ಜಟಾಸುರವಧೆ

ಭೀಮಸೇನಾತ್ಮಜ ಮತ್ತು ಇತರ ರಾಕ್ಷಸರು ಹೊರಟು ಹೋದ ನಂತರ ಗಂಧಮಾಧನ ಪರ್ವತದಲ್ಲಿ ಪಾಂಡವರು ಶಾಂತರಾಗಿ ವಾಸಿಸುತ್ತಿರುವಾಗ ಒಂದು ದಿನ ಭೀಮಸೇನನು ಇಲ್ಲದಿರುವಾಗ ಓರ್ವ ರಾಕ್ಷಸನು ಧರ್ಮರಾಜನನ್ನು, ನಕುಲ-ಸಹದೇವರನ್ನು ಮತ್ತು ಕೃಷ್ಣೆಯನ್ನು ಅಪಹರಿಸಿಕೊಂಡು ಹೋದನು. ಅವನು ತಾನೋರ್ವ ಮಂತ್ರ ಕುಶಲ, ಶಸ್ತ್ರ ಅಶ್ವಸ್ತ್ರ ವಿತ್ತಮ ಬ್ರಾಹ್ಮಣನೆಂದು ಹೇಳಿಕೊಂಡು ಪಾಂಡವರನ್ನು ನಿತ್ಯವೂ ಸುತ್ತುವರೆದುಕೊಂಡು ಇರುತ್ತಿದ್ದನು. ಆ ಜಟಾಸುರನೆಂಬ ವಿಖ್ಯಾತನು ಪಾರ್ಥನ ಧನುಸ್ಸು ಮತ್ತು ಬತ್ತಳಿಕೆಗಳನ್ನು ಪರೀಕ್ಷಿಸುವ ಅವಕಾಶವನ್ನು ಹುಡುಕುತ್ತಿದ್ದನು. ಅರಿಂದಮ ಭೀಮಸೇನನು ಬೇಟೆಗೆಂದು ಹೋಗಿದ್ದಾಗ, ಆ ದುಷ್ಟಾತ್ಮ ರಾಕ್ಷಸನು ತನ್ನ ಬೇರೆಯದಾದ ವಿಕೃತ ಮಹಾ ಭೈರವ ರೂಪವನ್ನು ಧರಿಸಿ ಸರ್ವ ಶಸ್ತ್ರಗಳನ್ನು ಹಿಡಿದು, ದ್ರೌಪದಿಯನ್ನೂ ಮೂವರು ಪಾಂಡವರನ್ನೂ ಎತ್ತಿಕೊಂಡು ಹೋದನು. ಆದರೆ ಪಾಂಡವ ಸಹದೇವನು ಮಾತ್ರ ಯತ್ನದಿಂದ ತಪ್ಪಿಸಿಕೊಂಡು ಭೀಮಸೇನನನ್ನು ಕರೆಯುತ್ತಾ ಆ ಮಹಾಬಲನು ಹೋದ ದಾರಿಯಲ್ಲಿಯೇ ಹೋದನು. ಎತ್ತಿಕೊಂಡು ಹೋಗುತ್ತಿರುವಾಗ ಧರ್ಮರಾಜ ಯುಧಿಷ್ಠಿರನು ಅವನಿಗೆ ಹೇಳಿದನು: “ಮೂಢ! ನಿನ್ನ ಧರ್ಮವು ಕ್ಷೀಣಿಸುತ್ತಾ ಬಂದಿದೆಯಾದರೂ ಅದನ್ನು ನೀನು ಗಮನಿಸುತ್ತಿಲ್ಲ! ಮನುಷ್ಯರೂ ಮತ್ತು ಇತರ ಯೋನಿಗಳಲ್ಲಿ ಜನಿಸಿದ ಅನ್ಯರೂ ಕೂಡ - ಗಂಧರ್ವರು, ಯಕ್ಷರು, ರಾಕ್ಷಸರು, ಪಕ್ಷಿ ಪ್ರಾಣಿಗಳು ಮನುಷ್ಯರನ್ನು ಅವಲಂಬಿಸಿ ಜೀವಿಸುತ್ತಾರೆ. ಅವರಂತೆ ನೀನೂ ಕೂಡ ಉಪಜೀವನ ಮಾಡುತ್ತೀಯೆ! ನಮ್ಮ ಈ ಲೋಕವು ಸಮೃದ್ಧವಾಗಿದ್ದರೆ ನಿನ್ನ ಲೋಕವೂ ವೃದ್ಧಿಹೊಂದುತ್ತದೆ. ಈ ಲೋಕವು ಶೋಕದಿಂದಿದ್ದರೆ ದೇವತೆಗಳು ಶೋಕಿಸುತ್ತಾರೆ. ಯಾಕೆಂದರೆ ಅವರು ಯಥಾವಿಧಿಯಾಗಿ ನಡೆಯುವ ಪೂಜೆ ಮತ್ತು ಹವ್ಯಕವ್ಯಗಳ ಮೂಲಕ ವೃದ್ಧಿ ಹೊಂದುತ್ತಾರೆ. ರಾಕ್ಷಸ! ನಾವು ರಾಷ್ಟ್ರವನ್ನು ಕಾಯುವವರು ಮತ್ತು ರಕ್ಷಕರು. ರಾಷ್ಟ್ರದ ರಕ್ಷಣೆಯೇ ಇಲ್ಲವೆಂದಾದರೆ ಎಲ್ಲಿಯ ಅಭಿವೃದ್ಧಿ ಮತ್ತು ಹೇಗಿನ ಸುಖ! ತಪ್ಪಿಲ್ಲದ ರಾಜನನ್ನು ರಾಕ್ಷಸನು ಹಳಿಯಬಾರದು. ನಾವು ಅಣುವಿನಷ್ಟೂ ಏನೂ ತಪ್ಪನ್ನು ಮಾಡಿಲ್ಲ. ಸ್ನೇಹ ಮತ್ತು ವಿಶ್ವಾಸದಿಂದಿದ್ದವರನ್ನು, ಯಾರ ಅನ್ನವನ್ನು ಉಂಡಿದ್ದೇವೋ ಮತ್ತು ಯಾರ ಆಶ್ರಯದಲ್ಲಿದ್ದೆವೋ ಅಂಥವರಿಗೆ ಎಂದೂ ಆಪತ್ತನ್ನು ತರಬಾರದು. ನೀನು ನಮ್ಮೊಡನೆ ಉಳಿದುಕೊಂಡಿದ್ದೆ, ನಮ್ಮ ಗೌರವವನ್ನು ಪಡೆದು ನೀನು ಸುಖವಾಗಿ ವಾಸಿಸುತ್ತಿದ್ದೆ. ನಮ್ಮ ಅನ್ನವನ್ನೇ ತಿಂದ ನೀನು ನಮ್ಮನ್ನು ಏಕೆ ಅಪಹರಿಸಿಕೊಂಡು ಹೋಗುತ್ತಿರುವೆ? ನಿನ್ನ ಆಚಾರವು ಸುಳ್ಳು. ನಿನ್ನ ವಯಸ್ಸು ಸುಳ್ಳು. ನಿನ್ನ ಬುದ್ಧಿಯೂ ಸುಳ್ಳು! ಆದರೆ ಇಂದು ನಿನಗೆ ದೊರಕುವ ಮರಣವು ಸುಳ್ಳಾಗುವುದಿಲ್ಲ! ಈಗ ನೀನು ದುಷ್ಟಬುದ್ಧಿಯವನೂ ಸರ್ವಧರ್ಮಗಳನ್ನು ಬಿಟ್ಟವನೂ ಆಗಿದ್ದರೆ ನಮ್ಮ ಅಸ್ತ್ರಗಳನ್ನು ಕೊಟ್ಟು ಯುದ್ಧದಲ್ಲಿ ದ್ರೌಪದಿಯನ್ನು ಪಡೆ. ಆದರೆ ನೀನು ಅಜ್ಞಾನದಿಂದ ಇದೇ ಕೆಲಸವನ್ನು ಮಾಡುತ್ತೀಯಾದರೆ ಅಧರ್ಮವನ್ನು ಮಾಡಿದವರು ಪಡೆಯುವ ತುಚ್ಛ ಲೋಕವನ್ನು ಹೊಂದುತ್ತೀಯೆ. ಇಂದು ನೀನು ಮನುಷ್ಯ ಸ್ತ್ರೀಯನ್ನು ಎತ್ತಿಕೊಂಡು ಕುಂಭದಲ್ಲಿರುವ ವಿಷವನ್ನು ಕದಡಿ ಕುಡಿದಿದ್ದೀಯೆ!”

ಆಗ ಯುಧಿಷ್ಠಿರನು ತನ್ನ ಭಾರದಿಂದ ಅವನನ್ನು ಒತ್ತಲು ಅವನ ಭಾರದಿಂದ ಆ ಭೂತಾತ್ಮನು ಶೀಘ್ರವಾಗಿ ಹೋಗಲು ಸಾಧ್ಯವಾಗಲಿಲ್ಲ. ಆಗ ಯುಧಿಷ್ಠಿರನು ದ್ರೌಪದಿ ಮತ್ತು ನಕುಲರಿಗೆ ಹೇಳಿದನು: “ಮೂಢ ರಾಕ್ಷಸರಿಂದ ಭಯಪಡಬೇಡಿ! ಅವನ ಓಟವನ್ನು ಸ್ಥಗಿತಗೊಳಿಸಿದ್ದೇನೆ. ಮಹಾಬಾಹು ಪವನಾತ್ಮಜನು ತುಂಬಾ ದೂರದಲ್ಲಿ ಇರಲಿಕ್ಕಿಲ್ಲ. ಸ್ವಲ್ಪವೇ ಸಮಯದಲ್ಲಿ ಅವನು ಬಂದರೆ ಈ ರಾಕ್ಷಸನು ಉಳಿಯುವುದಿಲ್ಲ.”

ಆ ಮೂಢಚೇತಸ ರಾಕ್ಷಸನನ್ನು ನೋಡಿ ಸಹದೇವನು ಕುಂತೀಪುತ್ರ ಯುಧಿಷ್ಠಿರನಿಗೆ ಈ ಮಾತುಗಳನ್ನಾಡಿದನು: “ರಾಜನ್! ಯುದ್ಧದಲ್ಲಿ ಇವನನ್ನು ಎದುರಿಸಿ ಪ್ರಾಣವನ್ನು ತ್ಯಜಿಸುವುದರಿಂದ ಅಥವಾ ಶತ್ರುವನ್ನು ಜಯಿಸುವುದರಿಂದ ದೊರೆಯುವಷ್ಟು ತೃಪ್ತಿಯು ಕ್ಷತ್ರಿಯನಿಗೆ ಇನ್ನ್ಯಾವುದರಿಂದ ದೊರೆಯುತ್ತದೆ? ಯುದ್ಧಮಾಡಿ ನಾವು ಇವನನ್ನು ಮುಗಿಸಬಹುದು ಅಥವಾ ಇವನೇ ನಮ್ಮನ್ನು ಮುಗಿಸಬಹುದು. ಇದೇ ನಮಗೆ ಒದಗಿಬಂದಿರುವ ಸ್ಥಳ ಮತ್ತು ಅವಕಾಶ! ಕ್ಷತ್ರಧರ್ಮವನ್ನು ಪಾಲಿಸುವ ಕಾಲವು ಒದಗಿಬಂದಿದೆ. ಜಯಿಸಿದರೆ ಅಥವಾ ಮಡಿದರೆ ನಮಗೆ ಸದ್ಗತಿಯು ಪ್ರಾಪ್ತವಾಗುತ್ತದೆ. ಇಂದು ಸೂರ್ಯನು ಮುಳುಗುವಾಗಲೂ ಈ ರಾಕ್ಷಸನು ಜೀವಿತನಾಗಿದ್ದರೆ ಇನ್ನು ಎಂದೂ ನನ್ನನ್ನು ಕ್ಷತ್ರಿಯನೆಂದು ಕರೆದುಕೊಳ್ಳಲಾರೆ! ಭೋ! ಭೋ! ರಾಕ್ಷಸ! ನಿಲ್ಲು! ನಾನು ಪಾಂಡವ ಸಹದೇವ! ನನ್ನನ್ನು ಕೊಂದು ಅವರನ್ನು ಎತ್ತಿಕೊಂಡು ಹೋಗು ಅಥವಾ ನನ್ನಿಂದ ಮರಣ ಹೊಂದು.”

ಅವನು ಹೀಗೆ ಹೇಳುತ್ತಿರಲು ಅಕಸ್ಮಾತ್ತಾಗಿ ಮಹಾಬಾಹು ಭೀಮಸೇನನು ವಜ್ರಧಾರಿ ವಾಸವನಂತೆ ಅಲ್ಲಿ ಕಂಡುಬಂದನು. ಅವನು ತನ್ನ ಈರ್ವರು ಸಹೋದರರನ್ನೂ ಯಶಸ್ವಿನೀ ದ್ರೌಪದಿಯನ್ನೂ, ಭೂಮಿಯ ಮೇಲೆ ನಿಂತಿರುವ ಸಹದೇವನನ್ನೂ ಮತ್ತು ಕಾಲವಶನಾಗಿ ಬುದ್ಧಿಯನ್ನು ಕಳೆದುಕೊಂಡು ಅಲ್ಲಲ್ಲಿ ತಿರುಗುತ್ತಿರಲು ದೈವದಿಂದ ತಡೆಹಿಡಿಯಲ್ಪಟ್ಟು ಮಾರ್ಗದ ಎದುರು ನಿಂತಿರುವ ಮೂಢ ರಾಕ್ಷಸನನ್ನೂ ನೋಡಿದನು. ದ್ರೌಪದಿಯನ್ನೂ ಸಹೋದರರನ್ನು ಅಪಹರಿಸಿಕೊಂಡು ಹೋಗುತ್ತಿರುವುದನ್ನು ನೋಡಿದ ಮಹಾಬಲ ಭೀಮನು ಕ್ರೋಧಮೂರ್ಛಿತನಾಗಿ ರಾಕ್ಷಸನಿಗೆ ಹೇಳಿದನು: “ನಮ್ಮ ಶಸ್ತ್ರಗಳನ್ನು ನೀನು ಪರೀಕ್ಷಿಸುತ್ತಿರುವಾಗ ಮೊದಲೇ ನಿನ್ನನ್ನು ಅರ್ಥಮಾಡಿಕೊಂಡಿದ್ದೆ! ಆದರೆ ನಿನ್ನ ಕುರಿತು ನನಗೆ ಅಷ್ಟು ಆಸಕ್ತಿಯಿಲ್ಲದೇ ಇದ್ದುದರಿಂದ ಆಗಲೇ ನಿನ್ನನ್ನು ಕೊಲ್ಲಲಿಲ್ಲ. ಬ್ರಾಹ್ಮಣ ರೂಪದ ಹಿಂದೆ ಅಡಗಿಕೊಂಡಿದ್ದ ನೀನು ನಮಗೆ ಅಪ್ರಿಯ ಮಾತುಗಳನ್ನೆಂದೂ ಆಡಿರಲಿಲ್ಲ. ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಎಂದೂ ಅಪ್ರಿಯ ಕೆಲಸಗಳನ್ನು ಮಾಡದೇ ಇದ್ದ ಬ್ರಾಹ್ಮಣ ರೂಪದಲ್ಲಿ ಅತಿಥಿಯಾಗಿದ್ದ ತಪ್ಪನ್ನೇ ಮಾಡದಿದ್ದ ನಿನ್ನನ್ನು ಹೇಗೆ ತಾನೇ ನಾನು ಕೊಲ್ಲುತ್ತಿದ್ದೆ? ನೀನೊಬ್ಬ ರಾಕ್ಷಸನೆಂದು ತಿಳಿದೂ ನಿನ್ನನ್ನು ಸಂಹರಿಸಿದವನು ನರಕವನ್ನು ಸೇರುತ್ತಿದ್ದ! ನಿನ್ನ ವಧೆಯ ಕಾಲವು ಒದಗಿ ಬಂದಿರಲಿಲ್ಲವೆಂದು ತೋರುತ್ತದೆ. ಆದರೆ ಇಂದು ನಿನ್ನದೇ ಬುದ್ಧಿ ಕಾರ್ಯದಿಂದ ಅಧ್ಭುತಕರ್ಮಿ ಕಾಲವು ಕೃಷ್ಣೆಯ ಅಪಹರಣದ ಮೂಲಕ ಅದನ್ನು ಒದಗಿಸಿ ಕೊಟ್ಟಿದೆ. ನೀರಿನಲ್ಲಿರುವ ಮೀನಿನ ಬಾಯಿಯು ಕೊಕ್ಕೆಗೆ ಹೇಗಿ ಸಿಲುಕಿಕೊಳ್ಳುತ್ತದೆಯೋ ಹಾಗೆ ಇಂದು ಕಾಲವೆಂಬ ದಾರದಲ್ಲಿ ಜೋತು ಬಿದ್ದಿರುವ ಕೊಕ್ಕೆಗೆ ನೀನು ಸಿಲುಕಿ ಬಿಟ್ಟಿದ್ದೀಯೆ! ಇಂದು ನನ್ನಿಂದ ಹೇಗೆ ಬಿಡುಗಡೆ ಹೊಂದುತ್ತೀಯೆ? ಎಲ್ಲಿಂದ ನೀನು ಬಂದಿದ್ದೀಯೋ ಮತ್ತು ಎಲ್ಲಿಗೆ ಹೋಗಲು ಬಯಸುತ್ತೀಯೋ ಅಲ್ಲಿಗೆ ಇಂದು ನೀನು ಹೋಗದೇ ಬಕ ಮತ್ತು ಹಿಡಿಂಬರು ಹೋದ ದಾರಿಯಲ್ಲಿಯೇ ಹೋಗುತ್ತೀಯೆ!”

ಭೀಮನು ಹೀಗೆ ಹೇಳಲು ಕಾಲಚೋದಿತ ರಾಕ್ಷಸನು ಭಯಗೊಂಡು ಅವರೆಲ್ಲರನ್ನೂ ಬಿಸುಟು ಯುದ್ಧಕ್ಕೆ ಅಣಿಯಾಗಿ ನಿಂತನು. ರೋಷದಿಂದ ಅವನ ಕೆಳಬಾಹುವು ಕಂಪಿಸುತ್ತಿರಲು ಭೀಮನಿಗೆ ತಿರುಗಿ ಹೇಳಿದನು: “ಮೂಢ! ನಾನೇನೂ ದಿಕ್ಕು ತಪ್ಪಿ ಹೋಗುತ್ತಿರಲಿಲ್ಲ. ನಿನಗೋಸ್ಕರವೇ ಕಾಯುತ್ತಿದ್ದೆ! ರಣದಲ್ಲಿ ನಿನ್ನಿಂದ ಯಾವ ಯಾವ ರಾಕ್ಷಸರು ಹತರಾದರೋ ಅವರ ಕುರಿತು ಕೇಳಿದ್ದೇನೆ. ನಿನ್ನ ರಕ್ತದಿಂದ ಇಂದು ಅವರಿಗೆ ಉದಕ ಕ್ರಿಯೆಯನ್ನು ಮಾಡುತ್ತೇನೆ.” ಹೀಗೆ ಹೇಳಲು ಭೀಮನು ನಾಲಿಗೆಯಿಂದ ತನ್ನ ಬಾಯಿಯ ತುದಿಯನ್ನು ನೆಕ್ಕಿ ಸಾಕ್ಷಾತ್ ಕಾಲಾಂತಕನಂತೆ ಕ್ರೋಧದಿಂದ ರಾಕ್ಷಸನೊಂದಿಗೆ ಬಾಹುಯುದ್ಧಕ್ಕೆ ಮುನ್ನುಗ್ಗಿದನು. ಆಗ ರಾಕ್ಷಸನೂ ಕೂಡ ಯುದ್ಧಕ್ಕೆ ಅಣಿಯಾಗಿ ನಿಂತಿದ್ದ ಭೀಮನೆಡೆಗೆ ವಜ್ರಧರನೆಡೆಗೆ ಬಲನು ಹೇಗೋ ಹಾಗೆ ಮುನ್ನುಗ್ಗಿದನು. ಆಗ ಅವರಿಬ್ಬರ ದಾರುಣ ಬಾಹುಯುದ್ಧವು ಪ್ರಾರಂಭವಾಯಿತು. ಇಬ್ಬರು ಮಾದ್ರೀ ಪುತ್ರರೂ ಕೋಪದಿಂದ ಮುನ್ನುಗ್ಗಲು ಕುಂತೀಪುತ್ರ ವೃಕೋದರನು ನಗುತ್ತಾ ಅವರನ್ನು ತಡೆದು ಹೇಳಿದನು: “ನಾನು ಈ ರಾಕ್ಷಸನನ್ನು ಕೊಲ್ಲಲು ಶಕ್ತನಾಗಿದ್ದೇನೆ. ಸುಮ್ಮನೇ ನೋಡುತ್ತಿರಿ! ರಾಜನ್! ಸ್ವತಃ ನನ್ನಿಂದ, ನನ್ನ ಭ್ರಾತೃಗಳಿಂದ ಮಾಡಿದ ಧರ್ಮಕಾರ್ಯಗಳಿಂದ, ಯಾಗಗಳಿಂದ, ಈ ರಾಕ್ಷಸನನ್ನು ಸಂಹರಿಸುತ್ತೇನೆ. ಇದು ನನ್ನ ಪ್ರತಿಜ್ಞೆ!” ಹೀಗೆ ಹೇಳಲು ಆ ವೀರ ರಾಕ್ಷಸ ವೃಕೋದರರಿಬ್ಬರೂ ಪರಸ್ಪರರೊಡನೆ ಸ್ಪರ್ಧಿಸುತ್ತಾ ಬಾಹುಗಳಿಂದ ಹೊಡೆದಾಡಿದರು. ಕೃದ್ಧರಾದ ಆ ಭೀಮ-ರಾಕ್ಷಸರು ದೇವದಾನವರಂತೆ ಒಬ್ಬರಿಂದೊಬ್ಬರು ಬಹಳಷ್ಟು ಹೊಡೆದಾಡಿದರು. ಅವರಿಬ್ಬರೂ ಮರಗಳನ್ನು ಕೀಳುತ್ತಾ ಅನ್ಯೋನ್ಯರನ್ನು ಹೊಡೆದರು ಮತ್ತು ಆ ಮಹಾಬಲಶಾಲಿಗಳು ನಾನು ಗೆದ್ದೆ ನಾನು ಗೆದ್ದೆ ಎಂದು ಜೋರಾಗಿ ಕೂಗಾಡಿಕೊಂಡರು. ಬಲಶಾಲಿಗಳಲ್ಲಿಯೇ ಶ್ರೇಷ್ಠರಾದ ಅವರಿಬ್ಬರೂ ತಮ್ಮ ತಮ್ಮ ತೊಡೆಗಳಿಂದ ಮಹಾವೃಕ್ಷಗಳನ್ನು ಕಿತ್ತು ಪರಸ್ಪರ ಜಯವನ್ನು ಬಯಸಿ ಅನ್ಯೋನ್ಯರನ್ನು ಹೊಡೆಯುತ್ತಿದ್ದರು. ಆ ಯುದ್ಧದಲ್ಲಿ ಕೀಳಲ್ಪಟ್ಟು ಬಹಳಷ್ಟ್ರು ವೃಕ್ಷಗಳು ನಾಶಗೊಂಡವು. ಹಿಂದೆ ಕಪಿಸಿಂಹ ಸಹೋದರ ವಾಲಿ-ಸುಗ್ರೀವರ ನಡುವೆ ನಡೆದ ಯುದ್ಧದಂತೆ ತೋರಿಬಂದಿತು. ಪರಸ್ಪರರನ್ನು ಕೊಲ್ಲುವ ಉದ್ದೇಶದಿಂದ ಆ ಪ್ರದೇಶದಲ್ಲಿದ್ದ ಎಲ್ಲ ಮರಗಳನ್ನು ಬೀಳಿಸಿ, ನೂರಾರು ಸಂಖ್ಯೆಗಳಲ್ಲಿ ಗುಂಪುಮಾಡಿಯಾದ ನಂತರ ಆ ಮಹಾಬಲಶಾಲಿಗಳಿಬ್ಬರೂ ಸ್ವಲ್ಪ ಸಮಯ ಕಲ್ಲುಬಂಡೆಗಳನ್ನು ಎತ್ತಿಕೊಂಡು ದೊಡ್ಡ ಮೋಡಗಳಿಂದ ಆವೃತವಾದ ಪರ್ವತಗಳಂತೆ ಯುದ್ಧಮಾಡಿದರು. ಉಗ್ರವಾಗಿ ತೋರುದ್ದಿದ್ದ ಆ ಕಲ್ಲುಬಂಡೆಗಳನ್ನು ದಯೆತೋರಿಸದೇ ಪರಸ್ಪರರ ಮೇಲೆ ಬೀಸಾಡಿದರು. ಆಕಾಶದಲ್ಲಿ ಮಿಂಚಿನಂತೆ ಆ ಮಹಾವೇಗದಲ್ಲಿ ಹಾರುತ್ತಿದ್ದ ಬಂಡೆಗಲ್ಲುಗಳು ಕಂಡುಬಂದವು. ಆ ಬಲದರ್ಪಿತರಿಬ್ಬರೂ ಅನ್ಯೋನ್ಯರ ಭುಜಗಳನ್ನು ಹಿಡಿದು ಆನೆಗಳಂತೆ ಎಳೆದಾಡಿದರು. ಆ ಮಹಾಘೋರರೀರ್ವರೂ ಮುಷ್ಟಿಗಳಿಂದ ಅನ್ಯೋನ್ಯರನ್ನು ಹೊಡೆಯುತ್ತಿರಲು ಆ ಮಹಾತ್ಮರ ಮಧ್ಯೆ ಚಟ ಚಟ ಎನ್ನುವ ಶಬ್ಧವು ಕೇಳಿಬಂದಿತು. ಐದುಹೆಡೆಯ ಸರ್ಪದಂತಿದ್ದ ತನ್ನ ಮುಷ್ಠಿಯನ್ನು ಬಿಗಿದು ಆ ರಾಕ್ಷಸನ ತಲೆಯಮೇಲೆ ವೇಗದಿಂದ ಗುದ್ದಿದನು. ಅವನ ಪೆಟ್ಟನ್ನು ತಿಂದು ಆ ರಾಕ್ಷಸನು ತಲೆತಿರುಗಿ ಆಯಾಸಗೊಂಡಿದ್ದುದನ್ನು ನೋಡಿದ ಭೀಮಸೇನನು ಅವನ ಮೇಲೆರಗಿದನು. ಅಮರೋಪಮ ಮಹಾಬಾಹು ಭೀಮನು ಅವನನ್ನು ತನ್ನ ಎರಡೂ ಕೈಗಳಿಂದ ಮೇಲಕ್ಕೆತ್ತಿ ಗಟ್ಟಿಯಾಗಿ ನೆಲಕ್ಕೆ ಅಪ್ಪಳಿಸಿದನು. ಆಗ ಪಾಂಡವನು ಅವನ ದೇಹದ ಸರ್ವಾಂಗಗಳನ್ನೂ ಒತ್ತಿ ತನ್ನ ತೋಳಿನಿಂದ ಅವನ ಶಿರವನ್ನು ದೇಹದಿಂದ ತುಂಡುಮಾಡಿದನು. ಭೀಮಸೇನನ ಅದ್ಭುತ ಬಲಕ್ಕೆ ಸಿಲುಕಿ ತುಟಿಗಳು ಸೀಳಿಹೋದ, ಕಣ್ಣುಗಳು ಮೇಲೆದ್ದ, ಹಲ್ಲುಗಳನ್ನು ಕಚ್ಚಿದ್ದ ಆ ಜಟಾಸುರನ ಶಿರಸ್ಸು ರಕ್ತದಿಂದ ತೋಯ್ದು, ಮರದಿಂದ ಬೀಳುವ ಹಣ್ಣಿನಂತೆ ಕೆಳಕ್ಕೆ ಬಿದ್ದಿತು. ಅವನನ್ನು ಸಂಹರಿಸಿದ ಆ ಮಹೇಷ್ವಾಸನು, ವಾಸವನನ್ನು ಅಮರರು ಹೇಗೋ ಹಾಗೆ ದ್ವಿಜಶ್ರೇಷ್ಠರು ಪ್ರಶಂಸಿಸುತ್ತಿರಲು, ಯುಧಿಷ್ಠಿರನ ಬಳಿ ಬಂದನು.

Leave a Reply

Your email address will not be published. Required fields are marked *