ರಾಜಸೂಯದ ಕುರಿತು ಯುಧಿಷ್ಠಿರನ ಸಮಾಲೋಚನೆ; ಜರಾಸಂಧವಧೆ
ನಾರದ ಋಷಿಯ ಮಾತನ್ನು ಕೇಳಿ ಯುಧಿಷ್ಠಿರನು ನಿಟ್ಟುಸಿರೆಳೆದು, ರಾಜಸೂಯವನ್ನು ಹೇಗೆ ನೆರವೇರಿಸಬಹುದು ಎಂದು ಚಿಂತಿಸಿದನು ಮತ್ತು ಯಾವುದೇ ರೀತಿಯ ಸಾಂತ್ವನವನ್ನು ಪಡೆಯಲಿಲ್ಲ. ಮಹಾತ್ಮ ರಾಜರ್ಷಿಗಳ ಮಹಿಮೆಗಳನ್ನು ಕೇಳಿ ಮತ್ತು ಈ ಯಾಗಕರ್ಮದಿಂದ ಅವರಿಗೆ ಪುಣ್ಯಲೋಕ ಪ್ರಾಪ್ತಿಯಾದುದನ್ನು ನೋಡಿ, ಅದರಲ್ಲೂ ವಿಶೇಷವಾಗಿ ರಾಜರ್ಷಿ ಹರಿಶ್ಚಂದ್ರನು ಯಜಿಸಿದ ರಾಜಸೂಯ ಯಜ್ಞವನ್ನು ಕೈಗೊಳ್ಳಲು ಬಯಸಿದನು. ನಂತರ ಯುಧಿಷ್ಠಿರನು ಸಭಾಸದರೆಲ್ಲರನ್ನೂ ಅರ್ಚಿಸಿ, ತಿರುಗಿ ಅವರೆಲ್ಲರಿಂದ ಗೌರವವಿಸಲ್ಪಟ್ಟು, ಯಜ್ಞದ ಕುರಿತು ಯೋಚಿಸತೊಡಗಿದನು. ಬಹಳಷ್ಟು ಯೋಚನೆಮಾಡಿದ ನಂತರ ಆ ಕುರುವೃಷಭ ರಾಜೇಂದ್ರನು ರಾಜಸೂಯ ಕ್ರತುವನ್ನು ಕೈಗೊಳ್ಳಲು ಮನಸ್ಸು ಮಾಡಿದನು. ಪುನಃ ಧರ್ಮವನ್ನೇ ಅನುಪಾಲಿಸುತ್ತಿದ್ದ ಆ ಅದ್ಭುತವೀರ್ಯಜನು ಇದು ಸರ್ವಲೋಕಗಳಿಗೂ ಹಿತವಾದದ್ದುದೇ ಎಂದು ಯೋಚಿಸಿದನು. ಸರ್ವ ಧರ್ಮವಿದರಲ್ಲಿ ವರಿಷ್ಠ ಯುಧಿಷ್ಠಿರನು ಸರ್ವ ಪ್ರಜೆಗಳನ್ನೂ ಗಮನದಲ್ಲಿಟ್ಟುಕೊಂಡು ಯಾರನ್ನೂ ಬಿಡದೇ ಎಲ್ಲರಿಗೂ ಹಿತವಾದುದನ್ನು ಕೈಗೊಂಡನು. ಹೀಗೇ ಮುಂದುವರೆದು ಅವನು ತನ್ನ ಜನರಿಗೆ ತಂದೆಯಂತೆ ಆಶ್ವಾಸನೆಗಳನ್ನಿತ್ತನು ಮತ್ತು ಅವನನ್ನು ದ್ವೇಷಿಸುವವರು ಯಾರೂ ಇಲ್ಲದೇ ಹೋದುದರಿಂದ ಅವನು ಅಜಾತಶತ್ರು ಎಂದು ಕರೆಯಿಸಿಕೊಂಡನು. ಮಾತನಾಡುವವರಲ್ಲಿ ಶ್ರೇಷ್ಠ ಅವನು ತನ್ನ ಮಂತ್ರಿಗಳು ಮತ್ತು ಭ್ರಾತೃಗಳನ್ನು ಕರೆಯಿಸಿ ರಾಜಸೂಯದ ಕುರಿತು ಪುನಃ ಪುನಃ ಕೇಳುತ್ತಿದ್ದನು. ಈ ರೀತಿಯ ಪ್ರಶ್ನೆ ಬರಲು ಅಲ್ಲಿ ಸೇರಿದ್ದ ಮಂತ್ರಿಗಳು ಯಜ್ಞವನ್ನು ಕೈಗೊಳ್ಳಲು ಉತ್ಸುಕನಾಗಿದ್ದ ಮಹಾಪ್ರಾಜ್ಞ ಯುಧಿಷ್ಠಿರನಿಗೆ ಹೇಳಿದರು:
“ಈ ರೀತಿ ಅಭಿಷಿಕ್ತನಾಗುವುದರಿಂದ ನೃಪತಿಯು ವರುಣನ ಸ್ಥಾನವನ್ನು ಪಡೆಯುತ್ತಾನೆ. ಅವನು ಆಗ ರಾಜನಾಗಿದ್ದರೂ ಸಂಪೂರ್ಣ ಸಮ್ರಾಟನ ಸ್ಥಾನವನ್ನು ಪಡೆಯುತ್ತಾನೆ. ನೀನು ಅಂಥಹ ಸಮ್ರಾಟ ಸ್ಥಾನಕ್ಕೆ ಅರ್ಹನಾಗಿದ್ದುದರಿಂದ ರಾಜಸೂಯದ ಸಮಯ ಪ್ರಾಪ್ತವಾಗಿದೆ ಎಂದು ನಿನ್ನ ಸುಹೃದಯರು ಅಭಿಪ್ರಾಯ ಪಡುತ್ತಾರೆ. ಸಂಶಿತವ್ರತರು ಸಾಮವೇದದ ಮೂಲಕ ಆರು ಅಗ್ನಿಗಳನ್ನು ಸ್ಥಾಪಿಸುವ ಈ ಯಜ್ಞಕ್ಕೆ ಕ್ಷತ್ರಿಯರ ಸಮ್ಮತವಿರಬೇಕಾಗಿದ್ದುದರಿಂದ ತನ್ನದೇ ಆದ ಸಮಯವೆಂದಿಲ್ಲ. ಎಲ್ಲ ಕ್ರಮಗಳನ್ನೂ ಆಹುತಿಗಳನ್ನೂ ನಡೆಸಿ ಕ್ರತುವನ್ನು ಪೂರೈಸಿ ಅಭಿಷಿಕ್ತನಾದ ನಂತರವೇ ಅವನನ್ನು ಸರ್ವಜಿತುವೆಂದು ಕರೆಯಲಾಗುತ್ತದೆ. ನಾವೆಲ್ಲರೂ ನಿನ್ನ ವಶದಲ್ಲಿದ್ದೇವೆ. ನೀನು ಸಮರ್ಥನಾಗಿದ್ದೀಯೆ. ವಿಚಾರಮಾಡದೇ ರಾಜಸೂಯಕ್ಕೆ ಮನಸ್ಸು ಮಾಡು.”
ಹೀಗೆ ಅವನ ಸರ್ವ ಸುಹೃದಯರೂ ಪುನಃ ಪುನಃ ಹೇಳಿದರು. ಅಂಥಹ ಧಾರ್ಮಿಕ, ಧೃಷ್ಠ, ಇಷ್ಠ, ಮತ್ತು ವರಿಷ್ಠ ಮಾತುಗಳನ್ನು ಅವರಿಂದ ಕೇಳಿದ ವಿಶಾಂಪತಿ ಪಾಂಡವನು ಅದನ್ನು ಸ್ವೀಕರಿಸಿದನು. ಸುಹೃದಯರ ಮಾತುಗಳನ್ನು ಕೇಳಿ ಮತ್ತು ತಾನು ಸಮರ್ಥನೆಂದು ತಿಳಿದ ಅವನು ಪುನಃ ಪುನಃ ಮನಸ್ಸಿನಲ್ಲಿಯೇ ರಾಜಸೂಯದ ಕುರಿತು ಯೋಚಿಸಿದನು. ಆ ಮಹಾತ್ಮನು ಪುನಃ ಪುನಃ ಭ್ರಾತೃಗಳೊಡನೆ, ಧೌಮ್ಯ-ದ್ವೈಪಾಯನರಂಥಹ ಧೀಮಂತ ಋತ್ವಿಗರೊಡನೆ, ಮತ್ತು ಮಂತಿಗಳೊಡನೆ ಮಂತ್ರಾಲೋಚನೆ ಮಾಡಿದನು. ಯುಧಿಷ್ಠಿರನು ಹೇಳಿದನು:
“ಶ್ರದ್ಧೆಯಿಂದ ಹೇಳುತ್ತಿರುವ ಈ ಸಮ್ರಾಟಸ್ಥಾನವನ್ನು ನೀಡುವ ಸುಕ್ರತು ರಾಜಸೂಯವು ಹೇಗೆ ನಡೆಯಬಹುದು?”
ಆ ರಾಜನು ಹೀಗೆ ಹೇಳಲು ಧರ್ಮಾತ್ಮ ಯುಧಿಷ್ಠಿರನಿಗೆ ಪ್ರತಿಸಲವೂ
“ಧರ್ಮಜ್ಞ! ರಾಜಸೂಯ ಮಹಾಕ್ರತುವಿಗೆ ನೀನು ಅರ್ಹ!”
ಎಂದು ಹೇಳುತ್ತಿದ್ದರು. ಋತ್ವಿಗ ಋಷಿಗಳು ಈ ರೀತಿ ನೃಪತಿಗೆ ಹೇಳಲು ಮಂತ್ರಿಗಳು ಮತ್ತು ಸಹೋದರರು ಆ ಮಾತನ್ನು ಸನ್ಮಾನಿಸಿ ಸ್ವಾಗತಿಸಿದರು. ಮಹಾಪ್ರಾಜ್ಞ ರಾಜ ಪಾರ್ಥನಾದರೂ ಲೋಕಗಳ ಹಿತವನ್ನೇ ಬಯಸಿ ಪುನಃ ತನ್ನ ಮನಸ್ಸಿನಲ್ಲಿಯೇ ವಿಮರ್ಶಿಸಿದನು. ತನ್ನ ಸಾಮರ್ಥ್ಯವನ್ನು ಪರಿಗಣಿಸಿ, ದೇಶ ಕಾಲಗಳನ್ನು ತುಲನೆ ಮಾಡಿ, ಆದಾಯ ವ್ಯಯಗಳನ್ನು ಪರಿಶೀಲಿಸಿ ಕಾರ್ಯವನ್ನು ಕೈಗೊಳ್ಳುವ ಪ್ರಾಜ್ಞನು ಎಂದೂ ನಾಶವಾಗುವುದಿಲ್ಲ. ತನ್ನನ್ನು ಆಪತ್ತಿನಲ್ಲಿ ತಂದುಕೊಳ್ಳಲು ಯಜ್ಞ ಸಮಾರಂಭವನ್ನು ಕೈಗೊಳ್ಳಬಾರದು ಮತ್ತು ಈ ಕಾರ್ಯದಲ್ಲಿ ಪ್ರಯತ್ನ ಬೇಕು ಎಂದು ತಿಳಿದ ಅವನು ಆ ಕಾರ್ಯದ ನಿಶ್ಚಿತಾರ್ಥಕ್ಕಾಗಿ ಮನಸ್ಸಿನಲ್ಲಿಯೇ ಸರ್ವಲೋಕಗಳಲ್ಲಿ ಶ್ರೇಷ್ಠನೆಂದು ತಿಳಿದ ಜನಾರ್ದನ ಹರಿ ಕೃಷ್ಣನಲ್ಲಿಗೆ ಹೋದನು. ಪಾಂಡವನು ದೇವಕರ್ಮಗಳಿಗೆ ಸಮ ಕಾರ್ಯಗಳನ್ನೆಸಗಿದ ಆ ಮಹಾಬಾಹು, ಹುಟ್ಟಿಲ್ಲದ ಆದರೂ ಸ್ವ ಇಚ್ಛೆಯಿಂದ ಮನುಷ್ಯರಲ್ಲಿ ಜನ್ಮ ತಾಳಿದ ಅಪ್ರಮೇಯನನ್ನು ನೆನೆದನು. ಅವನಿಗೆ ತಿಳಿಯದೇ ಇದ್ದದ್ದು ಏನೂ ಇಲ್ಲ. ಅವನ ಕರ್ಮದಿಂದ ಹುಟ್ಟದೇ ಇರುವಂಥಹುದು ಏನೂ ಇಲ್ಲ. ಅವನು ಸಹಿಸದೇ ಇರುವಂಥಹುದು ಯಾವುದೂ ಇಲ್ಲ ಎಂದು ಕೃಷ್ಣನ ಕುರಿತು ಅವನು ಯೋಚಿಸಿದನು.
ಅಂತಿಮ ನಿರ್ಧಾರಕ್ಕೆ ಬಂದ ನಂತರ ಪಾರ್ಥ ಯುಧಿಷ್ಠಿರನು ಬೇಗನೆ ಗುರುವಿಗೆ ಕಳುಹಿಸುವಂತೆ ದೂತನನ್ನು ಆ ಸರ್ವ ಭೂತಗಳ ಗುರುವಿಗೆ ಕಳುಹಿಸಿದನು. ಶೀಘ್ರರಥದಲ್ಲಿ ಬೇಗನೇ ಯಾದವರನ್ನು ತಲುಪಿದ ದೂತನು ದ್ವಾರಕಾವಾಸಿ ಕೃಷ್ಣನನ್ನು ದ್ವಾರವತಿಯ ಮನೆಯಲ್ಲಿ ಕಂಡನು. ತನ್ನನ್ನು ನೋಡಲು ಬಯಸಿದ ಪಾರ್ಥನನ್ನು ನೋಡುವ ಆಸೆಯಿಂದ ಅಚ್ಯುತನು ಇಂದ್ರಸೇನನನ್ನೊಡಗೊಂಡು ಇಂದ್ರಪ್ರಸ್ಥಕ್ಕೆ ಹೊರಟನು. ಕ್ಷಿಪ್ರವಾಹನವನ್ನೇರಿ ವಿವಿಧದೇಶಗಳನ್ನು ವೇಗವಾಗಿ ದಾಟಿ ಜನಾರ್ದನನು ಇಂದ್ರಪ್ರಸ್ಥವನ್ನು ಸೇರಿ ಪಾರ್ಥನನ್ನು ಭೇಟಿಯಾದನು. ಭ್ರಾತೃವಿನ ಮನೆಗೆ ಭ್ರಾತೃವನ್ನು ಸ್ವಾಗತಿಸುವಂತೆ ಧರ್ಮರಾಜ ಭೀಮಸೇನರು ಸ್ವಾಗತಿಸಲು ಅವನು ತನ್ನ ತಂದೆಯ ತಂಗಿಯನ್ನು ಪ್ರೀತಿಯಿಂದ ಕಂಡನು. ತನ್ನ ಪ್ರೀತಿಯ ಸುಹೃದ ಅರ್ಜುನನೊಡನೆ ರಮಿಸಿದನು ಮತ್ತು ಯಮಳರಿಂದ ಗುರುವಿಗೆ ತಕ್ಕ ಗೌರವವನ್ನು ಪಡೆದನು. ಅವನು ವಿಶ್ರಾಂತಿಯನ್ನು ಹೊಂದ ನಂತರ ಸಮಯ ಮಾಡಿಕೊಂಡು ಶುಭದೇಶದಲ್ಲಿ ಧರ್ಮರಾಜನು ಅವನನ್ನು ಬೇಟಿಮಾಡಿ ತನ್ನ ಯೋಜನೆಯ ಕುರಿತು ಹೇಳಿಕೊಂಡನು. ಯುಧಿಷ್ಠಿರನು ಹೇಳಿದನು:
“ರಾಜಸೂಯವನ್ನು ಕೈಗೊಳ್ಳುವ ಮನಸ್ಸಾಗಿದೆ. ಆದರೆ ಕೃಷ್ಣ! ನಿನಗೆ ತಿಳಿದಿದೆ ಇದನ್ನು ಕೇವಲ ಇಚ್ಛಿಸುವುದರಿಂದ ಮಾತ್ರ ನೆರವೇರಿಸಿದಂತಾಗುವುದಿಲ್ಲ. ಯಾವುದರಿಂದ ಎಲ್ಲವೂ ಸಂಭವಿಸುತ್ತವೆಯೋ ಯಾವುದನ್ನು ಎಲ್ಲೆಡೆಯೂ ಪೂಜಿಸುತ್ತಾರೋ ಮತ್ತು ಯಾವ ರಾಜನನ್ನು ಸರ್ವೇಶ್ವರನೆಂದು ಪರಿಗಣಿಸುತ್ತಾರೋ ಅದೇ ರಾಜಸೂಯ. ಸಭೆಯಲ್ಲಿ ನನ್ನ ಮಿತ್ರರು ನಾನು ರಾಜಸೂಯವನ್ನು ಮಾಡಲು ಅರ್ಹ ಎಂದಿದ್ದಾರೆ. ಆದರೆ ಇದರ ಕುರಿತು ನಿನ್ನ ಮಾತುಗಳನ್ನು ಕೇಳಿಯೇ ನಿಶ್ಚಯಿಸಬೇಕೆಂದಿದ್ದೇನೆ. ಕೆಲವರು ಮಿತ್ರತ್ವದಿಂದಾಗಿ ದೋಷವನ್ನು ಪರಿಗಣಿಸುವುದಿಲ್ಲ. ಇನ್ನು ಕೆಲವರು ಲಾಭದ ಪ್ರತೀಕ್ಷೆಯಿಂದ ಪ್ರಿಯ ಮಾತುಗಳನ್ನೇ ಆಡುತ್ತಾರೆ. ಹಾಗಾಗಿ ಜನರ ಅಭಿಪ್ರಾಯಗಳು ಅಷ್ಟೇ ಪ್ರಯೋಜನವಾಗಿರುತ್ತವೆ. ಆದರೆ ನೀನು ಕಾಮ ಕ್ರೋಧಗಳನ್ನು ತೊರೆದು ಈ ಎಲ್ಲ ಆಕಾಂಕ್ಷೆಗಳನ್ನೂ ಮೀರಿದ್ದೀಯೆ. ಈ ಲೋಕಕ್ಕೆ ಶ್ರೇಷ್ಠವಾದುದು ಏನು ಎನ್ನುವುದನ್ನು ನೀನು ಹೇಳಬೇಕು.”
ರಾಜಸೂಯದ ಕುರಿತು ಯುಧಿಷ್ಠಿರನಿಗೆ ಶ್ರೀಕೃಷ್ಣನ ಸಲಹೆ
ಶ್ರೀಕೃಷ್ಣನು ಹೇಳಿದನು:
“ಮಹಾರಾಜ! ನಿನ್ನ ಸರ್ವಗುಣಗಳಿಂದಾಗಿ ನೀನು ರಾಜಸೂಯವನ್ನು ಮಾಡಲು ಅರ್ಹನಾಗಿದ್ದೀಯೆ. ಆದರೆ, ನಿನಗೆ ಇದೆಲ್ಲ ತಿಳಿದಿದ್ದರೂ ಕೆಲವು ವಿಷಯಗಳನ್ನು ಹೇಳುತ್ತೇನೆ. ಈಗ ಕ್ಷತ್ರಿಯರೆಂದು ಯಾರು ತಿಳಿಯಲ್ಪಟ್ಟಿದ್ದಾರೋ ಅವರೆಲ್ಲರೂ ಜಾಮದಗ್ನಿ ರಾಮನು ಉಳಿಸಿದ ಕ್ಷತ್ರಿಯರಿಂದಲೇ ಹುಟ್ಟಿದ್ದಾರೆ. ಈಗಿನ ಕ್ಷತ್ರಿಯರು ತಮ್ಮ ಕುಲಸಂಕಲ್ಪಗಳನ್ನು ಅವರವರ ಮಾತಿನ ಅಧಿಕಾರದಂತೆ ಮಾಡಿಕೊಂಡಿದ್ದಾರೆ. ಈ ಭುವಿಯಲ್ಲಿರುವ ರಾಜರುಗಳ ಮತ್ತು ಇತರ ಶ್ರೇಣಿಬದ್ಧ ಕ್ಷತ್ರಿಯರು ಇಲ ಮತ್ತು ಇಕ್ಷ್ವಾಕು ವಂಶಗಳಿಂದ ಬಂದಿದ್ದವೆಂದು ಪರಿಗಣಿಸುತ್ತಾರೆ. ಇಲ ಮತ್ತು ಇಕ್ಷ್ವಾಕು ವಂಶದ ನೃಪರ ನೂರಾ ಒಂದು ಕುಲಗಳಿವೆ ಎಂದು ತಿಳಿ. ಯಯಾತಿ ಮತ್ತು ಭೋಜರ ಎರಡು ಮಹಾ ಕವಲುಗಳು ನಾಲ್ಕೂ ದಿಶೆಯಲ್ಲಿ ಹರಡಿವೆ. ಹೀಗೆ ಎಲ್ಲ ಕ್ಷತ್ರಿಯರೂ ಅವರವರ ಕುಲವನ್ನು ಗೌರವಿಸುತ್ತಾರೆ. ಮಧ್ಯ ಭೂಮಿಯನ್ನಾಳಿದ ನೂರಾಒಂದನೆಯ ಕುಲದಲ್ಲಿ ಹುಟ್ಟಿದ ಚತುರ್ಯ ಎನ್ನುವ ಓರ್ವ ರಾಜನು ಇದರಲ್ಲಿ ಮಿಥಭೇದವನ್ನು ತಂದನು. ಆ ಸಾಮ್ರಾಜ್ಯವನ್ನು ತನ್ನ ಹುಟ್ಟಿನಿಂದ ಜರಾಸಂಧನು ಪಡೆದಿದ್ದಾನೆ. ಇನ್ನೊಬ್ಬ ಪ್ರತಾಪಿ ಶಿಶುಪಾಲನು ಸಂಪೂರ್ಣವಾಗಿ ಅವನೊಂದಿಗೆ ಸೇರಿಕೊಂಡಿದ್ದಾನೆ ಮತ್ತು ಅತಿ ಬುದ್ಧಿವಂತಿಕೆಯಿಂದ ಅವನ ಸೇನಾಪತಿಯಾಗಿದ್ದಾನೆ. ಕರೂಷಾಧಿಪತಿ ಮಾಯಾಯೋದ್ಧ ಮಹಾಬಲ ವಕ್ರನು ಶಿಷ್ಯನಂತೆ ಅವನನ್ನು ಸೇರಿಕೊಂಡಿದ್ದಾನೆ. ಹಂಸ ಮತ್ತು ಡಿಂಬಕರೆಂಬ ಇಬ್ಬರು ಇತರ ಮಹಾವೀರ ಮಹಾತ್ಮರು ಆ ಮಹಾವೀರ ಜರಾಸಂಧನನ್ನು ಸೇರಿಕೊಂಡಿದ್ದಾರೆ. ಇದೇ ರೀತಿ ದಂತವಕ್ತ್ರ, ಕರೂಷ, ಕಲಭ, ಮೇಘವಾಹನರೂ ಅವನನ್ನು ಸೇರಿದ್ದಾರೆ. ಭೂತಮಣಿಯೆಂದು ಹೆಸರಾದ ಹೊಳೆಯುತ್ತಿರುವ ದಿವ್ಯ ಮಣಿಯನ್ನು ತಲೆಯ ಮೇಲೆ ಹೊತ್ತ, ಯವನಾಧಿಪರಾದ ಮುರ ಮತ್ತು ನರಕರನ್ನು ಶಿಕ್ಷಿಸಿದ, ವರುಣನಂತೆ ಅತೀವ ಬಲದಿಂದ ಪಶ್ಚಿಮ ದೇಶಗಳನ್ನು ಆಳುತ್ತಿರುವ, ನಿನ್ನ ತಂದೆಯ ಸಖ ವೃದ್ಧ ಭಗದತ್ತನು ಅವನಿಗೆ ಮಾತು ಮತ್ತು ಕರ್ಮಗಳ ಮೂಲಕ ನಮಿಸುತ್ತಾನೆ. ಆದರೆ ನಿನ್ನ ತಂದೆಯ ಸ್ನೇಹದಿಂದಾಗಿ ಮನಸ್ಸಿನಲ್ಲಿ ನಿನ್ನ ಬೆಂಬಲಿಗನಾಗಿದ್ದಾನೆ. ಭೂಮಿಯ ದಕ್ಷಿಣ-ಪಶ್ಚಿಮ ಭಾಗದಲ್ಲಿರುವ ನಿನ್ನ ಸೋದರ ಮಾವ, ಕುಂತಿವರ್ಧನ, ಶತ್ರುತಾಪನ ಶೂರ ಪುರುಜಿತುವು ಮಾತ್ರ ನಿನ್ನನ್ನು ಸ್ನೇಹದಿಂದ ಕಾಣುತ್ತಿದ್ದಾನೆ. ಹಿಂದೆ ನನ್ನಿಂದ ಹತನಾಗದ, ಪುರುಷೋತ್ತಮನೆಂದು ವಿಜ್ಞಾತನಾದ, ಚೇದಿಯಲ್ಲಿರುವ ದುರ್ಮತಿಯು ಈ ಲೋಕದಲ್ಲಿ ಪುರುಷೋತ್ತಮನು ತಾನೇ ಎಂದು ತಿಳಿದು ಮೋಹದಿಂದ ನನ್ನ ಬಿರುದನ್ನು ಇಟ್ಟುಕೊಂಡಿರುವ ವಂಗ, ಪುಂಡ್ರ ಮತ್ತು ಕಿರಾತರ ರಾಜ ಬಲಸಮನ್ಚಿತ ವಾಸುದೇವನೆಂದು ಈ ಲೋಕದಲ್ಲಿ ವಿಶ್ರುತ ಪೌಂಡ್ರಕನೂ ಕೂಡ ಜರಾಸಂಧನ ಕಡೆ ಹೋಗಿದ್ದಾನೆ. ಯುದ್ಧದಲ್ಲಿ ಜಾಮದಗ್ನಿ ಪರಶುರಾಮನಂತೆ ಶೂರನಾದ ಆಹೃತಿಯ ಸೋದರ, ತನ್ನ ವಿದ್ಯಾಬಲದಿಂದ ಪಾಂಡ್ಯ, ಕ್ರಥ ಮತ್ತು ಕೈಶಿಕರನ್ನು ಸೋಲಿಸಿದ, ಇಂದ್ರಸಖ ಬಲೀ ಭೋಜ ಚತುರ್ಯು ಭೀಷ್ಮಕನು ರಾಜ ಮಾಗಧನ ಭಕ್ತ. ಆ ಪರವೀರಹನು ಸಂಬಂಧಿಗಳಾದ ನಮ್ಮಲ್ಲಿ ಯಾವಾಗಲೂ ಪ್ರೀತಿಯಿಂದ ನಡೆದುಕೊಳ್ಳಲಿಲ್ಲ. ನಾವು ಅವನನ್ನು ಒಳ್ಳೆಯದಾಗಿ ಕಂಡರೂ ಅವನು ನಮ್ಮನ್ನು ಕೆಟ್ಟುದಾಗಿ ನೋಡುತ್ತಿದ್ದಾನೆ. ತನ್ನ ಕುಲ ಮತ್ತು ಬಲಗಳನ್ನು ಗಮನಿಸದೇ ಬೆಳಗುತ್ತಿರುವ ಯಶಸ್ಸನ್ನು ನೋಡಿ ಅವನು ಜರಾಸಂಧನ ಆಸರೆಯಲ್ಲಿದ್ದಾನೆ. ಜರಾಸಂಧನಿಂದ ಭಯಗೊಂಡು ಉತ್ತರದ ಭೋಜರೂ ಮತ್ತು ಇತರ ಹದಿನೆಂಟು ಕುಲಗಳೂ ಪಶ್ಚಿಮದ ಕಡೆ ಪಲಾಯನ ಮಾಡಿದ್ದಾರೆ. ಅವರಂತೆ ಶೂರಸೇನರು, ಭದ್ರಕಾರರು, ಬೋಧರು, ಶಾಲ್ವರು, ಪಟಚರರು, ಸುಸ್ಥರರು, ಸುಕುಟ್ಟರು, ಕುಣಿಂದರು, ಕುಂತರು, ಮತ್ತು ತಮ್ಮ ರಕ್ತಸಂಬಂಧಿಗಳೊಡನೆ ಶಾಲ್ವೇಯ ರಾಜರು, ದಕ್ಷಿಣ ಪಾಂಚಾಲರು ಮತ್ತು ಪೂರ್ವ ಕುಂತಳದ ಕೋಶಲರು ಪಲಾಯನ ಮಾಡಿದ್ದಾರೆ. ಭಯಾರ್ದಿತರಾಗಿ ಮತ್ಸ್ಯರೂ ಮತ್ತು ಸಂನ್ಯಸ್ತಪಾದರೂ ಉತ್ತರದಿಶೆಯನ್ನು ತೊರೆದು ದಕ್ಷಿಣ ದಿಕ್ಕಿನಲ್ಲಿ ವಾಸಿಸುತ್ತಿದ್ದಾರೆ. ಅದೇ ರೀತಿ ಸರ್ವ ಪಾಂಚಾಲರೂ ಜರಾಸಂಧನ ಭಯಾರ್ದಿತರಾಗಿ ತಮ್ಮ ರಾಷ್ಟ್ರಗಳನ್ನು ಸಂಪೂರ್ಣವಾಗಿ ತೊರೆದು ಎಲ್ಲ ದಿಕ್ಕುಗಳಲ್ಲಿ ಚದುರಿ ಹೋಗಿದ್ದಾರೆ. ಕೆಲವೇ ಸಮಯದ ಹಿಂದೆ ತನ್ನ ಬಾಂಧವರನ್ನೇ ತುಳಿದ ಕಂಸನು ಬಾರ್ಹದ್ರಥ ಜರಾಸಂಧನ ಇಬ್ಬರು ಪುತ್ರಿಯರನ್ನು, ಅಂದರೆ ಸಹದೇವನ ಸಹೋದರಿಯರಾದ ಅಸ್ತಿ ಮತ್ತು ಪ್ರಾಪ್ತಿಯರನ್ನು ಮದುವೆಯಾಗಿದ್ದ. ಆ ವೃಥಾಮತಿಯು ತನ್ನವರನ್ನೇ ಬಲತ್ಕಾರದಿಂದ ವಶದಲ್ಲಿರಿಸಿಕೊಂಡಿದ್ದ. ಆ ದುರಾತ್ಮನು ಭೋಜರಾಜ ವೃದ್ಧರನ್ನು ಅತಿಯಾಗಿ ಪೀಡಿಸುತ್ತಿದ್ದಾಗ ಅವರು, ತಮ್ಮನ್ನು ಉಳಿಸಿಕೊಳ್ಳುವುದಕ್ಕೋಸ್ಕರ ನಮ್ಮೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು. ಆಹುಕನ ಮಗಳು ಸುತನುವನ್ನು ಅಕ್ರೂರನಿಗಿತ್ತು, ಸಂಕರ್ಷಣ ರಾಮನೊಡನೆ ಅವನ ಬೆಂಬಲದಿಂದ ನಾನು ಕಂಸ ಮತ್ತು ಸುನಾಮರನ್ನು ಕೊಂದು ನಮ್ಮವರ ಕಷ್ಟಗಳನ್ನು ಕಡೆಗಾಣಿಸಿದೆ. ಆ ಭಯದಿಂದ ವಿಮುಕ್ತರಾದ ಈ ಹದಿನೆಂಟು ಕುಲಗಳು ಜರಾಸಂಧನ ವಿರುದ್ಧ ಬಂಡಾಯಕ್ಕೆಂದು ತಮ್ಮೊಳಗೇ ಮಂತ್ರಾಲೋಚನೆ ಮಾಡಿದರು. ಒಂದೇ ಏಟಿಗೆ ನೂರರನ್ನು ಒಮ್ಮಿಲೇ ಕೊಲ್ಲಬಹುದಾದ ಮಹಾಸ್ತ್ರಗಳಿಂದ, ಮುನ್ನೂರು ವರ್ಷಗಳು ಸತತವಾಗಿ ವಿಶ್ರಾಂತಿಯಿಲ್ಲದೇ ಹೋರಾಡಿದರೂ ನಾವು ಅವನನ್ನು ಸಂಹರಿಸಲಾರೆವು ಎಂಬ ನಿರ್ಧಾರಕ್ಕೆ ಬಂದರು. ಯಾಕೆಂದರೆ ಅವನ ಜೊತೆ ಬಲಶಾಲಿಗಳಲ್ಲಿಯೇ ಬಲಶಾಲಿ ಶ್ರೇಷ್ಠರಾದ ಹಂಸ ಮತ್ತು ಡಿಭಕರೆಂಬ ಹೆಸರಿನ ಅಮರಸಮ ಯೋಧಸತ್ತಮರಿದ್ದರು. ಆ ಇಬ್ಬರು ವೀರರೂ ಮತ್ತು ವೀರ್ಯವಾನ್ ಜರಾಸಂಧನೂ ಸೇರಿ ಈ ಮೂವರೂ ಮೂರುಲೋಕಗಳಿಗೂ ಸಾಕು ಎನ್ನುವುದು ನನ್ನ ಮತ. ಇದು ಕೇವಲ ನಮ್ಮ ನಂಬಿಕೆ ಮಾತ್ರವಲ್ಲ. ಈಗ ಎಷ್ಟುಮಂದಿ ರಾಜರಿದ್ದಾರೋ ಅವರೆಲ್ಲರ ಅಭಿಪ್ರಾಯ. ಆಗ ಒಮ್ಮೆ ಹಂಸನೆಂದು ಖ್ಯಾತ ಮಹಾನೃಪನು ಅನ್ಯರಸಹಿತ ಆ ಹದಿನೆಂಟು ಕುಲಗಳಮೇಲೆ ಧಾಳಿಯಿಟ್ಟನು. ಯಾರೋ ಹಂಸನು ಹತನಾದನೆಂಬ ಸುಳ್ಳನ್ನು ಹರಡಿಸಿದರು ಮತ್ತು ಅದನ್ನು ಕೇಳಿದ ಡಿಭಕನು ಯಮುನಾ ನದಿಯಲ್ಲಿ ಮುಳುಗಿದನು. ಹಂಸನ ಹೊರತಾಗಿ ಈ ಲೋಕದಲ್ಲಿ ಜೀವಿಸುವ ಬಯಕೆಯಿಲ್ಲ ಎಂದು ನಿರ್ಧರಿಸಿ ಡಿಭಕನು ಸಾವನ್ನಪ್ಪಿದನು. ಡಿಭಕನ ಕುರಿತು ಕೇಳಿ ಪರಪುರಂಜಯ ಹಂಸನೂ ಕೂಡ ಯಮುನೆಯನ್ನು ತಲುಪಿ ಅಲ್ಲಿ ಮುಳುಗಿ ಸತ್ತನು. ಅವರಿಬ್ಬರೂ ನಿಧನ ಹೊಂದಿದರು ಎನ್ನುವುದನ್ನು ಕೇಳಿದ ರಾಜಾ ಜರಾಸಂಧನು ಶೂರಸೇನನ ಕಡೆಯಿಂದ ತನ್ನ ಪುರಕ್ಕೆ ಹಿಂದಿರುಗಿದನು. ಆ ರಾಜನು ಹಿಂದಿರುಗಿದ ನಂತರ ನಾವೆಲ್ಲರೂ ಪುನಃ ಸಂತೋಷದಿಂದ ಮಥುರೆಯಲ್ಲಿ ವಾಸಿಸುತ್ತಿದ್ದೇವೆ. ನಂತರ ರಾಜೀವಲೋಚನೆ ಕಂಸನ ಪತ್ನಿ ಮತ್ತು ಜರಾಸಂಧನ ಮಗಳು ತನ್ನ ಪತಿಯನ್ನು ಕಳೆದುಕೊಂಡ ದುಃಖದಲ್ಲಿ ತಂದೆ ಮಗಧ ನೃಪತಿಯಲ್ಲಿಗೆ ಹೋಗಿ ಅವಳ ಗಂಡನನ್ನು ಕೊಂದವನನ್ನು ಕೊಲ್ಲುವ ಪ್ರತಿಜ್ಞೆಗೈಯುವಂತೆ ಪ್ರಚೋದಿಸಿದಳು. ಆಗ ನಾವು ಹಿಂದೆ ಮಾಡಿದ ಮಂತ್ರಾಲೋಚನೆಯನ್ನು ನೆನಪಿಸಿಕೊಂಡು ವಿಮನಸ್ಕರಾಗಿ ಹಿಂದೆ ಸರಿದೆವು. ಅವನ ಭಯದಿಂದ ನಮ್ಮ ಮಹಾ ಸಂಪತ್ತನ್ನು ದೋಚಿಕೊಂಡು ಧನ ಮತ್ತು ಬಾಂಧವರೊಡಗೂಡಿ ಚದುರಿ ಪಲಾಯನ ಮಾಡಿದೆವು. ಎಲ್ಲರೂ ಆಲೋಚನೆ ಮಾಡಿ ಪಶ್ಚಿಮ ದಿಕ್ಕಿನಲ್ಲಿ ರೈವತ ಶೋಭಿತ ರಮ್ಯ ಕುಶಸ್ಥಲೀ ಪುರದಲ್ಲಿ ನೆಲೆ ಮಾಡಿದೆವು. ಅಲ್ಲಿ ನಾವು ದೇವತೆಗಳಿಗೂ ಅಸಾಧ್ಯ ಕೋಟೆಗಳನ್ನು ಕಟ್ಟಿ ಪುನರ್ವಸತಿ ಮಾಡಿದೆವು. ಅಲ್ಲಿ ಸ್ತ್ರೀಯರೂ ಯುದ್ಧಮಾಡಬಲ್ಲರು. ಇನ್ನು ವೃಷ್ಣಿಪುಂಗವರದ್ದೇನು! ಮಾಧವೀತೀರ್ಥದ ಮುಖ್ಯ ಪರ್ವತವನ್ನು ನೋಡುತ್ತಿರುವ ಆ ಪ್ರದೇಶದಲ್ಲಿ ನಾವು ಯಾರದ್ದೂ ಭಯವಿಲ್ಲದೇ ವಾಸಿಸುತ್ತಿದ್ದೇವೆ. ಈ ರೀತಿ ಜರಾಸಂಧನಿಂದ ಸತತ ಕಿರುಕುಳಕ್ಕೊಳಪಟ್ಟು ನಾವು ಸಾಮರ್ಥ್ಯವಂತರೂ ಸಂಬಂಧಿಗಳೂ ಆದ ನಿಮ್ಮ ಆಶ್ರಯದಲ್ಲಿ ಇದ್ದೇವೆ. ಒಂದೊಂದು ಯೋಜನೆಯ ಅಂತರದಲ್ಲಿಯೂ ಗೋಡೆಗಳಿಂದ ಆವೃತವಾಗಿ ನಮ್ಮ ಸ್ಥಳವು ಮೂರು ಯೋಜನೆ ಆಳದಲ್ಲಿದೆ. ಒಂದೊಂದು ಯೋಜನೆಯ ಅಂತರದಲ್ಲಿಯೂ ಸೇನೆಯನ್ನಿರಿಸಲಾಗಿದೆ ಮತ್ತು ಮಧ್ಯದಲ್ಲಿ ನೂರು ಬಾಗಿಲುಗಳ ಕೋಟೆ ಮತ್ತು ನಿರೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ಇವೆಲ್ಲವೂ ಹದಿನೆಂಟು ಕುಲಗಳ ಯುದ್ಧದುರ್ಮದ ಕ್ಷತ್ರಿಯರಿಂದ ರಕ್ಷಿಸಲ್ಪಟ್ಟಿದೆ. ನಮ್ಮ ಕುಲದಲ್ಲಿ ಹದಿನೆಂಟು ಸಾವಿರ ಸೇನೆಗಳಿವೆ. ಆಹುಕನಿಗೆ ನೂರು ಮಕ್ಕಳಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಮೂರುನೂರು ಜನರಿದ್ದಾರೆ. ಸಹೋದರನೊಂದಿಗೆ ಚಾರುದೇಷ್ಣ, ಚಕ್ರದೇವ, ಸಾತ್ಯಕಿ, ನಾನು, ರೌಹಿಣೇಯ, ಯುದ್ಧದಲ್ಲಿ ಶೌರಿಯ ಸಮ ಸಾಂಬ - ಇವರೆಲ್ಲರೂ ಏಳು ರಥಿಗಳು. ಇನ್ನು ಇತರರ ಕುರಿತು ನನ್ನನ್ನು ಕೇಳು ರಾಜನ್! ಕೃತವರ್ಮ, ಅನಾಧೃಷ್ಠಿ, ಸಮೀಕ, ಸಮಿತಿಂಜಯ, ಕಹ್ವ, ಶಂಕು, ನಿದಾಂತ ಇವರು ಅನ್ಯ ಏಳು ಮಹಾರಥಿಗಳು ಮತ್ತು ಭೋಜ ಅಂಧಕನ ಈರ್ವರು ಪುತ್ರರು ಮತ್ತು ವೃದ್ಧ ರಾಜನೂ ಸೇರಿ ಹತ್ತು ಮಹಾರಥಿಗಳು. ಲೋಕಗಳನ್ನೇ ನಾಶಪಡಿಸಬಲ್ಲ ಈ ವೀರ್ಯವಂತ ವೀರ ಮಹಾಬಲರು ಮಧ್ಯಮ ದೇಶವನ್ನು ನೆನಪಿಸಿಕೊಡುತ್ತಾ ವೃಷ್ಣಿಗಳ ಮಧ್ಯದಲ್ಲಿ ವ್ಯಥೆಯನ್ನು ಕಳೆದುಕೊಂಡು ವಾಸಿಸುತ್ತಿದ್ದಾರೆ. ಸದಾ ಸಂಗ್ರಾಮಗುಣಯುಕ್ತ ನೀನು ಕ್ಷತ್ರಿಯರಲ್ಲಿ ನಿನ್ನನ್ನು ಸಾಮ್ರಾಟನನ್ನಾಗಿ ಮಾಡಿಕೊಳ್ಳಲು ಅರ್ಹನಾಗಿದ್ದೀಯೆ. ಆದರೆ ಮಹಾಬಲ ಜರಾಸಂಧನು ಜೀವಿತವಾಗಿರುವವರೆಗೆ ರಾಜಸೂಯವನ್ನು ಮಾಡಲು ನಿನ್ನಿಂದ ಶಕ್ಯವಿಲ್ಲ ಎಂದು ನನ್ನ ಅನಿಸಿಕೆ. ಮಹಾ ಆನೆಗಳನ್ನು ಸಿಂಹವು ಹಿಮಾಲಯದ ಕಂದರಗಳಲ್ಲಿ ಅಡಗಿಸಿಟ್ಟುಕೊಳ್ಳುವಂತೆ ಸರ್ವ ರಾಜರುಗಳನ್ನೂ ಗೆದ್ದು ಅವನು ಗಿರಿವ್ರಜದಲ್ಲಿ ಸೆರೆಹಿಡಿದಿಟ್ಟಿದ್ದಾನೆ. ಮಹಾದೇವನನ್ನು ಆರಾಧಿಸಲೆಂದೇ ಆ ಪಾರ್ಥಿವರನ್ನು ಗೆದ್ದ ರಾಜ ಜರಾಸಂಧನು ವಸುಧಾಧಿಪರನ್ನು ಬಲಿಕೊಡಲು ಬಯಸುತ್ತಿದ್ದಾನೆ. ಪಾರ್ಥಿವರನ್ನು ಸೋಲಿಸಿದಾಗಲೆಲ್ಲ ಅವನು ತನ್ನ ಪುರಕ್ಕೆ ಕರೆದುಕೊಂಡು ಹೋಗಿ ಬಂಧಿಸಿ ಸೇನೆಯ ಕಾವಲಿನಲ್ಲಿರಿಸಿದ್ದಾನೆ. ನಾವೂ ಕೂಡ ಜರಾಸಂಧನ ಭಯದಿಂದ ಮಥುರೆಯನ್ನು ತೊರೆದು ದ್ವಾರವತೀ ಪುರಕ್ಕೆ ಹೋಗಬೇಕಾಯಿತು. ಒಂದು ವೇಳೆ ನೀನು ಯಜ್ಞವನ್ನು ನೆರವೇರಿಸಲು ಇಚ್ಛಿಸುವೆಯಾದರೆ ಜರಾಸಂಧನನ್ನು ವಧಿಸಿ ಅವರನ್ನು ಬಿಡುಗಡೆಮಾಡಲು ಪ್ರಯತ್ನಿಸು. ಹೀಗೆಯೇ ರಾಜಸೂಯದ ಸೂಕ್ತ ಆರಂಭ ಸಾಧ್ಯ. ಬೇರೆ ಯಾವುದರಿಂದಲೂ ಅಲ್ಲ. ಇದು ನನ್ನ ಅಭಿಪ್ರಾಯ. ಅಥವಾ ನೀನು ಬೇರೆ ಏನನ್ನಾದರೂ ಯೋಚಿಸುತ್ತಿದ್ದೀಯಾ? ಇದು ಹೀಗಿರಲು ಸ್ವಯಂ ನೀನೇ ನನ್ನ ಅಭಿಪ್ರಾಯಗಳ ಕುರಿತು ನಿರ್ಧರಿಸು.”
ಯುಧಿಷ್ಠಿರನು ಹೇಳಿದನು:
“ಬುದ್ಧಿವಂತ! ಯಾರಿಗೂ ಹೇಳಲು ಸಾಧ್ಯವಾಗದೇ ಇದ್ದುದನ್ನು ನೀನು ಹೇಳಿದ್ದೀಯೆ. ನೀನಲ್ಲದೇ ಭುವಿಯಲ್ಲಿ ಬೇರೆ ಯಾರಿಗೂ ಸಂಶಯಗಳನ್ನು ನಿರ್ಮೂಲನೆ ಮಾಡುವುದು ತಿಳಿದಿಲ್ಲ! ರಾಜರ ಮನೆ ಮನೆಗಳಲ್ಲಿ ಅವರವರದ್ದೇ ಮೆಚ್ಚಿನವರಿರುತ್ತಾರೆ. ಆದರೆ ಅವರ್ಯಾರೂ ಎಲ್ಲರನ್ನೂ ಒಳಗೊಂಡ ಸಾಮ್ರಾಟ ಎನ್ನುವ ಪದವಿಯನ್ನು ಪಡೆಯಲಿಲ್ಲ. ಇನ್ನೊಬ್ಬರ ಶಕ್ತಿಯನ್ನು ತಿಳಿದಿದ್ದವನು ತನ್ನನ್ನು ತಾನೇ ಹೊಗಳಿಕೊಳ್ಳಬಹುದು? ಇತರರಿಗೆ ಹೋಲಿಸಿ ಯಾರನ್ನು ಪ್ರಶಂಸಿಸುತ್ತಾರೋ ಅವರಿಗೇ ನಿಜವಾದ ಗೌರವ. ಭೂಮಿಯು ಬಹಳ ವಿಶಾಲವಾಗಿದೆ ಮತ್ತು ಬಹಳ ರತ್ನಗಳಿಂದ ಕೂಡಿದೆ. ದೂರ ಹೋದರೇ ಯಾವುದು ಒಳ್ಳೆಯದೆಂದು ತಿಳಿಯಲು ಸಾಧ್ಯ. ಶಮೆಯೇ ಅತ್ಯುತ್ತಮವೆಂದು ನನ್ನ ಅನಿಸಿಕೆ. ಅವರನ್ನು ಬಿಡುಗಡೆಮಾಡಿಸುವುದರಿಂದ ಶಮೆಯು ದೊರಕುವುದಿಲ್ಲ. ಯಜ್ಞವನ್ನು ಪ್ರಾರಂಭಿಸಿದರೆ ಅದು ದೊರಕುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಒಳ್ಳೆಯ ಕುಲದಲ್ಲಿ ಹುಟ್ಟಿದ ಮನಸ್ವಿಗಳೆಲ್ಲರೂ ಇದೇ ಅಭಿಪ್ರಾಯ ಪಡುತ್ತಾರೆ. ಬಹುಷಃ ಯಾವಾಗಲೋ ಅವರಲ್ಲಿಯೇ ಒಬ್ಬನು ಶ್ರೇಷ್ಠನೆನೆಸಿಕೊಳ್ಳುತ್ತಾನೆ.”
ಭೀಮನು ಹೇಳಿದನು:
“ಸಾಹಸಪ್ರವೃತ್ತಿಯಿಲ್ಲದ ರಾಜನು ಹುತ್ತದಂತೆ ಕುಸಿಯುತ್ತಾನೆ. ಉಪಾಯವಿಲ್ಲದ ಬಲಶಾಲಿಯೂ ದುರ್ಬಲನೆಂದೇ ಪರಿಗಣಿಸಲ್ಪಡುತ್ತಾನೆ. ಆದರೆ, ಓರ್ವ ದುರ್ಬಲನು ಉಪಾಯದಿಂದ ಬಲಶಾಲಿ ಶತ್ರುವನ್ನು ಸೋಲಿಸಬಹುದು. ಅವನ ಯೋಜನೆಯು ಸರಿಯಾದುದಾಗಿತ್ತೆಂದರೆ ಅವನು ತನಗೆ ಹಿತವಾದುದನ್ನು ಸಾಧಿಸಬಹುದು. ಕೃಷ್ಣನಲ್ಲಿ ಯೋಜನೆಯಿದೆ. ನನ್ನಲ್ಲಿ ಶಕ್ತಿಯಿದೆ. ಮತ್ತು ಪಾರ್ಥ ಧನಂಜಯನಲ್ಲಿ ಜಯವಿದೆ. ಮೂರು ಅಗ್ನಿಗಳಂತೆ ನಾವು ಮಾಗಧನನ್ನು ಗೆಲ್ಲಬಹುದು.”
ಕೃಷ್ಣನು ಹೇಳಿದನು:
“ತನ್ನ ಲಾಭವನ್ನೇ ಅನುಸರಿಸುತ್ತಿರುವ ಮೂರ್ಖನು ಆಗುವ ಪರಿಣಾಮಗಳನ್ನು ಗಮನಿಸುವುದಿಲ್ಲ. ಆದುದರಿಂದ ಅವರು ಲಾಭದ ಹಿಂದೆಹೋಗುತ್ತಿರುವ ಮೂರ್ಖ ಶತ್ರುಗಳನ್ನು ಸಹಿಸುವುದಿಲ್ಲ. ತೆರಿಗೆಯಿಲ್ಲದಂತೆ ಮಾಡಿ ಯೌವನಾಶ್ವ, ಪ್ರಜಾಪಾಲನೆಯ ಮೂಲಕ ಭಗೀರಥ, ತಪೋಯೋಗದ ಮೂಲಕ ಕಾರ್ತವೀರ್ಯ, ಬಲದಿಂದ ವಿಭು ಭರತ, ಮತ್ತು ಸಂಪತ್ತಿನ ಮೂಲಕ ಮರುತ್ತ ಈ ಐವರು ಸಾಮ್ರಾಟರೆನಿಸಿಕೊಂಡರೆಂದು ಕೇಳಿದ್ದೇವೆ. ಈಗ ಬಾರ್ಹದತ್ತ ಜರಾಸಂಧನನ್ನು ಧರ್ಮ, ಲಾಭ ಮತ್ತು ನ್ಯಾಯಗಳಿಂದ ನಿಗ್ರಹಿಸುವ ಸೂಚನೆಯು ಬಂದೊದಗಿದೆ ಎಂದು ತಿಳಿ. ನೂರಾಒಂದು ಕುಲಗಳ ನೃಪರು ಅವನಿಗೆ ತಕ್ಕಂತೆ ನಡೆದುಕೊಳ್ಳಲು ಬಯಸುವುದಿಲ್ಲ. ಆದುದರಿಂದಲೇ ಅವನು ತನ್ನ ಬಲದಿಂದ ರಾಜ್ಯಭಾರ ಮಾಡುತ್ತಿದ್ದಾನೆ. ಸಂಪತ್ತಿಗೆ ಭಾಗಧಾರ ರಾಜರು ಜರಾಸಂಧನನ್ನು ಗೌರವಿಸುತ್ತಾರೆ. ಆದರೆ ಬಾಲ್ಯದಿಂದಲೇ ಅನ್ಯಾಯದಲ್ಲಿ ನಿರತನಾಗಿದ್ದ ಅವನಿಗೆ ಇದೂ ಕೂಡ ತೃಪ್ತಿಯನ್ನು ನೀಡುತ್ತಿಲ್ಲ. ಅವನು ಮೂರ್ಧಾಭಿಷಿಕ್ತ ನೃಪತಿ ಮುಖ್ಯ ಪುರುಷರನ್ನು ಬಲಾತ್ಕಾರವಾಗಿ ಸೋರೆಹೊಡೆಯುತ್ತಾನೆ. ಅವನಿಗೆ ಕಪ್ಪವನ್ನು ಕೊಡದೇ ಇರುವ ಪುರುಷರು ಯಾರನ್ನೂ ನೋಡಿಲ್ಲ. ಈ ರೀತಿ ಜರಾಸಂಧನು ಸರ್ವರನ್ನೂ ತನ್ನ ವಶದಲ್ಲಿ ಇರಿಸಿಕೊಂಡಿದ್ದಾನೆ - ಅಂಥವರ ಸಂಖ್ಯೆ ಸುಮಾರು ನೂರರ ಹತ್ತಿರವಿದೆ. ಅಂಥಹವನ ಮೇಲೆ ಓರ್ವ ದುರ್ಬಲ ರಾಜನು ಹೇಗೆ ತಾನೆ ಧಾಳಿಯಿಡಬಹುದು? ಪಶುಪತಿಯ ಮನೆಯಲ್ಲಿ ಬಲಿಪಶುಗಳಂತೆ ಪ್ರೋಕ್ಷಣೆಮಾಡಿ ಶುದ್ಧಪಡಿಸಿದ ರಾಜರು ಹೇಗೆ ತಾನೆ ಜೀವಿತವಾಗಿರಲು ಬಯಸುತ್ತಾರೆ? ಶಸ್ತ್ರದಿಂದ ಮರಣಹೊಂದಿದ ಕ್ಷತ್ರಿಯನು ಗೌರವಿಸಲ್ಪಡುತ್ತಾನೆ. ಹೀಗಿರುವಾಗ ನಾವೆಲ್ಲರೂ ಸೇರಿ ಮಾಗಧನನ್ನು ಎದುರಿಸಬಾರದೇ? ಎಂಭತ್ತಾರು ರಾಜರು ಜರಾಸಂಧನ ಕಾರಗೃಹದಲ್ಲಿ ಬಂಧಿತರಾಗಿದ್ದಾರೆ. ಇನ್ನು ಉಳಿದ ಹದಿನಾಲ್ಕು ರಾಜರುಗಳ ನಂತರ ಅವನ ಕ್ರೂರಕೃತ್ಯವನ್ನು ನೆರವೇರಿಸುತ್ತಾನೆ. ಇದರಲ್ಲಿ ಅವನಿಗೆ ವಿಘ್ನವನ್ನು ತರುವವನು ಬೆಳಗುವ ಯಶಸ್ಸನ್ನು ಹೊಂದುತ್ತಾನೆ. ಮತ್ತು ಜರಾಸಂಧನ ಮೇಲೆ ವಿಜಯವನ್ನು ಗಳಿಸಿದವನು ನಿಶ್ಚಯವಾಗಿಯೂ ಸಾಮ್ರಾಟನಾಗುತ್ತಾನೆ.”
ಜರಾಸಂಧವಧೆಯ ಕುರಿತು ಸಮಾಲೋಚನೆ
ಯುಧಿಷ್ಠಿರನು ಹೇಳಿದನು:
“ಸಾಮ್ರಾಟಪದವಿಯನ್ನು ಪಡೆಯುವುದು ನನ್ನ ವೈಯಕ್ತಿಕ ಬಯಕೆ. ಸ್ವಾರ್ಥಪರಾಯಣನಾದ ನಾನು ಹೇಗೆ ನಿಮ್ಮೆಲ್ಲರನ್ನೂ ಬಲವಂತಮಾಡಿ ಇಂಥಹ ಸಾಹಸಕ್ಕೆ ಕಳುಹಿಸಲಿ? ಜನಾರ್ದನ! ಭೀಮಾರ್ಜುನರಿಬ್ಬರೂ ನನ್ನ ಕಣ್ಣುಗಳಿದ್ದಂತೆ ಎಂದು ನನ್ನ ಅನಿಸಿಕೆ. ಮನಸ್ಸು ಮತ್ತು ಕಣ್ಣುಗಳನ್ನು ಕಳೆದುಕೊಂಡರೆ ನನ್ನ ಜೀವನದಲ್ಲಿ ಉಳಿಯುವುದಾದರೂ ಏನು? ಜರಾಸಂಧನ ದುಷ್ಪಾರ ಭೀಮವಿಕ್ರಮ ಬಲವನ್ನು ಎದುರಿಸಿದಾಗ ಕೇವಲ ಶ್ರಮವು ಪರಾಜಯಗೊಳಿಸುತ್ತದೆ. ಇದರಲ್ಲಿ ಅರ್ಥವಾದರೂ ಏನಿದೆ? ಇದಕ್ಕಿಂತ ಬೇರೆ ಪರಿಣಾಮವಾದರೂ ಅತ್ಯಂತ ಅನರ್ಥವಾಗುವುದು. ಇದರ ಕುರಿತು ನಾನು ಏನು ಯೋಚಿಸುತ್ತಿದ್ದೇನೆ ಎನ್ನುವುದನ್ನು ಕೇಳು. ಈ ಯೋಜನೆಯನ್ನು ಇಲ್ಲಿಯೇ ಬಿಟ್ಟುಬಿಡುವುದು ಒಳ್ಳೆಯದು ಎಂದು ನನಗನ್ನಿಸುತ್ತಿದೆ. ಈಗ ನನ್ನ ಮನಸ್ಸು ಇದರ ವಿರುದ್ಧವಾಗಿದೆ. ರಾಜಸೂಯವು ಸಾಧ್ಯವಾದುದಲ್ಲ.”
ಶ್ರೇಷ್ಠ ಧನುಸ್ಸು, ಎರಡು ಅಕ್ಷಯ ಭತ್ತಳಿಕೆಗಳು, ರಥ, ಧ್ವಜ, ಮತ್ತು ಸಭೆಯನ್ನು ಪಡೆದ ಮಹಾಯೋಧ ಪಾರ್ಥನು ಯುಧಿಷ್ಠಿರನಿಗೆ ಹೇಳಿದನು:
“ರಾಜನ್! ಬಯಸಿದರೂ ದೊರಕಲು ಕಷ್ಟವಾದ ಧನಸ್ಸು, ಅಸ್ತ್ರ, ಬಾಣಗಳು, ವೀರ್ಯ, ಬೆಂಬಲಿಗರು, ಭೂಮಿ, ಯಶಸ್ಸು, ಬಲಗಳನ್ನು ನಾನು ಪಡೆದಿದ್ದೇನೆ. ತಿಳಿದವರು ಉತ್ತಮ ಕುಲದಲ್ಲಿ ಜನಿಸಿದವರನ್ನು ಮತ್ತು ಸತ್ಕರ್ಮದಲ್ಲಿ ತೊಡಗಿದವರನ್ನು ಪ್ರಶಂಸಿಸುತ್ತಾರೆ. ಆದರೆ ಬಲದ ಸದೃಶವಾದುದ್ದು ಇಲ್ಲ ಮತ್ತು ಸಾಹಸವು ನನಗೆ ಇಷ್ಟವಾಗುತ್ತದೆ. ವೀರ ಕುಲದಲ್ಲಿ ಹುಟ್ಟಿದವನು ನಿರ್ವೀರ್ಯನಾಗಿ ಏನನ್ನು ಸಾಧಿಸುತ್ತಾನೆ? ಎಲ್ಲೆಡೆಯೂ ಸೋಲಿಸುವುದನ್ನೇ ಪ್ರವೃತ್ತಿಯನ್ನಾಗಿಸಿಕೊಂಡವನು ಕ್ಷತ್ರಿಯನೆನೆಸಿಕೊಳ್ಳುತ್ತಾನೆ. ಸರ್ವಗುಣಹೀನನೂ ಕೂಡ ವೀರ್ಯವಂತನಾಗಿದ್ದರೆ ಶತ್ರುಗಳನ್ನು ಸೋಲಿಸುತ್ತಾನೆ. ಆದರೆ ಸರ್ವಗುಣಯುಕ್ತನಾಗಿದ್ದರೂ ನಿರ್ವೀರ್ಯನಾಗಿದ್ದರೆ ಏನು ತಾನೆ ಮಾಡಿಯಾನು? ಬಳಸಬಹುದಾದ ಸರ್ವಗುಣಗಳೂ ಪರಾಕ್ರಮಿಯಲ್ಲಿವೆ. ಸಿದ್ಧಿ, ಕಾರ್ಯ, ದೈವಗಳು ಒಟ್ಟಿಗೇ ಜಯಕ್ಕೆ ಕಾರಣವಾಗುತ್ತವೆ. ಒಮ್ಮೊಮ್ಮೆ ಈ ಬಲಗಳಿಂದ ಕೂಡಿದವನೂ ಪ್ರಮಾದಕ್ಕೊಳಗಾಗಿ ಶತ್ರುವಿನ ದ್ವಾರದಲ್ಲಿಯೇ ತನ್ನ ಬಲವನ್ನು ಕಡಿಮೆಮಾಡಿಕೊಳ್ಳಬಹುದು. ಬಲವಿಲ್ಲದವನು ಹೇಗೆ ದೀನನೋ ಹಾಗೆ ಬಲಾನ್ವಿತನು ಎಲ್ಲರಿಗೂ ಬೇಕಾದವನು. ಜಯವನ್ನು ಬಯಸುವ ರಾಜನು ಇವೆರಡೂ ನಾಶಕಾರಕ ಕಾರಣಗಳನ್ನು ತೊರೆಯಬೇಕು. ಯಜ್ಞಕ್ಕೋಸ್ಕರ ನಾವು ಜರಾಸಂಧನ ವಿನಾಶ ಮತ್ತು ರಾಜರ ವಿಮೋಚನೆಯನ್ನು ಸಾಧಿಸಿದರೆ ಇದಕ್ಕಿಂತಲೂ ಹೆಚ್ಚಿನದು ಏನಾಗಬಹುದು? ಇದಕ್ಕೆ ನಾವು ಹಿಂಜರಿದರೆ ನಮ್ಮಲ್ಲಿ ಗುಣವಿಲ್ಲವೆಂದಾಗುವುದು ನಿಶ್ಚಯ. ನಿಃಸಂಶಯ ಗುಣಕ್ಕಿಂತಲೂ ನಿರ್ಗುಣವನ್ನು ನೀನು ಹೇಗೆ ಗೌರವಿಸುತ್ತೀಯೆ? ನಿನ್ನನ್ನು ಸಾಮ್ರಾಟನನ್ನಾಗಿಸಲು ನಾವು ಶತ್ರುಗಳೊಂದಿಗೆ ಹೋರಾಡುತ್ತೇವೆ. ನಂತರ ಶಾಂತಿಯನ್ನು ಬಯಸುವ ಮುನಿಗಳಿಗೆ ಸುಲಭವಾಗಿ ಕಾಷಾಯವು ದೊರೆಯುತ್ತದೆ.”
ವಾಸುದೇವನು ಹೇಳಿದನು:
“ಅರ್ಜುನನು ಭಾರತ ವಂಶದಲ್ಲಿ ಮತ್ತು ಕುಂತಿಯ ಸುತನಾಗಿ ಹುಟ್ಟಿದುದಕ್ಕೆ ಸರಿಯಾದ ಬುದ್ಧಿಯನ್ನು ಪ್ರದರ್ಶಿಸಿದ್ದಾನೆ. ರಾತ್ರಿಯೋ ಹಗಲೋ ಮೃತ್ಯುವಿನ ಸಮಯವನ್ನು ನಾವು ಯಾರೂ ತಿಳಿದಿಲ್ಲ! ಹಾಗೆಯೇ ಯುಧ್ಧಮಾಡದೇ ಅಮರರಾದ ಯಾರ ಕುರಿತೂ ನಾವು ಕೇಳಿಲ್ಲ! ಇದೇ ನ್ಯಾಯ ಮತ್ತು ವಿಧಿಪೂರ್ವಕವಾಗಿ ಶತ್ರುಗಳ ಮೇಲೆ ಧಾಳಿಯಿಡುವ ಪುರುಷನ ಹೃದಯವನ್ನು ಸಂತಸಗೊಳಿಸುವ ಕಾರ್ಯ. ಹೋರಾಟದಲ್ಲಿ ಉತ್ತಮ ನ್ಯಾಯವೇ ಗೆಲ್ಲುತ್ತದೆ. ಎರಡೂ ಪಕ್ಷಗಳು ಸರಿಸಮವಾಗಿದ್ದರೆ, ಅದರಲ್ಲಿ ಸಂಶಯ ಬರಬಹುದು. ಆದರೆ ಎರಡು ಪಕ್ಷಗಳು ಎಂದೂ ಸರಿಸಮವಾಗಿರುವುದಿಲ್ಲ. ಒಳ್ಳೆಯ ನೀತಿಯನ್ನು ನಮ್ಮದಾಗಿಸಿಕೊಂಡು ಶತ್ರುವಿನ ಬಳಿ ಹೋದರೆ ನದಿಯ ಪ್ರವಾಹವು ವೃಕ್ಷವನ್ನು ಹೇಗೋ ಹಾಗೆ ಕೊನೆಗೊಳಿಸಲು ಏಕೆ ಸಾಧ್ಯವಿಲ್ಲ? ನಮ್ಮ ದುರ್ಬಲತೆಯನ್ನು ಮುಚ್ಚಿಟ್ಟುಕೊಂಡು ಅವನ ದುರ್ಬಲತೆಯನ್ನು ನೋಡಿ ಆಕ್ರಮಣ ಮಾಡೋಣ. ತನಗಿಂತಲೂ ಬಲಶಾಲಿಯಾಗಿರುವವನನ್ನು ಸೇನೆ ಮತ್ತು ಬಲದೊಂದಿಗೆ ಆಕ್ರಮಣ ಮಾಡಬಾರದು ಎನ್ನುವುದು ಬುದ್ಧಿವಂತರ ನೀತಿ ಮತ್ತು ಇದು ನನಗೂ ಇಷ್ಟವಾಗುತ್ತದೆ. ಸೇನೆಯನ್ನು ತೆಗೆದುಕೊಳ್ಳದೇ ಶತ್ರುವಿನ ಬಳಿಸೇರಿ, ಶತ್ರುದೇಹವನ್ನು ಆಕ್ರಮಿಸಿ, ನಮ್ಮ ಗುರಿಯನ್ನು ಸಾಧಿಸಿದರೆ ನಮ್ಮ ಮೇಲೆ ಯಾವ ಅಪವಾದವೂ ಬರುವುದಿಲ್ಲ. ಜೀವಿಗಳ ಅಂತರಾತ್ಮನಂತೆ ಅವನೊಬ್ಬನೇ ನಿತ್ಯ ಶ್ರೀಯನ್ನು ಹೊರಸೂಸುತ್ತಾನೆ, ಅವನ ಕ್ಷಯದೊಂದಿಗೆ ಅವನ ಬಲವೂ ಕ್ಷಯಿಸುವುದು. ಒಂದುವೇಳೆ ಅವನನ್ನು ನಾವು ಕೊಂದನಂತರ ಉಳಿದವರು ನಮ್ಮ ಮೇಲೆ ಆಕ್ರಮಣ ಮಾಡಿದರೆ ತಮ್ಮ ಜಾತಿಯವರನ್ನು ಬಿಡುಗಡೆಮಾಡಲು ತೊಡಗಿ ಯುದ್ಧದಲ್ಲಿ ವೀರಸ್ವರ್ಗವನ್ನು ಪಡೆಯುತ್ತೇವೆ.”
ಯುಧಿಷ್ಠಿರನು ಹೇಳಿದನು:
“ಕೃಷ್ಣ! ಈ ಜರಾಸಂಧನು ಯಾರು? ಅಗ್ನಿಸದೃಶನಾದ ನಿನ್ನನ್ನು ಮುಟ್ಟಿದರೂ ಪತಂಗದಂತೆ ಸುಟ್ಟುಹೋಗದೇ ಇರುವ ಅವನ ವೀರ್ಯ ಮತ್ತು ಪರಾಕ್ರಮಗಳಾದರೂ ಏನು?”
ಜರಾಸಂಧ
ಕೃಷ್ಣನು ಹೇಳಿದನು:
“ರಾಜನ್! ಜರಾಸಂಧನ ವೀರ್ಯ ಪರಾಕ್ರಮಗಳ ಕುರಿತು ಮತ್ತು ಅವನು ನಮ್ಮ ವಿರುದ್ಧ ಬಹಳ ರೀತಿಯಲ್ಲಿ ನಡೆದುಕೊಂಡರೂ ಏನೂ ಮಾಡದೇ ಇದ್ದುದಕ್ಕೆ ಕಾರಣವನ್ನು ಕೇಳು. ಮೂರು ಅಕ್ಷೌಹಿಣೀ ಸೇನಾಪತಿ ಸಮರದರ್ಪಿತ ಬೃಹದ್ರಥನೆಂಬ ಹೆಸರಿನ ಮಗಧಾಧಿಪತಿ ರಾಜನಿದ್ದನು. ಅವನು ರೂಪವಂತನೂ ವೀರ್ಯಸಂಪನ್ನನೂ ಶ್ರೀಮಂತನೂ ಅತುಲವಿಕ್ರಮನೂ ಆಗಿದ್ದನು. ನಿತ್ಯವೂ ದೀಕ್ಷಾನಿರತನಾಗಿದ್ದ ಅವನು ತೆಳುದೇಹನವನಾಗಿದ್ದು ಇನ್ನೊಬ್ಬ ಶತುಕ್ರತುವೋ ಎಂಬಂತೆ ತೋರುತ್ತಿದ್ದನು. ತೇಜಸ್ಸಿನಲ್ಲಿ ಸೂರ್ಯಸದೃಶನಾಗಿದ್ದನು, ಕ್ಷಮೆಯಲ್ಲಿ ಪೃಥ್ವಿಸಮನಾಗಿದ್ದನು, ಕೋಪದಲ್ಲಿ ಅಂತಕ ಯಮನ ಸಮನಾಗಿದ್ದನು, ಮತ್ತು ಸಂಪತ್ತಿನಲ್ಲಿ ವೈಶ್ರವಣನಂತಿದ್ದನು. ಅವನ ಉಚ್ಛ ಜನ್ಮದಂತೆ ಅವನ ಗುಣಗಳೂ ಉತ್ತಮವಾಗಿದ್ದು, ಸೂರ್ಯನಿಂದ ಹೊರಸೂಸಿದ ಕಿರಣಗಳಂತೆ ಇಡೀ ಪೃಥ್ವಿಯನ್ನೇ ವ್ಯಾಪಿಸಿದ್ದವು. ಆ ಮಹಾವೀರನು ರೂಪ ಮತ್ತು ಸಂಪತ್ತನ್ನು ಹೊಂದಿದ್ದ ಕಾಶೀರಾಜನ ಅವಳಿ ಮಕ್ಕಳನ್ನು ಮದುವೆಯಾದನು. ಆ ಪುರುಷರ್ಷಭನು ತನ್ನ ಪತ್ನಿಯರಿಬ್ಬರ ಸಮಕ್ಷಮದಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡನು: ಅವನು ಅವರ ವಿರುದ್ಧ ಎಂದೂ ನಡೆದುಕೊಳ್ಳುವುದಿಲ್ಲ ಎಂದು. ಆ ರಾಜನು ತನ್ನ ಪ್ರಿಯ ಅನುರೂಪ ಇಬ್ಬರು ಪತ್ನಿಯರೊಂದಿಗೆ ಹೆಣ್ಣಾನೆಗಳ ಮಧ್ಯೆ ಗಂಡಾನೆಯಂತೆ ರಂಜಿಸಿದನು. ಅವರಿಬ್ಬರ ಮಧ್ಯೆ ವಸುಧಾಧಿಪನು ಗಂಗಾ ಮತ್ತು ಯಮುನೆಯರ ಮಧ್ಯೆ ಸಾಗರನ ಮೂರ್ತಿಯಂತೆ ರರಾಜಿಸಿದನು. ವಿಷಯ ಸುಖದಲ್ಲಿಯೇ ಮಗ್ನನಾಗಿ ಅವನ ಯೌವನವು ಕಳೆಯುತ್ತಾಬಂದರೂ ಅವನಿಗೆ ವಂಶಕರ ಪುತ್ರನು ಯಾರೂ ಜನಿಸಲಿಲ್ಲ. ಬಹಳಷ್ಟು ಮಂಗಲ ಹೋಮಗಳು ಮತ್ತು ಪುತ್ರಕಾಮೇಷ್ಠಿಯಿಂದಲೂ ಆ ನೃಪಶ್ರೇಷ್ಠನು ಕುಲವಿವರ್ಧನ ಪುತ್ರನನ್ನು ಪಡೆಯಲಿಲ್ಲ. ಆಗ ಮಹಾತ್ಮ ಗೌತಮ ಕಾಕ್ಷೀವತನ ಮಗ ಚಂಡಕೌಶಿಕಿ ಎಂದು ಪ್ರಸಿದ್ಧ ಉದಾರ ತಪಸ್ವಿಯು ಅಲ್ಲಿಗೆ ಬಂದು ಒಂದು ಮರದಡಿಯಲ್ಲಿ ವಿಶ್ರಾಂತಿತೆಗೆದುಕೊಳ್ಳುತ್ತಿದ್ದಾನೆ ಎಂದು ಕೇಳಿದನು. ಪತ್ನಿಯರ ಸಹಿತ ರಾಜನು ಸರ್ವ ರತ್ನ ಉಡುಗೊರೆಗಳಿಂದ ಅವನನ್ನು ಸಂತೃಪ್ತಿಗೊಳಿಸಿದನು. ಆ ಸತ್ಯಧೃತಿ ಸತ್ಯವಾಗ್ಮಿ ಋಷಿಸತ್ತಮನು
“ಸುವ್ರತ ರಾಜನ್! ನಾನು ಸಂತುಷ್ಠಗೊಂಡಿದ್ದೇನೆ. ವರವನ್ನು ಕೇಳಿಕೋ!”
ಎಂದನು. ಪುತ್ರನನ್ನು ನೋಡಲು ಹಾತೊರೆಯುತ್ತಿದ್ದ ಬೃಹದ್ರಥನು ತನ್ನ ಪತ್ನಿಯರೊಂದಿಗೆ ನಮಸ್ಕರಿಸಿ ಕಣ್ಣೀರಿನಿಂದ ಕಟ್ಟಿದ ಧ್ವನಿಯಲ್ಲಿ ಹೇಳಿದನು:
“ಭಗವನ್! ಮಕ್ಕಳಿಲ್ಲದೆ ರಾಜ್ಯವನ್ನು ತೊರೆದು ತಪೋವನಕ್ಕೆ ಹೊರಡುತ್ತಿರುವ ಈ ಅಲ್ಪಭಾಗನಿಗೆ ಈ ರಾಜ್ಯದಿಂದ ಏನಾಗಬೇಕು? ವರದಿಂದ ಏನಾಗಬೇಕು?”
ಇದನ್ನು ಕೇಳಿದ ಮುನಿಯು ಚಿಂತೆಗೊಳಗಾಗಿ ಧ್ಯಾನಮಗ್ನನಾದನು. ಅವನು ಯಾವ ಮಾವಿನ ಮರದ ಕೆಳಗೆ ಕುಳಿತಿದ್ದನೋ ಅಲ್ಲಿಂದ ಗಿಳಿಗಳು ಕಚ್ಚದೇ ಇದ್ದ ಒಂದು ಇಡೀ ಮಾವಿನ ಹಣ್ಣು ಅವನ ತೊಡೆಯಮೇಲೆ ಬಿದ್ದಿತು. ಮುನಿಶ್ರೇಷ್ಠನು ಆ ಅಪ್ರತಿಮ ಹಣ್ಣನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ಪುತ್ರನನ್ನು ಕೊಡುವಂಥೆ ಅದಕ್ಕೆ ಹೃದಯದಿಂದ ಅಭಿಮಂತ್ರಿಸಿ ರಾಜನಿಗೆ ಕೊಟ್ಟನು. ಮತ್ತು ಆ ಮಹಾಪ್ರಾಜ್ಞ ಮಹಾಮುನಿಯು ರಾಜನಿಗೆ ಹೇಳಿದನು:
“ರಾಜನ್! ನಿನ್ನ ಆಸೆಯು ಈಡೇರುತ್ತದೆ. ಹೋಗು. ಮನುಜಾಧಿಪ! ಹಿಂದಿರುಗು.”
ಆಗ ಆ ನೃಪತಿಸತ್ತಮನು ತಾನು ಮಾಡಿಕೊಂಡಿದ್ದ ಒಪ್ಪಂದವನ್ನು ನೆನಪಿಸಿಕೊಂಡು ತನ್ನ ಇಬ್ಬರು ಪತ್ನಿಯರಿಗೂ ಆ ಒಂದು ಫಲವನ್ನು ಕೊಟ್ಟನು. ಶುಭೆಯರಿಬ್ಬರೂ ಆ ಮವಿನಹಣ್ಣನ್ನು ಅರ್ಧಮಾಡಿ ತಿಂದರು. ಮುನಿಯ ಸತ್ಯವಾಖ್ಯಗಳು ನಿಜವಾಗುವುದು ನಿರ್ದಿಷ್ಟವಾಗುವುದರಿಂದ, ಆ ಮಾವಿನ ಹಣ್ಣನ್ನು ತಿಂದ ಇಬ್ಬರೂ ಗರ್ಭವನ್ನು ಧರಿಸಿದರು. ಅವರನ್ನು ನೋಡಿದ ನರಪತಿಯು ಬಹಳ ಹರ್ಷಿತನಾದನು. ಸಮಯವು ಪ್ರಾಪ್ತಿಯಾದಾಗ ಇಬ್ಬರು ಶುಭೆಯರೂ ಅರ್ಧ ದೇಹವನ್ನು ಹೊಂದಿದ - ಒಂದು ಕಣ್ಣು, ಒಂದು ತೋಳು, ಒಂದು ಕಾಲು, ಕುಂಡೆ, ಅರ್ಧ ಮುಖ ಮತ್ತು ಹೊಟ್ಟೆಯ ಮಗುವಿಗೆ ಜನ್ಮವಿತ್ತರು. ಆ ಅರ್ಧ ಮಗುವನ್ನು ನೋಡಿ ಇಬ್ಬರೂ ಭಯದಿಂದ ನಡುಗಿದರು. ಆಗ ಆ ಉದ್ವಿಗ್ನ ಅಬಲೆ ಸಹೋದರಿಯರು ಜೊತೆಗೆ ವಿಚಾರ ಮಾಡಿ ಬಹು ದುಃಖಿತರಾಗಿ ಜೀವಂತವಾಗಿದ್ದ ಆ ಎರಡು ಅರ್ಧ ಶಿಶುಗಳನ್ನು ಬಿಸಾಡಿದರು. ಆ ಎರಡು ಅರ್ಧ ಶಿಶುಗಳನ್ನು ಸರಿಯಾಗಿ ಸುತ್ತಿ ಸೂತಗಿತ್ತಿಯರು ಅಂತಃಪುರದ ಬಾಗಿಲಿನಿಂದ ಹೊರಹೋಗಿ ಎಸೆದು ಅವಸರದಲ್ಲಿ ಹಿಂದಿರುಗಿದರು. ಅದೇ ಸಮಯದಲ್ಲಿ ರಕ್ತ-ಮಾಂಸಗಳನ್ನು ತಿನ್ನುವ ಜರಾ ಎಂಬ ಹೆಸರಿನ ರಾಕ್ಷಸಿಯು ನಾಲ್ಕು ರಸ್ತೆಗಳು ಸೇರುವಲ್ಲಿ ಇರಿಸಿದ್ದ ಮಕ್ಕಳನ್ನು ಎತ್ತಿಕೊಂಡಳು. ಅವನ್ನು ತೆಗೆದುಕೊಂಡು ಹೋಗಲು ಸುಲಭವಾಗಲೆಂದು ಆ ರಾಕ್ಷಸಿಯು, ವಿಧಿಯ ಶಕ್ತಿಯಿಂದ ಪ್ರಚೋದಿತಳಾಗಿ, ಆ ಎರಡು ಅರ್ಧ ಶರೀರಗಳನ್ನು ಒಟ್ಟುಮಾಡಿ ಹಿಡಿದುಕೊಂಡಳು. ಆ ಎರಡು ಅರ್ಧಶರೀರಗಳನ್ನು ಒಟ್ಟುಮಾಡಿದ ಕೂಡಲೇ ಒಂದಾಗಿ ವೀರ ಕುಮಾರನ ಶರೀರವನ್ನು ತಾಳಿತು. ಆಗ ಆ ರಾಕ್ಷಸಿಯು ಆಶ್ಚರ್ಯದಿಂದ ತೆರೆದ ಕಣ್ಣುಗಳಿಂದ ನೋಡಿದಳು. ವಜ್ರದಿಂದ ಮಾಡಿದಂತಿದ್ದ ಆ ಶಿಶುವನ್ನು ಎತ್ತಿಕೊಂಡು ಹೋಗಲೂ ಅವಳಿಗೆ ಸಾಧ್ಯವಾಗಲಿಲ್ಲ. ಆ ಬಾಲಕನು ತನ್ನ ಕೈಬೆರಳುಗಳನ್ನು ಮುಷ್ಟಿ ಮಾಡಿಕೊಂಡು ತನ್ನ ಬಾಯಿಯಲ್ಲಿಟ್ಟುಕೊಂಡು ಮಳೆಯ ಮೋಡವು ಒಡೆಯುವಾಗ ಹೇಗೆ ಗುಡುಗುತ್ತದೆಯೋ ಹಾಗೆ ಜೋರಾಗಿ ಅಳತೊಡಗಿದನು. ಆ ಶಬ್ಧವನ್ನು ಕೇಳಿ ಸಂಭ್ರಾಂತನಾದ ಪರಂತಪ ನರವ್ಯಾಘ್ರ ರಾಜನು ಅಂತಃಪುರ ಜನರೊಂದಿಗೆ ಹೊರಬಂದನು. ದುಃಖಿತರಾದ, ನಿರಾಶರಾದ, ಹಾಲುತುಂಬಿದ ಸ್ತನಗಳ ಆ ಅಬಲೆಯರು ಪುತ್ರನನ್ನು ಪಡೆಯಲೋಸುಗ ತಕ್ಷಣವೇ ಓಡಿ ಬಂದರು. ಸಂತತಿಯನ್ನು ಬಯಸಿ ಬಂದ ಆ ರಾಜನನ್ನು ಮತ್ತು ಬಲಶಾಲಿ ಮಗುವನ್ನು ನೋಡಿದ ರಾಕ್ಷಸಿಯು ಯೋಚಿಸಿದಳು:
“ಪುತ್ರನಿಗಾಗಿ ಕೃಪಣನಾದ ಈ ರಾಜನ ರಾಜ್ಯದಲ್ಲಿ ವಾಸಿಸುತ್ತಿರುವ ನಾನು ಬಾಸ್ಕರನ ಕಿರಣಗಳನ್ನು ಕೊಂಡೊಯ್ಯುವ ಮೋಡಗಳಂತೆ ಈ ಬಾಲಕನನ್ನು ಎತ್ತಿಕೊಂಡು ಹೋಗಬಾರದು.”
ಅವಳು ಮನುಷ್ಯರೂಪವನ್ನು ಧರಿಸಿ ಮನುಜಾಧಿಪನಿಗೆ ಹೇಳಿದಳು:
“ಬೃಹದ್ರಥ! ನಾನು ಕೊಡುತ್ತಿರುವ ಇವನು ನಿನ್ನ ಮಗ. ಸ್ವೀಕರಿಸು. ಆ ದ್ವಿಜಶ್ರೇಷ್ಠನ ವರಪ್ರಸಾದದಿಂದ ನಿನ್ನ ಇಬ್ಬರು ಪತ್ನಿಯರಲ್ಲಿ ಜನಿಸಿ, ಸೂಲಗಿತ್ತಿರಿಯರಿಂದ ಪರಿತ್ಯಕ್ತನಾದ ಇವನನ್ನು ನಾನು ರಕ್ಷಿಸಿದ್ದೇನೆ.”
ಅನಂತರ ಸುಂದರ ಕಾಶಿರಾಜನ ಸುತೆಯರು ಆ ಬಾಲಕನನ್ನು ಎಳೆದು ಬಿಗಿದಪ್ಪಿ ಹರಿದು ಬರುತ್ತಿದ್ದ ಮೊಲೆಯ ಹಾಲನ್ನು ಅವನ ಮೇಲೆ ಸುರಿಸಿದರು. ಇದನ್ನೆಲ್ಲ ನೋಡಿ ಸಂತೋಷಗೊಂಡ ರಾಜನು ತನ್ನ ಮನುಷ್ಯರೂಪದಲ್ಲಿ ರಾಕ್ಷಸಿಯಂತೆ ತೋರದಿದ್ದ ಹೊಸ ಬಂಗಾರದ ಕಾಂತಿಯುಕ್ತ ಆ ರಾಕ್ಷಸಿಗೆ ಹೇಳಿದನು:
“ನನ್ನ ಮಗನನ್ನು ಇತ್ತ ಕಮಲದ ಕುಸುಮದಂತೆ ಕಾಂತಿಯುಕ್ತಳಾದ ನೀನು ಯಾರು? ಕಲ್ಯಾಣಿ! ನನಗೆ ನಿನ್ನ ಮೇಲುಂಟಾದ ಪ್ರೀತಿಗಾಗಿ ಹೇಳು. ನಿನ್ನ ಪ್ರತಿಭೆಯನ್ನು ನೋಡಿದರೆ ದೇವತೆಯೆಂದು ನನಗನ್ನಿಸುತ್ತದೆ.”
ಆಗ ರಾಕ್ಷಸಿಯು ಹೇಳಿದಳು:
“ರಾಜೇಂದ್ರ! ನಿನಗೆ ಮಂಗಳವಾಗಲಿ! ನಾನೋರ್ವಳು ಇಚ್ಛಿಸಿದ ದೇಹವನ್ನು ಧರಿಸಬಲ್ಲ ಜರಾ ಎಂಬ ಹೆಸರಿನ ರಾಕ್ಷಸಿ. ನಾನು ನಿನ್ನ ರಾಜ್ಯದಲ್ಲಿ ಎಲ್ಲರಿಂದ ಗೌರವಿಸಲ್ಪಟ್ಟು ಸುಖದಿಂದ ವಾಸಿಸುತ್ತಿದ್ದೇನೆ. ನಿನಗೆ ಹೇಗೆ ಪ್ರತ್ಯುಪಕಾರ ಮಾಡಲಿ ಎಂದು ನಿತ್ಯವೂ ಚಿಂತಿಸುತ್ತಿದ್ದೆ. ಈಗ ನಿನ್ನ ಪುತ್ರನ ಎರಡು ಅರ್ಧಗಳನ್ನು ನೋಡಿ, ಒಟ್ಟುಗೂಡಿಸಿದಾಗ ವಿಧಿಯ ಹೇಳಿಕೆಯಂತೆ ಕುಮಾರನಾದನು. ಇದು ನಿನ್ನ ಭಾಗ್ಯ. ಇದರಲ್ಲಿ ನಾನು ಕೇವಲ ಒಂದು ಕಾರಣ ಅಷ್ಟೆ.”
ಇದನ್ನು ಹೇಳಿದ ಅವಳು ಅಲ್ಲಿಯೇ ಅಂತರ್ಧಾನಳಾದಳು. ನೃಪನು ತನ್ನ ಕುಮಾರನನ್ನು ಎತ್ತಿಕೊಂಡು ಸ್ವಗೃಹವನ್ನು ಪ್ರವೇಶಿಸಿದನು. ಅನಂತರ ನೃಪನು ತನ್ನ ಬಾಲಕನಿಗೆ ಮಾಡಬೇಕಾದ ಎಲ್ಲ ಸಂಸ್ಕಾರಗಳನ್ನೂ ಮಾಡಿ ರಾಕ್ಷಸಿಯ ಕುರಿತು ಮಗಧದಲ್ಲಿ ಮಹಾ ಉತ್ಸವವನ್ನು ಆಜ್ಞಾಪಿಸಿದನು. ಆ ಪ್ರಜಾಪತಿಸಮ ಪಿತನು ಅವನಿಗೆ ನಾಮಕರಣ ಮಾಡಿದನು. ಜರಾಳಿಂದ ಒಂದಾದುದರಿಂದ ಅವನ ಹೆಸರನ್ನು ಜರಾಸಂಧನೆಂದಾಯಿತು. ಆ ಮಗಧಾಧಿಪತಿಯ ಮಗನಾದರೂ ಮಹಾತೇಜಸ್ಸಿನಿಂದ ಆಹುತಿಯನ್ನು ಹಾಕಿದಾಗ ಅಗ್ನಿಯು ಹೇಗೋ ಹಾಗೆ ಗಾತ್ರ ಮತ್ತು ಬಲ ಸಂಪನ್ನನಾಗಿ ಬೆಳೆದನು. ಸ್ವಲ್ಪ ಸಮಯದ ನಂತರ ಪುನಃ ಅದೇ ಮಹಾತಪಸ್ವಿ ಭಗವಾನ್ ಜಂಡಕೌಶಿಕಿಯು ಮಗಧ ದೇಶಕ್ಕೆ ಬಂದನು. ಅವನ ಆಗಮನದಿಂದ ಸಂತೋಷಗೊಂಡ ಬೃಹದ್ರಥನು ತನ್ನ ಅಮಾತ್ಯರು, ಪುರದ ಜನರು, ಪತ್ನಿಯರು ಮತ್ತು ಮಗನೊಂದಿಗೆ ಹೊರಬಂದನು. ಪಾದ್ಯ, ಅರ್ಘ್ಯ, ಆಚಮನೀಯಗಳಿಂದ ಅವನನ್ನು ಅರ್ಚಿಸಿ ನೃಪತಿಯು ತನ್ನ ರಾಜ್ಯದ ಸಹಿತ ಪುತ್ರನನ್ನು ಅವನಿಗೆ ಸಮರ್ಪಿಸಿದನು. ರಾಜನಿಂದ ಆ ಪೂಜೆಯನ್ನು ಸ್ವೀಕರಿಸಿದ ಭಗವಾನ್ ಋಷಿಯು ಸಂತೋಷಗೊಂಡ ಅಂತರಾತ್ಮದಿಂದ ಮಾಗಧ ರಾಜನಿಗೆ ಹೇಳಿದನು:
“ರಾಜನ್! ಇವೆಲ್ಲವನ್ನೂ ನಾನು ನನ್ನ ಜ್ಞಾನದ ಕಣ್ಣುಗಳಿಂದ ತಿಳಿದಿದ್ದೆ. ನಿನ್ನ ಪುತ್ರನು ಭವಿಷ್ಯದಲ್ಲಿ ಏನಾಗುತ್ತಾನೆ ಎನ್ನುವುದನ್ನು ಈಗ ಕೇಳು. ಇವನ ವೀರ್ಯಕ್ಕಿಂತಲೂ ವೀರ್ಯವುಳ್ಳ ಪಾರ್ಥಿವರ್ಯಾರೂ ಇರುವುದಿಲ್ಲ. ನದಿಯ ಪ್ರವಾಹವು ಪರ್ವತಕ್ಕೆ ಹೇಗೆ ನೋವನ್ನುಂಟಮಾಡಲಾರವೋ ಹಾಗೆ ದೇವತೆಗಳೂ ಬಿಟ್ಟ ಅಸ್ತ್ರಗಳಿಂದ ಇವನಿಗೆ ಪೆಟ್ಟಾಗುವುದಿಲ್ಲ. ನಕ್ಷತ್ರಗಳ ಪ್ರಭೆಯನ್ನು ಮೀರಿಸುವ ಭಾಸ್ಕರನಂತೆ ಇವನು ಮೂರ್ಧಾಭಿಷಿಕ್ತರಾದ ಎಲ್ಲರ ಶಿರಗಳಿಗಿಂಥ ಬೆಳಗುತ್ತಾನೆ. ಇವನನ್ನು ಆಕ್ರಮಿಸುವ ರಾಜರ ಸಮೃದ್ಧ ಬಲ ವಾಹನಗಳು ಬೆಂಕಿಯಿಂದ ಪತಂಗವು ಹೇಗೋ ಹಾಗೆ ವಿನಾಶ ಹೊಂದುತ್ತವೆ. ಮಳೆನೀರೆಲ್ಲವನ್ನು ನದಿಗಳ ಮೂಲಕ ಹೇಗೆ ಸಾಗರವು ಹೀರಿಕೊಳ್ಳುತ್ತದೆಯೋ ಹಾಗೆ ಇವನು ಸರ್ವರಾಜರ ಶ್ರಿಯನ್ನು ಒಟ್ಟುಗೂಡಿಸಿ ಹಿಡಿದುಕೊಳ್ಳುತ್ತಾನೆ. ಸರ್ವಸಸ್ಯಧಾರಿಣಿ ಈ ಧರೆಯು ಹೇಗೆ ಶುಭ ಮತ್ತು ಅಶುಭಗಳನ್ನು ಸಹಿಸಿಕೊಳ್ಳುತ್ತಾಳೋ ಹಾಗೆ ಈ ಮಹಾಬಲನು ನಾಲ್ಕೂ ವರ್ಣದವರನ್ನು ಚೆನ್ನಾಗಿ ಪರಿಪಾಲಿಸುತ್ತಾನೆ. ಸರ್ವಭೂತಗಳಲ್ಲಿ ಇರುವ ವಾಯುವಿಗೆ ಶರೀರವು ಹೇಗೋ ಹಾಗೆ ಸರ್ವ ನರಾಧಿಪರೂ ಇವನ ಆಜ್ಞೆಗೊಳಗಾಗುತ್ತಾರೆ. ತನ್ನ ಅತಿಬಲದಿಂದ ಸರ್ವಲೋಕಗಳನ್ನು ಜಯಿಸುವ ಈ ಮಾಗಧನು ಸ್ವಯಂ ಮಹಾದೇವ ತ್ರಿಪುರಾಂತಕ ಹರ ರುದ್ರನನ್ನು ಕಾಣುತ್ತಾನೆ.”
ಹೀಗೆ ಹೇಳಿದ ಮುನಿಯು ತನ್ನ ಕಾರ್ಯಗಳ ಕುರಿತು ಯೋಚಿಸುತ್ತಾ ನೃಪ ಬೃಹದ್ರಥನನ್ನು ಕಳುಹಿಸಿದನು. ತನ್ನ ಜ್ಞಾತಿಬಾಂಧವರಿದ ಕೂಡಿ ನಗರವನ್ನು ಪ್ರವೇಶಿಸಿ ಜರಾಸಂಧನನ್ನು ಮಗಧಾಧಿಪತಿಯನ್ನಾಗಿ ಅಭಿಷೇಕಿಸಿ ನರಪತಿ ಬೃಹದ್ರಥನು ಅಂತಿಮ ನಿವೃತ್ತಿಯನ್ನು ಪಡೆದನು. ಜರಾಸಂಧನನ್ನು ಅಭಿಷೇಕಿಸಿ ರಾಜ ಬೃಹದ್ರಥನು ತನ್ನ ಇಬ್ಬರೂ ಪತ್ನಿಯರೊಡನೆ ತಪೋವನದಲ್ಲಿ ಅನುರತನಾದನು. ತನ್ನ ಈರ್ವರು ತಾಯಂದಿರೊಡನೆ ತಂದೆಯು ತಪೋವನದಲ್ಲಿರಲು ಜರಾಸಂಧನು ತನ್ನ ವೀರ್ಯದಿಂದ ರಾಜರನ್ನು ವಶಮಾಡಿಕೊಂಡನು. ತುಂಬಾ ಸಮಯದ ನಂತರ ತಪೋವನಕ್ಕೆ ಹೋಗಿದ್ದ ನೃಪ ಬೃಹದ್ರಥನು ತಪಸ್ಸನ್ನು ಮಾಡಿ ತನ್ನ ಭಾರ್ಯೆಯರೊಂದಿಗೆ ಸ್ವರ್ಗವನ್ನು ಸೇರಿದನು. ಶಸ್ತ್ರಗಳಿಂದ ಸಾವನ್ನು ಹೊಂದದ ಹಂಸ-ಡಿಭಕರು ಜರಾಸಂಧನ ಜೊತೆಯಿದ್ದರು. ನಾನು ಈ ಮೊದಲೇ ಹೇಳಿದ ಆ ಮಹಾಬಲಶಾಲಿಗಳಿಬ್ಬರೂ ಮಂತ್ರಾಲೋಚನೆಯಲ್ಲಿ ಮತಿವಂತರಾಗಿ ಶ್ರೇಷ್ಠರಾಗಿದ್ದರು, ಯುದ್ಧ ಶಾಸ್ತ್ರದಲ್ಲಿ ವಿಶಾರದರಾಗಿದ್ದರು. ಇವನೇ ಆ ವೀರಬಲಿ. ಅವನನ್ನು ಕುಕುರರು, ಅಂಧಕರು, ಮತ್ತು ವೃಷ್ಣಿಗಳು ನೀತಿಯ ಕಾರಣದಿಂದ ಅಲಕ್ಷಿಸಿದ್ದರು.”
ಕೃಷ್ಣ-ಪಾಂಡವರ ಮಾಗಧಯಾತ್ರೆ
ವಾಸುದೇವನು ಹೇಳಿದನು:
“ಹಂಸ-ಡಿಭಕರು ಪತಿತರಾಗಿದ್ದಾರೆ; ಕಂಸ ಮತ್ತು ಅವನ ಅಮಾತ್ಯರು ನಿಪತಿತರಾಗಿದ್ದಾರೆ. ಈಗ ಜರಾಸಂಧನ ನಿಧನದ ಕಾಲವು ಬಂದೊದಗಿದೆ. ಅವನನ್ನು ರಣದಲ್ಲಿ ಗೆಲ್ಲಲು ಸುರಾಸುರ ಸರ್ವರಿಂದಲೂ ಶಕ್ಯವಿಲ್ಲ. ಆದರೆ, ನಮಗೆ ತಿಳಿದಿರುವಂತೆ, ಪ್ರಾಣ-ಯುದ್ಧದಲ್ಲಿ ಅವನನ್ನು ಗೆಲ್ಲಬಹುದು. ನನ್ನಲ್ಲಿ ನೀತಿಯಿದೆ. ಭೀಮನಲ್ಲಿ ಬಲವಿದೆ. ಮತ್ತು ಅರ್ಜುನನು ನಮ್ಮೀರ್ವರನ್ನು ರಕ್ಷಿಸಬಲ್ಲನು. ರಾಜನ್! ಮೂರು ಅಗ್ನಿಗಳಂತೆ ನಾವು ಅವನನ್ನು ಸಾಧಿಸುತ್ತೇವೆ. ಏಕಾಂತದಲ್ಲಿ ಆ ನರಾಧಿಪನನ್ನು ನಾವು ಮೂವರೂ ಎದುರಿಸಿದಾಗ ನಮ್ಮಲ್ಲಿ ಒಬ್ಬನನ್ನು ಯುದ್ಧದಲ್ಲಿ ತೊಡಗಿಸುತ್ತಾನೆ ಎನ್ನುವುದರಲ್ಲಿ ಸಂದೇಹವಿಲ್ಲ. ಲೋಕದ ಅವಮಾನ ಮತ್ತು ತನ್ನ ಮೇಲಿರುವ ಅಭಿಮಾನಗಳು ನಿಶ್ಚಿತವಾಗಿಯೂ ಅವನನ್ನು ಭೀಮಸೇನನೊಡನೆ ಯುದ್ಧಮಾಡಲು ಪ್ರೇರೇಪಿಸುತ್ತವೆ. ಲೋಕ ನಿಧನಕ್ಕೆ ಹೇಗೆ ಅಂತಕನು ಸಾಕೋ ಹಾಗೆ ಅವನ ನಿಧನಕ್ಕೆ ಮಹಾಬಾಹು ಮಹಾಬಲ ಭೀಮಸೇನನು ಸಾಕು. ನಿನ್ನ ಹೃದಯವು ತಿಳಿದಿದ್ದರೆ ಮತ್ತು ನನ್ನಮೇಲೆ ನಿನಗೆ ವಿಶ್ವಾಸವಿದ್ದರೆ ಶೀಘ್ರದಲ್ಲಿಯೇ ಭೀಮಾರ್ಜುನರನ್ನು ನನಗೊಪ್ಪಿಸು.”
ಭಗವಂತನು ಹೀಗೆ ಹೇಳಲು ಯುಧಿಷ್ಠಿರನು ಸಂಪ್ರಹೃಷ್ಟಮುಖರಾಗಿ ನಿಂತಿದ್ದ ಭೀಮ ಪಾರ್ಥರೆಡೆಗೆ ನೋಡುತ್ತಾ ಉತ್ತರಿಸಿದನು:
“ಅಚ್ಯುತ! ನನ್ನೊಂದಿಗೆ ಈ ರೀತಿ ವ್ಯವಹರಿಸಬೇಡ! ಪಾಂಡವರ ನಾಥನು ನೀನು. ನಾವೆಲ್ಲರೂ ನಿನ್ನ ಆಶ್ರಯದಲ್ಲಿದ್ದೇವೆ. ನೀನು ಹೇಳಿದುದೆಲ್ಲವೂ ಸರಿಯೇ. ಲಕ್ಷ್ಮಿಯು ಪರಾಂಙ್ಮುಖಿಯಾಗಿರುವವರ ಎದುರು ನೀನು ಬರುವುದೇ ಇಲ್ಲ. ನಿನ್ನ ನಿರ್ದೇಶನದಂತೆ ನಡೆದರೆ ಜರಾಸಂಧನು ನಿಹತನಾಗುತ್ತಾನೆ, ಮಹೀಕ್ಷಿತರು ಬಿಡುಗಡೆ ಹೊಂದುತ್ತಾರೆ ಮತ್ತು ರಾಜಸೂಯವು ನನಗೆ ಲಬ್ಧವಾಗುತ್ತದೆ. ನನ್ನ ಜಗತ್ಕಾರ್ಯ ಕಾರ್ಯವು ಸರಿಯಾಗಿ ನೆರವೇರುವಂತೆ ಮಾಡು. ನೀವು ಮೂವರ ವಿನಃ ನಾನು ಜೀವಿಸಲು ಶಕ್ಯನಿಲ್ಲ. ಧರ್ಮಕಾಮಾರ್ಥರಹಿತ ರೋಗಿಯಂತೆ ಬಳಲುತ್ತೇನೆ. ಶೌರಿಯ ವಿನಃ ಪಾರ್ಥನಿಲ್ಲ, ಪಾಂಡವನ ವಿನಃ ಶೌರಿಯಿಲ್ಲ. ಈ ಈರ್ವರು ಕೃಷ್ಣರಿಗೆ ಲೋಕದಲ್ಲಿ ಅಜೇಯರು ಯಾರೂ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಈ ಶ್ರೀಮಾನ್ ವೃಕೋದರನೂ ಕೂಡ ಬಲಿಗಳಲ್ಲಿ ಶ್ರೇಷ್ಠನು. ನಿಮ್ಮಿಬ್ಬರ ಸಹಾಯ ದೊರೆತರೆ ಈ ಮಹಾಯಶಸ್ವಿ ವೀರನು ಏನನ್ನು ಸಾಧಿಸಲಾರ? ಸುಪ್ರಣೀತನ ನಾಯಕತ್ವವನ್ನು ಹೊಂದಿರುವ ಬಲಪ್ರವಾಹವು ಉತ್ತಮ ಕಾರ್ಯವನ್ನು ಸಾಧಿಸಬಲ್ಲದು. ಪ್ರಣೀತನ ನಾಯಕತ್ವದಲ್ಲಿ ಬಲವಿರಬೇಕು. ಇಲ್ಲದಿದ್ದರೆ ಅದು ಕುರುಡು ಮತ್ತು ಜಡವಾಗಿರುತ್ತದೆ ಎಂದು ಹೇಳುತ್ತಾರೆ. ತಗ್ಗಿರುವಲ್ಲಿಗೇ ನೀರು ಹೇಗೆ ಹರಿಯುತ್ತದೆಯೋ ಹಾಗೆ ಅಮಿತಬುದ್ಧಿಯುಳ್ಳವರು ಛಿದ್ರವಿರುವಲ್ಲಿಗೆ ಬಲವನ್ನು ಒಯ್ಯುತ್ತಾರೆ. ಆದುದರಿಂದ ವಿಧಾನಜ್ಞ ಲೋಕವಿಶ್ರುತ ಪುರುಷ ಗೋವಿಂದನ ಆಶ್ರಯದಲ್ಲಿರುವ ನಾವು ಕಾರ್ಯಸಿದ್ಧಿಯನ್ನು ಹೊಂದುತ್ತೇವೆ. ಹೀಗೆ ಕಾರ್ಯಾರ್ಥಸಿದ್ಧಿಗಾಗಿ ಎಲ್ಲ ಕಾರ್ಯಗಳಲ್ಲಿ ಪ್ರಜ್ಞೆ, ನೀತಿ, ಬಲ ಮತ್ತು ಕ್ರಿಯೋಪಾಯಸಮನ್ವಿತ ಕೃಷ್ಣನನ್ನೇ ಮುಂದಿಡಬೇಕು. ಈ ರೀತಿ ಕಾರ್ಯಾರ್ಥಸಿದ್ಧಿಗಾಗಿ ಪಾರ್ಥ ಅರ್ಜುನನು ಯದುಶ್ರೇಷ್ಠ ಕೃಷ್ಣನನ್ನು ಅನುಸರಿಸಲಿ. ಭೀಮನು ದನಂಜಯನನ್ನು ಅನುಸರಿಸಲಿ. ನೀತಿ, ಜಯ ಮತ್ತು ಬಲವು ವಿಕ್ರಮವನ್ನು ಸಿದ್ಧಿಗೊಳಿಸುತ್ತದೆ.”
ಅವನು ಈ ರೀತಿ ಹೇಳಲು ವಿಪುಲೌಜಸ ಸರ್ವ ಭ್ರಾತರರೂ - ವಾರ್ಷ್ಣೇಯ ಮತ್ತು ಪಾಂಡವರೀರ್ವರು - ಮಗಧದ ಕಡೆ ಹೊರಟರು. ವರ್ಚಸ್ವಿ ಸ್ನಾತಕ ಬ್ರಾಹ್ಮಣರ ಉಡುಪನ್ನು ಹೊದ್ದು ಸುಹೃದಯರ ಮನೋಜ್ಞ ಮಾತುಗಳಿಂದ ಅಭಿನಂದಿತರಾಗಿ ಹೊರಟರು. ಸುಂದರ ವಸ್ತ್ರಗಳನ್ನು ಧರಿಸಿದ್ದ ಮತ್ತು ಅಭಿತಪ್ತ ಜ್ಞಾತಿಗಳಿಗೋಸ್ಕರ ಸಿಟ್ಟಿಗೆದ್ದಿದ್ದ ಆ ರವಿಸೋಮಾಗ್ನಿವಪುಷರ ದೇಹಗಳು ಭಯಂಕರವಾಗಿ ತೋರುತ್ತಿದ್ದವು. ಭೀಮನನ್ನು ಮುಂದಿಟ್ಟುಕೊಂಡು ಒಂದೇ ಕಾರ್ಯದಲ್ಲಿ ತೊಡಗಿರುವ ಯುದ್ಧದಲ್ಲಿ ಅಪರಾಜಿತ ಕೃಷ್ಣರೀರ್ವರನ್ನು ನೋಡಿದ ಅವನು ಜರಾಸಂಧನು ಹತನಾದನೆಂದೇ ಭಾವಿಸಿದನು. ಯಾಕೆಂದರೆ ಅವರೀರ್ವರು ಮಹಾತ್ಮರೂ ಸರ್ವಕಾರ್ಯಗಳನ್ನು ಪ್ರಾರಂಭಿಸುವುದರಲ್ಲಿ ಮತ್ತು ಧರ್ಮಾರ್ಥಕಾಮಕಾರ್ಯಗಳ ನಿಗ್ರಹದಲ್ಲಿ ಈಶರು. ಕುರುದೇಶದಿಂದ ಹೊರಟು ಕುರುಜಂಗಲದ ಮಧ್ಯದಿಂದ ಹಾಯ್ದು ರಮ್ಯ ಪದ್ಮಸರೋವರಕ್ಕೆ ಹೋಗಿ ಕಾಲಕೂಟವನ್ನು ದಾಟಿ, ಒಂದೇ ಪರ್ವತದಿಂದ ಉದ್ಭವಿಸುವ ಗಂಡಕೀ, ಶೋಣ ಮತ್ತು ಸದಾನೀರ ನದಿಗಳನ್ನು ಒಂದೊಂದಾಗಿ ದಾಟಿ ಮುಂದುವರೆದರು. ರಮ್ಯ ಸರಯೂವನ್ನು ದಾಟಿ ಪೂರ್ವದಲ್ಲಿ ಕೋಸಲವನ್ನು ನೋಡುತ್ತಾ ಮಿಥಿಲೆಗೆ ಹೋಗಿ ಮಾಲಾ ಮತ್ತು ಚರ್ಮಣ್ವತೀ ನದಿಗಳನ್ನು ದಾಟಿದರು. ಆ ಮೂವರು ಅಚ್ಯುತರೂ ಪೂರ್ವಮುಖವಾಗಿ ಹೊರಟು ಗಂಗಾ ಮತ್ತು ಶೋಣ ನದಿಗಳನ್ನು ದಾಟಿ ಕುರವ ವೃಕ್ಷಗಳಿಂದ ಸುತ್ತುವರೆಯಲ್ಪಟ್ಟ ಮಾಗಧ ಕ್ಷೇತ್ರವನ್ನು ತಲುಪಿದರು. ಗೋವುಗಳ ಗುಂಪಿನಿಂದ ಕೂಡಿದ, ಒಳ್ಳೆಯ ನೀರು ಮತ್ತು ಸುಂದರ ವೃಕ್ಷಗಳಿಂದ ಕೂಡಿದ ಗೋರಥ ಗಿರಿಯನ್ನು ತಲುಪಿ ಅಲ್ಲಿಂದ ಅವರು ಮಾಗಧ ಪುರವನ್ನು ಕಂಡರು. ವಾಸುದೇವನು ಹೇಳಿದನು:
“ಪಾರ್ಥ! ಇದೇ ಸದಾ ಪಶು-ನೀರಿನಿಂದ ಮತ್ತು ನಿರಾಮಯ ಸುಂದರ ದೊಡ್ಡ ನಿವೇಶನಗಳಿಂದ ಕೂಡಿದ ಶುಭ ಮಾಗಧ! ಇವು ವೈಹಾರ, ವರಾಹ, ವೃಷಭ, ಋಷಿಗಿರಿ ಮತ್ತು ಚೈತ್ಯಗಳೆಂಬ ಐದು ವಿಪುಲ ಬೆಟ್ಟಗಳು. ಶೀತಲ ದ್ರುಮಗಳನ್ನೊಡಗೂಡಿದ ಈ ಐದು ಮಹಾಶೃಂಗ ಪರ್ವತಗಳು ಒಟ್ಟಾಗಿ, ಒಂದಕ್ಕೊಂದು ಹೊಂದಿಕೊಂಡು, ಗಿರಿವ್ರಜವನ್ನು ರಕ್ಷಿಸುತ್ತಿವೆಯೋ ಎಂಬಂತೆ ತೋರುತ್ತಿವೆ. ಪುಷ್ಪಗಳಿಂದ ತುಂಬಿದ ಶಾಖೆಗಳ ಮನೋರಮ ಸುಗಂಧವನ್ನು ಸೂಸುವ ಕಾಮಿಜನಪ್ರಿಯಕರ ಲೋಧ್ರಾ ವನಗಳಲ್ಲಿ ಗಿರಿವ್ರಜವು ಅಡಗಿರುವಂತೆ ತೋರುತ್ತಿದೆ. ಇಲ್ಲಿಯೇ ಮಹಾತ್ಮ ಸಂಶಿತವ್ರತ ಗೌತಮ ಋಷಿಯು ಶೂದ್ರ ಔಶೀನರಿಯಲ್ಲಿ ಕಾಕ್ಷೀವಾನ್ ಮೊದಲಾದ ಸುತರನ್ನು ಪಡೆದನು. ಅವನ ಸ್ಥಳದಲ್ಲಿ ವಾಸಿಸುತ್ತಿದ್ದುದಕ್ಕಾಗಿ ಗೌತಮನು ಮಗಧ ರಾಜವಂಶವನ್ನು ಅದರ ರಾಜರು ಅವನಿಗಿತ್ತ ಮಾನ್ಯತೆಗಳಿಗಾಗಿ ಪ್ರೀತಿಸಿದನು. ಅರ್ಜುನ! ಹಿಂದೆ ಅಂಗ, ವಂಗ ಮೊದಲಾದ ಸುಮಹಾಬಲ ರಾಜರುಗಳೂ ಕೂಡ ಗೌತಮನ ಆಶ್ರಮಕ್ಕೆ ಬಂದು ಸಂತೋಷವನ್ನು ಪಡೆದರು. ಗೌತಮನ ಆಶ್ರಮಕ್ಕೆ ಹೊಂದಿಕೊಂಡು ಬೆಳೆದಿರುವ ಈ ಮನೋರಮ ಪ್ರಿಯಾಲ ವನರಾಶಿ ಮತ್ತು ಸುಂದರ ಲೋಧ್ರಾವೃಕ್ಷಗಳನ್ನು ನೋಡು. ಇಲ್ಲಿ ಅರ್ಬುದ ಮತ್ತು ಶಕ್ರವಾಪೀ ಎಂಬ ಎರಡು ಶತ್ರುತಾಪನ ಪನ್ನಗಗಳು ವಾಸಿಸುತ್ತವೆ. ಅಲ್ಲಿಯೇ ಸ್ವಸ್ತಿಕ ಮತ್ತು ಮಣಿನಾಗನ ಉತ್ತಮ ಆಲಯಗಳೂ ಇವೆ. ಮಣಿಯ ಕೃಪೆಯಿಂದ ಈ ಮಾಗಧವು ಮೇಘಗಳಿಂದ ಎಂದೂ ವಂಚಿತವಾಗುವುದಿಲ್ಲ. ಕೌಶಿಕ ಮತ್ತು ಮಣಿಮತನೂ ಕೂಡ ಇದರ ಮೇಲೆ ಅನುಗ್ರಹವನ್ನು ವೃದ್ಧಿಸಿದ್ದಾರೆ. ತಾನು ಗಳಿಸಿದ ಅರ್ಥಸಿದ್ಧಿಯು ಎಂದೂ ಕಡಿಮೆಯಾಗುವುದಿಲ್ಲ ಎಂದು ಜರಾಸಂಧನು ತಿಳಿದಿದ್ದಾನೆ. ಆದರೆ ನಾವು ಅವನ ಬಳಿ ಹೋಗಿ ಅವನ ದರ್ಪವನ್ನು ಕೆಳಗುರಿಸೋಣ.”
ಈ ರೀತಿ ಮಾತನಾಡುತ್ತಾ ವಿಪುಲೌಜಸ ಅಣ್ಣತಮ್ಮಂದಿರೆಲ್ಲರೂ - ವಾರ್ಷ್ಣೇಯ ಮತ್ತು ಇಬ್ಬರು ಪಾಂಡವರು - ಮಗಧಪುರ ಪ್ರವೇಶ ಮಾಡಿದರು. ತುಷ್ಟಪುಷ್ಟಜನ ಭರಿತ, ಚಾತುರ್ವರ್ಣ್ಯಜನ ಸಮುದಾಯದಿಂದ ಕೂಡಿದ, ವಿಜೃಂಭಣೆಯ ಉತ್ಸವಭರಿತವಾದ, ಭೇಧಿಸಲಸಾದ್ಯ ಗಿರಿವ್ರಜವನ್ನು ಅವರು ಪ್ರವೇಶಿಸಿದರು. ಅವರು ನಗರದ ಮಹಾದ್ವಾರದ ಮೂಲಕ ಹೋಗದೇ ಬೃಹದ್ರಥರು ಮತ್ತು ನಗರವಾಸಿಗಳು ಪೂಜಿಸುವ ಗಿರಿಯನ್ನು ಏರಿದರು. ಅಲ್ಲಿ ಬೃಹದ್ರಥನು ನರಭಕ್ಷಕ ವೃಷಭರೂಪೀ ರಾಕ್ಷಸನನ್ನು ಸಂಹರಿಸಿದ್ದನು. ಆ ನರಭಕ್ಷಕನನ್ನು ಸಂಹರಿಸಿ ಅವನ ಚರ್ಮದಿಂದ ಮೂರು ನಗಾರಿಗಳನ್ನು ಮಾಡಿದ್ದನು. ಚರ್ಮದಿಂದ ಅವುಗಳನ್ನು ಮುಚ್ಚಿ ತನ್ನ ಪುರದಲ್ಲಿ ಸ್ಥಾಪಿಸಿದನು. ಈ ನಗಾರಿಗಳನ್ನು ಬಾರಿಸುವಾಗ ದಿವ್ಯಪುಷ್ಪಗಳ ಮಳೆ ಸುರಿಯುತ್ತಿತ್ತು. ಜರಾಸಂಧನನ್ನು ಕೊಲ್ಲಲು ಬಯಸಿದ ಅವರು ಮಾಗಧರ ಮೆಚ್ಚಿನ ಚೈತ್ಯಕ ಶಿಖರವನ್ನೇರಿ ಅವನ ತಲೆಯನ್ನೋ ಎನ್ನುವಂತೆ ಆ ನಗಾರಿಗಳನ್ನು ಒಡೆದುಹಾಕಿದರು. ಆ ಶೃಂಗವು ಪುರಾತನವೂ, ಅಗಲವೂ, ಸ್ಥಿರವಾಗಿದ್ದುದೂ ಆಗಿತ್ತು ಮತ್ತು ಮಾಲೆಗಳಿಂದ ಸದಾ ಅರ್ಚಿಸಲ್ಪಟ್ಟು ಸುಪ್ರತಿಷ್ಠವಾಗಿತ್ತು. ತಮ್ಮ ವಿಪುಲ ಬಾಹುಬಲದಿಂದ ಆ ವೀರರು ಅದನ್ನು ಒಡೆದು ಕೆಳಗುರುಳಿಸಿದರು. ನಂತರ ಅವರು ಮಾಗಧವನ್ನು ನೋಡಿ, ಪುರವನ್ನು ಪ್ರವೇಶಿಸಿದರು. ಇದೇ ಸಮಯದಲ್ಲಿ ಪುರೋಹಿತರು ನೃಪ ಜರಾಸಂಧನನ್ನು ಆನೆಯ ಮೇಲೆ ಕುಳ್ಳಿರಿಸಿ ನಾಲ್ಕೂ ಕಡೆಗಳಿಂದ ಅಗ್ನಿಯನ್ನು ಹಿಡಿದು ಪೂಜಿಸುತ್ತಿದ್ದರು. ಸ್ನಾತಕವ್ರತಿಗಳಂತೆ ವೇಷಧರಿಸಿದ ಆ ಮೂವರು ತಮ್ಮ ಬಾಹುಗಳನ್ನು ಬಿಟ್ಟು ಬೇರೆ ಯಾವ ಆಯುಧಗಳೂ ಇಲ್ಲದೇ ಜರಾಸಂಧನೊಡನೆ ಹೋರಾಡಲು ಪ್ರವೇಶಮಾಡಿದರು. ಸರ್ವಕಾಮ ಸಮೃದ್ಧಿಗೊಳಿಸುವ ಸರ್ವಗುಣೋಪೇತ ಉತ್ತಮ ವಸ್ತುಗಳಿಂದ ಭೂಷಿತ ಸಂಪದ್ಭರಿತ ಭಕ್ಷ್ಯ ಮಾಲೆಗಳ ಅಂಗಡಿಗಳನ್ನು ನೋಡಿದರು. ಆ ಸಮೃಧ್ಧ ವೀಧಿಗಳನ್ನು ನೋಡಿ ಆ ನರೋತ್ತಮ ಕೃಷ್ಣ, ಭೀಮ, ಧನಂಜಯರು ರಾಜಮಾರ್ಗದಲ್ಲಿ ನಡೆದರು. ಆ ಮಹಾಬಲಿಗಳು ಬಲಾತ್ಕಾರವಾಗಿ ಮಾಲಾಕಾರನಿಂದ ಮಾಲೆಗಳನ್ನು ಕಸಿದುಕೊಂಡರು. ಈ ರೀತಿ ಬಣ್ಣಬಣ್ಣದ ವಸ್ತ್ರಗಳನ್ನು, ಮಾಲೆಗಳನ್ನು ಮತ್ತು ಉತ್ತಮ ಕುಂಡಲಗಳನ್ನು ಧರಿಸಿ ಅವರು ಧೀಮತ ಜರಾಸಂಧನ ನಿವೇಶನವನ್ನು ಹಿಮವತ್ಪರ್ವತದ ಸಿಂಹಗಳು ಗೋವಿನ ಹಟ್ಟಿಯನ್ನು ಪ್ರವೇಶಿಸುವಂತೆ ಪ್ರವೇಶಿಸಿದರು. ಆ ಬಾಹುಶಾಲಿಗಳ ಚಂದನ ಮತ್ತು ಅಗರುಗಳಿಂದ ಭೂಷಿತ ಬಾಹುಗಳು ಶೈಲಸ್ತಂಭಗಳಂತೆ ಶೋಭಿಸುತ್ತಿದ್ದವು. ಆನೆಗಳಂತೆ ಧೃಢಕಾಯರಾದ, ಶಾಲವೃಕ್ಷದಂತೆ ಎತ್ತರವಿದ್ದ, ವಿಶಾಲ ಎದೆಯ ಅವರನ್ನು ನೋಡಿದ ಮಾಗಧರು ವಿಸ್ಮಿತರಾದರು. ಆ ಮಹಾಬಲಿ ನರರ್ಷಭರು ಜನಸಂದಣಿಯಿಂದ ಕೂಡಿದ್ದ ಮೂರು ಕಕ್ಷಗಳನ್ನು ದಾಟಿ ಅಹಂಕಾರದಿಂದ ರಾಜನ ಸಮೀಪ ಬಂದರು. ಜರಾಸಂಧನು ಪಾದ್ಯ-ಮಧುಪರ್ಕಗಳಿಗರ್ಹ ಮಾನಾರ್ಹ ಅವರನ್ನು ಕುಳ್ಳಿರಿಸಿ ಯಥಾವಿಧಿಯಾಗಿ ಸತ್ಕರಿಸಿದನು.
ಕೃಷ್ಣ-ಜರಾಸಂಧರ ಸಂವಾದ
ಅವರಿಗೆ ರಾಜ ಪ್ರಭುವು ನಿಮಗೆ ಸ್ವಾಗತ ಎಂದು ಹೇಳಿದನು. ಏಕೆಂದರೆ ಸ್ನಾತಕ ಬ್ರಾಹ್ಮಣರು ತಲುಪಿದ್ದಾರೆ ಎಂದು ಕೇಳಿದ ಕೂಡಲೇ ಮಧ್ಯರಾತ್ರಿಯಲ್ಲಿ ಕೂಡ ಅವರನ್ನು ಭೇಟಿಯಾಗುವುದು ಆ ನೃಪತಿಯ ಭೂಮಿಯಲ್ಲೆಲ್ಲ ವಿಶ್ರುತ ವ್ರತವಾಗಿದ್ದಿತು. ಅಪೂರ್ವ ವೇಷಗಳಲ್ಲಿದ್ದ ಅವರನ್ನು ಸಮೀಪದಿಂದ ನೋಡಿದ ನೃಪತಿಸತ್ತಮ ಜರಾಸಂಧನು ವಿಸ್ಮಿತನಾದನು. ರಾಜ ಜರಾಸಂಧನನ್ನು ಕಂಡಕೂಡಲೇ ಅಮಿತ್ರಘ್ನ ನರರ್ಷಭರು ಎಲ್ಲರೂ ಹೀಗೆ ಹೇಳಿದರು:
“ರಾಜನ್! ಸ್ವಸ್ತಿ ಮತ್ತು ಕುಶಲವಾಗಲಿ!”
ಇದನ್ನು ಹೇಳಿ ಹಾಗೆಯೇ ನಿಂತುಕೊಂಡು, ನೃಪನನ್ನೂ ಮತ್ತು ಪರಸ್ಪರರನ್ನೂ ನೋಡತೊಡಗಿದರು. ನಂತರ ಜರಾಸಂಧನು ಬ್ರಾಹ್ಮಣವೇಷದಲ್ಲಿದ್ದ ಯಾದವ-ಪಾಂಡವರಿಗೆ ಕುಳಿತುಕೊಳ್ಳಿ ಎಂದು ಹೇಳಿದನು. ಮೂವರು ಪುರುಷರ್ಷಭರೂ ಕುಳಿತುಕೊಂಡರು. ಮಹಾಧ್ವರದ ಅಗ್ನಿಗಳಂತೆ ಮೂವರೂ ಕಳೆಯಿಂದ ಬೆಳಗುತ್ತಿದ್ದರು. ಆಗ ಅವರ ವೇಷಧಾರಣೆಯ ಕಾರಣದಿಂದ ಅವರನ್ನು ನಿಂದಿಸುತ್ತಾ ಸತ್ಯಸಂಧ ನರಾಧಿಪ ಜರಾಸಂಧನು ಹೇಳಿದನು:
“ನನಗೆ ಎಲ್ಲ ತಿಳಿದಿರುವಂತೆ ಈ ಮನುಷ್ಯಲೋಕದಲ್ಲಿ ಸ್ನಾತಕವ್ರತದಲ್ಲಿರುವ ಬ್ರಾಹ್ಮಣರು ಮಾಲೆ-ಲೇಪನಗಳನ್ನು ಧರಿಸುವುದಿಲ್ಲ. ಇಲ್ಲಿರುವ ನೀವು ಪುಷ್ಪಗಳನ್ನು ಧರಿಸಿದ್ದೀರಿ ಮತ್ತು ನಿಮ್ಮ ಭುಜಗಳು ಧನುಸ್ಸನ್ನು ಏರಿಸಿದುದರಿಂದಾದ ಘಾಯಗಳನ್ನು ಹೊಂದಿವೆ. ಕ್ಷತ್ರಿಯರ ಅಂಗವಸ್ತ್ರಗಳನ್ನು ಧರಿಸಿರುವ ನೀವು ಬ್ರಾಹ್ಮಣರೆಂದು ತೋರುತ್ತಿದ್ದೀರಿ. ಈ ರೀತಿ ಬಣ್ಣಬಣ್ಣದ ವಸ್ತ್ರಗಳನ್ನು ಧರಿಸಿ, ಮಾಲೆ-ಲೇಪನಗಳನ್ನು ಧರಿಸಿರುವ ನೀವು ಯಾರು? ಸತ್ಯವನ್ನು ಹೇಳಿರಿ. ರಾಜನಲ್ಲಿ ಸತ್ಯವೇ ಶೋಭೆಯನ್ನು ನೀಡುತ್ತದೆ. ನೀವುಗಳು ರಾಜನನ್ನು ಅಪಮಾನಿಸುತ್ತಿದ್ದೇವೆ ಎನ್ನುವ ಭಯವಿಲ್ಲದೇ ಚೈತ್ಯಕ ಗಿರಿಯ ಶಿಖರವನ್ನು ಒಡೆದು, ದ್ವಾರದ ಮೂಲಕವಲ್ಲದೇ ಪ್ರವೇಶಿಸಿದ್ದುದು ಏಕೆ? ವಿಶೇಷವಾಗಿ ಮಾತಿನಲ್ಲಿಯೇ ಬ್ರಾಹ್ಮಣರ ವೀರತನವಿರುತ್ತದೆ. ಆದರೆ ನೀವು ಮಾಡಿದ್ದುದು ನಿಮ್ಮ ಗುರುತಿಗೆ ಸರಿಯಾದುದಲ್ಲ. ನಿಮ್ಮ ಉದ್ದೇಶವೇನು ಹೇಳಿ. ಈ ರೀತಿ ನನ್ನ ಬಳಿ ಬಂದು ವಿಧಿಪೂರ್ವಕವಾಗಿ ನಿಮಗಿತ್ತಿರುವ ಸತ್ಕಾರವನ್ನು ನೀವು ಏಕೆ ಸ್ವೀಕರಿಸುತ್ತಿಲ್ಲ? ನೀವು ಯಾವ ಕಾರ್ಯಕ್ಕಾಗಿ ನಮ್ಮಲ್ಲಿಗೆ ಬಂದಿದ್ದೀರಿ?”
ಅವನ ಈ ಮಾತಿಗೆ ಮಹಾಮನಸ್ವಿ, ವಾಕ್ಯವಿಶಾರದ ಕೃಷ್ಣನು ಮೃದು-ಗಂಭೀರಧ್ವನಿಯಲ್ಲಿ ಈ ಮಾತುಗಳನ್ನಾಡಿದನು:
“ರಾಜನ್! ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಯಾರೂ ಸ್ನಾತಕವ್ರತಿಗಳಾಗಬಹುದು. ಆದರೆ ಅದಕ್ಕೆ ಕೆಲವು ವಿಶೇಷನಿಯಮಗಳು ಕೆಲವು ಸಾಧಾರಣ ನಿಯಮಗಳೂ ಇವೆ. ವಿಶೇಷನಿಯಮಗಳನ್ನು ಪರಿಪಾಲಿಸುವ ಕ್ಷತ್ರಿಯನು ಸದಾ ಸಂಪತ್ತಿನ ಪಾತ್ರನಾಗುತ್ತಾನೆ. ಪುಷ್ಪಧಾರಣಮಾಡುವವರಲ್ಲಿ ಶ್ರೀಯು ವಾಸಿಸುವುದು ನಿಶ್ಚಿತ. ಆದುದರಿಂದ ನಾವು ಪುಷ್ಪಗಳನ್ನು ಧರಿಸಿದ್ದೇವೆ. ಕ್ಷತ್ರಿಯನ ವೀರ್ಯತ್ವವು ಅವನ ಬಾಹುಗಳಲ್ಲಿರುತ್ತವೆ. ಮಾತಿನಲ್ಲಿ ಅವನು ಅಷ್ಟೊಂದು ವೀರನಿಲ್ಲದಿರಬಹುದು. ಆದುದರಿಂದ ಅವನ ಮಾತು ನಿಷ್ಟೂರವಾಗಿರುವುದಿಲ್ಲ ಎಂದು ಕೇಳಿದ್ದೇವೆ. ವಿಧಾತನು ಕ್ಷತ್ರಿಯರ ವೀರ್ಯವನ್ನು ಅವರ ಭುಜಗಳಲ್ಲಿಯೇ ಇರಿಸಿದ್ದಾನೆ. ಅದನ್ನು ನೀನು ನೋಡಲು ಬಯಸುವೆಯಾದರೆ ನಿಸ್ಸಂಶಯವಾಗಿ ನಿನಗೆ ತೋರಿಸಲಾಗುತ್ತದೆ. ಸಂತರು ಅವರ ಶತ್ರುವಿನ ಗೃಹವನ್ನು ದ್ವಾರದಮೂಲಕ ಪ್ರವೇಶಿಸುವುದಿಲ್ಲ ಮತ್ತು ಸುಹೃದಯರ ಗೃಹವನ್ನು ದ್ವಾರದ ಮೂಲಕವೇ ಪ್ರವೇಶಿಸುತ್ತಾರೆ. ಆದುದರಿಂದ ನಾವು ನಿನ್ನ ದ್ವಾರವನ್ನು ತಿರಸ್ಕರಿಸಿದೆವು. ಒಂದು ಕಾರ್ಯದ ಉದ್ದೇಶವನ್ನಿಟ್ಟುಕೊಂಡು ಬಂದ ನಾವು ಶತ್ರುವಿನ ಆತಿಥ್ಯವನ್ನು ಸ್ವೀಕರಿಸುವುದಿಲ್ಲ. ಇದು ನಮ್ಮ ಶಾಶ್ವತ ವ್ರತವೆಂದು ತಿಳಿ.”
ಜರಾಸಂಧನು ಹೇಳಿದನು:
“ನಿಮಗೆ ನಾನು ಎಂದೂ ವೈರತ್ವದಿಂದ ಏನನ್ನೂ ಮಾಡಿದ ನೆನಪಿಲ್ಲ. ನಿಮ್ಮ ಕುರಿತು ಕೆಟ್ಟದ್ದಾಗಿ ಯೋಚಿಸಿದ್ದೂ ನನ್ನ ಗಮನಕ್ಕಿಲ್ಲ. ವೈರತ್ವವನ್ನೇ ತೋರಿಸದಿದ್ದ ಅನಾಗಸ ನನ್ನನ್ನು ನೀವು ಹೇಗೆ ಶತ್ರುವೆಂದು ತಿಳಿಯುತ್ತೀರಿ. ಹೇಳಿ ವಿಪ್ರರೇ! ಇದು ಸಾತ್ವಿಕರ ನಿಯಮವೇ? ಅನಾಗಸನ ವಿರುದ್ಧವಾದರೆ ಕ್ಷತ್ರಿಯನಾಗಿದ್ದರೂ ಅವನು ಧರ್ಮಲೋಪಿಯಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಅವನು ಎಷ್ಟೇ ಧರ್ಮಜ್ಞನಾಗಿರಲಿ ಅಥವಾ ಮಹಾತ್ಮನಾಗಿರಲಿ, ಇದಕ್ಕೆ ವಿರುದ್ಧವಾಗಿ ಲೋಕದಲ್ಲಿ ನಡೆದುಕೊಂಡರೆ ವೃಜಿಗಳ ಗತಿಯನ್ನು ಹೊಂದುತ್ತಾನೆ ಮತ್ತು ತನ್ನ ಶ್ರೇಯಸ್ಸನ್ನು ಕಳೆದುಕೊಳ್ಳುತ್ತಾನೆ. ತ್ರೈಲೋಕ್ಯದಲ್ಲಿಯೇ ಕ್ಷತ್ರಧರ್ಮವನ್ನು ಪಾಲಿಸಿಕೊಂಡು ಸಾಧುಚಾರಿಗಳಲ್ಲಿ ಶ್ರೇಷ್ಠನಾದ, ಅನಾಗಸನಾದ, ಪ್ರಜಾಪಾಲಕನಾದ, ನನ್ನನ್ನು ನೀವು ಪ್ರಮಾದದಿಂದ ಶತ್ರುವೆಂದು ತಿಳಿದಿರುವಿರಿ.”
ವಾಸುದೇವನು ಹೇಳಿದನು:
“ಮಹಾಬಾಹೋ! ಕುಲಕಾರ್ಯನಾದ ಕುಲೋದ್ಧಹನಾದ ಓರ್ವ ಮಹಾರಾಜನಿದ್ದಾನೆ. ಅವನ ನಿಯೋಗದಿಂದಲೇ ನಾವು ಮೂವರು ಇಲ್ಲಿ ಉಪಸ್ಥಿತರಿದ್ದೇವೆ. ಲೋಕವಾಸಿಗಳಾದ ಕ್ಷತ್ರಿಯರನ್ನು ನೀನು ಅಪಹರಿಸಿದ ಅತಿ ದೊಡ್ಡ ಕ್ರೂರಕಾರ್ಯವನ್ನು ಮಾಡಿದ್ದರೂ ನೀನು ನಿನ್ನನ್ನು ಅನಾಗಸನೆಂದು ಹೇಗೆ ಕಲ್ಪಿಸಿಕೊಂಡಿದ್ದೀಯೆ? ಒಬ್ಬ ರಾಜನು ಇತರ ಸಾಧು ರಾಜರುಗಳನ್ನು ಹೇಗೆ ತಾನೆ ಹಿಂಸಿಸಬಹುದು? ಸೆರೆಹಿಡಿದ ರಾಜರುಗಳನ್ನು ನೀನು ರುದ್ರನಿಗೆ ಬಲಿಯಾಗಿ ನೀಡಲು ಬಯಸುತ್ತಿರುವೆ! ನೀನು ಮಾಡಿದ ಈ ಪಾಪಕೃತ್ಯವು ನಮ್ಮ ಮೇಲೆಯೂ ಪರಿಣಾಮ ಬೀರುತ್ತಿದೆ. ಏಕೆಂದರೆ, ಧರ್ಮಚಾರಿಣರಾದ ನಾವು ಧರ್ಮದ ರಕ್ಷಣೆಗೆ ಶಕ್ತರಾಗಿದ್ದೇವೆ. ಮನುಷ್ಯರನ್ನು ಬಲಿಕೊಡುವುದನ್ನು ಎಂದೂ ನೋಡಿದ್ದಿಲ್ಲ. ನೀನು ಹೇಗೆ ದೇವ ಶಂಕರನಿಗೆ ಮನುಷ್ಯರನ್ನು ಬಲಿಕೊಡಲು ಯೋಚಿಸುತ್ತಿರುವೆ? ಸವರ್ಣಿಯಾದ ನೀನು ಸವರ್ಣದವರನ್ನೇ ಪಶುಗಳಂತೆ ಬಲಿಕೊಡಲು ಬಯಸುತ್ತಿದ್ದೀಯೆ. ಜರಾಸಂಧ! ನಿನಗಿಂತಲೂ ವೃಥಾಮತಿಯಾದ ಇನ್ನೊಬ್ಬನು ಯಾರಿದ್ದಾನೆ? ಆರ್ತಾನುಸಾರಿಗಳಾದ ನಾವು ಜ್ಞಾತಿಕ್ಷಯಕಾರಕ ನಿನ್ನನ್ನು ವಿನೀತನನ್ನಾಗಿಸಿ ಜ್ಞಾತಿಜರ ವೃದ್ಧಿಗೋಸ್ಕರವಾಗಿ ಇಲ್ಲಿಗೆ ಬಂದಿದ್ದೇವೆ. ಲೋಕದ ಕ್ಷತ್ರಿಯರಲ್ಲಿ ಅನ್ಯ ಪುರುಷರು ಯಾರೂ ಇಲ್ಲವೆಂದು ನೀನು ತಿಳಿದಿದ್ದರೆ ಅದೊಂದು ದೊಡ್ಡ ಬುದ್ಧಿವಿಪ್ಲವತೆ ಎಂದು ತಿಳಿ. ತನ್ನ ಉತ್ತಮ ಜನ್ಮವನ್ನು ತಿಳಿದ ಯಾವ ಕ್ಷತ್ರಿಯನು ತಾನೆ ರಣದಲ್ಲಿ ತೀರಿಕೊಂಡ ನಂತರ ಅವ್ಯಯವೂ ಅತುಲವೂ ಆದ ಸ್ವರ್ಗವನ್ನು ಹೊಂದುವುದಿಲ್ಲ? ಸ್ವರ್ಗವನ್ನೇ ಗುರಿಯನಾಗಿಟ್ಟುಕೊಂಡು ರಣಯಜ್ಞದಲ್ಲಿ ದೀಕ್ಷಿತರಾದವರನ್ನು ಲೋಕದ ಕ್ಷತ್ರಿಯರು ಪೂಜಿಸುತ್ತಾರೆ ಎನ್ನುವುದನ್ನು ತಿಳಿ. ಜಯವು ಸ್ವರ್ಗಯೋನಿ, ಯಶಸ್ಸೂ ಸ್ವರ್ಗಯೋನಿ, ತಪಸ್ಸೂ ಸ್ವರ್ಗಯೋನಿ. ಹಾಗೆಯೇ ಯುದ್ಧವೂ ನೇರವಾದ ಮಾರ್ಗವು. ಯಾಕೆಂದರೆ ಇದೇ ಗುಣದಿಂದಲೇ ನಿತ್ಯ ಸಮಾಹಿತ ವೈಜಯಂತ ಜಗತ್ಪತಿ ಶತಕ್ರತು ಇಂದ್ರನು ಅಸುರರನ್ನು ಪರಾಜಿತಗೊಳಿಸಿದನು. ವಿಪುಲ ಮಾಗಧ ಸೈನ್ಯವನ್ನು ಹೊಂದಿ ಬಾಹುಬಲದರ್ಪಿತನಾದ ನಿನ್ನನ್ನು ಸೋಲಿಸದೇ ಬೇರೆ ಹೇಗೆ ತಾನೆ ಸ್ವರ್ಗವನ್ನು ಪಡೆಯಬಹುದು? ಇತರರನ್ನು ಕಡೆಗಣಿಸಬೇಡ! ಯಾವ ನರನಲ್ಲಿಯೂ ವೀರ್ಯವಿಲ್ಲವೇ? ನಿನ್ನ ತೇಜಸ್ಸಿಗೆ ಸಮನಾದವನು ಯಾರೂ ಇಲ್ಲವೇ? ನಾನು ನಿನಗೆ ಹೇಳುತ್ತೇನೆ. ನಾವು ನಿನ್ನ ಸರಿಸಾಟಿಗಳಾಗಿದ್ದೇವೆ. ನಿನ್ನ ದರ್ಪವನ್ನು ತೊರೆ. ಮಕ್ಕಳು, ಅಮಾತ್ಯರು ಮತ್ತು ಸೇನೆಯೊಂದಿಗೆ ಯಮಕ್ಷಯಕ್ಕೆ ಹೋಗಬೇಡ. ಅವರಿಗಿಂಥ ಉತ್ತಮರನ್ನು ಕಡೆಗಣಿಸಿದುದರಿಂದಲೇ ಇಲ್ಲಿ ದಂಭೋದ್ಭವ, ಕಾರ್ತವೀರ್ಯ, ಉತ್ತರ ಮತ್ತು ಬೃಹದ್ರಥ ಮೊದಲಾದ ನೃಪರು ಸೇನೆಗಳೊಂದಿಗೆ ವಿನಾಶಹೊಂದಿದರು. ನಿನ್ನಿಂದ ರಾಜರುಗಳನ್ನು ಬಿಡುಗಡೆಮಾಡಲು ಬಯಸುವ ನಾವು ಬ್ರಾಹ್ಮಣರಲ್ಲ. ನಾನು ಶೌರಿ ಹೃಷೀಕೇಶ ಮತ್ತು ಈ ಈರ್ವರು ವೀರ ಪಾಂಡವರು. ನಾವು ನಿನ್ನನ್ನು ಆಹ್ವಾನಿಸುತ್ತಿದ್ದೇವೆ. ಸ್ಥಿರನಾಗಿ ಯುದ್ಧ ಮಾಡು. ಸರ್ವ ನೃಪತಿಗಳನ್ನೂ ಬಿಡುಗಡೆಮಾಡು ಅಥವಾ ಯಮಕ್ಷಯಕ್ಕೆ ಹೋಗು.”
ಜರಾಸಂಧನು ಹೇಳಿದನು:
“ನಾನು ಎಂದೂ ಸೋಲಿಸದೇ ಯಾವ ರಾಜನನ್ನೂ ಹಿಡಿದಿಲ್ಲ. ಸೋತವರು ಯಾರುತಾನೆ ನನ್ನನ್ನು ಎದುರಿಸಿದ್ದಾರೆ? ಮತ್ತು ನಾನು ಯಾರನ್ನು ತಾನೇ ಸೋಲಿಸಲಿಲ್ಲ? ಕೃಷ್ಣ! ವಿಕ್ರಮದಿಂದ ವಶಮಾಡಿಕೊಳ್ಳುವುದು ಮತ್ತು ತನಗಿಷ್ಟಬಂದಂತೆ ನಡೆದುಕೊಳ್ಳುವುದೇ ಕ್ಷತ್ರಿಯನ ಧರ್ಮವೆಂದು ಹೇಳಿದ್ದಾರೆ. ಕ್ಷತ್ರಿಯಧರ್ಮವನ್ನು ತಿಳಿದಿರುವ ನಾನು ದೇವನಿಗೆಂದು ಹಿಡಿದಿಟ್ಟಿರುವ ಈ ರಾಜರುಗಳನ್ನು ಇಂದು ಭಯದಿಂದ ಹೇಗೆ ಬಿಡುಗಡೆಮಾಡಬಲ್ಲೆ? ಸೈನ್ಯದೊಂದಿಗೆ ಸೇರಿರುವ ಸೈನ್ಯವನ್ನು ಅಥವಾ ಒಬ್ಬನೇ ಒಬ್ಬನೊಂದಿಗೆ, ಅಥವಾ ಇಬ್ಬರೊಂದಿಗೆ ಅಥವಾ ಒಬ್ಬೊಬ್ಬರಾಗಿ ಅಥವಾ ಒಟ್ಟಿಗೇ ಮೂವರೊಂದಿಗೆ ಯುದ್ಧಮಾಡಬಲ್ಲೆ.”
ಹೀಗೆ ಹೇಳಿ ಜರಾಸಂಧನು ಸಹದೇವನ ಅಭಿಷೇಕವನ್ನು ಆಜ್ಞಾಪಿಸಿ ಭಯಂಕರ ಯುದ್ಧಮಾಡಲು ಸಿದ್ಧನಾಗಿ ನಿಂತನು. ಆ ಯುದ್ಧವು ಪ್ರಾರಂಭವಾಗುವಾಗ ರಾಜನು ತನ್ನ ಸೇನಾಪತಿಗಳಾದ, ಲೋಕದಲ್ಲಿ ಹಂಸ-ಡಿಭಕರೆಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ, ಮನುಷ್ಯಲೋಕದಲ್ಲಿ ಹಿಂದೆ ಶ್ರೇಷ್ಠರೆಂದು ಕರೆಯಲ್ಪಟ್ಟು ಲೋಕಸತ್ಕೃತರಾಗಿದ್ದ, ಕೌಶಿಕ ಚಿತ್ರಸೇನರನ್ನು ನೆನೆದನು. ಅಚ್ಯುತ ಶೌರಿಯು ಕೂಡ ಆ ರಾಜನು ಬಲಶಾಲಿಗಳಲ್ಲಿ ಶ್ರೇಷ್ಠ, ವಿಕ್ರಮದಲ್ಲಿ ಶಾರ್ದೂಲ ಸಮನಾಗಿದ್ದಾನೆ, ಸತ್ಯಸಂಧ ಜರಾಸಂಧನು ಭುವಿಯಲ್ಲಿ ಬೀಮಪರಾಕ್ರಮಿಯಾಗಿದ್ದಾನೆ ಮತ್ತು ಅವನ ವಧೆಯು ಬೇರೆಯವನ ಪಾಲೆಂದು ನಿರ್ದಿಷ್ಠವಾಗಿದೆ ಎನ್ನುವುದನ್ನು ನೆನಪಿಸಿಕೊಂಡನು. ಹೀಗೆ ಹಲಧರನ ಅನುಜ ಮಧುಸೂದನನು ತನ್ನನ್ನು ತಾನೇ ಮುಖ್ಯನೆಂದು ಪರಿಗಣಿಸದೇ ಬ್ರಹ್ಮನ ಯೋಜನೆಯನ್ನು ಪುರಸ್ಕರಿಸಿ ಅವನನ್ನು ಕೊಲ್ಲಲು ಮುಂದಾದನು. ನಂತರ ಯದುನಂದನ ಅಧೋಕ್ಷಜನು ಯುದ್ಧಕ್ಕೆ ನಿರ್ಧರಿಸಿದ ವಾಗ್ಮಿ ರಾಜನನ್ನು ಕುರಿತು ಹೇಳಿದನು:
“ರಾಜನ್! ನಮ್ಮ ಈ ಮೂವರಲ್ಲಿ ಯಾರೊಂದಿಗೆ ಯುದ್ಧಮಾಡಲು ಬಯಸುತ್ತೀಯೆ? ನಮ್ಮಲ್ಲಿ ಯಾರು ನಿನ್ನೊಂದಿಗೆ ಯುದ್ಧಮಾಡಲು ಅಣಿಯಾಗಬೇಕು?”
ಕೃಷ್ಣನು ಈ ರೀತಿ ಹೇಳಲು ಮಾಗಧ ಮಹಾದ್ಯುತಿ ಜರಾಸಂಧನು ಯುದ್ಧಮಾಡಲು ಭೀಮಸೇನನನ್ನು ಆರಿಸಿಕೊಂಡನು.
ಭೀಮಸೇನ-ಜರಾಸಂಧರ ಮಲ್ಲಯುದ್ಧ; ಜರಾಸಂಧವಧೆ
ಜರಾಸಂಧನ ಬಳಿಯಲ್ಲಿ ಅವನ ಪುರೋಹಿತರು ವೇದನೆಯನ್ನು ಹೋಗಲಾಡಿಸುವ, ಪುನಃಶ್ಚೇತನಗೊಳಿಸುವ ಶ್ರೇಷ್ಠ ಗಿಡಮೂಲಿಕೆಗಳನ್ನು ಹಿಡಿದು ನಿಂತರು. ವಿದ್ವಾನ್ ಬ್ರಾಹ್ಮಣರು ಯಶಸ್ಸಿಗಾಗಿ ಆಶಿರ್ವಚನಗಳನ್ನು ನೀಡಲು, ಸಮನರ್ಹ ಕ್ಷತ್ರಧರ್ಮ ಪಾಲಕ ಜರಾಸಂಧನು ತನ್ನ ಕಿರೀಟವನ್ನು ಕೆಳಗಿಟ್ಟು, ತಲೆಗೂದಲನ್ನು ಬಾಚಿ, ಅಲೆಗಳೊಂದಿಗೆ ಮೇಲೇರುವ ಸಮುದ್ರದಂತೆ ಮೇಲೆದ್ದನು. ಆ ಮತಿವಂತ ರಾಜನು ಭೀಮಪರಾಕ್ರಮಿ ಭೀಮನಲ್ಲಿ ಹೇಳಿದನು: “ಭೀಮ! ನಾನು ನಿನ್ನೊಂದಿಗೆ ಯುದ್ಧ ಮಾಡುತ್ತೇನೆ. ಏಕೆಂದರೆ ತನಗಿಂಥ ಶ್ರೇಷ್ಠನಾದವನಿಂದ ಸೋಲುವುದು ಒಳ್ಳೆಯದು.” ಹೀಗೆ ಹೇಳಿ ಅರಿಂದಮ ಮಹಾತೇಜಸ್ವಿ ಜರಾಸಂಧನು ಹಿಂದೆ ಅಸುರ ಬಲಿಯು ಶಕ್ರನನ್ನು ಹೇಗೋ ಹಾಗೆ ಭೀಮಸೇನನ ಮೇಲೆ ಎರಗಿದನು. ಆಗ ಬಲಶಾಲಿ ಭೀಮಸೇನನು ಕೃಷ್ಣನಿಂದ ಸಲಹೆ ಪಡೆದು ಅವನಿಂದ ಹರಸಲ್ಪಟ್ಟು ಜರಾಸಂಧನೊಡನೆ ಯುದ್ಧಮಾಡಲು ಮುಂದಾದನು. ಆ ಇಬ್ಬರು ವೀರ ನರಶಾರ್ದೂಲರು ಬಾಹುಗಳನ್ನೇ ಶಸ್ತ್ರಗಳನ್ನಾಗಿಸಿ ಪರಮಸಂಹೃಷ್ಟರಾಗಿ ಅನ್ಯೋನ್ಯರನ್ನು ಸೋಲಿಸುವ ಉದ್ದೇಶದಿಂದ ಪರಸ್ಪರರ ಮೇಲೆರಗಿದರು. ಅವರ ಭುಜಗಳ ಹೊಡೆತದಿಂದ, ನಿಗ್ರಹ ಪ್ರಗ್ರಹಗಳ ಶಬ್ಧವು ಮಿಂಚು ಬಡಿದ ಪರ್ವತಗಳ ಗರ್ಜನೆಯಂತೆ ಕೇಳಿಬಂದವು. ಅವರಿಬ್ಬರೂ ಪರಮಸಂಹೃಷ್ಟರಾಗಿದ್ದರು. ಇಬ್ಬರೂ ಬಲದಲ್ಲಿ ಅತಿಬಲರಾಗಿದ್ದರು ಮತ್ತು ಪರಸ್ಪರರನ್ನು ಬೀಳಿಸುವ ಉದ್ದೇಶದಿಂದ ಅನ್ಯೋನ್ಯರಲ್ಲಿರುವ ನ್ಯೂನತೆಗಳನ್ನು ಹುಡುಕುತ್ತಿದ್ದರು. ವೃತ್ರ ಮತ್ತು ವಾಸವರ ಯುದ್ಧದಂತಿದ್ದ ಈ ಬಲಿಗಳ ನಡುವಿನ ಯುದ್ಧವು ಬಹಳಷ್ಟು ಪ್ರೇಕ್ಷಕರನ್ನು ಹಿಂಜರಿಯುವಂತೆ ಮಾಡಿತು.
ಪ್ರಕರ್ಷಣ ಆಕರ್ಷಣಗಳಿಂದ ಮತ್ತು ಬಿಗಿ ಹಿಡಿದ ಮುಷ್ಠಿಗಳಿಂದ ಅನ್ಯೋನ್ಯರನ್ನು ಎಳೆದಾಡಿ ಕಾಲುಗಳನ್ನು ಮೇಲೆತ್ತಿ ಬಡಿದರು. ನಂತರ ದೊಡ್ಡ ಧ್ವನಿಯಿಂದ ಪರಸ್ಪರರನ್ನು ಹೀಯಾಳಿಸುತ್ತಾ ಕಲ್ಲಿನ ಮೇಲೆ ಕಲ್ಲಿನ ಪ್ರಹಾರವಾಗುತ್ತಿದೆಯೋ ಎನ್ನುವಂತೆ ಇಬ್ಬರೂ ಪರಸ್ಪರರನ್ನು ಗುದ್ದಿದರು. ವಿಶಾಲ ಎದೆಯ, ನೀಳಬಾಹುಗಳ, ಇಬ್ಬರು ಯುದ್ಧಕುಶಲರೂ ಕಬ್ಬಿಣದ ಪರಿಘಗಳಂತಿರುವ ಬಾಹುಗಳಿಂದ ಶರೀರದಮೇಲೆ ಹೊಡೆತಗಳ ಮಳೆಸುರಿಸಿದರು. ಕಾರ್ತೀಕ ಮಾಸದ ಪ್ರಥಮ ದಿನ ಪ್ರಾರಂಭವಾದ ಆ ಸ್ಪರ್ಧೆಯು ದಿನರಾತ್ರಿಗಳೆನ್ನದೇ ಅನವರತವಾಗಿ ಅವಿಶ್ರಾಂತವಾಗಿ ನಡೆಯಿತು. ಹದಿಮೂರನೆಯ ದಿನವೂ ಇಬ್ಬರು ಮಹಾತ್ಮರೂ ಯುದ್ಧದಲ್ಲಿ ತೊಡಗಿದ್ದರು. ಆದರೆ, ಹದಿನಾಲ್ಕನೆಯ ರಾತ್ರಿ, ಮಾಗಧನು ಆಯಾಸಗೊಂಡು ಹಿಂದೆ ಸರಿದನು. ರಾಜನು ಆಯಾಸಗೊಂಡಿದ್ದುದನ್ನು ನೋಡಿದ ಜನಾರ್ದನನು ಭೀಮಕರ್ಮಿಣಿ ಭೀಮನನ್ನು ಸಂಬೋಧಿಸುತ್ತಿದ್ದಾನೋ ಎನ್ನುವಂತೆ ಹೇಳಿದನು:
“ಕೌಂತೇಯ! ಆಯಾಸಗೊಂಡ ಶತ್ರುವನ್ನು ರಣದಲ್ಲಿ ಅಪ್ಪಳಿಸಬಾರದು. ಹಾಗೆ ಅಪ್ಪಳಿಸಿದರೆ ಅವನು ಸಂಪೂರ್ಣವಾಗಿ ಜೀವ ತೊರೆಯಬಹುದು. ಆದುದರಿಂದ ನರಾಧಿಪನನ್ನು ಪೀಡಿಸಬೇಡ. ಮೊದಲಿನಂತೆ ಒಂದೇ ಸಮನೆ ಬಾಹುಗಳಿಂದಲೇ ಯುದ್ಧಮಾಡು.”
ಕೃಷ್ಣನು ಈ ರೀತಿ ಹೇಳಲು ಪರವೀರಹ ಪಾಂಡವನು ಜರಾಸಂಧನ ರಂಧ್ರವನ್ನು ತಿಳಿದು ಅವನನ್ನು ವಧಿಸುವ ಮನಸ್ಸುಮಾಡಿದನು. ಜಯಿಸಲಾಧ್ಯ ಜರಾಸಂಧನನ್ನು ಬಲಿಗಳ ಮುಖ್ಯ ವೃಕೋದರ ಕುರುನಂದನನು ಗಟ್ಟಿಯಾಗಿ ಹಿಡಿದುಕೊಂಡನು. ಆಗ ಭೀಮಸೇನನು ಜರಾಸಂಧನನ್ನು ಕೊಲ್ಲುವ ಸಂಪೂರ್ಣ ಮನಸ್ಸುಮಾಡಿ ಯದುನಂದನ ಕೃಷ್ಣನಿಗೆ ಹೇಳಿದನು:
“ಕೃಷ್ಣ! ಕಚ್ಚೆ ಕಟ್ಟಿ ನಿಂತಿರುವ ನನ್ನಿಂದ ಈ ಪಾಪಿಯು ಪ್ರಾಣಕ್ಕೆ ಅರ್ಹನಲ್ಲ.”
ಇದನ್ನು ಕೇಳಿದ ಪುರುಷವ್ಯಾಘ್ರ ಕೃಷ್ಣನು ಜರಾಸಂಧನ ವಧೆಯನ್ನು ಬಯಸಿ ವೃಕೋದರನಿಗೆ ತ್ವರೆಮಾಡಲು ಹೇಳಿದನು:
“ಹಾಗಾದರೆ ತಕ್ಷಣವೇ ನೀನು ದೇವತೆಗಳಿಂದ ಪಡೆದಿರುವ ಸತ್ವವನ್ನು ತೋರಿಸು! ಭೀಮ! ಈ ದಿನ ವಾಯುದೇವನ ಬಲವನ್ನು ಜರಾಸಂಧನ ಮೇಲೆ ಪ್ರಯೋಗಿಸಿ ತೋರಿಸು!”
ಇದನ್ನು ಕೇಳಿದ ಅರಿಂದಮ ಮಹಾಬಲಿ ಭೀಮನು ಜರಾಸಂಧನನ್ನು ಬಲವಂತವಾಗಿ ಮೇಲಕ್ಕೆತ್ತಿ ತನ್ನ ಭುಜಗಳಿಂದ ನೂರು ಬಾರಿ ಅವನನ್ನು ತಿರುಗಿಸಿ, ತನ್ನ ತೊಡೆಯ ಮೇಲೆ ಬೀಳಿಸಿ, ಅವನ ಬೆನ್ನನ್ನು ಮುರಿದು, ದೇಹವನ್ನು ತುಳಿದು ಗರ್ಜಿಸಿದನು. ಅವನು ಕೆಳಗೆ ಬೀಳಲು ಮತ್ತು ಪಾಂಡವನು ಗರ್ಜಿಸಲು ಸರ್ವಪಾಣಿಗಳಿಗೂ ಭಯವನ್ನುಂಟುಮಾಡುವ ತುಮುಲವು ಕೇಳಿಬಂದಿತು. ಭೀಮಸೇನ-ಜರಾಸಂಧರ ಗರ್ಜನೆಗಳನ್ನು ಕೇಳಿ ಸರ್ವ ಮಾಗಧರೂ ತಲೆತಿರುಗಿ ಬಿದ್ದರು ಮತ್ತು ಗರ್ಭಿಣಿ ಮಹಿಳೆಯರಿಗೆ ಗರ್ಭಪಾತವಾಯಿತು. ಭೀಮಸೇನನ ಗರ್ಜನೆಯನ್ನು ಕೇಳಿದ ಮಾಗಧರು ಹಿಮಾಲಯವೇ ಸೀಳಿಹೋಯಿತೇ ಅಥವಾ ಭೂಮಿಯೇ ಕುಸಿದು ಹೋಯಿತೇ ಎಂದು ಯೋಚಿಸಿದರು.
ಅನಂತರ ಆ ಅರಿಂದಮರು ನಿದ್ದೆಯಲ್ಲಿರುವಂತೆ ತೋರುತ್ತಿದ್ದ ಮೃತನೃಪತಿಯನ್ನು ರಾಜಕುಲದ್ವಾರದಲ್ಲಿಯೇ ಬಿಟ್ಟು ಕತ್ತಲೆಯಲ್ಲಿ ಹೊರಟುಹೋದರು. ಕೃಷ್ಣನು ಜರಾಸಂಧನ ಪತಾಕಯುಕ್ತ ರಥವನ್ನು ಕಟ್ಟಿ, ಭ್ರಾತೃಗಳಿಗೆ ಅದನ್ನು ಏರಲು ಹೇಳಿ, ಬಾಂಧವರನ್ನು ಬಿಡುಗಡೆಗೊಳಿಸಿದನು. ಮಹಾಭಯದಿಂದ ಬಿಡುಗಡೆ ಹೊಂದಿದ ಪೃಥಿವೀಶ್ವರ ರಾಜರು ರತ್ನಭುಜ ಕೃಷ್ಣನಿಗೆ ರತ್ನಗಳನ್ನಿತ್ತು ಸತ್ಕರಿಸಿದರು. ಆ ಅಕ್ಷತ, ಶಸ್ತ್ರಸಂಪನ್ನ ಜಿತಾರಿಯು ದಿವ್ಯರಥವನ್ನೇರಿ ರಾಜರೊಡನೆ ಗಿರಿವ್ರಜದಿಂದ ನಿರ್ಗಮಿಸಿದನು. ಇಬ್ಬರು ಯೋಧರು ಮತ್ತು ಕೃಷ್ಣನು ಸಾರಥಿಯಾಗಿರುವ, ಕೊಲ್ಲುವ ಅಭ್ಯಾಸವನ್ನಿಟ್ಟುಕೊಂಡಿರುವ, ಸರ್ವ ರಾಜರಿಗೂ ದುರ್ಜಯವಾದ ಆ ರಥವು ತನಗೆ ತಕ್ಕವರನ್ನು ಪಡೆದುಕೊಂಡಂತೆ ಕಂಡುಬಂದಿತು. ಭೀಮಾರ್ಜುನರು ಕುಳಿತಿರುವ, ಕೃಷ್ಣನ ಸಾರಥ್ಯದಲ್ಲಿರುವ, ಸರ್ವ ಧನ್ವಿಗಳಿಗೂ ದುರ್ಜಯವಾದ ಆ ರಥವು ಸುಂದರವಾಗಿ ಹೊಳೆಯುತ್ತಿತ್ತು. ತಾರಕನೊಡನೆ ಆದ ಸಂಗ್ರಾಮದ ಸಮಯದಲ್ಲಿ ಶಕ್ರ ಮತ್ತು ವಿಷ್ಣು ಏರಿ ಹೋಗುತ್ತಿದ್ದ ರಥವನ್ನೇ ಕೃಷ್ಣನು ಏರಿ ಹೊರಟನು. ಯಾವ ರಥವನ್ನೇರಿ ಶಕ್ರನು ತೊಂಭತ್ತೊಂಭತ್ತು ದಾನವರನ್ನು ಸಂಹರಿಸಿದ್ದನೋ ಆ ಹದಮಾಡಿದ ಚಿನ್ನದಂತೆ ಹೊಳೆಯುತ್ತಿರುವ, ಕಿಂಕಿಣೀಜಾಲ ಮಾಲೆಗಳಿಂದ ಅಲಂಕೃತವಾದ, ಮಳೆಗಾಲದ ಮೋಡಗಳಂತೆ ಶಬ್ಧಮಾಡುತ್ತಿದ್ದ, ವಿಜಯೀ, ಶತ್ರುಘಾತಿ ರಥವನ್ನು ಪಡೆದ ಪುರುಶರ್ಷಭರು ಅತ್ಯಂತ ಸಂತೋಷಗೊಂಡರು. ಭ್ರಾತೃಗಳ ಸಹಿತ ಮಹಾಬಾಹು ಕೃಷ್ಣನನ್ನು ಆ ರಥದಲ್ಲಿ ಕುಳಿತಿದ್ದುದನ್ನು ನೋಡಿದ ಮಾಗಧರು ವಿಸ್ಮಿತರಾದರು. ದಿವ್ಯಾಶ್ವಗಳನ್ನು ಹೊಂದಿದ್ದ, ವಾಯುಸಮ ವೇಗವುಳ್ಳ ಆ ರಥವು ಕೃಷ್ಣನು ಏರುತ್ತಿದ್ದಂತೆ ಪ್ರಕಾಶಗೊಂಡು ಇನ್ನೂ ಕಂಗೊಳಿಸಿತು. ಆ ರಥದ ಮೇಲೆ ಒಂದು ಯೋಜನೆಯವರೆಗೂ ಕಾಣಿಸುವಂತೆ ಶ್ರೀಮಾನ, ಇಂದ್ರಾಯುಧದಂತೆ ಹೊಳೆಯುತ್ತಿರುವ, ದೇವವಿಹಿತ ಉತ್ತಮ ಧ್ವಜವು ಹಾರುತ್ತಿತ್ತು. ಆಗ ಕೃಷ್ಣನು ಗುರುತ್ಮಂತನನ್ನು ಸ್ಮರಿಸಿದನು ಮತ್ತು ಕೂಡಲೆ ಅವನು ಬಂದನು. ಅವನೊಂದಿಗೆ ಪತಾಕೆಯು ದೇವಾಲಯಗಳಲ್ಲಿನ ಧ್ವಜಸ್ಥಂಭದಂತೆ ಎತ್ತರಕ್ಕೆ ಏರಿತು. ಧ್ವಜದಲ್ಲಿದ್ದ ಇತರ ಭೂತಗಳು ಬಾಯಿತೆರೆದು ಮಹಾನಾದ ಮಾಡುತ್ತಿರಲು ಪನ್ನಗಾಶನ ಗುರುತ್ಮಂತನು ಆ ರಥದ ಮೇಲೆ ಏರಿದನು. ಭೂತಗಳ ಕಣ್ಣುಕುಕ್ಕಿಸುವಂತೆ ಅವನು ಅಧಿಕ ತೇಜಸ್ಸಿನಿಂದ ಮಧ್ಯಾಹ್ನದ ಭಾಸ್ಕರನಂತೆ ಸಹಸ್ರಕಿರಣಗಳಿಂದ ಆವೃತನಾಗಿ ಬೆಳಗಿದನು. ಆ ಧ್ವಜವು ಎಂದೂ ವೃಕ್ಷಗಳಿಗೆ ಸಿಲುಕಿರಲಿಲ್ಲ, ಯಾವುದೇ ಅಸ್ತ್ರಗಳಿಂದ ಘಾಯಗೊಂಡಿರಲಿಲ್ಲ ಮತ್ತು ಆ ದಿವ್ಯ ಧ್ವಜವು ದೇವತೆಗಳಿಗೆ ಮತ್ತು ಮನುಷ್ಯರಿಗೆ ಕಾಣುತ್ತಿತ್ತು. ಮಳೆಗಾಲದ ಮೋಡದ ಗುಡುಗಿನಂತೆ ಶಬ್ಧಮಾಡುವ ಆ ದಿವ್ಯ ರಥವನ್ನೇರಿ ಪುರುಷವ್ಯಾಘ್ರ ಅಚ್ಯುತನು ಪಾಂಡವರಿಬ್ಬರನ್ನೊಡಗೂಡಿ ಹೊರಟನು. ಆ ರಥವನ್ನು ರಾಜ ವಸುವು ವಾಸವನಿಂದ ಪಡೆದಿದ್ದನು ಮತ್ತು ಬೃಹದ್ರಥನು ವಸುವಿನಿಂದ ಪಡೆದನು. ಕ್ರಮೇಣವಾಗಿ ಬೃಹದ್ರಥನಿಂದ ನೃಪ ಬಾರ್ಹದ್ರಥನು ಪಡೆದನು.
ಮಹಾಬಾಹು ಪುಂಡರೀಕಾಕ್ಷನು ಗಿರಿವ್ರಜದಿಂದ ಹೊರಟ ನಂತರ ಆ ಮಹಾಯಶರು ಹೊರಗಡೆ ಒಂದು ಸಮ ಪ್ರದೇಶದಲ್ಲಿ ರಥವನ್ನು ನಿಲ್ಲಿಸಿದರು. ಅಲ್ಲಿ ಸರ್ವ ನಾಗರೀಕರೂ ಬ್ರಾಹ್ಮಣರನ್ನು ಮುಂದಿಟ್ಟುಕೊಂಡು ವಿಧಿವತ್ತಾದ ಕರ್ಮಗಳಿಂದ ಅವರನ್ನು ಸತ್ಕರಿಸಿದರು. ಬಂಧನದಿಂದ ಮುಕ್ತರಾದ ರಾಜರು ಮಧುಸೂದನನನ್ನು ಸಾಂತ್ವಪೂರ್ವ ವಚನಗಳಿಂದ ಪೂಜಿಸಿದರು.
“ದೇವಕಿನಂದನ! ಭೀಮಾರ್ಜುನರ ಬಲದಿಂದ ಕೂಡಿ ಧರ್ಮವನ್ನು ಪರಿಪಾಲಿಸಿದ್ದುದು ಮಹಾ ಅದ್ಭುತವೇನೂ ಅಲ್ಲ. ವಿಷ್ಣು! ಪುರುಷೋತ್ತಮ! ಜರಾಸಂಧನ ಕೆಟ್ಟ ಘೋರ ದುಃಖದ ಮಡುಲಿನಲ್ಲಿ ಮುಳುಗಿದ್ದ, ದಾರುಣ ಗಿರಿದುರ್ಗಗಳ ಕೋಟೆಯೊಳಗೆ ಕೊಳೆಯುತ್ತಿದ್ದ ರಾಜರನ್ನು ಇಂದು ಉದ್ಧರಿಸಿ ನೀನು ಬೆಳಗುತ್ತಿದ್ದೀಯೆ. ನಾವು ಏನು ಮಾಡಬೇಕು ಹೇಳು. ನೃಪರಿಗೂ ದುಷ್ಕರವೆನಿಸಿದ್ದುದನ್ನು ಮಾಡಿಕೊಡುತ್ತೇವೆ ಎಂದು ತಿಳಿ.”
ಆ ಆಶ್ವಾಸನೆಗೆ ಮಹಾಮನ ಹೃಷೀಕೇಶನು ಉತ್ತರಿಸಿದನು:
“ಯುಧಿಷ್ಠಿರನು ಮಹಾಕ್ರತು ರಾಜಸೂಯವನ್ನು ಮಾಡಲಿಚ್ಛಿಸಿದ್ದಾನೆ. ಪಾರ್ಥಿವತ್ವವನ್ನು ಬಯಸುತ್ತಿರುವ ಆ ಧರ್ಮಪ್ರವೃತ್ತನ ಯಜ್ಞಕ್ಕೆ ನೀವೆಲ್ಲರೂ ಸಹಾಯವನ್ನು ನೀಡಬೇಕು.”
ಆಗ ಸರ್ವ ನೃಪರೂ ಸಂತೋಷದಿಂದ “ಹಾಗೆಯೇ ಆಗಲಿ!” ಎಂದು ಮಾತುಕೊಟ್ಟರು. ಪೃಥಿವೀಶ್ವರರು ತಮ್ಮ ರತ್ನಗಳನ್ನು ದಾಶಾರ್ಹನೊಂದಿಗೆ ಹಂಚಿಕೊಳ್ಳಲು, ಗೋವಿಂದನು ಅವರ ಮೇಲಿನ ಅನುಕಂಪದಿಂದ ಇಷ್ಟವಿಲ್ಲದಿದ್ದರೂ ಅವುಗಳನ್ನು ಸ್ವೀಕರಿಸಿದನು.
ಜರಾಸಂಧನ ಮಗ ಮಹಾರಥಿ ಸಹದೇವನು ಪುರೋಹಿತನನ್ನು ಮುಂದಿಟ್ಟುಕೊಂಡು ಅಮಾತ್ಯರು ಮತ್ತು ತನ್ನವರೊಂದಿಗೆ ಹೊರಬಂದನು. ಸಹದೇವನು ಮನುಷ್ಯರ ದೇವ ವಾಸುದೇವನ ಮುಂದೆ ಬಹುರತ್ನಗಳನ್ನು ಇಟ್ಟು ತಲೆತಗ್ಗಿಸಿ ನಿಂತನು. ಭಯಗ್ರಸ್ತನಾದ ಅವನಿಗೆ ಕೃಷ್ಣನು ಅಭಯವನ್ನಿತ್ತನು ಮತ್ತು ಜರಾಸಂಧನ ಮಗನನ್ನು ಅಲ್ಲಿಯೇ ಆಗಲೇ ಅಭಿಷೇಕಿಸಿದನು. ಕೃಷ್ಣನೊಂದಿಗೆ ಸೇರಿ, ಪಾರ್ಥರಿಬ್ಬರಿಂದಲೂ ಸತ್ಕೃತನಾದ ಮತಿವಂತ ರಾಜನು ಪುನಃ ಬಾರ್ಹದ್ರಥನ ಪುರವನ್ನು ಪ್ರವೇಶಿಸಿದನು. ಪುಷ್ಕರೇಕ್ಷಣ ಕೃಷ್ಣನಾದರೂ ಪಾರ್ಥರಿಬ್ಬರೊಡಗೂಡಿ, ಪರಮ ಸಂಪತ್ತನ್ನು ಭೂರಿ ರತ್ನಗಳನ್ನೂ ತೆಗೆದುಕೊಂಡು ಪರಮ ತೇಜಸ್ಸಿನಿಂದ ಹೊರಟನು. ಪಾಂಡವರಿಬ್ಬರೊಡನೆ ಅಚ್ಯುತನು ಇಂದ್ರಪ್ರಸ್ಥವನ್ನು ತಲುಪಿ ಧರ್ಮರಾಜನನ್ನು ಭೇಟಿಯಾಗಿ ಸಂತೋಷದಿಂದ ಹೇಳಿದನು:
“ನೃಪಸತ್ತಮ! ಅದೃಷ್ಟವಶಾತ್ ಬಲವಾನ್ ಭೀಮನು ಜರಾಸಂಧರನ್ನು ಕೆಳಗುರುಳಿಸಿ ಬಂಧನದಲ್ಲಿದ್ದ ರಾಜರನ್ನು ವಿಮುಕ್ತಿಗೊಳಿಸಿದನು. ಅದೃಷ್ಟವಶಾತ್ ಭೀಮಸೇನಧನಂಜಯರಿಬ್ಬರೂ ಕುಶಲವಾಗಿ ಪುನಃ ತಮ್ಮ ನಗರಕ್ಕೆ ಹಿಂದಿರುಗಿದ್ದಾರೆ!”
ಯುಧಿಷ್ಠಿರನು ಕೃಷ್ನನಿಗೆ ಯಥಾರ್ಹವಾಗಿ ಪೂಜಿಸಿದನು ಮತ್ತು ಸಂತೋಷದಿಂದ ಭೀಮಸೇನ ಅರ್ಜುನರನ್ನು ಬಿಗಿದಪ್ಪಿದನು. ನಂತರ ಜರಾಸಂಧನನ್ನು ಸೋಲಿಸುವುದರಲ್ಲಿ ಸಹೋದರರು ಪಡೆದ ಜಯವನ್ನು ಭ್ರಾತೃಗಳೊಂದಿಗೆ ಅಜಾತಶತ್ರುವು ಆನಂದಿಸಿದನು. ಪಾಂಡವನು ಸೇರಿದ್ದ ರಾಜ ನರಾಧಿಪರನ್ನು ವಯಸ್ಸಿಗೆ ತಕ್ಕಂತೆ ಪೂಜಿಸಿ ಸತ್ಕರಿಸಿ ಬೀಳ್ಕೊಂಡನು. ಯುಧಿಷ್ಠಿರನಿಂದ ಅನುಜ್ಞೆಯನ್ನು ಪಡೆದ ಆ ನೃಪರು ಸಂತೋಷಗೊಂಡು ಅವರವರ ರಥಗಳಲ್ಲಿ ತಮ್ಮ ದೇಶಗಳಿಗೆ ತ್ವರೆಮಾಡಿ ಹೊರಟರು. ಹೀಗೆ ಪುರುಷಶಾರ್ದೂಲ ಮಹಾಬುದ್ಧಿ ಜನಾರ್ದನನು ಅರಿ ಜರಾಸಂಧನನ್ನು ಪಾಂಡವರ ಮೂಲಕ ಸಂಹರಿಸಿದನು. ಜರಾಸಂಧನನ್ನು ಸಂಹರಿಸಿದ ಆ ಬುದ್ಧಿಪೂರ್ವ ಅರಿಂದಮನು ಧರ್ಮರಾಜನ, ಪೃಥಾ, ಕೃಷ್ಣಾ, ಸುಭದ್ರಾ, ಭೀಮಸೇನ, ಫಲ್ಗುನ ಮತ್ತು ಯಮಳರ ಅನುಜ್ಞೆಯನ್ನು ಪಡೆದು, ಧೌಮ್ಯನಿಂದ ಬೀಳ್ಕೊಂಡು ತನ್ನ ಪುರದ ಕಡೆ ಹೊರಟನು. ಧರ್ಮರಾಜನು ಉಡುಗೊರೆಯನ್ನಾಗಿ ಕೊಟ್ಟಿದ್ದ, ದಿಶಗಳಲ್ಲಿ ದಿವ್ಯನಾದಗಳಿಂದ ತುಂಬುವ ಆ ಪ್ರಮುಖ ರಥದಲ್ಲಿ ಉದಯವಾಗುತ್ತಿರುವ ಸೂರ್ಯನ ತೇಜಸ್ಸಿನಿಂದ ಕುಳಿತುಕೊಂಡನು. ನಂತರ ಯುಧಿಷ್ಠಿರನನ್ನು ಮುಂದಿಟ್ಟುಕೊಂಡು ಪಾಂಡವರು ಅಕ್ಲಿಷ್ಟಕಾರಿಣಿ ಕೃಷ್ಣನನ್ನು ಪ್ರದಕ್ಷಿಣೆಮಾಡಿದರು.
ದೇವಕಿನಂದನ ಭಗವಾನ್ ಕೃಷ್ಣನು ಹೋದನಂತರ, ವಿಪುಲ ಜಯವನ್ನು ಪಡೆದ, ರಾಜರಿಗೆ ಅಭಯವನ್ನಿತ್ತು ತಮ್ಮ ಕರ್ಮಗಳಿಂದ ತೇಜಸ್ಸನ್ನು ವೃದ್ಧಿಗೊಳಿಸಿಕೊಂಡ ಪಾಂಡವರು ದ್ರೌಪದಿಯೊಡನೆ ಪರಮ ಪ್ರೀತಿಯಿಂದ ವರ್ಧಿಸಿದರು. ರಾಜ್ಯಪಾಲನೆಗೆ ಕೀರ್ತಿವಂತನಾದ ಆ ರಾಜನು ಆ ಸಮಯದಲ್ಲಿ ಧರ್ಮಕಾಮಾರ್ಥಕ್ಕನುಗುಣ ಕಾರ್ಯಗಳಲ್ಲಿ ನಿರತನಾದನು.