Related imageಸಭಾಕ್ರಿಯ

ಮಯನಿಂದ ಸಭಾಭವನ ನಿರ್ಮಾಣ ಕಾರ್ಯಾರಂಭ

ನಂತರ ಮಯನು ಅಂಜಲಿಬದ್ಧನಾಗಿ ಶ್ಲಾಘನೀಯ ಮಾತುಗಳಿಂದ ಪುನಃ ಪುನಃ ಪೂಜಿಸುತ್ತಾ ವಾಸುದೇವನ ಸನ್ನಿಧಿಯಲ್ಲಿ ಪಾರ್ಥನನ್ನು ಉದ್ದೇಶಿಸಿ ಹೇಳಿದನು:

“ಕುಂತಿಪುತ್ರ! ಸಂಕೃದ್ಧ ಕೃಷ್ಣ ಮತ್ತು ಧಗಿಸಲು ಸಿದ್ಧ ಪಾವಕನಿಂದ ನನ್ನನ್ನು ರಕ್ಷಿಸಿದ್ದೀಯೆ. ನಿನಗಾಗಿ ನಾನು ಏನು ಮಾಡಲಿ? ಹೇಳು.”

ಅರ್ಜುನನು ಹೇಳಿದನು:

“ನೀನು ಸರ್ವವನ್ನೂ ಮಾಡಿದ್ದೀಯೆ! ಮಂಗಳವಾಗಲಿ! ಇನ್ನು ನೀನು ಹೋಗಬಹುದು. ನಮ್ಮ ಮೇಲೆ ನಿನ್ನ ಪ್ರೀತಿ ಯಾವಾಗಲೂ ಇರಲಿ. ನಿನ್ನ ಮೇಲೆಯೂ ನಮ್ಮ ಪ್ರೀತಿ ಸದಾ ಇರುತ್ತದೆ.”

ಮಯನು ಹೇಳಿದನು:

“ಭರತ! ಪುರುಷರ್ಷಭನಂತೆ ಮಾತನಾಡಿದ್ದೀಯೆ. ಆದರೂ, ಪ್ರೀತಿಪೂರ್ವಕವಾಗಿ ನಿನಗೋಸ್ಕರ ಏನನ್ನಾದರೂ ಮಾಡಲು ಇಚ್ಛಿಸುತ್ತೇನೆ. ನಾನೊಬ್ಬ ಮಹಾಕವಿ. ದಾನವರ ವಿಶ್ವಕರ್ಮನಿದ್ದಂತೆ. ಆದ್ದರಿಂದ ನಿನಗೋಸ್ಕರ ಏನನ್ನಾದರೂ ಮಾಡಲು ಇಚ್ಛಿಸುತ್ತೇನೆ.”

ಅರ್ಜುನನು ಹೇಳಿದನು:

“ನಾನು ನಿನ್ನನ್ನು ಪ್ರಾಣಸಂಕಟದಿಂದ ವಿಮುಕ್ತಗೊಳಿಸಿದೆ ಎಂದು ತಿಳಿದಿರುವೆ. ಹಾಗಿದ್ದರೂ ನಾನು ನಿನ್ನಿಂದ ಏನನ್ನು ಮಾಡಿಸಿಕೊಳ್ಳಲೂ ಶಕ್ಯನಿಲ್ಲ. ದಾನವ! ಹಾಗೆಂದು ನಿನ್ನ ಇಚ್ಛೆಯನ್ನು ಭಂಗಗೊಳಿಸಲೂ ನನಗೆ ಇಷ್ಟವಿಲ್ಲ. ಕೃಷ್ಣನಿಗೋಸ್ಕರ ಏನನ್ನಾದರೂ ಮಾಡು. ಅದೇ ನನಗೆ ಪ್ರತೀಕಾರ ಮಾಡಿದಂತಾಗುತ್ತದೆ.”

ಮಯನು ವಾಸುದೇವನನ್ನು ಒತ್ತಾಯಿಸಲು ಅವನು ಏನನ್ನು ಕೇಳಬೇಕೆಂದು ಮುಹೂರ್ತಕಾಲ ಯೋಚಿಸಿ ಪ್ರಚೋದಿಸಿದನು:

“ದೈತ್ಯ! ಧರ್ಮರಾಜನಿಗೆ ತಕ್ಕದು ಎಂದು ನಿನಗನ್ನಿಸುವ ಒಂದು ಸಭಾಭವನವನ್ನು ನಿರ್ಮಿಸು! ನೋಡಿ ವಿಸ್ಮಿತರಾದ ಈ ಮನುಷ್ಯಲೋಕದ ಯಾವ ಮಾನವರಿಂದಲೂ ಅದರಂತಹುದನ್ನು ಕಟ್ಟಿಸಲು ಅಸಾಧ್ಯವಾಗುವ ಅದ್ಭುತ ಸಭಾಭವನವನ್ನು ನಿರ್ಮಿಸು. ದೇವತೆಗಳ, ಅಸುರರ ಮತ್ತು ಮನುಷ್ಯರ ವಿನ್ಯಾಸಗಳು ಕಂಡುಬರುವಂತಹ ಒಂದು ಸಭಾಭವನನ್ನು ನಿರ್ಮಾಣಮಾಡು!”

ಈ ಮಾತನ್ನು ಕೇಳಿದ ಮಯನು ಸಂತುಷ್ಟನಾಗಿ, ದೇವತೆಗಳ ವಿಮಾನದಂತಿರುವ ಸಭಾಭವನವನ್ನು ಪಾಂಡವರಿಗಾಗಿ ನಿರ್ಮಿಸಲು ಸಂತೋಷದಿಂದ ಒಪ್ಪಿಕೊಂಡನು. ಅನಂತರ, ಕೃಷ್ಣ ಮತ್ತು ಪಾರ್ಥರು ನಡೆದದ್ದೆಲ್ಲವನ್ನೂ ಯಥಾವತ್ತಾಗಿ ಧರ್ಮರಾಜ ಯುಧಿಷ್ಠಿರನಿಗೆ ವರದಿ ಮಾಡಿದರು ಮತ್ತು ಮಯನಿಗೆ ಭೆಟ್ಟಿ ಮಾಡಿಸಿದರು. ಯುಧಿಷ್ಠಿರನು ಅವನಿಗೆ ಯಥಾರ್ಹ ಪೂಜಿಸಿದನು ಮತ್ತು ಮಯನೂ ಎಲ್ಲ ಸತ್ಕಾರಗಳನ್ನೂ ಸತ್ಕೃತನಾಗಿ ಸ್ವೀಕರಿಸಿದನು. ನಂತರ ಆ ದೈತ್ಯನು ಪಾಂಡುಪುತ್ರರಿಗೆ ಪೂರ್ವಕಾಲದಲ್ಲಿ ಅಲ್ಲಲ್ಲಿ ನಡೆದ ದೇವಚರಿತ್ರೆಯನ್ನು ತಿಳಿಸಿದನು. ಸ್ವಲ್ಪ ಕಾಲ ವಿಶ್ರಾಂತಿ ಪಡೆದ ಆ ವಿಶ್ವಕರ್ಮನು ಮಹಾತ್ಮ ಪಾಂಡವರಿಗೋಸ್ಕರ ಸಭಾಭವನದ ಯೋಜನೆಯನ್ನು ತಯಾರಿಸಿ ಕಟ್ಟಲು ಪ್ರಾರಂಭಿಸಿದನು. ಪಾರ್ಥರ ಮತ್ತು ಮಹಾತ್ಮ ಕೃಷ್ಣನ ಅಭಿಪ್ರಾಯದಂತೆ ಆ ಮಹಾತೇಜಸ್ವಿ, ಕೃತಕೌತಕಿ, ಮಂಗಲಕರ, ವೀರ್ಯವಂತ ಅಸುರನು ಪುಣ್ಯಕಾಲದಲ್ಲಿ ಸಾವಿರಾರು ದ್ವಿಜಶ್ರೇಷ್ಠರಿಗೆ ಪಾಯಸ ಮತ್ತು ಬಹುವಿಧ ಧನವನ್ನಿತ್ತು ತೃಪ್ತಿಪಡಿಸಿ ಸರ್ವಋತುಗುಣಸಂಪನ್ನ, ದಿವ್ಯರೂಪಿ ಹತ್ತು ಸಾವಿರ ಕಿಷ್ಕು ಮನೋಹರ ಭೂಮಿಯನ್ನು ಅಳತೆಮಾಡಿದನು.

ಇಂದ್ರಪ್ರಸ್ಥದಿಂದ ದ್ವಾರಕೆಗೆ ಶ್ರೀಕೃಷ್ಣನ ಪ್ರಯಾಣ

ಖಾಂಡವಪ್ರಸ್ಥದಲ್ಲಿ ಸುಖವಾಗಿ ವಾಸವಾಗಿದ್ದು, ಪ್ರೀತಿಪರ ಪಾರ್ಥರಿಂದ ಪೂಜನಾರ್ಹನಾಗಿ ಪೂಜಿಸಿಕೊಂಡ ಜನಾರ್ದನನು ತಂದೆಯನ್ನು ಕಾಣುವ ಮನಸ್ಸುಳ್ಳವನಾಗಿ, ಹೊರಡಲು ಇಚ್ಚಿಸಿದನು. ವಿಶಾಲನೇತ್ರ ಜಗದ್ವಂದ್ಯನು ಧರ್ಮರಾಜ ಮತ್ತು ಪೃಥಾರಿಗೆ ಬೀಳ್ಕೊಡುತ್ತಾ ತಂದೆಯ ಸೋದರಿಯ ಪಾದಗಳಲ್ಲಿ ತಲೆಯನ್ನಿಟ್ಟು ವಂದಿಸಿದನು. ಅವಳು ಕೇಶವನ ಶಿರವನ್ನು ಆಘ್ರಾಣಿಸಿ, ತೊಟ್ಟಿ ಹಿಡಿದಳು. ನಂತರ ಮಹಾಯಶ ಕೃಷ್ಣನು ತನ್ನ ತಂಗಿಯ ಬಳಿ ಹೋದನು. ಅವಳನ್ನು ನೋಡಿದ ಹೃಷೀಕೇಶನು ಪ್ರೀತಿಯಿಂದ ಕಣ್ಣೀರು ತುಂಬಿದವನಾದನು. ಭಗವಂತನು ಭದ್ರೆ ಭದ್ರಭಾಷಿಣಿ ಸುಭದ್ರೆಗೆ ಅರ್ಥಪೂರ್ಣ, ತತ್ವಪೂರ್ಣ, ಸಂಕ್ಷಿಪ್ತ ಹಿತ ಮಾತುಗಳನ್ನಾಡಲು ಅವಳು ಸ್ವ-ಜನರಿಗೆ ಸಂದೇಶಗಳನ್ನು ಕಳುಹಿಸಿಸುತ್ತಾ ಅವನಿಗೆ ಪುನಃ ಪುನಃ ಶಿರಸಾ ವಂದಿಸಿದಳು. ಭಾಮಿನಿ ಸುಭದ್ರೆಯನ್ನು ಬೀಳ್ಕೊಂಡ ನಂತರ ಜನಾರ್ದನನು ಕೃಷ್ಣೆ ಮತ್ತು ಧೌಮ್ಯರನ್ನು ನೋಡಲು ಹೋದನು. ಪುರುಷಸತ್ತಮ ಜನಾರ್ದನನು ಧೌಮ್ಯನಿಗೆ ಯಥಾವತ್ತಾಗಿ ವಂದಿಸಿದನು. ಮತ್ತು ದ್ರೌಪದಿಗೆ ಸಾಂತ್ವನವನ್ನು ನೀಡಿ, ಅವಳಿಂದ ಬೀಳ್ಕೊಂಡನು. ನಂತರ ಆ ಧೀಮಂತ ಬಲಶಾಲಿಯು, ಪಾರ್ಥನ ಸಹಿತ ಸಹೋದರರ ಬಳಿ ಬಂದನು; ಐವರು ಸಹೋದರರಿಂದ ಸುತ್ತುವರಿಯಲ್ಪಟ್ಟ ಕೃಷ್ಣನು ಅಮರರಿಂದ ಸುತ್ತುವರಿಯಲ್ಪಟ್ಟ ಶಕ್ರನಂತೆ ಕಂಡನು. ಯದುಪುಂಗವನು ಮಾಲೆ, ಜಪ, ನಮಸ್ಕಾರ, ಮತ್ತು ವಿವಿಧ ಗಂಧಗಳಿಂದ ದೇವ-ದ್ವಿಜರನ್ನು ಪೂಜಿಸಿದನು. ಈ ಎಲ್ಲ ಕಾರ್ಯಗಳನ್ನೂ ಮುಗಿಸಿದ ನಂತರ ಶ್ರೇಷ್ಠನು ಹೊರಟು, ಸ್ವಸ್ತಿ ವಾಚನ ಮಾಡುತ್ತಿದ್ದ ವಿಪ್ರರೆಲ್ಲರಿಗೂ ಮೊಸರಿನ ಪಾತ್ರೆ, ಫಲಾಕ್ಷತೆ, ಮತ್ತು ಅರಳನ್ನು ನೀಡಿ, ಪ್ರದಕ್ಷಿಣೆ ಮಾಡಿದನು. ಗರುಡನ ಚಿಹ್ನೆಯನ್ನೊಳಗೊಂಡ ಧ್ವಜವನ್ನು ಹೊತ್ತ ಕಾಂಚನ ರಥವನ್ನು ಏರಿ, ಗದಾ, ಚಕ್ರ, ಖಡ್ಗ ಮತ್ತು ಇತರ ಆಯುಧಗಳನ್ನು ಧರಿಸಿದನು. ಉತ್ತಮ ತಿಥಿ, ನಕ್ಷತ್ರ ಮತ್ತು ಮುಹೂರ್ತದಲ್ಲಿ ಪುಂಡರೀಕಾಕ್ಷನು ಸೈನ್ಯ-ಸುಗ್ರೀವ ವಾಹನನಾಗಿ ಹೊರಟನು. ಪ್ರೇಮಭಾವದಿಂದ ರಾಜ ಯುಧಿಷ್ಠಿರನು ಅವನನ್ನು ಅನುಸರಿಸಿ ರಥವನ್ನೇರಿ, ಉತ್ತಮ ಸಾರಥಿ ದಾರುಕನನ್ನು ಸರಿಸಿ, ಸ್ವಯಂ ಕುರುಪತಿಯೇ ಕಡಿವಾಣವನ್ನು ಹಿಡಿದನು. ಅರ್ಜುನನೂ ಸಹ ರಥವನ್ನೇರಿ, ಚಿನ್ನದ ದಂಡದ ಚಾಮರವನ್ನು ಅವನ ಶಿರದ ಸುತ್ತ ಸೂರ್ಯ ಪ್ರದಕ್ಷಿಣೆಯಂತೆ ಬೀಸಿದನು. ವಿಜಯೀ ಭೀಮಸೇನನೂ ಕೂಡ ಅವಳಿಗಳ ಸಹಿತ ಋತ್ವಿಕರು ಮತ್ತು ಪೌರಜನರಿಂದ ಸುತ್ತುವರಿಯಲ್ಪಟ್ಟ ಕೃಷ್ಣನನ್ನು ಅನುಸರಿಸಿದನು. ಸಹೋದರರಿಂದ ಅನುಸರಿಸಲ್ಪಟ್ಟ ಪರವೀರವಿನಾಶಿ ಕೇಶವನು ಪ್ರಿಯ ಶಿಷ್ಯರ ಮಧ್ಯದಲ್ಲಿರುವ ಗುರುವಿನಂತೆ ಶುಶೋಭಿಸಿದನು. ಗೋವಿಂದನು ಪಾರ್ಥನನ್ನು ಬಿಗಿದಪ್ಪಿ, ಅತಿ ದುಃಖದಿಂದ ಬೀಳ್ಕೊಟ್ಟನು ಮತ್ತು ಯುಧಿಷ್ಠಿರ-ಭೀಮಸೇನರಿಗೆ ವಂದಿಸಿದನು. ಯಮಳರು ಅವನನ್ನು ಬಾಹುಗಳಿಂದ ಬಿಗಿದಪ್ಪಿ ಬೀಳ್ಕೊಟ್ಟರು. ಹೀಗೆ ಪಾಂಡವರನ್ನು ಬೀಳ್ಕೊಟ್ಟು, ಹಿಂಬಾಲಿಸಿ ಬಂದಿದ್ದವರೆಲ್ಲರಲ್ಲೂ ಮರಳಿ ಕಳುಹಿಸಿ, ಕೃಷ್ಣನು ಇನ್ನೊಬ್ಬ ಪುರಂದರನಂತೆ ತನ್ನ ನಗರಕ್ಕೆ ಪ್ರಯಾಣಿಸಿದನು. ಕಣ್ಮರೆಯಾಗುವವರೆಗೂ ಕೃಷ್ಣನನ್ನು ಕಣ್ಣಿನಲ್ಲಿಯೇ ಹಿಂಬಾಲಿಸಿ, ನಂತರ ಆ ಪ್ರೀತಿಸಮನ್ವಿತನನ್ನು ತಮ್ಮ ತಮ್ಮ ಮನಸ್ಸಿನಲ್ಲಿಯೇ ಹಿಂಬಾಲಿಸಿದರು. ಅವರೆಲ್ಲರೂ ಕೇಶವದರ್ಶನಕ್ಕಾಗಿ ಅತೃಪ್ತ ಮನಸ್ಸಿನವರಾಗಿದ್ದಂತೆ, ಪ್ರಿಯದರ್ಶನ ಶೌರಿಯು ಶೀಘ್ರದಲ್ಲಿಯೇ ಅವರ ಕಣ್ಣಿಂದ ಅಂತರ್ಧಾನನಾದನು. ಗೋವಿಂದನ ಜೊತೆ ತಮ್ಮ ಮನಸ್ಸುಗಳನ್ನೂ ಕಳುಹಿಸಿಕೊಟ್ಟ ಪುರುಷರ್ಷಭ ಪಾರ್ಥರೆಲ್ಲರೂ ತಮ್ಮ ನಗರಕ್ಕೆ ಮರಳಿದರು ಮತ್ತು ಸಮಯದಲ್ಲಿ ಕೃಷ್ಣನು ತನ್ನ ರಥದಲ್ಲಿ ದ್ವಾರಕೆಯನ್ನು ತಲುಪಿದನು.

ಮಯಸಭೆಯ ನಿರ್ಮಾಣ

ವಿಜಯಿಗಳಲ್ಲಿ ಶ್ರೇಷ್ಠ ಪಾರ್ಥ ಅರ್ಜುನನಿಗೆ ಮಯನು ಹೇಳಿದನು:

“ನಾನು ಈಗ ಹೊರಡುತ್ತಿದ್ದೇನೆ. ಬೇಗನೆ ಹಿಂದಿರುಗಿಬಿಡುತ್ತೇನೆ. ನನ್ನನ್ನು ಕೇಳು. ಕೈಲಾಸದ ಉತ್ತರದ ಮೇರುಪರ್ವತದಲ್ಲಿ ಎಲ್ಲ ದಾನವರೂ ಯಾಗಮಾಡಬೇಕೆಂದಿದ್ದಾಗ ನಾನು ರಮ್ಯ ಬಿಂದು ಸರೋವರದ ಬಳಿ ಒಂದು ಮಣಿಮಯ ಭಂಡಾರವನ್ನು ರಚಿಸಿದ್ದೆ. ಅದನ್ನು ಸತ್ಯಸಂಧ ವೃಷಪರ್ವನ ಸಭೆಯಲ್ಲಿ ಇಟ್ಟಿದ್ದೆ. ಅದು ಇನ್ನೂ ಅಲ್ಲಿ ಇದ್ದರೆ ನಾನು ಹೋಗಿ ತೆಗೆದುಕೊಂಡು ಬರುತ್ತೇನೆ. ಅದರಿಂದ ಯಶಸ್ವಿನಿ ಪಾಂಡವನಿಗಾಗಿ ಎಲ್ಲರ ಮನಸ್ಸನ್ನೂ ಅಹ್ಲಾದಿಸುವ ಸರ್ವರತ್ನಭೂಷಿತ ಸುಂದರ ಸಭೆಯನ್ನು ನಿರ್ಮಿಸುತ್ತೇನೆ! ಬಿಂದುಸರೋವರದಲ್ಲಿ ರಾಜ ಯೌವನಾಶ್ವನು ರಣದಲ್ಲಿ ರಿಪುಗಳನ್ನು ಸಂಹರಿಸಿ ಇಟ್ಟ ಶ್ರೇಷ್ಠ ಗದೆಯೊಂದಿದೆ. ಅದು ಭಾರವಾಗಿದೆ, ದೊಡ್ಡದಾಗಿದೆ. ಸುಂದರ, ಸುವರ್ಣಬಿಂದುಗಳಿಂದ ಅಲಂಕೃತಗೊಂಡು ಸುಂದರವಾಗಿದೆ. ಧೃಡವಾಗಿದ್ದು ಶತಸಹಸ್ರ ಸೇನೆಯಲ್ಲಿ ಎಲ್ಲರನ್ನೂ ಸಂಹರಿಸಬಲ್ಲದ್ದು. ನಿನಗೆ ಗಾಂಡೀವವು ಹೇಗೋ ಹಾಗೆ ಭೀಮನಿಗೆ ಅದು ಅನುರೂಪವಾದದ್ದು. ಮತ್ತು ವರುಣನ ಸುಘೋಷದಿಂದೊಡಗೂಡಿದ ದೇವದತ್ತ ಮಹಾಶಂಖವೂ ಇದೆ. ಇವೆಲ್ಲವನ್ನು ನಿನಗೆ ತಂದು ಕೊಡುತ್ತೇನೆ. ಅದರಲ್ಲಿ ಸಂಶಯವೇ ಇಲ್ಲ!”

ಪಾರ್ಥನಲ್ಲಿ ಈ ರೀತಿ ಮಾತನಾಡಿ ಆ ಅಸುರನು ಆಗ್ನೇಯ ದಿಕ್ಕಿನಲ್ಲಿ ಹೋದನು. ಕೈಲಾಸದ ಉತ್ತರದಲ್ಲಿ ಮೈನಾಕ ಪರ್ವತದ ಕಡೆ ಹಿರಣ್ಮಯ ಶಿಖರವನ್ನು ಹೊಂದಿದ ಒಂದು ಪೂಜನೀಯ ಮಣಿಮಯ ಮಹಾಗಿರಿಯಿದೆ. ಅಲ್ಲಿಯೇ ರಾಜ ಭಗೀರಥನು ಬಹಳ ವರ್ಷಗಳು ಭಾಗೀರಥಿ ಗಂಗೆಯನ್ನು ನೋಡುತ್ತಾ ವಾಸಿಸುತ್ತಿದ್ದ ಬಿಂದು ಎಂಬ ಹೆಸರಿನ ರಮ್ಯ ಸರೋವರವಿದೆ. ಅಲ್ಲಿಯೇ ಮಹಾತ್ಮ ಸರ್ವಭೂತೇಶ್ವರನು ಯಾಗ ಮಂಟಪದ ಮಣಿಮಯ ಸ್ಥಂಭಗಳನ್ನು ಮತ್ತು ಹಿರಣ್ಮಯ ಯಾಗ ಕುಂಡವನ್ನು, ಸುಂದರವಾಗಿ ಕಾಣಲಿಕ್ಕೆಂದೇ ಹೊರತು ದೃಷ್ಟಾಂತವನ್ನು ನೀಡಲಿಕ್ಕಲ್ಲ, ರಚಿಸಿ ಒಂದು ನೂರು ಮುಖ್ಯ ಯಾಗಗಳನ್ನು ಮಾಡಿದ್ದನು. ಇದೇ ಸ್ಥಳದಲ್ಲಿ ಶಚೀಪತಿ ಸಹಸ್ರಾಕ್ಷನು ಸಿದ್ಧಿಯನ್ನು ಪಡೆದನು. ಅಲ್ಲಿಯೇ ತಿಗ್ಮತೇಜಸ್ವಿ ಭೂತಪತಿಯು ಸನಾತನ ಸರ್ವಲೋಕಗಳನ್ನೂ ಸೃಷ್ಟಿಸಿ ಸಹಸ್ರಾರು ಭೂತಗಳಿಂದ ಸುತ್ತುವರೆದು ಉಪಾಸಿತನಾಗಿದ್ದನು. ಅಲ್ಲಿಯೇ ನರ ನಾರಾಯಣರು, ಬ್ರಹ್ಮ, ಯಮ, ಮತ್ತು ಐದನೆಯದಾಗಿ ಸ್ಥಾಣುವು ಸಹಸ್ರಯುಗಗಳಿಗೊಮ್ಮೆ ಸತ್ರವನ್ನು ನಡೆಸುತ್ತಾರೆ. ಅದೇ ಸ್ಥಳದಲ್ಲಿ ವಾಸುದೇವನು ಸಹಸ್ರವರ್ಷಗಳ ಸತ್ರವನ್ನು ಶ್ರದ್ಧೆಯಿಂದ ಸತತವಾಗಿ ಶಿಷ್ಟರಿಗೆ ಕಲಿಸಲೋಸುಗ ಆಯೋಜಿಸುತ್ತಾನೆ. ಅಲ್ಲಿ ಕೇಶವನು ಸಹಸ್ರಾರು ಸಂಖ್ಯೆಗಳಲ್ಲಿ ಸುವರ್ಣಮಾಲೆಗಳಿಂದಲಂಕೃತ ಕಂಬಗಳನ್ನೂ ಮತ್ತು ಹೊಳೆಯುತ್ತಿರುವ ಯಜ್ಞವೇದಿಕೆಗಳನ್ನೂ ಕೊಟ್ಟಿದ್ದನು. ಅಲ್ಲಿಗೆ ಹೋಗಿ ಆ ರಾಕ್ಷಸನು ಗದೆ, ಶಂಖ, ಮತ್ತು ವೃಷಪರ್ವನಲ್ಲಿದ್ದ ಸ್ಫಟಿಕ ಸಭಾದ್ರವ್ಯಗಳೆಲ್ಲವನ್ನೂ ಕಿಂಕರರ ಸಹಾಯದಿಂದ ಎತ್ತಿಕೊಂಡನು. ಅವೆಲ್ಲವನ್ನೂ ತೆಗೆದುಕೊಂಡು ಬಂದು ಅವನು ಸುರರದ್ದೋ ಎಂದು ತೋರುವ, ಅಪ್ರತಿಮ, ದಿವ್ಯ, ಮಣಿಮಯ, ಮೂರೂ ಲೋಕಗಳಲ್ಲಿಯೂ ವಿಶೃತ ಶುಭ ಸಭೆಯ ನಿರ್ಮಾಣದಲ್ಲಿ ತೊಡಗಿದನು. ಅವನು ಅಪ್ರತಿಮ ಗದೆಯನ್ನು ಭೀಮಸೇನನಿಗೆ ಕೊಟ್ಟನು ಮತ್ತು ಅನುತ್ತಮ ದೇವದತ್ತ ಶಂಖವನ್ನು ಪಾರ್ಥನಿಗಿತ್ತನು.

ನೂರು ಗಟ್ಟಿ ಸ್ತಂಭಗಳಿಂದ ಕೂಡಿದ ಆ ಸಭೆಯು ಪರಿಧಿಯಲ್ಲಿ ಹತ್ತು ಸಾವಿರ ಕಿಷ್ಕುಗಳದ್ದಾಗಿತ್ತು. ಆ ಅತಿ ದಿವ್ಯ ಸುಂದರ ಸಭೆಯು ಅಗ್ನಿ, ಸೂರ್ಯ ಅಥವಾ ಚಂದ್ರನಂತೆ ಹೊಳೆಯುತ್ತಿತ್ತು. ಕಾಂತಿಯಲ್ಲಿ ಸೂರ್ಯನ ಕಾಂತಿಯನ್ನೂ ಮೀರುತ್ತಿದೆಯೋ ಎಂಬಂತಿದ್ದ ಅದು ದೇವತೆಗಳ ವರ್ಚಸ್ಸಿನಿಂದ ಉರಿಯುತ್ತಿದೆಯೋ ಎಂಬಂತೆ ಹೊಳೆಯುತ್ತಿತ್ತು. ಅತಿ ಎತ್ತರದ ಆ ವಿಸ್ತಾರ ಸುಂದರ ಸಭೆಯು ಪರ್ವತ ಅಥವಾ ಮೋಡಗಳಂತೆ ಆಕಾಶವನ್ನು ಮುಟ್ಟಿ ನಿಂತಿತ್ತು ಮತ್ತು ನೋಡಿದವರ ಆಯಾಸವನ್ನೆಲ್ಲ ನೀಗಿಸುತ್ತಿತ್ತು. ಉತ್ತಮ ದ್ರವ್ಯಗಳಿಂದ ನಿರ್ಮಿತವಾಗಿ ಮಣಿಯುಕ್ತ ಗೋಡೆಗಳಿಂದ ಸುತ್ತುವರೆಯಲ್ಪಟ್ಟ ಅದು ವಿಶ್ವಕರ್ಮನ ಸುಕೃತದಿಂದ ಬಹು ರತ್ನ ಮತ್ತು ಬಹು ಧನಗಳಿಂದ ಭರಿತವಾಗಿತ್ತು. ಮಯನು ಇದಕ್ಕೆ ನೀಡಿದ್ದ ರೂಪ ಸಂಪನ್ನತೆಗೆ ದಾಶಾರ್ಹನ ಸುಧರ್ಮವಾಗಲೀ ಬ್ರಹ್ಮನ ಸಭೆಯಾಗಲೀ ಸರಿಸಾಟಿಯಾಗುವಂತಿರಲಿಲ್ಲ. ಮಯನ ಆಜ್ಞೆಯಂತೆ ಕಿಂಕರರೆಂಬ ಹೆಸರಿನ ಎಂಟು ಸಹಸ್ರ ರಾಕ್ಷಸರು ಆ ಸಭೆಯನ್ನು ಕಾಯುತ್ತಿದ್ದರು. ಅಂತರಿಕ್ಷಚರಿ ಘೋರ, ಮಹಾಕಾಯ, ಮಹಾಬಲಿಗಳೂ ಆಗಿದ್ದ ಅವರು ರಕ್ತಾಕ್ಷರೂ, ಪಿಂಗಳಾಕ್ಷರೂ, ಶುಕ್ತಿಕರ್ಣರೂ, ಮತ್ತು ಪ್ರಹಾರಿಗಳೂ ಆಗಿದ್ದರು. ಆ ಸಭೆಯಲ್ಲಿ ಮಯನು ಅಪ್ರತಿಮ ವೈಡೂರ್ಯದ ಎಲೆಗಳು ಮತ್ತು ಮಣಿಯುಕ್ತ ದಂಟುಗಳನ್ನುಳ್ಳ ಕಮಲ, ಪದ್ಮ, ಸೌಗಂಧಿಕಾ ಪುಷ್ವಗಳಿಂದ, ಪುಷ್ಪಿತ ನಾನಾವಿಧದ ನೀರು ಸಸ್ಯಗಳಿಂದ, ಪಂಕಜಗಳು, ಕೂರ್ಮ ಮತ್ಸ್ಯಗಳಿಂದ ತುಂಬಿ ಶೋಭನೀಯವಾದ ಒಂದು ಸರೋವರವನ್ನು ನಿರ್ಮಿಸಿದನು. ಅದರೊಳಗೆ ನಿಧಾನವಾಗಿ ಮೆಟ್ಟಿಲುಗಳು ಜಾರಿದ್ದವು, ನೀರು ಕೆಸರಿಲ್ಲದೆ ಶುಭ್ರವಾಗಿತ್ತು. ಎಲ್ಲ ಋತುಗಳಲ್ಲಿಯೂ ತುಂಬಿರುತ್ತಿತ್ತು ಮತ್ತು ಅದರಲ್ಲಿರುವ ಮುಕ್ತಬಿಂದುಗಳಂತಿರುವ ಪುಷ್ಪಗಳು ಮಂದ ಮಾರುತವು ಬೀಸಲು ತೇಲಾಡುತ್ತಿದ್ದವು. ಮಣಿರತ್ನಗಳಿಂದ ರಚಿತಗೊಂಡ ಅದನ್ನು ನೋಡಿದ ಕೆಲವು ಪಾರ್ಥಿವರು ಸರೋವರವೆಂದು ಕಂಡರೂ ಗುರುತಿಸಲಾಗದೆ ಅಜ್ಞಾನದಿಂದ ಅದರೊಳಗೆ ಬಿದ್ದರು. ಆ ಸಭೆಯ ಸುತ್ತಲೂ ನಿತ್ಯವೂ ಪುಷ್ಪವಂತ, ನಾನಾವಿಧದ ನೀಲ ಶೀತ ನೆರಳನ್ನು ನೀಡುವ ಮನೋರಮ ಮಹಾದ್ರುಮಗಳು ನಿಂತಿದ್ದವು. ಎಲ್ಲೆಡೆಯಲ್ಲಿಯೂ ಸುಂಗಂಧ ಕಾನನಗಳು, ಹಂಸ, ಬಾತುಕೋಳಿ ಮತ್ತು ಚಕ್ರವಾಕ ಶೋಭಿತಗೊಂಡ ಪುಷ್ಕರಣಿಗಳು ಇದ್ದವು. ಮಾರುತ ಗಾಳಿಯು ನೀರು ಮತ್ತು ನೆಲಗಳಲ್ಲಿ ಬೆಳೆದ ಪುಷ್ಪಗಳೆಲ್ಲವುಗಳ ಸುವಾಸನೆಯನ್ನು ಹೊತ್ತು ಪಾಂಡವರ ಬಳಿ ಬೀಸುತ್ತಿತ್ತು. ಈ ರೀತಿಯಾಗಿತ್ತು ಆ ಮಯನಿಂದ ಹದಿನಾಲ್ಕು ತಿಂಗಳುಗಳಲ್ಲಿ ನಿರ್ಮಿತ ಸಭೆ! ಸಂಪೂರ್ಣವಾದ ನಂತರ ಮಯನು ರಾಜ ಧರ್ಮರಾಜನಿಗೆ ತಿಳಿಸಿದನು.

ಸಭಾಪ್ರವೇಶ

ಅನಂತರ ರಾಜ ಯುಧಿಷ್ಠಿರನು ಅದನ್ನು ಪ್ರವೇಶಿಸಿದನು. ಆ ಸಮಯದಲ್ಲಿ ನರಾಧಿಪನು ಹತ್ತು ಸಾವಿರ ಬ್ರಾಹ್ಮಣರಿಗೆ ಘೃತಪಾಯಸ, ಮಧು, ಮತ್ತು ಮೂಲಫಲಗಳ ಭಕ್ಷಗಳ ಭೋಜನವನ್ನಿತ್ತನು ಮತ್ತು ಅವರಿಗೆ ವಸ್ತ್ರ ಭೂಷಣಗಳನ್ನು ನಾನಾರೀತಿಯ ಮಾಲೆಗಳನ್ನು ಕೊಟ್ಟನು. ಪ್ರಭುವು ಪ್ರತಿಯೊಬ್ಬನಿಗೆ ಸಹಸ್ರ ಗೋವುಗಳನ್ನಿತ್ತನು. ಅಲ್ಲಿಯ ಪುಣ್ಯಾಹಘೋಷವು ಸ್ವರ್ಗದವರೆಗೂ ಕೇಳಿಬರುತ್ತಿತ್ತು. ಆ ಕುರುಶ್ರೇಷ್ಠನು ವಾದ್ಯಗಳು, ವಿವಿಧ ಗೀತಗಳು ಮತ್ತು ನಾನಾವಿಧದ ಸುಗಂಧಗಳಿಂದ ದೇವತೆಗಳನ್ನು ಪೂಜಿಸುತ್ತಿರಲು ಅಲ್ಲಿ ಮಲ್ಲರು, ನಟರು, ಝಲ್ಲರು, ಸೂತರು, ವೈತಾಲಿಕರು ಮಹಾತ್ಮ ಯುಧಿಷ್ಠಿರನನ್ನು ಏಳು ರಾತ್ರಿಗಳವರೆಗೆ ಸೇವಿಸಿದರು. ಭ್ರಾತೃಗಳ ಸಹಿತ ಆ ರಮ್ಯ ಸಭೆಯನ್ನು ಪೂಜಿಸಿದ ಪಾಂಡವನು ದಿವಿಯಲ್ಲಿಯ ಶಕ್ರನ ಹಾಗೆ ರಮಿಸಿದನು. ಆ ಸಭೆಯಲ್ಲಿ ಪಾಂಡವರ ಸಹಿತ ಋಷಿಗಳು ಕುಳಿತಿದ್ದರು. ಮತ್ತು ನಾನಾ ದೇಶಗಳಿಂದ ಸಮಾಗತ ನರೇಂದ್ರರೂ ಕುಳಿತಿದ್ದರು. ಅಸಿತ ದೇವಲ, ಸತ್ಯ, ಸರ್ಪಮಾಲೀ, ಮಹಾಶಿರ, ಅರ್ವಾವಸು, ಸುಮಿತ್ರ, ಮೈತ್ರೇಯ, ಶುಲಕ, ಬಲಿ, ವಕ, ದಾಲ್ಭ್ಯ, ಸ್ಥೂಲಶಿರ, ಕೃಷ್ಣದ್ವೈಪಾಯನ, ವ್ಯಾಸಶಿಷ್ಯರಾದ ನಾನು, ಶುಕ, ಸುಮಂತು, ಜೈಮಿನಿ, ಮತ್ತು ಪೈಲ, ತಿತ್ತಿರಿ, ಯಾಜ್ಞವಲ್ಕ್ಯ, ಮಗನೊಂದಿಗೆ ಲೋಮಹರ್ಷಣ, ಅಪ್ಸುಹೋಮ, ಧೌಮ್ಯ, ಅಣೀಮಂಡವ್ಯ, ಕೌಶಿಕ, ದಾಮೋಷ್ಣೀಷ, ತ್ರೈವಣಿ, ಪರ್ಣಾದ, ಘಟಜಾನುಕ, ಮೌಂಜಾಯನ, ವಾಯುಭಕ್ಷ, ಪಾರಾಶರ್ಯ, ಸಾರಿಕ, ಬಲವಾಕ, ಶಿನೀವಾಕ, ಸುತ್ಯಪಾಲ, ಕೃತ್ಹಶ್ರಮ, ಜಾತೂಕರ್ಣ, ಶಿಖಾವಾ, ಸುಬಲ, ಪಾರಿಜಾತಕ, ಪರ್ವತ, ಮಹಾಭಾಗ ಮಿನಿ ಮಾರ್ಕಾಂಡೇಯ, ಜಂಘಾಬಂಧು, ರೈಭ್ಯ, ಕೋಪವೇಗಸ್ರಬ, ಭೃಗು, ಹರಿಬಭ್ರು, ಕೌಂಡಿನ್ಯ, ಬಭೃಮಾಲೀ, ಸನಾತನ, ಕಕ್ಷೀವಾನ, ಔಷಿಷ, ನಾಚಿಕೇತ, ಗೌತಮ, ಮಹಾತಪರಾದ ಪೈಂಗ, ವರಾಹ, ಶುನಕ, ಶಾಂಡಿಲ್ಯ, ಕರ್ಕರ, ವೇಣುಜಂಘ, ಕಲಾಪ, ಕಠ, ಮೊದಲಾದ ಧರಸಂಹಿತ, ಧೃತಾತ್ಮ, ಜಿತೇಂದ್ರಿಯ ಮುನಿಗಳು ಮತ್ತು ಅನ್ಯ ಬಹಳಷ್ಟು ವೇದಪಾರಂಗತರು ಆ ಮಹಾತ್ಮನ ಸಭೆಯಲ್ಲಿ ಉಪಸ್ಥಿತರಿದ್ದರು. ಆ ಪುಣ್ಯ, ಧರ್ಮಜ್ಞ, ಶುಚಿ ಮತ್ತು ಅಮಲ ಋಷಿಸತ್ತಮರು ಕಥೆಗಳನ್ನು ಹೇಳುತ್ತಿದ್ದರು.

ಹಾಗೆಯೇ, ಶ್ರೀಮಂತ ಮಹಾತ್ಮ ಧರ್ಮಾತ್ಮ ಕ್ಷತ್ರಿಯಶ್ರೇಷ್ಠರು ಧರ್ಮರಾಜನ ಉಪಸ್ಥಿತಿಯಲ್ಲಿದ್ದರು: ಮುಂಜಕೇತು, ವಿವರ್ಧನ, ಸಂಗ್ರಾಮಜಿತ್, ದುರ್ಮುಖ, ವೀರ್ಯವಾನ ಉಗ್ರಸೇನ, ಕಕ್ಷಸೇನ, ಕ್ಷಿತಿಪತಿ ಕ್ಷೇಮಕಕ್ಷ, ಅಪರಾಜಿತ ಕಾಂಬೋಜರಾಜ ಕಮಲ, ದೇವ ವಜ್ರಧರನು ಕಾಲಕೇಯ ಅಸುರರನ್ನು ಹೇಗೋ ಹಾಗೆ ಯವನರನ್ನು ಒಬ್ಬನೇ ಸತತವೂ ನಡುಗಿಸುತ್ತಿದ್ದ ಮಹಾಬಲ ಕಂಪನ. ಮದ್ರಕಾಂತ ಜಟಾಸುರ, ಕುಂತಿ, ಕಿರಾತರಾಜ ಕುಣಿಂದ, ಹಾಗೆಯೇ ಅಂಗ ವಂಗರ ಸಹಿತ ಪುಂಡ್ರಕ, ಪಾಂಡ್ಯ, ಉದ್ರಜ ಮತ್ತು ಅಂಧಕ. ಕಿರಾತರಾಜ ಸುಮನ, ಯವನಾಧಿಪತಿ ಜಾಣೂರ, ದೇವರಾತ ಭೋಜ, ಭೀಮರಥ, ಶ್ರುತಾಯುಧ, ಕಲಿಂಗ ಜಯತ್ಸೇನ, ಮಗಧ, ಸುಶರ್ಮ, ಚೇಕಿತಾನ, ಅಮಿತ್ರಕರ್ಷಣ ಸುರಥ, ಕೇತುಮಾನ್, ವಸುದಾನ, ವೈದೇಹಿ ಕೃತಕ್ಷಣ, ಸುಧರ್ಮಾ, ಅನಿರುದ್ಧ, ಮಹಾಬಲ ಶ್ರುತಾಯು, ಅನೂಪರಾಜ, ದುರ್ಧರ್ಷ, ಕ್ಷೇಮಜಿ, ಸುದಕ್ಷಿಣ, ಮಗನೊಂದಿಗೆ ಶಿಶುಪಾಲ, ಕರೂಷಾಧಿಪತಿ, ವೃಷ್ಣಿಗಳಲ್ಲಿ ದುರ್ಧರ್ಷ, ದೇವರೂಪಿಣಿ ಕುಮಾರ ಆಹುಕ, ವಿಪೃಥು, ಗದ, ಸಾರಣ, ಅಕ್ರೂರ, ಕೃತವರ್ಮ, ಶಿನಿಯ ಸುತ ಸಾತ್ಯಕಿ, ಭೀಷ್ಮಕ, ಅಥಾಹೃತಿ, ವೀರ್ಯವಾನ ದ್ಯುಮತ್ಸೇನ, ಕೇಕಯ, ಮಹೇಷ್ವಾಸ ಸೌಮಕಿ ಯಜ್ಞಸೇನ, ಮತ್ತು ಅರ್ಜುನನು ಸ್ವೀಕರಿಸಿದ್ದ ರೌರವಜಿನಗಳನ್ನು ಧರಿಸಿ ಧನುರ್ವೇದವನ್ನು ಕಲಿಯುತ್ತಿದ್ದ ಮಹಾಬಲಶಾಲಿ ರಾಜಪುತ್ರರು, ಅಲ್ಲಿಯೇ ಕಲಿಯುತ್ತಿದ್ದ ವೃಷ್ಣಿನಂದನ ಕುಮಾರ ರೌಕ್ಮಿಣೇಯ, ಸಾಂಬ, ಯುಯುಧಾನ ಮತ್ತು ಸಾತ್ಯಕಿ.

ಇವರು ಮತ್ತು ಇನ್ನೂ ಅನ್ಯ ಬಹಳಷ್ಟು ರಾಜರು, ಧನಂಜಯನ ನಿತ್ಯ ಸಖ ತುಂಬುರು, ಗೀತವಾದ್ಯ ಕುಶಲ, ಶಮ್ಯತಾಲವಿಶಾರದ ಗಂಧರ್ವ, ಅಪ್ಸರೆಯರು, ತಾಲ ಲಯಗಳ ವಿಶಾರದ ಕಿನ್ನರರು, ಮತ್ತು ಅಮಾತ್ಯನ ಸಹಿತ ಚಿತ್ರಸೇನ, ಇವರೆಲ್ಲ ಗಂಧರ್ವರೂ ತುಂಬುರುವಿನ ನಿರ್ದೇಶನದಲ್ಲಿ ಒಟ್ಟಿಗೇ ಸಂಗೀತ ಹಾಡಿದರು. ದಿವ್ಯತಾನಗಳಿಂದ ಕ್ರಮಬದ್ಧವಾಗಿ ಹಾಡುತ್ತಾ ಆ ಮನೋರಂಜಕರು ಪಾಂಡುಪುತ್ರರನ್ನು ಮತ್ತು ಋಷಿಗಳನ್ನು ರಮಿಸುತ್ತಾ ಉಪಾಸಿಸುತ್ತಿದ್ದರು. ಆ ಸಭೆಯಲ್ಲಿ ಆಸೀನರಾಗಿದ್ದ ಸುವ್ರತ ಸತ್ಯಸಂಗರವು ದಿವಿಯಲ್ಲಿ ಬ್ರಹ್ಮನನ್ನು ದೇವತೆಗಳು ಹೇಗೋ ಹಾಗೆ ಯುಧಿಷ್ಠಿರನನ್ನು ಉಪಾಸಿಸುತ್ತಿತ್ತು.

ನಾರದನ ಆಗಮನ ಮತ್ತು ರಾಜ್ಯಾಡಳಿತದ ಕುರಿತು ಪ್ರಶ್ನೆಗಳು

ಹೀಗೆ ಮಹಾತ್ಮ ಪಾಂಡವರು ಅಲ್ಲಿ ಕುಳಿತಿರಲು ಮತ್ತು ಮಹಾ ಗಂಧರ್ವರೂ ಕೂಡ ಅಲ್ಲಿ ಕುಳಿತುಕೊಂಡಿರಲು ಆ ಸಭೆಗೆ ಸರ್ವ ಲೋಕಗಳನ್ನೂ ಸಂಚರಿಸುವ ಸುಮಹಾತೇಜಸ್ವಿ ಋಷಿ ನಾರದನು ಇತರ ಋಷಿಗಳ ಸಹಿತ ಆಗಮಿಸಿದನು. ಪಾರಿಜಾತ, ಧೀಮಂತ ರೈವತ, ಸುಮುಖ ಮತ್ತು ಸೌಮ್ಯರೊಂದಿಗೆ ಸಂಚರಿಸುತ್ತಿದ್ದ ಮನೋವೇಗಿ ಅಮಿತದ್ಯುತಿ ದೇವರ್ಷಿಯು ತಮ್ಮ ಸಭೆಯಲ್ಲಿದ್ದ ಪಾಂಡವರನ್ನು ಕಾಣಲು ಬಯಸಿದ್ದನು. ಋಷಿಯು ಬರುತ್ತಿರುವುದನ್ನು ನೋಡಿದ ಸರ್ಮಧರ್ಮವಿದು ಪಾಂಡವಶ್ರೇಷ್ಠನು ತನ್ನ ಅನುಜರೊಡನೆ ತಕ್ಷಣವೇ ಮೇಲೆದ್ದನು. ವಿನಯಾವನತನಾಗಿ ಪ್ರೀತಿಯಿಂದ ನಮಸ್ಕರಿಸಿದನು ಮತ್ತು ಯಥಾವಿಧಿಯಾಗಿ ಅವನಿಗೆ ಅರ್ಹ ಆಸನವನ್ನು ನೀಡಿದನು. ಆ ಧರ್ಮವಿದುವು ಅವನನ್ನು ರತ್ನಗಳಿಂದ ಮತ್ತು ಸರ್ವಕಾಮಗಳಿಂದ ಅರ್ಚಿಸಿದನು. ಈ ರೀತಿ ಸರ್ವ ಪಾಂಡವರಿಂದ ಅರ್ಚಿತ ವೇದಪಾರಗ ಮಹರ್ಷಿಯು ಯುಧಿಷ್ಠಿರನಲ್ಲಿ ಧರ್ಮಕಾಮಾರ್ಥಸಂಯುಕ್ತ ಈ ಪ್ರಶ್ನೆಗಳನ್ನು ಕೇಳಿದನು:

“ನಿನ್ನ ಸಂಪತ್ತು ಸಾಕೆನಿಸುತ್ತದೆಯೇ? ಮನಸ್ಸು ಧರ್ಮದಲ್ಲಿ ರಮಿಸುತ್ತಿದೆಯೇ? ಸುಖಗಳನ್ನು ಅನುಭವಿಸುತ್ತಿದ್ದೀಯಾ? ನಿನ್ನ ಮನಸ್ಸು ನೊಂದಿಲ್ಲ ತಾನೆ? ಪೂರ್ವ ಪಿತಾಮಹರ ಆಚರಣೆಯಲ್ಲಿಯೇ ನಡೆದುಕೊಳ್ಳುತ್ತಿದ್ದೀಯಾ? ಪ್ರಜೆಗಳ ಧರ್ಮ ಮತ್ತು ಅರ್ಥಗಳೆರಡನ್ನೂ ಕ್ಷೀಣಮಾಡದಂತೆ ನಡೆದುಕೊಳ್ಳುತ್ತಿದ್ದೀಯಾ? ಅರ್ಥಕ್ಕಾಗಿ ಧರ್ಮವನ್ನು ಅಥವಾ ಧರ್ಮಕ್ಕಾಗಿ ಅರ್ಥವನ್ನು, ಅಥವಾ ಇವೆರಡಕ್ಕಾಗಿ ಪ್ರೀತಿಸಾರ ಕಾಮವನ್ನು ಬಾಧಿಸುತ್ತಿಲ್ಲವಲ್ಲ? ಅರ್ಥ, ಧರ್ಮ, ಕಾಮಗಳ ಸಮಯವನ್ನು ತಿಳಿದು, ಕಾಲಕ್ಕೆ ತಕ್ಕಂತೆ ವಿಭಜಿಸಿ, ಸೇವಿಸುತ್ತಿದ್ದೀಯಾ? ಆರು ರಾಜಗುಣಗಳು, ಏಳು ಉಪಾಯಗಳು ಮತ್ತು ಬಲಾಬಲ - ಈ ಹದಿನಾಲ್ಕು ಅಂಶಗಳನ್ನು ನೀನು ಸರಿಯಾಗಿ ಪರೀಕ್ಷಿಸುತ್ತಿದ್ದೀಯಾ? ಒಟ್ಟಾಗಿ ಮಾಡುವ ಎಂಟು ಕರ್ಮಗಳನ್ನು ತೆಗೆದುಕೊಳ್ಳುವುದಕ್ಕೆ ಮೊದಲು ನಿನ್ನನ್ನು ಮತ್ತು ನಿನ್ನ ಶತ್ರುಗಳನ್ನು ಪರೀಕ್ಷಿಸುತ್ತೀಯಾ? ನಿನ್ನ ಆರು ಅಧಿಕಾರಿಗಳು ಲುಪ್ತರಲ್ಲ ತಾನೆ? ಶ್ರೀಮಂತರಾದ ಅವರೆಲ್ಲರೂ ದುರ್ವ್ಯಸನಗಳಿಗೆ ತುತ್ತಾಗದೇ ನಿನಗೆ ವಿಧೇಯರಾಗಿಯೇ ಇದ್ದಾರಲ್ಲವೇ? ಅವರು ತರ್ಕ ಮತ್ತು ಗೂಢಚರರ ತನಿಖೆಗೊಳಗಾಗಿ ಪರಿಶಂಕಿತರಾಗಿದ್ದಾರೆ ತಾನೆ? ಸದಾ ನಿನ್ನ ಮಂತ್ರಿಗಳು ಗುಟ್ಟನ್ನು ಕೇವಲ ನಿನ್ನಲ್ಲಿ ಅಥವಾ ಅಮಾತ್ಯರಲ್ಲಿ ಇಟ್ಟುಕೊಳ್ಳುತ್ತಾರಲ್ಲವೇ? ನೀನು ಶಾಂತಿ ಮತ್ತು ಯುದ್ಧಗಳನ್ನು ಕಾಲಕ್ಕನುಗುಣವಾಗಿ ಅನುಸರಿಸುತ್ತಿದ್ದೀಯಲ್ಲವೇ? ಉದಾಸೀನರಾದವರ ಮತ್ತು ಯಾರಪಂಗಡವನ್ನೂ ಸೇರಿರದವರೊಡನೆ ನೀನು ಸರಿಯಾಗಿ ನಡೆದು ಕೊಳ್ಳುತ್ತಿದ್ದೀಯಾ? ನಿನ್ನ ಮಂತ್ರಿಗಳು ನಿನ್ನ ಹಾಗೆಯೇ ಯೋಚನೆಯಲ್ಲಿ ಶುದ್ಧರಾಗಿ ಜೀವಿಸಲು ಸಮರ್ಥರಿದ್ದಾರೆಯೇ? ನಿನ್ನ ಹಾಗೆಯೇ ಕುಲೀನರೂ, ಅನುರಕ್ತರೂ, ಮತ್ತು ಕೃತಾರ್ಥರೂ ಆಗಿದ್ದಾರೆಯೇ? ಈ ಮಂತ್ರಿಗಳೇ ರಾಜರ ವಿಜಯದ ಮೂಲವಾಗುತ್ತಾರೆ. ಈ ಮಂತ್ರಧನವು ಶಾಸ್ತ್ರಕೋವಿದರಾದ ಅಮಾತ್ಯರಲ್ಲಿ ಸುರಕ್ಷಿತವಾಗಿರುತ್ತದೆ. ನೀನು ನಿದ್ರಾವಶಕ್ಕೊಳಗಾಗದೆ ಸರಿಯಾದ ಸಮಯಕ್ಕೆ ಏಳುತ್ತೀಯಾ? ಅರ್ಥಧರ್ಮವಿದುವಾದ ನೀನು ಅಪರ ರಾತ್ರಿಯಲ್ಲಿ ಚಿಂತಿಸುತ್ತಿರುತ್ತೀಯಾ? ನೀನು ಒಬ್ಬನೇ ಅಥವಾ ಬಹು ಜನರೊಟ್ಟಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ತಾನೇ? ಮತ್ತು ನೀನು ತೆಗೆದುಕೊಂಡ ಅಥವಾ ತೆಗೆದುಕೊಳ್ಳುವ ನಿರ್ಧಾರಗಳು ರಾಷ್ಟ್ರದಲ್ಲಿ ಎಲ್ಲರಕಡೆಗೂ ಹೋಗುವುದಿಲ್ಲ ತಾನೆ? ನೀನು ಕಡಿಮೆ ವೆಚ್ಚದ ಆದರೆ ಉತ್ತಮ ಅಭಿವೃದ್ಧಿಯ ಯೋಜನೆಗಳನ್ನು ಒಪ್ಪಿಕೊಂಡ ನಂತರ ಅದನ್ನು ಶೀಘ್ರವಾಗಿ ನೆರವೇರಿಸಲು ಯಾವುದೇ ವಿಘ್ನಗಳನ್ನು ತರುವುದಿಲ್ಲ ತಾನೇ? ನಿನಗೆ ಗೊತ್ತಿಲ್ಲದ, ಅಥವಾ ಸ್ವಲ್ಪವೇ ತಿಳಿದಿರುವ ಅಥವಾ ನಿನಗೆ ಅನುಮಾನವಿರುವ ರಾಜ್ಯದ ಯಾವುದೇ ಆಗುಹೋಗುಗಳು ಇಲ್ಲ ತಾನೇ? ಯಾಕೆಂದರೆ ಅವುಗಳಲ್ಲಿ ಭಾಗವಹಿಸುವುದು ಅಗತ್ಯ. ಜನರು ನೀನು ಏನು ಮಾಡಿಲ್ಲವೋ ಅದನ್ನು ಬಿಟ್ಟು ನೀನು ಸಂಪೂರ್ಣ ಮಾಡಿರುವ ಅಥವಾ ನಿನ್ನಿಂದ ಸಂಪೂರ್ಣವಾಗುತ್ತಿರುವ ಯೋಜನೆ ಕಾರ್ಯಗಳ ಕುರಿತು ಮಾತ್ರ ತಿಳಿದಿದ್ದಾರೆ ತಾನೇ? ಸರ್ವಶಾಸ್ತ್ರಕೋವಿದ ಕಾರಣಿಕರು ಎಲ್ಲ ಕುಮಾರರಿಗೂ ಮತ್ತು ಯೋಧಪ್ರಮುಖರಿಗೂ ಸಂಪೂರ್ಣವಾಗಿ ತರಬೇತಿಯನ್ನು ನೀಡುತ್ತಿದ್ದಾರೆ ತಾನೇ? ನೀನು ಸಹಸ್ರ ಮೂರ್ಖರಿಗಿಂಥಲೂ ಒಂದು ಪಂಡಿತನನ್ನು ಬಯಸುತ್ತೀಯೆ ತಾನೆ? ಯಾಕೆಂದರೆ ಕಾರ್ಯಕಲಾಪಗಳಲ್ಲಿ ಅಡಚಣೆಗಳೊದಗಿದಾಗ ಪಂಡಿತರೇ ಪರಿಹಾರಗಳನ್ನು ನೀಡುತ್ತಾರೆ. ನಿನ್ನ ಸರ್ವ ದುರ್ಗಗಳೂ ಧನ, ಧಾನ್ಯ, ಆಯುಧಗಳು, ನೀರು, ಯಂತ್ರಗಳು, ಶಿಲ್ಪಿಗಳು ಮತ್ತು ಧನುರ್ಧರರಿಂದ ತುಂಬಿ ತುಳುಕುತ್ತಿದೆ ತಾನೆ? ಮೇಧಾವಿಯೂ, ಶೂರನೂ, ನಿಯಂತ್ರದಲ್ಲಿರುವವನೂ, ಬುದ್ಧಿವಂತನೂ ಆದ ಒಬ್ಬನೇ ಅಮಾತ್ಯನು ರಾಜನಿಗೆ ಅಥವಾ ರಾಜಕುಮಾರನಿಗೆ ಮಹಾ ಶ್ರೇಯಸ್ಸನ್ನು ತರುತ್ತಾನೆ. ಅನ್ಯರ ಹದಿನೆಂಟು ಮತ್ತು ಸ್ವಪಕ್ಷದ ಹದಿನೈದು ಪದಾಧಿಕಾರಿಗಳನ್ನು ಪರಸ್ಪರರಿಗೆ ಪರಿಚಯವಿಲ್ಲದಿರುವ ಮೂವರು ಗುಪ್ತಚಾರರ ಮೂಲಕ ತಿಳಿದುಕೊಳ್ಳುತ್ತಿದ್ದೀಯಾ? ಜಾಗರೂಕತೆಯಿಂದ, ಅವರಿಗೆ ತಿಳಿಯದಂತೆ ನೀನು ನಿನ್ನ ಶತ್ರುಗಳ ಮೇಲೆ ಗಮನವಿಟ್ಟಿರುತ್ತೀಯೆ ತಾನೆ? ನಿನ್ನ ಪುರೋಹಿತನು ವಿನಯಸಂಪನ್ನನೇ? ಉತ್ತಮ ಕುಲದಲ್ಲಿ ಜನಿಸಿದವನೇ? ಬಹಳಷ್ಟು ಪಂಡಿತನೇ? ಅಸೂಯೆಯಿಲ್ಲದೇ ಪ್ರಶ್ನಿಸುವವನೇ? ಮತ್ತು ನೀನು ಅವನನ್ನು ಸತ್ಕರಿಸುತ್ತೀಯಾ? ಅವನು ನಿನ್ನ ಅಗ್ನಿಕಾರ್ಯಗಳಲ್ಲಿ ನಿರತನಾಗಿದ್ದಾನೆಯೇ? ವಿಧಿ-ವಿಧಾನಗಳನ್ನು ತಿಳಿದುಕೊಂಡಿದ್ದಾನೆಯೇ? ಮತ್ತು ಅವನು ಯಾವಾಗ ಆಹುತಿಗಳನ್ನು ಕೊಡಬೇಕು ಎನ್ನುವುದನ್ನು ಸದಾ ತಿಳಿದಿದ್ದಾನೆಯೇ? ನಿನ್ನ ಜ್ಯೋತಿಷಿಯು ವೇದ ಮತ್ತು ಅದರ ಅಂಗಗಳಲ್ಲಿ ನಿಷ್ಣಾತನಾಗಿದ್ದಾನೆಯೇ? ಎಲ್ಲ ಉತ್ಪಾತಗಳಲ್ಲಿ ಮುಂದೇನಾಗಬಹುದು ಎನ್ನುವುದನ್ನು ಪ್ರತಿಪಾದಿಸುವುದರಲ್ಲಿ ಕುಶಲನಾಗಿದ್ದಾನೆ ತಾನೆ? ನೀನು ಉತ್ತಮರನ್ನು ಉನ್ನತ ಹುದ್ದೆಗೆ, ಮಧ್ಯಮರನ್ನು ಮಧ್ಯಮ ಹುದ್ದೆಗೆ, ಮತ್ತು ವಿನಯಾವಂತರನ್ನು ಕೆಳಹುದ್ದೆಗಳಿಗೆ ನಿಯೋಜಿಸಿದ್ದಿ ತಾನೆ? ಪಿತೃ ಪಿತಾಮಹರೂ ಶುಚಿಯಾಗಿರುವ, ಶ್ರೇಷ್ಠರಲ್ಲಿಯೂ ಶ್ರೇಷ್ಠರಾದ, ಮೋಸವನ್ನು ಮೀರಿರುವ ಮಹಾತ್ಮರನ್ನು ನಿನ್ನ ಮುಖ್ಯ ಮಂತ್ರಿಯನ್ನಾಗಿ ನಿಯೋಜಿಸಿದ್ದೀ ತಾನೆ ? ನಿನ್ನ ಮಂತ್ರಿಗಳು ಪ್ರಜೆಗಳನ್ನು ಉಗ್ರ ಶಿಕ್ಷೆಗಳಿಂದ ದಂಡಿಸದೇ ನಿನ್ನ ರಾಷ್ಟ್ರವನ್ನು ಆಳುತ್ತಿದ್ದಾರೆಯೇ? ಯಾಜಕರು ಜಾತಿಯನ್ನು ಕಳೆದುಕೊಂಡವರನ್ನು ಕೀಳಾಗಿ ಕಾಣುವಂತೆ ಮತ್ತು ಪ್ರೀತಿಯುಳ್ಳ ಆದರೆ ಉಗ್ರನಾದ ಪತಿಯನ್ನು ಪತ್ನಿಯು ಹೇಗೋ ಹಾಗೆ ನಿನ್ನ ಜನರು ನಿನ್ನನ್ನು ಕೀಳಾಗಿ ಕಾಣುವುದಿಲ್ಲ ತಾನೆ? ನಿನ್ನ ಸೇನಾಪತಿಯು ದೃಷ್ಟಿಯುಳ್ಳವನೂ, ಶೂರನೂ, ಮತಿವಂತನೂ, ಧೃತಿವಂತನೂ, ಶುಚಿಯೂ, ಕುಲೀನನೂ ಸುಂದರನೂ, ಅನುರಕ್ತನೂ, ದಕ್ಷನೂ ಆಗಿದ್ದಾನೆ ತಾನೇ? ನಿನ್ನ ಸರ್ವ ಸೇನಾಮುಖ್ಯರೂ ಯುದ್ಧವಿಶಾರದರೂ, ಮಹಾಯುದ್ಧಗಳನ್ನು ಮಾಡಿತೋರಿಸಿದವರೂ, ವಿಕ್ರಾಂತರೂ, ಮತ್ತು ನಿನ್ನಿಂದ ಸತ್ಕೃತರೂ ಮಾನಿತರೂ ಆಗಿದ್ದಾರೆ ತಾನೆ? ನೀನು ನಿನ್ನ ಸೇನೆಗೆ ಯಥೋಚಿತ ಆಹಾರ, ವೇತನವನ್ನು ಕಾಲಕ್ಕೆ ಸರಿಯಾಗಿ, ಮುಂದೂಡದೇ ಕೊಡುತ್ತಿದ್ದೀಯೆ ತಾನೇ? ಆಹಾರ-ಸಂಬಳಗಳನ್ನು ಸಮಯಕ್ಕೆ ಸರಿಯಾಗಿ ಕೊಡದೇ ಇದ್ದರೆ ಸೇವಕರು ಒಡೆಯನ ಮೇಲೆ ಸಿಟ್ಟಿಗೇಳುತ್ತಾರೆ. ಅವರಿಗಿದ್ದ ಕೊರತೆಯಿಂದಾಗಿ ಮಹಾ ಅನರ್ಥವೇ ಆಗಬಹುದು ಎಂದು ಹೇಳುತ್ತಾರೆ. ಮುಖ್ಯವಾಗಿ ಎಲ್ಲ ಕುಲೀನ ಪುತ್ರರೂ ನಿನ್ನಲ್ಲಿಯೇ ಅನುರಕ್ತರಾಗಿದ್ದಾರೆ ತಾನೆ? ಅವರು ಯಾವಾಗಲೂ ಯುದ್ಧದಲ್ಲಿ ನಿನಗೋಸ್ಕರವಾಗಿ ಪ್ರಾಣವನ್ನು ತೊರೆಯಲು ಸಿದ್ಧರಿದ್ದಾರೆ ತಾನೆ? ಸೇನೆಯಲ್ಲಿ ತನ್ನ ಸ್ವಾರ್ಥಕ್ಕೋಸ್ಕರ ಶಾಸನವನ್ನು ಮೀರಿ ತನಗಿಷ್ಟಬಂದಂತೆ ಆಳುವ ಯಾರೊಬ್ಬನೂ ಇಲ್ಲ ತಾನೆ? ತನಗೆ ವಹಿಸಿದ ಜವಾಬ್ದಾರಿಗಳನ್ನೂ ಮೀರಿ, ತನ್ನದೇ ಪ್ರೇರಣೆಯಿಂದ ಕೆಲಸವನ್ನು ಸಾಧಿಸಿದವನಿಗೆ ವಿಶೇಷ ಸನ್ಮಾನ, ಅಥವಾ ವೇತನ ಅಥವಾ ಆಹಾರವು ದೊರಕುತ್ತದೆ ತಾನೆ? ವಿಧ್ಯಾವಿನೀತರು ಮತ್ತು ಜ್ಞಾನವಿಶಾರದರಿಗೆ ಅವರ ಗುಣಕ್ಕೆ ತಕ್ಕಂತೆ ನೀಡಿ ಸಂತೋಷಪಡಿಸುತ್ತೀಯೆ ತಾನೆ? ನಿನಗಾಗಿ ಮೃತ್ಯುವನ್ನು ಹೊಂದಿದವರ ಪತ್ನಿಯರಿಗೆ ಅಥವಾ ಬೇರೆ ಯಾವುದೇ ಕಾರಣಕ್ಕೆ ಕಷ್ಟದಲ್ಲಿರುವವರಿಗೆ ಆರ್ಥಿಕ ಬೆಂಬಲವನ್ನು ನೀಡುತ್ತೀಯೆ ತಾನೆ? ಯುದ್ಧದಲ್ಲಿ ಸೋತ ಅಥವಾ ಹೆದರಿ ಶರಣುಬಂದ ಅಥವಾ ಮನಸ್ಸನ್ನು ಬದಲಾಯಿಸಿ ಶರಣುಬಂದ ಶತ್ರುವನ್ನು ಪುತ್ರನನ್ನು ಹೇಗೋ ಹಾಗೆ ರಕ್ಷಿಸುತ್ತೀಯೆ ತಾನೆ? ಭೂಮಿಯಲ್ಲಿರುವ ಸರ್ವರನ್ನೂ, ತಾಯಿ ಅಥವಾ ತಂದೆಯಂತೆ, ಸಮನಾಗಿ, ಶಂಕಿಸದೇ ನೋಡಿಕೊಳ್ಳುತ್ತಿದ್ದೀಯೆ ತಾನೆ? ಓರ್ವ ಶತ್ರುವು ತೊಂದರೆಯಲ್ಲಿದ್ದಾನೆ ಎಂದು ಕೇಳಿದಾಗ ನೀನು ತಕ್ಷಣ ನಿನ್ನ ತ್ರಿವಿಧ ಸೇನೆಯನ್ನು ವೀಕ್ಷಿಸಿ, ಜಯ ಮತ್ತು ಅಪಜಯಗಳು ನಂತರ ನಿರ್ಧರಿಸಲ್ಪಡುತ್ತದೆ ಎಂದು ತಿಳಿದೂ, ಮುಂಗಡ ವೇತನವನ್ನಿತ್ತು, ಅವನ ಮೇಲೆ ಧಾಳಿಯಿಡುತ್ತೀಯೆ ತಾನೆ? ಶತ್ರುವಿನ ರಾಷ್ಟ್ರದಲ್ಲಿ ಅಡಗಿರುವ ರತ್ನ ಸಂಪತ್ತುಗಳನ್ನು ನಿನ್ನ ಸೇನಾಪತಿಗಳಲ್ಲಿ ಅವರ ಪದವಿಗೆ ತಕ್ಕಂತೆ ಹಂಚುತ್ತೀಯೆ ತಾನೆ? ಮೊದಲು ನಿನ್ನನ್ನು ನೀನೇ ಗೆದ್ದುಕೊಂಡು ಜಿತೇಂದ್ರಿಯನಾಗಿ ಪ್ರಮತ್ತರೂ ಅಜಿತೇಂದ್ರಿಯರೂ ಆದ ನಿನ್ನ ಶತ್ರುಗಳನ್ನು ಗೆಲ್ಲುತ್ತೀಯೆ ತಾನೇ? ನೀನು ಶತ್ರುಗಳ ಮೇಲೆ ಧಾಳಿಯಿಡುವ ಮೊದಲು ಸಾಮ, ದಾನ, ಭೇದ, ಮತ್ತು ದಂಡ ಈ ನೀತಿಗಳನ್ನು ಸರಿಯಾಗಿ ಬಳಸುತ್ತೀಯೆ ತಾನೆ? ನಿನ್ನ ಮೂಲವನ್ನು ದೃಢಪಡಿಸಿಕೊಂಡೇ ಯುದ್ಧಕ್ಕೆ ಹೊರಡುತ್ತೀಯೆ ತಾನೆ? ನೀನು ಗೆಲ್ಲಲೆಂದೇ ಹೋರಾಡುತ್ತೀಯಾ ಮತ್ತು ಗೆದ್ದವರನ್ನು ರಕ್ಷಿಸುತ್ತೀಯಾ? ನಿನ್ನ ಸೇನೆಯು ಚತುರ್ವಿಧವಾಗಿದ್ದು ಎಂಟು ಅಂಗಗಳನ್ನು ಹೊಂದಿದೆಯೇ? ಶತ್ರುವನ್ನು ಸದೆಬಡಿಯಲು ಸೇನಾಪತಿಗಳಿಂದ ಒಳ್ಳೆಯ ರೀತಿಯಲ್ಲಿ ನಡೆಸಲ್ಪಡುತ್ತಿವೆ ತಾನೆ? ಶತ್ರುವಿನ ರಾಷ್ಟ್ರದಲ್ಲಿ ಸುಗ್ಗಿ ಮತ್ತು ಬಿತ್ತುವ ಕಾಲವನ್ನು ಬಿಟ್ಟು ಸಮರದಲ್ಲಿ ಶತ್ರುವಿನ ಮೇಲೆ ಆಕ್ರಮಣ ಮಾಡುತ್ತೀಯೆ ತಾನೆ? ನಿನ್ನ ಮತ್ತು ಪರ ರಾಷ್ಟ್ರಗಳಲ್ಲಿ ಇರುವ ನಿನ್ನ ಅಧಿಕೃತರಿಗೆ ಹಣದ ಕೊರತೆಯಿಲ್ಲ ತಾನೇ ಮತ್ತು ಪರಸ್ಪರರನ್ನು ರಕ್ಷಿಸುತ್ತಾರೆ ತಾನೆ? ನಿನ್ನ ಆಹಾರ, ಆಭರಣಗಳು ಮತ್ತು ಸುವಾಸನೆಗಳನ್ನು ಕಾಯುವವರನ್ನು ನೀನೇ ಆರಿಸಿಕೊಂಡಿದ್ದೀಯೆ ತಾನೆ? ನಿನ್ನ ಕೋಶ, ಕೋಷ್ಠ (ಪಣತ), ವಾಹನ, ದ್ವಾರ, ಆಯುಧ, ಮತ್ತು ತೆರಿಗೆಗಳನ್ನು ಕಾಯುತ್ತಿರುವವರು ಒಳ್ಳೆಯವರು, ನಿನ್ನಲ್ಲೇ ನಿರತ ಭಕ್ತರು ತಾನೆ? ಒಳಗಿರಲಿ ಅಥವಾ ಹೊರಗಿರಲಿ, ಮೊದಲು ನಿನ್ನನ್ನು ನೀನು ರಕ್ಷಿಸಿಕೊಳ್ಳುತ್ತೀಯೆ, ನಂತರ ನಿನ್ನ ಸೇವಕರು, ಮತ್ತು ನಿನ್ನ ಬಾಂಧವರು ತಾನೆ? ಪಾನ, ದ್ಯೂತ, ವ್ಯೇಶ್ಯೆಯರೊಡನೆ ಸಂಗ ಇತ್ಯಾತಿ ವ್ಯಸನಗಳಿಗೆ ಸಂಬಂಧಿಸಿದ ನಿನ್ನ ಖರ್ಚು ಎಷ್ಟಾಯಿತೆಂದು ನಿನ್ನ ಸೇವಕರು ಪ್ರಾತಃಕಾಲದಲ್ಲಿ ತಿಳಿಸುವುದಿಲ್ಲ ತಾನೆ? ನಿನ್ನ ಖರ್ಚುವೆಚ್ಚಗಳು ನಿನ್ನ ಆದಾಯದ ಅರ್ಧಭಾಗವೋ ಅಥವಾ ಕಾಲುಭಾಗವೋ ಅಥವಾ ಮುಕ್ಕಾಲುಭಾಗವೋ? ಕಷ್ಟದಲ್ಲಿರುವ ನಿನ್ನ ಜ್ಞಾತಿ-ಬಾಂಧವರನ್ನೂ, ಆಚಾರ್ಯರನ್ನೂ, ವೃದ್ಧರನ್ನೂ, ವರ್ತಕರನ್ನೂ, ಶಿಲ್ಪಿಗಳನ್ನೂ, ನಿನ್ನ ಇತರ ಆಶ್ರಿತರನ್ನೂ ಧನ-ದಾನ್ಯಗಳನ್ನಿತ್ತು ಸಂತೈಸುವೆ ತಾನೆ? ನಿನ್ನ ಆಯವ್ಯಯ ಪರಿಶೀಲನೆಯಲ್ಲಿ ನಿಯುಕ್ತ ಸರ್ವ ಗಣಕ ಲೇಖಕರೂ ದಿನನಿತ್ಯದ ಆಯವ್ಯಯವನ್ನು ಪೂರ್ವಾಹ್ಣದಲ್ಲಿಯೇ ನಿನಗೆ ವರದಿ ಮಾಡುತ್ತಾರೆ ತಾನೇ? ಅರ್ಥಶಾಸ್ತ್ರದಲ್ಲಿ ಅನುಭವಹೊಂದಿದ್ದ ನಿನ್ನ ಹಿತಕಾಮಿ, ಅನುಪ್ರಿಯ ಅಧಿಕಾರಿಗಳನ್ನು, ಮೊದಲು ಯಾವುದೇ ತರಹದ ತಪ್ಪು ಇಲ್ಲದಿದ್ದರೂ ತೆಗೆದುಹಾಕಿಲ್ಲ ತಾನೆ? ಉತ್ತಮ, ಮಧ್ಯಮ ಮತ್ತು ಅಧಮ ಪುರುಷರನ್ನು ತಿಳಿದು ನೀನು ಅವರಿಗೆ ಅನುರೂಪ ಕೆಲಸಗಳಲ್ಲಿ ನಿಯೋಜಿಸುತ್ತೀಯೆ ತಾನೆ? ಹಣದಾಸೆಯಿರುವವರನ್ನೂ, ಕಳ್ಳರನ್ನೂ, ವೈರಿಗಳನ್ನೂ ಮತ್ತು ವ್ಯವಹಾರದಲ್ಲಿ ಅನುಭವವಿಲ್ಲದವರನ್ನೂ ಅಧಿಕಾರಸ್ಥಾನದಲ್ಲಿ ಇಟ್ಟುಕೊಂಡಿಲ್ಲ ತಾನೆ? ಲೋಭಿಗಳಿಂದಲೂ, ಕಳ್ಳರಿಂದಲೂ, ಕುಮಾರರಿಂದಲೂ, ಸ್ತ್ರೀಬಲದಿಂದಲೂ ಅಥವಾ ನಿನ್ನಿಂದಲೂ ರಾಷ್ಟ್ರವು ಪೀಡೆಗೊಳಗಾಗಿಲ್ಲ ತಾನೆ? ಕೃಷಿಕರು ಸಂತುಷ್ಟರಾಗಿದ್ದಾರೆ ತಾನೆ? ನಿನ್ನ ರಾಷ್ಟ್ರದಲ್ಲಿ ಎಲ್ಲಾ ಕಡೆ ತುಂಬಿದ ದೊದ್ದ ದೊಡ್ಡ ಕೆರೆಗಳನ್ನು ನಿರ್ಮಿಸಿದ್ದೀಯೆ ತಾನೇ? ಕೃಷಿಯು ದೈವ ತರುವ ಮಳೆಯ ಮೇಲೆ ಮಾತ್ರ ಅವಲಂಬಿತವಾಗಿಲ್ಲ ತಾನೆ? ಕೃಷಿಕರ ಬೀಜಧಾನ್ಯ ಅಥವಾ ಆಹಾರ ಧಾನ್ಯಗಳು ಕಡಿಮೆಯಾದರೆ, ಅವರಿಗೆ ನೂರಕ್ಕೆ ಒಂದರಂತೆ ಮಾಸಿಕವೃದ್ಧಿಯನ್ನು ಪಡೆದುಕೊಂಡು ಸಾಲವನ್ನು ಕೊಡುತ್ತೀಯೆ ತಾನೇ? ನಂಬಿಕೆಗೆ ಅರ್ಹ ಸಾಧು ಜನರು ನಿನ್ನ ಮುಖ್ಯ ಇಲಾಖೆಗಳನ್ನು ನೋಡಿಕೊಳ್ಳುತ್ತಿರುವರು ತಾನೆ? ಏಕೆಂದರೆ ಮುಖ್ಯ ಇಲಾಖೆಗಳು ಸರಿಯಾಗಿ ನಡೆದರೆ ಮಾತ್ರ ಲೋಕವು ಸುಖ ಮತ್ತು ಅಭಿವೃದ್ಧಿಯನ್ನು ಹೊಂದುತ್ತದೆ. ನಿಷ್ಠರೂ, ಪ್ರಾಜ್ಞರೂ, ನ್ಯಾಯಪರರೂ ಮತ್ತು ನಿನಗೆ ವಿಧೇಯರಾಗಿರುವ ಐದು ಅಧಿಕಾರಿಗಳು ನಿನ್ನ ನಗರದ ಪ್ರತಿ ಗ್ರಾಮೀಣ ಪ್ರದೇಶದಲ್ಲಿ ಇರುವರು ತಾನೆ? ಇವರು ಒಗ್ಗಟ್ಟಿನಲ್ಲಿ ಕೆಲಸಮಾಡಿ ಕ್ಷೇಮ ತರುತ್ತಾರೆ ತಾನೇ? ನಗರಗಳ ರಕ್ಷಣೆಗೋಸ್ಕರ ಗ್ರಾಮಗಳಲ್ಲಿಯೂ ನಗರಗಳಲ್ಲಿರುವಂಥೆ ವ್ಯವಸ್ಥೆಮಾಡಲಾಗಿದೆ ತಾನೆ? ಗ್ರಾಮಗಳ ರಕ್ಷೆಗೋಸ್ಕರ ಎಲ್ಲ ಹಳ್ಳಿಗಳಲ್ಲಿಯೂ ಗ್ರಾಮಗಳಲ್ಲಿರುವ ಸೌಕರ್ಯಗಳಿವೆ ತಾನೆ? ನಿನ್ನ ದೇಶದಲ್ಲಿ ಸೈನ್ಯವು ಸಮ ಮತ್ತು ವಿಷಮ ಪ್ರದೇಶಗಳಲ್ಲಿಯೂ ನಗರಗಳಲ್ಲಿಯೂ ಸಂಚರಿಸಿ ಕಳ್ಳರನ್ನು ಹುಡುಕುತ್ತಿರುತ್ತಾರೆ ತಾನೆ? ಸ್ತ್ರೀಯರನ್ನು ಸಂತವಿಸುತ್ತೀಯೆ ಮತ್ತು ಅವರನನ್ನು ರಕ್ಷಿಸುತ್ತಿರುವೆ ತಾನೆ? ಆದರೆ ಅವರ ಮೇಲೆ ತುಂಬಾ ನಂಬಿಕೆಯನ್ನಿಡುವುದಿಲ್ಲ ತಾನೆ? ಅವರೊಂದಿಗೆ ರಹಸ್ಯವಿಷಯಗಳನ್ನು ಹೇಳಿಕೊಳ್ಳುವುದಿಲ್ಲ ತಾನೆ? ಗೂಢಚಾರರ ವರದಿಯನ್ನು ಕೇಳಿ ಮಾಡಬೇಕಾದ ಕಾರ್ಯದ ಕುರಿತು ಯೋಚಿಸಿ, ಒಳಗಿರುವವರು ಯಾರೆಂದು ತಿಳಿದು ನಂತರ ಸುಖವಾಗಿ ಸುರಕ್ಷಿತವಾಗಿ ಮಲಗುತ್ತೀಯೆ ತಾನೆ? ರಾತ್ರಿಯ ಮೊದಲು ಎರಡು ಯಾಮಗಳಲ್ಲಿ ನಿದ್ದೆ ಮಾಡಿ ಕೊನೆಯ ಯಾಮದಲ್ಲಿ ಎದ್ದು ಧರ್ಮಾರ್ಥ ವಿಷಯಗಳ ಕುರಿತು ಚಿಂತಿಸುತ್ತೀಯೆ ತಾನೆ? ಸಕಾಲದಲ್ಲಿ ಎದ್ದು, ನಿತ್ಯವಿಧಿಗಳನ್ನು ಪೂರೈಸಿ, ಸಮಲಂಕೃತನಾಗಿ, ಕಾಲಜ್ಞ ಮಂತ್ರಿಗಳೊಂದಿಗೆ ಪುರಜನರ ದರ್ಶನ ಮಾಡುತ್ತೀಯೆ ತಾನೆ? ಕೆಂಪು ಉಡುಗೆಗಳನ್ನು ಧರಿಸಿ ಕಡ್ಗಗಳನ್ನು ಹಿಡಿದಿರುವ, ಅಲಂಕೃತ ಅಂಗರಕ್ಷಕರು ಸುತ್ತಲೂ ಇದ್ದು ಯಾವಾಗಲೂ ನಿನ್ನನ್ನು ರಕ್ಷಿಸಿರುತ್ತಾರೆ ತಾನೆ? ನ್ಯಾಯಕ್ಕೆ ಬಂದ ವಿಷಯಗಳಲ್ಲಿ, ಶಿಕ್ಷೆನೀಡಬೇಕಾದವರಿಗೆ ಮತ್ತು ಗೌರವಿಸಬೇಕಾದವರಿಗೆ, ನಿನಗಿಷ್ಟವಾದವರಾಗಿದ್ದರೂ ಇಷ್ಟವಿಲ್ಲದವರಾಗಿದ್ದರೂ ಸಂಪೂರ್ಣವಾಗಿ ಪರೀಕ್ಷಿಸಿ ಯಮನಂತೆ ವರ್ತಿಸುತ್ತೀಯೆ ತಾನೆ? ಶಾರೀರಿಕ ಬಾಧೆಗಳನ್ನು ಔಷಧ ಮತ್ತು ಪಥ್ಯಗಳಿಂದ ಮತ್ತು ಮಾನಸಿಕ ಬಾಧೆಗಳನ್ನು ವೃದ್ಧರ ಸೇವೆ ಮಾಡುವುದರಿಂದ ಸದಾ ಹೋಗಲಾಡಿಸಿಕೊಳ್ಳುತ್ತೀಯೆ ತಾನೆ? ನಿನ್ನ ಶರೀರ ಹಿತವನ್ನು ನೋಡಿಕೊಳ್ಳುವ ವೈದ್ಯರು ಅಷ್ಟಾಂಗ ಚಿಕಿತ್ಸೆಯಲ್ಲಿ ವಿಶಾರದರು, ಸ್ನೇಹಪರರು ಮತ್ತು ಅನುರಕ್ತರು ತಾನೆ? ಲೋಭದಿಂದಲಾಗಲೀ, ಮೋಹದಿಂದಲಾಗಲೀ, ಅಭಿಮಾನದಿಂದಾಗಲೀ ನೀನು ನಿನ್ನಲ್ಲಿಗೆ ಬಂದಿರುವ ಅರ್ಥಿ-ಪ್ರತ್ಯರ್ಥಿಗಳನ್ನು ಎಂದೂ ಹಿಂದೆ ಕಳುಹಿಸುವುದಿಲ್ಲ ತಾನೆ? ಲೋಭದಿಂದಾಗಲೀ, ಮೋಹದಿಂದಾಗಲೀ, ಗೊಂದಲದಿಂದಾಗಲೀ, ಅಥವಾ ಪ್ರೀತಿಯಿಂದಾಗಲೀ ನಿನ್ನ ಆಶ್ರಿತರಾಗಿರುವ ಮನುಷ್ಯರ ಜೀವನವೃತ್ತಿಯನ್ನು ನಿಲ್ಲಿಸುವುದಿಲ್ಲ ತಾನೆ? ನಗರದಲ್ಲಿ ವಾಸಿಸುವವರ ಸಹಿತ ನಿನ್ನ ರಾಷ್ಟ್ರದಲ್ಲಿ ವಾಸಿಸಿರುವವರು ಶತ್ರುಗಳ ಪ್ರೇರಣೆಯಿಂದ ನಿನ್ನ ವಿರುದ್ಧ ಒಟ್ಟಿಗೆ ಪ್ರತಿಭಟಿಸುತ್ತಿಲ್ಲ ತಾನೆ? ನಿನ್ನ ದುರ್ಬಲಶತ್ರುವನ್ನು ಬಲಪ್ರಯೋಗಿಸಿ ನಿಯಂತ್ರಣದಲ್ಲಿಟ್ಟುಕೊಂಡಿದ್ದೀಯೆ ತಾನೆ? ಮತ್ತು ನಿನಗಿಂಥ ಹೆಚ್ಚು ಬಲಶಾಲಿಯಾಗಿರುವವರನ್ನು ಪರಸ್ಪರ ವಿಚಾರವಿನಿಮಯದಿಂದ ತೊಂದರೆಕೊಡದ ಹಾಗೆ ನೋಡಿಕೊಳ್ಳುತ್ತಿದ್ದೀಯೆ ತಾನೆ? ನಿನ್ನ ಅಧೀನದಲ್ಲಿರುವ ಭೂಮಿಪಾಲರೆಲ್ಲರೂ ನಿನ್ನಲ್ಲಿಯೇ ಅನುರಕ್ತರಾಗಿದ್ದಾರೆ ತಾನೆ? ಮತ್ತು ನಿನಗಾಗಿ ಪ್ರಾಣವನ್ನು ತೊರೆಯಲೂ ಸಿದ್ಧರಿದ್ದಾರೆ ತಾನೆ? ನೀನು ನಿನ್ನ ಒಳ್ಳೆಯದಕ್ಕಾಗಿಯೇ ಸರ್ವ ವಿಧ್ಯೆಗಳಲ್ಲಿ ಅವರಿಗಿರುವ ಗುಣಮಟ್ಟಕ್ಕನುಗುಣವಾಗಿ ಬ್ರಾಹ್ಮಣರು ಮತ್ತು ಸಾಧುಗಳನ್ನು ಗೌರವಿಸುತ್ತೀಯೆ ತಾನೆ? ನಿನ್ನ ಪೂರ್ವಜ ಜನರಿಂದ ಆಚರಿತಗೊಂಡ ಮೂರುವೇದಗಳೇ ಮೂಲ ಧರ್ಮದಂತೆ ನಡೆದುಕೊಳ್ಳುತ್ತಿದ್ದೇಯೆ ಮತ್ತು ಕರ್ಮಗಳಲ್ಲಿ ನಿರತನಾಗಿದ್ದೀಯೆ ತಾನೆ? ನಿನ್ನ ಮನೆಯಲ್ಲಿ ನಿನ್ನ ಸಮ್ಮುಖದಲ್ಲಿ ಗುಣವಂತ ದ್ವಿಜರು ದಕ್ಷಿಣೆಗಳನ್ನು ಪಡೆದು ಸ್ವಾದಯುಕ್ತ ಉತ್ತಮ ಊಟವನ್ನು ಉಣ್ಣುತ್ತಾರೆ ತಾನೆ? ಏಕಚಿತ್ತನಾಗಿ ಆತ್ಮವನ್ನು ಜಯಿಸಿ, ವಾಜಪೇಯ ಮತ್ತು ಪುಂಡರೀಕ ಕ್ರತುಗಳನ್ನು ಸಂಪೂರ್ಣವಾಗಿ ಮಾಡಲು ಪ್ರಯತ್ನಿಸುತ್ತಿರುವೆ ತಾನೆ? ನೀನು ಜ್ಞಾತಿ-ಬಾಂಧವರನ್ನು, ಗುರುಗಳನ್ನು, ವೃದ್ಧರನ್ನು, ದೇವತೆಗಳನ್ನು, ತಾಪಸರನ್ನು, ಚೈತ್ಯಗಳನ್ನು, ಮಂಗಳಕರ ವೃಕ್ಷಗಳನ್ನು, ಬ್ರಾಹ್ಮಣರನ್ನು ನಮಸ್ಕರಿಸುತ್ತೀಯೆ ತಾನೆ? ಆಯುಸ್ಸನ್ನೂ ಯಶವನ್ನೂ ವೃದ್ಧಿಸುವ, ಧರ್ಮಕಾಮಾರ್ಥಗಳನ್ನು ತೋರಿಸುವ ಇದರಂತೆಯೇ ಬುದ್ಧಿ ಮತ್ತು ನಡತೆಗಳಿಂದ ನಿನ್ನ ದೇಶವನ್ನು ಆಳುತ್ತಿದ್ದೀಯೆ ತಾನೆ?

ಈ ರೀತಿ ಬುದ್ಧಿಯುಕ್ತನಾಗಿ ನಡೆದುಕೊಳ್ಳುವವನ ರಾಷ್ಟ್ರವು ನಾಶವಾಗುವುದಿಲ್ಲ ಮತ್ತು ಅಂಥಹ ರಾಜನು ಮಹಿಯನ್ನು ಗೆದ್ದು ಅತ್ಯಂತ ಸುಖವನ್ನು ಹೊಂದುತ್ತಾನೆ. ಆರ್ಯ ವಿಶುದ್ಧಾತ್ಮರ ಮೇಲೆ ಕಳ್ಳತನದ ಅಪವಾದನ್ನು ಹೊರಿಸಿ ಲೋಭದಿಂದಲೋ ಮಂದಬುದ್ಧಿಯಿಂದಲೋ ವಧೆಯಾಗದ ಹಾಗೆ ನೋಡಿಕೊಳ್ಳುತ್ತೀಯೆ ತಾನೆ? ಪ್ರಶ್ನೆಗಳಿಗೊಳಗಾಗಿ, ಅವನನ್ನು ಸಲಕರಣೆಗಳೊಡನೆ ನೋಡಿದವರ ಸಾಕ್ಷಿಯ ಪ್ರಕಾರ ಸೆರೆಹಿಡಿದು ಬಂಧನದಲ್ಲಿಟ್ಟ ಅಪರಾಧಿಯು ಲಂಚದ ಕಾರಣದಿಂದ ಬಿಡುಗಡೆ ಹೊಂದಬಹುದೇ? ಒಂದುವೇಳೆ ಧನಿಕ ಮತ್ತು ಬಡವನ ಮಧ್ಯೆ ಜಗಳ ಬಂದಾಗ ನಿನ್ನ ಅಮಾತ್ಯರು ಲಂಚವನ್ನು ತೆಗೆದುಕೊಂಡು ಸುಳ್ಳು ನಿರ್ಧಾರಗಳನ್ನು ನೀಡುತ್ತಾರೆಯೇ? ನಾಸ್ತಿಕ್ಯ (ದೇವರಲ್ಲಿ ನಂಬಿಕೆಯನ್ನಿಡದಿರುವುದು), ಅನೃತ (ಸುಳ್ಳು ಹೇಳುವುದು), ಕ್ರೋಧ (ಸಿಟ್ಟು), ಪ್ರಮಾದ (ಅಜಾಗರೂಕತೆ), ದೀರ್ಘಸೂತ್ರತೆ (ಸುತ್ತುಬಳಸಿ ಯೋಜಿಸುವುದು, ಕೆಲಸ ಮಾಡುವುದು), ಜ್ಞಾನವನ್ನು ಕಾಣದಿರುವುದು (ವಿವೇಕತೆಯನ್ನು ಅಲಕ್ಷಿಸುವುದು), ಆಲಸ್ಯ (ಸೋಮಾರಿತನ), ಕ್ಷಿಪ್ತಚಿತ್ತತೆ (ಸದಾ ಮರೆಯುವಿಕೆ), ಒಬ್ಬನಿಂದಲೇ ಸಲಹೆ ಸೂಚನೆಗಳನ್ನು ಸ್ವೀಕರಿಸುವುದು, ಅಭಿವೃದ್ಧಿ ಯೋಜನೆಗಳ ಕುರಿತು ಅವುಗಳ ಬಗ್ಗೆ ತಿಳಿಯದಿದ್ದವರಿಂದ ಸಲಹೆ ಸೂಚನೆಗಳನ್ನು ಪಡೆಯುವುದು, ನಿರ್ಧರಿಸಿದ ಕಾರ್ಯಗಳನ್ನು ತಡವಾಗಿ ಆರಂಭಿಸುವುದು, ಮಂತ್ರಾಲೋಚನೆಗಳನ್ನು ಗೌಪ್ಯವಾಗಿ ಇಡದೇ ಇರುವುದು, ಮಂಗಲಕಾರ್ಯಗಳನ್ನು ಕೈಗೊಳ್ಳದೇ ಇರುವುದು, ಮತ್ತು ಸುಖಭೋಗಗಳಲ್ಲಿಯೇ ತೊಡಗಿರುವುದು ಇವೇ ಹದಿನಾಲ್ಜು ರಾಜದೋಷಗಳನ್ನು ನೀನು ವರ್ಜಿಸಿದ್ದೀಯೆ ತಾನೇ? ವೇದಗಳು ಸಫಲವಾಗಿವೆಯೇ? ಧನವು ಸಫಲವಾಗಿದೆಯೇ? ಹೆಂಡತಿಯರು ಸಫಲವಾಗಿದ್ದಾರೆಯೇ? ಮತ್ತು ಕಲಿತಿದ್ದಿದು ಸಫಲವಾಗಿದೆಯೇ?”

ಯುಧಿಷ್ಠಿರನು ಹೇಳಿದನು:

“ವೇದಗಳು ಹೇಗೆ ಸಫಲವಾಗುತ್ತವೆ? ಧನವು ಹೇಗೆ ಸಫಲವಾಗುತ್ತದೆ? ಪತ್ನಿಯರು ಹೇಗೆ ಸಫಲವಾಗುತ್ತಾರೆ? ಮತ್ತು ಕಲಿತಿದ್ದಿದು ಹೇಗೆ ಸಫಲವಾಗುತ್ತದೆ?”

ನಾರದನು ಹೇಳಿದನು:

“ವೇದಗಳು ಅಗ್ನಿಹೋತ್ರದಲ್ಲಿ ಫಲವನ್ನು ನೀಡುತ್ತವೆ. ಧನವು ಭೋಗ ಮತ್ತು ದಾನಗಳಲ್ಲಿ ಸಫಲವಾಗುತ್ತದೆ. ಪತ್ನಿಯರು ರತಿಕ್ರೀಡೆಯಲ್ಲಿ ಮತ್ತು ಸಂತಾನದಲ್ಲಿ ಫಲವನ್ನು ನೀಡುತ್ತಾರೆ. ಮತ್ತು ಕಲಿತಿದ್ದಿದು ಶೀಲ ಮತ್ತು ನಡವಳಿಕೆಯಲ್ಲಿ ಸಫಲವಾಗುತ್ತದೆ.”

ಆ ಸುಮಹಾತಪ ನಾರದನು ಈ ರೀತಿ ಹೇಳಿದ ನಂತರ ಅರಿಂದಮ ಧರ್ಮಾತ್ಮ ಯುಧಿಷ್ಠಿರನನ್ನು ಕೇಳಿದನು:

“ತೆರಿಗೆಯ ಅಧಿಕಾರಿಗಳು ದೂರದೇಶಗಳಿಂದ ಲಾಭಗಳಿಸಲೆಂದು ಬಂದಿರುವ ವರ್ತಕರಿಂದ ಯಥೋಕ್ತ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ ತಾನೆ? ತಮ್ಮ ದ್ರವ್ಯಗಳನ್ನು ತಂದ ಅವರನ್ನು ನಿನ್ನ ರಾಷ್ಟ್ರದ ನಗರಗಳಲ್ಲಿ ಮೋಸಮಾಡದೇ ವಂಚನೆ ಮಾಡದೇ ಗೌರವದಿಂದ ಕಾಣುತ್ತಾರೆ ತಾನೆ? ಅರ್ಥವಿದ, ಧರ್ಮಾನುದರ್ಶಿಗಳಾದ ವೃದ್ಧರಿಂದ ನೀನು ನಿತ್ಯವೂ ಧರ್ಮಾರ್ಥಸಹಿತ ಮಾತುಗಳನ್ನು ಕೇಳುತ್ತಿರುತ್ತೀಯೆ ತಾನೆ? ಸುಗ್ಗಿಯ ಕಾಲದಲ್ಲಿ, ಗೋವುಗಳು ಕರುಹಾಕುವ ಕಾಲದಲ್ಲಿ, ಮರಗಳು ಹೂಬಿಡುವ ಮತ್ತು ಹಣ್ಣುಗಳನ್ನು ಪಡೆಯುವ ಕಾಲದಲ್ಲಿ ಧರ್ಮಾರ್ಥ ವೃದ್ಧಿಗೋಸ್ಕರ ದ್ವಿಜರಿಗೆ ಜೇನು ಮತ್ತು ತುಪ್ಪಗಳ ದಾನ ಮಾಡುತ್ತೀಯೆ ತಾನೆ? ನೀನು ಯಾವಾಗಲೂ ಎಲ್ಲ ಶಿಲ್ಪಿಗಳಿಗೂ ನಾಲ್ಕುತಿಂಗಳ ಮುಂಗಡ ದ್ರವ್ಯೋಪಕರಣಗಳನ್ನು ಕೊಡುತ್ತೀಯೆ ತಾನೆ? ಕಾರ್ಯ ಮತ್ತು ಕರ್ತಾರರನ್ನು ಗುರುತಿಸಿ, ಪ್ರಶಂಸಿಸಿ, ಸಾತ್ವಿಕರ ಮಧ್ಯೆ ಪೂಜಿಸಿ ಸತ್ಕರಿಸುತ್ತೀಯೆ ತಾನೆ? ಸರ್ವ ಸೂತ್ರಗಳನ್ನು-ಹಸ್ತಿಸೂತ್ರ, ಅಶ್ವಸೂತ್ರ, ರಥ ಸೂತ್ರಗಳನ್ನು ಪಡೆದಿದ್ದೀಯೆ ತಾನೆ? ನಿನ್ನ ಮನೆಯಲ್ಲಿ ಧನುರ್ವೇದ ಸೂತ್ರ, ನಗರ ನಿರ್ಮಾಣ ಯಂತ್ರ ಸೂತ್ರಗಳ ಅಧ್ಯಯನವು ಸದಾ ನಡೆಯುತ್ತದೆ ತಾನೆ? ನಿನಗೆ ಶತ್ರುಗಳನ್ನು ನಾಶಪಡಿಸಬಲ್ಲ ಸರ್ವ ಅಸ್ತ್ರಗಳ, ಬ್ರಹ್ಮದಂಡದ ಮತ್ತು ವಿಷಯೋಗ ಪ್ರಯೋಗಗಳೆಲ್ಲವೂ ತಿಳಿದಿದೆ ತಾನೆ? ನೀನು ನಿನ್ನ ರಾಷ್ಟ್ರವನ್ನು ಅಗ್ನಿಭಯ, ಸರ್ಪ ಭಯ, ವ್ಯಾಲಭಯ, ರೋಗಭಯ ಮತ್ತು ರಾಕ್ಷಸಭಯಗಳಿಂದ ರಕ್ಷಿಸುತ್ತಿದ್ದೀಯೆ ತಾನೆ? ಅಂಧರನ್ನೂ, ಮೂಕರನ್ನೂ, ಕುಂಟರನ್ನೂ, ವಿಕಲಾಂಗರನ್ನೂ, ಅನಾಥರನ್ನೂ, ಪರಿವ್ರಾಜಕರನ್ನೂ ತಂದೆಯೋಪಾದಿಯಲ್ಲಿ ಪರಿರಕ್ಷಿಸುತ್ತಿರುವ ತಾನೆ?”

ಆ ಮಹಾತ್ಮ ಬ್ರಾಹ್ಮಣಸತ್ತಮನ ಮಾತುಗಳನ್ನು ಕೇಳಿ ಸಂತೋಷಗೊಂಡ ಕುರುವೃಷಭ ರಾಜನು ಆ ದೇವರೂಪಿ ನಾರದನ ಪಾದಗಳಿಗೆ ಅಭಿವಂದಿಸಿ ನಮಸ್ಕರಿಸಿ ಹೇಳಿದನು:

“ನನ್ನ ಪ್ರಜ್ಞೆಯನ್ನು ಇನ್ನೂ ವೃದ್ಧಿಗೊಳಿಸಿದ ನೀನು ಹೇಳಿದ ಮಾತುಗಳಂತೆಯೇ ನಡೆದುಕೊಳ್ಳುತ್ತೇನೆ.”

ಆ ರಾಜನು ಹಾಗೆ ಹೇಳಿದುದಲ್ಲದೇ ಅದರಂತೆಯೇ ಮಾಡಿ ಸಾಗರದಿಂದ ಆವೃತ ಮಹಿಯನ್ನು ಪಡೆದನು. ನಾರದನು ಹೇಳಿದನು:

“ಈ ರೀತಿಯಲ್ಲಿ ಯಾವ ರಾಜನು ನಡೆದುಕೊಳ್ಳುತ್ತಾನೋ ಅವನು ಚಾತುರ್ವರ್ಣ್ಯದವರನ್ನು ರಕ್ಷಿಸಿ, ಈ ಭೂಮಿಯಲ್ಲಿ ಸುಖೀ ಜೀವನವನ್ನು ಪಡೆದು ಶಕ್ರನ ಲೋಕವನ್ನು ಹೊಂದುತ್ತಾನೆ.” ಮಹರ್ಷಿಯ ವಚನಗಳಿಂದ ಪರಮಸಂತುಷ್ಟನಾದ ಧರ್ಮರಾಜ ಯುಧಿಷ್ಠಿರನು ಅವನನ್ನು ಪೂಜಿಸಿ, ಅನುಜ್ಞೆಯನ್ನು ಪಡೆದು ಈ ಮಾತುಗಳನ್ನಾಡಿದನು: “ಭಗವನ್! ನೀವು ಹೇಳಿದ ಧರ್ಮನಿಶ್ಚಯವೂ ಅನುಸರಣೀಯವೂ ಆದುದನ್ನು ಯಥಾಶಕ್ತಿಯಾಗಿ, ಯಥಾನ್ಯಾಯವಾಗಿ ಮತ್ತು ವಿಧಿವತ್ತಾಗಿ ಮಾಡುತ್ತೇನೆ. ಹಿಂದಿನ ರಾಜರು ಇವೆಲ್ಲವನ್ನೂ ಯಥಾನ್ಯಾಯವಾಗಿ ಅರ್ಥವತ್ತಾಗಿ ವಿಚಾರಿಸಿ ಆಚರಿಸಿ ಫಲಗಳನ್ನು ಪಡೆದರು. ನಾವೂ ಕೂಡ ನಿನ್ನ ಈ ಸತ್ಪಥದಲ್ಲಿ ನಡೆಯಲು ಇಚ್ಛಿಸುತ್ತೇವೆ. ಆದರೆ ನಿಯತಾತ್ಮರಾದ ಹಿಂದಿನವರು ನಡೆದುಕೊಂಡಂತೆ ನಡೆದುಕೊಳ್ಳಲು ಶಕ್ಯವಿಲ್ಲದಿರಬಹುದು.”

ಲೋಕಪಾಲಕರ ಸಭೆಗಳ ವರ್ಣನೆಯ ಪ್ರಸ್ತಾವನೆ

ಹೀಗೆ ಮಾತನಾಡಿದ ಆ ಧರ್ಮಾತ್ಮ ಮಹಾಮತಿ ಪಾಂಡವ ಯುಧಿಷ್ಠಿರನು ಅವನನ್ನು ಪೂಜಿಸಿ, ಒಂದು ಕ್ಷಣ ಕಾದು, ಸಮಯ ಪ್ರಾಪ್ತಿಯಾದಾಗ, ಆ ಲೋಕಚರ ಮುನಿ ನಾರದನು ತನ್ನ ಆಸನದಲ್ಲಿ ಕುಳಿತುಕೊಂಡಿದ್ದುದನ್ನು ನೋಡಿ, ರಾಜರ ಮಧ್ಯದಲ್ಲಿ ಕೇಳಿದನು:

“ಮನೋವೇಗದಲ್ಲಿ ಪ್ರಯಾಣಿಸಬಲ್ಲ ನೀವು ಸದಾ ಪೂರ್ವದಲ್ಲಿ ಬ್ರಹ್ಮನು ನಿರ್ಮಿಸಿದ ಪ್ರೇಕ್ಷಣೀಯ ನಾನಾ ವಿಧದ ಬಹಳಷ್ಟು ಲೋಕಗಳನ್ನು ಸಂಚರಿಸುತ್ತಿರುತ್ತೀರಿ. ಬ್ರಹ್ಮನ್! ಈ ರೀತಿಯ ಅಥವಾ ಇದಕ್ಕಿಂತಲೂ ಉತ್ತಮ ಸಭಾಭವನವನ್ನು ನೀವು ಇದಕ್ಕೂ ಮೊದಲು ಎಲ್ಲಿಯಾದರೂ ನೋಡಿದ್ದಿರೇ? ನನ್ನ ಈ ಪ್ರಶ್ನೆಗೆ ಉತ್ತರಿಸಿ!”

ಧರ್ಮರಾಜನಾಡಿದ ಮಾತುಗಳನ್ನು ಕೇಳಿ ನಾರದನು ಮುಗುಳ್ನಗುತ್ತಾ ಪಾಂಡವನಿಗೆ ಮಧುರ ವಾಣಿಯಲ್ಲಿ ಉತ್ತರಿಸಿದನು:

“ರಾಜನ್! ಮನುಷ್ಯರಲ್ಲಿ ಇದರಂಥಹ ಮಣಿಮಯ ಸಭೆಯನ್ನು ಇದಕ್ಕೂ ಮೊದಲು ನೋಡಿರಲಿಲ್ಲ ಕೇಳಿರಲಿಲ್ಲ. ಆದರೆ ನಿನಗೆ ಕೇಳಲು ಮನಸ್ಸಿದ್ದರೆ ನಾನು ಪಿತೃರಾಜನ, ಧೀಮತ ವರುಣನ, ಇಂದ್ರನ, ಕೈಲಾಸನಿಲಯನ, ಮತ್ತು ಬ್ರಹ್ಮನ ದಿವ್ಯ ದುಃಖವನ್ನು ಹೋಗಲಾಡಿಸುವ ಸಭೆಗಳ ಕುರಿತು ಹೇಳುತ್ತೇನೆ.”

ನಾರದನ ಈ ಮಾತುಗಳನ್ನು ಕೇಳಿ ಧರ್ಮರಾಜ ಮಹಾಮನಸ್ವಿ ಯುಧಿಷ್ಠಿರನು ಸಹೋದರರೊಂದಿಗೆ ಸರ್ವ ನೃಪರ ಮಧ್ಯದಲ್ಲಿ ಅಂಜಲೀಬದ್ಧನಾಗಿ ಉತ್ತರಿಸಿದನು:

“ನಾವು ಆ ಎಲ್ಲ ಸಭೆಗಳ ಕುರಿತು ಕೇಳಲು ಬಯಸುತ್ತೇವೆ. ಹೇಳಿ. ಬ್ರಹ್ಮನ್! ಆ ಸಭೆಗಳು ಯಾವ ದ್ರವ್ಯದಿಂದ ಮಾಡಲ್ಪಟ್ಟಿವೆ? ಅವುಗಳ ವಿಸ್ತಾರ ಮತ್ತು ಅಳತೆ ಏನು? ಅವನ ಸಭೆಯಲ್ಲಿ ಪಿತಾಮಹನನ್ನು ಯಾರು ಉಪಾಸಿಸುತ್ತಾರೆ? ಹಾಗೆಯೇ ದೇವರಾಜ ವಾಸವನ, ವೈವಸ್ವತ ಯಮನ, ವರುಣನ, ಕುಬೇರನ ಸಭೆಗಳಲ್ಲಿ ಯಾರು ಯಾರು ಉಪಸ್ಥಿತರಿರುತ್ತಾರೆ? ಇವೆಲ್ಲವನ್ನು ನೀನು ಹೇಳಿದಂತೆ ಕೇಳಲು ಬಯಸುತ್ತೇವೆ. ಇದರ ಕುತೂಹಲವು ಅತ್ಯಧಿಕವಾಗಿದೆ.”

ಪಾಂಡವನು ಈ ರೀತಿ ಹೇಳಲು ನಾರದನು ಅವನಿಗೆ ಉತ್ತರಿಸಿದನು:

“ರಾಜನ್! ಒಂದೊಂದಾಗಿ ಆ ಸಭೆಗಳ ಕುರಿತು ಹೇಳುತ್ತೇನೆ. ಕೇಳು.”

ಇಂದ್ರಸಭೆಯ ವರ್ಣನೆ

ನಾರದನು ಹೇಳಿದನು:

“ಕೌರವ್ಯ! ತನ್ನ ಕರ್ಮಗಳಿಂದ ಪಡೆದ ಶಕ್ರನ ದಿವ್ಯ ಸಭೆಯು ಸೂರ್ಯಪ್ರಭೆಯ ಸರಿಸಮ ಕಾಂತಿಯುಕ್ತವಾಗಿದ್ದು ಸ್ವಯಂ ಶಕ್ರನಿಂದ ನಿರ್ಮಿತಗೊಂಡಿತು. ಇಷ್ಟವಿದ್ದಲ್ಲಿಗೆ ಹೋಗಬಹುದಾದ ಆ ಸಭೆಯು ಒಂದು ನೂರು ಯೋಜನೆ ಅಗಲವಾಗಿಯೂ, ನೂರಾ ಐವತ್ತು ಯೋಜನೆ ಉದ್ದವಾಗಿಯೂ, ಐದು ಯೋಜನೆ ಎತ್ತರವಾಗಿಯೂ ಇದೆ. ವೃದ್ಧಾಪ್ಯ, ಶೋಕ ಮತ್ತು ರೋಗರಹಿತ, ನಿರಾತಂಕ, ಮಂಗಳಕರ, ಶುಭ, ಕೊಠಡಿ ಮತ್ತು ಆಸನಗಳಿಂದ ತುಂಬಿದ, ರಮ್ಯ, ದಿವ್ಯ ವೃಕ್ಷಗಳಿಂದ ಶೋಭಿತ, ಸಬೆಯ ಪರಮಾಸನದಲ್ಲಿ ಕಿರೀಟಿ ಲೋಹಿತಾಂಗ ದೇವೇಶ್ವರನು ಮಹೇಂದ್ರಾಣಿ ಶಚಿ ಮತ್ತು ಶ್ರೀ ಲಕ್ಷ್ಮಿಯರೊಡನೆ ಮತ್ತು ಹ್ರೀ, ಕೀರ್ತಿ ಮತ್ತು ದ್ಯುತಿಗಳ ಸಹಿತ ಹೊಳೆಯುವ ಆಕಾರವನ್ನು ಪಡೆದು, ಶುದ್ಧ ವಸ್ತ್ರ, ಬಣ್ಣದ ಮಾಲೆಗಳನ್ನು ಧರಿಸಿ ಕುಳಿತಿರಲು ಮರುತರು, ಗೃಹಮೇಧಿ ದೇವತೆಗಳು, ಸಿದ್ಧರು, ದೇವರ್ಷಿಗಳು, ಸಾಧ್ಯರು ಮತ್ತು ದೇವಗಣಗಳು ಆ ಮಹಾತ್ಮ ಶತಕ್ರತುವನ್ನು ನಿತ್ಯವೂ ಉಪಾಸಿಸುತ್ತಾರೆ. ಇವರ ದಿವ್ಯರೂಪ ಸ್ವಲಂಕೃತ ಅನುಚರರು ಎಲ್ಲರೂ ಮಹಾತ್ಮ ಅರಿಂದಮ ದೇವರಾಜನನ್ನು ಉಪಾಸಿಸುತ್ತಾರೆ. ಹಾಗೆಯೇ ಅಮಲರೂ, ನಿಷ್ಪಾಪರೂ, ಅಗ್ನಿಯಂತೆ ಬೆಳಗುವವರೂ, ತೇಜಸ್ವಿಗಳು, ಸೋಮಯಾಜಿಗಳೂ, ವಿಪಾಪಿಗಳೂ, ವಿಗತಕ್ಲಮರೂ ಆದ ಸರ್ವ ದೇವರ್ಷಿಗಳೂ ಶಕ್ರನ ಉಪಾಸನೆ ಮಾಡುತ್ತಾರೆ: ಪರಾಶರ, ಪರ್ವತ, ಸಾವರ್ಣಿ, ಗಾಲವ, ಶಂಖ, ಲಿಖಿತ, ಮುನಿ ಗೌರಶಿರ, ದುರ್ವಾಸ, ದೀರ್ಘತಪಸ್, ಯಾಜ್ಞವಲ್ಕ್ಯ, ಭಾಲುಕಿ, ಉದ್ದಾಲಕ, ಶ್ವೇತಕೇತು, ಪ್ರಭು ಶಾತ್ಯಾಯನ, ಹವಿಷ್ಮತ್, ಗವಿಷ್ಠ, ಪಾರ್ಥಿವ ಹರಿಶ್ಚಂದ್ರ, ಹೃದ್ಯ, ಉದರಶಾಂಡಿಲ್ಯ, ಪಾರಶರ್ಯ, ಮತ್ತು ಕೃಷೀವಲ, ವಾತಸ್ಕಂಧ, ವಿಶಾಖ, ವಿಧಾತ, ಕಾಲ, ಅನಂತದಂತ, ತ್ವಷ್ಟ, ವಿಶ್ವಕರ್ಮ, ತುಂಬುರು, ಮೊದಲಾದ ಯೋನಿಜರೂ, ಅಯೋನಿಜರೂ, ವಾಯುಭಕ್ಷರೂ, ಹುತಾಶಿನರು ಎಲ್ಲರೂ ಸರ್ವಲೋಕಗಳ ಒಡೆಯ ವಜ್ರಿಯನ್ನು ಉಪಾಸಿಸುತ್ತಾರೆ. ಹಾಗೆಯೇ ಮಹಾತಪಸ್ವಿಗಳಾದ ಸಹದೇವ, ಸುನೀಥ, ವಾಲ್ಮೀಕಿ, ಸತ್ಯವಂತ ಸಮೀಕ, ಸತ್ಯಸಂಗರ ಪ್ರಚೇತ, ಮೇಧಾತಿಥಿ, ವಾಮದೇವ, ಪುಸಸ್ತ್ಯ, ಪುಲಹ, ಕ್ರತು, ಮರುತ್ತ, ಮರೀಚಿ, ಸ್ಥಾಣು, ಮಹಾತಪಸ್ವಿಗಳಾದ ಅತ್ರಿ, ಕಕ್ಷಿವಾನ್, ಗೌತಮ, ಆರ್ಕ್ಷ್ಯ, ಮುನಿ ವೈಶ್ವಾನರ, ಮುನಿ ಕಾಲಕವೃಕ್ಷೀಯ, ಆಶ್ರವ್ಯ, ಹಿರಣ್ಯದ, ಸಂವರ್ತ, ದೇವಹವ್ಯ, ಮತ್ತು ವೀರ್ಯವಾನ್ ವಿಷ್ವಕ್ಸೇನ. ದಿವ್ಯ ನದಿಗಳು, ಔಷಧಗಳು, ಶ್ರದ್ಧಾ, ಮೇಧಾ, ಸರಸ್ವತೀ, ಧರ್ಮ, ಅರ್ಥ, ಕಾಮ, ಮಿಂಚು, ಮಳೆಯ ಮೋಡಗಳು, ವಾಯು, ಗುಡುಗು, ಪೂರ್ವ ದಿಕ್ಕು, ಇಪ್ಪತ್ತೇಳು ಯಜ್ಞವಾಹಕ ಅಗ್ನಿಗಳು - ಅಗ್ನಿಶೋಮ, ಇಂದ್ರಾಗ್ನೀ, ಮಿತ್ರ, ಸವಿತರ್, ಯಮ, ಭಗ, ವಿಶ್ವ, ಸಾಧ್ಯ, ಶುಕ್ರ, ಮಂಥೀ, ಯಜ್ಞ, ದಕ್ಷಿಣ, ಗ್ರಹಗಳು, ಸರ್ವ ಸ್ತೋಭಗಳು, ಮತ್ತು ಯಜ್ಞವನ್ನು ಕೊಂಡೊಯ್ಯುವ ಎಲ್ಲ ಮಂತ್ರಗಳು ಅಲ್ಲಿ ಸೇರಿರುತ್ತಾರೆ. ಹಾಗೆಯೇ ಅಪ್ಸರೆಯರು, ಮನೋರಮ ಗಂಧರ್ವರು ವಿವಿಧ ನೃತ್ಯ, ವಾದ್ಯ, ಗೀತ, ಹಾಸ್ಯಗಳಿಂದ, ಸ್ತುತಿ, ಮಂಗಲ ಸ್ತುತಿಗಳಿಂದ ಕರ್ಮಗಳಿಂದ ಮಹಾತ್ಮ ವಿಕ್ರಮ ನೃಪತಿ ದೇವರಾಜ ಶತಕ್ರತು ಬಲವೃತ್ರನಿಷೂದನನನ್ನು ರಮಿಸುತ್ತಿರುತ್ತಾರೆ. ಸರ್ವ ಬ್ರಹ್ಮ ರಾಜರ್ಷಿಗಳು, ಸರ್ವ ದೇವರ್ಷಿಗಳು ಭೂಷಿತರಾಗಿ ಅಗ್ನಿಯಂತೆ ಬೆಳಗುತ್ತಿರುವ ವಿವಿಧ ದಿವ್ಯ ವಿಮಾನಗಳಲ್ಲಿ ಒಳಗೆ ಮತ್ತು ಹೊರಗೆ ಹೋಗುತ್ತಿರುತ್ತಾರೆ. ಬೃಹಸ್ಪತಿ ಶುಕ್ರರು ಒಟ್ಟಿಗೇ ಅವನಲ್ಲಿಗೆ ಹೋಗುತ್ತಿರುತ್ತಾರೆ. ಇವರು ಮತ್ತು ಇನ್ನೂ ಇತರ ಬಹಳಷ್ಟು ಯತಾತ್ಮ ಯತವ್ರತರು ಚಂದ್ರಸಂಕಾಶರು ಸೋಮನಂತೆ ಪ್ರಿಯದರ್ಶನರು ಬ್ರಹ್ಮನ ವಚನದಂತೆ ಬರುವ ಭೃಗು ಮುಂತಾದ ಸಪರ್ಷಿಗಳು ಬಂದು ಹೋಗುತ್ತಿರುತ್ತಾರೆ. ಶತಕ್ರತುವಿನ ಈ ಪುಷ್ಕರಮಾಲಿನೀ ಸಭೆಯನ್ನು ನಾನು ನೋಡಿದಹಾಗೆ ಹೇಳಿದ್ದೇನೆ.”

ಯಮಸಭಾವರ್ಣನೆ

ನಾರದನು ಹೇಳಿದನು:

“ಯುಧಿಷ್ಠಿರ! ವಿಶ್ವಕರ್ಮನು ವೈವಸ್ವತ ಯಮನಿಗೋಸ್ಕರ ನಿರ್ಮಿಸಿದ ದಿವ್ಯ ಸಭೆಯ ಕುರಿತು ಹೇಳುತ್ತೇನೆ ಕೇಳು. ಆ ತೇಜಸ್ವೀ, ಸೂರ್ಯನ ಪ್ರಕಾಶದಂತೆ ಬೆಳಗುತ್ತಿರುವ ಸಭೆಯು ನೂರು ಯೋಜನ ವಿಸ್ತಾರವಾಗಿದ್ದು ಎಲ್ಲೆಲ್ಲಿ ಹೋಗಲೂ ಸಾದ್ಯವಾಗಿರುವಂಥದಾಗಿದೆ. ಒಳಗೆ ಅತಿ ಉಷ್ಣವೂ ಇಲ್ಲ ಅತಿ ಶೀತವೂ ಇಲ್ಲ, ಮನಸ್ಸನ್ನು ಸಂತೋಷಗೊಳಿಸುತ್ತದೆ, ಶೋಕವಿಲ್ಲ, ವೃದ್ಧಾಪ್ಯವಿಲ್ಲ, ಹಸಿವು ಬಾಯಾರಿಕೆಗಳಿಲ್ಲ, ಅಪ್ರಿಯವಾದುದೇನೂ ಇಲ್ಲ, ದೀನತೆಯಿಲ್ಲ, ಶೋಕವಿಲ್ಲ ಮತ್ತು ಅನಾನುಕೂಲವಾದದ್ದು ಏನೂ ಇಲ್ಲ. ಅಲ್ಲಿ ಮನುಷ್ಯರ ಮತ್ತು ದೇವತೆಗಳ ಸರ್ವ ಕಾಮಗಳೂ ತೃಪ್ತಿಗೊಳ್ಳುತ್ತವೆ. ಅಲ್ಲಿ ಭಕ್ಷ್ಯ ಭೋಜ್ಯಗಳ ಮತ್ತು ಅವುಗಳ ರುಚಿಯಲ್ಲಿ ಕೊರತೆಯಿಲ್ಲ. ಅಲ್ಲಿ ಪುಣ್ಯಸುಗಂಧಿತ ಮಾಲೆಗಳಿವೆ, ಮತ್ತು ವೃಕ್ಷಗಳು ಸದಾ ಹೂ ಹಣ್ಣುಗಳಿಂದ ತುಂಬಿರುತ್ತವೆ. ಅಲ್ಲಿ ರುಚಿಕರ ತಣ್ಣೀರು ಮತ್ತು ಬಿಸಿ ನೀರು ಎರಡೂ ದೊರೆಯುತ್ತವೆ. ಅಲ್ಲಿ ಪುಣ್ಯ ರಾಜರ್ಷಿಗಳೂ, ಅಮಲ ದೇವರ್ಷಿಗಳೂ ಸಂತೋಷದಿಂದ ವೈವಸ್ವತ ಯಮನನ್ನು ಉಪಾಸಿಸುತ್ತಾರೆ - ಯಯಾತಿ, ನಹುಷ, ಪುರು, ಮಾಂಧಾತ, ಸೋಮಕ, ನೃಗ, ತ್ರದಸ್ಯು, ತುರಯ, ಕೃತವೀರ್ಯ, ಶೃತಶ್ರವ, ಅರಿಪ್ರಣುತ್, ಸುಸಿಂಹ, ಕೃತವೇಗ, ಕೃತಿ, ನಿಮಿ, ಪ್ರತರ್ದನ, ಶಿಬಿ, ಮತ್ಸ್ಯ, ಪೃಥ್ವಕ್ಷ, ಬೃಹದ್ರಥ, ಐಡ, ಮರುತ, ಕುಶಿಕ, ಸಾಂಕಸ್ಯ, ಸಂಕೃತಿ, ಭಾವ, ಚತುರಶ್ವ, ಸದಶ್ವೋರ್ಮಿ. ಪಾರ್ಥಿವ ಕಾರ್ತಿವೀರ್ಯ, ಭರತ, ಸುರಥ, ಸುನೀಥ, ನೈಷಧ ನಲ, ದಿವೋದಾಸ, ಸುಮನ, ಅಂಬರೀಷ, ಭಗೀರಥ, ವ್ಯಶ್ವ, ಸ್ವದಶ್ವ, ವಧ್ರಶ್ವ, ಪಂಚಹಸ್ತ, ಪೃಥುಶ್ರವ, ಋಷದ್ಗು, ವೃಷಸೇನ, ಕ್ಷುಪ, ಸುಮಹಾಬಲ, ಋಷದಶ್ವ, ವಸುಮನ, ಧ್ವಜೀ ರಥೀ ಪುರುಕುತ್ಸ, ಅರಿಷ್ಠಿಶೇಣ, ದಿಲೀಪ, ಮಹಾತ್ಮ ಉಶೀನರ, ಔಶೀನರ, ಪುಂಡರೀಕ, ಶರ್ಯಾತಿ, ಶರಭ, ಶುಚಿ, ಅಂಗ, ಅರಿಷ್ಟ, ವೇನ, ದುಃಷಂತ, ಸಂಜಯ, ಜಯ, ಭಾಮಸ್ವರಿ, ಸುನೀಥ, ನಿಷಧ, ತ್ವಿಶೀರಥ, ಕರಂಧಮ, ಬಾಹ್ಲೀಕ, ಸುದ್ಯುಮ್ನ, ಬಲವಾನ್ ಮಧು, ಕಪೋತರೋಮ, ತೃಣಕ, ಸಹದೇವ, ಅರ್ಜುನ, ರಾಮ ದಾಶರಥಿ, ಲಕ್ಷ್ಮಣ, ಪ್ರತರ್ದನ, ಅಲರ್ಕ, ಕಕ್ಷಸೇನ, ಗಯ, ಗೌರ, ಜಾಮದಗ್ನಿ ರಾಮ, ನಾಭಾಗ, ಸಗರ, ಭೂರಿದ್ಯುಮ್ನ, ಮಹಾಶ್ವ, ಪೃಥ್ವಶ್ವ, ಜನಕ, ವೈನ್ಯ, ರಾಜ ವಾರಿಷೇಣ, ಪುರುಜ, ಜನಮೇಜಯ, ಬ್ರಹ್ಮದತ್ತ, ತ್ರಿಗರ್ತ, ರಾಜ ಉಪರಿಚರ, ಇಂದ್ರದ್ಯುಮ್ನ, ಭೀಮಜ, ಗಯ, ಪೃಷ್ಠ, ಅನಘ ನಯ, ಪದ್ಮ, ಮುಚುಕುಂದ, ಭೂರಿದ್ಯುಮ್ನ, ಪ್ರಸೇನಜಿತ್, ಅರಿಷ್ಟನೇಮಿ, ಪ್ರದ್ಯುಮ್ನ, ಪೃಥಗಾಶ್ವ, ಅಜಕ, ನೂರು ಮತ್ಸ್ಯ ನೃಪತಿಯರು, ನೂರು ನೀಪರು, ನೂರು ಹಯರು, ನೂರು ಧೃತರಾಷ್ಟ್ರರು, ಎಂಭತ್ತು ಜನಮೇಜಯರು, ನೂರು ಬ್ರಹ್ಮದತ್ತರು, ನೂರು ವೈರಿಗಳಾದ ಈರಿಗಳು, ರಾಜರ್ಷಿ ಶಂತನು, ನಿನ್ನ ತಂದೆ ಪಾಂಡು, ಉಶದ್ಗವ, ಶತರಥ, ದೇವರಾಜ, ಜಯದ್ರಥ, ರಾಜರ್ಷಿ ವೃಷಾದರ್ಭಿ, ಮಂತ್ರಿಗಳ ಸಹಿತ ಧಾಮ್ನಾ, ಬಹಳಷ್ಟು ಭೂರಿ ದಕ್ಷಿಣೆಗಳನ್ನಿತ್ತು ಅಶ್ವಮೇಧೇಷ್ಠಿಗಳನ್ನು ನಡೆಸಿದ ಸಹಸ್ರಾರು ಶತಬಿಂದುಗಳು. ಈ ಎಲ್ಲ ಕೀರ್ತಿಮಂತ, ಬಹುಶ್ರುತ, ಪುಣ್ಯ ರಾಜರ್ಷಿಗಳು ಆ ಸಭೆಯಲ್ಲಿ ವೈವಸ್ವತನನ್ನು ಆರಾಧಿಸುತ್ತಾರೆ. ಅಗಸ್ತ್ಯ, ಮತಂಗ, ಕಾಲ, ಮೃತ್ಯು, ಯಜ್ವಾನ, ಸಿದ್ಧರು, ಯೋಗಶರೀರಿಗಳು, ಅಗ್ನಿಷ್ವಾತ್ತರು, ಪಿತರರು, ಫೇನಪರು, ಚೋಶ್ಮಪರು, ಸ್ವಧಾವಂತರು, ಬರ್ಹಿಷದರು, ಮೂರ್ತಿಮಂತರು, ಕಾಲಚಕ್ರ, ಸಾಕ್ಷಾತ್ ಭಗವಾನ್ ಹವ್ಯವಾಹನ, ದುಷ್ಕೃತಕರ್ಮಿ ನರರು, ದಕ್ಷಿಣಾಯನದಲ್ಲಿ ಮೃತಹೊಂದಿದವರು, ಕಾಲವನ್ನು ನಡೆಸುವ ಯಮನನ್ನು ಅರಿತ ಮನುಷ್ಯರು, ಶಿಂಶಪ ಮತ್ತು ಪಾಲಾಶ ವೃಕ್ಷಗಳು, ಕಶ ಮತ್ತು ಕುಶಗಳು, ಧರ್ಮರಾಜ ಮೂರ್ತಿಮಂತ ನಿರಾಮಯನನ್ನು ಉಪಾಸಿಸುತ್ತಾರೆ. ಇವರು ಮತ್ತು ಇನ್ನೂ ಬಹಳಷ್ಟು ಇತರ ಪಿತೃರಾಜನ ಸಭಾಸದರಾಗಿದ್ದಾರೆ ಮತ್ತು ಇವರೆನ್ನೆಲ್ಲರನ್ನೂ ನಾಮ ಕರ್ಮಗಳಿಂದ ಎಣಿಸುವುದು ಅಶಕ್ಯ. ಆದರೂ ಬೇಕೆಂದಲ್ಲಿಗೆ ಹೋಗಬಲ್ಲ ಈ ರಮ್ಯ ಸಭೆಯಲ್ಲಿ ಎಂದೂ ಇಕ್ಕಟ್ಟು ಎನ್ನಿಸುವುದಿಲ್ಲ. ದೀರ್ಘಕಾಲದವರೆಗೆ ತಪಸ್ಸನ್ನು ತಪಿಸಿ ವಿಶ್ವಕರ್ಮನು ಇದನ್ನು ನಿರ್ಮಿಸಿದನು ಮತ್ತು ತನ್ನದೇ ತೇಜಸ್ಸಿನಿಂದ ಅದು ಉರಿಯುತ್ತಿದೆಯೋ ಎನ್ನುವಂತೆ ಬೆಳಗುತ್ತದೆ. ಅಲ್ಲಿಗೆ ಉಗ್ರತಪಸ್ವಿಗಳು, ಸುವ್ರತರು, ಸತ್ಯವಾದಿಗಳು, ಶಾಂತರು, ಸನ್ಯಾಸಿಗಳು, ಸಿದ್ಧರು, ಪುಣ್ಯಕರ್ಮಗಳಿಂದ ಪೂತರಾದವರು ಎಲ್ಲರೂ ಹೊಳೆಯುತ್ತಿರುವ ದೇಹಗಳನ್ನು ಧರಿಸಿ, ಶುಭ್ರವಸ್ತ್ರಗಳನ್ನು ಧರಿಸಿ, ಬಣ್ಣಬಣ್ಣದ ಅಂಗದ ಮತ್ತು ಮಾಲೆಗಳನ್ನು ಧರಿಸಿ, ಜ್ವಲಿಸುತ್ತಿರುವ ಕುಂಡಲಗಳನ್ನು ಧರಿಸಿ ಹೋಗುತ್ತಾರೆ. ಇಂಥಹ ಪುಣ್ಯಕರ್ಮ ಸುಕೃತರು ಅನುಸರಿಸುತ್ತಿರಲು ಭೂಷಿತ ಮಹಾತ್ಮ ಗಂಧರ್ವರು ಮತ್ತು ನೂರಾರು ಅಪ್ಸರಗಣಗಳು ವಾದ್ಯ, ನೃತ್ಯ, ಗೀತ, ಹಾಸ್ಯ, ಲಾಸ್ಯ ಮತ್ತು ಎಲ್ಲವುಗಳಿಂದ ಪುಣ್ಯ ಗಂಧ, ಶಬ್ಧಗಳಿಂದ ದಿವ್ಯ ಮಾಲೆಗಳಿಂದ ಎಲ್ಲರೂ ಅವನನ್ನು ಸುತ್ತುವರೆದಿರುತ್ತಾರೆ! ನೂರು ನೂರು ಸಾವಿರದಷ್ಟು ಧರ್ಮಿಗಳು ಮಹಾತ್ಮ ರೂಪಯುಕ್ತ ಮನಸ್ವಿನಿ ಪ್ರಜೇಶ್ವರನನ್ನು ಉಪಾಸನೆ ಮಾಡುತ್ತಾರೆ. ಮಹಾತ್ಮ ಪಿತೃರಾಜನ ಸಭೆಯು ಈ ರೀತಿ ಇದೆ. ಈಗ ಪುಷ್ಕರಮಾಲಿನೀ ಎಂಬ ವರುಣನ ಸಭೆಯ ಕುರಿತು ಹೇಳುತ್ತೇನೆ.”

ವರುಣಸಭಾ ವರ್ಣನೆ

ನಾರದನು ಹೇಳಿದನು:

“ಯುಧಿಷ್ಠಿರ! ವರುಣನ ದಿವ್ಯ ಸಿತಪ್ರಭಾ ಸಭೆಯು ಶುಭಪ್ರಾಕಾರತೋರಣಗಳಿಂದ ಕೂಡಿದ್ದು ಪ್ರಮಾಣದಲ್ಲಿ ಯಮನ ಸಭೆಯಂತೆಯೇ ಇದೆ. ನೀರಿನಲ್ಲಿ ವಿಶ್ವಕರ್ಮನು ಅದನ್ನು ನಿರ್ಮಿಸಿದ್ದನು. ಅದು ದಿವ್ಯ ರತ್ಮಮಯ ಫಲಪುಷ್ಪಗಳನ್ನು ನೀಡುವ ವೃಕ್ಷಗಳಿಂದ ಆವೃತಗೊಂಡಿದೆ. ಬೇರೆ ಬೇರೆ ಬಣ್ಣಗಳ - ನೀಲಿ, ಹಳದಿ, ಕಪ್ಪು, ಬಿಳಿ, ಕೆಂಪು - ಹೂವಿನ ಹಾಸಿಗೆ ಇದೆ. ಮತ್ತು ಅಲ್ಲಿ ಪುಷ್ಪಗುಚ್ಛಗಳಿಂದ ತುಂಬಿದ ಬಳ್ಳಿಗಳೂ ಇವೆ. ಅಲ್ಲಿ ನಾನಾ ರೂಪದ ವರ್ಣಿಸಲಾಧ್ಯ ಸುಂದರ ನೂರಾರು ಸಹಸ್ರಾರು ಮೃದುಸ್ವರಗಲ ಪಕ್ಷಿಗಳು ಅಲ್ಲಲ್ಲಿ ಹಾರಾಡುತ್ತಿರುತ್ತವೆ. ಆ ಸಭೆಯಲ್ಲಿ ಏನನ್ನು ಮುಟ್ಟಿದರೂ ಸುಖವಾಗಿರುತ್ತದೆ. ಶೀತವೂ ಇಲ್ಲ ಉಷ್ಣವೂ ಇಲ್ಲ. ವರುಣನು ಪಾಲಿಸುತ್ತಿರುವ ಆ ರಮ್ಯ ಶ್ವೇತ ಸಭೆಯಲ್ಲಿ ಹಲವಾರು ಕೊಠಡಿಗಳು ಆಸನಗಳು ಇವೆ. ಅಲ್ಲಿ ವರುಣನು ವರುಣಿಯೊಡನೆ ದಿವ್ಯರತ್ನಾಂಬರಗಳನ್ನು ಧರಿಸಿ ಭೂಷಣಗಳಿಂದ ಶೋಭಿತನಾಗಿ ಕುಳಿತಿರುತ್ತಾನೆ. ಹಾರಗಳನ್ನು ಆಭರಣಗಳನ್ನು ಧರಿಸಿ, ದಿವ್ಯಮಾಲೆಗಳನ್ನು ಕೆಳಗೆ ಹಾಸಿರುವ ಆದಿತ್ಯರು ಅಲ್ಲಿ ಜಲೇಶ್ವರ ವರುಣನನ್ನು ಉಪಾಸಿಸುತ್ತಾರೆ. ಅದೇ ರೀತಿ, ನಾಗ ವಾಸುಕಿ, ತಕ್ಷಕ, ಐರಾವತ ಕೃಷ್ಣ, ಲೋಹಿತ, ಪದ್ಮ, ಚಿತ್ರ, ವೀರ್ಯವಂತ ಕಂಬಲ, ಅಶ್ವತರ, ನಾಗ ಧೃತರಾಷ್ಟ್ರ, ಬಲಾಹಕ, ಮಣಿಮಾನ್, ಕುಂಡಲಧರ, ಕರ್ಕೋಟಕ, ಧನಂಜಯ, ಪ್ರಹ್ಲಾದ, ಮೂಷಿಕಾದ, ಮತ್ತು ಜನಮೇಯ ಎಲ್ಲರೂ ಪತಾಕ ಮಂಡಲಗಳಿಂದ ಶೋಭಿತರಾಗಿ ಹೆಡೆಯನ್ನು ಎತ್ತಿ, ಇವರು ಮತ್ತು ಇನ್ನೂ ಇತರ ಬಹಳಷ್ಟು ಸರ್ಪಗಳು ಮಹಾತ್ಮ ವರುಣನನ್ನು ಉಪಾಸನೆಮಾಡಿ ರೋಗಗಳಿಂದ ಹೊರತಾಗಿರುತ್ತಾರೆ. ರಾಜಾ ಬಲಿ ವಿರೋಚನ, ಪೃಥ್ವಿಯನ್ನು ಜಯಿಸಿದ ನರಕ, ಪ್ರಹ್ಲಾದ, ವಿಪ್ರಚಿತ್ತಿ, ಸರ್ವ ಕಾಲಕಂಜರು, ಸುಮನು, ದುರ್ಮುಖ, ಶಂಖ, ಸುಮನ, ಸುಮತಿ, ಸ್ವನ, ಘಟೋದರ, ಮಹಾಪಾರ್ಶ್ವ, ಕಥನ, ಪಿಠರ, ವಿಶ್ವರೂಪ, ಸುರೂಪ, ವಿರೂಪ, ಮಹಾಶಿರ, ದಶಗ್ರೀವ, ವಾಲಿ, ಮೇಘವಾಸ, ದಶಾವರ, ಕೈಟಭ, ವಿಟ್ಟಥ, ಸಂಹ್ಲಾದ, ಇಂದ್ರತಾಪನ, ದೈತ್ಯ ದಾನವ ಪಂಗಡಗಳು - ತಮ್ಮ ಹೊಳೆಯುವ ಕುಂಡಲಗಳು, ಎಲ್ಲರೂ ಮಾಲೆಗಳನ್ನು ಕಿರೀಟಗಳನ್ನು ಧರಿಸಿ, ದಿವ್ಯ ವಸ್ತ್ರಗಳನ್ನು ಧರಿಸಿ, ಎಲ್ಲರೂ ಶೂರರೂ, ವರಗಳನ್ನು ಪಡೆದವರೂ, ಮೃತ್ಯುವನ್ನು ಜಯಿಸಿದವರೂ, ಸದಾ ಧರ್ಮಪಾಶದಲ್ಲಿರುವ, ಸರ್ವ ಸುಚರಿತವ್ರತರೂ ಆ ಮಹಾತ್ಮ ವರುಣದೇವನನ್ನು ಉಪಾಸಿಸುತ್ತಾರೆ. ಹಾಗೆಯೇ ನಾಲ್ಕು ಸಮುದ್ರಗಳು, ನದೀ ಭಾಗೀರಥಿ, ಕಾಲಿಂದೀ, ವಿದಿಶಾ, ವೇಣ್ಣ, ವೇಗವಾಹಿನೀ ನರ್ಮದಾ, ವಿಪಾಶಾ, ಶತದ್ರು, ಚಂದ್ರಭಾಗ, ಸರಸ್ವತೀ, ಇರಾವತೀ, ವಿತ, ಸಿಂಧು, ದೇವನದಿ, ಗೋದಾವರೀ, ಕೃಷ್ಣವೇಣಿ, ಕಾವೇರಿ, ಸರಿದ್ವರಾ, ಇವು ಮತ್ತು ಇತರ ನದಿಗಳು, ತೀರ್ಥಗಳು, ಸರೋವರಗಳು, ಬಾವಿಗಳು, ಕಾರಂಜಿಗಳು ದೇಹವಂತರಾಗಿ, ಹೊಂಡ-ಕೆರೆಗಳು ದೇಹವಂತರಾಗಿ, ದಿಕ್ಕುಗಳು, ಭೂಮಿ, ಸರ್ವ ಪರ್ವತಗಳು, ಸರ್ವ ಜಲಚರಗಳು ಮಹಾತ್ಮನನ್ನು ಉಪಾಸಿಸುತ್ತವೆ. ಗೀತ, ವಾದ್ಯಗಳಿಂದ ಅಲ್ಲಿ ಎಲ್ಲ ಗಂಧರ್ವ ಅಪ್ಸರ ಗಣಗಳು ಒಟ್ಟಿಗೇ ವರುಣನನ್ನು ಸ್ತುತಿಸುತ್ತಿರುತ್ತಾರೆ. ರತ್ನವಂತ ಪರ್ವತಗಳು ಮತ್ತು ಅಲ್ಲಿ ಕಂಡುಬರುವ ಔಷಧ ರಸಗಳು ಎಲ್ಲವೂ ರೂಪತಾಳಿ ಆ ಈಶ್ವರನನ್ನು ಉಪಾಸಿಸುತ್ತವೆ. ಸ್ವಯಂ ನಾನೇ ಹಿಂದೆ ವರುಣನ ಸಭೆಗೆ ಹಾರಿ ಹೋಗಿ ನೋಡಿದ್ದೇನೆ. ಈಗ ಕುಬೇರನ ರಮ್ಯ ಸಭೆಯ ಕುರಿತು ಕೇಳು.”

ಕುಬೇರಸಭಾ ವರ್ಣನೆ

ನಾರದನು ಹೇಳಿದನು:

“ರಾಜನ್! ವೈಶ್ರವಣಿಯ ಬಿಳಿಯ ಕಾಂತಿಯುಕ್ತ ಸಭೆಯು ಒಂದು ನೂರು ಯೋಜನ ಉದ್ದ ಮತ್ತು ಎಪ್ಪತ್ತು ಯೋಜನ ವಿಸ್ತೀರ್ಣವಾದದ್ದು. ಸ್ವಯಂ ವೈಶ್ರವಣನು ತನ್ನ ತಪಸ್ಸಿನಿಂದ ಚಂದ್ರನ ಪ್ರಭೆಯನ್ನು ಹೊಂದಿದ, ಆಕಾಶದಲ್ಲಿ ತೇಲುತ್ತಿರುವ, ಕೈಲಾಸಶಿಖರದಂತಿದ್ದ ಆ ಸಭೆಯನ್ನು ನಿರ್ಮಿಸಿದನು. ಗುಹ್ಯಕರು ಕೊಂಡೊಯ್ಯುವ ಆ ಸಭೆಯು ಆಕಾಶಕ್ಕೆ ಅಂಟಿಕೊಂಡಿರುವಂತೆ ತೋರುತ್ತದೆ. ಅದು ದಿವ್ಯ ಹೇಮಮಯ ಎತ್ತರ ಮರಗಳಿಂದ ಶೋಭಿತವಾಗಿದೆ. ಕಿರಣಗಳನ್ನು ಹೊರಸೂಸುವ, ಹೊಳೆಯುತ್ತಿರುವ, ದಿವ್ಯಗಂಧಾ ಮನೋರಮಾ ಬಿಳಿಯ ಮೋಡ ಅಥವಾ ಶಿಖರದಂತಿರುವ ಆ ಸಭೆಯು ತೇಲುತ್ತಿರುವಂತೆ ತೋರುತ್ತದೆ. ಅಲ್ಲಿ ರಾಜಾ ವೈಶ್ರವಣನು ವಿಚಿತ್ರ ಆಭರಣ ವಸ್ತ್ರಗಳನ್ನು ಧರಿಸಿ, ಹೊಳೆಯುತ್ತಿರುವ ಕುಂಡಲಗಳನ್ನು ಧರಿಸಿ, ಸಹಸ್ರಾರು ಸ್ತ್ರೀಯರಿಂದ ಸುತ್ತುವರೆಯಲ್ಪಟ್ಟು, ದಿವಾಕರನಂತೆ ಹೊಳೆಯುತ್ತಿರುವ, ದಿವ್ಯ ದಿಂಬುಗಳಿಂದ ಅಲಂಕೃತ, ದಿವ್ಯ ಪಾದಪೀಠವನ್ನು ಹೊಂದಿದ, ಸುಂದರ ಶ್ರೇಷ್ಠ ಆಸನದಲ್ಲಿ ಕುಳಿತಿರುತ್ತಾನೆ. ಸುವಾಸಿತ ಶುದ್ಧ ಗಾಳಿಯು ಮಂದಾರ ವನಗಳ ಉದಾರತೆಯನ್ನು ಎತ್ತಿಕೊಂಡು, ಸೌಂಗಂಧಿಕಗಳ ಸುವಾಸನೆಯನ್ನು ಎತ್ತಿ ತರುತ್ತದೆ. ಮಿಶ್ರಕೇಶಿ, ರಂಭಾ, ಶುಚಿಸ್ಮಿತೆ ಚಿತ್ರಸೇನಾ, ಚಾರುನೇತ್ರೆ, ಘೃತಾಚೀ, ಮೇನಕಾ, ಪುಂಜಿಕಸ್ಥಲಾ, ವಿಶ್ವಾಚೀ, ಸಹಜನ್ಯಾ, ಪ್ರಮ್ಲೋಚಾ, ಉರ್ವಶೀ, ಇರಾ, ವರ್ಗಾ, ಸೌರಭೇಯೀ, ಸಮೀಚೀ, ಬುದ್ಬುದಾ, ಲತಾ - ಇವರು ಮತ್ತು ಇನ್ನೂ ಸಹಸ್ರಾರು ಇತರ ನೃತ್ತಗೀತವಿಶಾರದ ಅಪ್ಸರೆಯರ ಗುಂಪು ಧನದನ ಸೇವೆಮಾಡುತ್ತದೆ. ಅನಿಶವೂ ದಿವ್ಯ ವಾದ್ಯ, ನೃತ್ಯ, ಗೀತಗಳಿಂದ ತುಂಬಿದ ಆ ಸಭೆಯು ಗಂಧರ್ವಾಪ್ಸರ ಗಣಗಳಿಂದ ಹೊಳೆಯುತ್ತಿರುತ್ತದೆ. ಅಲ್ಲಿ ಕಿನ್ನರ ಎಂಬ ಹೆಸರಿನ ಗಂಧರ್ವರು, ಮತ್ತು ನರ ಎಂಬ ಹೆಸರಿನ ಇತರರು, ಮಣಿಭದ್ರ, ಧನದ, ಶ್ವೇತಭದ್ರ, ಗುಹ್ಯಕ, ಕಶೇರಕ, ಗಂಡಕಂಡು, ಮಹಾಬಲ ಪ್ರದ್ಯೋತ, ಕುಸ್ತುಂಬುರು, ಪಿಶಾಚ, ಗಜಕರ್ಣ, ವಿಶಾಲಕ, ವರಾಹಕರ್ಣ, ಸಾಂದ್ರೋಷ್ಠ, ಫಲಭಕ್ಷ, ಫಲೋದಕ, ಅಂಗಚೂಡ, ಶಿಖಾವರ್ತ, ಹೇಮನೇತ್ರ, ವಿಭೀಷಣ, ಪುಷ್ಪಾನನ, ಪಿಂಗಲಕ, ಶೋಣಿತೋದ, ಪ್ರವಾಲಕ, ವೃಕ್ಷವಾಸ್ಯ, ನಿಕೇತ, ಚೀರವಾಸ, ಇವರು ಮತ್ತು ಅನ್ಯ ಬಹಳಷ್ಟು ನೂರಾರು ಸಹಸ್ರಾರು ಯಕ್ಷರು ನಲಕೂಬರರು, ಭಗವತೀ ಮತ್ತು ಶ್ರೀ ಸದಾ ಅವನ ಉಪಸ್ಥಿತಿಯಲ್ಲಿರುತ್ತಾರೆ. ನಾನು ಮತ್ತು ನನ್ನಂಥಹ ಇತರರು, ಆಚಾರ್ಯರು, ಇತರ ದೇವರ್ಷಿಗಳು ಹಲವಾರು ಬಾರಿ ಅಲ್ಲಿ ಬಂದಿರುತ್ತಾರೆ. ನೂರಾರು ಸಹಸ್ರಾರು ಭೂತಗಣಗಳಿಂದ ಆವೃತ ಉಮಾಪತಿ, ಪಶುಪತಿ, ಶೂಲಧಾರಿ, ಭಗನೇತ್ರಹ, ಭಗವಾನ್ ತ್ರ್ಯಂಬಕ ಮತ್ತು ಅಯಾಸವೇ ತೋರದ ದೇವಿ ಅಲ್ಲಿದ್ದಾರೆ. ಮಾಂಸ, ಕೊಬ್ಬು ಮತ್ತು ಎಲಬುಗಳನ್ನು ಸೇವಿಸುವ, ನೋಡಲು ಅಥವಾ ಕೇಳಲು ಉಗ್ರರಾಗಿರುವ, ನಾನಾ ಆಯುಧಗಳನ್ನು ಘೋರ ಭಿರುಗಾಳಿಯಿಂದ ನಡುಗುತ್ತಿದೆಯೋ ಎನ್ನುವಂತೆ ಬೀಸುತ್ತಿರುವ, ವಿಕಟ, ಮಹಾಜವ, ಕೆಂಪುಕಣ್ಣಿನ, ಮನೋವೇಗದ ಕುಬ್ಜ ಸಖರಿಂದ ಧನದನು ಸದಾ ಆವೃತನಾಗಿರುತ್ತಾನೆ. ಅಂತರಿಕ್ಷದಲ್ಲಿ ಪ್ರಯಾಣಿಸುತ್ತಿರುವಾಗ ಅವನ ಈ ಸಭೆಯನ್ನು ನಾನು ನೋಡಿದೆ. ರಾಜನ್! ಈಗ ನಾನು ಎಲ್ಲ ಆಯಾಸಗಳನ್ನೂ ಹೋಗಲಾಡಿಸುವ ಪಿತಾಮಹನ ಸಭೆಯ ಕುರಿತು ಹೇಳುತ್ತೇನೆ.”

ಬ್ರಹ್ಮಸಭಾ ವರ್ಣನೆ ಮತ್ತು ರಾಜಸೂಯದ ಪ್ರಸ್ತಾವನೆ

ನಾರದನು ಹೇಳಿದನು:

“ರಾಜನ್! ಹಿಂದೆ ದೇವಯುಗದಲ್ಲಿ ವಿಗತಕ್ಲಮ ಭಗವಾನ್ ಆದಿತ್ಯನು ಮಾನುಷ ಲೋಕವನ್ನು ನೋಡಲು ದಿವದಿಂದ ಆಗಮಿಸಿದನು. ಮಾನುಷರೂಪದಲ್ಲಿ ಸಂಚರಿಸುತ್ತಿರುವಾಗ ಅವನು ಸ್ವಯಂಭು ಬ್ರಹ್ಮನ ಮಹಾ ಸಭೆಯನ್ನು ನೋಡಿದ ಹಾಗೆ ನನಗೆ ಹೇಳಿದನು. ದಿವ್ಯ ಅಪ್ರಮೇಯ ಪ್ರಭೆಯನ್ನು ಹೊಂದಿದ, ಮನಸ್ಸಿಗೆ ಸಂತೋಷವನ್ನು ನೀಡುವ, ತನ್ನ ಅನಿರ್ದೇಶ್ಯ ಪ್ರಭಾವದಿಂದ ಸರ್ವಭೂತಗಳ ಮನೋರಮೆ ಆ ಸಭೆಯ ಗುಣಗಳನ್ನು ಕೇಳಿದ ನಾನು ಅದನ್ನು ನೋಡಲು ಉತ್ಸುಕನಾಗಿ ಆದಿತ್ಯನಲ್ಲಿ ಕೇಳಿಕೊಂಡೆನು. “ಭಗವನ್! ಪಿತಾಮಹನ ಮಹಾಸಭೆಯನ್ನು ನೋಡಲು ಬಯಸುತ್ತೇನೆ. ಯಾವ ತಪಸ್ಸು, ಕರ್ಮ, ಔಷಧಿ, ಉಪಾಯ ಅಥವಾ ಮಾಯೆಯಿಂದ ಅದನ್ನು ನೋಡಲು ಸಾಧ್ಯವಾಗುತ್ತದೆ? ನಾನು ಆ ಸಭೆಯನ್ನು ಹೇಗೆ ನೋಡಲಿ ಎಂದು ಹೇಳು.” ಆಗ ಆ ವೀರ್ಯವಾನ್ ಸೂರ್ಯ ಭಗವಾನನು ಪಾಪವೇ ಇಲ್ಲದ ಆಯಾಸವನ್ನೇ ಅರಿಯದ ಬ್ರಹ್ಮನ ಆ ಸಭೆಗೆ ನನ್ನನ್ನು ಕರೆದುಕೊಂಡು ಆಗಮಿಸಿದನು. ಇದೇ ಅದರ ರೂಪವೆಂದು ನಿರ್ದಿಷ್ಠವಾಗಿ ಹೇಳಲು ಶಕ್ಯವಿಲ್ಲ. ಯಾಕೆಂದರೆ ಕ್ಷಣ ಕ್ಷಣಕ್ಕೆ ಅದರ ಅನಿರ್ದೇಶ್ಯ ರೂಪವು ಬದಲಾಗುತ್ತಿರುತ್ತದೆ. ನನಗೆ ಅದರ ಪರಿಮಾಣವಾಗಲೀ ಸಂಸ್ಥಾನವಾಗಲೀ ಗೊತ್ತಿಲ್ಲ. ಮತ್ತು ಅದಕ್ಕೆ ಮೊದಲು ಎಂದೂ ನಾನು ಅಂಥಹ ರೂಪವನ್ನು ನೋಡಿರಲಿಲ್ಲ. ಆ ಸಭೆಯು ಸುಸುಖವಾಗಿದೆ - ಶೀತವೂ ಇಲ್ಲ ಉಷ್ಣವೂ ಇಲ್ಲ. ಅದನ್ನು ಪ್ರವೇಶಿಸಿದವರಿಗೆ ಹಸಿವು, ಬಾಯಾರಿಕೆ, ಆಯಾಸ ಎನ್ನುವುದೇ ಇರುವುದಿಲ್ಲ. ಅದು ಬಣ್ಣ ಬಣ್ಣಗಳಿಂದ ಹೊಳೆಯುತ್ತಿದ್ದು ನಾನಾ ರೂಪಗಳಲ್ಲಿ ರಚಿಸಲ್ಪಟ್ಟಿದೆ. ಅದಕ್ಕೆ ಬೆಂಬಲ ನೀಡುವ ಯಾವ ಸ್ತಂಬಗಳೂ ಇರಲಿಲ್ಲ. ಶಾಶ್ವತವಾಗಿದ್ದ ಅದಕ್ಕೆ ಕ್ಷಯವೆಂಬುದೇ ತಿಳಿದಿಲ್ಲ. ಅದು ಚಂದ್ರ, ಸೂರ್ಯ ಮತ್ತು ಅಗ್ನಿಗೂ ಅಧಿಕ ಸ್ವಯಂಪ್ರಭೆಯನ್ನು ಹೊಂದಿದೆ. ನಾಕದ ಸೂರಿನಲ್ಲಿ ಭಾಸ್ಕರನಿಗೆ ಬೆಳಕನ್ನು ನೀಡುತ್ತಿದೆಯೋ ಎನ್ನುವಂತೆ ಬೆಳಗುತ್ತದೆ. ಅದರಲ್ಲಿ ದೇವಮಾಯೆಯಿಂದ ನಿಲುವಿಲ್ಲದೇ ಲೋಕಗಳನ್ನು ಸೃಷ್ಟಿಮಾಡುತ್ತಿರುವ ಲೋಕಪಿತಾಮಹ ಭಗವಾನನು ತಾನೊಬ್ಬನೇ ಕುಳಿತಿದ್ದಾನೆ. ಪ್ರಜಾಪತಿಗಳಾದ ದಕ್ಷ, ಪ್ರಚೇತ, ಪುಲಹ, ಮರೀಚಿ, ಕಶ್ಯಪ, ಭೃಗು, ಅತ್ರಿ, ವಸಿಷ್ಠ, ಗೌತಮ, ಅಂಗಿರಸ, ಮನು, ಅಂತರಿಕ್ಷ, ವಿಧ್ಯೆ, ವಾಯು, ಅಗ್ನಿ, ಜಲ, ಭೂಮಿ, ಶಬ್ಧ, ಸ್ಪರ್ಷ, ರೂಪ, ರಸ, ಗಂಧ, ಪ್ರಕೃತಿ, ವಿಕಾರ ಮತ್ತು ವಿಶ್ವದ ಅನ್ಯ ಕಾರಣಗಳು ಆ ಪ್ರಭುವಿನ ಸೇವೆಮಾಡುತ್ತಾರೆ. ನಕ್ಷತ್ರಗಳ ಸಹಿತ ಚಂದ್ರಮ, ಗಭಸ್ತಿಮಾನ ಆದಿತ್ಯ, ವಾಯು, ಋತುಗಳು, ಸಂಕಲ್ಪ, ಪ್ರಾಣ, ಇವು ಮತ್ತು ಅನ್ಯ ಬಹಳಷ್ಟು – ಅರ್ಥ, ಧರ್ಮ, ಕಾಮ, ಹರ್ಷ, ದ್ವೇಶ, ತಪಸ್ಸು, ದಮ - ಎಲ್ಲವೂ ಸ್ವಯಂಭುವಿನ ಉಪಸ್ಥಿತಿಯಲ್ಲಿದ್ದಾರೆ. ಅಲ್ಲಿಗೆ ಗಂಧರ್ವರು ಅಪ್ಸರೆಯರು ಒಟ್ಟಿಗೇ ಬರುತ್ತಾರೆ. ಇಪ್ಪತ್ತೇಳು ಮತ್ತು ಅನ್ಯ ಲೋಕಪಾಲರೆಲ್ಲರೂ, ಶುಕ್ರ, ಬೃಹಸ್ಪತಿ, ಬುಧ, ಅಂಗಾರಕ, ಶನೈಶ್ಚರ, ರಾಹು ಮೊದಲಾದ ಗ್ರಹಗಳೆಲ್ಲರೂ, ಮಂತ್ರ, ರಥಂತರ, ಹರಿಮಾನ್, ವಸುಮಾನ್, ಅವರ ರಾಜನೊಂದಿಗೆ ಆದಿತ್ಯರು, ಎರಡೆರಡು ಹೆಸರುಗಳಿಂದ ಕರೆಯಲ್ಪಡುವ ಎಲ್ಲ ದೇವತೆಗಳೂ, ಮರುತ, ವಿಶ್ವಕರ್ಮ, ವಸವ, ಎಲ್ಲ ಪಿತೃಗಣಗಳು, ಸರ್ವ ಹವಿಸ್ಸುಗಳು, ಋಗ್ವೇದ, ಸಾಮವೇದ, ಯಜುರ್ವೇದ, ಅಥರ್ವವೇದ, ಪರ್ವಗಳು, ಸರ್ವ ಇತಿಹಾಸಗಳು, ಉಪವೇದಗಳು, ವೇದಾಂಗಗಳು, ಗ್ರಹಗಳು, ಯಜ್ಞಗಳು, ಸೋಮಗಳು, ಸರ್ವ ದೇವತೆಗಳು, ದುರ್ಗತರಣೀ ಸಾವಿತ್ರೀ, ಸಪ್ತವಿಧ ವಾಣೀ, ಮೇಧಾ, ಧೃತಿ, ಶ್ರುತಿ, ಪ್ರಜ್ಞಾ, ಬುದ್ಧಿ, ಯಶಸ್ಸು, ಕ್ಷಮಾ, ಸಾಮ, ಸ್ತುತಿ, ಶಸ್ತ್ರಗಳು, ಗಾಥಗಳು, ವಿವಿಧ ಭಾಷೆಗಳು, ತರ್ಕಯುಕ್ತ ಭಾಗಗಳು, ಕ್ಷಣ, ಲವ, ಮುಹೂರ್ತ, ಹಗಲು, ರಾತ್ರಿ, ಮತ್ತು ಅರ್ಧಮಾಸ, ಮಾಸ, ಆರೂ ಋತುಗಳು, ಸಂವತ್ಸರಗಳು, ಪಂಚಯುಗಗಳು, ಚತುರ್ವಿಧ ಆಹೋರಾತ್ರಿಗಳು, ದಿವ್ಯ, ನಿತ್ಯವೂ ಅಕ್ಷಯ ಮತ್ತು ಅವ್ಯಯ ಕಾಲಚಕ್ರ, ಅದಿತಿ, ದಿತಿ, ದನು, ವಿನತ, ಇರಾ, ಕದ್ರು, ಕಾಲಕ, ಸುರಭಿ, ದೇವಿ ಸರಮಾ, ಗೌತಮೀ, ಆದಿತ್ಯ, ವಸವ, ರುದ್ರ, ಮರುತ, ಅಶ್ವಿನೀ ದೇವತೆಗಳು, ವಿಶ್ವೇದೇವರು, ಸಾದ್ಯರು, ಪಿತೃಗಳು, ಮನಸ್ಸಿನಲ್ಲಿಯೇ ಹುಟ್ಟಿದವರು, ರಾಕ್ಷಸರು, ಪಿಶಾಚರು, ದಾನವರು, ಗುಹ್ಯಕರು, ಸುಪರ್ಣ, ನಾಗ ಮತ್ತು ಇತರ ಪಶುಗಳು ಪಿತಾಮಹನ ಸೇವೆ ಮಾಡುತ್ತಾರೆ. ಅಲ್ಲಿ ದೇವ ನಾರಾಯಣನಿದ್ದಾನೆ, ದೇವರ್ಷಿಗಳು, ವಾಲಖಿಲ್ಯ ಋಷಿಗಳು, ಯೋನಿಗಳಲ್ಲಿ ಹುಟ್ಟಿದವರು, ಅಯೋನಿಜರು ಎಲ್ಲರೂ ಇದ್ದಾರೆ. ಈ ತ್ರಿಲೋಕದಲ್ಲಿ ಕಾಣುತ್ತಿರುವ ಏನೆಲ್ಲ ಸ್ಥಾವರ ಜಂಗಮಗಳಿವೆಯೋ ಅವೆಲ್ಲವನ್ನೂ ನಾನು ಅಲ್ಲಿ ನೋಡಿದ್ದೇನೆ ಎಂದು ತಿಳಿ. ಎಂಭತ್ತು ಸಾವಿರ ಊರ್ಧ್ವರೇತಸ ಯತಿಗಳು, ಮಕ್ಕಳನ್ನು ಪಡೆದಿರುವ ಐವತ್ತು ಸಾವಿರ ಋಷಿಗಳು, ಮತ್ತು ಸರ್ವ ದಿವೌಕಸರೂ ತಮಗಿಷ್ಟ ಬಂದಂತೆ ಅಲ್ಲಿಗೆ ಬಂದು ಅವನಿಗೆ ಶಿರಸಾ ವಂದಿಸಿ ಬಂದಹಾಗೆ ಮರಳಿ ಹೋಗುವವರನ್ನು ಕಂಡಿದ್ದೇನೆ. ಅತಿಥಿಗಳಾಗಿ ಆಗಮಿಸಿದ ದೇವತೆಗಳು, ದೈತ್ಯರು, ನಾಗಗಳು, ಮುನಿಗಳು, ಯಕ್ಷರು, ಸುಪರ್ಣರು, ಕಾಲೇಯರು, ಗಂಧರ್ವರು, ಅಪ್ಸರೆಯರಿಗೆ ಅಮಿತಬುದ್ಧಿ ಮಹಾಭಾಗ ಲೋಕಪಿತಾಮಹ ಸರ್ವಭೂತಗಳಿಗೂ ದಯಾವಂತ ಬ್ರಹ್ಮನು ಯಥಾರ್ಹವಾಗಿ ಪ್ರೀತಿ ತೋರಿಸುತ್ತಾನೆ. ಆ ವಿಶ್ವಾತ್ಮ ಸ್ವಯಂಭು ಅಮಿತಪ್ರಭನು ಅವರನ್ನು ಬರಮಾಡಿಕೊಂಡು ಸಾಂತ್ವನದಾಯಕ ಆನಂದವನ್ನು ನೀಡುತ್ತಾನೆ. ಬರುವ ಮತ್ತು ಹೋಗುತ್ತಿರುವ ಅತಿಥಿಗಳಿಂದ ಆ ಸುಖಪ್ರದ ಸಭೆಯು ಸದಾ ಅತ್ಯಂತ ಬಿಡುವಿಲ್ಲದಂತಿರುತ್ತದೆ. ಬ್ರಹ್ಮರ್ಷಿಗಣಸೇವಿತ, ಸರ್ವತೇಜೋಮಯಿ, ಆಯಾಸವನ್ನು ದೂರಮಾಡುವ, ಬ್ರಹ್ಮನ ಶ್ರೀಯಿಂದ ದೀಪ್ಯಮಾನವಾಗಿರುವ ಆ ದಿವ್ಯ ಸಭೆಯು ಮಂಗಳಕರವಾದುದು. ಸರ್ವಲೋಕದಲ್ಲಿ ಅದರಂತೆ ಕಾಣುವ ಸಭೆಯು ಹೇಗೆ ದುರ್ಲಭವೋ ಹಾಗೆ ಮನುಷ್ಯರಲ್ಲಿ ನಿನ್ನ ಈ ಸಭೆಯು ದುರ್ಲಭ. ದೇವತೆಗಳಲ್ಲಿ ನಾನು ಇದಕ್ಕೂ ಮೊದಲು ನೋಡಿದ ಸಭೆಗಳಿವು. ನಿನ್ನ ಈ ಸಭೆಯು ಮನುಷ್ಯ ಲೋಕದಲ್ಲಿ ಸರ್ವಶ್ರೇಷ್ಠತಮವಾದದ್ದು.”

ಯುಧಿಷ್ಠಿರನು ಹೇಳಿದನು:

“ಪ್ರಭೋ! ನೀನು ಹೇಳಿದಂತೆ ವೈವಸ್ವತನ ಸಭೆಯಲ್ಲಿ ಪ್ರಾಯಷಃ ಲೋಕದ ರಾಜರುಗಳೆಲ್ಲರೂ ಇದ್ದಾರೆ ಎಂದಾಯಿತು. ವರುಣನ ಸಭೆಯಲ್ಲಿ ನಾಗಗಳು, ದೈತ್ಯೇಂದ್ರರು, ನದಿಗಳು ಮತ್ತು ಸಾಗರಗಳು ಇದ್ದಾರೆ ಎಂದು ನೀನು ಹೇಳಿದೆ. ಹಾಗೆಯೇ ಧನಪತಿಯ ಸಭೆಯಲ್ಲಿ ಯಕ್ಷರು, ಗುಹ್ಯಕರು, ರಾಕ್ಷಸರು, ಗಂಧರ್ವರು, ಅಪ್ಸರೆಯರು ಮತ್ತು ಭಗವಾನ್ ವೃಷಧ್ವಜನು ಇದ್ದಾರೆ. ಮತ್ತು ಪಿತಾಮಹನ ಸಭೆಯಲ್ಲಿ ಮಹರ್ಷಿಗಳು, ಸರ್ವ ದೇವತೆಗಳು ಮತ್ತು ಸರ್ವ ಶಾಸ್ತ್ರಗಳು ಇವೆಯೆಂದು ಹೇಳಿದೆ. ಶತಕ್ರತುವಿನ ಸಭೆಯಲ್ಲಿ ದೇವತೆಗಳು, ಮುನಿಗಳು, ನಿರ್ದಿಷ್ಟ ಗಂಧರ್ವರು ಮತ್ತು ವಿವಿಧ ಮಹರ್ಷಿಗಳು ಇದ್ದಾರೆಂದು ಹೇಳಿದೆ. ಆದರೆ ನೀನು ಮಹಾತ್ಮ ದೇವೇಂದ್ರನ ಸಭೆಯಲ್ಲಿ ಒಬ್ಬನೇ ರಾಜರ್ಷಿ ಹರಿಶ್ಚಂದ್ರನು ಇದ್ದಾನೆಂದು ಹೇಳಿದೆ. ಅವನು ಏನು ಮಾಡಿದನು ಅಥವಾ ತಪಸ್ಸನ್ನು ಮಾಡಿದನೇ ಅಥವಾ ವ್ರತಗಳನ್ನು ಮಾಡಿದನೇ? ಯಾವುದರಿಂದ ಆ ಮಹಾಯಶನು ಶಕ್ರನೊಂದಿಗೆ ಸ್ಪರ್ಧಿಸುತ್ತಿದ್ದಾನೆ? ಮತ್ತು ಪಿತೃಲೋಕಕ್ಕೆ ಹೋದಾಗ ನೀನು ನನ್ನ ತಂದೆ ಮಹಾಭಾಗ ಪಾಂಡುವನ್ನು ನೋಡಿದೆ. ಅವನೊಂದಿಗೆ ಭೇಟಿಯು ಹೇಗಿತ್ತು? ಅವನು ನಿನ್ನಲ್ಲಿ ಏನು ಹೇಳಿದನು ಎನ್ನುವುದನ್ನು ತಿಳಿಯಲು ಬಯಸುತ್ತೇನೆ. ನಿನ್ನಿಂದ ಸರ್ವವನ್ನೂ ಕೇಳಿ ತಿಳಿದುಕೊಳ್ಳಬೇಕೆಂಬ ಕುತೂಹಲವಾಗಿದೆ.”

ನಾರದನು ಹೇಳಿದನು:

“ರಾಜೇಂದ್ರ! ಹರಿಶ್ಚಂದ್ರನ ಕುರಿತು ಕೇಳಿದ್ದೀಯಾದ್ದರಿಂದ ನಿನಗೆ ಆ ಧೀಮಂತನ ಮಹಾತ್ಮೆಯನ್ನು ಹೇಳುತ್ತೇನೆ. ಆ ಬಲವಂತ ರಾಜನು ಸರ್ವಮಹೀಕ್ಷಿತರ ಸಾಮ್ರಾಟನಾಗಿದ್ದು ಸರ್ವ ಮಹೀಪಾಲರೂ ಅವನ ಆಜ್ಞೆಯನ್ನು ಪಾಲಿಸುತ್ತಿದ್ದರು. ಅವನು ಏಕಾಂಗಿಯಾಗಿ ಹೇಮವಿಭೂಷಿತ ರಥವನ್ನೇರಿ ಎಳೂ ದ್ವೀಪಗಳನ್ನು ತನ್ನ ಶಸ್ತ್ರಪ್ರತಾಪದಿಂದ ಗೆದ್ದನು. ಶೈಲವನಕಾನನಗಳ ಸಹಿತ ಸರ್ವ ಮಹಿಯನ್ನೂ ಗೆದ್ದು ಅವನು ಮಹಾಕ್ರತು ರಾಜಸೂಯವನ್ನು ನೆರವೇರಿಸಿದನು. ಅವನ ಆಜ್ಞೆಯಂತೆ ಸರ್ವ ಮಹೀಪಾಲರೂ ಧನ ಮತ್ತು ಅನ್ಯ ಸಂಪತ್ತುಗಳನ್ನು ತಂದು ಆ ಯಜ್ಞದಲ್ಲಿ ದ್ವಿಜರ ಸೇವೆ ಮಾಡಿದರು. ಆ ನರೇಶ್ವರನು ಯಾಜಕರಿಗೆ ಪ್ರೀತಿಯಿಂದ ಅವರು ಕೇಳಿದುದಕ್ಕಿಂತಲೂ ಐದು ಪಟ್ಟು ಧನವನ್ನು ಅಲ್ಲಿಯೇ ಅದೇ ಸಮಯದಲ್ಲಿಯೇ ದಾನವನ್ನಾಗಿತ್ತನು. ಯಜ್ಞವು ಮುಗಿದ ನಂತರ ಅವನು ನಾನಾ ದಿಕ್ಕುಗಳಿಂದ ಬಂದು ಸೇರಿದ್ದ ಬ್ರಾಹ್ಮಣರನ್ನು ವಿವಿಧ ಸಂಪತ್ತುಗಳನ್ನಿತ್ತು ತೃಪ್ತಿಪಡಿಸಿದನು. ವಿವಿಧ ಭಕ್ಷ್ಯ ಭೋಜ್ಯಗಳಿಂದ ರತ್ನಗಳ ರಾಶಿಗಳಿಂದ ಮುದಿತಗೊಂಡ ದ್ವಿಜರು ಸಂತೋಷದಿಂದ ನೃಪರೆಲ್ಲರಲ್ಲಿ ನೀನು ಅಧಿಕ ತೇಜಸ್ವಿ ಮತ್ತು ಯಶಸ್ವಿ ಎಂದು ಹೇಳಿದರು. ಈ ಕಾರಣಗಳಿಂದ ಹರಿಶ್ಚಂದ್ರನು ಸಹಸ್ರಾರು ರಾಜರುಗಳನ್ನೂ ಮೀರಿ ಬೆಳಗುತ್ತಾನೆ ಎನ್ನುವುದನ್ನು ತಿಳಿ. ಆ ಮಹಾಯಜ್ಞವನ್ನು ಮುಗಿಸಿದ ಪ್ರತಾಪವಾನ್ ಹರಿಶ್ಚಂದ್ರನು ಆ ಶುಭಸಾಂರಾಜ್ಯದ ಅಭಿಷಿಕ್ತನಾದನು. ಮಹಾಕ್ರತು ರಾಜಸೂಯವನ್ನು ಯಾಜಿಸುವ ಅನ್ಯ ಮಹೀಪಾಲರೂ ಮಹೇಂದ್ರನೊಂದಿಗೆ ಸಂತೋಷಪಡುತ್ತಾರೆ. ಯಾರು ಸಂಗ್ರಾಮದಲ್ಲಿ ಪಲಾಯನಮಾಡದೇ ನಿಧನವನ್ನು ಹೊಂದುತ್ತಾರೋ ಅವರೂ ಕೂಡ ಅವನ ಸಭೆಯನ್ನು ಸೇರಿ ಆನಂದಿಸುತ್ತಾರೆ. ಮತ್ತು ಯಾರು ತೀವ್ರ ತಪಸ್ಸಿನ ಮೂಲಕ ಇಲ್ಲಿ ದೇಹವನ್ನು ತ್ಯಜಿಸುತ್ತಾರೋ ಅವರೂ ಕೂಡ ಅವನ ಆಸ್ಥಾನವನ್ನು ಸೇರಿ ನಿತ್ಯವೂ ಶ್ರೀಮಂತರಾಗಿ ಬೆಳಗುತ್ತಾರೆ. ಹರಿಶ್ಚಂದ್ರನ ಶ್ರಿಯನ್ನು ನೋಡಿದ ನೃಪತಿ ಪಾಂಡುವು ವಿಸ್ಮಿತನಾದನು. ನಿನ್ನ ವಶದಲ್ಲಿರುವ ಭ್ರಾತರ ಮೂಲಕ ಮಹಿಯನ್ನು ಗೆಲ್ಲಲು ಸಮರ್ಥನಾಗಿದ್ದೀಯೆ. ರಾಜಸೂಯ ಕ್ರತುವನ್ನು ಕೈಗೊಳ್ಳತಕ್ಕದ್ದು ಎಂದು ಅವನು ಹೇಳಿದನು. ಅವನ ಸಂಕಲ್ಪದಂತೆ ಮಾಡು. ಪೂರ್ವಜರ ಸಹಿತ ಅವನು ಮಹೇಂದ್ರನ ಲೋಕವನ್ನು ಸೇರುತ್ತಾನೆ. ಈ ಕ್ರತುವಿನಲ್ಲಿ ಮಹಾ ವಿಘ್ನಗಳು ಬಂದೊದಗುತ್ತವೆ ಎಂದು ನಂಬಿಕೆಯಿದೆ. ಯಜ್ಞಗಳನ್ನು ನಾಶಪಡಿಸುವ ಬ್ರಹ್ಮರಾಕ್ಷಸರು ಇದರಲ್ಲಿರುವ ದುರ್ಬಲತೆಯನ್ನು ಹುಡುಕಿಕೊಂಡಿರುತ್ತಾರೆ. ಪೃಥ್ವಿಕ್ಷಯಕಾರಕ ಯುದ್ಧವು ಮುಂದೆಬರುತ್ತದೆ ಮತ್ತು ಅಂಥಹ ಕ್ಷಯವನ್ನು ಸೂಚಿಸುವ ನಿಮಿತ್ತಗಳು ಕೆಲವು ಕಂಡುಬರುತ್ತವೆ. ಇದರ ಕುರಿತು ಚೆನ್ನಾಗಿ ಯೋಚಿಸು. ಯಾವುದು ಕ್ಷಮವೆನಿಸುತ್ತದೆಯೋ ಅದನ್ನು ಮಾಡು. ನಿತ್ಯವೂ ಚಾತುರ್ವರ್ಣ್ಯದ ರಕ್ಷಣೆಯನ್ನು ಮರೆಯಬೇಡ. ನೀನು ಕೂಡ ವೃದ್ಧಿ ಹೊಂದು, ಸಂತೋಷಪಡು, ಮತ್ತು ದ್ವಿಜರಿಗೆ ದಾನಗಳನ್ನಿತ್ತು ತೃಪ್ತಿಪಡಿಸು. ನೀನು ಕೇಳಿದ್ದುದೆಲ್ಲವನ್ನೂ ವಿಸ್ತಾರವಾಗಿ ನಾನು ನಿನಗೆ ಹೇಳಿದ್ದೇನೆ. ನಿನ್ನಿಂದ ಬೀಳ್ಕೊಂಡು ನಾನು ಈಗ ದಾಶಾರ್ಹನಗರಿಯ ಕಡೆ ಹೋಗುತ್ತೇನೆ.

ಪಾರ್ಥನಿಗೆ ಈ ರೀತಿ ಹೇಳಿ ನಾರದನು ತನ್ನ ಜೊತೆಗಿದ್ದ ಋಷಿಗಳೊಂದಿಗೆ ಹೊರಟು ಹೋದನು. ನಾರದನು ಹೋದ ನಂತರ ಪಾರ್ಥನು ಭ್ರಾತೃಗಳ ಸಹಿತ ಕ್ರತುಶ್ರೇಷ್ಠ ರಾಜಸೂಯದ ಕುರಿತು ಚಿಂತನೆಮಾಡಿದನು.

Leave a Reply

Your email address will not be published. Required fields are marked *