Image result for flowers against white backgroundಅನುದ್ಯೂತ; ಪಾಂಡವರಿಗೆ ವನವಾಸ

ಯುಧಿಷ್ಠಿರನನ್ನು ಪುನಃ ದ್ಯೂತಕ್ಕೆ ಕರೆದುದು

ಧೀಮತ ಧೃತರಾಷ್ಟ್ರನು ಅವರಿಗೆ ಹೋಗಲು ಅನುಮತಿಯನ್ನು ಕೊಟ್ಟ ಎಂದು ತಿಳಿದಾಕ್ಷಣವೇ ದುಃಶಾಸನನು ಅಣ್ಣನ ಬಳಿ ಹೋದನು. ಅಲ್ಲಿ ಅಮಾತ್ಯರ ಜೊತೆಗಿದ್ದ ದುರ್ಯೋಧನನ್ನು ಭೆಟ್ಟಿಯಾಗಿ ದುಃಖಾರ್ತನಾಗಿ ಹೇಳಿದನು:

“ಕಷ್ಟಪಟ್ಟು ಗಳಿಸಿದ ಎಲ್ಲವನ್ನೂ ಆ ಮುದುಕನು ನಾಶಮಾಡಿಬಿಟ್ಟನಲ್ಲ! ಎಲ್ಲ ಸಂಪತ್ತನ್ನೂ ಶತ್ರುಗಳಿಗೆ ಹೋಗುವ ಹಾಗೆ ಮಾಡಿದ್ದಾನೆ. ಮಹಾರಥಿಗಳೇ! ಇದನ್ನು ಯೋಚಿಸಿ.”

ಆಗ ಮಾನಿನ ದುರ್ಯೋಧನನು ಕರ್ಣ ಮತ್ತು ಸೌಬಲ ಶಕುನಿಯರೊಡಗೂಡಿ ಒಟ್ಟಿಗೇ ಪಾಂಡವರ ಪ್ರತಿ ಸಂಚು ಹೂಡಿದನು. ಅವರು ಅವಸರ ಮಾಡಿ ವೈಚಿತ್ರವೀರ್ಯ ಮನೀಷಿಣಿ ರಾಜ ಧೃತರಾಷ್ಟ್ರನಲ್ಲಿಗೆ ಹೋಗಿ ಮೃದು ಮಾತುಗಳಿಂದ ಹೇಳಿದರು:

“ರಾಜನ್! ದೇವಪುರೋಹಿತ ವಿದ್ವಾನ್ ಬೃಹಸ್ಪತಿಯು ಶಕ್ರ ನೀತಿಯನ್ನು ಪ್ರತಿಪಾದಿಸುತ್ತಾ ಏನು ಹೇಳಿದನೆಂದು ನೀನು ಕೇಳಿಲ್ಲವೇ? ಶತ್ರುಗಳು ಯುದ್ಧ ಅಥವಾ ಬಲವನ್ನುಪಯೋಗಿಸಿ ನಿನಗೆ ಹಾನಿಯನ್ನುಂಟುಮಾಡುವ ಮೊದಲೇ ಎಲ್ಲ ಉಪಾಯಗಳನ್ನೂ ಬಳಸಿ ಅವರನ್ನು ಬಗ್ಗಿಸಬೇಕು. ಪಾಂಡವರ ಧನದಿಂದ ನಾವು ಸರ್ವ ಪಾರ್ಥಿವರನ್ನೂ ಮೆಚ್ಚಿಸಿ ನಂತರ ನಾವು ಅವರ ಮೇಲೆ ಆಕ್ರಮಣ ಮಾಡಿದರೆ ನಾವು ಸೋಲುವುದೇ ಇಲ್ಲ. ಆದರೆ ಸಿಟ್ಟಿಗೆದ್ದು ಕಚ್ಚಲು ಸಿದ್ಧವಿದ್ದ ವಿಷಭರಿತ ಸರ್ಪವನ್ನು ತನ್ನ ಬೆನ್ನಮೇಲೆ ಹಾಕಿಕೊಂಡು ಕುತ್ತಿಗೆಗೆ ಸುತ್ತಿಕೊಂಡರೆ ಅದರಿಂದ ಬಿಡುಗಡೆ ಹೊಂದುವುದಾದರೂ ಹೇಗೆ? ಕುಪಿತ ಪಾಂಡವರು ಶಸ್ತ್ರಗಳನ್ನು ಪಡೆದು ರಥವನ್ನೇರಿದ್ದಾರೆ. ಕೃದ್ಧ ವಿಷಸರ್ಪದಂತೆ ಅವರು ನಮ್ಮನ್ನು ನಿಶ್ಯೇಷ ನಾಶಪಡಿಸುತ್ತಾರೆ. ಅರ್ಜುನನು ತನ್ನ ಎರಡು ಭತ್ತಳಿಕೆಗಳನ್ನು ತೆರೆದು ಮತ್ತೆ ಮತ್ತೆ ಗಾಂಡೀವವನ್ನೆತ್ತಿಕೊಂಡು ನಿಟ್ಟಿಸುರು ಬಿಡುತ್ತಾ ಸುತ್ತಲೂ ನೋಡುತ್ತಿದ್ದಾನೆ. ವೃಕೋದರನು ಭಾರೀ ಗದೆಯನ್ನು ವೇಗವಾಗಿ ಮೇಲೆತ್ತಿ ಕಟ್ಟಿದ ಸ್ವರಥದಲ್ಲಿ ಹೊರಡುತ್ತಿದ್ದಾನೆ ಎಂದು ಕೇಳಿದೆವು. ನಕುಲನು ಅಷ್ಟಚಂದ್ರಕ ಗುರಾಣಿ ಮತ್ತು ಖಡ್ಗವನ್ನು ಹಿಡಿದಿದ್ದಾನೆ. ರಾಜ ಮತ್ತು ಸಹದೇವರು ತಮ್ಮ ಇಂಗಿತಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಬಹಳಷ್ಟು ಶಸ್ತ್ರಸಮೇತರಾಗಿ ಅವರೆಲ್ಲರೂ ರಥಗಳನ್ನೇರಿ ರಥಗಳಿಗೆ ಕಟ್ಟಿದ ಕುದುರೆಗಳನ್ನು ಹೊಡೆಯುತ್ತಾ ಸೇನೆಗಳನ್ನು ಒಟ್ಟುಗೂಡಿಸಲು ಹೊರಟಿದ್ದಾರೆ. ನಾವು ಅವರನ್ನು ಅವಮಾನಿಸಿದ್ದೇವೆ. ಅವರು ನಮ್ಮನ್ನು ಎಂದೂ ಕ್ಷಮಿಸುವುದಿಲ್ಲ. ಅವರಲ್ಲಿ ಯಾರುತಾನೆ ದ್ರೌಪದಿಯ ಅಪಮಾನವನ್ನು ಕ್ಷಮಿಸಿಯಾರು? ನಿನಗೆ ಮಂಗಳವಾಗಲಿ! ಪಾಂಡವರ ವನವಾಸಕ್ಕಾಗಿ ಇನ್ನೊಮ್ಮೆ ಜೂಜಾಡಬೇಕು. ಹೀಗೆ ಮಾತ್ರ ನಾವು ಅವರನ್ನು ವಶಪಡಿಸಿಕೊಳ್ಳಲು ಸಾಧ್ಯ. ಅವರಾಗಲೀ ನಾವಾಗಲೀ ಯಾರು ದ್ಯೂತದಲ್ಲಿ ಸೋಲುತ್ತಾರೋ ಅವರು ಹನ್ನೆರಡು ವರ್ಷಗಳು ಮಹಾರಣ್ಯವನ್ನು ಪ್ರವೇಶಿಸಿ ಜಿನಧಾರಿಗಳಾಗಿ ವಾಸಿಸಬೇಕು. ಹದಿಮೂರನೆಯ ವರ್ಷ ಜನಮದ್ಯದಲ್ಲಿ ಅಜ್ಞಾತರಾಗಿ ಇರಬೇಕು. ಒಂದುವೇಳೆ ಕಂಡುಹಿಡಿಯಲ್ಪಟ್ಟರೆ, ವನದಲ್ಲಿ ಪುನಃ ಹನ್ನೆರಡು ವರ್ಷಗಳನ್ನು ಕಳೆಯಬೇಕು. ನಾವು ಅಥವಾ ಅವರು ಉಳಿದುಕೊಳ್ಳಬೇಕು. ಹಾಗೆ ದ್ಯೂತವು ನಡೆಯಲಿ. ಇದನ್ನು ಪಣವಾಗಿಟ್ಟು ಪಾಂಡವರು ದಾಳಗಳನ್ನು ಎಸೆದು ಜೂಜಾಡಲಿ. ಇದು ನಾವು ಮುಖ್ಯವಾಗಿ ಮಾಡಬೇಕಾಗಿರುವ ಕೆಲಸ. ಅಕ್ಷವಿದ್ಯೆಯನ್ನು ತಿಳಿದಿರುವ ಈ ಶಕುನಿಯು ನಮ್ಮ ಸಂಪನ್ಮೂಲ ವ್ಯಕ್ತಿ. ಮಿತ್ರರನ್ನು ಸಂಪಾದಿಸಿ, ದುರಾಸದ, ಶಕ್ತಿಯುತ ಸೈನ್ಯವನ್ನು ಬೆಳೆಸಿ ನಾವು ನಮ್ಮ ರಾಜ್ಯದಲ್ಲಿ ದೃಢ ನೆಲೆಯನ್ನು ಸಾಧಿಸಬಲ್ಲೆವು. ಒಂದುವೇಳೆ ಅವರು ಈ ಹದಿಮೂರು ವರ್ಷಗಳ ವ್ರತವನ್ನು ಮಾಡಿ ಜೀವಂತ ಉಳಿದರೆ ಅವರನ್ನು ನಾವು ಜಯಿಸಬಹುದು. ಇದಕ್ಕೆ ಅನುಮತಿಯನ್ನು ನೀಡು.”

ಧೃತರಾಷ್ಟ್ರನು ಹೇಳಿದನು:

“ಅವರು ತಮ್ಮ ದಾರಿಯಲ್ಲಿ ದೂರ ಹೋಗಿದ್ದರೂ ಕೂಡ ಅವರನ್ನು ಕೂಡಲೆ ಹಿಂದಕ್ಕೆ ಕರೆಯಿರಿ. ಪಾಂಡವರು ಹಿಂದುರಿಗಿ ಬಂದು ಇನ್ನೊಮ್ಮೆ ದ್ಯೂತವನ್ನು ಆಡಬೇಕು!”

ಆಗ ದ್ರೋಣ, ಸೋಮದತ್ತ, ಮಹಾರಥಿ ಬಾಹ್ಲೀಕ, ವಿದುರ, ದ್ರೋಣಪುತ್ರ, ವೈಶ್ಯಾಪುತ್ರ, ವೀರ್ಯವಾನ್ ಭೂರಿಶ್ರವ, ಶಾಂತನವ, ಮಹಾರಥಿ ವಿಕರ್ಣ ಎಲ್ಲರೂ

“ದ್ಯೂತವು ಬೇಡ! ಶಾಂತತೆಯನ್ನು ಕಾಪಾಡಿರಿ!”

ಎಂದು ಹೇಳಿದರು. ಅದರ ಪರಿಣಾಮಗಳನ್ನು ಕಂಡ ಸರ್ವ ಸುಹೃದಯರೂ ಇಷ್ಟಪಡದೇ ಇದ್ದರೂ ಸುತಪ್ರಿಯ ಧೃತರಾಷ್ಟ್ರನು ಪಾಂಡವರಿಗೆ ಆಹ್ವಾನವನ್ನು ಕಳುಹಿಸಿದನು. ಆಗ ಪುತ್ರನ ಮೇಲೆ ಪ್ರೀತಿಯಿದ್ದರೂ ಧರ್ಮನಿರತೆ ಗಾಂಧಾರಿಯು ಶೋಕಾರ್ತಳಾಗಿ ಜನೇಶ್ವರ ಮಹಾರಾಜ ಧೃತರಾಷ್ಟ್ರನಿಗೆ ಹೇಳಿದಳು:

“ದುರ್ಯೋಧನನು ಹುಟ್ಟಿದಾಗ ಮಹಾಮತಿ ಕ್ಷತ್ತನು ಈ ಕುಲಪಾಂಸನನನ್ನು ಪರಲೋಕಕ್ಕೆ ಕಳುಹಿಸುವುದೇ ಲೇಸು ಎಂದು ಹೇಳಿದ್ದನು. ಭಾರತ! ಹುಟ್ಟುತ್ತಿರುವಾಗಲೇ ಇವನು ನರಿಯಂತೆ ಕೂಗಿದನು. ಕುರುಗಳೇ! ನೋಡುತ್ತಿರಿ! ಇವನು ಈ ಕುಲದ ಅಂತ್ಯಕ್ಕೆ ಕಾರಣನಾಗುತ್ತಾನೆ. ಶಿಷ್ಟರಲ್ಲದ ಬಾಲಕರ ಅಭಿಪ್ರಾಯಗಳನ್ನು ತೆಗೆದುಕೊಳ್ಳಬೇಡ. ಕುಲದ ಘೋರ ಕ್ಷಯಕ್ಕೆ ನೀನು ಕಾರಣನಾಗಬೇಡ. ಕಟ್ಟಿದ ಸೇತುವೆಯನ್ನು ಯಾರು ಒಡೆಯುತ್ತಾರೆ? ಆರಿಹೋಗುತ್ತಿರುವ ಬೆಂಕಿಯನ್ನು ಯಾರು ಗಾಳಿ ಹಾಕಿ ಉರಿಸುತ್ತಾರೆ? ಶಾಂತರಾಗಿರುವ ಪಾರ್ಥರನ್ನು ಪುನಃ ಯಾರುತಾನೆ ಸಿಟ್ಟಿಗೇಳಿಸುತ್ತಾರೆ? ನಿನಗೆ ನೆನಪಿರಬಹುದು. ಆದರೂ ನಿನಗೆ ಪುನಃ ನೆನಪಿಸಿಕೊಡುತ್ತೇನೆ. ಶಾಸ್ತ್ರವು ದುರ್ಬುದ್ಧಿಗೆ ಒಳ್ಳೆಯದನ್ನಲ್ಲದೇ ಬೇರೆಯದನ್ನು ಕಲಿಸಲಾರದು. ಹಾಗೆಯೇ ಬಾಲಮತಿಯು ಎಂದೂ ವೃದ್ಧನೆನಿಸಲಾರ. ನೀನೇ ನಿನ್ನ ಪುತ್ರರಿಗೆ ದಾರಿತೋರಿಸಬೇಕು. ಇಲ್ಲವಾದರೆ ಸೋತ ಅವರು ನಿನ್ನನ್ನು ದೂರಮಾಡುತ್ತಾರೆ. ಇತರರ ಬುದ್ಧಿಯಿಂದ ಹುಟ್ಟಿದ ನಿನ್ನ ಬುದ್ಧಿಯು ಶಮ ಧರ್ಮಗಳಿಗೆ ಹೊರತಾಗಿರದಿರಲಿ. ಕ್ರೂರಕರ್ಮಗಳಿಂದ ಸಂಪಾದಿಸಿದ ಐಶ್ವರ್ಯವು ನಾಶವಾಗಿ ಹೋಗುತ್ತದೆ. ಆದರೆ ಸೌಮ್ಯಕರ್ಮಗಳಿಂದ ಹೆಚ್ಚಿಸಿದ ಧನವು ಪುತ್ರಪೌತ್ರರಿಗೂ ಸಂದುತ್ತದೆ.”

ಆಗ ಮಹಾರಾಜನು ಧರ್ಮದರ್ಶಿನೀ ಗಾಂಧಾರಿಗೆ ಹೇಳಿದನು:

“ನಮ್ಮ ಕುಲವು ಅಂತ್ಯಗೊಳ್ಳುವುದೇ ಆದರೆ ಅದನ್ನು ತಡೆಯಲು ನಾನು ಶಕ್ಯನಿಲ್ಲ. ಅವರು ಏನನ್ನು ಬಯಸುತ್ತಾರೋ ಹಾಗೆಯೇ ಆಗಲಿ. ಪಾಂಡವರು ಹಿಂದಿರುಗಬೇಕು. ನನ್ನವರು ಪಾಂಡವರೊಂದಿಗೆ ಪುನಃ ದ್ಯೂತವನ್ನು ನಡೆಸಲಿ!”

ಧೀಮಂತ ರಾಜ ಧೃತರಾಷ್ಟ್ರನ ವಚನದಂತೆ ಪ್ರತಿಕಾಮಿಯೋರ್ವನು ಬಹಳಷ್ಟು ದೂರ ಪ್ರಯಾಣಿಸಿದ್ದ ಯುಧಿಷ್ಠಿರನಿಗೆ ಹೇಳಿದನು:

“ರಾಜನ್! ಯುಧಿಷ್ಠಿರ! ಸಭೆಯು ಹಾಸಿ ತಯಾರಾಗಿದೆ. ದಾಳಗಳನ್ನು ಎಸೆಯಲಾಗಿದೆ. ಭಾರತ! ಪಾಂಡವ! ಬಂದು ಆಡು! ಎಂದು ನಿನ್ನ ತಂದೆಯು ನಿನಗೆ ಹೇಳಿದ್ದಾನೆ.”

ಯುಧಿಷ್ಠಿರನು ಹೇಳಿದನು:

“ಧಾತುವಿನ ನಿಯೋಗದಿಂದಲೇ ಜೀವಿಗಳು ಶುಭಾಶುಭಗಳನ್ನು ಹೊಂದುತ್ತವೆ. ನಾವು ಪುನಃ ದ್ಯೂತವನ್ನಾಡಬೇಕೆಂದಿದ್ದರೆ ಅದನ್ನು ತಡೆಯಲು ಸಾಧ್ಯವಿಲ್ಲ! ವಯೋವೃದ್ಧನ ನಿಯೋಗದಂತೆ ಅಕ್ಷದ್ಯೂತದ ಆಹ್ವಾನವನ್ನು ಸ್ವೀಕರಿಸುವುದು ಕ್ಷಯಕರ ಎಂದು ತಿಳಿದಿದ್ದರೂ ಅವನ ಮಾತುಗಳನ್ನು ಅತಿಕ್ರಮಿಸಲಾರೆ.”

ಹೀಗೆ ಹೇಳಿ ಪಾರ್ಥ ಪಾಂಡವನು ಶಕುನಿಯ ಮಾಯೆಯನ್ನು ತಿಳಿದಿದ್ದರೂ ದ್ಯೂತಕ್ಕೆ ತನ್ನ ತಮ್ಮಂದಿರೊಡನೆ ಹಿಂದಿರುಗಿದನು. ಪುನಃ ಆ ಮಹಾರಥಿ ಭರತರ್ಷಭರು ತಮ್ಮ ಸುಹೃದಯರ ಮನಸ್ಸನ್ನು ಚಿಂತೆಗೊಳಪಡಿಸುತ್ತಾ ಆ ಸಭೆಯನ್ನು ಪ್ರವೇಶಿಸಿದರು. ಸರ್ವಲೋಕವಿನಾಶದ ದೈವ ನಿಶ್ಚಯದಿಂದ ಪೀಡಿತರಾದ ಅವರು ಕುಳಿತುಕೊಂಡು ಪುನಃ ದ್ಯೂತವನ್ನು ಪಾರಂಭಿಸಿದರು.

ಯುಧಿಷ್ಠಿರನ ಪುನಃ ಪರಾಜಯ

ಶಕುನಿಯು ಹೇಳಿದನು:

“ಭರತರ್ಷಭ! ಈ ವಯೋವೃದ್ಧನು ನಿನ್ನ ಧನವನ್ನು ನಿನಗೆ ಬಿಡುಗಡೆ ಮಾಡಿದನು. ಅದಕ್ಕೆ ಅವನನ್ನು ಗೌರವಿಸುತ್ತೇನೆ. ಆದರೆ ಈ ಮಹಾಧನಕ್ಕಾಗಿ ಒಂದೇ ಒಂದು ಆಟವಿದೆ. ಕೇಳು. ನಿಮ್ಮಿಂದ ನಾವು ದ್ಯೂತದಲ್ಲಿ ಸೋತರೆ ರುರು ಮತ್ತು ಜಿಂಕೆಯ ಚರ್ಮಗಳ ವಸ್ತ್ರಧಾರಣೆ ಮಾಡಿ ಹನ್ನೆರಡು ವರ್ಷ ಮಹಾರಣ್ಯವನ್ನು ಪ್ರವೇಶಿಸುತ್ತೇವೆ. ಮತ್ತು ಹದಿಮೂರನೆಯ ವರ್ಷ ಜನರ ಮಧ್ಯದಲ್ಲಿ ಅಜ್ಞಾತವಾಸ ಮಾಡುತ್ತೇವೆ, ಆ ಒಂದು ವರ್ಷದಲ್ಲಿ ಗುರುತಿಸಲ್ಪಟ್ಟರೆ ಪುನಃ ಹನ್ನೆರಡು ವರ್ಷಗಳ ವನವಾಸವನ್ನು ಮುಗಿಸುತ್ತೇವೆ. ಅಥವಾ ನಾವು ನಿಮ್ಮನ್ನು ಸೋಲಿಸಿದರೆ ನೀವು ಕೃಷ್ಣೆಯೊಡನೆ ಹನ್ನೆರಡು ವರ್ಷಗಳು ಜಿನವನ್ನು ಧರಿಸಿ ವನದಲ್ಲಿ ವಾಸಿಸಬೇಕು. ಹದಿಮೂರನೆಯ ವರ್ಷವು ಮುಗಿದ ನಂತರ ಪುನಃ ಯಥೋಚಿತವಾಗಿ ತಮ್ಮ ರಾಜ್ಯವನ್ನು ಒಬ್ಬರು ಇನ್ನೊಬ್ಬರಿಂದ ಹಿಂದೆ ತೆಗೆದುಕೊಳ್ಳಬೇಕು. ಈ ಒಪ್ಪಂದದೊಂದಿಗೆ ಪುನಃ ನಮ್ಮೊಂದಿಗೆ ದಾಳವನ್ನೆಸೆದು ಪಣವನ್ನಿಟ್ಟು ದ್ಯೂತವನ್ನಾಡು.”

ಸಭಾಸದರು ಹೇಳಿದರು:

“ಅಹೋ! ಧಿಕ್ಕಾರ! ಈ ಬಾಂಧವನು ಮಹಾ ಭಯವನ್ನು ತಿಳಿದಿಲ್ಲ! ಯಾರೂ ಕೂಡ ಇದನ್ನು ತಿಳಿಯಬಹುದು. ಆದರೆ ಸ್ವಯಂ ಭರತರ್ಷಭರೇ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ!”

ನರಾಧಿಪ ಪಾರ್ಥನು ಜನರ ಕೂಗನ್ನು ಕೇಳಿಸಿಕೊಂಡರೂ ತನಗಾದ ನಾಚಿಕೆಯಿಂದ ಮತ್ತು ಧರ್ಮದೊಂದಿಗಿರಬೇಕೆಂಬ ಇಚ್ಛೆಯಿಂದ ಪುನಃ ದ್ಯೂತಕ್ಕೆ ಒಪ್ಪಿಕೊಂಡನು. ಆ ಮಹಾಬುದ್ಧಿಯು ತಿಳಿದಿದ್ದರೂ “ಇದು ಕುರುಗಳ ವಿನಾಶವನ್ನು ತರುವುದಿಲ್ಲವೇ?” ಎಂದು ಚಿಂತಿಸಿ ಪುನಃ ದ್ಯೂತಕ್ಕೆ ಮರಳಿ ಹೇಳಿದನು:

“ಸ್ವಧರ್ಮವನ್ನು ಅನುಸರಿಸುವ ನನ್ನಂಥಹ ರಾಜನು ಆಹ್ವಾನಿಸಲ್ಪಟ್ಟಾಗ ಹಿಂದಿರುಗಿ ಬರದೇ ಇರಲು ಹೇಗೆ ಸಾಧ್ಯ? ಶಕುನಿ! ನಿನ್ನೊಂದಿಗೆ ಆಡುತ್ತೇನೆ!”

ಶಕುನಿಯು ಹೇಳಿದನು:

“ಗೋವುಗಳು, ಕುದುರೆಗಳು, ಹಾಲುಕೊಡುವ ಹಸುಗಳು, ಲೆಕ್ಕವಿಲ್ಲದಷ್ಟು ಕುರಿಗಳು ಮತ್ತು ಆಡುಗಳು, ಆನೆಗಳು, ಕೋಶ, ಹಿರಣ್ಯ ಮತ್ತು ದಾಸಿಯರು ಎಲ್ಲವೂ ಪಣವಾಗಿರಲಿ. ಪಾಂಡವರೇ! ಇದು ನನ್ನ ಒಂದೇ ಒಂದು ಎಸೆತ! ಇದರಲ್ಲಿ ಸೋತ ನೀವು ಅಥವಾ ನಾವು ವನವನ್ನು ಸೇರಿ ವಾಸಿಸೋಣ. ಈ ಒಪ್ಪಂದದೊಂದಿಗೆ ಆಡೋಣ. ಒಂದೇ ಒಂದು ದಾಳದಿಂದ ವನವಾಸ!”

ಪಾರ್ಥನು ಅದಕ್ಕೆ ಒಪ್ಪಿಕೊಳ್ಳಲು ಸೌಬಲ ಶಕುನಿಯು ದಾಳಗಳನ್ನು ಹಿಡಿದು ಯುಧಿಷ್ಠಿರನಿಗೆ “ಗೆದ್ದೆ!” ಎಂದು ಕೂಗಿ ಹೇಳಿದನು.

ಪಾಂಡವರ ಪ್ರತಿಜ್ಞೆಗಳು

ಪರಾಜಿತ ಪಾರ್ಥರು ವನವಾಸಕ್ಕೆ ಮನಸ್ಸುಮಾಡಿ, ಒಬ್ಬೊಬ್ಬರಾಗಿ ಜಿನ ವಸ್ತ್ರ ಉತ್ತರೀಯಗಳನ್ನು ತೊಟ್ಟರು. ರಾಜ್ಯವನ್ನು ಕಳೆದುಕೊಂಡು ಜಿನವಸ್ತ್ರಗಳನ್ನು ಸುತ್ತಿಕೊಂಡು ವನವಾಸಕ್ಕೆ ಹೊರಡುತ್ತಿರುವ ಆ ಅರಿಂದಮರನ್ನು ನೋಡಿ ದುಃಶಾಸನನು ಹೇಳಿದನು:

“ಮಹಾತ್ಮ ರಾಜ ಧಾರ್ತರಾಷ್ಟ್ರನ ಚಕ್ರವು ತಿರುಗಲು ಪ್ರಾರಂಬಿಸಿದೆ. ಸೋತ ಪಾಂಡುಪತ್ರರು ಪರಮ ವಿಪತ್ತನ್ನು ಹೊಂದಿದ್ದಾರೆ. ಇಂದು ದೇವತೆಗಳು ತಮ್ಮ ಸುಲಭ ಆಕಾಶಮಾರ್ಗಗಳಲ್ಲಿ ಬಂದಿದ್ದಾರೆ. ಯಾಕೆಂದರೆ ನಾವು ಗುಣದಲ್ಲಿ ಅವರಿಗಿಂತಲೂ ಶ್ರೇಷ್ಠರು ಮತ್ತು ಸಂಖ್ಯೆಯಲ್ಲಿಯೂ ಅವರಿಗಿಂತ ಹೆಚ್ಚಾಗಿದ್ದೇವೆ. ಪಾರ್ಥರು ಸುಖವನ್ನು ಕಳೆದುಕೊಂಡು, ರಾಜ್ಯಭ್ರಷ್ಟರಾಗಿ ಬಹು ವರ್ಷಗಳ ದೀರ್ಘಕಾಲದ ಕೊನೆಯೇ ಇಲ್ಲದ ನರಕದಲ್ಲಿ ಬಿದ್ದಿದ್ದಾರೆ! ಬಲಮತ್ತರಾಗಿ ಧಾರ್ತರಾಷ್ಟ್ರರನ್ನು ಗೇಲಿಮಾಡುತ್ತಿದ್ದ ಪಾಂಡವರು ಈಗ ಸೋತು ಸಂಪತ್ತನ್ನು ಕಳೆದುಕೊಂಡು ವನವನ್ನು ಸೇರುತ್ತಿದ್ದಾರೆ! ಸೌಬಲನ ದಾಳವನ್ನು ಒಪ್ಪಿಕೊಂಡ ಅವರೆಲ್ಲರೂ ತಮ್ಮ ಹೊಳೆಯುವ ಬಣ್ಣದ ದಿವ್ಯ ಅಂಗಿ-ಮೇಲಂಗಿಗಳನ್ನು ಕಳಚಿ ರುರು ಚರ್ಮಗಳನ್ನು ಧರಿಸಬೇಕಾಗಿದೆ! ತಮ್ಮಂಥಹ ಪುರುಷರು ಲೋಕದಲ್ಲಿಯೇ ಇಲ್ಲ ಎಂದು ತಿಳಿದು ಸದಾ ಅಭಿಮಾನಿಗಳಾಗಿದ್ದ ಪಾಂಡವರು ಇಂದು ಕಷ್ಟದಲ್ಲಿ ಷಂಡತಿಲದಂತೆ ನಿಷ್ಪಲರು ಎಂದು ತಮ್ಮ ಕುರಿತು ಸರಿಯಾಗಿ ತಿಳಿದುಕೊಳ್ಳಲಿ! ನಿನ್ನ ವನವಾಸವು ಮನಸ್ವಿಗಳ ವನವಾಸದಂತೆ ಇಲ್ಲ. ಇವುಗಳು ಸಂಸ್ಕರಿಸದೇ ಇದ್ದ ಜಿನಗಳು. ಇವು ಬಲಶಾಲಿ ಪಾಂಡವರದ್ದು! ಮಹಾಪ್ರಾಜ್ಞ ಸೋಮಕ ಯಜ್ಞಸೇನನು ಕನ್ಯೆ ಪಾಂಚಾಲಿಯನ್ನು ಪಾಂಡವರಿಗೆ ನೀಡಿ ತಪ್ಪು ಮಾಡಿದನು. ಯಾಕೆಂದರೆ ನಪುಂಸಕ ಪಾರ್ಥರು ಯಾಜ್ಞಸೇನೆಗೆ ಪತಿಗಳಾಗಿ ಉಳಿದಿಲ್ಲ! ಯಾಜ್ಞಸೇನಿ! ಸೂಕ್ಷ್ಮ ವಸ್ತ್ರಗಳನ್ನು ಧರಿಸಿದ್ದವರು ಈಗ ಜಿನವನ್ನು ಧರಿಸಿ, ನಿರ್ಧನರಾಗಿ, ಅಪ್ರತಿಷ್ಠರಾಗಿ ವನವಾಸಿಗಳಾದುದನ್ನು ನೋಡಿ ನೀನು ಏನು ಸುಖವನ್ನು ಅನುಭವಿಸಬಲ್ಲೆ? ಇಲ್ಲಿರುವ ಬೇರೆ ಯಾರನ್ನಾದರನ್ನು ನಿನ್ನ ಪತಿಯನ್ನಾಗಿ ವರಿಸು. ಇಲ್ಲಿ ಸೇರಿರುವ ಸರ್ವ ಕುರುಗಳೂ ಗಂಭೀರರೂ, ಅಧಿಕಾರವುಳ್ಳವರೂ, ಉತ್ತಮ ಧನವಂತರೂ ಆಗಿದ್ದಾರೆ. ಈ ಕಾಲ ವಿಪರ್ಯಾಸವು ನಿನಗೆ ಕಷ್ವವಾಗಬಾರದೆಂದು ಇವರಲ್ಲಿ ಯಾರನ್ನಾದರನ್ನೂ ನಿನ್ನ ಪತಿಯನ್ನಾಗಿ ಆರಿಸಿಕೋ. ಪೊಳ್ಳು ಎಳ್ಳಿನಂತೆ, ಕೇವಲ ಚರ್ಮಮಾತ್ರವಿರುವ ಜಿಂಕೆಯಂತೆ ಮತ್ತು ಪೊಳ್ಳು ಕಾಕಯದಂತೆ ಪಾಂಡವರೆಲ್ಲರೂ ಅಫಲರಾಗಿದ್ದಾರೆ! ಪತಿತ ಪಾಂಡವರನ್ನು ನೀನು ಏಕೆ ಉಪಾಸಿಸುತ್ತೀಯೆ? ಪೊಳ್ಳು ಎಳ್ಳನ್ನು ಉಪಾಸಿಸಿ ಶ್ರಮಿಸುವುದು ವ್ಯರ್ಥ!”

ಈ ರೀತಿ ಧೃತರಾಷ್ಟ್ರನ ಕ್ರೂರ ಪುತ್ರನು ತನ್ನ ಚುಚ್ಚುಮಾತುಗಳನ್ನು ಪಾರ್ಥರಿಗೆ ಕೇಳಿಸಿದನು. ಇದನ್ನು ಕೇಳಿ ಅತಿ ಕುಪಿತನಾದ ಭೀಮಸೇನನು ಅವನನ್ನು ಮೂದಲಿಸುತ್ತಾ ತನ್ನ ಕೋಪವನ್ನು ತಡೆಹಿಡಿಯುತ್ತಾ ಹಿಮಾಲಯದ ಸಿಂಹವು ನರಿಗೆ ಹೇಳುವಂತೆ ಜೋರಾಗಿ ಕೂಗಿ ಹೇಳಿದನು:

“ಕ್ರೂರ! ಪಾಪಿ! ದುಷ್ಟನಂತೆ ಹುರುಳಿಲ್ಲದ ಮಾತನ್ನಾಡುತ್ತಿದ್ದೀಯೆ. ರಾಜರ ಮಧ್ಯದಲ್ಲಿ ಗಾಂಧಾರರ ಕೌಶಲ್ಯವನ್ನು ಪ್ರಶಂಸಿಸುತ್ತಿದ್ದೀಯೆ! ನಮ್ಮ ಮರ್ಮಸ್ಥಾನಗಳನ್ನು ನಿನ್ನ ತೀಕ್ಷ್ಣ ಮಾತುಗಳಿಂದ ಹೇಗೆ ಚುಚ್ಚುತ್ತಿರುವೆಯೋ ಹಾಗೆ ಯುದ್ಧದಲ್ಲಿ ನಿನಗೂ ಮಾಡಿ ನೆನಪಿಸಿಕೊಡುತ್ತೇನೆ. ಕಾಮಲೋಭವಶರಾಗಿ ಯಾರು ನಿನ್ನನ್ನು ಹಿಂಬಾಲಿಸಿ ಪ್ರೋತ್ಸಾಹಿಸಿ ರಕ್ಷಿಸುವರೋ ಅವರನ್ನೂ ಕೂಡ ಅವರ ಸಂಬಂಧಿಗಳೊಂದಿಗೆ ಯಮಸಾದನಕ್ಕೆ ಕಳುಹಿಸುತ್ತೇನೆ.”

ಜಿನವಸ್ತ್ರವನ್ನು ಧರಿಸಿ ದುಃಖ ಪೀಡಿತನಾಗಿ ಹೀಗೆ ಹೇಳಿ ಕುರುಗಳ ಮಧ್ಯೆ ಧರ್ಮಮಾರ್ಗದಲ್ಲಿ ನಡೆಯುತ್ತಿದ್ದ ಅವನನ್ನು ದುಃಶಾಸನನು ಸುತ್ತುವರೆದು ನಾಚಿಕೆಯನ್ನು ಬಿಟ್ಟು “ಹಸು! ಹಸು!”ಎಂದು ಕುಣಿದಾಡಿದರು. ಆಗ ಭೀಮಸೇನನು ಹೇಳಿದನು:

“ದುಃಶಾಸನ! ಈ ರೀತಿ ಒರಟು ಕ್ರೂರ ಪೌರುಷದ ಮಾತನಾಡಲು ನಿನಗೆ ಮಾತ್ರ ಸಾಧ್ಯ. ಯಾಕೆಂದರೆ, ವಂಚನೆಯಿಂದ ಧನವನ್ನು ತೆಗೆದುಕೊಂಡ ಯಾರು ತಾನೆ ಈ ರೀತಿ ಕೊಚ್ಚಿಕೊಳ್ಳುತ್ತಾರೆ. ರಣದಲ್ಲಿ ನಿನ್ನ ಎದೆಯನ್ನು ಸೀಳಿ ರಕ್ತವನ್ನು ಕುಡಿಯದೇ ಇದ್ದರೆ ಈ ಪಾರ್ಥ ವೃಕೋದರನು ಸುಕೃತಲೋಕಗಳಿಗೆ ಹೋಗದಿರಲಿ! ಧಾರ್ತರಾಷ್ಟ್ರರನ್ನು ರಣದಲ್ಲಿ ಸರ್ವ ಧನ್ವಿಗಳ ಎದಿರು ಕೊಂದ ಕೂಡಲೇ ಶಾಂತನಾಗುತ್ತೇನೆ. ಸತ್ಯವನ್ನೇ ನಾನು ಹೇಳುತ್ತಿದ್ದೇನೆ.”

ಪಾಂಡವರು ಸಭೆಯಿಂದ ಹೊರಡುತ್ತಿರುವಾಗ ಮಂದಬುದ್ಧಿ ರಾಜ ದುರ್ಯೋಧನನು ಹರ್ಷದಿಂದ ಆಟವಾಡುತ್ತಾ ಭೀಮಸೇನನ ಸಿಂಹ ನಡುಗೆಯನ್ನು ತಾನೇ ನಡೆದು ಅಣಕಿಸಿದನು. ತನ್ನ ಅರ್ಧದೇಹವನ್ನು ದುರ್ಯೋಧನನ ಕಡೆ ತಿರುಗಿಸಿ ವೃಕೋದರನು ಹೇಳಿದನು:

“ಆಟದಲ್ಲಿ ಇದು ಗೆಲ್ಲಲು ಸಹಾಯ ಮಾಡುವುದಿಲ್ಲ! ಮೂಢ! ನಿನ್ನನ್ನು ಮತ್ತು ನಿನ್ನ ಅನುಯಾಯಿಗಳನ್ನು ಶೀಘ್ರವೇ ಕೊಲ್ಲುವಾಗ ನಿನಗೆ ಇದನ್ನು ನೆನಪಿಸಿಕೊಟ್ಟು ಉತ್ತರ ನೀಡುತ್ತೇನೆ!”

ತನಗಾದ ಈ ಅವಮಾನವನ್ನು ತಾನೇ ವೀಕ್ಷಿಸಿ ತನ್ನ ಸಿಟ್ಟನ್ನು ತಡೆಹಿಡಿದುಕೊಂಡು, ಆ ಮಾನಿನಿ ಬಲವಾನ್ ಭೀಮನು ರಾಜನನ್ನು ಅನುಸರಿಸಿ ಕೌರವರ ಸಂಸದಿಯಿಂದ ಹೊರ ಹೋಗುವಾಗ ಈ ಮಾತನ್ನಾಡಿದನು:

“ನಾನು ದುರ್ಯೋಧನನನ್ನು ಕೊಲ್ಲುತ್ತೇನೆ. ಧನಂಜಯನು ಕರ್ಣನನ್ನು ಕೊಲ್ಲುತ್ತಾನೆ. ಮೋಸದ ಜೂಜುಗಾರ ಶಕುನಿಯನ್ನು ಸಹದೇವನು ಕೊಲ್ಲುತ್ತಾನೆ. ಈ ಸಭಾಮಧ್ಯದಲ್ಲಿ ಇನ್ನೊಮ್ಮೆ ಮುಂದಾಗುವ ಈ ಮಹಾ ವಚನವನ್ನು ಹೇಳುತ್ತಿದ್ದೇನೆ: ನಮ್ಮ ನಡುವೆ ಯುದ್ಧವಾದಾಗ ದೇವತೆಗಳು ಇದನ್ನು ಸತ್ಯಮಾಡುತ್ತಾರೆ - ಈ ಪಾಪಿ ಸುಯೋಧನನನ್ನು ಯುದ್ಧದಲ್ಲಿ ಗದೆಯಿಂದ ಕೊಲ್ಲುತ್ತೇನೆ ಮತ್ತು ಇವನ ಶಿರವನ್ನು ಭೂಮಿಯಮೇಲೆ ಉರುಳಿಸಿ ಕಾಲಿನಿಂದ ತುಳಿಯುತ್ತೇನೆ. ಮತ್ತು ಈ ಮಾತಿನ ಮಲ್ಲ ಪೌರುಷದ ದುರಾತ್ಮ ದುಃಶಾಸನನ ರಕ್ತವನ್ನು ಸಿಂಹದಂತೆ ಕುಡಿಯುತ್ತೇನೆ.”

ಅರ್ಜುನನು ಹೇಳಿದನು:

“ಭೀಮನ ಈ ನಿರ್ಧಾರಿತ ಮಾತುಗಳು ಕೇವಲ ಮಾತುಗಳೆಂದು ತಿಳಿಯಬೇಡಿ. ಇಂದಿನಿಂದ ಹದಿಮೂರನೆಯ ವರ್ಷದಲ್ಲಿ ಇದು ನಡೆಯುವುದನ್ನು ನೋಡುವಿರಿ! ಭೂಮಿಯು ದುರ್ಯೋಧನ, ಕರ್ಣ, ದುರಾತ್ಮ ಶಕುನಿ, ಮತ್ತು ದುಃಶಾಸನ ಈ ನಾಲ್ವರ ರಕ್ತವನ್ನು ಕುಡಿಯುತ್ತದೆ! ಭೀಮಸೇನ! ನಿನ್ನ ಆಜ್ಞೆಯಂತೆ ನಾನು ದುರಾತ್ಮರನ್ನು ಜೋರಾಗಿ ಹೊಗಳುವ ಹೊಗಳುಭಟ್ಟ ಈ ಕರ್ಣನನ್ನು ಕೊಲ್ಲುತ್ತೇನೆ. ಭೀಮನಿಗೆ ಸಂತೋಷವನ್ನುಂಟುಮಾಡಲು ಈ ಅರ್ಜುನನು ಕರ್ಣನನ್ನು ಮತ್ತು ಕರ್ಣನ ಅನುಯಾಯಿಗಳನ್ನು ಗರಿಯುಕ್ತ ಬಾಣಗಳಿಂದ ಕೊಲ್ಲುತ್ತೇನೆ ಎಂದು ಭರವಸೆಯನ್ನು ನೀಡುತ್ತೇನೆ. ಬುದ್ಧಿಗೆಟ್ಟು ನನ್ನೊಡನೆ ಹೋರಾಡುವ ಅನ್ಯ ಸರ್ವ ನೃಪರನ್ನೂ ಕೂಡ ತೀಕ್ಷ್ಣ ಬಾಣಗಳಿಂದ ಯಮಸಾದನಕ್ಕೆ ಕಳುಹಿಸುತ್ತೇನೆ. ಒಂದು ವೇಳೆ ನಾನು ಈ ಸತ್ಯದಿಂದ ದೂರಾದೆನೆಂದರೆ ಹಿಮಾಲಯವು ತನ್ನ ಸ್ಥಾನದಿಂದ ಚಲಿಸಲಿ, ದಿವಾಕರನು ತನ್ನ ಪ್ರಭೆಯನ್ನು ಕಳೆದುಕೊಳ್ಳಲಿ, ಮತ್ತು ಚಂದ್ರನು ತನ್ನ ಶೀತಲವನ್ನು ಕಳೆದುಕೊಳ್ಳಲಿ! ಇಂದಿನಿಂದ ಹದಿನಾಲ್ಕನೆಯ ವರ್ಷದಲ್ಲಿ ದುರ್ಯೋಧನನು ಗೌರವದಿಂದ ರಾಜ್ಯವನ್ನು ಹಿಂದೆ ಕೊಡದಿದ್ದರೆ ಇದು ಸತ್ಯವಾಗುತ್ತದೆ!”

ಈ ರೀತಿ ಪಾರ್ಥನು ಮಾತನಾಡಲು ಶ್ರೀಮಾನ್ ಮಾದ್ರವತೀ ಸುತ ಪ್ರತಾಪವಾನ್ ಸಹದೇವನು ತನ್ನ ವಿಪುಲ ಬಾಹುವನ್ನು ಹಿಡಿದು ಸೌಬಲನ ವಧೆಯನ್ನು ಬಯಸುತ್ತಾ ಸರ್ಪದಂತೆ ಭುಸುಗುಟ್ಟುತ್ತಾ ಕ್ರೋಧದಿಂದ ಕೆಂಪಾದ ಕಣ್ಣುಗಳುಳ್ಳವನಾಗಿ ಈ ಮಾತುಗಳನ್ನಾಡಿದನು:

“ಗಾಂಧಾರರ ಯಶೋಹರ! ಮೂಢ! ದಾಳಗಳೆಂದು ತಿಳಿದು ಎಸೆದ ದಾಳಗಳು ದಾಳಗಳಲ್ಲ! ಸಮರದಲ್ಲಿ ನೀನೇ ಆರಿಸಿಕೊಂಡ ತೀಕ್ಷ್ಣ ಬಾಣಗಳು! ನೀನು ಮತ್ತು ನಿನ್ನ ಸಂಬಂಧಿಕರ ಕುರಿತು ಭೀಮನು ಹೇಳಿದ ಎಲ್ಲವನ್ನೂ ನಾನು ಮಾಡಿ ಮುಗಿಸುತ್ತೇನೆ. ನೀನು ನಿನ್ನ ಎಲ್ಲ ಕಾರ್ಯಗಳನ್ನೂ ಮಾಡಿ ಮುಗಿಸು! ಕ್ಷತ್ರಧರ್ಮಾನುಸಾರವಾಗಿ ಸಂಗ್ರಾಮದಲ್ಲಿ ನಿಲ್ಲುವೆಯಾದರೆ ನಿನ್ನನ್ನು ನಿನ್ನ ಬಾಂಧವರೊಡನೆ ವಿಕ್ರಮದಿಂದ ಯುದ್ಧದಲ್ಲಿ ಅಲ್ಪವೇ ಸಮಯದಲ್ಲಿ ಕೊಲ್ಲುತ್ತೇನೆ.”

ಸಹದೇವನ ಮಾತುಗಳನ್ನು ಕೇಳಿ ಮನುಷ್ಯರಲ್ಲೆಲ್ಲ ಅತಿ ಸುಂದರ ನಕುಲನೂ ಕೂಡ ಈ ಮಾತನ್ನಾಡಿದನು.

“ಈ ದ್ಯೂತದಲ್ಲಿ ದುರ್ಯೋಧನನ ಪ್ರಿಯರಾಗಿ ಉಳಿದಕೊಳ್ಳಲು ಈ ಯಜ್ಞಸೇನ ಸುತೆಗೆ ಕ್ರೂರ ಮಾತುಗಳನ್ನು ಕೇಳಿಸಿ ಅಪಮಾನ ಮಾಡಿದ ಕಾಲಚೋದಿತ ಈ ದುರ್ವೃತ್ತ ಧಾರ್ತರಾಷ್ಟ್ರರ ಬೀಡಿಗೆ ಅವರಿಗಿಷ್ಟವಾದ ವೈವಸ್ವತಕ್ಷಯದ ದಾರಿಯನ್ನು ತೋರಿಸಿಕೊಡುತ್ತೇನೆ. ಧರ್ಮರಾಜನ ಆದೇಶದಂತೆ ದ್ರೌಪದಿಯ ಹೆಜ್ಜೆಗಳಲ್ಲಿ ನಡೆದು ಬೇಗನೇ ಈ ಪೃಥ್ವಿಯಲ್ಲಿ ಧಾರ್ತರಾಷ್ಟ್ರರಿಲ್ಲದಂತೆ ಮಾಡುತ್ತೇನೆ!”

ಹೀಗೆ ಪುರಷವ್ಯಾಘ್ರರೆಲ್ಲರೂ ತಮ್ಮ ಬಾಹುಗಳನ್ನು ಮುಂದೆ ಚಾಚಿ ಬಹಳ ಪ್ರತಿಜ್ಞೆಗಳನ್ನು ಮಾಡಿ ಧೃತರಾಷ್ಟ್ರನ ಎದಿರು ಹೋದರು.

ಯುಧಿಷ್ಠಿರನ ವನಪ್ರಸ್ಥಾನ

ಯುಧಿಷ್ಠಿರನು ಹೇಳಿದನು:

“ಭಾರತರೇ! ವೃದ್ಧ ಪಿತಾಮಹನೇ! ರಾಜ ಸೋಮದತ್ತ! ಮಹಾರಾಜ ಬಾಹ್ಲೀಕ! ನಿಮ್ಮಿಂದ ಬೀಳ್ಕೊಳ್ಳುತ್ತಿದ್ದೇನೆ. ದ್ರೋಣ, ಕೃಪ, ಅನ್ಯ ನೃಪರು, ಅಶ್ವತ್ಥಾಮ, ವಿದುರ, ಧೃತರಾಷ್ಟ್ರ, ಸರ್ವ ಧಾರ್ತರಾಷ್ಟ್ರರು, ಯುಯುತ್ಸು, ಸಂಜಯ, ಮತ್ತು ಸರ್ವ ಸಭಾಸದರಿಂದ ಬೀಳ್ಕೊಂಡು ಹೋಗುತ್ತಿದ್ದೇನೆ. ಪುನಃ ನಿಮ್ಮನ್ನು ಕಾಣುತ್ತೇನೆ.”

ನಾಚಿಕೆಯಿಂದ ಆ ಸಂತರು ಯುಧಿಷ್ಠಿರನಿಗೆ ಏನನ್ನೂ ಹೇಳಲಿಲ್ಲ. ಮನಸ್ಸಿನಲ್ಲಿಯೇ ಅವರು ಆ ಧೀಮಂತನಿಗೆ ಕಲ್ಯಾಣವನ್ನು ಬಯಸಿದರು. ವಿದುರನು ಹೇಳಿದನು:

“ಆರ್ಯೆ ರಾಜಪುತ್ರಿ ಸುಕುಮಾರಿ, ವೃದ್ಧೆ, ನಿತ್ಯವೂ ಸುಖವನ್ನೇ ಹೊಂದಿದ್ದ ಪೃಥೆಯು ಅರಣ್ಯಕ್ಕೆ ಹೋಗಬಾರದು. ಅವಳು ಇಲ್ಲಿ ನನ್ನ ಮನೆಯಲ್ಲಿ ಸತ್ಕೃತಳಾಗಿ ವಾಸಿಸುತ್ತಾಳೆ. ಪಾರ್ಥರೇ! ಇದನ್ನು ತಿಳಿದು ಎಲ್ಲ ರೀತಿಯಲ್ಲಿಯೂ ಸುರಕ್ಷಿತರಾಗಿರಿ. ನನ್ನಿಂದ ಇದನ್ನು ತಿಳಿದುಕೋ. ಅಧರ್ಮದಿಂದ ಗೆಲ್ಲಲ್ಪಟ್ಟವರು ಎಂದೂ ಸೋಲಿನಿಂದ ವ್ಯಥಿತರಾಗುವುದಿಲ್ಲ. ನೀನು ಧರ್ಮವನ್ನು ತಿಳಿದಿದ್ದೀಯೆ. ಧನಂಜಯನು ಯೋದ್ಧರಲ್ಲಿ ತಿಳಿದವನು. ಅರಿಗಳನ್ನು ಕೊಲ್ಲುವುದರಲ್ಲಿ ಭೀಮಸೇನನಿದ್ದಾನೆ. ನಕುಲನು ಸಂಪತ್ತನ್ನು ಕೂಡಿಸುವವನು. ಸಹದೇವನು ಸದೆಬಡಿಯುವವನು. ಧೌಮ್ಯನು ಬ್ರಹ್ಮವಿದರಲ್ಲಿ ಉತ್ತಮನು. ದ್ರೌಪದಿಯು ಧರ್ಮ-ಅರ್ಥಗಳಲ್ಲಿ ಕುಶಲಳೂ ಧರ್ಮಚಾರಿಣಿಯೂ ಆಗಿದ್ದಾಳೆ. ನೀವು ಎಲ್ಲರೂ ಅನ್ಯೋನ್ಯರನ್ನು ಪ್ರೀತಿಸುತ್ತೀರಿ ಮತ್ತು ಅನ್ಯೋನ್ಯರಲ್ಲಿ ಪ್ರೀತಿಯಿಂದ ಮಾತನಾಡುತ್ತೀರಿ. ಸಂತುಷ್ಟರಾದ ನಿಮ್ಮನ್ನು ಇತರರು ಬೇರೆ ಮಾಡಲು ಸಾಧ್ಯವಿಲ್ಲ. ನಿಮ್ಮನ್ನು ಯಾರು ತಾನೇ ದ್ವೇಷಿಸುವುದಿಲ್ಲ? ಈ ಎಲ್ಲ ಒಳ್ಳೆಯವೂ ನಿನ್ನಲ್ಲಿ ಒಂದಾಗಿವೆ. ಯಾವ ಶತ್ರುವೂ, ಶಕ್ರನ ಸಮನಾಗಿದ್ದರೂ ಅದನ್ನು ಕೊಲ್ಲಲು ಸಾಧ್ಯವಿಲ್ಲ. ಹಿಂದೆ ಹಿಮಾಲಯದಲ್ಲಿರುವಾಗ ಮೇರು ಪರ್ವತದ ಸಾವರ್ಣಿಯಿಂದ, ವಾರಣಾವತ ನಗರಿಯಲ್ಲಿ ದ್ವೈಪಾಯನ ಕೃಷ್ಣನಿಂದ, ಭೃಗುತುಂಗದಲ್ಲಿ ರಾಮನಿಂದ, ದೃಷದ್ವತೀ ತೀರದಲ್ಲಿ ಶಂಭುವಿನಿಂದ ಉಪದೇಶವನ್ನು ಪಡೆದಿದ್ದೀಯೆ. ಅಂಜನದ ಬಳಿ ಮಹರ್ಷಿ ಅಸಿತನನ್ನೂ ಕೇಳಿದ್ದೀಯೆ. ನಿನ್ನ ಈ ಪುರೋಹಿತ ಧೌಮ್ಯನು ಋಷಿಪೂಜಿತ ಬುದ್ಧಿಯನ್ನು ನೀನು ಕಳೆದುಕೊಳ್ಳಬಾರದೆಂದು ಸದಾ ನಾರದನನ್ನು ಕಾಣುತ್ತಿರುತ್ತಾನೆ. ಬುದ್ಧಿಯಲ್ಲಿ ನೀನು ಪುರೂರವ ಐಲನನ್ನೂ ಗೆಲ್ಲುತ್ತೀಯೆ! ಶಕ್ತಿಯಲ್ಲಿ ಅನ್ಯ ರಾಜರನ್ನು ಮತ್ತು ಧರ್ಮದ ಉಪಸೇವೆಯಲ್ಲಿ ಋಷಿಗಳನ್ನೂ ಗೆಲ್ಲುತ್ತೀಯೆ. ಜಯದಲ್ಲಿ ಇಂದ್ರನಂತೆ, ಕೋಪವನ್ನು ತಡೆಹಿಡಿದುಕೊಳ್ಳುವುದರಲ್ಲಿ ಯಮನಂತೆ, ಉದಾರತೆಯಲ್ಲಿ ಕುಬೇರನಂತೆ, ಸಂಯಮದಲ್ಲಿ ವರುಣನಂತೆ ಮನಸ್ಸನ್ನಿಡು. ಚಂದ್ರನಿಂದ ಆತ್ಮವನ್ನು, ನೀರಿನಿಂದ ಉಪಜೀವನವನ್ನು, ಭೂಮಿಯಿಂದ ಕ್ಷಮೆಯನ್ನು, ಸಮಗ್ರ ತೇಜಸ್ಸನ್ನೂ ಸೂರ್ಯಮಂಡಲದಿಂದ ಪಡೆದುಕೋ. ನಿನ್ನ ಬಲವು ವಾಯುವಿನಿಂದ ಮತ್ತು ಆತ್ಮವು ಭೂತಗಳಿಂದ ಹುಟ್ಟಿದೆ ಎಂದು ತಿಳಿ. ಆರೋಗ್ಯವಾಗಿರು ಮತ್ತು ನಿನಗೆ ಮಂಗಳವಾಗಲಿ. ಹಿಂದಿರುಗಿದಾಗ ಪುನಃ ನೋಡುತ್ತೇನೆ. ಆಪತ್ತಿನಲ್ಲಿ ಧರ್ಮವನ್ನು, ಅಪಾಯದಲ್ಲಿ ಅರ್ಥವನ್ನು ಅನುಸರಿಸಿ ಕಾಲ ಕಾಲದಲ್ಲಿ ಸರ್ವ ಕಾರ್ಯದಲ್ಲಿ ಯಥಾವತ್ತಾಗಿ ನಡೆದುಕೋ. ಬೀಳ್ಕೊಡುತ್ತಿದ್ದೇನೆ. ಸುಖವನ್ನು ಹೊಂದು. ನೀನು ಕೃತಾರ್ಥನಾಗಿ ಸುಖದಿಂದ ಹಿಂದಿರುಗುವುದನ್ನು ಕಾಯುತ್ತಿರುತ್ತೇನೆ.”

ಇದನ್ನು ಕೇಳಿ ಹಾಗೆಯೇ ಆಗಲೆಂದು ಹೇಳಿ ಸತ್ಯವಿಕ್ರಮ ಪಾಂಡವ ಯುಧಿಷ್ಠಿರನು ಭೀಷ್ಮ ದ್ರೋಣರನ್ನು ನಮಸ್ಕರಿಸಿ ಮುಂದುವರೆದನು.

ದ್ರೌಪದೀ-ಕುಂತಿ ಸಂವಾದ

ಅವನು ಹೊರಡುತ್ತಿರುವಾಗ ಕೃಷ್ಣೆಯು ಯಶಸ್ವಿನೀ ಪೃಥಾಳಲ್ಲಿಗೆ ಹೋದಳು. ಅಲ್ಲಿ ಅತ್ಯಂತ ದುಃಖಾರ್ತಳಾಗಿ ಅವಳಿಂದ ಮತ್ತು ಇತರರಿಂದ ಬೀಳ್ಕೊಂಡಳು. ಅವರವರಿಗೆ ತಕ್ಕಂತೆ ನಮಸ್ಕರಿಸಿ ಅಥವಾ ಆಲಂಗಿಸಿ ಅವಳು ಹೋಗಲು ಸಿದ್ಧವಾಗಿರಲು ಪಾಂಡವರ ಅಂತಃಪುರದಲ್ಲಿ ಜೋರಾಗಿ ರೋದನವು ಕೇಳಿಬಂದಿತು. ದುಃಖಸಂತಪ್ತೆ ಕುಂತಿಯು ಹೊರಡುತ್ತಿರುವ ದ್ರೌಪದಿಯನ್ನು ನೋಡಿ ಶೋಕವಿಹ್ವಲಳಾಗಿ ಕಷ್ಟದಿಂದ ಈ ಮಾತುಗಳನ್ನಾಡಿದಳು:

“ವತ್ಸೇ! ಈ ಮಹಾ ವ್ಯಸನವನ್ನು ಪಡೆದುದಕ್ಕೆ ಶೋಕಿಸಬೇಡ. ಸ್ತ್ರೀಧರ್ಮಗಳನ್ನು ಅರಿತಿದ್ದೀಯೆ ಮತ್ತು ಶೀಲಾಚಾರವತಿಯೂ ಆಗಿದ್ದೀಯೆ. ನಿನ್ನ ಪತಿಗಳ ಕುರಿತು ನಾನು ಏನನ್ನೂ ಹೇಳಬೇಕಾದ್ದಿಲ್ಲ. ನೀನು ನಿನ್ನ ಸಾಧ್ವೀಗುಣ ಸಮಾಧಾನಗಳಿಂದ ಎರಡೂ ಕುಲಗಳನ್ನು ಸಿಂಗರಿಸಿದ್ದೀಯೆ. ನಿನ್ನಿಂದ ಸುಟ್ಟುಹೋಗದೇ ಇದ್ದ ಕುರುಗಳು ಭಾಗ್ಯವಂತರು. ನನ್ನ ಧ್ಯಾನದಿಂದ ಶಕ್ತಿಯನ್ನು ಪಡೆದು ಅರಿಷ್ಟ ಮಾರ್ಗವನ್ನು ನಿನ್ನದಾಗಿಸಿಕೋ. ಆಗಲೇ ಬೇಕಾದುದಕ್ಕೆ ಸತ್ಸ್ತ್ರೀಯರು ಹಿಂಜರಿಯುವುದಿಲ್ಲ. ನಿನ್ನ ಹಿರಿಯರ ಧರ್ಮದ ರಕ್ಷಣೆಯಿರುವ ನೀನು ಅಲ್ಪ ಸಮಯದಲ್ಲಿಯೇ ಶ್ರೇಯಸ್ಸನ್ನು ಹೊಂದುತ್ತೀಯೆ! ವನದಲ್ಲಿ ವಾಸಿಸುವಾಗ ನನ್ನ ಪುತ್ರ ಸಹದೇವನನ್ನು ಸದಾ ನೋಡಿಕೋ! ಈ ವ್ಯಸನವನ್ನು ಹೊಂದಿದ ಅವನ ಮಹಾಮನಸ್ಸು ದುಃಖಿಸಬಾರದು.”

ಹಾಗೆಯೇ ಅಗಲೆಂದು ಹೇಳಿ ಸುರಿಯುವ ಕಣ್ಣೀರಿನಿಂದ ಮುಖವು ಕಲೆಯಾಗಿರಲು, ರಜಸ್ವಲೆಯಾದ ಏಕವಸ್ತ್ರದಲ್ಲಿದ್ದ  ಆ ದೇವಿಯು ತಲೆಕೂದಲನ್ನು ಕಟ್ಟದೆಯೇ ಹೊರಟಳು. ಅಳುತ್ತಾ ಹೋಗುತ್ತಿದ್ದ ಅವಳನ್ನು ಪೃಥೆಯು ದುಃಖದಿಂದ ಹಿಂಬಾಲಿಸಿ ಬಂದು ವಸ್ತ್ರಾಭರಣಗಳನ್ನು ಕಳಚಿಕೊಂಡು, ದೇಹಕ್ಕೆ ರುರುಚರ್ಮವನ್ನು ಸುತ್ತಿಕೊಂಡು, ಕೇಳಿ ಹಾಕುತ್ತಿದ್ದ ತಮ್ಮ ಶತ್ರುಗಳ ಮಧ್ಯದಲ್ಲಿ ನಾಚಿಕೆಯಿಂದ ತಲೆತಗ್ಗಿಸಿದ್ದ, ಆದರೆ ಸುಹೃದಯರ ಶೋಕದ ವಿಷಯರಾದ ಸರ್ವ ಸುತರನ್ನೂ ನೋಡಿದಳು. ಅತಿಪ್ರೀತಿಯಿಂದ ಬೇಗನೇ ಅದೇ ಅವಸ್ಥೆಯಲ್ಲಿ ಅವರ ಹತ್ತಿರ ಹೋಗಿ ಶೋಕದಿಂದ ವಿಲಪಿಸುತ್ತಾ ಅವರಿಗೆ ಮತ್ತು ಅವರ ಜನರಿಗೆ ಹೇಳಿದಳು:

“ಸದ್ಧರ್ಮ-ಚಾರಿತ್ರ್ಯಗಳನ್ನು ಸುತ್ತಿಕೊಂಡು ವಿಭೂಷಿತರಾದ, ಎಂದೂ ಕೆಳಮಟ್ಟಕ್ಕಿಳಿಯದೇ, ದೃಢಭಕ್ತರಾಗಿದ್ದ, ಸದಾ ದೇವತೆಗಳ ಪೂಜೆಯಲ್ಲಿ ನಿರತರಾದ ನಿಮಗೆ ಹೇಗೆ ಈ ವ್ಯಸನವು ಬಂದು ಸೇರಿಕೊಂಡಿತು? ಅಥವಾ ಇದು ಯಾವ ವಿಧಿವಿಪರ್ಯಾಸ? ಯಾರ ಶತ್ರುತ್ವ-ತಪ್ಪಿನಿಂದಾಗಿ ನಿಮ್ಮನ್ನು ಈ ಪರಿಸ್ಥಿತಿಯಲ್ಲಿ ಕಾಣುತ್ತಿದ್ದೇನೆ? ಬಹುಷಃ ನಿಮಗೆ ಜನ್ಮವಿತ್ತ ನನ್ನದೇ ದುರ್ಭಾಗ್ಯದಿಂದ, ಎಷ್ಟೇ ಉತ್ತಮ ಗುಣಾನ್ವಿತರಾಗಿದ್ದರೂ ನೀವು ಈ ಮಹಾ ದುಃಖಾಯಾಸಗಳನ್ನು ಅನುಭವಿಸುತ್ತಿರುವಿರಿ. ಸಂಪತ್ತು ಇಲ್ಲದವರಾಗಿ, ವೀರ್ಯ, ಸತ್ವ, ಬಲ, ಉತ್ಸಾಹ, ತೇಜಸ್ಸನ್ನು ಕಳೆದುಕೊಳ್ಳದಿದ್ದರೂ ಕೃಶರಾಗಿ ಹೇಗೆ ಆ ವನದುರ್ಗಗಳಲ್ಲಿ ವಾಸಿಸುವಿರಿ? ವನವಾಸವೇ ನಿಮಗೆ ನಿಶ್ಚಿತವಾದುದು ಎಂದು ನಾನು ತಿಳಿದಿದ್ದರೆ ಪಾಂಡುವಿನ ಮರಣದ ನಂತರ ಶತಶೃಂಗದಿಂದ ಗಜಾಹ್ವಯಕ್ಕೆ ಬರುತ್ತಲೇ ಇರಲಿಲ್ಲ. ಪ್ರಿಯ ಪುತ್ರರಿಗಾಗಿ ಶೋಕಿಸುವ ಮೊದಲೇ ಸ್ವರ್ಗಕ್ಕೆ ಹೋಗಲು ಬಯಸಿದ ತಪೋಮೇಧಾನ್ವಿತ ನಿಮ್ಮ ತಂದೆಯೇ ಧನ್ಯ ಎಂದು ತಿಳಿಯುತ್ತೇನೆ. ಸರ್ವಥಾ ಧರ್ಮಜ್ಞೆಯೂ, ಕಲ್ಯಾಣಿಯೂ, ಅತೀಂದ್ರಿಯಜ್ಞಾನಿಯೂ ಆದ ಮಾದ್ರಿಯೂ ಕೂಡ ಪರಮ ಗತಿಯನ್ನು ಹೊಂದಿ ಧನ್ಯಳಾದಳು ಎಂದು ತಿಳಿಯುತ್ತೇನೆ. ಪ್ರೀತಿ, ಚಿಂತೆ ಮತ್ತು ಗತಿಯು ನನ್ನನ್ನು ಇನ್ನೂ ಜೀವವನ್ನು ಹಿಡಿದಿಟ್ಟುಕೊಂಡಿರುವಂತೆ ಮಾಡಿವೆ. ಈ ಅಪ್ರಿಯ, ಕ್ಲೇಶವನ್ನೇ ಕೊಟ್ಟಿರುವ ನನ್ನ ಈ ಜೀವಿತಕ್ಕೆ ಧಿಕ್ಕಾರ!”

ಈ ರೀತಿ ವಿಲಪಿಸುತ್ತಿರುವ ಕುಂತಿಯನ್ನು ಸಂತವಿಸಿ, ನಮಸ್ಕರಿಸಿ, ಬೀಳ್ಕೊಂಡು ಪಾಂಡವರು ವನದಕಡೆ ಮುಂದುವರೆದರು. ವಿದುರ ಮೊದಲಾದವರು ಸ್ವಯಂ ತಾವೇ ದುಃಖಿತರಾಗಿದ್ದರೂ ಆರ್ತೆ ಕುಂತಿಯನ್ನು ಕಾರಣಗಳನ್ನಿತ್ತು ಸಮಾಧಾನ ಪಡೆಸಿ ನಿಧಾನವಾಗಿ ಕ್ಷತ್ತನ ಮನೆಗೆ ಕರೆದೊಯ್ದರು.

ಧೃತರಾಷ್ಟ್ರ-ವಿದುರ-ದ್ರೋಣ ಸಂವಾದ

ಶೋಕಾಕುಲಿತಚೇತನ ರಾಜಾ ಧೃತರಾಷ್ಟ್ರನು “ಶೀಘ್ರವೇ ಬಾ!” ಎಂದು ಕ್ಷತ್ತನಿಗೆ ಹೇಳಿ ಕಳುಹಿಸಿದನು. ಆಗ ವಿದುರನು ಧೃತರಾಷ್ಟ್ರನ ಮನೆಗೆ ಹೋದನು. ಅಲ್ಲಿ ಸಂವಿಗ್ನ ನರಾಧಿಪ ಧೃತರಾಷ್ಟ್ರನು ಅವನನ್ನು ಪ್ರಶ್ನಿಸಿದನು:

“ಕೌಂತೇಯ ಧರ್ಮರಾಜ ಯುಧಿಷ್ಠಿರ, ಭೀಮಸೇನ, ಸವ್ಯಸಾಚಿ ಮತ್ತು ಆ ಇಬ್ಬರು ಮಾದ್ರೀಪುತ್ರರು ಹೇಗೆ ಹೋದರು? ಕ್ಷತ್ತ! ಧೌಮ್ಯ ಮತ್ತು ತಪಸ್ವಿನೀ ದ್ರೌಪದಿಯು ಹೇಗೆ ಹೋದರು? ಅವರ ಎಲ್ಲ ಅಂಗವಿಚೇಷ್ಟಗಳನ್ನು ಕೇಳ ಬಯಸುತ್ತೇನೆ.”

ವಿದುರನು ಹೇಳಿದನು:

“ಕುಂತೀಪುತ್ರ ಯುದಿಷ್ಠಿರನು ಮುಖವನ್ನು ವಸ್ತ್ರದಿಂದ ಮುಚ್ಚಿಕೊಂಡಿದ್ದನು ಮತ್ತು ಪಾಂಡವ ಭೀಮಸೇನನು ತನ್ನ ಎರಡೂ ಬಾಹುಗಳನ್ನು ಹೊರಚಾಚಿಕೊಂಡು ಹೋದನು. ಸವ್ಯಸಾಚಿಯು ಮರಳನ್ನು ಚೆಲ್ಲುತ್ತಾ ರಾಜನನ್ನು ಹಿಂಬಾಲಿಸಿದನು. ಮಾದ್ರೀಪುತ್ರ ಸಹದೇವನು ಮುಖಕ್ಕೆ ಬಣ್ಣವನ್ನು ಬಳಿದುಕೊಂಡು ಹೋದನು. ಲೋಕದಲ್ಲಿಯೇ ಅತೀವ ಸುಂದರ ನಕುಲನು ತನ್ನ ಇಡೀ ದೇಹಕ್ಕೆ ಧೂಳನ್ನು ಬಳಿದುಕೊಂಡು ಚಿತ್ತವಿಹ್ವಲನಾಗಿ ರಾಜನನ್ನು ಅನುಸರಿಸಿದನು. ಸುಂದರಿ ಆಯತಲೋಚನೆ ಕೃಷ್ಣೆಯು ತಲೆಗೂದಲಿನಿಂದ ಮುಖವನ್ನು ಮುಚ್ಚಿಕೊಂಡು ರೋದಿಸುತ್ತಾ ರಾಜನನ್ನು ಹಿಂಬಾಲಿಸಿದಳು. ಧೌಮ್ಯನು ರೌದ್ರ ಯಮಸಾಮವನ್ನು ಹೇಳುತ್ತಾ ಕೈಗಳಲ್ಲಿ ದರ್ಬೆಗಳನ್ನು ಹಿಡಿದು ಮಾರ್ಗಕೂಡಿ ಹೋದನು.”

Image result for pandavas go to forestಧೃತರಾಷ್ಟ್ರನು ಹೇಳಿದನು:

“ವಿವಿಧರೂಪಗಳನ್ನು ಮಾಡಿಕೊಂಡು ಪಾಂಡವರು ಹೋಗುತ್ತಿದ್ದಾರೆ. ವಿದುರ! ಈ ರೀತಿ ಅವರು ಏಕೆ ಹೋಗುತ್ತಿದ್ದಾರೆ ಎನ್ನುವುದನ್ನು ಹೇಳು.”

ವಿದುರನು ಹೇಳಿದನು:

“ನಿನ್ನ ಪುತ್ರರು ವಂಚನೆಯಿಂದ ಅವರ ರಾಜ್ಯ ಮತ್ತು ಧನವನ್ನು ಅಪಹರಿಸಿದರೂ ಧೀಮಂತ ಧರ್ಮರಾಜನ ಬುದ್ಧಿಯು ಧರ್ಮದಿಂದ ವಿಚಲಿತವಾಗುವುದಿಲ್ಲ. ನಿತ್ಯವೂ ಧಾರ್ತರಾಷ್ಟ್ರರ ಮೇಲೆ ಕರುಣೆತೋರುವ ಈ ರಾಜನು ಮೋಸದಿಂದ ಕ್ರೋಧಸಂತಪ್ತ ತನ್ನ ಕೆಟ್ಟ ದೃಷ್ಟಿಯನ್ನು ಎಲ್ಲಿ ಹಾಯಿಸಲೂ ನಿರಾಕರಿಸುತ್ತಾನೆ. ಈ ಕಾರಣದಿಂದಲೇ ರಾಜ ಪಾಂಡವನು “ನಾನು ನೋಡಿ ಜನರನ್ನು ಸುಡಬಾರದು!” ಎಂದು ತನ್ನ ಘೋರ ದೃಷ್ಟಿಯನ್ನು ಮುಚ್ಚಿಕೊಂಡು ಹೋಗುತ್ತಾನೆ. ಭೀಮನು ಏಕೆ ಹಾಗೆ ಹೋಗುತ್ತಿದ್ದಾನೆ ಎಂದು ಹೇಳುತ್ತೇನೆ ಕೇಳು. “ನನ್ನ ಸಮನಾದ ಬಾಹುಬಲಿಯು ಇಲ್ಲ!” ಎಂದು ತನ್ನ ದಪ್ಪ ಬಾಹುಗಳಿಂದ ದರ್ಪಿತ ಭೀಮನು ತನ್ನ ಬಾಹುಗಳನ್ನು ಚಾಚಿ, ತನ್ನ ಬಾಹುಬಲದ ಅನುರೂಪ ಶತ್ರುಗಳ ವಿರುದ್ಧ ಬಳಸುವ ಬಾಹುಗಳನ್ನು ತೋರಿಸುತ್ತಾ ಹೋಗುತ್ತಾನೆ. ಕುಂತೀಪುತ್ರ ಅರ್ಜುನ ಸವ್ಯಸಾಚಿಯು ತನ್ನ ಬಾಣಗಳಿಂದ ಘಾತಿಗೊಳ್ಳುವವರ ಸಂಖ್ಯೆಯನ್ನು ಸೂಚಿಸಲು ಮರಳನ್ನು ಚೆಲ್ಲುತ್ತಾ ರಾಜನನ್ನು ಅನುಸರಿಸುತ್ತಾನೆ. ಬಿಡಿಬಿಡಿಯಾದ ಮರಳುಗಳಷ್ಟೇ ಬಾಣಗಳ ಮಳೆಯನ್ನು ಶತ್ರುಗಳ ಮೇಲೆ ಸುರಿಸುತ್ತಾನೆ. ಇಂದು ಯಾರೂ ತನ್ನ ಮುಖವನ್ನು ಗುರುತಿಸಬಾರದು ಎಂದು ಸಹದೇವನು ಮುಖಕ್ಕೆ ಬಳಿದುಕೊಂಡು ಹೋಗುತ್ತಿದ್ದಾನೆ. ಮಾರ್ಗದಲ್ಲಿ ಸ್ತ್ರೀಯರ ಹೃದಯವನ್ನು ಅಪಹರಿಸಬಾರದೆಂದು ನಕುಲನು ತನ್ನ ಸರ್ವಾಂಗಗಳನ್ನು ಧೂಳಿನಿಂದ ಬಳಿದುಕೊಂಡು ಹೋಗುತ್ತಿದ್ದಾನೆ. ಏಕವಸ್ತ್ರಾ, ಮುಕ್ತಕೇಶೀ, ರಜಸ್ವಲೆ, ರಕ್ತದ ಕಲೆಯುಳ್ಳ ವಸ್ತ್ರವನ್ನು ಧರಿಸಿ ರೋದಿಸುತ್ತಿರುವ ದ್ರೌಪದಿಯು ಈ ಮಾತುಗಳನ್ನು ಹೇಳಿದಳು: “ಇಂದಿನಿಂದ ಹದಿನಾಲ್ಕನೆಯ ವರ್ಷದಲ್ಲಿ ಯಾರ ಕಾರಣದಿಂದ ನಾನು ಈ ಅವಸ್ಥೆಯನ್ನು ಪಡೆದೆನೋ ಅವರ ಪತ್ನಿಯರು ತಮ್ಮ ಪತಿ, ಮಕ್ಕಳು, ಬಾಂಧವರು ಮತ್ತು ಮಿತ್ರರನ್ನು ಕಳೆದುಕೊಳ್ಳುತ್ತಾರೆ. ಬಂಧುಗಳ ರಕ್ತದಿಂದ ಲೇಪಿತರಾಗಿ ತಲೆಗೂದಲನ್ನು ಬಿಚ್ಚಿಕೊಂಡು ಹೀಗೆಯೇ ರಜಸ್ವಲೆಯರಾಗಿ ನಾರಿಯರು ತರ್ಪಣಗಳನ್ನು ನೀಡುತ್ತಿರುವುದು ಗಜಸಾಹ್ವಯದಲ್ಲಿ ಕಂಡುಬರುತ್ತದೆ!” ಅವರ ಪುರೋಹಿತ ಧೀರ ಧೌಮ್ಯನು ನೈಋತ ದರ್ಭೆಗಳನ್ನು ನೈರುತ್ಯದ ಕಡೆ ಮಾಡಿ ಹಾಕುತ್ತಾ ಯಮಸಾಮವನ್ನು ಹಾಡುತ್ತಾ ಮುಂದೆ ಹೋಗುತ್ತಿದ್ದಾನೆ. “ಯುದ್ಧದಲ್ಲಿ ಭಾರತರು ಹತರಾಗಲು ಕುರು ಪುರೋಹಿತರು ಹೀಗೆ ಯಮಸಾಮವನ್ನು ಹಾಡುತ್ತಾರೆ!” ಎಂದು ಹೇಳಿ ಧೌಮ್ಯನೂ ಹೋಗುತ್ತಾನೆ. “ಹಾ! ಹಾ! ನಮ್ಮ ನಾಥರು ಹೋಗುತ್ತಿದ್ದಾರೆ! ಈ ದೃಶ್ಯವನ್ನು ನೋಡಿ!” ಎಂದು ಬಹಳ ದುಃಖಾರ್ತ ಪೌರರು ಸುತ್ತುವರೆದು ಆಕ್ರಂದಿಸುತ್ತಿದ್ದಾರೆ. ಈ ರೀತಿಯ ಆಕಾರ ಚಿಹ್ನೆಗಳೊಂದಿಗೆ ತಮ್ಮ ನಿರ್ಧಾರ ಮನೋಗತವನ್ನು ಹೇಳುತ್ತಾ ಮನಸ್ವಿ ಕೌಂತೇಯರು ವನಕ್ಕೆ ಹೋದರು. ಹೀಗೆ ಈ ನರಾಗ್ರರು ಗಜಸಾಹ್ವಯದಿಂದ ಹೋಗುವಾಗ ಮೋಡವಿಲ್ಲದ ಆಕಾಶದಲ್ಲಿ ಮಿಂಚು ಕಂಡುಬಂದಿತು ಮತ್ತು ಭೂಮಿಯು ನಡುಗಿತು. ಗ್ರಹಣದ ಕಾಲವಲ್ಲದಿದ್ದರೂ ರಾಹುವು ಆದಿತ್ಯನಿಗೆ ಗ್ರಹಣವನ್ನುಂಟು ಮಾಡಿದನು. ಪುರವನ್ನು ನಡುಗಿಸುವಂಥ ಉಲ್ಕಾಪಾತವಾಯಿತು. ದೇವಾಲಯಗಳ ಹತ್ತಿರ ಮತ್ತು ಅರಮನೆಯ ಕಾವಲು ಗೋಪುರಗಳ ಮೇಲೆ ಹದ್ದು, ನರಿಗಳು ಮತ್ತು ಕಾಗೆಗಳು ಕೂಗಿದವು. ನಿನ್ನ ದುಷ್ಟ ಸಲಹೆಯಂತೆ ಪಾಂಡವರು ವನಕ್ಕೆ ತೆರಳುವಾಗ ಆದ ಈ ಮಹೋತ್ಪಾತಗಳು ಭಾರತರ ಅಂತ್ಯವನ್ನು ಸೂಚಿಸುತ್ತವೆ.”

ಆಗ ಸಭಾಮಧ್ಯದಲ್ಲಿ ಕುರುಗಳ ಎದುರಿಗೆ ಮಹರ್ಷಿಗಳಿಂದ ಸುತ್ತುವರೆದ ನಾರದನು ಬಂದು ನಿಂತು ಈ ರೀತಿಯ ರೌದ್ರ ಮಾತುಗಳನ್ನಾಡಿದನು:

“ಇಂದಿನಿಂದ ಹದಿಮೂರನೆಯ ವರ್ಷದಲ್ಲಿ ಇಲ್ಲಿರುವ ಕೌರವರು ದುರ್ಯೋಧನನ ಅಪರಾಧದಿಂದ ಮತ್ತು ಭೀಮಾರ್ಜುನರ ಬಲದಿಂದ ವಿನಾಶವನ್ನು ಹೊಂದುತ್ತಾರೆ!”

ಹೀಗೆ ಹೇಳಿ ತಕ್ಷಣವೇ ವಿಪುಲ ಬ್ರಹ್ಮಕಾಂತಿಯ ಆ ದೇವರ್ಷಿಸತ್ತಮನು ಆಕಾಶವನ್ನೇರಿ ಅಂತರ್ಧಾನನಾದನು.  ಆಗ ದುರ್ಯೋಧನ, ಕರ್ಣ ಮತ್ತು ಸೌಬಲ ಶಕುನಿಯೂ ಕೂಡ “ದ್ರೋಣನೇ ನಮ್ಮನ್ನು ಉಳಿಸಬಲ್ಲ!” ಎಂದು ತಿಳಿದು ರಾಜ್ಯವನ್ನು ಅವನಿಗೆ ಒಪ್ಪಿಸಿದರು. ಅದಕ್ಕೆ ದ್ರೋಣನು ಅಮರ್ಷಣ ದುರ್ಯೋದನ, ದುಃಶಾಸನ, ಕರ್ಣ ಮತ್ತು ಸರ್ವ ಭಾರತರನ್ನೂ ಉದ್ದೇಶಿಸಿ ಹೇಳಿದನು:

“ದೇವಪುತ್ರ ಪಾಂಡವರು ಅವಧ್ಯರು ಎಂದು ದ್ವಿಜರು ಹೇಳಿದ್ದಾರೆ. ಆದರೂ ನನ್ನಲ್ಲಿ ಶರಣುಬಂದವರಿಗೆ ಯಥಾಶಕ್ತಿ ಮಾಡುತ್ತೇನೆ. ತಾವಾಗಿಯೇ ಭಕ್ತಿಯಿಂದ ನನ್ನ ಬಳಿ ಶರಣುಬಂದಿರುವ ಧಾರ್ತರಾಷ್ಟ್ರರನ್ನೂ ರಾಜನನ್ನೂ ದೂರವಿಡಲು ಸಾಧ್ಯವಿಲ್ಲ. ಇನ್ನು ಉಳಿದದ್ದು ದೈವಕ್ಕಿರುವಂತೆ ನಡೆಯುತ್ತದೆ! ಸೋತ ಪಾಂಡುಪುತ್ರರು ಧರ್ಮಕ್ಕನುಸಾರ ವನಕ್ಕೆ ಹೋಗಿದ್ದಾರೆ. ಆ ಕೌರವರು ಹನ್ನೆರಡು ವರ್ಷಗಳು ವನದಲ್ಲಿ ವಾಸಿಸುತ್ತಾರೆ. ಬ್ರಹ್ಮಚರ್ಯವನ್ನು ಅನುಸರಿಸಿ, ಕ್ರೋಧ ಮತ್ತು ಅಸಹನೆಗಳಿಂದೊಡಗೂಡಿ ಪಾಂಡವರು ನನ್ನ ದುಃಖಕ್ಕೋಸ್ಕರ ವೈರವನ್ನು ತೆಗೆದುಕೊಂಡು ಬರುತ್ತಾರೆ. ಸಖ್ಯವನ್ನು ಪುನಃ ಪಡೆಯುವುದಕ್ಕೋಸ್ಕರ ನನ್ನಿಂದ ರಾಜ್ಯವನ್ನು ಕಳೆದುಕೊಂಡ ದ್ರುಪದನು ಕ್ರೋಧದಿಂದ ನನ್ನ ವಧೆಗೆಂದು ಪುತ್ರನಿಗಾಗಿ ಯಜ್ಞ ಮಾಡಿದ್ದನು. ಯಾಜ ಉಪಯಾಜರ ತಪಸ್ಸಿನಿಂದ ಅವನು ವೇದಿಮಧ್ಯದಲ್ಲಿ ಪಾವಕನಿಂದ ಪುತ್ರ ಧೃಷ್ಟಧ್ಯುಮ್ನನನ್ನು ಮತ್ತು ಸುಮಧ್ಯಮೆ ದ್ರೌಪದಿಯನ್ನೂ ಪಡೆದನು. ಮರ್ತ್ಯರ ಧರ್ಮಕ್ಕೊಳಗಾದ ನನಗೆ ಕವಚ-ಧನುರ್ಬಾಣಗಳೊಂದಿಗೇ ಹುಟ್ಟಿದ ಆ ಜ್ವಾಲವರ್ಣಿ ದೇವದತ್ತನ ಭಯವು ಆವರಿಸಿದೆ. ಈ ಪುರುಷರ್ಷಭ ಪಾರ್ಷತನು ಅವರ ಪಕ್ಷಕ್ಕೆ ಹೋಗಿದ್ದುದರಿಂದ ಬದುಕಿನಲ್ಲಿ ಅತ್ಯಂತ ನಿರಾಸೆಯುಳ್ಳ ನಾನು ನಿಮ್ಮ ಅರಿಗಳ ವಿರುದ್ಧ ಯುದ್ಧ ಮಾಡುತ್ತೇನೆ. ಈ ಅತಿವಿಶ್ರುತನು ನನ್ನ ವಧೆಗಾಗಿಯೇ ಇದ್ದಾನೆ ಎಂದು ಲೋಕವೇ ತಿಳಿದಿದೆ. ನೀವೇ ಕಾಲವನ್ನು ಬದಲಾಯಿಸಿದ್ದೀರಿ! ಆದುದರಿಂದ ಶ್ರೇಯವಾದುದ್ದನ್ನು ಬೇಗ ಮಾಡಿ. ಇದೂವರೆಗೆ ಮಾಡಿದ್ದುದು ಸಾಕಾಗಲಿಲ್ಲ. ಛಳಿಗಾಲದಲ್ಲಿ ತಾಳೆಯಮರದ ನೆರಳು ಹೇಗೋ ಹಾಗೆ ಈ ಸುಖವು ಸ್ವಲ್ಪವೇ ಸಮಯವಿರುವಂತಹುದು. ಮಹಾ ಯಜ್ಞಗಳನ್ನು ಯಾಜಿಸಿ. ಭೋಗಿಸುವುದರ ಜೊತೆಗೆ ದಾನವನ್ನೂ ನೀಡಿ. ಇಂದಿನಿಂದ ಹದಿನಾಲ್ಕನೆಯ ವರ್ಷದಲ್ಲಿ ಮಹಾ ವಿನಾಶವನ್ನು ಹೊಂದುತ್ತೀರಿ! ದುರ್ಯೋಧನ! ನಿನಗಿಷ್ಟವಾದುದನ್ನು ಕೇಳಿಸಿಕೊಂಡಿದ್ದೀಯೆ ಮತ್ತು ಅರ್ಥಮಾಡಿಕೊಂಡಿದ್ದೀಯೆ. ಒಂದುವೇಳೆ ಒಪ್ಪಿಕೊಂಡರೆ ಪಾಂಡವೇಯರನ್ನು ಸಾಮದಿಂದ ಸಂತೋಷಗೊಳಿಸು.”

ದ್ರೋಣನ ಮಾತುಗಳನ್ನು ಕೇಳಿದ ಧೃತರಾಷ್ಟ್ರನು ಹೇಳಿದನು:

“ಈ ಗುರುವು ಸರಿಯಾಗಿಯೇ ಹೇಳಿದ್ದಾನೆ. ಕ್ಷತ್ತ! ಪಾಂಡವರನ್ನು ಹಿಂದೆ ಕರೆದುಕೊಂಡು ಬಾ! ಮರಳಿ ಬರದಿದ್ದರೆ, ಪಾಂಡವರು ಶಸ್ತ್ರ, ರಥ, ಸೇವಕರು, ಮತ್ತು ಮಕ್ಕಳೊಂದಿಗೆ ಸುಖವಾಗಿ ಸತ್ಕೃತರಾಗಿ ಹೋಗಲಿ.”

ಧೃತರಾಷ್ಟ್ರ-ಸಂಜಯ ಸಂವಾದ

ದ್ಯೂತದಲ್ಲಿ ಸೋತ ಪಾರ್ಥರು ವನಕ್ಕೆ ಹೋಗಲು ಧೃತರಾಷ್ಟ್ರನನ್ನು ಚಿಂತೆಯು ಸಮಾವೇಶಗೊಂಡಿತು. ಆ ಜನೇಶ್ವರ ಧೃತರಾಷ್ಟ್ರನು ಚಿಂತೆಯಲ್ಲಿ ನಿಟ್ಟುಸಿರು ಬಿಡುತ್ತಾ ಏಕಾಗ್ರಚಿತ್ತನಾಗಿರದೇ ಕುಳಿತುಕೊಂಡಿರಲು ಸಂಜಯನು ಹೇಳಿದನು:

“ವಸುಧಾಧಿಪ! ಸಂಪತ್ತಿನೊಂದಿಗೆ ಸಂಪೂರ್ಣ ವಸುಧೆಯನ್ನು ಪಡೆದು, ಪಾಂಡವರನ್ನು ಅವರ ರಾಜ್ಯದಿಂದ ಹೊರಹಾಕಿ, ಯಾಕೆ ಶೋಕಿಸುತ್ತಿದ್ದೀಯೆ?”

ಧೃತರಾಷ್ಟ್ರನು ಹೇಳಿದನು:

“ಯುದ್ಧಶೌಂಡರನ್ನು ಮಿತ್ರರನ್ನಾಗಿ ಪಡೆದಿರುವ ಆ ಮಹಾರಥಿ ಪಾಂಡವರೊಂದಿಗೆ ವೈರವಾಗಿರುವರಿಗೆ ಚಿಂತೆ ಮಾಡಲು ಏನೂ ಇಲ್ಲವೇ?”

ಸಂಜಯನು ಹೇಳಿದನು:

“ರಾಜನ್! ಇದು ನೀನೇ ಮಾಡಿಕೊಂಡ ಸುಕೃತ. ಅತಿದೊಡ್ಡ ವೈರವು ಉಂಟಾಗುತ್ತದೆ. ಅನುಯಾಯಿಗಳೊಂದಿಗೆ ಸರ್ವಲೋಕದ ವಿನಾಶವಾಗುತ್ತದೆ. ಭೀಷ್ಮ, ದ್ರೋಣ ಮತ್ತು ವಿದುರರು ಬೇಡವೆಂದರೂ ಅತ್ಯಂತ ದಡ್ಡನೂ ನಿರ್ಲಜ್ಜನೂ ಆದ ನಿನ್ನ ಪುತ್ರ ದುರ್ಯೋಧನನು ಪಾಂಡವರ ಪ್ರಿಯ ಭಾರ್ಯೆ ಧರ್ಮಚಾರಿಣಿ ದ್ರೌಪದಿಯನ್ನು ಕರೆತರಲು ಸೂತಪುತ್ರ ಪ್ರತಿಕಾಮಿಯನ್ನು ಕಳುಹಿಸಿದನು.”

ಧೃತರಾಷ್ಟ್ರನು ಹೇಳಿದನು:

“ಯಾರ ಪರಾಭವವನ್ನು ದೇವತೆಗಳೇ ನಿಶ್ಚಯಿಸಿದ್ದಾರೋ ಅವನು ವಿಷಯವನ್ನು ಸರಿಯಾಗಿ ಕಾಣದೇ ಇರಲಿ ಎಂದು ಮೊದಲು ಅವನ ಬುದ್ಧಿಯನ್ನು ಕಿತ್ತುಕೊಳ್ಳುತ್ತಾರೆ. ವಿನಾಶವು ನಿಶ್ಚಿತವಾದಾಗ ಮತ್ತು ಬುದ್ಧಿಯು ಕಲುಷಿತವಾದಾಗ ಅನ್ಯಾಯವೂ ನ್ಯಾಯವೆಂದೇ ತೋರುತ್ತದೆ ಮತ್ತು ಅದನ್ನಲ್ಲದೇ ಬೇರೆ ಏನನ್ನೂ ಹೃದಯವು ಬಯಸುವುದಿಲ್ಲ. ವಿನಾಶವು ಹತ್ತಿರವಾದಾಗ ಕೆಟ್ಟದ್ದು ಒಳ್ಳೆಯದಾಗಿಯೂ ಒಳ್ಳೆಯದು ಕೆಟ್ಟದ್ದಾಗಿಯೂ ತೋರುತ್ತದೆ ಮತ್ತು ಮನುಷ್ಯನು ತನಗೆ ಕಂಡದ್ದನ್ನೇ ಸ್ವೀಕರಿಸುತ್ತಾನೆ. ಕಾಲವು ದಂಡವನ್ನೆತ್ತಿ ಶಿರವನ್ನೆಂದೂ ಒಡೆಯುವುದಿಲ್ಲ. ಈ ರೀತಿಯ ವಿಪರೀತ ಅರ್ಥಗಳನ್ನು ತೋರಿಸುವುದೇ ಕಾಲದ ಬಲ. ಮೈನವಿರೇಳಿಸುವ ಈ ಘೋರ ತುಮುಲವು ತಪಸ್ವಿನೀ ಪಾಂಚಾಲಿಯನ್ನು ಸಭಾಮಧ್ಯದಲ್ಲಿ ಎಳೆದು ತಂದಿರುವುದರಿಂದ ಆಗಿದ್ದುದು. ಕೆಟ್ಟ ಜೂಜಾಡುವವನಲ್ಲದೇ ಬೇರೆ ಯಾರು ತಾನೆ ಆ ಅಯೋನಿಜೆ, ರೂಪವತಿ, ಉತ್ತಮ ಕುಲದಲ್ಲಿ ಹುಟ್ಟಿದ, ವಿಭಾವರೀ, ಸರ್ವಧರ್ಮಜ್ಞೆ, ಯಶಸ್ವಿನಿಯನ್ನು ಬಲವಂತವಾಗಿ ಸಭಾಮಧ್ಯದಲ್ಲಿ ಎಳೆದು ತಂದಾರು? ಆ ಸ್ತ್ರೀಧರ್ಮಿಣೀ, ವರಾರೋಹೆ, ರಕ್ತದಿಂದ ತೋಯ್ದ ಏಕ ವಸ್ತ್ರಧಾರಿಣಿ ಪಾಂಚಾಲಿಯು ಸೋತ, ಭ್ರಷ್ಟಚಿತ್ತ, ಪತ್ನಿಯನ್ನು ಕಳೆದುಕೊಂಡ, ಸಂಪತ್ತನ್ನು ಕಳೆದುಕೊಂಡ, ಸರ್ವಕಾಮಗಳಿಂದ ವಂಚಿತರಾದ, ದಾಸಭಾವವನ್ನು ಹೊಂದಿದ, ಧರ್ಮಪಾಶದಲ್ಲಿ ಸಿಲುಕಿಕೊಂಡ, ವಿಕ್ರಮದಲ್ಲಿ ಅಶಕ್ತರಂತಿರುವ ಪಾಂಡವರನ್ನು ನೋಡಿದಳು. ಕೃದ್ಧಳೂ, ಅಸಹಾಯಕಳೂ. ದುಃಖಿತಳೂ ಆಗಿದ್ದ ಕೃಷ್ಣೆಯನ್ನು ದುರ್ಯೋಧನ ಕರ್ಣರು ಕಟು ಮಾತುಗಳಿಂದ ಅವಮಾನಿಸಿದರು. ಅವಳ ದೀನ ಕಣ್ಣುಗಳಿಂದ ಇಡೀ ಭೂಮಿಯೇ ಸುಟ್ಟುಹೋಗಬಹುದಾಗಿತ್ತು. ಇನ್ನು ನನ್ನ ಪುತ್ರರು ಉಳಿಯುವರೇ? ಅಲ್ಲಿ ಸೇರಿದ್ದ ಗಾಂಧಾರಿಯೂ ಸೇರಿ ಸರ್ವ ಭಾರತ ಸ್ತ್ರೀಯರು ಕೃಷ್ಣೆಯನ್ನು ಸಭೆಗೆ ಕರಿಸಿದ್ದುದನ್ನು ನೋಡಿ ಭೈರವವಾಗಿ ಕೂಗಿಕೊಂಡರು. ಸರ್ವ ಬ್ರಾಹ್ಮಣರೂ ದ್ರೌಪದಿಯ ಬಲಾತ್ಕಾರದಿಂದ ಕುಪಿತರಾಗಿ ಅಂದಿನ ಸಂಜೆ ಅಗ್ನಿಹೋತ್ರಗಳು ಉರಿಯಲಿಲ್ಲ. ಅನಿಷ್ಟ ಘೋರ ಭೂಕಂಪನದ ಧ್ವನಿಯು ಕೇಳಿಬಂದಿತು. ಆಕಾಶದಿಂದ ಘೋರ ಉಲ್ಕೆಗಳು ಬಿದ್ದವು. ಗ್ರಹಣ ಕಾಲವಲ್ಲದಿದ್ದರೂ ಮಹಾಘೋರ ರಾಹುವು ಸೂರ್ಯಗ್ರಹಣ ಮಾಡಿ ಪ್ರಜೆಗಳಲ್ಲಿ ಭಯವನ್ನುಂಟು ಮಾಡಿದನು. ಹಾಗೆಯೇ ಭಾರತರ ವಿನಾಶವನ್ನು ಸೂಚಿಸುವಂತೆ ರಥಶಾಲೆಗಳಲ್ಲಿ ಬೆಂಕಿಯು ಕಾಣಿಸಿಕೊಂಡಿತು ಮತ್ತು ಧ್ವಜಸ್ಥಂಭಗಳು ತಾವಾಗಿಯೇ ಮುರಿದು ಬಿದ್ದವು. ದುರ್ಯೋಧನನ ಅಗ್ನಿಹೋತ್ರದಲ್ಲಿ ನರಿಗಳು ಭೈರವವಾಗಿ ಕೂಗಿದವು, ಅದಕ್ಕೆ ಪ್ರತ್ಯುತ್ತರವಾಗಿ ಎಲ್ಲ ದಿಕ್ಕುಗಳಿಂದಲೂ ಕತ್ತೆಗಳು ಕೂಗಿದವು. ಆಗ ಭೀಷ್ಮನು ದ್ರೋಣ, ಕೃಪ, ಸೋಮದತ್ತ, ಮಹಾರಥಿ ಬಾಹ್ಲೀಕರೊಂದಿಗೆ ಸಭೆಯನ್ನು ಬಿಟ್ಟು ಹೊರಟು ಹೋದನು. ಆಗ ನಾನು ವಿದುರನಿಂದ ಪ್ರಚೋದಿತನಾಗಿ ಬೇಡಿದ ವರವನ್ನು ಕೊಡುತ್ತೇನೆ ಎಂದು ಕೃಷ್ಣೆಗೆ ಹೇಳಿದೆನು. ಆಗ ಪಾಂಚಾಲಿಯು ಅಮಿತೌಜಸ ಪಾಂಡವರನ್ನು ಕೇಳಿಕೊಂಡಳು. ನಾನು ರಥ, ಧನುಸ್ಸುಗಳೊಂದಿಗೆ ಅವರಿಗೆ ಹೋಗಲು ಅನುಮತಿಯನ್ನಿತ್ತೆನು. ಆಗ ಮಹಾಪ್ರಾಜ್ಞ, ಸರ್ವಧರ್ಮವಿದು ವಿದುರನು ಹೇಳಿದನು: “ಭಾರತರೇ! ಕೃಷ್ಣೆಯು ಸಭೆಗೆ ಬಂದಿರುವುದು ನಿಮ್ಮ ಅಂತ್ಯವನ್ನು ಸೂಚಿಸುತ್ತದೆ. ಈ ಪಾಂಚಾಲರಾಜನ ಸುತೆ ಪಾಂಚಾಲಿಯು ಪಾಂಡವರಿಗಾಗಿಯೇ ದೇವತೆಗಳು ಸೃಷ್ಟಿಸಿದ ಉತ್ತಮ ಶ್ರೀ. ಅವಳ ಅಪಮಾನವನ್ನು ಸಿಟ್ಟಿಗೆದ್ದ ಪಾಂಡವರಾಗಲೀ, ಮಹೇಷ್ವಾಸ ವೃಷ್ಣಿಗಳಾಗಲೀ, ಅಥವಾ ಮಹೌಜಸ ಪಾಂಚಾಲರಾಗಲೀ ಸಹಿಸುವುದಿಲ್ಲ. ಅವರು ಸತ್ಯಾಭಿಸಂಧ ವಾಸುದೇವನ ರಕ್ಷಣೆಯಲ್ಲಿದ್ದಾರೆ. ಪಾಂಚಾಲರಿಂದ ರಕ್ಷಿತನಾದ ಬೀಭತ್ಸುವು ಬರುತ್ತಾನೆ. ಅವರ ಮಧ್ಯದಲ್ಲಿ ಮಹೇಷ್ವಾಸ ಮಹಾಬಲ ಭೀಮಸೇನನು ಅಂತಕನ ದಂಡದಂತಿರುವ ಗದೆಯನ್ನು ಬೀಸುತ್ತಾ ಬರುತ್ತಾನೆ. ಧೀಮತ ಪಾರ್ಥನ ಗಾಂಡೀವದ ಘೋಷವನ್ನಾಗಲೀ, ಭೀಮನ ಗದಾಪ್ರಹಾರದ ರಭಸವನ್ನಾಗಲೀ ಕೇಳಲು ನರಾಧಿಪರಿಗಾಗಲಿಕ್ಕಿಲ್ಲ. ಆದುದರಿಂದ ಪಾರ್ಥರೊಂದಿಗೆ ಎಂದೂ ಯುದ್ಧವನ್ನು ಬಯಸಬಾರದು ಎಂದು ನನಗನ್ನಿಸುತ್ತದೆ. ಕುರುಗಳಿಗಿಂತ ಪಾಂಡವರೇ ಹೆಚ್ಚು ಶಕ್ತಿವಂತರು ಎಂದು ಸದಾ ನನ್ನ ಅಭಿಪ್ರಾಯ. ಮಹಾಧ್ಯುತಿ ರಾಜ ಜರಾಸಂಧನು ಬಲಶಾಲಿಯಾಗಿದ್ದರೂ ಅವನನ್ನು ಭೀಮನು ಕೇವಲ ಬಾಹುಪ್ರಹಾರದಿಂದಲೇ ಕೊಂದನು. ಪಾಂಡವರೊಂದಿಗೆ ಶಾಂತಿಯಿಂದಿರು ಮತ್ತು ಎರಡೂ ಪಕ್ಷಗಳಿಗೂ ಯುಕ್ತವಾಗಿರುವ ಕಾರ್ಯವನ್ನು ಶೀಘ್ರವೇ ಕೈಗೊಳ್ಳು!” ಗಾವಲ್ಗಣಿ! ಪುತ್ರನಿಗೆ ಹಿತವನ್ನುಂಟುಮಾಡಲು ಬಯಸಿದ ನಾನು ಕ್ಷತ್ತನು ಈ ರೀತಿ ಧರ್ಮಾರ್ಥಸಂಹಿತ ಮಾತುಗಳನ್ನು ಹೇಳಿದರೂ ಸ್ವೀಕರಿಸಲಿಲ್ಲ!”

 

Leave a Reply

Your email address will not be published. Required fields are marked *