ಹಿಡಿಂಬವಧ
ವನದಲ್ಲಿ ಪಾಂಡವರು ಮಲಗಿರುವಾಗ, ಆ ವನದಿಂದ ಸ್ವಲ್ಪ ದೂರದಲ್ಲಿಯೇ ಒಂದು ಶಾಲವೃಕ್ಷದಲ್ಲಿ ಹಿಡಿಂಬ ಎಂಬ ಹೆಸರಿನ ರಾಕ್ಷಸನು ಮಲಗಿದ್ದನು. ಮಹಾವೀರ, ಮಹಾಬಲಿ, ವಿರೂಪರೂಪಿ, ಪಿಂಗಾಕ್ಷ, ಕರಾಲ, ಘೋರದರ್ಶನ ಕ್ರೂರನು ಮನುಷ್ಯರ ಮಾಂಸವನ್ನು ಭಕ್ಷಿಸುವವನಾಗಿದ್ದನು. ಹಸಿದ ಅವನು ಮಾಂಸವನ್ನು ಬಯಸುತ್ತಿದ್ದಾಗ ಅಲ್ಲಿರುವ ಅವರನ್ನು ನೋಡಿದನು. ಪುನಃ ಪುನಃ ಅವನ ಕಣ್ಣುಗಳು ಅವರೆಡೆಗೇ ತಿರುಗುತ್ತಿರಲು ಅವನು ತನ್ನ ಬೆರಳುಗಳನ್ನು ಮೇಲಕ್ಕೆ ಮಾಡಿ ಹೊಲಸಾದ ತನ್ನ ಕೂದಲುಗಳನ್ನು ಕೆರೆದು ಕೆದರಿ ತನ್ನ ಅಗಲ ಬಾಯಿಯಿಂದ ಆಕಳಿಸಿದನು. ಆಗ ಆ ದುಷ್ಟ ಮಾನುಷಮಾಂಸ ಭಕ್ಷಕ, ಮಹಾಕಾಯ ಮಹಾಬಲಿಯು ಮನುಷ್ಯರ ವಾಸನೆಯನ್ನು ಆಘ್ರಾಣಿಸಿ ತನ್ನ ತಂಗಿಗೆ ಹೇಳಿದನು:
“ದೀರ್ಘ ಕಾಲದ ನಂತರ ಇಂದು ನನ್ನ ಮನಃಪ್ರಿಯ ಭಕ್ಷವು ದೊರಕಿದೆ. ನನ್ನ ನಾಲಿಗೆಯು ಹಸಿವೆಯಿಂದ ಜೊಲ್ಲು ಸುರಿಸುತ್ತಿದೆ ಮತ್ತು ಬಾಯಿಯ ಸುತ್ತನ್ನೆಲ್ಲಾ ನೆಕ್ಕುತ್ತಿದೆ. ಎಷ್ಟೋ ಸಮಯದಿಂದ ಏನನ್ನೂ ಕಚ್ಚಲು ದೊರೆಯದಿದ್ದ ನನ್ನ ಈ ಎಂಟು ತೀಕ್ಷ್ಣ ದಂಷ್ಟ್ರಗಳು ಆ ದೇಹಗಳಲ್ಲಿರುವ ರುಚಿ ಮಾಂಸಗಳಲ್ಲಿ ಹುಗಿದುಕೊಳ್ಳಲು ಕಾತರಗೊಂಡಿವೆ. ಆ ಮನುಷ್ಯರನ್ನು ಆಕ್ರಮಿಸಿ ಅವರ ಕಂಠಗಳ ಧಮನಿಗಳಲ್ಲಿ ಹರಿಯುವ ನೊರೆಯುಕ್ತ ಬಿಸಿಬಿಸಿ ಹೊಸರಕ್ತವನ್ನು ಕುಡಿಯುತ್ತೇನೆ. ಹೋಗು! ಈ ವನದಲ್ಲಿ ಮಲಗಿರುವ ಅವರು ಯಾರು ಎಂದು ತಿಳಿದುಕೊಂಡು ಬಾ. ಆ ಮನುಷ್ಯರ ಗಾಢ ವಾಸನೆಯಿಂದಲೇ ನಾನು ತೃಪ್ತನಾಗುತ್ತಿದ್ದೇನೆಂದು ಅನ್ನಿಸುತ್ತದೆ. ಆ ಮನುಷ್ಯರೆಲ್ಲರನ್ನೂ ಕೊಂದು ನನ್ನ ಹತ್ತಿರ ತೆಗೆದುಕೊಂಡು ಬಾ. ನಮ್ಮದಾದ ಈ ಪ್ರದೇಶದಲ್ಲಿ ಮಲಗಿರುವ ಅವರಿಂದ ನಿನಗೆ ಯಾವುದೇ ರೀತಿಯ ಭಯವೂ ಇಲ್ಲ. ಮನುಷ್ಯರ ಈ ಮಾಂಸಗಳಿಂದ ನಮಗಿಷ್ಟವಾದ ಹಾಗೆ ಅಡುಗೆ ಮಾಡಿ ಭಕ್ಷಿಸೋಣ. ಬೇಗನೆ ಹೋಗು ಮತ್ತು ನಾನು ಹೇಳಿದ ಹಾಗೆಯೇ ಮಾಡು.”
ಅಣ್ಣನ ಈ ಆಜ್ಞೆಯನ್ನು ಕೇಳಿದ ರಾಕ್ಷಸಿಯು ತಕ್ಷಣವೇ ಪಾಂಡವರಿದ್ದಲ್ಲಿಗೆ ಹೋದಳು. ಅಲ್ಲಿ ಬಂದ ಅವಳು ಪೃಥೆಯ ಜೊತೆ ಮಲಗಿದ್ದ ಪಾಂಡವರನ್ನು ಮತ್ತು ಎಚ್ಚೆತ್ತಿದ್ದ ಅಪರಾಜಿತ ಭೀಮಸೇನನನ್ನು ನೋಡಿದಳು. ಶಾಲ ವೃಕ್ಷದ ರೆಂಬೆಯಂತೆ ಎತ್ತರವಾಗಿದ್ದ ಭುವಿಯಲ್ಲಿಯೇ ಅಪ್ರತಿಮ ರೂಪವಂತನಾಗಿದ್ದ ಭೀಮಸೇನನನ್ನು ನೋಡಿದಾಕ್ಷಣವೇ ಆ ರಾಕ್ಷಸಿಯು ಅವನನ್ನು ಬಯಸಿದಳು.
“ಈ ಶ್ಯಾಮವರ್ಣದ ಮಹಾಬಾಹು, ಸಿಂಹಸ್ಕಂಧ, ಮಾಹಾಕಾಂತಿಯುಕ್ತ, ಕಂಬುಗ್ರೀವ, ಪುಷ್ಕರಾಕ್ಷನು ನನಗೆ ಯೋಗ್ಯ ಗಂಡನಾಗುತ್ತಾನೆ. ನಾನು ನನ್ನ ಅಣ್ಣನ ಆ ಕ್ರೂರ ಆಜ್ಞೆಯನ್ನು ನಡೆಸುವುದಿಲ್ಲ. ಪತಿಯ ಮೇಲಿನ ಪ್ರೀತಿಯು ಅಣ್ಣನ ಮೇಲಿನ ಪ್ರೀತಿಗಿಂತ ಹೆಚ್ಚೇ ಅಲ್ಲವೇ? ಇವರನ್ನು ಕೊಂದರೆ ನನಗೆ ಮತ್ತು ಅಣ್ಣನಿಗೆ ಕ್ಷಣಮಾತ್ರದ ತೃಪ್ತಿ ದೊರೆಯಬಹುದು. ಆದರೆ ಇವರನ್ನು ಕೊಲ್ಲದಿದ್ಡರೆ ವರ್ಷಾನುಗಟ್ಟಲೆ ನಾನು ತೃಪ್ತಿ ಹೊಂದಬಲ್ಲೆ.”
ಆ ಕಾಮರೂಪಿಣಿಯು ಉತ್ತಮ ಮಾನುಷಿಯ ರೂಪವನ್ನು ಧರಿಸಿ ನಾಚಿಕೊಂಡ ಲತೆಯಂತೆ ಮಹಾಬಾಹು ಭೀಮಸೇನನ ಬಳಿ ಮೆಲ್ಲ ಮೆಲ್ಲಗೆ ಬಂದಳು. ಆ ದಿವ್ಯಾಭರಣಭೂಷಿತೆಯು ಮುಗುಳ್ನಗುತ್ತಾ ಭೀಮಸೇನನಿಗೆ ಹೇಳಿದಳು:
“ಪುರುಷರ್ಷಭ! ನೀನು ಎಲ್ಲಿಂದ ಬಂದಿದ್ದೀಯೆ ಮತ್ತು ನೀನು ಯಾರು? ಇಲ್ಲಿ ಮಲಗಿರುವ ಈ ದೇವರೂಪಿ ಪುರುಷರು ಯಾರು? ಈ ಶ್ಯಾಮವರ್ಣಿ, ತನ್ನ ಮನೆಯಂತೆ ವಿಶ್ವಾಸದಿಂದ ಈ ವನದಲ್ಲಿ ಮಲಗಿರುವ ಎತ್ತರ ಸುಕುಮಾರಿಯು ನಿನಗೆ ಏನಾಗಬೇಕು? ಈ ಗಹನ ವನವು ರಾಕ್ಷಸರಿಂದ ಸೇರಿದೆ ಮತ್ತು ಇಲ್ಲಿಯೇ ಹತ್ತಿರದಲ್ಲಿ ಹಿಂಡಿಂಬ ಎಂಬ ಹೆಸರಿನ ಪಾಪಾತ್ಮ ರಾಕ್ಷಸನು ವಾಸಿಸುತ್ತಿದ್ದಾನೆ ಎನ್ನುವುದು ಅವಳಿಗೆ ತಿಳಿದಿಲ್ಲವೇ? ನನ್ನ ಅಣ್ಣ ಆ ರಾಕ್ಷಸನು ದುಷ್ಟಭಾವದಿಂದ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಅವನು ಅಮರೋಪಮ ನಿಮ್ಮ ಮಾಂಸವನ್ನು ಭಕ್ಷಿಸಲು ಬಯಸುತ್ತಾನೆ. ದೇವಗರ್ಭಸಮಪ್ರಭನಾದ ನಿನ್ನನ್ನು ನೋಡಿದಾಕ್ಷಣವೇ ನನ್ನ ಓರ್ವನೇ ಪತಿಯನ್ನಾಗಿ ಹೊಂದಲು ಬಯಸುತ್ತೇನೆ. ನಿನಗೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಇದನ್ನು ತಿಳಿದ ನೀನು ನನಗೆ ಯುಕ್ತವಾದಹಾಗೆ ನಡೆದುಕೋ. ಕಾಮವು ನನ್ನ ಅಂಗ-ಮನಸ್ಸುಗಳನ್ನು ಆವರಿಸಿದೆ. ನಿನ್ನನ್ನು ಪ್ರೀತಿಸುತ್ತೇನೆ. ನನ್ನನ್ನು ಪ್ರೀತಿಸು. ನಿನ್ನನ್ನು ನಾನು ಆ ನರಭಕ್ಷಕ ರಾಕ್ಷಸನಿಂದ ಉಳಿಸಬಲ್ಲೆ. ನಾವಿಬ್ಬರೂ ಗಿರಿದುರ್ಗಗಳಲ್ಲಿ ವಾಸಿಸೋಣ. ನನ್ನ ಪತಿಯಾಗು. ಅಂತರಿಕ್ಷದಲ್ಲಿ ಸಂಚರಿಸಬಲ್ಲೆ, ಬೇಕಾದಲ್ಲಿ ಹೋಗಬಲ್ಲೆ. ಎಲ್ಲಿ ಬೇಕಾದರಲ್ಲಿ ನನ್ನೊಂದಿಗೆ ಅತುಲ ಪ್ರೀತಿಯನ್ನು ಹೊಂದು.”
ಭೀಮನು ಹೇಳಿದನು:
“ರಾಕ್ಷಸಿ! ತಾಯಿಯನ್ನು, ಹಿರಿಯಣ್ಣನನ್ನು, ಮತ್ತು ಕಿರಿಯವರನ್ನು ಪರಿತ್ಯಜಿಸುವನು ಹೇಗೆ ತಾನೆ ಪ್ರಭು ಎನ್ನಿಸಿಕೊಳ್ಳುವನು? ನನ್ನಂಥಹ ಯಾವ ಮನುಷ್ಯನು ಮಲಗಿರುವ ಈ ಭ್ರಾತೃಗಳನ್ನು ಮತ್ತು ತಾಯಿಯನ್ನು ರಾಕ್ಷಸಭೋಜನವನ್ನಾಗಿ ಕೊಟ್ಟು ಕಾಮಾರ್ತನಾಗಿ ಹೋಗುತ್ತಾನೆ?”
ರಾಕ್ಷಸಿಯು ಹೇಳಿದಳು:
“ನಿನಗೆ ಬೇಕಾದುದನ್ನು ನಾನು ಮಾಡುತ್ತೇನೆ. ಇವರೆಲ್ಲರನ್ನೂ ಎಬ್ಬಿಸು. ಆ ನರಭಕ್ಷಕ ರಾಕ್ಷಸನಿಂದ ನಿಮ್ಮನ್ನು ಉಳಿಸಲು ಬಯಸುತ್ತೇನೆ.”
ಭೀಮನು ಹೇಳಿದನು:
“ರಾಕ್ಷಸಿ! ನನ್ನ ತಾಯಿ ಮತ್ತು ಸಹೋದರರು ವನದಲ್ಲಿ ಸುಖವಾಗಿ ನಿದ್ರಿಸುತ್ತಿದ್ದಾರೆ. ನಿನ್ನ ಆ ದುರಾತ್ಮ ಅಣ್ಣನ ಭಯದಿಂದ ನಾನು ಅವರನ್ನು ಎಬ್ಬಿಸಲಾರೆ. ನನ್ನ ಪರಾಕ್ರಮವನ್ನು ಎದುರಿಸುವ ಯಾವ ರಾಕ್ಷಸನೂ ಇಲ್ಲ, ಮನುಷ್ಯನೂ ಇಲ್ಲ, ಗಂಧರ್ವನೂ ಇಲ್ಲ ಅಥವಾ ಯಕ್ಷನೂ ಇಲ್ಲ. ಇಲ್ಲಿಯೇ ನಿಲ್ಲು ಅಥವಾ ಹೊರಟು ಹೋಗು. ನಿನಗಿಷ್ಟ ಬಂದ ಹಾಗೆ ಮಾಡು. ಅಥವಾ ನಿನ್ನ ಆ ನರಭಕ್ಷಕ ಅಣ್ಣನನ್ನು ಕಳುಹಿಸಿಕೊಡು.”
ತನ್ನ ತಂಗಿಯು ಹೋಗಿ ತುಂಬಾ ಹೊತ್ತಾಯಿತೆಂದು ತಿಳಿದ ರಾಕ್ಷಸೇಶ್ವರ ಹಿಡಿಂಬನು ಮರದಿಂದ ಕೆಳಗಿಳಿದು ಪಾಂಡವನಿದ್ದಲ್ಲಿಗೆ ಬಂದನು. ಆ ಮಹಾಬಲನ ಕಣ್ಣುಗಳು ಕೆಂಪಾಗಿದ್ದವು, ಬಾಹುಗಳು ಬಲವಾಗಿದ್ದವು, ಕೂದಲು ಎದ್ದು ನಿಂತಿದ್ದವು, ಮಳೆಯ ಮೋಡದಂತೆ ದಟ್ಟನಾಗಿದ್ದನು, ಹಲ್ಲುಗಳು ಮೊನಚಾಗಿದ್ದವು ಮತ್ತು ಮುಖವು ಪ್ರಜ್ಚಲಿಸುತ್ತಿತ್ತು. ಮೇಲೆರಗುತ್ತಾನೋ ಎನ್ನುವಂತಿರುವ ಆ ವಿಕೃತದರ್ಶನನನ್ನು ನೋಡಿ ಹಿಡಿಂಬಿಯು ನಡುಗುತ್ತಾ ಭೀಮಸೇನನಿಗೆ ಹೇಳಿದಳು:
“ಇಗೋ ದುಷ್ಟಾತ್ಮ ನರಭಕ್ಷಕನು ಕೋಪಗೊಂಡು ಬರುತ್ತಿದ್ದಾನೆ. ನೀನು ಮತ್ತು ನಿನ್ನ ಸಹೋದರರು ನಾನು ಹೇಳಿದ ಹಾಗೆ ಮಾಡಿ. ರಾಕ್ಷಸರ ಬಲಸಮನ್ವಿತೆ ನಾನು ಬೇಕಾದಲ್ಲಿ ಹೋಗಬಲ್ಲೆ. ನನ್ನ ಸೊಂಟದ ಮೇಲೇರು. ನಿನ್ನನ್ನು ಆಕಾಶ ಮಾರ್ಗದಲ್ಲಿ ಕರೆದೊಯ್ಯುತ್ತೇನೆ. ಮಲಗಿಕೊಂಡಿರುವ ನಿನ್ನ ಈ ತಾಯಿ ಮತ್ತು ಸಹೋದರರನ್ನು ಎಚ್ಚರಿಸು. ನಿಮ್ಮೆಲ್ಲರನ್ನೂ ನಾನು ಆಕಾಶ ಮಾರ್ಗವಾಗಿ ಕರೆದೊಯ್ಯುತ್ತೇನೆ.”
ಭೀಮನು ಹೇಳಿದನು:
“ವಿಪುಲಶ್ರೋಣಿ! ಹೆದರದಿರು. ನಾನಿಲ್ಲಿ ನಿಂತಿರುವಾಗ ಯಾರೂ ಯಾವುದೇರೀತಿಯ ಹಾನಿಯನ್ನುಂಟುಮಾಡುವುದಿಲ್ಲ. ನಿನ್ನ ಕಣ್ಣುಗಳೆದುರೇ ಅವನನ್ನು ಕೊಂದು ಹಾಕುತ್ತೇನೆ. ಈ ರಾಕ್ಷಸಾಧಮನು ಬಲದಲ್ಲಿ ನನ್ನ ಸರಿಸಾಟಿಯೇನಲ್ಲ. ರಾಕ್ಷಸರೆಲ್ಲ ಒಂದು ಸೇರಿದರೂ ಯುದ್ಧದಲ್ಲಿ ನನ್ನನ್ನು ಎದುರಿಸಲು ಸಾಧ್ಯವಿಲ್ಲ. ಆನೆಯ ಸೊಂಡಿಲಿನಂತೆ ಗೋಲಾಕಾರದಲ್ಲಿರುವ ಈ ನನ್ನ ಬಾಹುಗಳನ್ನು ನೋಡು. ಪರಿಘಗಳಂತಿರುವ ನನ್ನ ಈ ತೊಡೆಗಳನ್ನು ನೋಡು ಮತ್ತು ಗಟ್ಟಿಯಾದ ನನ್ನ ಈ ಎದೆಯನ್ನು ನೋಡು. ಇಂದ್ರನಂತಿರುವ ನನ್ನ ವಿಕ್ರಮವನ್ನು ಇಂದು ನೀನು ನೋಡುವೆ! ನಾನೋರ್ವ ಕೇವಲ ಮನುಷ್ಯನೆಂದು ತಿಳಿದು ಕಡೆಗಾಣಿಸಬೇಡ.”
ಹಿಡಿಂಬೆಯು ಹೇಳಿದಳು:
“ನರವ್ಯಾಘ್ರ! ದೇವರೂಪಿಣಿ ನಿನ್ನನ್ನು ನಾನು ಕಡೆಗಣಿಸುತ್ತಿಲ್ಲ. ಈ ರಾಕ್ಷಸನು ಮನುಷ್ಯರ ಮೇಲೆ ಯಾವರೀತಿ ಧಾಳಿ ಮಾಡುತ್ತಾನೆ ಎನ್ನುವುದನ್ನು ನಾನು ಮೊದಲೇ ನೋಡಿದ್ದೇನೆ.”
ಅವಳು ಈ ರೀತಿ ಭೀಮಸೇನನೊಂದಿಗೆ ಮಾತನಾಡುತ್ತಿರುವಾಗ ಆ ನರಭಕ್ಷಕ ರಾಕ್ಷಸನು ಕೇಳಿ ಕೃದ್ಧನಾದನು. ಹಿಡಿಂಬನು ಅವಳು ಮಾನುಷ ರೂಪವನ್ನು ಧರಿಸಿದ್ದುದನ್ನು ನೋಡಿದನು: ತಲೆಗೆ ಹೂಗಳನ್ನು ಮುಡಿದಿದ್ದಳು, ಅವಳ ಮುಖವು ಚಂದ್ರನ ಕಾಂತಿಯನ್ನು ಹೊಂದಿತ್ತು, ಸುಂದರ ಕಣ್ಣುಗಳನ್ನು, ಹುಬ್ಬುಗಳನ್ನು, ಮೂಗು ಮತ್ತು ಕೂದಲು, ಸುಕುಮಾರ ಉಗುರುಗಳು ಮತ್ತು ಚರ್ಮ, ಸರ್ವಾಭರಣ ಸಂಯುಕ್ತಳಾಗಿ, ಸೂಕ್ಷ್ಮ ವಸ್ತ್ರವನ್ನು ಧರಿಸಿದ್ದಳು. ವಿಭ್ರಾಂತಿಗೊಳಿಸುವ ಸುಮನೋಹರ ಮಾನುಷಿಯ ರೂಪದಲ್ಲಿದ್ದ ಅವಳು ಆ ಪುರುಷನನ್ನು ಕಾಮಿಸುತ್ತಿದ್ದಾಳೆ ಎಂದು ಶಂಕಿಸಿ ಆ ನರಭಕ್ಷಕನು ಕೋಪಗೊಂಡನು. ರಾಕ್ಷಸನು ತನ್ನ ತಂಗಿಯ ಮೇಲೆ ಸಂಕೃದ್ಧನಾಗಿ ಅವನ ದೊಡ್ಡ ಕಣ್ಣುಗಳನ್ನು ತೆರೆದು ಅವಳಿಗೆ ಹೇಳಿದನು:
“ನಾನು ಹಸಿದಿರುವಾಗ ಯಾವ ದುರ್ಮತಿಯು ವಿಘ್ನವನ್ನು ತರುತ್ತಿದ್ದಾಳೆ! ಹಿಂಡಿಂಬೇ! ನನ್ನ ಕೋಪದ ಸ್ವಲ್ಪವೂ ಭಯವಿಲ್ಲವೇ ನಿನಗೆ? ನಿನ್ನ ಬುದ್ಧಿಯನ್ನು ಕಳೆದುಕೊಂಡುಬಿಟ್ಟಿದ್ದೀಯಾ? ಪುರುಷನ ಹಿಂದೆ ಬಿದ್ದು ನನಗಿಷ್ಟವಾಗಿಲ್ಲದ್ದನ್ನು ಮಾಡುತ್ತಿರುವ ನಿನಗೆ ಧಿಕ್ಕಾರ! ಹಿಂದಿನ ಎಲ್ಲ ರಾಕ್ಷಸೇಂದ್ರರಿಗೆ ನೀನೊಬ್ಬಳು ಕಳಂಕಿ! ಯಾರಿಗೋಸ್ಕರ ನೀನು ನನ್ನ ವಿರುದ್ಧವಾಗಿ ನಡೆದುಕೊಳ್ಳುತ್ತಿರುವೆಯೋ ಅವರೆಲ್ಲರನ್ನೂ ಮತ್ತು ನಿನ್ನನ್ನೂ ಈ ಕ್ಷಣವೇ ಕೊಂದುಹಾಕುತ್ತೇನೆ.”
ಹೀಗೆ ಹೇಳಿ ಲೋಹಿತಾಕ್ಷ ಹಿಂಡಿಂಬನು ಹಲ್ಲುಗಳನ್ನು ಕಡಿಯುತ್ತಾ ಹಿಡಿಂಬಿಯನ್ನು ವಧಿಸಲು ಅವಳ ಮೇಲೆರಗಿದನು. ತನ್ನ ತಂಗಿಯ ಮೇಲೆ ಬೀಳುತ್ತಿರುವ ಅವನನ್ನು ನೋಡಿ ಪ್ರಹರಿಗಳಲ್ಲಿ ಶ್ರೇಷ್ಠ ತೇಜಸ್ವಿ ಭೀಮನು ಅವನನ್ನು ಅವಹೇಳಿಸುತ್ತಾ “ನಿಲ್ಲು! ನಿಲ್ಲು!” ಎಂದು ಕೂಗಿದನು. ತಂಗಿಯ ಮೇಲೆ ಸಿಟ್ಟಿಗೆದ್ದ ಆ ರಾಕ್ಷಸನನ್ನು ನೋಡಿ ಭೀಮಸೇನನು ನಗುತ್ತಾ ಹೇಳಿದನು:
“ಹಿಡಿಂಬ! ಸುಖವಾಗಿ ಮಲಗಿರುವ ಇವರನ್ನು ಏಕೆ ಎಬ್ಬಿಸುತ್ತಿರುವೆ? ದುರ್ಬುದ್ಧಿ! ಕೂಡಲೇ ನನ್ನನ್ನು ಎದುರಿಸು. ನನ್ನ ಮೇಲೆ ನಿನ್ನ ಪ್ರಹಾರಗಳನ್ನು ಪ್ರಯತ್ನಿಸು. ತಾನೇನೂ ತಪ್ಪು ಮಾಡಿರದ, ವಿಶೇಷವಾಗಿ ಇನ್ನೊಬ್ಬರಿಂದ ಅಪಕೃತಳಾದ ಈ ಸ್ತ್ರೀಯನ್ನು ಹೊಡೆಯಬೇಡ. ಈ ಬಾಲೆಯು ನನ್ನನ್ನು ಬಯಸುತ್ತಿರುವುದು ಅವಳ ವಶದಲ್ಲಿಲ್ಲ ಮತ್ತು ಪಾಪವೂ ಅಲ್ಲ. ಶರೀರಾಂತರದಲ್ಲಿ ಚಲಿಸುವ ಅನಂಗನಿಂದ ಅವಳು ಚೋದಿತಳಾಗಿದ್ದಾಳೆ. ಇವಳು ನಿನ್ನ ತಂಗಿ! ನೀನೇ ಅವಳನ್ನು ಇಲ್ಲಿಗೆ ಕಳುಹಿಸಿದೆ. ನನ್ನ ರೂಪವನ್ನು ನೋಡಿ ಕಾಮಪೀಡಿತಳಾದ ಈ ಭೀರುವು ನಿನ್ನ ಕುಲವನ್ನೇನೂ ದೂಷಿತ ಮಾಡಿಲ್ಲ. ಅನಂಗನಿಂದ ಆದ ದೋಷಕ್ಕಾಗಿ ಈ ಸ್ತ್ರೀಯನ್ನು ನಾನು ಇಲ್ಲಿ ನಿಂತಿರುವಾಗ ಕೊಲ್ಲಲಿಕ್ಕಾಗುವುದಿಲ್ಲ. ನನ್ನೊಡನೆ, ಒಬ್ಬನಿಗೆ ಒಬ್ಬನಾಗಿ ಹೋರಾಡು. ಇಂದು ನಾನೊಬ್ಬನೇ ನಿನ್ನನ್ನು ಯಮಸಾದನಕ್ಕೆ ಕಳುಹಿಸುತ್ತೇನೆ. ಇಂದು ನಿನ್ನ ತಲೆಯನ್ನು, ಆನೆಯೊಂದು ತನ್ನ ಕಾಲಿನಿಂದ ಜೋರಾಗಿ ತುಳಿದಿದೆಯೋ ಅನ್ನುವ ಹಾಗೆ ಅದು ಒಡೆದುಹೋಗುವ ತನಕ ನೆಲಕ್ಕೆ ಹಾಕಿ ಅಚ್ಚುತ್ತೇನೆ. ಇಂದು ಹೋರಾಟದಲ್ಲಿ ನಿನ್ನನ್ನು ಕೊಂದಾಗ ಹದ್ದುಗಳು ಮತ್ತು ನರಿಗಳು ಸಂತೋಷದಿಂದ ನಿನ್ನ ಅಂಗ-ಅಂಗವನ್ನು ಹರಿದು ತಿನ್ನುತ್ತವೆ. ಒಂದೇ ಒಂದು ಕ್ಷಣದಲ್ಲಿ ಈ ವನವನ್ನು ಅದರ ಕಂಟಕನಿಂದ ಬಿಡುಗಡೆ ಮಾಡುತ್ತೇನೆ. ಮನುಷ್ಯರನ್ನು ಭಕ್ಷಿಸುತ್ತಾ ನೀನು ಬಹಳ ಕಾಲದವರೆಗೆ ಇದನ್ನು ದೂಷಿಸುತ್ತಿದ್ದೀಯೆ. ಇಂದು ಪರ್ವತಾಕಾರದ ಆನೆಯನ್ನು ಒಂದು ಹುಲಿಯು ಎಳೆದಾಡುವಂತೆ ನಿನ್ನನ್ನು ನಾನು ನೆಲದ ಮೇಲೆ ಎಳೆದಾಡಿ ಅಪ್ಪಳಿಸುವುದನ್ನು ನಿನ್ನ ತಂಗಿಯು ನೋಡುವಳು. ಪಾಪಿ ರಾಕ್ಷಸನೇ! ನಿನ್ನನ್ನು ಕೊಂದ ನಂತರ ಈ ವನದಲ್ಲಿ ಸಂಚರಿಸುವ ಪುರುಷರು ನಿನ್ನ ಭಯವಿಲ್ಲದೇ ಸಂಚರಿಸಬಹುದು.”
ಹಿಡಿಂಬನು ಹೇಳಿದನು:
“ಮನುಷ್ಯ! ವೃಥಾ ಏಕೆ ಗರ್ಜಿಸುತ್ತಿರುವೆ? ಮೊದಲು ಕೃತ್ಯವನ್ನು ಮಾಡಿ ತೋರಿಸು. ಆಮೇಲೆ ಅದರ ಕುರಿತು ಜಂಬ ಕೊಚ್ಚಿಕೊಳ್ಳುವಿಯಂತೆ! ವಿಳಂಬ ಮಾಡಬೇಡ. ನನ್ನ ಬಲಕ್ಕಿಂಥ ನಿನ್ನನ್ನು ನೀನೇ ಪರಾಕ್ರಮಿಯೆಂದು ತಿಳಿದುಕೊಂಡಿದ್ದರೆ ನನ್ನೊಡನೆ ಹೋರಾಡು. ನಿನಗಿಂಥ ನನ್ನ ಬಲವೇ ಅಧಿಕ ಎನ್ನುವುದನ್ನು ತಿಳಿಯುತ್ತೀಯೆ. ಇವರನ್ನು ನಾನು ಈಗಲೇ ಹಿಂಸಿಸುವುದಿಲ್ಲ. ಸುಖವಾಗಿ ಮಲಗಿಕೊಂಡಿದ್ದಾರೆ. ಮಲಗಿರಲಿ. ಅಪ್ರಿಯ ಮಾತನಾಡುತ್ತಿರುವ ದುರ್ಬುದ್ದಿ ನಿನ್ನನ್ನು ಮೊದಲು ಕೊಲ್ಲುತ್ತೇನೆ. ನಿನ್ನ ದೇಹದ ರಕ್ತವನ್ನು ಕುಡಿದ ನಂತರ ಅವರನ್ನೂ ಮತ್ತು ನಂತರ ಈ ವಿಪ್ರಿಯಕಾರಿಣಿಯನ್ನೂ ಕೊಲ್ಲುತ್ತೇನೆ.”
ಹೀಗೆ ಹೇಳಿದ ಆ ಸಂಕೃದ್ಧ ಪುರುಷಾದಕನು ತನ್ನ ಬಾಹುಗಳನ್ನು ಚಾಚಿ ಅರಿಂದಮ ಭೀಮಸೇನನ ಕಡೆ ಮುನ್ನುಗ್ಗಿದನು. ಆದರೆ ಅವನು ವೇಗದಿಂದ ಬರುತ್ತಿದ್ದ ಹಾಗೆಯೇ ಭೀಮಪರಾಕ್ರಮಿ ಭೀಮನು ನಗುತ್ತಾ ಅವನ ಬಾಹುಗಳಿಗೆ ಹೊಡೆದು ಕೆಳಗುರುಳಿಸಿದನು. ಅವನನ್ನು ಕೆಳಗುರುಳಿಸಿದ ಭೀಮನು ಸಿಂಹವು ಒಂದು ಸಣ್ಣ ಪ್ರಾಣಿಯನ್ನು ಎಳೆದುಕೊಂಡು ಹೋಗುವಂತೆ ಅಲ್ಲಿಂದ ಎಂಟು ಧನುಸ್ಸುಗಳ ದೂರಕ್ಕೆ ಜೋರಾಗಿ ಎಳೆದುಕೊಂಡು ಹೋದನು. ಪಾಂಡವನಿಂದ ಬಲವಂತವಾಗಿ ಎಳೆದುಕೊಂಡು ಹೋಗಲ್ಪಟ್ಟ ರಾಕ್ಷಸನು ಕೃದ್ಧನಾಗಿ ಭೀಮಸೇನನನ್ನು ಬಿಗಿದಪ್ಪಿ ಭೈರವ ಸ್ವರದಲ್ಲಿ ಕೂಗಿದನು. ಪುನಃ ಮಹಾಬಲಿ ಭೀಮನು ಸುಖವಾಗಿ ಮಲಗಿದ್ದ ಭ್ರಾತೃಗಳು ಆ ಶಬ್ಧದಿಂದ ಎಚ್ಚೆತ್ತುಕೊಳ್ಳಬಾರದೆಂದು ಅವನನ್ನು ಬಲವಂತವಾಗಿ ಎಳೆದುಕೊಂಡು ಇನ್ನೂ ಸ್ವಲ್ಪ ದೂರ ಹೋದನು. ತಮ್ಮ ಎಲ್ಲ ಬಲವನ್ನೂ ಬಳಸಿ ಅವರಿಬ್ಬರೂ ಅನ್ಯೋನ್ಯರ ಮೇಲೆ ಕುಳಿತುಕೊಂಡು ಎಳೆದಾಡಿದರು: ರಾಕ್ಷಸ ಮತ್ತು ಭೀಮ ಇಬ್ಬರೂ ತಮ್ಮ ಪರಮ ವಿಕ್ರಮವನ್ನು ಪ್ರದರ್ಶಿಸಿದರು. ಮತ್ತಿನಲ್ಲಿರುವ ಅರವತ್ತು ವರ್ಷಗಳ ಆನೆಗಳಂತೆ ಇಬ್ಬರೂ ಮರಗಳನ್ನು ಮತ್ತು ಬಳ್ಳಿಗಳನ್ನು ಕಿತ್ತು ನಾಶಮಾಡಿದರು.
ಈ ಮಹಾ ಶಬ್ಧವನ್ನು ಕೇಳಿದ ನರರ್ಷಭರು ಎಚ್ಚೆದ್ದರು ಮತ್ತು ತಾಯಿಯೊಂದಿಗೆ ಅವರು ಎದುರಿಗೆ ನಿಂತಿದ್ದ ಹಿಡಿಂಬೆಯನ್ನು ನೋಡಿದರು. ಎಚ್ಚೆತ್ತ ಪೃಥೆಯ ಸಹಿತ ಆ ಪುರುಷವ್ಯಾಘ್ರರು ಅಮಾನುಷ ರೂಪಿಣಿ ಹಿಡಿಂಬೆಯನ್ನು ನೋಡಿ ವಿಸ್ಮಿತರಾದರು. ಆ ರೂಪಸಂಪದೆಯನ್ನು ನೋಡಿ ವಿಸ್ಮಿತಳಾದ ಕುಂತಿಯು, ನಿಧಾನವಾಗಿ ಸಾಂತ್ವನ ಪೂರ್ವಕ ಈ ಮಧುರ ವಾಖ್ಯಗಳನ್ನು ನುಡಿದಳು:
“ವರವರ್ಣಿನಿ! ಸುರರ ಮಗುವಂತಿರುವ ನೀನು ಯಾರು? ಯಾವ ಕೆಲಸವನ್ನಿಟ್ಟು-ಕೊಂಡು ನೀನು ಇಲ್ಲಿಗೆ ಬಂದಿರುವೆ? ಎಲ್ಲಿಂದ ಬಂದಿರುವೆ? ನೀನು ಈ ವನದ ದೇವತೆಯಾಗಿದ್ದರೆ ಅಥವಾ ಅಪ್ಸರೆಯಾಗಿದ್ದರೆ ಎಲ್ಲವನ್ನೂ ನನಗೆ ಹೇಳು. ನೀನು ಏಕೆ ಇಲ್ಲಿ ನಿಂತಿದ್ದೀಯೆ ಹೇಳು.”
ಹಿಡಿಂಬೆಯು ಹೇಳಿದಳು:
“ನೀಲಮೇಘನಿಭದಂತೆ ದಟ್ಟ ಈ ಮಹಾವನವನ್ನು ನೀನೇನು ನೋಡುತ್ತಿದ್ದೀಯೋ ಅದು ನನ್ನ ಮತ್ತು ರಾಕ್ಷಸ ಹಿಡಿಂಬನ ವಾಸಸ್ಥಳ. ಭಾಮಿನಿ! ನಾನು ಆ ರಾಕ್ಷಸೇಂದ್ರನ ತಂಗಿಯೆಂದು ತಿಳಿ. ನಿನ್ನನ್ನು ಮತ್ತು ನಿನ್ನ ಪುತ್ರರನ್ನು ಭಕ್ಷಿಸ ಬಯಸಿದ ನನ್ನ ಅಣ್ಣನು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಆ ಕ್ರೂರ ರಾಕ್ಷಸನ ಅಪ್ಪಣೆಯಂತೆ ನಾನು ಇಲ್ಲಿಗೆ ಬಂದೆ. ಇಲ್ಲಿ ನಿನ್ನ ಹೇಮವರ್ಣದ ಮಹೌಜಸ ಪುತ್ರನನ್ನು ಕಂಡೆ. ಸರ್ವಭೂತಗಳಲ್ಲಿ ವಿಚರಿಸಿರುವ ಮನ್ಮಥನಿಂದ ತಳ್ಳಲ್ಪಟ್ಟು ನಾನು ನಿನ್ನ ಪುತ್ರನ ವಶದಲ್ಲಿ ಬಂದೆ. ನಿನ್ನ ಮಹಾಬಲಶಾಲಿ ಪುತ್ರನನ್ನು ನನ್ನ ಪತಿಯನ್ನಾಗಿ ವರಿಸಿದ್ದೇನೆ. ಅವನನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನಾನು ಹಿಂದಿರುಗುವುದಕ್ಕೆ ತಡವಾದುದ್ದನ್ನು ತಿಳಿದ ಆ ನರಭಕ್ಷಕನು ನಿನ್ನ ಪುತ್ರರನ್ನು ಕೊಲ್ಲಲು ಸ್ವಯಂ ತಾನೇ ಇಲ್ಲಿಗೆ ಬಂದನು. ನನ್ನ ಕಾಂತ ನಿನ್ನ ಧೀಮಂತ ಪುತ್ರ ಮಹಾತ್ಮನು ಅವನನ್ನು ನೆಲದ ಮೇಲೆ ಚಚ್ಚಿಹಾಕಿ ಇಲ್ಲಿಂದ ಬಲವಂತವಾಗಿ ಎಳೆದುಕೊಂಡು ಹೋದನು. ಅಲ್ಲಿ ನೋಡು! ಮಹಾವೇಗದಲ್ಲಿ ಗರ್ಜಿಸುತ್ತಾ ಪರಸ್ಪರ ಹೋರಾಡುತ್ತಿರುವ ಆ ವಿಕ್ರಾಂತ ನರ-ರಾಕ್ಷಸರನ್ನು ನೋಡು.”
ಅವಳ ಮಾತುಗಳನ್ನು ಕೇಳುತ್ತಿದ್ದಂತೆಯೇ ವೀರ ಯುಧಿಷ್ಠಿರ, ಅರ್ಜುನ ಮತ್ತು ನಕುಲ ಸಹದೇವರು ಮೇಲೆದ್ದು ಜಯವನ್ನು ಬಯಸುತ್ತಾ ಪರಸ್ಪರರನ್ನು ಎಳೆದಾಡುತ್ತಿರುವ ರಣೋತ್ಕಟ ಎರಡು ಸಿಂಹಗಳಂತೆ ಹೊಡೆದಾಡುತ್ತಿರುವ ಅವರೀರ್ವರನ್ನು ಕಂಡರು. ಅವರು ಅನ್ಯೋನ್ಯರನ್ನು ಹಿಡಿದು ಪರಸ್ಪರರನ್ನು ಎಳೆಯುತ್ತಾ ಕಾಡ್ಗಿಚ್ಚಿನ ಹೊಗೆಯಂತೆ ದಟ್ಟ ಧೂಳನ್ನೆಬ್ಬಿಸಿದರು. ಅವರು ಧೂಳಿನಿಂದ ಮುಚ್ಚಿದ ಬೆಟ್ಟಗಳಂತೆ ಕಂಡರು, ಮತ್ತು ಮಂಜು ಮುಸುಕಿದ ಕಲ್ಲಿನ ಬೆಟ್ಟಗಳಂತೆ ಕಂಡರು. ಭೀಮನು ಆ ರಾಕ್ಷಸನಿಂದ ಕಷ್ಟಕ್ಕೊಳಗಾಗಿದ್ದುದನ್ನು ನೋಡಿದ ಪಾರ್ಥನು ನಗುತ್ತಾ ಮೆಲ್ಲನೆ ಹೇಳಿದನು:
“ಮಹಾಬಾಹು ಭೀಮ! ಹೆದರ ಬೇಡ. ಆಯಾಸಗೊಂಡ ನಾವೆಲ್ಲಾ ಮಲಗಿದ್ದೆವು. ನೀನು ಈ ಭೀಮರೂಪದವನೊಡನೆ ಹೊಡೆದಾಟಕ್ಕಿಳಿದಿದ್ದುದು ತಿಳಿಯಲಿಲ್ಲ. ರಾಕ್ಷಸನೊಡನೆ ನಿನ್ನ ಈ ಹೋರಾಟದಲ್ಲಿ ನಾನು ಸಯಾಯ ಮಾಡಲು ನಿಂತಿದ್ದೇನೆ. ನಕುಲ ಮತ್ತು ಸಹದೇವರು ತಾಯಿಯನ್ನು ಕಾಯುತ್ತಾರೆ.”
ಭೀಮನು ಹೇಳಿದನು:
“ಸುಮ್ಮನೆ ಕುಳಿತುಕೊಂಡು ನೋಡಿ! ವೃಥಾ ಉದ್ವೇಗಕ್ಕೊಳಗಾಗಬೇಡಿ! ನನ್ನ ಬಾಹುಗಳ ಮದ್ಯದಲ್ಲಿ ಸಿಲುಕಿದ ಇವನು ಇನ್ನು ಹೆಚ್ಚು ಕಾಲ ಬದುಕಲಾರ.”
“ಆ ಪಾಪಿ ರಾಕ್ಷಸನನ್ನು ಕೊಲ್ಲಲು ಇಷ್ಟೊಂದು ಸಮಯವನ್ನೇಕೆ ತೆಗೆದುಕೊಳ್ಳುತ್ತಿದ್ದೀಯೆ ಭೀಮ? ನಾವು ಇನ್ನು ಇಲ್ಲಿಂದ ಹೊರಡಬೇಕು. ಹೆಚ್ಚು ಹೊತ್ತು ಇಲ್ಲಿ ಇರಲು ಸಾಧ್ಯವಿಲ್ಲ. ಪೂರ್ವ ದಿಕ್ಕು ಕೆಂಪಾಗುವುದರೊಳಗಿನ ಸಂಧ್ಯಾ ಸಮಯದ ರೌದ್ರ ಮುಹೂರ್ತದಲ್ಲಿ ರಾಕ್ಷಸರು ಪ್ರಬಲರಾಗುತ್ತಾರೆ. ಬೇಗ ಮುಗಿಸು ಭೀಮ! ಅವನೊಂದಿಗೆ ಆಡಬೇಡ. ಆ ವಿಭೀಷಣ ರಾಕ್ಷಸನು ತನ್ನ ಮಾಯೆಯನ್ನು ಬಳಸುವುದರೊಳಗೆ ಅವನನ್ನು ಕೊಂದು ಹಾಕು. ನಿನ್ನ ಭುಜಗಳ ಶಕ್ತಿಯನ್ನು ಬಳಸು.”
ಅರ್ಜುನನ ಈ ಮಾತುಗಳನ್ನು ಕೇಳಿದ ಭೀಮನು ಆ ಭಯಂಕರ ರಾಕ್ಷಸನ ದೇಹವನ್ನು ಮೇಲೆತ್ತಿ ನೂರಕ್ಕೂ ಹೆಚ್ಚು ಬಾರಿ ತಿರುಗಿಸಿದನು. ಭೀಮನು ಹೇಳಿದನು:
“ವೃಥಾ ಮಾಂಸವನ್ನು ತಿಂದು ವೃಥಾ ಕೊಬ್ಬಿದ್ದೀಯೆ! ಬುದ್ಧಿ ಬೆಳೆಯದೇ ವೃಥಾ ಬೆಳೆದಿದ್ದೀ! ವೃಥಾ ಜೀವಿಸುವ ನಿನಗೆ ವೃಥಾ ಮರಣವೇ ತಕ್ಕುದು.”
ಅರ್ಜುನನು ಹೇಳಿದನು:
“ಈ ರಾಕ್ಷಸನು ನಿನಗೆ ಭಾರಿ ಎಂದು ಅನ್ನಿಸಿದರೆ, ನಾನು ನಿನಗೆ ಯುದ್ಧದಲ್ಲಿ ಸಹಾಯಮಾಡುತ್ತೇನೆ. ಇವನನ್ನು ಬೇಗನೆ ಕೊಂದು ಮುಗಿಸು. ಇಲ್ಲವಾದರೆ ನಾನು ಅವನನ್ನು ಕೊಂದು ಮುಗಿಸುತ್ತೇನೆ. ವೃಕೋದರ! ಹೋರಾಡಿ ಆಯಾಸಗೊಂಡಿದ್ದರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಸರಿ.”
ಅವನ ಈ ಮಾತುಗಳನ್ನು ಕೇಳಿದ ಭೀಮಸೇನನು ರೊಚ್ಚೆದ್ದು ಹಿಡಿಂಬನನ್ನು ಜೋರಾಗಿ ಭೂಮಿಯ ಮೇಲೆ ಅಪ್ಪಳಿಸಿ ಪ್ರಾಣಿಯನ್ನು ಬಲಿಕೊಡುವಂತೆ ಕೊಂದು ಹಾಕಿದನು. ಭೀಮನ ಕೈಯಿಂದ ಸಾಯುವಾಗ ಅವನು ಜೋರಾಗಿ ಕಿರುಚಿ, ವನವೆಲ್ಲಾ ಆ ಆಕ್ರಂದನದಿಂದ ನೀರು ತುಂಬಿದ ದುಂದುಭಿಯಂತೆ ಮೊಳಗಿತು. ಬಲಶಾಲಿ ಪಾಂಡುನಂದನನು ಅವನನ್ನು ತನ್ನ ತೊಡೆಯ ಮೇಲಿರಿಸಿ ಅವನ ಬೆನ್ನು ಮುರಿಯುವವರೆಗೆ ಬಗ್ಗಿಸಿ ತುಂಡುಮಾಡಿ ಪಾಂಡವರಿಗೆ ಆನಂದವನ್ನಿತ್ತನು. ಹಿಡಿಂಬನ ಸಂಹಾರವನ್ನು ನೋಡಿದ ಅವರೆಲ್ಲರೂ ತುಂಬಾ ಸಂಹೃಷ್ಟರಾಗಿ ಅರಿಂದಮ, ನರವ್ಯಾಘ್ರ ಭೀಮಸೇನನನ್ನು ಅಭಿನಂದಿಸಿದರು. ಭೀಮ ಪರಾಕ್ರಮಿ ಮಹಾತ್ಮ ಭೀಮನನ್ನು ಅಭಿನಂದಿಸಿದ ನಂತರ ಅರ್ಜುನನು ವೃಕೋದರನಿಗೆ ಹೇಳಿದನು:
“ಪ್ರಭು! ಈ ವನದ ಹತ್ತಿರದಲ್ಲಿಯೇ ಒಂದು ನಗರವಿದೆ ಎಂದು ನನ್ನ ಅನಿಸಿಕೆ. ನಿನಗೆ ಮಂಗಳವಾಗಲಿ! ಶೀಘ್ರವಾಗಿ ಹೋಗೋಣ. ಸುಯೋಧನನಿಗೆ ನಾವಿರುವುದು ತಿಳಿಯಬಾರದು.”
ತಾಯಿಯೊಂದಿಗೆ ಎಲ್ಲ ಪರಂತಪರೂ ಹಾಗೆಯೇ ಆಗಲೆಂದು ಹೇಳಿ ಹೊರಟರು. ರಾಕ್ಷಸಿ ಹಿಡಿಂಬಿಯೂ ಆ ಪುರುಷವ್ಯಾಘ್ರರನ್ನು ಹಿಂಬಾಲಿಸಿದಳು. ಭೀಮನು ಹೇಳಿದನು:
“ರಾಕ್ಷಸರು ವೈರತ್ವವನ್ನು ನೆನಪಿನಲ್ಲಿಟ್ಟುಕೊಂಡು ಮೋಹನೀಯ ಮಾಯೆಗಳನ್ನು ಬಳಸುತ್ತಾರೆ. ಹಿಡಿಂಬೇ! ನಿನ್ನ ಅಣ್ಣನು ಬೆಳಗಿದ ದಾರಿಯಲ್ಲಿ ನೀನೂ ಹೋಗು.”
ಯುಧಿಷ್ಠಿರನು ಹೇಳಿದನು:
“ಪುರುಷವ್ಯಾಘ್ರ ಭೀಮ! ಕೋಪದಲ್ಲಿಯೂ ಕೂಡ ಒಂದು ಸ್ತ್ರೀಯನ್ನು ಕೊಲ್ಲಬೇಡ. ಶರೀರಕ್ಕಿಂತಲೂ ಅಧಿಕ ಧರ್ಮವನ್ನು ಕಾಪಾಡು. ನಮ್ಮನ್ನು ಕೊಲ್ಲುವ ಉದ್ದೇಶವನ್ನಿಟ್ಟುಕೊಂಡು ಬಂದಿದ್ದ ಮಹಾಬಲಶಾಲಿ ರಾಕ್ಷಸನನ್ನು ನೀನು ಕೊಂದುಹಾಕಿದ್ದೀಯೆ. ಆದರೆ ಅವನ ತಂಗಿಯಾದ ಇವಳು ಕೋಪಗೊಂಡಿದ್ದರೂ ನಮಗೆ ಏನು ಮಾಡಬಲ್ಲಳು?”
ಆಗ ಹಿಡಿಂಬೆಯು ಅಂಜಲೀ ಬದ್ಧಳಾಗಿ ಕುಂತಿ ಮತ್ತು ಕೌಂತೇಯ ಯುಧಿಷ್ಠಿರನಿಗೆ ಅಭಿವಂದಿಸಿ ಈ ಮಾತುಗಳನ್ನು ಹೇಳಿದಳು:
“ಆರ್ಯೆ! ಅನಂಗಜನಿಂದ ಸ್ತ್ರೀಯರು ಹೇಗೆ ದುಃಖವನ್ನು ಅನುಭವಿಸುತ್ತಾರೆ ಎನ್ನುವುದು ನಿನಗೆ ತಿಳಿದಿದೆ. ಭೀಮಸೇನನಿಂದಾಗಿ ನನಗೆ ಆ ದುಃಖವು ಪ್ರಾಪ್ತವಾಗಿದೆ. ನನ್ನ ಸಮಯವನ್ನು ಪ್ರತೀಕ್ಷಿಸುತ್ತಾ ಆ ಪರಮ ದುಃಖವನ್ನು ನಾನು ಸಹಿಸಿಕೊಂಡಿದ್ದೇನೆ. ನನಗೆ ಸುಖವನ್ನು ನೀಡುವ ಆ ಸಮಯವು ಈಗ ಬಂದೊದಗಿದೆ. ನನ್ನ ಸುಹೃದಯರನ್ನು, ಸ್ವಧರ್ಮವನ್ನು, ಮತ್ತು ಸ್ವಜನರನ್ನು ತೊರೆದು ನಿನ್ನ ಪುರುಷವ್ಯಾಘ್ರ ಪುತ್ರನನ್ನು ಪತಿಯನ್ನಾಗಿ ವರಿಸಿದ್ದೇನೆ. ನಾನು ವರಿಸಿದ ಅವನು ಮತ್ತು ಯಶಸ್ವಿನಿ ನೀನು ನಾನು ಮಾತನಾಡಿದ ಹಾಗೇ ನಡೆದುಕೊಳ್ಳುತ್ತೇನೆ ಎಂದು ನನ್ನನ್ನು ತಿರಸ್ಕರಿಸುತ್ತಿದ್ದೀರಾ? ನನ್ನನ್ನು ನೀನು ಮೂಢಳೆಂದು ತಿಳಿಯಬಹುದು ಅಥವಾ ನಿನ್ನನ್ನೇ ಅನುಸರಿಸುವ ಭಕ್ತೆ ಎಂದು ತಿಳಿಯಬಹುದು. ನಿನ್ನ ಸುತನನ್ನು ಪತಿಯನ್ನಾಗಿಸಿ ಸೇರಲು ಅನುಮತಿ ನೀಡು. ಆ ದೇವರೂಪಿಯನ್ನು ಬೇಕಾದಲ್ಲಿ ಕರೆದುಕೊಂಡು ಹೋಗುತ್ತೇನೆ. ಪುನಃ ನಾನು ಇಲ್ಲಿಗೇ ಬರುತ್ತೇನೆ. ನನ್ನಲ್ಲಿ ವಿಶ್ವಾಸವನ್ನಿಡು! ನೀನು ನನ್ನ ಕುರಿತು ಯೋಚಿಸಿದಾಗಲೆಲ್ಲಾ ನಾನು ಬಂದು ನಿಮ್ಮೆಲ್ಲರನ್ನೂ ಕರೆದೊಯ್ಯುತ್ತೇನೆ. ನಾನು ಈ ನರರ್ಷಭರನ್ನು ದುರ್ಗಗಳನ್ನು ದಾಟಲು ಸಹಾಯ ಮಾಡುತ್ತೇನೆ. ಅಥವಾ ನನ್ನ ಬೆನ್ನಮೇಲೆ ಕೂರಿಸಿಕೊಂಡು ನೀವು ಎಲ್ಲಿ ಹೋಗಬೇಕೆಂದು ಬಯಸುವಿರೋ ಅಲ್ಲಿಗೆ ಶೀಘ್ರವಾಗಿ ಕರೆದೊಯ್ಯುತ್ತೇನೆ. ನೀವೆಲ್ಲರೂ ನನ್ನ ಮೇಲೆ ಕರುಣೆ ತೋರಿ! ಭೀಮಸೇನನು ನನ್ನನ್ನು ಪ್ರೀತಿಸುವಂತೆ ಮಾಡಿ. ಆಪತ್ತಿನಿಂದ ಪಾರಾಗಲು ಯಾವರೀತಿಯಲ್ಲಾದರೂ ಪ್ರಾಣವನ್ನುಳಿಸಿ ಕೊಂಡಿರಬೇಕು. ಆಗ ಎಲ್ಲವನ್ನೂ ತನ್ನ ಕರ್ತವ್ಯ ಮತ್ತು ಧರ್ಮವೆಂದು ಅನುಸರಿಸಲಿ. ಆದರೆ ಆಪತ್ತಿನಲ್ಲಿ ತನ್ನ ಧರ್ಮವನ್ನು ಯಾರು ಪಾಲಿಸುತ್ತಾನೋ ಅವನೇ ಧರ್ಮವಿದುತ್ತಮ. ಯಾಕೆಂದರೆ ದರ್ಮಿಣಿಗೆ ಆಪತ್ತು ಧರ್ಮದ ವ್ಯಸನವೆಂದೇ ತೋರುತ್ತದೆ. ಪುಣ್ಯವು ಪ್ರಾಣವನ್ನು ಕೊಡುತ್ತದೆ, ಪುಣ್ಯವು ಪ್ರಾಣವನ್ನು ಉಳಿಸುತ್ತದೆ. ಅವನು ಯಾವರೀತಿಯಲ್ಲಿ ತನ್ನ ಧರ್ಮವನ್ನು ಪಾಲಿಸಿದರೂ ತಪ್ಪೆನಿಸಿಕೊಳ್ಳುವುದಿಲ್ಲ.”
ಯುಧಿಷ್ಠಿರನು ಹೇಳಿದನು:
“ಹಿಡಿಂಬೆ! ನೀನು ಹೇಳಿದ ಹಾಗೆಯೇ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನೀನು ಹೇಳಿದ ಹಾಗೆ ಧರ್ಮದಲ್ಲಿಯೇ ನಿರತಳಾಗಿರು. ಸ್ನಾನ ಮತ್ತು ಆಹ್ನೀಕವನ್ನು ಪೂರೈಸಿ ಕೌತುಕ ಮಂಗಲವನ್ನು ಮಾಡಿದವನಾಗಿ ಭೀಮಸೇನನು ಸೂರ್ಯ ಮುಳುಗುವುದರೊಳಗೆ ನಿನಗೆ ಪ್ರೀತಿಮಾಡುತ್ತಾನೆ. ಹಗಲಿನಲ್ಲಿ ನೀನು ಅವನೊಡನೆ ನಿನಗಿಷ್ಟ ಬಂದಹಾಗೆ ವಿಹರಿಸಬಹುದು. ಆದರೆ ಪ್ರತಿ ರಾತ್ರಿಯೂ ಭೀಮಸೇನನನ್ನು ನೀನು ಪುನಃ ಇಲ್ಲಿಗೆ ತಲುಪಿಸಬೇಕು.”
ಹಾಗೆಯೇ ಆಗಲೆಂದು ಪ್ರತಿಜ್ಞೆ ಮಾಡಿ ರಾಕ್ಷಸಿ ಹಿಡಿಂಬೆಯು ಬೀಮಸೇನನನ್ನು ಎತ್ತಿಕೊಂಡು ಮೇಲೇರಿದಳು. ಸರ್ವಾಭರಣಭೂಷಿತಳಾಗಿ ಅತ್ಯಂತ ಸುಂದರ ರೂಪವನ್ನು ಪಡೆದು ಸುಮಧುರ ಪ್ರಣಯಮಾತುಗಳಿಂದ ಪಾಂಡವನನ್ನು ಪರ್ವತಗಳ ತುದಿಗಳಲ್ಲಿ, ರಮ್ಯ ದೇವ ಸ್ಥಳಗಳಲ್ಲಿ, ಮೃಗಪಕ್ಷಿಗಳ ಧ್ವನಿಗಳು ಸದಾ ಕೇಳಿ ಬರುತ್ತಿರುವ ಸ್ಥಳಗಳಲ್ಲಿ ರಮಿಸಿದಳು. ಹಾಗೆಯೇ ಪುಷ್ಪಭರಿತ ಮರಗಳನ್ನು ಹೊಂದಿದ ವನದುರ್ಗಗಳಲ್ಲಿ, ಅರಳುತ್ತಿರುವ ಕಮಲ ಮತ್ತು ಹೂಬಾಳೆಗಳಿಂದ ಕೂಡಿದ ರಮಣೀಯ ಸರೋವರಗಳಲ್ಲಿ, ವೈಢೂರ್ಯದ ಮರಳನ್ನು ಹೊಂದಿದ ನದಿ ದ್ವೀಪಪ್ರದೇಶಗಳಲ್ಲಿ, ಒಳ್ಳೆಯ ತೀರ್ಥವೆನಿಸಿಕೊಂಡ ವನಗಳಲ್ಲಿ, ಹರಿಯುವ ನದಿಗಳಲ್ಲಿ, ಪರ್ವತಗಳಿಂದ ಹರಿದು ಬರುವ ನದಿಗಳಲ್ಲಿ, ಮಣಿರತ್ನಗಳ ರಾಶಿಯನ್ನೇ ಹೊಂದಿರುವ ಸಾಗರ ಪ್ರದೇಶಗಳಲ್ಲಿ, ರಮ್ಯ ಪಟ್ಟಣಗಳಲ್ಲಿ ಮತ್ತು ಶಾಲ ವೃಕ್ಷಗಳ ಮಹಾ ವನದಲ್ಲಿ, ಪುಣ್ಯಕರ ದೇವಾರಣ್ಯಗಳಲ್ಲಿ ಮತ್ತು ಪರ್ವತ ಕಣಿವೆಗಳಲ್ಲಿ, ಗುಹ್ಯಕರ ನಿವಾಸ ಸ್ಥಳಗಳಲ್ಲಿ ಮತ್ತು ತಾಪಸಿಯರ ಆಶ್ರಮಗಳಲ್ಲಿ, ಸರ್ವಋತುಗಳ ಫಲಪುಷ್ಪಗಳಿಂದ ಭರಿತ ಮಾನಸ ಸರೋವರದಲ್ಲಿ ಅವಳು ಪರಮ ರೂಪದಿಂದ ಶೋಭಿತೆಯಾಗಿ ಪಾಂಡವನನ್ನು ರಮಿಸಿದಳು. ಭೀಮನೊಂದಿಗೆ ಎಲ್ಲೆಲ್ಲಿಯೂ ರಮಿಸಿದ ಆ ಮನೋಜವೆ ರಾಕ್ಷಸಿಯು ಮಹಾಬಲಿ ಭೀಮಸೇನನ ಪುತ್ರನಿಗೆ ಜನ್ಮವಿತ್ತಳು.
ವಿರೋಪಾಕ್ಷನಾದ ಅವನಿಗೆ ಅಗಲವಾದ ಮುಖವಿತ್ತು. ಶಂಖುವಿನಂಥ ವಿಭೀಷಣ ಕಿವಿಗಳನ್ನು ಹೊಂದಿದ್ದನು. ಆ ಭೀಮರೂಪಿಣಿ ಮಹಾಬಲಿಯ ತುಟಿಗಳು ಕೆಂಪಾಗಿದ್ದವು ಮತ್ತು ಹಲ್ಲುಗಳು ಹರಿತವಾಗಿದ್ದವು. ಅವನು ಮಹೇಷ್ವಾಸನೂ, ಮಹಾವೀರ್ಯನೂ, ಮಹಾಸತ್ವನೂ, ಮಹಾಭುಜನೂ, ಮಹಾಜವನೂ, ಮಹಾಕಾಯನೂ, ಮಹಾಮಾಯಿಯೂ ಮತ್ತು ಅರಿಂದಮನೂ ಆಗಿದ್ದನು. ಮನುಷ್ಯನಿಗೆ ಹುಟ್ಟಿದ ಆ ಅಮಾನುಷನು ಭೀಮ ವೇಗವನ್ನು ಹೊಂದಿದ್ದನು. ಮಹಾ ಬಲಶಾಲಿಯಾಗಿದ್ದನು. ಮನುಷ್ಯ-ಪಿಶಾಚಿಗಳನ್ನು ಮತ್ತು ಇತರ ರಾಕ್ಷಸರನ್ನು ಮೀರಿಸುವಂತಿದ್ದನು. ಅವನು ಬಾಲಕನಾಗಿದ್ದರೂ ಮನುಷ್ಯರಲ್ಲಿ ಯುವಕನಂತೆ ತೋರುತ್ತಿದ್ದನು. ಆ ವೀರ ಬಲಿಯು ಸರ್ವ ಅಸ್ತ್ರಗಳಲ್ಲಿ ಪರಮ ಪರಿಣತಿಯನ್ನು ಪಡೆದನು. ರಾಕ್ಷಸಿಯರು ಗರ್ಭಧರಿಸಿದ ದಿನವೇ ಮಗುವಿಗೆ ಜನ್ಮ ನೀಡುತ್ತಾರೆ, ಮತ್ತು ಆ ಮಕ್ಕಳು ಬೇಕಾದ ರೂಪವನ್ನು, ಬೇರೆ ಬೇರೆ ರೂಪಗಳನ್ನು ಧರಿಸಬಹುದು. ಬೋಳುಮಂಡೆಯ ಅವನು ತನ್ನ ತಂದೆ ತಾಯಿಗಳ ಪಾದಸ್ಪರ್ಷಮಾಡಿ ನಮಸ್ಕರಿಸಿದನು ಮತ್ತು ಅವರು ಆ ಪರಮೇಷ್ವಾಸನಿಗೆ ನಾಮಕರಣ ಮಾಡಿದರು. ಅವನು ಘಟದಂತೆಯೇ ಹೊಳೆಯುತ್ತಿದ್ದಾನೆ ಎಂದು ಅವನು ತಾಯಿಗೆ ಹೇಳಿದನು, ಮತ್ತು ಹಾಗೆಯೇ ಅವನ ಹೆಸರು ಘಟೋತ್ಕಚ ಎಂದಾಯಿತು.
ಘಟೋತ್ಕಚನು ಪಾಂಡವರಲ್ಲಿಯೇ ಅನುರಕ್ತನಾದನು ಮತ್ತು ಪಾಂಡವರೂ ಸಹ ಅವನನ್ನು ತುಂಬಾ ಪ್ರೀತಿಸುತ್ತಿದ್ದರು; ಅವನು ಅವರ ಆತ್ಮದಂತಿದ್ದನು. ಆಗ ಹಿಡಿಂಬೆಯು ಅವನಿಗೆ ನಮ್ಮ ಒಟ್ಟು ಬಾಳ್ವೆಯ ಸಮಯವು ಮುಗಿಯಿತು ಎಂದು ಹೇಳಿ ಒಂದು ಒಪ್ಪಂದವನ್ನು ಮಾಡಿಕೊಂಡು ತನ್ನ ದಾರಿಯಲ್ಲಿ ಹೊರಟುಹೋದಳು. ಘಟೋತ್ಕಚನು ತನ್ನ ತಂದೆಗೆ “ಕರೆದಾಗಲೆಲ್ಲಾ ಬರುತ್ತೇನೆ!”ಎಂದು ವಚನವನ್ನಿತ್ತು ಉತ್ತರ ದಿಕ್ಕಿನ ಕಡೆಗೆ ಹೊರಟುಹೋದನು. ತನ್ನ ಶಕ್ತ್ಯಾಸ್ತ್ರದ ಸಲುವಾಗಿ ಮಹಾತ್ಮ ಮಘವತನು ಅಪ್ರತಿಮ ವೀರ ಮಹಾತ್ಮ ಕರ್ಣನ ವಿನಾಶಕ್ಕಾಗಿ ಅವನನ್ನು ಸೃಷ್ಠಿಸಿದನು.
ಆ ಮಹಾರಥಿ ವೀರರು ಬಹಳಷ್ಟು ಮೃಗಗಣಗಳನ್ನು ಸಂಹರಿಸುತ್ತಾ ವನದಿಂದ ವನಕ್ಕೆ ಅತಿವೇಗದಲ್ಲಿ ಪ್ರಯಾಣ ಮಾಡಿದರು. ಅವರು ಮತ್ಸ್ಯ, ತ್ರಿಗರ್ತ, ಪಾಂಚಾಲ, ಕೀಚಕ ದೇಶಗಳನ್ನು ಅತಿಕ್ರಮಿಸಿ ರಮಣೀಯ ಸರೋವರಗಳನ್ನು ವನದೇಶಗಳನ್ನು ನೋಡಿದರು. ಕುಂತಿಯೂ ಸೇರಿ ಆ ಮಹಾತ್ಮರೆಲ್ಲರೂ ಜಟೆಯನ್ನು ಧರಿಸಿ ವಲ್ಕಲ ಜಿನ ವಸ್ತ್ರಗಳನ್ನು ಧರಿಸಿ, ತಾಪಸಿಗಳ ವೇಷವನ್ನು ತಾಳಿದರು. ಕೆಲವೊಮ್ಮೆ ಆ ಮಹಾರಥಿಗಳು ತಾಯಿಯನ್ನು ಎತ್ತಿಕೊಂಡು ಓಡುತ್ತಿದ್ದರು. ಕೆಲವೊಮ್ಮೆ ಅವಸರ ಮಾಡದೇ ಬಹಿರಂಗವಾಗಿ ಹೋಗುತ್ತಿದ್ದರು. ಅವರು ಬ್ರಾಹ್ಮಣರ ಎಲ್ಲ ವೇದಗಳನ್ನೂ ವೇದಾಂಗಗಳನ್ನೂ, ನೀತಿ ಶಾಸ್ತ್ರವನ್ನೂ ಕಲಿತುಕೊಂಡರು.
ಆ ಧರ್ಮಜ್ಞರು ಅವರ ಪಿತಾಮಹನನ್ನು ಕಂಡರು. ಆಗ ಆ ಪರಂತಪರು ತಮ್ಮ ತಾಯಿಯ ಸಹಿತ ಮಹಾತ್ಮ ಕೃಷ್ಣದ್ವೈಪಾಯನನನ್ನು ಅಭಿವಂದಿಸಿ, ಅಂಜಲೀ ಬದ್ಧರಾಗಿ ನಿಂತುಕೊಂಡರು. ವ್ಯಾಸನು ಹೇಳಿದನು:
“ಭರತರ್ಷಭರೇ! ಅಧರ್ಮ ನಿರತ ಧಾರ್ತರಾಷ್ಟ್ರರಿಂದ ನೀವು ವಿವಾಸಿತರಾಗುತ್ತೀರಿ ಎನ್ನುವುದನ್ನು ಪೂರ್ವದಲ್ಲಿಯೇ ನಾನು ನನ್ನ ಮನಸ್ಸಿನಲ್ಲಿ ತಿಳಿದುಕೊಂಡಿದ್ದೆ. ಅದನ್ನು ತಿಳಿದ ನಾನು ನಿಮಗೆ ಪರಮ ಹಿತವನ್ನು ಮಾಡುವ ಬಯಕೆಯಿಂದ ನಿಮ್ಮಲ್ಲಿಗೆ ಬಂದಿದ್ದೇನೆ. ಇದರ ಕುರಿತು ವಿಷಾದಿಸಬೇಡಿ. ಸರ್ವವೂ ಸುಖವನ್ನೇ ತರುತ್ತದೆ. ನೀವು ಮತ್ತು ಅವರು ಎಲ್ಲರೂ ನನಗೆ ಸಮಾನರೇ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಬಾಂಧವರು ದೀನ ಮತ್ತು ಬಾಲಿಶರಲ್ಲಿ ಸ್ನೇಹವನ್ನು ಮಾಡುತ್ತಾರೆ. ಆದುದರಿಂದ ನನಗೆ ನಿಮ್ಮಮೇಲೆ ಹೆಚ್ಚಿನ ಸ್ನೇಹವಿದೆ. ಸ್ನೇಹಪೂರ್ವಕವಾಗಿ ನಿಮಗೆ ಸಹಾಯವನ್ನು ನೀಡಲು ಬಯಸುತ್ತೇನೆ. ಇಲ್ಲಿಯೇ ಹತ್ತಿರದಲ್ಲಿ ರಮಣೀಯವೂ ನಿರಾಮಯವೂ ಆದ ನಗರವೊಂದಿದೆ. ವೇಷಮರೆಸಿಕೊಂಡು ಅಲ್ಲಿಯೇ ವಾಸಿಸಿರಿ ಮತ್ತು ನಾನು ಮರಳಿ ಬರುವುದನ್ನು ಪ್ರತೀಕ್ಷಿಸುತ್ತಿರಿ.”
ಅರಿಂದಮ ಪಾರ್ಥರಿಗೆ ಈ ರೀತಿ ಸಮಾಶ್ವಾಸನೆಯನ್ನು ನೀಡಿದ ಪ್ರಭು ವ್ಯಾಸನು ಅವರೊಂದಿಗೆ ಏಕಚಕ್ರ ನಗರಕ್ಕೆ ಬಂದು ಕುಂತಿಗೆ ಆಶ್ವಾಸನೆಯನ್ನಿತ್ತನು:
“ಪುತ್ರಿ! ಜೀವಿಸು. ನಿನ್ನ ಈ ಮಗ ಧರ್ಮಪುತ್ರ ಯುಧಿಷ್ಠಿರನು ಧರ್ಮರಾಜನಾಗಿ ಪೃಥ್ವಿಯ ಸರ್ವ ಪಾರ್ಥಿವರನ್ನೂ ಆಳುತ್ತಾನೆ. ಈ ಧರ್ಮವಿದನು ಅಖಿಲ ಪೃಥ್ವಿಯನ್ನೂ ಭೀಮಸೇನ-ಅರ್ಜುನರ ಬಲದಿಂದ ಧರ್ಮಪೂರ್ವಕವಾಗಿ ಗೆದ್ದು ಭೋಗಿಸುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ನಿನ್ನ ಮತ್ತು ಮಾದ್ರಿಯ ಈ ಮಕ್ಕಳು ಎಲ್ಲರೂ ಮಹಾರಥಿಗಳು ಮತ್ತು ಅವರು ಸ್ವರಾಷ್ಟ್ರದಲ್ಲಿ ಸುಖವಾಗಿ ಸುಮನಸ್ಕರಾಗಿ ವಿಹರಿಸುತ್ತಾರೆ. ಈ ಪೃಥ್ವಿಯನ್ನು ಜಯಿಸಿ ನರವ್ಯಾಘ್ರರು ಅಧಿಕ ಭೂರಿದಕ್ಷಿಣೆಗಳನ್ನೊಡಗೂಡಿದ ರಾಜಸೂಯ, ಅಶ್ವಮೇಧ ಮೊದಲಾದ ಕ್ರತುಗಳನ್ನು ಯಾಜಿಸಿತ್ತಾರೆ. ನಿನ್ನ ಮಕ್ಕಳು ಧನ ಮತ್ತು ಸುಖದಿಂದ ತಮ್ಮ ಸುಹೃದಯರನ್ನು ಅನುಗ್ರಹಿಸುತ್ತಾ ಪಿತೃಪಿತಾಮಹರ ಈ ರಾಜ್ಯವನ್ನು ಭೋಗಿಸುತ್ತಾರೆ.”
ಹೀಗೆ ಹೇಳಿ ಋಷಿ ದ್ವೈಪಾಯನನು ಅವರನ್ನು ಬ್ರಾಹ್ಮಣನೋರ್ವನ ಮನೆಗೆ ಕರೆದು ತಂದು ಪಾರ್ಥಿವಶ್ರೇಷ್ಠನಿಗೆ ಹೇಳಿದನು:
“ಪುನಃ ನಾನು ಬರುವುದನ್ನು ಪ್ರತೀಕ್ಷಿಸು. ದೇಶಕಾಲಗಳ ಕುರಿತು ತಿಳಿದನಂತರ ನೀವು ಪರಮ ಸಂತೋಷವನ್ನು ಹೊಂದುತ್ತೀರಿ.”
ಹಾಗೆಯೇ ಆಗಲೆಂದು ಪ್ರಾಂಜಲೀಬದ್ಧರಾಗಿ ಅವರು ವಚನವನ್ನಿತ್ತ ನಂತರ ಋಷಿ ಭಗವಾನ್ ವ್ಯಾಸಪ್ರಭುವು ತನಗಿಷ್ಟವಾದಲ್ಲಿಗೆ ಹೋದನು.