ಅರ್ಜುನನು ದಿವ್ಯಾಸ್ತ್ರಗಳನ್ನು ಪಡೆದನೆಂದು ಕೇಳಿದ ಧೃತರಾಷ್ಟ್ರನ ಶೋಕ
ಪಾರ್ಥನು ಶಕ್ರಲೋಕಕ್ಕೆ ಹೋದುದನ್ನು ಋಷಿಶ್ರೇಷ್ಠ ದ್ವೈಪಾಯನನಿಂದ ಕೇಳಿದ ಅಂಬಿಕಾಸುತನು ಸಂಜಯನಿಗೆ ಹೇಳಿದನು: “ಸೂತ! ಧೀಮಂತ ಪಾರ್ಥನ ಸಾಧನೆಗಳ ಕುರಿತು ಸಂಪೂರ್ಣವಾಗಿ ಕೇಳಿದ್ದೇನೆ. ನೀನೂ ಕೂಡ ಇದರ ಕುರಿತು ಹೇಗಾಯಿತೋ ಹಾಗೆ ತಿಳಿದುಕೊಂಡಿದ್ದೀಯಾ? ಗ್ರಾಮ್ಯಧರ್ಮದಲ್ಲಿ ಪ್ರಮತ್ತನಾದ ನನ್ನ ಮಗ ದುರ್ಬುದ್ಧಿ ಮಂದಾತ್ಮ ಪಾಪನಿಶ್ಚಯನು ಭೂಮಿಯಲ್ಲಿರುವವರೆಲ್ಲರನ್ನೂ ಸಾಯಿಸುತ್ತಾನೆ. ಧನಂಜಯನನ್ನು ಯೋದ್ಧನಾಗಿ ಪಡೆದ, ನಿತ್ಯವೂ, ಹಾಸ್ಯದಲ್ಲಿಯೂ, ಸತ್ಯವನ್ನೇ ಮಾತನಾಡುವ, ಮಹಾತ್ಮನು ತ್ರೈಲೋಕ್ಯವನ್ನೂ ತನ್ನದಾಗಿಸಿಕೊಳ್ಳಬಲ್ಲ! ಮೃತ್ಯು ಮತ್ತು ವೃದ್ಧಾಪಗಳನ್ನು ಗೆದ್ದಿದ್ದವನಾಗಿದ್ದರೂ, ಯಾರು ತಾನೇ ಅರ್ಜುನನ ಕಲ್ಲಿನ ಮೇಲೆ ಮಸೆದು ಹರಿತಾದ ಕಿವಿಗಳನ್ನುಳ್ಳ ಕಬ್ಬಿಣದ ಬಾಣಗಳ ಎದುರು ನಿಲ್ಲಬಹುದು? ದುರಾತ್ಮರಾದ ನನ್ನ ಮಕ್ಕಳೆಲ್ಲರೂ ಮೃತ್ಯುವಶವಾಗಿದ್ದಾರೆ. ಪಾಂಡವರೊಂದಿಗೆ ಇವರ ದುರಾಧರ್ಷ ಯುದ್ಧವು ನಡೆಯಲಿಕ್ಕಿದೆ! ಯುದ್ಧದಲ್ಲಿ ಈ ಗಾಂಡೀವಧನುಸ್ಸನ್ನು ಹಿಡಿದಿರುವನನ್ನು ಎದುರಿಸುವ ರಥಿಕನನ್ನು ನಾನು ಕಾಣುತ್ತಿಲ್ಲವಲ್ಲ! ಎಂದು ದಿನರಾತ್ರಿಯೂ ಚಿಂತಿಸುತ್ತಿದ್ದೇನೆ. ದ್ರೋಣ ಮತ್ತು ಕರ್ಣರಿಬ್ಬರೂ ಮತ್ತು ಭೀಷ್ಮನೇ ಅವನ ಎದುರಾದರೂ ಇಡೀ ಲೋಕಕ್ಕೇ ಮಹಾ ಅಪಾಯವನ್ನು ಕಾಣುತ್ತೇನೆಯೇ ಹೊರತು ಜಯವನ್ನು ಕಾಣುತ್ತಿಲ್ಲ! ಕರ್ಣನು ಕರುಣಾಮಯಿ ಮತ್ತು ಮರೆತುಹೋಗುವ ಸ್ವಭಾವವುಳ್ಳವ. ಅವನ ಗುರುವು ಬಹಳ ವೃದ್ಧ. ಪಾರ್ಥನು ಸಿಟ್ಟೆದ್ದಿದ್ದಾನೆ, ಬಲಶಾಲಿಯಾಗಿದ್ದಾನೆ, ಮತ್ತು ದುಡುಕದೇ ಧೃಢನಾಗಿ ಯುದ್ಧಮಾಡುವವನು. ಎಲ್ಲರೊಡನೆಯೂ, ಯಾರನ್ನೂ ಗೆಲ್ಲಲಾಗದ ಭಯಂಕರ ಹೋರಾಟದ ಮಹಾಯುದ್ಧವು ನಡೆಯಲಿದೆ! ಎಲ್ಲರೂ ಅಸ್ತ್ರವಿದರೇ, ಮತ್ತು ಎಲ್ಲರೂ ಮಹಾಯಶಸ್ಸು ಗಳಿಸಿದ ಶೂರರೇ! ಇನ್ನೊಬ್ಬರನ್ನು ಗೆದ್ದರೂ ಎಲ್ಲದರ ಒಡೆತನವನ್ನು ಬಯಸುವುದಿಲ್ಲ! ಅಂತ್ಯದಲ್ಲಿ ಇವರ ಅಥವಾ ಫಲ್ಗುನನ ವಧೆಯಾಗುತ್ತದೆ! ಆದರೆ ಅರ್ಜುನನನ್ನು ಕೊಲ್ಲುವವರು ಅಥವಾ ಗೆಲ್ಲುವವರು ಯಾರು ಎಂದು ತಿಳಿಯುತ್ತಿಲ್ಲ. ಮೂಢರ ಮೇಲೆ ಉಂಟಾಗಿರುವ ಈ ಕೋಪಾಗ್ನಿಯನ್ನು ಹೇಗೆ ತಣಿಸಬಹುದು? ತ್ರಿದಶಗಳ ಒಡೆಯನ ಸಮನಾಗಿರುವ ಈ ವೀರನು ಖಾಂಡವದಲ್ಲಿ ಅಗ್ನಿಯನ್ನು ತೃಪ್ತಿಪಡಿಸಿದ ಮತ್ತು ರಾಜಸೂಯ ಮಹಾಯಜ್ಞದಲ್ಲಿ ಸರ್ವ ರಾಜರನ್ನೂ ಗೆದ್ದ. ಪರ್ವತದ ಮೇಲೆ ಬಿದ್ದ ವಜ್ರಾಯುಧವಾದರೂ ಸ್ವಲ್ಪವನ್ನು ಉಳಿಸಬಹುದು ಆದರೆ ಸಂಜಯ! ನನ್ನ ಮಗ ಕಿರೀಟಿಯು ಬಿಟ್ಟ ಶರಗಳು ಏನನ್ನೂ ಉಳಿಸುವುದಿಲ್ಲ. ಸೂರ್ಯನ ಕಿರಣಗಳು ಹೇಗೆ ಚರಾಚರಗಳನ್ನೂ ಸುಡುತ್ತವೆಯೋ ಹಾಗೆ ಪಾರ್ಥನ ಭುಜದಿಂದ ಬಿಟ್ಟ ಬಾಣಗಳು ನನ್ನ ಮಕ್ಕಳನ್ನು ಸುಡುತ್ತವೆ. ಸವ್ಯಸಾಚಿಯ ರಥಘೋಷದಿಂದ ಭಯಾರ್ತರಾಗಿ ಭಾರತೀಯ ಸೇನೆಯು ಎಲ್ಲೆಡೆಯಲ್ಲಿಯೂ ಚದುರಿಹೋಗುತ್ತಿರುವಂತೆ ಕಾಣುತ್ತಿದೆ. ಯುದ್ಧದಲ್ಲಿ ಒಂದೇ ಸಮನೆ ತನ್ನ ಬತ್ತಳಿಕೆಗಳಿಂದ ಬಾಣಗಳನ್ನು ಮುಂದೆ ಸುರಿಸುತ್ತಿರುವ ಧನುಸ್ಸನ್ನು ಎಳೆದು ನಿಂತಿರುವ, ಸೃಷ್ಟಿಮಾಡುವ ಮತ್ತು ಸೃಷ್ಟಿಯಾದುದೆಲ್ಲವನ್ನೂ ಅಂತ್ಯಗೊಳಿಸುವ ವಿಧಾತ್ರನಂತಿರುವ ಕಿರೀಟಿಯುನ್ನು ಕಾಣುತ್ತಿದ್ದೇನೆ. ಆದರೆ ಆಗಲೇ ಬೇಕಾದ್ದುದನ್ನು ಆಗಬಾರದು ಎಂದು ತಡೆಯಲಿಕ್ಕಾಗುವುದಿಲ್ಲವಲ್ಲ!”
ಸಂಜಯನು ಹೇಳಿದನು: “ರಾಜನ್! ದುರ್ಯೋಧನನ ಕುರಿತು ನೀನು ಹೇಳಿದುದೆಲ್ಲವೂ ಇರುವ ಹಾಗೆಯೇ ಇದೆ. ಅದರಲ್ಲಿ ಏನೂ ಸುಳ್ಳಿಲ್ಲ. ಅಮಿತೌಜಸ ಪಾಂಡವರು ತಮ್ಮ ಧರ್ಮಪತ್ನಿ ಯಶಸ್ವಿನೀ ಕೃಷ್ಣೆಯನ್ನು ಸಭೆಗೆ ಎಳೆತಂದುದನ್ನು ನೋಡಿ, ದುಃಶಾಸನನ ಮತ್ತು ಕರ್ಣನ ಆ ದಾರುಣ ಪರಿಣಾಮನ್ನು ತರುವ ಮಾತುಗಳನ್ನು ಕೇಳಿ ಚೆನ್ನಾಗಿ ನಿದ್ದೆಮಾಡುತ್ತಾರೆ ಎಂದು ನನಗನಿಸುವುದಿಲ್ಲ. ಹೇಗೆ ಏಕಾದಶ ತನು ಸ್ಥಾಣುವು ಹೋರಾಟದಲ್ಲಿ ಪಾರ್ಥನ ಬಿಲ್ಲುಗಾರಿಕೆಯನ್ನು ಮೆಚ್ಚಿಕೊಂಡ ಎನ್ನುವುದನ್ನು ನಾನು ಕೇಳಿದ್ದೇನೆ. ಅವನನ್ನು ಪರೀಕ್ಷಿಸಲು ಸರ್ವದೇವೇಶ, ಕಪರ್ದಿ ಭಗವಾನನು ಕಿರಾತನ ವೇಷವನ್ನು ಧರಿಸಿ ಫಲ್ಗುನನೊಂದಿಗೆ ಸ್ವಯಂ ಯುದ್ಧ ಮಾಡಿದನು. ಅದೇ ಸಮಯದಲ್ಲಿ ಲೋಕಪಾಲಕರೂ ಕೂಡ ಅಸ್ತ್ರಕ್ಕಾಗಿ ಅತ್ಯಂತ ಕಷ್ಟಕರ ತಪಸ್ಸನ್ನು ಮಾಡುತ್ತಿದ್ದ ಕೌರವರ್ಷಭ ಅರ್ಜುನನಿಗೆ ಕಾಣಿಸಿಕೊಂಡರು. ಈ ಭೂಮಿಯಲ್ಲಿ ಅನ್ಯ ಯಾವ ನರನಿಗೂ ಪಡೆಯಲು ಸಾಧ್ಯವಾಗದ ಆ ಈಶ್ವರರ ಸಾಕ್ಷಾತ್ ದರ್ಶನವನ್ನು ಫಲ್ಗುನನು ಪಡೆದನು. ಮಹೇಶ್ವರನೇ ಸೋಲಿಸಲಿಕ್ಕಾಗದವನನ್ನು ಯುದ್ಧದಲ್ಲಿ ಸೋಲಿಸುವ ವೀರ ಪುರುಷರು ಯಾರಿದ್ದಾರೆ? ದ್ರೌಪದಿಯ ಮಾನಭಂಗಮಾಡಿ ಪಾಂಡವರ ಕೋಪಕ್ಕೊಳಗಾಗಿ ಮೈನವಿರೇಳಿಸುವ ಘೋರ ಯುದ್ಧವನ್ನು ತಂದುಕೊಂಡಿದ್ದಾರೆ. ಅಲ್ಲಿ ದ್ರೌಪದಿಗೆ ತನ್ನ ತೊಡೆಯನ್ನು ತೋರಿಸಿದ ದುರ್ಯೋಧನನಿಗೆ ಭೀಮನು ಕಂಪಿಸುತ್ತಿವ ತುಟಿಗಳಿಂದ ಮಹಾ ಮಾತನ್ನು ಹೇಳಿದ್ದನು: “ಪಾಪಿ! ಮೋಸದಿಂದ ಜೂಜಾಡುವವನೇ! ಹದಿಮೂರು ವರ್ಷಗಳ ನಂತರ ವಜ್ರದಂತಿರುವ ನನ್ನ ಗದೆಯಿಂದ ನಿನ್ನ ತೊಡೆಯನ್ನು ಮುರಿಯುತ್ತೇನೆ!” ಅವರೆಲ್ಲರೂ ಶ್ರೇಷ್ಠ ಹೋರಾಟಗಾರರು. ಎಲ್ಲರೂ ಅಮಿತ ತೇಜಸ್ಸುಳ್ಳವರು. ಎಲ್ಲರೂ ದೇವತೆಗಳಿಂದಲೂ ಗೆಲ್ಲಲಿಕ್ಕಾಗದ ಸರ್ವ ಅಸ್ತ್ರ ವಿದ್ವಾಂಸರು. ವೀರರೂ ರೋಷ ಸಮನ್ವಿತರೂ ಆದ ಸಿಟ್ಟಿಗೆದ್ದ ಪಾರ್ಥರು ನಿನ್ನ ಪುತ್ರರನ್ನು ಯುದ್ಧದಲ್ಲಿ ಕೊನೆಗಾಣಿಸುತ್ತಾರೆ ಎಂದು ನನಗನ್ನಿಸುತ್ತದೆ.”
ಧೃತರಾಷ್ಟ್ರನು ಹೇಳಿದನು: “ಸೂತ! ಕರ್ಣನು ಎಂಥಹ ಪೌರುಷದ ಮಾತುಗಳನ್ನಾಡಿದ್ದ! ಕೃಷ್ಣೆಯನ್ನು ಸಭೆಗೆ ಎಳೆದು ತಂದುದೇ ಈ ವೈರಕ್ಕೆ ಕಾರಣವಾಯಿತು. ಅವರ ಭ್ರಾತ ಗುರು ಜ್ಯೇಷ್ಠನು ವಿನಯದಿಂದ ನಡೆದುಕೊಳ್ಳುವುದಿಲ್ಲವಾದರೆ ನನ್ನ ಮೂಢ ಮಕ್ಕಳು ಹಾಗೆಯೇ ಇರುತ್ತಾರೆ. ನನಗೆ ಕಾಣಿಸುವುದಿಲ್ಲ ಎಂದು ನೋಡಿ ಈ ನಿರ್ವಿಚೇಷ್ಟ ಅಚೇತನನ ಮಾತುಗಳನ್ನು ಆ ದುರಾದೃಷ್ಟನು ಕೇಳುವುದಿಲ್ಲ. ಅವನ ಸಚಿವರಾದ ಕರ್ಣ, ಸೌಬಲ ಮೊದಲಾದವರು ಆ ಬುದ್ಧಿಯಿಲ್ಲದವನ ದೋಷಗಳನ್ನು ಹೆಚ್ಚಿಸಿ ತಾವೂ ಮೂಢರಂತಿದ್ದಾರೆ. ಅಮಿತ ತೇಜಸ್ವಿ ಪಾರ್ಥನು ಮೋಜಿಗೆಂದು ಬಾಣವನ್ನು ಬಿಟ್ಟರೂ ನನ್ನ ಮಕ್ಕಳನ್ನು ಸುಟ್ಟುಭಸ್ಮಮಾಡುತ್ತದೆ. ಇನ್ನು ಸಿಟ್ಟಿನಿಂದ ಹೋರಾಡಿದರೆ ಹೇಗೆ? ಪಾರ್ಥನ ಬಾಹುಬಲದಿಂದ ಬಿಡಲ್ಪಟ್ಟ, ಮಹಾಚಾಪದಿಂದ ಬಿಡಲ್ಪಟ್ಟ, ದಿವ್ಯ ಅಸ್ತ್ರ ಮಂತ್ರಗಳಿಂದ ಹುಟ್ಟಿದ ಬಾಣಗಳು ಸುರರನ್ನು ಕೂಡ ಸದೆಬಡಿಯುತ್ತವೆ. ಜನಾರ್ದನ, ಹರಿ ತ್ರೈಲೋಕ್ಯನಾಥನನ್ನೇ ನಂಬಿಕೆಯ ಸ್ನೇಹಿತನನ್ನಾಗಿ ಪಡೆದ ಅವನು ಏನನ್ನು ತಾನೇ ಗೆಲ್ಲಲಿಲ್ಲ? ಅರ್ಜುನನು ಮಹಾದೇವನೊಂದಿಗೆ ಬಾಹುಗಳೊಂದಿಗೆ ಎದುರಾದ ಎಂದು ಕೇಳಿದ್ದುದು ಮಹಾ ವಿಚಿತ್ರವಾದುದು. ಹಿಂದೆ ಖಾಂಡವದಲ್ಲಿ ಅಗ್ನಿಯ ಸಹಾಯಕ್ಕೆಂದು ಫಲ್ಗುನ ದಾಮೋದರರು ಏನು ಸಾಧಿಸಿದರು ಅದು ಎಲ್ಲ ಲೋಕಕ್ಕೂ ತಿಳಿದಿದೆ. ಪಾರ್ಥ, ಭೀಮ ಮತ್ತು ಸಾತ್ವತ ವಾಸುದೇವನು ಕೃದ್ಧರಾದರೆ ಅಮಾತ್ಯರೊಂದಿಗೆ, ಬಾಂಧವರೊಂದಿಗೆ ನನ್ನ ಮಕ್ಕಳು ಸರ್ವಥಾ ಇರುವುದಿಲ್ಲ.”
ಸುದೀರ್ಘವಾಗಿ ಬಿಸಿಶ್ವಾಸವನ್ನು ಬಿಟ್ಟು ಅಂಬಿಕಾಸುತ ಧೃತರಾಷ್ಟ್ರನು ಸೂತನನ್ನು ಕರೆಯಿಸಿ ಸಂಜಯನಿಗೆ ಹೇಳಿದನು: “ಪಾಂಡುವಿನ ಮಕ್ಕಳು, ದೇವರಾಜಸಮ ದ್ಯುತಿಯುಳ್ಳ ಮಹಾಭಾಗ ದೇವಪುತ್ರ ನಕುಲ ಸಹದೇವರು ಯುದ್ಧದಲ್ಲಿ ದುರ್ಮದರೂ, ದೃಢಾಯುಧರೂ, ಬಹುದೂರದ ವರೆಗೆ ಬಾಣಬಿಡಬಲ್ಲವರೂ, ಯುದ್ಧವನ್ನು ಗೆಲ್ಲುವ ನಿರ್ಧಾರಮಾಡಿದವರೂ, ಬಹುಬೇಗ ಕೈ ಬಳಸುವವರೂ, ಕ್ರೋಧವು ದೃಢವಾಗಿರುವವರೂ, ಯಾವಾಗಲೂ ಅಚಲಿತರಾಗಿಯೂ, ಉಲ್ಲಾಸವುಳ್ಳವರೂ ಆಗಿದ್ದಾರೆ. ಅಶ್ವಿನಿಯರಂತೆ ದುಃಸಹರೂ ಸಿಂಹವಿಕ್ರಾಂತರೂ ಆದ ಅವರಿಬ್ಬರು ಭೀಮಾರ್ಜುನರನ್ನು ಮುಂದಿಟ್ಟುಕೊಂಡು ರಣದಲ್ಲಿ ನಿಂತರೆ ಆ ಸೈನ್ಯವು ಉಳಿಯುತ್ತದೆ ಎಂದು ನನಗೆ ತೋರುವುದಿಲ್ಲ. ಆ ಇಬ್ಬರೂ ಯುದ್ಧದಲ್ಲಿ ಅಪ್ರತಿರಥರು, ದೇವಪುತ್ರರು, ಮಹಾರಥರು ದ್ರೌಪದಿಗೆ ನೀಡಿದ ಕಷ್ಟವನ್ನು ನೋಡಿ ಸಿಟ್ಟಾಗಿ ಎಂದೂ ಕ್ಷಮಿಸುವುದಿಲ್ಲ. ಸತ್ಯಸಂಧ ವಾಸುದೇವನಿಂದ ಯುದ್ಧದಲ್ಲಿ ರಕ್ಷಿತ ಮಹೇಷ್ವಾಸ ವೃಷ್ಣಿಗಳು, ಮಹೌಜಸ ಪಾಂಚಾಲರು ಮತ್ತು ಪಾರ್ಥರು ರಣದಲ್ಲಿ ನನ್ನ ಮಕ್ಕಳ ಸೇನೆಯನ್ನು ಭಸ್ಮಮಾಡಿಬಿಡುತ್ತಾರೆ. ಒಂದುವೇಳೆ ಯುದ್ಧವಾಗುತ್ತದೆ ಎಂದಾದರೆ ಬಲರಾಮ ಮತ್ತು ಕೃಷ್ಣರ ನಾಯಕತ್ವದಲ್ಲಿದ್ದ ವೃಷ್ಣಿಗಳ ವೇಗವನ್ನು ಪರ್ವತಗಳೂ ಕೂಡ ಸಹಿಸಲು ಶಕ್ಯವಾಗುವುದಿಲ್ಲ. ಅವರ ಮಧ್ಯದಲ್ಲಿ ಮಹೇಷ್ವಾಸ ಭೀಮಪರಾಕ್ರಮಿ ಭೀಮನು ವೀರರನ್ನು ಘಾಯಗೊಳಿಸುವ ಲೋಹದ ಮೊಳೆಗಳನ್ನುಳ್ಳ ಗದೆಯೊಂದಿಗೆ ಓಡಾಡುತ್ತಿರುತ್ತಾನೆ. ಹಾಗೆಯೇ ಸಿಡಿಲಿನಂತೆ ಗರ್ಜಿಸುವ ಗಾಂಡೀವದ ಠೇಂಕಾರವನ್ನೂ ಭೀಮನ ಗದೆಯ ವೇಗವನ್ನೂ ನರಾಧಿಪರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಇವುಗಳನ್ನು ಆಗ ನಾನು ನೆನಪಿನಲ್ಲಿಟ್ಟುಕೊಂಡಿರಬೇಕಾಗಿತ್ತು. ಆದರೆ ದುರ್ಯೋಧನನ ವಶಕ್ಕೆ ಸಿಲುಕಿ ಅದರಂತೆ ನಡೆದುಕೊಳ್ಳದೇ ಹೋದೆ. ಈಗ ಅವುಗಳನ್ನು ನೆನಪಿಸಿಕೊಳ್ಳುತ್ತೇನೆ.”
ಸಂಜಯನು ಹೇಳಿದನು: “ರಾಜನ್! ಅದೊಂದು ಮಹಾ ತಪ್ಪನ್ನು ನೀನು ಉಪೇಕ್ಷಿಸಿ ಮಾಡಿದೆ. ಪುತ್ರನ ಮೇಲಿನ ವ್ಯಾಮೋಹದಿಂದ ನೀನು ಅದನ್ನು ನಿಲ್ಲಿಸಲು ಸಮರ್ಥನಾಗಿದ್ದರೂ ತಡೆಯಲಿಲ್ಲ. ಪಾಂಡವರು ದ್ಯೂತದಲ್ಲಿ ಸೋತರು ಎಂದು ತಿಳಿದಕೂಡಲೇ ಅಚ್ಯುತ ಮಧುಸೂದನನು ಕಾಮ್ಯಕವನದಲ್ಲಿ ಪಾರ್ಥರನ್ನು ಭೆಟ್ಟಿಯಾದನು. ಹಾಗೆಯೇ ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ದ್ರುಪದನ ಮಕ್ಕಳು, ವಿರಾಟ ಧೃಷ್ಟಕೇತು ಮತ್ತು ಮಹಾರಥಿ ಕೇಕಯನೂ ಪಾಂಡವರನ್ನು ಭೆಟ್ಟಿಯಾದರು. ಪರಾಜಿತರಾದ ಪಾರ್ಥರನ್ನು ಕಂಡು ಅವರು ಅಲ್ಲಿ ಏನೇನು ಮಾತನಾಡಿದರು ಎನ್ನುವುದನ್ನು ಚಾರರಿಂದ ತಿಳಿದು ಎಲ್ಲವನ್ನೂ ನಾನು ನಿನಗೆ ತಿಳಿಸಿದ್ದೇನೆ. ಯುದ್ಧದ ಪ್ರಸಂಗವು ಬಂದರೆ ಅದರಲ್ಲಿ ಮಧುಸೂದನನು ಫಲ್ಗುನನ ಸಾರಥಿಯಾಗಲಿ ಎಂದು ಪಾಂಡವರು ಅಲ್ಲಿ ಸೇರಿದ್ದವರೊಂದಿಗೆ ನಿರ್ಧರಿಸಿದಾಗ ಹರಿಯು ಅದಕ್ಕೆ ಒಪ್ಪಿಕೊಂಡನು. ಕೃಷ್ಣನೂ ಕೂಡ ಕೃಷ್ಣಾಜಿನವನ್ನು ಉತ್ತರೀಯವಾಗಿ ಹೊದೆಯುವ ಪರಿಸ್ಥಿತಿಯಲ್ಲಿದ್ದ ಪಾರ್ಥರನ್ನು ನೋಡಿ ಕೋಪಗೊಂಡು ಯುಧಿಷ್ಠಿರನಿಗೆ ಹೇಳಿದನು: “ಅನ್ಯ ರಾಜರಿಗೆ ದುರ್ಲಭವಾದ ಸಮೃದ್ಧಿಯನ್ನು ಇಂದ್ರಪ್ರಸ್ಥದಲ್ಲಿ ರಾಜಸೂಯಯಾಗದ ಸಮಯದಲ್ಲಿ ಪಾರ್ಥರಲ್ಲಿ ನಾನು ನೋಡಿದ್ದೆ. ಭರತರ್ಷಭ! ಅಲ್ಲಿ ಪಾಂಡವರ ಶಸ್ತ್ರತೇಜಸ್ಸಿನಿಂದ ಭಯಪಟ್ಟ ಎಲ್ಲ ಮಹೀಪಾಲರೂ - ವಂಗರು, ಅಂಗರು, ಪೌಂಡ್ರರು, ಓಡ್ರರು, ಚೋಳರು, ದ್ರವಿಡರು, ಅಂಧಕರು, ಸಾಗರತೀರದಲ್ಲಿ ಪಟ್ಟಣಗಳಲ್ಲಿ ವಾಸಿಸುವವರು, ಸಿಂಹಳೀಯರು, ಬರ್ಬರರು, ಕಾಡಿನಲ್ಲಿ ವಾಸಿಸುವ ಮ್ಲೇಚ್ಛರು, ಸಾಗರದ ಕೊನೆಯವರೆಗೆ ವಾಸಿಸುವ ನೂರಾರು ಪಶ್ಚಿಮದೇಶದವರು, ಪಲ್ಲವರು, ದರದರು, ಕಿರಾತರು, ಯವನರು, ಶಕರು, ಹಾರಹೂಣರು, ಚೀನರು, ತುಖಾರರು, ಸೈಂಧವರು, ಜಾಗುಡರು, ರಮಠರು, ಮುಂಡರು, ರಾಣಿಯರು ಆಳುವ ದೇಶದವರು, ತಂಗಣರು ಮತ್ತು ಇತರ ಬಹಳಷ್ಟು ರಾಜರು ನಿನ್ನ ಸೇವಕರಾಗಿ ಯಜ್ಞದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಆ ಮಹಾ ಸಮೃದ್ಧಿಯು ಚಪಲವಾಗಿ ಅಷ್ಟು ಬೇಗನೆ ಬೇರೆಯವರ ಕೈಸೇರಿತಲ್ಲ! ಅದನ್ನು ಕಸಿದುಕೊಂಡವರನ್ನು ಜೀವಂತವಾಗಿ ಬಿಡುವುದಿಲ್ಲ! ರಾಮ, ಭೀಮಾರ್ಜುನರು, ಯಮಳರು, ಅಕ್ರೂರ, ಗದ, ಸಾಂಬ, ಪ್ರದ್ಯುಮ್ನ, ಆಹುಕ, ವೀರ ಧೃಷ್ಟದ್ಯುಮ್ನ ಮತ್ತು ಶಿಶುಪಾಲನ ಮಗನ ಜೊತೆಗೂಡಿ ಇಂದೇ ರಣದಲ್ಲಿ ದುರ್ಯೋಧನ, ಕರ್ಣ, ದುಃಶಾಸನ, ಸೌಬಲ ಮತ್ತು ವಿರೋಧಿಸುವ ಇತರರನ್ನು ಕೊಲ್ಲುತ್ತೇನೆ. ಅನಂತರ ಹಸ್ತಿನಾಪುರದಲ್ಲಿ ಸಹೋದರರೊಂದಿಗೆ ನೀನು ವಾಸಿಸಿ ಧೃತರಾಷ್ಟ್ರನ ಸಂಪತ್ತನ್ನು ಪಡೆದು ಇಡೀ ಭುಮಿಯನ್ನೇ ಆಳಬಹುದು.”
“ಆಗ ರಾಜನು ವೀರರ ಆ ಸಮಾಗಮದಲ್ಲಿ ಧೃಷ್ಟದ್ಯುಮ್ನನೂ ಸೇರಿ ಎಲ್ಲರೂ ಕೇಳುತ್ತಿರಲು ಹೇಳಿದನು: “ಜನಾರ್ದನ! ನಿನ್ನ ಮಾತನ್ನು ಸತ್ಯವೆಂದೇ ಸ್ವೀಕರಿಸುತ್ತೇನೆ. ನನ್ನ ಶತ್ರುಗಳನ್ನು ಅವರ ಸಂಬಂಧಿಕರೊಂದಿಗೆ ಕೊಲ್ಲುತ್ತೀಯೆ. ಆದರೆ ಕೇಶವ! ಇದನ್ನು ಹದಿಮೂರು ವರ್ಷಗಳ ನಂತರ ಸತ್ಯವಾಗಿಸು. ಯಾಕೆಂದರೆ, ರಾಜರ ಮಧ್ಯದಲ್ಲಿ ನಾನು ವನವಾಸದ ಪ್ರತಿಜ್ಞೆಯನ್ನು ಮಾಡಿದ್ದೇನೆ.” ಧರ್ಮರಾಜನ ಆ ಮಾತುಗಳನ್ನು ಕೇಳಿದ ಧೃಷ್ಟದ್ಯುಮ್ನನೇ ಮೊದಲಾದ ಸಭಾಸದರು ಒಪ್ಪಿಗೆ ಮತ್ತು ಭರವಸೆಯನ್ನಿತ್ತು ಸಿಟ್ಟಾಗಿದ್ದ ಕೇಶವನನ್ನು ಆ ಸಮಯಕ್ಕೆ ಉಚಿತವಾದ ಮೃದುಮಾತುಗಳಿಂದ ಸಂತವಿಸಿದರು. ಅವರು ವಾಸುದೇವನು ಕೇಳಿಸಿಕೊಳ್ಳುವಂತೆ ಬಹಳ ಕಷ್ಟದಲ್ಲಿದ್ದ ದ್ರೌಪದಿಗೆ ಹೇಳಿದರು: “ವರವರ್ಣಿನೀ! ದೇವೀ! ನಿನ್ನ ಕ್ರೋಧದಿಂದಾಗಿ ದುರ್ಯೋಧನನು ತನ್ನ ಜೀವವನ್ನು ಕಳೆದುಕೊಳ್ಳುತ್ತಾನೆ. ಇದು ಸತ್ಯವೆಂದು ತಿಳಿ. ದುಃಖಪಡಬೇಡ! ನಿನ್ನ ಸಿಟ್ಟನ್ನು ನೋಡಿ ನಿನ್ನ ಮೇಲೆ ಹಾಸ್ಯಮಾಡಿ ನಕ್ಕ ಅವರೆಲ್ಲರ ಮಾಂಸವನ್ನೂ ಪ್ರಾಣಿ ಪಕ್ಷಿಗಳು ತಿಂದು ನಗುತ್ತವೆ! ನಿನ್ನ ಉತ್ತಮಾಂಗಗಳನ್ನು ಹಿಡಿದು ಸಭೆಗೆ ಎಳೆದು ತಂದವರ ರುಂಡವನ್ನು ಎಳೆದಾಡುತ್ತಾ ಹದ್ದು ನರಿಗಳು ರಕ್ತವನ್ನು ಕುಡಿಯುತ್ತವೆ! ಕ್ರೂರ ಮೃಗಗಳು ಅವರ ಹೆಣಗಳನ್ನು ನೆಲದಮೇಲೆ ಎಳೆದಾಡಿ, ಎಡೆಬಿಡದೆ ಕಬಳಿಸುತ್ತಿರುವುದನ್ನು ನೀನು ನೋಡುತ್ತೀಯೆ! ನಿನ್ನನ್ನು ಕಾಡಿಸಿದ ಮತ್ತು ಅದನ್ನು ನಿರ್ಲಕ್ಷಿಸಿ ನೋಡುತ್ತಿದ್ದವರ ಶಿರಗಳು ಕತ್ತರಿಸಿ ಬಿದ್ದು ಭೂಮಿಯು ಅವರ ರಕ್ತವನ್ನು ಕುಡಿಯುತ್ತದೆ.”
“ಈ ರೀತಿ ಅಲ್ಲಿ ಸೇರಿದ್ದ ಎಲ್ಲ ಉತ್ತಮಗುಣಗಳ ತೇಜಸ್ವಿ ಶೂರ ಪುರುಷರ್ಷಭರು ಬಹುವಿಧದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಹದಿಮೂರು ವರ್ಷಗಳು ತುಂಬಿದ ನಂತರ ಧರ್ಮರಾಜನು ಆರಿಸಿದ ಈ ಮಹಾರಥಿಗಳು ವಾಸುದೇವನ ನಾಯಕತ್ವದಲ್ಲಿ ನಮ್ಮಮೇಲೆ ಆಕ್ರಮಣ ಮಾಡುತ್ತಾರೆ. ಧರ್ಮರಾಜನೊಂದಿಗೆ ರಾಮ, ಕೃಷ್ಣ, ಧನಂಜಯ, ಪ್ರದ್ಯುಮ್ನ, ಸಾಂಬ, ಯುಯುಧಾನ, ಭೀಮ, ಮಾದ್ರೀ ಸುತರು, ಕೇಕಯರಾಜಪುತ್ರ, ಪಾಂಚಾಲಪುತ್ರರು - ಇವರೆಲ್ಲ ಲೋಕವೀರರೂ, ಅಜೇಯರೂ, ಮಹಾತ್ಮರೂ, ಸಮರದಲ್ಲಿ ಹೋರಾಡಿ ತಮ್ಮ ಜೀವವನ್ನು ಉಳಿಸಿಕೊಳ್ಳಲು ಮುಂದಾಗುವ ತಮ್ಮ ಬಾಂಧವರು ಮತ್ತು ಸೈನ್ಯಗಳೊಡನೆ ಕೇಸರಿ ಸಿಂಹದಂತೆ ಕುಪಿತರಾಗಿದ್ದಾರೆ.”
ಧೃತರಾಷ್ಟ್ರನು ಹೇಳಿದನು: “ದ್ಯೂತದ ಸಮಯದಲ್ಲಿ ವಿದುರನು ನನಗೆ ಹೇಳಿದ್ದ – “ನರೇಂದ್ರ! ಒಂದು ವೇಳೆ ನೀನು ಪಾಂಡವರನ್ನು ಸೋಲಿಸಿದರೆ ಅದು ಖಂಡಿತವಾಗಿಯೂ ಕುರುಗಳ ಅಂತ್ಯವಾಗುತ್ತದೆ. ಮಹಾಭಯಂಕರ ರಕ್ತದ ಪ್ರವಾಹವು ಹರಿಯುವುದು!” ಸೂತ! ಹಿಂದೆ ಕ್ಷತ್ತನು ನನಗೆ ಹೇಳಿದ ಹಾಗೆಯೇ ಆಗುತ್ತದೆ ಎಂದು ನನಗನ್ನಿಸುತ್ತದೆ. ಪಾಂಡವರು ಒಪ್ಪಿಕೊಂಡ ಸಮಯದ ನಂತರ ಮುಂದೆ ಯುದ್ಧವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”