ಧೃತರಾಷ್ಟ್ರ-ವಿದುರರ ನಡುವೆ ಮನಸ್ತಾಪ

ಪಾಂಡವರು ವನಕ್ಕೆ ತೆರಳಿದ ನಂತರ ಪರಿತಪಿಸುತ್ತಿದ್ದ ಧೃತರಾಷ್ಟ್ರನು ಅಗಾಧಬುದ್ಧಿ ಧರ್ಮಾತ್ಮ ವಿದುರನಿಗೆ ಇಂತೆಂದನು:

“ನಿನ್ನ ಬುದ್ಧಿಯು ಭಾರ್ಗವನದಷ್ಟೇ ಶುದ್ಧವಾದುದು. ನಿನ್ನ ಧರ್ಮವು ಶ್ರೇಷ್ಠ ಮತ್ತು ಸೂಕ್ಷ್ಮ. ಕುರುಗಳು ನಿನ್ನನ್ನು ನಿಷ್ಪಕ್ಷಪಾತಿ ಎಂದು ಒಪ್ಪಿಕೊಳ್ಳುತ್ತಾರೆ. ಅವರಿಗೆ ಮತ್ತು ನನಗೆ ಈಗ ಯಾವುದು ಒಳ್ಳೆಯದು ಎನ್ನುವುದನ್ನು ಹೇಳು! ವಿದುರ! ಇವೆಲ್ಲ ನಡೆದುಹೋಯಿತಲ್ಲ! ಈಗ ನಾನು ಏನು ಮಾಡಬೇಕು? ಪ್ರಜೆಗಳು ನಮ್ಮೊಂದಿಗೇ ಇರುವಂತೆ ಹೇಗೆ ಮಾಡಬಹುದು? ಅವರು ನಮ್ಮನ್ನು ಸಮೂಲವಾಗಿ ನಾಶಪಡಿಸುವುದನ್ನಾಗಲೀ ಅವರು ನಾಶಹೊಂದುವುದನ್ನಾಗಲೀ ನಾನು ಬಯಸುವುದಿಲ್ಲ.”

ಅದಕ್ಕೆ ವಿದುರನು ಉತ್ತರಿಸಿದನು:

ನರೇಂದ್ರ! ಧರ್ಮದ ಮೂರು ಮೂಲಗಳಲ್ಲಿ ರಾಜ್ಯವೂ ಒಂದು ಎಂದು ಹೇಳುತ್ತಾರೆ. ನಿನ್ನ ಶಕ್ತಿಯಿದ್ದಷ್ಟು ಧರ್ಮದಲ್ಲಿ ನಡೆದುಕೊಂಡು ನಿನ್ನ ಮಕ್ಕಳು ಮತ್ತು ಕುಂತಿಯ ಮಕ್ಕಳು ಎಲ್ಲರನ್ನೂ ಪಾಲಿಸು. ಇದೇ ಧರ್ಮವನ್ನು ಸಭೆಯಲ್ಲಿ ಶಕುನಿಯೇ ಮೊದಲಾದ ಪಾಪಾತ್ಮರು ಉಲ್ಲಂಘಿಸಿದರು. ನಿನ್ನ ಮಗನು ಆ ಸತ್ಯಸಂಧ ಯುಧಿಷ್ಠಿರನನ್ನು ಜೂಜಿಗೆ ಆಹ್ವಾನಿಸಿ ಸೋಲಿಸಿದನು. ಅಂದು ನೀನು ಅದನ್ನು ನಡೆಯಲು ಬಿಟ್ಟಿದ್ದರೂ ಇಂದು ನಿನ್ನನ್ನು ಉಳಿಸಿಕೊಳ್ಳುವ ಉಪಾಯವನ್ನು ನಾನು ಕಂಡಿದ್ದೇನೆ. ಇದರಿಂದ ನಿನ್ನ ಪುತ್ರನು ಪಾಪಗಳಿಂದ ಮುಕ್ತನಾಗಿ ಒಳ್ಳೆಯವನಾಗಿ ಲೋಕದ ಗೌರವಕ್ಕೆ ಪಾತ್ರನಾಗುತ್ತಾನೆ. ನಿನ್ನದಕ್ಕಿಂತ ಅಧಿಕವಾಗಿ ಪಾಂಡುಪುತ್ರರಿಂದ ಏನೆಲ್ಲ ಪಡೆದಿದ್ದೀಯೋ ಅವೆಲ್ಲವನ್ನೂ ಪಾಂಡುಪುತ್ರರಿಗೆ ಹಿಂದಿರುಗಿಸು. ರಾಜನಾದವನು ತನ್ನದಾಗಿದ್ದುದರಲ್ಲಿ ತೃಪ್ತಿಯನ್ನು ಪಡೆದು ಇತರರದ್ದನ್ನು ಮೋಸದಿಂದ ತನ್ನದಾಗಿಸಿಕೊಳ್ಳಬಾರದು ಎನ್ನುವುದೇ ಪರಮ ಧರ್ಮ. ಶಕುನಿಯನ್ನು ನಿಂದಿಸಿ ಪಾಂಡವರನ್ನು ಸಂತೋಷಪಡಿಸುವುದೇ ನೀನು ಮಾಡಬೇಕಾದ ಮುಖ್ಯ ಕಾರ್ಯ. ನಿನ್ನ ಮಕ್ಕಳು ಉಳಿಯಬೇಕೆಂದಿದ್ದರೆ ಇದನ್ನು ಆದಷ್ಟು ಬೇಗ ಮಾಡು. ನೀನು ಇದನ್ನು ಮಾಡದಿದ್ದರೆ ಕುರುಗಳ ವಿನಾಶವು ನಿಶ್ಚಯ. ಕ್ರುದ್ಧ ಭೀಮಸೇನ-ಅರ್ಜುನರು ಯುದ್ಧದಲ್ಲಿ ಅವರ ಶತ್ರುಗಳ್ಯಾರನ್ನೂ ಉಳಿಸುವುದಿಲ್ಲ. ಯಾರ ಯೋಧನು ಲೋಕದಲ್ಲಿಯೇ ಶ್ರೇಷ್ಠ ಗಾಂಡಿವ ಧನುಸ್ಸಿನ ಕೃತಾಸ್ತ್ರ ಸವ್ಯಸಾಚಿ ಅರ್ಜುನನೋ ಮತ್ತು ಯಾರ ಯೋಧನು ಭೀಮನಂತ ಬಲಶಾಲಿಯೋ ಅಂಥವರಿಗೆ ಲೋಕದಲ್ಲಿ ಏನನ್ನು ಪಡೆಯಲು ಸಾಧ್ಯವಿಲ್ಲ? ಹಿಂದೆ ನಿನ್ನ ಮಗನು ಹುಟ್ಟುವಾಗಲೇ ನಾನು ನಿನಗೆ “ನಿನ್ನ ಈ ಪುತ್ರನನ್ನು ಕುಲಕ್ಕಾಗಿ ತ್ಯಜಿಸು!” ಎಂಬ ಹಿತಕರ ಮಾತನ್ನು ಹೇಳಿದ್ದೆ. ಆದರೂ ನೀನು ಅದನ್ನು ಮಾಡಲಿಲ್ಲ. ಈಗಲೂ ಈ ಹಿತಮಾತುಗಳಂತೆ ಮಾಡದಿದ್ದರೆ ನಂತರ ನೀನು ಪಶ್ಚಾತ್ತಾಪ ಪಡುತ್ತೀಯೆ. ಪಾಂಡವರೊಂದಿಗೆ ಒಂದೇ ರಾಜ್ಯವನ್ನಾಳಲು ನಿನ್ನ ಮಗನು ಒಪ್ಪಿಕೊಂಡರೆ ಮತ್ತು ನಿನ್ನ ಮಗನ ಮತ್ತು ಅವನ ಸಹಾಯಕರು ನಿನ್ನ ನಿಯಂತ್ರಣದಲ್ಲಿರಿಸಿಕೊಂಡರೆ ನೀನು ದುಃಖಿಸುವುದಿಲ್ಲ. ನಿನ್ನ ಮಗನು ಈ ಪ್ರೀತಿಸಂಯೋಗಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅವನನ್ನು ಸೆರೆಹಿಡಿದು ಯುಧಿಷ್ಠಿರನನ್ನು ಅಧಿಪತಿಯನ್ನಾಗಿ ನಿಯೋಜಿಸು. ಅವನೇ ಧರ್ಮದಿಂದ ಈ ಭೂಮಿಯನ್ನು ಆಳಲಿ. ಆಗ ಸರ್ವಪಾರ್ಥಿವರೂ ನಮಗೆ ವೈಶ್ಯರಂತೆ ಅನುಯಾಯಿಗಳಾಗಿರುತ್ತಾರೆ. ದುರ್ಯೋಧನ-ಶಕುನಿ ಮತ್ತು ಕರ್ಣರು ಪಾಂಡುಪುತ್ರರೊಂದಿಗೆ ಪ್ರೀತಿಯಿಂದಿರಬೇಕು. ದುಃಶಾಸನನು ಸಭಾಮಧ್ಯದಲ್ಲಿ ದ್ರೌಪದಿ ಮತ್ತು ಭೀಮಸೇನರ ಕ್ಷಮೆಯನ್ನು ಕೇಳಬೇಕು. ಸ್ವಯಂ ನೀನೇ ಯುಧಿಷ್ಠಿರನನ್ನು ಸಂತವಿಸು. ಅವನನ್ನು ಗೌರವಿಸಿ ರಾಜ್ಯದಲ್ಲಿ ಸ್ಥಾಪಿಸು. ಇದನ್ನು ಮಾಡಿದರೆ ನೀನು ಕೃತಕೃತ್ಯನಾಗುವೆ!”

ಧೃತರಾಷ್ಟ್ರನು ಹೇಳಿದನು:

“ವಿದುರ! ಸಭೆಯಲ್ಲಿ ಪಾಂಡವರಿಗೆ ಮತ್ತು ನನಗೆ ಇದನ್ನೇ - ಅವರಿಗೆ ಹಿತವಾಗಿರುವ ಮತ್ತು ನನ್ನವರಿಗೆ ಅಹಿತವಾಗಿರುವ ಮಾತುಗಳನ್ನು ಹೇಳಿದ್ದೆ. ಇವು ಯಾವುದೂ ನನ್ನ ಮನಸ್ಸಿಗೆ ಹಿಡಿಯುವುದಿಲ್ಲ. ಪಾಂಡವರ ಪರವಾಗಿ ನೀನು ಹೇಗೆ ಈ ರೀತಿಯ ನಿಶ್ಚಯವನ್ನು ಮಾಡಬಲ್ಲೆ? ನೀನು ನನ್ನ ಹಿತದಲ್ಲಿಲ್ಲವೆಂದು ನನಗನ್ನಿಸುತ್ತದೆ. ಪಾಂಡವರಿಗಾಗಿ ನಾನು ನನ್ನ ಮಗನನ್ನು ಹೇಗೆತಾನೇ ತ್ಯಜಿಸಿಯೇನು? ಅವರೂ ಕೂಡ ನನ್ನ ಪುತ್ರರೆನ್ನುವುದರಲ್ಲಿ ಸಂಶಯವೇ ಇಲ್ಲ. ಆದರೂ ದುರ್ಯೋಧನನು ನನ್ನ ದೇಹದಿಂದ ಹುಟ್ಟಿದವನು. ಸಮತೆಯನ್ನು ತೋರಿಸುವ ಯಾರು ತಾನೇ ಪರರಿಗಾಗಿ ನಾನು ನನ್ನ ದೇಹವನ್ನೇ ತ್ಯಜಿಸುತ್ತೇನೆ ಎಂದು ಹೇಳಿಯಾನು? ನೀನು ಎಂದೂ ನನಗೆ ತಪ್ಪನ್ನು ಹೇಳಿಲ್ಲ. ಆದುದರಿಂದ ನಿನ್ನ ಈ ಅಧಿಕತನವನ್ನು ಸಹಿಸುತ್ತೇನೆ. ಈಗ ನೀನು ಎಲ್ಲಿ ಬೇಕಾದರೂ ಹೋಗಬಹುದು ಅಥವಾ ಬೇಕೆಂದರೆ ಇಲ್ಲಿಯೇ ಇರು. ಸತಿಯಲ್ಲದ ಸ್ತ್ರೀಯು ಸಂತವಿಸಿದರೂ ಹೊರಟು ಹೋಗುತ್ತಾಳೆ.”

ಇದನ್ನು ಹೇಳಿ ಧೃತರಾಷ್ಟ್ರನು ಅವಸರದಲ್ಲಿ ಎದ್ದು ಅಂತಃಪುರಕ್ಕೆ ತೆರಳಿದನು. “ಹೀಗಲ್ಲ!” ಎಂದು ಹೇಳುತ್ತಾ ವಿದುರನು ಪಾರ್ಥರು ಇರುವಲ್ಲಿಗೆ ತೆರಳಲು ತ್ವರೆಮಾಡಿದನು.

ಭರತರ್ಷಭ ಪಾಂಡವರಾದರೋ ವನದಲ್ಲಿ ವಾಸಿಸುವ ಉದ್ದೇಶದಿಂದ ಜಾಹ್ನವೀ ತಟದಿಂದ ತಮ್ಮ ಅನುಯಾಯಿಗಳ ಸಹಿತ ಕುರುಕ್ಷೇತ್ರದ ಕಡೆ ಪ್ರಯಾಣಿಸಿದರು. ಸರಸ್ವತೀ, ದೃಷದ್ವತಿ ಮತ್ತು ಯಮುನೆಯನ್ನು ದಾಟಿ ವನದಿಂದ ವನಕ್ಕೆ ಹೋಗುತ್ತಾ ಸತತವಾಗಿ ಪಶ್ಚಿಮದಿಕ್ಕಿನಲ್ಲಿ ಪ್ರಯಾಣಮಾಡಿದರು. ಆಗ ಸರಸ್ವತೀ ದಡದಲ್ಲಿ ಮರುಭೂಮಿಯ ಮಧ್ಯದಲ್ಲಿ ಕಾಮ್ಯಕ ಎಂಬ ಹೆಸರಿನ ಮುನಿಜನರಿಗೆ ಪ್ರಿಯವಾದ ವನವನ್ನು ನೋಡಿದರು. ಬಹಳಷ್ಟು ಮೃಗಗಳು ಮತ್ತು ದ್ವಿಜರು ವಾಸಿಸುತ್ತಿದ್ದ ಆ ವನದಲ್ಲಿ ಮುನಿಗಳಿಂದ ಸಾಂತ್ವನವನ್ನು ಪಡೆಯುತ್ತಾ ವೀರರು ನೆಲೆಸಿದರು. ಆಗ ವಿದುರನೂ ಕೂಡ ಪಾಂಡವರನ್ನು ನೋಡುವ ಇಚ್ಛೆಯಿಂದ ಒಂಟಿ ರಥದಲ್ಲಿ ಸಮೃದ್ಧ ಕಾಮ್ಯಕ ವನಕ್ಕೆ ಆಗಮಿಸಿದನು. ಶೀಘ್ರ ಅಶ್ವಗಳಿಂದ ಎಳೆಯಲ್ಪಟ್ಟ ವಾಹನದಿಂದ ವಿದುರನು ಆ ಕಾನನಕ್ಕೆ ಬಂದು ಏಕಾಂತ ಸ್ಥಳದಲ್ಲಿ ದ್ರೌಪದಿ, ಸಹೋದರರು ಮತ್ತು ಬ್ರಾಹ್ಮಣರೊಂದಿಗೆ ಕುಳಿತಿದ್ದ ಧರ್ಮರಾಜನನ್ನು ನೋಡಿದನು. ದೂರದಿಂದಲೇ ವಿದುರನನ್ನು ನೋಡಿದ ಆ ಸತ್ಯಸಂಥ ರಾಜನು ಸಹೋದರ ಭೀಮಸೇನನನ್ನು ಹತ್ತಿರ ಕರೆದು ಕೇಳಿದನು:

“ಭೇಟಿಯಾದಾಗ ಕ್ಷತ್ತನು ಏನು ಹೇಳಬಹುದು? ಸೌಬಲನು ಹೇಳಿಕಳುಹಿಸಿದಂತೆ ಇನ್ನೊಮ್ಮೆ ಜೂಜಿಗೆ ಕರೆಯಲು ಇಲ್ಲಿಗೆ ಬಂದಿರಬಹುದೇ? ದುಷ್ಟ ಶಕುನಿಯು ಇನ್ನೊಮ್ಮೆ ಜೂಜಿನಲ್ಲಿ ನಮ್ಮನ್ನು ಸೋಲಿಸಿ ನಮ್ಮ ಆಯುಧಗಳನ್ನು ಪಡೆಯಲು ಬಯಸಿರಬಹುದೇ? ಯಾರಾದರೂ ಇಲ್ಲಿಗೆ ಬಾ ಎಂದು ಆಹ್ವಾನಿಸಿದರೆ ಇಲ್ಲ ಎಂದು ಹೇಳುವುದಕ್ಕೆ ನನಗಾಗುವುದಿಲ್ಲ ಭೀಮಸೇನ! ಆದರೂ ಹೇಗಾದರೂ ಯಾರಾದರೂ ಗಾಂಡೀವವನ್ನು ಪಣವಾಗಿ ಗೆದ್ದರೆ ನಮಗೆ ಪುನಃ ರಾಜ್ಯಪ್ರಾಪ್ತಿಯಾಗುವುದಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ.”

ಪಾಂಡವೇಯರೆಲ್ಲರೂ ಎದ್ದು ನಿಂತು ವಿದುರನನ್ನು ಬರಮಾಡಿಕೊಂಡರು. ಅವರಿಂದ ಸತ್ಕೃತನಾದ ಅಜಮೀಢನು ಯಥೋಚಿತವಾಗಿ ಪಾಂಡುಪುತ್ರರೊಡನೆ ಕೂಡಿದನು. ವಿದುರನು ವಿಶ್ರಾಂತಿ ಪಡೆದ ನಂತರ ಆ ನರರ್ಷಭರು ಅವನು ಬಂದಿರುವ ಕಾರಣವನ್ನು ಕೇಳಿದರು. ಅವನಾದರೋ ಅವರಿಗೆ ಅಂಬಿಕೇಯ ಧೃತರಾಷ್ಟ್ರನು ನಡೆದುಕೊಂಡಿದುದರ ಕುರಿತು ವಿಸ್ತಾರವಾಗಿ ವಿವರಿಸಿದನು:

“ಅಜಾತಶತ್ರು! ನನ್ನನ್ನು ಪರಿಪಾಲಿಸುವ ಧೃತರಾಷ್ಟ್ರನು ನನ್ನನ್ನು ಸ್ವಾಗತಿಸಿ ಗೌರವಿಸಿ ಹೇಳಿದನು: ‘ಹೀಗೆಲ್ಲ ನಡೆದುಹೋಗಿರಲು, ಇಬ್ಬರಿಗೂ ಸಮತೆಯನ್ನು ತೋರಿಸಿ, ಅವರಿಗೆ ಮತ್ತು ನಮಗೆ ಸರಿಯಾದುದು ಏನು ಹೇಳು!’ ನಾನು ಕೌರವರಿಗೆ ಏನು ತಕ್ಕುದಾದುದೋ ಮತ್ತು ಧೃತರಾಷ್ಟ್ರನಿಗೂ ಹಿತವೂ ಸರಿಯೂ ಆದುದೋ ಅದನ್ನು ಹೇಳಿದೆನು. ಆದರೆ ನನ್ನ ಸಲಹೆಯು ಅವನ ಮನಸ್ಸನ್ನು ತಲುಪಲಿಲ್ಲ, ಮತ್ತು ಬೇರೆ ಏನನ್ನು ಹೇಳಲೂ ನನಗೆ ಮನಸ್ಸಾಗಲಿಲ್ಲ. ಯಾವುದು ಪರಮ ಶ್ರೇಯವೋ ಅದನ್ನೇ ನಾನು ಹೇಳಿದೆ. ಆದರೆ ಅಂಬಿಕೇಯನು ಅದನ್ನು ಕೇಳಲಿಲ್ಲ. ರೋಗಿಗೆ ಪಥ್ಯ ಆಹಾರವು ರುಚಿಕರವೆನಿಸುವುದಿಲ್ಲದಂತೆ ನನ್ನ ಮಾತುಗಳು ಅವನಿಗೆ ಹಿಡಿಸಲಿಲ್ಲ. ಪ್ರದುಷ್ಟ ಸ್ತ್ರೀಯೋರ್ವಳನ್ನು ಶ್ರೋತ್ರಿಯ ಕಡೆ ಹೇಗೋ ಹಾಗೆ ಅವನನ್ನು ಶ್ರೇಯಸ್ಸಿನ ಕಡೆ ಕೊಂಡೊಯ್ಯಲು ಸಾಧ್ಯವಿಲ್ಲ. ಅರವತ್ತು ವರ್ಷದವನು ಕುಮಾರಿಗೆ ಪತಿಯಾಗಿ ಹೇಗೆ ಇಷ್ಟವಾಗುವುದಿಲ್ಲವೋ ಹಾಗೆ ನನ್ನ ಮಾತುಗಳು ಭರತರ್ಷಭನಿಗೆ ಇಷ್ಟವಾಗಲಿಲ್ಲ! ಕೌರವರ ವಿನಾಶವು ನಿರ್ಧರಿತವಾಗಿದೆ ಮತ್ತು ಧೃತರಾಷ್ಟ್ರನು ಶ್ರೇಯಸ್ಸನ್ನು ಕಾಣುವುದಿಲ್ಲ. ಕಮಲದ ದಂಟಿಗೆ ನೀರು ಹೇಗೆ ಅಂಟಿಕೊಳ್ಳುವುದಿಲ್ಲವೋ ಹಾಗೆ ಒಳ್ಳೆಯ ಸಲಹೆಯ ಮಾತುಗಳು ಅವನಿಗೆ ತಾಗುವುದಿಲ್ಲ. ಕೃದ್ಧನಾದ ಧೃತರಾಷ್ಟ್ರನು ನನಗೆ ಹೇಳಿದನು: ‘ಭಾರತ! ನಿನಗೆ ಎಲ್ಲಿ ಶ್ರದ್ಧೆಯಿದೆಯೋ ಅಲ್ಲಿಗೆ ಹೋಗು. ಈ ಭೂಮಿ ಮತ್ತು ಪುರವನ್ನು ಪಾಲಿಸಲು ಇನ್ನು ನನಗೆ ನಿನ್ನ ಸಹಾಯವು ಅಗತ್ಯವಿಲ್ಲ.’ ಧೃತರಾಷ್ಟ್ರನಿಂದ ತ್ಯಕ್ತನಾದ ನಾನು ತ್ವರೆಮಾಡಿ ಸಮಾಲೋಚನೆ ಮಾಡಲು ನಿನ್ನಲ್ಲಿಗೆ ಬಂದಿದ್ದೇನೆ. ಸಭೆಯಲ್ಲಿ ನಾನು ಹೇಳಿದ ಸರ್ವವನ್ನೂ ಮನಸ್ಸಿನಲ್ಲಿಟ್ಟುಕೋ. ಅವನ್ನೇ ಪುನಃ ಹೇಳುತ್ತೇನೆ. ತನ್ನ ಪ್ರತಿಸ್ಪರ್ಧಿಗಳಿಂದ ಸಂಪೂರ್ಣವಾಗಿ ಸೋತವನು ಕ್ಷಮಿಸಿ ಕಾಲವನ್ನು ಉಪಾಸಿಸುತ್ತಾನೆ. ಅಗ್ನಿಯನ್ನು ಹೇಗೆ ವೃದ್ಧಿಸುತ್ತೀವೋ ಹಾಗೆ, ನಿಧಾನವಾಗಿ ತನ್ನನ್ನು ತಾನೇ ವೃದ್ಧಿಗೊಳಿಸಿಕೊಂಡು ಏಕೈಕನಾಗಿ ಪೃಥ್ವಿಯನ್ನು ಅನುಭವಿಸುತ್ತಾನೆ. ತನ್ನ ಸಹಾಯಕರೊಂದಿಗೆ ಸಂಪತ್ತನ್ನು ಹಂಚಿಕೊಂಡವನಿಗೆ ಅವನು ದುಃಖದಲ್ಲಿರುವಾಗ ಸಹಾಯಕರಿರುತ್ತಾರೆ. ಇದೊಂದು ಸಹಾಯಕರನ್ನು ಒಟ್ಟುಮಾಡಿಕೊಳ್ಳುವ ಉಪಾಯ. ಸಹಾಯಕರಿಂದ ಪೃಥ್ವಿಯನ್ನೇ ಗೆಲ್ಲಬಹುದು. ಪ್ರಲಾಪವಿಲ್ಲದೇ ಸತ್ಯವನ್ನು ಹೇಳುವುದು ಶ್ರೇಷ್ಠ. ಭೋಜನವನ್ನು ಸಹಾಯಕರೊಂದಿಗೆ ಸಮನಾಗಿ ಹಂಚಿಕೊಳ್ಳುವುದು ಶ್ರೇಷ್ಠ. ಇನ್ನೊಬ್ಬರ ಮೊದಲೇ ಸ್ವಾರ್ಥವು ಬರಬಾರದು. ಅಂಥಹ ನಡತೆಯು ಭೂಮಿಪಾಲನನ್ನು ವೃದ್ಧಿಗೊಳಿಸುತ್ತದೆ.”

ಯುಧಿಷ್ಠಿರನು ಹೇಳಿದನು:

“ವಿದುರ! ನೀನು ಹೇಳಿದಹಾಗೆಯೇ ಮಾಡುತ್ತೇನೆ ಮತ್ತು ನಿನ್ನ ಮಹಾ ವಿವೇಕವನ್ನು ಮನಃಪೂರ್ವಕವಾಗಿ ಮಾಡುತ್ತೇನೆ. ಈ ಕಾಲದೇಶಗಳಿಗೆ ಹೊಂದುವಂಥಹ ಮತ್ತೇನನ್ನಾದರೂ ಹೇಳಬಯಸಿದರೆ ಅದರಂತೆಯೂ ಎಲ್ಲವನ್ನು ಮಾಡುತ್ತೇನೆ.”

ವಿದುರನು ಪಾಂಡವರ ಆಶ್ರಮದ ಬಳಿ ಹೋದನಂತರ ಮಹಾಪ್ರಾಜ್ಞ ಧೃತರಾಷ್ಟ್ರನು ಪರಿತಪಿಸಿದನು. ಅವನು ಸಭಾದ್ವಾರದ ಕಡೆ ಹೋಗಿ ವಿದುರನ ನೆನಪು ಬಂದು ಮೋಹಿತನಾಗಿ ಪಾರ್ಥಿವೇಂದ್ರರ ಸಮಕ್ಷಮದಲ್ಲಿಯೇ ಮೂರ್ಛೆತಪ್ಪಿ ಬಿದ್ದನು. ಪುನಃ ಎಚ್ಚೆತ್ತು ನೆಲದಿಂದ ಮೇಲೆದ್ದು ಆ ರಾಜನು ಹತ್ತಿರದಲ್ಲಿ ನಿಂತಿದ್ದ ಸಂಜಯನಿಗೆ ಹೇಳಿದನು:

“ನನ್ನ ತಮ್ಮ ಮಿತ್ರನು ಸಾಕ್ಷಾತ್ ಧರ್ಮನಂತಿದ್ದಾನೆ. ಅವನನ್ನು ನೆನಪಿಸಿಕೊಂಡರೆ ನನ್ನ ಹೃದಯವು ಹರಿದುಹೋಗುತ್ತಿದೆ. ಆದಷ್ಟು ಬೇಗನೇ ನನ್ನ ಧರ್ಮಜ್ಞ ತಮ್ಮನನ್ನು ಹಿಂದೆ ಕರೆದು ತಾ!” ಇದನ್ನು ಹೇಳಿದ ಆ ನೃಪತಿಯು ಕರುಣೆಯಿಂದ ಪರಿವೇದಿಸಿದನು. ಅನಂತರ, ಪಾಶ್ಚಾತ್ತಾಪದಿಂದ ಬೆಂದು ವಿದುರನ ನೆನಪಿನಿಂದ ಸೆಳೆಯಲ್ಪಟ್ಟು ಭ್ರಾತೃಸ್ನೇಹದಿಂದ ಸಂಜಯನಿಗೆ ಈ ಮಾತುಗಳನ್ನಾಡಿದನು: “ಹೋಗು ಸಂಜಯ! ನನ್ನ ತಮ್ಮ ವಿದುರನನ್ನು ತಿಳಿದಿದ್ದೇನೆ. ಕೋಪದಿಂದ ಹೊಡೆದ ನನ್ನ ಪಾಪಿಷ್ಟ ಪ್ರಹಾರದ ನಂತರವೂ ವಿದುರನು ಜೀವಂತವಿದ್ದಾನೆ! ನನ್ನ ತಮ್ಮನು ಎಂದೂ ಯಾವುದೇ ಸೂಕ್ಷ್ಮವಾದ ತಪ್ಪು-ಸುಳ್ಳುಗಳನ್ನೂ ಆಚರಿಸಿದವನಲ್ಲ! ಆ ಪರಮಬುದ್ಧಿವಂತನು ಈಗ ಏಕೆ ನನ್ನ ಕಾರಣದಿಂದ ತಪ್ಪುಕೆಲಸ ಮಾಡಿದವನೆಂದಾಗಬೇಕು? ಆ ಪ್ರಾಜ್ಞನು ತನ್ನ ಜೀವವನ್ನು ತೆಗೆದುಕೊಳ್ಳಬಾರದು. ಹೋಗಿ ಕರೆದುಕೊಂಡು ಬಾ!”

ರಾಜನ ಆ ಮಾತುಗಳನ್ನು ಕೇಳಿ, ಅವುಗಳನ್ನು ಅನುಮೋದಿಸುತ್ತಾ, ಸಂಜಯನು ಸರಿ ಎಂದು ಹೇಳಿ ಕಾಮ್ಯಕವನದ ಕಡೆ ತ್ವರೆಮಾಡಿದನು. ಸ್ವಲ್ಪವೇ ಸಮಯದಲ್ಲಿ ಅವನು ಪಾಂಡವರಿರುವ ಆ ವನವನ್ನು ಸೇರಿ ಅಲ್ಲಿ ರುರುಜಿನಗಳನ್ನು ಧರಿಸಿ, ಸಹಸ್ರಾರು ಬ್ರಾಹ್ಮಣರು, ವಿದುರ ಮತ್ತು ಸಹೋದರರೊಂದಿಗೆ, ದೇವತೆಗಳಿಂದ ಸುತ್ತುವರೆಯಲ್ಪಟ್ಟ ಶತಕ್ರತುವಿನಂತೆ, ಕುಳಿತಿದ್ದ ಯುಧಿಷ್ಠಿರನನ್ನು ಕಂಡನು. ಯುಧಿಷ್ಠಿರನನ್ನು ತಲುಪಿ ಸಂಜಯನು ಅವನನ್ನು ಗೌರವಿಸಿದನು. ಮತ್ತು ಭೀಮಾರ್ಜುನರನ್ನೂ ಯಮಳರನ್ನೂ ಅವರಿಗೆ ತಕ್ಕಂತೆ ಅಭಿನಂದಿಸಿದನು. ರಾಜನು ಕುಶಲವನ್ನು ಕೇಳಿದನು ಮತ್ತು ಸಂಜಯನು ಸುಖಾಸೀನನಾಗಲು ತಾನು ಬಂದಿರುವ ಕಾರಣವೇನೆಂದು ಹೇಳಿದನು:

“ಕ್ಷತ್ತ! ಅಂಬಿಕಾಸುತ ರಾಜ ಧೃತರಾಷ್ಟ್ರನು ನಿನ್ನನ್ನು ನೆನಪಿಸಿಕೊಂಡಿದ್ದಾನೆ. ಬೇಗನೇ ಹೋಗಿ ಅವನನ್ನು ಕಂಡು ಆ ಪಾರ್ಥಿವನನ್ನು ಪುನರ್ಜೀವಗೊಳಿಸು! ನರಶ್ರೇಷ್ಠ ಕುರುನಂದನ ಪಾಂಡವರಿಂದ ಬೀಳ್ಕೊಂಡು ತಕ್ಷಣವೇ ರಾಜಸಿಂಹನ ಬಳಿ ಹೋಗಬೇಕು.”

ಇದನ್ನು ಕೇಳಿ ಧೀಮಂತ, ಸ್ವಜನವತ್ಸಲ ವಿದುರನು ಯುಧಿಷ್ಠಿರನಿಂದ ಬೀಳ್ಕೊಂಡು ಪುನಃ ಗಜಾಹ್ವಯಕ್ಕೆ ಹಿಂದಿರುಗಿದನು. ಮಹಾಪ್ರಾಜ್ಞ ಪ್ರತಾಪವಾನ್ ಧೃತರಾಷ್ಟ್ರನು ಅವನಿಗೆ ಹೇಳಿದನು:

“ಧರ್ಮಜ್ಞ! ಒಳ್ಳೆಯದಾಯಿತು ನೀನು ಹಿಂದಿರುಗಿ ಬಂದೆ! ಒಳ್ಳೆಯದಾಯಿತು ನೀನು ನನ್ನನ್ನು ನೆನಪಿಸಿಕೊಂಡೆ! ನಿನ್ನಿಂದಾಗಿ ಇತ್ತೀಚೆಗೆ ದಿನ ರಾತ್ರಿಗಳಲ್ಲಿ ನಿದ್ದೆಯಿಲ್ಲದೇ ನನ್ನ ದೇಹದ ವಿಚಿತ್ರ ರೂಪವನ್ನು ಕಾಣುತ್ತೇನೆ.”

ಅವನು ವಿದುರರನ್ನು ತನ್ನ ತೋಳುಗಳಿಂದ ಬಿಗಿದಪ್ಪಿ, ನೆತ್ತಿಯನ್ನು ಆಘ್ರಾಣಿಸಿ,

“ರೋಷದಲ್ಲಿ ನಾನು ನಿನಗೆ ಹೇಳಿದುದನ್ನು ಕ್ಷಮಿಸು!”

ಎಂದು ಕೇಳಿಕೊಂಡನು. ವಿದುರನು ಹೇಳಿದನು:

“ರಾಜನ್! ಅದನ್ನು ನಾನು ಕ್ಷಮಿಸಿಯಾಗಿದೆ. ನೀನೇ ನಮ್ಮ ಪರಮ ಗುರು. ನಿನ್ನನ್ನು ನೋಡಲೆಂದೇ ನಾನು ಕ್ಷಿಪ್ರವಾಗಿ ಇಲ್ಲಿಗೆ ಬಂದೆ. ಧರ್ಮಚೇತಸ ಪುರುಷರು ದೀನರು ಮತ್ತು ಕೆಳಗೆ ಬಿದ್ದವರ ಸಹಾಯಕ್ಕೆಂದು ಏನೂ ವಿಚಾರಮಾಡದೇ ಹೋಗುತ್ತಾರೆ. ಪಾಂಡುವಿನ ಮಕ್ಕಳು ನನಗೆ ಹೇಗೋ ಹಾಗೆ ನಿನ್ನ ಮಕ್ಕಳೂ ಕೂಡ. ಅವರು ಕಷ್ಟದಲ್ಲಿದ್ದಾರೆ ಎಂದು ನನ್ನ ಮನಸ್ಸು ಇಂದು ಅವರ ಜೊತೆಯಲ್ಲಿದೆ.”

ಈ ರೀತಿ ಅನ್ಯೋನ್ಯರ ಹತ್ತಿರ ಬಂದು ಆ ಇಬ್ಬರು ಮಹಾದ್ಯುತಿ ಸಹೋದರರು ವಿದುರ ಮತ್ತು ಧೃತರಾಷ್ಟ್ರರು ಪರಮ ಸಂತೋಷವನ್ನು ಹೊಂದಿದರು.

Leave a Reply

Your email address will not be published. Required fields are marked *