ಮೈತ್ರೇಯನು ದುರ್ಯೋಧನನಿಗೆ ಶಾಪವನ್ನಿತ್ತಿದುದು
ವ್ಯಾಸನು ಹೋಗುತ್ತಿದ್ದಂತೆಯೇ ಮೈತ್ರೇಯನು ಕಾಣಿಸಿಕೊಂಡನು ಮತ್ತು ಧೃತರಾಷ್ಟ್ರನು ಪುತ್ರರೊಂದಿಗೆ ಅವನನ್ನು ಪೂಜಿಸಿ ಬರಮಾಡಿಕೊಂಡನು. ಅಂಬಿಕಾಸುತ ರಾಜ ಧೃತರಾಷ್ಟ್ರನು ಆ ಮುನಿಪುಂಗವನಿಗೆ ಅರ್ಘ್ಯಾದಿ ಎಲ್ಲ ಸತ್ಕಾರಕ್ರಿಯೆಗಳನ್ನು ಪೂರೈಸಿ, ಅವನು ವಿಶ್ರಾಂತಗೊಳ್ಳಲು ವಿನಯದಿಂದ ಕೇಳಿದನು: “ಭಗವನ್! ಕುರುಜಂಗಲಕ್ಕೆ ನಿಮ್ಮ ಆಗಮನವು ಸುಖಕರವಾಗಿತ್ತೇ? ಐವರು ವೀರ ಪಾಂಡವ ಸಹೋದರರು ಕುಶಲರಾಗಿರುವರಷ್ಟೇ? ಆ ಪುರುಷರ್ಷಭರು ಒಪ್ಪಂದದಂತೆ ಇರಲು ಬಯಸುತ್ತಾರೆ ತಾನೇ? ಕುರುಗಳ ಒಳ್ಳೆಯ ಭ್ರಾತೃತ್ವವು ಅವಿಚ್ಛಿನ್ನವಾಗಿ ಉಳಿದುಕೊಳ್ಳುತ್ತದೆ ತಾನೇ?”
ಮೈತ್ರೇಯನು ಹೇಳಿದನು: “ತೀರ್ಥಯಾತ್ರೆಯನ್ನು ಮಾಡುತ್ತಾ ಅನುಕ್ರಮವಾಗಿ ಕುರುಜಂಗಲವನ್ನು ಸೇರಿದೆನು. ಅಲ್ಲಿ ಕಾಮ್ಯಕವನದಲ್ಲಿ ಧರ್ಮರಾಜನನ್ನು ನೋಡಿದೆನು. ಪ್ರಭೋ! ಜಟಾಜಿನ ಧಾರಿಣಿ ತಪೋವನ ವಾಸಿನಿ ಆ ಮಹಾತ್ಮನನ್ನು ನೋಡಲು ಮುನಿಗಣಗಳು ಒಟ್ಟಾಗಿ ಬಂದು ಸೇರಿದ್ದವು. ಅಲ್ಲಿ ನಿನ್ನ ಪುತ್ರರ ಕಪಟತನ, ಮತ್ತು ಅನ್ಯಾಯವಾಗಿ ದ್ಯೂತರೂಪದಲ್ಲಿ ಬಂದೊದಗಿದ ಮಹಾ ಅಪಾಯದ ಕುರಿತು ಕೇಳಿದೆನು. ಆಗ ಕೌರವರ ಕುರಿತು ಯೋಚಿಸಿದ ನಾನು ನಿನ್ನಲ್ಲಿಗೆ ಬಂದೆ. ನಿನ್ನ ಮೇಲೆ ನನಗೆ ಸದಾ ಅಧಿಕ ಸ್ನೇಹ ಮತ್ತು ಪ್ರೀತಿಯಿದೆ. ನೀನು ಮತ್ತು ಭೀಷ್ಮರು ಜೀವಂತವಾಗಿರುವಾಗಲೇ ನಿನ್ನ ಪುತ್ರರು ಅನ್ಯೋನ್ಯರನ್ನು ವಿರೋಧಿಸುವುದು ಸರಿಯಲ್ಲ. ಸ್ವಯಂ ನೀನೇ ಪ್ರಗ್ರಹ ನಿಗ್ರಹಗಳ ಮಧ್ಯದಲ್ಲಿದ್ದೀಯೆ. ಆದರೂ ನೀನು ಏಕೆ ಬೆಳೆದಿರುವ ಈ ಘೋರ ಅನ್ಯಾಯವನ್ನು ಉಪೇಕ್ಷಿಸುತ್ತಿದ್ದೀಯೆ? ನಿನ್ನ ಸಭೆಯಲ್ಲಿ ನಡೆದುದು ದಸ್ಯುಗಳ ವರ್ತನೆಯಂತಿತ್ತು! ತಾಪಸಿಗಳ ಸಮಾಗಮದಲ್ಲಿ ಅದು ನಿನ್ನ ಕೀರ್ತಿಯನ್ನು ಹೆಚ್ಚಿಸುವುದಿಲ್ಲ!”
ಆಗ ಭಗವಾನ್ ಋಷಿ ಮೈತ್ರೇಯನು ರಾಜ ಅಮರ್ಷಣ ದುರ್ಯೋಧನನ ಕಡೆ ತಿರುಗಿ ಈ ಮೃದು ಮಾತುಗಳನ್ನಾಡಿದನು: “ದುರ್ಯೋಧನ! ನಿನ್ನದೇ ಒಳಿತಾಗಿ ಹೇಳುವ ನನ್ನ ಈ ತಿಳುವಳಿಕೆಯ ಮಾತುಗಳನ್ನು ಕೇಳು. ಪಾಂಡವರನ್ನು ದ್ವೇಷಿಸಬೇಡ. ನಿನ್ನ, ಪಾಂಡವರ, ಕೌರವರ ಮತ್ತು ಲೋಕಕ್ಕೇ ಏನು ಹಿತವೋ ಅದನ್ನು ಮಾಡು! ಅವರೆಲ್ಲ ನರವ್ಯಾಘ್ರರೂ ಶೂರರು, ವಿಕ್ರಾಂತ ಯೋದ್ಧರು. ಎಲ್ಲರೂ ಆನೆಗಳ ಬಲವುಳ್ಳವರು ಮತ್ತು ವಜ್ರದಂತೆ ದೃಢರು. ಅವರೆಲ್ಲರೂ ಸತ್ಯವ್ರತ ಪರಾಯಣರು. ಎಲ್ಲರೂ ಅಭಿಮಾನಿ ಪುರುಷರು. ದೇವಶತ್ರುಗಳಾದ ಕಾಮರೂಪಿಣಿ ರಾಕ್ಷರನ್ನು -ಮುಖ್ಯವಾಗಿ ಹಿಡಿಂಬ, ಬಕ ಮತ್ತು ರಾಕ್ಷಸ ಕಿರ್ಮೀರರನ್ನು ಸಂಹರಿಸಿದವರು. ಇವರಲ್ಲಿ ಕೊನೆಯ ರೌದ್ರಾತ್ಮನು ಆ ಮಹಾತ್ಮರನ್ನು ರಾತ್ರಿಯಲ್ಲಿ ಮಾರ್ಗದಲ್ಲಿ ಸುತ್ತುವರೆದು ಪರ್ವತದಂತೆ ಅಚಲವಾಗಿ ನಿಂತಿರಲು ಸಮರಶ್ಲಾಘೀ ಬಲಿಗಳಲ್ಲಿಯೇ ಶ್ರೇಷ್ಠ ಭೀಮನು ಕ್ಷುದ್ರಮೃಗವನ್ನು ವ್ಯಾಘ್ರವೊಂದು ಕೊಲ್ಲುವಂತೆ ಬಲದಿಂದ ಸಂಹರಿಸಿದನು. ನೋಡು! ದಿಗ್ವಿಜಯದಲ್ಲಿ ಭೀಮನು ಹೇಗೆ ಜರಾಸಂಧನನ್ನು ಉರುಳಿಸಿದನು. ಆ ಮಹೇಷ್ವಾಸ ಜರಾಸಂಧನು ಯುದ್ಧದಲ್ಲಿ ಹತ್ತುಸಾವಿರ ಆನೆಗಳ ಬಲವನ್ನು ಹೊಂದಿದ್ದನು. ಯಾರ ಸಂಬಂಧಿಯು ವಾಸುದೇವನೋ ಮತ್ತು ಬಾವನು ಪಾರ್ಷತನೋ ಅವರನ್ನು ಮುಪ್ಪು ಮತ್ತು ಸಾವಿಗೆ ಅಧೀನನಾದ ಯಾವ ನರನು ತಾನೇ ಯುದ್ಧದಲ್ಲಿ ಎದುರಿಸಿಯಾರು? ನಿನ್ನ ಮತ್ತು ಪಾಂಡವರ ಮಧ್ಯೆ ಶಾಂತಿಯಿರಬೇಕು. ನಾನು ಹೇಳಿದಂತೆ ಮಾಡು. ಇಲ್ಲದಿದ್ದರೆ ಮೃತ್ಯುವಶನಾಗುತ್ತೀಯೆ.”
ಹೀಗೆ ಮೈತ್ರೇಯನು ಹೇಳತ್ತಿರಲು ಅವನು ಆನೆಯ ಸೊಂಡಿಲಿನಂತಿದ್ದ ತನ್ನ ತೊಡೆಯನ್ನು ತಟ್ಟಿದನು. ನಗುವಂತೆ ಮಾಡಿ ಆ ದುರ್ಮತಿ ದುರ್ಯೋಧನನು ಏನನ್ನೂ ಹೇಳದೇ ತಲೆಯನ್ನು ತಗ್ಗಿಸಿ ತನ್ನ ಕಾಲ ಬೆರಳಿನಿಂದ ನೆಲದ ಮೇಲೆ ಬರೆಯತೊಡಗಿದನು. ಹೇಳಿದ್ದುದನ್ನು ಕೇಳದೇ ದುರ್ಯೋಧನನು ನೆಲದ ಮೇಲೆ ಬರೆಯುತ್ತಿರುವುದನ್ನು ನೋಡಿ ಮೈತ್ರೇಯನು ಕೋಪಾವಿಷ್ಟನಾದನು. ಕೋಪಾವಿಷ್ಟನಾದ ಆ ಮುನಿಸತ್ತಮ ಮೈತ್ರೇಯನು ವಿಧಿಯ ಸೆಳೆತಕ್ಕೆ ಸಿಕ್ಕಿ ಅವನನ್ನು ಶಪಿಸಲು ನಿರ್ಧರಿಸಿದನು. ಆಗ ಕೋಪದಿಂದ ಅವನ ಕಣ್ಣುಗಳು ಕೆಂಪಾಗಲು, ನೀರನ್ನು ಮುಟ್ಟಿ ಮೈತ್ರೇಯನು ಆ ದುಷ್ಟಚೇತಸ ಧಾರ್ತರಾಷ್ಟ್ರನನ್ನು ಶಪಿಸಿದನು: “ನನ್ನನ್ನು ಅನಾದರಿಸಿ ನನ್ನ ಮಾತುಗಳಂತೆ ನಡೆದುಕೊಳ್ಳದೇ ಇದ್ದುದಕ್ಕೆ ನೀನು ಸದ್ಯವೇ ನಿನ್ನ ಅಭಿಮಾನದ ಫಲವನ್ನು ಹೊಂದುತ್ತೀಯೆ! ನಿನ್ನ ವಿದ್ರೋಹದಿಂದ ನಡೆಯುವ ಮಹಾ ಯುದ್ಧದಲ್ಲಿ ಬಲಿ ಭೀಮನು ತನ್ನ ಗದಾಪ್ರಹಾರದಿಂದ ನಿನ್ನ ತೊಡೆಯನ್ನು ಒಡೆಯುತ್ತಾನೆ!”
ಈ ಮಾತನ್ನು ಆಡುತ್ತಿದ್ದಂತೆಯೇ ಮಹೀಪತಿ ಧೃತರಾಷ್ಟ್ರನು “ಈ ರೀತಿ ಆಗದಂತೆ ಮಾಡು!” ಇಂದು ಆ ಮುನಿಯನ್ನು ಬೇಡಿಕೊಂಡನು.
ಮೈತ್ರೇಯನು ಹೇಳಿದನು: “ರಾಜನ್! ನಿನ್ನ ಮಗನು ಶಾಂತಿಯನ್ನು ಕೇಳಿಕೊಂಡರೆ ಶಾಪದಂತೆ ನಡೆಯುವುದಿಲ್ಲ. ಇದಕ್ಕೆ ವಿಪರೀತವಾಗಿ ನಡೆದುಕೊಂಡರೆ ಶಾಪದಂತೆಯೇ ನಡೆಯುತ್ತದೆ!”
ಅದನ್ನು ವಿಲಕ್ಷಣೆ ಮಾಡಿ ದುರ್ಯೋಧನನ ತಂದೆಯು ಮೈತ್ರೇಯನನ್ನು ಕೇಳಿದನು: “ಭೀಮಸೇನನು ಕಿರ್ಮೀರನನ್ನು ಹೇಗೆ ಉರುಳಿಸಿದನು?”
ಮೈತ್ರೇಯನು ಹೇಳಿದನು: “ಅಸೂಯೆಗೊಂಡಿರುವ ನಿನಗಾಗಲೀ ಅವಿಧೇಯನಾಗಿರುವ ನಿನ್ನ ಈ ಮಗನಿಗಾಗಲೀ ನಾನು ಇದನ್ನು ಹೇಳುವುದಿಲ್ಲ! ನಾನು ಹೊರಟು ಹೋದ ನಂತರ ಎಲ್ಲವನ್ನೂ ವಿದುರನು ನಿನಗೆ ಹೇಳುತ್ತಾನೆ.”
ಇದನ್ನು ಹೇಳಿ ಮೈತ್ರೇಯನು ಎದ್ದುಕೊಂಡು ಎಲ್ಲಿಂದ ಬಂದಿದ್ದನೋ ಅಲ್ಲಿಗೆ ಹೊರಟುಹೋದನು. ಕಿರ್ಮೀರನ ವಧೆಯಿಂದ ಚಿಂತಿತನಾದ ದುರ್ಯೋಧನನು ಹೊರಗೆ ಹೊರಟುಹೋದನು.