೇರಿ ಗುಡುಗಿನ ಶಬ್ಧವನ್ನು ಕೇಳಿ ಆನಂದದಿಂದ ಗರಿಗಳನ್ನು ಪ್ರಸರಿಸಿ ಹೃದಯಂಗಮವಾಗಿ ಕೂಗಿ ನೃತ್ಯವಾಡುತ್ತಿದ್ದವು. ಮತ್ತೆ ಕೆಲವು ನವಿಲುಗಳು ಮರದ ರೆಂಬೆಗಳ ಮೇಲೆಯೇ ಜಾಗರವಾಡುತ್ತಿದ್ದವು. ಅದನ್ನು ನೋಡಿದರೆ ವೃಕ್ಷಕ್ಕೆ ಕಿರೀಟವಿಟ್ಟಂತೆ ಕಾಣುತ್ತಿತ್ತು. ಮರಗಳ ಮಧ್ಯ ಮಧ್ಯದಲ್ಲಿ ಸಣ್ಣ ಸಣ್ಣ ಸರೋವರಗಳಿದ್ದವು. ಅವುಗಳಲ್ಲಿ ಸಿಂಧುವಾರಗಳೆಂಬ ನೀಳವಾದ ಕಮಲದ ಬಳ್ಳಿಗಳಿದ್ದವು. ಅವು ಮನ್ಮಥನ ಶೂಲಾಯುಧಗಳೋಪಾದಿಯಲ್ಲಿ ಕಾಣುತ್ತಿದ್ದವು. ಪರ್ವತ ಶಿಖರಗಳಲ್ಲಿ ಕರ್ಣಿಕಾರವೃಕ್ಷಗಳಿದ್ದು ಅವುಗಳ ಕುಸುಮಗಳು ಹೊಂಬಣ್ಣದಿಂದ ಪ್ರಕಾಶಿಸುತ್ತಿದ್ದವು ಮತ್ತು ಆ ಪುಷ್ಪಗಳು ದುಂಡಾಗಿದ್ದು ಪರ್ವತದ ಕರ್ಣಕುಂಡಲಗಳೋಪಾದಿಯಲ್ಲಿ ಪ್ರಕಾಶಿಸುತ್ತಿದ್ದವು.
ಮಾರ್ಗದಲ್ಲಿ ನಡೆದು ಹೋಗುತ್ತಿರುವಾಗ ಪಾಂಡವರು ಪುಷ್ಪಭರಿತವಾದ ಕುರವಕ ವೃಕ್ಷಗಳನ್ನು ಕಂಡರು. ಅವುಗಳಲ್ಲಿದ್ದ ಹೂಗಳನ್ನು ಕಾಮನ ಬಾಣಗಳಿಗೆ ಹೋಲಿಸಬಹುದ್ದಾಗಿತ್ತು. ಆ ಪುಷ್ಪಗಳ ಸೊಬಗನ್ನು ಎಷ್ಟು ನೋಡಿದರೂ ತೃಪ್ತಿಯಾಗುತ್ತಿರಲಿಲ್ಲ. ಅಲ್ಲಿದ್ದ ತಿಲಕ ವೃಕ್ಷಗಳು ಅರಣ್ಯಕ್ಕೆ ತಿಲಕಪ್ರಾಯವಾಗಿದ್ದವು. ಆಗತಾನೆ ಚಿಗುರಿ ಹೂವಾಗಿದ್ದ ಮಾವಿನ ಮರಗಳನ್ನೂ ಪಾಂಡವರು ದಾರಿಯಲ್ಲಿ ಕಂಡರು. ಆ ವೃಕ್ಷಗಳಲ್ಲಿ ಪುಷ್ಪರಸವನ್ನು ಹೀರುತ್ತಾ ಅನೇಕ ದುಂಬಿಗಳು ಝೇಂಕಾರಮಾಡುತ್ತಿದ್ದವು. ಆ ವೃಕ್ಷಗಳೆಲ್ಲವೂ ನಯನಮನೋಹರವಾಗಿದ್ದು ಮನ್ಮಥನ ಬಾಣಗಳಂತಿದ್ದವು. ಇನ್ನೂ ಅನೇಕ ವೃಕ್ಷಗಳು ಹೂವಿನಿಂದ ಕೂಡಿ ಕಂಗೊಳಿಸುತ್ತಿದ್ದವು. ಕೆಲವು ಕೆಂಪುಬಣ್ಣದ ಹೂಗಳಿಂದಲೂ ಮತ್ತು ಕೆಲವು ಹೊಂಬಣ್ಣದ ಹೂಗಳಿಂದಲೂ ಶೋಭಿಸುತ್ತಿದ್ದವು. ಎತ್ತರವಾಗಿ ಬೆಳೆದಿದ್ದ ಸಾಲ, ತಮಾಲ, ಪಾಟಲ ಮತ್ತು ಬಕುಳ ವೃಕ್ಷಗಳು ಪುಷ್ಪಭರಿತವಾಗಿದ್ದು ಪರ್ವತಕ್ಕೆ ಹಾಕಿರುವ ಪುಷ್ಪಮಾಲಿಕೆಗಳೋಪಾದಿಯಲ್ಲಿ ಕಂಗೊಳಿಸುತ್ತಿದ್ದವು. ಜನಮೇಜಯ! ಸ್ಪಟಿಕಶಿಲೆಯಷ್ಟು ಸ್ವಚ್ಛವಾಗಿದ್ದ ನೀರುಳ್ಳ ಸರೋವರಗಳನ್ನೂ, ಅವುಗಳಲ್ಲಿದ್ದ ನಯನ ಮನೋಹರವಾದ ಬಿಳಿಯ ರೆಕ್ಕೆಗಳ ಕಲಹಂಸ, ಕೊಕ್ಕರೆ ಮೊದಲಾದ ಪಕ್ಷಿಗಳನ್ನೂ, ಕಮಲ-ಕುಶೇಶಯಗಳನ್ನೂ ನೋಡುತ್ತಾ, ನೀರನ್ನು ಕುಡಿದು ಮತ್ತು ಸರೋವರಗಳಲ್ಲಿ ಮಿಂದು ದಣಿವಾರಿಸಿಕೊಳ್ಳುತ್ತಾ ಪಾಂಡವರು ಮುಂದೆ ಮುಂದೆ ಪ್ರಯಾಣಮಾದಿದರು. ಆ ವನದ ಸೊಬಗನ್ನು ನೋಡುತ್ತಿದ್ದ ಪಾಂಡವರು ಭ್ರಾಂತರಾಗಿ ತೆರೆದ ಕಣ್ಣುಗಳನ್ನು ಮುಚ್ಚುತ್ತಲೇ ಇರಲಿಲ್ಲ. ಅವರಿಗೆ ಎಲ್ಲವೂ ಆಶ್ಚರ್ಯಕರವಾಗಿ ಕಂಡಿತು. ಕಮಲ, ಕಹ್ಲಾರ, ಉತ್ಪಲ ಮತ್ತು ಪುಂಡರೀಕ ಪುಷ್ಪಗಳ ಮೇಲೆ ಬೀಸಿದ ಸುಗಂಧಮಯ ಮಂದಮಾರುತವು ಪಾಂಡವರ ಮೇಲೆ ಬೀಸಿ ಅವರಿಗೆ ಮತ್ತಷ್ಟು ಆನಂದವನ್ನುಂಟುಮಾಡಿತು. ಯುಧಿಷ್ಠಿರನಾದರೋ ಆ ಶ್ರೇಷ್ಠ ಪರ್ವತದಲ್ಲಿದ್ದ ವೃಕ್ಷಗಳನ್ನು ನೋಡಿ ಭೀಮಸೇನನನ್ನುದ್ದೇಶಿಸಿ ಈ ಮಧುರವಾಕ್ಯಗಳಲ್ಲಿ ಹೇಳಿದನು: “ಭೀಮಸೇನ! ನಿಶ್ಚಯವಾಗಿಯೂ ಈ ಗಂಧಮಾದನ ಪರ್ವತದ ವನವು ಎಷ್ಟು ಸೊಗಸಾಗಿದೆ! ಈ ಕಾನನವು ದೇವಲೋಕದ ವೃಕ್ಷಗಳಿಂದ ತುಂಬಿಹೋಗಿದೆ. ಎಲ್ಲ ವೃಕ್ಷಗಳೂ, ಗಿಡ ಬಳ್ಳಿಗಳೂ ಫಲ-ಪುಷ್ಪಭರಿತವಾಗಿವೆ. ಮುಳ್ಳಿನ ಗಿಡಗಳಿಲ್ಲ. ಫಲಪುಷ್ಪಗಳಿಲ್ಲದ ಒಂದು ಮರವನ್ನಾಗಲೀ, ಗಿಡವನ್ನ್ನಾಗಲೀ, ಬಳ್ಳಿಯನ್ನಾಗಲೀ ನಾವು ಕಾಣಲಿಲ್ಲ. ನಾನಾ ವಿಧದ, ನಾನಾ ಜಾತಿಗಳ, ನಾನಾ ಬಣ್ಣದ ಮರ-ಗಿಡ-ಬಳ್ಳಿಗಳಿವೆ. ಈ ಮರಗಳ ಚಿಗುರೆಲೆಗಳನ್ನು ತಿಂದು ಸುಮಧುರವಾಗಿ ಧ್ವನಿಮಾಡುತ್ತಿರುವ ಗಂಡುಕೋಗಿಲೆಗಳಿಂದ ನಿಬಿಡವಾಗಿದ್ದು ನೋಡುವವರಿಗೆ ನೇತ್ರಾನಂದವನ್ನೂ ಕರ್ಣಾನಂದವನ್ನೂ ಏಕಕಾಲದಲ್ಲಿ ನೀಡುತ್ತಿವೆ. ಇಲ್ಲಿರುವ ಈ ಸರೋವರವನ್ನಾದರೂ ನೋಡು! ಅರಳಿದ ಕಮಲಗಳಿಂದ ತುಂಬಿಹೋಗಿದೆ. ದುಂಬಿಗಳು ಇವುಗಳ ಮಧುರ ಮಧುರಸವನ್ನು ಕುಡಿದು ಮದಿಸಿರುವವು. ಈ ಸಮಯದಲ್ಲಿಯೇ ಸರೋವರವನ್ನು ಆನೆಗಳು ಕಲಕುತ್ತಿವೆ. ಭೀಮಸೇನ! ಈ ಸರೋವರವನ್ನು ನೋಡು! ಇಲ್ಲಿರುವ ಕಮಲಗಳು ಮಾಲೆಯಾಕಾರದಲ್ಲಿದ್ದು ಮೂರ್ತಿಮತ್ತಾಗಿರುವ ಲಕ್ಷ್ಮಿಗೆ ಹಾಕಿರುವ ಹಾರದೋಪಾದಿಯಲ್ಲಿ ಕಾಣಿಸುತ್ತಿವೆ. ನಿಶ್ಚಯವಾಗಿಯೂ ಈ ವನಲಕ್ಷ್ಮಿಯು ಅನೇಕಾನೇಕ ಸುಗಂಧಮಯ ಪುಷ್ಪಗಳಿಂದ ಅಲಂಕೃತಳಾಗಿರುವಳು! ಅತ್ತಕಡೆ ನೋಡು ಭೀಮ! ಆ ಪ್ರದೇಶಗಳಲ್ಲಿಯೇ ದೇವತೆಗಳು ವಿಹರಿಸುತ್ತಿದ್ದಾರೆ. ನಾವಿಲ್ಲಿ ಬಂದು ಧನ್ಯರಾದೆವು.”
ಆ ಉತ್ತಮ ಮಾರ್ಗವನ್ನು ಪ್ರಯಾಣಿಸಿ ಆ ಪರ್ವತೇಂದ್ರನ ದರ್ಶನದಿಂದ ಸಂತೋಷಗೊಂಡ ಪರಂತಪರ ಮನಸ್ಸು ತೃಪ್ತಿಯನ್ನೇ ಹೊಂದಲಿಲ್ಲ. ಆಗಅಲ್ಲಿ ಹೂವು ಹಣ್ಣುಗಳಿಂದ ತುಂಬಿದ್ದ ವೃಕ್ಷಗಳ ಸಂಕುಲವಾಗಿದ್ದ ರಾಜರ್ಷಿ ಆರ್ಷ್ಟಿಷೇಣನ ಆಶ್ರಮವನ್ನು ನೋಡಿದರು. ಕೇವಲ ಧಮನಿಗಳಿಂದ ಕಟ್ಟಲ್ಪಟ್ಟಿದ್ದನೋ ಎನ್ನುವಷ್ಟು ತೀವ್ರ ತಪಸ್ಸಿನಿಂದ ಕೃಷನಾಗಿದ್ದ ಸರ್ವಧರ್ಮಗಳ ಪಾರಂಗತ ಆರ್ಷ್ಟಿಷೇಣನ ಬಳಿ ಬಂದರು.
ತಪಸ್ಸಿನಿಂದ ಪಾಪಗಳನ್ನೆಲ್ಲ ಸುಟ್ಟುಹಾಕಿದ್ದ ಅವನ ಬಳಿಸಾರಿ ಯುಧಿಷ್ಠಿರನು ತನ್ನ ಹೆಸರನ್ನು ಹೇಳಿಕೊಂಡು ಸಂತೋಷದಿಂದ ತಲೆಬಾಗಿ ನಮಸ್ಕರಿಸಿದನು. ಅನಂತರ ಕೃಷ್ಣೆ, ಭೀಮ ಮತ್ತು ಯಶಸ್ವಿಗಳಾದ ಯಮಳರು ತಲೆಬಾಗಿ ಆ ರಾಜರ್ಷಿಯ ಬಳಿಸಾರಿ ಸುತ್ತುವರೆದರು. ಹಾಗೆಯೇ ಪಾಂಡವರ ಪುರೋಹಿತ ಧರ್ಮಜ್ಞ ಧೌಮ್ಯನು ಯಥಾನ್ಯಾಯವಾಗಿ ಆ ಸಂಶಿತವ್ರತ ಋಷಿಯ ಬಳಿಬಂದನು. ದಿವ್ಯ ದೃಷ್ಟಿಯಿಂದ ಪಾಂಡುವಿನ ಪುತ್ರರಾದ ಆ ಕುರುಶ್ರೇಷ್ಠರನ್ನು ಗುರುತಿಸಿದ ಆ ಧರ್ಮಜ್ಞ ಮುನಿಯು ಕುಳಿತುಕೊಳ್ಳಲು ಹೇಳಿದನು. ಆ ಮಹಾತಪಸ್ವಿಯು ಪ್ರಾಜ್ಞ ಕುರುವೃಷಭನನ್ನು ಪೂಜಿಸಿ, ತಮ್ಮಂದಿರೊಡನೆ ಕುಳಿತುಕೊಂಡ ಅವನ ಆರೋಗ್ಯದ ಕುರಿತು ಪ್ರಶ್ನಿಸಿದನು. “ನೀನು ಯಾವಾಗಲೂ ಸುಳ್ಳುಹೇಳುವ ಭಾವನನ್ನು ಇಟ್ಟುಕೊಂಡಿಲ್ಲ ಮತ್ತು ಧರ್ಮದಂತೆ ನಡೆದುಕೊಳ್ಳುತ್ತೀಯೆ ತಾನೇ? ಪಾರ್ಥ! ನಿನ್ನ ತಂದೆ-ತಾಯಂದಿರ ಕುರಿತಾದ ನಿನ್ನ ವರ್ತನೆಯು ಕ್ಷೀಣಿಸುವುದಿಲ್ಲ ತಾನೇ? ನೀನು ಎಲ್ಲ ಗುರುಗಳನ್ನೂ, ವೃದ್ಧರನ್ನೂ, ಮತ್ತು ವೈದ್ಯರನ್ನೂ ಪೂಜಿಸುತ್ತೀಯೆ ತಾನೇ? ನೀನು ಎಂದೂ ಪಾಪಕರ್ಮಗಳನ್ನು ಮಾಡಲು ಬಯಸಿಲ್ಲ ತಾನೇ? ಯಥಾನ್ಯಾಯವಾಗಿ ಒಳಿತನ್ನು ಹೇಗೆ ಸ್ವೀಕರಿಸಬೇಕು ಮತ್ತು ದುಷ್ಕೃತವನ್ನು ಹೇಗೆ ಗಮನಿಸಬಾರದು ಎನ್ನುವುದನ್ನು ತಿಳಿದಿದ್ದೀಯೆ ತಾನೇ? ಜಂಬಕೊಚ್ಚಿಕೊಳ್ಳುವುದಿಲ್ಲ ತಾನೇ? ಸಾಧುಜನರು ಯಥಾರ್ಹವಾಗಿ ನಿನ್ನಿಂದ ಸಮ್ಮಾನಿತರಾಗಿ ಸಂತೋಷಗೊಳ್ಳುತ್ತಾರೆ ತಾನೇ? ವನದಲ್ಲಿ ವಾಸವಾಗಿದ್ದುಕೊಂಡೂ ಧರ್ಮವನ್ನು ಅನುಸರಿಸುತ್ತಿದ್ದೀಯೆ ತಾನೇ? ದೌಮ್ಯನು ನಿನ್ನ ಆಚಾರ, ದಾನ, ಧರ್ಮ, ತಪಸ್ಸು, ಶೌಚ, ಆರ್ಜವಗಳ ಕುರಿತು ಖಂಡಿಸುವ ಸನ್ನಿವೇಶಗಳು ಒದಗಿಲ್ಲ ತಾನೇ? ತಂದೆ ಮತ್ತು ಅಜ್ಜಂದಿರ ನಡತೆಯನ್ನು ಅನುಸರಿಸುತ್ತೀಯೆ ತಾನೇ? ರಾಜರ್ಷಿಗಳು ನಡೆದ ದಾರಿಯಲ್ಲಿಯೇ ಹೋಗುತ್ತಿದ್ದೀಯೆ ತಾನೇ? ತಮ್ಮ ಕುಲದಲ್ಲಿ ಮಗ ಅಥವಾ ಮೊಮ್ಮಗನು ಹುಟ್ಟಿದಾಗಲೆಲ್ಲಾ ಪಿತೃಲೋಕದಲ್ಲಿರುವ ಪಿತೃಗಳು ನಗುತ್ತಾರೆ ಅಥವಾ ದುಃಖಿಸುತ್ತಾರೆ ಎಂದು ಹೇಳುತ್ತಾರೆ. ಅವನು ದುಷ್ಟಕರ್ಮಗಳನ್ನೆಸಗಿದರೆ ನಮಗೆ ಏನಾಗುತ್ತದೆ? ಅಥವಾ ಅವನ ಸುಕೃತಗಳಿಂದ ನಮಗೆ ಒಳ್ಳೆಯದಾಗುತ್ತದೆಯೇ? ಎಂದು ಚಿಂತಿಸುತ್ತಿರುತ್ತಾರೆ. ತಂದೆ, ತಾಯಿ, ಹಾಗೆಯೇ ಅಗ್ನಿ, ಗುರು ಮತ್ತು ಆತ್ಮ ಈ ಐವರನ್ನು ಪೂಜಿಸುವವನು ಎರಡೂ ಲೋಕಗಳನ್ನು ಗೆಲ್ಲುತ್ತಾರೆ. ಪರ್ವಸಂಧಿಗಳಲ್ಲಿ (ಹುಣ್ಣಿಮೆ ಅಮವಾಸ್ಯೆಗಳಲ್ಲಿ) ಕೇವಲ ನೀರು ಮತ್ತು ಗಾಳಿಯನ್ನು ಸೇವಿಸುವ ಋಷಿಗಳು ಗಾಳಿಯಲ್ಲಿ ಹಾರಿಕೊಂಡು ಬಂದು ಈ ಪರ್ವತಶ್ರೇಷ್ಠನನ್ನು ಭೇಟಿ ಮಾಡುತ್ತಾರೆ. ಪರಸ್ಪರರಲ್ಲಿ ಅನುರತರಾದ ಕಿಂಪುರುಷ ಕಾಮಿ-ಕಾಂತೆಯರೂ ಕೂಡ ಈ ಪರ್ವತ ಶಿಖರಗಳಲ್ಲಿ ಕಂಡುಬರುತ್ತಾರೆ. ಕೊಳೆಯಿಲ್ಲದ ಶುಭ್ರ ರೇಷ್ಮೆ ಬಟ್ಟೆಗಳನ್ನುಟ್ಟು, ಹಾರಗಳನ್ನು ಧರಿಸಿದ ಬಹಳಷ್ಟು ಸುಂದರ ಗಂಧರ್ವ ಅಪ್ಸರ ಗಣಗಳು, ವಿಧ್ಯಾಧರರ ಗುಂಪುಗಳು, ಮಹಾ ಉರಗಗಣಗಳು, ಪಕ್ಷಿ ಮತ್ತು ಉರಗಗಣಗಳು ಅಲ್ಲಿ ಕಾಣಿಸುತ್ತಾರೆ. ಆ ಗಿರಿಯ ಶಿಖರದಲ್ಲಿ ಹುಣ್ಣಿಮೆ-ಅಮವಾಸ್ಯೆಗಳಲ್ಲಿ ಭೇರಿ, ಪಣವ, ಶಂಖ ಮತ್ತು ಮೃದಂಗಗಳ ನಿನಾದವು ಕೇಳಿಬರುತ್ತದೆ. ಇಲ್ಲಿ ನಿಂತುಕೊಂಡರೂ ಆ ಎಲ್ಲವನ್ನೂ ಕೇಳಬಹುದು. ಎಷ್ಟೇ ಮನಸ್ಸು ಮಾಡಿದರೂ ನೀವು ಅದರ ಹತ್ತಿರ ಹೋಗಕೂಡದು. ಇಲ್ಲಿಂದ ಮುಂದೆ ಹೋಗುವುದು ಅಸಾಧ್ಯ. ಯಾಕೆಂದರೆ, ಅಲ್ಲಿ ದೇವತೆಗಳು ವಿಹರಿಸುತ್ತಾರೆ, ಮತ್ತು ಅದು ಮನುಷ್ಯರ ಗಮನಕ್ಕೆ ಸಿಲುಕುವುದಿಲ್ಲ. ಇಲ್ಲಿರುವ ಸರ್ವಭೂತಗಳೂ ಸ್ವಲ್ಪವೇ ತಪ್ಪುಮಾಡಿರುವ ಮನುಷ್ಯನನ್ನೂ ದ್ವೇಷಿಸುತ್ತವೆ ಮತ್ತು ರಾಕ್ಷಸರು ಅವನನ್ನು ಒದೆಯುತ್ತಾರೆ. ಈ ಗಿರಿಯ ಶಿಖರವನ್ನು ದಾಟಿದರೆ ಪರಮಸಿದ್ಧ ದೇವರ್ಷಿಗಳ ಮಾರ್ಗವು ತೋರುತ್ತದೆ. ಚಪಲನಾಗಿ ಇಲ್ಲಿಂದ ಮುಂದೆ ಪ್ರಯಾಣಮಾಡಿದರೆ ಅವನನ್ನು ರಾಕ್ಷಸರು ಕಬ್ಬಿಣದ ಶೂಲಗಳಿಂದ ತಿವಿದು ಹೊಡೆಯುತ್ತಾರೆ. ಹುಣ್ಣಿಮೆ-ಅಮವಾಸ್ಯೆಗಳಲ್ಲಿ ಅಪ್ಸರೆಯರಿಂದ ಪರಿವೃತನಾಗಿ, ಸಮೃದ್ಧನಾದ, ಸರ್ವರಾಕ್ಷಸರ ಒಡೆಯನಾದ ನರವಾಹನ ವೈಶ್ರವಣನು ಇಲ್ಲಿ ಶಿಖರದಲ್ಲಿ ಉದಯಿಸುತ್ತಿರುವ ಸೂರ್ಯನಂತೆ ಬೆಳಗುತ್ತಿರುವ, ರ್ವಭೂತಗಳಿಗೆ ದರ್ಶನನೀಡಿ ಕುಳಿತುಕೊಂಡಿರುವುದನ್ನು ಕಾಣಬಹುದು. ಈ ಗಿರಿಶಿಖರವು ಧೇವ-ದಾನವ-ಸಿದ್ಧರು ಮತ್ತು ವೈಶ್ರವಣನ ಉದ್ಯಾನವನವು. ಪರ್ವಸಂಧಿಗಳಲ್ಲಿ ತುಂಬುರನು ಉಪಾಸೀನನಾಗಿರುವ ಕುಬೇರನನ್ನು ಗೀತ-ವಾದ್ಯಗಳಿಂದ ಮನೋರಂಜಿಸುವಾಗ ಅದನ್ನು ಗಂಧಮಾದನದಲ್ಲಿ ಕೇಳಬಹುದು. ಪರ್ವಸಂಧಿಗಳಲ್ಲಿ ಸರ್ವಭೂತಗಳು ಬಹುಸಂಖ್ಯೆಗಳಲ್ಲಿ ಈ ರೀತಿಯ ಅದ್ಭುತವನ್ನು ನೋಡುತ್ತಾರೆ. ತಿನ್ನಬಹುದಾದ ಎಲ್ಲ ರಸಭರಿತ ಫಲಗಳನ್ನು ಸೇವಿಸುತ್ತಾ ಅರ್ಜುನನನ್ನು ನೋಡುವವರೆಗೆ ಇಲ್ಲಿಯೇ ವಾಸಿಸು. ಇಲ್ಲಿಗೆ ಹೇಗೋ ಬಂದಿದ್ದಾಗಿದೆ. ಚಪಲನಾಗಬೇಡ! ಇಷ್ಟಬಂದಂತೆ ಮತ್ತು ಆಸಕ್ತಿಯಿದ್ದಷ್ಟು ಇಲ್ಲಿ ವಿಹರಿಸಿಕೊಂಡು ವಾಸಿಸಿ ನಂತರ ಭೂಮಿಯನ್ನು ಆಳುತ್ತೀಯೆ.”
ಆ ಅಪ್ರತಿಮ ತೇಜಸ್ವಿಯ ಆತ್ಮಹಿತ ಮಾತುಗಳನ್ನು ಕೇಳಿ ಭರತರ್ಷಭರು ಅವನ ಶಾಸನದಂತೆ ಸತತವಾಗಿ ನಡೆದುಕೊಂಡರು. ಮುನಿಗಳ ಭೋಜನ, ರಸವತ್ತಾದ ಹಣ್ಣುಗಳು, ವಿಷವನ್ನು ಹಚ್ಚಿರದ ಶುದ್ಧ ಬಾಣಗಳಿಂದ ಹೊಡೆದ ಜಿಂಕೆಯ ಮಾಂಸ, ಬಹು ವಿಧದ ಸಿಹಿ ಊಟಗಳನ್ನು ಉಣ್ಣುತ್ತಾ ಭರತರ್ಷಭ ಪಾಂಡವರು ಹಿಮಾಲಯದ ಆ ತಪ್ಪಲಿನಲ್ಲಿ ವಾಸಿಸಿದರು. ಹೀಗೆ ಅವರು ಲೋಮಶನು ಹೇಳಿದ ವಿವಿಧ ಮಾತುಗಳನ್ನು ಕೇಳುತ್ತಾ ವಾಸಿಸಿ ಅವರ ಐದನೆಯ ವರ್ಷವೂ ಕಳೆಯಿತು. ಇದರ ಮೊದಲೇ ಘಟೋತ್ಕಚನು ಬೇಕಾದಾಗ ಬರುತ್ತೇನೆ ಎಂದು ಹೇಳಿ ತನ್ನ ಸರ್ವ ರಾಕ್ಷಸರೊಂದಿಗೆ ಹೊರಟುಹೋಗಿದ್ದ. ಆ ಮಹಾತ್ಮರು ಆರ್ಷ್ಟಿಶೇಣನ ಆಶ್ರಮದಲ್ಲಿ ವಾಸಿಸುತ್ತಾ ಮಹಾ ಅದ್ಭುತಗಳನ್ನು ನೋಡುತ್ತಲೇ ಹಲವು ತಿಂಗಳುಗಳು ಕಳೆದವು. ಪಾಂಡವರು ಅಲ್ಲಿ ವಿಹರಿಸುತ್ತಾ ಸಂತೋಷದಿಂದಿರಲು ಮಹಾಭಾಗ ಮುನಿಗಳು ಮತ್ತು ಚಾರಣರು ಪ್ರೀತಿಯಿಂದ ಪಾಂಡವರನ್ನು ನೋಡಲು ಅಲ್ಲಿಗೆ ಬರುತ್ತಿದ್ದರು. ಆಗ ಆ ಸಿದ್ಧಾತ್ಮ ಯತವ್ರತರೊಂದಿಗೆ ಭರತಸತ್ತಮರು ದಿವ್ಯ ಕಥನಗಳನ್ನು ಚರ್ಚಿಸುತ್ತಿದ್ದರು.
ಕೆಲವು ದಿನಗಳ ನಂತರ ಆ ಮಹಾಸರೋವರದ ಹತ್ತಿರ ವಾಸಿಸಿ ಬೆಳೆಯುತ್ತಿದ್ದ ಮಹಾನಾಗವೊಂದನ್ನು ಪಕ್ಷಿಯೊಂದು ಕ್ಷಣಮಾತ್ರದಲ್ಲಿ ಎತ್ತಿಕೊಂಡು ಹೋಯಿತು. ಆಗ ಆ ಮಹಾಪರ್ವತವು ನಡುಗಿತು. ದೊಡ್ಡ ದೊಡ್ಡ ಮರಗಳು ಕೆಳಗುರುಳಿದವು. ಆ ಅದ್ಭುತವನ್ನು ಪಾಂಡವರೂ ಸರ್ವರೂ ವೀಕ್ಷಿಸಿದರು. ಆಗ ಆ ಉತ್ತಮ ಪರ್ವತದ ಶಿಖರದಿಂದ ಬೀಸಿದ ಗಾಳಿಯು ಸುಗಂಧಿತ ಸುಂದರ ಪುಷ್ಪಗಳನ್ನು ಪಾಂಡವರ ಕಡೆ ತಂದು ಚೆಲ್ಲಿತು. ಆ ದಿವ್ಯ ಪುಷ್ಪಗಳನ್ನು ಪಾಂಡವರೂ ಮತ್ತು ಅವರ ಸ್ನೆಹಿತರೂ ನೋಡಿದರು. ಐದು ಬಣ್ಣಗಳ ಆ ಹೂಗಳನ್ನು ಯಶಸ್ವಿನಿ ಪಾಂಚಾಲಿಯೂ ನೋಡಿದಳು. ಅದೇ ಸಮಯದಲ್ಲಿ ಕೃಷ್ಣೆಯು ಪರ್ವತದ ಒಂದೆಡೆಯಲ್ಲಿ ಒಬ್ಬನೇ ಸುಖಾಸೀನನಾಗಿದ್ದ ಮಹಾಭುಜ ಭೀಮಸೇನನಿಗೆ ಹೇಳಿದಳು: “ಭರತರ್ಷಭ! ಪಕ್ಷಿಯು ಮೇಲೆಬ್ಬಿಸಿದ ಅತಿ ದೊಡ್ಡ ಭಿರುಗಾಳಿಯು ಐದುಬಣ್ಣಗಳ ಹೂಗಳನ್ನು ನದೀ ಅಶ್ವರಥದ ಬಳಿ ಎಲ್ಲರೂ ನೋಡುತ್ತಿದ್ದಂತೆಯೇ ತಂದು ಬೀಳಿಸಿದೆ. ನಿನ್ನ ತಮ್ಮ ಸತ್ಯಸಂಧನು ಖಾಂಡವದಲ್ಲಿ ಗಂಧರ್ವ-ಉರಗ-ರಾಕ್ಷಸರು ಮತ್ತು ಇಂದ್ರನನ್ನೂ ತಡೆಗಟ್ಟಿ ಉಗ್ರ ಮಾಯಾವಿಗಳನ್ನು ಕೊಂದು ಗಾಂಡಿವ ಧನುಸ್ಸನ್ನು ಪಡೆದ. ನೀನೂ ಕೂಡ ತುಂಬಾ ತೇಜೋವಂತ ಮತ್ತು ಮಹಾ ಬಾಹುಬಲವಂತ. ಎದುರಿಸಲಸಾದ್ಯನಾದ ಮತ್ತು ಗೆಲ್ಲಲಸಾದ್ಯನಾದ ನೀನು ಶತಕ್ರತು ಇಂದ್ರನ ಸಮಾನ. ನಿನ್ನ ಬಾಹುಬಲ ಮತ್ತು ವೇಗದಿಂದ ನರಳುವ ಸರ್ವ ರಾಕ್ಷಸರೂ ಈ ಪರ್ವತವನ್ನು ತೊರೆದು ದಿಕ್ಕು ದಿಕ್ಕುಗಳಲ್ಲಿ ಓಡಿ ಹೋಗುತ್ತಾರೆ. ಆಗ ನಿನ್ನ ಸ್ನೇಹಿತರೆಲ್ಲರೂ ಭಯಭೀತರಾಗಿ ಬಣ್ಣದ ಹೂಗಳನ್ನು ಮುಡಿದು ಮಂಗಳಕರವಾಗಿರುವ ಈ ಉತ್ತಮ ಪರ್ವತವನ್ನು ಏರಬಹುದು. ನಿನ್ನ ಬಾಹುಬಲವನ್ನು ಆಶ್ರಯಿಸಿ ಈ ಪರ್ವತದ ಶಿಖರವನ್ನು ನೋಡುವ ಆಸೆ ಬಹುಕಾಲದಿಂದ ನನ್ನಲ್ಲಿದೆ.”
ಚಾಟಿಯೇಟಿಗೊಳಗಾದ ಎತ್ತಿನಂತೆ ಆ ಮಹಾಬಾಹು ಪರಂತಪನು ದ್ರೌಪದಿಯ ಮಾತುಗಳನ್ನು ಸಹಿಸಲಾರದೇ ಹೋದನು. ಸಿಂಹರಾಜನ ನಡುಗೆಯುಳ್ಳ, ಶ್ರೀಮಾನ್, ಉದಾರ, ಕನಕಪ್ರಭ, ಮನಸ್ವೀ, ಬಲವಾನ್, ದೃಪ್ತ, ಶೂರ, ಪಾಂಡವ, ಲೋಹಿತಾಕ್ಷ, ವಿಶಾಲ ಎದೆಯುಳ್ಳವ, ಮತ್ತಗಜಶ ವಿಕ್ರಮವುಳ್ಳ, ಸಿಂದದಂಷ್ಟ್ರ, ದಷ್ಟಬಾಹುಗಳುಳ್ಳವ, ಶಾಲವೃಕ್ಷಗಳಂತೆ ಎತ್ತರಕ್ಕೆ ಬೆಳೆದಿದ್ದ, ಮಹಾತ್ಮ, ಸರ್ವಾಂಗಗಳೂ ಸುಂದರವಾಗಿರುವ, ಶಂಖದಂತೆ ಕುತ್ತಿಗೆಯುಳ್ಳ, ಮಹಾಭುಜಿ, ಬಲಿ ಭೀಮಸೇನನು ಹಿಂಬಾಗದಲ್ಲಿ ಬಂಗಾರವನ್ನು ಹೊಂದಿದ್ದ ಧನುಸ್ಸು, ಖಡ್ಗ, ಮತ್ತು ಬತ್ತಳಿಕೆಗಳನ್ನು ಎತ್ತಿಕೊಂಡು ರಾಜ ಕೇಸರಿಯಂತೆ ಮತ್ತು ಆನೆಗಳ ನಾಯಕನಂತೆ ಭಯಸಮ್ಮೋಹಗಳಿಲ್ಲದೇ ಪರ್ವತವನ್ನೇರಿದನು. ಬಾಣ, ಖಡ್ಗ ಮತ್ತು ಧನುಸ್ಸನ್ನು ಹಿಡಿದು ಮೃಗೇಂದ್ರ ಸಿಂಹನಂತೆ ಮತ್ತು ಆನೆಗಳ ನಾಯಕನಂತೆ ಬರುತ್ತಿದ್ದ ಅವನನ್ನು ಅಲ್ಲಿದ್ದ ಎಲ್ಲರೂ ನೋಡಿದರು. ದ್ರೌಪದಿಯ ಸಂತೋಷವನ್ನು ಹೆಚ್ಚಿಸಲು ಆ ಪಾಂಡವನು ಗದೆಯನ್ನು ಹಿಡಿದು ಭಯ ಸಮ್ಮೋಹಗಳನ್ನು ತೊರೆದು ಆ ಪರ್ವತವನ್ನು ಏರಿದನು. ಆಯಾಸವಾಗಲೀ, ಭಯವಾಗಲೀ ಅಥವಾ ಹೇಡಿತನವಾಗಲೀ, ಮಾತ್ಸರ್ಯವಾಗಲೀ ಆ ವಾಯುಪುತ್ರ ಪಾರ್ಥನನ್ನು ಕಾಡಲಿಲ್ಲ. ಆಗ ಆ ಮಹಾಬಾಹುವು ಘೋರವಾಗಿ ತೋರುತ್ತಿದ್ದ ಚಿಕ್ಕದಾದ ವಿಷಮ ದಾರಿಯೊಂದನ್ನು ಹಿಡಿದು ಬಹು ಎತ್ತರವಾಗಿದ್ದ ಆ ಗಿರಿಯನ್ನೇರಿದನು. ಕಿನ್ನರರನ್ನೂ, ಮಹಾನಾಗಗಳನ್ನೂ, ಮುನಿಗಳನ್ನೂ, ಗಂಧರ್ವರಾಕ್ಷಸರನ್ನೂ ಹರ್ಷಗೊಳಿಸುತ್ತಾ ಆ ಮಹಾಬಲನು ಪರ್ವತದ ಶಿಖರವನ್ನು ತಲುಪಿದನು. ಅಲ್ಲಿ ಆ ಭರತರ್ಷಭನು ಕಾಂಚನ ಮತ್ತು ಸ್ಪಟಿಕದ ಕಟ್ಟಡಗಳಿಂದ ಅಲಂಕೃತಗೊಂಡಿದ್ದ ವೈಶ್ರವಣ ಕುಬೇರನ ಆವಾಸವನ್ನು ಕಂಡನು. ಗಂಧಮಾದನದಿಂದ ಪ್ರಾರಂಭಗೊಂಡು ಎಲ್ಲವಕ್ಕೂ ಸಂತೋಷವನ್ನು ನೀಡುತ್ತಿದ್ದ ಎಲ್ಲ ತರಹದ ಉತ್ತಮ ಸುವಾಸನೆಯನ್ನು ಹೊತ್ತ ಸುಖಕರ ಗಾಳಿಯು ಅಲ್ಲಿ ಬೀಸುತ್ತಿತ್ತು. ಅತೀವ ಸುಂದರವಾದ ಯೋಚನೆಗೂ ಮೀರಿದ ಅದ್ಭುತವಾದ ಸುಂದರ ಬಣ್ಣಗಳ ಪರಮ ಸುಂದರ ಹೂಗಳಿಂದ ತುಂಬಿದ ಎಲ್ಲ ತರಹದ ಮರಗಳು ಅಲ್ಲಿ ಬೆಳೆದಿದ್ದವು. ಆ ಭರತರ್ಷಭ ಭೀಮನು ರತ್ನಗಳ ಜಾಲಗಳಿಂದ ಸುತ್ತುವರೆಯಲ್ಪಟ್ಟ, ವಿಚಿತ್ರಹೂವುಗಳ ಮಾಲೆಗಳನ್ನು ಧರಿಸಿದ್ದ, ಮಂಗಳಕರವಾಗಿದ್ದ ರಾಕ್ಷಸಾಧಿಪತಿ ಕುಬೇರನ ಅರಮನೆಯನ್ನು ನೋಡಿದನು.
ಗದೆ, ಖಡ್ಗ, ಧನುಸ್ಸುಗಳನ್ನು ಹಿಡಿದು ಜೀವವನ್ನು ಬಿಡಲೂ ತಯಾರಾಗಿದ್ದ ಮಹಾಬಾಹು ಭೀಮಸೇನನು ಪರ್ವತದಂತೆ ಅಚಲನಾಗಿ ನಿಂತನು. ಆಗ ಅವನು ತನ್ನ ಶಂಖವನ್ನು ಶತ್ರುಗಳ ಮೈ ನವಿರೇಳಿಸುವಂತೆ ಊದಿದನು ಮತ್ತು ತನ್ನ ಬಿಲ್ಲಿನ ಟೇಂಕಾರದಿಂದ ಮತ್ತು ಚಪ್ಪಾಳೆಯಿಂದ ಅಲ್ಲಿರುವ ಪ್ರಾಣಿಗಳಲ್ಲಿಯೂ ಭಯವನ್ನುಂಟುಮಾಡಿದನು. ಮೈನವಿರೆದ್ದ ಯಕ್ಷರು, ರಾಕ್ಷಸರು ಮತ್ತು ಗಂಧರ್ವರು ಆ ಧ್ವನಿಯನ್ನೇ ಅವಲಂಬಿಸಿ ಪಾಂಡವನ ಸಮೀಪಕ್ಕೆ ಓಡಿ ಬಂದರು. ಯಕ್ಷರು ಮತ್ತು ಗಂಧರ್ವರು ಹಿಡಿದಿದ್ದ ಗದೆ, ಪರಿಘ, ಖಡ್ಗ, ಶಕ್ತಿ, ಶೂಲ, ಕೊಡಲಿಗಳು ಹೊಳೆಯುತ್ತಿರಲು ಅವರು ಮತ್ತು ಭೀಮಸೇನನೊಂದಿಗೆ ಯುದ್ಧವು ನಡೆಯಿತು. ಭೀಮಸೇನನು ತನ್ನ ಭಯಂಕರ ವೇಗದ ಬಾಣಗಳು ಮತ್ತು ಈಟಿಯಿಂದ ಆ ಮಹಾಕಾಯರು ಪ್ರಯೋಗಿಸುತ್ತಿದ್ದ ಶಕ್ತಿ, ಶೂಲ, ಪರಘಗಳನ್ನು ತುಂಡರಿಸಿದನು. ಆ ಮಹಾಬಲನು ಆಕಾಶ ಮತ್ತು ನೆಲದಮೇಲೆ ಗರ್ಜಿಸುತ್ತಿದ್ದ ರಾಕ್ಷಸರ ದೇಹಗಳನ್ನು ತನ್ನ ಬಾಣಗಳಿಂದ ಚುಚ್ಚಿದನು. ಆ ರಾಕ್ಷಸರ ದೇಹಗಳ ಎಲ್ಲಕಡೆಯಿಂದ ಆ ಮಹಾಬಲನ ಮೇಲೆ ರಕ್ತದ ಮಹಾಮಳೆಯೇ ಸುರಿಯಿತು. ಭೀಮನ ಬಾಹುಬಲದ ಪ್ರಯೋಗದಿಂದಾಗಿ ಹಲವಾರು ಯಕ್ಷ ರಾಕ್ಷಸರ ಶಿರ-ಶರೀರಗಳು ತುಂಡಾದುದು ಕಂಡುಬಂದವು. ಕಪ್ಪು ಮೋಡಗಳು ಸೂರ್ಯನನ್ನು ಮುತ್ತುವಂತೆ ಆ ಸುಂದರ ಪಾಂಡವನನ್ನು ರಾಕ್ಷಸರು ಮುತ್ತುವುದನ್ನು ಸರ್ವಭೂತಗಳೂ ನೋಡಿದವು. ಅವನು ಆದಿತ್ಯನು ತನ್ನ ಕಿರಣಗಳಿಂದ ಎಲ್ಲವನ್ನೂ ಹೊಗುವಂತೆ ಆ ಸತ್ಯವಿಕ್ರಮಿ, ಮಹಾಬಾಹು ಬಲವಾನನು ಶರಗಳಿಂದ ಶತ್ರುಗಳನ್ನು ಘಾತಿಗೊಳಿಸಿದನು. ಮಹಾಸ್ವರದಲ್ಲಿ ಕೂಗಿ ಅವನನ್ನು ಹೆದರಿಸಿದರು. ಆದರೂ ಯಾವ ರಾಕ್ಷಸನೂ ಭೀಮಸೇನನು ಭಯಪಟ್ಟಿದುದನ್ನು ನೋಡಲಿಲ್ಲ. ಅವನ ಬಾಣಗಳಿಂದ ಎಲ್ಲ ಅಂಗಗಳೂ ಗಾಯಗೊಳ್ಲಲು ಭೀಮಸೇನನಿಗೆ ಹೆದರಿ ಅವರು ಘೋರ ಆರ್ತಸ್ವರದಲ್ಲಿ ಕೂಗಿ ಅವರ ಮಹಾಯುಧಗಳನ್ನು ಎಸೆದರು. ಗದೆ, ಶೂಲ, ಖಡ್ಗ, ಶಕ್ತಿ ಮತ್ತು ಕೊಡಲಿಗಳನ್ನು ಎಸೆದು ಆ ದೃಢಧನ್ವಿಗೆ ಹೆದರಿ ಅವರು ದಕ್ಷಿಣದಿಕ್ಕಿನ ಕಡೆ ಓಡಿಹೋದರು.
ಆದರೆ ಅಲ್ಲಿ ವೈಶ್ರವಣ ಕುಬೇರನ ಸಖ ಮಣಿಮತನೆಂಬ ಹೆಸರಿನ ವಿಶಾಲ ಎದೆಯ ಮಹಾಭುಜಿ ಮಹಾಬಲ ರಾಕ್ಷಸನು ಶೂಲ-ಗದೆಗಳನ್ನು ಹಿಡಿದು ತನ್ನ ಅಧಿಕಾರವನ್ನೂ ಪೌರುಷವನ್ನು ತೋರಿಸುತ್ತಾ ನಿಂತನು. ಪಲಾಯನ ಮಾಡುತ್ತಿರುವ ಅವರನ್ನು ನೋಡಿ ನಸುನಗುತ್ತಾ ಅವನು ಹೇಳಿದನು: “ಒಬ್ಬನೇ ಮನುಷ್ಯನಿಂದ ಬಹಳ ಸಂಖ್ಯೆಯಲ್ಲಿರುವ ನಾವು ಪರಾಜಿತರಾದರೆ ಧನೇಶ್ವರ ವೈಶ್ರವಣ ಕುಬೇರನ ಅರಮನೆಯನ್ನು ತಲುಪಿ ಏನು ಹೇಳುವಿರಿ?” ಹೀಗೆ ಹೇಳಿ ಅವರೆಲ್ಲರನ್ನೂ ತಡೆಹಿಡಿದು ಆ ರಾಕ್ಷಸನು ಶಕ್ತಿ, ಶೂಲ ಮತ್ತು ಗದೆಗಳನ್ನು ಹಿಡಿದು ಪಾಂಡವ ಭೀಮನ ಮೇಲೆ ಧಾಳಿಯಿಟ್ಟನು. ಮದಿಸಿದ ಆನೆಯಂತೆ ತನ್ನ ಮೇಲೆ ವೇಗದಿಂದ ಎರಗಿದ್ದುದನ್ನು ನೋಡಿ ಭೀಮಸೇನನು ಕರುಗಳ ಹಲ್ಲುಗಳಿಂದ ಮಾಡಿದ ಬಾಣಗಳಿಂದ ಅವನ ಪಕ್ಕಗಳಿಗೆ ಹೊಡೆದನು. ಕೃದ್ಧನಾದ ಆ ಮಹಾಬಲ ಮಣಿಮತನು ದೊಡ್ಡ ಗದೆಯನ್ನು ಹಿಡಿದು ತಿರುಗಿಸಿ ಭೀಮಸೇನನ ಮೇಲೆ ಎಸೆದನು. ಮಿಂಚಿನಂತೆ ಮಹಾಘೋರವಾಗಿ ಆಕಾಶದಲ್ಲಿ ಬರುತ್ತಿರುವ ಆ ಮಹಾಗದೆಯನ್ನು ಭೀಮಸೇನನು ಕಲ್ಲಿನಮೇಲೆ ಮಸೆದ ಹಲವಾರು ತೀಕ್ಷ್ಣಬಾಣಗಳಿಂದ ಹೊಡೆದನು. ಆದರೆ ಅವುಗಳೆಲ್ಲವೂ ಗದೆಯನ್ನು ಮುಟ್ಟುತ್ತಲೇ ಮೊನಚಾದವು ಮತ್ತು ಅತಿ ವೇಗದಲ್ಲಿ ಬರುತ್ತಿದ್ದ ಆ ಗದೆಯನ್ನು ತಮ್ಮ ವೇಗದಿಂದ ತಡೆಯಲಸಾದ್ಯವಾದವು. ಗದಾಯುದ್ಧದ ವಿಷಯವನ್ನು ಚೆನ್ನಾಗಿ ತಿಳಿದಿದ್ದ ಆ ಭೀಮವಿಕ್ರಮ ವೀರ್ಯವಂತ ಭೀಮಸೇನನು ಅವನ ಪ್ರಹಾರವನ್ನು ತಪ್ಪಿಸಿಕೊಂಡನು. ಅಷ್ಟರಲ್ಲಿಯೇ ಆ ಧೀಮಂತ ರಾಕ್ಷಸನು ಸಮಯವನ್ನು ನೋಡಿ ಮಹಾಘೋರವಾಗಿದ್ದ ಬಂಗಾರದ ತುದಿಯನ್ನು ಹೊಂದಿದ್ದ ಶಕ್ತಿಯನ್ನು ಅವನ ಮೇಲೆ ಎಸೆದನು. ಅಗ್ನಿಯೊಂದಿಗೆ ಜ್ವಲಿಸುತ್ತಾ ಮಹಾರೌದ್ರನಂತೆ ಬರುತ್ತಿದ್ದ ಅದು ಭೀಮಸೇನನ ಬಲಭುಜವನ್ನು ಸೀಳಿ ತಕ್ಷಣವೇ ನೆಲಕ್ಕೆ ಬಿದ್ದಿತು. ಹೀಗೆ ಶಕ್ತಿಯಿಂದ ಚೆನ್ನಾಗಿ ಗಾಯಗೊಂಡ ಆ ಅಮಿತಪರಾಕ್ರಮಿ, ಮಹೇಷ್ವಾಸ, ಗದಾಯುದ್ಧ ವಿಶಾರದ ಕೌರವ್ಯ ಭೀಮಸೇನನು ಎಲ್ಲೆಡೆಯಲ್ಲಿಯೂ ಉಕ್ಕಿನಿಂದ ಮಾಡಿದ್ದ ಗದೆಯನ್ನು ಎತ್ತಿ ಹಿಡಿದು ಬೀಸುತ್ತಾ ಮಹಾಬಲಿ ಮಣಿಮತನ ಕಡೆಗೆ ಓಡಿದನು.
ಮಣಿಮಂತನೂ ಕೂಡ ಉರಿಯುತ್ತಿರುವ ಮಹಾಶೂಲವನ್ನು ಹಿಡಿದು ಜೋರಾಗಿ ಕೂಗುತ್ತಾ ವೇಗದಿಂದ ಭೀಮಸೇನನೆಡೆಗೆ ಎಸೆದನು. ಗದೆಯ ತುದಿಯಿಂದ ಆ ಶೂಲವನ್ನು ತುಂಡರಿಸಿ ಗದಾಯುದ್ಧ ವಿಶಾರದ ಭೀಮಸೇನನು ಹಾವಿನಮೇಲೆ ಗರುಡನು ಎರಗುವಂತೆ ಮಣಿಮತನ ಮೇಲೆ ಹಾರಿ ಎರಗಿದನು. ಗದೆಯನ್ನು ಗರಗರನೆ ಜೋರಾಗಿ ತಿರುಗಿಸುತ್ತಾ ಆ ಮಹಾಬಾಹುವು ಮೇಲೆ ಹಾರಿ ಜೋರಾಗಿ ಕಿರುಚುತ್ತಾ ಅವನ ನೆತ್ತಿಯ ಮೇಲೆ ಹೊಡೆದನು. ಇಂದ್ರನು ಎಸೆದ ವಜ್ರದಂತೆ ಅದು ಗಾಳಿಯಲ್ಲಿ ವೇಗದಿಂದ ಬಂದು ರಾಕ್ಷಸನನ್ನು ಹೊಡೆದು ಕೆಳಗುರುಳಿಸಿತು. ಸಿಂಹನಿಂದ ಬೀಳಿಸಲ್ಪಟ್ಟ ಹಸುವಿನಂತೆ ಭೀಮಬಲ ಭೀಮಸೇನನಿಂದ ಕೆಳಗುರುಳಿ ಬಿದ್ದ ಆ ರಾಕ್ಷಸನನ್ನು ಸರ್ವರೂ ನೋಡಿದರು. ಅವನು ನೆಲದ ಮೇಲೆ ಉರುಳಿ ಬಿದ್ದುದನ್ನು ನೋಡಿದ ಹತಶೇಷ ನಿಶಾಚರರು ಘೋರ ಆರ್ತಸ್ವರದಲ್ಲಿ ಕೂಗುತ್ತಾ ಪೂರ್ವದಿಕ್ಕಿನಲ್ಲಿ ಓಡಿಹೋದರು.
ಗಿರಿಗುಹೆಗಳಿಂದ ಬರುತ್ತಿರುವ ಬಹುವಿಧದ ಶಬ್ಧಗಳನ್ನು ಕೇಳಿ ಅಜಾತಶತ್ರು ಕೌಂತೇಯ ಯುಧಿಷ್ಠಿರ, ಮಾದ್ರಿಯ ಮಕ್ಕಳು ನಕುಲ ಸಹದೇವರು, ಧೌಮ್ಯ, ದ್ರೌಪದಿ, ಮತ್ತು ಎಲ್ಲ ವಿಪ್ರರೂ ಸುಹೃದಯರೂ ಭೀಮಸೇನನಿಲ್ಲದಿದ್ದುದನ್ನು ನೋಡಿ ಚಿಂತಾಪರರಾದರು. ಆ ಶೂರ ಮಹಾರಥಿಗಳು ದ್ರೌಪದಿಯನ್ನು ಅರ್ಷ್ಟಿಷೇಣಿಯ ಬಳಿ ಇರಿಸಿ, ಆಯುಧಗಳೊಡನೆ ಒಂದಾಗಿ ಆ ಪರ್ವತವನ್ನೇರಿದರು. ಪರ್ವತದ ತುದಿಯನ್ನು ತಲುಪಿದ ಆ ಮಹೇಷ್ವಾಸ ಮಹಾರಥಿಗಳು ಅರಿಂದಮ ಭೀಮಸೇನನನ್ನೂ, ಮತ್ತು ಭೀಮಸೇನನು ಸದೆಬಡಿದು ಬೀಳಿಸಿದ್ದ ಉಚ್ಛೋಶ್ವಾಸಗಳನ್ನು ಬಿಡುತ್ತಾ, ಸತ್ವವನ್ನು ಕಳೆದುಕೊಂಡಿದ್ದ ಮಹಾಕಾಯ, ಮಹಾಬಲಶಾಲಿ, ಮಹಾಘೋರ ರಾಕ್ಷಸರನ್ನು ಕಂಡರು. ಗದೆ, ಖಡ್ಗ ಮತ್ತು ಧನುಸ್ಸನ್ನು ಹಿಡಿದ ಆ ಮಹಾಬಾಹು ಭೀಮಸೇನನು ಯುದ್ಧದಲ್ಲಿ ಎಲ್ಲ ದಾನವರನ್ನೂ ಕೊಂದ ಮಘವನ್ ಇಂದ್ರನಂತೆ ಶೋಭಿಸುತ್ತಿದ್ದನು. ಆಗ ಉತ್ತಮ ಗತಿಯನ್ನು ಪಡೆದ ಪಾಂಡವರು ಆ ಹೆಣಗಳನ್ನು ದಾಟಿ, ವೃಕೋದರ ಭೀಮಸೇನನನ್ನು ಬಿಗಿದಪ್ಪಿ ಅಲ್ಲಿಯೇ ಕುಳಿತುಕೊಂಡರು. ಆ ನಾಲ್ಕು ಧನುಶ್ರೇಷ್ಠರಿಂದ ಪರ್ವತವು ಸ್ವರ್ಗದಲ್ಲಿ ಮಹಾಭಾಗ ಲೋಕಪಾಲಕರೊಂದಿಗಿರುವ ದೇವೇಂದ್ರನಂತೆ ತೋರಿತು.
ಕುಬೇರನ ಅರಮನೆಯನ್ನೂ ಮತ್ತು ಕೆಳಗುರುಳಿ ಬಿದ್ದಿದ್ದ ರಾಕ್ಷಸರನ್ನೂ ನೋಡಿ ಅಣ್ಣ ಪಾಂಡವನು ಕುಳಿತಿದ್ದ ತಮ್ಮನಿಗೆ ಹೇಳಿದನು: “ಭೀಮ! ತಿಳಿಯದೇ ಅಥವಾ ದುಡುಕಿ ನೀನು ಮುನಿಯ ಸುಳ್ಳಿಗೆ ಸಮನಾಗಿರುವ ಈ ಪಾಪಕೃತ್ಯವನ್ನು ಮಾಡಿದ್ದೇವೆ. ರಾಜನ ಇಚ್ಛೆಯ ವಿರುದ್ಧವಾದ ಕೆಲಸವನ್ನು ಮಾಡಬಾರದೆಂದು ಧರ್ಮವನ್ನು ತಿಳಿದವರು ತಿಳಿದಿದ್ದಾರೆ. ನೀನು ಮಾಡಿದ ಈ ಕೆಲಸವು ದೇವೇಂದ್ರನಿಗೆ ಇಷ್ಟವಾದುದಲ್ಲ. ಧರ್ಮ ಅರ್ಥಗಳನ್ನು ಅನಾದರಿಸಿ ಪಾಪವನ್ನೆಸಗುವ ಮನವು ಪಾಪಕರ್ಮಗಳ ಫಲವನ್ನು ಪಡೆದೇ ಪಡೆಯುತ್ತದೆ ಎನ್ನುವುದು ನಿಜ. ನನಗೆ ಅಪ್ರಿಯವಾದ ಈ ರೀತಿಯ ಕೆಲಸವನ್ನು ಮತ್ತೆ ಮಾಡಬೇಡ.” ಆ ಧರ್ಮಾತ್ಮ, ಮಹಾತೇಜಸ್ವಿ, ತತ್ವ ಅರ್ಥಗಳನ್ನು ವಿಭಜಿಸಲು ತಿಳಿದಿದ್ದ ಅಣ್ಣ ಕುಂತಿಪುತ್ರ ಯುಧಿಷ್ಠಿರನು ದೋಷವಿಲ್ಲದ ತಮ್ಮನಿಗೆ ಈ ರೀತಿ ಮಾತನಾಡಿ, ಅದರ ಅರ್ಥದ ಕುರಿತು ಯೋಚಿಸುತ್ತಾ ಮಾತನ್ನು ನಿಲ್ಲಿಸಿದನು.
ಇದರ ಮಧ್ಯೆ ಭೀಮಸೇನನಿಂದ ಹತರಾಗದೇ ಉಳಿದಿದ್ದ ಎಲ್ಲ ರಾಕ್ಷಸರು ಕುಬೇರನ ಮನೆಯ ಕಡೆ ಹೋದರು. ಭೀಮಸೇನನಿಂದ ಭಯಾರ್ದಿತರಾಗಿ ದುಃಖದಿಂದ ಜೋರಾಗಿ ಕೂಗುತ್ತಾ ಆ ಮಹಾವೇಗಿಗಳು ವೇಗದಿಂದ ವೈಶ್ರವಣ ಕುಬೇರನ ಸಭೆಯನ್ನು ತಲುಪಿದರು. ಶಸ್ತ್ರಾಯುಧಗಳನ್ನು ಕಳೆದುಕೊಂಡು, ದೇಹದಿಂದ ರಕ್ತವು ತೋಯುತ್ತಿರಲು, ಆಯಾಸಗೊಂಡ, ತಲೆಕೂದಲು ಕೆದರಿದ ಅವರು ಯಕ್ಷಾಧಿಪತಿ ಕುಬೇರನಿಗೆ ಹೇಳಿದರು: “ದೇವ! ಗದೆ, ಪರಿಘ, ಖಡ್ಗ, ಶಕ್ತಿ ಮತ್ತು ಪ್ರಾಸಗಳನ್ನು ಹಿಡಿದ ನಿನ್ನ ಎಲ್ಲ ಮುಖ್ಯ ಯೋದ್ಧರು ಸರೋವರದ ಹತ್ತಿರ ಸತ್ತು ಬಿದ್ದಿದ್ದಾರೆ. ಧನೇಶ್ವರ! ಮನುಷ್ಯನೋರ್ವನು ಈ ಪರ್ವತವನ್ನು ಉಲ್ಲಂಘಿಸಿದ್ದಾನೆ ಮತ್ತು ಅವನು ಒಬ್ಬನೇ ಬಹುಸಂಖ್ಯೆಯಲ್ಲಿದ್ದ ಕ್ರೋಧವಶರ ಗುಂಪನ್ನು ಸಂಹರಿಸಿದ್ದಾನೆ. ರಾಕ್ಷಸೇಂದ್ರರ ಮತ್ತು ಯಕ್ಷರ ಪ್ರಮುಖರು ಹೊಡೆತ ತಿಂದು ತಮ್ಮ ಜೀವವನ್ನು ಕಳೆದುಕೊಂಡು ಬಿದ್ದಿದ್ದಾರೆ. ಅವನು ಈ ಪರ್ವತವನ್ನು ವಶಪಡಿಸಿಕೊಂಡಿದ್ದಾನೆ. ನಿನ್ನ ಸಖ ಮಣಿಮತನನ್ನು ಸಂಹರಿಸಿದ್ದಾನೆ. ಇವೆಲ್ಲವನ್ನೂ ಮನುಷ್ಯನೋರ್ವನು ಮಾಡಿದ್ದಾನೆ. ನಂತರದ ವಿಧಿಯನ್ನು ನೀನೇ ಮಾಡಬೇಕು.”
ಇದನ್ನು ಕೇಳಿದ ಸರ್ವ ಯಕ್ಷರ ರಾಜನು ಸಂಕೃದ್ಧನಾದನು. ಕೋಪದಿಂದ ಕಣ್ಣುಗಳು ಕೆಂಪಾಗಲು, ಇದು ಹೇಗೆ ನಡೆಯಿತು ಎಂದು ಉದ್ಗರಿಸಿದನು. ಇದು ಭೀಮಸೇನನ ಎರಡನೆಯ ಅಪರಾಧವೆಂದು ಕೇಳಿದ ಯಕ್ಷಾಧಿಪ ಧನೇಶ್ವರನು ಕ್ರೋಧದಿಂದ ಕುದುರೆಗಳನ್ನು ಕಟ್ಟಿ ಎಂದು ಆಜ್ಞಾಪಿಸಿದನು. ಆಗ ಘನಮೋಡದಂತೆ ದೊಡ್ಡದಾಗಿದ್ದ ಪರ್ವತ ಶಿಖರದಂತೆ ಎತ್ತರವಾಗಿದ್ದ ಉತ್ತಮ ರಥಕ್ಕೆ ಗಂಧರ್ವ ಕುದುರೆಗಳನ್ನು ಕಟ್ಟಿದರು. ಅವನ ಉತ್ತಮ ಕುದುರೆಗಳು ಸರ್ವಗುಣಗಳಿಂದೊಳಗೊಂಡಿದ್ದವು. ಕಣ್ಣುಗಳು ವಿಮಲವಾಗಿದ್ದವು. ತೇಜಸ್ವಿ ಮತ್ತು ಬಲಶಾಲಿಗಳಾಗಿದ್ದವು. ನಾನಾರತ್ನಗಳಿಂದ ಅಲಂಕೃತಗೊಂಡು ಶೋಭಾಯಮಾನವಾಗಿದ್ದವು. ರಥಕ್ಕೆ ಕಟ್ಟಿದಾಗಲೇ ಬಾಣಗಳಂತೆ ಹಾರಿಹೋಗಲು ಸಿದ್ಧರಾಗಿ ಮುಂದೆ ಬರಲಿರುವ ವಿಜಯವನ್ನು ತಿಳಿದು ಸಂತೋಷಪಡುವಂತೆ ಉದ್ವೇಗಗೊಂಡು ಕುಣಿದಾಡಿದವು. ಆ ಮಹಾದ್ಯುತಿ ಭಗವಾನ್ ರಾಜರಾಜನು ಮಹಾರಥವನ್ನೇರಿ ನಿಂತುಕೊಳ್ಳಲು ದೇವಗಂಧರ್ವರು ಅವನನ್ನು ಸ್ತುತಿಸಿದರು. ಹೀಗೆ ಆ ಮಹಾತ್ಮ ಸರ್ವಯಕ್ಷಧನಾಧಿಪನು ಹೋಗುತ್ತಿರಲು ರಕ್ತಾಕ್ಷರಾದ, ಬಂಗಾರದ ಬಣ್ಣದ, ಮಹಾಕಾಯ, ಮಹಾಬಲಶಾಲಿ, ಮಹಾವೀರ ಯಕ್ಷರು ಆವೇಶಗೊಂಡು ಸಾವಿರ ಸಾವಿರ ಸಂಖ್ಯೆಯಲ್ಲಿ ಆಯುಧಗಳನ್ನು ಹಿಡಿದು, ಖಡ್ಗಗಳನ್ನು ಕಟ್ಟಿಕೊಂಡು ಅವನನ್ನು ಸುತ್ತುವರೆದು ನಿಂತರು.
ಆ ಮಹಾಂತ ಸುಂದರ ಧನೇಶ್ವರನು ಹತ್ತಿರ ಬರುತ್ತಿರುವುದನ್ನು ನೋಡಿ ಪಾಂಡವರು ಹರ್ಷದಿಂದ ಪುಳಕಿತರಾದರು. ಕುಬೇರನೂ ಕೂಡ, ಕೈಗಳಲ್ಲಿ ಬಿಲ್ಲು ಖಡ್ಗಗಳನ್ನು ಹಿಡಿದಿದ್ದ ಪಾಂಡುವಿನ ಆ ಮಹಾಸಾತ್ವಿಕ ಮಹಾರಥಿ ಮಕ್ಕಳನ್ನು ಕಂಡು ಸಂತೋಷಗೊಂಡನು. ಮಹಾಜವ ಯಕ್ಷರು ಪಕ್ಷಿಗಳಂತೆ ಗಿರಿಶೃಂಗದ ಮೇಲೆ ಹಾರಿ ನಾಯಕ ಧನೇಶ್ವರನನನ್ನು ಸುತ್ತುವರೆದು ನಿಂತುಕೊಂಡರು. ಅವನು ಪಾಂಡವರಿಗೆ ಒಲವನ್ನು ತೋರಿಸುತ್ತಿರುವುದನ್ನು ನೋಡಿದ ಆ ಯಕ್ಷ-ಗಂಧರ್ವರು ಕೋಪವನ್ನು ತೊರೆದು ನಿರ್ವಿಕಾರರಾಗಿ ನಿಂತಿದ್ದರು. ಧರ್ಮವಿದ ಪಾಂಡವರಾದರೋ - ನಕುಲ, ಸಹದೇವ ಮತ್ತು ಯುಧಿಷ್ಠಿರರು -ಆ ಮಹಾತ್ಮ ಧನಾಧಿಪತಿ ಕುಬೇರನಿಗೆ ನಮಸ್ಕರಿಸಿದರು. ತಾವೇ ಅಪರಾಧಿಗಳೆಂದು ತಿಳಿದ ಆ ಮಹಾರಥಿಗಳೆಲ್ಲರೂ ಕೈಮುಗಿದು ಧನೇಶ್ವರ ಕುಬೇರನನ್ನು ಸುತ್ತುವರೆದು ನಿಂತುಕೊಂಡರು. ಧನಾಧಿಪನು ವಿಶ್ವಕರ್ಮನಿಂದ ನಿರ್ಮಿತವಾಗಿದ್ದ ಬಣ್ಣದ ಅಂಚುಗಳನ್ನು ಹೊಂದಿದ್ದ ಸುಂದರ ಪುಷ್ಪಕದಲ್ಲಿ ಕುಳಿತುಕೊಂಡಿದ್ದನು. ಅವನ ಕೆಳಗೆ ಸಹಸ್ರಾರು ಚೂಪಾಗಿದ್ದ ಕಿವಿಗಳನ್ನುಳ್ಳ ಮಹಾಕಾಯ ಯಕ್ಷ-ರಾಕ್ಷಸರು ಕುಳಿತುಕೊಂಡಿದ್ದರು. ಶತಕ್ರತು ಇಂದ್ರನನ್ನು ದೇವತೆಗಳು ಹೇಗೋ ಹಾಗೆ ನೂರಾರು ಗಂಧರ್ವ ಮತ್ತು ಅಪ್ಸರಗಣಗಳು ಅವನನ್ನು ಸುತ್ತುವರೆದು ನಿಂತಿದ್ದರು. ಶಿರದಲ್ಲಿ ಶೋಭಿಸುತ್ತಿದ್ದ ಬಂಗಾರದ ಆಭರಣವನ್ನು ಧರಿಸಿದ್ದ ಮತ್ತು ಕೈಗಳಲ್ಲಿ ಬಿಲ್ಲು, ಬಾಣ ಮತ್ತು ಖಡ್ಗವನ್ನು ಹಿಡಿದಿದ್ದ ಬೀಮಸೇನನು ತಲೆಯೆತ್ತಿ ಧನಾಧಿಪ ಕುಬೇರನನ್ನು ನೋಡಿದನು. ರಾಕ್ಷಸರಿಂದ ಘಾಯಗೊಂಡಿದ್ದರೂ ಕುಬೇರನನ್ನು ನೋಡುತ್ತಿದ್ದ ಭೀಮನಲ್ಲಿ ಭಯವಾಗಲೀ ಆಯಾಸವಾಗಲೀ ತೋರುತ್ತಿರಲಿಲ್ಲ.
ಯುದ್ಧದಲ್ಲಿ ಉತ್ಸುಕನಾಗಿ ತೀಕ್ಷ್ಣಬಾಣಗಳನ್ನು ಹಿಡಿದು ನಿಂತಿದ್ದ ಭೀಮನನ್ನು ನೋಡಿ ನರವಾಹನ ಕುಬೇರನು ಧರ್ಮಸುತ ಯುಧಿಷ್ಠಿರನನ್ನುದ್ದೇಶಿಸಿ ಹೇಳಿದನು: “ಪಾರ್ಥ! ಇರುವ ಎಲ್ಲದರ ಹಿತವನ್ನು ನೀನು ಬಯಸುತ್ತೀಯೆ ಎನ್ನುವುದನ್ನೂ ಎಲ್ಲರೂ ಬಲ್ಲರು. ಆದುದರಿಂದ ನಿನ್ನ ಬಂಧುಗಳೊಂದಿಗೆ ಈ ಪರ್ವತದ ತುದಿಯಲ್ಲಿ ನಿರ್ಭಯನಾಗಿ ವಾಸಿಸು. ಭೀಮಸೇನನೊಂದಿಗೆ ಸಿಟ್ಟಾಗಬೇಡ. ಅವರೆಲ್ಲರೂ ಕಾಲನಿಂದ ಮೊದಲೇ ಹತರಾಗಿದ್ದರು. ನಿನ್ನ ತಮ್ಮನು ಈ ಕಾರ್ಯಕ್ಕೆ ನಿಮಿತ್ತಮಾತ್ರ. ಸಾಹಸ ಕಾರ್ಯವು ನಡೆದುಹೋಯಿತಲ್ಲ ಎಂದು ನೀನು ಮನಸ್ಸು ಸಣ್ಣಮಾಡುವ ಅವಶ್ಯಕತೆಯಿಲ್ಲ. ಈ ಯಕ್ಷ-ರಾಕ್ಷಸರ ವಿನಾಶವನ್ನು ಸುರರು ಹಿಂದೆಯೇ ಕಂಡಿದ್ದರು. ನನಗೆ ಭೀಮಸೇನನ ಮೇಲೆ ಸ್ವಲ್ಪವೂ ಕೋಪವಿಲ್ಲ. ನಾನು ಸಂತೋಷಗೊಂಡಿದ್ದೇನೆ. ಈ ಹಿಂದೆಯೇ ನಾನು ಭೀಮನ ಈ ಕೃತ್ಯದಿಂದ ಸಂತೃಪ್ತನಾಗಿದ್ದೇನೆ.”
ರಾಜನಿಗೆ ಈ ರೀತಿ ಹೇಳಿ, ಭೀಮಸೇನನನ್ನು ಉದ್ದೇಶಿಸಿ ಹೇಳಿದನು: “ಮಗೂ! ನಾನು ನಿನ್ನ ಮನಸ್ಸಿನ ಮೇಲೆ ಭಾರವನ್ನು ಹೊರಿಸುವುದಿಲ್ಲ. ಕೃಷ್ಣೆಗಾಗಿ ನೀನು ನನ್ನನ್ನೂ ಮತ್ತು ದೇವತೆಗಳನ್ನೂ ಕಡೆಗೆಣಿಸಿ ನಿನ್ನದೇ ಬಾಹುಬಲವನ್ನು ಆಶ್ರಯಿಸಿ ಈ ಸಾಹಸವನ್ನು ಕೈಗೊಂಡ ನಿನ್ನ ಮೇಲೆ ನನಗೆ ಪ್ರೀತಿಯಿದೆ. ಇಂದು ನಾನು ಒಂದು ಘೋರ ಶಾಪದಿಂದ ಬಿಡುಗಡೆ ಹೊಂದಿದ್ದೇನೆ. ಹಿಂದೆ ನನ್ನ ಯಾವುದೋ ಒಂದು ಅಪರಾಧಕ್ಕಾಗಿ ಕೃದ್ಧನಾದ ಪರಮ ಋಷಿ ಅಗಸ್ತ್ಯನಿಂದ ಶಪಿಸಲ್ಪಟ್ಟಿದ್ದೆ. ಅದು ಇಂದು ಇಲ್ಲದಂತಾಯಿತು. ಈ ಶೋಕವನ್ನು ಅನುಭವಿಸುತ್ತೇನೆಂದು ನನಗೆ ಮೊದಲೇ ತಿಳಿದಿದ್ದುದರಿಂದ ಇದರಲ್ಲಿ ನಿನ್ನ ಅಪರಾಧವೇನೂ ಇಲ್ಲ.”
ಯುಧಿಷ್ಠಿರನು ಹೇಳಿದನು: “ಭಗವನ್! ಮಹಾತ್ಮ ಅಗಸ್ತ್ಯನಿಂದ ನೀನು ಹೇಗೆ ಶಪಿಸಲ್ಪಟ್ಟೆ? ನಿನ್ನ ಶಾಪದ ಕಾರಣವನ್ನು ಕೇಳಲು ಬಯಸುತ್ತೇನೆ. ಆ ಧೀಮಂತನ ಕ್ರೋಧದಿಂದ ನಿನ್ನನ್ನು ನಿನ್ನ ಸೇನೆ ಮತ್ತು ಅನುಯಾಯಿಗಳಿಂದಿಗೆ ಭಸ್ಮಮಾಡದೇ ಇದ್ದುದೇ ಒಂದು ಆಶ್ಚರ್ಯ!”
ವೈಶ್ರವಣನು ಹೇಳಿದನು: “ನರೇಶ್ವರ! ಕುಶವತಿಯಲ್ಲಿ ದೇವತೆಗಳ ಮಂತ್ರಾಲೋಚನೆ ನಡೆಯುತ್ತಿತ್ತು. ಅಲ್ಲಿಗೆ ನಾನು ವಿವಿಧ ಆಯುಧಗಳನ್ನು ಧರಿಸಿದ್ದ ಮೂರುನೂರು ಪದ್ಮ ಸಂಖ್ಯೆಗಳಷ್ಟು ಘೋರರೂಪಿ ಯಕ್ಷರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೆ. ಮಾರ್ಗದಲ್ಲಿ ನಾನಾಪಕ್ಷಿಗಣಗಳಿಂದ ಕೂಡಿದ್ದ ಹೂಬಿಟ್ಟ ಮರಗಳಿಂದ ಶೋಭಾಯಮಾನವಾಗಿದ್ದ ಯಮುನಾ ತೀರದಲ್ಲಿ ಉಗ್ರ ತಪಸ್ಸಿನಲ್ಲಿ ನಿರತನಾಗಿದ್ದ ಋಷಿಸತ್ತಮ ಅಗಸ್ತ್ಯನನ್ನು ಕಂಡೆ. ತೋಳುಗಳನ್ನು ಮೇಲಕ್ಕೆತ್ತಿ ಸೂರ್ಯನಿಗೆ ಅಭಿಮುಖನಾಗಿ ನಿಂತಿದ್ದ, ವಿಧಿವತ್ತಾಗಿ ಉರಿಸಿದ ಅಗ್ನಿಯಂತೆ ಉರಿಯುತ್ತಿರುವ ಆ ತೇಜೋರಾಶಿಯನ್ನು ಆಕಾಶದಲ್ಲಿ ಹೋಗುತ್ತಿರುವ ರಾಕ್ಷಸರ ಅಧಿಪತಿ ಶ್ರೀಮಾನ್ ಮಣಿಮತ್ ಎಂಬ ಹೆಸರಿನ ನನ್ನ ಸಖನು ನೋಡಿ ಮೂರ್ಖತನದಲ್ಲಿ, ಏನೂ ತಿಳಿಯದವನಂತೆ ವರ್ತಿಸುತ್ತಾ ದರ್ಪ ಮತ್ತು ಮೋಹದಿಂದ ಆ ಮಹರ್ಷಿಯ ನೆತ್ತಿಯಮೇಲೆ ಉಗುಳಿದನು. ಸರ್ವದಿಕ್ಕುಗಳನ್ನು ಸುಟ್ಟುಬಿಡುವನೋ ಎನ್ನುವಷ್ಟು ಕೋಪದಿಂದ ಅವನು ನನಗೆ ಹೇಳಿದನು: “ಧನೇಶ್ವರ! ನಿನ್ನ ಈ ಸಖನು ನನ್ನನ್ನು ಕಡೆಗೆಣಿಸಿ ನೀನು ನೋಡುತ್ತಿರುವಾಗಲೇ ಈ ಅಪರಾಧವನ್ನು ಎಸಗಿದುದಕ್ಕಾಗಿ ಅವನು ತನ್ನ ಸೈನ್ಯದೊಂದಿಗೆ ಮನುಷ್ಯನಿಂದ ಸಾವನ್ನು ಹೊಂದುತ್ತಾನೆ. ದುರ್ಮತಿಯಾದ ನೀನು ಕೂಡ ಈ ಸೇನೆಯ ನಾಶದಿಂದ ದುಃಖವನ್ನು ಪಡೆಯುತ್ತೀಯೆ. ಆದರೆ ಆ ಮನುಷ್ಯನನ್ನು ನೋಡಿದಾಕ್ಷಣ ಈ ದೋಷದಿಂದ ಮುಕ್ತಿಯನ್ನು ಹೊಂದುತ್ತೀಯೆ. ಆದರೆ ಈ ಸೇನೆಯ ಮಕ್ಕಳು ಮತ್ತು ಮೊಮ್ಮಕ್ಕಳು ಈ ಶಾಪಕ್ಕೆ ಗುರಿಯಾಗುವುದಿಲ್ಲ. ಅದು ನಿನ್ನ ಆಜ್ಞೆಯಂತೆ ನಡೆದುಕೊಳ್ಳುತ್ತದೆ. ಹೋಗು!” ಹಿಂದೆ ಆ ಋಷಿಸತ್ತಮನಿಂದ ನನಗೆ ಇದೇ ಶಾಪವು ದೊರೆತಿತ್ತು. ನಿನ್ನ ತಮ್ಮ ಭೀಮನು ಅದರಿಂದ ಬಿಡುಗಡೆ ದೊರಕಿಸಿದನು.
“ಯುಧಿಷ್ಠಿರ! ಧೃತಿ, ದಕ್ಷತೆ, ದೇಶ, ಕಾಲ ಮತ್ತು ಪರಾಕ್ರಮ ಈ ಐದು ವಿಧಗಳನ್ನು ಲೋಕತಂತ್ರಗಳೆಂದು ತಿಳಿಯಬಹುದು. ಕೃತಯುಗದಲ್ಲಿ ಮನುಷ್ಯರು ತಮ್ಮ ತಮ್ಮ ಕಾರ್ಯಗಳಲ್ಲಿ ಧೃತಿಮಂತರೂ, ದಕ್ಷರೂ, ಪರಾಕ್ರಮಿಗಳೂ, ಮತ್ತು ವಿಧಾನಗಳನ್ನು ತಿಳಿದವರೂ ಆಗಿದ್ದರು. ಧೃತಿಮಂತ, ದೇಶಕಾಲಗಳನ್ನು ತಿಳಿದವನು ಸರ್ವಧರ್ಮಗಳನ್ನು ತಿಳಿದಿರುತ್ತಾನೆ ಮತ್ತುಅಂಥಹ ಕ್ಷತ್ರಿಯನು ಪೃಥ್ವಿಯನ್ನು ಆಳುತ್ತಾನೆ. ಸರ್ವಕರ್ಮಗಳಲ್ಲಿ ಹೀಗೆ ನಡೆದುಕೊಳ್ಳುವ ಪುರುಷನು ಲೋಕದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಮತ್ತು ಸಾವಿನನಂತರ ಸದ್ಗತಿಯನ್ನು ಪಡೆಯುತ್ತಾನೆ. ವೃತ್ರಹ ಶಕ್ರನು ದೇಶಕಾಲಗಳ ಅವಕಾಶವನ್ನು ಆಧರಿಸಿ ಪರಾಕ್ರಮದಿಂದ ನಡೆದುಕೊಂಡು, ವಸುಗಳೊಂದಿಗೆ ತ್ರಿದಿವ ರಾಜ್ಯವನ್ನು ಪಡೆದನು. ಪಾಪವನ್ನೇ ಅನುಸರಿಸುವ ಪಾಪಾತ್ಮ ಪಾಪಬುದ್ಧಿಯು ಕರ್ಮಫಲವನ್ನು ತಿಳಿಯದೇ ಇಲ್ಲಿ ಮತ್ತು ನಂತರದಲ್ಲಿ ನಾಶವನ್ನು ಹೊಂದುತ್ತಾನೆ. ಅಕಾಲಜ್ಞನು ಕಾರ್ಯಗಳ ವ್ಯತ್ಯಾಸವನ್ನು ತಿಳಿಯದೇ ಪ್ರಾರಂಭಿಸಿದುದೆಲ್ಲವನ್ನೂ ಕಳೆದುಕೊಳ್ಳುತ್ತಾನೆ ಮತ್ತು ಇಲ್ಲಿ ಹಾಗೂ ನಂತರ ನಾಶವನ್ನು ಹೊಂದುತ್ತಾನೆ. ಹಾಗಿನ ಮೋಸಗಾರ ದುರಾತ್ಮರು ಸಾಹಸದಲ್ಲಿಯೇ ತೊಡಗಿರುತ್ತಾರೆ ಮತ್ತು ಸರ್ವ ಸಾಮಾರ್ಥ್ಯವನ್ನೂ ಸೇರಿಸಿ ಪಾಪದಲ್ಲಿ ತೊಡಗಿರುತ್ತಾರೆ. ನಿನ್ನ ನಿರ್ಭಯಿ ಭೀಮಸೇನನು ಧರ್ಮವನ್ನು ತಿಳಿದಿಲ್ಲ. ಹಿಂಸೆಗಳಲ್ಲಿ ತೊಡಗುತ್ತಾನೆ. ಬಾಲಬುದ್ಧಿಯುಳ್ಳವನು ಮತ್ತು ದುರ್ಬಲಮನಸ್ಸಿನವನು. ಅವನಿಗೆ ಉಪದೇಶಮಾಡು. ರಾಜರ್ಷಿ ಆರ್ಷ್ಟಿಷೇಣನ ಆಶ್ರಮಕ್ಕೆ ಹಿಂದಿರುಗಿ ಅಲ್ಲಿಯೇ ಕೃಷ್ಣಪಕ್ಷದಲ್ಲಿ ಶೋಕ-ಭಯಗಳನ್ನು ಕಳೆದು ವಾಸಿಸು. ಈ ಗಿರಿವಾಸಿಗಳು ಅಲಕರು, ಗಂಧರ್ವರು, ಯಕ್ಷರು, ಮತ್ತು ರಾಕ್ಷಸರು ನನ್ನ ಅಪ್ಪಣೆಯಂತೆ ಈ ಬ್ರಾಹ್ಮಣರೊಂದಿಗೆ ನಿನ್ನನ್ನು ರಕ್ಷಿಸುತ್ತಾರೆ. ಈ ನಿನ್ನ ಭೀಮನು ಗಿರಿಯಲ್ಲಿ ಸಾಹಸ ಮಾಡುತ್ತಿದ್ದಾನೆ. ಅವನನ್ನು ನೀನು ತಡೆಹಿಡಿಯಬೇಕು. ಇನ್ನು ಮುಂದೆ ವನಗೋಚರರು ಎಲ್ಲರೂ ನಿನ್ನನ್ನು ನೋಡಿಕೊಳ್ಳುತ್ತಾರೆ ಮತ್ತು ಸದಾ ರಕ್ಷಿಸುತ್ತಾರೆ. ನನ್ನವರು ನಿನಗೆ ನೀಡುವ ರುಚಿಯಾಗಿರುವ ಬಹುತರಹದ ಅನ್ನಪಾನೀಯಗಳನ್ನು ಸ್ವೀಕರಿಸು. ಇಂದ್ರನಿಂದ ಅರ್ಜುನ, ವಾಯುವಿನಿಂದ ಭೀಮ ಮತ್ತು ಧರ್ಮನಿಂದ ಯೋಗದಲ್ಲಿ ನಿಜಸುತನಾಗಿ ಜನಿಸಿದ ನೀನು, ಮತ್ತು ಅಶ್ವಿನೀ ದೇವತೆಗಳ ಆತ್ಮಸಂಪನ್ನರಾದ ನಕುಲ-ಸಹದೇವರು ನೀವೆಲ್ಲರೂ ಇಲ್ಲಿಯೂ ಕೂಡ ನನ್ನ ರಕ್ಷಣೆಯಲ್ಲಿ ಇರುತ್ತೀರಿ. ಭೀಮಸೇನನ ತಮ್ಮ ಫಲ್ಗುನ ಅರ್ಜುನನು ಅರ್ಥತತ್ವಗಳ ವಿಭಾಗಗಳನ್ನು ತಿಳಿದಿದ್ದಾನೆ. ಸರ್ವಧರ್ಮಗಳ ವಿಶೇಷತೆಗಳನ್ನು ತಿಳಿದಿದ್ದಾನೆ. ಮತ್ತು ಸ್ವರ್ಗದಲ್ಲಿ ಪರಿಣಿತನಾಗುತ್ತಿದ್ದಾನೆ. ಲೋಕಗಳಲ್ಲಿ ಅಗ್ರರು ಮತ್ತು ಪರಮ ಸಂಪದರೆನ್ನುವವರು ಯಾರೆಲ್ಲ ಇದ್ದಾರೋ ಅವರು ಎಲ್ಲರೂ ಹುಟ್ಟಿನಿಂದಲೇ ಅರ್ಜುನನನ್ನು ನೋಡಿಕೊಳ್ಳುತ್ತಿದ್ದಾರೆ. ದಮ, ದಾನ, ಬಲ, ಬುದ್ಧಿ, ಧೃತಿ, ತೇಜಸ್ಸು ಮತ್ತು ಇನ್ನೂ ಇತರ ಮಹಾಸತ್ವಗಳು ಆ ಅಮಿತ ತೇಜಸ್ವಿ ಉತ್ತಮ ಅರ್ಜುನನಲ್ಲಿವೆ. ಅರ್ಜುನನು ಮೋಹದಿಂದ ಏನನ್ನೂ ಮಾಡುವುದಿಲ್ಲ. ಅವನು ಮೂಢತನದಿಂದಲೂ ಏನನ್ನೂ ಮಾಡುವುದಿಲ್ಲ. ಮತ್ತು ಅರ್ಜುನನು ಸುಳ್ಳನ್ನಾಡಿದನೆಂದು ಜನರು ಯಾರೂ ಇತರರೊಂದಿಗೆ ಹೇಳಿದುದಿಲ್ಲ. ಕುರುಗಳ ಕೀರ್ತಿವರ್ಧನ ಅರ್ಜುನನು ದೇವತೆಗಳು, ಪಿತೃಗಳು ಮತ್ತು ಗಂಧರ್ವರಿಂದ ಗೌರವಸಲ್ಪಟ್ಟು ಇಂದ್ರನ ಸನ್ನಿಧಿಯಲ್ಲಿ ಅಸ್ತ್ರಾಭ್ಯಾಸವನ್ನು ಮಾಡುತ್ತಿದ್ದಾನೆ. ಧರ್ಮದಿಂದ ಸರ್ವ ರಾಜರನ್ನೂ ವಶದಲ್ಲಿಟ್ಟುಕೊಂಡಿದ್ದ ನಿನ್ನ ತಂದೆಯ ಅಜ್ಜ ಮಹಾತೇಜಸ್ವಿ ಶಂತನುವು ಸ್ವರ್ಗದಲ್ಲಿ ಗಾಂಡೀವ ಧನುಸ್ಸನ್ನು ಹಿಡಿದಿರುವ ಅರ್ಜುನನಿಂದ ಸಂತೋಷಗೊಂಡಿದ್ದಾನೆ. ಆ ಮಹಾವೀರ, ಕುಲವನ್ನು ಹೊತ್ತಿರುವ, ಪಿತೃಗಳು, ದೇವತೆಗಳು ಮತ್ತು ಬ್ರಾಹ್ಮಣರನ್ನು ಪೂಜಿಸಿ ಯಮುನಾ ತೀರದಲ್ಲಿ ಏಳು ಮುಖ್ಯವಾದ ಮಹಾ ಯಜ್ಞಗಳನ್ನು ನಡೆಸಿ ಮಹಾಯಶಸ್ವಿಯಾಗಿ ಸ್ವರ್ಗವನ್ನು ಗೆದ್ದು ಈಗ ಇಂದ್ರಲೋಕದಲ್ಲಿ ವಾಸಿಸುತ್ತಿರುವ ನಿನ್ನ ಮುತ್ತಜ್ಜ ಅಧಿರಾಜ ಶಂತನುವು ನಿನ್ನ ಆರೋಗ್ಯದ ಕುರಿತು ಕೇಳಿದ್ದಾನೆ.”
ಅನಂತರ ವೃಕೋದರ ಭೀಮಸೇನನು ಶಕ್ತಿ, ಗದೆ, ಖಡ್ಗ ಮತ್ತು ಧನುಸ್ಸನ್ನು ಕೆಳಗಿಟ್ಟು ಕುಬೇರನಿಗೆ ನಮಸ್ಕರಿಸಿದನು. ಆಗ ಆ ಶರಣ್ಯ ಧನಾದ್ಯಕ್ಷ ಕುಬೇರನು ಶರಣಾಗತನಾದ ಭೀಮನಿಗೆ ಹೇಳಿದನು: “ಶತ್ರುಗಳ ಮಾನಭಂಗ ಮಾಡು ಮತ್ತು ಸುಹೃದಯರ ಆನಂದವನ್ನು ಹೆಚ್ಚಿಸು. ಶತ್ರುತಾಪನರೇ! ಈ ಸುಂದರ ಮನೆಗಳಲ್ಲಿ ವಾಸಿಸಿ. ಯಕ್ಷರು ನಿಮ್ಮ ಕಾಮನೆಗಳನ್ನು ಪೂರೈಸುತ್ತಾರೆ. ಶೀಘ್ರದಲ್ಲಿಯೇ ಆ ಪುರುಷರ್ಷಭ ಗುಡಾಕೇಶ ಧನಂಜಯ ಅರ್ಜುನನು ಅಸ್ತ್ರಗಳನ್ನು ಕಲಿತು, ಸಾಕ್ಷಾತ್ ಮಘವತ ಇಂದ್ರನಿಂದ ಬೀಳ್ಕೊಂಡು ಬಂದು ಸೇರುತ್ತಾನೆ.”
ಈ ರೀತಿ ಉತ್ತಮಕರ್ಮಿ ಯುಧಿಷ್ಠಿರನಿಗೆ ಉಪದೇಶಗಳನ್ನಿತ್ತು ಆ ಗುಹ್ಯಕಾಧಿಪ ಕುಬೇರನು ಪರ್ವತಗಳಲ್ಲಿ ಅಂತರ್ಧಾನನಾದನು. ಅವನನ್ನು ಸಹಸ್ರಾರು ಯಕ್ಷರೂ ರಾಕ್ಷಸರೂ ನಾನಾ ರತ್ನಗಳಿಂದ ಸಿಂಗರಿಸಲ್ಪಟ್ಟ ರಥಸಂಕುಲಗಳನ್ನೇರಿ ಹಿಂಬಾಲಿಸಿ ಹೋದರು. ಕುಬೇರನ ಮನೆಗೆ ಹೋಗುವ ಐರಾವತದ ದಾರಿಯಲ್ಲಿ ಹೋಗುತ್ತಿರುವ ಪರಮಾಶ್ವಗಳು ಪಕ್ಷಿಗಳಂತೆ ಶಬ್ಧಮಾಡುತ್ತಾ ಸಾಗಿದವು. ಧನಾಧಿಪತಿ ಕುಬೇರನ ಆ ಕುದುರೆಗಳು ಒಂದು ಸಾಲಿನಲ್ಲಿ ಆಕಾಶವನ್ನೇರಿ ಮಿಂಚಿನಂತೆ ಪ್ರಕಾಶಿಸುತ್ತಾ ಗಾಳಿಯನ್ನು ಏರಿ ಸಾಗಿದವು. ಅನಂತರ ಧನಾಧಿಪತಿ ಕುಬೇರನ ಆಜ್ಞೆಯಂತೆ ಸಾವನ್ನಪ್ಪಿದ್ದ ಆ ರಾಕ್ಷಸರ ಶರೀರಗಳನ್ನು ಎಳೆದು ಪರ್ವತಗಳ ಮೇಲೆ ಹಾಕಲಾಯಿತು. ಮಣಿಮತನೊಂದಿಗೆ ಅವರೆಲ್ಲರಿಗೂ ಧೀಮಂತ ಅಗಸ್ತ್ಯಮುನಿಯ ಶಾಪಕಾಲವು ಪ್ರಾಪ್ತವಾಗಿತ್ತು. ಮಹಾತ್ಮ ಪಾಂಡವರು ಅಲ್ಲಿಯ ಮನೆಗಳಲ್ಲಿ ಎಲ್ಲ ರಾಕ್ಷಸರಿಂದ ಪೂಜಿತರಾಗಿ ಸುಖದಿಂದ ನಿರ್ಭೀತರಾಗಿ ರಾತ್ರಿಯನ್ನು ಕಳೆದರು.
ಮಂದರ-ಮೇರು ದರ್ಶನ
ಅನಂತರ ಸೂರ್ಯೋದಯದಲ್ಲಿ ಆಹ್ನೀಕವನ್ನು ಪೂರೈಸಿ ಧೌಮ್ಯನು ಆರ್ಷ್ಟಿಷೇಣನೊಂದಿಗೆ ಪಾಂಡವರಲ್ಲಿಗೆ ಬಂದನು. ಅವರು ಆರ್ಷ್ಟಿಷೇಣನ ಮತ್ತು ಧೌಮ್ಯನ ಪಾದಗಳಿಗೆ ವಂದಿಸಿ, ಕೈಜೋಡಿಸಿ ಅಲ್ಲಿದ್ದ ಬ್ರಾಹ್ಮಣರೆಲ್ಲರಿಗೂ ನಮಸ್ಕರಿಸಿದರು. ಆಗ ಮಹರ್ಷಿ ಧೌಮ್ಯನು ಯುಧಿಷ್ಠಿರನ ಬಲಗೈಯನ್ನು ಹಿಡಿದು ಪೂರ್ವದಿಕ್ಕನ್ನು ನೋಡುತ್ತಾ ಹೇಳಿದನು: “ಮಹಾರಾಜ! ಅದು ಸಾಗರಪರ್ಯಂತದ ಭೂಮಿಯನ್ನು ಆವರಿಸಿ ವಿರಾಜಿಸಿ ನಿಂತಿರುವ ಶೈಲರಾಜ ಮಂದರ! ಇಂದ್ರ ಮತ್ತು ವೈಶ್ರವಣರು ಪರ್ವತ, ವನ ಕಾನನಗಳಿಂದ ಶೋಭಿತ ಈ ದಿಕ್ಕನ್ನು ರಕ್ಷಿಸುತ್ತಾರೆ. ಇದು ಮಹೇಂದ್ರ ಮತ್ತು ರಾಜ ವೈಶ್ರವಣನ ಪೀಠವೆಂದು ಸರ್ವಧರ್ಮಗಳನ್ನು ತಿಳಿದ ಬುದ್ಧಿವಂತ ಋಷಿಗಳುಹೇಳಿದ್ದಾರೆ. ಇಲ್ಲಿಂದ ಉದಯಿಸುವ ಆದಿತ್ಯನನ್ನು ಪ್ರಜೆಗಳು, ಋಷಿಗಳು, ಧರ್ಮಜ್ಞರು, ಸಿದ್ಧರು, ಸಾಧ್ಯರು ಮತ್ತು ದೇವತೆಗಳೂ ಕೂಡ ಪೂಜಿಸುತ್ತಾರೆ. ಎಲ್ಲ ಜೀವಿಗಳ ಪ್ರಭು, ಧರ್ಮಾತ್ಮ ಯಮರಾಜನು ಪ್ರೇತಸತ್ವಗಳ ದಾರಿಯಾದ ಈ ದಕ್ಷಿಣ ದಿಕ್ಕನ್ನು ಪಾಲಿಸುತ್ತಾನೆ. ಇದು ಪುಣ್ಯ, ಅತೀವ ಅದ್ಭುತವಾಗಿ ಕಾಣುವ, ಪರಮ ಐಶ್ವರ್ಯದಿಂದ ಕೂಡಿದ ಪ್ರೇತರಾಜನ ಭವನ ಸಂಯಮನ. ಸೂರ್ಯನು ತಲುಪಿ ಸತ್ಯದಲ್ಲಿ ನೆಲೆಗೊಳ್ಳುವ ಇದನ್ನು ಅಸ್ತಪರ್ವತರಾಜನೆಂದು ತಿಳಿದವರು ಹೇಳುತ್ತಾರೆ. ಈ ಪರ್ವತರಾಜ ಮತ್ತು ಮಹೋದಧಿ ಸಮುದ್ರದಲ್ಲಿಯೂ ನೆಲೆಗೊಂಡು ರಾಜ ವರುಣನು ಇರುವವನ್ನು ರಕ್ಷಿಸುತ್ತಾನೆ. ಉತ್ತರ ದಿಕ್ಕಿನಲ್ಲಿ ಬ್ರಹ್ಮವಿದರ ದಾರಿಯಾದ ಪ್ರಸಿದ್ಧ ಮಂಗಳಕರ ಮಹಾಮೇರುವು ಬೆಳಗುತ್ತ ನಿಂತಿದೆ. ಅದರ ಮೇಲೆ ಪ್ರಜಾಪತಿ ಬ್ರಹ್ಮನ ಸದನವು ನಿಂತಿದೆ. ಅಲ್ಲಿ ಪ್ರಜಾಪತಿ, ಭೂತಾತ್ಮನು ಚಲಿಸುವ ಮತ್ತು ನಿಂತಿರುವ ಎಲ್ಲವನ್ನೂ ಸೃಷ್ಟಿಸುತ್ತಾ ಇರುವನು. ಅಲ್ಲಿಯೇ ಬ್ರಹ್ಮನ ಮಾನಸಪುತ್ರರಲ್ಲಿ ಏಳನೆಯವನಾದ ದಕ್ಷನ ಯಾನ, ಮಂಗಳವೂ ಅನಾಮಯವೂ ಆದ ಮಹಾಮೇರುವಿನ ಸ್ಥಾನವಿದೆ. ಅಲ್ಲಿಯೇ ಅತ್ರಿಯೇ ಮೊದಲಾದ ಸಪ್ತದೇವರ್ಷಿಗಳೂ, ಮಸಿಷ್ಠ ಪ್ರಮುಖರೂ ಸದಾ ಪ್ರತಿಷ್ಠಿತರಾಗಿರುತ್ತಾರೆ. ಆತ್ಮತೃಪ್ತರಾದ ದೇವತೆಗಳೊಂದಿಗೆ ಪಿತಾಮಹನಿರುವ, ವಿರಾಜಿಸುತ್ತಿರುವ ಉತ್ತಮ ಮೇರು ಶಿಖರವನ್ನು ನೋಡು. ಬ್ರಹ್ಮನ ಸದನದ ನಂತರ ಪ್ರಕಾಶಿಸುವ ಸ್ಥಾನವು ಪ್ರಕೃತಿಯ ಸರ್ವಭೂತಗಳ ಅಂತಿಮ ಕಾರಣನಾದ ಅನಾದಿನಿಧನ, ದೇವ, ಪ್ರಭೂ ನಾರಾಯಣನ ಪರಮ ಸ್ಥಾನ. ಆ ತೇಜೋಮಯವಾದ ಮಂಗಳಕರ ದಿವ್ಯ ಸ್ಥಾನವನ್ನು ನೋಡಲು ದೇವತೆಗಳೂ ಪ್ರಯತ್ನಪಡಬೇಕಾಗುತ್ತದೆ. ಸೂರ್ಯ ಮತ್ತು ಅಗ್ನಿಗಳಿಗಿಂತಲೂ ಹೆಚ್ಚಾಗಿ ಬೆಳಗುವ ಆ ಮಹಾತ್ಮ ವಿಷ್ಣುವಿನ ಸ್ಥಾನವನ್ನು ಅದರ ಪ್ರಭೆಯ ಕಾರಣದಿಂದಲೇ ದೇವದಾನವರಿಗೂ ನೋಡಲು ಕಷ್ಟವಾಗುತ್ತದೆ. ಅಲ್ಲಿಗೆ ತಲುಪಿದಾಗ ಪ್ರಭಾಯುಕ್ತ ದೇವತೆಗಳೆಲ್ಲರೂ ಹೊಳೆಯುವುದಿಲ್ಲ. ಏಕೆಂದರೆ ಎಲ್ಲರಿಗಿಂತ ಹೆಚ್ಚಾಗಿ ಅವನೇ ಹೊಳೆದು ವಿರಾಜಿಸುತ್ತಿರುತ್ತಾನೆ. ಯತಿಗಳು ಪರಮ ತಪಸ್ಸಿನ ಫಲಗಳೊಂದಿಗೆ ಮತ್ತು ಶುಭ ಕರ್ಮಗಳ ಭಾವಗಳೊಂದಿಗೆ ಭಕ್ತಿಯಿಂದ ಹರಿ ನಾರಾಯಣನಲ್ಲಿಗೆ ಹೋಗುತ್ತಾರೆ. ಯೋಗಸಿದ್ಧರು ತಮೋಮೋಹವಿವರ್ಜಿತ ಮಹಾತ್ಮರು ಅಲ್ಲಿಗೆ ಹೋಗಿ ಪುನಃ ಈ ಲೋಕಕ್ಕೆ ಹಿಂದಿರುಗುವುದಿಲ್ಲ. ಈಶ್ವರನ ಈ ಸ್ಥಳವು ಅಕ್ಷಯವೂ ಅವ್ಯವವೂ ಆದುದು. ಆದುದರಿಂದ ಇದಕ್ಕೆ ಸದಾ ಪ್ರಣಾಮಮಾಡು. ಕತ್ತಲೆಯನ್ನು ದೂರಮಾಡುವ ಭಗವಾನ್ ಆದಿತ್ಯನೂ ಕೂಡ ಎಲ್ಲ ರಾಶಿಗಳೊಡಗೂಡಿ ಇದರ ಪ್ರದಕ್ಷಿಣೆ ಮಾಡುತ್ತಾನೆ. ವಿಭಾವಸು ದಿವಾಕರನು ಅಸ್ತವನ್ನು ತಲುಪಿ ಸಂಧ್ಯೆಯನ್ನು ದಾಟಿ ಉತ್ತರ ದಿಶೆಯಲ್ಲಿ ಪ್ರಯಾಣಿಸುತ್ತಾನೆ. ಸರ್ವ ಭೂತಹಿತ ರತನಾದ ಆ ಸವಿತಾ ದೇವನು ಮೇರುವನ್ನು ಸುತ್ತುವರೆದು ಪುನಃ ಪೂರ್ವಮುಖನಾಗುತ್ತಾನೆ. ಇದೇ ರೀತಿ ಭಗವಾನ್ ಸೋಮನೂ ಕೂಡ ನಕ್ಷತ್ರಗಳೊಡನೆ ಕಾಲವನ್ನು ಮಾಸವಾಗಿಯೂ, ಮಾಸವನ್ನು ಪರ್ವಗಳಾಗಿಯೂ ವಿಂಗಡಿಸುತ್ತಾ ಹೋಗುತ್ತಾನೆ. ಹೀಗೆ ಮಹಾಮೇರುವನ್ನು ಸುತ್ತುವರೆದು ಸೂರ್ಯನು ಸರ್ವಭೂತಗಳಿಗೆ ಒಳಿತನ್ನು ಮಾಡಲು ಮಂದರಕ್ಕೆ ಪುನಃ ಹೋಗುತ್ತಾನೆ. ಹೀಗೆ ತನ್ನ ಕಿರಣಗಳಿಂದ ಜಗತ್ತಿನ ಕತ್ತಲೆಯನ್ನು ಕಳೆದು ಒಳಿತನ್ನು ಮಾಡುವ ದೇವ ಆದಿತ್ಯನು ಬೇರೆ ಯಾರೂ ಪ್ರಯಾಣಿಸದ ಅದೇ ದಾರಿಯಲ್ಲಿ ಸುತ್ತುವರೆಯುತ್ತಾನೆ. ಛಳಿಗಾಲವನ್ನುಂಟುಮಾಡಲು ಅವನು ದಕ್ಷಿಣಪಥವನ್ನು ಹಿಡಿಯುತ್ತಾನೆ. ಆ ಕಾಲವನ್ನು ಎಲ್ಲರೂ ಶಿಶಿರವೆಂದು ಕರೆಯುತ್ತಾರೆ. ಹಿಂದುರಿಗಿದಾಗ ಆ ವಿಭಾವಸುವು ತನ್ನ ತೇಜಸ್ಸನ್ನು ಪುನಃ ಪಡೆದುಕೊಂಡು ಎಲ್ಲ ಸ್ಥಾವರ ಜಂಗಮಗಳನ್ನು ಸುಡುತ್ತಾನೆ. ಆಗ ನರರು ಮತ್ತು ಇತರ ಪ್ರಾಣಿಗಳು ಬೆವರು, ಬಳಲಿಕೆ, ಸೋಮಾರಿತನ ಮತ್ತು ಸುಸ್ತನ್ನು ಅನುಭವಿಸಿ ಸತತವೂ ನಿದ್ದೆಯನ್ನು ಬಯಸುತ್ತಾರೆ. ಹೀಗೆ ಭಗವಾನ್ ಸೂರ್ಯನು ವರ್ಣಿಸಲಸಾಧ್ಯವಾದ ದಾರಿಯನ್ನು ಪ್ರಯಾಣಿಸಿ, ಪುನಃ ಮಳೆಯನ್ನು ಸುರಿಸಿ, ಎಲ್ಲ ಪ್ರಜೆಗಳಿಗೂ ಒಳಿತುಮಾಡುತ್ತಾನೆ. ಮಳೆ-ಗಾಳಿಗಳನ್ನು ಸುರಿಸಿ ಸ್ಥಾವರ ಜಂಗಮಗಳ ಸುಖವನ್ನು ಹೆಚ್ಚಿಸಿ ಆ ಸುಮಹಾತೇಜಸ್ವಿಯು ಪುನಃ ತಿರುಗುತ್ತಾನೆ. ಹೀಗೆ ಸ್ವಲ್ಪವೂ ಆಯಾಸಗೊಳ್ಳದೇ ಈ ಕಾಲಚಕ್ರದ ದಾರಿಯನ್ನು ಹಿಡಿದು ಸರ್ವಭೂತಗಳನ್ನೂ ತನ್ನೊಂದಿಗೆ ಎಳೆದುಕೊಂಡು ಸೂರ್ಯನು ಸಂಚರಿಸುತ್ತಾನೆ. ಇವನು ಒಮ್ಮೆಯೂ ಸ್ಥಿರವಾಗಿ ನಿಲ್ಲದೇ ಎಲ್ಲರಿಗೂ ತೇಜಸ್ಸನ್ನು ನೀಡುತ್ತಾ ಪುನಃ ಹಿಂದೆ ತೆಗೆದುಕೊಳ್ಳುತ್ತಾ ಸತತವಾಗಿ ಸಂಚರಿಸುತ್ತಿರುತ್ತಾನೆ. ಸರ್ವಭೂತಗಳ ಆಯಸ್ಸು ಮತ್ತು ಕರ್ಮಗಳನ್ನು ಅಳೆಯುತ್ತಾ ಸೂರ್ಯದೇವನು ಸದಾ ಹಗಲು-ರಾತ್ರಿಗಳನ್ನು ಋತುಗಳನ್ನೂ ಸೃಷ್ಟಿಸುತ್ತಿರುತ್ತಾನೆ.”