ಅರಗಿನ ಮನೆ
ಭೀಮಸೇನನ ಅಧಿಕ ಶಕ್ತಿಯನ್ನೂ ಧನಂಜಯನ ಕೃತವಿದ್ಯೆಯನ್ನೂ ನೋಡಿದ ದುರ್ಮತಿ ದುರ್ಯೋಧನನು ಪರಿತಪಿಸಿದನು. ವೈಕರ್ತನ ಕರ್ಣ ಮತ್ತು ಸೌಬಲ ಶಕುನಿಯರು ಪಾಂಡವರನ್ನು ಕೊಲ್ಲಲು ಅನೇಕ ಉಪಾಯಗಳನ್ನು ಹೂಡಿದರು. ಆದರೆ ಆ ಅರಿಂದಮ ಪಾಂಡವರು ಅವೆಲ್ಲವನ್ನೂ ಮೊದಲೇ ತಿಳಿದುಕೊಂಡಿದ್ದರೂ ವಿದುರನ ಸಲಹೆಯಂತೆ ಅವನ್ನು ಸಹಿಸಿಕೊಂಡು ಬಹಿರಂಗಗೊಳಿಸದೇ ಇದ್ದರು. ಪಾಂಡುಸುತರು ಸುಗುಣಗಳಿಂದ ಬೆಳೆಯುತ್ತಿರುವುದನ್ನು ನೋಡಿದ ಪೌರರು ಚೌಕಗಳಲ್ಲಿ ಸೇರಿದಾಗಲೆಲ್ಲೆಲ್ಲಾ ಅವರ ಕುರಿತೇ ಮಾತನಾಡುತ್ತಿದ್ದರು.
“ಮೊದಲು ಪ್ರಜ್ಞಾಚಕ್ಷು ಜನೇಶ್ವರ ಧೃತರಾಷ್ಟ್ರನಿಗೆ ಕುರುಡನಾಗಿದ್ದಾನೆಂದು ರಾಜ್ಯವು ದೊರೆಯಲಿಲ್ಲ. ಈಗ ಹೇಗೆ ರಾಜನಾಗಿದ್ದಾನೆ? ಹಿಂದೆ ರಾಜ್ಯವನ್ನು ತಿರಸ್ಕರಿಸಿದ ಸತ್ಯಸಂಧ ಮಹಾವ್ರತ ಶಾಂತನವ ಭೀಷ್ಮನು ಮುಂದೆ ಎಂದೂ ಅದನ್ನು ಸ್ವೀಕರಿಸುವುದಿಲ್ಲ. ಹಾಗಿದ್ದಾಗ ಈಗ ತರುಣನಾಗಿದ್ದರೂ ವೃದ್ಧರಂತೆ ಶೀಲವಂತ, ಸತ್ಯನೂ ಕರುಣವೇದಿಯೂ ಆದ ಜ್ಯೇಷ್ಠ ಪಾಂಡವನನ್ನು ನಾವು ಅಭಿಷೇಕಿಸಬೇಕು. ಆ ಧರ್ಮವಿದನೇ ಶಾಂತನವ ಭೀಷ್ಮ, ಪುತ್ರರಿಂದೊಡಗೂಡಿದ ಧೃತರಾಷ್ಟ್ರ ಇವರನ್ನು ಪೂಜಿಸಿ ವಿವಿಧ ಭೋಗಗಳಿಗೆ ಏರ್ಪಾಡುಮಾಡಿಕೊಡುತ್ತಾನೆ.”
ದುರ್ಮತಿ ದುರ್ಯೋಧನನು ಯುಧಿಷ್ಠಿರನ ಅನುರಕ್ತರು ಮಾತನಾಡಿಕೊಳ್ಳುತ್ತಿದ್ದ ಈ ವಾಕ್ಯಗಳನ್ನು ಕೇಳಿ ಪರಿತಪಿಸಿದನು. ಆ ದುಷ್ಟಾತ್ಮನು ಅವರ ಈ ಮಾತುಗಳಿಂದ ಬೆಂದು, ಅವನ್ನು ಕ್ಷಮಿಸಲಾಗದೇ, ಈರ್ಷೆಯಿಂದ ಸಂತಪ್ತನಾಗಿ ಧೃತರಾಷ್ಟ್ರನಲ್ಲಿಗೆ ಬಂದನು. ಅವನು ಒಬ್ಬನೇ ಇದ್ದುದನ್ನು ನೋಡಿ ತನ್ನ ತಂದೆಗೆ ನಮಸ್ಕರಿಸಿ, ಪೌರರ ಬಯಕೆಗಳಿಂದ ಸಂತಪ್ತನಾಗಿ, ಈ ಮಾತುಗಳನ್ನಾಡಿದನು:
“ತಂದೇ! ಪೌರರ ಅಶುಭ ತೊದಲಿಕೆಯ ಮಾತುಗಳನ್ನು ಕೇಳಿದ್ದೇನೆ. ನಿನ್ನನ್ನು ಮತ್ತು ಭೀಷ್ಮನನ್ನು ಅನಾದರಿಸಿ ಅವರು ಪಾಂಡವನನ್ನು ತಮ್ಮ ರಾಜನನ್ನಾಗಿ ಬಯಸುತ್ತಾರೆ. ರಾಜ್ಯವನ್ನು ಬಯಸದ ಭೀಷ್ಮನೇನೋ ಇದಕ್ಕೆ ಒಪ್ಪಿಕೊಳ್ಳಬಹುದು. ಆದರೆ ನಮ್ಮ ಮೇಲೆ ಪುರದ ಜನರು ಅತಿ ದೊಡ್ಡ ಪೀಡೆಯನ್ನು ತರಲು ಬಯಸುತ್ತಿದ್ದಾರೆ. ಹಿಂದೆ ಪಾಂಡುವು ತನ್ನ ಗುಣಗಳ ಕಾರಣಗಳಿಂದ ತನ್ನ ತಂದೆಯಿಂದ ರಾಜ್ಯವನ್ನು ಪಡೆದನು. ರಾಜ್ಯವು ನಿನಗೆ ಪ್ರಾಪ್ತಿಯಾಗುತ್ತಿದ್ದರೂ ನಿನ್ನ ಅವಗುಣದ ಕಾರಣದಿಂದ ಅದು ನಿನಗೆ ದೊರೆಯಲಿಲ್ಲ. ಈಗ ಪಾಂಡುವಿನ ದಾಯಾದ್ಯವು ಪಾಂಡವನಿಗೆ ದೊರೆತರೆ ಅದು ಮುಂದೆ ಅವನ ಮಗನಿಗೆ, ಮತ್ತೆ ಅವನ ಮಗನಿಗೆ ದೊರೆಯುವುದು ನಿರ್ದಿಷ್ಟ. ನಾವಾದರೂ ನಮ್ಮ ಮಕ್ಕಳೊಂದಿಗೆ ರಾಜವಂಶವನ್ನು ಕಳೆದುಕೊಂಡು ಲೋಕದಲ್ಲಿ ಯಾರಿಗೂ ತಿಳಿಯದವರಂತೆ ಆಗಿಬಿಡುತ್ತೇವೆ. ನಾವು ಈ ರೀತಿ ಪರ ಪಿಂಡದ ಉಪಜೀವನವೆಂಬ ಸತತ ನರಕಕ್ಕೆ ಹೋಗುವ ಮುನ್ನ ಇದಕ್ಕೆ ಏನನ್ನಾದರೂ ಶೀಘ್ರವಾಗಿ ಕ್ರಮತೆಗೆದುಕೋ. ಹಿಂದೆ ನೀನೇ ರಾಜ್ಯದಲ್ಲಿ ಸ್ಥಿರವಾಗಿ ಅಭಿಷಿಕ್ತನಾಗಿದ್ದರೆ, ಜನರಿಗೆ ಇಷ್ಟವಿಲ್ಲದಿದ್ದರೂ ನಿಶ್ಚಯವಾಗಿ ನಾವೇ ರಾಜ್ಯವನ್ನು ಪಡೆಯುತ್ತಿದ್ದೆವು.”
ಪುತ್ರ ದುರ್ಯೋಧನನ ಈ ಮಾತುಗಳನ್ನು ಕೇಳಿದ ಧೃತರಾಷ್ಟ್ರನು ಒಂದು ಕ್ಷಣ ಯೋಚಿಸಿ ಹೇಳಿದನು:
“ಧರ್ಮನಿತ್ಯ ಪಾಂಡುವು ಸದಾ ಎಲ್ಲ ಬಾಂಧವರಿಗೂ, ಅದರಲ್ಲೂ ವಿಶೇಷವಾಗಿ ನನಗೆ ಪ್ರಿಯವಾದುದನ್ನೇ ಮಾಡುತ್ತಿದ್ದನು. ಅವನು ತನಗಾಗಿ ಭೋಜನವೇ ಇತ್ಯಾದಿ ಏನನ್ನೂ ಬಯಸಿದ್ದುದನ್ನು ತಿಳಿದಿಲ್ಲ. ಆ ಧೃತವ್ರತನು ರಾಜ್ಯವನ್ನು ಹೇಗೋ ಹಾಗೆ ನನಗೆ ಎಲ್ಲವನ್ನೂ ಕೊಡುತ್ತಿದ್ದನು. ಪಾಂಡುವಿನ ಹಾಗೆ ಅವನ ಪುತ್ರನೂ ಕೂಡ ಧರ್ಮಪರಾಯಣನಾಗಿದ್ದಾನೆ, ಗುಣದಲ್ಲಿ ಲೋಕವಿಖ್ಯಾತನಾಗಿದ್ದಾನೆ, ಮತ್ತು ಪೌರರ ಸುಸಮ್ಮತನಾಗಿದ್ದಾನೆ. ನಾವಾದರೂ ಹೇಗೆ, ವಿಶೇಷವಾಗಿ ಸಸಹಾಯನಾದ ಅವನನ್ನು ಬಲವಂತವಾಗಿ ತನ್ನ ಪಿತೃ ಪಿತಾಮಹರ ರಾಜ್ಯದಿಂದ ಹೊರಗಟ್ಟಲು ಸಾದ್ಯ? ಪಾಂಡುವು ಸತತವಾಗಿ ಅಮಾತ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು, ಸೇನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು, ಮತ್ತು ವಿಶೇಷವಾಗಿ ತನ್ನ ಪುತ್ರ-ಪೌತ್ರರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಹಿಂದೆ ಪಾಂಡುವು ಪೌರವ ಜನರೆಲ್ಲರನ್ನೂ ಸತ್ಕರಿಸುತ್ತಿದ್ದನು. ಮಗನೇ ಯುಧಿಷ್ಠಿರನ ಸಲುವಾಗಿ ಸಬಾಂಧವರಾಗಿ ನಮ್ಮನ್ನೆಲ್ಲ ಅವರು ಕೊಲ್ಲುವುದಿಲ್ಲವೇ?”
ದುರ್ಯೋಧನನು ಹೇಳಿದನು:
“ತಂದೇ! ಈ ದೋಷದ ಕುರಿತು ನಾನು ಇದಾಗಲೇ ಯೋಚಿಸಿದ್ದೇನೆ. ಪ್ರಕೃತಿಯಲ್ಲಿರುವ ಎಲ್ಲವನ್ನೂ ನೋಡಿದಾಗ ಹಣ ಮತ್ತು ಅನುಕೂಲಗಳನ್ನು ಪಡೆದಿರುವ ಪ್ರಜೆಗಳು ತಮ್ಮ ನಿಷ್ಠತೆಯನ್ನು ನಿಶ್ಚಯವಾಗಿಯೂ ನಮ್ಮ ಮೇಲೆ ಬದಲಾಯಿಸುತ್ತಾರೆ. ಅರ್ಥವರ್ಗ ಮತ್ತು ಅದಕ್ಕೆ ಸಂಬಂಧಿಸಿದ ಅಮಾತ್ಯರು ಈಗ ನನ್ನ ವಶದಲ್ಲಿದ್ದಾರೆ. ನೀನು ಪಾಂಡವರನ್ನು ಯಾವುದಾದರೂ ಮೃದು ಉಪಾಯದಿಂದ ವಾರಣಾವತ ನಗರದಲ್ಲಿರುವಂತೆ ಮಾಡಬೇಕು. ಯಾವಾಗ ಈ ರಾಜ್ಯವು ನನ್ನಲ್ಲಿ ಪ್ರತಿಷ್ಠಿತವಾಗುತ್ತದೆಯೋ ಆಗ ಕುಂತಿಯು ತನ್ನ ಮಕ್ಕಳಿಂದೊಡಗೂಡಿ ಪುನಃ ಇಲ್ಲಿಗೆ ಬರಬಹುದು.”
ಧೃತರಾಷ್ಟ್ರನು ಹೇಳಿದನು:
“ದುರ್ಯೋಧನ! ನಾನೂ ಕೂಡ ಅದೇ ಉಪಾಯವನ್ನು ಯೋಚಿಸಿದ್ದೆ. ಆದರೆ ಈ ಪಾಪಿ ಅಭಿಪ್ರಾಯವನ್ನು ಯಾರಿಗೂ ತಿಳಿಸಿರಲಿಲ್ಲ. ಭೀಷ್ಮನಾಗಲೀ ದ್ರೊಣನಾಗಲೀ ಕ್ಷತ್ತನಾಗಲೀ ಗೌತಮನಾಗಲೀ ಯಾರೂ ಸಹ ಕೌಂತೇಯರನ್ನು ಹೊರಗಟ್ಟುವುದನ್ನು ಎಂದೂ ಸಮ್ಮತಿಸುವುದಿಲ್ಲ. ಪುತ್ರಕ! ಆ ಕೌರವರಿಗೆ ನಾವೂ ಮತ್ತು ಅವರೂ ಒಂದೇ. ಈ ಧರ್ಮಯುಕ್ತ ಮನಸ್ವಿಗಳು ಈ ರೀತಿಯ ವಿಷಮವನ್ನು ಎಂದೂ ಸಹಿಸುವುದಿಲ್ಲ. ಈ ಮಹಾತ್ಮ ಕೌರವರನ್ನು ಕೊಂದು ನಾವು ಹೇಗೆ ತಾನೆ ಜಗತ್ತಿನಲ್ಲಿ ಇರಲು ಸಾಧ್ಯ?”
ದುರ್ಯೋಧನನು ಹೇಳಿದನು:
“ಭೀಷ್ಮನು ಯಾವಾಗಲೂ ಮಧ್ಯಸ್ಥನಾಗಿರುತ್ತಾನೆ. ದ್ರೋಣ ಪುತ್ರನು ನನ್ನ ಕಡೆ ಇದ್ದಾನೆ. ಮತ್ತು ತನ್ನ ಪುತ್ರನೆಲ್ಲಿರುತ್ತಾನೋ ಅಲ್ಲಿ ದ್ರೋಣನಿರುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವರು ಮೂವರೂ ಎಲ್ಲಿ ಇರಲಿಕ್ಕಾಗುತ್ತದೆಯೋ ಅಲ್ಲಿ ಕೃಪ ಶಾರದ್ವತನೂ ಸೇರುತ್ತಾನೆ. ಅವನು ಎಂದೂ ದ್ರೋಣ ಮತ್ತು ತನ್ನ ತಂಗಿಯ ಮಗನನ್ನು ಬಿಟ್ಟಿರುವುದಿಲ್ಲ. ಅವನು ಬೇರೆಯವರೊಂದಿಗೆ ಗೌಪ್ಯವಾಗಿ ಎಷ್ಟೇ ಸೇರಿದರೂ, ಕ್ಷತ್ತನ ಜೀವನವು ನಮ್ಮೊಂದಿಗೆ ಬಂಧಿಸಲ್ಪಟ್ಟಿದೆ. ಪಾಂಡವರ ಪರವಾಗಿ ಏಕೈಕನಾದ ಅವನು ನಮಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟುಮಾಡಲಿಕ್ಕೂ ಸಮರ್ಥನಲ್ಲ. ನೀನು ಬೇಕಾದರೆ ಇಂದೇ ತಾಯಿಯೊಂದಿಗೆ ಪಾಂಡುಪುತ್ರರನ್ನು ನಿಸ್ಸಂಕೋಚವಾಗಿ ವಾರಣಾವತಕ್ಕೆ ಕಳುಹಿಸಬಹುದು. ಇದರಿಂದ ಯಾವ ದೋಷವೂ ಉಂಟಾಗುವುದಿಲ್ಲ. ಹೀಗೆ ಮಾಡಿ ನನ್ನ ಹೃದಯವನ್ನು ಚುಚ್ಚಿ ಶೋಕದ ಪಾವಕನನ್ನು ಹುಟ್ಟಿಸಿರುವ ಈ ಒಂದು ಅತಿ ಘೋರ ಮುಳ್ಳನ್ನು ನಾಶಪಡಿಸು.”
ನಂತರ ದುರ್ಯೋಧನನು ತನ್ನ ತಮ್ಮಂದಿರೊಡಗೂಡಿ ಹಣ ಮತ್ತು ಗೌರವಗಳನ್ನು ನೀಡುತ್ತಾ ಕ್ರಮೇಣವಾಗಿ ಎಲ್ಲ ಪ್ರಜೆಗಳನ್ನೂ ಗೆಲ್ಲ ತೊಡಗಿದನು. ಧೃತರಾಷ್ಟ್ರನ ಆದೇಶದಂತೆ ಕೆಲವು ಕುಶಲಮಂತ್ರಿಗಳು ವಾರಣಾವತ ನಗರದ ರಮ್ಯತೆಯ ಕುರಿತಾಗಿ ಕಥೆಗಳನ್ನು ಕಟ್ಟಿ ಹೇಳ ತೊಡಗಿದರು:
“ಭುವಿಯಲ್ಲೆ ರಮಣೀಯತಮ ಪಶುಪತಿಯ ನಗರ ವಾರಣಾವತದಲ್ಲಿ ಅತಿ ದೊಡ್ಡ ಸಮ್ಮೇಳನವು ನಡೆಯಲಿದೆ. ಮನೋರಮೆ ಆ ಶ್ರೇಷ್ಠ ನಗರವು ಸರ್ವರತ್ನ ಸಮಾಕೀರ್ಣವಾಗಿದೆ.”
ಹೀಗೆಂದು ಧೃತರಾಷ್ಟ್ರನ ಜನರು ಕಥೆಗಳನ್ನು ಹರಡಿಸಿದರು. ಈ ರೀತಿ ರಮ್ಯ ವಾರಣಾವತ ನಗರದ ಕುರಿತು ಹೇಳಿದ್ದುದನ್ನು ಕೇಳಿದ ಪಾಂಡುಪುತ್ರರಲ್ಲಿ ಅಲ್ಲಿಗೆ ಹೋಗುವ ಅಭಿಪ್ರಾಯವುಂಟಾಯಿತು. ಅವರಲ್ಲಿ ಕುತೂಹಲ ಮೂಡಿದೆ ಎಂದು ತಿಳಿದ ನೃಪ ಅಂಬಿಕಾಸುತನು ಪಾಂಡವರನ್ನು ಕರೆಯಿಸಿ ಅವರಿಗೆ ಹೇಳಿದನು:
“ನನ್ನ ಜನರು ನಿತ್ಯವೂ ಪುನಃ ಪುನಃ ವಾರಾಣಾವತ ನಗರವು ಲೋಕದಲ್ಲೇ ರಮಣೀಯತರವಾದುದು ಎಂದು ಹೇಳುತ್ತಿರುತ್ತಾರೆ. ಮಗನೇ! ವಾರಣಾವತ ಉತ್ಸವನ್ನು ನೋಡುವ ಮನಸ್ಸಿದ್ದರೆ ನಿನ್ನ ಅನುಯಾಯಿ ಗಣದೊಂದಿಗೆ ಅಲ್ಲಿ ಅಮರರಂತೆ ವಿಹರಿಸು. ಸುವರ್ಚಸ ದೇವತೆಗಳಂತೆ ನಿನಗಿಷ್ಟಬಂದಂತೆ ಬ್ರಾಹ್ಮಣರಿಗೆ ಮತ್ತು ಗಾಯಕರೆಲ್ಲರಿಗೂ ರತ್ನಗಳನ್ನು ಕೊಡು. ಸ್ವಲ್ಪ ಕಾಲ ಅಲ್ಲಿದ್ದು ಸಂಪೂರ್ಣ ಸಂತೋಷವನ್ನು ಹೊಂದಿಯಾದ ನಂತರ ನೀನು ಸುಖದಿಂದ ಪುನಃ ಈ ಹಸ್ತಿನಾಪುರಕ್ಕೆ ಬರಬಹುದು.”
ಇದು ಧೃತರಾಷ್ಟ್ರನ ಆಸೆ ಎಂದು ತಿಳಿದ ಯುಧಿಷ್ಠಿರನು ತನ್ನ ಅಸಹಾಯಕತೆಯನ್ನು ತಿಳಿದು ಹಾಗೆಯೇ ಆಗಲೆಂದು ಉತ್ತರಿಸಿದನು. ನಂತರ ಯುಧಿಷ್ಠಿರನು ದೀನನಾಗಿ ಮೆಲ್ಲಗೆ ಮಹಾಪ್ರಾಜ್ಞ ಭೀಷ್ಮ, ಮಹಾಮತಿ ವಿದುರ, ದ್ರೋಣ, ಬಾಹ್ಲೀಕ, ಕೌರವ ಸೋಮದತ್ತ, ಕೃಪ, ಆಚಾರ್ಯ ಪುತ್ರ ಮತ್ತು ಯಶಸ್ವಿನಿ ಗಾಂಧಾರಿಯಲ್ಲಿ ಹೇಳಿದನು:
“ಧೃತರಾಷ್ಟ್ರನ ಆದೇಶದಂತೆ ನಾವು ನಮ್ಮವರೊಂದಿಗೆ ಜನಸಂಧಣಿಯ ರಮಣೀಯ ವಾರಣಾವತ ನಗರದಲ್ಲಿ ಹೋಗಿ ವಾಸಿಸುತ್ತೇವೆ. ಎಲ್ಲರೂ ಪ್ರಸನ್ನ ಮನಸ್ಕರಾಗಿ ಪುಣ್ಯ ಮಾತುಗಳಿಂದ ನೀವು ನೀಡಿದ ಆಶೀರ್ವಾದದ ಬಲದಿಂದ ನಮಗೆ ಯಾವುದೇ ರೀತಿಯ ಕಷ್ಟವೂ ಬರುವುದಿಲ್ಲ.”
ಪಾಂಡುಪುತ್ರನ ಈ ಮಾತುಗಳಿಗೆ ಸರ್ವ ಕೌರವರೂ ಪ್ರಸನ್ನವದನರಾಗಿ ಪಾಂಡವರನ್ನು ಬೀಳ್ಕೊಟ್ಟರು:
“ನಿನ್ನ ದಾರಿಯಲ್ಲಿ ಎಲ್ಲ ಭೂತಗಳಿಂದಲೂ ಮಂಗಳವುಂಟಾಗಲಿ. ಪಾಂಡುನಂದನ! ಯಾವ ಕಡೆಯಿಂದಲೂ ಯಾವುದರಿಂದಲೂ ನಿನಗೆ ಅಶುಭವು ಬಾರದಿರಲಿ.”
ನಂತರ ಶುಭ ಪ್ರಯಾಣದ ಆಶೀರ್ವಾದಗಳನ್ನು ಹೊತ್ತ ಪಾಂಡವರು ರಾಜ್ಯಲಾಭಕ್ಕೆಂದು ಬೇಕಾದ ಎಲ್ಲ ಕಾರ್ಯಗಳನ್ನೂ ನೆರವೇರಿಸಿ ವಾರಣಾವತಕ್ಕೆ ಹೊರಟರು.
ರಾಜನು ಮಹಾತ್ಮ ಪಾಂಡವನಿಗೆ ಈ ರೀತಿ ಹೇಳಿದ್ದುದರಿಂದ ದುರಾತ್ಮ ದುರ್ಯೋಧನನು ಬಹಳ ಹರ್ಷಗೊಂಡನು. ಅವನು ತನ್ನ ಸಚಿವ ಪುರೋಚನನನ್ನು ಏಕಾಂತದಲ್ಲಿ ಕರೆದು ಅವನ ಬಲಗೈಯನ್ನು ಹಿಡಿದು ಈ ಮಾತುಗಳನ್ನಾಡಿದನು:
“ಪುರೋಚನ! ವಸುಸಂಪೂರ್ಣ ಈ ವಸುಂಧರೆಯು ನನ್ನವಳಾದಹಾಗೆ. ನನ್ನವಳಾದ ಅವಳನ್ನು ನಿನಗೂ ಕೊಟ್ಟಿದ್ದೇನೆ. ಅವಳನ್ನು ರಕ್ಷಿಸಬೇಕು. ನಿನ್ನಲ್ಲಿದ್ದಷ್ಟು ವಿಶ್ವಾಸವು ನನಗೆ ಬೇರೆ ಯಾರಲ್ಲಿಯೂ ಇಲ್ಲ. ನನಗೆ ಈ ಸಹಾಯವನ್ನು ಮಾಡಿದೆಯೆಂದರೆ ನಿನಗೆ ಮಂತ್ರಿತ್ವವನ್ನು ನೀಡುವ ಭರವಸೆ ಕೊಡುತ್ತೇನೆ. ಈ ಸಮಾಲೋಚನೆಯನ್ನು ಗೌಪ್ಯವಾಗಿಡು. ನಿನ್ನ ನಿಪುಣ ಉಪಾಯಗಳಿಂದ ನನ್ನ ಪ್ರತಿದ್ವಂದಿಗಳನ್ನು ನಾಶಗೊಳಿಸು. ನಾನು ಹೇಳಿದ ಹಾಗೆ ಮಾಡು. ಧೃತರಾಷ್ಟ್ರನು ಪಾಂಡವರನ್ನು ವಾರಣಾವತಕ್ಕೆ ಕಳುಹಿಸುತ್ತಿದ್ದಾನೆ. ಧೃತರಾಷ್ಟ್ರನ ಆದೇಶದಂತೆ ಅವರು ಅಲ್ಲಿ ಉತ್ಸವದಲ್ಲಿ ವಿಹರಿಸುತ್ತಾರೆ. ನೀನು ಇಂದೇ ವೇಗವಾಗಿ ಓಡುವ ರಾಸಭಗಳ ಗಾಡಿಯಲ್ಲಿ ವಾರಣಾವತವನ್ನು ಸೇರಿ ನಾನು ಹೇಳಿದ ಹಾಗೆ ಮಾಡು. ಅಲ್ಲಿ ಹೋಗಿ ಪರಮಸಂವೃತ ನಾಲ್ಕು ಕೋಣೆಗಳನ್ನುಳ್ಳ ಆಯುಧಾಗಾರದ ಬಳಿಯಲ್ಲಿಯೇ ಬೆಲೆಬಾಳುವ ಗೃಹವೊಂದನ್ನು ನಿರ್ಮಿಸು. ಶಣ ಸರ್ಜರ ಮೊದಲಾದ ಮತ್ತು ಯಾವುದಾದರೂ ಅಗ್ನಿಯಲ್ಲಿ ಸುಟ್ಟುಹೋಗಬಲ್ಲಂತಹ ಎಲ್ಲ ವಸ್ತುಗಳನ್ನೂ ಬಳಸು. ಅವುಗಳನ್ನು ತೈಲ, ಅರಗು ಮತ್ತು ತುಪ್ಪಗಳಿಂದ ಮಣ್ಣಿನಲ್ಲಿ ಸೇರಿಸಿ ಅದನ್ನು ಗೋಡೆಗಳಿಗೆ ಲೇಪಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಸೆಣಬು, ಬಿದಿರು, ತುಪ್ಪ, ಮರ, ಮತ್ತು ಮರದ ಪುಡಿಯನ್ನು ಸೇರಿಸಬೇಕು. ಆದರೆ ಪಾಂಡವರು ಪರೀಕ್ಷಿಸಿದರೂ ಅವರಿಗೆ ಶಂಕೆಯುಂಟಾಗಬಾರದ ಹಾಗಿರಬೇಕು. ಅಥವಾ ಬೇರೆ ಯಾರಿಗೂ ಇದೊಂದು ಅಗ್ನಿಯ ಶಲ್ಯಂತ್ರವೆಂದು ತಿಳಿಯಬಾರದು. ಈ ರೀತಿ ಮನೆಯನ್ನು ನಿರ್ಮಿಸಿ, ಅವರನ್ನು ಸತ್ಕರಿಸಿ ಪಾಂಡವರು ಮತ್ತು ಸಖೀಮೇಳದೊಂದಿಗೆ ಅಲ್ಲಿ ವಾಸಿಸಲು ಕುಂತಿಯನ್ನು ಆಗ್ರಹಿಸಬೇಕು. ನನ್ನ ತಂದೆಗೆ ತೃಪ್ತಿಕೊಡುವಷ್ಟು ಅಲ್ಲಿ ಪಾಂಡವರಿಗಾಗಿ ಆಸನಗಳ, ಹಾಸಿಗೆಗಳ, ಮಂಚಗಳ, ಮತ್ತು ವಾಹನಗಳ ವ್ಯವಸ್ಥೆಯಾಗಬೇಕು. ವಾರಣಾವತ ನಗರಿಯಲ್ಲಿ ಅವರು, ನಮ್ಮ ಸಮಯವು ಬರುವವರೆಗೆ, ಯಾವುದೇ ರೀತಿಯ ಸಂಶಯವನ್ನೂ ಹೊಂದದೇ ವಿಶ್ರಾಂತಿಪಡೆಯುತ್ತಿರಬೇಕು. ಅವರಿಗೆ ಬರುವ ಅಪಾಯದ ಯಾವ ಶಂಕೆಯೂ ಇಲ್ಲ ಎಂದು ಖಾತ್ರಿಪಡಿಸಿಕೊಂಡ ನಂತರ ಅವರು ನಿರ್ಭಯರಾಗಿ ಮಲಗಿಕೊಂಡಿದ್ದಾಗ ದ್ವಾರದಲ್ಲಿಯೇ ಬೆಂಕಿಯನ್ನು ಹಾಕಿ ಹೊತ್ತಿಸಬೇಕು. ಈ ರೀತಿ ಬೆಂಕಿಯಲ್ಲಿ ಸುಟ್ಟು ತೀರಿಕೊಂಡಾಗ ಪಾಂಡವರು ಅವರ ಮನೆಯಲ್ಲಿಯೇ ಜೀವಂತ ಸುಟ್ಟುಹೋದರು ಎಂದು ಅವರ ಜನರೆಲ್ಲರೂ ತಿಳಿದುಕೊಳ್ಳುತ್ತಾರೆ.”
ಪುರೋಚನನು ಕೌರವನಿಗೆ ಹಾಗೆಯೇ ಮಾಡುತ್ತೇನೆಂದು ಪ್ರತಿಜ್ಞೆಯನ್ನಿತ್ತು ಕತ್ತೆಯ ಬಂಡಿಯನ್ನೇರಿ ವಾರಣಾವತ ನಗರಿಗೆ ಹೊರಟನು. ದುರ್ಯೋಧನನಿಗೆ ವಿನೀತ ಪುರೋಚನನು ಬೇಗನೆ ಹೋಗಿ ರಾಜಪುತ್ರನು ಹೇಳಿದ ಹಾಗೆಯೇ ಎಲ್ಲವನ್ನೂ ಮಾಡಿದನು.
ಅನಿಲೋಪಮ ಉತ್ತಮ ಅಶ್ವಗಳನ್ನು ಕಟ್ಟಿದ್ದ ರಥಗಳನ್ನು ಏರುವಾಗ ಆರ್ತ ಪಾಂಡವರು ಭೀಷ್ಮ, ರಾಜ ಧೃತರಾಷ್ಟ್ರ, ಮಹಾತ್ಮ ದ್ರೋಣ, ವಿದುರ, ಕೃಪ ಮತ್ತು ಅನ್ಯ ವೃದ್ಧರ ಪಾದಗಳಿಗೆರಗಿದರು. ಹೀಗೆ ಎಲ್ಲ ಕುರುವೃದ್ಧರಿಗೂ ಅಭಿವಂದಿಸಿ ಯತವ್ರತರು ಸಮಾನರನ್ನು ಆಲಿಂಗಿಸಿದರು ಮತ್ತು ಕಿರಿಯರಿಂದ ಅಭಿವಂದಿಸಲ್ಪಟ್ಟರು. ಎಲ್ಲ ತಾಯಂದಿರಿಗೂ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಎಲ್ಲ ಪ್ರಜೆಗಳಿಂದ ಬೀಳ್ಕೊಂಡು ವಾರಣಾವತಕ್ಕೆ ಹೊರಟರು. ಮಹಾಪ್ರಾಜ್ಞ ವಿದುರ, ಅನ್ಯ ಕುರುಪುಂಗವರು ಮತ್ತು ಶೋಕಾರ್ತ ಪೌರರು ಆ ಪುರುಷವ್ಯಾಘ್ರರನ್ನು ಹಿಂಬಾಲಿಸಿದರು. ಅಲ್ಲಿಯೇ ಇದ್ದ ಕೆಲ ನಿರ್ಭಯ ಬ್ರಾಹ್ಮಣರು ಪಾಂಡುಪುತ್ರರಿಗಾಗಿ ಅತೀವ ದುಃಖಿತರಾಗಿ ಹೇಳಿಕೊಳ್ಳುತ್ತಿದ್ದರು:
“ವಿಷಮ ರಾಜ ಧೃತರಾಷ್ಟ್ರನು ಎಲ್ಲೆಡೆಯಲ್ಲಿಯೂ ಕತ್ತಲೆಯನ್ನೇ ಕಾಣುತ್ತಿದ್ದಾನೆ. ದುರ್ಭುದ್ಧಿಯು ಧರ್ಮವನ್ನೇ ನೋಡುವುದಿಲ್ಲ. ಅಪಾಪಾತ್ಮ ಪಾಂಡವನು ಪಾಪಗೈಯುವವನೇ ಅಲ್ಲ; ಬಲಿಗಳಲ್ಲಿ ಶ್ರೇಷ್ಠ ಭೀಮನಾಗಲೀ, ಕೌಂತೇಯ ಧನಂಜಯನಾಗಲೀ, ಮಹಾಪ್ರಾಜ್ಞ ಮಾದ್ರೀಪುತ್ರರಾಗಲೀ ಪಾಪವನ್ನೆಂದೂ ಎಸಗುವುದಿಲ್ಲ. ಅವರು ಪಿತೃವಿನಿಂದ ರಾಜ್ಯವನ್ನು ಪಡೆದಿದ್ದುದು ಧೃತರಾಷ್ಟ್ರನಿಗೆ ಸಹಿಸಲಿಕ್ಕಾಗಲಿಲ್ಲ. ಭರತರ್ಷಭ ಕೌಂತೇಯರನ್ನು ಏನೂ ಕಾರಣವಿಲ್ಲದೇ ಹೊರಗಟ್ಟುವ ಈ ಅತಿದೊಡ್ಡ ಅಧರ್ಮಕ್ಕೆ ಭೀಷ್ಮನಾದರೂ ಹೇಗೆ ಅನುಮತಿಯನ್ನಿತ್ತ? ಹಿಂದೆ ಶಾಂತನವ ವಿಚಿತ್ರವೀರ್ಯ ಮತ್ತು ಕುರುನಂದನ ಪಾಂಡು ಇಬ್ಬರೂ ನಮ್ಮ ತಂದೆಗಳಂತಿದ್ದರು. ಆ ಪುರುಷವ್ಯಾಘ್ರನು ದೈವಾಧೀನನಾದ ನಂತರ ಬಾಲಕರಾದ ಈ ರಾಜಪುತ್ರರನ್ನು ಧೃತರಾಷ್ಟ್ರನಿಗೆ ಸಹಿಸಲಾಗುತ್ತಿಲ್ಲ. ನಮಗೆ ಕೂಡ ಅವನನ್ನು ಸಹಿಸಲಾಗುತ್ತಿಲ್ಲ. ನಾವೆಲ್ಲರೂ ಈ ಉತ್ತಮ ನಗರಿ-ಮನೆಗಳನ್ನು ತೊರೆದು ಯುಧಿಷ್ಠಿರನು ಹೋಗುವಲ್ಲಿಗೆ ಹೋಗೋಣ.”
ದುಃಖಿತ ಪೌರರು ಈ ರೀತಿ ಮಾತನಾಡಿಕೊಳ್ಳುತ್ತಿರುವಾಗ ದುಃಖಕರ್ಶಿತ ಧರ್ಮರಾಜ ಯುಧಿಷ್ಠಿರನು ಪರಮಪ್ರೀತನಾಗಿ ಹೇಳಿದನು:
“ಗುರುವಿನಂತೆ ಶ್ರೇಷ್ಠ ಪೃಥ್ವೀಪತಿಯನ್ನು ತಂದೆಯಂತೆ ಮನ್ನಿಸಬೇಕು. ಅವನು ನಮಗೆ ಏನನ್ನು ಹೇಳುತ್ತಾನೋ ಅದನ್ನು ಸ್ವಲ್ಪವೂ ಶಂಕಿಸದೇ ಮಾಡುತ್ತೇವೆ ಎನ್ನುವುದು ನಮ್ಮ ವ್ರತ. ನೀವು ನಮ್ಮ ಸುಹೃದಯರು. ನಮಗೆ ಪ್ರದಕ್ಷಿಣೆ ಮಾಡಿ ಆಶೀರ್ವದಿಸಿ ನಮ್ಮನ್ನು ಅಭಿನಂದಿಸಿ ನಿಮ್ಮ ನಿಮ್ಮ ಮನೆಗಳಿಗೆ ತೆರಳಿ. ನಿಮ್ಮಿಂದ ನಮಗೆ ಯಾವಾಗಲಾದರೂ ಕಾರ್ಯವಾಗಬೇಕೆಂದಾಗ ನನಗೆ ಪ್ರಿಯ ಮತ್ತು ಹಿತಕರವಾದವುಗಳನ್ನು ಮಾಡುವಿರಂತೆ.”
ಅವರು ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿ ಅವರಿಗೆ ಪ್ರದಕ್ಷೆಣೆ ಮಾಡಿ ಆಶೀರ್ವದಿಸಿ-ಅಭಿನಂದಿಸಿ ನಗರಕ್ಕೆ ಹಿಂದಿರುಗಿದರು.
ಪೌರರು ಹಿಂದಿರುಗಿದ ನಂತರ ಸರ್ವ ಧರ್ಮವಿದ ವಿದುರನು ಪಾಂಡವಶ್ರೇಷ್ಠನಿಗೆ ಬೋಧಿಸುತ್ತಾ ಪ್ರಾಜ್ಞನು ಧರ್ಮಾರ್ಥದರ್ಶಿ ಒಗಟುಗಳನ್ನು ಅರಿಯಬಲ್ಲ ಪ್ರಾಜ್ಞನಿಗೆ ಹೇಳುವಂತೆ ಈ ಮಾತುಗಳನ್ನಾಡಿದನು:
“ತಿಳಿದಿರುವವನು ಆಪತ್ತನ್ನು ಗೆಲ್ಲಲು ಪ್ರಯತ್ನಿಸುತ್ತಾನೆ. ಲೋಹವಲ್ಲದ ಆದರೂ ಮೊನಚಾದ ಶಸ್ತ್ರವೊಂದು ಶರೀರವನ್ನು ಆವರಿಸಿದೆ. ಇದನ್ನು ತಿಳಿದವನನ್ನು ಯಾವ ಆಯುಧವೂ ಕೊಲ್ಲುವುದಿಲ್ಲ ಆದರೆ ಶತ್ರುವನ್ನು ಎದುರಿಸುತ್ತದೆ. ಕಕ್ಷಗಳನ್ನು ಮತ್ತು ಛಳಿಯನ್ನು ಕೊಲ್ಲುವಂತಹ ಆಯುಧವು ವಿಶಾಲ ಬಿಲದಲ್ಲಿರುವುದನ್ನು ಕೊಲ್ಲುವುದಿಲ್ಲ ಎಂದು ತಿಳಿದವನು ತನ್ನನ್ನು ತಾನೇ ರಕ್ಷಿಸಿಕೊಂಡು ಜೀವಿಸುತ್ತಾನೆ. ಕುರುಡನಿಗೆ ದಾರಿ ಕಾಣುವುದಿಲ್ಲ, ಕುರುಡನಿಗೆ ದಿಕ್ಕೇ ಕಾಣುವುದಿಲ್ಲ ಮತ್ತು ತನ್ನ ರಕ್ಷಣೆಯನ್ನು ಮಾಡಿಕೊಳ್ಳದಿರುವವನು ಶ್ರೇಯಸ್ಸನ್ನು ಹೊಂದಲಾರ. ಇದನ್ನು ತಿಳಿದು ಜಾಗರೂಕನಾಗಿರು. ನರನು ಆಪ್ತರಲ್ಲದವರಿಂದ ಕೊಡಲ್ಪಟ್ಟ ಲೋಹವಲ್ಲದ ಈ ಶಸ್ತ್ರವನ್ನು ತೆಗೆದುಕೊಂಡು ಮುಳ್ಳುಹಂದಿಯ ಆಸರೆಯನ್ನು ಪಡೆದು ಬೆಂಕಿಯಿಂದ ಬಿಡುಗಡೆ ಹೊಂದುತ್ತಾನೆ. ನಡೆಯುತ್ತಿರುವ ಮಾರ್ಗಗಳನ್ನು ಮತ್ತು ದಿಕ್ಕುಗಳನ್ನು ನಕ್ಷತ್ರಗಳ ಮೂಲಕ ತಿಳಿದುಕೊಳ್ಳುತ್ತಾನೆ; ತಾನೇ ತನ್ನ ಪಂಚ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮುಳುಗಿಹೋಗುವುದರಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ.”
ಅವರನ್ನು ಅನುಸರಿಸಿ ಹೋಗುತ್ತಿರುವಾಗ ಈ ಸೂಚನೆಗಳನ್ನಿತ್ತ ವಿದುರನು ಪಾಂಡವರಿಗೆ ಪ್ರದಕ್ಷಿಣೆಮಾಡಿ ಅವರನ್ನು ಬೀಳ್ಕೊಟ್ಟು ತನ್ನ ಮನೆಗೆ ಹಿಂದುರಿಗಿದನು.
ವಿದುರ, ಭೀಷ್ಮ, ಮತ್ತು ಪೌರಜನರು ಹಿಂದಿರುಗಿದ ನಂತರ ಕುಂತಿಯು ಅಜಾತಶತ್ರುವನ್ನ ಕರೆದು ಕೇಳಿದಳು:
“ಜನರ ಮಧ್ಯದಲ್ಲಿ ಕ್ಷತ್ತನು ಏನು ಹೇಳಿದನು? ನೀನು ಅದಕ್ಕೆ ಹಾಗೆಯೇ ಆಗಲಿ ಎಂದೆ. ನಮಗೆ ಇದು ಅರ್ಥವಾಗಲಿಲ್ಲ! ನಾವೆಲ್ಲರೂ ಅದನ್ನು ಕೇಳಬಹುದಂಥದ್ದಾಗಿದ್ದರೆ, ಕೆಟ್ಟ ವಿಷಯವಲ್ಲದಿದ್ದರೆ ನಿನ್ನ ಮತ್ತು ಅವನ ಸಂವಾದವೆಲ್ಲವನ್ನು ತಿಳಿಯಲು ಬಯಸುತ್ತೇನೆ.”
ಯುಧಿಷ್ಠಿರನು ಹೇಳಿದನು:
“ವಿದುರನು ನನಗೆ ವಿಷ ಮತ್ತು ಅಗ್ನಿಗಳ ಕುರಿತು ಜಾಗರೂಕನಾಗಿರಲು ಹೇಳಿದನು. ದಾರಿಗಳ್ಯಾವುವೂ ನನಗೆ ತಿಳಿಯದೆ ಇರಬಾರದೆಂದೂ ಹೇಳಿದನು. ಜಿತೇಂದ್ರಿಯನಾಗಿದ್ದು ವಸುಧೆಯನ್ನು ಪ್ರಾಪ್ತಗೊಳಿಸಿಕೊಳ್ಳಬಹುದು ಎಂದೂ ಹೇಳಿದನು. ಅವೆಲ್ಲವೂ ಅರ್ಥವಾಯಿತೆಂದು ನಾನು ವಿದುರನಿಗೆ ಉತ್ತರವಿತ್ತೆ.”
ಫಲ್ಗುಣದ ಎಂಟನೇ ದಿನ ರೋಹಿಣೀ ನಕ್ಷತ್ರದಲ್ಲಿ ಅವರು ವಾರಣಾವತವನ್ನು ಸೇರಿ ನಗರ ಮತ್ತು ಜನರನ್ನು ನೋಡಿದರು. ವಾರಣಾವತದ ಸರ್ವ ಪೌರಜನರೂ ನರಶ್ರೇಷ್ಠ ಪಾಂಡುಪುತ್ರರು ಬಂದಿದ್ದಾರೆಂದು ಕೇಳಿದೊಡನೆ ಅತಿ ಸಂತೋಷದಿಂದ ನಾನಾ ವಾಹನಗಳಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಶಾಸ್ತ್ರಗಳಲ್ಲಿ ಹೇಳಿದ ಎಲ್ಲ ಮಂಗಲ ವಸ್ತುಗಳನ್ನು ತೆಗೆದುಕೊಂಡು ನಗರದಿಂದ ಹೊರಬಂದರು. ವಾರಣಾವತಕ ಜನರು ಕೌಂತೇಯರನ್ನು ತಲುಪಿ ಸರ್ವರೂ ಅವರನ್ನು ಗೌರವದಿಂದ ಸುತ್ತುವರೆದು ಜಯಘೋಷಗೈದರು. ಅವರಿಂದ ಆವೃತ ಪುರುಷವ್ಯಾಘ್ರ ದೇವಸಂಕಾಶ ಧರ್ಮರಾಜ ಯುಧಿಷ್ಠಿರನು ಅಮರರ ಮಧ್ಯೆ ವಜ್ರಪಾಣಿಯಂತೆ ಕಂಗೊಳಿಸಿದನು. ಪೌರರಿಂದ ಸತ್ಕೃತರಾದ ಮತ್ತು ಪೌರರನ್ನು ಸತ್ಕರಿಸಿದ ಆ ಅನಘರು ಅಲಂಕೃತ ಜನಸಂಕೀರ್ಣ ವಾರಣಾವತವನ್ನು ಪ್ರವೇಶಿಸಿದರು. ಪುರವನ್ನು ಪ್ರವೇಶಿಸಿದ ಕೂಡಲೇ ಆ ವೀರರು ತಮ್ಮ ಕರ್ಮಗಳಲ್ಲಿ ನಿರತ ಬ್ರಾಹ್ಮಣರ ಮನೆಗಳಿಗೆ ಭೇಟಿಯಿಟ್ಟರು. ಹಾಗೆಯೇ ನಗರದ ಅಧಿಕಾರಿಗಳ ಮತ್ತು ರಥಿಗಳ ಮನೆಗಳಿಗೆ ಹೋದರು. ಈ ನರಶ್ರೇಷ್ಠರು ವೈಶ್ಯ ಮತ್ತು ಶೂದ್ರರ ಮನೆಗಳಿಗೂ ಭೇಟಿಯಿತ್ತರು. ಪೌರಜನರಿಂದ ಪೂಜಿಸಿಲ್ಪಟ್ಟ ನಂತರ ಭರತರ್ಷಭ ಪಾಂಡವರು ತಮ್ಮ ವಸತಿಗೃಹಕ್ಕೆ ತೆರಳಿ ಅಲ್ಲಿ ಪುರೋಚನನಿಂದ ಸ್ವಾಗತಿಸಲ್ಪಟ್ಟರು. ಪುರೋಚನನು ಅವರಿಗೆ ಭಕ್ಷ್ಯಾನ್ನಗಳನ್ನೂ, ಪಾನೀಯಗಳನ್ನೂ, ಸುಂದರ ಹಾಸಿಗೆಗಳನ್ನೂ ಮತ್ತು ಮುಖ್ಯ ಆಸನಗಳನ್ನೂ ಇತ್ತನು. ಅಲ್ಲಿ ಅವರು ತಮ್ಮ ರಾಜಪರಿಚಾರಕರೊಂದಿಗೆ ಅವನಿಂದ ಸತ್ಕೃತರಾಗಿ ಪುರನಿವಾಸಿಗಳ ಸೇವೆಗಳೊಂದಿಗೆ ವಾಸಿಸಿದರು.
ಅಲ್ಲಿ ಅವರು ಹತ್ತು ದಿನಗಳು ಇರಲಾಗಿ ಪುರೋಚನನು ಅಶುಭವಾದರೂ ಶಿವ ಎಂದು ಕರೆಯಲ್ಪಟ್ಟ ಗೃಹವನ್ನು ಉಡುಗೊರೆಯಾಗಿತ್ತನು. ಪುರೋಚನನ ವಚನದಂತೆ ಆ ಪುರುಷವ್ಯಾಘ್ರರು ತಮ್ಮ ಪರಿಚಾರಕರೊಂದಿಗೆ ಗುಹ್ಯಕರು ಕೈಲಾಸವನ್ನು ಪ್ರವೇಶಿಸುವಂತೆ ಆ ಭವನವನ್ನು ಪ್ರವೇಶಿಸಿದರು. ಆದರೆ ಸರ್ವಧರ್ಮವಿಶಾರದ ಯುಧಿಷ್ಠಿರನು ಆ ಮನೆಯನ್ನು ಪರೀಕ್ಷಿಸಿ ಭೀಮಸೇನನಿಗೆ
“ಬೆಣ್ಣೆ ಮತ್ತು ಲಾಕ್ಷಗಳಿಂದ ಮಿಶ್ರಿತ ಕೊಬ್ಬಿನ ವಾಸನೆ ಬರುತ್ತಿರುವ ಇದು ಒಂದು ಅಗ್ನಿಜಾಲ!”
ಎಂದು ಹೇಳಿದನು.
“ಪರಂತಪ! ಬೆಂಕಿಯಲ್ಲಿ ಸುಟ್ಟು ಭಸ್ಮಮಾಡುವುದಕ್ಕಾಗಿಯೇ ಈ ಮನೆಯನ್ನು ನಿರ್ಮಿಸಿದ್ದಾರೆ ಎನ್ನುವುದು ವ್ಯಕ್ತವಾಗುತ್ತದೆ. ಮನೆಯನ್ನು ಕಟ್ಟುವುದಕ್ಕೆ ಬಳಸಿದ ಶಣ, ಸರ್ಜ, ಗನ್ನೆ, ಹುಲ್ಲು, ತೊಗಟೆ ಮತ್ತು ಬಿದಿರು ಎಲ್ಲವನ್ನೂ ತುಪ್ಪದಲ್ಲಿ ತೋಯಿಸಿದ್ದಾರೆ ಎನ್ನುವುದೂ ವ್ಯಕ್ತವಾಗುತ್ತದೆ. ಅವರ ವೃತ್ತಿಯನ್ನು ಚೆನ್ನಾಗಿ ತಿಳಿದಿರುವ ಶಿಲ್ಪಿಗಳೇ ಇದನ್ನು ನಿರ್ಮಿಸಿದ್ದಾರೆ ಎನ್ನುವುದು ಸತ್ಯ. ನಾನು ನಿಶ್ಚಿಂತೆಯಿಂದಿರುವಾಗ ಪಾಪಿ ಪುರೋಚನನು ನನ್ನನ್ನು ಸುಟ್ಟುಹಾಕಲು ಬಯಸಿದ್ದಾನೆ. ಇದನ್ನೇ ಆ ಮಹಾಬುದ್ಧಿ ವಿದುರನು ಮೊದಲೇ ವೀಕ್ಷಿಸಿ ಇದರ ಕುರಿತು ಎಚ್ಚರಿಕೆಯ ಮಾತುಗಳನ್ನಾಡಿದ್ದ. ಅವನು ಮೊದಲೇ ನಮಗೆ ಎಚ್ಚರಿಕೆ ನೀಡಿದ್ದುದರಿಂದ ಈಗ ನಮಗೆ ಈ ಮನೆಯು ಅಶುಭವಾದದ್ದು ಮತ್ತು ದುರ್ಯೋಧನನ ವಶದಲ್ಲಿದ್ದು ಅವನಿಗೆ ವಿಧೇಯರಾಗಿರುವ ಗೂಢ ಕರ್ಮಿಗಳು ಇದನ್ನು ನಿರ್ಮಿಸಿದ್ದಾರೆ ಎನ್ನುವುದು ತಿಳಿದಿದೆ.”
ಭೀಮನು ಹೇಳಿದನು:
“ಈ ಮನೆಯು ಅಗ್ನಿಜಾಲವಾಗಿ ನಿರ್ಮಿತವಾಗಿದೆ ಎಂದು ನಿನ್ನ ಅಭಿಪ್ರಾಯವಾದರೆ ನಾವು ಮೊದಲೇ ವಾಸಿಸುತ್ತಿದ್ದ ಮನೆಗೆ ಹೋಗುವುದು ಒಳ್ಳೆಯದು.”
ಯುಧಿಷ್ಠಿರನು ಹೇಳಿದನು:
“ಇಲ್ಲ. ನಾವು ಏನೂ ತಿಳಿಯದವರಂತೆ ಉತ್ಸಾಹದಿಂದ, ನಾಶವಾಗುತ್ತೇವೋ ಎನ್ನುವ ಹಾಗೆ ಇಲ್ಲಿಯೇ ಇದ್ದುಕೊಂಡು ಇಲ್ಲಿಂದ ತಪ್ಪಿಸಿಕೊಳ್ಳುವ ನಿರ್ದಿಷ್ಠ ಮಾರ್ಗವನ್ನು ಹುಡುಕಬೇಕು ಎಂದು ನನಗನ್ನಿಸುತ್ತದೆ. ಏಕೆಂದರೆ ಪುರೋಚನನು ನಮಗೆ ಇದೆಲ್ಲ ತಿಳಿದಿದೆ ಎಂದು ಯೋಚಿಸಿದರೆ ಶೀಘ್ರದಲ್ಲಿಯೇ ಕಾರ್ಯವೆಸಗಿ ನಮ್ಮನ್ನು ಸುಟ್ಟು ಸಾಯಿಸುತ್ತಾನೆ. ಸುಯೋಧನನ ಅನುಮತಿಯಂತೆ ನಡೆಯುತ್ತಿರುವ ಮೂಢ ಪುರೋಚನನು ಯಾವುದೇ ರೀತಿಯ ಅಧರ್ಮ ಮತ್ತು ಉಪಕ್ರೋಶದಿಂದ ಹಿಂಜರಿಯುವುದಿಲ್ಲ. ನಾವು ಸುಟ್ಟು ಭಸ್ಮವಾದಾಗ ಪಿತಾಮಹ ಭೀಷ್ಮ ಅಥವಾ ಇತರ ಕೌರವರು ಕುಪಿತರಾಗುತ್ತಾರೋ ಇಲ್ಲವೋ ಎನ್ನುವುದು ಪ್ರಶ್ನೆ. ಧರ್ಮಪೂರಕವಾಗಿ ಅವನು ಮತ್ತು ಅನ್ಯ ಕುರುಪುಂಗವರು ಸಿಟ್ಟಿಗೇಳಲೂ ಬಹುದು. ಆದರೆ ಬೆಂಕಿಯ ಭಯದಿಂದ ನಾವು ಪಲಾಯನ ಮಾಡಿದರೆ ರಾಜ್ಯಲುಬ್ಧ ಸುಯೋಧನನು ನಮ್ಮೆಲ್ಲರನ್ನೂ ತನ್ನ ಗೂಢಾಚಾರಿಗಳ ಮೂಲಕ ಸಾಯಿಸುತ್ತಾನೆ. ಅವನಿಗೆ ಸ್ಥಾನಮಾನಗಳಿವೆ, ನಮಗೆ ಸ್ಥಾನಮಾನಗಳಿಲ್ಲ. ಅವನಿಗೆ ತನ್ನ ಪಕ್ಷದವರು ಎನ್ನುವುವರಿದ್ದಾರೆ, ನಮಗೆ ನಮ್ಮವರು ಯಾರೂ ಇಲ್ಲ. ಅವನಿಗೆ ಮಹಾಕೋಶವೇ ಇದೆ. ನಮಗೆ ಕೋಶವೇ ಇಲ್ಲ. ನಿರ್ದಿಷ್ಠವಾಗಿಯೂ ಅವನು ನಮ್ಮನ್ನು ಸಂಹರಿಸಬಲ್ಲ. ಆದುದರಿಂದ ಈ ಪಾಪಿಯನ್ನೂ ಮತ್ತು ಪಾಪಿ ಸುಯೋಧನನ್ನೂ ವಂಚಿಸಿ ನಾವು ಎಲ್ಲಿಯೇ ವಾಸಿಸುತ್ತಿರಲಿ ಗೂಢವಾಗಿ ವಾಸಿಸಬೇಕು. ನಾವು ಬೇಟೆಗಾರರಂತೆ ಭೂಮಿಯನ್ನೆಲ್ಲಾ ಸುತ್ತೋಣ. ಇದರಿಂದ ಭವಿಷ್ಯದಲ್ಲಿ ಪಲಾಯನಗೈಯಲು ಎಲ್ಲ ಮಾರ್ಗಗಳೂ ನಮಗೆ ತಿಳಿಯುತ್ತವೆ. ಚೆನ್ನಾಗಿ ಮುಚ್ಚಲ್ಪಟ್ಟ ಒಂದು ಬಿಲವನ್ನು ಭೂಮಿಯಲ್ಲಿ ಅಗೆಯಬೇಕು; ಅಲ್ಲಿ ಅಡಗಿ ಕೊಂಡರೆ ಬೆಂಕಿಯು ನಮ್ಮನ್ನು ಸುಡುವುದಿಲ್ಲ. ನಾವು ಇಲ್ಲಿ ವಾಸಿಸುತ್ತಿರುವಾಗ ಪುರೋಚನನಿಗಾಗಲೀ ಅಥವಾ ಇತರ ಪೌರ ಜನರಿಗಾಗಲೀ ತಿಳಿಯದಂತೆ ಎಲ್ಲ ಜಾಗರೂಕತೆಯನ್ನೂ ವಹಿಸೋಣ.”
ಒಮ್ಮೆ ವಿದುರನ ಓರ್ವ ಸ್ನೇಹಿತ ಖನಕನು ಪಾಂಡವರು ಒಬ್ಬರೇ ಇರುವಾಗ ಹೇಳಿದನು:
“ನಾನೊಬ್ಬ ಅಗೆಯುವುದರಲ್ಲಿ ಕುಶಲ ಖನಕ. ವಿದುರನು ಪಾಂಡವರಿಗೆ ಒಳ್ಳೆಯದನ್ನು ಮಾಡಲೋಸುಗ ನನ್ನನ್ನು ಕಳುಹಿಸಿದ್ದಾನೆ. ನಿಮಗೆ ನಾನು ಏನು ಮಾಡಲಿ? ಪಾಂಡವರಿಗೆ ಶ್ರೇಯಸ್ಸುಂಟಾಗುವಂತೆ ಮಾಡು, ಅವರಿಗೆ ವಿಶ್ವಾಸವನ್ನು ನೀಡು ಎಂದು ವಿದುರನು ನನಗೆ ಗುಟ್ಟಿನಲ್ಲಿ ಹೇಳಿದನು. ನಿಮಗೆ ನಾನು ಏನು ಮಾಡಲಿ? ಈ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿ ಪುರೋಚನನು ನಿಮ್ಮ ಈ ಭವನದ ದ್ವಾರದಲ್ಲಿ ಬೆಂಕಿಯನ್ನು ಹಚ್ಚುವವನಿದ್ದಾನೆ. ಧಾರ್ತರಾಷ್ಟ್ರನು ಪುರುಷರ್ಷಭ ಪಾಂಡವರನ್ನು ಅವರ ಮಾತೆಯ ಸಹಿತ ಸುಟ್ಟುಹಾಕಲು ನಿರ್ಧರಿಸಿದ್ದಾನೆ ಎಂದು ಕೇಳಿದ್ದೇನೆ. ವಿದುರನು ನಿನ್ನಲ್ಲಿ ಮ್ಲೇಚ್ಛ ಭಾಷೆಯಲ್ಲಿ ಏನನ್ನೋ ಹೇಳಿದ್ದನು. ಮತ್ತು ನೀನು ಅದಕ್ಕೆ ಹಾಗೆಯೇ ಆಗಲಿ ಎಂದು ಹೇಳಿದ್ದೆ. ಈ ವಿಷಯವೇ ನಿನಗೆ ನನ್ನಲ್ಲಿ ವಿಶ್ವಾಸವನ್ನು ತರಬೇಕು.”
ಆಗ ಅವನಿಗೆ ಸತ್ಯಧೃತಿ ಕುಂತಿಪುತ್ರ ಯುಧಿಷ್ಠಿರನು ಹೇಳಿದನು:
“ಸೌಮ್ಯ! ನಿನ್ನನ್ನು ನಾನು ವಿದುರನ ಸುಹೃದನೆಂದೂ, ಶುಚಿಯಾದವನೆಂದೂ, ದೃಢಭಕ್ತಿಯುಳ್ಳವನೆಂದೂ, ಪ್ರಿಯಕರನೆಂದೂ ಗುರುತಿಸುತ್ತೇನೆ. ಕವಿಯಿಂದ ಯಾವುದೇ ರೀತಿಯ ಅಭಿಜ್ಞಾನವನ್ನು ಬಳಸುವ ಅವಶ್ಯಕತೆಯಿಲ್ಲ. ಅವನು ಹೇಗೆ ನಮ್ಮವನೋ ನೀನೂ ಕೂಡ ನಮ್ಮವನೇ; ನಿನ್ನನ್ನು ನಮ್ಮಲ್ಲಿಯೇ ಒಬ್ಬನೆಂದು ಪರಿಗಣಿಸುತ್ತೇವೆ. ನಾವು ಹೇಗೆ ಅವನಿಗೆ ಸೇರಿದ್ದೇವೋ ಹಾಗೆ ನಿನಗೂ ಸೇರಿದ್ದೇವೆ. ಆ ಕವಿಯು ನಮ್ಮನ್ನು ಪಾಲಿಸುವಂತೆ ಪಾಲಿಸು. ಧಾರ್ತರಾಷ್ಟ್ರನ ಶಾಸನದಂತೆ ಪುರೋಚನನು ನನಗಾಗಿ ಈ ಅಗ್ನಿಜಾಲದ ಮನೆಯನ್ನು ನಿರ್ಮಿಸಿದ್ದಾನೆ ಎನ್ನುವುದು ವಿಹಿತವಾಗಿದೆ. ಆ ಪಾಪಿಯಲ್ಲಿ ಕೋಶವೂ ಇದೆ ಸಹಾಯಕರೂ ಇದ್ದಾರೆ. ಆ ದುರ್ಮತಿ ದುಷ್ಟಾತ್ಮನು ಯಾವಾಗಲೂ ನಮ್ಮನ್ನು ಬಾಧಿಸಲು ನಿರತನಾಗಿದ್ದಾನೆ. ನಿನ್ನೆಲ್ಲ ಪ್ರಯತ್ನಗಳಿಂದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡು. ನಾವು ಸುಟ್ಟುಹೋದರೆ ಸುಯೋಧನನು ಬಯಸಿದಂತೆಯೇ ಆಗುತ್ತದೆ. ಇದೋ ಅಲ್ಲಿರುವುದು ಆ ದುರಾತ್ಮನ ಸಮೃದ್ಧ ಆಯುಧಾಗಾರ. ಈ ವಿಶಾಲ ಅರಮನೆಯನ್ನು ಅದರ ಗೋಡೆಗೆ ಹೊಂದಿಕೊಂಡೇ ಕಟ್ಟಿಸಿದ್ದಾರೆ. ಈ ಅಶುಭ ಕರ್ಮದಕುರಿತು ವಿದುರನಿಗೆ ಮೊದಲೇ ತಿಳಿದಿತ್ತು. ಆದುದರಿಂದಲೇ ಅವನು ನಮಗೆ ಎಚ್ಚರಿಕೆಯನ್ನು ನೀಡಿದ್ದ. ಮೊದಲೇ ಕ್ಷತ್ತನು ವೀಕ್ಷಿಸಿದ್ದ ಆಪತ್ತು ನಮಗೆ ಈಗ ಬಂದಾಗಿದೆ. ಪುರೋಚನನಿಗೆ ತಿಳಿಯದ ರೀತಿಯಲ್ಲಿ ನಾವು ಇದರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡು.”
ಹಾಗೆಯೇ ಆಗಲೆಂದು ಹೇಳಿ ಖನಕನು ತನ್ನ ಕೆಲಸದಲ್ಲಿ ನಿರತನಾದನು. ಅವನು ಒಂದು ದೊಡ್ಡ ಗುಂಡಿಯನ್ನು ತೆಗೆದು ಅದರಲ್ಲಿ ವಿಶಾಲ ಬಿಲವನ್ನು ಅಗೆದನು. ಅವನು ಅದನ್ನು ಮನೆಯ ಮಧ್ಯದಲ್ಲಿ ಅತಿ ದೊಡ್ಡ ಬಾಯಿಯಿಲ್ಲದ ಹಾಗೆ ನಿರ್ಮಿಸಿದನು. ಅದರ ಬಾಯನ್ನು ಭೂಮಿಗೆ ಸಮಾನ ಹಲಗೆಗಳಿಂದ ಮುಚ್ಚಿದನು. ಸದಾ ಅವರ ಗೃಹದ್ವಾರದಲ್ಲಿಯೇ ವಾಸಿಸುತ್ತಿದ್ದ ಅಶುಭ ಪುರೋಚನನ ಭಯದಿಂದ ಅವರು ಅದರ ಬಾಯನ್ನು ಚೆನ್ನಾಗಿ ಮುಚ್ಚಿದರು. ಪಾಂಡವೇಯರೆಲ್ಲರೂ ಆಯುಧಗಳ ಜೊತೆ ಆ ಬಿಲದಲ್ಲಿಯೇ ಮಲಗುತ್ತಿದ್ದರು. ಹಗಲಿನಲ್ಲಿ ಅವರು ಬೇಟೆಗೆಂದು ವನದಿಂದ ವನಕ್ಕೆ ಸಂಚರಿಸುತ್ತಿದ್ದರು. ಅವರು ಅಲ್ಲಿ ವಿಶ್ವಾಸವಿಲ್ಲದವರಾದರೂ ವಿಶ್ವಾಸವಿದ್ದವರಂತೆ, ಅಸಂತುಷ್ಟ-ರಾಗಿದ್ದರೂ ಸಂತುಷ್ಟರಾದವರಂತೆ ಪುರೋಚನನನ್ನು ವಂಚಿಸಿ ಪರಮದುಃಖಿತರಾಗಿ ವಾಸಿಸುತ್ತಿದ್ದರು. ವಿದುರನ ಅಮಾತ್ಯ ಖನಕಸತ್ತಮನನ್ನು ಬಿಟ್ಟು ನಗರವಾಸಿಗಳಲ್ಲಿ ಬೇರೆ ಯಾರೂ ಅವರನ್ನು ಅರ್ಥಮಾಡಿಕೊಳ್ಳಲಿಲ್ಲ.
ಅವರು ಸಂತೋಷದಿಂದ ಏನೂ ಸಂಶಯವಿಲ್ಲದವರ ಹಾಗೆ ಒಂದು ವರ್ಷ ಸಂಪೂರ್ಣವಾಗಿ ಕಳೆದುದನ್ನು ನೋಡಿದ ಪುರೋಚನನು ಹರ್ಷಿತನಾದನು. ಹಾಗೆ ಪುರೋಚನನು ಸಂತೋಷದಿಂದಿರಲು ಕೌಂತೇಯ ಧರ್ಮವಿದ ಯುಧಿಷ್ಠಿರನು ಭೀಮಸೇನ, ಅರ್ಜುನ ಮತ್ತು ಯಮಳರಿಗೆ ಹೇಳಿದನು:
“ಪಾಪಿ ಪುರೋಚನನು ನಮಗೇನೂ ಸಂಶಯವಿಲ್ಲವೆಂದು ನಂಬಿದ್ದಾನೆ. ಆ ನೃಶಂಸಾತ್ಮನನ್ನು ಮೋಸಗೊಳಿಸಿ ಪಲಾಯನಮಾಡುವ ಕಾಲವು ಪ್ರಾಪ್ತವಾಗಿದೆ ಎಂದು ನನ್ನ ಅಭಿಪ್ರಾಯ. ಆಯುಧಾಗರಕ್ಕೆ ಬೆಂಕಿಯನ್ನಿಟ್ಟು ಪುರೋಚನನನ್ನೂ ಸುಟ್ಟು ಬಿಡೋಣ. ಆರು ಜನರನ್ನು ಇಲ್ಲಿ ಇರಿಸಿ, ನಾವು ಯಾರಿಗೂ ಕಾಣಿಸದ ಹಾಗೆ ತಪ್ಪಿಸಿಕೊಳ್ಳೋಣ.”
ಆಗ ದಾನದ ನೆಪದಿಂದ ಕುಂತಿಯು ಒಂದು ರಾತ್ರಿ ಬ್ರಾಹ್ಮಣರಿಗೆ ಮಹಾ ಭೋಜನವನ್ನು ನಿಯೋಜಿಸಿದಳು. ಬಂದಿದ್ದ ಸ್ತ್ರೀಯರು ಯಥೇಚ್ಛವಾಗಿ ತಿಂದು ಕುಡಿದು ವಿಹರಿಸಿದರು. ನಂತರ ಮಾಧವಿಯ ಅನುಜ್ಞೆಯನ್ನು ಪಡೆದು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಅನ್ನವನ್ನು ಬೇಡಿಕೊಂಡು ಕಾಲಚೋದಿತ ನಿಷಾದಿಯೋರ್ವಳು ತನ್ನ ಐವರು ಪುತ್ರರೊಂದಿಗೆ ಆ ಭೋಜನಕ್ಕೆ ಬಂದಿದ್ದಳು. ಅವಳು ಮತ್ತು ಅವಳ ಪುತ್ರರು ಮದಿರವನ್ನು ಕುಡಿದು ಅಮಲಿನಿಂದ ಮದವಿಹ್ವಲರಾದರು. ಮಕ್ಕಳೂ ಕೂಡಿ ಅವರೆಲ್ಲರೂ ಅಲ್ಲಿಯೇ ಉಳಿದರು. ಅವರು ಸತ್ತವರಂತೆ ಹೊರಗಿನ ಜ್ಞಾನವೇ ಇಲ್ಲದೇ ಮಲಗಿದ್ದರು. ಆಗ ಭಿರುಗಾಳಿ ಬೀಸುತ್ತಿರಲು ಜನರೆಲ್ಲ ರಾತ್ರಿ ಮಲಗಿರಲು ಭೀಮನು ಪುರೋಚನನು ಮಲಗಿದ್ದಲ್ಲಿ ಬೆಂಕಿಯನ್ನಿಟ್ಟನು. ಆಗ ಜೋರಾಗಿ ಉರಿಯುತ್ತಿರುವ ಬೆಂಕಿಯ ಶಬ್ಧದಿಂದ ಜನರೆಲ್ಲರಿಗೂ ಎಚ್ಚರವಾಯಿತು. ಪೌರರು ಹೇಳಿದರು:
“ದುರ್ಯೋಧನನ ಆಜ್ಞೆಯಂತೆ ಆ ಪಾಪಿ ಅಕೃತಬುದ್ಧಿ ಪುರೋಚನನು ಈ ಮನೆಯನ್ನು ಕಟ್ಟಿ ತಾನೇ ಅದರಲ್ಲಿ ಸುಟ್ಟುಹೋದ. ಮಂತ್ರಿಗಳ ಮೂಲಕ ಬಾಲಕ ಶುದ್ಧ ಪಾಂಡವರನ್ನು ಸುಟ್ಟುಹಾಕಿದ ಧೃತರಾಷ್ಟ್ರನ ಕೆಟ್ಟ ಬುದ್ಧಿಗೆ ಧಿಕ್ಕಾರ! ವಿಶ್ವಾಸದಿಂದಿದ್ದ ಆ ಮುಗ್ಧ ನರೋತ್ತಮರನ್ನು ಸುಡುವುದರೊಂದಿಗೆ ಆ ಅತಿದುರ್ಮತಿ ಪಾಪಾತ್ಮನೂ ಸುಟ್ಟು ಹೋಗಿದ್ದುದು ಒಳ್ಳೆಯದೇ ಆಯಿತು.”
ಆ ರಾತ್ರಿ ಮನೆಯನ್ನು ಸುತ್ತುವರೆದಿದ್ದ ವಾರಣಾವತದ ಜನರು ಈ ರೀತಿ ವಿಲಪಿಸಿದರು.
ದುಃಖಿತ ಪಾಂಡವರು ತಮ್ಮ ತಾಯಿಯೊಂದಿಗೆ ಬಿಲದ ಮೂಲಕ ಹೊರಟು ಗುಟ್ಟಾಗಿ ಯಾರಿಗೂ ಕಾಣದಹಾಗೆ ಹೋದರು. ಆದರೆ ನಿದ್ದೆಯು ಕಡಿಮೆಯಾಗಿದ್ದುದರಿಂದ ಮತ್ತು ಭಯದಿಂದ ತಾಯಿಯೊಂದಿಗಿದ್ದ ಪರಂತಪ ಪಾಂಡವರಿಗೆ ಬೇಗ ಬೇಗ ಹೋಗಲು ಸಾಧ್ಯವಾಗಲಿಲ್ಲ. ಆಗ ಭೀಮವೇಗಪರಾಕ್ರಮಿ ಭೀಮಸೇನನು ತಾಯಿಯನ್ನೂ ಮತ್ತು ಭ್ರಾತೃಗಳೆಲ್ಲರನ್ನೂ ಎತ್ತಿಕೊಂಡು ನಡೆಯತೊಡಗಿದನು. ಆ ವೀರನು ತಾಯಿಯನ್ನು ಭುಜದಮೇಲೇರಿಸಿಕೊಂಡನು, ಯಮಳರನ್ನು ಸೊಂಟದ ಮೇಲಿರಿಸಿಕೊಂಡನು, ಮತ್ತು ಮಹಾಬಲಶಾಲಿ ಪಾರ್ಥರೀರ್ವರನ್ನೂ ಕೈಗಳಲ್ಲಿ ಎತ್ತಿ ಹಿಡಿದನು. ತನ್ನ ವೇಗದಿಂದ ಮರಗಳನ್ನು ಬೀಳಿಸಿದನು ಮತ್ತು ತನ್ನ ಹೆಜ್ಜೆಗಳಿಂದ ನೆಲವನ್ನು ತುಳಿದು ತತ್ತರಿಸಿದನು. ಈ ರೀತಿ ತೇಜಸ್ವಿ ವೃಕೋದರನು ಭಿರುಗಾಳಿಯಂತೆ ಮುನ್ನುಗ್ಗಿದನು.
ರಾತ್ರಿಯು ಕಳೆದ ನಂತರ ನಗರದ ಎಲ್ಲ ಜನರೂ ಬೇಗನೆ ಅಲ್ಲಿಗೆ ಬಂದು ಪಾಂಡುನಂದರನ್ನು ಹುಡುಕ ತೊಡಗಿದರು. ಬೆಂಕಿಯ ಉರಿಯನ್ನು ಆರಿಸಿದ ನಂತರ ಆ ಜನರು ಅದೊಂದು ಜಾತುಗೃಹವಾಗಿತ್ತು ಮತ್ತು ಅದರಲ್ಲಿ ಅಮಾತ್ಯ ಪುರೋಚನನೂ ಸುಟ್ಟು ಹೋಗಿದ್ದಾನೆ ಎನ್ನುವುದನ್ನು ಕಂಡರು.
“ಇದು ಪಾಂಡವರ ವಿನಾಶಕ್ಕಾಗಿ ದುರ್ಯೊಧನನು ನಡೆಸಿದ ಪಾಪ ಕರ್ಮ!”
ಎಂದು ಕೂಗಾಡಿದರು.
“ಈ ರೀತಿ ದಾಯಾದಿ ಪಾಂಡುಪುತ್ರರನ್ನು ಸುಟ್ಟುಹಾಕಿದ ಧಾರ್ತರಾಷ್ಟ್ರನ ಈ ಕೃತ್ಯವು ಧೃತರಾಷ್ಟ್ರನಿಗೆ ನಿಸ್ಸಂಶಯವಾಗಿಯೂ ತಿಳಿದಿತ್ತು. ಆದರೂ ಅವನು ಇದನ್ನು ನಿಲ್ಲಿಸಲಿಲ್ಲ. ನಿಜವಾಗಿ ಶಾಂತನವ ಭೀಷ್ಮನಾಗಲೀ, ದ್ರೋಣ, ವಿದುರ, ಕೃಪ ಮತ್ತು ಅನ್ಯ ಕೌರವರಾಗಲೀ ಯಾರೂ ಧರ್ಮವನ್ನು ಅನುಸರಿಸುತ್ತಿಲ್ಲ. ಪಾಂಡವರನ್ನು ಸುಟ್ಟುಹಾಕುವ ನಿನ್ನ ಈ ಸಂಚು ಸಫಲವಾಯಿತು ಎಂದು ಆ ದುರಾತ್ಮ ಧೃತರಾಷ್ಟ್ರನಿಗೆ ಸಂದೇಶವನ್ನು ಕಳಿಸೋಣ.”
ಬೆಂಕಿಯಲ್ಲಿ ಪಾಂಡವರನ್ನು ಹುಡುಕುತ್ತಿದ್ದಾಗ ಮುಗ್ಧ ನಿಷಾದಿ ಮತ್ತು ಅವಳ ಐವರು ಪುತ್ರರು ಸುಟ್ಟುಹೋಗಿದ್ದುದನ್ನು ಕಂಡರು. ಮನೆಯನ್ನು ಹುಡುಕುವಾಗ ಅದೇ ಖನಕನು ಆ ಬಿಲವನ್ನು ಸಂಪೂರ್ಣವಾಗಿ ಕಸದಿಂದ ಮುಚ್ಚಿ, ಇತರ ಜನರಿಗೆ ಕಾಣದಹಾಗೆ ಮಾಡಿದನು. ನಂತರ ನಾಗರೀಕರು ಪಾಂಡವರು ಮತ್ತು ಅಮಾತ್ಯ ಪುರೋಚನ ಅಗ್ನಿಯಲ್ಲಿ ಸುಟ್ಟುಹೋದರು ಎನ್ನುವ ವಿಷಯವನ್ನು ಧೃತರಾಷ್ಟ್ರನಿಗೆ ಕಳುಹಿಸಿದರು.
ರಾಜ ಧೃತರಾಷ್ಟ್ರನು ಪಾಂಡುಪುತ್ರರ ಮಹಾ ಅಪ್ರಿಯ ವಿನಾಶವನ್ನು ಕೇಳಿ ಬಹು ದುಃಖಿತನಾಗಿ ವಿಲಪಿಸಿದನು.
“ವಿಶೇಷವಾಗಿ ಅವನ ವೀರರು ಮಾತೆಯ ಸಹಿತ ಸುಟ್ಟುಹೋದ ನಂತರ ಈಗ ನನ್ನ ಸುದುರ್ಲಭ ತಮ್ಮ ರಾಜ ಪಾಂಡುವು ಮೃತನಾದ. ಜನರು ಶೀಘ್ರವೇ ವಾರಣಾವತ ನಗರಕ್ಕೆ ಹೋಗಿ ಆ ವೀರರಿಗೆ ಮತ್ತು ಕುಂತಿರಾಜಸುತೆಗೆ ಸಂಸ್ಕಾರಕ್ರಿಯೆಗಳನ್ನು ಮಾಡಲಿ. ಅವರ ಅಸ್ತಿಗಳಿಗೆ ಶುಭ್ರ ದೊಡ್ಡ ಕುಂಡಗಳನ್ನು ತಯಾರಿಸಿ ಅಲ್ಲಿ ಮೃತರಾದವರ ಸುಹೃದಯರು ಅವರನ್ನು ಸತ್ಕರಿಸಲಿ. ಈ ಗತಿಯನ್ನು ಹೊಂದಿದ ಪಾಂಡವರು ಮತ್ತು ಕುಂತಿಗೆ ನನ್ನಿಂದ ಏನೆಲ್ಲ ಮಾಡುವುದೋ ಹಿತವೋ ಮತ್ತು ಧನಗಳಿಂದ ಶಖ್ಯವೋ ಅವೆಲ್ಲವನ್ನು ಮಾಡಬೇಕು.”
ಹೀಗೆಂದ ಅಂಬಿಕಾ ಸುತ ಧೃತರಾಷ್ಟ್ರನು ತನ್ನ ಕುಲದವರಿಂದ ಸುತ್ತುವರೆಯಲ್ಪಟ್ಟು ಪಾಂಡುಪುತ್ರರಿಗೆ ತರ್ಪಣವನ್ನಿತ್ತನು. ಶೋಕಪರಾಯಣ ಸರ್ವ ಕೌರವರೂ ದುಃಖಿತರಾಗಿ ರೋದಿಸಿದರು. ಆದರೆ ಅವರಿಗಿಂಥ ಹೆಚ್ಚು ತಿಳಿದಿದ್ದ ವಿದುರನು ಸ್ವಲ್ಪವೇ ಶೋಕವನ್ನು ವ್ಯಕ್ತಪಡಿಸಿದನು.
ಪಾಂಡವರಾದರೂ ವಾರಣಾವತ ನಗರವನ್ನು ಬಿಟ್ಟು ವೇಗದಲ್ಲಿ ದಕ್ಷಿಣ ದಿಕ್ಕಿನ ಮುಖವಾಗಿ ಪ್ರಯಾಣಮಾಡಿದರು. ನಕ್ಷತ್ರಗಳ ಚಿಹ್ನೆಗಳಿಂದ ದಾರಿಯನ್ನು ತಿಳಿಯುತ್ತಾ ಅತಿ ಕಷ್ಟದಿಂದ ದಕ್ಷಿಣಾಭಿಮುಖವಾಗಿ ಹೋಗುತ್ತಾ ಗಹನ ವನವೊಂದನ್ನು ಸಮೀಪಿಸಿದರು. ಪಾಂಡುನಂದನರು ಆಯಾಸಗೊಂಡಿದ್ದರು, ಬಾಯಾರಿಕೆಯಿಂದ ಬಳಲಿದ್ದರು ಮತ್ತು ನಿದ್ದೆಯಿಂದ ಕುರುಡರಾಗಿದ್ದರು. ಪುನಃ ಅವರು ಮಹಾವೀರ ಭೀಮಸೇನನಿಗೆ ಹೇಳಿದರು:
“ಈ ಗಹನ ವನದಲ್ಲಿ ಇರುವುದಕ್ಕಿಂದ ಕಷ್ಟತರವಾದುದ್ದಾದರೂ ಏನಿದೆ? ಯಾವ ದಿಕ್ಕೂ ನಮಗೆ ತಿಳಿಯುತ್ತಿಲ್ಲ ಮತ್ತು ಮುಂದುವರೆಯಲು ಶಕ್ತಿಯೂ ಇಲ್ಲವಾಗಿದೆ. ಆ ಪಾಪಿ ಪುರೋಚನನು ಸುಟ್ಟು ಸತ್ತನೋ ಇಲ್ಲವೋ ಎಂದೂ ನಮಗೆ ತಿಳಿಯದು. ಹೇಗೆತಾನೆ ನಾವು ಈ ಭಯದಿಂದ ಯಾರಿಗೂ ಕಾಣದ ರೀತಿಯಲ್ಲಿ ತಪ್ಪಿಸಿಕೊಳ್ಳಬಹುದು? ಮೊದಲು ಮಾಡಿದಂತೆ ನಮ್ಮನ್ನು ಪುನಃ ಎತ್ತಿಕೋ. ನಮ್ಮೆಲ್ಲರಲ್ಲಿ ನೀನೊಬ್ಬನೇ ವಾಯುವಿನಷ್ಟು ಬಲವಂತನಾಗಿದ್ದೀಯೆ.”
ಧರ್ಮರಾಜನು ಹೀಗೆ ಹೇಳಲು ಮಹಾಬಲಿ ಭೀಮಸೇನನು ಕುಂತಿ ಮತ್ತು ಭ್ರಾತೃಗಳನ್ನು ಎತ್ತಿಕೊಂಡು ಹೊರಟನು.
ಆ ವಿಕ್ರಮನು ವೇಗವಾಗಿ ಹೋಗುತ್ತಿರಲಾಗಿ ಅವನ ತೊಡೆಗಳ ವೇಗದಿಂದ ಆಷಾಢ ಮತ್ತು ಜ್ಯೇಷ್ಠ ಮಾಸಗಳ ಪ್ರಾರಂಭದಲ್ಲಿ ಕಂಡುಬರುವ ಭಿರುಗಾಳಿಯಂತೆ ಗಾಳಿಯೆದ್ದಿತು. ಅವನು ಹೂವು ಹಣ್ಣುಗಳಿದ್ದ ಮರಗಳನ್ನು ತುಳಿದು ಹಾಕಿದನು ಮತ್ತು ಅವನ ದಾರಿಯ ಬಳಿಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಇಲ್ಲದಂತೆ ಮಾಡಿದನು. ಹೀಗೆ ಮರಗಳನ್ನು ಉರುಳಿಸಿ ಬೀಳಿಸುತ್ತಾ ಅತಿ ವೇಗದಲ್ಲಿ ಅವನು ಹೋದನು. ಅವನ ವೇಗದಿಂದ ಪಾಂಡವರು ಮೂರ್ಛಿತರಾದಂತಾದರು. ದೂರ ದೂರದಲ್ಲಿ ದಡಗಳನ್ನು ಹೊಂದಿರುವ ಹಲವಾರು ನದಿಗಳನ್ನು ತಮ್ಮ ಭುಜಗಳನ್ನೇ ದೋಣಿಯನ್ನಾಗಿ ಮಾಡಿಕೊಂಡು ದಾಟಿದರು. ಮತ್ತು ದಾರಿಯಲ್ಲಿ ಧಾರ್ತರಾಷ್ಟ್ರನ ಭಯದಿಂದ ವೇಷವನ್ನು ಬದಲಾಯಿಸಿಕೊಂಡರು. ದುಷ್ಕರವಾದಗಲೆಲ್ಲಾ ಭೀಮಸೇನನು ಸುಕುಮಾರೀ ಯಶಸ್ವಿನೀ ತಾಯಿಯನ್ನು ಮಾತ್ರ ತನ್ನ ಬೆನ್ನ ಮೇಲೆ ಎತ್ತಿಕೊಂಡು ದಡ ಮತ್ತು ಗುಡ್ಡಬೆಟ್ಟಗಳನ್ನು ಏರುತ್ತಿದ್ದನು. ಸಾಯಂಕಾಲವಾಗುತ್ತಿದ್ದಂತೆ ಭರತರ್ಷಭರು ಗಡ್ಡೆಗೆಣಸುಗಳು, ಫಲಗಳು ಮತ್ತು ನೀರಿನ ಅಭಾವವಾಗಿದ್ದ ಕ್ರೂರ ಪಕ್ಷಿಮೃಗಗಳಿಂದ ಕೂಡಿದ ಘೋರ ವನವೊಂದರ ಸಮೀಪ ತಲುಪಿದರು. ಘೋರ ಕತ್ತಲೆಯು ಆವರಿಸುತ್ತಿದ್ದಂತೆ ಮೃಗಪಕ್ಷಿಗಳು ದಾರುಣರಾಗಿ ಕಂಡವು; ಅಕಾಲಿಕವಾದ ಭಿರುಗಾಳಿಯಿಂದ ಸರ್ವ ದಿಕ್ಕುಗಳೂ ಕಾಣದಂತಾದವು. ಆಯಾಸ, ಬಾಯಾರಿಕೆ ಮತ್ತು ನಿದ್ದೆಯು ಆ ಕೌರವರನ್ನು ಪೀಡಿಸಿತು ಮತ್ತು ಇನ್ನು ಮುಂದುವರೆಯಲು ಅವರಿಗೆ ಅಸಾಧ್ಯವೆನಿಸಿತು. ಆಗ ಭೀಮನು ಆ ಘೋರ ವನವನ್ನು ಪ್ರವೇಶಿಸಿ ವಿಶಾಲ ಏಕಾಂತಪ್ರದೇಶದಲ್ಲಿ ವಿಪುಲ ನೆರಳನ್ನು ನೀಡುತ್ತಿದ್ದ ರಮಣೀಯ ನ್ಯಗ್ರೋಧ ವೃಕ್ಷವನ್ನು ಕಂಡನು. ಅವರನ್ನೆಲ್ಲ ಅಲ್ಲಿಯೇ ಕೆಳಗಿಳಿಸಿ ಭರತರ್ಷಭನು ಹೇಳಿದನು:
“ನೀವೆಲ್ಲ ಇಲ್ಲಿಯೇ ವಿಶ್ರಮಿಸಿ. ನಾನು ನೀರನ್ನು ಹುಡುಕಿ ತರುತ್ತೇನೆ. ಸರೋವರದಲ್ಲಿ ವಾಸಿಸುವ ಸಾರಸಗಳ ಮಧುರ ಕೂಗನ್ನು ಕೇಳುತ್ತಿದ್ದೇನೆ. ಖಂಡಿತವಾಗಿಯೂ ಅಲ್ಲಿ ವಿಶಾಲವಾದ ಸರೋವರವೊಂದು ಇದೆ ಎಂದು ನನ್ನ ಅಭಿಪ್ರಾಯ.”
ಜ್ಯೇಷ್ಠ ಅಣ್ಣನಿಂದ ಹೋಗಲು ಅನುಮತಿಯನ್ನು ಪಡೆದ ಅವನು ಆ ಜಲಚಾರಿಣಿಗಳು ಕೂಗುತ್ತಿರುವಲ್ಲಿಗೆ ಹೋದನು. ಅಲ್ಲಿ ಆ ಭರತರ್ಷಭನು ನೀರನ್ನು ಕುಡಿದು, ಸ್ನಾನಮಾಡಿ ತನ್ನ ಉತ್ತರೀಯದಿಂದ ನೀರನ್ನು ಹಿಡಿದು ತಂದನು. ಹತ್ತಿರದಲ್ಲಿಯೇ ಇದ್ದ ತಾಯಿಯ ಕಡೆ ಬೇಗನೆ ಹಿಂದಿರುಗಿದನು. ಅಲ್ಲಿ ಬರಿಯ ನೆಲದಮೇಲೆ ಮಲಗಿದ್ದ ತನ್ನ ತಾಯಿ ಮತ್ತು ಸಹೋದರರನ್ನು ಕಂಡು ವೃಕೋದರನು ದುಃಖಿತನಾಗಿ ವಿಲಪಿಸಿದನು.
“ಹಿಂದೆ ವಾರಣಾವತದಲ್ಲಿ ಶ್ರೇಷ್ಠ ಹಾಸಿಗೆಗಳ ಮೇಲೆ ನಿದ್ದೆಯನ್ನೇ ಪಡೆಯದಿದ್ದ ಇವರು ಈಗ ನೆಲದಮೇಲೆ ಮಲಗಿ ನಿದ್ದೆಹೋಗಿದ್ದಾರಲ್ಲ? ಶತ್ರುಸಂಘಾವಮರ್ದಿನ ವಾಸುದೇವನ ತಂಗಿ, ಸರ್ವಲಕ್ಷಣಪೂಜಿತೆ ಕುಂತಿಭೋಜಸುತೆ ಕುಂತಿ, ವಿಚಿತ್ರವೀರ್ಯನ ಸೊಸೆ, ಮಹಾತ್ಮ ಪಾಂಡುವಿನ ಭಾರ್ಯೆ, ನಿತ್ಯವೂ ಅರಮನೆಯಲ್ಲಿ ಮಲಗುವ ಪುಂಡರೀಕಾಂತರಪ್ರಭೆ, ಮಹಾ ಸ್ತ್ರೀಯರಲ್ಲಿ ಅತೀವ ಸುಕುಮಾರಿ, ಬೆಲೆಬಾಳುವ ಹಾಸಿಗೆಯ ಮೇಲೆ ಮಲಗುವವಳು ಈಗ ಅಯೋಚಿತ ನೆಲದ ಮೇಲೆ ಮಲಗಿದ್ದುದನ್ನು ನೋಡು! ಧರ್ಮ, ಇಂದ್ರ ಮತ್ತು ವಾಯುವಿನಿಂದ ಈ ಮಕ್ಕಳನ್ನು ಪಡೆದ ಅವಳು ಪರಿಶ್ರಾಂತಳಾಗಿ ನೆಲದಮೇಲೆ ಮಲಗಿದ್ದಾಳಲ್ಲ! ಇದಕ್ಕಿಂತಲೂ ಹೆಚ್ಚಾದ ಯಾವ ದೃಷ್ಟತಮ ದುಃಖವನ್ನು ನನಗೆ ಸಹಿಸಲು ಸಾಧ್ಯ? ಈ ನರವ್ಯಾಘ್ರರು ಇಂದು ಈ ನೆಲದಮೇಲೆ ಮಲಗಿದ್ದುದ್ದನ್ನು ನೋಡುತ್ತಿದ್ದೇನಲ್ಲ! ಮೂರೂ ಲೋಕಗಳನ್ನೂ ರಾಜ್ಯವನ್ನಾಗಿ ಆಳುವ ಅರ್ಹತೆಯುಳ್ಳ ಈ ಧರ್ಮವಿದ ನೃಪನು ಹೇಗೆ ತಾನೆ ಓರ್ವ ಸಾಮಾನ್ಯನಂತೆ ಆಯಾಸಗೊಂಡು ಭೂಮಿಯ ಮೇಲೆ ಮಲಗಿದ್ದಾನೆ? ಮೋಡದಂತೆ ಕಪ್ಪಾಗಿರುವ, ಭೂಮಿಯಲ್ಲಿರುವ ನರರಲ್ಲಿಯೇ ಅಪ್ರತಿಮನಾಗಿರುವ ಇವನು ಸಾಮಾನ್ಯನೋರ್ವನಂತೆ ಭೂಮಿಯಮೇಲೆ ಮಲಗಿರುವುದು ದುಃಖತರವಲ್ಲವೇ? ಅಶ್ವಿನಿದೇವತೆಗಳಂತೆ ರೂಪಸಂಪನ್ನರಾದ ಈ ಯಮಳರು ಸಾಮಾನ್ಯರಂತೆ ಧರಣೀತಲದಲ್ಲಿ ಮಲಗಿದ್ದಾರಲ್ಲ! ಈ ಲೋಕದಲ್ಲಿ ವಿಷಮರಾಗಿರುವ ಮತ್ತು ಕುಲವನ್ನು ಕೆಡಿಸುವ ಬಂಧುಗಳು ಯಾರೂ ಇಲ್ಲದವನು ಗ್ರಾಮದಲ್ಲಿರುವ ಒಂಟಿ ಮರದಂತೆ ಸುಖವಾದ ಜೀವನವನ್ನು ಜೀವಿಸುತ್ತಾರೆ. ಗ್ರಾಮದಲ್ಲಿ ಒಂಟಿಯಾಗಿರುವ ವೃಕ್ಷವು ಪರ್ಣ ಫಲಪೂರಿತವಾಗಿರುತ್ತದೆ ಯಾಕೆಂದರೆ ಬಂಧುಗಳು ಯಾರನ್ನೂ ಹೊಂದಿರದ ಅದನ್ನು ಪೂಜಿಸುತ್ತಾರೆ. ಬಹಳ ಮಂದಿ ಧರ್ಮಸಂಶ್ರಿತ ಶೂರ ನೆಂಟರನ್ನು ಹೊಂದಿದವರು ಈ ಲೋಕದಲ್ಲಿ ನಿರಾಮಯ ಸುಖ ಜೀವನವನ್ನು ಜೀವಿಸುತ್ತಾರೆ. ಬಾಂಧವರನ್ನು ಮಿತ್ರರನ್ನಾಗಿ ಪಡೆದ ಮಕ್ಕಳು ಅನ್ಯೋನ್ಯರಿಗೆ ಆಶ್ರಯವನ್ನು ನೀಡುತ್ತಾ ಕಾಡಿನಲ್ಲಿ ಬೆಳೆಯುವ ಮರಗಳಂತೆ ಬಲವಂತರಾಗಿ ಸಮೃದ್ಧ ಜೀವನವನ್ನು ಜೀವಿಸುತ್ತಾರೆ. ಧೃತರಾಷ್ಟ್ರ ಮತ್ತು ಅವನ ದುರಾತ್ಮ ಪುತ್ರನಿಂದ ಹೊರಗಟ್ಟಲ್ಪಟ್ಟ ನಾವು ಅವನೇ ಹೇಳಿ ಮಾಡಿಸಿದ್ದ ಬೆಂಕಿಯನ್ನು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡೆವು. ಆ ಅಗ್ನಿಯಿಂದ ತಪ್ಪಿಸಿಕೊಂಡ ನಾವು ಈಗ ಈ ಮರದ ಆಶ್ರಯವನ್ನು ಬಯಸುತ್ತಿದ್ದೇವೆ. ಈ ಅನುತ್ತಮ ಕ್ಲೇಶವನ್ನು ಪಡೆದ ನಾವು ಯಾವ ದಿಕ್ಕಿನಲ್ಲಿ ಹೋಗಬಲ್ಲೆವು? ಈ ವನದಿಂದ ಹತ್ತಿರದಲ್ಲಿಯೇ ಒಂದು ನಗರವು ಕಂಡುಬರುತ್ತಿದೆ. ಆದರೆ ಅವರು ಮಲಗಿರುವಾಗ ಯಾರಾದರೂ ಒಬ್ಬರು ಎಚ್ಚರವಾಗಿರಬೇಕಲ್ಲ! ನಾನೇ ಎಚ್ಚರವಾಗಿರುತ್ತೇನೆ.”
ಆಯಾಸವನ್ನು ತಣಿಸಿ ಎಚ್ಚೆತ್ತ ನಂತರ ಅವರು ನೀರನ್ನು ಕುಡಿಯುತ್ತಾರೆ ಎಂದು ನಿಶ್ಚಯಿಸಿದ ಭೀಮನು ಸ್ವಯಂ ರಾತ್ರಿಯಿಡೀ ಎಚ್ಚೆತ್ತೇ ಇದ್ದನು.