ದ್ವೈತವನದಲ್ಲಿ ದ್ರೌಪದೀ-ಯುಧಿಷ್ಠಿರ-ಭೀಮಸೇನರ ಸಂವಾದ

ದ್ವೈತವನವನ್ನು ಸೇರಿದ ಪಾರ್ಥರು ಸಾಯಂಕಾಲದಲ್ಲಿ ಕೃಷ್ಣೆಯೊಂದಿಗೆ ಕುಳಿದುಕೊಂಡು ದುಃಖಶೋಕಪರಾಯಣರಾಗಿ ಮಾತನಾಡಿಕೊಳ್ಳುತ್ತಿದ್ದರು. ಆಗ ಪ್ರಿಯೆ, ಸುಂದರಿ, ಚೆನ್ನಾಗಿ ಬುದ್ಧಿವಂತಿಕೆಯ ಮಾತನಾಡಬಲ್ಲ, ಪಂಡಿತೆ, ಪತಿವ್ರತೆ ಕೃಷ್ಣೆಯು ಧರ್ಮರಾಜನಿಗೆ ಈ ಮಾತುಗಳನ್ನು ಹೇಳಿದಳು:

“ಆ ಪಾಪಿ ದುರಾತ್ಮ, ಸುಳ್ಳುಗಾರ, ಧಾರ್ತರಾಷ್ಟ್ರನಿಗೆ ನಮ್ಮ ಮೇಲೆ ನಿಜವಾಗಿಯೂ ಅಷ್ಟೊಂದು ದುಃಖವಾಗುತ್ತಿರಲಿಕ್ಕಿಲ್ಲ. ರಾಜನ್! ನೀನು ನನ್ನೊಂದಿಗೆ ಮತ್ತು ನಿನ್ನ ಭ್ರಾತೃಗಳೆಲ್ಲರೊಂದಿಗೆ ಜಿನವಸ್ತ್ರಗಳನ್ನು ಧರಿಸಿ ಹೊರಡುತ್ತಿರುವಾಗ ಅವನು ಏನಾದರೂ ಮಾತನಾಡಿದನೇ? ಇಲ್ಲ ತಾನೇ? ನಮ್ಮನ್ನು ವನಕ್ಕೆ ಕಳುಹಿಸಿ ಆ ದುಷ್ಟಾತ್ಮ ದುರ್ಮತಿಗೆ ಪಶ್ಚಾತ್ತಾಪ ಏನಾದರೂ ಆಯಿತೇ? ಇಲ್ಲ ತಾನೇ? ನಮ್ಮಲ್ಲೆಲ್ಲರಿಗೂ ಶ್ರೇಷ್ಠನಾದ ಧರ್ಮಪರನಾದ ನಿನಗೆ ಅಂಥಹ ಕಠೋರಮಾತುಗಳನ್ನಾಡಿದ ಆ ದುಷ್ಕೃತಕರ್ಮಿಯ ಹೃದಯವು ಕಬ್ಬಿಣದ್ದಾಗಿರಬೇಕು! ಸುಖೋಚಿತನೂ, ದುಃಖಕ್ಕೆ ಅನರ್ಹನೂ ಆದ ನಿನಗೆ ಈ ತರಹದ ದುಃಖವನ್ನು ತಂದಿತ್ತು ಆ ದುರಾತ್ಮ ಪಾಪಪುರುಷನು ತನ್ನ ಸ್ನೇಹಿತರ ಪಡೆಯೊಂದಿಗೆ ನಲಿಯುತ್ತಿದ್ದಾನೆ. ನೀನು ಜಿನಧಾರಿಯಾಗಿ ವನಕ್ಕೆ ಹೊರಡುವಾಗ ನಾಲ್ಕೇ ನಾಲ್ಕು ಮಂದಿ ಪಾಪಿಗಳು ಕಣ್ಣೀರು ಸುರಿಸಲಿಲ್ಲ. ನಾನು ಲೆಖ್ಕ ಮಾಡಿದ್ದೆ - ದುರ್ಯೋಧನ, ಕರ್ಣ, ದುರಾತ್ಮ ಶಕುನಿ, ಅವನ ಕೆಟ್ಟ ತಮ್ಮ ಉಗ್ರ ದುಃಶಾಸನ! ದುಃಖದಿಂದ ಬೆಂದ ಇತರ ಎಲ್ಲ ಕುರುಗಳ ಕಣ್ಣುಗಳಿಂದ ನೀರು ಇಳಿಯುತ್ತಿತ್ತು. ಈ ಹಾಸಿಗೆಯನ್ನು ನೋಡಿ ಹಿಂದೆ ನಿನಗಿದ್ದ ಹಾಸಿಗೆಯನ್ನು ನೆನಪಿಸಿಕೊಂಡು ದುಃಖಿಸುತ್ತೇನೆ. ನಿನಗೆ ಸುಖವೇ ಸರಿಯಾದುದು. ದುಃಖಕ್ಕೆ ಅರ್ಹನಲ್ಲ! ಸಭಾಮಧ್ಯದಲ್ಲಿದ್ದ ರತ್ನದಿಂದ ಅಲಂಕೃತಗೊಂಡಿದ್ದ ದಂತದ ಸಿಂಹಾಸನವನ್ನು ನೆನಪಿಸಿಕೊಂಡು ಈಗ ನಿನ್ನ ದರ್ಭಾಸನವನ್ನು ನೋಡಿ ಶೋಕವು ನನ್ನ ಉಸಿರುಕಟ್ಟಿಸುತ್ತಿದೆ. ರಾಜರಿಂದ ಸುತ್ತುವರೆದು ನೀನು ಸಭೆಯಲ್ಲಿದ್ದುದನ್ನು ನೋಡಿದ್ದೆ. ಈಗ ಅದೆಲ್ಲವೂ ಇಲ್ಲವೆಂದಾಗ ನನ್ನ ಹೃದಯಕ್ಕೆ ಶಾಂತಿಯಾದರೂ ಹೇಗಿರುತ್ತದೆ? ಚಂದನದ ಲೇಪವನ್ನು ಹಚ್ಚಿಕೊಂಡು ಸೂರ್ಯವರ್ಚಸನಾಗಿದ್ದ ನಿನ್ನನ್ನು ನೋಡಿದ್ದ ನಾನು ಈಗ ಧೂಳು-ಕೊಳೆಗಳಿಂದ ಲೇಪಿತನಾಗಿರುವುದನ್ನು ನೋಡಿ ಮೂರ್ಛೆಹೋಗುವುದಿಲ್ಲವೇ? ಹಿಂದೆ ನೀನು ಶುಭ್ರವಾದ ಬೆಲೆಬಾಳುವ ಕೌಶಿಕವಸ್ತ್ರಗಳಲ್ಲಿದ್ದುದನ್ನು ನೋಡಿದ್ದೆ. ಈಗ ನಾನು ನೀನು ಚೀರಿಣವನ್ನು ಧರಿಸಿದುದನ್ನು ನೋಡಬೇಕಾಗಿದೆ! ಸಹಸ್ರಾರು ಬ್ರಾಹ್ಮಣರಿಗೆ ನಿನ್ನ ಮನೆಯಿಂದ ಬಂಗಾರದ ತಟ್ಟೆಗಳಲ್ಲಿ ಎಲ್ಲರ - ಯತಿಗಳಿರಲಿ, ಮನೆಯಿಲ್ಲದವರಿರಲಿ, ಗೃಹಸ್ಥರಿರಲಿ - ಎಲ್ಲರ ನಾಲಿಗೆಯ ರುಚಿಯನ್ನೂ ತೀರಿಸುವ, ಚೆನ್ನಾಗಿ ತಯಾರಿಸಿದ ಆಹಾರವನ್ನು ಹೊತ್ತು ತಂದು ಉತ್ತಮ ಭೋಜನವನ್ನು ನೀಡುತ್ತಿದ್ದ ಆ ಒಂದು ಕಾಲವಿತ್ತು. ಈಗ ನನಗದು ಕಾಣದಿರುವಾಗ, ನನ್ನ ಹೃದಯಕ್ಕೆ ಏನು ಶಾಂತಿಯಿರಬಹುದು? ಹೊಳೆಯುವ ಕುಂಡಲಗಳನ್ನು ಧರಿಸಿದ್ದ ಯುವಕರು ನಿನ್ನ ತಮ್ಮಂದಿರಿಗೆ ಉತ್ತಮವಾಗಿ ತಯಾರಿಸಿದ ಮೃಷ್ಟಾನ್ನ ಪದಾರ್ಥಗಳನ್ನು ಉಣಿಸುತ್ತಿದ್ದರು. ಇಂದು ಅವರೆಲ್ಲರೂ ವನದಲ್ಲಿ ವನೋತ್ಪತ್ತಿಗಳನ್ನು ತಿಂದು ಜೀವಿಸುತ್ತಿರುವುದನ್ನು ನೋಡುತ್ತಿದ್ದೇನೆ. ಅವರು ದುಃಖಕ್ಕೆ ಅನರ್ಹರು. ನನ್ನ ಮನಸ್ಸು ಶಾಂತಿಯನ್ನೇ ಕಾಣುತ್ತಿಲ್ಲ. ವನದಲ್ಲಿ ವಾಸಿಸುವ ಭೀಮಸೇನನು ದುಃಖಿತನಾಗಿ ಯೋಚನಾಮಗ್ನನಾಗಿರುವುದನ್ನು ನಾನು ನೋಡುತ್ತಿದ್ದೇನೆ. ಕಾಲವು ಕಳೆದಂತೆ ನಿನಗೆ ಸಿಟ್ಟು ಬರುವುದಿಲ್ಲವೇ? ತನ್ನ ಕೆಲಸಗಳನ್ನು ತಾನಾಗಿಯೇ ಮಾಡಿಕೊಳ್ಳುತ್ತಿದ್ದ, ಸುಖಾರ್ಹ ಭೀಮಸೇನನು ದುಃಖಿತನಾಗಿರುವುದನ್ನು ನೋಡಿ ನಿನಗೆ ಕೋಪವು ಹೆಚ್ಚಾಗುವುದಿಲ್ಲವೇ? ವಿವಿಧ ವಾಹನಗಳಿಂದಲೂ ವಸ್ತ್ರಗಳಿಂದಲೂ ತೃಪ್ತಿಗೊಂಡು ಸುಖವಾಗಿದ್ದ ಅವನು ವನದಲ್ಲಿರುವುದನ್ನು ನೋಡಿ ನಿನಗೆ ಹೇಗೆ ತಾನೇ ಕೋಪವು ಹೆಚ್ಚಾಗುವುದಿಲ್ಲ? ಆ ಪ್ರಭುವು ಸರ್ವ ಕುರುಗಳನ್ನೂ ಕೊಲ್ಲಲು ಉತ್ಸುಕನಾಗಿದ್ದನು. ಆದರೆ ಆ ವೃಕೋದರನು ನಿನ್ನ ಅಪ್ಪಣೆಯನ್ನು ಕಾಯುತ್ತಾ ಅದನ್ನು ಸಹಿಸಿಕೊಂಡಿದ್ದಾನೆ. ಯಾರ ಎರಡು ಕೈಗಳು ಕಾರ್ತವೀರ್ಯಾರ್ಜುನನ ಸಹಸ್ರಬಾಹುಗಳ ಸಮಾನವಾಗಿರುವವೋ, ಬಾಣಗಳನ್ನು ಬಿಡುವ ವೇಗದಲ್ಲಿ ಕಾಲಾಂತಕನ ಸಮನಾದ, ಯಾರ ಶಸ್ತ್ರಪ್ರಪಾತಕ್ಕೆ ಸಿಲುಕಿ ಸರ್ವ ಪಾರ್ಥಿವರೂ ಶರಣು ಬಿದ್ದಿದ್ದರೋ, ನಿನ್ನ ಯಜ್ಞದಲ್ಲಿ ಬ್ರಾಹ್ಮಣರ ಉಪಚಾರದಲ್ಲಿ ತೊಡಗಿದ್ದ, ದೇವದಾನವರಿಂದ ಪೂಜಿತ ಈ ಪುರುಷವ್ಯಾಘ್ರ ಅರ್ಜುನನೂ ಕೂಡ ಧ್ಯಾನತತ್ಪರನಾಗಿರುವುದನ್ನು ಕಂಡು ಹೇಗೆ ತಾನೇ ನಿನ್ನ ಸಿಟ್ಟು ಹೆಚ್ಚಾಗುವುದಿಲ್ಲ? ದುಃಖಕ್ಕೆ ಅನರ್ಹನಾದ, ಸುಖಕ್ಕೆ ಅರ್ಹನಾದ ಪಾರ್ಥನು ವನವನ್ನು ಸೇರಿದುದನ್ನು ನೋಡಿ ನಿನ್ನ ಕೋಪವು ಹೆಚ್ಚಾಗುತ್ತಿಲ್ಲವೆಂದರೆ ನನಗೆ ಆಶ್ಚರ್ಯವೆನಿಸುತ್ತಿದೆ. ಒಬ್ಬನೇ ರಥವನ್ನೇರಿ ದೇವತೆಗಳನ್ನೂ, ಮನುಷ್ಯರನ್ನೂ, ಸರ್ಪಗಳನ್ನೂ ಜಯಿಸಿದ ಅವನು ವನವನ್ನು ಸೇರಿದುದನ್ನು ನೋಡಿ ನಿನ್ನ ಸಿಟ್ಟು ಹೇಗೆ ತಾನೇ ಹೆಚ್ಚಾಗುತ್ತಿಲ್ಲ? ಆ ಪರಂತಪನು ಅದ್ಭುತ ಆಕಾರಗಳ ರಥ, ಕುದುರೆಗಳು ಮತ್ತು ಆನೆಗಳಿಂದ ಸುತ್ತುವರೆದು ಬಲವನ್ನುಪಯೋಗಿಸಿ ಪಾರ್ಥಿವೇಂದ್ರರಿಂದ ಕಪ್ಪ ಕಾಣಿಕೆಗಳನ್ನು ಕಸಿದುಕೊಳ್ಳಲಿಲ್ಲವೇ? ಅವನು ಒಂದೇ ಸಾರಿ ಐದುನೂರು ಬಾಣಗಳನ್ನು ಬಿಡುವುದಿಲ್ಲವೇ? ಅಂಥವನು ಈಗ ವನವನ್ನು ಸೇರಿದ್ದಾನೆ ಎಂದು ನೋಡಿ ನಿನ್ನ ಸಿಟ್ಟೇಕೆ ಹೆಚ್ಚಾಗುತ್ತಿಲ್ಲ? ರಣದಲ್ಲಿ ತುರಾಣಿ ಹಿಡಿಯುವವರಲ್ಲಿ ಶ್ರೇಷ್ಠ, ಶ್ಯಾಮವರ್ಣದ, ಎತ್ತರವಾಗಿರುವ ತರುಣ ನಕುಲನು ವನದಲ್ಲಿದ್ದಾನೆಂದು ನೋಡಿ ನಿನ್ನ ಸಿಟ್ಟೇಕೆ ಹೆಚ್ಚಾಗುತ್ತಿಲ್ಲ? ಸುಂದರ ಶೂರ ಮಾದ್ರೀಪುತ್ರ ಸಹದೇವನು ವನದಲ್ಲಿರುವುದನ್ನು ನೋಡಿ ನಿನ್ನ ಸಿಟ್ಟೇಕೆ ಹೆಚ್ಚಾಗುತ್ತಿಲ್ಲ? ದ್ರುಪದನ ಕುಲದಲ್ಲಿ ಹುಟ್ಟಿದ, ಮಹಾತ್ಮ ಪಾಂಡುವಿನ ಸೊಸೆ ನಾನು ವನವನ್ನು ಸೇರಿದ್ದುದನ್ನು ನೋಡಿಯೂ ನಿನ್ನ ಕೋಪವು ಏಕೆ ಹೆಚ್ಚಾಗುತ್ತಿಲ್ಲ? ನಿನ್ನ ತಮ್ಮಂದಿರನ್ನು ಮತ್ತು ನನ್ನನ್ನು ನೋಡಿಯೂ ನಿನ್ನ ಮನಸ್ಸು ವ್ಯಥಿತಗೊಳ್ಳುವುದಿಲ್ಲ ಎಂದರೆ ನಿನ್ನಲ್ಲಿ ಇನ್ನು ಏನೂ ಸಿಟ್ಟು ಉಳಿದಿರುವುದಕ್ಕಿಲ್ಲ! ಆದರೆ ಸಿಟ್ಟಿಲ್ಲದಿರುವ ಕ್ಷತ್ರಿಯನೇ ಲೋಕದಲ್ಲಿ ಇಲ್ಲ ಎನ್ನುವುದಕ್ಕೆ ವಿರುದ್ಧ ಮಾತೇ ಇಲ್ಲದಿರುವಾಗ ಇಂದು ಕ್ಷತ್ರಿಯನಾದ ನಿನ್ನನ್ನು ನೋಡಿ ಆ ಮಾತಿಗೆ ವಿರುದ್ಧವಾಗಿರುವುದನ್ನು ನೋಡುತ್ತಿದ್ದೇನೆ. ಸಮಯವು ಬಂದಾಗ ತನ್ನ ತೇಜಸ್ಸನ್ನು ತೋರಿಸದೇ ಇರುವ ಕ್ಷತ್ರಿಯನನ್ನು ಸರ್ವಭೂತಗಳೂ ಸದಾ ಕೀಳಾಗಿ ಕಾಣುತ್ತವೆ ಎಂದು ಹೇಳುತ್ತಾರೆ. ಶತ್ರುಗಳನ್ನು ಯಾವಾಗಲೂ ನೀನು ಕ್ಷಮಿಸಬಾರದು. ಯಾಕೆಂದರೆ ನಿನ್ನ ತೇಜಸ್ಸಿನಿಂದಲೇ ಅವರನ್ನು ಕಡಿದುರಿಳಿಸಲು ಸಾಧ್ಯ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗೆಯೇ ಕ್ಷಮಾಕಾಲದಲ್ಲಿ ಕ್ಷಮಿಸದೇ ಇರುವ ಕ್ಷತ್ರಿಯನು ಸರ್ವಭೂತಗಳಿಗೆ ಅಪ್ರಿಯನಾಗಿ ಇಲ್ಲಿ ಮತ್ತು ಇದರ ನಂತರ ನಾಶ ಹೊಂದುತ್ತಾನೆ.

“ಈ ವಿಷಯದ ಕುರಿತು ಪುರಾತನ ಇತಿಹಾಸದಲ್ಲಿರುವಂತೆ ವಿರೋಚನನ ಪುತ್ರ ಬಲಿ ಮತ್ತು ಪ್ರಹ್ಲಾದರ ಸಂವಾದವನ್ನು ಉದಾಹರಿಸುತ್ತಾರೆ. ಅಸುರೇಂದ್ರ ಮಹಾಪ್ರಾಜ್ಞ ಬಲಿಯು ತನ್ನ ತಂದೆಯ ತಂದೆ ದೈತ್ಯೇಂದ್ರ ಪ್ರಹ್ಲಾದನನ್ನು ಧರ್ಮದ ಆಗುಹೋಗುಗಳ ಕುರಿತು ಕೇಳಿದನು: “ಅಜ್ಜಾ! ಯಾವುದು ಒಳ್ಳೆಯದು - ಕ್ಷಮಿಸುವುದೋ ಅಥವಾ ಸೇಡನ್ನು ತೀರಿಸುಕೊಳ್ಳುವುದೋ? ಇದರ ಕುರಿತು ನನಗೆ ಸಂಶಯವಿದೆ. ದಯವಿಟ್ಟು ನಾನು ಕೇಳಿದುದಕ್ಕೆ ಉತ್ತರಿಸು. ಇವೆರಡರಲ್ಲಿ ಯಾವುದು ಏನೂ ಸಂಶಯವಿಲ್ಲದೇ ಶ್ರೇಯಸ್ಕರವಾದುದು? ನೀನು ನನಗೆ ತಿಳಿಸಿದ ಎಲ್ಲದರಂತೆ ನಡೆದುಕೊಳ್ಳುತ್ತೇನೆ.” ಈ ಪ್ರಶ್ನೆಗೆ ಸರ್ವ ನಿಶ್ಚಯಗಳನ್ನೂ ತಿಳಿದ ಅವನ ಅಜ್ಜ ಪ್ರಹ್ಲಾದನು ಅವನಿಗೆ ಎಲ್ಲವನ್ನೂ ಹೇಳಿದನು: “ಸೇಡು ಯಾವಾಗಲೂ ಒಳ್ಳೆಯದಲ್ಲ. ಹಾಗೆಯೇ ಕ್ಷಮೆಯೂ ಯಾವಾಗಲೂ ಒಳ್ಳೆಯದಲ್ಲ. ಮಗೂ! ಆದುದರಿಂದ ನಿಸ್ಸಂಶಯವಾಗಿ ಇವೆರಡನ್ನೂ ತಿಳಿದುಕೊಂಡಿರಬೇಕು! ನಿತ್ಯವೂ ಕ್ಷಮಿಸುವುದರಲ್ಲಿ ಬಹಳಷ್ಟು ದೋಷಗಳಿವೆ: ಅಂಥವನ ಸೇವಕರು ಮತ್ತು ಇತರರು ಅವನೊಂದಿಗೆ ಉದಾಸೀನರಾಗಿ ನಡೆದುಕೊಳ್ಳುತ್ತಾರೆ. ಸರ್ವಭೂತಗಳಲ್ಲಿ ಯಾವುದೂ ಅವನನನ್ನು ಎಂದೂ ನಮಸ್ಕರಿಸುವುದಿಲ್ಲ. ಆದುದರಿಂದಲೇ ಸದಾ ಕ್ಷಮಿಸುವವನನ್ನು ಪಂಡಿತರು ಟೀಕಿಸುತ್ತಾರೆ. ಅವನ ಸೇವಕರು ಅವನನ್ನು ಕಡೆಗಾಣಿಸಿ ಬಹಳಷ್ಟು ದುಷ್ಟ ವ್ಯಸನಗಳಲ್ಲಿ ತೊಡಗುತ್ತಾರೆ - ಆ ಸಣ್ಣಬುದ್ಧಿಯವರು ಅವನ ಸಂಪತ್ತನ್ನು, ವಾಹನ, ವಸ್ತ್ರ, ಅಲಂಕಾರಗಳು, ಹಾಸಿಗೆ, ಆಸನಗಳು, ಭೋಜನ ಪದಾರ್ಥಗಳು, ಪಾನೀಯಗಳು, ಹೀಗೆ ಸರ್ವ ಉಪಕರಣಗಳನ್ನೂ ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನೊಬ್ಬರಿಗೆ ಕೊಡಬೇಕು ಎಂದು ಆದೇಶವನ್ನಿತ್ತರೆ ಅವನ ಬುದ್ಧಿಯಿಲ್ಲದ ಸೇವಕರು ಇಂಥವರಿಗೇ ಕೊಡಬೇಕೆಂದು ತಮ್ಮ ಯಜಮಾನನ ಆಜ್ಞೆಯಾಗಿದ್ದರೂ, ತಮಗೆ ಬೇಕಾದಂತೆ ಕೊಟ್ಟು ಬಿಡುತ್ತಾರೆ. ಅವರು ಯಜಮಾನನಿಗೆ ದೊರೆಯಬೇಕಾದ ಗೌರವವನ್ನು ಅವನಿಗೆ ನೀಡುವುದಿಲ್ಲ. ಇಂಥಹ ಅಗೌರವವು ಮರಣಕ್ಕಿಂತಲೂ ಕೆಟ್ಟದ್ದು ಎಂದು ಈ ಲೋಕದಲ್ಲಿ ತಿಳಿದಿದ್ದಾರೆ. ಯಾವಾಗಲೂ ಕ್ಷಮಿಸುವವನಿಗೆ ಅವನ ಕುಟುಂಬ, ಸೇವಕರು, ಮಕ್ಕಳು, ಅವಲಂಬಿಸಿರುವವರು, ಮತ್ತು ಇತರರೂ ಕೂಡ ಗಮನಕೊಡದೇ ನಡೆದುಕೊಳ್ಳುತ್ತಾರೆ. ಕ್ಷಮಾವಂತನನ್ನು ಹೀಯಾಳಿಸಿ ಅವನ ಪತ್ನಿಯನ್ನೂ ಕೇಳುತ್ತಾರೆ ಮತ್ತು ಬುದ್ಧಿಯಿಲ್ಲದ ಹೆಂಡತಿಯೂ ಕೂಡ ತನಗಿಷ್ಟಬಂದಂತೆ ನಡೆದುಕೊಳ್ಳುತ್ತಾಳೆ. ಯಾವಾಗಲೂ ಸುಖಿಗಳಾಗಿರುವ ಆ ಅವಲಂಬಿತ ಜನರು ತಕ್ಕುದಾದ ಸ್ವಲ್ಪ ಶಿಕ್ಷೆಯನ್ನು ವಿಧಿಸಿದರೂ ದಂಗೆಯೇಳುತ್ತಾರೆ ಮತ್ತು ಯಜಮಾನನೇ ತಪ್ಪಿತಸ್ಥನೆಂದು ಸಾಧಿಸುತ್ತಾರೆ. ಇವು ಮತ್ತು ಇನ್ನೂ ಇತರ ದೋಷಗಳು ಸದಾ ಕ್ಷಮಾವಂತನಾಗಿರುವವನಲ್ಲಿ ಇರುತ್ತವೆ. ಈಗ ನಿತ್ಯವೂ ಅಕ್ಷಮಾವಂತನಾಗಿರುವವನಲ್ಲಿ ಇರುವ ದೋಷಗಳ ಕುರಿತು ಕೇಳು! ಕಾರಣವಿದ್ದೋ ಅಥವಾ ಕಾರಣವಿಲ್ಲದೆಯೋ ಯಾವಾಗಲೂ ಸಿಟ್ಟಿನಿಂದ ಇದ್ದು, ತನ್ನ ಅಧಿಕಾರದಿಂದ ಸಿಟ್ಟಾಗಿ ವಿವಿಧ ಶಿಕ್ಷೆಗಳನ್ನು ವಿಧಿಸುವ ಸಿಟ್ಟಿನವನನ್ನು ಮಿತ್ರರೂ ಕೂಡ ವಿರೋಧಿಸುತ್ತಾರೆ. ಅಂಥವನನ್ನು ಸ್ವಜನರನ್ನೂ ಕೂಡಿ ಇಡೀ ಲೋಕದವರು ದ್ವೇಷಿಸುತ್ತಾರೆ. ಇನ್ನೊಬ್ಬರನ್ನು ಅಪಮಾನಿಸುವ ಅಂಥಹ ಮನುಷ್ಯನು ತನ್ನ ಸಂಪತ್ತನ್ನು ಕಳೆದುಕೊಂಡು, ಜನರ ಅನಾದರಣೀಯನಾಗುತ್ತಾನೆ. ಅಂಥವನು ಸಂತಾಪ, ದ್ವೇಷ, ಲೋಭ, ಮತ್ತು ಶತ್ರುಗಳನ್ನೂ ಪಡೆಯುತ್ತಾನೆ. ಸಿಟ್ಟಿನಿಂದ ವಿವಿಧ ಕ್ರೂರ ಶಿಕ್ಷೆಗಳನ್ನು ವಿಧಿಸುವ ಪುರುಷನು ಬೇಗನೇ ತನ್ನ ಅಧಿಕಾರ, ಐಶ್ವರ್ಯ, ಪ್ರಾಣ ಮತ್ತು ಸ್ವಜರನನ್ನೂ ಕಳೆದುಕೊಳ್ಳುತ್ತಾನೆ. ತನಗೆ ಒಳ್ಳೆಯದನ್ನು ಅಥವಾ ಕೆಟ್ಟದನ್ನು ಮಾಡುವವರನ್ನು ಏನೂ ವ್ಯತ್ಯಾಸವಿಲ್ಲದೇ ಸಿಟ್ಟಿನಿಂದ ಶಿಕ್ಷಿಸುವವನಿಂದ ಜನರು ಬಿಲದೊಳಗೆ ಹೊಕ್ಕ ಸರ್ಪದಂತೆ ಹಿಂದೆಸರಿಯುತ್ತಾರೆ. ಜನರಿಂದ ದೂರಮಾಡಲ್ಪಟ್ಟ ಅವನಿಗೆ ಲೋಕದಲ್ಲಿ ಹೇಗೆ ತಾನೇ ಯಶಸ್ಸು ದೊರಕೀತು? ಒಂದು ಸಣ್ಣ ಅವಕಾಶ ಸಿಕ್ಕಿದರೂ ಕೂಡ ಜನರು ಅವನಿಗೆ ಕೆಟ್ಟದನ್ನು ಮಾಡಲು ಕಾಯುತ್ತಿರುತ್ತಾರೆ. ಆದುದರಿಂದ ಯಾರೂ ನಿತ್ಯವೂ ಸಿಟ್ಟಿನಿಂದ ಇರಬಾರದು ಅಥವಾ ಮೃದುವಾಗಿಯೂ ಇರಬಾರದು. ಸಮಯಕ್ಕೆ ತಕ್ಕಂತೆ ಮೃದುವಾಗುವವನು ಮತ್ತು ಸಮಯಕ್ಕೆ ತಕ್ಕಂತೆ ಸಿಟ್ಟಾಗುವನು ಈ ಲೋಕದಲ್ಲಿ ಮತ್ತು ಇದರ ನಂತರದ ಲೋಕಗಳಲ್ಲಿ ಸುಖವನ್ನು ಪಡೆಯುತ್ತಾನೆ. ಈಗ ಕೇಳು. ಯಾವ ಯಾವ ಸಂದರ್ಭಗಳಲ್ಲಿ ಕ್ಷಮಾವಂತನಾಗಿರಬೇಕು ಎನ್ನುವುದನ್ನು ವಿಸ್ತಾರವಾಗಿ ಹೇಳುತ್ತೇನೆ. ತಿಳಿದವರು ಹೇಳಿದ ಈ ರೀತಿಯಂತೆ ನಿತ್ಯವೂ ನಡೆದುಕೊಳ್ಳಬೇಕು. ಹಿಂದೆ ಉಪಕಾರ ಮಾಡಿದವನನ್ನು ಮುಂದೆ ಎಷ್ಟೇ ದೊಡ್ಡ ಅಪರಾಧವನ್ನೆಸಗಿರಲಿ, ಅವನು ಮಾಡಿದ ಉಪಕಾರಕ್ಕಾಗಿ ಆ ಅಪರಾಧಿಯನ್ನು ಕ್ಷಮಿಸಬೇಕು. ತನ್ನ ಆಶ್ರಯದಲ್ಲಿರುವರು ತಿಳುವಳಿಕೆಯಿಲ್ಲದೇ ಅಪರಾಧವನ್ನೆಸಗಿದರೆ ಅವರನ್ನು ಕ್ಷಮಿಸಬೇಕು. ಏಕೆಂದರೆ ಎಲ್ಲ ಪುರುಷರಿಗೂ ಸುಲಭವಾಗಿ ಪಾಂಡಿತ್ಯವು ದೊರೆಯುವುದಿಲ್ಲ. ತಿಳಿದು ಮಾಡಿ ತಿಳಿಯದೇ ಮಾಡಿದೆವೆಂದು ಅಪ್ರಮಾಣಿಕವಾಗಿರವವರನ್ನು, ಪಾಪವು ಎಷ್ಟೇ ಸಣ್ಣದಾಗಿರಲಿ, ಶಿಕ್ಷಿಸಬೇಕು. ಮೊದಲನೆಯ ಅಪರಾಧ, ಅದು ಯಾವ ಪ್ರಾಣಿಯದ್ದೇ ಆಗಿರಲಿ, ಅದನ್ನು ಕ್ಷಮಿಸಬೇಕು. ಆದರೆ, ಎರಡನೆಯದನ್ನು, ಎಷ್ಟೇ ಸಣ್ಣದಾಗಿದ್ದರೂ, ಶಿಕ್ಷಿಸಬೇಕು. ಒಂದುವೇಳೆ ತಿಳಿಯದೇ ಅಪರಾಧವನ್ನು ಮಾಡಿದ್ದರೆ, ಅದನ್ನು ಸರಿಯಾಗಿ ಪರೀಕ್ಷೆಮಾಡಿ, ಅನಂತರವೇ ಕ್ಷಮಿಸಬೇಕು. ಮೃದುತ್ವದಿಂದ ಮೃದುವಾಗಿರುವವರನ್ನೂ ದಾರುಣವಾಗಿರುವವರನ್ನೂ ಸೋಲಿಸಬಹುದು. ಮೃದುವಾಗಿರುವವರಿಗೆ ಯಾವುದೂ ಅಸಾಧ್ಯವಿಲ್ಲ. ಆದುದರಿಂದ ಮೃದುವಾದ ಮನಸ್ಸು ಅತ್ಯಂತ ತೀಕ್ಷ್ಣವಾದುದು. ದೇಶ ಮತ್ತು ಕಾಲಗಳೆರಡನ್ನೂ ಮತ್ತು ತನ್ನ ಬಲಾಬಲಗಳನ್ನೂ ನೋಡಿ ನಡೆದುಕೊಳ್ಳಬೇಕು. ದೇಶ ಮತ್ತು ಕಾಲಕ್ಕೆ ಸರಿಯಾಗಿರದ ನಡತೆಯು ಸೋಲುತ್ತದೆ. ಆದುದರಿಂದ ಸರಿಯಾದ ದೇಶ ಮತ್ತು ಸಮಯಕ್ಕೆ ಕಾಯಬೇಕಾಗುತ್ತದೆ. ಹಾಗೆಯೇ ಜನರ ಭಯದಿಂದಾಗಿಯೂ ಓರ್ವ ಅಪರಾಧಿಯನ್ನು ಕ್ಷಮಿಸಬಹುದು. ಈ ವಿಧದ ಸಂದರ್ಭಗಳಲ್ಲಿ ಕ್ಷಮಿಸುವುದೇ ಒಳ್ಳೆಯದು ಎಂದು ಹೇಳಿದ್ದಾರೆ. ಇವುಗಳನ್ನು ಬಿಟ್ಟು ಇತರ ಸಂದರ್ಭಗಳಲ್ಲಿ ಸಿಟ್ಟಿನಿಂದ ವರ್ತಿಸಬಹುದು ಎಂದು ಹೇಳಿದ್ದಾರೆ.”

“ನರಾಧಿಪ! ಆದುದರಿಂದ ಸತತವೂ ಅಪಕಾರಗಳನ್ನೆಸಗುತ್ತಾ ಬಂದಿರುವ ಲುಬ್ಧ ಧಾರ್ತರಾಷ್ಟ್ರರ ಮೇಲೆ ನಿನಗೆ ಸಿಟ್ಟು ಬರುವ ಸಂದರ್ಭವೇ ಬಂದಿದೆ. ಕುರುಗಳ ಕುರಿತು ಕ್ಷಮಾಭಾವದಿಂದಿರುವ ಕಾಲವಿನ್ನು ಎನೂ ಉಳಿದಿಲ್ಲ. ತೇಜಸ್ಸಿನಿಂದ ನಡೆದುಕೊಳ್ಳುವ ಕಾಲವು ಬಂದಾಗ ತೇಜಸ್ಸನ್ನೇ ಬಳಸಬೇಕಾಗುತ್ತದೆ. ಮೃದುಸ್ವಭಾವದವರನ್ನು ಗಮನಿಸುವುದಿಲ್ಲ ಮತ್ತು ತೀಕ್ಷ್ಣಬುದ್ಧಿಯವರಿಂದ ಜನರು ದೂರವಿರುತ್ತಾರೆ. ಸಮಯ ಬಂದಾಗ ಎರಡನ್ನೂ ತಿಳಿದವನೇ ಮಹೀಪತಿ.”

ಯುಧಿಷ್ಠಿರನು ಹೇಳಿದನು:

“ಮಹಾಪ್ರಾಜ್ಞೆ! ಕ್ರೋಧವು ಮನುಷ್ಯನನ್ನು ಕೊಲ್ಲುತ್ತದೆ ಮತ್ತೆ ಕ್ರೋಧವೇ ಅವನನ್ನು ಉಚ್ಛಸ್ಥಾನಕ್ಕೆ ಕರೆದೊಯ್ಯಬಹುದು. ಒಳ್ಳೆಯದು ಕೆಟ್ಟದ್ದು ಎರಡಕ್ಕೂ ಕ್ರೋಧವೇ ಮೂಲ ಎಂದು ತಿಳಿ. ಕ್ರೋಧವನ್ನು ಯಾರು ಸಂಹರಿಸುತ್ತಾನೋ ಅವನಿಗೆ ಒಳ್ಳೆಯದಾಗುತ್ತದೆ. ಅದರಂತೆಯೇ ಪುನಃ ಯಾರು ಕ್ರೋಧವನ್ನು ನಿತ್ಯವೂ ನಿಯಂತ್ರಣದಲ್ಲಿಟ್ಟುಕೊಂಡಿರುವುದಿಲ್ಲವೋ ಅಂಥಹ ಪುರುಷನಿಗೆ ಕೆಟ್ಟದಾಗುತ್ತದೆ. ಕ್ರೋಧವು ಪರಮ ದಾರುಣವಾದುದ್ದು. ಪ್ರಜೆಗಳ ವಿನಾಶಕ್ಕೆ ಕ್ರೋಧವೇ ಮೂಲವೆಂದು ಕಾಣುತ್ತೇವೆ. ಹೀಗಿರುವಾಗ ನನ್ನಂಥವನು ಹೇಗೆ ಆ ಲೋಕನಾಶಕ ಕ್ರೋಧವನ್ನು ತಾಳಬೇಕು? ಕೋಪಗೊಂಡ ನರನು ಪಾಪಕೃತ್ಯಗಳನ್ನು ಮಾಡುತ್ತಾನೆ. ಕೃದ್ಧನಾದವನು ಗುರುವನ್ನೂ ಕೊಲ್ಲಬಹುದು. ಕೃದ್ಧ ಪುರುಷನು ತನಗಿಂತ ಶ್ರೇಯಸ್ಸಿನಲ್ಲಿದ್ದವರನ್ನು ಮಾತುಗಳಿಂದ ಅಪಮಾನಿಸುತ್ತಾನೆ. ಯಾಕೆಂದರೆ, ಕುಪಿತನಾದಾಗ ಏನನ್ನು ಮಾತನಾಡಬೇಕು ಏನನ್ನು ಮಾತನಾಡಬಾರದು ಎನ್ನುವುದೇ ತಿಳಿಯುವುದಿಲ್ಲ. ಆದುದರಿಂದ ಕೃದ್ಧನಾದವನು ಏನು ಮಾಡುತ್ತಾನೆ ಏನು ಹೇಳುತ್ತಾನೆ ಎನ್ನುವುದು ಅವನಿಗೇ ಗೊತ್ತಿರುವುದಿಲ್ಲ. ಕ್ರೋಧದಲ್ಲಿ ಅವಧ್ಯರನ್ನು ಕೊಂದಾನು ಅಥವಾ ವಧ್ಯರನ್ನು ಸತ್ಕರಿಸಿಯಾನು. ಕೃದ್ಧನು ಸ್ವತಃ ತನ್ನನ್ನೂ ಕೂಡ ಯಮಸಾದನಕ್ಕೆ ಕಳುಹಿಸಿಕೊಳ್ಳಬಹುದು. ಈ ದೋಷಗಳನ್ನು ಪರಿಗಣಿಸಿಯೇ ಇಲ್ಲಿ ಪರಮ ಶ್ರೇಯಸ್ಸು ಮತ್ತು ಅಲ್ಲಿ ಉತ್ತಮಗತಿಯನ್ನು ಹೊಂದಲು ಬಯಸುವ ಬುದ್ಧಿವಂತರು ಕ್ರೋಧವನ್ನು ತೊರೆಯುತ್ತಾರೆ. ಬುದ್ಧಿವಂತರು ವರ್ಜಿಸುವ ಕ್ರೋಧವನ್ನು ನಾನು ಏಕೆ ನನ್ನದಾಗಿಸಿಕೊಳ್ಳಬೇಕು? ಇದರ ಕುರಿತು ಯೋಚಿಸಿಯೇ ನನ್ನ ಸಿಟ್ಟು ಏರುವುದಿಲ್ಲ. ತನ್ನ ಮೇಲೆ ಸಿಟ್ಟಾದವನ ಮೇಲೆ ಯಾರು ಸಿಟ್ಟಾಗುವುದಿಲ್ಲವೋ ಅವನು ಸ್ವತಃ ತನ್ನನ್ನು ಮತ್ತು ಇತರನನ್ನು ಒಂದು ಮಹಾ ಭಯದಿಂದ ರಕ್ಷಿಸುತ್ತಾನೆ. ಇಬ್ಬರಿಗೂ ಚಿಕಿತ್ಸಕನಾಗುತ್ತಾನೆ. ಶಕ್ತಿಯುಳ್ಳ ಮನುಷ್ಯನು ತಿರಸ್ಕರಿಸಿದನೆಂದು ಅವನ ಮೇಲೆ ಅಷ್ಟೊಂದು ಶಕ್ತಿಯಿಲ್ಲದಿರುವ ಮನುಷ್ಯನು ಸಿಟ್ಟು ಮಾಡಿದರೆ, ಆ ಮೂಢನು ತನ್ನ ಜೀವನವನ್ನೇ ಕಳೆದುಕೊಳ್ಳುತ್ತಾನೆ. ತನ್ನ ಮೇಲೆ ಪ್ರಭುತ್ವವನ್ನು ಹೊಂದಿರದ, ಕಷ್ಟಗಳನ್ನು ಹುಡುಕಿಕೊಂಡು ಹೋಗುವ ಅಂಥವನಿಗೆ ಪರಲೋಕವು ಸುಖಕರವಾಗಿರುವುದಿಲ್ಲ. ಆದುದರಿಂದಲೇ ಅಶಕ್ತರು ತಮ್ಮ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ. ಹಾಗೆಯೇ ಸಿಟ್ಟು ಮಾಡದ ಬಲಶಾಲಿಯು, ಬುದ್ಧಿವಂತನಾಗಿದ್ದರೆ, ತನಗೆ ತೊಂದರೆಕೊಡುತ್ತಿದ್ದವರ ಕಷ್ಟಗಳನ್ನೂ ನಾಶಪಡಿಸಿ, ಪರಲೋಕದಲ್ಲಿ ಆನಂದಿಸುತ್ತಾನೆ. ಆದುದರಿಂದಲೇ ಇದನ್ನು ತಿಳಿದ ಬಲವಂತರು ಮತ್ತು ದುರ್ಬಲರು ಇಬ್ಬರೂ ನಿತ್ಯವೂ, ಕಷ್ಟದ ಸಮಯದಲ್ಲಿಯೂ ಕೂಡ, ಕ್ಷಮಾವಂತರಾಗಿರಬೇಕು. ಸಿಟ್ಟನ್ನು ಗೆಲ್ಲುವುದನ್ನು ಸಾಧುಗಳು ಪ್ರಶಂಸಿಸುತ್ತಾರೆ. ನಿತ್ಯವೂ ಕ್ಷಮಾವಂತನೇ ಉತ್ತಮ ಜಯವನ್ನು ಹೊಂದುತ್ತಾನೆ ಎನ್ನುವುದೇ ಸಾಧುಗಳ ಅಭಿಪ್ರಾಯ. ಸುಳ್ಳಿಗಿಂತ ಸತ್ಯವೇ ಒಳ್ಳೆಯದು, ಕ್ರೂರತ್ವಕ್ಕಿಂತ ಮೃದುತ್ವವೇ ಒಳ್ಳೆಯದು. ಸಾಧುಗಳಿಂದ ವಿವರ್ಜಿತವಾದ ಬಹುದೋಷಗಳನ್ನು ಹೊಂದಿದ, ಸುಯೋಧನನನ್ನು ಕೊಲ್ಲಬಹುದಾದ ಕ್ರೋಧವನ್ನು ನನ್ನಂಥವನು ಹೇಗೆ ತಾನೇ ನನ್ನದನ್ನಾಗಿ ಮಾಡಿಕೊಳ್ಳಲಿ? ದೀರ್ಘದರ್ಶಿ ಪಂಡಿತರು ಯಾವುದನ್ನು ತೇಜಸ್ಸು ಎಂದು ಕರೆಯುತ್ತಾರೋ ಅದರಲ್ಲಿ ಕ್ರೋಧವೇ ಇಲ್ಲ ಎನ್ನುವುದು ನಿಶ್ಚಿತ. ಯಾರು ಹುಟ್ಟಿದ ಕ್ರೋಧವನ್ನು ಪ್ರಜ್ಞೆಯಿಂದ ತಡೆಹಿಡಿಯುತ್ತಾನೋ ಅಂಥವನನ್ನು ತತ್ವದರ್ಶಿ ವಿದ್ವಾಂಸರು ತೇಜಸ್ವಿಯೆಂದು ಗೌರವಿಸುತ್ತಾರೆ. ಸಿಟ್ಟಿಗೆದ್ದವನು ಮಾಡಬೇಕಾದುದನ್ನು ಯಥಾವತ್ತಾಗಿ ತಿಳಿದುಕೊಳ್ಳುವುದಿಲ್ಲ. ಸಿಟ್ಟಿಗೆದ್ದ ಮನುಷ್ಯನು ಏನು ಮಾಡಬೇಕು ಎನ್ನುವುದನ್ನು ಮತ್ತು ಎಷ್ಟು ಮಾಡಬೇಕು ಎನ್ನುವುದರ ಕುರಿತು ನೋಡುವುದೇ ಇಲ್ಲ. ಕೃದ್ಧನಾದವನು ದಂಡನೆಗೆ ಅರ್ಹರಲ್ಲದವರಿಗೂ ದಂಡನೆಯನ್ನು ನೀಡುತ್ತಾನೆ ಮತ್ತು ಹಿರಿಯರನ್ನು ಅವಹೇಳನ ಮಾಡುತ್ತಾನೆ. ಆದುದರಿಂದ ಕ್ರೋಧವನ್ನು ದೂರಮಾಡಿ ಕೆಲಸಮಾಡುವವನೇ ತೇಜಸ್ವಿ ಎಂದೆನಿಸಿಕೊಳ್ಳುತ್ತಾನೆ. ಕ್ರೋಧಕ್ಕೊಳಗಾದವನಿಗೆ ತೇಜಸ್ವಿಯ ಗುಣಗಳಾದ ದಕ್ಷತೆ, ಅಸೂಯೆಪಡೆಯದೇ ಇರುವ, ಶೌರ್ಯ, ಮತ್ತು ಶೀಘ್ನತ್ವವನ್ನು ಹೊಂದಲು ಸಾಧ್ಯವಿಲ್ಲ. ಕ್ರೋಧವನ್ನು ಬಿಟ್ಟ ಪುರುಷನು ತನ್ನ ತೇಜಸ್ಸನ್ನು ಸರಿಯಾಗಿ ಪಡೆಯಬಹುದು. ಯಾವಾಗಲೂ ಸಿಟ್ಟು ಮಾಡುವವನಿಗೆ ಕಾಲಬಂದಾಗ ತೇಜಸ್ಸಿನಿಂದ ನಡೆದುಕೊಳ್ಳಲು ಕಷ್ಟವಾಗುತ್ತದೆ. ತಿಳಿಯದೇ ಇರುವವರು ಕ್ರೋಧವನ್ನೇ ತೇಜಸ್ಸೆಂದು ತಪ್ಪು ತಿಳಿಯುತ್ತಾರೆ. ಲೋಕಗಳ ನಾಶಕ್ಕಾಗಿಯೇ ಮನುಷ್ಯನಿಗೆ ಕೋಪವು ವಿಹಿತವಾಗಿದೆ. ಆದುದರಿಂದ ಸರಿಯಾಗಿ ನಡೆದುಕೊಳ್ಳುವ ಪುರುಷನು ಕ್ರೋಧವನ್ನು ತ್ಯಜಿಸಬೇಕು. ಸ್ವಧರ್ಮವನ್ನು ಅಲ್ಲಗಳೆದರೂ ಪರವಾಗಿಲ್ಲ ಸಿಟ್ಟಾಗಬಾರದೇ ಇರುವುದೇ ಶ್ರೇಯಸ್ಸು ಎನ್ನುವುದಂತೂ ನಿಶ್ಚಯವೇ ಸರಿ. ಬುದ್ಧಿಯಿಲ್ಲದಿರುವವರು ತಿಳುವಳಿಕೆಯಿಲ್ಲದಿರುವವರು ಎಲ್ಲವನ್ನೂ ಮೀರಿ ನಡೆಯುತ್ತಾರೆಂದಾದರೆ ನನ್ನಂಥವನು ಹೇಗೆ ತಾನೇ ಅದನ್ನು ಮೀರಿ ನಡೆಯಲಿ? ಪೃಥ್ವಿಗೆ ಸಮಾನ ಕ್ಷಮಾವಂತರು ಜನರಲ್ಲಿ ಇಲ್ಲದೇ ಇದ್ದಿದ್ದರೆ ಜನರಲ್ಲಿ ಶಾಂತಿಯೇ ಇರುತ್ತಿರಲಿಲ್ಲ. ಯಾಕೆಂದರೆ ಕ್ರೋಧವೇ ಯುದ್ದದ ಮೂಲ. ದಬ್ಬಾಳಿಕೆಗೊಳಗಾದವರು ದಬ್ಬಾಳಿಕೆ ಮಾಡಲು ಪ್ರಾರಂಭಿಸಿದರೆ, ಗುರುವಿನಿಂದ ಪೆಟ್ಟುತಿಂದವನು ಗುರುವನ್ನೇ ಹೊಡೆಯಲು ಹೋದರೆ ಇರುವವೆಲ್ಲವುಗಳ ವಿನಾಶ ಮತ್ತು ಅಧರ್ಮವು ನಿಶ್ಚಿತವಾಗುತ್ತದೆ. ಬೈಯಲ್ಪಟ್ಟ ಎಲ್ಲ ಜನರೂ ಪುನಃ  ಬೈಯಲು ಆಗುತ್ತಿದ್ದರೆ ಅಥವಾ ಹೊಡೆತ ತಿಂದವನು ಪುನಃ ಹೊಡೆಯಲಿಕ್ಕೆ ಹೋದರೆ, ಹಿಂಸೆಗೊಳಗಾದವನು ಹಿಂಸಾಚಾರಕ್ಕೆ ಇಳಿದರೆ, ತಂದೆಯರು ಮಕ್ಕಳನ್ನೂ, ಮಕ್ಕಳು ತಂದೆಯಂದಿರನ್ನೂ ಹೊಡೆಯುವಂತಾದರೆ, ಗಂಡಂದಿರು ಹೆಂಡಂದಿರನ್ನು ಮತ್ತು ಹೆಂಡಿರು ಗಂಡಂದಿರನ್ನು ಹೊಡೆಯುವಂತಾದರೆ, ಹೀಗೆ ಲೋಕದಲ್ಲಿ ಜನರು ಕೋಪದಿಂದ ಇದ್ದಿದ್ದರೆ ಜನರೇ ಹುಟ್ಟುತ್ತಿರಲಿಲ್ಲ ಎಂದು ತಿಳಿ! ಏಕೆಂದರೆ, ಶಾಂತಿಯೇ ಪ್ರಜೆಗಳ ಹುಟ್ಟಿಗೆ ಕಾರಣ ಎಂದು ತಿಳಿ. ಅಂಥಹ ಲೋಕದಲ್ಲಿ ಪ್ರಜೆಗಳೆಲ್ಲರೂ ಬೇಗನೆ ಸಾಯುತ್ತಾರೆ. ಸಿಟ್ಟೇ ಪ್ರಜೆಗಳ ವಿನಾಶಕ್ಕೂ, ಅವರು ಇಲ್ಲದಂತೆ ಮಾಡುವುದಕ್ಕೂ ಕಾರಣ. ಈ ಲೋಕದಲ್ಲಿ ಭೂಮಿಗೆ ಸಮನಾದ ಕ್ಷಮಾವಂತರು ಕಾಣಿಸಿಕೊಳ್ಳುವುದರಿಂದಲೇ ಜನರು ಹುಟ್ಟುತ್ತಾರೆ ಮತ್ತು ಇರುವಿಕೆ ಮುಂದುವರೆಯುತ್ತಿದೆ. ಎಲ್ಲ ಆಪತ್ತುಗಳಲ್ಲಿಯೂ ಪುರುಷನು ಕ್ಷಮಾವಂತನಾಗಿರಬೇಕು. ಯಾಕೆಂದರೆ ಕ್ಷಮೆ ಎಂದರೆ ಭೂತಗಳ ಇರುವಿಕೆ ಮತ್ತು ಜನ್ಮ ಎಂದೂ ಕರೆಯಲ್ಪಟ್ಟಿದೆ. ಬಲವಂತರ ಹೀಯಾಳಿಕೆಗೊಳಲ್ಪಟ್ಟ, ಹೊಡೆತತಿಂದ ಮತ್ತು ಸಿಟ್ಟಿಗೊಳಗಾದವನು ನಿತ್ಯವೂ ಕ್ರೋಧವನ್ನು ಗೆದ್ದಿರುವವನು ವಿದ್ವಾಂಸ ಮತ್ತು ಉತ್ತಮ ಪುರುಷ. ತನ್ನ ಪ್ರಭಾವದಿಂದ ಸನಾತನ ಲೋಕಗಳೂ ಆ ಮನುಷ್ಯನದಾಗುತ್ತವೆ. ಸ್ವಲ್ವವನ್ನೇ ತಿಳಿದುಕೊಂಡಿರುವವನ ಕೋಪವು ಇದನ್ನೂ ಮತ್ತು ಇತರ ಲೋಕಗಳನ್ನೂ ನಾಶಪಡಿಸುತ್ತದೆ. ಆದುದರಿಂದಲೇ ನಿತ್ಯವೂ ಕ್ಷಮಾವಂತರನ್ನು ಹೊಗಳಿ ಹಾಡುಹೇಳಿ ಕ್ಷಮಾವತ ಮಹಾತ್ಮ ಕಾಶ್ಯಪರು ಉದಾಹರಿಸುತ್ತಾರೆ: ‘ಕ್ಷಮೆಯೇ ಧರ್ಮ. ಕ್ಷಮೆಯೇ ಯಜ್ಞ. ಕ್ಷಮೆಯೇ ವೇದ. ಕ್ಷಮೆಯೇ ಶ್ರುತಿ. ಇದನ್ನು ತಿಳಿದವನು ಎಲ್ಲವನೂ ಕ್ಷಮಿಸಬಲ್ಲನು. ಕ್ಷಮೆಯೇ ಬ್ರಹ್ಮ. ಕ್ಷಮೆಯೇ ಸತ್ಯ. ಕ್ಷಮೆಯೇ ಇರುವಂಥಹುದು ಮತ್ತು ಮುಂದೆ ಇರಬಹುದಾದಂಥುಹುದು. ಕ್ಷಮೆಯೇ ತಪಸ್ಸು. ಕ್ಷಮೆಯೇ ಶೌಚ. ಕ್ಷಮೆಯೇ ಜಗತ್ತನ್ನು ಎತ್ತಿ ಹಿಡಿದಿರುವುದು. ಬ್ರಹ್ಮವಿದರ, ತಪಸ್ವಿಗಳ ಮತ್ತು ಯಜ್ಞವಿದರ ಲೋಕಗಳು ಕ್ಷಮಾವಂತನಿಗೆ ಸೇರುತ್ತವೆ. ತೇಜಸ್ವಿಗಳ ತೇಜಸ್ಸೇ ಕ್ಷಮೆ, ಕ್ಷಮೆಯೇ ತಪಸ್ವಿಗಳ ಬ್ರಹ್ಮ. ಸತ್ಯವಂತರ ಸತ್ಯವೇ ಕ್ಷಮೆ ಮತ್ತು ಕ್ಷಮೆಯೇ ದಾನ ಮತ್ತು ಕ್ಷಮೆಯೇ ಯಶಸ್ಸು. ಬ್ರಹ್ಮ, ಸತ್ಯ, ಯಜ್ಞ ಮತ್ತು ಲೋಕಗಳು ನೆಲೆಮಾಡಿರುವ ಕ್ಷಮೆಯನ್ನು ನನ್ನಂಥವನು ಹೇಗೆ ತಾನೇ ಬಿಟ್ಟುಬಿಡಲಿ? ಯಾಜಿಸುವವರು ಲೋಕಗಳನ್ನು ಅನುಭೋಗಿಸುತ್ತಾರೆ ಮತ್ತು ಹಾಗೆಯೇ ಕ್ಷಮಾವಂತರು ನಂತರದ ಲೋಕಗಳನ್ನು ಅನುಭೋಗಿಸುತ್ತಾರೆ. ತಿಳಿದಿರುವ ಪುರುಷನು ಯಾವಾಗಲೂ ಕ್ಷಮಿಸುತ್ತಾನೆ. ಎಲ್ಲವನ್ನೂ ಕ್ಷಮಿಸುವವನೇ ಬ್ರಹ್ಮನಾಗುತ್ತಾನೆ. ಈ ಲೋಕವು ಕ್ಷಮಾವಂತನದ್ದು, ಪರಲೋಕವೂ ಆ ಕ್ಷಮಾವಂತನದ್ದೇ! ಕ್ಷಮಾವಂತರು ಇಲ್ಲಿ ಸಮ್ಮಾನವನ್ನು ಪಡೆಯುತ್ತಾರೆ ಮತ್ತು ಪರಲೋಕದಲ್ಲಿ ಶುಭಗತಿಯನ್ನು ಹೊಂದುತ್ತಾರೆ. ಕೋಪವನ್ನು ಕ್ಷಮೆಯಿಂದ ಸದಾ ನಿಯಂತ್ರಣದಲ್ಲಿಟ್ಟುಕೊಂಡಿರುವ ಮನುಷ್ಯನಿಗೆ ಉತ್ತಮ ಲೋಕಗಳು ದೊರೆಯುತ್ತವೆ. ಆದುದರಿಂದ ಕ್ಷಮೆಯೇ ಶ್ರೇಷ್ಠವೆಂದು ಅಭಿಪ್ರಾಯ.’ ಇದೇ ನಿತ್ಯವೂ ಕ್ಷಮಾವಂತರಾಗಿರುವವರ ಕುರಿತು ಕಾಶ್ಯಪನು ಹಾಡಿದ ಗೀತೆ. ಈ ಗೀತೆಯನ್ನು ಕೇಳಿದ ನೀನು ಈಗಲಾದರೂ ಕ್ಷಮಾವಂತಳಾಗಿರು. ಸಿಟ್ಟುಮಾಡಬೇಡ! ಶಾಂತನವ ಪಿತಾಮಹನು ಶಮೆಯನ್ನು ಪೂಜಿಸುತ್ತಾನೆ. ಆಚಾರ್ಯ ವಿದುರ ಕ್ಷತ್ತನೂ ಶಮೆಯನ್ನೇ ಬೆಂಬಲಿಸುತ್ತಾನೆ. ಕೃಪ, ಸಂಜಯರೂ ಕೂಡ ಶಮೆಯನ್ನೇ ಹೊಗಳುತ್ತಾರೆ. ಸೋಮದತ್ತ, ಯುಯುತ್ಸು, ದ್ರೋಣಪುತ್ರ, ಪಿತಾಮಹ ವ್ಯಾಸನೂ ಕೂಡ ನಿತ್ಯವೂ ಶಮೆಯನ್ನೇ ಪ್ರೋತ್ಸಾಹಿಸುತ್ತಾರೆ. ಅವರು ಶಮೆಯ ಕುರಿತಾಗಿ ನಿತ್ಯವೂ ಅವನನ್ನು ಪ್ರಚೋದಿಸುತ್ತಾರಿರುವುದರಿಂದ ರಾಜನೂ ಕೂಡ ನನಗೆ ರಾಜ್ಯವನ್ನು ಕೊಡುತ್ತಾನೆ. ಹಾಗೆ ಬುದ್ಧಿ ಮಾಡದಿದ್ದರೆ ಲೋಭದಿಂದ ವಿನಾಶವನ್ನು ಹೊಂದುತ್ತಾನೆ. ಭರತರು ನಾಶಹೊಂದುವ ದಾರುಣ ಕಾಲವು ಬಂದಿದೆ. ಇದೇ ನನಗೆ ಇದೂವರೆಗೆ ಇರುವ ಮತ್ತು ಸದಾ ಇರುವ ನಿಶ್ಚಯ. ಸುಯೋಧನನಿಗೆ ಕ್ಷಮೆಯೆಂದರೇನೇ ತಿಳಿದಿಲ್ಲ ಮತ್ತು ಅವನಲ್ಲಿ ಕ್ಷಮೆಯನ್ನು ಕಾಣುವುದಕ್ಕಾಗುವುದಿಲ್ಲ. ನಾನಾದರೋ ಕ್ಷಮೆಯೇನೆಂದು ತಿಳಿದಿದ್ದೇನೆ ಮತ್ತು ಕ್ಷಮಿಸಲು ಸಮರ್ಥನಿದ್ದೇನೆ. ಕ್ಷಮೆ ಮತ್ತು ಮೃದುತ್ವ ಇವೇ ಆತ್ಮವಂತರು ನಡೆದುಕೊಳ್ಳುವ ಸನಾತನ ಧರ್ಮ. ಅದರಂತೆಯೇ ನಾನೂ ಕೂಡ ನಡೆದುಕೊಳ್ಳುತ್ತೇನೆ.”

ದ್ರೌಪದಿಯು ಹೇಳಿದಳು:

“ನಿನ್ನ ತಂದೆ ಪಿತಾಮಹರಂತೆ ನಡೆದುಕೊಳ್ಳಬೇಕಾಗಿರುವ ನೀನು ಬೇರೆಯೇ ರೀತಿಯಲ್ಲಿ ಯೋಚಿಸುತ್ತಿರುವೆ. ನಿನ್ನಲ್ಲಿ ಈ ಗೊಂದಲವನ್ನುಂಟುಮಾಡಿರುವ ಧಾತ್ರ ವಿಧಾತ್ರರಿಗೆ ವಂದನೆಗಳು! ಧರ್ಮ, ಮೃದುತ್ವ, ಕ್ಷಮೆ, ದಿಟ್ಟತನ, ಮತ್ತು ಕೋಮಲತೆಗಳಿಂದ ಯಾವ ಪುರುಷನೂ ಶ್ರೇಯಸ್ಸನ್ನು ಹೊಂದುವುದಿಲ್ಲ. ಇಂದು ನಿನಗೆ ಬಂದೊದಗಿರುವ ಕಷ್ಟಕ್ಕೆ ನೀನೂ ಅರ್ಹನಲ್ಲ ಮತ್ತು ನಿನ್ನ ಈ ಮಹೌಜಸ ತಮ್ಮಂದಿರೂ ಅರ್ಹರಲ್ಲ. ಇಂದು ಅವರಿಗೆ ತಿಳಿದಿದೆ - ನಿನಗೆ ಧರ್ಮಕ್ಕಿಂತಲೂ ಹೆಚ್ಚಿಗೆ ಪ್ರಿಯವಾದದ್ದು ಏನೂ ಇಲ್ಲ - ಜೀವವೂ ಅಷ್ಟೊಂದು ಪ್ರಿಯವಲ್ಲ! ನಿನ್ನ ರಾಜ್ಯವೂ ಧರ್ಮಕ್ಕಾಗಿಯೇ, ಜೀವಿತವೂ ಧರ್ಮಕ್ಕಾಗಿಯೇ ಎನ್ನುವುದನ್ನು ಬ್ರಾಹ್ಮಣರೂ, ಹಿರಿಯರೂ, ದೇವತೆಗಳೂ ತಿಳಿದಿದ್ದಾರೆ. ಧರ್ಮವನ್ನು ಪರಿತ್ಯಜಿಸುವ ಮೊದಲು ನೀನು ಭೀಮಾರ್ಜುನರನ್ನೂ, ಮಾದ್ರೇಯರನ್ನೂ ಮತ್ತು ನನ್ನನ್ನೂ ಸಹ ತೊರೆಯುತ್ತೀಯೆ ಎಂದು ನನಗನ್ನಿಸುತ್ತದೆ. ಧರ್ಮವನ್ನು ಪರಿಪಾಲಿಸಿ ರಕ್ಷಿಸುವ ರಾಜರನ್ನು ಧರ್ಮವೇ ರಕ್ಷಿಸುತ್ತದೆ ಎಂದು ಆರ್ಯರಿಂದ ಕೇಳಿದ್ದೇನೆ. ಆದರೆ ಅದು ನಿನ್ನನು ರಕ್ಷಿಸುವುದಿಲ್ಲ ಎಂದು ನನ್ನ ಅಭಿಪ್ರಾಯ. ನೆರಳು ಹೇಗೆ ಪುರುಷನನ್ನು ಸತತವೂ ಅನುಸರಿಸುತ್ತಿರುತ್ತದೆಯೋ ಹಾಗೆ ನಿನ್ನ ಬುದ್ಧಿಯೂ ಕೂಡ ನಿತ್ಯವೂ ಆಚೆ ಈಚೆ ಹೋಗದೆ ಧರ್ಮವನ್ನೇ ಅನುಸರಿಸುತ್ತದೆ. ನಿನ್ನ ಸರಿಸಮರನ್ನು ಅಥವಾ ನಿನಗಿಂಥ ಕೀಳುಮಟ್ಟದಲ್ಲಿರುವವರನ್ನು, ಮತ್ತು ನಿನಗಿಂಥ ಒಳ್ಳೆಯರಾಗಿರುವವರನ್ನು ನೀನು ಎಂದೂ ಹೀಯಾಳಿಸಿಲ್ಲ. ಇಡೀ ಪೃಥ್ವಿಯನ್ನು ಪಡೆದ ಮೇಲೂ ನಿನ್ನ ತಲೆಯು ಬೆಳೆಯಲಿಲ್ಲ! ಸ್ವಾಹಾಕಾರ ಮತ್ತು ಸ್ವಧರ್ಮದಿಂದ ನೀನು ದ್ವಿಜರನ್ನೂ, ದೇವತೆಗಳನ್ನೂ, ಮತ್ತು ಪಿತೃಗಳನ್ನೂ ಸತತವೂ ಪೂಜಿಸುತ್ತೀಯೆ ಮತ್ತು ಸೇವಿಸುತ್ತೀಯೆ. ನೀನು ಸತತವೂ ಬ್ರಾಹ್ಮಣರ, ಯತಿಗಳ, ಮೋಕ್ಷಿಣಿಗಳ ಮತ್ತು ಗೃಹಸ್ಥರ ಎಲ್ಲ ಆಸೆಗಳನ್ನೂ ಪೂರೈಸುತ್ತೀಯೆ. ಆರಣ್ಯಕರಿಗೆ ನೀನು ಲೋಹದ ಪಾತ್ರೆಗಳನ್ನು ಕೊಡುತ್ತೀಯೆ. ಬ್ರಾಹ್ಮಣರಿಗೆ ಕೊಡಲಾಗದೇ ಇರುವಂಥಹುದು ಏನೂ ನಿನ್ನ ಮನೆಯಲ್ಲಿ ಇಲ್ಲ. ಪ್ರತಿ ಮುಂಜಾನೆ ಮತ್ತು ಸಾಯಂಕಾಲ ವೈಶ್ವದೇವವನ್ನು ಪೂರೈಸಿದ ನಂತರ ಮೊದಲು ಅತಿಥಿಗಳಿಗೆ ಮತ್ತು ಅವಲಂಬಿತರಿಗೆ ಊಟವನ್ನಿತ್ತು ಉಳಿದುದನ್ನು ನೀನು ಸೇವಿಸುತ್ತೀಯೆ. ಇಷ್ಟಿಗಳು, ಪಶುಬಂಧಗಳು, ಕಾಮ್ಯನಿಮಿತ್ತಗಳು, ಪಾಕಯಜ್ಞಗಳು ಮತ್ತು ಯಜ್ಞಕರ್ಮಗಳು ನಿತ್ಯವೂ ನಡೆಯುತ್ತಲೇ ಬಂದಿವೆ. ರಾಷ್ಟ್ರದಿಂದ ಹೊರಹಾಕಲ್ಪಟ್ಟು ವಾಸಿಸುತ್ತಿರುವ ಈ ವಿಜನ, ದಸ್ಯುಗಳಿಂದ ಕೂಡಿರುವ ಮಹಾರಣ್ಯದಲ್ಲಿಯೂ ಕೂಡ ನಿನ್ನ ಧರ್ಮವು ತಪ್ಪದೇ ನಡೆಯುತ್ತಿದೆ. ನೀನು ಅಶ್ವಮೇಧ, ರಾಜಸೂಯ, ಪುಂಡರೀಕ ಮತ್ತು ಗೋಸವ ಇವೆಲ್ಲ ಮಹಾಯಜ್ಞಗಳನ್ನೂ ಇಷ್ಟಿಗಳನ್ನೂ ಭೂರಿದಕ್ಷಿಣೆಗಳನ್ನಿತ್ತು ನೆರವೇರಿಸಿದ್ದೀಯೆ. ಜೂಜಿನಲ್ಲಿ ವಿಷಮ ಸೋಲಿನಿಂದ ಪರಿತಪಿಸಿದ ಬುದ್ಧಿಯಿಂದ ನೀನು ರಾಜ್ಯ, ಸಂಪತ್ತು, ಆಯುಧಗಳು, ತಮ್ಮಂದಿರನ್ನು ಮತ್ತು ನನ್ನನ್ನೂ ಕೂಡ ಸೋತೆ. ಆಗ ನೀನು ಧಿಟ್ಟನಾಗಿದ್ದೆ, ಮೃದುವಾಗಿದ್ದೆ, ಕೊಡುವವನಾಗಿದ್ದೆ, ವಿನೀತನಾಗಿದ್ದೆ, ಮತ್ತು ಸತ್ಯವಾದಿಯಾಗಿದ್ದೆ. ಆದರೂ ಜೂಜಿನ ವ್ಯಸನದಿಂದ ನಿನ್ನ ಬುದ್ಧಿಯು ಹೇಗೆ ತಾನೇ ಕೆಳಗುರುಳಿತು?

“ನಿನ್ನ ಈ ದುಃಖವನ್ನು ಮತ್ತು ಇಂಥಹ ಆಪತ್ತನ್ನು ನೋಡಿ ನನ್ನ ಬುದ್ದಿಯು ತುಂಬಾ ಗೊಂದಲದಲ್ಲಿದೆ ಮತ್ತು ಮನಸ್ಸು ದುಃಖದಿಂದ ಸುಡುತ್ತಿದೆ. ಲೋಕವು ಈಶ್ವರನ ವಶದಲ್ಲಿದೆ ವ್ಯಕ್ತಿಯಿಂದ ಅಲ್ಲ ಎನ್ನುವುದರ ಕುರಿತಾಗಿ ಈ ಪುರಾತನ ಇತಿಹಾಸವೊಂದನ್ನು ಉದಾಹರಿಸಿ ಹೇಳುತ್ತಾರೆ. ವೀರ್ಯಸ್ಖಲನವಾಗುವ ಮೊದಲೇ ಮಾನವನ ಸುಖದುಃಖಗಳನ್ನೂ, ಪ್ರಿಯ ಅಪ್ರಿಯವಾದವುಗಳನ್ನೂ ಸರ್ವರ ಒಡೆಯ ಧಾತನೇ ಕೊಡುತ್ತಾನೆ. ಜೀವಿಗಳು ಬೇರೆ ಯಾರೋ ಆಡಿಸುತ್ತಿರುವ ಮರದ ಗೊಂಬೆಗಳಂತೆ! ಆ ಬೇರೆಯವನೇ ಜೀವಿಗಳ ದೇಹ ಮತ್ತು ಕೈಕಾಲುಗಳನ್ನು ಚಲಿಸುವಂತೆ ಮಾಡುತ್ತಾನೆ. ಈಶ್ವರನು ಆಕಾಶದಂತೆ ಸರ್ವಭೂತಗಳಲ್ಲಿಯೂ ವ್ಯಾಪ್ತನಾಗಿ, ಅವುಗಳಿಗೆ ಕಲ್ಯಾಣಕರ ಮತ್ತು ಪಾಪಕಾರಕಗಳನ್ನು ಕೊಡುತ್ತಾನೆ. ದಾರಕ್ಕೆ ಕಟ್ಟಲ್ಪಟ್ಟ ಪಕ್ಷಿಯಂತೆ ಮನುಷ್ಯನು ತನ್ನ ಸ್ವಾಮಿಯಲ್ಲ. ಈಶ್ವರನ ಅಧೀನದಲ್ಲಿರುವ ಅವನು ಸ್ವತಃ ತನ್ನ ಅಥವಾ ಬೇರೆ ಯಾರ ಸ್ವಾಮಿಯಾಗಿರಲೂ ಸಾಧ್ಯವಿಲ್ಲ! ದಾರಕ್ಕೆ ಪೋಣಿಸಿದ ಮಣಿಯಂತೆ, ಮೂಗುದಾಣದಿಂದ ಹಿಡಿಯಲ್ಪಟ್ಟ ಎತ್ತಿನಂತೆ ಮನುಷ್ಯನು ಧಾತುವಿನಲ್ಲಿಯೇ ತನ್ಮಯನಾಗಿ, ಅವನಿಗೆ ತನ್ನನ್ನು ಸಮರ್ಪಿಸಿಕೊಂಡು ಅವನ ಆದೇಶವನ್ನೇ ಅನುಸರಿಸುತ್ತಾನೆ. ಪ್ರವಾಹದ ಮಧ್ಯದಲ್ಲಿ ಬಿದ್ದು ಸಿಕ್ಕುಹಾಕಿಕೊಂಡ ವೃಕ್ಷದಂತೆ ಪ್ರತಿಯೊಬ್ಬ ಮನುಷ್ಯನೂ ತನ್ನ ಅಧೀನದಲ್ಲಿರದೇ ಕಾಲದ ಅಧೀನದಲ್ಲಿರುತ್ತಾನೆ. ಮನುಷ್ಯನಿಗೆ ಏನೂ ತಿಳಿದಿರುವುದಿಲ್ಲ. ಅವನಿಗೆ ಅವನ ಸುಖದುಃಖಗಳ ಮೇಲೆ ನಿಯಂತ್ರಣವಿರುವುದಿಲ್ಲ. ಈಶ್ವರನಿಂದ ಪ್ರೇರಿತನಾಗಿ ಅವನು ಸ್ವರ್ಗಕ್ಕೂ ಹೋಗಬಹುದು ಅಥವಾ ನರಕಕ್ಕೂ ಹೋಗಬಹುದು. ಭಿರುಗಾಳಿಯ ಹೊಡೆತಕ್ಕೆ ಸಿಕ್ಕಿದ ಸಣ್ಣ ಹುಲ್ಲುಕಡ್ಡಿಯು ಗಾಳಿಯು ಚಲಿಸಿದತ್ತ ಚಲಿಸುವಂತೆ, ಸರ್ವಭೂತಗಳೂ ಬಲಿಷ್ಠವಾದ ದೈವಪ್ರೇರಣೆಯ ಪ್ರಭಾವಕ್ಕೆ ಸಿಲುಕಿರುತ್ತಾರೆ. ಈಶ್ವರನು ಪಾಪ ಅಥವಾ ಪುಣ್ಯಕರ್ಮಗಳನ್ನು ಕಟ್ಟಿಕೊಂಡು ಭೂತಗಳಲ್ಲಿ ವ್ಯಾಪ್ತನಾಗಿ ತಿರುಗುತ್ತಿರುತ್ತಾನಾದರೂ ಗಮನಕ್ಕೆ ಬರುವುದಿಲ್ಲ. ಯಾವುದರ ಮೂಲಕ ವಿಭುವು ಶುಭಾಶುಭ ಕರ್ಮಗಳನ್ನು ಮಾಡಿಸುತ್ತಾನೋ ಆ ಕ್ಷೇತ್ರವೆಂದು ಕರೆಯಲ್ಪಡುವ ಶರೀರವು ಧಾತು ವಿಭುವಿನ ಉಪಕರಣ ಮಾತ್ರ. ಈಶ್ವರನಿಂದ ಮಾಡಲ್ಪಟ್ಟ ಈ ಮಾಯೆಯ ಪ್ರಭಾವವನ್ನು ನೋಡು. ತನ್ನ ಮಾಯೆಯಿಂದ ಮೋಹಿಸಿ ಭೂತಗಳನ್ನು ಭೂತಗಳೇ ಕೊಲ್ಲುವಂತೆ ಮಾಡುತ್ತಾನೆ. ವೇದದರ್ಶಿ ಮುನಿಗಳು ಇದನ್ನು ಕಂಡು ಬೇರೆಯೇ ದಾರಿಯನ್ನು ಹಿಡಿಯುತ್ತಾರೆ. ಆಕಾಶದಲ್ಲಿರುವವು ಬೇಗ ಬೇಗನೆ ಪರಿವರ್ತನಗೊಳ್ಳುತ್ತವೆ. ಪುರುಷರಿಗೆ ಒಂದು ರೀತಿ ಕಂಡರೆ ಪ್ರಭುವು ಅದನ್ನು ಬದಲಾಯಿಸುತ್ತಾನೆ. ಕಟ್ಟಿಗೆಯನ್ನು ಕಟ್ಟಿಗೆಯಿಂದ ಹೇಗೋ ಹಾಗೆ, ಕಲ್ಲನ್ನು ಕಲ್ಲಿನಿಂದ ಹೇಗೋ ಹಾಗೆ, ಜಡವಸ್ತುವನ್ನು ಜಡವಸ್ತುವಿನಿಂದ ಹೇಗೋ ಹಾಗೆ ಸ್ವಯಂಭೂ, ಪ್ರಪಿತಾಮಹ ಭಗವಾನ್ ದೇವನು ಭೂತಗಳಿಂದಲೇ ಭೂತಗಳನ್ನು ಮರೆಸಿ ಕೊಲ್ಲಿಸುತ್ತಾನೆ. ಒಟ್ಟು ಸೇರಿಸಿ, ಬಿಟ್ಟುಹೋಗುವಂತೆ ಮಾಡಿ, ಆ ಕುಶಲ ಕಾರ್ಯಕರ್ಮಿ ಭಗವಾನ್ ಪ್ರಭುವು ಮಕ್ಕಳು ಗೊಂಬೆಗಳೊಂದಿಗೆ ಆಡುವಂತೆ ಭೂತಗಳೊಂದಿಗೆ ಆಡುತ್ತಾನೆ. ಧಾತನು ಭೂತಗಳೊಡನೆ ತಂದೆ ಅಥವಾ ತಾಯಿಯಂತೆ ವರ್ತಿಸುವುದಿಲ್ಲ. ಇತರ ಜನರು ಹೇಗೆ ವರ್ತಿಸುತ್ತಾರೋ ಹಾಗೆ ಇವನೂ ಕೂಡ ರೋಷದಿಂದಲೋ ಎನ್ನುವಂತೆ ವರ್ತಿಸುತ್ತಾನೆ. ಆರ್ಯರು, ಶೀಲವಂತರು, ವಿನೀತರು ತಮ್ಮ ತಮ್ಮ ಪ್ರವೃತ್ತಿಗಳಲ್ಲಿ ಬಳಲಿರುವುದನ್ನು ಮತ್ತು ಅನಾರ್ಯರು ಸುಖದಿಂದಿರುವುದನ್ನು ನೋಡಿ ನನ್ನ ಮನಸ್ಸು ಚಿಂತೆಯಿಂದ ವಿಹ್ವಲವಾಗಿದೆ.

“ನಿನ್ನ ಕಷ್ಟಗಳು ಮತ್ತು ಸುಯೋಧನನ ಸಮೃದ್ಧಿ ಈ ವಿಷಮತೆಯನ್ನು ನೋಡಿ ಇದಕ್ಕೆ ಎಡೆಮಾಡಿಕೊಟ್ಟ ಧಾತಾರನನ್ನು ಧಿಕ್ಕರಿಸುತ್ತೇನೆ. ಆರ್ಯಶಾಸ್ತ್ರಗಳನ್ನು ಉಲ್ಲಂಘಿಸಿ, ಕ್ರೂರ, ಲುಬ್ಧ, ಅಧರ್ಮಚಾರಿ ಧಾರ್ತರಾಷ್ಟ್ರರಿಗೆ ಸಂಪತ್ತನ್ನು ಕೊಟ್ಟು ಧಾತನಿಗೆ ಏನು ಫಲದೊರೆಯುತ್ತದೆ? ಕರ್ಮವು ಅದನ್ನು ಎಸಗಿದ ಕರ್ತಾರನಲ್ಲದೇ ಬೇರೆ ಯಾರನ್ನೂ ಕಾಡಿಸುವುದಿಲ್ಲ ಎಂದಾಗ ಅಂಥಹ ಕರ್ಮಗಳ ಪಾಪವು ಈಶ್ವರನಿಗೆ ತಾಗಬೇಕು ತಾನೇ? ಕರ್ತಾರನಿಗೆ ಅಂಥಹ ಕರ್ಮದ ಪಾಪವು ತಗಲುವುದಿಲ್ಲವೆಂದಾದರೆ ಬಲವೇ ಎಲ್ಲವಕ್ಕೂ ಕಾರಣವೆಂದಾದರೆ ದುರ್ಬಲ ಜನರ ಕುರಿತು ನಾನು ಶೋಕಿಸುತ್ತೇನೆ.”

ಯುಧಿಷ್ಠಿರನು ಹೇಳಿದನು:

“ಯಾಜ್ಞಸೇನಿ! ನೀನು ಹೇಳಿದ ಮಾತುಗಳು ಉತ್ತಮ ಶಬ್ಧಗಳನ್ನೊಡಗೂಡಿವೆ ಮತ್ತು ಚೆನ್ನಾಗಿದೆ. ಆದರೆ ನೀನು ಹೇಳುವುದು ನಾಸ್ತಿಕರ ಭಾಷೆಯಂತೆ ನನಗೆ ಕೇಳುತ್ತಿದೆ. ನಾನು ಧರ್ಮದ ಫಲವನ್ನು ಬಯಸಿ ನಡೆಯುತ್ತಿಲ್ಲ. ಕೊಡಬೇಕು ಎಂದು ಕೊಡುತ್ತೇನೆ ಮತ್ತು ಯಾಜಿಸಬೇಕೆಂದು ಯಜ್ಞಗಳನ್ನು ಮಾಡುತ್ತೇನೆ. ಅದು ಫಲವನ್ನು ಕೊಡಲಿ ಅಥವಾ ಕೊಡದಿರಲಿ, ಒಬ್ಬ ಗೃಹಸ್ಥ ಪುರುಷನು ಮಾಡಬೇಕಾದುದನ್ನು ಯಥಾಶಕ್ತಿ ಮಾಡುತ್ತೇನೆ. ನಾನು ಧರ್ಮದಲ್ಲಿ ನಡೆಯುತ್ತೇನೆ. ಆದರೆ ಧರ್ಮದಿಂದ ನಡೆಯುವುದು ಫಲವನ್ನು ಕೊಡುತ್ತದೆ ಎನ್ನುವ ಕಾರಣದಿಂದಲ್ಲ. ಧರ್ಮವನ್ನು ಅತಿಕ್ರಮಿಸಬಾರದೆಂದು ಮತ್ತು ಸತ್ಯವಂತರಂತೆ ನಡೆದುಕೊಳ್ಳಬೇಕೆಂದು. ಸ್ವಭಾವತಃ ನನ್ನ ಮನಸ್ಸು ಧರ್ಮದಲ್ಲಿಯೇ ದೃಢವಾಗಿದೆ. ಧರ್ಮವನ್ನು ಬಳಸಿಕೊಳ್ಳಲು ಬಯಸುವವನು, ಮತ್ತು ಧರ್ಮದಂತೆ ನಡೆದುಕೊಂಡು ಆಮೇಲೆ ಅದರ ಕುರಿತು ಶಂಕಿಸುವವನು, ಮತ್ತು ನಾಸ್ತಿಕನಾಗಿದ್ದುಕೊಂಡು ಧರ್ಮವನ್ನು ಪಾಲಿಸುವವನು ಮತ್ತು ಪಾಪಬುದ್ಧಿಯಿಂದ ಧರ್ಮಾಚರಣೆ ಮಾಡುವವನು ಧರ್ಮದ ಫಲವನ್ನು ಹೊಂದುವುದಿಲ್ಲ. ನಾನು ವೇದಪ್ರಾಮಾಣ್ಯದಿಂದಲೇ ಈ ಮಾತುಗಳನ್ನು ಹೇಳುತ್ತಿದ್ದೇನೆ. ವೇದಗಳ ಪ್ರಮಾಣವೇ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ. ವೇದಪ್ರಮಾಣವಾಗಿರುವ ಧರ್ಮದ ವಿಷಯದಲ್ಲಿ ಖಂಡಿತವಾಗಿಯೂ ಸಂಶಯಪಡಬೇಡ. ಯಾವನು ಧರ್ಮದ ವಿಷಯದಲ್ಲಿ ಸಂಶಯಪಡುವನೋ ಅವನು ಜನ್ಮಾಂತರದಲ್ಲಿ ತಿರ್ಯಗ್ಯೋನಿಯಲ್ಲಿ ಪಶು-ಪಕ್ಷಿಗಳಾಗಿ ಹುಟ್ಟುತ್ತಾನೆ. ಯಾರಿಗೆ ಧರ್ಮದ ವಿಷಯದಲ್ಲಿ ಋಷಿಪ್ರೋಕ್ತ ಪ್ರವಚನಗಳ ವಿಷಯದಲ್ಲಿ ದುರ್ಬಲ ಬುದ್ಧಿಯಿರುವುದೋ ಅವರಿಗೆ, ಶ್ರೂದ್ರರಿಗೂ ವೇದಗಳಿಗೂ ಎಷ್ಟು ಅಂತರವಿರುವುದೋ ಅಷ್ಟೇ ಉತ್ತಮಲೋಕಗಳೂ ಮತ್ತು ಮೋಕ್ಷಮಾರ್ಗವೂ ಅತಿದೂರವಾಗುವವು. ಉತ್ತಮ ಕುಲದಲ್ಲಿ ಹುಟ್ಟಿದ ಯಶಸ್ವಿನೀ ವೇದಾಧ್ಯಾಯೀ ಧರ್ಮಪರನನ್ನು ಧರ್ಮಾತ್ಮರು ಕೇವಲ ಜ್ಞಾನಕ್ಕೆ ಮತ್ತು ಧರ್ಮಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟು ರಾಜರ್ಷಿಗಳಂತೆ ಪೂಜಿಸಿ ಗೌರವಿಸುತ್ತಾರೆ. ಶಾಸ್ತ್ರಗಳನ್ನು ತಿರಸ್ಕರಿಸಿ ಧರ್ಮವನ್ನು ಶಂಕಿಸಿಸುವ ಮಂದಬುದ್ಧಿಯು ಶೂದ್ರರು ಮತ್ತು ಕಳ್ಳರಿಗಿಂತಲೂ ಪಾಪಿ. ಇಲ್ಲಿಗೆ ಬಂದಿದ್ದ ಮಹಾತಪಸ್ವಿ ಋಷಿಗಳನ್ನು -ಅಪ್ರಮೇಯಾತ್ಮ, ಧರ್ಮದಿಂದ ಚಿರಂಜೀವಿಯಾಗಿರುವ ಮಾರ್ಕಂಡೇಯ, ವ್ಯಾಸ, ವಸಿಷ್ಠ, ಮೈತ್ರೇಯ, ನಾರದ, ಲೋಮಶ, ಶುಕ ಮತ್ತು ಧರ್ಮದಲ್ಲಿಯೇ ನಿರತರಾಗಿರುವ ಸಿದ್ಧ ಸುಚೇತಸ ಋಷಿಗಳನ್ನು-ನೀನು ಪ್ರತ್ಯಕ್ಷವಾಗಿ ಕಂಡಿದ್ದೀಯೆ. ದೇವತೆಗಳಿಗಿಂತಲೂ ಹಿರಿಯರಾದ, ಶಾಪ ಮತ್ತು ಅನುಗ್ರಹಗಳನ್ನು ನೀಡಲು ಶಕ್ಯರಾದ ಈ ದಿವ್ಯಯೋಗಸಮನ್ವಿತರನ್ನು ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ಅಮರರಿಗೆ ಸಮಾನರಾದ, ಪ್ರತ್ಯಕ್ಷವಾಗಿ ಆಗಮಗಳ ವಿಚಾರವನ್ನು ಕಂಡುಕೊಂಡ ಇವರೇ ನನಗೆ ಸದಾ ಧರ್ಮದಲ್ಲಿಯೇ ನಡೆದುಕೊಳ್ಳಲು ಹೇಳುತ್ತಾ ಬಂದಿದ್ದಾರೆ. ಆದುದರಿಂದ ರಜೋಗುಣದಿಂದ ಪ್ರಭಾವಿತ ಮನಸ್ಸಿನಿಂದ ನೀನು ಧಾತರನನ್ನು ಮತ್ತು ಧರ್ಮವನ್ನು ಅವಹೇಳನಮಾಡುವುದು ಮತ್ತು ಶಂಕಿಸುವುದು ಸರಿಯಲ್ಲ. ಧರ್ಮದಲ್ಲಿ ಅತಿಯಾಗಿ ಸಂಶಯವಿರುವವನಿಗೆ ಪ್ರಮಾಣವೆನ್ನುವುದು ಏನೂ ದೊರೆಯದೇ ತನ್ನನ್ನೇ ಪ್ರಮಾಣವೆಂದು ತಿಳಿದು ಇತರರ ಶ್ರೇಯಸ್ಸನ್ನು ಅಲ್ಲಗಳೆಯುತ್ತಾನೆ. ಕಣ್ಣಿಗೆ ಕಾಣುವ ಮತ್ತು ಇಂದ್ರಿಯಸುಖಕ್ಕೆ ಸಂಬಂಧಿಸಿದ ಲೋಕವೇ ಸಾಕ್ಷಿಯೆಂದು ತಿಳಿದು ಬುದ್ಧಿಯಿಲ್ಲದ ಬಾಲಕನಂತೆ ಬೇರೆ ಎಲ್ಲಿಯೋ ಹೋಗುತ್ತಾನೆ. ಧರ್ಮದಲ್ಲಿ ಸಂಶಯವನ್ನಿಟ್ಟುಕೊಂಡು ನಡೆಯುವವನಿಗೆ ಪ್ರಾಯಶ್ಚಿತ್ತವೆನ್ನುವುದೇ ಇಲ್ಲ. ಎಷ್ಟೇ ಯೋಚಿಸಿದರೂ ಅಂಥಹ ಪಾಪಿ ಕೃಪಣನು ಲೋಕಗಳನ್ನು ಹೊಂದುವುದಿಲ್ಲ. ವೇದಪ್ರಮಾಣಗಳನ್ನು ನಿರಾಕರಿಸುವವನು, ವೇದ ಮತ್ತು ಶಾಸ್ತ್ರಗಳ ಅರ್ಥಗಳನ್ನು ನಿಂದಿಸುವವನು, ಮತ್ತು ಕಾಮಲೋಭಗಳ ಹಿಂದೆಹೋಗುವ ಮೂಢನು ನರಕವನ್ನು ಹೊಂದುತ್ತಾನೆ. ಯಾರು ವೇದ ಮತ್ತು ಧರ್ಮಗಳ ವಿಷಯದಲ್ಲಿ ಶಂಕಿಸದೇ ಕರ್ತವ್ಯದೃಷ್ಟಿಯಿಂದ ನಿತ್ಯವೂ ಧರ್ಮಾಚರಣೆ ಮಾಡುವನೋ ಅಂತವನಿಗೆ ನಿಶ್ಚಯವಾಗಿಯೂ ಉತ್ತಮ ಲೋಕಗಳು ಸಿಗುತ್ತವೆ. ಋಷಿಗಳ ಪ್ರಮಾಣಗಳನ್ನು ಅಲ್ಲಗಳೆಯುತ್ತಾ ಧರ್ಮವನ್ನು ಪರಿಪಾಲಿಸದೇ ಸರ್ವ ಶಾಸ್ತ್ರಗಳನ್ನು ವಿರೋಧಿಸಿ ನಡೆದುಕೊಳ್ಳುವ ಮೂಢನು ಜನ್ಮಜನ್ಮಾಂತರಗಳಲ್ಲಿಯೂ ಸುಖವನ್ನು ಹೊಂದುವುದಿಲ್ಲ. ಶಿಷ್ಟರು ಆಚರಿಸುವ, ಸರ್ವವನ್ನೂ ತಿಳಿದಿರುವ, ಸರ್ವವನ್ನೂ ಪ್ರಮಾಣಪೂರ್ವಕವಾಗಿ ಕಂಡಿರುವ ಪುರಾಣ ಋಷಿಗಳು ಹೇಳಿದ ಧರ್ಮದ ಕುರಿತು ಸಂಶಯಪಡಬೇಡ. ಸ್ವರ್ಗಕ್ಕೆ ಹೋಗುವವರಿಗೆ ಧರ್ಮವೊಂದೇ ನೌಕೆ. ಬೇರೆ ಯಾವುದೂ ಅಲ್ಲ. ಅದು ಸಾಗರದ ಇನ್ನೊಂದು ದಡವನ್ನು ಸೇರಲು ಬಯಸುವ ವರ್ತಕರಿಗಿರುವ ಹಡಗಿನಂತೆ.

“ಒಂದುವೇಳೆ ಧರ್ಮಚಾರಿಗಳು ಅನುಸರಿಸುವ ಈ ಧರ್ಮವು ನಿಷ್ಫಲವೇ ಆಗಿದ್ದರೆ ಈ ವೇಳೆಗೆ ಇಡೀ ಪ್ರಪಂಚವೇ ಗಾಢಾಂಧಕಾರದಲ್ಲಿ ಮುಳುಗಿಹೋಗುತ್ತಿತ್ತು. ನಿರ್ವಾಣದ ಹಿಂದೆ ಯಾರೂ ಹೋಗುತ್ತಿರಲಿಲ್ಲ. ಮನುಷ್ಯರು ಪಶುಗಳಂತೆ ಜೀವಿಸುತ್ತಿದ್ದರು. ಯಾಗಗಳನ್ನು ಮಾಡುತ್ತಿರಲಿಲ್ಲ ಅಥವಾ ಯಾಗಗಳಿಗೆ ವಿಘ್ನಗಳನ್ನೇ ತರುತ್ತಿದ್ದರು ಮತ್ತು ಅದರಿಂದ ಯಾವ ಲಾಭವನ್ನೂ ಪಡೆಯುತ್ತಿರಲಿಲ್ಲ. ತಪಸ್ಸು, ಬ್ರಹ್ಮಚರ್ಯ, ಯಜ್ಞ ಮತ್ತು ಸ್ವಾಧ್ಯಾಯ, ಅದರಂತೆಯೇ ದಾನ, ಆರ್ಜವ ಮುಂತಾದವುಗಳು ನಿಷ್ಪ್ರಯೋಜಕವಾಗಿದ್ದರೆ ಹಿಂದಿನವರು, ಅವರ ಹಿಂದಿನವರು ಮತ್ತು ಅವರ ಹಿಂದಿನವರು ಧರ್ಮದಲ್ಲಿ ನಡೆದುಕೊಳ್ಳುತ್ತಿರಲಿಲ್ಲ. ಒಂದುವೇಳೆ ಈ ಕ್ರಿಯೆಗಳೆಲ್ಲವೂ ನಿಷ್ಪ್ರಯೋಜಕವಾಗಿದ್ದರೆ ಇವುಗಳನ್ನು ಆಚರಿಸಿದವರು ಅತ್ಯಂತ ವಂಚನೆಗೊಳಗಾಗಿದ್ದರು ಎಂದು ಹೇಳಬಹುದು! ಋಷಿಗಳು, ದೇವತೆಗಳು, ಗಂಧರ್ವರು, ಅಸುರರು, ರಾಕ್ಷಸರು ಎಲ್ಲರೂ ಬಲಶಾಲಿಗಳು. ಯಾವ ಕಾರಣಕ್ಕಾಗಿ ಇವರು ಅತಿ ನಂಬಿಕೆಯಿಂದ ಧರ್ಮವನ್ನು ಆಚರಿಸುತ್ತಿದ್ದರು? ಧರ್ಮವು ಖಂಡಿತವಾಗಿಯೂ ಫಲದಾಯಕ, ಮತ್ತು ಧರ್ಮವನ್ನಾಚರಿಸಿದರೆ ಧಾತಾರನು ಶ್ರೇಯಸ್ಸನ್ನು ನೀಡುತ್ತಾನೆ ಎಂದು ತಿಳಿದೇ ಅವರು ಸನಾತನ ಧರ್ಮವನ್ನು ಆಚರಿಸುತ್ತಾ ಬಂದಿದ್ದಾರೆ. ವಿದ್ಯೆ ಮತ್ತು ತಪಸ್ಸು ಫಲವನ್ನು ನೀಡುತ್ತವೆ ಎಂದು ಪ್ರತ್ಯಕ್ಷವಾಗಿ ಕಂಡಿದ್ದೇವೆ ಮತ್ತು ತಿಳಿದಿದ್ದೇವೆ. ಧರ್ಮವು ಫಲವನ್ನು ನೀಡುತ್ತದೆ ಮತ್ತು ನಿಷ್ಫಲವಾಗುವುದಿಲ್ಲ ಎಂದು ಹೇಳುತ್ತಾರೆ. ನಿನ್ನ ವಿಷಯದಲ್ಲಿಯೂ ಇದೇ ಆಗಲಿಲ್ಲವೇ? ನಿನ್ನ ಜನ್ಮದ ಕುರಿತು ನೀನು ಏನನ್ನು ಕೇಳಿಕೊಂಡಿದ್ದೀಯೋ ಅದನ್ನೇ ಸ್ಮರಿಸಿಕೋ. ಪ್ರತಾಪಿ ಧೃಷ್ಟದ್ಯುಮ್ನನೂ ಹೇಗೆ ಹುಟ್ಟಿದ ಎನ್ನುವುದನ್ನು ನೀನು ತಿಳಿದಿದ್ದೀಯೆ. ಇದೇ ಅದಕ್ಕೆ (ತಪಸ್ಸು ಫಲವನ್ನು ನೀಡುತ್ತದೆ ಎನ್ನುವುದಕ್ಕೆ) ಸರಿಯಾದ ಉಪಮಾನ. ಕರ್ಮಗಳಿಂದ ಫಲದೊರೆಯುತ್ತದೆ ಎಂದು ತಿಳಿದು ಸ್ವಲ್ಪದರಲ್ಲಿಯೇ ತೃಪ್ತಿಪಡೆಯುವವನು ವಿದ್ವಾಂಸನು. ಬುದ್ಧಿಯಿಲ್ಲದವರು ಯಾವಾಗಲೂ ಎಷ್ಟೇ ಸಿಕ್ಕಿದರೂ ಅಸಂತುಷ್ಟರಾಗಿದ್ದುಕೊಂಡು ಇಲ್ಲಿಯೂ ಸಂತೋಷಪಡುವುದಿಲ್ಲ ಮತ್ತು ಧರ್ಮಾಚರಣೆಯನ್ನು ಮಾಡದೇ ಇದ್ದ ಅವರಿಗೆ ಪರಲೋಕದಲ್ಲಿಯೂ ಧರ್ಮಜನಿತ ಸುಖವು ದೊರೆಯುವುದಿಲ್ಲ.

“ಕರ್ಮಗಳಿಗೆ ಪಾಪ-ಪುಣ್ಯಫಲಗಳು ಹೇಗೆ ಪ್ರಾಪ್ತವಾಗುತ್ತವೆ ಮತ್ತು ಕರ್ಮಗಳು ಹೇಗೆ ಹುಟ್ಟುತ್ತವೆ ಮತ್ತು ನಾಶವಾಗುತ್ತವೆ ಎನ್ನುವುದು ದೇವರಹಸ್ಯ. ಇವುಗಳನ್ನು ಯಾರೂ ತಿಳಿದಿಲ್ಲ, ಪ್ರಜೆಗಳು ಇದರ ಕುರಿತು ಕತ್ತಲೆಯಲ್ಲಿಯೇ ಇದ್ದಾರೆ. ದೇವತೆಗಳ ಈ ಗೂಢ ಮಾಯೆಯನ್ನು ದೇವತೆಗಳು ರಕ್ಷಿಸುತ್ತಿದ್ದಾರೆ. ಪಾಪ ಕರ್ಮಗಳನ್ನು ತಪಸ್ಸಿನಿಂದ ಸುಟ್ಟುಹಾಕಿದ, ಕೃಶಾಂಗ ಸುವ್ರತ ಪ್ರಸನ್ನ ಮನಸ್ಸನ್ನು ಹೊಂದಿದ ದ್ವಿಜರು ಮಾತ್ರ ಇವುಗಳನ್ನು ಕಂಡುಕೊಂಡಿದ್ದಾರೆ. ಧರ್ಮದ ಫಲವನ್ನು ಸದ್ಯ ಕಾಣದ ಮಾತ್ರಕ್ಕೆ ಧರ್ಮವನ್ನೂ ದೇವತೆಗಳನ್ನೂ ಶಂಕಿಸಬೇಡ. ಅಪ್ರಮತ್ತನಾಗಿ ಯಜ್ಞ-ಯಾಗಗಳನ್ನು ಮಾಡಬೇಕು ಮತ್ತು ಅಸೂಯೆಪಡದೇ ದಾನಮಾಡಬೇಕು. ಕರ್ಮಗಳಿಗೆ ಫಲವಿದ್ದೇ ಇದೆ. ಆದುದರಿಂದಲೇ ಧರ್ಮವು ಶಾಶ್ವತವಾಗಿದೆ ಎಂದು ಬ್ರಹ್ಮನು ಕಶ್ಯಪನೇ ಮೊದಲಾದ ತನ್ನ ಮಕ್ಕಳಿಗೆ ಹೇಳಿದ್ದನು. ಆದುದರಿಂದ ಮಂಜು ಕರಗುವಂತೆ ನಿನ್ನ ಸಂಶಯವು ನಾಶವಾಗಲಿ. ಎಲ್ಲವೂ ಹೀಗೆಯೇ ಎಂದು ನಿಶ್ಚಯಿಸಿ ನಿನ್ನ ಮನಸ್ಸಿನಲ್ಲಿ ಹುಟ್ಟಿದ ನಾಸ್ತಿಕ್ಯಭಾವವನ್ನು ತೊರೆ. ಪ್ರಾಣಿಗಳಿಗೆ ಧಾತಾರನಾಗಿರುವ, ಸರ್ವಾಂತರ್ಯಾಮಿಯಾಗಿರುವ, ಎಲ್ಲರಿಗೂ ಸ್ವಾಮಿಯಾಗಿರುವ ಪರಮ ಪುರುಷನನ್ನು ನಿಂದಿಸಬೇಡ. ಅವನನ್ನು ಸೇರುವುದು ಹೇಗೆಂಬುದನ್ನು ತಿಳಿದು ಅವನಿಗೆ ಶರಣಾಗತಳಾಗು. ಯಾರ ಪ್ರಸಾದದಿಂದ ಮನುಷ್ಯನು ಅಮರ್ತ್ಯನಾಗುತ್ತಾನೋ ಅಂಥಹ ಪರಮ ಪುರುಷನನನ್ನು ಯಾವ ಕಾರಣದಿಂದಲೂ ಅನಾದರಿಸಬೇಡ.”

ದ್ರೌಪದಿಯು ಹೇಳಿದಳು:

“ಪಾರ್ಥ! ನಾನು ಯಾವುದೇ ರೀತಿಯಲ್ಲಿ ಧರ್ಮದ ಅವಹೇಳನ ಮಾಡುವುದಿಲ್ಲ ಮತ್ತು ತಿರಸ್ಕರಿಸುವುದಿಲ್ಲ. ಪ್ರಜಾಪತಿ ಈಶ್ವರನನ್ನು (ಚರಾಚರ ಪ್ರಾಣಿಗಳಿಗೂ ಸ್ವಾಮಿಯಾದ ಪರಮಾತ್ಮನನ್ನು) ನಾನೇಕೆ ನಿಂದಿಸಲಿ? ದುಃಖಿತಳಾಗಿ ಪ್ರಲಾಪಮಾಡುತ್ತಿದ್ದೇನೆ ಎಂದು ನನ್ನನ್ನು ಅರ್ಥಮಾಡಿಕೋ. ಈ ರೀತಿ ಹಿಂದೆಯೂ ವಿಲಪಿಸಿದ್ದೆ. ಈಗಲೂ ವಿಲಪಿಸುತ್ತಿದ್ದೇನೆ. ನನ್ನನ್ನು ಅರ್ಥಮಾಡಿಕೋ.  ಹುಟ್ಟಿರುವ ಎಲ್ಲವಕ್ಕೂ ಕರ್ಮಮಾಡುವುದು ಕರ್ತವ್ಯ ತಾನೆ? ಸ್ಥಾವರಗಳು (ಜೀವವಿಲ್ಲದವುಗಳು) ಮಾತ್ರ ಕರ್ಮಮಾಡುವುದಿಲ್ಲ. ಇತರ ಎಲ್ಲರೂ ಕರ್ಮಗಳನ್ನು ಮಾಡುತ್ತಾರೆ. ತಾಯಿಯ ಮೊಲೆಯ ಹಾಲನ್ನುಣ್ಣುವುದರಿಂದ ಹಿಡಿದು ಸಾವಿನ ಹಾಸಿಗೆ ಹಿಡಿಯುವವರೆಗೆ ಚಲಿಸುವ ಎಲ್ಲವೂ, ಅವರಲ್ಲೂ ಮುಖ್ಯವಾಗಿ ಮನುಷ್ಯನು, ಕರ್ಮಮಾಡಿಯೇ ಜೀವವೇತನವನ್ನು ಗಳಿಸುತ್ತವೆ. ಕರ್ಮಗಳ ಮೂಲಕವೇ ಇಲ್ಲಿಯ ಮತ್ತು ಮುಂದಿನ ಜೀವಗಳನ್ನು ಗಳಿಸುತ್ತಾರೆ (ಕರ್ಮಗಳ ಮೂಲಕವೇ ಬೇರೆ ಬೇರೆ ಜನ್ಮಗಳನ್ನು ಪಡೆಯುತ್ತಾರೆ). ಸರ್ವಜೀವಿಗಳೂ ಉತ್ಥಾನವನ್ನು (ವಿಕಾಸವನ್ನು) ಚೆನ್ನಾಗಿ ತಿಳಿದುಕೊಂಡಿವೆ. ಎಲ್ಲ ಲೋಕಗಳಿಗೂ ಕಾಣಿಸುವಂತೆ ಪ್ರತ್ಯಕ್ಷವಾಗಿ ತಮ್ಮ ತಮ್ಮ ಕರ್ಮಗಳ ಫಲವನ್ನು ಅನುಭವಿಸುತ್ತವೆ. ನನಗೆ ಕಾಣುವಂತೆ ಹುಟ್ಟಿದವೆಲ್ಲವೂ, ಧಾತಾ (ಫಲವನ್ನು ಕೊಡುವವನು), ವಿಧಾತ (ಕರ್ಮಗಳನ್ನು ನಡೆಸುವವನು) ರನ್ನೂ, ನೀರನಲ್ಲಿರುವ ಬಕಪಕ್ಷಿಯೂ ಸೇರಿ, ತಮ್ಮ ತಮ್ಮ ವಿಕಾಸವನ್ನು ಮತ್ತೆ ಮತ್ತೆ ಬದುಕುತ್ತಿದ್ದಾರೆ. ಆದುದರಿಂದ ನಿನ್ನ ಕರ್ಮವನ್ನು ಮಾಡು! ಅನುಮಾನಪಡಬೇಡ! ಕರ್ಮದಿಂದ ಗಟ್ಟಿಯಾಗು (ಕರ್ಮದ ಕವಚವನ್ನು ಕಟ್ಟಿಕೋ)! ಯಾಕೆಂದರೆ ತಾನು ಇದೇ ಕರ್ಮವನ್ನು ಮಾಡಬೇಕು ಎಂದು ತಿಳಿದವನು ಸಾವಿರರಲ್ಲಿ ಒಬ್ಬನಾದರೂ ಇರುವನೋ ಇಲ್ಲವೋ! ತನ್ನ ಅಭಿವೃದ್ಧಿಗೋಸ್ಕರ ಮತ್ತು ರಕ್ಷಣೆಗೋಸ್ಕರ ಕೆಲಸವನ್ನು ಮಾಡಲೇ ಬೇಕಾಗುತ್ತದೆ. ಇನ್ನೂ ಗಳಿಸದೇ ಗಳಿಸಿದುದೆಲ್ಲವನ್ನೂ ತಿಂದರೆ ಹಿಮಾಲಯಪರ್ವತದಷ್ಟಿದ್ದರೂ ಸಾಕಾಗುವುದಿಲ್ಲ. ತಮ್ಮ ತಮ್ಮ ಕೆಲಸಗಳನ್ನು ಮಾಡದೇ ಇದ್ದರೆ ಪ್ರಾಣಿಗಳೆಲ್ಲವೂ ನಾಶಹೊಂದುತ್ತಿದ್ದವು! ಕರ್ಮಗಳನ್ನು ಮಾಡಿಯೂ ಫಲವನ್ನು ಪಡೆಯದೇ ಇರುವ ಪ್ರಾಣಿಗಳನ್ನು ನೋಡಿದ್ದೇವೆಯೇ? ವೃತ್ತಿಯನ್ನು ಮಾಡದೇ ಇರುವವರನ್ನು ಲೋಕಗಳಲ್ಲಿ ಯಾರನ್ನೂ ತಿಳಿದಿಲ್ಲ! ಲೋಕದಲ್ಲಿ ಎಲ್ಲವೂ ಮೊದಲೇ ನಿಶ್ಚಿತವಾಗಿರುತ್ತದೆ ಎಂದು ಹೇಳುವವರು ಮತ್ತು ಲೋಕದಲ್ಲಿ ಎಲ್ಲವೂ ಅದೃಷ್ಟ (ಯಾವುದೂ ನಿಶ್ಚಿತವಾಗಿಲ್ಲ! ಎಲ್ಲವೂ ತನಗಿಷ್ಟಬಂದಂತೆ ನಡೆಯುತ್ತವೆ) ಎನ್ನುವವರು ಇಬ್ಬರೂ ಹಠವಾದಿಗಳು (ಪರಸ್ಪರರನ್ನು ವಿರೋಧಿಸುವವರು). ಇವೆರಡು ವಾದಗಳಿಗಿಂತಲೂ, ಲೋಕದಲ್ಲಿ ಎಲ್ಲವೂ ಕರ್ಮವನ್ನು ಮಾಡುವವನ ಬುದ್ಧಿಯ ಮೇಲೆ ಅವಲಂಬಿಸಿದೆ ಎನ್ನುವ ವಾದವನ್ನೇ ಪ್ರಶಂಸಿಸಬೇಕು. ದೈವವನ್ನು (ಲೋಕದಲ್ಲಿ ನಡೆಯುವುದೆಲ್ಲವೂ ಮೊದಲೇ ನಿರ್ಧರಿತಕೊಂಡಿದೆ ಎಂದು) ನಂಬಿ, ಏನನ್ನೂ ಮಾಡದೇ ಸುಖದ ನಿದ್ದೆಯನ್ನು ಮಾಡುವ ಸುದುರ್ಬುದ್ಧಿಯು ನೀರಿನಲ್ಲಿ ತುಂಬಿದ ಕೊಡಪಾನದಂತೆ ಮುಳುಗಿ ಹೋಗುತ್ತಾನೆ. ಹಾಗೆಯೇ ಅದೃಷ್ಟವನ್ನೇ ನಂಬಿರುವವನು, ಕರ್ಮವನ್ನೆಸಗಲು ಶಕ್ತನಿದ್ದರೂ ಕರ್ಮಮಾಡದೇ ಕುಳಿತುಕೊಳ್ಳುವವನು, ರಕ್ಷಣೆಯೇ ಇಲ್ಲದ ದುರ್ಬಲನಂತೆ ಹೆಚ್ಚು ಕಾಲ ಬದುಕುವುದಿಲ್ಲ. ಅಕಸ್ಮಾತ್ತಾಗಿ ಒಬ್ಬ ಪುರುಷನು ಸಂಪತ್ತನ್ನು ಪಡೆದರೆ ಅವನಿಗೆ ಅದು ಅದೃಷ್ಟವಶಾತ್ ದೊರೆಯಿತೆಂದು ಹೇಳುತ್ತಾರೆಯೇ ಹೊರತು ಅದು ಅವನ ಪ್ರಯತ್ನದಿಂದ ದೊರೆಯಿತು ಎಂದು ಯಾರೂ ಹೇಳುವುದಿಲ್ಲ. ಏನನ್ನು ಪಡೆದರೂ ಅದನ್ನು ಅವರು ದೈವವೆಂದು (ಇದು ಮೊದಲೇ ನಿಶ್ಚಯಿಸಲ್ಪಟ್ಟಿತ್ತು ಎಂದು) ಕರೆಯುತ್ತಾರೆ ಎಂದು ಮೊದಲೇ ದೈವದಿಂದ ನಿಶ್ಚಿತಗೊಂಡಿರುತ್ತದೆ. ಆದರೆ ತನ್ನದೇ ಕರ್ಮದಿಂದ ಒಬ್ಬ ಪುರುಷನು ಕಣ್ಣುಗಳಿಗೆ ಕಾಣುವಂತಹ ಪ್ರತ್ಯಕ್ಷ ಏನಾದರೂ ಫಲವನ್ನು ಪಡೆದನೆಂದರೆ ಅದು ಪುರುಷಪ್ರಯತ್ನದಿಂದ ಆಯಿತು ಎನ್ನುತ್ತಾರೆ. ಸ್ವಭಾವತಃ ಕರ್ಮಗಳನ್ನೆಸಗುವಂಥಿರುವವನು ತನ್ನ ಪ್ರಯತ್ನದಿಂದ ಹೊರತಾಗಿ ಬೇರೆ ಯಾವ ಕಾರಣದಿಂದಲೂ ಸಂಪತ್ತನ್ನು ಹೊಂದುವುದಿಲ್ಲ. ಅದು (ಪ್ರಯತ್ನಕ್ಕೆ ಪ್ರತಿಯಾಗಿ) ಸ್ವಾಭಾವಿಕವಾಗಿ ತಾನಾಗಿಯೇ ಬಂದ ಫಲ ಎಂದು ತಿಳಿ. ಹೀಗೆ ಅದೃಷ್ಟದಿಂದ ಮತ್ತು ದೈವನಿಶ್ಚಯದಿಂದ, ಸ್ವಾಭಾವಿಕವಾಗಿ ಅಥವಾ ತನ್ನ ಪ್ರಯತ್ನದಿಂದ ಏನನ್ನು ಹೊಂದುತ್ತಾನೋ ಅದೇ ಅವನ ಪೂರ್ವಕರ್ಮದ ಫಲ. ಈಶ್ವರ ಧಾತನೂ ಕೂಡ ಇದೇ ಕಾರಣಗಳಿಂದಾಗಿ ತನ್ನ ಕರ್ಮವನ್ನು ಮಾಡುತ್ತಾನೆ ಮತ್ತು ಮನುಷ್ಯರಲ್ಲಿ ಅವರ ಪೂರ್ವಜನ್ಮದ ಕರ್ಮಗಳಿಗನುಗುಣವಾಗಿ ಫಲವನ್ನು ಹಂಚುತ್ತಾನೆ. ಮನುಷ್ಯನು ಶುಭಾಶುಭವಾದ ಏನನ್ನು ಮಾಡಿದರೂ ಅದು ಅವನ ಪೂರ್ವಕರ್ಮದ ಫಲದ ಆಧಾರದ ಮೇಲೆ ಧಾತುವು ನಿಶ್ಚಯಿಸಿದುದು ಎಂದು ತಿಳಿ. ಈ ದೇಹವು ಕರ್ಮವನ್ನು ಮಾಡಿಸಲು ಧಾತುವು ಬಳಸುವ ಒಂದು ಸಾಧನ ಮಾತ್ರ. ಅವನೇ ಮನುಷ್ಯನನ್ನು ಪ್ರಚೋದಿಸುವುದು; ಮತ್ತು ಮನುಷ್ಯನು ಅವನ ಪ್ರಚೋದನೆಗೆ ಸಿಕ್ಕಿ, ಅಸಹಾಯಕನಾಗಿ, ಕರ್ಮಗಳನ್ನು ಮಾಡುತ್ತಿರುತ್ತಾನೆ. ಮಹೇಶ್ವರನು ಒಂದೆಲ್ಲಾ ಒಂದು ಕಾರ್ಯದಲ್ಲಿ ಸರ್ವಭೂತಗಳನ್ನೂ ತೊಡಗಿಸುತ್ತಾನೆ ಮತ್ತು ಅದಕ್ಕೆ ಇಷ್ಟವಿದ್ದರೂ ಇಲ್ಲದಿದ್ದರೂ ಕಾರ್ಯಮಾಡುವುದನ್ನು ಅನಿವಾರ್ಯವನ್ನಾಗಿಸುತ್ತಾನೆ. ಮನಸ್ಸಿನಲ್ಲಿ ಗುರಿಯನ್ನು ನಿಶ್ಚಯಿಸಿ ನಂತರ ಅದನ್ನು ಕರ್ಮದಿಂದ ಪಡೆಯುತ್ತಾನೆ. ಬುದ್ಧಿವಂತ ಪುರುಷನು ಪಡೆಯುವುದೆಲ್ಲಕ್ಕೂ ಕಾರಣ ತಾನು ಮೊದಲು ಮನಸ್ಸುಮಾಡಿರುವುದು. ಕರ್ಮಗಳನ್ನು ಎಣಿಸುವುದು ಶಕ್ಯವಿಲ್ಲ ತಾನೇ? ಮಹಾಸೌಧಗಳು ಮತ್ತು ನಗರಗಳು ಪುರುಷಪ್ರಯತ್ನದಿಂದ ಸಾಧಿಸಿರುವಂಥವುಗಳಲ್ಲವೇ? ಎಳ್ಳಿನಲ್ಲಿ ಎಣ್ಣೆಯಿದೆ, ಹಸುವಿನಲ್ಲಿ ಹಾಲಿದೆ ಮತ್ತು ಕಟ್ಟಿಗೆಯಲ್ಲಿ ಬೆಂಕಿಯಿದೆ ಎನ್ನುವುದನ್ನು ತನ್ನದೇ ಬುದ್ಧಿಯಿಂದ ತಿಳಿದುಕೊಳ್ಳಬೇಕು ಮತ್ತು ಅವುಗಳನ್ನು ತನ್ನ ಬುದ್ಧಿ ಓಡಿಸಿಯೇ ಪಡೆಯಬೇಕಾಗುತ್ತದೆ. ಈ ಕರ್ಮಸಿದ್ಢಿಗಳ ಆಧಾರದ ಮೇಲೆಯೇ (ಕರ್ಮ ಮಾಡುವುದರಲ್ಲಿ ಫಲವಿದೆ ಎನ್ನುವುದರ ಆಧಾರದ ಮೇಲೆಯೇ) ಇಲ್ಲಿ ಜೀವಿಗಳು ಬದುಕುತ್ತಾರೆ. ಚೆನ್ನಾಗಿ ವಿನಿಶ್ಚಿತಗೊಂಡ, ಕುಶಲತೆಯಿಂದ ಮಾಡಿದ ಕೆಲಸವನ್ನು ಇನ್ನೊಂದು ಕೆಲಸದೊಂದಿಗೆ ಹೋಲಿಸಿ ಇದು ಒಬ್ಬ ಕುಶಲನು ಮಾಡಿದ ಕೆಲಸ ಎಂದು ವ್ಯತ್ಯಾಸಗಳನ್ನು ತಿಳಿಯಬಹುದು. ಪುರುಷನ ಕಾರ್ಯಸಾಧನೆಯು ಇವಕ್ಕೆಲ್ಲ ಕಾರಣವಲ್ಲ ಎಂದಿದ್ದರೆ ಯಾಗಗಳಿಗಾಗಲೀ ದಾನಗಳಿಗಾಗಲೀ ಫಲವು ದೊರೆಯುತ್ತಿರಲಿಲ್ಲ ಮತ್ತು ಗುರು-ಶಿಷ್ಯರೂ ಇರುತ್ತಿರಲಿಲ್ಲ. ಪುರುಷನೇ ಕರ್ತೃ ಎಂದು ತಿಳಿದಿರುವುದರಿಂದಲೇ ಕರ್ಮಸಿದ್ಧಿಯನ್ನು ಪ್ರಶಂಸಿಸುತ್ತಾರೆ, ಮತ್ತು ಸಾಧಿಸದೇ ಇರುವವನನ್ನು ನಿಂದಿಸುತ್ತಾರೆ. ಹಾಗಿರುವಾಗ, ಕರ್ಮವು ನಾಶವಾಗುತ್ತದೆ ಎಂದು ಹೇಗೆ ಹೇಳಬಹುದು? ನಡೆಯುವುದೆಲ್ಲವೂ ಆಕಸ್ಮಿಕ ಎನ್ನುವವರಿದ್ದಾರೆ. ನಡೆಯುವುದೆಲ್ಲವೂ ದೈವನಿಶ್ಚಿತ ಎನ್ನುವವರಿದ್ದಾರೆ ಮತ್ತು ನಡೆಯುವುದೆಲ್ಲವೂ ಪುರುಷನ ಪ್ರಯತ್ನದಿಂದ ಹುಟ್ಟಿದವು ಎಂದು ಹೇಳುವವರಿದ್ದಾರೆ. ಈ ರೀತಿ ಮೂರು ಬಗೆಯಲ್ಲಿ ಹೇಳುವವರಿದ್ದಾರೆ. ಇನ್ನು ಕೆಲವರು ನಡೆಯುವುದೆಲ್ಲವನ್ನೂ ತಿಳಿದುಕೊಳ್ಳಲು ಈ ಮೂರು ವಿಷಯಗಳು ಮಾತ್ರ ಸಾಲದು ಎಂದು ಹೇಳುತ್ತಾರೆ. ಎಲ್ಲವನ್ನೂ ದೈವವು ತಂದಿದೆಯೋ ಅಥವಾ ಅದೃಷ್ಟವು ತಂದಿದೆಯೋ ಎಂದು ಕಾಣದೇ ಇದ್ದರೂ, ಪ್ರತಿಯೊಂದಕ್ಕೂ ದೈವದಿಂದಲೂ ಹುಟ್ಟಿರಬಹುದು ಅಥವಾ ಅದೃಷ್ಟದಿಂದಲೂ ಹುಟ್ಟಿರಬಹುದು - ಒಂದಕ್ಕೊಂದು ಪೋಣಿಸಿಕೊಂಡಿರುವ ಘಟನೆಗಳ ಸರಪಳಿಯಿದೆ. ಕೆಲವು ಆಕಸ್ಮಿಕವಾಗಿ ಬರುತ್ತವೆ, ಕೆಲವು ದೈವದತ್ತವಾಗಿ ಬರುತ್ತವೆ, ಕೆಲವು ಸ್ವಕರ್ಮದಿಂದ ಬರುತ್ತವೆ. ಈ ರೀತಿಯಲ್ಲಿ ಮನುಷ್ಯನು ಫಲವನ್ನು ಹೊಂದುತ್ತಾನೆ. ಬೇರೆ ಯಾವ ನಾಲ್ಕನೆಯ ಕಾರಣಗಳಿಂದಲೂ ಅಲ್ಲ ಎಂದು ಕುಶಲರು, ತತ್ವಗಳನ್ನು ತಿಳಿದವರು ಹೇಳುತ್ತಾರೆ. ಆದರೂ ಧಾತನು ಜೀವಿಗಳಿಗೆ ಇಷ್ಟ ಮತ್ತು ಅನಿಷ್ಟ ಫಲಗಳನ್ನು ಕೊಡುತ್ತಾನೆ. ಹಾಗಿಲ್ಲದೇ ಇದ್ದರೆ (ಕೊಡುವವನು ಅವನಲ್ಲ ಎಂದಿದ್ದರೆ) ಜೀವಿಗಳು ಎಂದೂ ಬಡತನದಲ್ಲಿರುತ್ತಿರಲಿಲ್ಲ. ಅವನಿಗೆ ಬೇಕಾದುದೆಲ್ಲವನ್ನೂ ಕರ್ಮಮಾಡಿ ಪಡೆದುಕೊಳ್ಳುತ್ತಿದ್ದ. ಕರ್ಮವನ್ನು ಮೊದಲು ಮಾಡಿದರೆ ತಾನೆ ಫಲ ದೊರೆಯುವುದು? ಮುಂದೆ ಮಾಡುವ ಕಾರ್ಯಕ್ಕೆ ಇಂದೇ ಫಲವು ದೊರೆಯುವುದಿಲ್ಲವಲ್ಲ? ಈ ಮೂರು ರೀತಿಯ ಅರ್ಥಸಿದ್ಧಿಗಳನ್ನು ಯಾರು ಕಾಣುವುದಿಲ್ಲವೋ ಅಂಥಹ ಮನುಷ್ಯರು ಲೋಕದಲ್ಲಿ ಅರ್ಥಸಿದ್ಧಿಯು ಹೇಗೆ ಬರುತ್ತದೆಯೋ ಹಾಗೆಯೇ ತೆಗೆದುಕೊಳ್ಳುತ್ತಾರೆ. ಮಾನವನು ಕರ್ಮವನ್ನು ಮಾಡಲೇ ಬೇಕು ಎಂದು ಮನುವು ತನ್ನ ನಿಶ್ಚಯವನ್ನು ನೀಡಿದ್ದಾನೆ. ಪ್ರಯತ್ನಪಡದೇ ಇರುವ ಮನುಷ್ಯನು ಸಂಪೂರ್ಣವಾಗಿ ಸೋಲನ್ನು ಹೊಂದುತ್ತಾನೆ. ಕರ್ಮಗಳನ್ನು ಮಾಡಿದರೆ ತಾನೇ ಪ್ರಯತ್ನವು ಸಫಲವಾಗುವುದು! ಆಲಸ್ಯದಿಂದ ಏನನ್ನೂ ಮಾಡದೇ ಕುಳಿತಿರುವವನು ಎಂದೂ ಫಲಸಿದ್ಧಿಯನ್ನು ಹೊಂದುವುದಿಲ್ಲ. ಒಂದುವೇಳೆ ಸರಿಯಾದ ಕಾರಣದಿಂದಲೇ ಮಾಡಿದ ಕರ್ಮಕ್ಕೆ ತಕ್ಕುದಾದ ಫಲವು ದೊರೆಯದಿದ್ದರೆ ಅದಕ್ಕೆ ಪ್ರಾಯಶ್ಚಿತ್ತವು ಇದೆ. ಕರ್ಮವನ್ನು ಮಾಡುವುದರಿಂದ ಮನುಷ್ಯನು ತನ್ನ ಋಣದಿಂದ ಮುಕ್ತನಾಗುತ್ತಾನೆ. ಆಲಸ್ಯದಿಂದ ಮಲಗಿರುವ ಮನುಷ್ಯನಿಗೆ ದರಿದ್ರವೇ ಉಂಟಾಗುವುದು. ಆದರೆ ದಕ್ಷನಾದವನು ಫಲವನ್ನು ಹೊಂದಿ ಸಂಪತ್ತನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಸಂಶಯದಲ್ಲಿರುವವರಿಗೆ ಫಲವು ದೊರೆಯದೇ ಇರಬಹುದು. ನಿಸ್ಸಂಶಯನಾಗಿ ಕರ್ಮಮಾಡುವ ಧೀರನಾದ ಕರ್ಮರತ ಮನುಷ್ಯನು ನಿಸ್ಸಂಶಯವಾಗಿಯೂ ಫಲವನ್ನು ಪಡೆಯುತ್ತಾನೆ. ಈ ಸಮಯದಲ್ಲಿ ನಾವು ಮತ್ತು ನಾವು ನಡೆದುಕೊಂಡ ರೀತಿ ಎಲ್ಲವೂ ಅನರ್ಥವಾಗಿವೆ (ಫಲವನ್ನು ಕೊಡುತ್ತಿಲ್ಲ). ಆದರೆ ನೀನು ಕರ್ಮದಲ್ಲಿ ನಿರತನಾಗಿದ್ದರೆ ಯಾವುದೂ ಸಂಶಯಾಸ್ಪದವಾಗಿ ಉಳಿಯುವುದಿಲ್ಲ. ಒಂದುವೇಳೆ ನಿನಗೆ ಯಶಸ್ಸು ದೊರೆಯದೇ ಇದ್ದರೂ ಕೂಡ ಅದು ನಿನ್ನ ಮತ್ತು ನಿನ್ನ ಭ್ರಾತರಾದ ವೃಕೋದರ, ಬೀಭತ್ಸು ಮತ್ತು ಯಮಳರಿಗೆ ಕೀರ್ತಿಯನ್ನು ತರುತ್ತದೆ.  ಅವರ ಕರ್ಮಗಳು ಇತರರಿಗೆ ಸಫಲವಾಗಿದೆ ಎಂದಾದರೆ ನಮ್ಮ ಕರ್ಮಗಳೂ ಪುನಃ ಫಲವನ್ನೀಯುವವು. ಆದರೆ ಕರ್ಮವನ್ನು ಮಾಡಿದವನಿಗೆ ಮಾತ್ರ ಆ ಕರ್ಮದ ಫಲವೇನೆಂದು ಮೊದಲು ತಿಳಿಯುವುದು. ರೈತನು ಭೂಮಿಯನ್ನು ನೇಗಿಲಿನಿಂದ ಹೂಳಿ, ಬೀಜವನ್ನು ಬಿತ್ತಿ ಸುಮ್ಮನೇ ಕುಳಿತುಕೊಳ್ಳುತ್ತಾನೆ ಮತ್ತು ಮಳೆಯು ಅಲ್ಲಿ ಕೆಲಸಮಾಡುತ್ತದೆ. ಒಂದುವೇಳೆ ಮಳೆಯು ಬಂದು ಅವನಿಗೆ ಅನುಗ್ರಹಿಸದೇ ಇದ್ದರೂ, ರೈತನನ್ನು ಅಲ್ಲಿ ದೂರಲಿಕ್ಕಾಗುವುದಿಲ್ಲ. ಯಾಕೆಂದರೆ ಅವನು ಇನ್ನೊಬ್ಬನು ಮಾಡುವ ಸಕಲ ಕರ್ಮಗಳನ್ನೂ ಮಾಡಿದ್ದಾನೆ. ಒಂದುವೇಳೆ ನಾವು ಅಸಫಲರಾದರೆ ಅದರಲ್ಲಿ ನಮ್ಮ ಅಪರಾಧ ಸ್ವಲ್ವವೂ ಇರುವುದಿಲ್ಲ. ಈ ರೀತಿಯಲ್ಲಿ ಬುದ್ಧಿವಂತನು ಕಾಣುತ್ತಾನೆ, ಅಸಫಲನಾದರೆ ತನ್ನನ್ನು ತಾನು ನಿಂದಿಸಿಕೊಳ್ಳುವುದಿಲ್ಲ. ಕಾರ್ಯಮಾಡಿದರೂ ಸಿದ್ಧಿಯು ದೊರೆಯಲಿಲ್ಲವೆಂದಾದರೆ ಅದರಲ್ಲಿ ನಿರಾಸೆಹೊಂದಲು ಕಾರಣವಿಲ್ಲ. ಯಾಕೆಂದರೆ ಯಾವುದೇ ಕರ್ಮಕ್ಕೂ ಎರಡು ಫಲಗಳಿರುತ್ತವೆ: ಸಿದ್ಧಿಯಾಗುವುದು ಅಥವಾ ಸಿದ್ಧಿಯಾಗದೇ ಇರುವುದು. ಆದರೆ ಕರ್ಮವನ್ನೇ ಮಾಡದಿರುವುದು ಇನ್ನೊಂದು ವಿಷಯ. ಒಂದು ಕರ್ಮವು ಸಿದ್ಧಿಯಾಗಬೇಕಾದರೆ ಅದಕ್ಕೆ ಹಲವಾರು ಅಂಶಗಳು ಒಂದುಗೂಡಿ ಬರಬೇಕಾಗುತ್ತದೆ. ಕಾರ್ಯಗುಣದ ಅಭಾವದಲ್ಲಿ ಫಲವು ಕೆಟ್ಟದಾಗಬಹುದು ಅಥವಾ ಫಲವು ದೊರೆಯದೇ ಇರಬಹುದು. ಆರಂಭವನ್ನೇ ಮಾಡಿರದ ಕಾರ್ಯದ ಗುಣವನ್ನಾಗಲೀ ಫಲವನ್ನಾಗಲೀ ಕಾಣಲಿಕ್ಕಾಗುವುದಿಲ್ಲವಲ್ಲ! ತಿಳಿದವನು ಯಥಾಶಕ್ತಿಯಾಗಿ ಯಥಾಬಲವಾಗಿ ದೇಶ, ಕಾಲ, ಉಪಾಯಗಳನ್ನು ಬುದ್ಧಿಯಿಂದ ಒಟ್ಟುಸೇರಿಸಿ ತನ್ನ ಮಂಗಳ-ಒಳಿತಿಗಾಗಿ ಮನಸ್ಸುಮಾಡುತ್ತಾನೆ. ಪರಾಕ್ರಮವು ತೋರಿಸಿದಂತೆ ಅಪ್ರಮತ್ತನು ಕಾರ್ಯಮುಖನಾಗಬೇಕು. ಕರ್ಮಯೋಗಗಳಲ್ಲಿ ಪರಾಕ್ರಮವೇ ಎಲ್ಲಕ್ಕಿಂತ ಮುಖ್ಯ ಅಂಶ. ಬಹಳಷ್ಟು ಗುಣಗಳಲ್ಲಿ ತನಗಿಂತ ಶ್ರೇಷ್ಠನಾಗಿರುವವನನ್ನು ಕಂಡಾಗ ಮನುಷ್ಯನು ಅವನೊಂದಿಗೆ ಸೌಮ್ಯ ಉಪಾಯಗಳಿಂದ ತನ್ನ ಕಾರ್ಯಸಾಧನೆಯನ್ನು ಮಾಡಿಕೊಳ್ಳಬೇಕು. ಸಮಯವರಿತು ಅಂಥವನ ವಿನಾಶಕ್ಕೆ ಯತ್ನಿಸುತ್ತಲೇ ಇರಬೇಕು. ಅವನು ಸಿಂಧುನದಿಯಂತಿರಬಹುದು ಅಥವಾ ಪರ್ವತದಂತಿರಬಹುದು. ಮನುಷ್ಯಧರ್ಮಕ್ಕೊಳಗಾದವನು ತಾನೇ? ಪ್ರಯತ್ನಶೀಲನಾದವನು ಶತ್ರುವಿನಲ್ಲುಂಟಾಗಬಹುದಾದ ನ್ಯೂನತೆಯನ್ನು ಹುಡುಕಿ ಅವನ ವಿನಾಶಕ್ಕೆ ಯತ್ನಿಸಿ ತಾನೂ ನಿರ್ದೋಷಿಯಾಗುತ್ತಾನೆ ಮತ್ತು ತನ್ನ ಸಲಹೆಗಾರರನ್ನೂ ನಿರ್ದೋಷಿಗಳನ್ನಾಗಿ ಮಾಡುತ್ತಾನೆ. ಮನುಷ್ಯನು ಎಂದೂ ತನ್ನನ್ನು ತಾನು ಕೀಳಾಗಿ ಕಾಣಬಾರದು. ತನ್ನನ್ನು ಕೀಳಾಗಿ ಕಾಣುವವನಿಗೆ ಯಶಸ್ಸು ದೊರೆಯಲಾರದು. ಇದೇ ಲೋಕ ಸಿದ್ಧಿಯ ಅಡಿಪಾಯ. ಸಿದ್ಧಿಗೆ, ಕಾಲ ಮತ್ತು ಅವಸ್ಥೆಗಳ ಆಧಾರದ ಮೇಲೆ ಬಹಳಷ್ಟು ದಾರಿಗಳಿವೆ ಎಂದು ಹೇಳುತ್ತಾರೆ. ನನ್ನ ತಂದೆಯು ಹಿಂದೆ ನಮ್ಮ ಮನೆಯಲ್ಲಿ ಓರ್ವ ಪಂಡಿತನನ್ನು ಇರಿಸಿಕೊಂಡಿದ್ದನು. ಅವನೇ ನನ್ನ ತಂದೆಗೆ ಈ ವಿಷಯಗಳನ್ನು ಹೇಳಿದನು. ಅವನು ಹಿಂದೆ ಬೃಹಸ್ಪತಿಯಿಂದ ಹೇಳಲ್ಪಟ್ಟ ಇದೇ ಸಿದ್ಧಾಂತವನ್ನು ನನ್ನ ಸಹೋದರರಿಗೆ ಕೊಟ್ಟಿದ್ದನು ಮತ್ತು ಅವರ ಸಂಭಾಷಣೆಯನ್ನು ನಾನು ನನ್ನ ಮನೆಯಲ್ಲಿ ಆಗ ಕೇಳಿಕೊಂಡಿದ್ದೆ. ಯಾವುದೋ ಕೆಲಸಕ್ಕೆಂದು ಅಲ್ಲಿಗೆ ಹೋಗಿದ್ದ ನನ್ನನ್ನು ಅವನು ಸಂತವಿಸಿದಾಗ, ತಂದೆಯ ತೊಡೆಯಮೇಲೆ ಕುಳಿತುಕೊಂಡು ಕೇಳಿದ್ದೆನು.”

ಯಾಜ್ಞಸೇನಿಯ ಮಾತುಗಳನ್ನು ಕೇಳಿದ ಭೀಮಸೇನನು ಅತಿ ಕುಪಿತನಾಗಿ ನಿಟ್ಟುಸಿರು ಬಿಡುತ್ತಾ ಕೃದ್ಧನಾಗಿ ರಾಜನಿಗೆ ಹೇಳಿದನು:

“ಸತ್ಪುರುಷರಿಗೆ ಉಚಿತವಾದ ರಾಜಧರ್ಮದ ಮಾರ್ಗದಲ್ಲಿ ನಡೆ! ಧರ್ಮ, ಕಾಮ ಮತ್ತು ಅರ್ಥಹೀನರಾಗಿ ಹೀಗೆ ಏಕೆ ತಪೋವನದಲ್ಲಿ ವಾಸಿಸುತ್ತಿದ್ದೇವೆ? ದುರ್ಯೋಧನನು ನಮ್ಮ ರಾಜ್ಯವನ್ನು ಧರ್ಮದಿಂದ ಅಥವಾ ಪ್ರಾಮಾಣಿಕತೆಯಿಂದ ಅಥವಾ ವೀರತನದಿಂದ ತೆಗೆದುಕೊಳ್ಳಲಿಲ್ಲ. ಅವನು ಮೋಸದ ಜೂಜಿನ ಮೂಲಕ ಅಪಹರಿಸಲಿಲ್ಲವೇ? ಒಂದು ದುರ್ಬಲ ನರಿಯು ಬಲವಂತ ಸಿಂಹದ ಬಾಯಿಯಿಂದ ಹಸಿಮಾಂಸದ ತುಂಡನ್ನು ಕಸಿದುಕೊಂಡಂತೆ ನಮ್ಮ ರಾಜ್ಯವನ್ನು ನಮ್ಮಿಂದ ಕಸಿದುಕೊಳ್ಳಲಾಯಿತು. ಧರ್ಮವೆಂಬ ಹರಿದುಹೋದ ಚಾದರವನ್ನು ಹೊದ್ದು ಧರ್ಮ ಮತ್ತು ಕಾಮಗಳಿಗೆ ಮೂಲವಾದ ಅರ್ಥವನ್ನು ಬಿಸಾಡಿ ಈ ದಟ್ಟ ಕಾಡಿನಲ್ಲಿ ಏಕೆ ಪರಿತಪಿಸುತ್ತಿರುವೆ? ಗಾಂಡೀವ ಧನುಸ್ಸನ್ನು ಹಿಡಿದ ಅರ್ಜುನನಿಂದ ರಕ್ಷಿಸಲ್ಪಟ್ಟ ನಮ್ಮ ರಾಜ್ಯವನ್ನು ಶಕ್ರನೂ ಕಸಿದುಕೊಳ್ಳಲು ಅಸಾಧ್ಯನಾಗಿರುವಾಗ, ನಿನ್ನ ಅನುಯಾಯಿಗಳಾದ ನಾವು ನೋಡುತ್ತಿದ್ದಂತೆಯೇ ನಮ್ಮಿಂದ ಅದನ್ನು ಅಪಹರಿಸಲಾಯಿತು. ಕೈಯಿಲ್ಲದವನು ಬಿಲ್ವದ ಹಣ್ಣನ್ನು ಕಿತ್ತುಕೊಂಡಂತೆ ಮತ್ತು ಕುಂಟನು ಹಸುವನ್ನು ಕದ್ದುಕೊಂಡು ಹೋದಂತೆ, ನಿನ್ನ ಕಾರಣದಿಂದ, ನಾವೆಲ್ಲರೂ ಜೀವಂತವಿರುವಾಗಲೇ ನಮ್ಮ ಐಶ್ವರ್ಯವನ್ನು ಅಪಹರಿಸಿಕೊಂಡು ಹೋದರಲ್ಲ! ಧರ್ಮದಲ್ಲಿಯೇ ನಡೆಯುವುದರಲ್ಲಿ ಸುಖವನ್ನು ಪಡೆಯುವ ನಿನಗೆ ಇಷ್ಟವಾದುದನ್ನು ಮಾಡಲೆಂದು ನಾವು ಈ ಮಹಾ ವ್ಯಸನವನ್ನು ಸಹಿಸಿಕೊಂಡಿದ್ದೇವೆ. ನಿನ್ನ ಸಿದ್ಧಾಂತವನ್ನು ಅನುಸರಿಸಿ ನಾವು ನಮ್ಮ ಮಿತ್ರರಿಂದ ದೂರರಾಗಿ ಶತ್ರುಗಳಿಗೆ ಆನಂದವನ್ನು ನೀಡುತ್ತಿದ್ದೇವೆ. ನಿನ್ನ ಶಾಸ್ತ್ರವನ್ನು ಸ್ವೀಕರಿಸಿ ಅಂದೇ ನಾವು ಧಾರ್ತರಾಷ್ಟ್ರರನ್ನು ಕೊಲ್ಲದೇ ಇದ್ದುದೇ ತಪ್ಪಾಗಿ ಹೋಯಿತು. ಅದಕ್ಕಾಗಿಯೇ ನಾವು ಈ ದುಷ್ಕೃತವನ್ನು ಅನುಭವಿಸುತ್ತಿದ್ದೇವೆ. ಮೃಗದಂತೆ ಜೀವಿಸುತ್ತಿರುವುದನ್ನು ನೋಡು. ವೀರರಲ್ಲದವರು ಈ ರೀತಿ ನಡೆದುಕೊಳ್ಳುತ್ತಾರೆಯೇ ಹೊರತು ಬಲವಿರುವವರು ಹೀಗೆ ನಡೆದುಕೊಳ್ಳುವುದಿಲ್ಲ. ನಿನ್ನ ಈ ನಡತೆಯನ್ನು ಕೃಷ್ಣನಾಗಲೀ, ಬೀಭತ್ಸುವಾಗಲೀ, ಅಭಿಮನ್ಯುವಾಗಲೀ, ಸೃಂಜಯನಾಗಲೀ, ನಾನಾಗಲೀ ಮತ್ತು ಈ ಇಬ್ಬರು ಮಾದ್ರೀ ಸುತರಾಗಲೀ ಖಂಡಿತವಾಗಿಯೂ ಅನುಮೋದಿಸುವುದಿಲ್ಲ. ನೀನು ಧರ್ಮ ಧರ್ಮ ಎಂದು ಸತತವೂ ವ್ರತನಿರತನಾಗಿರುತ್ತೀಯೆ. ಈ ಜೀವನ ಕಷ್ಟವನ್ನು ಸಹಿಸಲಾಗದೆ ನಿರಾಸೆಯುಂಟಾಗಿ ಈ ವಿಧದ ನಪುಂಸಕ ಜೀವನವನ್ನು ಅವಲಂಬಿಸಿಲ್ಲ ತಾನೇ? ದುರ್ಬಲರಾದವರು ಮಾತ್ರ ತಾವು ಕಳೆದುಕೊಂಡ ಸಂಪತ್ತನ್ನು ಪುನಃ ಪಡೆಯಲು ಅಸಮರ್ಥರಾಗಿ ನಿರಾಶೆಹೊಂದುತ್ತಾರೆ. ಜೀವನದಲ್ಲಿ ನಿರಾಶೆಯು ಸರ್ವಘಾತಕವಾದುದು ಮತ್ತು ನಿಷ್ಫಲವಾದುದು. ನಿನಗೆ ದೂರದೃಷ್ಟಿಯಿದೆ ಮತ್ತು ಶಕ್ತನಾಗಿರುವೆ. ನಾವು ಪರಾಕ್ರಮಿಗಳೆಂದು ನಿನಗೆ ಗೊತ್ತು. ಆದರೂ ಶಾಂತಪರನಾದ ನೀನು ಆಗಿರುವ ಅನರ್ಥವನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ತುಂಬಾ ಕ್ಷಮಾಪರರಾಗಿರುವ ನಮ್ಮನ್ನು ಧಾರ್ತರಾಷ್ಟ್ರರು ಅಶಕ್ತರೆಂದೇ ತಿಳಿದುಕೊಂಡಿದ್ದಾರೆ. ಇದು ರಣದಲ್ಲಿ ಸಾಯುವುದಕ್ಕಿಂತಲೂ ದುಃಖತರವಾದುದು. ನೇರವಾಗಿ, ಹಿಂದಿರುಗದೇ, ಅಲ್ಲಿಯೇ ಯುದ್ಧಮಾಡಿದ್ದರೆ ಚೆನ್ನಾಗಿರುತ್ತಿತ್ತು. ನಾವೆಲ್ಲರೂ ಸತ್ತರೂ ನಂತರ ಶ್ರೇಯವಾದ ಲೋಕಗಳನ್ನು ಪಡೆಯುತ್ತಿದ್ದೆವು. ಅಥವಾ ಅವರನ್ನು ಸಂಹರಿಸಿ ನಮ್ಮ ಭೂಮಿ ಸರ್ವವನ್ನೂ ಹಿಂದೆ ತೆಗೆದುಕೊಂಡಿದ್ದರೆ ಅದೂ ಶ್ರೇಯಸ್ಕರವೇ ಆಗುತ್ತಿರಲಿಲ್ಲವೇ? ನಮ್ಮ ಧರ್ಮದಂತೆ ನಡೆದುಕೊಳ್ಳಬೇಕೆಂದರೆ, ವಿಪುಲ ಕೀರ್ತಿಯನ್ನು ಬಯಸಿದರೆ, ವೈರಿಗಳನ್ನು ಎದುರಿಸಿ ಕಾರ್ಯನಿರತರಾಗುವುದೇ ಸರ್ವಥಾ ಒಳ್ಳೆಯದು. ಅನ್ಯರಿಂದ ಅಪಹೃತವಾದ ರಾಜ್ಯಕ್ಕಾಗಿ ನಾವು ಯುದ್ಧಮಾಡಿದೆವೆಂದರೆ ನಾವು ಸರಿಯಾದುದನ್ನೇ ಮಾಡಿದೆವೆಂದು ತಿಳಿಯುತ್ತಾರೆ. ಎಲ್ಲರೂ ಹೊಗಳುತ್ತಾರೆಯೇ ಹೊರತು ನಿಂದಿಸುವುದಿಲ್ಲ. ತನ್ನನ್ನೂ ಮತ್ತು ಮಿತ್ರರನ್ನೂ ಸಂಕಟಕ್ಕೊಳಪಡಿಸುವ ಧರ್ಮವು ಧರ್ಮವೆನಿಸುವುದೇ? ಅದು ಧರ್ಮವಲ್ಲ, ಕುಧರ್ಮ. ಯಾವಾಗಲೂ ಧರ್ಮವೆಂದು ಕುಳಿತಿರುವ ಪುರುಷನನ್ನು ಧರ್ಮವೇ ದುರ್ಬಲನನ್ನಾಗಿ ಮಾಡಿಬಿಡುತ್ತದೆ. ಸತ್ತವನನ್ನು ದುಃಖಸುಖಗಳು ಪರಿತ್ಯಜಿಸುವಂತೆ ದುರ್ಬಲನಾದವನನ್ನು ಧರ್ಮಾರ್ಥಗಳೆರಡೂ ತೊರೆಯುತ್ತವೆ. ಧರ್ಮಕ್ಕಾಗಿ ಕಷ್ಟಪಡುವುದು ಪಂಡಿತನ ಧರ್ಮವಲ್ಲ. ಒಬ್ಬ ಕುರುಡನು ಸೂರ್ಯನ ಬೆಳಕನ್ನು ಅರಿಯದೇ ಇರುವಂತೆ ಅಂಥವನು ಧರ್ಮದ ಅರ್ಥವನ್ನು ತಿಳಿದುಕೊಂಡಿರುವುದಿಲ್ಲ. ಅದರಂತೆ ಕೇವಲ ಐಶ್ವರ್ಯಕ್ಕಾಗಿಯೇ ಹಣದ ಸಂಪಾದನೆ ಮಾಡುವವನು ಹಣದ ಪ್ರಯೋಜನವನ್ನು ತಿಳಿಯಲಾರನು. ಅರಣ್ಯದಲ್ಲಿ ಕೂಲಿಗಾಗಿ ದನಗಳನ್ನು ಕಾಯುವ ಗೋಪಾಲಕನಂತೆ ಅವನು ಹಣದ ರಕ್ಷಣೆಯಲ್ಲಿ ಮಾತ್ರ ಆಸಕ್ತನಾಗಿರುತ್ತಾನೆ. ಅತಿಯಾಗಿ ಹಣವನ್ನು ಸಂಪಾದನೆ ಮಾಡುವವನು, ಇತರ ಎರಡು ಗುರಿಗಳನ್ನು (ಧರ್ಮ ಮತ್ತು ಕಾಮ) ನಿರ್ಲಕ್ಷಿಸಿದರೆ ಸರ್ವಜೀವಿಗಳಿಂದಲೂ ವಧ್ಯ ಮತ್ತು ಬ್ರಾಹ್ಮಣನನ್ನು ಕೊಂದವನಷ್ಟು ಎಲ್ಲರ ನಿಂದೆಗೆ ಪಾತ್ರನಾಗುತ್ತಾನೆ. ಹಾಗೆಯೇ, ಸದಾ ಕಾಮಗಳನ್ನು ಪೂರೈಸುವುದರಲ್ಲಿ ತೊಡಗಿ, ಇತರ ಎರಡು ಪುರುಷಾರ್ಥಗಳನ್ನು ನಿರ್ಲಕ್ಷಿಸುವವನಿಗೆ ಮಿತ್ರರು ಇಲ್ಲವಾಗುತ್ತಾರೆ ಮತ್ತು ಅವನು ಧರ್ಮ ಮತ್ತು ಅರ್ಥಗಳೆರಡನ್ನೂ ಕಳೆದುಕೊಳ್ಳುತ್ತಾನೆ. ಧರ್ಮ ಮತ್ತು ಅರ್ಥಹೀನನಾದವನು ಕಾಮಗಳನ್ನು ಪೂರೈಸಿಕೊಂಡ ನಂತರ, ಕೊಳವು ಬತ್ತಿಹೋಗುವ ತನಕ ಕಾಮದಲ್ಲಿ ರಮಿಸುತ್ತಿರುವ ಮೀನಿನಂತೆ ಸಾಯುವುದು ಸತ್ಯ. ಈ ಕಾರಣದಿಂದಲೇ ಪಂಡಿತರು ಧರ್ಮಾರ್ಥಗಳ ವಿಷಯದಲ್ಲಿ ಬಹಳ ಜಾಗರೂಕತೆಯಿಂದಿರುತ್ತಾರೆ. ಅಗ್ನಿಗೆ ಅರಣಿಯು ಪ್ರಕೃತಿಯಾಗಿರುವಂತೆ ಕಾಮಪ್ರಾಪ್ತಿಗೆ ಧರ್ಮಾರ್ಥಗಳೆರಡೂ ಮುಖ್ಯಾಂಗಗಳು. ಅರ್ಥವೂ ಸರ್ವಥಾ ಧರ್ಮದ ಮೂಲವಾಗಿರಬೇಕು. ಅದರಂತೆ ಧರ್ಮವೂ ಅರ್ಥಪ್ರಯೋಜನವುಳ್ಳದ್ದಾಗಿರಬೇಕು. ಸಮುದ್ರವು ಮೋಡವನ್ನೂ, ಮೋಡವು ಸಮುದ್ರವನ್ನೂ ಅವಲಂಬಿಸಿಕೊಂಡಿರುವಂತೆ ಧರ್ಮಾರ್ಥಗಳೆರಡೂ ಒಂದನ್ನೊಂದು ಅವಲಂಬಿಸಿ ನಿಂತಿವೆ. ದ್ರವ್ಯಾರ್ಥಗಳ ಸ್ಪರ್ಷಸಂಯೋಗದಿಂದಲೇ ಪ್ರೀತಿ (ಕಾಮ) ಉಂಟಾಗುತ್ತದೆ. ಕಾಮವೆಂಬುದು ಕೇವಲ ಮನಸ್ಸಿನಲ್ಲಿರುವುದೇ ಹೊರತು ಅದಕ್ಕೆ ಬೇರೆಯ ಶರೀರವಿಲ್ಲ. ಅದು ಅನಂಗ. ಯಾರೂ ಅದನ್ನು ನೋಡಲು ಸಾಧ್ಯವಿಲ್ಲ. ಅರ್ಥವನ್ನು ಅರಸುವ ಪುರುಷನು ಅದನ್ನು ಧರ್ಮದಿಂದ ಪಡೆಯುತ್ತಾನೆ. ಕಾಮಾರ್ಥಿಯು ಅದನ್ನು ಅರ್ಥದಿಂದ ಪಡೆಯುತ್ತಾನೆ. ಆದರೆ ಕಾಮದಿಂದ ಎನನ್ನು ಪಡೆಯಲೂ ಸಾಧ್ಯವಿಲ್ಲ. ಯಾಕೆಂದರೆ, ಕಾಮದಿಂದ ಇನ್ನೊಂದು ಕಾಮವು ಫಲವಾಗಿ ಹುಟ್ಟುವುದಿಲ್ಲ. ಕಾಮವನ್ನೇ ಫಲವೆಂದು ಉಪಭೋಗಮಾಡುವುದರಿಂದ ಕಟ್ಟಿಗೆಯನ್ನು ಸುಟ್ಟರೆ ಭಸ್ಮವೇ ಉಳಿದುಕೊಳ್ಳುವಂತೆ ಕಾಮದಿಂದ ಬೇರೆ ಏನು ಫಲವೂ ದೊರೆಯುವುದಿಲ್ಲ. ಈ ಅರಣ್ಯದಲ್ಲಿರುವ ಪಕ್ಷಿಗಳನ್ನು ಬೇಡನು ಹೇಗೆ ಹಿಂಸೆಪಡಿಸುತ್ತಾನೋ ಹಾಗೆ ಅಧರ್ಮವು ಲೋಕದ ಜೀವಿಗಳನ್ನು ಹಿಂಸಿಸುತ್ತದೆ. ಕಾಮಲೋಭಗಳಿಗೆ ಅಧೀನನಾಗಿ ಧರ್ಮದ ನಿಜಸ್ವರೂಪವನ್ನು ಯಾರು ತಿಳಿಯುವುದಿಲ್ಲವೋ ಅವನು ವಧಾರ್ಹ. ಇಹ-ಪರಗಳೆರಡರಲ್ಲೂ ಅವನು ದುರ್ಮತಿಯೆನಿಸಿಕೊಳ್ಳುತ್ತಾನೆ. ಅರ್ಥವೆಂದರೆ ದ್ರವ್ಯಪರಿಗ್ರಹ ಎನ್ನುವುದು ನಿನಗೆ ತಿಳಿದೇ ಇದೆ. ಅರ್ಥದ ನಿಜಸ್ವರೂಪವನ್ನೂ ವಿಕೃತಿಯನ್ನೂ ನೀನು ಚೆನ್ನಾಗಿ ತಿಳಿದುಕೊಂಡಿದ್ದೀಯೆ. ವೃದ್ಧಾಪ್ಯದಲ್ಲಿ ಅಥವಾ ಮರಣಕಾಲದಲ್ಲಿ ಐಶ್ವರ್ಯವು ನಾಶವಾದರೆ ಅನರ್ಥಎಂದು ತಿಳಿಯುತ್ತಾರೆ. ಅಂಥಹ ಪರಿಸ್ಥಿತಿ ಈಗ ನಮ್ಮದಾಗಿದೆ. ಪಂಚೇಂದ್ರಿಯಗಳು, ಮನಸ್ಸು ಮತ್ತು ಹೃದಯವು ವಿಷಯದಲ್ಲಿ ತೊಡಗಿದಾಗ ಉಂಟಾಗುವುದೇ ಕಾಮ. ಎಲ್ಲ ಕರ್ಮಗಳಿಂದ ದೊರೆಯುವ ಉತ್ತಮ ಫಲವೇ ಕಾಮ ಎಂದು ನನ್ನ ಅಭಿಪ್ರಾಯ. ಆದುದರಿಂದಲೇ ಧರ್ಮ, ಅರ್ಥ, ಕಾಮಗಳನ್ನು ಬೇರೆ ಬೇರೆಯಾಗಿ ನೋಡಬಾರದು. ಮನುಷ್ಯನು ಮೊದಲು ಧರ್ಮಪರನಾಗಿದ್ದು ನಂತರ ಅರ್ಥವನ್ನು ಪಡೆದು ತದನಂತರ ಕಾಮವನ್ನು ಪೂರೈಸಿಕೊಳ್ಳಬೇಕು. ಯಾವಾಗಲೂ ಈ ಮೂರನ್ನೂ ಸೇವಿಸಬೇಕು. ದಿನದ ಮೊದಲಭಾಗದಲ್ಲಿ ಧರ್ಮವನ್ನೂ, ಮಧ್ಯಭಾಗದಲ್ಲಿ ಧನವನ್ನೂ ಮತ್ತು ಅಂತ್ಯದಲ್ಲಿ ಕಾಮವನ್ನೂ ಆಚರಿಸಬೇಕು. ಇದೇ ಶಾಸ್ತ್ರಗಳು ಮಾಡಿಟ್ಟ ವಿಧಿ. ಮೊದಲು ಕಾಮವನ್ನು ಅರಸಬೇಕು, ಮಧ್ಯದಲ್ಲಿ ಅರ್ಥವನ್ನು ಪಡೆಯಬೇಕು ಮತ್ತು ಜೀವನದ ಕೊನೆಯ ಭಾಗದಲ್ಲಿ ಧರ್ಮವನ್ನು ಪಾಲಿಸಬೇಕು. ಒಂದಾದ ನಂತರ ಇನ್ನೊಂದು. ಇದೇ ಶಾಸ್ತ್ರಗಳು ಮಾಡಿಟ್ಟ ವಿಧಿ. ಧರ್ಮ, ಅರ್ಥ, ಕಾಮಗಳನ್ನು ಯಥಾವತ್ತಾಗಿ ಕಾಲಕ್ಕೆ ಸರಿಯಾಗಿ ವಿಭಜನೆ ಮಾಡಿ ಕಾಲವನ್ನರಿತ ಪಂಡಿತನು ಈ ಮೂರನ್ನೂ ಸೇವಿಸುತ್ತಾನೆ. ಸುಖವನ್ನು ಅರಸುವವನಿಗೆ ಸರ್ವಪರಿತ್ಯಾಗವು ಒಳ್ಳೆಯದೋ ಅಥವಾ ಸಾಧಿಸುವುದು ಒಳ್ಳೆಯದೋ ಎನ್ನುವುದಕ್ಕೆ ಬುದ್ಧಿಯುಪಯೋಗಿಸಿ ಉತ್ತರವನ್ನು ಕಂಡುಕೊಳ್ಳುಬೇಕು. ಅದನ್ನು ನಿರ್ಧರಿಸಿದ ನಂತರ ತಕ್ಷಣವೇ ಮೊದಲನೆಯದನ್ನು ಮಾಡಬೇಕು ಅಥವಾ ಸಾಧನೆಗೆ ಪ್ರಯತ್ನಿಸಬೇಕು. ಯಾಕೆಂದರೆ ಇವೆರಡರ ಮಧ್ಯೆ ಓಲಾಡುವವನ ಜೀವನವು ರೋಗಿಷ್ಟನ ದುಃಖಕ್ಕೆ ಸಮಾನವಾದುದು.

“ನೀನು ಧರ್ಮವನ್ನು ತಿಳಿದಿದ್ದೀಯೆ ಮತ್ತು ಸದಾ ಧರ್ಮದಲ್ಲಿಯೇ ನಡೆದುಕೊಂಡು ಬಂದಿದ್ದೀಯೆ. ನಿನ್ನ ಸ್ನೇಹಿತರು ನಿನ್ನನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ನಿನ್ನ ಕರ್ಮಚೋದನೆಯನ್ನು ಪ್ರಶಂಸಿಸುತ್ತಾರೆ. ದಾನ, ಯಜ್ಞ, ಸಂತರ ಪೂಜೆ, ವೇದಧಾರಣ, ಮಾರ್ಜವ ಇವೆಲ್ಲವೂ ಫಲವನ್ನು ನೀಡುವ ಉತ್ತಮ ಧರ್ಮವೇ ಸರಿ. ಆದರೆ ಅರ್ಥವಿಹೀನನಾದವನು (ಬಡವನು) ಇದನ್ನು (ಧರ್ಮವನ್ನು) ಸೇವಿಸಲು ಶಕ್ತನಾಗುವುದಿಲ್ಲ. ಬೇರೆ ಯಾವುದು ಇದ್ದರೂ ಈ ಗುಣಗಳನ್ನು ಸಂಪೂರ್ಣವಾಗಿ ಇರಿಸಿಕೊಳ್ಳಬೇಕು. ಈ ಜಗತ್ತಿನ ಮೂಲ ಧರ್ಮ. ಧರ್ಮಕ್ಕಿಂತ ಹಿರಿದಾದುದು ಬೇರೆ ಯಾವುದೂ ಇಲ್ಲ. ಮತ್ತು ಈ ಧರ್ಮವನ್ನು ಮಹಾ ಸಂಪತ್ತಿನಿಂದ ಮಾತ್ರ ಸೇವಿಸಲು ಸಾಧ್ಯ. ಅಂಥಹ ಸಂಪತ್ತನ್ನು ಬೇಡುವುದರಿಂದಾಗಲೀ ದೀನತೆಯಿಂದಾಗಲೀ ಎಂದೂ ಪಡೆಯಲಿಕ್ಕಾಗುವುದಿಲ್ಲ. ಕೇವಲ ಸದಾ ಧರ್ಮಬುದ್ಧಿಯಿಂದ ಮಾತ್ರ ಅದನ್ನು ಸಂಪಾದಿಸಲು ಶಕ್ಯ. ದ್ವಿಜರಿಗೆ ಸಿದ್ಧಿಯನ್ನು ತರುವ ಯಾಚನೆಯು ನಿನಗೆ ನಿಷಿದ್ಧವಾದುದು. ಆದುದರಿಂದ, ನಿನ್ನ ತೇಜಸ್ಸಿನಿಂದ ಸಂಪತ್ತಿನ ನಿನ್ನ ಕೊರತೆಯನ್ನು ಪೂರೈಸಿಕೋ. ಭಿಕ್ಷಾಟನೆ ಮಾಡುವುದಾಗಲೀ, ವೈಶ್ಯರ ಅಥವಾ ಶೂದ್ರರ ಜೀವನವನ್ನು ಅನುಸರಿಸುವುದಾಗಲೀ ಕ್ಷತ್ರಿಯರಿಗೆ ಸರಿಯಾದುದಲ್ಲ. ಕ್ಷತ್ರಿಯರಿಗೆ ಅವನ ಎದೆಯ ಬಲವೇ ಅತಿದೊಡ್ಡ ಧರ್ಮ. ಉದಾರತೆಯೇ ಧರ್ಮವೆಂದು ತಿಳಿದ ವಿದ್ವಾಂಸರು ಹೇಳುತ್ತಾರೆ. ಉದಾರತೆಯನ್ನು ನಿನ್ನದಾಗಿಸಿ ಅದರಮೇಲೆ ಸ್ಥಿರನಾಗಿ ನಿಲ್ಲು. ಎದ್ದೇಳು! ಸನಾತನ ಧರ್ಮವನ್ನು ನೀನು ತಿಳಿದಿದ್ದೀಯೆ. ಇತರರಿಗೆ ಕಷ್ಟಕೊಡುವ ಕ್ರೂರ ಕರ್ಮಗಳನ್ನು ಕೊನೆಗೊಳಿಸಲೇ ನೀನು ಹುಟ್ಟಿದ್ದೀಯೆ. ಪ್ರಜಾಪಾಲನೆಯಿಂದ ನೀನು ಪಡೆಯುವ ಫಲವನ್ನು ಯಾರೂ ನಿಂದಿಸಲಾರರು. ಇದೇ ಧಾತನು ನಮಗೆ ವಿಹಿಸಿದ ಸನಾತನ ಧರ್ಮವಲ್ಲವೇ? ಇದರಿಂದ ನೀನು ವಿಚಲಿತನಾದರೆ ಲೋಕದ ಹಾಸ್ಯಕ್ಕೆ ಒಳಪಡುತ್ತೀಯೆ. ಯಾಕೆಂದರೆ, ಸ್ವಧರ್ಮಕ್ಕೆ ಹೊರತಾಗಿ ನಡೆದುಕೊಳ್ಳುವ ಮನುಷ್ಯರನ್ನು ಪ್ರಶಂಸಿಸುವುದಿಲ್ಲ. ನಿನ್ನ ಹೃದಯವನ್ನು ಕ್ಷತ್ರಿಯ ಹೃದಯವನ್ನಾಗಿಸಿ ಮನಸ್ಸಿನಲ್ಲಿರುವ ದುರ್ಬಲತೆಯನ್ನು ಕಿತ್ತು ಹಾಕು. ವೀರ್ಯವನ್ನು ತೋರಿಸು ಮತ್ತು ಹೋರಾಡಬೇಕಾದ ಯುದ್ಧವನ್ನು ಹೋರಾಡು. ಕೇವಲ ಧರ್ಮಾತ್ಮನಾಗಿದ್ದುಕೊಂಡು ಯಾವ ರಾಜನೂ ಪೃಥ್ವಿಯನ್ನು ಗೆಲ್ಲಲಿಲ್ಲ ಅಥವಾ ಸಂಪತ್ತನ್ನು ಗಳಿಸಲಿಲ್ಲ. ನರಿಯು ತನ್ನ ಆಹಾರವನ್ನು ಪಡೆಯುವಂತೆ, ಕ್ಷುದ್ರರೂ ಲೋಭಿಗಳೂ ಆದ ಜನರಿಗೆ ಸಿಹಿಮಾತುಗಳನ್ನಿತ್ತು ಮೋಸಮಾಡಿ ರಾಜ್ಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ದೇವತೆಗಳ ಅಣ್ಣಂದಿರಾದ, ಅವರಿಗಿಂತ ಮೊದಲೇ ಹುಟ್ಟಿದ್ದ, ಎಲ್ಲ ರೀತಿಯಲ್ಲಿಯೂ ಸುಸಮೃದ್ಧರಾಗಿದ್ದ ಅಸುರರನ್ನು ದೇವತೆಗಳು ಮೋಸದಿಂದಲೇ ಸೋಲಿಸಿದರು. ಸರ್ವವೂ ಬಲಶಾಲಿಗೇ ಸೇರಿದ್ದು ಎಂದು ತಿಳಿದು, ಮೋಸದಿಂದ ನಿನ್ನ ಶತ್ರುಗಳನ್ನು ಗೆಲ್ಲುವುದೇ ಶ್ರೇಷ್ಠ. ಯುದ್ಧದಲ್ಲಿ ಧನುರ್ಧರ ಅರ್ಜುನನ ಸಮನಾದ ಇನ್ನೊಬ್ಬ ಯೋಧನಿಲ್ಲ. ಗದಾಧರನಾದ ನನ್ನ ಸಮನಾದವರು ಯಾರಿದ್ದಾರೆ? ಉತ್ತಮ ಬಲಶಾಲಿಯೂ ಕೂಡ ತನ್ನ ಸತ್ವದ ಆಧಾರದ ಮೇಲೆಯೇ ಯುದ್ಧವನ್ನು ಮಾಡುತ್ತಾನೆ. ನೀನೂ ಕೂಡ ಪ್ರಮಾಣದಿಂದಲ್ಲದೇ, ಉತ್ಸಾಹದಿಂದಲ್ಲದೇ, ಸತ್ವದಿಂದ ಹೋರಾಡು. ಸತ್ವವೇ ಅರ್ಥದ ಮೂಲ ಮತ್ತು ಇದಕ್ಕೆ ಹೊರತಾದುದು ಸುಳ್ಳು. ಛಳಿಗಾಲದಲ್ಲಿ ಮರದ ನೆರಳಿನಂತೆ ಇದು ಸುಳ್ಳಲ್ಲ. ಬೀಜವನ್ನು ಬಿತ್ತುವ ಹಾಗೆ ಸಂಪತ್ತನ್ನು ಪಡೆಯಬೇಕೆಂದರೆ ಸ್ವಲ್ಪ ಸಂಪತ್ತನ್ನು ತ್ಯಾಗಮಾಡಬೇಕಾಗುತ್ತದೆ. ಇದರಲ್ಲಿ ನಿನಗೆ ಸಂಶಯವಿಲ್ಲದಿರಲಿ. ಆದರೆ ಯಾವುದರಲ್ಲಿ ಹಾಕಿದ ಬಂಡವಾಳದಷ್ಟೇ ಅಥವಾ ಅದಕ್ಕಿಂತಲೂ ಕಡಿಮೆ ದೊರೆಯುತ್ತದೆಯೋ ಅಲ್ಲಿ ಬಂಡವಾಳವನ್ನು ಹಾಕಬಾರದು, ಯಾಕೆಂದರೆ ಅದು ತುರಿಕೆಯನ್ನು ತುರಿಸಿಕೊಂಡಹಾಗೆ. ಅದೇ ರೀತಿಯಲ್ಲಿ ಸ್ವಲ್ಪ ಧರ್ಮವನ್ನು ತೊರೆದು ಮನುಷ್ಯನು ಅಧಿಕ ಧರ್ಮವನ್ನು ಪಡೆಯುತ್ತಾನೆ. ಅಂಥವನು ತಿಳಿದವನು ಎಂದು ನಿಶ್ಚಿತನಾಗುತ್ತಾನೆ. ಪಂಡಿತರು ತಮ್ಮ ಮಿತ್ರರ ಮೂಲಕ ಶತ್ರುಗಳನ್ನು ಅವರ ಮಿತ್ರರಿಂದ ಬೇರ್ಪಡಿಸುತ್ತಾರೆ. ಮಿತ್ರರಿಂದ ಬೇರೆಯಾಗಿ, ಅವರಿಂದ ಪರಿತ್ಯಕ್ತನಾಗಿ ದುರ್ಬಲನಾದಾಗ ಅವನನ್ನು ವಶಪಡಿಸಿಕೊಳ್ಳುತ್ತಾರೆ. ಉತ್ತಮ ಬಲಶಾಲಿಗಳೂ ಕೂಡ ಸತ್ವದಿಂದಲೇ ಯುದ್ಧವನ್ನು ಮಾಡುತ್ತಾರೆ. ಕೇವಲ ಶ್ರಮದಿಂದ ಅಥವಾ ಸಿಹಿಮಾತುಗಳಿಂದ ಎಲ್ಲರೂ ಪ್ರಜೆಗಳನ್ನಾಗಿ ಸ್ವೀಕರಿಸುವುದಿಲ್ಲ. ದುರ್ಬಲರು ಒಟ್ಟಾಗಿ ಮಿತ್ರರಿಲ್ಲದ ಬಲಶಾಲಿಯನ್ನೂ ಕೂಡ ಜೇನನ್ನು ಕೀಳುವವನನ್ನು ಜೇನುಹುಳಗಳು ಹೇಗೋ ಹಾಗೆ ಸಂಹರಿಸುತ್ತಾರೆ. ಸೂರ್ಯನು ಹೇಗೆ ತನ್ನ ಕಿರಣಗಳಿಂದ ಸರ್ವ ಪ್ರಜೆಗಳನ್ನೂ ಪಾಲಿಸುತ್ತಾನೋ ಹಾಗೆ ನೀನೂ ಕೂಡ ಸೂರ್ಯನಂತೆ ಆಗಬೇಕು. ನಮ್ಮ ಪಿತಾಮಹರು ಮಾಡಿದಹಾಗೆ ವಿಧಿಯಿಂದ ಈ ಭೂಮಿಯನ್ನು ಪಾಲನ ಮಾಡುವುದೇ ನಮ್ಮ ಪುರಾತನ ತಪಸ್ಸು ಎಂದು ಕೇಳಿಲ್ಲವೇ? ನಿನ್ನ ಈ ವ್ಯಥೆಯನ್ನು ನೋಡಿ ಲೋಕದ ಜನರು ಸೂರ್ಯನು ತನ್ನ ಕಾಂತಿಯನ್ನು ಮತ್ತು ಚಂದ್ರನು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದಾರೋ ಎಂದು ಚಿಂತೆಗೊಳಗಾಗಿದ್ದಾರೆ. ಜನರು ಸೇರಿದ ಪರಿಷತ್ತುಗಳಲ್ಲೆಲ್ಲ ನಿನ್ನ ಪ್ರಶಂಸೆ ಮತ್ತು ಇತರರ ನಿಂದನೆಯೇ ನಡೆಯುತ್ತದೆ. ಇದಕ್ಕೂ ಹೆಚ್ಚಿನದುದೆಂದರೆ, ಬ್ರಾಹ್ಮಣರು, ಹಿರಿಯರು ಒಟ್ಟಿಗೆ ಸೇರಿದಾಗಲೆಲ್ಲ, ಮೋಹವಿಲ್ಲದ, ಕಾರ್ಪಣ್ಯದಿಂದಲ್ಲದ, ಲೋಭದಿಂದಲ್ಲದ, ಭಯದಿಂದಲ್ಲದ, ಅನೃತವಲ್ಲದ, ಕಾಮದಿಂದಲ್ಲದ, ಅರ್ಥಕ್ಕಾಗಿರದ ನಿನ್ನ ಈ ಸತ್ಯಸಂಧತೆಯನ್ನೇ ಸಂತೋಷದಿಂದ ಮಾತನಾಡಿಕೊಳ್ಳುತ್ತಾರೆ. ಭೂಮಿಯನ್ನು ಪಡೆಯುವಾಗ ರಾಜನು ಸ್ವಲ್ಪ ಏನಾದರೂ ಪಾಪವನ್ನು ಗಳಿಸಿದರೂ ಅವೆಲ್ಲವನ್ನೂ ನಂತರ ವಿಪುಲ ದಕ್ಷಿಣೆಗಳನ್ನಿತ್ತು ಯಜ್ಞಗಳ ಮೂಲಕ ಇಲ್ಲವಾಗಿಸಬಹುದು. ಚಂದ್ರನ ಮೂಲಕ ಕತ್ತಲೆಯಿಂದ ಬಿಡುಗಡೆಹೊಂದುವಂತೆ ಬ್ರಾಹ್ಮಣರಿಗೆ ಗ್ರಾಮಗಳನ್ನೂ, ಸಹಸ್ರಾರು ಗೋವುಗಳನ್ನೂ ಕೊಡುವುದರಿಂದ ಸರ್ವಪಾಪಗಳಿಂದ ಬಿಡುಗಡೆಯಾಗುತ್ತದೆ. ಗ್ರಾಮೀಣ ಮತ್ತು ಪುರಜನರೆಲ್ಲರೂ, ವೃದ್ಧರೂ ಬಾಲಕರೂ ಸೇರಿ ನಿನ್ನನ್ನು ಪ್ರಾಯಶಃ ಹೊಗಳುತ್ತಾರೆ.

“ದುರ್ಯೋಧನನಲ್ಲಿ ರಾಜ್ಯವಿರುವುದು ನಾಯಿಯ ಚರ್ಮದಿಂದ ಮಾಡಿದ ಚೀಲದಲ್ಲಿ ಹಾಲಿರುವಂತೆ, ಕೀಳುಜಾತಿಯವನಲ್ಲಿ ವೇದಗಳಿರುವಂತೆ, ಕಳ್ಳನಲ್ಲಿ ಸತ್ಯಭಾಷಣವಿರುವಂತೆ ಮತ್ತು ಹೆಂಗಸರಲ್ಲಿ ಪರಾಕ್ರಮವಿರುವಂತೆ ಸರ್ವಥಾ ಅನುಚಿತವಾದುದು ಎಂದು ಜನರು ಪರಸ್ಪರರಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ನಿರ್ವಚನವು ಹಿಂದಿನಿಂದಲೂ ಲೋಕದಲ್ಲಿ ಪ್ರಸಿದ್ಧವಾಗಿದೆ. ವಟುಗಳು ಅನುದಿನವೂ ವೇದವನ್ನು ಅಧ್ಯಯನ ಮಾಡುವಂತೆ ಸ್ತ್ರೀಯರೂ ಮಕ್ಕಳೂ ಈ ಶ್ಲೋಕವನ್ನು ಹೇಳುತ್ತಿರುತ್ತಾರೆ. ನಿನ್ನ ರಥವನ್ನೇರಿ, ಸರ್ವೋಪಕರಣಗಳನ್ನೂ ತೆಗೆದುಕೊಂಡು, ತ್ವರೆಮಾಡಿ, ದ್ವಿಜಶ್ರೇಷ್ಠರು ನಿನಗೆ ಸಿದ್ಧಿಯು ಬೇಗ ಆಗಲಿ ಎಂದು ವಾಚಿಸುತ್ತಿರಲು, ಇಂದೇ ಗಜಸಾಹ್ವಯಕ್ಕೆ ಹೊರಡು. ಅಸ್ತ್ರದಂತಿರುವ ನಿನ್ನ ಈ ತಮ್ಮಂದಿರಿಂದ ಸುತ್ತುವರೆಯಲ್ಪಟ್ಟು, ಸರ್ಪಗಳ ವಿಷಸಮಾನ ಅವರ ಆಯುಧಗಳೊಂದಿಗೆ ಮರುತ್ತುಗಳೊಡನೆ ವೃತ್ರಹನು ಹೇಗೋ ಹಾಗೆ ಹೊರಡು. ಅಸುರರನ್ನು ಇಂದ್ರನು ಸಂಹರಿಸಿದಂತೆ ನಿನ್ನ ತೇಜಸ್ಸಿನಿಂದ ಶತ್ರುಗಳನ್ನು ಸಂಹರಿಸಿ ನಿನ್ನ ಸಂಪತ್ತನ್ನು ತಿರುಗಿ ಪಡೆ. ಗಾಂಡೀವದಿಂದ ಬಿಡಲ್ಪಟ್ಟ ಹದ್ದಿನ ಪುಕ್ಕಗಳನ್ನು ಧರಿಸಿದ ಬಾಣಗಳ ಆಘಾತವನ್ನು ತಡೆದುಕೊಳ್ಳುವ ಯಾವ ಮನುಷ್ಯನೂ ಈ ಭೂಮಿಯಲ್ಲಿ ಇಲ್ಲ. ಯುದ್ಧದಲ್ಲಿ ಕೃದ್ಧನಾದ ನನ್ನ ಗದಾವೇಗವನ್ನು ಸಹಿಸುವ ಯಾರೊಬ್ಬ ವೀರನೂ ಇಲ್ಲ, ಆನೆಯೂ ಇಲ್ಲ, ಮತ್ತು ಒಳ್ಳೆಯ ಕುದುರೆಯೂ ಇಲ್ಲ. ಸೃಂಜಯರ, ಕೈಕೇಯರ, ವೃಷ್ಣಿವೃಷಭರ ಜೊತೆಗೂಡಿ ನಮಗೆ ಯುದ್ಧದಲ್ಲಿ ರಾಜ್ಯವನ್ನು ಹಿಂದೆ ಪಡೆಯಲು ಏಕೆ ಸಾಧ್ಯವಾಗುವುದಿಲ್ಲ?”

ಯುಧಿಷ್ಠಿರನು ಹೇಳಿದನು:

“ಭಾರತ! ನಿನ್ನ ಮಾತುಗಳು ನನ್ನನ್ನು ಚುಚ್ಚುತ್ತಿವೆ ಮತ್ತು ಕಾಡುತ್ತಿವೆ ಎನ್ನುವುದು ನಿಸ್ಸಂಶಯವಾಗಿಯು ಸತ್ಯ. ನಿನ್ನ ಕಡುಮಾತುಗಳಿಗೆ ನಾನು ನಿನ್ನನ್ನು ಜವಾಬ್ದಾರನೆಂದು ತಿಳಿಯುವುದಿಲ್ಲ ಯಾಕೆಂದರೆ ನನ್ನ ತಪ್ಪಿನಿಂದಾಗಿಯೇ ನಿನಗೆ ಈ ವ್ಯಸನವು ಬಂದಿರುವುದು. ನಾನು ಧೃತರಾಷ್ಟ್ರನ ಮಕ್ಕಳಿಂದ ರಾಜ್ಯ ಮತ್ತು ರಾಷ್ಟ್ರವನ್ನು ಪಡೆಯುವ ಇಚ್ಛೆಯಿಂದ ಜೂಜಿನ ದಾಳಗಳನ್ನು ಹಿಡಿದೆ. ಆದರೆ ಸುಬಲನ ಮಗ ಶಕುನಿಯು ಸುಯೋಧನನ ಪರವಾಗಿ ನನ್ನ ಎದುರಾಳಿಯಾಗಿ ಆಡಿ ಮೋಸಮಾಡಿದನು. ಆ ಮಹಾಮಾಯಿ, ಪರ್ವತಪ್ರದೇಶದಲ್ಲಿ ವಾಸಿಸುವ ಶಕುನಿಯು ಸಭೆಯಲ್ಲಿ ಜೂಜಿನ ದಾಳಗಳನ್ನು ಎಸೆದು ಮಾಯೆಯನ್ನೇ ತಿಳಿಯದ ನನ್ನೊಡನೆ ಮಾಯೆಯನ್ನು ಬಳಸಿದನು. ಆಗ ನಾನು ಅವನ ಕಪಟತನವನ್ನು ಕಂಡು ಕುಪಿತನಾದೆ. ಸರಿಯಿರಲಿ, ಬೆಸೆಯಿರಲಿ ದಾಳಗಳು ಶಕುನಿಯು ಬಯಸಿದಂತೆ ಬೀಳುತ್ತಿವೆ ಎಂದು ನೋಡಿದಾಗಲಾದರೂ ನಾನು ನನ್ನನ್ನು ನಿಯಂತ್ರಿಸಿಕೊಳ್ಳಬಹುದಾಗಿತ್ತು. ಆದರೆ ಕೋಪವು ಮನುಷ್ಯನ ಆಲೋಚನೆಯನ್ನು ಕೊಲ್ಲುತ್ತದೆ. ತಮ್ಮ! ಪೌರುಷ, ಮಾನ ಮತ್ತು ವೀರ್ಯವು ಕಡೆಯುತ್ತಿರುವಾಗ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿನ್ನ ಮಾತುಗಳನ್ನು ನಾನು ಅಲ್ಲಗಳೆಯುವುದಿಲ್ಲ. ಅದು ಹಾಗೆಯೇ ಆಗಬೇಕೆಂದಿದ್ದಿತು ಎಂದು ತಿಳಿಯುತ್ತೇನೆ. ರಾಜ ಧೃತರಾಷ್ಟ್ರನ ಮಗನು ನಮ್ಮಿಂದ ರಾಜ್ಯವನ್ನು ಕಸಿದುಕೊಳ್ಳುವ ಹಠ ಮಾಡಿದ್ದುದರಿಂದ ನಮಗೆ ಈ ಕಷ್ಟವು ಬಂದೊದಗಿದೆ. ಅದರಿಂದ ದ್ರೌಪದಿಯು ನಮ್ಮನ್ನು ಪಾರುಮಾಡುವ ವರೆಗೆ ನಮಗೆ ದಾಸತ್ವವು ಬಂದಿತು. ನಾವು ಪುನಃ ದ್ಯೂತಕ್ಕೆ ಸಭೆಗೆ ಬಂದಾಗ ಧೃತರಾಷ್ಟನ ಮಗನು ನನಗೆ ಏನು ಹೇಳಿದ ಎನ್ನುವುದನ್ನು ನೀನು ಮತ್ತು ಧನಂಜಯ ಇಬ್ಬರೂ ತಿಳಿದಿದ್ದೀರಿ. ಮತ್ತು ದಾಳದ ಒಂದು ಎಸೆತಕ್ಕೆ ಪಣವಾಗಿ ಏನನ್ನು ಇಡಬೇಕು ಎನ್ನುವುದನ್ನು ಅಲ್ಲಿ ಸೇರಿದ್ದ ಭಾರತರೂ ಕೇಳಿಸಿಕೊಂಡರು. “ಅಜಾತಶತ್ರು! ಹನ್ನೆರಡು ವರ್ಷಗಳು ನಿನಗಿಷ್ಟಬಂದಹಾಗೆ ವನದಲ್ಲಿ ಎಲ್ಲರಿಗೂ ತಿಳಿಯುವ ರೀತಿಯಲ್ಲಿ ವಾಸಿಸುತ್ತೀಯೆ. ಅದರ ನಂತರ ಒಂದು ವರ್ಷ ಯಾರಿಗೂ ತಿಳಿಯದಂತೆ ಗೂಢವಾಗಿ ಮರೆಮಾಡಿಕೊಂಡು ಎಲ್ಲ ಸಹೋದರರೊಂದಿಗೆ ವಾಸಿಸುತ್ತೀಯೆ. ನೀನು ಹೀಗೆ ವಾಸಿಸುತ್ತಿರುವಾಗ ಆ ವರ್ಷದಲ್ಲಿ ಭಾರತರ ಗೂಢಚಾರರು ನಿನ್ನ ಕುರಿತು ಕೇಳಿದರೆ ಮತ್ತು ಗುರುತಿಸಿದರೆ ನೀನು ಅಷ್ಟೇ ವರ್ಷಗಳು ಪುನಃ ಅದೇ ರೀತಿಯಲ್ಲಿ ವಾಸಿಸುತ್ತೀಯೆ. ನಿಶ್ಚಯವಾಗಿ ಈ ರೀತಿ ಭರವಸೆಯನ್ನು ನೀಡು. ಆ ಸಮಯದಲ್ಲಿ ನಿನ್ನನ್ನು ಹುಡುಕಲಿಕ್ಕಾಗದಿದ್ದರೆ ಮತ್ತು ನಮ್ಮವರನ್ನು ನೀನು ಮೋಸಮಾಡಿದರೆ, ಈ ಕುರುಸಂಸದಿಯಲ್ಲಿ ಸತ್ಯವನ್ನು ಹೇಳುತ್ತಿದ್ದೇನೆ ಈ ಐದುನದಿಗಳು ನಿನ್ನದಾಗುತ್ತವೆ. ನಿನ್ನಿಂದ ನಾವು ಸೋಲಿಸಲ್ಪಟ್ಟರೆ, ನಾವೂ ಕೂಡ, ಎಲ್ಲ ಸಹೋದರರೂ, ಭೋಗಗಳನ್ನು ತೊರೆದು ಅಷ್ಟೊಂದು ಸಮಯ ಪುರದ ಹೊರಗೆ ವಾಸಿಸುತ್ತೇವೆ.” ಹೀಗೆಂದು ರಾಜನು ಕುರುಗಳ ಮಧ್ಯದಲ್ಲಿ ಹೇಳಿದಾಗ ನಾನು “ಹಾಗೆಯೇ ಆಗಲಿ!” ಎಂದಿದ್ದೆ. ಅಲ್ಲಿ ಆಗ ಅತ್ಯಂತ ಮೋಸದ ಆಟವು ಆರಂಭವಾಯಿತು. ನಾವು ಸೋತೆವು ಮತ್ತು ನಾವೆಲ್ಲರೂ ಕಾಡಿಗೆ ಹೊರಟೆವು. ಈಗ ನಾವು ಕೃಚ್ಛರಾಗಿ ಕೃಚ್ಛರೂಪದಲ್ಲಿ ವನ-ದೇಶಗಳಲ್ಲಿ ಸುತ್ತಾಡುತ್ತಿದ್ದೇವೆ. ಸುಯೋಧನನೂ ಶಾಂತಿಯನ್ನು ಬಯಸುತ್ತಿಲ್ಲ. ಅವನು ತನ್ನ ಸಿಟ್ಟಿಗೆ ಸಿಲುಕಿ ತುಂಬಾ ತಪ್ಪನ್ನು ಮಾಡುತ್ತಾನೆ. ಅವನು ಸರ್ವ ಕುರುಗಳನ್ನೂ ತನ್ನವರನ್ನಾಗಿ ಮಾಡಿಕೊಂಡಿದ್ದಾನೆ ಮತ್ತು ಅವನ ವಶದಲ್ಲಿರುವವರು ಅವನನ್ನೇ ಅನುಸರಿಸುತ್ತಾರೆ. ಸತ್ಯವಂತರ ಸಮ್ಮುಖದಲ್ಲಿ ಒಪ್ಪಿಕೊಂಡ ಒಪ್ಪಂದವನ್ನು ರಾಜ್ಯಕ್ಕೋಸ್ಕರ ಯಾರುತಾನೇ ಮುರಿಯುತ್ತಾರೆ? ಧರ್ಮವನ್ನು ಉಪಕ್ರಮಿಸಿ ಭೂಮಿಯನ್ನು ಆಳುವುದು ಆರ್ಯರಿಗೆ ಮರಣಕ್ಕಿಂತ ಹೆಚ್ಚಿನದು ಎಂದು ತಿಳಿದಿದ್ದೇನೆ. ದ್ಯೂತದ ಸಮಯದಲ್ಲಿ ನೀನು ಒಂದು ವೀರಕರ್ಮವನ್ನೇ ಮಾಡಲು ಮುಂದಾಗಿದ್ದೆ. ಪರಿಘೋಪಮವಾದ ನಿನ್ನ ಬಾಹುಗಳನ್ನು ಮುಟ್ಟಿಕೊಂಡು ನನ್ನ ಕೈಗಳನ್ನು ಸುಡಲು ನಿಶ್ಚಯಿಸಿದ್ದೆ. ಅರ್ಜುನನು ತಡೆದಿದ್ದುದರಿಂದ ನನ್ನ ಕೈಗಳನ್ನು ಸುಡಲಿಲ್ಲ. ನೀನು ನನ್ನ ಕೈಗಳನ್ನು ಸುಟ್ಟಿದ್ದರೆ ಯಾವ ದುಷ್ಕೃತವಾಗುತ್ತಿತ್ತು? ಒಪ್ಪಂದವನ್ನು ಮಾಡಿಕೊಳ್ಳುವ ಮೊದಲೇ ನೀನು ಈ ರೀತಿಯ ಪೌರುಷದ ಮಾತನ್ನು ಏಕೆ ಹೇಳಲಿಲ್ಲ? ಈಗ ನಿನಗೆ ಇದಕ್ಕೆ ಸಮಯ ದೊರಕಿದೆ. ಆದರೆ ತುಂಬಾ ತಡವಾಯಿತು. ನಿನ್ನ ಸಮಯವನ್ನು ಕಳೆದುಕೊಂಡ ನೀನು ಈಗ ನನ್ನನ್ನು ನಿಂದಿಸುತ್ತಿದ್ದೀಯಾ?

“ಭೀಮಸೇನ! ವಿಷದ ರುಚಿಯನ್ನು ತಿಳಿದ ನಾವೆಲ್ಲರೂ ನೋಡುತ್ತಿರುವಾಗಲೇ ಯಾಜ್ಞಸೇನಿಯನ್ನು ಎಳೆದಾಡಿದರು ಮತ್ತು ಅದನ್ನು ನೋಡಿಯೂ ನಾವು ಶಾಂತರಾಗಿದ್ದೆವು ಎನ್ನುವುದೇ ನನಗೆ ಅತ್ಯಂತ ದುಃಖವನ್ನು ನೀಡುತ್ತಿದೆ. ಇಂದು ನಾವು ಏನು ಮಾಡಲೂ ಶಕ್ಯರಿಲ್ಲ. ಬೀಜಬಿತ್ತಿದವನು ಬೆಳೆಗೆ ಹೇಗೆ ಕಾಯುತ್ತಾನೋ ಹಾಗೆ ಕುರುವೀರರ ಮಧ್ಯದಲ್ಲಿ ಹೇಳಿದಂತೆ ಮಾಡಿ ನಾವು ಸುಖೋದಯದ ಕಾಲವನ್ನು ಪ್ರತೀಕ್ಷಿಸೋಣ. ಹಿಂದೆ ಶತ್ರುವಿನ ವಂಚನೆಯಿಂದ ವಂಚಿತನಾದ ವೀರನು ವೈರಿಯು ಪುಷ್ಪ-ಫಲಗಳಿಂದ ಕೂಡಿರುವನೆಂಬುದನ್ನು ಅರಿತು, ಸಮಯವನ್ನು ತಿಳಿದು ಶತ್ರುವಿನ ಮಹಾಗುಣವನ್ನು ಪೌರುಷದಿಂದ ಯಾವಾಗ ಅಪಹರಿಸುವನೋ ಆಗಲೇ ಆ ವೀರನು ಪ್ರಪಂಚದಲ್ಲಿ ಕೀರ್ತಿವಂತನಾಗಿ ಬಾಳುತ್ತಾನೆ. ಅವನು ಲೋಕದಲ್ಲಿರುವ ಸಮಗ್ರ ಸಂಪತ್ತನ್ನೂ ಪಡೆಯುತ್ತಾನೆ ಮತ್ತು ಅವನ ಶತ್ರುಗಳೇ ಅವನನ್ನು ಗೌರವಿಸುತ್ತಾರೆ. ಅವನ ಮಿತ್ರರು ಅವನನ್ನು ಅಧಿಕವಾಗಿ ಪ್ರೀತಿಸುತ್ತಾರೆ ಮತ್ತು ದೇವತೆಗಳು ಇಂದ್ರನ ಸೇವೆಯನ್ನು ಹೇಗೆ ಮಾಡುತ್ತಾರೋ ಹಾಗೆ ಅನುಸರಿಸಿಕೊಂಡಿರುತ್ತಾರೆ. ನನ್ನ ಪ್ರತಿಜ್ಞೆಯು ಸತ್ಯವಾದುದೆಂದು ತಿಳಿ. ಜೀವನ ಮತ್ತು ಅಮೃತತ್ವಕ್ಕೆ ಬದಲಾಗಿ ಧರ್ಮವನ್ನು ಆರಿಸಿಕೊಂಡಿದ್ದೇನೆ. ರಾಜ್ಯವಾಗಲೀ, ಪುತ್ರರಾಗಲೀ, ಯಶಸ್ಸಾಗಲೀ, ಧನವಾಗಲೀ ಎಲ್ಲವೂ ಸೇರಿಯೂ ಸತ್ಯದ ಒಂದಂಶಕ್ಕೂ ಸಮನಲ್ಲ.”

ಭೀಮಸೇನನು ಹೇಳಿದನು:

“ಮಹಾರಾಜ! ನೀನು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದುದೇನೋ ಸರಿ! ಆದರೆ ಕಾಲಬಂಧನಕ್ಕೊಳಗಾದ, ನೊರೆಯ ಗುಳ್ಳೆಯಂತಿರುವ ಮತ್ತು ಗಳಿತ ಹಣ್ಣು ಮರದಿಂದ ಹೇಗೆ ಯಾವಾಗಲಾದರೂ ಬೀಳಬಹುದೋ ಹಾಗಿರುವ ಮನುಷ್ಯನಿಗೆ ರೆಕ್ಕೆಗಳನ್ನು ಹೊಂದಿರುವ, ಅನಂತ, ಅಪ್ರಮೇಯ, ಸರ್ವರನ್ನೂ ತೆಗೆದುಕೊಂಡು ಹೋಗುವ, ಎಲ್ಲಿಯಾದರೂ ಕ್ಷಿಪ್ರವಾಗಿ ಹೋಗಬಲ್ಲ ಕಾಲ ಅಂತಕನು ಯಾವಾಗಬೇಕಾದರೂ ಪ್ರತ್ಯಕ್ಷನಾಗಬಹುದು. ಸೂಜಿಯ ಮೊನೆಯಿಂದ ತೆಗೆದು ಕಣ್ಣಿಗೆ ಹಚ್ಚಿಕೊಂಡರೂ ಡಬ್ಬದಲ್ಲಿರುವ ಕಾಡಿಗೆಯು ಕೆಲವೇ ಸಮಯದ ನಂತರ ಮುಗಿದುಹೋಗುವುದಿಲ್ಲವೇ? ಅದೇ ರೀತಿ ನಮ್ಮ ಆಯಸ್ಸೂ ಕೂಡ ಕಣ್ಣು ರೆಪ್ಪೆ ಬಡಿಯುವಿಕೆಯಲ್ಲಿಯೇ ಮುಗಿದುಹೋಗಿ ಬಿಡುತ್ತದೆ. ಹೀಗಿದ್ದರೂ ನೀನು ಕಾಲವನ್ನು ನಂಬಿ ಕುಳಿತಿರುವೆಯಲ್ಲ! ಯಾರಿಗೆ ಚಿರಾಯುಷ್ಯವಿರುವುದೋ, ಯಾರು ತಮ್ಮ ಜೀವನದ ಮುಂದಿನ ದಿನಗಳು ಇದೇ ರೀತಿ ಇರುತ್ತದೆ ಎಂದು ತಿಳಿದಿರುವವರೋ, ಯಾರಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ವಿಷಯಗಳ ಅರಿವು ಇಂದೇ ಇರುವುದೋ ಅಂಥಹ ಕಾಲಜ್ಞರು ಮಾತ್ರ ಸಮಯದ ನಿರೀಕ್ಷಣೆ ಮಾಡುತ್ತಾ ಕುಳಿತುಕೊಳ್ಳಬಹುದು. ಆದರೆ ಮುಂದಿನ ಹದಿಮೂರು ವರ್ಷಗಳಲ್ಲಿ ನಾವು ಇರುತ್ತೀವೋ ಅಥವಾ ಸಾಯುತ್ತೀವೋ ಎನ್ನುವುದರ ಅರಿವೇ ಇಲ್ಲದ ನಾವು ನಿಷ್ಕಾರಣವಾಗಿ ಈ ಹದಿಮೂರು ವರ್ಷಗಳನ್ನೂ ಕಾಡಿನಲ್ಲಿ ಕಳೆದೆವೆಂದಾದರೆ ಯಾವ ವಿಧದ ಪ್ರಯೋಜನವೂ ಇಲ್ಲದೇ ನಮ್ಮ ಆಯಷ್ಯವು ಕ್ಷಯಿಸಿಹೋಗುತ್ತದೆ. ಶರೀರವಿದ್ದವರಿಗೆ ಶರೀರದ ಮರಣವು ನಿತ್ಯ ಮತ್ತು ನಿಶ್ಚಯ. ಆದುದರಿಂದ ಸಮಯಕ್ಕೆ ಕಾಯುವ ಬದಲು ಈಗಲೇ ಪ್ರಯತ್ನ ಮಾಡಿ ರಾಜ್ಯವನ್ನು ಹಿಂದೆ ತೆಗೆದುಕೊಳ್ಳೋಣ! ಯಾರು ವೈರಿಗಳನ್ನು ಧ್ವಂಸಮಾಡುವುದರಿಂದ ಪ್ರಾಪ್ತವಾಗುವ ಕೀರ್ತಿ-ಪ್ರತಿಷ್ಠೆಗಳನ್ನು ಪಡೆಯದೇ ಲೋಕದಲ್ಲಿ ಅಗಣ್ಯನಾಗಿರುವನೋ ಅವನು ಬಂಜೆ ಹಸುವಿನಂತೆ ಕೆಲ ಸಮಯ ಭೂಮಿಗೆ ಭಾರನಾಗಿದ್ದು ಸಾಯುತ್ತಾನೆ. ಯಾರು ದೌರ್ಬಲ್ಯ ಮತ್ತು ಹೇಡಿತನದಿಂದ ಶತ್ರುಗಳನ್ನು ವಿನಾಶಗೊಳಿಸಲು ಯತ್ನಿಸದೇ ಆಲಸಿಕೆಯಿಂದ ಇರುವನೋ ಅವನ ಜನ್ಮವೇ ವ್ಯರ್ಥ ಮತ್ತು ಅವನ ಹುಟ್ಟೂ ಅತ್ಯಂತ ಕುತ್ಸಿತವಾದುದು ಎಂದು ತಿಳಿಯುತ್ತೇನೆ. ನಿನ್ನ ಬಾಹುಗಳು ಚಿನ್ನದವು. ಸಂಗ್ರಾಮದಲ್ಲಿ ನಿನ್ನ ಬಾಹುಗಳಿಂದ ದ್ವೇಷಿಗಳನ್ನು ಕೊಂದು ಸಂಪತ್ತನ್ನು ಗಳಿಸಿ ಪ್ರಖ್ಯಾತನಾಗುವೆ. ಮೋಸಮಾಡುವವನನ್ನು ಕೊಂದರೆ ಆ ಪುರುಷನು ನರಕಕ್ಕೆ ಹೋದರೂ ಅದು ಅವನಿಗೆ ಸ್ವರ್ಗವಾಗಿ ಅನುಭವವಾಗುತ್ತದೆ. ಅಮರ್ಷದಿಂದ ಹುಟ್ಟಿದ ಸಂತಾಪವು ಉರಿಯುತ್ತಿರುವ ಪಾವಕನಿಗಿಂತಲೂ ಹೆಚ್ಚು; ಮತ್ತು ಅದರಿಂದ ಬೇಯುತ್ತಿರುವ ನನಗೆ ಹಗಲಾಗಲೀ ರಾತ್ರಿಯಾಗಲೀ ನಿದ್ದೆಯಿಲ್ಲ. ಇಲ್ಲಿ ಬಿಲ್ಲುಗಾರಿಕೆಯಲ್ಲಿ ಪ್ರವೀಣ, ಪಾರ್ಥ ಬೀಭತ್ಸುವು ಗುಹೆಯೊಳಗಿನ ಸಿಂಹದಂತೆ ಪರಿಸಂತಪ್ತನಾಗಿದ್ದಾನೆ. ಈ ಧನುರ್ಧಾರಿಯೊಬ್ಬನೇ ಸರ್ವಲೋಕವನ್ನು ಎದುರಿಸಲು ಕಾತರಿಸುತ್ತಿದ್ದಾನೆ. ಮತ್ತು ಮಹಾ ಆನೆಯಂತೆ ತನ್ನಲ್ಲಿರುವ ಕೋಪವನ್ನು ತಡೆಹಿಡಿದುಕೊಳ್ಳುತ್ತಿದ್ದಾನೆ. ನಿನ್ನದೇ ಒಳಿತನ್ನು ಇಚ್ಛಿಸುವ ನಕುಲ, ಸಹದೇವ, ಮತ್ತು ಪ್ರೌಢ ವೀರರ ತಾಯಿ ಮೂಕರಂತೆ ಜಡವಾಗಿ ಕುಳಿತಿದ್ದಾರೆ. ನಿನ್ನ ಎಲ್ಲ ಬಾಂಧವರೊಂದಿಗೆ ಸೃಂಜಯರು ನಿನಗೆ ಒಳ್ಳೆಯದನ್ನೇ ಬಯಸುತ್ತಾರೆ. ನಾನು ಮತ್ತು ಪ್ರತಿವಿಂಧ್ಯನ ತಾಯಿ ಮಾತ್ರ ಕೋಪದಿಂದ ಸಂತಪ್ತರಾಗಿ ಮಾತನಾಡುತ್ತಿದ್ದೇವೆ. ಆದರೂ ನಾನು ಹೇಳುವುದೆಲ್ಲ ಅವರಿಗೂ ಸರಿಯೆನಿಸುತ್ತದೆ. ಯಾಕೆಂದರೆ ಅವರೂ ಕೂಡ ವ್ಯಸನವನ್ನು ಹೊಂದಿದ್ದಾರೆ ಮತ್ತು ಎಲ್ಲರೂ ಯುದ್ಧವನ್ನು ಸ್ವಾಗತಿಸುತ್ತಾರೆ. ನಮಗಿಂತಲೂ ನೀಚ ಮತ್ತು ಅಲ್ಪಬಲರಾದವರು ನಮ್ಮ ರಾಜ್ಯವನ್ನು ಕಸಿದುಕೊಂಡು ಭೋಗಿಸುತ್ತಿದ್ದಾರೆ ಎಂದರೆ ಇದಕ್ಕಿಂತಲೂ ದೊಡ್ಡ ಪಾಪವು ನಡೆಯಲು ಸಾಧ್ಯವಿಲ್ಲ. ಶೀಲವನ್ನು ಕಳೆದುಕೊಳ್ಳುವ ಭಯದಿಂದ ಮೃದುತ್ವ-ಕೋಮಲತೆಗಳನ್ನು ಬಳಸಿ ಕಷ್ಟಗಳನ್ನು ಸಹಿಸಿಕೊಳ್ಳುತ್ತಿದ್ದರೆ ಬೇರೆ ಯಾರೂ ನಿನ್ನನ್ನು ಹೊಗಳುವುದಿಲ್ಲ. ಮೃದುವಾದ ಬ್ರಾಹ್ಮಣನಂತಿರುವ ನೀನು ಕ್ಷತ್ರಿಯಕುಲದಲ್ಲಿ ಹೇಗೆ ಹುಟ್ಟಿದೆ? ಪ್ರಾಯಶಃ ಕ್ರೂರ ಬುದ್ಧಿಗಳೇ ಕ್ಷತ್ರಿಯ ಯೋನಿಯಲ್ಲಿ ಜನಿಸುತ್ತಾರೆ. ಮನುವು ಹೇಳಿರುವ ರಾಜಧರ್ಮವನ್ನು ನೀನು ಕೇಳಿದ್ದೀಯೆ - ಕ್ರೌರ್ಯ, ಮೋಸಗಳಿಂದ ಕೂಡಿ ವೈರಿಗಳನ್ನು ಸಂಹರಿಸಬೇಕು. ಕೆಲಸ ಬಹಳಷ್ಟಿದೆ. ಆಲಸ್ಯದಿಂದ ಮಲಗಿರುವ ಹೆಬ್ಬಾವಿನಂತೆ ಏಕೆ ಇರುವೆ. ನಿನ್ನಲ್ಲಿ ಬುದ್ಧಿ, ವೀರ್ಯ, ವಿದ್ಯೆ ಮತ್ತು ಉತ್ತಮ ಕುಲವಿದೆ. ನಮ್ಮನ್ನು ಅಡಗಿಸಿ ಇಡಲು ನೀನು ಏನನ್ನು ಬಯಸುತ್ತಿದ್ದೀಯೋ ಅದು ಒಂದು ಮುಷ್ಟಿ ಹುಲ್ಲಿನಿಂದ ಹಿಮಾಲಯ ಪರ್ವತವನ್ನೇ ಮುಚ್ಚಿಬಿಡಲು ಪ್ರಯತ್ನಿಸುವಂತೆ! ಸೂರ್ಯನು ಹೇಗೆ ಆಕಾಶದಲ್ಲಿ ಅಡಗಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಹಾಗೆ ಇಡೀ ಪೃಥ್ವಿಯಲ್ಲಿಯೇ ವಿಶ್ರುತನಾದ ನಿನಗೆ ಗುಪ್ತವಾಗಿ ಅಜ್ಞಾತವಾಸವನ್ನು ಮಾಡಲು ಸಾಧ್ಯವಿಲ್ಲ. ದೊಡ್ಡ ಶಾಲವೃಕ್ಷ ಮತ್ತು ಪುಷ್ಪಭರಿತ ರೆಂಬೆಗಳಿಂದ ಕೂಡಿದ ಪಲಾಶವೃಕ್ಷದಂತಿರುವ, ಬಿಳಿಯ ಆನೆಯಂತಿರುವ ಜಿಷ್ಣುವಾದರೂ ಅಜ್ಞಾತನಾಗಿ ಹೇಗೆ ವಾಸಿಸಬಲ್ಲನು? ಸಿಂಹಸಂಕಾಶರಾದ ಈ ಇಬ್ಬರು ಕಿರಿಯ ಸಹೋದರ ನಕುಲ-ಸಹದೇವರು ಹೇಗೆ ಅಜ್ಞಾತರಾಗಿ ಇರಬಲ್ಲರು? ಪುಣ್ಯಕೀರ್ತಿ, ರಾಜಪುತ್ರಿ, ವೀರರ ತಾಯಿ, ಪ್ರಸಿದ್ಧ ಕೃಷ್ಣೆ ದ್ರೌಪದಿಯು ಹೇಗೆ ತಾನೇ ಯಾರಿಗೂ ತಿಳಿಯದಂತೆ ವಾಸಿಸಬಲ್ಲಳು? ಮೇರು ಪರ್ವತದಂತೆ ಕಾಣುವ ನನ್ನನ್ನು ಅಜ್ಞಾತವಾಸದಲ್ಲಿ ಅಡಗಿ ವಾಸಿಸುವಾಗ ಮಕ್ಕಳನ್ನೂ ಸೇರಿ ಜನರು ಗುರುತಿಸಬಲ್ಲರು. ಅಲ್ಲದೇ ನಾವು ಬಹಳಷ್ಟು ರಾಷ್ಟ್ರಗಳಿಂದ ರಾಜರನ್ನು ಮತ್ತು ರಾಜಪುತ್ರರನ್ನು ತೆಗೆದು ಹಾಕಿದ್ದೇವೆ. ಅವರು ಈಗ ಧೃತರಾಷ್ಟ್ರನನ್ನು ಅನುಸರಿಸುತ್ತಾರೆ. ಪದಚ್ಯುತರಾದ ಅವರು ಅವರಿಗಾದ ಅಪಮಾನವನ್ನು ನಿಜವಾಗಿಯೂ ಇನ್ನೂ ಮರೆತಿಲ್ಲ ಮತ್ತು ಅವನಿಗೆ ಸಂತೋಷವನ್ನು ತರಲು ನಮ್ಮನ್ನು ಸದೆಬಡಿಯಲು ಪ್ರಯತ್ನಿಸುತ್ತಾರೆ. ಅವರು ನಮ್ಮ ಮೇಲೆ ಬಹಳಷ್ಟು ಗೂಢಚರರನ್ನು ಬಿಡುತ್ತಾರೆ, ಅವರು ನಮ್ಮನ್ನು ಹುಡುಕಿ ಅವರಿಗೆ ನಮ್ಮ ಕುರಿತು ವರದಿ ಮಾಡುತ್ತಾರೆ. ಅದು ನಮಗೆ ಮಹಾ ಭಯವನ್ನು ತಂದೊಡ್ಡುತ್ತದೆ. ನಾವು ಈಗಾಗಲೇ ಹದಿಮೂರು ತಿಂಗಳು ಪೂರ್ತಿ ವನದಲ್ಲಿ ವಾಸಿಸಿದ್ದೇವೆ. ಅವುಗಳನ್ನು ಅಷ್ಟೇ ಸಂಖ್ಯೆಯ ವರ್ಷಗಳೆಂದು ತಿಳಿ. ಪೂತಿಕಗಳು ಸೋಮವನ್ನು ಪ್ರತಿನಿಧಿಸುವಂತೆ ಒಂದು ತಿಂಗಳನ್ನು ಒಂದು ವರ್ಷವೆಂದು ತೆಗೆದುಕೊಳ್ಳಬಹುದು ಎಂದು ತಿಳಿದವರು ಹೇಳುತ್ತಾರೆ. ಅಥವಾ ನೀನು ಒಂದು ಹೆಚ್ಚು ಭಾರವನ್ನು ಹೊತ್ತು ಹೋಗುವ ಒಳ್ಳೆಯ ಎತ್ತಿಗೆ ತೃಪ್ತಿಯಾಗುವವರೆಗೆ ತಿನ್ನಿಸುವುದರಿಂದ ಈ ಪಾಪದಿಂದ ವಿಮುಕ್ತನಾಗಬಲ್ಲೆ! ಆದುದರಿಂದ ನೀನು ಶತ್ರುಗಳನ್ನು ವಧಿಸುವ ನಿರ್ಧಾರ ಮಾಡಬೇಕು. ಯಾಕೆಂದರೆ, ಎಲ್ಲ ಕ್ಷತ್ರಿಯರಿಗೆ ಯುದ್ಧಮಾಡುವುದರ ಹೊರತಾಗಿ ಬೇರೆ ಯಾವುದೂ ಧರ್ಮವಲ್ಲ.”

ಭೀಮಸೇನನ ಮಾತುಗಳನ್ನು ಕೇಳಿ ಕುಂತೀಪುತ್ರ ಪುರುಷವ್ಯಾಘ್ರ ಪರಂತಪ ಯುಧಿಷ್ಠಿರನು ನಿಟ್ಟುಸಿರು ಬಿಡುತ್ತಾ ಚಿಂತಾಮಗ್ನನಾದನು. ಸ್ವಲ್ಪ ಹೊತ್ತು ಯೋಚಿಸಿ ಹೀಗೇ ಮಾಡಬೇಕು ಎಂದು ನಿರ್ಧರಿಸಿ ತಕ್ಷಣವೇ ಭೀಮಸೇನನಿಗೆ ಈ ಮಾತುಗಳನ್ನು ಹೇಳಿದನು:

“ಮಹಾಬಾಹೋ! ಇದು ನೀನು ಹೇಳಿದ ಹಾಗೆಯೇ ಇದೆ. ಆದರೆ, ನಾನು ಹೇಳುವ ಬೇರೆ ವಿಷಯವನ್ನೂ ಮನದಟ್ಟು ಮಾಡಿಕೋ. ಕೇವಲ ಸಾಹಸದಿಂದ ಕೈಗೊಳ್ಳುವ ಮಹಾ ಪಾಪ ಕರ್ಮಗಳು ವ್ಯಥೆಯನ್ನೇ ತರುತ್ತವೆ. ಚೆನ್ನಾಗಿ ಆಲೋಚಿಸಿದ, ಚೆನ್ನಾಗಿ ತಯಾರಿಸಲ್ಪಟ್ಟ, ಚೆನ್ನಾಗಿ ಕಾರ್ಯಗತಗೊಂಡ ಒಳ್ಳೆಯ ವಿಚಾರದ ಯೋಜನೆಯು ಫಲವನ್ನು ಕೊಡುತ್ತದೆ ಮತ್ತು ದೈವವೂ ಅದಕ್ಕೆ ಬಲಗೈಯನ್ನು ನೀಡುತ್ತದೆ. ನೀನಾದರೋ ಈಗ ನಿನ್ನ ಸ್ವಂತ ಬಲದರ್ಪ ಮತ್ತು ಚಪಲತೆಯಿಂದ ಇದನ್ನೇ ಮಾಡಬೇಕೆಂದು ಯೋಚಿಸುತ್ತಿರುವೆ. ಆದರೆ ಅದರ ಕುರಿತು ನನ್ನನ್ನು ಕೇಳು. ಭೂರಿಶ್ರವ, ಶಲ, ವೀರ್ಯವಾನ್ ಜಲಸಂಧ, ಭೀಷ್ಮ, ದ್ರೋಣ, ಕರ್ಣ, ವೀರ್ಯವಾನ್ ದ್ರೋಣಪುತ್ರ (ಅಶ್ವತ್ಥಾಮ), ದುರ್ಯೋಧನನೇ ಮೊದಲಾದ ದುರ್ಧರ್ಷ ಧಾರ್ತರಾಷ್ಟ್ರರು ಎಲ್ಲರೂ ಅಸ್ತ್ರಗಳನ್ನು ಪಡೆದವರು ಮತ್ತು ಸದಾ ಯುದ್ಧಕ್ಕೆ ತಯಾರಿರುವವರು. ನಮ್ಮಿಂದ ಕಾಡಿಸಲ್ಪಟ್ಟ ರಾಜ-ಪಾರ್ಥಿವರು ಕೌರವನ ಪಕ್ಷವನ್ನು ಸೇರಿಕೊಂಡಿದ್ದಾರೆ ಮತ್ತು ಅವರ ಮೇಲೆ ಸ್ನೇಹವನ್ನು ಬೆಳೆಸಿಕೊಂಡಿದ್ದಾರೆ. ಅವರು ಈಗ ದುರ್ಯೋಧನನ ಹಿತದಲ್ಲಿ ತೊಡಗಿದ್ದಾರೆ, ನಮ್ಮ ಜೊತೆಗಿಲ್ಲ. ಕೋಶವು ತುಂಬಿರುವುದರಿಂದ ಅವರು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮ ಪಂಗಡದವರನ್ನು ಭದ್ರವನ್ನಾಗಿಟ್ಟುಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ. ಕೌರವ ಸೈನ್ಯದ ಎಲ್ಲರೂ - ಮಕ್ಕಳು, ಅಮಾತ್ಯರು ಮತ್ತು ಸೈನಿಕರು - ಎಲ್ಲ ಸಂಪತ್ತು ಭೋಗಗಳನ್ನೂ ತಮ್ಮ ತಮ್ಮಲ್ಲಿಯೇ ಹಂಚಿಕೊಂಡಿದ್ದಾರೆ. ದುರ್ಯೋಧನನಿಂದ ವಿಶೇಷವಾಗಿ ಸಮ್ಮಾನಿತರಾದ ಆ ವೀರರು ಸಂಗ್ರಾಮದಲ್ಲಿ ಅವನಿಗೇ ತಮ್ಮ ಪ್ರಾಣವನ್ನು ಪಣವನ್ನಾಗಿಡುತ್ತಾರೆ ಎಂದು ನನ್ನ ನಿಶ್ಚಯ. ಭೀಷ್ಮ, ಮಹಾಬಾಹು ದ್ರೋಣ, ಮತ್ತು ಮಹಾತ್ಮ ಕೃಪನು ನಮ್ಮ ಮತ್ತು ಅವರೊಂದಿಗೆ ಒಂದೇ ಸಮನಾಗಿ ನಡೆದುಕೊಂಡರೂ, ರಾಜನ ಅನ್ನತಿಂದುದರ ಋಣದಲ್ಲಿರುತ್ತಾರೆ ಎಂದು ನನಗನ್ನಿಸುತ್ತದೆ. ಆದುದರಿಂದಲೇ ಆ ಎಲ್ಲ ದಿವ್ಯಾಸ್ತ್ರಗಳ ವಿಧ್ವಾಂಸರು, ಎಲ್ಲ ಧರ್ಮಪರಾಯಣರು ಸಂಗ್ರಾಮದಲ್ಲಿ ಎಷ್ಟೇ ಅಮೂಲ್ಯವಾಗಿದ್ದರೂ ತಮ್ಮ ಪ್ರಾಣವನ್ನು ಅವನಿಗಾಗಿ ತೊರೆಯಲು ತಯಾರಿದ್ದಾರೆ. ಇಂದ್ರನ ನಾಯಕತ್ವದಲ್ಲಿದ್ದ ದೇವತೆಗಳಿಂದಲೂ ಅವರು ಅಜೇಯರು ಎಂದು ನನಗನ್ನಿಸುತ್ತದೆ. ಅವರಲ್ಲಿರುವ ಕರ್ಣನಾದರೋ ಓರ್ವ ಮಹಾರಥಿ. ಸೇಡಿಟ್ಟುಕೊಳ್ಳುವವನು. ನಿತ್ಯವೂ ಸಂಹೃಷ್ಟನಾಗಿರುವವನು. ಸರ್ವಾಸ್ತ್ರಗಳನ್ನೂ ತಿಳಿದವನು, ಮತ್ತು ಅಭೇದ್ಯ ಕವಚದಿಂದ ರಕ್ಷಿತನಾಗಿರುವವನು. ಈ ಎಲ್ಲ ಪುರುಷಸತ್ತಮರನ್ನೂ ರಣದಲ್ಲಿ ಗೆಲ್ಲದೇ ದುರ್ಯೋಧನನನ್ನು ಕೊಲ್ಲಲು, ಬೇರೆ ಯಾರದ್ದೂ ಸಹಾಯವಿಲ್ಲದೇ, ನಿನಗೆ ಸಾಧ್ಯವಿಲ್ಲ. ಎಲ್ಲ ಧನುಸ್ಸನ್ನು ಹಿಡಿದವರಲ್ಲಿಯೂ ಅತಿ ಲಾಘವವನ್ನು ಪಡೆದಿರುವ ಸೂತಪುತ್ರನ ಕುರಿತು ಚಿಂತಿಸಿ ನನಗೆ ನಿದ್ರೆಯೇ ಬರುತ್ತಿಲ್ಲ.”

ಅತ್ಯಮರ್ಷಣ ಭೀಮಸೇನನು ಈ ಮಾತುಗಳನ್ನು ತಿಳಿದುಕೊಂಡು ದುಃಖಿತನಾದನು ಮತ್ತು ಅಪಾಯವನ್ನು ಅರಿತುಕೊಂಡು ಮುಂದೆ ಏನನ್ನೂ ಮಾತನ್ನಾಡಲಿಲ್ಲ.

Leave a Reply

Your email address will not be published. Required fields are marked *