Related imageಅರ್ಜುನವನವಾಸ

ಇಂದ್ರಪ್ರಸ್ಥಕ್ಕೆ ನಾರದನ ಆಗಮನ

ಧೃತರಾಷ್ಟ್ರನ ಅನುಜ್ಞೆಯಂತೆ ರಾಜ್ಯವನ್ನು ಹೊಂದಿದ ಆ ಪುರುಷವ್ಯಾಘ್ರ, ಪರಂತಪ ಪಾಂಡವರು ಕೃಷ್ಣೆಯೊಡನೆ ರಮಿಸಿದರು. ರಾಜ್ಯವನ್ನು ಪಡೆದ ಮಹಾತೇಜಸ್ವಿ ಸತ್ಯಸಂಧ ಯುಧಿಷ್ಠಿರನು ಭ್ರಾತೃಗಳೊಡನೆ ಪೃಥ್ವಿಯನ್ನು ಧರ್ಮದಿಂದ ಪಾಲಿಸತೊಡಗಿದನು. ಅರಿಗಳನ್ನು ಗೆದ್ದು ಮಹಾಪ್ರಾಜ್ಞ ಸತ್ಯಧರ್ಮಪರಾಯಣ ಪಾಂಡುನಂದನನು ಪರಮ ಸಂತಸವನ್ನು ಹೊಂದಿ ಬಾಳುತ್ತಿದ್ದನು. ಪುರುಷರ್ಷಭರು ಬೆಲೆಬಾಳುವ ರಾಜಾಸನಗಳಲ್ಲಿ ಕುಳಿತು ಸರ್ವ ಪೌರಕಾರ್ಯಗಳನ್ನೂ ಮಾಡುತ್ತಿದ್ದರು. ಒಮ್ಮೆ ಸರ್ವ ಮಹಾತ್ಮರೂ ಕುಳಿತಿರುವಾಗ ಅಲ್ಲಿಗೆ ದೇವರ್ಷಿ ನಾರದನು ಬಂದನು. ಯುಧಿಷ್ಠಿರನು ಅವನಿಗೆ ತನ್ನದೇ ಸುಂದರ ಆಸನವನ್ನು ನೀಡಿದನು ಮತ್ತು ದೇವರ್ಷಿಯನ್ನು ಸ್ವಯಂ ಕುಳ್ಳಿರಿಸಿ ಯಥಾವಿಧಿ ಅರ್ಘ್ಯವನ್ನಿತ್ತನು. ನಂತರ ಧೀಮಾನ್ ಯುಧಿಷ್ಠಿರನು ರಾಜ್ಯವನ್ನೇ ಅವನಿಗೆ ನಿವೇದಿಸಿದನು. ಅವನ ಪೂಜೆಯನ್ನು ಸ್ವೀಕರಿಸಿದ ಋಷಿಯು ಸಂತೋಷಗೊಂಡು ಅವನಿಗೆ ಆಶೀರ್ವಾದಗಳನ್ನಿತ್ತು ಕುಳಿತುಕೊಳ್ಳಲು ಹೇಳಿದನು. ರಾಜ ಯುಧಿಷ್ಠಿರನು ಕುಳಿತುಕೊಳ್ಳಲು ಭಗವಾನನು ಬಂದಿದ್ದಾನೆಂದು ಕೃಷ್ಣೆಗೆ ಬರಲು ಹೇಳಿ ಕಳುಹಿಸಿದನು. ಕೇಳಿದೊಡನೆಯೇ ದ್ರೌಪದಿಯು ಶುಚಿರ್ಭೂತಳಾಗಿ ಪಾಂಡವರೊಡನೆ ನಾರದನು ಇರುವಲ್ಲಿಗೆ ಹೋದಳು. ದೇವರ್ಷಿಯ ಚರಣಗಳೆರಡಕ್ಕೂ ನಮಸ್ಕರಿಸಿದ ಧರ್ಮಚಾರಿಣಿ ದ್ರುಪದಾತ್ಮಜೆಯು ಅಂಜಲೀಬದ್ಧಳಾಗಿ, ಸುಸಂವೀತಳಾಗಿ ನಿಂತುಕೊಂಡಳು. ಸತ್ಯವಾಗ್ಮಿ ಋಷಿಸತ್ತಮ ಧರ್ಮಾತ್ಮ ಭಗವಾನ್ ನಾರದನು ಅನಿಂದಿತೆ ರಾಜಪುತ್ರಿಗೆ ವಿವಿಧ ಆಶೀರ್ವಾದಗಳನ್ನಿತ್ತು ಹೋಗಬಹುದೆಂದು ಹೇಳಿದನು. ಕೃಷ್ಣೆಯು ಹೋದನಂತರ ಯುಧಿಷ್ಠಿರನೇ ಮೊದಲಾದ ಪಾಂಡವರು ಮಾತ್ರ ಏಕಾಂತದಲ್ಲಿರಲು, ಸರ್ವರನ್ನೂ ಉದ್ದೇಶಿಸಿ ಭಗವಾನ್ ಋಷಿಯು ಹೇಳಿದನು:

“ಯಶಸ್ವಿನೀ ಪಾಂಚಾಲಿಯು ನಿಮ್ಮೆಲ್ಲರಿಗೂ ಒಬ್ಬಳೇ ಧರ್ಮಪತ್ನಿಯಾಗಿದ್ದಾಳೆ. ಅವಳಿಂದಾಗಿ ನಿಮ್ಮ ನಿಮ್ಮಲ್ಲಿ ಭೇದವುಂಟಾಗದಂತೆ ನಿಮ್ಮಲ್ಲಿಯೇ ಒಂದು ನೀತಿಯನ್ನು ಪಾಲಿಸಬೇಕಾಗುತ್ತದೆ. ಹಿಂದೆ ಮೂರೂ ಲೋಕಗಳಲ್ಲಿಯೂ ವಿಶೃತ, ಒಬ್ಬರನ್ನೊಬ್ಬರು ಬಿಟ್ಟಿರದೇ ಇದ್ದ ಸುಂದ ಮತ್ತು ಉಪಸುಂದರೆಂಬ ಈರ್ವರು ಅಸುರ ಸಹೋದರರಿದ್ದರು. ಅವರು ಬೇರೆ ಯಾರಿಂದಲೂ ಅವಧ್ಯರಾಗಿದ್ದರು. ಒಂದೇ ರಾಜ್ಯ, ಒಂದೇ ಅರಮನೆ, ಒಂದೇ ಹಾಸಿಗೆ, ಆಸನ, ಆಹಾರವನ್ನು ಬಳಸುತ್ತಿದ್ದ ಅವರು ತಿಲೋತ್ತಮೆಯ ಸಲುವಾಗಿ ಪರಸ್ಪರರನ್ನು ಸಂಹರಿಸಿದರು. ಯುಧಿಷ್ಠಿರ! ಆದುದರಿಂದ ನಿಮ್ಮ ಅನ್ಯೋನ್ಯರಲ್ಲಿ ಇರುವ ಸೌಹಾರ್ದತೆಯನ್ನು ರಕ್ಷಿಸಿಕೋ ಮತ್ತು ನಿಮ್ಮಲ್ಲಿಯೇ ಭೇದವುಂಟಾಗದ ಹಾಗೆ ನಡೆದುಕೋ!”

ಯುಧಿಷ್ಠಿರನು ಹೇಳಿದನು:

“ಮಹಾಮುನೇ! ಸುಂದ ಮತ್ತು ಉಪಸುಂದರು ಯಾರ ಮಕ್ಕಳು ಮತ್ತು ಅವರಲ್ಲಿ ಹೇಗೆ ಭೇದವುಂಟಾಯಿತು ಮತ್ತು ಅವರು ಹೇಗೆ ಅನ್ಯೋನ್ಯರನ್ನು ಸಂಹರಿಸಿದರು? ಮತ್ತು ಕಾಮದಿಂದ ಆ ಸಮ್ಮತ್ತರು ಪರಸ್ಪರರನ್ನು ಸಂಹರಿಸಿದ ಆ ತಿಲೋತ್ತಮೆಯು ಯಾರು? ಅಪ್ಸರೆಯೇ? ದೇವಕನ್ಯೆಯೇ? ಮತ್ತು ಅವಳು ಯಾರವಳು? ಇವೆಲ್ಲವನ್ನೂ ಯಥಾವತ್ತಾಗಿ ಕೇಳಲು ಬಯಸುತ್ತೇನೆ. ವಿಪ್ರ! ಇದರ ಕುರಿತು ನನಗೆ ಪರಮ ಕುತೂಹಲವುಂಟಾಗಿದೆ.”

ಆಗ ನಾರದನು ಪಾಂಡವರಿಗೆ ಸುಂದೋಪಸುಂದರ ಕಥೆಯನ್ನು ಹೇಳಿ,

“ಭರತಸತ್ತಮರೆಲ್ಲರ ಮೇಲಿರುವ ನನ್ನ ಪ್ರೀತಿಯ ಕಾರಣದಿಂದಾಗಿ ನಾನು ನಿಮಗೆ ಹೇಳುತ್ತಿದ್ದೇನೆ. ದ್ರೌಪದಿಯ ಕಾರಣದಿಂದಾಗಿ ನಿಮ್ಮೆಲ್ಲರಲ್ಲಿ ಭೇದವುಂಟಾಗದಿರಲಿ! ನನಗೆ ಪ್ರಿಯವಾದುದನ್ನು ಮಾಡಬೇಕೆಂದರೆ ಹಾಗೆಯೇ ಮಾಡಿರಿ. ನಿಮಗೆ ಮಂಗಲವಾಗಲಿ!”

ಎಂದನು. ಮಹಾತ್ಮ ನಾರದ ಮಹರ್ಷಿಯು ಈ ರೀತಿ ಹೇಳಲು ಅವರು ಒಂದಾಗಿ ಆ ದೇವರ್ಷಿ ಅಮಿತತೇಜಸ್ವಿ ನಾರದನ ಸಮಕ್ಷಮದಲ್ಲಿ ಅನ್ಯೋನ್ಯರಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು:

“ದ್ರೌಪದಿಯೊಡನಿರುವವನನ್ನು ಅನ್ಯ ಯಾರೂ ನೋಡಿದರೆ ಅವನು ಬ್ರಹ್ಮಚಾರಿಯಾಗಿ ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಬೇಕು!”

ಧರ್ಮಚಾರಿ ಪಾಂಡವರಲ್ಲಿ ಈ ಒಪ್ಪಂದ ಆಗುವಹಾಗೆ ಮಾಡಿ ಪರಮ ಪ್ರೀತ ಮಹಾಮುನಿ ನಾರದನು ಇಷ್ಟ ದೇಶಕ್ಕೆ ತೆರಳಿದನು. ಹೀಗೆ ನಾರದನಿಂದ ಪ್ರಚೋದಿತರಾದ ಅವರು ಮೊದಲೇ ಅನ್ಯೋನ್ಯ ಒಪ್ಪಂದವನ್ನು ಮಾಡಿಕೊಂಡು ಯಾವುದೇ ರೀತಿಯ ಭೇದಗಳಿಲ್ಲದೇ ವಾಸಿಸುತ್ತಿದ್ದರು. ಈ ರೀತಿ ಒಪ್ಪಂದವನ್ನು ಮಾಡಿಕೊಂಡ ಪಾಂಡವರು ಅಲ್ಲಿಯೇ ವಾಸಿಸುತ್ತಿದ್ದರು. ಅವರ ಶಸ್ತ್ರಪ್ರತಾಪದಿಂದ ಅನ್ಯ ಮಹೀಕ್ಷಿತರನ್ನು ವಶಪಡಿಸಿಕೊಂಡರು. ಕೃಷ್ಣೆಯು ಆ ಎಲ್ಲ ಅಮಿತೌಜಸ, ಮನುಜಸಿಂಹ, ಪಂಚ ಪಾರ್ಥರ ವಶವರ್ತಿನಿಯಾಗಿದ್ದಳು. ಆನೆಗಳೊಂದಿಗೆ ಸರಸ್ವತಿಯು ಹೇಗೋ ಹಾಗೆ ಅವಳು ತನ್ನ ಐದು ಪತಿಗಳೊಡನೆ ಪರಮಪ್ರೀತಳಾಗಿದ್ದಳು. ಮಹಾತ್ಮ ಪಾಂಡವರು ಧರ್ಮದಲ್ಲಿ ನಡೆದುಕೊಂಡಿರಲು ಸರ್ವ ಕುರುಗಳೂ ದೋಷರಹಿತರಾಗಿ ಸುಖಾನ್ವಿತರಾಗಿ ವರ್ಧಿಸಿದರು.

ಅರ್ಜುನನು ಒಪ್ಪಂದವನ್ನು ಮುರಿದುದರಿಂದ ವನವಾಸಕ್ಕೆ ತೆರಳಿದುದು

ದೀರ್ಘಕಾಲದ ನಂತರ ಕೆಲವು ಕಳ್ಳರು ಓರ್ವ ಬ್ರಾಹ್ಮಣನ ಗೋವುಗಳನ್ನು ಅಪಹರಿಸಿದರು. ತನ್ನ ಧನವನ್ನು ಕಳೆದುಕೊಂಡು ಕ್ರೋಧಮೂರ್ಛಿತನಾದ ಆ ಬ್ರಾಹ್ಮಣನು ಖಾಂಡವಪ್ರಸ್ಥಕ್ಕೆ ಬಂದು ಪಾಂಡವರನ್ನು ಮೂದಲಿಸಿದನು.

“ಕ್ಷುದ್ರ, ನೃಶಂಸ, ಅಕೃತಾತ್ಮರು ಗೋಧನವನ್ನು ಕದ್ದು ಹೋಗುತ್ತಿದ್ದಾರೆ! ಪಾಂಡವರೇ! ಓಡಿ ಹೋಗಿ ಅದನ್ನು ಹಿಂದಿರುಗಿ ತೆಗೆದುಕೊಂಡು ಬನ್ನಿ! ಪ್ರಮತ್ತ ಬ್ರಾಹ್ಮಣನ ಹವಿಸ್ಸನ್ನು ಕಾಗೆಗಳು ಎತ್ತಿಕೊಂಡು ಹೋಗುತ್ತಿವೆ.  ಶಾರ್ದೂಲನ ಗುಹೆಯಲ್ಲಿ ಯಾರೂ ಇಲ್ಲದಿರಲು ನೀಚ ತೋಳವು ಒಳಹೊಕ್ಕಿದೆ! ಪ್ರಜೆಗಳು ಕೊಡುವ ರಾಜಾದಾಯದ ಆರನೆಯ ಒಂದು ಪಾಲನ್ನು ಉಪಭೋಗಿಸುವ ರಾಜನು ತನ್ನ ಪ್ರಜೆಗಳನ್ನು ರಕ್ಷಿಸದಿದ್ದರೆ ಅವನು ಸಮಗ್ರ ಸರ್ವಲೋಕದಲ್ಲಿ ಪಾಪಚಾರಿ ಎಂದೆನಿಸಿಕೊಳ್ಳುತ್ತಾನೆ. ಬ್ರಾಹ್ಮಣನ ವಸ್ತುವಿನ ಕಳ್ಳತನವಾಗಿದೆಯೆಂದರೆ ಧರ್ಮ-ಅರ್ಥದ ವಿಲೋಪವಾದಂತೆ! ನಾನು ರೋಧಿಸುತ್ತಿದ್ದೇನೆ! ಅಸ್ತ್ರಧಾರಣಮಾಡಿ!”

ರೋಧಿಸುತ್ತಿರುವ ಆ ವಿಪ್ರನ ಸುತ್ತ ಮುತ್ತಲಿದ್ದ ಕುಂತೀಪುತ್ರ ಪಾಂಡವ ಧನಂಜಯನು ಅವನ ಆ ಮಾತುಗಳನ್ನು ಕೇಳಿದನು. ಇದನ್ನು ಕೇಳಿದ ಆ ಮಹಾಬಾಹುವು ದ್ವಿಜನಿಗೆ “ಹೆದರಬೇಡ!”ಎಂದು ಹೇಳಿದನು. ಆದರೆ ಮಹಾತ್ಮ ಪಾಂಡವರು ತಮ್ಮ ಆಯುಧಗಳನ್ನು ಎಲ್ಲಿ ಇರಿಸಿದ್ದರೋ ಅಲ್ಲಿ ಕೃಷ್ಣೆಯ ಸಹಿತ ಧರ್ಮರಾಜ ಯುಧಿಷ್ಠಿರನಿದ್ದನು. ಆ ಪಾಂಡವನು ಅಲ್ಲಿ ಪ್ರವೇಶಿಸಲೂ ಶಕ್ಯನಿರಲಿಲ್ಲ. ಅಲ್ಲಿಂದ ಹೊರಟು ಹೋಗಲೂ ಶಕ್ಯನಿರಲಿಲ್ಲ. ಆ ಅರ್ತನು ಪುನಃ ಪುನಃ ತನ್ನ ತೀಕ್ಷ್ಣ ನಾಲಗೆಯಿಂದ ಒತ್ತಾಯಿಸುತ್ತಿರಲು, ಅವನ ಆಕ್ರಾಂತದ ಮಧ್ಯೆ ಕೌಂತೇಯನು ದುಃಖಿತನಾಗಿ ಚಿಂತಿಸಿದನು:

“ಈ ತಪಸ್ವಿ ಬ್ರಾಹ್ಮಣನ ಧನದ ಕಳ್ಳತನವಾಗಿದೆ. ಅವನ ಕಣ್ಣೀರನ್ನು ಒಣಗಿಸುವುದು ನಿಶ್ಚಯವಾಗಿಯು ಕರ್ತವ್ಯ. ಇಂದು ದ್ವಾರದಲ್ಲಿ ನಿಂತು ರೋದಿಸುತ್ತಿರುವ ಇವನ ರಕ್ಷಣೆಯನ್ನು ಮಾಡದೇ ಇದರ ಉಪಪ್ರೇಕ್ಷಣೆಯನ್ನು ಮಾಡಿದರೆ ಮಹೀಪತಿಯು ಮಹಾ ಅಧರ್ಮವನ್ನು ಮಾಡಿದ ಹಾಗಾಗುತ್ತದೆ. ನಾನು ರಕ್ಷಿಸದಿದ್ದರೆ ನಾವೆಲ್ಲರೂ ಈ ಲೋಕದಲ್ಲಿಯೇ ಅನಾಸ್ತಿಕರೆಂದೂ, ಅಧರ್ಮಿಗಳೆಂದೂ ಕುಪ್ರಸಿದ್ಧರಾಗುತ್ತೇವೆ. ರಾಜನನ್ನು ಕೇಳದೆಯೇ ನಾನು ಹೋದೆನೆಂದರೆ ನಿಸ್ಸಂಶಯವಾಗಿಯೂ ನನ್ನ ನೃಪತಿ ಅಜಾತಶತ್ರುವಿಗೆ ಅಪ್ರಿಯವನ್ನು ಮಾಡಿದಂಥಾಗುತ್ತದೆ. ರಾಜನ ಗೃಹವನ್ನು ಪ್ರವೇಶಿಸಿದರೆ ನನಗೆ ವನವಾಸವಾಗುತ್ತದೆ. ಅಧರ್ಮ ಅಥವಾ ಮಹಾವನದಲ್ಲಿ ನನ್ನ ಮರಣ. ಆದರೆ ಶರೀರನಾಶಕ್ಕಿಂತಲೂ ಧರ್ಮವೇ ಮೇಲು!”

ಈ ರೀತಿ ನಿಶ್ಚಯಿಸಿದ ಕುಂತೀಪುತ್ರ ಧನಂಜಯನು ರಾಜನ ಅನುಜ್ಞೆಯಿಲ್ಲದೇ ಪ್ರವೇಶಿಸಿ ಧನುಸ್ಸನ್ನು ತಂದು ಸಂಹೃಷ್ಠ ಬ್ರಾಹ್ಮಣನಿಗೆ ಉತ್ತರಿಸಿದನು:

“ಬ್ರಾಹ್ಮಣ! ಶೀಘ್ರವಾಗಿ ಬಾ! ಆ ಕಳ್ಳರನ್ನು ಹಿಡಿಯಬೇಕು. ಆ ಕ್ಷುದ್ರರು ತುಂಬಾ ದೂರ ಹೋಗಿರಲಿಕ್ಕಿಲ್ಲ. ಒಟ್ಟಿಗೇ ಹೋಗೋಣ. ಅವರನ್ನು ಹಿಡಿದು ನಿನ್ನ ಧನವನ್ನು ಹಿಂದಿರುಗಿಸುತ್ತೇನೆ.” ಆ ಮಹಾಬಾಹುವು ಧನುಸ್ಸನ್ನು ಹಿಡಿದು, ವರ್ಮದಿಂದ ಧ್ವಜಯುಕ್ತ ರಥವನ್ನೇರಿ ಚೋರರನ್ನು ಬೆನ್ನಟ್ಟಿ ಶರಗಳಿಂದ ವಿಧ್ವಂಸಿಸಿ ಧನವನ್ನು ಗೆದ್ದನು. ಬ್ರಾಹ್ಮಣನಿಗೆ ಅದನ್ನು ಒಪ್ಪಿಸಿ ಯಶವನ್ನು ಪಡೆದು ವೀರ ಪಾಂಡವ ಪರಂತಪ ಸವ್ಯಸಾಚಿಯು ಪುರವನ್ನು ಸೇರಿದನು. ಸರ್ವ ಗುರುಗಳನ್ನೂ ಅಭಿವಂದಿಸಿದನು ಮತ್ತು ಅವರೂ ಅವನಿಗೆ ಪ್ರತಿನಂದಿಸಿದರು. ನಂತರ ಅವನು ಧರ್ಮರಾಜನಿಗೆ ಹೇಳಿದನು: “ನನಗೆ ವ್ರತವನ್ನು ಆದೇಶಿಸು! ನಾನು ನಿನ್ನನ್ನು ನೋಡಿ ಒಪ್ಪಂದವನ್ನು ಅತಿಕ್ರಮಿಸಿದ್ದೇನೆ. ನಾವು ಮಾಡಿಕೊಂಡ ಒಪ್ಪಂದದಂತೆ ನಾನು ವನವಾಸಕ್ಕೆ ತೆರಳುತ್ತೇನೆ.”

ಒಮ್ಮೆಲೇ ಈ ಅಪ್ರಿಯ ವಾಕ್ಯವನ್ನು ಕೇಳಿದ ಧರ್ಮರಾಜನು ಶೋಕಾರ್ತನಾಗಿ ಸಜ್ಜಮಾನನಾಗಿ “ಏಕೆ?”ಎಂದು ಉದ್ಗರಿಸಿದನು. ನಂತರ ಅಚ್ಯುತ ಭ್ರಾತಾ ಯುಧಿಷ್ಠಿರನು ತಮ್ಮ ಗುಡಾಕೇಶನಿಗೆ ಹೇಳಿದನು:

“ಅನಘ! ನಾನು ಹಿರಿಯವನಾಗಿದ್ದೇನಾದರೆ ನನ್ನ ಮತವನ್ನು ಕೇಳು. ನೀನು ಅನುಪ್ರವೇಶಿಸಿ ನನಗೇನಾದರೂ ಅಪ್ರಿಯವಾದುದನ್ನು ಮಾಡಿದ್ದೀಯೆಂದರೆ ನಾನು ಅದೆಲ್ಲವನ್ನೂ ಕ್ಷಮಿಸುತ್ತೇನೆ ಮತ್ತು ಅದರ ಸೇಡನ್ನು ನನ್ನ ಹೃದಯದಿಂದ ತೆಗೆದುಬಿಡುತ್ತೇನೆ. ಕಿರಿಯವನು ಹಿರಿಯವನಲ್ಲಿ ಪ್ರವೇಶಿಸಿದರೆ ಅಪಘಾತವೆನಿಸುವುದಿಲ್ಲ. ಆದರೆ ಕಿರಿಯನಲ್ಲಿ ಹಿರಿಯವನು ಅನುಪ್ರವೇಶಿಸಿದರೆ ಅದು ವಿಧಿಲೋಪಕವಾಗುತ್ತದೆ. ನಿಲ್ಲು! ನನ್ನ ವಚನದಂತೆ ಮಾಡು. ನಿನ್ನಿಂದ ಧರ್ಮಲೋಪವೂ ಆಗಲಿಲ್ಲ ಮತ್ತು ನಿನ್ನಿಂದ ನನಗೆ ಯಾವುದೇ ರೀತಿಯ ಅಪಮಾನವೂ ಆಗಲಿಲ್ಲ.”

ಅರ್ಜುನನು ಹೇಳಿದನು:

“ಧರ್ಮವನ್ನು ಕಪಟದಿಂದ ಪಾಲಿಸಬೇಡ ಎನ್ನುವುದನ್ನು ನಿನ್ನಿಂದಲೇ ನಾನು ಕೇಳಿದ್ದೇನೆ. ನಾನು ಸತ್ಯದಿಂದ ವಿಚಲಿತನಾಗುವುದಿಲ್ಲ. ನಾನು ಸತ್ಯದ ಆಯುಧವನ್ನು ಧರಿಸಿದ್ದೇನೆ.” ರಾಜನ ಅನುಜ್ಞೆಯಂತೆ ಅವನಿಗೆ ಬ್ರಹ್ಮಚರ್ಯದ ದೀಕ್ಷೆಯನ್ನು ನೀಡಲಾಯಿತು. ಅವನು ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಲು ಹೊರಟನು.

ಕೌರವರ ಯಶಸ್ಕರ ಮಹಾಬಾಹುವು ಹೊರಡುವಾಗ ವೇದಪಾರಂಗತ, ಮಹಾತ್ಮ ಬ್ರಾಹ್ಮಣರು, ವೇದವೇದಾಂಗ ವಿದ್ವಾಂಸರು, ಆಧ್ಯಾತ್ಮ ಚಿಂತಕರು, ಆಕ್ಷರು, ಭಗದ್ಭಕ್ತರು, ಸೂತರು, ಪೌರಾಣಿಕರು, ಕಥಕರು, ಶ್ರವಣರು, ವನೌಕಸರು, ಮತ್ತು ದಿವ್ಯ ಆಖ್ಯಾನಗಳನ್ನು ಮಧುರವಾಗಿ ಓದಬಲ್ಲ ದ್ವಿಜರು ಮತ್ತು ಇತರರು ಅನುಸರಿಸಿದರು. ಇವರು ಮತ್ತು ಅನೇಕ ಇತರರ ಸಹಾಯದಿಂದ, ಇಂದ್ರನು ಮರುತ್ತರಿಂದ ಸುತ್ತುವರೆಯಲ್ಪಟ್ಟಂತೆ ಸುತ್ತುವರೆಯಲ್ಪಟ್ಟು, ಸುಂದರ ಕಥೆಗಳನ್ನು ಕೇಳುತ್ತಾ ಪ್ರಯಾಣಿಸಿದನು. ಆ ಭರತರ್ಷಭನು ರಮಣೀಯ ಸುಂದರ ವನಗಳನ್ನು, ಸರೋವರಗಳನ್ನು, ನದಿಗಳನ್ನು, ಸಾಗರಗಳನ್ನು, ಪ್ರದೇಶಗಳನ್ನು, ಮತ್ತು ಪುಣ್ಯ ತೀರ್ಥಗಳನ್ನು ನೋಡಿದನು. ಗಂಗಾದ್ವಾರವನ್ನು ಸೇರಿದ ನಂತರ ಪ್ರಭುವು ಅಲ್ಲಿಯೇ ವಾಸಿಸಲು ಪ್ರಾರಂಭಿಸಿದನು.

ಉಲೂಪಿ

ಕೌಂತೇಯನು ಗಂಗಾದ್ವಾರದಲ್ಲಿ ವಾಸಿಸುತ್ತಿರಲು ಬ್ರಾಹ್ಮಣ ವಿಪ್ರರು ಅನೇಕ ಅಗ್ನಿಹೋತ್ರಗಳನ್ನು ನೆರವೇರಿಸಿದರು. ಅವುಗಳನ್ನು ಹೆಚ್ಚಿಸಿ, ಜ್ವಲಿಸಿ, ಆಹುತಿಗಳನ್ನು ಹಾಕುವ, ಎರಡೂ ದಡಗಳಿಂದ ಪುಷ್ಪಗಳನ್ನು ಹಾಕುವ, ಸ್ನಾನಮಾಡಿ ಸತ್ಪಥ ನಿರತ ಆ ಮಹಾತ್ಮರಿಂದ ಗಂಗಾದ್ವಾರವು ಅತೀವ ಶೋಭೆಗೊಂಡಿತ್ತು. ಇವೆಲ್ಲವೂ ಆ ನಿವೇಶ ಸ್ಥಳದಲ್ಲಿ ನಡೆಯುತ್ತಿರಲು ಪಾಂಡುನಂದನ ಕೌಂತೇಯನು ಸ್ನಾನಕ್ಕೆಂದು ಗಂಗೆಯಲ್ಲಿ ಇಳಿದನು. ಅಲ್ಲಿ ಅವನು ಸ್ನಾನಮಾಡಿ, ಪಿತಾಮಹರಿಗೆ ತರ್ಪಣೆಯನ್ನಿತ್ತು ಅಗ್ನಿಕಾರ್ಯವನ್ನು ಮಾಡಲು ನೀರಿನಿಂದ ಮೇಲಕ್ಕೆ ಬರಬೇಕೆನ್ನುವಾಗ ಆ ಮಹಾಬಾಹುವನ್ನು ಮನಸ್ಸಿಗೆ ಬಂದಂತೆ ಹೋಗಬಲ್ಲ ಅಂತರ್ಜಲ ಮಹಾರಾಜನ ಕನ್ಯೆ ಉಲೂಪಿಯು ನೀರಿಗೆ ಸೆಳೆದಳು. ನಾಗ ಕೌರವನ ಪರಮಾರ್ಚಿತ ಭವನದಲ್ಲಿ ಸುಸಮಾಹಿತ ಅಗ್ನಿಯನ್ನು ಪಾಂಡವನು ಕಂಡನು. ಕುಂತೀಪುತ್ರ ಧನಂಜಯನು ಅಲ್ಲಿಯೇ ಅಶಂಕಮಾನನಾಗಿ ಅಗ್ನಿಕಾರ್ಯವನ್ನು ಮಾಡಿ, ಹುತಾಶನನನ್ನು ತೃಪ್ತಿಪಡಿಸಿದನು. ಅಗ್ನಿಕಾರ್ಯವನ್ನು ಪೂರೈಸಿ ಕೌಂತೇಯನು ಮುಗುಳ್ನಗುತ್ತಾ ನಾಗರಾಜಸುತೆಗೆ ಈ ಮಾತುಗಳನ್ನಾಡಿದನು.

“ಭೀರು! ನೀನು ಏಕೆ ಈ ಸಾಹಸವನ್ನು ಮಾಡಿದೆ? ಈ ಸುಂದರ ದೇಶವು ಯಾವುದು? ನೀನು ಯಾರು? ಯಾರ ಮಗಳು?”

Image result for ulupiಉಲೂಪಿಯು ಹೇಳಿದಳು:

“ಐರಾವತ ಕುಲದಲ್ಲಿ ಹುಟ್ಟಿದ ಕೌರವ್ಯ ಎಂಬ ಹೆಸರಿನ ಪನ್ನಗನಿದ್ದಾನೆ. ಪಾರ್ಥ! ಪನ್ನಗಿಯಾದ ನಾನು ಅವನ ಮಗಳು. ಹೆಸರು ಉಲೂಪಿ. ನೀನು ಸ್ನಾನಕ್ಕೆಂದು ನದಿಯಲ್ಲಿ ಇಳಿಯುವುದನ್ನು ನೋಡಿದೆ. ನಿನ್ನನ್ನು ನೋಡಿದೊಡನೆಯೇ ನಾನು ಕಾಮ ಮೂರ್ಛಿತಳಾದೆ. ನಿನ್ನ ಕಾರಣದಿಂದ ಅನಂಗಮಥಿತಳಾದ ನನ್ನನ್ನು ಸಂತೋಷಗೊಳಿಸು. ರಹಸ್ಯವಾಗಿ ನಿನ್ನನ್ನಿತ್ತು ಅನನ್ಯಳಾದ ನನ್ನನ್ನು ಪ್ರೀತಿಸು.”

ಅರ್ಜುನನು ಹೇಳಿದನು:

“ಭದ್ರೇ! ಧರ್ಮರಾಜನು ನನಗೆ ಹನ್ನೆರಡು ವರ್ಷಗಳ ಬ್ರಹ್ಮಚರ್ಯವನ್ನು ಅದೇಶಿಸಿದ್ದಾನೆ. ನಾನು ನನ್ನ ವಶದಲ್ಲಿಲ್ಲ. ಆದರೂ ನಾನು ನಿನ್ನನ್ನು ಪ್ರೀತಿಸಲು ಬಯಸುತ್ತೇನೆ. ಇದಕ್ಕೆ ಮೊದಲು ನಾನು ಎಂದೂ ಯಾವ ಕಾರಣಕ್ಕೂ ಅನೃತವನ್ನು ಹೇಳಿದವನಲ್ಲ. ಹೇಗೆ ನಾನು ನನ್ನನ್ನು ಸುಳ್ಳನ್ನಾಗಿಸದೇ, ಧರ್ಮವನ್ನು ಬಿಡದೇ ನಿನ್ನನ್ನು ಪ್ರೀತಿಸಲಿ?”

ಉಲೂಪಿಯು ಹೇಳಿದಳು:

“ಪಾಂಡವ! ನೀನು ಮೇದಿನಿಯಲ್ಲಿ ಅಲೆಯುತ್ತಿರುವೆ ಮತ್ತು ನಿನ್ನ ಹಿರಿಯನು ನಿನಗೆ ಬ್ರಹ್ಮಚರ್ಯದ ಆದೇಶವನ್ನಿತ್ತಿದ್ದಾನೆ ಎನ್ನುವುದನ್ನು ನಾನು ತಿಳಿದಿದ್ದೇನೆ. ದ್ರುಪದನ ಮಗಳೊಡನೆ ಇರುವಾಗ ನಿಮ್ಮಲ್ಲಿ ಬೇರೆ ಯಾರಾದರೂ ಅಲ್ಲಿಗೆ ತಿಳಿಯದೇ ಹೋದರೆ ಅವನು ಹನ್ನೆರಡು ವರ್ಷಗಳ ಪರ್ಯಂತ ಬ್ರಹ್ಮಚಾರಿಯಾಗಿ ವನದಲ್ಲಿ ತಿರುಗಾಡಬೇಕು ಎಂಬ ಒಪ್ಪಂದವನ್ನು ಮಾಡಿಕೊಂಡಿರುವಿರಿ. ಆದರೆ ಅನ್ಯೋನ್ಯರ ಈ ವನವಾಸವು ದ್ರೌಪದಿಗೆ ಮಾತ್ರ ಸಂಬಂಧಿಸಿದ್ದುದು. ಅವಳ ಕುರಿತಾಗಿ ಮಾತ್ರ ಇದು ಧರ್ಮದ ವಿಷಯವಾಗುತ್ತದೆ. ನನ್ನ ವಿಷಯದಲ್ಲಿ ಅದು ಅಧರ್ಮವಾಗುವುದಿಲ್ಲ. ಆರ್ತರ ಪರಿತ್ರಾಣವು ನಿನ್ನ ಕರ್ತವ್ಯ. ನನ್ನ ಪರಿತ್ರಾಣದಿಂದ ನಿನ್ನ ಧರ್ಮವು ಲೋಪವಾಗುವುದಿಲ್ಲ. ಒಂದುವೇಳೆ ಅದರಿಂದ ಸೂಕ್ಷ್ಮ ಪ್ರಮಾಣದಲ್ಲಿ ಧರ್ಮದ ಅತಿಕ್ರಮವಾದರೂ ನನಗೆ ಪ್ರಾಣ ನೀಡುವುದೂ ಕೂಡ ನಿನ್ನ ಧರ್ಮವೇ. ನಿನ್ನನ್ನು ಪ್ರೀತಿಸುವ ನನ್ನನ್ನು ಪ್ರೀತಿಸು. ಅದೇ ಸಾತ್ವಿಕರ ಮತ. ನೀನು ಇದನ್ನು ಮಾಡದಿದ್ದರೆ ನನ್ನ ಸಾವು ನಿಶ್ಚಯ. ಪ್ರಾಣದಾನವನ್ನಿತ್ತು ಅನುತ್ತಮ ಧರ್ಮವನ್ನು ಪರಿಪಾಲಿಸು. ಇಂದು ನಾನು ನಿನ್ನ ಶರಣು ಬಂದಿದ್ದೇನೆ. ನೀನು ನಿತ್ಯವೂ ದೀನರನ್ನು ಅನಾಥರನ್ನು ಪರಿರಕ್ಷಿಸಿದ್ದೀ. ದುಃಖದಿಂದ ರೋದಿಸುತ್ತಾ ನಿನ್ನ ಶರಣು ಬಂದಿದ್ದೇನೆ. ನಿನ್ನ ಮೇಲಿನ ಪ್ರೇಮದಿಂದ ನಾನು ಶರಣು ಬಂದಿದ್ದೇನೆ. ಆದುದರಿಂದ ನನಗೆ ಪ್ರಿಯವಾದುದನ್ನು ಮಾಡು. ಆತ್ಮಪ್ರದಾನದ ಮೂಲಕ ನೀನು ನನ್ನ ಕಾಮವನ್ನು ಪೂರೈಸಬೇಕು.”

ಪನ್ನಗೇಶ್ವರ ಕನ್ಯೆಯು ಹೀಗೆ ಹೇಳಲು ಕೌಂತೇಯನು ಧರ್ಮವನ್ನೇ ತನ್ನ ಗುರಿಯನಾಗಿಟ್ಟುಕೊಂಡು ಅವಳು ಕೇಳಿದಂತೆಯೇ ಎಲ್ಲವನ್ನೂ ಮಾಡಿದನು. ಆ ಪ್ರತಾಪವಂತನು ಅವಳೊಡನೆ ನಾಗಭವನದಲ್ಲಿ ರಾತ್ರಿಯನ್ನು ಕಳೆದು ಸೂರ್ಯೋದಯವಾಗುತ್ತಿದ್ದಂತೆ ಕೌರವ್ಯನ ನಿವೇಶನದಿಂದ ಮೇಲೆದ್ದನು.

ವಜ್ರಧರಾತ್ಮಜನು ಅವೆಲ್ಲವನ್ನೂ ಬ್ರಾಹ್ಮಣರಿಗೆ ವರದಿಮಾಡಿ, ಹಿಮವತ್ಪರ್ವತದ ಪಕ್ಕದಿಂದ ನಡೆದರು. ಕೌಂತೇಯನು ಅಗಸ್ತ್ಯವಟ, ವಸಿಷ್ಠ ಪರ್ವತ ಮತ್ತು ಭೃಗುತುಂಗಗಳಿಗೆ ಹೋಗಿ ಅಲ್ಲಿ ತನ್ನನ್ನು ಪರಿಶುದ್ಧಿಮಾಡಿಕೊಂಡನು. ಕುರುಸತ್ತಮನು ತೀರ್ಥಸ್ಥಳಗಳಲ್ಲಿ ದ್ವಿಜರಿಗೆ ಸಹಸ್ರಾರು ಗೋವು-ನಿವೇಶನಗಳನ್ನು ದಾನವಿತ್ತನು. ಪುರುಷಸತ್ತಮನು ಹಿರಣ್ಯಬಿಂದು ತೀರ್ಥದಲ್ಲಿ ಸ್ನಾನಮಾಡಿ ಪರ್ವತಶ್ರೇಷ್ಠನನ್ನು ಮತ್ತು ಪುಣ್ಯ ಪ್ರದೇಶಗಳನ್ನು ನೋಡಿದನು. ಪೂರ್ವದಿಶೆಯಲ್ಲಿ ಹೋಗಲಿಚ್ಛಿಸಿದ ಆ ಭರತರ್ಷಭ ನರಶ್ರೇಷ್ಠನು ಬ್ರಾಹ್ಮಣರೊಡನೆ ಅಲ್ಲಿಂದ ಕೆಳಗಿಳಿದನು. ಒಂದೊಂದಾಗಿ ಆ ಕುರುಸತ್ತಮನು ರಮ್ಯ ನೈಮಿಷಾರಣ್ಯದ ಬಳಿಯಲ್ಲಿದ್ದ ನದಿ ಉತ್ಪಲಿನೀ, ನಂದಾ, ಅಪರನಂದಾ, ಯಶಸ್ವಿನೀ ಕೌಶಿಕೀ, ಮಹಾನದೀ, ಗಯಾ ಮತ್ತು ಗಂಗಾ ಮೊದಲಾದ ತೀರ್ಥಗಳನ್ನು ಕಂಡನು. ಈ ರೀತಿ ಸರ್ವ ತೀರ್ಥಗಳನ್ನು ಮತ್ತು ಆಶ್ರಮಗಳನ್ನು ನೋಡಿ, ಬ್ರಾಹ್ಮಣರಿಗೆ ಸಂಪತ್ತುಗಳನ್ನಿತ್ತು ತನ್ನನ್ನು ಪಾವನಗೊಳಿಸಿದನು. ಅಂಗ, ವಂಗ, ಕಳಿಂಗಗಳಲ್ಲಿ ಯಾವ ಯಾವ ಪುಣ್ಯ ತೀರ್ಥಸ್ಥಳಗಳಿವೆಯೂ ಅವೆಲ್ಲವುಗಳಿಗೂ ಹೋದನು. ಅವುಗಳನ್ನು ನೋಡಿ ಅಲ್ಲಿ ವಿಧಿವತ್ತಾಗಿ ಧನವನ್ನೂ ದಾನ ಮಾಡಿದನು. ಕಲಿಂಗರಾಷ್ಟ್ರ ದ್ವಾರದಲ್ಲಿ ಪಾಂಡವನನ್ನು ಅನುಸರಿಸಿ ಬಂದಿದ್ದ ಬ್ರಾಹ್ಮಣರು ಕೌಂತೇಯನ ಅನುಜ್ಞೆಯಂತೆ ಹಿಂದಿರುಗಿದರು. ಶೂರ ಕುಂತೀಪುತ್ರ ಧನಂಜಯನು ಅವರ ಅನುಜ್ಞೆಯನ್ನು ಪಡೆದು ಕೆಲವೇ ಸಹಾಯಕರೊಂದಿಗೆ ಸಾಗರದವರೆಗೂ ಪ್ರಯಾಣಿಸಿದನು. ಕಲಿಂಗವನ್ನೂ ಅಲ್ಲಿಯ ಧರ್ಮ, ರಮಣೀಯ, ಪ್ರೇಕ್ಷಣೀಯ ದೇಶ ಪ್ರದೇಶಗಳನ್ನೂ ದಾಟಿ ಪ್ರಭುವು ತಾಪಸರಿಂದ ಉಪಶೋಭಿತ ಮಹೇಂದ್ರಪರ್ವತವನ್ನು ನೋಡಿ, ನಿಧಾನವಾಗಿ ಸಮುದ್ರತೀರದಲ್ಲಿದ್ದ ಮಣಲೂರಿಗೆ ಬಂದನು.

ಚಿತ್ರಾಂಗದಾ

ಅಲ್ಲಿ ಸರ್ವ ಪುಣ್ಯ ತೀರ್ಥಕ್ಷೇತ್ರಗಳಿಗೂ ಭೇಟಿನೀಡಿ ಆ ಮಹಾಬಾಹುವು ಮಣಲೂರೇಶ್ವರ ಧರ್ಮಜ್ಞ ಮಹೀಪತಿ ಚಿತ್ರವಾಹನನಲ್ಲಿಗೆ ಹೋದನು. ಆ ಪುರದಲ್ಲಿ ವಿಹರಿಸುತ್ತಿದ್ದ ಅವನ ಮಗಳು ಚಾರುದರ್ಶನೆ ಚಿತ್ರಾಂಗದ ಎನ್ನುವ ಹೆಸರುಳ್ಳವಳನ್ನು ಕಂಡನು. ಅ ವರಾರೋಹೆ ಚೈತ್ರವಾಹಿನಿಯನ್ನು ನೋಡಿದ ಕೂಡಲೇ ಅವನು ಕಾಮಮೋಹಿತನಾದನು ಮತ್ತು ರಾಜನಲ್ಲಿಗೆ ಹೋಗಿ ತನ್ನ ಉದ್ದೇಶವನ್ನು ತಿಳಿಸಿದನು. ಆಗ ರಾಜನು ಅವನಿಗೆ ಈ ಸಾಂತ್ವಪೂರ್ವಕ ಮಾತುಗಳನ್ನಾಡಿದನು:

“ಈ ಕುಲದಲ್ಲಿ ಪ್ರಭಂಕರ ಎಂಬ ಹೆಸರಿನ ರಾಜನಿದ್ದನು. ಅಪುತ್ರನಾದ ಅವನು ಸಂತಾನಕ್ಕಾಗಿ ಉತ್ತಮ ತಪವನ್ನಾಚರಿಸಿದನು. ಅವನ ಉಗ್ರ ತಪಸ್ಸಿನಿಂದ ಮತ್ತು ಪ್ರಣಿಪಾತದಿಂದ ಶಂಕರ ಈಶ್ವರ ಮಹಾದೇವ ಉಮಾಪತಿಯು ಸಂತುಷ್ಟನಾದನು. ಭಗವಾನನು ಅವನಿಗೆ ಕುಲದ ಒಂದೊಂದು ಪೀಳಿಗೆಯಲ್ಲಿ ಒಂದೊಂದೇ ಸಂತಾನವಾಗುತ್ತದೆ ಎಂದು ವರವನ್ನಿತ್ತನು. ಅಂದಿನಿಂದ ಈ ಕುಲದಲ್ಲಿ ಒಂದೇ ಸಂತಾನವು ಆಗುತ್ತಾ ಬಂದಿದೆ. ನನ್ನ ಪೂರ್ವಜರೆಲ್ಲರಿಗೂ ಪುತ್ರರು ಹುಟ್ಟಿದ್ದರು. ಆದರೆ ನನ್ನ ಕುಲದಲ್ಲಿ ಕನ್ಯೆಯು ಹುಟ್ಟಿದ್ದಾಳೆ. ಅವಳೇ ಈ ಕುಲವನ್ನು ಮುಂದುವರೆಸಿಕೊಂಡು ಹೋಗುತ್ತಾಳೆ ಎನ್ನುವುದರಲ್ಲಿ ಸಂಶಯವಿಲ್ಲ. ಅವಳು ನನ್ನ ಪುತ್ರನೆಂದೇ ಭಾವಿಸುತ್ತಿದ್ದೇನೆ. ವಿಧಿವತ್ತಾಗಿ ಅವಳು ಪುತ್ರಿಕೆಯಂತಿದ್ದಾಳೆ. ನಿನ್ನಿಂದ ಅವಳಲ್ಲಿ ಹುಟ್ಟುವವನು ಈ ಕುಲದ ವಾರಸನಾಗಲಿ. ಇದು ನನ್ನ ಶುಲ್ಕ. ಇದಕ್ಕೆ ಒಪ್ಪಿಗೆಯಿದ್ದರೆ ಅವಳನ್ನು ಸ್ವೀಕರಿಸು.”

ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿ ಅವನು ಆ ಕನ್ಯೆಯನ್ನು ಸ್ವೀಕರಿಸಿದನು. ಕೌಂತೇಯನು ಆ ನಗರದಲ್ಲಿ ಮೂರು ವರ್ಷಗಳ ಪರ್ಯಂತ ವಾಸಿಸಿದನು.

ಅಪ್ಸರೆಯರ ಶಾಪ ವಿಮೋಚನೆ

ನಂತರ ಭರತರ್ಷಭನು ದಕ್ಷಿಣದಲ್ಲಿ ಸುಪುಣ್ಯ ತಪಸ್ವಿಗಳಿಂದ ಕೂಡಿದ ಸಮುದ್ರ ತೀರ್ಥಗಳಿಗೆ ಹೋದನು. ಅಲ್ಲಿಯ ತಪಸ್ವಿಗಳು ಐದು ತೀರ್ಥಗಳನ್ನು - ಹಿಂದೆ ತಪಸ್ವಿಗಳು ಅವುಗಳನ್ನು ಪೂಜಿಸುತ್ತಿದ್ದರೂ - ತೊರೆದಿದ್ದರು. ಅವುಗಳು ಅಗಸ್ತ್ಯ ತೀರ್ಥ, ಸೌಭದ್ರ, ಸುಪಾವನ ಪೌಲೋಮ, ಅಶ್ವಮೇಧ ಫಲವನ್ನು ನೀಡುವ ಪ್ರಸನ್ನ ಕಾರಂಧಮ, ಮತ್ತು ಮಹಾ ಪಾಪ ಪ್ರಮಶನ ಭರದ್ವಾಜ ತೀರ್ಥ. ತಪಸ್ವಿಗಳಿಂದ ತೊರೆಯಲ್ಪಟ್ಟು ನಿರ್ಜನವಾಗಿದ್ದ ಆ ತೀರ್ಥಗಳನ್ನು ನೋಡಿದ ಕುರುನಂದನ ಪಾಂಡವನು ಅಂಜಲೀ ಬದ್ಧನಾಗಿ ಅವರಲ್ಲಿ ಪ್ರಶ್ನಿಸಿದನು:

“ಬ್ರಹ್ಮವಾದಿಗಳು ಈ ತೀರ್ಥಗಳನ್ನು ಏಕೆ ವರ್ಜಿಸಿದ್ದಾರೆ?”

ಅದಕ್ಕೆ ತಾಪಸಿಗಳು ಹೇಳಿದರು:

“ಅಲ್ಲಿ ಐದು ಮೊಸಳೆಗಳು ವಾಸಿಸುತ್ತಿವೆ ಮತ್ತು ಅವು ತಪೋಧನರನ್ನು ಹಿಡಿಯುತ್ತವೆ. ಕುರುನಂದನ! ಆದುದರಿಂದ ಈ ತೀರ್ಥಗಳು ವರ್ಜಿತವಾಗಿವೆ.”

ಅವರಿಂದ ಇದನ್ನು ಕೇಳಿದ ಮಹಾಬಾಹು ಪುರುಷೋತ್ತಮನು ತಪೋಧನರು ತಡೆದರೂ ಆ ತೀರ್ಥಗಳನ್ನು ನೋಡಲು ಹೋದನು.

ಆ ಶೂರ ಪರಂತಪನು ಮಹರ್ಷಿ ಸುಭದ್ರನ ತೀರ್ಥಕ್ಕೆ ಬಂದು ಸ್ನಾನಕ್ಕೆಂದು ಅತಿವೇಗದಲ್ಲಿ ಅದರಲ್ಲಿ ಧುಮುಕಿದನು. ತಕ್ಷಣವೇ ನೀರಿನಲ್ಲಿ ವಾಸಿಸುತ್ತಿದ್ದ ಮಹಾ ಮೊಸಳೆಯೊಂದು ಕುಂತೀಪುತ್ರ ಧನಂಜಯನನ್ನು ಹಿಡಿದು ನೀರಿಗೆ ಎಳೆಯಿತು. ಬಲಿಗಳಲ್ಲಿಯೇ ಶ್ರೇಷ್ಠ ಮಹಾಬಾಹು ಕೌಂತೇಯನು ತನ್ನ ಬಲದಿಂದ ಭುಸುಗುಟ್ಟುತ್ತಿದ್ದ ಆ ಜಲಚರವನ್ನು ಹಿಡಿದು, ಮೆಟ್ಟಿ ನೀರಿನ ಮೇಲೆ ಬಂದನು. ಯಶಸ್ವಿ ಅರ್ಜುನನು ಎಳೆದು ಮೇಲೆ ತಂದಕೂಡಲೇ ಅದು ಸರ್ವಾಭರಣ ಭೂಷಿತ ಕಲ್ಯಾಣಿ, ಶ್ರೀಯಂತೆ ದೀಪ್ಯಮಾನ ದಿವ್ಯರೂಪಿ ಮನೋರಮೆ ನಾರಿಯ ರೂಪವನ್ನು ತಾಳಿತು. ಈ ಮಹಾ ಅದ್ಭುತವನ್ನು ನೋಡಿದ ಕುಂತೀಪುತ್ರ ಧನಂಜಯನು ಪರಮಪ್ರೀತನಾಗಿ ಆ ಸ್ತ್ರೀಗೆ ಹೇಳಿದನು:

“ಕಲ್ಯಾಣಿ! ನೀನು ಯಾರು? ಮತ್ತು ಹೇಗೆ ಮೊಸಳೆಯಾದೆ? ನೀನು ಯಾವ ಪುರಾತನ ಕಾರಣಕ್ಕಾಗಿ ಈ ಮಹಾ ಪಾಪವನ್ನು ಮಾಡುತ್ತಿರುವೆ?”

ನಾರಿಯು ಹೇಳಿದಳು:

“ಮಹಾಬಾಹು! ನಾನು ದೇವಾರಣ್ಯವಿಚಾರಿಣಿ ಅಪ್ಸರೆ. ನಿತ್ಯವೂ ಮಹಾಬಲ ಧನಪತಿಯ ಇಷ್ಟದವಳಾದ ನನ್ನ ಹೆಸರು ವರ್ಗಾ. ನನ್ನ ಅನ್ಯ ನಾಲ್ಕು ಸಖಿಯರಿದ್ದರು. ಎಲ್ಲರೂ ಕಾಮಗಾಮಿಗಳು ಮತ್ತು ಸುಂದರಿಯರು. ನಾವೆಲ್ಲ ಒಮ್ಮೆ ಲೋಕಪಾಲಕನ ನಿವೇಶನಕ್ಕೆ ಹೋಗಿದ್ದೆವು. ದಾರಿಯಲ್ಲಿ ನಾವೆಲ್ಲರೂ ಏಕಾಂತದಲ್ಲಿ ಒಬ್ಬನೇ ಅಭ್ಯಾಸಮಾಡುತ್ತಿದ್ದ ಸಂಶಿತವ್ರತ, ರೂಪವಂತ ಬ್ರಾಹ್ಮಣನನ್ನು ನೋಡಿದೆವು. ಅವನ ತಪಸ್ಸಿನಿಂದ ಆ ಪ್ರದೇಶವು ತೇಜಸ್ಸಿನಿಂದ ಆವೃತವಾಗಿತ್ತು. ಆದಿತ್ಯನಂತೆ ಅವನು ಇಡೀ ಪ್ರದೇಶವನ್ನು ಬೆಳಗುತ್ತಿದ್ದನು. ಅವನ ಉಗ್ರ ತಪಸ್ಸಿನ ಪ್ರಭಾವ ಮತ್ತು ಅದ್ಭುತವನ್ನು ನೋಡಿ ನಾವು ಅವನ ತಪಸ್ಸಿನಲ್ಲಿ ವಿಘ್ನವನ್ನುಂಟುಮಾಡಲು ಆ ಪ್ರದೇಶಕ್ಕೆ ಬಂದಿಳಿದೆವು. ನಾನು, ಸೌರಭೇಯೀ, ಸಮೀಚೀ, ಬುದ್ಬುದಾ, ಲತಾ ಎಲ್ಲರೂ ಒಟ್ಟಿಗೇ ಆ ವಿಪ್ರನಲ್ಲಿಗೆ ಹೋದೆವು. ನಾವು ಹಾಡಿದೆವು, ನಕ್ಕೆವು ಮತ್ತು ಆ ದ್ವಿಜನನ್ನು ಪ್ರಚೋದಿಸಿದೆವು. ಆದರೆ ಅವನು ನಮಗೆ ಯಾವುದೇ ರೀತಿಯ ಗಮನವನ್ನೂ ಕೊಡಲಿಲ್ಲ. ತಪಸ್ಸಿನಲ್ಲಿ ನಿರತನಾಗಿದ್ದ ಆ ನಿರ್ಮಲನು ಅಲುಗಾಡಲೂ ಇಲ್ಲ. ಆದರೆ ಕುಪಿತನಾದ ಅವನು ನಮಗೆ ಶಾಪವನ್ನಿತ್ತನು:

’ನೀವೆಲ್ಲರೂ ನೂರು ವರ್ಷಗಳು ಮೊಸಳೆಗಳಾಗಿ ಜಲದಲ್ಲಿ ವಾಸಿಸುತ್ತೀರಿ!’

ವ್ಯಥಿತರಾದ ನಾವೆಲ್ಲರೂ ಆ ತಪೋಧನ, ಅಚ್ಯುತ ವಿಪ್ರನ ಶರಣು ಹೋದೆವು:

’ನಮ್ಮ ರೂಪ, ಯೌವನ, ಮತ್ತು ಕಂದರ್ಪನಿಂದ ದರ್ಪಿತರಾದ ನಾವು ಈ ಅಯುಕ್ತ ಕಾರ್ಯವನ್ನೆಸಗಿದ್ದೇವೆ. ದ್ವಿಜ! ನಮ್ಮನ್ನು ಕ್ಷಮಿಸಬೇಕು. ನಮ್ಮ ಸಾವಿನ ಕಾಲಬಂದಿದೆಯೆಂದೇ ನಾವು ಸಂಶಿತಾತ್ಮ ನಿನ್ನನ್ನು ಪ್ರಲೋಭಿಸಿಸಲು ಬಂದಿರುವಂತಿದೆ. ಆದರೆ ಧರ್ಮಚಿಂತಕರು ಸ್ತ್ರೀಯರನ್ನು ಕೊಲ್ಲಬಾರದೆಂದು ಹೇಳುತ್ತಾರೆ. ಆದುದರಿಂದ ಧರ್ಮಜ್ಞನಾದ ನೀನು ಧರ್ಮಪ್ರಕಾರವಾಗಿ ನಮ್ಮನ್ನು ಹಿಂಸಿಸಬಾರದು. ಸರ್ವಭೂತಗಳ ಮಿತ್ರ ಧರ್ಮಜ್ಞನೇ ಬ್ರಾಹ್ಮಣನೆಂದು ಹೇಳುತ್ತಾರೆ. ಮನೀಷಿಗಳ ಈ ಕಲ್ಯಾಣಕರ ಮಾತನ್ನು ಸತ್ಯವನ್ನಾಗಿಸು. ಶಿಷ್ಟರು ಶರಣುಬಂದ ಪ್ರಪನ್ನರನ್ನು ಪಾಲಿಸುತ್ತಾರೆ. ನಾವು ನಿನ್ನ ಶರಣು ಬಂದ ಪ್ರಪನ್ನರು. ನೀನು ನಮ್ಮನ್ನು ಕ್ಷಮಿಸಬೇಕು.’

ಈ ಮಾತುಗಳನ್ನು ಕೇಳಿದ ರವಿಸೋಮಸಮಪ್ರಭ ಶುಭಕರ್ಮಿ ಧರ್ಮಾತ್ಮ ಬ್ರಾಹ್ಮಣನು ಪ್ರಸನ್ನನಾಗಿ ಹೇಳಿದನು:

’ನೂರು, ಸಾವಿರ, ಎನ್ನುವ ಶಬ್ಧಗಳು ಯಾವಾಗಲೂ ಅಕ್ಷಯವಾಚಕಗಳು. ಆದರೆ ನನ್ನ ಶತ ಪರಿಮಾಣವು ಅಕ್ಷಯವಾಚಕವಲ್ಲ. ಯಾವಾಗ ನೀವು ಮೊಸಳೆಗಳಾಗಿ ಪುರುಷರನ್ನು ನೀರಿಗೆ ಎಳೆಯುತ್ತೀರೋ ಆಗ ಪುರುಷಸತ್ತಮನೋರ್ವನು ನಿಮ್ಮನ್ನು ಜಲದಿಂದ ಮೇಲಕ್ಕೆ ಎಳೆದಾಗ ನೀವೆಲ್ಲರೂ ಅದೇ ಸ್ಥಳದಲ್ಲಿ ಪುನಃ ಸ್ವರೂಪವನ್ನು ಹೊಂದುತ್ತೀರಿ. ಈ ಹಿಂದೆ ನಾನು ಎಂದೂ ಹಾಸ್ಯಕ್ಕಾಗಿಯೂ ಸುಳ್ಳನ್ನು ಹೇಳಿಲ್ಲ. ಇಂದಿನಿಂದ ಈ ಎಲ್ಲ ತೀರ್ಥಗಳೂ ನಾರೀ ತೀರ್ಥಗಳೆಂಬ ಹೆಸರಿನಿಂದ ಖ್ಯಾತಿ ಹೊಂದುತ್ತವೆ. ಅವುಗಳು ಮನೀಷಿಗಳಿಗೆ ಪುಣ್ಯ ಮತ್ತು ಪಾವನಗಳೆನಿಸುತ್ತವೆ.’

ನಂತರ ನಾವು ಆ ವಿಪ್ರನ ಪ್ರದಕ್ಷಿಣೆ ಮಾಡಿ, ಅಭಿವಂದಿಸಿ ಅವನಿಂದ ಬೀಳ್ಕೊಂಡು, ದುಃಖಿತರಾಗಿ ನಮ್ಮ ಸ್ವದ್ರೂಪವನ್ನು ಪುನಃ ನೀಡುವ ಆ ನರನು ಯಾರು? ಅವನ ಹೆಸರೇನು? ಅವನು ಯಾವಾಗ ಬರುತ್ತಾನೆ? ಎಂದು ಚಿಂತಿಸಿದೆವು. ನಾವು ಹೀಗೆ ಚಿಂತಿಸುತ್ತಿರುವಾಗ ತಕ್ಷಣವೇ ಮಹಾಭಾಗ ದೇವರ್ಷಿ ನಾರದನನ್ನು ಕಂಡೆವು. ಆ ದೇವರ್ಷಿ ಅಮಿತದ್ಯುತಿಯನ್ನು ಕಂಡು ನಾವೆಲ್ಲರೂ ಹೃಷ್ಟರಾಗಿ ಅವನನ್ನು ಅಭಿನಂದಿಸಿ ವ್ಯಥಿತ ಮುಖಿಗಳಾಗಿ ನಿಂತೆವು. ಅವನು ನಮ್ಮ ದುಃಖದ ಮೂಲವನ್ನು ಕೇಳಿದನು ಮತ್ತು ನಾವು ಅವನಿಗೆ ಎಲ್ಲವನ್ನೂ ಹೇಳಿದೆವು. ಅದನ್ನು ಕೇಳಿದ ಅವನು ನಮಗೆ ಈ ಮಾತುಗಳನ್ನು ಹೇಳಿದನು:

’ದಕ್ಷಿಣ ಸಾಗರ ತಟದಲ್ಲಿ ಐದು ತೀರ್ಥಗಳಿವೆ. ತಡಮಾಡದೇ ಆ ಪುಣ್ಯ ರಮಣೀಯ ಸ್ಥಳಕ್ಕೆ ಹೋಗಿರಿ. ಅಲ್ಲಿಗೆ ಪುರುಷವ್ಯಾಘ್ರ ಪಾಂಡವ ಧನಂಜಯನು ಬರುತ್ತಾನೆ ಮತ್ತು ಆ ಶುದ್ಧಾತ್ಮನು ನಿಸ್ಸಂಶಯವಾಗಿಯೂ ನಿಮ್ಮನ್ನು ನಿಮ್ಮ ಕಷ್ಟದಿಂದ ಬಿಡುಗಡೆ ಮಾಡುತ್ತಾನೆ.’

ಅವನ ಮಾತುಗಳನ್ನು ಕೇಳಿ ನಾವೆಲ್ಲರೂ ಇಲ್ಲಿಗೆ ಬಂದೆವು. ನಿನ್ನಿಂದ ನಾನು ಬಿಡುಗಡೆಹೊಂದಿದೆ ಎನ್ನುವುದು ಸತ್ಯ. ಆದರೆ ನನ್ನ ಅನ್ಯ ಸಖಿಯರು ಇನ್ನೂ ಜಲದಲ್ಲಿ ಇದ್ದಾರೆ. ವೀರ! ಈ ಎಲ್ಲರನ್ನೂ ಬಿಡುಗಡೆಗೊಳಿಸುವ ಶುಭ ಕರ್ಮವನ್ನು ಮಾಡು!”

ನಂತರ ವೀರ್ಯವಾನ್ ಪಾಂಡವಶ್ರೇಷ್ಠನು ಆಪತ್ತಿನಲ್ಲಿದ್ದ ಆ ಎಲ್ಲ ದೀನಾತ್ಮರನ್ನೂ ಬಿಡುಗಡೆಗೊಳಿಸಿದನು. ಅಪ್ಸರೆಯರು ನೀರಿನಿಂದ ಮೇಲೆದ್ದು ತಮ್ಮ ರೂಪವನ್ನು ಪಡೆದರು ಮತ್ತು ಹಿಂದಿನಂತೆಯೇ ಕಾಣತೊಡಗಿದರು. ಆ ತೀರ್ಥಗಳನ್ನು ಶುದ್ಧಗೊಳಿಸಿ ಅನುಜ್ಞೆಯನ್ನು ಪಡೆದು ಪ್ರಭುವು ಚಿತ್ರಾಂಗದೆಯನ್ನು ನೋಡಲು ಮಣಲೂರಪುರಕ್ಕೆ ಪುನಃ ಹೋದನು. ಅವಳಲ್ಲಿ ರಾಜ ಬಭ್ರುವಾಹನನು ಪುತ್ರನಾಗಿ ಜನಿಸಿದ್ದನು. ಅವನನ್ನು ನೋಡಿ ಪಾಂಡವನು ಗೋಕರ್ಣಕ್ಕೆ ಹೋದನು. ನಂತರ ಆ ಅಮಿತ ವಿಕ್ರಮನು ಪಶ್ಚಿಮದಿಕ್ಕಿನಲ್ಲಿದ್ದ ಎಲ್ಲ ಪುಣ್ಯ ತೀರ್ಥ ಪ್ರದೇಶಗಳಿಗೆ ಭೇಟಿಯಿತ್ತನು. ಪಶ್ಚಿಮ ಸಮುದ್ರದಲ್ಲಿ ಯಾವ್ಯಾವ ತೀರ್ಥ ಸ್ಥಾನಗಳಿವೆಯೋ ಅವೆಲ್ಲವಕ್ಕೂ ಹೋಗಿ ಅವನು ಪ್ರಭಾಸಕ್ಕೆ ಬಂದನು.

ಕೃಷ್ಣಾರ್ಜುನರ ಪುನರ್ಮಿಲನ

ಮಧುಸೂದನನು ಅಪರಾಜಿತ ಬೀಭತ್ಸುವು ತೀರ್ಥಯಾತ್ರೆ ಮಾಡುತ್ತಾ ಪ್ರಭಾಸದೇಶವನ್ನು ತಲುಪಿದ್ದಾನೆ ಎನ್ನುವುದನ್ನು ಕೇಳಿದನು. ಕೌಂತೇಯನಿಗೆ ತಿಳಿಯದಂತೆಯೇ ಮಾಧವನು ಅಲ್ಲಿಗೆ ಹೋದನು ಮತ್ತು ಪುನಃ ಪ್ರಭಾಸದಲ್ಲಿ ಕೃಷ್ಣ ಪಾಂಡವರ ಅನ್ಯೋನ್ಯ ದರ್ಶನವಾಯಿತು. ಅವರು ಅನ್ಯೋನ್ಯರನ್ನು ಆಲಂಗಿಸಿದರು ಮತ್ತು ಕುಶಲವನ್ನು ವಿಚಾರಿಸಿದರು. ನರನಾರಾಯಣ ಋಷಿಗಳಾಗಿದ್ದ ಆ ಪ್ರಿಯ ಸಖರು ವನದಲ್ಲಿ ಕುಳಿತುಕೊಂಡರು. ನಂತರ ವಾಸುದೇವನು ಅರ್ಜುನನ ಕುರಿತು ಕೇಳಿದನು:

“ಪಾಂಡವ! ನೀನು ಯಾವ ಕಾರಣಕ್ಕಾಗಿ ತೀರ್ಥಯಾತ್ರೆ ಮಾಡುತ್ತಿದ್ದೀಯೆ?”

ಆಗ ಅರ್ಜುನನು ನಡೆದುದೆಲ್ಲವನ್ನೂ ಯಥಾವತ್ತಾಗಿ ಹೇಳಿದನು. ಅದನ್ನು ಕೇಳಿ ಪ್ರಭು ವಾರ್ಷ್ಣೇಯನು ಅದು ಸರಿಯೆಂದು ಹೇಳಿದನು. ಪ್ರಭಾಸದಲ್ಲಿ ಕೃಷ್ಣ ಪಾಂಡವರು ಮನಬಂದಂತೆ ವಿಹರಿಸಿದರು. ಅವರು ಉಳಿಯಲು ರೈವತ ಪರ್ವತಕ್ಕೆ ಹೋದರು. ಕೃಷ್ಣನ ವಚನದಂತೆ ಮೊದಲೇ ಆ ಪರ್ವತವನ್ನು ಜನರು ಸಮಲಂಕರಿಸಿ ಭೋಜನವನ್ನು ಏರ್ಪಡಿಸಿದ್ದರು. ಪಾಂಡವನು ಅವೆಲ್ಲವನ್ನೂ ಸ್ವೀಕರಿಸಿ ಆನಂದಿಸಿದನು. ಮತ್ತು ವಾಸುದೇವನ ಸಹಿತ ನಟನರ್ತಕರನ್ನೂ ನೋಡಿದನು. ಅವರೆಲ್ಲರನ್ನೂ ಪ್ರಶಂಸಿಸಿ ಬೀಳ್ಕೊಟ್ಟು ಮಹಾದ್ಯುತಿ ಪಾಂಡವನು ಸಿಂಗರಿಸಿದ ದಿವ್ಯ ಶಯನವನ್ನು ಸೇರಿದನು. ಅವನು ಸಾತ್ವತನಿಗೆ ತಾನು ಕಂಡ ತೀರ್ಥಗಳ, ಪರ್ವತಗಳ, ನದಿಗಳ ಮತ್ತು ವನಗಳ ಕುರಿತು ಹೇಳಿದನು. ಈ ಕಥೆಗಳನ್ನೆಲ್ಲಾ ಹೇಳುತ್ತಿರುವಾಗಲೇ ನಿದ್ರೆಯು ಕೌಂತೇಯನನ್ನು ಸ್ವರ್ಗಸಮ್ಮಿತ ಲೋಕಕ್ಕೆ ಕರೆದುಕೊಂಡು ಹೋಯಿತು.

ಬೆಳಗಾಗುತ್ತಲೇ ಆ ಅನಘನು ಮಧುರ ಗೀತ, ವೀಣೆಯ ನಾದ, ಮತ್ತು ಮಂಗಲ ಸ್ತುತಿಗಳಿಗೆ ಎಚ್ಚೆತ್ತನು. ಅವಶ್ಯಕಾರ್ಯಗಳನ್ನು ಮುಗಿಸಿ ವಾರ್ಷ್ಣೇಯನಿಂದ ಅಭಿನಂದಿತನಾಗಿ ಕಾಂಚನಾಂಗ ರಥದಲ್ಲಿ ದ್ವಾರಕೆಗೆ ಹೋದನು. ಕುಂತೀಸುತನ ಗೌರವಾರ್ಥವಾಗಿ ದ್ವಾರಕೆಯನ್ನು ಗುಡಿಸಲನ್ನೂ ಸೇರಿ ಚೆನ್ನಾಗಿ ಅಲಂಕರಿಸಲಾಗಿತ್ತು. ದ್ವಾರಕಾವಾಸಿ ಜನರು ಕೌಂತೇಯನನ್ನು ನೋಡಲೆಂದು ರಾಜ ಮಾರ್ಗದಲ್ಲಿ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸೇರಿದರು. ಅಲ್ಲಿ ಭೋಜ, ವೃಷ್ಣಿ, ಅಂಧಕರು ಮತ್ತು ಅವರ ಸ್ತ್ರೀಯರ ನೂರಾರು ಸಹಸ್ರಾರು ಸಂಖ್ಯೆಗಳ ಮಹಾ ಸಮಾವೇಶವಿತ್ತು. ಭೋಜ, ವೃಷ್ಣಿ, ಅಂಧಕಾತ್ಮಜರಿಂದ ಸತ್ಕೃತನಾಗಿ, ಅಭಿವಾದಿಸುವವರನ್ನು ಅಭಿವಾದಿಸಿ ಸರ್ವರಿಗೂ ಸಂತಸವನ್ನು ತಂದನು. ಕುಮಾರ ಸರ್ವರೂ ಆ ವೀರನನ್ನು ಸತ್ಕಾರದಿಂದ ಅಭಿವಾದಿಸಿದರು. ಸಮಾನ ವಯಸ್ಕರು ಎಲ್ಲರೂ ಪುನಃ ಪುನಃ ಆಲಂಗಿಸಿದರು. ಅವನು ರತ್ನ ಭೋಜ್ಯ ಸಮಾವೃತ ಕೃಷ್ಣನ ಭವನದಲ್ಲಿ ಕೃಷ್ಣನೊಡನೆ ಬಹಳಷ್ಟು ರಾತ್ರಿಗಳು ತಂಗಿದನು.

ಸುಭದ್ರಾಹರಣ

ಕೆಲವು ದಿನಗಳ ನಂತರ ವೃಷ್ಣಿ ಮತ್ತು ಅಂಧಕರು ಅದೇ ರೈವತಕ ಗಿರಿಯಲ್ಲಿ ಒಂದು ಮಹಾ ಉತ್ಸವವನ್ನು ನೆರವೇರಿಸಿದರು. ವೀರ ಭೋಜರು, ವೃಷ್ಣಿಗಳು ಮತ್ತು ಅಂಧಕರು ಆ ಮಹಾಗಿರಿಯಲ್ಲಿ ಸಹಸ್ರಾರು ಬ್ರಾಹ್ಮಣರಿಗೆ ದಾನವನ್ನಿತ್ತರು. ಆ ಗಿರಿಯ ಸುತ್ತಲ ಪ್ರದೇಶವು ರತ್ನಚಿತ್ರಗಳಿಂದ ಕೂಡಿದ ಪ್ರಾಸಾದಗಳಿಂದ ಮತ್ತು ಎಲ್ಲೆಡೆಯೂ ದೀಪವೃಕ್ಷಗಳಿಂದ ಶೋಭಿತವಾಗಿತ್ತು. ಅಲ್ಲಿ ವಾದಕರು ತಮ್ಮ ವಾದ್ಯಗಳನ್ನು ನುಡಿಸುತ್ತಿದ್ದರು, ನರ್ತಕರು ನರ್ತಿಸುತ್ತಿದ್ದರು ಮತ್ತು ಗಾಯಕರು ಗಾಯನ ಹಾಡುತ್ತಿದ್ದರು. ಸುಮಹೌಜಸ ವೃಷ್ಣಿ ಕುಮಾರರು ಅಲಂಕೃತರಾಗಿ ತಮ್ಮ ತಮ್ಮ ವಾಹನಗಳ ಮೇಲೆ ಕುಳಿತು ಬಂಗಾರದ ಕಡಗಗಳನ್ನು ಹಾಕಿಕೊಂಡು ಎಲ್ಲ ಕಡೆ ಓಡಾಡುತ್ತಿದ್ದರು. ಪೌರರು ತಮ್ಮ ಪತ್ನಿಯರು ಮತ್ತು ಅನುಚರರೊಂದಿಗೆ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ನಡೆಯುತ್ತ ಅಥವಾ ವಾಹನಗಳಲ್ಲಿ ಹೊರಬಂದಿದ್ದರು. ಅಲ್ಲಿ ಸಂಗೀತಗಾರರು ಹಿಂಬಾಲಿಸಿಬರುತ್ತಿರಲು ಎತ್ತರವಾಗಿದ್ದ ಪ್ರಭು ಹಲಧರನು ಕುಡಿದು ಮತ್ತನಾಗಿ ರೇವತಿಯ ಸಹಿತ ತಿರುಗಾಡುತ್ತಿದ್ದನು. ಅಲ್ಲಿ ವೃಷ್ಣಿಗಳ ರಾಜ ಪ್ರತಾಪವಾನ್ ಉಗ್ರಸೇನನೂ ತನ್ನ ಸಹಸ್ರ ಪತ್ನಿಯರೊಂದಿಗೆ ಗಂಧರ್ವರಿಂದ ರಂಜಿಸಿಕೊಳ್ಳುತ್ತಾ ಇದ್ದನು. ದಿವ್ಯಮಾಲಾಂಬರಗಳನ್ನು ಧರಿಸಿ ಕುಡಿದ ಅಮಲಿನಲ್ಲಿ ಸಮರದುರ್ಮದರಾಗಿದ್ದ ರೌಕ್ಮಿಣೇಯ-ಸಾಂಬರಿಬ್ಬರೂ ಅಮಲಿನಲ್ಲಿ ಅಮರರಂತೆ ವಿಹರಿಸುತ್ತಿದ್ದರು. ಅಕ್ರೂರ, ಸಾರಣ, ಗದ, ಭಾನು, ವಿಡೂರಥ, ನಿಶಠ, ಚಾರುದೇಷ್ಣ, ಪೃಥು, ವಿಪೃಥು, ಸತ್ಯಕ, ಸಾತ್ಯಕಿ, ಭಂಗಕಾರ, ಸಹಾಚರ, ಹಾರ್ದಿಕ್ಯ ಕೃತವರ್ಮ ಮತ್ತು ಇನ್ನೂ ಇತರರು ಯಾರ ಹೆಸರನ್ನು ಹೇಳಲಿಲ್ಲ ಎಲ್ಲರೂ ತಮ್ಮ ತಮ್ಮ ಸ್ತ್ರೀಯರು ಮತ್ತು ಗಾಯಕರಿಂದ ಸುತ್ತುವರೆಯಲ್ಪಟ್ಟು ರೈತಕದಲ್ಲಿ ನಡೆಯುತ್ತಿದ್ದ ಆ ಉತ್ಸವದ ಶೋಭೆಯನ್ನು ಹೆಚ್ಚಿಸಿದರು. ಆ ಮಹಾಶುಭ ಕೋಲಾಹಲವು ನಡೆಯುತ್ತಿರಲು ವಾಸುದೇವ ಮತ್ತು ಪಾರ್ಥರು ಒಟ್ಟಿಗೇ ನಡೆಯುತ್ತಿದ್ದರು ಮತ್ತು ಅಲ್ಲಿ ನಡೆಯುತ್ತಿರುವಾಗ ಅಲಂಕೃತಳಾಗಿ ಸಖಿಗಳ ಮಧ್ಯದಲ್ಲಿದ್ದ ವಸುದೇವನ ಸುಂದರ ಮಗಳು ಭದ್ರೆಯನ್ನು ನೋಡಿದರು. ಅವಳನ್ನು ನೋಡಿದೊಡನೆಯೇ ಅರ್ಜುನನು ಅವಳಲ್ಲಿ ಅನುರಕ್ತನಾದನು. ಪಾರ್ಥನು ಅವಳಲ್ಲಿಯೇ ಏಕಾಗ್ರಮನಸ್ಕನಾಗಿದ್ದುದನ್ನು ಕೃಷ್ಣನು ಗಮನಿಸಿದನು. ಆಗ ಪುಷ್ಕರಾಕ್ಷನು ನಗುತ್ತಾ ಹೇಳಿದನು:

“ವನಚರನ ಮನಸ್ಸು ಕಾಮದಿಂದ ಏರು ಪೇರಾಗುತ್ತಿದೆಯೇ? ಪಾರ್ಥ! ನಿನಗೆ ಮಂಗಳವಾಗಲಿ! ಅವಳು ಸಾರಣನ ಸಹೋದರಿ ಮತ್ತು ನನ್ನ ತಂಗಿ. ಸುಭದ್ರಾ ಎಂಬ ಹೆಸರಿನವಳು. ನನ್ನ ತಂದೆಯ ಹಿರಿಯ ಮಗಳು. ನಿನ್ನ ಮನಸ್ಸು ಅವಳಲ್ಲಿದೆ ಎಂದಾದರೆ ಸ್ವಯಂ ನಾನೇ ತಂದೆಯಲ್ಲಿ ಮಾತನಾಡುತ್ತೇನೆ.”

ಅರ್ಜುನನು ಹೇಳಿದನು:

“ರೂಪಸಂಪನ್ನಳಾದ ಈ ವಸುದೇವನ ಮಗಳು ಮತ್ತು ವಾಸುದೇವನ ತಂಗಿಯನ್ನು ಯಾರು ತಾನೇ ಮೋಹಿಸುವುದಿಲ್ಲ? ನಿನ್ನ ತಂಗಿ ವಾರ್ಷ್ಣೇಯಿಯು ನನ್ನ ಮಹಿಷಿಯಾಗುತ್ತಾಳೆಂದರೆ ನಾನು ಎಲ್ಲ ಒಳ್ಳೆಯ ಕೆಲಸಗಳನ್ನೂ ಮಾಡಿರಬೇಕು. ಅವಳನ್ನು ಪಡೆಯುವ ಉಪಾಯವೇನು ಹೇಳು. ಮನುಷ್ಯನಿಂದ ಸಾಧ್ಯವಾಗುವ ಎಲ್ಲವನ್ನೂ ಮಾಡುತ್ತೇನೆ.”

ವಾಸುದೇವನು ಹೇಳಿದನು:

“ಪಾರ್ಥ! ಸ್ವಯಂವರವೇ ಕ್ಷತ್ರಿಯರ ವಿವಾಹ. ಆದರೆ ಅದು ಸಂಶಯಯುಕ್ತವಾದುದು ಏಕೆಂದರೆ ಅದರ ಫಲಿತಾಂಶವು ಭಾವನೆಗಳ ಮೇಲೆ ಅವಲಂಬಿಸಿಲ್ಲ. ಬಲವಂತಾಗಿ ಕದ್ದುಕೊಂಡು ಹೋಗುವುದೂ ಶೂರ ಕ್ಷತ್ರಿಯರ ವಿವಾಹವಾಗಬಹುದು ಎಂದು ಧರ್ಮವಿದುಗಳು ಹೇಳುತ್ತಾರೆ. ನನ್ನ ತಂಗಿ ಕಲ್ಯಾಣಿಯನ್ನು ಕದ್ದುಕೊಂಡು ಹೋಗು. ಸ್ವಯಂವರದಲ್ಲಿ ಅವಳ ಬಯಕೆಗಳು ಏನೋ ತಿಳಿದಿಲ್ಲ.”

ಅರ್ಜುನ-ಕೃಷ್ಣರು ಆ ನಿಶ್ಚಯವನ್ನು ಮಾಡಿ ಶೀಘ್ರಗ ಜನರನ್ನು ಇಂದ್ರಪ್ರಸ್ಥದಲ್ಲಿದ್ದ ಧರ್ಮರಾಜನಲ್ಲಿಗೆ ಕಳುಹಿಸಿದರು. ವಿಷಯವನ್ನು ಕೇಳಿದೊಡನೆಯೇ ಮಹಾಬಾಹು ಪಾಂಡವನು ತನ್ನ ಒಪ್ಪಿಗೆಯನ್ನು ನೀಡಿದನು. ಭೀಮಸೇನನು ಇದನ್ನು ಕೇಳಿ ಕೃತಕೃತ್ಯನಾದಂತೆ ಭಾವಿಸಿದನು. ಇತರರೊಡನೆ ಈ ವಿಷಯವನ್ನು ಹೇಳಿಕೊಂಡು ಸಂತಸ ಪಟ್ಟನು. ಅವನ ಅನುಜ್ಞೆಯಿದೆ ಎಂದು ತಿಳಿದ ಧನಂಜಯನು ಕನ್ಯೆಯು ರೈವತಕ್ಕೆ ಹೋಗಿದ್ದಾಳೆ ಎನ್ನುವುದನ್ನೂ ತಿಳಿದುಕೊಂಡನು. ಕೃಷ್ಣನೊಂದಿಗೆ ಉಪಾಯವನ್ನು ಚರ್ಚಿಸಿ, ಅವನ ಅನುಜ್ಞೆಯನ್ನು ಪಡೆದು, ಕೃಷ್ಣನ ಮನಸ್ಸನ್ನು ತಿಳಿದುಕೊಂಡು ಭರತರ್ಷಭನು ಯಥಾವಿಧಿಯಾಗಿ ತಯಾರಿಸಿದ, ಸೈನ್ಯ-ಸುಗ್ರೀವರನ್ನು ಕಟ್ಟಿದ, ಗಂಟೆ ಮಾಲೆಗಳಿಂದ ಅಲಂಕೃತವಾದ ಕಾಂಚನಾಂಗ ರಥವನ್ನೇರಿ ಹೊರಟನು. ಅರಿಗಳ ಹರ್ಷಘಾತಿಯ ಆ ರಥದಲ್ಲಿ ಮಳೆಯ ಮೋಡಗಳಂತೆ ಘರ್ಜಿಸಬಲ್ಲ ಮತ್ತು ಅಗ್ನಿಪ್ರಕಾಶದಿಂದ ಜ್ವಲಿಸುವ ಎಲ್ಲ ಶಸ್ತ್ರಗಳೂ ಇದ್ದವು. ಕವಚ, ಖಡ್ಗ, ಕೈ ಮತ್ತು ಬೆರಳುಗಳ ಕವಚಗಳಿಂದ ಸನ್ನದ್ಧನಾಗಿ ಬೇಟೆಯಾಡಲು ಹೋಗುವ ನೆಪದಲ್ಲಿ ವೇಗದಿಂದ ಹೊರಟನು. ಸುಭದ್ರೆಯು ಶೈಲೇಂದ್ರ ರೈವತವನ್ನೂ ಮತ್ತು ಅಲ್ಲಿರುವ ಸರ್ವ ದೇವತೆಗಳನ್ನೂ ಬ್ರಾಹ್ಮಣರ ಸ್ವಸ್ತಿ ವಾಚಗಳೊಂದಿಗೆ ಪೂಜಿಸಿ, ಗಿರಿಯ ಪ್ರದಕ್ಷಿಣೆ ಮಾಡಿ ದ್ವಾರಕೆಯ ಕಡೆ ಬರುತ್ತಿದ್ದಳು. ಆಗ ಕಾಮಬಾಣ ಪೀಡಿತ ಕೌಂತೇಯನು ಚಾರು ಸರ್ವಾಂಗೀ ಸುಭದ್ರೆಯನ್ನು ಎತ್ತಿ ಬಲವಂತವಾಗಿ ತನ್ನ ರಥದ ಮೇಲೆ ಇರಿಸಿದನು.

Image result for subhadra haranಆ ಶುಚಿಸ್ಮಿತೆಯನ್ನು ಪಡೆದ ಕೂಡಲೇ ಪುರುಷವ್ಯಾಘ್ರನು ಆಕಾಶವೇಗದಲ್ಲಿ ತನ್ನ ರಥದಲ್ಲಿ ಸ್ವಪುರದ ಕಡೆ ಪ್ರಯಾಣಿಸಿದನು. ಆದರೆ, ಸುಭದ್ರೆಯು ಅಪಹರಣವಾಗುತ್ತಿರುವುದನ್ನು ನೋಡಿದ ಅವಳ ಸೈನಿಕ ಜನರು ಸರ್ವರೂ ಕೂಗುತ್ತಾ ದ್ವಾರಕಾಪುರಿಗೆ ಓಡಿದರು. ಅವಸರದಲ್ಲಿ ಸುಧರ್ಮ ಸಭೆಯನ್ನು ಸೇರಿದ ಅವರು ಪಾರ್ಥವಿಕ್ರಮದ ಕುರಿತು ಸರ್ವವನ್ನು ಸಭಾಪಾಲನಿಗೆ ನಿವೇದಿಸಿದರು. ಅದನ್ನು ಕೇಳಿದ ಸಭಾಪಾಲನು ಬಂಗಾರದಿಂದ ಅಲಂಕೃತ ಮಹಾಘೋಷದ ಯುದ್ಧ ಭೇರಿಯನ್ನು ಹೊಡೆಯಿಸಿದನು. ಶಬ್ಧದಿಂದ ಬೆದರಿದ ಭೋಜ ವೃಷ್ಣಿ ಅಂಧಕರು ಅನ್ನಪಾನಗಳನ್ನು ಅಲ್ಲಿಯೇ ತೊರೆದು ಸಭೆಯನ್ನು ಸೇರಿದರು. ಆಗ ಪುರುಷವ್ಯಾಘ್ರ ವೃಷ್ಣಿ ಅಂಧಕ ಮಹಾರಥಿಗಳು ನೂರಾರು ಸಂಖ್ಯೆಗಳಲ್ಲಿ ಹುತಾಶನನು ಅಗ್ನಿಕುಂಡವನ್ನು ಏರುವಂತೆ ಬಂಗಾರದಿಂದ ಮಾಡಲ್ಪಟ್ಟ, ಬೆಲೆಬಾಳುವ ದಿಂಬುಗಳಿದ್ದ, ಮಣಿವಿದ್ರುಮಚಿತ್ರಗಳಿಂದ ಜ್ವಲಿತಾಗ್ನಿ ಪ್ರಭಾವಳಿಗಳಿಂದ ಕೂಡಿದ ಸಿಂಹಾಸನಗಳನ್ನು ಅಲಂಕರಿಸಿದರು. ಅವರೆಲ್ಲರೂ ದೇವತೆಗಳಂತೆ ಕುಳಿತುಕೊಳ್ಳಲು ಸಭಾಪಾಲ ಮತ್ತು ಸಹಾನುಗರು ಜಿಷ್ಣುವಿನ ಚೇಷ್ಟೆಯನ್ನು ವರದಿಮಾಡಿದರು. ಅದನ್ನು ಕೇಳಿದ ಮದದಿಂದ ರಕ್ತಾಂತಲೋಚನರಾದ ವೃಷ್ಣಿವೀರರು ಪಾರ್ಥನನ್ನು ಕ್ಷಮಿಸದೆಯೇ ಒಟ್ಟಾದರು.

“ರಥಗಳನ್ನು ಕಟ್ಟಿ. ಧನುಸ್ಸು, ಮಹಾರ್ಹಣಿ ಮತ್ತು ಕವಚ ಮುಂತಾತ ಅನೇಕ ಆಯುಧಗಳನ್ನು ತನ್ನಿ.”

ಕೆಲವರು ತಮ್ಮ ಅನುಚರರಿಗೆ ರಥಗಳನ್ನು ಕಟ್ಟುವಂತೆ ಕೂಗಿ ಹೇಳಿದರು. ಇನ್ನು ಕೆಲವರು ತಾವೇ ವಿಭೂಷಿತ ತುರಗಗಳನ್ನು ಕಟ್ಟಿದರು. ರಥಗಳನ್ನು, ಕವಚಗಳನ್ನು, ಧ್ವಜಗಳನ್ನು ತರುವಾಗ ಕೂಗಾಡುತ್ತಿದ್ದ ಆ ನರವೀರರಲ್ಲಿ ಮಹಾ ಗೊಂದಲವುಂಟಾಯಿತು. ಇವುಗಳ ಮಧ್ಯದಲ್ಲಿ ಕೈಲಾಸಶಿಖರೋಪಮವಾಗಿ ಎತ್ತರವಾಗಿದ್ದ, ನೀಲವಸ್ತ್ರಗಳನ್ನು ಧರಿಸಿದ್ದ, ಕುಡಿದ ಅಮಲಿನಲ್ಲಿದ್ದ ವನಮಾಲಿ [ಬಲರಾಮ] ಯು ಈ ಮಾತುಗಳನ್ನಾಡಿದನು:

“ಜನಾರ್ದನನು ಸುಮ್ಮನಿರುವಾಗ ನೀವೆಲ್ಲ ಮೂಢರು ಏನು ಮಾಡುತ್ತಿರುವಿರಿ? ಅವನ ಮನಸ್ಸಿನಲ್ಲಿ ಏನಿದೆಯೆಂದು ತಿಳಿಯದೇ ಸಂಕೃದ್ಧ ಮೇಘಗಳಂತೆ ಗರ್ಜಿಸುತ್ತಿದ್ದೀರಲ್ಲ? ಮೊದಲು ಆ ಮಹಾಮತಿಯು ತನ್ನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಹೇಳಲಿ. ನಂತರ ಅವನು ಏನನ್ನು ಬಯಸುತ್ತಾನೆ ಅದನ್ನೇ ಹಿಂಜರಿಯದೇ ಮಾಡಿ.”

ಹಲಾಯುಧಧಾರಿಯ ಈ ಒಳ್ಳೆಯ ಸಲಹೆಯನ್ನು ಕೇಳಿದ ಅವರೆಲ್ಲರೂ ಸಾಧು ಸಾಧು ಎಂದು ಸುಮ್ಮನಾದರು. ಧೀಮಂತ ಬಲದೇವನ ಮಾತು ಸರಿಯಾದುದೆಂದು ಪುನಃ ಸರ್ವರೂ ಸಭಾಮಧ್ಯದಲ್ಲಿ ಕುಳಿತುಕೊಂಡರು. ಆಗ ಕಾಮಪಾಲನು ಪರಂತಪ ವಾಸುದೇವನನ್ನುದ್ದೇಶಿಸಿ ಹೇಳಿದನು:

“ಜನಾರ್ದನ! ನೀನು ಏಕೆ ಏನನ್ನೂ ಹೇಳದೇ ಇಲ್ಲಿಯೇ ನೋಡುತ್ತಾ ಕುಳಿತಿದ್ದೀಯೆ. ನಿನ್ನ ಕಾರಣದಿಂದಲೇ ನಾವೆಲ್ಲರೂ ಪಾರ್ಥನನ್ನು ಇಲ್ಲಿಗೆ ಬರಮಾಡಿಸಿಕೊಂಡೆವು. ಆ ದುರ್ಬುದ್ಧಿ ಕುಲಪಾಪಿಯು ನಮ್ಮ ಈ ಗೌರವಕ್ಕೆ ಅರ್ಹನಿರಲಿಲ್ಲ! ತಾನು ಒಂದು ಒಳ್ಳೆಯ ಕುಲದಲ್ಲಿ ಹುಟ್ಟಿದವನೆಂದು ತಿಳಿಯುವ ಯಾವ ಪುರುಷ ತಾನೆ ಊಟಮಾಡಿದ ತಟ್ಟೆಯನ್ನು ಸ್ವಯಂ ಒಡೆಯುತ್ತಾನೆ? ಸಂಬಂಧವನ್ನು ಬೆಳೆಸಲು ಮತ್ತು ಹಿಂದೆ ಮಾಡಿದ ಉಪಕಾರಗಳನ್ನು ಗೌರವಿಸಿ ಬಂದ ಯಾರುತಾನೇ ಈ ರೀತಿಯ ಸಾಹಸವನ್ನು ಮಾಡಬಲ್ಲರು? ಸುಭದ್ರೆಯನ್ನು ಬಲವಂತವಾಗಿ ಅಪಹರಿಸಿ ಅವನು ನಮ್ಮ ಮೇಲೆ ಮತ್ತು ಕೇಶವನ ಮೇಲೆ ಅವನಿಗಿರುವ ಅಸಹ್ಯಭಾವನೆಯನ್ನು ತೋರಿಸಿ ಅಪಮಾನ ಮಾಡಿದ್ದಾನೆ ಮತ್ತು ತನ್ನ ಮೃತ್ಯುವನ್ನು ಬಯಸಿದ್ದಾನೆ. ನನ್ನ ತಲೆಯ ಮೇಲೆ ಕಾಲನ್ನಿಟ್ಟ ಅವನನ್ನು ಹೇಗೆತಾನೇ ಕ್ಷಮಿಸಲಿ? ಪಾದದಿಂದ ತುಳಿಯಲ್ಪಟ್ಟ ಹಾವು ಕ್ಷಮಿಸಬಲ್ಲದೇ? ಇಂದು ನಾನೊಬ್ಬನೇ ವಸುಧೆಯಲ್ಲಿ ಕೌರವರೇ ಇಲ್ಲದಂತೆ ಮಾಡುತ್ತೇನೆ. ಅರ್ಜುನನ ಈ ಅತಿಕ್ರಮವನ್ನು ನಾನು ಸಹಿಸಲಾರೆ!”

ಮೇಘದುಂದುಭಿಯಂತೆ ಗರ್ಜಸುತ್ತಿರುವ ಅವನನ್ನು ಸರ್ವ ಭೋಜ ವೃಷ್ಣಿ ಅಂಧಕರೂ ಅನುಮೋದಿಸಿದರು. ಸರ್ವ ವೃಷ್ಣಿಗಳೂ ಅವನ ಮಾತುಗಳನ್ನು ಪುನಃ ಪುನಃ ಹೇಳುತ್ತಿರಲು ವಾಸುದೇವನು ಧರ್ಮಾರ್ಥಸಂಹಿತ ಈ ಮಾತುಗಳನ್ನು ಹೇಳಿದನು:

“ಗುಡಾಕೇಶನು ನಮ್ಮ ಕುಲಕ್ಕೆ ಯಾವುದೇ ಅಪಮಾನವನ್ನೆಸಗಿಲ್ಲ. ಹೊರತಾಗಿ ನಮ್ಮ ಮೇಲೆ ಅಧಿಕ ಸನ್ಮಾನವನ್ನು ತೋರಿಸಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಸಾತ್ವತರು ಅರ್ಥಲುಬ್ಧಿಗಳಲ್ಲ ಎನ್ನುವುದನ್ನು ಪಾರ್ಥನು ತಿಳಿದ್ದಿದ್ದಾನೆ. ಹಾಗೆಯೇ ಆ ಪಾಂಡವನು ಸ್ವಯಂವರದಲ್ಲಿ ಗೆಲ್ಲಲಾರ ಎನ್ನುವುದನ್ನೂ ಅರಿತಿದ್ದಾನೆ. ಪಶುವಂತೆ ಕನ್ಯೆಯರನ್ನು ಕೊಡುವುದನ್ನು ಯಾರುತಾನೆ ಮನ್ನಿಸಿಯಾರು? ಮತ್ತು ಭುವಿಯ ಯಾವ ಪುರುಷನು ತಾನೆ ತನ್ನ ಸಂತಾನವನ್ನು ಮಾರಾಟಮಾಡುತ್ತಾನೆ? ಈ ಎಲ್ಲ ದೋಷಗಳನ್ನೂ ಕೌಂತೇಯನು ಪರಿಶೀಲಿಸಿದ್ದ ಎನ್ನುವುದು ನನ್ನ ಅಭಿಪ್ರಾಯ. ಆದುದರಿಂದ ಪಾಂಡವನು ಧರ್ಮಪ್ರಕಾರ ಕನ್ಯೆಯನ್ನು ಅಪಹರಿಸಿದ್ದಾನೆ. ಈ ಸಂಬಂಧವು ಉಚಿತವೇ ಆಗಿದೆ. ಸುಭದ್ರೆಯು ಯಶಸ್ವಿನಿ ಮತ್ತು ಅವಳನ್ನು ಬಲವಂತವಾಗಿ ಅಪಹರಿಸಿದ ಪಾರ್ಥನೂ ಕೂಡ ಯಶಸ್ವಿಯು. ಭರತ ಮತ್ತು ಮಹಾತ್ಮ ಶಂತನುವಿನ ಕುಲದಲ್ಲಿ ಜನಿಸಿದ ಮತ್ತು ಕುಂತಿಭೋಜನ ಮಗಳ ಪುತ್ರ ಅರ್ಜುನನನ್ನು ಯಾರುತಾನೇ ಬಯಸುವುದಿಲ್ಲ? ನನ್ನಷ್ಟೇ ಸಮರ್ಥನಾಗಿರುವ ಪಾರ್ಥನನ್ನು ವಿಕ್ರಮದಲ್ಲಿ ಪರಾಜಿಸುವ ಯಾರನ್ನೂ ವಿರೂಪಾಕ್ಷ ಭಗನೇತ್ರಹರ ಹರನನ್ನು ಬಿಟ್ಟು ಸರ್ವ ಲೋಕಗಳಲ್ಲಿಯೂ ಇಂದ್ರ ರುದ್ರರಲ್ಲಿಯೂ ನನಗೆ ಕಾಣುತ್ತಿಲ್ಲ. ಅದರಲ್ಲೂ ರಥ ನನ್ನದು ಮತ್ತು ಕುದುರೆಗಳೂ ನನ್ನವೇ. ಯುದ್ಧದಲ್ಲಿ ಶೀಘ್ರಾಸ್ತ್ರನಾದ ಪಾರ್ಥನಿಗೆ ಸರಿಸಾಟಿ ಯಾರೂ ಇಲ್ಲ. ಧನಂಜಯನ ಬೆನ್ನಟ್ಟುವ ಬದಲಾಗಿ ಅವನನ್ನು ಸಂತವಿಸಿ ಸಂತೋಷದಿಂದ ಹಿಂದೆ ಕರೆದುಕೊಂಡು ಬರಬೇಕು ಎನ್ನುವುದು ನನ್ನ ಅಂತಿಮ ಅಭಿಪ್ರಾಯ. ತನ್ನ ಬಲದಿಂದ ನಮ್ಮನ್ನೆಲ್ಲ ಸೋಲಿಸಿ ಪಾರ್ಥನು ತನ್ನ ಪುರವನ್ನು ಸೇರಿದನೆಂದರೆ ತಕ್ಷಣವೇ ನಮ್ಮೆಲ್ಲರಿಗೆ ಅಪಕೀರ್ತಿ ಬರುತ್ತದೆ. ಆದರೆ ಸಾಂತ್ವನದಲ್ಲಿ ಪರಾಜಯವೆನ್ನುವುದೇ ಇಲ್ಲ.”

ವಾಸುದೇವನ ಈ ಮಾತುಗಳನ್ನು ಕೇಳಿದ ನಂತರ ಅವರು ಅದರಂತೆಯೇ ಮಾಡಿದರು. ಅರ್ಜುನನನ್ನು ಹಿಂದೆ ಕರೆತಂದು ಅವನ ವಿವಾಹವನ್ನು ನೆರವೇರಿಸಿದರು. ಕೌಂತೇಯನು ಆ ವರ್ಷದ ಉಳಿದ ರಾತ್ರಿಗಳನ್ನು ವೃಷ್ಣಿನಂದನರ ಸತ್ಕಾರದಲ್ಲಿ ಯಥಾಕಾಮವಾಗಿ ವಿಹರಿಸುತ್ತಾ ಅಲ್ಲಿಯೇ ಕಳೆದನು. ಉಳಿದ ಸಮಯವನ್ನು ಪ್ರಭುವು ಪುಷ್ಕರದಲ್ಲಿ ಕಳೆದನು.

ಹರಣಾಹರಣ

ಹನ್ನೆರಡು ವರ್ಷಗಳು ಪೂರ್ಣವಾದ ನಂತರ ಅವನು ಖಾಂಡವಪ್ರಸ್ಥವನ್ನು ಪ್ರವೇಶಿಸಿದನು. ಧನಂಜಯನು ಆಗಮಿಸಿ ಧೌಮ್ಯ ಮತ್ತು ತಾಯಿಯನ್ನು ವಂದಿಸಿದನು. ಧನಂಜಯನು ರಾಜನ ಮತ್ತು ಭೀಮನ ಚರಣಗಳನ್ನು ಸ್ಪರ್ಷಿಸಿದನು. ನಂತರ ಹರ್ಷಿತರಾದ ಯಮಳರು ಅವನಿಗೆ ವಂದಿಸಿದರು. ಮತ್ತು ಸಖರು ಆನಂದಿತರಾದರು. ಆ ವಿನಯ ಸಮಾಹಿತನು ರಾಜನನ್ನು ಅಭಿನಂದಿಸಿದನು. ಆಚಾರ್ಯ ಮತ್ತು ಬ್ರಾಹ್ಮಣರನ್ನು ಅಭಿನಂದಿಸಿ, ಪಾರ್ಥನು ದ್ರೌಪದಿಯಿದ್ದಲ್ಲಿಗೆ ಬಂದನು. ದ್ರೌಪದಿಯು ಪ್ರಣಯದಲ್ಲಿ ಕುರುನಂದನಿಗೆ ಉತ್ತರಿಸಿದಳು:

“ಕೌಂತೇಯ! ಸಾತ್ವತಾತ್ಮಜೆಯು ಎಲ್ಲಿ ಇರುವಳೋ ಅಲ್ಲಿಗೆ ಹೋಗು. ಎಷ್ಟು ಚೆನ್ನಾಗಿ ಕಟ್ಟಿದ್ದರೂ ಭಾರ ಬಿದ್ದಾಗ ಮೊದಲನೆಯ ಗಂಟೇ ಸಡಿಲವಾಗುತ್ತದೆ!”

ಈ ರೀತಿ ಕೃಷ್ಣೆಯು ಬಹುವಿಧವಾಗಿ ವಿಲಪಿಸುತ್ತಿರಲು ದನಂಜಯನು ಅವಳನ್ನು ಪುನಃ ಪುನಃ ಸಂತವಿಸಲು ಪ್ರಯತ್ನಿಸಿದನು ಮತ್ತು ಕ್ಷಮೆಯನ್ನು ಯಾಚಿಸಿದನು. ಪಾರ್ಥನು ತ್ವರೆಮಾಡಿ ರಕ್ತಕೌಶೇಯವನ್ನು ಧರಿಸಿದ್ದ ಸುಭದ್ರೆಯನ್ನು ಗೋಪಾಲಿಕ ವೇಷಕ್ಕೆ ಬದಲಾಯಿಸಿ ಕರೆತಂದನು. ಯಶಸ್ವಿನಿಯು ಆ ರೂಪದಲ್ಲಿ ಇನ್ನೂ ಅಧಿಕ ಶೋಭಮಾನಳಾಗಿ ಕಾಣುತ್ತಿದ್ದಳು. ಶ್ರೇಷ್ಠ ಭವನವನ್ನು ಪ್ರವೇಶಿಸಿ ಆ ವೀರಪತ್ನಿ ವರಾಂಗನೆ, ವಿಶಾಲ ಕಣ್ಣುಗಳ ಯಶಸ್ವಿನೀ ಭದ್ರೆಯು ಪೃಥಾಳನ್ನು ವಂದಿಸಿದಳು. ಕುಂತಿಯು ಆ ಚಾರುಸರ್ವಾಂಗಿಯನ್ನು ಬಿಗಿದಪ್ಪಿ ನೆತ್ತಿಯನ್ನು ಆಘ್ರಾಣಿಸಿದಳು. ಮತ್ತು ಪರಮ ಪ್ರೀತಿಯಿಂದ ಅವಳಿಗೆ ಅತುಲ ಅಶೀರ್ವಚನಗಳನ್ನಿತ್ತಳು. ನಂತರ ಆ ಪೂರ್ಣೇಂದುಸದ್ರುಶಾನನೆಯು ತ್ವರೆಮಾಡಿ ದ್ರೌಪದಿಯನ್ನು ವಂದಿಸಿ “ನಾನು ಭದ್ರಾ. ನಿನ್ನ ಸೇವಕಿ!” ಎಂದು ಹೇಳಿದಳು. ಮಾಧವನ ತಂಗಿಯನ್ನು ಮೇಲೆತ್ತಿದ್ದ ಕೃಷ್ಣೆಯು ಅವಳನ್ನು ಆಲಂಗಿಸಿ ಪ್ರೀತಿಯಿಂದ ಹೇಳಿದಳು:

“ನಿನ್ನ ಪತಿಗೆ ಬೇರೆ ಯಾವ ಸ್ಪರ್ಧಿಯೂ ಇಲ್ಲದಂತಾಗಲಿ!”

ಇದರಿಂದ ಸಂತೋಷಗೊಂಡ ಭದ್ರೆಯು “ಹಾಗೆಯೇ ಆಗಲಿ!” ಎಂದು ಉತ್ತರಿಸಿದಳು. ಮಹಾರಥಿ ಪಾಂಡವರೂ ಹರ್ಷಿತರಾದರು. ಕುಂತಿಯೂ ಕೂಡ ಪರಮಪ್ರೀತಳಾದಳು.

ಇಂದ್ರಪ್ರಸ್ಥಕ್ಕೆಂದು ಹೊರಟಿದ್ದ ಪಾಂಡವಶ್ರೇಷ್ಠ ಅರ್ಜುನನನು ನಗರವನ್ನು ಸೇರಿದನೆಂಬ ವಿಷಯವನ್ನು ಕೇಳಿದ ವಿಶುದ್ಧಾತ್ಮ ಪುಂಡರೀಕಾಕ್ಷ ಕೇಶವನು ರಾಮನ ಸಹಿತ ವೀರರೂ ಮಹಾರಥಿಗಳೂ ಆದ ವೃಷ್ಣಿ ಅಂಧಕ ಮುಖ್ಯರೊಡಗೂಡಿ ಅಲ್ಲಿಗೆ ಬಂದನು. ನೂರಾರು ಭ್ರಾತೃಗಳು, ಕುಮಾರರು, ಮತ್ತು ಯೋಧರಿಂದ ಸುತ್ತುವರೆಯಲ್ಪಟ್ಟು, ಮಹಾಸೈನ್ಯದೊಂದಿಗೆ ಪರಂತಪ ಶೌರಿಯು ಆಗಮಿಸಿದನು. ಅಲ್ಲಿಗೆ ದಾನಪತಿ, ಧೀಮಂತ, ಮಹಾಯಶ, ವೃಷ್ಣಿವೀರರ ಸೇನಾಪತಿ, ಅರಿಂದಮ ಅಕ್ರೂರನು ಆಗಮಿಸಿದನು. ಮಹಾತೇಜಸ್ವಿ ಅನಾದೃಷ್ಟಿ, ಮಹಾಯಶ ಉದ್ಧವ, ಸಾಕ್ಷಾತ್ ಬೃಹಸ್ಪತಿಯ ಶಿಷ್ಯ, ಮಹಾಬುದ್ಧಿ, ಮಹಾಯಶ, ಸತ್ಯಕ, ಸಾತ್ಯಕಿ, ಮತ್ತು ಸಾತ್ವತ ಕೃತವರ್ಮ, ಪ್ರದ್ಯುಮ್ನ, ಸಾಂಬ, ನಿಷಠ, ಶಂಖು, ಚಾರುದೇಷ್ಣ, ವಿಕ್ರಾಂತ ಝಿಲ್ಲಿ, ವಿಪ್ರುಥು, ಮಹಾಬಾಹು ಸಾರಣ, ಮತ್ತು ವಿದುಷರಲ್ಲಿ ಶ್ರೇಷ್ಠ ಗದ - ಇವರು ಮತ್ತು ಇನ್ನೂ ಬಹಳಷ್ಟು ವೃಷ್ಣೀ, ಭೋಜ ಮತ್ತು ಅಂಧಕರು ವಧುವಿಗೆ ಉಡುಗೊರೆಗಳನ್ನು ತೆಗೆದುಕೊಂಡು ಖಾಂಡವಪ್ರಸ್ಥಕ್ಕೆ ಆಗಮಿಸಿದರು. ಕೃಷ್ಣ ಮಾಧವನು ಬರುತ್ತಿದ್ದಾನೆಂದು ಕೇಳಿ ರಾಜ ಯುಧಿಷ್ಠಿರನು ಅವನನ್ನು ಬರಮಾಡಿಕೊಳ್ಳಲು ಅವಳಿಯರನ್ನು ಕಳುಹಿಸಿದನು. ಅವರು ಸಮೃದ್ಧವಾದ ವೃಷ್ಣೀ ಚಕ್ರವನ್ನು ಸ್ವಾಗತಿಸಿ ಪತಾಕ ಧ್ವಜ ಶೋಭಿತ ಖಾಂಡವಪ್ರಸ್ಥವನ್ನು ಪ್ರವೇಶಿಸಿದರು.

ಮಾರ್ಗಗಳನ್ನು ಗುಡಿಸಿ ಸಿಂಪಡಿಸಲಾಗಿತ್ತು, ಪುಷ್ಪಗಳನ್ನು ಹರಡಿ ಶೋಭೆಗೊಳಿಸಲಾಗಿತ್ತು, ಚಂದನದ ರಸ ಮತ್ತು ಇತರ ಶೀತಲ ಪುಣ್ಯ ಸುಗಂಧಗಳನ್ನು ಪಸರಿಸಲಾಗಿತ್ತು. ಅಲ್ಲಲ್ಲಿ ಗಂಧದ ಹೊಗೆಯ ಸುಗಂಧವು ಬರುತ್ತಿತ್ತು. ನಗರವು ಶುಚಿರ್ಭೂತರಾದ ನರರಿಂದ ಮತ್ತು ವಣಿಕರಿಂದ ಶೋಭಿಸುತ್ತಿತ್ತು. ಮಹಾಬಾಹು ಪುರುಷೋತ್ತಮ ಕೇಶವನು ರಾಮನೊಂದಿಗೆ ವೃಷ್ಣಿ ಅಂಧಕ ಮಹಾಭೋಜರಿಂದ ಸಂವೃತನಾಗಿ ಮುನ್ನಡೆದನು. ಸಹಸ್ರಾರು ಪೌರರಿಂದ ಬ್ರಾಹ್ಮಣರಿಂದ ಸಂಪೂಜ್ಯಮಾನನಾಗಿ ಅವನು ಪುರಂದರನ ಗೃಹದಂತಿದ್ದ ರಾಜ ಭವನವನ್ನು ಪ್ರವೇಶಿಸಿದನು. ಯುಧಿಷ್ಠಿರನು ಯಥಾವಿಧಿಯಾಗಿ ರಾಮನನ್ನು ಸ್ವಾಗತಿಸಿದನು ಮತ್ತು ಕೇಶವನ ನೆತ್ತನ್ನು ಆಘ್ರಾಣಿಸಿ, ಬಾಹುಗಳಿಂದ ಬಿಗಿದಪ್ಪಿದನು. ಪ್ರೀಯಮಾಣನಾದ ಕೃಷ್ಣನು ಅವನನ್ನು ವಿನಯದಿಂದ ನಮಸ್ಕರಿಸಿದನು ಮತ್ತು ಪುರುಷವ್ಯಾಘ್ರ ಭೀಮನನ್ನು ವಿಧಿವತ್ತಾಗಿ ಗೌರವಿಸಿದನು. ಧರ್ಮರಾಜ ಯುಧಿಷ್ಠಿರನು ವೃಷ್ಣಿ ಅಂಧಕ ಶ್ರೇಷ್ಠರನ್ನು ತಕ್ಕುದಾಗಿ ಯಥಾವಿಧಿಯಾಗಿ ಸತ್ಕರಿಸಿ ಬರಮಾಡಿಕೊಂಡನು. ಕೆಲವರನ್ನು ಹಿರಿಯರೆಂದು ನಮಸ್ಕರಿಸಿದನು, ಕೆಲವರನ್ನು ಸಮವಯಸ್ಕರಂತೆ, ಇನ್ನು ಕೆಲವರನ್ನು ಕಿರಿಯವರೆಂದು ಪ್ರೇಮದಿಂದ ಅಭಿವಾದಿಸಿದನು. ಅನಂತರ ಮಹಾಯಶಸ್ವಿ ವಾಸುದೇವನು ವರನ ಕಡೆಯವರಿಗೆ ಸುಭದ್ರೆಯ ಬಂಧು ಬಳಗದವರಿಂದ ಎಂದು ಉತ್ತಮ ಧನವನ್ನು ಬಳುವಳಿಯಾಗಿ ನೀಡಿದನು. ಕಿಂಕಿಣೀಜಾಲಮಾಲೆಗಳಿಂದ ಶೋಭಿತವಾದ, ನಾಲ್ಕು ಕುದುರೆಗಳನ್ನು ಕಟ್ಟಿದ್ದ, ಕುಶಲ ಸಮ್ಮತರಾದ ಸೂತರೊಂದಿಗೆ ಕಾಂಚನದ ಸಾವಿರ ರಥಗಳನ್ನು ಮತ್ತು ಮಥುರದೇಶದ, ಹಾಲನ್ನು ಕೊಡುವ, ಪುಣ್ಯವರ್ಚಸ ಸುಂದರ ಮತ್ತು ಉತ್ತಮ ಗೋವುಗಳನ್ನು ಕೃಷ್ಣನು ನೀಡಿದನು. ಇದಲ್ಲದೇ ಜನಾರ್ದನನು ಪ್ರೀತಿಯಿಂದ ಶುಭ್ರವಾದ, ಚಂದ್ರನ ಬಿಂಬಗಳಂತೆ ಕಾಣುತ್ತಿದ್ದ, ಹೇಮಭೂಷಿತ ಸಹಸ್ರ ಕುದುರೆಗಳನ್ನು ನೀಡಿದನು. ಹಾಗೆಯೇ ಐದು ಐದು ನೂರು ಬಿಳಿ ಬಣ್ಣದ ಮತ್ತು ಕಪ್ಪು ಬಣ್ಣದ ವೇಗವಾಗಿ ಹೋಗಬಲ್ಲ ಅಶ್ವತರಿಗಳನ್ನೂ ನೀಡಿದನು. ಮತ್ತು ಆ ಪುಷ್ಕರೇಕ್ಷಣನು ಬೆಳ್ಳಗಿರುವ, ಸುವೇಷಿತ, ಸುವರ್ಚಸ, ನೂರು ಸುವರ್ಣದ ಮಾಲೆಗಳನ್ನು ಧರಿಸಿದ್ದ, ಆರೋಗ್ಯವಂತ, ಸುಂದರ ವಸ್ತ್ರಗಳನ್ನು ಧರಿಸಿದ್ದ, ಪರಿಚರ್ಯೆಗಳಲ್ಲಿ ದಕ್ಷ, ಮತ್ತು ಅಲಂಕಾರದಲ್ಲಿ ನಿಪುಣರಾದ ಸಹಸ್ರ ಯುವತಿಯರನ್ನು ಉಡುಗೊರೆಯಾಗಿತ್ತನು. ಮೇಲೆ ಕುಳಿತು ಸವಾರಿಮಾಡಬಲ್ಲ ಬಾಹ್ಲೀಕ ದೇಶದ ಒಂದು ಲಕ್ಷ ಕುದುರೆಗಳನ್ನು ಅನುತ್ತಮ ಕನ್ಯಾಧನವಾಗಿ ಜನಾರ್ದನನು ನೀಡಿದನು. ದಾಶಾರ್ಹ ಜನಾರ್ದನನು ಹತ್ತು ಮನುಷ್ಯರು ಹೊರಬಲ್ಲಷ್ಟು ಅಗ್ನಿವರ್ಚಸ ಉತ್ತಮ ಗುಣದ ಕೃತಾಕೃತ ಕನಕವನ್ನೂ ನೀಡಿದನು. ಸಾಹಸಪ್ರಿಯನು ಮೂರು ಕಡೆಗಳಲ್ಲಿ ಮದ ಸುರಿಸುತ್ತಿದ್ದ, ಪರ್ವತಗಳಂತೆ ಎತ್ತರವಾಗಿದ್ದ, ಸಮರದಲ್ಲಿ ಹಿಂದೆ ಹೆಜ್ಜೆಯಿಡದ, ಶ್ರೇಷ್ಠ ಜೋರಾಗಿ ಶಬ್ಧ ನೀಡಬಲ್ಲ ಬಂಗಾರದ ಗಂಟೆಗಳಿಂದ ಕಟ್ಟಲ್ಪಟ್ಟ, ಪಲ್ಲಕ್ಕಿಗಳನ್ನು ಹೊಂದಿದ ಆಯ್ದ ಸಹಸ್ರ ಆನೆಗಳನ್ನು ನೀಡಿದನು. ಇವೆಲ್ಲವನ್ನು ಸಂಬಂಧದಿಂದ ಸಂತೋಷಗೊಂಡ ಹಲಧರ ರಾಮನು ಪಾರ್ಥನಿಗೆ ಪ್ರೀತಿಯಿಂದ ಕೊಟ್ಟನು. ವಸ್ತ್ರಕಂಬಳಿಗಳೇ ನೊರೆಯಾಗಿದ್ದ, ಮಹಾ ಗಜಗಳೇ ತಿಮಿಂಗಿಲಗಳಾಗಿದ್ದ, ಪತಾಕಗಳ ದೋಣಿಗಳು ತೇಲುತ್ತಿದ್ದ ಧನ ರತ್ನಗಳ ಈ ಮಹಾಪ್ರವಾಹವು ಸಾಗರವನ್ನು ಸೇರುವ ಮಹಾ ನದಿಯಂತೆ ಪಾಂಡವರನ್ನು ಸಂಪೂರ್ಣವಾಗಿ ಆವರಿಸಿ ಅವರ ವೈರಿಗಳಲ್ಲಿ ಅಸೂಯೆಯನ್ನು ಮಾಡಿಸಿ ಅವರಿಗೆ ಸಂತೋಷಪಡಿಸಿತು.

ಧರ್ಮರಾಜ ಯುಧಿಷ್ಠಿರನು ಅವೆಲ್ಲವನ್ನೂ ಸ್ವೀಕರಿಸಿ ವೃಷ್ಣಿ ಅಂಧಕ ಮಹಾರಥಿಗಳಿಗೆ ಸತ್ಕರಿಸಿದನು. ಅಲ್ಲಿ ಸೇರಿದ್ದ ಮಹಾತ್ಮ ಕುರು ವೃಷ್ಣಿ ಅಂಧಕ ಶ್ರೇಷ್ಠರು ಪುಣ್ಯಪುರುಷರು ಸ್ವರ್ಗದಲ್ಲಿ ಹೇಗೋ ಹಾಗೆ ಆನಂದಿಸಿದರು. ಕುರು ವೃಷ್ಣಿಯರು ಎಷ್ಟು ಬೇಕೋ ಅಷ್ಟು ಎಷ್ಟು ಯೋಗ್ಯವೋ ಅಷ್ಟು ಮಹಾ ಪಾನ, ಸಂಗೀತ ಮತ್ತು ವಾದ್ಯಗಳ ಮೂಲಕ ರಂಜಿಸಿದರು. ಈ ರೀತಿ ಉತ್ತಮ ವೀರರು ಅಲ್ಲಿ ಬಹಳ ದಿವಸಗಳು ವಿಹರಿಸಿ ಕುರುಗಳಿಂದ ಪೂಜಿತರಾಗಿ ಪುನಃ ದ್ವಾರವತೀ ಪುರವನ್ನು ತಲುಪಿದರು. ಕುರುಸತ್ತಮರು ನೀಡಿದ್ದ ಶುಭ್ರ ರತ್ನಗಳನ್ನು ಸ್ವೀಕರಿಸಿ ವೃಷ್ಣಿ ಅಂಧಕ ಮಹಾರಥಿಗಳು ರಾಮನ ನೇತೃತ್ವದಲ್ಲಿ ಹೊರಟರು. ಆದರೆ ಮಹಾಮನ ವಾಸುದೇವನು ಪಾರ್ಥನ ಸಹಿತ ರಮ್ಯ ಶಕ್ರಪ್ರಸ್ಥ ನಗರದಲ್ಲಿ ಉಳಿದುಕೊಂಡನು. ಅವನು ಪಾರ್ಥನ ಸಹಿತ ಯಮುನಾ ತೀರದಲ್ಲಿ ವಿಹರಿಸುತ್ತಿದ್ದನು. ಕಿರೀಟಿಯ ಸಹಿತ ವರಾಹ ಮತ್ತು ಇತರ ಮೃಗಗಳನ್ನು ಬೇಟೆಯಾಡಿ ರಮಿಸಿದನು.

ಅಭಿಮನ್ಯು-ದ್ರೌಪದೇಯರ ಜನ್ಮ

ಕೇಶವನ ಪ್ರಿಯ ತಂಗಿ ಸುಭದ್ರೆಯು ಪೌಲೋಮಿಯು ದ್ಯುತಿಮಂತ ಜಯಂತನಿಗೆ ಹೇಗೋ ಹಾಗೆ ಸೌಭದ್ರನಿಗೆ ಜನ್ಮವಿತ್ತಳು. ಸುಭದ್ರೆಯು ಜನ್ಮವಿತ್ತ ಅಭಿಮನ್ಯುವು ದೀರ್ಘಬಾಹುವೂ, ಮಹಾಸತ್ವಯುತನೂ, ವೃಷಭಾಕ್ಷನೂ, ನರರ್ಷಭನೂ ವೀರನೂ ಆಗಿದ್ದನು. ಅವನು ನಿರ್ಭಯನಾಗಿದ್ದನು, ಕುಪಿತನಾಗಿದ್ದನು. ಅದುದರಿಂದ ಪುರುಷರ್ಷಭ ಅರಿಮರ್ದನ ಆರ್ಜುನಿಯನ್ನು ಅಭಿಮನ್ಯು ಎಂದು ಕರೆಯಲಾಯಿತು. ಕಡೆದ ಶಮೀ ಗರ್ಭದ ಮುಖದಿಂದ ಹುತಾಶನನು ಹೇಗೋ ಹಾಗೆ ಆ ಅತಿರಥನು ಸಾತ್ವತೆಯಲ್ಲಿ ಧನಂಜಯನಿಂದ ಸಂಭವಿಸಿದನು. ಅವನು ಹುಟ್ಟಿದಾಗ ಮಹಾಬಾಹು ಕುಂತೀಪುತ್ರ ಯುಧಿಷ್ಠಿರನು ದ್ವಿಜರಿಗೆ ಹತ್ತು ಸಾವಿರ ಹಸುಗಳನ್ನೂ ಮತ್ತು ಅಷ್ಟೇ ಸಂಖ್ಯೆಯಲ್ಲಿ ಬಂಗಾರದ ನಾಣ್ಯಗಳನ್ನೂ ದಾನಮಾಡಿದನು. ಪಿತೃಗಳಿಗೆ ಮತ್ತು ಸರ್ವ ಪ್ರಜೆಗಳಿಗೆ ಚಂದ್ರಮನು ಹೇಗೋ ಹಾಗೆ ಅವನು ಬಾಲ್ಯದಿಂದ ವಾಸುದೇವನ ಅಚ್ಚುಮೆಚ್ಚಿನವನಾಗಿದ್ದನು. ಜನ್ಮಪ್ರಭೃತಿಯಾದ ಅವನ ಎಲ್ಲ ಶುಭಕ್ರಿಯೆಗಳನ್ನೂ ಕೃಷ್ಣನೇ ನೆರವೇರಿಸಿದನು. ಮತ್ತು ಆ ಬಾಲಕನೂ ಶುಕ್ಲಪಕ್ಷದಲ್ಲಿ ಶಶಿಯ ಹಾಗೆ ವೃದ್ಧಿಸಿದನು. ಆ ಅರಿಂದಮನು ವೇದಜ್ಞ ಅರ್ಜುನನಿಂದ ಚತುಷ್ಪಾದಗಳನ್ನು ಹೊಂದಿದ್ದ, ದಶವಿಧದ ಸಕಲ ದಿವ್ಯ ಮಾನುಷ ಧನುರ್ವೇದವನ್ನು ಕಲಿತುಕೊಂಡನು. ಆ ಮಹಾಬಲಿಯು ಅಸ್ತ್ರಗಳ ವಿಜ್ಞಾನವನ್ನೂ ಕಲಿತುಕೊಂಡನು, ಸರ್ವವನ್ನೂ ಬಳಸುವುದರಲ್ಲಿ, ಮತ್ತು ವಿಶೇಷವಾದವುಗಳನ್ನೂ ಕಲಿತುಕೊಂಡನು. ಅವನು ಆಗಮ ಪ್ರಯೋಗಗಳಲ್ಲಿ ತನ್ನ ಸರಿಸಾಟಿಯನ್ನಾಗಿ ಮಾಡಿದನು. ಧನಂಜಯನು ಪುತ್ರ ಸೌಭದ್ರನನ್ನು ನೋಡಿದಾಗಲೆಲ್ಲಾ ಸಂತೋಷಪಡುತ್ತಿದ್ದನು. ಸರ್ವಸಂಹನನೋಪೇತ, ಸರ್ವಲಕ್ಷಣಲಕ್ಷಿತ, ದುರ್ದರ್ಷ, ವೃಷಭಸ್ಕಂಧ, ಉರಗದಂತೆ ಅಗಲ ಬಾಯನ್ನುಳ್ಳ, ಸಿಂಹದರ್ಪ, ಮಹೇಷ್ವಾಸ, ಮತ್ತಮಾತಂಗ ವಿಕ್ರಮಿ, ಮೇಘದುಂಧುಭಿ ನಿರ್ಘೋಷ, ಪೂರ್ಣಚಂದ್ರನಿಭಾನನ, ಶೌರ್ಯ ವೀರ್ಯ ರೂಪದಲ್ಲಿ ಕೃಷ್ಣ ಸದೃಶ ಪುತ್ರನನ್ನು ವಘವಂತನು ಹೇಗೋ ಹಾಗೆ ಕಂಡನು.

ಶುಭಲಕ್ಷಣೆ ಪಾಂಚಾಲಿಯೂ ಕೂಡ ತನ್ನ ಐವರು ಪತಿಗಳಿಂದ ಐದು ಪರ್ವತಗಳಂತಿರುವ ವೀರ ಶುಭ ಐವರು ಪುತ್ರರನ್ನು ಪಡೆದಳು. ಯುಧಿಷ್ಠಿರನಿಂದ ಪ್ರತಿವಿಂದ್ಯ, ವೃಕೋದರನಿಂದ ಸುತಸೋಮ, ಅರ್ಜುನನಿಂದ ಶೃತಕರ್ಮ, ನಕುಲನಿಂದ ಶತಾನೀಕ, ಮತ್ತು ಸಹದೇವನಿಂದ ಶೃತಸೇನ ಈ ಐವರು ವೀರ ಮಹಾರಥಿಗಳಿಗೆ ಪಾಂಚಾಲಿಯು ಅದಿತಿಯು ಆದಿತ್ಯರನ್ನು ಹೇಗೋ ಹಾಗೆ ಜನ್ಮವಿತ್ತಳು. ಶಾಸ್ತ್ರತಃ ವಿಪ್ರನು ಯುಧಿಷ್ಠಿರನಿಗೆ ಪ್ರತಿವಿಂದ್ಯನ ಕುರಿತು ಹೇಳಿದನು:

“ಇವನು ಪರಪ್ರಹರಣಜ್ಞಾನದಲ್ಲಿ ಪ್ರತಿವಿಂದ್ಯನಾಗುತ್ತಾನೆ. ಸಹಸ್ರ ಸೋಮಗಳನ್ನು ಹಿಂಡಿದಾಗ ಆಗುವ ಸೋಮಾರ್ಕಸಮತೇಜಸ್ವಿ ಮಹೇಷ್ವಾಸ ಸುತಸೋಮನನ್ನು ಭೀಮಸೇನನಿಂದ ಪಡೆದಳು. ಪ್ರಸಿದ್ಧ ಮಹಾಕರ್ಮಗಳನ್ನು ಮಾಡಿ ಹಿಂದಿರುಗಿದ ಕಿರೀಟಿಯಿಂದ ಹುಟ್ಟಿದ ಈ ಪುತ್ರನು ಶೃತಕರ್ಮನೆಂದಾಗುತ್ತಾನೆ.”

ಕೌರವ್ಯ ಕುರುನಂದನ ನಕುಲನು ಕೀರ್ತಿವರ್ಧನ ತನ್ನ ಪುತ್ರನಿಗೆ ರಾಜರ್ಷಿ ಶತಾನೀಕನ ಹೆಸರನ್ನೇ ಇಟ್ಟನು. ನಂತರ ಕೃಷ್ಣೆಯು ವಹ್ನಿದೇವತೆಯ ನಕ್ಷತ್ರದಲ್ಲಿ ಸಹದೇವನಿಂದ ಸುತನನ್ನು ಪಡೆದಳು. ಆದುದರಿಂದ ಅವನು ಶೃತಸೇನನೆಂದಾದನು. ಯಶಸ್ವಿಯರಾದ ದ್ರೌಪದೇಯರು ಒಂದೊಂದು ವರ್ಷ ಅಂತರದಲ್ಲಿ ಹುಟ್ಟಿದರು ಮತ್ತು ಪರಸ್ಪರರರ ಹಿತದಲ್ಲಿ ನಿರತರಾಗಿದ್ದರು. ಅವರಿಗೆ ಧೌಮ್ಯನು ವಿಧಿವತ್ತಾಗಿ ಜಾತಕರ್ಮ, ಚೌಳ, ಮತ್ತು ಉಪನಯನಗಳನ್ನು ನೆರವೇರಿಸಿಕೊಟ್ಟನು. ಆ ಸುಚರಿತವ್ರತರು ವೇದಾಧ್ಯಯನವನ್ನು ಮುಗಿಸಿ ದಿವ್ಯ ಮಾನುಷ ಸರ್ವ ಅಸ್ತ್ರ ಶಸ್ತ್ರಗಳನ್ನೂ ಅರ್ಜುನನಿಂದ ಕಲಿತರು. ಈ ವಿಶಾಲ ಛಾತಿಯ ಮಹಾಬಲಶಾಲಿ ದೇವಗರ್ಭಸಮಾನ ಪುತ್ರರಿಂದ ಸುತ್ತುವರೆಯಲ್ಪಟ್ಟ ರಾಜಶಾರ್ದೂಲ ಪಾಂಡವರು ಸಂತೋಷವನ್ನು ಹೊಂದಿದರು.

Leave a Reply

Your email address will not be published. Required fields are marked *