Related imageದ್ಯೂತ: ದ್ರೌಪದೀ ವಸ್ತ್ರಾಪಹರಣ

ದ್ಯೂತಾರಂಭ

ಪಾಂಡವರು ಜೂಜಾಡುವವರಿಂದ ತುಂಬಿದ್ದ ರಮ್ಯ ಸಭೆಯನ್ನು ಪ್ರವೇಶಿಸಲು ಶಕುನಿಯು ಹೇಳಿದನು:

“ರಾಜನ್! ಸಭೆಯಲ್ಲಿ ಕಂಬಳಿಯನ್ನು ಹಾಸಿಯಾಗಿದೆ ಮತ್ತು ಇಲ್ಲಿರುವವರು ಸಂತೋಷಪಡಲು ಸಮಯವನ್ನು ತೆಗೆದಿಟ್ಟಿದ್ದಾರೆ. ನಾವು ದಾಳಗಳನ್ನು ಉರುಳಿಸುವಾಗ ಪಣದ ಕುರಿತು ಪರಸ್ಪರರಲ್ಲಿ ಒಪ್ಪಂದವಿರಲಿ.”

ಯುಧಿಷ್ಠಿರನು ಹೇಳಿದನು:

“ರಾಜನ್! ಪಣವಿಟ್ಟು ಜೂಜಾಡುವುದು ಮೋಸ ಮತ್ತು ಪಾಪದ ಕೆಲಸ. ಅದರಲ್ಲಿ ಕ್ಷತ್ರಿಯ ಪರಾಕ್ರಮವೇನೂ ಇಲ್ಲ ಮತ್ತು ಶಾಶ್ವತ ನೀತಿಯೂ ಇಲ್ಲ. ನೀನು ಏಕೆ ದ್ಯೂತವನ್ನು ಪ್ರಶಂಸಿಸುತ್ತಿದ್ದೀಯೆ? ಶಕುನಿ! ಜೂಜಾಡುವವನ ಕಪಟವನ್ನು ಯಾರೂ ಪ್ರಶಂಸಿಸುವುದಿಲ್ಲ, ಗೌರವಿಸುವುದಿಲ್ಲ. ನಮ್ಮನ್ನು ಕಪಟಮಾರ್ಗದಿಂದ ಕ್ರೂರವಾಗಿ ಸೋಲಿಸಬೇಡ.”

ಶಕುನಿಯು ಹೇಳಿದನು:

“ಸಂಖ್ಯೆಗಳನ್ನು ಅನುಸರಿಸುವ, ಮೋಸವನ್ನು ಗುರುತಿಸುವ, ದಾಳಗಳನ್ನು ಉರುಳಿಸುವುದರಲ್ಲಿ ನಿರಾಯಾಸನಾದ, ಮತ್ತು ದ್ಯೂತವನ್ನು ತಿಳಿದ ಮಹಾಮತಿಯು ದ್ಯೂತದ ಎಲ್ಲ ಪ್ರಕ್ರಿಯೆಗಳನ್ನೂ ಸಹಿಸಬಲ್ಲ. ಜೂಜಿನಲ್ಲಿ ಇಡುವ ಪಣವನ್ನು ಕಳೆದುಕೊಳ್ಳುವುದರಿಂದ ನಮಗೆ ಪರಮ ಕಷ್ಟವೆನಿಸಬಹುದು. ಆದುದರಿಂದ ಜೂಜಾಡುವುದು ಕೆಟ್ಟದೆಂದು ಹೇಳುತ್ತಾರೆ. ಪಾರ್ಥಿವ! ಜೂಜಾಡೋಣ. ಅನುಮಾನಪಡಬೇಡ. ಈಗಲೇ ಪಣವನ್ನು ಇಡು. ತಡಮಾಡಬೇಡ.”

ಯುಧಿಷ್ಠಿರನು ಹೇಳಿದನು:

“ಸದಾ ಲೋಕದ್ವಾರಗಳಿಗೆ ಸಂಚರಿಸುವ ಮುನಿಸತ್ತಮ ಅಸಿತ ದೇವಲರು ಈ ರೀತಿ ಹೇಳಿದ್ದಾರೆ: “ಮಾಯೆಯಿಂದ ಜೂಜಾಡುವರೊಂದಿಗೆ ಪಣವಿಡುವುದು ಪಾಪ. ಧರ್ಮವನ್ನು ಪಣವಿಟ್ಟು ಯುದ್ಧದಲ್ಲಿ ಜಯಗಳಿಸುವುದು ಇದಕ್ಕಿಂತಲೂ ಉತ್ತಮವಾದುದು. ಯಾವ ಆರ್ಯನೂ ಮ್ಲೇಚ್ಛಭಾಷೆಯಲ್ಲಿ ಮಾತನಾಡುವುದಿಲ್ಲ ಮತ್ತು ಮಾಯೆಯಿಂದ ನಡೆದುಕೊಳ್ಳುವುದಿಲ್ಲ. ಓರೆ ಕೋರೆಗಳಿಲ್ಲದ ನೇರ ಯುದ್ಧವೇ ಸತ್ಪುರುಷನ ವ್ರತ.” ನಮ್ಮ ಶಕ್ತಿಗನುಗುಣವಾಗಿ ಅರ್ಹ ಬ್ರಾಹ್ಮಣರನ್ನು ಪೂಜಿಸಲು ಪ್ರಯತ್ನಿಸುತ್ತೇವೆ. ಶಕುನಿ! ಆ ವಿತ್ತವನ್ನು ಮೀರಿ ಪಣವಿಟ್ಟು ಆಡಬೇಡ. ಅದಕ್ಕಿಂತಲೂ ಹೆಚ್ಚಿನದನ್ನು ಗೆಲ್ಲಬೇಡ. ನಾನು ಮೋಸದಿಂದ ಸುಖವನ್ನಾಗಲೀ ಧನವನ್ನಾಗಲೀ ಬಯಸುವುದಿಲ್ಲ. ಆದರೆ, ಮೋಸವಿಲ್ಲದ ಜೂಜಿಗೆ ಮಾನ್ಯತೆಯಿಲ್ಲ.”

ಶಕುನಿಯು ಹೇಳಿದನು:

“ಯುಧಿಷ್ಠಿರ! ಶ್ರೋತ್ರಿಯನ್ನು ಅಶ್ರೋತ್ರಿಯು ಕೇವಲ ಮೋಸದಿಂದಲೇ ಗೆಲ್ಲಬಹುದು. ವಿದ್ವಾನನು ಅವಿದುಷಿಯನ್ನೂ ಕೂಡ ಮೋಸದಿಂದಲೇ ಹಿಂದೆಮಾಡುತ್ತಾನೆ. ಆದರೆ ಜನರು ಅದನ್ನು ಮೋಸವೆಂದು ಕರೆಯುವುದಿಲ್ಲ. ನೀನು ನನ್ನಲ್ಲಿಗೆ ಬಂದಿದ್ದೀಯೆ. ಒಮ್ಮೆ ನಾನು ಮೋಸಗಾರನೆಂದು ನಿನಗನ್ನಿಸಿದರೆ ಮತ್ತು ಇದರಲ್ಲಿ ನಿನಗೆ ಭಯವೆನಿಸಿದರೆ ಜೂಜಿನಿಂದ ದೂರವಿರು.”

ಯುಧಿಷ್ಠಿರನು ಹೇಳಿದನು:

“ಎದುರಾಳಿಯು ಕರೆದಾಗ ನಾನು ಹಿಂಜರಿಯುವುದಿಲ್ಲ. ಇದು ನಾನು ನಡೆಸುತ್ತಿರುವ ವ್ರತ. ರಾಜನ್! ವಿಧಿಯು ಬಲಶಾಲಿಯು. ನಾನು ದೈವದ ವಶನಾಗಿದ್ದೇನೆ. ಈ ಸಮಾಗಮದಲ್ಲಿ ಯಾರೊಡನೆ ನಾನು ಜೂಜಾಡಬೇಕಾಗುತ್ತದೆ? ಎದುರು ಪಣವೇನಿದೆ? ದ್ಯೂತವನ್ನು ಆರಂಭಿಸೋಣ.”

ದುರ್ಯೋಧನನು ಹೇಳಿದನು:

“ವಿಶಾಂಪತೇ! ನಾನು ರತ್ನಗಳನ್ನು ಧನವನ್ನು ನೀಡುತ್ತೇನೆ. ನನ್ನ ಪರವಾಗಿ ನನ್ನ ಮಾತುಲ ಶಕುನಿಯು ದಾಳಗಳನ್ನೆಸೆಯುತ್ತಾನೆ.”

ಯುಧಿಷ್ಠಿರನು ಹೇಳಿದನು:

“ಒಬ್ಬನ ಪರವಾಗಿ ಇನ್ನೊಬ್ಬನು ಜೂಜಾಡುವುದು ನನಗೆ ಸರಿಯೆನ್ನಿಸುವುದಿಲ್ಲ. ನಿನಗೆ ಇದು ತಿಳಿದಿದೆ. ಇದನ್ನು ತಿಳಿದುಕೊಂಡು ನಿನಗಿಷ್ಟವಿದ್ದಂತೆ ಆಟವು ಪ್ರಾರಂಭವಾಗಲಿ.”

ದ್ಯೂತವು ಪ್ರಾರಂಭವಾದ ಹಾಗೆಯೇ ಧೃತರಾಷ್ಟ್ರನ ಮುಂದಾಳುತ್ವದಲ್ಲಿ ಸರ್ವ ರಾಜರು - ಇದರಿಂದ ಅತೀವ ಪ್ರೀತಮನಸ್ಕರಾಗಿರದ ಭೀಷ್ಮ, ದ್ರೋಣ, ಕೃಪ, ಮಹಾಮತಿ ವಿದುರ, ಮತ್ತು ಅನ್ಯರು - ಸಭೆಯನ್ನು ಪ್ರವೇಶಿಸಿದರು. ಆ ಸಿಂಹಗ್ರೀವ ಮಹೌಜಸರು ಜೋಡಿಗಳಲ್ಲಿ ಅಥವಾ ಒಬ್ಬಂಟಿಗರಾಗಿ ಸುಂದರ ವಿಶಾಲ ಸಿಂಹಾಸನಗಳಲ್ಲಿ ಆಸೀನರಾದರು. ಆ ಸಭೆಯು ಮಹಾಭಾಗ ದೇವತೆಗಳ ಸಮಾಗಮದಿಂದ ಶೋಭಿಸುವ ದಿವಿಯಂತೆ ಸಮಾಗತ ರಾಜರಿಂದ ಶೋಭಿಸುತ್ತಿತ್ತು. ಎಲ್ಲರೂ ವೇದವಿದರೂ, ಶೂರರೂ ಆಗಿದ್ದು ಸರ್ವರೂ ಭಾಸ್ಕರಮೂರ್ತಿಗಳಾಗಿದ್ದರು. ನಂತರ ಆ ಸುಹೃದಯಕರ ದ್ಯೂತವು ಪ್ರಾರಂಭವಾಯಿತು.

ಯುಧಿಷ್ಠಿರನು ಪಣಗಳನ್ನು ಸೋತುದು

ಯುಧಿಷ್ಠಿರನು ಹೇಳಿದನು:

“ರಾಜನ್! ಇಗೋ. ಸಾಗರಾವರ್ತಸಂಭವ ಮಣಿಹಾರಗಳು ಮತ್ತು ಶ್ರೀಮಾನ ಕನಕ ಉತ್ತಮ ಭೂಷಣಗಳ ಬಹುಧನ. ಇದು ನನ್ನ ಪಣ. ಇದಕ್ಕೆ ಪ್ರತಿಯಾದ ನಿನ್ನ ಪಣವೇನು? ನೀನು ಕ್ರಮದಿಂದಿರು. ಈ ಪಣವನ್ನು ನಾನೇ ಗೆಲ್ಲುತ್ತೇನೆ.”

ದುರ್ಯೋಧನನು ಹೇಳಿದನು:

“ನನ್ನಲ್ಲಿಯೂ ಮಣಿಗಳಿವೆ. ವಿವಿಧ ಧನಗಳಿವೆ. ಅರ್ಥದಲ್ಲಿ ನನಗೆ ಮತ್ಸರವಿಲ್ಲ. ಈ ಪಣವನ್ನು ನಾನೇ ಗೆಲ್ಲುತ್ತೇನೆ.”

ಆಗ ಅಕ್ಷತತ್ವವನ್ನು ತಿಳಿದಿದ್ದ ಶಕುನಿಯು ದಾಳಗಳನ್ನು ಹಿಡಿದನು. ಶಕುನಿಯು ಯುಧಿಷ್ಠಿರನಿಗೆ “ಗೆದ್ದೆ!” ಎಂದು ಹೇಳಿದನು. ಯುಧಿಷ್ಠಿರನು ಹೇಳಿದನು:

“ನಿನ್ನ ಚಾಕಚಕ್ಯತೆಯಿಂದ ನನ್ನನ್ನು ಮೋಹಗೊಳಿಸಿ ನೀನು ಈ ಆಟವನ್ನು ಗೆದ್ದಿದ್ದೀಯೆ ಶಕುನಿ! ಆಗಲಿ. ಈಗ ಜೂಜಾಡೋಣ. ಸಾವಿರಾರು ಬಾರಿ ದಾಳಗಳನ್ನು ಹಿಡಿಯೋಣ. ಪ್ರತಿಯೊಂದರಲ್ಲಿಯೂ ಒಂದೊಂದು ಸಾವಿರ ಚಿನ್ನದ ನಾಣ್ಯಗಳಿಂದ ತುಂಬಿರುವ ನೂರು ಕುಂಡಿಗಳಿವೆ. ನನ್ನ ಕೋಶವು ಅಕ್ಷಯ ಹಿರಣ್ಯವನ್ನೂ ಅನೇಕ ಚಿನ್ನವನ್ನೂ ಹೊಂದಿದೆ. ನನ್ನ ಈ ಧನವನ್ನು ನಿನಗಾಗಿ ಪಣವನ್ನಿಟ್ಟು ಆಡುತ್ತೇನೆ.”

ಅವನು ಹೀಗೆ ಹೇಳಲು ಶಕುನಿಯು ನೃಪನಿಗೆ “ಇದನ್ನೂ ಗೆದ್ದೆ!” ಎಂದು ಕೂಗಿ ಹೇಳಿದನು. ಯುಧಿಷ್ಠಿರನು ಹೇಳಿದನು:

“ಇದೋ ನನ್ನ ಸಹಸ್ರ ಸಮಿತ, ವೈಯಾಗ್ರ, ಸುಪ್ರವರ್ತಿತ, ಸುಂದರ ಚಕ್ರಗಳಿಂದ ನಡೆಯುವ, ಪ್ರಸಿದ್ಧ, ಗಂಟೆಗಳ ಮಾಲೆಗಳಿಂದ ಅಲಂಕೃತ, ನಮ್ಮನ್ನು ಇಲ್ಲಿಗೆ ಕರೆದುತಂದ ಗುಡುಗಿನ ಧ್ವನಿಯ ವಿಜಯಶಾಲಿ, ಪುಣ್ಯ, ಮೇಘಸಾಗರಗಳಂತೆ ಘರ್ಜಿಸುವ, ಬೂದುಬಣ್ಣದ ರಾಷ್ಟ್ರದಲ್ಲಿಯೇ ಪ್ರಶಂಸೆಗೊಂಡ ಭೂಮಿಯ ಮೇಲೆ ನಡೆಯುವ ಯಾರೂ ಇವರಿಂದ ತಪ್ಪಿಸಿಕೊಳ್ಳದ, ಒಳ್ಳೆಯ ಎಂಟು ಅಶ್ವಗಳಿಂದ ಎಳೆಯಲ್ಪಡುವ, ರಾಜರಥ. ನನ್ನ ಈ ಧನವನ್ನು ನಾನು ನಿನಗೆ ಕೊಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಯುಧಿಷ್ಠಿರನು ಹೇಳಿದನು:

“ಸೌಬಲ! ನನ್ನಲ್ಲಿ ಮದಿಸಿದ ಆನೆಗಳು ಸಹಸ್ರಸಂಖ್ಯೆಯಲ್ಲಿವೆ. ಇವುಗಳು ಬಂಗಾರದ ಫಲಕಗಳನ್ನು ಬಂಗಾರದ ಮಾಲೆಗಳನ್ನು ಮತ್ತು ಅಲ್ಲಲ್ಲಿ ಕಮಲಗಳನ್ನು ಧರಿಸಿವೆ. ರಾಜವಾಹನಗಳಾದ ಅವು ಚೆನ್ನಾಗಿ ಪಳಗಿಸಲ್ಪಟ್ಟಿವೆ ಮತ್ತು ರಣರಂಗದಲ್ಲಿ ಸರ್ವ ಶಬ್ಧಗಳನ್ನೂ ಸಹಿಸಬಲ್ಲವು. ಆ ಮಹಾಕಾಯಗಳ ದಂತಗಳು ಕಬ್ಬಿನಷ್ಟು ಉದ್ದಗಿವೆ, ಮತ್ತು ಪ್ರತಿಯೊಂದಕ್ಕೂ ಎಂಟು ಹೆಣ್ಣಾನೆಗಳ ಹಿಂಡಿವೆ. ಅವೆಲ್ಲವೂ ಮುಂದಿರುವುದನ್ನು ಉರುಳಿಸಬಲ್ಲ ಪರ್ವತ ಮತ್ತು ಮೋಡಗಳಿಂತಿರುವ ಆನೆಗಳು. ನನ್ನ ಈ ಧನವನ್ನು ನಾನು ನಿನಗೆ ಕೊಡುತ್ತಿದ್ದೇನೆ.”

ಪಾರ್ಥನ ಈ ಮಾತಿಗೆ ಶಕುನಿ ಸೌಬಲನು ನಕ್ಕು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಯುಧಿಷ್ಠಿರನು ಹೇಳಿದನು:

“ನನ್ನಲ್ಲಿ ನೂರು ಸಾವಿರ ಬಳೆ ಮತ್ತು ತೋಳುಬಂದಿಗಳನ್ನು ಧರಿಸಿದ, ಬಂಗಾರದ ಹಾರಗಳಿಂದ ಅಲಂಕೃತಗೊಂಡ ಅತಿಸುಂದರ ತರುಣಿ ದಾಸಿಯರಿದ್ದಾರೆ. ಅವರೆಲ್ಲರೂ ಬೆಲೆಬಾಳುವ ಮಾಲ್ಯಾಭರಣಗಳನ್ನೂ, ಸುಂದರ ವಸ್ತ್ರಗಳನ್ನೂ, ಚಂದನಲೇಪನಗಳನ್ನೂ, ಹೇಮ ಮಣಿಗಳನ್ನೂ, ಮತ್ತು ಸೂಕ್ಷ್ಮ ವಸ್ತ್ರಗಳನ್ನೂ ಧರಿಸಿದ್ದಾರೆ. ನೃತ್ಯಗಾನದಲ್ಲಿ ಕುಶಲರಾದ ಇವರು ನನ್ನ ಶಾಸನದಂತೆ ಸ್ನಾತಕರು, ಅಮಾತ್ಯರು ಮತ್ತು ರಾಜರುಗಳ ಸೇವೆಯಲ್ಲಿ ನಿರತರಾಗಿರುತ್ತಾರೆ. ನನ್ನ ಈ ಧನವನ್ನು ನಾನು ನಿನಗೆ ಕೊಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಯುಧಿಷ್ಠಿರನು ಹೇಳಿದನು:

“ನನ್ನಲ್ಲಿ ಅಷ್ಟೇ ಸಹಸ್ರ ಸಂಖ್ಯೆಯಲ್ಲಿ ದಾಸರಿದ್ದಾರೆ. ಇವರು ಕುಶಲರು ಮತ್ತು ಹೇಳಿದ ಹಾಗೆ ನಡೆದುಕೊಳ್ಳುವವರು. ಸದಾ ಸುಂದರ ವಸ್ತ್ರಗಳನ್ನು ಧರಿಸಿರುತ್ತಾರೆ. ಪ್ರಜ್ಞಾವಂತರು, ಮೇಧಾವಿಗಳು, ದಕ್ಷರೂ ಆದ ಈ ಯುವಕರು ನುಣುಪಾದ ಕುಂಡಲಗಳನ್ನು ಧರಿಸಿರುತ್ತಾರೆ. ಇವರು ಪಾತ್ರೆಗಳನ್ನು ಹಿಡಿದು ದಿನರಾತ್ರಿಯೂ ಅತಿಥಿಗಳಿಗೆ ಭೋಜನವನ್ನು ನೀಡುತ್ತಾರೆ. ಈ ನನ್ನ ಧನವನ್ನು ನಿನಗೆ ನಾನು ಕೊಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಯುಧಿಷ್ಠಿರನು ಹೇಳಿದನು:

“ಅಷ್ಟೇ ಸಂಖ್ಯೆಯ ಬಂಗಾರದಿಂದ ಮಾಡಲ್ಪಟ್ಟ, ಧ್ವಜಗಳನ್ನು ಹೊಂದಿದ, ವಿನೀತ ಹಯ, ಸಾರಥಿ ಮತ್ತು ಯೋಧರಿಂದ ಸಂಪನ್ನ ರಥಗಳು ನನ್ನಲ್ಲಿವೆ. ಒಬ್ಬೊಬ್ಬ ಯೋಧನಿಗೂ ಯುದ್ಧವಿರಲಿ ಯುದ್ಧವಿಲ್ಲದಿರಲಿ ಒಂದು ತಿಂಗಳಿಗೆ ಸಾವಿರಕ್ಕೂ ಹೆಚ್ಚು ಸಂಬಳವು ದೊರೆಯುತ್ತದೆ. ಈ ನನ್ನ ಧನವನ್ನು ನಾನು ನಿನಗೆ ಪಣವಾಗಿ ಇಡುತ್ತಿದ್ದೇನೆ.”

ಪಾರ್ಥನ ಈ ಮಾತುಗಳಿಗೆ ಕೃತವೈರಿ ದುರಾತ್ಮ ಶಕುನಿಯು ಯುಧಿಷ್ಠಿರನಿಗೆ “ಇದನ್ನೂ ಗೆದ್ದೆ!” ಎಂದು ಹೇಳಿದನು. ಯುಧಿಷ್ಠಿರನು ಹೇಳಿದನು:

“ಗಾಂಡೀವಧನ್ವನಿಗೆ ಸಂತುಷ್ಟನಾದ ಚಿತ್ರರಥನು ನೀಡಿದ ತ್ತಿತ್ತಿರಿ ಬಣ್ಣದ ಹೇಮಮಾಲಿನಿ ಗಂಧರ್ವ ಅಶ್ವಗಳಿವೆ. ನನ್ನ ಈ ಧನವನ್ನು ನಾನು ನಿನಗೆ ಪಣವಾಗಿ ನೀಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಯುಧಿಷ್ಠಿರನು ಹೇಳಿದನು:

“ನನ್ನಲ್ಲಿ ಲೆಖ್ಕವಿಲ್ಲದಷ್ಟು ರಥಗಳು, ಬಂಡಿಗಳು ಮತ್ತು ನನಗಾಗಿ ಕಟ್ಟಿದ ಕುದುರೆಗಳಿವೆ. ಇವುಗಳ ಸುತ್ತಲೂ ಬೇರೆ ಬೇರೆ ರೀತಿಯ ಪಶುಪ್ರಾಣಿಗಳಿವೆ. ಇವುಗಳೊಂದಿಗೆ ನನ್ನಲ್ಲಿ ಹಾಲುಕುಡಿದು ಪಾಯಸವನ್ನು ತಿಂದು ವಿಶಾಲ ವಕ್ಷಸ್ಥರಾದ ಬೇರೆ ಬೇರೆ ವರ್ಣಗಳಿಂದ ಸಾವಿರ ಸಾವಿರ ಆರಿಸಿದ ಅರವತ್ತು ಸಾವಿರ ಪುರುಷರಿದ್ದಾರೆ. ನನ್ನ ಈ ಧನವನ್ನು ನಿನಗೆ ನಾನು ಕೊಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಯುಧಿಷ್ಠಿರನು ಹೇಳಿದನು:

“ನನ್ನಲ್ಲಿ ತಾಮ್ರ ಮತ್ತು ಕಬ್ಬಿಣಗಳಿಂದ ಮಾಡಿದ ನಾಲ್ಕು ನೂರು ನಿಧಿಗಳಿವೆ. ಇವುಗಳೊಂದೊಂದರಲ್ಲಿಯೂ ಐದು ದ್ರೌಣಿ ಗಟ್ಟಿ ಬಂಗಾರವಿದೆ. ನನ್ನ ಈ ಧನವನ್ನು ನಾನು ನಿನಗೆ ಪಣವಾಗಿ ಇಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.

ವಿದುರನ ಹಿತವಚನ

ಆಗ ಧೃತರಾಷ್ಟ್ರನನ್ನುದ್ದೇಶಿಸಿ ವಿದುರನು ಹೇಳಿದನು:

“ಮಹಾರಾಜ! ಸಾಯುತ್ತಿರುವವನಿಗೆ ಔಷಧಿಯು ಹೇಗೆ ಹಿಡಿಸುವುದಿಲ್ಲವೋ ಹಾಗೆ ನಿನಗೆ ಇದನ್ನು ಕೇಳಲು ಇಷ್ಟವಿಲ್ಲದಿದ್ದರೂ ನಾನು ಈಗ ಏನು ಹೇಳುವೆನೋ ಅದನ್ನು ಕೇಳು. ಹುಟ್ಟಿದಾಕ್ಷಣವೇ ಯಾರು ನರಿಯ ಹಾಗೆ ವಿಸ್ವರವಾಗಿ ಕೂಗಿದನೋ ಆ ಪಾಪಚೇತಸ ದುರ್ಯೋಧನನೇ ಭಾರತರ ಕುಲಘ್ನ! ಅವನೇ ನಮ್ಮ ಸಾವಿಗೆ ಕಾರಣನಾಗುತ್ತಾನೆ. ದುರ್ಯೋಧನನ ರೂಪದಲ್ಲಿ ಮನೆಯಲ್ಲಿಯೇ ನರಿಯೊಂದು ವಾಸಿಸುತ್ತಿದೆ ಎಂದು ತಿಳಿದೂ ನೀನು ಜಾಗರೂಕತೆಯನ್ನು ವಹಿಸಲಿಲ್ಲ. ಕಾವ್ಯನ ಮಾತನ್ನು ನನ್ನಿಂದ ಕೇಳು. ಸರಾಯಿಯನ್ನು ಕುಡಿಯುವವನು ಕೆಳಗೆ ಬೀಳುತ್ತಾನೆ ಎನ್ನುವುದನ್ನು ತಿಳಿದಿರುವುದಿಲ್ಲ. ಮೇಲೇರಿದ ಅವನಿಗೆ ಕೆಳಗೆ ಬೀಳುತ್ತೇನೆ ಎನ್ನುವುದರ ಅರಿವು ಇರುವುದಿಲ್ಲ. ಇವನು, ಜೂಜಾಟದ ಸರಾಯಿಯಿಂದ ಮತ್ತನಾಗಿ ಸುತ್ತ ಮುತ್ತ ಏನನ್ನೂ ನೋಡುತ್ತಿಲ್ಲ. ಈ ಮಹಾರಥಿಗಳೊಂದಿಗೆ ವೈರವನ್ನು ಸಾಧಿಸಿ ಪ್ರಪ್ರಾತವನ್ನು ಕಾಣುತ್ತಾನೆ ಎನ್ನುವ ತಿಳುವಳಿಕೆ ಅವನಿಗಿಲ್ಲ. ರಾಜರಿಗೆ ಯಾವುದು ಅಸಮಂಜಸ ಎನ್ನುವುದು ನಿನಗೆ ತಿಳಿದೇ ಇದೆ. ಅಂಧಕರು, ಯಾದವರು ಮತ್ತು ಭೋಜರು ಸಮೇತರಾಗಿ ಕಂಸನನ್ನು ತಿರಸ್ಕರಿಸಿದರು. ಅವರ ಇಚ್ಛೆಯಂತೆ ಅಮಿತ್ರಘಾತಿ ಕೃಷ್ಣನು ಅವನನ್ನು ಸಂಹರಿಸಿದಾಗ, ಅವನ ಕುಲದವರು ಎಲ್ಲರೂ ನೂರು ವರ್ಷಗಳ ಪರ್ಯಂತ ಸಂತೋಷವನ್ನಾಚರಿಸಿದರು. ನಿನ್ನ ನಿಯುಕ್ತಿಯಂತೆ ಸವ್ಯಸಾಚಿಯು ಸುಯೋಧನನನ್ನು ನಿಗ್ರಹಿಸಲಿ ಮತ್ತು ಈ ಪಾಪಿಯ ನಿಗ್ರಹದಿಂದಾಗಿ ಕುರುಗಳು ಸುಖ ಸಂತೋಷವನ್ನು ಹೊಂದಲಿ. ಈ ಕಾಗೆಯಿಂದ ನವಿಲುಗಳನ್ನು ಪಡೆ. ಈ ನರಿಯಿಂದ ಹುಲಿಗಳನ್ನು ಹೊಂದು. ಪಾಂಡವರನ್ನು ಕೊಂಡುಕೋ. ಶೋಕಸಾಗರದಲ್ಲಿ ಮುಳುಗಬೇಡ. ಕುಲವನ್ನುಳಿಸಲು ಪುರುಷನನ್ನು ತ್ಯಜಿಸು. ಗ್ರಾಮವನ್ನುಳಿಸಲು ಕುಲವನ್ನು ತ್ಯಜಿಸು. ರಾಷ್ಟವನ್ನುಳಿಸಲು ಗ್ರಾಮವನ್ನು ತ್ಯಜಿಸು. ಮತ್ತು ಆತ್ಮವನ್ನು ಉಳಿಸಿಕೊಳ್ಳಲು ಪೃಥ್ವಿಯನ್ನೇ ತ್ಯಜಿಸು. ಹೀಗೆ ಸರ್ವಜ್ಞ ಸರ್ವಭಾವಜ್ಞ ಸರ್ವಶತ್ರುಭಯಂಕರ ಕಾವ್ಯನು ಜಂಬನನ್ನು ತ್ಯಜಿಸುವಂತೆ ಮಹಾ ಅಸುರರಿಗೆ ಹೇಳಿದ್ದನು. ವನದಲ್ಲಿ ಸಂಚರಿಸುತ್ತಿದ್ದ ಬಂಗಾರದ ಮೊಟ್ಟೆಗಳನ್ನು ಇಡುತ್ತಿದ್ದ ಯಾವುದೋ ಪಕ್ಷಿಯನ್ನು ಓರ್ವನು ಮನೆಗೆ ತೆಗೆದುಕೊಂಡು ಹೋಗಿ ಲೋಭದಿಂದ ಅದನ್ನು ಕೊಂದ ಎನ್ನುವುದನ್ನು ಕೇಳಿದ್ದೇವೆ. ಈ ಮನುಷ್ಯನು ಹಿರಣ್ಯದ ಆಸೆಯಿಂದ ಕುರುಡನಾಗಿ ಯಾವುದನ್ನು ಅವಲಂಬಿಸಿ ಸದಾ ವಾಸಿಸಬಹುದಾದೋ ಆ ಪಕ್ಷಿಯನ್ನೇ ಕೊಂದು ಒಂದೇ ಏಟಿನಲ್ಲಿ ಏನೆಲ್ಲ ಹೊಂದಿದ್ದನೋ ಮತ್ತು ಮುಂದೆ ಹೊಂದಬಹುದಾಗಿತ್ತೋ ಅವೆಲ್ಲವನ್ನೂ ನಾಶಪಡಿಸಿದನು. ತಕ್ಷಣ ದೊರೆಯುವ ಲಾಭಕ್ಕಾಗಿ ಪಾಂಡವರನ್ನು ದ್ವೇಷಿಸಬೇಡ. ಪಕ್ಷಿಯನ್ನು ಕೊಂದವನಂತೆ ನೀನೂ ಕೂಡ ನಂತರ ನೊಂದುತ್ತೀಯೆ. ಮಾಲಾಕಾರನಂತೆ ಪಾಂಡವರೆನ್ನುವ ಹೂವಿನ ತೋಟದಲ್ಲಿ ಪುನಃ ಪುನಃ ಅವರೊಂದಿಗೆ ಸ್ನೇಹದಿಂದಿದ್ದು, ಪುಷ್ಪಗಳು ಹುಟ್ಟುತ್ತಿದ್ದ ಹಾಗೆ ಒಂದೊಂದಾಗಿ ಅವನ್ನು ತೆಗೆದುಕೋ. ಇದ್ದಲು ಸುಡುವವನು ಮರವನ್ನು ಬೇರಿನ ಸಹಿತ ಸುಡುವಹಾಗೆ ಇವರನ್ನು ಸುಡಬೇಡ. ಮಕ್ಕಳು, ಅಮಾತ್ಯರು ಮತ್ತು ಸೇನೆಯೊಂದಿಗೆ ಪರಾಭವದೆಡೆಗೆ ಹೋಗಬೇಡ. ಒಂದಾಗಿರುವ ಪಾರ್ಥರನ್ನು ಯಾರುತಾನೆ ಯುದ್ಧದಲ್ಲಿ ಜಯಿಸಬಲ್ಲರು? ಸಾಕ್ಷಾತ್ ಮರುತ್ಪತಿಯು ಮರುತ್ತುಗಳ ಸಮೇತ ಬಂದರೂ ಸಾಧ್ಯವಿಲ್ಲ.

ಎಲ್ಲ ಕಲಹಗಳಿಗೆ, ಸುಳ್ಳು ಬೇಧಗಳಿಗೆ ಮತ್ತು ಮಹಾ ಯುದ್ಧಕ್ಕೆ ದ್ಯೂತವೇ ಕಾರಣವಾಗುತ್ತದೆ. ಇದಕ್ಕೆ ತೊಡಗಿರುವ ಧೃತರಾಷ್ಟ್ರ ಪುತ್ರ ದುರ್ಯೋಧನನು ಉಗ್ರ ವೈರತ್ವವನ್ನು ಸೃಷ್ಟಿಸುತ್ತಿದ್ದಾನೆ. ದುರ್ಯೋಧನನ ಅಪರಾದದಿಂದ ಪ್ರತೀಪನ ಕುಲದವರು, ಶಾಂತನವರು, ಭೀಮಸೇನನ ಕುಲದವರು, ಮತ್ತು ಬಾಹ್ಲೀಕರು ಎಲ್ಲರೂ ಶೋಕವನ್ನು ಹೊಂದುತ್ತಾರೆ. ಬರಿಯ ಮದದಿಂದ ದುರ್ಯೋಧನನು ಮದದಲ್ಲಿರುವ ಹೋರಿಯು ಹೇಗೆ ತನ್ನ ಕೋಡನ್ನೇ ತೀವಿ ತುಂಡುಮಾಡಿಕೊಳ್ಳುತ್ತದೆಯೋ ಹಾಗೆ ಇಡೀ ರಾಷ್ಟ್ರದ ಸುರಕ್ಷತೆಯನ್ನು ಅಪಹರಿಸಿದ್ದಾನೆ. ವೀರನಾಗಿರಲಿ ಕವಿಯಾಗಿರಲಿ ಯಾರು ತನ್ನ ದೃಷ್ಟಿಕೋಣವನ್ನು ಬಿಟ್ಟು ಇನ್ನೊಬ್ಬರ ಮನಸ್ಸಿನಂತೆ ನಡೆದುಕೊಳ್ಳುತ್ತಾನೋ ಅವನು ಬಾಲಕನಿಂದ ನಡೆಸಲ್ಪಡುವ ದೋಣಿಯನ್ನು ಏರಿ ಸಮುದ್ರವನ್ನು ದಾಟಲು ಹೋಗಿ ಘೋರವಾದ ವ್ಯಸನದಲ್ಲಿ ಮುಳುಗುತ್ತಾನೆ. ದುರ್ಯೋಧನನು ಪಾಂಡವರೊಂದಿಗೆ ಆಡುತ್ತಿದ್ದಾನೆ, ಮತ್ತು ಅವನು ಗೆಲ್ಲುತ್ತಿದ್ದಾನೆ ಎಂದು ನೀನು ಸಂತೋಷಪಡುತ್ತಿದ್ದೀಯೆ. ಈ ಒಂದು ಆಟದಿಂದ ಯುದ್ಧವು ಹುಟ್ಟುತ್ತದೆ, ಮತ್ತು ಅದರಿಂದ ಎಲ್ಲರ ವಿನಾಶವು ಉಂಟಾಗುತ್ತದೆ. ಈ ಕುಪ್ರಣೀತ ಆಟವು ಇದನ್ನು ಆಯೋಜಿಸಿದ ಪ್ರೌಢನ ಹೃದಯದ ಅಂತರಾಳದಲ್ಲಿ ಅಧೋಗತಿಯಲ್ಲಿರುವ ಫಲವನ್ನು ಆಕರ್ಷಿಸುತ್ತದೆ. ಯುಧಿಷ್ಠಿರನೊಂದಿಗೆ ಇದು ಸಫಲವಾದರೆ ಸುಧನ್ವಿಯಲ್ಲಿ ವೈರತ್ವವನ್ನು ಉಂಟುಮಾಡುತ್ತದೆ. ಪ್ರತೀಪನ ಮತ್ತು ಶಾಂತನವನ ಕುಲದವರೇ! ಕಾವ್ಯನ ಮಾತುಗಳನ್ನು ಕೇಳಿ. ಕಿಚ್ಚೇಳುತ್ತಿರುವ ಈ ಕೆಟ್ಟ ಬೆಂಕಿಯು ನಿಮ್ಮನ್ನು ಆವರಿಸದಿರಲಿ. ಯುದ್ಧದ ಮೊದಲೇ ಇದನ್ನು ಶಾಂತಗೊಳಿಸಿ. ದ್ಯೂತದಿಂದ ಪಾಂಡವ ಅಜಾತಶತ್ರುವಿಗೆ ಅಥವಾ ವೃಕೋದರ, ಸವ್ಯಸಾಚೀ ಅಥವಾ ಯಮಳರಿಗೆ ಉಂಟಾದ ಸಿಟ್ಟು ತಣಿಯದಿದ್ದರೆ ಅದರಿಂದ ಉಂಟಾಗುವ ತುಮುಲದಲ್ಲಿ ಯಾವ ದ್ವೀಪವು ದೊರೆಯಬಲ್ಲದು? ಈ ದ್ಯೂತದ ಮೊದಲೂ ನೀನು ನಿನ್ನ ಮನಸ್ಸಿನಲ್ಲಿ ಬಯಸಿದಷ್ಟು ಸಂಪತ್ತಿನ ಒಡೆಯನಾಗಿರುವೆ. ಪಾಂಡವರಿಂದ ಇನ್ನೂ ಹೆಚ್ಚಿನ ಸಂಪತ್ತನ್ನು ಪಡೆದರೆ ಅದು ಯಾರಿಗೆ ಬೇಕು? ಪಾರ್ಥರೇ ನಿನ್ನ ಸಂಪತ್ತಲ್ಲವೇ? ಸೌಬಲನಾಡುವ ದ್ಯೂತವು ನಮಗೆಲ್ಲ ಗೊತ್ತೇ ಇದೆ. ಆ ಪಾರ್ವತೀಯನು ದ್ಯೂತದಲ್ಲಿ ಕೈಚಳಕವನ್ನು ತಿಳಿದಿದ್ದಾನೆ. ಆದುದರಿಂದ ಮಾಯೆಯಿಂದ ಆಡುವ ಈ ಪಾರ್ವತೀಯ ಶಕುನಿಯು ಎಲ್ಲಿಂದ ಬಂದಿದ್ದಾನೋ ಅಲ್ಲಿಗೇ ಹೋಗಲಿ.”

ದುರ್ಯೋಧನನು ಹೇಳಿದನು:

“ವಿದುರ! ನೀನು ಯಾವಾಗಲೂ ಪರರ ಯಶಸ್ಸನ್ನು ಶ್ಲಾಘಿಸುತ್ತೀಯೆ ಮತ್ತು ಧಾರ್ತರಾಷ್ಟ್ರರನ್ನು ಒಳಗಿಂದೊಳಗೇ ಹೀಯಾಳಿಸುತ್ತೀಯೆ. ನಿನಗೆ ಯಾರಲ್ಲಿ ಪ್ರೀತಿಯಿದೆ ಎನ್ನುವುದನ್ನು ತಿಳಿದಿದ್ದೇವೆ. ಬಾಲಕರೆಂದು ತಿಳಿದು ನಮ್ಮನ್ನು ನೀನು ಮನ್ನಿಸುವುದಿಲ್ಲ. ಅವನ ನಿಂದನೆ ಪ್ರಶಂಸೆಯಲ್ಲಿಯೇ ಒಬ್ಬ ಪುರುಷನ ಪ್ರೀತಿ ಯಾರಲ್ಲಿದೆ ಎನ್ನುವುದನ್ನು ಚೆನ್ನಾಗಿ ತಿಳಿಯಬಹುದು. ನಿನ್ನ ನಾಲಗೆಯು ಹೃದಯ ಮತ್ತು ಮನಸ್ಸನ್ನು ತೆರೆಯುತ್ತದೆ. ಮನಸ್ಸಿನಲ್ಲಿರುವ ದ್ವಂದ್ವಗಳನ್ನೂ ಅದು ಪ್ರಕಟಿಸುತ್ತದೆ. ಅಪ್ಪಿಕೊಂಡ ಹಾವಿನಂತೆ ಇದ್ದೀಯೆ. ಪೋಷಕನನ್ನೇ ಕಾಡಿಸುವ ಬೆಕ್ಕಿನಂತಿದ್ದೀಯೆ. ಸಹೋದರನಿಗೆ ಕೇಡನ್ನು ಬಯಸುವುದು ಪಾಪವೆಂದು ಹೇಳುತ್ತಾರೆ. ನಿನಗೆ ಪಾಪದ ಭಯ ಸ್ವಲ್ಪವೂ ಇಲ್ಲವೇ? ಶತ್ರುಗಳನ್ನು ಗೆದ್ದು ಮಹಾ ಫಲವನ್ನು ಗಳಿಸುತ್ತೇವೆ. ನಮ್ಮೊಡನೆ ಅಷ್ಟೊಂದು ನಿಷ್ಟೂರವಾಗಿ ಮಾತನಾಡಬೇಡ. ನಮ್ಮ ದ್ವೇಷಿಗಳೊಂದಿಗೆ ನೀನು ಸೇರಿಕೊಂಡು ಸಂತೋಷದಿಂದಿರುವೆ ಮತ್ತು ಇನ್ನೂ ಕೆಟ್ಟದ್ದೆಂದರೆ ನಮ್ಮೊಡನೆಯೇ ದ್ವೇಷವನ್ನು ಸಾಧಿಸುತ್ತಿರುವೆ. ಅಕ್ಷಮವಾಗಿ ಮಾತನಾಡಿದವನು ಅಮಿತ್ರನಾಗುತ್ತಾನೆ ಮತ್ತು ಅಮಿತ್ರರನ್ನು ಪ್ರಶಂಸಿಸುವುದರ ಮೂಲಕ ತನ್ನ ಗುಟ್ಟನ್ನು ಅಡಗಿಸಿಟ್ಟುಕೊಳ್ಳುತ್ತಾನೆ. ನಾಚಿಕೆಯಿಂದಲಾದರೂ ಅವನ ಬಾಯಿಯು ಏಕೆ ಮುಚ್ಚುವುದಿಲ್ಲ? ನೀನು ಏನನ್ನು ಬಯಸಿದ್ದೆಯೋ ಅದನ್ನು ಇಂದು ಮಾತನಾಡುತ್ತಿದ್ದೀಯೆ. ನಮ್ಮನ್ನು ಅಪಮಾನಿಸಬೇಡ. ನಿನ್ನ ಮನಸ್ಸಿನಲ್ಲೇನಿದೆ ಎನ್ನುವುದನ್ನು ನಾವು ತಿಳಿದಿದ್ದೇವೆ. ಇದೂವರೆಗೆ ಗಳಿಸಿರುವ ಗೌರವವನ್ನು ಉಳಿಸಿಕೋ. ಇನ್ನೊಬ್ಬರ ವ್ಯವಹಾರದಲ್ಲಿ ಹೆಚ್ಚು ತಲೆಹಾಕಬೇಡ. ನಾನೇ ಮಾಡುತ್ತಿದ್ದೇನೆ ಎಂದು ನನ್ನನ್ನು ದೂರಬೇಡ. ಅಂಥಹ ಕಠೋರ ಮಾತುಗಳಿಂದ ಸದಾ ನಮ್ಮನ್ನು ಹೀಯಾಳಿಸಬೇಡ. ನೀನು ಏನನ್ನು ಯೋಚಿಸುತ್ತಿದ್ದೀಯೆ ಎಂದು ನಾನು ಎಂದೂ ನಿನ್ನನ್ನು ಕೇಳಲಿಲ್ಲ. ನಿನ್ನನ್ನು ಬೀಳ್ಕೊಡುತ್ತೇನೆ. ನಮ್ಮ ತಾಳ್ಮೆಯು ಕಡಿಮೆಯಾಗುತ್ತಿದೆ. ಗುರುವು ಒಬ್ಬನೇ. ಎರಡನೆಯ ಗುರುವೇ ಇಲ್ಲ. ಆ ಗುರುವು ಗರ್ಭದಲ್ಲಿ ಮಲಗಿರುವ ಪುರುಷನಿಗೆ ಹೇಳಿಕೊಡುತ್ತಾನೆ. ಅವನ ಹೇಳಿಕೆಯಂತೆಯೇ, ನೀರು ಹೇಗೆ ಹರಿಯುತ್ತದೆಯೋ ಹಾಗೆ, ನಾನೂ ಕೂಡ ಹರಿಯುತ್ತೇನೆ. ತಲೆಯಿಂದ ಕಲ್ಲನ್ನು ತುಂಡುಮಾಡುವವನಾಗಲೀ, ಅಥವಾ ಹಾವಿಗೆ ತಿನ್ನಿಸುವವನಾಗಲೀ ಏನು ಮಾಡಬೇಕೆಂದು ಅವನ ಅನುಶಾಸನವಿರುತ್ತದೆಯೋ ಅದರಂತೆಯೇ ಮಾಡುತ್ತಾನೆ. ಯಾರು ಬಲವಂತವಾಗಿ ಆಜ್ಞೆಯನ್ನು ನೀಡುತ್ತಾನೋ ಅವನನ್ನು ಅಮಿತ್ರನೆಂದು ತಿಳಿಯುತ್ತಾರೆ. ಪಂಡಿತನು ಮಿತ್ರನಂತೆ ವರ್ತಿಸುವವನ ಸಾಂಗತ್ಯವನ್ನು ಬಯಸುತ್ತಾನೆ. ಉರಿಯುತ್ತಿರುವ ಬೆಂಕಿಯನ್ನು ಹಚ್ಚಿದವನು ಮೊದಲೇ ಓಡಿ ಹೋಗದಿದ್ದರೆ ಉಳಿದಿರುವ ಭಸ್ಮವೂ ಅವನಿಗೆ ಕಾಣಲಿಕ್ಕೆ ಸಿಗುವುದಿಲ್ಲ. ದ್ವೇಷಿಸುವ ಶತ್ರುವಿನ ವರ್ಗದವನನ್ನು, ಅದರಲ್ಲೂ ವಿಶೇಷವಾಗಿ ಕೆಟ್ಟದ್ದನ್ನು ಬಯಸುವ ಮನುಷ್ಯನನ್ನು, ಎಂದೂ ಇಟ್ಟುಕೊಳ್ಳಬಾರದು. ನಿನಗಿಷ್ಟವಿದ್ದ ಕಡೆ ಹೋಗು. ಯಾಕೆಂದರೆ ಕೆಟ್ಟ ಹೆಂಡತಿಯು ಎಷ್ಟು ಒತ್ತಾಯಮಾಡಿದರೂ ಬಿಟ್ಟೇ ಹೋಗುತ್ತಾಳೆ.”

ವಿದುರನು ಹೇಳಿದನು:

“ಇಷ್ಟು ಮಾತ್ರಕ್ಕೆ ಯಾರನ್ನು ತ್ಯಜಿಸುತ್ತಾರೋ ಅವರ ಸಖ್ಯವು ಅಂತ್ಯವಾಯಿತೆಂದು ಇವನಿಗೆ ಹೇಳು ರಾಜನ್! ರಾಜರ ಬುದ್ಧಿಯು ತಿರುಗುತ್ತಿರುತ್ತದೆ. ಸಂತವಿಸುತ್ತಾ ಮುಸಲದಿಂದ ಹೊಡೆಯುತ್ತಾರೆ. ರಾಜಪುತ್ರ! ನೀನು ಇನ್ನೂ ಬಾಲಕನೆಂದು ತಿಳಿದಿದ್ದೀಯೆ. ಬಾಲಕನಾದ ನೀನು ನಾನೊಬ್ಬ ಮಂದಬುದ್ಧಿಯೆಂದು ತಿಳಿದಿದ್ದೀಯೆ. ಮೊದಲು ಒಬ್ಬನನ್ನು ಸ್ನೇಹಿತನನ್ನಾಗಿ ಮಾಡಿಕೊಂಡು ನಂತರ ಅವನನ್ನೇ ದೂಷಿಸುವವನು ಬಾಲಕನೇ ಸರಿ. ಶ್ರೋತ್ರಿಯ ಮನೆಯಲ್ಲಿ ದುಷ್ಟ ಸ್ತ್ರೀಯಿದ್ದರೆ ಹೇಗೋ ಹಾಗೆ ಮಂದಬುದ್ಧಿಯು ಯಾವ ಶ್ರೇಯಸ್ಸಿನೆಡೆಯೂ ಕೊಂಡೊಯ್ಯುವುದಿಲ್ಲ. ಆದರೆ ಅರುವತ್ತು ವರ್ಷದ ಪತಿಯು ಕುಮಾರಿಯೋರ್ವಳಿಗೆ ಹೇಗೋ ಹಾಗೆ ಇದು ಈ ಭರತರ್ಷಭನಿಗೆ ಇಷ್ಟವಾಗುವುದಿಲ್ಲ. ನೀನು ಮಾಡುವ ಎಲ್ಲ ಕಾರ್ಯಗಳ, ಅವು ಎಷ್ಟೇ ಹಿತವಾಗಿರಲಿ ಅಥವಾ ಅಹಿತವಾಗಿರಲಿ, ಪ್ರಿಯವಾದುದನ್ನು ಮಾತ್ರ ಕೇಳಲು ಬಯಸುತ್ತೀಯಾದರೆ ಸ್ತ್ರೀಯರಲ್ಲಿ, ಜಡರಲ್ಲಿ, ಪಂಗುಕರಲ್ಲಿ ಅಥವಾ ಅವರಂತೆ ಮೂಢರಾಗಿರುವವರಲ್ಲಿ ಹೋಗಿ ಕೇಳು. ನಿನಗೆ ಇಲ್ಲಿ ಅನುಪ್ರಿಯವಾಗಿ ಮಾತನಾಡುವ ಜನರು ಖಂಡಿತವಾಗಿಯೂ ದೊರೆಯುತ್ತಾರೆ. ಆದರೆ ಅಪ್ರಿಯವಾಗಿದ್ದರೂ ಒಳ್ಳೆಯ ಸಲಹೆಯನ್ನು ನೀಡುವವರು ದುರ್ಲಭ ಎಂದು ತಿಳಿದವರು ಹೇಳುತ್ತಾರೆ. ಒಡೆಯನಿಗೆ ಯಾವುದು ಇಷ್ಟ ಯಾವುದು ಇಷ್ಟವಿಲ್ಲ ಎನ್ನುವುದನ್ನು ಮರೆತು ತಾನು ಧರ್ಮದಲ್ಲಿದ್ದುಕೊಂಡು ಅಪ್ರಿಯವಾದರೂ ಉತ್ತಮ ಸಲಹೆಗಳನ್ನು ನೀಡುವವನಲ್ಲಿಯೇ ರಾಜನು ಸಹಾಯಕನನ್ನು ಕಾಣುತ್ತಾನೆ. ಆರೋಗ್ಯದಿಂದಿರಲು ಕಟುಕಾದ, ತೀಕ್ಷ್ಣವಾದ, ಸುಡುತ್ತಿರುವ, ಕೆಟ್ಟವಾಸನೆಯ ದ್ರವವನ್ನು ಸಾತ್ವಿಕರು ಕುಡಿಯುತ್ತಾರೆ. ಆದರೆ ಕೆಟ್ಟವರು ಅದನ್ನೇ ನಿರಾಕರಿಸುತ್ತಾರೆ. ಇದನ್ನು ಕುಡಿದು ನಿನ್ನ ಸಿಟ್ಟನ್ನು ಶಾಂತಗೊಳಿಸು. ವೈಚಿತ್ರವೀರ್ಯನಿಗೆ ಮತ್ತು ಅವನ ಮಗನಿಗೆ ಶಾಶ್ವತ ಯಶಸ್ಸು ಮತ್ತು ಸಂಪತ್ತನ್ನು ಬಯಸುತ್ತೇನೆ. ಇದು ಹೀಗಿರುವಾಗ ನಾನು ನಿನಗೆ ನಮಸ್ಕರಿಸಿ ಬೀಳ್ಕೊಳ್ಳುತ್ತೇನೆ. ನನಗೂ ಕೂಡ ವಿಪ್ರರು ಅವರ ಅಶೀರ್ವದಗಳನ್ನು ನೀಡಲಿ. ಕಣ್ಣಿನಲ್ಲಿ ವಿಷಕಾರುವ ಹಾವುಗಳನ್ನು ಸಿಟ್ಟಿಗೆಬ್ಬಿಸಬಾರದು ಎಂದು ಪಂಡಿತರು ಹೇಳುತ್ತಾರೆ. ಅದನ್ನೇ ನಾನು ನಿನಗೆ ಹೇಳಲು ಪ್ರಯತ್ನಿಸಿದೆ.”

ದ್ರೌಪದಿಯನ್ನು ಸೋತುದು

ಶಕುನಿಯು ಹೇಳಿದನು:

“ಯುಧಿಷ್ಠಿರ! ಪಾಂಡವರ ಬಹಳಷ್ಟು ಸಂಪತ್ತನ್ನು ಸೋತಿದ್ದೀಯೆ. ಇನ್ನೂ ಸೋಲದೇ ಇದ್ದ ಸಂಪತ್ತು ಇದ್ದರೆ ಹೇಳು.”

ಯುಧಿಷ್ಠಿರನು ಹೇಳಿದನು:

“ಸೌಬಲ! ನನ್ನಲ್ಲಿ ಅಸಂಖ್ಯ ಸಂಪತ್ತಿದೆ ಎಂದು ತಿಳಿ. ಶಕುನಿ! ನನ್ನ ಸಂಪತ್ತಿನ ಕುರಿತು ನೀನೇಕೆ ಕೇಳುತ್ತಿದ್ದೀಯೆ? ಪಣವಿಡಲು ಲೆಕ್ಕ ಮಾಡಲಾಗದಷ್ಟು, ತೂಕಮಾಡಲಾಗದಷ್ಟು, ಕೋಟಿಗಟ್ಟಲೆ, ಪದ್ಮಗಟ್ಟಲೆ, ಅರ್ಬುದಗಟ್ಟಲೆ, ಸಮುದ್ರದ ನೀರಿನ ಹನಿಗಳನ್ನು ಹೇಗೆ ಲೆಖ್ಕಮಾಡಲು ಅಸಾಧ್ಯವೋ ಅಷ್ಟು ಧನ ನನ್ನಲ್ಲಿದೆ.! ಈ ನನ್ನ ಧನವನ್ನು ನಾನು ನಿನಗೆ ಕೊಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಯುಧಿಷ್ಠಿರನು ಹೇಳಿದನು:

“ನನ್ನಲ್ಲಿ ಅಸಂಖ್ಯ ಹೆಚ್ಚು ಹಾಲನ್ನೀಯುವ ಗೋವುಗಳು, ಕುದುರೆಗಳು ಇವೆ. ಸಿಂಧುವಿನ ಪೂರ್ವಕ್ಕೆ ನಮ್ಮ ಬಣ್ಣದ ಜನರಲ್ಲಿರುವ ಎಲ್ಲವೂ ನನ್ನವೇ. ನನ್ನ ಈ ಧನವನ್ನೇ ನಿನಗೆ ನಾನು ನೀಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಯುಧಿಷ್ಠಿರನು ಹೇಳಿದನು:

“ರಾಜನ್! ಇನ್ನು ನನ್ನಲ್ಲಿ ಉಳಿದಿರುವ ಧನವೆಂದರೆ ನನ್ನ ನಗರ, ಜನಪದ, ಬ್ರಾಹ್ಮಣರದ್ದನ್ನು ಬಿಟ್ಟು ಉಳಿದ ಭೂಮಿ, ಬ್ರಾಹ್ಮಣರನ್ನು ಬಿಟ್ಟು ಉಳಿದ ನಾಗರೀಕರು. ನನ್ನ ಇವೆಲ್ಲವನ್ನೂ ನಿನಗೆ ನಾನು ಕೊಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಯುಧಿಷ್ಠಿರನು ಹೇಳಿದನು:

“ರಾಜನ್! ಇಗೋ ರಾಜಪುತ್ರರು ಧರಿಸಿ ಶೋಭಿಸುತ್ತಿರುವ ಎಲ್ಲ ಕುಂಡಲಗಳು, ಎದೆ ಕವಚಗಳು, ಅಂಗವಿಭೂಷಣಗಳು. ಈ ನನ್ನ ಧನವನ್ನು ನಿನಗೆ ನಾನು ಕೊಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಯುಧಿಷ್ಠಿರನು ಹೇಳಿದನು:

“ಶ್ಯಾಮವರ್ಣಿ ಲೋಹಿತಾಕ್ಷ ಸಿಂಹಸ್ಕಂಧ ಮಹಾಭುಜ ಯುವಕ ನಕುಲ ಮತ್ತು ಅವನ ಒಡೆತನದಲ್ಲಿರುವ ಎಲ್ಲ ಧನವೂ ನನ್ನ ಈ ಒಂದು ಕೈಗೆ.”

ಶಕುನಿಯು ಹೇಳಿದನು:

“ರಾಜನ್! ಆದರೆ ರಾಜಪುತ್ರ ನಕುಲನು ನಿನ್ನ ಪ್ರಿಯಕರನು. ಈ ಪಣವನ್ನೂ ನಾವು ಗೆದ್ದರೆ ನಿನ್ನಲ್ಲಿ ಪಣವಿಡಲು ಬೇರೆ ಏನಿದೆ?”

ಇದನ್ನು ಕೇಳಿದ ಶಕುನಿಯು ದಾಳಗಳೊಂದಿಗೆ ಮಾತನಾಡಿದನು. ನಂತರ ಶಕುನಿಯು ಯುಧಿಷ್ಠಿರನಿಗೆ “ಇದನ್ನೂ ಗೆದ್ದೆ!” ಎಂದು ಕೂಗಿ ಹೇಳಿದನು. ಯುಧಿಷ್ಠಿರನು ಹೇಳಿದನು:

“ಈ ಸಹದೇವನು ಧರ್ಮವನ್ನು ಹೇಳಿಕೊಡುತ್ತಾನೆ. ಇವನು ಲೋಕದಲ್ಲಿ ಪಂಡಿತನೆಂದು ಕರೆಯಲ್ಪಟ್ಟಿದ್ದಾನೆ. ಇದಕ್ಕೆ ಅನರ್ಹನಾದ ಈ ಪ್ರಿಯ ರಾಜಪುತ್ರನನ್ನು ಅಪ್ರಿಯನ ಹಾಗೆ ನಾನು ನಿನಗೆ ಕೊಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಶಕುನಿಯು ಹೇಳಿದನು:

“ರಾಜನ್! ನಿನಗೆ ಪ್ರಿಯರಾದ ಮಾದ್ರೀಪುತ್ರರೀರ್ವರನ್ನೂ ನಾನು ಗೆದ್ದೆ. ಆದರೂ ಭೀಮಸೇನ ಮತ್ತು ಧನಂಜಯರಲ್ಲಿ ನಿನಗೆ ಹೆಚ್ಚಿನ ಪ್ರೀತಿಯಿದೆ ಎಂದು ನನಗನ್ನಿಸುತ್ತದೆ.”

ಯುಧಿಷ್ಠಿರನು ಹೇಳಿದನು:

“ನ್ಯಾಯವಾದುದನ್ನು ನೋಡದೇ ಅಧರ್ಮದಲ್ಲಿ ನಡೆದುಕೊಳ್ಳುತ್ತಿದ್ದೀಯೆ. ಮೂಢ! ಸುಮನಸ್ಕರಾದ ನಮ್ಮಲ್ಲಿ ಭೇದವನ್ನು ಉಂಟುಮಾಡಲು ಬಯಸುತ್ತಿದ್ದೀಯೆ.”

ಶಕುನಿಯು ಹೇಳಿದನು:

“ಮತ್ತನಾದವನು ಹಳ್ಳದಲ್ಲಿ ಬೀಳುತ್ತಾನೆ. ಪ್ರಮತ್ತನಾದವನು ಮರಕ್ಕೇ ಎಡವುತ್ತಾನೆ. ರಾಜನ್! ನೀನು ಜ್ಯೇಷ್ಠ. ಹಿರಿಯವನು. ನಿನಗೆ ನನ್ನ ವಂದನೆಗಳು. ಜೂಜಾಡುವವರು ಹುಚ್ಚರಂತೆ ಮಾತನಾಡುತ್ತಾರೆ ಮತ್ತು ಕನಸಿನಲ್ಲಿಯೂ ನನಸಿನಲ್ಲಿಯೂ ಕಂಡಿರದಂಥಹ ದೃಶ್ಯಗಳನ್ನು ಕಾಣುತ್ತಾರೆ.”

ಯುಧಿಷ್ಠಿರನು ಹೇಳಿದನು:

“ಶಕುನಿ! ಯುದ್ಧದಲ್ಲಿ ನಮ್ಮನ್ನು ನಾವೆಯಂತೆ ಪಾರುಮಾಡಿ ರಿಪುಗಳನ್ನು ಜಯಿಸಿದ ತರಸ್ವೀ ಲೋಕವೀರ ಮತ್ತು ಇದಕ್ಕೆ ಅನರ್ಹನಾದ ಫಲ್ಗುನನನ್ನು ನಿನಗೆ ಕೊಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಶಕುನಿಯು ಹೇಳಿದನು:

“ಇಗೋ! ಈ ಪಾಂಡವ ಧನುರ್ಧರ, ಪಾಂಡವ ಸವ್ಯಸಾಚಿಯನ್ನು ನಾನು ಪರಾಜಿತಗೊಳಿಸಿದ್ದೇನೆ. ರಾಜನ್! ಇನ್ನು ಪಣವನ್ನಿಡಲು ನಿನ್ನಲ್ಲಿ ಉಳಿದಿರುವವನು ನಿನ್ನ ಪ್ರೀತಿಯ ಪಾಂಡವ ಭೀಮ.”

ಯುಧಿಷ್ಠಿರನು ಹೇಳಿದನು:

“ವಜ್ರಿ ದಾನವಶತ್ರುವಿನಂತೆ ಒಬ್ಬನೇ ಯುದ್ಧದಲ್ಲಿ ನಮ್ಮ ನಾಯಕನಾಗಿ ನಮಗೆ ಮಾರ್ಗದರ್ಶನ ನೀಡಿದ, ಹುಬ್ಬುಗಳನ್ನು ಬಿಗಿಮಾಡಿ ಕೆಳಗೇ ದಿಟ್ಟಿಟ್ಟು ನೋಡುತ್ತಿರುವ, ಸದಾ ಸಿಟ್ಟಿನಲ್ಲಿರುವ ಆ ಸಿಂಹಸ್ಕಂಧ ಬಲದಲ್ಲಿ ಯಾರೂ ಸರಿಸಾಟಿಯನ್ನು ಹೊಂದದಿದ್ದ ಗದಾಯೋದ್ಧರಲ್ಲಿಯೇ ಶ್ರೇಷ್ಠ ಅರಿಮರ್ದನ ರಾಜಪುತ್ರ ಭೀಮಸೇನನನ್ನು, ಅವನು ಇದಕ್ಕೆ ಅನರ್ಹನಾದರೂ, ರಾಜನ್! ನಾನು ನಿನಗೆ ನೀಡುತ್ತಿದ್ದೇನೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಶಕುನಿಯು ಹೇಳಿದನು:

“ಕೌಂತೇಯ! ನೀನು ಬಹಳ ಸಂಪತ್ತನ್ನೂ, ಭ್ರಾತೃಗಳನ್ನೂ, ಆನೆ ಕುದುರೆಗಳನ್ನೂ ಸೋತಿದ್ದೀಯೆ. ಇನ್ನು ಸೋತುಕೊಳ್ಳಲು ಬೇರೆ ಏನಾದರೂ ಇದ್ದರೆ ಹೇಳು.”

ಯುಧಿಷ್ಠಿರನು ಹೇಳಿದನು:

“ನನ್ನ ಎಲ್ಲ ಭ್ರಾತೃಗಳಿಂದ ಗಾಢವಾಗಿ ಪ್ರೀತಿಸಲ್ಪಟ್ಟ ನಾನೇ ಉಳಿದಿದ್ದೇನೆ. ಗೆದ್ದನಂತರ ನಾವು ನಾಶವಾಗುವವರೆಗೆ ನಿನ್ನ ಸೇವೆ ದಾಸರಾಗಿರುತ್ತೇವೆ.”

ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು. ಶಕುನಿಯು ಹೇಳಿದನು:

“ನಿನ್ನನ್ನು ನೀನೇ ಸೋಲಿಸಿಕೊಂಡು ನೀನು ಒಂದು ಪಾಪಿಷ್ಟ ಕಾರ್ಯವನ್ನೇ ಎಸೆಗಿದ್ದೀಯೆ. ರಾಜನ್! ಇನ್ನೂ ಧನವು ಉಳಿದಿರುವಾಗ ತನ್ನನ್ನು ತಾನು ಸೋಲಿಸಿಕೊಳ್ಳುವುದು ಪಾಪ.”

ಅಲ್ಲಿ ಕುಳಿತಿದ್ದ ಸರ್ವ ಲೋಕವೀರರನ್ನೂ ಒಂದೊಂದೇ ಎಸೆತದಲ್ಲಿ ಗೆದ್ದಿದ್ದ ಆ ಅಕ್ಷಜ್ಞಾನಿ, ಜೂಜಿನಲ್ಲಿ ಚಾಕಚಕ್ಯತೆಯನ್ನು ಹೊಂದಿದ್ದ ಶಕುನಿಯು ಈ ರೀತಿ ಹೇಳಿದನು:

“ಇನ್ನೂ ಒಂದು ಎಸೆತವನ್ನು ಗೆಲ್ಲಲು ನಿನ್ನ ಪ್ರಿಯ ದೇವಿಯಿದ್ದಾಳೆ. ಕೃಷ್ಣಾ ಪಾಂಚಾಲಿಯನ್ನು ಪಣವನ್ನಾಗಿಟ್ಟು ನಿನ್ನನ್ನು ಪುನಃ ಗೆಲ್ಲು.”

ಯುಧಿಷ್ಠಿರನು ಹೇಳಿದನು:

“ಗಾತ್ರದಲ್ಲಿ ಅತಿ ಸಣ್ಣವಳೂ ಅತಿ ದೊಡ್ಡವಳೂ ಆಗಿಲ್ಲದ, ಅತಿ ಕಪ್ಪೂ ಅಥವಾ ಅತಿ ಕೆಂಪೂ ಅಲ್ಲದ, ಪ್ರೇಮದಿಂದ ಕಣ್ಣುಗಳು ಕೆಂಪಾಗಿರುವ ಅವಳನ್ನು ನಾನು ನಿನಗೆ ಪಣವನ್ನಾಗಿ ಇಡುತ್ತಿದ್ದೇನೆ. ರೂಪದಲ್ಲಿ ಶ್ರೀಯ ಸಮಾನ ಅವಳಿಗೆ ಶರತ್ಕಾಲ ಕಮಲದ ಎಸಳುಗಳಂಥಹ ಕಣ್ಣುಗಳಿವೆ. ಅವಳು ಶರತ್ಕಾಲ ಕಮಲದ ಸುಗಂಧವನ್ನು ಸೂಸುತ್ತಾಳೆ, ಶರತ್ಕಾಲ ಕಮಲಗಳನ್ನು ಸೇವಿಸುತ್ತಾಳೆ. ಕ್ರೂರತ್ವವೆನ್ನುವುದೇ ಇಲ್ಲದ ಅವಳು ಪುರುಷರು ಇಚ್ಛಿಸುವ ಸ್ತ್ರೀಯಂತೆ ರೂಪಸಂಪದಳು ಮತ್ತು ಶೀಲಸಂಪದಳು. ಕೊನೆಯಲ್ಲಿ ಮಲಗಿ ಮೊದಲೇ ಏಳುವ ಅವಳು ಗೋಪಾಲಕರು ಮತ್ತು ಆಡು ಮೇಯಿಸುವ ಯಾರಿಗೆ ಏನನ್ನು ಮಾಡಬೇಕು ಏನನ್ನು ಮಾಡಬಾರದು ಎನ್ನುವುದನ್ನು ತಿಳಿದಿದ್ದಾಳೆ. ಬೆವರಿದ ಅವಳ ಪದ್ಮವಕ್ತ್ರವು ಮಲ್ಲಿಕದಂತೆ ಬೆಳಗುತ್ತದೆ, ವೇದಿಯಂಥಹ ನಡುವಿರುವ ಅವಳು ದೀರ್ಘಕೇಶೀ ಮತ್ತು ತಾಮ್ರಾಕ್ಷೀ. ಅವಳ ದೇಹದಮೇಲೆ ಸ್ವಲ್ಪವೂ ರೋಮಗಳಿಲ್ಲ. ಸೌಬಲ! ಈ ಎಲ್ಲ ವಿವಿಧ ಗುಣಗಳನ್ನು ಹೊಂದಿದ ಸುಮಧ್ಯಮೆ ಚಾರ್ವಾಂಗಿ ದ್ರೌಪದಿ ಪಾಂಚಾಲಿಯನ್ನು ನಾನು ಪಣವಾಗಿ ಇಡುತ್ತಿದ್ದೇನೆ.”

ಧರ್ಮರಾಜನು ಈ ರೀತಿ ಮಾತನ್ನಾಡಲು ಸಭೆಯಲ್ಲಿರುವ ಹಿರಿಯರೆಲ್ಲರೂ “ಧಿಕ್ಕಾರ! ಧಿಕ್ಕಾರ!” ಎಂದು ಕೂಗಿದರು. ಆ ಸಭೆಯೇ ಕಂಪಿಸಿತು. ರಾಜರುಗಳು ತಮ್ಮ ತಮ್ಮೊಳಗೇ ಮಾತನಾಡಿಕೊಳ್ಳತೊಡಗಿದರು. ಭೀಷ್ಮ, ದ್ರೋಣ ಕೃಪ ಮೊದಲಾದವರು ಬೆವರಿನಲ್ಲಿ ಮುಳುಗಿದರು. ವಿದುರನು ಶಕ್ತಿಯನ್ನು ಕಳೆದುಕೊಂಡವನಂತೆ ತಲೆಯನ್ನು ಹಿಡಿದುಕೊಂಡು, ಕೆಳಗೆ ನೋಡುತ್ತಾ, ಸರ್ಪದಂತೆ ನಿಟ್ಟಿಸುರು ಬಿಡುತ್ತಾ ಯೋಚನೆಯಲ್ಲಿ ತೊಡಗಿದನು. ಆದರೆ ಸಂಹೃಷ್ಟ ಧೃತರಾಷ್ಟ್ರನು ತನ್ನ ಆಕಾರವನ್ನು ರಕ್ಷಿಸಲು ಅಸಮರ್ಥನಾಗಿ ಪುನಃ ಪುನಃ

“ಅವನು ಗೆದ್ದನೇ? ಅವನು ಗೆದ್ದನೇ?”

ಎಂದು ಕೇಳುತ್ತಿದ್ದನು. ಕರ್ಣ, ದುಃಶಾಸನ ಮೊದಲಾದವರು ಅತ್ಯಂತ ಹರ್ಷಿತರಾದರು. ಆದರೆ ಸಭೆಯಲ್ಲಿರುವ ಇತರರ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಸೌಬಲನು ಏನೂ ವಿಚಾರಮಾಡದೇ ಗೆಲುವಿನ ಮದೋತ್ಕಟನಾಗಿ, “ನಾನು ಗೆದ್ದೆ!” ಎಂದು ಹೇಳುತ್ತಾ ದಾಳಗಳನ್ನು ಉರುಳಿಸಿದನು. ದುರ್ಯೋಧನನು ಹೇಳಿದನು:

“ಕ್ಷತ್ತ! ಇಲ್ಲಿ ಬಾ! ಪಾಂಡವರು ಗೌರವಿಸುವ ಪ್ರಿಯ ಭಾರ್ಯೆ ದ್ರೌಪದಿಯನ್ನು ಕರೆದುಕೊಂಡು ಬಾ! ತಕ್ಷಣವೇ ಅವಳು ನಮ್ಮ ಇತರ ದಾಸಿಯರೊಂದಿಗೆ ಮನೆಯನ್ನು ಗುಡಿಸಲಿ ಮತ್ತು ಇತರ ಕೆಲಸಗಳನ್ನು ಮಾಡಲಿ. ಅದನ್ನು ನೋಡಲು ಏನು ಸಂತೋಷ!”

ವಿದುರನು ಹೇಳಿದನು:

“ನಿನ್ನಂಥವರಿಂದ ನಡೆಯಬಾರದ್ದುದು ನಡೆದುಹೋಗುತ್ತದೆ. ಮೂಢ! ಪಾಶವನ್ನು ಸುತ್ತಿಹಾಕಿಕೊಳ್ಳುತ್ತಿದ್ದೀಯೆ ಎನ್ನುವುದು ನಿನಗೆ ತಿಳಿಯುತ್ತಿಲ್ಲ. ಸಿಟ್ಟಾದ ಹುಲಿಯ ಮೇಲೆ ಬೀಳುವ ಜಿಂಕೆಯಂತೆ ನೀನು ತಿಳಿಯದೇ ಪ್ರಪಾತದಲ್ಲಿ ನೇತಾಡುತ್ತಿದ್ದೀಯೆ. ಮಹಾವಿಷದಿಂದ ತುಂಬಿದ ವಿಷಸರ್ಪಗಳನ್ನು ತಲೆಯಮೇಲೆ ಹೊತ್ತಿದ್ದೀಯೆ. ಮಂದಾತ್ಮ! ಅವರನ್ನು ಇನ್ನೂ ಸಿಟ್ಟಿಗೆಬ್ಬಿಸಬೇಡ. ನೀನು ಯಮಕ್ಷಯಕ್ಕೆ ಹೋಗುತ್ತೀಯೆ. ತನ್ನ ಮೇಲಿನ ಒಡೆತನವನ್ನು ಕಳೆದುಕೊಂಡ ನಂತರವೇ ರಾಜನು ಅವಳನ್ನು ಪಣವಾಗಿಟ್ಟಿದುದರಿಂದ ಕೃಷ್ಣೆಯು ಇನ್ನೂ ದಾಸಿಯಾಗಿಲ್ಲ ಎನ್ನುವುದು ನನ್ನ ಅಭಿಪ್ರಾಯ. ತನ್ನನ್ನೇ ನಾಶಪಡಿಸುವ ಬಿದಿರು ಹೇಗೆ ಹೂವನ್ನು ನೀಡುತ್ತದೆಯೋ ಹಾಗೆ ರಾಜ ಧೃತರಾಷ್ಟ್ರ ಪುತ್ರನು ಫಲವನ್ನು ನೀಡುತ್ತಿದ್ದಾನೆ. ಯಮಾಂತಕಾಲವನ್ನು ಪ್ರಾಪ್ತಿ ಹೊಂದಿದ ಇವನಿಗೆ ದ್ಯೂತವು ಮಹಾಭಯಂಕರ ವೈರಕ್ಕೆ ದಾರಿಮಾಡಿಕೊಡುತ್ತದೆ ಎನ್ನುವುದನ್ನು ತಿಳಿದಿಲ್ಲ. ಕೆಟ್ಟದ್ದನ್ನು ಮಾಡಬೇಡ, ಕೆಟ್ಟದ್ದನ್ನು ಮಾತನಾಡಬೇಡ. ಏನೂ ಇಲ್ಲದವನಿಂದ ಎಲ್ಲವನ್ನೂ ಕಸಿಯಬೇಡ. ಘಾಯಗೊಂಡಿರುವವನಿಗೆ ಏನನ್ನು ಹೇಳಿದರೆ ಇನ್ನೊಬ್ಬರಿಗೆ ದುಃಖವನ್ನುಂಟುಮಾಡುತ್ತದೆಯೋ ಅಂಥಹ ಮಾತುಗಳನ್ನಾಡಬೇಡ. ಬಾಯಿಂದ ಹೊರಬರುವ ಮಾತುಗಳು ಯಾರನ್ನು ತಲುಪುತ್ತದೆಯೋ ಅವನು ಹಗಲು ರಾತ್ರಿ ಶೋಕಿಸುತ್ತಾನೆ. ಇನ್ನೊಬ್ಬರಿಗೆ ನೋವನ್ನುಂಟುಮಾಡುವ ಮಾತುಗಳನ್ನು ಪಂಡಿತರು ಆಡುವುದೇ ಇಲ್ಲ. ಕಳೆದು ಹೋದ ಖಡ್ಗವನ್ನು ಒಂದು ಆಡು ಭೂಮಿಯನ್ನು ಪರಚಿ ಅಗೆದು ತೆಗೆಯಿತಂತೆ. ಆದರೆ ಮುಂದೆ ಅದೇ ಖಡ್ಗವು ಅದರ ಕುತ್ತಿಗೆಯನ್ನು ಕಡಿಯುವ ಘೋರ ಸಾಧನವಾಯಿತಂತೆ. ಆದುದರಿಂದ ಪಾಂಡುಪುತ್ರರೊಂದಿಗೆ ವೈರವನ್ನು ಬಗೆಯಬೇಡ. ಅಂಥವರು ವನೇಚರರ ಮೇಲೆ ಅಥವಾ ಗೃಹಸ್ಥರ ಮೇಲೆ ಅಥವಾ ಪರಿಪೂರ್ಣ ವಿಧ್ಯಾವಂತರಾದ ತಪಸ್ವಿಗಳ ಮೇಲೆ ಒಳ್ಳೆಯದನ್ನಾಗಲೀ ಕೆಟ್ಟದ್ದನ್ನಾಗಲೀ ಮಾತನಾಡುವುದಿಲ್ಲ. ಆದರೆ ಅವರು ನಾಯಿಗಳಂತೆ ಸದಾ ಬೊಗಳುತ್ತಿರುತ್ತಾರೆ. ಇದೊಂದು ಘೋರ ನರಕದ ಕಡೆ ತೆರೆಯುವ ದ್ವಾರ ಎಂದು ನಿನಗೆ ತಿಳಿದಿಲ್ಲ. ಈ ದ್ಯೂತದೊಂದಿಗೆ ಅಲ್ಲಿಗೆ ನಿನ್ನನ್ನು ದುಃಶಾಸನನ ಸಹಿತ ಅಲ್ಲಿ ಇನ್ನೂ ಬಹಳಷ್ಟು ಕುರುಗಳು ಹಿಂಬಾಲಿಸುವರು. ಮೂಢ ರಾಜ ಧೃತರಾಷ್ಟ್ರನ ಪುತ್ರನು ಪದ್ಯರೂಪದ ನನ್ನ ಈ ಮಾತುಗಳನ್ನು ಕೇಳದಿದ್ದರೆ ಹಲಗೆಗಳು ಮುಳುಗುತ್ತವೆ ಮತ್ತು ಕಲ್ಲುಗಳು ತೇಲುತ್ತವೆ. ಹಡಗುಗಳು ಸಮುದ್ರದಲ್ಲಿ ಶಾಶ್ವತವಾಗಿ ದಾರಿತಪ್ಪುತ್ತವೆ. ತಿಳಿದಿರುವವರ ಮತ್ತು ಸುಹೃದಯರ ಪದ್ಯರೂಪದ ಮಾತುಗಳನ್ನು ಕೇಳದ ಮತ್ತು ಲೋಭವನ್ನು ವೃದ್ಧಿಸುತ್ತಿರುವ ಇದು ಕುರುಗಳ ಸುದಾರುಣ, ಸರ್ವಹರ ವಿನಾಶವನ್ನು ತರುತ್ತದೆ.”

“ಕ್ಷತ್ತನಿಗೆ ಧಿಕ್ಕಾರ!” ಎಂದು ಹೇಳಿ, ದರ್ಪಮತ್ತ ಧೃತರಾಷ್ಟ್ರ ಪುತ್ರನು ಸಭೆಯಲ್ಲಿರುವ ಪ್ರತಿಕಾಮಿಯನ್ನು ನೋಡಿ, ಆ ಪರಮ ಆರ್ಯರ ಮಧ್ಯದಲ್ಲಿ ಹೇಳಿದನು:

“ಪ್ರತಿಕಾಮಿ! ನೀನು ಹೋಗಿ ದ್ರೌಪದಿಯನ್ನು ಕರೆದು ತಾ. ಪಾಂಡವರಿಂದ ನಿನಗೆ ಏನೂ ಭಯವಿಲ್ಲ. ಈ ಕ್ಷತ್ತನು ತುಂಬಾ ಮೃದು ಮತ್ತು ಇದರ ವಿರುದ್ಧ ಮಾತನಾಡುತ್ತಾನೆ. ನಮ್ಮ ವೃದ್ಧಿಯನ್ನು ಇವನು ಎಂದೂ ಬಯಸಲಿಲ್ಲ.”

ರಾಜವಚನವನ್ನು ಕೇಳಿದ ಶೀಘ್ರವೇ ಆ ಸೂತ ಪ್ರತಿಕಾಮಿಯು ಹೊರಗೆ ಹೋದನು. ಅವನು ಸಿಂಹದ ಗುಹೆಯನ್ನು ಒಂದು ನಾಯಿಯು ಹೊಗುವಂತೆ ಪಾಂಡವರ ಮಹಿಷಿಯ ಮನೆಯನ್ನು ಪ್ರವೇಶಿಸಿದನು.

ದ್ರೌಪದಿಯ ಪ್ರಶ್ನೆಗಳು

ಪ್ರತಿಕಾಮಿಯು ಹೇಳಿದನು:

“ದ್ರೌಪದೀ! ದ್ಯೂತಮದಮತ್ತ ಯುಧಿಷ್ಠಿರನು ನಿನ್ನನ್ನು ದುರ್ಯೋಧನನಿಗೆ ಸೋತನು. ಬಂದು ಧೃತರಾಷ್ಟ್ರನ ಮನೆಯನ್ನು ಪ್ರವೇಶಿಸು. ಅಲ್ಲಿ ನಿನಗೆ ನಿನ್ನ ಕೆಲಸಗಳ ಕುರಿತು ಹೇಳುತ್ತೇನೆ.”

ದ್ರೌಪದಿಯು ಹೇಳಿದಳು:

“ಪ್ರತಿಕಾಮಿ! ನನ್ನಲ್ಲಿ ಈ ರೀತಿ ಹೇಗೆ ಮಾತನಾಡುತ್ತಿದ್ದೀಯೆ? ಯಾವ ರಾಜಪುತ್ರನು ತನ್ನ ಪತ್ನಿಯನ್ನು ಪಣವಾಗಿ ಇಡುತ್ತಾನೆ? ಮೂಢ ರಾಜನು ದ್ಯೂತಮದದಲ್ಲಿ ಮತ್ತನಾಗಿದ್ದಿರಬಹುದು. ಅವನಿಗೆ ಪಣವಿಡಲು ಬೇರೆ ಏನೂ ಉಳಿದಿರಲಿಲ್ಲವೇ?”

ಪ್ರತಿಕಾಮಿಯು ಹೇಳಿದನು:

“ಬೇರೆ ಏನೂ ಪಣವನ್ನಾಗಿಡಲು ಇಲ್ಲದಿದ್ದಾಗಲೇ ಅಜಾತಶತ್ರು ಪಾಂಡವನು ನಿನ್ನನ್ನು ಪಣವಾಗಿಟ್ಟನು. ಇದಕ್ಕೆ ಮೊದಲು ರಾಜನು ತನ್ನ ಸಹೋದರರನ್ನು ಮತ್ತು ನಂತರ ಸ್ವಯಂ ತನ್ನನ್ನೇ ಕಳೆದುಕೊಂಡು ರಾಜಪುತ್ರಿ ನಿನ್ನನ್ನು ಪಣವನ್ನಾಗಿಟ್ಟನು.”

ದ್ರೌಪದಿಯು ಹೇಳಿದಳು:

“ಸೂತಜ! ಹಾಗಾದರೆ ನೀನು ಜೂಜಾಡುವ ಸಭೆಗೆ ಹೋಗಿ ಕೇಳು: “ಭಾರತ! ಮೊದಲು ನೀನು ಯಾರನ್ನು ಸೋತೆ? ನಿನ್ನನ್ನೋ ಅಥವಾ ನನ್ನನ್ನೋ?” ಇದನ್ನು ತಿಳಿದು ನಂತರ ಬಂದು ನನ್ನನ್ನು ಕರೆದುಕೊಂಡು ಹೋಗು.”

ಸಭೆಗೆ ಹೋಗಿ ಅವನು ದ್ರೌಪದಿಯ ಪ್ರಶ್ನೆಯನ್ನು ಕೇಳಿದನು:

““ಯಾರ ಒಡೆಯನೆಂದು ನೀನು ನನ್ನನ್ನು ಸೋತೆ?” ಎಂದು ದ್ರೌಪದಿಯು ಕೇಳುತ್ತಾಳೆ. “ಮೊದಲು ಯಾರನ್ನು ಸೋತೆ? ನಿನ್ನನ್ನೋ ಅಥವಾ ನನ್ನನ್ನೋ?””

ಆದರೆ ಯುಧಿಷ್ಠಿರನು ಜೀವಹೋದವನಂತೆ ಹಂದಾಡದೇ ಕುಳಿತಿದ್ದನು. ಅವನು ಸೂತನಿಗೆ ಒಳ್ಳೆಯ ಅಥವಾ ಕೆಟ್ಟ ಯಾವುದೇ ಮಾತನ್ನೂ ಹೇಳಲಿಲ್ಲ. ದುರ್ಯೋಧನನು ಹೇಳಿದನು:

“ಕೃಷ್ಣೆ ಪಾಂಚಾಲಿಯು ಇಲ್ಲಿಗೇ ಬಂದು ಅವಳೇ ಈ ಪ್ರಶ್ನೆಯನ್ನು ಕೇಳಲಿ. ಅವಳು ಏನು ಹೇಳುವವಳಿದ್ದಾಳೆ ಮತ್ತು ಇವನು ಏನು ಹೇಳುವವನಿದ್ದಾನೆ ಎನ್ನುವುದನ್ನು ಇಡೀ ಸಭೆಯೇ ಕೇಳಲಿ.”

ದುರ್ಯೋಧನನ ವಶಾನುಗ ಆ ಸೂತ ಪ್ರತಿಕಾಮಿಯು ರಾಜಭವನಕ್ಕೆ ಹೋಗಿ ನಡುಗುತ್ತಾ ದ್ರೌಪದಿಗೆ ಹೇಳಿದನು:

“ರಾಜಪುತ್ರಿ! ಸಭೆಯಲ್ಲಿರುವವರು ನಿನ್ನನ್ನು ಕರೆಯುತ್ತಿದ್ದಾರೆ. ಕೌರವರ ನಾಶವು ಪ್ರಾಪ್ತವಾಗಿದೆ ಎಂದು ನನಗನ್ನಿಸುತ್ತದೆ. ರಾಜಪುತ್ರಿ! ನೀನು ಸಭೆಗೆ ಬರಬೇಕು ಎನ್ನುವ ಅವನು ನಮ್ಮ ಸಮೃದ್ಧಿಯನ್ನು ಪಾಲಿಸುವವನಲ್ಲ.”

ದ್ರೌಪದಿಯು ಹೇಳಿದಳು:

“ಇದು ಸಂವಿಧಾತನು ನಿಶ್ಚಯಿಸಿದುದಲ್ಲವೇ! ಎರಡೂ ಸ್ಪರ್ಷಗಳು ಧೀರ-ಬಾಲಕರಿಬ್ಬರನ್ನೂ ಮುಟ್ಟುತ್ತವೆ. ಅವನು ಹೇಳಿದಂತೆ ಲೋಕದಲ್ಲಿ ಧರ್ಮವೊಂದೇ ಶ್ರೇಷ್ಠವಾದುದು. ಧರ್ಮವನ್ನು ಕಾಪಾಡಿದರೆ ಮಾತ್ರ ನಮಗೆ ಶಾಂತಿಯು ದೊರೆಯುತ್ತದೆ.”

ಯುಧಿಷ್ಠಿರನಾದರೋ ದುರ್ಯೋದನನು ಏನು ಮಾಡಬೇಕೆಂದಿದ್ದಾನೆ ಎನ್ನುವುದನ್ನು ಕೇಳಿ, ಓರ್ವ ಸಮ್ಮತ ದೂತನನ್ನು ದ್ರೌಪದಿಯ ಕಡೆ ಕಳುಹಿಸಿದನು. ರಜಸ್ವಲೆಯಾದ ಏಕವಸ್ತ್ರದಲ್ಲಿದ್ದ ಪಾಂಚಾಲಿಯು ರೋದಿಸುತ್ತಾ ಸಭೆಗೆ ಆಗಮಿಸಿ ತನ್ನ ಮಾವನ ಎದುರು ನಿಂತುಕೊಂಡಳು. ಅವರ ಮುಖವನ್ನು ನೋಡಿದ ರಾಜ ದುರ್ಯೋಧನನು ಹೃಷ್ಟನಾಗಿ ಸೂತನಿಗೆ ಹೇಳಿದನು:

“ಪ್ರತಿಕಾಮಿ! ಅವಳನ್ನು ಇಲ್ಲಿಗೆ ಕರೆದುಕೊಂಡು ಬಾ. ಕುರುಗಳು ಅವಳೊಡನೆ ಪ್ರತ್ಯಕ್ಷವಾಗಿ ಮಾತನಾಡುತ್ತಾರೆ.”

ಅವನ ವಶಾನುಗಾಮಿ ಸೂತನು ದ್ರುಪದಾತ್ಮಜರ ಕೋಪದಿಂದ ಭಯಭೀತನಾಗಿ ತನ್ನ ಮಾನವನ್ನು ತೊರೆದು ಪುನಃ ಸಭೆಗೆ ಹೇಳಿದನು:

“ಕೃಷ್ಣೆಯೊಂದಿಗೆ ಮಾತನಾಡಲು ನಾನು ಯಾರು?”

ದುರ್ಯೋಧನನು ಹೇಳಿದನು:

“ದುಃಶಾಸನ! ಈ ದಡ್ಡ ಸೂತಪುತ್ರನು ವೃಕೋದರನಿಗೆ ಹೆದರಿದ್ದಾನೆ. ನೀನೇ ಹೋಗಿ ಯಾಜ್ಞಸೇನಿಯನ್ನು ಎಳೆದು ತಾ. ಅಧಿಕಾರವನ್ನು ಕಳೆದುಕೊಂಡವರು ನಿನ್ನನ್ನು ಹೇಗೆ ತಡೆದಾರು?”

ಅಣ್ಣನನ್ನು ಕೇಳಿದ ರಾಜಪುತ್ರನು ಮೇಲೆದ್ದು ಕೋಪದಿಂದ ಕಣ್ಣುಕೆಂಪು ಮಾಡಿಕೊಂಡು ಆ ಮಹಾರಥಿಗಳ ಅರಮನೆಯನ್ನು ಪ್ರವೇಶಿಸಿ ರಾಜಪುತ್ರಿ ದ್ರೌಪದಿಗೆ ಹೇಳಿದನು:

“ಪಾಂಚಾಲಿ ಕೃಷ್ಣೇ! ನಿನ್ನನ್ನು ಗೆದ್ದಾಗಿದೆ. ಬಾ. ಲಜ್ಜೆಯನ್ನು ತೊರೆದು ದುರ್ಯೋಧನನ್ನು ನೋಡು. ಇನ್ನು ನೀನು ಕುರುಗಳ ಸೇವೆ ಮಾಡುವೆ. ನಿನ್ನನ್ನು ಧರ್ಮಪೂರ್ವಕವಾಗಿಯೇ ಪಡೆದಿದ್ದಾಗಿದೆ. ನನ್ನೊಂದಿಗೆ ಸಭೆಗೆ ಬಾ.”

ಅವಳು ಮನಸ್ಸಿಲ್ಲದೇ ಎದ್ದು ಕೈಗಳಿಂದ ವಿವರ್ಣ ಮುಖವನ್ನು ಉಜ್ಜಿಕೊಂಡು ಆರ್ತಳಾಗಿ ರೋದಿಸುತ್ತಾ ಕುರುಪುಂಗವ ವೃದ್ಧ ರಾಜನ ಸ್ತ್ರೀಯರು ಇರುವ ಕಡೆ ಓಡಿದಳು. ಆಗ ತಕ್ಷಣವೇ ರೋಷದಿಂದ ಗರ್ಜಿಸುತ್ತಾ ದುಃಶಾಸನನು ಅವಳ ಬಿಚ್ಚಿದ ದೀರ್ಘ ನೀಲ ಕೇಶದ ಮೂಲಕ ಆ ನರೇಂದ್ರಪತ್ನಿಯನ್ನು ಹಿಡಿದನು. ಮಹಾಕ್ರತು ರಾಜಸೂಯದ ಅವಭೃಥ ಜಲದಿಂದ ಮಂತ್ರೋಕ್ತವಾಗಿ ತೊಳೆಯಲ್ಪಟ್ಟ ಕೇಶವನ್ನು ಧೃತರಾಷ್ಟ್ರಜನು ಬಲವಂತವಾಗಿ ಎಳೆದು ಪಾಂಡವರ ವೀರ್ಯವನ್ನು ಅಲ್ಲಗಳೆದನು. ದುಃಶಾಸನನು ಅತಿಕೃಷ್ಣಕೇಶಿನಿ ಕೃಷ್ಣೆಯನ್ನು ಎಳೆದು ಸಭಾಸಮೀಪಕ್ಕೆ ತಂದು ನಾಥವತಿಯಾಗಿದ್ದರೂ ಅನಾಥೆಯಂತೆ ಅವಳನ್ನು ವಾಯುವು ಬಾಳೆಯ ಮರವನ್ನು ತಳ್ಳಿ ಉರುಳಿಸುವಂತೆ ತಳ್ಳಿದನು. ಅವಳನ್ನು ಎಳೆದುಕೊಂಡು ಹೋಗುತ್ತಿರುವಾಗ ಅವಳು ತನ್ನ ದೇಹವನ್ನು ಬಗ್ಗಿಸಿಕೊಂಡು ಸಣ್ಣ ಸ್ವರದಲ್ಲಿ ಹೇಳಿದಳು:

“ಇಂದು ನಾನು ರಜಸ್ವಲೆಯಾಗಿದ್ದೇನೆ. ಮೂಢ! ಒಂದೇ ಒಂದು ವಸ್ತ್ರದಲ್ಲಿದ್ದೇನೆ. ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಬೇಡ.”

ಆದರೆ ತನ್ನ ಶಕ್ತಿಯಿಂದ ಕಪ್ಪು ಕೇಶವನ್ನು ಹಿಡಿದು ಕೃಷ್ಣೆಯನ್ನು ಕೆಳಗೆ ತಳ್ಳಿದ ಅವನು

“ಪಾರುಮಾಡಲು ಕೃಷ್ಣ, ಜಿಷ್ಣು, ಹರಿ ಮತ್ತು ನರ ಯಾರನ್ನಾದರೂ ಕೂಗಿ ಕರೆ. ಆದರೂ ನಾನು ನಿನ್ನನ್ನು ಎಳೆದೊಯ್ಯುತ್ತೇನೆ”

ಎಂದನು.

“ಯಾಜ್ಞಸೇನಿ! ನೀನು ರಜಸ್ವಲೆಯಾಗಿರಬಹುದು, ಏಕಾಂಬರಿಯಾಗಿರಬದುದು ಅಥವಾ ವಿವಸ್ತ್ರಳಾಗಿರಬಹುದು. ದ್ಯೂತದಲ್ಲಿ ನಿನ್ನನ್ನು ಗೆದ್ದು ದಾಸಿಯನ್ನಾಗಿ ಮಾಡಿದ್ದೇವೆ. ಮತ್ತು ದಾಸಿಯರೊಂದಿಗೆ ನಮಗಿಷ್ಟಬಂದಂತೆ ವರ್ತಿಸುತ್ತೇವೆ.”

ಕೂದಲು ಕೆದರಿಹೋಗಿರಲು ವಸ್ತ್ರವು ಬೀಳುತ್ತಿರಲು ದುಃಶಾಸನನಿಂದ ಎಳೆದುಕೊಂಡು ಹೋಗಲ್ಪಟ್ಟ ಕೃಷ್ಣೆಯು ನಾಚಿಕೆ ಮತ್ತು ಸಿಟ್ಟಿನಿಂದ ಸಣ್ಣಧ್ವನಿಯಲ್ಲಿ ಪುನಃ ಹೇಳಿದಳು:

“ಸಭೆಯಲ್ಲಿ ಸರ್ವರೂ ಇಂದ್ರ ಸಮಾನರು, ಶಾಸ್ತ್ರಗಳನ್ನು ಓದಿದವರು ಮತ್ತು ಕ್ರಿಯಾವಂತರಿದ್ದಾರೆ. ಸರ್ವರೂ ಹಿರಿಯರಾಗಿದ್ದು ನನ್ನ ಗುರುಸ್ಥಾನದಲ್ಲಿದ್ದಾರೆ. ಅವರ ಕಣ್ಣೆದುರು ನಾನು ಈ ರೀತಿ ನಿಲ್ಲಲಾರೆ! ಅನಾರ್ಯನಂತೆ ನಡೆದುಕೊಳ್ಳುತ್ತಿರುವವನೇ! ನನ್ನನ್ನು ಈ ರೀತಿ ವಿವಸ್ತ್ರಳನ್ನಾಗಿ ಮಾಡಿ ಅಪಮಾನಗೊಳಿಸಬೇಡ! ನಿನ್ನ ಸಹಾಯಕ್ಕೆಂದು ಇಂದ್ರನೊಂದಿಗೆ ದೇವತೆಗಳು ಬಂದರೂ ಈ ರಾಜಪುತ್ರರು ನಿನ್ನನ್ನು ಬಿಡಲಾರರು. ರಾಜ ಧರ್ಮಸುತನು ಧರ್ಮದಲ್ಲಿ ನಿರತನಾದವನು ಮತ್ತು ಧರ್ಮವು ನಿಪುಣರಿಗೂ ತಿಳಿಯದೇ ಸೂಕ್ಷ್ಮವಾದದ್ದು. ನನ್ನ ಪತಿಯ ಮಾತೂ ಕೂಡ ನನ್ನ ಸ್ವಗುಣಗಳನ್ನು ತೊರೆದು ಪರಮಾಣುಮಾತ್ರದ ದೋಷವನ್ನೂ ಕೂಡ ಬಯಸುವುದಿಲ್ಲ. ರಜಸ್ವಲೆಯಾಗಿರುವ ನನ್ನನ್ನು ಕುರುವೀರರ ಮಧ್ಯದಲ್ಲಿ ನೀನು ಈ ರೀತಿ ಎಳೆದುಕೊಂಡು ಹೋಗುವುದು ಅನಾರ್ಯವಾದುದು. ಇದಕ್ಕಾಗಿ ನಿನ್ನನ್ನು ಇಲ್ಲಿರುವ ಯಾರೂ ಗೌರವಿಸುವುದಿಲ್ಲ. ನಿಶ್ಚಯವಾಗಿಯೂ ನಿನ್ನ ಮನಸ್ಸಿನಲ್ಲಿರುವುದು ಅವರಿಗೆ ತಿಳಿದಿಲ್ಲ. ನಿನಗೆ ಧಿಕ್ಕಾರ! ಸಭೆಯಲ್ಲಿರುವ ಸರ್ವ ಕುರುಗಳೂ ಕುರುಧರ್ಮವನ್ನು ಉಲ್ಲಂಘಿಸುತ್ತಿರುವುದನ್ನು ನೋಡುತ್ತಿರುವರಲ್ಲಾ! ಭಾರತರ ಧರ್ಮ ಮತ್ತು ಕ್ಷತ್ರಿಯರಿಗಿರುವ ನಡವಳಿಕೆ ನಷ್ಟವಾಗಿ ಹೋಯಿತೇ! ದ್ರೋಣ ಮತ್ತು ಭೀಷ್ಮರಲ್ಲಿ ಸತ್ವವು ಉಳಿದಿಲ್ಲ ಎನ್ನುವುದು ನಿಶ್ಚಯ. ಹಾಗೆಯೇ ಮಹಾತ್ಮ ರಾಜನನ್ನೂ ಸೇರಿ ಕುರುವೃದ್ಧಮುಖ್ಯರು ಈ ಉಗ್ರ ಅಧರ್ಮವನ್ನು ಗಮನಿಸುತ್ತಿಲ್ಲವಲ್ಲಾ!”

ಹೀಗೆ ಕರುಣಾಜನಕವಾಗಿ ಮಾತನಾಡುತ್ತಿದ್ದ ಆ ಸುಮಧ್ಯಮೆಯು ತನ್ನ ಪತಿಯರನ್ನು ಹೀನ ಕೋಪ ದೃಷ್ಟಿಯಿಂದ ನೋಡಿದಳು ಮತ್ತು ಅವಳ ತುದಿಗಣ್ಣಿನ ಕುಪಿತ ದೃಷ್ಟಿಯು ಅವರ ಮೇಲೆ ಬೀಳಲು ಪಾಂಡವರ ಅಂಗಾಂಗಗಳು ಕೋಪಪರಿವೃತವಾದವು. ಕೃಷ್ಣೆಯ ಆರ್ತ ಮತ್ತು ಕೋಪಗಳಿಂದ ಕೂಡಿದ ತುದಿಗಣ್ಣಿನ ದೃಷ್ಟಿಯಷ್ಟು ಅವರಿಗೆ ರಾಜ್ಯ, ಧನ ಅಥವಾ ಪ್ರಮುಖ ರತ್ನಗಳನ್ನಾಗಲೀ ಕಳೆದುಕೊಂಡಿದ್ದುದು ದುಃಖವನ್ನು ಕೊಟ್ಟಿರಲಿಲ್ಲ. ಕೃಪಣರಾದ ತನ್ನ ಆ ಪತಿಗಳ ಮೇಲೆ ದೃಷ್ಟಿಹಾಯಿಸುತ್ತಿದ್ದ ಕೃಷ್ಣೆಯನ್ನು ನೋಡಿದ ದುಃಶಾಸನನು ಅವಳು ಮೂರ್ಛೆಹೋಗುವಷ್ಟು ವೇಗದಿಂದ ಅವಳನ್ನು ಹಿಡಿದು ಅಲ್ಲಾಡಿಸುತ್ತಾ ಉಗ್ರವಾಗಿ ನಗುತ್ತಾ ದಾಸಿ ಎಂದು ಕರೆದನು. ಅತೀವ ಹೃಷ್ಟನಾದ ಕರ್ಣನು ನಗುತ್ತಾ ಅದೇ ಶಬ್ಧವನ್ನು ಬಳಸಿ ಅವನ ಆ ಮಾತನ್ನು ಗೌರವಿಸಿದನು. ಗಾಂಧಾರರಾಜ ಸುಬಲನ ಪುತ್ರನೂ ಕೂಡ ಹಾಗೆಯೇ ದುಃಶಾಸನನನ್ನು ಅಭಿನಂದಿಸಿದನು. ಇವರಿಬ್ಬರು ಮತ್ತು ಧಾರ್ತರಾಷ್ಟ್ರನನ್ನು ಬಿಟ್ಟು ಸಭೆಯಲ್ಲಿ ಕುಳಿತಿದ್ದ ಎಲ್ಲರೂ ಕೃಷ್ಣೆಯನ್ನು ಈ ರೀತಿ ಸಭೆಗೆ ಎಳೆದು ತಂದಿದ್ದನ್ನು ನೋಡಿ ಅತೀವ ದುಃಖಿತರಾದರು. ಭೀಷ್ಮನು ಹೇಳಿದನು:

“ಸುಭಗೇ! ಧರ್ಮವು ಸೂಕ್ಷ್ಮವಾದುದು. ನಿನ್ನ ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಳಲು ನಾನು ಅಸಮರ್ಥನಾಗಿದ್ದೇನೆ. ತನ್ನದಲ್ಲದ ಇನ್ನೊಬ್ಬರನ್ನು ಪಣವಾಗಿಡುವುದು ಸರಿಯಲ್ಲ. ಆದರೆ ಸ್ತ್ರೀಯು ಭರ್ತೃವಿನ ವಶವೆಂದು ಕಾಣುತ್ತಾರೆ. ಯುಧಿಷ್ಠಿರನು ಸತ್ಯವನ್ನು ತ್ಯಜಿಸುವ ಮೊದಲು ಸರ್ವ ಸಮೃದ್ಧ ಪೃಥಿವಿಯನ್ನೇ ತ್ಯಜಿಸುವವನು. ಆ ಪಾಂಡವನು ನನ್ನನ್ನು ಗೆದ್ದಿದ್ದಾರೆ ಎಂದು ಹೇಳಿದ. ಆದುದರಿಂದ ನಾನು ಈ ಗೊಂದಲವನ್ನು ಬಿಡಿಸಲಾರೆ. ದ್ಯೂತದಲ್ಲಿ ಶಕುನಿಯ ಅದ್ವಿತೀಯರಾದವರು ಯಾರೂ ಇಲ್ಲ. ಅವನು ಕುಂತೀಸುತನಿಗೆ ಅವನಿಗಿಷ್ಟ ಬಂದಹಾಗೆ ಮಾಡಲು ಅವಕಾಶಕೊಟ್ಟಿದ್ದಾನೆ. ಆ ಮಹಾತ್ಮನು ತನಗೆ ಮೋಸವಾಗಿದೆ ಎಂದು ತಿಳಿದಿಲ್ಲ. ಆದುದರಿಂದ ನಾನು ನಿನ್ನ ಈ ಪ್ರಶ್ನೆಗೆ ಉತ್ತರಿಸಲಾರೆ.”

ದ್ರೌಪದಿಯು ಹೇಳಿದಳು:

“ಅನಾರ್ಯ ದುಷ್ಟಾತ್ಮ ಮೋಸಗಾರ ಕುಶಲ ದ್ಯೂತಪ್ರಿಯರು ಇದರಲ್ಲಿ ಪಳಗಿಲ್ಲದ ರಾಜನನ್ನು ಸಭೆಗೆ ಆಹ್ವಾನಿಸಿದರು. ಹಾಗಿದ್ದಾಗ ಅವನಿಗೆ ಇಷ್ಟಬಂದಹಾಗೆ ಮಾಡಲು ಅವಕಾಶವಿತ್ತು ಎಂದು ಹೇಗೆ ಹೇಳಬಹುದು? ಈ ಶುದ್ಧಭಾವ ಕುರುಪಾಂಡವಾಗ್ರನು ಮೋಸಪ್ರವೃತ್ತಿಯನ್ನು ತಿಳಿಯಲಿಲ್ಲ. ಆಟವಾಡಲು ತೊಡಗಿದ ಅವನು ಸರ್ವವನ್ನೂ ಕಳೆದುಕೊಂಡ ನಂತರವೇ ನನ್ನನ್ನು ಪಣವನ್ನಾಗಿಡಲು ಒಪ್ಪಿಕೊಂಡನು. ಮಕ್ಕಳು ಮತ್ತು ಸೊಸೆಯುಂದಿರ ಈಶರಾದ ಕುರುಗಳು ಇಲ್ಲಿ ಈ ಸಭೆಯಲ್ಲಿ ಇದ್ದಾರೆ. ಎಲ್ಲರೂ ನನ್ನ ಈ ಮಾತನ್ನು ಸಮೀಕ್ಷಿಸಿ ಮತ್ತು ನನ್ನ ಈ ಪ್ರಶ್ನೆಗೆ ಯಥಾವತ್ತಾಗಿ ಉತ್ತರಿಸಿ.”

ಈ ರೀತಿ ಕರುಣಾಜನಕವಾಗಿ ರೋದಿಸುತ್ತಾ ಹೇಳಿದ ಅವಳು ತನ್ನ ಆ ಪತಿಯಂದಿರನ್ನು ನೋಡುತ್ತಿರಲು ದುಃಶಾಸನನು ಪೌರುಷದಿಂದ ಅಪ್ರಿಯ ಅಮಧುರ ಮಾತುಗಳನ್ನಾಡಿದನು. ಉತ್ತರೀಯವನ್ನು ಹಿಡಿದೆಳೆಯುವಂತೆ ಆ ಅನರ್ಹ ರಜಸ್ವಲೆಯನ್ನು ಎಳೆದು ತಂದುದ್ದನ್ನು ನೋಡಿದ ವೃಕೋದರನು ಕೋಪದಿಂದ ಯುಧಿಷ್ಠಿರನನ್ನು ನೋಡಿ ಪರಮಾರ್ತರೂಪನಾದನು. ಭೀಮನು ಹೇಳಿದನು:

“ಯುಧಿಷ್ಠಿರ! ಜೂಜುಗಾರರ ದೇಶದಲ್ಲಿ ವೈಶ್ಯೆಯರು ಬಹಳಷ್ಟು ಇರುತ್ತಾರೆ. ಆದರೆ ಅವರನ್ನು ಎಂದೂ ಪಣವಾಗಿ ಇಡುವುದಿಲ್ಲ. ಯಾಕೆಂದರೆ ಅಂಥವರ ಮೇಲೂ ಅವರಿಗೆ ದಯವಿರುತ್ತದೆ. ಕಾಶಿರಾಜನು ತಂದ ಕಪ್ಪ, ಮತ್ತು ನಮ್ಮ ಎಲ್ಲ ವಿಶಾಲ ಸಂಪತ್ತು, ಅನ್ಯ ಪೃಥಿವೀಪಾಲಕರು ಉಡುಗೊರೆಯಾಗಿ ತಂದಿದ್ದ ರತ್ನಗಳು, ವಾಹನಗಳು, ಧನ, ಕವಚಗಳು, ಆಯುಧಗಳು, ರಾಜ್ಯ ಮತ್ತು ಸ್ವಯಂ ನಮ್ಮನ್ನು ಜೂಜಿನಲ್ಲಿ ಇತರರಿಗೆ ಸೋತಿದ್ದೇವೆ. ಆದರೆ ಇದರಲ್ಲಿ ನನಗೆ ಕೋಪ ಬರಲಿಲ್ಲ. ಯಾಕೆಂದರೆ ನೀನು ಇವೆಲ್ಲವುಗಳ ಒಡೆಯ. ಆದರೆ ದ್ರೌಪದಿಯನ್ನು ಪಣವಿಟ್ಟು ನೀನು ಅತಿಕ್ರಮಿಸಿದೆ ಎಂದು ನನ್ನ ಅಭಿಪ್ರಾಯ. ಇದಕ್ಕೆ ಅವಳು ಅರ್ಹಳಲ್ಲ. ಬಾಲಕಿಯಾದಾಗ ಪಾಂಡವರನ್ನು ಪಡೆದ ಅವಳು ನೀನು ಮಾಡಿದ ಕೆಲಸದಿಂದಾಗಿ ಈಗ ಕ್ಷುದ್ರ, ಅಸತ್ಯ, ಮೋಸಮಾಡುವುದರಲ್ಲಿ ಆನಂದಹೊಂದುವ ಕೌರವರಿಗೆ ಸಿಕ್ಕಿ ಬಿದ್ದಿದ್ದಾಳೆ. ಇವಳಿಂದಾಗಿ ನಾನು ನನ್ನ ಸಿಟ್ಟನ್ನು ನಿನ್ನ ಮೇಲೆ ಉರುಳಿಸುತ್ತಿದ್ದೇನೆ. ನಿನ್ನ ಕೈಗಳನ್ನು ಸುಡುತ್ತೇನೆ. ಸಹದೇವ! ಅಗ್ನಿಯನ್ನು ತೆಗೆದುಕೊಂಡು ಬಾ!”

ಅರ್ಜುನನು ಹೇಳಿದನು:

“ಭೀಮಸೇನ! ಇದಕ್ಕೆ ಮೊದಲು ನೀನು ಈ ರೀತಿಯ ಮಾತುಗಳನ್ನಾಡಿರಲಿಲ್ಲ. ನಿನ್ನಲ್ಲಿರುವ ಧರ್ಮಗೌರವವನ್ನು ನಿನ್ನ ವೈರಿಗಳು ಖಂಡಿತವಾಗಿಯೂ ನಾಶಪಡಿಸಿದಂತಿದೆ. ವೈರಿಗಳ ಯೋಜನೆಯಲ್ಲಿ ಬೀಳಬೇಡ. ಉತ್ತಮ ಧರ್ಮದಂತೆ ನಡೆದುಕೋ. ಜ್ಯೇಷ್ಠ ಭ್ರಾತ ಧಾರ್ಮಿಕನನ್ನು ಅತಿಕ್ರಮಿಸುವ ಅರ್ಹತೆ ಯಾರಿಗೂ ಇಲ್ಲ. ಶತ್ರು ಆಹ್ವಾನಿತ ರಾಜನು ಕ್ಷಾತ್ರಧರ್ಮವನ್ನು ತಿಳಿದು ಶತ್ರುಗಳ ಇಚ್ಛೆಯಂತೆ ಜೂಜಾಡಿದನು. ಅದೇ ಮಹಾ ಕೀರ್ತಿಕರವಾದುದು.”

ಭೀಮಸೇನನು ಹೇಳಿದನು:

“ಧನಂಜಯ! ತನಗಾಗಿ ಇದನ್ನೆಲ್ಲ ಮಾಡಿದನೆಂದು ನಾನು ಯೋಚಿಸಿದ್ದರೆ ಇವನ ಎರಡೂ ಕೈಗಳನ್ನು ಬಲವಂತವಾಗಿ ಬಿಗಿದು ಉರಿಯುತ್ತಿರುವ ಬೆಂಕಿಯಲ್ಲಿ ಸುಡುತ್ತಿದ್ದೆ!”

ಆಗ ದುಃಖಿತ ಪಾಂಡವರನ್ನೂ ಮತ್ತು ಕಷ್ಟದಲ್ಲಿರುವ ಪಾಂಚಾಲಿಯನ್ನೂ ನೋಡಿದ ಧೃತರಾಷ್ಟ್ರಜ ವಿಕರ್ಣನು ಈ ರೀತಿ ಹೇಳಿದನು:

“ಪಾರ್ಥಿವರೇ! ಯಾಜ್ಞಸೇನಿಯು ಕೇಳಿದ ಪ್ರಶ್ನೆಗೆ ಉತ್ತರಿಸಿ. ನಾವು ಆ ಮಾತನ್ನು ನಿರ್ಧರಿಸಬೇಕು. ಇಲ್ಲದಿದ್ದರೆ ನರಕಕ್ಕೆ ಹೋಗುವುದಿಲ್ಲವೇ? ಭೀಷ್ಮ ಮತ್ತು ಧೃತರಾಷ್ಟ್ರರು ಕುರುವೃದ್ಧರು. ಅವರು ಮತ್ತು ಮಹಾಮತಿ ವಿದುರ ಇಲ್ಲಿ ಇದ್ದೂ ಮಾತನಾಡುತ್ತಿಲ್ಲವಲ್ಲ? ನಮ್ಮೆಲ್ಲರ ಆಚಾರ್ಯ ಭಾರದ್ವಾಜ ದ್ರೋಣನೂ ಕೃಪನೂ ಇಲ್ಲಿದ್ದಾರೆ. ಆದರೂ ಆ ದ್ವಿಜಸತ್ತಮರು ಈ ಪ್ರಶ್ನೆಯ ಕುರಿತು ಮಾತನಾಡುತ್ತಿಲ್ಲವಲ್ಲ! ಸರ್ವದಿಕ್ಕುಗಳಿಂದ ಬಂದು ಇಲ್ಲಿ ನೆರೆದಿರುವ ಅನ್ಯ ಪೃಥಿವೀಪಾಲಕರೂ ಕೂಡ ಕಾಮಕ್ರೋಧಗಳನ್ನು ತೊರೆದು ಅವರಿಗೆ ತಿಳಿದಂತೆ ಮಾತನಾಡಬೇಕು! ಪಾರ್ಥಿವರೇ! ಅತ್ಯಂತ ಸುಂದರಿ ದ್ರೌಪದಿಯು ಪುನಃ ಪುನಃ ಕೇಳಿದ ಪ್ರಶ್ನೆಯನ್ನು ಗಮನಿಸಿ. ಅದನ್ನು ವಿಮರ್ಶಿಸಿ, ಪರವಾಗಿರಲಿ ವಿರುದ್ಧವಾಗಿರಲಿ, ಅದಕ್ಕೆ ಉತ್ತರವನ್ನು ನೀಡಿ!”

ಈ ರೀತಿ ಅವನು ಸರ್ವ ಸಭಾಸದರಲ್ಲಿ ಅನೇಕಬಾರಿ ಕೇಳಿಕೊಂಡನು. ಆದರೂ ಅಲ್ಲಿದ್ದ ಪೃಥಿವೀಪಾಲಕರು ಒಳ್ಳೆಯದಾದ ಅಥವಾ ಕೆಟ್ಟುದಾದ ಏನನ್ನೂ ಹೇಳಲಿಲ್ಲ. ವಿಕರ್ಣನು ಸರ್ವ ಪೃಥಿವೀಪಾಲಕರಲ್ಲಿ ಪುನಃ ಪುನಃ ಕೇಳಿಕೊಂಡನಂತರ, ಕೈ ಕೈ ತಿವಿಯುತ್ತಾ ನಿಟ್ಟಿಸುರು ಬಿಡುತ್ತಾ ಹೇಳಿದನು:

“ಪೃಥಿವೀಪಾಲಕರೇ! ನಿಮ್ಮ ಉತ್ತರವನ್ನು ಹೇಳಿ ಅಥವಾ ಹೇಳದೇ ಇರಿ. ಆದರೆ ನಾನು ಮಾತ್ರ ಈ ವಿಷಯದಲ್ಲಿ ನ್ಯಾಯವೆಂದು ತಿಳಿದುದನ್ನು ಹೇಳುತ್ತೇನೆ. ಮಹೀಕ್ಷಿತರ ನಾಲ್ಕು ವ್ಯಸನಗಳ ಕುರಿತು ಹೇಳುತ್ತಾರೆ: ಬೇಟೆಯಾಡುವುದು, ಮದಿರ ಸೇವನೆ, ಜೂಜಾಡುವುದು ಮತ್ತು ದ್ವಂದ್ವಯುದ್ಧ ಮಾಡುವುದು. ಇವುಗಳಲ್ಲಿ ನಿರತನಾದ ನರನು ಧರ್ಮವನ್ನು ತೊರೆದು ನಡೆದುಕೊಳ್ಳುತ್ತಾನೆ, ಮತ್ತು ಯಥಾಯುಕ್ತವಾಗಿ ಮಾಡಿದ ಕ್ರಿಯೆಗಳನ್ನು ಲೋಕವು ಪರಿಗಣಿಸುವುದಿಲ್ಲ. ವ್ಯಸನದಲ್ಲಿ ನಿರತನಾಗಿದ್ದ ಪಾಂಡುಪುತ್ರನು ಭಾವುಕತೆಯಿಂದ ವರ್ತಿಸಿ ಜೂಜುಕೋರರು ಜೂಜಿಗೆಂದು ಕರೆದಾಗ ದ್ರೌಪದಿಯನ್ನು ಪಣವನ್ನಾಗಿಟ್ಟನು. ಈ ಅನಿಂದಿತೆಯು ಸರ್ವ ಪಾಂಡವರ ಸಾಧಾರಣ ಪತ್ನಿ. ಇವಳನ್ನು ಪಣವಾಗಿಡುವ ಮೊದಲೇ ಪಾಂಡವನು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದನು. ಪಣವು ಬೇಕಿದ್ದಾಗ ಸೌಬಲನು ಕೃಷ್ಣೆಯ ಕುರಿತು ಹೇಳಿದನು. ಇವೆಲ್ಲವನ್ನೂ ವಿಚಾರಿಸಿದರೆ ಅವಳನ್ನು ಗೆದ್ದಾಯಿತು ಎಂದು ನನಗೆ ಅನ್ನಿಸುವುದಿಲ್ಲ.”

ದ್ರೌಪದೀ ವಸ್ತ್ರಾಪಹರಣ

ಇದನ್ನು ಕೇಳಿದ ಕೂಡಲೇ ಆ ಸಭೆಯಿಂದ ಮಹಾ ಕೋಲಾಹಲವು ಕೇಳಿ ಬಂದಿತು. ವಿಕರ್ಣನನ್ನು ಪ್ರಶಂಸಿಸಲಾಯಿತು ಮತ್ತು ಸೌಬಲನನ್ನು ನಿಂದಿಸಲಾಯಿತು. ಆ ಶಬ್ಧವು ಕಡಿಮೆಯಾದಾಗ ಕ್ರೋಧಮೂರ್ಛಿತ ರಾಧೇಯನು ತನ್ನ ಸುಂದರ ಬಾಹುವನ್ನು ಹಿಡಿದು ಈ ಮಾತುಗಳನ್ನಾಡಿದನು:

“ಅರಣಿಯಿಂದ ಉತ್ಪನ್ನ ಬೆಂಕಿಯು ಹೇಗೆ ಕಟ್ಟಿಗೆಯನ್ನೇ ಸುಡುತ್ತದೆಯೋ ಹಾಗೆ ವಿಕರ್ಣನ ಮಾತುಗಳಲ್ಲಿ ಬಹಳಷ್ಟು ವೈಕೃತಗಳು ಕಂಡುಬರುತ್ತವೆ. ಕೃಷ್ಣೆಯು ಬಹಳಷ್ಟು ಒತ್ತಾಯಿಸಿದರೂ ಇಲ್ಲಿರುವವರು ಅವಳಿಗೆ ಉತ್ತರಿಸಲಿಲ್ಲ. ಏಕೆಂದರೆ, ದೃಪದಾತ್ಮಜೆಯನ್ನು ಧರ್ಮಪೂರಕವಾಗಿಯೇ ಗೆದ್ದಿದ್ದೇವೆ ಎಂದು ನನಗೆ ಮತ್ತು ಅವರಿಗೆ ಅನ್ನಿಸುತ್ತದೆ. ಧಾರ್ತರಾಷ್ಟ್ರ! ನೀನು ನಿನ್ನ ಕೇವಲ ಬಾಲ್ಯತನವನ್ನು ತೋರಿಸಿಕೊಳ್ಳುತ್ತಿದ್ದೀಯೆ. ಸಭಾಮಧ್ಯದಲ್ಲಿ ನಿನ್ನ ಹಿರಿಯರು ಹೇಳಬಹುದಾಗಿದ್ದುದನ್ನು ಇನ್ನೂ ಬಾಲಕನಾದ ನೀನು ಹೇಳುತ್ತಿದ್ದೀಯೆ. ದುರ್ಯೋಧನನ ಕಿರಿಯ ತಮ್ಮನಾದ ನಿನಗೆ ಧರ್ಮವೇನೆಂದು ತಿಳಿದಿಲ್ಲ. ಆದುದರಿಂದಲೇ ಅಲ್ಪಬುದ್ಧಿಯ ನೀನು ಕೃಷ್ಣೆಯನ್ನು ಗೆದ್ದಿದ್ದರೂ ಗೆಲ್ಲಲಿಲ್ಲವೆಂದು ಹೇಳುತ್ತಿದ್ದೀಯೆ. ಪಾಂಡವಾಗ್ರಜನು ಸಭೆಯಲ್ಲಿ ಸರ್ವಸ್ವವನ್ನೂ ಕಳೆದುಕೊಂಡಾಗ ಕೃಷ್ಣೆಯನ್ನು ಗೆಲ್ಲಲಿಲ್ಲ ಎಂದು ಹೇಗೆ ಹೇಳುತ್ತೀಯೆ? ದ್ರೌಪದಿಯು ಅವನ ಸರ್ವಸ್ವದ ಒಂದು ಭಾಗವಲ್ಲವೇ? ಹಾಗಿರುವಾಗ ಕೃಷ್ಣೆಯನ್ನು ಧರ್ಮಪೂರ್ವಕವಾಗಿ ಗೆಲ್ಲಲಿಲ್ಲ ಎಂದು ನೀನು ಹೇಗೆ ಅಭಿಪ್ರಾಯ ಪಡುತ್ತೀಯೆ? ತನ್ನ ತಿಳುವಳಿಕೆಯಲ್ಲಿದ್ದು ಪಾಂಡವನು ದ್ರೌಪದಿಯ ಹೆಸರು ಹೇಳಿ ಪಣವನ್ನಿಟ್ಟಿದ್ದಾನೆ. ಹಾಗಿರುವಾಗ ನೀನು ಹೇಗೆ ಅವಳನ್ನು ಗೆಲ್ಲಲಿಲ್ಲ ಎಂದು ಹೇಳುತ್ತೀಯೆ? ಒಂದು ವೇಳೆ ನಿನ್ನ ಅಭಿಪ್ರಾಯದಲ್ಲಿ ಏಕವಸ್ತ್ರಳಾದವಳನ್ನು ಸಭೆಗೆ ಎಳೆದು ತಂದಿದ್ದುದು ಅಧರ್ಮ ಎಂದಾದರೆ ಅದರ ಕುರಿತು ನಾನು ಹೇಳುವ ಮಾತನ್ನು ಕೇಳು. ಸ್ತ್ರೀಗೆ ಒಬ್ಬನೇ ಪತಿ ಎಂದು ದೈವವಿಹಿತವಾಗಿದ್ದುದು. ಅನೇಕರ ವಶಳಾಗಿರುವ ಇವಳು ಬಂಧಕಿ ಎನ್ನುವುದು ವಿನಿಶ್ಚಿತ. ನನ್ನ ಅಭಿಪ್ರಾಯದಲ್ಲಿ ಅಂಥವಳನ್ನು ಸಭೆಗೆ ಕರೆತರುವುದರಲ್ಲಿ ಅಥವಾ ಏಕವಸ್ತ್ರದಲ್ಲಿರುವುದಾಗಲೀ ಅಥವಾ ಆ ವಿಷಯದಲ್ಲಿ ವಿವಸ್ತ್ರಳಾಗಿದ್ದರೂ ಏನೂ ತಪ್ಪಿಲ್ಲ. ಇವಳು ಪಾಂಡವರ ಸ್ವತ್ತು ಮತ್ತು ಅವರೆಲ್ಲರನ್ನೂ ಧರ್ಮಪ್ರಕಾರವಾಗಿ ಸಂಪತ್ತಿನ ಸಮೇತ ಸೌಬಲನು ಗೆದ್ದಿರುವನು. ದುಃಶಾಸನ! ಈ ವಿಕರ್ಣನು ಬಾಲಕನಂತೆ ತಿಳಿಯದೇ ಮಾತನಾಡುತ್ತಿದ್ದಾನೆ. ಪಾಂಡವರ ಮತ್ತು ದ್ರೌಪದಿಯ ಬಟ್ಟೆಗಳನ್ನು ಕಳಚು!”

Image result for draupadi vastraharanಇದನ್ನು ಕೇಳಿದ ಸರ್ವ ಪಾಂಡವರೂ ತಮ್ಮ ತಮ್ಮ ವಸ್ತ್ರಗಳನ್ನು ಉತ್ತರೀಯಗಳನ್ನು ತೆಗೆದು ಸಭೆಯಲ್ಲಿ ಕುಳಿತುಕೊಂಡರು. ಆಗ ದುಃಶಾಸನನು ಸಭಾಮಧ್ಯದಲ್ಲಿ ದ್ರೌಪದಿಯ ಬಟ್ಟೆಯನ್ನು ಬಲವಂತವಾಗಿ ಏಳೆಯಲು ಪ್ರಾರಂಭಿಸಿದನು. ಆದರೆ ದ್ರೌಪದಿಯ ವಸ್ತ್ರವನ್ನು ಎಳೆಯುತ್ತಿದ್ದ ಹಾಗೆ ಪ್ರತೀಸಾರಿ ಅದೇ ರೀತಿಯ ವಸ್ತ್ರವು ಪುನಃ ಕಂಡು ಬರುತ್ತಿತ್ತು. ಆ ಅದ್ಭುತವನ್ನು ನೋಡಿದ ಲೋಕದ ಸರ್ವ ಮಹೀಕ್ಷಿತರಲ್ಲಿ ಘೋರ ಧ್ವನಿಯಲ್ಲಿ ಹಲಹಲ ಶಬ್ದ ಉಂಟಾಯಿತು. ಅಗ ಆ ರಾಜಮಧ್ಯದಲ್ಲಿ ಕ್ರೋಧದಿಂದ ತುಟಿಗಳು ಕಂಪಿಸುತ್ತಿರಲು ಭೀಮನು ಕೈ ಕೈ ತಿರುವುತ್ತಾ ಮಹಾ ಧ್ವನಿಯಲ್ಲಿ ಶಾಪವನ್ನಿತ್ತನು.

“ಈ ಲೋಕದಲ್ಲಿ ವಾಸಿಸುವ ಕ್ಷತ್ರಿಯರೇ! ಇದರ ಮೊದಲು ಯಾರೂ ಹೇಳಿರದ ಮತ್ತು ಇದರ ನಂತರ ಯಾರೂ ಹೇಳಲಾರದ ನನ್ನ ಈ ಮಾತುಗಳನ್ನು ಹೃದಯಪೂರ್ವಕವಾಗಿ ಕೇಳಿ. ಇಂದು ನಾನು ಹೇಳುವ ಹಾಗೆ ಮಾಡದೇ ಯುದ್ಧದಲ್ಲಿ ಪಾಪಿ ದುರ್ಜಾತಿ ಭಾರತರಿಗೆ ಹೊರತಾದ ಇವನ ಎದೆಯನ್ನು ಬಲವಂತವಾಗಿ ಸೀಳಿ ರಕ್ತವನ್ನು ಕುಡಿಯದೇ ಇದ್ದರೆ ನನ್ನ ಸರ್ವ ಪಿತಾಮಹರ ಗತಿಯನ್ನು ಪಡೆಯದೇ ಇರಲಿ!”

ಅವನ ಈ ವಚನವನ್ನು ಕೇಳಿದ ಸರ್ವಲೋಕಗಳೂ ಹರ್ಷಿತಗೊಂಡವು. ಅವನನ್ನು ಬಹಳಷ್ಟು ಗೌರವಿಸಿದರು ಮತ್ತು ಧೃತರಾಷ್ಟ್ರಜನನ್ನು ಜರೆದರು. ಸಭಾಮಧ್ಯದಲ್ಲಿ ಬಟ್ಟೆಗಳ ರಾಶಿಯೇ ಆಗಿತ್ತು. ಆಗ ದುಃಶಾಸನನು ಆಯಾಸಗೊಂಡು ನಾಚಿಕೆಯಿಂದ ಕೆಳಗೆ ಕುಳಿತುಕೊಂಡನು. ಆಗ ಆ ಸಭೆಯಲ್ಲಿದ್ದ ನರದೇವತೆಗಳು ಕುಂತೀಸುತರನ್ನು ನೋಡಿ ರೋಮಾಂಚನ ಧ್ವನಿಯಲ್ಲಿ ಧಿಕ್ಕಾರ ಎಂದು ಕೂಗಿದರು. ಕೌರವರು ಅವಳ ಪ್ರಶ್ನೆಗೆ ಉತ್ತರಿಸುತ್ತಿಲ್ಲ ಎಂದು ಜನರು ಧೃತರಾಷ್ಟ್ರನನ್ನು ಜರಿದರು. ಆಗ ತನ್ನ ಕೈ ಎತ್ತಿ ಸಭಾಸದರನ್ನು ಸುಮ್ಮನಿಸಿರಿದ ಸರ್ವಧರ್ಮಜ್ಞ ವಿದುರನು ಈ ಮಾತುಗಳನ್ನಾಡಿದನು:

“ಪ್ರಶ್ನೆಯನ್ನು ಕೇಳಿದ ದ್ರೌಪದಿಯು ಅನಾಥೆಯಂತೆ ರೋದಿಸುತ್ತಿದ್ದಾಳೆ. ಸಭ್ಯರೇ! ಅವಳ ಪ್ರಶ್ನೆಯನ್ನು ಬಿಡಿಸದೇ ಇದ್ದರೆ ಧರ್ಮ ಪೀಡನವಾಗುತ್ತದೆ. ಆರ್ತನಾಗಿ ಸಭೆಗೆ ಬರುವವನು ಪ್ರಜ್ವಲಿಸುವ ಹವ್ಯವಾಹನನ ಹಾಗೆ. ಸಭಿಕರು ಸತ್ಯ ಮತ್ತು ಧರ್ಮದಿಂದ ಅವನನ್ನು ಪ್ರಶಾಂತಗೊಳಿಸಬೇಕು. ಆರ್ತ ಮಾನವನು ಸಭೆಯಲ್ಲಿ ಧರ್ಮಪ್ರಶ್ನೆಯನ್ನು ಕೇಳಿದಾಗ ಕಾಮಕ್ರೋಧಗಳ ವಶಹೋಗದೇ ಆ ಪ್ರಶ್ನೆಯನ್ನು ಅಲ್ಲಿಯೇ ಉತ್ತರಿಸಬೇಕು. ವಿಕರ್ಣನು ತನಗೆ ತಿಳಿದ ಪ್ರಮಾಣದಲ್ಲಿ ಪ್ರಶ್ನೆಯನ್ನು ಉತ್ತರಿಸಿದ್ದಾನೆ. ನೀವು ಕೂಡ ನಿಮಗೆ ತಿಳಿದ ಹಾಗೆ ಈ ಪ್ರಶ್ನೆಯ ಕುರಿತು ಮಾತನಾಡಬೇಕು. ಸಭೆಯಲ್ಲಿ ಕುಳಿತುಕೊಂಡು ಪ್ರಶ್ನೆಗೆ ಉತ್ತರವನ್ನು ನೀಡದೇ ಇದ್ದರೆ ಅವನು ಧರ್ಮದರ್ಶಿಯಾಗಿದ್ದರೂ ಸುಳ್ಳನ್ನು ಹೇಳುವುದರ ಅರ್ಧದಷ್ಟು ಫಲವನ್ನು ಅನುಭವಿಸುತ್ತಾನೆ. ಮತ್ತು ಸಭೆಯಲ್ಲಿದ್ದುಕೊಂಡು ಧರ್ಮದರ್ಶಿಯು ಪ್ರಶ್ನೆಯನ್ನು ಅಧರ್ಮ ರೀತಿಯಲ್ಲಿ ಉತ್ತರಿಸಿದರೆ ಸುಳ್ಳುಹೇಳುವುದರ ಪೂರ್ಣಫಲವನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಪುರಾತನ ಇತಿಹಾಸ ಪ್ರಹ್ಲಾದ ಮತ್ತು ಮುನಿ ಆಂಗಿರಸರ ನಡುವಿನ ಸಂವಾದವನ್ನು ಉದಾಹರಣೆಯಾಗಿ ಕೊಡುತ್ತಾರೆ.

ಪ್ರಹ್ಲಾದನೆಂಬ ಹೆಸರಿನ ದೈತ್ಯೇಂದ್ರನ ಪುತ್ರ ವಿರೋಚನನು ಓರ್ವ ಕನ್ಯೆಗೋಸ್ಕರ ಆಂಗಿರಸ ಸುಧನ್ವನ ಎದುರಾದನು. ಕನ್ಯೆಯನ್ನು ಬಯಸಿದ ಅವರಿಬ್ಬರೂ ನಾನು ಉತ್ತಮ ನಾನು ಉತ್ತಮ ಎಂದು ತಮ್ಮ ಪ್ರಾಣವನ್ನೇ ಪಣವಿಟ್ಟು ಹೋರಾಡಿದರು ಎಂದು ಕೇಳಿಲ್ಲವೇ? ಅವರಿಬ್ಬರೂ ಆ ಪ್ರಶ್ನೆಯನ್ನು ವಿವಾದಿಸಿ ಪ್ರಹ್ಲಾದನಲ್ಲಿ ಕೇಳಿದರು:

“ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎನ್ನುವ ಪ್ರಶ್ನೆಯನ್ನು ಉತ್ತರಿಸು. ಆದರೆ ಸುಳ್ಳನ್ನು ಹೇಳಬೇಡ.”

ಈ ವಿವಾದದಿಂದ ಭೀತನಾಗಿ ಅವನು ಸುಧನ್ವನನ್ನು ನೋಡಿದನು. ಆಗ ಸುಧನ್ವನು ಕೃದ್ಧನಾಗಿ ಬ್ರಹ್ಮದಂಡತಂತೆ ಪ್ರಜ್ವಲಿಸುತ್ತಾ ಇಂತೆಂದನು:

“ಪ್ರಹ್ಲಾದ! ಒಂದು ವೇಳೆ ನೀನು ಸುಳ್ಳನ್ನು ಹೇಳಿದರೆ ಅಥವಾ ಏನನ್ನೂ ಹೇಳದೇ ಇದ್ದರೆ ವಜ್ರಿಯು ತನ್ನ ವಜ್ರದಿಂದ ನಿನ್ನ ಶಿರವನ್ನು ನೂರು ತುಂಡುಗಳನ್ನಾಗಿ ಒಡೆಯುತ್ತಾನೆ.”

ಸುಧನ್ವನ ಆ ಮಾತಿಗೆ ದೈತ್ಯ ಪ್ರಹ್ಲಾದನು ವ್ಯತಿಥನಾಗಿ ಅಶ್ವತ್ಥ ಎಲೆಯಂತೆ ತತ್ತರಿಸಿದನು ಮತ್ತು ಸಮಾಲೋಚಿಸಲು ಮಹೌಜಸ ಕಶ್ಯಪನಲ್ಲಿಗೆ ಹೋಗಿ ಹೇಳಿದನು:

“ನೀನು ದೇವತೆಗಳ ಮತ್ತು ಅಸುರರ ಧರ್ಮವನ್ನು ತಿಳಿದಿದ್ದೀಯೆ. ಈಗ ಓರ್ವ ಬ್ರಾಹ್ಮಣನ ಧರ್ಮಪ್ರಶ್ನೆಯನ್ನು ಕೇಳು. ನನ್ನ ಕೇಳಿಕೆಯಂತೆ ಒಂದು ಪ್ರಶ್ನೆಗೆ ನಿರ್ದಿಷ್ಠ ಉತ್ತರವನ್ನು ನೀಡದಿರುವ ಅಥವಾ ಸುಳ್ಳು ಉತ್ತರವನ್ನು ನೀಡುವವನಿಗೆ ಪರ ಲೋಕದಲ್ಲಿ ಯಾವ ಸ್ಥಾನವು ದೊರೆಯುತ್ತದೆ ಎನ್ನುವುದನ್ನು ಹೇಳು.”

ಕಶ್ಯಪನು ಹೇಳಿದನು:

“ಪ್ರಶ್ನೆಗೆ ಉತ್ತರವನ್ನು ತಿಳಿದೂ ಕಾಮ, ಕ್ರೋಧ ಅಥವಾ ಭಯದಿಂದ ಉತ್ತರಿಸದೇ ಇರುವವನು ತನ್ನ ಮೇಲೆಯೇ ಸಹಸ್ರ ವರುಣ ಪಾಶಗಳನ್ನು ಬಿಡುಗಡೆಮಾಡಿಕೊಳ್ಳುತ್ತಾನೆ. ಅಂಥಹ ಒಂದು ಪಾಶವನ್ನು ಬಿಡಿಸಿಕೊಳ್ಳಲೂ ಅವನಿಗೆ ಒಂದು ವರ್ಷ ಬೇಕಾಗುತ್ತದೆ. ಆದುದರಿಂದ ನಿನಗೆ ಸತ್ಯವು ತಿಳಿದಿದ್ದರೆ ಸತ್ಯವನ್ನು ನೇರವಾಗಿ ಹೇಳಿಬಿಡು. ಅಧರ್ಮದಿಂದ ಇರಿತಗೊಂಡ ಧರ್ಮನು ಸಭೆಗೆ ಬಂದಾಗ ಸಭಾಸದರು ಆ ಈಟಿಯನ್ನು ಕಿತ್ತೊಗೆಯದಿದ್ದರೆ ಅದು ಅಲ್ಲಿರುವವರನ್ನು ಇರಿಯುತ್ತದೆ. ಅವರಲ್ಲಿ ಶ್ರೇಷ್ಠನು ಅರ್ಧವನ್ನು ಪಡೆಯುತ್ತಾನೆ, ಕರ್ತೃವು ಕಾಲುಭಾಗವನ್ನು ಪಡೆಯುತ್ತಾನೆ, ಮತ್ತು ನಿಂದಿಸಬೇಕಾದವರನ್ನು ನಿಂದಿಸದೇ ಇದ್ದ ಸಭಾಸದರು ಕಾಲುಭಾಗವನ್ನು ಪಡೆಯುತ್ತಾರೆ. ನಿಂದಾರ್ಹನನ್ನು ನಿಂದಿಸುವುದರಿಂದ ಶ್ರೇಷ್ಠನು ತಪ್ಪಿಲ್ಲದವನಾಗುತ್ತಾನೆ ಮತ್ತು ಸಭಾಸದರು ಮುಕ್ತರಾಗುತ್ತಾರೆ. ಆಗ ಪಾಪವು ಕರ್ತಾರನಿಗೆ ಹೋಗುತ್ತದೆ. ಪ್ರಹ್ಲಾದ! ಆದರೆ ಪ್ರಶ್ನೆಯನ್ನು ತಂದವನಿಗೆ ಧರ್ಮದ ವಿರುದ್ಧವನ್ನು ಹೇಳುವವನು ಹಿಂದಿನ ಮತ್ತು ಮುಂದಿನ ಏಳು ಪೀಳಿಗೆಗಳವರೆಗೆ ದಾನ-ಆಹುತಿಗಳ ಫಲವನ್ನು ನಾಶಗೊಳಿಸುತ್ತಾನೆ. ಸಂಪತ್ತನ್ನು ಅಪಹರಿಸಿಕೊಂಡವನ ದುಃಖ, ಪುತ್ರನ ಕೊಲೆಯಾದವನ ದುಃಖ, ಸಾಲಗಾರನ ಪ್ರತಿಯಾದ ದುಃಖ, ರಾಜನ ಬಂಧಿಯಾದವನ ದುಃಖ, ಪತಿವಿಹೀನ ಸ್ತ್ರೀಯ ದುಃಖ, ದಂಡಿನಿಂದ ತೊರೆಯಲ್ಪಟ್ಟವನ ದುಃಖ, ಇಬ್ಬರು ಹೆಂಡಿರಿರುವವನ ಪತ್ನಿಯ ದುಃಖ, ಮತ್ತು ಸಾಕ್ಷಿಗಳ ಎದುರು ಹೊಡೆತತಿಂದವನ ದುಃಖ ಇವೆಲ್ಲವೂ ದುಃಖಗಳೂ ಒಂದೇ ಎಂದು ತ್ರಿದಶೇಶ್ವರರು ಹೇಳುತ್ತಾರೆ. ಈ ಎಲ್ಲ ದುಃಖಗಳಿಗೂ ತಪ್ಪು ಉತ್ತರವನ್ನು ನೀಡಿದವನು ಇದೇ ದುಃಖವನ್ನು ಅನುಭವಿಸಿತ್ತಾನೆ. ತನ್ನ ಸಮಕ್ಷಮದಲ್ಲಿ ಯಾರು ನೋಡುತ್ತಾನೋ ಅಥವಾ ಕೇಳುತ್ತಾನೋ ಅವನನ್ನು ಸಾಕ್ಷಿ ಎಂದು ಕರೆಯುವುದರಿಂದ ಅವನು ಸತ್ಯವನ್ನು ನುಡಿದನಾದರೆ ಅವನ ಧರ್ಮ ಮತ್ತು ಅರ್ಧಗಳು ನಾಶವಾಗುವುದಿಲ್ಲ.”

ಕಶ್ಯಪನ ಮಾತನ್ನು ಕೇಳಿದ ಪ್ರಹ್ಲಾದನು ಪುತ್ರನಿಗೆ

“ನಿನಗಿಂಥ ಸುಧನ್ವನು ಶ್ರೇಷ್ಠನು. ಏಕೆಂದರೆ ನನಗಿಂಥ ಅಂಗಿರಸನು ಶ್ರೇಷ್ಠ” ಎಂದನು. “ಸುಧನ್ವನ ತಾಯಿಯೂ ನಿನ್ನ ತಾಯಿಗಿಂಥ ಶ್ರೇಷ್ಠಳು. ವಿರೋಚನ! ಆದುದರಿಂದ ಸುಧನ್ವನು ನಿನ್ನ ಪ್ರಾಣದ ಈಶ್ವರನಾಗುತ್ತಾನೆ.”

ಆಗ ಸುಧನ್ವನು ಹೇಳಿದನು:

“ಪುತ್ರಸ್ನೇಹವನ್ನು ಪರಿತ್ಯಜಿಸಿ ನೀನು ಧರ್ಮದಲ್ಲಿ ಗಟ್ಟಿಯಾಗಿ ನಿಂತಿದ್ದೀಯೆ. ನಿನ್ನ ಪುತ್ರನನ್ನು ಬಿಡುಗಡೆಮಾಡುತ್ತೇನೆ. ಅವನು ನೂರು ವರ್ಷಗಳು ಜೀವಿಸಲಿ.”

ಸರ್ವ ಸಭಾಸದರೂ ಈ ಪರಮ ಧರ್ಮವನ್ನು ಕೇಳಿದ್ದೀರಿ. ಈಗ ಕೃಷ್ಣೆಯ ಪ್ರಶ್ನೆಯ ಕುರಿತು ಏನು ಉತ್ತರವನ್ನು ನೀಡಬೇಕೆಂದು ಯೋಚಿಸಿರಿ.”

ವಿದುರನ ಈ ಮಾತುಗಳನ್ನು ಕೇಳಿಯೂ ಪಾರ್ಥಿವರು ಏನನ್ನೂ ಮಾತನ್ನಾಡಲಿಲ್ಲ. ಆಗ ಕರ್ಣನು ದಾಸಿ ಕೃಷ್ಣೆಯನ್ನು ಮನೆಗೆ ಕರೆದುಕೊಂಡು ಹೋಗು ಎಂದು ದುಃಶಾಸನನಿಗೆ ಕೂಗಿ ಹೇಳಿದನು. ನಾಚಿ ಕಂಪಿಸುತ್ತಾ ಪಾಂಡವರನ್ನು ನೋಡಿ ಪ್ರಲಪಿಸುತ್ತಿದ್ದ ಆ ತಪಸ್ವಿನಿಯನ್ನು ದುಃಶಾಸನನು ಸಭಾಮದ್ಯದಲ್ಲಿ ಎಳೆದನು. ದ್ರೌಪದಿಯು ಹೇಳಿದಳು:

“ಬಲಶಾಲಿಯು ಬಲಾತ್ಕಾರವಾಗಿ ಎಳೆದು ತರುವಾಗ ವಿಹ್ವಲಳಾದ ನಾನು ಮೊದಲೇ ಮಾಡಬೇಕಾಗಿದ್ದ ಒಂದು ಮಹೋತ್ತರ ಕಾರ್ಯವು ಉಳಿದುಬಿಟ್ಟಿದೆ. ಕುರುಸಂಸದಿಯಲ್ಲಿರುವ ಈ ಗುರುಗಳ ಅಭಿವಂದನೆಯನ್ನು ಮಾಡಬೇಕಾಗಿತ್ತು. ಇದು ನನ್ನ ಅಪರಾಧ ಎಂದು ತಿಳಿಯಬೇಡಿ. ಇದನ್ನು ಮೊದಲೇ ನಾನು ಮಾಡಲಿಲ್ಲ!”

ಅವನಿಂದ ಸಭೆಗೆ ಎಳೆದು ತರಲ್ಪಟ್ಟ ಆ ತಪಸ್ವಿನಿಯು ಉಚಿತವಾಗಿರದ ಆ ಅನುಭವದಿಂದ ದುಃಖಿತಳಾಗಿ ಬಿದ್ದು ವಿಲಪಿಸಿದಳು:

“ಸ್ವಯಂವರ ರಂಗದಲ್ಲಿ ಸಮಾಗಮಿಸಿದ್ದ ನೃಪರು ನೋಡಿದ ಮೊದಲು ಅಥವಾ ನಂತರ ನೋಡದೇ ಇದ್ದ ನನ್ನನ್ನು ಇಂದು ಸಭೆಗೆ ಎಳೆದು ತರಲಾಯಿತು. ಇದಕ್ಕೆ ಮೊದಲು ನನ್ನ ಮನೆಯಲ್ಲಿ ವಾಯುವಾಗಲೀ ಆದಿತ್ಯನಾಗಲೀ ನೋಡದೇ ಇದ್ದ ನನ್ನನ್ನು ಕುರುಸಂಸದಿಯಲ್ಲಿ ಸಭಾಮಧ್ಯದಲ್ಲಿ ಎಳೆದು ತಂದು ಪ್ರದರ್ಶಿಸಲಾಗಿದೆ. ಇದಕ್ಕೆ ಮೊದಲು ನನ್ನ ಮನೆಯಲ್ಲಿ ವಾಯು ಸ್ಪರ್ಷವನ್ನೂ ಸಹಿಸಲಾರದ ಪಾಂಡವರು ಇಂದು ಈ ದುರಾತ್ಮನು ನನ್ನನ್ನು ಸ್ಪರ್ಷಿಸುವುದನ್ನು ಸಹಿಸಿಕೊಂಡಿದ್ದಾರೆ. ಕೌರವರ ಕಾಲವು ಮುಗಿಯಲು ಬಂದಿದೆಯೆಂದು ನನಗನ್ನಿಸುತ್ತದೆ. ತಮ್ಮ ಅನರ್ಹ ಸೊಸೆ ಮತ್ತು ಹೆಣ್ಣುಮಕ್ಕಳಿಗೆ ಕಷ್ಟಕೊಡುತ್ತಿದ್ದಾರೆ. ಇಲ್ಲವಾದರೆ ಏಕೆ ಸತಿ ಮತ್ತು ಶುಭೆಯಾದ ನನ್ನನ್ನು ಈ ಸಭಾಮಧ್ಯದಲ್ಲಿ ಎಳೆದು ತಂದಿದ್ದಾರೆ? ಮಹೀಕ್ಷಿತರ ಧರ್ಮವೇ ಇಲ್ಲವಾಯಿತೆ? ಹಿಂದೆ ಎಂದೂ ಧಾರ್ಮಿಕ ಸ್ತ್ರೀಯರನ್ನು ಸಭೆಗೆ ಕರೆತಂದಿದ್ದುದನ್ನು ಕೇಳಿಲ್ಲ. ಈ ಸನಾತನ ಧರ್ಮವು ಕೌರವರಲ್ಲಿ ನಶಿಸಿಹೋದಂತಿದೆ. ಪಾಂಡವರ ಭಾರ್ಯೆ, ಪಾರ್ಷತನ ತಂಗಿ, ವಾಸುದೇವನ ಸಖಿ ಸತಿಯನ್ನು ಪಾರ್ಥಿವರ ಸಭೆಯಲ್ಲಿ ಏಕೆ ಎಳೆದು ತರಲಾಯಿತು? ಧರ್ಮರಾಜನ ಭಾರ್ಯೆ ಸದೃಶವರ್ಣಜಳಾದ ಇವಳು ದಾಸಿಯೋ ಅಥವಾ ದಾಸಿಯಲ್ಲವೋ ಹೇಳಿ ಕೌರವರೇ! ನಿಮ್ಮ ಹೇಳಿಕೆಯಂತೆ ನಡೆದುಕೊಳ್ಳುತ್ತೇನೆ. ಈ ಕೌರವರ ಯಶೋಹರ ಕ್ಷುದ್ರನು ನನ್ನ ಮಾನಕಳೆಯುತ್ತಿದ್ದಾನೆ. ಇನ್ನು ಇದನ್ನು ನಾನು ಸಹಿಸಲಾರೆ. ನಿಮ್ಮ ಅಭಿಪ್ರಾಯದಲ್ಲಿ ನನ್ನನ್ನು ಗೆದ್ದಿದ್ದಾರೆಯೋ ಇಲ್ಲವೋ ಎನ್ನುವುದನ್ನು ಹೇಳಿ. ನನ್ನ ಪ್ರಶ್ನೆಗೆ ಉತ್ತರವನ್ನು ಬಯಸುತ್ತೇನೆ ಮತ್ತು ಅದರಂತೆ ಮಾಡುತ್ತೇನೆ.”

ಭೀಷ್ಮನು ಹೇಳಿದನು:

“ಕಲ್ಯಾಣಿ! ಧರ್ಮದ ನಡೆಯನ್ನು ತಿಳಿಯಲಸಾಧ್ಯ ಎಂದು ಕೇಳಿದ್ದೇನೆ. ಲೋಕದ ಮಹಾತ್ಮ ವಿಪ್ರರೂ ಅದನ್ನು ಹಿಂಬಾಲಿಸಲು ಶಕ್ಯರಿಲ್ಲ. ಲೋಕದಲ್ಲಿ ಧರ್ಮವು ಪ್ರಶ್ನೆಯಲ್ಲಿದ್ದಾಗಲೆಲ್ಲಾ ಬಲಶಾಲಿ ಪುರುಷರು ಏನನ್ನು ಧರ್ಮವೆಂದು ಕಾಣುತ್ತಾರೋ ಅದನ್ನೇ ಇತರರೂ ಕೂಡ ಧರ್ಮವೆಂದು ಸ್ವೀಕರಿಸುತ್ತಾರೆ. ನಾನು ಈ ಪ್ರಶ್ನೆಯನ್ನು ನಿಶ್ಚಯವಾಗಿ ಉತ್ತರಿಸಲು ಶಕ್ತನಾಗಿಲ್ಲ. ಯಾಕೆಂದರೆ ಇದು ಸೂಕ್ಷ್ಮವಾದುದು, ಗಹನವಾದುದು ಮತ್ತು ಇದೊಂದು ದೊಡ್ಡ ಸಾಹಸವು. ಈ ಕುಲದ ಅಂತ್ಯಕ್ಕೆ ತಡವಿಲ್ಲವೆಂದು ತೋರುತ್ತದೆ. ಸರ್ವ ಕುರುಗಳೂ ಲೋಭ-ಮೋಹಪರಾಯಣರಾಗಿದ್ದಾರೆ. ಕುಲವಧು ನಿನ್ನನ್ನು ಇಲ್ಲಿ ಕರೆತಂದಂತೆ ಉತ್ತಮ ಕುಲಗಳಲ್ಲಿ ಜನಿಸಿದವರು ವ್ಯಸನಪೀಡಿತರಾಗಿ ಧರ್ಮಮಾರ್ಗವನ್ನು ತೊರೆಯುವುದಿಲ್ಲ. ಕಷ್ಟಶೋಕವನ್ನು ಹೊಂದಿದ್ದರೂ ನೀನು ನಡೆದುಕೊಂಡ ರೀತಿಯು ಅಂಥಹುದು. ಈಗಲೂ ನೀನು ಧರ್ಮವನ್ನು ಹುಡುಕುತ್ತಿದ್ದೀಯೆ. ಇಲ್ಲಿರುವ ದ್ರೋಣ ಮೊದಲಾದ ಧರ್ಮವಿದ ವೃದ್ಧ ಜನರು ಸತ್ವವನ್ನು ಕಳೆದುಕೊಂಡು ಶೂನ್ಯ ದೇಹದಲ್ಲಿರುವವರಂತೆ ಮುಖವನ್ನು ಕೆಳಮಾಡಿ ಕುಳಿತಿದ್ದಾರೆ. ನನ್ನ ಪ್ರಕಾರ ಯುಧಿಷ್ಠಿರನು ಮಾತ್ರ ಈ ಪ್ರಶ್ನೆಗೆ ಪ್ರಮಾಣ. ನಿನ್ನನ್ನು ಗೆದ್ದಿದ್ದಾರೆಯೋ ಅಥವಾ ಇಲ್ಲವೋ ಎನ್ನುವುದನ್ನು ಸ್ವಯಂ ಅವನೇ ಹೇಳಬೇಕು.”

ಬಹಳಷ್ಟು ನಡೆದುಹೋದವುಗಳನ್ನು ಮತ್ತು ಕುರರೀ ಪಕ್ಷಿಯಂತೆ ಆರ್ತಳಾಗಿ ರೋಧಿಸುತ್ತಿದ್ದ ಅವಳನ್ನು ನೋಡಿದ ಮಹೀಕ್ಷಿತರು ಧಾರ್ತರಾಷ್ಟ್ರನ ಭೀತಿಯಿಂದ ಒಳ್ಳೆಯ ಅಥವಾ ಕೆಟ್ಟ ಯಾವ ಮಾತುಗಳನ್ನೂ ಆಡಲಿಲ್ಲ. ಪಾರ್ಥಿವ ಪುತ್ರಪೌತ್ರರೆಲ್ಲರೂ ಸುಮ್ಮನಿದ್ದುದನ್ನು ನೋಡಿದ ಧೃತರಾಷ್ಟ್ರಪುತ್ರನು ಮುಗುಳ್ನಗುತ್ತಾ ಪಾಂಚಾಲರಾಜ ಸುತೆಗೆ ಹೇಳಿದನು:

“ಯಾಜ್ಞಸೇನಿ! ನಿನ್ನ ಈ ಪ್ರಶ್ನೆಯನ್ನು ನಿನ್ನ ಸತ್ವಶಾಲಿ ಪತಿಗಳು - ಭೀಮ, ಅರ್ಜುನ, ಸಹದೇವ ಮತ್ತು ನಕುಲರಲ್ಲಿ ಇಡು. ನೀನು ಕೇಳಿದುದರ ಉತ್ತರ ಅವರಿಂದ ಬರಲಿ. ಯುಧಿಷ್ಠಿರನು ನಿನ್ನ ಒಡೆಯನಲ್ಲ ಎಂದು ಇವರೆಲ್ಲರೂ ಈ ಅರ್ಯರ ಮಧ್ಯದಲ್ಲಿ ಹೇಳಲಿ. ಆಗ ನೀನು ಧರ್ಮರಾಜನನ್ನು ದಾಸಭಾವದಿಂದ ಮುಕ್ತನನ್ನಾಗಿಸಬಲ್ಲೆ. ಅವನು ನಿನ್ನ ಒಡೆಯ ಅಥವಾ ಒಡೆಯನಲ್ಲವೆಂದು ಸ್ವಯಂ ಧರ್ಮಸ್ಥಿತ ಇಂದ್ರಸಮಾನ ಮಹಾತ್ಮ ಧರ್ಮರಾಜನು ಹೇಳಲಿ. ಅವನ ಮಾತಿನ ಪ್ರಕಾರ ನೀನು ಯಾವುದಾದರೂ ಒಂದರಂತೆ ಮಾಡು. ಈ ಸಭೆಯಲ್ಲಿರುವ ಸರ್ವ ಕೌರವರೂ ವರ್ತಮಾನದಲ್ಲಿ ನಿನ್ನ ದುಃಖದಲ್ಲಿ ಮುಳುಗಿಹೋಗಿದ್ದಾರೆ. ಆ ಆರ್ಯಸತ್ವರು ಯಥಾವತ್ತಾಗಿ ಉತ್ತರಿಸಲಾಗದೇ ನಿನ್ನ ಅಲ್ಪ ಭಾಗ್ಯ ಪತಿಗಳ ಕಡೆ ನೋಡುತ್ತಿದ್ದಾರೆ.”

ಆಗ ಸಭೆಯಲ್ಲಿದ್ದ ಸರ್ವರೂ ಕುರುರಾಜನ ಆ ಮಾತನ್ನು ಉಚ್ಛ ಸ್ವರಗಳಲ್ಲಿ ಪ್ರಶಂಸಿಸಿದರು. ಕೆಲವರು ಸಂತೋಷದಿಂದ ಕರವಸ್ತ್ರಗಳನ್ನು ಮೇಲೆ ಹಾರಿಸಿದರೆ ಇನ್ನು ಕೆಲವರು “ಹಾ! ಹಾ!” ಎಂದು ಜೋರಾಗಿ ಕೂಗಿದರು. ಅಲ್ಲಿದ್ದ ಸರ್ವ ಪಾರ್ಥಿವರೂ ಸಂತೋಷದಿಂದ ಧಾರ್ಮಿಕ ಕುರುಶ್ರೇಷ್ಠನನ್ನು ಗೌರವಿಸಿದರು. ಸರ್ವ ಪಾರ್ಥಿವರೂ ಧರ್ಮಜ್ಞನು ಏನು ಹೇಳುತ್ತಾನೆ ಎಂದು ಮುಖ ತಿರುಗಿಸಿ ಯುಧಿಷ್ಠಿರನೆಡೆಗೆ ನೋಡಿದರು. ಯುದ್ಧದಲ್ಲಿ ಗೆಲ್ಲಲಾರದ ಪಾಂಡವ ಬೀಭತ್ಸುವು ಏನು ಹೇಳುತ್ತಾನೆ? ಭೀಮಸೇನ ಮತ್ತು ಯಮಳರು ಏನು ಹೇಳುತ್ತಾರೆ? ಎಂದು ತುಂಬಾ ಕುತೂಹಲಗೊಂಡರು.

ಭೀಮನ ಮಾತು

ಆ ಶಬ್ಧವು ಕಡಿಮೆಯಾಗಲು ಭೀಮಸೇನನು ಚಂದನಲೇಪಿತ ವಿಪುಲ ಭುಜವನ್ನು ಹಿಡಿದು ಹೇಳಿದನು:

“ಧರ್ಮರಾಜ ಯುಧಿಷ್ಠಿರನು ನಮ್ಮ ಗುರು ಮತ್ತು ಈ ಕುಲದ ಪ್ರಭುವಾಗಿರದಿದ್ದರೆ ನಾವು ಈ ರೀತಿ ನೋವನ್ನನುಭವಿಸುತ್ತಿರಲಿಲ್ಲ. ಅವನು ನಮ್ಮ ಪುಣ್ಯ ಮತ್ತು ತಪಸ್ಸಿನ ಈಶ್ವರ ಮಾತ್ರ ಅಲ್ಲ ಪ್ರಾಣಗಳ ಈಶ್ವರನೂ ಹೌದು. ಅವನು ತನ್ನನ್ನು ತಾನು ಸೋತೆನೆಂದು ತಿಳಿದರೆ ನಾವೂ ಕೂಡ ಸೋತೆವೆಂದೇ ತಿಳಿಯುತ್ತೇವೆ. ಪಾಂಚಾಲಿಯ ಕೂದಲನ್ನು ಸ್ಪರ್ಷಿಸಿದ ಈ ಭೂಮಿಯ ಮೇಲಿನ ಯಾವ ನರನೂ ಜೀವ ಸಹಿತ ನನ್ನಿಂದ ಉಳಿಯುತ್ತಿರಲಿಲ್ಲ. ಪರಿಘದಂತೆ ಉರುಟಾದ ನನ್ನ ಈ ಭುಜಗಳನ್ನು ನೋಡಿ. ಇವುಗಳಲ್ಲಿ ಸಿಲುಕಿಕೊಂಡ ಶತಕ್ರತುವೂ ಕೂಡ ಬಿಡುಗಡೆ ಹೊಂದಲು ಸಾಧ್ಯವಿಲ್ಲ. ಆದರೆ ಈಗ ಧರ್ಮಪಾಶದಲ್ಲಿ ಸಿಲುಕಿದ ನಾನು ಗೌರವ ಮತ್ತು ಅರ್ಜುನನ ನಿಗ್ರಹದಿಂದ ಸಂಕಟವನ್ನು ತರುತ್ತಿಲ್ಲ. ಧರ್ಮರಾಜನು ನನ್ನನ್ನು ಬಿಡುಗಡೆಮಾಡಿದರೆ ಸಿಂಹವು ಕ್ಷುದ್ರಮೃಗಗಳನ್ನು ಹೇಗೋ ಹಾಗೆ ಈ ಪಾಪಿ ಧಾರ್ತರಾಷ್ಟ್ರರನ್ನು ನಿಶ್ಯೇಷವಾಗಿ ಸಮಮಾಡುತ್ತಿದ್ದೆ!”

ಆಗ ಭೀಷ್ಮ, ದ್ರೋಣ ಮತ್ತು ವಿದುರರು “ಶಾಂತನಾಗು! ನಿನ್ನಿಂದ ಸರ್ವವೂ ಸಂಭವವಿದೆ!” ಎಂದರು.

ಕರ್ಣನು ಹೇಳಿದನು:

“ದಾಸ, ಶಿಷ್ಯ ಮತ್ತು ಅಸ್ವತಂತ್ರ ನಾರಿ - ಈ ಮೂವರು ಅಧನರು. ಭದ್ರೇ! ದಾಸನ ಪತ್ನಿಯಾದ ನೀನು ಇವನ ಧನ. ಹೀನೇಶ್ವರಳಾದ ದಾಸಿಯೇ! ನೀನು ದಾಸಧನ. ಇವನ ಮನೆಯನ್ನು ಪ್ರವೇಶಿಸಿ ಪರಿಚಾರ ಸೇವೆಗಳನ್ನು ಮಾಡು. ಅದೊಂದು ಕಾರ್ಯವು ಉಳಿದುಕೊಂಡಿದೆ. ಈಗ ಈ ಎಲ್ಲ ಧಾರ್ತರಾಷ್ಟ್ರರೂ ನಿನ್ನ ಒಡೆಯರು. ಪಾರ್ಥರಲ್ಲ. ನಿನ್ನ ಸ್ವಾತಂತ್ರ್ಯವನ್ನು ಪಣವನ್ನಾಗಿಡದಂಥಹ ಬೇರೆ ಯಾರನ್ನಾದರೂ ನಿನ್ನ ಪತಿಯನ್ನಾಗಿ ಆರಿಸಿಕೋ. ಪತಿಯ ಸೇವೆ ಮಾಡುವುದು ಅನವದ್ಯವಲ್ಲ. ನಿನ್ನನ್ನು ನಿತ್ಯ ದಾಸಿಯಾಗಿ ತಿಳಿಯುತ್ತೇವೆ. ನಕುಲ, ಭೀಮಸೇನ, ಯುಧಿಷ್ಠಿರ, ಸಹದೇವ ಮತ್ತು ಅರ್ಜುನರು ಪರಾಜಿತರಾಗಿದ್ದಾರೆ. ದಾಸಿಯಾಗಿ ಒಳಗೆ ಬಾ. ಪರಾಜಿತರಾದವರು ನಿನ್ನ ಪತಿಗಳಾಗಿ ಉಳಿದಿಲ್ಲ. ಪಾರ್ಥನ ಪರಾಕ್ರಮ-ಪೌರುಷವೆಲ್ಲ ಅವನ ಸ್ವಂತ ಪ್ರಯೋಜನಕ್ಕೇ ಬರುತ್ತಿಲ್ಲ. ಪಾಂಚಾಲ ದ್ರುಪದನ ಈ ಮಗಳನ್ನು ಸಭಾಮಧ್ಯದಲ್ಲಿ ಜೂಜಿನ ಪಣವನ್ನಾಗಿಟ್ಟು ಕಳೆದುಕೊಂಡ!”

ಇದನ್ನು ಕೇಳಿ ಅತಿಕುಪಿತನಾದ ಭೀಮಸೇನನು ಸಹಿಸಲಾಗದೇ ನಿಟ್ಟುಸಿರು ಬಿಡುತ್ತಾ ಆರ್ತರೂಪಿ ಧರ್ಮಪಾಶಗಳಿಂದ ಬದ್ಧ ರಾಜನನ್ನು ಸುಡುತ್ತಿರುವನೋ ಎನ್ನುವಂತೆ ಕೋಪವಿರಕ್ತ ದೃಷ್ಟಿಯಿಂದ ನೋಡಿ ಹೇಳಿದನು:

“ರಾಜನ್! ನಾನು ಸೂತಪುತ್ರನ ಮೇಲೆ ಕುಪಿತನಾಗಿಲ್ಲ. ಯಾಕೆಂದರೆ ನಾವು ದಾಸಧರ್ಮವನ್ನು ಪಡೆದಿರುವುದು ಸತ್ಯ. ನರೇಂದ್ರ! ಆದರೆ ನೀನು ಅವಳನ್ನು ಪಣವಾಗಿ ಎಸೆಯದಿದ್ದರೆ ನನ್ನನ್ನು ಈ ರೀತಿ ಇವರು ಬಂಧನದಲ್ಲಿಡಲು ಸಾಧ್ಯವಾಗುತ್ತಿತ್ತೇ?”

ರಾಧೇಯನ ಮಾತುಗಳನ್ನು ಕೇಳಿದ ರಾಜ ದುರ್ಯೋಧನನು ಜೀವವಿಲ್ಲದವನಂತೆ ಸುಮ್ಮನೆ ಕುಳಿತಿದ್ದ ಯುಧಿಷ್ಠಿರನಿಗೆ ಹೇಳಿದನು:

“ನೃಪ! ಭೀಮಾರ್ಜುನರು ಮತ್ತು ಯಮಳರು ನಿನ್ನ ಶಾಸನವನ್ನು ಅನುಸರಿಸುತ್ತಾರೆ. ಪ್ರಶ್ನೆಗೆ ಉತ್ತರಿಸು. ನಾವು ಕೃಷ್ಣೆಯನ್ನು ಗೆದ್ದಿದ್ದೇವೆ ಎಂದು ನಿನಗನಿಸುತ್ತದೆಯೇ?”

ಈ ರೀತಿ ಕೌಂತೇಯನಿಗೆ ಹೇಳಿ ಆ ಐಶ್ವರ್ಯಮದಮೋಹಿತನು ತನ್ನ ವಸ್ತ್ರವನ್ನು ಮೇಲೆತ್ತಿ ಕರೆಯುವ ದೃಷ್ಟಿಯಿಂದ ದ್ರೌಪದಿಯತ್ತ ನೋಡಿದನು. ರಾಧೇಯನೊಂದಿಗೆ ಚೇಷ್ಟೆಯಾಡುತ್ತಾ ಭೀಮಸೇನನನ್ನು ಸಿಟ್ಟಿಗೇಳಿಸಲು, ಅವನು ಬಾಳೆಯದಿಂಡಿನಂತಿದ್ದ, ಸರ್ವಲಕ್ಷಣಪೂಜಿತ, ಆನೆಯ ಸೊಂಡಿಲಿನಂತಿದ್ದ, ವಜ್ರಪ್ರತಿಮ, ಗೌರವಯುಕ್ತ ತನ್ನ ಎಡ ತೊಡೆಯನ್ನು ದ್ರೌಪದಿಗೆ ತೋರಿಸಿದನು. ಅದನ್ನು ನೋಡಿದ ವೃಕೋದರನು ತನ್ನ ಕೆಂಪು ಕಣ್ಣುಗಳನ್ನು ಅರಳಿಸಿ ಸಭೆಯಲ್ಲಿದ್ದ ರಾಜರೆಲ್ಲರಿಗೂ ಕೇಳುವ ಹಾಗೆ ಕೂಗಿ ಹೇಳಿದನು:

“ಮಹಾಯುದ್ಧದಲ್ಲಿ ನಾನು ಇವನ ಆ ತೊಡೆಯನ್ನು ಗದೆಯಿಂದ ಹೊಡೆದು ತುಂಡುಮಾಡದಿದ್ದರೆ ಈ ವೃಕೋದರನು ತನ್ನ ಪಿತೃಗಳ ಲೋಕವನ್ನು ಸೇರದಿರಲಿ!”

ಅವನು ಈ ರೀತಿ ಹೇಳುತ್ತಿದ್ದಂತೆ ಪೊಳ್ಳು ಮರದ ಕೊಟರೆಯಿಂದ ಹೇಗೋ ಹಾಗೆ ಆ ಕೃದ್ಧನ ದೇಹದ ಎಲ್ಲ ರಂಧ್ರಗಳಿಂದ ಬೆಂಕಿಯು ಹೊರಬಿದ್ದಿತು. ವಿದುರನು ಹೇಳಿದನು:

“ರಾಜರೇ! ಈ ಮಹಾ ಭಯಂಕರ ಭೀಮಸೇನನನ್ನು ನೋಡಿ! ಇವನು ವರುಣನ ಪಾಶದಂತೆಯೇ ತೋರುತ್ತಿದ್ದಾನೆ. ಇದು ಈ ಪುರಾತನ ಭರತವಂಶಕ್ಕೆ ದೈವವು ಮೊದಲೇ ನೀಡಿದ ಒಂದು ದುರ್ಭಾಗ್ಯವಾಗಿರಬಹುದು. ಸಭೆಯಲ್ಲಿ ಈ ಸ್ತ್ರೀಗಾಗಿ ನಡೆಸಿದ ನಿಮ್ಮ ಅತಿದ್ಯೂತವನ್ನು ಸಾಕುಮಾಡಿ. ಪಾಪವನ್ನು ಯೋಜಿಸಿ ಕಾರ್ಯಗತಗೊಳಿಸಿದ ನಿಮ್ಮ ಯೋಗಕ್ಷೇಮಕ್ಕೆ ಮಹಾಭಯವೊಂದು ಗೋಚರವಾಗುತ್ತಿದೆ. ಬೇಗನೆ ಇದರ ಕುರಿತು ಧರ್ಮವು ಏನು ಹೇಳುತ್ತದೆ ಎನ್ನುವುದನ್ನು ನಿರ್ಧಾರಮಾಡಿ. ಆ ನಿರ್ಧಾರವು ಸರಿಯಾಗಿರದಿದ್ದರೆ ಈ ಸಭೆಯು ಅನುಭವಿಸುತ್ತದೆ. ಈ ಜೂಜುಗಾರನು ತಾನು ಪರಾಜಿತನಾಗುವುದರ ಮೊದಲೇ ಇವಳನ್ನು ಪಣವನ್ನಾಗಿಟ್ಟಿದ್ದರೆ ಅವನು ಅವಳ ಒಡೆಯನಾಗಿರುತ್ತಿದ್ದನು. ಯಾವುದರ ಮೇಲೆ ತನಗೆ ಒಡೆತನವೇ ಇಲ್ಲವೋ ಅದನ್ನು ಪಣವಾಗಿಟ್ಟು ಗೆದ್ದೆನೆಂದರೆ ಕನಸಿನಲ್ಲಿ ಗೆದ್ದ ಪಣವೂ ಧನವಾಗಿರುತ್ತಿತ್ತು. ಗಾಂಧಾರಿಪುತ್ರನ ಮಾತುಗಳನ್ನು ಕೇಳಿದ ನೀವು ಇದರ ಕುರಿತಾದ ಧರ್ಮನಿರ್ಣಯವನ್ನು ಹೇಳಿ.”

ದುರ್ಯೋಧನನು ಹೇಳಿದನು:

“ಭೀಮನ ವಾಕ್ಯ, ಹಾಗೆಯೇ ಅರ್ಜುನನ ಮತ್ತು ಯಮಳರ ಮಾತಿನಂತೆ ನಾವು ನಡೆದುಕೊಳ್ಳೋಣ. ಒಂದು ವೇಳೆ ಯುಧಿಷ್ಠಿರನು ಅವರ ಒಡೆಯನಾಗಿರಲಿಲ್ಲ ಎಂದು ಅವರು ಹೇಳಿದರೆ, ಯಾಜ್ಞಸೇನಿ! ನೀನು ದಾಸತ್ವದಿಂದ ಮುಕ್ತಳಾಗುತ್ತೀಯೆ.”

ಅರ್ಜುನನು ಹೇಳಿದನು:

“ನಮ್ಮನ್ನು ಪಣವನ್ನಾಗಿ ಇಡುವುದಕ್ಕೆ ಮೊದಲು ರಾಜ ಮಹಾತ್ಮ ಕುಂತೀಪುತ್ರ ಧರ್ಮರಾಜನು ನಮ್ಮ ಒಡೆಯನಾಗಿದ್ದನು. ಆದರೆ ತನ್ನನ್ನು ತಾನೇ ಕಳೆದುಕೊಂಡವನು ಯಾರ ಒಡೆಯ? ಇದನ್ನೇ ನೀವು ಸರ್ವ ಕುರುಗಳೂ ನಿರ್ಧಾರ ಮಾಡಬೇಕು.”

ದ್ರೌಪದೀ ವರಲಾಭ

ಆಗ ಅಲ್ಲಿ ರಾಜ ಧೃತರಾಷ್ಟ್ರನ ಗೃಹದ ಅಗ್ನಿಹೋತ್ರದ ಬಳಿ ನರಿಯೊಂದು ಕೂಗಿತು. ಅದಕ್ಕೆ ಪ್ರತ್ಯುತ್ತರವಾಗಿ ಕತ್ತೆಗಳು ಒದರಿದವು. ಅದೇ ಸಮಯದಲ್ಲಿ ಎಲ್ಲಕಡೆಗಳಿಂದ ಪಕ್ಷಿಗಳ ರೋದನವು ಕೇಳಿಬಂದಿತು. ಆ ಘೋರ ಶಬ್ಧವನ್ನು ತತ್ವವಾದಿ ವಿದುರನು ಕೇಳಿದನು. ಹಾಗೆಯೇ ಸುಬಲಾತ್ಮಜನೂ, ಭೀಷ್ಮ-ದ್ರೋಣರೂ, ಮತ್ತು ವಿದ್ವಾನ್ ಗೌತಮನೂ ಕೇಳಿದರು. ಅವರು ಜೋರಾಗಿ “ಸ್ವಸ್ತಿ! ಸ್ವಸ್ತಿ!” ಎಂದು ಕೂಗಿದರು. ವಿದ್ವಾಂಸ ವಿದುರ ಮತ್ತು ಗಾಂಧಾರಿ ಇಬ್ಬರೂ ಆ ಘೋರ ಉತ್ಪಾತಗಳು ತೋರಿದುದನ್ನು ತಕ್ಷಣವೇ ರಾಜನಿಗೆ ಹೇಳಿದ ನಂತರ ರಾಜನು ಈ ಮಾತುಗಳನ್ನಾಡಿದನು:

“ಮಂದಬುದ್ಧಿ! ದುರ್ಯೋಧನ! ಕುರುಪುಂಗವರ ಈ ಸಭೆಯಲ್ಲಿ ಸರಿಯಾಗಿಯೇ ಮಾತನಾಡುತ್ತಿರುವ ಸ್ತ್ರೀಯೊಂದಿಗೆ ಅದರಲ್ಲೂ ವಿಶೇಷವಾಗಿ ಧರ್ಮನ ಪತ್ನಿ ದ್ರೌಪದಿಯೊಂದಿಗೆ ಕೆಟ್ಟದ್ದಾಗಿ ವರ್ತಿಸಿದ್ದುದರಿಂದ ಸೋತವನು ನೀನೇ!”

ಹೀಗೆ ಹೇಳಿದ ಮನೀಷಿ ಧೃತರಾಷ್ಟ್ರನು ಬಾಂಧವ ಪತ್ನಿ ಕೃಷ್ಣಾ ಪಾಂಚಾಲಿಯನ್ನು ಸಂತವಿಸುವ ಉದ್ದೇಶದಿಂದ ಪ್ರಜ್ಞೆಯ ತತ್ವಬುದ್ಧಿಯನ್ನು ಸೂಚಿಸುವ ಮಾತುಗಳನ್ನಾಡಿದನು:

“ಪಾಂಚಾಲಿ! ಪರಮ ಧಾರ್ಮಿಕ ಸತಿಯಾದ ನೀನು ನನ್ನ ಸೊಸೆಯಂದಿರಲ್ಲಿಯೇ ವಿಶಿಷ್ಠಳಾಗಿದ್ದೀಯೆ. ನನ್ನಿಂದ ನೀನು ಬಯಸುವ ವರವನ್ನು ಪಡೆ.”

ದ್ರೌಪದಿಯು ಹೇಳಿದಳು:

“ಭರತರ್ಷಭ! ವರವೊಂದನ್ನು ನನಗೆ ಕೊಡುವುದಾದರೆ ಸರ್ವಧರ್ಮಾನುಗ ಶ್ರೀಮಾನ್ ಯುಧಿಷ್ಠಿರನು ಅದಾಸನಾಗಲಿ. ತಿಳಿಯದವರು ಮನಸ್ವಿ ಪ್ರತಿವಿಂಧ್ಯನನ್ನು “ಇಗೋ ಇವನು ದಾಸಪುತ್ರ!” ಎಂದು ಕರೆಯದಂತಾಗದಿರಲಿ! ಈ ವರೆಗೆ ಬೇರೆ ಯಾವ ಪುರುಷನೂ ಅವನಂತೆ ಲಾಲಿತನಾಗಿಲ್ಲ. ಅವನು ತನ್ನ ದಾಸಪುತ್ರತ್ವವನ್ನು ನೋಡಿ ಸತ್ತೇಹೋಗುತ್ತಾನೆ!”

ಧೃತರಾಷ್ಟ್ರನು ಹೇಳಿದನು:

“ಭದ್ರೇ! ನಾನು ನಿನಗೆ ಎರಡನೇ ವರವನ್ನು ಕೊಡುತ್ತೇನೆ. ಕೇಳಿಕೋ. ನೀನು ಒಂದೇ ಒಂದು ವರಕ್ಕೆ ಅರ್ಹಳಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ.”

ದ್ರೌಪದಿಯು ಹೇಳಿದಳು:

“ನನ್ನ ಎರಡನೆಯ ವರವಾಗಿ ನಾನು ರಥ-ಧನುಸ್ಸುಗಳೊಂದಿಗೆ ಭೀಮಸೇನ, ಧನಂಜಯ ಮತ್ತು ನಕುಲ ಸಹದೇವರನ್ನು ಕೇಳಿಕೊಳ್ಳುತ್ತೇನೆ.”

ಧೃತರಾಷ್ಟ್ರನು ಹೇಳಿದನು:

“ಮೂರನೆಯ ವರವನ್ನೂ ಕೇಳು. ನೀನು ಎರಡೇ ಎರಡು ವರಗಳಿಂದ ಸುಸತ್ಕೃತಳಾದೆಯೆಂದು ಅನಿಸುವುದಿಲ್ಲ. ಧರ್ಮಚಾರಿಣಿಯಾದ ನೀನು ನನ್ನ ಎಲ್ಲ ಸೊಸೆಯಂದಿರಲ್ಲಿ ಶ್ರೇಯಸಿ.”

ದ್ರೌಪದಿಯು ಹೇಳಿದಳು:

“ಭಗವನ್! ಲೋಭವು ಧರ್ಮವನ್ನು ನಾಶಪಡಿಸುತ್ತದೆ. ನಾನು ಮೂರನೆಯ ವರವನ್ನು ಪಡೆಯಲು ಅನರ್ಹಳು. ವೈಶ್ಯೆಯ ಪತ್ನಿಗೆ ಒಂದೇ ವರ, ಕ್ಷತ್ರಿಯನ ಪತ್ನಿಗೆ ಎರಡು ವರಗಳು, ರಾಜನ ಪತ್ನಿಗೆ ಮೂರು ವರಗಳು ಮತ್ತು ಬ್ರಾಹ್ಮಣನ ಪತ್ನಿಗೆ ನೂರು ವರಗಳೆಂದು ಹೇಳುತ್ತಾರೆ. ಪಾಪೀಯಸರಾಗಿದ್ದ ನನ್ನ ಪತಿಗಳು ಈಗ ಪಾರಾಗಿದ್ದಾರೆ. ಇನ್ನು ಮುಂದೆ ಅವರೇ ತಮ್ಮ ಪುಣ್ಯ ಕರ್ಮಗಳಿಂದ ಒಳ್ಳೆಯದನ್ನು ಹೊಂದುತ್ತಾರೆ!”

ಕರ್ಣನು ಹೇಳಿದನು:

“ಇದೂವರೆಗೆ ಕೇಳಿದ್ದ ರೂಪಸಮನ್ವಿತ ಯಾವ ಮನುಷ್ಯ ಸ್ತ್ರೀಯೂ ಇಂಥಹ ಕರ್ಮವನ್ನು ಸಾಧಿಸಿದುದನ್ನು ಕೇಳಿಲ್ಲ. ಪಾರ್ಥರು ಮತ್ತು ಧಾರ್ತರಾಷ್ಟ್ರರು ಕ್ರೋಧಾವಿಷ್ಟರಾಗುತ್ತಿರಲು ಈ ದ್ರೌಪದಿ ಕೃಷ್ಣೆಯು ಪಾಂಡುಪುತ್ರರರಿಗೆ ಶಾಂತಿಯನ್ನು ತಂದಿಟ್ಟಹಾಗಾಯಿತು. ಮುಳುಗುತ್ತಿದ್ದ ದೋಣಿಯಿಂದ ತಳವಿಲ್ಲದ ಸಾಗರದಲ್ಲಿ ಮುಳುಗಿ ಹೋಗುತ್ತಿದ್ದ ಈ ಪಾಂಡುಪುತ್ರರಿಗೆ ಪಾಂಚಾಲಿಯು ಪಾರುಮಾಡುವ ದೋಣಿಯಂತಾದಳು.”

ಭೀಮನ ಕ್ರೋಧ

ಪಾಂಡುಪುತ್ರರಿಗೆ ಸ್ತ್ರೀಯೇ ಗತಿಯಾದಳು ಎಂದು ಕುರುಮಧ್ಯದಲ್ಲಿ ಹೇಳಿದ್ದುದನ್ನು ಕೇಳಿದ ಭೀಮಸೇನನು ಅತಿ ಕೋಪಗೊಂಡು ಮನನೊಂದು ಹೇಳಿದನು:

“ಪುರುಶನಿಗೆ ಮೂರು ಜ್ಯೋತಿಗಳಿವೆ ಎಂದು ದೇವಲನು ಹೇಳಿದ್ದಾನೆ: ಸಂತಾನ, ಕರ್ಮ ಮತ್ತು ವಿದ್ಯೆ. ಇವುಗಳಿಂದಲೇ ಸೃಷ್ಟಿಯಾದವುಗಳು ಬಾಳುತ್ತವೆ. ಬಾಂಧವರು ಬಿಸಾಡಿದ ಪುರುಷನ ಮಾಂಸವಿಲ್ಲದ ಪ್ರಾಣಗತ ಶೂನ್ಯ ದೇಹದ ನಂತರ ಉಳಿಯುವುದೆಂದರೆ ಇವು ಮೂರೇ. ಧನಂಜಯ! ನಮ್ಮ ಪತ್ನಿಯನ್ನು ಇವರು ಉಲ್ಲಂಘಿಸಿ ಒಂದು ಜ್ಯೋತಿಯನ್ನು ಆರಿಸಿದ್ದಾರೆ. ಉಲ್ಲಂಘನೆಗೊಂಡ ಪತ್ನಿಯಿಂದ ಸಂತಾನವನ್ನು ಹೇಗೆ ಪಡೆಯಬಹುದು?”

ಅರ್ಜುನನು ಹೇಳಿದನು:

“ಹೀನಪುರುಷರು ಆಡಿದ ಅಥವಾ ಆಡದೇ ಇದ್ದ ಮಾತುಗಳಿಗೆ ಭಾರತರು ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಉತ್ತಮ ಪುರುಷರು ಸದಾ ಸುಕೃತಗಳನ್ನೇ ನೆನಪಿಟ್ಟುಕೊಳ್ಳುತ್ತಾರೆ. ವೈರತ್ವದಿಂದ ಮಾಡಿದ ಕರ್ಮಗಳನ್ನಲ್ಲ. ತಮ್ಮ ಮೇಲೆಯೇ ವಿಶ್ವಾಸವಿರುವ ಸಂತರು ಒಳ್ಳೆಯದನ್ನು ಗುರುತಿಸುತ್ತಾರೆ.”

ಭೀಮನು ಹೇಳಿದನು:

“ಸಮಾಗತ ಎಲ್ಲ ಶತ್ರುಗಳನ್ನೂ ಇಲ್ಲಿಯೇ ಕೊಂದುಬಿಡುತ್ತೇನೆ. ಆದುದರಿಂದ ರಾಜೇಂದ್ರ! ಹೊರಗೆ ಹೋಗು. ಇವರನ್ನು ಸಮೂಲವಾಗಿ ಸಂಹರಿಸುತ್ತೇನೆ. ಇಲ್ಲಿ ಇನ್ನೂ ಏಕೆ ವಿವಾದದಲ್ಲಿ ತೊಡಗಿ ಕ್ಲೇಶವನ್ನು ಅನುಭವಿಸಬೇಕು? ಇಂದೇ ಇಲ್ಲಿಯೇ ಇವರನ್ನು ವಧಿಸುತ್ತೇನೆ. ನೀನು ಈ ವಸುಧೆಯನ್ನು ಆಳು.”

ಹೀಗೆ ಹೇಳಿದ ಭೀಮಸೇನನು ತನ್ನ ಕಿರಿಯ ತಮ್ಮಂದಿರುಗಳಿಂದ ಆವೃತನಾಗಿ ಮೃಗಮಧ್ಯದಲ್ಲಿದ್ದ ಸಿಂಹನಂತೆ ಕಾಣುತ್ತಿದ್ದನು ಮತ್ತು ಆಗಾಗ ಪರಿಘವನ್ನು ನೋಡುತ್ತಿದ್ದನು. ಅಕ್ಲಿಷ್ಟಕರ್ಮಿ ಪಾರ್ಥರು ಅವನನ್ನು ಒಳ್ಳೆಯ ರೀತಿಯಲ್ಲಿ ಸಂತವಿಸುತ್ತಿರಲು ವೀರ್ಯವಾನ್ ಮಹಾಬಾಹುವು ಒಳಗಿಂದೊಳಗೇ ಬೇಯತೊಡಗಿದನು. ಅವನ ಕಿವಿ ಮತ್ತು ಇತರ ರಂಧ್ರಗಳಿಂದ ಧೂಮದೊಂದಿಗೆ ನಿಧಾನವಾಗಿ ಉರಿಯುತ್ತಿರುವ ಕೆಂಡದಂತೆ ಬೆಂಕಿಯು ಹೊರಬಂದಿತು. ಅವನ ಮುಖವು ಯುಗಾಂತಕಾಲವು ಪ್ರಾಪ್ತವಾದಾಗ ಸ್ವಯಂ ಕೃತಾಂತನ ರೂಪವು ಹೇಗೋ ಹಾಗೆ ನೋಡಿದವರಿಗೆ ಭಯವನ್ನುಂಟುಮಾಡುವಂಥಾಯಿತು. ಯುಧಿಷ್ಠಿರನು ಆ ಬಾಹುಬಲಶಾಲಿಯ ಬಾಹುಗಳನ್ನು ಹಿಡಿದು “ಭಾರತ! ಬೇಡ! ಸುಮ್ಮನಿರು!” ಎಂದು ಕೂರಿಸಿದನು. ಆ ಕೋಪಸಂರಕ್ತಲೋಚನ ಮಹಾಬಾಹುವನ್ನು ತಡೆಹಿಡಿದ ಯುಧಿಷ್ಠಿರನು ಅಂಜಲೀ ಬದ್ಧನಾಗಿ ತನ್ನ ಪಿತ ಧೃತರಾಷ್ಟ್ರನ ಸಮುಪಸ್ಥಿತಿಯಲ್ಲಿ ಬಂದನು.

ಇಂದ್ರಪ್ರಸ್ಥಕ್ಕೆ ಯುಧಿಷ್ಠಿರನ ಪ್ರಯಾಣ

ಯುಧಿಷ್ಠಿರನು ಹೇಳಿದನು:

“ರಾಜನ್! ಈಗ ನಾವು ಏನು ಮಾಡಬೇಕು? ನಮಗೆ ಆಜ್ಞಾಪಿಸು. ನೀನು ನಮ್ಮ ಒಡೆಯ. ನಿತ್ಯವೂ ನಾವು ನಿನ್ನ ಶಾಸನದಂತೆ ನಡೆದುಕೊಳ್ಳಲು ಬಯಸುತ್ತೇವೆ.”

ಧೃತರಾಷ್ಟ್ರನು ಹೇಳಿದನು:

“ಅಜಾತಶತ್ರು! ನಿನಗೆ ಮಂಗಳವಾಗಲಿ! ಶಾಂತಿ ಮತ್ತು ಸುಖದಿಂದ ಹೋಗು. ನಿನಗೆ ಅನುಜ್ಞೆಯಿದೆ. ನಿನ್ನ ರಾಜ್ಯವನ್ನು ಧನದೊಂದಿಗೆ ಆಳು. ಆದರೆ ಈ ವೃದ್ಧನು ನಿನಗೆ ನೀಡುವ ಸಲಹೆಯನ್ನು ಹೃದಯಕ್ಕೆ ತೆಗೆದುಕೋ. ಏಕೆಂದರೆ ಇದು ನಿಶ್ಚಯವಾಗಿಯೂ ಪರಮ ಶ್ರೇಯಸ್ಸಿಗೆ ಪಥ್ಯ. ನಿನಗೆ ಧರ್ಮಗಳ ಸೂಕ್ಷ್ಮ ಗತಿಯು ತಿಳಿದಿದೆ. ವಿನೀತನಾಗಿರುವೆ ಮತ್ತು ವೃದ್ಧರ ಸೇವೆ ಮಾಡುತ್ತೀಯೆ. ಎಲ್ಲಿ ಬುದ್ಧಿಯಿದೆಯೋ ಅಲ್ಲಿ ಶಾಂತಿಯಿರುತ್ತದೆ. ಶಾಂತನಾಗಿ ಹೋಗು. ಕಟ್ಟಿಗೆಯಲ್ಲದುದನ್ನು ಶಸ್ತ್ರವು ಕಡಿಯುವುದಿಲ್ಲ. ಕಟ್ಟಿಗೆಯ ಮೇಲೆ ಮಾತ್ರ ಶಸ್ತ್ರವನ್ನು ಪ್ರಯೋಗಿಸಬಹುದು. ಉತ್ತಮ ಪುರುಷನು ವೈರತ್ವವನ್ನು ತಿಳಿದಿರುವುದಿಲ್ಲ. ಗುಣಗಳನ್ನು ನೋಡುತ್ತಾನೆ, ಅವಗುಣಗಳನ್ನಲ್ಲ ಮತ್ತು ವಿರೋಧವನ್ನು ಸಾಧಿಸುವುದಿಲ್ಲ. ನರಾಧಮರು ಮಾತ್ರ ಮಾತನಾಡುವಾಗ ಅಪಮಾನ ಮಾಡುತ್ತಾರೆ. ಆದರೆ ಉತ್ತಮ ಪುರುಷರು ಹೇಳದೇ ಇದ್ದ ಅಥವಾ ಹೇಳಿದ ಯಾವುದೇ ಅಹಿತ ಮಾತುಗಳಿಗೆ ಪ್ರತಿಕ್ರಿಯೆ ತೋರಿಸದೇ ಸಹಿಸಿಕೊಳ್ಳುತ್ತಾರೆ. ಸಂತರು ಸುಕೃತಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಮತ್ತು ಗುರುತಿಸುತ್ತಾರೆ. ದ್ವೇಷದಲ್ಲಿ ಮಾಡಿದವುಗಳನ್ನಲ್ಲ. ಏಕೆಂದರೆ ಅವರಿಗೆ ತಮ್ಮ ಮೇಲೆಯೇ ವಿಶ್ವಾಸವಿರುತ್ತದೆ. ಈ ಸತ್ಸಮಾಗಮದಲ್ಲಿ ನೀನು ಗೌರವಯುತವಾಗಿ ನಡೆದುಕೊಂಡಿದ್ದೀಯೆ. ದುರ್ಯೋಧನನ ಕೆಟ್ಟ ವರ್ತನೆಗಳನ್ನು ಹೃದಯಕ್ಕೆ ತೆಗೆದುಕೊಳ್ಳಬೇಡ. ನಿನ್ನ ಋಣಾಕಾಂಕ್ಷಿಗಳಾಗಿ ಉಪಸ್ಥಿತರಿರುವ ಈ ವೃದ್ಧರೂ ಅಂಧರೂ ಆದ ನಿನ್ನ ತಾಯಿ ಗಾಂಧಾರಿ ಮತ್ತು ತಂದೆ ನನ್ನನ್ನು ನೋಡು. ಮಿತ್ರರನ್ನು ಮತ್ತು ಪುತ್ರರ ಬಲಾಬಲವನ್ನು ನೋಡುವುದಕ್ಕೋಸ್ಕರ ನಾನು ಈ ದ್ಯೂತವನ್ನು ಏರ್ಪಡಿಸಿದ್ದೆ. ನಿನ್ನ ಅನುಶಾಸನದಲ್ಲಿರುವ ಕುರುಗಳ ಮತ್ತು ಧೀಮಂತ ಸರ್ವಶಾಸ್ತ್ರವಿಶಾರದ ಮಂತ್ರಿ ವಿದುರನ ಕುರಿತು ಶೋಕಿಸಬೇಡ. ನಿನ್ನಲ್ಲಿ ಧರ್ಮವಿದೆ. ಅರ್ಜುನನಲ್ಲಿ ವೀರ್ಯವಿದೆ. ಭೀಮಸೇನನಲ್ಲಿ ಪರಾಕ್ರಮವಿದೆ ಮತ್ತು ಯಮಳರಲ್ಲಿ ಶ್ರದ್ಧೆ, ಗುರು-ಹಿರಿಯರ ಶುಶ್ರೂಷೆಯಿದೆ. ನಿನಗೆ ಮಂಗಳವಾಗಲಿ! ಖಾಂಡವಪ್ರಸ್ಥವನ್ನು ಸೇರು. ನಿನ್ನ ಭ್ರಾತೃಗಳಲ್ಲಿ ನಿನಗೆ ಸೌಹಾರ್ದತ್ವ ಇರಲಿ ಮತ್ತು ನಿನ್ನ ಮನಸ್ಸು ಧರ್ಮದಲ್ಲಿ ನೆಲೆಸಿರಲಿ.”

ಭರತಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಈ ಮಾತುಗಳೆಲ್ಲವನ್ನೂ ಗೌರವಾನ್ವಿತವಾಗಿ ಒಪ್ಪಿಕೊಂಡು ಭ್ರಾತೃಗಳ ಸಹಿತ ಹೊರಟನು. ಅವರು ಮೇಘದಂತೆ ಗರ್ಜಿಸುವ ರಥಗಳನ್ನೇರಿ ಕೃಷ್ಣೆಯ ಸಹಿತ ಹೃಷ್ಠಮನಸ್ಕರಾಗಿ ಉತ್ತಮ ಪುರ ಇಂದ್ರಪ್ರಸ್ಥದ ಕಡೆ ಹೊರಟರು.

Leave a Reply

Your email address will not be published. Required fields are marked *