ಪಾಂಡವರ ದ್ವೈತವನ ಪ್ರವೇಶ; ಮಾರ್ಕಂಡೇಯನ ಆಗಮನ; ದಾಲ್ಭ್ಯನ ಉಪದೇಶ
ದ್ವೈತವನ ಪ್ರವೇಶ
ದಾಶಾರ್ಹಾಧಿಪತಿಯು ಹೊರಟುಹೋದ ನಂತರ ಭೂತಪತಿ ಪ್ರಕಾಶ, ವೀರ ಯುಧಿಷ್ಠಿರ, ಭೀಮಸೇನಾರ್ಜುನರು ಮತ್ತು ಯಮಳರು ಕೃಷ್ಣೆ ಮತ್ತು ಪುರೋಹಿತನೊಡನೆ ಪರಮ ಅಶ್ವಗಳಿಂದೊಡಗೂಡಿದ, ಬೆಲೆಬಾಳುವ ರಥವನ್ನೇರಿ, ವನಕ್ಕೆ ಹೊರಟರು. ಹೊರಡುವಾಗ ಶಿಕ್ಷಾಕ್ಷರಮಂತ್ರವಿಧ್ಯೆಗಳ ಬ್ರಾಹ್ಮಣರಿಗೆ ಚಿನ್ನದ ನಾಣ್ಯಗಳನ್ನೂ ವಸ್ತ್ರ- ಗೋವುಗಳನ್ನೂ ದಾನವನ್ನಾಗಿ ನೀಡಿದರು. ಇಪ್ಪತ್ತು ಶಸ್ತ್ರಧಾರಿಗಳು ಮುಂದೆ ನಡೆದರು ಮತ್ತು ಧನಸ್ಸು, ಕವಚಗಳು, ಲೋಹದ ಬಾಣಗಳು, ಉಪಕರಣಗಳು ಎಲ್ಲವನ್ನೂ ಎತ್ತಿಕೊಂಡು ಹಿಂದೆ ನಡೆದರು. ಅನಂತರ ಸಾರಥಿ ಇಂದ್ರಸೇನನು ಬೇಗನೇ ರಾಜಪುತ್ರಿಯ ವಸ್ತ್ರಗಳನ್ನು, ದಾಸಿಗಳನ್ನು, ವಿಭೂಷಣಗಳನ್ನು ಒಟ್ಟುಮಾಡಿ ರಥದ ಹಿಂದೆ ತೆಗೆದುಕೊಂಡು ಬಂದನು. ಪೌರರು ಕುರುಶ್ರೇಷ್ಠನ ಬಳಿ ಹೋದರು ಮತ್ತು ದೀನಸತ್ವರಾಗಿ ಅವನನ್ನು ಪ್ರದಕ್ಷಿಣೆಮಾಡಿದರು. ಬ್ರಾಹ್ಮಣರು ಪ್ರಸನ್ನರಾಗಿ ಅವನನ್ನು ಮತ್ತು ಕುರುಜಂಗಲದ ಮುಖ್ಯರೆಲ್ಲರನ್ನೂ ಅಭಿವಂದಿಸಿದರು. ಧರ್ಮರಾಜನೂ ಕೂಡ ಪ್ರಸನ್ನನಾಗಿ ತನ್ನ ಭ್ರಾತೃಗಳೊಂದಿಗೆ ಅವರಿಗೆ ಅಭಿವಂದಿಸಿದನು. ಅಲ್ಲಿಯೇ ನಿಂತು ಅಧಿಪತಿ ಮಹಾತ್ಮನು ಕುರುಜಂಗಲದ ಜನರಾಶಿಯನ್ನು ನೋಡಿದನು. ಆ ಮಹಾತ್ಮ ಕುರುವೃಷಭನು ಒಬ್ಬ ತಂದೆಯು ತನ್ನ ಮಕ್ಕಳಲ್ಲಿ ತೋರಿಸುವ ಭಾವವನ್ನು ತೋರಿಸಿದನು. ಅವರೂ ಕೂಡ ಆ ಭರತಪ್ರಮುಖನಿಗೆ ಪುತ್ರರು ತಂದೆಗೆ ಹೇಗೋ ಹಾಗೆ ಇದ್ದರು. ಅಲ್ಲಿ ಕುರುಪ್ರವೀರನನ್ನು ಸುತ್ತುವರೆದು “ಹಾ ನಾಥ! ಹಾ ಧರ್ಮ!” ಎಂದು ಹೇಳುತ್ತಾ ಅತಿ ದೊಡ್ಡ ಜನಸಂದಣಿಯೇ ಸೇರಿ ನಿಂತಿದ್ದವರ ಎಲ್ಲರ ಮುಖದಲ್ಲಿ ನಾಚಿಕೆ ಮತ್ತು ಕಣ್ಣೀರಿತ್ತು.
“ಕುರುಗಳ ಶ್ರೇಷ್ಠ ಅಧಿಪತಿ! ಪುತ್ರರನ್ನು ತೊರೆದು ಹೋಗುವ ತಂದೆಯಂತೆ ನೀನು ನಮ್ಮನ್ನು ಬಿಟ್ಟು ಹೊರಟು ಹೋಗುತ್ತಿದ್ದೀಯೆ! ನಗರ ಮತ್ತು ಗ್ರಾಮೀಣ ಪ್ರಜೆಗಳನ್ನು ಎಲ್ಲರನ್ನೂ ತೊರೆದು ಧರ್ಮರಾಜ ನೀನು ಎಲ್ಲಿಗೆ ಹೋಗುತ್ತೀಯೆ? ಅತ್ಯಂತ ಕೆಟ್ಟ ಬುದ್ಧಿಯ ಧಾರ್ತರಾಷ್ಟ್ರ, ಜೊತೆಗೆ ಸೌಬಲ, ಮತ್ತು ಪಾಪಮತಿ ಕರ್ಣನಿಗೆ ಧಿಕ್ಕಾರ! ಧರ್ಮನಿತ್ಯನಾದ ನಿನಗೆ ಪಾಪವೆಸಗಿದವರು ಅನರ್ಥವನ್ನು ಬಯಸುತ್ತಿದ್ದಾರೆ. ಸ್ವಯಂ ನೀನೇ ಈ ಅಪ್ರತಿಮ ನಿವೇಶನವನ್ನು, ದೇವಪುರದಂತೆ ಪ್ರಕಾಶಿತ ಮಹಾ ಪುರವನ್ನು ನಿರ್ಮಿಸಿರುವೆ. ಅಮೋಘವಾಗಿ ನಿರ್ಮಿಸಿರುವ ಈ ಶತಕ್ರತುಪ್ರಸ್ಥವನ್ನು ಬಿಟ್ಟುಎಲ್ಲಿಗೆ ಹೋಗುತ್ತಿರುವೆ? ದೇವಸಭೆಯ ಪ್ರಕಾಶವನ್ನು ಹೊಂದಿರುವ ಈ ಅಪ್ರತಿಮ ಸಭೆಯನ್ನು ಮಹಾತ್ಮ ಮಯನು ನಿರ್ಮಿಸಿದನು. ದೇವರಹಸ್ಯದಂತಿರುವ, ದೇವಮಾಯೆಯಂತಿರುವ ಇದನ್ನು ಬಿಟ್ಟು ಎಲ್ಲಿಗೆ ಹೊರಟಿರುವೆ?”
ಧರ್ಮ-ಕಾಮ-ಅರ್ಥಗಳನ್ನು ತಿಳಿದುಕೊಂಡಿರುವ, ತೇಜಸ್ವಿ ಬೀಭತ್ಸುವು ಅಲ್ಲಿ ಸೇರಿದ ಅವರಿಗೆ ಉಚ್ಛ ಸ್ವರದಲ್ಲಿ ಹೇಳಿದನು:
“ವನದಲ್ಲಿ ವಾಸಮಾಡಿ ರಾಜನು ದ್ವೇಷಿಗಳ ಯಶಸ್ಸನ್ನು ಹಿಂದೆ ತೆಗೆದುಕೊಳ್ಳುತ್ತಾನೆ! ದ್ವಿಜಮುಖ್ಯರೇ! ನೀವು ಒಬ್ಬೊಬ್ಬರಾಗಿ ಅಥವಾ ಒಟ್ಟಿಗೇ ನಮ್ಮ ಜೊತೆ ಬಂದು ಧರ್ಮಾರ್ಥಗಳನ್ನು ಹೇಳುವ ಮಾತುಗಳಿಂದ ನಮ್ಮ ಪರಮ ಸಿದ್ಧಿಯು ಹೇಗೆ ಎನ್ನುವುದನ್ನು ಹೇಳಿಕೊಡಿ!”
ಅರ್ಜುನನು ಈ ಮಾತುಗಳನ್ನು ಹೇಳಲು ಆ ಬ್ರಾಹ್ಮಣರು ಮತ್ತು ಸರ್ವವರ್ಣದವರು ಸಂತೋಷಗೊಂಡರು ಮತ್ತು ಒಟ್ಟಿಗೇ ಆ ಧರ್ಮಭೃತ ವರಿಷ್ಠರನ್ನು ಪ್ರದಕ್ಷಿಣೆ ಮಾಡಿದರು. ಪಾರ್ಥ ವೃಕೋದರ, ಧನಂಜಯ, ಯಾಜ್ಞಸೇನಿ, ಮತ್ತು ಯಮಳರನ್ನು ಬೀಳ್ಕೊಟ್ಟು ಯುಧಿಷ್ಠಿರನಿಂದ ಅನುಮತಿಯನ್ನು ಪಡೆದು, ಸಂತೋಷವನ್ನು ಕಳೆದುಕೊಂಡು ತಮ್ಮ ತಮ್ಮ ಮನೆಗಳಿಗೆ ರಾಷ್ಟ್ರಕ್ಕೆ ತೆರಳಿದರು.
ಅವರು ಹೊರಟುಹೋದ ನಂತರ ಸತ್ಯಸಂಗರ, ಧರ್ಮಾತ್ಮ, ಕೌಂತೇಯ ಯುಧಿಷ್ಠಿರನು ತನ್ನ ತಮ್ಮಂದಿರೆಲ್ಲರಿಗೆ ಹೇಳಿದನು:
“ಈ ಹನ್ನೆರಡು ವರ್ಷಗಳು ನಾವು ನಿರ್ಜನ ವನದಲ್ಲಿ ವಾಸಿಸಬೇಕು. ಆದುದರಿಂದ ಮಹಾರಣ್ಯದಲ್ಲಿ ಬಹಳಷ್ಟು ಮೃಗಜಿಂಕೆಗಳಿರುವ, ಬಹಳ ಪುಷ್ಪಫಲಗಳಿಂದ ರಮ್ಯವಾಗಿರುವ, ಮಂಗಳಕರ, ಪುಣ್ಯಜನರು ಬರಲು ಉಚಿತವಾದ, ಆರೋಗ್ಯಕರ, ಈ ಎಲ್ಲ ವರ್ಷಗಳೂ ಸುಖಕರವಾಗಿ ವಾಸಮಾಡಬಲ್ಲ ಪ್ರದೇಶವನ್ನು ನೋಡೋಣ.”
ಹೀಗೆ ಹೇಳಿದ ಧರ್ಮರಾಜನಿಗೆ ಧನಂಜಯನು, ಗುರುವಿಗೆ ಹೇಗೋ ಹಾಗೆ ಆ ಮನಸ್ವಿ, ಮಾನವಗುರುವನ್ನು ಗೌರವಿಸಿ ಉತ್ತರಿಸಿದನು:
“ನೀನಾದರೋ ಮಹರ್ಷಿಗಳ, ವೃದ್ಧರ ಪಾದಗಳನ್ನು ಪೂಜಿಸಿ ಕಾಲಕಳೆದವನು. ಮಾನುಷ ಲೋಕದಲ್ಲಿ ನಿನಗೆ ತಿಳಿಯದೇ ಇರುವುದು ಏನೂ ಇಲ್ಲ. ಭರತರ್ಷಭ! ನೀನು ನಿತ್ಯವೂ ದ್ವೈಪಾಯನನೇ ಮೊದಲಾದ, ಸರ್ವಲೋಕದ್ವಾರಗಳಿಗೆ - ದೇವಲೋಕದಿಂದ ಬ್ರಹ್ಮಲೋಕ, ಮತ್ತು ಗಂಧರ್ವ-ಅಪ್ಸರ ಲೋಕಗಳಿಗೂ, ನಿತ್ಯವೂ ಸಂಚರಿಸುವ ನಾರದನನ್ನೂ ಸೇರಿ ಮಹಾತಪಸ್ವಿ ಬ್ರಾಹ್ಮಣರ ಉಪಾಸನೆಯನ್ನು ಮಾಡಿದ್ದೀಯೆ. ಬ್ರಾಹ್ಮಣರ ಸರ್ವ ಗತಿಯನ್ನು ತಿಳಿದಿದ್ದೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ನೀನು ಅವರೆಲ್ಲರ ಪ್ರಭಾವಗಳನ್ನೂ ಕೂಡ ತಿಳಿದಿದ್ದೀಯೆ. ಶ್ರೇಯಕಾರಣವನ್ನು ನೀನೇ ತಿಳಿದಿದ್ದೀಯೆ. ಆದುದರಿಂದ ನೀನು ಎಲ್ಲಿ ಬಯಸುತ್ತೀಯೋ ಅಲ್ಲಿಯೇ ನಿವಾಸವನ್ನು ಮಾಡೋಣ. ಇದು ದ್ವೈತವನ ಎಂಬ ಹೆಸರಿನ ಪುಣ್ಯಜನರು ಬರುವ, ಬಹಳಷ್ಟು ಪುಷ್ಪಫಲಗಳಿಂದ ಕೂಡಿ ರಮ್ಯವಾದ, ನಾನಾ ಪಕ್ಷಿಗಣಗಳು ಬರುವ ಸರೋವರ. ಒಂದುವೇಳೆ ನಿನಗೆ ಅನುಮತಿಯಿದ್ದರೆ ಇಲ್ಲಿಯೇ ಹನ್ನೆರಡು ವರ್ಷಗಳನ್ನು ಕಳೆಯೋಣ ಎಂದು ನನಗನ್ನಿಸುತ್ತದೆ. ಅಥವಾ ನೀನು ಬೇರೆ ಸ್ಥಳವನ್ನು ಯೋಚಿಸಿದ್ದೀಯಾ?”
ಯುಧಿಷ್ಠಿರನು ಹೇಳಿದನು:
“ಪಾರ್ಥ! ನೀನು ಹೇಳಿದುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪುಣ್ಯವೂ ವಿಖ್ಯಾತವೂ ಆದ ಮಹಾ ದ್ವೈತವನ ಸರೋವರಕ್ಕೆ ಹೋಗೋಣ.”
ಅನಂತರ ಧರ್ಮಚಾರಿ ಸರ್ವ ಪಾಂಡವರು ಬಹಳಷ್ಟು ಬ್ರಾಹ್ಮಣರೊಡನೆ ಪುಣ್ಯ ದ್ವೈತವನಕ್ಕೆ ಹೊರಟರು. ಅಗ್ನಿಹೋತ್ರಗಳನ್ನು ಇಟ್ಟ ಬ್ರಾಹ್ಮಣರು, ಅಗ್ನಿಹೋತ್ರವಿಲ್ಲದವರು, ಸ್ವಾಧ್ಯಾಯಿಗಳು, ಭಿಕ್ಷುಗಳು, ಜಪಿಗಳು ಮತ್ತು ವನವಾಸಿಗಳು ಇದ್ದರು. ಯುಧಿಷ್ಠಿರನ ಜೊತೆ ಹೋಗುತ್ತಿದ್ದವರಲ್ಲಿ ಬಹಳಷ್ಟು ನೂರು ಬ್ರಾಹ್ಮಣರು, ತಪಸ್ವಿಗಳು, ಸತ್ಯಶೀಲರು ಸಂಶಿತವ್ರತರು ಇದ್ಡರು. ಹೀಗೆ ಬಹಳಷ್ಟು ಬ್ರಾಹ್ಮಣರೊಂದಿಗೆ ಪ್ರಯಾಣಮಾಡಿ ಭರತರ್ಷಭ ಪಾಂಡವರು ಪುಣ್ಯವೂ ರಮ್ಯವೂ ಆದ ದ್ವೈತವನವನ್ನು ಪ್ರವೇಶಿಸಿದರು. ಬೇಸಗೆಯ ಕೊನೆಯಾಗಿದ್ದುದರಿಂದ ರಾಷ್ಟ್ರಪತಿಯು ಆ ಮಹಾವನದಲ್ಲಿ ಹೂಗಳನ್ನು ಸುರಿಸುತ್ತಿದ್ದ ಶಾಲ, ಮಾವು, ತಾಳೆ, ಮಧೂಕ, ಕದಂಬ, ಸರ್ಜ, ಅರ್ಜುನ ಮತ್ತು ಮಲ್ಲಿಗೆಯ ಮರಗಳನ್ನು ನೋಡಿದನು. ಆ ವನದ ಮಹಾದ್ರುಮಗಳ ತುದಿಯಲ್ಲಿ ಮನೋರಮ ಗಾಯನವನ್ನು ಹಾಡುತ್ತಿದ್ದ ನವಿಲುಗಳು, ಚಕೋರ ಗಣಗಳು, ಕಾನನಕೋಕಿಲಗಳು ಇದ್ದವು. ಆ ವನದಲ್ಲಿ ರಾಷ್ಟ್ರಪತಿಯು, ಪರ್ವತಗಳಂತೆ ತೋರುತ್ತಿದ್ದ ಮದೋತ್ಕಟ ಸಲಗಗಳನ್ನೊಡಗೂಡಿದ ಅತಿ ದೊಡ್ಡ ಆನೆಯ ಹಿಂಡುಗಳನ್ನು ನೋಡಿದನು. ಮನೋರಮೆ ಭೋಗವತಿಯನ್ನು ಸಮೀಪಿಸಿ ಆ ವನದಲ್ಲಿ ವಾಸಿಸುತ್ತಿದ್ದ ಧೃತಾತ್ಮರನ್ನೂ, ಚೀರಜಟಾಧಾರಣಿಗಳನ್ನೂ, ಅನೇಕ ಸಿದ್ಧರ್ಷಿಗಣಗಳನ್ನೂ ನೋಡಿದನು. ಯಾನದಿಂದಿಳಿದು ಆ ಧರ್ಮಾತ್ಮವಂತರಲ್ಲಿಯೇ ಶ್ರೇಷ್ಠ ರಾಜನು, ಅಮಿತೌಜಸ ತ್ರಿವಿಷ್ಟಪರೊಂದಿಗೆ ಶಕ್ರನು ಹೇಗೋ ಹಾಗೆ ತಮ್ಮಂದಿರು ಮತ್ತು ತನ್ನ ಜನರ ಜೊತೆ ಆ ಕಾನನವನ್ನು ಪ್ರವೇಶಿಸಿದನು. ಆ ಸತ್ಯಸಂಧ ನರೇಂದ್ರಸಿಂಹನನ್ನು ನೋಡಲು ಕುತೂಹಲದಿಂದ ಚಾರಣ ಸಿದ್ಧರ ಗಣಗಳೂ, ಇತರ ವನವಾಸಿಗಳೂ ಕೆಳಗಿಳಿದು ಆ ಮನಸ್ವಿನಿಯನ್ನು ಸುತ್ತುವರೆದು ನಿಂತರು. ಅವನು ಅಲ್ಲಿ ಎಲ್ಲ ಸಿದ್ಧರಿಗೂ ಅಭಿವಂದಿಸಿದನು ಮತ್ತು ರಾಜ ಅಥವಾ ದೇವತೆಯಂತೆ ಅವರಿಂದ ಗೌರವಿಸಲ್ಪಟ್ಟನು. ಆ ಧರ್ಮಭೃತರಲ್ಲಿ ವರಿಷ್ಠನು ಸರ್ವ ದ್ವಿಜಾಗ್ರರೊಡನೆ ಅಂಜಲೀ ಬದ್ಧನಾಗಿ ಪ್ರವೇಶಿಸಿದನು. ಆ ಪುಣ್ಯಶೀಲ ಮಹಾತ್ಮನು ತಂದೆಯಂತೆ ಧರ್ಮಪರ ತಪಸ್ವಿಗಳಿಂದ ಸ್ವಾಗತಗೊಂಡನು. ನಂತರ ರಾಜನು ಹೂಗಳಿಂದ ತುಂಬಿದ್ದ ಒಂದು ಮಹಾವೃಕ್ಷದ ಬುಡದಲ್ಲಿ ಕುಳಿತುಕೊಂಡನು. ಭರತಪ್ರಬರ್ಹರಾದ ಭೀಮ, ಕೃಷ್ಣಾ, ಧನಂಜಯ, ಯಮಳರು ಮತ್ತು ಆ ನರೇಂದ್ರನ ಅನುಚರರೆಲ್ಲರೂ ವಾಹನಗಳನ್ನು ಬಿಟ್ಟು ಕೆಳಗಿಳಿದು ಬಂದು ಅಲ್ಲಿ ಕುಳಿತುಕೊಂಡರು. ಕೆಳಗೆ ಇಳಿದಿದ್ದ ಬಳ್ಳಿಗಳನ್ನು ಹೊಂದಿದ್ದ ಆ ಮಹಾಮರವು ಅಲ್ಲಿಗೆ ವಾಸಿಸಲು ಬಂದಿರುವ ಆ ಐವರು ಮಹಾತ್ಮ ಪಾಂಡವ ಉಗ್ರಧನ್ವಿಗಳಿಂದ ಆನೆಗಳ ಹಿಂಡುಗಳನ್ನು ಹೊಂದಿದ್ದ ಮಹಾಗಿರಿಯಂತೆ ತೋರಿತು.
ಹಿಂದೆ ಸುಖಜೀವನಕ್ಕೆ ಹೊಂದಿಕೊಂಡು ಈಗ ಕಷ್ಟಕ್ಕೊಳಗಾದ ಆ ಇಂದ್ರಪ್ರತಿಮ ನರೇಂದ್ರಪುತ್ರರು ಕಾನನವನ್ನು ಸೇರಿ ಮಂಗಳಕರ ಸರಸ್ವತೀ ತೀರದ ಶಾಲವನದಲ್ಲಿ ವಾಸಿಸತೊಡಗಿದರು. ಆ ವನದಲ್ಲಿ ಕುರುವೃಷಭ ಮಹಾನುಭಾವ ರಾಜನು ಆರಿಸಿದ ಫಲಮೂಲಗಳಿಂದ ಸರ್ವ ಯತಿಗಳನ್ನೂ, ಮುನಿಗಳನ್ನೂ, ದ್ವಿಜಾತಿಪ್ರಮುಖ್ಯರನ್ನೂ ಸತ್ಕರಿಸಿದನು. ಆ ಮಹಾವನದಲ್ಲಿ ಪಾಂಡವರು ವಾಸಿಸುತ್ತಿರುವಾಗ ಸರ್ವಸಮೃದ್ಧ ತೇಜಸ್ವಿ, ಕುರುಗಳಿಗೆ ತಂದೆಯಂತಿದ್ದ ಪುರೋಹಿತ ಧೌಮ್ಯನು ಪಿತೃಕಾರ್ಯಗಳನ್ನೂ, ಹೋಮಗಳನ್ನೂ, ಅಗ್ರಿಯಾಣಿಗಳನ್ನೂ ಮಾಡಿಸಿದನು.
ಮಾರ್ಕಂಡೇಯನ ಆಗಮನ
ಅವರು ಹೀಗೆ ರಾಷ್ಟ್ರದಿಂದ ಹೊರಗೆ ವಾಸಿಸುತ್ತಿರಲು ಶ್ರೀಮತ ಪಾಂಡವರಿಗೆ ಅತಿಥಿಯಾಗಿ ಆ ಆಶ್ರಮಕ್ಕೆ ತೀವ್ರ ಸಮೃದ್ಧ ತೇಜಸ್ವಿ ಪುರಾತನ ಋಷಿ ಮಾರ್ಕಂಡೇಯನು ಆಗಮಿಸಿದನು. ಆ ಸರ್ವವೇದವಿದುವು ದ್ರೌಪದಿ ಕೃಷ್ಣೆಯನ್ನು, ಯುಧಿಷ್ಠಿರ, ಭೀಮಸೇನ ಮತ್ತು ಅರ್ಜುನರನ್ನು ನೋಡಿ ಮಹಾತ್ಮ ರಾಮನನ್ನು ಮನಸ್ಸಿನಲ್ಲಿಯೇ ನೆನೆದುಕೊಂಡು ಆ ಅಮಿತೌಜಸ ತಪಸ್ವಿಗಳ ಮಧ್ಯೆ ಮುಗುಳ್ನಕ್ಕನು. ಮನಸ್ಸು ಕುಂದಿದ ಧರ್ಮರಾಜನು ಹೇಳಿದನು:
“ಇಲ್ಲಿರುವ ಎಲ್ಲ ತಪಸ್ವಿಗಳೂ ನಾಚಿಕೆಯಿಂದ ಇದ್ದಾರೆ. ಇತರರ ಎದುರಿನಲ್ಲಿ, ನನ್ನನ್ನು ನೋಡುವಾಗ ಸಂತೋಷಗೊಂಡವನಂತೆ ನೀನು ಏಕೆ ಮುಗುಳ್ನಗುತ್ತಿರುವೆ?”
ಮಾರ್ಕಂಡೇಯನು ಹೇಳಿದನು:
“ಮಗೂ! ನಾನು ಸಂತೋಷಗೊಳ್ಳಲೂ ಇಲ್ಲ, ನಾನು ನಗುತ್ತಲೂ ಇಲ್ಲ. ನನ್ನನ್ನು ಹೊಗಳಿಕೊಳ್ಳುವುದರಿಂದ ಅಥವಾ ದರ್ಪದಿಂದ ಈ ಹರ್ಷವು ಹುಟ್ಟಲಿಲ್ಲ. ಇಂದು ನಿನ್ನ ದುಃಖವನ್ನು ಕಂಡು ನನಗೆ ಸತ್ಯವತ ಧಾಶರಥಿ ರಾಮನ ನೆನಪಾಯಿತಷ್ಟೇ. ಪಾರ್ಥ! ಹಿಂದೆ ಆ ರಾಜನೂ ಕೂಡ ಲಕ್ಷ್ಮಣನೊಂದಿಗೆ ತಂದೆಯ ಆಜ್ಞೆಯಂತೆ ವನದಲ್ಲಿ ವಾಸಿಸಿ, ಧನ್ನುಸ್ಸನ್ನು ಹಿಡಿದು ಸಂಚರಿಸಿಸುತ್ತಿರುವಾಗ ನಾನು ಅವನನ್ನು ಗಿರಿ ಋಷ್ಯಮೂಕದಲ್ಲಿ ಕಂಡಿದ್ದೆ. ಮಯನನ್ನು ಗೆದ್ದ ಮತ್ತು ನಮೂಚಿಯನ್ನು ಸಂಹರಿಸಿದ ಸಹಸ್ರನೇತ್ರನ ಸರಿಸಾಟಿಯಾದ ಆ ಮಹಾತ್ಮ ಅನಘ ದಾಶರಥಿಯು ತಂದೆಯ ನಿರ್ದೇಶನದಂತೆ ವನವಾಸವನ್ನು ಮಾಡಿ ಸ್ವಧರ್ಮದಂತೆ ನಡೆದುಕೊಂಡನು. ಪ್ರಭಾವದಲ್ಲಿ ಶಕ್ರನಿಗೆ ಸರಿಸಮನಾದ, ಸಮರದಲ್ಲಿ ಅಜೇಯನಾದ ಆ ಮಹಾನುಭಾವನೂ ಕೂಡ ಭೋಗಗಳನ್ನು ತೊರೆದು ವನದಲ್ಲಿ ಸಂಚರಿಸಿದನು. ನನ್ನಲ್ಲಿ ಬಲವಿದೆಯೆಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು. ಮಗೂ! ನಾಭಾಗ, ಭಗೀರಥ ಮೊದಲಾದ ನೃಪರೂ ಕೂಡ ಸಾಗರಾಂತದವರೆಗಿನ ಈ ಭೂಮಿಯನ್ನು ಮತ್ತು ನಂತರ ಲೋಕಗಳನ್ನು ಸತ್ಯದಿಂದಲೇ ಗೆದ್ದರು. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು. ಸಂತ ಸತ್ಯವ್ರತ ಕಾಶಿಕರೂಷಗಳ ರಾಜನು ರಾಷ್ಟ್ರ ಮತ್ತು ಸಂಪತ್ತನ್ನು ತೊರೆದುದಕ್ಕೆ ಅಲರ್ಕನೆಂದು ಕರೆಯಲ್ಪಡುತ್ತಾನೆ. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು. ಹಿಂದೆ ಧಾತ್ರನು ನಿಶ್ಚಯಿಸಿದ್ದ ವಿಧಿಯನ್ನು ಗೌರವಿಸಿದ ಸಂತ ಸಪ್ತ ಋಷಿಗಳು ಆಕಾಶದಲ್ಲಿ ಹೊಳೆಯುತ್ತಾರೆ. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು. ಪರ್ವತ ಶಿಖರಗಳಂತೆ ಇರುವ, ಮಹಾಬಲಶಾಲಿಗಳಾಗಿದ್ದರೂ, ಧಾತ್ರುವಿನ ನಿಯಮಗಳನ್ನು ಪಾಲಿಸುವ ಆನೆಗಳನ್ನು ನೋಡು. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು. ಸರ್ವ ಭೂತಗಳನ್ನೂ ನೋಡು. ವಿಧಾತ್ರನು ಮಾಡಿಟ್ಟ ನಿಯಮಗಳಂತೆ ಪ್ರಭಾವಶಾಲಿಗಳಾಗಿದ್ದರೂ ಸ್ವಯಂ ನಿಯಂತ್ರಣದಿಂದ ನಡೆಯುತ್ತಿವೆ. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು. ಸತ್ಯದಿಂದ, ಧರ್ಮದಿಂದ, ಯಥಾರ್ಹವಾಗಿ ನಡೆದುಕೊಳ್ಳುತ್ತಾ, ವಿನಯತೆಯಿಂದ ನೀನೂ ಕೂಡ ಸರ್ವಭೂತಗಳನ್ನೂ ಮೀರಿಸಿ ಯಶದಲ್ಲಿ, ತೇಜಸ್ಸಿನಲ್ಲಿ ವಿಭಾವಸು ಭಾಸ್ಕರನಂತೆ ಬೆಳಗಬಲ್ಲೆ. ಪ್ರತಿಜ್ಞೆ ಮಾಡಿದ್ದಂತೆ ಈ ಕಷ್ಟಕರ ವನವಾಸವನ್ನು ಸಂಪೂರ್ಣವಾಗಿ ಪೂರೈಸು. ನಿನ್ನದೇ ತೇಜಸ್ಸಿನಿಂದ ನಂತರ ನೀನು ಕೌರವರಿಂದ ಸಂಪತ್ತನ್ನು ಪಡೆಯುತ್ತೀಯೆ.”
ತಪಸ್ವಿಗಳ ಮಧ್ಯದಲ್ಲಿ ಸ್ನೇಹಿತರೊಂದಿಗಿದ್ದ ಅವನಿಗೆ ಈ ಮಾತುಗಳನ್ನು ಹೇಳಿದ ಮಹರ್ಷಿಯು ಧೌಮ್ಯ ಮತ್ತು ಪಾರ್ಥರನ್ನು ಬೀಳ್ಕೊಂಡು ಉತ್ತರ ದಿಕ್ಕಿನೆಡೆಗೆ ಹೊರಟುಹೋದನು.
ಬಕ ದಾಲ್ಭ್ಯನ ಉಪದೇಶ
ಮಹಾತ್ಮ ಪಾಂಡವರು ದ್ವೈತವನದಲ್ಲಿ ವಾಸಿಸುತ್ತಿರಲು ಆ ಮಹಾರಣ್ಯವು ಬ್ರಾಹ್ಮಣರ ಗುಂಪಿನಿಂದ ತುಂಬಿಕೊಂಡಿತು. ಬ್ರಹ್ಮಲೋಕದ ಸಮನಾಗಿದ್ದ ಆ ದ್ವೈತವನ ಸರೋವರವು ಸತತವೂ ಎಲ್ಲಕಡೆಯಿಂದಲೂ ಪುಣ್ಯ ಬ್ರಹ್ಮಘೋಷದ ಶಬ್ಧದ ಗುಂಗಿನಿಂದ ತುಂಬಿಕೊಂಡಿತ್ತು. ಎಲ್ಲೆಡೆಯೂ ಯಜುಷ, ಸುಂದರ ಸಾಮ ಮತ್ತು ಗದ್ಯಗಳ ಉಚ್ಛಾರಣ ಗಾಯನಗಳ ಹೃದಯಂಗಮ ನಿಸ್ವನವು ಕೇಳಿಬರುತ್ತಿತ್ತು. ಪಾಂಡವರ ಧನುಸ್ಸಿನ ಘೋಷ ಮತ್ತು ಧೀಮಂತ ಬ್ರಾಹ್ಮಣರ ಬ್ರಹ್ಮಘೋಷ ಇವೆರಡೂ ಬ್ರಾಹ್ಮಣ ಮತ್ತು ಕ್ಷತ್ರಿಯರ ಸಂಘಟನೆಯಂತೆ ತೋರುತ್ತಿತ್ತು. ಆಗ ಸಂಧ್ಯಾಸಮಯದಲ್ಲಿ ಕೌಂತೇಯರನ್ನು ಸುತ್ತುವರೆದು ಋಷಿಗಳು ಕುಳಿತುಕೊಂಡಿರಲು ಬಕ ದಾಲ್ಭ್ಯನು ಧರ್ಮರಾಜ ಯುಧಿಷ್ಠಿರನನ್ನು ಉದ್ದೇಶಿಸಿ ಹೇಳಿದನು:
“ಪಾರ್ಥ! ತಪಸ್ವಿ ಬ್ರಾಹ್ಮಣರ ಉರಿಯುತ್ತಿರುವ ಅಗ್ನಿಯಲ್ಲಿ ಹೋಮಗಳನ್ನು ಮಾಡುವ ವೇಳೆಯು ಪ್ರಾಪ್ತಿಯಾಯಿತು ನೋಡು! ನಿನ್ನ ರಕ್ಷಣೆಗೆಂದು ಧೃತವ್ರತರಾಗಿರುವ ಈ ಭೃಗುಗಳು, ಅಂಗಿರಸರು, ವಾಸಿಷ್ಠರು, ಕಾಶ್ಯಪರು, ಆಗಸ್ತ್ಯರು, ಮಹಾಭಾಗ ಆತ್ರೇಯರು ಇವರೆಲ್ಲ ಉತ್ತಮವ್ರತರು ಜಗತ್ತಿನ ಶ್ರೇಷ್ಠ ಬ್ರಾಹ್ಮಣರು ನಿನ್ನೊಡನೆ ಸೇರಿ ಪುಣ್ಯ ಧರ್ಮಗಳಲ್ಲಿ ನಡೆಯುತ್ತಿದ್ದಾರೆ. ಈಗ ನಾನು ನಿನಗೆ ಹೇಳುವ ಮಾತುಗಳನ್ನು ಏಕಾಗ್ರಚಿತ್ತನಾಗಿ ನಿನ್ನ ಸಹೋದರರೊಂದಿಗೆ ಕೇಳು. ಬ್ರಹ್ಮವು ಕ್ಷಾತ್ರತ್ವವನ್ನು ಸೇರಿ ಕ್ಷಾತ್ರತ್ವ ಮತ್ತು ಬ್ರಾಹ್ಮಣತ್ವ ಎರಡೂ ಒಟ್ಟಿಗೇ ಬೆಂಕಿ ಮತ್ತು ಗಾಳಿ ವನವನ್ನು ಹೇಗೆ ಸುಡುತ್ತವೆಯೋ ಹಾಗೆ ಶತ್ರುಗಳನ್ನು ಸುಟ್ಟುಹಾಕುತ್ತವೆ. ಈಗಿನ ಮತ್ತು ಮುಂದಿನ ಲೋಕಗಳನ್ನು ಗೆಲ್ಲಲು ಬಯಸುವೆಯಾದರೆ, ಬ್ರಾಹ್ಮಣರನ್ನು ಬಿಟ್ಟು ಇರಲು ಇಚ್ಛಿಸಬೇಡ. ಧರ್ಮಾರ್ಥಗಳನ್ನು ತಿಳಿದು ತನ್ನ ಗೊಂದಲವನ್ನು ತೊಡೆದುಹಾಕಿದ, ವಿನೀತ ದ್ವಿಜರನ್ನು ಪಡೆದು ನೃಪನು ತನ್ನ ಸ್ಪರ್ಧಿಗಳನ್ನು ತೆಗೆದುಹಾಕುತ್ತಾನೆ. ಪ್ರಜಾಪಾಲನೆಯಿಂದ ಸಂಪಾದಿಸಿದ ಅತಿ ಶ್ರೀಮಂತ ಮತ್ತು ಧಾರ್ಮಿಕ ಬಲಿಯು ಲೋಕದಲ್ಲಿ ದ್ವಿಜರಲ್ಲದೇ ಬೇರೆ ಯಾರದ್ದೂ ಮೊರೆ ಹೋಗಲಿಲ್ಲ. ವಿರೋಚನನ ಅಸುರ ಮಗನಿಗೆ ಕಾಮ ಸುಖದ ಕೊರತೆಯಿರಲಿಲ್ಲ ಮತ್ತು ಸಂಪತ್ತು ಕಡಿಮೆಯಾಯಿತೆಂದಿರಲಿಲ್ಲ. ಬ್ರಾಹ್ಮಣರನ್ನು ಕೂಡಿಕೊಂಡು ಭೂಮಿಯನ್ನು ಪಡೆದುಕೊಂಡನು ಮತ್ತು ಅವರಿಗೆ ಕೆಟ್ಟದನ್ನು ಮಾಡಿದಾಗಲೆಲ್ಲಾ ದುಃಖಕ್ಕೊಳಗಾದನು. ಬ್ರಾಹ್ಮಣರನ್ನು ಸತ್ಕರಿಸದೇ ಇದ್ದರೆ ಈ ಭೂಮಿಯು ಕ್ಷತ್ರಿಯರನ್ನು ಬಹಳ ಸಮಯದವರೆಗೆ ಪ್ರೀತಿಸುವುದಿಲ್ಲ. ಆದರೆ ನಯ-ವಿನೀತಿಯಿಂದ ಕೂಡಿದ ಬ್ರಾಹ್ಮಣನು ಯಾರಿಗೆ ಕಲಿಸುತ್ತಾನೋ ಅವನಿಗೆ ಸಮುದ್ರದಿಂದ ಸುತ್ತುವರೆದ ಈ ಭೂಮಿಯು ತಲೆಬಾಗುತ್ತದೆ. ಸಂಗ್ರಾಮದಲ್ಲಿ ಮಾವುತನ ನಿಯಂತ್ರಣವನ್ನು ಕಳೆದುಕೊಂಡ ಆನೆಯ ಸಾಮರ್ಥ್ಯವು ಹೇಗೋ ಹಾಗೆ ಬ್ರಾಹ್ಮಣರನ್ನು ಕಳೆದುಕೊಂಡ ಕ್ಷತ್ರಿಯನ ಬಲವು ಕ್ಷೀಣಿಸುತ್ತದೆ. ಬ್ರಾಹ್ಮಣರಲ್ಲಿ ಅನುಪಮ ದೃಷ್ಟಿಯಿದೆ ಮತ್ತು ಕ್ಷತ್ರಿಯರಲ್ಲಿ ಅಪ್ರತಿಮ ಬಲವಿದೆ. ಇವರಿಬ್ಬರೂ ಒಟ್ಟಿಗೇ ನಡೆದಾಗ ಲೋಕವು ಸಂತೋಷಗೊಳ್ಳುತ್ತದೆ. ಮಹಾ ಅಗ್ನಿಯು ಗಾಳಿಯು ಬೀಸುವುದರಿಂದ ಹೇಗೆ ವನವನ್ನು ಸುಟ್ಟುಹಾಕುತ್ತದೆಯೋ ಹಾಗೆ ಬ್ರಾಹ್ಮಣರು ಜೊತೆಗಿರುವ ರಾಜನು ರಿಪುಗಳನ್ನು ಸುಟ್ಟುಹಾಕುತ್ತಾನೆ. ಇಲ್ಲದಿರುವುದನ್ನು ಪಡೆಯಲು ಮತ್ತು ಇದ್ದುದನ್ನು ಹೆಚ್ಚಿಸಿಕೊಳ್ಳಲು ಬುದ್ಧಿವಂತನು ಬ್ರಾಹ್ಮಣರ ಸಲಹೆಯನ್ನು ಪಡೆದು ಅದರಂತೆ ನಡೆಯಬೇಕು. ದೊರೆಯದಿರುವುದನ್ನು ಪಡೆಯಲು, ಪಡೆದುದನ್ನು ವೃದ್ಧಿಗೊಳಿಸಲು, ಮತ್ತು ಸರಿಯಾದ ದಾರಿಯನ್ನು ಹಿಡಿಯಲು ಯಶಸ್ವಿನಿಯೂ, ವೇದವಿದನೂ, ಬಹುಶ್ರುತನೂ, ವಿಪಶ್ಚಿತನೂ ಆದ ಬ್ರಾಹ್ಮಣನೊಂದಿಗೆ ಜೀವಿಸಿಬೇಕು. ಬ್ರಾಹ್ಮಣರೊಂದಿಗೆ ನಿನ್ನ ನಡತೆಯು ಯಾವಾಗಲೂ ಉತ್ತಮವಾಗಿಯೇ ಇದೆ. ಆದುದರಿಂದ ನಿನ್ನ ಯಶಸ್ಸು ಸರ್ವಲೋಕಗಳಲ್ಲಿಯೂ ಬೆಳಗುತ್ತದೆ.”
ಅವನು ಈ ರೀತಿ ಯುಧಿಷ್ಠಿರನನ್ನು ಹೊಗಳಲು ಸಂತೋಷಗೊಂಡ ಬ್ರಾಹ್ಮಣರೆಲ್ಲರೂ ಬಕ ದಾಲ್ಭ್ಯನನ್ನು ಹೊಗಳಿದರು. ದ್ವೈಪಾಯನ, ನಾರದ, ಜಾಮದಗ್ನ್ಯ, ಪೃಥುಶ್ರವ, ಇಂದ್ರದ್ಯುಮ್ನ, ಭಾಲುಕಿ, ಕೃತಚೇತ, ಸಹಸ್ರಪಾದ, ಕರ್ಣಶ್ರವ, ಮುಂಜ, ಅಗ್ನಿವೇಶ, ಶೌನಕ, ಋತ್ವಿಕ, ಸುವಾಕ್, ಬೃಹದಶ್ವ, ಋತಾವಸು, ಊರ್ಧ್ವರೇತ, ವೃಷಾಮಿತ್ರ, ಸುಹೋತ್ರ, ಹೋತ್ರವಾಹನ, ಇವರು ಮತ್ತು ಇತರ ಬಹಳಷ್ಟು ಸಂಶಿತವ್ರತ ಬ್ರಾಹ್ಮಣ ಋಷಿಗಳು ಪುರಂದರನನ್ನು ಹೇಗೋ ಹಾಗೆ ಆಜಾತಶತ್ರುವನ್ನು ಸತ್ಕರಿಸಿದರು.