ದುರ್ಯೋಧನನು ಪಾಂಡವರನ್ನು ಕೊಲ್ಲಲು ಯೋಚಿಸುತ್ತಿರುವಾಗ ವ್ಯಾಸನು ಧೃತರಾಷ್ಟ್ರನಿಗೆ ಸಲಹೆಗಳನ್ನಿತ್ತಿದುದು

ವಿದುರನು ಹಿಂದಿರುಗಿ ಬಂದಿದ್ದಾನೆ ಮತ್ತು ರಾಜನು ಅವನನ್ನು ಸಂತವಿಸಿದ್ದಾನೆ ಎಂದು ಕೇಳಿದ ಧೃತರಾಷ್ಟ್ರಾತ್ಮಜ ದುರ್ಮತಿ ದುರ್ಯೋಧನನು ಪರಿತಪಿಸಿದನು. ಅವನು ಸೌಬಲ, ಕರ್ಣ ಮತ್ತು ದುಃಶಾಸರನ್ನು ಕರೆಯಿಸಿ ತನ್ನ ಬುದ್ಧಿಯಿಂದ ಹುಟ್ಟಿದ ಕತ್ತಲೆಯನ್ನು ಪ್ರವೇಶಿಸುತ್ತಾ ಈ ಮಾತುಗಳನ್ನಾಡಿದನು: “ಪಾಂಡುಪುತ್ರರ ಹಿತರತನಾಗಿರುವ ಮತ್ತು ಅವರ ಬುದ್ಧಿವಂತ ಮಿತ್ರನಾಗಿರುವ ಮಂತ್ರಿ ವಿದುರನು ಧೃತರಾಷ್ಟ್ರನ ಸಮ್ಮತಿಯಂತೆ ಹಿಂದಿರುಗಿ ಬಂದಿದ್ದಾನೆ. ವಿದುರನು ಪಾಂಡವರನ್ನು ಹಿಂದೆ ಕರೆಯಿಸಲು ರಾಜನ ಮನಸ್ಸನ್ನು ಪುನಃ ಬದಲಾಯಿಸದೇ ಇರುವಂತೆ ನನ್ನ ಹಿತದಲ್ಲಿ ಏನಾದರೂ ಸಲಹೆ ಮಾಡಿರಿ. ಪಾರ್ಥರು ಎಂದಾದರು ಇಲ್ಲಿಗೆ ಹಿಂದಿರುಗುವುದನ್ನು ನೋಡಿದರೆ ನಾನು ಪುನಃ ಜೀವವಿಲ್ಲದವನಂತೆ, ಸಾರವಿಲ್ಲದವನಂತೆ ಒಣಗಿ ಹೋಗುತ್ತೇನೆ. ಅವರು ಇಲ್ಲಿಗೆ ಪುನಃ ಬಂದು ಅಭಿವೃದ್ಧಿ ಹೊಂದುತ್ತಾರಾದರೆ, ಅದನ್ನು ಸಹಿಸಿಕೊಳ್ಳಲಾರದೇ ನಾನು ವಿಷವನ್ನು ಸೇವಿಸುತ್ತೇನೆ ಅಥವಾ ನೇಣು ಹಾಕಿಕೊಳ್ಳುತ್ತೇನೆ ಅಥವಾ ಬೆಂಕಿಯಲ್ಲಿ ಬೀಳುತ್ತೇನೆ.”

ಶಕುನಿಯು ಹೇಳಿದನು: “ರಾಜನ್! ಏಕೆ ಹೀಗೆ ಬಾಲಿಷವಾಗಿ ಯೋಚಿಸುತ್ತಿರುವೆ? ಒಪ್ಪಂದವನ್ನು ಮಾಡಿಕೊಂಡು ಹೊರಟು ಹೋದ ಅವರು ಎಂದೂ ಹಿಂದಿರುಗುವುದಿಲ್ಲ. ಪಾಂಡವರೆಲ್ಲರೂ ಸತ್ಯವಾಕ್ಯದಲ್ಲಿ ನಿಂತವರು. ನಿನ್ನ ತಂದೆಯ ಮಾತನ್ನು ಯಾವ ಕಾರಣಕ್ಕೂ ಅವರು ಸ್ವೀಕರಿಸುವುದಿಲ್ಲ. ಅಥವಾ ಒಂದು ವೇಳೆ ಅವರು ಅವನ ಮಾತನ್ನು ಸ್ವೀಕರಿಸಿ ಪುನಃ ಪುರಕ್ಕೆ ಮರಳಿದರೆ ಅವರು ಒಪ್ಪಂದವನ್ನು ಮುರಿದುದಕ್ಕಾಗಿ ಅವರೊಂದಿಗೆ ಇನ್ನೊಮ್ಮೆ ಪಣವನ್ನಿಟ್ಟು ಜೂಜಾಡಬಹುದು. ನಾವೆಲ್ಲರೂ ರಾಜನ ಅನುವರ್ತಿಗಳಂತಿದ್ದು ತಟಸ್ಥರಾಗಿರೋಣ ಮತ್ತು ಪಾಂಡವರನ್ನು ಸುತ್ತುವರೆದು ಅವರನ್ನು ಕಾಯುತ್ತಿರೋಣ.”

ದುಃಶಾಸನನು ಹೇಳಿದನು: “ಮಾವ! ನೀನು ಹೇಳಿದ್ದುದು ಸರಿಯಾಗಿಯೇ ಇದೆ. ನಿನ್ನ ಮನಸ್ಸಿನಲ್ಲಿರುವುದನ್ನು ನೀನು ಹೇಳಿದಾಗಲೆಲ್ಲ ನನಗೆ ಹಿತವೆನಿಸುತ್ತದೆ.”

ಕರ್ಣನು ಹೇಳಿದನು: “ದುರ್ಯೋಧನ! ನೀನು ಬಯಸಿದ್ದುದನ್ನೇ ನಾವೆಲ್ಲರೂ ಬಯಸುತ್ತೇವೆ. ನಮ್ಮಲ್ಲಿ ಎಲ್ಲರಲ್ಲಿಯೂ ಒಂದೇ ಮತವಿರುವಂತೆ ತೋರುತ್ತದೆ.”

ಕರ್ಣನು ಹೀಗೆ ಹೇಳಲು ರಾಜ ದುರ್ಯೋಧನನು ಸಂತೋಷಗೊಳ್ಳದೇ ತಕ್ಷಣವೇ ತನ್ನ ಮುಖವನ್ನು ತಿರುಗಿಸಿದನು. ಇದನ್ನು ನೋಡಿದ ಕರ್ಣನು ತನ್ನ ಶುಭಕಣ್ಣುಗಳನ್ನು ದೊಡ್ಡದು ಮಾಡಿ ಪರಮ ಕೃದ್ಧನಾಗಿ ರೋಷದಿಂದ ತನ್ನನ್ನು ತಾನೇ ಉದ್ರೇಕಿಸಿಕೊಂಡು ದುಃಶಾಸನ ಮತ್ತು ಸೌಬಲರಿಬ್ಬರನ್ನೂ ಉದ್ದೇಶಿಸಿ ಹೇಳಿದನು: “ನರಾಧಿಪರೇ! ಇದರ ಕುರಿತು ನನ್ನ ವಿಚಾರವೇನು ಎನ್ನುವುದನ್ನು ಕೇಳಿ! ನಾವು ಒಟ್ಟಿಗೇ ಶಸ್ತ್ರಗಳನ್ನು ತೆಗೆದುಕೊಂಡು ಕವಚಗಳನ್ನು ಧರಿಸಿ ರಥಗಳನ್ನೇರಿ ವನದಲ್ಲಿ ತಿರುಗುತ್ತಿರುವ ಪಾಂಡವರನ್ನು ಕೊಲ್ಲಲು ಹೋಗೋಣ! ಅವರೆಲ್ಲರೂ ಯಾರಿಗೂ ತಿಳಿಯದ ಮಾರ್ಗದಲ್ಲಿ ಹೋಗಿ ಶಾಂತರಾದ ನಂತರ ಧೃತರಾಷ್ಟ್ರ ಮತ್ತು ನಾವು ಪ್ರತಿಸ್ಪರ್ಧಿಗಳಿಲ್ಲದೇ ಇರಬಹುದು. ಎಲ್ಲಿಯವರೆಗೆ ಅವರು ದೀನರಾಗಿರುತ್ತಾರೋ, ಎಲ್ಲಿಯವರೆಗೆ ಅವರು ದುಃಖಿತರಾಗಿರುತ್ತಾರೋ, ಮತ್ತು ಎಲ್ಲಿಯವರೆಗೆ ಅವರು ಮಿತ್ರವಿಹೀನರಾಗಿರುತ್ತಾರೋ ಅಲ್ಲಿಯವರೆಗೆ ನಾವು ಅವರನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ನನ್ನ ಅಭಿಪ್ರಾಯ.”

ಅವನ ಈ ಮಾತುಗಳನ್ನು ಕೇಳಿ ಅವನನ್ನು ಪುನಃ ಪುನಃ “ಅದು ಹೌದು!” ಎಂದು ಹೇಳುತ್ತಾ ಎಲ್ಲರೂ ಆ ಸೂತಪುತ್ರನನ್ನು ಗೌರವಿಸಿದರು. ಹೀಗೆ ಹೇಳಿ ಸಂಕೃದ್ಧರಾದ ಅವರೆಲ್ಲರೂ ತಮ್ಮ ತಮ್ಮ ರಥಗಳನ್ನೇರಿ ಪಾಂಡವರನ್ನು ಕೊಲ್ಲುವುದಕ್ಕೆ ನಿರ್ಧರಿಸಿ ಒಟ್ಟಿಗೆ ಹೊರಟರು.

ಅವರು ಹೊರಟಿದ್ದುದನ್ನು ತನ್ನ ದಿವ್ಯ ದೃಷ್ಟಿಯಿಂದ ಕಂಡು ತಿಳಿದ ವಿಶುದ್ಧಾತ್ಮ ಕೃಷ್ಣ ದ್ವೈಪಾಯನನು ಅಲ್ಲಿಗೆ ಬಂದನು. ಲೋಕ ಪೂಜಿತ ಆ ಭಗವಾನನು ಅವರೆಲ್ಲರನ್ನೂ ತಡೆಹಿಡಿದು ನಿಲ್ಲಿಸಿ, ಅವಸರ ಮಾಡಿ ಕುಳಿತಿದ್ದ ಪ್ರಜ್ಞಾಚಕ್ಷುವಿನಲ್ಲಿಗೆ ಬಂದು ಹೇಳಿದನು.: “ಧೃತರಾಷ್ಟ್ರ! ನನ್ನ ಮಾತನ್ನು ಅರ್ಥಮಾಡಿಕೋ. ಸರ್ವ ಕೌರವರ ಉತ್ತಮ ಹಿತಕ್ಕಾಗಿ ಮಾತನಾಡುತ್ತಿದ್ದೇನೆ. ದುರ್ಯೋಧನ ಮತ್ತು ಅವನ ಅನುಯಾಯಿಗಳಿಂದ ಮೋಸದಲ್ಲಿ ಸೋತು ವನಕ್ಕೆ ಆ ಪಾಂಡವರು ಹೋದುದು ನನಗೆ ಇಷ್ಟವಾಗಲಿಲ್ಲ. ಹದಿಮೂರು ವರ್ಷಗಳು ಪೂರ್ಣವಾದನಂತರ ಅವರು ತಮ್ಮ ಕಷ್ಟಗಳನ್ನು ನೆನೆಸಿಕೊಂಡು ಕೌರವರ ಮೇಲೆ ಕ್ರೋಧದ ವಿಷವನ್ನು ಬಿಡುಗಡೆಮಾಡುತ್ತಾರೆ. ಏಕೆ ನಿನ್ನ ಈ ಪಾಪಾತ್ಮ, ಅತಿಮಂದಮತಿ ಪುತ್ರನು ಪಾಂಡವರ ಮೇಲೆ ಸದಾ ಸಿಟ್ಟುಮಾಡಿಕೊಂಡು, ಅವರನ್ನು ಸಂಹರಿಸಿ ರಾಜ್ಯವನ್ನು ಅಪಹರಿಸಲು ಬಯಸುತ್ತಾನೆ? ಆ ಮೂಢನನ್ನು ಈಗಲೇ ತಡೆಹಿಡಿಯಬೇಕು. ನಿನ್ನ ಮಗನು ಶಾಂತನಾಗಬೇಕು. ವನದಲ್ಲಿ ಅವರನ್ನು ಕೊಲ್ಲಲ್ಲು ಬಯಸಿದರೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ. ಪ್ರಾಜ್ಞ ವಿದುರನು ಏನು ಹೇಳಿದ್ದಾನೋ, ಭೀಷ್ಮ, ನಾನು, ಕೃಪ ಮತ್ತು ದ್ರೋಣರು ಏನು ಹೇಳುತ್ತಿದ್ದೇವೋ ಅದನ್ನು ಒಳ್ಳೆಯದೆಂದೇ ತಿಳಿ. ಸ್ವಜನರೊಂದಿಗೆ ಯುದ್ಧಮಾಡುವುದು ಖಂಡನಾರ್ಹ. ಯಶಸ್ಸನ್ನು ತರದ ಅಧರ್ಮವನ್ನು ಪ್ರತಿಪಾದಿಸಬೇಡ! ಪಾಂಡವರ ಕುರಿತು ಈ ರೀತಿಯ ಸಮೀಕ್ಷೆಯಿದೆ! ಅವರನ್ನು ಉಪೇಕ್ಷೆಮಾಡುವುದರಿಂದ ಅನ್ಯಾಯವಾಗಿ ಮಹಾ ಅಂತ್ಯವನ್ನು ತಲುಪಿದ ಹಾಗೆ! ಈಗ ನಿನ್ನ ಮಂದಾತ್ಮ ಸುತನು ತನ್ನ ಸಹಾಯಕರಿಲ್ಲದೇ ಒಬ್ಬಂಟಿಗನಾಗಿ ವನಕ್ಕೆ ಹೋಗಿ ಪಾಂಡವರ ಸಹಿತ ವಾಸಿಸಲಿ. ಈ ಸಂಸರ್ಗದಿಂದ ನಿನ್ನ ಪುತ್ರನಿಗೆ ಪಾಂಡವರೊಡನೆ ಸ್ನೇಹವುಂಟಾದರೆ ನೀನು ಕಾರ್ಯಸಿದ್ಧಿಯನ್ನು ಹೊಂದಿದಂತೆ! ಆದರೂ ಹುಟ್ಟುವಾಗಲೇ ಇದ್ದ ಶೀಲವು ಅವನು ಮೃತನಾಗುವವರೆಗೆ ಅವನನ್ನು ಬಿಡುವುದಿಲ್ಲ ಎಂದು ಕೇಳಿದ್ದೇವೆ. ಇದರ ಕುರಿತು ಭೀಷ್ಮ, ದ್ರೋಣ, ವಿದುರ ಮತ್ತು ನಿನ್ನ ವಿಚಾರವೇನು? ವಿಷಯವು ಕೈ ತಪ್ಪಿ ಹೋಗುವುದರ ಮೊದಲೇ ಯಾವುದು ಸರಿಯೋ ಅದನ್ನು ಮಾಡಬೇಕು!”

ಧೃತರಾಷ್ಟ್ರನು ಹೇಳಿದನು: “ಭಗವನ್! ಈ ದ್ಯೂತದ ಮಾತು ನನಗೂ ಇಷ್ಟವಾಗಲಿಲ್ಲ. ಆದರೆ ವಿಧಿಯು ನನ್ನನ್ನೂ ಮೀರಿ ನನ್ನಿಂದ ಇದು ನಡೆಯುವ ಹಾಗೆ ಮಾಡಿತು ಎಂದು ನನಗನ್ನಿಸುತ್ತದೆ. ಇದು ಭೀಷ್ಮನಿಗೂ, ದ್ರೋಣ ಮತ್ತು ವಿದುರರಿಗೂ ಇಷ್ಟವಾಗಿರಲಿಲ್ಲ. ಗಾಂಧಾರಿಯೂ ಇದನ್ನು ಬಯಸಿರಲಿಲ್ಲ. ಆದರೂ ಮೋಹದಿಂದ ದ್ಯೂತವು ನಡೆದುಹೋಯಿತು! ತಿಳಿದಿದ್ದರೂ ಕೂಡ ಪುತ್ರಸ್ನೇಹದಿಂದಾಗಿ ನಾನು ಆ ಅಚೇತನ ದುರ್ಯೋಧನನನ್ನು ಪರಿತ್ಯಜಿಸಲು ಶಕ್ತನಾಗಿಲ್ಲ!”

ವ್ಯಾಸನು ಹೇಳಿದನು: “ನೃಪತೇ ವೈಚಿತ್ರವೀರ್ಯ! ನೀನು ಹೇಳುತ್ತಿರುವುದು ಸತ್ಯ. ಮಗನೇ ಶ್ರೇಷ್ಠ. ಮಗನನ್ನು ಮೀರಿ ಇನ್ನೊಂದಿಲ್ಲ ಎನ್ನುವುದನ್ನು ನಾನೂ ಕೂಡ ಧೃಢವಾಗಿ ತಿಳಿದುಕೊಂಡಿದ್ದೇನೆ. ಇಂದ್ರನೂ ಕೂಡ, ಎಷ್ಟೇ ಬೆಲೆಬಾಳುವಂಥಹದಾಗಿದ್ದರೂ ಮಗನಿಂತ ಶ್ರೇಷ್ಠವಾದ ಸಂಪತ್ತು ಬೇರೊಂದಿಲ್ಲ ಎನ್ನುವ ಸತ್ಯವನ್ನು ಸುರಭಿಯ ಕಣ್ಣೀರಿನಿಂದ ಕಂಡುಕೊಂಡಿದ್ದನು. ಇದಕ್ಕೆ ಸಂಬಂಧಿಸಿದ ಸುರಭಿ ಮತ್ತು ಇಂದ್ರರ ನಡುವೆ ನಡೆದ ಸಂವಾದದ ಒಂದು ಉತ್ತಮ ಮಹದಾಖ್ಯಾನವನ್ನು ಹೇಳುತ್ತೇನೆ. ಹಿಂದೆ ಗೋವುಗಳ ಮಾತೆ ಸುರಭಿಯು ಸ್ವರ್ಗಕ್ಕೆ ಹೋಗಿ ತುಂಬಾ ರೋದಿಸಿದಳು. ಅದನ್ನು ನೋಡಿದ ಇಂದ್ರನಿಗೆ ಅನುಕಂಪವುಂಟಾಯಿತು. ಇಂದ್ರನು ಹೇಳಿದನು: “ಶುಭೇ! ಯಾವ ಕಾರಣಕ್ಕಾಗಿ ನೀನು ಈ ರೀತಿ ರೋದಿಸುತ್ತಿರುವೆ? ದಿವೌಕಸರು, ಮನುಷ್ಯರು ಮತ್ತು ಗೋವುಗಳು ಕ್ಷೇಮದಿಂದಿದ್ದಾರೆ ತಾನೆ? ಇದು ಸಣ್ಣ ವಿಷಯವಾಗಿರಲಿಕ್ಕಿಲ್ಲ!” ಅದಕ್ಕೆ ಸುರಭಿಯು ಹೇಳಿದಳು: “ತ್ರಿದಶಾಧಿಪ! ನಿಮಗೆಲ್ಲರಿಗೂ ಯಾವುದೇ ರೀತಿಯ ಆಪತ್ತೂ ಬಂದೊದಗಿಲ್ಲ! ನಾನು ನನ್ನ ಪುತ್ರನಿಗೋಸ್ಕರ ಶೋಕಿಸಿ ಅಳುತ್ತಿದ್ದೇನೆ. ನೇಗಿಲ ಭಾರದಡಿಯಲ್ಲಿ ನನ್ನ ದುರ್ಬಲ ಪುತ್ರನನ್ನು ಭಯಂಕರ ಬಾರಿಕೋಲಿನಿಂದ ಆ ರೈತನು ಹೊಡೆಯುತ್ತಿರುವುದನ್ನು ನೋಡು! ಬಹಳಷ್ಟು ಆಯಾಸಗೊಂಡಿರುವವನನ್ನು ಚೆನ್ನಾಗಿ ಹೊಡೆಯುತ್ತಿರುವುದನ್ನು ನೋಡಿ ಕೃಪಾವಿಷ್ಟಳಾಗಿದ್ದೇನೆ. ನನ್ನ ಮನಸ್ಸಿನಲ್ಲಿ ಶೋಕವು ಹುಟ್ಟಿದೆ. ಅಲ್ಲಿ ಒಬ್ಬ ಬಲವಂತನು ಅಧಿಕ ಭಾರವನ್ನು ಹೊತ್ತಿದ್ದಾನೆ. ಇನ್ನೊಬ್ಬನು ಕಡಿಮೆ ಬಲವುಳ್ಳವನು ಕೃಶನಾದವನು ಕಡಿವಾಣದಿಂದ ನಿಯಂತ್ರಣದಲ್ಲಿದ್ದಾನೆ. ಅವನು ಹೇಗೆ ಭಾರವನ್ನು ಹೊರಬಲ್ಲ ಎನ್ನುವುದರ ಕುರಿತೇ ಚಿಂತಿಸುತ್ತಿದ್ದೇನೆ. ಒಂದೇ ಸಮನೆ ಅವನನ್ನು ಹೊಡೆಯುತ್ತಿದ್ದರೂ, ತಿವಿಯುತ್ತಿದ್ದರೂ ಅವನು ಆ ಭಾರವನ್ನು ಎಳೆಯಲು ಶಕ್ಯನಿಲ್ಲ. ನೋಡು! ಆದುದರಿಂದಲೇ ಅವನಿಗಾಗಿ ದುಃಖಾರ್ತಳಾಗಿ ದುಃಖದಿಂದ ತುಂಬಾ ರೋದಿಸುತ್ತಿದ್ದೇನೆ. ಕರುಣೆಯಿಂದ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿದೆ.” ಇಂದ್ರನು ಹೇಳಿದನು: “ಶೋಭನೇ! ನಿನ್ನ ಸಹಸ್ರಾರು ಪುತ್ರರು ಪೀಡನೆಗೊಳಗಾಗುತ್ತಿದ್ದಾರೆ. ಈ ಒಬ್ಬನೇ ಪುತ್ರನ ಪೀಡನೆಯಿಂದ ನೀನು ಏಕೆ ಕೃಪಾವಿಷ್ಟಳಾಗಿದ್ದೀಯೆ?” ಸುರಭಿಯು ಹೇಳಿದಳು: “ಶಕ್ರ! ನನಗೆ ಸಹಸ್ರಾರು ಪುತ್ರರಿದ್ದರೂ ಸರ್ವರೂ ನನಗೆ ಸಮನಾಗಿದ್ದಾರೆ. ಆದರೆ ದೀನನಾದ ಸುತನ ಮೇಲೆ ಕೃಪೆಯು ಅಧಿಕ!”” ಸುರಭಿಯ ಮಾತುಗಳನ್ನು ಕೇಳಿದ ಇಂದ್ರನು ಅತ್ಯಂತ ವಿಸ್ಮಿತನಾದನು ಮತ್ತು ಆತ್ಮಜನು ಜೀವಕ್ಕಿಂತಲೂ ಅಧಿಕವೆಂದು ತನ್ನಲ್ಲಿಯೇ ಯೋಚಿಸಿದನು. ಆಗ ಭಗವಾನ್ ಪಾಕಶಾಸನನು ಅಲ್ಲಿ ತಕ್ಷಣವೇ ಅತಿ ಮಳೆಯನ್ನು ಸುರಿಸಿ ಕೃಷಿಕನ ಹೂಳುವಿಕೆಗೆ ವಿಘ್ನವನ್ನುಂಟುಮಾಡಿದನು. ಸುರಭಿಯು ಹೇಳಿದಂತೆ ನಿನ್ನ ಮಕ್ಕಳಲ್ಲಿ ಎಲ್ಲರೂ ಸಮನಾಗಿದ್ದರೂ ದೀನರ ಮೇಲೆ ಅಧಿಕ ಕೃಪೆಯಿರಲಿ. ನೀನು ಹೇಗೆ ನನ್ನ ಮಗನೋ ಹಾಗೆಯೇ ಪಾಂಡುವೂ ನನ್ನದೇ ಮಗ. ಮಹಾಪ್ರಾಜ್ಞ  ವಿದುರನೂ ಕೂಡ. ಸ್ನೇಹದಿಂದ ನಿನಗೆ ಇದನ್ನು ಹೇಳುತ್ತಿದ್ದೇನೆ. ನಿನಗೆ ನೂರಾಒಂದು ಮಕ್ಕಳಿದ್ದಾರೆ. ಆದರೆ ಪಾಂಡುವಿಗೆ ಐವರೇ ಇದ್ದರೂ ಅವರು ಸರಳರಾಗಿದ್ದು ತುಂಬಾ ದುಃಖಿತರಾಗಿರುವಂತೆ ಕಾಣುತ್ತಿದ್ದಾರೆ. ಅವರು ಹೇಗೆ ಕೊನೆಯವರೆಗೆ ಉಳಿಯುತ್ತಾರೆ ಮತ್ತು ಹೇಗೆ ವೃದ್ಧಿಸುತ್ತಾರೆ ಎಂದು ಆ ದೀನ ಪಾರ್ಥರ ಕುರಿತು ನನ್ನ ಮನಸ್ಸು ಪರಿತಪಿಸುತ್ತಿದೆ. ಕೌರವ್ಯರು ಜೀವಂತರಾಗಿರಬೇಕೆಂದು ಬಯಸುವೆಯಾದರೆ ನಿನ್ನ ಸುತ ದುರ್ಯೋಧನನು ಪಾಂಡವರಲ್ಲಿ ಹೋಗಿ ಸಂಧಿಮಾಡಿಕೊಳ್ಳಲಿ.”

ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ! ನೀನು ಹೇಳಿದುದನ್ನು ನಾನೂ ಮತ್ತು ಇಲ್ಲಿರುವ ಸರ್ವ ನರಾಧಿಪರೂ ತಿಳಿದಿದ್ದೇವೆ. ನೀನು ಕುರುಗಳ ಸುಖೋದಯಕ್ಕೆ ಯಾವುದು ಒಳ್ಳೆಯದು ಎಂದು ಹೇಳಿದೆಯೋ ಅದನ್ನೇ ನನಗೆ ವಿದುರನೂ, ಭೀಷ್ಮನೂ ಮತ್ತು ದ್ರೋಣನೂ ಹೇಳಿದ್ದಾರೆ. ಒಂದುವೇಳೆ ನಾನು ನಿನ್ನ ಅನುಗ್ರಹಕ್ಕೆ ಅರ್ಹನೆಂದಾದರೆ ಮತ್ತು ನಿನಗೆ ಕೌರವರ ಮೇಲೆ ದಯೆಯಿದ್ದರೆ ನನ್ನ ಪುತ್ರ ದುರಾತ್ಮ ದುರ್ಯೋಧನನಿಗೆ ಬೋಧಿಸಬೇಕು!”

ವ್ಯಾಸನು ಹೇಳಿದನು: “ರಾಜನ್! ಈಗ ಇಲ್ಲಿಗೆ ಭಗವಾನ್ ಋಷಿ ಮೈತ್ರೇಯನು, ಪಾಂಡವ ಸಹೋದರರನ್ನು ಭೇಟಿಯಾದ ನಂತರ ನಿನ್ನನ್ನು ಕಾಣಲು ಬರುತ್ತಿದ್ದಾನೆ. ಈ ಮಹಾನೃಷಿಯು ನಿನ್ನ ಕುಲಕ್ಕೆ ಶಾಂತಿಯನ್ನು ತರುವುದಕ್ಕೆ ಯಾವುದು ನ್ಯಾಯವೋ ಅದರ ಅನುಶಾಸನವನ್ನು ನಿನ್ನ ಪುತ್ರ ದುರ್ಯೋಧನನಿಗೆ ನೀಡುತ್ತಾನೆ. ಅವನು ಏನೇ ಹೇಳಿದರೂ ಅದನ್ನು ಶಂಕಿಸದೇ ಕಾರ್ಯಗತಗೊಳಿಸು. ಅದನ್ನು ಕಾರ್ಯಗತಗೊಳಿಸದಿದ್ದರೆ ಅವನು ರೋಷಗೊಂಡು ನಿನ್ನ ಮಗನಿಗೆ ಶಾಪವನ್ನು ನೀಡಬಲ್ಲರು!” ಇದನ್ನು ಹೇಳಿದ ವ್ಯಾಸನು ಹೊರಟು ಹೋದನು.

Leave a Reply

Your email address will not be published. Required fields are marked *